ಬೇಸಿಗೆಯ ದಿನಪೂರ್ತಿ ಭೂಮಿಗೆ ಸುಡುಬಿಸಿಲನ್ನು ನೀಡಿ ಸಂತೃಪ್ತಿ ಹೊಂದಿದ ಸೂರ್ಯ ಅಂದಿಗೆ ತನ್ನ ಕೆಲಸ ಮುಗಿಯಿತೆಂದು ಪಶ್ಚಿಮ ದಿಗಂತವನ್ನು ಮುಟ್ಟಿದ್ದ. ಶಾಲೆಗೆ ರಜವಿದ್ದುದರಿಂದ ಬೆಳಗಿನಿಂದ ಸಂಜೆಯವರೆಗೆ ಆಟ, ಪಾಠ, ಹರಟೆಗಳಲ್ಲಿ ಕಾಲ ತಳ್ಳಿದ್ದ ಉಲ್ಲಾsಸ್ ಮತ್ತು ಅವನ ಗೆಳೆಯರು, ಸೂರ್ಯನಿಗೆ ವಿದಾಯ ಹೇಳುವವರಂತೆ ಮೈದಾನದ ತುದಿಯಲ್ಲಿದ್ದ ದೊಡ್ಡ ಬಂಡೆಯ ಮೇಲೆ ಸೇರಿದ್ದರು. ಅವರವರಿಗೆ ಇಷ್ಟಬಂದ ಭಂಗಿಯಲ್ಲಿ ಕುಳಿತು ತಮ್ಮ ಹುಡುಗುತನದ ಸ್ವೇಚ್ಛ ಕ್ಷಣಗಳ ಆನಂದ ಸವಿಯುತ್ತಿದ್ದರು. ಎಲ್ಲರೂ ಹೈಸ್ಕೂಲಿನಲ್ಲಿ ಓದುತ್ತಿದ್ದರು. ಪ್ರಪಂಚದಲ್ಲಿ ನಡೆಯುವ ಎಲ್ಲಾ ವಿಷಯಗಳಲ್ಲಿಯೂ ಕುತೂಹಲ ತಳೆಯುವಂತಹ ಜೀವನ ಘಟ್ಟ. ಜವಾಬ್ದಾರಿಗಳಿಲ್ಲದೆ ಕಾಲ ಕಳೆಯುತ್ತಾ, ಮುಂದಿನ ಜೀವನದ ಬಗ್ಗೆ ಕನಸುಗಳನ್ನು ಹೆಣೆಯುವ ಕಾಲ. ನಗರ ಜೀವನದ ಅನುಕೂಲತೆಗಳಿದ್ದರೂ, ನಗರ ಜೀವನದ ವೈಪ್ಯರೀತ್ಯಗಳು ಅವರ ಊರಿಗೆ ಇನ್ನೂ ತಲುಪಿರದ ಕಾರಣ ನಿಶ್ಚಿಂತೆಯಾಗಿ ಸ್ನೇಹಿತರು, ಆಟ, ಓದುಗಳಲ್ಲಿ ಕಾಲ ಕಳೆಯಬಹುದಾದ ಸುಂದರ ಪ್ರಶಾಂತ ಪರಿಸರ.

ಆಟವಾಡಿ ದಣಿದದ್ದರಿಂದ ಸ್ವಲ್ಪ ಹೊತ್ತು ಎಲ್ಲರೂ ಮೌನವಾಗಿಯೇ ಕುಳಿತಿದ್ದರು. ಇದ್ದಕ್ಕಿದ್ದಂತೆ ಉಲ್ಲಾಸ್ ‘ಏ! ನಿಮಗೆ ಒಂದು ವಿಷ್ಯ ಹೇಳಬೇಕು. ನಿನ್ನೆ ನಮ್ಮ ಅಪ್ಪ ಒಂದು ಅಕ್ಕಿ ಕಾಳು ತಂದಿದ್ದಾರೆ” ಎಂದು ಹೇಳಿದ.

ತಕ್ಷಣ ಕೃಷ್ಣ ’ಅದೇನು ದೊಡ್ಡ ವಿಷ್ಯ. ಪ್ರತಿ ತಿಂಗಳೂ ನಮ್ಮಪ್ಪ ಒಂದು ಮೂಟೆ ಅಕ್ಕಿ ತರ್ತಾರೆ” ಎಂದ. ಅವರ ಮನೆಯಲ್ಲಿ ಅವನ ಅಜ್ಜಿ, ತಾತ, ಚಿಕ್ಕಪ್ಪ- ಹೀಗೆ ಒಟ್ಟು ಕುಟುಂಬ. ಆದ್ದರಿಂದ ಅದು ಸಹಜವೇ.

“ಏ ತರಲೆ, ಸ್ವಲ್ಪ ನನ್ನ ಮಾತು ಮುಗಿಯುವವರೆಗೆ ಸುಮ್ಮನೆ ಇರ‍್ತೀಯಾ? ಆ ಅಕ್ಕಿ ಕಾಳು ನೀನು ಅನ್ನ ಮಾಡಿಕೊಂಡು ತಿನ್ನುವ ಹಾಗಿಲ್ಲ. ಅದರ ಮೇಲೆ ಒಂದು ಕಡೆ ನೆಹರೂ ಮತ್ತು ಮತ್ತೊಂದು ಕಡೆ ಗಾಂಧೀಜಿಯವರ ಚಿತ್ರಗಳನ್ನು ಪೇಂಟ್ ಮಾಡಿದ್ದಾರೆ. ಅಕ್ಕಿ ಕಾಳನ್ನು ಒಂದು ಟ್ಯೂಬ್ ಒಳಗೆ ಇಟ್ಟಿದ್ದಾರೆ. ಅದನ್ನು ಹೇಗೆ ಬರೆದರೋ? ನೋಡಿದರೆ ಆಶ್ಚರ್ಯವಾಗುತ್ತದೆ. ಈಗ ಹೇಳು ಇದು ವಿಶೇಷ ವಿಷಯ ತಾನೆ?”

ಅಷ್ಟುಹೊತ್ತು ಕಲ್ಲಿನ ಮೇಲೆ ಅರ್ಧ ಮಲಗಿಕೊಂಡಿದ್ದ ಕೃಷ್ಣ ಎದ್ದು ಕೂತು, ಕಣ್ಣರಳಿಸಿ “ಹೌದಾ?” ಎಂದು ಬಾಯಿಬಿಟ್ಟ.

“ನಮ್ಮ ಅಪ್ಪ ಹೇಳ್ತಾ ಇದ್ದರು, ಒಂದು ಅಕ್ಕಿಕಾಳಿನಲ್ಲಿ ಭಗವದ್ಗೀತೆಯ ಒಂದು ಪೂರ್ತಿ ಶ್ಲೋಕವನ್ನು ಕೊರೆದಿದ್ದನ್ನು ನೋಡಿದ್ದರಂತೆ.” ಈ ಮಾತನ್ನು ಹೇಳಿದವನು ಉಮೇಶ್.

‘ಹೌದು ಕಣೊ. ನಾನು ನಮ್ಮ ಅಪ್ಪ ತಂದ ಅಕ್ಕಿಕಾಳನ್ನು ನೋಡಿದ ಕೂಡಲೆ ಇಂಟರ್‌ನೆಟ್‌ನಲ್ಲಿ  ಏನಾದರೂ ಮಾಹಿತಿ ಸಿಗಬಹುದೇನೋ ಎಂದು ನೋಡಿದೆ. ಹೀಗೆ ಚಿಕ್ಕ ಅಕ್ಷರಗಳನ್ನು ಬರೆಯುವುದಕ್ಕೆ ಮೈಕ್ರೋಕಾಲಿಗ್ರಫಿ ಎಂದು ಹೇಳ್ತಾರೆ. ಭಾರತದಲ್ಲಿ ಬಹಳ ಹಿಂದೆಯೇ ಇಂತಹ ಸೂಕ್ಷ್ಮಲಿಪಿ ಬರೆಯುವವರು ಇದ್ರಂತೆ. ಇತ್ತೀಚಿಗೆ ಆಸ್ಟ್ರೇಲಿಯ, ಕೆನಡಾ ದೇಶಗಳಲ್ಲಿ ಅಕ್ಕಿಕಾಳಿನ ಮೇಲೆ ಹೆಸರು, ಚಿತ್ರ ಇತ್ಯಾದಿಗಳನ್ನು ಬಿಡಿಸಿ, ಬೇರೆ-ಬೇರೆ ಆಕಾರದಲ್ಲಿರುವ ಗಾಜಿನ ಟ್ಯೂಬ್‌ಗಳಲ್ಲಿ ಇಟ್ಟು ಸರಕ್ಕೆ ಪದಕ, ನೆಕ್‌ಲೇಸ್ ಎಲ್ಲ ಮಾಡ್ತಾರಂತೆ. ಚೀನಾ ದೇಶದಲ್ಲೂ ಈ ಕಲೆ ಇದೆಯಂತೆ” ಎಲ್ಲಾ ವಿಷಯದಲ್ಲಿಯೂ ಕುತೂಹಲ ತಳೆದು ವಿಷಯವನ್ನು ಮತ್ತಷ್ಟು ಆಳವಾಗಿ ತಿಳಿಯಲು ಉತ್ಸುಕನಾಗಿರುತ್ತಿದ್ದ ಉಲ್ಲಾಸ್ ಈ ಬಗ್ಗೆ ಆಗಲೇ ಸ್ವಲ್ಪ ಸಂಶೋಧನೆಯನ್ನೂ ಮಾಡಿದ್ದ.

ಹೀಗೆ ಉಲ್ಲಾಸ್ ಹೇಳುತ್ತಿರುವಾಗ ಅಲ್ಲಿಗೆ ನಾಗರಾಜ್ ಮೇಷ್ಟ್ರು ಬಂದರು. ನಾಗರಾಜ್ ಮೇಷ್ಟ್ರೆಂದರೆ ಹುಡುಗರಿಗೆ ಅಚ್ಚುಮೆಚ್ಚು. ಅವರು ಹುಡುಗರೊಂದಿಗೆ ಹುಡುಗರಾಗಿ ಬೆರೆಯುವುದೇ ಇದಕ್ಕೆ ಕಾರಣ. ಹಾಗೆಯೇ ತಾವು ಹೊಸ ವಿಷಯಗಳನ್ನು ತಿಳಿದುಕೊಳ್ಳುವುದೇ ಅಲ್ಲದೆ, ಅದರ ವಿಷಯ ಹುಡುಗರಿಗೂ ತಿಳಿಸಿ ಅವರನ್ನು ಚರ್ಚೆಯಲ್ಲಿ ತೊಡಗಿಸಿ, ಮಕ್ಕಳನ್ನು ಹೊಸ ಚಟುವಟಿಕೆಗಳತ್ತ ಪ್ರೇರೇಪಿಸುವ, ಹುರಿದುಂಬಿಸುವ ಅವರ ಸ್ವಭಾವ. ಮೇಷ್ಟ್ರು ಬಂದರೆಂದು ಎಲ್ಲರೂ ನೆಟ್ಟಗೆ ಕುಳಿತು ತಮ್ಮ ‘ನಮಸ್ಕಾರ’ ಹೇಳಿದರು.

“ಏನ್ರೋ. ಆಟ ಆಯಿತಾ? ಇವತ್ತಿನ ಹರಟೆ ವಿಷ್ಯ ಏನು?” ಎಂದು ಅವರೂ ಮಕ್ಕಳೊಂದಿಗೆ ಕುಳಿತರು.

ಸರಿ, ಅದುವರೆಗೂ ಅವರು ಮಾತನಾಡುತ್ತಿದ್ದ ವಿಷಯದ ಸಂಕ್ಷಿಪ್ತ ವರದಿಯನ್ನು ಒಪ್ಪಿಸಿದರು.

“ಅದೆಲ್ಲಾ ಸರಿ. ಆದರೆ ಹೀಗೆ ಅಕ್ಕಿಕಾಳಿನ ಮೇಲೆ ಪೇಂಟ್ ಮಾಡುವುದರಿಂದ ಏನು ಪ್ರಯೋಜನ ಸಾರ್?” ಸ್ವಲ್ಪ ಸೋಮಾರಿ ಸ್ವಭಾವದ ಕೃಷ್ಣನ ಪ್ರಶ್ನೆ.

ಅದಕ್ಕೆ ಮೇಷ್ಟ್ರು ಹೀಗೆ ಹೇಳಿದರು. “ಮನುಷ್ಯ ಇತರ ಪ್ರಾಣಿಗಳಿಗಿಂತ ಬೇರೆಯಾಗಿರುವುದು ಈ ಕಾರಣಕ್ಕೆ. ‘ಮಾನವ ಜನ್ಮ ದೊಡ್ಡದು. ಇದ ಹಾನಿ ಮಾಡಬೇಡಿ ಹುಚ್ಚಪ್ಪಗಳಿರಾ.’ ಎಂಬ ದಾಸರ ಪದ ಕೇಳಿಲ್ಲವೆ? ಕೇವಲ ತಿಂದುಂಡು, ತಿರಿಬೋಕಿಯಾಗಿರುವುದರಿಂದ ಆತ್ಮ ತೃಪ್ತಿ ಸಿಗುವುದಿಲ್ಲ. ಏನಾದರೂ ಸಾಧಿಸಬೇಕೆಂಬ ಆಸೆ ಇರುತ್ತದೆ. ಹಾಗಾಗಿಯೇ ವೃತ್ತಿಯ ಜೊತೆಗೇ ಏನಾದರೂ ಪ್ರವೃತ್ತಿಯನ್ನೂ ಬೆಳಸಿಕೊಂಡಿರುತ್ತಾನೆ. ಹಿಮಾಲಯ ಪರ್ವತ ಹತ್ತುವುದರಿಂದ ಏನು ಪ್ರಯೋಜನ? ಪರ್ವತ ಹತ್ತಿದಾಗ ತಾನು ಒಂದು ಕಷ್ಟಸಾಧ್ಯವಾದ ಕೆಲಸ ಸಾಧಿಸಿದೆನೆಂಬ ತೃಪ್ತಿ ಸಿಗುವುದಿಲ್ಲವೆ? ಅಲ್ಲದೆ ಒಂದು ಹೊಸ ವಿಷಯವನ್ನು ತಿಳಿದುಕೊಳ್ಳುವುದರಿಂದ ಮತ್ತಷ್ಟು ಸಂಬಂಧಿತ ವಿಷಯಗಳು ಬೆಳಕಿಗೆ ಬರುತ್ತವೆ. ಉದಾಹರಣೆಗೆ ಅಂತರಿಕ್ಷ ಯಾನ ಮಾಡಲು ಉಪಯೋಗಿಸಲೆಂದು ಅಮೆರಿಕದವರು ಕಂಡುಹಿಡಿದು ತಯಾರಿಸಿದ ಡಾಟ್ ಪೆನ್ ಈಗ ಎಲ್ಲರಿಗೂ ಉಪಯೋಗಕ್ಕೆ ಬರುವ ವಸ್ತುವಾಗಿದೆ. ಮಾಹಿತಿಯನ್ನು ಸಂಗ್ರಹಿಸುವ, ರವಾನಿಸುವ ತಂತ್ರಜ್ಞಾನ ಅಭಿವೃದ್ಧಿಯಾಗಿ, ಈಗ ಪ್ರಪಂಚದ ಒಂದು ಮೂಲೆಯಲ್ಲಿ ಜರಗುವ ಪ್ರಸಂಗ, ಕ್ಷಣ ಮಾತ್ರದಲ್ಲಿ ಪ್ರಪಂಚದ ಮೂಲೆ ಮೂಲೆಗೆ ತಲುಪಲು ಸಾಧ್ಯವಾಗಿದೆ. ಇದರಿಂದ ಮಾನವ ಜನಾಂಗದವರೆಲ್ಲಾ ಒಂದೇ ಎಂಬ ಭಾವನೆ ಬೆಳೆಯಲು ಅನುಕೂಲವಾಗುತ್ತದೆ. ಹಾಗೇ, ನಮ್ಮ ಯೋಧರಿಗೆ, ಹಿಮಾಲಯ ಹತ್ತಲು ಹೋಗುವವರಿಗೆ ಅನುಕೂಲವಾಗಲೆಂದು ಅನೇಕ ದಿನಗಳು ಸಂರಕ್ಷಿಸಿಡಲು ಸಾಧ್ಯವಾಗುವಂತೆ ತಯಾರಿಸಿದ ತಿಂಡಿ-ತಿನಸುಗಳನ್ನು, ಈಗ ಸಾಮಾನ್ಯರಿಗೂ ಸಿಗುವಂತೆ ತಯಾರಿಸಿ ಮಾರಾಟ ಮಾಡುತ್ತಿಲ್ಲವೆ?”

ಯಾವಾಗಲೂ ತಿಂಡಿ-ತಿನಿಸುಗಳನ್ನು ಅಚ್ಚುಕಟ್ಟಾಗಿ ಅನುಭವಿಸುವ ಕೃಷ್ಣ “ಅಯ್ಯೋ, ಬಿಡಿ ಸಾರ್. ಆ ಪ್ಯಾಕೆಟ್‌ನಲ್ಲಿ ಸಿಗುವ ಬಿಸಿಬೇಳೆಭಾತ್ ನಮ್ಮಮ್ಮ ಮಾಡುವ ಬಿಸಿಬೇಳೆಭಾತ್‌ನಷ್ಟು ಚೆನ್ನಾಗಿರುವುದಿಲ್ಲ.” ಎಂದು ತನ್ನ ಅಭಿಪ್ರಾಯ ಹೇಳಿದ.

“ಇದು ಒಳ್ಳೆಯ ಮಾಹಿತಿ. ನೋಡಿ ಹೀಗೇ ಒಂದು ವಿಷಯ ಹೇಳಿದ್ದರಿಂದ ಮತ್ತೊಂದು ಮಾಹಿತಿ ತಿಳಿಯಿತು. ಈಗ ಮಾಹಿತಿಯ ವಿಷಯವನ್ನೇ ತೆಗೆದುಕೊಳ್ಳಿ. ಎಷ್ಟೊಂದು ಮಾಹಿತಿಯನ್ನು, ಅಡಗಿಸಿ ಅಚ್ಚುಕಟ್ಟಾಗಿ ವಿಧವಿಧವಾದ ಸಂಗ್ರಹ ಸಾಧನಗಳಲ್ಲಿ ಸಂಗ್ರಹಿಸಿಡಬಹುದು. ಬಹಳ ಹಿಂದೆ ತಮಗೆ ತಿಳಿದ ಮಾಹಿತಿಯನ್ನು ಇನ್ನೊಬ್ಬರಿಗೆ ತಿಳಿಸದೆ ಮುಚ್ಚಿಡುತ್ತಿದ್ದರು. ಆದರೆ ಈಗ ನಡೆಯುತ್ತಿರುವುದು ‘ಮಾಹಿತಿಯುಗ’. ಎಲ್ಲರಿಗೂ ಮಾಹಿತಿಯನ್ನು ತಿಳಿಯುವ ತವಕ. ಅಷ್ಟೇ ಅಲ್ಲ ಸರ್ಕಾರದ ಮಾಹಿತಿಯನ್ನು ತಿಳಿದು ಕೊಳ್ಳುವ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇರುತ್ತದೆ. ಅದಕ್ಕೆ ಪೂರಕವಾಗಿ ಈಗ ಮಾಹಿತಿಯನ್ನು ಕೊಡಬಲ್ಲ, ಸಂಗ್ರಹಿಸಬಲ್ಲ ಅನೇಕ ಸಾಧನಗಳಿವೆ. ಉದಾಹರಣೆಗೆ ಒಂದು ಕಂಪ್ಯೂಟರ್‌ನಲ್ಲಿ ಅಪಾರ  ಪಠ್ಯ, ಧ್ವನಿ ಮತ್ತು ಚಿತ್ರ ಮಾಹಿತಿಯನ್ನು ಸಂಗ್ರಹಿಸಬಹುದು, ರವಾನಿಸಬಹುದು. ಚಿಕ್ಕ ಮೊಬೈಲ್ ಫೋನ್‌ನಿಂದ ಎಷ್ಟೆಲ್ಲಾ ಕೆಲಸ ಮಾಡಬಹುದು. ನಮ್ಮ ಪುರಾಣದಲ್ಲಿ ಬರುವ ಬಲಿ-ವಾಮನರ ಕಥೆ ಕೇಳಿದ್ದೀರಾ? ಈ ಮಾಹಿತಿ ಸಂಗ್ರಹ ಸಾಧನಗಳಲ್ಲಿರುವ ವಿದ್ಯುನ್ಮಾನ ಸರ್ಕ್ಯುಟ್‌ಗಳು ವಾಮನನಂತೆ ಅತಿ ಚಿಕ್ಕ ರೂಪದಲ್ಲಿರುತ್ತವೆ. ಆದರೆ ತ್ರಿವಿಕ್ರಮನಂತೆ ಅಗಾಧ ಕೆಲಸ ಮಾಡುವ ಸಾಮರ್ಥ್ಯ ಹೊಂದಿರುತ್ತವೆ. ಈಗ ಅಕ್ಕಿಕಾಳಿನ ಮೇಲೆ ಚಿತ್ರ ಬಿಡಿಸುವ ವಿಷಯವನ್ನೇ ತೆಗೆದುಕೊಳ್ಳಿ. ಅದು ಒಂದು ಕಲೆ. ಬಹಳ ಕಷ್ಟದ ಕೆಲಸ. ಕೆಲವರು ಮಾತ್ರ ಇಂತಹ ಕಲಾವಿದರಾಗಬಹುದು. ಆದರೆ ಮಾಹಿತಿ ತಂತ್ರಜ್ಞಾನವನ್ನು ಬಳಸಿ ಊಹಿಸಲೂ ಸಾಧ್ಯವಾಗದಷ್ಟು ಮಾಹಿತಿಯನ್ನು ಬಹಳ ಕಡಿಮೆ ಜಾಗದಲ್ಲಿ ಸಂಗ್ರಹಿಸುವುದೇ ಅಲ್ಲದೇ, ಅತಿ ಶೀಘ್ರವಾಗಿ ಬಹಳ ದೂರದ ಸ್ಥಳಗಳಿಗೂ ರವಾನಿಸಬಹುದು. ಇದು ಸುಲಭ, ಎಲ್ಲರಿಗೂ ಸಾಧ್ಯ.”

“ಹೌದು ಸಾರ್, ಒಂದು ಡಿವಿಡಿಯಲ್ಲಿ, ಅಂದರೆ ಕೈಲಿ ಹಿಡಿದುಕೊಳ್ಳುವಷ್ಟು ಚಿಕ್ಕ ವಸ್ತುವಿನಲ್ಲಿ ಒಂದು ಪೂರ್ತಿ ಸಿನೆಮಾ ಇರತ್ತೆ. ಅಷ್ಟೇ ಏಕೆ ಒಂದು ವಿಶ್ವಕೋಶವನ್ನೇ ಅಡಗಿಸಿಡಬಹುದು. ಅದರಲ್ಲಿ ಪಠ್ಯ, ಧ್ವನಿ, ಚಿತ್ರ, ಚಿತ್ರ ಸಂಚಾಲನೆ(ಅನಿಮೇಷನ್) ಹೀಗೆ ಎಲ್ಲಾ ತರಹದ ಮಾಹಿತಿಯನ್ನು ಒಗ್ಗೂಡಿಸಿಡಬಹುದು.” ಈ ಪ್ರತಿಕ್ರಿಯೆ ಬಂದದ್ದು ಉಲ್ಲಾಸನಿಂದ. ಉಲ್ಲಾಸ್‌ಗೆ ಕಂಪ್ಯೂಟರ್ ಹುಚ್ಚು. ಅದರ ಬಗ್ಗೆ ಮಾತನಾಡುವುದೆಂದರೆ ಇಮ್ಮಡಿ ಉತ್ಸಾಹ.

“ಸಾರ್, ನಾವು ಬೇಸಿಗೆ ರಜದ ಪ್ರಾಜೆಕ್ಟ್‌ಗೆ ಇದೇ ವಿಷಯವನ್ನು ಅಂದರೆ ಮಾಹಿತಿ ಸಂಗ್ರಹ ಸಾಧನಗಳ ವಿಷಯವನ್ನೇ ಏಕೆ ತೆಗೆದುಕೊಳ್ಳಬಾರದು?” ಋತ್ವಿಕ್ ಸೂಚಿಸಿದ.

ಪ್ರತಿ ವರ್ಷ ತರಗತಿಯ ಮಕ್ಕಳಿಂದ ಬೇಸಿಗೆ ರಜಾದಲ್ಲಿ ಪ್ರಾಜೆಕ್ಟ್ ಮಾಡಿಸುವುದು ನಾಗರಾಜ್‌ರವರ ಅಭ್ಯಾಸ. ಈ ಪ್ರಾಜೆಕ್ಟ್‌ನ ವಿಷಯವನ್ನು ಮಕ್ಕಳೇ ಆಸಕ್ತಿಯಿಂದ ಆಯ್ದುಕೊಳ್ಳುವಂತೆ ಮಾಡುವುದು ಅವರ ಜಾಣತನ. ಇವತ್ತು ಕೂಡ ಕಡೆಗೆ ವಿಷಯ ಆ ಕಡೆಯೇ ವಾಲಿತು.

“ಅಯ್ಯೋ! ಈ ವಿಷಯ ಆರಿಸಿಕೊಂಡರೆ, ವರ್ಷವೆಲ್ಲಾ ಮಾಡುತ್ತಿರಬಹುದು ಸಾರ್. ಪ್ರಾಜೆಕ್ಟ್ ಮುಗಿಯುವುದೇ ಇಲ್ಲ” ಅಷ್ಟೊಂದು ಕೆಲಸ ಮಾಡುವ ಮನಸ್ಸಿಲ್ಲದ ಅಸಾಮಿ ಕೃಷ್ಣನ ಸಂಕಟ ವ್ಯಕ್ತವಾಯಿತು.

ಅದಕ್ಕೆ ಮಾಸ್ಟರ್‌ರ ಪರಿಹಾರ ಸಿದ್ಧವಾಗಿತ್ತು. “ಎಲ್ಲರೂ ಎಲ್ಲವನ್ನೂ ಓದುವುದು, ವಿಷಯ ಸಂಗ್ರಹ ಮಾಡುವುದೂ ಬೇಡ. ನಿಮ್ಮನಿಮ್ಮಲ್ಲಿ ವಿಷಯವನ್ನು ಹಂಚಿಕೊಳ್ಳಿ. ಒಟ್ಟು ಎಷ್ಟು ಉಪಭಾಗಗಳೆಂದು ಮೊದಲು ಯೋಚಿಸೋಣ. ಮಾಹಿತಿ ಎಂದರೇನು? ಅದರ ಉಪಯೋಗಗಳೇನು? ಬಹಳ ಮುಂಚೆ ಪಠ್ಯ ಮಾಹಿತಿಯನ್ನು ಯಾವರೀತಿ ಸಂಗ್ರಹ ಮಾಡುತ್ತಿದ್ದರು ಎಂದು ಪ್ರಾರಂಭಿಸಿ, ಮುದ್ರಿತ ಪುಸ್ತಕಗಳ ತನಕ ಇಬ್ಬರು ಹಂಚಿಕೊಳ್ಳಿ. ಅನಂತರ ಧ್ವನಿಮಾಹಿತಿಯನ್ನು ಸಂಗ್ರಹಿಸಲು ಬಳಸುವ ವಿವಿಧ ವಿಧಾನಗಳನ್ನು ಇಬ್ಬರು, ತಾಂತ್ರಿಕತೆ ಮುಂದುವರಿದಂತೆ ಚಿತ್ರಮಾಹಿತಿಯನ್ನು ಸಂಗ್ರಹಿಸಲು ಅಭಿವೃದ್ಧಿಗೊಂಡ ಸಾಧನಗಳ ಬಗ್ಗೆ ಇಬ್ಬರು, ಕೊನೆಯದಾಗಿ ಪಠ್ಯ, ಧ್ವನಿ, ಚಿತ್ರ ಮತ್ತು ಚಲನಚಿತ್ರಗಳನ್ನೂ ಒಟ್ಟಾಗಿ ಸಂಗ್ರಹಿಸಲು ಸಾಮರ್ಥ್ಯವುಳ್ಳ ಮಾಧ್ಯಮದ ಬಗ್ಗೆ ಮತ್ತಿಬ್ಬರು ವಿಷಯ ಸಂಗ್ರಹ ಮಾಡಿ. ಎಲ್ಲವನ್ನೂ ಒಟ್ಟುಗೂಡಿಸಿ ಪ್ರಾಜೆಕ್ಟ್ ಸಿದ್ಧ ಮಾಡಿದರೆ ಆಯಿತು.”

“ಆದರೆ ನಮಗೆ ಅಷ್ಟೆಲ್ಲಾ ವಿಷಯ ಸಿಕ್ಕುತ್ತದೆಯೆ?” ಋತ್ವಿಕ್‌ಗೆ ಆಗಲೇ ಮಾಡುವ ಕೆಲಸದ ವಿಷಯ ತನಗೆ ಪೂರ್ತಿ ಗೊತ್ತಿಲ್ಲವಲ್ಲಾ ಎಂಬ ಆತಂಕ ಪ್ರಾರಂಭವಾಯಿತು.

ಅದಕ್ಕೆ ಉಮೇಶ್ ‘ಹೆದರಬೆಡವೋ,

ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತಂ |
ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತಂ ||
ಕೆಲವಂ ಸಜ್ಜನಸಂಗದಿಂದಲರಿಯಲ್…..

ಎಂಬ ಸೋಮೇಶ್ವರ ಶತಕದ ಪದ್ಯವನ್ನು ಕೇಳಿಲ್ಲವೇ ಹಾಗೆ ವಿಷಯ ತಿಳಿದುಕೊಳ್ಳೋಣ” ಎಂದು ಅವನಿಗೆ ಧೈರ್ಯತುಂಬಿದ.

“ಮತ್ತೆಲ್ಲವನೂ ತಿಳಿದುಕೊಳ್ಳಲು ಅಂತರಜಾಲವ ಹೊಕ್ಕು, ಮೂಷಿಕವನು ಕ್ಲಿಕ್ಕಿಸು ಮೂರ್ಖ ಮಹಾಶಯ” ಎಂದು ಮತ್ತೊಂದು ಸಾಲನ್ನೂ ಸೇರಿಸಿಕೊಳ್ಳೋ’ ಎಂದು ಕೃಷ್ಣ ತನ್ನ ಕಪಿತ್ವವನ್ನು ಸೇರಿಸಿದ

ಎಲ್ಲರಿಗೂ ನಗು ಬಂತು. ಈ ಎಲ್ಲಾ ನಿರ್ಧಾರಗಳಾಗುವ ಹೊತ್ತಿಗೆ ಸೂರ್ಯ ತನ್ನ ಮನೆ ಸೇರಿದ್ದ. ಕತ್ತಲಾಗಿರುವ ಕಡೆ ಎಲ್ಲರ ಗಮನ ಹೋಯಿತು. ಎಲ್ಲರೂ ಎದ್ದು ಜೊತೆಯಾಗಿ ಮನೆಯ ದಾರಿ ಹಿಡಿದರು.

ಹದಿನೈದು ದಿನಗಳ ನಂತರ……

ಗುರುವಾರ

ಮತ್ತೊಮ್ಮೆ ಎಲ್ಲರೂ ಒಟ್ಟಾಗಿ ಸೇರಿ ತಾವು ಸಂಗ್ರಹಿಸಿದ ವಿಷಯಗಳ ವಿನಿಮಯ ಮತ್ತು ಅದರ ಬಗ್ಗೆ ಚರ್ಚಿಸಲು ಉತ್ಸುಕರಾಗಿ ಮೈದಾನದ ತುದಿಯ ಬಂಡೆಯ ಬಳಿ ಸೇರಿದರು. ನಾಗರಾಜ್ ಮೇಷ್ಟ್ರಿಗೆ ಮುಂಚೆಯೇ ವಿಷಯ ತಿಳಿಸಿದ್ದರಿಂದ ಅವರೂ ಬಂದು ಹುಡುಗರ ಗುಂಪನ್ನು ಸೇರಿದರು.

‘ಏನು ಉಲ್ಲಾಸ್, ನಿನ್ನ ಸಂಶೋಧನೆ ಎಲ್ಲಿಯವರೆಗೆ ಬಂತು?’ ಎಂದು ಕೇಳುವುದರೊಂದಿಗೆ ಅಂದಿನ ಚರ್ಚೆ ಪ್ರಾರಂಭಿಸಿದರು.

ಅದಕ್ಕೆ ಉತ್ತರವಾಗಿ ಉಲ್ಲಾಸ್ “ಸಾರ್, ನನ್ನ ವಿಷಯ ಡಿಜಿಟಲ್ ಮಾಹಿತಿ ಸಂಗ್ರಹ ಸಾಧನಗಳು. ಆದ್ದರಿಂದ ಅದರ ವಿಷಯ ಕೊನೆಯಲ್ಲಿ. ಮೊದಲು ಬಹಳ ಹಿಂದೆ ಮನುಷ್ಯರು ಯಾವ ರೀತಿ ವಿಷಯಗಳನ್ನು ಸಂಗ್ರಹಿಸುತ್ತಿದ್ದರು ಎಂದು ತಿಳಿದುಕೊಳ್ಳಬೇಕಲ್ಲವೆ? ಆ ವಿಷಯ ಋತ್ವಿಕ್ ಮತ್ತು ಕೃಷ್ಣ ಇಬ್ಬರೂ ಬರೆದಿದ್ದಾರೆ.” ಎಂದು ಹೇಳಿದ.

“ಓಹ್, ನನಗೆ ಯಾರು ಯಾವ ವಿಷಯ ತೆಗೆದುಕೊಂಡಿದ್ದೀರಿ ಎಂದು ತಿಳಿದಿರಲಿಲ್ಲ. ಸರಿ ಇವತ್ತು ನಿಮ್ಮ ವಿಷಯವೇ ಬರಲಿ” ಎಂದು ಋತ್ವಿಕ್ ಮತ್ತು ಕೃಷ್ಣರ ಕಡೆ ಕೈ ತೋರಿದರು.

“ಸಾರ್, ಈ ಸೋಮಾರಿ ಕೃಷ್ಣ ನನ್ನ ಆಟ ಆಡಿಸಿ ಬಿಟ್ಟ ಸಾರ್. ವಿಷಯ ಸಂಗ್ರಹ ಮಾಡುವಾಗ ಹೆಲ್ಪ್ ಮಾಡಿದ. ಕೊನೇಲಿ ಬರೆಯೋಕ್ಕೆ ಮಾತ್ರ ಚಕ್ಕರ್ ಕೊಟ್ಟ.’ ಎಂದು ಮಿತ್ರನನ್ನು ದೂರಿ ಋತ್ವಿಕ್ ಓದಲು ಪ್ರಾರಂಭಿಸಿದ.