Categories
ರಚನೆಗಳು

ಜಗನ್ನಾಥದಾಸರು

ನುಡಿ-೧: ಅಷ್ಟ ವಿಭವಪೂರ್ಣ
೧೨೨
ಸುರಪನಾಲಯದಂತೆ ಮಂತ್ರಾಲಯ
ಕರೆಸುವುದು ಕಂಗೊಳಿಸುವುದು ನೋಳ್ಪ ಜನಕೆ ಪ
ಕಾಮಧೇನುವಿನಂತೆ ಇಪ್ಪ ಗುರುವರ ಸಾರ್ವ
ಭೌಮ ಸುಧೀಯೀಂದ್ರಸುತ ರಾಘವೇಂದ್ರ
ಆಮಯಾಧಿಪ ಖಳತಮಿಶ್ರ ಓಡಿಸುವ ಚಿಂ
ತಾಮಣಿ ಪ್ರಕಾಶದಂತಿಪ್ಪ ವೃಂದಾವನದಿ ೧
ಸುರತರುವಿನಂತಿಪ್ಪ ಕೀರ್ತಿ ಸಚ್ಚಾಯಾಶ್ರಿ
ತರ ಮನೋರಥಗಳನು ಪೂರೈಸುವಾ
ಧರಣಿಸುರಾಖ್ಯ ಷಟ್ಟದಗಳಿಗೆ ಸತ್ಯದಾ
ಪರಿಮಳದಿ ತೃಪ್ತಿಬಡಿಸುವ ಮರುತನಂತೆ ೨
ವಾರಾಹಿ ಎಂಬ ನಂದನ ವನದಿ ಜನರತಿ ವಿ
ಹಾರ ಮಾಳ್ಪರು ಸ್ನಾನಪಾನದಿಂದಾ
ಶ್ರೀ ರಾಘವೇಂದ್ರನಿಲ್ಲಿಪ್ಪ ಕಾರಣ ಪರಮ
ಕಾರುಣ್ಯ ನಿಧಿ ಜಗನ್ನಾಥ ವಿಠಲನಿಹನು ೩

ದಶಾವತಾರಗಳು
೧೮೯
ಸುವ್ವಿ ಶ್ರೀ ದೇವಿರಮಣ ಸುವ್ವಿ ಸರ್ಪರಾಜಶಯನ
ಸುವ್ವಿ ದೈತ್ಯನಿಕರ ಹರಣ ಸುವ್ವಿ ನಾರಾಯಣ ಪ
ಭವ್ಯಚರಿತ ದುರಿತವಿಪಿನ ಹವ್ಯವಾಹನ ಭವೇಂದ್ರಾದಿ
ಸೇವ್ಯಮಾನ ಸುಪ್ರಸಿದ್ಧ ಸುಲಭಸ್ ಮೂರುತಿ
ಅವ್ಯಯಾಮಿತ ಸುಖಾತ್ಮ ದಿವ್ಯ ಮಹಿಮೆ ತುತಿಪೆ
ಸುವಿವೇಕಿಗಳಿಗೆ ಕೊಡುವುದಮಿತ ಮೋದವ ೧
ವಾಸವಾದ್ಯಮರ ವಾರಾಶಿ ಶಾರದೇಂದು ಮಧ್ವ
ದೇಶಿಕಾರ್ಯ ಚಿತ್ತ ಸಿಂಹಪೀಠಮಧ್ಯಗ
ದೇಶಕಾಲ ವ್ಯಾಪ್ತ ಸರ್ವೇಶ ಸಾರ್ವಭೌಮ ಶ್ರೀಮ
ಹೀ ಸಮೇತ ಕೃಷ್ಣ ಕೊಡಲಿ ಎಮಗೆ ಮಂಗಳ ೨
ಕಮಲ ಸಂಭವನ ವೇದ ತಮನು ಒಯ್ಯತಿರಲು ಲಕ್ಷ್ಮೀ
ರಮಣ ಮಚ್ಚನಾಗಿ ತಂದ ಶರಧಿ ಮಥನದಿ
ಕಮಠ ರೂಪಿನಿಂದ ಸುರರಿಗಮೃತವಿತ್ತು ಕಾಯ್ದ ಅಖಿಳ
ಸುಮನಸೇಂದ್ರ ಸ್ವಾಮಿ ಕೊಡಲಿ ಎಮಗೆ ಮಂಗಳ ೩
ಕನಕ ಲೋಚನನ ಸದೆದು ಮನುಜಸಿಂಹ ವೇಷನಾದ
ದ್ಯುನದಿ ಪಡೆದು ಜನನಿ ಕಡಿದು ವನವ ಚರಿಸಿದ
ಜನಪ ಕಂಸನ್ನೊದೆದು ತಿರಿಪುರವನಿತೆಯರ ಸುವ್ರ್ರತ
ವನಳಿದ ವಿನುತ ಕಲಿ ದೇವರಾಜ ಎಮ್ಮ ಸಲಹಲಿ ೪
ಪಾಹಿ ಪಾವನ ಚರಿತ್ರ ಪಾಹಿ ಪದ್ಮ ಪತ್ರನೇತ್ರ
ಪಾಹಿ ನಿಗಮ ನಿಕರಸ್ತೋತ್ರ ಲಲಿತ ಗಾತ್ರ ಮಾಂ
ಪಾಹಿ ಸಜ್ಜನಸುಮಿತ್ರ ಪಾಹಿ ದೋಷದೂರ ಸುಗುಣ
ಪಾಹಿ ಜಗನ್ನಾಥ ವಿಠಲ ಜಯ ತ್ರಿಧಾಮಗ ೫

೧೯೪
ಸೋಮ ಸುರ್ಯೋಪರಾಗದಲಿ ಗೋಸಹಸ್ರಗಳ
ಭೂಮಿದೇವರಿಗೆ ಸುರನದಿಯ ತಟದಿ
ಶ್ರೀ ಮುಕುಂದಾರ್ಪಣವೆನುತ ಕೊಟ್ಟ ಫಲವಕ್ಕು
ಈ ಮಧ್ವನಾಮ ಬರೆದೋದಿದವರಿಗೆ ೧
ಪುತ್ರರಿಲ್ಲದವರು ಸತ್ಪುತ್ರರೈದುವರು ಸ
ರ್ವತ್ರದಲಿ ದಿಗ್ವ್ವಿಜಯವಹುದು ಸಕಳ
ಶತ್ರುಗಳು ಕೆಡುವರಪಮೃತ್ಯು ಬರಲಂಜುವುದು
ಸೂತ್ರನಾಮಕನ ಸಂಸ್ತುತಿ ಮಾತ್ರದೀ ೨
ಶ್ರೀ ಪಾದರಾಯರು ಪೇಳಿದ ಮಧ್ವ ನಾಮ ಸಂ
ತಾಪ ಕಳೆದಖಿಳ ಸೌಖ್ಯನೀವುದೂ
ಶ್ರೀಪತಿ ಜಗನ್ನಾಥವಿಠಲನ ತೋರಿ ಭವ
ಕೂಪಾರದಿಂದ ಕಡೆಹಾಯಿಸುವುದು ೩

ನುಡಿ-೫: ಋಷುಗಣರು
ಸೋಮಶಿವ ಶರ್ವ ಭವ ಶಿತಿಕಂಠ ನಿನ್ನಪದ
ತಾಮರಸಯುಗ್ಮಗಳಿಗಾನಮಿಸುವೆ ಪ
ಕಾಮಹರ ಕೈಲಾಸ ಹೇಮಗಿರಿಯಾವಾಸ
ರಾಮನಾಮನ ಭಜಿಪ ಉಮೆಯರಸ ಶಂಭೋ ಅ
ಮೃತ್ಯುಂಜಯ ಮೃಗಾಂಕ ಕೃತ್ತಿವಾಸ ಕೃಪಾಳೊ
ವಿತ್ತÀ್ತಪತಿ ಸಖ ವಿನಾಯಕರ ಜನಕ
ಭೃತ್ಯವರ್ಗಕೆ ಬಾಹಪಮೃತ್ಯು ಕಳೆದು ಸಂ
ಪತ್ತು ಪಾಲಿಸುವುದು ನಿವೃತ್ತಿ ಸಂಗಮಪ ೧
ಗೋಪತಿ ಧ್ವಜ ಘೋರ ಪಾಪ ಸಂಹರಣ ಹರಿ
ತೋಪಲೋಪಮ ಕಂಠ ಚಾಪಪಾಣೀ
ಶ್ರೀ ಪತಿಯ ಶ್ರೀನಾಭಿ ಕೂಪಸಂಭವತನಯ
ನೀ ಪಾಲಿಸೆಮ್ಮನು ವಿರೂಪಾಕ್ಷ ಗುರುವೆ ೨
ಭಸಿತ ಭೂಷಿತಡಮರು ತಿಸುಳಗೈಯನೆ ಶಂಭೋ
ಕಿಸಲಯೋಪಮ ನವಿರ ಶಶಿಭೂಷಣ
ಅಸುರಾರಿ ಶ್ರೀ ಜಗನ್ನಾಥ ವಿಠಲನ ಪದ
ಬಿಸಜ ಧ್ಯಾನವನೀಯೊ ಹಸನಾಗಿ ಕಾಯೊ ೩

೯೫
ಸ್ಮರಿಸಿ ತೀರ್ಥಕ್ಷೇತ್ರ ಸಜ್ಜನರು ನಿತ್ಯದಲಿ
ಅರಣೋದಯದಲೆದ್ದು ಭಕ್ತಿಪೂರ್ವಕವಾಗಿ
ಕಠಿಣಶ್ರಮದಿ ಮಾಳ್ಪ ಪಾಪರಾಶಿಗಳ ಪರಿಹರಿಸುತ್ತ ಸಂತ್ಯೆಸುವಾ ಪ
ಭಾಗೀರಥಿ ಸರಸ್ವತಿ ಯಮುನಾ ವಾರಾಣಾ
ಶ್ರೀ ಗೋದ ಫಲ್ಗುಣಿ ಶೋಣಭದ್ರಾ ನರ್ಮ
ದಾ ಗಂಡಕಿ ಭಿಮರಥಿ ತುಂಗಭದ್ರೆ ಪ್ರಯಾಗ ತ್ರಿವೇಣಿ ಹೇಮಾ
ವೇಗವತಿ ಗಾಯತ್ರೀ ಕಾಶಿಮಣಿಕರ್ಣಿ
ಕಾ ಗೌತಮಿ ವಿಯದ್ಗಂಗಾ ಕುಮುದ್ವತೀ
ಕಾಗಿನೀ ನೇತ್ರಾವತಿ ಹೈಮ ಸಿಂಧು ಪಾಪಾಘನಾಶಿನೀ ೧
ಸರಯು ಜಯಮಂಗಳ ಜಮದಗ್ನಿ ವರತಾಮ್ರ
ಪರಣಿ ಯೋಗಾನಂದ ಕೃತಮಾಲಕುಹು ಮಹೇ
ಶ್ವರಿ ಶಂಖ ಚಕ್ರವತಿ ಭವನಾಶಿನಿ ಗದಾಧರ ಮೇನಕಾ
ಧುನಾಶಿ ಗರುಡ ಮದಿರಾ
ಮರುದ್ವತಿ ಸ್ವರ್ಣಮುಖರಿ ವರ ಝರತಾಪಿನಿ ಕಾಳಿ ಸೌ
ಪರಣಿ ದಕ್ಷಿಣೋತ್ತರಪಿನಾಕಿ ಕಪಿಲ ಶೀತಳ ಕಾನಂದ
ಕುರಮುಖಿ ಪ್ರಣವಸಿದ್ಧ ೨
ಕಾವೇರಿ ಸಿಧು ಮಾಲತಿ ಗಾರ್ಗಿಣಿ ಹರಿ
ದ್ರವತಿ ಇಂದ್ರಾಣಿ ಕುಂದ ಕುಂದಿನಿ ಶೈವ
ದೇವವತಿ ಪಾತಾಳ ಗಂಗಾ ಪುನಹ ನೀರಾ ಕುಮಾರಧಾರಾ
ಸಾವಿತ್ರಿ ದಾನ್ಯಮಾಲಾ ಪುಷ್ಪವತಿ ಲೋಕ
ಪಾವನಿ ಮೌಳಿ ಮೌಕ್ತಿಕ ಸಿಂಧು ಧರ್ಮಕು
ಶಾವಂತಿನಿ ಚಕ್ರತೀರ್ಥ ಭವ ನಾಶಿನಿ
ವರದಾ ಮಲಾಪಹಾರಿ ೩
ಸ್ವಾಮಿ ಪುಷ್ಕರಣಿ ಮಾನಸ ಚಂದ್ರ ಪುಷ್ಕರಣಿ
ಭೂಮಂಡಲದೊಳುತ್ತಮೋತ್ತಮ ತ್ರಿಪುಷ್ಕರಣಿ
ಶ್ರೀ ಮಧ್ವ ನಿತ್ಯ ಪುಷ್ಕರಣಿ ಸೀತಾ
ಪದ್ಮಸರ ಚಂದ್ರಭಾಗತೀರ್ಥ
ವಾಮನ ಮಯೂರ ಪಂಪಾಸರೋವರ ಪುಣ್ಯ
ಧಾಮ ವ್ಯಾಸ ಸಮುದ್ರ ಧವಳಗಂಗಾ ಸುಸಾ
ಧ್ಯಮೃತ ಸಮುದ್ರ ಗುರು ಭೀಮಸೇನತಟಾಕ
ರೋಮಹರ್ಷತೀರ್ಥ ೪
ದ್ವಾರಕಾನಗರ ಸಾಲಗ್ರಾಮ ಟರರ ಬದರಿ ಕೇ
ದಾರ ನರನಾರಾಯಣ ಶ್ರೀ ಮಜ್ಜಗನ್ನಾಥ ಶ್ರೀ ಮುಷ್ಣ
ಮೇರು ಪಾಶ್ರ್ವ ಮಂದರ ಸುಪಾಶ್ರ್ವ
ಮೈನಾಕ ಕೈಲಾಸ ಕಂಚಿ
ಶ್ರೀರಂಗನಾಥ ನೈಮಿಷ ದ್ವೈತವನ ಚಂಪ
ಕಾರುಣ್ಯ ಕಾಶಿ ಪಂಪಾವಂತಿಕಾ ಪುರಿ
ಗೌರಿ ಮಯೂರ ಸಿಂಹಾದ್ರಿ ಪಾಟಲ
ಹರಿದ್ವಾರ ಛಾಯಾಪಿಪ್ಪಲ ೫
ಕೇದಾರ ಸಾಗರ ಮಂದಾಕಿನಿ ಕುಸುಮವತಿ
ಆದಿಸುಬ್ರಹ್ಮಣ್ಯ ಕೋಟೇಶ್ವರ ನಂದಿ
ಪಾದ ಕ್ರೌಂಚಾದ್ರಿ ಮಹಾನಂದಿ ಶಂಕರ ನಾಮ
ನಾರಯಣ ನಿವರ್ತಿ
ವೇದಪಾದ ಯಯಾತಿ ಗಿರಿ ಕಾಲಹಸ್ತಿ ಕೌ
ಮೋದಕೀ ಪಾಡುರಂಗ ಕ್ಷೇತ್ರ ಶ್ರೀ ವಿಷ್ಣು
ಪಾದ ಗಯಾ ಕಾಳೇಶ್ವರೀ ಹಸ್ತನಾಪುರಿ
ಪಾಟಲೀ ಮಂತ್ರಾಲಯ೬
ಗೋವರ್ಧನಾದ್ರಿ ಮೈನಾಕ ಮಂದರ ಮಲಯ
ಕೈವಲ್ಯನಾಥ ಕಾಶೀರ ಜಾಂಬವತಿ ವೃಂ
ದಾವನ ಧನುಷ್ಕೋಟಿ ವಾತಾಪುರಿ
ಕನ್ಯಾಕುವರಿ ಕೈಲಾದ್ರಿ ವೃಷಭಾ
ಶ್ರೀ ವಿರೂಪಾಕ್ಷ ಕುಂದರ ನಂದಪುರಿ ಮಾಯಾ
ಶ್ರೀವತ್ಸ ಗಂಧಮಾದನ ಚಿತ್ರಕೂಟ ದ್ವಾ
ರಾವತಿ ವ್ಲಾಘ್ರಪುರಿಗೋಕುಲ
ನರಾಚಲಾಸೌಭದ್ರಿ ಆದಿನಾಥ ೭
ಈ ಮಹಿಮಂಡಲದೊಳಿಪ್ಪ ತೀರ್ಥಕ್ಷೇತ್ರ
ನಾಮಗಳ ಕಾಲತ್ರಯದಲ್ಲಿ ಸರಿಸುತಿಹ
ಧೀಮಂತರಿಗೆ ಸಂಚಿತಾಪ ಪರಿಹರದಾನಂತರದಲಿ
ಸೋಮಾರ್ಕರುಳನಕ ಸಕಲ ಭೋಗಗಳ ಸು
ತ್ರಾಮಲೊಕದ ಲುಣಿಸಿ ಕರುಣಾಳು ಪ್ರಾತ್ಯಕೆ ಸ್ವ
ಧಾಮ ಮುಕ್ತರ ಮಾಳ್ಪನು ಅಹುದು
ಅಹುದೆಂದು ಸೂತ ಶೌನಕಣೆ ಪೇಳ್ದ೮
ಈ ಭರತ ಖಂಡದೊಳಗುಳ್ಳ ತೀರ್ಥಕ್ಷೇತ್ರ
ವೈಭವಾಬ್ಜ ಭವಾಂಡ ಪಾರನದೊಳಗೆ ಹರಿ
ನಾಭಿ ಸಂಭವ ಪೇಳ್ದ ನಾರದನಿಗಿಸಿತೆಂದು
ಪರಮಕಾರುಣ ದಿಂದ
ಸ್ತ್ರೀಬಾಲ ಗೋವಿಪ್ರಮಾತ ಪಿತೃಗಳ ಧನ
ಲೋಭದಿಂದಲಿಕೊಂದ ಪಾತಕವ ಪರಿಹರಿಸಿ
ಶ್ರೀಭೂರಮಣ ಜಗನ್ನಾಥ ವಿಠ್ಠಲ ಕೊಡುವ
ಬೇಡಿದಿಷ್ಟಾರ್ಥಗಳನು ೯

ನುಡಿ-೩: ಸಾಲೋಕ್ಯ
೧೨೩
ಸ್ಮರಿಸಿ ಬೇಡುವೆನು ನಾ ಹೇ ಗುರು ಸಾರ್ವಭೌಮಾ ಪ
ನಿರುತ ನೀ ಪೊರೆ ಎನ್ನ ವಾದಿಗಜಸಿಂಹ ಅ.ಪ.
ದಿತಿಸುತಗೆ ಸುತನೆನಿಸಿ | ಅತಿಮುದದಿ ಸುರಮುನಿಯ
ಮತ ಹಿಡಿದು ಹರಿಯ ಮಹಿಮೆ ಪಿತಗೆ ಪೇಳಿ
ಖತಿಗೊಂಡು ನಿನ್ನ ಮೂರುತಿ ತೋರೆನಲು ಶ್ರೀ
ಪತಿಯ ಸ್ತಂಭದಿ ಕರೆದ ಪ್ರಹ್ಲಾದ ರಾಜ ೧
ಬಾಲ್ಯದಲಿ ಯತಿಯಾಗಿ ಲೀಲೆಯಿಂದಲಿ | ಭೂಮಿ
ಪಾಲಗೊದಗಿರ್ದ ಕುಹು ಯೋಗ ಬಿಡಿಸಿ
ಖೂಳ ಮಾಯಳ ಜಯಿಸಿ ಚಂದ್ರಿಕಾ ಗ್ರಂಥವನು
ಪೇಳಿ ಹರಿಪೀಠವೇರಿದ ವ್ಯಾಸರಾಜ ೨
ಕಾಮರಿಪುನುತ ಮೂಲರಾಮ ಪದಯುಗ ಕುಮುದ
ಸೋಮನೆನಿಸುವ ಭಕ್ತಸ್ತೊಮಕ್ಕೆಲ್ಲ
ನೇಮದಿಂದಲಿ ವಿವಿಧ ಕಾಮಿತಾರ್ಥ ಸ್ಫುಟತ
ಹೇಮಸನ್ನಿಭ ಗಾತ್ರ ಪಾವನ ಚರಿತ್ರ ೩
ಶಾಂತತೆಯ ಪೊಂದಿ ಮಂತ್ರಾಲಯದಿ ವೃಂದಾವ
ನಾಂತರದೊಳಿರುತ ಸಿರಿಕಾಂತ ಹರಿಯಾ
ಚಿಂತಿಸುತಲಿಹ ಸರ್ವತಂತ್ರ ಸ್ವತಂತ್ರ ಕರು
ಣಾಂತರಂಗನೆ ರಾಘವೇಂದ್ರ ಯತಿವರ್ಯಾ ೪
ಮೂಕ ಬಧಿರಾಂಧತ್ವಗಳ ಪೊಂದಿ ಧರಣಿಯೊಳು
ವ್ಯಾಕುಲವ ಪಡುವವರನುದ್ಧರಿಸುತ
ನಾಕಪತಿವಿನುತ ಜಗನ್ನಾಥವಿಠಲನ ಮಧುಪ
ನೀ ಕೊಟ್ಟು ಸಲಹೆನ್ನಭೀಷ್ಟ ಸಮುದಾಯ ೫
ಇತರ ಯತಿವರೇಣ್ಯರ ಸ್ತೋತ್ರ

ನುಡಿ-೩: ಸಕಲ ಸಾರಭೋಕ್ತ
೧೨೫
ಸ್ಮರಿಸು ಗುರು ಸಂತತಿಯನು ಮನವೇ ಪ
ಸ್ಮರಿಸು ಗುರು ಸಂತತಿಯ ಸರ್ವಕಾಲಗಳಲ್ಲಿ
ಪೊರೆವ ಹರಿ ಚತುರವಿಧ ಪುರುಷಾರ್ಥಗಳನಿತ್ತು ಅ.ಪ.
ಪರಮಹಂಸಾಖ್ಯ ಹರಿ ಗುರುತಮನೆನಿಸುತಿಪ್ಪ
ಪರಮೇಷ್ಠಿ ತತ್ಸುತರು ಸನಕಾದ್ಯರಾ
ಕರಕಮಲ ಸಂಜಾತ ಕೂರ್ಮಾಸ ಜ್ಞಾನನಿಧಿ
ಗುರುಡವಾಹನ ತೀರ್ಥ ಕೈವಲ್ಯ ಯತಿವರರ ೧
ಜ್ಞಾನೇಶ ಪರತೀರ್ಥ ಸತ್ಯ ಪ್ರಜ್ಞ ಪ್ರಾಜ್ಞ
ಸೂನು ಸುತಪೋರಾಜ ವರಕುಮಾರಾ
ಮೌನಿಕುಲವರ ಅಚ್ಯುತ ಪ್ರೇಕ್ಷರಂಘ್ರಿಗಳ
ಆ ನಮಿಪೆನನವರತ ಭಕ್ತಿ ಪೂರ್ವಕದೀ ೨
ಅಚ್ಛಿನ್ನ ಭಕ್ತ ಮರುತವತಾರ ಮಧ್ವಮುನಿ
ಪ್ರೋಚ್ಚಾಬ್ಜನಾಭ ನರಹರಿ ಮಾಧವಾ
ಸಚ್ಚರಿತ ಅಕ್ಷೋಭ್ಯ ಮುನಿಪ ಪ್ರತಿವಾದಿ ಭೂ
ತೋಚ್ಛಾಟನವಗೈದ ಜಯತೀರ್ಥ ಗುರುವರರ ೩
ವಿದ್ಯಾಧಿರಾಜ ರಾಜೇಂದ್ರ ಸುತಪೋನಿಧಿ ಜ
ಯಧ್ವಜರ ಪುರುಷೋತ್ತಮ ಬ್ರಹ್ಮಣ್ಯರಾ
ಮಧ್ವ ಸಿದ್ಧಾಂತ ಸ್ಥಾಪಕ ವ್ಯಾಸರಾಯ ಪ್ರ
ಸಿದ್ಧ ಶ್ರೀನಿವಾಸಯತಿಗಳ ಪವಿತ್ರ ಪದ ೪
ಲಕ್ಷ್ಮೀ ಕಾಂತರನ ಶ್ರೀಪತಿ ರಾಮಚಂದ್ರರನ
ಲಕ್ಷ್ಮೀ ವಲ್ಲಭ ಲಕ್ಷ್ಮೀ ನಾಥಪತಿಯಾ
ಲಕ್ಷ್ಮೀ ನಾರಾಯಣರ ಶ್ರೀ ರಘುನಾಥ ಸು
ಭಿಕ್ಷುಗಳ ಜಗನ್ನಾಥ ಗುರುಗಳನಾ ೫
ಸಾನುರಾಗದಲಿ ಸರ್ವೋತ್ತಮನ ಮೂರ್ತಿ ವಿ
ಜ್ಞಾನ ಪೂರ್ವಕ ಭಜಿಸಿ ಸುಖಿಸುತಿಪ್ಪಾ
ಶ್ರೀನಾಥ ಗುರುವರರ ಕರಕಮಲಜಾತ ವಿ
ದ್ಯಾನಾಥ ಯತಿಗಳನು ಅನುದಿನದಿ ಮರೆಯದಲೆ ೬
ವಿಧ್ಯಾಧಿರಾಜರ ಕವೀಂದ್ರ ವಾಗೀಶರ ಸ್ವ
ಸಿದ್ಧಾಂತ ಸ್ಥಾಪಿಸಿದ ರಾಮ ಚಂದ್ರಾ
ಅದ್ವೈತ ಕುಮುದ ದಿನಪ ವಿಬುಧೇಂದ್ರಾರ್ಯ
ಸದ್ವೈಷ್ಣವಾಗ್ರಣಿ ಜಿತಾಮಿತ್ರ ಮುನಿವರರ ೭
ರಘುನಂದನ ಸುರೇಂದ್ರ ವಿಜಯೀಂದ್ರ ಸುಧೀಂದ್ರ
ಸುಗುಣ ವಾರಿಧಿ ರಾಘವೇಂದ್ರಾರ್ಯರಾ
ನಿಗಮಾರ್ಥ ಕೋವಿದ ಸುಯೋಗೀಂದ್ರ ಸೂರೀಂದ್ರ
ಜಗತೀತಳದಿ ಪ್ರಸಿದ್ಧ ಸುಮತೀಂದ್ರರ ೮
ಸಾಧುಜನಸನ್ನುತ ಉಪೇಂದ್ರರಾಯರ ವೇದ
ವೇದಾಂಗ ಚತುರ ವಾದೀಂದ್ರ ಯತಿಯಾ
ಭೇದಮತ ವಾರಿನಿಧಿ ಚಂದ್ರ ವಸುಧೇಂದ್ರ ವಿ
ದ್ಯಾದಾನಾಸಕ್ತ ವರದೇಂದ್ರ ಯತಿವರರ ೯
ರಾಮವೇದವ್ಯಾಸರಂಘ್ರಿ ಕಮಲಗಳ ಹೃ
ತ್ತಾಮರಸದೊಳು ಪೂಜಿಸಿದ ಬಗೆಯನ್ನು
ಧೀಮಂತರಿಗೆ ತಿಳಿಸಲೋಸುಗದಿ ನವರತ್ನ
ಹೇಮ ಮಂಟಪ ವಿರಚಿಸಿದ ಭುವನೇಂದ್ರರಾ ೧೦
ಪವಮಾನ ಮತ ಪ್ರವರ್ತಕರೊಳುತ್ತಮರೆನಿಪ
ಭವ ಗೆದ್ದಾ ಸುಬೋಧ ಸುಜನೇಂದ್ರರಾ
ಅವನಿತ ದೊಳಗೆ ಅಭ್ಯಧಿಕರನ ಮಾಡಿ ಸ
ತ್ಕವಿಗಳನೆ ಸಂತೈಸಲೆಂದು ಸ್ಥಾಪಿಸಿದವರಾ ೧೧
ಹರಿಯ ಸಂಸ್ಮರಣೆ ಅಹರ್ನಿಶಿಗಳಲಿ ಮಹ ವಿಪ
ತ್ಪರಿಹಾರಗೈಸುವುದು ಗುರುಗಳ ಸ್ಮರಣೇ
ಪರಮ ಸೌಖ್ಯವನೀವದಾದಾವ ಕಾಲದಲಿ
ಪೊರೆವ ಜಗನ್ನಾಥ ವಿಠ್ಠಲವೊಲಿದು ನಿರುತಾ೧೨
ನವ ವೃಂದಾವನ

ವಾಯುದೇವರ ಪತ್ನಿ ಭಾರತೀ
೨೩
ಸ್ಮರಿಸು ಸಂತತ ಹರಿಯನು ಮನವೇ ಪ
ಸ್ಮರಿಸು ಸಂತತ ಹರಿಯ ಕರುಣಾಳುಗಳ ದೊರೆಯ
ಸರಸಿಯೊಳಗಂದು ಕರಿಯ ನರನ ಸಂಗರದೊಳಗೆ ಕಾಯ್ದು
ದರಿಯ ಜಪ ಹೋಮ (ವ್ರತ) ದಾನ ತಪಕೆ
ದೊರೆಯ ಜಗದೀಶ ಅ.ಪ.
ತಾನೆ ಇಹ ಪರ ಸೌಖ್ಯ ದಾನಿಗಳರಸನೆಂದು
ಸಾನುರಾಗದಿ ನಂಬಿದ ಜನಕೆ ಸುರ
ಧೇನುವಂದದಲಿ ಮೋದ ಸಲಿಸುವ ಶ್ರೀಮ
ದಾನಂದ ಪೂರ್ಣಬೋಧ ಪತಿ ಸಾಮ
ಗಾನ ಲೋಲನ ಪ್ರಸಾದಾ ಪಾದಾ ೧
ಎಲ್ಲೆಲ್ಲಿ ನೋಡೆ ಮತ್ತಲ್ಲಲ್ಲಿ ನೆಲೆಸಿಹನು
ಬಲ್ಲಿದನು ಭಾಗ್ಯವಂತ ನಂಬಿದವರಿ
ಗಲ್ಲದೆ ಒಲಿಯ ಭ್ರಾಂತಾ ದುಷ್ಟ ಜನ
ರೊಲ್ಲ ನಿಶ್ಚಯ ಮಹಂತಾರೊಡೆಯ ಕೈ
ವಲ್ಯದಾಯಕನ ಇಂಥಾ ಪಂಥಾ ೨
ಅಣುವಿನೊಳಗಣುವಹನು
ಘನಕೆ ಘನತರನಹನು
ಅಣು ಮಹದ್ವಿಲಕ್ಷಣಾ ಕಲ್ಯಾಣ
ಗುಣಜ್ಞಾನ ಘನಲಕ್ಷಣಾ ಸಂಪೂರ್ಣ
ಮನ ಮುಟ್ಟಿ ಕರೆದಾಕ್ಷಣಾ ಬಂದೊದಗಿ
ಕುಣಿವ ಲಕ್ಷ್ಮೀ ವಕ್ಷನಾ ಅನಪೇಕ್ಷನಾ ೩
ಚೆಲುವರೊಳಗತಿ ಚೆಲುವ ಸುಲಭರೊಳಗತಿ ಸುಲಭ
ಒಲಿವ ಸರಿ ಬಂದ ತೆರದಿ ಗುಣಕರ್ಮ
ಕುಲಶೀಲಗಳನೆಣಿಸನರಿದೀ – ಭಕುತಿ
ಫಲವ ಕೊಡೆ ತಾ ತವಕದಿ ಶಬರಿ ಎಂ
ಜಲನುಂಡ ಕರುಣಾ ಶರಧಿ ಭರದೀ ೪
ನೋಡಿ ನೋಡಿಸುತಿಹನು ಮಾಡಿ ಮಾಡಿಸುತಿಹನು
ನೀಡಿ ನೀಡಿಸುವ ಪಿಡಿವಾ ಪಿಡಿಸುವನು
ಬೇಡಿ ಬೇಡಿಸುವ ಬಡವರೊಡೆಯ ಕೊಂ
ಡಾಡುವರ ಒಡನಾಡುವಾ ಈ ಮಹಿಮೆ
ಗೀಡೆಂದು ಆವ ನುಡಿವಾ ಕೆಡುವಾ ೫
ಪ್ರಾದೇಶ ಮಾತ್ರ ಸ್ಥಿತ ಶ್ರೀ ದೇವಿಯರಸ ಕನ
ಕೋದರಾದ್ಯಮರ ವ್ರಾತಾ ಸಹಿತ ಮಹ
ದಾದಿ ಪೃಥ್ವಂತ ಭೂತಾದೊಳು ನಿಲಿಸಿ
ಕಾದುಕೊಂಡಿಹ ವಿಧಾತಾ ಅಂಡತ್ರಿದ
ಶಾಧಿಪನ ಸೂತ ಸಚ್ಚರಿತಾ ೬
ಸ್ವಗತಭೇದವಿಶೂನ್ಯ ನಿಗಮ ಸಂಚಾರ ಶ್ರೀ
ಜಗನ್ನಾಥವಿಠಲರೇಯಾ ತನ್ನ ಪಾ
ದಗಳ ಧ್ಯಾನಿಪರ ನೋಯಾಗೊಡದಂತೆ
ಹಗಲಿರುಳು ಕಾವಾ ಮಾಯಾ ರಮಣ ನಮ್ಮ
ನಗಲಿ ಸೈರಿಸನು ಪ್ರಿಯಾ ಧ್ಯೇಯಾ ೭

೨೭೯
ಹನುಮ ಭೀಮಾನಂದ ಮುನಿರಾಯ ಎನ್ನದು
ರ್ಗುಣಗಳೆಣಿಸದಲೆ ಸಾಕಿ ಸಲಹೆಂದು |
ಸಲಹೆಂದು ಬಿನ್ನೈಪೆವಿ
ಜ್ಞಾನ ರೂಪ ವಿಜಿತಾತ್ಮ ೧
೨೮೦ತ್ರಿದಶವಿಂಶತಿ ರೂಪ ಸುದತಿಯಿಂದೊಡಗೊಡಿ
ಪದುಮಜಾಂಡದೊಳು ಸರ್ವತ್ರ | ಸರ್ವತ್ರ ಭಕುತರಾ
ಬದಿಗನಾಗಿದ್ದು ಸಲಹುವಿ ೨
೨೮೧ಕೋಟಿತ್ರಯ ಸ್ವರೂಪಿ ದಾಟಿಸು ಭವಾಬ್ಧಿಯ ನಿ
ಶಾಟ ಕುಲವೈರಿ ಭಯಹಾರಿ |
ಭಯಹಾರಿ ರಣದೊಳು ಕಿ
ರೀಟಿಯ ಕಾಯ್ದಿ ಧ್ವಜನಾಗಿ ೩
೨೮೨ಪ್ರಾಣನಾಯಕ ನಿನ್ನ ಕಾಣ ಬೇಕೆಂದೆನುತ
ಸಾನುರಾಗದಲಿ ನಮಿಸುವೆ | ನಮಿಸುವೆನು ಮೂಜಗ
ತ್ರಾಣ ಪಂಚಾಸ್ಯ ಪರಮೇಷ್ಟಿ ೪
೨೮೩ಚತುರವಿಂಶತಿ ತತ್ವ ಪತಿಗಳೊಳಗೆ ಗರುವ
ನತಿಸುವೆನು ನಿನ್ನ ಚರಣಕ್ಕೆ | ಚರಣಕಮಲವ ತೋರಿ
ಕೃತ ಕೃತ್ಯನೆನಿಸೊ ಕೃಪೆಯಿಂದ ೫
೨೮೪ಮೂರೇಳು ಸಾವಿರದ ಆರ್ನೂರು ಮಂತ್ರವ
ಈರೇಳು ಜಗದಿ ಜನರೊಳು | ಜನರೊಳು ಮಾಡಿ ಉ
ದ್ಧಾರ ಗೈಸುವಿಯೊ ಸುಜನರ ೬
೨೮೫ಪವಮಾನರಾಯ ನೀ ತ್ರಿವಿಧ ಜೀವರೊಳಿದ್ದು
ವಿವಿಧ ವ್ಯಾಪಾರ ನೀ ಮಾಡಿ | ನೀ ಮಾಡಿ ಮಾಡಿಸಿ
ಅವರವರ ಗತಿಯ ಕೊಡುತಿಪ್ಪ ೭
೨೮೬ ಮಿಶ್ರ ಜೀವ ರೊಳಿದ್ದು ಮಿಶ್ರಜ್ಞಾನವನಿತ್ತು
ಮಿಶ್ರ ಸಾಧನವ ನೀ ಮಾಡಿ | ನೀ ಮಾಡಿ ಮಾಡಿಸಿ
ಮಿಶ್ರಗತಿಗಳನೆ ಕೊಡುತಿಪ್ಪೆ ೮
೨೮೭ಅನಿಲದೇವನೆ ದೈತ್ಯದನುಜ ರಾಕ್ಷ ಸರೊಳಿದ್ದು
ಅನುಚಿತ ಕುಕರ್ಮ ನೀ ಮಾಡಿ | ನೀ ಮಾಡಿ ಮೋಹಿಸಿ
ದಣಿಸುವಿಯೊ ಅವರ ದಿವಿಜೇಶ ೯
೨೮೮ಕಾಲನಿಯಮಕನೆ ಕಾಲತ್ರಯಾದಿಗಳಲ್ಲಿ
ಕಾಲ ಗುಣ ಕರ್ಮ ಅನುಸಾರ | ಅನುಸಾರವಿತ್ತು
ಪಾಲಿಸುವಿ ಜಗವ ಪವಮಾನ೧೦
೨೮೯ಆಖಣಾಶ್ಮನೆ ನಿನ್ನ ಸೋಕಲರಿಯವು ದೋಷ
ಶ್ರೀಕಂಠ ಮುಖ್ಯ ಸುರರಿಗೆ | ಸುರರಿಗಿಲ್ಲವು ಭಾರ
ತೀಕಾಂತ ನಿನಗೆ ಬಹದೆಂತೊ ೧೧
೨೯೦ ಕಲ್ಯಾದಿ ದೈತ್ಯಕುಲದಲ್ಲಣ ದಯಾಸಾಂದ್ರ
ಬಲ್ಲಿದನು ಜಗಕೆ ಭಯದೂರ | ಭಯದೂರ ಭಕ್ತರ
ನೆಲ್ಲ ಕಾಲದಲ್ಲಿ ಸಲಹಯ್ಯ ೧೨
೨೯೧ಕಾರುಣ್ಯನಿಧಿ ಜಗದ ಉದ್ಧಾರಕನು ನೀನೆ ಉ
ದ್ಧಾರ ಮಾಡದಿರೆ ಭಕುತರ | ಭಕುತರನು ಕಾವ
ರಿನ್ನಾರು ಲೋಕದಲಿ ಜಯವಂತ ೧೩
೨೯೨ತ್ರಿಜಗದ್ಗುರುವರೇಣ್ಯ ಋಜುಗಣಾಧಿಪ ಪಾದಾಂ
ಬುಜ ಯುಗ್ಮಕ್ಕೆರಗಿ ಬಿನ್ನೈಪೆ | ಬಿನ್ನೈಪೆ ಮನ್ಮನದಿ
ನಿಜರೂಪ ತೋರಿ ಸಂತೈಸೊ ೧೪
೨೯೩ಅನಿಲದೇವನೆ ನಿನ್ನ ಜನುಮ ಜನುಮಗಳಲ್ಲಿ
ಇನಿತು ಬೇಡುವೆನು ಎಂದೆಂದು |
ಎಂದೆಂದು ವಿಷಯ ಚಿಂ
ತನೆಯ ಕೊಡದೆನ್ನ ಸಲಹೆಂದು ೧೫
೨೯೪ತಾರತಮ್ಯ ಜ್ಞಾನ ವೈರಾಗ್ಯಭಕ್ತಿ
ಧಾರಡ್ಯವಾಗಿ ಇರಲೆಂದು | ಇರಲೆಂದು ಬಿನ್ನೈಪೆ
ಭಾರತೀರಮಣ ನಿನಗಾನು ೧೬
೨೯೫ ಮರಣ ಜನನಗಳು ಬಂದರೆ ಬರಲಿ ಪ್ರದ್ವೇಷ
ಗುರು ಹಿರಿಯರಲ್ಲಿ ಹರಿಯಲ್ಲಿ | ಹರಿಯಲ್ಲಿ ಕೊಡದೆ ಉ
ದ್ಧರಿಸಬೇಕೆನ್ನ ಪರಮಾಪ್ತ ೧೭
೨೯೬ವಿಷಯದಾಸೆಗಳ ಬಿಡಿಸಿ ಅಸುನಾಥ ಎನ್ನ ಪಾ
ಲಿಸಬೇಕು ಮನವ ನಿನ್ನಲ್ಲಿ | ನಿನ್ನಲ್ಲಿ ನಿಲಿಸಿ ಸಂ
ತಸದಿ ಕಾಯೆನ್ನ ಮರುದೀಶ ೧೮
೨೯೭ ವಾಯು ಹನುಮದ್ಭೀಮರಾಯ ಮಧ್ವರ ಸ್ತೋತ್ರ
ಬಾಯೊಳುಳ್ಳವಗೆ ಜನ್ಮಾದಿ | ಜನ್ಮಾದಿ ರೋಗಭಯ
ವೀಯನೆಂದೆಂದು ಭಗವಂತ ೧೯
೨೯೮ಮಾತರಿಶ್ವನೆ ಎನ್ನ ಮಾತುಗಳ ಲಾಲಿಸಿ ಜಗ
ನ್ನಾಥ ವಿಠಲನ್ನ ಮನದಲ್ಲಿ | ಮನದಲ್ಲಿ ತೋರಿ ಭವ
ಭೀತಿಯನು ಬಿಡಿಸೊ ಭವ್ಯಾತ್ಮ ೨೦
೨೯೯ ನಮ್ಮ ಗುರುಗಳ ಪಾದ ಒಮ್ಮೆ ನೆನೆಯಲು ಆ
ಜನ್ಮ ಕೃತ ಪಾಪ ಪರಿಹಾರ | ಪರಿಹಾರವಾಗಿ ಸ
ದ್ಬೊಮ್ಮಪದವಿಯಲಿ ಸುಖಿಸುವಿ ೨೧
೩೦೦ಮೂರೇಳು ಸಾವಿರದ ಆರುನೂರು ಹಂಸ
ಮೂರು ಮಂತ್ರಗಳ ಜನರೊಳು | ಜನರೊಳು ಮಾಡ್ವ ಸ
ಮೀರನ ಅಡಿಗೆ ಶರಣೆಂಬೆ ೨೨
೩೦೧ಅಂಜಿದವರಿಗೆ ವಜ್ರಪಂಜರನೆನಿಪ ಪ್ರ
ಭಂಜನ ಪ್ರಭುವೆ ಪ್ರತಿದಿನ | ಪ್ರತಿದಿನ ನಮ್ಮ ಭಯ
ಭಂಜಿಸಿ ಕಾಯೊ ಬಹುರೂಪ ೨೩
೩೦೨ಭವಿಷ್ಯದ್ವಿಧಾತನೆ ತವ ಚರಣ ಸೇವಿಪೆನು
ಶ್ರವಣ ಮನನಾದಿ ಭಕುತಿಯ | ಭಕುತಿ ನಿನ್ನಲ್ಲಿ ಮಾ
ಧವನಲ್ಲಿ ಕೊಟ್ಟು ಸಲಹಯ್ಯ೨೪
೩೦೩ಕಲಿಮುಖ್ಯ ದೈತ್ಯರುಪಟಳವ ಪರಿಹರಿಸಿ ಮ
ತ್ಕುಲಗುರುವೆ ಸಲಹೊ ಕಾರುಣ್ಯ | ಕಾರುಣ್ಯ ಸಿಂಧು ನಿ
ನ್ನೊಲುಮೆಯೊಂದಿ ಹರಿಕಾಯ್ವ ೨೫
೩೦೪ ಭಾರತೀ ರಮಣ ಮದ್ಭಾರ ನಿನ್ನದು ಎನ್ನ
ಪಾರ ದೋಷಗಳ ಎಣಿಸದೆ | ಎಣಿಸದೆ ಸಂತೈಸೊ
ಕಾರುಣ್ಯ ಸಿಂಧು ಎಂದೆಂದು ೨೬
೩೦೫ಶ್ರೀಶಸದ್ಮನೆ ಜೀವರಾಶಿಯೊಳಗೊಂದಧಿಕ
ವಿಂಶತಿ ಸಹಸ್ರದಾರ್ನೂರು | ಆರ್ನೂರು ಹಗಲಿರುಳು
ಶ್ವಾಸ ಜಪಮಾಡಿ ಹರಿಗೀವಿ ೨೭
೩೦೬ತಾಸಿಗೊಂಭೈ ನೂರು ಶ್ವಾಸಜಪಗಳ ಮಾಡಿ
ಬೇಸರದೆ ನಮ್ಮ ಸಲಹುವಿ | ಸಲಹುವಿ ಶ್ರೀ ಭಾರ
ತೀಶ ನಿನ್ನಡಿಗೆ ಶರಣೆಂಬೆ ೨೮
೩೦೭ಬಲದೇವ ನೀನೆ ಬೆಂಬಲವಾಗಿ ಇರಲು ದು
ರ್ಬಲ ಕಾಲಕರ್ಮ ಕೆಡಿಸೋದೆ | ಕೆಡಿಸೋದೆ ನಿನ್ನ ಹಂ
ಬಲು ಉಳ್ಳ ಜನರ ಜಗದೊಳು ೨೯
೩೦೮ಹಾಲಾಹಲವನುಂಡು ಪಾಲಿಸಿದೆ ಜಗವ ಕರು
ಣಾಳು ಪವಮಾನ ವಿಜ್ಞಾನ | ವಿಜ್ಞಾನ ಭಕುತಿ ಶ್ರೀ
ಲೋಲನಲಿ ಕೊಟ್ಟು ಸಲಹಯ್ಯ ೩೦
೩೦೯ವಾತಾತ್ಮಜನೆ ನಿನ್ನ ಪ್ರೀತಿಯನೆ ಪಡೆದ ಖ
ದ್ಯೋತನಂದನನ ಪೊರೆದಂತೆ |
ಪೊರೆದಂತೆ ಪೊರೆಯೆನ್ನ
ನೀನಿಂತು ಕ್ಷಣದಿ ಕೃಪೆಯಿಂದ ೩೧
೩೧೦ಅಪರಾಜಿತನೆ ಮನದೊಳಪರೋಕ್ಷವಿತ್ತೆನಗೆ
ಅಪವರ್ಗದಲ್ಲಿ ಸುಖವೀಯೊ |
ಸುಖವೀಯೊ ಭಾವಿ ಲೋ
ಕಪಿತಾಮಹನೆ ಎನಗೆ ದಯವಾಗೊ ೩೨
೩೧೧ ಬುದ್ಧಿ ಬಲ ಕೀರ್ತಿ ಪರಿಶುದ್ದ ಭಕ್ತಿಜ್ಞಾನ
ಸದ್ಧೈರ್ಯಾಜಾಡ್ಯ ಆಯುಷ್ಯ | ಆಯುಷ್ಯ ವಿತ್ತಭಿ

ಇದೊಂದು ನಿಂದಾಸ್ತುತಿ
೭೮
ಹನುಮ ಭೀಮಾನಂದ ಮುನಿವರೇಣ್ಯ
ತನು ಮನದ ತಾಪ ಕಳೆದನುದಿನದಿ ಪಾಲಿಪುದು ಪ
ಪ್ರಾಣಪಂಚಕ ಸುಪರ್ವಾಣ ಗುರುವರ ಜಗ
ತ್ರಾಣ ತ್ರಯೀಮಯಿ ಪುರಾಣವೇದ್ಯಾ
ಮಾಣದೆನ್ನಯ ಹೃದಯ ತಾಣದೊಳಗರಿ ಶಂಖ
ಪಾಣಿರೂಪನ ಬಿಡದೆ ಕಾಣಿಸು ಕೃಪಾಸಿಂಧು ೧
ಸೂತ್ರನಾಮಕನೆ ತಾಪತ್ರಯಗಳಿಂದ್ಹಗಲು
ರಾತ್ರಿಯಲಿ ಬಳುಲುತಿಹ ನಿತ್ರಾಣನ
ಗಾತ್ರದೊಳು ನೆಲೆಸಿ ಸರ್ವತ್ರದಲಿ ಸುಖವಿತ್ತು
ಶತ್ರುತಾಪಕನಾಗು ಸ್ತೋತ್ರವನೆ ಕೈಕೊಂಡು ೨
ಅಸುನಾಥ ಶರಣಂಗೆ ವಶವಾಗು ಅನುದಿನದಿ
ಅಸುರಭಂಜನ ಜ್ಞಾನ ಸುಸುಖ್ಮಾತನೇ
ಬಿಸರುಹಾಂಬಕ ಜಗನ್ನಾಥವಿಠಲನ ಕೈ
ವಶಮಾಡಿ ಕೊಡುತಿಪ್ಪ ಶ್ವಸನಾವತಾರಿ೩

ನುಡಿ-೩ : ಭೂತರಾಜರೆಂಬೋರು
೧೬೩
ಹರಿದಾಸರಿಗೆ ಒಬ್ಬರ ಗೊಡವೆ ಯಾತಕೆ
ಅರಿವೆ ಅನ್ನಾಭರಣ ದ್ರವ್ಯ
ಸರ್ವವು ಶ್ರೀ ವರನೆ ಎಂಬ ಪ
ನಿತ್ಯಾನಂದ ನಿತ್ಯಜ್ಞಾನಾನಿಮಿತ್ತ ಬಂಧು ಭಕ್ತರಿಗೆ
ಇತ್ತದ್ದೆ ಸಂಪತ್ತು ಎಂದು ಕೀರ್ತಿಸುತ್ತ ನರ್ತಿಸುವ ೧
ದೋಷದೂತರನೊಬ್ಬ ಪೋಷ್ಯ ಪೋಷಕಾಧಾರ ಧೇಯ
ದೋಷಕಾರಿ ತ್ರೈ ಲೋಕ್ಯ ವಿಭೂಷಣ ವಿಭೂತಿದನೆಂಬ ೨
ಎನ್ನ ಸ್ವಾಮಿ ಸರ್ವರಿಗೆ ಎನ್ನ ಬಿಂಬ ಎಲ್ಲರಿಗೆ
ಮಾನ್ಯ ಮಾನದನು ಜಗದ್ಭಿನ್ನನೆಂದು ತುತಿಸುತಿಪ್ಪ ೩
ಜನನೀ ಜನಕ ಲಕ್ಷ್ಮೀ ನಾರಾಯಣನೆ ಪುತ್ರಮಿತ್ರನೆಂದು
ಕ್ಷಣಶ ಕೊಂಡಾಡುತನ್ಯರ ಗಣನೆ ಮಾಡದಿಪ್ಪ ನಿಜ೪
ಹಾನಿ ಲಾಭ ಕೀರ್ತಿ ಅಪಮಾನ ಮಾನ ಪುಣ್ಯಪಾಪ
ಶ್ರೀನಿವಾಸಗರ್ಪಿಸಿ ಮದ್ದಾನೆಯಂತೆ ಚರಿಸುತಿಪ್ಪ ೫
ಅನಂತ ಜೀವರಿಗಿನ್ನು ಅನಾದಿ ಅನ್ನದನಾಗಿ
ಅನಿರ್ವಿಣ್ಣ ನಾಮಕನೆಂದು ಸನ್ನುತಿಸಿ ಹಿಗ್ಗುತಿಪ್ಪ ೬
ಸರ್ವ ಜೀವ ದೇಹಾಂತಸ್ಥ ಸರ್ವ ಜಗನ್ನಾಥ ವಿಠಲ
ಸರ್ವರೂಪ ಸರ್ವನಾಮ ಸರ್ವವೇದೋದಿತನೆಂಬೊ ೭

ಶೇಷಶಯನ
೧೯೦
ಹಸೆಗೇಳೊ ಪ
ಶಂಕರ ದೇವನಾಲಂಕಾರ ಶಯನ ಶಂಖ ನೃಪನ ಪಾಲಾ
ಶಂಖಾದಿ ಸೂದನ ಶಂಕೆಯಿಲ್ಲದೆ ತಾಯಿ
ಸಂಕಲೆ ಕಡಿದ ಶಶಾಂಕಕೋಟಿ ಪ್ರಭಾವ
ಸಂಕರುಷಣ ದೇವ ಶಂಖಾರಿಧರನೆ ೧
ಕಲ್ಯಾಣ ಗುಣನಿಧಿ ಕಾಮನ ಪಿತನ ಸೊಲ್ಲಿಗೆ
ಕಂಬದಿ ಬಂದಚ್ಯುತನೆ
ಗೊಲ್ಲರ ಸಲಹಿದ ಗೋವರ್ಧನಧರ ಪುಲ್ಲ ಲೋಚನನೆ೨
ಶಕಟ ಮೊದಲಾದ ಅಖಿಳ ಅಸುರರ ಶಕುತಿಯ
ಅಪಹರಿಸಿದ ಅದಿತಿ ರುಕ್ಮಿಣಿಯೊಡನೆ ವಿಹಾರ ಸಕಲ
ಸುರರೊಡೆಯ ಸಾಮಗಾಯನಲೋಲ ಶಕುಜನಕನೆ೩
ಶಾಮಲ ಶರೀರ ವರ್ಣ ವಿನುತ
ವ್ಯೋಮ ಗಂಗೆಯ ಪೆತ್ತ ಪಾವನಚರಿತ
ರೋಮ ರೋಮ ಕೂಪದಿ ಆನಂದ ಭರಿತ
ದಾಮೋದರ ವಿಶ್ವದಾನಿಗಳರಸನೇ ಸಾಮಜವರದ ೪
ಸನಕಾದಿ ಮುನಿಜ ಸನ್ನುತ ಚರಣ
ಅನಿರುದ್ಧ ದೇವನೆ ಅಸುರ ಸಂಹರಣಾ
ಕನಕಗರ್ಭಾದಿ ಸುರಕಟಕ ಪಾಲಕನೆ
ವನಜ ಜಾಂಡವ ಪೆತ್ತ ವೈಕುಂಠ ಪುರಾಧೀಶ ೫
ಫಣಿ ಫಣ ಮರ್ದನ ಪ್ರಣವ ಪ್ರತಿಪಾದ್ಯ ಪ್ರ
ಸನ್ನವದನಾ ರಣರಂಗ ಭೀಮಾ ಭಕುತ
ಜನ ಮೋದನಾ ಅಣು ಸ್ಥೂಲದಲಿ
ಅನುಗಾಲ ವ್ಯಾಪ್ತನೆ ಫಣಿರಿಪು ಗಮನ ೬
ಶ್ವೇತವಾಹನನ ಸಮರದಿ ಕಾಯಿದಾ
ರಾತಿದೂರನೆ ಅಖಿಳ ಜೀವ ಭೇದಾ
ಪೀತವಸನ ದರ ಪರಮ ಸುಮೋದಾ
ಭೀತಿರಹಿತ ಕಲ್ಪಭೂಜನೆನಿಪ ಜಗನ್ನಾಥವಿಠ್ಠಲನೆ ೭

೧೭೭
ಹಿಂದಿಲ್ಲ ಇಂದು ಮುಂದಿಲ್ಲ ಪ
ಶ್ರೀ ಮುಕುಂದಗೆ ಸಮರೆನಿಸುವರು ಲೋಕದೊಳು ಅ.ಪ.
ವನಧಿ ಮಥನದಲ್ಲಿ ಅನಿಮಿಷರನ ಬಿಟ್ಟು
ಜನನಿ ಲಕುಮಿ ನಾರಾಯಣನೊಲಿಸಿದಳಾ ೧
ಪ್ರಪಿತಾಮಹನು ಲೋಕಾಧಿಪ ಬ್ರಹ್ಮಗೆ
ತಪ ತಪವೆಂದು ಪೇಳಿದಗುಪಮೆ ಎನಿಸುವವರು ೨
ಕಂದು ಗೊರಳ ವರವನೀಯೆ ಹಿಂದಟ್ಟದಸುರನ
ಕೊಂದು ಶಿವನ ಕಾಯ್ದ ಇಂದಿರಾಪತಿಗೆಣೆ ೩
ಮಂದರಾದ್ರಿಯನೆತ್ತಿ ಸಿಂಧುಮಥನ ಮಾಡಿ
ವೃಂದಾರಕರಿಗೆ ಆನಂದವಿತ್ತು ಪರಿ೪
ಭೃಗು ಮುನಿಪನು ಬ್ರಹ್ಮಾದಿಗಳ ಪರೀಕ್ಷಿಸಿ
ಜಗನ್ನಾಥವಿಠಲ ತ್ರಿಗುಣವರ್ಜಿತನೆಂದು ೫

ಅಸುರೆ ಪೂತನಿಯ ಸಂಹರಿಸಿ :ನೋಡಿ
೧೯೫
ಅನಘಾನೆಂದೊಮ್ಮೆ ನೆನೆದು ಮಾನವ ಪಾಪ
ವನಧಿ ದಾಟುವ ಬಹುವೇಗದಿಂದ
ಜನನ ಮರಣ ಭಯವಿನಿತಿಲ್ಲಾ ಅವನೆ ಸ
ಜ್ಜನ ಶಿರೋಮಣಿ ಕಾಣೊ ಸರ್ವರೊಳು
ಜನಕ ಜನನಿ ಮೊದಲಾದ ನೂರೊಂದು ಕುಲವ ಪಾ
ವನಿತಾದಿ ವಿಷಯಗಳನನುಭವಿಸುತ ತನ್ನ
ಮನೆಯೊಳಿರಲವ ಜೀವನ ಮುಕ್ತನೊ
ಸನಕಾದಿ ಮುನಿಗಳ ಮನಕೆ ನಿಲುಕದಿಪ್ಪ
ಘನ ಮಹಿಮನೆ ಬಂದು ಕುಣಿವ ಮುಂದೆ
ಹನುಮವಂದಿತ ಜಗನ್ನಾಥವಿಠ್ಠಲರೇಯ
ಅನಿಮಿತ್ತ ಬಂಧು ನೀನು ಆವಾವ ಕಾಲದಲ್ಲಿ ೧

ಜೀವೂಬಾಯಿ ಅವರು ಪ್ರತಿ ಯುಗಾದಿ ಹಬ್ಬದಂದು
೧೯೬
ಆರು ವಂದಿಸಲೇನು ಆರು ನಿಂದಿಸಲೇನು
ಆರು ಶಾಪಿಸಲೇನು
ಆರು ಕೋಪಿಸಲೇನು
ಆರು ಮುನಿದು ಮಾತನಾಡದಿದ್ದರೆ ಏನು
ಮಾರುತಾಂತರ್ಯಾಮಿ ಜಗನ್ನಾಥವಿಠಲನ
ಕಾರುಣ್ಯ ಪಾತ್ರರ ಕರುಣವೆನ್ನೊಳಗಿರೆ ೧

೧೯೭
ಧ್ರುವತಾಳ
ದುರಿತವನ ಕುಠಾರಿ ದುರ್ಜನ ಕುಲವೈರಿ
ಶರಣಾಗತ ವಜ್ರ ಪಂಜರ ಕುಂಜರ
ವರ ಸಂರಕ್ಷಕ ಜನ್ಮ ಮರಣರಹಿತ ಮಹಿತ
ಪರಮ ಕರುಣಾಸಿಂಧು ಭಕ್ತ ಬಂಧು
ಸ್ವರತ ಸ್ವತಂತ್ರ ಜಗದ್ಭರಿತ ಚಿತ್ಸುಖಪೂರ್ಣ
ಹರಿಯೆ ಕ್ಷರಾಕ್ಷರ ಪುರುಷೋತ್ತÀಮ
ಉರಗಶಯನ ವೈಕುಂಠವರ ಮಂದಿರ ಚಂದಿರ
ತರಣಿಕೋಟಿ ಸಂಕಾಶ ವಿಮಲಕೇಶ
ಧುರದೊಳಗರ್ಜುನನ ತುರಗ ನಡೆಸಿದ ಸಂ
ಗರ ಭಯಂಕರ ಲೋಕ್ಯೆಕ ಧೀರ
ಸ್ಮರಣೆÉ ಮಾತ್ರದಿ ಅಜಾಮಿಳಗೆ ಮುಕ್ತಿಯನಿತ್ತೆ
ಅರಿದೆನೊ ನೀ ಎಮ್ಮ ಪೊರೆವುದಕ್ಕೆ
ಸರುವ ಕಾಮದ ಜಗನ್ನಾಥವಿಠ್ಠಲ ಭಕ್ತ
ಪರಿಪಾಲಕನೆಂಬ ಬಿರುದು ನಿನ್ನದಲ್ಲದೆ ೧
ಮಟ್ಟತಾಳ
ವಿಧಿಪಿತ ನೀನಲ್ಲದೆ ನಿಧಿಪತಿಗಳು ಉಂಟೆ
ಸದÀನನಾಗಿ ಇಪ್ಪೆ ನಿನ್ನ ದಾಸರಿಗಾಗಿ
ಮಧುಸೂದನ ಜಗನ್ನಾಥವಿಠ್ಠಲರೇಯ
ನಿಧನನೆನಿಸಿ ಕೊಂಡೆ ನಿನ್ನ ದ್ವೇಷಿಗಳಿಗೆ ೨
ರೂಪಕತಾಳ
ಮೂರು ಲೋಕ ಸ್ವಾಮಿ ಸರ್ವಜ್ಞ ಸುಖಪೂರ್ಣ
ಪ್ರೇರಕ ಸಾಕ್ಷಿ ಕಾರಣ ಕಾರ್ಯ ದೋಷ ವಿ
ದೂರ ಸದ್ಗುಣ ಸಾಂದ್ರ ಸುಜನಾಂಬುಧಿ ಚಂದ್ರ
ಭಾರಕರ್ತನೆ ಜಗಕೆ ನೀನಿರೆ ಎಮ್ಮ ಮ
ನೋರಥವ ಸಲಿಸುವುದೇನಾಶ್ಚರ್ಯವೊ
ಕ್ರ್ರೂರ ಮಾನವರ ಸಂಹಾರ ಮಾಡಿಸು ಗುರು
ಮಾರುತನಿಂದತಿ ಶೀಘ್ರನಾಗೀ
ನೀ ರಕ್ಷಿಸೆಂದು ಪ್ರಾರ್ಥಿಸುವ ಭಕ್ತರಿಗೆ ಭೂರಿ
ಸಾರ ಭಾಗ್ಯವನಿತ್ತು ನೀ ರಕ್ಷಿಸನುದಿನ
ಶೂರ ಜಗನ್ನಾಥ ವಿಠ್ಠಲ ನೀನಲ್ಲದಿರುಭ
ಕ್ತರ ಕಾವ ಕರುಣಿಗಳು ಜಗದೀ ೩
ಝಂಪೆ ತಾಳ
ಪಿತನಿಂದ ನೊಂದ ಪುಹ್ಲಾದನ ಕಾಯಿದೆ ದೇ
ವತೆಗಳಿಗೆ ಬಂದ ಭಯ ಪರಿಹರಿಸಿ ದಯದಿ ದ್ರೌ
ಪದಿಯ ಮೊರೆ ಕೇಳಿ ದಿವ್ಯಾಂಬರವ ಕರುಣಿಸಿದೆ
ಕ್ಷಿತಿಜನಾಲಯದಿ ಬಳಲುವ ಬಾಲೆಯರ ದ್ವಾರಾ
ವತಿಗೆ ಕರೆದೊಯ್ದು ಒಲಿದವರ ಪೋಷಿಸಿದೆ ಮಾ
ರುತಿಯ ಕರದಿಂದ ಬೃಹದ್ರಥನ ಕುವರನ ಕೊಲಿಸಿ
ಕ್ಷಿತಿಪರನ ಬಿಡಿಸಿ ಪಾಲಿಸಿದೆ ಕರುಣದಲಿ ಕುರು
ಪೃತನದೊಳು ಪಾಂಡವರ ಗೆಲಿಸಿ ಕೀರ್ತಿಯ ಪಡೆದೆ
ಶತಮೋಹನಾಸ್ತ್ರದಿಂದಲಿ ಗರ್ಭದೊಳಗೆ ಪೀ
ಡಿತನಾದ ಶಿಶು ಪರೀಕ್ಷಿತನ ಸಂತೈಸಿದೇ
ಶಿತಿಕಂಠಗೊಲಿದು ಸಾರಥಿಯಾಗಿ ಮುಪ್ಪುರದ
ಸತಿಯರನ ಕೊಲಿಸಿ ಕೀರುತಿಯಿತ್ತೆ ಭಕ್ತನಿಗೆ
ಮಿತಿಯುಂಟೆ ನಿನ್ನ ಕರುಣಕ್ಕೆ ದೇವವರ್ಯ ಸಾಂ
ಪ್ರತ ಬೇಡಿಕೊಂಬೆ ಬಿನ್ನಪ ಕೇಳಜಸ್ರ ಸಂ
ತುತಿಪ ಭಕುತನ ಮನೋರಥವ ಪೂರೈಸು ಸು
ವೃತನಾಮ ಶ್ರೀ ಜಗನ್ನಾಥ ವಿಠ್ಠಲ ಭಾಗ
ವತಜನ ಪ್ರೀಯ ನೀನೆ ಗತಿ ಎಮಗೆ ಇಹಪರದಿ ೪
ತ್ರಿವಿಡಿತಾಳ
ನೀ ಸಲಹಲಿನ್ನಾರು ಬಂದ
ಡ್ಡೈಸುವರು ಮೂಲೋಕದೊಳಹೊರ
ಗೀ ಸಮಸ್ತ ದಿವೌಕಸರು ನಿನ
ಗೆ ಸಮರ್ಪಕವಾದ ಕಾರ್ಯ ಮ
ಹಾ ಸುಖದಿ ನಡೆಸುವರು ಲಕ್ಷ್ಮೀ
ದಾಸಿ ಎನಿಪಳು ನಿನ್ನ ಮನೆಯಲ್ಲಿ
ದೇಶ ಕಾಲಾದಿಗಳು ನಿನಗಾ
ವಾಸ ಯೋಗ್ಯಸ್ಥಾನವೆನಿಪವು
ಶ್ರೀಶ ಲೋಕತ್ರಯಕೆ ಲೇಸಾ
ಯಾಸವೆಂಬುದು ಕಾಣೆನೋ ಕರು
ಣಾ ಸಮುದ್ರನೆ ಒಲಿದು ಎಮ್ಮಭಿ
ಲಾಷೆ ಪೂರೈಸೆಂದು ವೇದವ್ಯಾಸ ಕೀಟಕೆ ಒಲಿದು
ಮಹಿ ಸಿಂಹಾಸನವೇರಿಸಿ ಮೆರೆಸಿದ ಪ
ರಾಶರಾತ್ಮಜ ನಿನ್ನ ಬಣ್ಣಿಸೆ
ನಾ ಸಮರ್ಥನೆ ಎಂದಿಗಾದರು
ನೀ ಸುಲಭನೆಂದರಿದು ನಾ ಬಿ
ನ್ನೈಸಿದೆನೊ ಈ ರೀತಿಯಲಿ ಸ
ರ್ವಾಸುನಿಲಯ ಜಗನ್ನಾಥ ವಿಠಲೇಸು ಮಾತುಗಳ್ಯಾಕೆ ಮನ್ಮನ
ದಾಸೆ ಪೂರ್ತಿಯ ಮಾಡಿ ಎಮ್ಮನು
ದಾಸಿಸದೆ ದಯದಿಂದ ನೋಳ್ಪ್ಪುದು ೫
ಅಟ್ಟತಾಳ
ನಿಗಮ ತತಿಗಳಿಗೆ ವೇದ್ಯವಾದ ನಿನ್ನ
ಅಗಣಿತ ಮಹಿಮೆ ಲಕುಮಿ ಬೊಮ್ಮ ಭವಾ
ದಿಗಳು ತಾವರಿಯರು ಸಾಕಲ್ಯಮಂದ ಜೀ
ವಿಗಳಿಗೆ ಗೋಚರಿಸುವುದೆ ನಿನ್ನರೂಪ
ಭಗವಂತ ನೀನೆ ದಯಾಳು ಎಂದರಿದು ನಾ
ಪೊಗಳಿದೆನೊ ಯಥಾಮತಿಯೊಳಗೆ ಲೇಶ
ಬಗೆಯಾದೀಗೆನ್ನಪರಾಧ ಕೋಟಿಗಳನು
ಜಗತೀಪತಿ ತನ್ನ ಮಗುವಿನ ತೊದಲು ಮಾ
ತುಗಳನು ಕೇಳಿ ತಾ ನಗುತಲಿ ಕಾಮಿತ
ಬಗೆ ಬಗೆಯಿಂದ ಪೂರ್ತಿಸಿ ಮಿಗೆ ಹರುಷದಿ
ಬಿಗಿದಪ್ಪಿ ಮೋದಿಪನಲ್ಲದೆ ಶಿಶುವಿನ
ತೆಗೆದು ಬಿಸುಟು ಮತ್ತೆ ಹಗೆಗೊಂಬನೇನೋ ತ್ರೈ
ಯುಗನೆ ಬಿಡದೆ ಪಾಡಿ ಪೊಗುಳುವ ದಾಸಗೀ
ಬಗೆ ಬಡತನವ್ಯಾಕೊ ಸಂಸಾರದೊಳಗೆ ನಾ
ಲ್ಮೊಗನಯ್ಯ ಅರ್ಥ ಕಾಮಗಳೊಳಗಿಪ್ಪ ಈ
ರ್ವಗೆ ರೂಪವೊಂದಾಗೆ ಆವುದಸಾಧ್ಯವೊ
ಗಗನ ಪಾತಾಳ ವ್ಯಾಪ್ತ ರೂಪನೆ ಕರ
ಮುಗಿವೆ ಗೋಚರಿಸೆಮ್ಮ
ದೃಗಯುಗಗಳಿಗಿಂದು ಯುಗಾವರ್ತ
ಜಗನ್ನಾಥ ವಿಠಲ ನರ
ಮೃಗನಾಗಿ ಸ್ತಂಭದಿಂದೊಡೆದು ಬಂದೊದಗಿದೆ ೬
ಏಕತಾಳ
ಶ್ರೀನಿಧಿ ಪ್ರತಿದೇಹಗಳಲ್ಲಿ ಗತಿ
ನೀನಲ್ಲದೆ ಎಮಗಾರಿಹ ಪರದಲ್ಲಿ
ಆ ನಳಿನಭವ ಭವಾದ್ಯನಿಮೀಷರ ನಿ
ಜಾನಂದವರಿತು ಫಲಗಳ ಕೊಡುವಿ ಮ
ಹಾನುಭಾವ ಎಮ್ಮಭಿಮತ ಸಲಿಸುವು
ದೆೀನಚ್ಚರಿ ನಿನ್ನರಸಿ ಲಕುಮಿ ಕಡೆ
ಗಾಣಳು ಪರಮೈಶ್ವರ್ಯದ ಪ್ರಾಂತ ಚಿ
ದಾನಂದಮಯನೆ ಪ್ರಣತರ ಅಧಿಕಾ
ರಾನುಸಾರ ಸುಖ ಪಾನೀಯಧೀಯೊಳು ಲೋಲ್ಯಾಡಿಸುತಿಹೆ
ದಾನಿಗಳರಸ ಮನಾದಿಕರಣಗಳ
ಮಾನಿಗಳೊಡೆಯನೆನಿಸುವ ಮುಖ್ಯ
ಪ್ರಾಣ ಪತಿಗೆ ನೂತನ ವಿಜ್ಞಾಪನ
ವೇನುಂಟನುದಿನದಲಿ ಮಾಳ್ಪುದು
ಮಾನವ ಗುರು ಜಗನ್ನಾಥ ವಿಠ್ಠಲ ಕರು
ಣಾನಿಧೆ ಸರ್ವರ ಸುಲಭ ನೀನಲ್ಲದೆ ೭
ಜತೆ
ಚಟುಲ ಕಾರ್ಯಗಳ ಸಂಘಟನೆ ಮಾಡಿಸುವಿ ನಿ
ಷ್ಕುಟಿಲ ಜಗನ್ನಾಥವಿಠ್ಠಲ ದೇವೋತ್ತಮ ||

೧೯೮
ಧ್ರುವತಾಳ
ವರದ ವರದ ಶೋಭಿತ ವರದಾಯಕ ವರ
ಪರಮ ಪುರುಷೋತ್ತಮ ಅಮಿತ ಮಹಿಮ
ಶರಣಾಗತರ ಕಲ್ಪತರುವೆ ವಿಮಲಾಂಬುರಹ
ನಿರುಪಮ ನಿರ್ದೋಷ ನಿಖಿಳ ನಿಶೇಷಾಶೇಷ ಜನನ
ಮರಣ ರಹಿತ ಲೋಕಮಹಿತ
ಸಿರಿ ಸರಿಸಿಜ ಭವ ವಾಣಿ ವಾಯು
ಗರುಡಶೇಷ ಇಂದ್ರ ದೇವೋತ್ತಂಸ ಹಂಸಾ
ಸ್ವರತ ಸ್ವತಂತ್ರನೆ ಸುಗುಣಭರಿತ ಸೌಭಾಗ್ಯವಂತ
ನಿರುತ ಎನ್ನಂತರಂಗವಾಸ ಶ್ರೀಶಾ
ಹರಿಯೆ ನೀನಲ್ಲದೆ ಅನ್ಯರನರಿಯೆ ಎಮ್ಮ ಸಾಕುವ
ಧೊರಿಯೆ ದೂರುವೆ ಎನ್ನಯ ಮೊರೆಯ ಕೇಳೊ ಕೇಳೊ
ಮರುಳ ಕುವಳೆ ಎನ್ನ ದುರುಳ ವಿಷಯಂಗಳಿ
ಗೆರಗಿಸಿ ಕಂಗೆಡಿಪ ಕರಣಂಗಳು
ಇರುಳು ಹಗಲು ನಿನ್ನ ಪರವಾಗಿರಲಿ ಬಾಹ
ದುರಿತ ಕೋಟಿಗಳಿಗೆ ಅಂಜೆ ನಾನು
ಸುರಚಿ ನಾಮಕ ಜಗನ್ನಾಥ ವಿಠ್ಠಲ ನಿಜ
ಕರುಣಿ ಕೈ ಪಿಡಿದೆನ್ನನುದ್ಧರಿಸ ಬೇಕೊ ೧
ಮಟ್ಟತಾಳ
ಈಶ ಪೂರ್ಣಕಾಮ ದೋಷರಹಿತ ಸ್ವಪ್ರ
ಕಾಶ ವಾರಿಧಿ ಲಕುಮಿ ಶೇಷ ದಿವಿಜರಿಂದ
ನೀ ಸೇವಿತನಾಗಿ ದೇಶ ಕಾಲಗಳಲ್ಲಿ ವಾಸವಾಗಿಯಿಪ್ಪ
ವಾಸುದೇವನೆ ನಿನ್ನ ಉಪಾಸನೆ ಮಾಡದಲೆ
ಕ್ಲೇಶಕೆ ಒಳಗಾದೆ ಪಾಶಧರಾರ್ಚಿತನೆ
ಘಾಸಿಗೊಳಿಸದೆಮ್ಮ ಪೋಷಿಸಬೇಕಿನ್ನು
ವಾಸವಾನುಜ ಜಗನ್ನಾಥ ವಿಠ್ಠಲ ಲೌಕಿಕ
ಆಸೆ ಬಿಡಿಸಿ ನಿನ್ನ ದಾಸನೆನಿಸಿ ಸಲಹೊ ೨
ತ್ರಿವಿಡಿತಾಳ
ಕರಣನಾಮಕನಾಗಿ ಇಂದ್ರಿಯಗಳೊಳು ಮಾನಿ
ಸುರರೊಳು ನೆಲೆಸಿದ್ದು ವಿವಿಧ ವಿಷಯಂಗಳು
ನೆರವಿಗಳೊಳಗಿದ್ದು ನಿನ್ನ ರೂಪವ
ಬೆರೆಸಿ ಅರಿಯಗೊಡದೆ ವಿಹರಿಸುತಿಪ್ಪೆ
ಗುರಿ ಮಾಡಿ ಜೀವರ ಪುಣ್ಯಪಾಪಗಳಿಗೆ
ನಿರಯ ಸ್ವರ್ಗಗಳೀವೆ ಲೀಲೆಯಿಂದ
ಪರಿಪೂರ್ಣ ಕಾಮ ಈ ಪರಿ ಸಂಸಾರದೊಳೆಮ್ಮ
ತಿರುಗಿಸಿ ನೀ ಕ್ರೀಡೆಯಾಡುತಿಪ್ಪೆ
ವಿರಿಜಾನಾಮಕ ಜಗನ್ನಾಥ ವಿಠ್ಠಲ ನಿಜ
ಕರುಣಿ ಕೈಪಿಡಿದೆಮ್ಮನುದ್ಧರಿಸಬೇಕು ೩
ಅಟ್ಟತಾಳ
ಆ ಚತುರ್ಮುಖ ರಜತಾಚಲ ನಿಲಯಾದಿ
ಖೇಚರರಿಗೆ ಮನೋವಾಚಾಮಗೋಚರ
ಪ್ರಾಚೀನ ಕರ್ಮಾಬ್ದಿ ವೀಚಿಯೊಳಗೆ ಮುಣುಗಿ
ಈ ಚಾರುವರಿವಂಗೆ ಗೋಚರಿಸುವೆ ಮ
ರೀಚನ ಕೋಟಿ ಭವ ಮೋಚಕ ನೀನೆಂದು
ಸೂಚಿಸಿದರು ಶ್ರೀಮದಾಚಾರ್ಯರು
ಈ ಚರಾಚರದಲ್ಲಿ ನೀಚರಿಗೆ ಕರ ಚಾಚದಂತೆ ಮಾಡು
ಯಾಚಿಸುವೆನು ಸವ್ಯಸಾಚಿ ವರದ ಜಗನ್ನಾಥ ವಿಠ್ಠಲ ನಿನ್ನಾ
ಲೋಚನೆ ಕೊಡುವುದು ಸದಾಚಾರಿಗಳ ಕೂಡೆ ೪
ಆದಿತಾಳ
ಅನಘ ನೀನೆದೊಮ್ಮೆ ನೆನೆವ ಮನವ ಬಂಧು
ಜನರ ಕೂಡಿಕೊಂಡು ವನಿತಾದಿ ವಿಷಯಂಗಳು
ಅನುಭವಿಸುತ ತನ್ನ ಮನೆಯೊಳಗಿರಲಾ ಜೀ
ವನೇ ಮುಕ್ತನೂ ಅನಿಮಿಷ ಭಾನು
ತನಯ ಲೋಕದಲಿ ನಾರಾಯಣ
ಎನೆ ನರಕಸ್ಥ ಜನರು ಮುಕ್ತರಹರು
ಘನಮಹಿಮನೆ ನಿನ್ನ ಅನುಶ್ರುತ ಉಳ್ಳವ
ಮನುಜನಾಗಲಿ ಮತ್ತೆ ದನುಜನಾಗಲಿ ತ್ರಿಭು
ವನದೊಳು ಮಾನ್ಯನೊ ಅನುಮಾನ ಇದಕ್ಕಿಲ್ಲ ಪುತ
ರ್ದನ ಶಾಮಕ ಜಗನ್ನಾಥ ವಿಠಲ
ನಿಋಋತಿ ವಿಭೀಷಣಗೆ ಒಲಿದಂತೆ ಕಾಯೊ ೫
ಜತೆ
ಭಕ್ತವತ್ಸಲ ಜಗನ್ನಾಥ ವಿಠ್ಠಲ ಮುಕ್ತಾ
ಮುಕ್ತ ನಿಯಾಮಕ ಭಕ್ತನ್ನ ಕೈ ಪಿಡಿಯೊ

೧೯೯
ಧ್ರುವ ತಾಳ
ಶುಭದ ಸುಂದರಕಾಯಾ ವಿಬುಧ ಸನ್ಮುನಿಗೇಯಾ
ಅಬುಜ ಜಾಂಡೋದರ ನಿರ್ವಿಕಾರ
ತ್ರಿಭುವನಾತ್ಮ ಭಾವನ ತ್ರಿಗುಣಾತೀತ ನಿತ್ಯದು
ರ್ಲಭ ದುರ್ವಿಭಾವ್ಯ ದೂರೀಕೃತ ದುರಿತ
ನಭಗವರ ವಾಹನ ನಳಿನ ಲೋಚನ ಚನ್ನ
ಇಭರಾಜವರದ ಇಂದಿರೆ ಅರಸ
ಉಭಯ ಸ್ಥಾನದಿ ವ್ಯಾಪ್ತ ತತ್ತದ್ದೋಷ ನಿರ್ಲಿಪ್ತ
ಸಭೆಯೊಳು ದೌಪದಿಯ ಕಾಯ್ದ ಕರುಣಿ
ನಿಬಿಡ ಪಂಕದಿ ಶಿಗಬಿದ್ದು ಬನ್ನಬಡುವ
ಅಬಲರ ಉದ್ಧರಿಸೊ ಅಬುಧಿ ಶಯನ
ಸುಭುಜನಾಮಕ ಜಗನ್ನಾಥ ವಿಠ್ಠಲ ನಿನ
ಗಭಿವಂದಿಸುವೆ ಎನಗೆ ಅಭಯವಿತ್ತು ಸಲಹೊ ೧
ಮಟ್ಟತಾಳ
ಪ್ರತಿ ಪ್ರತಿ ಕಲ್ಪಸ್ಥ ಪ್ರತಿ ಪ್ರತಿ ಜೀವರಿಗೆ
ಪ್ರತಿ ಪ್ರತಿ ಯುಗಗಳಲ್ಲಿ ಪ್ರತಿ ಪ್ರತಿ ದೇಹಕ್ಕೆ
ಕೃತ ಕರ್ಮಗಳರಿತು ಪಿತ ಜನನಿ ಭ್ರಾತ
ಸತಿಸುತ ಮುಂತಾದ ಇತರ ಜನರೊಳಿದ್ದು
ಗತಿ ತಪ್ಪಲಿಗೊಡದೆ ಒಬ್ಬೊಬ್ಬರೊಳಗೆ
ಹಿತವನೆ ಪುಟ್ಟ್ಟಿಸಿ ಪೋಷ್ಯ ಪೋಷಕನೆನಿಸಿ
ವೃತಜ ಜಾಂಡ ಪೊರೆವೆ ನಿರ್ವಾಜದಿ ನಿರುತ
ಪತಿತ ಪಾವನ ಜಗನ್ನಾಥ ವಿಠ್ಠಲ ನಿನ್ನ
ದ್ಭುತ ಮಹಿಮೆಯ ಶತಮೋದಗೊಶವೇ ೨
ತ್ರಿವಿಡಿತಾಳ
ಕಂಥ ಪಟಗಳಿಗೆ ತಂತು ಜೋಡಿಸಿದಂತೆ
ಪಿಂತೆ ಮಾಡಿದ ಕರ್ಮ ತಂತುಗಳಿಂದಲಿ
ಅಂತವಿಲ್ಲದೆ ಜೀವ ತಂತಿಣಿಗಳ ಕಟ್ಟಿ
ಸಂತೆ ನೆರಹಿ ಜನರ ಅಂತರಂಗದಿ ನೆಲೆಸಿ
ಕಾಂತೆಯರೊಡನೆ ರಮಿಸಿ ಸಂತೊಷಗಳನೀವೆ
ಸಂತರಿಗೆ ಸರ್ವ ಕಾಲದಲಿ
ಎಂತೆಂತು ಸೇವಿಪ ಜಂತುಗಳಿಗೆ ಗತಿ
ಪ್ರಾಂತಕ್ಕೆ ಕೊಡುವೆ ಶ್ರೀಕಾಂತ ನೀನು
ಇಂಥ ವ್ಯಾಪಾರ ನೀ ಮಾಡುತ ಇರಲಾಗಿ
ಚಿಂತೆ ಬಡುವುದ್ಯಾಕೊ ಜೀವರಿಗೆ
ಹೊಂತಕಾರಿ ಜಗನ್ನಾಥ ವಿಠ್ಠಲ ಬ್ರಹ್ಮ
ಕಂತುಹರಾದ್ಯರ ಸ್ವಾಂತಕ್ಕೆ ನಿಲುಕೆ ೩
ಅಟ್ಟತಾಳ
ಆರಿಗೆ ಚಿಂತಿಸಲಾರಿಗೋಸುಗ ಪೋಗಿ
ಆರಿಗಾಲ್ಪರಿಯಲಿ ಆರೆನ್ನ ಸಲಹುವ
ರಾರಿವರೆನಗೆ ನಾನಾರು ಜೀವರಿಗೆ ಸ
ರೋರುಹ ಭವನ ಸುಚಾರು ಸೃಷ್ಟಿಯೊಳು
ಭಾರಕ ನಾನೊರ್ವ ಭಾರಕರ್ತನು ನೀನೆ
ಈರೇಳು ಭುವನದ ವ್ಯಾಪಾರ ಮಾಡುವ ಸರ್ವರಾ
ಧಾರ ನೀನಿರೆ ಬಡಿವಾರವ್ಯಾತಕೆ ಎನಗೆ ರ
ಮಾರುಮಣನೆ ಜಗನ್ನಾಥವಿಠ್ಠಲ ಪರಿ
ವಾರ ನಿನ್ನದು ಕಾಯೊ ಕಾರುಣ್ಯನಿಧಿ ಬೇಗ ೪
ಆದಿತಾಳ
ಏಸೇಸು ಕಲ್ಪದಲ್ಲಿ ಶ್ರೀ ಸತ್ಯಾದಿ ವೈಕುಂಠ
ಶ್ರೀ ಸತ್ಯಲೋಕ ಆದಿ ಜಗತ್ತು
ಈಶಾವಾಸ್ಯವೆಂದು ಭೂಸುರೋತ್ತಮರು ಪೇಳ್ವ
ರೈಸೇ ಅನ್ಯಥಾ ಉಂಟೆ ವಾಸುದೇವನೆ ಜೀವ
ರಾಸಿಯೊಳು ನೀನಿದ್ದು ದೋಷಫಲಗಳುಣಿಸ
ಲೋಸುಗ ಸ್ಥೂಲದೇಹ ನೀ ಸಂಬಂಧಿಸಿ ಹೃದಯಾ
ಕಾಶದೊಳು ನೀನಿದ್ದು ಕ್ಷೇಶ ಸುಖಗಳೀವೆ
ನೀ ಸ್ವತಂತ್ರನಾಗಿ ಅಜಭವ ಸುರಾದಿಗಳಾ
ಯಾಸವಿಲ್ಲದೆ ಪೊರೆವೆ ಶಾಶ್ವತ ಮೂರುತಿ
ವಾಸವಾನುಜ ಜಗನ್ನಾಥ ವಿಠ್ಠಲ ನಿನ್ನ
ದಾಸನ ಅಪರಾಧ ಲೇಶ ನೋಡದೆ ಕಾಯೊ ೫
ಜತೆ
ಅನಂತ ಜೀವರು ನಿನ್ನಾಧೀನರೊ ಶ್ರೀ ಜ
ಗನ್ನಾಥವಿಠ್ಠಲ ಪ್ರಪನ್ನವತ್ಸಲ ನೀನು ೬
ತತ್ವ ಸುವಾಲಿಗಳು

ಅರಿತವರಿಗತಿ ಸುಲಭ ಹರಿಯ ಪೂಜೆ
೧೬೪
ಅರಿತವರಿಗತಿ ಸುಲಭ ಹರಿಯ ಪೂಜೆ ಪ
ಅರಿಯದವ ನಿರ್ಭಾಗ್ಯತರ ಲೋಕದೊಳಗೆ ಅ.ಪ.
ಹೈಮಾಂಡ ಮಂಟಪವು ಭೂಮಂಡಲವೆ ಪೀಠ
ಸೋಮ ಸೂರ್ಯರೆ ದೀಪ ಭೂರುಹಗಳು
ಚಾಮರಗಳತಿ ವಿಮಲ ವ್ಯೋಮ ಮಂಡಲ ಛತ್ರ
ಯಾಮಾಷ್ಟಕರಗಳಷ್ಟದಳದ ಪದ್ಮವುಯೆಂದು ೧
ಮಳೆಯೆ ಮಜ್ಜನವು ದಿಗ್ವಲಯಂಗಳೇ ವಸನ
ಮಲಯಜಾನಿಲವೇ ಶ್ರೀಗಂಧ ಧೂಪಾ
ಇಳೆಯೊಳಗೆ ಬೆಳೆದ ಧಾನ್ಯಗಳೆಲ್ಲ ನೈವೇದ್ಯ
ಥಳ ಥಳಿಪ ಮಿಂಚು ಕರ್ಪೂರದಾರತಿಗಳೆಂದು ೨
ನಕ್ಷತ್ರ ಮಂಡಲವೇ ಲಕ್ಷ ದೀಪಾವಳಿಯು
ದಕ್ಷಿಣೋತ್ತರ ಅಯನಗಳೇ ಬನವು
ವೃಕ್ಷ ವಲ್ಲಿಜ, ಸುಫಲ ಪುಷ್ಪಗಳೊಳಗೆ ಲಕ್ಷ್ಮೀ
ವಕ್ಷ ವ್ಯಾಪಕನಾಗಿ ತಾನೆ ಭೋಗಿಪನೆಂದು ೩
ಗುಡುಗು ಸಪ್ತ ಸಮುದ್ರ ಸಿಡಿಲು ಘೋಷವೇ ವಾದ್ಯ
ಪೊಡವಿಪರಿಗೀವ ಕಪ್ಪವೇ ಕಾಣಿಕೆಗಳು
ಉಡುಪ ಭಾಸ್ಕರರ ಮಂಡಲಗಳಾದರ್ಶಗಳು
ನಡೆವ ನಡೆಗಳು ಹರಿಗೆ ಬಿಡದೆ ನರ್ತನವೆಂದೂ ೪
ಯುಗ ಚತುಷ್ಟಯವೆ ಪರಿಯಂಕ ಪಾದಗಳಬ್ದ
ಬಿಗಿವ ಪಟ್ಟಿಗಳು ಕಂದಾಯ ಕಸಿ ಯೊ
ಗಗನ ಮೇಲ್ಗಟ್ಟು ಸಂಕ್ರಮಣಗಳೇ ಬಡವುಗಳೂ
ಭಗವಂತಗುಪಬರ್ಹಣಗಳು ಷಡೃತುಗಳೆಂದೂ ೫
ನಾಗವಲ್ಲೆಗಳೆ ದಿವಸಗಳು ಕರಣವೇ ಕ್ರಮಕೆ
ಯೋಗಗಳೇ ಚೂರ್ಣ ರಾತ್ರೆ ತಾಂಶೊಕ
ಭೋಗವತೀ ಜಲವೆ ಗಂಡೂಷೋದಕ ಶುದ್ಧ
ಸಾಗರವೆ ಪಾದೋದಕ ವಿರಾಡ್ರ್ರೂಪಗೆಂದು೬
ಶಾತಕುಂಭೋಧರಾಂಡಾಂತಸ್ಥ ರೂಪ ಸಂ
ಪ್ರೀತಿಯಿಂದಲಿ ಯಜಿಸಿ ಮೋದಿಪರನಾ
ಮಿತ ಶೋಕರ ಮಾಡಿ ಸಂತೈಸುತಿಹ ಜಗ
ನ್ನಾಥ ವಿಠಲ ಒಲಿದು ಸರ್ವ ಕಾಲಗಳಲ್ಲಿ ೭

ಹಾಡಿನ ಹೆಸರು :ಅರಿತವರಿಗತಿ ಸುಲಭ ಹರಿಯ ಪೂಜೆ
ಹಾಡಿದವರ ಹೆಸರು :ವಿದ್ಯಾಭೂಷಣ
ರಾಗ :ಸಾಮ
ತಾಳ :ಆದಿ ತಾಳ ಖಂಡನಡೆ
ಸಂಗೀತ ನಿರ್ದೇಶಕರು :ವಿದ್ಯಾಭೂಷಣ

ನಿರ್ಗಮನ

ಇರಬೇಕು ನಿಂದಕರು ಸಜ್ಜನರಿಗೆ
೧೬೬
ಇರಬೇಕು ನಿಂದಕರು ಸಜ್ಜನರಿಗೆ ಪ
ದುರಿತ ರಾಶಿಗಳ ಪರಿಹರಿಸಲೋಸುಗ ಅ.ಪ.
ಕಲಿಯುಗದಿ ಕೋವಿದರು ಕಲುಷ ಕರ್ಮವ ಮಾಡೆ
ಕಳೆವರಿನ್ನಾರೆಂದು ಕಮಲಭವನು
ತಿಳಿದು ನಿರ್ಮಿಸಿದವನಿಯೊಳಗೆ ನಿಂದಕರ
ಕಲುಷರನ ಮಾಡಿ ತನ್ನವರ ಸಲಹುವ ೧
ದಿವಿಜರಿಳೆಯೊಳಗೆ ಜನ್ಮಗಳೊಲ್ಲೆವೆಂದಬ್ಜ
ಭವಗೆ ಮೊರೆಯಿಡಲು ವರವಿತ್ತನಂದು
ಭವಕೆ ಕಾರಣ ಕರ್ಮ ಮಾಡಿದರು ಸರಿಯೆತ
ನ್ನವನೆನಿಸದವಗೆ ತಜ್ಜನ್ಯ ಫಲ ಬರಲೆಂದು ೨
ಮಾನವಾಧಮ ಜನರು ನೋಡಿ ಸಹಿಸದಲೆ
ಹೀನ ಮತಿಯಿಂದ ಮಾತುಗಳಾಡಲು
ಭಾನು ಮಂಡಲಕೆ ಮೊಗವೆತ್ತಿ ಉಗುಳಿದರೆ
ನ್ನಾನನವೆ ತೊಯ್ವುದಲ್ಲದರ್ಕಗೇನಪಮಾನ ೩
ಮಲವ ತೊಳೆವಳು ತಾಯಿ ಕೈಗಳಿಂದಲಿ ನಿತ್ಯ
ತೊಳೆವ ನಿಂದಕ ತನ್ನ ನಾಲಗಿಂದ
ಬಲು ಮಿತ್ರನಿವನೆಂದು ಕರೆದು ಮನ್ನಿಸಬೇಕು
ಹಲವು ಮಹ ಪಾಪಗಳ ಕಳೆದು ಪುಣ್ಯವನೀವ ೪
ಅನುಭವಿಪ ದುಷ್ಕರ್ಮಗಳ ಜನ್ಯ ಫಲವು ತ
ನ್ನಣುಗರಿಗೆ ಅಪವಾದ ರೂಪದಿಂದ
ಉಣಿಸಿ ಮುಕ್ತರ ಮಾಡಿ ಸಂತೈಪ ನರಕ ಯಾ
ತನೆಗಳವರಿಗೆ ಇಲ್ಲದುದರಿಂದ ಎಂದೆಂದೂ ೫
ಮನುಜಾಧಮರಿಗೆ ಹರಿದಾಸರಲಿ ದ್ವೇಷ
ವೆನಿಪ ಸಾಧನವೆ ನಿಸ್ಸಂದೇಹವು
ಅನುತಾಪ ಬಿಡದೆ ಹರುಷಿತರಾಗಿ ನಿಷ್ಪ್ರಯೋ
ಜನದಿ ಹರಿಪದಾಬ್ಜ ಭಜಿಪ ಭಜಕರಿಗೆ ೬
ಲೋಕದೊಳು ನಿರ್ಮಿಸಿದನಿರ್ವರನು ಹರಿ ತಾನು
ಭೂ ಕೋವಿದರ ಮಲವು ಪೋಗಲೆಂದು
ಶ್ರೀ ಕರಾರ್ಚಿತ ಜಗನ್ನಾಥವಿಠಲ ಗ್ರಾಮ
ಸೂಕರರು ನಿಂದಕರು ಕರುಣಾಳು ಇಳೆಯೊಳಗೆ ೭

ಹಾಡಿನ ಹೆಸರು :ಇರಬೇಕು ನಿಂದಕರು ಸಜ್ಜನರಿಗೆ
ಹಾಡಿದವರ ಹೆಸರು :ವಿದ್ಯಾಭೂಷಣ
ರಾಗ :ಶಂಕರಾಭರಣ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ವಿದ್ಯಾಭೂಷಣ
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ದಾಸೋಹಂ ತವ ದಾಸೋಹಂ
೧೦
ದಾಸೋಹಂ ತವ ದಾಸೋಹಂ ಪ
ವಾಸುದೇವ ವಿತತಾಘಸಂಘ ತವ ಅ
ಜೀವಾಂತರ್ಗತ ಜೀವ ನಿಯಾಮಕ
ಜೀವವಿಲಕ್ಷಣ ಜೀವನದ
ಜೀವಾಧಾರಕ ಜೀವರೂಪ ರಾ
ಜೀವ ಭವಜನಕ ಜೀವೇಶ್ವರ ತವ ೧
ಕರ್ಮಕರ್ಮಕೃತ ಕರ್ಮಕೃತಾಗಮ
ಕರ್ಮ ಫಲಪ್ರದ ಕರ್ಮಜಿತ
ಕರ್ಮಬಂಧ ಮಹಕರ್ಮ ವಿಮೋಚಕ
ಕರ್ಮನಿಗ್ರಹ ಕರ್ಮಸಾಕ್ಷಿ ತವ ೨
ಕಾಲಾಹ್ವಯ ಮಹಕಾಲ ನಿಯಾಮಕ
ಕಾಲಾತೀತ ತ್ರಿಕಾಲಜ್ಞ
ಕಾಲಪ್ರವರ್ತಕ ಕಾಲನಿವರ್ತಕ
ಕಾಲೋತ್ಪಾದಕ ಕಾಲಮೂರ್ತಿ ತವ ೩
ಧರ್ಮಯೂಪ ಮಹಧರ್ಮ ವಿವರ್ಧನ
ಧರ್ಮ ವಿಧೋತ್ತಮ ಧರ್ಮನಿಧೇ
ಧರ್ಮ ಸೂಕ್ಷ್ಮ ಮಹಧರ್ಮ ಸಂರಕ್ಷಕ
ಧರ್ಮಸಾಕ್ಷಿ ಯಮಧರ್ಮಪುತ್ರ ತವ ೪
ಮಂತ್ರಯಂತ್ರ ಮಹ ಮಂತ್ರ ಬೀಜ ಮಹ
ಮಂತ್ರರಾಜಗುರು ಮಂತ್ರ ಧೃತ (ಜಿತ)
ಮಂತ್ರಮೇಯ ಮಹಮಂತ್ರಗಮ್ಯ ಫಲ
ಮಂತ್ರಮೇಯ ಜಗನ್ನಾಥ ವಿಠಲ ತವ ೫

ಹಾಡಿನ ಹೆಸರು :ದಾಸೋಹಂ ತವ ದಾಸೋಹಂ
ಹಾಡಿದವರ ಹೆಸರು :ಇಂದೂ ವಿಶ್ವನಾಥ್
ಸಂಗೀತ ನಿರ್ದೇಶಕರು :ಶ್ಯಾಮಲಾ ಜಿ. ಭಾವೆ
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ವಿಠಲಯ್ಯ ವಿಠಲಯ್ಯ
೬೧
ವಿಠಲಯ್ಯ ವಿಠಲಯ್ಯ ಪ
ತಟಿತ್ಕೋಟಿನಿಭಕಾಯ ಜಗನ್ನಾಥ ವಿಠಲಯ್ಯಾ ಅ.ಪ.
ಭಜಿಸುವೆ ನಿನ್ನನು ಅಜಭವ ಸುರನುತ
ಭಜಕಾಮರತರು ಕುಜನ ಕುಠಾರಾ ೧
ನೀ ಕರುಣಿಸದೆ ನಿರಾಕರಿಸಲು ಎನ್ನ
ಸಾಕುವರಾರು ದಯಾಕರ ಮೂರುತಿ ೨
ಶರಣಾಗತರನು ಪೊರೆವನೆಂಬ ತವ
ಬಿರಿದು ಕಾಯೋ ಕರಿವರದ ಜಗನ್ನಾಥ ೩

ಹಾಡಿನ ಹೆಸರು :ವಿಠಲಯ್ಯ ವಿಠಲಯ್ಯ
ಹಾಡಿದವರ ಹೆಸರು :ಪಂಚಾಕ್ಷರಿ ಹಿರೇವಇಠ್
ರಾಗ :ಜನ ಸಮ್ಮೋಹಿನಿ
ತಾಳ :ಭಜನ್ ಠೇಕಾ
ಸಂಗೀತ ನಿರ್ದೇಶಕರು :ವೆಂಕಟೇಶ ಕುಮಾರ್ ಎಂ.
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಸೋಮಶಿವ ಶರ್ವ ಭವ ಶಿತಿಕಂಠ
ಸೋಮಶಿವ ಶರ್ವ ಭವ ಶಿತಿಕಂಠ ನಿನ್ನಪದ
ತಾಮರಸಯುಗ್ಮಗಳಿಗಾನಮಿಸುವೆ ಪ
ಕಾಮಹರ ಕೈಲಾಸ ಹೇಮಗಿರಿಯಾವಾಸ
ರಾಮನಾಮನ ಭಜಿಪ ಉಮೆಯರಸ ಶಂಭೋ ಅ
ಮೃತ್ಯುಂಜಯ ಮೃಗಾಂಕ ಕೃತ್ತಿವಾಸ ಕೃಪಾಳೊ
ವಿತ್ತÀ್ತಪತಿ ಸಖ ವಿನಾಯಕರ ಜನಕ
ಭೃತ್ಯವರ್ಗಕೆ ಬಾಹಪಮೃತ್ಯು ಕಳೆದು ಸಂ
ಪತ್ತು ಪಾಲಿಸುವುದು ನಿವೃತ್ತಿ ಸಂಗಮಪ ೧
ಗೋಪತಿ ಧ್ವಜ ಘೋರ ಪಾಪ ಸಂಹರಣ ಹರಿ
ತೋಪಲೋಪಮ ಕಂಠ ಚಾಪಪಾಣೀ
ಶ್ರೀ ಪತಿಯ ಶ್ರೀನಾಭಿ ಕೂಪಸಂಭವತನಯ
ನೀ ಪಾಲಿಸೆಮ್ಮನು ವಿರೂಪಾಕ್ಷ ಗುರುವೆ ೨
ಭಸಿತ ಭೂಷಿತಡಮರು ತಿಸುಳಗೈಯನೆ ಶಂಭೋ
ಕಿಸಲಯೋಪಮ ನವಿರ ಶಶಿಭೂಷಣ
ಅಸುರಾರಿ ಶ್ರೀ ಜಗನ್ನಾಥ ವಿಠಲನ ಪದ
ಬಿಸಜ ಧ್ಯಾನವನೀಯೊ ಹಸನಾಗಿ ಕಾಯೊ ೩

ಹಾಡಿನ ಹೆಸರು :ಸೋಮಶಿವ ಶರ್ವ ಭವ ಶಿತಿಕಂಠ
ಹಾಡಿದವರ ಹೆಸರು :ವಿರೂಪಾಕ್ಷ ವಂದಲಿ
ರಾಗ :ಮಧ್ಯಮ ಸಾರಂಗ್
ತಾಳ :ಭಜನ್ ಠೇಕಾ
ಸಂಗೀತ ನಿರ್ದೇಶಕರು :ವೆಂಕಟೇಶ ಕುಮಾರ್ ಎಂ.
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ