Categories
ವಿಜ್ಞಾನ

ಹವಾಗುಣ ಬದಲಾವಣೆ

ಏಳನೆಯ ತರಗತಿಯಲ್ಲಿ ಓದುತ್ತಿರುವ ಲಖನೌ ಹುಡುಗಿ ಯುಗರತ್ನಾ ಶ್ರೀವಾಸ್ತವ ಮೊನ್ನೆ (ಸೆಪ್ಟೆಂಬರ್ ೨೨,೨೦೦೯) ವಿಶ್ವಸಂಸ್ಥೆಯ ಸಾರ್ವತ್ರಿಕ ಸಮಾವೇಶದಲ್ಲಿ ಭಾಷಣ ಮಾಡು­ತ್ತಿರುವ ಸಂದರ್ಭದಲ್ಲಿ ಜಗತ್ತಿನ ಏಳುನೂರು ತಾಣಗಳಲ್ಲಿ ಏಕಕಾಲಕ್ಕೆ ಒಂದು ಹೊಸ ಸಿನಿಮಾ ಪ್ರದರ್ಶಿತವಾಗುತ್ತಿತ್ತು. ಸಿನೆಮಾದ ಹೆಸರು ‘ಏಜ್ ಆಫ್ ಸ್ಟುಪಿಡ್’ (ದಡ್ಡರ ಯುಗ).
ಬೆಂಗಳೂರಿನಲ್ಲೂ ಮೂರು ಕಡೆ ಪ್ರದರ್ಶನ ಕಂಡ ಈ ಚಿತ್ರ ಮತ್ತು ನ್ಯೂಯಾರ್ಕ್‌ನಲ್ಲಿ ಯುಗ­ರತ್ನಾ ಮಾಡಿದ ಭಾಷಣ ಎರಡರದ್ದೂ ಸಂದೇಶ ಒಂದೇ:
ಇಂದಿನ ಜನ ನಾಯಕರು ತಂತಮ್ಮ ದೇಶಗಳನ್ನು ಸರಿಯಾಗಿ ಮುನ್ನಡೆಸದಿದ್ದರೆ ಹವಾಗುಣ ಬದಲಾವಣೆ ತೀವ್ರವಾಗಲಿದೆ; ಭವಿಷ್ಯ ತೀರಾ ಕರಾಳವಾಗಲಿದೆ ಎಂದು. ‘ಸ್ಟುಪಿಡ್’ ಚಿತ್ರದಲ್ಲಿ ಇಂದಿಗೆ 45 ವರ್ಷಗಳ ನಂತರದ ಭೂಮಿಯ ಸಂದರ್ಭವನ್ನು ತೋರಿಸ­ಲಾಗಿದೆ.
ಕ್ರಿ.ಶ. ೨೦೫೫ರಲ್ಲಿ ಬಿಸಿ ಪ್ರಳಯದ ನಂತರವೂ ಬದುಕುಳಿದ ಏಕಾಂಗಿ ವೃದ್ಧ­ನೊಬ್ಬನ ಜೀವನ ಚಿತ್ರಣ ಅದರಲ್ಲಿದೆ. ಆದರೆ ಇಡೀ ಚಿತ್ರ ಅದೊಂದೇ ವರ್ಷದ್ದಲ್ಲ. 2008­ರಿಂದ ಹಿಡಿದು ಮುಂದಿನ ನಾಲ್ಕು ದಶಕಗಳ ಬದುಕಿನ ಚಿತ್ರಣವನ್ನು ಕಲ್ಪನೆ ಮತ್ತು ವಾಸ್ತವ­ಗಳ ದೃಶ್ಯಾವಳಿಗಳಲ್ಲಿ ತೋರಿಸಲಾಗಿದೆ.
ಲಂಡನ್ ನಗರ ಪದೇ ಪದೇ ಜಲಪ್ರಳಯಕ್ಕೆ ತುತ್ತಾಗಿ ಖಾಲಿಯಾಗಿದೆ. ಸಿಡ್ನಿಯ ಖ್ಯಾತ ಅಪೇರಾ ಹೌಸ್ ಕಟ್ಟಡದ ಹಿಂದೆ ಜ್ವಾಲೆಗೆ ಭುಗಿಲೇಳುತ್ತಿದೆ; ಇಡೀ ಆಸ್ಟ್ರೇಲಿಯಾ ಖಂಡವೇ ವಿಶಾಲ ಕರಕಲು ಭೂಮಿಯಾಗಿದೆ. ಅಮೆರಿಕದ ಜೂಜುಖೋರರ ನಗರ ಲಾಸ್ ವೆಗಾಸ್ ಇಡಿಯಾಗಿ ಮರುಭೂಮಿಯ ಮರಳು ರಾಶಿ­ಯಲ್ಲಿ ಹೂತಿದೆ.
ಬರದ ಬೇಗೆಯಲ್ಲಿ ನಿರ್ಜನ­ವಾದ ಭರತಖಂಡ, ತಾಜ್ ಮಹಲ್ ಸಮೀಪ ಕಾಗೆಗಳು ಕುಕ್ಕುತ್ತಿರುವ ಮಾನವ ಮಾಂಸಖಂಡ; ಉತ್ತರ ಧ್ರುವದ ತುಸು ತಂಪಿನಲ್ಲಿ ನಿರಾಶ್ರಿತರ ನರಕಸದೃಶ ಬದುಕು ( ‘ಏಜಾಫ್ ಸ್ಟುಪಿಡ್’ ಜಾಲತಾಣದಲ್ಲಿ ಈ ಚಿತ್ರವನ್ನು ಉಚಿತವಾಗಿ ನೋಡಬಹುದು).
ಕಟ್ಟುಕತೆ ನಿಜ. ಆದರೆ ಇಂದಿನ ಸಮಾಜ ಹೀಗೆಯೇ ಸಂಪನ್ಮೂಲಗಳ ದುಂದುವೆಚ್ಚದಲ್ಲಿ ತಲ್ಲೆನ­ವಾಗಿದ್ದರೆ, ‘ಸ್ಟುಪಿಡ್’ನಲ್ಲಿ ಕಾಣುವ ಚಿತ್ರ­ಣವೇ ವಾಸ್ತವವೂ ಆಗಲು ಸಾಧ್ಯವಿದೆ. ವಿಶ್ವಸಂಸ್ಥೆಯಿಂದ ನೇಮಕಗೊಂಡ ಐಪಿಸಿಸಿ ತಜ್ಞರ ಅಂದಾಜಿನ ಪ್ರಕಾರ, ಭೂಮಿಯ ಸರಾ­ಸರಿ ಉಷ್ಣತೆ ನಾಲ್ಕು ಡಿಗ್ರಿ ಸೆಲ್ಸಿಯಸ್ ಏರಿದರೆ ಇವೆಲ್ಲ ಕರಾಳ ಭವಿಷ್ಯವೂ ನಿಜವಾಗುತ್ತದೆ.
ಇಂದಿನ ರಾಜಕೀಯ ಧುರೀಣರು ನಿಜಕ್ಕೂ ಮುತ್ಸದ್ದಿಗಳಾಗಿ ಇಡೀ ಮಾನವಕುಲದ ಪ್ರಗ­ತಿಯ ದಿಶೆಯನ್ನು ಬದಲಿಸದಿದ್ದರೆ ನ್ಯೂಯಾರ್ಕ್­ನಲ್ಲಿರುವ ಸ್ವಾತಂತ್ರ್ಯದೇವಿಯ ಪ್ರತಿಮೆಯ ತೋಳಿನ ತುದಿಯಲ್ಲಿರುವ ದೊಂದಿ ನೀರಲ್ಲಿ ಮುಳುಗಿ ನಂದಿಹೋಗುತ್ತದೆ.
ಮುತ್ಸದ್ದಿಗಳು ಎಲ್ಲಿದ್ದಾರೆ? ಯುಗರತ್ನಾ ಭಾಷಣ ಮಾಡಿದ ಹಾಗೆಯೇ ವಿಶ್ವಸಂಸ್ಥೆಯ ಸಾರ್ವತ್ರಿಕ ಸಮಾವೇಶದಲ್ಲಿ ಹಿಂದೆ 1992ರಲ್ಲಿ ಕೆನಡಾದ ಸೆವೆರಿನ್ ಸುಝುಕಿ ಎಂಬ ಇನ್ನೊಬ್ಬ ಹುಡುಗಿ ಅಂದಿನ ಧುರೀಣರಿಗೆ ಕಳಕಳಿಯ ಮನವಿ ಮಾಡಿದ್ದಳು.
ಜೀವಸಂಕುಲದ ಸತತ ನಾಶ, ಮರುಭೂಮಿ ವಿಸ್ತರಣೆ, ಜಲ ಮಾಲಿನ್ಯ, ಶಸ್ತ್ರಾಸ್ತ್ರ ಸಂಗ್ರಹಣೆ ಮುಂತಾದ ಅನಿಷ್ಟಗಳನ್ನು ಪಟ್ಟಿಮಾಡಿ, ‘ಹಿರಿಯರೇ, ಇವುಗಳನ್ನೆಲ್ಲ ಸರಿ­ಪಡಿ­ಸಲು ನಿಮಗೆ ಸಾಧ್ಯವಿಲ್ಲ ಎಂದಾದರೆ, ಇಂಥ ಅನಿಷ್ಟಗಳ ಸರಮಾಲೆ ಇನ್ನಷ್ಟು ಬೆಳೆಯದಂತೆ ತಡೆಯಲು ಸಾಧ್ಯವೇ?’ ಎಂದು ಕೇಳಿದ್ದಳು. ಅಂದಿನ ಎಲ್ಲ ಸಂಕಟಗಳೂ ಇಂದು ಇನ್ನಷ್ಟು ಉಲ್ಬಣಗೊಂಡಿವೆ. ಸಂಕಟಗಳ ಜಾಗತೀಕರಣ ವಾಗಿದೆ.
ಸಮಸ್ಯೆಗಳನ್ನು ಕಡಿಮೆ ಮಾಡಲೆಂದು ವಿಜ್ಞಾನಿ­ಗಳು, ತಂತ್ರವಿದ್ಯಾ ಪರಿಣತರು ಹಾಗೂ ಯೋಜನಾ ತಜ್ಞರು ರೂಪಿಸುವ ಎಲ್ಲ ಉಪಾಯ­ಗಳೂ ರಾಜಕೀಯ ಹಸ್ತಕ್ಷೇಪ­ದಿಂದಾಗಿ ಇನ್ನಷ್ಟು ಸಮಸ್ಯೆಗಳಿಗೆ ದಾರಿಮಾಡಿ­ಕೊಡು­ತ್ತವೆ.
ಇದಕ್ಕೆ ತೀರ ಸರಳ ಉದಾಹರಣೆ ಎಂದರೆ ಬೋರ್‌ವೆಲ್ ಯಂತ್ರಗಳು. ಕುಡಿ­ಯುವ ನೀರಿನ ಸಮಸ್ಯೆಯ ಪರಿಹಾರಕ್ಕೆ ಸಿಕ್ಕ ಅತ್ಯುತ್ತಮ ತಾಂತ್ರಿಕ ಉಪಾಯ ಇದು ಹೌದು. ಆದರೆ ಅದರ ದುರ್ಬಳಕೆ ಅತಿಯಾಗಿದ್ದರಿಂದಲೇ ನೆಲದಾಳಕ್ಕೂ ಮರುಭೂಮಿ ವಿಸ್ತರಿಸಿದೆ.
ರಾಜ­ಸ್ತಾನದ ನಂತರದ ಅತಿ ದೊಡ್ಡ ‘ಮರುಭೂಮಿ ಸದೃಶ’ ಭೂಕ್ಷೇತ್ರವಿರುವ ರಾಜ್ಯ ನಮ್ಮದೆಂಬ ಕುಖ್ಯಾತಿ ಬಂದಿದೆ. ಇಂಥ ಬೋರ್‌ವೆಲ್‌ಗಳಿಗೆ ನಿಯಂತ್ರಣ ಹೇರಲೆಂದು ಮಸೂದೆ ತರುವ ಯತ್ನಗಳೆಲ್ಲ ರಾಜಕೀಯ ಹಿತಾಸಕ್ತಿಯಿಂದಾಗಿ ವಿಫಲವಾಗಿವೆ.
ಇದೀಗ ಉಡಾವಣೆಗೊಂಡ ‘ಓಷನ್­ಸ್ಯಾಟ್’ ಉದಾಹರಣೆಯನ್ನೇ ನೋಡೋಣ. ಕಳೆದ ಮೂವತ್ತು ವರ್ಷಗಳಿಂದಲೂ ಇದೇ ಮಾದರಿಯ ಉಪಗ್ರಹಗಳು ಜಗತ್ತಿನ ವಿಶಾಲ ಸಾಗರಗಳ ಮೇಲೆ ಕಣ್ಣಿಟ್ಟಿವೆ.
ಅಮೆರಿಕದ ‘ನೋವಾ’ ಸರಣಿ ಉಪಗ್ರಹಗಳು ರವಾನಿಸುವ ಮಾಹಿತಿ ಎಲ್ಲರಿಗೂ ಲಭ್ಯ ಇವೆ. ಹವಾಮಾನ ಮುನ್ಸೂಚನೆಯ ಕುರಿತಂತೆ ದಿನವೂ ನಮ್ಮ ಟಿವಿಯಲ್ಲಿ ಕಾಣುವ ನಕ್ಷೆಗಳು ಚಿತ್ರಗಳೆಲ್ಲ ‘ನೋವಾ’ ಉಪಗ್ರಹಗಳಿಂದ ಬಂದುದೇ ಆಗಿವೆ.
ಜತೆಗೆ ಯಾವ ಸಮುದ್ರದ ಯಾವ ಭಾಗದಲ್ಲಿ ಉಷ್ಣತೆ ತುಸು ಹೆಚ್ಚಾಗಿದೆ, ಹಸಿರು ಪಾಚಿಗಳು ಯಾವ ಭಾಗದಲ್ಲಿ ಹೆಚ್ಚಾಗಿ ಸಾಂದ್ರವಾಗಿವೆ ಎಂಬುದರ ವರದಿ ಕೂಡ ಅಲ್ಲಿಂದಲೇ ಸಿಗುತ್ತದೆ. ಅದನ್ನು ಆಧರಿಸಿ, ಯಾವ ದಿಕ್ಕಿನಲ್ಲಿ ಎಷ್ಟು ದೂರದಲ್ಲಿ ಮೀನುಗಳು ಒಟ್ಟಾಗಿ ಸಂಚರಿಸುತ್ತಿವೆ ಎಂಬುದನ್ನು ಕೂಡ ಹೇಳಬಹುದು.
ಹೈದರಾ­ಬಾದ್‌ನಲ್ಲಿರುವ ‘ಸಾಗರ ಮಾಹಿತಿ ಕೇಂದ್ರ’ (ಇನ್­ಕೊಯಿಸ್) ಹೆಸರಿನ ಸರ್ಕಾರಿ ಸ್ವಾಮ್ಯದ ಸಂಸ್ಥೆ ‘ನೋವಾ’ ನೆರವಿನಿಂದ ವಾರಕ್ಕೆ ಮೂರು ಬಾರಿ ಮೀನು ದಟ್ಟಣಿಸಿರುವ ಸ್ಥಳಗಳನ್ನು ಗುರುತಿಸಿ ದೇಶದ ನಾನಾ ಬಂದರುಗಳಿಗೆ ಮಾಹಿತಿ ನೀಡುತ್ತದೆ.
ದೋಣಿಯಲ್ಲಿ ಕೂತು ಹತ್ತಾರು ಕಿಮೀ ದೂರದವರೆಗೆ ಅಂಡಲೆಯುತ್ತ ಅದೆಷ್ಟೊ ಬಾರಿ ವ್ಯರ್ಥ ಸುತ್ತಾಡುವ ಮೀನು­ಗಾರ­ರಿಗೆ ಇದರಿಂದ ತುಂಬ ಅನುಕೂಲವಾಗಿದೆ. ಇಂಥದೇ ಸ್ಥಳದಲ್ಲಿ ಮೀನುಗಳಿವೆ ಎಂದು ಗೊತ್ತಾಗಿ ನೇರವಾಗಿ ಅಲ್ಲಿಗೆ ಧಾವಿಸುತ್ತಾರೆ. ಸಮಯ ಹಾಗೂ ಶಕ್ತಿಯ ಉಳಿತಾಯವಾಗಿ ‘ನೀಲಕ್ರಾಂತಿ’ ಯಶಸ್ವಿಯಾಗುತ್ತದೆ.
ಈಗ ಆಗಿದ್ದೇನೆಂದರೆ, ಸಾಮಾನ್ಯ ಮೀನು­ಗಾರ­ರಿಗೆ ಈ ಮಾಹಿತಿ ಸಿಗುವ ಮೊದಲೇ ಯಾಂತ್ರೀಕೃತ ಬೃಹತ್ ಹಡಗುಗಳು ಅಲ್ಲಿಗೆ ಧಾವಿಸುತ್ತವೆ. ಬೇಡಿಕೆ ಇರಲಿ ಬಿಡಲಿ, ಭಕ್ಷ್ಯ­ಯೋಗ್ಯ ಇರಲಿ ಬಿಡಲಿ, ವಿಶಾಲ ಬಲೆಗಳನ್ನು ಬೀಸಿ ಏಕಕಾಲಕ್ಕೆ ಹತ್ತಾರು ಟನ್‌ಗಟ್ಟಲೆ ಮೀನುಗಳನ್ನು ಹಿಡಿದು ತರುತ್ತವೆ.
ದುರ್ಬಲ ಮೀನುಗಾರರು ತಮ್ಮ ಸಾಂಪ್ರದಾಯಿಕ ಜ್ಞಾನದ (ಅಂದರೆ ಪಕ್ಷಿಗಳ ಹಾರಾಟ, ನೀರಿನ ಗುಳ್ಳೆ, ಬದಲಾಗುವ ಬಣ್ಣ, ಗಾಳಿಯ ವಾಸನೆ) ಜಾಡು ಹಿಡಿದು ಅತ್ತ ಹೋದರೆ ಅಲ್ಲಿ ಎಲ್ಲವೂ ಆಗಲೇ ಖಾಲಿ. ಯಾಂತ್ರಿಕ ಹಡಗುಗಳ ಇಂಥ ಅಂದಾ­ದುಂದಿ ಕಬಳಿಕೆಯಿಂದಾಗಿ ಇಂದು ಜಗತ್ತಿನ ಜಲಜೀವ ಭಂಡಾರವೇ ಖಾಲಿಯಾಗುತ್ತವೆ.
ನಿನ್ನೆ ಹಾರಿಬಿಟ್ಟ ಉಪಗ್ರಹದಿಂದ ನಮ್ಮ ಬಾಹ್ಯಾಕಾಶ ತಂತ್ರಜ್ಞರ ಆತ್ಮವಿಶ್ವಾಸ ಹೆಚ್ಚಿದೆ; ಪಿಎಸ್‌ಎಲ್‌ವಿ ರಾಕೆಟ್‌ಗಳ ವಿಶ್ವಾಸಾರ್ಹತೆ ಇನ್ನಷ್ಟು ಹೆಚ್ಚಿದೆ.
ಬೇರೆ ರಾಷ್ಟ್ರಗಳು ತುಸು ಅಗ್ಗದ ದರದಲ್ಲಿ ನಮ್ಮ ರಾಕೆಟ್ ಮೇಲೆಯೇ ತಮ್ಮ ಉಪಗ್ರಹಗಳ ಹಾರಿಬಿಡಬಹುದಾದ ಅವಕಾಶ ಹೆಚ್ಚಿದೆ. ಎಲ್ಲಕ್ಕಿಂತ ಮುಖ್ಯ ಎಂದರೆ ಮುಂದೆಂದಾದರೂ ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳು ಉಪಗ್ರಹ ಚಿತ್ರಣಗಳನ್ನು ನಮಗೆ ಕೊಡಲು ನಿರಾಕರಿಸಿದರೆ ನಾವು ಕಂಗಾಲಾಗ­ಬೇಕಾಗಿಲ್ಲ. ಸ್ವಾವಲಂಬನೆ ನಮ್ಮದಾಗುತ್ತದೆ.
‘ಓಷನ್‌ಸ್ಯಾಟ್-2’ ನೆರವಿನಿಂದ ನಾವೂ ಮೀನುಗುಂಪುಗಳನ್ನು ಪತ್ತೆಹಚ್ಚಲು ಸಾಧ್ಯ­ವಾಗುತ್ತದೆ. ಸುಂಟರಗಾಳಿಯ ಮುನ್ಸೂಚನೆ ಗೊತ್ತಾಗಬಹುದು. ಸಮುದ್ರ ಕೊರೆತ ಎಲ್ಲೆಲ್ಲಿ ಎಷ್ಟು ತೀವ್ರ ಆಗಲಿಕ್ಕಿದೆ, ಉಪ್ಪುನೀರು ಎಷ್ಟೆಷ್ಟು ದೂರಕ್ಕೆ ನುಗ್ಗುತ್ತಿದೆ ಎಂಬುದೂ ಗೊತ್ತಾಗ­ಬಹುದು.
ಅದನ್ನೇ ಆಧರಿಸಿ, ಕಡಲ ಕೊರೆತ ತಡೆಗಟ್ಟುವ ಇನ್ನಷ್ಟು ವ್ಯರ್ಥ ಯೋಜನೆಗಳು ಎಲ್ಲೋ ರೂಪುಗೊಳ್ಳುತ್ತವೆ; ಸಾರ್ವಜನಿಕ ಹಣದ ಅಪವ್ಯಯ ಹಾಗೂ ಮೌಲ್ಯಗಳ ಕುಸಿತ ಹೆಚ್ಚುತ್ತದೆ. ಅದನ್ನು ತಡೆಗಟ್ಟುವ ರಾಜಕೀಯ ಇಚ್ಛಾಶಕ್ತಿ ನಮ್ಮಲ್ಲಿ ಬೆಳೆದೀತೆ? ಎಸ್‌ಈಝಡ್­ಗಳು, ಕಡಲಂಚಿನ ರೆಸಾರ್ಟ್‌ಗಳು ಕಂಡಕಂಡಲ್ಲಿ ಆಳ ಬೋರ್‌ವೆಲ್ ಕೊರೆದು ಜಲಖಜಾನೆ­ಯನ್ನು ಖಾಲಿ ಮಾಡದಂತೆ ತಡೆಯಲು ಸಾಧ್ಯವೆ?
ಬೋರ್‌ವೆಲ್ ಮಾತು ಬಂದಾಗ ಸಹಜವಾಗಿ ನಾರ್ಮನ್ ಬೋರ್ಲಾಗ್ ನೆನಪೂ ಬರುತ್ತದೆ. ‘ಹಸಿರುಕ್ರಾಂತಿಯ ಜನಕ’ ಎಂದೇ ಖ್ಯಾತಿ ಹಾಗೂ ನೊಬೆಲ್ ಶಾಂತಿ ಪುರಸ್ಕಾರ ಪಡೆದು ಈಚೆಗೆ ಗತಿಸಿದ ಈ ಪುಣ್ಯಾತ್ಮನಿಂದಾಗಿ ಮೆಕ್ಸಿಕೊ, ಪಾಕಿಸ್ತಾನ ಮತ್ತು ಭಾರತದಲ್ಲಿ ಆಹಾರ ಸ್ವಾವ­ಲಂಬನೆ ಸಾಧ್ಯವಾಯಿತು ನಿಜ.
ಅಧಿಕ ಇಳು­ವರಿಯ ಜತೆಗೆ ಅಧಿಕ ನೀರು, ಅಧಿಕ ವಿದ್ಯುತ್ತು, ಅಧಿಕ ಪೆಟ್ರೋಲಿಯಂ, ಅಧಿಕ ಒಳಸುರಿ ಎಲ್ಲವು­ಗಳ ಮಹಾಕ್ರಾಂತಿಯೇ ನಡೆದು ಇಂದಿನ ಭೂಮಿಯ ಒಟ್ಟಾರೆ ಸಂಕಷ್ಟಗಳಿಗೆ ಆತನ ಕೊಡುಗೆಯೂ ಅಧಿಕ ಎಂತಲೂ ವಾದಿಸ­ಬಹುದು.
ಕೃಷಿ ವಿಸ್ತರಣೆಗೆಂದು ನಾಶವಾಗ­ಬಹುದಾಗಿದ್ದ ಲಕ್ಷಾಂತರ ಹೆಕ್ಟೇರ್ ಅರಣ್ಯ ತನ್ನಿಂದಾಗಿ ಉಳಿಯಿತೆಂದೂ ಹಸಿವೆಯಿಂದ ಸಾಯಬಹುದಾಗಿದ್ದ ಕೋಟ್ಯಂತರ ಜನರ ಬದುಕು ಭದ್ರವಾಯಿತೆಂದೂ ಆತ ಹೇಳಿದ್ದರಲ್ಲಿ ಸತ್ಯಾಂಶ ಇದೆಯಾದರೂ ಕೃಷಿಭೂಮಿಯಲ್ಲಿ ಸಾಂಪ್ರದಾಯಿಕ ತಳಿಗಳ ನಾಶ, ಮಣ್ಣುನೀರಿನ ಮಾಲಿನ್ಯ, ನೆಲದಾಳದ ಬರಗಾಲ ಎಲ್ಲಕ್ಕೂ ಈ ಕ್ರಾಂತಿಯೇ ಕಾರಣ ಎಂಬುದೂ ಅಷ್ಟೇ ನಿಜ. ಈಚೆಗೆ ಈತ ಕುಲಾಂತರಿ ತಳಿಗಳ ಪ್ರಚಾರಕನೂ ಆಗಿ, ಕಳೆನಾಶಕ ಕೆಮಿಕಲ್‌ಗಳ ಪ್ರಚಾರಕನಾಗಿ, ಐರೋಪ್ಯ ರಾಷ್ಟ್ರಗಳಲ್ಲಿ ಸಾಕಷ್ಟು ಜನರ ವಿರೋಧ ಕಟ್ಟಿಕೊಂಡಾಗಿತ್ತು ಕೂಡ.
‘ಕೈಯಾರೆ ಕಳೆ ಕೀಳುವುದೆಂದರೆ ತುಂಬ ಕಷ್ಟದ ಕೆಲಸ; ಬಡವರಿಗೂ ಟೊಂಕ ಇರುತ್ತದೆ ಕಣ್ರೀ!’ ಎಂದು ಬೋರ್ಲಾಗ್ ಕಳೆನಾಶಕ ಕೆಮಿಕಲ್ ತಯಾರಿ­ಸುವ ಕಂಪೆನಿಗಳ ವಕ್ತಾರನಂತೆ ಕಳೆದ ವರ್ಷ ಹೇಳಿದ್ದು ಅನೇಕರನ್ನು ಕೆರಳಿಸಿತ್ತು. ಕೃಷಿ ರಸಾ­ಯನಗಳ ಅತಿ ಬಳಕೆಯಿಂದಾಗಿಯೇ ಭಾರತ­ದಂಥ ದೇಶಗಳ ಕೃಷಿಕರು ನಾನಾ ಕಾಯಿಲೆ­ಗಳಿಂದ, ಖಿನ್ನತೆಯಿಂದ ಬಳಲುತ್ತ, ಆತ್ಮಹತ್ಯೆಗೆ ಶರಣಾಗುತ್ತಿರುವಾಗ, ಅಂಥ ಅನಾಹುತಗಳಿಗೆ ವಿಜ್ಞಾನ ತಂತ್ರಜ್ಞಾನ ಕಾರಣವೇ ಅಥವಾ ಧನದಾಹಿ ಕಂಪೆನಿಗಳು ಕಾರಣವೇ, ಅವುಗಳನ್ನು ಪೊರೆಯುವ ರಾಜಕಾರಣಿಗಳು ಕಾರಣವೇ ಎಂಬುದು ಸದಾ ಚರ್ಚಾಸ್ಪದ ವಿಷಯ ವಾಗಿಯೇ ಉಳಿಯುತ್ತದೆ.
ಹಸಿರು ಕ್ರಾಂತಿಯ ಎಲ್ಲಕ್ಕಿಂತ ದೊಡ್ಡ ಅನಾಹುತವನ್ನು ಈಗೀಗ ವಿಜ್ಞಾನಿಗಳು ಮನಗಾಣುತ್ತಿದ್ದಾರೆ. ಹೈಬ್ರಿಡ್ ತಳಿಗಳಲ್ಲಿ ಕಬ್ಬಿಣ, ಸತು, ಅಯೊಡಿನ್ ಮತ್ತು ಎ ಜೀವಸತ್ವ ತೀರಾ ಕಡಿಮೆ ಇರುತ್ತದೆ. ಅದನ್ನೇ ತಿಂದು ಬೆಳೆದ ಇಡೀ ಜನಾಂಗ ಹೊಟ್ಟೆ ತುಂಬಿದ್ದರೂ ‘ಅವಿತ ಹಸಿವೆ’ಯಿಂದಾಗಿ ಅನೇಕ ಅವ್ಯಕ್ತ ದೌರ್ಬಲ್ಯಗಳ ತವರಾಗುತ್ತದೆ.
ಆಹಾರ ಧಾನ್ಯಗಳಿಗಿಂತ ಹೆಚ್ಚಾಗಿ ಮಾಂಸ, ಮೊಟ್ಟೆ, ಮೀನು, ಹಣ್ಣುಹಂಪಲುಗಳನ್ನು ಸೇವಿಸುವ ಜಗತ್ತಿನ ಇತರ ಜನಾಂಗಕ್ಕೆ ಹೋಲಿಸಿದರೆ ಹೈಬ್ರಿಡ್ ಧಾನ್ಯಗಳನ್ನೇ ಹೆಚ್ಚಾಗಿ ಉಣ್ಣುವವವರಿಗೆ ಬೌದ್ಧಿಕ, ಭಾವನಾತ್ಮಕ ಹಾಗೂ ದೈಹಿಕ ಸೋಲುಗಳು ಪದೇ ಪದೇ ಎದುರಾಗುತ್ತವೆ.
ಸಮತೋಲ ಆಹಾರವೇ ದುರ್ಲಭವಾದಾಗ ನೊಬೆಲ್ ಪಾರಿತೋಷಕವೂ ಒಲಿಂಪಿಕ್ ಪದಕಗಳೂ ದುರ್ಲಭವಾಗುತ್ತವೆ.