ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ;
ವಾಮನಕ್ರಮಂ ಮುಟ್ಟುಗೆ  ಮುಟ್ಟುದಿರ್ಕೆ ಮುಗಿಲಂ;
ಹರನಂ ನರನೊತ್ತಿ ಗಂಟಲಂ ಮೆಟ್ಟುಗೆ ಮೆಟ್ಟದಿರ್ಕೆ;
ಕವಿಗಳ್ ಕೃತಿಬಂಧದೊಳಲ್ತೆ
ಕಟಿದರ್, ಮುಟ್ಟಿದರ್, ಒತ್ತಿ ಮೆಟ್ಟಿದರ್‌;
ಅದೇನಳವಗ್ಗಳಮೊ ಕವೀಂದ್ರರಾ!
– ನೇಮಿಚಂದ್ರ

The poet’s eye, in a fine frenzy rolling,
Doth glance from heaven to earth, from earth to heaven;
and, as immagination bodies forth
The form of things unknown, the poets pen
Turn them to shapes and gives to airy nothing
A local habitation and a name.
– SHAKESPEARE

 

ನೇಮಿಚಂದ್ರ ಮತ್ತು ಷೇಕ್ಸ್‌ಪಿಯರ್ ಇಬ್ಬರೂ ಕವಿನಿರ್ಮಿತಿಯ ವಿಚಾರವಾಗಿ ತಮ್ಮ ತಮ್ಮ ಕೃತಿಗಳಲ್ಲಿ, ಪ್ರಾಸಂಗಿಕವಾಗಿ, ಮೇಲೆ ಉದ್ಧರಿಸಿದ ರೀತಿಯಲ್ಲಿ, ತಮ್ಮ ಅಭಿಪ್ರಾ ವ್ಯಕ್ತಪಡಿಸಿದ್ದಾರೆ.

ನೇಮಿಚಂದ್ರನ ದೃಷ್ಟಿಯಲ್ಲಿ ಕವಿಸೃಷ್ಟಿ ಅದ್ಭುತವಾದದ್ದು. ಕವಿಗಳ ಶಕ್ತಿ ಮಿಸ್ಮಯಾವಹವಾದದ್ದು. “ಅಳವು ಅದೇನ್‌ ಅಗ್ಗಳಮೊ ಕವೀಂದ್ರರಾ” ಎನ್ನುತ್ತಾನೆ. ಆದರೆ ಆ ಸ್ತುತಿಯ ಹಿಂದೆ ಕವಿತೆಯ ಬುಡಕ್ಕೆ ಕೊಡಲಿ ಹಾಕುವ ಒಂದು ಮನೋಧರ್ಮ ಹುದುಗಿದಂತಿದೆ: ಕಾವ್ಯದಲ್ಲಿ ಕೌತುಕ ಸ್ವಾರಸ್ಯವೇನೊ ಇದೆ; ಅದರ ಆಧಾರ ಮಾತ್ರ ಸತ್ಯದ ಮೇಲೆ ನಿಂತಿಲ್ಲ: ಅದೊಂದು ಸುರಸ ಸುಂದರವಾದ ಮಿಥ್ಯೆ ಎಂದು ವ್ಯಂಗ್ಯವಾಗಿ ಮೂದಲಿಸುವಂತೆ ಕಾಣುತ್ತದೆ. ಕಪಿಗಳು ಕಡಲನ್ನು ಕಟ್ಟಲಿ, ಬಿಡಲಿ; ಮಾಮನ ತ್ತಿವಿಕ್ರಮನಾಗಿ ತನ್ನೊಂದು ಪಾದದಿಂದಲೆ ಆಕಾಶವನ್ನೆಲ್ಲ ಅಳೆಯಲಿ, ಅಳೆಯದಿರಲಿ; ಶಿವನ ಗಂಟಲನ್ನು ಅರ್ಜುನ ಒತ್ತಿ ಮೆಟ್ಟಲಿ, ಮೆಟ್ಟದಿರಲಿ; ಕವಿಗಳು ತಮ್ಮ ಕೃತಿಗಳಲ್ಲಿ ಮಾತ್ರ ಈ ಕೆಲಸಗಳನ್ನೆಲ್ಲ ಮಾಡಿಸಿಬಿಟ್ಟಿದ್ದಾರೆ! ಅಂದರೆ ಅವು ಲೋಕದಲ್ಲಿಯೂ ಸಂಭವಿಸಿದ ನಿಜತ್ವದ ವಿಚಾರವಾಗಿ ನೇಮಿಚಂದ್ರನಿಗೆ ಶ್ರದ್ದೆಯಿಲ್ಲ. ಅವನೇನೂ ಬಾಯಿ ಬಿಟ್ಟು ಅವು ಸುಳ್ಳು ಎಂದು ಹೇಳುವುದಿಲ್ಲ ಆದರೆ ಅವನು ವ್ಯಕ್ತಪಡಿಸಿರುವ ಸಂದೇಹದ ವ್ಯಂಗ್ಯವು ಬಾಯಿಬಿಟ್ಟು ಹೇಳುವುದಕ್ಕಿಂತಲೂ ಸಮರ್ಪಕವಾಗಿ ತನ್ನ ಕೆಲಸವನ್ನು ಸಾಧಿಸುತ್ತವೆ.

[1]

ಕವಿಕಲ್ಪನಾದೃಷ್ಟಿಯ ಮಿಚಾರವಾಗಿ ಷೇಕ್ಸ್‌ಪಿಯರ್ ಹೇಳುತ್ತಾನೆ: “ಕವಿಯ ಕಣ್ಣು, ಒಂದು ಆವೇಶ ಮಧುರ್ಯದ ಮತ್ತಿನಲ್ಲಿ, ಸ್ವರ್ಗದಿಂದ ಮರ್ತ್ಯಕ್ಕೂ, ಮರ್ತ್ಯದಿಂದ ಸ್ವರ್ಗಕ್ಕೂ ಕಟಾಕ್ಷಪ್ರಸಾರ ಮಾಡುತ್ತದೆ; ಅತೀತವೂ ಅಗೋಚರವೂ ಆಗಿರುವ ವಸ್ತುಗಳಿಗೆ ಕಲ್ಪನಾಪ್ರತಿಭೆ ರೂಪದಾನ ಮಾಡಿದಂತೆಲ್ಲ ಕವಿಯ ಲೇಖನಿ, ಆಕಾಶ ಶೂನ್ಯಕ್ಕೂ ಆಕಾರ ನೀಡುವಂತೆ, ಅವಕ್ಕೆ ಲೌಕಿಕಾವಾಸ್ಯಗಳನ್ನು ನಿರ್ಮಿಸಿ, ಹೆಸರನ್ನೂ ದಯಪಾಲಿಸುತ್ತದೆ.”

ಷೇಕ್ಸ್‌ಪಿಯರ್‌ನ ದೃಷ್ಟಿ ಕವಿಕಲ್ಪನೆ ಸೃಷ್ಟಿಸುವ ಕಾವ್ಯಪ್ರತಿಮೆಗಳನ್ನೆ ಸತ್ಯಗಳೆಂದಾಗಲಿ ಸತ್ಯದ ಪ್ರತಿಕೃತಿಗಳೆಂದಾಗಲಿ ಒಪ್ಪಿಕೊಳ್ಳುವ ಸಾಹಸಕ್ಕೆ ಹೋಗದಿದ್ದರೂ ಆ ಕಾವ್ಯಪ್ರತಿಮೆಗಳು ಅತೀತಾಗೋಚರ ವಸ್ತುಗಳಿಗೆ ಕವಿಪ್ರತಿಭೆ ನೀಡುವ ಲೌಕಿಕ ರೂಪಗಳಾಗುತ್ತವೆ ಎಂಬುದನ್ನು ಸೂಚಿಸಿದ್ದಾನೆ. ಅತೀಂದ್ರಿಯವಾದ ಆ ವಸ್ತುಗಳಿಗೆ ಕವಿಕಲ್ಪನೆ ಮನೆ ಕಟ್ಟಿ ಹೆಸರು ಕೊಡದಿದ್ದರೆ, ಎಂದರೆ ಆ ಅತೀಂದ್ರಿಯ ಸತ್ಯಗಳನ್ನು ಸೇಂದ್ರಿಯಗೊಳಿಸದಿದ್ದರೆ, ಯಾವ ವಸ್ತುಗಳು (ಅವು ಅವಸ್ತುಗಳಲ್ಲ, ಮಿಥ್ಯೆಯಲ್ಲ, ಹುಸಿಯಲ್ಲ!) ಸಾಮಾನ್ಯನಿಗೆ ಅವಸ್ತುಕಲ್ಪಗಳೊ ಅವಾಙ್ಮಾನಸ ಗೋಚರಗಳೊ ಅವುಗಳನ್ನು ಮರ್ತ್ಯದ ಕಾಲದೇಶದ ಚೌಕಟ್ಟಿಗೆಳೆದು ಲೋಕಸಂವಾದಿಗಳನ್ನಾಗಿ ಪರಿವರ್ತಿಸಿ ಐಂದ್ರಿಯ ಗ್ರಾಹ್ಯಗಳನ್ನಾಗಿ ಮಾಡದಿದ್ದರೆ, ಅವು ಕಾವ್ಯವಿಷಯಗಳಾಗುತ್ತಿರಲಿಲ್ಲ; ಸಹೃದಯಸಂವೇದನೆಗೆ ಅತೀತವಾಗಿ ಅಚಿಂತ್ಯವಾಗಿ ಶೂನ್ಯಪ್ರಾಯವಾಗಿಯೇ ಸರ್ವದಾ ಉಳಿಯುತ್ತಿದ್ದುವು.

ನೇಮಿಚಂದ್ರನು ನಾವು ಉಲ್ಲೇಖಿಸಿರುವ ಆ ಪದ್ಯದ ಮಟ್ಟಿಗಾದರೂ ಪ್ರತಿಕೃತಿದೃಷ್ಟಿಯನ್ನು ಪ್ರತಿನಿಧಿಸುತ್ತಾನೆ. ಷೇಕ್ಸ್‌ಪಿಯರ್‌ನದು ಪ್ರತಿಮಾ ದೃಷ್ಟಿಯನ್ನು ಪ್ರತಿನಿಧಿಸುತ್ತದೆ.

ಕಪಿಗಳು ಕಡಲನ್ನು ಕಟ್ಟಿದುದು, ಶಿವನೊಡನೆ ಮಲ್ಲಗಾಳೆಗವಾಡಿ ಅರ್ಜುನ ಅವನ ಗಂಟಲನ್ನು ಮೆಟ್ಟಿದುದು ಐತಿಹಾಸಿಕ ಘಟನೆಗಳೆ? ಅಲ್ಲವೇ? ಅವು ಈ ಲೋಕದಲ್ಲಿ ನಡೆದು, ಚರಿತ್ರೆಯ ಮಿಷಯವಾಗುವ ಘಟನೆಗಳಾಗಿದ್ದರೆ, ನಿಯತಿಕೃತವಾದ ನಿಯಮಗಳಿಗೆ ಅಧೀನವಾಗಿಯೆ ಇರುತ್ತಿದ್ದುವು. ಅವು ಲೋಕವಾಸ್ತವವಾದ ಅಂತಹ ಐತಿಹಾಸಿಕ ಘಟನೆಗಳಲ್ಲ-ಎಂಬ ಬುದ್ಧಿಯೆ ನೇಮಿಚಂದ್ರನ ಸಂದೇಹದ ಇಂಗಿತ. ಅವು ಬರಿಯ ಕವಿಕಲ್ಪಿತ ಕಟ್ಟುಕಥೆ. ಅವು ನಿಯತಿ ರಚಿಸಿರುವ ನಿಯಮಗಳಿಗೆ ಅಧೀನವಾಗಿಲ್ಲ. ಏಕೆಂದರೆ ನಿಯತಿಕೃತನಿಯಮದ ಪ್ರಕಾರ ಯಾವ ಕೋತಿಯೂ ಬೆಟ್ಟವನ್ನೆತ್ತಲಾರದು. ಎಂತಹ ಬುದ್ಧಿವಂತ ಕಪಿಯೂ ಮನುಷ್ಯರೊಡನೆ ವಾಗ್‌ವ್ಯಾಪಾರಗಳಲ್ಲಿ ವ್ಯವಹರಿಸಿ, ಅವನ ಉದ್ದೇಶಗಳೊಡನೆ ಸಹಕರಿಸಲಾರದು. ಅಂತಹ ಕಥೆಗಳಿಗೆ ಕಾಲಿಲ್ಲ, ಅಥವಾ ಅವುಗಳ ಕಾಲು ನಮಗೆ ತಿಳಿದಿರುವ ಈ ಭೂಮಿಯ ಮೇಲೆ ನಿಂತಿಲ್ಲ. ಆದ್ದರಿಂದಲೆ ಅವು ನಿಯತಿಕೃತ ನಿಮರಹಿತವಾದುವು.

ಅಂತಹ ಅಸತ್ಯಪ್ರಸಂಗಗಳ ಅಧ್ಯಯನದಿಂದಾಗುವ ಪ್ರಯೋಜನ? ಕಲ್ಪನಾ ರಮಣೀಯತೆಯಿಂದ ದೊರಕೊಳ್ಳುವ ಆಹ್ಲಾದ; ಕವಿಚಮತ್ಕಾರದಿಂದ ಲಭಿಸುವ ಸೌಂದರ್ಯಾನುಭವ ಅಥವಾ ರಸಾನುಭವ. ಕಾವ್ಯವು ಸತ್ಯಾನ್ವೇಷಣೆಯ ಕರ್ಮವಲ್ಲ, ವಿಜ್ಞಾನದಂತೆ. ಶಾಸ್ತ್ರದಲ್ಲಿ ಸತ್ಯವನ್ನು ನಿರೀಕ್ಷಿಸುವಂತೆ ಕಾವ್ಯದಲ್ಲಿ ನಿರೀಕ್ಷಿಸುವುದು ಅಸಂಗತ ಮತ್ತು ಅಪ್ರಕೃತ. ಅದು ಸಂಪೂರ್ಣವಾಗಿ ವಿಭಾವ ಪ್ರಪಂಚ. ವಿಭಾವ ಎಂದರೆ ಯಾವುದು ಲೋಕಾನುಭವದಲ್ಲಿ ಮೂಲವಾಗಿರುವುದೊ ಆ ಮೂಲಕ್ಕೆ ಒಡ್ಡಿದ ಒಂದು ಕಲಾಪ್ರತಿಮೆ. ಆ ಪ್ರತಿಮೆಯ ಸತ್ಯ ಸಹೃದಯನಿಗೆ ಸೌಂದರ್ಯದಲ್ಲಿ ಮಾತ್ರ ನಿಷ್ಠವಾಗುತ್ತದೆ; ರಂಗಭೂಮಿಯಲ್ಲಿ ಹಿಮಗಿರಿಯನ್ನು ದೃಶ್ಯವಾಗಿ ಮಾಡಲೆಂದು ಹತ್ತಿಯ ಬಿಳಿಯ ರಾಶಿಯನ್ನು ಸೇರಿಸಿದರೂ ಪ್ರೇಕ್ಷಕನೆಗೆ ಹಿಮರಾಶಿಯ ಸೌಂದರ್ಯವನ್ನು ತಂದುಕೊಡುವುದರಲ್ಲಿಯೆ ಅದರ ಸತ್ಯ ನಿಷ್ಠೆ ಪರ್ಯಾವಸಾನವಾಗುವಂತೆ! ಅಲ್ಲಿ ಹಿಮ ಬರಲಾರದೆಂದೂ ತಾನು ನೋಡುತ್ತಿರುವುದು ಹಿಮ ಅಲ್ಲವೆಂದೂ ಪ್ರೇಕ್ಷಕನ ಬುದ್ಧಿಗೆ ಗೊತ್ತಿದ್ದರೂ ಅವನು ಅದರ ಸುಂದರ ಮಾಯೆಗೆ ವಶನಾಗಿ ಸೌಂದರ್ಯವನ್ನು ಅನುಭವಿಸುತ್ತಾನೆ. ಹಾಗೆ ಅನುಭವಿಸುದರಲ್ಲಿಯೆ ಕಲೆಯ ಸಾರ್ಥಕ್ಯವಿರುತ್ತದೆ. ಹಾಗೆ ಮಾಡುವುದಕ್ಕೆ ಬದಲಾಗಿ ಅವನು ವೈಜ್ಞಾನಿಕ ಸತ್ಯಯದ ಅನ್ವೇಷಣೆಗೆ ಹೊರಟರೆ ಕಲಾನಂದದಿಂದ ಸಂಪೂರ್ಣವಾಗಿ ವಂಚಿತನಾಗುತ್ತಾನೆ.[2] ನೇಮಿಚಂದ್ರನೂ ಕಪಿಗಳು ಸೇತುವೆ ಕಟ್ಟಿದ ಲೌಕಿಕ ಸತ್ಯದ ಮಿಚಾರದಲ್ಲಿ ಸಂದೇಹ ವ್ಯಕ್ತಪಡಿಸಿದರೂ ಅದರ ಸೌಂದರ್ಯಾನುಭವದಿಂದ ನಾವು ವಂಚಿತರಾಗಬೇಕೆಂದು ಸೂಚಿಸುವುದಿಲ್ಲ. ಅದಕ್ಕೆ ಬದಲಾಗಿ ಅದರ ಸೌಂದರ್ಯ ಮಾಯೆಯನ್ನು ಮೆಚ್ಚಿದ್ದಾನೆ: ‘ಅದೇನಳವಗ್ಗಳಮೊ ಕವೀಂದ್ರರಾ!’ ಎಂದು!

ಕಾವ್ಯಲೋಕದಲ್ಲಿ ಮೇಲೆ ಹೇಳಿದ ನಿಯತಿಕೃತನಿಯಮರಾಹಿತ್ಯವು ಉತ್ತಮ ಸಹೃದಯನ ರಸಾಸ್ವಾದನೆಗೆ ಯಾವ ಅಡಚಣೆಯನ್ನು ತಂದೊಡ್ಡುವುದಿಲ್ಲ. ಏಕೆಂದರೆ ಅವನಿಗೆ ಈ ಸಂದರ್ಬದಲ್ಲಿ ಪ್ರಕೃತವಾದದ್ದು ಭಾವಸಂವಾದವೆ ಹೊರತು ಲೋಕಸಂವಾದವಲ್ಲ. ಶಾಸ್ತ್ರಭಾಷೆಗೆ ಅವಶ್ಯಕವಾದ ಲೋಕೋಪಯೋಗ ಇಲ್ಲಿ ಗಮ್ಯವಲ್ಲ; ಕಾವ್ಯಭಾಷೆಯ ಗಮ್ಯ ಅದರ ಭಾವೋಪಯೋಗದಿಂದ ಮಾತ್ರ ಸಿದ್ದಿಸುತ್ತದೆ…[3]

ಈ ಸಂದರ್ಭದಲ್ಲಿ ಎರಡು ಪ್ರಶ್ನೆಗಳೇಳುತ್ತವೆ.

ಒಂದು: ಕವಿಕೃತಿ ನಿಜವಾಗಿಯೂ ನಿಯತಿಕೃತನಿಯಮರಹಿತವೆ? ಹೌದು ಎಂದರೆ ಯಾವ ಅರ್ಥದಲ್ಲಿ? ಅಲ್ಲ ಎಂದರೆ ಯಾವ ಅರ್ಥದಲ್ಲಿ?

ಮತ್ತೊಂದು: ಕಾವ್ಯದ ವಸ್ತು ಸತ್ಯವಾಗಿರಲಿ, ಅಲ್ಲದಿರಲಿ; ಅದು ಸಹೃದಯನಿಗೆ ಅಲಕ್ಷಿತವಾದದ್ದು. ಅವನಿಗೆ ಭಾವಸಂವಾದವೆ ಮುಖ್ಯ ಲಕ್ಷ್ಯ. ಆ ಭಾವಸಂವಾದ ಯಾವ ರಸಸ್ಥಿತಿಯನ್ನು ಅಥವಾ ಭಾವಭಿತ್ತಿಜ  ಚಿತ್ತಭಂಗಿಯನ್ನು ಸಹೃದಯನಲ್ಲಿ ಉಂಟುಮಾಡಬೇಕೆಂದು ಉದ್ದೇಶಿತವಾಗಿದೆಯೊ ಅದನ್ನು ನೆರವೇರಿಸಿದರೆ ಮುಗಿಯಿತು ಕಾವ್ಯದ ಕಾರ್ಯ.

ಆ ಭಾವಸಂವಾದದಿಂದಾಗುವ ರಸಾನುಭವಕ್ಕೆ ವಸ್ತುಸಂವಾದವೊಂದಿದೆಯೆ ಎಂಬ ಪಶ್ನೆಗೆ ಅರ್ಥವಿಲ್ಲವೆ? ಅಂತಹ ಭಾವಸಂವಾದದಿಂದಾಗುವ ರಸಾನುಭವ ಮಾತ್ರವೆ ಪರಮಪ್ರಯೋಜನವೂ ಪರಮ ಪುರುಷಾರ್ಥವೂ ಆಗಿರುವ ಪಕ್ಷದಲ್ಲಿ, ಅದರ ಸತ್ಯತೆ ನಮ್ಮ ವ್ಯಕ್ತಿಮಾತ್ರ ನಿಷ್ಠವಾದ ರಸಾನುಭವ ಮಾತ್ರ ಆಗಿರುವ ಪಕ್ಷದಲ್ಲಿ, ಕಾವ್ಯಕ್ಕೂ ಮತ್ತು ಯಾವುದಾದರೊಂದು ತಾತ್ಕಾಲಿಕ ಆಹ್ಲಾದವನ್ನೊ ಆವೇಶವನ್ನೊ ಮನೋಹರವಾದ ಉನ್ಮೇಷವನ್ನೊ ತಂದು ಕೊಡುವ ಮಾದಕ ಪದಾರ್ಥಕ್ಕೂ ಹೆಚ್ಚಿನ ಮೌಲ್ಯಭೇದವಿರುವಂತೆ ತೋರುವುದಿಲ್ಲ. ಕವಿಕೃತಿಯಾದರೇನಂತೆ? ಮಾದಕ ಪದಾರ್ಥವಾದರೇನಂತೆ? ಎರಡರಿಂದಲೂ ದೊರೆಕೊಳ್ಳುವುದು ತಾತ್ಕಾಲಿಕವಾದ ಆಹ್ಲಾದ, ಒಂದು ರೀತಿಯ ಮೈಮರೆಯುವಿಕೆ, ಅದನ್ನು ದೊಡ್ಡದಾಗಿ ‘ಸದ್ಯಃಪರ-ನಿರ್ವೃತ್ತಿ’ ಎಂದಾಕ್ಷಣ ಅದು ಶಾಶ್ವತ ಪ್ರಯೋಜನದ ಅಥವಾ ಪುರುಷಾರ್ಥದ ವಸ್ತುವಾಗಿಬಿಟ್ಟಿತೆ? ಅದೂ ದೈನಂದಿನ ಸಂಸಾರದ ಬೇಸರ, ದುಃಖ, ಶೋಕಸಂಕಟಾದಿಗಳಿಂದ ಸ್ವಲ್ಪಕಾಲದ ಮಟ್ಟಿಗಾದರೂ ತಪ್ಪಿಸಿಕೊಳ್ಳುವ ವಿಧಾನವಲ್ಲವೆ? ಸಾಮಾಜಿಕ ಮರ್ಯಾದೆಯನ್ನು ಕಳೆದುಕೊಳ್ಳದಂತೆ, ನಾವು ಮಾಡುವ ಪಲಾಯನವಲ್ಲವೆ?

ಈ ಎರಡು ಪಶ್ನೆಗಳಿಗೆ ನಾವು ಕೊಡುವ ಉತ್ತರಗಳಲ್ಲಿ ಒಂದರ ಉತ್ತರ ಮತ್ತೊಂದರ ಮೇಲೆ ಮಹತ್ತಾದ ಪರಿಣಾಮ ಉಂಟುಮಾಡುತ್ತದೆ ಕವಿಕೃತಿ ‘ನಿಯತಿಕೃತ ನಿಯಮರಹಿತವೆ’? ಎಂಬ ಪಶ್ನೆಗೆ ‘ಪ್ರತಿಕೃತಿದೃಷ್ಟಿ’ ಹೌದು ಎಂದು ಉತ್ತರ ಹೇಳಿದರೆ, ‘ಪ್ರತಿಮಾದೃಷ್ಟಿ’ ಅಲ್ಲ ಎಂದು ಹೇಳುತ್ತದೆ. ಸಾಮಾನ್ಯ ಮನುಷ್ಯವರ್ಗದ ದಿನದಿನದ ಅನುಭವದ ಪಂಚೇಂದ್ರಿಯ ಲೋಕಸತ್ಯಕ್ಕೆ ಕಾವ್ಯಸತ್ತೆ ಸಂವಾದಿಯಾಗಿಲ್ಲದುದರಿಂದ ಅದು ನಿಯತಿಕೃತ ನಿಯಮರಹಿತವಾದುದು ಎಂಬುದು ಪ್ರತಿಕೃತಿದೃಷ್ಟಿಯ ವಾದ. ಸಾಮಾನ್ಯ ಮನುಷ್ಯವರ್ಗವೊಂದರಿಂದಲೆ ಮನುಷ್ಯತ್ವವೆಲ್ಲ ಮುಗಿದುಬಿಡುವುದಿಲ್ಲ. ವಿಶೇಷವ್ಯಕ್ತಿಗಳೂ ಇರುತ್ತಾರೆ. ಅಲ್ಲದೆ ಪಂಚೇಂದ್ರಿಯ ಲೋಕಸತ್ಯವನ್ನು ಮೀರಿದ ಅತೀಂದ್ರಿಯ ಮತ್ತು ಅತಿಮನೋಗ್ರಾಹ್ಯವಾದ ಅನ್ಯಲೋಕಸತ್ಯಗಳೂ ಇವೆ. ಆ ಅನುಭವಗಳನ್ನು ಇಂದ್ರಿಯಗ್ರಾಹ್ಯವಾಗುವ ರೀತಿಯಲ್ಲಿ ಮಾನುಷವಾದ ಸಂಕೇತಭಾಷೆಯಿಂದ ಹೇಳಬೇಕಾದರೆ ಕವಿ ನಮ್ಮ ನಿತ್ಯ ಪರಿಚಿತ ಲೋಕನಿಯತಿಯ ನಿಯಮಗಳನ್ನು ಕ್ರಮದಲ್ಲಿ ರೂಪದಲ್ಲಿ ಉಕ್ತಿ ರೀತಿಗಳಲ್ಲಿ ಉಲ್ಲಂಘಿಸಬೇಕಾಗುತದೆ. ಆ ಉಲಂಘನೆಯಲ್ಲಿಯೂ ಅವನು ಬೇರೊಂದು ನಿಯತಿಯ ಬೇರೆ ಬೇರೆ ನಿಯಮಪ್ರಕಾರಗಳನ್ನು ಕೈಬಿಡುವುದಿಲ್ಲ. ಏಕೆಂದರೆ ಒಂದು ನಿಯತಿ ಮತ್ತು ಅದರ ನಿಯಮಗಳಿರದೆ ಯಾವ ಸೃಷ್ಠಿಯೂ ಸಾಧ್ಯವಾಗುವುದಿಲ್ಲ. ಸೃಷ್ಠಿಯೆಂದರೆ ನಿಯತಿಯಮಾಧೀನವಾಗಿಯೆ ಹೊಮ್ಮುವ ರಚನೆ.[4] ಕೃತಿಲೋಕವಾಗಲಿ ಪ್ರಕೃತಿ ಲೋಕವಾಗಲಿ ಒಂದರ ನಿಯತಿನಿಯಮಗಳು ಮತ್ತೊಂದರ ಮೇಲೆ ಅಧಿಕಾರ ನಡೆಸಲು ಅಸಮರ್ಥವಾಗಿದ್ದರೂ ತಮ್ಮ ತಮ್ಮ ನಿಯತಿನಿಯಮಗಳಿಗೆ ಅಧೀನವಾಗಿಯೆ ಇರಬೇಕು ಧಿಕ್ಕರಿಸಿದರೆ ಅವಕ್ಕೆ ಗತಿ ಪ್ರಲಯಸ್ಥತಿ[5]

ಕಪಿಗಳು ಸೇತುವೆ ಕಟ್ಟಿದುವು ಎಂಬುದರಲ್ಲಾಗಲಿ, ವಾಮನನು ತ್ರಿವಿಕ್ರಮನಾಗಿ ಆಕಾಶವನ್ನೆಲ್ಲ ಒಂದು ಪಾದದಿಂದಲೆ ತುಂಬಿ ಅಳೆದನೆಂಬುದರಲ್ಲಾಗಲಿ ಎಲ್ಲಿದೆ ನಿಯತಿಕೃತ ನಿಯಮರಾಹಿತ್ಯ? ಉಕ್ತಿಯ ಅತಿಶಯತೆಯಲ್ಲಿಯೆ? ಅಸ್ವಾಭಾವಿಕತೆಯಲ್ಲಿಯೆ? ಅದ್ಭುತದಲ್ಲಿಯೆ? ‘ಕಪಿಗಳು ಕಡಲಿಗೆ ಸೇತುವೆ ಕಟ್ಟಿದವು’ ಎನ್ನುವುದಕ್ಕೆ ಬದಲಾಗಿ ‘ಮನುಷ್ಯರು ಹೊಳೆಗೆ ಸೇತುವೆ ಕಟ್ಟಿದರು’ ಎಂದಿದ್ದರೆ ಸಾಮಾನ್ಯನ ಭೌತಮನಸ್ಸು ಅತಿಶಯೋಕ್ತಿಯ ಅನನ್ವಯದಿಂದ ದಿಗಿಲುಗೊಳ್ಳುತ್ತಿರಲಿಲ್ಲ. ತನಗೆ ಪರಿಚಿತವಾದ ಲೋಕವ್ಯಾಪಾರದ ನಿಯಮಗಳಿಗೆ ಚ್ಯತಿಯಾಗಲಿ ಪಲ್ಲಟವಾಗಲಿ ಒದಗದಿರುವುದರಿಂದ ತೃಪ್ತಿಗೊಳ್ಳುತ್ತಿತ್ತು. ಆದರೆ ಅದಕ್ಕೆ ಬಾಹ್ಯವಾದ ಲೋಕಸತ್ಯಮಾತ್ರ ಗೋಚರವಾಗುತ್ತಿತ್ತೆ ಹೊರತು ಅದರ ಹಿಂದಿರುವ ಅತ್ಯಂತ ಮುಖ್ಯವಾದ ಆಂತರಿಕವಾದ ಸತ್ಯಸ್ಯಸತ್ಯವಾದ ಭಾವ ಸತ್ಯದ ಅನುಭವವಾಗುತ್ತಿರಲಿಲ್ಲ. ಸಹೃದಯನಿಗೆ ಆ ಭಾವಸತ್ಯದ ಅನುಭವವಾಗಬೇಕೆಂಬ ವಿವಕ್ಷೆಯಿಂದಲೆ ಕವಿಕಲ್ಪನಾಪ್ರತಿಭೆ ಭೌತಲೋಕದ ನಿಯತಿನಿಯಮಗಳನ್ನು ಮೀರಿ ಭಾವಲೋಕದ ನಿಯತಿನಿಯಮಗಳಿಗೆ ಅನುಸಾರವಾಗಿ ಪ್ರತಿಮಾಸೃಜನೆಯಲ್ಲಿ ತೊಡಗುತ್ತದೆ.[6] ದರ್ಶನದೀಪ್ತವಾದ ಕವಿಕ್ರತು ತನ್ನ ಮಹಾ ಅನುಭವಕ್ಕೆ ಮೆಯ್‌ನೀಡಲು ಮನುಷ್ಯ ಲೋಕಾನುಭವದ ಪ್ರತಿಮಾಸಾಗ್ರಿಯನ್ನು ಅಮಾನುಷವೆಂಬಂತೆ ಉಪಯೋಗಿಸುತ್ತದೆ. ಕಲೆಯ ಪ್ರಕಾಶನಕ್ಕೆ ಸಾಮಗ್ರಿಯನ್ನು ಒದಗಿಸುವ ಆ ಅನುಭವ ಅಪರಿಚಿತ ಭೂಮಿಕೆಯದಾಗಿರುವುದರಿಂದ ಆ ಅಲೌಕಿಕತೆಯನ್ನು ಪ್ರಕಟಿಸುವುದಕ್ಕೆ ಲೋಕಾತಿಕ್ರಾಂತವಿಧಾನಗಳನ್ನೆ ಅನುಸರಿಸಬೇಕಾಗುತ್ತದೆ.[7]

ಆ ಕಾರಣಕ್ಕಾಗಿ ಕವಿನಿರ್ಮಿತಿಯನ್ನು ನಿಯತಿಕೃತನಿಯಮರಹಿತ ಎಂದು ವರ್ಣಿಸುವುದರಲ್ಲಿ ಪೂರ್ಣಸತ್ಯವಿರುವುದಿಲ್ಲ. ಯಾವುದೋ ನಾವು ಒಪ್ಪಿರುವ ಒಂದು ಭೂಮಿಕೆಯ ನಿಯತಿಗೆ ಅದು ವ್ಯತ್ಯಸ್ತವಾದ ಮಾತ್ರಕ್ಕೆ ಅದನ್ನು ಹಾಗೆ ವರ್ಣಿಸುವುದು ತಪ್ಪಾಗುತ್ತದೆ. ಕಾವ್ಯದ ಭೂಮಿಕೆ ಉದ್ದೇಶ ಪ್ರಯೋಜನಗಳಿಗೆ ಅನುಸಾರಿಯಾಗಿ ಕವಿಯ ಕಲ್ಪನಾಪ್ರತಿಭೆ ಪರಿಚಿತ ಲೋಕ ನಿಯತಿಯನ್ನು ಉತ್ತರಿಸದರೂ ಮತ್ತೊಂದು ಸೂಕ್ಷ್ಮತರ ನಿಯತಿಗೆ ಅಧೀನವಾಗಿ ಸೃಜನಕಾರ್ಯದಲ್ಲಿ ತನ್ನ ಗುರಿಯನ್ನು ಸಾಧಿಸುತ್ತದೆ.

ಇನ್ನು ಎರಡನೆಯ ಪ್ರಶ್ನೆ: ಕಾವ್ಯಭಾಷೆಯ ಪ್ರಯೋಜನ ಅದರ ಭಾವೋಪಯೋಗದಲ್ಲಿದೆ. ಅದರ ಸತ್ಯ ಲೋಕಸತ್ಯವಲ್ಲ, ಭಾವಸತ್ಯ. ಅದರಿಂದ ನಾವು ನಿರೀಕ್ಷಿಸಬೇಕಾದದ್ದು ಭಾವಸಂವಾದವನ್ನೆ ಹೊರತು ಲೋಕ ಸಂವಾದವನ್ನಲ್ಲ. ಅಲ್ಲಿಗೆ ಪ್ರಕೃತವಾದದ್ದು ಪ್ರತಿಮಾದೃಷ್ಟಿಯೆ ಹೊರತು ಪ್ರತಿಕೃತಿ ದೃಷ್ಟಿಯಲ್ಲ – ಎಂಬುದನ್ನೆಲ್ಲ ಒಪ್ಪಿಕೊಂಡರೂ ಆ ಭಾವಸತ್ಯ ಬರಿಯ ಭಾವಮಾತ್ರವೋ? ಅಥವಾ ಅದರಲ್ಲಿ ಇನ್ನೇನಾದರೂ ಸತ್ಯವಿದೆಯೊ? ಎಂಬ ಪ್ರಶ್ನೆಗೆ ನಾವು ಕೊಡುವ ಉತ್ತರದಲ್ಲಿ ಕಾವ್ಯದ ಪುರುಷಾರ್ಥ ನಿರ್ಣಯವಾಗುತ್ತದೆ.

ಕವಿ ಯಾವ ಮಟ್ಟದವನೆ ಆಗಲಿ, ಕಾವ್ಯ ಯಾವ ರೀತಿಯದೆ ಆಗಲಿ ಸಹೃದಯನಿಗೆ ಅವನ ಕೃತಿಯ ಅಧ್ಯಯನದಿಂದಾಗುವ ಪ್ರಯೋಜನ ಬರಿಯ ಭಾವವಿಲಾಸ; ವ್ಯಕ್ತಿಗತ ಮತ್ತು ಸಂಪೂರ್ಣವಾಗಿ ವೈಯಕ್ತಿಕವಾದದ್ದು. ಆ ಉಲ್ಲಾಸವನ್ನೊ ಆಹ್ಲಾದವನ್ನೊ ಸವಿದರಾಯಿತು. ಆ ಸವಿಯುವಿಕೆಯೆ ರಸಾನುಭವ. ಅದಕ್ಕೆ ಅದೇ ಪ್ರಯೋಜನ. ಇನ್ನಾವುದಾದರೂ ಬೇರೆಯ ಪ್ರಯೋಜನವನ್ನು ಹುಡುಕುವುದು ವ್ಯರ್ಥ.[8] ಒಂದು ವೇಳೆ ಅಂತಹ ಬೇರೊಂದು ಶಾಶ್ವತ ಪ್ರಯೋಜನವೇನಾದರೂ ಇದೆ ಎಂದು ಭಾವಿಸಿದರೆ ಅದು ಸಹೃದಯನ ಭ್ರಮೆ. ಬಹುಶಃ ಸ್ವಾರಸ್ಯವಾದ ಮಧುರವಾದ ತೃಪ್ತಿಕರವಾದ ಭ್ರಮೆ. ‘ಪಾತಾಳದಲ್ಲಿ ಪಾಪಚ್ಚಿ’ಯಾಗಲಿ, ‘ಬೊಮ್ಮನಹಳ್ಳಿಯ ಕಿಂದರೆಜೋಗಿ’ಯಾಗಲಿ, ‘ಗೋವಿನ ಕಥೆ’ಯಾಗಲಿ, ಡಾಂಟೆಯ ‘ಡಿವೈನ್ ಕಾಮೆಡಿ’ಯಾಗಲಿ, ಶ್ರೀ ಅರವಿಂದರ ‘ಸಾವಿತ್ರಿ’ಯಾಗಲಿ, ವರ್ಡ್ಸ್‌‌ವರ್ತ್‌ ಕವಿಯ ‘ಟಿಂಟರ್ನ್‌ ‌ಅಬೆ’ಯಾಗಲೆ, ಕೌಪರನ ‘ಜಾನ್‌ ಗಿಲ್ಪನ್‌’ ಆಗಲಿ, ಕೋಲ್‌ರಿ‌ಜ್‌ನ ‘ರೈಮ್‌ ಆಫ್‌ ದಿ ಏನ್ಷಂಟ್‌ ಮ್ಯಾರಿನರ್’ ಆಗಲಿ ಎಲ್ಲದರ ಪ್ರಯೋಜನವೂ ಬರಿಯ ಭಾವ ಸ್ವಾರಸ್ಯಾನುಭವ. ಅದರಲ್ಲಿ ಏನಾದರೂ ತಾತ್ತ್ವಿಕವಾದ ಸತ್ಯಾಂಶವನ್ನು ಕಾಣಲೆಳಸುವುದು ಅವೈಜ್ಞಾನಿಕ. ತುದಿಯಲ್ಲಿ ರಸಾನುಭವಕ್ಕೂ ಹಾನಿಕರ, ಹುಸಿನಂಬಿಕೆಯ ಬುಡ ಅಳ್ಳಾಡಿದರೆ![9]

ಮೇಲಣ ದೃಷ್ಟಿ ನಿಜವಾದರೆ ಜಗತ್ತಿನ ಕಾವ್ಯಗಳೆಲ್ಲದರ ಬೆಲೆ ಹೆಂಡದ ಬೆಲೆಯ ಮಟ್ಟಕ್ಕೆ ಇಳಿದುಹೋಗುವುದರಲ್ಲಿ ಸಂದೇಹವಿಲ್ಲ; ಅಥವಾ ಹೆಚ್ಚು ಎಂದರೆ ಹೆಂಡದ ಮಟ್ಟಕ್ಕಿಂತ ತುಸು ಮೇಲಿನ ಸ್ಥಾನದಲ್ಲಿ ಉಳಿಯಬಹುದೇನೊ!

ಆಧುನಿಕ ಪಾಶ್ಚಾತ್ಯ ಸಾಹಿತ್ಯ ವಿಮರ್ಶಕರಲ್ಲಿ ವೈಜ್ಞಾನಿಕ ದೃಷ್ಟಿ ಪ್ರಾಯೋಗಿಕ ಮನಶ್ಯಾಸ್ತ್ರಗಳಿಂದ ಪ್ರೇರಿತರಾಗಿ ಕಾವ್ಯ, ಕಾವ್ಯಭಾಷೆ ಮತ್ತು ಕಾವ್ಯಾನುಭವಗಳನ್ನು ವಿಶ್ಲೇಷಿಸಹೊರಟವರಲ್ಲಿ ಐ.ಎ. ರಿಚರ್ಡ್ಸ್‌ ಪ್ರಸಿದ್ದರಾಗಿದ್ದಾರೆ. ಅವರು ಆ ಕಾರ್ಯಕ್ಕೆ ಉನ್ನತ ಉದ್ದೇಶದಿಂದಲೆ ತೊಡಗಿದ್ದಾರೆ. ಕಲಾನುಭವ ಕವ್ಯಾನುಭವಗಳು ಖಿಲವಾಗುತ್ತಿರುವ ಈ ವೈಜ್ಞಾನಿಕ ಯುಗದಲ್ಲಿ, ಆರ್ಥಿಕವಾಗಿ ಮುಂದುವರಿಯುತ್ತಿದ್ದರೂ ಮಾನವಚೇತನೆಗೆ ಹಿಂದಿನ ಮತಶ್ರದ್ದೆಯ ಕೀಲುತಪ್ಪಿದಂತಾಗಿ ಅಶಾಂತಿ, ಅತೃಪ್ತಿ, ಅಸೂಯೆ, ಸಂದೇಹ, ಸಂಶಯ, ಅತಿ ಕಾಮುಕತೆ, ಆದರ್ಶತಿರಸ್ಕಾರ, ಧ್ಯೇಯಲಘುತ್ವ ಇತ್ಯಾದಿಗಳಿಂದ ಇಳಿಯುತ್ತಿರುವ ನಾಗರಿಕತೆಯ ಕಬ್ಬಿಣದ ಕರಾಳಮುಷ್ಟಿಯಲ್ಲಿ ಸಿಕ್ಕಿ ಜಜ್ಜರಿತವಾಗಿರುವ ಮಹಾಯುದ್ದಾನಂತರದ ಪಾಶ್ಚಾತ್ಯ ಜನರ ಸೀಳು ಸೀಳಾದ ವ್ಯಕ್ತಿತ್ವಕ್ಕೆ ರಸಾನುಭವದ ರಕ್ಷಣೆಯನ್ನು ಒದಗಿಸಬೇಕೆಂಬುದೆ ಅವರ ಆಶಯ. ಹಿಂದಿನ ಕಾವ್ಯಾನುಭವದಲ್ಲಿ ಅಂತರ್ಗತಾಂಶವೆಂಬಂತಿದ್ದ ತಾತ್ವಿಕವಾದ ಮತ್ತು ಮತೀಯವಾದ ನಂಬಿಕೆಗಳನ್ನು ಇಂದಿನ ವೈಜ್ಞಾನಿಕ ದೃಷ್ಟಿ ನುಂಗಲಾರದು. ರಸಾಂಶವೂ ಮತ್ತು ನಂಬಿಕಗಳೂ ಎಷ್ಟರಮಟ್ಟಿಗೆ ಬೆರೆತುಕೊಂಡಿವೆ ಎಂದರೆ ಒಂದನ್ನುಳಿದು ಒಂದನ್ನು ಮಾತ್ರ ಸ್ವೀಕರಿಸಲು ಸಾಧ್ಯವಾಗುವಂತೆಯೆ ಇಲ್ಲ. ಉಗುಳಿದರ ಎರಡನ್ನೂ ಉಗಳಬೇಕು; ನುಂಗಿದರೆ ಎರಡೂ ಹೊಟ್ಟೆಗೆ ಹೋಗುತ್ತವೆ! ಇಂತಹ ಪುಲಿದರಿಯ ಪರಿಸ್ಥಿತಿಯಲ್ಲಿ ಅವೈಜ್ಞಾನಿಕವಾದ ಬೌದ್ಧಿಕಾಂಶಗಳನ್ನೂ ಶ್ರದ್ಧಾಂಶಗಳನ್ನೂ ನುಂಗಲು ಹೇಸಿದ ವಿಜ್ಞಾನದೃಷ್ಟಿ ಎರಡನ್ನೂ ಉಗುಳಲು ನಿಶ್ಚಯಿಸಿ, ಹೊಟ್ಟಿನ ಜೊತೆಗೆ ಕಾಳನ್ನೂ ಹೊರಗೆಸೆಯಿತು. ಯಾವಾಗ ಜನಹೃದಯ ಅಂತಹ ಭಾವಶಾಂತಿ ಮತ್ತು ರಸಪುಷ್ಟಿಗಳಿಂದ ವಂಚಿತವಾಯಿತೊ ಆಗ ಸಂಭವಿಸಿತು ಅತೃಪ್ತಿ ಅಶಾಂತಿಗಳ ರುಜೆ. ರಸಾನುಭವದ ಸಾಂತ್ವನ ಕ್ಷೇಮಂಕರ ಪ್ರಭಾವವನ್ನರಿತ ರಿಚರ್ಡ್ಸ್‌ ಮತ್ತು ಅವರಂತಹ ಸಾಹಿತ್ಯ ಮಿವರ್ಶಕರು ರಸಾಂಶದ ಮಿಶ್ರಣದಲ್ಲಿರುವ ಬೌದ್ಧಿಕಾಂಶ ಶ್ರದ್ಧಾಂಶಗಳನ್ನು ಅದರ ಭಾವಾಂಶದಿಂದ ಪ್ರತ್ಯೇಕಿಸಿದರೆ ವಿಜ್ಞಾನದೃಷ್ಟಿ ಅವಮಾನಿತವಾಗದೆ ಕಾವ್ಯದ ಭಾವಾಂಶದಿಂದ ಪುಷ್ಟಿ ಪಡಿಯಲು ಹಿಂಜರಿಯದೆಂದು ನಿರ್ಣಯಿಸಿ ರಸಾನುಭವಕ್ಕೆ ಭಂಗಬರದಂತೆ ಅವನ್ನು ವಿಭಜಿಸಿ ಪ್ರತ್ಯೇಕಿಸಲು ಪ್ರಯತ್ನಿಸಿದ್ದಾರೆ. ಆ ಪ್ರಯತ್ನದ ಫಲವೇ ಮೇಲೆ ಪ್ರತಿಪಾದಿತವಾಗಿರುವ ಸಿದ್ಧಾಂತ.[10]

ಆ ಸಿದ್ದಾಂತದ ಪ್ರಕಾರ ನಮ್ಮ ರಸಾನುಭವಕ್ಕೆ ಕಾವ್ಯದಲ್ಲಿರಬಹುದಾದ ಮತೀಯ ತಾತ್ವಿಕ ಬೌದ್ಧಿಕಾಂಶ ಶ್ರದ್ಧಾಂಶಗಳು ಅನಾವಶ್ಯಕ; ಅವು ಬರಿಯ ಆವಲಂಬನ ರೂಪವಾದ ನಂಬಿಕೆಗಳೆ ಹೊರತು ವೈಜ್ಞಾನಿಕ ಸತ್ಯಗಳಲ್ಲ. ಆದ್ದರಿಂದ ಅವುಗಳನ್ನು ಸಂಪೂರ್ಣವಾಗಿ ತ್ಯಜಿಸಿ ಅಥವಾ ನಿರ್ಲಕ್ಷಿಸಿ, ಭಾವಾಂಶವನ್ನು ಮಾತ್ರ ಅನುಭವಿಸಿ, ನಮ್ಮ ಬದುಕಿನ ಛಿದ್ರತೆಯನ್ನು ಮುಚ್ಚಿ, ಶೂನ್ಯತೆಯನ್ನು ತುಂಬಿಕೊಂಡು, ತುಂಬುಬಾಳನ್ನು ಬಾಳಬೇಕು.

ಪೂರ್ವೋಕ್ತ ಸಿದ್ದಾಂತವನ್ನು ಒಪ್ಪಿಕೊಂಡರೆ ಎಂತಹ ಆತ್ಮವಂಚಕವಾದ ಮಿಥ್ಯಾಚಾರಕ್ಕೆ ಸಮ್ಮತಿಸಿದಂತಾಗುತ್ತದೆ ಎಂಬುದು ಒಂದು ಮತ ಪ್ರಪಂಚದ ನಿದರ್ಶನ ತೆಗೆದುಕೊಂಡರೆ ಬಯಲಾಗುತ್ತದೆ: ಭಕ್ತನೊಬ್ಬನು ತನ್ನ ಇಷ್ಟ ದೇವತೆಯ ಉಪಾಸನೆಯಲ್ಲಿ ತೊಡಗಿರುತ್ತಾನೆ. ಅವನು ಅರ್ಚಿಸುತ್ತಿರುವ ವಿಗ್ರಹ ಗಣೇಶನದು. ಆ ಪೂಜೆ ಪ್ರಾರ್ಥನೆಗಳಿಂದ ಅವನಿಗೆ ತನ್ನ ಬದುಕಿನಲ್ಲಿ ಬಂದೊದಗಬಹುದಾದ ಹಾನಿ ಹತಾಶೆ ಕಷ್ಟ ನಿಷ್ಠುರ ದುಃಖ ಸಂಕಟಾದಿಗಳನ್ನು ಸಹಿಸುವ ಮನಸ್ಸಮಾಧಾನ ಚಿತ್ತಶಾಂತಿ ಹೃದಯಧೈರ್ಯ ಇವುಗಳೆಲ್ಲ ಒದಗುತ್ತವೆ. ಆ ಮನೋಮಯದ ಪರಿಣಾಮ ಪ್ರಾಣಮಯ ಅನ್ನಮಯಗಳನ್ನೂ ವ್ಯಾಪಿಸುತ್ತದೆ. ಅವನು ತೃಪ್ತನಾಗಿರುತ್ತಾನೆ. ಶಾಂತನಾಗಿರುತ್ತಾನೆ, ಸಮಾಜ ಹಿತೈಷಿಯಾಗಿರುತ್ತಾನೆ, ದೇಹ ಪ್ರಾಣ ಮನಸ್ಸುಗಳಲ್ಲಿ ಆರೋಗ್ಯವಂತನಾಗಿರುತ್ತಾನೆ.

ಅಂತಹ ಭಕ್ತನ ಶ್ರದ್ಧೆಯನ್ನು ಒಬ್ಬ ವಿಚಾರವಾದಿಯಾದ ವಿಜ್ಞಾನಿ ಮಿತ್ರನು ಭಂಗಿಸುತ್ತಾನೆ. ಆ ಶ್ರದ್ಧೆ ಬರಿಯ ಮೌಢ್ಯ ಎಂದು ತೋರಿಸಿಕೊಡುತ್ತಾನೆ. ಆ ದೇವತೆ ಬರಿಯ ಮಣ್ಣಿನ ವಿಗ್ರಹವಾಗುತ್ತದೆ. ಅದೊಂದು ಮತಭ್ರಾಂತಿ ನಿರ್ಮಿಸಿರುವ ವಿಕಾರಸೃಷ್ಟಿಯಾಗುತ್ತದೆ. ಉಪಾಸನೆ ನಿಲ್ಲುತ್ತದೆ. ಭಕ್ತಿ ಹಾರಿಹೋಗುತ್ತದೆ. ಸ್ವಲ್ಪ ಕಾಲದಲ್ಲಿಯೆ ಭಕ್ತನಾಗಿದ್ದ ಅವನು ನವನಾಗರಿಕನಾಗುತ್ತಾನೆ. ಅವನಲ್ಲಿ ಹಿಂದಿದ್ದ ಸಮಾಧಾನ ತೃಪ್ತಿ ಧೈರ್ಯ ಶರಣಾಗತಭಾವ ಇವೆಲ್ಲ ಹೋಗಿ ಅಶಾಂತಿ ಅಸೂಯೆ ಅಲ್ಪತೆ ಅಹಂಕಾರ ಇವುಗಳ ಪರಿಣಾಮವಾಗಿ ಅವನ ವ್ಯಕ್ತಿತ್ವದ ಮೇಲೆ ಆಘಾತವಾಗುತ್ತದೆ. ಅವನು ಅಸ್ವಸ್ಥನಾಗುತ್ತಾನೆ.

ಅವನಿಗೊದಗಿದ ದುರವಸ್ಥೆಯನ್ನು ನೋಡಿ ಆ ವಿಚಾರವಾದಿಮಿತ್ರನು ಆಲೋಚನೆಗೀಡಾಗುತ್ತಾನೆ. ಅವನ ಗಣೇಶ ಅವಿಚಾರದ ಮೌಢ್ಯವಾಗಿದ್ದರೂ ಉಪಾಸನೆಯ ಭಕ್ತಿಭಾವದಿಂದ ಅವನಿಗೆ ಮನಸ್ಸಮಾಧಾನ ಆತ್ಮಶಾಂತಿ ದೊರೆಯುತ್ತಿದ್ದುವು. ಆದ್ದರಿಂದ ಆ ಭಕ್ತಿಯ ಭಾವ ಮಾತ್ರವನ್ನು ಉಳಿಸಿಕೊಂಡು ಅದರ ಹಿಂದಿರುವ ಭಗವಂತನನ್ನು ಹೊರಕ್ಕೆ ತಳ್ಳುವ ಉಪಾಯ ಹೇಳಿಕೊಡುತ್ತಾನೆ: “ನಿನ್ನ ಗಣೇಶನೇನೊ ಸುಳ್ಳು; ಅದೆಲ್ಲ ಬರಿಯ ಪುರಾಣಕಥೆ. ಮಕ್ಕಳಿಗೂ ಮಕ್ಕಳಂತಹವರಿಗೂ ಸ್ವಾರಸ್ಯಕ್ಕಾಗಿ ಕಟ್ಟಿದ ಕಟ್ಟುಕತೆ. ಆದರೆ ನೀನು ಅದರಿಂದ ಪಡೆಯುತ್ತಿದ್ದ ಭಕ್ತಿಭಾವ ಇತ್ತಲ್ಲ ಅದು ನಿನ್ನ ಬದುಕಿನ ತುಷ್ಟಿಪುಷ್ಟಿಗಳಿಗೆ ಸಹಾಯಕವಾಗಿತ್ತು. ಈಗ ಆ ಭಾವಾನುಭವ ತಪ್ಪಿದುದರಿಂದ ನಿನಗೆ ಅನಾರೋಗ್ಯವಾಗಿದೆ; ನಿನ್ನ ಮನಸ್ಸು ಅಶಾಂತವಾಗಿದೆ. ಆ ಭಾವಾನುಭಾವವೇನೊ ಸ್ವಸ್ಥಜೀವನಕ್ಕೆ ಅತ್ಯಾವಶ್ಯಕ. ಅದರೆ ನಿನ್ನ ಗಣೇಶವಿಗ್ರಹದ ಸತ್ಯ ನಿನ್ನ ಭಕ್ತಿಭಾವದ ಅನುಭವದಲ್ಲಿದಯೆ ಹೊರತು ಆ ದೇವತೆಯ ಸತ್ಯತೆಯಲ್ಲಾಗಲಿ ಆ ವಿಗ್ರಹದ ಶಕ್ತಿಯಲ್ಲಾಗಲಿ ಇಲ್ಲ ಎಂಬುದನ್ನು ಚೆನ್ನಾಗಿ ಮನನಮಾಡು. ಆ ಗಣೇಶವಿಗ್ರಹದ ಸತ್ಯ ವಸ್ತುಸತ್ಯವಲ್ಲ; ಭಾವಸತ್ಯ. ಅಲ್ಲಿ ನಾವು ನಿರೀಕ್ಷಿಸಬೇಕಾದ್ದು ಭಾವಸಂವಾದವನ್ನೆ ಹೊರತು ವಸ್ತುಸಂವಾದ ಅಥವಾ ಲೋಕಸಂವಾದವನ್ನಲ್ಲ. ನಿಜಕ್ಕೂ ಅಲ್ಲಿ ಸತ್ಯವಾಗುವುದಕ್ಕೆ ಯಾವ ಆಧಾರವಸ್ತುವೂ ಇಲ್ಲ; ಇರಬೇಕಾದ್ದೂ ಇಲ್ಲ. ಭಾವವೆ ಮುಖ್ಯ; ಭಾವವೆ ಪರಮ ಪ್ರಯೋಜನ. ಆದ್ದರಿಂದ ಆ ಭಕ್ತಿಭಾವವನ್ನುಳಿಸಿಕೊ; ಭಗವಂತನನ್ನು ಬಿಸಾಡು. ಅಥವಾ ನಿನ್ನ ಭಕ್ತಿಭಾವದ ಅನುಭವಕ್ಕೆ ಆ ಬಿಸಾಡುವಿಕೆಯಿಂದ ತೊಂದರೆ ಉಂಟಾಗುವುದಾದರೆ ತತ್ಕಾಲದ ಮಟ್ಟಿಗೆ ನಂಬಿದರೂ ಚಿಂತೆಯಿಲ್ಲ. ಆದರೆ ಆ ನಂಬಿಕೆ ಬರಿಯ ಭಾವಮಾತ್ರ ಪ್ರಯೋಜನಕಾರಿ ಎಂಬುದು ನೆನಪರಲಿ. ಆ ನಂಬಿಕೆ ಯಾವ ವೈಜ್ಞಾನಿಕ ವಸ್ತುವಿನ ಬೆಂಬಲವೂ ಇಲ್ಲ.”

‘ಭಕ್ತಿಭಾವವಿರಲಿ, ಭಗವಂತ ಮಾತ್ರ ತೊಲಗಲಿ!’ ಎಂಬ ಈ ಸಿದ್ದಾಂತವನ್ನು ಆ ಉಪಾಸಕ ಹೇಗೆ ಜೀರ್ಣಿಸಿಕೊಳ್ಳುತ್ತಾನೆ? ಅವನ ಭಕ್ತಿಯ ಬಲಕ್ಕೆ. ಅದರ ಕ್ಷೇಮಂಕರ ಶಕ್ತಿಗೆ ಅವಶ್ಯ ಕಾರಣವೆ-ಗಣೇಶ ಎಂಬ ದೇವತೆಯಿದ್ದಾನೆ; ಅವನ ಅನುಗ್ರಹ ಶಕ್ತಿಯೆತನ್ನೆಲ್ಲ ಮನೋರಥಗಳನ್ನು ಈಡೇರಿಸುತ್ತಿದೆ; ಅವನು ನಿಜವಾಗಿಯೂ ಸತ್ಯವಾಗಿಯೂ – ಬರಿಯ ತನ್ನ ಭಾವ ಮಾತ್ರದಲ್ಲಲ್ಲ  – ವಿಘ್ನೇಶ್ವರನಾಗಿರುವುದರಿಂದಲೆ ಬದುಕಿನ ಎಡರು ತೊಡರುಗಳನ್ನು ಪರಿಹರಿಸಲು ಸಮರ್ಥನಾಗಿದ್ದಾನೆ ಎಂಬ ದೃಢವಾದ ವಿಸ್ವಾಸ! ಅದು ಬರಿಯ ಶ್ರದ್ಧೆಯಲ್ಲ. ಬುದ್ಧಿಯ ಅನುಮತಿಯೂ ಅದಕ್ಕಿದ್ದೇ ಇರುತ್ತದೆ. ಭಗವತ್ ತತ್ತ್ವವೆ ಇಲ್ಲವೆಂದು ಬುದ್ಧಿಪೂರ್ವಕವಾಗಿ ಒಪ್ಪಿಕೊಂಡಮೇಲೆಯೂ ಅವನ ಮೇಲೆ ಭಕ್ತಿ ಹುಟ್ಟಲು ಸಾಧ್ಯವೆ? ಆಗ ಭಕ್ತಿ ಎಂಬುದಕ್ಕೇನಾದರೂ ಅರ್ಥವಿದೆಯೆ? ಅಂತಹ ಸೃಷ್ಟಣೆಯ ಭಕ್ತಿ ಎಂದಾದರೂ ಭಾವವಾಗಲು ಸಾಧ್ಯವೆ? ಎಂತಹ ಆತ್ಮವಂಚನಾ ಚತುರನಿಗಾದರೂ ಆ ರೀತಿ ಆತ್ಮವಂಚನೆಮಾಡಿಕೊ ಎಂದರೆ ಕಣ್ಣುಕಣ್ಣು ಬಿಡದಿರಲು ಸಾಧ್ಯವಾಗುತ್ತದೆಯೆ?

ಮೇಲೆ ಪ್ರತಿಪಾದಿಸಿದ ವಿಷಯವು ಮತಪ್ರಪಂಚಕ್ಕೆ ಹೇಗೊ ಹಾಗೆಯೆ ಕಾವ್ಯಕಲಾ ಪ್ರಪಂಚಕ್ಕೂ ಅನ್ವಯಿಸುತ್ತದೆ. ಕಾವ್ಯದ ಮಟ್ಟಿಗೆ ಭಾವ ಸಂವಾದವೆ ಪ್ರಕೃತವೆಂದು ಒಪ್ಪಿದರೂ, ಅಂತಹ ಭಾವಕ್ಕೆ ಯಾವುದೊ ರೀತಿಯಲ್ಲಿ, ಯಾವುದಾದರೊಂದು ಭೂಮಿಕೆಯಲ್ಲಿ, ಯಾವುದೊ ಸುಕ್ಷ್ಮಾತಿ ಸೂಕ್ಷ್ಮವಾದ ಸ್ವರೂಪದಲ್ಲಿ ವಸ್ತುಸಂವಾದವೊಂದಿರುತ್ತದೆ; ಅದು ಸತ್ಯ, ನಿತ್ಯಸತ್ಯ-ಎಂಬ ನಂಬಿಕೆ, ಶ್ರದ್ಧೆ, ವಿಶ್ವಾಸ ಇಲ್ಲದಿದ್ದರೆ ನಿಜವಾದ ಭಾವಸಂವಾದ ಸಾಧ್ಯವಾಗುವುದೂ ಅಸಂಭವನೀಯ. ಮನಸ್ಸಿನ ಅಶಾಂತಿಯನ್ನು ಪರಿಹರಿಸಲೆಂದು ಹೊರಟ ಉಪಾಯಸಿದ್ಧಾಂತವು ಅತ್ಯಂತ ಜಟಿಲ ಮನೋರೋಗಗಳಿಗೆ ಕಾರಣವಾದರೆ ನಾವು ಆಶ್ಚರ್ಯಪಡಬೇಕಾಗಿಲ್ಲ.

ಯೋಗವಿಜ್ಞಾನದಲ್ಲಿ ಮುಂದುವರಿದು ಅನ್ಯಲೋಕಗಳ ಮತ್ತು ಬೇರೆ ಬೇರೆ ಭೂಮಿಕೆಗಳ ಅನುಭವಗಳನ್ನು ಪಡೆದವರಿಂದ ಈ ವಿಷಯದಲ್ಲಿ ನಮಗೆ ಹೆಚ್ಚು ಬೆಳಕು ದೊರೆಯುವ ಸಂಭವವಿದೆ.[11]

ಯಾವ ವಸ್ತುಸಂವಾದದ ಅಪೇಕ್ಷೆಯೂ ಇಲ್ಲದೆ ಭಾವಸಂವಾದ ಮಾತ್ರದಿಂದಲೆ ಸಾಧ್ಯವಾಗುವ ನಿರಪೇಕ್ಷಕವಾದ ರಸಾನುಭವವೆ ಪರಮ ಪ್ರಯೋಜನ ಎಂಬ ಸಿದ್ದಾಂತ ಅಂಶಸತ್ಯವಾಗಬಹುದಲ್ಲದೆ ಪೂರ್ಣಸತ್ಯವಾಗಲಾರದು. ‘ಬೊಮ್ಮನ ಹಳ್ಳಿಯ ಕಿಂದರಜೋಗಿ’ಯಂತಹ ಕಥನ ಕವನಗಳಲ್ಲಿ ಸಹೃದಯನು ಯಾವ ಲೋಕ ಅಥವಾ ವಸ್ತು ಸಂವಾದವನ್ನು ಬೌದ್ಧಿಕವಾಗಿ ನಿರೀಕ್ಷಿಸದೆ ಅಥವಾ ಯಾವ ನಂಬಿಕೆಯ ಬೆಂಬಲವನ್ನೂ ಹಾರೈಸದೆ ಕಾವ್ಯಾನಂದವನ್ನು ಅನುಭವಿಸಬಹುದು. ಅದರ ‘ನಿಯತಿಕೃತನಿಯಮ ರಾಹಿತ್ಯ’ದಿಂದ ಅವನ ಲೋಕವಿಜ್ಞಾನಕ್ಕೆ ಯಾವ ಧಕ್ಕೆಯೂ ಒದಗದಂತೆ ಅದರ ಲೀಲಾಸತ್ಯವನ್ನು ಸವಿಯಬಹುದು. ಆದರೆ ವರ್ಡ್ಸವರ್ತ ಕವಿ ಅನುಭವಿಸಿದ ‘ಭಾವ ಸಮಾಧಿ’ (that Blessed Mood)ಯ ವಸ್ತುಸಂವಾದ ಸತ್ಯತೆಯನ್ನು ಧಿಕ್ಕರಿಸಿ ಬರಿಯ ‘ಭಾವಸಂವಾದ ಸತ್ಯತೆ’ಯನ್ನು ಸ್ವೀಕರಿಸಲು ಪ್ರಯತ್ನಿಸಿದರೆ ತನಗೆ ತಾನೆ ಮೋಸಮಾಡಿಕೊಂಡಂತಾಗುತ್ತದೆ. ವರ್ಡ್ಸವರ್ತ ಉಪಯೋಗಿಸಿರುವ ಭಾಷೆಯ ಮತ್ತು ಕಲ್ಪನೆಯ ಪ್ರತಿಮೆಗಳನ್ನೆ ನಿತ್ಯಸತ್ಯಗಳೆಂದು ನಾವು ಒಪ್ಪಬೇಕಾಗಿಲ್ಲ.[12] ಆ ಭಾಷೆ ಪ್ರತಿಮೆಗಳು ಸೂಚಿಸುವ ಅನುಭವ – ಭಾವಾನುಭವ, ರಸಾನುಭವ – ಯಾವುದೊ ಅಚಿಂತ್ಯವೂ ಅತೀತವೂ ‘ಪ್ರತಿಭಾನ ಮಾತ್ರ ಸಂವೇದ್ಯ’ವೂ ಆಗಿರುವ ನಿತ್ಯಸತ್ಯದ ವಸ್ತುಸಂವಾದಕ್ಕೆ ಸಾಕ್ಷಿಯಾಗಿದೆ ಎಂಬುದನ್ನು ಮಾತ್ರ ನಾವು ಚೈತನ್ಯಪೂರ್ವಕವಾಗಿ ಗ್ರಹಿಸಲೆಬೇಕಾಗುತ್ತದೆ. ಇಲ್ಲದಿದ್ದರೆ, ಆ ಕವನದ ಹೃದ್ವಸ್ತುವೆ ಆಗಿರುವ ಆ ಕವಿಯ ‘ಅನುಭಾವ’ದ ದರ್ಶನವನ್ನು ಸಹೃದಯನು ಭ್ರಾಂತಿ ಎಂದು ತಿರಸ್ಕರಿಸುವದಾದರೆ ‘ಟಿಂಟರ್ನ್‌ ಅಬೆ’ ಕವನವು ನಿರ್ಜೀವ ಅಲಂಕಾರ ಮಾತ್ರದ ವಸ್ತುವಾಗಿ ತನ್ನ ಈಗಿನ ಸ್ವರ್ಗ ಶಿಖರಸ್ಥಾನದಿಂದ ಪತಿತವಾಗಿ ಯಃಕಶ್ಚಿತ ಪದ್ಯ ಪಂಕ್ತಿಗೆ ಬೀಳುವುದರಲ್ಲಿ ಸಂದೇಹವಿಲ್ಲ.

ಲಘುಕವಿಗಳಿಗೂ ಲಘುಕೃತಿಗಳಿಗೂ ಅನ್ವಯವಾಗಬಹುದಾದ ಭಾವಸಂವಾದ ವಾದದ ಪರಿಮಿತ ಪರಿಧಿಯ ಒಳಕ್ಕೆ ದ್ರಷ್ಟಾರರೂ ರಸಋಷಿಗಳೂ ಆಗಿರುವ ಮಹಾಕವಿಗಳ ದರ್ಶನದೀಪ್ತ ಮಹೋನ್ನತ ಕೃತಿಗಳನ್ನು ತಳ್ಳಲು ಸಾಧ್ಯವಾಗುವುದಿಲ್ಲ. ಅವರ ಕೃತಿಗಳು ನಿತ್ಯಸತ್ಯಗಳನ್ನೂ ಮತ್ತು ಚಿರಂತನ ಪುರುಷಾರ್ಥಗಳನ್ನೂ ಅಭಿವ್ಯಕ್ತಗೊಳಿಸುವ ಪ್ರತಿಮಾವಿಧಾನದ ಸೃಜನೆಗಳಾಗಿವೆ. ಅವು ಹೊರನೋಟಕ್ಕೆ ವೈಯಕ್ತಿಕವಾದ ವ್ಯಷ್ಟಿಸೃಷ್ಟಿಗಳಾಗಿ ತೋರಿದರೂ ಒಳಹೊಕ್ಕು ನೋಡಿದರೆ ಶಕ್ತಿಮಯವಾದ ಸಮಷ್ಟಿ ಪ್ರಜ್ಞೆಯ ಆವಿರ್ಭಾವಗಳಾಗಿರುತ್ತವೆ. ಅಲ್ಲಿ ಸಹೃದಯನಿಗೆ ಒದಗುವ ಭಾವ ಸಂವಾದ ಮತ್ತು ರಸಾನುಭವಗಳಿಗೆ ನಿತ್ಯಸತ್ಯದ ಮತ್ತು ಶಾಶ್ವತ ಪುರುಷಾರ್ಥದ ದರ್ಶನದೀಪ್ತಿಯ ಆಧ್ಯಾತ್ಮಿಕವಾದ ಚಿರಂತನ ಪ್ರಯೋಜನವಿರುತ್ತದೆ. ಆ ಕಾರಣದಿಂದಲೆ ಅವು ಮಹಾಕಾವ್ಯಗಳೆಂದೂ ಚಿರಕೃತಿಗಳೆಂದೂ ಪೂಜ್ಯಸ್ಥಾನದಲ್ಲಿ ನಿಲ್ಲುತ್ತವೆ.[13] ಅವು ಯುಗಶಕ್ತಿಯ ಪ್ರತಿಕಗಳಾಗುತ್ತವೆ: ಯುಗಮಾನಸ ಪ್ರತಿಭಾಪ್ರಣಾಳಿಕಾ ಸ್ವರೂಪವಾಗಿರುವ ಮಹಾಕವಿ ಕಲ್ಪನೆಯ ಆಲವಾಲಗಳಲ್ಲಿ ಅತೀತದಿಂದ ಅವತರಿಸುವ ದೇವತಾ ಚೈತನ್ಯಪ್ರವಾಹಗಳಿಗೆ ಸಾಮಾನ್ಯಮರ್ತ್ಯ ಪ್ರಜ್ಞಾಗ್ರಾಹ್ಯವಾಗುವಂತೆ ರೂಪಧಾರಣೆ ಮಾಡಿರುವ ಗುರುಗಳಾಗುತ್ತವೆ.

ಹಾಗೆ ಅರೂಪಕ್ಕೆ ರೂಪಧಾರಣೆ ಮಾಡಿಸುವುದರಲ್ಲಿಯೆ ‘ನಿಯತಿ ಕೃತನಿಯಮ ರಾಹಿತ್ಯ’ವೆ ಮೊದಲಾದ ಪ್ರತಿಮಾವಿಧಾನದ ಅವಶ್ಯಕತೆ ಮೂಡುತ್ತದೆ. ಮಹಾಕವಿ ತನ್ನ ದರ್ಶನಾನುಭವಕ್ಕೆ ಮೈಕೊಡುವ ಪ್ರಯತ್ನದಲ್ಲಿ ಚರಿತ್ರೆಯ ಸಾಮಗ್ರಿಯನ್ನೊ ಪುರಾಣದ ಕಥಾವಸ್ತುವನ್ನೊ ಅಥವಾ ಸ್ವಕಲ್ಪನಾ ಸೃಷ್ಟಿಯಾಗಿ ಭಿನ್ನ ಭಿನ್ನ ನಿಯಮಗಳಿಗೆ ಅಧೀನವಾಗುವ ವಿಚಿತ್ರವಾದ ಪಾತ್ರ ಸನ್ನಿವೇಶ ಕಥಾದಿ ಚಿತ್ರಭಿತ್ತಿಗಳನ್ನೊ ನಿದರ್ಶನಗಳನ್ನಾಗಿ ಉಪಯೋಗಿಸಿಕೊಳ್ಳುತ್ತಾನೆ. ಹಾಗೆ ಉಪಯೋಗಿಸಿಕೊಂಡ ಮಾತ್ರಕ್ಕೆ ಅವನು ಚರ್ವಿತ ಚರ್ವಣ ದೋಷಕ್ಕೆ ಒಳಗಾಗುವುದಿಲ್ಲ. ವರ್ಣಶಿಲ್ಪಿ ತನ್ನ ಚಿತ್ರಕ್ಕೆ ಯಾರಾದರೂ ಇತರರು ತಯಾರು ಮಾಡಿದ ಬಣ್ಣಗಳನ್ನು ಬಳಸಿಕೊಳ್ಳುವಂತೆ ಕವಿ ಹಳೆಯ ಸಾಮಗ್ರಿಯನ್ನು ಬಳಸಿಕೊಂಡಮಾತ್ರಕ್ಕೆ ಕೃತಿ ಹಳಸಲಾಗುವುದಿಲ್ಲ. ಕವಿಯ ‘ದರ್ಶನ’ದ ನವನವೋನ್ಮೇಷನತ್ವವು ಅವನು ಬಳಸಿಕೊಳ್ಳುವ ಹಳೆಯದಾಗಿರಬಹುದಾದ ನಿದರ್ಶನವನ್ನು ಹೊಸವೊಡವೆಗಳ ನಿರ್ಮಾಣಕ್ಕಾಗಿ ಕರಗಿಸುವ ಹಳೆಯೊಡವೆಗಳ ಚಿನ್ನವನ್ನು ಬೆಂಕಿ ವ್ಯಾಪಿಸುವಂತೆ ವ್ಯಾಪಿಸಿ ನವೋನವತ್ವವನ್ನು ಸಾಧಿಸುತ್ತದೆ.[14] ಕಪಿಗಳು ಕಡಲಿಗೆ ಸೇತುವೆ ಕಟ್ಟುವುದಾಗಲಿ, ವಾಮನನ ತ್ರಿವಿಕ್ರಮಪಾದ ಮುಗಿಲನ್ನು ಮುಟ್ಟುವುದಾಗಲಿ, ಹರನ ಕೊರಳನ್ನು ನರನೊತ್ತಿ ಮೆಟ್ಟುವುದಾಗಲಿ ಲೋಕ ಸಂವಾದಿಯಾದ ಚರಿತ್ರೆಯ ಘಟನೆಗಳ ಪ್ರತಿಕೃತಿವರ್ಣನೆಗಳಲ್ಲ. ಅವುಗಳ ವಸ್ತುಸತ್ಯತೆ ಸಹೃದಯನ ಭಾವಸಂವಾದದಿಂದೊದಗುವ ರಸಾನುಭವದಿಂದ ಧ್ವನಿತವಾಗುವ ‘ದರ್ಶನ’ದ ನಿತ್ಯತೆಯಲ್ಲಿ ನೆಲಸಿದೆ. ಆ ಸಹೃದಯತೆ ಮತ್ತು ಅದರಿಂದ ಸ್ಪಂದಿತವಾಗುವ ‘ದರ್ಶನಧ್ವನಿ’ ಇರದಿದ್ದರೆ ಅವು ಬರಿಯ ಭಾವಸಂವಾದದ ರಸಸುಖದಲ್ಲಿ ಮಾತ್ರ ಪರ್ಯವಸಾನಹೊಂದುವ ರಸವತ್‌ಕಾವ್ಯಗಳಾಗುತ್ತವೆ. ಅಲ್ಲಿಯೂ, ಒಂದು ವೇಳೆ ಮೇಲೆ ಪ್ರತಿಪಾದಿಸಿದ ಆಧ್ಯಾತ್ಮಿಕವಾದ ತಾತ್ತ್ವಿಕವಾದ ದರ್ಶನಧ್ವನಿ ಇರದಿದ್ದರೂ, ಓದುಗನಲ್ಲಿ ಕಾವ್ಯೇತರವೆಂದು ತೋರುವ ಧಾರ್ಮಿಕ ಆಥವಾ ಮತೀಯ ಶ್ರದ್ಧೆಯಿದ್ದರೂ ಸಾಕು, ಅವನ ಭಾವಸಂವಾದದಿಂದೊದಗುವ ರಸಾನಭವದಲ್ಲಿ ತಪೋಗ್ನಿಯ ಅಧ್ವರ್ಯವಾಗಿರುತ್ತದೆ. ಆತ್ಮೋದ್ಧಾರಕ್ಕೂ ಚೇತನ ವಿಕಾಸಕ್ಕೂ ನೆರವಾಗುವ ಒಂದು ಅತೀತ ಭೂಮಿಕೆಯ ಚಿತ್‌ಶಕ್ತಿರೂಪದ ವಸ್ತುಸಂವಾದದ ಆತ್ಮಶ್ರೀ.


[1]       ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ ಒಂದು ವಿಷಯ: ಜೈನನಾದ ನೇಮಿಚಂದ್ರ ಜೈನೇತರ ನಿದರ್ಶನಗಳನ್ನೆ ತೆಗೆದುಕೊಂಡಿದ್ದಾನೆ. ಬಹುಶಃ ಜೈನ ಕಾವ್ಯಗಳಲ್ಲಿ ಬರುವ ವ್ಯಕ್ತಿ ಘಟನೆ ಸನ್ನಿವೇಶಗಳ ವಿಚಾರವಾಗಿ ಅವನ ಶ್ರದ್ಧೆಯ ನಿಲವಿಗೆ ಯಾವ ಪ್ರಶ್ನಾರ್ಥಕ ಚಿಹ್ನೆಯ ಊರಗೋಲೂ ಬೇಕಾಗಿಲ್ಲವೆಂದು ತೋರುತ್ತದೆ!

[2]       It is evident that the bulk of poetry consists of statements which only the very foolish would think of attempting to verify. But even when they are, on examination, frankly false, this is no defect, unless, indeed, the obviousness of the falsity forces the reader to reactions which are incongruent or disturbing to the poem. And equally, a point more often misunderstood, their truth, when they are true, is no merit. — I.A. RICHARDS

[3]       ’ದ್ರೌಪದಿಯ ಶ್ರೀಮುಡಿ’ಯಲ್ಲಿರುವ “ಭಾಷೆ: ಲೋಕೋಪಯೋಗಿ ಮತ್ತು ಭಾವೋಪಯೋಗಿ” ಎಂಬ ಪ್ರಬಂಧ ನೋಡಿ.

[4]       ಸೃಜನೆ ಎಂದರೆ ಹೆಚ್ಚು ಸಮರ್ಪಕ. ಏಕೆಂದರೆ ಅದು ಸಹಜವಾಗಿ ಅಕೃತಕವಾಗಿ ತನಗೆ ಬಾಹ್ಯವಾದ ಸಹಾಯ ನಿರಪೇಕ್ಷವಾಗಿ ಸತಸಿದ್ದವಾಗುವುದರಿಂದ.

[5]      ‘ತಪೋನಂದನ’ ಮತ್ತು ದ್ರೌಪದಿಯ ಶ್ರೀಮುಡಿ’ಗಳಲ್ಲಿರುವ ಕಾವ್ಯ ಮೀಮಾಂಸೆಯ ಪ್ರಬಂಧಗಳನ್ನು ನೋಡಿ.

[6]       ‘The visionary experience is cloaked in Dante’s case by the introduction of historical facts and in that of Wanger by mythological events-so that history and mythology are sometimes taken to be the materials with which these poets worked. But with neither of them does the moving force and the deeper significance lie there. For both it is contained in the visionary experience’

–C.G.JUNG, ‘Psychology and Literature

[7]       ‘ತಪೋನಂದನ’ದ “ಪ್ರತಿಮಾ ಮತ್ತು ಪ್ರತಿಕೃತಿ” ನೋಡಿ.

[8]       The emotions and attitudes resulting from a statement used emotively need not be directed towards anything to which the statement refers.

–I.A. RICHARDS. ‘Principles of Literary Criticism

[9]       Many attitudes which arise without dependence upon any reference merely by the interplay and resolution of impulses otherwise awakened, can be momentarily encouraged by suitable beliefs held as scientific beliefs are held. So far as this encouragement is concerned, the truth or falsity of these beliefs does not matter, the immediate effect is the same in either case. When the attitude is important the temptation to base it upon some reference which is treated as established scientific truths are treated is very great and the poet thus easily comes to invite the destruction of his work.

–I.A. RICHARDS.

[10]      For clear and impartial awareness of the nature of the world in which we live and the development of attitudes which enable us to live in it finely are both necessities and neither can be subordinated to the other. They are almost independent, such connections as exist well organised individuals being adventitious.

–I.A. RICHARDS.

[11]      ‘ರಸಾನುಭವದ ಅಲೌಕಿಕತೆ,’ ‘ಸಾಹಿತ್ಯದಲ್ಲಿ ಪ್ರತಿಮಾ’ – ಎಂಬ ಪ್ರಬಂಧಗಳಲ್ಲಿ ಇದಕ್ಕೆ ವಿವರಣೆ ದೊರೆಯುತ್ತದೆ.

The poet is not writing history, he is writing only poetry; he may have got it from the psychic intuitive plane or from his imagination, from the psycho-mental plane or from any other. What on earth does it matter whether Krishna lived on the physical plane or not? If his experience is real on the psychic and spiritual plane, it is all the matters. As long as you find Krishna as a divine Power on the psychic or spiritual plane his life on the physical plane does not matter. He is true, he is real. The physical is only a shadow of the psychic.

–SRI AUROBINDO in ‘Evening Talks’.

[12]      ಏಕೆಂದರೆ ಇನ್ನೊಬ್ಬ ಕವಿ ಅದೇ ಅನುಭವಸತ್ಯಕ್ಕೆ ‘Pantheism’ ತತ್ತ್ವಪ್ರತಿಮೆಯನ್ನು ಒಡ್ಡುವುದಕ್ಕೆ ಬದಲಾಗಿ ಬೇರೊಂದು ತತ್ತ್ವಪ್ರತಿಮೆಯನ್ನು  ಒಡ್ಡಿದ್ದರೆ ಅದಕ್ಕೆ ಅಡ್ಡಿಯೇನಿರುತ್ತಿರಲಿಲ್ಲ.

[13]     Great poetry draws its strength from the life of mankind, and we completely miss its meaning if we try to derive it from personal factors. Whenever the collective-unconscious becomes a living experience and is brought to bear upon the conscious outlook of an age, this event is a creative act which is of importance to everyone living in that age. A work of art is produced that contains what may truthfully be called a message to generations of men.

— C.G. JUNG

[14]      ಅಕ್ಷರಾದಿ ರಚನೇವ ಯೋಜ್ಯತೇ | ಯತ್ರ ವಸ್ತುರಚನಾ ಪರಾತನೀ ||
ನೂತನೇ ಸ್ಪುರತಿ ಕಾವ್ಯವಸ್ತುನೀ | ವ್ಯಕ್ತಮೇವ ಖಲು ಸಾ ನ ದುಷ್ಯತಿ ||
— ಧ್ವನ್ಯಾಲೋಕ ೪.೪೫

It is therefore to be expected of the poet that he will resort to mythology in order to give his experience its most fitting expression. It would be a serious mistake to suppose that he works with materials received at secondhand.

— C.G. JUNG