Categories
e-ದಿನ

ಮೇ-01

ದಿನಾಚರಣೆಗಳು: ಕಾರ್ಮಿಕರ ದಿನಾಚರಣೆ

‘ಮೇ ದಿನ’ ಅಥವಾ ‘ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಸಮಾಜವಾದಿ ಮತ್ತು ಕಮ್ಮ್ಯೂನಿಸ್ಟ್ ರಾಷ್ಟ್ರಗಳು ಹಾಗೂ ಸಂಘಟನೆಗಳು 19ನೇ ಶತಮಾನದಿಂದ ಆಚರಿಸಲು ಮೊದಲುಮಾಡಿವೆ. 1886ರ ವರ್ಷದ ಮೇ 4ರಂದು ಚಿಕಾಗೋದ, ಇಲಿನಾಯ್ಸ್ ಪ್ರದೇಶದ ಹೇ ಮಾರ್ಕೆಟ್ ಎಂಬಲ್ಲಿ ಕಾರ್ಮಿಕರ ಮೇಲೆ ನಡೆದ ದಮನಕಾರಿ ಘಟನೆಯನ್ನು ಈ ಆಚರಣೆ ಹಿನ್ನೆಲೆಯಾಗಿ ಇಟ್ಟುಕೊಂಡಿದೆ.

ಮಹಾರಾಷ್ಟ್ರ ದಿನ ಮತ್ತು ಗುಜರಾತ್ ದಿನ

1960ರ ವರ್ಷದಲ್ಲಿ ಮುಂಬೈ ಪ್ರಾಂತ್ಯವನ್ನು ಮಹಾರಾಷ್ಟ್ರ ಮತ್ತು ಗುಜರಾತ್ ಎಂಬ ಪ್ರತ್ಯೇಕ ರಾಜ್ಯಗಳನ್ನಾಗಿ ಈ ದಿನದಂದು ಪರಿಗಣಿಸಿದ್ದರಿಂದ ಈ ಎರಡೂ ರಾಜ್ಯಗಳ ಜನರು ತಮ್ಮ ತಮ್ಮ ರಾಜ್ಯೋತ್ಸವ ಆಚರಣೆಯನ್ನು ನಡೆಸುತ್ತಾರೆ.

ಪ್ರಮುಖಘಟನಾವಳಿಗಳು:

ಕ್ರಿಸ್ತ ಪೂರ್ವ 475: ರೋಮನ್ ರಾಯಭಾರಿಯಾದ ಪ್ಯುಬ್ಲಿಯಸ್ ವಲೇರಿಯಸ್ ಪೋಪ್ಲಿಕೋಲ ಎಂಬಾತ ವೆಲಿ ಮತ್ತು ಸಬೈನ್ಸ್ ಮೇಲೆ ವಿಜಯೋತ್ಸವವನ್ನು ಆಚರಿಸಿದ.

1851: ರಾಣಿ ವಿಕ್ಟೋರಿಯಾ ಅವರು ಲಂಡನ್ನಿನ ಕ್ರಿಸ್ಟಲ್ ಪ್ಯಾಲೇಸಿನಲ್ಲಿ ‘ಗ್ರೇಟ್ ಎಕ್ಸಿಭಿಷನ್’ ಎಂಬ ಎಲ್ಲ ರಾಷ್ಟ್ರಗಳ ಕೈಗಾರಿಕಾ ವಸ್ತುಗಳ ಬೃಹತ್ ಪ್ರದರ್ಶನವನ್ನು ಉದ್ಘಾಟಿಸಿದರು.

1884: ಅಮೆರಿಕದಲ್ಲಿ ದಿನಕ್ಕೆ 8 ಗಂಟೆಗಳ ಅವಧಿಯ ಕಾರ್ಮಿಕ ದಿನದ ಬೇಡಿಕೆಯು ಘೋಷಣೆಗೊಂಡಿತು.

1886: ಅಮೆರಿಕದ ಎಲ್ಲೆಡೆಗಳಲ್ಲಿ ಯಾವುದೇ ಸಂಭಳದ ಕಡಿತವಿಲ್ಲದೆ 8 ಗಂಟೆಗಳ ಅವಧಿಯ ಕಾರ್ಮಿಕ ದಿನದ ಬೇಡಿಕೆಯಿಂದ ಪ್ರತಿಭಟನೆಗಳು ನಡೆದವು. ಈ ಕಾವು ಕೆಲವು ದಿನಗಳವರೆಗೂ ಮುಂದುವರೆಯಿತು. ಇದೇ ನಿಟ್ಟಿನಲ್ಲಿ ಚಿಕಾಗೋದಲ್ಲಿನ ಹೇ ಮಾರ್ಕೆಟ್ ಪ್ರದೇಶದಲ್ಲಿ ದಮನಕಾರಿ ಘಟನೆಗಳು ನಡೆದು, ಹಲವು ದೇಶಗಳಲ್ಲಿ ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಗೆ ನಾಂದಿಯಾಯಿತು.

1897: ಸ್ವಾಮಿ ವಿವೇಕಾನಂದರು ಕೋಲ್ಕತದಲ್ಲಿ ರಾಮಕೃಷ್ಣ ಮಿಷನ್ ಸ್ಥಾಪಿಸಿದರು.

1925: ವಿಶ್ವದ ಅತಿ ದೊಡ್ಡ ಕಾರ್ಮಿಕ ಸಂಘಟನೆಯಾದ ಆಲ್-ಚೀನಾ ಫೆಡರೇಶನ್ ಆಫ್ ಟ್ರೇಡ್ ಯೂನಿಯನ್ಸ್ ಅಧಿಕೃತವಾಗಿ ಸ್ಥಾಪಿಸಲ್ಪಟ್ಟಿತು.

1930: ಕುಬ್ಜ ಗ್ರಹವಾದ ಪ್ಲೂಟೋವನ್ನು ಹೆಸರಿಸಲಾಯಿತು.

1931: ನ್ಯೂಯಾರ್ಕ್ ನಗರದ ‘ಎಂಪೈರ್ ಸ್ಟೇಟ್ ಬಿಲ್ಡಿಂಗ್’ ಸಮರ್ಪಣೆಗೊಂಡಿತು.

1933:  ಇಂಗ್ಲೆಂಡ್ ಮತ್ತು ಭಾರತ ನಡುವಣ ದೂರವಾಣಿ ಸೇವೆ ಆರಂಭಗೊಂಡಿತು. ಭಾರತದ ರಾಜ್ಯ ಕಾರ್ಯದರ್ಶಿ ಸರ್ ಸ್ಯಾಮ್ಯುಯೆಲ್ ಹೋರ್ ಮತ್ತು ಮುಂಬೈಯ ಗವರ್ನರ್ ಸರ್ ಫ್ರೆಡರಿಕ್ ಸೈಕ್ಸ್ ಅವರ ಮಧ್ಯೆ ಮೊತ್ತ ಮೊದಲ ದೂರವಾಣಿ ಸಂಭಾಷಣೆ ನಡೆಯಿತು.

1956: ಜೋನಾಸ್ ಸಲ್ಕ್ ಅವರು ತಯಾರಿಸಿದ ಪೋಲಿಯೋ ಲಸಿಕೆಯನ್ನು ಸಾರ್ವಜನಿಕ ಉಪಯೋಗಕ್ಕೆ ಬಿಡುಗಡೆ ಮಾಡಲಾಯಿತು.

1960: ಮುಂಬೈ ಪ್ರಾಂತ್ಯವು ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಾಗಿ ವಿಂಗಡನೆಗೊಂಡಿತು.

1989: ಅಮೆರಿಕದ ಫ್ಲೋರಿಡಾದಲ್ಲಿನ ಆರ್ಲ್ಯಾಂಡೋ ಬಳಿಯಲ್ಲಿ, ವಾಲ್ಟ್ ಡಿಸ್ನಿ ವರ್ಲ್ಡ್ ಸಂಸ್ಥೆಯು ತನ್ನ ಆವರಣದಲ್ಲಿ ಡಿಸ್ನಿ-ಎಂ.ಜಿ.ಎಂ. ಸ್ಟುಡಿಯೋ ಆರಂಭಿಸಿತು .

1998: ಸುಮಾರು 760 ಕಿ.ಮೀ. ಉದ್ದದ ಕೊಂಕಣ ರೈಲ್ವೇಗೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಈ ದಿನ ಹಸಿರು ನಿಶಾನೆ ತೋರಿಸಿದರು. ಈ ಮಾರ್ಗವು ರತ್ನಗಿರಿಯಿಂದ ಮುಂದಕ್ಕೆ ವಿಸ್ತರಣೆಯಾಗಿದ್ದು, ನಿತ್ಯ ಹರಿದ್ವರ್ಣದ ಕಾಡುಗಳ ಮಧ್ಯೆ ನಿರ್ಮಾಣಗೊಂಡಿದೆ.

2002: ಓಪನ್ ಆಫೀಸ್ (OpenOffice.org) ತನ್ನ ಪ್ರಥಮ ಸುದೃಢ ಎನ್ನಬಹುದಾದ ಆವೃತ್ತಿ 1,0 ಅನ್ನು ಬಿಡುಗಡೆ ಮಾಡಿತು.

2003: ಅಮೆರಿಕ ಅಧ್ಯಕ್ಷರಾದ ಜಾರ್ಜ್ ಡಬ್ಲ್ಯೂ. ಬುಷ್ ಅವರು ‘ಗುರಿ ಸಾಧಿಸಿದ’ ಭಾಷಣ ಎಂದು ಬಣ್ಣಿತಗೊಂಡಿರುವ ಇರಾಖ್ ಮೇಲಿನ ಆಕ್ರಮಣದಲ್ಲಿನ ವಿಜಯವನ್ನು ಘೋಷಿಸಿದರು.

2008: ಚಲಿಸುವ ರೈಲನ್ನು ಹತ್ತುವ ಸಂದರ್ಭದಲ್ಲಿ ಮೃತರಾದ/ ಗಾಯಗೊಂಡ ವ್ಯಕ್ತಿಯ ಕುಟುಂಬವೂ ಪರಿಹಾರ ಪಡೆಯಲು ಅರ್ಹ ಎಂದು ಸುಪ್ರೀಂಕೋರ್ಟ್ ಹೇಳಿತು. ಚಲಿಸುವ ರೈಲನ್ನು ಹತ್ತುವ ಯತ್ನದಲ್ಲಿ ವ್ಯಕ್ತಿಯು ತನ್ನದೇ ತಪ್ಪಿನಿಂದ ರೈಲಿಗೆ ಸಿಲುಕಿದ್ದರೂ ಆತನ/ ಆಕೆಯ ಕುಟುಂಬ ಪರಿಹಾರ ಪಡೆಯಲು ಅರ್ಹ ಎಂದು ಕೋರ್ಟ್ ಸ್ಪಷ್ಟಪಡಿಸಿತು.

2008: ಪ್ರಸಾರ ಭಾರತಿಯ ನೂತನ ಅಧ್ಯಕ್ಷರಾಗಿ ನಿವೃತ್ತ ಐಎಎಸ್ ಅಧಿಕಾರಿ ಅರುಣ್ ಭಟ್ನಾಗರ್ ಅವರನ್ನು ನೇಮಕ ಮಾಡಲಾಯಿತು. ಮಧ್ಯಪ್ರದೇಶ ಕೇಡರಿನ 1966ರ ತಂಡದ ಐಎಎಸ್ ಅಧಿಕಾರಿಯಾದ ಭಟ್ನಾಗರ್ ಅವರು ಈ ಮೊದಲು ರಾಷ್ಟ್ರೀಯ ಸಲಹಾ ಸಮಿತಿಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.

2008: ಪ್ರಖ್ಯಾತ ಜಾದೂಗಾರ ಡೇವಿಡ್ ಬ್ಲೇನ್ ಅವರು 17 ನಿಮಿಷಗಳಿಗೂ ಹೆಚ್ಚುಕಾಲ ಉಸಿರಾಟ ಸ್ಥಗಿತಗೊಳಿಸಿಕೊಂಡು, ಬಳಿಕ ಆರಾಮ ಸ್ಥಿತಿಗೆ ಮರಳುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದರು.

2009: ರಾಷ್ಟ್ರದ ಪ್ರತಿಯೊಬ್ಬ ನಾಗರಿಕನಿಗೂ ಪಿಂಚಣಿ ಪಡೆಯಲು ಅವಕಾಶ ಕಲ್ಪಿಸುವ ಉದ್ದೇಶದ ಕೇಂದ್ರದ ‘ಹೊಸ ಪಿಂಚಣಿ ಯೋಜನೆ’ಯು (ಎನ್‌ಪಿಎಸ್) ಕಾರ್ಮಿಕ ದಿನವಾದ ಈದಿನ ದೇಶದಾದ್ಯಂತ ಜಾರಿಗೆ ಬಂದಿತು.

ಪ್ರಮುಖಜನನ/ಮರಣ:

1852: ಸ್ಪಾನಿಷ್ ನರವಿಜ್ಞಾನಿ ಮತ್ತು ವೈದ್ಯಶಾಸ್ತ್ರಜ್ಞರಾದ ಸಾಂಟಿಯಾಗೋ ರೇಮನ್ ವೈ ಕಜಾಲ್ ಅವರು ಸ್ಪೇನಿನ ಪೆಟಿಲ್ಲ ಡಿ ಅರಾಗನ್ ಎಂಬಲ್ಲಿ ಜನಿಸಿದರು. ನರವಿಜ್ಞಾನದ ಪಿತಾಮಹರೆಂದು ಇವರು ಪ್ರಸಿದ್ಧರಾಗಿದ್ದಾರೆ. ನರಮಂಡಲದ ವ್ಯವಸ್ಥೆಯ ಕುರಿತಾದ ಸಂಶೋಧನೆಗಾಗಿ ಇವರಿಗೆ 1906 ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತ್ತು.

1919: ಮನ್ನಾಡೆ ಎಂದು ಪ್ರಸಿದ್ಧರಾದ ಭಾರತೀಯ ಚಿತ್ರರಂಗದ ಮಹಾನ್ ಹಿನ್ನಲೆಗಾಯಕರಾದ ಪ್ರಬೋಧ ಚಂದ್ರ ದೇ ಅವರು ಕಲಕತ್ತೆಯಲ್ಲಿ ಜನಿಸಿದರು. ಪ್ರಮುಖವಾಗಿ ಹಿಂದೀ ಮತ್ತು ಬಂಗಾಳಿಯಲ್ಲಿ ಹಾಡಿರುವ ಇವರು ಇತರ ಭಾರತೀಯ ಭಾಷೆಗಳಲ್ಲೂ ತಮ್ಮ ಧ್ವನಿ ನೀಡಿದ್ದಾರೆ. ಪದ್ಮಶ್ರೀ, ಪದ್ಮಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರಗಳು ಇವರಿಗೆ ಸಂದಿವೆ.

1948: ಕವಯಿತ್ರಿ ಶಶಿಕಲಾರವರು ವಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ಮೇ 1, 1948ರಂದು ಜನಿಸಿದರು. ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಮುಂತಾದ ಹಲವಾರು ಗೌರವಗಳು ಶಶಿಕಲಾ ವೀರಯ್ಯಸ್ವಾಮಿಯವರಿಗೆ ಸಂದಿವೆ.

1955: ಭಾರತೀಯ ಉದ್ದಿಮೆಗಳಲ್ಲಿ ಪ್ರಮುಖವಾದ ‘ಮಹೇಂದ್ರ ವ್ಯವಹಾರ ಸಮೂಹ’ದ ಮುಖ್ಯಸ್ಥರಾದ ಆನಂದ ಮಹೇಂದ್ರ ಅವರು ಮುಂಬೈನಲ್ಲಿ ಜನಿಸಿದರು.

1968: ಪ್ರಸಿದ್ಧ ವ್ಯಂಗ್ಯಚಿತ್ರಕಾರರೂ, ಆಯುರ್ವೇದ ವೈದ್ಯರೂ ಆಗಿದ್ದ ಡಾ. ಸತೀಶ್ ಶೃಂಗೇರಿ ಜನಿಸಿದರು.

1700: ಇಂಗ್ಲಿಷ್ ಕವಿ, ನಾಟಕಕಾರ ಮತ್ತು ವಿಮರ್ಶಕ ಜಾನ್ ಡ್ರೈಡೆನ್ ನಿಧನರಾದರು. ಇವರು ಲಾರಿಯೇಟ್ ಹುದ್ದೆಗೆ ಅಧಿಕೃತವಾಗಿ ನೇಮಕಗೊಂಡ ಮೊಟ್ಟ ಮೊದಲ ಇಂಗ್ಲಿಷ್ ಕವಿ. ಆದರೆ ನೂತನ ದೊರೆ ಮೂರನೇ ವಿಲಿಯಂಗೆ ಪ್ರಮಾಣವಚನ ಬೋಧಿಸಲು ನಿರಾಕರಿಸಿದ್ದಕ್ಕಾಗಿ ಈ ಸ್ಥಾನವನ್ನು ಕಳೆದುಕೊಂಡರು.

2008: ಖ್ಯಾತ ಗಾಂಧಿವಾದಿ ಹಾಗೂ ರಾಜ್ಯಸಭಾ ಸದಸ್ಯೆ, ಪದ್ಮವಿಭೂಷಣ ಗೌರವಾನ್ವಿತರಾದ ನಿರ್ಮಲಾ ದೇಶಪಾಂಡೆ ಅವರು ತಮ್ಮ 79ನೇ ವಯಸ್ಸಿನಲ್ಲಿ ನವದೆಹಲಿಯಲ್ಲಿ ನಿಧನರಾದರು.