ಅನುಭವ ಸ್ಥವಿರೆಯಾದರೂ ಸರ್ವದಾ ಪ್ರಗತಿಶೀಲೆ; ಸಂಪ್ರದಾಯ ಸುಸ್ಥಿರೆಯಾದರೂ ನಿರಂತರ ಕ್ರಾಂತಿದರ್ಶಿನಿ; ಪ್ರಾಚೀನೆಯಾದೆರೂ ನಿತ್ಯ ನೂತನೆ: ಸಾಹಿತ್ಯಲಕ್ಷ್ಮಿ ಸ್ವಭಾವತಃ ನವನವೋನ್ಮೇಷಶಾಲಿನಿ.

ಸನಾತನದಲ್ಲಿ ಕೂಟಸ್ಥೆಯಾಗಿರುವ ಆಕೆ, ಪರಿವರ್ತನೆಯ ಲೀಲೆಯಲ್ಲಿ ತನ್ಮಯಿಯಾಗಲು ಹಿಂಜರಿಯುವುದಿಲ್ಲ. ಯುಗಯುಗಾಯುವಾಗಿರುವ ಆಕೆಯ ನಡೆ ಒಮ್ಮೊಮ್ಮೆ ನಮ್ಮ ವಾರ್ಷಿಕವಾದ ಅಲ್ಪಾಯು ದೃಷ್ಟಿಗೆ, ನಿಂತುಹೋಗಿ ತಟಸ್ಥವಾದಂತೆ ತೋರಿದರೂ, ಆ ತೂರಿಕೆ ನಮ್ಮ ಮಿತಪ್ರಜ್ಞಾಕಾರಣವಾದ ದುರ್ಬಲತೆಯ ಕುರುಹೆ ಹೊರತು ನಿಜವಾಗಿಯೂ ಆಕೆಯ ನಡೆಗೇಡಲ್ಲ.

ಸಾಹಿತ್ಯವನ್ನು ಜನಜೀವನದ ಪ್ರತಿಬಿಂಬ ಎಂದು ವರ್ಣಿಸುವುದು ವಾಡಿಕೆಯಾಗಿದೆ. ಅದು ಬಿಂಬ ಮಾತ್ರವಲ್ಲದೆ ಪ್ರತಿಫಲವೂ ಆಗುತ್ತದೆಂಬುದನ್ನು ನಾವು ಮರೆಯಬಾರದು. ಹಾಗೆ ತಿದ್ದಿದರೂ ಪೂರ್ಣಸತ್ಯ ಸಿದ್ಧಿಯಾಗುವುದಿಲ್ಲ. ಏಕೆಂದರೆ ಸಾಹಿತ್ಯ ಜನಜೀವನವನ್ನು ನಿರೂಪಿಸುತ್ತದೆ, ಮತ್ತು ಜನ ಜೀವನದಿಂದ ರೂಪಿತವಾಗುತ್ತದೆ ಎಂಬ ಅಂಶಸತ್ಯಗಳ ಜೊತೆಗೆ ಸಾಹಿತ್ಯ ಜೀವನವನ್ನು ರೂಪಿಸುತ್ತದೆ ಎಂಬ ಮುಖ್ಯ ಸತ್ಯಾಂಶವೂ ಸೇರದಿದ್ದರೆ ಪೂರ್ಣದೃಷ್ಟಿಯ ಸತ್ಯ ಲಭಿಸುವುದಿಲ್ಲ.

ಜನಜೀವನದ ನದಿ ಹರಿದ ಮೇಲೆ ಸಿದ್ಧವಾಗುವ ನದೀಪಾತ್ರಮಾತ್ರದಂತಲ್ಲ ಸಾಹಿತ್ಯ; ನದಿಯ ನೀರನ್ನೂ ಸೃಜಿಸಿ, ಅದು ಹರಿಯುವ ದಿಕ್ಕನ್ನೂ ಹರಿಯಬೇಕಾದ ದಾರಿಯನ್ನೂ ನಿರ್ಣಯಿಸುವ ಚೇತನಶಕ್ತಿಯೂ ಹೌದು. ರಸರತಿ ಆ ಚೇತನಶಕ್ತಿ, ಸೃಷ್ಟಿಮೂಲವಾಗಿರುವುದರಿಂದ, ಅದು ಸೃಷ್ಟಿಹೃದಯದಲ್ಲಿ ಸದಾ ಸ್ಪಂದಿಸುತ್ತಿರುವುದರಿಂದ, ಸೃಷ್ಟಿದೇವಿಯಾದ ಮಹಾಲಕ್ಷ್ಮಿಯಂತೆ ವಾಗ್ದೇವಿಯಾದ ಮಹಾಸರಸ್ವತಿಯೂ ಯಾವಾಗಲೂ ಹೊಸ ಹೊಸದಾಗಿ ನವನವೀನ ಪ್ರಕಾರಗಳಲ್ಲಿ ಪ್ರವಾಹ ಲೋಲೆಯಾಗಿರುವ ನವನವೋನ್ಮೇಷಶಾಲಿನಿ ಮತ್ತು ಕ್ರಾಂತದರ್ಶಿನಿ.

ನಮಗೆ ತಿಳಿದಿರುವಂತೆ, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮೂರು ಪ್ರಬಲವಾದ ಪರಿವರ್ತನೆಯ ಘಟ್ಟಗಳನ್ನು ಗುರುತಿಸಬಹುದು. ಅಥವಾ ಆಧುನಿಕ ಕಾಲವನ್ನೂ ಗಮನಿಸಿ ಹೇಳುವುದಾದರೆ ನಾಲ್ಕು ಘಟ್ಟಗಳನ್ನು ಗುರುತಿಸಬಹುದು.

ಒಂದನೆಯದು ಹತ್ತನೆಯ ಶತಮಾನದಲ್ಲಿ; ಎರಡನೆಯದು ಹನ್ನೆರಡನೆಯ ಶತಮಾನದಲ್ಲಿ; ಮೂರನೆಯದು ಹದಿನಾಲ್ಕು ಹದಿನೈದನೆಯ ಶತಮಾನಾವಧಿಯಲ್ಲಿ; ನಾಲ್ಕನೆಯದು ಹತ್ತೊಂಬತ್ತು ಇಪ್ಪತ್ತನೆಯ ಶತಮಾನಾವಧಿಯಲ್ಲಿ.

ಪ್ರಥಮ ನವೋದಯದಲ್ಲಿ ಜೈನ ಧರ್ಮ ರೂಪದಿಂದ ಆವಿರ್ಭೂತವಾದ ಆ ಚೇತನಶಕ್ತಿ ಕನ್ನಡಕ್ಕೆ ಆದಿಕವಿಯಾದ ಪಂಪನ ಕೃತಿಗಳಲ್ಲಿ ತನ್ನ ಭವ್ಯಸ್ಮಾರಕ ಸ್ವರೂಪವನ್ನು ನಿರ್ಮಿಸಿಕೊಂಡಿವೆ.

ದ್ವಿತೀಯ ನವೋದಯದಲ್ಲಿ ವೀರಶೈವ ಧರ್ಮ ರೂಪದಲ್ಲಿ ಮೈದೋರಿದ ಆ ಶಕ್ತಿ ಹರಿಹರ ರಾಘವಾಂಕರ ಕೃತಿಸಮಷ್ಟಿಯಲ್ಲಿ ತನ್ನ ಚಿರ ಸ್ಮೃತಿಮಂದಿರವನ್ನು ಸ್ಥಾಪಿಸಿಕೊಂಡಿದೆ.

ತೃತೀಯ ನವೋದಯದಲ್ಲಿ ವೈಷ್ಣವ ಭಕ್ತಿ ರೂಪದಲ್ಲಿ ಪುನರುತ್ಥಾನವಾದ ಆ ರಸಸ್ಫೂರ್ತಿ ಕುಮಾರವ್ಯಾಸ ಬಿರುದಿನ ನಾರಣಪ್ಪನ ಮಹಾಕೃತಿಯಲ್ಲಿ ತನ್ನ ವಿಯಚ್ಚುಂಬಿಯಾದ ಬೃಹದ್‌ಗೋಪುರವನ್ನು ಕಂಡರಿಸಿಕೊಂಡಿದೆ.

ನಮ್ಮಿ ಚತುರ್ಥ ನವೋದಯದಲ್ಲಿ ಆ ಚೇತನ ಶಕ್ತಿ ಯಾವ ರೂಪದಲ್ಲಿ ಮೈದೋರಿದೆ? ಅದರ ಸರ್ವತೋಮುಖತೆಯೇನು? ಅದರ ವ್ಯಾಪಕತೆಯೇನು? ಅದರ ಧರ್ಮವೇನು? ದೃಷ್ಟಿಯೇನು? ಸೃಷ್ಟಿಯೇನು? ಅದೂ ತನ್ನ ಮಹಾಕವಿಯನ್ನೂ ತನ್ನ ಶಕ್ತಿ ಕಾಂತಿ ಸಾಹಸ ಧ್ಯೇಯ ದರ್ಶನಗಳಿಗೆಲ್ಲ ವಿರಾಟ್ ಪ್ರತಿಮೆಯಾಗುವ ಮಹಾಕೃತಿಯನ್ನೂ ಕಡೆದಿದೆಯೆ? ಕಡೆಯಬಲ್ಲುದೆ? ಮುಂದಾದರೂ ಕಡೆದುಕೊಳ್ಳುತ್ತದೆಯೆ? ಹೇಳಬಲ್ಲವರಾರು?

ಆಂಗ್ಲೇಯ ಭಾಷೆಯ ಮುಖಾಂತರ ನಮ್ಮ ದೇಶಕ್ಕೆ ಆಗಮಿಸಿದ ಪಾಶ್ಚಾತ್ಯ ಸಾಹಿತ್ಯಸಂಸ್ಕೃತಿಗಳು ಭಾರತೀಯರ ಬದುಕಿನ ಮೇಲೆ ಬೀರಿದ ಪ್ರಭಾವವೆ ಆಧುನಿಕ ನವೋದಯಕ್ಕೆ ಕಾರಣ. ಕನ್ನಡಕ್ಕೆ ಆ ಪ್ರಭಾವ ಕೆಲವೆಡೆಗೆ ನೇರವಾಗಿ ಬಂದಿದೆ. ಮತ್ತೆ ಕೆಲವೆಡೆ ಇತರ ದೇಶಭಾಷಾ ಸಾಹಿತ್ಯಗಳ ಮೂಲಕ ಬಂದಿದೆ.

ಕವಿತೆಯನ್ನೆ ಗಮನಿಸಿ ಹೇಳುವುದಾದರೆ. ಆ ಪ್ರಭಾವ ನೇರವಾಗಿಯೆ ಬಂದಿದೆ ಎಂದು ಹೇಳಬಹುದು. ಇಂಗ್ಲಿಷ್‌ಕವನಗಳು ಭಾಷಾಂತರವಾಗಿ ಕನ್ನಡಕ್ಕೆ ಕಾಲಿಟ್ಟಂದಿನಿಂದ ಆಧುನಿಕ ಕನ್ನಡ ಕವಿತೆಯ ಹುಟ್ಟು ಮೊದಲಾಯಿತು. ಈ ಪ್ರಭಾವ ಕವನಗಳ ವಸ್ತು ಮತ್ತು ಸೃಷ್ಟಿ ಇವುಗಳನ್ನು ಕುರಿತದ್ದಕ್ಕಿಂತಲೂ ಹೆಚ್ಚಾಗಿ ಅವುಗಳ ಛಂದಸ್ಸು ರೀತಿ ರೂಪ ಮತ್ತು ಭಾವ ವಿನ್ಯಾಸಗಳಿಗೆ ವಿಶೇಷವಾಗಿ ಅನ್ವಯವಾಗುತ್ತದೆ. ಹಿಂದಿನ ನವೋದಯಗಳಿಗೆ ಸ್ವಮತಾಭಿಮಾನವೆ ಮುಖ್ಯ ಪ್ರಚೋದನೆಯಾದಂತೆ ಇಂದಿನ ನವೋದಯಕ್ಕೆ ಸ್ವದೇಶಪ್ರೇಮ ಮತ್ತು ಸ್ವರಾಷ್ಟ್ರಾಭಿಮಾನ ಮೂಲವಾದ ಸ್ವಾತಂತ್ಯ್ರ ಸಂಗ್ರಾಮ ಭಾವನೆಯಿಂದಲೆ ಆ ಪ್ರೇರಣೆ ವಿಪುಲಪ್ರಮಾಣದಲ್ಲಿ ಒದಗಿತೆಂದು ಹೇಳಬೇಕಾಗುತ್ತದೆ.

ಆ ಸ್ವಾತಂತ್ಯ್ರ ಸಂಗ್ರಾಮ ನಮ್ಮನ್ನು ಆಕ್ರಮಿಸಿದ್ದ ವಿದೇಶಿಯರನ್ನು ಹೊರಕ್ಕಟ್ಟುವ ರಾಜಕೀಯೋದ್ಯಮದಲ್ಲಿ ಮಾತ್ರವೆ ಪರ್ಯವಸಾನಹೊಂದದೆ ಧಾರ್ಮಿಕ ಸಾಮಾಜಿಕ ಆರ್ಥಿಕ ಭೂಮಿಕೆಗಳಲ್ಲಿಯೂ ಯತ್ನಶೀಲವಾಗಿದ್ದುದನ್ನು ಕಾಣುತ್ತೇವೆ. ಅಂದರೆ ಪರಕೀಯರಿಂದ ನಮ್ಮ ನಾಡನ್ನು ಬಿಡಿಸಿಕೊಳ್ಳಬೇಕೆಂಬುದರ ಜೊತೆಜೊತೆಗೆ ಪರಮತಾಕ್ರಮಣದಿಂದ ಸ್ವಧರ್ಮವನ್ನು ರಕ್ಷಿಸಬೇಕೆಂಬ ಉದ್ಯಮವನ್ನೂ ಕಾಣುತ್ತೇವೆ.

ನಮ್ಮ ಸಮಾಜವನ್ನು ದುರ್ಗತಿಗೆ ತಳ್ಳಿದ ಮೂಢಭಾವನೆ ಮತ್ತು ಮೂಢಾಚಾರಗಳಿಂದ ಅದನ್ನು ಶುದ್ಧಿಗೊಳಿಸಿ ಉದ್ಧರಿಸಬೇಕೆಂಬ ಸುಧಾರಣಾ ಸಾಹಸವನ್ನೂ ಇದಿರುಗೊಳ್ಳುತ್ತೇವೆ. ನಮ್ಮ ಹೊಟ್ಟೆ ಬಟ್ಟೆಗಾಗಿ ಹೆರರ ಕೈ ಹಾರೈಸುವ ದುರ್ಬಲರ ದುರವಸ್ಥೆಯಿಂದ ನಮ್ಮನ್ನು ನಾವು ಪಾರುಮಾಡಿಕೊಂಡು ಸ್ವಾವಲಂಬಿಗಳಾಗಬೇಕೆಂಬ ತೀವ್ರಪ್ರಯತ್ನವನ್ನೂ ಸಂದರ್ಶಿಸುತ್ತೇವೆ.

ಆಧುನಿಕ ಕನ್ನಡ ಕವಿತಾಸಾಹಿತ್ಯ ಸರೋವರವು ಈ ಎಲ್ಲ ಶಕ್ತಿಗಳಿಂದಲೂ ತಾಡಿತವಾಗಿ, ಅವು ಪ್ರಚೋದಿಸುವ ಭಾವಾನುಭಾವಗಳಿಂದ ತರಂಗಿತವಾಗಿ ರಮಣೀಯವಾಗಿದೆ.

ಅದು ಕಾರಣವಾಗಿಯೆ ಇಂದಿನ ಕವಿತಾಸಾಹಿತ್ಯ, ಶಿವಶರಣರ ವಚನ ಸಾಹಿತ್ಯದಲ್ಲಿಯೂ ಹರಿದಾಸರ ಭಕ್ತಿಸಾಹಿತ್ಯದಲ್ಲಿಯೂ ನಾವು ಕಾಣುವಂತೆಯೆ, ದೀರ್ಘ ಕೃತಿ ರೂಪದಲ್ಲಿರದೆ, ಭಾವಗೀತೆಗಳಾಗಿ ಪರಿಣಮಿಸಿದೆ. ಈ ರೀತಿಲಾಘವವನ್ನೆ ಕಿರುನಾಟಕ ಸಣ್ಣಕಥೆ ಲಘುಪ್ರಬಂಧಗಳಲ್ಲಿಯೂ ನಾವು ಕಾಣುತ್ತೇವೆ.

ಆದರೆ ಗದ್ಯಸಾಹಿತ್ಯದಲ್ಲಿ ಮಹಾಕಾದಂಬರಿಗಳೂ ದೊಡ್ಡ ನಾಟಕಗಳೂ ಕೆಲವಾದರೂ ಉದ್ಭವಿಸಿದಂತೆ ಪದ್ಯಸಾಹಿತ್ಯದಲ್ಲಿ ದೀರ್ಘಕಾವ್ಯ ಮಹಾಕಾವ್ಯಗಳು ಉದ್ಭವಿಸಿಲ್ಲ.* ಚಿರಕಾಲ ನಿಲ್ಲಬಹುದಾದ ದೀರ್ಘಕೃತಿಗಳು ಒಂದೆರಡಿವೆ ಎಂದು ಒಪ್ಪಬಹುದಾದರೂ ಮಹಾಕೃತಿ ಎಂಬ ಹೆಸರಿಗೆ ಅರ್ಹವಾಗುವ ಚಿರಕಾವ್ಯ ಇನ್ನೂ ಸಂಭವವಿಲ್ಲ. ಅಥವಾ ಬಯಲಿಗೆ ಬಂದಿಲ್ಲ.

ಆದರೆ ಯಾವ ಕಾಲವಾದರೂ ತನ್ನ ಸಂಸ್ಕೃತಿಯ ಸತ್ವವನ್ನೂ ಮಹತ್ವವನ್ನೂ ಬರುವ ಶತಮಾನಗಳಿಗೂ ತೋರಿ ಬೀರಬೇಕಾದರೆ ತನ್ನ ಮಹಾವ್ಯಕ್ತಿತ್ವಕ್ಕೆ ನಿಧಿಯೂ ಪ್ರತಿನಿಧಿಯೂ ಆಗುವ ಬೃಹತ್‌ಪ್ರತಿಮೆ ಒಂದನ್ನಾದರೂ ಕಡೆದು ನಿಲ್ಲಿಸಲೇ ಬೇಕಾಗುತ್ತದೆ. ಇಂದಲ್ಲ ನಾಳೆ ಆಧುನಿಕ ಕವಿತಾ ಸಾಹಿತ್ಯಕ್ಕೆ ಅಂತಹ ಮೇರುಕೃತಿ ಸಿದ್ಧವಾಗಿಯೆ ಆಗುತ್ತದೆ ಎಂಬ ನಮ್ಮ ಶ್ರದ್ಧೆ ಬಂಜೆಯಾಗದಿರಲಿ.

ಇಂದಿನ ಕವಿತೆಯ ಸದ್ಯಸ್ಥಿತಿಯ ವಿಚಾರವಾಗಿ, ಹೆಸರು ಹೇಳಲು ಕೂಡ ಅವಕಾಶವಿಲ್ಲದನಿತು ಸಂಕ್ಷೇಪವಾಗಿ, ಸಂಗ್ರಹವಾಗಿ ಹೇಳಿದ್ದೇನೆ. ಈ ಕವನ ಕೋಟಿಗಳಲ್ಲಿ ಬಹುಪಾಲು ಹೆಸರುಳಿಯದೆ ಹೋಗುತ್ತದೆ, ನಿಜ. ಆದರೆ ಅವುಗಳಲ್ಲಿ ಕೆಲವಾದರೂ ತಮ್ಮ ಹೃದಯದಲ್ಲಿ ಅಮೃತಕಲಶವಿಟ್ಟುಕೊಂಡಿವೆ ಎಂದು ನಿರ್ಮಮತೆಯಿಂದ ಹೇಳಬಹುದು.

ಅಲ್ಲದೆ, ಇನ್ನೂ ಒಂದು ಹೆಜ್ಜೆ ಮುಂಬರಿದು ಹೇಳುವುದಾದರೆ, ಹಾಗೆ ಉಳಿಯುವ ಕವನಗಳಲ್ಲಿ ಕೆಲವಾದರೂ ಜಗತ್ತಿನ ಇತರ ಸಾಹಿತ್ಯಗಳ ಸರ್ವ ಶ್ರೇಷ್ಠ ಕೃತಿಗಳ ಪಂಕ್ತಿಯಲ್ಲಿ ಹೆಗಲೆಣೆಯಾಗಿ ಮುಡಿಯೆತ್ತಿ ನಿಲ್ಲಲು ಅರ್ಹವಾಗಿವೆ ಎಂದು ಹೆಮ್ಮೆಯಿಂದ ಘೋಷಿಸಲು ಕನ್ನಡಿಗರು ಹಿಂಜರಿಯಬೇಕಾಗಿಲ್ಲ.

ಕನ್ನಡ ಕವಿತಾಸಾಹಿತ್ಯದ ಇಂದಿನಿರವಿನ ವಿಚಾರವಾಗಿ ತೂಗಿ ತೊನೆದು ಇಷ್ಟನ್ನು ಆಡಿದ ಮೇಲೆ, ಅದರ ಮುಂದಿನ ನಡೆಯನ್ನು ಕುರಿತು ಎರಡು ಮಾತು ಅನಿವಾರ್ಯವಾಗಿ ಹೇಳಿದರೆ, ‘ಅನಿಷ್ಟ’ವಾದರೂ ಚಿಂತೆಯಿಲ್ಲ. ಭವಿಷ್ಯತ್ತನ್ನು ಕುರಿತು ಆಡುವುದು ಎಂತಹ ಪ್ರವಾದಿಗೂ ಸಾಹಸಕಾರ್ಯವೆ. ಎಂತಹ ಸೂಕ್ಷ್ಮ ಮೇಧಾಶಕ್ತಿಯೂ ಊಹೆಯೂ ಹುಸಿಯಾಗುವುದು ಸಾಧ್ಯ. ಪ್ರಕೃತ ಭಾಷಣಕಾರನ ಈ ಮುಂದಣ ಊಹೆಯಂತೂ ಹುಸಿಯಾಗುವುದಾದರೆ, ಅವನಿಗಿಂತಲೂ ಹೆಚ್ಚು ಸಂತೋಷಪಡುವವರು ಬೇರೆ ಇರುವುದಿಲ್ಲ.

ಇಂದಿನ ಕಿಶೋರ ಕವಿಗಳ ಬರಹದಲ್ಲಿ ಬಹು ಪಾಲು ಅನುಕರಣವಾದರೂ ಅದು ಸ್ವಾಭಾವಿಕವಾಗಿರುವುದರಿಂದ ಚಿಂತೆಗೆ ಎಡೆಗೊಡುವಂತಹ ವಿಷಯವೇನಲ್ಲ. ಆದರೆ ಹಲವರಲ್ಲಿ ತೋರುವ ಒಂದು ಅತಿ ಲಘು ಮನೋಧರ್ಮವೂ ಸುಲಭಪ್ರಶಂಸೆಗೆ ಹಾತೊರೆಯುವ ಶ್ರಮವಂಚನಾಬುದ್ಧಿಯೂ ಮತಿಗೌರವ ಸಾಲದ ಸ್ವಾತಂತ್ಯ್ರಭ್ರಾಂತಿ ಮಾತ್ರವಾಗಿರುವ ಅತಂತ್ರತೆಯೂ ನೆಲದಲ್ಲಿ ಸರಿಯಾಗಿ ಬೇರೂರುವ ಮುನ್ನವೆ, ಪ್ರಾಚೀನ ಕವಿಮನೋಫಲವತ್‌ಕಾವ್ಯ ಕ್ಷೇತ್ರಗಳಲ್ಲಿ ಸುಪ್ರತಿಷ್ಠರಾಗಿ ಸರ್ವರಸಗ್ರಹಣಸಾಮರ್ಥ್ಯವನ್ನೂ ರಸತಪಶ್ಯಕ್ತಿಯನ್ನೂ ಸಂಪಾದಿಸುವ ಮೊದಲೆ, ಆಕಾಶಕ್ಕೆ ಬೆಳೆದು ಲೋಕನೇತ್ರ ಕೇಂದ್ರಗಳಾಗಿ ನಿಲ್ಲಬೇಕೆಂಬ ವಟೋಪಮವಾದ ವಟುಮಹಾತ್ವಾಕಾಂಕ್ಷೆಯೂ ಪ್ರಶಂಸನೀಯವಾದರೂ ಬುಡಭದ್ರತೆಗೆ ಕೊಡಲಿ ಹಾಕಿಕೊಳ್ಳುವ ಆತ್ಮವಿಧ್ವಂಸನೀಯವಾದ ಬಾಲಕಾತುರತೆಯೂ ಕನ್ನಡ ಸಾಹಿತ್ಯ ಶ್ರೇಯೋಕಾಂಕ್ಷಿಗಳಿಗೆ ಅಧೈರ್ಯ ತರುವಂತಿದೆ.

ಆದರೆ ಇದು ಸ್ವಾತಂತ್ಯ್ರ ಸಾಧನೆಯಾದ ಸಂಧಿಕಾಲ. ವ್ಯವಸ್ಥಾಂತರವು ಪ್ರಾರಂಭದಲ್ಲಿ ಅವ್ಯವಸ್ಥೆಗೆ ಎಡೆಗೊಡುವುದು ಅನಿವಾರ್ಯ. ಅದು ಪೂರೈಸಿ ಸುವ್ಯವಸ್ಥೆಗೆ ಬಂದೇ ಬರುತ್ತದೆ. ಆದ್ದರಿಂದ ನಿರಾಶೆಗೆ ಅವಕಾಶವಿಲ್ಲ. ಅಧೈರ್ಯ ಸಲ್ಲ.

ಸಿರಿಗನ್ನಡಂ ಗೆಲ್ಗೆ!

 


* ಈ ಭಾಷಣದ ಕಾಲಕ್ಕೆ ಅನ್ವಯವಾಗುತ್ತಿದ್ದ ಈ ಹೇಳಿಕೆಯ ಸತ್ಯ ಈಗ ನಮ್ಮ ಸುದೈವದಿಂದ ಸುಳ್ಳಾಗಿರುವುದು ಲೇಖಕನಿಗೆ ಹೆಮ್ಮೆಯ ವಿಷಯವಾಗಿದೆ.