ಸಂಧಿವಾತ; ಸುಧಾರಿತ ವ್ಯಾಯಾಮ ಚಿಕಿತ್ಸೆಯ ಈ ಕಿರುಪುಸ್ತಕದಲ್ಲಿ ಸಂಧಿವಾತ ರೋಗಿಗಳು ಏಕೆ? ಹೇಗೆ? ವ್ಯಾಯಾಮವನ್ನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿ-ಶಿಕ್ಷಣ-ಸಂವಹನವನ್ನು ನೀಡಲಾಗಿದೆ.

ಸಂಧಿವಾತ ರೋಗಿಗಳು ವ್ಯಾಯಾಮವನ್ನು ಆರಂಭಿಸುವ ಮೊದಲು, ಯಾವ ರೀತಿಯ ವ್ಯಾಯಾಮವನ್ನು ನಿಮ್ಮ ಕಾಯಿಲೆಗೆ ಅನುಗುಣವಾಗಿ ಮಾಡಬೇಕೆಂಬುದನ್ನು, ವೈದ್ಯರಿಂದ ಅಥವಾ ಫಿಸಿಯೋಥೆರಪಿಸ್ಟ್‌ರಿಂದ ಸರಿಯಾಗಿ ತಿಳಿದುಕೊಂಡು ಮಾಡುವುದರಿಂದ, ಸಮಸ್ಯೆಗಳು ಉದ್ಭವಿಸುವುದಿಲ್ಲ. ಸುಧಾರಿತ ವ್ಯಾಯಾಮ, ಚಿಕಿತ್ಸೆಯ ಭಾಗವಾಗಿರುವುದರಿಂದ ಕೀಲುಗಳಲ್ಲಿ ನೋವಿದ್ದಾಗ ವ್ಯಾಯಾಮವನ್ನು ಮಾಡಬಾರದು. ವೈದ್ಯರು ಸೂಚಿಸಿರುವ ಔಷಧಿಯನ್ನು ಸೇವಿಸಿ, ನೋವು ಕಡಿಮೆಯಾದ ನಂತರ ವ್ಯಾಯಾಮವನ್ನು ಮಾಡುವುದು ಸೂಕ್ತ.

ಸಂಧಿವಾತ, ದೀರ್ಘಕಾಲದ ಕಾಯಿಲೆಯಾಗಿರುವುದರಿಂದ ವೈದ್ಯರ ಸಲಹೆ-ಸೂಚನೆಯ ಮೇರೆಗೆ ಔಷಧಿ ಚಿಕಿತ್ಸೆಯನ್ನು ಕ್ರಮವಾಗಿ ಪಡೆಯಬೇಕು. ವ್ಯಾಯಾಮವನ್ನು ಪ್ರತಿದಿನ ಅಥವಾ ದಿನ ಬಿಟ್ಟು ದಿನ ಮಾಡುವುದರ ಮೂಲಕ ನಿಮ್ಮ ಶರೀರದ ಕೀಲುಗಳು, ಸ್ನಾಯುಗಳು ದೃಢವಾಗಿ ಮತ್ತು ಬಲವಾಗಿರುವಂತೆ ಜಾಗ್ರತೆಯನ್ನು ವಹಿಸಬೇಕು.

ಈ ಕೃತಿಯಲ್ಲಿ ಸಂಧಿವಾತ ರೋಗಿಗಳಿಗೆ ಪಥ್ಯಾಹಾರಎಂಬ ಲೇಖನವನ್ನು ಬಳಸಿಕೊಳ್ಳಲು ಅನುಮತಿ ನೀಡಿದ ಸ್ನೇಹಿತರಾದ ಶ್ರೀ ಎಸ್‌. ವಿಶ್ವನಾಥ, ಮಂಡ್ಯರವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.

ಈ ಕೃತಿಯ ಉದ್ದೇಶ ಸಂಧಿವಾತದವರಿಗೆ ಆರೋಗ್ಯ ಶಿಕ್ಷಣ ನೀಡುವುದೇ ಹೊರತು, ಸ್ವಯಂ ಚಿಕಿತ್ಸೆಯನ್ನು ಮಾಡಿಕೊಳ್ಳಲು ಪ್ರೋತ್ಸಾಹವನ್ನು ನೀಡುವುದಕ್ಕಲ್ಲ ಎಂಬುದನ್ನು ಈ ಮೂಲಕ ತಿಳಿಸಲು ಇಚ್ಛಿಸುತ್ತೇನೆ.

ಎನ್‌. ವಿಶ್ವರೂಪಾಚಾರ್
ದಿನಾಂಕ: ೧೯-೦೫-೨೦೦೭
ಬೆಂಗಳೂರು.