Loading Events

« All Events

ಪ. ರಾಮಕೃಷ್ಣಶಾಸ್ತ್ರಿ

July 7

..೧೯೫೩ ಗಹನವಾದ ವಿಷಯಗಳನ್ನು ಮಕ್ಕಳಿಗೆ ತಿಳಿಯುವಂತೆ, ಅವರ ಮನಸ್ಸಿಗೆ ಮುಟ್ಟುವಂತೆ ಸರಳವಾಗಿ, ಸುಂದರವಾಗಿ, ಆಕರ್ಷಕ. ಶೈಲಿಯಲ್ಲಿ ನಿರೂಪಿಸುವುದು ಕಷ್ಟದ ಕೆಲಸವೆ. ಆದರೂ ಮಕ್ಕಳ ಮನೋವಿಕಾಸಕ್ಕೆ ಅನುಕೂಲವಾಗುವಂತಹ, ರಂಜನೀಯವಾದ ಮಕ್ಕಳ ಸಾಹಿತ್ಯ ರಚನೆಯಲ್ಲಿ ತೊಡಗಿರುವ ರಾಮಕೃಷ್ಣ ಶಾಸ್ತ್ರಿಯವರು ಹುಟ್ಟಿದ್ದು ೧೯೫೩ರ ಜುಲೈ ೭ರಂದು ದ.ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ. ತಂದೆ ವೆಂಕಟರಮಣ ಶಾಸ್ತ್ರಿ, ತಾಯಿ ಗುಣವತಿ. ಮನೆಯೇ ಪಾಠಶಾಲೆ, ಪ್ರಾರಂಭಿಕ ಶಿಕ್ಷಣ ಮನೆಯಲ್ಲಿಯೆ ಕಲಿತು ನೇರವಾಗಿ ಸೇರಿದ್ದು ನಾಲ್ಕನೆಯ ತರಗತಿಗೆ. ಓದಿದ್ದು ಏಳನೆಯ ತರಗತಿಯವರೆಗೆ ಮಾತ್ರ, ಪುತ್ತೂರಿನ ಬಳಿ ಕಬಕ ಮಾಧ್ಯಮಿಕ ಶಾಲೆಯಲ್ಲಿ. ನಂತರ ಸಾಂಸಾರಿಕ ತೊಂದರೆಯಿಂದ ಕುಟುಂಬ ವಲಸೆ ಬಂದು ನೆಲಸಿದ್ದು ಮಚ್ಚಿನ ಗ್ರಾಮದಲ್ಲಿ. ಓದಿಗೆ ಇದರಿಂದ ತಡೆಯುಂಟಾಗಿ ಅವಲಂಬಿಸಿದ್ದು ಕೃಷಿ. ಆದರೂ ಬಿಡುವಿನ ವೇಳೆಯಲ್ಲಿ ಓದುವುದು, ಬರೆಯುವುದನ್ನೂ ರೂಢಿಸಿಕೊಂಡರು. ಹನ್ನೊಂದನೆಯ ವಯಸ್ಸಿಗೆ ಇವರು ಬರೆದ ಕತೆ ಕೈಲಾಸ ಮಾಸಪತ್ರಿಕೆಯಲ್ಲಿ ಪ್ರಕಟವಾಯಿತು (೧೯೬೪). ಇದರಿಂದ ಉತ್ತೇಜಿತರಾಗಿ ಬರೆದ ಕತೆ, ಕವನ, ಮಕ್ಕಳ ಪದ್ಯಗಳು, ಚುಟುಕ, ವ್ಯಂಗ್ಯ ಚಿತ್ರ ಮುಂತಾದವುಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲೆಲ್ಲಾ ಪ್ರಕಟವಾಗತೊಡಗಿದವು. ಇವರು ಬರೆದ ಕೆಲ ಕಥೆಗಳು ಹಿಂದಿ, ಗುಜರಾತಿ, ತಮಿಳು, ಭಾಷೆಗಳಿಗೂ ಅನುವಾದಗೊಂಡಿವೆ. ಆಕಾಶವಾಣಿಯಲ್ಲಿ ತುಳು ಮತ್ತು ಕನ್ನಡದ ಕಥೆಗಳು ಪ್ರಸಾರವಾಗಿವೆ. ಚೆನ್ನೈನ ದೂರದರ್ಶನದಲ್ಲೂ ಇವರ ಕಥೆಗಳು ಪ್ರಸಾರಗೊಂಡಿವೆ. ಮಹಾರಾಷ್ಟ್ರದ ಕನ್ನಡಶಾಲೆಯ ಆರನೆಯ ಮತ್ತು ಏಳನೆಯ ತರಗತಿಯ ಪಠ್ಯಪುಸ್ತಕದಲ್ಲೂ ಇವರ ಕಥೆಗಳು ಸೇರ್ಪಡೆಯಾಗಿವೆ. ಕರ್ನಾಟಕ ಸರಕಾರದ ಪರಿಸರ ಘೋಷಣೆ ಸ್ಪರ್ಧೆ, ಪ್ರಜಾವಾಣಿ ಮಕ್ಕಳ ಕಥಾ ಸ್ಪರ್ಧೆ, ಮುಂಬೈ ಕರ್ನಾಟಕ ಸಂಘದ ಹಾಸ್ಯಲೇಖನ ಸ್ಫರ್ಧೆ ಮುಂತಾದ ಹಲವಾರು ಸ್ಪರ್ಧೆಗಳಲ್ಲಿ ವಿಜೇತರಾಗಿ ಬಹುಮಾನಗಳಿಸಿದ್ದಾರೆ. ಕೃಷಿಯನ್ನೇ ವೃತ್ತಿಯಾಗಿ ಅವಲಂಬಿಸದ್ದು ಕೃಷಿಕರ ಬದುಕನ್ನು ಹಸನುಗೊಳಿಸಲು ರಘುರಾಮಶೆಟ್ಟರು ಪ್ರಾರಂಭಿಸಿದ ‘ಕೃಷಿಕರ ಸಂಘಟನೆ’ ಪತ್ರಿಕೆಯ ಉಪಸಂಪಾದಕರಾಗಿಯೂ ದುಡಿದಿದ್ದಾರೆ. ಇವರು ಬರೆದ ಮಕ್ಕಳ ಕಥೆ ಸಂಕಲನಗಳು ಹಿಮದ ಹುಡುಗಿ, ಆನೆ ಮತ್ತು ಇರುವೆ, ಚಿನ್ನದ ಸೇಬು, ಚಿನ್ನದ ಗರಿ, ಪ್ರೀತಿಯ ಗುಟ್ಟು, ಹಾಲಿನ ರೊಟ್ಟಿ ಮತ್ತು ಇತರ ಕಥೆಗಳು ಮುಂತಾದ ೨೮ ಸಂಕಲನಗಳು ಪ್ರಕಟಗೊಂಡಿವೆ. ಇವಲ್ಲದೆ ಚೀನಾ ದೇಶದ ಜನಪದ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅಕ್ಷರ ಕಿರಣ ಯೋಜನೆಯಡಿ ನವಸಾಕ್ಷರರಿಗಾಗಿ ದೇವಲೋಕದ ಕುದುರೆ, ವ್ಯಾಪಾರಿ ಸೋತ, ಬದುಕುವ ದಾರಿ, ಬುದ್ಧಿವಂತ ಜಮೀನ್ದಾರ ಮೊದಲಾದ ೯ ಕೃತಿಗಳನ್ನೂ ಪ್ರಕಟಿಸಿದ್ದಾರೆ. ಮಕ್ಕಳಿಗಾಗಿ ರಚಿಸಿದ ವ್ಯಕ್ತಿ ಚಿತ್ರಗಳೆಂದರೆ ಕುದ್ಮಲ್‌ ರಂಗರಾವ್‌, ರಾಮದಾಸ್‌, ಮೊಳಹಳ್ಳಿ ಶಿವರಾಯರು. ಈ ಮೂರು ಕೃತಿಗಳನ್ನೂ ರಾಷ್ಟ್ರೋತ್ಥಾನ ಸಾಹಿತ್ಯದ ಭಾರತ-ಭಾರತಿ ಸಂಪದಕ್ಕಾಗಿ ರಚಿಸಿದ್ದಾರೆ. ಮಹಿಳೆಯರ ಬದುಕನ್ನು ಉತ್ತಮ ಪಡಿಸಲು ರಚಿಸಿದ ಕೃತಿಗಳೆಂದರೆ ಸುಂದರ ಬದುಕಿಗೆ ಒಂದಷ್ಟು ಸೂತ್ರಗಳು, ಶೌಚಾಲಾಯ-ಆರೋಗ್ಯ ಮಾತೆಗಿದು ದೇವಾಲಯ, ಉತ್ತಮ ಆರೋಗ್ಯಕ್ಕೆ ಅಂದದ ಕೈದೋಟ ಮುಂತಾದ ಕೃತಿಗಳನ್ನೂ ರಚಿಸಿದ್ದು ಮಹಿಳೆಯರಲ್ಲಿ ಆರೋಗ್ಯದ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಪ್ರೌಢರಿಗಾಗಿ ಬರೆದ ಕಥೆಗಳ ಸಂಕಲನಗಳೆಂರೆ ‘ಬದುಕು’ ಮತ್ತು ‘ಚಿತ್ರಚೋರ’ ಹಾಗೂ ಎರಡು ಹಾಸ್ಯ ಲೇಖನ ಸಂಕಲನಗಳಾದ ಎಂಕ್ಟೇಸಿಯ ಸಂಕಟ ಮತ್ತು ಸನ್ಮಾನ ಪ್ರಸಂಗ ಮತ್ತು ಇತರ ಹಾಸ್ಯಲೇಖನಗಳು. ತುಳು ಭಾಷೆಯಲ್ಲಿ ರಚಿಸಿದ ಕಾದಂಬರಿ ಪುದ್ವಾರು. ದ. ಕನ್ನಡ ಜಿಲ್ಲೆಯವರಿಗಾಗಿಯೇ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮೀಸಲಾಗಿಟ್ಟಿರುವ ಜಿ.ಪಿ.ರಾಜರತ್ನಂ ಪ್ರಶಸ್ತಿ, ದ.ಕ.ಜಿಲ್ಲಾ ಮಕ್ಕಳ ಸಾಹಿತ್ಯ ಪ್ರಶಸ್ತಿ, ಅಖಿಲ ಕರ್ನಾಟಕ ಮಕ್ಕಳ ಮೇಳದ ಪ್ರಶಸ್ತಿ ತುಳು ಕಾದಂಬರಿಗಾಗಿ ಫಣಿಯಾಡಿ ಪ್ರಶಸ್ತಿ, ಆಶಾ ಸಾಲಿಯಾನ್‌ ಪ್ರತಿಷ್ಠಾನ ಪ್ರಶಸ್ತಿ, ತುಳುಪ್ರಶಸ್ತಿ, ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ತಾಲ್ಲೂಕು ಸಾಹಿತ್ಯ ಪರಿಷತ್‌ ಪ್ರಶಸ್ತಿ, ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನ, ಚುಟುಕು ಸಾಹಿತ್ಯ ಸಮ್ಮೇಳನಗಳಲ್ಲಿ ಗೋಷ್ಠಿಯ ಅಧ್ಯಕ್ಷತೆ ಮುಂತಾದ ಗೌರವಗಳು ಸಂದಿವೆ. ಶೈಕ್ಷಣಿಕವಾಗಿ ಯಾವ ಉನ್ನತ ಮಟ್ಟದ ವಿದ್ಯಾಭ್ಯಾಸವಿಲ್ಲದಿದ್ದರೂ ಮಕ್ಕಳ ಮನಸ್ಸನ್ನರಿತು, ಮಕ್ಕಳಿಗೆ ಮುದಕೊಡುವ ಸಾಹಿತ್ಯ ರಚನೆಯಲ್ಲಿ ತೊಡಗಿದ್ದು ಸುಮಾರು ನಲವತ್ತಕ್ಕೂ ಹೆಚ್ಚು ಕೃತಿ ರಚಿಸಿದ್ದು. ಇವರು ವಿವಿಧ ಪತ್ರಿಕೆಗಳಿಗೆ ಬರೆದ ಲೇಖನಗಳ ಸಂಖ್ಯೆಯೇ ಸುಮಾರು ೭೫೦೦ ಕ್ಕೂ ಹೆಚ್ಚು!

Details

Date:
July 7
Event Category: