ಬಹು ಪುರಾತನ ಕಾಲದಿಂದಲೂ, ಮಾನಸಿಕ ಕಾಯಿಲೆಗಳು ಜನರನ್ನು ಕಾಡುತ್ತಿದ್ದರೂ ಜನರಿಗೆ ಅವುಗಳ ಪರಿಚಯವೇ ಇಲ್ಲ. “ಹುಚ್ಚು”, “ಬುದ್ಧಿಭ್ರಮಣೆ”, “ತಲೆ ಕೆಟ್ಟು ಹೋಗುವುದು” ಎಂಬಿತ್ಯಾದಿ ಪದಗಳಷ್ಟೇ ಗೊತ್ತು. ಮನೋರೋಗಿ ಅಥವಾ ಮಾನಸಿಕ ಕಾಯಿಲೆಯವನು ಅಥವಾ ಕಾಯಿಲೆಯವಳು ಎಂದರೆ “ಕೆದರಿನ ಕೂದಲು, ಚಿಂದಿಯಾದ ಉಡುಪು, ದಿನಗಟ್ಟಲೇ ಸ್ನಾನ ಕಾಣದೇ ಕೊಳಕಾದ ಶರೀರ, ಕ್ಷಣಕ್ಷಣಕ್ಕೆ ಬದಲಾಗುವ ಅಳು, ನಗು, ಭಯ, ಕೋಪಗಳ ಭಾವ ವಿಕಾರ, ಗುರಿ ಇಲ್ಲದ ಅಲೆದಾಟ, ಆಗಿಂದ್ದಾಗ್ಗೆ ಕಾಣಿಸಿಕೊಳ್ಳುವ ಅರ್ಥವಿಲ್ಲದ ಹಿಂಸಾಚಾರ ನೆನಪಿಗೆ ಬರುತ್ತದೆ. ಹೀಗಾಗಿ ಮನೋರೋಗಿ ಎಂದಾಕ್ಷಣ ಜನಗಳ ಮನಸ್ಸಿನಲ್ಲಿ ಭಯ, ಜಿಗುಪ್ಸೆ, ಸಿಟ್ಟು ಮೂಡಿಬರುತ್ತದೆ. ಮನೋರೋಗಿಯನ್ನು ದೂರಸರಿಸುತ್ತಾರೆ. ಅಪಾಯಕಾರಿ ಎಂದು ಅವನಿಂದ/ಅವಳಿಂದ ದೂರ ಉಳಿಯುತ್ತಾರೆ.

ಜನಪ್ರಿಯ ನಂಬಿಕೆಗಳು:

 • ಪಾಪಕರ್ಮ ಫಲ: “ಹಿಂದಿನ ಜನ್ಮದಲ್ಲೋ, ಈ ಜನ್ಮದಲ್ಲೋ ತಾನು ಮಾಡಿದ ಪಾಪ ಕೆಲಸಗಳಿಗೆ, ಮಾನಸಿಕ ಕಾಯಿಲೆಯನ್ನು ಪಡೆಯುವುದರ ಮೂಲಕ ವ್ಯಕ್ತಿ ಶಿಕ್ಷೆಯನ್ನು ಅನುಭವಿಸುತ್ತಾನೆ/ಳೆ. ನಂಬಿಕೆ ತಪ್ಪು.
 • ಮಾಟ, ಮಂತ್ರ, ತಂತ್ರಗಳ ಫಲ: “ಕೆಲವರು ಸಾಧನೆ ಮಾಡಿ ದುಷ್ಟವಿದ್ಯೆ/ದುಷ್ಟ ಶಕ್ತಿಯನ್ನು ಬಳಸಿ, ಇತರರಿಗೆ ಅಥವಾ ಆಯ್ದ ವ್ಯಕ್ತಿಗಳಿಗೆ ಮಾನಸಿಕ ಕಾಯಿಲೆ ಬರುವಂತೆ ಮಾಡುತ್ತಾರೆ”. ಇದು ಸುಳ್ಳು.
 • ದೆವ್ವ ಭೂತ, ಪಿಶಾಚಿಗಳ ಕೀಟಳೆ: “ಅಕಾಲ ಅಥವಾ ದುರ್ಮರಣಕ್ಕೆ ಈಡಾದವರಿಗೆ ಮೋಕ್ಷ-ಸದ್ಗತಿ ಇಲ್ಲ. ಅವರ ಆತ್ಮಗಳು ಅತೃಪ್ತರಾಗಿ ತಿರುಗಾಡುತ್ತಿರುತ್ತವೆ. ಅಮಾಯಕರ ದೇಹವನ್ನು ಪ್ರವೇಶಿಸಿ ಮನೋರೋಗವನ್ನುಂಟು ಮಾಡಿ ಖುಷಿಪಡುತ್ತವೆ”. ಇದು ಮಿಥ್ಯ.

 

 

 • ಮದ್ದು ಹಾಕುವುದು: “ವಿಷಕಾರಿ/ಹುಚ್ಚು ಬರಿಸುವ ಮದ್ದನ್ನು ವ್ಯಕ್ತಿಗೆ ಯಾರೋ ದುರಾತ್ಮರು ಹಾಕಿದ್ದಾರೆ/ಹಾಕಿಸಿದ್ದಾರೆ”. ಇದು ಸಾಧ್ಯವಿಲ್ಲ.
 • ದೇವರ ಮುನಿಸುಶಾಪ: “ಹರಕೆ ಕಾಣಿಕೆಗಳನ್ನು ಸಲ್ಲಿಸದೇ ಹೋದರೆ, ದೇವರ ಪೂಜೆ ಪುನಸ್ಕಾರಗಳನ್ನು ಶ್ರದ್ಧೆಯಿಂದ ಮಾಡದೇ ಹೋದರೇ, ದೇವರಿಗೆ ದೇವಸ್ಥಾನಗಳಿಗೆ ಅಪಚಾರ ಮಾಡಿದರೆ, ದೇವರಿಗೆ ಕೋಪ ಬಂದು, ಆ ವ್ಯಕ್ತಿಗೆ ಅಥವಾ ಆ ಕುಟುಂಬಕ್ಕೆ ಮಾನಸಿಕ ಕಾಯಿಲೆ ಬರುವಂತೆ ಮಾಡುತ್ತಾನೆ”. ನಂಬಿಕೆ ಬೇಡ.

 

 

 • “ಮನಸ್ಸಿಗೆ ಆಘಾತವಾಗುವಂತಹ ಕಷ್ಟನಷ್ಟ, ಸೋಲು, ಸಾವು, ಅಪಮಾನ, ನಿರಾಶೆ, ದುರಂತಗಳು, ಮೋಸ ವಂಚನೆಗಳು ಮಾನಸಿಕ ಸಮತೋಲನವನ್ನು ತಪ್ಪಿಸಿ ಮಾನಸಿಕ ಕಾಯಿಲೆಯನ್ನುಂಟು ಮಾಡುತ್ತವೆ.” ಕೆಲವರಲ್ಲಿ ಹೀಗಾಗುತ್ತದೆ.
 • ದುಶ್ಚಟಗಳು: “ಮದ್ಯಪಾನ, ಮಾದಕವಸ್ತು ಸೇವನೆ, ವೇಶ್ಯಾ ಸಂಪರ್ಕ, ಜೂಜಾಡುವುದು ಇತ್ಯಾದಿ ದುಶ್ಚಟಗಳಿಂದ ಮಾನಸಿಕ ಕಾಯಿಲೆ ಬರುತ್ತದೆ.” ಸರಿ.
 • ಹತೋಟಿ ಇಲ್ಲದ ಅರಿಷಡ್ವರ್ಗಗಳು: “ಅತಿಯಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳು ಮಾನಸಿಕ ಕಾಯಿಲೆಗೆ ಕಾರಣವಾಗುತ್ತವೆ.” ಸರಿ
 • ಅನುವಂಶೀಯತೆ: “ಹುಚ್ಚು ವಂಶ ಪಾರಂಪರ್ಯವಾಗಿ ಬರುತ್ತದೆ. ತಂದೆಗೋ, ತಾಯಿಗೋ ಕಾಯಿಲೆ ಇದ್ದರೆ, ಮಕ್ಕಳಿಗೂ ಬರುತ್ತದೆ”. ಶೇ. 10ರಷ್ಟು ಪ್ರಕರಣಗಳಲ್ಲಿ ರೋಗ ಅನುವಂಶೀಯವಾಗಿ ಬರಬಹುದು.
 • ಅತಿಯಾದ ಬೌದ್ಧಿಕ ಚಿಂತನೆ: “ವಿಪರೀತ ಓದುವುದು, ಯಾವುದಾದರೂ ವಿಷಯ, ವಿಷಯಗಳ ಬಗ್ಗೆ ಸದಾ ಚಿಂತನೆ ಮಾಡುವುದರಿಂದ ತಲೆಕೆಡುತ್ತದೆ.”    ತಪ್ಪು.
 • ತಲೆಗೆ ಪೆಟ್ಟು: “ತಲೆಗೆ ಜೋರಾದ ಏಟು ಬಿದ್ದರೆ, ಅಪಾಯ.” ಹೌದು.
 • ಭೀಭತ್ಸ ದೃಶ್ಯಗಳು: “ಭೀಕರವಾದ ಅನುಭವಗಳಿಂದ, ಹುಚ್ಚು ಹಿಡಿಯುತ್ತದೆ.” ಕೆಲವು ಸಲ ಸರಿ.
 • ಒಂಟಿತನ : “ಬಹುಕಾಲ ಒಂಟಿಯಾಗಿದ್ದರೆ, ಜನರಿಂದ ತಿರಸ್ಕೃತನಾದರೆ ವ್ಯಕ್ತಿಗೆ ಮಾನಸಿಕ ಕಾಯಿಲೆ ಬರುತ್ತದೆ.” ಬರಬಹುದು.
 • ಇಳಿವಯಸ್ಸು: “ತುಂಬಾ ವಯಸ್ಸಾದರೆ, ಅರಳುಮರುಳು ಜೊತೆಗೆ ಮನಸ್ಸು ರೋಗಗ್ರಸ್ತವಾಗುತ್ತದೆ.” ಹೌದು, ಹೀಗಾಗಬಹುದು.
 • ಅತಿಯಾದ ಹಸ್ತಮೈಥುನ: “ಋತುಸ್ರಾವದ ಅವಧಿಯಲ್ಲಿ ಹೆಣ್ಣಿನೊಂದಿಗೆ ಸಂಭೋಗದಿಂದ ಮನೋರೋಗ ಬರುತ್ತದೆ.” ತಪ್ಪು ಈರೀತಿ ಆಗುವುದಿಲ್ಲ.
 • “ಪಿತ್ಥ ಪದಾರ್ಥಗಳನ್ನು ಹೆಚ್ಚು ತಿಂದರೆ, ದೇಹದಲ್ಲಿ ಪಿತ್ಥ ಕೆರಳಿದರೆ, ಹುಚ್ಚು ಕಾಯಿಲೆ ಬರುತ್ತದೆ.” ಇದಕ್ಕೆ ಆಧಾರವಿಲ್ಲ.

ಪರಿಹಾರ ಚಿಕಿತ್ಸೆ

ಮಾನಸಿಕ ಕಾಯಿಲೆಗಳು ಬರಲು ಕಾರಣವಾಗುವ ಅಂಶಗಳ ಆಧಾರದ ಮೇಲೆ ಚಿಕಿತ್ಸೆಯನ್ನು ಜಾರಿಗೊಳಿಸಲಾಗುತ್ತಿತ್ತು. ಇಂದಿಗೂ ಈ ಅನೇಕ ಚಿಕಿತ್ಸಾ ವಿಧಾನಗಳು ನಮ್ಮ ಸಮಾಜದಲ್ಲಿ ಜಾರಿಯಲ್ಲಿವೆ.

 • ಪ್ರತಿ ಮಾಟ-ಮಂತ್ರತಂತ್ರಗಳನ್ನು ಮಂತ್ರವಾದಿಗಳ ಕೈಯಿಂದ ಮಾಡಿಸುವುದು.
 • ದೆವ್ವ-ಭೂತ ಪಿಶಾಚಿಗಳನ್ನು ಓಡಿಸುವುದು (ಮಂತ್ರವಾದಿಗಳು, ಪೂಜಾರಿಗಳು ಮತ್ತು ದೇವರುಗಳ ಸಹಾಯದಿಂದ)
 • ಮದ್ದೀಡನ್ನು “ವಾಂತಿ ಮಾಡಿಸುವುದರ ಮೂಲಕ” ತೆಗೆಸುವುದು.
 • ದೇವರಪೂಜೆ, ಪುನಸ್ಕಾರ, ತೀರ್ಥಯಾತ್ರೆ, ಹರಕೆ, ಕಾಣಿಕೆಗಳ ಮೂಲಕ ದೇವರನ್ನು ಒಲಿಸಿಕೊಳ್ಳುವುದು, ದೇವಶಾಪ/ಮುನಿಸಿನಿಂದ ತಪ್ಪಿಸಿಕೊಳ್ಳುವುದು, ದೈವಕೃಪೆ/ಕರುಣೆಗಾಗಿ ಪ್ರಾರ್ಥಿಸುವುದು. ಅನೇಕ ಬಗೆಯ ಧಾರ್ಮಿಕ ವಿಧಿಗಳನ್ನು ಮಾಡುವುದು. ದಾನ-ಧರ್ಮ-ದತ್ತಿಗಳನ್ನು ಮಾಡುವುದು.
 • ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವುದು ಅಥವಾ ವ್ಯಕ್ತಿಯ ಪರವಾಗಿ ಬೇರೆಯವರು ಮಾಡಿಸುವುದು.
 • ಮನೋರೋಗಿಯನ್ನು ದೇವಸ್ಥಾನ, ಮಠ, ದರ್ಗಾ, ಚರ್ಚುಗಳಲ್ಲಿಟ್ಟು ಪ್ರತಿದಿನ “ಧಾರ್ಮಿಕ ವಿಧಿಗಳನ್ನು” ಆಚರಿಸುವುದು. ಪವಿತ್ರ ನೀರಲ್ಲಿ ಮಿಂದು ಅಥವಾ ಆ ನೀರನ್ನು ಚುಮುಕಿಸುವುದು.
 • ಉಪವಾಸವಿರುವುದು, ಆಹಾರ ಪಥ್ಯ ಮಾಡುವುದು.
 • ಮನೋರೋಗಿಯನ್ನು ಒಂಟಿಯಾಗಿ, ಕೋಣೆಯಲ್ಲಿ ಕೂಡಿಹಾಕುವುದು.
 • ಮನೋರೋಗಿಯನ್ನು “ಮಾನಸಿಕ ಆಸ್ಪತ್ರೆ”ಯಲ್ಲಿಡುವುದು.
 • ಅವರ ಪಾಡಿಗೆ ಅವರನ್ನು ಬಿಡುವುದು. ಸ್ವಲ್ಪ ಕಾಲಾನಂತರ ಮನೋರೋಗ ತನಗೆ ತಾನೇ ಕಡಿಮೆಯಾಗುತ್ತದೆ.

ಈ ತಪ್ಪು ನಂಬಿಕೆ ಆಚರಣೆಗಳನ್ನು ಬಿಡಬೇಕು. ರೋಗ ಪ್ರಾರಂಭವಾಗುತ್ತಿದ್ದಂತೆ ಮನೋವೈದ್ಯರನ್ನು ಕಾಣಬೇಕು. ಚಿಕಿತ್ಸೆ ಕೊಡಿಬೇಕು.

ಮಾನಸಿಕ ಕಾಯಿಲೆಗಳು ಬರಲು ಕಾರಣವೇನು?

ಹಲವು ಕಾರಣಗಳು ಸೇರಿ ಮಾನಸಿಕ ಕಾಯಿಲೆಗಳು ಸೃಷ್ಟಿಯಾಗುತ್ತದೆ.

1.   ಅನುವಂಶೀಯತೆ.

2.   ಮಿದುಳಿನಲ್ಲಿ ಆಗುವ ರಾಸಾಯನಿಕ ಬದಲಾವಣೆಗಳು, ಡೋಪಮಿನ್, ಸೆರೋಟೊನಿನ್, ಗಾಬಾ ಇತ್ಯಾದಿ ನರವಾಹಕ ವ್ಯವಸ್ಥೆ ಏರುಪೇರಾಗಿರುತ್ತದೆ.

3.   ಮಿದುಳಿಗೆ ಸಣ್ಣ ಅಥವಾ ದೊಡ್ಡ ಪ್ರಮಾಣದ ಹಾನಿ.

4.   ಮಿದುಳಿಗೆ ರಕ್ತ ಪೂರೈಕೆಯಲ್ಲಿ ಕೊರತೆಯುಂಟಾಗುವುದು.

5.   ಅತಿಯಾದ ಆಲ್ಕೋಹಾಲ್-ಮಾದಕ ವಸ್ತುಗಳ ಸೇವನೆ. ವಿವಿಧ ರೀತಿಯ ನಂಜು ವಸ್ತುಗಳು ಮಿದುಳನ್ನು ಹಾನಿ ಮಾಡುವುದು.

6.   ಬಾಲ್ಯದಲ್ಲಿ ನೋವಿನ ಅನುಭವಗಳು, ಪ್ರೀತಿ ಆಸರೆಯಿಂದ ವಂಚಿತವಾಗಿರುವುದು.

7.   ಮೇಲಿಂದ ಮೇಲೆ ಕಷ್ಟ, ನಷ್ಟ, ಸೋಲು, ನಿರಾಶೆಗಳುಂಟಾಗುವುದು.

8.   ಮಾನಸಿಕ ಚಿಂತೆ, ವ್ಯಥೆ, ಒತ್ತಡಗಳು, ಅತೃಪ್ತಿ, ಅಸಮಾಧಾನ, ಆರ್ಥಿಕ ಸಮಸ್ಯೆಗಳು.

9.   ದೀರ್ಘಕಾಲದ ಹಾಗೂ ಮಾನಸಿಕ ಸಾಮಾಜಿಕ ಕಳಂಕವನ್ನುಮಾಡುವ, ಪ್ರಾಣಾಪಾಯವನ್ನುಂಟು ಮಾಡುವ ಕಾಯಿಲೆಗಳು ಅಥವಾ ಅನಾರೋಗ್ಯ.

10. ಸಾಮಾಜಿಕ ಅವ್ಯವಸ್ಥೆ ಹಾಗೂ ತೊಂದರೆದಾಯಕ ಪರಿಸರ.

ಸಾಮಾನ್ಯ ಮಾನಸಿಕ ಕಾಯಿಲೆಗಳು

1.         ಖಿನ್ನತೆ ಕಾಯಿಲೆ.

2.         ಆತಂಕ, ಭಯದ ಮನೋರೋಗಗಳು.

3.         ಉನ್ಮಾದ ಮನೋರೋಗ.

4.         ಗೀಳು ಮನೋರೋಗ.

5.         ಸ್ಕಿಜೋಫ್ರೀನಿಯಾ.

6.         ಬೈಪೋಲಾರ್ ಅಪೆಕ್ಟಿವ್ ಡಿಸಾರ್ಡರ್ (ಮೇನಿಯಾ-ಖಿನ್ನತೆ ಕಾಯಿಲೆ).

7.         ಇಳಿ ವಯಸ್ಸಿನ ಮರೆವಿನ ರೋಗ-ಡೆಮನ್ಷಿಯ.

8.         ಸನ್ನಿ-ಡೆಲಿರಿಯಂ.

9.         ಮದ್ಯಪಾನ – ಮಾದಕ ವಸ್ತುಗಳ ಚಟ.

10.       ಬುದ್ಧಿಮಾಂದ್ಯತೆ.

11.       ಮಕ್ಕಳಲ್ಲಿ ಕಂಡುಬರುವ ಮಾನಸಿಕ ಅಸ್ವಸ್ಥತೆಗಳು.

12.       ವ್ಯಕ್ತಿತ್ವ ದೋಷದ ಕಾಯಿಲೆಗಳು.

ಚಿಕಿತ್ಸೆ

1.         ಔಷಧಿಗಳು: ಖಿನ್ನತೆ ನಿವಾರಕ, ಪ್ರಧಾನ ಮತ್ತು ಅಲ್ಪಮಟ್ಟದ ಶಮನಕಾರಿಗಳು.

2.         ವಿದ್ಯುತ್ ಕಂಪನ ಚಿಕಿತ್ಸೆ.

3.         ಮನೋಚಿಕಿತ್ಸೆ ಮತ್ತು ನಡುವಳಿಕೆ ಚಿಕಿತ್ಸೆ.

4.         ಆಪ್ತ ಸಲಹೆ ಮತ್ತು ಸಮಾಧಾನ.

5.         ತರಬೇತಿ ಮತ್ತು ಅಂಗಮರ್ಧನ ಚಿಕಿತ್ಸೆ (ಮುಖ್ಯವಾಗಿ ಬುದ್ಧಿಮಾಂದ್ಯ ಮಕ್ಕಳಿಗೆ)

6.         ಅನುಕೂಲಕರ ಪರಿಸರ

7.         ವಿರಾಮಕರ ಹಾಗೂ ಕಲಾ ಚಟುವಟಿಕೆಗಳು, ಯೋಗ, ಧ್ಯಾನ.