Categories
ರಚನೆಗಳು

ಪ್ರಾಣೇಶದಾಸರು

ಇತರ ಯತಿಗಳ ಸ್ತೋತ್ರ
೧೬೩
ಶ್ರೀಭುವನೇಂದ್ರತೀರ್ಥರ ಸ್ತುತಿ
ಗುರುಗಳ ನೋಡಿರೈ ಉತ್ತಮ ವರಗಳ ಬೇಡಿರೈ ಪ
ದುರುಳ ತಿಮಿರ ದಿನಕರ ಶರಣರ ಸುರತರು |ವರದೇಂದ್ರರ ಕರ ಪಂಕಜರುಹ ಅ.ಪ.
ಮಂಗಳ ವಿಗ್ರಹ ಮಧ್ವ ಮತಾಂಬುಧಿ ಸೋಮ ಸದ್ಗುಣಧಾಮ |
ಪಿಂಗಳ ನಿಭ ಸನ್ಯಾಸ ಕುಲೋತ್ತಮನೀತಾ ಲೋಕ ವಿಖ್ಯಾತಾ ||
ಸಂಗರಹಿತ ಕೌಪೀನ ಕಮಂಡಲಧರ ದೋಷ ವಿದೂರ |
ಮಂಗಳೆ ಪತಿ ಪದಭಜಕ ಅಘೋರ ಗವೀಂದ್ರ ಶ್ರೀ ಭುವನೇಂದ್ರ ೧
ಜನ್ಮಾರಭ್ಯವು ಲೌಕಿಕ ಸ್ವಪ್ನದೊಳರಿಯಾ ಭೂಸುರ ವರ್ಯಾ |
ಸುಮ್ಮನೆ ಈ ಪರಿ ಪದವಿಯು ಜಗದೊಳು ಬಹದು ಆರಿಗೆ ಅಹದು ||
ಬೊಮ್ಮನ ಸಂತತಿಯಿದು ಪುಸಿಯಲ್ಲವು ಸತ್ಯಾ ಭಜಿಸಿರಿ ನಿತ್ಯಾ |
ಯಮ್ಮ ಬಳಿಯೊಳಿಹ ದುಷ್ಟ ಮತೇಂಧನ ದಾವ ಸೌಖ್ಯವನೀವಾ ೨
ಧಾರುಣಿಯೊಳು ವಿಸ್ತರಿಸಿದ ಸ್ವಮತವ ಧೀರಾ ಗುಣಗಂಭೀರಾ |
ಆರಿಂದೊಶ ಚರಿತೆಯ ಪೂರ್ತಿಸಿ ಪೇಳ್ವದಕೆ ಬಹು ಸುಖ ಮನಕೆ ||
ಶ್ರೀ ರಾಘವೇಂದ್ರರನುಗ್ರಹ ಪಾರಾವಾರಾದೊಳಗೆ ವಿಹಾರಾ |
ಘೋರಿಸುತಿಹ ಸಂಸಾರ ಸಮುದ್ರಕೆ ಮುನಿಯೂ ಯತಿ ಶಿರೋಮಣಿಯೂ೩
ಚಿರಕಾಲ ಸುಕೃತ ದೊರಕಲು ವದಗುವುದೂ ಸೇವೆಯಿವರದು |
ಮರಳೊಂದ್ಯೋಚಿಸದಲೆ ಶರಣಾಗತರಾಗೀ ಚಿಂತೆಯ ನೀಗೀ ||
ಎರವಿಲ್ಲದೆ ದುಃಖವ ಪರಿಹರಿಪರು ಹತ್ತೇ ಕರೆವರು ಮತ್ತೇ |
ಸಿರಿ ಪೂರ್ಣಾಯು ಸುತಾದಿ ವಿಷಯಗಳ ಕೊಡುವ ದುರಿತವ ತರಿವ ೪
ತವಕದೊಳಿವರ ಪದಾಬ್ಜವ ಸೇವಿಪ ಭಕ್ತಾ ಜೀವನ್ಮುಕ್ತಾ |
ಕುವಲಯದೊಳಗೀಗಿವರಿಗೆ ಸರಿಯಾರಿಲ್ಲಾ ಕೇಳಿರಿ ಸೊಲ್ಲಾ ||
ಅವನೀಶರು ಎಂಬಾಹ್ವಯ ತಿಳಿಯಲಿಕುಂಟೇ ಅಧಿಕರುವುಂಟೇ |
ಇವರಿಗೆರಗದಿರೆ ಒಲಿಯನು ಶ್ರೀ ಪ್ರಾಣೇಶಾ ವಿಠಲನು ಲೇಶ ೫

೧೭೦
(ಶ್ರೀ ವ್ಯಾಸರಾಯರ, ಶ್ರೀ ಮದುತ್ತರಾದೀ ಮಠದ ಯತಿಗಳ ಸ್ತೋತ್ರ)
ಗುರುಗಳ ಪದ ಪಂಕಜ | ಸ್ಮರಿಸುವೆ ನಿತ್ಯಾ ||ದುರಿತೌಘಗಳನು | ಓಡಿಸುವನತ್ತತ್ತ ಪ
ರಾಜೇಂದ್ರ ತಪೋನಿಧಿ | ಶ್ರೀ ಜಯಧ್ವಜ ತೀರ್ಥ ||ರಾಜಿತ ಪುರುಷೋತ್ಮ | ಬ್ರಹ್ಮಣ್ಯ ತೀರ್ಥ ೧
ಮಧ್ವಸಿದ್ಧಾಂತ ಸಂಸ್ಥಾಪಕ ವ್ಯಾಸರಾಯ ಪ್ರ |ಸಿದ್ಧ ಶ್ರೀನಿವಾಸ ಶ್ರೀ ಲಕ್ಷ್ಮೀಕಾಂತಾ ೨
ಬಲ್ಲೀದ ಶ್ರೀಪತಿ ರಾಮಚಂದ್ರ ಲಕ್ಷ್ಮೀ ||ವಲ್ಲಭ ಶ್ರೀ ಲಕ್ಷ್ಮೀನಾಥರೆಂತೆಂಬಾ ೩
ಶ್ರೀ ಲಕ್ಷ್ಮೀಪತಿ ತೀರ್ಥ ಲಕ್ಷ್ಮೀನಾರಾಯಣ ||ನೀಲೇಶ ಭಜಕರು ಶ್ರೀನಾಥ ತೀರ್ಥ ೪
ರಘುನಾಥ ಜಗನ್ನಾಥ ಕರಜಾತ ||ಸುಗುಣ ವಿದ್ಯಾನಾಥ ಶ್ರೀ ವಿದ್ಯಾಪತಿಯಾ ೫
ಶ್ರೀ ವಿದ್ಯಾನಿಧಿ ರಘುನಾಥ ಶ್ರೀ ರಘುವರ್ಯ ||ಕೋವಿದ ವಿನುತ ರಘೂತ್ತಮ ತೀರ್ಥ ೬
ವ್ಯಾಸ ವಿದ್ಯಾಪತಿ ವಿದ್ಯಾಧೀಶ ತೀರ್ಥ ||ಶ್ರೀ ಸತ್ಯವ್ರತರ ಶ್ರೀ ಸತ್ಯನಿಧಿಗಳ ೭
ಗುರು ಸತ್ಯನಾಥ ಶ್ರೀ ಸತ್ಯಾಭಿನವ ತೀರ್ಥ ||ವರ ಸತ್ಯಪೂರ್ಣ ಶ್ರೀ ಸತ್ಯ ವಿಜಯರಾ ೮
ಸತ್ಯ ಪ್ರೀಯರ ಸತ್ಯಬೋಧ ಸತ್ಯ ಸಂಧ ||ಸತ್ಯ ವರರ ಸತ್ಯಧರ್ಮಾಖ್ಯ ಮುನಿಪಾ ೯
ಈ ನಮ್ಮ ಗುರುಗಳ ಅನುದಿನ ಸ್ಮರಿಸೂತ |ಪ್ರಾಣೇಶ ವಿಠಲನ ಕರುಣವ ಪಡೆವೆ೧೦

೧೬೯
ಶ್ರೀ ರಾಯರ ಮಠದ ಯತಿಗಳ ಸ್ತೋತ್ರ
ಗುರುಗಳನನುದಿನ ನೆನೆವೆ ನಾ |ದುರಿತ ದಟ್ಟುಳಿ ಸಾರೆ ಬಂದೀತಿನ್ನೇನಾ ಪ
ಪಾರ್ಥ ರಕ್ಷಕನ ಸೇ | ವಾರ್ಥ ಖಳರ ಕೊಂದು |ಕೀರ್ತಿ ಪಡೆದ ಸುಖ | ತೀರ್ಥರೆಂತೆಂಬಾ ೧
ನೀ ಪಾಲೀಸೆಂದೆನಲಾಪತ್ತು ಬಿಡಿಸುವ |ಮಾಪತಿ ನಿಜದೂತ | ಶ್ರೀ ಪದ್ಮನಾಭ ೨
ಕರಿಪತಿ ಬಳಿಯಿಂದ | ಧರಿಜ ಪತಿಯ ತಂದು |ಗುರುಗಳಿಗಿತ್ತೀಹ | ನರಹರಿ ತೀರ್ಥಾ ೩
ಬಾದರಾಯಣ ದಿವ್ಯ | ಪಾದ ಜಲಜ ಭೃಂಗ |ಭೂದೇವ ವಂದಿತ | ಮಾಧವ ತೀರ್ಥ ೪
ಇಕ್ಷುಚಾಪನ ಮ್ಯಾಳ | ಲಕ್ಷ್ಮೀ ಇಲ್ಲದೆ ಬಲು |ಪೇಕ್ಷೆ ಮಾಡಿದ | ಅಕ್ಷೋಭ್ಯ ಮುನಿಪ ೫
ದಯಮಾಡಿರೆಂದು ವಿ | ನಯದಿಂದ ಭಜಿಪರ |ಬಯಕೀ ಪೂರೈಸುವ | ಜಯತೀರ್ಥರೆಂಬ ೬
ಅದ್ವೈತ ಗಜ ಸಿಂಹ | ಮಧ್ವ ಮತೋದ್ಭವ |ಸದ್ವೈಷ್ಣವ ಪ್ರೀಯ | ವಿದ್ಯಾಧಿರಾಜ೭
ಸಂದೇಹವಿಲ್ಲದೇ | ವಂದೀಪ ಜನರಾಸೆ |ತಂದುಕೊಡುವ ದಯ | ಸಿಂಧು ಕವೀಂದ್ರಾ ೮
ರಾಗ ವರ್ಜಿತ | ಭಾಗವತರ ಪಾಲ |ಯೋಗಿ ಶಿರೋಮಣಿ | ವಾಗೀಶ ಮುನಿಪ ೯
ಸಾರಿದ ಭಕುತರ | ಘೋರಿಪ ಅಘಗಳ |ದೂರ ಓಡಿಸುತಿಪ್ಪ | ಶ್ರೀ ರಾಮಚಂದ್ರ ೧೦
ಕು ಭವದೊಳಿರುವಾರ | ಸೊಬಗಿನಿಂದಲಿ ನೋಡಿ |ಅಭಯ ಕೊಡುತಿಪ್ಪ | ವಿಬುಧೇಂದ್ರ ತೀರ್ಥ ೧೧
ಭ್ರಾಮಕ ಜನ ಶಿಕ್ಷ | ಧೀಮಂತ ಜನ ಪಕ್ಷ |ಹೇಮ ವರಣಾಂಗ ಜಿ | ತಾಮಿತ್ರ ಮುನಿಪಾ ೧೨
ಬಗೆ ಬಗೆ ಭಜಿಸಲು | ಇಗಡ ಜನರನೊಲ್ಲ |ಬಗಿವಾನು ಸುಜನರ | ರಘುನಂದನಾರ್ಯ೧೩
ಪೊಂದಿದವರ ನೋಯ | ದಂದದಿ ಸಲಹುವ |ಎಂದೆಂದು ಬಿಡದ ಶ್ರೀ ಸು | ರೇಂದ್ರಾಖ್ಯ ಮುನಿಪ ೧೪
ನಿಜಭಕ್ತಿಯಲಿ ಪಾದ | ಭಜಿಸೂವ ಅಗಣಿತ |ಸುಜನರ ಸಲಹುವ | ವಿಜಯಿಂದ್ರ ಮುನಿಪ ೧೫
ವೀಂದ್ರ ವಾಹನ ಯಾದ | ವೇಂದ್ರಾಂಘ್ರಿ ಭಜಿಸೂವ |ಸಾಂದ್ರ ಭಕ್ತಿಯಲಿ ಸು | ಧೀಂದ್ರಾಖ್ಯ ಮುನಿಪಾ೧೬
ಧಾರುಣಿಯೊಳಗತಿ | ಚಾರು ವೃಂದಾವನ |ದೀ ರಾಜಿಸುತಿಪ್ಪ | ಶ್ರೀ ರಾಘವೇಂದ್ರಾ ೧೭
ಶ್ಲಾಘೀನ ಗುಣನಿಧಿ | ಮಾಗಧ ರಿಪು ದಾಸ |ರಾಘವೇಂದ್ರರ ಪುತ್ರ | ಯೋಗೀಂದ್ರ ತೀರ್ಥ ೧೮
ವೈರಾಗ್ಯ ಗುಣದಿಂದ | ಮಾರಾರೀಯಂದದಿ |ತೋರುವರನು ದಿನ | ಸೂರೀಂದ್ರ ತೀರ್ಥ ೧೯
ಕುಮತವೆಂಬಗಣೀತ | ತಿಮಿರ ಓಡಿಸುವಲ್ಲಿ |ಕಮಲಾಪ್ತನಂತೀಹ | ಸುಮತೀಂದ್ರ ತೀರ್ಥ ೨೦
ಸಲ್ಲಾದ ಸುಖಗಳ | ನೆಲ್ಲಾವು ಜರಿದು ಶ್ರೀ |ನಲ್ಲಾನ ಭಜಿಸಲು | ಬಲ್ಲ ಉಪೇಂದ್ರಾ ೨೧
ಮೋದ ಮುನಿ ಮತ ಮ | ಹೋದಧಿ ಚಂದ್ರ ವಿ |ದ್ಯಾದಿ ದಾನಾಸಕ್ತ | ವಾದೀಂದ್ರ ತೀರ್ಥ ೨೨
ಬಿಸಜನಾಭನ ದೂತ | ವಸುಧಿಯೊಳಗೆ ಖ್ಯಾತ |ಕಿಸಲಯೋಪಮ ಪಾದ | ವಸುಧೀಂದ್ರ ತೀರ್ಥ ೨೩
ಪರ ಮತೋರಗ ವೀಪ | ಕರುಣಿ ವಿಗತ ಕೋಪ |ವರ ವೇದ ಸುಕಲಾಪ | ವರದೇಂದ್ರ ಭೂಪ ೨೪
ಸುವಿವೇಕಿಗಳಿಗಿಷ್ಟ | ತವಕದಿಂದಲಿ ಈವ |ಕವಿಭಿರೀಡಿತ ಪಾದ | ಭುವನೇಂದ್ರ ತೀರ್ಥ ೨೫
ಶಬರೀ ವಲ್ಲಭನಂಘ್ರಿ | ಅಬುಜಾಳಿ ಸೂರ್ಯ ಸ |ನ್ನಿಭ ವಾದಿ ಗಜಸಿಂಹ ಸುಬೋಧೇಂದ್ರ ತೀರ್ಥ ೨೬
ಪ್ರಾಣೇಶ ವಿಠಲನ | ಕಾಣಬೇಕಾದರೆ |ಈ ನಮ್ಮ ಗುರುಗಳ | ಧ್ಯಾನದೊಳಿಹದೂ ೨೭

೨೫೫
ಗೋಪಾಲಕೃಷ್ಣನಿಗೆ ಮಂಗಳಾ | ಘೋರಪಾಪಾರಣ್ಯ ಧನಂಜಯಗೆ ಮಂಗಳ ಪ
ಚಿಕ್ಕವನಾಗಿ ಬಲಿಯ ದಾನವ ಬೇಡಿ ನೆಲಾ |ಕಿಕ್ಕಿ ತುಳಿದಂವಗೆ ಮಂಗಳಾ ||
ಸೊಕ್ಕಿದ ಜಾಂಬುನದಾಕ್ಷನ ಹುಡಿಗುಟ್ಟೀ |ಅಕ್ಕರೆಲ್ಲರಿಗೆ ಮಾಡ್ದಗೆ ಮಂಗಳಾ ೧
ಕಿಡಿಯನುಗುಳುತಲಿ ಚಟಚಟ ಕಂಬದಿಂದ |ಒಡದು, ಬಂದವನಿಗೆ ಮಂಗಳಾ ||
ಕಡು ಕೋಪದಿಂದ ಶಾತ ಕುಂಭ ಕಶ್ಯಪುವಿನಾ |ಪಿಡಿದೊಡಲು ಬಗದವಗೆ ಮಂಗಳಾ ೨
ನುಡಿಯಲು ಜನನಿಯು ಕೇಳಿ ಪುರವ ಬಿಟ್ಟು |ಅಡವಿಗೆ ಹೋದಂವಗೆ ಮಂಗಳಾ ||
ಮಡದೀಯಾಕೃತಿವೈದ ಸುರನ ಕೊಂದವನಿಗೆ |ಕಡಲಾ ಮಂದಿರನಿಗೆ ಶುಭ ಮಂಗಳಾ ೩
ಪಾಷಾಣಳಾದವಳ ಉದ್ಧಾರ ಮಾಡಿದವಗೇ |ದೋಷರಹಿತನಿಗೆ ಮಂಗಳಾ ||
ಭೇಶ ಭಾಸ್ಕರ ಕೋಟಿ ತೇಜ ಹರಿಗೆ ಸ- |ರ್ವೇಶ ಮುರಾಂತಕಗೆ ಶುಭಮಂಗಳಾ ೪
ಶ್ರೀರಮಣ ಶ್ರೀಮಂತ ಪ್ರಾಣೇಶ ವಿಠ್ಠಲನೀಗೆ |ವಾರೀಜ ನಯನಗೆ ಮಂಗಳಾ ||
ನಾರಾಯಣಗೆ ದಯಸಾಂದ್ರಗೆ ದಶ ಅವ- |ತಾರ ಗೋವಿಂದ ವಾಮನಗೆ ಮಂಗಳಾ ೫

೨೨೭
ಶ್ರೀ ಗೋಪಿಚಂದನ ಮುದ್ರಾಧಾರಣ ಮಾಹಾತ್ಮ್ಯ
ಗೋಪಿಚಂದನ ಮುದ್ರಧಾರಣ ಮಹಾತ್ಮಿಯನು |ಆಪನಿತು ಬರವೆ ಕೇಳ್ವದು ಸುಜನರುಪ
ಪೂರ್ವದಲಿ ಕೈಲಾಸ ಶಿಖರದಲಿ ಇಂದ್ರಾದಿ |ಗೀರ್ವಾಣ ಸಕಲ ಮುನಿ ಪ್ರಮಥರಿಂದಾ ||
ಪಾರ್ವತೀಶನು ಸೇವೆಗೊಳುತಿರಲು ಜನಕ ದಯ |ಬೀರ್ವದಕೆ ಗೌರಿ ಪತಿಗಿಂತೆಂದಳೂ೧
ಎಲೆ ದೇವ ನಿಮ್ಮಿಂದ ಲೋಕಕ್ಹಿತಕರವಾದ |ಬಲು ಧರ್ಮ ಗೌಪ್ಯ ವೃತ ಕೇಳ್ದೆನೀಗಾ ||
ತಿಳಿಸುವದು ಊಧ್ರ್ವ ಪುಂಡ್ರದ ಮುದ್ರಿ ಮಹಿಮೆ ಎನೆ ಮು- |ಗುಳು ನಗಿಯಿಂದ ಸತಿಗಿಂತೆಂದನೂ ೨
ಅರಸಿ ಕೇಳ್ ವಿಪ್ರನಾಗಲಿ ಸುಪಂಡಿತನಾಗೆ |ಧರಿಸದಿರೆ ಗೋಪಿಚಂದನ ಮುದ್ರಿಯಾ ||
ಸುರ ಘಟ ಸಮಾನ ತದ್ದೇಹದರುಶನ ಪಾಪ |ತರಣಿ ಬಿಂಬವ ನೋಡಿ ಕಳಿಯಬೇಕೂ ೩
ಕೋಪಿಯಾಗಲಿಯನಾಚಾರಿಯಾಗಲಿ ಸರ್ವ- |ದಾ ಪರರ ನಿಂದೆಗೈವವನಾಗಲೀ ||
ಗೋಪಿಚಂದನ ಲಿಪ್ತ ಗಾತ್ರನಾದನ ದೋಷ |ಲೇಪವಿಲ್ಲದೆ ಮುಕ್ತನಹನುಭವದಿಂ೪
ಎಂತು ಪೇಳಲಿ ಊಧ್ರ್ವ ಪುಂಡ್ರ ಮಹತ್ಮಿಯನು |ಅಂತಿಜ ಲಲಾಟದಲಿ ಶೋಭಿಸಲ್ಕೇ ||
ಅಂತಃಕರುಣ ಶುದ್ಧನವನೇ ಪೂಜ್ಯನು ವಲಿವ |ಕಂತುಪಿತ ಕುಲಶೀಲಗಳನೆಣಿಸದೇ ೫
ಭಾಮಿನಿಯು ಅಜ್ಞಾನದಿಂ ಪುಂಡ್ರ ಧರಿಸದಲೆ |ಹೋಮಾರ್ಥವಾಗಿ ಪಾಕವ ಮಾಡಲೂ ||
ಆ ಮಹತ್ಪಾಪವೇನಂಬೆ ವಿಷ್ಟಸಮಾನ್ನ |ಈ ಮರ್ಮವರಿಯದುಂಡುವಗ ನರಕಾ೬
ಹರಿಯ ಚಕ್ರಾಂಕಿತ ವಿರಹಿತ ಸ್ತ್ರೀ ಪುರುಷಾಂಗ |ಸ್ಪರುಶವಾಯಿತೆ ದೈವವಶದಿಂದಲೀ ||
ಅರಲವ ತಡಿಯದೆ ಆಮಲ್ಕ ಗೋಮಯ ಸ್ನಾನ |ವಿರಚಿಸುತ ಶ್ರೀಶಂಘ್ರಿ ಪೂಜಿಸುವದೂ ೭
ಸ್ಮರಣೆ ಮಾಡದೆ ಹರಿಯ ಅಂಕಿತರ ಹಿತ ದೇಹ |ಜರಿಯೆ ಜಾಹ್ನವಿಯಲ್ಲಿ ನರಕ ಉಂಟೂ ||
ಅರಿ ಶಂಖ ಧರಿಸಿ ಕೀಕಟದಲ್ಲಿ ಮೃತನಾಗೆ |ಲರಿವದು, ಪ್ರಯಾಗ ಮೃತಿಗತಿಯವನಿಗೇ ೮
ಪುತ್ರಹೀನಗೆ ಲೋಕವಿಲ್ಲವೆಂಬುವದ್ಯಾಕೆ |ಮಿತ್ರ ಕುಲಜನ ಮುದ್ರೆ ಧರಿಸುತಿರಲೂ ||
ಶತ್ರು ಸಮಾನಾಪಹ್ಯರಿದು ಮುದ್ರಿಯನಿಡದೆ ಸ್ವ- |ಪಿತೃಗಳಿಗೈದಿಸುತಿಹರು ದುರ್ಗತೀ ೯
ಆವ ವಿಪ್ರನು ಊಧ್ರ್ವಪುಂಡ್ರ ವಿರಹಿತನಾಗಿ |ಭಾವಶುದ್ಧದಿ ಶ್ರಾದ್ಧ ಮಾಡಲವನಾ ||
ಜೀವಿಸುವದ್ಯಾಕೆಂದು ಶಪಿಸಿ ದ್ವಾದಶ ವರುಷ |ತಾಂ ವದನದೋರಧೋಹರು ಪಿತೃಗಳೂ ೧೦
ಶಿರದಲ್ಲಿ ಚಕ್ರವಿರೆ ದೇವರೆನಿಸುವದು ಭುಜ |ಅರಿಯುಕ್ತವಾಗಿರಲು ದ್ವಿಜನೆನಿಸುವಾ ||
ವಿರಹಿಥರಿ ಪ್ರತಿಮಿ ಪೂಜಿಸಲು ವಿಪ್ರಗೆ ದಾನ |ವಿರಸೆ ರಂಧ್ರ ಕಲಶದೊಳುದಕದಂತೆ ೧೧
ಯಾಗ ಮಾಡಲಿ ಮಹದ್ದಾನ ಬಹು ಮಾಡಲೀ |ಯೋಗ ಮಾಡಲಿ ವೇದ ಓದುತಿರಲೀ ||
ನಾಗವರದನ ಲಾಂಛನವ ಧರಿಸದಲೆ ಕುನ್ನಿ |ಭಾಗೀರಥಿಯೊಳದ್ದಿ ತೆಗಿದ ತೆರವೂ ೧೨
ನಾಮಕರ್ಣುಪನಯನ ಆಷಾಢ ಕಾರ್ತೀಕ |ಶ್ರೀ ಮಾಧವನ ದಿನದಿ ತಪ್ತಮುದ್ರಿ ||
ಧೀಮಂತರಾದ ಗುರುಗಳ ಕೈಯ ಧರಿಸುವದು |ನೇಮದಿಂ ಪಂಚ ಸಂಸ್ಕಾರದೊಳಿದೂ ೧೩
ಎರಡಾರು ನಾಲ್ಕು ಎರಡೂ ಒಂದು ಪುಂಡ್ರಗಳು |ಧರಿಸುವದು ನಾಲ್ಕು ವರ್ಣವು ಕ್ರಮಾತೂ ||
ಅರಿಪ್ರಮುಖ ಪಂಚಮುದ್ರಿಯೊಳು ಹಿಂಕಾರಾದಿ |ಹರಿರೂಪ ಪಂಚರಿದು ಧರಿಸಬೇಕೂ ೧೪
ಶಚಿಯೆ ಮೊದಲಾದ ನಿರ್ಜರರ ಹೆಂಡರು ಪುಂಡ್ರ |ಶುಚಿಮನದಿ ಧರಿಸಿ ಸ್ವಪತಿಗಳ ಸಹಿತಾ ||
ಅಚಲಿತ ಸುಮಾಂಗಲ್ಯಯೈದಿ ಸ್ವ ಸ್ಥಳದಲ್ಲಿ |ಮುಚುಕುಂದ ವರದನಾರಾಧಿಸುವರೂ ೧೫
ಈ ವಚನಕಾವ ಸ್ಥಳಕಾವ ನಾಮಾವ ಮು- |ದ್ರಾವ ಮಿತಿಯಾಕಾರ ಮೃದವೆಲ್ಲಿದೂ ||
ಆವ ವರ್ಣದಲೇನು ಆವಂಗುಲದಲೇನು |ಆವ ಮಂತ್ರದಕೆನಲು ಪೇಳ್ವನಿಂತೂ ೧೬
ಕಾಮಿನಿಯೆ ಗೋಪಿಚಂದನ ಮರ್ದಿಸುವದಿಂತು |ವಾಮಹಸ್ತದ ಮಧ್ಯ ಜಲವ ಧರಿಸೀ ||
ಈ ಮೂರು ಪಾದ ಗಾಯಿತ್ರಿಯಿಂ ಮಂತ್ರಿಸುತ |ಆ ಮಹಾ ಋಕ್ಕಥೋ ದೇವತಿಯಿಂ೧೭
ತರುವಾಯ ಧರಿಸುವದು ಪುಂಡ್ರಗಳು ಕೇಳೆಲಗೆ |ವರಪಣಿಗೆ ಆದಿಯಲಿ ಕೇಶವಲ್ಲೀ ||
ಸುರಪ ನಾರಾಯಣುದರದಿ ಹೃದಯದಲ್ಲಿ ಮಾ- |ವರ ಕಂಠ ದೇಶದಲ್ಲಿ ಗೋವಿಂದನೂ ೧೮
ಬಲಪಾಶ್ರ್ವದಲಿ ವಿಷ್ಣು ಭುಜದಲ್ಲಿ ಮಧೂಸೂದ |ಸಲೆ ಬಲದ ಕಂಠದಲಿ ತ್ರೀವಿಕ್ರಮಾ ||
ಲಲನೇ ಕೇಳ್ ವಾಮಪಾಶ್ರ್ವಕೆ ವಾಮನಾ ಭುಜಕೆ |ಖಳಹ ಶ್ರೀಧರ ಕಂಠದಲಿ ಹೃಷೀಕಶ ೧೯
ಪೃಷ್ಠದಲಿ ಕಂಜನಾಭ ಶಿರದಿ ದಾಮೋದರನು |ಇಷ್ಟೆ ದ್ವಾದಶನಾಮ ಸಿತಪಕ್ಷಕೇ ||
ಕೃಷ್ಣಪಕ್ಷದೊಳಿವಕೆ ಸಂಕರುಷಣಾದಿ ಶ್ರೀ |ಕೃಷ್ಣ ಪರಿಯಂತ ತಿಳಿವರು ಸುಜನರೂ೨೦
ಶೈಲಾಗ್ರ ವಲ್ಮೀಶ ಶಿಂಧು ಹರಿ ಕ್ಷೇತ್ರ ನದಿ |ಕೂಲ ದ್ವಾರಕಿ ನೆಲದ ಶ್ರೀ ತುಲಸಿಯಾ ||
ಮೂಲದಲ್ಲಿಹ ಮೃತ್ತಿಕಾಗಳಿಂತು ಸುಪವಿತ್ರ |ಕೇಳದರೊಳಗೆ ಗೋಪಿಚಂದನಧಿಕಾ ೨೧
ಶಾಮ ಶಾಂತವು ರಕ್ತ ರಾಜ ವಶ ಪೀತ ಶ್ರೀ |ಆ ಮಹಾ ವಿಷ್ಣು ಪ್ರಿಯಕರವು ಶ್ವೇತಾ ||
ಈ ಮರ್ಮಗಳ ತಿಳಿದು ಪುಂಡ್ರಧಾರಣ ಮಾಡೆ |ಭೂಮಿಯೊಳಗವರು ಸಜ್ಜನರು ಸಖಿಯೇ ೨೨
ಸ್ತ್ರೀ ಪುರುಷರೆಲ್ಲ ಧರಿಸುವದು ವಿವರವ ತಿಳಿದು |ಪಾಪಿ ಹೆಂಗಸು ಅವಳಾದರನ್ನಾ ||
ಗೋಪಿಚಂದನ ಗದಾ ಫಣಿಗೆ ಧರಿಸದಲಿದ್ದ- |ರಾ ಪುರುಷನಳಿದು ದುಃಖವ ಬಡುವಳೂ೨೩
ಸಕಲ ಗುಣ ತರ್ಜನದಿ ಮಧ್ಯಮದಿ ಜ್ಞಾನ ನಾ- |ಮಿಶ ಸದಾಚಾರ ಕನಿಷ್ಠದಲಿ ಮೋಕ್ಷಾ ||
ಸುಖದಿ, ವಿಧಿತಿಲಕ ದಕ್ಷಿಣದಿ ಉತ್ತರದಿ ಶಿವ |ಅಕಳಂಕ ಹರಿ ಮಧ್ಯ ಛಿದ್ರದಲ್ಲೀ ೨೪
ಸಛಿದ್ರ ಹರಿಮನೆನಿಸುವದು ಶ್ವಾನಾಂಘ್ರಿ ಸಮ |ಅಚ್ಛಿದ್ರ ಪಣಿಯು ಈ ಲೋಕದಲ್ಲೀ ||
ತತ್ಸಮಾನಧಮರಿಲ್ಲ ಪುಂಡ್ರದಾಕಾರ |ಮತ್ಸಖಿಯೆ ಕೇಳಾದರದಲಿ ಪೇಳುವೇ ೨೫
ದಂಡದಾಕಾರ ಹಚ್ಚುವದು ಫಣಿಯಲ್ಲಿ ಖರ |ದಂಡದಂತೆದಿಗೆ ಭುಜದಲಿ ಬಿದಿರೆಲೀ ||
ಪುಂಡರೀಕಾಕ್ಷ ಕೇಳನ್ಯ ದೀಪಾಕೃತಿಯು |ಪಂಡಿತರು ಧರಿಸುವರು ನಿಗಮೋಕ್ತಿಯಿಂ ೨೬
ವನಿತೇ ಕೇಳ್ ಫಣಿ ಕಂಠದಲಿ ನಾಲ್ಕು ಪೃಷ್ಠ ತಲಿ |ಇನಿತರಲಿ ಪಂಚಾಂಗುಲದ ಪರಿಮಿತೀ ||
ಮುನಿ ನೇತ್ರ ಬೆರಳಷ್ಟು ಕುಕ್ಷಿಯಲಿ ಮೇಳೊಂದು |ಘನ ಉದರದಲ್ಲಿ ಬಾಹುಗಳಿಘತ್ತೂ ೨೭
ವಕ್ಷದಲಿ ಅಷ್ಟಾಂಗುಲದ ಪ್ರಮಾಣವ ಧರಿಸಿ |ಅಕ್ಷಯಾನಂದದಿಂ ನಿವ್ರ್ಯಾಜದಿಂ ||
ಪಕ್ಷಿವಾಹನಾಯುಧವ ನಾಲ್ಕೊಂದು ವಿವರವ | ಮುಮುಕ್ಷುಗಳು ತಿಳಿದು ಧರಿಸುವರು ಇಂತೂ ೨೮
ವಲ್ಲಭಯೆ ಕೇಳ್ಮುದ್ರಿಗಳು ಭಂಗರ |ಬೆಳ್ಳಿ ತಾಮ್ರವಾದರು ದೊರಕದ ಕಾಲಕೇ ||
ಕಲ್ಲಿನವು ಕಾಷ್ಠದವು ಕಬ್ಬಿಣದವಾದರೂ |ಬಲ್ಲವರು ಮುದದಿಂದ ಧರಿಸುತಿಹರೂ ೨೯
ಉದರದಲಿ ಮೂರು ಚಕ್ರದರಡಿಗೆ ದರ ವಂದು |ಪದುಮದ್ವಯ ಮಧ್ಯದಲಿ ನಾಮ ನಾಲ್ಕೂ ||
ಇದರಂತೆ ಬಲಕುಕ್ಷಿ ಬಾಹುಗಳಿಗ್ಹಚ್ಚುವದು |ಮುದದಿಂದಲರಿ ಮಾತ್ರ ವಂದು ಕೊರತೀ ೩೦
ದರ ಎರಡರಡಿ ಒಂದು ಅರಿ ಎರಡು ಗದಿ ನಾಮ |ಧರಿಸುವದು ನಾಲ್ಕು ಎಡಕುಕ್ಷಿ ಭುಜಕೇ ||
ಕೊರಳಿಗೆ ಕಪೋಲಗಳಿಗೊಂದೊಂದು ಹಚ್ಚುವದು |ಅರಿ ಬಲಕ ಎಡಭಾಗದಲಿ ಶಂಖವೂ೩೧
ಗದೆ ಪಣಿಗೆ ಹೃದಯದಲಿ ರವಿ ಪದ್ಮ ಕರದ್ವಯಕ |ಮಧುಸೂದನಾಂಕಿತವು ಸರ್ವ ಸ್ಥಳಕೇ ||
ಇದರಂತೆ ಆಚರಿಪ ಸದ್ವೈಷ್ಣವರ ಸುಖವು |ಅದನೆಂತು ವರ್ಣಿಸಲಿ ವಶವಲ್ಲವೂ ೩೨
ಶರ ಚಾಪಗಳನು ಮೂಧ್ರ್ನಿಯಲಿ ಖಡ್ಗವು ಚರ್ಮ |ವೆರಡು ಬಲ ಎಡ ಸ್ತನದಿ ಕೌಸ್ತುಭವನೂ ||
ಉರದಲ್ಲಿ ದಕ್ಷಿಣದ ಸ್ತನದಲ್ಲಿ ಶ್ರೀವತ್ಸ |ಧರಿಸುವದು ಆರು ಚಿಹ್ನಗಳು ಸತತಾ ೩೩
ಲಕ್ಷ್ಮೀರಮಣನ ಮುದ್ರ ಪುಂಡ್ರ ಧರಿಸಿದ ದ್ವಿಜನ |ಕುಕ್ಷಿಯೊಳು ಕವಳ ಮಾತ್ರನ್ನ ಕೊಡಲೂ ||
ಅಕ್ಷಯಾಗುವದು ಫಲ ಹಿಂದೆ ಮುಂದೇಳು ಕುಲ |ತಕ್ಷಣಕೆ ಶುಚಿಯಾಗಿ ಗತಿ ಕೊಡುವದೂ ೩೪
ಹೀನ ಪುಂಡ್ರನು ಸುಪಂಡಿತನಾಗಿರಲು ಅವನ |ಆನನದಿ ಕೊಟ್ಟನ್ನ ಅಳುವದಿಂತೂ ||
ಏನು ದುಷ್ಕರ್ಮ ಒದಗಿತೊ ಈ ಒಡೆಯನಿಂದ |ಈ ನಷ್ಟನಿಗೆ ಕೊಡಿಸಿಕೊಂಡೆನೆಂದು ೩೫
ಪಂಚನಿಶಿ ಬದುಕುವದೆ ಲೇಸೂಧ್ರ್ವ ಪುಂಡ್ರಗಳು |ಪಂಚಮುದ್ರಿಯ ಧರಿಸಿ ಹರಿ ಭಜಿಸುತಾ ||
ವಂಚಿಸಿ ಮುಕುಂದನ ತಿರಸ್ಕರಿಸಿ ಮುದ್ರಿಯ ವಿ- |ರಂಚಿ ಕಲ್ಪಯುತ ಜೀವಿಸಲು ವ್ಯರ್ಥಾ ೩೬|
ಎಲ್ಲಿ ಶ್ರೀ ತುಲಸಿವನ ಪದ್ಮವನ ವೈಷ್ಣವರು |ಎಲ್ಲಿ ಇಹರಲ್ಲೇ ಇಹ ಪರಮಾತ್ಮನೂ ||
ಸೊಲ್ಲಾಲಿಸಿದು ಹರಿ ನುಡಿದಿಹನಾ ವೈಕುಂಠ- |ದಲ್ಲಿಲ್ಲ ನೆನವರಲ್ಲಿರುವನೆಂದೂ ೩೭
ಯರಡಾರು ಪುಂಡ್ರ ಶ್ರೀ ಮುದ್ರಧಾರಣ ಚರಿತ |ಸ್ಮರಿಸಿ ಕೇಳಿದರೆ ಇಚ್ಛಾರ್ಥ ಪಡೆದೂ ||
ಮುರವೈರಿ ಲೋಕವೈದುವರು ಶೃತಿ ಸಿದ್ಧವಿದು |ಗಿರಿಜೆ ಕೇಳೆಂದು ಧೂರ್ಜಟ ಪೇಳಿದಾ ೩೮
ಶಿವ ಸಕಲ ಶಾಸ್ತ್ರಗಳ ಕಲಿಕಿ ಗಿರಿಜೆಗೆ ಪೇಳ್ದ |ವಿವರರಿತು ಆಚರಿಪ ಭಾಗವತರಾ ||
ಭವಶರಧಿಯಿಂದ ಕಡಿಗೆತ್ತಿ ಪಾಲಿಸುತಿಹನು |ಕವಿಗೇಯ ಪ್ರಾಣೇಶ ವಿಠ್ಠಲ ಜಸ್ರಾ ೩೯

೨೦೨
ಘಾಸಿ ಮಾಡನು ಯಮನು | ಘಾಸಿ ಮಾಡನೂ ||
ವಾಸುದೇವನಂಘ್ರಿ ಯುಗಳ | ಬ್ಯಾಸರದಲೆ ಭಜಿಸುವರಿಗೆ ಪ
ಎರಡು ಆರು ಪುಂಡ್ರ ತುಲಸಿ |ಸರಸಿಜಾಕ್ಷ ಮಾಲಿ ಧರಿಸಿ ||
ಶಿರಿ ರಮಣನ ಗುಣಕಥನವ |ಇರಳು ಹಗಲು ಸ್ಮರಿಸುವರಿಗೆ೧
ಅಲವ ಬೋಧರುಕ್ತಿಯಂತೆ |ಮಲ ವಿಸರ್ಜನಾದಿ ಕರ್ಮ ||
ಗಳನು ತಪ್ಪದಲೆ ನಡಿಸುತ |ಭಳಿರೆ ಎನಿಸಿಕೊಂಬುವರಿಗೆ ೨
ಪನ್ನಗಾರಿಧ್ವಜನ ದಿನದೊ |ಳನ್ನ ನಿದ್ರಿಗಳನು ತೊರದು ||
ಅನ್ಯ ಶಾಸ್ತ್ರಗಳನು ಕನಸಿ |ಲೆನ್ನ ನೆನಿಸದಿದ್ದವರಿಗೆ ೩
ಪಂಚತೀರ್ಥ ಕರದೊಳರಿತು |ಪಂಚಕರ್ಮಗಳನು ಮಾಡಿ ||
ಪಂಚ ಅಗ್ನಿಗಳಲಿ ನಿರುತ |ಪಂಚ ಆಹುತಿ ಕೊಡುವರಿಗೇ ೪
ತಾರತಮ್ಯ ರೂಪಗಳನು |ಸೂರಿಗಳ ಮುಖದಲಿ ಕೇಳಿ ||
ವಾರಣಾಸಿ ಪ್ರಮುಖ ಯಾತ್ರಿ |ಭಾರೆ ಭಾರೆ ಮಾಡುವರಿಗೆ ೫
ಯಾದವೇಶನಿಚ್ಛೆಯಿಂದ |ಲಾದ ದೇವೆ ಲಾಭವೆಂದು ||
ಮೋದ ಬಡುತಲಿದ್ದು ಪಂಚ |ಭೇದ ತಿಳಿವ ಜ್ಞಾನಿಗಳಿಗೆ ೬
ಹೀನ ಬಹು ಉತ್ತುಮನು ಯೆಂದು |ಪ್ರಾಣಿಗಳೆಂತರಿವರೊ ಅಂತೆ ||
ಕಾಣಿಸಿಕೊಂಬ ಪ್ರತ್ ಪ್ರತ್ಯೇಕ |ಪ್ರಾಣೇಶ ವಿಠಲನೆಂಬುವರಿಗೆ ೭

೧೬೭
ಶ್ರೀಧರತೀರ್ಥರ ಸ್ತುತಿ
ಚಿರಕಾಲ ಮರೆಯೆ | ನಿಮ್ಮ ಸ್ಮರಣೆ | ಶ್ರೀಧರ ತೀರ್ಥ ಗುರುರಾಯ ಧೊರೆಯೆ ಪ
ಭವದೂರ ವೀತ ವಿಷಯ ಸಂಗ ಅವನಿಯೊಳು ಖ್ಯಾತ |
ತವಕದಿಂದಲಿ ಲಾಲಿಸುವುದೆನ್ನ ಮಾತ |ಭುವನೇಂದ್ರ ಯತಿ ಕರಕಮಲ ಸಂಜಾತ ೧
ಮೃದ ಸಮ ಹೇಮಾದಿಗಳನು ಮಾಡಿದ ಜಿತಕಾಮ |
ಬುಧ ಜನ ವಂದ್ಯ ಸದ್ಗುಣ ಗಣಧಾಮ |ಮುದ ತೀರ್ಥ ಮತ ಪಾರಾವಾರ ಸು ಸೋಮ ೨
ಪತಿತ ಪವಿತ್ರ ದಯಾಂಬುಧೇ ಶತ ಪತ್ರ ನೇತ್ರ |
ವಿತರಣೆಯಲಿ ರವಿಜನೆ ಶುಭ ಗಾತ್ರ |ಪತಗಾಭ ದಂಡಾದಿಧರ ಸುಚರಿತ್ರ ೩
ನತು ಸುರಮಣಿಯೆ ನೀವಲ್ಲದೆ ಇತರರಿಗೆ ಮಣಿಯೆ |
ಪ್ರತಿವಾದಿ ಮಹಾ ತಿಮಿರಕೆ ದಿನಮಣಿಯೆ |ಮತಿಯ ಪಾಲಿಸೊ ದುಃಖ ಪೃಷದಶ್ವ ಫಣಿಯೇ೪
ಸಾಕೆನ್ನ ಕೀಳು ಬುದ್ಧಿಯ ಕಳೆದು ಜೋಕೆಯಿಂದ ಆಳು |
ನೀ ಕೈಯ ಬಿಡಲು ಸಾಕುವರಿಲ್ಲ ಕೇಳು |ಶ್ರೀಕಾಂತ ಪ್ರಾಣೇಶ ವಿಠ್ಠಲನ ಆಳು೫

೨೪೯
ಉರುಟಣೀ ಪದ
ಜಯತೂ ರುಗ್ಮಿಣಿ ಕಾಂತಾ | ಜಯತೂ ಕಂಸ ಕೃತಾಂತಾ |ಜಯ ಜಯತೂ ಧೀಮಂತಾ ಜಯ ನಿಶ್ಚಿಂತಾ | ಪ
ಖಳರಾ ಬಾಧಿಗೆ ಭೂಮಿ | ಲಲನೇ ಗೋ ರೂಪದಲಿ ||ನಳಿನಾ ಪೀಠನ ಕೂಡಿ ಬಿನ್ನೈಸಲು ಕೇಳಿ ೧
ತ್ರಿಗುಣಾ ವರ್ಜಿತವಾದಾ | ಯುಗ ಒಂದೂಮಾತ್ಮ ಕಥಾ ||ಮಗಳಲ್ಲಿದ್ದಾ ಉತ್ಸಾಹ ತೋರುವೆ ಜಗತಿಯೊಳೆಂದೂ೨
ವಾರಿಧಿಯಾ ಮಧ್ಯದಲೀ | ದ್ವಾರಕಿಯಾ ವಿರಚಿಸೀ ||ಕ್ರೂರಾ ದೈತ್ಯರ ಗೆಲಿದು ರುಗ್ಮಿಣಿಯಾ ತಂದೂ ೩
ನಿತ್ಯದಲಿ ಅವಿಯೋಗಿ | ಸತ್ಯಾವಾದರು ಶ್ರೀಶಾ ||ಮತ್ತೂ ಹಮ್ಮುತಲೀ ವಿವಾಹ ಮನುಜಾರಂತೇ೪
ಬ್ರಹ್ಮಾದಿ ನಿರ್ಜರರಾ | ಸುಮ್ಮನದಿ ಕರಿಸಾಲೂ ||ಒಮ್ಮೇಲೆ ಬಂದರು ತಮ್ಮಯ ಸ್ತ್ರೀಯರ ಕೂಡೀ ೫
ನಿತ್ಯಾನಂದಗೆ ಮದುವೀ | ಮತ್ತೆಲ್ಲೀದೀಗಮ್ಮಾ ||ಮೊತ್ತಕೆ ಸಂತೋಷವ ಮಾಡಲು ರಚಿಸಿದನೀಗಾ ೬
ಆವಾವಾ ಕಾಲದಲೀ | ಆವಾ ಪುಣ್ಯದ ಫಲವೂ ||ಆವಲ್ಲಿಂದೊದಗಿತೊ ಇಂದಿಗೆ ಬಹು ಮುದವೆಂದೂ ೭
ಸರಸ್ವತಿ ಭಾರತಿ ಶಚಿಯೂ | ಗಿರಿಜೆ ವಾರುಣಿಯು ಸೌ ||ಪರಣೀ ಗಂಗಾದಿಗಳೂ ಶುಭದಿನದಲ್ಲೀ ೮
ಗುರು ಆಜ್ಞಾದಲಿ ಕಲ್ಲೂ | ಒರಳೂ ಪೂಜಿಯ ಮಾಡೀ ||ಸ್ವರಗೈದು ಪಾಡಿದರೆಲ್ಲರು ಸುವ್ವೀ ಎಂದೂ೯
ಮರುತಾ ದೇವರು ಹರಿಯಾ | ಪುರವಾ ಶೃಂಗರಿಸೀದಾ ||ಶರಧೀಜಾದಿತ್ಯರು ತೋರಣಕೊಪ್ಪಿದರಾಗಾ ೧೦
ಚಿತ್ರಾ ವೇದಿಕದಲ್ಲಿ | ಸಪ್ತಾ ವಾಹನ ಹರಿಯಾ ||ಮುತ್ತೈದೇರೆಲ್ಲರು ಕರದರು ಶೋಭಾನೆಂದೂ ೧೧
ಶಂಖಿಣಿ ಪದ್ಮಿಣಿಯರು ವಸ್ತ್ರಾ | ಲಂಕರದಿಂ ಶೃಂಗರಿಸಿ ಅರಿಷಿಣ ||ಕಂಕಣಧಾರಗಳನು ಕಟ್ಟಿದರೂ ವೆಂಕಟಗಿಂದಿರಿಗೇ ೧೨
ಮಾಂಗಲ್ಯತಂತೂ ನಾನೆ ನಂಬೀ | ಮಂಗಳತರ ವಾಕ್ಯಗಳಂದಾ ||ಮಂಗಳಸೂತ್ರ ಸು ಕರಿಮಣಿ ಕಟ್ಟಿದ ಮಂಗಳೆಗೀಶಾ ೧೩
ಬಳಿಕಾ ಲಾಜಾಹೋಮಾ | ಗಳು ವಿದ್ಯುಕ್ತದಿ ಮಾಡಿ ||ಜಲಜಾನಾಭನಿಗೆ ಭೂಮವ ಬಡಿಸಿದರಾಗಾ ೧೪
ಆ ತರುವಾಯದಲಿ ದೇ | ವಾ ತರುಣೀರೆಲ್ಲಾರೂ ||ಸೂತವಕಾದಿಂದಲಿ ಬನ್ನಿರಿ ಉರುಟಣಿಗೆಂದೂ ೧೫
ಸ್ವರ್ಣದ ಬಟ್ಟಲದೊಳಗೇ | ಎಣ್ಣಿ ಅರಿಶಿನವನು ಕಲಿಸೀ ||ಚೆನ್ನೆ ಭಾರತಿ ಕರಿಸಿದಳಾನಂದಾದಿಂದಾ ೧೬
ಸೂರುತಿ ಸೀರಿ ಕೆಲರೂ | ಸಾರಾವಾಳೀ ಕೆಲರೂ ||ಚ್ಯಾರು ವಸ್ತ್ರಗಳನ್ನೂ ಉಟ್ಟರು ಸ್ತ್ರೀಯರು ಬ್ಯಾಗಾ ೧೭
ಕಂಚುಕ ತೊಟ್ಟರು ಬಿಗಿದೂ | ಮಿಂಚುವ ವಸ್ತಗಳಿಟ್ಟೂ ||ಕುಂಚಿಗಿ ಬಾಲಕರನ್ನೂ ತಮ್ಮಯ ಕೊಂಕಳೋಳಿಟ್ಟೂ ೧೮
ವರುಷಾ ಕಾಲದ ನದಿಯಂತೆ | ಹರುಷುಬ್ಬಿ ಬಂದಾರೂ ||ಸರಸೀಜಾಕ್ಷನು ರಮೆ ಮಾಡುವ ಊರುಟಣಿ ನೋಡಾ೧೯
ಗಿರಿಜೆ ಬಟ್ಟಲು ಪಿಡಿದೂ | ಶಿರಿಯಾ ಮುಂದಕೆ ಕರದೂ ||ಸರುವೇಶಾಗೂಟಣಿ ಮಾಡೆಂದರಿಶಿನ ಕೊಡಾಲೂ ೨೦
ತುಂಗಾ ವಿಕ್ರಮ ಹರಿಯೇ | ಶೃಂಗಾರಾಂಬುಧಿಯೇ ಕಾ- ||ಳಿಂಗನ ಮರ್ದಿಸಿದಂಥಾ ಕಾಲ್ಕೊಡು ಅರಿಶೀನ ಹಚ್ಚೂವೇ ೨೧
ಒದಗೀದಾ ಖಳಗಂಜೀ | ಎದಿಗೊಟ್ಟೂ ನಿಲ್ಲದಲೇ ||ಹದಿನ್ಯೋಳಾವತ್ರ್ಯೋಡಿದ ಪದಕೊಡು ಅರಿಶಿನ ಹಚ್ಚೂವೇ ೨೨
ಆ ಪಾರ್ಥನ ತೇರಿನ ಹಗ್ಗಾ | ನೀ ಪಿಡಿಯೆ ಕುದರಿ ಖುರ ಧೂಳೀ ||ಲೇಪಿಸಿದಂಥಾ ಮುಖ ಕೊಡು ಅರಿಶಿನ ಕುಂಕುಮ ಹಚ್ಚೂವೆ ೨೩
ಜನನೀಯಾ ಮೊಗ ನೋಡುತಾ | ವಿನಿಯದಲಿಂ ಜುರು ಜುರು ಮೆಲುತಾ ||ಸ್ತನ ಪಿಡಿದಾಡಿದ ಕರ ಯುಗವನೆ ಕೊಡು ಗಂಧವ ಹಾಕೂವೆ ೨೪
ತುಂಬೀದಾ ಕೌಸ್ತುಭ ಕಾಂತೀ | ಗಿಂಬಾಗಿ ತೋರಿಸುವಾ ||ಕಂಬು ಕಂಧರವನೆ ಕೊಡು ಪದ್ಮದ ಮಾಲಿಕಿ ಹಚ್ಚೂವೆ ೨೫
ಅಂದೀ ಪರಿಯಿಂದರ್ಚಿಸೀ | ಹೊಂದೀ ಕುಳ್ಳಿರೆ ಗಿರಿಜೇ ||ಮಂದಾರೋದ್ಧರ ಊಟಣಿ ಮಾಡೇಳೆಂದಾಳೂ೨೬
ಇಂದಿರೇ ಬಲು ಸುಂದಾರೆ | ಚಂದೀರಾಸ್ಯನ್ನರಸೀ ||ಮಂದಸ್ಮಿತ ಮುಖವನು ಕೊಡು ಅರಿಶಿನ ಕುಂಕುಮ ಹಚ್ಚೂವೆ ೨೭
ಮುನಿನುಡಿಗೆ ಮರುಳಾಗೀ | ಎನ ಬಯಸೀ ಕಣ್ಣಿನ ಅಂ- |ಜನದಿಂ ಪತ್ರವ ಬರದಿಹ ಕರ ಕೊಡು ಗಂಧವ ಹಚ್ಚೂವೆ ೨೮
ಅರಸೂ ನೇಮಿಸಿದಂಥಾ | ದೊರೆಗಳ ವಂಚಕಳೆಂಬಾ ||ಹರಲೀಯಾ ಹೊತ್ತಿಹ ಶಿರವನೆ ಕೊಡು ನಾ ಸೂಸುಕ ಮುಡಿಸುವೆ ೨೯
ಪಾಕೀ ಕೊಟ್ಟು ಚೇಳು ಬೇಕೆಂದು ಕಚ್ಚಿಸಿಕೊಂಡಂತೇ ||ಕಾಕು ಮಾತುಗಳಾಡೀ ಎನ್ನಿಂದಾಡಿಸಿಕೊಂಡೀ ೩೦
ಎನುತಾ ಗಂಧಾದಿಗಳೂ | ವನಿತಿಗೇ ಉಪಚರಿಸೀ ||ಅನಿಮಿಷೇಶನು ಕುಳಿತನು ಸಂತೋಷದಿ ಪೀಠದಲೀ ೩೧
ಅಂಬೂಜಾಕ್ಷನ ತೊಡಿಯಲ್ಲೀ | ಅಂಬೀಯಾ ಬರಿ ಎಂದೂ ಜಗ ||ದಂಬಿಯಾ ನಿಲ್ಲಿಸಿ ಬರಸಿದರೆಲ್ಲರು ಕೂಡೀ ೩೨
ಬಂಧಕ ಶಕುತೀಯಾಲಿಂದಾ | ಇಂದಿರಿಯಾ ಮೋಹಿಪ ಗೋ- ||ವಿಂದಗೆ ಕಂಚುಕ ಗ್ರಂಥಿಯ ಬಿಚ್ಚೆಂದಾಡಿದರೆಲ್ಲಾ ೩೩
ಲೋಕವತೂ ಲೀಲಾ ಕೈವಲ್ಯಂ | ಶ್ರೀ ಕಾಂತಾ ನರರಂತೇ || ತಾ ಕಂಚುಕ ಬಿಚ್ಚಿಟ್ಟನು ಪದದಡಿ ನೀ ಕೊಳ್ಳೆಂದೂ ೩೪
ನಖ ಮಹಿಮೆರಿಯದವಳು ನಿನ್ನಾ | ಅಕಳಂಕಡಿಗಳೆತ್ತುವಳೇ ||ಸುಕರುಣದಲಿ ಕೊಡು ಭೃತ್ಯಳಿಹಳು ನಿನಗೆಂದಳು ಗೌರೀ ೩೫
ಸರ್ಪ ಶಕಟ ಪೂತನಿ ಪ್ರಮುಖರ ಭಯ | ಕ್ಷಿಪ್ರ ಕಳದು ಬಹು ಮೆರದವಗೇ ||ಉಪ್ಪಕ್ಕಿಗಳು ನಿವಾಳಿಸುತಿಹರಿದು ಸೋಜಿಗವಲ್ಲೇ ೩೬
ಪೂಗೀ ಫಲ ತಾಂಬೂಲವನೂ | ಆ ಗೊರಕನ್ನಿಕಿಗಳು ಮೆದ್ದೂ ||ಈಗಿನ ಜನ ಮಾಡಿದ ತೆರ ಲೀಲೆಯ ಮಾಡಿದರಾಗಾ ೩೭
ಪಾವಕನೆಲ್ಲವು ಉಂಬಾ | ತಾ ವರ್ಣಾ ವಿಕಾರಾಗ ಹರೀ ||ಆವನ ಚಾರಿಯ ಫಲ ಭಕ್ಷೀಸಿದವಗೀದೋಷಗಳುಂಟೇ ೩೮
ಇನಿತೂ ಸ್ತೋತ್ರವ ಮಾಡೀ | ಅನಿಮಿಷರಾ ರಾಣಿಯರೂ ||ಮಣಿ ಮುತ್ತಿನ ಆರುತಿ ಎತ್ತಿದರತಿ ಸಂಭ್ರಮದಿಂದಲ್ಲೀ೩೯
ಉರುವಶಿಯರು ನಲಿದಾಡುವರು | ಸುರರು ಸುಮನ ಮಳೆ ಸುರಿಸುವರೂ ||ಮೊರಿಯಲು ದುಂದುಭಿ ನಭದಲಿ ನಾರದಮುನಿ ಕುಣಿದಾಡುತಿರೇ ೪೦
ಮಂಗಳ ಝಷ ಕೂರ್ಮ ಕಿಟಿ ನರಸಿಂಹಗೆ | ಮಂಗಳ ವಟು ಭಾರ್ಗವ ದಾಶರಥಿಗೇ ||ಮಂಗಳ ಕೃಷ್ಣಜಿನಜ ಹಯವಹನಗೆ ಮಂಗಳ ಪದಗಳಿಗೇ ೪೧
ವ್ಯಾಸೋಕ್ತಿಗಳಲಿ ಬಹಳುಂಟಾದದು | ನಾ ಶಕುತಿದ್ದಷ್ಠೇಳಿದೆ ನೀ ಕಥಿ ||ದೋಷಿರೆ ಕ್ಷಮಿಸಿ ಗ್ರಹಿಸತಕ್ಕದು ಕೇತಕಿಯಂತೆ ಸುಜನರೂ ೪೨
ಪ್ರಾಣೇಶ ವಿಠಲನ ಉರುಟಣಿ ಪದವನು | ಸಾನುರಾಗದಲಿ ಕೇಳ್ದರಿಗೇ ||ಏನು ಬೇಡಿದಿಷ್ಟಾರ್ಥವ ಕೊಡುವನು ಇಹಪರದಲ್ಲೀ ೪೩

೨೦೫
ಜಾರ ಪುರುಷಾರಾಡೋ ನುಡಿಯು | ಶ್ರೀ ಸಮೀರನ ಭಕ್ತರು ಕೇಳಿ ಛೀ ಯನ್ನಿರಿ ಪ
ಮೊನ್ನೆ ನಾ ನದಿಯೊಳು ಸ್ನಾನಕ್ಕೆ ಪೋಗಿರೆ |ಹೆಣ್ಣೊಂದು ಬಂದಿತ್ತು ವಗಿಯಲಿಕ್ಕೆ ||ಅಣ್ಣಾ ನಾ ಏನು ಹೇಳಲಿ ಯಂವಿ ಇಕ್ಕಾದೆ |ಯನ್ನನೇ ನೋಡುವಳೆಂದು ಪೇಳುವನೊಬ್ಬ ೧
ದಾರಿಯೊಳ್ ಬರುತಿರೆ ಗಜಗಮನ್ಯೊಬ್ಬಳು |ಸಾರಿ ಸಾರಿಗೆ ಬಂದು ನಗುತ ನಿಮ್ಮಾ ||ಊರಾವದೆಂಬಳು ಬಿಡಿ ಬಿಡಿ ಮಾತೀಲಿ |ನಾರಿ ಹಂಬಲ ಮರಿಯಿನೊ ತಮ್ಮ ಎಂಬೊಬ್ಬ ೨
ಆ ತರುಣಿಯ ಚಲ್ವಿರೆಯ ನೋಡಿ ಬೆನ್ನಿಗೆ |ಆರೂ ಪೋಗಲು ಕೋಣಗುದಗ ಗಂಡೂ ||ಜಾತಿಗಳಿಗೆ ನಾಚಿಕಿಲ್ಲೆಂದು ಬೈವಳ |ಮಾತೀನ ಸವಿಯೇನು ಹೇಳಲೆಂಬನೊಬ್ಬನು ೩
ಬಿಳಿ ಜಾಡರೋಣಿಯೋಳ್ ಬರುವಾಗ ಪ್ರಾಯದ |ವಳು ಕಂಡು ಎದುರಿಗೆ ಪೋಗಲಾಗೀ ||ಲಲನೆ ಹಿಂದಕ್ಕೆ ದಬ್ಬಿದರೆ ಗೋಡಿಗಾತೆ ಕೈ |ವಳದದ್ದೆ ಎಚ್ಚರಿಕಿಲ್ಲವೆಂಬುವನೊಬ್ಬ ೪
ಜಾಣಾರು ಬಹುಮಂದಿ ಇರಲಾಗಿ ಬೇಕಂತ |ಓಣಿಯೊಳಗೆ ತೊಂಬಲದ ರಸವಾ ||ಮೀನಾಕ್ಷಿ ಉಗುಳೀದಳೆನ ಮ್ಯಾಲೆ ಸುಳ್ಳಲ್ಲ |ಪ್ರಾಣೇಶ ವಿಠಲನ ಆಣೆಂಬೊಬ್ಬ ವಿವೇಕಿ೫

ಶ್ರೀ ಜಗನ್ನಾಥದಾಸರ ಸ್ತೋತ್ರ
೧೭೩
ತಂಗಿ ನೋಡಿದೆಯೇನಿಂದು | ಕಂಗಳು ದಣಿಯ ಗುರು-ರಂಗನೊಲಿದ ದಾಸರಾಯರ ಪ
ಶ್ರೀಪತಿಯೊಲಿಯಲೆಲ್ಲ ಪ್ರಾಪುತಿಯೆಂಬುವ ಪ್ರಮಾಣ |ವೀ ಪುರುಷರಲ್ಲಿಯೆ ಒಪ್ಪುವದೇ | ತಂಗೀ ||ಶಾಪಾನುಗ್ರಹ ಸಮರ್ಥರೀ ಪೊಡವಿಯೊಳು ನಿತ್ಯ |ಕಾಪಾಡುವರೆಮ್ಮನೆಲ್ಲರ ತಂಗೀ ೧
ಶಿಖೆಯೊಳಿದ್ದ ಪೀಯೂಷ ಸುಖದಿ ಪಿತೃಗಳುಂಡರು |ಅಕಟಾ ಕಾಣರೀ ಜನವೆಂದೂ | ತಂಗೀ ||ಸಕಲ ಗ್ರಂಥವ ಶೋಧಿಸಿ ಯುಕುತಿಯಿಂ ಹರಿಕಥಾಮೃತ |ಸಕಲರಿಗಿತ್ತು ಸಲಹುವರೇ ತಂಗೀ ೨
ಕಾಶಿ ಪ್ರಯಾಗ ವಾರಣಾಸಿಯಿಂದಧಿಕ ಹರಿ |ದಾಸರಾಯರಿದ್ದಾ ಸ್ಥಾನವೂ | ತಂಗೀ ||ನಾಶವಾಗುವದಘ ಮನ ಮೀಸಲಾಗುವದು ಶ್ರೀ ಪ್ರಾ |ಣೇಶ ವಿಠ್ಠಲ ಕೈ ಸೇರುವ ತಂಗೀ೩

೨೨೪
ತಂತ್ರಸಾರೋಕ್ತಿ ಕೇಶವಾದಿ ಇಪ್ಪತ್ತನಾಲ್ಕು ಮೂರ್ತಿ ಲಕ್ಷಣ
ತಿಳಿವದು ಸಜ್ಜನರೂ ಶಿರಿ |ನಿಲಿಯ ವಿಧಿಗೆ ತಾ ||ವಲಿದು ಸರಿದ ನುಡಿ |ತಿಳಿವದು ಸಜ್ಜನರೂ ಪ
ಮಾಧವನಿಪ್ಪತ್ನಾಲ್ಕು ಮೂರ್ತಿ ಬಹು |ಬೋಧರ ಉಕ್ತಿ ಮನಕೆ ತಂದೂ ||ಶೋಧಿಸಿ ಕ್ರಮ ವ್ಯುತ್ಕ್ರಮ ಪದ್ಮಾದಿ ಗ- |ದಾದಿ ಅರ್ಧ ಸಾಂತರ ಕ್ರಮವೆಂಬುದು೧
ಕೇಶವ ವಿಷ್ಣು ಗೋವಿಂದ ವಾಮನ ಕ್ರಮ |ಈಶ ಮಧುರಿಪುರ ಮಾಧವನೂ ||ದೋಷಹ ತ್ರಿವಿಕ್ರಮ ನಾರಾಯಣ |ಭಾಸಿಸುತಿಹ ವ್ಯುತ್ಕ್ರಮ ಮೂರುತಿ ಎಂದು ೨
ಸಂಕರುಷಣ ಅನಿರುದ್ಧನು ಶ್ರೀಧರ |ಪಂಕಜನಾಭ ಕಂಜಾದಿ ಕ್ರಮಾ ||ಬಿಂಕದ ದಾಮೋದರ ಪುರುಷೋತ್ಮ ಕ |ಳಂಕ ಹೃಷೀಕಪುಪೇಂದ್ರ ಗದಾದೆಂದು ೩
ಮುನಿನುತ ವಾಸುದೇವ ಅಧೋಕ್ಷಜ |ಮನಸಿಜ ಪಿತ ನರಸಿಂಹ ಹರೀ ||ಅನಘರ್ಧಕ್ರಮ ಪ್ರದ್ಯುಮ್ನ ಜನಾ- |ರ್ದನ ಅಚ್ಯುತ ಕೃಷ್ಣನು ಸಾಂತರಕ್ರಮ ೪
ನೀಲ ಘನಾಂಗನ ರವಿ ನಿಭ ಇಪ್ಪ |ತ್ನಾಲಕು ಮೂರುತಿ ಲಕ್ಷಣವೂ ||ಮ್ಯಾಲಿನ ಬಲಗೈ ಮೊದಲು ಕೆಳಗೆ ಕಡಿ |ಕೇಳಿ ಶಂಖ ರವಿಗದ ಕಂಜ ಕೇಶವ ೫
ಕಂಜಗದ ರವಿದರ ಧರ ನಾರಾಯಣ |ವೃಜನ ಹರವಿದರ ಪದ್ಮ ಗದಾ ||ಭುಜ ಮಾಧವ ಗದ ಕಂಜಧರ ರವಿ ಭೂ |ಮಿಜ ವಲ್ಲಭ ಗೋವಿಂದ ಮೂರುತಿಯಂದು ೬
ಪುಂಡರೀಕಧರ ರವಿಗದ ವಿಷ್ಣು ಪ್ರ- |ಚಂಡ ಶಂಖ ಕಂಜ ಗದ ಚಕ್ರಾ ||ಅಂಡಜವಹ ಮಧುರಿಪು ಗದ ರವಿದರ |ಮಂಡಿತ ಪದ್ಮ ತ್ರಿವಿಕ್ರಮ ಮೂರುತಿ ೭
ಅರಿದರ ಕಂಜ ಸು ಕಂಬುವಾಮನ ಶ್ರೀ- |ಧರ ರವಿ ಗದಧರ ಪದ್ಮಯುತಾ ||ವರ ಚಕ್ರ ಜಲಜದರ ಗದ ಹೃಷಿಕ ಪ- |ಪರ ಕಂಜ ರವಿಗದ ಶಂಖ ಪದುಮನಾಭಾ ೮
ದರಗದ ರವಿ ಕಂಜ ದಾಮೋದರ ಸಂ- |ಕರುಷಣ ಶಂಖ ಕಂಜಾರಿ ಗದಾ ||ಶರಧಿಜ ರವಿ ಪಂಕಜ ಗದ ಸಂತತ |ಧರಿಸಿಹ ಮಾಯಪ ವಾಸುದೇವನೆಂದು ೯
ದರ ಸುಗದ ನಳಿನ ಅರಿ ಪ್ರದ್ಯುಮ್ನನು |ದುರುಳಹ ಗದ ಕಂಬು ಕಂಜಾರೀ ||ಸುರಪನಿರುದ್ಧ ಕಮಲದರ ಗದ ರವಿ |ಧರಿಸಿಹ ಸರ್ವದ ಪುರುಷೋತ್ತುಮನೆಂದು೧೦
ಗದ ಕಂಬುಚರಣ ಸರಸಿಜಧೋಕ್ಷಜ |ಪದುಮ ಗದದರ ರವಿ ನರಹರೀ ||ಉದಜಾರಿದರ ಗದಾಚ್ಯುತ ರವಿದರ |ಗದ ಕಮಲಾಂಶ ಜನಾರ್ದನ ವಿಭುವೆಂದು ೧೧
ಗದ ಚಕ್ರ ವಿಷಜ ಶಂಖ ಉಪೇಂದ್ರನು |ಸುದರುಶನ ಕಂಜ ಗದದರ ಹರೀ ||ಯದುಪತಿ ಕರ ನಾಲ್ಕರೊಳು ಗದ ಕಮಲ |ಸುದರುಶನ ವಿಧುಭ ಪಾಂಚಜನ್ಯವೆಂದು ೧೨
ವರ ಗಾಯತ್ರೀ ವರ್ಣ ಮೂರ್ತಿಗಳಿ- |ವರು ಸಾದರದಲಿ ಧೇನಿಪುದೂ ||ನಿರುತ ಸುಕವಿಗಳ ಮತವಿದು ದಕ್ಷಿಣ |ವರ ಪ್ರಾಣೇಶ ವಿಠಲ ಸಂತೈಪನೂ ೧೩

೧೯೭
ಧಿಕು ಧಿಕು ನರಪತಿ ಊಳಿಗವು |ಬೇಕು ಬೇಕು ಸಿರಿಪತಿ ವಾಲಗವು ಪ
ಕರದಾಕ್ಷಣ ಸ್ವಾಮಿ ಪರಾಕು ಎಂದು ಕರವ ಮುಗಿದು ನಿಲ್ಲಲಿ ಬೇಕು ೧
ಸಮೂಹಕೊಂದಾಜ್ಞಾಪಿಸಲೂ ತಾಮಮತೆಯಲಿ ಮಾಳ್ಪುದು ಬಹಳೂ ೨
ಹಳಿದರು ನಗತಲೆ ಇರಬೇಕೂ ತನಕುಲದಭಿಮಾನವ ಬಿಡಬೇಕು ೩
ಇಷ್ಟಾದರು ಉಣಲನ್ನಿಲ್ಲಾ | ಗೇಣೂಘಟ್ಟಿ ವಸ್ತ್ರ ಸ್ವಪ್ನದೋಳಿಲ್ಲಾ ೪
ಹೀನವಿದೆಂದು ತಿಳಿದಧಮರೂ ಶ್ರೀಪ್ರಾಣೇಶ ವಿಠ್ಠಲನವರೆನಿಸರೂ ೫

೧೮೦
ನಂಬು ಹರಿಯ ಪಾದವಾ | ಮನವೆ,ಹಂಬಲಿಸದೆ ಹಲವಾ | ಮನವೆ ಪ
ಸತಿ ಸುತರುಣಲೆಂದು | ಆಸಿಗೆಸತತ ಹಾಕುವಿ ತಂದೂ ||
ಮತಿಯೆ ಯಮನು ಕೊಂದು | ವೈತಿರೆ ಸತಿ ಬಿಡಿಸೊಳೆ ಬಂದು ಮನವೇ ೧
ಧರಣಿ ವೆಗ್ಗಳ ಘಳಿಸೀ | ಬಹುದಿನಇರುವೆನೆಂಬುವೆ ಬಯಸೀ ||
ಧರಿಯಲರು ಪೂರೈಸೀ | ದರೆ ಸುಮ್ಮನಿರು ಮಾಧವನ ಸ್ಮರಿಸೀ, ಮನವೇ ೨
ಧನ ಸಂಪಾದಿಸ ಬ್ಯಾಡೋ | ಖಳ ಸುಯೋಧನನು ಯೇನಾದ ನೋಡೋ ||
ಘನ ಮಹತ್ಮರ ಕೂಡೋ | ಪ್ರಾಣೇಶ ವಿಠಲನನಿರುತ ಪಾಡೋ, ಮನವೇ ೩

೧೯೯
ನಗಿ ಬರುವದೋ ಮನವೆ ನೀನು ಮಾಡುವಾ |ಹಗರಣಾಕಿದು ಘನವೇ ||
ಜಗಪತಿಗೆ ಕರ ಮುಗಿಯದಲೆ ಸದ |ವಗತನದೊಳಗೆ ತಗಲಿಕೊಂಡೀ ಪ
ಶೃತಿ ಸಾರುತಿಹದು ಕೇಳೋ | ಈ ಶರೀರವು |ಸತಿ ಪುತ್ರಾದಿ ಧನಂಗಳೂ | ಅಸ್ಥಿರವೆಂದೂ |ಮತಿಯಿಲ್ಲೆ ತಿಳಿದು ಬಾಳೂ | ನಿಂದಿಸದೆ ತಾಳೂ ||ಪ್ರತಿ ದೀನಾ ಮರಿಯದೆ | ಅತಿಥಿಗಾಳುಣಿಸೀ | ಸದ್ಗತಿಯ ಪಡೆವದೋ ದು | ರ್ಮತಿಯಾ ಹರಿಕಥಿಯೊಳ |ಗತಿ ನಿರತಕನೆನಿಸಿಕೋ ಯಿ | ನಿತು ಮನಕೆ ಬರಲಿ |ತವಕದಿ ಮನ್ಮಥನ ಆಟಕೆ ತೊಡಕಿ | ನಿರಯಸ್ಥಿತನೆನಿಸುವದು | ಹಿತವೆ ನಿನಗೇ ೧
ನರರಾಶ್ರಯಿಸುವದ್ಯಾಕೆ | ಭಕ್ತಿಯಲಿ ಶ್ರೀ |ನರಹರಿಯ ಸ್ತುತಿಸಬೇಕೋ | ಇನಿತೂ ಭಾಗ್ಯ |ಯರವೆಂದು ತಿಳಿಯಬೇಕೂ | ಮತ್ಸರಾ ಬಿಟ್ಟೂ |ಹಿರಿಯರಿಗೆರಗಬೇಕೋ | ಆಸೀಯೂ ಯಾಕೋ ||ಧರಿಯೊಳು ಬಹುಮಂದೀ | ಅರಸಾರಿದ್ದರು ಹಿಂದೆ |ಅರಿಯಾ ತಮ್ಮ ಕೂಡ ವೈದರೆ | ಸ್ವಲ್ಪ ಸುಖಗಳಾ |ಹರಿ ದಿನದಿ ಜಾಗರ ಮಾಡಿ ಇ | ತರನ ಬಯಸದೆ |ನಿರುತ ಅಧರ್ಮದಿ ನಿರತನಾಗದೆ | ಬೆರಸುತಿಹೆ ನೀ |ಚರೊಳು ಸ್ನೇಹವ | ಮರುಳು ಮನುಜಾ ೨
ಎಷ್ಟು ಹೇಳಲಿ ಸಜ್ಜನಾ | ಭಜಿಸೀ ವಿ |ಶಿಷ್ಟಾನೆನಿಸೋ ದುರ್ಜನಾ | ರೊಡನೆ ಮಾತೂ |ಬಿಟ್ಟು ಘಳಿಸೋ ವಿಜ್ಞಾನಾ | ಹೀಂಗಿರೆ ದೋಷಾ |ನಷ್ಟಾವೊ ಉಳಧಿತೇನಾ | ನಿಶ್ಚಯ ಪ್ರಮಾಣಾ ||ಬಿಟ್ಟು ಭಾರತಿಕಾಂತಾಗಿಷ್ಟು | ನಿಂದಿಸಿದಾವಾ |ಕೆಟ್ಟ ಕೆಟ್ಟನು ಯನ್ನೊ | ಇಟ್ಟು ದ್ವಾದಶನಾಮ |ಮುಟ್ಟದಿರು ಪರರಿಟ್ಟ ಒಡವಿಯಾ |ಧಿಟ್ಟಿಸುತ ಮನ | ಸಿಟ್ಟು ಸ್ತ್ರೀಯರ ದೃಷ್ಟಿಸದೆ ಜಗ |ಜಟ್ಟಿ ಪ್ರಾಣೇಶ ವಿಠಲನ | ಸಂತುಷ್ಟಿ ಬಡಿಸೋ ೩

೮೭
ವಾಯುದೇವರ ಸ್ತುತಿ
ನಮೋ ನಮೋ ಗುರುವಾತ ನಿನ್ನ ಚರಣಯುಗಳಕೆ |ಕಮಲನೇತ್ರನ ದೂತ ನೆರೆ ನಂಬಿದ ಜನರ |ಶ್ರಮವ ನೀಗುವ ದಾತ ಮೂಜಗದಿ ನಿನ್ನ ಮ-ಹಿಮೆಯ ಬಲ್ಲರೋ ಖ್ಯಾತ ಶ್ರೀ ಕಾಳಿನಾಥ ||ತಿಮಿರ ರಿಪು ನಿಭ ಅಮರವಂದಿತ |ಡಮರುಧರ ಪಿತ ಸಮೀರ ದೇವ ಪ
ತ್ರೇತಯುಗದಲಿ ಅಂದು ಹನುಮಂತ ಶ್ರೀರಘು |ನಾಥನಲ್ಲಿಗೆ ಬಂದು ಪರಮಾತ್ಮ ನಿನ್ನಯ |ಮಾತು ಕೇಳುವೆನೆಂದು ಕೈಕೊಂಡು ಸೇವೆಯಾ |ನಾಥ ಜನ ಕುಮುದೇಂದು ಕರ ಮುಗಿದು ನಿಂದು ||ಆ ತರಣಿಕುಲ ಜಾತನುಂಗುರವಾತುರದಿ ಕೊಂ-ಡಾತ ವೇಗದಿ ಸೀತೆಗರ್ಪಿಸಿ ಭೀತಿಯಿಲ್ಲದೆ |ಪಾತಕರ ಬಹು ಘಾತಿಸಿದೆಯೆಲೋ ೧
ಕುಂತಿಯಲಿ ಅವತಾರ ಮಾಡಿದೆಯೊ ಕುರುಕುಲಕೆ |ಅಂತಕ ಖಳಕುಠಾರಾ ಸೀಳಿದೆಯೊ ಮಗಧನ |ಸಂತರೊಡೆಯ ಉದಾರ ವಿಕ್ರಮನೆ ಬಹು ಗುಣ |ವಂತ ಕಲ್ಮಷ ದೂರಾ ಆ ಕೀಚಕರಾ ||ಸಂತತಿಯನಳಿದಂಥ ನಿಜ ಬಲವಂತ ನಿನ್ನಯ |ಪಂಥ ಗೆಲಿಸಿದೆ ದಂತಿ ಪುರದರ ಸಂತಕಾತ್ಮಜ |ನಂತು ನೆಲಿಸಿದೆ ಚಿಂತಾರಹಿತ ೨
ಕಲಿಯುಗದಿ ಮುನಿಯಾಗಿ ಪ್ರಾಣೇಶ ವಿಠ್ಠಲ |ನೊಲುಮೆಯನು ಚೆನ್ನಾಗಿ ಗಳಿಸುತಲಿ ಸೂತ್ರಗ |ಳೊಲಿಸಿ ಬಹು ಸ್ಪಷ್ಟವಾಗಿ ಗ್ರಂಥಗಳ ವಿರಚಿಸಿ |ಹಲವು ಮತಗಳ ನೀಗಿದಂಥ ಸುನಿಯೋಗಿ ||ಕಳೆದು ಸುಜನರ ಮಲಿನವನು ಈ ಇಳೆಯೊಳಗೆ ಬಹು |ಬೆಳದೆ ನಿನ್ನ ಮತ ಚಲುವ ಯತಿ ಯನಗೊಲಿದು ಸನ್ಮತಿ |ಕಲಿಸುವದು ಕರಗಳನು ಬಿಡದಲೆ ೩

ಷಣ್ಮಹಿಷಿಯರ ಸ್ತೋತ್ರ
೧೪೩
(ಶ್ರೀ ದಾಸರಾಯರ ‘ಮುಯ್ಯದ ಪದ ದಿಂದ ಆಯ್ದುಕೊಂಡ ಪದವಿದು)
ನಮೋ ನಮೋ ನಮೋ ಜಾಂಬವತೀ |ನಮೋ ಲಕ್ಷಣಾ ನೀಲಾ ಭದ್ರೀ ||
ನಮೋ ನಮೋ ಶ್ರೀ ಮಿತ್ರವಿಂದಾ |ನಮೋ ನಮೋ ಹೇ ಕಳಿಂದಾ ೧
ಹರಿ ಪ್ರೀಯರೂ ನೀವವ್ವಾ |ಹರಿಭಕ್ತಿ ಪಾಲೀಸಿರವ್ವಾ ||ಹರುಷ ವೈದಿಸಿರೆವ್ವಾ |ದುರಿತ ಪರಿಹರಿಸೀರೆವ್ವಾ ೨
ಘನ್ನ ಬುದ್ಧೀ ಪಾಲಿಸಿರೆವ್ವಾ |ಯನ್ನ ಉದ್ಧರಿಸೀರೆವ್ವಾ ||ಬಿನ್ನಪವ ಕೇಳೀರವ್ವಾ |ಅನ್ನಿಗನೆನ ಬ್ಯಾಡಿರವ್ವಾ ೩

ಶ್ರೀತುಲಸೀದೇವಿ ಸ್ತೋತ್ರ
೧೪೨
ನಮೋ ನಮೋ ಶ್ರೀ ತುಲಸೀ | ಪಾಹಿ ಪಾಹಿ |ಕುಮತಿಯ ಪರಿಹರಿಸೀ
ಅಮಿತ ಮಹಿಮೆ ಸದ್ಗುಣ ಗಣ ಪೂರ್ಣೆ ಸು- |ಕಮಲೇಕ್ಷಣ ಮಧುಸೂದನನರಸೀ ಪ
ಅಂದಿನ ಕಾಲಲೀ ಹರಿ ಪದ |ವಂದಿಸಿ ಭಕುತಿಯಲೀ ||
ಅಂದದಿ ವರ ಪಡೆದಿಂದಿಗು ಸರ್ವರ |ಮಂದಿರದೊಳಗಿಹೆ ಪೂಜೆಯ ಕೊಳುತಲಿ೧
ಧನುವಂತರಿ ನಯನಾದಿಂದಿಳಿ |ದೊನಜೆ ಜಲಂಧರನಾ ಲ- |
ಲನೆಯ ಉದ್ಧರಿಸಿದ ಪಾವನ ತರೆ |ಎನಗಸದಳ ವರ್ಣಿಸೆ ನಿನ್ನ ಗುಣಾ ೨
ನಾ ನಂಬಿದೆ ನಿನ್ನಾ ದೇವತೆ |ಮಾನಿನಿ ಮಣಿಯನ್ನಾ ||
ಹೀನತೆಯಣಿಸದೆ ಕರುಣಿಸಿ ಸರ್ವದ |ಪ್ರಾಣೇಶ ವಿಠಲನ ಧ್ಯಾನದೊಳಿರಿಸೆ ೩

೧೬೮
ಯತಿಗಳ ಪರಂಪರಾ ಸ್ತೋತ್ರ ಪದಗಳು
(ಶ್ರೀ ಬ್ರಹ್ಮದೇವರಿಂದ ಶ್ರೀಮಧ್ವಾಚಾರ್ಯರವರೆಗೆ ಪರಂಪರಾ ಸ್ತೋತ್ರ )
ನಾಭಿ ಸಂಭವ ಸಂತ | ತೀ ಭಕ್ತಿಂದೊರ್ಣಿಸೂವೆ |ಈ ಭವ ಶರಧೀ ತ್ವರದಿಂದ ಕೋಲೆ ||
ಈ ಭವ ಶರಧಿ ತ್ವರದಿಂದ ದಾಟಿಸಿ |ಈ ಭಾಗವತರಾ ಕೂಡಿಸಲು ಕೋಲೆ ಪ
ವಿಧಿಜಾತಾ ಸನಕಾದಿ ತದನಂತರಾ ದೂರ್ವಾಸ |ಅದರ್ಹಿಂದೆ ಜ್ಞಾನಾ ನಿಧಿಗಳ ಕೋಲೆ ||
ಅವರ್ಹಿಂದೆ ಜ್ಞಾನಾ ನಿಧಿಯೂ ಗರುಡವಾಹನ |ಬುಧರೂ ಕೈವಲ್ಯಾ ತೀಥರೂ ಕೋಲೆ ೧
ಜ್ಞಾನೇಶ ಪರತೀರ್ಥ ಮೌನೀಶ ಸತ್ಯ ಪ್ರಜ್ಞಾ |ದೀನ ವತ್ಸಲರೂ ಪ್ರಾಜ್ಞ ತೀರ್ಥಾ ಕೋಲೆ ||
ದೀನ ವತ್ಸಲರೂ ಪ್ರಾಜ್ಞಾ ಸೂತ ಪೋರಾಜ |ಜ್ಞಾನಿ ಅಚ್ಯುತಾಪ್ರೇಕ್ಷರೂ ಕೋಲೆ ೨
ಕ್ಷಿತಿಯೊಳಗೆ ದುರ್ಮತ ವತಿಶಯವಾದವೆಂದು |ಸ್ತುತಿಸಾಲು ಸುರರು ಮೊರೆ ಕೇಳಿ ಕೋಲೆ ||
ಸ್ತುತಿಸಾಲು ಸುರರೂ ಮೊರೆ ಕೇಳಿ ಪಾಲಿಸಿದಾ |ಯತಿ ಶಿರೋಮಣಿಯ ಬಲಗೊಂಬೆ ಕೋಲೆ೩
ಹರಿ ಸರ್ವೋತ್ತಮನಲ್ಲ ಬರಿದೆ ವಿಶ್ವವೆಲ್ಲ |ಎರಡಿಲ್ಲವೆಂದು ಪೇಳೋರು ಕೋಲೆ ||
ಎರಡಿಲ್ಲವೆಂದು ಪೇಳ್ವಾ ಮಾಯ್ಗಳ ಗೆದ್ದಾ |ಗುರು ಮಧ್ವ ಮುನಿಗೆ ನಾ ಶರಣೆಂಬೆ ಕೋಲೆ ೪
ಮೂರು ದೇವರು ಸಮ ಆರೂ ಮಾತಾಗಳೆಂಬ |ಪೋರಾ ವಾದಿಗಳಾ ನಯದಿಂದ ಸೋಲಿಸಿದ ||
ಪೋರ ವಾದಿಗಳ ನಯದಿಂದ ಸೋಲಿಸಿದ |ಭಾರತಿ ಪತಿಯ ಬಲಗೊಂಬೆ ಕೋಲೆ ೫
ಒಂದು ಇಲ್ಲಾವು ಎಂಬೊ ಮಂದಮತಿಯ ಮತ |ಒಂದೇ ಮಾತಿನಲಿ ಗೆಲಿದಾರು ಕೋಲೆ ||
ಒಂದೇ ಮಾತಿನಲಿ ಗೆಲಿದಂಥಾ ಶ್ರೀಮದಾ |ನಂದಾ ತೀರ್ಥರನಾ ಬಲಗೊಂಬೆ ಕೋಲೆ೬
ನಾನಾ ದೇವರು ಎಂಬಾ ಹೀನ ಮತಗಳೆಲ್ಲ |ಜಾಣೀಕಿಯಲ್ಲಿ ಗೆಲಿದಾರು ಕೋಲೆ ||
ಜಾಣೀಕಿಯಲ್ಲಿ ಗೆಲಿದಂಥಾ ಕುಲಗುರು |ಪ್ರಾಣದೇವರಿಗೆ ಶರಣೆಂಬೆ ಕೋಲೆ ೭
ಇಲ್ಲಿ ಮಾತ್ರವು ಭೇದ ಅಲ್ಲಿ ಒಂದೆಂಬುವ |ಖುಲ್ಲಾರನೆಲ್ಲ ಮುರಿದಾರೂ ಕೋಲೆ ||
ಖುಲ್ಲಾರನೆಲ್ಲ ಮುರಿದ ಸದ್ಗುರು ಪಾದ |ಪಲ್ಲವಗಳಿಗೆ ಶರಣೆಂಬೆ ಕೋಲೆ ೮
ತನುವೇ ನಾನೆಂಬುವ ಭಣಗು ಮತಗಳೆಲ್ಲ |ವಿನಯದಿಂದಲಿ ಗೆಲಿದರು ಕೋಲೆ ||
ವಿನಯದಿಂದಲಿ ಗೆಲಿದಂಥಾ ಶ್ರೀ ಮಧ್ವಾ |ಮುನಿಯ ಪಾದಗಳ ಸ್ಮರಿಸೂವೆ ಕೋಲೆ ೯
ಇಪ್ಪತ್ತೊಂದು ಕುಭಾಷ್ಯ ತಪ್ಪಾನೆ ಸೋಲಿಸಿದ |ಸರ್ಪಶಯನನ ಒಲಿಸೀದ ಕೋಲೆ ||
ಸರ್ಪಶಯನನ ಒಲಿಸೀದ ಗುರುಗಳ |ತಪ್ಪದೆ ನೆನೆವೇನನುದಿನ ಕೋಲೆ ೧೦
ಈತನ ಮಹಿಮೀಯ ಭೂತನಾಥನರಿಯ |ನಾ ತುತಿಸುವೆನೇ ಕಡೆ ಗಂಡು ಕೋಲೆ ||
ನಾ ತುತಿಸುವೆನೇ ಕಡೆ ಗಂಡು ಮರುತನ |ಮಾತು ಮಾತಿಗೆ ಸ್ಮರಿಸಿರೊ ಕೋಲೆ ೧೧
ಸರುವ ಕರ್ಮವ ಮಾಡೆ ಮರುತಾಂತರ್ಗತನೆಂದು |ಹರಿಗರ್ಪಿಸದಲೆ ಮುದದಿಂದ ಕೋಲೆ ||
ಹರಿಗರ್ಪಿಸದಲೆ ಮುದದಿಂದಲಿರುವಾರು |ನಿರಯ ಭಾಗಿಗಳು ತಿಳಿವದು ಕೋಲೆ ೧೨
ಈ ನಮ್ಮ ಗುರು ಮೆಚ್ಚಾದೇನೂ ಸಾಧನ ಮಾಡಿ |ಪ್ರಾಣೇಶ ವಿಠಲಾನೊಲಿಸೋರಾ ಕೋಲೆ ||
ಪ್ರಾಣೇಶ ವಿಠಲನೊಲಿಸವಂಥ ಜಾಣರ |ನಾನೆಲ್ಲಿ ಕಾಣೆ ಜಗದೊಳು ಕೋಲೆ೧೩

೧೮೮
ನಾಲಿಗಿದ್ಯಾತಕೆ ಲಕುಮಿಲೋಲನ ನೆನಿಯದೆ |
ಮೂಲೋಕದೊಡಿಯ ಕೇಶವನ ಗುಣ |ತಿಳಿದು ಸತತ ಸ್ಮರಣಿ ಮಾಡದೆ ಪ
ಅಜ ಶಿವಾದಿ ದಿವಿಜರಿಂದ |ಭಜಿಸಿಕೊಂಬ ಅಖಿಲ ಮಹಿಮ ||
ತ್ರಿಜಗ ಕ್ಷಣಕೆ ಶ್ವೇಚ್ಛೆಯಿಂದ |ಸೃಜಿಪನೆಂದು ಸ್ಮರಣಿ ಮಾಡದೆ ೧
ಮ್ಯಾಲಿನೇಳು ಲೋಕ ಕೆಳಗಿ |ನೇಳು ಲೋಕ ನಮ್ಮ ಹರಿಗೆ ||
ಸ್ಥೂಲ ರೂಪವೆಂದು ವೇದ |ಪೇಳುವವೆಂದು ಸ್ಮರಣಿ ಮಾಡದೆ ೨
ಉರಗ ಪರ್ವತದಲಿ ನಿಂದು |ಧರಣಿಯೊಳಗೆ ಭಕತ ಜನಕೆ ||
ಕರದು ಕೊಡುವ ಪ್ರಾಣೇಶ ವಿಠಲ |ವರವು ಎಂದು ಸ್ಮರಣಿ ಮಾಡದೆ ೩

೨೧೦
ನೀತಿ ಕೆಟ್ಟಿತು ಕಲಿಯುಗದಲಿ ಕೇಳಿ |ಮಾತುಳಾಂತಕನ ಮಹಿಮೆಯು ಹೀಂಗದೇ ಪ
ನೀಚ ಕುಲದವನು ದೊರೆ ಬುಧನವರ ಸೇವಕರು |ಚೋಚುವಳು ಹೆಂಡತಿಯು ತನ್ನ ಪತಿಯಾ ||
ಆಚಾರ ಮಾಡುವರೆ ತೊತ್ತು ಹುಡಿಕ್ಯಾಡುವರು |ನಾಚಿಕಿಲ್ಲದೆ ಸತತ ಬೇಡುತಿಹರೂ ೧
ತನಗಾಗಬೇಕೆಂದು ಪರಹಿಂಸೆ ಮಾಡುವರು |ಧಣಿಯ ಮಾತನು ಮೀರುವನು ಭೃತ್ಯನೂ ||
ಘನ ಗರ್ವದಿಂದ ಗುರುಗಳ ನಿಂದಿ ಮಾಡುವರು |ಮುಣಿಗೆ ಹೋಯಿತು ಹರಿದಿನದ ನಿರ್ಜಲಾ ೨
ಹೆಣ್ಣು ಮಾರುವರು ಉತ್ತಮರು ತಮ್ಮಾದವನು |ಅಣ್ಣನಿಗೆ ಕಠಿಣ ವಾಕ್ಯವನಾಡುವಾ ||
ಇನ್ನೊಂದು ಜನುಮ ಕರಿಯರು ಹೆತ್ತವರ ಸೇವಿ |ಸಣ್ಣ ನಡತಿಯಲೆ ಇರುವರು ಸರ್ವರೂ ೩
ಸುಳ್ಳನಾಡುವರು ಪಂಡಿತರು ಪ್ರಭುತನದವನು |ಕೊಲ್ಲಿಸುವ ತನ್ನ ರಾಜ್ಯದ ಪ್ರಜೆಗಳಾ ||
ಇಲ್ಲಧೋಯಿತು ಬ್ರಾಹ್ಮಣರಲ್ಲಿ ಮಂತ್ರದ ವೀರ್ಯಬಲ್ಲವರೆ ಅವಿವೇಕ ಪಥ ಪಿಡಿವರೂ ೪
ಶ್ರೀಶನುತ ಪ್ರಾಣೇಶ ವಿಠಲನಂ ತಿಳಿದು ಕಾ |ಳೀಕಾಂತನಲ್ಲಿ ಭಕ್ತಿ ಮಾಡರೂ ||
ಕಾಕುಲಾತಿಯ ಬಿಟ್ಟು ನಿಃಸಂಗಿಯನಿಸರೂ |ನೂಕುವರು ಹಸಿದು ಬಂದರೆ ವಿಪ್ರರಾ ೫

೧೫೦
ಶ್ರೀಮಾಧವತೀರ್ಥರ ಸ್ತುತಿ
ನೋಡಿದೆ ನಾ ಧನ್ಯನಿಂದಿಗೆ | ನೋಡಿದೆ ಗುರು ಮಾಧವ ತೀರ್ಥರ ವೃಂದಾವನವನ್ನು ಪ
ಗಂಗೆಗೇನು ಪ್ರಯೋಜನವಿಳೆಯೊಳು ಬಾಹದಕೆ |ಪಿಂಗಳಗೇನು ಜ್ಞಾನಿಗಳಿಗೇನು ||
ತುಂಗ ಮಹಿಮೆಯಿಂದ ಅಜ್ಞ ಜನರ ಪಾಪ |ಹಿಂಗಿಸಬೇಕೆಂಬದಲ್ಲದೆ ಮನವೆ ೧
ನರಹರಿ ಗುರು ಸುತ ವರದ ಅಕ್ಷೋಭ್ಯ ಮುನಿ |ಕರ ಪೂಜಿತಾರವಿಂದ ನಾಭರಲ್ಲಿ ||
ಧರಾ ಧರಜ ತೀರದಿ ಸತ್ಯ ಮುನಿಗಳಿಂದ |ನಿರುತಾರಾಧನೆ ಕೊಳುತಿರ್ಪರು ಮನವೆ ೨
ಏನು ಇವರ ಬಣ್ಣಿಸಲಿ ಎನ್ನಿಂದೊಶವಲ್ಲ |ಆನತ ಜನರಿಗೆ ಕರುಣಿಸಿ ||
ಪ್ರಾಣೇಶ ವಿಠಲನ ಧಾಮ ತೋರಿಸುವರು |ಕ್ಷೋಣಿಯೊಳಗಪ್ರತಿಮ ಮಹಿಮರು ೩

೨೦೧
ಬಳಸ ಬ್ಯಾಡಿರೊ ಇಂಥಾ ಖಳರ ಸ್ನೇಹವಾ |ಹಲವು ಬಗೆಯಿಂದ ನೋಡಿ |ತಿಳಿದುಕೊಂಡು ಬಾಳಿರೆಣ್ಣ ಪ
ಖಿನ್ನರಾಗ ಬ್ಯಾಡಿ ಮುಂದೆ |ಯನ್ನ ಕಾರ್ಯ ಬರಲಿ ನಿಮ್ಮ ||
ನುನ್ನತರನ ಮಾಳ್ಪೆನೆಂದು |ಅನ್ನ ಕಳವ ಪಾಪಿ ಕೂಡ೧
ಮೊದಲ ಸ್ನೇಹಕಿಂದು ನಮ್ಮ |ಕಧಿಕ ಪ್ರಾಪ್ತಿ ಆಹದೆಂದು ||
ಒದಗಿ ಬಂದವರಿಗೆ ಊರ |ಕದಕೆ ಅಪ್ಪಣಿಲ್ಲವೆಂಬ ೨
ಕಲುಷ ನಾಶ ದ್ವಿಜರ ಪಾದ |ನಳಿನ ಪಾಂಸು ಸ್ಪರುಶವೆಂದು ||
ತಿಳಿಯದೆಮ್ಮ ಮನಿಯು ಸ್ವಲ್ಪ |ಬಳಿಯ ಗ್ರಹದೋಳಿಹ್ಯದು ಯಂಬ೩
ಹಲವು ಬೇಡಿದದನು ಕೊಟ್ಟು |ಬಲು ಉದಾರಿ ಎಂದು ತೋರಿ ||
ಶಳದು ಕೊಂಬ ಸಕಲ ವಿದ್ಯ |ಸುಲಿವ ಹಣ ಉಪಾಯದಿಂದ ೪
ಕಾಸಿನಾಸಿಗಾಗಿ ಯಿಂಥ |ದೋಷಿ ಸಂಗ ಮಾಡಿ ವ್ಯರ್ಥ ||
ಮೋಸವಾಗ ಬ್ಯಾಡಿ ಪ್ರಾಣೇಶ |ವಿಠಲನಂಘ್ರಿ ಭಜಿಸಿ ೫

೧೭೯
ಬೇಡೂವರೋ ಸುಖ | ಬೇಡರೋ ಕಷ್ಟವ | ಮಾಡರೋ ಅದರ ಉಪಾಯವಾ || ಜನ ಪ
ಕಿಟ್ಟಾ ತುಳಿದು ಕುರ | ಳೊಟ್ಟೂವರೊಂದಿನ ||ಕುಟ್ಟಾರೋ ರಂಗವಾಲಿಯನೂ ೧
ಬಟ್ಟ ಕೊಂಬುವರು | ಯಥೇಷ್ಟ ದೇವರುಗಳು ||ಪೆಟ್ಟಿಗಿಯೊಳು ಬತ್ತಲಹ್ಯವೂ೨
ಸಾಲೂ ಸಾಲೆಮ್ಮಿಯ | ಸೋಲಾದೆ ತೊಳೆವರು ||ಸಾಲಿಗ್ರಾಮಕ್ಕೀಸು ನೀರಿಲ್ಲಾ ೩
ಇದ್ದ ಪದಾರ್ಥವನ್ನೆ ಬುದ್ಧಿ | ಪೂರ್ವಕವಾಗಿ ||ಮಧ್ವೇಶಗರ್ಪಿಸಿ ಭುಂಜಿಸರೋ ೪
ತುಕ್ಕೂವರೂರು | ಮೂಕ್ಕೂಕಾಳಿಗೆಂದದ್ದು ||ಮುಕ್ಕುಂದನಾ ಸುತ್ತಿ ನಮಿಸಾರೋ ೫
ಬೀಗರೂಟಕನೇಕ | ಭೋಗಾವು ಜೋಳದ ||ವಾಗಾರ ಬ್ರಹ್ಮರ ಯಡಿಯೊಳಗೇ ೬
ತಮ್ಮನಿಯವರಿಗೆ | ಖಮ್ಮಾನ ತುಪ್ಪವು ||ಖಮ್ಮಟು ದೇವ ಬ್ರಾಹ್ಮರೀಗೆ ೭
ಹಾಳು ಸುದ್ದಿಗೆ ಕಿವಿಗಾಳು | ಕೊಟ್ಟಿಹರೊಮ್ಮೆ ||ಕೇಳಾರೋ ಸತ್ಕಥಿಗಳನೂ ೮
ಕೆಟ್ಟದ್ದು ತಾವ ಮಾಡಿ | ಬಿಟ್ಟೆಮ್ಮನು ಪ್ರಾಣೇಶ ||ವಿಠ್ಠಲನೆಂದು ಮಿಡುಕೂವರೋ ೯

೧೮೧
ಭಯ ಉಂಟೆ ಮನುಜ ಶ್ರೀಪತಿಯೆ ಗತಿಯೆಂದವರಿಗೆ |ಪಯಗಡಲ ನಿಲಯ ಭಕುತರ ಮರೆಯನೂ ಪ
ದಂಡು ಬಹು ಬರಲಿ, ತನು ರೋಗದಲಿ ಬಳಲಲೀ |ಕಂಡು ಒಬ್ಬರು ಮಾತನಾಡದಿರಲೀ ||
ಹೆಂಡತಿಯು ತುಚ್ಛ ಮಾಡಲಿ, ಮಗನು ಬೊಗಳಲೀ |ಕೆಂಡ ತೃಣ ನ್ಯಾಯ ಹರಿಸ್ಮರಣಿಗಿನಿತೂ ೧
ಅರಸುಗಳು ಕೋಪಿಸಲಿ, ವರುಷಗಳು ತಡೆಯಲೀ |ಹರಿದು ವ್ಯಾಘ್ರಗಳು ಮ್ಯಾಲೆ ಹರಿದು ಬರಲೀ ||
ಉರಗ ನಿರ್ಜರ ವದನ ಚೋರ ಭಯವಾಗಲೀ |ಶರಧಿ ಋಷಿ ನ್ಯಾಯ ಅನಘನ ಸ್ಮರಣೆಗೇ ೨
ಗ್ರಾಸ ದೊರಕದಲಿರಲಿ, ಬಂಧುಗಳು ಜರಿಯಲೀ |ನಾಶವಾಗಲಿ ಘಳಿಸಿದಂಥ ಬದುಕೂ ||
ಶ್ರೀಶ ಪ್ರಾಣೇಶ ವಿಠ್ಠಲನೆ ನೀ ಗತಿ ಎನಲು |ವೀಶಾಹಿ ನ್ಯಾಯ ಈ ಭಯಗಳೆಲ್ಲ ೩

೨೫೩
ಮಂಗಳ ರಾಘವ ಜಾನಕಿಗೆ | ಮಂಗಳ ಕೃಷ್ಣಗೆ ರುಕ್ಮಿಣಿಗೇ ||ಮಂಗಳ ಋಷಭ ಜಯಂತಿಗೇ | ಶೋಭಾನೆ ಪ
ವೃಂದಾವನ ಪತಿ ಕೇಶವಗೆ | ಮಂದರಧರ ನಾರಾಯಣಗೇ |ಇಂದ್ರಕೃತ್ಯ ಪರಿಹರ ಮಾಧವ | ಗೋವಿಂದನಿಗೇ || ಸಾಗರನಂದನಿಗೇ ದೈತ್ಯನಿಕೃಂದನಿಗೇ | ಅಂಡಜ ಶ್ಯಂದನಿಗಾರುತಿಯಾ ಬೆಳಗೀರೆ ೧
ವಿಷ್ಣು ಮಧುರಿ ಪುತ್ರಿ ವಿಕ್ರಮಗೇ | ಸೃಷ್ಟಿಪ ವಾಮನ ಶ್ರೀಧರಗೇ ||ದುಷ್ಟಮದ ಹೃಷಿಕೇಶ ಪ್ರಸಿದ್ಧ ಸು ವಿಠ್ಠಲಗೇ || ದೇವೋ-ತ್ರ‍ಕಷ್ಟಳಿಗೇ ಕನಕೊಸನುಟ್ಟಳಿಗೇ | ವಿಧಿಗೊರ-ಕೊಟ್ಟಳಿಗಾರುತೀಯಾ ಬೆಳಗೀರೆ ೨
ಕಂಜನಾಭ ದಾಮೋದರೆಗೆ | ಕಂಜವರದ ಸಂಕರುಷಣಗೆ |ಕುಂಜರ ಪಾಲಕ ವಾಸುದೇವ ವಿಷಭುಂಜನಿಗೇ || ನಿತ್ಯ ನಿರಂಜನಿಗೇ ಖಳಕುಲ ಭಂಜನಿಗೇ | ಕುಮತ್ಯಾಂ-ಥಾಂಜನಿಗಾರುತಿಯಾ ಬೆಳಗೀರೆ ೩
ಪ್ರದ್ಯುಮ್ನಗೆ ಅನಿರುದ್ಧನಿಗೆ | ಸಿದ್ಧರೊಡಿಯ ಪುರಷೋತ್ತುಮಗೆ |ಶುದ್ಧ ಅಧೋಕ್ಷಜ ನಾರಸಿಂಹ ಶ್ರೀ ಬುದ್ಧನಿಗೇ || ಸರ್ವದಇದ್ದಳಿಗೇ ದೋಷ ಅಬದ್ಧಳಿಗೇ | ಕುಸುತನಗೆದ್ದಳಿಗಾರುತಿಯಾ ಬೆಳಗೀರೆ ೪
ತಂದೆ ಶ್ರೀ ಪ್ರಾಣೇಶ ವಿಠ್ಠಲಗೇ | ವಂದ್ಯಾಚ್ಯುತ ಜನಾರ್ದನಿಗೇ |ಇಂದ್ರಪ್ರಕಾಶ ಉಪೇಂದ್ರಗೆ ಹರಿಯದು ನಂದನಗೇ || ಭಾಗ್ಯದಇಂದಿರಿಗೇ ಜಗಕತಿ ಸುಂದರಿಗೇ | ಸರಸಿಜಮಂದಿರಿಗಾರುತಿಯಾ ಬೆಳಗೀರೆ ೫

೨೦೮
ಮಧ್ವಮತ ಪೊಂದದವ ದೈತ್ಯ | ಮನಶುದ್ಧವಿಲ್ಲದೆ ಶೀಲ ಮಾಳ್ಪನೆ ವ್ರಾತ್ಯ ಪ
ರವಿ ಬಾರದಿರಲಘ್ರ್ಯ ಕೊಡುವವ ಧನ್ಯ |ದಿವದಿ ಕರ್ಮವ ಬಿಟ್ಟು ಮಲಗೂವ ಠೊಣ್ಣ್ಯಾ ||ದಿವಿಜೇಶಾರ್ಪಿತವಲ್ಲದುಂಬಾವ ಅನ್ಯಾ |ಅವದಾನಾ ಕೊಡುವವ ಅಗ್ರಗಣ್ಯಾ ೧
ತಾರತಮ್ಯ ತಿಳಕೊಳದವ ನಷ್ಟಾ |ಮೀರದೇ ಹಿರಿಯರನರ್ಚಿಸುವನೇ ನಿಷ್ಠಾ ||
ನಾರಿಯರಿಗೆ ಮನಸಿಡುವವ ಭ್ರಷ್ಟಾ |ಸೂರಿಗಳಿಗೆ ಎರಗುವನೆ ವಿಶಿಷ್ಟಾ ೨
ಕಾಮಕ್ರೋಧಂಗಳ ಗೆದ್ದವ ವೀರಾ |ಈ ಮೊಣ್ಣು ದೇಹ ಪೋಷಿಸಿಕೊಂಬ ಚೋರ ||
ಧಾಮಾದಿಗಳು ಎನ್ನದೆನದವ ಧೀರಾ |ಆ ಮಹಾತ್ಮರ ನಿಂದಿಸುವನೇವೆ ಪೋರ ೩
ಮೂಲಾವತಾರೈಕ್ಯವೆನದವ ಖೋಡಿ |ಕಾಲವಿಲ್ಲದೆ ಸುಳ್ಳಾಡುವನೇವೆ ಪೀಡೀ ||
ಆಳಲಾರದೆ ಸತಿ ಬಿಡುವ ಹೇಡಿ |ಶ್ರೀ ಲೋಲ ಪರನೆನ್ನದವ ಕುಲಿಗೇಡಿ ೪
ತಿಥಿ ತ್ರಯ ಸತಿ ಸಂಗ ಮಾಳ್ಪಾನೇ ಹೊಲಿಯಾ |ಮತಿಗೆಟ್ಟು ಯಮನಲ್ಲಿ ತಿಂಬೂವ ಕೊಲಿಯಾ ||
ಕ್ಷಿತಿಯೊಳು ತನ ಭಾವ ಜನಕೆ ತೋರದಿಹ್ಯನೆ |ಕೃತಿಪತಿ ಪ್ರಾಣೇಶ ವಿಠಲಾಗೆ ಗೆಳೆಯಾ ೫

ಶ್ರೀ ಪ್ರಾಣೇಶದಾಸರ ಲೋಕನೀತಿಯ ಹಾಡುಗಳು
೧೭೮
ಮನವೆ ಸ್ಮರಿಸೊ ಕಂಡ್ಯಾ ಹರಿಯಾ | ಶ್ರೀ ರೂ |ಗ್ಮಿಣಿ ನಾಥಾ ಭಕುತರನೆಂದೆಂದು ಮರಿಯಾ ಪ
ಮರುಳೆ ಕೇಳಿದನಾನವರತ | ಹಿಂದೆ |ಯರಳಿ ಜನ್ಮವ ತಾಳಿ ಬಂದನಾ ಭರತಾ ||
ಥರವೆ ವಿಷಯಾಪೇಕ್ಷೆ ನಿರುತಾ | ನೀ ಎ |ಚ್ಚರಿದು ಪೂಜಿಸು ತಾನೆ ಒಲಿವಾ ಶ್ರೀಭರತಾ ೧
ಒಡಲು ನಿಶ್ಚಯವೆನ್ನಬ್ಯಾಡೋ | ಧರ್ಮಾ |ತಡಿಯದೆ ಹಗಲಿರಳೆನ್ನದೆ ಮಾಡೋ ||
ಕಡು ತ್ಯಾಗಿ ರವಿಜಾನ ನೋಡೋ | ಭೀಮಾ |ನುಡಿದು ಧರ್ಮಜಗಾದಾಲೋಚನೆ ಮಾಡೋ ೨
ಕುಲಗುರು ಸುಖತೀರ್ಥರೆಂದೂ | ಸ್ಪಷ್ಟಾ ತಿಳಿದು ಪ್ರಾಣೇಶ ವಿಠ್ಠಲನಂಘ್ರಿ ಪೊಂದು ||
ಹಲವು ದೋಷ ಪೋಪವು ಬೆಂದೂ | ಶಿರಿ |ನಿಲಯ ಕೊಡುವ ನಿನ್ನಾ ಬಯಕೀಯ ತಂದೂ೩

೨೫೮
ಮುಯ್ಯದ ಪದದಲ್ಲಿಯ ಲಕ್ಷ್ಮೀದೇವಿಯ ಸ್ತುತಿ
ಮಾಯೆ ವಾಸುದೇವನಾ |ಜಾಯೆ ಪೊಂದೀದೆ ಯನ್ನಕಾಯೆ ನಿನ್ನವಾನೆಂದುತಾಯೆ ಸುಕಾಯೆ ೧
ಇಂದೀರೆ ಸರಸೀಜಮಂದೀರೆ ನಿನ್ನ ಪಾದ ||ಪೊಂದೀರೆ ಭವದೊಳು ನೊಂದೀರೆ ನೀರೆ ೨
ಗುರು ಪ್ರಾಣೇಶಾ ವಿಠ್ಠಲಗೆರಗೀ ನಿನ್ನ ವಂದೀಸಿಬರೆವೆ ಮುಯ್ಯಾದ ಕಥೀಯಾಕರುಣೀಸು ಮತೀಯಾ ೩

೧೯೪
ಯಾಕೆ ಸಾಧುಗಳ ಸೇವಿಸಲೊಲ್ಲೀ |ಸಾಕುವರೆ ಕಾಕು ಮನವೆ ಪ
ನಿರುತ ಮನಸಿನಲ್ಲಿ | ಹರಿಪಾದ ಕಮಲವ ||ಸ್ಮರಿಸುವರಿರಲಾಗಿ | ಮರುಳೊಂದು ಕ್ಷೇತ್ರೆ ೧
ಬಲ್ಲೀದ ಮುಷ್ಟೀಕ | ಮಲ್ಲಾರಿ ಮಹಿಮಿಯ ||ಬಲ್ಲಾವರವಯವ | ಎಲ್ಲಾರಂತೇ೨
ಶಿರ ಕಾಸಿ, ಗಯಾ ನೇತ್ರ | ವರ ಕಾಂಚೀ ನಾಸೀಕ ||ಶರಣಾರ ವದನವೇ | ಶಿರಿ ಜಗನ್ನಾಥಾ ೩
ಹೃದಯಾವೆ ವೈಕುಂಠ | ಉದರ ಶ್ವೇತ ದ್ವೀಪ ||ಪದ ಸರ್ವ ವಪು ಶೇಷಾ | ಸದನವು ಕೇಳೋ ೪
ಪ್ರಾಣೇಶ ವಿಠಲಾನ | ಧ್ಯಾನಾವ ಮಾಳ್ಪಾರ |ಮಾನವರೆಂದರೇ | ಹೀನ ಗತಿಯೋ೫

೧೫೧
ಶ್ರೀಅಕ್ಷೋಭ್ಯತೀರ್ಥರ ಸ್ತುತಿ
ರಕ್ಷಿಸೆನ್ನನು ದಯಾಂಬುಧೇ ರಕ್ಷಿಸೆನ್ನನು ಪ
ರಕ್ಷಿಸೆನ್ನನು ಪಾಪ ಶಿಕ್ಷಿಸಿ ಕರುಣದಿ |ಪಕ್ಷಿವಾಹನ ಪ್ರಿಯ ಅಕ್ಷೋಭ್ಯ ಮುನಿಪ ಅ.ಪ.
ಅನುಮಾನವಿಲ್ಲದೆ ಮಣಿದೆ ತವಾಂಘ್ರಿಗೆ |ಅನಘ ಶ್ರೀ ಮಾಧವ ಮುನಿ ಕರಜಾತ ೧
ಜಯ ಮುನಿ ವಂದಿತ ಜಯವಂತ ನೀನೆವೆ |ದಯ ಮಾಡಿದರೆ ದುಃಖ ಬಯಲಾಗಲರಿಯೆ ೨
ಪ್ರಾಣೇಶ ವಿಠಲನ ಧ್ಯಾನದೊಳಗೆ ಮನ |ತಾನಿರುವಂದದಿ ಪೋಣಿಸು ಜವದಿ ೩

೧೫೪
ಶ್ರೀ ರಾಘವೇಂದ್ರ ತೀರ್ಥರ ಸ್ತುತಿ
ರಾಘವೇಂದ್ರರ ನಿನ್ನ ಪಾದ ಸರಸಿಜಕೆ |ಬಾಗುವೆ ಮನ್ಮನದರಿಕೆ ಪೂರೈಸೊ ಪ
ವಾಸುದೇವಾರ್ಚಕ ಭೂಸುರ ವಂದಿತ |ದೋಷವ ಕಳೆವದು ದೇಶಿಕವರ್ಯ ೧
ವಿಷಯಂಗಳೆಲ್ಲ ದಹಿಸಿ ಯೋಗ ಮಾರ್ಗದಿಂ |ವಸುದೇವ ಪುತ್ರನೊಲಿಸಿಕೊಂಡ ಶಕ್ತ ೨
ಭೂತ ಪ್ರೇತಗಳ ಬಲಾತುರದಲಿ ಕಳೆವಾ |ತುಂಗ ಮಹಿಮನೆ ಭೂತಲದೊಳಗೆ೩
ಅಂಗಜ ಶರ ದೂರ ಮಂಗಳ ವಿಗ್ರಹ |ತುಂಗ ತೀರಾವಾಸ ಪಿಂಗಳ ತೇಜ೪
ದಂಡ ಕಾಷಾಯ ಕಮಂಡಲಧರ ಪ್ರ |ಚಂಡ ಮಹಾತ್ಮ ಸುಪಂಡಿತರೊಡೆಯ ೫
ಸಾರುವ ಶರಣರ ಘೋರಿಸುತಿಪ್ಪ ಸಂ |ಸಾರ ಕಡಲಿಗೆ ಶರೀರ ಸಂಭವನೇ ೬
ಮರೆಹೊಕ್ಕು ದಾಸರ ಮರಿಯಾದೆ ಸಲಹಯ್ಯ |ಪರಮತ ಉರಗಕ್ಕೆ ಗರುಡನೆನಿಪನೆ೭
ತಂದೆ ಪಾಲಿಸೊ ದಯಾಸಿಂಧು ಜಗದ್ಗುರು |ಮಂದಮತಿಗಳೆಂಬ ಇಂಧನಕ್ಕನಲ ೮
ವಟುವಪು ಪ್ರಾಣೇಶ ವಿಠಲನ ನಿಜದಾಸ |ಸಟೆಯಲ್ಲ ಸಂಸಾರ ಕಟಕಟಿ ಬಿಡಿಸೊ ೯

೧೭೭
ಶ್ರೀಪುರಂದರದಾಸರ ಸ್ತೋತ್ರ
ರಾಯರ ಭಾಗ್ಯವಿದು | ಪುರಂದರ ರಾಯರ ಭಾಗ್ಯವಿದು |
ಶ್ರೀಯರಸನ ಪ್ರಿಯ | ಪುರಂದರ ರಾಯರ ಭಾಗ್ಯವಿದು ಪ
ನಾರದ ಮುನಿವರ ಕರದಲಿ ವೀಣಾ |ಧಾರಿಯಾಗಿ ಧರಾತಳದೊಳಗೆ ||
ಶ್ರೀ ರಮಣನ ವಿಸ್ತಾರ ಮಹಿಮೆಯನು |ಬೀರುತ ಭವ ಮಂದಿರ ಪೊಕ್ಕ ೧
ತೊಡೆಯಲಿಟ್ಟು ನಿಜ ಮಡದಿಯ ತಾ |ತಡೆಯದೆ (ವಟದೆಲೆಯಲಿ) ವಿವಿಧ ಮುನಿಗಳಿಂದ ||
ಸಡಗರದಲಿ ಸಂಸ್ತುತಿಸಿಕೊಂಬ ಬಾಂ |ಜಡೆಯನು ಕಂಡವನಡಿಗೆರಗಿದನು ೨
ಚರಣಾಂಬುಜಕ್ಕೆರಗಿದ ಮುನಿಪನ |ಕರವಿಡಿದೆತ್ತಿ ಸಂರಂಭಿಸುತ ||
ವರ ನಯ ವಾಕ್ಯಗಳಿಂದ ಕುಶಲವ |ಕ್ಕರದಲಿ ಕೇಳಿದ ಸುರಮುನಿಯ ೩
ಬಂದ ಕಾರಣವೇನೆಂದು ಪೇಳಲು ಮು |ನೀಂದ್ರನು ತವ ಚರಣಾಂಬುಜದ ||
ಸಂದರುಶನ ಹೊರತೊಂದು ಕಾರ್ಯವಿ |ಲ್ಲೆಂದು ನುಡಿದನಾನಂದ ಬಾಷ್ಪದಲಿ ೪
ಈ ತೆರದಲಿ ನುಡಿದಾ ತರುವಾಯದಿ |ಪೀತಾಂಬರ ಬಿಗಿದಪ್ಪಿ ವಿಧಿ ||
ಜಾತನ ಕರುಣದಿ ಶ್ರೀ ತರುಣೀಶನಖ್ಯಾತಿಯ ತೋರವ ತರಿಸಿ ಧರೆಯಲೆಂದ ೫
ಈ ನುಡಿಯನು ಕೇಳ್ಯಾ ನಾರದ ಮುನಿ |ಧೇನಿಸಿ ಶ್ರೀಹರಿ ವರದಿಂದ ||
ಈ ನಾಡಿನೊಳಗೆ ಪುರಂದರ ಪೊಳಲೊಳ | ಮಾನವರೊಳಗುದ್ಭೂತನಾದ ಗುರು ೬
ವ್ಯಾಸ ಮುನಿಯನುಪದೇಶದಿ ತತ್ವಜ್ಞ |ಭಾಸುರ ಮತ ಹೊಂದೆವತರಿಸಿ ||
ಶ್ರೀಶನ ಗುಣ ಕೀರ್ತನೆಯ ಕೀರ್ತಿಸಿ ವಿ | ಭಾಸ ಮಾನ ಮಹಿಮೆಯಲಿಂದೊಪ್ಪುವ ೭
ದಾಸ ಜನರ ಪೋಷಿಸುತಲಿ ತದಭಿ |ಲಾಷೆಗಳೀವುತ ನಿರುತದಲಿ ||
ಮೀಸಲ ಮನದಲ್ಲ್ಯಖಿಳ ಪದಾರ್ಥ ರ | ಮೇಶನಿಗರ್ಪಿಸಿ ನಲಿ ನಲಿದಾಡುವ ೮
ದಾಸೋತ್ತುಮರ ವಿಶೇಷ ಮಹಿಮೆಗಳ |ನೇಸು ಜನ್ಮದಿ ಪೇಳಲೊಶವಲ್ಲ ||
ವಾಸುದೇವ ಪ್ರಾಣೇಶ ವಿಠ್ಠಲ ಪ್ರ | ಕಾಶಿಪ ಮನದಲ್ಲಿವರ ನಂಬಿದರ೯

೧೭೧
(ಅಕ್ಷೋಭ್ಯತೀರ್ಥರ ಮಠದ ಯತಿಗಳ ಸ್ತೋತ್ರ)
ವಂದಿಸುವೆ ಗುರು ಸಂತತಿಗೆ ಪ್ರತಿದಿನಾ |ನಂದ ತೀರ್ಥರ ‘ಮತೋದ್ಧಾರರಿವರಹುದೆಂದು,* ಪ
ಶ್ರೀಮದಕ್ಷೋಭ್ಯ ಮುನಿ ತ್ರೈಲೋಕ್ಯ ಭೂಷಣರ |ಧೀಮಂತ ಲೋಕವಂದಿತ ತೀರ್ಥರ ||
ರಾಮಪದ ಜಲಜಾಳಿ ಸುಲಭ ರಘುಪುಂಗವರ |ಶ್ರೀಮಂತ ರಘುನಾಥ ರಘುವರ್ಯ ರಘುಸುತಗೆ ೧
ವಿದ್ಯಾನಿಧಿ ಮುನಿ ರಘುಪತಿಯ ನಾರಾಯಣರ |ಮಧ್ವ ಭಕ್ತಾಗ್ರಣಿ ಮುಕುಂದ ತೀರ್ಥರ ||
ಅದ್ವೈತ ಗಿರಿ ಕುಲಿಶ ರಾಮ ರಘುಪತಿ ತೀರ್ಥ |ಸದ್ವೈಷ್ಣವರ ಪಾಲ ರಾಮಚಂದ್ರಾರ್ಯರಿಗೆ ೨
ಶ್ರೀ ರಘೋತ್ತಮ ತೀರ್ಥ ರಘುರಾಜ ರಘುಪತಿಯ |ಶ್ರೀರಾಮಚಂದ್ರ ತೀರ್ಥಾರ್ಯರ ಪದ ||
ವಾರಿಜಯುಗಳವ ಭಕ್ತಿಪೂರ್ವಕದಿ ಸ್ಮರಿಸುವೆನು |ಮಾರಮಣ ಪ್ರಾಣೇಶ ವಿಠಲ ಕರುಣಿಸಲೆಂದು ೩
* ಮತಾಂಬುಧಿಗೆ ವಿಧುಯೆಂದು.

೨೫೬
ಜೋಗುಳ ಹಾಡು
ವಜೋ ಜೋೃಷ್ಣಿ ಕುಲಾಂಬುಧಿ ಚಂದ್ರಾ |ಜೋ ಜೋ ಚಿತ್ಸುಖ ಬಲ ಗುಣ ಸಾಂದ್ರಾ ||
ಜೋ ಜೋ ಭಕ್ತೌಘ ದೋಷಾಹಿವೀಂದ್ರಾ |ಜೋ ಜೋ ಅಸುರಾರಿ ಹರಿ ದಿವಿಜೇಂದ್ರಾ ಪ
ಮಧ್ವ ಮನಾಬ್ಜ ಮಂಟಪದಲ್ಲಿ ಶೋಭಿಪ |ಶುದ್ಧಮಾತ್ಮಕ ಹೇಮ ನಿರ್ಮಿತ ತೊಟ್ಟಿಲ ||
ಮಧ್ಯ ಶ್ರೀ ಸಹಿತ ಉಯ್ಯಾಲಿಯನಾಡುವ |ಸಿದ್ಧಾರರಸ ವೇದ ವೇದ್ಯ ಕೇಶವನೇ ೧
ಶಿರಿ ವಿಧಿ ಶಿವ ಶಕ್ರ ರವಿ ಶಶಿ ಮೊದಲಾದ |ಸುರರೆಲ್ಲ ಕಲ್ಪ ಕಲ್ಪದಲಿ ಮಾಡಿದ ಸೇವೆ ||
ಚರಣ ಕಮಲಕರ್ಪಿಸಿದ ರುಚಿನೋಳ್ಪಂತೆ |ಜುರು ಜುರುಂಗುಟ ಮೆಲುತಿಹ ಮುದ್ದು ಕೂಸೇ೨
ಅನ್ನಾಜ ಪ್ರಾಣಾಜ್ಯ ಶಿವ ದಿವಿಜರ ಶಾಖ- |ವನ್ನು ಬೊಮ್ಮಾಂಡಾಖ್ಯ ಹರಿವಾಣದೊಳಗೇ ||
ಚನ್ನಾಗಿ ಲಲನಿ ಸಹಿತವಾಗಿ ಭುಂಜಿಸಿ |ನುಣ್ಣಾನ ವಟಪತ್ರ ಶಾಯಿ ಕೃಪಾಂಗಾ ೩
ವೇದ ನಗೋದ್ಧಾರಿ ಕೋಲ ನರಹರೀ |ಭೂದಾನ ಬೇಡ್ದ ರೇಣುಕ ರಾವಣಾರೀ ||
ಯಾದವ ಪತಿ ಬುದ್ಧ ವಾಜೀಯನೇರಿ |ಮೇದಿನಿಯಾಳ್ದ ಸುಜನರುಪಕಾರೀ ೪
ಮಾನಿ ಮಾನಿದ ಬಕ ಶೆಕಟಾದಿ ಕಾಲಾ ವಿ- |ತಾನ ನಂದನ ಕಾಳಿ ಕುಂಜರ ಪಾಲಾ ||
ಭಾನು ಶತಾಭ ಗೋಪಾಂಗನ ಲೋಲಾ |ಸ್ಥಾಣು ಮೋಹಿಸಿದಾ ಶ್ರೀ ಪ್ರಾಣೇಶ ವಿಠಲಾ ೫

೧೫೨
ಜಯರಾಯರ ಸ್ತುತಿ
ವಿಜಯರಾಯರಂಘ್ರಿ ಜಲಜವ |ಭಜಿಸಿ ಜನರು ತಡೆಯದಲೆ | ಜವಾ ಗುರು ಪ
ಕುತರ್ಕಿಗಳ ಹತರ್ನುಗೈಸಿದ |ಶತ ಕೃತಾಲ್ಯರ ಸುತರಾದ | ಗುರು ೧
ವಸುಧಿಯೊಳಗನ್ಯ ವೇಷದಿಂ ಚ |ರಿಸಿದ ಲೇಸಾಗಿ ಸಾರಥಿ ಶ್ರೀಶನಾದ | ಗುರು ೨
ಖ್ಯಾತಿಯಿಂ ಲೋಕದಿ ವಾತಜನ್ನೊಲಿಸಿದ |ದಾತನ ಅರಿಯ ಜಗನ್ನಾಥನುಳಿದು | ಗುರು ೩
ದುಷ್ಟರ ಜರಿದ ವಿಶಿಷ್ಟರ ಪೊರೆದ ಶ್ರೀ |ಕೃಷ್ಣನ ಸಖನೋರ್ವ ಸೃಷ್ಟಿಯೊಳಗೆ | ಗುರು ೪
ಈಶಗೊಲಿದ ತುರುಗಾಸ್ಯನಾಳುಗಳೊಳು |ಈ ಸುಗುಣಿಗೆ ಕಾಣೆ ನಾ ಸರಿಯಾ | ಗುರು ೫
ತಾತನಾಲಯಕೈದಿ ನೂತನ ವಿದ್ಯಂಗ |ಳಾತುರದಲಿಯೈದಿದಾತ ನೀತ | ಗುರು ೬
ಪ್ರಾಣೇಶ ವಿಠಲನು ತಾ ನುಡಿಸದೆ ತುಟಿ |ಯನು ಹೊಂದಿಸರಜ ಸ್ಥಾಣುವೆನುವ | ಗುರು೭

೨೦೩
ವೈರಾಗ್ಯವೇ ಜಪ ತಪ, ಮಖ ಯೋಗ ಯಾತ್ರಿ ಧರ್ಮಾದಾನ |
ಮಾರಮಣನ ಪ್ರೀತಿದರಿಂದಾಹದು ಎಂಬುವನೇವೇ ಪ್ರವೀಣಾ ಪ
ಉಂಡು ಉಂಡು ನಾ ವುಂಡಿಲ್ಲೆಂಬದೆ ಮಹ ವೈರಾಗ್ಯ |ಕಂಡು ಕಂಡೂ ನಾ ಕಂಡಿಲ್ಲೆಂಬದೆ ಬಲು ವೈರಾಗ್ಯ ||
ಹೆಂಡತಿ ಸಂಗವ ಮಾಡಿ ಮಾಡಿಲ್ಲೆಂಬದೆ ವೈರಾಗ್ಯ |ಹಿಂಡೂ ಬಳಗದೊಳು ಇದ್ದೂ ಇದ್ದೂ ಇಲ್ಲೆಂಬದೆ ವೈರಾಗ್ಯ೧
ನಡದು ನಡದು ನಾ ನಡೆದೇ ಇಲ್ಲೆಂಬದೆ ವೈರಾಗ್ಯ |ನುಡಿದು ನುಡಿದು ನಾ ನುಡಿದೇ ಇಲ್ಲೆಂಬದೆ ನಿಜ ವೈರಾಗ್ಯ ||
ಹಿಡಿದು ಹಿಡಿದು ನಾ ಹಿಡಿದೇ ಇಲ್ಲೆಂತಿಪ್ಪದೆ ವೈರಾಗ್ಯ |ಉಡಿಗಿ ಉಟ್ಟು ನಾ ಉಟ್ಟೇ ಇಲ್ಲೆಂತೆಂಬದೆ ವೈರಾಗ್ಯ ೨
ಬಿಟ್ಟೂ ಬಿಟ್ಟೂ ನಾ ಬಿಟ್ಟೆಯಿಲ್ಲೆಂಬದೆ ವೈರಾಗ್ಯ |ಕೆಟ್ಟೂ ಕೆಟ್ಟೂ ನಾ ಕೆಟ್ಟಿಲ್ಲವೆಂಬುದೇ ಘನ ವೈರಾಗ್ಯ ||
ಕೊಟ್ಟೂ ಕೊಟ್ಟೂ ನಾ ಕೊಟ್ಟೆಯಿಲ್ಲೆಂತೆಂಬದೆ ವೈರಾಗ್ಯ |ಅಷ್ಟೂ ಶ್ರೀ ಪ್ರಾಣೇಶ ವಿಠ್ಠಲಗರ್ಪಿತವೆಂಬದೆ ವೈರಾಗ್ಯ ೩

೧೯೦
ವ್ಯರ್ಥ ವೈಷ್ಣವನಂತೆ ನೋಡಿ ಶೋಣಿತ ಪೂಯ |ಗರ್ತದೊಳಗೇ ಪೋಗಿ ಬೀಳಬೇಕಯ್ಯೋಪ
ಮಧ್ವರಾಯರ ನೂರು ಕಲ್ಪ ಸಾಧನನಾಮ |ಬುದ್ಧಿವಂತರಿಂದ ತಿಳಿಯಲಿಲ್ಲಯ್ಯೋ ೧
ಪ್ರಾಣಯಾಮವು ಮೂರೊಂದಾಶ್ರಮವು ಆಚ |ಮಾನ ಮಾಡುವ ವಿಧಿ ತಿಳಿಯಲಿಲ್ಲಯ್ಯೋ ೨
ಪ್ರಾಣೇಶ ವಿಠಲೊಂದು ಮೂರು ರೂಪದಿ ಯಮ |ಸೂನುಯೆಂತಾದ ನೆಂದರಿಯಲಿಲ್ಲಯ್ಯೋ ೩

೧೫೩
ಶ್ರೀವ್ಯಾಸರಾಯರ ಸ್ತೋತ್ರ
ವ್ಯಾಸರಾಯರ ಬೇಸರದೇ ನೆನೆ |ದಾಸೆ ಪೂರ್ತಿಸಿಕೊಂಬೆ ನಾಂ ಪ
ದಾಸರಾಯರಿಗಾಸು ಮಂತ್ರೋಪ |ದೇಶ ಕರುಣದಿ ಮಾಡಿದ ||
ದೇಶದೊಳಗೆ ವಿಶೇಷ ಮೆರೆದು ಅ |ಶೇಷ ಜನರುದ್ಧರಿಸಿದ ೧
ವಾಸುದೇವನ ದ್ವೇಷಿಗಳ ಅನಾ |ಯಾಸದಿಂ ನೀ ಕರಿಸಿದ ||
ದಾಸ ವರ್ಗವ ಪೋಷಿಸಲು ನಿ |ರ್ದೋಷ ಗ್ರಂಥ ವಿರಚಿಸಿದ ೨
ಭಾಸುರ ಚರಿತ ಭೇಶ ಭಾಸ ಸು |ಕಾಷಾಯಾಂಬರ ಧರಿಸಿದ ||
ವೀಶವಾಹನ ಕ್ಲೇಶಹ ಪ್ರಾ |ಣೇಶ ವಿಠ್ಠಲನೊಲಿಸಿದ ೩

ಕಾಮದೇವರ ಇಂದ್ರದೇವರ ಹಾಗೂ ಇನ್ನಿತರರ ಸ್ತೋತ್ರಗಳು
೧೪೪
ಶರಣು ಶರಣು ರತಿನಾಥ |ಸುರವರ ಅನಿರುದ್ಧನ ತಾತಾ ||
ಕರುಣ ಪಯೋನಿಧೆ ರುಗ್ಮಿಣಿ ಜಾತಾ |ತ್ವರದಿಂ ಲಾಲಿಸು ಮಾತಾಪ
ಭರತನೆ ಸನತ್ಕುಮಾರಾ | ಸೂದರುಶನ ಪರಮೋದಾರಾ ||
ಹರ ನಂದನ ನತ ಬಂಧು ಕುಮಾರಾ |ಕರ ಪಿಡಿ ಕೃಷ್ಣ ಕುಮಾರಾ ೧
ತರುಣಿಯ ಬಿನ್ನಪ ಶಿವನಲಿ ಬಂದು |ಶರೀರವ ಕರಗಿಸಿದೆಂದೂ ೨
ಮೀನನ ಬಸುರೊಳು ಪೊಕ್ಕೆ | ಆಮಾನವರ ಕೈಗೆ ಸಿಕ್ಕೆ ||
ದಾನವನನ್ನು ಬಿಸುಟಿದೆ ಕುಕ್ಕೆ | ಆನೊರಣಿಸಲಿಕ್ಕಿದು ಶಕ್ಯೆ ೩
ಭುವನಜ ಅಶೋಕ ಚೂತಾ | ಹೇನವ ಮಲ್ಲಿಕುತ್ಪಲ ಧರಿತಾ ||
ಪವನ ಉಡುಗಣಪ ವಸಂತ ಮಿಳಿತಾ |ಸುವಿಶಾಲ ಅದ್ಭುತ ಚರಿತಾ ೪
ಅಕಳಂಕನಂಗ ಮಾರಾ | ಹೇಮಕರ ಧ್ವಜ ಶುಕದೇರಾ ||
ಅಕುಟಿಲ ಪ್ರಾಣೇಶ ವಿಠಲನುದಾರಾ |ಸುಕಥೆ ಅರುಪು ಗಂಭೀರಾ ೫

೨೫೦
ಉಡಿ ತುಂಬುವ ಪದ
ಶೋಭನ ಶ್ರೀನಾರಾಯಣಗೆ ಇಂದಿರಿಗೇ |ಶೋಭನ ಕ್ಷೀರಾಬ್ಧಿ ನಿಲಯಗಂಭೃಣಿಗೇ || ಶೋಭನ ಕೃಷ್ಣಗೆ ಭೀಷ್ಮ ಕುವರಿಗೇ |ಶೋಭನ ದಶರಥರಾಮ ಜಾನಕಿಗೆ |ಶೋಭನವೆನ್ನೀ ಬುಧರೆಲ್ಲಾಪ
ಜ್ಞಾನಿ ವಶಿಷ್ಠಾ ಮುಖ್ಯಾ ಋಷಿ ಬ್ರಹ್ಮಾದಿಗಳೂ |ವಾಣೀ ಭಾರತಿ ಗೌರಿ ಪ್ರಮುಖ ನಾರಿಯರೂ ||ಕ್ಷೋಣಿಯೊಳಗೆ ಮಿಗಿಲಾದ ಸಂಭ್ರಮದಿಂದಾ |ಜಾನಕಿಗುಡಿಯಾ ತುಂಬಿದ ಕಥಿ ಪದವನು ||ಧೇನಿಸಿ ಪಾಡುವದು ಪ್ರತಿದಿನಾ ೧
ಸರಸ್ವತಿ ಪಾರ್ವತಿ ಕೂಡಿ ಇಂದಿರಿಗೇ |ಸರುವಾಭರಣ ಶ್ರಿಂಗರಿಸಿ ತವಕದಲೀ ||ಇರಸೀ ತಟ್ಟಿಯೊಳು ಮುತ್ತು ಮಾಣಿಕ ಪ್ರವಾಳಾ |ಹರಿಗರ್ಪಿಸೀ ಮೂಲೋಕಾ ಜನನಿಯ ಮುಂದಕೆ ||ಕರದು ತುಂಬಿದಾರು ಉಡಿಯೊಳು ೨
ವಾರುಣೀ ಸೌಪರಣೀ ದೇವಿಯರೊದಗೀ |ಸೂರುತಿ ಉಡುಸಿ ಚಿನ್ನದ ಬಟ್ಟಲೊಳಗೇ ||ನಾರಿಕೇಳ ದಾಳಿಂಬು ನಿಂಬಿ ಕದಳಿ ಫಲಾ |ನಾರಾಯಣಗರ್ಪಿಸಿ ಉಡಿಯಾ ತುಂಬಿದರು ||ಮಾರಾ ಜನನೀಗೆ ಜಯವೆಂದೂ ೩
ಉತ್ತೂಮ ಶಚಿದೇವ ದಿವ್ಯಾಂಬರುಡಿಸೀ |ಕಿತ್ತಳಿ ಜಂಬು ದ್ರಾಕ್ಷ ಚೂತ ಫಲಗಳೂ ||ಉತ್ತುತ್ತಿ ತಾಂಬೂಲ ಪೂಗಿ ಫಲಗಳನ್ನೂ |ಸಪ್ತವಾಹನಗರ್ಪಿಸ್ಯುಡಿಯ ತುಂಬಿದಳು ||ಸತ್ಯಾಭಾಮಿನಿಗೆ ಶುಭವೆಂದೂ ೪
ದಿಟ್ಟಾಂತಕನ ರಾಣೀ ಚಿನ್ನದಂಬರವಾ |ಥಟ್ಟಾನುಡಸಿ ನಾನಾ ಜಾತಿ ಪುಷ್ಪಗಳಾ ||ಘಟ್ಟಿ ತಂಡೂಲ ಸಾವೀರ ಹೊನ್ನು ಬೆರಸಿ ಉಡಿ |ಘಟ್ಟ್ಯಾಗಿ ಬಿಗಿ ಎಂದು ತುಂಬಿದಳೂ ||ಪ್ರಾಣೇಶ ವಿಠ್ಠಲಗರ್ಪಿಸುತಾ ಶುಭವೆಂದೂ ೫

೨೪೮
ಕಂಕಣ ಕಟ್ಟುವ ಪದ
ಶೋಭಾನ ಕಾಮಜನಕನಿಗೆ | ಶೋಭನ ಶ್ರೀ ಮಹಾ ಲಕುಮಿಗೆ |ಶೋಭಾನವೆನ್ನೀ ಬುಧರೆಲ್ಲಾ ಪ
ಪಾಲ ಸಮುದ್ರವು ಹೆಣ್ಣಿನ ಮನೀ |ಮೇಲಾದ ದ್ವಾರಕಿ ಗಂಡಿನ ಮನಿ ||ಮೂಲೋಕದೊಳಗಿಹ ನಿಬ್ಬಣದವ- |ರೋಲಯ ಒದಗೀದಾರು ಶೋಭಾನ ೧
ಅಂಬರ ಛಪ್ಪರ ರವಿಚಂದ್ರರು |ಸಂಭ್ರಮ ತೋರಣಗಳು ಮದುವೀಗೆ ||ಇಂಬಾದ ಮೇದಿನಿ ಪರದಿಯ ಶ್ಯಾಲಿ |ಹೊಂಬಣ್ಣನ ಗಿರಿಜಗುಲೀ ಶೋಭಾನ ೨
ಆ ಮಹಾ ಸುರರಂಗನಿಯರು ಬಹ- |ಳಾ ಮುದದಲಿ ಪ್ರಾಣೇಶ ವಿಠ್ಠಲಗೆ ||ಶ್ರೀ ಮಾಯಾದೇವಿಗೆ ಕಂಕಣ |ನೇಮಿಸಿ ಕಟ್ಟಿದರೂ ಶೋಭಾನ ೩

ವ್ಯಾಸಕೂಟ, ದಾಸಕೂಟದವರ ಹಾಗೂ ಇತರ ಗುರುಗಳ ಸ್ತೋತ್ರಗಳು
೧೪೮
ಶ್ರೀಮಧ್ವರಾಯರ ಸುವ್ವಾಲೆ
ಸುವ್ವಾಲೆ ಸುವ್ವಿ ಸುವ್ವಾಲೆ ಪ
ಗುರು ಮಧ್ವರಾಯರ ಭಾಗ್ಯ |ಹರ ಮುಖ್ಯ ನಿರ್ಜರರಿಂದ ವರ್ಣಿಸಲಸದಳವಮ್ಮ ||ಅ.ಪ.||
ಇಂದಿರೆ ಮೂರು ರೂಪದಿಂದ ತಾನೆ ಪಡೆದಳು |ಎಂದು ಪೇಳುವದಾವೇದ | ಸುವ್ವಿ ||ಮಂದಮತಿಗಳಿವರ ಮಂದಿಯಂತೆ ತಿಳಿದು |ಅಂಧ ಕೂಪದೊಳು ಬೀಳುವರೆ | ಸುವ್ವಿ ೧
ನೂರಾ ತೊಂಬತ್ತೆಂಟು ಘೋರ ತಾಪಸು ಮಾಡಿ |ಮೂರು ರೂಪವೀಗಾದನೆ | ಸುವ್ವಿ ||ಮೀರೆ ಈ ಕಲ್ಪವನು ವಾರಿಜಾಸನನಾಗಿ |ಈರೇಳು ಲೋಕವಾಳುವನೆ | ಸುವ್ವಿ ೨
ಎಪ್ಪತೊಂದು ಮಹಾಯುಗ ಇಪ್ಪ ಒಬ್ಬೊಬ್ಬ ಮನು |ಅಪ್ಪಪ್ಪ ಬಹಳಾಯುಷೆಂಬೊರೊ | ಸುವ್ವಿ ||ಸುಪ್ರಸಿದ್ಧವಾದ ದ್ವಿಸಪ್ತ ಮನುವು ಶೃತಸೋಮ |ನಪ್ಪನಿಗೊಂದೇ ದಿವಸವೆ | ಸುವ್ವಿ ೩
ಈ ರೀತಿ ನಾಮದಿಂ ನೂರು ವತ್ಸರ ಬಾಳಿ |ನಾರಾಯಣನ ಭಜಿಸುವ | ಸುವ್ವಿ ||ಘೋರ ಪ್ರಳಯ ಕಾಲಕ್ಕು ಮಾರಮಣನ ದಯದಿಂದ |ಬಾರದಜ್ಞಾನವೀತಂಗೆ | ಸುವ್ವಿ ೪
ಈತನಾಳಿಕೆಯೊಳು ಮೂವತ್ತೊಂಬತ್ತು ಕಲ್ಪಕ್ಕೆ |ಭೂತನಾಥಗೆ ಅಪರೋಕ್ಷ | ಸುವ್ವಿ ||ಆತನಾರಭ್ಯ ನಾರನಾಗ ಪರಿಯಂತ ಪರೋಕ್ಷ |ನೀತ ಕಲ್ಪಗಳಲ್ಲೆಹದೆ | ಸುವ್ವಿ ೫
ಎಲ್ಲ ದೇವರು ನಿತ್ಯದಲ್ಲಿ ಬಂದು ಬಂದೀತ |ನಲ್ಲಿ ಉಪದೇಶ ಕೊಂಡಾರೆ | ಸುವ್ವಿ ||ಖುಲ್ಲ ಮಾಯಿ ಸಮೂಹ ಗೆಲ್ದು ವೇದವ್ಯಾಸ |ನಲ್ಲಿ ಅದ್ಯಾಪಿಯಿಹರೆ | ಸುವ್ವಿ೬
ಪಾನೀಯಜಾಜಾಂಡದೊಳು |ನಾನಾ ಜೀವರಿಗೆ ಚೇತನೀತನಿಂದಲೆಯೇ | ಸುವ್ವಿ ||ಏನು ಪೇಳಲಮ್ಮಾ ಈ ಪ್ರಾಣಿಯೊಲಿದರೆ ಶ್ರೀ |ಪ್ರಾಣೇಶ ವಿಠಲನೊಲಿದಂತೆ | ಸುವ್ವಿ ೭

೧೮೨
ಸತತ ಹರಿಯ ಸ್ಮರಿಸುತಿರಬೇಕು ಮನವೇ |ಇತರ ಚಿಂತೆಗಳು ಗಣಿಸದಲೆ ಇರಬೇಕುಪ
ಸತಿ ಸುತ ಬಳಗವನ್ನು ಪಾಲಿಸುತಲಿರಬೇಕು |ಸತತ ಮಾಡುವುದೆಲ್ಲ ಸ್ವಾಮಿ ಸೇವೆನಬೇಕು |ಅತಿಥಿಗಳು ಬರಲು ಕರೆದು ಉಣಿಸುತಿರಬೇಕು ||ಮತಿಹೀನರ ಸಂಗ ಬಿಡಬೇಕು, ಮೂಜಗ |ತ್ಪತಿ ಯಾಜ್ಞದವರು ಶ್ರೀಪ್ರಮುಖರೆನಬೇಕು ೧
ಗುರು ಹಿರಿಯರ ಚರಣಕೆ ಬಾಗಿ ನಡಿಯಲಿ ಬೇಕು |ಪರಮ ವೈಷ್ಣವರ ಗೆಳಿತನವ ಮಾಡಲಿಬೇಕು |ಪರವಾದಿಗಳ ಮತವ ನಿಂದಿಸುತಲಿರಬೇಕು ||ವರ ಮಂತ್ರಗಳ ಜಪಿಸಬೇಕು | ತನು ನಿಮಿಷ ಸ್ಥಿರವಲ್ಲವೆಂದು ನಿಶ್ಚಯ ತಿಳಿಯಬೇಕು ೨
ಪ್ರಥಮ ಚರಣದಲಿ ಗುರುಕುಲ ವಾಸವಿರಬೇಕು |ದ್ವಿತೀಯದಲಿ ಹರಿಸುರಾರ್ಚನೆ ಮಾಡಲಿಬೇಕು |ತೃತೀಯದಲಿ ತೀರ್ಥಯಾತ್ರೆಗಳ ಚರಿಸಲಿಬೇಕು ||ಚತುರ್ಥದಲಿ ಹರಿ ಸ್ಮರಿಸಬೇಕೂ | ವರುಷಶತ ಹೀಗೆ ಸತ್ಕರ್ಮದಲಿ ಕಳಿಯಬೇಕೂ ೩
ಮಾನಾಪಮಾನಾದಿ ಸಮನ ತಿಳಿಯಲಿಬೇಕು |ಜ್ಞಾನಿಗಳು ಮನುಜರಲ್ಲೆಂದು ಪೂಜಿಸಬೇಕು |ಶ್ರೀನಿವಾಸನ ರೂಪಕೈಕ್ಯ ಚಿಂತಿಸಬೇಕು ||ಹೀನ ಗುಣವನು ಬಿಡಲಿಬೇಕೂ | ಭಗವಂತಏನು ಕೊಟ್ಟದೆ ಪರಮ ಸೌಖ್ಯವೆನಬೇಕೂ ೪
ಹೇಮ ಲೋಷ್ಟಾದಿಗಳು ಸಮನ ನೋಡಲಿಬೇಕು |ಶ್ರೀ ಮಧ್ವಮುನಿ ಮತಕೆ ಸರಿಯಿಲ್ಲವೆನಬೇಕು |ಶ್ರೀ ಮಾಧವನ ದಿನದಿ ಉಪವಾಸವಿರಬೇಕು ||ರಾಮಕಥೆಯನೆ ಕೇಳಬೇಕೂ | ಸತತ ನಿಷ್ಕಾಮಪ್ರಾಣೇಶ ವಿಠ್ಠಲನು ಎನಬೇಕೂ ೫

೨೨೬
ಗ್ರಂಥಮಾಲಿಕಾ ಸ್ತೋತ್ರ
ಸದ್ವೈಷ್ಣವರಾದವರೆಲ್ಲ ಕೇಳಿರಿಅದ್ವೈತರುಸರಾಡದಂದದಿಮಧ್ವಮುನಿ ಬರದಂಥ ಗ್ರಂಥಸಂಖ್ಯವ ಪೇಳ್ವೆನೂ ಪ
ಪ್ರಥಮ ಗೀತಾಭಾಷ್ಯ ನಂತರ |ಚತುರಮುಖ ಸೂತ್ರಕ್ಕೆ ಭಾಷ್ಯ ಮು- |ಕುತಿ ಪ್ರದಣು ಭಾಷ್ಯಾಖ್ಯ ಗ್ರಂಥವು ಅನುವ್ಯಾಖ್ಯಾನಾ ||ಚತುರ ಗ್ರಂಥ ಪ್ರಮಾಣ ಲಕ್ಷಣ |ಕ್ಷಿತಿಯೊಳಗೆ ವೈಷ್ಣವ ಜನಕೆ ಸಮ್ಮತಿ |ಕಥಾ ಲಕ್ಷಣ ಉಪಾಧೀ ಖಂಡನಾ ಗ್ರಂಥಾ ೧
ಸರಸ ಮಾಯಾವಾದ ಖಂಡನ |ವರಮಿತ್ರತ್ವ ಸುಮಾನ ಖಂಡನ |ಪರಮ ಮಂಗಳ ಕೊಡುವ ಗ್ರಂಥವು ತತ್ವ ಸಂಖ್ಯಾನಾ ||ವರದ ತತ್ವ ವಿವೇಕ ಗ್ರಂಥವು |ಹಿರಿದು ತತ್ವೋದ್ಯೋತ ಗ್ರಂಥ ಸು- |ಕರುಮ ನಿರ್ಣಯ ವಿಷ್ಣು ತತ್ವ ನಿರಣಯ ಋಗ್ಭಾಷ್ಯಾ ೨
ಐತರೇಯವು ತೈತರೇಯ ಸು- |ಖ್ಯಾತೆ ಬೃಹದಾರಣ್ಯ ಮಹಿಮೀ |ವ್ರಾತ ಈಶಾವಾಸ್ಯ ಕಾಠಕ ದಿವ್ಯ ಛಂದೋಗ್ಯಾ ||ಭೂತಿದಾಥರ್ವಣ ಸುಮಂಡುಕ |ವೀತಭಯ ಷಟ್ಪ್ರಶ್ನ ಅಭಯದ |ಆ ತಳವಕಾರಿಂತು ಹತ್ತುಪನಿಷದಗಳ ಭಾಷ್ಯಾ ೩
ಪತಿತಪಾವನ ಗೀತ ತಾತ್ಪ- |ರ್ಯತುಳನ್ಯಾಯ ವಿವರ್ಣ ಹರಿ ನಖ |ಸ್ತುತಿ ಯಮಕ ಭಾರತ ಬಿಡದೆ ವಿಶ್ವಾಸ ಮಾಳ್ಪರಿಗೇ ||ಗತಿ ದ್ವಾದಶ ಸ್ತೋತ್ರ ಕೃಷ್ಣಾ |ಮೃತ ಮಹರ್ಣವ ತಂತ್ರಸಾರ |ಚ್ಯುತ ಪ್ರಿಯ ಸದಾಚಾರ ಸ್ರ‍ಮತಿ ಭಾಗವತ ತಾತ್ಪರ್ಯ ೪
ಬಾಹ ದುರಿತವ ತಡದು ತ್ವರ ಹೃ- |ದಾಹ ಪರಿಹರಿಸುತಿಹ ಶ್ರೀ ಮ- |ನ್ಮಹಾ ಭಾರತ ತಾತ್ಪರ್ಯ ನಿರ್ಣಯ ಪ್ರಣವ ಕಲ್ಪಾ ||ಸ್ನೇಹ ಭಕ್ತರ ಪೊರಪ ಮಾತುಳ |ದ್ರೋಹಿ ಜನ್ಮ ಜಯಂತಿ ಕಥಿ ನಡು |ಗೇಹ ಸುತ ವಿರಚಿಸಿದ ಮೂವತ್ತೇಳು ಗ್ರಂಥವಿವೂ ೫
ಹಲವು ಕ್ಷೇತ್ರ ಸುಯಾತ್ರಿ ದಾನಂ- |ಗಳು ವೃತ ಉಪವಾಸ ಯಜ್ಞ ಮಾಡಿದ |ಫಲವು ಈ ಗ್ರಂಥಗಳ ಪಠಿಸುವುದಕ್ಕೆ ಸಮವಲ್ಲಾ ||ಇಳಿಯ ಮಧ್ಯದೊಳೆಮ್ಮ ವಚನಂ- |ಗಳಿಗೆ ಸಮಹಿತ ವಸ್ತುವಿಲ್ಲೆಂ- |ದಲವ ಬೋಧರು ಶಿಷ್ಯ ಜನರಿಗೆ ತಾವೆ ಪೇಳಿಹರೂ ೬
ಕುನರಗೆಂದಿಗ್ಯೂ ಪೇಳದಲೆ ಸ- |ಜ್ಜನರು ಸದ್ಭಕ್ತಿಯಲಿ ಪಠಿಸುವ |ದನವರತ ಈ ಗ್ರಂಥಮಾಲಿಕಿ ಶ್ರೀದ ಶುಚಿ ಸದನಾ ||ಅನಘ ಶ್ರೀ ಪ್ರಾಣೇಶ ವಿಠಲನು |ಮನದಭೀಷ್ಠಿಯ ಕೊಟ್ಟು ಇಹದಲಿ |ಕೊನಿಗೆ ತನ್ನಾಲಯದಿ ಸಂವಿಯದ ಸುಖದೊಳಿರಿಸುವನೂ೭

೨೦೯
ಸರವಾದೀ ಪರವಾದೀಪರಮಾತ್ಮನೆ ನೀನೆಂಬುವರೇನೋ ಪ
ಕ್ಲೇಶ ಮೋದಗಳು ಶ್ರೀಶಗೆಲ್ಲಿಹವೊ |ನೀ ಸೋಸುತಲಿಹೆ ಏಸು ಜನ್ಮದಲಿ ೧
ನಿತ್ಯ ತೃಪ್ತನವ ಹೊತ್ತು ತಿಂಬಿ ನೀ |ಎತ್ತ ಆತ ನೀನೆತ್ತಲೊ ಮರುಳೇ ೨
ಒಂದೆ ಎಂಬೊ ಮತದಿಂದ ಸಹೋದರಿ |ಗಿಂದಿಲಿಂದ ಸತಿ ಎಂದು ಕರವದೋ ೩
ಕಲಿಯಲಿ ಸಲ್ಲದು ಜಲಜಜ ವಿದ್ಯವ |ಹಳಿಯ ತಟ್ಟಲಿಯ ಹೊಲಿ ಅನುದಿನದೀ ೪
ಶುದ್ಧ ಸ್ವಭಾವದೋಳಿದ್ದಿಯೊ ಅಥವಾ |ಮದ್ಯ ಕುಡಿದರೇ ಬುದ್ಧಿಯೊ ತಿಳಿಯದು೫
ನೀನಾಡುವದಕೆ ಹೀನಗತಿಯೆ ಧ್ರುವ |ಪ್ರಾಣೇಶ ವಿಠಲನ ಆಣೆಲೊ ಕೇಳೂ ೬

೧೭೨
(ಶ್ರೀ ಮಧ್ವಾಚಾರ್ಯರು ಯತಿಗಳಿಗೆ ಮೂರ್ತಿಗಳನ್ನಿತ್ತ ವಿವರ)
ಸುಖತೀರ್ಥರೆದುವರನ ಸ್ಥಾಪಿ |ಸ್ಯೊಂಬತ್ತೆತಿಗಳನು ಮಾಡಿ ಅವರವರಿಗೆ ||ಅಕಳಂಕ ನಾಮಗಳ ಮೂರ್ತಿಗಳ ಕೊಟ್ಟ |ವಿವರ ಬಣ್ಣಿಸುವೆ ಸುಜನರು ಕೇಳಿಪ
ಶ್ರೀ ಪದ್ಮನಾಭ ಹೃಷಿಕೇಶ |ನರಹರಿ ಜನಾರ್ದನ ಯತಿ ||ಉಪೇಂದ್ರ ತೀರ್ಥ ಪಾಪಘ್ನ ವಾಮನ ಮುನಿಪ |ವಿಷ್ಣು ಯತಿ ರಾಮತೀರ್ಥದೋಕ್ಷಜ ತೀರ್ಥರು ||ಈ ಪೆಸರಿಲೊಂಬತ್ತು ಮಂದಿ ರಘುಪತಿ | ಕಾಳೀ ಮಥನ ವಿಠ್ಠಲನೆರಡೆರಡು ||ಭೂಪತಿ ನರಸಿಂಹ ವಿಠ್ಠಲ ಹೀಗೆ |ಒಂಬತ್ತು ಮೂರ್ತಿಗಳನು ಕೊಟ್ಟು ೧
ಪದುಮನಾಭರಿಗೆ ರಾಮನ ಕೊಟ್ಟು |ಸಕಲ ದೇಶವನಾಳಿ ಧನ ತಾ ಎನುತಲೀ |ಅದರ ತರುವಾಯ ಹೃಷಿಕೇಶ ತೀರ್ಥರಿ |ಗೊಂದು ರಾಮಮೂರ್ತಿಯನು ಕೊಟ್ಟು ||ಬುಧಜನಾರ್ಚಿತ ನೃಸಿಂಹಾರ್ಯರಿಗೆ |ಕಾಳಿಯ ಮರ್ದನನಾದ ಶ್ರೀ ಕೃಷ್ಣಮೂರ್ತಿ |ಹೃದಯ ನಿರ್ಮಲ ಜನಾರ್ದನ ತೀರ್ಥರಿಗೆ ಕಾಳೀ ಮಥನ ಶ್ರೀ ಕೃಷ್ಣಮೂರ್ತಿಯ ಕೊಟ್ಟು೨
ಯತಿವರ ಉಪೇಂದ್ರರಾಯರಿಗೆ ವಿಠ್ಠಲನವಾಮನ ತೀರ್ಥರಿಗೆ ವಿಠ್ಠಲನಾ |ನತ ಸುರದ್ರುಮ ವಿಷ್ಣುತೀರ್ಥರಿಗೆ ವರಹ-ಶ್ರೀರಾಮ ತೀರ್ಥರಿಗೆ ನರಸಿಂಹ ||ಅತಿ ಸುಗುಣ ಅಧೋಕ್ಷಜ ತೀರ್ಥರಿಗೆ ವಿಠಲ |ನಿಂತು ಒಂಬತ್ತು ಮೂರ್ತಿಗಳ ಕೊಟ್ಟು |ಕ್ಷತಿಯೊಳಗೆ ತಾಪ್ಯಪೀಠ ಪುರಸ್ಥಪ್ರಾಣೇಶ ವಿಠ್ಠಲನ ಅರ್ಚನೆಗಿಟ್ಟರು ಕೇಳಿ೩

೧೯೫
ಸೊಕ್ಕಿಲಿ ಇರಬ್ಯಾಡವೆಲ ಹುಚ್ಚ ಪ್ರಾಣೀ |ಸೊಕ್ಕಿಲಿ ಇರಬ್ಯಾಡಾ ಪ
ಧೊರಿತನ ಬಂದಾಗ ಕೇವಲ ಬಡವರ |ಕರಕರಿ ಬಡಿಸುವಿ ತಿಳಿಯದಲೇ ||
ಸ್ಥಿರವಲ್ಲ ಸೌಭಾಗ್ಯ ಪೋಗಲು ಬಳಲುತ |ತಿರಿಕಿಯ ಬೇಡೂವದಿಟ್ಟಿಹದೆಲವೋ ೧
ಪ್ರಾಯದ ಕಾಲಕ್ಕೆ ಮದದಿಂದ ತಿರುಗುವೀ |ತಾಯಿ ತಂದೆ ಗುರುಗಳು ಯನದೇ ||
ಕಾಯ ಮುಪ್ಪಾಗಲು ಮುನುಗುತ ಮೂಲಿಗೆ |ಬಾಯಿ ಮುಚ್ಚಿಕೊಂಡು ಬೀಳುವ್ಯೊ ಮರುಳೇ ೨
ಇಪ್ಪತ್ತು ಸಾವಿರ ಹೊನ್ನಿನ ಬಿಗಿವಿಲಿ |ವಪ್ಪಿಲ್ಲದುರಿವಿ ಆ ಧನವು ಕಾಳೀ ||
ದರ್ಪಹ ಪ್ರಾಣೇಶ ವಿಠಲನ್ಯರಿಗೆ ಕೊಡೆ |ಲಪ್ಪಯಮ್ಮ ಎಂದು ಹೊಡಕೊಂಬಿ ಮರುಳೇ ೩

೨೦೪
ಸ್ವರ್ಗ ನರ್ಕವೆಂಬುದು ಬ್ಯಾರಿಲ್ಲಾ |ತಿಳಕೊಳಲಿಕ್ಕರಿಪರಧಮರೂ ||
ದುರ್ಗಾ ರಮಣನ ಗುಣ ಕೊಂಡಾಡುವ |ರಿಲ್ಲೇ ಉಂಟೆಂಧೇಳುವರೂ ಪ
ಅರುಣೋದಯಕೇಳುತ ಭಕ್ತಿಂಧರಿ |ಸ್ಮರಣಿಯ ಮಾಡುತಿಹದೆ ಸ್ವರ್ಗಾ ||
ತುರುಕರ ಬಿಡಿ ಶಗಣಿಯ ಬಳಿ ಕುರ್ಚಿಗಿ |ಸರವಿಯ ತಾ ಯಂಬದೆ ನರ್ಕಾ ೧
ನಳಿನಿ ಪ್ರಮುಖ ನದಿಗಳ ತಾರತಮ್ಯವ |ತಿಳಿದು ಸ್ನಾನ ಮಾಳ್ಪುದೆ ಸ್ವರ್ಗಾ ||
ಹಳಸ ಮೋರಿಯಿಂಧರಟಿಕೊಳುತ ಊ- |ರೊಳು ಸಂಚರಿಸುವದೇ ನರ್ಕಾ ೨
ದ್ವಾದಶ ನಾಮವ ಮುದ್ರಿ ತುಲಸಿ ಸರ |ಸಾದರದಿಂ ಧರಿಪದೆ ಸ್ವರ್ಗಾ ||
ತಾ ದುರ್ಬುದ್ಧಿಯಲಿಂದಲಿ ಮತ್ತೇ |ನಾದರು ಧರಿಸುವದೇ ನರ್ಕಾ ೩
ಜಲಜಾಕ್ಷನ ಪೂಜಿಸಿ ನೈವೇದ್ಯಂ |ಗಳ ದ್ವಿಜಗಿತ್ತುಂಬುದೆ ಸ್ವರ್ಗಾ ||
ಹುಲಿಗಿಯಲ್ಲಿ ಪೊಲ್ಕಮ್ಮ ಕಂಭ ಗೋ |ದಲಿಗರ್ಪಿಸಿ ತಿಂಬದೆ ನರ್ಕಾ ೪
ದರುಶನ ಗ್ರಂಥಾರ್ಥವ ಸಾದರದಿಂ |ನಿರುತದಿ ಕೇಳುತಿಹದೆ ಸ್ವರ್ಗಾ ||
ಪರಕಥಿ ಕೇಳುತ ಪ್ರಾಣೇಶ ವಿಠಲನ |ಮರದು ಬದುಕುತಿಹದೇ ನರ್ಕಾ ೫

೧೮೩
ಹರಿ ಹರೀ ಎಂದು ಅನವರತ ಸ್ಮರಿಸೋ |ನರ ವಿಷಯ ಲಂಪಟವ ಮುಂಚೆ ತ್ಯಜಿಸೋ ಪ
ಹೋಮಾನ್ನದಿಂದುದಸಿ | ವನ ಚರಿಸಿ ಕಪಿ ನೆರಸಿ |ಕಾಮಿನಿಯ ಕೊಂದು, ಶರನದಿಯ ದಾಟೀ ||ತಾಮರಸ ಮುಖಿಯ ಸಂತೋಷ ಪಡಿಸುತ ಎಲ್ಲ |ತಾಮಸರ ಸದೆಬಡೆದು, ಅಸುರಗೊಲಿದಾ ೧
ಬಲಿ ತಿಂದ, ಪುವು ತಂದ, ವಿಷ ಉಂಡ, ಮಡು ಬಿದ್ದ |ತುಳಿದ ಸರ್ಪನ, ಶರಿಯವರ ಬಿಡಿಸಿದಾ ||ಖಳ ಬಕನ ಕೊಂದರಸಿ ಊಳಿಗವ ಮಾಡಿ, ಶಶಿ |ಕುಲದೊಳವತರಿಸಿ, ಧಾರುಣಿ ಸಲಹಿದಾ೨
ಯತಿಯಾದ ಪ್ರಾಣೇಶ ವಿಠ್ಠಲನ ದ್ವಿಜವರಗೆ |ಸುತನಾಗಿ ಸದ್ಗ್ರಂಥ ವಿರಚಿಸಿದನಾ ||ಧೃತ ಕಮಂಡುಲ ದಂಡ, ಕಾಷಾಯ ಬದರಿಯಲಿ |ಸತತ ನಿಲಿಸಿಹ ಜಗಚ್ಚೇಷ್ಟರಾದಾ ೩

೧೮೬
ಹರಿಭಕ್ತರಾದ ಬಳಿಕ ದುಃಸ್ವಭಾವದ |ನರರ ಕೊಂಡಾಡೂವರೆ |ಸರಸೀಜಾಂಬಕನೆ ಕೃಪಾಂಗದಿಂದೀಸೆ |ಮರಳೊಂದು ಯೋಚನೆಯೇ ಪ
ಉತ್ತಮ ಏಕಾದಶಿಯ ವ್ರತವಿರಲಾಗಿ |ಮತ್ತೊಂದು ವ್ರತಗಳ್ಯಾಕೆ |ಸತ್ಯವಂತರ ಸನ್ನಿಧಾನದಲ್ಲಿರುತಿರೆ |ಪ್ರತ್ಯೇಕ ಕ್ಷೇತ್ರವ್ಯಾಕೇ ||ಪತ್ನಿ ಸಂಗವ ಬಿಟ್ಟು ದುಷ್ಟಬುದ್ಧಿಯಲ್ಲಿಹ |ತೊತ್ತಿನ ಸಂಗತಿಯೇ |ವಿತ್ತದ ಗಿರಿ ತನ್ನ ಕೈವಶವಾಗಲು |ಹತ್ತೆಂಟು ಹೊನ್ನಿನಾಶೇ೧
ವರ ಗಾಯಿತ್ರಿಯ ದಿವ್ಯ ಮಂತ್ರ ಜಪಿಸಲು |ಶರೀರಕ್ಕೆ ಮೈಲಿಗೆಯೇ |ಸುರಗಂಗೆಯೊಳು ಪೊಕ್ಕು ಸ್ನಾನ ಮಾಡಿದ ಮ್ಯಾಲೆ |ಹರಿವೊ ಹಳ್ಳದ ಪೊರವೇ ||ಗರುಡ ದೇವರ ಮಂತ್ರ ಕಲಿತುಕೊಂಡವನಿಗೆ |ಉರುಗಾನ ಹಾವಳಿಯೇ |ಅರಸಿನ ಕರುಣಾವೆ ಪೂರ್ಣವಿದ್ದರೆ ಮಿಕ್ಕ |ಪರಿಚಾರಕರ ಭಯವೇ೨
ಕುಂತಿ ನಂದನನ ನಿರಂತರ ಭಜಸಲುಅಂತಕನುಪಟಳವೇ |ಚಿಂತಿತ ಫಲವೀವ ಸುರತರುವಿರಲಾಗಿ |ತಿಂತ್ರಿಣಿ ಬಯಸುವರೇ ||ಸಂತತ ಸತ್ಕಥಾ ಶ್ರವಣವಾಗುತಲಿರೆ |ಮಂತ್ರಗಳಾಸಕ್ತಿಯೇ |ಕಂತೂಪ ಪ್ರಾಣೇಶ ವಿಠಲಾನ ಪೊಂದಾಲು |ಚಿಂತೀಯ ಮಾಡುವರೇ ೩

೧೮೫
ಹರಿಭಕ್ತರಾದವರಿಗಾವ ಭಯವೇನೋ |ಪೊರೆವ ಅವರನು ತಾನೆ ಕ್ಷಣ ಕ್ಷಣದಲೀ ಪ
ವಾರುಣೇಂದ್ರನು ಮಡುವಿನೊಳಗೆ ನಕ್ರನ ಬಾಧೆ |ಗಾರದಲೆ ಕೂಗಲಾಕ್ಷಣ ಕರುಣದೀ |ಶ್ರೀ ರಮಣ ತವಕದಲಿ ಬಂದು ಆ ದುರಿತವನು |ತಾರಿಸಿ ಸುಗತಿ ಕೊಟ್ಟಿದ್ದಿಲ್ಲೆ ನೋಡಿ ೧
ಅರಗಿನಾಲಯದಲ್ಲಿ ಕುಂತಿ ತನಯರ ಪೊಗಿಸಿ |ಉರಿಯಿಕ್ಕೆ ಕೌರವರು ಕಪಟದಲ್ಲೀ ||ಉರುಗ ಶಯನನ ಕರುಣ ಪೂರ್ಣವಿದ್ದುದರಿಂದ |ಹೊರ ಹೊರಟು ಬಂದು ಬದುಕಿದರು ಕೇಳಿ೨
ಧರಿಪತಿ ಕುವರನ್ನ ಶಂಖಲಿಖಿತರು ಕೂಡಿ |ಮರಳುವಾ ತೈಲದೊಳು ಹಾಕಲವನೂ ||ಸುರವಂದ್ಯ ಪ್ರಾಣೇಶ ವಿಠಲನೇ ಎನಲಾಗಿ |ಪರಮ ತಣ್ಣೀರಾಯಿತೆಣ್ಣೆ ನೋಡೀ೩

೧೮೪
ಹರಿಯನ್ನಬಾರದೆ, ಎಲೆ ಮನವೆ ಆವಾಗಲೀ |ಮರಳೊಂದು ವಿಷಯದಾಪೇಕ್ಷ ತೊರದೂ ಪ
ಸಂಸಾರವೆಂಬುದು ದುಃಖಸಾಗರವೊ, ಒಂ |ದಂಶವಾದರು ಸುಖವು ಇದರೊಳಿಲ್ಲಾ ||
ಹಿಂಸಿಸಿಕೊ ದುರ್ಗುಣವ ಇಂದಿನಾರಭ್ಯ ನಿಃ |ಸಂಶಯದಿ ಸಜ್ಜನರ ಸಂಗ ಪಿಡಿದೂ ೧
ತನುವು ಸ್ಥಿರವಲ್ಲ ದಾನವ ಮಾಡುವದಕರ್ಧ |ಕ್ಷಣ ಮಾತ್ರಕಾಲಸ್ಯ ಮಾಡಸಲ್ಲಾ ||
ಧನ ಮನವು ಇದ್ದಾಗೆ ಸತ್ಪಾತ್ರರಿಗೇವೆ ಕೊಡು |ನಿನ ಗತಿಗೆ ಪಾಥೇಯವೆಂದು ತಿಳಿದೂ ೨
ಶ್ರೀಕಾಂತ ಪ್ರಾಣೇಶ ವಿಠಲ ಮೆಚ್ಚೂವಂತೆ |ನೂಕು ದಿನ ಸುಖ ದುಃಖ ಸಮನ ಮಾಡೀ ||
ಈ ಕು ನರರನ್ನ ಸೇವಿಸದೆ ಸದ್ಭಕ್ತಿಯಲಿ |ಶ್ರೀಕಾಳಿಕಾಂತನೇ ಮುಖ್ಯ ಗುರುವೆಂದೂ ೩

೧೫೫
ಶ್ರೀ ವರದೇಂದ್ರ ತೀರ್ಥರ ಸ್ತುತಿ
ಹಿಂದಿನ ಸುಕರ್ಮವೇಸು | ಬಂದೊದಗಿದವೋ ವರ |ದೇಂದ್ರರಾಯ ಬಂದ ನಮ್ಮ | ಮಂದಿರಕಿಂದು ಪ
ಮುತ್ತಿನ ಅಂದಣದೊಳು | ಸತ್ತಿಗಿ ನೆರಳಲಿ | ಪ್ರ-ಶಸ್ತವಾಗಿ ವೇದಶಾಸ್ತ್ರವೊತ್ತಿ ವೋದುವ ||ಉತ್ತಮ ಬುಧರ ಕೂಡ | ಭೃತ್ಯರ ಸಂಗಡ ಬಹು |ಹತ್ತೆಂಟು ಬಿರುದಾವಳಿಯುಕ್ತ ಬಂದರು೧
ತಂಡ ತಂಡಕ್ಕೆ ಜನರು | ಹಿಂಡುಗೂಡಿ ಫಲಗಳ |ಕೊಂಡು ಬಂದು ಮಾಡುವರು ದಂಡ ಪ್ರಣಾಮ ||ಪಂಡಿತಾಗ್ರಗಣ್ಯರು ಭೂ | ಮಂಡಲದೊಳಾಗ ಶ್ರೀಯಾ |ಖಂಡಲನಂತೆ ತೋರ್ವಾ ಕಮಂಡಲಧರ ೨
ಶ್ರೀಕರ ಪ್ರಾಣೇಶ ವಿಠ್ಠಲನೇಕಾಂತದಿ ಒಲಿಸುವಲ್ಲಿ |ಈ ಕುಂಭಿಣಿಯೊಳಗೀತಗೆ ಕಾಣೆನೀಡ ||
ನೀ ಕಾಯಬೇಕೆಂದವರ ಶೋಕವ ಪರಿಹರಿಸಿ |ಜೋಕೆ ಮಾಡುವ ನಿತ್ಯ ದೇಶಿಕ ಕುಲಪತಿ೩

೧೯೧
ಹೀಗನುದಿನದಲಿ ಆಚರಿಪರು ಸದ್ವೈಷ್ಣವರೂ |ಹ್ಯಾಗಂದರೆ ಆಪನಿತು ಪೇಳುವೆನು, ಕೇಳ್ವದು ಸಜ್ಜನರು ಪ
ಕೊಡೋದಿಲ್ಲ ಶೈವರಿಗೆ ದಾನವನು | ಹಿಡೋದಿಲ್ಲವರದು ||ಆಡೋದಿಲ್ಲ ಹರಿಗಲ್ಲದೆ ವಿಷಯಕೆ | ಸಿಡೋದಿಲ್ಲ ಮನಸು ||ಸುಡೋದಿಲ್ಲ ಪರರನ್ನವ ಹಮ್ಮಿಗೆ | ಪಡೋದಿಲ್ಲ ಖ್ಯಾತಿ ||ನಡೊದಿಲ್ಲವಧಮರ ಸ್ಥಾನಗಳಿಗೆ | ವಡೋದಿಲ್ಲ ತತ್ವ ೧
ತಡೋದಿಲ್ಲವನ್ಯಾಯ, ಪ್ರವರ್ತಕ | ಬಡೋದಿಲ್ಲ ದೈನ್ಯಾ ||ಕಡೋದಿಲ್ಲ ವೃಥ ಪಣಾದಿಗಳನು | ತೊಡೋದಿಲ್ಲ ಸ್ವರ್ಣಾ ||ಇಡೋದಿಲ್ಲ ನಾಳಿಗೆ ದಿವ್ಯಾಂಬರ | ಉಡೋದಿಲ್ಲ ಬಯಸೀ ||ಜಡೋದಿಲ್ಲ ಭೋಗದ್ರವ್ಯಂಗದಿ | ನುಡೋದಿಲ್ಲಪದ್ಧ ೨
ಹೊಡೋದಿಲ್ಲ ಪ್ರಾಣಿಗಳ ಅನರ್ಪಿತ | ಮುಡೋದಿಲ್ಲ ಶಿರದೀ ||ಶಡೋದಿಲ್ಲ ಬಲ್ಲವರಾವೆಂದೂ | ತೊಡೋದಿಲ್ಲ ಮುದ್ರೀ ||ಕುಡೋದಿಲ್ಲ ಸಪ್ತಾಂಬು ಕುಶಾಸ್ತ್ರದಿ | ನಡೋದಿಲ್ಲ ಬುದ್ಧಿ ||ಬಿಡೋದಿಲ್ಲ ಪ್ರಾಣೇಶ ವಿಠಲನ ದಿನ | ಕೆಡೋದಿಲ್ಲವೆಂದೂ ೩

೧೯೬
ಹುಚ್ಚು ಸೇರಿತೆ ನಿನಗೆ ಮಂದಮತಿ ಮನವೆ ಕೇಳು |ಎಚ್ಚರಿಕೆ ಇಲ್ಲೆ ಶೃತಿ ಸಾರುತಿಹದೂ ಪ
ಪರಮಾತ್ಮ ಆವಾಗ ಏನು ಮಾಡುವನೊ ಯಮ |ಗರಿಕಿಲ್ಲವೆಂಬುವರು ಬ್ರಹ್ಮಮುಖರೂ ||ಬರಿದೇ ನೀ ಸದನ ಸತಿ ಸುತರು ಎನ್ನವರೆಂದು |ಕರಕರಿಗೆ ಒಳಗಾಗಿ ಕೆಡುತಿಹೆಲೊ ವ್ಯರ್ಥಾ ೧
ಈ ತನುವು ನೆಚ್ಚಬಾರದು ನೀರಗುಳ್ಳಿ ಯಂ |ದೂ ತುಚ್ಛ ಮಾಡುವರು ಕವಿಗಳೆಲ್ಲಾ ||ಪ್ರೀತಿಯಿಂದಲಿ ಅಶನ ಉಂಡು ಸೊಕ್ಕಿದೆ ಒಮ್ಮೆ |ಸೋತೆ ಉಪವಾಸದಲಿ ಎಂದು ಮಿಡುಕುತಿ ಯಲವೋ೨
ಹಿಂದಿನವಗುಣವು ಪೋಗಲಿ ಶುದ್ಧ ಭಕುತಿಯಲೀ |ಇಂದು ಪ್ರಾಣೇಶ ವಿಠ್ಠಲನ ಪಾದಾ ||ವಂದಿಸುತ ದುರ್ವಿಷಯದಾಪೇಕ್ಷ ಜರಿದು, ದ್ವಿಜ |ನಂದನನ ಸ್ನೇಹ ಸಂಪಾದಿಸು ತ್ವರಾ ೩

೨೨೧
ಮಾನಸ ಪೂಜಾಕ್ರಮ
ಹೃದಯ ಮಂದಿರ ವಿವರ ಈ ಪರಿಯಲಿಂ ತಿಳಿದು |ಮಧುವೈರಿ ಪೂಜಿ ಮಾಳ್ಪುದು ಸುಜನರೂ ಪ
ಉದಯದಲಿ ಮೂರು ಬಾಗಿಲು, ಪ್ರಥಮದಲಿ ರಮಾ |ಅದರ ತರುವಾಯ ರವಿನಾಮ ಪ್ರಾಣಾ ||ಪದುಮಾಕ್ಷಿ ಭಾರತಿ ದ್ಯುನಾಮದಿಂದಿಹಳಲ್ಲಿ |ತುದಿಯ ಬಾಗಿಲಿಗೆ, ಜಯ ವಿಜಯರೂ ೧
ಯಮದಿಸಿಗೆ ಮೂರು ಕದ ಮೊದಲು ಶ್ರೀ ಎರಡರೊಳು |ತಿಮಿಪಾಖ್ಯ ವ್ಯಾನದಿಙÁನ್ನಾಂ ಭಾರತೀ ||ಅಮಲ ಬಲ ಪ್ರಬಲ ಮೂರನೇ ದ್ವಾರಕಿಹರು ಪ- |ಶ್ಚಿಮ ದ್ವಾರ ಮೂರರೊಳಿಹರ ಪೇಳ್ವೇ ೨
ಪ್ರಥಮಮಾ ದ್ವಿತಿಯದಲಿ ಶಿಖಿನಾಮಕ ಪಾನ |ಪೃಥಿವಿ ನಾಮಕೆ ಭಾರತೀ ಕುಮುದರೂ ||ತೃತಿಯದಲ್ಲಿಹ್ಯರುತ್ತರಕೆ ಮೂರು ದ್ವಾರಗಳು |ಸತತಲ್ಲಿ ನೆಲಸಿಹರ ಪೆಸರು ಕೇಳೀ ೩
ಒಂದರೊಳು ಶ್ರೀ ದ್ವಿತಿಯ ಸುರಪ ನಾಮ ಸಮಾನ |ಇಂದುಮುಖಿ ಭಾರತಿಯು ವಿದ್ದ್ಯುನ್ನಾಮ್ನೀ ||ನಂದನು ಸುನಂದ ಮೂರನೇ ಬಾಗಿಲಲ್ಲಿಹರು |ಬಂದು ಕದ ಮೇಲೂ ಭಾಗದಲೀಹದೂ ೪
ಅಲ್ಲಿ ಆಕಾಶ ನಾಮಕಳು ಲಕ್ಷ್ಮೀ ಉದಾನ |ಚಲ್ವಿ ಭಾರತಿಯು ವಾಙು‌ ನಾಮದಲಿಹಳೂ ||ಮಲ್ಲರಿಪು ಅಷ್ಟಪತ್ರದೊಳಗೆ ದ್ವಿಷಡ್ರೂಪ |ದಲ್ಲಿಹ್ಯ ವಿವರ ಕೇಳಿ ಆದರದಲೀ೫
ಎರಡೆರಡು ದಿಕ್ಕಿನಲಿ ಒಂದೊಂದ್ಪಿ ದಿಕ್ಕಿನಲಿ |ಎರಡೈದು ಒಂದು ಸ್ತ್ರೀ ಒಂದು ಪುರುಷಾ ||ಪರಮ ಪಾವನವಾದ ಈ ಹನ್ನೆರಡು ರೂಪ |ಗುರು ಮಧ್ವ ಮುನಿರಾಯರೊರಣಿಸಿಹರೂ ೬
ಮನಕಂಜ ಮೂಲದಲಿ ದುರ್ಗ ಭೂ ಮಧ್ಯದಲಿ |ಕೊನಿ ನಳ ಶ್ರೀ ಭಾಗ ಭೇದಗಳಿವೂ ||ಮನುಜನಂಗುಟ ಮಿತಿ ತುದಿಯಲಿ ಹರಿಯಗ್ರೇಶ |ನೆನಿಸಿ ಜೀವರಿಗೆ ಸುಷುಪ್ತಿಯನೀವನೂ ೭
ತಾವರಿಯ ಮಧ್ಯದಲಿ ಇಹನಷ್ಟ ಪ್ರಾದೇಶ |ಆವಾಗ ದೇಹಿಗಾಧಾರ ಪುರುಷಾ ||ಭಾವಿಸುವದಿನಿತೆ ಮಿತೆ ಮೂಲೇಶ ಈತಗೇ |ಕೋವಿದರು ವಿಜ್ಞಾನವಪು ಎಂಬರೂ ೮
ಮೂಲೇಶನಂಘ್ರಿ ಆಶ್ರಯಿಸಿ ಮುಖ್ಯ ಪ್ರಾಣ |ವಾಲಗವ ಮಾಳ್ಪ ಕೈಮುಗಿದು ನಿರುತಾ ||ಕಾಳೀಶನಂತರ್ಗತನು ವಿಷ್ಣುವಿಗೆ ನಾಮ |ಲಾಳೂಕ ವೈಕುಂಠ ಶೆನಕೇಂದ್ರಾ ೯
ಹಂಸ ಸೋಹಂ ಸ್ವಹಾ ಎಂಬ ಜಪ ಸರ್ವರೊಳು |ಶ್ವಾಸರೂಪದಿ ಮಾಳ್ಪ ಇದನು ತಿಳಿದೂ ||ಶ್ರೀಶಗರ್ಪಿಸಿದವನೆ ಜ್ಞಾನಿ ಎಂದಿಗ್ಯು ಬಂಧ |ಪಾಶದೊಳು ಶಿಲ್ಕ ಲಾಲಿಪುದು ಬುಧರೂ೧೦
ಈ ವಾಯುದೇವನಡಿ ಆಶ್ರೈಸಿ ಸರ್ವದಾ |ಜೀವನಿಹ ಅವನಿರವು ಎಂತು ಕೇಳೀ ||ಆವ ಕೇಶ ಸಹಸ್ರ ಭಾಗದೊಳು ಒಂದಂಶ |ದೀ ಒಪ್ಪುವನು ಸರ್ವವಯವಗಳಿಂದ ೧೧
ವಾಸುದೇವನೆ ಹರಿಗೆ ಶಿರವೆನಿಪನಾ ಶಿರವು |ಈ ಶರೀರಗೆ ಶಿರವು ನಾರಾಯಣಾ ||ಭಾಸಿಸುವ ಮಧ್ಯ ಮಧ್ಯದೊಳಿಹದು ಪ್ರದ್ಯುಮ್ನ |ಶ್ರೀಶನಾ ಬಲ ಭಾಗ ಬಲದೊಳಿಹದೂ ೧೨
ವಾಮ ಹರಿಗನಿರುದ್ಧ ಜೀವನೆಡದಲ್ಲಿಹದು |ಸ್ವಾಮಿ ಪದ ಸಂಕರಷಣಿದರೊಳಿಹದೂ ||ರಾಮವಾಗೇಂದ್ರಿ ದೇವಗೆ ವಾಗ್ದೋಳಿಹ ನೃಹರಿ |ಶ್ರೀ ಮನೋರಮಗೆ ಪ್ರಾಣ ಜೀವ ಪ್ರಾಣಾ ೧೩
ಹರಿನೇತ್ರ ಕಪಿಲಜೀವನ ಕಣ್ಣಿನಲಿಹ ವಿ- |ವರ ತಿಳಿವದೀ ಜೀವನಂಗಧವಣೀ ||ವರ ರಮ್ಯವಾದ ಜೀವನ ಹೃತ್ಕಮಲ ಶ್ವೇತ |ವರಣಷ್ಟ ಪತ್ರ ಉಳ್ಳದು ತಿಳಿವದೂ ೧೪
ಅಲ್ಲಿದ್ದ ಹರಿಗಾತ್ಮ ಜೀವ ಹೃದಯಂಬುವರುಬಲ್ಲವರು ಸ್ಥೂಲಾಂಗ ಹೃತ್ಸರಸಿಜಾ ||ದಲ್ಲೆಷ್ಟದಳ ಮಧ್ಯ ರತ್ನಮೌಕ್ತಿಕ ಕಾಂತಿ |ಯಲ್ಲಿಹದು ಹೇಮಮಂಟಪಮಾತ್ಮಕಾ ೧೫
ಆ ಮಂಟಪದಲಿ ಹನ್ನೆರಡು ಮೂಲ್ಯುಳ್ಳ ಭಾ- |ನೂ ಮಂಡಲದಲಿ ಬಡುವಾಗೀಹದೂ ||ಸೋಮ ಮಂಡಲದಲಿ ತ್ರಿಕೋಣಾಗ್ನಿ ಮಂಡಲದಿ |ಭೂಮಿಧರ ಶೇಷ ಪರಿಯಂಕದಲ್ಲೀ ೧೬
ಮುತ್ತು ರತ್ನಗಳಿಂದ ದಟಿತವಾದಾಸನ ವಿ- |ಚಿತ್ರ ರತ್ನಖಚಿತದ ಉಪಬರ್ಹಣಾ ||ಉತ್ತುಮಶಿತ ದ್ವೀಪಗತ ವಿಷ್ಣು ಅಲ್ಲಿಹನು |ನಿತ್ಯ ಪರಮಾತ್ಮನೆಂಬರು ಆತಗೇ ೧೭
ಬಿಂಬನಾಮನ ರೂಪವೇನು ವರ್ಣಿಪೆನುದಿತ |ಅಂಬುಜಾಪ್ತಾಭ ಚಿತ್ತ್ ಸುಖವಿಗ್ರಹಾ ||ಕಂಬುರ ವಿಗದ ಕಂಜಶಿರಿ ಧರಣಿ ಸಹಿತ ಹೇ |ಮಾಂಬರದಿ ವಡ್ಯಾಣದಿಂದೊಪ್ಪುವಾ ೧೮
ಕಟಿ ಪ್ರದೇಶನು ಗುಂಭನಾಭಿ ಕೌಸ್ತುಭ ವಕ್ಷ |ಪಟುತರ ಭುಜದಿ ಭೂಷಣದಲೊಪ್ಪುವಾ ||ದಟಿತ ರತ್ನದ ಮುಕುಟ ನೀಲಾಳಕನು ಬ್ರಹ್ಮ |ನಿಟಿಲಾಕ್ಷ ಮುಖ ಸೈನ್ಯ ಶೃತಿ ಭೂಷಣಾ ೧೯
ಪವಳ ಮೌಕ್ತಿಕ ರತ್ನಹಾರ ಅರವಿಂದಾಕ್ಷ |ಸುವಿಶಾಲ ಹೃದಯ ಮಂದಸ್ಮಿತ ಮುಖಾ- ||ಸುವರಣ್ಣ ಕಡೆಯನೂ ಪುರಗೆಜ್ಜೆಯುಕ್ತ ಪದ |ದಿ ವಿಷತ್ಪತಿಯ ಪೊಗಳಲಾಶಕ್ತನೇ ೨೦
ಸ್ಥಾನತ್ರಯದೊಳಿದ್ದ ಹೃತ್ಪದ್ಮದೊಳಗಿದ್ದ |ನಾನಾ ಜೀವ ಜಡರೊಳ ಹೊರಗಿರುತಿಹ್ಯಾ ||ಶ್ರೀನಿವಾಸನ ರೂಪಕತ್ಯಂತ ಐಕ್ಯವನು |ಸಾನುರಾಗದಲಿ ಚಿಂತಿಪುದೆ ಪೂಜೀ ೨೧
ಧನರೂಪ ಬಲಯುಕ್ತನಾದ ಕಾಲಕು ತನ್ನ |ತನಯ ಪಂಡಿತನಾಗದೆಂತಸಹ್ಯಾ ||ಜನಕಗಾಗುವಧಾಂಗೆ ಬಾಹ್ಯ ವಸ್ತುಗಳಿಂದ |ಘನ ಪೂಜಿಸಿದರು ಶ್ರೀನಾಥ ಮೆಚ್ಚಾ ೨೨
ತನ್ನ ಮನಿಯೊಳಗಿನ ವಿಚಾರವನು ಬಿಟ್ಟು ಮ- |ತ್ತನ್ಯರಪರಾಧವೆಣಿಸುವನ ತೆರದೀ ||ಚನ್ನಾಗಿ ಈ ಮರ್ಮ ತಿಳಕೊಳ್ಳದೆ ಬಲ್ಲೆನೆಂ- |ದಿನ್ನೊಂದು ಪ್ರಶ್ನ ಮಾಡುವನೆ ಮೂರ್ಖಾ ೨೩
ಹದಿಮೂರು ದ್ವಾರಷ್ಟ, ಪತ್ರಧೋಮುಖವಾದ |ಹೃದಯದ ವಿಚಾರಗಣಿತೆನ್ನ ಮತಿಗೇ ||ಒದಗಿದಷ್ಟೇಳಿಹೆನು ತುಷ್ಟನಾಗನೆ ಶ್ರೀಶ |ವಿದುರಿತ್ತಿ ಪಾಲಿಗೊಲಿದವನಲ್ಲವೇ ೨೪
ಹೃದಯ ಜೀವನ ಶರೀರಹಂಕಾರ ಅಂತರಾತ್ಮ |ಮೊದಲು ಹರಿನಾಮ ಜೀವನೊಳು ತಿಳಿದೂ ||ಮದನನೈಯನ ಪೂಜಿ ಮನದಲ್ಲಿ ಮಾಡಲು ಬಿ- |ಡದೆ ಕಾಯ್ವ ಇಹಪರದಿ ಕರುಣಸಾಂದ್ರಾ ೨೫
ಏನು ಕೊಟ್ಟರು ಒಲ್ಲ ಈ ವಿಚಾರಕೆ ಪ್ರೀಯ |ಧೇನುವಂದದಲೀವ ಬೇಡಿದಿಷ್ಟಾ ||ನಾನರಿಯೆನಿದನಪದ್ಧವ ಕ್ಷಮಿಸುವರು ಬುಧರು |ಶ್ರೀನಾಥ ನುಡಿಸಿದಂದದಿ ಪೇಳಿಹೇ ೨೬
ಶಬರಿ ಗಾಗೇಯ ಕಾಳಿಂಗ ಶಿಶುಪಾಲ ಭೃಗು |ಅಬುಜ ಪ್ರಥಮಾಂಗ ಅಜಮೀಳ ತಾರಾ ||ವಿಬುಧೇಶ ಪ್ರಮುಖರಪರಾಧ ಕ್ಷಮಿಸಿದ ಕೃಪಾ |ಅಬುಧಿ ಯನ್ನಯ ಅಪದ್ಧಗಳೆಣಿಸೊನೇ ೨೭
ಸೂಜಿಯಿಂ ರಣ ಜೈಸಿದಂತೆ ಯನ್ನೀ ಮತಿಗೆ |ರಾಜೀವ ನಯನೊಲಿದು ಪೇಳಿಸಿದನೇ ||ಶ್ರೀ ಜಗನ್ನಾಥರಾಯರ ದಾಸರವನೆಂದು |ಸೋಜಿಗವ ಮಾಡ್ದ ಪ್ರಾಣೇಶ ವಿಠಲಾ ೨೮
ಮಂಗಳಂ ಶಫರ ಕೂರ್ಮ ಕಿಟ ನೃಹರಿ ವಟುರಾಮ |ಮಂಗಳ ಧರಿಜ ರಮಣ ಕೃಷ್ಣ ಬುದ್ಧಾ ||ಮಂಗಳ ಹಯವಹನ ಅನಂತ ಸುಗುಣಾರ್ಣವಗೆ |ಮಂಗಳಂ ಪ್ರಾಣೇಶ ವಿಠ್ಠಲನಿಗೇ೨೯

೨೦೭
ಹೋಗೂವಳಗಸೀಯಾ ಪರಿಯಂತಾ | ಭ್ರಾಂತಳಾಗಿ ಬಂದೆಂಬಳ್ ಸೊಸೆಗೆ ಹೀಗಂತಾ ಪ
ಹರಿಯಾತ್ರಿ ಘೋಹ ಜನರ ಕಂಡು ಬ್ಯಾಗ ಮೈ |ಮರದು ನೋಡುವೆನೆಂಬ ಹರುಷದಿಂದುಬ್ಬೀ ೧
ನೆರಮನಿಯವರಿಗೆ ಮೊರ ಪುಟ್ಟಿ ಗಿದ್ದಾನ |ಯರವು ಎಂದಿಗೂ ಕೊಡದಿರು ಕಂಡ್ಯಾ ಎಂದೂ ೨
ಸುಟ್ಟೀತು ಕೊಳವಿ ಮತ್ತಿಷ್ಟು ಬಾಯಿಲೆ ಊದಿ |ಅಟ್ಟುಣ್ಣು ನಿನ್ನಯ ಹೊಟ್ಟಿಗೇ ಎಂದೂ ೩
ತಪ್ಪತಾರ ತಿಂದು ತಿಪ್ಪಿಘಾಕಲಿ ಬ್ಯಾಡ |ಒಪ್ಪತ್ತೆ ತಿನುತ ಬಾ ಸಪ್ಪಟಿ ಯಂದೂ ೪
ಮಂದಿ ಕಂಡು ದೀಪ ಮಂದಿರಕಿಡಬ್ಯಾಡ |ಮಂದ ತುಟ್ಟ್ಯಾದೀತು ಮುಂದೆಣ್ಣಿ ಎಂದೂ೫
ಸಡಗರದಲಿ ಠಾಂವು ಕೊಡು ಎಂದು ಕೇಳ್ಯಾರು |ಪಡಸಾಲಿಯೊಳು ತಂದು, ಇಡು ಬಾನವೆಂದೂ ೬
ಭಿಕ್ಷಾದವರಿಗೆ ಮಂತ್ರಾಕ್ಷತಿಗಿಲ್ಲೆನ್ನು |ನಾ ಕ್ಷಮಿಸೆ ನೀಡಿದರೆ ಶಿಕ್ಷಿಪೆನೆಂದೂ ೭
ಕುರುಳು ತಾ ಬೆಂಕಿ ಹೊತ್ತಿಸಿ ಕೊಡುವೆನೆಂದು |ಮುರಿದು ಹೊತ್ತಿಸಿಕೊಡು ನೆರೆಯವರಿಗೆಂದೂ ೮
ಹೆತ್ತವರೂರಿಂದ ಹಸ್ತು ಬಂದವರೀಗೆ |ಅತ್ತೆವರೆಯಿಲ್ಲೆಂದು ಉತ್ತರ ಕೊಡೆಂದು ೯
ಬಿಸಿಲಿಗೆ ಹಾಕು ದವಸಗಳ ಮಾಳಿಗಿ ಸಾ |ರಿಸಿ ಕಡ್ಡಿ ಬುಡ್ಡಿಯ ಹಸಮಾಡ್ಯುಣ್ಣೆಂದೂ ೧೦
ಪ್ರಾಣೇಶ ವಿಠಲಾನು ಧೇನಿಸಲಿಲ್ಲಿಹ |ನಾನ್ಯಾಖೋಗಲಿ ಎಂದು ತಾ ನಿಂತಳಬಲೆ೧೧

ಇಂಥಲ್ಲಿರಬೇಕು ಜನ್ಮ ಸಾರ್ಥಕ
೧೯೩
ಇಂಥಲ್ಲಿರಬೇಕು ಜನ್ಮ ಸಾರ್ಥಕ ಮಾಡುವ ನರನೂ |
ಎಂಥೆಂತಲ್ಲೆಂದರೆ ಕೇಳ್ವದು ಸುಜನರು ಪೇಳ್ವೆನದನೂ ಪ
ಭಾಗವತಾದಿ ಪುರಾಣ ಸಾತ್ವಿಕರು ಪೇಳುವ ಸ್ಥಳದಲ್ಲಿ |
ಭಾಗೀರಥಿ ಮೊದಲಾಗಿಹ ಸತ್ತೀರ್ಥಗಳಿಹ ಭೂಮಿಯಲೀ ||
ಯಾಗ ಮಾಡುವಲ್ಲಿ ನಾಗಪಾಲಕನ ಆಲಯವಿದ್ದಲ್ಲೀ |
ಯೋಗಿ ಜನರು ಅಹರ್ನಿಶಿಯಲಿ ಭಗವಧ್ಯಾನ ಮಾಡುವಲ್ಲೀ ೧
ಸತ್ಯ ವಚನವಿದ್ದಲ್ಲಿ, ದುರ್ವಿಷಯ ಬಿಟ್ಟ ಪುರುಷರಲ್ಲೀ |
ಮತ್ತರಾಗದಲೆ ಬ್ರಹ್ಮಚಾರಿ ಮಾತ್ರಕ ನಮಿಸುವರಲ್ಲೀ ||
ವಿತ್ತ ರಾಶಿ ಕಸಕುಪ್ಪಿ ಸಮನೆಂದರಿತು ಇಹರಲ್ಲೀ |
ಮತ್ರ್ಯರಾಶ್ರಯಿಸಿ ಬಂದು ಕಾಲಕುಪಜೀವಿಸದವರಲ್ಲಿ ೨
ತತ್ವವರಿತು ನೋಳ್ಪರಿಗೆ ಹುಚ್ಚರಂದದಿ ಇದ್ದವರಲ್ಲೀ |
ಉತ್ತಮವಾಗಲಿ ಕೆಟ್ಟದೆ ಆಗಲಿ ನಗುತಲೆ ಇಹರಲ್ಲೀ ||
ಕತ್ತಿಯೆ ಮೊದಲಾಗಿಹ ಪ್ರಾಣಿಗಳಲಿ ಸಮ ಕರುಣಿದ್ದಲ್ಲೀ
ಸತ್ಯರಮಣ ಪ್ರಾಣೇಶ ವಿಠ್ಠಲನ ಮೂರ್ತಿ ಕಾಂಬರಲ್ಲೀ ೩

ಹಾಡಿನ ಹೆಸರು :ಇಂಥಲ್ಲಿರಬೇಕು ಜನ್ಮ ಸಾರ್ಥಕ
ಹಾಡಿದವರ ಹೆಸರು :ವಸಂತಾ ಪಿ. ಎಸ್.
ಸಂಗೀತ ನಿರ್ದೇಶಕರು :ವಸಂತಾ ಪಿ. ಎಸ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ವೇದ ಉದ್ಧರಿಸಿದ
೨೪೫
ದೇವರನ್ನು ಹಸೆಗೆ ಕರೆದ ಪದಗಳು
ವೇದ ಉದ್ಧರಿಸೀದಾ ಮತ್ಸ್ಯಾವತಾರನೇ |ಆದಿತ್ಯಾರಿಗೊಲಿದಮೃತ ನೀಡಿದನೇ ||ಮೇದಿನಿಯನು ಪೊತ್ತ ವರಹವತಾರನೆ |ಆ ದೈತ್ಯನಳಿದು ಪ್ರಹ್ಲಾದಗೊಲಿದನೇ ||ಭೂ ದೇವಾ ರೂಪೀ ಹಸಿಗೇಳೂ ೧
ಭೃಗು ಕುಲೋದ್ಭವನೇ ಭೀಷ್ಮನ ಬೆಳಸಿದನೇ |ನಗಜ ರಮಣನ ಕಾರ್ಮೂಕ ಮುರಿದವನೇ ||ಹಗೆಯನಳಿದು ಪಾಂಚಜನ್ಯ ಘಳಿಸಿದನೆ |ಇಗಡ ದೈತ್ಯರ ಬುದ್ಧಿ ಭೇದ ಮಾಡಿದನೇ ||ಅಗಣಿತ ಮಹಿಮಾ ಹಸಿಗೇಳೂ ೨
ಕುದರೀಯೇರಿ ಕುಜನರಾ ಕುಲ ತರಿದವನೇ |ಬುಧರಗೋಸುಗ ಹತ್ತಾವತಾರವಾದವನೇ ||ಸುದರೂಶನ ಶಂಖ ಗದ ಜಲಜ ಧರನೇ |ವಿಧಿಪಿತ ಶ್ರೀ ರಮಣ ಪ್ರಾಣೇಶ ವಿಠ್ಠಲನೆ ||ಸುಧಿಗಡಲಾಲಯನೆ ಹಸಿಗೇಳೂ ೩

ಹಾಡಿನ ಹೆಸರು :ವೇದ ಉದ್ಧರಿಸಿದ
ಹಾಡಿದವರ ಹೆಸರು :ಅಂಬಯ್ಯ ನುಲಿ
ರಾಗ :ಗೋರಖ್ ಕಲ್ಯಾಣ್
ತಾಳ :ಭಜನ್ ಠೇಕಾ
ಸಂಗೀತ ನಿರ್ದೇಶಕರು :ವೆಂಕಟೇಶ ಕುಮಾರ್ ಎಂ.
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಶಿವಭಕ್ತನಾಗೋ ಪ್ರಾಣಿ
೧೩೪
ಶಿವಭಕ್ತನಾಗೋ ಪ್ರಾಣೀ | ಅವನಿಯಲ್ಲಿ ಪರದಲ್ಲಿ ||ವಿವಿಧ ಭೋಗಗಳ ಕಾಂಬೀ | ಶಿವಭಕ್ತನಾಗೊ ಪ್ರಾಣೀ ಪ
ಲಿಂಗಾಧಾರಣ ಮಾಡಿ ಜಂಗಮರಧಿಕಾರಾ ಸಾರೀ |ಹಿಂಗಿಕೊ ಭವಜನ್ನ್ಯ ದುಃಖ ||ಸಂಗಾವಾಗಿ ರುದ್ರಾಕ್ಷಿಯಂಗಾಳರ್ಚಿಸೂತಾ | ನಿಃ ಸಂಗನಾಗೊ ದುರ್ವಿಷಯದೀ ೧
ಸುವಿವೇಕಿ ಮನಸಿಲಿಂದಾ ಶಿವಶಬ್ದವ ಶೋಧಿಸಿ |ಕವಿಗಳ ಮುಖದಿಂದ ತಿಳಿಯೋ ||ನವತ್ರಿಪತ್ರಯುಕ್ತ ಬಿಲ್ವಾ ಸಮರ್ಪಣೆ ಮಾಡೊ |ಸವೆಯಾದಂಥ ಪದವೈದೂವಿ೨
ಭಜಿಸೋ ವೀಭೂತಿಯನ್ನು ದ್ವಿಜಸ್ತೋಮಾಕೆರಗಾದೀರೊ |ಪ್ರಜಗಳಿಗೆ ತೋರದಿರು ಭಾವಾ ||ಅಜ ಪ್ರಾಣೇಶ ವಿಠ್ಠಲಾನು ಅಜಿನಾಂಬರ ಸಮನೆನಬ್ಯಾಡಾ |ವಿಜಯವಂತನಾಗುವೀ ಜಗದೀ ೩

ಹಾಡಿನ ಹೆಸರು :ಶಿವಭಕ್ತನಾಗೋ ಪ್ರಾಣಿ
ಹಾಡಿದವರ ಹೆಸರು :ಸದಾಶಿವ ಪಾಟೀಲ್
ರಾಗ :ದಾನಿ ಮಿಶ್ರ
ತಾಳ :ಭಜನ್ ಠೇಕಾ
ಶೈಲಿ :ಹಿಂದುಸ್ತಾನಿ
ಸಂಗೀತ ನಿರ್ದೇಶಕರು :ವೆಂಕಟೇಶ ಕುಮಾರ್ ಎಂ.
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಹರಿಯನ್ನಬಾರದೆ ಎಲೆ ಮನವೆ
೧೮೪
ಹರಿಯನ್ನಬಾರದೆ, ಎಲೆ ಮನವೆ ಆವಾಗಲೀ |ಮರಳೊಂದು ವಿಷಯದಾಪೇಕ್ಷ ತೊರದೂ ಪ
ಸಂಸಾರವೆಂಬುದು ದುಃಖಸಾಗರವೊ, ಒಂ |ದಂಶವಾದರು ಸುಖವು ಇದರೊಳಿಲ್ಲಾ ||ಹಿಂಸಿಸಿಕೊ ದುರ್ಗುಣವ ಇಂದಿನಾರಭ್ಯ ನಿಃ |ಸಂಶಯದಿ ಸಜ್ಜನರ ಸಂಗ ಪಿಡಿದೂ ೧
ತನುವು ಸ್ಥಿರವಲ್ಲ ದಾನವ ಮಾಡುವದಕರ್ಧ |ಕ್ಷಣ ಮಾತ್ರಕಾಲಸ್ಯ ಮಾಡಸಲ್ಲಾ ||ಧನ ಮನವು ಇದ್ದಾಗೆ ಸತ್ಪಾತ್ರರಿಗೇವೆ ಕೊಡು |ನಿನ ಗತಿಗೆ ಪಾಥೇಯವೆಂದು ತಿಳಿದೂ ೨
ಶ್ರೀಕಾಂತ ಪ್ರಾಣೇಶ ವಿಠಲ ಮೆಚ್ಚೂವಂತೆ |ನೂಕು ದಿನ ಸುಖ ದುಃಖ ಸಮನ ಮಾಡೀ ||ಈ ಕು ನರರನ್ನ ಸೇವಿಸದೆ ಸದ್ಭಕ್ತಿಯಲಿ |ಶ್ರೀಕಾಳಿಕಾಂತನೇ ಮುಖ್ಯ ಗುರುವೆಂದೂ ೩

ಹಾಡಿನ ಹೆಸರು :ಹರಿಯನ್ನಬಾರದೆ ಎಲೆ ಮನವೆ
ಹಾಡಿದವರ ಹೆಸರು :ವಸಂತಾ ಪಿ. ಎಸ್.
ಸಂಗೀತ ನಿರ್ದೇಶಕರು :ವಸಂತಾ ಪಿ. ಎಸ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *