ಯಮುನಾ ನದಿಯ ತೀರ. ನೀರಿನ ಅಂಚನ್ನು ಮುಟ್ಟಿ ಎತ್ತರವಾಗಿ ಬೆಳೆದು ನಿಂತಿರುವ ಕಾಡುಗಿಡಗಳು. ಅಲ್ಲೇ ಒಂದು ಚಿಕ್ಕ ಗುಡಿಸಲು. ಅದರ ಮಗ್ಗುಲಲ್ಲಿ ದಡಕ್ಕೆ ಎಳೆದು ನಿಲ್ಲಿಸಿದ್ದ ದೋಣಿ, ಅದರ ಜಲ್ಲೆ ಹುಟ್ಟುಗಳು. ಹತ್ತಿರದಲ್ಲಿ ಮರಳಿನ ಮೇಲೆ ಹರಡಿ ಬಿದ್ದಿದ್ದ ಮೀನಿನ ಬಲೆ, ಒಂದೆರಡು ಗಾಳಗಳು. ಗಾಳಿ ಬೀಸಿದಾಗ ಬಂದು ಮೂಗಿಗೆ ಅಡರುತ್ತಿದ್ದ ಸತ್ತ ಮೀನಿನ ವಾಸನೆ.

ಆ ಗುಡಿಸಿಲು ಬೆಸ್ತರ ಪಾಳೆಯಕ್ಕೆ ಸೇರಿದ್ದು. ದಾಶ ಎನ್ನುವವನು ಆ ಪಾಳೆಯದ ಒಡೆಯ. ಆ ಸಂಜೆ ಅವನು ಕೆಲಸ ಮುಗಿಸಿಕೊಂಡು ಬಂದು ಗುಡಿಸಿಲಿನಲ್ಲಿ ಕುಳಿತು ಊಟ ಮಾಡುತ್ತಿದ್ದ. ಅವನ ಸಾಕುಮಗಳು ಸತ್ಯವತಿ ಬಡಿಸುತ್ತಿದ್ದಳು. ಅಲ್ಲಿ ವಾಸವಾಗಿದ್ದವರು ಅವರಿಬ್ಬರೇ. ಉಳಿದ ಗುಡಿಸಿಲುಗಳೆಲ್ಲಾ ತೋಪಿನಾಚೆ ಇದ್ದವು. ಊಟ ಮಾಡುತ್ತಿದ್ದ ಬೆಸ್ತನ ಚುರುಕಾದ ಕಿವಿಗೆ ಹೊರಗೆ ಏನೋ ಸದ್ದಾದುದು ಕೇಳಿಸಿರಬೇಕು.

“ಸತ್ಯವತಿ, ಅದೇನು ನೋಡು” ಎಂದ.

ಮಗಳು ಗುಡಿಸಿಲ ಬಾಗಿಲನ್ನು ಕೊಂಚ ತೆಗೆದು ಹೊರಗೆ ಇಣುಕಿದಳು.

“ಅಪ್ಪಾ ಯಾರೋ ಬಂದಿದ್ದಾರೆ. ”

“ಯಾರದು?”

“ಯಾರೋ, ನಾನು ಕಂಡವರಂತೂ ಅಲ್ಲ”

“ಹೇಗಿದ್ದಾರೆ, ಹೇಳು”

“ಜುಟ್ಟು ಎತ್ತಿ ತಲೆಯ ಮೇಲೆ ಗಂಟು ಹಾಕಿದ್ದಾರೆ. ಕುತ್ತಿಗೆಯಲ್ಲಿ ಮಣಿಸರ; ಕೈಯಲ್ಲಿ ದಂಡ, ಕಮಂಡಲ; ಕಾಲಿಗೆ ಮರದ ಮೆಟ್ಟು; ಉಟ್ಟಿರುವುದು ನಾರುಮಡಿ.”

“ದೊಡ್ಡವರೊ, ಚಿಕ್ಕವರೊ?”

“ಇನ್ನೂ ಚಿಕ್ಕವಯಸ್ಸೇ ಇದ್ದೀತು. ಆ ಗಡ್ಡ ಮೀಸೆಯಲ್ಲಿ ಹೇಗೆ ಹೇಳುವುದು ಅಪ್ಪಾ?” ಎಂದು ಸತ್ಯವತಿ ನಕ್ಕಳು.

“ಮಕ್ಕಳೇ, ಅವರು ಯಾರೋ ಋಷಿಗಳಿರಬೇಕು. ಆಚೆಯ ದಡಕ್ಕೆ ಹೋಗಬೇಕೋ ಏನೊ. ನಾನು ಊಟ ಮಾಡುತ್ತಿದ್ದೇನಲ್ಲಾ. ನೀನೇ ಹೋಗಮ್ಮ. ದೋಣಿಯಲ್ಲಿ ಅವರನ್ನು ಆ ಕಡೆಗೆ ಹಾಯಿಸಿ ಬಾ. ತಡಮಾಡಿದರೆ ಕೋಪಿಸಿಕೊಂಡು ಶಾಪಕೊಟ್ಟಾರು. ಬೇಗ ಹೋಗು, ತಾಯಿ.”

ಮಗಳು ಬೇಗಬೇಗ ಹೆಜ್ಜೆ ಹಾಕುತ್ತ ಹೊರಗೆ ಬಂದಳು. ಅಲ್ಲಿ ನಿಂತಿದ್ದವನು ದೋಣಿಯ ಕಡೆ ಕೈ ತೋರಿಸಿದ. ಅವಳು ಹೆದರುತ್ತಲೇ ಹೋಗಿ ದೋಣಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ ಅದನ್ನು ನೀರಿಗೆ ನೂಕಿದಳು. ಅವನು ಒಂದೇ ನೆಗೆತಕ್ಕೆ ಹಾರಿ ಅದರಲ್ಲಿ ಕುಳಿತ. ಹುಡುಗಿಯೂ ದೋಣಿ ಹತ್ತಿ ಒಂದು ಮೂಲೆಯಲ್ಲಿ ಕುಳಿತು ನೀರಿನಲ್ಲಿ ಜಲ್ಲೆಯನ್ನು ಇಳಿಬಿಟ್ಟು ಮೀಟತೊಡಗಿದಳು. ದೋಣಿ ಮೆಲ್ಲನೆ ತೇಲುತ್ತ ಎದುರು ದಡದ ಕಡೆ ಸಾಗಿತು.

ಅವನು ಅವಳನ್ನು ದಿಟ್ಟಿಸಿ ನೋಡಿದ. ಬೆಳುದಿಂಗಳಂಥ ಚೆಲುವೆ. ಆದರೆ ಅವಳ ಮೈಯಿಂದ ಮೀನಿನ ವಾಸನೆ ಬರುತ್ತಿತ್ತು. ಅವನು ತಡೆಯಲಾರದೆ ಮೂಗು ಮುಚ್ಚಿಕೊಂಡ. ಆ ಕೆಟ್ಟ ವಾಸನೆ ಇಲ್ಲದಿದ್ದರೆ ಅವಳು ತನಗೆ ಒಳ್ಳೆಯ ಸಂಗಾತಿಯಾದಾಳೆಂದು ಅವನಿಗೆ ತೋರಿತು. ಅವಳ ಮೈಯಲ್ಲಿ ತುಂಬಿದ್ದ ಮೀನಿನ ವಾಸನೆಯನ್ನು ತನ್ನ ತಪಸ್ಸಿನ ಶಕ್ತಿಯಿಂದ ನೀಗಿಸಿದ; ಅದಕ್ಕೆ ಬದಲು ಕಸ್ತೂರಿಯ ವಾಸನೆ ಬರುವ ಹಾಗೆ ಮಾಡಿದ. ಅದು ಅವಳಿಗೂ ಗೊತ್ತಾಯಿತು. ಅವನನ್ನು ನೋಡಿ ನಕ್ಕಳು; ಅವನೂ ನಕ್ಕ. ಅಷ್ಟು ಹೊತ್ತಿಗೆ ದೋಣಿ ಹೊಳೆಯ ನಡುವೆ ಇದ್ದ ಒಂದು ದಿಬ್ಬದ ಹತ್ತಿರ ಬಂದಿತ್ತು. ಅಲ್ಲಿ ಗಿಡಮರಗಳು ಹುಲುಸಾಗಿ ಬೆಳೆದಿದ್ದವು; ಬಣ್ಣಬಣ್ಣದಹಕ್ಕಿಗಳು ಗಿಡದಿಂದ ಗಿಡಕ್ಕೆ ಹಾರುತ್ತಿದ್ದವು. ಅವರು ಅಲ್ಲೇ ಇಳಿದು ಸ್ವಲ್ಪ ಹೊತ್ತು ನಿಂತರು. ಆ ವೇಳೆಗೆ ಅವರು ನಿಜವಾದ ಸಂಗಾತಿಗಳೇ ಆಗಿದ್ದರು.

ಅವರು ಪರಾಶರ ಋಷಿ. ಅವರಿಬ್ಬರ ಮಗನೇ ವ್ಯಾಸ ಋಷಿ.

ಕರೆದಾಗ ಬರುವೆ

ವ್ಯಾಸ ಎನ್ನುವುದು ಹೆಸರಲ್ಲ; ಅದು ಒಂದು ಬಿರುದು. ಒಂದೊಂದು ದ್ವಾಪರ ಯುಗದಲ್ಲಿ ಒಬ್ಬೊಬ್ಬ ವ್ಯಾಸರ ಅವತಾರ. ಇನ್ನೊಂದು ದ್ವಾಪರ ಯುಗ ಬರುವವರೆಗೂ ಅವರ ಪಟ್ಟ. ಈಗಿನ ವ್ಯಾಸರ ಹೆಸರು ಕೃಷ್ಣದ್ವೈಪಾಯನ. ಅವರು ಕಪ್ಪಗಿರುವುದರಿಂದ ಕೃಷ್ಣ; ಯಮುನಾ ನದಿಯ ದ್ವೀಪವನ್ನಾಗಿ ಹುಟ್ಟಿದುದರಿಂದ ದ್ವೈಪಾಯನ; ವೇದವನ್ನು ನಾಲ್ಕು ಭಾಗವನ್ನಾಗಿ ವಿಂಗಡಿಸಿರುವುದರಿಂದ ವೇದವ್ಯಾಸ; ಬದರಿಯಲ್ಲಿ ಅವರ ಆಶ್ರಮ ಇರುವುದರಿಂದ ಬಾದರಾಯಣ. ಹೀಗೆ ಎಷ್ಟೋ ಹೆಸರುಗಳಿಂದ ಅವರನ್ನು ಕರೆಯುವುದುಂಟು. ನಾವು ವ್ಯಾಸ ಎಂದೇ ಕರೆಯೋಣ.

ಇವರನ್ನು ಕುರಿತು ಹಲವಾರು ಕಥೆಗಳಿವೆ. ಎಲ್ಲ ಇವರ ಅಸಾಧಾರಣ ಹಿರಿಮೆಗೆ ಕನ್ನಡಿಗಳು.

ವ್ಯಾಸರು ಹುಟ್ಟುತ್ತಲೇ ಬೆಳೆದು ದೊಡ್ಡವರಾದರು. ವೇದ, ಶಸ್ತ್ರ, ಪುರಾಣ, ಇತಿಹಾಸ, ಕಾವ್ಯ ಮುಂತಾದ ಎಲ್ಲ ತಿಳಿವಳಿಕೆಯೂ ಅವರಿಗೆ ಆಗಲೆ ಬಂದುಬಿಟ್ಟಿತ್ತು. ಎಷ್ಟಾದರೂ ಋಷಿಯ ಮಗನಲ್ಲವೆ ?

ವ್ಯಾಸರು ತಾಯಿಯ ಕಾಲಿನ ಮೇಲೆ ತಲೆಯಿಟ್ಟು ನಮಸ್ಕಾರ ಮಾಡಿದರು. ಸತ್ಯವತಿ ಅವರ ತಲೆಯನ್ನು ಅಕ್ಕರೆಯಿಂದ ಸವರಿದಳು. ವ್ಯಾಸರು ಎದ್ದುನಿಂತು “ಅಮ್ಮ, ನಿನಗೆ ಯಾವಾಗ ನನ್ನನ್ನು ನೋಡಬೇಕು ಎನ್ನಿಸುವುದೋ ಆಗ ನನ್ನನ್ನು ಜ್ಞಾಪಿಸಿಕೊ. ಎಲ್ಲಿದ್ದರೂ ಬರುತ್ತೇನೆ” ಎಂದು ಕೈಮುಗಿದರು.

“ಹಾಗೆಯೇ ಆಗಲಿ, ಮಗು” ಎಂದು ಸತ್ಯವತಿ ಮಗನನ್ನು ಕಳಿಸಿಕೊಟ್ಟಳು. ಅವರು ಬದರಿಗೆ ತಪಸ್ಸಿಗೆ ಹೊರಟುಹೋದರು.

ಹಲವಾರು ವರ್ಷ ಕಳೆಯಿತು.

ಆಗ ಶಂತನು ಎಂಬ ಒಬ್ಬ ರಾಜನು ಆಳುತ್ತಿದ್ದ. ಅವನ ರಾಜಧಾನಿ ಹಸ್ತಿನಾವತಿ. ಅವನು ಒಂದು ದಿನ ಸತ್ಯವತಿಯನ್ನು ಕಂಡ. ಅವಳನ್ನು ಮದುವೆಯಾದ. ಮುಂದೆ ಅವರಿಗೆ ಇಬ್ಬರು ಗಂಡುಮಕ್ಕಳಾದರು. ಚಿತ್ರಾಂಗದ, ವಿಚಿತ್ರವೀರ್ಯ ಎಂದು ಅವರ ಹೆಸರು. ಚಿತ್ರಾಂಗದ ಚಿಕ್ಕಂದಿನಲ್ಲಿಯೇ ತೀರಿಹೋದ; ವಿಚಿತ್ರವೀರ್ಯ ಮದುವೆಯಾದ ಮೇಲೆ ತೀರಿಹೋದ. ಅವನಿಗೆ ಅಂಬಿಕೆ, ಅಂಬಾಲಿಕೆ ಎಂಬ ಇಬ್ಬರು ಹೆಂಡತಿಯರಿದ್ದರು. ಮಕ್ಕಳಿರಲಿಲ್ಲ. ಹಾಗಾಗಿ ಈ ವಂಶ ಮುಂದೆ ಬೆಳೆಯದೆ ನಿಂತು ಹೋಗುವುದಲ್ಲಾ ಎಂದು ಸತ್ಯವತಿಗೆ ಚಿಂತೆಯಾಯಿತು. ಏನು ಮಾಡಬೇಕೆಂದು ತೋರದೆ ಅವಳು ವ್ಯಾಸರನ್ನು ನೆನೆದಳು. ಅವರು ಸ್ವಲ್ಪ ಸಮಯದಲ್ಲೇ ಹಸ್ತಿನಾವತಿಗೆ ಬಂದು ತಾಯಿಗೆ ನಮಸ್ಕಾರ ಮಾಡಿದರು.

“ಏನಮ್ಮ, ಎಲ್ಲರೂ ಚೆನ್ನಾಗಿದ್ದರೆ ತಾನೆ? ಏತಕ್ಕೆ ನನ್ನ ನೆನಪು ಬಂದಿತು? ನನ್ನಿಂದ ಏನಾಗಬೇಕು, ಹೇಳು” ಎಂದು ಕೇಳಿದರು.

ಸತ್ಯವತಿ ತನ್ನ ಚಿಂತೆಯನ್ನು ಅವರಿಗೆ ತಿಳಿಸಿದಳು. ಅವರ ದಯದಿಂದ ಸತ್ಯವತಿಯ ಸೊಸೆಯರಾದ ಅಂಬಿಕೆ, ಅಂಬಾಲಿಕೆಯರಿಗೆ ಇಬ್ಬರು ಗಂಡುಮಕ್ಕಳಾದರು. ಒಬ್ಬ ದೃತರಾಷ್ಟ್ರ; ಇನ್ನೊಬ್ಬ ಪಾಂಡು. ಹಾಗೆಯೇ ಅರಮನೆಯ ಒಬ್ಬ ದಾಸಿಗೂ ಒಂದು ಗಂಡುಮಗುವಾಯಿತು. ಅವನೇ ವಿದುರ; ತುಂಬ ನೀತಿವಂತ.

ಧೃತರಾಷ್ಟ್ರನ ಮಕ್ಕಳು ಕೌರವರು; ಪಾಂಡವಿನ ಮಕ್ಕಳು ಪಾಂಡವರು. ವ್ಯಾಸರು ಇಲ್ಲದಿದ್ದರೆ ಕೌರವರೂ ಇರುತ್ತಿರಲಿಲ್ಲ. ಪಾಂಡವರೂ ಇರುತ್ತಿರಲಿಲ್ಲ. ಮಹಾಭಾರತದ ಯುದ್ಧವೂ ಆಗುತ್ತಿರಲಿಲ್ಲ; ಆ ಕಥೆಯೂ ಹುಟ್ಟುತ್ತಿರಲಿಲ್ಲ .

ಅಮ್ಮಾ, ನನ್ನೊಡನೆ ಬಾ

ಎಷ್ಟೋ ವರ್ಷಗಳ ಬಳಿಕ ಪಾಂಡುರಾಜ ಸತ್ತಾಗಲೂ ಸತ್ಯವತಿ ವ್ಯಾಸರನ್ನು ಜ್ಞಾಪಿಸಿಕೊಂಡಳು. ಅವರು ಬಂದು ಎಲ್ಲರಿಗೂ ಸಮಾಧಾನ ಹೇಳಿದರು; ಧೈರ್ಯ ಹೇಳಿದರು. ಆ ವೇಳೆಗೆ ಸತ್ಯವತಿಯೂ ತುಂಬ ಮುದುಕಿಯಾಗಿದ್ದಳು. ಕಷ್ಟಗಳನ್ನು ನೋಡಿ ಅವಳಿಗೂ ಬೇಸರವಾಗಿತ್ತು. ವ್ಯಾಸರು ಅದನ್ನು ತಿಳಿದುಕೊಂಡು “ಅಮ್ಮಾ, ಈಗ ನೀನು ಈ ಸಂಸಾರ ಬಿಟ್ಟು ಕಾಡಿಗೆ ಹೋಗಿ ದೇವರ ಧ್ಯಾನ ಮಾಡುತ್ತಾ, ಉಳಿದ ಕಾಲವನ್ನು ನೆಮ್ಮದಿಯಿಂದ ಕಾಲ ಕಳೆಯುವುದು ಒಳ್ಳೆಯದು. ನನ್ನ ಜೊತೆಯಲ್ಲಿ ಬಾ. ನೀನು ಒಪ್ಪುವ ಜಾಗವನ್ನು ತೋರಿಸುತ್ತೇನೆ” ಎಂದರು.

ಸತ್ಯವತಿ ಆ ಮಾತಿಗೆ ಒಪ್ಪಿದಳು. ಸೊಸೆಯರಾದ ಅಂಬಿಕೆ, ಅಂಬಾಲಿಕೆಯರು ತಾವು ಅತ್ತೆಯೊಂದಿಗೆ ಹೊರಟರು. ಮಕ್ಕಳು ಮನೆಮಂದಿಗೆ ಯಾರಿಗೂ ಅದು ಇಷ್ಟವಿಲ್ಲ. ಅವರು ಅಡ್ಡಗಟ್ಟಿ ಹೋಗಬೇಡಿರೆಂದು ಎಷ್ಟೋ ಹೇಳಿದರು. ಅತ್ತು ಗೋಳಾಡಿದರು. ವ್ಯಾಸರು ಅವರಿಗೆಲ್ಲಾ ಸಮಯಕ್ಕೆ ತಕ್ಕ ನಾಲ್ಕು ಬುದ್ಧಿಯ ಮಾತು ಹೇಳಿ ಊರಬಾಗಿಲವರೆಗೂ ಬಂದಿದ್ದ ಗುಂಪನ್ನು ಹಿಂದಕ್ಕೆ ಕಳಿಸಿದರು.

ಅವರು ಕೆಲವು ದಿನ ನಡೆದು ದಟ್ಟವಾದ ಒಂದು ಕಾಡನ್ನು ಹೊಕ್ಕರು; ಒಂದು ಬೆಟ್ಟದ ತಪ್ಪಲಿನಲ್ಲಿ ಬಂದು ನಿಂತರು. ಅಲ್ಲಿ ದೊಡ್ಡ ದೊಡ್ಡ ಮರಗಳು ಬೆಳೆದಿದ್ದವು; ಹತ್ತಿರದಲ್ಲೇ ಒಂದು ಹೊಳೆ ಹರಿಯುತ್ತಿತ್ತು. ಅದರ ತುಂಬ ತಾವರೆ ಹೂವು ಬೆಳೆದಿತ್ತು. ಅದರ ತುಂಬ ತಾವರೆ ಹೂವು ಬೆಳೆದಿತ್ತು. ಆ ಜಾಗದಲ್ಲಿ ನೀರು ನೆರಳಿನ ಅನುಕೂಲ ಚೆನ್ನಾಗಿತ್ತು. ವ್ಯಾಸರು ಒಂದು ದೊಡ್ಡ ಬಂಡೆಯನ್ನು ಆಸರೆಯನ್ನಾಗಿ ಮಾಡಿಕೊಂಡು, ಗಿಡದ ರೆಂಬೆಗಳನ್ನೂ ಎಲೆಗಳನ್ನೂ ಬಿಡಿಸಿಕೊಂಡು ಬಂದರು; ತಾಯಿಗೆ ಅಲ್ಲೇ ಅಚ್ಚುಕಟ್ಟಾದ ಗುಡಿಸಿಲನ್ನು ಕಟ್ಟಿಕೊಟ್ಟರು. ನೀರು ಕುಡಿಯಬೇಕೆನಿಸಿದಾಗ ತಾವರೆಯ ಎಲೆಯನ್ನು ದೊನ್ನೆಯ ಹಾಗೆ ಮಾಡಿ ನೀರು ತುಂಬಿ ತರುವುದನ್ನು ತೋರಿಸಿಕೊಟ್ಟರು; ಹಸಿವಾದಾಗ ಕಾಡುಹಣ್ಣು ಗಡ್ಡೆಗೆಣಸುಗಳನ್ನು ಹುಡುಕಿ  ತರುವ ಬಗೆಯನ್ನು ತೋರಿಸಿಕೊಟ್ಟರು. ಹೀಗೆ ತಾಯಿಯ ಸೇವೆ ಮಾಡುತ್ತ ವ್ಯಾಸಮುನಿ ಅಲ್ಲಿ ನಾಲ್ಕು ದಿನ ನಿಂತರು.

ಕೊನೆಗೆ ಅವರು ತಾಯಿಯನ್ನು ಬಿಟ್ಟು ಆಶ್ರಮಕ್ಕೆ ಹೋಗುವ ದಿನ ಬಂದಿತು. ಭಕ್ತಿಯಿಂದ ಅವಳ ಪಾದದ ಮೇಲೆ ತಲೆಯಿಟ್ಟು ಅಪ್ಪಣೆ ಕೇಳಿದರು. ತಮಗೆ ಮತ್ತೆ ತಾಯಿಯನ್ನು ನೋಡುವ ಭಾಗ್ಯ ಇಲ್ಲವೆಂಬುದು ಅವರಿಗೆ ತಿಳಿದಿತ್ತು. ಋಷಿಯಾದರೂ ಮನಸ್ಸಿನ ಬಿಗಿ ಒಂದು ಗಳಿಗೆ ಸಡಿಲವಾಗಿ ಕಣ್ಣು ಹನಿಗೂಡಿತು. ಸತ್ಯವತಿ ಮಗನ ತಲೆಯನ್ನು  ಹಿಡಿದೆತ್ತಿ ಪ್ರೀತಿಯಿಂದ ಮೈದಡವಿದಳು. ಅವಳಿಗೆ ಕಣ್ಣು ತುಂಬ ನೀರು.

“ಹೋಗಿ ಬಾ, ಮಗು. ಸಾವಿರ ಕಾಲ ಕೀರ್ತಿವಂತನಾಗಿ ಬಾಳು” ಎಂದು ಹರಸಿದಳು.  ಹೋಗಿ ಬರುತ್ತೇನೆಂದು ವ್ಯಾಸರು, ಹಸುವನ್ನು ಬಿಡಲಾರದ ಕರುವಿನ ಹಾಗೆ ಹೆಜ್ಜೆ ಹೆಜ್ಜೆಗೆ ನಿಂತು ತಿರುಗಿನೋಡುತ್ತ ಹೊರಟು ಗಿಡಗಳ ನಡುವೆ ಎಲ್ಲೋ ಮರೆಯಾದರು. ಸತ್ಯವತಿ ಅವರು ಹೋದ ದಾರಿಯನ್ನೇ ನೆಟ್ಟ ನೋಟದಿಂದ ನೋಡುತ್ತ ತುಂಬ ಹೊತ್ತು ನಿಂತಿದ್ದಳು.

ವ್ಯಾಸರು ಧೃತರಾಷ್ಟ್ರನಿಗೆ ‘ಮಾಡಿದ ಪಾಪಕ್ಕೆ ತಕ್ಕ ಫಲವನ್ನು ಉಣ್ಣಬೇಕಾಗುತ್ತದೆ’ ಎಂದರು.

ವ್ಯಾಸರು ಹೊರಟುಹೋದ ಮೇಲೆ ಸತ್ಯವತಿಯೂ ಅಂಬಾಲಿಕೆಯರೂ ಋಷಿಗಳ ಹಾಗೆ ಹಣ್ಣು ಹಂಪಲು ಗಡ್ಡೆಗೆಣಸು ತಿಂದುಕೊಂಡು, ಕಾಡಿನಲ್ಲಿದ್ದು ದೇವರ ಧ್ಯಾನ ಮಾಡುತ್ತಾ, ತಮ್ಮ ಕೊನೆಯ ದಿನಗಳನ್ನು ಕಳೆದರು.

ಇದು ನ್ಯಾಯವಲ್ಲ

ಧೃತರಾಷ್ಟ್ರ ಒಳ್ಳೆಯವನಾದರೂ ಅವನ ಮಕ್ಕಳಾದ ಕೌರವರು ಕೆಟ್ಟವರು, ಕಿಡಿಗೇಡಿಗಳು. ಅವರಿಗೆ ಮೊದಲಿನಿಂದಲೂ ಪಾಂಡವರ ಮೇಲೆ ಹೊಟ್ಟೆಕಿಚ್ಚಿತ್ತು; ಅವರು ಏಳಿಗೆಗೆ ಬರಬಾರದೆಂಬ ಕೆಟ್ಟ ಬುದ್ಧಿಯಿತ್ತು. ಏನಾದರೂ ಮಾಡಿ ಅವರ ರಾಜ್ಯವನ್ನು ಕಸಿದುಕೊಳ್ಳಬೇಕೆಂದು ಹೊಂಚುಹಾಕುತ್ತಿದ್ದರು. ಅವರ ಸೋದರಮಾವ ಶಕುನಿ ಅವರಿಗೆ ಉಪಾಯ ಹೇಳಿಕೊಡುತ್ತಿದ್ದ. ಅವನ ಮಾತಿನಂತೆ ಒಂದು ಪಗಡೆಯ ಆಟ ಏರ್ಪಾಡಾಯಿತು. ಅದು ಜೂಜು, ಒಳ್ಳೆಯದಲ್ಲ ಎನ್ನುವುದು ಧೃತರಾಷ್ಟ್ರನಿಗೂ ಗೊತ್ತಿತ್ತು; ವಿದುರನಿಗೂ ಗೊತ್ತಿತ್ತು. ಆದರೆ ಅವರ ಮಾತನ್ನು ಕೇಳುವವರು ಯಾರು? ಇಷ್ಟರ ಮೇಲೆ ವಿದುರ ಹೇಳಿದಷ್ಟು ಕಟ್ಟು ನಿಟ್ಟಾಗಿ ಹೇಳುವುದಕ್ಕೆ ಧೃತರಾಷ್ಟ್ರ ಹೋಗಲಿಲ್ಲ. ಎಷ್ಟಾದರೂ ಅವರು ತನ್ನ ಮಕ್ಕಳು ಎನ್ನುವ ಮಮತೆ.

ಪಾಂಡವರಲ್ಲಿ ಮೊದಲನೆಯವನಾದ ಯುಧಿಷ್ಠಿರ ಶಕುನಿಯ ಮೋಸಕ್ಕೆ ಸಿಕ್ಕಿ ಜೂಜಿನಲ್ಲಿ ರಾಜ್ಯವನ್ನೆಲ್ಲಾ ಕಳೆದುಕೊಂಡ. ಕೌರವರಿಗೆ ಬೇಕಾದದ್ದೇ ಅದು. ಅವರು ಪಾಂಡವರನ್ನು ಉಟ್ಟ ಬಟ್ಟೆಯ ಮೇಲೆ ಕಾಡಿಗೆ ಅಟ್ಟಿದರು.

ಈ ವಿಷಯ ವ್ಯಾಸರಿಗೆ ಗೊತ್ತಾಯಿತು. ಅವರು ನೇರವಾಗಿ ಹಸ್ತಿನಾವತಿಗೆ ಬಂದರು. ಧೃತರಾಷ್ಟ್ರ ಅವರನ್ನು ಅರಮನೆಗೆ ಬರಮಾಡಿಕೊಂಡು, ಅವರ ಕಾಲಿಗೆರಗಿ ಎತ್ತರವಾದ ಪೀಠದಲ್ಲಿ ಕುಳ್ಳಿರಿಸಿದ. ಪಾಂಡವರು ರಾಜ್ಯ ಕಳೆದುಕೊಂಡು ಕಾಡಿಗೆ ಹೋದ ವಿಷಯವನ್ನು ವ್ಯಾಸರು ಎಲ್ಲಿ ಎತ್ತಿಬಿಡುವರೋ ಎಂದು ಧೃತರಾಷ್ಟ್ರನ ಮನಸ್ಸಿನಲ್ಲಿ ದಿಗಿಲು. ಆದರೆ ಅವರು ಬಂದದ್ದೇ ಅದಕ್ಕೆ.

“ಏನಪ್ಪಾ, ವಂಶಕ್ಕೆ ಹಿರಿಯನಾಗಿ ನೀನಿದ್ದೂ ಪಾಂಡವರನ್ನು ಹೀಗೆ ಕಾಡುಪಾಲು ಮಾಡಬಹುದೆ? ನಿನ್ನ ಮಕ್ಕಳಿಗೆ ಬುದ್ಧಿ ಹೇಳಬಾರದಾಗಿತ್ತೆ?” ಎಂದು ವ್ಯಾಸರು ಕೇಳಿದರು.

ಧೃತರಾಷ್ಟ್ರನ ಬಾಯಲ್ಲಿ ಮಾತೇ ಹೊರಡಲಿಲ್ಲ. ಅವನು ಸುಮ್ಮನೆ ತಲೆತಗ್ಗಿಸಿದ.

ಅಷ್ಟು ಹೊತ್ತಿಗೆ ವಿದರು ಅಲ್ಲಿಗೆ ಬಂದ ವ್ಯಾಸರನ್ನು ಕಂಡು ಭಕ್ತಿಯಿಂದ ನಮಸ್ಕಾರ ಮಾಡಿದ.

“ಏನಪ್ಪಾ ವಿದರು, ನೀನಾದರೂ ಆ ಮೂರ್ಖರಿಗೆ ಬುದ್ಧಿ ಹೇಳಬಾರದಾಗಿತ್ತೆ? ಇದನ್ನೆಲ್ಲ ನೋಡುತ್ತಾ ಹೇಗೆ ಸುಮ್ಮನಿದ್ದೆ?” ಎಂದು ವ್ಯಾಸರು ಕೇಳಿದರು.

ವಿದುರನಿಗೆ ಜೀವ ಹಿಡಿಯಾಯಿತು; ಅವನ ಕಣ್ಣು ಹನಿಗೂಡಿತು. ಪಾಂಡವರನ್ನು ಕಂಡರೆ ಅವನಿಗೆ ಅಷ್ಟೊಂದು ಅಕ್ಕರೆಯಿತ್ತು.

“ಧೃತರಾಷ್ಟ್ರನೂ ಹೇಳಿದ: ನಾನೂ ಹೇಳಿದೆ. ಆದರೆ ಆ ದುಷ್ಟರು ಕೇಳಲಿಲ್ಲ” ಎಂದು ನುಡಿದು ವಿದುರ ತಲೆತಗ್ಗಿಸಿ ನಿಂತುಕೊಂಡ.

ವ್ಯಾಸರು ಧೃತರಾಷ್ಟ್ರನನ್ನು ಬಿರುಗಣ್ಣಿನಿಂದ ನೋಡುತ್ತ “ಧೃತರಾಷ್ಟ್ರ, ನಿನ್ನ ಮಕ್ಕಳ ಬುದ್ಧಿಯನ್ನು ಮೊದಲಿನಿಂದಲೂ ಬಲ್ಲೆ. ಅದರಲ್ಲಿಯೂ ದುರ್ಯೋಧನ ತುಂಬ ಕೆಟ್ಟವನು. ಅವನು ಯಾವ ಅನ್ಯಾಯಕ್ಕೂ ಹೇಸುವವನಲ್ಲ. ಅದು ನಿನಗೆ ಗೊತ್ತು. ಆ ಮಗನ ಮೇಲಿನ ಪ್ರೀತಿ ನಿನ್ನ ಕೈಕಟ್ಟಿತಲ್ಲವೆ? ಅದರಿಂದ ಸುಮ್ಮನಿದ್ದೆಯಾ?” ಎಂದು ಹಂಗಿಸಿದರು.

ಧೃತರಾಷ್ಟ್ರ ನೆಲಕ್ಕೆ ಇಳಿದುಹೋದ. ಏನು ಉತ್ತರ ಕೊಡಬೇಕೋ ಅವನಿಗೆ ಗೊತ್ತಾಗಲಿಲ್ಲ. ವ್ಯಾಸರು ಆಡಿದ ಮಾತೆಲ್ಲ ನಿಜವೇ ಆಗಿತ್ತು.

“ಕೇಡುಗಾಲಕ್ಕೇ ಅವರಿಗೆ ಈ ಬುದ್ಧಿ ಬಂದಿದೆ. ಪಾಂಡವರಿಗೆ ಅನ್ಯಾಯ ಮಾಡಿದವರಿಗೆ ಒಳ್ಳೆಯದಾಗುವುದಿಲ್ಲ. ಅವರ ಕಡೆ ಕೃಷ್ಣನೇ ಇದ್ದಾನೆನ್ನುವುದು ನಿಮಗೆ ತಿಳಿಯುವುದಿಲ್ಲವಲ್ಲ! ಪಾಂಡವರ ರಾಜ್ಯವನ್ನೆಲ್ಲಾ ಅವರಿಗೆ ಮತ್ತೆ ಕೊಟ್ಟು ಅವರಲ್ಲಿ ವಿಶ್ವಾಸದಿಂದ ನಡೆದುಕೊಳ್ಳುವಂತೆ ನಿನ್ನ ಮಕ್ಕಳಿಗೆ ಅದರಲ್ಲೂ ದುರ್ಯೋಧನನಿಗೆ ಮೊದಲು ಹೇಳು, ಧೃತರಾಷ್ಟ್ರ. ಪಾಂಡವರೊಡನೆ ಹಗೆತನ ಕಟ್ಟಿಕೊಂಡರೆ ಕೌರವ ವಂಶ ಉಳಿಯುವುದಿಲ್ಲ. ಮಾಡಿದ ಪಾಪಕ್ಕೆ ತಕ್ಕ ಫಲವನ್ನು ಉಣ್ಣಬೇಕಾದೀತು. ನನ್ನ ಮಾತನ್ನು ಬರೆದಿಟ್ಟುಕೋ!” ಎಂದು ವ್ಯಾಸರು ಸಿಟ್ಟಿನಿಂದ ನುಡಿದು ಹೊರಟುಹೋದರು.

ಸಿಡಿಲಿನಂಥ ಆ ಮಾತುಗಳನ್ನು ಕೇಳಿ ಧೃತರಾಷ್ಟ್ರ ನಡುಗಿದ. ಋಷಿಯ ಬಾಯಲ್ಲಿ ಬಂದ ಮಾತು ಸುಳ್ಳಾಗುವುದಿಲ್ಲ ಎನ್ನುವುದು ಅವನಿಗೆ ಗೊತ್ತಿತ್ತು.

ಎರಡು ದಿನ ತಾಳಿ

ವ್ಯಾಸರು ಅಲ್ಲಿಂದ ಹೊರಟವರು ಪಾಂಡವರು ಹೋದ ದಾರಿಯನ್ನು ಹಿಡಿದು ನಡೆದರು. ಕೆಲವು ದಿನಗಳಲ್ಲಿಯೇ ಕಾಡಿನಲ್ಲಿ ಒಂದು ಕಡೆ ಅವರು ಬೀಡು ಬಿಟ್ಟಿದ್ದ ಜಾಗಕ್ಕೆ ಬಂದರು. ಇದ್ದಕ್ಕಿದ್ದ ಹಾಗೆ ಬಂದ ಮುನಿಯನ್ನು ಕಂಡು ಪಾಂಡವರೆಲ್ಲರಿಗೂ ಸಂತೋಷವಾಯಿತು. ಅವರು ಒಬ್ಬೊಬ್ಬರಾಗಿ ಬಂದು ನಮಸ್ಕಾರ ಮಾಡಿದರು. ತಾವು ಊಟಕ್ಕೆ ಮಾಡಿಕೊಂಡಿದ್ದ ಅಂಬಲಿಯನ್ನು ವ್ಯಾಸರಿಗೆ ಮೊದಲು ಒಪ್ಪಿಸಿ ಉಳಿದಿದ್ದನ್ನು ತಾವು ಕುಡಿದರು. ಅವರ ಆದರಕ್ಕೆ ವ್ಯಾಸರು ತುಂಬ ಸಂತೋಷಪಟ್ಟರು. ವನವಾಸದ ಮಾತು ಬಂದಾಗ ದ್ರೌಪದಿ ಒಂದು ಕಡೆ ಕಣ್ಣೀರಿಡುತ್ತಾ ನಿಂತಿದ್ದುದನ್ನು ಕಂಡು ವ್ಯಾಸರ ಮನಸ್ಸು ಮರುಗಿತು.

“ಮಗಳೇ, ದುಃಖಿಸಬೇಡ. ಈ ಕಷ್ಟ ತುಂಬ ದಿವಸ ಇರುವುದಿಲ್ಲ. ಧರ್ಮಕ್ಕೆ ಗೆಲುವಾಗಿ ಅಧರ್ಮಕ್ಕೆ ಸೋಲಾಗುವ ಸಮಯ ಬಂದೇ ಬರುತ್ತದೆ. ಈಗ ಸ್ವಲ್ಪ ಕಾಲ ಈ ತೊಂದರೆಯನ್ನು ತಾಳಿಕೊಳ್ಳಬೇಕು. ಪಾಂಡವರು ಒಳ್ಳೆಯವರು, ಧೀರರು. ಅವರು ಹುಟ್ಟಿರುವುದೇ ಕೌರವಕುಲವೆಂಬ ಮುಳ್ಳನ್ನು ಕಿತ್ತುಹಾಕುವುದಕ್ಕೆ. ನೀನೇಕೆ ಅಳುತ್ತೀಯೆ, ಸುಮ್ಮನಿರು” ಎಂದರು.

ಈ ಮಾತಿನಿಂದ ಪಾಂಡವರ ಮನಸ್ಸಿಗೆ ಎಷ್ಟೋ ನೆಮ್ಮದಿಯಾಯಿತು. ವ್ಯಾಸರು ಅವರೊಡನೆ ಎರಡು ದಿನ ಇದ್ದು ಆಮೇಲೆ ಹೊರಟು ಹೋದರು. ಪಾಂಡವರು ಮುಂದಕ್ಕೆ ಪ್ರಯಾಣ ಮಾಡಿದರು.

ಪಾಂಡವರಿಗೂ ಕೌರವರಿಗೂ ಹಗೆ ಹರಿಯಲಿಲ್ಲ. ಯುದ್ಧ ಆಗಲೇಬೇಕಾಯಿತು. ಹದಿನೆಂಟು ದಿನ ದೊಡ್ಡ ಯುದ್ಧ ನಡೆಯಿತು.

ಯುದ್ಧ ಭೂಮಿಯಲ್ಲಿ ಕೂಡ ವ್ಯಾಸರು ಆಗಾಗ ಬಂದು ಹೋಗುತ್ತಲೆ ಇದ್ದರು; ಪಾಂಡವರ ಹಿತವನ್ನು ನೋಡಿಕೊಳ್ಳುತ್ತಿದ್ದರು. ಕಾಳಗದಲ್ಲಿ ಒಂದು ಸಲ ತನ್ನ ಎದುರಿಗೆ ಕಾಣಿಸಿಕೊಂಡ ದುರ್ಯೋಧನನನ್ನು ಕಂಡು ಯುಧಿಷ್ಠಿರನಿಗೆ ಎಲ್ಲಿಲ್ಲದ ಸಿಟ್ಟು ಬಂದಿತು. ಅವನನ್ನು ಕೊಲ್ಲುವುದಕ್ಕೆಂದು ಬಿಲ್ಲಿಗೆ ಬಾಣವನ್ನು ಹೂಡಿದ. ಆಗ ವ್ಯಾಸರು ಎಲ್ಲಿಂದಲೋ ಬಂದು ಅವನನ್ನು ತಡೆದರು.

“ಅದು ನಿನ್ನ ಕೆಲಸವಲ್ಲಪ್ಪಾ, ಅದನ್ನು ಮಾಡುವುದಾಗಿ ಹಟ ತೊಟ್ಟಿರುವವನು ನಿನ್ನ ತಮ್ಮ, ಭೀಮ. ಅವನಿಗೆ ಅದನ್ನು ಬಿಡು!” ಎಂದರು. ಯುಧಿಷ್ಠಿರ ಅವರ ಮಾತಿಗೆ ತಲೆಬಾಗಿ ಮನ್ನಣೆ ಕೊಟ್ಟು ರಥವನ್ನು ಬೇರೆ ಕಡೆ ತಿರುಗಿಸುವ ಹಾಗೆ ಸಾರಥಿಗೆ ಹೇಳಿದ.

ಆ ಬಳಿಕ ಭೀಮನಿಗೂ ದುರ್ಯೋಧನನಿಗೂ ಯುದ್ಧವಾಯಿತು. ಕೊನೆಯಲ್ಲಿ ಭೀಮ ಗದೆಯಿಂದ ದುರ್ಯೋಧನನ ತೊಡುಗೆ ಹೊಡೆದು ಅವನನ್ನು ಕೆಡವಿದ. ದುರ್ಯೋಧನ ಕೆಳಗೆ ಬಿದ್ದು ಪ್ರಾಣಬಿಡುತ್ತಿರುವ ಸುದ್ದಿ ತಿಳಿದು ಧೃತರಾಷ್ಟ್ರ ವಿದುರನನ್ನು ಕರೆದುಕೊಂಡು ಯುದ್ಧಭೂಮಿಗೆ ಬಂದ. ಅವನ ಗೋಳು ಹೇಳತೀರದು. ಮಗನ ಮೈಮೇಲೆ ಕುಸಿದು ಬಿದ್ದು ಗೋಳಾಡತೊಡಗಿದ. ಆಗ ವ್ಯಾಸರು ಅಲ್ಲಿಗೆ ಬಂದರು.

ನಿನ್ನ ಮಕ್ಕಳೆಂದು ತಿಳಿ

“ಧೃತರಾಷ್ಟ್ರ, ಸಮಾಧಾನಮಾಡಿಕೊಳ್ಳಪ್ಪಾ, ಹಿರಿಯನಾಗಿ ನೀನೇ ಹೀಗೆ ಮಾಡಿದರೆ ಹೇಗೆ?” ಎಂದು ಅವನ ಮೈದಡವಿದರು.

“ನನಗೆ ಬದುಕುವ ಇಷ್ಟವಿಲ್ಲ. ಮಕ್ಕಳನ್ನೆಲ್ಲಾ ಕಳೆದುಕೊಂಡು ನಾನು ಬದುಕಿ ಏನು ಪ್ರಯೋಜನ?”

“ಏಕೆ ಈ ಹುಚ್ಚು ಮಾತಾಡುತ್ತೀಯೆ? ಯಾವುದು ಆಗಬೇಕಾಗಿತ್ತೋ ಅದು ಆಯಿತು. ಅವರ ಹಣೆಯಲ್ಲಿ ಹಾಗೆ ಬರೆದಿತ್ತು. ‘ ಈ ಹಗೆತನ ಬೇಡ; ನಮಗೆ ಅರ್ಧ ರಾಜ್ಯವೂ ಬೇಡ;  ಐದು ಹಳ್ಳಿಗಳನ್ನು ಕೊಟ್ಟರೆ ಸಾಕು. ರಾಜಿ ಮಾಡಿಕೊಳ್ಳೋಣ. ನಮ್ಮನಮ್ಮಲ್ಲೇ ಏಕೆ ಈ ಜಗಳ?’ ಎಂದು ಯುಧಿಷ್ಠಿರ ಎಷ್ಟೋ ಹೇಳಿದನಲ್ಲ. ಆ ಮಾತನ್ನು ದುರ್ಯೋಧನ ಕೇಳಿದನೆ? ಹೋಗಲಿ, ತಂದೆಯೆಂದು ನಿನ್ನ ಮಾತಿಗಾದರೂ ಬೆಲೆ ಕೊಟ್ಟನೆ ? ಕೌರವರದು ಅನ್ಯಾಯದ ಬುದ್ದಿ; ಪಾಂಡವರದು ನ್ಯಾಯದ ಬುದ್ಧಿ. ಅವರವರು ಅದರ ಫಲವನ್ನು ಕಂಡರು, ಉಂಡರು. ಇದನ್ನು ಯಾರೂ ತಪ್ಪಿಸುವ ಹಾಗಿರಲಿಲ್ಲ. ಇದೆಲ್ಲವನ್ನು ತಿಳಿದೂ ನೀನು ಸುಮ್ಮನೆ ಏತಕ್ಕೆ ಗೋಳಾಡುತ್ತೀಯೆ? ಅರಮನೆಗೆ ನಡೆ; ಪಾಂಡವರನ್ನು ಬರಮಾಡಿಕೊ; ಅವರೇ ನಿನ್ನ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳೆಂದು ತಿಳಿ” ಎಂದು ಸಮಾಧಾನ ಮಾಡಿದರು; ವಿದುರನ ಜೊತೆಮಾಡಿ ಧೃತರಾಷ್ಟ್ರನನ್ನು ಅರಮನೆಗೆ ಕಳಿಸಿದರು.

ವ್ಯಾಸರು ಮಹಾಭಾರತದ ಕಥೆಯನ್ನು ಹೇಳುತ್ತ ಹೋದರು, ಗಣೇಶ ಬರೆದುಕೊಳ್ಳುತ್ತಾ ಹೋದ.

 

ಯುಧಿಷ್ಠಿರ ವೀರನಾದರೂ ಅವನ ಮನಸ್ಸು ತುಂಬ ಮೃದು. ಕೌರವರು ಮಾಡಿದ ತಪ್ಪಿಗೆ, ತಮಗೆ ಕೊಟ್ಟ ಹಲವು ಬಗೆಯ ಕಿರುಕುಳಕ್ಕೆ ಪಾಂಡವರು ಅವರನ್ನು ಕೊಲ್ಲದೆ ಬೇರೆ ದಾರಿಯೇ ಇರಲಿಲ್ಲ. ಆದರೂ ಹೀಗಾಯಿತಲ್ಲಾ ಎಂದು ಯುಧಿಷ್ಠಿರ ಒಳಗೇ ಸಂಕಟ ಪಡುತ್ತಿದ್ದ. ಗಾಂಧಾರಿಯನ್ನು ಕಂಡಾಗಲಂತೂ ಅವನ ಮನಸ್ಸೇ ಕದಡಿಹೋಯಿತು. ತಮ್ಮಂದಿರನ್ನು ಹಿಂದಿಟ್ಟುಕೊಂಡು ಬಂದು ತಪ್ಪು ಮಾಡಿದವನ ಹಾಗೆ ದುಃಖಪಡುತ್ತ ಅವಳ ಕಾಲಿನ ಮೇಲೆ ಬಿದ್ದ. ಹುಟ್ಟು ಕುರುಡನಾದ ಧೃತರಾಷ್ಟ್ರನ ಕೈ ಹಿಡಿದಿದ್ದ ಗಾಂಧಾರಿ ಯಾವಾಗಲೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿರುತ್ತಿದ್ದಳು. ತನ್ನ ಗಂಡ ಕುರುಡನಾದ್ದರಿಂದ ಪ್ರಪಂಚವನ್ನು ನೋಡುವುದು ತನಗೂ ಬೇಡ ಎನ್ನುವುದು ಅವಳ ಮನಸ್ಸು. ಮಕ್ಕಳನ್ನು ಕಳೆದುಕೊಂಡ ಸಂಕಟ ಆ ಪತಿವ್ರತೆಯ ಹೊಟ್ಟೆಯಲ್ಲಿ ಉರಿಯಾಗಿ ಎದ್ದಿತ್ತು. ಆ ಸಿಟ್ಟಿನಲ್ಲಿ ಅವಳು ಆಡಿದ ಮಾತು ಶಾಪವಾಗುತ್ತಿತ್ತು. ಯುಧಿಷ್ಠಿರ, ಭೀಮ ಮೊದಲಾದವರು ಬಗ್ಗಿ ನಮಸ್ಕಾರ ಮಾಡಿದಾಗ ಅವಳ ಮುಖ ಕೆಂಪಿಟ್ಟಿತು, ತುಟಿ ಅದುರಿತು; ಕೆಟ್ಟ ಮಾತು ಹೊರಬೀಳುವುದರಲ್ಲಿತ್ತು. ಆಗ ಅಲ್ಲೇ ಇದ್ದ ವ್ಯಾಸರು ಇದನ್ನು ಕಂಡರು; ತಡಮಾಡಿದರೆ ಕೇಡಾದೀತೆಂದು ಬಗೆದು ಬೇಗ ಬಂದು ಗಾಂಧಾರಿಯ ತಲೆಯ ಮೇಲೆ ಕೈಯಿಟ್ಟು, “ನಾನು ವ್ಯಾಸ!” ಎಂದರು. ಗಾಂಧಾರಿ ಹೆದರಿದಳು; ನಾಲಗೆಯ ಕೊನೆಗೆ ಬಂದಿದ್ದ ಮಾತನ್ನು ನಿಲ್ಲಿಸಿಕೊಂಡಳು.

“ಮಗಳೇ, ನಿನ್ನ ಬುದ್ಧಿಯನ್ನು ಸಿಟ್ಟಿನ ಕೈಗೆ ಕೊಡಬೇಡ. ಪಾಂಡವರು ಮಾಡಿದ ತಪ್ಪಾದರೂ ಏನು? ಅವರು ಧರ್ಮದ ದಾರಿಯಲ್ಲೇ ನಡೆದಿದ್ದಾರೆ. ಆದದ್ದು ಆಗಿಹೋಯಿತು. ಸಮಾಧಾನ ಮಾಡಿಕೋ. ಇವರೇ ನಿನ್ನ ಮಕ್ಕಳೆಂದು ತಿಳಿ” ಎಂದರು. ಕುಲದ ಹಿರಿಯರಾದ ವ್ಯಾಸರ ಮಾತು ಕೇಳಿ ಗಾಂಧಾರಿ ತಲೆ ತಗ್ಗಿಸಿದಳು. ಅವಳಿಗೆ ದುಃಖದೊಡನೆ ನಾಚಿಕೆಯೂ ಆಯಿತು. ವ್ಯಾಸರ ಕಾಲನ್ನು ಮುಟ್ಟಿ ನಮಸ್ಕಾರ ಮಾಡಿದಳು; ತನ್ನ ಹೊಟ್ಟೆಯ ಸಂಕಟವನ್ನು ನುಂಗಿಕೊಂಡಳು; ಪಾಂಡವರನ್ನು ಒಬ್ಬೊಬ್ಬರನ್ನಾಗಿ ಹತ್ತಿರ ಕರೆದು ಮೈದಡವಿದಳು.

ಹೇಡಿಯ ಹಾಗೆ ಆಡುತ್ತೀಯಲ್ಲ!”

ಕೈ ಬಿಟ್ಟಿದ್ದ ರಾಜ್ಯವನ್ನೆಲ್ಲಾ ಗೆದ್ದು ಸಿಂಹಾಸನದಲ್ಲಿ ಕುಳಿತಿದ್ದರೂ ಯುಧಿಷ್ಠಿರನಿಗೆ ಮನಸ್ಸಿನಲ್ಲಿದ್ದ ಕೊರಗು  ಹೋಗಿರಲಿಲ್ಲ. ಆ ಬವಣೆಯನ್ನೆಲ್ಲ ನೋಡಿ ಅವನಿಗೆ ಬೇಸರ ಹುಟ್ಟಿತು; ಪ್ರಪಂಚವೇ ಬೇಡವಾಗಿತ್ತು. ಎಲ್ಲವನ್ನೂ ಬಿಟ್ಟು ಕಾಡಿಗೆ ತಪಸ್ಸಿಗೆ ಹೊರಟುಹೋಗಬೇಕೆಂದು ಯೋಚಿಸುತ್ತಿದ್ದ. ಇದು ಹೇಗೊ ವ್ಯಾಸರಿಗೆ ತಿಳಿಯಿತು. ಅವರು ಒಂದು ದಿನ ಇದ್ದಕ್ಕಿದ್ದ ಹಾಗೆ ಅರಮನೆಗೆ ಬಂದರು; ಎದ್ದು ನಮಸ್ಕಾರ ಮಾಡಿದ ಯುಧಿಷ್ಠಿರನನ್ನು ಅಕ್ಕರೆಯಿಂದ ಹತ್ತಿರ ಕರೆದು ಕುಳ್ಳಿರಿಸಿಕೊಂಡರು.

“ಏನೋ ಯೋಚನೆ ಮಾಡುತ್ತಿರುವ ಹಾಗಿದೆಯಲ್ಲಪ್ಪ?” ಯುಧಿಷ್ಠಿರ ಸುಮ್ಮನಿದ್ದ.

“ನನ್ನ ಹತ್ತಿರ ಹೇಳುವುದಕ್ಕೂ ಸಂಕೋಚವೇ ಮಗು? ಹೇಳು”.

“ಏನೋ ಮನಸ್ಸಿಗೆ ಬೇಸರ” ಎಂದು ಮಾತು ತೇಲಿಸುವ ಪ್ರಯತ್ನ ಮಾಡಿದ ಯುಧಿಷ್ಠಿರ.

“ನಿನ್ನ ದುಗುಡವನ್ನು ನಾನು ಬಲ್ಲೆ. ನನ್ನ ಹತ್ತಿರ ಮರೆಮಾಚುವುದೇಕೆ? ಎಲ್ಲವನ್ನೂ ಬಿಟ್ಟು ಸನ್ಯಾಸಿಯಾಗಿ ಕಾಡಿಗೆ ಹೊರಟುಹೋಗಬೇಕೆಂದಲ್ಲವೆ ನಿನ್ನ ಯೋಚನೆ?” ಎಂದು ಕೇಳಿದರು.

“ಹೌದು, ಮನಸ್ಸೇಕೋ ಆ ಕಡೆಯೇ ಹೋಗುತ್ತಿದೆ” ಎಂದು ಮೆಲ್ಲನೆ ನುಡಿದ ಯುಧಿಷ್ಠಿರ.

ಆ ಮಾತಿಗೆ ಅವರು ಗಟ್ಟಿಯಾಗಿ ನಕ್ಕರು.

“ಹುಚ್ಚಪ್ಪ! ಕಾಡಿಗೆ ಹೋಗುತ್ತಾನಂತೆ! ಎಂಥ ಗಂಡಸಯ್ಯ! ಯುದ್ಧದಲ್ಲಿ ವೀರರಾಗಿ ಹೋರಾಡಿದ್ದೀರಿ; ನಿಮಗೆ ನ್ಯಾಯವಾಗಿ ಬರಬೇಕಾಗಿದ್ದುದನ್ನೆಲ್ಲಾ ಮತ್ತೆ ಪಡೆದಿದ್ದೀರಿ. ಈಗ ಸುಮ್ಮನೆ ರಾಜ್ಯ ಆಳಿಕೊಂಡಿರುವುದನ್ನು ಬಿಟ್ಟು ಕಾಡಿಗೆ ಹೋಗುತ್ತಾನಂತೆ, ತಪಸ್ಸಿಗೆ! ನೀನು ಕ್ಷತ್ರಿಯ ಕುಲದಲ್ಲಿ ಹುಟ್ಟಿದವನಲ್ಲವೊ? ಆ ಧರ್ಮ ಏನು ಹೇಳುವುದು ನಿನಗೆ ಗೊತ್ತಿಲ್ಲವೊ? ಹೇಡಿಯ ಹಾಗೆ ಆಡುತ್ತೀಯಲ್ಲ! ಶಂಖಲಿಖಿತರ ಕಥೆ ಕೇಳಿಲ್ಲವೇನಯ್ಯ?” ಎಂದರು ವ್ಯಾಸರು.

“ಇಲ್ಲ” ಎಂದ ಯುಧಿಷ್ಠಿರ.

“ಹಾಗಾದರೆ ಕೇಳು – ಹಿಂದೆ ಶಂಖ, ಲಿಖಿತ ಎಂಬ ಅಣ್ಣ ತಮ್ಮಂದಿರಿದ್ದರು. ಇಬ್ಬರೂ ಋಷಿಗಳು; ಶಾಸ್ತ್ರ, ಧರ್ಮ ಬಲ್ಲವರು. ಆದ್ದರಿಂದ ಅವರನ್ನು ಕಂಡರೆ ಎಲ್ಲರಿಗೂ ತುಂಬ ಗೌರವ. ಅವರು ಕಾಡಿನಲ್ಲಿ ಒಂದು ಕಡೆ ಆಶ್ರಮ ಕಟ್ಟಿಕೊಂಡಿದ್ದರು. ಒಂದು ದಿನ ಶಂಖ ಎಲ್ಲೋ ಹೋಗಿದ್ದಾಗ, ಲಿಖಿತ ಗಿಡದಲ್ಲಿ ಬಿಟ್ಟಿದ್ದ ಹಣ್ಣುಗಳನ್ನು ಕಿತ್ತು ತಿಂದ. ಅಣ್ಣ ಬಂದ ಮೇಲೆ ತಾನು ಮಾಡಿದ್ದನ್ನು ಹೇಳಿದ. ಶಂಖನಿಗೆ ಕೋಪ ಬಂದಿತು. ‘ಲಿಖಿತ, ನೀನು ಮಾಡಿದ್ದು ಕಳ್ಳತನ. ಅದಕ್ಕೆ ಶಿಕ್ಷೆಯಾಗಬೇಕು. ಶಿಕ್ಷೆ ಮಾಡುವವನು ರಾಜ. ಅದನ್ನು ಅವನೇ ಮಾಡಲಿ. ಅಲ್ಲಿಗೇ ಹೋಗು’ ಎಂದು ತಮ್ಮನನ್ನು ಕಳಿಸಿದ. ಲಿಖಿತ ಅಣ್ಣನ ಮಾತಿನಂತೆ ದೊರೆಯ ಬಳಿಗೆ ಬಂದು ತಾನು ಮಾಡಿದ ತಪ್ಪನ್ನು ತಿಳಿಸಿದ. ಕೂಡಲೆ ದೊರೆ ಅವನ ಕೈಗಳನ್ನು ಕತ್ತರಿಸಿಹಾಕುವಂತೆ ತನ್ನ ಭಟ್ಟರಿಗೆ ಹೇಳಿದ. ಅವರು ಹಾಗೆಯೇ ಮಾಡಿದರು. ಲಿಖಿತ ಆಶ್ರಮಕ್ಕೆ ಬಂದು ಮೊಂಡುಗೈಗಳನ್ನು ತೋರಿಸುತ್ತ ‘ಅಣ್ಣ, ನನ್ನ ತಪ್ಪಿಗೆ ತಕ್ಕ ಶಿಕ್ಷೆ ಆಯಿತು’ ಎಂದು ಹೇಳಿದ. ಶಂಖ ‘ಸರಿ, ಒಳ್ಳೆಯದೇ ಆಯಿತು. ಹೋಗು, ಸ್ನಾನ ಮಾಡಿಕೊಂಡು ಬಾ’ ಎಂದ. ಲಿಖಿತ ಹೊಳೆಗೆ ಹೋಗಿ ನೀರಿನಲ್ಲಿ ಇಳಿದ. ಅವನು ಒಂದು ಮುಳುಗು ಹಾಕಿ ಏಳುವಷ್ಟರಲ್ಲಿ ಎರಡು ಕೈಗಳೂ ಬಂದಿದ್ದವು! ದೊರೆಗೆ ಋಷಿಯನ್ನು ಕಂಡರೆ ದ್ವೇಷವಿರಲಿಲ್ಲ. ಅವನು ಮಾಡಿದ್ದು ತಪ್ಪಿಗೆ ಶಿಕ್ಷೆ. ಅದು ಪಾಪವಲ್ಲ, ಕ್ಷತ್ರಿಯ ಧರ್ಮ. ಅಣ್ಣ ತಮ್ಮನಿಗೆ ಕೊಟ್ಟಿದ್ದೂ ತಪ್ಪಿಗೆ ಶಿಕ್ಷೆಯೇ. ಅದೂ ಸರಿ. ಕೌರವರು ಮಾಡಿದ್ದು ತಪ್ಪು; ಅವರನ್ನು ನೀವು ಕೊಂದದ್ದು ಆ ತಪ್ಪಿಗೆ ಶಿಕ್ಷೆ. ಇದು ಕ್ಷತ್ರಿಯರಾದ ನಿಮ್ಮ ಧರ್ಮ. ನಿನ್ನ ಕುಲಧರ್ಮವನ್ನು ಬಿಟ್ಟು ಈಗಲೆ ತಪಸ್ಸಿಗೆ ಹೋಗಬೇಕು ಎನ್ನುವ ವೈರಾಗ್ಯವೇಕೆ?” ಎಂದರು. ಯುಧಿಷ್ಟಿರ ಸುಮ್ಮನಿದ್ದ.

ವ್ಯಾಸರು ಗಾಂಧಾರಿಯ ತಲೆಯ ಮೇಲೆ ಕೈಯಿಟ್ಟು ‘ನಾನು ವ್ಯಾಸ’ ಎಂದರು.

“ಇನ್ನೂ ಒಂದು ಕಥೆ ಹೇಳುತ್ತೇನೆ, ಕೇಳು. ಹಿಂದೆ ದೇವತೆಗಳಿಗೂ ರಾಕ್ಷಸರಿಗೂ ದೊಡ್ಡ ಯುದ್ಧವಾಯಿತು. ಅದು ರಾಜ್ಯದ ಜಗಳವೇ; ಅವರೂ ನಿಮ್ಮ ಹಾಗೆ ಅಣ್ಣ ತಮ್ಮಂದಿರೇ. ಒಳ್ಳೆಯ ಕೆಲಸ ಮಾಡುತ್ತಿದ್ದವರು ದೇವತೆಗಳು; ಕೆಟ್ಟ ಕೆಲಸ ಮಾಡುತ್ತಿದ್ದವರು ರಾಕ್ಷಸರು. ಆ ಯುದ್ಧಕ್ಕೆ ಕಾರಣ ರಾಕ್ಷಸರ ಜಂಬ, ಹೊಟ್ಟೆಕಿಚ್ಚು. ದೇವತೆಗಳ ಕಡೆಯವರೇ ಕೆಲವು ಜನ ಹೋಗಿ ರಾಕ್ಷಸರ ಗುಂಪನ್ನು ಸೇರಿಕೊಂಡರು. ಅವರೂ ವೇದ ಓದಿದ ಪಂಡಿತರೇ. ದೇವತೆಗಳು ಅವರನ್ನೂ ಬಿಡದೆ ಹಿಡಿದು ಕೊಂದರು. ಅದಕ್ಕೆ ಅವರಿಗೆ ಪಾಪ ಬರಲಿಲ್ಲ. ಅವರು ಮಾಡಿದ್ದು ಅನ್ಯಾಯಕ್ಕೆ, ತಪ್ಪಿಗೆ ಶಿಕ್ಷೆ. ಒಬ್ಬನಿಂದ ಒಂದು ಗುಂಪು, ವಂಶ ಹಾಳಾಗುವಹಾಗಿದ್ದರೆ ಅವನನ್ನು ಕೊಲ್ಲುವುದು ತಪ್ಪಲ್ಲ; ಒಂದು ಗುಂಪಿನಿಂದ, ವಂಶದಿಂದ ದೇಶಕ್ಕೆ ಕೇಡಾಗುವ ಹಾಗಿದ್ದರೆ ಅದನ್ನು ತೊಡೆದುಹಾಕುವುದೂ ತಪ್ಪಲ್ಲ. ನೀವು ಮಾಡಿದ್ದರಲ್ಲಿ ತಪ್ಪೇನೂ ಇಲ್ಲವಲ್ಲಾ. ಹೇಳು, ಈಗಲಾದರೂ ಕಾಡಿಗೆ ಹೋಗುವ ಯೋಚನೆ ಬಿಡುತ್ತೀಯಾ?” ಎಂದು ಕೇಳಿದರು.

“ಸರಿ, ಆದರೆ….” ಎಂದು ಯುಧಿಷ್ಠಿರ ಅಷ್ಟಕ್ಕೇ ನಿಲ್ಲಿಸಿ ತಲೆ ತಗ್ಗಿಸಿದ.

“ಏನು,  ಅಷ್ಟಕ್ಕೇ ಮಾತು ನುಂಗುತ್ತಿದ್ದೀಯಲ್ಲಾ!” ಎಂದು ಕೇಳಿದರು ವ್ಯಾಸರು.

“ಅರ್ಜುನನ ಮಗ, ಅಭಿಮನ್ಯು, ಇನ್ನೂ ಹದಿನಾರರ ಹಸುಳೆ, ನಮ್ಮ ಕಣ್ಣೆದುರಿಗೇ ಹೋಗಿಬಿಟ್ಟನಲ್ಲಾ. ಇದೊಂದು ನನ್ನ ಮನಸ್ಸನ್ನು ಕೊರೆಯುತ್ತಿದೆ” ಎಂದ ಯುಧಿಷ್ಠಿರ. ಅವನ ಗಂಟಲು ಬಿಗಿಯಿತು; ಕಣ್ಣಲ್ಲಿ ನೀರಾಡಿತು.

ವ್ಯಾಸರು ಒಂದು ಗಳಿಗೆ ಸುಮ್ಮನಿದ್ದರು.

ಅವನು ಸಿಂಹದ ಮರಿ

“ನಿಜ, ನೀವು ಯಾರೂ ಹತ್ತಿರ ಇಲ್ಲದಿದ್ದ ಸಮಯ ನೋಡಿ ಕೌರವರು ಚಕ್ರದ ಹಾಗೆ ಸುತ್ತುಗಟ್ಟಿ ಅಭಿಮನ್ಯು ಒಬ್ಬನನ್ನೇ ಒಳಗೆ ಸೇರಿಸಿಕೊಂಡು ಮೋಸದಿಂದ ಕೊಂದರು. ಅದನ್ನು ನಾನು ಕಾಣೆನೆ? ಯುದ್ಧದ ವಿಷಯವೇ ಹಾಗಪ್ಪ. ನೀನೂ ತಿಳಿಯದವನ ಹಾಗೆ ಮಾತಾಡುತ್ತೀಯಲ್ಲ. ಯುಧಿಷ್ಠಿರ! ದಂಡಿನಲ್ಲಿ ಸೋದರಮಾವನೆ? ಅಭಿಮನ್ಯುವನ್ನು ಕೊಂದರೆ ಅರ್ಜುನನ ಅರ್ಧ ಬಲವನ್ನು ಮುರಿದ ಹಾಗಾಗುವುದೆಂದು ಕೌರವರು ಲೆಕ್ಕ ಹಾಕಿದ್ದರು. ಆ ಲೆಕ್ಕಾಚಾರ ತಲೆಕೆಳಗಾಯಿತು. ಅಭಿಮನ್ಯು ಹುಡುಗನಾದರೂ ವೀರ, ಸಿಂಹದ ಮರಿ. ಬಾಳೆಗಿಡವನ್ನು ಕತ್ತಿರಿಸುವ ಹಾಗೆ ಎದುರುಬಿದ್ದ ಶತ್ರುಗಳಲ್ಲಿ ಎಷ್ಟೋ ಜನವನ್ನು ಕೊಚ್ಚಿ ಕೆಡವಿದ ಮೇಲೆಯೇ ಅವನು ಸತ್ತದ್ದು. ಅವನು ಈಗ ಇರುವುದು ವೀರಸ್ವರ್ಗದಲ್ಲಿ. ಅದು ಎಲ್ಲರಿಗೂ ಸಿಕ್ಕುವುದಿಲ್ಲ, ಯುಧಿಷ್ಠಿರ. ನೀನೇಕೆ ಸಂಕಟಪಡುತ್ತೀಯೆ? ಹಿಂದೆ ಎಂಥೆಂಥ ಮಹಾನುಭಾವರೋ ಇದ್ದರು. ಅವರೂ ಒಂದಲ್ಲ ಒಂದು ದಿನ ಹೋದವರೇ” ಎಂದು ಹಾಗೆ ಹೆಸರುವಾಸಿಯಾದ ಹದಿನಾರು ಜನರ ಕಥೆಯನ್ನು ಹೇಳಿದರು.

ಅವರು ಹೀಗೆ ಮಾತಾಡುತ್ತ ಕುಳಿತಿದ್ದುದನ್ನು ಕಂಡು ಅರ್ಜುನ, ಸುಭದ್ರೆ ಅಭಿಮನ್ಯುವಿನ ಹೆಂಡತಿ ಉತ್ತರೆ ಅಲ್ಲಿಗೆ ಬಂದರು. ವ್ಯಾಸರ ಕಾಲು ಮುಟ್ಟಿ ನಮಸ್ಕಾರ ಮಾಡಿದರು.

“ಬನ್ನಿ, ಯುಧಿಷ್ಠಿರನಿಗೆ ಹೇಳಿದ ಮಾತೇ ನಿಮಗೂ. ಅಭಿಮನ್ಯು ಹೇಡಿಯಾಗಿ ಸತ್ತಿಲ್ಲ; ವೀರನಾಗಿ ಹೋರಾಡಿ ವೀರಸ್ವರ್ಗ ಸೇರಿದ್ದಾನೆ. ಈಗ ಅವನಿಲ್ಲ, ನಿಜ. ಆದರೆ ಅವನ ಕೀರ್ತಿ ಉಳಿದಿದೆ. ಅವನ ಹೆಸರೊಂದೇ ಸಾಕು. ಅದು ನಿಮ್ಮ ವಂಶಕ್ಕೇ ಭೂಷಣ. ನೀವು ಯಾರೂ ಇನ್ನು ಅಳಬಾರದು. ಮಗು ಉತ್ತರೆ, ನಿನ್ನ ಹೊಟ್ಟೆಯಲ್ಲಿ ಪಾಂಡವಂಶದ ಹೆಸರನ್ನು ಉಳಿಸುವ ದೊಡ್ಡ ಚಕ್ರವರ್ತಿಯೇ ಹುಟ್ಟುತ್ತಾನೆ. ಇನ್ನೇಕಮ್ಮಾ ದುಃಖ? ಸುಮ್ಮನಿರು” ಎಂದು ಎಲ್ಲರನ್ನೂ ಸಮಾಧಾನ ಮಾಡಿದರು.

“ಏನಪ್ಪಾ ಯುಧಿಷ್ಠಿರ, ಈಗಲಾದರೂ ಸಮಾಧಾನ ಆಯಿತೋ ಇಲ್ಲವೊ? ಕಾಡು ತಪ್ಪಸ್ಸು ಎನ್ನುವ ಯೋಚನೆಯನ್ನು ಬಿಟ್ಟೆಯೋ ಇಲ್ಲವೋ?” ಎಂದು ನಕ್ಕು ಕೇಳಿದರು.

“ಬಿಟ್ಟೆ!” ಎಂದು ಯುಧಿಷ್ಠಿರ ಮುನಿಯ ಕಾಲನ್ನು ಮುಟ್ಟಿ ನಮಸ್ಕಾರ ಮಾಡಿದ.

ಹೀಗೆ ವ್ಯಾಸರು ಎಲ್ಲರಿಗೂ ಬುದ್ಧಿಯ ಮಾತು ಹೇಳಿ, ಎಲ್ಲರನ್ನೂ ನೆಲೆನಿಲ್ಲಿಸಿ ತಮ್ಮ ಆಶ್ರಮಕ್ಕೆ ಹೊರಟು ಹೋದರು.

ಸತ್ತವರು ಬಂದರು!

ದಿನಗಳು ಉರುಳಿದವು.

ಆ ವೇಳೆಗೆ ಧೃತರಾಷ್ಟ್ರ, ಗಾಂಧಾರಿ, ಕುಂತಿ ಮೊದಲಾದವರು ಹಣ್ಣು ಹಣ್ಣು ಮುದುಕರಾಗಿದ್ದರು. ಅರಮನೆಯ ವಾಸ, ಊರಿನ ಗದ್ದಲ ಅವರಿಗೆ ಸಾಕಾಗಿತ್ತು. ಕಾಡಿನಲ್ಲಿ ಆಶ್ರಮ ಕಟ್ಟಿಕೊಂಡು ನೆಮ್ಮದಿಯಾಗಿರಬೇಕೆಂದು ಮನಸ್ಸಾಯಿತು. ಯುಧಿಷ್ಠಿರ ಮೊದಲಾದವರಿಗೆ ಹೇಳಿ, ಅವರನ್ನೆಲ್ಲಾ ಒಪ್ಪಿಸಿ ಕಾಡಿಗೆ ಹೊರಟರು. ಈ ಸಂಗತಿ ವ್ಯಾಸರಿಗೆ ತಿಳಿದು ಅವರು ಬಂದು ಅರ್ಧದಾರಿಯಲ್ಲಿ ಕಂಡು ತಮ್ಮ ಆಶ್ರಮಕ್ಕೆ ಕರೆದುಕೊಂಡು ಹೋದರು. ಎಲ್ಲರೂ ಅಲ್ಲಿ ಒಂದು ತಿಂಗಳ ಕಾಲವನ್ನು ನೆಮ್ಮದಿಯಾಗಿ ಕಳೆದರು.

ಆಗ ಗಾಂಧಾರಿಗೆ ಯುದ್ಧದಲ್ಲಿ ಸತ್ತ ತನ್ನ ಮಕ್ಕಳನ್ನು ನೋಡಬೇಕೆಂಬ ಹಂಬಲ ಹುಟ್ಟಿತು; ಕುಂತಿಗೆ ಕರ್ಣನನ್ನು ನೋಡಬೇಕೆಂಬ ಆಸೆಯಾಯಿತು; ಧೃತರಾಷ್ಟ್ರನಿಗೂ ಅದೇ ಇಷ್ಟವಿತ್ತು. ಅವರು ಅದನ್ನು ವ್ಯಾಸರಿಗೆ ಹೇಳಿದರು. ಅವರು ಆ ಸಮಯದಲ್ಲಿ ಪಾಂಡವರೂ ಇರುವುದು ಸರಿಯೆಂದು ಯೋಚಿಸಿ ರಾಜಧಾನಿಯಿಂದ ಅವರನ್ನೆಲ್ಲಾ ಕರೆಸಿಕೊಂಡರು. ಗೊತ್ತಾದ ಒಂದು ದಿನ ಎಲ್ಲರೂ ಗಂಗಾನದಿಯ ತೀರದಲ್ಲಿ ಸೇರಿ ರಾತ್ರಿಯಾಗುವುದನ್ನೇ ಕಾಯುತ್ತಿದ್ದರು.

ಆ ಇರುಳು ಒಂದು ಹೊತ್ತಿನಲ್ಲಿ ವ್ಯಾಸರು ಗಂಗಾ ನದಿಯಲ್ಲಿ ನಿಂತು ಸತ್ತು ಹೋಗಿದ್ದವರನ್ನೆಲ್ಲಾ ಹೆಸರು ಹಿಡಿದು ಕರೆದರು. ಅವರು ಒಬ್ಬೊಬ್ಬರಾಗಿ ಕಾಣಿಸಿಕೊಂಡು ದಡಕ್ಕೆ ಬಂದು ನಿಂತರು. ಒಂದು ಕಡೆ ದುರ್ಯೋಧನ, ಅವನ ಅಷ್ಟೂ ಜನ ತಮ್ಮಂದಿರು; ಇನ್ನೊಂದು ಕಡೆ ಕರ್ಣ, ಅಭಿಮನ್ಯು ಮುಂತಾದವರು; ಹೀಗೆ ಮಡಿದ ಇನ್ನು ಎಷ್ಟೋ ಜನ ನೆಂಟರು, ಇಷ್ಟರು. ಅಗಲಿದ ತಂದೆ, ತಾಯಿ, ಮಕ್ಕಳು, ಅಣ್ಣತಮ್ಮಂದಿರು ಒಬ್ಬರನ್ನೊಬ್ಬರು ಕಂಡು ಪಟ್ಟ ಸಂತೋಷ ಅಷ್ಟಿಷ್ಟಲ್ಲ. ಆ ರಾತ್ರಿ ಒಂದು ಗಳಿಗೆಯೋ ಎನ್ನುವ ಹಾಗೆ ಕಳೆದು ಹೋಯಿತು. ಬೇರೆ ಲೋಕಗಳಿಂದ ಬಂದಿದ್ದವರೆಲ್ಲಾ ಬೆಳಗಾದ ಕೂಡಲೆ ಕಣ್ಮರೆಯಾದರು.

ದಿನದ ಮೇಲೆ ದಿನ ಉರುಳುತ್ತಾ ಮೂವತ್ತಾರು ವರ್ಷ ಕಳೆಯಿತು.

ಒಂದು ದಿನ ಶ್ರೀಕೃಷ್ಣ ದೇಹವನ್ನು ಬಿಟ್ಟ. ಅರ್ಜುನನಿಗೆ ಅವನ ಅಗಲಿಕೆಯ ದುಃಖವನ್ನು ತಡೆದುಕೊಳ್ಳುವುದಕ್ಕೆ ಆಗಲಿಲ್ಲ. ಅವನು ವ್ಯಾಸರ ಆಶ್ರಮಕ್ಕೆ ಬಂದು ಅವರ ಕಾಲಿನ ಮೇಲೆ ಬಿದ್ದು ಹೊರಳಾಡಿದ; ನಡೆದ ಸಂಗತಿಯನ್ನೆಲ್ಲ ಹೇಳಿದ. ವ್ಯಾಸರಿಗೆ ಅದು ಮೊದಲೇ ಗೊತ್ತಿತ್ತು.

“ಅರ್ಜುನ ಸುಮ್ಮನೆ ಏಕೆ ಗೋಳಾಡುತ್ತೀಯೆ? ಯಾವುದಕ್ಕೆ ಕೃಷ್ಣ ಹುಟ್ಟಿ ಬಂದಿದ್ದನೋ ಆ ಕೆಲಸವನ್ನು ಮಾಡಿ ಮುಗಿಸಿ ಹೊರಟುಹೋದ. ಅದು ಅವನ ಇಷ್ಟ. ನಮಗೆ ಉಳಿದಿರುವುದು ಅವನ ಸ್ಮರಣೆಯೊಂದೇ. ನೀವೂ ಇಷ್ಟು ವರ್ಷ ರಾಜ್ಯ ಆಳಿದ್ದೀರಿ; ಕೀರ್ತಿ ಸಂಪಾದಿಸಿದ್ದೀರಿ. ಈಗ ದ್ವಾಪರಯುಗ ಮುಗಿಯುತ್ತ ಬಂದಿದೆ. ಇನ್ನು ನೀವು ಸ್ವರ್ಗಕ್ಕೆ ಹೊರಟುಹೋಗುವುದು ಒಳ್ಳೆಯದು. ನಾನು ಹೀಗೆ ಹೇಳಿದೆನೆಂದು ಯುಧಿಷ್ಠಿರನಿಗೆ ಹೇಳು. ಹೋಗಿ ಬಾ” ಎಂದು ಹೇಳಿ ಕಳುಹಿಸಿದರು.

ಗಣೇಶ ಬರೆದುಕೊಂಡ

ಹೀಗೆ ದ್ವಾಪರಯುಗದಲ್ಲಿ ಹುಟ್ಟಿದ ವ್ಯಾಸರು ಆಗ ಏನೇನು ನಡೆಯಿತೋ ಅದೆಲ್ಲವನ್ನೂ ಕಂಡವರು; ಎಲ್ಲರಿಗೂ ಹಿರಿಯರಾಗಿದ್ದವರು; ನೀತಿಯ, ಧರ್ಮದ ದಾರಿ ತೋರಿಸಿದವರು; ತಪ್ಪು ಯಾರು ಮಾಡಿದರೂ ಅದನ್ನು ತಿದ್ದುವುದಕ್ಕೆ ಮುಂದೆ ಬಂದವರು. ಅವರನ್ನು ಕಂಡರೆ ಒಳ್ಳೆಯವರಿಗೆಲ್ಲಾ ಭಕ್ತಿ, ಗೌರವ; ಕೆಟ್ಟವರಿಗೆ ದಿಗಿಲು. ಅವರ ಕಣ್ಣೆದುರಿಗೇ ಎಷ್ಟೋ ದೊಡ್ಡ ದೊಡ್ಡ ವಂಶಗಳು ಹುಟ್ಟಿದವು, ಬೆಳೆದವು, ಅಳಿದವು. ತಪಸ್ಸಿನ ಬಲದಿಂದ, ಯೋಗಶಕ್ತಿಯಿಂದ ಋಷಿಗಳು ನೂರಾರು ವರ್ಷ ಬದುಕಬಲ್ಲರು; ಅವರು ಮನಸ್ಸು ಮಾಡಿದರೆ ಮುಪ್ಪನ್ನು, ಸಾವನ್ನು ಗೆಲ್ಲಬಲ್ಲರು. ವ್ಯಾಸರು ಅಂಥ ಶಕ್ತಿಯುಳ್ಳ ಋಷಿ. ಅವರು ಈಗಲೂ ಬದರಿಯಲ್ಲಿ ಇರುವರೆಂದೇ ನಂಬಿಕೆ.

ಭಾರತದ ಕಥೆಯನ್ನು ಲೋಕಕ್ಕೆ ತಿಳಿಸಿದವರೇ ವ್ಯಾಸರು. ಅದು ಹೇಗೆ? ಅದೊಂದು ಸ್ವಾರಸ್ಯ.

ಮಹಾಭಾರತದ ಯುದ್ಧವೆಲ್ಲಾ ಮುಗಿದುಹೋಗಿ ಬಹುಕಾಲದ ನಂತರ ಒಂದು ದಿನ ಬ್ರಹ್ಮ ಬದರಿಕಾಶ್ರಮಕ್ಕೆ ಬಂದ. ವ್ಯಾಸರು ಅವನನ್ನು ಮರ್ಯಾದೆಯಿಂದ ಎದುರುಗೊಂಡು ಕುಳ್ಳಿರಿಸಿದರು. ಕ್ಷೇಮಸಮಾಚಾರದ ಮಾತೆಲ್ಲಾ ಆಯಿತು.

“ಏನಪ್ಪಾ ವಿಶೇಷ, ಇಷ್ಟು ದೂರ ಬಂದೆಯಲ್ಲಾ?” ಎಂದು ಕೇಳಿದರು ವ್ಯಾಸರು.

“ನಿಮ್ಮಿಂದ ಒಂದು ಕೆಲಸ ಆಗಬೇಕಲ್ಲಾ ಮುನಿಗಳೇ”.

“ಅದೇನಪ್ಪಾ ಅಂಥಾದ್ದು?”

“ನೀವು ಮಹಾಭಾರತ ಯುದ್ಧವನ್ನೆಲ್ಲಾ ನೋಡಿದ್ದೀರಿ. ಆಗ ಇದ್ದ ಜನರನ್ನೆಲ್ಲ ಬಲ್ಲಿರಿ, ಅವರೊಡನೆ ಮಾತಾಡಿದ್ದೀರಿ. ನಿಮಗೆ ಗೊತ್ತಿಲ್ಲದ ವಿಷಯವಿಲ್ಲ. ಆ ಕಥೆ ನೀವು ಬರೆದರೆ ತುಂಬ ಚೆನ್ನಾಗಿರುತ್ತೆ, ನೋಡಿ” ಎಂದ ಬ್ರಹ್ಮ.

“ಅದೇನೋ ಸರಿಯಪ್ಪ. ನಾನು ಹೇಳಿದ್ದನ್ನು ಕೇಳಿ ಚೆನ್ನಾಗಿ ಬರೆದುಕೊಳ್ಳುವವರನ್ನು ಎಲ್ಲಿಂದ ತರೋಣ? ಅಂಥವರು ಯಾರಿದ್ದಾರೆ, ಹೇಳು?” ಎಂದು ವ್ಯಾಸರು ಪ್ರಶ್ನೆ ಹಾಕಿದರು.

“ನಮ್ಮ ಗಣೇಶ ತುಂಬ ಬುದ್ಧಿವಂತ. ಅವನನ್ನು ಒಪ್ಪಿಸಿ ಕಳಿಸಿದರೆ ಆಗಬಹುದೆ?” ಎಂದು ಕೇಳಿದ ಬ್ರಹ್ಮ.

“ಹಾಗೇ ಮಾಡು” ಎಂದು ವ್ಯಾಸರು ಉತ್ತರ ಕೊಟ್ಟರು. ಬ್ರಹ್ಮ ಹೊರಟುಹೋದ. ಸ್ವಲ್ಪ ದಿನ ಕಳೆದ ಮೇಲೆ ವಿನಾಯಕ ಇಲಿಯ ಮೇಲೆ ಕುಳಿತು ವ್ಯಾಸರ ಆಶ್ರಮಕ್ಕೆ ಬಂದ. ಆಗ ವ್ಯಾಸರು ಕಣ್ಣುಮುಚ್ಚಿ ಧ್ಯಾನ ಮಾಡುತ್ತ ಕುಳಿತಿದ್ದರು.

“ನಮಸ್ಕಾರ ಮುನಿಗಳೇ” ಎಂದು ಗಣಪತಿ ನಮಸ್ಕರಿಸುತ್ತ ಗಟ್ಟಿಯಾಗಿ ಕೂಗಿ ಹೇಳಿದ. ವ್ಯಾಸರು ನಿಧಾನವಾಗಿ ಕಣ್ಣು ಬಿಟ್ಟು ನೋಡಿದರು.

“ಓ ಗಣಪತಿಯೇ? ಬಾ” ಎಂದು ಎದ್ದು ಅವನನ್ನು ಒಳಗೆ ಕರೆದುಕೊಂಡು ಹೋದರು.

“ನಾನು ಬಂದಿರುವುದು ಏಕೆಂದು ತಮಗೆ ಗೊತ್ತಲ್ಲ?” ಎಂದು ವ್ಯಾಸರ ಮುಂದೆ ಕುಳಿತುಕೊಳ್ಳುತ್ತ ಗಣೇಶ ಕೇಳಿದ.

ಗೊತ್ತು ಗೊತ್ತು. ಬ್ರಹ್ಮ ಅಲ್ಲವೇನಪ್ಪಾ ಕಳಿಸಿದ್ದು? ಎಂದು ಕೇಳುತ್ತ ವ್ಯಾಸರು ನಸುನಕ್ಕರು.

“ಹೌದು, ಎಲ್ಲಿ ಕಥೆ ಹೇಳಿ ಮತ್ತೆ, ಬರೆದು ಕೊಳ್ಳುತ್ತೇನೆ” ಎಂದ ಗಣೇಶ.

“ಆಗಲಪ್ಪಾ, ಬರೆದುಕೋ” ಎಂದರು  ಮುನಿ.

“ಆದರೆ ಒಂದು ಮಾತು” ಎಂದ ಗಣೇಶ.

“ಅದೇನು ಹೇಳು”

“ನೋಡಿ, ನೀವು ಕಥೆ ಹೇಳುವಾಗ ನಡುವೆ ಎಲ್ಲೂ ನಿಲ್ಲಿಸಬಾರದು. ಕುದುರೆ ಓಡುವ ಹಾಗೆ ನೀವು ಕಥೆ ಹೇಳಬೇಕು; ನೀರು ಕುಡಿದ ಹಾಗೆ ನಾನು ಬರೆದು ಬಿಡುತ್ತೇನೆ. ಕಥೆ ಹೇಳುವಾಗ ಎಲ್ಲಾದರೂ ನೀವು ನಿಲ್ಲಿಸಿದರೆ ಈ ಕೆಲಸ ಬಿಟ್ಟು ಹೊರಟುಹೋಗುತ್ತೇನೆ” ಎಂದು ಗಣೇಶ ಒಂದು ಕೊಕ್ಕೆ ಹಾಕಿದ.

ಭಲೆ ಹುಡುಗ ಎಂದು ವ್ಯಾಸರು ಮೆಚ್ಚಿಕೊಂಡರು. ತಾವು ಹೇಳುವ ಕಥೆ ಬರೆದುಕೊಳ್ಳುವುದಕ್ಕೆ ಇಂಥ ಚುರುಕು ಹುಡುಗನೇ ಸರಿ ಎನ್ನಿಸಿತು ಅವರಿಗೆ. ಆದರೆ ವ್ಯಾಸರೇನು ಸಾಮಾನ್ಯರೆ? ಎಲ್ಲವನ್ನೂ ತಿಳಿದಿದ್ದ ಜಾಣರು. ಅವರೂ ಒಂದು ಷರತ್ತು ಹಾಕಿದರು.

“ನೀನು ಹೇಳಿದ ಹಾಗೇ ಆಗಲಯ್ಯ. ಆದರೆ ನಾನು ಹೇಳುವುದನ್ನು ನೀನು ಅರ್ಥಮಾಡಿಕೊಂಡು ಬರೆಯುತ್ತ ಹೋಗಬೇಕು. ಹಾಗಾದರೆ ಮಾತ್ರ ನಿನ್ನ ಷರತ್ತಿಗೆ ಒಪ್ಪಿಗೆ” ಎಂದರು.

ಸರಿ, ಆರಂಭವಾಯಿತು ಕಥೆ. ವ್ಯಾಸರು ಹೇಳುತ್ತ ಹೋದರು; ಗಣೇಶ ಬರೆದುಕೊಳ್ಳುತ್ತ ಹೋದ. ವ್ಯಾಸರು ಒಂದು ಪದ್ಯದ ಒಂದು ಸಾಲು ಹೇಳಿ ಮುಗಿಸುವ ಹೊತ್ತಿಗೆ ಗಣೇಶ ಅದನ್ನು ಬರೆದು ಮುಗಿಸಿಬಿಡುತ್ತಿದ್ದ; “ಹೂ, ಮುಂದೆ, ಮುಂದೆ!” ಎಂದು ಅವಸರ ಮಾಡುತ್ತಿದ್ದ; ಮಹಾಭಾರತದ ಕಥೆ ಬಹು ದೊಡ್ಡದು ಅದರಲ್ಲಿ ಓಡಾಡುವ ಮಹಾವ್ಯಕ್ತಿಗಳೇ ನೂರಾರು ಮಂದಿ. ಅದರಲ್ಲಿ ಬರುವ ನೂರಾರು ಸ್ವಾರಸ್ಯದ ಸಂಗತಿಗಳನ್ನು ಒಂದು ನಿಮಿಷವೂ ನಿಲ್ಲಿಸದೆ ಹೇಳುವುದು ಸುಲಭವೆ? ಮಧ್ಯೆ ಮಧ್ಯೆ ಹೇಗೆ ಹೇಳಿದರೆ ಸ್ಪಷ್ಟವಾಗಿರುತ್ತದೆ, ಚೆನ್ನಾಗಿರುತ್ತದೆ ಎಂದು ಯೋಚಿಸಿ ಹೇಳಿ ಬರೆಸಬೇಕಾಗುತ್ತದಲ್ಲ? ವ್ಯಾಸರು ಉಪಾಯಗಾರರು. ಗಣೇಶ ಅವಸರ ಮಾಡಿದಾಗ ಕಷ್ಟವಾದ ಒಂದು ಪದ್ಯ ಹೇಳಿಬಿಡುತ್ತಿದ್ದರು. ಗಣೇಶ ಅದನ್ನು ಅರ್ಥಮಾಡಿ ಕೊಂಡು ಬರೆದುಕೊಳ್ಳುವಷ್ಟರಲ್ಲಿ ಅವರು ಮುಂದಿನ ಕಥೆಯನ್ನು ಹೇಳಿಬಿಡುತ್ತಿದ್ದರು. ಹೀಗೆ ಗಣೇಶ ನಿಲ್ಲಿಸಿ ಬರೆದ ಶ್ಲೋಕಗಳನ್ನು ‘ವ್ಯಾಸಗುಟ್ಟು’ ಎಂದು ಕರೆಯುವ ವಾಡಿಕೆ.

ಹಬ್ಬಿತು ಲೋಕಕ್ಕೆಲ್ಲ

ವ್ಯಾಸರ ಶಿಷ್ಯ ವೈಶಂಪಾಯನ. ಅವನ ಗುರುವಿನ ಸೇವೆ ಮಾಡಿಕೊಂಡು ಅಲ್ಲೇ ಇದ್ದ. ವ್ಯಾಸರು ಕಥೆ ಹೇಳಿ ಗಣೇಶನ ಕೈಯಲ್ಲಿ ಬರೆಸುತ್ತಿದ್ದಾಗ ವೈಶಂಪಾಯನ ಅಲ್ಲೇ ಕುಳಿತು ಅದನ್ನು ಕೇಳುತ್ತಿದ್ದ. ಇಂಥ ಒಂದು ಸೊಗಸಾದ ಕಥೆ ಲೋಕದ ಜನಕ್ಕೆ ತಿಳಿದರೆ ತುಂಬ ಒಳ್ಳೆಯದೆಂದು ಅವನಿಗೆ ತೋರಿತು. ಅದು ಅವನ ಮನಸ್ಸಿನಲ್ಲಿತ್ತು.

ಈ ಸಮಯದಲ್ಲಿ ಹಸ್ತಿನಾವತಿಯಲ್ಲಿ ಜನಮೇಜಯ ರಾಜ್ಯ ಆಳುತ್ತಿದ್ದ. ಅವನು ಅರ್ಜುನನ ಮರಿಮಗ. ವ್ಯಾಸರು ಮಹಾಭಾರತದ ಯುದ್ಧವನ್ನು ನೋಡಿದ್ದ ಸಂಗತಿ ಜನಮೇಜಯನ ಕಿವಿಗೆ ಬಿದ್ದಿತ್ತು; ತನ್ನ ವಂಶದ ಶೂರರ ಕಥೆಯನ್ನು ಅವರ ಬಾಯಿಂದಲೇ ಕೇಳಬೇಕೆಂಬ ಆಸೆಯೂ ಇತ್ತು. ಆದರೆ ವ್ಯಾಸರಂತ ದೊಡ್ಡ ಋಷಿಯನ್ನು ಕರೆಸಿಕೊಳ್ಳುವುದು ಹೇಗೆ?  ಅವನು ಮಂತ್ರಿಗಳೊಡನೆ ಆಲೋಚನೆ ಮಾಡಿ ಒಂದು ದೊಡ್ಡ ಯಾಗಕ್ಕೆ ಏರ್ಪಾಡು ಮಾಡಿದ. ಯಾಗವೆಂದರೆ ಯಾವ ಋಷಿಯೂ ಬರಲಾರೆ ಎನ್ನುವುದಿಲ್ಲ. ಅದು ಅವರಿಗೆ ತುಂಬ ಇಷ್ಟ.

ಜನಮೇಜಯ ವ್ಯಾಸರನ್ನು ಕರೆದು ಬರಲು ತನ್ನ ಪುರೋಹಿತನನ್ನೇ ಕಳಿಸಿದ. ಕೆಲವು ದಿನಗಳಲ್ಲೇ ಅವರು ಶಿಷ್ಯರೊಡನೆ ಹಸ್ತಿನಾವತಿಗೆ ಬಂದರು. ಹಾಗೆಯೇ ಬೇರೆ ಬೇರೆ ಕಡೆಗಳಿಂದಲೂ ನೂರಾರು ಮಂದಿ ಋಷಿಗಳು ಬಂದರು. ಯಾಗ ಚೆನ್ನಾಗಿಯೇ ನಡೆಯಿತು. ಜನಮೇಜಯ ವ್ಯಾಸರನ್ನು ನಾಲ್ಕು ದಿನ ಹೆಚ್ಚಾಗಿಯೇ ನಿಲ್ಲಿಸಿಕೊಂಡ.

“ಗುರುಗಳೇ, ನೀವು ನಮ್ಮ ಹಿರಿಯರನ್ನೆಲ್ಲಾ ನೋಡಿದ್ದೀರಿ. ಅವರ ಚರಿತ್ರೆಯನ್ನೆಲ್ಲಾ ಬಲ್ಲಿರಿ. ಆ ಕಥೆಯನ್ನು ದಯಮಾಡಿ ಹೇಳಬೇಕು.”ಎಂದು ಒಂದು ದಿನ ಜನಮೇಜಯ ಕೇಳಿದ.

“ಆಗಲಪ್ಪಾ, ನಮ್ಮ ವೈಶಂಪಾಯನ ಹೇಳುತ್ತಾನೆ, ಕೇಳು” ಎಂದು ಆ ಸಂಗತಿಯನ್ನೆಲ್ಲಾ ವಿವರವಾಗಿ ಹೇಳುವಂತೆ ವ್ಯಾಸರು ಶಿಷ್ಯನಿಗೆ ಅಪ್ಪಣೆ ಮಾಡಿದರು. ಅವನು ಅದನ್ನು ಗುರುವಿನ ಬಾಯಿಂದ ಹೇಗೆ ಕೇಳಿದ್ದನೋ ಹಾಗೆಯೇ ಒಂದನ್ನೂ ಬಿಡದೆ ಹೇಳಿದ. ಜನಮೇಜಯ ತನ್ನ ಪರಿವಾರದೊಡನೆ ಕುಳಿತು ಕೇಳಿದ. ಆಗ ಅಲ್ಲಿ ಉಗ್ರಶ್ರವ ಎಂಬ ಒಬ್ಬ ಋಷಿಯೂ ಇದ್ದ-ಕಥೆ ಅವನ ಕಿವಿಯ ಮೇಲೂ ಬಿದ್ದಿತ್ತು. ಕೆಲವು ದಿನಗಳಾದ ಮೇಲೆ ನೈಮಿಷ ಎಂಬ ಕಾಡಿನಲ್ಲಿ ಯಾಗ ನಡೆಯಿತು. ಉಗ್ರಶ್ರವ ಅಲ್ಲಿಗೆ ಹೋದಾಗ ನೂರಾರು ಜನ ಋಷಿಗಳು ಸೇರಿದ್ದ ಸಭೆಯಲ್ಲಿ ಆ ಕಥೆಯನ್ನು ಹೇಳಿದ. ಆಮೇಲೆ ಅದು ಒಬ್ಬರಿಂದ ತಿಳಿದು ಎಲ್ಲಾ ಕಡೆಯೂ ಹಬ್ಬಿತು.

ವ್ಯಾಸರು ವೇದವನ್ನು ವಿಂಗಡಿಸಿದರೆಂದು ಹಿಂದೆ ಹೇಳಿತಷ್ಟೆ. ಅದು ಅವರು ಮೊದಲು ಮಾಡಿದ ಕೆಲಸ. ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣ ವೇದ ಎನ್ನುವುದೇ ಈ ನಾಲ್ಕು ಭಾಗಗಳು. ಮೊದಲು ಅದೆಲ್ಲಾ ಒಂದೇ ಆಗಿತ್ತು. ವ್ಯಾಸರ ಶಿಷ್ಯರಾಗಿದ್ದ ಋಷಿಗಳು ಎಷ್ಟೋ ಜನ. ಅವರಲ್ಲಿ ಪೈಲ, ವೈಶಂಪಾಯನ,  ಜೈಮಿನಿ, ಸುಮಂತು ಎನ್ನುವ ನಾಲ್ಕು ಜನ ನಾಲ್ಕು ವೇದಗಳನ್ನೂ ಲೋಕದಲ್ಲಿ ಹರಡಿದರು. ವೇದಗಳಲ್ಲಿ ಅಡಗಿರುವ ಅರ್ಥದ ಗುಟ್ಟನ್ನು ತಿಳಿಸಲು ವ್ಯಾಸರು ಬ್ರಹ್ಮ ಸೂತ್ರಗಳನ್ನು ಬರೆದರು. ಅದೂ ತಿಳಿದುಕೊಳ್ಳುವುದಕ್ಕೆ ಎಲ್ಲಿ ಕಷ್ಟವಾಗುವುದೋ ಎಂದು ಹಿಂದೆ ಇದ್ದ ಮಹನೀಯರ ಸಂಗತಿಗಳನ್ನು, ಅವುಗಳಿಗೆ ಹಣೆದುಕೊಂಡ ಹಾಗೆ ಬರುವ ನೀತಿ ಕಥೆಗಳನ್ನು ಒಳಗೊಂಡ ಹದಿನೆಂಟು ಪುರಾಣಗಳನ್ನು ಬರೆದರು. ಆ ಮೇಲೆ ‘ಹರಿವಂಶ’ ಎಂಬ ಇನ್ನೊಂದು ಪುಸ್ತಕವನ್ನೂ ಬರೆದರು. ಅದು ಶ್ರೀಕೃಷ್ಣನ ಚರಿತ್ರೆ; ಕೊನೆಯಲ್ಲಿ ಬರೆದ ಗ್ರಂಥ. ಅದಕ್ಕೆ ಸ್ವಲ್ಪ ಮುಂಚೆ ಹೇಳಿ ಬರೆಸಿದ್ದೇ ಭಾರತದ ಕಥೆ. ಅದರಲ್ಲಿ ಇಲ್ಲದೆ ಇರುವ ವಿಷಯವೇ ಇಲ್ಲ. ಅದಕ್ಕೆ ಐದನೆಯ ವೇದವೆಂದು ಹೆಸರು. ‘ಜಯ’ ಎನ್ನುವುದು ಅದರ ಇನ್ನೊಂದು ಹೆಸರು. ಯಾವುದರ ಹೆಸರನ್ನು ಕೇಳಿದರೆ ಪ್ರಪಂಚದಲ್ಲಿ ತಿಳಿವಳಿಕೆಯುಳ್ಳ ಜನರೆಲ್ಲ ಕೈಯೆತ್ತಿ ಮುಗಿಯುವರೋ ಆ ‘ಭಗವದ್ಗೀತೆ’ಯ ಹೂರಣ ಹುದುಗಿರುವುದು ಭಾರತದಲ್ಲೇ. ವ್ಯಾಸರು ನಮ್ಮ ದೇಶಕ್ಕೆ ಕೊಟ್ಟಿರುವುದು ಇಂಥ ದೊಡ್ಡ ಜ್ಞಾನದ ಆಸ್ತಿ.

ನಮ್ಮ ಪುರಾಣಗಳಲ್ಲಿ ಕಾಣಿಸಿಕೊಳ್ಳುವ ಮಹಾಪುರುಷರಲ್ಲಿ ಮಹಾಮಹಿಮರು ವ್ಯಾಸರು. ತಮಗಾಗಿ ಅವರು ಏನನ್ನೂ ಬಯಸಲಿಲ್ಲ. ಸ್ವಾರ್ಥ, ದ್ವೇಷ ಯಾವುದೂ ಇಲ್ಲದ ನಿರ್ಮಲ ಮನಸ್ಸು, ಸೂರ್ಯ ಪ್ರಕಾಶದಂತಹ ವಿವೇಕ. ತಮ್ಮ ಕಣ್ಣಮುಂದೆಯೇ ಶಂತನುವಿಂದ ಜನಮೇಜಯನವರೆಗೆ ಏಳು ಪೀಳಿಗೆಗಳನ್ನು ಕಂಡರು; ಶ್ರೀಕೃಷ್ಣ, ಭೀಷ್ಮ, ಧೃತರಾಷ್ಟ್ರ, ಧರ್ಮರಾಯ, ದುರ್ಯೋಧನರಂತಹ ಪರ್ವತಸದೃಶ ವ್ಯಕ್ತಿಗಳೊಡನೆ ಓಡಾಡಿದರು. ದುಃಖದಲ್ಲಿದ್ದವರಿಗೆ ಅಮೃತದಂತಹ ಮಾತುಗಳನ್ನು ಹೇಳಿದರು, ತಪ್ಪು ಮಾಡಿದವರಿಗೆ ಸ್ಪಷ್ಟವಾಗಿ ಎಚ್ಚರಿಕೆ ಹೇಳಿದರು. ಒಳ್ಳೆಯವರಿಗೆ ಧೈರ್ಯುಕೊಟ್ಟರು, ತಾವೇ ಅಗ್ನಿಯಂತೆ ಪರಿಶುದ್ಧರಾಗಿ ನಡೆದರು. ಇಂತಹವರ ವಿಷಯದ ಒಂದೊಂದು ಕಥೆಯೂ ನಮಗೆಲ್ಲ ದಾರಿ ತೋರುವ ಒಂದೊಂದು ದೀಪದ ಹಾಗೆ.

*       *       *