ಕಾಲದ ಸೆಳೆತವು ಸಮಕಾಲೀನ ವಿಷಯಗಳ ಅರ್ಥಪೂರ್ಣ ಮಾಹಿತಿ, ವಿಮರ್ಶಾತ್ಮಕ ದೃಷ್ಟಿಕೋನ ಮತ್ತು ಸೈದ್ಧಾಂತಿಕ ನಿಲುವುಗಳನ್ನು ಒದಗಿಸಲು ಪ್ರಯತ್ನಿಸುತ್ತದೆ. ಈ ಸೆಳೆತವು ನಿರ್ಧಾರಕ ವಿಷಯಗಳ ಜ್ಞಾನದ ಹರವನ್ನು ವಿಸ್ತರಿಸುವ, ನಮ್ಮ ಸಾಮಾನ್ಯ ಜ್ಞಾನವನ್ನು ಪ್ರಶ್ನಿಸುವ, ಹಳೆ ಪರಿಕಲ್ಪನೆಗಳ ಮರುಚಿಂತನೆ ಮತ್ತು ಕಲ್ಪನೆಗಳನ್ನು ರೂಪಿಸುವ ಹಾಗೂ ನಮ್ಮನ್ನು ಕಾಡುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ವಿಶ್ಲೇಷಿಸುತ್ತದೆ.

ಈ ಸೆಳೆತದಲ್ಲಿ ಜಾವಿದ್ ಆಲಂ ಭಾರತದಲ್ಲಿ ಪ್ರಜಾಪ್ರಭುತ್ವ ಹೇಗೆ ರೂಪುಗೊಂಡಿದೆಯೆಂಬುದನ್ನು ತಿಳಿಯಲು ಪ್ರಯತ್ನಿಸುತ್ತಾರೆ. ಈ ಪದದ ಅರ್ಥ ಏನು ಮತ್ತು ವ್ಯವಸ್ಥೆ ಹೇಗೆ ಕಾರ್ಯೋನ್ಮುಖವಾಗುತ್ತಿದೆ ಎಂಬುದನ್ನು ಶೋಧಿಸುತ್ತಾರೆ. ಆಲಂ ಅವರು ಎತ್ತುವ ಪ್ರಶ್ನೆ ಉದ್ದೇಶಪೂರ್ವಕವಾಗಿ ನಾಟಕೀಯವೆನಿಸುತ್ತದೆ: ಯಾರು ಪ್ರಜಾಪ್ರಭುತ್ವವನ್ನು ಬಯಸುತ್ತಾರೆ? ಅವರ ಉತ್ತರವು ಬಹುಶಃ ಮತ್ತಷ್ಟು ಆಶ್ಚರ್ಯಕರವೆನಿಸುತ್ತದೆ.

ಜಾವಿದ್ ಆಲಂ ಅವರ ಅಭಿಪ್ರಾಯದಂತೆ ಭಾರತದಲ್ಲಿ ಪ್ರಜಾಪ್ರಭುತ್ವದ ಉಳಿವು ಆಳಿಸಿಕೊಳ್ಳುವವರ ರಾಜಕಾರಣವನ್ನು ಅವಲಂಬಿಸಿದೆ. ಅಧಿಕಾರಸ್ಥರು, ಜನಪ್ರತಿನಿಧಿಗಳು ಮತ್ತು ದೇಶ ಆಳುವವರು ಪ್ರಜಾಪ್ರಭುತ್ವದ ಪೋಷಕರಲ್ಲ. ಇವರು ವಿಫಲರಾಗಲಿ, ಅವರು ನಾವು ನೀಡಿದ ಆಶ್ವಾಸನೆಯನ್ನು ಈಡೇರಿಸುವಲ್ಲಿ ಸೋಲಲಿ ವ್ಯವಸ್ಥೆ ಮಾತ್ರ ಮುಂದುವರಿಯುತ್ತದೆ. ಭಾರತದ ಪ್ರಜಾಸತ್ತೆಯ ಹಲವಾರು ಸಂಗತಿಗಳನ್ನು ತಾವು ನಡೆಸಿದ ಸಮೀಕ್ಷೆಯ ಹಿನ್ನಲೆಯಲ್ಲಿ ಆಲಂ ಅವರು ವಿವರಿಸುತ್ತಾರೆ. ಬಹುಪಾಲು ಮತದಾರರು ರಾಜಕೀಯ ನಾಯಕರ ಒತ್ತಡಕ್ಕೆ ಮಣಿಯಲಾರರು ಮತ್ತು ಅವರು ಆರಿಸುವ ಪಕ್ಷದ ಮೇಲೆ ನಂಬಿಕೆಯನ್ನು ಕಳೆದುಕೊಂಡಿರುತ್ತಾರೆ ಎಂದು ಸಮೀಕ್ಷೆ ದೃಢಪಡಿಸುತ್ತದೆ. ಹಾಗಂತ ಅವರು ಮತ ಚಲಾಯಿಸದೆ ಸುಮ್ಮನೆ ಕೂರುವುದಿಲ್ಲ. ನಾಯಕತ್ವದ ಬಗ್ಗೆ ಅಸಹನೆ ಇದ್ದರೂ ಆಲಂ ಅವರು ತಿಳಿಸುವಂತೆ ಮತದಾನದ ಅರ್ಥ ಮತ್ತು ವ್ಯಾಪಕತೆ ಕುರಿತಂತೆ ಜನಸಾಮಾನ್ಯರಲ್ಲಿ ಅತಿಯಾದ ಜಾಗೃತಿ ಉಂಟಾಗಿದೆ. ಪ್ರಜಾಸತ್ತೆಯು ಸಂಪತ್ತು, ಅಂತಸ್ತು ಮತ್ತು ಅಧಿಕಾರದ ಜೊತೆಗೆ ಸಾಗುತ್ತದೆ ಎಂಬ ನಿಲುವನ್ನು ಬಹುಮುಖ್ಯವಾಗಿ ಈ ಸಮೀಕ್ಷೆ ಅಲ್ಲಗಳೆಯುತ್ತದೆ. ಬಡವರು ಹೆಚ್ಚಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವರು ಮತ್ತು ಪ್ರಜಾಸತ್ತೆಯಲ್ಲಿ ತಮ್ಮ ಅಚಲವಾದ ನಂಬಿಕೆಯನ್ನು ಉಳಿಸಿಕೊಂಡಿರುತ್ತಾರೆ. ಆದರೆ ಮೇಲ್ವರ್ಗವು ಇದಕ್ಕೆ ವ್ಯತಿರಿಕ್ತವಾಗಿದೆ. ಆಲಂ ಅವರು ಪ್ರತಿಪಾದಿಸುವಂತೆ ಭಾರತದಲ್ಲಿ ಪ್ರಜಾಸತ್ತೆಯು ಜನಸಾಮಾನ್ಯರ ಪ್ರಜ್ಞೆಯಲ್ಲಿ ಅಂತರ್ಗತಗೊಂಡು ಮಾದರಿ ಸಮಾಜವಾಗಿ ಜನರಿಂದ ಒಪ್ಪಿತವಾಗಿದೆ. ಅದು ಬಡವರ ಸಮಸ್ಯೆಗಳನ್ನು ಬಗೆಹರಿಸಿಲ್ಲ. ಅವರಿಗೆ ಆಹಾರ ಮತ್ತು ಸೂರು ಒದಗಿಸಿಲ್ಲ. ಆದರೂ ಅದು ಅವರ ಘನತೆ, ಹಕ್ಕುಗಳು ಮತ್ತು ಹಕ್ಕುದಾರಿಕೆಗೆ ಹೋರಾಡಲು ಅವಕಾಶವನ್ನು ಕಲ್ಪಿಸಿದೆ. ಮತದಾನದ ಹಕ್ಕು ಒಂದರ್ಥದಲ್ಲಿ ಶ್ರೇಣಿಕರಣವನ್ನು ಗೌಣವಾಗಿಸುತ್ತ ಜನರನ್ನು ಸಮಾನರನ್ನಾಗಿಸುತ್ತದೆ. ವಂಚಿತರಿಗೆ ಅವರ ಸಾಮಾಜಿಕ ಸ್ಥಾನಮಾನಗಳನ್ನು ಉನ್ನತೀಕರಿಸಲು ಅವಕಾಶ ಒದಗಿಸುವ ಮೂಲಕ ಸಾಮಾಜಿಕ ಜೀವನದಲ್ಲಿ ಎಂದೂ ಅನುಭವಿಸಲಾರದ ಒಂದು ಅಧಿಕಾರದ ತಿಳುವಳಿಕೆಯನ್ನು ಅದು ನೀಡುವುದು.

ಭಾರತದಲ್ಲಿ ಪ್ರಜಾಸತ್ತೆಯ ಸ್ವರೂಪವನ್ನು ಅರ್ಥೈಸಬೇಕಾದರೆ ನಾವು ಅದರ ವೈಶಿಷ್ಟ್ಯವನ್ನು ಶೋಧಿಸಬೇಕಿದೆ. ಅದರ ಗುಣಲಕ್ಷಣಗಳ ಸಂರಚನೆ ಮತ್ತು ಪಶ್ಚಿಮದೊಂದಿಗಿನ ಅದರ ಭಿನ್ನಾಭಿಪ್ರಾಯಗಳನ್ನು ಗಮನಿಸಬೇಕಿದೆ. ಆಧುನಿಕತೆಯ ಪ್ರಭಾವದೊಂದಿಗೆ ಪಶ್ಚಿಮದಲ್ಲಿ ಸಮಾನ ಪೌರತ್ವ ಮತ್ತು ಸಮಾನ ಹಕ್ಕುಗಳ ಪರಿಕಲ್ಪನೆ ಪ್ರಚಾರ ಪಡೆಯಿತು. ಒಂದು ಸ್ವಾಯತ್ತ, ಸ್ವಯಂ ಚಿಂತನಾಶೀಲ ಮತ್ತು ಅರ್ಥಪೂರ್ಣವಾದ ಸ್ವಕಲ್ಪನೆಯೊಂದಿಗೆ ಸ್ವತಂತ್ರನಾದ ವ್ಯಕ್ತಿ ತನ್ನ ಒಲವು ಮತ್ತು ಇಚ್ಛಾಶಕ್ತಿಗೆ ಅನುಗುಣವಾಗಿ ನಡೆಯುವನೆಂಬ ನೆಲೆಯಲ್ಲಿ ಇದು ರೂಪು ಪಡೆಯಿತು. ಆಧುನಿಕ ಪ್ರಜಾಸತ್ತೆಯು ಒಂದು ಪ್ರಾಚೀನ ವ್ಯವಸ್ಥೆಯ ಅವಶೇಷಗಳ ಮೇಲೆ ಸ್ಥಾಪನೆಯಾಗಿದ್ದು ವ್ಯಕ್ತಿಗಳ ಹಕ್ಕು ಮತ್ತು ಪಾತ್ರಗಳು ಸಾಮಾಜಿಕ ಏಣಿಶ್ರೇಣಿಯಲ್ಲಿನ ಅವರ ಸ್ಥಾನಮಾನಗಳ ಹಿನ್ನೆಲೆಯಲ್ಲಿ ಪೂರ್ವ ನಿರ್ಧಾರವಾಗುತ್ತಿತ್ತು.

ಸಮುದಾಯದ ಕಟ್ಟುಪಾಡುಗಳಿಂದ ವ್ಯಕ್ತಿಗಳನ್ನು ಮುಕ್ತಗೊಳಿಸದಿದ್ದರೆ ಪ್ರಜಾಸತ್ತೆ ಅಭಿವೃದ್ಧಿ ಹೊಂದದು. ಇದರರ್ಥ ಆಲಂ ಅವರು ತಿಳಿಸುವಂತೆ ಭಾರತದಲ್ಲಿ ಪ್ರಜಾಪ್ರಭುತ್ವ ಬೆಳವಣಿಗೆ ಎಂದರೆ ಸಮುದಾಯದ ವಿಘಟನೆ ಎಂದಲ್ಲ. ಬಂಡವಾಳಶಾಹಿಯ ಒತ್ತಡ ಮತ್ತು ರಾಜ್ಯದ ಕಾರ‍್ಯಕ್ಷಮತೆಯ ಪುನರ್ ವ್ಯಾಖ್ಯೆ ಮುಂತಾದ ಬದಲಾವಣೆಗಳಿಂದಾಗಿ ಜಾತಿಗಳು ಸಾಂಪ್ರದಾಯಿಕವಾಗಿ ಆಚರಣಾವಾದಿ ಸಂಗತಿಗಳಿಂದ ಮುಂದಕ್ಕೆ ಬಂದು ಸಮುದಾಯಗಳಾಗಿ ಹೊರಹೊಮ್ಮಿವೆ ಮತ್ತು ರಾಜಕೀಯದಲ್ಲಿ ಪ್ರಬಲವಾದ ನೆಲೆಯನ್ನು ಕಾಣುತ್ತಿದೆ. ಭಾರತದಲ್ಲಿ ಪ್ರಜಾಸತ್ತೆಯ ಹೋರಾಟವು ಕೇವಲ ಹಕ್ಕುಗಳ ವ್ಯಕ್ತಿಗತವಾದ ಪ್ರತಿಪಾದನೆಯಿಂದ ಬಲಗೊಂಡಿಲ್ಲ. ಅವು ದಮನಿತ ಸಮುದಾಯಗಳ ಹೋರಾಟಗಳಿಂದ ಬಲಗೊಂಡಿದೆ. ದಲಿತ, ಹಿಂದುಳಿದ ಜಾತಿಗಳು, ಮುಸ್ಲಿಮರು ಮತ್ತು ಮಹಿಳಾ ಹೋರಾಟಗಳು ಹೇಗೆ ಭಾರತದ ಪ್ರಜಾಸತ್ತೆಯ ಸ್ವರೂಪವನ್ನು ಸಂದಿಗ್ಧವಾಗಿ ರೂಪಿಸಿತು ಮತ್ತು ರಾಜಕೀಯ ಸಂಸ್ಕೃತಿಯ ವಿಶಿಷ್ಟವಾದ ಸಂರಚನಾ ಕಾರ್ಯಕ್ಷಮತೆಯ ಅರ್ಥವನ್ನು ಮರು ವ್ಯಾಖ್ಯಾನಿಸಿತು ಎಂಬುದನ್ನು ಆಲಂ ವಿವರಿಸುತ್ತಾರೆ. ಈ ಸಮುದಾಯಗಳ ಸಮಷ್ಟಿಯ ಹಕ್ಕೊತ್ತಾಯಗಳು ಹಿಂಸಾತ್ಮಕವಾದ ಸಾಮಾಜಿಕ ಸಂಘರ್ಷಗಳಿಗೆ ಎಡೆಮಾಡಿತು ಮತ್ತು ರಾಜಕೀಯದಲ್ಲಿ ನಾಟಕೀಯವಾದ ತಿರುವುಗಳಿಗೂ ಕಾರಣವಾಯಿತು. ಈ ಸಂಘರ್ಷಗಳನ್ನು ಎಚ್ಚರದಿಂದ ಗಮನಿಸುವುದರೊಂದಿಗೆ ಪ್ರತೀ ಹೋರಾಟಗಳ ವೈಶಿಷ್ಟವು ಅನಿವಾರ್ಯವಾಗಿ ಅವುಗಳ ರಾಜಕೀಯ ಉಗಮಕ್ಕೆ ಹೇಗೆ ರೂಪ ನೀಡಿತು ಎಂಬುದನ್ನು ಆಲಂ ವಿಶ್ಲೇಷಿಸುತ್ತಾರೆ.

ಭಾರತದಲ್ಲಿ ಪ್ರಜಾಸತ್ತೆಯು ರಾಷ್ಟ್ರದ ಕಲ್ಲನೆಯ ವಿಶಿಷ್ಟವಾದ ಪ್ರತಿಪಾದನೆಯ ಜೊತೆಗೆ ಪ್ರಚಲಿತಕ್ಕೆ ಬಂತು. ರಾಷ್ಟ್ರೀಯ ಹೋರಾಟದೊಂದಿಗೆ ಅಸ್ತಿತ್ವ ಕಂಡ ವಸಾಹತೋತ್ತರ ರಾಜ್ಯ ವ್ಯವಸ್ಥೆಯು ಪ್ರಾದೇಶಿಕ ಘಟಕಗಳನ್ನು ಗೌರವಿಸಿದರೂ ಪ್ರಬಲ ಕೇಂದ್ರದ ಅಗತ್ಯವನ್ನು ಪ್ರತಿಪಾದಿಸಿತು. ಘಟಕಗಳ ಅಸಮಗ್ರತೆಯ ಭಯದಿಂದ ರಾಷ್ಟ್ರವನ್ನು ಏಕಾತ್ಮಕವಾಗಿ ಸಾದೃಶ್ಯಗೊಳಿಸಿ ಕೇಂದ್ರದ ಸ್ಥಿರತೆಯ ನೆಲೆಯಲ್ಲಿ ಪ್ರಜಾಸತ್ತೆಯ ಬಲವನ್ನು ನಿರ್ಧರಿಸುವಂತಾಯಿತು. ಪ್ರಾದೇಶಿಕ ಘಟಕಗಳ ಅಸಮಗ್ರತೆಯ ಬೆದರಿಕೆಯು ರಾಷ್ಟ್ರದ ಏಕಾತ್ಮಕ ಕಲ್ಪನೆಗೆ ಯಾವತ್ತೂ ತೊಂದರೆಯನ್ನೊಡ್ಡುವುದು. ಪ್ರಾದೇಶಿಕ ಘಟಕಗಳು ಅವುಗಳ ಆಶೋತ್ತರಗಳನ್ನು ಪ್ರತಿಪಾದಿಸುತ್ತಲೇ ರಾಷ್ಟ್ರದ ಕಲ್ಪನೆಯನ್ನು ಬುಡಮೇಲುಗೊಳಿಸಿ ಪ್ರಜಾಸತ್ತೆಯ ಮೂಲವನ್ನು ಒಡೆಯುವುದಾಗಿದೆ. ಕೇಂದ್ರವನ್ನು ಸ್ಥಿರಪಡಿಸಲು ಪ್ರಾದೇಶಿಕ ಘಟಕಗಳನ್ನು ಶಿಸ್ತಿಗೊಳಪಡಿಸಿ ಮೌನವಾಗಿಸಬೇಕಿತ್ತು. ೧೯೯೦ರ ಹೊತ್ತಿಗೆ ರಾಷ್ಟ್ರದ ಈ ಏಕಾತ್ಮಕ ಕಲ್ಪನೆಯು ನಿಧಾನವಾಗಿ ಒಡೆಯಲ್ಪಟ್ಟು ಇದು ಪ್ರಜಾಸತ್ತೆಯ ಕಾರ್ಯರೂಪದಲ್ಲಿ ಹೇಗೆ ಬಿಂಬಿಸಲ್ಪಟ್ಟಿತ್ತೆಂಬುದನ್ನು ಆಲಂ ವಿವರಿಸುತ್ತಾರೆ. ಅಲ್ಲಿಯ ತನಕ ಪ್ರಾದೇಶಿಕ ಪಕ್ಷಗಳಿಗೆ ಕೇಂದ್ರದಲ್ಲಿ ನಿರ್ಣಾಯಕವಾದ ಪಾತ್ರವಿರಲಿಲ್ಲ. ಅದರ ಸಾಧನೆಗಳೇನಿದ್ದರೂ ಸ್ಥಳೀಯ ಮಟ್ಟಕ್ಕೆ ಸೀಮಿತಗೊಂಡಿತ್ತು. ರಾಷ್ಟ್ರೀಯ ಪಕ್ಷಗಳು ಸಂಸದೀಯ ಚುನಾವಣೆಯಲ್ಲಿ ಸುಮಾರು ಶೇಕಡ ೭೫ರಷ್ಟು ಮತಗಳನ್ನು ಪಡೆಯುತ್ತಿತ್ತು. ೧೯೯೬ರ ಚುನಾವಣೆಯ ನಂತರ ಪ್ರಾದೇಶಿಕ ಪಕ್ಷಗಳು ನಿರ್ಣಾಯಕವಾದ ಮಹತ್ವವನ್ನು ಪಡೆದವು. ಸಂಮ್ಮಿಶ್ರ ರಾಜಕಾರಣದ ತಾತ್ಕಾಲಿಕವಾದ ಸಮಯ ಸಂದರ್ಭವು ಔಚಿತ್ಯವು ಮರೆಗೆ ಸರಿದು ಅದರ ಪ್ರಭಾವ ವ್ಯಾಪಕವಾಗ ತೊಡಗಿತು. ಭಾರತದ ರಾಜಕಾರಣದಲ್ಲಿ ಒಂದು ಬಿಕ್ಕಟ್ಟನ್ನು ಮುಂದೊಡ್ಡುವಂತೆ ಇದನ್ನು ಒಂದು ಅಸ್ಥಿರತೆಯ ಪರ್ವದ ಉಧ್ಘಾಟನೆ ಎಂದು ಆಲಂ ಅವರ ಪ್ರಕಾರ ಅದು ನಮ್ಮ ಪ್ರಜಾಸತ್ತೆ ಪರಿಗಣಿಸಬೇಕಿಲ್ಲ. ರಾಷ್ಟ್ರದ ಕಲ್ಪನೆಯನ್ನು ಮಾರ್ಪಾಡು ಮಾಡುವಂತೆ ಪ್ರಜಾಪ್ರಭುತ್ವ ಪ್ರಕ್ರಿಯೆಯ ಹರವನ್ನು ವಿಸ್ತರಿಸುವುದು. ರಾಷ್ಟ್ರವನ್ನು ಬಹು ಕೇಂದ್ರಗಳ ವಿಭಿನ್ನ ಸ್ವರಗಳ ಒಂದು ಸಂಕಿರ್ಣತೆಯ ಏಕತೆ ಎಂಬಂತೆ ಹೆಚ್ಚಾಗಿ ಪುನರ್ ವ್ಯಾಖ್ಯಾನಿಸಲಾಗುತ್ತಿದೆ. ಪ್ರಜಾಸತ್ತೆಯ ಇಂಥ ಸ್ವರಗಳನ್ನು ಮೊಳಕೆಯಲ್ಲಿ ಚಿವುಟದೆ ಅವುಗಳ ಪ್ರತಿಪಾದನೆಗೆ ಅವಕಾಶವನ್ನು ಕಲ್ಪಿಸತಕ್ಕದ್ದು.

ಭಾರತದಲ್ಲಿನ ಪ್ರಜಾಸತ್ತೆಯ ಚಾರಿತ್ರಿಕ ಗುರುತನ್ನು ಶೋಧಿಸುತ್ತ ಆಲಂ ಪ್ರಬಲ ಪಕ್ಷಗಳಲ್ಲಿನ ಬದಲವಣೆಯತ್ತ ನೋಡುತ್ತಾರೆ. ೧೯೫೦ ಮತ್ತು ೧೯೬೦ರಲ್ಲಿ ಕಾಂಗ್ರೆಸ್ ಪಕ್ಷವು ವರ್ಗ ಮತ್ತು ಹಿತಾಶಕ್ತಿಗಳ ಒಂದು ಬಣವನ್ನು ಪ್ರತಿನಿಧಿಸುವ ಪ್ರಮುಖ ಸಂಘಟನೆಯೆಂದೆನಿಸಿತ್ತು. ೧೯೬೦ರ ಮಧ್ಯಭಾಗದಲ್ಲಿ ವಿವಿಧ ವರ್ಗಗಳನ್ನು ಪ್ರತಿನಿಧಿಸುವ ರಾಜಕೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳ ಬೆಳವಣಿಗೆಯೊಂದಿಗೆ ಈ ಬಣಗಳಲ್ಲಿ ಬಿರುಕುಂಟಾದವು. ೧೯೮೦ರಿಂದೀಚೆಗೆ ಬಿಜೆಪಿಯು ಪ್ರಬಲ ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್ಸನ್ನು ಪದಚ್ಯುತಿಗೊಳಿಸಿತು. ಆ ಮೂಲಕ ನೆಹರೂ ಅವರ ಪ್ರಜಾಸತ್ತೆ ರಾಷ್ಟ್ರ ಮತ್ತು ಜಾತ್ಯತೀತ ನಿಲುವಿನ ತಪ್ಪು ಅಭಿಪ್ರಾಯವನ್ನು ಹೋಗಲಾಡಿಸಿ ತನ್ನ ಸಾಮಾಜಿಕ ನೆಲೆಯನ್ನು ವಿಸ್ತರಿಸಿತು. ಎಲೀಟುಗಳು, ಬೂರ್ಶ್ವಾ ಮತ್ತು ಮಂಡಲ್ ವರದಿ ನಂತರ ಅದರ ವಿರುದ್ಧದ ಹಿಂದುತ್ವ ಶಕ್ತಿಗಳ ಹೊಸ ಬಣಗಳ ರೂಪುಗೊಳ್ಳುವಿಕೆಯಿಂದ ೧೯೯೦ರಲ್ಲಿ ಅದು ತನ್ನ ಅಧಿಕಾರ ಬಲವನ್ನು ವ್ಯಾಪಕಗೊಳಿಸಿರುವುದನ್ನು ಯಾರೂ ಗಮನಿಸಬಹುದಾಗಿದೆ. ಆಲಂ ಅವರ ಪ್ರಕಾರ ಈ ಸಂಧಿಕಾಲ ನಾಜೂಕಿನದಾಗಿದ್ದು ತಡೆಯಿಲ್ಲದ ಜಾತೀಕರಣದ ವಿರುದ್ಧದ ಜನಾಭಿಪ್ರಾಯದ ಸಿಟ್ಟಿನ ಮಧ್ಯೆ ಈ ಮೈತ್ರಿ ಹೆಚ್ಚು ಕಾಲ ನೆಲೆ ನಿಲ್ಲದು. ಈ ಅಸಮಾಧಾನದ ಮೂಲವನ್ನು ಗ್ರಹಿಸಿದಲ್ಲಿ ಮಾತ್ರ ಪ್ರಜಾಪಕ್ಷಗಳು ಗಟ್ಟಿಗೊಳ್ಳಬಹುದು. ೨೦೦೪ರ ಐತಿಹಾಸಿಕ ಚುನಾವಣೆಗೂ ಮುಂಚೆ ಬರೆಯಲ್ಪಟ್ಟ ಈ ಸೆಳೆತ ಕುತೂಹಲಕಾರಿಯಾಗಿ  ಭವಿಷ್ಯಸೂಚಕವೆನಿಸಿದೆ.

ಅಧಿಕಾರದ ದೃಢತೆಯೊಂದಿಗೆ ಈ ಸೆಳೆತ ಒಂದು ವಿಷಯವನ್ನು ಪ್ರಸ್ತಾಪಿಸುತ್ತದೆ. ಭಾರತದ ಪ್ರಜಾಪ್ರಭುತ್ವದ ಜೀವನ ಮುಂದೆಂದಿಗೂ ಎಲೀಟು ಪೋಷಕತ್ವವನ್ನು ಅವಲಂಬಿಸದು. ಅದು ತನ್ನಷ್ಟಕ್ಕೆ ಒಂದು ಹರವು ಮತ್ತು ಸ್ವಾಯತ್ತತೆಯನ್ನು ಪಡೆದಿದ್ದು ತನ್ನೆಲ್ಲ ಸಮಸ್ಯೆಗಳ ಮಧ್ಯೆಯೂ ಸಮಾಜದ ಜೊತೆ ಹಾಸುಹೊಕ್ಕಾಗಿದೆ. ಪ್ರಜಾಪ್ರಭುತ್ವವನ್ನು ಯಾರಾದರೂ ಬುಡಮೇಲುಗೊಳಿಸಲು ಪ್ರಯತ್ನಿಸಿದರೆ ಇಂದು ಜನಸಾಮಾನ್ಯರು ಅದರ ರಕ್ಷಣೆಗೆ ಇರುತ್ತಾರೆ. ತುರ್ತುಪರಿಸ್ಥಿತಿ ನಂತರ ಜನಸಾಮಾನ್ಯರು ಹಾಗೆ ಮಾಡಿದ್ದು ಈಗಲೂ ಇತ್ತೀಚಿನ ಘಟನೆಗಳು ತೋರಿಸುವಂತೆ ನಂತರ ಜನಸಾಮಾನ್ಯರು ಹಾಗೆ ಮಾಡಿದ್ದು ಈಗಲೂ ಇತ್ತೀಚಿನ ಘಟನೆಗಳು ತೋರಿಸುವಂತೆ ಮತ್ತು ಇತ್ತೀಚಿನ ಚುನಾವಣೆಯಲ್ಲಿ ಇದನ್ನು ಮತ್ತೊಮ್ಮೆ ಶೃತಪಡಿಸಿರುತ್ತಾರೆ. ಭಾರತದ ಪ್ರಜಾಪ್ರಭುತ್ವದ ವಿಧಿಬರಹದ ಬಗೆಗೆ ನಿರಾಶಾವಾದಿಗಳು ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ.

ನೀಲಾದ್ರಿ ಭಟ್ಟಾಚಾರ್ಯ