ವಿದ್ಯೆಯ ಸೃಷ್ಟಿ ಕನ್ನಡ ವಿಶ್ವವಿದ್ಯಾಲಯದ ಒಂದು ಪ್ರಮುಖ ಉದ್ದೇಶ. ವಿಶ್ವದ ಜ್ಞಾನವನ್ನು ಕನ್ನಡಿಗರಿಗೆ ಮುಟ್ಟಿಸುವ ಕನ್ನಡ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸುವ ಮಹತ್ವದ ಹೊಣೆಗಾರಿಕೆ ಕನ್ನಡ ವಿಶ್ವವಿದ್ಯಾಲಯಕ್ಕಿದೆ. ವಿದ್ಯೆಯ ಸೃಷ್ಟಿ ಮತ್ತು ಪ್ರಸರಣ ಎಂದರೆ ಅದು ಕೇವಲ ವಿಶ್ವವಿದ್ಯಾಲಯದಲ್ಲಿರುವ ಅಧ್ಯಾಪಕರಿಂದ ಮಾತ್ರ ಎಂಬ ಹಮ್ಮು ನಮ್ಮದಲ್ಲ. ಇಲ್ಲಿನ ವಿವಿಧ ವಿಭಾಗಗಳ ಒಳಗಿನ ಪ್ರತಿಭಾವಂತರ ಜೊತೆಗೆ ಕರ್ನಾಟಕದ ಎಲ್ಲ ಸಾಂಸ್ಕೃತಿಕ ಕ್ಷೇತ್ರದ ಪ್ರತಿಭಾ ಸಂಪನ್ನತೆಯನ್ನು ಬೆಸೆಯುವ ಕೊಂಡಿಯಂತೆ ಪ್ರತಿಯೊಂದು ವಿಭಾಗವೂ ಕೆಲಸ ಮಾಡುತ್ತದೆ. ಸುಂದರ ಬೆಸುಗೆ ಹೊಸ ಜ್ಞಾನದ ಸೃಷ್ಟಿಗೆ ಹಾಗೆಯೇ ಅರ್ಥಪೂರ್ಣ ಮೌಲ್ಯಗಳ ಪುನರ್ ಸ್ಥಾಪನೆಗೆ ಕಾರಣವಾಗಿದೆ. ವಿದ್ಯೆಯ ಸೃಷ್ಟಿಗೆ ಪೂರಕವಾದ ಹಲವು ಬಗೆಯ ಜ್ಞಾನವಾಹಿನಿಗಳ ತಿಳುವಳಿಕೆ ವಿಶ್ವವಿದ್ಯಾಲಯದ ಒಳಗೆ ರೂಪುಗೊಳ್ಳುತ್ತಿದೆ. ಕನ್ನಡ ಸಂಶೋಧನೆಯ ವಿಧಿವಿಧಾನಗಳನ್ನು ಸೃಷ್ಟಿಸುವ ಪ್ರಯತ್ನ ಇಲ್ಲಿ ನಡೆಯುತ್ತಿದೆ. ಇವುಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅನೇಕ ಕಮ್ಮಟ, ತರಬೇತಿ ಮುಂತಾದಂತೆ ಹತ್ತಾರು ಶಿಬಿರಗಳು ಇಲ್ಲಿ ನಡೆಯುತ್ತಿವೆ. ಎಲ್ಲ ಕುಲುಮೆಗಳಲ್ಲಿ ಪಕ್ವಗೊಂಡ ಜ್ಞಾನ ಪುಸ್ತಕದ ರೂಪದಲ್ಲಿ ಪ್ರಸಾರಾಂಗದ ಮೂಲಕ ಆಕಾರ ಪಡೆಯುತ್ತಿದೆ. ಕನ್ನಡ ವಿಶ್ವವಿದ್ಯಾಲಯವು ಜನಸಾಮಾನ್ಯರು, ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಂಶೋಧಕರನ್ನು ತನ್ನ ಗುರಿಯನ್ನಾಗಿಟ್ಟುಕೊಂಡು ಹಲವು ಬಗೆಯ ಕಾರ್ಯಯೋಜನೆಗಳನ್ನು ಜಾರಿಗೆ ತಂದಿದೆ. ಜನಸಾಮಾನ್ಯರ ತಿಳುವಳಿಕೆಗಾಗಿ ನವಸಾಕ್ಷರ ಮಾಲೆ ಮತ್ತು ಮಂಟಪ ಮಾಲೆ ಎಂಬ ಪುಸ್ತಕಗಳು, ವಿದ್ಯಾರ್ಥಿಗಳಿಗಾಗಿ ಪಠ್ಯಪುಸ್ತಕಗಳು, ಸಂಶೋಧಕರಿಗೆ ಹಲವು ಬಗೆಯ ವಿಶ್ವಕೋಶಗಳು ಮುಂತಾದಂತೆ ವೈವಿಧ್ಯಮಯ ಜ್ಞಾನ ಸೃಷ್ಟಿ ಇಲ್ಲಿ ನಡೆಯತ್ತಿದೆ. ಇವೆಲ್ಲವನ್ನೂ ಮೀರಿ ಮತ್ತೊಂದು ಗುರಿ ಕನ್ನಡ ವಿಶ್ವವಿದ್ಯಾಲಯಕ್ಕೆ ಇದೆ. ಅದೇನೆಂದರೆ ಕನ್ನಡ ಸಂಸ್ಕೃತಿಯ ಅಮೂಲಾಗ್ರ ಶೋಧ ನಡೆಸುವ ಮೂಲಕ ದೇಸಿ ಚಿಂತನಾಕ್ರಮವೊಂದನ್ನು ರೂಪಿಸುವುದು. ಭಾರತೀಯ ಸಂಸ್ಕೃತಿ ಎಂದು ಏಕಮುಖವಾಗಿ ಸಾರ್ವತ್ರೀಕರಿಸುವ ಭ್ರಮೆಯಿಂದ ಹೊರಬಂದು ಪ್ರತಿಯೊಂದು ನೆಲಕ್ಕೂ ತನ್ನದೇ ಆದ ವೈಶಿಷ್ಟ್ಯತೆ ಇದೆಯೆಂಬ ವಾಸ್ತವವಾದ ನೆಲೆಯಲ್ಲಿ ಕನ್ನಡ ನೆಲದ ಗುಣ ಹುಡುಕುವ ಕಾರ್ಯದಲ್ಲಿ ನಾವು ಈಗ ಮಗ್ನರಾಗಿದ್ದೇವೆ. ಮೂಲಕ ನಿರ್ಲಕ್ಷಿಸಲ್ಪಟ್ಟ ಕ್ಷೇತ್ರಗಳನ್ನು ಪ್ರಧಾನ ನೆಲೆಗೆ ತರುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ದೇಶದ ಅಥವಾ ನಾಡಿನ ಅಂಚಿನ ಜನಕ್ಕೆ ಕೂಡ ಒಂದು ಶ್ರೀಮಂತ ಸಂಸ್ಕೃತಿ ಇದೆಯೆಂದು, ಸಂಸ್ಕೃತಿಗೆ ತನ್ನದೇ ವಿಶಿಷ್ಟ ಪರಂಪರೆಯಿದೆ ಎಂದು, ಪರಂಪರೆಯೇ ನಾಡಿನ ವಿವೇಕ ಮತ್ತು ಜ್ಞಾನವನ್ನು ಕಾಪಾಡಿಕೊಂಡು ಬಂದಿದೆ ಎಂದು ಸ್ಪಷ್ಟ ಮಾತುಗಳಿಂದ ನಿರ್ವಚಿಸಬೇಕಾದ ಕಾಲವೊಂದು ಈಗ ಬಂದಿದೆ. ಮೂಲಕ ಕನ್ನಡ ನಾಡಿನ ಸರ್ವತೋಮುಖ ಬೆಳವಣಿಗೆಯನ್ನು ಯಾವ ಯಾವ ದಿಸೆಯಲ್ಲಿ ಸಾಧಿಸಬೇಕೆಂಬ ದೂರದೃಷ್ಟಿ ಮತ್ತು ಆಶಾವಾದ ಕೂಡ ನಮ್ಮ ಅಧ್ಯಯನಗಳ ಹಿಂದೆ ಇದೆ.

ಒಂದು ಕಡೆಯಿಂದ ವಸಾಹತುಶಾಹಿ ಧೋರಣೆಯ ಪಾಶ್ಚಾತ್ಯ ಪ್ರಭಾವ, ಮತ್ತೊಂದು ಕಡೆ ವೈದಿಕಶಾಹಿಗಳ ವೈಭವೀಕರಣ ಇವುಗಳಿಂದ ಆವರಿಸಿದ ವಿಸ್ಮೃತಿಯಿಂದ ಬಿಡುಗಡೆಗೊಳ್ಳುವ ಮೂಲಕ ಕನ್ನಡ ಸಂಸ್ಕೃತಿಯೊಂದನ್ನು ಪ್ರತಿಷ್ಠಪಿಸುವ ಕೆಲಸ ಆಗಬೇಕಾಗಿದೆ. ಇಂದಿನ ಜಾಗತೀಕರಣ, ಕೋಮುವಾದ ಹಿಂಸೆಯ ವಾತಾವರಣದಲ್ಲಿ ನಲುಗುತ್ತಿರುವ ಮಾನವೀಯ ಮೌಲ್ಯಗಳನ್ನು ಹುಡುಕುವ ಮತ್ತು ಹುಟ್ಟುಹಾಕುವ ಬರಹಗಳನ್ನು ಪ್ರೋತ್ಸಾಹಿಸುವ ಕೆಲಸವೂ ಆಗಬೇಕಾಗಿದೆ. ಒಟ್ಟಾರೆಯಾಗಿ ಆಲೋಚನೆಗಳ ಮತ್ತು ಸಿದ್ಧಾಂತಗಳ ಮೌಲ್ಯೀಕರಣದ ಅಗತ್ಯವನ್ನು ಮನಗಂಡಿರುವ ಕನ್ನಡ ವಿಶ್ವವಿದ್ಯಾಲಯ ದೇಸಿ ಮತ್ತು ಸಾಂಪ್ರದಾಯಿಕ ಮೌಲ್ಯಗಳ ನಡುವೆ ಮುಖಾಮುಖಿಯೊಂದನ್ನು ಹುಟ್ಟು ಹಾಕುವ ಮೂಲಕ ಸತ್ಯದ ಬೆಳಕಿನೆಡೆಗೆ ಕೊಂಡೊಯ್ಯುವ ಕೆಲಸವನ್ನು ಮಾಡುತ್ತಿದೆಯೆಂಬ ಆಶಯ ನಮ್ಮದಾಗಿದೆ.

ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಲಾಗುತ್ತಿರುವ ಸ್ಥಳಿಯ ಚರಿತ್ರೆ ಮತ್ತು ಪುರಾತತ್ವ ಮಾಲೆಯ ಗ್ರಂಥಗಳು ಆಯಾಯ ಪ್ರದೇಶದ ಐತಿಹಾಸಿಕ ಅನನ್ಯತೆಯನ್ನು ಸೂಕ್ತ ರೀತಿಯಲ್ಲಿ ನೆನಪಿಸುವ ಕೆಲಸ ಮಾಡುತ್ತಿವೆ. ಒಂದು ಪ್ರದೇಶದ  ಮೌಖಿಕ ಚರಿತ್ರೆಯನ್ನು ಪರಿಗಣನೆಗೆ ತೆಗೆದುಕೊಳ್ಳದೇ ಹೋದ ಪಕ್ಷದಲ್ಲಿ ಅದು ಅರ್ಧಸತ್ಯದ ಇತಿಹಾಸವಾಗುತ್ತದೆ. ವಸಾಹತು ಪೂರ್ವಕಾಲದ ಚರಿತ್ರೆಯ ರಚನೆ ಹೆಚ್ಚಾಗಿ ನೆಲೆಯಲ್ಲಿ ಆದ ಕಾರಣ ಇತಿಹಾಸದ ಸಮಗ್ರ ನೋಟ ಸಾಧ್ಯವಾಗಲಿಲ್ಲ. ಆದರೆ ಇತ್ತೀಚಿನ ದಶಕಗಳಲ್ಲಿ ಸ್ಥಳಿಯ ಚರಿತ್ರೆ ಮತ್ತು ಮೌಖಿಕ ಆಕರಗಳನ್ನು ಪ್ರಧಾನವಾಗಿ ಪರಿಗಣಿಸುವ ಮೂಲಕ ಚರಿತ್ರೆಯ ರಚನಾ ಶಾಸ್ತ್ರಕ್ಕೆ ಹೊಸ ಆಯಾಮ ನೀಡಲಾಗಿದೆ. ಅಂತಹ ಪ್ರಯತ್ನಗಳಲ್ಲಿ ಮಾಲೆಯ ಎರಡನೆಯ ಗ್ರಂಥವಾದಹಾನಗಲ್ಲುಸೇರುತ್ತದೆ. ಇದರ ಸಂಪಾದಕರಾದ ಡಾ. ವಾಸುದೇವ ಬಡಿಗೇರ ಅವರು ವೈವಿಧ್ಯಮಯ ಲೇಖನಗಳನ್ನು ಸಂಕಲಿಸಿ ಕೊಡುವುದರ ಮೂಲಕ ಸ್ಥಳಿಯ ಚರಿತ್ರೆ ಅಧ್ಯಯನಕ್ಕೆ ಮೌಲಿಕ ಕಾಣಿಕೆಯೊಂದನ್ನು ನೀಡಿದ್ದಾರೆ. ಅವರಿಗೆ ಹಾಗೂ ಲೇಖನಗಳನ್ನು ಬರೆದಿರುವ ಎಲ್ಲ ಲೇಖಕರಿಗೆ ಕೃತಜ್ಞತೆಗಳು ಸಲ್ಲುತ್ತವೆ. ಗ್ರಂಥವನ್ನು ಅಚ್ಚುಕಟ್ಟಾಗಿ ಹೊರತರುತ್ತಿರುವ ಪ್ರಸಾರಾಂಗದ ನಿರ್ದೇಶಕರಾದ ಪ್ರೋ. ಮಲ್ಲೇಪುರಂ ಜಿ. ವೆಂಕಟೇಶ ಮತ್ತು ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ ಅವರಿಗೆ ಆಭಾರಿಯಾಗಿದ್ದೇನೆ.

ಡಾ. ಹಿ. ಚಿ. ಬೋರಲಿಂಗಯ್ಯ
ಕುಲಪತಿ