ಭಾಮಿನಿ
ಎಂದವರು ನಿರ್ಧರಿಸುತೊಡನೆಯೆ |
ಬಂದು ಮನೆಯನು ಸೇರಿ ಮರುದಿನ |
ಚಂದದಿಂ ವೇಷವನು ಧರಿಸುತೆ ಬಳಿಕ ಪೊರಮಟ್ಟು ||
ಮುಂದುವರಿದಲ್ಲಿರ್ಪ ಮಾರಿಯ |
ಮಂದಿರಕೆ ಬರುತಿರಲು ಮುನಿಕುಲ |
ವೃಂದದಿಂದೊಡಗೂಡಿ ಕಣ್ವರು ಬಂದರಾಯೆಡೆಗೆ        || ೧೧೧ ||

ರಾಗ ಸಾಂಗತ್ಯ ರೂಪಕತಾಳ
ವರಮುನಿವರ್ಯರ ಕಂಡೊಡನಾಕ್ಷಣ |
ಚರಣಕ್ಕೆ ಮಣಿಯುತೆಲ್ಲವರು ||
ಪರಮ ಭಕ್ತಿಯನು ತೋರ್ಪಡಿಸುತ್ತಲಿರೆ ಬಳಿ |
ಕೊರೆದನು ಕೃತವರ್ಮ ನಗುತೆ       || ೧೧೨ ||

ಘನಮಹಿಮರೆ ನೀವು ಬಂದುದೀಗೊಳಿತೆನ್ನ |
ವನಿತೆಯು ಬಸುರಿಯಾಗಿಹಳು ||
ಜನಿಸುವ ಶಿಶುವಾವುದಿವಳಿಗೆಂದೊರೆಯುತ್ತೆ |
ಮನಕೆ ತೋಷವನೀವುದೀಗ           || ೧೧೩ ||

ಎಂದೆನುತೆಲ್ಲರು ಹುಸಿನಗೆಯನು ಬೀರು |
ತಂದು ಹಾಸ್ಯವ ಗೆಯ್ಯುತಿರಲು ||
ಚಂದದಿಂ ಯೋಚಿಸಿ ಮುನಿಮೃಡನಾಕ್ಷಣ |
ನೊಂದು ರೋಷವ ತಾಳುತೆಂದ     || ೧೧೪ ||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಎಲವೆಲವೊ ನಿನ್ನವಳು ಹೆರುವಳು |
ಕುಲವಿಘಾತಕ ಮುಸಲವೊಂದನು |
ಕೊಲುವುದಿದು ನಿಮ್ಮವರ ತಲೆಯನು | ನೆಲಕೆ ಕೆಡಹಿ   || ೧೧೫ ||

ಖೂಳರಾಗಿಹ ನಿಮ್ಮ ತಲೆಯನು |
ಹೋಳುಗೈವಾ ಮುಸಲ ಜನಿಸಲಿ |
ನಾಳೆಯೇ ನಿನ್ನವಳ ಬಸುರಲಿ | ಕೇಳಿರಿದನು || ೧೧೬ ||

ಮಂಡೆಗಟ್ಟಿಯೆನುತ್ತೆ ಮದದಲಿ |
ಬಂಡೆಯನು ಹಾಯ್ದವನ ತೆರದಿಂ |
ದಂಡಲೆಯ ಬೇಕೆಲ್ಲರಿಂದೀ | ಭಂಡತನಕೆ      || ೧೧೭ ||

ಕಂದ
ಮುನಿಪತಿಯಿಂತೊರೆಯುತೆ ನಿಜ |
ವನದೆಡೆ ಗೈದಲ್ಕೆ ಬಳಿಕ ಯಾದವರೆಲ್ಲರ್ ||
ಮನದೊಳ್ ರೋದಿಸೆ ಸಾಂಬನು |
ಸನಿಹದಳಿರ್ಪವರ ಕೂಡೆ ಬಳಿಕಿಂತೆಂದಂ      || ೧೧೮ ||

ರಾಗ ನೀಲಾಂಬರಿ ರೂಪಕತಾಳ
ಅಕಟಕಟಿಂತೇತಕೆ ಮತಿ | ವಿಕಳತೆಯಂದೀದಿನ ಯದು |
ನಿಕರವ ನೆರಹುತೆ ಮುನಿಕುಲ | ಮುಕುರವ ಕೆಣಕಿದೆನೊ          || ೧೧೯ ||

ಏತಕೆ ನಾರೀವೇಷವ | ನಾ ತಳೆದೆನೊ ಕೃತವರ್ಮನ |
ನೇತಕೆ ಸೇರಿಸಿಕೊಂಡೆನೊ | ಘಾತಕವಾಯ್ತಲ್ಲ           || ೧೨೦ ||

ಎಂತೈದಿತು ನವರಾತ್ರಿಯಿ | ದೆಂತೈದಿಹನೋ ಮುನಿಪತಿ |
ಯಂತಕನಂತೀಯೆಡೆಗತಿ ಚಿಂತೆಯು ಬಂತಲ್ಲಾ          || ೧೨೧ ||

ಆರೊಡನುಸುರಲಿ ದುಃಖವ | ನಾರಿಹರೆನ್ನನು ಪೊರೆಯುವ |
ಧೀರರು ಜಗದೊಳಗಯ್ಯೋ | ತೋರದು ಗತಿ ಎನಗೆ   || ೧೨೨ ||

ಭಾಮಿನಿ
ಇಂತವನು ಮರುಗುತ್ತೆ ಚಿಂತೆಯ |
ನಾಂತಿರಲು ಕೃತವರ್ಮಕನು ತ |
ನ್ನಂತರಂಗದೊಳೆಯ್ದೆ ಯೋಚಿಸಿ ಮತ್ತೆ ಸಾಂಬನನು ||
ಸಂತವಿಸುತೀ ಕಷ್ಟವನು ದನು |
ಜಾಂತಕನು ನೀಗುವನೆನುತೆ ನಿ |
ಶ್ಚಿಂತೆಯಿಂ ಶ್ರೀಹರಿಯ ಬಳಿಗೈತಂದನವರೊಡನೆ       || ೧೨೩ ||

ಅಂಕ ೭.  ಯಾದವರ ದುಃಖನಿವಾರಣೆ

ರಾಗ ಸಾಂಗತ್ಯ ರೂಪಕತಾಳ
ಇತ್ತಲಾ ಶ್ರೀಹರಿ ತನ್ನ ಮಂದಿರದೊಳು |
ಮತ್ತಕಾಶಿನಿಯರ ನೆರಹಿ ||
ನೆತ್ತವನಾಡುತ್ತಲಿರುತಿರಲಲ್ಲಿಗೆ |
ಮತ್ತೆ ಬಂದರು ಸಾಂಬಾದಿಗಳು      || ೧೨೪ ||

ಪಾದಕ್ಕೆ ವಂದಿಸಿ ನಿಂದು ದುಃಖಿಸುತಿರ್ಪ |
ಯಾದವರನು ಕಂಡು ಹರಿಯು ||
ಭೇದವನಾಂತಿರ್ಪುದೇಕೆನೆ ಕೃತವರ್ಮ |
ನಾ ದಯಾನಿಧಿಯೊಡನೆಂದ           || ೧೨೫ ||

ರಾಗ ಕೇದಾರಗೌಳ ಅಷ್ಟತಾಳ
ದೇವ ನಿನ್ನಾಜ್ಞೆಯಂತೀ ದಿನದುತ್ಸವ | ದಾ ವೇಳೆಯೊಳು ನಡೆವ ||
ಪಾವನ ಕಾರ್ಯಕ್ಕೆ ವೇಷವ ಧರಿಸುತ್ತೆ | ನಾವು ಪೋಗುತಲಿರ್ದೆವು         || ೧೨೬ ||

ನಾನೊಬ್ಬ ಪುರುಷನಂತಾ ಸಾಂಬನನುಪಮ | ಮಾನಿನಿಯಂದದಲಿ ||
ಸಾನಂದದಿಂದೆ ವೇಷವ ಧರಿಸುತ್ತೆ ವಿ | ಧಾನದಿಂ ಪೋಗುವಾಗ            || ೧೨೭ ||

ಮುನಿಕಣ್ವರೈತರೆ ನಾನು ವಿನೋದದಿಂ | ಘನಮಹಿಮಾನ್ವಿತರೆ ||
ಮನದನ್ನೆಯಾದಿವಳೇನನು ಹೆರುವಳೆಂ | ದೆನೆ ಕನಲುತ್ತವರು   || ೧೨೮ ||

ನಿನ್ನ ವಂಶವ ಕೊಲ್ವ ಮುಸಲವ ಹೆರುವಳೆಂ | ದೆನ್ನುತೆ ಮುನಿ ಪೋದನು ||
ಬನ್ನವಾಯ್ತಿದರಿಂದಲಿನ್ನೇವೆನೆನಲಾಗ | ಪನ್ನಗಶಯನನೆಂದ     || ೧೨೯ ||

ವಾರ್ಧಕ
ಇದು ಸತ್ಯವಾಗದಿರದಿದಕೆ ನೀವೊಂದಿನಿತು |
ಬೆದರದಿರಿ ಜನಿಸಿದೊನಕೆಯನು ಕೊಂಡೊಯ್ದು ವಾ |
ರಿಧಿಯ ಸೈಕತಶಿಲೆಯೊಳೆಡೆಬಿಡದೆ ತೇದದನು ನಿರ್ನಾಮವೆಸಗಿ ಬಳಿಕ ||
ಮುದದಿಂದೆ ಬನ್ನಿರೆಂದಚ್ಯುತಂ ಬೆಸಸಲವ |
ರಧಿಕ ತೋಷದೊಳಿರಲು ಮರುದಿನವೆ ಜನಿಸಿತಾ |
ಯದುಕುಲವಿನಾಶಕಾರಕ ಮುಸಲವಾಸಾಂಬನುದರ ಪ್ರದೇಶದಿಂದೆ       || ೧೩೦ ||

ಆಗಳಿಳೆ ನಡುಗಿತುಲ್ಕಾಪಾತವಾಯ್ತು ಬಿರು |
ಸಾಗಿ ಬೀಸಿತು ಚಂಡಮಾರುತಂ ಧರಣಿಯಂ |
ಸಾಗರದ ಜಲವೆಯ್ದೆ ಮುತ್ತಿ ಮುಸುಕಿತ್ತು ನಡುಹಗಲೆ ನರಿಗಳ್ ಕೂಗುತೆ ||
ಸಾಗುತಿರಲಿದು ದುರ್ನಿಮಿತ್ತ ವೆಂದರಿತು ಬುಧ |
ರಾಗಮಿಸಿ ಶಾಂತಿಕರ್ಮಂಗಳಂ ಗೆಯ್ಯೆ ಮುಂ |
ದಾಗಿ ಯದುವೀರರೈತಂದರೊನಕೆಯನು ನಿರ್ನಾಮವೆಸಗುವೆವೆನ್ನುತೆ    || ೧೩೧ ||

ಕಂದ
ಬಂದೆಲ್ಲರ್ ಮುಸಲದ ಬಳಿ |
ನಿಂದದನೀಕ್ಷಿಸುತೆ ಪಿಡಿದು ದೇವಾಸುರರಾ ||
ಮಂದರವ ಪೊತ್ತಂದದೊ |
ಳಂದತಿ ಬಲದಿಂದೆ ಪೊತ್ತು ನಡೆಯುತ್ತಿರ್ದರ್ || ೧೩೨ ||

ರಾಗ ಶಂಕರಾಭರಣ ಮಟ್ಟೆತಾಳ
ಬಂದರು | ಯಾದವರು ಮುಸಲವನಾಂತು | ಬಂದರು || ಪಲ್ಲವಿ ||

ಬಂದರು ವಿಘ್ನೇಶನನ್ನು | ಮೋದ |
ದಿಂದೆ ಪೂಜಿಸುತೆ ಮಕ್ಕಳನ್ನು | ದೂರ |
ನಿಂದಿರೆಂದೆಚ್ಚರಿಸುತೆ ಸರ್ವರನು ಕರೆ |
ತಂದೆತ್ತಿ ಪೋಪಂತೆ ಗೆಯ್ದು ನಿರ್ಣಯವನ್ನು || ಅ.ಪಲ್ಲವಿ ||

ಬಿಡದೆ ಯಾದವರೆಲ್ಲ ಕೂಡಿ | ಮತ್ತೆ |
ತಡೆಯದೆಲ್ಲರು ಮನಮಾಡಿ | ಸೇರು |
ತೊಡನೆತ್ತುವಂತೆ ಮಾತಾಡಿ | ಹಾಗೆ |
ಪಿಡಿದೆತ್ತಲದನು ಮುಂದೂಡಿ | ಬೇಗ |
ನಡಿಯಿಡುವಂತೆ ಸೂಚನೆಯನು ನೆರೆನೀಡಿ |
ನಡೆದರು ಪೊತ್ತು ಕೊಂಡದನು ನಗಾಡಿ || ಬಂದರು     || ೧೩೩ ||

ಏರಿಳಿಯುತ್ತ ಪೋಗುತ್ತೆ | ಹೊತ್ತ |
ಭಾರಕ್ಕೆ ಬಳಲಿ ಬಾಡುತ್ತೆ | ನಿಂದು |
ಮಿರಿ ಸತ್ವವನು ತೋರುತ್ತೆ | ರೋಷ |
ವೇರಿ ಗರ್ಜಿಸಿ ಹೂಂಕರಿಸುತೆ | ಧೀರ |
ವೀರ ಯಾದವರೆಲ್ಲರದನೈದೆ ಹೂಡುತ್ತೆ |
ಭೂರಿಸಾಗರದೆಡೆಗದನು ತಂದರು ಮತ್ತೆ || ಬಂದರು   || ೧೩೪ ||

ಭಾಮಿನಿ
ಧರೆಯ ಭಾರವ ಮಿರಿಸುವ ಭೀ |
ಕರದ ಮುಸಲವ ಹೊತ್ತು ತಂದಾ |
ಶರನಿಧಿಯ ತೀರದಲಿ ಯಾದವರಿಳುಹಿ ಮತ್ತದನು |
ಮೆರೆವ ಸೈಕತಶಿಲೆಯ ಮೇಲಿ |
ಟ್ಟರೆಯುತಿರ್ದರು ಬಿಡದೆ ವರ್ಷಗ |
ಳೆರಡು ತೀರುವವರೆಗೆ ಹಗಲಿರುಳೆನ್ನದನುದಿನವು        || ೧೩೫ ||

ರಾಗ ಸಾಂಗತ್ಯ ರೂಪಕತಾಳ
ಹೀಗವರರೆಯಲು ಮುಸಲವು ಶರಗಾತ್ರ
ವಾಗುಳಿಯಿತು ಸವೆಯುತ್ತೆ ||
ಹೇಗಿದನಿನ್ನರೆಯುವುದೆಂದು ತಿಳಿಯದೆ |
ಕೂಗುತೆ ಕುಳಿತಿರಲವರು   || ೧೩೬ ||

ಕೃತವರ್ಮನೆಂದನೀ ಮುಸಲದ ತುಂಡಿನಿಂ |
ದಿತರರಿಗಿರದಿನ್ನು ಬಾಧೆ ||
ಜತನದಿಂದಿದನಬ್ಧಿಗೆಸೆಯುತೆ ನಾವೀಗ |
ಜೊತೆಯಾಗಿ ಸಾಗುವ ಪುರಕೆ         || ೧೩೭ ||

ಕಂದ
ಎಂದದನಬ್ಧಿಗೆ ಬಿಸುಡುತೆ |
ಬಂದಾ ಹರಿಯೊಡನೆ ವಿಷಯಮಂ ನೆರೆಯರುಹು ||
ತ್ತಂದದೊಳಿರುತಿರ್ದರ್ ನಿಜ |
ಮಂದಿರದೊಳ್ ಬಹಳ ತೋಷದಿಂದವರೆಲ್ಲರ್            || ೧೩೮ ||

ಅಂಕ ೮.  ಮುಸಲಾಸ್ತ್ರಪ್ರದಾನ

ರಾಗ ಭೈರವಿ ಝಂಪೆತಾಳ
ಇತ್ತ ಭಿಲ್ಲನೆನಿಪ್ಪ ಮಿಂಗುಲಿಗನೊಂದು ದಿನ |
ಹತ್ತಿರಕೆ ಕರೆದು ನಿಜ ಸತಿಯೊಡನೆ ಮುದದಿ ||
ಚಿತ್ತಶುದ್ಧಿಯೊಳೆಂದನೆಲೆ ಭಿಲ್ಲಿ ಎನಗೆ ದೊರ |
ಕಿತ್ತೊಂದು ಮಿನದರ ವಿಷಯವೇನೆಂಬೆ         || ೧೪೦ ||

ಅದರ ಜಠರದೊಳೊಂದು ಶರ ದೊರಕಿತೆನಗೆ ನಾ |
ನದನು ಕೊಂಡೊಯ್ದು ಶಬರೇಶಗೀಯಲ್ಕೆ ||
ಮುದದಿಂದ ಕೊಡುವನೆನಗುಡುಗೊರೆಯನಲ್ಲದಿ |
ನ್ನಧಿಕ ಧನ ದೊರೆವುದೆನಲವಳು ಪೇಳಿದಳು  || ೧೪೧ ||

ಪತಿಯೆ ನೀನಲ್ಲಿಂದ ಪಡೆದುದನು ಕೊಟ್ಟೆನ್ನ |
ಹಿತವ ಪರಿಪೂರ್ಣಗೊಳಿಸುತ್ತೆನ್ನ ಸುತರ ||
ಜತನದಿಂ ಪಾಲಿಸುವುದೆನಲೊಪ್ಪುತವನು ನಿಜ |
ಸತಿಯೊಡನೆ ನುಡಿದನೀ ರೀತಿಯಿಂದಾಗ      || ೧೪೨ ||

ಹೋದ ನಾನಲ್ಲಿಂದ ಬರ್ಪವರೆಗಿಲ್ಲಿಯೇ |
ಕಾದುಕೊಂಡಿರು ಜತನದಿಂದೆಮ್ಮ ಮನೆಯ ||
ಮೋದದಿಂದೆನುತೊರೆದು ನಡೆದನವನಾವನದ |
ಹಾದಿಯನು ಹಿಡಿದಸ್ತ್ರಸಹಿತ ಶೀಘ್ರದಲಿ         || ೧೪೩ ||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಜರನೆನುವ ಶಬರೇಶನಿತ್ತಲು | ಕರೆದು ತನ್ನನುಚರರನೀಕ್ಷಿಸಿ |
ಸರಸದಿಂದೀಪರಿಯೊಳೊರೆದನು | ಭರದೊಳಾಗ        || ೧೪೪ ||

ಮೆರೆವ ನಮ್ಮ ನಿಷಾದವನದೊಳು | ಹರಿ ಶರಭ ಮಹಿಷಾದಿಗಳ ದು |
ರ್ಭರದ ಬಾಧೆಗಳಿರ್ಪವೇನೀ | ವರುಹಿರೆನಗೆ  || ೧೪೫ ||

ದುರುಳ ದುರ್ಜನರೈದಿ ನಿಮ್ಮನು | ಬರಿದೆ ಪೀಡಿಸುತಿರ್ಪರೈ ನೆರೆ |
ಹೊರೆಯ ಶಬರರು ಕಷ್ಟವನು ಕೊ | ಟ್ಟಿರುವರೇನೊ     || ೧೪೬ ||

ಇಂದು ನಮ್ಮಿವನದೊಳತಿ ಸುಖ | ದಿಂದ ನಾವಿರುತಿಹೆವೆನಲು ನಡೆ |
ತಂದನಾ ಎಡೆಗೊರ್ವ ಧೀವರ | ನಂದು ಮುದದಿ        || ೧೪೭ ||

ವಂದಿಸುತೆ ನಿಂದವನನೀಕ್ಷಿಸು | ತೆಂದನಾ ಶಬರೇಶನೆಲವೊ |
ಬಂದವನು ನೀನಾರೆನಲ್ಕವ | ನಂದು ನುಡಿದ || ೧೪೮ ||

ರಾಗ ಮುಖಾರಿ ಏಕತಾಳ
ವನದೊಡೆಯನೆ ಕೇಳು ಬೇಗ | ಪೇಳುವುದನ್ನು |
ಮನದೊಲವಿಂದೆ ನೀನೀಗ ||
ಘನವನನಿಧಿಯಿಂ | ದಿನನಿತ್ಯವು ಮಿ |
ನನು ಹಿಡಿಯುತೆ ಜೀ | ವನವನು ನಡೆಸುವ |
ಮನೆತನದವನೆ | ನ್ನನು ಸರ್ವರು ಭಿ |
ಲ್ಲನೆನುತ್ತೀ ಮೇ | ದಿನಿಯೊಳು ಕರೆವರು        || ೧೪೯ ||

ಎಂದು ಸಮುದ್ರಕೆಯ್ದುತ್ತೆ | ಗಾಳವ ಹಾಕು |
ತೊಂದು ಮಿನನು ಹಿಡಿಯುತ್ತೆ ||
ತಂದದರುದರವ | ನಂದದೆ ಸೀಳಲು |
ಚಂದದ ಶರವೆನ | ಗಿಂದೇ ದೊರಕಿತು |
ತಂದೆನು ಕಾಣಿಕೆ | ಎಂದಿದನೆಲೆ ಗುಣ |
ಸಿಂಧುವೆ ರಕ್ಷಿಸು | ಮುಂದೆನುತಿತ್ತನು           || ೧೫೦ ||

ಭಾಮಿನಿ
ಒಡನೆ ಧೀವರನಿತ್ತ ಬಾಣವ |
ನಡವಿಯೊಡೆಯನು ನೋಡಿ ತೋಷದ |
ಕಡಲೊಳಾಳುತ್ತಿದು ಮಹಾದಿವ್ಯಾಸ್ತ್ರವೆಂದೆನುತೆ ||
ನುಡಿದು ನಿಜಶರನಿಧಿಯೊಳಿರಿಸುತೆ |
ತಡೆಯದಾ ಧೀವರಗೆ ಬಹುವಿಧ |
ನುಡುಗೊರೆಯನಿತ್ತವನ ಕಳುಹುತೆ ಸುಖದೊಳಿರುತಿರ್ದ           || ೧೫೧ ||

ಅಂಕ ೯.  ಯಾದವರ ನಿರ್ನಾಮ

ರಾಗ ಸೌರಾಷ್ಟ್ರ ತ್ರಿವುಡೆತಾಳ
ದ್ವಾರಕಾಪುರವರದೊಳಿತ್ತಲು | ತೋರಿದುತ್ಪಾತವನು ಕಾಣುತೆ |
ಸಾರಸಾಕ್ಷನು ನುಡಿದನಿದು ಗಾಂ | ಧಾರಿ ಶಾಪ         || ೧೫೨ ||

ಅಲ್ಲದಿರ್ದೊಡೆ ಧರೆಯು ಕಂಪಿಸಿ | ತಲ್ಲಣಿಸುವುದೆ ನರಿಗಳೀ ಹಗ |
ಲೆಲ್ಲ ಕೂಗುವುದುಂಟೆ ನಾಡಿನೊ | ಳೆಲ್ಲೆಡೆಯೊಳು       || ೧೫೩ ||

ಅರುಣವರ್ಷವು ಸುರಿವುತಿದೆ ಭೀ | ಕರ ಮಹಾನಿಲ ಸುಳಿವುತಿದೆ ದು |
ರ್ಧರದ ಸಿಡಿಲಾರ್ಭಟಿಸುತಿದೆ ಜನ | ತರಹರಿಪುದು     || ೧೫೪ ||

ವಾರ್ಧಕ
ಇದರ ಕುರಿತೀಗ ಯೋಚನೆಗೆಯ್ಯಬೇಕದಕೆ |
ಮೊದಲಾಗಿ ಬರಲಿ ಕೃತವರ್ಮಸಾತ್ಯಕಿಸಾಂಬ |
ಗದ ಮಿನಕೇತನಾದಿಗಳೆಂದು ದೂತರಂ ಕರೆದು ಕಳುಹಲ್ಕಾ ಕ್ಷಣ ||
ಮುದದೊಳವರೆಲ್ಲರೈತಂದು ವಂದಿಸಿ ಮತ್ತೆ |
ಸದಮಲಾತ್ಮಕನೊಳೇನಪ್ಪಣೆ ಎನಲ್ಕಾಗ |
ಮದನಪಿತನವರೊಡನೆ ನುಡಿದನುತ್ಪಾತಶತಕದ ವಿಷಯವೆಲ್ಲವನ್ನು       || ೧೫೫ ||

ರಾಗ ಕೇದಾರಗೌಳ ಅಷ್ಟತಾಳ
ಬಂಧುಬಾಂಧವರೆ ನೀವೆಲ್ಲರು ಕೇಳಬೇ | ಕಿಂದಿಲ್ಲಿ ಕಾಣಿಸುವ || ದಂದುಗದುತ್ಪಾತಕಿನ್ನೇನನೆಸಗುವು |
ದೆಂದು ಯೋಚನೆ ಗೆಯ್ದಿರೆ             || ೧೫೬ ||

ಅದರಿಂದನಿಷ್ಟ ಸಂಭವಿಸದೆ ಪೋಗದು | ಮೊದಲಿದಕೇವೆವಿನ್ನು ||
ಬೆದರದೆ ಯೋಚಿಸಿ ಪೇಳ್ವುದೆಂದೆನೆ ಸಾಂಬ |
ನಿದಿರೆದ್ದು ನಮಿಸುತೆಂದ    || ೧೫೭ ||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಪಿತನೆ ಲಾಲಿಸು ಧರೆಯೊಳಾರೋ |
ದಿತಿಸುತರು ದುಷ್ಕಾರ್ಯವೆಸಗುವ |
ರತಿಶಯದೊಳವರನ್ನು ಕೊಲುವೆನು | ಕ್ಷಿತಿಗೆ ಕೆಡಹಿ     || ೧೫೮ ||

ಒಡನೆ ಸಾತ್ಯಕಿ ನುಡಿದನಾರೋ |
ದಡಿಗರನ್ನೆಯವೆಸಗುತಿರಲೀ |
ಪೊಡವಿಯೊಳಗಿಂತಪ್ಪುದವರನು | ಕಡಿದು ಕೊಲುವೆ    || ೧೫೯ ||

ಭರದೊಳೆದ್ದಾಗದನು ನುಡಿದನು |
ಮೆರೆವ ಮಹದುತ್ಪಾತ ಶತಕ |
ಕ್ಕಿರುವ ಕಾರಣವನ್ನು ಶೋಧಿಸಿ | ಬರುವೆನಿಂದು         || ೧೬೦ ||

ಮಿನ ಕೇತನನಾಗ ನುಡಿದನು |
ನಾನೆ ಪೊರಡುವೆನಿದನು ಶೋಧಿಸೆ |
ನೀನನುಜ್ಞೆಯನೀಯಬೇಕನು | ಮಾನವಿಡದೆ  || ೧೬೧ ||

ಆಗ ಕೃತವರ್ಮಕನು ನುಡಿದನು |
ಹೇಗಿದನು ನಾನರಿಯ ಬಲ್ಲೆನು |
ನಾಗಶಯನನೆ ನೀನು ಹೇಳಿದ | ಹಾಗೆ ಗೈವೆ || ೧೬೨ ||

ನಿನಗರಿಯದಿಹ ವಿಷಯವಾವುದು |
ಘನಮಹಿಮ ದಯೆದೋರಿ ಪೊರೆಯೆಂ |
ದೆನಲು ಹರಿ ಯೋಚಿಸುತೆ ನುಡಿದನು | ನೆನೆಯುತಾಗ            || ೧೬೩ ||