ಬಂದರು ನಗರಿ ಮಂಗಳೂರು ಪಡುವಣ ಕಡಲ ಕಿನಾರೆಯಲ್ಲಿರುವ ಸುಂದರ ತಾಣವೂ ಹೌದು. ನೆಲ, ಜಲ, ರೈಲು, ವಾಯುಯಾನ ಇರುವ ಈ ನಾಡಿನ ಏಕೈಕ ಪಟ್ಟಣ. ಪುರಾತನ ದೇವಾಲಯಗಳು, ಮಸೀದಿ, ಚರ್ಚ್‌ಗಳಿರುವ ಸರ್ವಧರ್ಮಗಳ ನೆಲೆವೀಡು. ತುಳು, ಕೊಂಕಣಿ, ಬ್ಯಾರಿ, ಕನ್ನಡ, ಅರೆಕನ್ನಡ, ಮಲೆಯಾಳಂ ಸಹಿತ ಈ ದೇಶದ ಹಲವು ಭಾಷೆಗಳನ್ನಾಡುವ ಜನರು ಇಲ್ಲಿ ಸೌಹಾರ್ದವಾಗಿ ಬದುಕುತ್ತಿದ್ದಾರೆ.

ಉಡುಗೆ-ತೊಡುಗೆ, ಆಹಾರ ಪದ್ಧತಿಯಲ್ಲಿ ವೈವಿಧ್ಯತೆ ಇಲ್ಲಿನ ವಿಶೇಷತೆ. ಕಲೆ, ಸಂಸ್ಕೃತಿಯಲ್ಲಿ ವಿಭಿನ್ನತೆ, ನಾಗಾರಾಧನೆ,ದೇವಾರಾಧನೆ ಜೊತೆಗೆ ದೈವಾರಾಧನೆ ಅನಾದಿಕಾಲದ ಕಟ್ಟುಕಟ್ಟಳೆ ಇರುವ ತುಳುನಾಡು. ಅಳಿಯಸಂತಾನ ಕಟ್ಟುಪಾಡುಗಳಿರುವ ಇಲ್ಲಿಯ ಜನರು, ಅವರ ಬದುಕು, ನಡೆ, ನುಡಿ ಎಲ್ಲದರಲ್ಲೂ ವೈಶಿಷ್ಟ್ಯತೆ ಮಡುಗಟ್ಟಿದೆ. ಯಕ್ಷಗಾನ ಈ ನೆಲದ ಗಂಡು ಮೆಟ್ಟಿನ ಕಲೆ.

ಈ ದೇಶದ ಮೊಟ್ಟಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡಿದ ಉಳ್ಳಾಲದ ರಾಣಿ ಅಬ್ಬಕ್ಕಳ ಹೋರಾಟದ ವೀರಭೂಮಿ ಮಂಗಳೂರು. ಇಂಥ ಐತಿಹಾಸಿಕ ನಗರದಲ್ಲಿ ಹದಿನೇಳನೇ ರಾಷ್ಟ್ರೀಯ ಯುವಜನೋತ್ಸವ ಜನವರಿ ೧೨ ರಿಂದ ೧೬ರವರೆಗೆ ಅಭೂತಪೂರ್ವವಾಗಿ ನಡೆಯಿತು.

ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಮೂಲಕ ರಾಜ್ಯ ಸರ್ಕಾರ ಆತಿಥ್ಯದ ಹೊಣೆ ಹೊತ್ತು ಮಂಗಳೂರು ನಗರವನ್ನು ಯುವಜನೋತ್ಸವ ನಡೆಸಲು ಆಯ್ಕೆಮಾಡಿ ಇಲ್ಲಿನ ಸಂಘಟನಾ ಶಕ್ತಿಗೆ ಸವಾಲನ್ನೇ ಒಡ್ಡಿತ್ತು. ಹಲವು, ಭಾಷೆ, ಸಂಸ್ಕೃತಿ, ಆಹಾರ ಪದ್ಧತಿಯ ಯುವಜನರು ಐದು ದಿನಗಳ ಕಾಲ ಮಂಗಳೂರಲ್ಲಿ ಕಲೆತು ತಮ್ಮ ಪ್ರತಿಭಾ ಪ್ರದರ್ಶನ ಮಾಡುವ ಅವಕಾಶ ಇಲ್ಲಿ.

ಮಂಗಳೂರು ಒಂದು ರೀತಿಯಲ್ಲಿ ಪ್ರಯೋಗ ಭೂಮಿ. ಆದ್ದರಿಂದಲೇ ಈ ಯುವಜನೋತ್ಸವದ ಉದ್ಘಾಟನೆಯಲ್ಲೂ ಅಂಥ ಪ್ರಯೋಗವಿತ್ತು. ಮಂಗಳೂರು ಕೇಂದ್ರಸ್ಥಳವಾದ ನೆಹರೂ ಮೈದಾನದಿಂದ ಜನವರಿ ೧೨ ರಂದು ಸುಡುಬಿಸಿಲಲ್ಲಿ ಯುವಜನೋತ್ಸವದ ಅದ್ದೂರಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

ನಾಡಿನ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ವರ್ಣರಂಜಿತವಾದ ಅದ್ದೂರಿ ಮೆರವಣಿಗೆಯೊಂದಿಗೆ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಯುವಪ್ರತಿಭೆಗಳ ಸಮಾಗಮ ಕಣ್ಣಿಗೆ ರಾಚುತ್ತಿತ್ತು. ಬಂದರು ನಗರಿ ಮಂಗಳೂರಿನ ಮುಖ್ಯ ಬೀದಿಯಲ್ಲಿ ಹಾದು ಬರುತ್ತಿದ್ದ ಮೆರವಣಿಗೆಯನ್ನು ಸಹಸ್ರಾರು ಮಂದಿ ಸಾಕ್ಷೀಕರಿಸಿದರು.

ಜಾನಪದ ಕಲೆಗಳು ಮೆರವಣಿಗೆಗೆ ಕಳೆತಂದುಕೊಟ್ಟಿದ್ದವು. ಕೊಂಬು ಕಹಳೆ, ಜಾಗಟೆ, ಡೊಳ್ಳು, ಯಕ್ಷಗಾನ ಕುಣಿತಗಳು, ಪೂಜಾ ಕುಣಿತ, ನಂದಿಧ್ವಜ, ಗೊರವರ ಕುಣಿತ ಹೀಗೆ ಸುಮಾರು ಐವತ್ತಕ್ಕೂ ಹೆಚ್ಚು ಜಾನಪದ ತಂಡಗಳು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದವು.ಮಂಗಳೂರಲ್ಲಿ ಈ ಹಿಂದೆ ಮೊದಲ ಕರಾವಳಿ ಉತ್ಸವ ನಡೆದಾಗ ಕಂಡು ಬಂದ ವೈಭವೋಪೇತ ಮೆರವಣಿಗೆಯನ್ನು ಮೆಲುಕು ಹಾಕುವಂತೆ ಮಾಡಿತು. ಕರಾವಳಿಯ ಆಟಿಕಳೆಂಜ, ಕಂಗಿಲು ಕುಣಿತ ವಿಶೇಷವಾಗಿ ಗಮನ ಸೆಳೆದವು.ಉರಿಬಿಸಿಲಲ್ಲಿ ಹೊರಟ ಮೆರವಣಿಗೆ ಮುಖ್ಯ ವೇದಿಕೆಯ ಮಂಗಳಾ ಕ್ರೀಡಾಂಗಣ ತಲುಪಿದಾಗ ಸೂರ್ಯ ಪಶ್ಚಿಮದ ಅರಬ್ಬಿ ಸಮುದ್ರದಲ್ಲಿ ಮುಳುಗುತ್ತಿದ್ದ.

ಮಂಗಳಾ ಕ್ರೀಡಾಂಗಣದ ಭವ್ಯ ವೇದಿಕೆಯಲ್ಲಿ ರಾಷ್ಟ್ರೀಯ ಯುವಜನೋತ್ಸವಕ್ಕೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಚಾಲನೆ ನೀಡಿದರು. ತವರಿನಲ್ಲೀ ಇಂಥ ಯುವಜನೋತ್ಸವ ನಡೆಸುವ ಅವಕಾಶ ಸಿಕ್ಕಿದ್ದು ತಮ್ಮ ಭಾಗ್ಯ ಎಂದು ಬಣ್ಣಿಸುವ ಮೂಲಕ ಮುಖ್ಯಮಂತ್ರಿ ತುಸು ಭಾವಪರವಶವಾದರು. ಕಾರಣ ಕ್ರೀಡಾಂಗಣದಲ್ಲಿ ಎತ್ತ ನೋಡಿದರೂ ಜನಸಾಗರ, ಅವರ ನಿರೀಕ್ಷೆಯನ್ನೂ ಮೀರಿ ಮಂಗಳೂರಿನ ಜನರು ಸೇರಿದ್ದರು.

ಯುವಜನರನ್ನು ಉತ್ತೇಜಿಸುವುದಕ್ಕಾಗಿಯೇ ಯುವ ಬಜೆಟ್ ಮಂಡನೆ ಮಾಡುವ ಘೋಷಣೆ ಮಾಡಿದರಲ್ಲದೇ, ಯುವಜನ ಮತ್ತು ಕ್ರೀಡಾ ಇಲಾಖೆಯನ್ನು ಮತ್ತಷ್ಟು ಸಬಲೀಕರಣ ಮಾಡಿ ವಿವೇಕಾನಂದರ ಜನ್ಮದಿನೋತ್ಸವದ ಸಂದರ್ಭದಲ್ಲಿ ಯುವಜನರನ್ನು ಕೇಂದ್ರವನ್ನಾಗಿಟ್ಟುಕೊಂಡು ಹಲವು ಕಾರ್ಯಕ್ರಮ ರೂಪಿಸುವುದಾಗಿ ಹೇಳಿದರು.

ಕೇಂದ್ರ ಯುವನ ಸೇವೆ ಮತ್ತು ಕ್ರೀಡಾ ಸಚಿವ ಅಜೆಯ್ ಮಾಕನ್, ಕೇಂದ್ರ ಮಂತ್ರಿ ಎಂ.ವೀರಪ್ಪ ಮೊಯ್ಲಿ, ಕರ್ನಾಟಕದ ಸಚಿವರಾದ ಡಾ.ವಿ.ಎಸ್.ಆಚಾರ್ಯ, ಜೆ.ಕೃಷ್ಣ ಪಾಲೇಮಾರ್, ಉಪಸಭಾಪತಿ ಎನ್.ಯೋಗೀಶ್ ಭಟ್, ಸಂಸದ ನಳಿನ್ ಕುಮಾರ್ ಕಟೀಲ್, ಸ್ಥಳೀಯ ಶಾಸಕರು, ಮೇಯರ್, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್, ಹೆಚ್ಚುವರಿ ಮುಖ್ಯಕಾರ್ಯದರ್ಶಿ ಕೆ.ಜೈರಾಜ್ ಸಹಿತ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿ ವರ್ಗ, ಜಿಲ್ಲಾಡಳಿತ ಯಂತ್ರ ಈ ಅಭೂತಪೂರ್ವ ಯುವಜನೋತ್ಸವದ ಉದ್ಘಾಟನೆಗೆ ಸಾಕ್ಷಿಯಾಗಿತ್ತು.

ಯುವಪ್ರತಿಭೆಗಳ ಸಂಗಮ

ರಾಷ್ಟ್ರೀಯ ಯುವಜನೋತ್ಸವ ಈ ದೇಶದ ಯುವಪ್ರತಿಭೆಗಳ ಪ್ರತಿಭೆಯನ್ನು ಒರೆಗೆ ಹಚ್ಚುವ ವೇದಿಕೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಯುವಕರು ತಮ್ಮ ತಮ್ಮ ರಾಜ್ಯಗಳನ್ನು ಪ್ರತಿನಿಧಿಸಿ ಕಲೆ, ಸಂಸ್ಕೃತಿಯ ಆಳ-ಹರವು ಎಷ್ಟೆಂದು ಜನರ ಮುಂದು ಬಿಚ್ಚಿಡುವ ಸನ್ನಿವೇಶ. ಸಂಗೀತ, ನೃತ್ಯ, ಸಾಹಸ ಕ್ರೀಡೆ, ಜನಪದ ಹಾಡುಗಾರಿಕೆ, ಶಾಸ್ತ್ರೀಯ ಸಂಗೀತ, ಜನಪದ ಕುಣಿತ ಹೀಗೆ ವಿಭಾಗಿಸಿ ಎಂಟು ಕಡೆಗಳಲ್ಲಿ ಏಕಕಾಲದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ನೃತ್ಯ ದೈವದತ್ತ ಕಲೆ, ಒಬ್ಬ ನೃತ್ಯಕಾರ ರೂಪುಗೊಳ್ಳಬೇಕಾದರೆ ಅಲ್ಲಿ ಶಿಲ್ಪಿಯ ಪರಿಶ್ರಮ ಬೇಕು, ಕಲ್ಲಿನ ಸಹನೆ ಬೇಕು. ಇದು ನಿರೂಪಗೊಂಡಿದ್ದು ಮಂಗಳೂರಿನಲ್ಲಿ. ೨೮ ರಾಜ್ಯಗಳಿಂದ ಈ ಸ್ಪರ್ಧೆಗೆ ಬಂದಿದ್ದರು. ಅರ್ಧನಾರೀಶ್ವರನ್ನು ವರ್ಣದಲ್ಲಿ ನಿರೂಪಿಸುತ್ತಾ ಮೂಡಿಬಂದ ಹರಿಯಾಣಾದ ತನ್ವಿಗುಪ್ತಾರ ನೃತ್ಯಕ್ಕೆ ಸೆಡ್ಡು ಹೊಡೆದಿದ್ದು ಕರ್ನಾಟಕದ ಅನಿಲ್.ಬಿ.ಅಯ್ಯರ್. ಚಿದಾನಂದ ತಾಂಡವೇಶ್ವರನ ಕಂಡೆ ಎನ್ನುತ್ತಾ ಬಂದ ಅನಿಲ್ ಅಯ್ಯರ್ ಪ್ರೇಕ್ಷಕರಿಗೆ ನಟರಾಜನ ಪ್ರತ್ಯಕ್ಷ ದರ್ಶನ ಮಾಡಿಸಿದುದು ತಮ್ಮ ನೃತ್ಯದಲ್ಲಿ. ಆಂಧ್ರಾ ಯುವತಿ ರಮ್ಯ ಕೌಮುದಿ, ಮರೆಯಲಾಗದ ಝಲಕ್ ಉಳಿಸಿದ ಗುಜರಾತಿ ಯುವತಿ ಜಿನಾಲ್ ಹದ್ರಿ ಭರತನಾಟ್ಯದ ರಸದೌತಣ ಉಣಿಸಿದರು. ಸ್ಪರ್ಧಿಗಳು ನಿಗದಿತ ಸಮಯವನ್ನು ಬಳಸಿಕೊಂಡು ಹಿರಿಯ ನೃತ್ಯಕಾರರೇ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದುದು ವಿಶೇಷ.

ಕರ್ನಾಟಿಕ್ ಏಕವ್ಯಕ್ತಿ ಸಂಗೀತ ಸ್ಪರ್ಧೆಯಲ್ಲಿ ಒಂಭತ್ತು ರಾಜ್ಯಗಳ ಸ್ಪರ್ಧಿಗಳು ಭಾಗವಹಿಸಿದ್ದರು. ದೆಹಲಿಯ ಎ.ಅಕ್ಷಯ, ಮಧ್ಯಪ್ರದೇಶದ ಎಸ್.ಸುಧಾಕರ್, ತಮಿಳುನಾಡಿನ ಇಸಿಕ್ಕಿನಪ್ಪನ್, ಛತ್ತೀಸ್‌ಗಡದ ಜಾನ್ಹವಿ, ಪಂಜಾಬಿನ ಕರಣ್ ಯಾದವ್, ಆಂಧ್ರಪ್ರದೇಶದ ಆದಿತ್ಯ ವಿಶ್ವನಾಥನ್, ಕರ್ನಾಟಕದ ಉಷಾ.ಹೆಚ್, ಗುಜರಾತಿನ ಅತುಲ್ ಜಿ.ನಾಯರ್, ಕೇರಳದ ಕಾರ್ತಿಕೇಯನ್ ಎಲ್ಲರ ಗಮನ ಸೆಳೆದರು.

ಕರ್ನಾಟಿಕ್ ಸಂಗೀತ ಏಕವ್ಯಕ್ತಿ ಸ್ಪರ್ಧೆಯ ಕಾರ‍್ಯಕ್ರಮಕ್ಕೆ ವಿದೇಶಿಗರೂ ಭಾಗವಹಿಸಿ, ಸಂಗೀತ ಆಸ್ವಾದಿಸಿದ್ದು ಗಮನ ಸೆಳೆಯಿತು. ಜರ್ಮನಿಯ ಲಿಯಾ ಹಾಗೂ ಒಕ್ಟಾವಿಯಾ ಪ್ರೇಕ್ಷಕರಾಗಿ ಭಾಗವಹಿಸಿ ರಂಗು ನೀಡಿದರು. ‘ಕರ್ನಾಟಿಕ್ ಸಂಗೀತ ಪಾಶ್ಚಿಮಾತ್ಯ ಸಂಗೀತಕ್ಕಿಂತ ಚೆನ್ನಾಗಿದ್ದು ಮನಸ್ಸಿಗೆ ಮುದ ನೀಡುತ್ತಿದೆ. ಯುವಜನೋತ್ಸವ ತುಂಬಾ ಸುಂದರವಾಗಿದ್ದು ನಾವು ಇಲ್ಲಿ ತುಂಬ ಎಂಜಾಯ್ ಮಾಡ್ತಾ ಇದ್ದೇವೆ’ ಎನ್ನುವಾಗ ಅವರ ಮುಖದಲ್ಲಿ ಸಂತೃಪ್ತಿಯಿತ್ತು.

ಕನ್ನಡದ ನೆಲದಲಿ  ಒಡಿಸ್ಸಿಯ ಕಂಪು

ಒರಿಸ್ಸಾ ಅಂದಾಕ್ಷಣ ನೆನಪಾಗುವುದು ಒಡಿಸ್ಸಿ. ಇದು ಇಲ್ಲಿಯ ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲೊಂದು. ನೃತ್ಯ ವೈವಿದ್ಯಕ್ಕೆ ಹೆಸರಾದ ಭಾರತದಲ್ಲಿ ಇದು ಇನ್ನೊಂದು ಕೂಸು. ದೇಹ ದಂಡನೆ ಇಲ್ಲಿ ವಿದ್ಯಾರ್ಥಿಗಳಿಗೆ ಲೆಕ್ಕವೇ ಅಲ್ಲ. ದೇಹ ಬಾಗಿಸಿ ಸಮಯಕ್ಕೆ ಸವಾಲೆಸೆಯುವಂತೆ ಕುಣಿಯುವ ಈ ನೃತ್ಯಕಾರರನ್ನು ನೋಡುವುದೇ ಚಂದ.

ಉತ್ತರ ಭಾರತಕ್ಕೆ ಮೀಸಲಾದ ಇಂತಹ ಒಂದು ನೃತ್ಯ ಶೈಲಿ ಕರಾವಳಿಯ ಕಲಾರಸಿಕರನ್ನರಸಿ ಬಂದಿದ್ದು ರಾಷ್ಟ್ರೀಯ ಯುವಜನೋತ್ಸವದಲ್ಲಿ. ಯುವ ಶಕ್ತಿಗಳ ಹೆಜ್ಜೆಯಲ್ಲಿ ಮೂಡಿದ ನೃತ್ಯ ಕರಾವಳಿಯ ಯಾವ ಅಲೆಗೂ ಅಳಿಸಲಾರದಷ್ಟು ಗಟ್ಟಿಯಾಗಿ ಉಳಿದು ಹೋಯಿತು. ಒಡಿಸ್ಸಿಗೆ ಒಡಿಸ್ಸಿಯೇ ಸಾಟಿ ಎಂಬಂತೆ ಹೆಜ್ಜೆಗಳು ಸದ್ದು ಮಾಡುತ್ತಿದ್ದರೆ ಪ್ರೇಕ್ಷಕರು ಮೂಕಸಾಕ್ಷಿಯಾಗಿದ್ದರು.

ಏಕಾಂಕ ಸ್ಪರ್ಧೆಗಳು

ಏಕಾಂಕ ಸ್ಪರ್ಧೆಗಳಲ್ಲಿ ೨೪ ತಂಡಗಳು ಭಾಗವಹಿಸಿದ್ದವು. ದಾದರ್, ನಗರ್ ಹವೇಲಿ, ಮಧ್ಯಪ್ರದೇಶ, ಗುಜರಾತ್ ಹಾಗು ಒರಿಸ್ಸಾ ರಾಜ್ಯಗಳ ಕಲಾ ತಂಡಗಳು ತಮ್ಮ ಕಲೆಯನ್ನು ಪ್ರದರ್ಶಿಸಿದವು. ಏಕಾಂಕ ಸ್ಪರ್ಧೆಯಲ್ಲಿ ಅತ್ಯಂತ ರೋಚಕ ಪ್ರದರ್ಶನ ನೀಡಿದ ಬಿಹಾರದ ಅಜಬ್ ನವಾಬ್ ಕಿ ಗಜಬ್ ಕಹಾನಿ ಸರ್ವರ ಪ್ರಶಂಸೆಗೆ ಪಾತ್ರವಾಯಿತು. ಓರ್ವ ಯುವ ಹೃದಯದ ಕನಸು ಈ ಏಕಾಂಕ ನಾಟಕದ ಸುತ್ತ ಹೆಣೆಯಲ್ಪಟ್ಟಿತ್ತು.ವೇಷಧಾರಿಗಳ ವರ್ಣಗಾರಿಕೆ ಪಾತ್ರದ ಮೆರುಗು ಹೆಚ್ಚಿಸಿದವು. ಮಹಾರಾಷ್ಟ್ರ ತಂಡದ ಏಕಾಂಕ ನಾಟಕದಲ್ಲಿ ಮುಂಬೈನ ಬಾಂಬ್ ಸ್ಫೋಟದ ನಂತರದ ಜನರ ಏಕತೆಯನ್ನು ಬಿಂಬಿಸಲ್ಪಟ್ಟಿತ್ತು. ಗೋವಾ ತಂಡ ವಾಸ್ತವ ಸ್ಥಿತಿ ಗತಿಯನ್ನು ಬಿಂಬಿಸುವಅತ್ತೆ – ಸೊಸೆ ಜೀವನ ಗಾಥೆಯನ್ನು ಹೇಳಿದರೆ ಕಳೆದ ಬಾರಿ ಏಕಾಂಕ ನಾಟಕದಲ್ಲಿ ಗೆದ್ದಿದ್ದ ಕೇರಳ ತಂಡ ಈ ಬಾರಿಯೂ ಉತ್ತಮ ಪ್ರದರ್ಶನ ನೀಡಿತು.

ಕೂಚುಪುಡಿಯ ಮೋಡಿ

ಕೂಚುಪುಡಿ ನೃತ್ಯ ಸ್ಪರ್ಧೆಯಲ್ಲಿ ಆಂಧ್ರ ಪ್ರದೇಶ, ಮಧ್ಯಪ್ರದೇಶ, ಕರ್ನಾಟಕ, ಹರಿಯಾಣ, ಮಣಿಪುರಿ ಹೀಗೆ ೧೦ ರಾಜ್ಯಗಳ ಸರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ.ಬಂಗಾಳದ ಸ್ಪರ್ಧಿಯಿಂದ ಶುರುವಾದ ನೃತ್ಯ ಕೊನೆಯ ಸ್ಪರ್ಧಿಯವರೆಗೂ ನೋಡುಗರ ಕಣ್ಮನವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು. ಆದಿತಾಳದಲ್ಲಿ ಮೂಡಿಬಂದ ಯದುವಂಶ ಬುನಾಂಬುದಿ ಸಂಗೀತಕ್ಕೆ ಪ. ಬಂಗಾಳದ ಗೆಜ್ಜೆಗಳು ಕುಣಿಯಲಾರಂಭಿಸಿದಾಗ ಪ್ರೇಕ್ಷಕರು ಮೂಖರಾದರು.ನಂತರದ ನೃತ್ಯಗಳಿಗೆ ತಾನೇನು ಸಾಟಿ ಇಲ್ಲ ಎಂಬಂತೆ ಬಂದ ಮಧ್ಯ ಪ್ರದೇಶದ ನೃತ್ಯಗಾತಿ ರಾಜ್‌ಶ್ರೀ ರಾಜ್ ಹೆಜ್ಜೆ ಹಾಕಿದ್ದು ದೇವಿಸ್ತುತಿಗೆ. ಮಹಿಷಾಸುರನ ರಾಕ್ಷಸೀಯ ಕೃತ್ಯಗಳು ಮೂರೂ ಲೋಕದಲ್ಲಿ ಹೆಚ್ಚಾದಾಗ ದೇವಿ ಮರ್ಧಿನಿಯಾಗಿ ಬಂದು ಲೋಕ ಸಂರಕ್ಷಣೆ ಮಾಡುವುದು ಇದರ ಕಥೆಯಾಗಿದೆ. ಶಣ್ಮುಕ ಪ್ರಿಯರಾಗ,ಆದಿ ತಾಳಗಳಲ್ಲಿ ಮೂಡಿಬಂದ ಹಾಡಿಗೆ ಸುಂದರವಾಗಿ ಹೆಜ್ಜೆ ಹಾಕಿದ ರಾಜ್‌ಶ್ರೀ ಪ್ರೇಕ್ಷಕರನ್ನು ಮಂತ್ರ ಮುಗ್ದರನ್ನಾಗಿ ಮಾಡಿದರು. ಅಂತೂ ಕರಾವಳಿ ರಂಗಮಂಚದಲ್ಲಿ ಮೂಡಿಬಂದ ನೃತ್ಯ ವೈವಿಧ್ಯ ಜನಮನಸೂರೆಗೊಂಡಿತು.

ಮಂತ್ರಮುಗ್ಧವಾಗಿಸಿದ ಮಣಿಪುರಿ

ಮಣಿಪುರಿ ನೃತ್ಯ ಸ್ಪರ್ಧೆಯಲ್ಲಿ ರಂಗದ ತುಂಬೆಲ್ಲಾ ಬಣ್ಣ-ಬಣ್ಣಗಳ ಹೊಂಬೆಳಕು. ಬೆಳಕ ಸೀಳಿ ಬಂದಂತೆ ಕಾಣುವ ನೃತ್ಯಗಾರರು. ಅವರ ಚಿತ್ತಾಕರ್ಷಕ ವೇಷಭೂಷಣಗಳು ಪ್ರೇಕ್ಷಕರನ್ನು ಅದಾವುದೋ ಲೋಕಕ್ಕೆ ಎಳೆದೊಯ್ದಿತ್ತು. ಈ ಸ್ಪರ್ಧೆಯಲ್ಲಿ ೯ ರಾಜ್ಯಗಳ ನೃತ್ಯಕಾರರು ಸ್ಪರ್ಧಿಸಿದ್ದರು. ಮಣಿಪುರಿ ಭಾರತದ ನೃತ್ಯವೈಶಿಷ್ಯಗಳಲ್ಲೊಂದು. ಮಣಿಪುರಿ ನೃತ್ಯದ ಇನ್ನೊಂದು ವಿಶೇಷತೆಯೆಂದರೆ ಇಲ್ಲಿ ಬಳಸಲಾಗುವ ಸಂಗೀತ. ಮೃದಂಗ, ಡ್ರಮ್ ಹಾಗೂ ಹಾಡುಗಾರಿಕೆಗಳು ಒಂದಾಗಿ ಕಲೆತು ನೃತ್ಯಕ್ಕೆ ಮೆರುಗು ನೀಡುತ್ತವೆ. ಈ ಮಣಿಪುರಿ ನೃತ್ಯದಲ್ಲಿ ರಾಸಲೀಲ, ಪುಂಗ್‌ಚೋಲೊಮ್, ಗೊಸ್ತಾಲೀಲಾ, ಪಾಲ ಕೀರ್ತನ, ಕಾಂಬಾತೋಯ್ಬಿ, ಮೈಬೀ ಡಾನ್ಸ್ ಹೀಗೆ ಹತ್ತು ಹಲವು ವಿಧಗಳು.

ಮಂಗಳೂರಿನ ರಂಗಮಂಚದಲ್ಲಿ ಇಂತಹದ್ದೊಂದು ಸ್ಪರ್ಧೆ ಇದೇ ಮೊದಲ ಬಾರಿಗೆ ನಡೆಯಿತು.ಅಸ್ಸಾಂ ನೃತ್ಯಕಾರ ಸುಧೀರ್ ಕುಮಾರ್ ಘೋಷ್ ಅವರಿಂದ ನೃತ್ಯ ಸ್ಪಧೆಯ ಆರಂಭ. ರಾಧಾ ಕೃಷ್ಣರ ಭೇಟಿಯನ್ನು ವಿಷದಪಡಿಸುವ ಹಾಡನ್ನು ಬಹಳ ಸುಂದರವಾಗಿ ನೃತ್ಯದ ಮೂಲಕ ಪ್ರಸ್ತುತಪಡಿಸುವುದರ ಮೂಲಕ ನೆರೆದ ಮಂಗಳೂರಿನ ಸಭಿಕರಿಗೆ ಮಣಿಪುರ ನೃತ್ಯಗಳು ಮುದನೀಡಿದವು.

ಸಾಹಸ ಕ್ರೀಡೆ

ಅಂಗವೈಕಲ್ಯದ ನಡುವೆಯೂ ಯಾವ ಅಡೆ ತಡೆ ಇಲ್ಲದೆ ನೆಹರೂ ಮೈದಾನದಲ್ಲಿ ಸಾಹಸ ಕ್ರೀಡೆಯಲ್ಲಿ ತೊಡಗಿಸಿಕೊಂಡ ಉತ್ತರ ಪ್ರದೇಶದ ಯುವಕನಲ್ಲಿ ಹೂಸ ಉತ್ಸಾಹ ಚಿಮ್ಮಿತ್ತು. ನೆಹರು ಮೈದಾನದ ತುಂಬಲ್ಲ ಉತ್ಸಾಹ,ಶಕ್ತಿ,ಕುತೂಹಲ ತುಂಬಿತ್ತು.೧೮ವರ್ಷದ ಉತ್ತಮ್ ತನ್ನ ಎರಡು ಕಾಲನ್ನು ಪೋಲಿಯೋಗೆ ತುತ್ತಾಗಿ ಕಳೆದು ಕೊಂಡಿದ್ದರು ಸಹ ಯಾರ ಸಹಾಯವನ್ನು ಪಡೆಯದೇ ಸ್ಪೃಡರ್ ವೆಬ್ ಸಾಹಸ ಕ್ರೀಡೆಯಲ್ಲಿ ಭಾಗವಹಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ ಮತ್ತು ಇದರ ಮೂಲಕ ಸ್ವ-ನಂಬಿಕೆ ಎಲ್ಲವನ್ನು ಸಾಧಿಸಬಹುದೆಂದ ಸಂದೇಶವನ್ನು ಸಾರಿದ..

ಉತ್ತಮನ ಹಾಗೆ ಬೇರೆ ಬೇರೆ ಕಡೆಗಳಿಂದ ಆಗಮಿಸಿದ್ದ ಯುವಕ ಯುವತಿಯರು ತಮ್ಮ ತಾವೂ ಹಲವಾರು ಸಾಹಸ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿ ಸಂತುಷ್ಟರಾದರು. ಈ ಹೂಸ ಸಾಹಸ ಕಾರ್ಯಗಳು ಅವರಿಗೆ ಮನೋರಂಜನೆ ಜೊತೆಗೆ ದೃಢವಿಶ್ವಾಸವನ್ನು ನೀಡುತ್ತಿತ್ತು.

ಬಡವರ ಪಾಲಿಗೆ ದೂರವೇ ಆಗಿದ್ದ ಇಂತಹ ಸಾಹಸ ಕೀಡೆಗಳಲ್ಲಿ ಭಾಗವಹಿಸಿದ್ದಕ್ಕಾಗಿ ಮತ್ತು ಇಂತಹ ಅನುಭವ ಜೀವನದಲ್ಲಿ ಮೂದಲನೇ ಪಾಲಿಗೆ ದೊರೆಕಿಸಿಕೊಟ್ಟಿ ಕರ್ನಾಟಕ ಸರಕಾರಕ್ಕೆ ವಂದಿಸಿದಾಗ ೧೪ ವರ್ಷದ ಇಫ್ತಿಯಾರ್ ಕಣ್ಣಾಗಳು ಒದ್ದೆಯಾಗಿದ್ದವು. ಅದು ಎಲ್ಲರ ಮನಕಲಕುವಂತ ದೃಶವಾಗಿತ್ತು. ೮ ಸಾವಿರಕ್ಕೂ ಹೆಚ್ಚು ಮಕ್ಕಳು ಹಾಗೂ ಯುವಕರು ಸಾಹಸ ಕ್ರೀಡೆಗಳಲ್ಲಿ ಭಾಗಿಯಾಗಿದ್ದರು.ಇಲ್ಲಿ ನಡೆದ ಜಾರ್ಬಿಂಗ್ ಬಾಲ್-ಗೋಲಾಕಾರದ ಬೃಹತ್ತಾದ ಚೆಂಡಿನಲ್ಲಿ ಮನುಷ್ಯರು ಒಳಹೊಕ್ಕ ಕೂಡಲೆ ಚೆಂಡು ಉರುಳುತ್ತಾ ಹೋಗುತ್ತದೆ ಇದೊಂದು ಮಕ್ಕಳಿಗೆ ಅತ್ಯಂತ ಆನಂದ ಉಂಟುಮಾಡಿದ ಕ್ರೀಡೆಯಾಗಿತ್ತು.ಬರ್ಮಾ ಬ್ರಿಜ್ ನಿಜಕ್ಕೂ ಅತ್ಯಂತ ರೋಮಾಂಚಕಾರಿಯಾದ ಸಾಹಸಮಯವಾಗಿತ್ತು. ಸರಿಸುಮಾರು ೪೦ ಅಡಿ ಉದ್ದದ ೧೫ಅಡಿಗೂ ಹೆಚ್ಚು ಎತ್ತರದ ಬ್ರಿಜ್ ಮೇಲೆ ಮಕ್ಕಳು ನಡೆಯುತ್ತಿದ್ದರೆ ನಮ್ಮ ಸೈನಿಕರು ಶತ್ರು ಪಾಳೆಯಕ್ಕೆ ಲಗ್ಗೆ ಇಡಲು ಪಡುವ ಹಾಗೆ ಗೋಚರಿಸುತ್ತಿತ್ತು. ಮಕ್ಕಳು ಬರ್ಮಾ ಬ್ರಿಜ್ಜಿನ ಮೇಲೆ ಜಾಗರೂಕತೆಯಿಂದ ಹೆಜ್ಜೆ ಮೇಲೆ ಹಜ್ಜೆ ಇಟ್ಟು ನಡೆಯುತ್ತಿದ್ದರೆ ಆಕ್ಕ ಪಕ್ಕ ನಿಂತಿದ್ದ ಮಕ್ಕಳ ಪೋಷಕರು ಆತಂಕದಿಂದ ಅವರ ಬರುವಿಕೆಯನ್ನೆ ಕಾಯುತ್ತಿದ್ದ ದೃಶ್ಯ ಕೌತುಕಮಯವಾಗಿತ್ತು. ಇನ್ನುಳಿದಂತೆ ಫ್ಲೈಯಿಂಗ್ ಫಾಕ್ಸ ಮತ್ತು ಕೃತಕ ಗೋಡೆ ಹತ್ತುವ ಕ್ರೀಡೆಗಳು ಸಹ ಜನಾಕರ್ಷಕವಾಗಿದ್ದವು.

ಜನಸಾಗರವಾದ ಆಹಾರೋತ್ಸವ

ಯುವಜನೋತ್ಸವದ ಪ್ರಮುಖ ಆಕರ್ಷಣೆಯೆಂದರೆ ವಿಭಿನ್ನ ಶೈಲಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ರುಚಿರುಚಿಯಾದ ಆಹಾರ ಖಾದ್ಯಗಳನ್ನು ಸವಿಯುವುದು. ಈ ಕಾರಣಕಾಗಿಯೇ ಈ ಯುವಜನೋತ್ಸವದಲ್ಲಿ ಜನಜಂಗುಳಿಯಿಂದ ಕೂಡಿತ್ತು ಆಹಾರೋತ್ಸವ ಮಳಿಗೆಗಳು.

ಇಲ್ಲಿ ೪೦ ಮಳಿಗೆಗಳನ್ನು ಬೇರೆ ಬೇರೆ ರಾಜ್ಯಗಳಿಗೆ, ಕೇಂದ್ರಾಡಳಿತ ಪ್ರದೇಶಗಳಿಗೆ ೭ ಹಾಗೂ ಮಂಗಳೂರು ಮತ್ತು ಕೊಡಗು ಜಿಲ್ಲೆಗಳಿಗೆ ೫ ಮಳಿಗೆಗಳನ್ನು ಕೊಡಲಾಗಿತ್ತು.ಒಣ ಆಹಾರ ಮಾರಾಟಕ್ಕೆ  ೧೬ ಮಳಿಗೆಗಳನ್ನು ತೆರೆಯಲಾಗಿತ್ತು.ಯಾವ ರಾಜ್ಯದ ಖಾದ್ಯ ತಿನ್ನಬೇಕು ಅನ್ನಿಸುವುದೋ ಆ ರಾಜ್ಯದ ತಿನಿಸುಗಳಿಗಾಗಿ ಆ ಮಳಿಗೆ ಹೊಕ್ಕರೆ ಸಾಕು. ಒಂದು ರೀತಿಯಲ್ಲಿ ಹೊರಗಿನಿಂದ ಬಂದವರಿಗೆ ತಮ್ಮ ಮನೆಯ ನೆನಪಾಗಿ ತಮ್ಮದೇ ಆಹಾರ ತಿನ್ನಬೇಕು ಅನ್ನಿಸಿದರೆ ಈ ಮಳಿಗೆಗೆ ಬಂದರೆ ಬಯಕೆ ಈಡೇರಿಸಿಕೊಳ್ಳಬಹುದಾಗಿತ್ತು.

 

ಹಿಮಾಚಲ ಪ್ರದೇಶ, ಕೇರಳ, ಸಿಕ್ಕಿಂ, ಉತ್ತರಪ್ರದೇಶ, ಆಂಧ್ರ, ಝಾರ್ಖಾಂಡ್, ಜಮ್ಮು-ಕಾಶ್ಮೀರ, ಮಿಜೋರಾಂ, ರಾಜಾಸ್ಥಾನ, ಮಧ್ಯಪ್ರದೇಶ, ಮಣಿಪುರ ಹೀಗೆ ಯಾವುದೇ ರಾಜ್ಯದ ಆಹಾರ ಬೇಕಾದರೂ ಇಲ್ಲಿನ ಮಳಿಗೆಗಳಲ್ಲಿದ್ದವು.ಕರ್ನಾಟಕದವರ ಸಹಿತ ಹೊರ ರಾಜ್ಯಗಳ ಜನರಿಗೆ ಕರಾವಳಿಯ ಆಹಾರ ಪದಾರ್ಥಗಳನ್ನು ಉಣಬಡಿಸುವ ಮಳಿಗೆಗಳು ಇಲ್ಲಿದ್ದವು. ತಮ್ಮ ರಾಜ್ಯದ ಆಹಾರಗಳನ್ನು ಬೇರೆ ರಾಜ್ಯದವರಿಗೆ ಈ ಯುವಜನೋತ್ಸವದ ಮೂಲಕ ಪರಿಚಯಿಸುವ ಕೆಲಸವೂ ಇದರಿಂದ ಸಾಧ್ಯವಾಯಿತು.ಹೊರಗಿನಿಂದ ನೋಡಿದರೆ ಈ ಆಹಾರ ಮಳಿಗೆಗಳು ದುಬಾರಿ ಅನ್ನಿಸಬಹುದಾಗಿತ್ತಾದರೂ ಖಂಡಿತಕ್ಕೂ ದುಬಾರಿ ಆಗಿರಲಿಲ್ಲ. ಮಂಗಳೂರು ನಗರದಲ್ಲೇ ಸಾಮಾನ್ಯ ಊಟಕ್ಕೆ ಕನಿಷ್ಠ ೫೦ ರೂಪಾಯಿ ತೆರೆಬೇಕು. ಈ ಆಹಾರ ಮಳಿಗೆಯೊಳಗೆ ಹೊಕ್ಕು ನಿಮಗೆ ಗೊತ್ತಿಲ್ಲದ ಅನ್ಯ ರಾಜ್ಯದ ಆಹಾರದ ಸವಿಯನ್ನು ಆಸ್ವಾಧಿಸಲು ಕೇವಲ ೫೦ ರೂಪಾಯಿ ಖರ್ಚು ಮಾಡುವುದು ದುಬಾರಿಯೇ?.

ಮಂಗಳೂರು ಸಮಗ್ರ ಭಾರತ

ಮಂಗಳೂರು ನಗರ ಐದು ದಿನಗಳ ಕಾಲ ಅಕ್ಷರಸ: ಸಮಗ್ರ ಭಾರತ. ದೇಶದ ಬೇರೆ ಬೇರೆ ರಾಜ್ಯಗಳನ್ನು ಪ್ರತಿನಿಧಿಸುತ್ತಿರುವ ಯುವಜನರು ೧೭ನೇ ರಾಷ್ಟ್ರೀಯ ಯುವಜನೋತ್ಸವದಲ್ಲು ಭಾಗವಹಿಸಿ ನಗರದ ಯಾವುದೇ ಮೂಲೆಗೆ ಹೋದರು ಕುತ್ತಿಗೆಯಲ್ಲಿ ಬ್ಯಾಡ್ಜ್ ಧರಿಸಿರುವ ಯುವಕರ ತಂಡಗಳು, ಕೆಲವೊಮ್ಮೆ ಒಂಟಿಯಾಗಿಯೂ ಕಾಣುತ್ತಿದ್ದರು. ನಗರದ ಎಂಟು ಕಡೆಗಳಲ್ಲಿ ವಿಭಿನ್ನ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ತಮ್ಮ ಆಸಕ್ತಿ-ಅಭಿರುಚಿಗೆ ತಕ್ಕಂಥ ಕಾರ್ಯಕ್ರಮಗಳನ್ನು ನೋಡಲು ಯುವಕರು ಹೋಗುತ್ತಿದ್ದಾರೆ.

ಇಲ್ಲಿನ ಖಾಸಗಿ ಬಸ್ ಮಾಲೀಕರು ಯುವಜನರಿಗೆ ವಿಶೇಷ ಸವಲತ್ತು ಕೊಟ್ಟಿದ್ದರು. ಯುವಜನೋತ್ಸವದ ಪ್ರತಿನಿಧಿಗಳು ಬ್ಯಾಡ್ಜ್ ಧರಿಸಿದ್ದರೆ ಎಲ್ಲಿಂದ ಎಲ್ಲಿಗೆ ಬೇಕಾದರೂ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿತ್ತು. ಇದರಿಂದಾಗಿ ಪ್ರತಿನಿಧಿಗಳಿಗೆ ಯಾವುದೇ ಬಸ್ ಹತ್ತಿದರೂ ಬಸ್ ನಿರ್ವಾಹಕರು ಸರಿಯಾದ ಮಾಹಿತಿ ನೀಡಿ ಅವರು ಹೋಗಬಯಸುವ ಸ್ಥಳ ಹೇಳಿದರೆ ಅಲ್ಲಿಗೆ ಹೋಗುವ ಬಸ್ ಮಾರ್ಗ ತಿಳಿಸಿ ಸಹಕರಿಸುತ್ತಿದ್ದರು.

ರಾತ್ರಿಯಾಯಿತೆಂದರೆ ಮಂಗಳಾ ಕ್ರೀಡಾಂಗಣದಲ್ಲಿ ಸಾಂಸ್ಕೃತಿಕ ರಸದೌತಣ ಸವಿಯುವ ಅವಕಾಶ. ಕ್ರೀಡಾಂಗಣ ತುಂಬಿ ತುಳುಕುವಷ್ಟು ಆಸಕ್ತರು. ಹರಿಹರನ್ ಸಂಗೀತ ಸಂಜೆ, ರಾಕ್ ಶೋ, ಕದ್ರಿ ಗೋಪಾಲ್‌ನಾಥ್ ಸ್ಯಾಕ್ಸೋಫೋನ್, ಪ್ರವೀಣ್ ಗೋಡ್ಕಿಂಡಿ ಕೊಳಲು, ಶಿವಮಣಿ ಡ್ರಮ್ ವಾದನ ಜನಸ್ತೋಮವನ್ನು ಮಂತ್ರಮುಗ್ಧರನಾಗಿಸಿದ ಮರೆಯಲಾಗದ ಕಾರ್ಯಕ್ರಮ.

ಯುವಜನೋತ್ಸವಕ್ಕೆ ಅದ್ದೂರಿ ತೆರೆ

ಐದು ದಿನಗಳ ಕಾಲದ ಹದಿನೇಳನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಸೋಮವಾರ (ಜನವರಿ ೧೬) ಮುಸ್ಸಂಜೆ ತೆರೆಬಿತ್ತು. ಲಕ್ಷಾಂತರ ನಾಗರಿಕರು ದೇಶದ ಬೇರೆ ಬೇರೆ ಭಾಗಗಳಿಂದ ಬಂದಿದ್ದ ಸುಮಾರು ಆರು ಸಾವಿರ ಮಂದಿ ಯುವಕರ ಪ್ರತಿಭೆಗಳನ್ನು ನೋಡಿ ಸಂತಸಪಟ್ಟರೆ, ಮಂಗಳೂರು ನಗರದ ಆತಿಥ್ಯ, ಯುವಜನೋತ್ಸವಕ್ಕೆ ಮಾಡಿದ್ದ ವ್ಯವಸ್ಥೆಗಳನ್ನು ಪ್ರತಿನಿಧಿಗಳು ಮುಕ್ತಕಂಠದಿಂದ ಹೊಗಳಿದರು.ಹಿಂದೆಂದೂ ಇಷ್ಟೊಂದು ಅಚ್ಚುಕಟ್ಟಾಗಿ ಯುವಜನೋತ್ಸವ ಆಯೋಜಿಸಿರಲಿಲ್ಲ ಎನ್ನುವ ಮಾತುಗಳು ಯುವಜನರಿಂದಲೇ ಬಂದವು. ಊಟ, ವಸತಿ, ಪ್ರಯಾಣದ ವ್ಯವಸ್ಥೆ ಸಹಿತ ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಳ್ಳಲಾಗಿತ್ತು.

ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಸಮಾರೋಪ ಸಮಾರಂಭದಲ್ಲಿ ಮನಬಿಚ್ಚಿ ಮಾತನಾಡಿ ಯುವಜನೋತ್ಸವದ ಉದ್ಘಾಟನೆ ಸಂದರ್ಭದಲ್ಲಿ ಹೇಗಾಗುವುದೋ ಎನ್ನುವ ಆತಂಕವಿತ್ತು. ಅಚ್ಚುಕಟ್ಟಾದ ನಿರ್ವಹಣೆಯಿಂದಾಗಿ ಆತಂಕ ದೂರವಾಯಿತು ಎಂದರಲ್ಲದೇ ಈ ಉತ್ಸವದ ಯಶಸ್ಸಿಗೆ ಕಾರಣರಾದವರನ್ನು ಮನತುಂಬಿ ಸ್ಮರಿಸಿದರು.

ಮುಖ್ಯ ಅತಿಥಿಯಾಗಿದ್ದ ಜಮ್ಮು ಮತ್ತು ಕಾಶ್ಮೀರದ ಕ್ರೀಡಾ ಸಚಿವ ರಾಜೇಂದರ್ ಸಿಂಗ್, ಕರ್ನಾಟಕ ಸರಕಾರವು ನೀಡಿದ ಉತ್ತಮ ಸಹಕಾರಗಳಿಂದ ರಾಷ್ಟ್ರೀಯ ಯುವಜನೋತ್ಸವವು ಅಭೂತಪೂರ್ವ ಯಶಸ್ಸು ಗಳಿಸಿತು ಎಂದು ಪ್ರಶಂಸಿದರು. ಯುವಜನ ಪ್ರಶಸ್ತಿ ಪಡೆದ ೩೦ ಮಂದಿಯನ್ನು ತಮ್ಮ ಸರ್ಕಾರದ ಅತಿಥಿಗಳಾಗಿ ಕಾಶ್ಮೀರಕ್ಕೆ ಬರುವಂತೆ ಆಹ್ವಾನಿಸಿ ಹೃದಯ ಶ್ರೀಮಂತಿಕೆ ಮೆರೆದರು.ಸಮಾರಂಭದ ಅಧ್ಯಕ್ಷತೆಯನ್ನು ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ವಹಿಸಿದ್ದರು.

ಭಾರತ ಸರಕಾರದ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಖಾತೆ ಕಾರ್ಯದರ್ಶಿ ಸಿಂಧುಶ್ರೀ ಕುಲ್ಲಾರ್, ರಾಜ್ಯ ಸರಕಾರದ ಅಪರ ಕಾರ್ಯದರ್ಶಿ ಜೈರಾಜ್ ಮಾತನಾಡಿ, ರಾಷ್ಟ್ರೀಯ ಯುವಜನೋತ್ಸವದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.ರಾಜ್ಯ ಸರಕಾರದ ಯುವಜನ ಸೇವಾ ಮತ್ತು ಕ್ರೀಡಾ ಖಾತೆ ಪ್ರಧಾನ ಕಾರ್ಯದರ್ಶಿ ಐ.ಆರ್. ಪೆರುಮಾಳ್ ಅವರಂತೂ ಸಂತಸವನ್ನು ತಡೆಯಗಾದಷ್ಟು ಖುಷಿಯಲ್ಲಿದ್ದು ಮಂಗಳೂರಿಗರನ್ನು ಹೊಗಳಿ ಧನ್ಯತೆ ಮೆರೆದರು.

ಹಿಂದೆ ಆಗಿಲ್ಲ ಮುಂದೆ ಇಂಥ ಯುವಜನೋತ್ಸವ ಆಗಲಿ ಎನ್ನುವ ಹಾರೈಕೆಯೊಂದಿಗೆ ದೇಶದ ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದ ಸುಮಾರು ಆರು ಸಾವಿರ ಯುವಜನರು ಸುಂದರ ನೆನಪುಗಳನ್ನು ಹೊತ್ತು ತವರಿಗೆ ನಿರ್ಗಮಿಸಿದರು. ಈ ಮೂಲಕ ಮಂಗಳೂರು ಧನ್ಯತೆಯಲ್ಲಿ ಮೈಮರೆಯಿತು. ಈ ಯುವಜನೋತ್ಸವವನ್ನು ನಡೆಸುವ ಹೊಣೆ ಹೊತ್ತಿದ್ದ ಕರ್ನಾಟಕ ಸರ್ಕಾರ ದೇಶದ ಯುವಜನರ ಮುಕ್ತ ಪ್ರಶಂಸೆಗೆ ಪಾತ್ರವಾಯಿತು.