2. ರೇವಣಸಿದ್ದೇಶ್ವರ (ಪುರುಷ) ಘನತೆಯ ಹೋಳಿಯ ಪದ
ವರಗಣ ನಿನ್ನ ಪದ ಸರಸಿಜಕ್ಕೆರೆಗುವೆನು
ಪರಮಪಾವನ ಸದ್ಗುರುವೇ
ಲಾವಣಿ
ರೂಢಿಯೊಳು ನಿನ್ನ ಪಾದ ಹಾಡಿಹರಸುವೆನು
ಮೂಢನೆಂದು ಕರುಣಿಸು ಬೇಗ ನಾಡ ಮಾತದೇನೊ ದೇವ
ಬೇಡಿಕೊಂಬುವೆನು ನಿನ್ನ ಕೂಡಿಸಿಕೊಡೀಗ ಪದಗಳಾ
ಜೋಡಿನ ಗೆಳೆಯರು ಕೂಡಿ ಹಾಡುವೆವು ಹರುಷದಿಂದ
ಕೇಡ ಬಾರದ್ಹಂಗ ರಕ್ಷಿಸೋ
ಇಳುವು
ಆನೆಯ ಮುಖದವನೆ
ಜ್ಞಾನ ಮೂರುತಿ ನೀನೆ
ಮಾನಿನಿಯರ ಸಂಗಾ
ತಾನು ಕೂಡದ ಲಿಂಗಾ
ಧ್ಯಾನಿಸುವೆನು ನಿನ್ನಾ
ಏನುತಿಳಿಯದ ಮುನ್ನಾ
ಏರ
ಪರಮ ಪಾವನ ಸದ್ಗುರುವೆ ಮತಿಕೊಟ್ಟು
ಸರಸಾಗಿ ಹೋಳಿ ಪದ ನಡಸೊ ॥
ಹೆಣ್ಣು ಹೆಚ್ಚೆಂದೆಂಬುವಣ್ಣಗಳು ಕೇಳಿರೊ
ಮಣ್ಣು ಪಾಲಾದ ಕಥೆಗಳಾ
ಲಾವಣಿ
ಕೊಲ್ಹಾಪುರದೊಳಗೊಬ್ಬ ಬಲ್ಲಿದಳು ಮಾಯೆಯೆಂಬ
ಸೊಲ್ಲಿನಿಂದ ಬೆಳೆದಿರಲಾಗ ಕುಲ್ಲತನದಿಂದಲೀ ತ
ನ್ನೆಲ್ಲ ಸಿದ್ಧರುಗಳ ತಂದು ನಿಲ್ಲದೆ ಮೂಗಿಗೆ ಕವಡಿಯಾ
ಅಲ್ಲಿ ಪೋಣೀಸುತ್ತಲವರ ಹುಲ್ಲಿಗೆ ಸಮಾನವೆನಿಸಿ
ಮಲ್ಲ ಮಲ್ಲರನ್ನ ಸೋಲಿಸಿ
ಇಳುವು
ತಾನೆ ಘನವೆನಿಸೀಗ
ಹೀನ ಮಾಯೆಯು ಆಗ
ಕೊನೆ ವಿಷಗಳ ಗುಟ್ಟು
ಸ್ಥಾನ ಮೊಲೆಯೊಳಗಿಟ್ಟು
ನಾನಾ ತೆರದಿಂ ಕಾಡಿ
ಮಾನಹೀನರ ಮಾಡೀ
ಏರ
ಮಣ್ಣುಪಾಲಾದ ಕಥೆಯ ಸಜ್ಜನರೆಲ್ಲ
ಕಣ್ಣು ಮೂರುಳ್ಳ ಶಿವದಯದೀ ॥
ಕೊಲ್ಹಾಪುರದ ಮಾಯಿ ಬಲ್ಲಿದಳು ವಿಷ ಹಾಕಿ
ಕೊಲ್ಲುವಳು ಸಿದ್ಧರೆಂಬವರಾ
ಲಾವಣಿ
ಮದ್ದು ಮಂತ್ರ ಯಂತ್ರದಿ ಪ್ರ ಸಿದ್ಧರಾದ ಋಷಿಗಳ
ನೊದ್ದು ಬಂಧಿಸುತ್ತಲಿರೆ ಮದ್ದಾನೆಯ ಪರಿಯೊಳವಳು
ಸಿದ್ಧರನ್ನು ತುಳಿದಾಡುತ ಗುದ್ದಾಟವಾಯಿತೀಪರಿ
ಸುದ್ದಿಯನು ಕೇಳಿ ರೇವಣ ಸಿದ್ಧನೆಂಬ ಯತಿಯು ಹೊರಟ
ಚಿದ್ಘನ ಮೂರ್ತಿ ಬಹುಬೇಗ
ಇಳುವು
ಇಂದು ಜಂಗಮನಾಗಿ
ಬಂದನಾ ಶಿವಯೋಗಿ
ಇಂದುಧರ ಭಸ್ಮವನು
ಚೆಂದ ಹಣೆಗಿಟ್ಟವನು
ಅಂದ ರುದ್ರಾಕ್ಷಿ ಸರಾ
ಸಂದು ಸಂದಿಗೆ ಹಾರಾ
ಏರ
ಕೊಲ್ಲುವಳು ಸಿದ್ಧರೆಂಬುವರನಾ ಸುದ್ದಿ
ನಿಲ್ಲದೆ ಕೇಳಿ ರೇವಣನೂ ॥
ಶಿವನೆಯವತಾರಾಗಿ ಭುವನದೊಳು ಬಂದನು
ಅವನಿಯ ಜನರಿಗಿಷ್ಟಾರ್ಥ
ಲಾವಣಿ
ಕಾವಿಯ ಲಾಂಚನ ಪೊದ್ದು ಹಾವಿಗೆ ಪಾದದಿ ಮೆಟ್ಟಿ
ಭಾವಿಸಿ ಹಸ್ತದಿ ದಂಡಾಗ್ರ ಸಾವಿನ ಭಯವ ಮೀರಿ
ಜೀವಿಗಳ ರಕ್ಷಿಸುತಲಿ ಅವಿಚಾರಿಗಳ ಶಿಕ್ಷಿಸುತ್ತಾ
ಧಾವಿಸಿ ಕೊಲ್ಹಾಪುರದ ಠಾವಿನೊಳು ಬಂದನಾಗ
ದೇವಿ ಮಾಯೆಯ ಮನೆಗಾಗೀ
ಇಳುವು
ಭೋಗಿ ಭೂಷಣನಂದು
ಬಾಗಿಲದೊಳು ಬಂದು
ಯೋಗಿ ಭಿಕ್ಷಾಯೆಂದು
ಕೂಗಿದನು ತಾ ನಿಂದು
ರಾಗಿ ಮಾಯೆಯ ಮುಂದು
ಜೋಗಿ ಬಂದಿಹೆನಂದೂ
ಏರ
ಅವನಿಯ ಜನರಿಗಿಷ್ಟಾರ್ಥಗೋಸ್ಕರದೀ
ಜವನಹರ ಸಿದ್ಧ ತಾ ಬಂದಾ ॥
ಸಿದ್ಧಿ ಬಂದಿಹನೆಂಬ ಸುದ್ದಿಯನು ತಾ ಕೇಳಿ
ಗರ್ವಿಸಿ ನುಡಿದಲಾಕ್ಷಣದೀ
ಲಾವಣಿ
ನೂರು ಸಾವಿರ ಸಿದ್ಧರುಗಳ ಮೋರೆಯ ಮೇಲೆ ಹೊಡೆದು ಮಹಾ
ಚೋರರಂತೆ ಹೆಡಗುಡಿಕಟ್ಟಿ ಘೋರಬಡಿಸುವೆ ನನ
ಗಾರಿನ್ನೆದುರಿಲ್ಲವೆಂದು ಚೀರಿವೊದರುತ ಬಂದಳು
ಘೋರತರದ ವಿಷಗಳನು ಬೀರುತವನ ಹಸ್ತದೊಳು
ಹೀರಿ ಹಿಂಡಿದಳು ಮೊಲೆಗಳಿಂದಾ
ಇಳುವು
ಸುರಿಸಿದಳೂ ವಿಷವನ್ನು
ಹರುಷದಿಂದಲಿ ತಾನು
ಸರಸದಿಂದಲಿ ಕಂಡಾ
ಬೆರಸುತಾಗಳೆ ವುಂಡಾ
ತರಿಸು ಸಾಕಿಲ್ಲೆನಗ
ಧರಿಸುವೆನು ನಾನೀಗ
ಏಳು
ಗದ್ರಿಸಿ ನುಡಿದಳಾಕ್ಷಣದಿ ತನ್ನೊಳಗೆ
ಇದ್ದಷ್ಟು ವಿಷವ ನೀಡಿದಳೊ ॥
ಎಷ್ಟು ನೀಡಿದರವನದಷ್ಟೆಲ್ಲವನು ಕುಡಿದು
ಭ್ರಷ್ಟೆ ತಾಯೆಂದು ಬೇಡಿದನೂ
ಲಾವಣಿ
ಬೇಡುವ ಸಿದ್ಧನ ಕಂಡು ರೂಢಿಸಿ ವಿಷವ ಕೊಟ್ಟು
ಮೂಢ ಮತಿಯಿಂದ ಕಂಗೆಟ್ಟು ಕೋಡಿಯಾಯಿತೆನ್ನ ಮಾತು
ಜೋಡಿಸಲಿನ್ನೆಲ್ಲಿ ತಂದು ರಾಡಿ ಸಹಿತ ಸಾಲದಿವಗೆಂದು
ನಾಡಿನೊಳಗಿವನಂಥ ಕಾಡರಿಲ್ಲವೆಂದು ಮಾಯೆ
ಓಡಿ ಹೋಗುವ ಸಮಯದಿ
ಇಳುವು
ಮಾರ ಮರ್ಧನ ಸಿದ್ಧಾ
ನಾರಿಯನು ತಾನೊದ್ದಾ
ಮಾರಿ ಮಸಣಿಯ ಗೆದ್ದಾ
ಧೀರನಿವ ಬಲು ವೃದ್ಧಾ
ಸಾರಿ ಮಾಯೆಯ ಮದ್ದಾ
ಭೂರಿ ತಾ ಪ್ರಸಿದ್ಧಾ
ಏರ
ಭ್ರಷ್ಟೆ ತಾಯೆಂದು ಬೇಡುತಿರಲಾ ಮಾಯೆ
ರಾಷ್ಟ್ರವನು ಬಿಟ್ಟು ಓಡಿದಳೂ ॥
ಹೋಗುತಿಹ ಮಾಯೆಯನು ಬಾಗಿ ಮುಂದಲೆ ಹಿಡಿದು
ತೂಗಿ ನೆಲಕಪ್ಪಳಿಸಿ ಬಡಿದನೂ
ಲಾವಣಿ
ಮೇದಿನಿಯ ಮೇಲೆ ಕೆಡಹಿ ಪಾದದಿಂದ ಮೆಟ್ಟಿ ಮೊಲೆಯ
ಛೇದಿಸುತ್ತ ತಲೆಯನೊಂದು ಹರಿದು ಕಾದ ಬೆನ್ನಿನೆಲುವನಾಗ
ಶೋಧಿಸಿ ದಂಡಿಗೆ ಮಾಡಿ ಭೇಧಿಸಿದ ಮೂರು ಕಾಯಿಗಳಾ
ಆಧಾರಾದಿ ಕರುಳ ತೆಗೆದು ಮೋದದಿ ತಂತಿಯ ಮಾಡಿ
ನಾದಗಳನಾಗ ಹುಟ್ಟಿಸೀ
ಇಳುವು
ಭಾರಿ ಕಿನ್ನರಿ ಮಾಡಿ
ಬಾರಿಸಿದನು ನೋಡಿ
ಮಾರಿ ಮಾಯೆಯು ನೋಡಿ
ಸೋರಿ ಹೋಯಿತು ಕೋಡಿ
ಸೋರಿ ಹೋಯಿತು ಜಾಡಿ
ಮಾರಮರ್ಧನ ಸೂಡಿ
ಧೀರ ಭಕ್ತರೊಳಾಡೀ
ಏರ
ತೂಗಿ ನೆಲಕ್ಕಪ್ಪಳಿಸಿ ಬಡಿದ ರೇವಣಸಿದ್ಧ
ಯೋಗಿಗಿನ್ನಾರು ಸರಿಯಿಲ್ಲಾ ॥
ಇಂತೆಪ್ಪ ಮಾಯೆಯನು ಕಂಡು ಹರ ಕಡಿದನು
ಸಂತರಿದನೊಲಿದು ಕೇಳುವರೂ
ಲಾವಣಿ
ನಾರಿಯೆಂಬುವದು ದೊಡ್ಡ ಮಾರಿ ಕೇಳೀ ಮರ್ತ್ಸರಿಗೆ
ಸೂರೆಗೊಂಡು ಬಿಟ್ಟರೆತಿಗಳು ಚಾರುಭೃಂಗಿಯೆಂಬವನು
ಮಾರಹರನಧಿಕನೆಂದು ಸಾರಿ ಪ್ರತಿಜ್ಞೆಯ ಮಾಡಲು
ಧೀರೆ ಪಾರ್ವತಿಯು ಕೇಳಿ ಶಾರೀರದೊಳಿಹ ತನ್ನ
ಪೂರ ರಕ್ತದಂಶವನ್ನು ತೆಗೆಯೇ
ಇಳುವು
ಮಾತೆಯಂಶವನೆಲ್ಲ
ಆತನೊಗೆದನು ಮಲ್ಲ
ಭೂತೇಶ ಮೆಚ್ಚದನು
ಪ್ರೀತಿಯೊಳು ಹೆಚ್ಚದನು
ಮತ್ತೊಂದು ಪಾದವನು
ಸತ್ಯದಿಂ ಕೊಟ್ಟವನೂ
ಏರ
ಸಂತರಿದನೊಲಿದು ಕೇಳುವದು ಭೃಂಗೀಶ
ಶಾಂತನ ಕಥೆಯ ದೃಷ್ಟಾಂತಾ ॥
ಹೆಣ್ಣಿನ ಪದಗಳನು ಬಣ್ಣಿಸಿ ಹಾಡುವರು
ಕಣ್ಣುಗೆಟ್ಟವರು ಕಲಿಯುಗದೀ
ಲಾವಣಿ
ಯೋಗಿಗಳೆಂಬವರೆಲ್ಲ ಭೋಗವನ್ನು ಬಿಟ್ಟು ತಮ್ಮ
ಯೋಗದೊಳಗೊಪ್ಪಿತವಾಗಿ ನೀಗಿ ಮಾಯಾ ಮಿಥ್ಯವೆಂದು
ಸೋಗೆಗಣ್ಣವರನು ವಿರಾಗದಿಂದ ಭ್ರಾಂತಿಯ ಬಿಟ್ಟೂ
ಹೋಗುವರು ಶಿವ ಸಮ ವಾಗೀಶನ ಲೋಕಕೆ
ಭೋಗಿಗಳನುಳಿದ ಮಹಾತ್ಮರೂ
ಇಳುವು
ಅದರ ಕಾರಣದಿಂದ
ಇದನು ನಂಬರಿ ಚೆಂದ
ಮದ ಸೊಕ್ಕಿ ನಾರಿಯರ
ಪದವು ಹಿತವೆಂಬವರ
ಒದೆಯುವನು ಯಮಧರ್ಮಾ
ಒದಗುವದು ಬಹು ಕರ್ಮಾ
ಏರ
ಕಣ್ಣು ಗೆಟ್ಟವರು ಕಲಿಯುಗದ ಜನರೆಲ್ಲ
ಮಣ್ಣು ಪಾಲಾಗಿ ಹೋಗುವರೂ ॥
ಹಾಸ್ಯದ ಪದವೆಂದು ದೂಷಿಸಿ ನುಡಿಬೇಡ್ರಿ
ಈಶನ ಮಹಿಮೆಯಿದು ಈಗ
ಲಾವಣಿ
ಹೋಳಿಯ ಪದವಿದೆಂದು ಜಾಳ ಮಾಡಿ ನುಡಿಯ ಬೇಡ್ರಿ
ಬಾಳಲೋಚನನ ಸ್ತುತಿಯಿದು ತಾಳಿ ಶಾಂತಿಯಿಂದಲಿದನು
ಕೇಳಿದರೆ ಸರ್ವಸುಖದಿ ಬಾಳುವರು ಶಿವದಯದಿಂದಾ
ಏಳು ಜನ್ಮದ ಪಾಪವೆಲ್ಲ ಮೇಳ ಸಹಿತ ಹೊರಟು ಹೋಗು
ತಾಳುವರು ಮುಕ್ತಿ ರಾಜ್ಯವಾ
ಇಳುವು
ಗುರುವಿನಲ್ಲಿಗೆ ಹೋಗಿ
ಎರಗಿ ನಾವು ಶಿರಬಾಗಿ
ವರವ ಬೇಡಲು ಬೇಗ
ಪರಮ ಹರುಷದೊಳಾಗ
ಕರುಣಿಸಿದ ವಾಕ್ಯವನು
ಅರುಪಿದೆವು ನಾವಿದನೂ
ಏರ
ಈಶನ ಮಹಿಮೆಯಿದು ಈಗ ಬನಹಟ್ಟಿ
ವಾಸ ಸದ್ಗುರುವಿನಪ್ಪಣೆಯೂ ॥
ಇತಿ ರೇವಣ ಸಿದ್ದೇಶ್ವರ (ಪುರುಷ) ಘನತೆಯ ಹೋಳಿಯ ಪದ ಸಂಪೂರ್ಣ
ಮಂಗಲ ಮಸ್ತು
* * *
3. ಮಾಯಾ (ಸ್ತ್ರೀ) ಘನತೆಯ ಹೋಳಿಯ ಪದ
ವರ ಗಿರಿಜ ಪಾರ್ವತಿಯನಿರದೆ ಕೊಂಡಾಡುತ
ಹರುಷದಿ ಹೋಳಿ ಪದಗಳನೂ
ಲಾವಣಿ
ಶರಣರಂಘ್ರಿಗಳ ನೆನೆದು ಧರಣಿಯೊಳು ಪೇಳುವೆನು
ಮರಣ ರಹಿತ ಮಾಯಾಶಕ್ತಿ ಘನವಾ ಹೆಣ್ಣಿನ ಧಿಕ್ಕಾರ ಮಾಡು
ವಣ್ಣಗಳು ಕೇಳಿರೆಲ್ಲ ಕಣ್ಣ ಮೂರುಳ್ಳವನೀಶ್ವರಾ
ತೊಡೆಯ ಕೊಟ್ಟ ಪಾರ್ವತಿಗೆ ಮುಡಿಯ ಕೊಟ್ಟ ಗಂಗಾಂಬಿಕೆಗೆ
ಬಡಿವಾರದ ಮಾತಿದೇನಲ್ಲಾ
ಇಳುವು
ನಾರಿಯೆಂಬುವ ಜಾಲಾ
ಮೀರಿದವರಾರಿಲ್ಲ
ಸಾರುವವು ಶೃತಿಯೆಲ್ಲ
ಮಾರಹರನೇ ಬಲ್ಲ
ಧೀರ ಕೇಳೀ ಸೊಲ್ಲಾ
ಪೋರಾಟವದು ಹೊಲ್ಲಾ
ಏರ
ಹರುಷದಿ ಹೋಳಿ ಪದಗಳನು ಪೇಳುವೆನು
ಸರಸದ ವಾಕ್ಯ ವಿನಯದಲೀ ॥
ಬ್ರಹ್ಮ ನಾರಾಯಣರು ಒಮ್ಮೆ ಶಿಕ್ಕರೊ ಬಲೆಗೆ
ಹಮ್ಮು ಬೇಡೀಗಳೆಲೊ ತಮ್ಮ
ಲಾವಣಿ
ಚತುರ ವೇದ ಬ್ರಹ್ಮನಿಂದ ಕ್ಷಿತಿಯೊಳುದಸಿದವೆಂದು ಹಿತದಿ
ಪೇಳ್ವರೆಲ್ಲ ನೀವು ಕೇಳಿ ಮತಿಯು ಸಾಲದವನು ಮನೆಯ
ಸತಿಯು ಸರಸ್ವತಿಗೆ ವಾಕ್ಯ ಗತಿಯು ನಾಲಿಗೆಯನವ ಕೊಟ್ಟಾ
ಚೆಂದದಿ ಕೃಷ್ಣನು ತನ್ನ ಹೊಂದೆದೆಯ ಮೇಲೆ ಸ್ತ್ರೀಯಿಂದ
ತುಳಿದಾಡಿಸಿಕೊಂಡಾ
ಇಳುವು
ನಾರಿಯೆಂಬುವ ಭೂತಾ
ಸೇರದಾರಿಲ್ಹೊರತಾ
ಮಾರಿ ಮಸಣಿಗಳಂತೆ
ದೂರಗೊಳಿಸುವ ಭ್ರಾಂತೆ
ಯಾರಿಗಾದರಿದೇನು
ದೂರಾಗದು ತಾನೂ
ಏರ
ಹಮ್ಮು ಬೇಡೀಗಳೆಲೊ ತಮ್ಮ ತ್ರಿಮೂರ್ತಿ
ಗಮ್ಮನೆ ನಾರಿವಶರವರೂ ॥
ಋಷಿಗಳೆಂಬವರೆಲ್ಲ ಶಶಿವದನೆಯರ ಕೂಡಿ
ಹಸನಾಗಿ ತಪವ ಮಾಡಿದರೂ
ಲಾವಣಿ
ಕುಂಬಿನಿಯೊಳ್ಪರಾಶರನಂಬಿಗಿತ್ತಿಯನ್ನು ಕೂಡೆ
ಸಂಭವಿಸಿದನು ವ್ಯಾಸ ಋಷಿ ಮುಂದೆ ವ್ಯಾಸ ವಿಧವೆಯರ
ನಂದು ಕೂಡಲಾಗಳೀರ್ವ ನಂದನರು ಹುಟ್ಟಿದರು ಕೇಳು
ಅಂಧಕನು ಧೃತರಾಷ್ಟ್ರನು ಸುಂದರನು ಪಾಂಡು ರಾಜ
ಸಂದೇಹವೇನ್ಹೇಳಿದರೊಳೂ
ಇಳುವು
ಮಾಯಿಯೆಂಬುವ ಮಾತಾ
ಬಾಯಿಯೊಳಾಡಲು ಘಾತಾ
ಕಾಯ ಧರಿಸಿದರೆಲ್ಲ
ಸಾಯದುಳಿದವರಿಲ್ಲ
ಛಾಯಿಯೆಂಬುದೆ ಜಗವಾ
ಛಾಯ ಮಾಡಿತು ಯುಗವಾ
ಏರ
ಹಸನಾಗಿ ತಪವ ಮಾಡಿದರು ಬನಪುರದ
ಶಿಶಿಧರನೊಡನೆ ಕೂಡಿದರೂ ॥
ಸಟೆ ಮಾಯಿಯೆಂಬುವರ ಕಟವಾಯಿ ಶೀಳುವಳು
ಹಟವಿದು ನಿನಗೆ ತರವಲ್ಲಾ
ಲಾವಣಿ
ರಾಮಚಂದ್ರನೆಂಬ ರಾಜ ಪ್ರೇಮದಿಂದಲಿರಲಲ್ಲಿ
ಸ್ವಾಮಿಯ ಶಿಷ್ಯ ಋಷಿ ಬಂದಾ ಮಾಯಿಯೆಂಬ ರೂಪವದು
ಛಾಯ ಸುಳ್ಳೋ ಸತ್ಯವೆಂದು ರಾಯ ಕೇಳಿದನು ಮುನಿಯನಾಗ
ಮನಸಿನೊಳಗೆ ಪುಸಿಯೆಂದವನು ನೆನಸಿದಾಕ್ಷಣವೆ ಶಬರಿ
ಜನಿಸಿ ಬಂದಳು ಸಭೆಯೊಳೂ
ಇಳುವು
ದುಡಿಯಲಾರದೆ ಬಂದು
ಒಡೆಯನೆಲ್ಲಿಯನೆಂದು
ಹಡದ ಮಕ್ಕಳ ಬಿಟ್ಟು
ಬಡಿವಾರ ವ್ಯಾಕಿಷ್ಟು
ಬಡಮುನಿಯೆ ಬಾರೆಂದು
ಜಡಿದು ಜಗ್ಗಿದಳಂದೂ
ಏರ
ಹಟವಿದು ನಿನಗೆ ತರವಲ್ಲ ಸುಮ್ಮನೆ
ವಟವಟವೆಂದರೇನಹುದೊ ॥
ವೇದಶಾಸ್ತ್ರವನೋದಿ ಹಾದಿ ತಿಳಿಯದೆ ಹೋದಿ
ವಾದವ್ಯಾಕೆಲವೊ ಪ್ರತಿವಾದಿ
ಲಾವಣಿ
ಮಾತನಾಡಿದರೆ ಮಾಯಿ ಜಾತವಾಯಿತದನು ನೀನು
ಯಾತರಿಂದ ನುಡಿದುತೋರುವಿ ನೀತಿಯವನೀತಿ ಸಪ್ತ
ಧಾತುಗೀತವೆಂಬವೆಲ್ಲ ವೋತು ಮಾಯಾ ರೂಪು ಕೇಳವು
ಭೂತಭುವನ ನಾಥರೆಂಬ ಈ ತರದ ಮಾಯಿಗುಣ
ಖ್ಯಾತಿಗೊಂಡಿಹುದು ಪ್ರಸಿದ್ಧಾ
ಇಳುವು
ನಾ ಮಾಯಿ ನೀ ಮಾಯಿ
ತಾ ಮಾಯಿ ತನು ಮಾಯಿ
ಜಗ ಮಾಯಿ ಯುಗ ಮಾಯಿ
ಮಗ ಮಾಯಿ ಪಿತ ಮಾಯಿ
ಅದು ಮಾಯಿ ಇದು ಮಾಯಿ
ಸದಮಳದ ಸನ್ಮಾಯೀ
ಏರ
ವಾದ ವ್ಯಾಕೆಲವೊ ಪ್ರತಿವಾದಿಯೀಪದವ
ಭೇದವ ತಿಳಿಯೊ ಸಮ್ಮತದೀ ॥
ಧರೆಯೊಳಗೆ ಬನಹಟ್ಟಿ ಗುರುವಿನಪ್ಪಣೆಯಿಂದ
ಪರಿಪರಿ ಪದವ ಹಾಡುವೆನು ಸಜ್ಜನರು
ಕರುಣದಿಂದೊಲಿದು ಕೇಳುವದೂ
ಇತಿ ಮಾಯಾ (ಸ್ತ್ರೀ) ಘನತೆಯ ಹೋಳಿಯ ಪದ ಸಂಪೂರ್ಣ
॥ಮಸ್ತು॥
* * *
Leave A Comment