Categories
e-ದಿನ

ಮಾರ್ಚ್-25

ಪ್ರಮುಖಘಟನಾವಳಿಗಳು:

1655: ಕ್ರಿಶ್ಚಿಯಾನ್ ಹ್ಯೂಗೆನ್ಸ್ ಅವರು ಶನಿ ಗ್ರಹದ ದೊಡ್ಡ ಚಂದ್ರನಾದ ‘ಟೈಟನ್’ ಅನ್ನು ಪತ್ತೆ ಹಚ್ಚಿದರು

1807: ಬ್ರಿಟಿಷ್ ಸಾಮ್ರಾಜ್ಯದಲ್ಲಿ ಗುಲಾಮರನ್ನು ಮಾರಾಟ ಮಾಡುವುದನ್ನು ನಿಷೇದಿಸುವ ‘ಸ್ಲೇವ್ ಟ್ರೇಡ್ ಆಕ್ಟ್’ ಖಾಯಿದೆಯನ್ನು ಜಾರಿಗೊಳಿಸಲಾಯಿತು.

1807: ವಿಶ್ವದ ಪ್ರಪ್ರಥಮ ಪ್ರಯಾಣಿಕರ ರೈಲ್ವೇ ವ್ಯವಸ್ಥೆಯಾದ ಓವೈಸ್ಟೆರ್ ಮೌತ್ ರೇಲ್ವೆ ಆರಂಭಗೊಂಡಿತು. ಮುಂದೆ ಇದು ‘ಸ್ವಾನ್ಸಿಯಾ ಅಂಡ್ ಮಂಬಲ್ಸ್ ರೈಲ್ವೇ’ ಎಂದು ಹೆಸರಾಯಿತು.

1811: ‘ದಿ ನೆಸೆಸಿಟಿ ಆಫ್ ಅಥೇಯಿಸಮ್’(ನಾಸ್ತಿಕವಾದದ ಅಗತ್ಯತೆ) ಎಂಬ ಕರಪತ್ರ ಪ್ರಕಟಿಸಿದ ಪೆರ್ಸಿ ಬೈಶ್ಷೆ ಶೆಲ್ಲಿ ಅವರನ್ನು ಆಕ್ಸ್ಫರ್ಡ್ ವಿಶ್ವವಿದ್ಯಾಲಯದಿಂದ ಉಚ್ಛಾಟಿಸಲಾಯಿತು.

1949: ಬೃಹತ್ ಪ್ರಮಾಣದ ಗಡೀಪಾರುಗಳ ‘ಮಾರ್ಚ್ ಡೆಪೋರ್ಟೇಶನ್’ ಘಟನೆಯಲ್ಲಿ 92,000 ಜನರನ್ನು ಸಂಕಷ್ಟಕ್ಕೆ ಗುರಿಪಡಿಸಲಾಯಿತು. ಎಸ್ಟೋನಿಯಾ, ಲಾಟ್ವಿಯಾ ಮತ್ತು ಲಿಥುವೇನಿಯಾಗಳಲ್ಲಿ ಜನರನ್ನು ಬೆದರಿಸಿ ಬಾಲ್ಟಿಕ್ಸ್ ಪ್ರದೇಶದಿಂದ ಸೋವಿಯತ್ ಯೂನಿಯನ್ನಿನ ದೂರದ ಪ್ರದೇಶಗಳಿಗೆ ಗಡೀಪಾರು ಮಾಡಲಾಯಿತು.

1957: ಐರೋಪ್ಯ ರಾಷ್ಟ್ರಗಳ ಆರ್ಥಿಕ ಸಮುದಾಯವು (ಯೋರೋಪಿಯನ್ ಎಕನಾಮಿಕ್ ಕಮ್ಮ್ಯೂನಿಟಿ) ಸ್ಥಾಪನೆಗೊಂಡಿತು. ಪಶ್ಚಿಮ ಜರ್ಮನಿ, ಫ್ರಾನ್ಸ್, ಇಟಲಿ, ಬೆಲ್ಜಿಯಂ, ನೆದರ್ಲ್ಯಾಂಡ್ಸ್ ಮತ್ತು ಲುಕ್ಸೆಂಬೋರ್ಗ್ ದೇಶಗಳು ಈ ಸಮುದಾಯದ ಪ್ರಾರಂಭಿಕ ಸದಸ್ಯ ದೇಶಗಳಾದವು.

1965: ನಾಗರಿಕ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಅವರ ನೇತೃತ್ವದ ಸೇಲ್ಮಾದಿಂದ ಅಲಬಾಮಾದ ರಾಜಧಾನಿ ಮಾಂಟಗೋಮೇರಿವರೆಗಿನ ನಾಲ್ಕು ದಿನಗಳ 50 ಕಿಲೋಮೀಟರ್ ಪಾದಯಾತ್ರೆಯು ಯಶಸ್ವಿಯಾಗಿ ಮುಕ್ತಾಯಗೊಂಡಿತು.

1971: ಬಾಂಗ್ಲಾದೇಶ ವಿಮೋಚನಾ ಚಳುವಳಿಯನ್ನು ಹತ್ತಿಕ್ಕಲು ಪಾಕಿಸ್ತಾನಿ ಸಶಸ್ತ್ರ ಪಡೆಗಳು ‘ಆಪರೇಷನ್ ಸರ್ಚ್ಲೈಟ್’ ಕಾರ್ಯಾಚರಣೆ ಆರಂಭಗೊಳಿಸಿತು. ಈ ಕಾರ್ಯಾಚರಣೆಯಲ್ಲಿ ಜನರಲ್ ಟಿಕ್ಕಾ ಖಾನ್ ನೇತೃತ್ವದ ಪಾಕಿಸ್ಥಾನಿ ಸೇನೆಯು ಬಾಂಗ್ಲಾದೇಶಿ ಸ್ವಾತಂತ್ರ್ಯ ಹೋರಾಟದ ಕೇಂದ್ರಬಿಂದುವಾಗಿದ್ದ ಡಾಕಾ ವಿಶ್ವವಿದ್ಯಾಲಯದ ಮೇಲೆ ಹಾಗೂ ನಾಗರೀಕ ಸಮುದಾಯದ ಮೇಲೆ ದಾಳಿ ನಡೆಸಿ ನೂರಾರು ಯುವಕರು ಹತರಾದರು.

1975: ಸೌದಿ ಅರೇಬಿಯಾದ ದೊರೆ ಫೈಸಲ್ ಅವರನ್ನು ರಿಯಾದಿನ ಅರಮನೆಯಲ್ಲಿ ಅವರ ಸೋದರಳಿಯ ರಾಜಕುಮಾರ ಮುಸೀದ್ ಗುಂಡಿಟ್ಟು ಕೊಂದ. ಮಾನಸಿಕ ರೋಗಿಯೆಂದು ಹೇಳಲಾದ ಮುಸೀದ್ ಅನ್ನು ಜೂನ್ ತಿಂಗಳಲ್ಲಿ ಮರಣದಂಡನೆಗೆ ಗುರಿಪಡಿಸಲಾಯಿತು.

1995: ವಿಶ್ವದ ಪ್ರಥಮ ‘ವಿಕಿ’ ಎನಿಸಿದ ಹಾಗೂ ಪೋರ್ಟ್ ಲ್ಯಾಂಡ್ ಪ್ಯಾಟರನ್ ರೆಪಾಸಿಟರಿಯ ಭಾಗವಾದ ‘ವಿಕಿವಿಕಿವೆಬ್’ (WikiWikiWeb) ಅನ್ನು ವಾರ್ಡ್ ಕನ್ನಿಂಗ್ಹ್ಯಾಮ್ ಅವರು ಸಾರ್ವತ್ರಿಕಗೊಳಿಸಿದರು.

1995: ವಿಶ್ವದ ಪ್ರಥಮ ‘ವಿಕಿ’ ಎನಿಸಿದ ಹಾಗೂ ಪೋರ್ಟ್ ಲ್ಯಾಂಡ್ ಪ್ಯಾಟರನ್ ರೆಪಾಸಿಟರಿಯ ಭಾಗವಾದ ‘ವಿಕಿವಿಕಿವೆಬ್’ (WikiWikiWeb) ಅನ್ನು ವಾರ್ಡ್ ಕನ್ನಿಂಗ್ಹ್ಯಾಮ್ ಅವರು ಸಾರ್ವತ್ರಿಕಗೊಳಿಸಿದರು.

2007: ಭಾರತದ ಸ್ವದೇಶೀ ನಿರ್ಮಿತ ‘ಅಸ್ತ್ರ’ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವು ಒರಿಸ್ಸಾದ ಬಾಲಸೋರ್ ಸಮೀಪದ ಚಂಡೀಪುರ ಪರೀಕ್ಷಾ ವಲಯದಲ್ಲಿ ಯಶಸ್ವಿಯಾಗಿ ನೆರವೇರಿತು.

2008: ಭೂತಾನಿನಲ್ಲಿ ನಡೆದ ಮೊತ್ತಮೊದಲ ಸಂಸದೀಯ ಚುನಾವಣೆಯಲ್ಲಿ ಭೂತಾನ್ ಪೀಸ್ ಅಂಡ್ ಪ್ರಾಸ್ಪರಿಟಿ ಪಕ್ಷವು ಗೆಲುವು ಸಾಧಿಸಿತು. ಒಟ್ಟು 47 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಈ ಪಕ್ಷ 44 ಸ್ಥಾನಗಳಲ್ಲಿ ಗೆಲುವು ಪಡೆಯಿತು. ಚುನಾವಣೆಯಲ್ಲಿ ಮತದಾರರು ದೊರೆಯ ಸಂಬಂಧಿಗಳನ್ನು ತಿರಸ್ಕರಿಸಿದರು. ಉಳಿದ ಮೂರು ಸ್ಥಾನಗಳಲ್ಲಿ ಮಾತ್ರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಗೆದ್ದಿತು.

2008: ಪಾಕಿಸ್ಥಾನದ 25ನೇ ಪ್ರಧಾನಿಯಾಗಿ ಪಾಕಿಸ್ಥಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ನಾಯಕ ಯೂಸಫ್ ರಝಾ ಜಿಲಾನಿ ಅವರು ಇಸ್ಲಾಮಾಬಾದಿನಲ್ಲಿ ಅಧಿಕಾರ ಸ್ವೀಕರಿಸಿದರು.

2009: ಸುಲಭ್ ಆರೋಗ್ಯ ಸಮುದಾಯ ಆಂದೋಲನದ ಸ್ಥಾಪಕ ಡಾ. ಬಿಂದೇಶ್ವರ್ ಪಾಠಕ್ ಅವರು ‘200ರ ಸ್ಟಾಕ್ ಹೋಮ್’ ವಾಟರ್ ಪ್ರಶಸ್ತಿಗೆ ಆಯ್ಕೆಯಾದರು.

ಪ್ರಮುಖಜನನ/ಮರಣ:

1908: ಕನ್ನಡ ಹೋರಾಟಗಾರ, ಬರಹಗಾರ, ಪತ್ರಕರ್ತ ಮತ್ತು ಚಿತ್ರಸಾಹಿತಿ ನಾಡಿಗೇರ ಕೃಷ್ಣರಾಯ ಅವರು ಹರಿಹರದಲ್ಲಿ ಜನಿಸಿದರು. ಅನೇಕ ಕೃತಿ ರಚಿಸಿದ್ದ ಇವರು ಅ.ನ. ಕೃಷ್ಣರಾಯರ ನೇತೃತ್ವದ ಕನ್ನಡ ಚಳುವಳಿಯಲ್ಲಿ ಪಾಲ್ಗೊಂಡಿದ್ದರು ಹಾಗೂ ಕೆಲವೊಂದು ಚಲನಚಿತ್ರಗಳಿಗೆ ಸಂಭಾಷಣೆ ಮತ್ತು ಗೀತರಚನೆ ಸಹಾ ಮಾಡಿದ್ದರು.

1914: ಹಸಿರು ಕ್ರಾಂತಿಯ ಹರಿಕಾರ, ಅಮೆರಿಕದ ಕೃಷಿ ವಿಜ್ಞಾನಿ ನಾರ್ಮನ್ ಅರ್ನೆಸ್ಟ್ ಬೊರ್ಲಾಗ್ ಅವರು ಅಮೆರಿಕದ ಲೋವಾ ಬಳಿಯ ಕ್ರೆಸ್ಕೋ ಎಂಬಲ್ಲಿ ಜನಿಸಿದರು. ಇವರಿಗೆ 1970 ವರ್ಷದಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಸಂದಿತು.

1916: ರೊಮ್ಯಾಂಟಿಕ್ ಕಲೆಯ ರಸಋಷಿ ಎನಿಸಿದ್ದ ಎಸ್ ಎಂ ಪಂಡಿತ್‌ ಅವರು ಕಲ್ಬುರ್ಗಿಯಲ್ಲಿ ಜನಿಸಿದರು. ಪೌರಾಣಿಕ ಪತ್ರಗಳಿಂದ ಸಿನಿಮಾ ಚಲನಚಿತ್ರ ನಟನಟಿಯರ ಚಿತ್ರಣ, ಹಾಗೂ ವಿದೇಶಗಳಲ್ಲಿನ ಅಂತರರಾಷ್ಟ್ರೀಯ ಪ್ರದರ್ಶನಗಳವರೆಗೆ ಇವರ ಕೀರ್ತಿ ವ್ಯಾಪಿಸಿತ್ತು. ಲಂಡನ್ನಿನ ರಾಯಲ್ ಸೊಸೈಟಿ ಫೆಲೋಷಿಪ್. ಕರ್ನಾಟಕ ರಾಜ್ಯ ಲಲಿತಕಲಾ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದ ಹಲವಾರು ಗೌರವಗಳು ಇವರಿಗೆ ಸಂದಿದ್ದವು.

1937: ಡಾಮಿನೋಸ್ ಪಿಜ್ಜಾ ಸ್ಥಾಪಕರಾದ ಟಾಮ್ ಮೊನಘನ್ ಅವರು ಅಮೆರಿಕದ ಮಿಚಿಗನ್ ಪ್ರದೇಶದ ಆನ್ ಹಾರ್ಬರ್ ಎಂಬಲ್ಲಿ ಜನಿಸಿದರು.

1942: ಡಾ. ಗೀತಾ ನಾಗಭೂಷಣ ಅವರು ಕಲ್ಬುರ್ಗಿ ಜಿಲ್ಲೆಯ ಸವಳಗಿ ಗ್ರಾಮದಲ್ಲಿ ಜನಿಸಿದರು. ತಮ್ಮ ಶಿಕ್ಷಕ ವೃತ್ತಿ ಮತ್ತು ಬರಹ ಪ್ರವೃತ್ತಿಗಳಿಂದ ಪ್ರಸಿದ್ಧರಾದ ಇವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯದ ಡಾಕ್ಟರೇಟ್, ಅತ್ತಿಮಬ್ಬೆ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.

1979: ಭಾರತದ ಪ್ರಥಮ ಮಹಿಳಾ ಚೆಸ್ ಗ್ರ್ಯಾಂಡ್ ಮಾಸ್ಟರ ಎಸ್. ವಿಜಯಲಕ್ಷ್ಮೀ ಅವರು ಚೆನ್ನೈನಲ್ಲಿ ಜನಿಸಿದರು.

1914: ಫ್ರೆಂಚ್ ಲೆಕ್ಸಿಕೋಗ್ರಾಫರ್ ಮತ್ತು ಕವಿ ಫ್ರೆಡೆರಿಕ್ ಮಿಸ್ತ್ರಾಲ್ ಅವರು ಫ್ರಾನ್ಸಿನ ಮೈಲ್ಲಾನೆ ಎಂಬಲ್ಲಿ ನಿಧನರಾದರು. ಇವರಿಗೆ 1904ರ ವರ್ಷದಲ್ಲಿ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

1931: ಸ್ವಾತಂತ್ರ್ಯ ಹೋರಾಟಗಾರ, ಬರಹಗಾರ ಮತ್ತು ಪತ್ರಕರ್ತ ಗಣೇಶ್ ಶಂಕರ್ ವಿದ್ಯಾರ್ಥಿ ಅವರು ಕಾನ್ಪುರದಲ್ಲಿ ನಿಧನರಾದರು. ದೇಶಕ್ಕೋಸ್ಕರ ಹಲವಾರು ಬಾರಿ ಸೆರೆವಾಸ ಅನುಭವಿಸಿದ ಇವರು 1931ರ ವರ್ಷದಲ್ಲಿ ಉಂಟಾದ ಮತೀಯ ಗಲಭೆಗಳಲ್ಲಿ ಹಲವಾರು ಅಮಾಯಕರನ್ನು ರಕ್ಷಿಸಹೋಗಿ ದುಷ್ಕರ್ಮಿಗಳಿಂದ ಹತ್ಯೆಗೊಳಗಾದರು.