Categories
e-ದಿನ

ಫೆಬ್ರವರಿ-02

ಪ್ರಮುಖಘಟನಾವಳಿಗಳು:

1536: ಸ್ಪೈನಿನ ಪೆಡ್ರೋ ಡಿ. ಮೆಂಡೋಜಾ ಅವರು ಅರ್ಜೆಂಟಿನಾದ ಬ್ಯೂನೋ ಐರ್ಸ್ ಅನ್ವೇಷಿಸಿದರು

1653: ಮುಂದೆ ನ್ಯೂಯಾರ್ಕ್ ನಗರವೆಂದು ಹೆಸರಾದ ನ್ಯೂ ಆಮ್ಸ್ಟರ್ಡ್ಯಾಮ್ ಸ್ಥಾಪನೆಗೊಂಡಿತು

1848: ಕ್ಯಾಲಿಫೋರ್ನಿಯಾದಲ್ಲಿ ಚಿನ್ನದ ಬೃಹತ್ ನಿಕ್ಷೇಪ ಪತ್ತೆಯಾದ ಹಿನ್ನೆಲೆಯಲ್ಲಿ, ಚೀನಾದಿಂದ ವಲಸೆಬಂದ ಗಣಿಕಾರ್ಮಿಕರ ಮೊದಲ ಹಡಗು ಸ್ಯಾನ್ ಫ್ರಾನ್ಸಿಸ್ಕೋ ತಲುಪಿತು

1876: ಅಮೆರಿಕದಲ್ಲಿ ನ್ಯಾಷನಲ್ ಲೀಗ್ ಆಫ್ ಪ್ರೊಫೆಶನಲ್ ಬೇಸ್ ಬಾಲ್ ಕ್ಲಬ್ಸ್ ಆರಂಭಗೊಂಡಿತು. ಇದು ಬೇಸ್ ಬಾಲ್ ಆಟದ ಅತ್ಯಂತ ಮಹತ್ವದ ಲೀಗ್ ಎನಿಸಿದೆ.

1913: ಅಮೆರಿಕದ ಪ್ರಮುಖ ರೈಲು ರಸ್ತೆ ನಿಲ್ದಾಣವಾದ ನ್ಯೂಯಾರ್ಕ್ ಗ್ರಾಂಡ್ ಸೆಂಟ್ರಲ್ ಟರ್ಮಿನಲ್ ಕಾರ್ಯಾರಂಭ ಮಾಡಿತು.

1934: ಎಕ್ಸ್ಪೋರ್ಟ್-ಇಂಪೋರ್ಟ್ ಬ್ಯಾಂಕ್ ಆಫ್ ಯುನೈಟೆಡ್ ಸ್ಟೇಟ್ಸ್ ಸ್ಥಾಪನೆಗೊಂಡಿತು

1934: ಸೋವಿಯತ್ ಸೇನೆಯು ಜರ್ಮನಿಯ ಕೊನೆಯ ಸೇನಾ ತಂಡದ ಶರಣಾಗತಿಯನ್ನು ಅಂಗೀಕರಿಸುವುದರೊಂದಿಗೆ ಸ್ಟಾಲಿನ್ಗ್ರಾಡ್ ಯುದ್ಧವು ಅಂತ್ಯಗೊಂಡಿತು

1971: ಉಗಾಂಡದಲ್ಲಿ ಅಧ್ಯಕ್ಷ ಮಿಲ್ಟನ್ ಒಬೋಟೆ ಸ್ಥಾನದಲ್ಲಿ ಇದಿ ಅಮೀನ್ ಅಧಿಕಾರ ವಹಿಸಿಕೊಂಡ.

1972: ‘ಬ್ಲಡಿ ಸಂಡೆ’ ಪ್ರತೀಕಾರವಾಗಿ ಡಬ್ಲಿನ್ ನಗರದಲ್ಲಿ ಬ್ರಿಟಿಷ್ ರಾಯಭಾರ ಕಚೇರಿ ಧ್ವಂಸಗೊಂಡಿತು. ಜನವರಿ 30, 1972ರಂದು ಉತ್ತರ ಐರ್ಲ್ಯಾಂಡಿನಲ್ಲಿ ಶಾಂತಿಯುತ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳುತ್ತಿದ್ದ ಸಾರ್ವಜನಿಕರ ಮೇಲೆ ಬ್ರಿಟಿಷ್ ಸೈನಿಕರು ಗುಂಡು ಹಾರಿಸಿ 26 ಜನರನ್ನು ಸಾವಿಗೀಡುಮಾಡಿದ್ದರು.

1990: ವರ್ಣಭೇದ ನೀತಿಯಿದ್ದ ದಕ್ಷಿಣ ಆಫ್ರಿಕಾದಲ್ಲಿ ಆಶಾಕಿರಣವೊಂದು ಮೂಡಿತು. ಎಫ್. ಡಬ್ಲೂ. ಕ್ಲಾರ್ಕ್ ಅವರು ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಮೇಲಿನ ನಿರ್ಬಂಧ ತೆರವುಗೊಳಿಸಿದರಲ್ಲದೆ, ನೆಲ್ಸನ್ ಮಂಡೇಲ ಅವರನ್ನು ಬಿಡುಗಡೆ ಮಾಡುವ ಆಶ್ವಾಸನೆ ನೀಡಿದರು.

2000: ಪ್ಯಾರಿಸ್ನಲ್ಲಿ ಫಿಲಿಪ್ ಬಿನಾಂಟ್ ಅವರು ಟೆಕ್ಸಾಸ್ ಇನ್ಸ್ಟ್ರುಮೆಂಟ್ ಸಂಸ್ಥೆ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನದ ಮುಖೇನ ಮೊದಲ ಡಿಜಿಟಲ್ ಸಿನಿಮಾ ಪ್ರದರ್ಶನ ವ್ಯವಸ್ಥೆಯನ್ನು ಸಾಕಾರಗೊಳಿಸಿದರು.

2004: ಸ್ವಿಸ್ ಟೆನಿಸ್ ಆಟಗಾರ ರೋಜರ್ ಫೆಡರರ್ ಅವರು ವಿಶ್ವದ ಆಗ್ರಶ್ರೇಯಾಂಕದ ಪುರುಷ ಟೆನಿಸ್ ಆಟಗಾರರಾದರು. ಈ ಸ್ಥಾನವನ್ನು ಅವರು 237 ವಾರಗಳ ಕಾಲ ಉಳಿಸಿಕೊಂಡಿದ್ದರು.

2007: ಇಂಡೊನೆಷ್ಯಾದಲ್ಲಿ 300 ವರ್ಷಗಲ್ಲಿ ಅತ್ಯಂತ ಭೀಕರವಾದ ಪ್ರವಾಹ ಮೊದಲುಗೊಂಡಿತು.

2007: ಕಲಾವಿದ ಎಂ.ಎಫ್. ಹುಸೇನ್ ಅವರ ವುಮನ್ ಅಂಡ್ ಹಾರ್ಸಸ್ ಕಲಾಕೃತಿಯು ದುಬೈಯಲ್ಲಿ ನಡೆದ ಹರಾಜಿನಲ್ಲಿ 4,41,600 ಡಾಲರುಗಳ ದಾಖಲೆ ಮೊತ್ತಕ್ಕೆ ಮಾರಾಟಗೊಂಡಿತು.

2007: ಧರ್ಮಸ್ಥಳದ ಬಾಹುಬಲಿಗೆ ಎಳನೀರು, ಹಾಲು, ಕಬ್ಬಿನಹಾಲು, ಅರಿಷಿಣಗಳ 1008 ಕಲಶಗಳಿಂದ ಅಭಿಷೇಕ ನಡೆಯಿತು. ದೆಹಲಿಯ ಸುರೇಂದ್ರಜೀ ಮೊದಲ ಕಲಶ ಪಡೆದರು.

2008: ಶಾಂತಿ ಪ್ರಕ್ರಿಯೆ ಹಾಗೂ ಮಾನವ ಅಭಿವೃದ್ಧಿಗೆ ಅನುಕೂಲವಾಗುವ ರೀತಿಯಲ್ಲಿ ಬಾಹ್ಯಾಕಾಶ ಯೋಜನೆ ಕೈಗೊಳ್ಳಲು ಮತ್ತು ಪರಸ್ಪರ ಸಹಕರಿಸಲು ಭಾರತ ಹಾಗೂ ಅಮೆರಿಕ ಒಪ್ಪಂದ ಮಾಡಿಕೊಂಡವು. ಇಸ್ರೋ ಹಾಗೂ ನಾಸಾ ಈ ನಿಟ್ಟಿನ ಒಪ್ಪಂದಕ್ಕೆ ಸಹಿಹಾಕಿದವು. ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ನಾಸಾ ಆಡಳಿತಾಧಿಕಾರಿ ಮೈಖೆಲ್ ಗ್ರಿಫ್ಫಿನ್ ಹಾಗೂ ಇಸ್ರೊ ಅಧ್ಯಕ್ಷ ಜಿ. ಮಾಧವನ್ ನಾಯರ್ ಅವರು ಈ ಕುರಿತಾದ ಒಪ್ಪಂದಕ್ಕೆ ಸಹಿ ಮಾಡಿದರು.

2008: ಬೆಸ್ಟ್ ಬೇಕರಿ ಪ್ರಕರಣದ ಪ್ರಮುಖ ಸಾಕ್ಷಿ ಜಹೀರಾ ಖಾನ್ ಅವರಿಗೆ 38 ಲಕ್ಷ ರೂ. ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ಆದೇಶಿಸಿತು. ಬೆಸ್ಟ್ ಬೇಕರಿ ಪ್ರಕರಣದಲ್ಲಿ ಹೇಳಿಕೆ ಬದಲಿಸುವ ಸಲುವಾಗಿ ಕಾಂಗ್ರೆಸ್ ಪಾಲಿಕೆ ಸದಸ್ಯ ಚಂದ್ರಕಾಂತ್ ಶ್ರೀವಾತ್ಸವ್ ಅವರಿಂದ ಅಪಾರ ಪ್ರಮಾಣದ ಲಂಚ ಪಡೆದಿರುವ ಆರೋಪ ಜಹೀರಾ ಮೇಲಿತ್ತು.

2008: ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ‘ಗೋಲ್ಡನ್ ಚಾರಿಯಟ್’ ರೈಲಿಗೆ ಚಾಲನೆ ನೀಡಿದರು. ರೈಲ್ವೆ ಇಲಾಖೆ, ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಆರಂಭಿಸಿದ ಈ ಐಷಾರಾಮಿ ರೈಲು ಪ್ರವಾಸಿಗರನ್ನು ದೃಷ್ಟಿಯಲ್ಲಿಟ್ಟುಕೊಂಡಿದೆ. ಸುವರ್ಣರಥ ರೈಲಿಗೆ ಚಾಲನೆ ಕೊಟ್ಟ ವೇದಿಕೆಯಲ್ಲೇ, ಬಡವರ ರೈಲು ಎಂದೇ ಖ್ಯಾತಿ ಪಡೆದಿರುವ ಸಂಪೂರ್ಣ ಹವಾನಿಯಂತ್ರಿತ ‘ಗರೀಬ್ ರಥ’ ರೈಲಿಗೆ ಸಚಿವ ವೇಲು ಚಾಲನೆ ನೀಡಿದರು.

2009: ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್ ಕರೀಂ ತೆಲಗಿಗೆ ಒಂಬತ್ತು ಪ್ರಕರಣಗಳಲ್ಲಿ ಮುಂಬೈ ವಿಶೇಷ ನ್ಯಾಯಾಲಯವು ಕಾರಾಗೃಹ ಶಿಕ್ಷೆ ವಿಧಿಸಿತು. ಈಗಾಗಲೇ ಹಲವಾರು ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿ ಪುಣೆಯ ಯರವಾಡಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ತೆಲಗಿ, ನಕಲಿ ಛಾಪಾ ಕಾಗದದ 8 ಪ್ರಕರಣ ಮತ್ತು ನಕಲಿ ಪಾಸ್‌ಪೋರ್ಟ್ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಸಿಬಿಐನ ವಿಶೇಷ ನ್ಯಾಯಾಲಯವು ಪರಿಗಣಿಸಿತು. ನ್ಯಾಯಾಲಯವು ಪ್ರತಿಯೊಂದು ಪ್ರಕರಣದಲ್ಲಿ ತಲಾ ಐದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತು. ಎಲ್ಲ ಶಿಕ್ಷೆಗಳನ್ನು ಏಕಕಾಲಕ್ಕೆ ಅನುಭವಿಸಬೇಕಾಗುತ್ತದೆ. ತಾನು ಎಚ್‌ಐವಿ ಸೋಂಕು ಪೀಡಿತನಾಗಿರುವುದರಿಂದ ಶಿಕ್ಷೆಯಿಂದ ತನಗೆ ವಿನಾಯ್ತಿ ನೀಡಬೇಕೆಂದು ತೆಲಗಿ ಮನವಿ ಮಾಡಿಕೊಂಡಿದ್ದರೂ ಅದನ್ನು ನ್ಯಾಯಾಲಯವು ಪರಿಗಣಿಸಲಿಲ್ಲ.

2009: ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಇದೇ ಮೊದಲ ಬಾರಿಗೆ 197 ವಿಧಾನಸಭಾ ಕ್ಷೇತ್ರಗಳ ಭಾವಚಿತ್ರ ಸಹಿತ ಮತದಾರರ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿತು.

ಪ್ರಮುಖಜನನ/ಮರಣ:

1869: ನಾಟಕಶಿರೋಮಣಿ ಅನಮನಪಲ್ಲಿ ವೆಂಕಟ ವರದಾಚಾರ್ ಅವರು ಚಿತ್ರದುರ್ಗದಲ್ಲಿ ಜನಿಸಿದರು. ತಮ್ಮ ರತ್ನಾವಳಿ ನಾಟಕ ಸಭಾ ಮೂಲಕ ಅನೇಕ ಪ್ರಸಿದ್ಧ ನಾಟಕಗಳನ್ನು ಆಡಿದ ವರದಾಚಾರ್ಯರಿದ್ದ ರಂಗಭೂಮಿ ಯುಗವನ್ನು, ಕನ್ನಡ ವೃತ್ತಿ ರಂಗಭೂಮಿಯ ಸ್ವರ್ಣಯುಗವೆಂದು ಪರಿಗಣಿಸಲಾಗಿದೆ. ಇವರು 1926ರ ಏಪ್ರಿಲ್ 4ನೆಯ ದಿನದಂದು ಬೆಂಗಳೂರಿನಲ್ಲಿ ನಿಧನರಾದರು.

1889: ಸ್ವಾತಂತ್ರ್ಯ ಯೋಧೆ, ಗಾಂಧೀ ವಾದಿ, ಸಮಾಜಸೆವಾಕರ್ತೆ ರಾಜಕುಮಾರಿ ಅಮೃತಾ ಕೌರ್ ಲಕ್ನೋದಲ್ಲಿ ಜನಿಸಿದರು. ಅವರು ಸ್ವತಂತ್ರ ಭಾರತದ ಆರೋಗ್ಯ ಸಚಿವರಾಗಿ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿದರು.

1892: ಸಂಗೀತ ಕ್ಷೇತ್ರದ ಮಹಾನ್ ಸಾಧಕರೂ ಗದುಗಿನ ಪ್ರಸಿದ್ಧ ಸಂಗೀತ ಆಶ್ರಮವಾದ ‘ಶ್ರೀ ವೀರೇಶ್ವರ ಪುಣ್ಯಾಶ್ರಮ’ದ ಸಂಸ್ಥಾಪಕರೂ ಆದ ಶ್ರೀ ಪಂಚಾಕ್ಷರ ಗವಾಯಿಗಳು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ ಜನಿಸಿದರು. ಪಂಚಾಕ್ಷರಿ ಗವಾಯಿಗಳು ಕರ್ನಾಟಕಿ ಹಾಗೂ ಹಿಂದೂಸ್ತಾನಿ ಸಂಗೀತಗಳೆರಡರಲ್ಲೂ ಅಸೀಮ ಗಾಯಕರೆನಿಸಿದ್ದರಲ್ಲದೆ ಬಹುತೇಕ ಎಲ್ಲ ಸಂಗೀತ ವಾದ್ಯಗಳನ್ನು ನುಡಿಸುವುದರಲ್ಲಿಯೂ ನಿಷ್ಣಾತರೆನಿಸಿದ್ದರು.

1913: ಸಹಜ ಕೃಷಿಯ ಮಹಾನ್ ಸಾಧಕ ಮತ್ತು ತತ್ವಜ್ಞಾನಿ ಮಸನೋಬು ಫುಕೋಕ ಜಪಾನಿನ ಇಯೋ ಎಂಬಲ್ಲಿ ಜನಿಸಿದರು. ‘ಸ್ವಾಭಾವಿಕ ಕೃಷಿ’ ಅಥವಾ ‘ಏನನ್ನೂ ಮಾಡದೆ ಕೃಷಿ ಮಾಡು’ ಎಂಬುದು ಸಹಜವಾಗಿ ಕಾಡುಗಳು, ಸ್ವಾಭಾವಿಕ ಸಸ್ಯವರ್ಗ ಯಾವ ರೀತಿಯಲ್ಲಿ ತಾನೇ ತಾನಾಗಿ ಬೆಳೆದು ಫಲ ನೀಡುತ್ತದೆಯೋ ಅಂತಹ ರೀತಿಯನ್ನು ಸಿದ್ಧಿಸಿಕೊಂಡು ಮಹತ್ಸಾಧನೆ ಮಾಡಿದಾತನೀತ.

1914: ಮಹಾನ್ ಕಲಾವಿದ ಎಂ.ಜೆ. ಶುದ್ಧೋದನ ಜನಿಸಿದರು. ಬುದ್ಧನ ಅಪೂರ್ವ ಚಿತ್ರಗಳನ್ನು ಬಿಡಿಸಿದ್ದ ಇವರು ಅನೇಕ ವ್ಯಕ್ತಿಚಿತ್ರಗಳನ್ನೂ ಬಿಡಿಸಿದ್ದರು. ಮೈಸೂರಿನ ಜಯಚಾಮರಾಜೇಂದ್ರ ಕಲಾ ಶಾಲೆಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದರು.

1915: ಹಿರಿಯ ಪತ್ರಕರ್ತ, ಅಂಕಣಕಾರ ಮತ್ತು ಕಥೆಗಾರರಾದ ಖುಷ್ವಂತ್ ಸಿಂಗ್ ಅವರು ಈಗ ಪಾಕಿಸ್ತಾನದ ಭಾಗವಾಗಿರುವ ಹಡಲಿ ಎಂಬಲ್ಲಿ ಜನಿಸಿದರು. ಅವರ ಪ್ರಸಿದ್ಧ ಧಾರಾವಾಹಿ ಅಂಕಣ ‘with malice towards one and all’ ಭಾರತದ ಬಹುತೇಕ ದೈನಿಕಗಳಲ್ಲಿ ಆವರ್ತನಗೊಂಡು ಬೃಹತ್ ಓದುಗ ಬಳಗವನ್ನು ಸೃಷ್ಟಿಸಿತು. ಹಲವಾರು ಜನಪ್ರಿಯ ಸಾಹಿತ್ಯಕ ಪತ್ರಿಕೆಗಳು ಮತ್ತು ನಿಯತಕಾಲಿಕಗಳಿಗೆ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದ ಅವರಿಗೆ ಭಾರತ ಸರ್ಕಾರದ ಪದ್ಮವಿಭೂಷಣ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಶಿಪ್ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.

1923: ಭಾರತದ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾನಂತರದ ಹಾಕಿ ಆಟಗಾರ, ತರಬೇತು ದಾರ, ಕನ್ವರ್ ದಿಗ್ವಿಜಯ ಸಿಂಗ್ ಉತ್ತರ ಪ್ರದೇಶದ ಬರಬಾಂಕಿ ಎಂಬಲ್ಲಿ ಜನಿಸಿದರು. ‘ಬಾಬು’ ಎಂದು ಕರೆಯಲ್ಪಡುತ್ತಿದ್ದ ಇವರು 1928, 1932, 1936, 1948, 1952ರ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಚಿನ್ನದ ಪದಕ ಗಳಿಸಿದ ಹಾಕಿ ತಂಡದ ಸದಸ್ಯರಾಗಿದ್ದರಲ್ಲದೆ ಮುಂದಿನ ದಶಕಗಳಲ್ಲಿ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದರು. ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಂದಿತ್ತು .

1939: ಅಮೆರಿಕದ ಅರ್ಥಶಾಸ್ತ್ರಜ್ಞ ಡೇಲ್ ಟಿ. ಮಾರ್ಟೆನ್ಸೆನ್ ಒರಿಗಾನ್ ಎಂಬಲ್ಲಿ ಜನಿಸಿದರು. ‘ಮಾರ್ಕೆಟ್ಸ್ ವಿಥ್ ಸರ್ಚ್ ಫ್ರಿಕ್ಷನ್ಸ್’ ಕುರಿತಾದ ಚಿಂತನೆಗಾಗಿ ಇವರು 2010ರ ವರ್ಷದ ನೊಬೆಲ್ ಅರ್ಥಶಾಸ್ತ್ರದ ಪುರಸ್ಕಾರವನ್ನು ಸ್ವೀಕರಿಸಿದ್ದರು.

1884: ಹಿಂದೀ ಸಾಹಿತ್ಯವನ್ನು ವೈಜ್ಞಾನಿಕವಾಗಿ ಸಂಜ್ಞೀಕರಿಸಿ, ವಿಭಾಗೀಕರಿಸಿ, ಪ್ರಸ್ತುತ ಪಡಿಸಿದ ಮಹತ್ವದ ಸಾಧಕರಾದ ರಾಮಚಂದ್ರ ಶುಕ್ಲ ನಿಧನರಾದರು. ಯಾವುದೇ ವೈಜ್ಞಾನಿಕ ಸಾಧನಗಳೂ ಇನ್ನೂ ಲಭ್ಯವಿಲ್ಲದಿದ್ದ ಅಂದಿನ ದಿನಗಳಲ್ಲಿ ಇಂತಹ ಸಾಧನೆಯನ್ನು ಮಾಡಿ ‘ಸಾಹಿತ್ಯ ಕಾ ಇತಿಹಾಸ್’ ಪ್ರಕಟಿಸಿದ ಕೀರ್ತಿ ಇವರದ್ದಾಗಿದೆ. ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಆಗೋನ ಜಿಲ್ಲೆಯಲ್ಲಿ 1882ರ ವರ್ಷದಲ್ಲಿ ಜನಿಸಿದ್ದರು.

1970: ಬ್ರಿಟಿಷ್ ಗಣಿತಜ್ಞ, ತತ್ವಜ್ಞಾನಿ, ಇತಿಹಾಸಜ್ಞ ಮತ್ತು ಸಾಹಿತಿ ಬರ್ಟ್ರೆಂಡ್ ರಸೆಲ್ ಅವರು ಕ್ಯಾರ್ನಫನ್ ಶೈರ್ ಎಂಬಲ್ಲಿ ನಿಧನರಾದರು. ಎಲ್ಲ ರೀತಿಯ ಪೂರ್ವಾಗ್ರಹ ಯುದ್ಧಪೀಡಿತ ಮನೋಭಾವಗಳ ವಿರುದ್ಧರಾದ ಅವರು ಮುಕ್ತಮನಸ್ಸಿನ ಬರವಣಿಗೆಗೆ ಹೆಸರಾಗಿದ್ದು 1950ರ ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಪಡೆದಿದ್ದರು.

1980: ಅಮೆರಿಕದ ಜೈವಿಕ ವಿಜ್ಞಾನಿ ವಿಲಿಯಂ ಹೊವಾರ್ಡ್ ಸ್ಟೀನ್ ನಿಧನರಾದರು. ಇವರಿಗೆ ‘ರಿಬೋನ್ಯುಕ್ಲೀಸ್’ ಕುರಿತಾದ ಮಹತ್ವದ ಕೊಡುಗೆಗಾಗಿ 1972ರ ವರ್ಷದಲ್ಲಿ ರಸಾಯನ ಶಾಸ್ತ್ರಕ್ಕೆ ಸಲ್ಲುವ ನೊಬೆಲ್ ಪುರಸ್ಕಾರ ಸಂದಿತ್ತು.

2006: ಬಹುಭಾಷಾ ಮತ್ತು ಬಹುಶಾಸ್ತ್ರ ವಿದ್ವಾಂಸರಾದ ಪ್ರೊ. ಎಸ್. ಕೆ. ರಾಮಚಂದ್ರರಾವ್ ಅವರು ಬೆಂಗಳೂರಿನಲ್ಲಿ ನಿಧನರಾದರು. ವೇದ, ವೈದ್ಯಕೀಯ, ಸಕಲ ಧರ್ಮ ಶಾಸ್ತ್ರ, ಆಯುರ್ವೇದ, ಮನಃಶಾಸ್ತ್ರ, ಸಮಾಜಶಾಸ್ತ್ರ, ಸಾಹಿತ್ಯ, ಸಂಗೀತಕಲೆ, ಚಿತ್ರಕಲೆ, ಜೀವನಚರಿತ್ರೆ, ಅನುವಾದ, ಸಂಪಾದನೆ, ಜೀವನಸಾಧನೆ ಇತ್ಯಾದಿ ಬಹುಮುಖಿ ಕ್ಷೇತ್ರಗಳಲ್ಲಿ ಕೃತಿ ರಚಿಸಿ ಅತ್ಯದ್ಭುತ ಪ್ರತಿಭೆ ಎಂದೆನಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್, ಗಾಯನ ಸಮಾಜದ ‘ಸಂಗೀತ ಕಲಾ ರತ್ನ’, ವಿವಿಧ ಪ್ರತಿಷ್ಟಿತ ಸಂಸ್ಕೃತ ವಿದ್ಯಾಲಯಗಳ ‘ವೇದರತ್ನ’ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿದ್ದವು.