ರಾಗ ಸೌರಾಷ್ಟ್ರ ತ್ರಿವುಡೆತಾಳ

ತರುಣ ಕೇಳ್ ನಿನ್ನವ್ವೆ ಕುಂತಿಯು | ಬರುವಳಸ್ತ್ರವ ಬೇಡುವರೆ ಸುರ |
ವರಗೆ ಕವಚವ ಹಿಂದೆ ಕೊಟ್ಟಿಹ | ತೆರದಿ ನೀನು  || ೩೫೨ ||

ಭ್ರಾಂತಿಗೊಳಬೇಡೆನುತ ಕುವರನ | ಸಂತವಿಸಿ ರವಿ ಮರಳಲಿತ್ತಲು ||
ಕುಂತಿ ಬಂದಳು ಮಗನ ಬಳಿಗ | ತ್ಯಂತ ಮುದದಿ  || ೩೫೩ ||

ಕಂಡು ನಮಿಸಿದ ತಾಯಿಯಂಘ್ರಿಗೆ | ದಂಡದಂತಿರೆ ಮಗನೆ ಬಾ ಬಾ ||
ಗಂಡುಗಲಿ ಬಾರೆನುತಲೆತ್ತಿದಳ್ | ಮಂಡೆಯನ್ನು  || ೩೫೪ ||

ಹಣೆಯೊಳಾಸ್ಯವನಿರಿಸಿ ತಳ್ಕಿಸ | ಲನಿಬರಿಗೆ ನಯನಾಂಬು ತುಳುಕಲು ||
ವನಿತೆವೇಷದಿ ಗಂಗೆ ಬರಲಾ | ಕ್ಷಣದಿ ಕಂಡು  || ೩೫೫ ||

ಅಘವಿನಾಶೆಗೆ ನಮಿಸಲೀರ್ವರ | ನೆಗಹಿ ಪಾಂಡವ ಜನನಿ ಹಸ್ತದಿ |
ಮಗನನೊಪ್ಪಿಸಿಕೊಟ್ಟು ನುಡಿದಳು | ಸುಗುಣೆಯೊಡನೆ  || ೩೫೬ ||

ಭಾಮಿನಿ

ಕುಂತಿ ಕೇಳೌ ನಿನ್ನ ಪುತ್ರನ |
ನಿಂತುದಿನ ಕಾದಿರ್ದೆನಿಂದಿಗೆ |
ಸಂತು ನಾ ನಿನಗೆಂದ ಭಾಷೆಗಳೀ ಕುಮಾರಕನ ||
ಮುಂತೆ ಸಲಹಿಕೊಳೆನುತ ತೆರಳೆ ಕೃ |
ತಾಂತಸಹಜನುಸಿರ್ದ ನೀವ್ ಬಂ |
ದಂತರಂಗವಿದೇನು ಬೆಸಸೆಲೆ ತಾಯೆ ತನಗೆಂದ  || ೩೫೭ ||

ರಾಗ ಸಾಂಗತ್ಯ ರೂಪಕತಾಳ

ಚಿಣ್ಣ ಕೇಳೆನಗೆ ನೀ ಹಿರಿಯ ನಂದನನಾಗಿ | ನಿನ್ನನುಜರಿಗರಿಯಾದ ||
ದುರ್ನೀತಿವಂತನ ಮರೆಹೊಕ್ಕು ಬದುಕುವು | ದಿನ್ನಾವ ನೀತಿಯೊ ಕಂದ || || ೩೫೮ ||

ಬಲು ಪರಾಕ್ರಮಶಾಲಿಯಾಗಿ ನೀನನ್ಯರಿ | ಗಳುಕುವ ವಿಧಿಯು ತಾನೇಕೆ ||
ಇಳೆಯಾಧಿಪತ್ಯವ ಕೈಗೊಂಡು ಸಹಜರ | ಸಲಹಿಕೋ ನೀನೆಂದಳಾಕೆ || ೩೫೯ ||

ಎನಲು ಮಿತ್ರಜನೆಂದ ನಿಮಗೆ ನಾ ಚೊಚ್ಚಲ | ತನಯನಹುದು ತಾಯೆ ನಿಮ್ಮ ||
ತನುಜರ್ಗೆ ಜ್ಯೇಷ್ಠನಾಗಿಹೆ ಪರರೋಲಗ | ವನುಕರಿಸಲು ಬಾರದಮ್ಮ || ೩೬೦ ||

ನಿನ್ನಣುಗರು ಪಗೆಗಳು ತನಗಹಿತರು | ಎನ್ನುವ ನುಡಿಯು ವಿವೇಕ ||
ಭಿನ್ನವಿಲ್ಲದೆ ರಾಜ್ಯವಾಳುವೆನೆಂದರೆ | ಎನ್ನ ನಿಂದಿಪುದು ಮೂರ್ಲೋಕ || ೩೬೧ ||

ಪೋಷಿಸಿದಧಿಪಗಾಪತ್ತಿನ ವೇಳೆಲಿ | ಮೋಸವ ಮಾಡಿ ನಾನಿನ್ನು ||
ಏಸು ದಿನವು ಬಾಳಿಕೊಂಡಿರಬೇಕವ್ವ | ಹೇಸಳೆ ಜಯಲಕ್ಷ್ಮಿ ತಾನು  || ೩೬೨ ||

ಭಾಮಿನಿ

ಕಾಡಲಾಗದು ಎನ್ನೊಳೀ ನುಡಿ |
ಯಾಡಲಾಗದು ತಾಯೆ ಖತಿಯನು |
ಮಾಡಲಾಗದು ತಿಳುಹು ನೀ ನಡೆತಂದುದೇನೆನಲು ||
ನೋಡಿದಳು ಬಾಲಕನ ಗುಣಗಳ |
ಬಾಡಿದಳು ಹೃದಯಾಗ್ನಿತಾಪದಿ |
ಬೇಡಿದಳು ತೊಟ್ಟಂಬ ತೊಡದಿರು ಮಗನೆ ನೀನೆನುತ  || ೩೬೩ ||

ವಾರ್ಧಕ (ಅರ್ಧ)

ಹರಿಯ ಮಾಯದಿ ಮಿತ್ರ ಸೂಚನೆಯ ಗೆಯ್ದುದಂ |
ಮರೆತು ನಂಬುಗೆ ಕೊಟ್ಟು ಕರ್ಣ ನಿಜಜನನಿಯಂ |
ತೆರಳಿಸಿ ನಿಜಾಲಯಕೆ ಬರಲಿತ್ತ ಕಾಂಚನಮಹಾರಥದಿ ಕಂಸಾರಿಯು || ||೩೬೪||

ರಾಗ ಕಾಂಭೋಜ ಝಂಪೆತಾಳ

[ಕುರುಪತಿಯ ಬಳಿಗಾಗಿ ಹರಿಯ ಕಳುಹಿದೆನಲ್ಲ ||
ಬರಲಿಲ್ಲ ಈವರೆಗೆಯೆನುತ ಧರ್ಮಜನು  || ೩೬೫ ||

ಒಪ್ಪಿದನೊ ಕುರುವರನು ಇಲ್ಲ ಎಂಬುದ ಕೇಳಿ |
ಇಪ್ಪ ಬಗೆಯನು ಕಾಂಬೆನೆನುತ ತನ್ಮನದಿ  || ೩೬೬ ||

ಅಗ್ರಜನ ನುಡಿ ಕೇಳಿ ಕಲಿಧನಂಜಯನೆಂದ |
ಶೀಘ್ರದಲಿ ಶ್ರೀಹರಿಯು ಬರುವನೆಂದೆನುತ ||  || ೩೬೭ ||

ತಮ್ಮನಾಡಿದ ನುಡಿಗೆ ತಾನೊಪ್ಪಿ ಬಹಳ |
ಹುಮ್ಮನಸಿನಿಂದಲಿರಲಿತ್ತ ಶ್ರೀಹರಿಯು  || ೩೬೮ ||]

ವಾರ್ಧಕ (ಅರ್ಧ)

ತರಣಿತೇಜವ ನಿಲಿಸುತಂ ಬರೆ ಯುಧಿಷ್ಠಿರಂ |
ಪರಮ ಹರುಷವನಾಂತು ಸಹಜರಿಂದೊಡಗೂಡಿ |
ಚರಣಕೆರಗಲು ರಮಾರಮಣ ರಥವಿಳಿದು ಸಭೆಗಯ್ದಿ ಪದುಳದೊಳೆಂದನು || ||೩೬೯||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕುಮತಿ ಕೌರವ ರಣದಿ ರಾಜ್ಯವ | ನಿಮಗೆ ಕೊಡುತಿಹನಂತೆ ಸುಪರಾ |
ಕ್ರಮಿಗಳಾದರೆ ನೀವು ಕೊಂಬುದು | ಸಮರಮುಖದಿ  || ೩೭೦ ||

ಆ ನರಾಧಿಪನೋಲಗದೊಳಪ | ಮಾನ ತನಗಾಯ್ತೆನಲು ತರಣಿಜ |
ಸೂನು ಮರುಗಲು ನುಡಿದನಾ ಪವ | ಮಾನಸುತನು  || ೩೭೧ ||

ಶೌರಿಗಾದಪಮಾನಗಳು ಹೆ | ಮ್ಮಾರಿಗೌತಣವಾಯ್ತು ಮುಂದಿನ |
ಭಾರತದೊಳೆಂದಾಡುತಿರೆ ಕಂ | ಸಾರಿ ನುಡಿದ ||  || ೩೭೨ ||

ಅವಧಿವತ್ಸರವಿಲ್ಲ ನಾಳಿನ | ದಿವಸದೊಳಗೀ ಪೌರುಷವ ಕೌ |
ರವನ ಸರಿಸದಿ ತೋರಬಹುದೆಲೆ | ಪವನಜಾತ  || ೩೭೩ ||

ಕಳುಹು ಲಿಖಿತವ ಭೂಪರಿಗೆ ಬೆಂ | ಬಲಕೆ ನಾನಿಹೆನೈಸೆಕುರು ಮಂ |
ಡಲಕೆ ಪಯಣವ ಮಾಡಿ ನೀವಿ | ನ್ನಳುಕದೆನಲು  || ೩೭೪ ||

ಭಾಮಿನಿ

ಬರೆಸಿ ಲಿಖಿತವ ಕೃಷ್ಣನಪ್ಪಣೆ |
ವೆರಸಿ ಮಣಿಹಾರರ ಯುಧಿಷ್ಠಿರ |
ಕರೆಸಿ ಕಳುಹಲು ತೋರ್ದರೋಲೆಯನಖಿಳ ರಾಯರಿಗೆ ||
ಧುರಕೆ ತುರಗ ವರೂಥ ಗಜ ಮೋ |
ಹರಕೆ ಕಟ್ಟಾಳುಗಳು ಸಹಿತಂ |
ಬರಕೆ ಕೆಂಧೂಳಡರಲಯ್ದಿದರಖಿಳ ಭೂಭುಜರು  || ೩೭೫ ||

ವಾರ್ಧಕ

ವೀರ ದ್ರುಪದ ಶಿಖಂಡಿ ಸೃಂಜಯ ಶತಾನೀಕ |
ವೈರಾಟ ಕೇಕಯ ನೃಪಾಲ ಕುಂತೀಭೋಜ |
ಭೂರಮಣ ಕಾಶಿಪತಿ ಚೈದ್ಯ ಸಾತ್ಯಕಿ ಧೃಷ್ಟಕೇತು ಸೋಮಕಭೂಪರು ||
ಸೂರ್ಯಪೌತ್ರಗೆ ಮಿತ್ರರಾದರಸುಗಳ್ ತಮ್ಮ |
ವಾರಣ ತುರಂಗ ಸ್ಯಂದನ ಪದಾತಿಗಳೈದೆ |
ತೋರಲಾಹವಕಾಗಿ ಪೊಕ್ಕರೇಳಕ್ಷೆಹಿಣೀಸೈನ್ಯವಾಯ್ತೆಣಿಕೆಗೆ  || ೩೭೬ ||

ಭಾಮಿನಿ

ಜನಪ ಕೇಳಿನ್ನುಳಿದ ಕಾಲಾ |
ಳೆಣಿಸಲೇತಕೆ ಕೃಷ್ಣರಾಯಗೆ |
ಮಣಿದ ನಾಯಕವಾಡಿಗಳನುಪಚರಿಸುತಿರಲಾಗ ||
ದನುಜರುಗಳಾರ್ಭಟೆಯೊಳಂದು |
ಬ್ಬಣವ ತಿರುಹುತ ಘೋರ ರೂಪದಿ |
ರಣಭಯಂಕರ ಕಲಿಘಟೋತ್ಯಚ ಬಂದು ಕಾಣಿಸಿದ  || ೩೭೭ ||

ರಾಗ ಅಷ್ಟಪದಿ ಮಾರವಿ ಏಕತಾಳ

ಮಾರುತಜಾತಕು | ಮಾರಕ ಘೋರಾ ಕಾರದ ಕೌಣಪ | ವಾರವ ನೊಡಗೊಂ |
ಡಾರುಭಟಿಸುತಸು | ರಾರಿಯ ಯಮಜ ಸ |
ಮೀರಜ ಪಾರ್ಥರ ದೂರದಿ ಕಂಡಡ || ಗೆಡೆದನಾಗ  || ೩೭೮ ||

ಆ ಕೌರವ ಭೂ | ಲೋಕವ ಸಾಮದಿ | ತಾ ಕೊಡದಿಹನವಿ | ವೇಕಗಳಾಯ್ತುರೆ |
ನೂಕುವೆ ಯಮಪುರ | ಕಾ ಕುಜನರ ಕರು |
ಣಾಕರನೊಲುಮೆಯೊ | ಳೀ ಕಲಹದೊಳೆಂ || ದಾಡುತಿರ್ದ  || ೩೭೯ ||

ದಾನವನುಗ್ರವ | ಕ್ಷೆಣಿಪ ಕಾಲಜ | ಕಾಣುತವನ ಸ | ನ್ಮಾನಿಸಿ ತಮ್ಮಯ |
ಸೇನೆಗೆ ಧೊರೆಯಹ | ಜಾಣರಾರೆನಲು ನಿ |
ಧಾನಿಸಿ ದ್ರುಪದನ | ಸೂನುವ ನಿಶ್ಚಯ || ಗೆಯ್ದನು ಪಾರ್ಥ  || ೩೮೦ ||

ಭಾಮಿನಿ

ಹರಿಯ ನೇಮದಿ ದ್ರುಪದಸುತಗನು |
ಕರಿಸಿದರು ದಳದೊಡೆತನವ ಭೂ |
ಸುರರ ಮಂತ್ರದಿ ಸತಿಯರಾರತಿ ಬೆಳಗಲುತ್ಸಹದಿ ||
ನೆರವಿಯಲಿ ಸಾರಿದರು ಭಟರಿಗೆ |
ಧುರದಿ ಧೃಷ್ಟದ್ಯುಮ್ನನಾಜ್ಞೆಯೊ |
ಳಿರವೆನುತ ನಿಸ್ಸಾಳ ತಂಬಟೆ ಪಟಹರಭಸದಲಿ  || ೩೮೧ ||

ಕ್ಷೆಣಿಪತಿ ಕೇಳಾಗ ರಾಮ | ಧ್ಯಾನದಲಿ ನಡೆತಂದು ಮುಖ್ಯ |
ಪ್ರಾಣ ಕಮಲಾಧವಗೆ ಮೈಯಿಕ್ಕಿರಲು ಪದುಳಿಸುತ ||
ನೀನು ಪಾರ್ಥನ ತೇರಸಿಂಧದಿ | ಸಾನುರಾಗದಿ ಮಂಡಿಸೆಂದಾ |
ಸೇನೆ ತೆರಳಲೆನಲ್ಕೆ ಪೊರಟಯ್ದಿತು ಸುಲಗ್ನದಲಿ  || ೩೮೨ ||

ರಾಗ ಸುರುಟಿ ಮಟ್ಟೆತಾಳ

ಬಂದರು ರಣಕೆ | ಸಮರಾಂಗಣಕೆ      || ಪ ||

ಅನಿಲಗತಿಯ ಮೀರುವ ಹಯ | ಕುಣಿವ ಮದೇಭಗಳ ||
ನಿನದದಿ ಪೊಂದೇರ್ಗಳ ಸಂ | ದಣಿಗಳ ಕಾಲಾಳ || ಬಂದರು  || ೩೮೩ ||

ಚಿಮ್ಮುತ ಖಡ್ಗ ಸರಳ್ಗಳ | ಮುಮ್ಮೊನೆಗಳ ಮಾಡಿ ||
ಕಾರ್ಮುಕಗಳನುರೆ ತಿದ್ದುತ | ತಮ್ಮೊಳು ಮಾತಾಡಿ || ಬಂದರು  || ೩೮೪ ||

ಸ್ವಾಮಿಯ ರಥದಪರಾಂಗದಿ | ಭೂಮಿಪ ಧರ್ಮಜನ ||
ಸಾಮಜವರದರಿಕ್ಕೆಲ ನರ | ಭೀಮಾದ್ಯರ ಗಡಣ || ಬಂದರು  || ೩೮೫ ||

ಬೀಸುವ ಚಾಮರ ವಾದ್ಯದ | ಘೋಷದಿ ನರ್ತಿಸುತ ||
ವೇಶ್ಯೆಯರಯ್ತರೆ ನೋಡಿ ವಿ | ಲಾಸದಿ ಮನವಿಡುತ || ಬಂದರು || ೩೮೬ ||

ಮಾರ್ಬಲವೀಪರಿಯಲಿ ನಡೆ | ವಾರ್ಭಟೆಗಿಳೆಬಿರಿಯೆ ||
ಉರ್ಬಸವಾಯಿತು ಕಮಠಗೆ | ಪರ್ವತಗಳು ಜರಿಯೆ || ಬಂದರು || ೩೮೭ ||

ಭಾಮಿನಿ

ಎಲೆ ಧರಾಧಿಪ ಕೇಳು ಕುರುಮಂ |
ಡಲದಿ ಪಶ್ಚಿಮದೆಸೆಯೊಳ್ ಯಮಜನ |
ಬಲಸಮುದ್ರಕೆ ಬೇರೆಬೇರೆಸಗಿದರು ಮಂದಿರವ ||
ನಳಿನಭವಪಿತ ಭಕ್ತವತ್ಸಲ |
ಕಲುಷಹರ ಶ್ರೀವೆಂಕಟೇಶನ |
ನೊಲಿದು ಪೂಜಿಸುತಿರ್ದರವನಿಪರೆಂದನಾ ಮುನಿಪ  || ೩೮೮ ||

ಶ್ರೀಕೃಷ್ಣಸಂಧಾನ ಸಂಪೂರ್ಣ