Loading Events

« All Events

  • This event has passed.

ಎಚ್.ಬಿ.ಎಲ್.ರಾವ್

September 20, 2023

೨೦-೯-೧೯೩೩ ಯಕ್ಷಗಾನ ಕಲೆಗೆ ಆಧುನಿಕ ಸ್ಪರ್ಶ ನೀಡಿ ದೇಶ ವಿದೇಶಗಳಿಗೆ ಕೊಂಡೊಯ್ದು ತಲುಪಿಸಿದ ಕೀರ್ತಿ ಶಿವರಾಮ ಕಾರಂತರಿಗೆ ಸಂದರೆ, ದೇಶೀಯ ನೆಲೆಯಲ್ಲಿ ಯಕ್ಷಗಾನಕ್ಕೊಂದು ಸಮರ್ಥ ವೇದಿಕೆ ನಿರ್ಮಿಸಿ ಹೆಸರು ತಂದುಕೊಟ್ಟ ರಾವ್‌ರವರು ಹುಟ್ಟಿದ್ದು ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ. ತಂದೆ ಎಚ್.ಪಿ.ರಾವ್, ತಾಯಿ ಸೀತಾರತ್ನ. ಪ್ರಾರಂಭಿಕ ಶಿಕ್ಷಣ ಹೆಜಮಾಡಿ. ಶಿಕ್ಷಣವನ್ನು ಮುಂದುವರೆಸಲಾಗದೆ ಉದ್ಯೋಗಕ್ಕೆ ಸೇರಿದ್ದು ಬೆಂಗಳೂರು, ಮದರಾಸು ಹೊಟೇಲುಗಳಲ್ಲಿ. ಸಾಹಿತ್ಯ ಮತ್ತು ಯಕ್ಷಗಾನದ ಬಗ್ಗೆ ಚಿಕ್ಕಂದಿನಿಂದಲೂ ಬೆಳೆದ ಒಲವಿನಿಂದ, ಕೆಲಸಕ್ಕೆ ಸೇರಿದ್ದರೂ ಓದಿನೆಡೆಗೆ ಸೆಳೆದ ಮನಸ್ಸು. ಮುಂಬೈ ಸೇರಿದ ರಾವ್‌ರವರಿಗೆ ಕೇಂದ್ರ ಸರಕಾರದ ಎಕ್ಸೈಸ್ ಕಮೀಷನರ್ ಕಚೇರಿಯಲ್ಲಿ ದೊರೆತ ಉದ್ಯೋಗ. ಬೆಳಗಿನ ಉದ್ಯೋಗ, ರಾತ್ರಿ ಶಾಲೆಯಲ್ಲಿ ಕಲಿಕೆ. ತಾವಷ್ಟೇ ಕಲಿತದ್ದಲ್ಲದೆ ೧೫ ವರ್ಷಕಾಲ ರಾತ್ರಿ ಶಾಲೆಯ ಶಿಕ್ಷಕರಾಗಿ ನೂರಾರು ಜನರಿಗೆ ಮಾಡಿದ ವಿದ್ಯಾದಾನ. ಪಡೆದದ್ದು ಸಂಸ್ಕೃತ ಮತ್ತು ತತ್ತ್ವಜ್ಞಾನದಲ್ಲಿ ಎಂ.ಎ. ಪದವಿ. ಮುಂಬೈ ವಿಶ್ವವಿದ್ಯಾಲಯದಿಂದ ಕಾನೂನು ಪದವಿ. ‘ಯಕ್ಷಗಾನ ಕವಿಚರಿತೆ’ ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಲು ಮುಂಬಯಿ ವಿಶ್ವವಿದ್ಯಾಲಯದಲ್ಲಿ ಹೆಸರನ್ನು ನೋಂದಾಯಿಸಿದರೂ ಪದವಿ ಪಡೆಯಲಾಗದ ಅನಿವಾರ‍್ಯತೆ. ಯಕ್ಷಗಾನದ ಬಗ್ಗೆ ಸದಾ ಸಂಶೋಧನ ಮನಸ್ಸು. ಸ್ಥಾಪಿಸಿದ್ದು ‘ಪದವೀಧರ ಯಕ್ಷಗಾನ ಸಮಿತಿ.’ ಯಕ್ಷಗಾನ ಕಲೆಯ ಬಗ್ಗೆ ಜನರಲ್ಲಿ ಅಭಿರುಚಿ ಬೆಳೆಯುವಂತೆ ಹಮ್ಮಿಕೊಂಡ ಹಲವಾರು ಕಾರ‍್ಯಕ್ರಮಗಳು. ಸಮಾನ ಮನಸ್ಕರನ್ನು ಸೇರಿಸಿಕೊಂಡು ಇದುವರೆಗೂ ನಡೆಸಿರುವ ಹತ್ತು ಯಶಸ್ವಿ ಯಕ್ಷಗಾನ ಸಮ್ಮೇಳನಗಳು. ಯಕ್ಷಗಾನ ಕಲಾವಿದರನ್ನು ಕರೆಸಿ ಸನ್ಮಾನ. ವಿದ್ವಾಂಸರಿಂದ ನಡೆಸಿದ ಹಲವಾರು ಶಿಬಿರಗಳು. ರಚಿಸಿದ ಕೃತಿಗಳು ಹಲವಾರು. ಯಕ್ಷಗಾನ ಮುಖವರ್ಣಿಕೆ, ಔರ್ಧ್ವ ದೇಹಿಕ ವಿ, ಶಿವಳ್ಳಿ ಬ್ರಾಹ್ಮಣರು ಭಾಗ-೧, ನಮನ, ಶಿವಳ್ಳಿ ಬ್ರಾಹ್ಮಣರು ಭಾಗ-೨, ಅವಲೋಕನ, ಮುಂಬೈ ಕನ್ನಡಿಗರ ಸಿದ್ಧಿ ಮತ್ತು ಸಾಧನೆ. ಹೀಗೆ ವಿವಿಧ ಪ್ರಕಾರಗಳಲ್ಲಿ ಹಲವಾರು ಕೃತಿರಚನೆ. ರಚಿಸಿದ ಕೃತಿ ಸಂಖ್ಯೆ ೧೦೦ಕ್ಕೂ ಹೆಚ್ಚು. ಎಪ್ಪತ್ತರ ಸಂಭ್ರಮಕ್ಕೆ ಬರೆದು ಪ್ರಕಟಿಸಿದ ಕಾವ್ಯಮಯ ಆತ್ಮವೃತ್ತ ‘ಸಪ್ತ ಛಂದೋಗತಿಯ ಸಪ್ತತಿ ಗೀತೆಗಳು’, ೧೯೯೫ರಲ್ಲಿ ಪ್ರಕಟಿತ. ಸಂದ ಗೌರವ ಪ್ರಶಸ್ತಿಗಳು ಹಲವಾರು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿ, ಹೊರನಾಡ ಕನ್ನಡಿಗರ ಪ್ರಶಸ್ತಿ, ವಿಶ್ವೇಶ್ವರಯ್ಯ ದಶಮಾನೋತ್ಸವ ಪ್ರಶಸ್ತಿ. ಬೆಳಗಾವಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ‘ಕರ್ನಾಟಕ ಸಾಹಿತ್ಯ ಶ್ರೀ’ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿ : ವಸಂತ ಬನ್ನಾಡಿ – ೧೯೫೫

Details

Date:
September 20, 2023
Event Category: