ನನ್ನ ಗುರುಗಳಾಗಿದ್ದ ಕು.ಶಿ. ಹರಿದಾಸ ಭಟ್ಟರು ೧೯೮೫ರ ಆಗಸ್ಟ್ ೧೨ರಂದು ‘ಉದಯವಾಣಿ’ಯ ತನ್ನ ‘ಲೋಕಾಭಿರಾಮ’ ಅಂಕಣದಲ್ಲಿ ‘ಉಡುಪಿಯ ಅಕಬರ ಹಾಜಿ ಅಬ್ದುಲ್ಲಾ ಸಾಹೇಬರು’ ಎಂಬ ಲೇಖನ ಬರೆದರು. “ಇಂದು ರಚನಾತ್ಮಕ ಸಾಮಾಜಿಕ ಕರ್ತವ್ಯಗಳೆಂದು ನಾವು ಪಟ್ಟಿ ಮಾಡುವ ಹಲವಾರು ಕೆಲಸಗಳನ್ನು ವೈಯಕ್ತಿಕ ನೆಲೆಯಲ್ಲಿ ಮಾಡಿ, ಜನರ ನಾಲಗೆಯಲ್ಲಿ ತಮ್ಮ ಚಿರಂತನ ಸ್ಮಾರಕವನ್ನು ಕಟ್ಟಿ ಅಳಿದು ಹೋದ ಹಾಜಿ ಅಬ್ದುಲ್ಲಾ ಸಾಹೇಬರ ನೆನಪು ಉಡುಪಿಯ ಮಟ್ಟಿಗೆ ಮರೆಯಬಾರದ ಒಂದು ನೆನಪು ಆಗಿದೆ… ಅವರನ್ನು ಬಲ್ಲ ಮಂದಿ ಬದುಕಿರುವಾಗಲೇ ಅವರ ಜೀವನಚರಿತ್ರೆ ಒಂದು ರಚಿತವಾಗಬೇಕಾದ್ದು ಅಗತ್ಯ. ಅವರ ಜೀವನದ ಪುಟಗಳಲ್ಲಿ ಅಡಕಗೊಂಡಿರುವ ಧರ್ಮತತ್ವ, ಶಾಂತಿತತ್ವ, ಐಕ್ಯ ತತ್ವ, ದಾನ ಬುದ್ಧಿ ಒಂದಿಷ್ಟಾದರೂ ಇಂದಿನ ಧುರೀಣರನ್ನು ಸ್ಪರ್ಶಿಸಬೇಕು…” ಎಂಬ ಕು.ಶಿ. ಹರಿದಾಸ ಭಟ್ಟರ ಮಾತು ಹಾಜಿ ಅಬ್ದುಲ್ಲಾ ಅವರ ವ್ಯಕ್ತಿತ್ವದ ಕುರಿತು ನನ್ನಲ್ಲಿ ಕುತೂಹಲ ಮೂಡಿಸಿತು.

ನಾನು ಮತ್ತು, ನನ್ನ ಕವಿ ಮಿತ್ರ, ಕಾರ್ಪೊರೇಶನ್ ಬ್ಯಾಂಕ್ ಮುಖ್ಯ ಪ್ರಬಂಧಕ ಶ್ರೀ ಎಚ್. ಡುಂಡಿರಾಜರು ೧೯೯೫ರಲ್ಲಿ ಹಾಜಿ ಅಬ್ದುಲ್ಲಾ ಅವರ ಕುರಿತು ಮಾಹಿತಿ ಸಂಗ್ರಹಿಸಲು ಆರಂಭಿಸಿದೆವು. ಆಗ ಕಾರ್ಪೊರೇಶನ್ ಬ್ಯಾಂಕಿನ ಅಧ್ಯಕ್ಷರಾಗಿದ್ದ  ಶ್ರೀ ಕೆ. ರಾಮಮೂರ್ತಿ ಅವರು ನಾವು ಸಿದ್ಧಪಡಿಸುತ್ತಿದ್ದ ಗ್ರಂಥದ ಕುರಿತು ವಿಶೇಷ ಆಸಕ್ತಿ ವಹಿಸಿದರು. ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಉಡುಪಿ ಅಂಬಲಪಾಡಿಯ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಶ್ರೀ ನಿ. ಅಣ್ಣಾಜಿ ಬಲ್ಲಾಳ್, ಶ್ರೀ ಸಂತೋಷ ಕುಮಾರ್ ಗುಲ್ವಾಡಿ, ಶ್ರೀ ಯು.ಆರ್. ಜಯವಂತ ಉಡುಪಿ, ಶ್ರೀ ನಸೀಬ್ ಸಾಹೇಬ್ ಕುಂಜಿಬೆಟ್ಟು, ಶ್ರೀ ಎಸ್.ಪಿ. ನಾಯಕ್, ಉಡುಪಿ, ಶ್ರೀ ಅನುಪ್‌ರಾಮ್ ನಾನಾಲಾಲ್ ಪಾಂಡ್ಯಾ ಉಡುಪಿ (೧೯೨೨-೧೯೯೫) – ಇವರೆಲ್ಲ ಉಪಯುಕ್ತ ಮಾಹಿತಿಗಳನ್ನು ನೀಡಿದರು. ಪ್ರೊ. ಕು.ಶಿ. ಹರಿದಾಸ ಭಟ್ (೧೯೨೪-೨೦೦೦), ಮುಸ್ಲಿಮ್ಸ್ ಇನ್ ದಕ್ಷಿಣ ಕನ್ನಡ’ ಗ್ರಂಥದ ಲೇಖಕ ವಹಾಬ್ ದೊಡ್ಡಮನೆ, ಡಾ. ನವೀನಚಂದ್ರ ಕೃ. ತಿಂಗಳಾಯ – ಇವರೆಲ್ಲ ನಮಗೆ ಲೇಖನಗಳನ್ನು ನೀಡಿದರು. ಕು.ಶಿ. ಹರಿದಾಸ ಭಟ್ಟರು ನಮ್ಮನ್ನು ಅಗಲಿದ ಮೇಲೆ ೨೦೦೧ರಲ್ಲಿ ನಮ್ಮ ಹೊತ್ತಿಗೆ ‘ಹಾಜಿ ಅಬ್ದುಲ್ಲಾ ಸಾಹೇಬರು’ ಪ್ರಕಟವಾಯಿತು.

ಈಗ ಕಾರ್ಪೊರೇಶನ್ ಬ್ಯಾಂಕಿನ ಶತಮಾನೋತ್ಸವ ಸಂದರ್ಭದಲ್ಲಿ ಹಾಜಿ ಅಬ್ದುಲ್ಲಾ ಸಾಹೇಬರ ಜೀವನ ಚರಿತ್ರೆಯನ್ನು ಪರಿಷ್ಕರಿಸಿದ್ದೇನೆ. ಕರ್ನಾಟಕ ಸರಕಾರದ ವೈದ್ಯಕೀಯ ಶಿಕ್ಷಣ ಸಚಿವರಾಗಿರುವ ಡಾ|| ವಿ.ಎಸ್. ಆಚಾರ್ಯ, ಕಾರ್ಪೊರೇಶನ್ ಬ್ಯಾಂಕಿನ ನಿವೃತ್ತ ಅಧಿಕಾರಿ ಶ್ರೀ ಸದಾನಂದ ಶೇಟ್, ಶ್ರೀ ಎಚ್. ಡುಂಡಿರಾಜ – ಇವರೆಲ್ಲ ಉಪಯುಕ್ತ ಮಾಹಿತಿಗಳನ್ನು ನೀಡಿದ್ದಾರೆ. ಕಾರ್ಪೊರೇಶನ್ ಬ್ಯಾಂಕಿನ ಅಧ್ಯಕ್ಷ ಶ್ರೀ ವಿ.ಕೆ. ಚೋಪ್ರಾ, ಜನರಲ್ ಮ್ಯಾನೇಜರ್ ಶ್ರೀ ಬಿ. ಆರ್. ಭಟ್ – ಈ ಗ್ರಂಥವನ್ನು ಶ್ರದ್ಧೆಯಿಂದ ಪ್ರಕಟಿಸುತ್ತಿದ್ದಾರೆ. ಇವರೆಲ್ಲರಿಗೂ ನನ್ನ ಕೃತಜ್ಞತೆಗಳು.

ಈ ಪುಸ್ತಕವನ್ನು ಬರೆಯಲು ನಾನು ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾಗ ನನಗೆ ಸಿಕ್ಕಿದ ಜನರ ಪ್ರತಿಕ್ರಿಯೆಯಿಂದ ತುಂಬ ಪ್ರಭಾವಿತನಾದೆ. ಉಡುಪಿಯ ಹಳೆಯ ತಲೆಮಾರಿನವರು ಹಾಜಿ ಅಬ್ದುಲ್ಲಾರವರ ಸತ್ಕಾರ್ಯಗಳನ್ನು ಶ್ರದ್ಧೆ, ಭಕ್ತಿಗಳಿಂದ ಜ್ಞಾಪಿಸಿಕೊಂಡರೆ, ಯುವ ಜನರು ಅವರ ಬಗ್ಗೆ ಅರಿತುಕೊಳ್ಳುವುದರಲ್ಲಿ ಆಸಕ್ತಿ ತೋರಿದರು. ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಹಾಜಿ ಅಬ್ದುಲ್ಲಾ ಸಾಹೇಬರ ಹೆಸರಿನಲ್ಲಿ ಪ್ರತಿವರ್ಷ ಸಾಂಸ್ಕೃತಿಕ ಉತ್ಸವ ನಡೆಸಲು ಶಾಶ್ವತ ನಿಧಿಯೊಂದರ ಸ್ಥಾಪನೆ, ಅವರ ಹೆಸರಿನಲ್ಲಿ ಉಡುಪಿಯಲ್ಲೊಂದು ಗ್ರಂಥಾಲಯ, ಬಡ ವಿದ್ಯಾರ್ಥಿಗಳಿಗೆ ನೆರವು ನೀಡುವ ನಿಧಿಯೊಂದರ ಸ್ಥಾಪನೆಯೇ ಮೊದಲಾದ ಸಮಾಜ ಕಲ್ಯಾಣ ಚಟುವಟಿಕೆಗಳ ಮೂಲಕ ಹಾಜಿ ಅಬ್ದುಲ್ಲಾರವರನ್ನು ಚಿರಂತನಗೊಳಿಸುವ ಕೆಲಸ ನಡೆಯಬೇಕೆನ್ನುವ ಸಲಹೆಗಳೂ ಅವರಿಂದ ಬಂದವು. ತನ್ನ ಶತಮಾನೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಕಾರ್ಪೊರೇಶನ್ ಬ್ಯಾಂಕ್ ಮಂಗಳೂರಿನಲ್ಲಿ ಒಂದು ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ಸಾರ್ವಜನಿಕ ಗ್ರಂಥಾಲಯ ಹಾಗೂ ೨೫ ಗ್ರಾಮೀಣ ಪ್ರದೇಶಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸುತ್ತಿರುವುದು ಮತ್ತು ಗ್ರಾಮೀಣ ಪ್ರದೇಶಗಳ ೧೦೦ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುವ ಯೋಜನೆಯನ್ನು ಆರಂಭಿಸಿರುವುದು ನನಗೆ ಸಂತಸವನ್ನು ತಂದಿದೆ.

ಬ್ಯಾಂಕಿನ ಇಂತಹ ಜನಹಿತ ಕಾರ್ಯಕ್ರಮಗಳು ಹಾಜಿ ಅಬ್ದುಲ್ಲಾರವರು ಪ್ರತಿಪಾದಿಸಿದ ಆದರ್ಶಗಳನ್ನು ಎತ್ತಿ ಹಿಡಿಯುವಲ್ಲಿ ಮಹತ್ವದ ಪರಿಣಾಮವನ್ನು ಬೀರುವುದರಲ್ಲಿ ಸಂಶಯವಿಲ್ಲ.

ಮುರಳೀಧರ ಉಪಾಧ್ಯ ಹಿರಿಯಡಕ
‘ಸಖೀಗೀತ’
ಎಂ.ಐ.ಜಿ. -(ಎಚ್)
ದೊಡ್ಡನಗುಡ್ಡೆ, ಉಡುಪಿ – ೫೭೬ ೧೦೨.

* * *