ಅಧಿಕ ಹಣ, ಅಂತಸ್ತು, ಸ್ಥಾನಮಾನವನ್ನು ಗಳಿಸಲು ಪ್ರತಿಯೊಬ್ಬರೂ ಆಸೆ ಪಡುತ್ತಾರೆ. ಅದನ್ನು ಸಾಧಿಸಲು ಬೇಕು ವಿದ್ಯೆ ಮತ್ತು ಬುದ್ಧಿ. ಹೀಗಾಗಿ ಎಲ್ಲಾ ತಂದೆ ತಾಯಿಗಳು ತಮ್ಮ ಮಕ್ಕಳು ಶಾಲಾ ಕಾಲೇಜುಗಳಲ್ಲಿ ಚೆನ್ನಾಗಿ ಓದಲಿ, ಹೆಚ್ಚು ಅಂಕಗಳನ್ನು ತೆಗೆಯಲಿ, ಬುದ್ಧಿವಂತರೆನಿಸಿಕೊಳ್ಳಲಿ ಎಂದು ಆಶಿಸುತ್ತಾರೆ. ಶ್ರದ್ಧೆಯಿಂದ, ಶ್ರಮಪಟ್ಟು, ಕಲಿಯಿರಿ ಎಂದು ಮಕ್ಕಳನ್ನು ಒತ್ತಾಯಿಸುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಗೆ ಕೂಡ ತಾನು ಗರಿಷ್ಟಮಟ್ಟದ ಅಂಕಗಳನ್ನು ತೆಗೆಯಬೇಕು, ತನ್ನ ತರಗತಿ, ಶಾಲೆ, ಜಿಲ್ಲೆ, ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿರಬೇಕೆಂಬ ಆಸೆ ಇರುತ್ತದೆ. ಆದರೆ ಯಾವುದೇ ಶಾಲೆಯಲ್ಲಿ, ಕಾಲೇಜಿನಲ್ಲಿ ಶೇಕಡಾ ೨೦ ರಿಂದ ೫೦ ರವರೆಗೆ ವಿದ್ಯಾರ್ಥಿಗಳು ಫೇಲಾಗುತ್ತಾರೆ. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಫೇಲಾಗುವವರ ಸಂಖ್ಯೆ, ಪಾಸಾಗುವವರ ಸಂಖ್ಯೆಗಿಂತ ಹೆಚ್ಚಾಗಿರುತ್ತದೆ. ಓದದೇ ಫೇಲಾಗುವುದು, ಪೂರ್ಣ ಪ್ರಯತ್ನಪಡದೆ ಕಡಿಮೆ ಅಂಕಗಳನ್ನು ತೆಗೆಯುವುದು ಅರ್ಥವಾಗುವಂಥದ್ದು, ಆದರೆ ಕಷ್ಟಪಟ್ಟು ಶ್ರದ್ಧೆಯಿಂದ ಓದಿಯೂ, ಕೆಲವರು ಪರೀಕ್ಷೆಯಲ್ಲಿ ವಿಫಲರಾಗುತ್ತಾರೆ. ಅಂತಿಮ ಟೆಸ್ಟ್‌ನಲ್ಲಿ ೮೦ ಅಂಕ ಪಡೆದ ವಿದ್ಯಾರ್ಥಿ, ಒಂದು ವಾರದ ನಂತರ ನಡೆದ ಪರೀಕ್ಷೆಯಲ್ಲಿ ನಲವತ್ತೋ ಮೂವತ್ತೋ ಅಂಕಗಳನ್ನು ತೆಗೆಯುವುದು ಅರ್ಥವಾಗದ ಸಂಗತಿ.

ಪರೀಕ್ಷೆಯಲ್ಲಿ ಫೇಲಾಗುವುವವರನ್ನು, ಕಲಿಯುವುದರಲ್ಲಿ ಹಿಂದೆ ಬೀಳುವವರನ್ನು ದಡ್ಡರು, ಸೋಮಾರಿಗಳು, ಕಲಿಯುವುದರಲ್ಲಿ ಆಸಕ್ತಿ ಇಲ್ಲದವರು ಎಂದೆಲ್ಲಾ ದೂಷಿಸುತ್ತೇವೆ. ಇದು ಸರಿಯೇ? ಕಲಿಯುವುದು, ಕಲಿತದ್ದನ್ನು ನೆನಪಿನಲ್ಲಿಟ್ಟುಕೊಳ್ಳುವುದು, ಪ್ರಶ್ನೆಗಳಿಗೆ ಸರಿ ಉತ್ತರವನ್ನು, ಕಾಲಮಿತಿಯಲ್ಲಿ ಬರೆಯುವುದು, ಮಿದುಳಿನ ಸಾಮರ್ಥ್ಯ I.Q. ಶೇಕಡ ೧೫ ರಷ್ಟು ವಿದ್ಯಾರ್ಥಿಗಳಿಗೆ IQ ಸಾಧಾರಣಕ್ಕಿಂತ ಹೆಚ್ಚಿರುತ್ತದೆ ಅವರಿಗೆ ೮೦+ ಅಂಕಗಳನ್ನು ತೆಗೆಯುವುದು ನೀರು ಕುಡಿದಷ್ಟೇ ಸುಲಭ. ಶೇಕಡಾ ೧೫ ರಷ್ಟು ವಿದ್ಯಾರ್ಥಿಗಳಿಗೆ I.Q. ಸಾಧಾರಣಕ್ಕಿಂತ ಕಡಿಮೆ ಇರುತ್ತದೆ. ಶಿಕ್ಷಕರು ಮತ್ತು ಪೋಷಕರು ತಿಪ್ಪರಲಾಗ ಹಾಕಿದರೂ ಅವರಿಂದ ಶೇಕಡಾ ೫೦ಕ್ಕಿಂತ ಹೆಚ್ಚು ಅಂಕಗಳನ್ನು ಸ್ವಸಾಮರ್ಥ್ಯದಿಂದ ತೆಗೆಯಲು ಆಗುವುದಿಲ್ಲ.

ಉಳಿದ ಶೇಕಡಾ ೭೦ ರಷ್ಟು ವಿದ್ಯಾರ್ಥಿಗಳು ಶ್ರದ್ಧೆಯಿಂದ ಕಲಿತರೆ ಉತ್ತಮ ನಿರ್ವಹಣೆ; ಶ್ರದ್ಧೆ ಪ್ರಯತ್ನವಿಲ್ಲದಿದ್ದರೆ ಕಡಿಮೆ ನಿರ್ವಹಣೆಗೆ ಒಳಗಾಗುತ್ತಾರೆ. ಹೇಗೆ ಓದಬೇಕು; ಹೇಗೆ ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವುದು. ಒತ್ತಡದ ಸನ್ನಿವೇಶವಾದ ಪರೀಕ್ಷೆಯಲ್ಲಿ ನಿರಾತಂಕವಾಗಿ ನಿರರ್ಗಳವಾಗಿ ಬರೆಯುವುದು ಹೇಗೆ? ಈ ಪ್ರಶ್ನೆಗಳು ಎಲ್ಲ ವಿದ್ಯಾರ್ಥಿಗಳನ್ನು ಕಾಡುತ್ತದೆ.

ಈ ಕಿರು ಪುಸ್ತಕದಲ್ಲಿ ಬುದ್ದಿವಂತಿಕೆ-ಕಲಿಕೆ-ನೆನಪನ್ನು- ನಿರ್ದೇಶಿಸುವ ಮಿದುಳು ಅದರ ರಚನೆ, ಕಾರ್ಯವಿಧಾನ, ಬುದ್ಧಿವಂತಿಕೆಯ ವಿವಿಧ ಲಕ್ಷಣಗಳು, ನೆನಪಿನ ಪ್ರಕ್ರಿಯೆ, ಮರೆವಿಗೆ ಕಾರಣವಾಗುವ ಅಂಶಗಳು, ನೆನಪಿನ ಶಕ್ತಿಯನ್ನು ಹೆಚ್ಚಿಸುವ ವಿಧಾನಗಳು, ಪರೀಕ್ಷಾ ಭಯದ ಮೂಲ ಮತ್ತು ಅದರ ನಿವಾರಣೆ, ಹರೆಯದವರನ್ನು ಕಾಡುವ ಲೈಂಗಿಕ ಭಾವನೆಗಳು, ಖಿನ್ನತೆ, ಕೀಳರಿಮೆಗಳ ನಿವಾರಣೆಯ ಬಗ್ಗೆ ವೈಜ್ಞಾನಿಕ ಮಾಹಿತಿಯನ್ನು ನೀಡಲಾಗಿದೆ. ಜೊತೆಗೆ ಬದುಕೆಂಬ ದೊಡ್ಡ ಪರೀಕ್ಷೆಯನ್ನು ಎದುರಿಸಲು ಬೇಕಾದ ಜೀವನ ಕೌಶಲ್ಯಗಳನ್ನು ಕಡೆಯ ಅಧ್ಯಾಯದಲ್ಲಿ ವಿವರಿಸಲಾಗಿದೆ. ಈ ಪುಸ್ತಕ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಪೋಷಕರಿಗೆ ಮಾರ್ಗದರ್ಶಿಯಾಗಲಿ ಎಂದು ಹಾರೈಸುತ್ತೇನೆ.

ಈ ಪುಸ್ತಕದ ಮುದ್ರಣದ ಎಲ್ಲ ಖರ್ಚನ್ನು ವಹಿಸಿಕೊಂಡು, ಇದನ್ನು ತಮ್ಮ ತಂದೆತಾಯಿಯ ಸ್ಮರಣೆಗೆ ಅರ್ಪಿಸಿರುವ ಪ್ರೊ|| ಡಿ.ಎಸ್‌. ಚಂದ್ರಶೇಖರಯ್ಯನವರಿಗೆ ನಾನು ಅಭಾರಿಯಾಗಿದ್ದೇನೆ. ಅಂದವಾದ ಮುದ್ರಿಸಿರುವ ಮಮತಾ ಪ್ರಿಂಟಿಂಗ್‌ ಪ್ರೆಸ್‌ನ ಶ್ರೀರಮೇಶ್‌ ಬಾಬು ಮತ್ತು ಬಳಗದವರಿಗೆ ನನ್ನ ವಂದನೆಗಳು. ಈ ಪುಸ್ತಕವನ್ನ ಸಮಾಧಾನ ಆಪ್ತಸಲಹಾ ಕೇಂದ್ರ ಮೂಲಕ ಪ್ರಕಟಿಸಲು ಅನುವು ಮಾಡಿಕೊಟ್ಟಿರುವ ಬಿ.ಎಂ. ರಾಜಣ್ಣಾಚಾರ್ ಎಸ್‌.ಪಿ. ಸರೋಜಮ್ಮ ಚಾರಿಟಬಲ್‌ ಟ್ರಸ್ಟ್‌ ರಿ. ಬೆಂಗಳೂರು ಈ ಸಂಸ್ಥೆಯ ಎಲ್ಲ ಪದಾಧಿಕಾರಿಗಳಿಗೆ ನನ್ನ ಕೃತಜ್ಞತೆಗಳು. ಈ ಪುಸ್ತಕವನ್ನು ಓದಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ.

ಡಾ. ಸಿ.ಆರ್. ಚಂದ್ರಶೇಖರ್
೩೮, ದ,ರಾ, ಬೇಂದ್ರೆ ರಸ್ತೆ
ಸಿಂಡಿಕೇಟ್‌ ಬ್ಯಾಂಕ್‌ ಕಾಲೋನಿ,
ಬಿ.ಜಿ. ರಸ್ತೆ, ಬೆಂಗಳೂರು-೭೬
ಫೋನ್‌ : ೯೮೪೫೬೦೫೬೧೫
೧೦, ಏಪ್ರಿಲ್‌ ೨೦೦೮