ಜಗದೀ ದೈನಂದಿನ ಜಂಗಮತೆ
ನನ್ನೊಳು ಜನಿಯಿಸಿತೇತಕೆ ಮಮತೆ ?
ಈ ಹೊರಜಗಕೂ ನನ್ನೊಳ ಮುದಕೂ
ಏತರ ನಂಟೆಂತದಕೂ ಇದಕೂ ?[1]

ಈ ಪ್ರಶ್ನೆ ಏಳುತ್ತದೆ ಜಿಜ್ಞಾಸುವಾದ ಕಲೆಗಾರನಿಗೆ. ಲೋಕದಲ್ಲಿ ನಡೆಯುವ ಸಾಮಾನ್ಯವಾದ ದೈನಂದಿನ ವ್ಯಾಪಾರಗಳು ಏಕೆ ತನ್ನ ಮನಸ್ಸಿನಲ್ಲಿ ಅವುಗಳನ್ನು ಕುರಿತ ಒಂದು ಬಗೆಯ ಪ್ರೀತಿಯನ್ನುಂಟುಮಾಡುತ್ತವೆ. ತನ್ನ ಅಂತರಂಗದ ಹೃದಯ ಲೋಕಕ್ಕೂ, ಈ ಬಹಿರಂಗದ ರೂಪ ಲೋಕಕ್ಕೂ ಏತರ ನಂಟು? ಹೊರ ಜಗತ್ತಿನ ಚೆಲುವು ಒಳಜಗತ್ತಿನ ಪರಿಭಾವನೆಯ ವಸ್ತುವಾಗಿ ಮತ್ತೆ ಬೇರೊಂದು ಕಲಾಲೋಕವನ್ನು ಸೃಜಿಸುವುದಲ್ಲ! ಈ ಅಂತರಂಗ ಬಹಿರಂಗಗಳ ಆತ್ಮಸಂಗದ ಮೋಡಿ ಎಂಥದು ಎನ್ನಿಸುತ್ತದೆ ಕಲೆಗಾರನಿಗೆ.

ಕಲೆಗಾರ ಈ ಲೋಕದಲ್ಲಿ ವಸ್ತುವೊಂದರ ಸೌಂದರ‍್ಯಾನುಭವವನ್ನು ಪಡೆಯುವಾಗ ಆ ವ್ಯಾಪಾರದಲ್ಲಿ ನಾವು ಮೂರು ಅಂಶಗಳನ್ನು ಗುರುತಿಸಬಹುದು: ಒಂದು, ವ್ಯಕ್ತಿ, ಸೌಂದರ‍್ಯಾನುಭವವನ್ನು ಪಡೆಯುವ ಸಾಮರ್ಥ್ಯವುಳ್ಳ ಕಲಾವ್ಯಕ್ತಿ, ಎರಡು, ಸೌಂದರ‍್ಯಾನುಭವಕ್ಕೆ ಕಾರಣವಾದ ಲೋಕವಸ್ತು. ಮೂರು, ಈ ವಸ್ತು ವ್ಯಕ್ತಿಗಳ ಸಂಯೋಗದಿಂದ ನಿಷ್ಪತ್ತಿಯಾಗುವ ಸೌಂದರ‍್ಯಾನುಭವವೆಂಬ ಆನಂದ ವಿಶೇಷ.

ಕವಿಯ ಅನುಭವವೊಂದನ್ನು ತೆಗೆದುಕೊಳ್ಳೋಣ. ಕವಿಯೊಬ್ಬ ಚಂದ್ರೋದಯವನ್ನು ನೋಡುತ್ತಿದ್ದಾನೆ ಎಂದು ಭಾವಿಸೋಣ. ಹಗಲಿನ ಬೆಳಕೆಲ್ಲ ಅಳಿದು ಕತ್ತಲೆ ಆವರಿಸಿದೆ. ಪರಿಚಿತವಾದ ರೂಪಲೋಕವೆಲ್ಲವೂ ಕತ್ತಲಲ್ಲಿ ಕದಡಿ ವಿಚಿತ್ರವಾಗಿದೆ. ಹಗಲೆಲ್ಲ ಬೆಳಗಿದ ಬೆಳಕು ಮಾಯವಾದ ಮೋಡಿಗೆ ಬೆರಗಾಗಿರುವ ಕವಿಗೆ ಪೂರ್ವದಿಶೆಯಲ್ಲಿ ತಣ್ಣನೆಯ ಹೊಂಬೊಗರು ಹಬ್ಬುವುದು ಕಣ್ಣಿಗೆ ಬೀಳುತ್ತದೆ. ನೋಡನೋಡುತ್ತಲೇ ಅಗಾಧವಾದ ತಮವೇ ಬೆಳಕಿನ ಪುಂಜವೊಂದನ್ನು ತನ್ನ ಗರ್ಭದಿಂದ ಮೂಡಿಸುತ್ತಿದೆ! ದುಂಡಾದ ಕೆಂಪಾದ ಅಗಲವಾದ ಚಂದ್ರಮಂಡಲ ಮೇಲೆದ್ದು ಬರುತ್ತಿದೆ. ಕವಿ ಈ ಮನೋಹರವಾದ ದೃಶ್ಯವನ್ನು ನೋಡುತ್ತಾ ನೋಡುತ್ತಾ, ತಾನು ಯಾರು, ತಾನಿರುವುದೆಲ್ಲಿ, ಎಂಬುದನ್ನೆಲ್ಲಾ ಕ್ಷಣಕಾಲ ಮರೆತು ಆ ಮಧುರ ದೃಶ್ಯಾವಲೋಕನದಲ್ಲಿ ತಲ್ಲೀನನಾಗಿದ್ದಾನೆ. ದೃಶ್ಯದಲ್ಲಿ ಅವನ ಮನಸ್ಸು ಸುಮ್ಮನೆ ಮರುಳಾಗಿದೆ; ನೋಡುತ್ತಿದ್ದಾನೆ ಸುಮ್ಮನೆ- ಮಾತಿಲ್ಲದೆ, ಏನೂ ಇಲ್ಲದೆ, ಆ ಸೊಗಸಿಗಾಗಿ ನೋಡುತ್ತಿದ್ದಾನೆ. ಕವಿ ಹೀಗೆ ದೃಶ್ಯದಲ್ಲಿ ಮೈಮರೆಯಲು ಕಾರಣ, ಅವನಿಗೆ ಈ ಚಂದ್ರೋದಯವನ್ನು ಕುರಿತು ಒಲವಿದೆ; ಸುಂದರವಾದುದನ್ನು ಕಂಡು ಒಲಿಯುವ ಶಕ್ತಿ ಅವನಲ್ಲಿ ಎಂದೋ ಎಚ್ಚರವಾಗಿದೆ. ಆದುದರಿಂದಲೇ ಉಳಿದವರು ನೋಡಿದರೂ ಗಮನಿಸದೆ ಹೋದ ದೃಶ್ಯವನ್ನು ಅವನು ಅತ್ಯಂತ ಕಾತರತೆಯಿಂದ ಒಲಿದು ನೋಡುತ್ತಾನೆ. ಎರಡನೆಯದಾಗಿ, ಚಂದ್ರ ಎಂಬ ವಸ್ತುವಿಗೇ ಸಹಜ ಸೌಂದರ‍್ಯವಿದೆ; ಮನಸ್ಸನ್ನು ಆಕರ್ಷಿಸುವ ಹಾಗೂ ಆಕ್ರಮಿಸುವ ಶಕ್ತಿ ಇದೆ. ಎಂದರೆ ವಸ್ತುವಿಗೂ ನಮ್ಮ ಮನಸ್ಸಿನ ಮೇಲೆ ಪರಿಣಾಮ ಮಾಡುವ ಒಂದು ಶಕ್ತಿ ಇದೆ. ವ್ಯಕ್ತಿಗೂ ಅದನ್ನು ಒಲಿದು ಅನುಭವಿಸುವ ಸಾಮರ್ಥ್ಯವಿದೆ. ವಸ್ತುವಿಗೆ ಆಕರ್ಷಿಸುವ ಶಕ್ತಿ ಇದ್ದೂ, ಅದರಿಂದ ಆಕರ್ಷಿತವಾಗದವರಿದ್ದರೆ, ಆ ದೋಷ ವಸ್ತುವಿಗೆ ಸಂಬಂಧಿಸಿದ್ದೆಂದು ಹೇಳಲಾಗುವುದಿಲ್ಲ. ವ್ಯಕ್ತಿಗೆ ಒಲಿಯುವ, ಒಲಿದು ಅನುಭವಿಸುವ ಸಾಮರ್ಥ್ಯವಿದ್ದರೆ, ವಸ್ತುವಿನಲ್ಲಿ ಆಕರ್ಷಣೀಯವಾದ ಗುಣವಿಲ್ಲವೆಂಬಂತೆ ತೋರಿದರೂ ಒಲಿಯುವ ವ್ಯಕ್ತಿ ತನ್ನ ಒಲವಿನಿಂದಲೇ ವಸ್ತುವನ್ನು ಸುಂದರವೆಂಬಂತೆ ಕಾಣಬಹುದು. ಒಟ್ಟಿನಲ್ಲಿ ಪ್ರೀತಿಯೇ ಸೌಂದರ‍್ಯಾನುಭವದ ಸೂತ್ರ; ಪ್ರೀತಿಯ ಕಣ್ಣಿಗೆ ಯಾವೆಲ್ಲವೂ ಸುಂದರವಾಗಿ ತೋರುತ್ತವೆ. ಯಾವ ತಾಯಿ ಜಗತ್ತಿನಲ್ಲಿ ತಾನು ಹಡೆದ ಮಗು ಸುಂದರವಾಗಿಲ್ಲ ಎನ್ನಬಲ್ಲಳು? ವಾಸ್ತವವಾಗಿ ಪ್ರೇಮವೇ ಸೌಂದರ‍್ಯ ಧರ್ಮ.

ಪ್ರಸ್ತುತ ಸಂದರ್ಭದಲ್ಲಿ ಕವಿ ಚಂದ್ರೋದಯವನ್ನು ಕಂಡಾಗ ತನ್ನತನವೆಲ್ಲವೂ ಜಗುಳ್ದು ಲಯವಾಗಿ ಕ್ಷಣ ವಿಸ್ಮೃತಿಯಲ್ಲಿ ಒಂದು ಅಪೂರ್ವ ತಾದಾತ್ಮ್ಯಾನುಭೂತಿಯಲ್ಲಿ ನಿಂತಿದ್ದಾನೆ. ಈ ಸಂದರ್ಭದಲ್ಲಿನ ಭಾವ ಕೇವಲ ಪ್ರೇಮ. ಸದ್ಯದ ಮನಃಸ್ಥಿತಿಯಲ್ಲಿ ಸೌಂದರ‍್ಯಾನುಭವದ ಆನಂದವೇ ಅವನಿಗೆ ಪರಮ ಪ್ರಯೋಜನವೆಂಬಂತೆ ತೋರುತ್ತದೆ. ಚಂದ್ರ ಅವನ ಕಣ್ಣಿಗೆ ಕೇವಲ ಆನಂದದ ವಸ್ತು. ವಸ್ತು – ಆತ್ಮಗಳ ಒಂದು ಮಧುರ ಸಮ್ಮಿಳನದಲ್ಲಿ ಕವಿಗೆ ಸೌಂದರ‍್ಯಾನುಭವವಾಗುತ್ತದೆ. ಯಾವುದೋ ಒಂದು ಸೂತ್ರ ತನ್ನನ್ನೂ ಆ ಚಂದ್ರನನ್ನೂ ಒಂದೇ ಬಂಧದಲ್ಲಿ ಹೊಂದಿಸಿದ ಸಾಮರಸ್ಯಾನುಭವ ಅವನಿಗೆ ಆಗುತ್ತದೆ. ಆ ಅನುಭವದಲ್ಲಿ ಕವಿಗೆ ಯಾವ ಲೌಕಿಕಭಾವಗಳ ಸೋಂಕೂ ಇಲ್ಲದೆ ಅವನು ವಸ್ತು ನೀಡುವ ಸೊಗಸಿನಲ್ಲಿ ಒಂದಾಗಿರುತ್ತಾನೆ. ಆ ಅನುಭವ ಮಾತು ಮನಗಳನ್ನು ಮೀರಿದ್ದು; ಕಂಬನಿ ರೋಮಾಂಚನಗಳೇ ಆ ಅನುಭವದ ಭಾಷೆಯಾಗಬಹುದು. ಇದು ಈ ಅನುಭವದಲ್ಲಿ ಅತ್ಯಂತ ಶುದ್ಧವಾದ ಮತ್ತು ಅತ್ಯುತ್ತಮವಾದ ಒಂದು ಘಟ್ಟ.

ಸೌಂದರ‍್ಯಾನುಭವದಲ್ಲಿ ಮತ್ತೆ ಬೇರೆ ಬೇರೆ ಘಟ್ಟಗಳೂ ಇವೆ. ಮೇಲೆ ಹೇಳಿದ ಚಂದ್ರೋದಯ ಸಮಯದಲ್ಲಿ, ಕವಿಗಾಗುವ ಅನುಭವದ ನಿದರ್ಶನದಿಂದಲೇ ಇದನ್ನು ವಿವರಿಸಬಹುದು. ಕವಿ ಚಂದ್ರೋದಯವನ್ನು ನೋಡುವಾಗ ಅವನ ಅಂತರಂಗದಲ್ಲಿ ಚಂದ್ರನನ್ನು ಕುರಿತ ಅನೇಕ ಭಾವನೆಗಳು ಸದ್ಯಾನುಭವದಲ್ಲಿ ಸೇರ್ಕೆಗೊಳ್ಳಬಹುದು, ಅಥವಾ ಚಂದ್ರನನ್ನು ಕುರಿತು ಅನೇಕ ಕವಿಗಳು ಮಾಡಿರುವ ವರ್ಣನೆಗಳು ನೆನಪಿಗೆ ಬರಬಹುದು. ಅವನೇ ನಾನಾ ಕಡೆಗಳಲ್ಲಿ ನಾನಾ ಕಾಲದಲ್ಲಿ ಕಂಡ ಚಂದ್ರೋದಯಾನಂದದ ಅನುಭವ ಒಳಬಗೆಯಿಂದ ಮೇಲೆದ್ದು ಬರಬಹುದು. ಅಥವಾ ಆ ಸಂದರ್ಭದ ಅವನ ಭಾವದಂತೆ ಚಂದ್ರ ಅವನಿಗೆ ತೋರಬಹುದು. ಚಂದ್ರನನ್ನು ಅಂದಂದಿನ ಭಾವದ ಮೂಲಕ ನೋಡುವುದರ ಜೊತೆಗೆ ಅಲ್ಲೇ ಆ ಅನುಭವ ಹೊಸಹೊಸ ಭಾವನೆಗಳನ್ನೂ ಪ್ರಚೋದಿಸಬಹುದು. ಈ ಕಾರಣದಿಂದ ಕವಿಗೆ ತಾದಾತ್ಮ್ಯಾನುಭವದ ಜೊತೆಗೇ, ಆ ಚಂದ್ರ ‘ಪೂರ್ವದಿಗ್ವನಿತೆಯ ಕುಂಕುಮಬಿಂದು’ವಿನಂತೆಯೋ, ‘ಜಗದಾಲೋಕನ ದರ್ಪಣ’ದಂತೆಯೋ, ‘ಕನಕ ಕುಂಭ’ದಂತೆಯೋ, ‘ದೇವರ ಪೆಪ್ಪರ್‌ಮೆಂಟಿ’ನಂತೆಯೋ, ‘ಗಗನ ಸ್ಮಶಾನದಲಿ ಪ್ರಜ್ವಲಿಪ ಚಿತೆ’ಯಂತೆಯೋ ಕಾಣಬಹುದು. ಎಂದರೆ ಕವಿ ಆ ಅನುಭವವನ್ನು ಪಡೆಯುತ್ತಿರುವುದು ಸದ್ಯದ ಭಾವ ನಿರ್ಮಿಸುವ ಈ ಪ್ರತಿಮೆಗಳ ಮೂಲಕವೇ. ಎಂದರೆ ಕವಿ ವಸ್ತುವನ್ನು ನೋಡುತ್ತಾ ಈ ಭಾವಗಳನ್ನು ಆರೋಪಿಸುತ್ತಾನೆಂದಲ್ಲ; ಆಗಿನ ಅನುಭವವೇ ಅನಿವಾರ‍್ಯವಾಗಿ ಈ ಪ್ರತಿಮೆಗಳನ್ನು ಸೃಜಿಸಿ ಸೌಂದರ‍್ಯಾನುಭವವನ್ನು ಕವಿಗೆ ನೀಡುತ್ತದೆ. ಹಿಂದೆ ಹೇಳಿದ ಕೇವಲ ತಾದಾತ್ಮ್ಯಾನುಭವದಲ್ಲಿ ನಾವು ಎರಡನೆಯ ಅನುಭವದಲ್ಲಿಯಂತೆ ಯಾವ ಭಾವಗಳನ್ನೂ ಗುರುತಿಸಲಾಗುವುದಿಲ್ಲ. ಅಲ್ಲಿನ ಅನುಭವದಲ್ಲಿ ಕಲ್ಪನೆಯೂ ಹಿಂದೆ ಬಿದ್ದು ಬರಿಯ ಆನಂದಾನುಭವವೊಂದೆ ಪ್ರಧಾನವಾಗಿರುತ್ತದೆ.

ಇಂತಹ ಚಂದ್ರೋದಯದ ನೂರು ನೋಟಗಳನ್ನು ‘ಇದೆ ಮೊದಲೆಂಬಂತೆ’ ಕಂಡು ಉಂಡ ಕವಿಯ ಚಿತ್ತದಲ್ಲಿ ಎಂದೋ ಒಂದು ದಿನ ಒದಗಿ ಬರುತ್ತದೆ ಒಂದು ಸುಮುಹೂರ್ತ, ಈ ಆನಂದಾನುಭವದ ಬಿಡುಗಡೆಗೆ. ಕವಿ ಅಲ್ಲಿರಲಿ, ಇಲ್ಲಿರಲಿ ಎಲ್ಲಿಯೇ ಇರಲಿ  ಒಳಬಗೆಯಲ್ಲಿ ಈ ಅನುಭವಗಳು ಮೂಡಿ ಮೂಡಿ ಮುಳುಗುತ್ತಿರುತ್ತವೆ. ವರ್ಡ್ಸ್‌ವರ್ತ್ ಕವಿ ಹೇಳುವಂತೆ –

They flash upon that inward eye
which is the bliss of Solitude[2]

ಅಷ್ಟೇ ಅಲ್ಲ –

These beautious forms
Through a long absence have not been to me
As is a landscape to a blindman’s eye:
But oft, in loanly rooms and mid the dim
Of towns and cities, I have owed to them,
In hours of weariness, Sensations Sweet,
Felt in the blood, and felt along the heart;
And passing even into my purer mind,
With tranquil restoration…………….
While with an eye made quiet by the power
Of harmony, and the deep power of joy,
We see into the life of things.[3]

ಇದು ಕವಿಯ ಒಳಬಗೆಯಲ್ಲಾಗುವ ಅನುಭವ. ಯಾವಾಗಲೋ ಯಾವುದೋ ಒಂದು ಪ್ರೇರಣೆಯಿಂದ ಕವಿತೆ ಮೂಡುವ ಒಂದು ಮುಹೂರ್ತ ಕೂಡಿಬಂದಾಗ, ಏಕಾಂತದ ಪರಿಭಾವನೆಯಲ್ಲಿ ಕವಿ ಮತ್ತೆ ಪೂರ್ವಾನುಭವದ ಪುನರನುಭವದಲ್ಲಿ ತೊಡಗುತ್ತಾನೆ. ಹಿಂದೆ ಒಮ್ಮೆ ಪಡೆದ ಆನಂದಾನುಭವವನ್ನು ತನ್ನ ಮನೋರಸನೆಯಲ್ಲಿ ಚರ್ವಣಗೊಳಿಸುವಾಗ ಇದೂ ಮತ್ತೊಂದು ರೀತಿಯ ಸೌಂದರ್ಯಾನುಭವದ ಕ್ರಿಯೆಯೇ ಆಗುತ್ತದೆ. ತನ್ನಲ್ಲಿ ಸುಪ್ತವಾದ ಪೂರ್ವಾನುಭವಗಳನ್ನು ಬಿಚ್ಚುವುದರ ಜೊತೆಗೆ, ಈ ಕಾಲದಲ್ಲಿ ಹಿಂದೆ ಆಗದ ಇನ್ನೂ ಬೇರೆ ಬೇರೆಯ ಭಾವನೆಗಳೂ ಸ್ಫುರಿಸಿ ಈ ಅನುಭವವನ್ನು ಮೂರ್ತರೂಪವೊಂದರಲ್ಲಿ ಕಟ್ಟುವ ಕೆಲಸವನ್ನೂ ಕವಿಪ್ರತಿಭೆ ಮಾಡುತ್ತದೆ. ಅಂದರೆ, ಅನುಭವದ ಚರ್ವಣ ರೂಪದ ಪುನರನುಭವವೇ ಕಲಾಸೃಷ್ಟಿಗೆ ಕಾರಣ. ಹಿಂದೆ ಅವನು ವಸ್ತುಸಂಗದಲ್ಲಿ ಪಡೆದದ್ದು ಬರಿಯ ಆನಂದಾನುಭವ; ಅಲ್ಲಿ ಅದಕ್ಕದೇ ಪ್ರಯೋಜನವಾಗಿತ್ತು. ಏಕೆಂದರೆ ಅಲ್ಲಿ ಅನುಭವಿಸುವುದರಲ್ಲೇ ಕವಿಗೆ ತೃಪ್ತಿ ಇತ್ತು; ಅದನ್ನು ಯಾವುದಾದರೂ ಒಂದು ರೂಪದಲ್ಲಿ ಅಭಿವ್ಯಕ್ತಗೊಳಿಸಬೇಕೆಂಬ ಬಯಕೆಯ ನೆರಳಿನ ಸೋಂಕು ಕೂಡಾ ಅಲ್ಲಿರಲಿಲ್ಲ. ಆದರೆ ಈಗ ಆ ಎಲ್ಲ ಅನುಭವದ ಚರ್ವಣರೂಪದ ಪುನರನುಭವ ಉಕ್ತಿಯನ್ನು ಬಯಸುವುದರಿಂದ, ಉಕ್ತಿಗಾಗಿ ತುಡಿಯುವ ಈ ಅನುಭವವೂ, ಯಾವ ಉಕ್ತಿಯನ್ನೂ ಬಯಸದ ಹಿಂದಿನ ಅನುಭವವೂ ಒಂದೇ ಅಲ್ಲವೆಂಬುದು ಮಾತ್ರ ಅನುಭವವೇದ್ಯ. ಈ ಪುನರನುಭವದಲ್ಲಿ ಮೈದೋರುವ ಚಿತ್ರವೇ ಒಂದು ರೀತಿಯ ಮಾನಸಿಕ ಕಲಾಕೃತಿಯಾದರೂ ಅದು ಸಂಪೂರ್ಣವಾಗಿ ಬಹಿರಂಗಾಭಿವ್ಯಕ್ತಿಯನ್ನು ಪಡೆಯುವ ತನಕ ಕವಿಗೂ ಸಹ ಸ್ಪಷ್ಟವಾಗಿ ಗೋಚರವಲ್ಲ. ಈ ಕಟ್ಟುವ ಕಾರ್ಯದಲ್ಲಿ ಕವಿಗೆ ಅವನದೇ ಆದ ಪರಿಕರ ಒದಗಿಬರುತ್ತದೆ. ಈ ಅಭಿವ್ಯಕ್ತಿಯ ಸಾಮಗ್ರಿಯೂ ಅದೇ ಅನುಭವದಿಂದ ರೂಪಿಸಲ್ಪಟ್ಟು, ಅನುಭವಸೌಂದರ್ಯ ಉಕ್ತಿಯ ಸೌಂದರ್ಯವಾಗಿ ಪರಿವರ್ತಿತವಾಗುತ್ತದೆ. ಅಂದರೆ ಕವಿಯ ಉಕ್ತಿ ಪೂರ್ವಾನುಭವವನ್ನು ಪುನರನುಭವದ ಕ್ರಿಯೆಯ ಮೂಲಕ ಸಂಸ್ಕಾರಗೊಳಿಸಿ ಮೂರ್ತಗೊಳಿಸುತ್ತದೆ. ಎಂದರೆ ಕವಿಯು ಲೋಕವಸ್ತುವಿನ ಮಧುರ ಸಮ್ಮಿಳನದಲ್ಲಿ ಪಡೆದ ಆನಂದಾನುಭವವನ್ನು ಕಲಾಕೃತಿಯನ್ನಾಗಿ ಅಥವಾ ಸೌಂದರ್ಯದ ನಿರ್ಮಿತಿಯನ್ನಾಗಿ ರೂಪಿಸುತ್ತಾನೆ. ಈ ಸೌಂದರ್ಯಾನುಭವದ ಪರಿಣಾಮದ ಕಲಾಕೃತಿ ಕವಿಯು ಪ್ರೇಮ ಪೂರ್ವಕವಾಗಿ ವಸ್ತುವಿನೊಂದಿಗೆ ಪಡೆದ ಆತ್ಮಸಂಗದ ಮಧುರ ಮೂರ್ತರೂಪವಾಗಿ ಆನಂದದಾಯಕವಾಗುತ್ತದೆ. ಈ ಹಿನ್ನೆಲೆಯಿಂದ ಹೇಳಬಹುದಾದರೆ, ಸೌಂದರ್ಯ ಎಂದರೆ ಆನಂದದ ಮೂರ್ತರೂಪವೇ. ಈ ಮೂರ್ತರೂಪದ ಕಲಾಕೃತಿಯಿಂದ ಸಹೃದಯರಾದವರು ಮತ್ತೆ ಆನಂದವನ್ನು ಪಡೆಯುತ್ತಾರೆ.

ಕವಿ ನಿರ್ಮಿತಿಯಾದ ಕಲಾವಸ್ತುವಿನಿಂದ ಸಹೃದಯರು ಆನಂದವನ್ನು ಪಡೆಯಲು ಕಾರಣ ಅದು ಕವಿಯ ಆನಂದದ ಮೂರ್ತರೂಪ ಎನ್ನುವ ಅಂಶದಿಂದ ನಾವು ಇಡೀ ಸೃಷ್ಟಿಯ ಸೌಂದರ್ಯವು ನೀಡುವ ಆನಂದದ ರಹಸ್ಯವನ್ನು  ಊಹಿಸಬಹುದು. ನಮ್ಮ ಋಷಿಗಳು, ಈ ಸೃಷ್ಟಿ ಆನಂದದಿಂದ ಮೂಡಿದೆ, ಆನಂದದಲ್ಲೇ ಬದುಕಿದೆ, ಆನಂದದಲ್ಲೇ ಮುಳುಗುತ್ತದೆ ಎಂಬ ಅಮೋಘತತ್ವವನ್ನು ಹೇಳಿದರು. ಪ್ರತಿಯೊಂದೂ ಆ ದಿವ್ಯಾನಂದದ ಮೂರ್ತರೂಪವಾಗದ ಪಕ್ಷದಲ್ಲಿ ಈ ವಸ್ತುಗಳು ನಮಗೆ ಆನಂದವನ್ನು ಕೊಡಲು ಹೇಗೆ ಸಾಧ್ಯ? ಆದರೆ ಈ ಆನಂದ ‘ಅಕಾಮಹತ’ವಾದ ಚೇತನಗಳಿಗೆ ಅನುಭವಕ್ಕೆ ಬರುವಂತೆ ಕಾಮಹತವಾದ ಚೇತನಗಳಿಗೆ ಲಭಿಸದು ಎಂದು ತೈತ್ತಿರೀಯ ಉಪನಿಷತ್ತು ಹೇಳುತ್ತದೆ.[4] ಚೇತನಕ್ಕೆ ಎಷ್ಟರಮಟ್ಟಿಗೆ ಈ ‘ಅಕಾಮಹತತ್ವ’ ಲಭಿಸುವುದೋ ಅಷ್ಟರಮಟ್ಟಿಗೆ ಆನಂದ ವೃದ್ಧಿಯಾಗುತ್ತಾ ಹೋಗುತ್ತದೆ. ಈ ಹಂತದಲ್ಲಿ ಕವಿಚೇತನ ಪಡೆಯುವುದು ಮನುಷ್ಯಗಂಧರ್ವಾನಂದವನ್ನು; ಅದಕ್ಕೂ ಮೀರಿದ್ದು ದೇವಗಂಧರ್ವಾನಂದ ಇತ್ಯಾದಿ. ಆದುದರಿಂದಲೇ ‘ಕಾಮಹತ’ವಾದ ಬಹುಮಂದಿಗೆ ಈ ಜಗತ್ತು ಆನಂದಮಯವಾಗಿ ತೋರದೆ ಹೋಗುವುದು. ಕವಿ ವಿಷಯಾನಂದದಿಂದ, ಈ ‘ಅಕಾಮಹತತ್ವ’ ದಿಂದ ಲಭಿಸುವ ಆನಂದವನ್ನು ಬೇರ್ಪಡಿಸಿ ಕೃತಿಯನ್ನಾಗಿ ನೀಡುತ್ತಾನೆ.

ಶಕ್ತಿ ಸಂಚಯನ ಮತ್ತು ಶಕ್ತಿ ಸಂಚಾಲನ, ಇದೇ ಸೃಷ್ಟಿವ್ಯಾಪಾರದ ಲಕ್ಷಣವೆಂಬಂತೆ ತೋರುತ್ತದೆ. ಆನಂದ ಮತ್ತು ಸೌಂದರ‍್ಯವೆಂದರೆ ಇದೇ. ಯಾವ ಶಕ್ತಿ ಸಂಚಯನಗೊಂಡಾಗ ಸೌಂದರ‍್ಯವಾಗಿ, ಸಂಚಾಲನಗೊಂಡಾಗ ಆನಂದವಾಗುವುದೋ ಅದರ ಅನಂತ ವಿನ್ಯಾಸಗಳೇ ಈ ರೂಪಸೃಷ್ಟಿ. ಹೂವಾಗಿ ಸಂಚಯನಗೊಂಡ ಆನಂದ ಸೌಂದರ‍್ಯವಾಗಿ ತೋರಿ, ಕಂಪಾಗಿ ಸಂಚಾಲನಗೊಳ್ಳುತ್ತದೆ. ಹಕ್ಕಿಗೊರಳಿನಲ್ಲಿ ದನಿಯಾಗಿ ಸಂಚಯನಗೊಂಡ ಆನಂದ ಮಧುರದನಿ ತರಂಗಗಳಾಗಿ ಸಂಚಾಲನಗೊಳ್ಳುತ್ತದೆ. ಕವನವಾಗಿ ಸಂಚಯನಗೊಂಡ ಕವಿಯ ಆನಂದ, ಸಹೃದಯಾನಂದವಾಗಿ ಸಂಚಾಲನಗೊಳ್ಳುತ್ತದೆ. ಬೀಜರೂಪದಲ್ಲಿ ಸಂಚಯನಗೊಂಡ ಆನಂದ, ಗಿಡ ಮರ ಬಳ್ಳಿಯಾಗಿ ಸಂಚಾಲನಗೊಳ್ಳುತ್ತದೆ. ಎಂದರೆ ಸಂಚಯನ ಸಂಚಾಲನಕ್ಕಾಗಿಯೇ. ಸಂಚಯನ ಸಂಚಾಲನ ವ್ಯಾಪಾರದಲ್ಲಿ ರೂಪವೇನಿದ್ದರೂ ಕೇವಲ ಮಾಧ್ಯಮ ಮಾತ್ರ. ಈ ಎಲ್ಲ ಆನಂದದ ವ್ಯಾಪಾರದಲ್ಲಿ ಅದು ನಿರ್ಮಿಸಿಕೊಂಡು ಚಣಕಾಲ ಪ್ರಕಟಗೊಳ್ಳುವ ಮಾಧ್ಯಮವನ್ನು ನಾವು ಸೌಂದರ‍್ಯದ ವಸ್ತು ಎನ್ನುತ್ತೇವೆ. ಆನಂದ ಅಲೆಯಾದಾಗ ಹಿಗ್ಗಾಗಿಯೂ, ಘನೀಭೂತವಾದಾಗ ಸೌಂದರ‍್ಯವಾಗಿಯೂ ಪರಿಣಮಿಸುತ್ತದೆ. ಆನಂದದ ನಿಲ್ದಾಣವೇ ಸೌಂದರ‍್ಯ; ಎಲ್ಲೆಲ್ಲಿ ಆನಂದ ಹೆಪ್ಪುಗಟ್ಟುತ್ತದೆಯೋ ಅದೇ ಸೌಂದರ‍್ಯ. ಆದುದರಿಂದಲೇ “A thing of Beauty is Joy for ever, ಎಂದು ಕವಿ ಕೀಟ್ಸ್ ಹೇಳಿದ್ದು. ಹಾಗೆ ನೋಡಿದರೆ ಎಲ್ಲವೂ ಆನಂದದ ಮೂರ್ತರೂಪವಾದುದರಿಂದ ಎಲ್ಲವೂ ಸುಂದರ. ಈ ಆನಂದವನ್ನು ಅಕಾಮಹತವಾದ ಪ್ರೀತಿಯ ಕಣ್ಣು ವಸ್ತುವಿನ ಸಾಮರಸ್ಯಾನುಭವದಿಂದ ಗುರುತಿಸಬಲ್ಲದು. ಅಷ್ಟೇ ಅಲ್ಲ, ಈ ಸಾಮರಸ್ಯ ಉಂಟಾಗಲು ಕಾರಣ ಸೌಂದರ‍್ಯದ ವಸ್ತು ಮತ್ತು ಅದನ್ನು ಸವಿಯುವ ಚಿತ್ತ ಎರಡೂ ಒಂದೇ ಆನಂದದ ಸೃಷ್ಟಿಯಾದುದರಿಂದ. ಆತ್ಮ ಆತ್ಮಗಳ ಮಧುರ ಸಮ್ಮಿಳನದಿಂದ ಕಲೆಗಾರನ ಕಣ್ಣು ವಸ್ತುವಿನ ಸೌಂದರ‍್ಯವನ್ನು ಕಂಡು ಆನಂದವೆಂಬ ತೃತೀಯ ಮೌಲ್ಯವನ್ನು ತೆಗೆಯುತ್ತದೆ. ಈಗ ಸೌಂದರ‍್ಯ ಎಂದರೆ ಏನೆಂಬುದನ್ನು ಹೀಗೆ ಸೂತ್ರರೂಪದಲ್ಲಿ ಹೇಳಬಹುದು: ಆನಂದದ ಮೂರ್ತರೂಪವೇ ಸೌಂದರ‍್ಯ; ಪ್ರೀತಿಯ ಕಣ್ಣು ನಿಸ್ಸಂಗ ಪರಿಭಾವನೆಯಿಂದ ವಸ್ತುವಿನ ಸಾಮರಸ್ಯಾನುಭವದಲ್ಲಿ ಇದನ್ನು ಗುರುತಿಸಬಲ್ಲದು. ಪ್ರೀತಿಯು ಸಾಮರಸ್ಯಾನುಭವದಿಂದ ಗುರುತಿಸುವ ಆನಂದದ ಮೂರ್ತರೂಪವೇ ಸೌಂದರ‍್ಯ.

“ಕವಿ ಪಡೆಯುವ ಈ ಸಾಮರಸ್ಯಾನುಭವ ತುರೀಯೋಪಾಂತ್ಯಸ್ಥಿತಿ. ತುರೀಯದಲ್ಲಿ ಯೋಗಿಯ ಅನುಭವ. ಅಲ್ಲಿ ವಿಷಯ ಆತ್ಮಗಳ ಸಂಪೂರ್ಣ ಸಾಮರಸ್ಯ. ವಿಷಯ, ವಿಷಯಸ್ಥಾನದಲ್ಲಿರುವಾಗ ಅದು ಜೀವಾತ್ಮ ವಿಷಯವೇ; ಅದು ಪರಮಾತ್ಮ ವಿಷಯವಾದಾಗಲೇ ಆನಂದವಾಗುತ್ತದೆ. ವಸ್ತು – ವಿಷಯ ಸಂಗಮದಿಂದ ಸೌಂದರ‍್ಯಾನುಭವ. ಅದೊಂದು ರಾಸಾಯನಿಕ ಕ್ರಿಯೆ; ಭೌತಿಕ ಕ್ರಿಯೆಯಲ್ಲ. ಈ ಸಂಗಮ ಪರಸ್ಪರ ಗೌರವಜನ್ಯವಾದುದು. ಸೌಂದರ‍್ಯವೆಂದರೆ ಅಹಂ-ತತ್ ಇವೆರಡರ ಸಂಪೂರ್ಣ ಸಮೀಕರಣ. ಅದು ಅರ್ಧನಾರೀಶ್ವರನಂತೆ. ಅರ್ಧನಾರೀಶ್ವರನೇ ಸೌಂದರ‍್ಯದ ಅಧಿದೇವತೆ. ಅಲ್ಲಿ ಸಾಮರಸ್ಯವಿದೆ; ಆ ಸಾಮರಸ್ಯದಲ್ಲಿ ಪುರುಷ ರೂಪವೂ ಸ್ತ್ರೀ ರೂಪವೂ ಬೆಸೆದುಕೊಂಡಿವೆ. ಅಂತೆಯೇ ವಸ್ತು-ವಿಷಯಗಳ ಈ ಸಾಮರಸ್ಯವೇ ಸೌಂದರ‍್ಯ….

ಲೋಕಾನುಭವ ರುದ್ರರಭಸದಿಂದ ಹರಿಯುವ ಗಂಗೆಯಂತೆ. ಅದು ಶಿವಜಟೆಯ ದಮನದಿಂದ ಪಾವನವಾಯಿತು; ಸುಂದರವಾಯಿತು; ತನ್ನ ಆವೇಗ ಶಮನವನ್ನು ಪಡೆಯಿತು. ಗಂಗೆ ಶಿವಾಂಶದಿಂದ ತಾರಕವಾಯ್ತು. ಹಾಗಲ್ಲದಿದ್ದರೆ ಅದು ಆವೇಗ ಪ್ರಧಾನವಾಗುತ್ತಿತ್ತು. ಅಂತೆಯೇ ಕವಿಯ ಜಡೆ ಲೋಕಾನುಭವದ ರಭಸವನ್ನು ತಡೆದು ಶಿವಾಂಶವನ್ನು ನೀಡುತ್ತದೆ. ಇಲ್ಲದಿದ್ದರೆ ಅದು ಆವೇಗಪ್ರಧಾನವಾಗುತ್ತದೆ. ಹಾಗಾದಾಗ ಅದು ಮನುಷ್ಯ ಗಂಧರ್ವಾನಂದಕ್ಕೆ ಏರುವುದಿಲ್ಲ.’[5]

ಕವಿಯ ರಸಪರಿಭಾವನೆಗೆ ಸಿಕ್ಕಿ ಯಾವ ವಸ್ತುವಾದರೂ ತನ್ನ ಲೌಕಿಕ ಸಂಗವನ್ನು ಕಳೆದುಕೊಂಡು ರಸಾನುಭವದ ವಸ್ತುವಾಗುತ್ತದೆ. ಕಲಾಕೃತಿ ಅಥವಾ ರಸಾನುಭವದ ವಸ್ತುವೇ ಸಹೃದಯನ ಪರಿಭಾವನೆಯ ವಸ್ತು. ಕವಿಯ ಸೌಂದರ‍್ಯಾನುಭವದಿಂದ ಸಹೃದಯನ ಸೌಂದರ‍್ಯಾನುಭವದವರೆಗಿನ ಈ ರಸವ್ಯಾಪಾರವನ್ನು ಮೂರು ಘಟ್ಟಗಳಾಗಿ ಗುರುತಿಸಬಹುದು:

೧.         ಲೋಕವಸ್ತುವಿನಲ್ಲಿ ಕವಿ ಪ್ರೀತಿಯಿಂದ ಪಡೆಯುವ ಸಾಮರಸ್ಯದಿಂದ ಕವಿ ಗೊದಗುವ ಆನಂದಾನುಭವ.

೨.         ಕವಿ ತನಗೊದಗಿದ ಆನಂದಾನುಭವಗಳನ್ನು ಕುರಿತು ಪರಿಭಾವಿಸಿದಾಗ, ಅನುಭವದ ಪುನರನುಭವದಲ್ಲಿ ಅಭಿವ್ಯಕ್ತಿ ಕಾರಣವಾದ ಅನುಭವ ಮತ್ತು ಅದರ ಫಲವಾದ ಕಲಾಕೃತಿ ನಿರ್ಮಾಣ.

೩.         ಕವಿಯ ಅನುಭವದಿಂದ ಮೂಡಿದ ಕಲಾಕೃತಿಯನ್ನೇ ವಸ್ತುವನ್ನಾಗಿಸಿಕೊಂಡು ಸಹೃದಯನು ಪಡೆಯುವ ಅನುಭವ.

ಈ ಮೂರು ವ್ಯಾಪಾರಗಳನ್ನು ನಕ್ಷೆಯಾಗಿ ಹೀಗೆ ತೋರಿಸಬಹುದು.

ಈ ಮೂರು ವ್ಯಾಪಾರಗಳಲ್ಲೂ ಸೌಂದರ‍್ಯಾನುಭವ ಒಂದೇ ಎಂಬಂತೆ ತೋರಿದರೂ ವಾಸ್ತವವಾಗಿ ಒಂದೇ ಎನ್ನಲಾಗುವುದಿಲ್ಲ. ಮೂರನೆಯದಾದ ಸಹೃದಯಾನುಭವದಲ್ಲಂತೂ, ಸಹೃದಯನ ಶಕ್ತಿ ಸಂಸ್ಕಾರಗಳಿಗೆ ಅನುಸಾರವಾಗಿ ಕಲಾಕೃತಿಯಿಂದ ಸೌಂದರ್ಯಾನುಭವ ಒದಗುತ್ತದೆ. ಸಹೃದಯ ತನ್ನ ಎದುರಿಗೆ ಕವಿ ನಿರ್ಮಿತವಾದ ಕೃತಿಯೊಂದು ಇರುವುದೆಂಬುದರ ಅರಿವನ್ನು ಹೊಂದಿರುತ್ತಾನೆ. ತನ್ನ ಮತ್ತು ಕಲಾವಸ್ತುವಿನ ಪ್ರತ್ಯೇಕ ಅಸ್ತಿತ್ವವನ್ನು ಅರಿತೂ ಅವೆರಡರ ಅಂತರವನ್ನು ಒಂದು ಬಗೆಯ ತಟಸ್ಥ ತಲ್ಲೀನತೆಯಿಂದ ಮರೆಯುವುದರ ಮೂಲಕ ರಸಾನುಭವವನ್ನು ಪಡೆಯುತ್ತಾನೆ. ನಾಟಕ ನೋಡುವ ಪ್ರೇಕ್ಷಕನಿಗೆ ತಾನು ನೋಡುವುದು ನಾಟಕವೆಂಬ ಅರಿವಿದ್ದೂ, ನಾಟಕ ಕ್ರಿಯೆಯಲ್ಲಿ ಐಕ್ಯಹೊಂದಿದರೆ ತಾನೆ ರಸಾನುಭವ? ಆದುದರಿಂದ ಸಹೃದಯ ಲೋಕಭಾವದಿಂದ ಅಲಿಪ್ತನಾಗಿ, ಕವಿಭಾವದಲ್ಲಿ ಲಿಪ್ತನಾಗಿ, ಒಂದು ಬಗೆಯ ಲಿಪ್ತಾಲಿಪ್ತ ಸ್ಥಿತಿಯಲ್ಲಿರುವುದರಿಂದ ಅವನು ರಸಾನುಭವವನ್ನು ಪಡೆಯಬಲ್ಲನು. ಕವಿಯ ಕೃತಿ ಸಹೃದಯನಲ್ಲಿ ಈ ಒಂದು ಬಗೆಯ ಸಾಮರಸ್ಯದ ಅನುಭವವನ್ನು ಪಡೆದು ಅವನಲ್ಲಿ ಸಮಾನಭಾವನೆಯನ್ನು ಉದ್ದೀಪನಮಾಡುತ್ತದೆ. ಇಲ್ಲಿಯೂ ಸಹೃದಯನ ಅನುಭವದಲ್ಲಿ, ಕೃತಿಯಲ್ಲಿ ಮೂರ್ತಗೊಂಡ ಕವಿಯ ಅನುಭವವೂ, ಸಹೃದಯನಲ್ಲಿರುವ ಅನುಭವ ಸಾಮರ್ಥ್ಯವೂ ಪರಸ್ಪರ ಸಂಗಮಗೊಂಡು ಸಹೃದಯನ ಸೌಂದರ್ಯಾನುಭವಕ್ಕೆ ಕಾರಣವಾಗುತ್ತದೆ; ಈ ರಸಾನುಭವ ಸಹೃದಯನ ಸಂಸ್ಕಾರವನ್ನು ಅವಲಂಬಿಸಿದೆ. ಶಕುಂತಲೆ ದುಷ್ಯಂತರ ಪ್ರಣಯ ಪ್ರಸಂಗ ಶೃಂಗಾರರಸೋದ್ದೀಪನ ಕಾರಿಯಾದರೂ, ಅದರಿಂದ ನಾಟಕ ನೋಡುತ್ತ ಕುಳಿತವರೆಲ್ಲರಲ್ಲೂ ಶೃಂಗಾರರಸವೇ ಅನುಭವಕ್ಕೆ ಬರುತ್ತದೆಂದು ಹೇಳಲಾಗುವುದಿಲ್ಲ. ಅನೇಕರಿಗೆ ಲೋಕರತಿಯೇ ಅನುಭವಕ್ಕೆ ಬರಬಹುದು. ಮತ್ತೆ ಕೆಲವರಿಗೆ ಶೇ. ೫೦ ರತಿ, ಶೇ. ೫೦ ಶೃಂಗಾರವೂ, ಇನ್ನು ಕೆಲವರಿಗೆ ಶೇ. ೧೦ ರತಿಯೂ ಶೇ. ೯೦ ಶೃಂಗಾರವೂ ಅನುಭವಕ್ಕೆ ಬರಬಹುದು. ಉಳಿದ ಭಾವಗಳನ್ನು ಕುರಿತೂ ಈ ಮಾತನ್ನು ಹೇಳಬಹುದು. (ಇದನ್ನು ಚಿತ್ರರೂಪವಾಗಿ ಮುಂದೆ ತೋರಿಸಿದೆ.)

“ಈ ನಕ್ಷೆ ಭಾವ ಮತ್ತು ರಸಗಳಿಗಿರುವ ಸಂಬಂಧವನ್ನು ಹಾಗೂ ಅವು ಹೇಗೆ ವೃದ್ಧಿ ಹೊಂದುತ್ತವೆ ಎನ್ನುವುದನ್ನು ಸೂಚಿಸುತ್ತದೆ. ಮೇಲಿನ ಅರ್ಧ ವರ್ತುಲ ರಸಪ್ರಪಂಚ; ಅದರ ಉತ್ತರಧ್ರುವ ಕೇವಲ ರಸಲೋಕ. ಅದು ನಿರಾಕಾರ; ಅವಿವಿಧ. ಅದು ಯೋಗಿ ಸಿದ್ಧರ ಅನುಭವ ಕ್ಷೇತ್ರ. ಕವಿಯ ಅನುಭವ ಆ ತುರೀಯದಿಂದ ಕೆಳಗಿನದು. ಆದರೆ ಅದರ ಉದ್ದೇಶ ಅದನ್ನು ಮುಟ್ಟುವುದು- ಮಹಾ ಕವಿಗಳ ದೃಷ್ಟಿಯಲ್ಲಿ. ಕೆಳಗಿನ ಅರ್ಧವರ್ತುಲ ಮಾನವ ಭಾವಲೋಕ. ಅದರ ದಕ್ಷಿಣಧ್ರುವ ಕೇವಲ ಭಾವಲೋಕ; ಅದು ನಿರಾಕಾರ, ಅವಿವಿಧ. ಕೆಳಗಿನ ಅರ್ಧವರ್ತುಲ ಪ್ರಾಣಮಯ, ಮೇಲಿನ ಅರ್ಧವರ್ತುಲ ಮನೋಮಯ. ಲೋಕಭಾವಗಳೆಲ್ಲ ಈ ಪ್ರಾಣಮಯ ವ್ಯಾಪಾರದ ತರಂಗಗಳು. ಅಹಂಕಾರಾದಿಗಳಿಂದ ಲೌಕಿಕ ಬಯಕೆಗಳಿಂದ ತುಡಿಯುವ ಸ್ವಭಾವ ಇವುಗಳದು. A-B ಎನ್ನುವ ರೇಖೆ ಕವಿಯ ಅನುಭವವನ್ನು ಸೂಚಿಸುತ್ತದೆ. ಲೋಕ ಭಾವಗಳೆಲ್ಲ ಕವಿಯ ನಿರ್ಲಿಪ್ತ ಪರಿಭಾವನೆಗೆ ಸಂದು ತಮ್ಮ ಲೌಕಿಕತ್ವವನ್ನು ಕಳೆದುಕೊಂಡು ರಸವಾಗುತ್ತವೆ. ಎಂದರೆ ಭಾವ ರಸತ್ವಕ್ಕೆ ಏರುತ್ತದೆ. ಭಾವ ರಸತ್ವಕ್ಕೆ ಏರುವುದು ಎಂದರೆ ಪ್ರಾಣಮಯ ಮನೋಮಯಕ್ಕೇರುವುದು ಎಂದು ಅರ್ಥ. ಮನೋಮಯದಲ್ಲಿ ಪ್ರಾಣಮಯದ ಭಾವತ್ವ ವಿನಷ್ಟವಾಗುವುದಿಲ್ಲ; ಅದು ತನ್ನ ಅಲ್ಪತ್ವದಿಂದ ಪಾರಾಗಿ ವಿಸ್ತಾರವಾಗುತ್ತದೆ. ವಿಸ್ತಾರವಾದಷ್ಟೂ ರಸತ್ವಕ್ಕೆ ಏರುತ್ತದೆ. ಇದನ್ನೇ ಚಿತ್ರದಲ್ಲಿ ತೋರಿಸಿದೆ. ಕೆಳಗಿನ ಭಾವಲೋಕದಿಂದ ರೇಖಾಂಶಗಳಂತೆ ರತಿ ಹಾಸ ಶೋಕಾದಿ ಸ್ಥಾಯಿಭಾವಗಳು ಹೊರಡುತ್ತವೆ. ಅವುಗಳ ಮೇಲೆ ಅಕ್ಷಾಂಶಗಳಂತೆ  ಗುರುತುಮಾಡಿರುವ ರೇಖೆಗಳು ಆಯಾ ಭಾವಗಳ ‘ಡಿಗ್ರಿ’ಯನ್ನು ಸೂಚಿಸುತ್ತವೆ. ಈ ಸ್ಥಾಯಿ ಭಾವಗಳು ಎಲ್ಲವೂ ಎಲ್ಲರಿಗೂ ಎಲ್ಲ ಕಾಲದಲ್ಲೂ ಸಮಾನ ಎಂದಲ್ಲ. ಎಂದರೆ ಭಾವಲೋಕವು ಸಮತಲ ಪ್ರಾಂತ್ಯವಲ್ಲ; ಅದೊಂದು ಶ್ರೇಣಿ. ಈ ಭಾವಗಳು ಕವಿ ಅನುಭವದ ರೇಖೆಯನ್ನು ಮುಟ್ಟಿದೊಡನೆಯೇ ರಸತ್ವಕ್ಕೆ ತಿರುಗುತ್ತವೆ. ಹಾಗೆ ತಿರುಗಿ ಕೇವಲ ಆ ರಸದತ್ತ ಹೋಗುತ್ತವೆ. A-B ರೇಖೆಯ ಒಂದು ಮುಖ ಭಾವ; ಮತ್ತೊಂದು ಮುಖ ರಸ. ರತಿರೇಖೆ A-B ರೇಖೆಯನ್ನು ಮುಟ್ಟಿ ಪರಿವರ್ತಿತವಾಗಿ ರಸಲೋಕದಲ್ಲಿ ಶೃಂಗಾರವಾಗಿ ಬೆಳೆದು ಕೇವಲ (ಶೃಂಗಾರ ಎಂದರೆ ಇಲ್ಲಿ ಕೇವಲ ರಸ) ರಸದಲ್ಲಿ ಪರ್ಯವಸಾನವಾಗುತ್ತದೆ. ಅಂತೆಯೇ ಉಳಿದ ಭಾವಗಳೂ. ಈ ಭಾವಗಳನ್ನು ರಸವನ್ನಾಗಿ ಮಾಡುವುದು ಕವಿಯ ಸಾಮರ್ಥ್ಯವನ್ನು ಅವಲಂಬಿಸಿರುವಂತೆಯೇ, ಈ ರಸಲೋಕದಲ್ಲಿ ಸೌಂದರ್ಯಾನುಭವವನ್ನು ಪಡೆಯುವ ಸಾಮರ್ಥ್ಯವು ಸಹೃದಯನ ಶಕ್ತಿ ಸಂಸ್ಕಾರಗಳನ್ನು ಅವಲಂಬಿಸಿದೆ.”[6]

ಈ ಕಲಾಲೋಕ ಭವದಿಂದ ಬೇರೆಯಾದದ್ದು; ಭವದ ಆವೇಗವನ್ನು ಶಮನಗೊಳಿಸಿ ರಸದ ನಿಲುವಿಗೆ ಏರಿಸಿದ್ದು. ಈ ಕಾರಣದಿಂದ ಕಲಾನುಭವ ಲೋಕಾನುಭವದಿಂದ ಅನ್ಯವಾದುದು ಮತ್ತು ವಿಶಿಷ್ಟವಾದದ್ದು. ಆದುದರಿಂದ ಕಲಾಕೃತಿ, ಲೋಕ ವಸ್ತುಗಳು ಬಹು ಜನರ ಭಾಗಕ್ಕೆ ನೀಡದಿದ್ದ ಒಂದು ಅನುಪಮವಾದ ಆನಂದವನ್ನು ನೀಡುತ್ತವೆ. ಭಾರತೀಯ ಆಲಂಕಾರಿಕರು ಕಲಾಕೃತಿಯ ಆಸ್ವಾದದಿಂದ ಒದಗುವ ಈ ಅನುಭವವನ್ನು ಲೋಕೋತ್ತರ, ಲೋಕಾತಿಶಯ, ಲೋಕಾತಿಕ್ರಾಂತ ಎಂದು ಕರೆದು ಅದರ ವಿಶಿಷ್ಟತೆಯನ್ನು ಸಾರಿದ್ದಾರೆ. ರಸಾನುಭವ ಲೋಕಾತಿಶಯ, ಲೋಕೋತ್ತರ ಎಂದರೆ ಲೋಕದೂರವಾಗಲೀ ಲೋಕಭಿನ್ನವಾಗಲೀ ಅಲ್ಲ; ಆದರೆ ಅದು ಲೋಕಾನುಭವದಿಂದ ವಿಶೇಷವಾದುದು ಎಂದು ಅರ್ಥ. ಪಾಶ್ಚಾತ್ಯರಲ್ಲಿ ಬಹುಮಂದಿ ಇದನ್ನು ಒಪ್ಪಿಕೊಂಡರೂ, ಲೋಕದ ವಸ್ತುವಿನಿಂದ ನಾವು ಪಡೆಯುವ ಅನುಭವಕ್ಕೂ ಕಲಾಕೃತಿಯಿಂದ ಪಡೆಯುವ ಅನುಭವಕ್ಕೂ ಅಷ್ಟೇನೂ ವ್ಯತ್ಯಾಸವಿಲ್ಲವೆಂದೂ ಈ ಎರಡು ರೀತಿಯ ಸುಖಗಳು ಬೇರೆ ಬೇರೆ ಎನ್ನಲು ಮನಸ್‌ಶಾಸ್ತ್ರದ ಆಧಾರವಿಲ್ಲವೆಂದೂ ಹಲವರು ವಾದಿಸುತ್ತಾರೆ. ಕಾಲಿಂಗ್‌ವುಡ್ ಎಂಬ ವಿದ್ವಾಂಸನು “ನಾವು ಪ್ರಕೃತಿಯಲ್ಲಿ ಸಾಮಾನ್ಯವಾಗಿ ಎಷ್ಟೋ ವಸ್ತುಗಳನ್ನು ಸುಂದರವೆನ್ನುತ್ತೇವಾದರೂ, ಹಾಗೆನ್ನಲು ಕಾರಣವಾದ ಅನುಭವಕ್ಕೂ, ಸೌಂದರ್ಯಾನುಭವಕ್ಕೂ ಏನೇನೂ ಸಂಬಂಧವಿಲ್ಲ”[7] ‘ಎಂದು ಅಭಿಪ್ರಾಯಪಡುತ್ತಾನೆ.[8] ಐ.ಎ. ರಿಚರ್ಡ್ಸ್ ಅವರು ‘ಸೌಂದರ್ಯಾನುಭವ’ ಎಂಬ ಪ್ರತ್ಯೇಕವಾದ ಸ್ಥಿತಿ ಇಲ್ಲ ಎನ್ನುವುದನ್ನು ಪ್ರತಿಪಾದಿಸುತ್ತಾ, ನಾವು ಯಾವುದನ್ನು ಸೌಂದರ್ಯಾನುಭವ ಎನ್ನುತ್ತೇವೊ ಅದಕ್ಕೂ, ಲೋಕದ ಇನ್ನೂ ಹಲವಾರು ಅನುಭವಗಳಿಗೂ ಹೆಚ್ಚು ವ್ಯತ್ಯಾಸವೇನೂ ಇಲ್ಲ; ಸಾಮಾನ್ಯ ಅನುಭವಗಳನ್ನೆ ಒಂದು ರೀತಿಯ ಸುಸಂಸ್ಕೃತ ಬಂಧದಲ್ಲಿ ಕಲೆಯಲ್ಲಿ ಕಾಣುತ್ತೇವೆಯೇ ಹೊರತು ಕಲಾ ಅನುಭವ ಲೋಕಾನುಭವದಿಂದ ಹೊಸತೂ ಅಲ್ಲ: ಭಿನ್ನವೂ ಅಲ್ಲ. ಒಂದು ಚಿತ್ರವನ್ನು ನೋಡುವಾಗ, ಒಂದು ಕಾವ್ಯವನ್ನು ಓದುವಾಗ ಅಥವಾ ಕೇಳುವಾಗ ಆಗುವ ಅನುಭವ, ಚಿತ್ರಶಾಲೆಯ ದಾರಿಯಲ್ಲಿ ಮತ್ತೇನನ್ನೋ ಮಾಡುವಾಗ, ಅಥವಾ ಉಡುಪು ಹಾಕಿಕೊಳ್ಳುವಾಗ ಆಗುವ ಅನುಭವದಿಂದ ಬೇರೆಯಾದುದೇನೂ ಅಲ್ಲ. ಒಂದು ಅನುಭವ ಮತ್ತೊಂದಕ್ಕಿಂತ ಜಟಿಲವಾಗಿರಬಹುದು. ಆದರೆ ನಮ್ಮ ಮಾನಸಿಕ ಕ್ರಿಯೆ ಮಾತ್ರ ಪ್ರಧಾನವಾಗಿ ಬೇರೆಯಾದದ್ದೇನೂ ಅಲ್ಲ[9] – ಎಂದು ವಾದಿಸುತ್ತಾರೆ.

ಮನಸ್‌ಶಾಸ್ತ್ರದ ಪ್ರಯೋಗ ಪರೀಕ್ಷೆಗಳಿಂದ ನಿರ್ದಿಷ್ಟವಾಗಿ ಇತ್ಯರ್ಥವಾಗಬೇಕಾಗಿರುವ ಈ ತರ್ಕವನ್ನು ಬದಿಗಿರಿಸಿ ನಮ್ಮ ನಮ್ಮ ಅನುಭವವನ್ನೆ ಒಳಹೊಕ್ಕು ನೋಡಿದರೆ ಕಲಾ ಅನುಭವ ವಾಸ್ತವವಾಗಿಯೂ ಲೋಕಾನುಭವದಿಂದ ಒಂದು ರೀತಿಯಲ್ಲಿ ಅನ್ಯವಾದುದೂ ವಿಶಿಷ್ಟವಾದುದೂ ಎನ್ನುವುದು ನಿರ್ವಿವಾದ. ಲೋಕದ ಉಳಿದ ವ್ಯಾಪಾರಗಳಲ್ಲೂ ನಮ್ಮಲ್ಲಿ ಕಿಂಚಿತ್ತು ಸೌಂದರ್ಯಾನುಭವದೃಷ್ಟಿ ನಾವು ಗಮನಿಸುವ ವಸ್ತುಗಳ ಬಗ್ಗೆ ಪ್ರವರ್ತಿಸುವುದಾದರೂ, ಅದು ಕಲಾ ಅನುಭವದಲ್ಲಿ ತೀವ್ರವಾಗಿ, ಬಹುಮಟ್ಟಿಗೆ ಶುದ್ಧವಾಗಿ ಅನುಭವಕ್ಕೆ ಬರುತ್ತದೆ. ಹಾಗೆಂದ ಮಾತ್ರಕ್ಕೆ ಲೋಕದ ಉಳಿದೆಲ್ಲ ಸಂದರ್ಭಗಳ ಅನುಭವವೂ ಕಲಾ ಅನುಭವವೂ ಒಂದೇ ಎನ್ನಲಾಗುವುದಿಲ್ಲ. ರಿಚರ್ಡ್ಸ್ ಹೇಳುವಂತೆ ಈ ಎರಡು ಅನುಭವಗಳಿಗೂ ವ್ಯತ್ಯಾಸವಿಲ್ಲದೆ ಹೋಗುವುದು, ಎಲ್ಲವನ್ನೂ ಸೌಂದರ್ಯಾನುಭವವನ್ನಾಗಿಯೇ ಅನುಭವಿಸುವ ರಸಸಿದ್ಧರಿಗೆ ಮಾತ್ರ! ಆದರೆ ಎಲ್ಲರೂ ರಸಸಿದ್ಧರಲ್ಲವಲ್ಲ! ಇದರ ಮೇಲೆ ಸೌಂದರ್ಯಾನುಭವದಿಂದಾಗುವ ಸುಖ ಲೋಕದಲ್ಲಿ ಎಲ್ಲರೂ ಎಲ್ಲ ವಸ್ತುಗಳಿಗೂ ದೈಹಿಕ ಮಟ್ಟದಲ್ಲಿ ತೋರುವ ಕೇವಲ ಪ್ರತಿಕ್ರಿಯೆಗಳಿಂದಾಗುವ ಸಂವೇದನೆಗಳಿಂದ ಬೇರೆಯಾದುದು. ಸೌಂದರ್ಯಾನುಭವದ ಸ್ವರೂಪವನ್ನು ಕುರಿತು ಸುಪ್ರಸಿದ್ಧ ಮನೋವಿಜ್ಞಾನಿ ಸಿ.ಜೆ.ಯೂಂಗ್ ಹೇಳುವ ಈ ಮಾತುಗಳು ಗಮನಾರ್ಹವಾಗಿವೆ; “ಒಂದು ಪ್ರಚೋದನೆಗೆ ಪ್ರತಿಕ್ರಿಯೆಯನ್ನು ತೋರುವ ದೈಹಿಕ ಕ್ರಿಯೆಯನ್ನು ಕಾರ್ಯಕಾರಣ ಸಂಬಂಧದಿಂದ ವಿವರಿಸಬಹುದು. ಆದರೆ ಕಲಾ ಅನುಭವ ತದ್ವಿರುದ್ಧವಾದುದರಿಂದ ಅದು ವಿಚಾರಕ್ಕೆ ಅತೀತವಾದುದು. ನಾವು ಅದರ ಕಾರ್ಯವನ್ನು ವಿವರಿಸಬಹುದೇ ಹೊರತು ಅದರ ಸ್ವರೂಪವನ್ನಲ್ಲ. ಅದನ್ನು ಮಸುಕು ಮಸುಕಾಗಿ ಗುರುತಿಸಬಹುದೇ ಹೊರತು ಸ್ಪಷ್ಟವಾಗಿ  ಗ್ರಹಿಸಲು ಸಾಧ್ಯವಿಲ್ಲ”[10]


[1] ಪು.ತಿ.ನ. ರಸಸರಸ್ವತಿ : ಪು. ೩೭.

[2] Wordsworth : The Daffodils.

[3] Wordsworth: Lines Composed above Tintern Abbey: 23-30 and 47-49.

[4] ತೈತ್ತಿರೀಯ : ಎಂಟನೆಯ ಅನುವಾಕ (ಬ್ರಹ್ಮಾನಂದವಲ್ಲೀ)

[5] ಶ್ರೀ ಪು.ತಿ.ನ. ಅವರೊಂದಿಗೆ ತಾ.೧೦.೨.೫೭ ರಂದು ಈ ವಿಚಾರವಾಗಿ ಚರ್ಚಿಸಿದಾಗ ಅವರಿಂದ ಮೂಡಿದ ಅಭಿಪ್ರಾಯವನ್ನು ಹಿಡಿದಿಟ್ಟು ಇಲ್ಲಿ ಬಳಸಿಕೊಳ್ಳಲಾಗಿದೆ.

[6] ಶ್ರೀ ಕುವೆಂಪು ಅವರ ಎಂ.ಎ. ತರಗತಿಯ ಪಾಠದ ಟಿಪ್ಪಣಿಯಿಂದ.

[7] Colling Wood: Principles of Art. p.40

[8] ಪ್ರಕೃತಿವ್ಯಾಪಾರ ಮತ್ತು ಸೌಂದರ್ಯ ಇವುಗಳ ಅನುಭವದಲ್ಲಿ ಇದು ಸರಿಯಾಗಬಹುದು – ಕೆಲವು ಚೇತನಗಳಿಗೆ ಅನ್ವಯಿಸಿದರೆ ಮಾತ್ರ

[9] I.A. Richards: Principles of Literary Criticism : p. 16.

[10] C.J.Jung : Modern man in search of a Soul p. 177.