Categories
e-ದಿನ

ಮೇ-04

ಪ್ರಮುಖಘಟನಾವಳಿಗಳು:

1494: ಕ್ರಿಸ್ಟೋಫರ್ ಕೊಲಂಬಸ್ ಜಮೈಕಾ ದ್ವೀಪವನ್ನು ಪತ್ತೆಹಚ್ಚಿದರು.

1555: ಕಾಲಜ್ಞಾನಿ ನಾಸ್ಟ್ರಡಾಮಸ್ ತಮ್ಮ `ಸೆಂಚುರೀಸ್’ ಕೃತಿಯನ್ನು ಪ್ರಕಟಿಸಿದರು.

1675: ಇಂಗ್ಲೆಂಡಿನ ಎರಡನೇ ಚಾರ್ಲ್ಸ್ ಅವರು ರಾಯಲ್ ಗ್ರೀನ್ವಿಚ್ ವೀಕ್ಷಣಾಲಯ ಸ್ಥಾಪನೆಯನ್ನು ಆದೇಶಿಸಿದರು.

1799: ನಾಲ್ಕನೇ ಆಂಗ್ಲ-ಮೈಸೂರು ಯುದ್ಧವಾದ ಶ್ರೀರಂಗಪಟ್ಟಣ ಕದನದಲ್ಲಿ ಟಿಪ್ಪು ಸುಲ್ತಾನ್ ನಿಧನರಾದರು. ಜನರಲ್ ಜಾರ್ಜ್ ಹ್ಯಾರಿಸ್ ಬ್ರಿಟಿಷ್ ಪಡೆಗಳ ನೇತೃತ್ವ ವಹಿಸಿದ್ದರು.

1854: ಭಾರತದ ಮೊತ್ತ ಮೊದಲ ಅಂಚೆ ಚೀಟಿಯನ್ನು ಕೋಲ್ಕತ್ತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಅರ್ಧ ಆಣೆ ಬೆಲೆಯ ಈ ಅಂಚೆಚೀಟಿಯಲ್ಲಿ ರಾಣಿ ವಿಕ್ಟೋರಿಯಾ ಅವರ ಚಿತ್ರವನ್ನು ಮುದ್ರಿಸಲಾಗಿತ್ತು.

1886: ಮೇ ದಿನಾಚರಣೆಗೆ ಮೂಲವಾದ ಹೇ ಮಾರ್ಕೆಟ್ ಘಟನೆ ಜರುಗಿತು. ಅಮೆರಿಕದ ಚಿಕಾಗೋದಲ್ಲಿ ಕಾರ್ಮಿಕರ ಪ್ರದರ್ಶನ ಮೆರವಣಿಗೆಯನ್ನು ಮುರಿಯಲೆತ್ನಿಸುತ್ತಿದ್ದ ಪೋಲೀಸರ ಮೇಲೆ ಬಾಂಬ್ ಒಂದನ್ನು ಎಸೆಯಲಾಯಿತು. ಇದರಿಂದ ಉದ್ರಿಕ್ತರಾದ ಪೊಲೀಸರು ಮೆರವಣಿಗೆಯಲ್ಲಿ ಹೋಗುತ್ತಿದ್ದ ಜನರ ಮೇಲೆ ಗುಂಡಿನ ಮಳೆಗರೆದರು. ಒಟ್ಟಾರೆ ಈ ಘಟನೆಯಲ್ಲಿ 7 ಜನ ಪೋಲೀಸ್ ಅಧಿಕಾರಿಗಳು ಮತ್ತು 4 ಮಂದಿ ನಾಗರೀಕರು ನಿಧನರಾಗಿ ಬಹಳ ಮಂದಿ ಗಾಯಗೊಂಡರು.

1904: ಅಮೆರಿಕವು ಪನಾಮ ಕಾಲುವೆ ನಿರ್ಮಾಣವನ್ನು ಪ್ರಾರಂಭಿಸಿತು.

1953:ಅರ್ನೆಸ್ಟ್ ಹೆಮಿಂಗ್ಸ್ ವೇ ಅವರು ‘ದಿ ಓಲ್ಡ್ ಮ್ಯಾನ್ ಅಂಡ್ ದಿ ಸೀ’ ಕೃತಿಗೆ ಪುಲಿಟ್ಜರ್ ಬಹುಮಾನ ಪಡೆದರು.

1959: ಪ್ರಥಮ ‘ವಾರ್ಷಿಕ ಗ್ರಾಮಿ ಅವಾರ್ಡ್ಸ್’ ಸಮಾರಂಭ ನೆರವೇರಿತು.

1961: ಅಮೆರಿಕನ್ನರ ನಾಗರಿಕ ಹಕ್ಕುಗಳ ಚಳುವಳಿಯ ಅಂಗವಾಗಿ, ‘ಫ್ರೀಡಂ ರೈಡರ್ಸ್’ ತಂಡವು ದಕ್ಷಿಣದೆಡೆಗೆ ಬಸ್ ಪಯಣವನ್ನು ಆರಂಭಿಸಿತು.

1961: ಮಾಲ್ಕಂ ರಾಸ್ ಮತ್ತು ವಿಕ್ಟರ್ ಪ್ರಾಥರ್ ಬಲೂನಿನಲ್ಲಿ 113,740 ಅಡಿ (34.67 ಕಿಲೋ ಮೀಟರ್) ಎತ್ತರಕ್ಕೆ ಹಾರಿದ ದಾಖಲೆ ನಿರ್ಮಿಸಿದರು.

1972: ಕೆನಡಾದ ಪರಿಸರ ಸಂರಕ್ಷಣಾ ಸಂಘಟನೆಯಾದ ‘ಡೋಂಟ್ ಮೇಕ್ ಎ ವೇವ್ ಕಮಿಟಿ’ ತನ್ನ ಹೆಸರನ್ನು ಗ್ರೀನ್ ಪೀಸ್ ಫೌಂಡೇಶನ್ ಎಂದು ಬದಲಿಸಿಕೊಂಡಿತು.

1979: ಮಾರ್ಗರೇಟ್ ಥ್ಯಾಚರ್ ಅವರು ಯುನೈಟೆಡ್ ಕಿಂಗ್ಡಂನ ಪ್ರಥಮ ಮಹಿಳಾ ಪ್ರಧಾನ ಮಂತ್ರಿಗಳೆನಿಸಿದರು.

2006: ಭಾರತೀಯ ಮೂಲದ ಅಮೆರಿಕನ್ ಬಾಹ್ಯಾಕಾಶ ತಂತ್ರಜ್ಞೆ ಸುನೀತಾ ವಿಲಿಯಮ್ಸ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ಫ್ಲೈಟ್ ಎಂಜಿನಿಯರ್ ಆಗಿ ತಮ್ಮ ಪ್ರಥಮ ಪ್ರಯಾಣ ಮಾಡುವರು ಎಂದು ನಾಸಾ ಪ್ರಕಟಿಸಿತು.

2006: ಸಾನ್ ಸಾಲ್ವಡೋರಿನ ಹಣ್ಣು ಹಣ್ಣು ಮುದುಕಿ ಕ್ರೂಜ್ ಹೆರ್ನಾಂಡೆಸ್ ರಿವಾಸ್ ತಮ್ಮ 128ನೇ ಜನ್ಮದಿನವನ್ನು ಆಚರಿಸಿದರು.

2006: ಮಂಗಳೂರು ವಿಮಾನ ನಿಲ್ದಾಣದಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಕಸ್ಟಮ್ಸ್ ಇಲಾಖೆ ಅನುಮತಿ ನೀಡಿತು.

2007: ಕಾನ್ಸಾಸಿನ ಗ್ರೀನ್ ಬರ್ಗ್ ಪ್ರದೇಶವು ‘ಇ.ಎಫ್.5 ಟೊರ್ನಾಡೋ’’ ಎಂಬ ಭೀಕರ ಸುಂಟರಗಾಳಿಯಿಂದ ಬಹುತೇಕ ನಾಶಗೊಂಡಿತು.

2009: ಭಾರತ ರಾಷ್ಟ್ರೀಯ ವಿಮಾನಯಾನ ಕಂಪೆನಿ ಲಿಮಿಟೆಡ್ (ಎನ್‌ಎಸಿಐಎಲ್- ಏರ್‌ಇಂಡಿಯಾ) ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಕರ್ನಾಟಕ ಕೇಡರ್ ಐ.ಎ.ಎಸ್ ಅಧಿಕಾರಿ ಅರವಿಂದ್ ಜಾಧವ್ ಅವರು ಅಧಿಕಾರ ವಹಿಸಿಕೊಂಡರು.

ಪ್ರಮುಖಜನನ/ಮರಣ:

1649: ಭಾರತೀಯ ಬುಂದೇಲ ರಜಪೂತ ವಂಶಸ್ಥ ಮಹಾರಾಜ ಚಾತ್ರಸಾಲ್ ಅವರು ಕಚಾರ್ ಕಚನೈ ಎಂಬಲ್ಲಿ ಜನಿಸಿದರು. ಇವರು ಮೊಘಲ್ ದೊರೆ ಔರಂಗ್ಜೇಬ್ ವಿರುದ್ಧ ಹೋರಾಡಿ ಬುಂದೇಲ್ ಖಾಂಡ್ ಎಂಬ ತಮ್ಮದೇ ರಾಜ್ಯವನ್ನು ಪ್ರತಿಷ್ಟಾಪಿಸಿ, ಪನ್ನಾ ರಾಜ್ಯ ನಿರ್ಮಾಣಕಾರರಾದರು.

1655: ಪ್ರಸಿದ್ಧ ವಾದ್ಯ ತಯಾರಕ ಹಾಗೂ ಪಿಯಾನೋ ವಾದ್ಯವನ್ನು ಕಂಡುಹಿಡಿದ ಬಾರ್ಟೋಲೋಮಿಯೋ ಕ್ರಿಸ್ಟೋಫೋರಿ ಇಟಲಿಯಲ್ಲಿ ಜನಿಸಿದರು.

1767: ಕರ್ನಾಟಕ ಸಂಗೀತದ ಮಹಾನ್ ವಾಗ್ಗೇಯಕಾರರಾದ ಸಂತ ತ್ಯಾಗರಾಜರು ತಿರುವಾರೂರಿನಲ್ಲಿ ಜನಿಸಿದರು. ದಕ್ಷಿಣ ಭಾರತದ ಎಲ್ಲ ಮುಖ್ಯ ದೇವಸ್ಥಾನಗಳಿಗೆ ಭೇಟಿಯಿತ್ತ ತ್ಯಾಗರಾಜರು ಅಲ್ಲಿನ ದೇವದೇವತೆಗಳ ಬಗ್ಗೆ ಕೃತಿಗಳನ್ನು ರಚಿಸಿದ್ದಾರೆ. ಇವರು ಸುಮಾರು ಏಳುನೂರು ಕೃತಿಗಳನ್ನು ರಚಿಸಿದ್ದಾರೆ.

1921: ಡಾ. ಸುಮತೀಂದ್ರ ನಾಡಿಗರು ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಜನಿಸಿದರು. ಅಧ್ಯಾಪನದ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಾ ಬಂದಿರುವ ಸುಮತೀಂದ್ರ ನಾಡಿಗರು ಕಾವ್ಯ, ಸಣ್ಣಕಥೆ, ವಿಮರ್ಶೆ, ಅನುವಾದ ಪ್ರಕಾರಗಳಲ್ಲಿ ತಮ್ಮ ಕೊಡುಗೆಗಳನ್ನು ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನ್ಯಾಷನಲ್ ಬುಕ್ ಟ್ರಸ್ಟಿನ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿವೆ.

1943: ನೊಬೆಲ್ ಪುರಸ್ಕೃತ ಅಮಾರ್ತ್ಯ ಸೆನ್ ಅವರ ಶಿಷ್ಯರೂ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರೂ ಆದ ಪ್ರಶಾಂತ ಪಟ್ನಾಯಕ್ ಜನಿಸಿದರು.

1938: ನೊಬೆಲ್ ಶಾಂತಿ ಪುರಸ್ಕೃತ ಕಾರ್ಲ್ ವಾನ್ ಒಸ್ಸೀಟ್ಸ್ಕೈ ಅವರು ಜರ್ಮನಿಯ ಬರ್ಲಿನ್ ನಗರದಲ್ಲಿ ನಿಧನರಾದರು.

1972: ಅಮೆರಿಕದ ರಸಾಯನ ಶಾಸ್ತ್ರಜ್ಞ ಎಡ್ವರ್ಡ್ ಕ್ಯಾಲ್ವಿನ್ ಕೆಂಡಾಲ್ ಅವರು ಪ್ರಿನ್ಸ್ಟನ್ ಎಂಬಲ್ಲಿ ನಿಧನರಾದರು. ಹಾರ್ಮೋನ್ಸ್ ಆಫ್ ದಿ ಆಡ್ರಿನಾಲ್ ಗ್ಲ್ಯಾಂಡ್ ಕುರಿತಾದ ಸಂಶೋಧನೆಗಾಗಿ ಇವರಿಗೆ ನೊಬೆಲ್ ರಸಾಯನ ಶಾಸ್ತ್ರ ಪುರಸ್ಕಾರ ಸಂದಿತು.

2013: ಇಂಗ್ಲಿಷ್-ಬೆಲ್ಜಿಯನ್ ವೈದ್ಯಶಾಸ್ತ್ರಜ್ಞ ಮತ್ತು ಜೈವಿಕ ವಿಜ್ಞಾನಿ ಕ್ರಿಶ್ಚಿಯನ್ ಡೆ ದುವೆ ಅವರು ಬೆಲ್ಜಿಯಂ ದೇಶದ ಗ್ರೆಸ್-ಡಾಯ್ಸಿಯು ಎಂಬಲ್ಲಿ ನಿಧನರಾದರು. ಇವರಿಗೆ ‘ಸ್ಟ್ರಕ್ಚರಲ್ ಅಂಡ್ ಫಂಕ್ಷನಲ್ ಆರ್ಗನೈಸೇಶನ್ ಆಫ್ ದಿ ಸೆಲ್’ ಕುರಿತಾದ ಸಂಶೋಧನೆಗಾಗಿ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತ್ತು.