Categories
e-ದಿನ

ಜನವರಿ-07

ಪ್ರಮುಖಘಟನಾವಳಿಗಳು:

1610: ಪ್ರಖ್ಯಾತ ಖಗೋಳ ಶಾಸ್ತ್ರಜ್ಞರಾದ ಗೆಲಿಲಿಯೋ ಗೆಲಿಲಿ ಅವರು ಮುಂದೆ ಗೆಲಿಲಿಯನ್ ಮೂನ್ಸ್ ಎಂದೇ ಪ್ರಖ್ಯಾತವಾದ ಗ್ಯಾನಿಮೇಡ್, ಕಾಲಿಸ್ಟೋ, ಲೋ ಮತ್ತು ಯುರೋಪಾ ಚಂದ್ರರತ್ತ ಮೊದಲ ದೃಷ್ಟಿ ಹಾಯಿಸಿದರು. ಮೊದಲಿಗೆ ಲೋ ಮತ್ತು ಯುರೋಪಾ ಅವರಿಗೆ ಎರಡನ್ನೂ ಪ್ರತ್ಯೇಕಿಸಿಕೊಳ್ಳಲಿಕ್ಕೆ ಸಾಧ್ಯವಾಗದಿದ್ದರೂ, ಮಾರನೆಯ ದಿನ ಅವರಿಗೆ ಅದು ಸಾಧ್ಯವಾಯಿತು.

1782: ಅಮೆರಿಕಾದ ಮೊದಲ ವಾಣಿಜ್ಯ ಬ್ಯಾಂಕ್ ‘ಬ್ಯಾಂಕ್ ಆಫ್ ನಾರ್ತ್ ಅಮೆರಿಕ’ ಫಿಲೆಡೆಲ್ಫಿಯಾದಲ್ಲಿ ಕಾರ್ಯಾರಂಭ ಮಾಡಿತು. ಇದರ ಷೇರುಗಳು ಮಾರಾಟವಾದಾಗ, ಅದು ದೇಶದ ಮೊದಲ ಸಾರ್ವಜನಿಕ ಒಡೆತನದ ಪದ್ದತಿಗೆ ನಾಂದಿಯಾಯಿತು. 1791ರವರೆಗೆ ಇದು ಅಘೋಷಿತ ಅಮೆರಿಕದ ಸೆಂಟ್ರಲ್ ಬ್ಯಾಂಕ್ ಆಗಿತ್ತು.

1785: ಫ್ರಾನ್ಸಿನ ಜೀನ್ ಪಿಯೆರ್ ಬ್ಲಾನ್ಚರ್ಡ್ ಮತ್ತು ಅಮೇರಿಕಾದ ಜಾನ್ ಜೆಫ್ರೀಸ್ ಜೋಡಿ ಇಗ್ಲೆಂಡಿನ ಡೋವರ್ ಇಂದ ಫ್ರಾನ್ಸಿನ ಕಲಾಯಿಸ್ ಎಂಬಲ್ಲಿಗೆ, ಗಾಳಿ ತುಂಬಿದ ಬಲೂನಿನ ಮೂಲಕ ಯಶಸ್ವಿ ಪಯಣ ಕೈಗೊಂಡರು.

1789: ಅಮೆರಿಕದ ಮೊದಲ ಅಧ್ಯಕ್ಷರಾಗಿ ಜಾರ್ಜ್ ವಾಷಿಂಗ್ಟನ್ ಆಯ್ಕೆಗೊಂಡರು. ಅವರು ಅಧಿಕಾರ ಸ್ವೀಕರಿಸಿದ್ದು ಏಪ್ರಿಲ್ 30ರಂದು. ಇವರು 1797ರ ಮಾರ್ಚ್ 03 ರವರೆಗೆ ಅಧ್ಯಕ್ಷರಾಗಿದ್ದರು.

1857: ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಅಥವಾ ಸಿಪಾಯಿ ದಂಗೆಯಲ್ಲಿ ಪಾಲ್ಗೊಂಡ್ದದಕ್ಕಾಗಿ ಕೊನೆಯ ಮೊಘಲ್ ಚಕ್ರವರ್ತಿ ಎರಡನೆಯ ಬಹಾದುರ್ ಶಹಾ ಅವರ ಮೇಲೆ ವಿಚಾರಣೆ ಆರಂಭವಾಯಿತು.

1894: ಫ್ರೆಂಚ್ ಮೂಲದವರಾಗಿ ಥಾಮಸ್ ಆಲ್ವಾ ಎಡಿಸನ್ ಅವರ ಸಂಸ್ಥೆಯಲ್ಲಿ ತಂತ್ರಜ್ಞರಾದ ವಿಲಿಯಂ ಕೆನ್ನೆಡಿ ಡಿಕ್ಸನ್ ಅವರು, ಚಲನಚಿತ್ರಗಳನ್ನು ಚಿತ್ರೀಕರಿಸುವ ಕಿನೆಟೋಸ್ಕೋಪ್ ತಯಾರಿಯಲ್ಲಿ ಪಾಲ್ಗೊಂಡು ಅದಕ್ಕೆ ಅಗತ್ಯವಾದ ಸೇಲ್ಯುಲಾಯ್ಡ್ ಫಿಲಂ ಅನ್ನು ಅನ್ವೇಷಿಸಿದರು. ಇದಕ್ಕೆ ಅವರು 1894ರ ವರ್ಷದಲ್ಲಿ ಪೇಟೆಂಟ್ ಪಡೆದರು.

1904: ರೇಡಿಯೋ ವೈರ್ಲೆಸ್ ತರಂಗಗಳ ಮೂಲಕ ಗಂಭೀರ ಪರಿಸ್ಥಿತಿಗಳು ಎದುರಾದಾಗ ಉಪಯುಕ್ತವಾದ ’CQD’ ಸಂಜ್ಞೆಗಳ ಉಪಯೋಗ ಮಾರ್ಕೋನಿ ಇಂಟರ್ ನ್ಯಾಷನಲ್ ಮೆರಿನ್ ಕಾಮ್ಯೂನಿಕೇಶನ್ ಕಂಪೆನಿಯಿಂದ ಜಾರಿಗೆ ಬಂತು. ಇದರ ಅರ್ಥ ‘All Stations: distress’ ಎಂಬುದಾಗಿತ್ತು. ಇದು ಅಪಾಯದಲ್ಲಿ ಸಿಲುಕುತ್ತಿದ್ದ ನೌಕೆಗಳಿಗೆ ಬಹು ಉಪಯುಕ್ತವಾಗಿತ್ತು. ಮುಂದೆಯೂ ಅಲ್ಲಲ್ಲಿ ಈ ಸಂಜ್ಞೆಗಳು ಬಳಕೆಯಲ್ಲಿದ್ದರೂ SOS (Save our Ship, Save our Soul, Send out Succour ಇತ್ಯಾದಿ ಅರ್ಥ ಸೂಚಕಗಳ ) ಸಂಜ್ಞೆಗಳು ಹೆಚ್ಚು ಬಳಕೆಯಲ್ಲಿವೆ.

1927: ಅಟ್ಲಾಂಟಿಕ್ ಆಚೆ ಈಚೆಗಿನ ಮೊದಲ ಸಂಪರ್ಕ ದೂರವಾಣಿ ಸೇವೆ ನ್ಯೂಯಾರ್ಕ್ ಮತ್ತು ಲಂಡನ್ ನಗರಗಳ ನಡುವೆ ಆರಂಭಗೊಂಡಿತು.

1931: ಆಸ್ಟ್ರೇಲಿಯಾದ ಗೈ ಮೆನ್ಸೀಸ್ ಅವರು ಏಕಾಂಗಿಯಾಗಿ ಮೊದಲಬಾರಿಗೆ ಟ್ರಾನ್ಸ್-ಟಾಸ್ಮಾನ್ (ಆಸ್ಟ್ರೇಲಿಯಾ – ನೂಜಿಲೆಂಡ್) ವಿಮಾನ ಹಾರಾಟ ನಡೆಸಿದರು. 11 ಗಂಟೆ 45 ನಿಮಿಷಗಳ ನಿರಂತರ ಹೋರಾಟವನ್ನು ನಡೆಸಿದ ಅವರು ನ್ಯೂಜಿಲೆಂಡಿನ ಪಶ್ಚಿಮ ತೀರದಲ್ಲಿ ಪ್ರತಿಕೂಲ ಹವಾಮಾನದಿಂದ ಹಠಾತ್ ಭೂಸ್ಪರ್ಶಕ್ಕೀಡಾದರು. ಇದಕ್ಕೆ ಹಿಂದೆ ಸ್ಮಿತ್ ಮತ್ತು ಉಲ್ಮ್ ಎಂಬ ಜೋಡಿ 1928ರ ವರ್ಷದಲ್ಲಿ ದಕ್ಷಿಣದ ಭಾಗದಲ್ಲಿ ಇಂಗ್ಲೆಂಡಿನಿಂದ ಆಸ್ಟ್ರೇಲಿಯಾಕ್ಕೆ ಹಾರಿದ್ದರು. ಅನಿರೀಕ್ಷಿತವಾದ ಅಪಘಾತಕ್ಕೀಡಾದರೂ ಮೆನ್ಸೀಸ್ ಅವರು ಸ್ಮಿತ್ ಮತ್ತು ಉಲ್ಮ್ ಜೋಡಿಗಿಂತ ಎರಡೂವರೆ ತಾಸು ಹೆಚ್ಚಿನ ಹಾರಾಟ ನಡೆಸಿದ ಕೀರ್ತಿಗೆ ಪಾತ್ರರಾದರು.

1935: ಇಟಲಿಯ ಸರ್ವಾಧಿಕಾರಿ ಮುಸಲೋನಿ ಮತ್ತು ಫ್ರೆಂಚ್ ವಿದೇಶಾಂಗ ಸಚಿವ ಪಿಯೆರ್ರೆ ಲಾವಲ್ ಅವರ ಜೊತೆ ‘ಫ್ರಾಂಕೋ ಇಟಾಲಿಯನ್ ಒಪ್ಪಂದ’ ಏರ್ಪಟ್ಟಿತು. “ಪ್ರಥಮ ವಿಶ್ವಯುದ್ಧದ ನಂತರದಲ್ಲಿ ಫ್ರಾನ್ಸ್ ಮತ್ತು ಗ್ರೇಟ್ ಬ್ರಿಟನ್ ನಡುವೆ ಹಂಚಿಹೋಗಿದ್ದ ಜರ್ಮನಿ ವಸಾಹತು ಪ್ರದೇಶಗಳನ್ನು ಇಟಲಿಯು ಈ ಯುದ್ದದಲ್ಲಿ ಮಾಡಿದ ಬಲಿದಾನ ಮತ್ತು ಶ್ರಮದ ನೆನಪಿನ ಬಹುಮಾನ ರೂಪವಾಗಿ ಇಂಗ್ಲೆಂಡ್ ಮತ್ತು ಫ್ರಾನ್ಸಿನ ಕೆಲವೊಂದು ಗಡಿನಾಡ ಪ್ರದೇಶಗಳನ್ನು ನೀಡಲಾಗುವುದು” ಎಂಬುದು ಈ ಒಪ್ಪಂದದ ತಿರುಳಾಗಿತ್ತು.

1945: ಬ್ರಿಟಿಷ್ ಜನರಲ್ ಬೆನಾರ್ಡೋ ಮೊಂಟಗೋಮೆರಿ ಅವರು ಜರ್ಮನಿಯ ಪ್ರಾಬಲ್ಯವನ್ನು ಬಹುತೇಕವಾಗಿ ಮುರಿದ ‘ಬ್ಯಾಟಲ್ ಆಫ್ ದಿ ಬಲ್ಜ್’ ವಿಜಯದ ಯಶಸ್ಸು ನನಗೇ ಸಲ್ಲಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಾದಿಸಿದರು. ಪಶ್ಚಿಮದಲ್ಲಿ ಬೆಲ್ಜಿಯಂನ ವಲ್ಲೋನಿಯಾ, ಫ್ರಾನ್ಸ್, ಲುಕ್ಸೆಮ್ಬರ್ಗ್ ಮುಂತಾದ ದಟ್ಟ ಕಾಡುಪ್ರದೇಶಗಳ ನಡುವೆ ಜರುಗಿದ ಈ ಯುದ್ಧದಲ್ಲಿ ಜರ್ಮನಿಗೆ ಉಂಟಾದ ಭೀಕರ ನಷ್ಟಗಳ ಜೊತೆ ಜೊತೆಗೆ ಅಮೆರಿಕ ಪಡೆ ಕೂಡಾ ಅತೀವ ಕಷ್ಟನಷ್ಟಗಳಿಗೆ ಈಡಾಯಿತು.

1948: ಕೆಂಟಕಿ ಏರ್ ನ್ಯಾಷನಲ್ ಗಾರ್ಡಿನ ಚಾಲಕ ಥಾಮಸ್ ಮಾಂಟೆಲ್ ಅವರು UFO ಎನ್ನಲಾಗುವ ಗುರುತಿಸಲಾಗದ ಹಾರುವ ವಸ್ತುಗಳನ್ನು (Unidentified Flying Objects) ಹಿಡಿಯಹೋಗಿ ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಂಡರು.

1954: ಯಾಂತ್ರಿಕ ಭಾಷಾ ಅನುವಾದ ವ್ಯವಸ್ಥೆಯನ್ನು (Machine Translation System) ಮೊಟ್ಟ ಮೊದಲಬಾರಿಗೆ ಸಾರ್ವಜನಿಕವಾಗಿ ನ್ಯೂಯಾರ್ಕ್ನಲ್ಲಿರುವ ಐಬಿಎಮ್ ಪ್ರಧಾನ ಕಚೇರಿಯಲ್ಲಿ ಪ್ರದರ್ಶಿಸಲಾಯಿತು.

1968: ಸರ್ವೇಯರ್ ಸರಣಿಯ ಕೊನೆಯ ಗಗನನೌಕೆಯಾದ ‘ಸರ್ವೇಯರ್ 07’ ಕೇಪ್ ಕಾರ್ನಿವಲ್ ನಲ್ಲಿರುವ ಲಾಂಚ್ ಕಾಂಪ್ಲೆಕ್ಸಿನಿಂದ ನಭಕ್ಕೆ ಚಿಮ್ಮಿತು.

1985: ಜಪಾನ್ ದೇಶ ತನ್ನ ಪ್ರಥಮ ಅಂತರಗ್ರಹ ಸಂಚಾರಿ ಉಪಗ್ರಹವಾದ ‘ಸಕಿಗಾಕೆ’ ಅನ್ನು ಉಡಾಯಿಸಿತು. ಅಮೆರಿಕ ಮತ್ತು ಸೋವಿಯತ್ ಯೂನಿಯನ್ ಹೊರತು ಇನ್ಯಾವುದೇ ದೇಶ ಕೈಗೊಂಡ ಆಳವಾದ (space probe) ಬಾಹ್ಯಾಕಾಶ ಅನ್ವೇಷಣೆಯಲ್ಲಿ ಇದು ಪ್ರಥಮದ್ದಾಗಿದೆ.

2006: ಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್.ಆರ್.ರಾವ್ ಮತ್ತು ವಿಪ್ರೊ ಸಂಸ್ಥೆಯ ಮುಖ್ಯಸ್ಥರಾದ ಅಜೀಂ ಎಚ್. ಪ್ರೇಮ್ ಜಿ ಅವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಸೈನ್ಸ್ ಪದವಿ ಪ್ರದಾನ ಮಾಡಲಾಯಿತು. ರಾಜ್ಯಪಾಲ ಟಿ.ಎನ್. ಚತುರ್ವೇದಿ ಪ್ರಶಸ್ತಿ ಪ್ರದಾನ ಮಾಡಿದರು.

2006: ಸಾಗರೋತ್ತರ ಭಾರತೀಯರಿಗೆ ಆಗಾಗ ವೀಸಾ ಪಡೆಯಲು ಇದ್ದ ಕಿರಿಕಿರಿ ನಿವಾರಿಸಲು ಅಜೀವ ಪರ್ಯಂತ ಪ್ರವೇಶ ವೀಸಾ ಸೌಲಭ್ಯ ನೀಡುವ ಭಾರತ ಸಾಗರೋತ್ತರ ನಾಗರಿಕ (ಒಸಿಐ) ಯೋಜನೆಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಹೈದರಾಬಾದಿನ ಅನಿವಾಸಿ ಭಾರತೀಯ ನಿವಾಸಿ ಸಮಾವೇಶದಲ್ಲಿ ಚಾಲನೆ ನೀಡಿದರು. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಾದ ನಿವೃತಿ ರಾಯ್ ಮತ್ತು ಇಫ್ತಿಕಾರ್ ಷರೀಫ್ ಅವರಿಗೆ ಅನಿವಾಸಿ ಭಾರತೀಯ ಪೌರತ್ವ ಚೀಟಿಗಳನ್ನು ಪ್ರಧಾನಿ ಹಸ್ತಾಂತರಿಸಿದರು.

2007: ಜೈವಿಕ ತಂತ್ರಜ್ಞಾನ ಕಾರ್ಯದರ್ಶಿಗಳಾಗಿದ್ದ ಡಾ. ಎಂ.ಕೆ. ಭಾನ್ ಅವರನ್ನು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ (ಸಿ.ಎಸ್.ಐ.ಆರ್) ಮಹಾನಿರ್ದೇಶಕರನ್ನಾಗಿ ನೇಮಕ ಮಾಡಲಾಯಿತು.

2008: ಕುಟುಂಬಕ್ಕೆ ಒಂದೇ ಮಗು ಕಾಯ್ದೆಯನ್ನು ಉಲ್ಲಂಘಿಸಿದ ಚೀನಾದಲ್ಲಿನ ಹುಬೈ ಪ್ರಾಂತ್ಯದ 500 ಸದಸ್ಯರನ್ನು ಕಮ್ಯುನಿಸ್ಟ್ ಪಕ್ಷ ಉಚ್ಛಾಟಿಸಿತು. ಕಮ್ಯುನಿಸ್ಟ್ ಸದಸ್ಯರಲ್ಲದೆ ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ಸೇರಿದಂತೆ ಸುಮಾರು ಒಂದು ಲಕ್ಷ ಕುಟುಂಬಗಳು ಈ ನೀತಿಯನ್ನು ಉಲ್ಲಂಘಿಸಿದ್ದಾರೆ.

2009:  ಸತ್ಯಂ ಕಂಪ್ಯೂಟರ್ ಸರ್ವಿಸಸ್ ಲಿಮಿಟೆಡ್ ಸಂಸ್ಥೆಯ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ರಾಮಲಿಂಗರಾಜು, ತಾವು ಸಂಸ್ಥೆಗೆ ಹಲವು ಸಹಸ್ರ ಕೋಟಿಯಷ್ಟು ಮೋಸ ಎಸಗಿರುವುದಾಗಿ ನಿರ್ದೇಶಕರಿಗೆ ಸುದೀರ್ಘ ಪತ್ರ ಬರೆದು, ತಮ್ಮ ರಾಜೀನಾಮೆಯನ್ನೂ ಸಲ್ಲಿಸಿದರು.

2009: ಸಿದ್ದಾರ್ಥ ವಿಹಾರ ಟ್ರಸ್ಟ್ ಸಂಸ್ಥೆಯ ವತಿಯಿಂದ ನಿರ್ಮಾಣಗೊಂಡಿರುವ ಬುದ್ಧ ವಿಹಾರವನ್ನು ಕಲ್ಬುರ್ಗಿ ಸಮೀಪದಲ್ಲಿನ ಕುಸನೂರು ಬಳಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಉದ್ಘಾಟಿಸಿದರು.

2009: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತೀಯ ಮೂಲಸಂಜಾತ ಸಂಜಯ್ ಗುಪ್ತ ಅವರನ್ನು ಅಮೇರಿಕಾದ ಸರ್ಜನ್ ಜನರಲ್ ಆಗಿ ನೇಮಕ ಮಾಡಿದ್ದಾರೆ.

ಪ್ರಮುಖಜನನ/ಮರಣ:

1827: ಕೆನಡಾದ ತಂತ್ರಜ್ಞ ಮತ್ತು ಸಂಶೋಧಕ ಸ್ಟಾಂಡ್ ಫೋರ್ಡ್ ಫ್ಲೆಮಿಂಗ್ ಅವರು ಸ್ಕಾಟ್ ಲ್ಯಾಂಡ್ ದೇಶದ ಫಿಫೆ ಬಳಿಯ ಕಿರ್ಕ್ ಕಾಲ್ಡಿ ಎಂಬಲ್ಲಿ ಜನಿಸಿದರು. ಹದಿನೆಂಟನೆಯ ವಯಸ್ಸಿನಲ್ಲಿ ಇವರು ಕೆನಡಾಗೆ ವಲಸೆ ಬಂದರು. ಸಂಶೋಧಕರಾದ ಇವರು ವಿಶ್ವವನ್ನು ‘ವ್ಯವಸ್ಥಿತ ಕಾಲಮಾನ ಪ್ರದೇಶ’ (standard time zone)ಗಳಾಗಿ ವಿಂಗಡಿಸುವ ಪಸ್ತಾಪವನ್ನು ಮಂಡಿಸಿದರು. ಕೆನಡಾದ ಮೊದಲ ಅಂಚೆ ಚೀಟಿಯನ್ನು ರೂಪಿಸಿದರು. ಭೂಮಾಪನ ಮತ್ತು ಭೂನಕ್ಷೆ ತಯಾರಿಸುವ ವ್ಯವಸ್ಥೆ ಜಾರಿಗೆ ತಂದರು. ಬಹುತೇಕ ಇಂಟರ್ ಕೋಲೋನಿಯಲ್ ರೈಲ್ವೆ ಮತ್ತು ಕೆನಡಿಯನ್ ಪಸಿಫಿಕ್ ರೈಲ್ವೆ ವ್ಯವಸ್ಥೆಯನ್ನು ರೂಪಿಸಿದರು. 1915ರಲ್ಲಿ ನಿಧನರಾದ ಇವರು ‘ರಾಯಲ್ ಸೊಸೈಟಿ ಆಫ್ ಕೆನಡಾ’ ಸಂಸ್ಥಾಪಕ ಸದಸ್ಯರಾಗಿ ಮತ್ತು ‘ರಾಯಲ್ ಕೆನಡಿಯನ್ ಇನ್ಸ್ಟಿಟ್ಯೂಟ್’ ಸಂಸ್ಥಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

1909: ‘ಫಿಯರ್ ಲೆಸ್ ನಾಡಿಯಾ’ ಎಂದೇ ಖ್ಯಾತಿ ಪಡೆದಿದ್ದ ಭಾರತದ ಚಿತ್ರನಟಿ ಮೇರಿ ಈವಾನ್ಸ್ ನಾಡಿಯಾ ಅವರು ಆಸ್ಟ್ರೇಲಿಯಾದ ಪರ್ತ್ ನಗರದಲ್ಲಿ ಜನಿಸಿದರು. ಚಿಕ್ಕಂದಿನಲ್ಲೇ ತಂದೆಯೊಂದಿಗೆ ಭಾರತಕ್ಕೆ ಬಂದು, ಬ್ಯಾಲೆ ನರ್ತಕಿಯಾಗಿ, ರಂಗ ಕಲಾವಿದೆಯಾಗಿ, ಝರ್ಕೋ ಸರ್ಕಸ್ ಕಲಾವಿದೆಯಾಗಿ ಮತ್ತು ಚಲನಚಿತ್ರ ನಟಿಯಾಗಿ ಖ್ಯಾತಿ ಗಳಿಸಿದ್ದರು.

1912: ಪ್ರಸಿದ್ಧ ವ್ಯಂಗ್ಯಚಿತ್ರ ಸರಣಿ ‘ದಿ ಆಡಮ್ಸ್ ಫ್ಯಾಮಿಲಿ’ ಸೃಷ್ಟಿಕರ್ತ ಚಾರ್ಲ್ಸ್ ಆಡಮ್ಸ್ ಅಮೆರಿಕದ ನ್ಯೂಜೆರ್ಸಿ ಪ್ರಾಂತ್ಯದ ವೆಸ್ಟ್ ಫೀಲ್ಡ್ ಎಂಬಲ್ಲಿ ಜನಿಸಿದರು.

1917: ಕಲಾವಿದ ಮಿಲ್ಟನ್ ರೆಸ್ನಿಕ್ ಅವರು ಉಕ್ರೇನಿನ ಬ್ರಾಟ್ ಸ್ಲಾವ್ ಎಂಬಲ್ಲಿ ಜನಿಸಿದರು. ನ್ಯೂ ಬ್ರೈಡ್, ಪಿಂಕ್ ಫೈರ್, ಎಲೆಫೆಂಟ್, ವೆಡ್ಡಿಂಗ್, ಅರ್ಥ್ ಮುಂತಾದ ಅವರ ಪ್ರಸಿದ್ಧ ಚಿತ್ರಗಳು ಅಮೆರಿಕ ಮತ್ತು ಆಸ್ಟ್ರೇಲಿಯಾದ ಸಂಗ್ರಹಾಲಯಗಳಲ್ಲಿವೆ.

1917: ಸುಪ್ರಸಿದ್ಧ ಹಾರ್ಮೋನಿಯಂ ಕಲಾವಿದ ಪಂಡಿತ್ ರಾಮಭಾವು ಬಿಜಾಪುರೆ ಅವರು ಬೆಳಗಾವಿ ಜಿಲ್ಲೆಯ ಕಾಗವಾಡ ಎಂಬಲ್ಲಿ ಜನಿಸಿದರು. 1953ರಲ್ಲಿ ಅಖಿಲ ಭಾರತೀಯ ಗಂಧರ್ವ ಮಹಾ ವಿದ್ಯಾಲಯದಿಂದ ಸಂಗೀತ ವಿಶಾರದ ಹಾಗೂ ಸಂಗೀತ ಅಲಂಕಾರ (ಹಾರ್ಮೋನಿಯಂ) ಪರೀಕ್ಷೆಯಲ್ಲಿ ಇಡೀ ಭಾರತಕ್ಕೆ ಪ್ರಥಮ ಸ್ಥಾನ ಗಳಿಸಿದ ಕೀರ್ತಿ ಇವರದು. 93 ವರ್ಷ ಜೀವಿಸಿ, ದೇಶದೆಲ್ಲೆಡೆ ಕಾರ್ಯಕ್ರಮ ನೀಡಿ ಪ್ರಸಿದ್ಧರಾದ ಇವರಿಗೆ , ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾತಿಲಕ’, ಸಂಗೀತ ವಿದ್ವಾನ್ ಟಿ. ಚೌಡಯ್ಯ ಪ್ರಶಸ್ತಿ, ಮಹೋಪಾಧ್ಯಾಯ ಬಿರುದು ಮುಂತಾದ ಅನೇಕ ಗೌರವಗಳು ಸಂದಿದ್ದವು.

1925: ಯುನೈಟೆಡ್ ಕಿಂಗ್ಡಂನಲ್ಲಿನ ವಿಶ್ವ ಪ್ರಸಿದ್ಧ ಡರೆಲ್ ವೈಲ್ಡ್ ಲೈಫ್ ಪಾರ್ಕ್ ಸಂಸ್ಥಾಪಕ ಗೆರಾಲ್ಡ್ ಡರೆಲ್ ಅವರು ಜೆಮ್ಶೆಡ್ಪುರದಲ್ಲಿ ಜನಿಸಿದರು. ಪ್ರಕೃತಿ ಪ್ರೇಮಿ, ಪ್ರಾಣಿ ಸಂಗ್ರಹಾಲಯದ ಮುಖ್ಯಸ್ಥರಾಗಿ, ದೂರದರ್ಶನದಲ್ಲಿ ಪ್ರಕೃತಿ ಮತ್ತು ಪ್ರಾಣಿಗಳ ಕುರಿತಾದ ನಿರೂಪಕರಾಗಿ ಪ್ರಸಿದ್ಧರಾದ ಡರೆಲ್ ಹಲವಾರು ಪುಸ್ತಕಗಳನ್ನೂ ರಚಿಸಿದ್ದಾರೆ. ಇವರ ಅಣ್ಣ ಲಾರೆನ್ಸ್ ಡರೆಲ್ ಕಾದಂಬರಿಕಾರರಾಗಿ ಪ್ರಸಿದ್ಧರು.

1938: ಭಾರತೀಯ ಚಲನಚಿತ್ರರಂಗದ ಪ್ರಖ್ಯಾತ ನಟಿ ಬಿ. ಸರೋಜಾದೇವಿ ಅವರು ಬೆಂಗಳೂರಿನಲ್ಲಿ ಜನಿಸಿದರು. ಕನ್ನಡದಲ್ಲಿ ರಾಷ್ಟ್ರಪಶಸ್ತಿ ವಿಜೇತ ಚಿತ್ರ ‘ಕಿತ್ತೂರು ರಾಣಿ ಚೆನ್ನಮ್ಮ’ , ‘ಅಮರಶಿಲ್ಪಿ ಜಕಣಾಚಾರಿ’, ‘ನ್ಯಾಯವೇ ದೇವರು’ ಮುಂತಾದ ಚಿತ್ರಗಳಲ್ಲದೆ, ತಮಿಳು, ತೆಲುಗು, ಹಿಂದೀ ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ. ಅವರಿಗೆ ಪದ್ಮಶ್ರೀ, ಪದ್ಮಭೂಷಣ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಮುಂತಾದ ಅನೇಕ ಗೌರವಗಳು ಸಂದಿವೆ.

1941: ಪ್ರಸಿದ್ಧ ರಸಾಯನ ಶಾಸ್ತ್ರ ವಿಜ್ಞಾನಿ, ಕೇಂಬ್ರಿಡ್ಜ್ ಪ್ರಾಧ್ಯಾಪಕ ಜಾನ್ ಇ. ವಾಕರ್ ಇಂಗ್ಲೆಂಡಿನ ಪಶ್ಚಿಮ ಯಾರ್ಕ್ ಶೈರ್ ಬಳಿಯ ಹ್ಯಾಲಿಫಾಕ್ಸ್ ಎಂಬಲ್ಲಿ ಜನಿಸಿದರು. 1997ರಲ್ಲಿ ರಸಾಯನ ಶಾಸ್ತ್ರದಲ್ಲಿನ ಕೊಡುಗೆಗಾಗಿ ನೊಬೆಲ್ ಪ್ರಶಸ್ತಿ ಸಂದಿದೆ.

1989: ಜಪಾನ್ ಇತಿಹಾಸದಲ್ಲಿ ಅತ್ಯಂತ ದೀರ್ಘಕಾಲ ಆಳ್ವಿಕೆ ನಡೆಸಿದ ಚಕ್ರವರ್ತಿ ಹಿರೊಹಿತೊ ಟೋಕಿಯೋದಲ್ಲಿ ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದರು. ಅವರು 1926ರಿಂದ 1989ರವರೆಗೆ ಜಪಾನನ್ನು ಆಳಿದರು.

2007: ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿ ತೀರ್ಥಹಳ್ಳಿಯ ಸಾವಿತ್ರಮ್ಮ ರಾಮಶರ್ಮ ಶಿವಮೊಗ್ಗದಲ್ಲಿ ನಿಧನರಾದರು. ಮಕ್ಕಳ ಕಲ್ಯಾಣಕ್ಕೆ ಸಲ್ಲಿಸಿದ ಸೇವೆಗಾಗಿ 1982ರಲ್ಲಿ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪಡೆದಿದ್ದರು. ಬಸವಾನಿಯ ಹೊಳೆಕೊಪ್ಪದಲ್ಲಿ ವೃದ್ಧರಿಗಾಗಿ ‘ಅಭಯಾಶ್ರಮ’ ಮತ್ತು ತೀರ್ಥಹಳ್ಳಿಯಲ್ಲಿ ಕಸ್ತೂರಿಬಾ ಆಶ್ರಮ ನಡೆಸಿ ಹೆರಿಗೆ ಸೌಲಭ್ಯ ಕಲ್ಪಿಸಿದ್ದರು. ಅವರ ಪತಿ ವಾಮನಶರ್ಮ ಅವರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು.

2007: 86 ಬಾರಿ ಚುನಾವಣೆಗಳಲ್ಲಿ ಸ್ಪರ್ಧಿಸಿ ‘ಗಿನ್ನೆಸ್’ ದಾಖಲೆ ನಿರ್ಮಿಸಿದ್ದ ‘ಹೊಟ್ಟೆ ಪಕ್ಷ’ದ ರಂಗಸ್ವಾಮಿ ಬೆಂಗಳೂರಿನಲ್ಲಿ ನಿಧನರಾದರು. ಒಂದೂ ಸಲವೂ ಚುನಾವಣೆಯಲ್ಲಿ ಗೆಲುವು ಸಾಧಿಸದಿದ್ದದ್ದು ವಿನೂತನ ವಿಧಾನಗಳ ಮೂಲಕ ಪ್ರಚಾರ ನಡೆಸುತ್ತಿದ್ದುದು ಅವರ ವೈಖರಿಯಾಗಿತ್ತು.