ಪೂಜ್ಯ ಸ್ವಾಮಿ ಸಿದ್ಧೇಶ್ವರಾನಂದರು, ಶ್ರೀ ಮಹಾಪುರುಷಜಿಯವರ ಪದತಲದಲ್ಲಿ ಕುಳಿತು ಅವರ ದೀಕ್ಷಾನುಗ್ರಹಕ್ಕೆ ನಾನು ಪಾತ್ರನಾಗಬೇಕೆಂದು, ಸಲಹೆ ಇತ್ತಾಗ ನಾನು ಹಿಗ್ಗಿನಿಂದಲೆ ಸಮ್ಮತಿಸಿದ್ದೆ. ಆದರೆ ನಾನು ಒಪ್ಪಿದುದಕ್ಕೆ ಮುಖ್ಯ ಕಾರಣ ಅಥವಾ ಪ್ರೇರಣ ಎಷ್ಟರಮಟ್ಟಿಗೆ ಆಧ್ಯಾತ್ಮಿಕವಾಗಿತ್ತೊ ನಾನು ಹೇಳಲಾರೆ. ನಾನು ಒಪ್ಪಿದುದು, ಮುಖ್ಯವಾಗಿ, ಆ ಸಲಹೆ ಗೋಪಾಲ ಮಹಾರಾಜರಿಂದ ಬಂದುದರಿಂದಲೆ; ಎರಡನೆಯದಾಗಿ, ದೇಶ ಸಂಚಾರದ ಹೊಸ ಹೊಸ ಆನುಭವಗಳನ್ನು ಪಡೆಯುವ ಆಭಿಲಾಷೆಯಿಂದಲೂ ಇರಬಹುದು.

ಗೋಪಾಲ ಮಹಾರಾಜರು (ನಾವು ಸ್ವಾಮಿ ಸಿದ್ಧೇಶ್ವರಾನಂದರನ್ನು ಆ ಅಕ್ಕರೆಯ ಹೆಸರಿನಿಂದಲೆ ಕರೆಯುತ್ತಿದ್ದುದು ರೂಢಿ.) ನನ್ನನ್ನು ರಕ್ಷಿಸಿ, ನನ್ನ ಬದುಕನ್ನು ಕತ್ತಲೆಯಿಂದ ಬೆಳಕಿಗೆ ತಂದ ದಿವ್ಯವ್ಯಕ್ತಿಯಾಗಿದ್ದುದರಿಂದ ಅವರ ಯಾವ ಸಲಹೆಯನ್ನಾಗಲಿ ನಾನು ತಿರಸ್ಕರಿಸುತ್ತಿರಲಿಲ್ಲ. ಇನ್ನು ಶ್ರೀ ರಾಮಕೃಷ್ಣಪರಮಹಂಸರ ಅಂತರಂಗ ಶಿಷ್ಯರಲ್ಲೊಬ್ಬರಾಗಿ, ಸಾಕ್ಷಾತ್ಕಾರದ ಶಿಖರವೇರಿ, ಆಧ್ಯಾತ್ಮಿಕ ವಿಭೂತಿ ಪುರುಷರಾಗಿ, ಶ್ರೀ ರಾಮಕೃಷ್ಣ ಮಿಶನ್ನಿನ ಸರ್ವೋಚ್ಚ ಅಧ್ಯಕ್ಷರಾಗಿದ್ದ ಮಹಾಪುರುಷ ಸ್ವಾಮಿ ಶಿವಾನಂದರಿಂದ, ನನ್ನ ಜೀವನ ಸಮಾಸ್ತವನ್ನೂ ಅಲ್ಪತ್ವದಿಂದ ಮೇಲಕ್ಕೆತ್ತಿ, ನನ್ನಾತ್ಮವನ್ನು ಭೂಮತ್ವದಲ್ಲಿ ಸಂಸ್ಥಾಪಿಸುವ ಸಂಸ್ಕಾರವೊಂದಕ್ಕೆ ನನ್ನನ್ನು ಪಾತ್ರನಾಗುವಂತೆ ಮಾಡುತ್ತೇನೆ ಎಂದು ಅವರು ತಮ್ಮ ಅಹೈತುಕೀ ಪ್ರೀತಿಯಿಂದ ಆಶ್ವಾಸನವಿತ್ತರೆ, ಅದಕ್ಕೆ ಎಂದಾದರೂ ಒಲ್ಲೆ ಎನ್ನುವುದು ಸಾಧ್ಯವೆ?

ಆದರೆ ಆಗ ನನ್ನ ಚೇತನ ಆ ದಿವ್ಯಸಂಪತ್ತಿಗೆ ಸಿದ್ಧವಾಗಿತ್ತೇ? ಅದನ್ನು ಬುದ್ಧಿಪೂರ್ವಕವಾಗಿಯಾದರೂ ಅಪೇಕ್ಷಿಸಿತ್ತೇ? ಎಂದು ಯಾರದರೂ ಕೇಳಿದರೆ, ನಾನು ಧೈರ್ಯವಾಗಿ, ನಿರ್ನಿಷೇಧಾರ್ಥಕವಾಗಿ ಉತ್ತರಿಸಲಾರೆ. ನನ್ನ ಬದುಕಿನಲ್ಲಿ ನನಗೆ ಒದಗಿರುವ ಯಾವ ಪ್ರೇಯಸ್ಸಾಗಲಿ ಶ್ರೇಯಸ್ಸಾಗಲಿ ನನ್ನ ಪ್ರಯತ್ನದಿಂದ ಬಂದಂತೆ  ನನಗೆ ಎಂದೂ ಭಾಸವಾಗಿಲ್ಲ. ಯಾವುದೋ ನನಗರಿಯದ ಮಹಾಕೃಪೆ ನನ್ನ ಅರ್ಹತೆಯನ್ನೂ ಅಭೀಪ್ಸೆಯನ್ನೂ ಗಮನಿಸದೆ, ಕೆಲವೊಮ್ಮೆ ನನ್ನ ಅಹಂಕಾರದ ಇಷ್ಟಕ್ಕೆ ಇದಿರಾಗಿಯೆ, ನನ್ನನ್ನು ಮಂಗಳದ ಕಡೆಗೆ ಎಳೆದೊಯ್ದಿದೆ; ಮತ್ತು ಇಂದಿಗೂ ಎಳೆದೊಯ್ಯುತ್ತಿದೆ. ಆ ಮಹಾಕೃಪೆಯೆ ಸ್ವಾಮಿ ಸಿದ್ಧೇಶ್ವರಾನಂದರ ರೂಪದಲ್ಲಿ ನನ್ನನ್ನು ಪರಮಪೂಜ್ಯ ಸ್ವಾಮಿ ಶಿವಾನಂದರ ಪಾದಾರವಿಂದದೆಡೆಗೆ ಕರೆದೊಯ್ದಿತು!

೧೯೨೯ನೆಯ ಅಕ್ಟೋಬರ್ ತಿಂಗಳು ಮೂರನೆಯ ತೇದಿ ಗುರುವಾರ ಅಪರಾಹ್ನ ಎರಡೂವರೆ ಘಂಟೆಗೆ ನಾನು ಮತ್ತು ನನ್ನ ಒಬ್ಬ ಮಿತ್ರರು ಸ್ವಾಮಿ ಸಿದ್ಧೇಶ್ವರಾನಂದ ರೊಡನೆ ಮೈಸೂರು ಶ್ರೀರಾಮಕೃಷ್ಣಾಶ್ರಮದಿಂದ ಹೊರಟು ರೈಲುನಿಲ್ದಾಣಕ್ಕೆ ಬಂದು ಬೆಂಗಳೂರಿಗೆ ಹೊರಟುನಿಂತಿದ್ದ ರೈಲುಬಂಡಿಗೆ ಹತ್ತಿದಾಗ, ನನ್ನ ಜೀವಮಾನವನ್ನೆ ಸಂಪೂರ್ಣವಾಗಿ ಪರಿವರ್ತಿಸಲಿರುವ ಎಂತಹ ಮಹದ್ ಘಟನೆಯ ಸಂಭವಕ್ಕಾಗಿ ನಾನು ಪ್ರಯಾಣಮಾಡುತ್ತಿದ್ದೇನೆ ಎಂಬುದರ ಅರುವು ನನಗಿರಲಿಲ್ಲ. ಸಹ್ಯಾದ್ರಿಯ ಅರಣ್ಯಮಧ್ಯೆಯ ಕುಗ್ರಾಮವೊಂದರಿಂದ ಮೈಸೂರು ನಗರಕ್ಕೆ ವಿದ್ಯಾರ್ಥಿಯಾಗಿ ಬಂದ ನನಗೆ ಅಕಸ್ಮಾತ್ತಾಗಿ ಸಾರ್ವಜನಿಕ ಗ್ರಂಥಾಲಯದಲ್ಲಿ ದೊರೆತ ಶ್ರೀರಾಮಕೃಷ್ಣ – ವಿವೇಕಾನಂದ ಸಾಹಿತ್ಯಪರಿಚಯದಿಂದಾಗಿ ಆ ಮಹದ್ ವ್ಯಕ್ತಿಗಳ ವೈದ್ಯುತಿಕ ಪ್ರಭಾವಕ್ಕೆ  ವಶನಾಗಿ ಅಧ್ಯಾತ್ಮ ಪರವಾದ ಮನೋಧರ್ಮವನ್ನು ಪಡೆದಿದ್ದೆನಾದರೂ ಯಾವನಾದರೊಬ್ಬ ಗುರುವಿನಿಂದ ಮಂತ್ರದೀಕ್ಷೆ ತೆಗೆದುಕೊಳ್ಳುವಂತಹ ಸಂಪ್ರದಾಯಮಾರ್ಗದ ವಿಚಾರದಲ್ಲಿ ನಾನು, ನಿರಾಸಕ್ತನಾಗಿದ್ದೆ ಮಾತ್ರವಲ್ಲ, ಸ್ವಲ್ಪಮಟ್ಟಿಗೆ ತಿರಸ್ಕಾರಿಯೂ ಆಗಿದ್ದೆ. ವಿಶೇಷವಾಗಿ ಅದ್ವ್ಯೆತಪರವಾದ ಜ್ಞಾನಮಾರ್ಗವನ್ನೆ ಬೋಧಿಸುವಂತಿದ್ದ ಸ್ವಾಮಿ ವಿವೇಕಾನಂದರ ಉಪನ್ಯಾಸಗಳಿಂದ ಪ್ರಭಾವಿತವಾಗಿದ್ದ ನನ್ನ ಮನಸ್ಸು ಮಂತ್ರ ದೀಕ್ಷಾದಿ ಜಪಮಣಿಯ ಸಾಂಪ್ರದಾಯಕ ಆಚಾರಕ್ಕೆ ವಿಮುಖವಾಗಿತ್ತು. ಆದ್ದರಿಂದ ದೀಕ್ಷೆಯ ವಿಚಾರದಲ್ಲಿ ನನ್ನ ಹೃದಯದಲ್ಲಿ ಅಂತಹ ಹೇಳಿಕೊಳ್ಳುವ ಭಾವ ಸಂಚಾರವೇನೂ ಇರಲಿಲ್ಲ. ದೀಕ್ಷೆಕೊಡಲಿರುವ ಗುರುವಿನ ಹಿರಿಮೆಯೂ ಆಗ ನನಗೆ ದೂರ ದಿಗಂತ ವಿಷಯವಾಗಿಯೆ ಇತ್ತು. ಆ ದೂರದ ದಿವ್ಯ ಗುರುವಿನೆಡೆಗೆ ನನ್ನನ್ನೊಯ್ಯುತ್ತಿದ್ದ ಈ ಹತ್ತಿರದ ಗುರುವಿನ ಪ್ರೀತಿ ವಿಶ್ವಾಸಗಳೆ ನನಗೆ ಅಧಾರಭೂತ ಪ್ರಧಾನ ಭರವಸೆಯಾಗಿತ್ತು. ಸ್ವಾಮಿ ಸಿದ್ಧೇಶ್ವರಾನಂದರು ನನ್ನ ಬದಿಕಿನ ಹಾದಿಯಲ್ಲಿ ನನಗೆ ಸಂಧಿಸದೆ ಇದ್ದಿದ್ದರೆ ಅದರ ದಿಕ್ಕೆ ಬೇರೆಯಾಗಿರುತ್ತಿತ್ತೇನೋ?

ನಾವು ನಿಲ್ದಾಣಕ್ಕೆ ಬಂದಾಗಲೆ ಮಳೆ ಹೊಯ್ಯುತೊಡಗಿತ್ತು. ಬರಬರುತ್ತಾ ಚಂಡಮಾರುತವೂ ಎದ್ದಿತು. ಬಿರುಮಳೆ ಮತ್ತೂ ಜೋರಾಗಿ ಬೀಳತೊಡಗಿ ಬಹಳ ಹೊತ್ತಿನ ಮೇಲೆ ನಿಂತಿತು. ನಮ್ಮ ಪಯಣಕ್ಕೆ ಶುಭಕೋರಿ ಆಕಾಶವೆ ಆಶಿರ್ವದಿಸಿದಂತಿತ್ತು, ಆ ಮಳೆ ಹೊಯ್ದುದ್ದು, ಆಶ್ವೀಜಮಾಸದ ಸಸ್ಯಶಾಲಿನಿ ಪುಥ್ವೀಮಾತೆ ನಮ್ಮನ್ನು , ನಾವು ಪಯಣ ಹೊರಟಿದ್ದ ಮಂಗಳಕಾರ್ಯಕ್ಕಾಗಿ ನಗೆಗೂಡಿ ನೋಡಿ ಹರಸುವಂತಿತ್ತು. ಅಷ್ಟಲ್ಲದೆ ಏನು? ಕಲ್ಕತ್ತಾಭಿಮುಖವಾಗಿ ಹೊರಟಿದ್ದ ನಾವು ವಿಶಾಲ ವಿಶ್ವದಲ್ಲಿ ನಗಣ್ಯರಾದ ಯಃಕಶ್ಚಿತ ವ್ಯಕ್ತಿಗಳಾಗಿದ್ದರೂ ದಕ್ಷಿಣೇಶ್ವರ ದೇವಮಾನವನ ಶಿಷ್ಯೋತ್ತಮನ ಸನ್ನಿಧಿಗೆ ದೀಕ್ಷಾರ್ಥಿಗಳಾಗಿಹೊರಟಿದ್ದ ನಮ್ಮ ಉದ್ದೇಶ್ಯವು ಭೂಮಿ ಸಂಬಂಧಿಯಾಗಿದ್ದುದರಿಂದ ವಿಶ್ವಮಾತೆಯ ಸುವಿಶೇಷ ಗಮನಕ್ಕೆ  ಅದು ಬಂದಿದ್ದರೆ ಆಶ್ಚರ್ಯಪಡಬೇಕಾಗಿಲ್ಲವಲ್ಲವೇ!

ನಾವು ಬೆಂಗಳೂರಿನ ನಿಲ್ದಾಣವನ್ನು ತಲುಪಿದಗ ಚೆನ್ನಾಗಿ ಕತ್ತಲೆಯಾಗಿತ್ತು. ಮದರಾಸಿಗೆ ಹೊರಡುವ ರಾತ್ರಿಯ ರೈಲಿಗೆ ನಮ್ಮ ಸಾಮನುಗಳನ್ನೆಲ್ಲ ಬದಲಾಯಿಸಿದೆವು. ಅಷ್ಟರಲ್ಲಿ ಬೆಂಗಳೂರಿನ ಶ್ರೀರಾಮಕೃಷ್ಣಾಶ್ರಮದಿಂದ ನಮ್ಮನ್ನು ಅಭಿನಂದಿಸಿ ಬೀಳುಕೊಳ್ಳಲು ಬಂದಿದ್ದರು, ಸ್ವಾಮಿ ಸಂವಿದಾನಂದರು, ಎಳೆಯತಂಬಿ, ಮತ್ತು ಇತರ ಆಶ್ರಮದ ಭಕ್ತರು. ‘ಕವಿಗಾಗಿ ಈ ಹೂವು ತಂದಿದ್ದೇನೆ!’ ಎಂದು ಕೊಟ್ಟು ಸ್ವಾಗತಾಶೀರ್ವಾದವಿತ್ತರು ಸ್ವಾಮಿ ಸಂವಿದಾನಂದರು. ಅವರೆಲ್ಲರ ಮಾತುಕತೆ, ಸಂತೋಷ ಭಂಗಿ, ಸ್ವಾಗತೋತ್ಸಾಹ, ಅಭಿನಂದನಾ ಠೀವಿ ಇವು ಒಂದೊಂದು ನನ್ನ  ಮನಸ್ಸಿಗೆ ನಾವು ಹೊಗುತ್ತಿದ್ದ ಕಾರ್ಯದ ಹಿರಿಮೆಯನ್ನೂ ಶ್ಲಾಘ್ಯತೆಯನ್ನೂ ತಂದುಕೊಟ್ಟು, ನನ್ನ ಪುಣ್ಯಶಾಲಿತ್ವವನ್ನೂ ನನಗೆ ಸಂಭವಿಸಲಿದ್ದ ಮಹಾಶ್ರೇಯಸ್ಸಿನ ಲೋಕೋತ್ತರತೆ ಯನ್ನೂ ಹೃದಯಕ್ಕೆ ಘೋಷಿಸಿ ತಿವಿದು ಹೇಳುವಂತಿತ್ತು.

ಮದರಾಸಿಗೆ ಹೊರಟಿದ್ದ ನನ್ನ ಪರಿಚಯದ ಹಿರಿಯ ಪ್ರಾಧ್ಯಾಪಕರೊಬ್ಬರು ನಾವು ಕೂತಿದ್ದ ಗಾಡಿಗೇ ಹತ್ತಿದರು ನಾನು ಬೇಲೂರು ಮಠಕ್ಕೆ ಹೋಗುತ್ತಿದ್ದೇನೆ. ಎಂಬುದನ್ನುಕೇಳಿ ಅಭಿನಂದಿಸುತ್ತಾ ಹೇಳಿದರು: “ಹೌದಪ್ಪಾ, ಈಗಲೇ ಹೋಗಬೇಕು. ಮುಂದೆ ಸಂಸಾರದ ತಾಪತ್ರಯಗಳು ಬಂದುಬಿಟ್ಟ್ರೆ ತುಂಬಾ ತೊಂದರೆಯಾಗುತ್ತೆ. ನನಗೂ ಆಧ್ಯಾತ್ಮಿಕ ಪಿಪಾಸೆ ಇತ್ತು. ಆದರೆ ನಿಮಗೆ ಈಗ ದೊರೆಯುತ್ತಿರುವಂತೆ ನನಗೆ ಆಗ ಅವಕಾಶ ಸಿಕ್ಕಲಿಲ್ಲ. ತಾರುಣ್ಯದಲ್ಲಿಯೆ ರಕ್ಷಿತವಾಗದಿದ್ದ ಆಧ್ಯಾತ್ಮಿಕತೆ ತರುವಾಯ ಲೌಕಿಕ ಜೀವನದ ಚಪ್ಪಡಿಯಡಿ ಸಿಲುಕಿ ವಿನಷ್ಟವಾಯಿತು. ಅದನ್ನು ನೆನೆದು ಈಗ ನನ್ನ ಮನಸ್ಸು ವಿಷಾದಿಸುತ್ತದೆ. ಆದರೇನು ಮಾಡುವುದು?………. ಸಿದ್ಧ ಗುರುವರ್ಯರ ಅನುಗ್ರಹಕ್ಕೆ ಪಾತ್ರವಾಗುವ ನೀವೇ ಧನ್ನ್ಯರು.”

ರೈಲುಹೊರಡುವ ಸಿಳ್ಳು ಕೇಳಿಸಿದಾಗ ವಯಸ್ಸಿನಲ್ಲಿ ತುಂಬಾ ಮುಂದಿದ್ದು ಮುದುಕರಾಗಿದ್ದ ಎಳೆಯತಂಬಿ ಸ್ವಾಮಿ ಸಿದ್ಧೇಶ್ವರಾನಂದರಿಗೆ ಕಾಲುಮುಟ್ಟಿ ನಮಸ್ಕರಿಸಲು ಪ್ರಯತ್ನಿಸಿದರು. ಆದರೆ ಸ್ವಾಮಿಜಿ ಬಿಡಲಿಲ್ಲ. ಆಗ ಎಳೆಯತಂಬಿ “ಈ ನಮಸ್ಕಾರಗಳು ನಿಮಗಲ್ಲ, ಮಹಾಪುರುಷ ಮಹಾರಾಜರಿಗೆ ಮತ್ತು ಸ್ವಾಮಿ ಶರ್ವಾನಂದರಿಗೆ!” ಎಂದು ಕಾಲಿಗೆ ಅಡ್ಡಬಿದ್ದೇಬಿಟ್ಟರು. ನಾನು ಸ್ವಾಮಿ ಸಂವಿದಾನಂದರಿಗೆ ಕಾಲುಮುಟ್ಟಿ ನಮಸ್ಕರಿಸಿದೆ. ಅವರೆಂದರು “ಇದು ರೈಲಪ್ಪಾ, ಹೀಗೆಲ್ಲ ಮಾಡಿದರೆ ಜನರೇನು ಅಂದುಕೊಂಡಾರು?”

ಮರುದಿನ ಬೆಳ್ಳಿಗ್ಗೆ ಮದರಾಸಿನಲ್ಲಿ ರೈಲಿನಿಂದಿಳಿದು ಮೈಲಾಪುರದಲ್ಲಿರುವ ಶ್ರೀ ರಾಮಕೃಷ್ಣಾಶ್ರಮಕ್ಕೆ ಹೋದೆವು. ಮೊದಲು ದೇವರ ಮನೆಗೆ ಹೋಗಿ ಶ್ರೀ ಗುರುಮಹಾರಾಜರಿಗೆ ಪ್ರಣಾಮ ಸಲ್ಲಿಸಿದೆವು. ಶುಚಿಯಾಗಿ, ನಿಶ್ಯಬ್ದವಾಗಿ, ಜನ ಸಂದಣಿಯ ಪಟ್ಟಣದಲ್ಲಿದ್ದರೂ ಶಾಂತಿದಾಯಕಾವಾಗಿ ಪವಿತ್ರವಾಗಿತ್ತು ಆಶ್ರಮದ ಸಾನ್ನಿಧ್ಯ. ನಾನು ಮದರಾಸಿಗೆ ಬರುತ್ತಿದ್ದುದು ಅದೇ ಮೊದಲ ಸಲವಾಗಿದ್ದರೂ ಎಷ್ಟೋ ಕಾಲದಿಂದ ಚಿರಪರಿಚಿತವಾಗಿದ್ದ ನನ್ನ ಸ್ವಂತ ನೆಲೆಗೇ ಬಂದಂತಿತ್ತು. ಮೈಸೂರಾದರೇನು? ಬೆಂಗಳೂರಾದರೇನು? ಮದರಾಸಾದರೇನೆ? ಶ್ರೀ ರಾಮಕೃಷ್ಣ ಆಶ್ರಮಕ್ಕೆ ಸೇರಿದ ಸನ್ಯಾಸಿಗಳ ಸಂಗದಿಂದ ಪೂತವಾಗಿದ್ದ ಎಲ್ಲಸ್ಥಾನಗಳೂ ನನ್ನ ಸ್ವಂತದ ತವರು ನೆಲೆ ಗಳೆಂಬುದು ದಿನ ದಿನಕ್ಕೂ ಹೆಚ್ಚು ಹೆಚ್ಚಾಗಿ ಅನುಭವಕ್ಕೆ ಬರುತ್ತಿತ್ತು.

ಎಂತಹ ಸ್ನೇಹ? ಎಷ್ಟು ವಾತ್ಸಲ್ಯ? ಏನು ಆದರ? ನಾನು ಅವರೆಲ್ಲರಿಗೂ ಸೇರಿದವನು ಎಂಬ ಅದೆಂತಹ ಅಭಿಮಾನ, ವಿಶ್ವಾಸ? ಸನ್ಯಾಸಿಗಳು, ಬ್ರಹ್ಮಚಾರಿಗಳು, ಈಶ್ವರಾನಂದರು, ಅಸಂಗನಂದರು, ಗಣೇಶ ಮಹಾರಾಜ್, ಇಂದು ಮಹಾರಾಜ್, ಪುರುಷೋತ್ತಮ ಮಹಾರಾಜ್, – ಒಬ್ಬರೆ? ಇಬ್ಬರೆ? ಎಲ್ಲರೂ ನನಗೆ ತೋರಿದ ಪ್ರೀತಿಯಿಂದ ನಾನು ಸೋತುಹೋದೆ. ಬಹುಕಾಲದ ಮೇಲೆ ಮನೆಗೆ ಮರಳಿದ ಮಗಳಿಗೆ ತಾಯಿ ತೋರಬಹುದಾದ ಅಕ್ಕರೆಗೂ ಮಿರಿತ್ತು ಅದು ಆ ಪ್ರೀತಿಯಲ್ಲಿ ನನ್ನ ಚೇತನ ಅದ್ದಿ ಆರ್ದ್ರವಾಗಿಹೋದಂತಿತ್ತು, ಮುಂದೆ ಮಹಾಪುರುಷಜಿಯ ಸಾನ್ನಿಧ್ಯದಲ್ಲಿ ನಾನು ಅನುಭವಿಸಲಿದ್ದ ಅಪಾರ ದೈವೀಪ್ರೇಮಕ್ಕೆ ಮುನ್‌ಸೂಚಕವಾದ  ಒಂದು ತರಂಗಾಸ್ಫಾಲನೆಯೋ ಎಂಬಂತೆ!

ಮದರಾಸಿನಲ್ಲಿ ನಾವು ಎರಡು ಹಗಲು ಒಂದು ರಾತ್ರಿ ತಂಗಿದ್ದೆವು. ಪ್ರೇಕ್ಷಣೀಯವಾದ ಮನುಷ್ಯ ಕೃತ ಸ್ಥಾನಗಳನ್ನೂ ನಿಸರ್ಗ ಸ್ಥಾನಗಳನ್ನೂ ನೋಡಿದೆವು. ಅವುಗಳಲ್ಲೆಲ್ಲ ಚಿರಸ್ಮರಣೀಯಾಗಿರುವುದೆಂದರೆ – ಸಮುದ್ರದರ್ಶನ! – ಪ್ರಪ್ರಥದ ಸಮುದ್ರ ದರ್ಶನ! ಕವಿಯಾದ ನನಗೆ ಅದೊಂದು ಮಹನೀಯ ಭಗವದನುಭವವಾಗಿತ್ತು. ನಾನು ಯಾವ ಮಹಾಗುರುವಿನ ಬಳಿಗೆ ಮಂತ್ರದೀಕ್ಷಾರ್ಥಿಯಾಗಿ ಹೋಗುತ್ತಿದ್ದೆನೋ ಆ ದಿವ್ಯಗುರುವಿನ ಮತ್ತೊಂದು ನೈಸರ್ಗಿಕ ರೂಪವೇ ನನ್ನೆದುರು ಮೈದೋರಿ ನನ್ನನ್ನು ಅನಂತತೆಗೆತ್ತಿ ಅಪಾರಕ್ಕೆ ಬೀಸಿದಂತಾಗಿತ್ತು, ತೀರದಲಿ ನಿಂತು ವೀಕ್ಷಿಸುತ್ತಿದ್ದ ನನ್ನ ಚೇತನಕ್ಕೆ: ಅಚಂಚಲ ಆಕಾಶದ ಅನಂತತೆ, ಸುಚಂಚಲ ಸಾಗರದ ಅಪಾರತೆ ಮತ್ತು ಸಿಸ್ಥಿರಾ ಭೂಗೋಲದ ಅಸೀಮ ಸುವಿಶಾಲತೆ: – ಅನೇಕ ಭವ್ಯತಾ ವಿಭೂತಿ ಸಂಗಮ ಸ್ಥಾನವಲ್ಲವೆ ಸಮುದ್ರವೇಲೆ?

ಹೊರಡುವ ದಿನ ಸಂಜೆ ಮಂದಿರದಲ್ಲಿ ಮಂಗಳಾರತಿಯಾದಮೇಲೆ, ಪ್ರಸಾದ ಸ್ವೀಕಾರಮಾಡಿ, ಆಶ್ರಮವಾಸಿಗಳಿಗೆ ನಮಸ್ಕರಿಸಿ ರೈಲು ನಿಲ್ದಾಣಕ್ಕೆ ಹೊರಟಾಗ, ಅಂದು ಮದರಾಸು ಆಶ್ರಮದ ಅಧ್ಯಕ್ಷರಾಗಿದ್ದ ಪೂಜ್ಯಪಾದ ಶ್ರೀ ಯತೀಶ್ವರಾನಂದ ಸ್ವಾಮಿಗಳು ನಮ್ಮನ್ನು ಆಶಿರ್ವದಿಸಿ “ಗುರುಮಹಾರಾಜರು ನಿಮಗೆ ಕೃಪೆಮಾಡಲಿ! ಮಹಾಪುರುಷಜಿಯವರ ಅನುಗ್ರಹ ನಿಮಗೆ ದೊರೆಯಲಿ!” ಎಂದು ಹೃದಯತುಂಬಿ ಹಾರೈಸಿದರು.

ಮತ್ತೆ ಮುಂದಿನ ಎರಡು ದಿನಗಳು ಕಲ್ಕತ್ತಾಭಿಮುಖವಾಗಿ ಚಲಿಸುತ್ತಿದ್ದ ರೈಲುಬಂಡಿಯೆ ನಮ್ಮ ಪ್ರಪಂಚವಾಗಿತ್ತು.

ಮರುದಿನ ಪ್ರಾತಃಕಾಲದಲ್ಲಿ ರೈಲಿನ ಕಿಟಕಿಯಿಂದ ಹೊರಗೆ ನೋಡಿದಾಗ ಎಂತಹ ಸುಮನೋಹರ ದೃಶ್ಯ ಕಂಗೊಳಿಸುತ್ತಿತ್ತು. ಶಾಲಿವನ ರೂಪಿಣಿಯಾದ ಭಗವತಿಯ ನಿಸರ್ಗಲೀಲಾ ಶರೀರವು ಚೇತೋಹಾರಿಯಾಗಿ ಶೋಭಾಯಮಾನವಾಗಿತ್ತು! ರೈಲು ರಸ್ತೆಯ ಇಕ್ಕೆಲದಲ್ಲಿ ಹಸುರಿನ ನಿಸ್ತರಂಗಸಾಗರ ಸೀಮೆಯೆ ನಿರ್ದಿಗಂತವಾಗಿ ಹಸರಿಸಿತ್ತು. ಭರತಖಂಡದ ಪೂರ್ವ ತೀರಪ್ರದೇಶವು ಆಶ್ವೀಜಮಾಸದಲ್ಲಿ ನೂರಾರು ಮೈಲಿ ಹಬ್ಬಿದ  ಹಸುರಿನ ಹಾಸಗೆಯಂತೆ ಅತ್ಯಂತ ಮನಮೋಹಕವಾಗಿರುತ್ತದೆ. ಸ್ವಾಮಿ ಸಿದ್ಧೇಶ್ವರಾ ನಂದರು ದಾರಿಯುದ್ದಕ್ಕೂ ನಮ್ಮನ್ನು ಸಂಧಿಸುತ್ತಿದ್ದ ಐತಿಹಾಸಿಕ ಸ್ಥಳಗಳನ್ನೂ ನದಿಗಳನ್ನೂ ನಗರಗಳನ್ನೂ ಪಟ್ಟಣಗಳನ್ನೂ ಪುಣ್ಯಕ್ಷೇತ್ರಗಳನ್ನೂ ಆಂಧ್ರ ಉತ್ಕಲಾದಿ ವಿಶಿಷ್ಟ ಪ್ರದೇಶಗಳ ಪರಿಚಯವನ್ನೂ ಮಾಡಿಕೊಡುತ್ತಿದ್ದರು. ಜೊತೆಗೆ ವಿವಿಧ ಭಾಷೆಯ, ವಿವಿಧವೇಷದ, ವಿವಿಧ ರರ್ಣದ ಜನರ ಚಿತ್ರವಿಚಿತ್ರ ಪರಿಚಯವೂ ನಮಗೆ ವಿನೋದಕರವಾಗಿತ್ತು!

ಹೌರಾ ರೈಲುನಿಲ್ದಾಣದಲ್ಲಿ ಗಾಡಿ ನಿಂತಿತು. ಗಂತವ್ಯ ಇನ್ನೇನು ದೊರೆತುಬಿಡುತ್ತದೆ. ಎಂಬ ಸಂಭ್ರಮೋಲ್ಲಾಸದಿಂದ ಮನಸ್ಸು ಉತ್ಸಾಹಿತವಾಯಿತು. ಇದುವರೆಗೆ ಗಂಗಾ, ದಕ್ಷಿಣೇಶ್ವರ, ಬೇಲೂರು ಎಲ್ಲವೂ ಪುಸ್ತಕಗಳಲ್ಲಿ ಓದಿದ ವಿಷಯಗಳಾಗಿದ್ದುವು; ಈಗ  ಕಣ್ಣಿಗೇ ಗೋಚರವಾಗಿಬಿಡುತ್ತವೆ! ಆ ಒಂದೊಂದು ಹೆಸರಿನ ಹಿಂದೆಯೂ ಸುಪ್ತವಾಗಿದ್ದ  ಭಾವಕೋಶ ಎಚ್ಚತ್ತು ನನ್ನ ಹೃದಯವೆಲ್ಲ ಉಲ್ಲೋಲ ಕಲ್ಲೋಲವಾದ ಭಾವ ಸಮುದ್ರದಂತಾಯಿತು. ಯಾರನ್ನು ಲೋಕವೆಲ್ಲ ಅವತಾರಪುರುಷನೆಂದು ಪೂಜಿಸುವುದೋ ಅಂಥ ಮಹಾವಿಭೂತಿ ಭಗವಾನ್ ಶ್ರೀರಾಮಕೃಷ್ಣ ಪರಮಹಂಸ ಗುರುದೇವನು ಬದುಕಿ ಬಾಳಿ ಪವಿತ್ರಗೈದ ನೆಲಕ್ಕೆ ನಾನು, – ಸಾವಿರಾರು ಮೈಲಿ ದೂರದ ಸಹ್ಯಾದ್ರಿಯ ಅರಣ್ಯದಲ್ಲಿ ಹುಟ್ಟಿ ಬೆಳೆದ ಯಃಕಶ್ಚಿತ ನಾನು, – ಆತನ ಅಡಿಯ ಪುಡಿಯಿಂದ ದಿವೋದಿವ್ಯವಾದ ನೆಲದಮೇಲೆ ಇನ್ನೇನು ಕಾಲಿಡಲಿದ್ದೇನೆ! ನನಸೋ? ಬರಿಯ ಹೊಂಗನಸೋ? ಅಲ್ಲದೆ ಕಾವ್ಯದ ಮೇಲೆ ಕಾವ್ಯದಲ್ಲಿ, ಕವಿಯ ಮೇಲೆ ಕವಿ, ಸಾವಿರಾರು ವರ್ಷಗಳಿಂದ ಬಣ್ಣಿಸುತ್ತ ಬಂದಿರುವ ದೇವಗಂಗಾ ಮಾತೆಯ ಪ್ರಪ್ರಥಮ ದರ್ಶನ ಸ್ಪರ್ಶನಗಳಿಂದ ರಸಪ್ಲಾವಿತನಾಗುವುದರಲ್ಲಿದ್ದೇನೆ! ಜಾಹ್ನವಿ, ಗಂಗಾ, ಭಾಗೀರಥಿ, ಮಂದಾಕಿನಿ ಇತ್ಯಾದಿ ಎಷ್ಟೊಂದು ಹೆಸರುಗಳು ಆ ಪೂಜ್ಯ ವಾಹಿನಿಗೆ!

ನಿಲ್ದಾಣಕ್ಕೆ ಬೇಲೂರು ಮಠದಿಂದ ಶ್ರೀ ರಾಮನಾಥ ಮಹಾರಾಜನ್ ಬಂದಿದ್ದರು, ನಮ್ಮನ್ನು ಕರೆದೊಯ್ಯಲು. ಒಂದು ಟ್ಯಾಕ್ಸಿಯಲ್ಲಿ ಕುಳಿತು ಹೊರಟೆವು. ಹೆದ್ದಾರಿ ಕಿರುದಾರಿಗಳಲ್ಲಿ ಕಾರು ಸಂಚರಿಸುತ್ತಿದ್ದಂತೆ, ‘ಅರಮನೆಗಳ ಪಟ್ಟಣ’ ಎಂದು ನಾವು ಹುಡುಗರಾಗಿದ್ದಾಗ ಭೂವಿವರಣೆಯ ಪಾಠಗಳಲ್ಲಿ ಓದಿದ್ದ ಕಲ್ಕತ್ತಾ ಮಹಾನಗರವೂ ಇತರ ಅಂತಹ  ನಗರಗಳಂತೆಯೆ ಕೊಳಕು ಬೆಳಕು ಎರಡರಿಂದಲೂ ಕೂಡಿರುವುದನ್ನು  ಮನಸ್ಸಿಗೆ ತರುವಂತಿತ್ತು: ಕೆಲವೆಡೆ ಮಳೆಬಿದ್ದು ಕೊರಕಲು ಬೀದಿಗಳಿಂದ ಹಾರುತ್ತಿದ್ದ ಕೆಸರು ನೀರು! ಮತ್ತು ಹಲವು ಅಂತಸ್ತುಗಳ ಸೌಧಗಳ ನಡುನಡುವೆ ಮುದುಗಿ ನಿಂತಿದ್ದ ಮುರುಕು ಮನೆ ಮತ್ತು ಗುಡಿಸಲುಗಳು!ಇದ್ದಕ್ಕಿದ್ದಂತೆ ಉದ್ಘೋಷಿಸಿದರು, ಉಚ್ಚ ಭಾವಮಯ ಕಂಠದಿಂದ, ಹರ್ಷೋನ್ಮಾದವಾದಂತೆ, ಸ್ವಾಮಿಸಿದ್ಧೇಶರಾನಂದಜಿ!

“ಜಯ್ ಗುರುಮಹಾರಾಜ್ ಕೀ ಜಯ್! ನೋಡದೇ ಬೇಲೂರು ಮಠ! ನೋಡದೋ ಸ್ವಾಮಿಜಿಯ (ವಿವೇಕಾನಂದರ ) ಸಮಾಧಿ ಮಂದಿರ! ನೋಡಲ್ಲಿ  ದಕ್ಷಿಣೇಶ್ವರ ದೇವಾಲಯ ! ಜಯ್, ಗುರು ಮಹಾರಾಜ್ ಕೀ ಜಯ್!”

ಮತ್ತೆ ಅದೇ ವಾತ್ಸಲ್ಯದ ಸುಸ್ವಾಗತ, ನಮ್ಮನ್ನು ಎದುರುಗೊಂಡಿತು, ಮನೆಯ ಮಗಳು ತವರಿಗೆ ಮರಳಿ ಬಂದಳೆಂಬಂತೆ!

ಅತಿಥಿಗೃಹಕ್ಕೆ ಹೊಗಿ ನಮ್ಮ ಗಂಟುಮೂಟೆ ಇಟ್ಟು, ಅಲ್ಲಿ ಸ್ವಾಮಿ ಶರ್ವಾನಂದರಿಗೂ ಸ್ವಾಮಿ ಅನಂತಾನಂದರಿಗೂ ನಮಸ್ಕಾರ ಮಾಡಿದೆವು. ತರುವಾಯ ಸ್ನಾಮಾಡಿ ಪ್ರಯಾಣದ ಧೂಳೀ ಧೂಸರತೆಯಿಂದ ಪಾರಾಗಿ ಮಡಿಯಾದೆವು. ಅಲ್ಲಿಂದ ಗೋಪಾಲ ಮಹಾರಾಜರ ನೇತೃತ್ವ ಮತ್ತು ಮಾರ್ಗದರ್ಶನಗಳಲ್ಲಿ ಶ್ರೀ ಮಹಾಮಾತೆಯ, ಸ್ವಾಮಿ ಬ್ರಹ್ಮಾನಂದರ  ಮತ್ತು ವಿವೇಕಾನಂದರ ಸಮಾಧಿ ಮಂದಿರಗಳಿಗೆ ನಡೆದು ದರ್ಶನ ತೆಗೆದುಕೊಂಡೆವು. ಅಲ್ಲಿಂದ ಪರಮ ಪವಿತ್ರ ಸ್ಥಾನವಾದ ಶ್ರೀ ಶ್ರೀ ಗುರುಮಂದಿರಕ್ಕೆ ಹೋಗಿ ಭಕಿಭಾರದಿಂದ ಮಣಿದು ಅಡ್ಡಬಿದ್ದೆವು. ಇಲ್ಲಿಯೆ ಇದೆ ಅಲ್ಲವೆ, ಸ್ವಾಮಿ ವಿವೇಕಾನಂದರು ತಮ್ಮ ತಲೆಯಮೇಲೆ ಹೊತ್ತು ತಂದಿಟ್ಟ ಶ್ರೀ ಗುರುಮಹಾರಾಜರ ಲೌಕಿಕಾವಶೇಷದ ಭಸ್ಮಾಸ್ಥಿ ಮಂಜೂಷೆ ‘ಆತ್ಮಾರಾಮ’? – ಓ ಆ ಭಾವಾನುಭವವನ್ನೆಂತು ಬಣ್ಣಿಸುವುದೀ ತಣ್ಣನೆಯ ನಿರ್ಜಿವ ಲೇಖನಿ? ಕೈಮುಗಿದು  ಮತ್ತೆ ಮತ್ತೆ ಅಡ್ಡಬಿದ್ದು ಧನ್ಯಜೀವರಾದೆವು, ಜನ್ಮಸಾರ್ಥಕವಾಯಿತೆಂದು! ಮಹಾಪುರುಷಜಿ ಆಗ ಇಳಿವಯಸ್ಸಿನ ಕಾರಾಣ ಅಸ್ವಸ್ಥರಾಗಿದ್ದುದರಿಂದ ಅವರ ಮಧ್ಯಾಹ್ನ ವಿಶ್ರಾಂತಿಗೆ ಭಂಗತರಬಾರದೆಂದು ಅವರ ಸಾನ್ನಿಧ್ಯಕೆ ಹೋಗಲಿಲ್ಲ. ಊಟಮಾಡಿ ವಿಶ್ರಾಂತಿ ತೆಗೆದುಕೊಂಡ ತರುವಾಯ  ಅಪರಾಹ್ನ ಅವರ ಅನುಕೂಲ ಸಮಯ ತಿಳಿದು, ದರ್ಶನಕ್ಕೆ ಹೋಗುವುದೆಂದು ನಿಶ್ಚಯಿಸಿಕೊಂಡೆವು.

ಶ್ರೀರಾಮಕೃಷ್ಣ ಪರಮಹಂಸರ ಅಂತರಂಗ ಶಿಷ್ಯರ ವಿಚಾರವಾಗಿ ನಾನು ಅವರ ಜೀವನಚರಿತ್ರೆಯಲಿ ತುಸುಮಟ್ಟಿಗೆ ಓದಿಕೊಂಡಿದ್ದೆ. ಅದರೆ ತರುಣರಾಗಿದ್ದ ನನ್ನಂತಹರ  ಮನಸ್ಸು ಹೃದಯಗಳನ್ನೆಲ್ಲ ಆ ಕಾಲದಲ್ಲಿ ಸಂಪೂರ್ಣವಾಗಿ ಆಕ್ರಮಿಸಿದ್ದವರು ಸ್ವಾಮಿ ವಿವೇಕಾನಂದರೊಬ್ಬರೇ! ಸ್ವಯಂ ಭಗವಾನ್ ಶ್ರೀರಾಮಕೃಷ್ಣರು ಕೂಡ ನಮಗೆ ಸ್ವಾಮಿ ವಿವೇಕಾನಂದರ ಗುರುಗಳಾಗಿಯೆ ಪೂಜ್ಯರಾಗಿದ್ದರು ಎಂದಮೇಲೆ ಇನ್ನು ಇತರ ಅವರ ಶಿಷ್ಯರು ನಮಗೆ ಅಷ್ಟೇನೂ ಮನಸ್ಸನ್ನು ಸೂರೆಗೊಳ್ಳುವಷ್ಟು ಮುಖ್ಯರಾಗಿರಲಿಲ್ಲ.  ಏಕೆಂದರೆ, ತಾರುಣ್ಯವು ಯಾವುದು ಬೆರಗುಗೊಳಿಸುವುದೊ ಅದಕ್ಕೆ ಮಾತ್ರ ಬಹುಬೇಗನೆ  ಮಾರುವೋಗುತ್ತದೆ: ಪ್ರಸಿದ್ಧಿಯನ್ನೆ ಅದು ಸಿದ್ಧಿಗೆ ಲಕ್ಷಣವನ್ನಾಗಿ ಭಾವಿಸುತ್ತದೆ; ಬೆಳ್ಳಗಿರುವುದೆ ಅದಕ್ಕೆ ಹಾಲು; ಹೊಳೆಯುವುದೆ ಅದಕ್ಕೆ ಹೊನ್ನು: ಬಹುಜನರ ಸ್ತುತಿಗೂ ಗೌರವಕ್ಕೂ ಪಾತ್ರನಾಗಿರುವಾತನೆ ಅದಕ್ಕೆ ಆದರ್ಶಪುರುಷ. ಪತ್ರಿಕಾ ಪ್ರಕಟಣೆಯ ಕೀರ್ತಿಯನ್ನೆ ಅಂತಸ್ಸತ್ತ್ವವೆಂದು ಅದು ನಂಬಿಬಿಡುತ್ತದೆ. ಅದಕ್ಕೆ ಆಧ್ಯಾತ್ಮಿಕ ಮೌಲ್ಯದ ಸ್ವರೂಪವನ್ನರಿಯುವ ಶಕ್ತಿ ಇನ್ನೂ ಕಣ್ದೆರೆದಿರುವುದಿಲ್ಲ. ಬಾಹ್ಯ ವೈಭವವನ್ನೆ  ಅಂತರೈಶ್ವರ್ಯಕ್ಕೆ ಸಂಕೇತ ಎಂದು ಅದು ಭ್ರಮಿಸುತ್ತದೆ. ಅದಕ್ಕೆ ಪ್ರಶಾಂತತೆ, ನೀರವತೆ, ವಿವಿಕ್ತತೆ, ನಿರಾಡಂಬರತೆ ಇವುಗಳ ಹಿಂದೆ ಮರೆಯಲ್ಲಿರುವ ನೈಜ ಆಧ್ಮಾತ್ಮಿಕ ವಿಭೂತಿಯನ್ನು ಗುರುತಿಸುವ ಸಾಮರ್ಥ್ಯವೂ ಇರುವುದಿಲ್ಲ, ತಾಳ್ಮೆಯೂ ಇರುವುದಿಲ್ಲ.

ಅಂದಿನ ಲೋಕನಯನಕ್ಕೆ ಸ್ವಾಮಿವಿವೇಕಾನಂದರು ಸಮೀಪದ ಸೂರ್ಯ ಸ್ವಾಮಿ ಶಿವಾನಂದರು ದೂರದ, ಬಹುದೂರದ ನಕ್ಷತ್ರ. ಆದರೆ ಸುಕೃತವಶಾತ್ ನನ್ನ ಭಾಗಕ್ಕೆ, ಸ್ವಾಮಿ ಸಿದ್ಧೇಶ್ವರಾನಂದ ರೂಪದ ದೂರದರ್ಶಕಯಂತ್ರದಿಂದ ಆ ನಕ್ಷತ್ರವನ್ನು ನನ್ನ ದೃಷ್ಟಿಸಾಮಾರ್ಥ್ಯಾವಧಿಯಾಗಿ ವೀಕ್ಷಿಸಿದ್ದ ನನ್ನ ಭಾಗಕ್ಕೆ, ಮತ್ತು ನನ್ನ ಭಾಗ್ಯಕ್ಕೆ, ಸ್ವಾಮಿ ಶಿವಾನಂದರು ಸೂರ್ಯನಂತಲ್ಲದಿದ್ದರೂ ಚಂದ್ರನಷ್ಟಾದರೂ ಗೋಚರವಾಗಿದ್ದರು. ಬಹುಶಃ ಅವರು ಸೂರ್ಯನಂತಗಿದ್ದರೆ ನನ್ನಂತಹರು ಹತ್ತಿರಕ್ಕೆ ಹೋಗಲೂ ಸಾಧ್ಯವಾಗುತ್ತಿರಲಿಲ್ಲವೇನೊ? ಆಲಂಕಾರಿಕವಾಗಿ ಮಾತ್ರವಲ್ಲದೆ ನಿಜವಾಗಿಯೂ ಅವರು ಚಂದ್ರನಂತೆಯೆ ಸೌಮ್ಯರಾಗಿ, ಪ್ರಶಾಂತರಾಗಿ, ಸುಖಶೀತಲರಾಗಿದ್ದುದು ನನ್ನ ಪುಣ್ಯವೆಂದೇ ಭಾವಿಸುತ್ತೇನೆ.

ಅಪರಾಹ್ನ ಮೂರು ಘಂಟೆಯಾದ ಮೇಲೆ ಪೂಜ್ಯಪಾದ ಶ್ರೀಮತ್ ಸ್ವಾಮಿ ಶಿವಾನಂದ ಮಹಾರಾಜರ ದರ್ಶನಕ್ಕಾಗಿ ನಾವು ಮೂವರೂ ಹೊರಟೆವು – ಸ್ವಾಮಿ ಸಿದ್ಧೇಶ್ವರಾನಂದರು, ಮಾನಪ್ಪ ಮತ್ತು ನಾನು.

ಸಂತೋಷ ಮತ್ತು ಭಯಭಕ್ತಿ ಸಂಮಿಶ್ರವಾದ ಏನೋ ಒಂದು ಅನಿರ್ವಚನೀಯ ಭಾವಕ್ಷೋಭೆ ನನ್ನ ಹೃದಯದಲಿ ಸಂಚಾರಿಯಾಗಿತ್ತು. ಸ್ವಾಮಿ ಸಿದ್ಧೇಶ್ವರಾನಂದರು ನಾವು ಹೇಗೆ ಹೇಗೆ ವರ್ತಿಸಬೇಕೆಂಬ ವಿಚಾರವಾಗಿ ನಮಗೆ ಸಲಹೆ ಕೊಡುತ್ತಿದ್ದರು. ಮೆಟ್ಟಲು ಹತ್ತಿ ಮಹಡಿಗೆ ಹೋದವು. ಗಂಭೀರ ಧ್ಯಾನಮಯ ನಿಶ್ಯಬ್ದತೆಯ ವಲಯವನ್ನು ನಾವು ಪ್ರವೇಶಿಸಿದ್ದೆವು. ಇನ್ನೇನು ಗೋಚರವಾಗಲಿರುವ ರಹಸ್ಯಪೂರ್ಣ ದೃಶ್ಯವೊಂದಕ್ಕಾಗಿ ನನ್ನ ಸಮಸ್ತ ಚೇತನವೂ ಕಾತರ ಕುತೂಹಲಿಯಾಯಿತು. ಸ್ವಾಮಿ ಸಿದ್ಧೇಶ್ವರಾನಂದರ ಹಿಂದೆಹಿಂದೆಯೆ ಮಹಾಪುರುಷಜಿಯ ಕೊಠಡಿಯನ್ನು ಪ್ರವೇಶಿಸಿದೆ.

ನಿರೀಕ್ಷಿಸಿದಂತೆ ಅಲ್ಲಿ ಯಾವ ಅದ್ಭುತವೂ ನಮ್ಮನ್ನು ಚಕಿತಗೊಳಿಸಲು ಕಾದಿರಲಿಲ್ಲ ; ಡಂಗುಬಡಿಸುವ ಯಾವ ರಾಜಕೀಯತೆಯೂ ಅಲ್ಲಿ ಕಾಣಲಿಲ್ಲ. ಬಾಹ್ಯವೈಭವದ ಚಿಹ್ನೆ ಯಾವುದೂ ಅಲ್ಲಿ ಲವಲೇಶವೂ ಇರಲಿಲ್ಲ. ಮೂರ್ತಿವೆತ್ತ ಕರುಣೆಯಂತೆ, ಮೈಗೊಂಡ ಅಕ್ಕರೆಯಂತೆ, ಮನುಷ್ಯಾಕಾರವಾಂತ ಭಗವಂತನ ವಾತ್ಸಲ್ಯವೆಂಬಂತೆ ಪೂಜ್ಯವಾಗಿ ಕಾಣುತ್ತಿದ್ದ ವೃದ್ಧಮೂರ್ತಿಯೊಂದು ಅತ್ಯಂತ ನಿರಾಡಂಬರ ಭಂಗಿಯಲ್ಲಿ ಒಂದು ಆರಾಮ ಕುರ್ಚಿಯ ಮೇಲೆ  ಒರಗಿ ಕುಳಿತು ವಿಶ್ರಮಿಸಿ ಕೊಳ್ಳುತ್ತಿದ್ದುದು ಕಣ್ಣಿಗೆ ಬಿತ್ತು. ನಮ್ಮ ಕೈಗಳು, ಅವು ಕಾಣಿಕೆಕೊಡಲು ತಂದಿದ್ದ ವಸ್ತುಗಳನ್ನು ಹಿಡಿದಿದ್ದರೂ, ತಮಗೆ ತಾವೆ ಮುಗಿದಿದ್ದುವು, ಅಂಜಲಿಬದ್ಧವಾಗಿ!

ಸ್ವಲ್ಪಮಟ್ಟಿಗೆ ಸ್ಥೂಲಕಾಯರಾಗಿ ವೃದ್ಧಾಪ್ಯದ ಮತ್ತು ಅಸ್ವಸ್ಥತೆಯ ದೆಸೆಯಿಂದ ದಣಿದಂತೆ ತೋರುತ್ತಿದ್ದ ಅವರ ದೇಹ, ಅವರ ಆಂತರಿಕ ಸ್ವಭಾವದ ಮೃದುಲತೆಯನ್ನು ಪ್ರತಿಕೃತಿಸುವಂತೆ, ಎಳಬಿಸಿಲಿನಲ್ಲಿಯೂ ನಸು ಬಸವಳಿದ ತಳಿರಿನಂತೆ ಸ್ನಿಗ್ಧಕೋಮಲವಾಗಿ, ನೋಡಿದವರಲ್ಲಿ ಮಾತೃತ್ವದರ್ಶನ ಭಾವವನ್ನು ಪ್ರಚೋದಿಸುತ್ತಿತ್ತು. ಒಂದು ಅಪಾರ್ಥಿವ ಪ್ರಶಾಂತಿಯ ಪರಿವೇಷ ಅವರನ್ನು ಸುತ್ತುವರಿದು, ಅವರ ಮಡಿಲಿಗೆ ಬಿದ್ದ ನನ್ನ ಚೇತನವನ್ನೆಲ್ಲ ಶಿಶುಗೈದು ತೊಟ್ಟಿಲಿಗೆ ಹಾಕಿ ತೂಗಿದಂತಾಯ್ತು. ಅವರ ಸಂಪೂರ್ಣ ನಿರಹಂಕಾರದ ಮಹಾ ಪ್ರಪಾತದ ಅಂಚಿನಲ್ಲಿ ಹೆದರಿ ನಿಂತು ತತ್ತರಿಸಿತ್ತು, ನನ್ನ ಅಲ್ಪ ಆಹಂಕಾರ!

ಮಾತಿಲ್ಲದೆ ನಿಂತಿದ್ದ ಒಂದೆರಡು ಕ್ಷಣಕಾಲದಲ್ಲಿ ನನ್ನ ದೃಷ್ಟಿ ಅತ್ತಿತ್ತ ಹರಿದು ಆ ಕೊಠಡಿಯ ದಿವ್ಯ ಸರಳತೆಯನ್ನು ಗ್ರಾಮಿಣವಾಗಿ ಅವಲೋಕಿಸಿತ್ತು. ಅವರ ಮುಂದುಗಡೆ ಒಂದು ಹುಕ್ಕಾ ಇತ್ತು. ಗೋಡೆಗಳ ಮೇಲೆ  ನಾಲ್ಕೈದು ಪಟಗಳಿದ್ದುವು; ಅವರ ಮಲಗುವ ಮಂಚ ಒಂದು ಪಕ್ಕಕ್ಕಿತ್ತು; ಮತ್ತೊಂದು ಕಡೆಕಲವು ಪುಸ್ತಕ ; ಇನ್ನೊಂದೆಡೆ ಒಂದು ಸಣ್ಣ ಮೇಜು. ಆದರೆ ಅವುಗಳನ್ನೆಲ್ಲ ಕಣ್ಣು ನೋಡುತ್ತಿತ್ತೆ ಹೊರತು ಮನಸ್ಸಲ್ಲ.

ಸ್ವಾಮಿ ಸಿದ್ಧೇಶ್ವರಾನಂದರು ಮೊದಲು ಸಾಷ್ಟಾಂಗ ಪ್ರಣಾಮ ಮಾಡಿದರು. ತರುವಾಯ ಮಾನಪ್ಪನು ನಾವು ಮೈಸೂರಿನಿಂದ ತಂದಿದ್ದ ಶ್ರೀ ಚಾಮುಂಡಿ ಮಾತೆಯ ಬೆಳ್ಳಿಯ ವಿಗ್ರಹವನ್ನು ಅರ್ಪಿಸಿ ಅಡ್ಡಬಿದ್ದನು. ನಾನು ಊದಿನ ಕಡ್ಡಿಗಳ ಕಟ್ಟುಗಳನ್ನು ಪದತಲಕ್ಕೆ ನಿವೇದಿಸಿ ನೆಲಕ್ಕೆ ಹಣೆಮುಟ್ಟಿ ನಮಸ್ಕಾರ ಮಾಡಿದೆ.

ಪೂಜ್ಯ ಮಹಾಪುರುಷಜಿ ಹರ್ಷವದನರಾಗಿ ಅನುಗ್ರಹ ಪೂರ್ವಕವಾದ ದೃಷ್ಟಿಯಿಂದ ಆಶೀರ್ವದಿಸುತ್ತಾ ಕುಳಿತಿದ್ದರು.

ಗೋಪಾಲ ಮಹಾರಾಜರು ನಮ್ಮ ಪರಿಚಯ ಹೇಳಿ ” ಇವರು ನಿಮ್ಮನ್ನೆ ನೆಮ್ಮಿದ್ದಾರೆ.  ಇವರು ನಿಮ್ಮ ಮಾನಸಪುತ್ರರು. ಇವರನ್ನು ಅನುಗ್ರಹಿಸಿ ಕಾಪಾಡಬೇಕು” ಎಂದು ಭಕ್ತಿನಮ್ರರಾಗಿ ನಿವೇದಿಸಿದರು.

ಅಹಂಶೂನ್ಯವಾದ ಅಕೃತಕ ಸ್ವರದಿಂದ ಮಹಾಪುರುಷನ ಮೃದುವಾಣಿ ಹೊಮ್ಮಿತು: “ನಾನು ಯಾರು? ನಾನು ಯರು? ನಾನು ಯಾರು ?” ಎಂದು ಮೂರು ಸಾರಿ ಗಂಭೀರವಾಗಿ ಉಚ್ಚರಿಸಿ “ಎಲ್ಲ ಗುರುಮಹಾರಾಜ್! ಎಲ್ಲ ಗುರುಮಹಾರಾಜ್! ನಾನು ಯಾರು? ಎಲ್ಲ ಅವರೇ! ಅವರ ಇಚ್ಛೆ ಇದ್ದಂತಾಗಲಿ!” ಎಂದು ಅರ್ಧ ನಿಮಾಲಿತ ನಯನರಾದರು. ಮತ್ತೆ ತುಸುಹೊತ್ತಿನಲ್ಲಿಯೆ ಕಣ್ಣು ತೆರೆದು ನಮ್ಮತ್ತ ಕೃಪಾಕಟಾಕ್ಷ ಬೀರಿ ನಮ್ಮನ್ನೆ ಪ್ರಶ್ನಿಸುವಂತೆ ಹೇಳಿದರು: “ನನಗೇನು ಗೊತ್ತು? ನನಗೇನು ಗೊತ್ತು? ನಾನು ಆತನ ಆಜ್ಞಾಪಾಲಕ!”

ಅವರ ಆ ಉಕ್ತಿಯ ತಾತ್ಪರ್ಯವಾಗಲಿ, ಅದರ ಹಿಂದಣ ದರ್ಶನಧ್ವನಿಯಾಗಲಿ ನನಗೆ ಅಂದು ಸಂಪೂರ್ಣವಾಗಿ ಗ್ರಾಹ್ಯವಾಗಿರಲಿಲ್ಲ. ದೊಡ್ಡವರು ವಿನಯಕ್ಕಾಗಿ ಹೇಳುವ ಮರ್ಯದೆಯ ಮಾತುಗಳು ಎಂದು ಮಾತ್ರ ಗ್ರಹಿಸಿದ್ದೆ. ಅವುಗಳ ನಿಜವಾದ ಅರ್ಥ ನನ್ನ ಪ್ರಜ್ಞೆಗೆ ಗೊಚರವಾಗಿ, ಬುದ್ಧಿಗೆ ಗ್ರಾಹ್ಯವಾದದ್ದು ಬಹುಕಾಲದ ಮೇಲೆ: ಸ್ವಾಮಿ ಅಪೂರ್ವಾನಂದರು ಬಂಗಾಳಿಯಲ್ಲಿ ಬರೆದಿದ್ದ ” ಶಿವಾನಂದ ವಾಣಿ” ಎಂಬ ಹೆಸರಿನ ಮಹಾಪುರುಷ ಮಹಾರಾಜರ ಮಾತುಕತೆಗಳನ್ನು “For Seekers of God” ಎಂಬ ಅದರ ಇಂಗ್ಲಿಷ್ ಭಾಷಾಂತರದಲ್ಲಿ ಓದಿ, ಅದನ್ನು “ಗುರುವಿನೊಡನೆ ದೇವರಡಿಗೆ” ಎಂಬ ಹಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡುವ ಸುಯೋಗಕ್ಕೆ ನಾನು ಪಾತ್ರನಾದಂದು! ಶ್ರೀ ಮಹಾಪುರುಷಜಿ ತಮ್ಮತನವನ್ನೆಲ್ಲ ಒಂದಿನಿತೂ ಉಳಿಯದಂತೆ ಶ್ರೀ ಗುರು ಮಹಾರಾಜರಲ್ಲಿ ಸಂಪೂರ್ಣವಾಗಿ ಸಮರ್ಪಿಸಿ ಅವರಲ್ಲಿ ಐಕ್ಯರಾಗಿದ್ದರು ಎಂಬ ಸತ್ಯವನ್ನು  ನಾವು ಅವರ ಆ ಮಾತುಕತೆಗಳಲ್ಲಿ ಸಂದೇಹಕ್ಕೆ ಅವಕಾಶವಿಲ್ಲದಂತೆ ಕಾಣುತ್ತೇವೆ. ಶ್ರೀ ಮಹಾಪುರುಷಜಿಯ ಮಹೋನ್ನತ ಆಧ್ಯಾತ್ಮಿಕ ಅವಸ್ತೆ ಮತ್ತು ಸಿದ್ಧಿ ಆ ಮಾತುಕತೆಗಳಲ್ಲಿ ನಮಗೆ ಪ್ರಕಾಶಿತವಾಗುವಂತೆ ಮತ್ತೆಲ್ಲಿಯೂ ಆಗುವುದಿಲ್ಲ.

ಮತ್ತೆ ಮಹಾಪುರುಷಜಿ ನಮ್ಮ ಹೆಸರು ಕೇಳಿದರು.

ನಾವು ಹೇಳಿದುದನ್ನು ನೆನಪಿನಲ್ಲಿಟ್ಟುಕೊಳ್ಳಲು ಗಟ್ಟಿಪಾಠಮಾಡುವವರಂತೆ ನಮ್ಮಿಬ್ಬರ ಹೆಸರುಗಳನ್ನೂ ಅವರೇ ಉಚ್ಚರಿಸಿದರು, ಎರಡೆರಡೆ ಸಾರಿ: “ಪುಟ್ಟಪ್ಪ – ಮಾನಪ್ಪ,  ಪುಟ್ಟಪ್ಪ – ಮಾನಪ್ಪ!”

ಅವರು ಹಾಗೆ ಮಾಡಿದುದು ಅಂದು ನನಗೆ ಸ್ವಲ್ಪ ವಿನೋದಕರವಾಗಿಯೆ ತೋರಿತ್ತು. ಇಂದು ಅದನ್ನು ಕುರಿತು ಬರೆಯುತ್ತಿರುವ ನನಗೆ ರೋಮಾಂಚನವಾಗುತ್ತಿದೆ! ಯಃಕಶ್ವಿತ ಮನುಷ್ಯನಾದ ನನ್ನ ಹೆಸರು ಅಂತಹ ಭಗವದ್ ಪುರುಷನ ದಿವ್ಯಜಿಹ್ವೆಯಲ್ಲಿ!  ತಾಯಿ, ನೆಲದ ಮೇಲೆ ಅಂಬೆಗಾಲಿಕ್ಕಿ ಹುಡಿಯಲ್ಲಿ ಹೊರಳುತ್ತಿರುವ, ತನ್ನ ಕಂದನನ್ನು ಬಾಗಿ ತೋಳುಚಾಚಿ ಎತ್ತಿಕೊಳ್ಳುವಂತೆ ನಮ್ಮನ್ನವರು ತಮ್ಮ ವಾತ್ಸಲ್ಯದ ಮಡಿಲಿಗೆ ಎತ್ತಿಕೊಂಡಿದ್ದರು, ನಮ್ಮ ಹೆಸರನ್ನು ಉಚ್ಚರಿಸುವ ನೆವದಲ್ಲಿ!

ಅಂದಿನ ನನ್ನ ದಿನಚರಿಯಲ್ಲಿ ಈ ಭಾವ ಧ್ವನಿಸುವಂತೆ ಬರೆದಿದ್ದೇನೆ: “ಶ್ರೀ ಗುರುಮಹಾರಾಜರು ಹೇಗಿದ್ದರು ಎಂಬುದು  ಸ್ವಲ್ಪವಾದರೂ ಗೊತ್ತಾಗುತ್ತದೆ, ಮಹಾಪುರುಷಜಿಯವರನ್ನು  ನೋಡಿದರೆ. ಅವರು ಭಗವಾನ್ ಶ್ರೀ ರಾಮಕೃಷ್ಣರ ಆಧ್ಯಾತ್ಮಿಕ ಪ್ರತಿಮೂರ್ತಿ. ಅವರ ಸಾನ್ನಿಧ್ಯದಲ್ಲಿ ನಿಂತಾಗ ಮಹಾವಿಭೂತಿಯೊಬ್ಬನ ಮುಂದೆ ನಿಂತಿದ್ದೇವೆ ಎಂಬುದು ಸ್ವಸಂವೇದ್ಯವಾಗುತ್ತದೆ. ಅಹಂತಾವೇಲೆಯನ್ನೆಲ್ಲ ನಿರ್ದಿಗಂತಗೊಳಿಸಿರುವ ಅವರ ಭೂಮವ್ಯಕ್ತಿತ್ವ ಅಕ್ಷುಬ್ಧ ಅಸೀಮ ಸಾಗರದಂತೆ ಪ್ರಶಾಂತ ಭವ್ಯವಾಗಿದೆ.”

ಮರುದಿನ ಪೂರ್ವಾಹ್ನದಲ್ಲಿ ನಮಗೆ ದೀಕ್ಷೆಯ ಅನುಗ್ರಹವಾಗುತ್ತದೆ ಎಂಬುದನ್ನು  ಮಹಾಪುರುಷಜಿಯವರ ಸೇವಾಶುಶ್ರೂಷೆಯಲ್ಲಿ ನಿರತರಾಗಿದ್ದ  ಅನುಚರ ಸಾಧುಗಳಿಂದ ಗೊತ್ತು ಮಾಡಿಕೊಂಡ ಮೇಲೆ ಗೋಪಾಲ್ ಮಹಾರಾಜರು ನಮ್ಮನ್ನು ಸ್ವಾಮಿ ವಿವೇಕಾನಂದರ ಕೊಠಡಿಗೆ ಕರೆದೊಯ್ದರು. ಪೂಜ್ಯವೂ ಇತಿಹಾಸಪ್ರಸಿದ್ಧವಾಗಿ ಲೋಕ ವಿಖ್ಯಾತವೂ ಆಗಿರುವ ಆ ಕೊಠಡಿಯನ್ನು ನಾವು ಒಂದು ಪುಣ್ಯಕ್ಷೇತ್ರಕ್ಕೆಂತೊ ಅಂತೆ ಪ್ರವೇಶಿಸಿದೆವು. ಸ್ವಾಮಿಜಿ ಇಹಲೋಕವನ್ನು ಬಿಡುವಾಗ ಆ ಕೋಣೆ ಹೇಗೆ ಇದ್ದಿತೊ ಹಾಗೆಯೆ ಅದನ್ನಿಟ್ಟಿದ್ದರು. ನೋಡುವವರಿಗೆ ‘ಸ್ವಾಮಿಗಳು ಈಗತಾನೆ ಎಲ್ಲಿಗೊ ಕ್ಷಣಕಾಲ ಹೊರಗೆ ಹೋಗಿದ್ದಾರೆ; ಇನ್ನೇನು ಬಂದುಬಿಡುತ್ತಾರೆ. ದರ್ಶನಕ್ಕಾಗಿ ಕಾದಿಕೊಂಡಿರೋಣ!’ ಎನ್ನುವಹಾಗಿತ್ತು. ಅಲ್ಲಿಯೆ ಇಟ್ಟಿದ್ದ ಅವರ ಪಾದುಕೆಗಾಳಿಗೆ ನಮಿಸಿ, ನಿಂತು ಸುತ್ತಲೂ ಕಣ್ಣು ಹಾಯಿಸಿದೆ.

ಕೊಠಡಿಯ ಒಂದು ಭಾಗದಲ್ಲಿ ಅವರು ಮಲಗುತ್ತಿದ್ದ ವಿಶಾಲ ಮಂಚವಿತ್ತು. ಒಂದು ಮೇಜು ಕುರ್ಚಿಯೂ ಅವರು ಉಪಯೋಗಿಸುತ್ತಿದ್ದಲ್ಲಿಯೆ ಹಾಗೆಯೆ ಇದ್ದುವು. ಇತ್ತೀಚೆಗೆ ಇಟ್ಟಿದ್ದಂತೆ, ಬುದ್ಧದೇವನ ಒಂದು ಧ್ಯಾನಸ್ತಿಮಿತಭಂಗಿಯ ವಿಗ್ರಹವೂ ಆ ಕ್ಷೇತ್ರದ ಪ್ರಶಾಂತ ಗಂಭೀರತೆಗೆ ಪ್ರತಿ ಸ್ವರೂಪವಾಗಿತ್ತು. ಅವರು ಉಪಯೋಗಿಸುತ್ತಿದ್ದ ತಂಬೂರಿ, ಕೊಡೆ, ಊರುಗೋಲು, ಬಟ್ಟೆಬರಿ ಪುಸ್ತಕ ಎಲ್ಲವೂ ಅಲ್ಲಿಯೆ ವಿನೀತ ಸಾಕ್ಷಿಗಳಂತಿದ್ದುವು. ಪರಮಹಂಸರ ಮತ್ತು ಸ್ವಾಮಿಜಿಯ ತೈಲಚಿತ್ರಗಳೂ ಬಂದ ಯಾತ್ರಿಕರನ್ನು ಆಶೀರ್ವದಿಸುವಂತಿದ್ದುವು. ಮಂಚದ ಮೇಲೆ ಬಿಚ್ಚಿದ ಹಾಸಗೆಯ ಮೇಲೆ ಸ್ವಾಮಿಜಿಯ ಪಟ ರಾರಾಜಿಸಿತ್ತು. ಸ್ವಾಮಿ ಸಿದ್ಧೇಶ್ವರಾನಂದರು ಅಲ್ಲಿಯ ಪವಿತ್ರ ನಿಶ್ಯಬ್ಧತೆಗೆ ಭಂಗಬಾರದಂತೆ ನನ್ನ ಕಿವಿಯಲ್ಲಿ ಉಸುರಿದರು: “ಸ್ವಾಮಿಜಿ ಇಲ್ಲಿ ಮಲಗುತ್ತಲೆ ಇರಲಿಲ್ಲ. ಅಲ್ಲಿ ಹೊರಗಡೆ ವರಾಂದದಲ್ಲಿ ಒಂದು ಬರಿಯ ಚಾಪೆಯ ಮೇಲೆ ಮಲಗುತ್ತಿದ್ದರು!”

ಮಹಡಿಯ ಮೇಲಣ ಆ ವರಾಂಡಕ್ಕೆ ಹೋಗಿ ನಿಂತಾಗ, ಎಂತಹ ದೃಶ್ಯ ನಮ್ಮನ್ನು ಎದುರುಗೊಂದಿತು! ತುಂಬಿ ಹರಿಯುತ್ತಿದ್ದ ಬಿತ್ತರದೆಯ ಗಂಗಾಮಾತೆ ಕೆಂಗಾವಿಯುಟ್ಟಂತೆ ಕೆಂಪಗೆ ಹರಿಯುತ್ತಿದ್ದಳು; ಅಲ್ಲಲ್ಲಿ ದೋಣಿಗಳು, ಜಹಜುಗಳು; ಇಕ್ಕೆಲಗಳಲ್ಲಿಯ ನದಿಯ ತೀರದಲ್ಲಿ ಮಹಾಸೌಧಗಳ ಸಾಲು; ಅಲ್ಲಲ್ಲಿ ದಟ್ಟವಾಗಿ ತಳಿರಿಡಿದು ಹಸುರುಕ್ಕುವ ಮರಗಳ ತೋಪುಗಳು; ಆಗಲೇ ಕವಿಯುತ್ತಿದ್ದ ಮುಂಗಪ್ಪಿನಲ್ಲಿ ದೂರ ದಿಗಂತಸ್ಥವೆಂಬಂತೆ ದಕ್ಷಿಣೇಶ್ವರದ ದೇವಾಲಯಗಳ ಗೋಪುರ ಪಂಕ್ತಿ: ಬೇಲೂರುಮಠ ಸ್ಥಾಪನೆಗೆ ಸ್ಥಳವನ್ನಾಯ್ದ ದಿವ್ಯ ಸನ್ಯಾಸಿಯ ಸೌಂದರ್ಯಪ್ರಜ್ಞೆಗೆ ಸಾಕ್ಷಿಯಾಗಿತ್ತು ಆ ಕಂಗೊಳಿಸುವ ನೋಟ!

ಅಷ್ಟರಲ್ಲಿ ಸಂಧ್ಯಾ ಮಂಗಳಾರತಿಗೆ ಸಮಯ ಸನ್ನಿಹಿತವಾದ್ದರಿಂದ ನಾವೆಲ್ಲ ದೇವರಮನೆಗೆ, ಎಂದರೆ ಶ್ರೀಗುರು ಮಂದಿರಕ್ಕೆ, ಹೋಗಿ ಪೂಜೆಯಲ್ಲಿ ಭಾಗಿಗಳಾದೆವು. ದೇವರ ಗುಡಿಯನ್ನು ಎದೆತುಂಬಿ ಕಣ್ಣುತುಂಬ ನೋಡಿ ತಣಿದೆವು: ಹಾಲುಗಲ್ಲಿನ ನುಣುಪಾದ ನೆಲದ ತಣ್ಪು; ಒಳಗೆ ಪೀಠದಲ್ಲಿ ಶ್ರೀ ಗುರುಮಹಾರಾಜರ ಒಂದು ಸಣ್ಣ ಶಿಲಾವಿಗ್ರಹ; ನಿರಾಡಂಬರ ಮತ್ತು ನಿರಾಭರಣವಾಗಿದ್ದ ಅಲ್ಲಿಯ ಆ ಸರಳತೆಯಲ್ಲಿ ಅದೆಂತಹ ಭವ್ಯತೆಯ ಅನುಭವವಾಗುತ್ತದೆ ಭಕ್ತರಿಗೆ!

ಮಠದ ಹೊರ ಅಂಗಳದಲಿ ಗೋವುಗಳಿಗಾಗಿ ತಮ್ಮ ಸ್ವಹಸ್ತದಿಂದಲೆ ಹುಲ್ಲು ಕೊಯ್ಯುತ್ತಿದ್ದ ಸಾಧುಗಳು ಕತ್ತಲಾದ ಮೇಲೆ ಒಳಗೆ ಹೋದರು.

ನವರಾತ್ರಿಯ ಪೂಜೆಗಾಗಿ ದುರ್ಗಾದೇವಿಯ ವಿಗ್ರಹವನ್ನು ಸಿಂಗರಿಸುವುದರಲ್ಲಿ ಕೆಲವರು ಉದ್ಯುಕ್ತರಾಗಿದ್ದರು. ಆಹ! ಎಂತಹ ಸುಂದರ ವಿಗ್ರಹ ಅದು! ಶೃಂಗಾರದಲ್ಲಿಯೂ ಏನು ಅಸದೃಶ ಚಮತ್ಕಾರ! ಒಂದು ಕಡೆ ಲಕ್ಷ್ಮಿ; ಒಂದು ಕಡೆ ಸರಸ್ವತಿ; ಒಂದೆಡೆ ಗಣೇಶ; ಒಂದೆಡೆ ಸುಬ್ರಹ್ಯಣ್ಯ; ಮಲಗಿ ಮಲೆತಿರುವ ಮಹಿಷಾಸುರನ ಕಣ್ಣುಗಳೊ ಅದೆಷ್ಟು ಉಜ್ವಲ! ಆ ಹಾವೋ, ಆ ಸಿಂಹವೋ ; ಆದರೂ ಅಲಂಕೃತಳಾದ ತಾಯಿ ಭಯಂಕರೆಯಾಗಿ ತೋರಲಿಲ್ಲ ; ಮಕ್ಕಳನ್ನು ಕಂಡು ಮುಗುಳುನಗೆದೋರಿ  ಹರಸುವಂತಿದ್ದಳು, ರಾಮಣೀಯಕವಾಗಿ!

ನಕ್ಷತ್ರ ಕಾಂತಿಯ ಆಂಧಕಾರದಲ್ಲಿ ನಾನೋಬ್ಬನೆ ಮಠದ ಮುಂದೆ ಗಂಗೆಗೆ ಚಾಚಿಕೊಂಡಿರುವ ಸೋಪಾನ ಪಂಕ್ತಿಯ ವೇದಿಕೆಯ ಮೇಲೆ ತಿರುಗಾಡುತ್ತಾ ಆ ದಿನದ ವಿವಿಧ ರೂಪದ  ಅನಿಭವಗಳನ್ನು ಕುರಿತು ಧ್ಯಾನಿಸಿದೆ. ಅನುಭವಗಳ ರೂಪ ವಿವಿಧವಾಗಿದ್ದರೂ ಅವುಗಳಲ್ಲಿ ಏಕಸೂತ್ರದ ಒಂದು ಐಕ್ಯಸ್ವರೂಪವಿತ್ತು. ನಾಳೆ ನನಗೊದಗಲಿರುವ ಮಹಾಗುರುವಿನ ಅನುಗ್ರಹಕ್ಕೆ ಆ ಅನುಭವಗಳೆಲ್ಲವೂ ಸೇರಿ ಒಂದು ಆಧ್ಯಾತ್ಮಿಕವಾದ ಸಂಸ್ಕಾರಭಿತ್ತಿಯನ್ನು ಸಿದ್ಧಗೊಳಿಸಿದಂತಿತ್ತು, ನನ್ನ ಹೃದಯದಲ್ಲಿ.

ಮರುದಿನ ೮-೧೦-೧೯೨೯, ಆಶ್ವಿಜ ಶುದ್ಧಷಷ್ಠಿ, ಸ್ವಾಮಿ ಸಿದ್ಧೇಶ್ವರಾನಂದರು ಹೇಳಿದರು: “ಈವೊತ್ತು ನಿಜವಾಗಿಯೂ ಪ್ರಶಸ್ತವಾದ ದಿನ; ಸರಸ್ವತೀ ಆವಾಹನೆಯ ಶುಭದಿನ. ಕವಿಯಾಗಿರುವ ನಿನಗೆ ಈ ದಿನ ದೀಕ್ಷೆ ದೊರೆಯುವುದರಲ್ಲಿ ತುಂಬ ಅರ್ಥವಿದೆ, ಧ್ವನಿಯಿದೆ!”

ಅಂದು ಔಪಚಾರಿಕ ಪ್ರಶಂಸೆ ಎಂಬಂತೆ ತೋರಿತ್ತು, ಅವರ ಆ ಉಕ್ತಿ; ಇಂದು ಮೂವತ್ತೆಂಟು ವರ್ಷಗಳ ಅನಂತರ, ಅದನ್ನು ಕುರಿತು ಬರೆಯುತ್ತಿರುವಾಗ, ಅವರ ಸರಳ ಸಾಧಾರಣವಾಗಿದ್ದ ಆ ವಾಕ್ಕು ಎಂತಹ ಪ್ರವಾದಶಕ್ತಿಯಿಂದ ಕೂಡಿ ಎಷ್ಟು ಸತ್ಯಗರ್ಭಿತವಾಗಿತ್ತು ಎಂಬುದು ಸುಸ್ಪಷ್ಟವಾಗಿದೆ. ಅಂದು ನನಗೊದಗಿದ ಆಶೀರ್ವಾದದ ತಪೋಬಲವೆ ನನ್ನನ್ನು ಬದುಕಿನ ಕುಟಿಲ ಜಟಿಲವಾದ ಹಾದಿಯುದ್ದಕ್ಕೂ ಕೈಹಿಡಿದು ನಡೆಸಿ, ನನ್ನಿಂದ ಸಾಹಿತ್ಯಕ ಮಹಾಕೃತಿಗಳನ್ನು ಸೃಷ್ಟಿಸಿ, ನನ್ನ ಜೀವನವನ್ನು ಧನ್ಯವನ್ನಾಗಿ ಮಾಡಿದೆ!

ಇನ್ನು ದೀಕ್ಷೆಯ ವಿಷಯ? ಏನನ್ನು ಹೇಳುವುದು? ಏನನ್ನು ಹೇಳಿದರೆ ತಾನೆ ಅವರ ದಿವ್ಯ ಮಹೋನ್ನತಿಗೆ ತಗುವ ಗೌರವಸಗಿದಂತಾಗುತ್ತದೆ? ಅದನ್ನು ನೇರವಾಗಿ ಕುರಿತಾಡುವ ನುಡಿಗಳೆಲ್ಲ ಅದರ ಗುರುತ್ವಕ್ಕೆ ಭಂಗ ತರುತ್ತವೆ; ಅದನ್ನು ಲಘುಗೊಳಿಸುತ್ತವೆ! ಅನಧಿಕಾರಿಗಳ ಮುಂದೆ ಅದನ್ನು ಹಿಯಾಳಿಸಿದಂತೆಯೂ ಆಗುತ್ತದೇನೊ? ಆ ಅಪಚಾರಕ್ಕೆ ನಾನು ಕೈಹಾಕುವುದಿಲ್ಲ. ಅದಕ್ಕೆ ಬದಲಾಗಿ ‘ಅನುಕ್ತ’ ಎನಿಸುವ ಅನ್ಯರೀತಿಯಿಂದ ಅದರ ಅಮರ ಮಹಿಮೆಯನ್ನು ಇನಿತೆ ಸೂಚಿಸಲು ಪ್ರಯತ್ನಿಸುತ್ತೇನೆ. ಅಂದು ಬರೆದಿರುವ ನನ್ನ ದಿನಚರಿಯೂ ನನಗೆ ಯಾವ ನೆರವನ್ನೂ ನೀಡಲ್ಲೊಲ್ಲದೆ ತುಟಿಬಿಗಿದು ಮೌನವಾಗಿದೆ: “ಇಂದು ನನ್ನ ಜೀವಮಾನದಲ್ಲಿ ಅತ್ಯಂತ ಶ್ರೇಷ್ಠವಾದ ದಿನಗಳಲ್ಲಿ ಒಂದು ದಿನ. ಏಕೆಂದರೆ ಇಂದು ಶ್ರೀಮತ್ ಸ್ವಾಮಿ ಶಿವಾನಂದ ಸ್ವಾಮಿಗಳಿಂದ ನನಗೆ ದೀಕ್ಷೆ ಲಭಿಸಿತು. ಇದರ ವಿಷಯ ರಹಸ್ಯವಾಗಿರಬೇಕಾದ್ದರಿಂದ ನಾನ ಇಲ್ಲಿ ಬರೆಯುವುದಿಲ್ಲ” ಎಂದಿದೆ ಅಲ್ಲಿಯ ಲಿಖಿತ!

ತಮ್ಮ ಮಂತ್ರದೀಕ್ಷಾ ವಿಧಾನದ ವಿಚಾರವಾಗಿ ಸ್ವಯಂ ಮಹಾಪುರುಷಜಿಯೆ,

[ಸ್ವಾಮಿ ಪೂರ್ವಾನಂದರಿಂದ ಸಂಗ್ರಹಗೊಂಡಿರುವ ‘ಶಿವಾನಂದ ವಾಣಿ’,] ಹೀಗೆ  ಹೇಳಿದ್ದಾರೆ: “ನಮ್ಮದೀಕ್ಷಾ ಪ್ರದಾನದಲ್ಲಿ ಯಾವ ಭಟ್ಟಾಚಾರ್ಜಿಗಿರಿಯೂ ಇರುವುದಿಲ್ಲ. ಅಲ್ಲದೆ ಅಂಥಾ ಅಂತ್ರ ಮಂತ್ರ ಯಾವುದೂ ವಿಶೇಷವಾಗಿ ನನಗೆ ಗೊತ್ತೂ ಇಲ್ಲ; ಅವನ್ನು ತಿಳಿದುಕೊಳ್ಳುವುದರಿಂದ ಪ್ರಯೋಜನವೂ ಇದೆ ಎಂದು ನಾನು ಭಾವಿಸಿಯೂ ಇಲ್ಲ. ನನಗೆ ಗೊತ್ತಿರುವುದು, ಠಾಕೂರರು, – ಅವರೇ ಸರ್ವಸ್ವ. ಅವರದೆ ನಾಮ, ಅವರದೆ ಶಕ್ತಿ. ಅವರ ಇಚ್ಛೆಯ ಮೇರೆಗೆ ಅವರದೆ ಹೆಸರನ್ನು ಎಲ್ಲರಿಗೂ ಕೊಡುತ್ತೇನೆ. ಮತ್ತೆ ಪ್ರಾರ್ಥನೆ ಮಾಡುತ್ತೇನೆ, – ‘ಠಾಕೂರ್, ಇವರನ್ನು ಕೃಪೆಯಿಟ್ಟು ಸ್ವೀಕರಿಸಿ; ಇವರಿಗೆ ಭಕ್ತಿ ವಿಶ್ವಾಸಗಳನ್ನು ದಯಾಪಾಲಿಸಿ; ದಯೆ ತೋರಿ; ಎಂದು.”

ಇನ್ನೊಮ್ಮೆ ಅವರು ಮಂತ್ರದ ವಿಚಾರವಾಗಿ ಮಾತನಾಡುತ್ತಾ ಹೀಗೆ ಹೇಳಿದ್ದಾರೆ: “ಮಂತ್ರಕ್ಕೆ ಮತ್ತೇನು ಅರ್ಥ? ಮಂತ್ರ ಭಗವಂತನ ಹೆಸರು. ಅದರ ಜೊತೆಗಿರುವ ಬೀಜವಿದೆಯಲ್ಲಾ ಅದು ಬೇರೆ ಬೇರೆ ದೇವಿದೇವಿಯರನ್ನು ಕುರಿತ ಭಾವ ಪ್ರಕಾಶಕ ಶಬ್ದ. ಬೀಜ ಮತ್ತು ನಾಮ ಒಟ್ಟಾದರೆ ಮಂತ್ರ. ಒಟ್ಟಿನಲಿ ಮಂತ್ರ ಭಗವಂತನನ್ನು ನೆನೆಯಿಸುವ ವಿಧಾನ. ಮಂತ್ರಜಪ ಮಾಡುವುದೆಂದರೆ ದೇವರನ್ನು ಕರೆದಂತೆಯೆ.”

ದೀಕ್ಷಾಗುರುವಾಗಿ ಮಂತ್ರದೀಕ್ಷೆ ಕೊಡುವ ತಮ್ಮ ನಿಲವೇನು ಎಂಬುದರ  ವಿಚಾರವಾಗಿಯೂ ಅವರ ಮಾತುಕತೆಗಳಲ್ಲಿ ಒಂದು ಅದ್ಭುತ ಪ್ರಸಂಗ ಬರುತ್ತದೆ, ಕಾಶಿಯಲ್ಲಿ ಮಹಾಪುರುಷಜಿ ಆನೇಕರಿಗೆ ದೀಕ್ಷೆಕೊಟ್ಟ ಸಂದರ್ಭದಲ್ಲಿ: ಕಾಶಿ ಶಿವಕ್ಷೇತ್ರವಾದ್ದರಿಂದ ಸ್ವಾಮಿ ಬ್ರಹ್ಮಾನಂದರು, ಸ್ವಾಮಿ ಶಾರದಾನಂದರು ಮೊದಲಾದ ಶ್ರೀ ರಾಮಕೃಷ್ಣ ದೇವರ ಪ್ರಮುಖ ಅಂತರಂಗ ಶಿಷ್ಯರಲ್ಲಿ ಯಾರೂ ಅಲ್ಲಿ ಮಂತ್ರದೀಕ್ಷೆ ಕೊಡಲು ಸಮ್ಮತಿಸಿರಲಿಲ್ಲ. ಸ್ವಾಮಿ ಶಿವಾನಂದರು ಆ ನಿಯಮಕ್ಕೆ ವ್ಯತಿಕ್ರಮವಾಗಿ ದೀಕ್ಷೆ ಕೊಟ್ಟದ್ದು ಅನೇಕ ಸಾಧು ಸೇವಾನುಚರರ ಮನಸ್ಸಿನಲ್ಲಿ ಏನೊ ತುಸು ಕಳವಳದ ಸಂದೇಹಕ್ಕೆ ಕಾರಣವಾಗಿತ್ತು. ಆ ವಿಚಾರವಾಗಿ ಪ್ರಶ್ನಿಸಿದಾಗ ಮಹಾಪುರುಷಜಿ ಹೇಳಿದರು: “ನೋಡಯ್ಯ, ನಾನು ಯಾರಿಗಾದರೂ ದೀಕ್ಷೆ ಕೊಡುತ್ತೇನೆ ಎಂಬ ಬುದ್ಧಿ ನನ್ನ ಮನಸ್ಸಿನಲ್ಲಿ ಇರುವುದೇ ಇಲ್ಲ. ಶ್ರೀ ಠಾಕೂರರ ಕೃಪೆಯಿಂದ ನನ್ನಲ್ಲಿ ಗರುಬುದ್ಧಿ ಯಾವತ್ತೂ ತಲೆಹಾಕಿಲ್ಲ. ಜಗದ್ಗುರುವಾಗಿದ್ದಾನೆ ಆ ಶಂಕರ ಮಹಾದೇವ; – ಈ ಯುಗದಲಿ ಶ್ರೀ ರಾಮಕೃಷ್ಣದೇವ. ಆತನೆ ಭಕ್ತರ ಹೃದಯದಲ್ಲಿ ಪ್ರೇರಣೆಯಾಗಿ ಇಲ್ಲಿಗೆ ಅವರನ್ನು ಕಳುಹಿಸುತ್ತಾನೆ. ಇತ್ತ ಆತನೆ ನನ್ನಲ್ಲಿ ಕುಳಿತು ಏನು ಹೇಳಿಸುತ್ತಾನೊ ಅದನ್ನು ನಾನು ಮಾಡುತ್ತೇನೆ. ಶ್ರೀ ಠಾಕೂರರೆ ನನ್ನ ಅಂತರಾತ್ಮವಾಗಿದ್ದಾರೆ.”

ಯಾರನ್ನು ಜಗತ್ತು ಸನಾತನ ಪೂರ್ಣಬ್ರಹ್ಮದ ವರಿಷ್ಠಾವತಾರ ಎಂದು ಆರಾಧಿಸುತ್ತಿದೆಯೊ ಅಂತಹ ಭಗವಂತನ ನಿತ್ಯಸಂಗಿ ಪಾರ್ಷದರಲ್ಲಿ ಅಗ್ರ ಪಂಕ್ತಿಗೆ  ಸೇರಿದವನಾಗಿ, ಅವತಾರಪುಷೋತ್ತಮನ ಲೋಕಸಂಗ್ರಹ ಕಾರ್ಯದಲ್ಲಿ ಸಹಯೋಗಿಗಳಾಗಿ ಮತ್ತು ಸೇವಾ ಸಹಾಯಕರಾಗಿ ಆತನೊಡನೆ ಅವತೀರ್ಣರಾಗಿದ್ದ ಅಂತರಂಗ ಶಿಷ್ಯರಲ್ಲಿ ಈಶ್ವರಕೋಟಿಯೆಂದೂ ನಿತ್ಯಸಿದ್ಧನೆಂದೂ ಪರಿಗಣಿತನಾಗಿರುವ  ಮಹಾಪುರುಷನಿಂದ ದೀಕ್ಷೆ ಪಡೆಯುವುದೆಂದರೆ ಭವಭವಾಂತರ ಸುಕೃತ ಕೃಪೆಯಲ್ಲದೆ ಮತ್ತೇನು? ಅದರ ಧನ್ಯತೆ ಎಂತಹ  ಧ್ಯಾನಕ್ಕೂ ಅಗಮ್ಯವಾಗಿಯೆ ಉಳಿಯುತ್ತದೆ; ಪರಿಭಾವಿಸಿದಷ್ಟೂ ಭವ್ಯತರವಾಗಿ ತೋರುತ್ತದೆ ಅದರ ಮಹತ್ತು!

ದೀಕ್ಷಾನಂತರ ದುರ್ಗಾಪೂಜೆಯ ಕೊನೆಯ ದಿನದವರೆಗೂ ನಾವು ಬೇಲೂರು ಮಠದಲ್ಲಿದ್ದೆವು, ಭೌಗೋಳಿಕವಾಗಿ; ಆಧ್ಯಾತ್ಮಿಕವಾಗಿ,ಮಹಾಪುರುಷಜಿಯ ಸಾನ್ನಿಧ್ಯದ ಕೃಪಾವಕ್ಷನೀಡದಲ್ಲಿ ಪಕ್ಷಿಶಿಶುಗಳಾಗಿದ್ದೆವು! ನನ್ನನ್ನು ಮಹಾಗುರುವಿನೆಡೆಗೆ ಕರೆದೊಯ್ದ  ಗುರು ಸ್ವಾಮಿ ಸಿದ್ಧೇಶ್ವರಾನಂದರ ಸಂತೋಷಕ್ಕಂತೂ ಮೇರೆ ಇರಲಿಲ್ಲ. ಗರಿಬಲಿತ ಮೇಲೆ ಗೂಡಿನಿಂದ ಮೊತ್ತಮೊದಲನೆಯ ಬಾರಿಗೆ ಹೊರಗೆ ಹಾರಿದ ತನ್ನ ಮರಿಗಳನ್ನು ತಾಯಿಹಕ್ಕಿ ಯಾವ ಹಿಗ್ಗಿನಿಂದ ಈ ಗಿಡದಿಂದ ಆ ಗಿಡಕ್ಕೆ, ಈ ಮರದಿಂದ ಆ ಮರಕ್ಕೆ, ಈ ಹೂವಿನಿಂದ ಆ ಹೂವಿಗೆ, ಈ ಹಣ್ಣಿನಿಂದ ಆ ಹಣ್ಣಿಗೆ ತಳಿವಿಲ್ಲದ ಹೆಮ್ಮೆಯಿಂದ ಹಾರಿಸಿಕೊಂಡು ಹೋಗಿ ಭೂಮ್ಯಾಕಾಶಗಳ ಪರಿಚಯಮಾಡಿಕೊಡುವುದೋ ಹಾಗೆಯೆ ಅವರು ನಮ್ಮನ್ನು ದರ್ಶನೀಯ ಸ್ಥಾನಗಳಿಗೂ ಸಂದರ್ಶನೀಯ ವ್ಯಕ್ತಿಗಳ ಬಳಿಗೂ ಕರೆದೊಯ್ದು ನಮ್ಮ ಅನುಭವಕೋಶವನ್ನು ಶ್ರೀಮಂತಗೊಳಿಸಿದರು: ಮುಖ್ಯವಾಗಿ ದಕ್ಷಿಣೇಶ್ವರಕ್ಕೆ; ಮಾಸ್ಟರ್ ಮಹಾಶಯರ ಪೂಜ್ಯ ಸನ್ನಿಧಿಗೆ; ಮತ್ತು ಸ್ವಾಮಿ ಅಭೇದಾನಂದರೆಡೆಗೆ! ಜೋತೆಗೆ, ಬಂಗಾಳಿ ಸಾಹಿತ್ಯದ ಶ್ರೇಷ್ಠಕವಿಗಳ ಕೆಲವು ಕೃತಿಗಳ ಪರಿಚಯವೂ ಮೂಲದಲ್ಲಿಯೆ ದೊರೆಯುವಂತೆ ಮಾಡಿದರು.ಸ್ವಾಮಿ ಶಾಶ್ವತಾನಂದರೂ ಸ್ವಾಮಿ ವಿಜಯಾನಂದರೂ ರವೀಂದ್ರನಾಥಠಾಕೂರ, ಮೈಕೇಲ್ ಮಧುಸೂದನ ದತ್ತ , ನಸ್ರೂಲ್ ಇಸ್ಲಾಂ ಮುಂತಾದವರ ಭಾವಗೀತಾ ಕೃತಿಗಳನ್ನೂ, ಬ್ಲಾಂಕ್‌ವರ್ಸನಲ್ಲಿ ಬರೆದ ‘ಮೇಘನಾದ ವಧ’ ಕಾವ್ಯವನ್ನೂ ಛಂದೋಬದ್ಧವಾಗಿ ಹಾಡಿಯೂ ಓದಿಯೂ ಕನ್ನಡ  ಸರಸ್ವತಿಗೆ ಮಹತ್ ಸೇವೆ ಸಲ್ಲಿಸಿದರು.

ಅಲ್ಲಿಂದ ಹೊರಡುವ ಮುನ್ನ ಮಹಾಪುರುಷಜಿಯವರನ್ನು ಸಂದರ್ಶಿಸಿ, ಪ್ರಣಾಮ ಸಲ್ಲಿಸುವ ಭಾಗ್ಯ ನಾಲ್ಕು ಐದುಸಾರಿ ನಮಗೆ ದೊರೆಕೊಂಡಿತ್ತು. ಅವರು ದೇಹದಲ್ಲಿ ತುಂಬ ಅಸ್ವಸ್ಥರಾಗಿದ್ದುದರಿಂದ ದೀರ್ಘ ಸಂಭಾಷಣೆಗೆ ಅವಕಾಶವಿರಲಿಲ್ಲ. ಪ್ರತಿಸಲವೂ ಅವರು ನಮ್ಮ ಊಟ, ವಸತಿ, ಆರೋಗ್ಯ ಇವುಗಳ ವಿಷಯದಲ್ಲಿ ಮಾತೃಸದೃಶವಾದ ಆಸಕ್ತಿಯಿಂದ ವಿಚಾರಿಸುತ್ತಿದ್ದರು. ನಾವು ದಕ್ಷಿಣ ದೇಶದವರಾದುದರಿಂದ ನಮಗೆ ಬಂಗಾಳಿಯ ಭಕ್ಷ್ಯಭೋಜ್ಯ ಭೋಜನಾದಿಗಳು ಸೇರುತ್ತವೆಯೊ ಇಲ್ಲವೊ ಎಂಬ ಕಾತರ ಅವರಿಗೆ!

ಕೊನೆಯ ಸಾರಿ ಬೀಳ್ಕೊಳ್ಳುವ ಮುದಲು ಅವರಿಗೆ ಪ್ರಣಾಮ ಸಲ್ಲಿಸಲು ಹೋದಾಗ ಅವರು ಆಶೀರ್ವದಿಸಿದ ಕೊನೆಯ ಮಾತುಗಳಿವು: “ಶ್ರೀ ಗುರು ಮಹಾರಾಜರು ನಿಮ್ಮ ಬಳಿಯೆ ಸದಾ ಇರುವರು!”

ದೀಪ್ತ ಚೇತಸನಾಗಿ, ದಿವ್ಯ ಸಾನ್ನಿಧ್ಯವನ್ನು ಹೃದಯದಲ್ಲಿ ಹೊತ್ತು, ಊರಿಗೆ ಹಿಂತಿರುಗಿದ ಮೇಲೆ, ಇತರರಿಗಿಂತಲೂ ನಾನು ತುಸು ಎತ್ತರವಾಗಿ ಬಿಟ್ಟಂತೆ ನನಗೆ ಅನುಭವವಾಗತೊಡಗಿತು: ಮಾನಸಿಕವಾಗಿ ಮಾತ್ರವೆ ಅಲ್ಲ, ದೈಹಿಕವಾಗಿಯೂ ಅದು ಪ್ರತಿಫಲಿತವಾದಂತೆ ತೋರುತ್ತಿತ್ತು! ಅದನ್ನು ಕುರಿತು ಹಿರಿಯರೊಬ್ಬರೊಡನೆ ಪ್ರಸ್ತಾಪಿಸಿದಾಗ ಅವರು ಹೇಳಿದರು: “ಹೌದು, ದೀಕ್ಷಾನಂತರ ಹಾಗೆ ಆಗುತ್ತದೆ: ಚೇತನ ತನ್ನ ಊರ್ಧ್ವಮುಖ ಉದ್ಧಾರವನ್ನು ಆ ಪ್ರತಿಮೆಯೊಡ್ಡಿ ಅನುಭವಿಸುತ್ತದೆ.”

ಶ್ರೀ ಮಹಾಪುರುಷಜಿ ನನ್ನ ಚೇತನವನ್ನು ತಮ್ಮ ಕೃಪಾಶಕ್ತಿಯಿಂದ ಉನ್ನತಗೊಳಿಸಿದ್ದರು ಎಂಬುದರಲ್ಲಿ ಸಂದೇಹವೆಲ್ಲಿ ಬಂತು?

ತಮ್ಮ ಮಾತುತತೆಗಳಲ್ಲಿ ಅವರೆ ಹೇಳಿದ್ದಾರೆ:

“ಯಾರು ಠಾಕೂರರನ್ನು ನೋಡಲಾಗಲಿಲ್ಲವೋ ಆದರೆ ನಮ್ಮನ್ನು ನೋಡುತ್ತಿದ್ದಾರೆಯೋ ಅವರಿಗೂ ಕಲ್ಯಾಣವಾಗುತ್ತದೆ. ನಾವೂನೂ ಠಾಕೂರರದೇ ಅಂಶ.”

ದಿವ್ಯಗುರು ಅನುಗ್ರಹಿಸಿದ ಆ ಮಂತ್ರರಥವನ್ನೇರಿ ತರುವಾಯದ ನನ್ನ ಬಾಳು ಪುಣ್ಯಪಥದಲ್ಲಿ ನೇರವಾಗಿ ಏಳುಬೀಳುಗಳಿಲ್ಲದೆ ಸಾಗಿತು ಎಂದು ಯಾರೂ ಊಹಿಸದಿರಲಿ. ಸಮಾನ್ಯ ಬದ್ಧಜೀವವೊಂದು ಮುಗ್ಗರಿಸಬಹುದಾದ ಎಡೆಗಳಲ್ಲೆಲ್ಲ ನನ್ನ ಜೀವವೂ  ಮುಗ್ಗರಿಸಿದೆ: ಮೃತ್ಯುವಿನ ಇದಿರು ತತ್ತರಿಸಿದೆ; ಪಾಪದ ಪಂಕದಲ್ಲಿ ಬಿದ್ದು ಲಿವಿಲಿವಿ ಒದ್ದಾಡಿದೆ; ಅರಿಷಡ್ವರ್ಗದ ಉರಿಯಲ್ಲಿ ಬೆಂದಿದೆ; ಅಹಂಕಾರ, ಅನ್ಯಾಯ , ಅವಹೇಳನಾದಿಗಳ ನಿಷ್ಠುರ ಮುಷ್ಟಿಯಲ್ಲಿ ಸಿಕ್ಕಿ ನೊಂದಿದೆ. ಸೋತು ಕುಗ್ಗಿದೆ; ಗೆದ್ದು ಹಿಗ್ಗಿದೆ. ಆದರೆ ಆಟದಲ್ಲಿ ಗಿರ್ರನೆ ತಿರುಗುವ ಬಾಲಕನು ಭೇಟಿಕಂಭವನ್ನು ಬಲವಾಗಿ ಹಿಡಿಯುವಂತೆ, ನನ್ನ ಚೇತನ ಶ್ರೀ ಗುರುಪಾದರೂಪದ ನಾಮ ಮಂತ್ರವನ್ನು ದೃಢವಾಗಿ ಆಶ್ರಯಿಸಿ, ಒಮ್ಮೊಮ್ಮೆ ದಾರಿತಪ್ಪಿದರೂ ದಿಕ್ಕುತಪ್ಪದಂತೆ, ಗುರಿಯತ್ತ ಸಾಗುತ್ತಿದೆ.

ಶ್ರೀ ಮಹಾಪುರುಷಜಿಯವರಿಂದ ದೀಕ್ಷೆ ಪಡೆದ ಒಬ್ಬ ಶಿಷ್ಯ ತನ್ನ ಪೂರ್ವಜೀವನದಲ್ಲಿ ಕೊಳಕು ಬಾಳು ನಡೆಸಿದ್ದನು ಎಂಬ ವಿಷಯವನ್ನು ಅವರ ಗಮನಕ್ಕೆ ತಂದಾಗ, ಅವರಾಡಿದ ಈ ಮಾತುಗಳು ಸರ್ವರಿಗೂ ಸರ್ವಕಾಲಕ್ಕೂ ಧೈರ್ಯವಿತ್ತು ಮೇಲೆತ್ತುವ ಆಶೀರ್ವಚನವಾಗಿದೆ:

“ನೀನೇನೊ ಹೇಳಿದೆಯಲ್ಲವೆ, ಅವನಲ್ಲಿ ಕೆಲವು ಕೆಟ್ಟಚಾಳಿಗಳಿವೆ ಎಂದು? ಅದೆಲ್ಲ ನನಗೆ ಬೇಕಿಲ್ಲ ; ನಡೆದುಹೋದ ಜೀವನದಲ್ಲಿ ಯಾರು ಏನು ಮಾಡಿದರು, ಏನು ಮಾಡಲಿಲ್ಲ, ಅದೆಲ್ಲ ನನಗೆ ತಿಳಿಯಬೇಕಾಗಿಲ್ಲ. ಆಗಿಹೋದದ್ದು ಆಗಿಯೆಹೋಯಿತು. ಈಗ ಅವನು ಇಲ್ಲಿಗೆ ಬಂದು ಬಿದ್ದಿದ್ದಾನೆ; ಠಾಕೂರರಿಗೆ ಶರಣಾಗತನಾಗಿದ್ದಾನೆ; ಎಲ್ಲ ತೊಳೆದು ಹೋಗುತ್ತದೆ; ಅವನು ಬದುಕುತ್ತಾನೆ. ಠಾಕೂರರು ಕಪಾಲ ಮೋಚನರು; ಏನನ್ನೂ ತೊಡೆದುಹಾಕುವ ಶಕ್ತಿ ಅವರಿಗಿದೆ. ಯುಗಾವತಾರದಲ್ಲಿ ಶರಣಾಗತನಾಗಿದ್ದಾನೆ – ಅದೇನು ಕಡಮೆ ಸಂಗತಿಯೆ? ಬಹುಸುಕೃತಿ ಇರದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಗುರುಮಹಾರಾಜನ್ ಅತನನ್ನು ಉದ್ಧಾರ ಮಾಡಿಯೆ  ಮಾಡಿತ್ತಾರೆ……….ಅವರ ಹತ್ತಿರ ಎಂತಹ ಪಾಪವೂ ಅಂತಹ ದೊಡ್ಡದೇನೂ ಅಲ್ಲ. ಅವರು ಅಂತರ್ಯಾಮಿ, ನಿನ್ನ ಭೂತ ಭವಿಷ್ಯತ್ತು ವರ್ತಮಾನ ಎಲ್ಲವನ್ನೂ ತಿಳಿದೇ ಅವರು ನಿನಗೆ ಕೃಪೆದೋರಿದ್ದಾರೆ………ಅಲ್ಲದೆ, ಯಾವಾಗ ನೀನು ನನ್ನ ಬಳಿ ನಿನ್ನೆಲ್ಲ ದುಷ್ಕೃತಿ ನಿವೇದನ ಮಾಡಿದೆಯೊ ಆವಾಗಲೆ ನಿನ್ನೆಲ್ಲ ಪಾಪಕ್ಷಯವೂ ಆಗಿಹೋಯಿತೆಂದು ತಿಳಿ!………”

ನಿಜ, ಅವರು ಆಶ್ವಾಸನೆ ನೀಡಿರುವಂತೆ, ಬಹುಸುಕೃತಿ ಇರದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ: ಕೇರಳದ ಎಲ್ಲಿಯೊ ಹುಟ್ಟಿದ ಒಬ್ಬ ಶ್ರೀವ್ಯಕ್ತಿ ಕರ್ನಾಟಕದ ಎಲ್ಲಿಯೊ ಹುಟ್ಟಿದ ಇನ್ನೊಬ್ಬ ವ್ಯಕ್ತಿಗೆ ಬಂಗಾಳದ ಎಲ್ಲಿಯೊ ಅವತರಿಸಿದ ಮತ್ತೊಬ್ಬ ದಿವ್ಯವ್ಯಕ್ತಿಯಿಂದ ಮಂತ್ರದೀಕ್ಷೆ ಅನುಗ್ರಹಿಸುವ ಪವಾಡ!


* “ಸ್ವಾಮಿ ಶಿವಾನಂದ ಸ್ಮೃತಿಸಂಗ್ರಹ” ಬಂಗಾಳಿ ಗ್ರಂಥಕ್ಕಾಗಿ ಬರೆದುದು. ಸ್ವಾಮಿ ಅಪೂರ್ವಾ ನಂದರು ಬಾಷಾಂತರಿಸಿ ಅದರಲ್ಲಿ ಅಚ್ಚುಮಾಡಿದ್ದಾರೆ. ಮೈಸೂರು. ಜೂನ್ ೭, ೧೯೬೭.