ಗುರುವಾರ

ಸಾಗರ್ ಯಾವ ಕೆಲಸ ಮಾಡಿದರೂ ಅಚ್ಚುಕಟ್ಟಾಗಿ ಮಾಡುವ ಹುಡುಗ. ಆದ್ದರಿಂದಲೇ ಅವನಿಗೆ ಸ್ಕೂಲ್ ಕ್ಯಾಪ್ಟನ್ ಆಗುವ ಅವಕಾಶ ಸಿಕ್ಕಿತ್ತು. ಹಾಗಾಗಿ ಎಲ್ಲರೂ ಇವತ್ತು ಬಹಳ ಕುತೂಹಲದಿಂದ ಬಂದಿದ್ದರು. ಉಲ್ಲಾಸ್ ಕೂಡ ಕಂಪ್ಯೂಟರ್ ಭೂಪ. ಅವನಿಗೆ ಹೊಸ ವಿಷಯಗಳೆಂದರೆ ಅತ್ಯಂತ ಆಸಕ್ತಿ. ಮೇಷ್ಟ್ರು ಬರುತ್ತಿದ್ದಂತೆಯೇ “ಏನ್ರಪ್ಪಾ, ಭಲೆ ಜೋಡಿ, ತಯಾರಾ?” ಎಂದು ಕೇಳಿದರು. ಈಗ ಅವರಿಗೂ ಯಾರು ಯಾವ ವಿಷಯ ಎಂದು ಗೊತ್ತಾಗಿತ್ತು. ಅಲ್ಲದೆ ಈಗ ಉಳಿದಿದ್ದವರು ಅವರಿಬ್ಬರೇ.

“ಸಾರ್, ಮೊದಲ ಭಾಗವನ್ನು ಉಲ್ಲಾಸ್ ತಯಾರಿಸಿದ್ದಾನೆ. ನಾನು ಕೊನೆ” ಎಂದು ಹೇಳಿದ.

ಉಲ್ಲಾಸ್ ಓದಲು ಪ್ರಾರಂಭಿಸಿದ.

ಒಂದೇ ಕಟ್ಟೆಯ ಮೇಲೆ ಕುಳಿತಿರುವವರು ಮೂರು ಜನ
ಕೆಲಸ ಬೇರೆ, ಧರಿಸಿರುವವರು ಸಮವಸ್ತ್ರ ಒಂದೇ ಸಮ
ಯಜಮಾನರ ಸೇವೆಗೆ ಸದಾ ಸಿದ್ಧ ಇವರ ಮನ
ಸೂಕ್ಷ್ಮಕಾಯರೂ ಹೌದು, ಆಕಾಶಗಾಮಿಗಳೂ ಕೂಡ ಇವರು
ಹಾಗಾದರೆ ಯಾರು ಈ ಮೂವರು?

“ಹೇ, ಹೇ ಏನೋ ಇಲ್ಲಿ ಬಂದು ಒಗಟು ಹೇಳುತ್ತಿದ್ದೀಯಾ? ನಿನ್ನ ವಿಷಯ ಏನು? ಮಾಹಿತಿಯ ಹೊಸ ರೂಪ ಎಂದಲ್ಲವೇ” ಎಂದು ವಿನಯ್ ಎಚ್ಚರಿಸಿದ.

“ಅದೇ ವಿಷಯ ಕಣೋ, ನಾನು ಹೇಳಿದ ಒಗಟನ್ನ ಸ್ವಲ್ಪ ಸರಿಯಾಗಿ ಕೇಳಿಸಿಕೋ. ನನ್ನ ಒಗಟು ಬಿಡಿಸಿದರೇ ನಾನು ಮುಂದೆ ಓದುವುದು?” ಎಂದು ಸವಾಲು ಹಾಕಿ ಸುಮ್ಮನೆ ಕುಳಿತ ಉಲ್ಲಾಸ್

“ಅಯ್ಯೋ, ಇವತ್ತು ತಿಂಡಿ-ಬಂಡಿ ಏನೂ ಇಲ್ಲ. ಸಾಲದ್ದಕ್ಕೆ ಒಗಟು ಬೇರೆ. ಒಗಟು ಬಿಡಿಸಿದರೆ ಏನು ಕೊಡ್ತೀಯಾ?” ಉಲ್ಲಾಸನ ಸವಾಲಿಗೆ ಕೃಷ್ಣನ ಅಹವಾಲು.

ಅಷ್ಟರಲ್ಲಿ ನವೀನ್ “ನನಗೆ ಗೊತ್ತಾಯಿತು ನಿನ್ನ ಒಗಟಿಗೆ ಉತ್ತರ. ಇದು ನಿನ್ನ ವಿಷಯಕ್ಕೆ ಸಂಬಂಧಿಸಿದ್ದೆ. ಈ ಮೂರು ಜನ ಅಂದರೆ ಅಕ್ಷರ, ಚಿತ್ರ ಮತ್ತು ಧ್ವನಿ ಮಾಹಿತಿ. ಅವುಗಳು ಮಾಡುವ ಕೆಲಸ ಬೇರೆ. ಒಂದೇ ಕಟ್ಟೆ ಎಂದರೆ ಒಂದೇ ಸಾಧನ. ಅಂದರೆ ಸಿಡಿ, ಡಿವಿಡಿ ಇತ್ಯಾದಿ ಏನಾದರೂ ಆಗಬಹುದು. ಒಂದೇ ಸಮವಸ್ತ್ರವೆಂದರೆ…..” ಎಂದು ರಾಗ ತೆಗೆದ. ಅಲ್ಲಿ ಅವನಿಗೆ ಸ್ವಲ್ಪ ಗೊಂದಲವಾಯಿತು.

ಮುಂದೆ ನಾನು ಹೇಳುತ್ತೇನೆ ಎಂದು ಚರಣ್ ಮುಂದುವರಿಸಿದ. “ಈಗ ಈ ಎಲ್ಲಾ ಮಾಹಿತಿ ಪ್ರಕಾರಗಳೂ ಡಿಜಿಟಲ್ ಮಾಧ್ಯಮವನ್ನು ತಲುಪಿವೆ. ಅದಕ್ಕೆ ಸಮವಸ್ತ್ರ ಧರಿಸಿವೆ ಎಂದು ಹೇಳಿದೆ. ಎಲ್ಲ ಮಾಹಿತಿಯನ್ನೂ ಅತ್ಯಂತ ಚಿಕ್ಕ ಸ್ಥಳದಲ್ಲಿ ಅಡಗಿಸಬಹುದು. ಅದಕ್ಕೆ ಸೂಕ್ಷ್ಮಕಾಯ ಎಂದು ಹೇಳಿದ್ದೀಯಾ. ಆಕಾಶಗಾಮಿಗಳು-ಅಂದರೆ ಈಗ ಎಲ್ಲವನ್ನೂ ಇಂಟರ್‌ನೆಟ್ ಮೂಲಕ ಕಳುಹಿಸಬಹುದು. ಸರಿತಾನೆ ನಿನ್ನ ಒಗಟಿಗೆ ಉತ್ತರ.”

ಇಷ್ಟು ದಿನಗಳಲ್ಲಿ ಅವರ ಉತ್ಸಾಹ ಎಷ್ಟು ಹೆಚ್ಚಿತ್ತು ಅಂದರೆ ನಾಗರಾಜ್ ಮೇಷ್ಟ್ರು ಅಲ್ಲೇ ಇದ್ದಾರೆ ಎನ್ನುವುದನ್ನೂ ಮರೆತು, ಒಳ್ಳೆಯ ಆಟವನ್ನು ಆಡುವ ಆಟಗಾರರಂತೆ ತಮ್ಮತಮ್ಮಲ್ಲೇ ಮಾತನಾಡುತ್ತಾ, ಗೇಲಿಮಾಡಿಕೊಳ್ಳುತ್ತಾ ಪ್ರತಿಯೊಂದು ಕ್ಷಣವನ್ನೂ ಸುಖಿಸುತ್ತಿದ್ದರು. ಆ ಬಾಲಕರ ಒಡನಾಟದಲ್ಲಿ ನಾಗರಾಜ್ ಕೂಡ ಹುಡುಗರಾಗಿ ಬಿಡುತ್ತಿದ್ದರು. ಅವರು ಬಾಯಿ ಹಾಕಿ “ಓಹೋಹೋ! ಏನು ಉಲ್ಲಾಸ್ ಯಾವ ಕಂಪ್ಯೂಟರ್‌ನಲ್ಲಿ ಸಿಕ್ಕಿತು ಈ ಒಗಟು? ಬಹಳ ಚೆನ್ನಾಗಿದೆ.” ಎಂದು ಪ್ರಶಂಸಿಸಿದರು.

ಅದಕ್ಕೆ ಉತ್ತರವಾಗಿ ಉಲ್ಲಾಸ್ “ಇದು ನಮ್ಮ ‘ಮದರ್ ಇಂಡಿಯಾ ಕಂಪ್ಯೂಟರ್’ನಲ್ಲಿ ಸಿಕ್ಕಿತು’ ಎಂದು ಹೇಳಿ ಅದಕ್ಕೆ ವಿವರಣೆಯನ್ನೂ ನೀಡಿದ. ‘ದಿನ ಸಾಯಂಕಾಲ ಏನು ಮಾಡುತ್ತಿದ್ದೀರಿ’ ಎಂದು ನಮ್ಮ ತಾಯಿ ಕೇಳಿದರು. ನಾನು ನಿನ್ನೆ, ಹೇಗೂ ಬರೆದ ಹಾಳೆಗಳನ್ನೆಲ್ಲಾ ತೆಗೆದುಕೊಂಡು ಹೋಗಿದ್ದೆನಲ್ಲಾ ಅದನ್ನು ಅವರಿಗೂ ಓದಲು ಕೊಟ್ಟೆ. ಮತ್ತು ನಾನು ಇವತ್ತು ಓದುವ ವಿಷಯದ ಹಾಳೆಗಳನ್ನೂ ಕೊಟ್ಟೆ. ಎಲ್ಲವನ್ನೂ ಓದಿದ ನಂತರ ಅವರು ನನಗೆ ಈ ಒಗಟು ಬರೆದು ಕೊಟ್ಟರು. ನಿಮ್ಮ ಸ್ನೇಹಿತರಿಗೆ ಒಗಟು ಬಿಡಿಸುವಂತೆ ಕೇಳು ಎಂದು ಸೂಚಿಸಿದವರೂ ಅವರೇ” ಎಂದು ತನ್ನ ಮಾತು ಮುಗಿಸಿದ.

ನಾಗರಾಜ್‌ಗೆ ವಿಪರೀತ ಸಂತೋಷವಾಯಿತು. ಮಕ್ಕಳು ತಾವು ತಿಳಿದುಕೊಂಡದ್ದಲ್ಲದೆ ತಂದೆತಾಯಿಯರಿಗೂ ವಿಷಯದಲ್ಲಿ ಆಸಕ್ತಿ ಮೂಡಿಸಿದ್ದು ಸಂತೋಷವಾದರೆ, ತಂದೆತಾಯಿಯರು ಮಕ್ಕಳಿಗೆ ಹುರಿದುಂಬಿಸುತ್ತಿರುವುದು ಮತ್ತೂ ಹೆಚ್ಚು ಸಂತೋಷ ಕೊಡುವ ವಿಷಯವೆಂದು ಭಾವಿಸಿದರು.

“ಓಹ್, ಸರಿ ನಿಮ್ಮ ‘ಮದರ್ ಇಂಡಿಯಾ ಕಂಪ್ಯೂಟರ್’ ಗೆ ನಮ್ಮ ಧನ್ಯವಾದಗಳನ್ನು ತಿಳಿಸಿಬಿಡು” ಎಂದು ಹೇಳಿ ಓದುವುದನ್ನು ಮುಂದುವರಿಸುವಂತೆ ಸೂಚಿಸಿದರು.

೨೦ನೆಯ ಶತಮಾನದ ಮಧ್ಯದವರೆಗೂ ಬೇರೆಬೇರೆ ದಾರಿಗಳಲ್ಲಿ ಸಾಗುತ್ತಿದ್ದ ಮಾಹಿತಿ ಸಂಗ್ರಹ ಸಾಧನಗಳು ಇದ್ದಕ್ಕಿದ್ದಂತೆ ಸಂಗಮಿಸುವಂತೆ ಹತ್ತಿರವಾಯಿತು. ಇದಕ್ಕೆ ಬಹುಮುಖ್ಯ ಕಾರಣ ಕಂಪ್ಯೂಟರ್ ಎಂದು ಹೇಳಬಹುದು. ೧೯೪೬ರವರೆಗೂ ಕಂಪ್ಯೂಟರ್‌ಗಳನ್ನು ವಿಜ್ಞಾನ ಕ್ಷೇತ್ರದಲ್ಲಿ ಕ್ಲಿಷ್ಟವಾದ ಲೆಕ್ಕಗಳನ್ನು ಮಾಡಲು ಮಾತ್ರ ಬಳಸಲಾಗುತ್ತಿತ್ತು. ಅದು ಜನ ಸಾಮಾನ್ಯರು ಬಳಸಬಹುದಾದ ಯಂತ್ರವೆಂದು ಯಾರೂ ಯೋಚಿಸಿರಲಿಲ್ಲ. ಆದರೆ ೧೯೪೬ರಲ್ಲಿ ವಾನ್ ನ್ಯೂಮೆನ್ ಮತ್ತು ಅವನ ಸಂಗಡಿಗರು ಕಂಪ್ಯೂಟರ್‌ಗಳನ್ನು ಮಾಹಿತಿ ಸಂಗ್ರಹಿಸಲು, ಸಂಸ್ಕರಿಸಲು ಬಳಸಬಹುದೆಂದು ಪರಿಚಯಿಸಿದರು. ಅದುವರೆಗೂ ಬೃಹದಾಕಾರದಲ್ಲಿದ್ದ ಗಣಕಯಂತ್ರಗಳನ್ನು ಪ್ರಯೋಗಾಲಯ, ವಿಶ್ವವಿದ್ಯಾಲಯ ಇಂತಹ ಸ್ಥಳದಲ್ಲಿ ಮಾತ್ರ ಬಳಸುತ್ತಿದ್ದರು. ಇದಲ್ಲದೆ ಇದೇ ಸಮಯದಲ್ಲಿ ಡಿಜಿಟಲ್ ಗಣಕ ತಂತ್ರಜ್ಞಾನವೂ ಅಭಿವೃದ್ಧಿಯಾಯಿತು.

“ಸಾರ್ ಈ ಡಿಜಿಟಲ್ ಕಂಪ್ಯೂಟರ್ ಅಂದರೇನು?” ಋತ್ವಿಕ್‌ನ ಪ್ರಶ್ನೆ ಉಲ್ಲಾಸನ ವಾಚನಕ್ಕೆ ತಡೆ ಹಾಕಿತು.

ನಾಗರಾಜ್ ಬಾಯಿ ತೆಗೆಯುವ ಮೊದಲೇ ಸಾಗರ್ ಉತ್ತರ ಹೇಳಲು ಮುಂದಾದ.

“ಇದುವರೆಗೂ ಕಂಪ್ಯೂಟರ್‌ಗಳಲ್ಲಿ ಮಾಹಿತಿಯನ್ನು ಸಾದೃಶ್ಯ ರೂಪದಲ್ಲಿ ಸಂಗ್ರಹಿಸುತ್ತಿದ್ದರು. ಉದಾಹರಣೆಗೆ ಒಂದು ವೈಜ್ಞಾನಿಕ ಪ್ರಕ್ರಿಯೆಯಲ್ಲಿ ಉಷ್ಣತೆಯ ಆಧಾರದ ಮೇಲೆ ಒಂದು ಕ್ರಿಯೆ ನಡೆಯ ಬೇಕಾದರೆ, ಅದನ್ನು ಅಳೆಯಲು ಒಂದು ಸಂವೇದಕವನ್ನು ಜೋಡಿಸಿ, ಅಳೆದು ಕ್ರಿಯೆಯನ್ನು ಚಾಲಿಸುತ್ತಿದ್ದರು. ಆದರೆ ಈ ಡಿಜಿಟಲ್ ಕಂಪ್ಯೂಟರ್‌ನಲ್ಲಿ ಸಂವೇದಕವು ಅಳೆದ ಉಷ್ಣತೆಯನ್ನು ಅಂಕಿಗಳಾಗಿ ಮಾರ್ಪಡಿಸುತ್ತದೆ. ಕಂಪ್ಯೂಟರ್ ಆ ಅಂಕಿಯ ಆಧಾರದ ಮೇಲೆ ಕ್ರಿಯೆಯನ್ನು ಚಾಲಿಸುತ್ತದೆ.”

“ಅದು ಉಷ್ಣತೆಯನ್ನು ಅಂಕಿಗಳಾಗಿ ಹೇಗೆ ಪರಿವರ್ತಿಸುತ್ತದೆ?” ಮತ್ತೆ ಋತ್ವಿಕ್‌ನಿಂದಲೇ ಬಂದ ಪ್ರಶ್ನೆ.

ಆಗ ನಾಗರಾಜ್ “ಇದು ಇಲೆಕ್ಟ್ರಾನಿಕ್ ಸಾಧನಗಳಿಂದ ಸಾಧ್ಯ. ಆದರೆ ಈಗ ಆ ವಿವರಗಳನ್ನು ತಿಳಿದುಕೊಳ್ಳುವುದು ನಮ್ಮ ವಿಷಯವನ್ನು ಬಿಟ್ಟು ಬೇರೆ ಕಡೆಗೆ ಹೋದಂತಾಗುತ್ತದೆ. ಒಂದು ವಿಚಾರ ಈಗ ನೀವು ತಿಳಿದುಕೊಳ್ಳಬೇಕಾದುದೆಂದರೆ, ಡಿಜಿಟಲ್ ಕಂಪ್ಯೂಟರ್‌ಗೆ ಮಾಹಿತಿ ನಿರ್ವಹಿಸಲು ತಿಳಿದಿರುವುದು ಎರಡೇ ಅಂಕಿಗಳು. ಅದನ್ನು ಹೀಗೆ ವಿವರಿಸಬಹುದು. ಅದರ ಸಂಗ್ರಾಹಕದಲ್ಲಿ ಮಾಗ್ನೆಟಿಕ್ ಪದಾರ್ಥವಿರುತ್ತದೆ. ಅದರಲ್ಲಿ ನಿರ್ದಿಷ್ಟ ಸ್ಥಾನ ಮಾಗ್ನೆಟಿಕ್ ಪ್ರಭಾವಕ್ಕೆ ಒಳಗಾಗಿದೆಯಾ ಅಥವಾ ಇಲ್ಲವಾ ಎಂದು ಕಂಪ್ಯೂಟರ್‌ಗೆ ತಿಳಿಯಬೇಕು. ಈ ಎರಡು ಸ್ಥಿತಿಗಳನ್ನು ‘೧’ ಮತ್ತು ‘೦’ ಅಂಕಿಗಳೆಂದು ಗುರುತಿಸಲಾಗುತ್ತದೆ. ಇಂತಹ ಪ್ರತಿಯೊಂದು ಸ್ಥಾನಕ್ಕೆ ‘ಬಿಟ್” ಎಂದೂ ಮತ್ತು ಎಂಟು ‘ಬಿಟ್’ಗಳ ಗುಂಪಿಗೆ ‘ಬೈಟ್’ ಎಂದೂ ಹೆಸರು. ಒಂದು ಅಥವಾ ಹೆಚ್ಚು ಬೈಟ್‌ಗಳಲ್ಲಿ, ಬೇರೆಬೇರೆ ಬಿಟ್‌ಗಳಿಗೆ ಬೇರೆಬೇರೆ  ‘೦’ ಮತ್ತು ‘೧’ ಮೌಲ್ಯಗಳನ್ನು ಕೊಟ್ಟು ಪ್ರತಿಯೊಂದು ಅಕ್ಷರಕ್ಕೂ, ಅಂಕಿಗೂ ಒಂದು ಸಂಕೇತ (ಕೋಡ್) ನಿಗದಿಸಿ ಇದನ್ನು ಬೈನರಿ ಕೋಡ್ ಎಂದು ಹೇಳುತ್ತಾರೆ ಮಾಹಿತಿಯನ್ನು ಸಂಗ್ರಹಿಸಲು, ನಿರ್ವಹಿಸಲು ಈ ಸಂಕೇತವನ್ನೇ ಬಳಸಲಾಗುತ್ತದೆ. ಈ ಎರಡು ಅಂಕಿಗಳನ್ನು ಬಳಸಿಯೇ ಎಲ್ಲಾ ಲೆಕ್ಕಚಾರಗಳನ್ನೂ ಮಾಡುತ್ತದೆ. ಅಷ್ಟೇ ಅಲ್ಲ ಅನೇಕ ಭಾಷೆಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಿ, ಪರಿಷ್ಕರಿಸುವ ಕೆಲಸಗಳನ್ನು ಮಾಡುತ್ತದೆ.”

“ಅಬ್ಬಬ್ಬಾ! ಈ ಗಣಕಕ್ಕೆ ಮತ್ತಷ್ಟು ಅಂಕಿಗಳನ್ನು ಕಲಿಸಿ ಬಿಟ್ಟರೆ ಪ್ರಳಯವೇ ಆಗಿ ಬಿಡುತ್ತೇನೋ? ಈಗಲೇ ಇಷ್ಟು ಪವರ್‌ಫುಲ್.” ಎಂದು ಋತ್ವಿಕ್ ತನ್ನ ಅಭಿಪ್ರಾಯ ತಿಳಿಸಿದ

ಚರ್ಚೆ ಮುಗಿಯಿತೆಂದು ಉಲ್ಲಾಸ್ ಓದಲು ಪ್ರಾರಂಭಿಸಿದ.

-ಈಗಾಗಲೇ ಅನೇಕ ಸಾರಿ ಹೇಳಿರುವಂತೆ ಇಲೆಕ್ಟ್ರಾನಿಕ್ ಯುಗ ಆರಂಭವಾದ ಮೇಲೆ ದೃಶ್ಯ ಬದಲಾಯಿತು. ೧೯೬೦ರಲ್ಲಿ ಅರೆವಾಹಕಗಳು, ೧೯೭೦ರ ದಶಕದಲ್ಲಿ ಇಂಟಿಗ್ರೇಟೆಡ್ ಸರ್ಕ್ಯುಟ್‌ಗಳು, ಮತ್ತು ಮೈಕ್ರೋಪ್ರೊಸೆಸರ್‌ಗಳು ಹೆಚ್ಚಾದಂತೆಲ್ಲಾ ಗಣಕಯಂತ್ರಗಳ ಗಾತ್ರ ಕಿರಿದಾಯಿತು. ಆದರೆ ಅದರಲ್ಲಿ ಸಂಗ್ರಹಿಸಬಹುದಾದ ಮಾಹಿತಿಯ ಗಾತ್ರ ದೊಡ್ಡದಾಗುತ್ತಾ ಹೋಯಿತು. ಅಪಾರ ಸಂಖ್ಯೆಯಲ್ಲಿ ಗಣಕ ಯಂತ್ರಗಳು ಮಾರುಕಟ್ಟೆಯಲ್ಲಿ ದೊರೆಯುವಂತಾಯಿತು. ಅನೇಕ ಆಫೀಸುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ, ಪ್ರಯೋಗಾಲಯದಲ್ಲಿ ಪಠ್ಯ ಮಾಹಿತಿಯನ್ನು ಶೇಖರಿಸಲು, ವರದಿ ತಯಾರಿಸಲು  ಕಂಪ್ಯೂಟರ್ ಬಳಕೆ ಸಾಮಾನ್ಯ ಅಭ್ಯಾಸವಾಯಿತು. ೧೯೮೦ರ ಹೊತ್ತಿಗೆ ಮನೆಮನೆಗೂ ತಲುಪಿತು ಈ ಗಣಕ ಯಂತ್ರ.

ಇಲ್ಲಿ ಒಂದು ಕುತೂಹಲಕರ ಮಾಹಿತಿ.  ಕಂಪ್ಯೂಟರ್ ಬಳಕೆ ಪ್ರಾರಂಭವಾದರೆ ಜಗತ್ತಿನಲ್ಲಿ ಕಾಗದದ ಬಳಕೆ ಕಡಿಮೆಯಾಗಬಹುದೆಂದು ಜನರು ತಿಳಿದರು. ಆದರೆ ಕೆಲವೊಮ್ಮೆ ಇದಕ್ಕೆ ವಿರುದ್ಧ ಪರಿಣಾಮಗಳೂ ಆಗಿವೆ. ಒಂದು ಬಾರಿ ಒಂದೇ ಒಂದು ಅಕ್ಷರ ತಪ್ಪಿದಾಗ ಅದನ್ನು ಕೈನಲ್ಲಿ ತಿದ್ದದೆ ಮತ್ತೆ ಕಂಪ್ಯೂಟರ್‌ನಲ್ಲಿ ತಿದ್ದಿ, ತಿದ್ದಿದ ಪುಟದ ಅನೇಕ ಪ್ರತಿಗಳನ್ನು ಮತ್ತೆ ಮುದ್ರಿಸಲಾಯಿತಂತೆ.

ಈ ೧೯೫೦ರಿಂದ ೨೦೦೦ರದ ವರೆಗೆ ಆದ ಬದಲಾವಣೆಗಳು ಅತಿ ವೇಗದಲ್ಲಾಯಿತು. ಒಂದು ಮಾದರಿಯ ಕಂಪ್ಯೂಟರ್ ಕೊಂಡು ಅದನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಮತ್ತೊಂದು ಮಾದರಿಯ ಕಂಪ್ಯೂಟರ್ ತಯಾರಾಗುತ್ತಿತ್ತು. ಹಳೆಯ ಯಂತ್ರದಲ್ಲಿ ಕೆಟ್ಟುಹೋದ ಭಾಗಗಳಿಗೆ ಮತ್ತೆ ಹೊಸ ಭಾಗಗಳು ದೊರಕುತ್ತಿರಲಿಲ್ಲ. ಇದರಿಂದ ಬಳಕೆದಾರರಿಗೆ ಬಹಳ ತಾಪತ್ರಯವಾಗುತ್ತಿತ್ತು. ಆದರೂ ಸ್ವಲ್ಪ ಸಮಯದಲ್ಲಿ ಜನ ಈ ವೇಗಕ್ಕೂ ಒಗ್ಗಿಕೊಂಡು ಗಣಕಯಂತ್ರದಿಂದ ಅಪಾರ ಪ್ರಯೋಜನವನ್ನೂ ಪಡೆದುಕೊಳ್ಳುತ್ತಿದ್ದಾರೆ. ಪರ್ಸನಲ್ ಕಂಪ್ಯೂಟರ್ ಅಂದರೆ ವೈಯಕ್ತಿಕ ಗಣಕ ಈಗ ಅತಿ ಜನಪ್ರಿಯವಾಗಿವೆ.

ಗಣಕದ ಸ್ಮೃತಿಯಲ್ಲಿ ಅಪಾರ ಮಾಹಿತಿ ಸಂಗ್ರಹಿಸುವ ಜೊತೆಗೆ ಈ ಮಾಹಿತಿಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆಗೆದುಕೊಂಡು ಹೋಗಲು ಸಹಾಯಕವಾಗುವಂತೆ ಅನೇಕ ಸಾಧನಗಳನ್ನು ಕಂಡುಹಿಡಿಯಲಾಯಿತು. ೧೯೮೦ರಿಂದ ೧೯೯೦ರವರೆಗೆ ಮಾಹಿತಿಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ರವಾನಿಸಲು ಫ್ಲಾಪಿ ಡಿಸ್ಕ್‌ಗಳನ್ನು ಅತಿ ಹೆಚ್ಚಾಗಿ ಬಳಸುತ್ತಿದ್ದರು. ಕನ್ನಡದಲ್ಲಿ ಇಂತಹ ಮುದ್ರಿಕೆಗಳಿಗೆ ನಮ್ಯ ಮುದ್ರಿಕೆ ಎನ್ನುತ್ತಾರೆ. ಈ ಫ್ಲಾಪಿ ಡಿಸ್ಕ್‌ಗಳ ರಚನೆ ಧ್ವನಿಸುರುಳಿ(ಆಡಿಯೋ ಕ್ಯಾಸೆಟ್)ಯಲ್ಲಿ ಬಳಸುವ ಟೇಪನ್ನು ಹೋಲುತ್ತದೆ. ವೃತ್ತಾಕಾರದಲ್ಲಿರುವ ಮಾಗ್ನೆಟಿಕ್ ಪದಾರ್ಥವನ್ನು ಚೌಕಾಕಾರದಲ್ಲಿರುವ ಪ್ಲಾಸ್ಟಿಕ್ ಮೇಲ್ಪದರಲ್ಲಿಟ್ಟು ತಯಾರಿಸುತ್ತಾರೆ. ಈ ಮೇಲ್ಪದರ ರಕ್ಷಣೆಗೆ ಮಾತ್ರ. ಇದರಲ್ಲಿ ಮಾಹಿತಿಯನ್ನು ಆಂಕಿಕ ರೂಪದಲ್ಲಿ ಸಂಗ್ರಹಿಸಲಾಗುತ್ತದೆ. ಫ್ಲಾಪಿ ಡಿಸ್ಕ್‌ಗಳಲ್ಲಿನ ಮತ್ತೊಂದು ಪ್ರಯೋಜನವೆಂದರೆ ಅದರಲ್ಲಿರುವ ಮಾಹಿತಿಯನ್ನು ಪಡೆಯುವಾಗ ನೇರವಾಗಿ ನಮಗೆ ಬೇಕಾದ ಮಾಹಿತಿಯನ್ನು ತಲುಪಬಹುದು. ಉದಾಹರಣೆಗೆ ನೀವು ಹತ್ತನೆಯ ಅಧ್ಯಾಯ ಓದಬೇಕಾದರೆ, ಒಂದು, ಎರಡು… ಇತ್ಯಾದಿ ಅಧ್ಯಾಯಗಳನ್ನು ಹಾದು ಹೋಗಬೇಕಾಗಿಲ್ಲ. ನೇರವಾಗಿ ಹತ್ತನೆಯ ಅಧ್ಯಾಯ ತಲುಪಬಹುದು. ಟೇಪಿನಲ್ಲಿ ಈ ಅನುಕೂಲವಿಲ್ಲ. ಅದಕ್ಕಾಗಿ ಫ್ಲಾಪಿಗಳನ್ನು ‘Direct Access Storage’  ಎಂದು ಕರೆಯುತ್ತಾರೆ.

೫-೧/೪ ಇಂಚಿನ ನಮ್ಯ ಮುದ್ರಿಕೆ

೧೯೬೯ರಿಂದ ೧೯೭೭ರವರೆಗೆ ೮ ಇಂಚಿನ ಫ್ಲಾಪಿ ಡಿಸ್ಕ್‌ಗಳನ್ನು ಬಳಸುತ್ತಿದ್ದರು. ಇವುಗಳ ಸಂಗ್ರಹ ಸಾಮರ್ಥ್ಯ ೧೨೦೦ಕಿಲೋಬೈಟ್‌ಗಳು. ಆದರೆ ಇವುಗಳ ಗಾತ್ರ ಬಹಳ ದೊಡ್ಡದಾಗಿದ್ದು, ಬಳಸಲು ಹಿತಕರವಾಗಿಲ್ಲವೆಂದು ಅದರ ಗಾತ್ರವನ್ನು ೫-೧/೪ ಇಂಚಿಗೆ  ಇಳಿಸಲಾಯಿತು. ಆದರೆ ಗಾತ್ರ ಕಡಿಮೆಯಾದಂತೆ ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿರಬಹುದೆಂದು ಭಾವಿಸಬೇಡಿ. ಮತ್ತಷ್ಟು ಸಂಶೋಧನೆಗಳನ್ನು ಮಾಡಿ ೧೯೮೬ ರ ವೇಳೆಗೆ ಇದರ ಸಂಗ್ರಹ ಸಾಮರ್ಥ್ಯವನ್ನು ೧೦೦ಮೆಗಾಬೈಟ್‌ಗಳಿಗೆ ವಿಸ್ತರಿಸಿದರು. ಅಲ್ಲದೆ, ೩-೧/೨ ಇಂಚಿನ ೧.೪೪ ಮೆಗಾಬೈಟ್ ಫ್ಲಾಪಿಗಳನ್ನು ೧೯೮೭ರಲ್ಲಿ ತಯಾರಿಸಿ ಅದರ ಸಾಮರ್ಥ್ಯವನ್ನು ೧೯೯೯ರ ವೇಳೆಗೆ ೨೦೦ ಮೆಗಾಬೈಟ್‌ಗಳಿಗೆ ವಿಸ್ತರಿಸಿದರು. ನಮ್ಮ ಕಂಪ್ಯೂಟರ್‌ನ ಪರದೆಯ ಮೇಲೆ ನಾವು ಬೆರಳಚ್ಚಿಸಿದ ಮಾಹಿತಿಯನ್ನು ಉಳಿಸಲು ಒತ್ತುವ ಚಿಕ್ಕ ಚಿತ್ರವನ್ನು ಗಮನಿಸಿ. ಅದು ೩-೧/೨ ಇಂಚಿನ ಫ್ಲಾಪಿಯದೇ.

೩-೧/೨ ಇಂಚಿನ ಫ್ಲಾಪಿ

ಆದರೆ ಈ ಫ್ಲಾಪಿ ಡಿಸ್ಕ್‌ಗಳನ್ನು ಬಳಸುವಾಗ ಕೆಲವು ತೊಂದರೆಗಳು ಎದುರಾದವು. ಬಳಸುತ್ತಾ, ಬಳಸುತ್ತಾ ಅವುಗಳ ಆಕಾರ ಕೆಟ್ಟು ಹೋಗಿ ಅದರಲ್ಲಿದ್ದ ಮಾಹಿತಿಯನ್ನು ಓದಲು ಸಾಧ್ಯವಾಗುತ್ತಿರಲಿಲ್ಲ. ವಾತಾವರಣದ ಧೂಳು, ತೇವ, ಉಷ್ಣಾಂಶಗಳಿಂದಲೂ ಅವುಗಳಿಗೆ ತೊಂದರೆಯುಂಟಾಗುತ್ತಿತ್ತು. ಅಷ್ಟರಲ್ಲಿ ಬಹಳ ಜನ ಕಂಪ್ಯೂಟರ್‌ಗಳನ್ನು ಬಳಸಲು ಪ್ರಾರಂಭಿಸಿದ್ದರು. ಅವರಿಗೆ ನಂಬಿಕಾರ್ಹವಾದ, ಹೆಚ್ಚುಕಾಲ ಬಾಳಿಕೆ ಬರುವ ಸಂಗ್ರಹ ಸಾಧನದ ಅವಶ್ಯಕತೆ ಇತ್ತು.

ಆಗ ಮಾರುಕಟ್ಟೆಗೆ ತಲುಪಿದ್ದು ಕಾಂಪಾಕ್ಟ್ ಡಿಸ್ಕ್‌ಗಳು. ಇವುಗಳಿಗೆ ಕನ್ನಡದಲ್ಲಿ ಅಡಕ ಮುದ್ರಿಕೆಗಳು ಅಥವಾ ಅಡಕ ತಟ್ಟೆಗಳು ಎನ್ನುತ್ತಾರೆ. ವಾಸ್ತವದಲ್ಲಿ ಜೇಮ್ಸ್ ಟಿ. ರಸೆಲ್ ಎಂಬ ವಿಜ್ಞಾನಿ ೧೯೬೫ರಲ್ಲಿಯೇ ಇದನ್ನು ತಯಾರಿಸಿದ್ದನು. ಅತನು ತನ್ನ ಬಳಿ ಇದ್ದ ವಿನೈಲ್ ಧ್ವನಿಮುದ್ರಿಕೆಗಳು ಹಾಳಾಗುತ್ತಿದ್ದುದನ್ನು ನೋಡಿ ಬೇಸತ್ತು ಅದಕ್ಕಿಂತ ಉತ್ತಮ ವಿಧಾನವನ್ನು ಕಂಡುಹಿಡಿಯಲು ನಿರ್ಧರಿಸಿದ. ಆಗ ಆತನು ಮಾಗ್ನೆಟಿಕ್ ಮಾಧ್ಯಮಕ್ಕೆ ಬದಲು ಬೆಳಕಿಗೆ ಸಂವೇದಿಸುವ ಮಾಧ್ಯಮವನ್ನು ಆಯ್ದುಕೊಂಡ. ಅದರಲ್ಲಿ ಮುದ್ರಣಗೊಂಡ ಮಾಹಿತಿಯನ್ನು ಹಿಂಪಡೆಯಲು ಲೇಸರ್ ಕಿರಣಗಳನ್ನು ಬಳಸಿದ. ಈ ಪ್ರಯೋಗದಲ್ಲಿ ಯಶಸ್ಸನ್ನೂ ಪಡೆದ. ಆದರೆ ಜನಗಳಿಗೆ ಆತನ ಪ್ರಯೋಗದ ಬಗ್ಗೆ ಇನ್ನೂ ನಂಬಿಕೆ ಬರಲಿಲ್ಲ. ೧೯೮೫ ರಲ್ಲಿ ಅವನ ಅದೃಷ್ಟದ ಬಾಗಿಲು ತೆರೆಯಿತು. ಫಿಲಿಪ್ಸ್, ಸೋನಿ ಮುಂತಾದ ಬೃಹತ್ ಕಂಪನಿಗಳು ಈ ತಾಂತ್ರಿಕತೆಯನ್ನು ಬಳಸಲು ನಿರ್ಧರಿಸಿ ದೊಡ್ಡ ಪ್ರಮಾಣದಲ್ಲಿ ತಯಾರಿಕೆ ಆರಂಭಿಸಿದರು.

ಈ ಅಡಕ ತಟ್ಟೆಗಳ ತಯಾರಿಕೆಯಲ್ಲಿ ಅನೇಕ ಕಾರ್ಯಗಳು ಬಹಳ ನಿಖರವಾಗಿ ನಡೆಯಬೇಕು. ಇದರ ರಚನೆಯ ಬಗ್ಗೆ ಕೆಲವು ಮಾಹಿತಿಗಳು ಹೀಗಿವೆ. ಇದರ ವ್ಯಾಸ ೧೨ಸೆಂ.ಮಿ ಮತ್ತು ದಪ್ಪ ೧.೨ ಮಿಮಿ. ಆದರೆ ಈ ದಪ್ಪದಲ್ಲಿ ನಾಲ್ಕು ಪದರಗಳಿರುತ್ತವೆ. ತಳಭಾಗದಲ್ಲಿ ಪಾಲಿಕಾರ್ಬೊನೇಟ್ ಪ್ಲಾಸ್ಟಿಕ್, ಅದರ ಮೇಲೆ ಅಲ್ಯೂಮಿನಿಯಮ್, ನಂತರ ರಕ್ಷಣೆಗೆ ಅಕ್ರಲಿಕ್ ಹಾಗೂ ಮೇಲೆ ಲೇಬಲ್ ಇರುತ್ತದೆ. ಸಿಡಿಗಳನ್ನು ತಯಾರಿಸುವಾಗ ಪಾಲಿಕಾರ್ಬೊನೇಟ್ ಪ್ಲಾಸ್ಟಿಕ್ ಪದರದ ಮೇಲೆ ಬಹಳ ಸೂಕ್ಷ್ಮವಾದ ಉಬ್ಬುಗಳನ್ನು (bumps) ನಿರ್ಮಿಸಲಾಗುತ್ತದೆ. ಈ ಉಬ್ಬು, ಚಪ್ಪಟೆಭಾಗಗಳೇ (bumps and lands) ಡಿಜಿಟಲ್ ಸಂಕೇತದ ‘೦’ ಮತ್ತು ’೧’ ಗೆ ಸಮಾನವಾಗುತ್ತದೆ. ಮಾಹಿತಿಗೆ ತಕ್ಕಂತೆ ಸೃಷ್ಟಿಯಾಗುವ ಈ ಭಾಗಗಳನ್ನು ಲೇಸರ್ ಬೆಳಕಿನ ಮೂಲಕ ಗ್ರಹಿಸಿ ಸೂಕ್ತ ಮಾಹಿತಿಯನ್ನು ಹಿಂಪಡೆಯಲಾಗುತ್ತದೆ.

Cross-section of a CD

ಸಿಡಿ (ಸೀಳು ನೋಟ)

ಮೊದಲು ಈ ಅಡಕ ಮುದ್ರಿಕೆಗಳನ್ನು ಧ್ವನಿ ಮಾಹಿತಿ ಸಂಗ್ರಹಕ್ಕೆ ಮಾತ್ರ ಬಳಸುತ್ತಿದ್ದರು. ಇದರಲ್ಲಿ ಬಹಳ ಉತ್ತಮ ಮಟ್ಟದ ಧ್ವನಿ ಮುದ್ರಣ ಮತ್ತು ಚಾಲನೆಯನ್ನು ಬಹಳ ನಂಬಿಕಾರ್ಹವಾಗಿ ಮಾಡಬಹುದು. ಮುದ್ರಣಗೊಂಡ ಧ್ವನಿ, ದಿನಕಳೆದಂತೆ ಯಾವುದೇ ಕಾರಣಕ್ಕೂ ಗುಣಮಟ್ಟ ಕಳೆದುಕೊಳ್ಳುವುದಿಲ್ಲ.  ಕಾಲಕ್ರಮದಲ್ಲಿ ಇದನ್ನು ಯಾವುದೇ ತರಹದ ಡಿಜಿಟಲ್ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಾಗುವಂತೆ ಪರಿವರ್ತಿಸಲಾಯಿತು. ಈಗ ಸಿಡಿ-ರ‍್ಯಾಮ್‌ಗಳನ್ನು (CD-ROMs) ಕಂಪ್ಯೂಟರ್ ತಂತ್ರಾಂಶ (sofrware) ಇಲೆಕ್ಟ್ರಾನಿಕ್ ಆಟಗಳ ತಂತ್ರಾಂಶ ಮತ್ತು ಬಹುಮಾಧ್ಯಮದ ಮಾಹಿತಿಯನ್ನು ಸಂಗ್ರಹಿಸಿ ವಿತರಿಸಲು ಬಳಸಲಾಗುತ್ತಿದೆ. ಈ ಹಂತದಲ್ಲಿ ಅಕ್ಷರ, ಧ್ವನಿ ಮತ್ತು ಚಿತ್ರ ಎಲ್ಲವೂ ಆಂಕೀಕರಣವಾಗಿ ಹೋಯಿತು.

 

ಅಡಕ ತಟ್ಟೆ (ಸಿಡಿ)

ಅಡಕ ತಟ್ಟೆ (ಡಿವಿಡಿ)

ಬೇರೆಬೇರೆ ಕಂಪನಿಗಳು ತಯಾರಿಸುವ ಸಿಡಿಗಳಲ್ಲಿ ಬದಲಾವಣೆಗಳು, ಸುಧಾರಣೆಗಳು, ವಿಶೇಷತೆಗಳು ವ್ಯತ್ಯಾಸಗಳೂ ಇರುತ್ತವೆ. ನಾವು ಉಪಯೋಗಿಸುವ ಸಂದರ್ಭಕ್ಕೆ ತಕ್ಕಂತೆ ಸಿಡಿಗಳನ್ನು ಆಯ್ದುಕೊಳ್ಳಬೇಕು. ಇದರಲ್ಲಿ ಸಂಗ್ರಹಿಸಬಹುದಾದ ಮಾಹಿತಿಯನ್ನು ಧ್ವನಿ ಮಾಹಿತಿಯಾಗಿದ್ದರೆ ನಿಮಿಷಗಳಲ್ಲಿ, ಕಂಪ್ಯೂಟರ್ ಮಾಹಿತಿಯಾಗಿದ್ದರೆ ಬೈಟ್ಸ್‌ಗಳಲ್ಲಿ ಸೂಚಿಸಿರುತ್ತಾರೆ. ಸಾಧಾರಣವಾಗಿ ೧೨ ಸೆಂ.ಮಿ ಮುದ್ರಿಕೆಗಳು ೭೪ ನಿಮಿಷ /೬೫೦ ಮೆಗಾ ಬೈಟ್ , ೮೦ ನಿಮಿಷ/ ೭೦೦ ಮೆಗಾ ಬೈಟ್ ಅಥವಾ ೮ ಸೆಂ.ಮಿ ಮುದ್ರಿಕೆಗಳು ೨೧ ನಿಮಿಷ/ ೧೮೫ ಮೆಗಾ ಬೈಟ್ ಸಂಗ್ರಹ ಸಾಮರ್ಥ್ಯ ಹೊಂದಿರುತ್ತವೆ.

ವೈಯಕ್ತಿಕ ಕಂಪ್ಯೂಟರ್‌ಗಳಲ್ಲಿ ಮೊದಲು ಧೃಡ ಮುದ್ರಿಕೆಗಳಿರಲಿಲ್ಲ, ಎಲ್ಲ ಕೆಲಸಗಳಿಗೂ ಫ್ಲಾಪಿ ಮುದ್ರಿಕೆಗಳನ್ನು ಬಳಸುತ್ತಿದ್ದರು. ಅನಂತರ ಧೃಡಮುದ್ರಿಕೆಗಳು ಕಂಪ್ಯೂಟರ್ ಒಳಗೆ ಬೆಚ್ಚಗೆ ಕುಳಿತು ಬೀಗಿದವು. ಹೊರಗಿನ ಕೆಲಸಗಳಿಗೆ ಅನೇಕ ವಿಧದ ಮುದ್ರಿಕೆಗಳು ಬಂದವು. ಆದರೆ ಈಗ ಅವೆಲ್ಲದರ ಜೊತೆಗೆ ಅತಿ ಹೆಚ್ಚು ಸಂಗ್ರಹ ಸಾಮರ್ಥ್ಯವುಳ್ಳ ಬಾಹ್ಯ ಧೃಡ ಮುದ್ರಿಕೆಗಳು ತಯಾರಾದವು.

ಸೀಗೇಟ್ ಸಂಸ್ಥೆಯ ೩-೧/೨” ನ ೪೦ ಜಿಬಿ ಧೃಡಮುದ್ರಿಕೆ

ಬಾಹ್ಯ ಮತ್ತು ಆಂತರಿಕ ಧೃಡಮುದ್ರಿಕೆಗಳ ಸಂಗ್ರಹ ಸಾಮರ್ಥ್ಯಗಳೂ ದಿನದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿವೆ. ಇವುಗಳನ್ನು ಗಿಗಾಬೈಟ್‌ಗಳಲ್ಲಿ ಸೂಚಿಸಲಾಗುತ್ತದೆ. ಇತ್ತೀಚಿಗೆ ಟೆರಾ ಬೈಟ್ ಸಂಗ್ರಹ ಸಾಮರ್ಥ್ಯವುಳ್ಳ ಧೃಡ ಮುದ್ರಿಕೆಗಳೂ ತಯಾರಾಗಿವೆ. ಈ ಕೆಳಗೆ ಬೈಟ್‌ಗಳ ಸಂಬಂಧ ಸೂಚಿಸುವ ಕೋಷ್ಟಕವೊಂದನ್ನು ಕೊಟ್ಟಿದೆ.

೧೦೨೪ ಬೈಟ್‌ಗಳು = ೧ ಕಿಲೋ ಬೈಟ್(ಕೆಬಿ)
೧೦೨೪ ಕಿಲೋ ಬೈಟ್‌ಗಳು = ೧ ಮೆಗಾ ಬೈಟ್(ಎಂಬಿ)
೧೦೨೪ ಮೆಗಾ ಬೈಟ್‌ಗಳು = ೧ ಗಿಗಾ ಬೈಟ್(ಜಿಬಿ)
೧೦೨೪ ಗಿಗಾ ಬೈಟ್‌ಗಳು = ೧ ಟೆರಾ ಬೈಟ್ (ಟಿಬಿ)

“ಸಾರ್, ಇಷ್ಟೊಂದು ಬೈಟ್‌ಗಳನ್ನು ಜ್ಞಾಪಕ ಇಟ್ಟುಕೊಳ್ಳುವುದು ಬಹಳ ಕಷ್ಟದ ಕೆಲಸ ಸಾರ್. ನನಗೆ ಗೊತ್ತಿರುವುದು ಪಾರ್ಲೆ ಮಸ್ತ್‌ಬೈಟ್ಸ್ ಮಾತ್ರ” ಎಂದು ಕೃಷ್ಣ ತನ್ನ ಸಂಕಟ ಹೇಳಿಕೊಂಡ.

ಅದಕ್ಕೆ ಸಾಗರ್, “ನಾನು ಇಲ್ಲಿ ಸ್ವಲ್ಪ ವಿವರ ನೀಡುತ್ತೇನೆ. ೩೦ ಸಂಪುಟಗಳಿಗಿಂತ ಹೆಚ್ಚಿರುವ ಎನ್ಸೈಕ್ಲೋಪಿಡಿಯಾ ಬ್ರಿಟಾನಿಕಾದ ಸಂಪೂರ್ಣ ಮಾಹಿತಿಯನ್ನು ಒಂದು ಸಿಡಿಯಲ್ಲಿ ಬರೆದರೂ, ಮತ್ತಷ್ಟು ಬರೆಯಲು ಜಾಗವಿರುತ್ತದೆ. ಮತ್ತೊಂದು ವಿಶೇಷ. ಯಾವುದೇ ಮಾಹಿತಿಯನ್ನು ಕೇವಲ ೧೦ ಸೆಕೆಂಡುಗಳಲ್ಲಿ ಹುಡುಕುವ ಸೌಲಭ್ಯವಿರುತ್ತದೆ. ಆದರೆ ಈಗ ಡಿವಿಡಿ ಬಂದಿದೆ. ಇದು ಸಿಡಿಯನ್ನು ಹಿಂದಕ್ಕೆ ತಳ್ಳಿದೆ. ಇದರಲ್ಲಿ ಯಾವುದೇ ಅಡೆತಡೆ ಇಲ್ಲದೆ ಪಠ್ಯ. ಧ್ವನಿ ಮತ್ತು ಚಿತ್ರ, ಚಿತ್ರ ಸಂಚಾಲನೆ ಎಲ್ಲವನ್ನು ಸಲೀಸಾಗಿ ತುಂಬಿಸಬಹುದು. ಡಿವಿಡಿಗಳು ನಾಲ್ಕು ಘಂಟೆ ಕಾಲದ ವಿಡಿಯೋ ಜೊತೆ ಒಳ್ಳೆಯ ಗುಣ ಮಟ್ಟದ ನಾಲ್ಕು ಚಾನೆಲ್ ಆಡಿಯೋವನ್ನೂ ತುಂಬಿಸಿಟ್ಟುಕೊಳ್ಳಬಲ್ಲವು.” ಎಂದು ಹೋಲಿಕೆ ನೀಡಿದ

“ಸಾರ್, ಕಂಪ್ಯೂಟರ್‌ಲ್ಲಿ ಈಗ ಕನ್ನಡ ಭಾಷೆಯನ್ನು ಬಳಸುವಂತೆ. ಈ ಸಿಡಿ, ಡಿವಿಡಿಗಳಲ್ಲಿಯೂ ಕನ್ನಡದ ಮಾಹಿತಿಯನ್ನು ತುಂಬಿಸಬಹುದಾ? ಎಂದು ಋತ್ವಿಕ್ ಕೇಳಿದ.

ಅದಕ್ಕೂ ಉಲ್ಲಾಸನ ಉತ್ತರ ಸಿದ್ಧವಾಗಿತ್ತು. “ಕಂಪ್ಯೂಟರ್‌ಗಳಿಗಾಗಲೀ, ಈ ಸಂಗ್ರಹ ಮಾಧ್ಯಮಗಳಿಗಾಗಲೀ ಯಾವ ಭಾಷೆಯೂ ಬರುವುದಿಲ್ಲ. ನಾವು ಈಗಾಗಲೇ ಹೇಳಿರುವ ಹಾಗೆ ಅವುಗಳು ಮಾಹಿತಿಯನ್ನು ತುಂಬಿಸಿಟ್ಟುಕೊಳ್ಳುವುದು ಬೈನರಿ ಕೋಡ್‌ನಲ್ಲಿ. ಉದಾಹರಣೆಗೆ, ಮೈಸೂರು ವಿಶ್ವವಿದ್ಯಾಲಯದ ೧೪ ಸಂಪುಟಗಳ ವಿಶ್ವಕೋಶವನ್ನು ಮೈಸೂರು ವಿಶ್ವವಿದ್ಯಾಲಯ ಮತ್ತು ಕನ್ನಡ ಗಣಕ ಪರಿಷತ್ತು ಆಂಕಿಕಗೊಳಿಸಿ, ಬಿಡುಗಡೆಮಾಡಿದ್ದಾರೆ. ಒಟ್ಟು ಎಪ್ಪತ್ತೈದು ಲಕ್ಷ, ಐದು ಸಾವಿರದ ಐನೂರ ಎಂಬತ್ತೈದು(೭೫,೫೫೮೫) ಪದಗಳನ್ನೊಳಗೊಂಡಿರುವ ಈ ವಿಶ್ವಕೋಶದಲ್ಲಿ ೧೪,೭೯೧ ಲೇಖನಗಳು, ೯೬೧೪ ಚಿತ್ರಗಳು, ೫೮ ಧ್ವನಿ ತುಣುಕುಗಳು, ೩೮೨ ವೀಡಿಯೋ ತುಣುಕುಗಳು, ೧೮ ಚಿತ್ರಸಂಚಾಲನೆಗಳು ಒಂದೇ ಅಡಕ ಮುದ್ರಿಕೆಯೊಳಗೆ ಅಡಗಿ ಕುಳಿತಿವೆ. ಇದನ್ನು ಬಳಸಲು ಬೇಕಾಗುವ ತಂತ್ರಾಂಶವೂ ಇದರಲ್ಲಿಯೇ ಇದೆ. ಇದನ್ನು ಕಂಪ್ಯೂಟರ್‌ನಲ್ಲಿ ಬಳಸಬಹುದು.” ಎಂದು ವಿವರ ನೀಡಿದ.

“ಅಬ್ಬಾ! ಇಷ್ಟೊಂದು ವಿಷಯವನ್ನು ನಮ್ಮ ತಲೆಯಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲ. ಆ ಬ್ರಹ್ಮನಿಗೆ ಹೇಳಿ ಇನ್ನು ಮುಂದೆ ಎಲ್ಲ ಮನುಷ್ಯರ ತಲೆಯಲ್ಲಿ ಒಂದು ಪುಟ್ಟ ಕಂಪ್ಯೂಟರ್ ಜೋಡಿಸಿ ಬಿಡಯ್ಯಾ ಎಂದು ಅರ್ಜಿ ಹಾಕಬೇಕು.” ಎಂದು ಚರಣ್ ತನ್ನ ಮನಸ್ಸಿಗೆ ಬಂದ ವಿಚಾರವನ್ನು ಜೋರಾಗಿ ಹೇಳಿದ.

ಅದಕ್ಕೆ ಸಾಗರ್ ಹೀಗೆ ಓದಿದ;

-ಕಳೆದ ಮೂವತ್ತು ವರ್ಷಗಳಲ್ಲಿ ಡಿಜಿಟಲ್ ಸಾಧನಗಳ ಪ್ರಗತಿ ಊಹಿಸಲೂ ಆಗದ ವೇಗದಲ್ಲಿ ಆಗಿದೆ. ಅವುಗಳ ಗಾತ್ರವೂ ಕುಗ್ಗಿದೆ. ಕೈಲಿ ಹಿಡಿದುಕೊಂಡು ಹೋಗಬಹುದಾದ ಗಣಕಯಂತ್ರಗಳು ಬಂದಿವೆ. ಧ್ವನಿಮುದ್ರಣ ಮತ್ತು ಮರುಚಾಲನೆಗೂ ಸಣ್ಣಗಾತ್ರದ ಆದರೆ ಉತ್ತಮವಾಗಿ ಕಾರ್ಯ ನಿರ್ವಹಿಸಬಲ್ಲ ಮುದ್ರಕಗಳು ಬಂದಿವೆ. ಚಿತ್ರಮಾಹಿತಿಗೆ ಮತ್ತೆಮತ್ತೆ ಬಳಸಬಲ್ಲ ಚಿತ್ರಮಾಹಿತಿ ಸ್ಮೃತಿ ಕಾರ್ಡುಗಳು ದೊರಕುತ್ತಿವೆ.

ಫಿಲ್ಮ್‌ಗಳ ಅಗತ್ಯವಿರುವುದಿಲ್ಲ. ಇದೇ ತಾನೆ ಒಬ್ಬ ಮಾನವ ತನ್ನ ತಲೆಯಲ್ಲಿಯೂ ಒಂದು ಗಣಕವನ್ನು ಸ್ಥಾಪಿಸಬೇಕೆಂದು ಬ್ರಹ್ಮದೇವನಿಗೆ ಅರ್ಜಿ ಸಲ್ಲಿಸಿದ್ದು, ಆ ದಿನಗಳೂ ಬರುವುದು ದೂರವಿಲ್ಲ ಎಂದು ತಿಳಿಸ ಬಯಸುತ್ತೇವೆ.

ಎಲ್ಲರೂ ಸಾಗರ್ ಓದುವುದನ್ನು ಗಂಭೀರವಾಗಿ ಕೇಳುತ್ತಿದ್ದರು. ಈ ಮಾತು ಕೇಳಿದವರೇ ‘ಘೊಳ್’ ಎಂದು ನಕ್ಕರು.

ಎಲ್ಲರ ನಗು ನಿಂತ ನಂತರ……

ಇತ್ತೀಚಿಗೆ ಮೊಬೈಲ್ ಫೋನುಗಳು ಕೇವಲ ಮಾತನಾಡುವ ದೂರವಾಣಿಗಳಾಗಿ ಉಳಿದಿಲ್ಲ. ಅದರಲ್ಲೂ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳಬಹುದು. ಫೋನ್ ನಂಬರ್, ಸಂದೇಶ (SMS, MMS), ದಿನಚರಿ ಇತ್ಯಾದಿ. ಮೊಬೈಲ್‌ನಲ್ಲಿ ಫೋಟೋ ತೆಗೆಯುವುದು, ಸಂಗೀತ ಕೇಳುವುದು ಈಗ ಸಾಧ್ಯ. ಆದರೆ ಈಗ ಹೊಸದಾಗಿ ಬರಲಿರುವ ಮೊಬೈಲ್ ಸ್ಮೃತಿ ಕಾರ್ಡುಗಳು, ಫಾಕ್ಸ್, ವಿ-ಅಂಚೆ ಸಂದೇಶಗಳು, ಅಂತರಜಾಲದಿಂದ ಪಡೆದ ಮಾಹಿತಿಯನ್ನೂ ಸಂಗ್ರಹಿಸಿಟ್ಟುಕೊಳ್ಳುವಂತೆ ತಯಾರಾಗಿವೆ. ಒಂದು ದೊಡ್ಡನಗರದ ಟೆಲಿಫೋನ್ ಡೈರಕ್ಟರಿ, ನಕ್ಷೆ, ಚಿತ್ರಗಳು, ನಿಘಂಟು ಇತ್ಯಾದಿ ಎಲ್ಲಾ ಮಾಹಿತಿಯನ್ನೂ ಇದರೊಳಗೆ ಇಡಬಹುದು. ಒಟ್ಟು ೩ಗಿಗಾಬೈಟ್ ಸ್ಮೃತಿ ಹೊಂದಿರುವ ಫೋನ್‌ಗಳು ಲಭ್ಯವಾಗಲಿವೆ.

ಇದಲ್ಲದೆ Personal Digital Assistants (PDAs) ಮತ್ತು Global Positioning Systems (GPS) ಅಪಾರ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳಬಲ್ಲವು. PDA ಗಳು ಕೂಡ ಒಂದು ರೀತಿಯ ಸ್ಮೃತಿ ಕಾರ್ಡುಗಳು. ಇವುಗಳಲ್ಲಿ ವೈಯಕ್ತಿಕವಾಗಿ ನಮಗೆ ಬೇಕಾದ ಮಾಹಿತಿಯನ್ನು ತುಂಬಿಸಬಹುದು. ಇದನ್ನು ಫೋನ್, ಕಂಪ್ಯೂಟರ್, ಕೈಗಣಕಗಳಲ್ಲಿ ಅಳವಡಿಸಿಕೊಳ್ಳುವಂತೆ ರೂಪಿಸಲಾಗಿದೆ. GPS ನಾವು ಈ ಭೂಮಿಯ ಮೇಲೆ ಎಲ್ಲಿರುವೆವೆಂದು ಉಪಗ್ರಹದ ಸಂಕೇತಗಳ ಸಹಾಯ ಪಡೆದು ತಿಳಿಸುತ್ತದೆ. ಈ ಕಾರ್ಯಕ್ಕೆ ಅವಶ್ಯಕವಾದ ಅಪಾರ ಮಾಹಿತಿಯನ್ನು ಹೊಂದಿರುತ್ತದೆ. ಇದನ್ನು ವಾಹನ ಚಾಲಕರು, ಪ್ರವಾಸಿಗಳು ಬಳಸಬಹುದು.

ಇತ್ತೀಚೆಗೆ ಈ ಡಿಸ್ಕ್‌ಗಳಿಗಿಂತ ಸುಲಭವಾಗಿ, ನಂಬಿಕಾರ್ಹವಾಗಿ ಮಾಹಿತಿಯನ್ನು ರವಾನಿಸಬಲ್ಲ ಸಾಧನಗಳು ದೊರೆಯುತ್ತಿವೆ. ಇವುಗಳಿಗೆ ಬಳಸುವ ತಾಂತ್ರಿಕತೆಯನ್ನು “ಫ್ಲಾಶ್’ ಎನ್ನುತ್ತಾರೆ. ಈ ಸಾಧನವನ್ನು ಜಪಾನಿನ ತೋಷಿಬಾ ಕಂಪನಿಯವರು ಕಂಡುಹಿಡಿದರು. ಇವುಗಳಲ್ಲಿ ಮುಖ್ಯವಾದವು, ಥಂಬ್ ಡ್ರೈವ್, ಹ್ಯಾಂಡಿ ಡ್ರೈವ್, ಮೆಮೊರಿ ಸ್ಟಿಕ್, ಫ್ಲಾಶ್ ಸ್ಟಿಕ್. ಇವುಗಳನ್ನು ಗಣಕಕ್ಕೆ ಜೋಡಿಸಲು ಯೂನಿವರ್ಸಲ್ ಸೀರಿಯಲ್ ಪೋರ್ಟ್ ಎಂಬ ಊಡಿಕೆ ಗ್ರಹಿಸುವ ಜೋಡಕವಿರುತ್ತದೆ. ಇದಕ್ಕೆ ಜೋಡಿಸಿ ಗಣಕದಿಂದ ಮಾಹಿತಿಯನ್ನು ನಕಲಿಸಬಹುದು. ನಕಲಿಸಿದ ಮಾಹಿತಿಯನ್ನು ಬೇರೊಂದು ಗಣಕಕ್ಕೆ ತುಂಬಬಹುದು, ಇವು ಬಹಳ ಹಗುರವಾಗಿ ಅತಿ ಚಿಕ್ಕ ಗಾತ್ರದಲ್ಲಿರುತ್ತವೆ. ಇವುಗಳ ಸರಾಸರಿ ಸಂಗ್ರಹ ಸಾಮರ್ಥ್ಯವೆಷ್ಟು ಗೊತ್ತೆ? ಏಪ್ರಿಲ್ ೨೦೦೭ರ ಮಾಹಿತಿಯ ಪ್ರಕಾರ ೩೨ ಮೆಗಾಬೈಟ್‌ಗಳಿಂದ ಪ್ರಾರಂಭವಾಗಿ ೬೪ ಗಿಗಾಬೈಟ್‌ವರೆಗೆ ತಲುಪಿವೆ. ಇವುಗಳಿಗೆ ಅಗತ್ಯವಾದ ವಿದ್ಯುಚ್ಛಕ್ತಿಯನ್ನು ಗಣಕದಿಂದಲೇ ಪಡೆಯುತ್ತವೆ. ಇದರ ಒಳಗೆ ಒಂದು ಚಿಕ್ಕ ಮುದ್ರಿತ ಸರ್ಕ್ಯುಟ್ ಮತ್ತು ಮೈಕ್ರೋಪ್ರೊಸೆಸರ್ ಇರುತ್ತದೆ. ಇವುಗಳಲ್ಲಿ ಯಾವುದೇ ತರಹದ ಚಲಿಸುವ ಭಾಗವಿಲ್ಲ. ಇದರ ಭಾಗಗಳು ದೃಢವಾಗಿರುವುದರಿಂದ ಹೆಚ್ಚುಕಾಲ ಬಾಳಿಕೆ ಬರುತ್ತದೆ. ಒಂದು ಕೀಚೈನ್‌ನಲ್ಲಿ ಹಾಕಿಕೊಂಡು, ಜೇಬಿನಲ್ಲಿಟ್ಟುಕೊಳ್ಳಬಹುದು. ಅಡಕ ಮುದ್ರಿಕೆಯಲ್ಲಿ ಬರೆದ ಮಾಹಿತಿಯನ್ನು ೧೦೦೦ ಸಲ ಅಳಿಸಿ ಬರೆಯಬಹುದು. ಅನಂತರ ಅದು ಕೆಟ್ಟು ಹೋಗುವ ಸಂಭವವಿರುತ್ತದೆ. ಆದರೆ ಈ ಫ್ಲಾಶ್ ಸಾಧನಗಳಲ್ಲಿ ೫೦೦,೦೦೦ಕ್ಕೂ ಹೆಚ್ಚು ಬಾರಿ ಬರೆದು ಅಳಿಸಬಹುದು. ಮತ್ತೆ ಬರೆಯಬಹುದು.

ಯುಎಸ್‌ಬಿ ಫ್ಲಾಶ್ ಡ್ರೈವ್

ಯುಎಸ್‌ಬಿ ಫ್ಲಾಶ್ ಡ್ರೈವ್ (ಕನೆಕ್ಟರ್ ಒಳಗೆಳೆಯಬಹುದು )

ಫ್ಲಾಶ್ ಡ್ರೈವ್‌ನ ಒಳನೋಟ (೧. ಯುಎಸ್‌ಬಿ ಜೋಡಕ, ೨. ಯುಎಸ್‌ಬಿ ಸಂಗ್ರಹಾಕ ನಿಯಂತ್ರಕ, ೩. ಪರೀಕ್ಷಣೆಗಾಗಿ ಬಿಂದುಗಳು, ೪. ಪ್ಲಾಶ್ ಸ್ಮೃತಿಬಿಲ್ಲೆ, ೫. ಸ್ಪಟಿಕ ಆಂದೋಲಕ(ಕ್ರಿಸ್ಟಲ್ ಆಸಿಲೇಟರ್), ೬. ಎಲ್‌ಇಡಿ ದೀಪಗಳು, ೭. ಬರಹ ರಕ್ಷಣೆ ಸ್ವಿಚ್ಚು, ೮. ಎರಡೆನೆಯ ಫ್ಲಾಶ್ ಸ್ಮೃತಿಬಿಲ್ಲೆಗೆ ಕಾದಿರಿಸಿರುವ ಸ್ಥಳ)

ಇದೇ ರೀತಿ ಧ್ವನಿಮುದ್ರಣಕ್ಕೆ ಅಮೆರಿಕಾದ ‘ಆಪೆಲ್’ ಕಂಪನಿಯವರು ‘ಐಪಾಡ್’ ಎಂಬ ಸಾಧನವನ್ನು ೨೦೦೧ರಲ್ಲಿ ಬಿಡುಗಡೆಮಾಡಿದ್ದಾರೆ. ಇದನ್ನು ಬಿಡುಗಡೆ ಮಾಡಿದಾಗ ೫ ಜಿಬಿ ಧೃಢಮುದ್ರಿಕೆಗಳನ್ನು ಹೊಂದಿದ್ದ ಐಪಾಡ್‌ಗೆ “ನಿಮ್ಮ ಜೇಬಿನಲ್ಲಿ ೧೦೦೦ ಹಾಡುಗಳು”  ಎಂದು ಜಾಹೀರಾತು ನೀಡಿ, ಪ್ರಚಾರ ಮಾಡಲಾಯಿತು. ಈಗ ೫೧೨ ಮೆಗಾಬೈಟ್‌ಗಳಿಂದ ಪ್ರಾರಂಭವಾಗಿ ೮೦ ಜಿಬಿ ಸಂಗ್ರಹ ಸಾಮರ್ಥ್ಯವುಳ್ಳ ವಿವಿಧ ರೀತಿಯ ‘ಐಪಾಡ್’ಗಳು ಲಭ್ಯವಿವೆ. ಇದರೊಳಗೆ ಒಂದು ಧೃಡ ಮುದ್ರಿಕೆಯನ್ನೇ ಅಳವಡಿಸಿದ್ದಾರೆ. ಕೆಲವು ಚಿಕ್ಕ ಮಾದರಿಗಳಲ್ಲಿ ಫ್ಲಾಶ್ ತಾಂತ್ರಿಕತೆಯನ್ನು ಬಳಸಿದ್ದಾರೆ. ಸಂಗೀತಗಾರರು, ವಾದ್ಯಗೋಷ್ಠಿಗಳವರು ಇದನ್ನು ಬಹಳ ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಹಿನ್ನೆಲೆ ಸಂಗೀತವನ್ನು ಧ್ವನಿಮುದ್ರಿಸಿಕೊಂಡು ತಮ್ಮ ಕಾರ್ಯಕ್ರಮಗಳಲ್ಲಿ ಬಳಸುತ್ತಾರೆ. ಇವುಗಳನ್ನು ಧ್ವನಿ ರವಾನೆಗೆ, ಸಂಗೀತ ಕೇಳಲು ತಯಾರಿಸಿದರಾದರೂ, ಇದರಲ್ಲೂ ಪಠ್ಯ, ಚಿತ್ರ ಒಟ್ಟಿನಲ್ಲಿ ಎಲ್ಲ ತರಹದ ಡಿಜಿಡಲ್ ಮಾಹಿತಿಯನ್ನು ಸಂಗ್ರಹಿಸಬಹುದು. ಏಪ್ರಿಲ್ ೨೦೦೭ರ ಅಂಕಿ ಅಂಶಗಳ ಅನುಸಾರ ಈಗಾಗಲೇ ಪ್ರಪಂಚಾದ್ಯಂತ ೧೦೦ ಮಿಲಿಯನ್ ಐಪಾಡ್‌ಗಳು ಮಾರಾಟವಾಗಿವೆ. ಇತ್ತೀಚಿಗೆ ವಿವಿಧ ಮಾದರಿಯ ವಿಡಿಯೋ ಐಪಾಡ್‌ಗಳು ಮಾರುಕಟ್ಟೆಯನ್ನು ದಾಳಿಮಾಡಿವೆ.

ಫ್ಲಾಶ್ ಡ್ರೈವ್‌ನಂತಿರುವ ಡಿಜಿಟಲ್ ಧ್ವನಿ ಸಾಧನ

ಆಪಲ್ ಸಂಸ್ಥೆಯವರ ವಿವಿಧ ‘ಐಪಾಡ್’ ಗಳು

‘ಸಾರ್, ಹೀಗೇ ಎಲ್ಲದರ ಗಾತ್ರವನ್ನು ಕುಗ್ಗಿಸುತ್ತಾ ಕೊನೆಗೆ ಜನಗಳ ಗಾತ್ರ ಕುಗ್ಗಿಸಿ ಇಡೀ ಪ್ರಪಂಚವನ್ನು ಲಿಲಿಪುಟ್ ಪ್ರಪಂಚ ಮಾಡಿಬಿಡುತ್ತಾರೋ ಏನೋ ಈ ವಿಜ್ಞಾನಿಗಳು. ಹಾಗೆ ಮನುಷ್ಯನನ್ನೂ ಡಿಜಿಟಲ್ ರೂಪಕ್ಕೆ ರೂಪಾಂತರಿಸಿ, ಆಕಾಶಮಾರ್ಗವಾಗಿ ಅಂತರಜಾಲದ ಮೂಲಕ ಕಳುಹಿಸುವ ದಿನವೂ ಬರುತ್ತದೇನೋ?” ಎಂದ ಚರಣ್

“ಒಂದಂತೂ ನಿಜ, ಈ ಎಲ್ಲಾ ಮಾಹಿತಿಗಳನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸಿದ್ದರಿಂದ ಇಂಟರ್‌ನೆಟ್‌ನಲ್ಲಿ ಈ ಮಾಹಿತಿಯನ್ನು ತುಂಬಿಸಿ, ರವಾನಿಸಲು ಸಾಧ್ಯವಾಗಿದೆ. ಎಲ್ಲರಿಗೂ ಮಾಹಿತಿ ಲಭ್ಯವಾಗುತ್ತದೆ. ಹಾಗಾಗಿ ಇಂಟರ್‌ನೆಟ್ ಅಥವಾ ಅಂತರಜಾಲ ಅಗಾಧ ಮಾಹಿತಿಯನ್ನು ಸದಾಕಾಲ ಸಂಗ್ರಹಿಸಿಟ್ಟುಕೊಂಡಿರುವ ಬೃಹತ್ ಸಂಗ್ರಾಹಕ. ಅಂತರಜಾಲದ ವೇಗ ಮತ್ತು ವ್ಯಾಪ್ತಿ ಪ್ರಪಂಚವನ್ನು ಕುಗ್ಗಿಸಿದೆ. ಮಾನವ ವಿಶ್ವ ಮಾನವನಾಗುತ್ತಿದ್ದಾನೆ.’ ಎಂದು ನಾಗರಾಜ್ ಮಕ್ಕಳಿಗೆ ಅಂತರಜಾಲದ ಸೂಕ್ಷ್ಮ ಪರಿಚಯ ಮಾಡಿದರು.

‘ಸಾರ್, ಇದನ್ನೆಲ್ಲಾ ಕೇಳ್ತಾ, ಕೇಳ್ತಾ ನನಗೆ ಗಣೇಶನ ಹಬ್ಬದ ಜ್ಞಾಪಕ ಬರ‍್ತಾ ಇದೆ. ಗಣೇಶನ ಹಬ್ಬದಲ್ಲಿ ಕಡುಬು, ಚಕ್ಕುಲಿ, ಗುಗ್ಗುರಿ ಎಲ್ಲಾ ಮಾಡಿ ಗಣೇಶನಿಗೆ ನೈವೇದ್ಯ ಮಾಡಿ, ಕೃಷ್ಣಾರ್ಪಣ ಎಂದು ಅವನ ದಪ್ಪ ಹೊಟ್ಟೆ ಒಳಗೆ ತುಂಬಿಸಿಕೋ ಅಂತ ಹೇಳಿ ಬಿಡ್ತೀವಿ ಹಾಗೆ ಪಠ್ಯ, ಚಿತ್ರ ಮತ್ತು ಧ್ವನಿ ಎಲ್ಲವನ್ನೂ ಮೇಳೈಸಿ ಅಂದರೆ ಒಟ್ಟುಗೂಡಿಸಿ ಡಿಜಿಟಲ್ ರೂಪಕ್ಕೆ ತಂದು ಗಣಕದಲ್ಲಿ ಅಥವಾ ಇಂತಹ ಸಂಗ್ರಹ ಸಾಧನಗಳಲ್ಲಿ ತುಂಬಿ ಭದ್ರವಾಗಿಟ್ಟುಕೊಂಡಿರು ಎಂದು ಒಪ್ಪಿಸಿ ಬಿಡ್ತೀವಿ. ಅಲ್ವಾ?”  ಎಂದು ಕೃಷ್ಣ ತನ್ನ ವ್ಯಾಖ್ಯಾನ ನೀಡಿದ

ನಾಗರಾಜ್‌ಗೆ ಕೃಷ್ಣನ ವ್ಯಾಖ್ಯಾನ ಕೇಳಿ ನಗು ಬಂತು. “ಅಂತೂ ಕೃಷ್ಣ, ಯಾರು ಏನೇ ಹೇಳಿದರೂ ನೀನು ಹೊಟ್ಟೆಪಕ್ಷಕ್ಕೆ ಮಾತ್ರ ದ್ರೋಹ ಬಗೆಯುವುದಿಲ್ಲ.” ಎಂದು ಗೇಲಿಮಾಡಿದರು.

“ಅಲ್ಲಾ ಸಾರ್, ಹಾಗೆ ಜ್ಞಾಪಕ ಇಟ್ಟುಕೊಂಡರೆ ಮರೆಯುವುದಿಲ್ಲ. ಅದು ನನ್ನ ವಿಧಾನ” ಎಂದು ತನ್ನನ್ನು ತಾನು ಸಮರ್ಥಿಸಿಕೊಂಡ ಕೃಷ್ಣ

“ಹೌದ್ಹೌದು, ಗಣಪನ ಮುಂದೆ ಇಟ್ಟು ಕೃಷ್ಣಾರ್ಪಣ ಎನ್ನುವುದು. ಆದರೆ ತಿನ್ನುವುದು ಅರಗಿಸಿಕೊಳ್ಳುವುದು ‘ಕೃಷ್ಣ’ ಅಂದರೆ ನೀನೇ ತಾನೆ? ಇಲ್ಲಿ ಹಾಗಲ್ಲ. ಗಣಪನ ಮುಂದೆ ಇಲಿ ಇರುವ ಹಾಗೆ ಇಲ್ಲಿ ಗಣಕದ ಮುಂದೆ ಮೌಸ್ ಇಟ್ಟಿದ್ದಾರೆ. ಅದನ್ನು ಕ್ಲಿಕ್ಕಿಸಿ ನಾವು ಮಾಹಿತಿ ವಾಪಸ್ಸು ಪಡೆದುಕೊಳ್ಳಬಹುದು. ಆದರೆ ನೀನು ತಿಂದ ತಿಂಡಿ?” ಎಂದು ಉಲ್ಲಾಸ್ ಅವನ ಹೋಲಿಕೆಗೆ ಮತ್ತೊಂದು ಅಂಶವನ್ನು ಸೇರಿಸಿದ್ದೇ ಅಲ್ಲದೆ ವ್ಯತ್ಯಾಸವನ್ನೂ ಹೇಳಿದ.

“’ಸರ್ವಂ ವಿಷ್ಣು ಮಯಂ ಜಗತ್’ ಎನ್ನುವ ಹಾಗೆ ಈಗ ನಾವು ‘ಸರ್ವಂ ಡಿಜಿಟಲ್ ಮಯಂ ಜಗತ್’ ಅಂತ ಹೇಳಬಹುದು ಅಲ್ವಾ ಸಾರ್” ಎಂದು ಋತ್ವಿಕ್ ಧ್ವನಿಗೂಡಿಸಿದ.

ಎಲ್ಲರೂ ವಿಷಯವನ್ನು ಅರ್ಥೈಸಿಕೊಳ್ಳಲು, ಜ್ಞಾಪಕದಲ್ಲಿಟ್ಟುಕೊಳ್ಳಲು ತಮ್ಮದೇ ದಾರಿಯಲ್ಲಿ ಸಾಗುತ್ತಿದ್ದುದು ಅವರ ಮಾತುಗಳಿಂದ ಸ್ಪಷ್ಟವಾಗುತ್ತಿತ್ತು.

“ಇಷ್ಟು ದಿನ ಅಂದರೆ ಸರಿಯಾಗಿ ಒಂದು ವಾರ ನಮ್ಮ ಓದು ನಡೆಯಿತಲ್ಲವೇ? ಎಲ್ಲರೂ ಮತ್ತೊಮ್ಮೆ ಎಲ್ಲರ ಭಾಗಗಳನ್ನೂ ಓದಿ. ಅಲ್ಲದೆ ಈ ತಂತ್ರಜ್ಞಾನ ದಿನದಿನಕ್ಕೆ ಬೆಳೆಯುತ್ತಿರುತ್ತದೆ. ಹೊಸ ವಿಷಯಗಳನ್ನೂ ತಿಳಿದುಕೊಳ್ಳಿ. ಸ್ಕೂಲಿಗೆ ನಿಮ್ಮ ಈ ಎಲ್ಲಾ ಮಾಹಿತಿಯನ್ನು ಚಿತ್ರಗಳೊಂದಿಗೆ ಅಚ್ಚುಕಟ್ಟಾಗಿ ಮುದ್ರಿಸಿ ಕೊಡುವ ಏರ್ಪಾಡು ಮಾಡಿಕೊಳ್ಳಿ.” ಎಂದು ಮಕ್ಕಳು ಮುಂದೆ ಮಾಡಬೇಕಾದ ಕೆಲಸಗಳನ್ನು ನಾಗರಾಜ್ ನೆನಪು ಮಾಡಿಕೊಟ್ಟರು.

ಅಷ್ಟರಲ್ಲಿ ಸಾಗರ್ “ಸಾರ್ ನಮ್ಮ ಪ್ರಾಜೆಕ್ಟ್‌ಗೆ ಒಂದು ಹೆಸರು ಯೋಚಿಸಿದ್ದೇನೆ. ಎಂದು ಹೇಳಿದ”

ಎಲ್ಲರ ಕಿವಿ ಚುರುಕಾಯಿತು. ಆಗ ಸಾಗರ್ ‘ಮಾಹಿತಿ ಸಾಧನಗಳ ತೇರು, ತಲುಪಿದೆ ಡಿಜಿಟಲ್ ದರ್ಬಾರು’ ಎಂದು ಹೆಸರು ಕೊಡಬಹುದಲ್ಲವೇ?” ಎಂದು ಕೇಳಿದ

ವಿಶೇಷ ವಿನ್ಯಾಸದ ಫ್ಲಾಶ್ ಡ್ರೈವ್