. ಮೊಡವೆ

ಮೊಡವೆ ಆಗಿರುವ ಭಾಗವನ್ನು ಶುದ್ಧವಾದ ನೀರಿನಿಂದ ತೊಳೆಯಬೇಕು. ಬೇವಿನ ಎಲೆಗಳ ಜೊತೆಗೆ ಅರಿಶಿನದ ಪುಡಿಯನ್ನು ಸೇರಿಸಿ ನುಣ್ಣಗೆ ಅರಿಯಬೇಕು. ನುಣ್ಣಗೆ ಅರಿದ ಪೇಸ್ಟನ್ನು ರಾತ್ರಿ ಮಲಗುವ ಮುನ್ನ ಮೊಡವೆ ಇರುವ ಭಾಗಕ್ಕೆ ಹಚ್ಚಬೇಕು. ಮಾರನೆಯ ದಿನ ಉತ್ತಮ ಮೈ ಸೋಪನ್ನು ಉಪಯೋಗಿಸಿ ಬಿಸಿ ನೀರಿನಿಂದ ಮುಖವನ್ನು ತೊಳೆದುಕೊಂಡು ಶುಭ್ರವಾದ ಒಣಗಿದ ವಸ್ತ್ರದಿಂದ ಒರೆಸಿಕೊಳ್ಳಬೇಕು.

ಮೊಡವೆಗಳಿಂದ ತೊಂದರೆಪಡುತ್ತಿರತಕ್ಕವರು ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಮತ್ತು ಸಿಹಿ ತಿಂಡಿಯನ್ನು ಅತಿಯಾಗಿ ತಿನ್ನಬಾರದು. ಪ್ರತಿದಿನದ ಊಟದಲ್ಲಿ ಯತೇಚ್ಛವಾಗಿ ಹಸಿರು ಸೊಪ್ಪು, ತರಕಾರಿಗಳು , ಹಣ್ಣು-ಹಂಪಲುಗಳನ್ನು ಸೇವಿಸಬೇಕು.

. ಕುರು

ಸಣ್ಣಪುಟ್ಟ ಕುರುಗಳಲಿಗೆ-ಲವಂಗಗಳನ್ನು ನೀರಿನೊಂದಿಗೆ ಸೇರಿಸಿ ಅರೆದು, ಪೇಸ್ಟ್‌ ಮಾಡಿಕೊಂಡು ಹಚ್ಚಿದಲ್ಲಿ ಉಪಶಮನ ಉಂಟಾಗುತ್ತದೆ.

ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಅದನ್ನು ಸ್ನಾನದ ನೀರಿನೊಂದಿಗೆ ಮಿಶ್ರಮಾಡಿ ಸ್ನಾನವನ್ನು ಮಾಡುವುದರಿಂದ ಸಣ್ಣಪುಟ್ಟ ಕುರುಗಳು ಏಳುವುದಿಲ್ಲ.

. ಬ್ರಾಂಕ್ಯೆಟಿಸ್ ಮತ್ತು ಬ್ರಾಂಕೈಲ್ ಆಸ್ತಮ

ಬಿಸಿ ಹಾಲಿಗೆ ಒಂದು ಟೀ ಚಮಚದಷ್ಟು ಒಳ್ಳೆಯ ಅರಿಶಿನದ ಪುಡಿಯನ್ನು ಮಿಶ್ರಣ ಮಾಡಿ ದಿನಕ್ಕೆರಡು ಬಾರಿ ಕುಡಿಯಬೇಕು.

. ನೆಗಡಿ

ಮೂಗು ಮುಚ್ಚಿಕೊಂಡ ಇದ್ದರೆ, ಕೆಂಡದ ಮೇಲೆ ಅರಿಶಿನದ ಪುಡಿಯನ್ನು ಉದುರಿಸಿ, ಮೂಗಿನಿಂದ ವಾಸನೆಯನ್ನು ತೆಗೆದುಕೊಳ್ಳಬೇಕು.

. ಮಲಬದ್ಧತೆ

ಮಲಬದ್ಧತೆ ನಿವಾರಣೆಯಾಗಬೇಕಾದರೆ, ಪ್ರತಿ ದಿನ ನೀವು ಹೆಚ್ಚಾಗಿ ಶುದ್ಧವಾದ ನೀರನ್ನು ಕುಡಿಯಬೇಕು. ತಾಜಾ ಇರುವ ಹಸಿರು ತರಕಾರಿಗಳು, ಹಣ್ಣು-ಹಂಪಲುಗಳನ್ನು ನಾರು ಇರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು.

ಮಲಗುವ ಮುನ್ನ ಎರಡು ಅಥವಾ ನಾಲ್ಕು ಟೀ ಚಮಚ ಗುಲ್ಕನ್ನು ತಿಂದು, ದೊಡ್ಡ ಲೋಟದಲ್ಲಿ ಬಿಸಿ ಹಾಲನ್ನು ಕುಡಿಯಬೇಕು.

. ಪಾದದ ಆಣಿ

ಶಸ್ತ್ರವೈದ್ಯರಿಂದ ಪಾದದ ಆಣಿ (ಕಾರ್ನ್ಸ್)ಗಳನ್ನು ತೆಗೆಸಿಬಿಡಬೇಕು. ಅನಂತರ, ರಾತ್ರಿ ಮಲಗುವಾಗ ನಿಂಬೆಹಣ್ಣಿನ ಶರಬತ್ತನ್ನು ಕುಡಿದು, ಅದರ ಸಿಪ್ಪೆಯನ್ನು ಆಣಿಯ ಭಾಗದಲ್ಲಿಟ್ಟು-ಬ್ಯಾಂಡೇಜನ್ನು ಕಟ್ಟಬೇಕು.

. ಕೆಮ್ಮು

ತುಳಸಿ ಎಲೆಗಳನ್ನು ಶುದ್ಧವಾದ ನೀರಿನಿಂದ ತೊಳೆದು, ಅನಂತರ, ಆ ಎಲೆಗಳಿಂದ ರಸವನ್ನು ತೆಗೆದು ಅದಕ್ಕೆ ಒಂದೆರಡು ಚಮಚ ಜೇನುತುಪ್ಪವನ್ನು ಸೇರಿಸಿ, ಬೆಳಗ್ಗೆ-ಮಧ್ಯಾಹ್ನ ಮತ್ತು ರಾತ್ರಿ ಕ್ರಮವಾಗಿ ಐದು ದಿವಸಗಳ ಕಾಲ ಸೇವಿಸಿದರೆ, ಕೆಮ್ಮು ಉಪಶಮನವಾಗುತ್ತದೆ.

. ಶರೀರ ಬಲಕ್ಕೆ ಬಾಳೇ ಹಣ್ಣು

ರಸಬಾಳೇ ಅಥವಾ ಪಚ್ಚಬಾಳೇ ಅಥವಾ ಯಾಲಕ್ಕಿ ಬಾಳೇ ಹಣ್ಣನ್ನು ಊಟವಾದ ನಂತರ ಪ್ರತಿ ದಿವಸವು ತಪ್ಪದೆ ೪೦ ದಿನಗಳ ಕಾಲ ಸೇವಿಸಿದರೆ ಶರೀರದಲ್ಲಿ ಒಳ್ಳೆಯ ಬಲ ಉಂಟಾಗುತ್ತದೆ.

. ಬಾಯಿಯ ದುರ್ವಾಸನೆ

ಪ್ರತಿದಿನ ಭೋಜನವಾದ ನಂತರ ಲವಂಗವನ್ನು ಚಪ್ಪರಿಸುತ್ತಿದ್ದರೆ, ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ.

ಉಪ್ಪು ಮತ್ತು ಲವಂಗ ಎರಡನ್ನು ಸೇರಿಸಿ ಚಪ್ಪರಿಸುತ್ತಿದ್ದರೆ ಆಯಾಸ ನಿವಾರಣೆಯಾಗುವುದಲ್ಲದೆ, ಬಾಯಿಯ ದುರ್ವಾಸನೆಯು ನಿವಾರಣೆಯಾಗುತ್ತದೆ.

೧೦. ಕೀಲುನೋವು

ಕೀಲುನೋವು ನಿವಾರಣೆಗೆ, ಕೊಬ್ಬರಿ ಎಣ್ಣೆಯಲ್ಲಿ ಹಿಂಗುವಿನ ಪುಡಿಯನ್ನು ಚೆನ್ನಾಗಿ ಕಲಸಿ, ಕೀಲುನೋವು ಇರುವ ಭಾಗದಲ್ಲಿ ಉಜ್ಜುವುದರಿಂದ ನೋವು ಕಡಿಮೆಯಾಗುತ್ತದೆ.

೧೧. ಸಾಮಾನ್ಯವಾದ ಜಾಂಡೀಸ್ ಅಥವಾ ಅರಿಶಿನ ಕಾಮಾಲೆ

ಕಣ್ಣುಗಳು ಮತ್ತು ಶರೀರ ಹಳದಿ ಬಣ್ಣಕ್ಕೆ ತಿರುಗುತ್ತದೆ. ೨೦ ಗ್ರಾಮ್‌ ನಿಂಬೆಹಣ್ಣಿನ ರಸವನ್ನು ಶುದ್ಧವಾದ ನೀರಿನಲ್ಲಿ ಅಥವಾ ಬಿಸಿನೀರಿನಲ್ಲಿ ಕಲಿಸಿ, ಸ್ವಲ್ಪ ಸಕ್ಕರೆಯನ್ನು ಸೇರಿಸಿ ದಿನಕ್ಕೆ ಕನಿಷ್ಠ ಆರು ಬಾರಿಯಾದರೂ ಕುಡಿಯುತ್ತಿದ್ದರೆ, ಜಾಂಡೀಸ್‌ನ ತೊಡಕು ಕಮ್ಮಿಯಾಗುತ್ತದೆ.

೧೨. ಗಂಟಲು ತೊಂದರೆ

ಜೇನುತುಪ್ಪ ಮತ್ತು ನಿಂಬೇಹಣ್ಣಿನ ರಸವನ್ನು ಸಮವಾಗಿ ಸೇರಿಸಿ ದಿನಕ್ಕೆ ಕನಿಷ್ಠ ಮೂರು ಬಾರಿಯಾದರೂ ಸೇವಿಸಿದರೆ, ಗಂಟಲಿನ ಕರ್ಕಶ ಧ್ವನಿ ಹೊರಟುಹೋಗುತ್ತದೆ.

೧೩. ಪರಂಗಿ ಹಣ್ಣಿನ ರಸ

ಪರಂಗಿ ಹಣ್ಣಿನ ರಸ, ಕರುಳಿನಲ್ಲಿರುವ ಕ್ರಿಮಿಗಳನ್ನು ನಾಶಪಡಿಸುತ್ತದೆ, ಕಫವನ್ನು ಕರಗಿಸುತ್ತದೆ. ಶೀತ ಕಾಲದಲ್ಲಿ ಬಾದಾಮಿ ಹಾಲಿಗೆ ಏಲಕ್ಕಿ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ಶರೀರ ಉತ್ತೇಜಕವಾಗಿರುತ್ತದೆ.

೧೪. ಉಳುಕು ನಿವಾರಣೆ

ಉಳುಕಿನಿಂದಾಗಿ ತೀವ್ರವಾದ ನೋವು ಮತ್ತು ಉರಿಯೂತವಿರುತ್ತದೆ. ಮೊಟ್ಟ ಮೊದಲು, ತೊಂದರೆಗೆ ಒಳಗಾಗಿರುವ ಭಾಗವನ್ನು ಚಲಿಸಬಾರದು. ಅಡುಗೆ ಉಪ್ಪನ್ನು ಸೇರಿಸಿದ, ಬಿಸಿ ನೀರಿನಲ್ಲಿ ಉಳುಕಿರುವ ಭಾಗವನ್ನು ಸ್ವಲ್ಪ ಹೊತ್ತು ಇರಿಸಿಕೊಳ್ಳುವುದರಿಂದ ನೋವನ್ನು ಕಡಿಮೆ ಮಾಡುತ್ತದೆ. ಉಳುಕು ಇರುವ ಭಾಗಕ್ಕೆ ಆಗಿಂದಾಗ್ಯೆ ಬಿಸಿ ನೀರಿನ ಕಾಪುಟವನ್ನು ಕೊಡುವುದರಿಂದ ಉದಶಮನ ಉಂಟಾಗುತ್ತದೆ.

೧೫. ಜಾಂಡೀಸ್ (ಅರಿಶಿನ ಕಾಮಾಲೆ)

ಲಿವರ್ ಮೇಲೆ ಹೆಚ್ಚು ಘನ ಆಹಾರದ ಒತ್ತಡವನ್ನು ಹೇರಬಾರದು. ಕೊಬ್ಬಿನ ಪದಾರ್ಥಗಳಿಂದ ಮುಕ್ತವಾದ ದ್ರವ ಪದಾರ್ಥಗಳನ್ನು ನೀಡಬೇಕು. ಶುದ್ಧವಾದ ಜಾಗದಲ್ಲಿ ಸ್ವಚ್ಛವಾಗಿ ತಯಾರಿಸಿದ ಕಬ್ಬಿನ ರಸವನ್ನು ಕುಡಿಯಲು ಕೊಡಬಹುದು.

ಉತ್ತಮವಾದ ಮೊಸರಿಗೆ, ಸಕ್ಕರೆಯನ್ನು ಸೇರಿಸಿ,  ಕೊಡುವುದರಿಂದ, ಲಿವರ್ ಗೆ ತಂಪು ಉಂಟಾಗುತ್ತದೆ.

೧೬ . ಮಲಬದ್ಧತೆ ನಿವಾರಣೆಗೆ ಜೇನುತುಪ್ಪ

“ಹನಿ ಈಜ್‌ ಎ ಫ್ರೆಂಡ್‌ ಆಫ್‌ ಸ್ಟಮಕ್‌” ಎಂದು ಇಂಗ್ಲಿಷಿನಲ್ಲಿ ಗಾದೆಯಿದೆ. ಜೇನು ಔಷಧಗಳ ಔಷಧವಾಗಿದೆ. ರೋಗಿಗಳಿಗೆ, ನಿಶ್ಚಕ್ತರಿಗೆ, ಆರೋಗ್ಯವಂತರಿಗೆಲ್ಲ ಪುಷ್ಟಿಕರವಾದ ಆಹಾರ ಜೇನುತುಪ್ಪ.

ಜೇನುತುಪ್ಪಕ್ಕೆ ಸರಾಗವಾಗಿ, ಮಲ ವಿಸರ್ಜನೆಯನ್ನುಂಟುಮಾಡುವ ಶಕ್ತಿಯಿದೆ. ಆದುದರಿಂದ, ಮಲಬದ್ಧತೆ ಇರತಕ್ಕವರು ಬೆಳಗಿನ ಹೊತ್ತು, ಖಾಲಿ ಹೊಟ್ಟೆಯಲ್ಲಿ ದೊಡ್ಡ ಲೋಟದ ಬಿಸಿನೀರಿಗೆ ಎರಡು ಅಥವಾ ಮೂರು ಟೀ ಚಮಚದಷ್ಟು ಜೇನುತುಪ್ಪವನ್ನು ಸೇರಿಸಿ ಕುಡಿಯುವುದು ಒಳ್ಳೆಯದು.

೧೭. ಅಸ್ತಮ ತೊಂದರೆ

ಅಸ್ತಕಮ ತೊಂದರೆ ಇರತಕ್ಕವರಿಗೆ ಜೇನುತುಪ್ಪ ಅಮೃತ ಸಮಾನ. ಪ್ರತಿ ದಿನ ಎರಡು ಬಾರಿ ಬಿಸಿ ನೀರಿನಲ್ಲಿ ಜೇನುತುಪ್ಪವನ್ನು ಕಲಿಸಿ , ಕುಡಿಯುವುದರಿಂದ ಅಸ್ತಮಾ ತೊಂದರೆ ಉಪಶಮನಗೊಳ್ಳುತ್ತದೆ.

೧೮. ಆರೋಗ್ಯಕ್ಕಗಿ ಶುಂಠಿ

ಶುಂಠಿಯನ್ನು ಪ್ರತಿ ದಿನ ಆಹಾರದಲ್ಲಿ ಬಳಸುವುದರಿಂದ ಜೀರ್ಣಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಅಲ್ಲದೆ, ಅಜೀರ್ಣ, ಗ್ಯಾಸ್‌ಟ್ರಬಲ್‌ನ್ನು ನಿವಾರಿಸುತ್ತದೆ.

೧೯. ಹೊಟ್ಟೆ ನೋವು

ಶುಂಠಿ ರಸಕ್ಕೆ ಜೀರಿಗೆ ಪುಡಿಯನ್ನು ಸೇರಿಸಿ ಪ್ರತಿದಿನ ೨ ರಿಂದ ೩ ಬಾರಿ ಸೇವಿಸಿದರೆ ಹೊಟ್ಟೆ ನೋವು ಕಡಿಮೆಯಾಗುತ್ತದೆ.

೨೦ಕೆಮ್ಮು

ಶುಂಠಿ ರಸಕ್ಕೆ ಚಿಟಿಕೆಯಷ್ಟು ಅಡುಗೆ ಉಪ್ಪನ್ನು ಸೇರಿಸಿ, ದಿನ ೩ ಬಾರಿ, ನಾಲ್ಕೈದು ದಿನ ಸೇವಿಸಿದರೆ ಕೆಮ್ಮುಕಡಿಮೆಯಾಗುತ್ತದೆ.

೨೧ . ದದ್ದು

ಶುಂಠಿರಸ, ತುಳಸಿರಸ ಮತ್ತು ಅರಿಶಿನಪುಡಿಯನ್ನು ಮಿಶ್ರಮಾಡಿ, ಮೈಗೆ ಹಚ್ಚಿ ಕೊಂಡರೆ ದದ್ದುಗಳು ಕಡಿಮೆಯಾಗುತ್ತವೆ.

೨೨. ಕೆಮ್ಮು

ಬಿಸಿನೀರಿಗೆ ಸ್ವಲ್ಪ ನಿಂಬೇಹಣ್ಣಿನ ರಸವನ್ನು ಹಿಂಡಿ ಎರಡು ಟೀ ಚಮಚ ದಷ್ಟು ಜೇನು ತುಪ್ಪವನ್ನು ಅದಕ್ಕೆ ಸೇರಿಸಿ ಪ್ರತಿದಿನ (ಒಂದು ವಾರದ ಕಾಲವಾದರೆ ಸೇವಿಸಬೇಕು ) ಎರಡು ಸಾರಿ ಕುಡಿಯುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.

೨೩. ಕಣ್ಣುರಿ / ಹೊಟ್ಟೆ ನೋವು

ಪ್ರತಿದಿನ ಬೆಳಿಗ್ಗೆ ಉಪಾಹಾರಕ್ಕೆ ಮೊದಲು ಎಂಟು ಹತ್ತು ಬಿಳಿ ದಾಸವಾಳದ ಹೂವನ್ನು ಶುದ್ಧವಾದ ನೀರಿನಲ್ಲಿ ತೊಳೆದು ತಿಂದರೆ ಕಣ್ಣುರಿ, ಹೊಟ್ಟೆನೋವು ಬರುವುದಿಲ್ಲ.

೨೪. ಮುಟ್ಟಿನ ಹೊಟ್ಟೆ ನೋವು

ಮುಟ್ಟಾದಾಗ ಹೊಟ್ಟೆ ನೋವು ಬಂದರೆ ತಂಪಾದ ಪದಾರ್ಥಗಳಾದ ಮೊಸರನ್ನ ಅಥವಾ ಅವಲಕ್ಕಿ ಮೊಸರು ತಿಂದರೆ ಹೊಟ್ಟೆನೋವು ಕಮ್ಮಿಯಾಗುತ್ತದೆ.

೨೫. ಉಷ್ಣದ ಕೆಮ್ಮು

ಉಷ್ಣದ ಕೆಮ್ಮು ಬಂದಾಗ ಹುಳಿ ಇಲ್ಲದ ಮಜ್ಜಿಗೆ ಅನ್ನದ ಜೊತೆಗೆ ಹಸಿ ಈರುಳ್ಳಿಯನ್ನು ತಿಂದರೆ ಕೆಮ್ಮು ಕಡಿಮೆಯಾಗುತ್ತದೆ.

೨೭. ನೆಗಡಿ

ನೆಗಡಿ ಇದ್ದಾಗ ಹುರಿಗಡಲೆಯನ್ನು ತಿಂದು, ಬಿಸಿ ಕಾಫಿ ಕುಡಿದರೆ ನೆಗಡಿಯ ತೊಂದರೆ ಸ್ವಲ್ಪ ಉಪಶಮನ.

೨೮. ಮೊಡವೆ

ಅರಿಶಿಣವನ್ನು ನಿಂಬೇಹಣ್ಣಿನ ರಸದೊಂದಿಗೆ ಅರೆದು ಮುಖಕ್ಕೆ ಹಚ್ಚಿಕೊಳ್ಳುತ್ತಿದ್ದರೆ, ಮೊಡವೆಗಳು ಕಡಿಮೆಯಾಗಲು ಸಹಾಯಕವಾಗುತ್ತದೆ.

೨೯. ತಲೆಕೂದಲಿನ ಆರೋಗ್ಯಕ್ಕೆ

ಕೊಬ್ಬರಿ ಎಣ್ಣೆಗೆ , ಮೆಂತ್ಯೆಯನ್ನು ಹಾಕಿಟ್ಟು ತಲೆಗೂದಲಿಗೆ ಹಚ್ಚುವುದರಿಂದ ಕೂದಲಿನ ಆರೋಗ್ಯ ಹೆಚ್ಚುತ್ತದೆ.

೩೦. ಸಾಮಾನ್ಯ ನಿಶ್ಯಕ್ತಿ

ದಿನ ಬಿಟ್ಟುದಿನ, ಹಾಲಿನ ಜೊತೆಗೆ ಸ್ವಲ್ಪ ಕ್ಯಾರೆಟ್‌ ಜ್ಯೂಸನ್ನು ಸೇರಿಸಿ, ಸೇವಿಸುವುದರಿಂದ, ಶರೀರ, ಮಿದುಳು, ನರಗಳು ಮತ್ತು ಕಣ್ಣಿನ ದೃಷ್ಟಿಗೆ ಶಕ್ತಿ ಉಂಟಾಗುತ್ತದೆ.

೩೧ . ಸಂಧಿವಾತ (ರುಮಾಟಿಸಮ್)

ಜೇನು ತುಪ್ಪದೊಡನೆ, ಬೆಳ್ಳುಳ್ಳಿ ರಸವನ್ನು ಸೇರಿಸಿ ಪ್ರತಿದಿನ ಸೇವಿಸುವುದರಿಮದ ಸಂಧಿವಾತ ಕಡಿಮೆಯಾಗಲು ಸಹಾಯಕವಾಗುತ್ತದೆ.

ಬಿಸಿಮಾಡಿದ ಸ್ವಲ್ಪ ಕೊಬ್ಬರಿ ಎಣ್ಣೆಗೆ, ಬೆಳ್ಳುಳ್ಳಿ ರಸವನ್ನು ಸೇರಿಸಿ, ಸಂಧಿವಾತ ವಿರುವ ಜಾಗದಲ್ಲಿ ತಿಕ್ಕುವುದರಿಂದ ನೋವು ಕಡಿಮೆಯಾಗುತ್ತದೆ.

೩೨. ಕುರು ಮತ್ತು ಮೊಡವೆ

ಕುರು ಮತ್ತು ಮೊಡವೆಗಳಿಗೆ ಕ್ರಮವಾಗಿ ಬೆಳ್ಳುಳ್ಳಿ ರಸವನ್ನು ಹಚ್ಚುವುದರಿಂದ ನಿವಾರಣೆಯಾಗಲು ನೆರವಾಗುತ್ತದೆ.

೩೩. ಅರ್ಧ ತಲೆನೋವು

ಬೆಳ್ಳುಳ್ಳಿಯನ್ನು ಜಜ್ಜಿ ಅರ್ಧ ತಲೆನೋವು ಇರುವ ಜಾಗದಲ್ಲಿ ತಿಕ್ಕುವುದರಿಂದ ನೋವು ಕಡಿಮೆಯಾಗುತ್ತದೆ.

ವಿ.ಸೂ:- ತಲೆನೋವು ಪದೇ ಪದೇ ಬರುತ್ತಿದ್ದರೆ ವೈದ್ಯರಲ್ಲಿ ತೋರಿಸುವುದನ್ನು ಮರೆಯ ಬಾರದು.

೩೪. ಜೀರ್ಣವಾಗಲು

ಸ್ವಲ್ಪಜೀರಿಗೆಯನ್ನು ಚೆನ್ನಾಗಿ ಪುಡಿಮಾಡಿ ಬೆಲ್ಲ ಕಲಸಿದ ನೀರಿಗೆ ಹಾಕಿ ಊಟವಾದ ನಂತರ ಕುಡಿದರೆ ಆಹಾರ ಜೀರ್ಣವಾಗುವುದಲ್ಲದೆ, ಊಸನ್ನು ಹೊರಹಾಕಿ, ಅರುಚಿಯನ್ನು ನಿವಾರಿಸುತ್ತದೆ.

೩೫. ಎದೆ ಹಾಲು ಉತ್ಪತ್ತಿಗೆ

ತಾಯಂದಿರಲ್ಲಿ ಸಾಕಷ್ಟು ಎದೆಹಾಲು ಉತ್ಪತ್ತಿಯಾಗದಿದ್ದರೆ ಜೀರಿಗೆಯನ್ನು ಚೆನ್ನಾಗಿ ಪುಡಿಮಾಡಿ ಸಿಹಿಹಾಲಿಗೆ ಸೇರಿಸಿ ಪ್ರತಿದಿನ ಬೆ ಳಗ್ಗೆ ಮತ್ತು ರಾತ್ರಿ ಸೇವಿಸುತ್ತಿದ್ದರೆ ಹೆಚ್ಚಾಗಿ ಎದೆ ಹಾಲು ಉತ್ಪತ್ತಿಯಾಗಲು ಸಹಾಯ ಮಾಡುತ್ತದೆ.

೩೬. ಹುಳಿ ತೇಗು ಕಡಿಮೆಯಾಗಲು

ಶುಂಠಿ, ಜೀರಿಗೆ ಮತ್ತು ಬೇವಿನಸೊಪ್ಪಿನ ರಸವನ್ನು  ಸಮಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಅರಿದು, ಪ್ರಾತಃಕಾಲ ಸಿಹಿನೀರಿನ ಜೊತೆ ಸ್ವಲ್ಪ ದಿವಸ ಸೇವಿಸಿದರೆ, ಹುಳಿ ತೇಗು ಕಡಿಮೆಯಾಗುತ್ತದೆ.

೩೭. ಮಲಬದ್ಧತೆ ನಿವಾರಣೆಗೆ

ಪ್ರತಿ ದಿನ ರಾತ್ರಿ ಊಟ ಮಾಡಿದನಂತರ ಜೇನುತುಪ್ಪ (೨ ರಿಂದ ೪ ಟೀ ಚಮಚೆಯಷ್ಟು  ಮಾತ್ರ) ದೊಂದಿಗೆ ಕರಿಬೇವನ್ನು ಸೇವಿಸಿದರೆ, ಸಲೀಸಾಗಿ ಮಲವಿಸರ್ಜನೆಯಾಗುತ್ತದೆ.

೩೮. ಕೀಲುನೋವು ನಿವಾರಣೆಗೆ

ಶರೀರದಲ್ಲಿ ಯೂರಿಕ್‌ ಆಮ್ಲ ಹೆಚ್ಚಾಗಿ ಉಂಟಾಗುವ ಕೀಲುನೋವಿಗೆ ಸೌತೆಕಾಯಿ ಹಾಗೂ ಕ್ಯಾರೆಟ್‌ ರಸ ಎರಡನ್ನು ಮಿಶ್ರ ಮಾಡಿ ಕೆಲವು ದಿನ ಸೇವಿಸಿದರೆ, ಕೀಲುನೋವು ಕಡಿಮೆಯಾಗುತ್ತದೆ.

೩೯. ಕಂಠಸ್ವರ ಚೆನ್ನಾಗಿರಲು

ಆಗಿಂದಾಗ್ಗೆ ದಾಳಿಂಬೆ ರಸವನ್ನು ಸೇವಿಸುವುದರಿಂದ ಕಂಠಸ್ವರ ಚೆನ್ನಾಗಿರುತ್ತದೆ.

೪೦. ಮೂತ್ರ ಕೋಶದಲ್ಲಿನ ಕಲ್ಲು ಕರಗಲು

ಮೂಲಂಗಿ ರಸವನ್ನು ಊಟವಾದ ನಂತರ ಪ್ರತಿ ದಿನ ಸೇವಿಸುತ್ತಿದದರೆ, ಮೂತ್ರ ಕೋಶದಲ್ಲಿನ ಕಲ್ಲು ಕರಗಲು ಸಹಾಯ ಮಾಡುತ್ತದೆ.

೪೧. ಚೆನ್ನಾಗಿ ನಿದ್ರೆ ಬರಲು

  • ಪ್ರತಿ ದಿನ ಬೆಳಿಗ್ಗೆ ಉಪಾಹಾರವನ್ನು ಸೇವಿಸಿದ ನಂತರ, ರಾತ್ರಿ ಊಟ ಮಾಡಿದ ನಂತರ ನಿಂಬೆಹಣ್ಣಿನ ಶರಬತ್ತನ್ನು ಸೇವಿಸುವುದರಿಂದ ರಾತ್ರಿ ಹೊತ್ತು ಚೆನ್ನಾಗಿ ನಿದ್ರೆ ಬರುತ್ತದೆ. ಅಥವಾ,
  • ರಾತ್ರಿ ಊಟ ಮಾಡಿದನಂತರ ಗಸಗಸೆ ಪಾಯಸವನ್ನು ಕುಡಿಯುವುದರಿಂದ ನಿದ್ರೆ ಚೆನ್ನಾಗಿ ಬರುತ್ತದೆ. ಅಥವಾ,
  • ಬಕೆಟ್‌ನಲ್ಲಿ ಬಿಸಿನೀರು ಹಾಕಿ ೧೫ ನಿಮಿಷಗಳ ಕಾಲ ಆ ನೀರಿನಲ್ಲಿ ಪಾದಗಳನ್ನು ಇಟ್ಟುಕೊಂಡು, ಅನಂತರ ಟವೆಲ್‌ನಲ್ಲಿ ಒರೆಸಿಕೊಂಡು, ವಿಶ್ರಾಂತಿ ಪಡೆದರೆ ಚೆನ್ನಾಗಿ ನಿದ್ರೆ ಬರುತ್ತದೆ.

೪೨. ಮಕ್ಕಳಲ್ಲಿ ಅತಿಸಾರ ಭೇದಿಯನ್ನು ನಿಯಂತ್ರಿಸಲು

ಬೇಳೆಕಟ್ಟು, ಅನ್ನದ ಗಂಜಿ, ಸಿಹಿ ಗಂಜಿ, ಮಜ್ಜಿಗೆ, ಲಸ್ಸಿ (ಸಿಹಿ ಮಜ್ಜಿಗೆ) ಮೊದಲಾದ ಮನೆಯಲ್ಲೇ ದೊರೆಯಬಹುದಾದ ಪಾನೀಯಗಳಲ್ಲಿ ಯಾವುದಾದರು ಒಂದನ್ನು ಮಕ್ಕಳಲ್ಲಿ ಭೇದಿಯಾಗುತ್ತಿದ್ದರೆ, ಪ್ರತಿ ಅರ್ಧ ಗಂಟೆ ಗೊಮ್ಮೆ ಕೊಡುತ್ತಿದ್ದರೆ, ಮಕ್ಕಳಲ್ಲಿ ಸುಸ್ತು ಉಂಟಾಗುವುದಿಲ್ಲ, ನಿಶ್ಚಕ್ತಿ ಉಂಟಾಗುವುದಿಲ್ಲ. ಅಲ್ಲದೆ, ಭೇದಿಯು ನಿಯಂತ್ರಣಕ್ಕೆ ಬರುತ್ತದೆ.

೪೩. ಸಾಧಾರಣವಾದ ಬಾಯಿಹುಣ್ಣು ನಿವಾರಣೆಗೆ

ಹುಳು ಮಜ್ಜಿಗೆಯನ್ನು ಪ್ರತಿದಿನ ನಾಲ್ಕೈದು ಬಾರಿ ಕನಿಷ್ಠ ೭ ದಿನಗಳ ಕಾಲ, ಬಾಯಿ ಮುಕ್ಕಳಿಸಿದರೆ, ಸಾಧಾರಣವಾದ ಬಾಯಿಹುಣ್ಣು ನಿವಾರಣೆಯಾಗುತ್ತದೆ.

೪೪. ಮೂತ್ರ ಪಿಂಡದಲ್ಲಿ ಕಲ್ಲು: ವಿಟಮಿನ್ ಬಿ೬ರ ಪಾತ್ರ

ಮೂತ್ರಪಿಂಡದಲ್ಲಿ ಕಲ್ಲು ರೂಪಗೊಳ್ಳುವುದನ್ನು ತಡೆಗಟ್ಟಲು, ಆಕ್ಸಲಿಕ್‌ ಆಸೀಡ್‌ ಪ್ರಮಾಣವನ್ನು ಕಡಿಮೆ ಮಾಡಬೇಕು. ಅಲ್ಲದೆ, ಆಕ್ಸಲಿಕ್‌ ಆಸಿಡ್‌ ಇರುವ ಟೀ, ಚಾಕೋಲೆಟ್‌, ಬೀಟ್‌ರೂಟ್‌, ಟೊಮ್ಯಾಟೊ ಮೊದಲಾದುವನ್ನು ಸೇವಿಸಬಾರದು. ವಿಟಮಿನ್‌ ಬಿ6 ಇರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ವೈದ್ಯರ ಸಲಹೆಯ ಮೇರೆಗೆ ವಿಟಮಿನ್‌ ಬಿ6 ರ ಮಾತ್ರೆಗಳನ್ನು ಸೇವಿಸಬಹುದು.

೪೫. ಚಟುವಟಿಕೆ ಮತ್ತು ಮೂತ್ರ ಪಿಂಡದಲ್ಲಿ ಕಲ್ಲು

ಚಟುವಟಿಕೆಯಿಂದ ಇರದ ವ್ಯಕ್ತಿಗಳಲ್ಲಿ ರಕ್ತದಲ್ಲಿ ಹೆಚ್ಚಾಗಿ ಕ್ಯಾಲ್ಸಿಯಂ ಸಂಗ್ರಹಕೊಳ್ಳುತ್ತದೆಂದು ಡಾ|| ನೀಬರ್ಗ್ ತಿಳಿಸಿರುತ್ತಾನೆ. ಚಟುವಟಿಕೆಯಿಂದಾಗಿ, ಕ್ಯಾಲ್ಸಿಯಂ (ಸುಣ್ಣದಂಶ) ಮೂಳೆಗಳಿಗೆ ಹಿಂತಿರುಗಲು ಸಹಾಯ ಮಾಡುತ್ತದೆ. ನಿಮ್ಮಲ್ಲಿ ಕ್ಯಾಲ್ಸಿಯಂ ಕಲ್ಲುಗಳು ರೂಪಗೊಂಡಿದ್ದರೆ, ಪ್ರತಿ ದಿನ ಕುಳಿತಲ್ಲೇ ಕೂಡದೆ ವಾಕ್‌ ಮಾಡಿ, ಸ್ವಲ್ಪ ಹೊತ್ತು ಲಘು ವ್ಯಾಯಾಮವನ್ನು ಮಾಡಿರಿ. ದ್ವಿಚಕ್ರ ವಾಹನದಲ್ಲಿ ಓಡಾಡಿರಿ. ಚಟುವಟಿಕೆ ಕೂಡ ಶರೀರಕ್ಕೆ ಸೂಕ್ತವಾದ ಚಿಕಿತ್ಸೆಯಾಗಿರುತ್ತದೆ.

೪೬. ಸಾಧಾರಣವಾದ ಜ್ವರ ನಿವಾರಣೆಗೆ

ಸಾಧಾರಣವಾದ ಜ್ವರ ಕಡಿಮೆಯಾಗಲು, ನಿಂಬೇಹಣ್ಣಿನ ರಸವನ್ನು ಸಿಹಿ ನೀರಿನಲ್ಲಿ ಸಮಪ್ರಮಾಣದಲ್ಲಿ ಸೇರಿಸಿ, ಪ್ರತಿ ದಿನ ೩ ಬಾರಿ ನಾಲ್ಕೈದು ದಿನ ಸೇವಿಸಿದರೆ ಸಾಧಾರಣವಾದ ಜ್ವರ ನಿವಾರಣೆಯಾಗುತ್ತದೆ.

೪೭. ಮೂತ್ರ ಪಿಂಡದಲ್ಲಿ ಕಲ್ಲು ಕರಗಲು

  • ಬಾಳೇದಿಂಡಿನ ರಸವನ್ನು ಪ್ರತಿ ದಿನ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಒಂದು ಲೋಟದಷ್ಟು ಒಂದು ತಿಂಗಳ ಕಾಲ ಸೇವಿಸಿರಿ.
  • ಪ್ರತಿ ದಿನ ೩ ರಿಂದ ೪ ಲೀಟರ್ಗೂ ಹೆಚ್ಚಾಗಿ ಶುದ್ಧವಾದ ನೀರನ್ನು ಕುಡಿಯಿರಿ. ಬೇಸಿಗೆ ಕಾಲದಲ್ಲಿ ಯತೇಚ್ಛವಾಗಿ ನೀರನ್ನು ಕುಡಿಯಿರಿ.

೪೮. ಮೂತ್ರಪಿಂಡದಲ್ಲಿ ಕಲ್ಲುಗಳು ರೂಪಗೊಳ್ಳುವುದನ್ನು ತಡೆಗಟ್ಟಲು

ನಿಮ್ಮಲ್ಲಿ ಯಾವ ವಿಧವಾದ ಕಲ್ಲುರೂಪಗೊಂಡಿದ್ದರೂ, ವಿಟಮಿನ್‌ ‘ಎ’ ಸೇವನೆ ಅಗತ್ಯ. ಏಕೆಂದರೆ, ಇದರಿಂದ ಮೂತ್ರದ್ವಾರದ ಆಕಾರ ಚೆನ್ನಾಗಿರಲು ಸಹಾಯಕವಾಗುತ್ತದೆ. ಅಲ್ಲದೆ, ವಿಟಮಿನ್‌ ‘ಎ’ ಯಿಂದ ಭವಿಷ್ಯತ್ತಿನಲ್ಲಿ ಕಲ್ಲುಗಳು ರೂಪಗೊಳ್ಳುವುದು ತಡೆಗಟ್ಟಲ್ಪಡುತ್ತದೆ. ಆದುದರಿಂದ, ವಿಟಮಿನ್‌ ‘ಎ’ ಹೆಚ್ಚಾಗಿರುವ ಪರಂಗಿ ಹಣ್ಣು, ಮಾವಿನ ಹಣ್ಣು, ಕ್ಯಾರೆಟ್ಟನ್ನು ಸೇವಿಸುತ್ತಿರಬೇಕು. ಆದರೆ, ವಿಟಮಿನ್‌ ಎ ಮಾತ್ರೆಗಳನ್ನು ವೈದ್ಯರ ಸಲಹೆ ಪಡೆಯದೆ ಸೇವಿಸಬಾರದು.

೪೯. ಬೆನ್ನು ನೋವು ನಿವಾರಣೆಗೆ ಐಸ್ ಮಸಾಜ್

  • ಬೆನ್ನಿನ ಯಾವ ಭಾಗದಲ್ಲಿ ನೋವಿದೆಯೋ, ಆ ಭಾಗದಲ್ಲಿ ಐಸ್‌ನಿಂದ ೭ ರಿಂದ ೮ ನಿಮಿಷಗಳ ಮಸಾಜ್‌ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ. ಈ ಐಸ್‌ ಮಸಾಜ್‌ನ್ನು ೨ ರಿಂದ ೩ ದಿನಗಳ ಕಾಲ ಮಾಡಬೇಕು.

ವಿ.ಸೂ: ಮೂಳೆ ಮುರಿದಿರುವ ಭಾಗದಲ್ಲಿ ಯಾವುದೇ ಕಾರಣಕ್ಕೂ ಮಸಾಜ್ ಮಾಡಬೇಡಿರಿ. ರೋಗಿಗೆ ತೊಂದರೆಯಾಗುತ್ತದೆ.

೫೦. ಬಿಸಿ ಕಾಪುಟ ಮತ್ತು ಐಸ್ ಮಸಾಜ್

ಬೆನ್ನಿನ ಯಾವ ಭಾಗದಲ್ಲಿ ನೋವಿದೆಯೋ ಆ ಭಾಗದಲ್ಲಿ ಬಿಸಿ ಕಾಪುಟ ಅಥವಾ ಉಪ್ಪಿನ ಕಾಪುಟವನ್ನು ಕೊಟ್ಟನಂತರ, ಐಸ್‌ನಿಂದ ಮಸಾಜ್‌ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ.

೫೧. ಬಿಕ್ಕಳಿಕೆ ನಿವಾರಣೆಗೆ

ದೀರ್ಘವಾದ ಉಸಿರನ್ನು ಎಳೆದುಕೊಂಡು, ಎಷ್ಟು ಹೊತ್ತು ಸಾಧ್ಯವೋ ಅಷ್ಟು ಹೊತ್ತು ಉಸಿರನ್ನು ಹಾಗೇ ಇರಿಸಿಕೊಳ್ಳಲು ಪ್ರಯತ್ನಿಸಿರಿ. ತಣ್ಣೀರನ್ನು ಕುಡಿಯಿರಿ ಅಥವಾ ತಣ್ಣೀರಿನಿಂದ ಕೆಲವು ನಿಮಿಷಗಳ ಕಾಲ ಬಾಯಿ ಮುಕ್ಕಳಿಸಿರಿ.

೫೨. ವಮನವನ್ನು ತಡೆಗಟ್ಟಿಕೊಳ್ಳಲು

ಲವಂಗ ಅಥವಾ ಏಲಕ್ಕಿಯನ್ನು ಸ್ವಲ್ಪ ಹೊತ್ತು ಚೀಪಿರಿ. ಬಸ್‌ ಅಥವಾ ಕಾರಿನಲ್ಲಿ ಪ್ರಯಾಣಿಸುವಾಗ ವಮನ ಪ್ರವೃತ್ತಿ ಉಂಟಾದರೆ, ಅರ್ಧ ಹೋಳು ನಿಂಬೆಹಣ್ಣಿಗೆ ಸ್ವಲ್ಪ ಅಡಿಗೆ ಉಪ್ಪನ್ನು ಹಾಕಿಕೊಂಡು ನೆಕ್ಕಿರಿ.

೫೩. ಕರುಳು ನುಳಿತ ಅಥವಾ ಹೊಟ್ಟೆನೋವು ನಿವಾರಣೆಗೆ

ತಾಜಾ ಈರುಳ್ಳಿ ಜೊತೆಗೆ ಸ್ವಲ್ಪ ಅಡುಗೆ ಉಪ್ಪನ್ನು ಸೇರಿಸಿ ತಿಂದರೆ ಕರುಳಿನ ನುಲಿತ ಅಥವಾ ಹೊಟ್ಟೆನೋವು ಕಡಿಮೆಯಾಗುತ್ತದೆ.

೫೪. ಪಾದಗಳ ಬಿರುಕು ನಿವಾರಣೆಗೆ

ಒಂದು ಟೀ ಚಮಚ ಕ್ಯಾಸ್ಟರ್ ಆಯಿಲ್‌ಗೆ, ಒಂದು ಟೀ ಚಮಚೆಯಷ್ಟು ಅರಿಶಿನದ ಪುಡಿಯನ್ನು ಮಿಶ್ರಮಾಡಿ, ಪಾದದ ಬಿರುಕಿನ ಜಾಗದಲ್ಲಿ ಹಚ್ಚಿ, ಅರ್ಧ ಗಂಟೆಯ ನಂತರ ನೀರಿನಿಂದ ತೊಳೆಯಿರಿ. ಇದನ್ನು ಬೆಳಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಕೆಲವು ದಿನಗಳ ಕಾಲ ಮಾಡಬೇಕಲು.

೫೬. ಬೇಸಿಗೆ ಕಾಲದಲ್ಲಿ ಉಂಟಾಗುವ ಮೈತುರಿಕೆ ಅಥವಾ ನವೆಯ ನಿವಾರಣೆಗೆ

ಬಿಸಿಲಿನ ಬೇಗೆಯಿಂದ ತುರಿಕೆ ಅಥವಾ ನವೆಯಿದ್ದರೆ, ಇಡೀ ಶರೀರವನ್ನು ಮೊಸರಿನಿಂದ ಉಜ್ಜಿ ಇಪ್ಪತ್ತು ನಿಮಿಷಗಳ ನಂತರ ಶುದ್ಧವಾದ ನೀರಿನಿಂದ ತೊಳೆದುಕೊಳ್ಳಿರಿ. ಇದನ್ನು ಕೆಲವು ದಿನಗಳ ಕಾಲ ಪುನರಾವರ್ತನೆ ಮಾಡಬೇಕು.

೫೬. ಸ್ಥಳೀಯ ಉರಿಯೂತ, ಜ್ವರ ಮತ್ತು ಚರ್ಮದ ತೊಂದರೆಗಳ ನಿವಾರಣೆಗೆ

  • ಶ್ರೀಗಂಧವನ್ನು ನೀರಿನೊಂದಿಗೆ ಅರಿದು (ತೇಯ್ದು) ಮೈಯಲ್ಲಿ ಉರಿಯೂತವಿರುವ ಜಾಗಕ್ಕೆ, ಕೆಲವು ದಿವಸ ಹಚ್ಚುತ್ತಾ ಬಂದರೆ ಉರಿಯೂತ ಕಡಿಮೆಯಾಗುತ್ತದೆ.
  • ಸಾಧಾರಣ ಜ್ವರವಿದ್ದಾಗ ಶ್ರೀಗಂಧವನ್ನು ನೀರಿನೊಂದಿಗೆ ಅರೆದು (ತೇಯ್ದು) ಹಣೆಗೆ ಹಚ್ಚಿದರೆ, ಜ್ವರ ಕಡಿಮೆಯಾಗಲು ಸಹಾಯಕವಾಗುತ್ತದೆ.
  • ಮೈ ಚರ್ಮದಲ್ಲಿ (ನವೆ-ತುರಿಕೆ) ತೊಂದರೆ ಇರುವ ಜಾಗದಲ್ಲಿ ಶ್ರೀಗಂಧವನ್ನು ನೀರಿನೊಂದಿಗೆ ಅರೆದು, ಹಚ್ಚುತ್ತಾ ಬಂದರೆ ತೊಂದರೆ ಕಡಿಮೆಯಾಗುತ್ತದೆ.

೫೭. ಅರ್ಧ ತಲೆನೋವು ನಿವಾರಣೆಗೆ ಸಬ್ಬಸಿಗೆ ಸೊಪ್ಪಿನ ಜ್ಯೂಸ್

ಅರ್ಧ ತಲೆನೋವು ಇರತಕ್ಕವರು, ಬೆಳಗ್ಗೆ ಉಪಾಹಾರದ ನಂತರ, ರಾತ್ರಿ ಊಟ ಮಾಡಿದ ನಂತರ, ಸಬ್ಬಸಿಗೆ ಸೊಪ್ಪಿನ ಜ್ಯೂಸ್‌ನ್ನು ಪ್ರತಿ ದಿನ ೨ ಲೋಟದಷ್ಟು ಕುಡಿಯುವುದರಿಂದ ನಿವಾರಣೆಯಾಗುತ್ತದೆ (ಜ್ಯೂಸನ್ನು ಕೆಲವು ದಿನಗಳು ಕುಡಿಯಬೇಕು).

೫೮. ಲೈಂಗಿಕ ನಿಶ್ಚಕ್ತಿ ಮೂತ್ರಪಿಂಡದ ಕಲ್ಲುಗಳ ನಿವಾರಣೆಗೆ, ಮೂತ್ರಪಿಂಡ, ಲಿವರ್ ಮತ್ತು ಪ್ರಾಸ್ಟೇಟ್ ತೊಂದರೆಯ ನಿವಾರಣೆಗೆ

ಬೀಟ್‌ರೂಟ್‌ ರಸದ ಜೊತೆಗೆ, ಕ್ಯಾರೆಟ್‌ ಮತ್ತು ಸೌತೆಕಾಯಿ ರಸವನ್ನು ಮಿಶ್ರ ಮಾಡಿ, ಬೆಳಗ್ಗೆ ಟಿಫನ್‌ನಂತರ, ರಾತ್ರಿ ಭೋಜನದ ನಂತರ ಒಂದೊಂದು ಲೋಟದಷ್ಟು ಕುಡಿಯುವುದರಿಂದ ಲೈಂಗಿಕ ನಿಶ್ಶಕ್ತಿ ನಿವಾರಣೆಯಾಗುತ್ತದೆ. ಅಲ್ಲದೆ, ಮೂತ್ರ ಪಿಂಡದ ಕಲ್ಲು ಕರಗಲು ಸಹಾಯ ಮಾಡುತ್ತದೆ. ಮೂತ್ರಪಿಂಡ, ಲಿವರ್ ಮತ್ತು ಪ್ರಾಸ್ಟೇಟ್‌ ತೊಂದರೆಗಳ ನಿವಾರಣೆಗೂ ಸಹಾಯ ಮಾಡುತ್ತದೆ.

೫೯. ಬೇಗನೆ ವಯಸ್ಸಾಗುವುದನ್ನು ತಡೆಗಟ್ಟಲು ಪರಂಗಿ ಹಣ್ಣಿನ ಜ್ಯೂಸ್

ಅನೇಕ ತಜ್ಞರ ಪ್ರಕಾರ ಪರಂಗಿ ಹಣ್ಣಿನಲ್ಲಿ ಪ್ರೊಟಿಯೋಲಿಟಿಕಂ ಎಂಜೈಮ್‌ಗಳು ಯತೇಚ್ಛವಾಗಿರುವುದರಿಂದ, ಪಾಪೈನ್‌ ಎಂಬ ಮುಖ್ಯವಾದ ಎಂಜೈಮ್‌ ಇರುವುದರಿಂದ ಆಹಾರ ಜೀರ್ಣವಾಗಲು ಸಹಾಯ ಮಾಡುತ್ತದೆ. ಪರಂಗಿ ಹಣ್ಣಿನಲ್ಲಿ ವಿಟಮಿನ್‌ ಎ ಮತ್ತು ಸಿ ಯತೇಚ್ಛವಾಗಿದೆ. ಪ್ರತಿ ದಿನ ಪರಂಗಿ ಹಣ್ಣಿನ ಹೋಳನ್ನಾಗಲಿ ಅಥವಾ ಪರಂಗಿ ಹಣ್ಣಿನ ಜ್ಯೂಸನ್ನಾಗಲಿ ಕುಡಿದರೆ, ಬೇಗನೆ ವಯಸ್ಸಾಗುವುದನ್ನು ತಡೆಗಟ್ಟುತ್ತದೆಂದು, ಒಳ್ಳೆಯ ಆರೋಗ್ಯ ಉಂಟಾಗಲು ಸಹಾಯ ಮಾಡುತ್ತದೆಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

೬೦. ಕೀಲುನೋವು ಕಡಿಮೆಯಾಗಲು

ಕೀಲುನೋವು ಇರತಕ್ಕವರು ನಿಂಬೆಹಣ್ಣಿನ ರಸಕ್ಕೆ ಸ್ವಲ್ಪ ಹರಳೆಣ್ಣೆಯನ್ನು ಮಿಶ್ರಮಾಡಿ, ನೋವು ಇರುವ ಜಾಗದಲ್ಲಿ ತಿಕ್ಕಿದರೆ, ನೋವು ಕಡಿಮೆಯಾಗುತ್ತದೆ.

೬೧. ಲೈಂಗಿಕ ಸಾಮರ್ಥ್ಯದ ವೃದ್ಧಿಗೆ

ಕೆಲವು ಖರ್ಜೂರದ ಹಣ್ಣುಗಳನ್ನು ಒಂದು ರಾತ್ರಿ ಮೇಕೆ ಹಾಲಿನಲ್ಲಿ ನೆನಸಿಟ್ಟು ಮಾರನೆಯ ದಿನ ಬೆಳಿಗ್ಗೆ ಆ ಖರ್ಜೂರದ ಹಣ್ಣುಗಳನ್ನು ಮೆತ್ತಗೆ ಅರೆದು, ಅದೇ ಹಾಲಿನಲ್ಲಿ ಕಲೆಸಿ. ಪ್ರತಿದಿನ ಸೇವಿಸುತ್ತಿದ್ದರೆ ದೇಹಕ್ಕೆ ಅಗತ್ಯವಾದ ಕಬ್ಬಿಣ, ಕ್ಯಾಲ್ಸಿಯಂ (ಸುಣ್ಣದಂಶ), ಫಾಸ್ಟರಸ್‌ ಲಭ್ಯವಾಗುತ್ತದೆ, ಆರೋಗ್ಯವು ಸುಧಾರಿಸುತ್ತದೆ. ಲೈಂಗಿಕ ಅಥವಾ ಕಾಮ ಸಾಮರ್ಥ್ಯವು ವೃದ್ಧಿಗೊಳ್ಳುತ್ತದೆ.

೬೨. ಹೈಪರ್ ಅಸಿಡಿಟಿ ನಿವಾರಣೆಗೆ

ಹೈಪರ್ ಆಸಿಡಿಟಿಯಿಂದ ತೊಂದರೆಪಡುತ್ತಿರುವವರು, ಬಾಳೆಹಣ್ಣನ್ನು ಹಾಲಿನಲ್ಲಿ ಕಲೆಸಿ ಪ್ರತಿ ದಿನ ೨ ರಿಂದ ೩ ಬಾರಿ ಸೇವಿಸಿದರೆ ಹೈಪರ್ ಆಸಿಡಿಟಿ ಕಡಿಮೆಯಾಗುತ್ತದೆ.

೬೩. ನೆಗಡಿ ಶೀತದ ನಿವಾರಣೆಗೆ

ಬಿಲ್ವಪತ್ರೆ (ಎಲೆಗಳ ರಸ) ರಸವನ್ನು ಜೇನುತುಪ್ಪದೊಡನೆ ಸೇರಿಸಿ ಪ್ರತಿದಿನ ೨-೩ ಸಾರಿ ಒಂದು ವಾರದ ಕಾಲ ಸೇವಿಸಿ, ವಿಶ್ರಾಂತಿ ಪಡೆದರೆ ನೆಗಡಿ ಶೀತ ನಿವಾರಣೆಯಾಗುತ್ತದೆ.

೬೪. ಕೆಮ್ಮುಆಯಾಸ ನಿವಾರಣೆಗೆ

ಕೆಮ್ಮು-ಆಯಾಸ ಇರತಕ್ಕವರು, ಕಿತ್ತಳೆ ಹಣ್ಣಿನ ರಸಕ್ಕೆ ಒಂದು ಚಿಟಿಕೆ ಅಡುಗೆ ಉಪ್ಪು ಎರಡು ಟೀ ಚಮಚೆಯಷ್ಟು ಜೇನುತುಪ್ಪವನ್ನು ಮಿಶ್ರಮಾಡಿ ಪ್ರತಿ ದಿನ ೨ ರಿಂದ ೩ ಸಾರಿ ಒಂದು ವಾರದ ಕಾಲ ಸೇವಿಸದರೆ, ಸಾಧಾರಣವಾದ ಕೆಮ್ಮು ಹಾಗೂ ಆಯಾಸ ನಿವಾರಣೆಯಾಗುತ್ತದೆ.

೬೫. ಮಾನಸಿಕ ಪ್ರಶಾಂತತೆಗೆ

ಮಾವಿನ ಹಣ್ಣಿನ ರಸದ ಜೊತೆಗೆ ಸ್ವಲ್ಪ ಜೇನುತುಪ್ಪ ಸ್ವಲ್ಪ ಹಾಲನ್ನು ಮಿಶ್ರಮಾಡಿ, ಪ್ರತಿದಿನ ಸೇವಿಸುತ್ತಿದ್ದರೆ ಮಾನಸಿಕ ಪ್ರಶಾಂತತೆ ಉಂಟಾಗುವುದಲ್ಲದೆ, ನಿಶ್ಶಕ್ತಿಯೂ ನಿವಾರಣೆಯಾಗುತ್ತದೆ.

೬೬. ಮೂತ್ರಪಿಂಡದಲ್ಲಿ ಕಲ್ಲುಗಳ ನಿವಾರಣೆಗೆ

ಮೂತ್ರಪಿಂಡದಲ್ಲಿ ಕಲ್ಲು(ಗಳು) ಇರುವವರು ಒಂದು ಲೋಟ ಮಾವಿನ ಹಣ್ಣಿನ ರಸಕ್ಕೆ ಅರ್ಧ ಲೋಟದಷ್ಟು ಕ್ಯಾರೆಟ್‌ ರಸವನ್ನು ಮಿಶ್ರಮಾಡಿ ಪ್ರತಿ ದಿನ ೨ ರಿಂದ ೩ ಸಾರಿ ಮೂರು ತಿಂಗಳ ಕಾಲ ಸೇವಿಸಿದರೆ ಮೂತ್ರ ಪಿಂಡದಲ್ಲಿರುವ ಸಣ್ಣಗಾತ್ರದ ಕಲ್ಲುಗಳು ಕರಗಲು ಸಹಾಯಕವಾಗುತ್ತದೆ.

೬೭. ಪಿತ್ತ ಗಂದೆಗಳ ನಿವಾರಣೆಗಾಗಿ

ಪಿತ್ತದಿಂದ ಗಂದೆಗಳಾಗಿ ಮೈ ಕಡಿತವಿದ್ದರೆ ಹಾಗಲಕಾಯಿ ಎಲೆಗಳನ್ನು ಮೊಸರಿನಲ್ಲಿ ಅರೆದು, ಅದನ್ನು ಇಡೀ ಶರೀರಕ್ಕೆ ಲೇಪಿಸಿಕೊಂಡು ಒಂದು ಗಂಟೆಯ ನಂತರ ಸ್ನಾನವನ್ನು ಮಾಡಿದರೆ ಪಿತ್ತದ ಗಂದೆಗಳು ನಿವಾರಣೆಯಾಗುತ್ತದೆ.

೬೮. ಗಾಯದಲ್ಲಿ ಕೀವು ಉಂಟಾಗುವುದನ್ನು ತಡೆಗಟ್ಟಲು

ಸ್ವಲ್ಪ ವೀಳೆಯದೆಲೆ ರಸವನ್ನು ಗಾಯದ ಮೇಲೆ ಲೇಪಿಸುವುದರಿಂದ, ಗಾಯದಲ್ಲಿ ಕೀವು ಉಂಟಾಗುವುದನ್ನು ತಡೆಗಟ್ಟಿಕೊಳ್ಳಬಹುದು.

೬೯. ಬಾಯಿಯ ದುರ್ವಾಸನೆ ಕಡಿಮೆಯಾಗಲು

೧. ಊಟ ಮಾಡಿದ ನಂತರ ಲವಂಗವನ್ನು ಚಪ್ಪರಿಸುತ್ತಿದ್ದರೆ, ಬಾಯಿ ವಾಸನೆ ಕಡಿಮೆಯಾಗುತ್ತದೆ. ಅಥವಾ,

೨. ಅಡುಗೆ ಉಪ್ಪು ಮತ್ತು ಲವಂಗ ಎರಡನ್ನು ಚಪ್ಪರಿಸುತ್ತಿದ್ದರೆ ಆಯಾಸ ಕಡಿಮೆಯಾಗುವುದಲ್ಲದೆ, ಬಾಯಿಯ ವಾಸನೆಯು ಕಡಿಮೆಯಾಗುತ್ತದೆ .

೭೦. ನರಗಳ ನಿಶ್ಶಕ್ತಿ ನಿವಾರಣೆಗೆ

ದ್ರಾಕ್ಷಿರಸಕ್ಕೆ, ಜೇನುತುಪ್ಪ ಸ್ವಲ್ಪ ಮಿಶ್ರ ಮಾಡಿ ಸೇವಿಸುತ್ತಿದ್ದರೆ, ನರಗಳ ಬಲಹೀನತೆ ಕಡಿಮೆಯಾಗುತ್ತದೆ.

೭೧. ತಲೆನೋವು ಅಥವಾ ಮೂಗು ಕಟ್ಟಿರುವುದು ನಿವಾರಣೆಯಾಗಲು

ಬಿಸಿನೀರಿನ ಬಕೆಟ್‌ನಲ್ಲಿ ನಿಮ್ಮ ಪಾದಗಳನ್ನು ಹತ್ತು ನಿಮಿಷಗಳ ಕಾಲ ಇಟ್ಟುಕೊಳ್ಳುವುದರಿಂದ ನಿಮ್ಮ ತಲೆ ನೋವು ಮತ್ತು ಮೂಗು ಕಟ್ಟಿರುವುದು ನಿವಾರಣೆಯಾಗಲು ಸಹಾಯಕವಾಗುತ್ತದೆ.

೭೨. ಉದ್ವೇಗ (ಟೆನ್ಷನ್) ತಲೆನೋವು ನಿವಾರಣೆಗೆ ವ್ಯಾಯಾಮ

ನಿಮ್ಲಲ್ಲಿ ತಲೆನೋವು ತೀವ್ರವಾಗಿಲ್ಲದಿದ್ದರೆ, ಉದ್ವೇಗದ ತಲೆನೋವು ನಿವಾರಣೆಗೆ ೧೫ ರಿಂದ ೨೦ ನಿಮಿಷಗಳ ಕಾಲ ಪ್ರಶಾಂತವಾದ ಜಾಗದಲ್ಲಿ ಲಘು ವ್ಯಾಯಾಮ ಮಾಡಿ, ವಿಶ್ರಾಂತಿಯನ್ನು ಪಡೆಯುವುದರಿಂದ ನೋವು ನಿವಾರಣೆಯಾಗುತ್ತದೆ. ಆದರೆ, ಅರ್ಧ ತಲೆನೋವು (ಮೈಗ್ರೇನ್‌) ಇದ್ದಾಗ ವ್ಯಾಯಾಮವನ್ನು ಮಾಡದಿರುವುದು ಉತ್ತಮ. ಬೆನ್ನ ಮೇಲೆ ಮಲಗಿ ವಿಶ್ರಾಂತಿಯನ್ನು ಪಡೆಯುವುದರಿಂದ, ತಲೆನೋವು ಕಡಿಮೆಯಾಗಲು ಸಹಾಯಕವಾಗುತ್ತದೆ.

೭೩. ಮೂಲವ್ಯಾಧಿ ಕಡಿಮೆಯಾಗಲು

ಬೇವಿನ ಸೊಪ್ಪನ್ನು ಸ್ವಲ್ಪ ಅರಿದು, ಗುದದ್ವಾರದಲ್ಲಿ ಕಟ್ಟುತ್ತಿದ್ದರೆ , ನೋವು ಕಡಿಮೆಯಾಗುತ್ತದೆ.

೭೪. ಕೀಲುರಿತದ ನಿವಾರಣೆಗೆ

ಬೇವಿನ ಸೊಪ್ಪಿನ ರಸಕ್ಕೆ,  ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಮಿಶ್ರ ಮಾಡಿ, ಕೀಲುರಿತದ ಜಾಗದಲ್ಲಿ ಉಜ್ಜಿದರೆ, ನೋವು ಅಥವಾ ಉರಿತ ಕಮ್ಮಿಯಾಗುತ್ತದೆ.

೭೫. ಅಜೀರ್ಣದ ನಿವಾರಣೆಗೆ

ಬೆಲ್ಲದೊಂದಿಗೆ, ಶುಂಠಿ ಚೂರನ್ನು ಸೇರಿಸಿ, ಊಟಕ್ಕೆ ಮೊದಲು ತಿಂದರೆ, ಅಜೀರ್ಣ ಉಂಟಾಗುವುದಿಲ್ಲ.

೭೬. ಕೀಲುನೋವು ನಿವಾರಣೆಗೆ

ಹರಳೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ, ಕೀಲುನೋವು ಇರುವ ಜಾಗದಲ್ಲಿ ಉಜ್ಜಿದರೆ, ನೋವು ಕಡಿಮೆಯಾಗುತ್ತದೆ.

೭೭. ತಲೆನೋವು ನಿವಾರಣೆಗೆ

ನಿಂಬೆಹಣ್ಣಿನ ರಸಕ್ಕೆ, ಸ್ವಲ್ಪ ಅಡುಗೆ ಉಪ್ಪನ್ನು ಸೇರಿಸಿ ನೋವು ಇರುವ ಜಾಗದಲ್ಲಿ ತಿಕ್ಕಿದರೆ, ತಲೆನೋವು  ಕಡಿಮೆಯಾಗುತ್ತದೆ. ಅಥವಾ ನಿಂಬೆಹಣ್ಣಿನ ಶರಬತ್ತನ್ನು ಕುಡಿದು, ನಿಂಬೇಹಣ್ಣಿನ ಸಿಪ್ಪೆಯಿಂದ ಹಣೆಯನ್ನು ಉಜ್ಜಿದರೆ, ತಲೆನೋವು ನಿವಾರಣೆಯಾಗುತ್ತದೆ. ಅಥವಾ.  ತಲೆನೋವಿದ್ದಾಗ, ತುಳಸಿ ಎಲೆಯನ್ನು ತೊಳೆದು ಚೆನ್ನಾಗಿ ಅಗಿದು ಅದರ ರಸವನ್ನು  ನುಂಗಿ, ವಿಶ್ರಾಂತಿಯನ್ನು ಪಡೆದರೆ ನೋವು ಹೊರಟುಹೋಗುತ್ತದೆ.

೭೮. ಮೂತ್ರಪಿಂಡದಲ್ಲಿನ ಕಲ್ಲು ಕರಗಲು

ಪ್ರತಿ ದಿನ ಬೆಳಗ್ಗೆ ಮತ್ತು ರಾತ್ರಿ ತಲಾ ಒಂದು ಲೋಟ ಬೀಟ್‌ರೂಟ್‌ ಜ್ಯೂಸ್‌ನ್ನು ಒಂದು ತಿಂಗಳ ಕಾಲ ಸೇವಿಸುವುದರಿಂದ , ಮೂತ್ರ ಪಿಂಡದಲ್ಲಿನ ಸಣ್ಣಗಾತ್ರದ ಕಲ್ಲು ಕರಗಲು ಸಹಾಯಕವಾಗುತ್ತದೆ.

೭೯. ಗಂಟಲ ನೋವು ನಿವಾರಣೆಗೆ

ಒಂದು ಲೋಟ ಬಿಸಿನೀರಿಗೆ ಸ್ವಲ್ಪ ನಿಂಬೇಹಣ್ಣಿನ ರಸವನ್ನು ೨ ರಿಂದ ೩ ಚಮಚದಷ್ಟು ಜೇನುತುಪ್ಪವನ್ನು ಮಿಶ್ರಮಾಡಿ, ಪ್ರತಿ ದಿನ ರಾತ್ರಿ, ಒಂದು ವಾರದ ಕಾಲ ಸೇವಿಸಿದರೆ, ಸಾಮಾನ್ಯವಾದ ಗಂಟಲುರಿ ಅಥವಾ ಗಂಟಲ ನೋವು ನಿವಾರಣೆಯಾಗುತ್ತದೆ.

೮೦. ಕಣ್ಣುಗಳ ಕೆಳಗಡೆ ಇರುವ ಕಪ್ಪು ಛಾಯೆಯ ನಿವಾರಣೆಗಾಗಿ

ತಾಜಾ ಇರುವ ಮೆಂತ್ಯದ ಸೊಪ್ಪನ್ನು ನೀರನ್ನು ಹಾಕಿ, ಅರೆದು, ಪ್ರತಿ ದಿನ ಕಣ್ಣುಗಳ ಕೆಳಭಾಗದಲ್ಲಿರುವ ಕಪ್ಪು ಛಾಯೆ ಇರುವ ಜಾಗದಲ್ಲಿ ಹಚ್ಚುತ್ತಾ ಇದ್ದರೆ, ಕಪ್ಪು ಛಾಯೆ ಹೋಗಲು ಸಹಾಯಕವಾಗುತ್ತದೆ.

೮೧. ನೆಗಡಿ ನಿವಾರಣೆಗೆ

ಒಂದು ಲೋಟ ಬಿಸಿನೀರಿಗೆ, ಒಂದು ಚಮಚೆಯಷ್ಟು ಜೇನುತುಪ್ಪ ಮತ್ತು ಮೂರು ಡ್ರಾಪ್ಸ್‌ ನೀಲಗಿರಿ ತೈಲವನ್ನು ಮಿಶ್ರ ಮಾಡಿ, ಐದು ದಿವಸ ಸೇವಿಸಿದರೆ, ನೆಗಡಿ ನಿವಾರಣೆಯಾಗುತ್ತದೆ. ನೆಗಡಿ ಇದ್ದಾಗ, ಹೆಚ್ಚಾಗಿ ಶುದ್ಧವಾದ ನೀರನ್ನು ಕುಡಿಯಬೇಕು.

೮೨. ಅಸ್ತಮ ಮತ್ತು ಕೆಮ್ಮಲು ಕಡಿಮೆಯಾಗಲು

ಸಮ ಪ್ರಮಾಣದಲ್ಲಿ ಮೆಣಸು, ಖರ್ಜೂರ, ಒಣಗಿದ ಕಪ್ಪು ದ್ರಾಕ್ಷಿ, ಸಕ್ಕರೆ, ತುಪ್ಪ ಮತ್ತು ಜೇನುತುಪ್ಪವನ್ನು ಸೇರಿಸಿ ಮಾಡಿದ ಪೇಸ್ಟನ್ನು ಸೇವಿಸಿದರೆ ಅಸ್ತಮ ಮತ್ತು ಕೆಮ್ಮು ಕಡಿಮೆಯಾಗುತ್ತದೆಂದು ಆಯುರ್ವೇದ ಪಂಡಿತರಾದ ಜೆ.ಎಫ್‌. ದಸ್ತೂರ್ ರವರು ತಮ್ಮ ಗ್ರಂಥದಲ್ಲಿ ತಿಳಿಸಿದ್ದಾರೆ.

೮೩. ಅಸ್ತಮ ಕೆಮ್ಮಿನ ನಿವಾರಣೆಗೆ
ಒಂದು ಭಾಗ ಜೇನುತುಪ್ಪ, ಒಂದು ಭಾಗ ನಿಂಬೇಹಣ್ಣಿನ ರಸ, ಒಂದು ಭಾಗ ಜಿನ್‌ ಅಥವಾ ರಮ್‌ನ್ನು ಮಿಶ್ರ ಮಾಡಿಟ್ಟುಕೊಂಡು, ಎರಡು ಅಥವಾ ಮೂರು ಗಂಟೆಗೊಮ್ಮೆ ಒಂದು ಟೀ ಚಮಚೆಯಷ್ಟು ತೆಗೆದುಕೊಂಡರೆ ಅಸ್ತಮ ದವರಲ್ಲಿ ಕೆಮ್ಮು ನಿವಾರಣೆಯಾಗುತ್ತದೆಂದು ಶ್ರೀ ಡೇವಿಡ್‌ ವರ್ನರ್ ತಿಳಿಸಿದ್ದಾರೆ.

೮೪. ಆಸ್ತಮದವರಲ್ಲಿ ಕಫ ತೆಳುವಾಗಲು
ಕಫವನ್ನು ತೆಳುವಾಗಿ ಮಾಡಿ ಹೊರಹಾಕಲು ನೀರು ಸಹಾಯ ಮಾಡುತ್ತದೆ. ಆದುದರಿಂದ, ಕಾಯಿಸಿ ಆರಿಸಿದ ನೀರನ್ನು ಯತೇಚ್ಛವಾಗಿ ಆಸ್ತಮ ರೋಗಿಗಳು ಕುಡಿಯಬೇಕು.

೮೫. ಅಸ್ತಮ ಉಪಶಮನಕ್ಕೆ

ಬೆಳ್ಳುಳ್ಳಿಯನ್ನು ಔಷಧಿಯ ಪ್ರಮಾಣದಲ್ಲಿ ಪ್ರತಿನಿತ್ಯ ಸೇವಿಸಿದರೆ ಅಸ್ತಮಾ ಉಪಶಮನಗೊಳ್ಳುತ್ತದೆಂದು, ಕೆಮ್ಮು ಕಡಿಮೆಯಾಗಲು ಸಹಯ ಮಾಡುತ್ತದೆಂದು ‘ವಿ ಲೇಜ್‌ ಫಿಜಿಷಿಯನ್‌’ ಎಂಬ ಪುಸ್ತಕದಲ್ಲಿ ತಿಳಿಸಿದೆ.

೮೬. ಬೆನ್ನು ನೋವಿಗೆ ಬಿಸಿ ಕಾಪುಟ ಚಿಕಿತ್ಸೆ

ಪ್ರಜ್ಞಾ ಪೂರ್ವಕವಾಗಿ ಬಿಸಿಯ ಕಾಪುಟವನ್ನು ನೋವಿರುವ ಬೆನ್ನಿನ ಭಾಗದಲ್ಲಿ ಕೊಡುವುದರಿಂದ ನೋವು ಕಡಿಮೆಯಾಗುತ್ತದೆ. ಅಥವಾ ಪ್ರತಿದಿನ ಬಿಸಿನೀರಿನ ಸ್ನಾನವನ್ನು ಮಾಡುತ್ತಾ, ನೋವಿರುವ ಜಾಗದಲ್ಲಿ ಕೈಯಿಂದ ಉಜ್ಜಿಕೊಳ್ಳುವುದರಿಂದ ಬೆನ್ನು ನೋವು ಕಡಿಮೆಯಾಗುತ್ತದೆ.

೮೭. ಬೆನ್ನು ನೋವಿಗೆಚಲನಾ ಚಿಕಿತ್ಸೆ

ನಡೆಯುವುದು (ವಾಕಿಂಗ್‌) ಸಾಮಾನ್ಯವಾಗಿ ಒಳ್ಳೆಯ ವ್ಯಾಯಾಮ. ಬೆನ್ನು ನೋವು ಇದ್ದಾಗ ನಡೆದಾಡಲು ಪ್ರೋತ್ಸಾಹಿಸಿ, ವಿಶ್ರಾಂತಿ ಪಡೆಯಲು ತಿಳಿಸಬೇಕಲು . ನಡೆಯುವ ದೂರವನ್ನು ಕ್ರಮವಾಗಿ ಹೆಚ್ಚಿಸುತ್ತಾ ಹೋಗಬೇಕು, ವಾಕಿಂಗ್‌ ಮಾಡುವ ಮುನ್ನ ಕಷ್ಟಕರವಾದ ವ್ಯಾಯಾಮ ಅಥವಾ ಯೋಗಾಸನಗಳನ್ನು ಮಾಡಬಾರದು.

೮೮. ತಲೆನೋವು ಕಡಿಮೆಯಾಗಲು

ಈರುಳ್ಳಿಯನ್ನು ಚೆನ್ನಾಗಿ ಜಜ್ಜಿ ಅದರ ಪೇಸ್ಟಿನಿಂದ ಕಾಲಿನ ಪಾದಗಳನ್ನು ಚೆನ್ನಾಗಿ ತಿಕ್ಕಿ, ವಿಶ್ರಾಂತಿಯನ್ನು ಪಡೆಯುವುದರಿಂದ, ತಲೆನೋವು ಕಡಿಮೆಯಗುತ್ತದೆಂದು ಆಯುರ್ವೇದ ಪಂಡಿತರಾದ ಕೆ.ವಿ.ಜೆ. ಗಣಪತಿಸಿಂಗ್‌ ವರ್ಮಾ ತಿಳಿಸಿದ್ದಾರೆ.

೮೯. ಆಯಾಸ ನಿವಾರಣೆಗೆ

ಪ್ರತಿ ದಿನ ಕಿತ್ತಳೆಹಣ್ಣಿನ ಜ್ಯೂಸ್‌ ಅಥವಾ ನಿಂಬೇಹಣ್ಣಿನ ಜ್ಯೂಸನ್ನು ಐಸ್‌ಹಾಕದೆ ಸೇವಿಸುವುದರಿಂದ ಆಯಾಸ ನಿವಾರಣೆಯಾಗುತ್ತದೆ.

೯೦. ಪೈನಾಪಲ್ (ಅನಾನಸ್) ಜ್ಯೂಸ್

ಕೀಲುನೋವು ಕಡಿಮೆಯಾಗಲು ಪ್ರತಿ ದಿನ ಪೈನಾಪಲ್‌ ಜ್ಯೂಸನ್ನು (ಐಸ್‌ ಹಾಕದೆ ಕುಡಿಯಬೇಕು) ಸೇವಿಸುವುದರಿಂದ ಕೀಲುಗಳ ಊತ ಕಡಿಮೆಯಾಗುತ್ತದೆ. (ಜ್ಯೂಸ್‌ಗೆ ಸಕ್ಕರೆ ಹೆಚ್ಚಾಗಿ ಹಾಕಬಾರದು.) ಜ್ಯೂಸ್‌ಗೆ ಬದಲು ಅನಾನಸ್‌ ಚೂರುಗಳನ್ನು ತಿಂದರೆ ಒಳ್ಳೆಯದು.

೯೧. ಕೀಲುನೋವು ನಿವಾರಣೆಗೆ

ಬೆಳ್ಳುಳ್ಳಿಯನ್ನು ಜಜ್ಜಿ ಅದಕ್ಕೆ ಸ್ವಲ್ಪ ಅರಿಸಿನ ಮತ್ತು ಸ್ವಲ್ಪ ಸುಣ್ಣವನ್ನು ಮಿಶ್ರಮಾಡಿ ಪೇಸ್ಟ್‌ ಮಾಡಿಕೊಂಡು, ಕೀಲುನೋವು ಇರುವ ಜಾಗದಲ್ಲಿ ಪೋಲ್ಟೀಸ್ ನ್ನು ಹಾಕುವುದರಿಂದ ನೋವು ಕಡಿಮೆಯಾಗುತ್ತದೆ.

೯೨. ಕೀಲುನೋವಿಗೆ ಮಸಾಜ್

ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಅದಕ್ಕೆ ಕರ್ಪೂರವನ್ನು ಮಿಶ್ರಮಾಡಿ, ಅದರಿಂದ ಕೀಲುನೋವು ಇರುವ ಜಾಗದಲ್ಲಿ ಮಸಾಜ್‌ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ.

೯೩. ಮಾಂಸಖಂಡಗಳ ಉಳುಕು ನಿವಾರಣೆಗೆ

ಉಳುಕು ಇರುವ ಮಾಂಸಖಂಡಗಳ ಜಾಗದಲ್ಲಿ ನೀಲಗಿರಿ ತೈಲವನ್ನು ತಿಕ್ಕುವುದರಿಂದ ಉಳುಕು ನಿವಾರಣೆಯಾಗುತ್ತದೆ.

೯೪. ಕರುಳಿನ ಗ್ಯಾಸ್ ನಿವಾರಣೆಗೆ

ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯ ಎರಡು ಎಸಳನ್ನು ಸೇವಿಸುತ್ತಿದ್ದರೆ ಕರುಳಿನ ಗ್ಯಾಸ್‌ ನಿವಾರಣೆಯಾಗುತ್ತದೆ.

೯೫. ನರಗಳ ನಿಶ್ಶಕ್ತಿ ನಿವಾರಣೆಗೆ

ವೀಳೆಯದೆಲೆ ರಸಕ್ಕೆ ಒಂದು ಟೀ ಚಮಚೆಯಷ್ಟು ಜೇನುತುಪ್ಪವನ್ನು ಸೇರಿಸಿ ಪ್ರತಿ ದಿನ ಸೇವಿಸುತ್ತಿದ್ದರೆ , ನರಗಳ ನಿಶ್ಶಕ್ತಿ ನಿವಾರಣೆಯಾಗುತ್ತದೆ.

೯೬. ಜೀರ್ಣಶಕ್ತಿ ಅಭಿವೃದ್ಧಿಗೊಳ್ಳಲು

ಹುಳಿ ಇಲ್ಲದ ಮಜ್ಜಿಗೆಯನ್ನು ಪ್ರತಿದಿನ ಸೇವಿಸುತ್ತಿದ್ದರೆ ಜೀರ್ಣಶಕ್ತಿ ಅಭಿವೃದ್ಧಿಗೊಳ್ಳುತ್ತದೆ.

೯೭. ಮುಖದಲ್ಲಿನ ಫಂಗಸ್ ನಿವಾರಣೆಗೆ

ಈರುಳ್ಳಿ ರಸ ಮತ್ತು ವೀಳೆಯದೆಲೆ ರಸವನ್ನು ಸಮ ಪ್ರಮಾಣದಲ್ಲಿ ಮಿಶ್ರಮಾಡಿ, ಮುಖದ ಫಂಗಸ್‌ ಜಾಗದಲ್ಲಿ ಹಚ್ಚುತ್ತಿದ್ದರೆ ಫಂಗಸ್‌ ನಿವಾರಣೆಯಾಗುತ್ತದೆ.

೯೮. ಒಣಕೆಮ್ಮು ನಿವಾರಣೆಗೆ

ದಿನಕ್ಕೆ ಎರಡು ಬಾರಿ ಒಂದು ಟೀ ಚಮಚೆಯಷ್ಟು ಜೇನುತುಪ್ಪವನ್ನು ಒಂದು ವಾರದ ಕಾಲ ಸೇವಿಸಿದರೆ ಒಣಕೆಮ್ಮು ನಿವಾರಣೆಯಾಗುತ್ತದೆ.

೯೯. ಅಜೀರ್ಣ ನಿವಾರಣೆಗೆ

ಪುದೀನ, ಜೇನುತುಪ್ಪ ಮತ್ತು ನಿಂಬೆಹಣ್ಣಿನ ರಸವನ್ನು ಸಮಪ್ರಮಾಣದಲ್ಲಿ ಮಿಶ್ರಮಾಡಿ ಪ್ರತಿದಿನ ಸೇವಿಸುತ್ತಿದ್ದರೆ ಅಜೀರ್ಣ ನಿವಾರಣೆಯಾಗುತ್ತದೆ.

೧೦೦. ಮಕ್ಕಳಲ್ಲಿ ಜ್ವರ ನಿವಾರಣೆಗೆ

ಮಕ್ಕಳಲ್ಲಿ ಜ್ವರವಿದ್ದಾಗ ಬೀಟ್‌ರೂಟ್‌ ರಸವನ್ನು ಪ್ರತಿ ದಿನ ಮೂರು ಬಾರಿ ಅಲ್ಪ ಪ್ರಮಾಣದಲ್ಲಿ ನಾಲ್ಕೈದು ದಿನಗಳ ಕಾಲ ಕೊಡುವುದರಿಂದ ಜ್ವರ ಕಡಿಮೆಯಾಗಲು ಸಹಾಯಕವಾಗುತ್ತದೆ.

೧೦೧. ಬಿದ್ದ ನೋವು ನಿವಾರಣೆಗೆ

ಪಪ್ಪಾಯಿ ಅಥವಾ ಪರಂಗಿ ಗಿಡದ ಎಲೆಯನ್ನು ಚೆನ್ನಾಗಿ ಅರೆದು, ಬಿದ್ದು ಗಾಯವಾಗಿರುವ ಜಾಗದಲ್ಲಿ ಹಚ್ಚುವುದರಿಂದ, ನೋವು ನಿವಾರಣೆಯಾಗುತ್ತದೆ.

೧೦೨. ಕುರು ನಿವಾರಣೆಗೆ

ನಿಂಬೇಹಣ್ಣಿನ ರಸದಲ್ಲಿ ಶಂಕವನ್ನು ತೇಯ್ದು ಹಚ್ಚುತ್ತಿದ್ದರೆ, ಕುರು ಒಡೆದು ನಿವಾರಣೆಯಾಗಲು ಸಹಾಯಕವಾಗುತ್ತದೆ.

೧೦೩. ಸುಟ್ಟಗಾಯಗಳ ನಿವಾರಣೆಗೆ

ಕುಂಬಳಕಾಯಿಯ ಎಳೆಗಳನ್ನು ಚೆನ್ನಾಗಿ ಬಿಸಿ ನೀರಲ್ಲಿ ತೊಳೆದು ಅವುಗಳನ್ನು ಚೆನ್ನಾಗಿ ಅರೆದು ಅದರ ರಸವನ್ನು ಸುಟ್ಟ ಗಾಯದ ಮೇಲೆ ಹಚ್ಚುತ್ತಿದ್ದರೆ ಗಾಯ ವಾಸಿಯಾಗುತ್ತದೆ.

೧೦೪. ಹಲ್ಲುನೋವು ನಿವಾರಣೆಗೆ

ಲವಂಗದ ಎಣ್ಣೆಯಲ್ಲಿ ಅದ್ದಿದ ಶುದ್ಧವಾದ ಹತ್ತಿಯ ಸಣ್ಣ ಉಂಡೆಯನ್ನು ಹಲ್ಲು ನೋವು ಇರುವ ಜಾಗದಲ್ಲಿ ಅದುಮಿಟ್ಟರೆ, ಹಲ್ಲು ನೋವು ತಾತ್ಕಾಲಿಕವಾಗಿ ಕಡಿಮೆಯಾಗುತ್ತದೆ. ಲವಂಗವನ್ನು ಅಗಿಯುವುದರಿಂದ ಹಲ್ಲು ನೋವು ಕಡಿಮೆಯಾಗುವುದಿಲ್ಲ.

೧೦೫. ಕಿವಿಯ ಊತ ಕಡಿಮೆಯಾಗಲು

ಒಂದು ಅಥವಾ ಎರಡು ತೊಟ್ಟುಬೇವಿನ ಎಣ್ಣೆಯನ್ನು ಕಿವಿಯೊಳಗಡೆ ಹಾಕಿದರೆ, ಕಿವಿಯ ಊತ ಕಡಿಮೆಯಾಗುತ್ತದೆ.

೧೦೬. ಸುಟ್ಟ ಗಾಯಗಳಿಗೆ ತಣ್ಣೀರಿನ ಚಿಕಿತ್ಸೆ

ಸುಟ್ಟಗಾಯಗಳ ಮೇಲೆ ತಡಮಾಡದೆ ಶುದ್ಧವಾದ ತಣ್ಣೀರನ್ನು ಸುರಿಯುತ್ತಿರಬೇಕು. ಅಥವಾ ಸುಟ್ಟ ಭಾಗವನ್ನು ತಣ್ಣೀರಿನಲ್ಲಿ ಅದ್ದಿರಬೇಕು. ೧೦ ರಿಂದ ೨೦ ನಿಮಿಷಗಳಾದರು ತಣ್ಣಗೆ ಮಾಡಬೇಕು. ಅನಂತರ ವೈದ್ಯರಿಗೆ ತೋರಿಸುವುದನ್ನು ಮರೆಯಬಾರದು.

೧೦೭. ಪೈಲ್ಸ್ ಇದ್ದಾಗ ಹಾಗಲಕಾಯಿ ಎಲೆಯ ರಸ

ತಾಜಾ ಇರುವ ಹಾಗಲಕಾಯಿಯ ಎಲೆಯ ರಸವನ್ನು ಮೂರು ಚಮಚದಷ್ಟು ತೆಗೆದುಕೊಂಡು ಒಂದು ಲೋಟ ಮಜ್ಜಿಗೆಗೆ ಮಿಶ್ರಮಾಡಿ ಪ್ರತಿದಿನ ಒಂದು ತಿಂಗಳ ಕಾಲ ಬೆಳಗ್ಗೆ ಮತ್ತು ರಾತ್ರಿ ಸೇವಿಸುತ್ತಿದ್ದರೆ ಪೈಲ್ಸ್‌ (ಮೂಲವ್ಯಾಧಿ) ತೊಂದರೆ ಕಡಿಮೆಯಾಗಲು ಸಹಾಯಕವಾಗುತ್ತದೆ.

೧೦೮. ಶೀತನೆಗಡಿಗೆ ತುಳಸಿ ರಸ
ಶೀತ-ನೆಗಡಿ ಇದ್ದಾಗ ಶುದ್ಧ ನೀರಿನಲ್ಲಿ ತೊಳೆದ ತುಳಸಿ ಎಲೆಯನ್ನು ಅಗಿದು ಅದರ ರಸವನ್ನು ನುಂಗಬೇಕು. ಈ ರೀತಿ ಒಂದು ವಾರದ ಕಾಲ ಮಾಡಿದರೆ , ಶೀತ-ನೆಗಡಿ ನಿಯಂತ್ರಣದಲ್ಲಿರಲು ಸಹಾಯಕವಾಗುತ್ತದೆ.

೧೦೯. ಚಿಕ್ಕಮಕ್ಕಳಲ್ಲಿ ಜಂತು ಹುಳುವಿನ ಬಾಧೆ ನಿವಾರಣೇಗೆದ

ಅರ್ಧ ಲೋಟ ಬಿಸಿನೀರಿಗೆ ಒಂದು ಟೀ ಚಮಚೆಯಷ್ಟು ಬೆಳ್ಳುಳ್ಳಿ ರಸವನ್ನು ಮಿಶ್ರ ಮಾಡಿ, ದಿನಕ್ಕೆ ಎರಡು ಬಾರಿ ೩ ದಿನಗಳ ಕಾಲ ಚಿಕ್ಕಮಕ್ಕಳಿಗೆ ನೀಡಿದರೆ, ಹೊಟ್ಟೆಯಲ್ಲಿರುವ ಜಂತು ಹುಳುಗಳಿಂದ ಉಂಟಾಗುವ ಬಾಧೆ ನಿವಾರಣೆಯಾಗುತ್ತದೆ.

೧೧೦. ಎದೆ ಹಾಲಿನ ಗುಣಮಟ್ಟ ಹೆಚ್ಚಲು

ಎದೆ ಹಾಲಿನ ಗುಣಮಟ್ಟ ಹೆಚ್ಚಲು, ತಾಯಂದಿರು ಪ್ರತಿ ದಿನ ಒಂದು ಕ್ಯಾರೆಟ್‌ನ್ನಾಗಲಿ ಅಥವಾ ಒಂದು ಲೋಟ ಕ್ಯಾರೆಟ್‌ ಜ್ಯೂಸನ್ನಾಗಲಿ ಸೇವಿಸುತ್ತಿದ್ದರೆ. ಎದೆ ಹಾಲಿನ ಗುಣಮಟ್ಟ ಹೆಚ್ಚಾಗಲು ಮತ್ತು ಮಗುವಿನ ಕಣ್ಣುಗಳು ಆರೋಗ್ಯವಾಗಿರಲು ಸಹಾಯಕವಾಗುತ್ತದೆ.

* * *