ಮಾನವನ ಸ್ವತಂತ್ರನಲ್ಲ ಸ್ವಾವಲಂಬಿಯೂ ಅಲ್ಲ. ಅವನು ಪರತಂತ್ರ, ಪರಾವಲಂಬಿ. ಪ್ರಕೃತಿಯ ಮಡಿಲಲ್ಲಿ ಬೆಳೆದ ಜೀವಿ. ಪ್ರಕೃತಿಗೂ ಅವನಿಗೂ ಮೊದಲಿನಿಂದಲೂ ಬಿಡಲಾರದ ನಂಟು. ಹುಟ್ಟಿನಿಂದ ಸಾವಿನವರೆಗಿನ ಅವನ ಎಲ್ಲ ಚಟುವಟಿಕೆಗಳು ನಡೆಯುವದು ಪ್ರಕೃತಿಯ ಮಧ್ಯದಲ್ಲಿಯೇ. ಹೀಗಾಗಿ ಪ್ರಕೃತಿಯ ಪ್ರತಿಯೊಂದು ವಸ್ತುವನ್ನು ಆತ ತನ್ನ ಬದುಕಿನ ಎಲ್ಲ ಕಾರ್ಯಗಳಿಗೆ ಬಳಸಿಕೊಂಡ.

ಪ್ರಕೃತಿಯಲ್ಲಿ ಮೊದಲು ಹುಟ್ಟಿದ್ದು ಸಸ್ಯ. ಆಮೇಲೆ ಇತರ ಜೀವಿಗಳು. ಕೊನೆಗೆ ಮಾನವ ಎಂಬ ನಂಬಿಕೆ ಅನೇಕ ಜನಾಂಗಗಳಲ್ಲಿದೆ. ಹೀಗಾಗಿ ಅವನು ಹುಟ್ಟಿದ್ದು ಸಸ್ಯಗಳಿಂದ ತುಂಬಿದ ಕಾಡಿನಲ್ಲಿ, ಬೆಳೆದದ್ದು ಗಿಡ-ಮರಗಳ ಜೊತೆಯಲ್ಲಿ, ಬದುಕಿದ್ದು ಅವುಗಳ ಹಣ್ಣು-ಹಂಪಲ, ಗಡ್ಡೆ- ಗೆಣಸುಗಳನ್ನು ತಿಂದು. ಮಳೆ -ಗಾಳಿ ಬಿಸಿಲುಗಳಿಂದ ರಕ್ಷಣೆ ಪಡೆದದ್ದು, ಮಾನಮುಚ್ಚಿಕೊಂಡಿದ್ದು ಸಸ್ಯಗಳ ತೊಗಟೆ ತಪ್ಪಲಗಳಿಂದ, ಆಶ್ರಯ ಪಡೆದದ್ದು ಗಿಡದ ಹೊದರುಗಳಲ್ಲಿ. ಹೀಗೆ ತನ್ನ ಬದುಕಿಗೆ ಸಸ್ಯ ಸಂಪತ್ತು ಎಷ್ಟು ಅನಿವಾರ್ಯ ಅಗತ್ಯ ಎಂಬುದನ್ನು ಕಂಡುಕೊಂಡ ಅವನು ಅದನ್ನೇ ತನ್ನ ಊಟಕ್ಕೆ ಉಡಿಗೆಗೆ ಉಪಕರಣಗಳಿಗೆ ರೋಗ ನಿವಾರಣೆಗೆ ಅಷ್ಟೇ ಏಕೆ ತನ್ನ ಎಲ್ಲ ಭೌತಿಕ ಮಾನಸಿಕ ವ್ಯವಹಾರಗಳಿಗೆ ಒಂದಿಲ್ಲೊಂದು ರೀತಿಯಲ್ಲಿ ಬಳಿಸಿಕೊಳ್ಳುತ್ತ ಬಂದನು.

ಆಧುನಿಕ ಯುಗದಲ್ಲಿಯೂ ಮಾನವ ತನ್ನ ಸೌಕರ್ಯಗಳಿಗೆ ಕ್ಷೇಮ ಸಾಧನೆಗೆ ಸಸ್ಯ ಸಂಪತ್ತನ್ನೇ ಅವಲಂಬಿಸಿದ್ದಾನೆ. ಹೀಗಾಗಿ ಸಸ್ಯ ಸಂಪತ್ತು ಇರದೇ ಹೋಗಿದ್ದರೆ ಮಾನವ ಕುಲ ಅಷ್ಟೇ ಏಕೆ ಪ್ರಾಣಿ -ಪಕ್ಷಿ -ಕೀಟಕಗಳ ಕುಲದ ಅಸ್ತಿತ್ವವೇ ಇರುತ್ತಿರಲಿಲ್ಲ.

ಆಡು ಮುಟ್ಟದ ಗಿಡವಿಲ್ಲವೆನ್ನುವಂತೆ ಮಾನವನ ಉಪಯೋಗಕ್ಕೆ ಬಾರದ ಸಸ್ಯವಿಲ್ಲ. ಯಾವುದೋ ಗಿಡ, ಬಳ್ಳಿ, ಹುಲ್ಲು, ಕಂಟಿ ಉಪಯೋಗಕ್ಕೆ ಬರುವದಿಲ್ಲವೆಂದು ಯಾರಾದರೂ ಹೇಳಿದರೆ ಅದು ಅವರ ಆಜ್ಞಾನವೆಂದೇ ಹೇಳಬೇಕು.

ಹೀಗಾಗಿ ಸಸ್ಯ -ಮಾನವ ಸಂಬಂಧ ಅನಿವಾರ್ಯ ಮತ್ತು ಅವಿಭಾಜ್ಯ. ಇದು ನೀರು -ಮೀನಿನ ಸಂಬಂಧ. ಸಸ್ಯನಾಶ ಮಾನವ ಜನಾಂಗ ನಾಶ. ಇದು ವೈಜ್ಞಾನಿಕವಾಗಿಯೂ ಸತ್ಯ. ಮಾನವ ತನ್ನ ಹೆಜ್ಜೆ ಹೆಜ್ಜೆಗೂ ಸಸ್ಯಗಳನ್ನು ತೊಡಕು ಹಾಕಿಕೊಂಡೇ ಬದುಕಿದ್ದಾನೆ. ಅವನಿಗೆ ಸಸ್ಯದಂತಹ ಉಪಕಾರಿ, ಪ್ರಯೋಜನಕಾರಿ ಬಂಧು ಇನ್ನೊಂದಿಲ್ಲ. ಅಂತೆಯೇ “ನೆರಳಿಗೊಂದು ಮರ, ಕರುಳಿಗೊಂದು ಕೂಸು” ಎಂಬ ಜನಪದರ ಉಕ್ತಿ ಹುಟ್ಟಿಕೊಂಡಿದೆ.

ಹೀಗೆ ಬದುಕಿಗೆ ಅನಿವಾರ್ಯವಾಗಿರುವ ಸಸ್ಯಗಳನ್ನು ಕುರಿತು ಜನಪದರಲ್ಲಿ ಸಾಕಷ್ಟು ಗೀತೆ ಕಥೆ, ಪುರಾಣ, ಐತಿಹ್ಯ, ಗಾದೆ, ಒಗಟು, ನಂಬಿಕೆ, ಆಚರಣೆ, ಸಂಪ್ರದಾಯಗಳು ಹುಟ್ಟಿಕೊಂಡಿವೆ. ಅವುಗಳಲ್ಲಿ ಸಸ್ಯ ಸಂಬಂಧಿ ನಂಬಿಕೆಗಳಿಗೆ ಒಂದು ವಿಶಿಷ್ಟ ಸ್ಥಾನವಿದೆ. ಅವು ತಮ್ಮ ಆಸ್ತಿತ್ವವನ್ನು ಜನಪದರ ಆಚರಣೆ, ಸಂಪ್ರದಾಯ ಮತ್ತು ಪದ್ಧತಿಗಳ ಮೂಲಕ ತೋರ್ಪಡಿಸುತ್ತ ಬಾಳಿ ಬದುಕುತ್ತ ಬಂದಿವೆ.

ಸಸ್ಯ ಸಂಬಂಧಿ ನಂಬಿಕೆಗಳು ವ್ಯಾಪ್ತಿ ದೊಡ್ಡದು. ಅದರ ಪ್ರತಿಯೊಂದು ಅಂಗಗಳಾದ ಬೇರು, ಗಡ್ಡೆ, ಕಾಂಡ, ಟೊಂಗೆ ಅವುಗಳಿಂದ ಹೊರಡುವ ಅಂಟು, ಹಾಲು, ರಸ ಹಾಗೂ ಎಲೆ, ಕುಡಿ, ಹೂ, ಕಾಯಿ, ಹಣ್ಣು, ಬೀಜ, ತೆನೆ ಅದರ ಮದ, ರಾಶಿ, ಕಾಳು ಒಣಗಿದ ಮೇಲೆ ಅದರ ಕಟ್ಟಿಗೆ -ಬರಲು -ಕಡ್ಡಿ, ಮುಳ್ಳು ಸುಟ್ಟ ಮೇಲೆ ಹೊರಡುವ ಬೂದಿ, ಇದ್ದಲಿ, ಅವುಗಳಿಂದ ತಯಾರಿಸಿದ ಸಾಮಾಗ್ರಿಗಳು; ಕಂಡು ಹಿಡಿದ ನಂಬಿಕೆ ರೂಪದ ಔಷಧಿಗಳವರೆಗೆ ಸಸ್ಯ ನಂಬಿಕೆಯ ಪ್ರಪಂಚ ಹರಡಿಕೊಂಡಿದೆ.

ಸಸ್ಯ ಸಂಬಂಧಿ ನಂಬಿಕೆಗಳು ದೇಶದಿಂದ ದೇಶಕ್ಕೆ ಪ್ರದೇಶದಿಂದ ಪ್ರದೇಶಕ್ಕೆ ಮತದಿಂದ ಮತಕ್ಕೆ, ಜನಾಂಗದಿಂದ ಜನಾಂಗಕ್ಕೆ, ಸಂದರ್ಭದಿಂದ ಸಂದರ್ಭಕ್ಕೆ ಭಿನ್ನವಾಗಿರುವದರಿಂದ ಹಾಗೂ ವಿಪುಲವಾಗಿ ಬೆಳೆದಿರುವದರಿಂದ ಇವುಗಳ ಲೆಕ್ಕ ಹಾಕುವದು ಕಷ್ಟದ ಕೆಲಸ. ಅದಕ್ಕಾಗಿ ಸ್ಥೂಲವಾಗಿ ಈ ನಂಬಿಕೆಗಳನ್ನು ಧಾರ್ಮಿಕ ಮತ್ತು ಲೌಕಿಕ ಎಂದು ವಿಭಜಿಸಿ ವಿಶ್ಲೇಷಿಸಬಹುದು.

. ಧಾರ್ಮಿಕ ಹಿನ್ನೆಲೆಯಲ್ಲಿ ಹುಟ್ಟಿದ ನಂಬಿಕೆಗಳು

ಪುರಾಣ ಕಲ್ಪನೆಯಲ್ಲಿ ಅನೇಕ ಸಸ್ಯಗಳು ಪೂಜ್ಯ ವಸ್ತುಗಳೆನಿಸಿ ದೇವತ್ವಕ್ಕೆ ಏರಿದೆ. ಉದಾ : ಆಲ, ಅರಳೆ, ಬೇವು, ಹೊನ್ನಿ, ತುಳಸಿ, ಎಕ್ಕ, ಉತ್ತರಾಣಿ ಮುಂತಾದವುಗಳ್ನು ಮಾನವ ದೇವರೆಂದು ಆರಾಧಿಸುತ್ತ ಬಂದಿದ್ದಾನೆ. ಹೀಗಾಗಿ ಈ ಕುರಿತ ನಂಬಿಕೆಗಳು ಹುಲುಸಾಗಿ ಬೆಳೆದಿವೆ.

ಉದಾ:  ೧. ಮುಂಜಾನೆದ್ದು ಆಲ, ಅರಳೆ, ಬೇವಿನ ಗಿಡಗಳನ್ನು ನೋಡಬೇಕು.
೨. ಶಿವರಾತ್ರಿ ದಿವಸ ಶಿವ ಎಕ್ಕ ಗಿಡದಲ್ಲಿ ವಾಸ ಮಡುತ್ತಾನೆ.
೩. ಮದುವೆಯಾದವರು ತುಳಸಿ ಪೂಜೆ ಮಾಡಬೇಕು.
೪. ಆಲದ ಮರದ ಕೆಳಗೆ ಕುಳಿತು ಸುಳ್ಳು ಹೇಳಬಾರದು- ಮುಂತಾದವುಗಳು.

ಈ ಸತ್ಯಗಳು ವಿರಳವಾಗಿ ಬೆಳೆಯುವದರಿಂದ ಇವುಗಳನ್ನು ರಕ್ಷಿಸಬೇಕೆಂಬ ಅನೇಕ ನಂಬಿಕೆಗಳು ಹುಟ್ಟಿಕೊಂಡಿವೆ.

ಉದಾ:  ೧. ಬನ್ನಿ, ಪತ್ರಿ ಗಿಡಗಳನ್ನು ಕಡಿಯಬಾರದು ಮತ್ತು ಅವುಗಳ ಕಟ್ಟಿಗೆ ಸುಡಬಾರದು.
೨. ದೇವರ ಕಟ್ಟಿಗೆ ಕದಿಯಬಾರದು.

ಹೀಗೆ ಹೇಳಿದರೂ ಇಂಥ ಪವಿತ್ರ ಗಿಡಗಳಿಂದ ಉಪಕರಣಗಳನ್ನು ಮಾಡಿದರೆ ಶುಭವಾಗುತ್ತದೆ ಎಂಬ ಭಾವನೆಯಿಂದ ಮತ್ತೆ ಕೆಲವು ನಂಬಿಕೆಗಳು ಹುಟ್ಟಿವೆ.

ಉದಾ:  ೧. ಬನ್ನಿ ಗಿಡದಿಂದ ಮೇಟಿಯನ್ನು ಮಾಡಬೇಕು.
೨. ಹೊನ್ನಿ ಕಟ್ಟಗೆಯನ್ನು ತಲೆಬಾಗಿಲಕ್ಕೆ ಉಪಯೋಗಿಸಬೇಕು.
೩. ಅರಗ್ಯಾನ ಗಿಡದಿಂದ ರಾಗೋಲ ಮಾಡಿಸಬೇಕು.
೪. ಉತ್ತರಾಣಿ ಕಡ್ಡಿಯಿಂದ ಮಾಡಿದ ಸೆಳ್ಳನ್ನು ಕಣದಲ್ಲಿ ಬಳಿಸಬೇಕು -ಮುಂತಾದವುಗಳು

ಇಂಥ ಸಸ್ಯಗಳು ಮಾನವನಿಗೆ ಆಹಾರವನ್ನು ಒದಗಿಸುವದಿಲ್ಲ. ಆದರೆ ದೊಡ್ಡ ಗಾತ್ರದಲ್ಲಿ ಬೆಳೆದು ನೆರಳು ನೀಡುವದರಿಂದ ಬಹುಕಾಲ ಬಾಳಿ ಜೀವರಾಶಿಗಳಿಗೆ ಆಶ್ರಯ ಕೊಡುವುದರಿಂದ ಈ ನಂಬಿಕೆಗಳು ಹುಟ್ಟಿಕೊಂಡಂತೆ ಕಾಣುತ್ತದೆ.

ಹೀಗೆ ಕೆಲವು ಸಸ್ಯಗಳು ಪೂಜ್ಯವೆನಿಸಿದರೆ ಮತ್ತೆ ಕೆಲವು ಸಸ್ಯಗಳು ಅಪೂಜ್ಯ, ಅಪವಿತ್ರವೆನಿಸಿಕೊಂಡಿವೆ.

ಉದಾ: ಸಿಂದಿಗಿಡ, ಕಣಗಲ ಮುಂತಾದವು. ಇಂಥ ಗಿಡಗಳಿಂದ ತಯರಿಸಿದ ಉಪಕರಣಗಳನ್ನು ಪವಿತ್ರ ಸ್ಥಳದಲ್ಲಿ ಹಾಗೂ ಶುಭ ಸಂದರ್ಭದಲ್ಲಿ ಬಳಸದಿರಲು ಮತ್ತು ಈ ಸಸ್ಯಗಳನ್ನು ಮನೆಯ ಹತ್ತಿರ ಬೆಳೆಸದಿರಲು ನಿಷೇಧ ರೂಪದಲ್ಲಿ ನಂಬಿಕೆಗಳು ಹುಟ್ಟಿಕೊಂಡಿವೆ.

ಉದಾ:  ೧. ಸಿಂದಿ ಹೆಡಿಗೆ, ಕಸಬರಗೆಗಳನ್ನು ಅಡಿಗೆ ಮನೆ, ದೇವರ ಮನೆ ಮತ್ತು ಕಣದಲ್ಲಿ ಉಪಯೋಗಿಸಬಾರದು.
೨. ಕಣಗಿಲ ಮತ್ತು ಚೆಂಡು ಹೂಗಳನ್ನು ದೇವರಿಗೆ ಏರಿಸಬಾರದು -ಮುಂತಾದವುಗಳು.

ಸಿಂದಿಗಿಡ ಮತ್ತೇರಿಸುವ ಮದ್ಯವನ್ನು ಒದಗಿಸುವದರಿಂದ ಕಣಗಿಲ ಮತ್ತು ಚೆಂಡು ಹೂವಿನ ಗಿಡಗಳು ಪವಿತ್ರ ಸ್ಥಳಗಳಲ್ಲಿ ಬೆಳೆಯದಿರುವದರಿಂದ ಈ ರೀತಿಯ ನಂಬಿಕೆಗಳು ಹುಟ್ಟಿಕೊಂಡಿರಬೇಕು.

ಪೂಜ್ಯವೆನಿಸಿದ ಗಿಡಗಳನ್ನು ಹೆಣ್ಣು ಗಂಡು ಎಂದು ಕಲ್ಪಿಸಿ ಅವುಗಳಿಗೆ ಮಾನವರಂತೆ ಮದುವೆ ಮೊದಲಾದ ಶುಭಕಾರ್ಯ ಏರ್ಪಡಿಸುವ ಸಂಪ್ರದಾಯ ಬೆಳೆದು ಬಂದಿದ್ದು, ಅವುಗಳಿಗೆ ಸಂಬಂಧಿಸಿದ ಕೆಲವು ನಂಬಿಕೆಗಳು ಹುಟ್ಟಿಕೊಂಡಿವೆ.

ಉದಾ : ೧. ಆಲ, ಅರಳಿ, ಬನ್ನಿ ಮರಗಳೊಂದಿಗೆ ಬೇವು ಬೆಳೆದರೆ ಅವುಗಳಿಗೆ ಮದುವೆ ಮಾಡಬೇಕು.
೨. ತುಳಸಿ ಲಗ್ನ ಮಾಡಬೇಕು.
೩. ತೆಂಗು, ಮಾವು, ಬಾಳೆ ಫಲ ಬಿಟ್ಟಾಗ ಕುಪ್ಪಸ ಮಾಡಬೇಕು – ಮುಂತಾದವುಗಳು.

ಆಲ -ವಿಷ್ಣು, ಬೇವು -ಶಕ್ತಿ, ತುಳಸಿ- ಲಕ್ಷ್ಮಿ ಎಂಬ ಪುರಾಣ ಕತೆಗಳು ಈ ನಂಬಿಕೆಗಳಿಗೆ ಹಿನ್ನೆಲೆಯಾಗಿವೆ.

ಮಾನವ ಮೊದಲಮೊದಲು ದೇವರಿಗೆ ಪ್ರಾಣಿಗಳನ್ನು ಬಲಿ ಕೊಡುತ್ತಿದ್ದ. ಅದು ಪಾಪವೆಂಬ ಪ್ರಜ್ಞೆ ಮೂಡಿದಾಗ ಅವುಗಳ ಬದಲು ಸಸ್ಯಗಳನ್ನು ಬಲಿಕೊಡಲು ಪ್ರಾರಂಭಿಸಿರಬೇಕು. ಇದನ್ನು ಸೂಚಿಸುವ ಕೆಲವು ನಂಬಿಕೆಗಳು ಹುಟ್ಟಿಕೊಂಡಿವೆ.

ಉದಾ:  ೧. ದೇವರಿಗೆ ತೆಂಗು, ಕುಂಬಳಕಾಯಿ ಒಡೆಯಬೇಕು.
೨. ದೇವರಿಗೆ ನಿಂಬೆಕಾಯಿಗಳನ್ನು ನಿವಾಳಿಸಿ ಸೀಳಿ ಒಗೆಯಬೇಕು- ಮುಂತಾದವುಗಳು.

ಪ್ರತಿಯೊಂದು ವಸ್ತುವನ್ನು ಕೊಡುವವನು ದೇವರು. ಅದಕ್ಕಾಗಿ ತಾನು ಬೆಳೆದ ಮೊದಲ ಸಸ್ಯಗಳನ್ನು, ಧಾನ್ಯಗಳನ್ನು ಅವನಿಗೆ ಅರ್ಪಿಸಬೇಕು ಎಂಬ ಭಾವನೆ ಮಾನವನಲ್ಲಿ ಮೂಡಿತು. ಅದನ್ನು ಪ್ರತಿನಿಧಿಸುವ ಕೆಲವು ನಂಬಿಕೆಗಳು ಹುಟ್ಟಿಕೊಂಡಿವೆ.

ಉದಾ:  ೧. ಬೂದನ ರಾಶಿಯನ್ನು ಮಠಗಳಿಗೆ, ಪೂಜಾರಿಗಳಿಗೆ ಕೊಡಬೇಕು.
೨. ದೇವರಿಗೆ ಮದ ಅರ್ಪಿಸಬೇಕು.
೩. ಕುಂಬಳಕಾಯಿಯನ್ನು ಬ್ರಾಹ್ಮಣರಿಗೆ ಕೊಡಬೇಕು – ಮುಂತಾದವುಗಳು.

ಪೂಜ್ಯವೆನಿಸಿದ ಸಸ್ಯಗಳ ಬಗೆಗೆ ಅವುಗಳ ಮಹತ್ವವನ್ನು ವೈಭವಿಕರಿಸಲು ಕೆಲವು ಸಲ ಅರ್ಥರಹಿತ ನಂಬಿಕೆಗಳು ಹುಟ್ಟಿಕೊಳ್ಳುತ್ತವೆ.

ಉದಾ:  ೧. ಮೇಟಿಗೆ ತೆನೆಯನ್ನು ಕಟ್ಟಬೇಕು.
೨. ದೇವರಿಗೆ ತೆಂಗಿನ ಇಡಗಾಯಿ ಇಡಬೇಕು.
೩. ತೆಂಗನ್ನು ಒದೆಯಬಾರದು. ಒಡೆದ ತೆಂಗಿನಕಾಯಿಯನ್ನು ಮತ್ತೆ ಕೂಡಿಸಬಾರದು.
೪. ಎಲೆ ತಿಂದಾಗ ಬಾಯಿ ಕೆಂಪಾದ್ರೆ ಗಂಡ ಹೆಂಡತಿ ಪ್ರೀತಿಯಿಂದ ಇರುವರಂತೆ.
೫. ಕುಡಿ ಇದ್ದ ಎಲೆ ದೇವರಿಗೆ ಏರಿಸಬೇಕು -ಮುಂತಾದವುಗಳು.

ಇವುಗಳಲ್ಲದೆ ಪೂಜ್ಯವೆನಿಸಿದ ಸಸ್ಯಗಳನ್ನು ರಕ್ಷಿಸಬೇಕೆನ್ನುವ ರೀತಿಯಲ್ಲಿ ಕೆಲವು ನಂಬಿಕೆಗಳು ಹುಟ್ಟಿಕೊಂಡಿವೆ.

ಉದಾ:  ೧. ಬಾಳೆಯ ಗೊನೆಯನ್ನು ಕಳ್ಳರು ಕಡಿದುಕೊಂಡು ಹೋದಾಗ ಆಭಾಗಕ್ಕೆ ಸುಣ್ಣ ಹಚ್ಚಿದರೆ ಕಡಿದವರ ಮನೆ ಹಾಳಾಗುತ್ತದೆ.
೨. ತೆಂಗು, ಬಾಳೆ ಕಡಿಯಬಾರದು -ಮುಂತಾದವುಗಳು.

ಕೆಲವು ಸಸ್ಯಗಳು ಸಂಕೇತವಾಗಿ ಬಳಕೆಯಾಗುತ್ತದೆ. ಉದಾ: ಸಸ್ಯಗಳು ಹಸಿರು ಶ್ರೀಮಂತಿಕೆಯ ಸಂಕೇತ, ಹುಲ್ಲು ಅಸಾಯಕದ ಸಂಕೇತ, ಹಣ್ಣು -ಕಾಯಿಯ ಗೊಂಚಲ -ತೆನೆ ಮತ್ತು ಹಾಲುಳ್ಳ ಸಸ್ಯಗಳು ಸಮೃದ್ಧಿಯ ಸಂಕೇತ ಎಂದು ಜನಪದರು ತಿಳಿದುಕೊಂಡಿದ್ದಾರೆ. ಇವುಗಳಲ್ಲಿ ಕೆಲವು ಮಾನವನಿಗೆ ಪ್ರಮುಖ ಆಹಾರ ಧಾನ್ಯವಾಗಿರುವದರಿಂದ ಮತ್ತೆ ಕೆಲವು ಹಣ್ಣು- ಹಂಪಲಗಳನ್ನು ನೀಡುವುದರಿಮದ ಅವು ಪೂಜ್ಯವೆನಿಸಿವೆ. ಹೀಗಾಗಿ ಇವುಗಳ ಬಗ್ಗೆ ಹುಲುಸಾಗಿ ನಂಬಿಕೆಗಳು ಹುಟ್ಟಿಕೊಂಡಿವೆ. ಸಮೃದ್ಧಿಯ ಸಂಕೇತದ ಸಸ್ಯಗಳೆಂದರೆ ಗೋದಿ, ಜೋಳ, ಭತ್ತ, ತೆಂಗು, ಬಾಳೆ, ಅಡಿಕೆ, ಅರಿಷಿಣ, ಉತ್ತತ್ತಿ, ಎಲೆ ಮುಂತಾದವುಗಳು. ಇವುಗಳ ಕುರಿತ ನಂಬಿಕೆಗಳು ಹೀಗಿವೆ.

ಉದಾ:  ೧. ಮದುವೆ ಮಂಟಪದಲ್ಲಿ ಹಾಲಗಂಬ ನೆಡಬೇಕು.
೨. ಉಡಿ ತುಂಬಲು ಗೋದಿ, ಜೋಳ, ಹೆಸರು, ಅಕ್ಕಿ, ತೆಂಗು, ಅರಿಷಿಣ, ಎಲೆ, ಅಡಿಕೆಗಳನ್ನು ಬಳಸಬೇಕು.
೩. ಅಕ್ಷತೆಗಾಗಿ ಅಕ್ಕಿ, ಜೋಳ ಉಪಯೋಗಿಸಬೇಕು.
೪. ಒಂದು ಬೊಡ್ಡೆಗೆ ಎರಡು ಟೊಂಗೆ ಇದ್ದುದನ್ನು ಮೇಟಿ ಮಾಡಬೇಕು -ಮುಂತಾದವುಗಳು.

ಕೆಲವು ಸಸ್ಯಗಳು ದೊಡ್ಡದಾಗಿ, ದಟ್ಟವಾಗಿ ಬೆಳೆಯುವುದರಿಂದ ಅವುಗಳಲ್ಲಿ ಭೂತಗಳಿರುತ್ತವೆ ಎಂದು ಜನಪದರು ಭಾವಿಸಿದ್ದಾರೆ. ಈ ಅಂಜಿಕೆಯ ಹಿನ್ನೆಲೆಯಲ್ಲಿ ಕೆಲವು ನಂಬಿಕೆಗಳು ಹುಟ್ಟಿಕೊಂಡಿವೆ.

ಉದಾ:  ೧. ಮದುಮಕ್ಕಳು ಹುಣಸೆ ಮರದ ಕೆಳಗೆ ಹಾಯಬಾರದು.
೨. ಕಳ್ಳಿಸಾಲಿನಲ್ಲಿ ದೆವ್ವಗಳಿರುತ್ತವೆ.

ಇಂಥ ಸಸ್ಯಗಳು ಹುಳ ಹುಪ್ಪಡಿಗಳಿಗೆ ವಾಸಸ್ಥಾನವಾಗಿರುವದರಿಂದ ಈ ರೀತಿಯ ನಂಬಿಕೆಗಳು ಹುಟ್ಟಿಕೊಂಡಿರಬೇಕು.

ಹಾಗೆಯೆ ಸುಡಗಾಡದಲ್ಲಿ ಬೆಳೆದ ಗಿಡಗಳಲ್ಲಿ ಸತ್ತವರ ಆತ್ಮಗಳು ವಾಸಿಸುತ್ತವೆ ಎಂಬ ಭಾವನೆಯಿಂದ ಹುಟ್ಟಿದ ನಂಬಿಕೆಗಳು ಉಂಟು.

ಉದಾ:  ೧. ಸುಡಗಾಡದಲ್ಲಿರುವ ಗಿಡಗಳನ್ನು ಮನೆಗೆ ತರಬಾರದು, ಅವುಗಳಿಂದ ಮನೆ ಹಾಕಿಸಬಾರದು.
೨. ಗೋರಿಯ ಮೇಲೆ ಗಿಡ ನೆಡಬೇಕು – ಮುಂತಾದವುಗಳು.

ಹೀಗೆ ಧಾರ್ಮಿಕ ಹಿನ್ನೆಲೆಯಲ್ಲಿ ಅನೇಕ ನಂಬಿಕೆಗಳು ಹುಟ್ಟಿಕೊಂಡಿವೆ.

. ಲೌಕಿಕ ಹಿನ್ನೆಲೆಯಲ್ಲಿ ಹುಟ್ಟಿದ ನಂಬಿಕೆಗಳು :

ಜನಪದರು ವ್ಯಕ್ತಿ, ಕಾಲ, ವಸ್ತು, ಸಂಖ್ಯೆ, ದಿಕ್ಕು, ಪ್ರಾಣಿ, ಕನಸು ಮುಂತಾದವುಗಳ ಶುಭ- ಅಶುಭಗಳನ್ನು ಸೂಚಿಸುವಲ್ಲಿ ಸಸ್ಯಗಳನ್ನು ಆಧಾರವಾಗಿ ಬಳಸಿಕೊಳ್ಳುತ್ತ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ನಂಬಿಕೆಗಳ ಸಂಖ್ಯೆ ಅಧಿಕವಾಗಿವೆ.

ಶುಭವನ್ನು ಸೂಚಿಸುವ ನಂಬಿಕೆಗಳು

ಉದಾ:  ೧. ನರಿ ಕೂಗುವಾಗ ರಾಶಿ ಅಳೆದರೆ ಹುಲಸು ಆಗುತ್ತದೆ (ಪ್ರಾಣಿ).
೨. ಹೆಣ್ಣು ನೋಡಲು ಹೋಗುವಾಗ ಹನ್ನೊಂದು ಬಾಳೆಹಣ್ಣುಗಳು ಇರುವ ಹಣಿಗೆಯನ್ನು ಒಯ್ಯಬೇಕು (ಸಂಖ್ಯೆ).
೩. ಕಾಮಣ್ಣನ ಚಂಡು ಯಾವ ದಿಕ್ಕಿಗೆ ಬೀಳುತ್ತದೆ ಆ ದಿಕ್ಕಿಗೆ ಬೆಳೆ ಹುಲುಸು ಆಗುತ್ತದೆ (ದಿಕ್ಕು).
೪. ಬನ್ನಿ ಗಿಡವನ್ನು ಬಲಕ್ಕೆ ಮಾಡಿಕೊಂಡು ಹೋದರೆ, ಹೋದ ಕೆಲಸ ಆಗುತ್ತದೆ. (ಬಲ).
೫. ಕನಸಿನಲ್ಲಿ ಹಣ್ಣು ಕಂಡ್ರೆ ಹೆಣ್ಣು, ಕಾಯಿ ಕಂಡ್ರೆ ಗಂಡು (ಕನಸು) – ಮುಂತಾದವುಗಳು.

ಜನಪದರು ಮುಂಜಾನೆ, ಸಂಜೆ ಸಮಯ, ಬಲಗಡೆ, ಪೂರ್ವ ಉತ್ತರ ದಿಕ್ಕುಗಳು; ೨, ೫, ೧೧ರಂತಹ ಸಂಖ್ಯೆಗಳು; ನರಿ, ಮುಂಗಲಿಗಳಂತಹ ಪ್ರಾಣಿಗಳು ಶುಭವೆಂದು ತಿಳಿದು ಕೊಂಡಿರುವದನ್ನು ಈ ನಂಬಿಕೆಗಳು ತಿಳಿಸುತ್ತವೆ.

ಅಶುಭವನ್ನು ಸೂಚಿಸುವ ನಂಬಿಕೆಗಳು :

ಉದಾ:  ೧. ಹೆಣ್ಣು ನೋಡಲು ಹೋಗುವಾಗ ಕಟ್ಟಿಗೆ ಹೊರೆ ಎದುರಿಗೆ ಬರಬಾರದು (ವಸ್ತು).
೨. ಹೊಲ ಎಡಕ್ಕೆ ಮಾಡಿ ಬಿತ್ತಬಾರದು (ಎಡ).
೩. ಕನಸಿನಲ್ಲಿ ರಾಶಿ, ಜೋಳ ಕಾಣಿಸಿದರೆ ಮಕ್ಕಳಿಗೆ ಸುಂಕ ಆಗುತ್ತದೆ. (ಕನಸು).
೪. ಮೂರು ಸೌದೆ ಇಟ್ಟು ಒಲೆ ಹಚ್ಚಬಾರದು (ಸಂಖ್ಯೆ).

ಇಲ್ಲಿ ಎಡಗಡೆ, ದಕ್ಷಿಣ ದಿಕ್ಕು, ಕಟ್ಟಿಗೆ, ಮುಳ್ಳುಗಳಂತಹ ವಸ್ತುಗಳು ೧, ೩, ೭ ಗಳಂತಹ ಸಂಖ್ಯೆಗಳು ಜನಪದರಿಗೆ ಅಶುಭವಾಗಿರುವುದನ್ನು ತಿಳಿಸುತ್ತವೆ. ಇಂಥ ನಂಬಿಕೆಗಳ ಹುಟ್ಟಿಗೆ ಮಾನವನ ಮಾನಸಿಕ ಸ್ಥಿತಿಯೇ ಕಾರಣ.

ಇನ್ನೂ ಕೆಲವು ಸಸ್ಯಗಳು ಗಟ್ಟಿಯಾಗಿರುವದಿಲ್ಲ ಮತ್ತು ಮುಳ್ಳುಗಳಿಂದ ಕೂಡಿರುತ್ತವೆ. ಜೀವಕ್ಕೆ ಅಪಾಯ ಮತ್ತು ತೊಂದರೆಯನ್ನು ಉಂಟು ಮಾಡುವ ಇಂಥ ಸಸ್ಯಗಳನ್ನು ಮನೆಯ ಹತ್ತಿರ ಬೆಳೆಯಕೂಡದೆಂದು ಕೆಲವು ನಂಬಿಕೆಗಳು ಹುಟ್ಟಿಕೊಂಡಿವೆ.

ಉದಾ:  ೧. ನುಗ್ಗೆ ಗಿಡ ಮನೆ ಹತ್ತಿರ ಹಚ್ಚಬಾರದು.
೨. ಬಾರೆಗಿಡ ಮನೆ ಮುಂದೆ ಇರಬಾರದು – ಮುಂತಾದವುಗಳು

ಮುಂದೆ ಆಗಬಹುದಾದ ತೊಂದರೆಗಳನ್ನು ತಪ್ಪಿಸುವ ಮತ್ತು ಸಸ್ಯರಕ್ಷಣೆಯ ಕುರಿತು ಎಚ್ಚರಿಕೆ ಕೊಡುವ ರೀತಿಯಲ್ಲಿ ಕೆಲವು ನಂಬಿಕೆಗಳು ಹುಟ್ಟಿಕೊಂಡಿವೆ.

ಉದಾ:  ೧. ಹೆಣ್ಣು ಮಕ್ಕಳು ಉಳ್ಳಾಗಡ್ಡಿ ತಿನ್ನಬಾರದು.
೨. ಮೇಟಿಗೆ ಬೆನ್ನು ಹಚ್ಚಿ ನಿಲ್ಲಬಾರದು.
೩. ಗಿಡ ಹತ್ತಿಸಿದ ಮೇಲೆ ಆತ ಇಳಿಯುವವರೆಗೆ ಬಿಟ್ಟು ಹೋಗಬಾರದು – ಮುಂತಾದವುಗಳು.

ಸಸ್ಯ ರಕ್ಷಣೆಗೆ

ಉದಾ:  ೧. ಕಸಬರಿಗೆಗೆ ಒದೆಯಬಾರದು.
೨. ಕಸಬರಿಗೆ ಗೋಟು ನಿಲ್ಲಿಸಬಾರದು ಮುಂತಾದವು.

ಹಣ್ಣು, ಕಾಯಿ ಕೊಡುವ ಸಸ್ಯಗಳನ್ನು ರಕ್ಷಿಸಲು ಮತ್ತು ಸಸ್ಯಗಳಿಂದ ತಯಾರಿಸಿದ ವಸ್ತುಗಳನ್ನು ಹಾಳು ಮಾಡದಿರಲು ಎಚ್ಚರಿಕೆಯನ್ನು ಮತ್ತು ಕೆಲವು ಸಲ ಧರ್ಮದ ಅಂಜಿಕೆ ಹಾಕುವದರಿಂದ ಹಲವು ನಂಬಿಕೆಗಳು ಉದಯವಾಗುತ್ತವೆ.

ಉದಾ:  ೧. ಹಲಸಿನ ಮರದ ಕೆಳಗೆ ದನಗಳನ್ನು ಕಟ್ಟಿದರೆ ಫಲ ಬಿಡುವದಿಲ್ಲ.
೨. ದೇವರ ಕಂಬವನ್ನು ಒದೆಯಬಾರದು.

ಕಾಕತಾಳಿಯವಾಗಿ ಕೆಲವು ಘಟನೆಗಳು ನಡೆದು, ಅವು ಮುಂದೆ ಒಂದು ನಂಬಿಕೆಯಾಗಿ ಚಲಾವಣೆಯಲ್ಲಿ ಬಂದುದು ಕಂಡುಬರುತ್ತದೆ.

ಉದಾ:  ೧. ಜಾಲಿ ಗಿಡದ ಕೆಳಗೆ ದೀಪ ಹಚ್ಚಿದರೆ ಇಲ್ಲವೆ ಕುಲಾಯಿ, ಅಂಗಿ ಹಾಕಿದರೆ ಬಂಜೆಗೆ ಮಕ್ಕಳಾಗುತ್ತವೆ.
೨. ಮನೆ ಮುಂದೆ ತಿಪ್ಪರಿಕಾಯಿ ಬಳ್ಳಿ ಹಚ್ಚಿದರೆ ಬಡತನ ಬರುತ್ತದೆ.
೩. ಜೋಡು ಬಾಳೆಹಣ್ಣು ತಿಂದರೆ ಅವಳಿ -ಜವಳಿ ಮಕ್ಕಳಾಗುತ್ತವೆ.

ಇಂಥ ನಂಬಿಕೆಗಳ ಹುಟ್ಟಿಗೆ ತಪ್ಪುಕಲ್ಪನೆಯೇ ಕಾರಣ.

ಇನ್ನೂ ಕೆಲವು ನಂಬಿಕೆಗಳು ಆರೋಗ್ಯದ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿವೆ.

ಉದಾ:  ೧. ಒಬ್ಬರು ಮುಡಿದ ಹೂವನ್ನು ಮತ್ತೊಬ್ಬರು ಮುಡಿಯಬಾರದು. ಮುಡಿದರೆ ತಲೆ ನೋವು ಬರುವದು.
೨. ಮಕ್ಕಳಿಗೆ ನೆದರು ಆದರೆ ಕಸಬರಿಗೆ ಇಳುವಬೇಕು.
೩. ಬಿದ್ದು ಪೆಟ್ಟಾದರೆ ರೊಟ್ಟಿ ನಿವಾಳಿಸಿ ಆ ಸ್ಥಳದ ಕಡೆ ಒಗೆಯಬೇಕು.
೪. ಯುಗಾದಿಯ ದಿನ ನೀರಲ್ಲಿ ಬೇವಿನ ತಪ್ಪಲು ಹಾಕಿ ಸ್ನಾನ ಮಾಡಬೇಕು – ಮುಂತಾದವುಗಳು.

ಹಾಗೆಯೇ ಒಂದು ಸಸ್ಯವನ್ನು ಒಂದು ಮತದವರು ಪೂಜ್ಯವೆಂದು ಮತ್ತೊಂದು ಮತದವರು ಅಪೂಜ್ಯವೆಂದು ತಿಳಿದುಕೊಳ್ಳುವುದರಿಂದ ಮತ್ತೆ ಬೇರೆ ನಂಬಿಕೆಗಲ ಹುಟ್ಟಿಗೆ ಕಾರಣವಾಗುತ್ತದೆ.

ಉದಾ : ಹಿಂದುಗಳು ಬಾರಿಗಿಡವನ್ನು ಪೂಜ್ಯವೆಂದು ತಿಳಿದುಕೊಂಡಂತಿಲ್ಲ. ಹೀಗಾಗಿ ಮನೆಯ ಮುಂದೆ ಬಾರಿಗಿಡ ಹಚ್ಚಬಾರದು. ಮನೆಯಲ್ಲಿ ಗೂಗೆ ಹೊಕ್ಕರೆ ಬಾಗಿಲಿಗೆ ಬಾರಿ ಕಂಟಿ ಹಚ್ಚಿ ಮೂರು ತಿಂಗಳ ಮನೆ ಬಿಡಬೇಕು. ಎಂಬ ನಂಬಿಕೆಗಳು ಹುಟ್ಟಿಕೊಂಡಿವೆ. ಆದರೆ ಅದು ಸ್ವರ್ಗದಲ್ಲಿರುವ ಗಿಡವೆಂದು ಮುಸಲ್ಮಾನರು ತಿಳಿದುಕೊಂಡಿರುವುದರಿಂದ ಬಾರಿ ತಪ್ಪಲವನ್ನು ನೀರಿನಲ್ಲಿ ಹಾಕಿ ಶವಕ್ಕೆ ಸ್ನಾನ ಮಾಡಿಸಬೇಕು. ಗೋರಿಯ ಮೇಲೆ ಅದರ ಕಂಟಿಯನ್ನು ಹಚ್ಚಬೇಕು ಎಂಬ ನಂಬಿಕೆಗಳು ಹುಟ್ಟಿಕೊಂಡಿವೆ.

ಒಂದು ಸಸ್ಯವನ್ನು ಕುರಿತು ಒಂದು ಪ್ರದೇಶದಲ್ಲಿ ಕಂಡುಬರುವ ನಂಬಿಕೆ. ಮತ್ತೊಂದು ಪ್ರದೇಶದಲ್ಲಿ ಕಂಡುಬರುವದಿಲ್ಲ.

ಉದಾ:  ೧. ಮನೆ ಮುಂದೆ ಬಾಳೆ, ಕಣಗಿಲ ಹಚ್ಚಬಾರದು.
೨. ಅರಿಷಿಣ, ಬಾಳೆ, ಕಬ್ಬು ಈ ಮೂರನ್ನು ಕೂಡಿ ಬೆಳೆಯಬಾರದು.

ಈ ನಂಬಿಕೆಗಳು ಉತ್ತರ ಕರ್ನಾಟಕದಲ್ಲಿ ಚಲಾವಣೆಯಲ್ಲಿ ಇದ್ದರೆ, ಮಲೆನಾಡು – ಕರಾವಳಿ ಪ್ರದೇಶಗಳಲ್ಲಿ ಇಲ್ಲ. ಉತ್ತರ ಕರ್ನಾಟಕದಲ್ಲಿಯ ನೀರಿನ ಅಭಾವವೇ ಈ ನಂಬಿಕೆಗಳ ಹುಟ್ಟಿಗೆ ಕಾರಣವಾಗಿರಬೇಕು.

ಇದಲ್ಲದೆ ಸಸ್ಯಗಳನ್ನು ನೆಡುವ, ಕಿತ್ತುವ, ಕಡಿಯುವುದನ್ನು ಕುರಿತು ನಂಬಿಕೆಗಳು ಹುಟ್ಟಿಕೊಂಡಿವೆ.

ಉದಾ:  ೧. ಒಂದೇ ಕುಣಿಯಲ್ಲಿ ಕುಂಬಳ ಮತ್ತು ಮಾಗಿ ನೆಡುವಬಾರದು. ಯಾಕೆಂದರೆ ಕುಂಬಳ ಹಾರುವ, ಮಾಗಿ ಹೊಲೆಯ.
೨. ಸಸ್ಯದ ಬೇರುಗಳನ್ನು ಸೂರ್ಯನಿಗೆ ತೋರಿಸಿ ನೆಟ್ಟರೆ ಅವು ಹತ್ತುವುದಿಲ್ಲ.

ಇದರಲ್ಲಿ ಎರಡನೆಯ ನಂಬಿಕೆ ಪಂಪ ಭಾರತದಲ್ಲಿಯ ‘ಒತ್ತಿತರುಂಬಿ’ ನಿಂದ ಎಂಬ ಪದ್ಯದಲ್ಲಿ ಬಳಕೆಯಾಗಿದೆ ಎಂದು ಡಾ. ಎಂ. ಎಂ. ಕಲಬುರ್ಗಿ ಅವರು ತೋರಿಸಿಕೊಟ್ಟಿದ್ದಾರೆ.

ಹೀಗೆ ಹಲವಾರು ಕಾರಣಗಳಿಂದ ಸಸ್ಯ ಸಂಬಂಧಿ ನಂಬಿಕೆಗಳು ಹುಟ್ಟಿಕೊಂಡಿವೆ. ಇವುಗಳಲ್ಲಿ ಧಾರ್ಮಿಕ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ನಂಬಿಕೆಗಳು ಹೆಚ್ಚಾಗಿ ಅರ್ಥರಹಿತವಾಗಿದ್ದರೆ, ಲೌಕಿಕ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ನಂಬಿಕೆಗಳು ಹೆಚ್ಚಾಗಿ ಅರ್ಥವುಳ್ಳವುಗಳಾಗಿವೆ. ಮತ್ತು ಯಾವ ಸಸ್ಯ ಪೂಜ್ಯವಾಗಿದೆಯೋ, ಯಾವ ಸಸ್ಯ ಮುಖ್ಯ ಆಹಾರವಾಗಿದೆಯೋ ಹಾಗೂ ಸಸ್ಯದ ಯಾವ ಅಂಗ ಆಹಾರವನ್ನು ಒದಗಿಸುತ್ತದೆಯೋ ಅಂಥ ಸಸ್ಯಗಳ ಕುರಿತಾಗಿ, ಆ ಸಸ್ಯಗಳ ಅಂಗಗಳ ಕುರತಾಗಿ ನಂಬಿಕೆಗಳು ಹುಲುಸಾಗಿ ಹುಟ್ಟಿಕೊಂಡಿವೆ. ಹಾಗೂ ಯಾವ ಸಸ್ಯ ಯಾವ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುತ್ತದೆಯೋ ಆ ಸಸ್ಯದ ಕುರಿತಾಗಿ ನಂಬಿಕೆಗಳು ಆ ಪ್ರದೇಶದಲ್ಲಿ ಹೆಚ್ಚಾಗಿ ಚಲಾವಣೆಯಲ್ಲಿ ಇರುವದು ಕಂಡು ಬರುತ್ತದೆ. ಹೀಗೆ ಸಸ್ಯ ನಂಬಿಕೆಗಳು ತನ್ನದೆ ಆದ ವೈಶಿಷ್ಟ್ಯವನ್ನು ಹೊಂದಿವೆ.

 ಗ್ರಂಥ ಋಣ

 

೧. ಜಾನಪದ ಜೀವಾಳ : ಡಾ. ಮ. ಗು. ಬಿರಾದಾರ

೨. ಜಾನಪದ ಅಧ್ಯಯನ : ಡಾ. ದೇ. ಜವರೇಗೌಡ

೩. ಮೂಢನಂಬಿಕೆಗಳು : ಡಾ. ಎಲ್. ಆರ್. ಹೆಗಡೆ

೪. ಉತ್ತರ ಕರ್ನಾಟಕದ ಜನಪದ ನಂಬಿಕೆಗಳು : ಡಾ. ಎಂ. ಎಸ್. ಲಠ್ಠೆ

೫. ಜನಪದ ನಂಬಿಕೆಗಳು : ರಾಗೌ ಮತ್ತು ಎಂ. ಸಿ. ವಸಂತಕುಮಾರ

೬. ಜಾನಪದ ಸಂಕೀರ್ಣ : ರಾಗೌ

೭. ಕರ್ನಾಟಕದ ನಂಬಿಕೆಗಳು : (ಕರ್ನಾಟಕದ ಜಾನಪದ) ಡಾ. ವಿವೇಕ ರೈ