ಮನೆ ಔಷಧಿಗಳನ್ನು ಬಳಸುವ ಮುನ್ನ …;

  • ಮನೆ ಔಷಧಿಗಳನ್ನು ರೋಗಗಳನ್ನು ಗುಣ ಮಾಡುವ ಸಾಂಪ್ರದಾಯಿಕ ವಿಧಾನವೆಂದು ಹೇಳಬಹುದು. ಮನೆ ಔಷಧಿಗಳನ್ನು ಬಳಿಕೆಗೆ ತಂದವರು. ನಮ್ಮ ಅಜ್ಜ-ಅಜ್ಜಿ ಮತ್ತು ಗ್ರಾಮೀಣ ಬಂಧುಗಳು ಎಂಬುದನ್ನು ನಾವು ಮರೆಯಬಾರದು. ಅನುಭವದ ಹಿನ್ನೆಲೆಯಲ್ಲಿ, ಮನೆ ಔಷಧಿಗಳನ್ನು ನಮ್ಮ ಹಿರಿಯರು ವೈದ್ಯಕೀಯ ಚಿಕಿತ್ಸೆ ಸಿಗುವತನಕ, ಲಭ್ಯವಿರುವ ಆಹಾರ ಪದಾರ್ಥಗಳಿಂದ, ಸುಲಭವಾಗಿ ಲಭ್ಯವಾಗುವ ಗಿಡಮೂಲಿಕೆಗಳಿಂದ ತಾತ್ಕಾಲಿಕವಾಗಿ ಚಿಕಿತ್ಸೆ ನೀಡಿ, ಉಪದ್ರವವನ್ನು ನಿವಾರಣೆ ಮಾಡುತ್ತಿರುವುದನ್ನು ನಾವಿಂದು ಕೂಡ ಅನೇಕ ಮನೆಗಳಲ್ಲಿ ಕಾಣುತ್ತೇವೆ.
  • ಮನೆ ಔಷಧಿಗಳಿಂದ ತಾತ್ಕಾಲಿಕ ಉಪಶಮನ ಖಂಡಿತಾ ಸಿಗುತ್ತದೆ. ಆದರೆ, ತಾತ್ಕಾಲಿಕ ಉಪಶಮನಕ್ಕೂ ನಮ್ಮಲ್ಲಿ ಹಲವು-ಹತ್ತುಮಂದಿ-ಅಲೋಪಥಿ ಔಷಧಿಗಳಿಗೆ ಇಂದು ಮರೆ ಹೋಗುತ್ತಿರುವುದು ಶೋಚನೀಯ ಸಂಗತಿ. ಮನೆ ಔಷಧಿಗಳಿಂದ, ಅಲೋಪಥಿ ಔಷಧಿಗಳಿಂದ ಉಂಟಾಗುವಂತೆ ಅಡ್ಡ – ಪರಿಣಾಮಗಳು ಉಂಟಾಗುವುದಿಲ್ಲ. ೧೯೬೮ ರಲ್ಲಿ ನಾನು ಆರೋಗ್ಯ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿದನಂತರ, ‘ಮನೆ ಔಷಧಿ’ಗಳ ಬಗ್ಗೆ ಆಸಕ್ತಿ ಅಭಿರುಚಿ ಬೆಳೆಯಿತು. ಅಂದಿನಿಂದ, ಹೋಂ ರೆಮಿಡೀಸ್‌ನ್ನು ಅಧ್ಯಯನ ಮಾಡಿ, ಹಲವು-ಹತ್ತು ಕಡೆಯಿಂದ, ಇಂಗ್ಲೀಷ್‌-ತೆಲುಗು ಔಷಧಿ ಗ್ರಂಥಗಳಿಂದ ಸಂಗ್ರಹಿಸಿ, ಈ ಕಿರು ಹೊತ್ತಿಗೆಯ ರೂಪದಲ್ಲಿ ನಿಮ್ಮ ಕೈಯಲ್ಲಿರಿಸಿದ್ದೇನೆ . ಇದು ಸದುಪಯೋಗವಾದರೆ, ನನ್ನ ಶ್ರಮ ಸಾರ್ಥಕವಾಗುತ್ತದೆ.
  • ಮನೆ ಔಷಧಗಳು, ತಾತ್ಕಾಲಿಕ ಉಪಶಮನ ನೀಡುವಂತಹವು. ಆದುದರಿಂದ, ಶಾರೀರಿಕ ತೊಂದರೆಗಳಿಗೆ, ಶಾಶ್ವತ ಪರಿಹಾರ ಲಭ್ಯವಾಗಬೇಕಾದರೆ, ವೈದ್ಯರ ಸಲಹೆ-ಚಿಕಿತ್ಸೆ ಅಗತ್ಯ ಎಂಬುದನ್ನು ತಾವು ಮರೆಯಬಾರದು. ಈಗಲೂ, ಗ್ರಾಮೀಣ ಪ್ರದೇಶಗಳಲ್ಲಿ ಮನೆ ಔಷಧಗಳನ್ನು ಸಣ್ಣ-ಪುಟ್ಟ ತೊಂದರೆಗಳ ನಿವಾರಣೆಗೆ ಬಳಸುತ್ತಲೇ ಇದ್ದಾರೆ. ಮನೆ ಔಷಧಿಗಳು, ‘ಜನಪದ ವೈದ್ಯದ’ ಅವಿಭಾಜ್ಯ ಅಂಗ ಎಂದರೆ ತಪ್ಪಾಗಲಾರದು.
  • ‘ಸಾಂಪ್ರದಾಯಿಕ ಆರೋಗ್ಯ ಆರೈಕೆ’ಯಲ್ಲಿ ಮನೆ ಔಷಧ ಅಥವಾ ಹೋಂ ರೆಮಿಡೀಸ್‌ ಪ್ರಧಾನ ಪಾತ್ರವಹಿಸುತ್ತಿವೆ. ಆದರೆ, ಮನೆ ಔಷಧಿಗಳನ್ನು, ವೈಜ್ಞಾನಿಕ ರೋಗ ನಿಧಾನಕ್ಕೆ ಬದಲಿಯಾಗಲಿ ಅಥವಾ ಅಡ್ವಾನ್ಸ್‌ ವೈದ್ಯಕೀಯ ಚಿಕಿತ್ಸೆಗೆ ಬದಲಿ ವ್ಯವಸ್ಥೆಯಲ್ಲಾ ಎಂಬುದನ್ನು ನಾವು ಅರಿತಿರಬೇಕು, ಸಾಂಪ್ರದಾಯಿಕ ಚಿಕಿತ್ಸೆ; ಆಧುನಿಕ ಚಿಕಿತ್ಸೆಯ ಜೊತೆ-ಜೊತೆಯಲ್ಲಿ ನೆರವೇರಿದರೆ ಕಾಯಿಲೆಯನ್ನು ಗುಣಮಾಡಲು ಸಹಾಯಕವಾಗುತ್ತದೆ.

ಇಂದು ತಮ್ಮ ವಿಶ್ವಾಸಿ,
ಎನ್. ವಿಶ್ವರೂಪಾಚಾರ್