Categories
ಕನ್ನಡ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ವ್ಯಾಸರಾಯ ಬಲ್ಲಾಳ

ನಿಡಂಬೂರು ವ್ಯಾಸರಾಯ ಬಲ್ಲಾಳರು ಇಂದಿನ ಪೀಳಿಗೆಯ ಸಮರ್ಥ ಕಥೆಗಾರರಲ್ಲಿ ಹಾಗೂ ಕಾದಂಬರಿ ಕಾರರಲ್ಲಿ ಪ್ರಮುಖರು. ಇವರು ಪ್ರಸಿದ್ದ ಕಥೆಗಾರರಾಗಿ ಹಾಗೂ ಶ್ರೇಷ್ಟ ಕಾದಂಬರಿಕಾರರಾಗಿ ಹೆಸರು ಮಾಡಿದ್ದಾರೆ. ಇವರು ೧೯೨೩ ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯಲ್ಲಿ ಜನಿಸಿದರು. ಚಿಕ್ಕಂದಿನಿಂದ ಮುಂಬಯಿಯಲ್ಲೇ ನೆಲಸಿ ಮುಂಬಯಿಯ ತೈಲ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದು ಸಾಹಿತ್ಯ ಸೇವೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸ್ಥೆವಹಿಸಿರುವ ಇವರು ಕರ್ನಾಟಕ ಸಂಘ, ಸಾಹಿತ್ಯ ಕೂಟ, ಕನ್ನಡ ಕಲಾಕೂಟ, ಕನ್ನಡ ಕಲಾಕೇಂದ್ರಗಳ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾರೆ. ಮುಂಬೈ ಜೀವನ ಇವರ ಕಥೆ ಕಾದಂಬರಿಗಳಲ್ಲಿ ಕಲಾತ್ಮಕವಾಗಿ ಮೂಡಿಬಂದಿದೆ. ಸುಮಾರು ೪೦ ವರ್ಷಗಳ ಹಿಂದೆ ‘ಅಂಕಣ, ಕಾರರಾಗಿ ಇವರು ಮುಂಬಯಿಯಲ್ಲಿ ಹೆಸರು ಮಾಡಿದ್ದಾರೆ. ಬಲ್ಲಾಳರು ಕಥೆ, ಕಾದಂಬರಿ, ನಾಟಕ, ಪ್ರವಾಸ ಕಥನ, ಈ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ.

ಬಲ್ಲಾಳರು ಇಬ್ಸನ್ ಮತ್ತು ಬರ್ನಾಡ್ ಷಾ ಅವರ ನಾಟಕಗಳನ್ನೂ ಕನ್ನಡಕ್ಕೆ ರೂಪಾಂತರ ಮಾಡಿದ್ದಾರೆ. ‘ಗಿಳಿಯು ಪಂಜರದೊಳಿಲ್ಲ, ಮತ್ತು ‘ಮುಳ್ಳೆಲ್ಲಿದೆ ಮಂದಾರ, ಇವು ಇವರ ನಾಟಕಗಳು ‘ನಾನೊಬ್ಬ ಭಾರತೀಯ ಪ್ರವಾಸಿ, ಅವರ ಪ್ರವಾಸ ಕಥನವಾಗಿದೆ. ‘ಸಂಪಿಗೆ, ಮಂಜರಿ, ಕಾಡುಮಲ್ಲಿಗೆ, ಇವರ ಕಥಾಸಂಕಲನಗಳು. ಹೇಮಂತಗಾನ, ವಾತ್ಸಲ್ಯ ಪಥ, ಉತ್ತರಾಯಣ, ಬಂಡಾಯ, ಅನುರಕ್ತೆ, ಇವು ಇವರ ಪ್ರಮುಖ ಕಾದಂಬರಿಗಳು. ಇವರ ಬಂಡಾಯ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕಾರ ದೊರೆತಿದೆ. ‘ಬಂಡಾಯ, ಕಾದಂಬರಿಯಲ್ಲಿ ಸಿದ್ದಾಂತವೊಂದಕ್ಕೆ ಬದ್ದವಾಗಿ ಆರಂಭವಾಗುವ ಸಂಘಟನೆಗಳು, ಚಳುವಳಿಗಳು ಹೇಗೆ ಆ ಸಂಘಟನೆಯಲ್ಲಿ ತೊಡಗಿಸಿ ಕೊಂಡವರ ಮಾನವೀಯ ದೌರ್ಬಲ್ಯ, ಕುಟೀಲತೆ, ಸಣ್ಣತನಗಳಿಂದಾಗಿ ತವು ಯಾವ ಭ್ರಷ್ಠ ವ್ಯವಸ್ಥೆಯ ವಿರುದ್ದ ಆ ವ್ಯವಸ್ಥೆಯಷ್ಟೇ ಭ್ರಷ್ಟವಾಗಿ ಹೋಗುತ್ತದೆ. ಎಂಬುದನ್ನೂ ವಿಶ್ಲೇಷಿಸುವ ಒಂದು ಪ್ರಯತ್ನವನ್ನು ವ್ಯಾಸರಾಯ ಬಲ್ಲಾಳರು ಮಾಡಿದ್ದಾರೆ. ಕಾಡುಮಲ್ಲಿಗೆ, ಕಥಾಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ ದೊರೆತಿದ್ದು ರಾಜ್ಯ ಸಾಹಿತ್ಯ ಅಕಾಡಮಿ ಇವರನ್ನೂ ೧೯೮೩ ರಲ್ಲಿ ಸನ್ಮಾನಿಸಿದೆ. ವ್ಯಾಸರಾಯರು ಬರೆದದ್ದು ಕೆಲವೇ ಕೆಲವು ಕಾದಂಬರಿಗಳೆಂದೂ ಎನಿಸಿದರೂ ಪ್ರತಿಯೊಂದರಲ್ಲೂ ಅವರ ಶ್ರದ್ದೆ ನಿಷ್ಠೆಗಳ ಅಬಿವ್ಯಕ್ತಿ ಇದೆ. ಬದುಕಿನ ನವುರಾದ ವಿಮರ್ಶೆ ಇದೆ. ಆಳವಾದ ಜೀವನ ದರ್ಶನವಿದೆ. ಸೊಗಸಾಗಿ ಓದಿಕೊಂಡು ಹೋಗುವ ಕಾದಂಬರಿಗಳಾದರೂ ಇದು ಬರಿ ಕಥೆಯಲ್ಲೋ ಅಣ್ಣ, ಎಂದು ತೋರುವ ಎತ್ತರದಲ್ಲಿರುತ್ತದೆ.