Loading Events

« All Events

  • This event has passed.

ಡಾ. ಡಿ.ಎಸ್‌. ಶಿವಪ್ಪ

October 6, 2023

೦೬.೧೦.೧೯೧೬ ೦೯..೧೯೯೬ ಬೇರೆ ಬೇರೆ ವೃತ್ತಿಯಲ್ಲಿರುವ ಕೆಲ ಕನ್ನಡ ಬರಹಗಾರರು ಕತೆ, ಕಾದಂಬರಿಗಳನ್ನು ರಚಿಸಿ ಕನ್ನಡ ಸಾಹಿತ್ಯಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರೆ ಮತ್ತೆ ಕೆಲವರು ಕನ್ನಡದಲ್ಲಿ ಕೃತಿ ರಚಿಸಿ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಕೊಡುಗೆ ನೀಡಿದವರೂ ಇದ್ದಾರೆ. ಹೀಗೆ ಎರಡನೆಯ ಗುಂಪಿಗೆ ಸೇರಿದ್ದು ವೈದ್ಯಶಾಸ್ತ್ರವನ್ನು ಕನ್ನಡದಲ್ಲಿ ಬೋಧಿಸುವುದು ಅಸಾಧ್ಯವೆನ್ನುತ್ತಿದ್ದುದನ್ನು ಸವಾಲಾಗಿ ಸ್ವೀಕರಿಸಿ, ಕನ್ನಡದಲ್ಲಿ ಬೋಧಿಸಿದ್ದಲ್ಲದೆ ಕೃತಿ ರಚಿಸಿ ಸಾಧನೆ ಮಾಡಿದ ಶಿವಪ್ಪನವರು ಹುಟ್ಟಿದ್ದು ದೊಡ್ಡಬಳ್ಳಾಪುರದಲ್ಲಿ ೧೯೧೬ ರ ಅಕ್ಟೋಬರ್ ೬ ರಂದು. ತಂದೆ ಡಿ.ಎಸ್‌. ಸುಬ್ಬರಾಯಪ್ಪ, ತಾಯಿ ಚೌಡಮ್ಮ. ಮೈಸೂರು ವಿಶ್ವವಿದ್ಯಾಲಯದಿಂದ ವೈದ್ಯ ಪದವಿ ಪಡೆದ ನಂತರ (೧೯೪೩) ದೆಹಲಿಯ ಅಖಿಲ ಭಾರತ ವೈದ್ಯಕೀಯ ಕಾಲೇಜಿನಿಂದ ಔಷಧಿ ಶಾಸ್ತ್ರದಲ್ಲಿ ಪಡೆದ ಎಂ.ಡಿ ಪದವಿ (೧೯೬೨). ಹುಬ್ಬಳ್ಳಿ, ಮೈಸೂರು, ಬೆಂಗಳೂರು, ಮಂಡ್ಯ ಮುಂತಾದೆಡೆಗಳ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ಸಮುದಾಯ ಆರೋಗ್ಯ ರಕ್ಷಣೆಯ ಬಗ್ಗೆ ಕಾಳಜಿ ಹೊಂದಿದ್ದ ಶಿವಪ್ಪನವರು ರೋಗ ಲಕ್ಷಣಗಳನ್ನು ಅರಿಯುವ ಬಗೆ, ಅದರ ಸ್ವರೂಪ, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮ ಮುಂತಾದವುಗಳ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲು ಕನ್ನಡದಲ್ಲಿ ಬರವಣಿಗೆಯನ್ನು ಪ್ರಾರಂಭಿಸಿ ಬರೆದ ಮೊದಲ ಲೇಖನ ಪ್ರಕಟವಾದುದು ಸುಧಾವಾರ ಪತ್ರಿಕೆಯಲ್ಲಿ (೧೯೬೫). ಸುಮಾರು ಮೂವತ್ತು ವರ್ಷಗಳ ಕಾಲ ನಾಡಿನ ಪ್ರಖ್ಯಾತ ಪತ್ರಿಕೆಗಳಿಗೆಲ್ಲಾ ಲೇಖನಗಳನ್ನು ಬರೆದು ಜನರನ್ನು ಎಚ್ಚರಿಸಿದರು. ಬರವಣಿಗೆ ಪ್ರಾರಂಭಿಸಿದ ನಂತರ ತಾವು ಕಂಡ ಸಮಸ್ಯೆಗಳ ನಿವಾರಣೆಗೆ ಇಂಗ್ಲಿಷ್‌, ಲ್ಯಾಟಿನ್‌, ಫ್ರೆಂಚ್‌, ಜರ್ಮನ್‌, ಇಟಲಿ ಮುಂತಾದ ಭಾಷೆಗಳ ಪದಗಳಿಗೆ ಕನ್ನಡದಲ್ಲಿ ಸಮಾನಾಂತರ ಪದವನ್ನು ಸೃಷ್ಟಿಸಿ ಲೇಖನಗಳನ್ನು ಬರೆಯತೊಡಗಿದರು. ಔಷಧಿಗಳಿಗೆ ಸಂಬಂಧಿಸಿದಂತೆ ಬಳಕೆಯಲ್ಲಿದ್ದ ಗ್ರಾಮ್ಯ ಪದಗಳನ್ನೇ ಬಳಸಿ ಕೆಲವೇಳೆ ಹೊಸ ಪದಗಳನ್ನು ಸೃಷ್ಟಿಸಿ, ಕೆಲವಕ್ಕೆ ಹೊಸರೂಪ ಕೊಟ್ಟು ರಚಿಸತೊಡಗಿದರು. ಹೀಗೆ ಇವರ ಇಪ್ಪತ್ತೈದು ವರ್ಷಗಳ ಪರಿಶ್ರಮದ ಫಲವಾಗಿ ರಚಿತಗೊಂಡ ಕೃತಿ ‘ವೈದ್ಯಕ ಪದಗಳ ಹುಟ್ಟು ರಚನೆ’. ವಿದ್ಯಾರ್ಥಿಗಳ ಕೋರಿಕೆಯಂತೆ ಮೊದಲ ಮುದ್ರಣವಾಗಿ ಪ್ರಕಟಗೊಂಡುದು ೧೯೭೩ರಲ್ಲಿ. ನಿರಂತರ ಬೇಡಿಕೆ ಇದ್ದು ಹಲವಾರು ಮುದ್ರಣಗಳನ್ನು ಕಂಡಿದೆ. ಸುಮಾರು ೫೦೦ ಪುಟಗಳ ಈ ಗ್ರಂಥವು ಮೊದಲ ಭಾಗದಲ್ಲಿ ವೈದ್ಯಕ ಪದಗಳ ಹೆಚ್ಚಳಿಕೆ, ವೈದ್ಯಕ ಪದಗಳ ಮೂಲಗಳು, ಹಳಗಾಲದ ಭಾವನೆಗಳ ಉಳಿಕೆ, ವ್ಯುತ್ಪತ್ತಿಯ ಸೂತ್ರಗಳು, ಪದಗಳ ರಚನೆ ಸೂತ್ರಗಳು, ಸಾಮಾನ್ಯ ವೈದ್ಯಕ ಪದಗಳು ಮುಂತಾದ ಅಧ್ಯಾಯಗಳಿಂದ ಕೂಡಿದ್ದರೆ ಎರಡು ಮತ್ತು ಮೂರನೆಯ ಭಾಗದಲ್ಲಿ ಪದಗಳ ವರ್ಗೀಕರಣ, ಪದಗಳ ರಚನೆಗನ್ನಡಿಯಿಂದ ಕೂಡಿದೆ. ಹಲವಾರು ಮಂದಿ ವಿದ್ವಾಂಸರು ಒಂದೆಡೆ ಕುಳಿತು ಮಾಹಿತಿಯನ್ನು ಕ್ರೋಢೀಕರಿಸಿ ಮಾಡಬಹುದಾದ ಕೆಲಸವನ್ನು ಏಕಾಂಗಿಯಾಗಿ ಸಾಧಿಸಿ ತೋರಿಸಿದ್ದಾರೆ. ಶಿವಪ್ಪನವರ ಮತ್ತೊಂದು ಮಹತ್ವದ ಕೃತಿ ಎಂದರೆ ‘ಗುಂಡಿಗೆ ರೋಗದ ಕೈಪಿಡಿ’. ಇದರಲ್ಲಿ ಹೃದಯ ಸಂಬಂಧಿ ಖಾಯಿಲೆಗಳ ಮುನ್ನೆಚ್ಚರಿಕೆ ಕ್ರಮ ಮುಂತಾದವುಗಳನ್ನು ಅತಿ ಸರಳವಾಗಿ ವಿವರಿಸಿದ್ದಾರೆ. ವೈದ್ಯಕೀಯ ಪದಗಳ ನಿಘಂಟು ರಚನೆಯ ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ರಚನೆ, ಇಂಗ್ಲಿಷ್‌ – ಕನ್ನಡ ನಿಘಂಟು ಪರಿಷ್ಕರಣೆ, ನಿರಂಜನರ ಸಂಪಾದಕತ್ವದ ಜ್ಞಾನಗಂಗ್ರೋತ್ರಿಯ ಸಂಪುಟಗಳು, ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶ ಮುಂತಾದ ಬೃಹತ್‌ ಯೋಜನೆಗಳಿಗೂ ಸಹಕಾರ ನೀಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಪ್ರಕಟಣೆಗಳಾದ ಆರೋಗ್ಯಮಾಲೆಯ ಅಡಿಯಲ್ಲಿ ಹದಿನಾರು ಪುಸ್ತಕಗಳನ್ನು ಸಂಪಾದಿಸಿದ್ದಾರೆ. ಡಾ. ಶಿವಪ್ಪನವರ ಭಾಷಾ ಸಾಮರ್ಥ್ಯ, ವ್ಯಾಪಕ ಅಧ್ಯಯನ, ಕನ್ನಡದ ಬಗ್ಗೆ ಇದ್ದ ಒಲವುಗಳನ್ನು ಪ್ರತಿಬಿಂಬಿಸುವ ಕೃತಿ ‘ನುಡಿ – ಕಿಡಿ’ (೧೯೮೪) ನಾ. ಕಸ್ತೂರಿಯವರ ಅನರ್ಥ ಕೋಶದಂತೆ. ೮೨೫ ಪುಟಗಳ ಬೃಹತ್‌ ಸಂಪುಟವು ೧೧೫೦೦ ಪದಗಳಿಂದ ಕೂಡಿದೆ. ಇಂಗ್ಲಿಷ್‌ನ ರೀಡರ್ಸ್ ಡೈಜೆಸ್ಟ್‌ನಲ್ಲಿ ಬರುವ ಕೋಟಬಲ್‌ ಕೋಟ್ಸ್‌ ನಂತಹ ಚತುರೋಕ್ತಿ, ಚುಟುಕಗಳು, ಆಂಬ್ರೋಸ್‌ ಬಿಯರ್ಸ್‌ನ ಡೆವಿಲ್ಸ್‌ ಡಿಕ್ಷನರಿ ಮುಂತಾದ ಹಲವಾರು ಇಂಗ್ಲಿಷ್‌ ಪುಸ್ತಕಗಳಿಂದ ಮೂರು ದಶಕಗಳಿಗೂ ಹೆಚ್ಚುಕಾಲದಿಂದ ಸಂಗ್ರಹಿಸಿದ್ದು, ಕನ್ನಡ ಜಾಯಮಾನಕ್ಕೆ ಹೊಂದುವಂತೆ ಅನುವಾದಿಸಿ, ವಿಷಯಾನುಕ್ರಮವಾಗಿ ವರ್ಗೀಕರಿಸಿ ರಚಿಸಿದ ಕೃತಿ. ಉದಾ: (೧) ಅಂಗಿ – ಸವೆದೂ ಸವೆದೂ ಅರ್ಧವಾದಾಗ ಹೆಂಡತಿ ಆಗುತ್ತದೆ. ೨. ಅಂತಃಪುರ – ಗಂಡನನ್ನು ಹಂಚಿಕೊಳ್ಳುವ ಹೆಂಡತಿಯರ ತಂಡ. ೩. ಅಂತರಾತ್ಮ – ಒಂದು ಸಾವಿರ ಸಾಕ್ಷಿಗಳಿಗೆ ಸಮ. ಇಂತಹ ಒಂದು ಅನರ್ಥ, ಅನ್ಯರ್ಥ, ವಿಡಂಬನೆಯಾರ್ಥದ ಪದಗಳಿಂದ ಕೂಡಿದ ಕೋಶವಾಗಿದೆ. ಇವರ ಮತ್ತೊಂದು ಮಹೋನ್ನತ ಕೃತಿ ಎಂದರೆ ‘ಲಿವಿಂಗ್‌ಥಿಂಗ್ಸ್‌’ ಆಂಗ್ಲ ಕೃತಿಯ ಅನುವಾದ ‘ಜೀವಂತ ಭೂಮಿ’. ಮತ್ತೊಂದು ಅನುವಾದಿತ ಕೃತಿ ‘ಜೀವಂತ ವಸ್ತುಗಳ ಹುಟ್ಟುಗುಣ’. ಚಿತ್ರಕಲೆ, ಫೋಟೋಗ್ರಫಿಯಲ್ಲೂ ಆಸಕ್ತರಾಗಿದ್ದ ಶಿವಪ್ಪನವರು ತಮ್ಮ ಪುಸ್ತಕಗಳಿಗೆ ತಾವೇ ಚಿತ್ರರಚಿಸಿದ್ದಾರೆ. ಹೀಗೆ ವೈದ್ಯಶಾಸ್ತ್ರವನ್ನು ಜನಸಾಮಾನ್ಯರಿಗೂ ತಲುಪಿಸುವಲ್ಲಿ ಶ್ರಮವಹಿಸಿದ ಶಿವಪ್ಪನವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿಯಲ್ಲದೆ ಅನೇಕ ಪ್ರಶಸ್ತಿಗಳು ದೊರೆತಿದ್ದು ವೈದ್ಯಕೀಯ ಲೋಕದಿಂದ ನಿರ್ಗಮಿಸಿದ್ದು ೧೯೯೬ ರ ಸೆಪ್ಟೆಂಬರ್ ೯ ರಂದು.

Details

Date:
October 6, 2023
Event Category: