Categories
ಅಕಾಡೆಮಿ ಪ್ರಶಸ್ತಿ ಪುರಸ್ಕೃತರು (೧೯೫೯ – ೬೦ ರಿಂದ ೨೦೦೭-೦೮ವರೆಗೆ) ಕನ್ನಡ ಕಲೆ ನೃತ್ಯ ಪುಸ್ತಕಗಳಿಂದ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ರಾಧಾ ಶ್ರೀಧರ್

ತನ್ನ ರಜತ ಮಹೋತ್ಸವ ವರ್ಷಕ್ಕೆ ಕಾಲಿಡುತ್ತಿರುವ ಬೆಂಗಳೂರಿನ ವೆಂಕಟೇಶ ನಾಟ್ಯ ಮಂದಿರದ ನಿರ್ದೇಶಕಿ ರಾಧಾ ಶ್ರೀಧರ್ ನಾಡಿನ ನೃತ್ಯ ಕ್ಷೇತ್ರದಲ್ಲಿ ಚಿರಪರಿಚಿತ ವ್ಯಕ್ತಿ ಬಿ.ಎ., ಬಿ.ಎಡ್ ಪದವೀಧರೆಯಾದ ಇವರು ತಮ್ಮ ಭರತನಾಟ್ಯ ಶಿಕ್ಷಣವನ್ನು ಹೆಚ್. ಆರ್. ಕೇಶವಮೂರ್ತಿಯವರಲ್ಲಿ ಪ್ರಾರಂಭಿಸಿ, ಪ್ರೊ. ಕೃಷ್ಣರಾವ್-ಚಂದ್ರಭಾಗಾದೇವಿ, ಮುತ್ತಯ್ಯ ಪಿಳ್ಳೆ ಮತ್ತು ಡಾ. ಕೆ. ವೆಂಕಟಲಕ್ಷ್ಮಮ್ಮನವರುಗಳಲ್ಲಿ ಮುಂದುವರಿಸಿ, ನೃತ್ಯ ಕಲೆಯ ವಿವಿಧ ಅಂಗಗಳಲ್ಲಿ ಪರಿಣತಿ ಸಂಪಾದಿಸಿಕೊಂಡರು.

ನೃತ್ಯ ಪ್ರದರ್ಶನಕ್ಕಿಂತ ನೃತ್ಯ ಶಿಕ್ಷಣಕ್ಕೇ ತಮ್ಮನ್ನು ತೊಡಗಿಸಿಕೊಂಡ ರಾಧಾ ೧೯೬೯ ರ ಸುಮಾರಿನಲ್ಲಿ ತಮ್ಮ ನೃತ್ಯ ಶಾಲೆಯನ್ನು ಪ್ರಾರಂಭಿಸಿ, ತನ್ಮೂಲಕ ಅನೇಕ ಶಿಷ್ಯರನ್ನು ತಯಾರು ಮಾಡಿದ್ದಾರೆ. ಅವರುಗಳಲ್ಲಿ ಅವರ ಪುತ್ರಿ ಇಂದ್ರಾಣಿ ಪಾರ್ಥಸಾರಥಿ, ಪೂರ್ಣಿಮಾ ಅಶೋಕ್, ರಾಮು, ರೂಪಾ ಶಾಂಸುಂದರ್, ಸವಿತಾ ಶೇಖರ್‌ರಂಥವರು, ತಮಗೆ ತಮ್ಮ ಗುರುಗಳಿಗೆ ಒಳ್ಳೆಯ ಹೆಸರನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಧಾ ವಿಶ್ವವಿದ್ಯಾಲಯ ಮಟ್ಟದ ಹಾಗೂ ವಿದ್ಯಾ ಇಲಾಖೆ ನಡೆಸುವ ಪರೀಕ್ಷೆಗಳಿಗೆ ಪರೀಕ್ಷೆಗಳಿಗೆ ಪರೀಕ್ಷಕರಾಗಿಯೂ ಕೆಲಸ ಮಾಡಿದ್ದಾರೆ. ತಮ್ಮ ಶಾಲೆಯ ಮುಖಾಂತರ ಇವರು ನಡೆಸಿರುವ ನೃತ್ಯ ಕಾರ್ಯಗಾರಗಳು ಉಪಯುಕ್ತವಾಗಿ ಪರಿಣಮಿಸಿವೆ. ರಾಧಾ ನೃತ್ಯ ಸಂಯೋಜನೆಯಲ್ಲಿ ಪಳಗಿದ ಕೈ, ಹತ್ತಕ್ಕೂ ಮೀರಿ ನಿರ್ಮಾಣಗೊಂಡಿರುವ ಇವರ ನೃತ್ಯ-ನಾಟಕಗಳಲ್ಲಿ ಹಲವು ಒಂದಕ್ಕಿಂತ ಹೆಚ್ಚು ಪ್ರದರ್ಶನಗಳನ್ನು ಕಂಡಿವೆ. ಅವುಗಳಲ್ಲಿ “ಗೀತ ಗೋವಿಂದ”, “ಕೋಡೂರು ಕೊಡಗೂಸು”, “ಶ್ರೀನಿವಾಸ ಕಲ್ಯಾಣ” ಹೆಚ್ಚು ಜನಪ್ರಿಯವಾದುವುಗಳು. ರಾಧಾರಿಗೆ ಸನ್ಮಾನಗಳೂ ಕಡಿಮೆ ಇಲ್ಲ. ಅವುಗಳಲ್ಲಿ ಗಾಯನ ಸಮಾಜದ. ವಿಶ್ವ ಹಿಂದೂ ಪರಿಷತ್ತಿನ ಪ್ರಶಸ್ತಿಗಳು, ಮೀನಾಕ್ಷಿ ಸುಂದರಂ ಸಾಂಸ್ಕೃತಿಕ ಕೇಂದ್ರದ, ಶೇಷಾದ್ರಿಪುರಂ ಸ್ತ್ರೀ ಸಮಾಜದ, “ಮಹಾ ಮಾಯ” ದ ಸನ್ಮಾನಗಳು ಸೇರಿದೆ. ಇವರಿಗೆ ನಮ್ಮ ಅಕಾಡೆಮಿ ತನ್ನ ೧೯೯೨-೯೩ರ ಪ್ರಶಸ್ತಿ ಹಾಗೂ “ಕರ್ನಾಟಕ ಕಲಾ ತಿಲಕ” ಬಿರುದನ್ನು ನೀಡಿ ಗೌರವಿಸಿದೆ.