ಈ ನಾಟಕಗಳು ಬೇರೆ ಬೇರೆ ದೇಶಗಳ ಆಯ್ದ ಜಾನಪದ ಕತೆಗಳನ್ನು ಆಧಾರವಾಗಿರಿಸಿಕೊಂಡು ರಚಿಸಲಾಗಿದೆ.

ಪ್ರತಿಯೊಂದು ನಾಟಕವೂ ಮೂಲಕಥೆಯಲ್ಲಿನ ಒಂದು ಎಳೆಯನ್ನು ಆಧಾರವಾಗಿಟ್ಟುಕೊಂಡು ರಚಿಸಿದ ಕೃತಿಯಾಗಿರುತ್ತದೆ. ವಿಶಿಷ್ಟವೂ ಮನೋಜ್ಞವೂ ಆಗಿರುವ ಮೂಲಕಥೆಗಳೇ ಕೃತಿಗೆ ಮುಖ್ಯ ಪ್ರೇರಣೆ.

ಒಂದು ಕಥೆಯನ್ನು ಕಥಾರೂಪದಲ್ಲಿಯೆ ಅನುವಾದ ಮಾಡುವಾಗ, ಮೂಲ ರೂಪದಲ್ಲಿದ್ದಂತೆಯೆ ಕೊಡಬಹುದಾಗಿದೆ ಮತ್ತು ಹಾಗೆ ಕೊಡಬೇಕಾದ್ದು  ಅಗತ್ಯವೂ ಆಗಿದೆ. ಆದರೆ ನಾಟಕ ಬೇರೆಯೆ ಆಯಾಮವುಳ್ಳ ಮತ್ತು ಬೇರೆಯೆ ಅನುಭವವನ್ನು ಕೊಡುವಂಥ ಒಂದು ಮಾಧ್ಯಮ. ಆದುದರಿಂದ  ನಾಟಕರಚನೆಯಲ್ಲಿ  ನಾಟಕ ರಚನಾಕಾರ ತೆಗೆದುಕೊಳ್ಳುವ ಅಮಿತ ಸ್ವಾತಂತ್ರ್ಯ ಸಮರ್ಥನೀಯ ಎಂದು ಭಾವಿಸಿ ಈ ಮಾತನ್ನು ಇಲ್ಲಿ ಹೇಳಿದ್ದೇನೆ.

ಈ ನಾಟಕಗಳನ್ನು ಮುಖ್ಯವಾಗಿ ಶಾಲಾ ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿಸಿರುವುದಾಗಿದೆ. ಇವುಗಳಲ್ಲಿ ಕಥೆ ಮತ್ತು ಸಂಭಾಷಣೆಗೆ ಹೆಚ್ಚು ಒತ್ತು. ಆದುದರಿಂದ ಇದನ್ನು ಪ್ರಯೊಗಿಸಲು ರಂಗಪರಿಕರಗಳಿಂದ ಕೂಡಿರುವ ಸುಸಜ್ಜಿತ ರಂಗಮಂದಿರವೇ ಬೇಕೆಂದಿಲ್ಲ. ಒಂದು ತರಗತಿಯ ಮಕ್ಕಳು ಇವುಗಳನ್ನು  ಶಾಲಾ ರಂಗಮಂದಿರದಲ್ಲಿ  ಅಥವಾ ತಂತಮ್ಮ  ತರಗತಿಯಲ್ಲಿ  ಯಾವ ರಂಗಸಜ್ಜಿಕೆಯೂ ಇಲ್ಲದೆ ಪ್ರಯೊಗಿಸಬಹುದು. ಅದು ಪೂರ್ಣ ಪ್ರಮಾಣದ ನಾಟಕ ಪ್ರಯೊಗವೇ ಆಗಬೇಕೆಂದಿಲ್ಲ. ಅದೊಂದು ವೈನೋದಿಕ ಭಾಷಾ ಪಾಠ ಕೂಡ ಆಗಬಹುದು.

ಭಾಷೆಯನ್ನು ಬಳಸುವ ಇಚ್ಛೆ ಭಾಷೆಯ ಮೇಲಿನ ಪ್ರೀತಿಯಿಂದ ಹುಟ್ಟುತ್ತದೆ. ಬಲವಂತವಾಗಿ ಅದನ್ನು  ಬೆಳೆಸಲಿಕ್ಕಾಗುವುದಿಲ್ಲ. ಒಂದು ಭಾಷೆ ಮತ್ತು ಅದರ ಸಾಹಿತ್ಯವನ್ನು  ಪ್ರೀತಿಸುವಂತೆ ಮಾಡುವ ಕೆಲಸವನ್ನು  ಕಥೆಗಳು ಮತ್ತು  ನಾಟಕಗಳಷ್ಟು ಚಲೋದಾಗಿಯೂ ಪರಿಣಾಮಕಾರಿಯಾಗಿಯೂ ಮಾಡುವ ಮಾಧ್ಯಮ ಇನ್ನೊಂದಿಲ್ಲ.  ಈ ವಿಚಾರದಲ್ಲಿ , ನಾಟಕ ಪ್ರಕಾರವು  ಕಥಾ ಪ್ರಕಾರಕ್ಕಿಂತ ಒಂದಷ್ಟು ಭಿನ್ನ. ಹೇಗೆಂದರೆ, ಒಂದೇ ದಿನದಲ್ಲಿ ಮಗು ಒಂದು ದೊಡ್ಡ ಕಥೆಯನ್ನು ಅಥವಾ ಹಲವು ಚಿಕ್ಕ ಕಥೆಗಳನ್ನು ಓದಿ ಮುಗಿಸಬಹುದು. ಕಥೆಗಳನ್ನು ವೇಳೆ ಸಿಕ್ಕಾಗಲೆಲ್ಲಾ ಓದಬಹುದು. ಮನವಾಗಿ ಏಕಾಂತದಲ್ಲಿ ಓದಿ ಖುಷಿಪಡಬಹುದು. ನಾಟಕವನ್ನು  ದಿನಾ ನೋಡಲಿಕ್ಕಾಗುವುದಿಲ್ಲ. ನಾಟಕ ಆಗಾಗ ನೋಡಲಿಕ್ಕೆ ಸಿಗುವಂಥದೂ ಅಲ್ಲ. ನಾಟಕ ನೋಡಲು ಅದು ನಡೆಯುವಲ್ಲಿಗೇ ಹೋಗಬೇಕು. ಮಗು ಇದ್ದಲ್ಲಿಗೆ ನಾಟಕ ಬರುವುದು ಎಂದಾದರೊಮ್ಮೆ ಮಾತ್ರ.

ಆದರೆ ನಾಟಕಗಳ ವಿಚಾರದಲ್ಲಿ ಎರಡು ಮುಖ್ಯ ಪ್ರಯೊಜನಗಳನ್ನು  ಗಮನಿಸಬೇಕು:

ಒಂದು: ನಾಟಕವನ್ನು ಕೂಡ ಕಥೆಯಂತೆ ಓದಬಹುದು.

ಎರಡು: ನಾಟಕವನ್ನು ಓದುವ ಮೂಲಕ ಭಾಷೆಯನ್ನು  ಮಖಿಕವಾಗಿ ಬಳಸುವ  ಪರಿಣತಿ ಮಗುವಿಗೆ ಲಭಿಸುತ್ತದೆ.

ಶಾಲೆಯಲ್ಲಿ ಭಾಷಾ ಪಾಠದ ಒಂದು ಭಾಗವಾಗಿ ನಾಟಕವನ್ನು  ಓದುವಂಥ ಆಸಕ್ತಿಯನ್ನು ಮಕ್ಕಳಲ್ಲಿ ಹುಟ್ಟಿಸಬೇಕು. ಸ್ಪಷ್ಟ , ಶುದ್ಧ  ಉಚ್ಚಾರಣೆ, ಮಾತಿನ ಲಯ ಮುಂತಾದುವುಗಳನ್ನಲ್ಲದೆ,  ಸಂಭಾಷಣಾ ಚಾತುರ್ಯವನ್ನು ಮಕ್ಕಳು ನಾಟಕಗಳ ಮೂಲಕ ಕಲಿಯಬಹುದಾಗಿದೆ.  ಆದುದರಿಂದ ನಾಟಕದ ಪಾತ್ರಗಳನ್ನು ಮಕ್ಕಳ ನಡುವೆ ಹಂಚಿ ಓದಿಸುವ ಚಟುವಟಿಕೆಗಳನ್ನು ಶಾಲೆಗಳಲ್ಲಿ ನಡೆಸಬೇಕು. ಸಾಧ್ಯವಾದರೆ ಆಗಾಗ ಶಾಲಾ ರಂಗಭೂಮಿಯಲ್ಲಿ ಪ್ರದರ್ಶನಗಳನ್ನೇರ್ಪಡಿಸಬೇಕು.  ಹಾಗೆ ಮಾಡಿದಾಗ ಏಕ ಕಾಲದಲ್ಲಿಯೆ ನೂರಾರು ಮಕ್ಕಳಿಗೆ ಒಂದು ಅಪೂರ್ವವಾದ ಭಾಷಾಪಾಠ ಲಭ್ಯವಾಗುತ್ತದೆ. ಶಾಲಾ ರಂಗಭೂಮಿಯಲ್ಲಿ ನಾಟಕವನ್ನು ಪ್ರದರ್ಶಿಸಿದ ಬಳಿಕ ನಾಟಕದ ಪಠ್ಯವನ್ನು ಮಕ್ಕಳಿಗೆ ಒದಗಿಸಬೇಕಾದ್ದು ಅತಿ ಅಗತ್ಯ. ಈ ರೀತಿಯಲ್ಲಿ, ಶಾಲಾ ತರಗತಿಯಲ್ಲಿ ನಡೆಯುವ ಹಲವು ಔಪಚಾರಿಕ ಭಾಷಾಪಾಠಗಳು ಏನು  ಸಾಧಿಸುತ್ತವೆಯೊ ಅದನ್ನು ಅದಕ್ಕಿಂತ ಪರಿಣಾಮಕಾರಿಯಾಗಿ ಒಂದು ನಾಟಕ ಸಾಧಿಸಬಹುದು.

ನಾಟಕಗಳಲ್ಲಿ ಕೆಲವನ್ನು ಓದುವ ನಾಟಕಗಳು ಎಂದು ಗುರುತಿಸುವುದುಂಟು. ಅಂದರೆ, ಕೆಲವು ನಾಟಕಗಳು ರಂಗಪ್ರಯೊಗಕ್ಕೆ ಅನುಕೂಲವಾಗಿರುವುದಿಲ್ಲ ಎಂಬ ಕಾರಣದಿಂದ ಅವುಗಳನ್ನು ಓದುವ ನಾಟಕಗಳು ಎಂದು ಪರಿಗಣಿಸಲಾಗುತ್ತದೆ. ಆದರೆ ಬಹಳ ಕಾಲ ಓದುವ ನಾಟಕಗಳು ಎನಿಸಿಕೊಂಡಿದ್ದ ನಾಟಕಗಳು ಕಾಲಾನಂತರ ರಂಗಪ್ರಯೊಗಕ್ಕೊಳಗಾಗಿ ಶ್ರೇಷ್ಠ ನಾಟಕಗಳೆನಿಸಿಕೊಂಡದ್ದಿದೆ. ಬರ್ನಾರ್ಡ್ ಶಾನ ಪಿಗ್ಮೇಲಿಯನ್ (ಕನ್ನಡದಲ್ಲಿ “ಹೂ ಹುಡುಗಿ” ಎಂದು ಪ್ರಖ್ಯಾತವಾಗಿರುವ ನಾಟಕ), ಕುವೆಂಪು ವಿರಚಿತ  “ಸ್ಮಶಾನ ಕುರುಕ್ಷೇತ್ರ”  ಮುಂತಾದವುಗಳು  ಅಂಥ ಪ್ರಸಿದ್ಧವಾದ ರಂಗಪ್ರಯೊಗಗಳು.

ಒಂದು ನಾಟಕವು ರಂಗಪ್ರಯೊಗಕ್ಕೆ ಅನುಕೂಲವಾದುದಾಗಿರಲಿ ಅಲ್ಲದಿರಲಿ, ಅದರಲ್ಲಿ  ಒಂದು ಕಥೆಯಿದ್ದರೆ ಮತ್ತು   ಸಂಭಾಷಣೆಯ ಮೂಲಕ ಆ ಕಥೆ ನಡೆಯುವುದನ್ನು ಓದಿನ ಮೂಲಕ ಕಾಣಬಹುದಾಗಿದ್ದರೆ, ಅದನ್ನು ನಾವು ಓದಿ ಆನಂದಿಸಬಹುದಾಗಿದೆ. ನಾಟಕವನ್ನು ಕೇವಲ ರಂಗಪ್ರಯೊಗದ ದೃಷ್ಟಿಯಿಂದ ನೋಡದೆ, ಸಾಹಿತ್ಯವೆಂದು ಪರಿಗಣಿಸಬೇಕಾದ್ದು ಅಗತ್ಯ. ಆದ್ದರಿಂದ ಮಕ್ಕಳು ಆ ಭಾವನೆಯಿಂದ  ನಾಟಕ  ಓದುವ  ಅಭ್ಯಾಸವನ್ನು  ಚಿಕ್ಕಂದಿನಲ್ಲಿಯೆ  ಬೆಳೆಸಬೇಕು.

ಭಾಷೆಯನ್ನು ಹೇಗೆ ಕಲಿಯಬೇಕೋ ಹಾಗೆ ಕಲಿಯುವಲ್ಲಿ  ನಾಟಕಗಳು ಬಹಳ ಉಪಯೊಗಕಾರಿ. ಮಕ್ಕಳು ಯಾಕೆ ಚಲೋದಾಗಿ ಮಾತಾಡುವುದಿಲ್ಲ, ಭಾಷೆಯನ್ನು ಕಲಿಯಲು ಯಾಕೆ ತ್ರಾಸಪಡುತ್ತಾರೆ ಎಂದು ನಾನು ಎಷ್ಟೋ ವರ್ಷಗಳಿಂದ ಚಿಂತಿಸಿದ್ದೇನೆ. ಈ ಸಮಸ್ಯೆಗೆ ಶೈಕ್ಷಣಿಕ ಚೌಕಟ್ಟಿನೊಳಗೆ ಏನು ಮಾಡಬಹುದು ಎಂಬ ಬಗ್ಗೆ  ಬಹಳ ಚಿಂತನೆ ನಡೆಸಿದ್ದೇನೆ. ಕೆಲವು ವರ್ಷಗಳ ಭಾಷಾಭ್ಯಾಸದ ನಂತರ ಕೂಡ ಉಚ್ಚಾರ ದೋಷಗಳು, ವ್ಯಾಕರಣದೋಷಗಳು ಸಾಮಾನ್ಯ. ಕೇಳುವವರಿಗೆ ಸ್ಪಷ್ಟವಾಗಿ ಕೇಳಿಸುವಂತೆ ಮತ್ತ  ಸ್ಪಷ್ಟವಾಗಿ ಅರ್ಥವಾಗುವಂತೆ ಭಾಷೆಯನ್ನು ಆಡುವವರ ಸಂಖ್ಯೆ ಯಾಕಿಷ್ಟು ಕಡಿಮೆ? ಭಾಷೆಯ ಬಳಕೆಯಲ್ಲಿನ ಬಹಳಷ್ಟು ಕುಂದುಕೊರತೆಗಳಿಗೆ ಶಾಲೆಯಲ್ಲಿ ಭಾಷೆಯನ್ನು ಕಲಿಸುವುದರಲ್ಲಿರುವ ದೋಷಗಳೇ ಕಾರಣ. ವಿಖ್ಯಾತ ಶಿಕ್ಷಣನೊಬ್ಬ ಹೇಳಿದ್ದಾನೆ, “ನಮ್ಮ ಮಕ್ಕಳಿಗೆ ಭಾಷೆ ಕಲಿಸಲು ಶಾಲೆಗಳಿರುವಂತೆ, ನಡೆಯುವುದನ್ನು ಕಲಿಸಲು ಕೂಡ ಶಾಲೆಗಳಿರುತ್ತಿದ್ದರೆ, ಅವರೆಲ್ಲ ಹೆಳವರಾಗುತ್ತಿದ್ದರು.”

ಮಾತು ವಾಕ್ಯಗಳ ರೂಪದಲ್ಲಿರುತ್ತದೆ. ವಾಕ್ಯವನ್ನು ನಾವು ಆಡುವುದು ಅಥವಾ ಓದುವುದು “ನುಡಿಗಟ್ಟುಗಳ ಪುಂಜ”ಗಳ ರೂಪದಲ್ಲಿಯೆ ಹೊರತು “ಶಬ್ದದ ನಂತರ ಶಬ್ದ”ವಾಗಿ ಅಲ್ಲ. ಕೆಳಗಿನ ತರಗತಿಗಳಲ್ಲಿ ಓದುವ ಮಕ್ಕಳು ವಾಕ್ಯಗಳನ್ನು ಏರುಪೇರಿಲ್ಲದೆ ಓದುವುದು, ಒಂದು ವಿಚಿತ್ರವಾದ ರಾಗದಲ್ಲಿ ಓದುವುದು ಸಾಮಾನ್ಯ. ತಡೆತಡೆದು, ಅಕ್ಷರ ಅಕ್ಷರವಾಗಿ, ಶಬ್ದ ಶಬ್ದವಾಗಿ ಓದುವುದು ಕೂಡ ಸಾಮಾನ್ಯ. ಇದಕ್ಕೆ ಶಿಕ್ಷಕರು ಸರಿಯಾದ ರೀತಿಯಲ್ಲಿ ಭಾಷೆಯನ್ನು ಓದಲು ಕಲಿಸದಿರುವುದೇ ಕಾರಣ. ಓದುವಿಕೆಯು ಹತ್ತಿರ ಹತ್ತಿರ ಮಾತಿನ ಧಾಟಿಯಲ್ಲಿಯೆ ಇರಬೇಕು. ತಾಯಿ ತಂದೆಯರಿಂದ ಮಗು ಭಾಷೆಯನ್ನು ಕಲಿತು ಆಡುವ ಧಾಟಿಯಲ್ಲಿ ಇರಬೇಕು.

ಇಂಥ ತರಬೇತಿಯನ್ನು ನೀಡುವಲ್ಲಿ ನಾಟಕಗಳು ಬಹಳ ಸಹಕಾರಿ. ಮಕ್ಕಳು ಇಷ್ಟಪಡುವ ನಾಟಕಗಳನ್ನು ತರಗತಿಗಳಲ್ಲಿ ಒಂದು ಪಾಠವಾಗಿ ಆಡಬಹುದು. ಇಡೀ ಶಾಲೆಗೆ ಆಡಿ ತೋರಿಸಿದರೆ, ಅದೊಂದು ಭಾಷಾ ಪಾಠವಾಗಬಹುದು. ಭಾಷೆಯನ್ನು ಹೇಗೆ ಸರಿಯಾಗಿ ಆಡಬೇಕು ಎನ್ನುವ ತರಬೇತಿಯನ್ನು ನೀಡುವಲ್ಲಿ ನಾಟಕಗಳಿಗೆ ಸರಿಸಾಟಿ ಬೇರೆ ಇಲ್ಲ. ಮಕ್ಕಳು ತಮ್ಮ ಪಠ್ಯ ಪುಸ್ತಕದಲ್ಲಿರುವ ಯಾವ ಪಾಠಗಳನ್ನು ಮರಳಿ ಮರಳಿ ಓದುತ್ತಾರೆ ಎಂದು ಪಾಲಕರು ಮತ್ತು ಶಿಕ್ಷಕರು ವಿಚಾರಿಸಿ ನೋಡಿದರೆ, ನಾಟಕಗಳನ್ನು ಎಂದು  ಕಂಡುಕೊಳ್ಳಬಹುದು. ಪಾತ್ರಗಳನ್ನು ಹಂಚಿಕೊಟ್ಟು ಮಕ್ಕಳಿಂದ ಓದಿಸಿದರೆ, ಅವರಿಗೆ ಅದರಿಂದ ಬಹಳ ಮುದ ಸಿಗುತ್ತದೆ. ಅದು ಎಂದೆಂದೂ ಮರೆಯದಂತಹ  ಅನುಭವವಾಗುತ್ತದೆ. ವ್ಯಾಕರಣ ಅಭ್ಯಾಸದ ಮೂಲಕ ಭಾಷೆಯ ಮೇಲೆ ಪ್ರಭುತ್ವ ಬರುವುದಿಲ್ಲ. ವ್ಯಾಕರಣಬದ್ಧ ವಾಕ್ಯಸೂತ್ರಗಳ ಪ್ರಕಾರ  ನೂರಾರು ವಾಕ್ಯಗಳನ್ನು ರಚಿಸಿ ಮುದ್ರಿಸಿಕೊಟ್ಟರೆ ಭಾಷೆಯನ್ನು ಸುಲಲಿತವಾಗಿ ಆಡಲು ಬರೆಯಲು ಬರುವುದಿಲ್ಲ.  ಭಾಷೆಯನ್ನು ಸುಲಲಿತವಾಗಿ ಆಡಲು ಬರಬೇಕಾದರೆ, ಭಾಷೆಯು ನಮ್ಮ ಚಿಂತನೆಯಾಗಿ ಹೊರಬರಬೇಕು. ನಾವು ಆಡುವ ವಾಕ್ಯ ನಮ್ಮ ವಾಕ್ಯವಾಗಿರಬೇಕು.

ಈ ನಾಟಕಗಳ ಬರವಣಿಗೆಯಲ್ಲಿ ನನಗನಿಸಿದ್ದು, ಇದೇ ರೀತಿ ಮಕ್ಕಳು ಕೂಡ ತಮಗೆ ಸಿಕ್ಕಿದ ಕಥೆಗಳನ್ನು ಹೆಕ್ಕಿಕೊಂಡು ಐದು-ಹತ್ತು-ಹದಿನೈದು ನಿಮಿಷಗಳ ಕಥೆಯನ್ನು ಹೆಣೆಯಬಹುದು ಎಂದು. ಪುಟ್ಟ ಪುಟ್ಟ  ಮಕ್ಕಳ ಕಥೆಗಳು ಹೇರಳವಾಗಿ ಸಿಗುತ್ತವೆ. ಒಂದು ಪರಿಪೂರ್ಣ ನಾಟಕವಾಗುವಂಥ ವಸ್ತು ಅವುಗಳಲ್ಲಿ  ಇರುವುದಿಲ್ಲ . ಆದರೆ ಮಕ್ಕಳಿಗೆ ಅವುಗಳ ಮೂಲಕ ಸಂಭಾಷಣೆಯನ್ನು ರಚಿಸುವ ತರಬೇತಿಯನ್ನು ನೀಡಲು ಸಾಧ್ಯವಿದೆ. ಇದನ್ನು ಇಬ್ಬರು ಮೂವರು ಸೇರಿ ಕೂಡ ಮಾಡಬಹುದು. ಇಂಥ ತರಬೇತಿಯ ಲಾಭ ಬಹಳ. ನಾಟಕಗಳಲ್ಲಿ ಪಾತ್ರಗಳು ಆಡುವ ಮಾತುಗಳು ಮತ್ತು ನಾವು ನಮ್ಮ ದಿನದಿನದ ಬದುಕಿನಲ್ಲಿ ಆಡುವ ಮಾತುಗಳೇ ಆಗಿರುತ್ತವೆ ಎಂಬುದನ್ನು ಮಕ್ಕಳು ಗುರುತಿಸುತ್ತಾರೆ. ಭಾಷೆಯನ್ನು ಪ್ರೀತಿಸಲು ಕಲಿಯುತ್ತಾರೆ. ಭಾಷೆ ಮತ್ತ್ತು ಚಿಂತನೆ ಎಲ್ಲಾ ಕಲಿಕೆಯ ಅಡಿಗಲ್ಲು. ಭಾಷೆ ಸಶಕ್ತವಾಗಿದ್ದರೆ, ಕಲಿಕೆ ಸಶಕ್ತವಾಗಿರುತ್ತದೆ.

ನಾನು ಮಕ್ಕಳಿಗೆ ಹೇಳಬಯಸುತ್ತೇನೆ, ಏನೆಂದರೆ, ನಾನು ಬರೆದಂತೆ ನೀವು ಕೂಡ ನಾಟಕ ಬರೆಯಬಹುದು. ನಿಮ್ಮಿಂದ ಸಾಧ್ಯವಿದೆ. ಪ್ರಯತ್ನಿಸಿ. ನಾಟಕಗಳ ಮೂಲಕ ಭಾಷೆ ಕಲಿಯಿರಿ.  ನಾಟಕಗಳ ಮೂಲಕ ಒಳ್ಳೆಯ ಮಾತುಗಾರರಾಗಿ.

ಈ ನಾಟಕಗಳನ್ನು ಪ್ರಯೊಗಿಸಲು ರಂಗಪರಿಕರಗಳಿಂದ ಕೂಡಿರುವ ಸುಸಜ್ಜಿತ ರಂಗಮಂದಿರವೇ ಬೇಕೆಂದಿಲ್ಲ. ಒಂದು ತರಗತಿಯ ಮಕ್ಕಳು ಇವುಗಳನ್ನು  ಶಾಲಾ ರಂಗಮಂದಿರದಲ್ಲಿ  ಅಥವಾ ತಂತಮ್ಮ  ತರಗತಿಯಲ್ಲಿ  ಯಾವ ರಂಗಸಜ್ಜಿಕೆಯೂ ಇಲ್ಲದೆ ಪ್ರಯೊಗಿಸಬಹುದು. ಅದು ಪೂರ್ಣ ಪ್ರಮಾಣದ ನಾಟಕ ಪ್ರಯೊಗವೇ ಆಗಬೇಕೆಂದಿಲ್ಲ. ಅದೊಂದು ವೈನೋದಿಕ ಭಾಷಾ ಪಾಠ ಕೂಡ ಆಗಬಹುದು.

ಒಂದು ಭಾಷೆ ಮತ್ತು ಅದರ ಸಾಹಿತ್ಯವನ್ನು  ಪ್ರೀತಿಸುವಂತೆ ಮಾಡುವ ಕೆಲಸವನ್ನು  ಕಥೆಗಳು ಮತ್ತು  ನಾಟಕಗಳಷ್ಟು ಚಲೋದಾಗಿಯೂ ಪರಿಣಾಮಕಾರಿಯಾಗಿಯೂ ಮಾಡುವ ಮಾಧ್ಯಮ ಇನ್ನೊಂದಿಲ್ಲ.  ನಾಟಕಗಳನ್ನು ಕೂಡ ಕಥೆಯಂತೆ  ಓದಬಹುದಾಗಿದೆ. ನಾಟಕವನ್ನು ಓದುವ  ಮತ್ತು ವೀಕ್ಷಿಸುವ ಮೂಲಕ ಭಾಷೆಯನ್ನು  ಮಖಿಕವಾಗಿ ಬಳಸುವ  ಪರಿಣತಿ ಮಕ್ಕಳಿಗೆ ಲಭಿಸುತ್ತದೆ.

ಶಾಲೆಯಲ್ಲಿ ಭಾಷಾ ಪಾಠದ ಒಂದು ಭಾಗವಾಗಿ ನಾಟಕವನ್ನು  ಓದುವಂಥ ಆಸಕ್ತಿಯನ್ನು ಮಕ್ಕಳಲ್ಲಿ ಹುಟ್ಟಿಸಬೇಕು. ಸ್ಪಷ್ಟ, ಶುದ್ಧ  ಉಚ್ಚಾರಣೆ, ಮಾತಿನ ಲಯ ಮುಂತಾದುವುಗಳನ್ನಲ್ಲದೆ,  ಸಂಭಾಷಣಾ ಚಾತುರ್ಯವನ್ನು ಮಕ್ಕಳು ನಾಟಕಗಳ ಮೂಲಕ ಕಲಿಯಬಹುದಾಗಿದೆ.  ಆದುದರಿಂದ ನಾಟಕದ ಪಾತ್ರಗಳನ್ನು ಮಕ್ಕಳ ನಡುವೆ ಹಂಚಿ ಓದಿಸುವ ಚಟುವಟಿಕೆಗಳನ್ನು ಶಾಲೆಗಳಲ್ಲಿ ನಡೆಸಬೇಕು. ಸಾಧ್ಯವಾದರೆ ಆಗಾಗ ಶಾಲಾ ರಂಗಭೂಮಿಯಲ್ಲಿ ಪ್ರದರ್ಶನಗಳನ್ನೇರ್ಪಡಿಸಬೇಕು.  ಹಾಗೆ ಮಾಡಿದಾಗ ಏಕ ಕಾಲದಲ್ಲಿಯೆ ನೂರಾರು ಮಕ್ಕಳಿಗೆ ಒಂದು ಅಪೂರ್ವವಾದ ಭಾಷಾಪಾಠ ಲಭ್ಯವಾಗುತ್ತದೆ. ಶಾಲಾ ರಂಗಭೂಮಿಯಲ್ಲಿ ನಾಟಕವನ್ನು ಪ್ರದರ್ಶಿಸಿದ ಬಳಿಕ ನಾಟಕದ ಪಠ್ಯವನ್ನು ಮಕ್ಕಳಿಗೆ ಒದಗಿಸಬೇಕಾದ್ದು ಅತಿ ಅಗತ್ಯ. ಈ ರೀತಿಯಲ್ಲಿ, ಶಾಲಾ ತರಗತಿಯಲ್ಲಿ ನಡೆಯುವ ಹಲವು ಔಪಚಾರಿಕ ಭಾಷಾಪಾಠಗಳು ಏನು  ಸಾಧಿಸುತ್ತವೆಯೊ ಅದನ್ನು ಅದಕ್ಕಿಂತ ಪರಿಣಾಮಕಾರಿಯಾಗಿ ಒಂದು ನಾಟಕ ಸಾಧಿಸಬಹುದು.

ಕೆ.ಟಿ.ಗಟ್ಟಿ