gopal-column

ಸುಮಾರು ಒಂದು ನೂರು ವರುಷಗಳಷ್ಟು ಹಿಂದೆ ಮೈಸೂರಿನ ಕನ್ನಡ ಪಂಡಿತರೊಬ್ಬರು ‘ಕನ್ನಡವು ಸಂಸ್ಕೃತಜನ್ಯ’ ಎಂಬ ಶೀರ್ಷಿಕೆಯುಳ್ಳ ಪುಸ್ತಕವೊಂದನ್ನು ಬರೆದು ಪ್ರಕಟಪಡಿಸಿದ್ದರು. ಶಿಕ್ಷಕರ ತರಬೇತಿ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿದ್ದು ಅರಮನೆಯ ಗೌರವಕ್ಕೆ ಪಾತ್ರರಾಗಿದ್ದ ತಿರು. ಶ್ರೀನಿವಾಸ ರಂಗಾಚಾರ್ಯರೆಂಬ ಮಹನೀಯರೇ ಈ ಪುಸ್ತಕವನ್ನು ಬರೆದವರು. ಕನ್ನಡವು ದ್ರಾವಿಡ ಭಾಷಾಕುಟುಂಬಕ್ಕೆ ಸೇರಿದುದೆಂಬ ವಿಷಯವು ಮಾನ್ಯವಾಗುವುದಕ್ಕೆ ಮೊದಲು ಆಚಾರ್ಯರಂತೆಯೇ ಅವರ ತಲೆಮಾರಿನ ಇತರ ಅನೇಕ ವಿದ್ವಾಂಸರೂ ಕನ್ನಡವನ್ನು ಸಂಸ್ಕೃತದ ಮಡಿಲಿಗಿಡುವ ಇಲ್ಲವೇ ಹೊರಗೆಳೆಯುವ ದೀರ್ಘಚರ್ಚೆಯಲ್ಲಿ ತೊಡಗಿಕೊಂಡಿದ್ದರು. ಸದ್ಯಕ್ಕೆ ಈ ಚರ್ಚೆಯ ವಿವರಗಳಿಂದ ಪ್ರಯೋಜನವೇನೂ ಇಲ್ಲ, ನಿಜ. ಆದರೆ, ಇದಾದ ನೂರು ವರ್ಷಗಳ ನಂತರ ‘ಕನ್ನಡವನ್ನು ಸಂಸ್ಕೃತದ ಹಿಡಿತದಿಂದ ಬಿಡಿಸಬೇಕೋ ಹೇಗೆ?’ಎಂಬ ವಿಷಯವನ್ನು ಮುಂದಿಟ್ಟುಕೊಂಡು ಲೇಖನ ಬರೆಯಹೊರಟಿರುವ ನಾನು ತಿರು. ಶ್ರೀನಿವಾಸರಂಗಾಚಾರ್ಯರ ಮೊಮ್ಮಗ ಎಂದು ಪರಿಚಯಿಸಿಕೊಳ್ಳುವುದಕ್ಕಾಗಿಯಾದರೂ ಈ ಪೀಠಿಕೆ ಬೇಕಾಯಿತು.

ದೇಶ್ಯಭಾಷೆಯಾಗಿದ್ದ ಕನ್ನಡವು ಬೆಳೆದು ಪುಷ್ಟವಾಗುವುದಕ್ಕೆ ಸಂಸ್ಕೃತದಿಂದ ಸ್ವೀಕರಿಸಿದ್ದು ಯಥೇಚ್ಚ ಎನ್ನುವುದರಲ್ಲಿ ಎರಡು ಮಾತಿಲ್ಲ. ಕನ್ನಡಕ್ಕೆ ಲಿಪಿ ದೊರೆತು ಬರೆವಣಿಗೆ ತೊಡಗಿದ ಮೇಲಂತೂ ಈ ಪ್ರಭಾವ ಇನ್ನಷ್ಟು ಹೆಚ್ಚತೊಡಗಿತು. ಆಡುಮಾತಿನಲ್ಲಿ ಉಳಿದುಕೊಂಡ ಕನ್ನಡದ ಸೊಗಡು ಬರೆಹದ ಭಾಷೆಗೆ ಇಳಿಯಲು ಸಂಸ್ಕೃತ ಅಡ್ಡಿಯಾಯಿತು. ಕನ್ನಡದ ಧ್ವನಿಗಳಿಗೆ ಸಂಸ್ಕೃತದ ವರ್ಣಮಾಲೆಯೇ ಆಸರೆಯಾಯಿತು. ಅಲ್ಲಿನ ವ್ಯಾಕರಣ ನಿಯಮಗಳ ಬೆಳಕಿನಲ್ಲಿ ಕನ್ನಡದ ಪದ-ಪ್ರತ್ಯಯ-ವಿಭಕ್ತಿ-ಸಂಧಿ-ಸಮಾಸಗಳೆಲ್ಲ ರೂಪುಗೊಳ್ಳಬೇಕಾಗಿ ಬಂದಿತು. ಸಾಹಿತ್ಯವು ಜನಪದದ ಭಾಷೆ, ವಸ್ತು, ಲಯ, ಛಂದಗಳಿಂದ ದೂರವಾಗಿ ಶಿಷ್ಟತೆಯ ಸೆರಗಿನಲ್ಲಿ ಅವಿತುಕೊಂಡಿತು. ಚಂಪೂಕಾವ್ಯಪ್ರಕಾರವಂತೂ ಅರಮನೆ ಗುರುಮನೆಗಳ ಮಾನ್ಯತೆ ಪಡೆದು ಅಕ್ಷರವೃತ್ತಗಳ, ಷೋಡಶ ವರ್ಣನೆಗಳ, ಅಲಂಕಾರವೈವಿಧ್ಯದ ಬಣ್ಣ ತಾಳಿ ಮೆರೆಯತೊಡಗಿತು. ಈ ಪ್ರಕಾರಕ್ಕೆ ಸಿಕ್ಕ ಮನ್ನಣೆ ಇನ್ಯಾವ ಸಾಹಿತ್ಯಪ್ರಕಾರಕ್ಕೂ ಸಿಗದಿರುವುದು ಅಚ್ಚರಿಯೇ ಸರಿ. ಭಾಸ,ಕಾಳಿದಾಸರಂಥವರು ನಾಟಕಪ್ರಕಾರದಲ್ಲಿ ಸೃಷ್ಟಿಸಿದ ಅತ್ಯುತ್ತಮಕೃತಿಗಳೂ ಹಳಗನ್ನಡ ಲೇಖಕರಿಗೆ ಮಾದರಿಯೆನಿಸಲಿಲ್ಲ. ಬಾಣಭಟ್ಟನ ಕಾದಂಬರಿಯಂಥ ಗದ್ಯಕೃತಿಯೂ ಕನ್ನಡದ ಮನ್ನಣೆ ಪಡೆಯಲು ಚಂಪೂ ಶೈಲಿಯಲ್ಲೇ ಅವತರಿಸಬೇಕಾಯಿತು. ಇನ್ನು ಶಿವಕೋಟ್ಯಾಚಾರ್ಯರಂಥವರು ಕಥೆಗಳನ್ನು ಅದೆಷ್ಟು ಸ್ವಾರಸ್ಯಪೂರ್ಣವಾಗಿ ಕಟ್ಟಿಕೊಟ್ಟರೂ ವಡ್ಡಾರಾಧನೆಯಂತಹ ಕೃತಿಯ ಪ್ರಕಾರದ ಅನುಸರಣೆ ಉಳಿದ ಬರೆಹಗಾರರಿಗೆ ಬೇಕೆನಿಸಲಿಲ್ಲ. ಹೀಗೆ, ಒಂದೆಡೆ ಕನ್ನಡ ಕವಿಗಳು ಸಂಸ್ಕೃತಸಾಹಿತ್ಯದ ನಿರ್ದಿಷ್ಟ ಪ್ರಕಾರಕ್ಕೆ ಜೋತುಬಿದ್ದು ತಮ್ಮದೇ ಇತಿಮಿತಿಯಲ್ಲಿ ಸಿಲುಕಿಕೊಂಡು ಆಗಿನ ಸಾಹಿತ್ಯಕ್ಕೆ ಬೇರೆ ಬೇರೆ ಆಯಾಮಗಳನ್ನು ದೊರಕಿಸಿಕೊಡುವಲ್ಲಿ ವಿಫಲರಾದರೆಂದೇ ಹೇಳಬೇಕು. ಇನ್ನು ಕನ್ನಡ ಭಾಷೆಗೆ ಶಾಸ್ತ್ರೀಯ ಚೌಕಟ್ಟು ಕಟ್ಟಿದ ಪರಿಣಾಮವಾಗಿ ಕಾಲಾನುಕಾಲಕ್ಕೆ ಆಡುಮಾತಿನಲ್ಲಿ ಕನ್ನಡವು ಪಡೆದುಕೊಂಡ ರೂಪವ್ಯತ್ಯಯಗಳಾವುವೂ ಶಿಷ್ಟಸಾಹಿತ್ಯದ ಪರಿಗಣನೆಗೆ ಬಾರದೆ ಕವಿಗಳು ತಮ್ಮ ಕಾಲದ ವ್ಯವಹಾರಭಾಷೆಯಲ್ಲದ, ಹಿಂದಿನ ಯಾವುದೋ ಕಾಲದಲ್ಲಿ ಇದ್ದಿರಬಹುದಾದ ಭಾಷೆಯನ್ನು ನಿರೂಪಣೆಯ ಮಾಧ್ಯಮವಾಗಿ ಬಳಸಿಕೊಂಡಿದ್ದೂ ಒಂದು ಮಿತಿಯೇ. ಪಂಪರನ್ನರಂತಹ ಸಾರ್ವಕಾಲಿಕ ಶ್ರೇಷ್ಠಕವಿಗಳು ಇದ್ದ ಕಾಲವೇ ಇಂತಹುದೊಂದು ತೊಡಕಿನಲ್ಲಿ ಸಿಕ್ಕಿಕೊಂಡಿತೆನ್ನುವುದೂ ನಿಜ.

ಸ್ಥೂಲವಾಗಿ, ನಮ್ಮ ಅವಗಾಹನೆಗೆ ಲಭ್ಯವಿರುವ ಪೂರ್ವಕಾಲದ ಕನ್ನಡ ಸಾಹಿತ್ಯದ ಸುಮಾರು ಇನ್ನೂರು ವರುಷದ ಭಾಷಿಕಸ್ಥಿತಿಯನ್ನು ಕುರಿತು ಹೇಳಿದೆ. ಆದರೆ, ಹನ್ನೆರಡನೆಯ ಶತಮಾನದ ವೇಳೆಗೆ ಕನ್ನಡ ಸಾಹಿತ್ಯದ ರೂಪವೇ ಬದಲಾಯಿತು. ಅದಾಗಲೇ ಚಂಪೂಕಾವ್ಯಪ್ರಕಾರ ಸಂತೃಪ್ತದ್ರಾವಣದ ಹಂತಮುಟ್ಟಿತ್ತು. ಈ ಹೊತ್ತಿಗೆ ಬಸವಣ್ಣ ಮತ್ತವರ ಸಮಕಾಲೀನರು ಸಾಮಾಜಿಕವಾಗಿ ತರಲೆಳಸಿದ ಬದಲಾವಣೆಗಳನ್ನು ಯೋಚಿಸಿದಷ್ಟೇ ಗಂಭೀರವಾಗಿ ಸಾಹಿತ್ಯವನ್ನು ಜನಮಾನಸದೆಡೆಗೆ ಸೆಳೆದು ತರುವ ಪ್ರಾಮಾಣಿಕಪ್ರಯತ್ನಕ್ಕೆ ತೊಡಗಿದರು. ಕನ್ನಡ ಭಾಷೆ, ಸಾಹಿತ್ಯಗಳಿಗೆ ಸಂಬಂಧಪಟ್ಟಂತೆ ತಾವೇನೋ ಮಹತ್ತರವಾದ ಬದಲಾವಣೆ ತರುತ್ತಿದ್ದೇವೆ ಎನ್ನುವ ಯಾವುದೇ ತೋರ್ಪಡಿಕೆಯಿಲ್ಲದೆ ವಚನಕಾರರು ತೀರಾ ಸರಳವಾಗಿ ಕನ್ನಡಸಾಹಿತ್ಯ ಸಾಗುತ್ತಿದ್ದ ಮಾರ್ಗವನ್ನು ಜಟಿಲತೆಯ ಗೋಜಲುಗಳಿಂದ ಸರಿದಾರಿಗೆ ತಂದುಬಿಟ್ಟರು. ಕನ್ನಡವನ್ನು ಸಂಸ್ಕೃತದ ಸ್ವಯಿಚ್ಚಾಬಂಧನದಿಂದ ಪಾರುಮಾಡಿದ ಶ್ರೇಯವೂ ಅವರಿಗೆ ಸಲ್ಲಬೇಕು. ಹರಿಹರ, ರಾಘವಾಂಕರಂತಹ ಕವಿಗಳು ತಮ್ಮ ಕಾವ್ಯಾಭಿವ್ಯಕ್ತಿಗೆ ಬೇಕಾದ ಭಾಷೆ, ದೇಶೀಛಂದಸ್ಸುಗಳನ್ನು ಆರಿಸಿಕೊಳ್ಳುವುದಕ್ಕೆ ವಚನಕಾರರ ಆಂದೋಲನ ಪ್ರೇರಣೆ ನೀಡಿತು. ಅಲ್ಲಿಂದ ಮುಂದಿನ ಶತಮಾನಗಳಲ್ಲಿ ಕುಮಾರವ್ಯಾಸ, ಚಾಮರಸರ ಷಟ್ಪದಿ, ಹರಿದಾಸರ ಕೀರ್ತನೆ ಉಗಾಭೋಗಗಳು, ಕನಕದಾಸ ಗಿರಿಯಮ್ಮ ಮತ್ತಿತರರ ಸಾಂಗತ್ಯ ಮೊದಲಾದವು ನಮಗೆ ಲಭ್ಯವಾಗುವಂತಾಯಿತು. ಹೀಗೆ ನಡುಗನ್ನಡ ಸಾಹಿತ್ಯ ಶುದ್ಧಗನ್ನಡದ ಉಸಿರಾಡುವಂತಾದುದಕ್ಕೆ ಬಸವಣ್ಣ ಮತ್ತವರ ಸಮಕಾಲೀನರಿಗೆ ಕೃತಜ್ಞತೆ ಹೇಳಲೇಬೇಕು.

ಕನ್ನಡ ಸಾಹಿತ್ಯ ಛಂದಸ್ಸುಗಳೇನೋ ಸಂಸ್ಕೃತದ ಆವರಣದಿಂದ ಹೊರಬಂದವು. ಜನಪದ ಸಾಹಿತ್ಯವಂತೂ ಎಂದೂ ಸಂಸ್ಕೃತದ ಹಂಗಿನಲ್ಲಿ ಇರಲೇ ಇಲ್ಲ. ಆಯಿತಲ್ಲ, ಇನ್ನು ಕನ್ನಡವನ್ನು ಸಂಸ್ಕೃತದ ಹಿಡಿತದಿಂದ ಬಿಡಿಸುವುದಕ್ಕೇನಿದೆ? ಆದರೆ, ಕನ್ನಡವು ಸಾಹಿತ್ಯಸೃಷ್ಟಿಗಾಗಿ ಜನಸಾಮಾನ್ಯರ ಆಡುಭಾಷೆಯಿಂದ ಪ್ರತ್ಯೇಕವಾದ ಶಿಷ್ಟಭಾಷೆಯೊಂದನ್ನು ರೂಪಿಸಿಕೊಳ್ಳುವ ಕಾತರದಲ್ಲಿ ಸಂಸ್ಕೃತವನ್ನೇ ಅವಲಂಬಿಸಬೇಕಾಗಿ ಬಂದುದು ಅನಿವಾರ್ಯ. ಸಂಸ್ಕೃತದ ಪದಗಳನ್ನು ಕನ್ನಡಕ್ಕೆ ಆಮದು ಮಾಡಿಕೊಳ್ಳುವ ಸಂದರ್ಭದಲ್ಲಿ ಮಹಾಪ್ರಾಣಗಳನ್ನೂ ಶ,ಷ, ವಿಸರ್ಗ ಮೊದಲಾದವುಗಳನ್ನೂ ಕನ್ನಡದ ಧ್ವನಿಮಾಗಳೊಡನೆ ಸೇರಿಸಿಕೊಳ್ಳುವುದು ಅವಶ್ಯಕವೆನಿಸಿತು. ಕನ್ನಡದ ಅಕ್ಷರ,ಪದ, ವಾಕ್ಯಗಳನ್ನು ಸಂಸ್ಕೃತ ವ್ಯಾಕರಣದ ಪರಿಭಾಷೆಯ ಮೂಲಕವೇ ಅರ್ಥೈಸಿಕೊಳ್ಳಬೇಕೆಂದು ಕನ್ನಡಪಂಡಿತರಿಗೆ ಜ್ಞಾನೋದಯವಾಯಿತು. ಕನ್ನಡದಲ್ಲಿ ಎಂದೂ ಇರದಿದ್ದ ಋಕಾರವನ್ನು ತಂದುಕೊಂಡಿದ್ದು ಮಾತ್ರವಲ್ಲ, ಸಂಸ್ಕೃತದಲ್ಲೇ ಹುಡುಕಿದರೂ ಕಾಣಸಿಗದ ೠಕಾರವೂ ಅವರಿಗೆ ಅತ್ಯಂತ ಮಹತ್ವದ್ದಾಗಿ ಕಂಡಿತು. ವೈದಿಕ ಸಂಸ್ಕೃತದಲ್ಲಿ ಇದ್ದಿರಬಹುದಾದ ಲೃ, ಲೄಗಳಿಗೂ ಉಪಧ್ಮಾನೀಯ ಜಿಹ್ವಾಮೂಲೀಯಗಳೆಂಬ ಯೋಗವಾಹಗಳಿಗೂ ಕನ್ನಡ ವರ್ಣಮಾಲೆಯಲ್ಲಿ ಜಾಗ ಕಲ್ಪಿಸುವ ಪ್ರಯತ್ನ ನಡೆಯಿತು. ಸಂಸ್ಕೃತದಲ್ಲಿ ಕ್ಷ, ತ್ರ, ಜ್ಞಗಳೆಂಬ ಸಂಯುಕ್ತಾಕ್ಷರಗಳನ್ನು ಉಳಿದ ಒತ್ತಕ್ಷರಗಳಿಗಿಂತ ಭಿನ್ನವಾಗಿ ಬರೆಯಲಾಗುತ್ತದೆ. ಕಲಿಕೆಯ ಪ್ರಯೋಜನಕ್ಕಾಗಿ ಅವನ್ನು ವರ್ಣಮಾಲೆಯ ಕೊನೆಯಲ್ಲಿ ಸೇರಿಸಿರುತ್ತಾರೆ. ಕನ್ನಡದ ಶಿಷ್ಟರೂಪವನ್ನು ಸಂಸ್ಕೃತದ್ದೇ ಒಂದು ಅವತಾರವೆಂದು ಕಲ್ಪಿಸಿಕೊಂಡ ನಮ್ಮವರು ಮಕ್ಕೀ-ಕಾ-ಮಕ್ಕಿ ಅನುಸರಣೆಯನ್ನು ಮುಂದುವರೆಸಿ ಯರಲವಶಷಸಹಳ ಆದಮೇಲೆ ಕ್ಷ ತ್ರ ಜ್ಞಗಳನ್ನೂ ಮಕ್ಕಳಿಗೆ ಕಲಿಸತೊಡಗಿದರು. ಇಷ್ಟೆಲ್ಲ ಸಂಭ್ರಮದ ನಡುವೆ ಕನ್ನಡದ್ದೇ ಸ್ವಂತ ಅಕ್ಷರಗಳಾದ ಱ ೞ ಗಳು ಯಾರ ಬೀಳ್ಕೊಡುಗೆಯೂ ಇಲ್ಲದೆ ಕಣ್ಮರೆಯಾಗಿಬಿಟ್ಟವು. ಉಪಯೋಗಕ್ಕೆ ಬಾರದ ಸಂಸ್ಕೃತದ ಅಕ್ಷರಗಳನ್ನು ಕನ್ನಡಕ್ಕೆ ತಂದುತುಂಬುವ ಹವಣಿಕೆಯಲ್ಲಿದ್ದ ಪಂಡಿತರು ಱ ೞ ಗಳ ಅಗಲಿಕೆಗಾಗಿ ವಿಷಾದವನ್ನೂ ವ್ಯಕ್ತಪಡಿಸಹೋಗಲಿಲ್ಲ.

ಪಂಡಿತರ ಈ ಪ್ರಯೋಗಗಳೆಲ್ಲ ಶಿಷ್ಟಕನ್ನಡವೆನ್ನಿಸಿಕೊಂಡ ಒಂದು ರೂಪಕ್ಕೆ ಮಾತ್ರ ಸೀಮಿತವಾಯಿತು, ಹೇಗೂ ಜನಸಾಮಾನ್ಯರ ಆಡುಭಾಷೆ ದೇಶ್ಯವಾಗಿಯೇ ಉಳಿಯಿತಲ್ಲ ಎಂದು ಸಮಾಧಾನ ಪಟ್ಟುಕೊಳ್ಳುವ ಹಾಗಿಲ್ಲ. ಒಂದು ಕಾಲಕ್ಕೆ ಅಕ್ಷರಕಲಿಕೆ, ಶಿಷ್ಟಭಾಷೆ, ಲೇಖನಪ್ರಯೋಗಗಳು ಎಲ್ಲರಿಗೂ ಲಭ್ಯವೂ ಇರಲಿಲ್ಲ, ಅವಶ್ಯವೆಂದೂ ತೋರಿರಲಿಕ್ಕಿಲ್ಲ. ಇನ್ನೊಂದೆಡೆ ಜನಪದದ ಕನ್ನಡ, ಮನೆಯ ಮಾತಾದ ಕನ್ನಡ ಹೇಗಿತ್ತು, ಹೇಗಿರಬೇಕು ಎನ್ನುವುದು ಎಂದಿಗೂ ಪ್ರಶ್ನೆಯಾಗಿರಲಿಲ್ಲ. ಹಾಗಾಗಿ ಕನ್ನಡ ಅಕ್ಷರ, ವ್ಯಾಕರಣ, ಪ್ರಯೋಗಗಳು ಹೇಗಿರಬೇಕೆಂದು ಹೆಚ್ಚಾಗಿ ತಲೆಕೆಡಿಸಿಕೊಂಡವರಿರಲಿಲ್ಲ. ಕನ್ನಡಕ್ಕೆ ಶಬ್ದಮಣಿದರ್ಪಣದಂಥ ಉತ್ತಮ ವ್ಯಾಕರಣಗ್ರಂಥವನ್ನು ಕೊಡುಗೆಯಾಗಿತ್ತ ಕೇಶಿರಾಜ ಕನ್ನಡದ ದೇಸೀಸತ್ವದ ಪರವಾಗಿ ವಕಾಲತ್ತು ವಹಿಸಿದ್ದು ನಮ್ಮ ಭಾಷೆಯ ಇತಿಹಾಕ್ಕೆ ಸಂಬಂಧಿಸಿದಂತೆ ಬಹುಮೂಲ್ಯವಾದುದು. ವೈಯಾಕರಣನ ನಿಷ್ಠುರತೆ, ಶಾಸ್ತ್ರೀಯ ಜಿಗುಟುತನಗಳನ್ನು ಬಿಟ್ಟು ಭಾಷಾ ಬದಲಾವಣೆ, ಬಳಕೆಯ ಹೊರಳುಬಳುಕುಗಳನ್ನು ಒಪ್ಪಿಕೊಳ್ಳುವ ಕೇಶಿರಾಜನ ವಿಶಾಲ ಮನೋಭಾವ ವ್ಯಾಕರಣಕಾರರಲ್ಲಿ ಅಪರೂಪದ್ದು. ಆದರೆ ಕೇಶಿರಾಜ ನಿರೂಪಿಸಬೇಕಾಗಿ ಬಂದ ವ್ಯಾಕರಣ ಸೂತ್ರಗಳು ಸಂಸ್ಕೃತದ ಪರಿಭಾಷೆಯನ್ನು ಅನುಸರಿಸದೆ ವಿಧಿಯಿರಲಿಲ್ಲ. ಅಲ್ಲದೆ, ಉದಾಹರಣೆಯ ಪ್ರಯೋಗಗಳಿಗಾಗಿಯೂ ಹಿಂದಿನ ಚಂಪೂಕಾವ್ಯಗಳನ್ನು ಮುಂದಿಟ್ಟುಕೊಂಡೇ ಹೇಳಬೇಕಾಗಿ ಬಂದಿತು. ಹೀಗಾಗಿ ಕೇಶಿರಾಜನಂಥ ಕನ್ನಡಪ್ರೇಮಿ ಬರೆದ ವ್ಯಾಕರಣವೂ ಸಂಸ್ಕೃತದ ಚೌಕಟ್ಟಿನೊಳಗೇ ಸೇರಿಕೊಂಡಿತು. ಇಷ್ಟೆಲ್ಲ ರಗಳೆ ಬೇಡವೆಂದು ಭಟ್ಟಾಕಲಂಕನು ಕರ್ನಾಟಕ ಭಾಷಾಭೂಷಣವೆಂಬ ಕನ್ನಡವ್ಯಾಕರಣಗ್ರಂಥವನ್ನು ಸಂಸ್ಕೃತದಲ್ಲೇ ನಿರೂಪಿಸಿಬಿಟ್ಟ!

೧೯ನೆಯ ಶತಮಾನದಲ್ಲಿ ಶಾಲಾ ವಿದ್ಯಾಭ್ಯಾಸ ಶುರುವಾದ ಮೇಲೆ ಕನ್ನಡ ಕಲಿಕೆಗೂ ಒಂದು ವ್ಯವಸ್ಥೆ ಬೇಕಾಯಿತು. ಆದರೆ ಕನ್ನಡವನ್ನು ವ್ಯವಸ್ಥಿತವಾಗಿ ಕಲಿಸುವುದಕ್ಕಾಗಲಿ, ಅದನ್ನು ಕಲಿಸಬೇಕಾದ ಅಧ್ಯಾಪಕರ ಅರ್ಹತೆಯ ಬಗೆಗಾಗಲೀ ಯಾವುದೇ ನಿರ್ದಿಷ್ಟ ನಿಯಮಗಳನ್ನು ಅನುಸರಿಸಿದಂತೆ ಕಾಣುವುದಿಲ್ಲ. ಯಥಾಪ್ರಕಾರ ಸಂಸ್ಕೃತ ಕಲಿಸುತ್ತಿದ್ದ ಪಂಡಿತರೇ ಕನ್ನಡವನ್ನು ಬೋಧಿಸುವುದಕ್ಕೂ ಅದಕ್ಕೆ ಬೇಕಾದ ಪಠ್ಯವನ್ನು ತಯಾರಿಸುವುದಕ್ಕೂ ತೊಡಗಿಕೊಂಡರು. ೧೯೪೦ರ ದಶಕದಲ್ಲಿ ಪ್ರಾಥಮಿಕ ಶಾಲೆಯ ಎರಡನೆಯ ತರಗತಿಯ ಕನ್ನಡ ಪಠ್ಯಪುಸ್ತಕವನ್ನು ಪಾಠಹೇಳಲೆಂದು ಕೈಗೆತ್ತಿಕೊಂಡ ಜಿ.ಪಿ.ರಾಜರತ್ನಂ ಅವರಿಗೆ ಪುಸ್ತಕವನ್ನು ತೆರೆದೊಡನೆಯೇ ತಲೆಸುತ್ತುವ ಹಾಗಾಯಿತಂತೆ. ಅದರಲ್ಲಿದ್ದ ಮೊದಲ ಪಾಠದ ಹೆಸರು ಸೌವರ್ಣಮಧ್ಯ ಸ್ಥಿತಿ! ಕಳೆದ ಶತಮಾನದ ಪ್ರಾರಂಭದಲ್ಲಿ ಕನ್ನಡಭಾಷಾ ಬೋಧನೆಯನ್ನು ಮಕ್ಕಳಿಗೆ ಆಕರ್ಷಕವೂ ಸುಲಭವೂ ಆಗುವಂತೆ ಮಾಡಲೆತ್ನಿಸಿದ ಪಂಜೆ ಮಂಗೇಶರಾಯರ ಪ್ರಯೋಗಗಳು ಸಾಂಪ್ರದಾಯಕ ಬೋಧನೆಗೆ ಅಂಟಿಕೊಂಡಿದ್ದ ಪಂಡಿತವರ್ಗದಿಂದ ತೀವ್ರ ಪ್ರತಿಭಟನೆಯನ್ನು ಎದುರಿಸಬೇಕಾಯಿತು. ಶಾಲಾ ಇನ್ಸ್‌ಪೆಕ್ಟರ್ ಹುದ್ದೆಯನ್ನು ಅಲಂಕರಿಸಿದ್ದ ಮಂಗೇಶರಾಯರನ್ನು ಎತ್ತಂಗಡಿ ಮಾಡಿದಲ್ಲದೆ ಕನ್ನಡ ಉದ್ಧಾರವಾಗದೆಂದು ತೀರ್ಮಾನಿಸಿದ ಪ್ರಬಲಗುಂಪೊಂದು ಅವರನ್ನು ಜಿಲ್ಲೆಯಿಂದಲೇ ಹೊರಗೆ ಕಳಿಸುವಲ್ಲಿ ಯಶಸ್ವಿಯಾಯಿತು.

ಕಳೆದ ಶತಮಾನದ ಪ್ರಾರಂಭದಲ್ಲಿ ಶಾಲಾಕಾಲೇಜುಗಳಲ್ಲಿ ಕನ್ನಡವನ್ನು ಬೋಧಿಸುವ ಅಧ್ಯಾಪಕರಿಗೆ ನಿರ್ದಿಷ್ಟ ಅರ್ಹತೆಯನ್ನು ನಿಗದಿಪಡಿಸಿದಂತೆಯೂ ತೋರುವುದಿಲ್ಲ. ಅದು ಹೋಗಲಿ, ಶಾಲೆಗಳಲ್ಲಿ ಕನ್ನಡ ಬೋಧಿಸುವವರಿಗೆ ಇತರ ಎಲ್ಲ ಶಿಕ್ಷಕರಿಗಿಂತ ಕನಿಷ್ಠ ಸಂಬಳವನ್ನೇ ನಿಗದಿಪಡಿಸಿರುತ್ತಿದ್ದರು. ಕನ್ನಡ ಪಂಡಿತ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರು ಭಾಷಾಬೋಧಕರಾಗುತ್ತಿದ್ದುದು ನಿಜ. ಆದರೆ ಅವರು ಕಲಿತ ಪಠ್ಯಕ್ರಮದಲ್ಲಿ ಕನ್ನಡದಷ್ಟೇ ಸಂಸ್ಕೃತಕ್ಕೂ ಪ್ರಾಶಸ್ತ್ಯವಿರುತ್ತಿತ್ತು. ಹೀಗಾಗಿ ಸಂಸ್ಕೃತ ವರ್ಣಮಾಲೆ, ವ್ಯಾಕರಣ, ಛಂದಸ್ಸುಗಳೆಲ್ಲ ಕನ್ನಡ ಪಠ್ಯಕ್ರಮದೊಳಗೆ ಅಧಿಕೃತವಾಗಿ ಸೇರಿಕೊಂಡವು. ಈ ವ್ಯವಸ್ಥೆಯೇ ಇಂದಿನವರೆಗೂ ಮುಂದುವರೆದುಕೊಂಡು ಬಂದಿದೆ. ಅವತ್ತಿಗೂ ಇವತ್ತಿಗೂ ಒಂದೂ ಬದಲಾವಣೆ ಆಗಿಲ್ಲವೆಂದರೆ ತಪ್ಪಾಗುತ್ತದೆ. ಇವತ್ತಿನ ಪಠ್ಯಪುಸ್ತಕದಲ್ಲಿ ೠ ಎಂಬ ಅಕ್ಷರ ಕಾಣುತ್ತಿಲ್ಲ!

[ಕಣಜದಲ್ಲಿ ಪ್ರಕಟವಾಗುವ ಅಂಕಣ ಬರಹಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಆಯಾ ಅಂಕಣಕಾರರದು]