Categories
ವಚನಗಳು / Vachanagalu

ಚಿನ್ಮಯ ಜ್ಞಾನಿ ಚೆನ್ನಬಸವಣ್ಣ ವಚನಗಳು

ಕಾಯ ಒಂದು, ಪ್ರಾಣ ಒಂದು, ಭಾವ ಒಂದು,
ನಿರ್ಭಾವ ಒಂದು,
ಒಂದಲ್ಲದೆ ಎರಡುಂಟೆ ?
ಗುರು ಒಂದು, ಲಿಂಗ ಒಂದು, ಉಪದೇಶ ಒಂದು.
ಕೂಡಲಚೆನ್ನಸಂಗಯ್ಯನ ಶರಣ ಬಸವಣ್ಣನ ಗರುಡಿಯಲ್ಲಿ
ಇಬ್ಬರಿಗೆಯೂ ಅಭ್ಯಾಸ ಒಂದೆ ಕಾಣಾ ಪ್ರಭುವೆ/501
ಕಾಯ ಗುರು, ಪ್ರಾಣ ಲಿಂಗ, ಜ್ಞಾನ ಜಂಗಮ,
ಕಾಯದಲ್ಲಿ ಶುದ್ಧಪ್ರಸಾದ, ಪ್ರಾಣದಲ್ಲಿ ಸಿದ್ಧಪ್ರಸಾದ,
ಜ್ಞಾನದಲ್ಲಿ ಪ್ರಸಿದ್ಧಪ್ರಸಾದ.
ಈ ತ್ರಿವಿಧಪ್ರಸಾದ ನಿರ್ಣಯ ಕೂಡಲಚೆನ್ನಸಂಗಾ
ನಿಮ್ಮ ಶರಣಂಗೆ. /502
ಕಾಯ ಜೀವವಾಗಿ, ಜೀವ ಕಾಯವಾಗಿ
ಕಾಯ ಜೀವವ ಮುಟ್ಟದು, ಜೀವ ಕಾಯವ ಮುಟ್ಟದು,
ಸಂಬಂಧಸಂಭ್ರಮವಡಗದು,
ಲಿಂಗವಮುಟ್ಟದು, ಪ್ರಾಣವಗಲದು,
ಪ್ರಾಣಲಿಂಗವ ತೊರೆದು ಪ್ರಸಾದವಿನ್ನೆಲ್ಲಿಯದೋ,
ವಾಯಕ್ಕೆ ವಾಯ! ಕೂಡಲಚೆನ್ನಸಂಗನೆಂಬುದು ವಾಯ./503
ಕಾಯ ಪ್ರಸಾದ ಒಂದೆಡೆಯಲ್ಲಿ,
ಜೀವ ಪ್ರಸಾದ ಒಂದೆಡೆಯಲ್ಲಿ,
ವ್ಯಾಪಾರ ಪ್ರಸಾದ ಒಂದೆಡೆಯಲ್ಲಿ,
ಪ್ರಸಾದಿ ಪ್ರಸಾದವನೆ ಪತಿಕರಿಸಿಕೊಂಡಿಪ್ಪ.
ಓಗರ ಪ್ರಸಾದವೆಂಬ ಸಂಕಲ್ಪವಿರಹಿತ ಪ್ರಸಾದಿ,
ಭ್ರಾಂತು ಸೂತಕವಳಿದುಳಿದ ಪ್ರಸಾದಿ,
ಕೂಡಲಚೆನ್ನಸಂಗನಲ್ಲಿ ತಾನೆ ಪ್ರಸಾದಿ/504
ಕಾಯ ಪ್ರಸಾದವೊ, ಜೀವ ಪ್ರಸಾದವೊ, ಪ್ರಾಣ ಪ್ರಸಾದವೊ?
ಬಲ್ಲವರು ನೀವು ಹೇಳಿರೆ.
ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದವೆಂದು ಹೆಸರಿಟ್ಟುಕೊಂಡು ಕರೆವಿರಿ,
ಕಾಯವ ಕಳೆದು ಕಾಯಪ್ರಸಾದವೊ,
ಜೀವವ ಕಳೆದು ಜೀವಪ್ರಸಾದವೊ,
ಪ್ರಾಣವ ಕಳೆದು ಪ್ರಾಣಪ್ರಸಾದವೊ?
ಇಂತಿವನುತ್ತರಿಸಿದ ಮಹಾಪ್ರಸಾದವನಲ್ಲದೆ ಕೊಳ್ಳೆ.
ರಂಜಕಪ್ರಸಾದಕಾನಂಜುವೆ ಕೂಡಲಚೆನ್ನಸಂಗಮದೇವಾ,/505
ಕಾಯ ಬ್ರಹ್ಮಚಾರಿಯಾದಡೇನಯ್ಯಾ,
ಆಸೆ ಬ್ರಹ್ಮಚಾರಿಯಾಗದನ್ನಕ್ಕರ ?
ಶಬ್ದ ಮೌನಿಯಾದಡೇನಯ್ಯಾ,
ನೆನಹು ಮೌನಿಯಾಗದನ್ನಕ್ಕರ ?
ತನು ಬೋಳಾದಡೇನಯ್ಯಾ, ಮನ ಬೋಳಾಗದನ್ನಕ್ಕರ ?
ಇದು ಕಾರಣ- ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣಸ್ಥಲವಾರಿಗೆಯೂ ಅಳವಡದು/506
ಕಾಯ ಮೇಖಳೆಯಾಗಿ, ಪ್ರಾಣ ಲಿಂಗವಾಗಿ,
ಭಾವ ಭಾವಿಸುತ್ತಿದ್ದಿತ್ತು ನೋಡಾ !
ದೇಹೋ ದೇವಾಲಯಃಪ್ರೋಕ್ತೋ ಜೀವೋ ದೇವಃ ಸದಾಶಿವಃ
ತ್ಯಜೇದಜ್ಞಾನನಿರ್ಮಾಲ್ಯಂ ಸೋಡಿಹಂಭಾವೇನ ಪೂಜಯೇತ್
ಎಂದುದಾಗಿ-ಇದು ಕಾರಣ ಕೂಡಲಚೆನ್ನಸಂಗಯ್ಯ.
ಮಹವ ನುಂಗಿದ ಮಹಂತನ ಬೆರಗು./507
ಕಾಯ ಲಿಂಗವ ಮುಟ್ಟಿದರೆ, ಕಾಯ ಲಿಂಗಭಕ್ತನಾಗಿರಬೇಕು.
ನಯನ ಲಿಂಗವ ಮುಟ್ಟಿದರೆ, ನಯನ ಲಿಂಗಭಕ್ತನಾಗಿರಬೇಕು.
ಶ್ರೋತ್ರ ಲಿಂಗವ ಮುಟ್ಟಿದರೆ, ಶ್ರೋತ್ರ ಲಿಂಗಭಕ್ತನಾಗಿರಬೇಕು.
ಭಾವ ಲಿಂಗವ ಮುಟ್ಟಿದರೆ, ಭಾವ ಲಿಂಗಭಕ್ತನಾಗಿರಬೇಕು.
ಇದು ಕಾರಣ ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣ ಸರ್ವಜೀವದಯಾಪಾರಿಯಾಗಿರಬೇಕು. /508
ಕಾಯ ವಿಕಾರವಳಿದಲ್ಲದೆ ಮಾಯವಿಕಾರವಳಿಯದು
ಮಾಯವಿಕಾರವಳಿದಲ್ಲದೆ ಭವನಾಶವಾಗದು.
ಭವನಾಶವಾದಲ್ಲದೆ ಲಿಂಗಸಂಬಂಧವಳವಡದು
ಲಿಂಗಸಂಬಂಧವಳವಟ್ಟಲ್ಲದೆ ಸುಖವು ಸಾಧ್ಯವಾಗದು.
ಪರಮಸುಖಪರಿಣಾಮಕ್ಕೆ ಮಹಾನುಭಾವಿನಗಳ ಸಂಗವೆ ಬೇಕು.
ಮಹಾನುಭಾವಿಗಳ ಸಂಗದಿಂದಲ್ಲದೆ ವಿಶ್ರಾಮವಿಲ್ಲಫ
ಮಹಾನುಭಾವಸ್ವಾಯತವಿಲ್ಲದ ಸಮಾಧಾನಸಂಬಂಧವನೆನ್ನದೆನ್ನಬಹುದೆ ?
ಘನಮನವೇದಿಸಿ ಆದಿಯನಾದಿಯನೊಳಕೊಂಡು
ಆಧಾರವಿಲ್ಲದ ನಿಲವು ಸಾಧ್ಯವಾಯಿತ್ತು ನೋಡಾ.
ಕೂಡಲಚೆನ್ನಸಂಗನಶರಣ ಪ್ರಭುದೇವರು ಅಜಾತನೆಂಬ ಭೇದವೆನಗಿಂದು
ಕಾಣಬಂದಿತ್ತು. /509
ಕಾಯ ವಿರೊಧಿ ಸ್ಪರ್ಶನ, ಭಾವ ವಿರೋಧಿ ದರ್ಶನ,
ರುಚಿ ವಿರೋಧಿ ಪ್ರಸಾದಿ.
ಕೂಡಲಚೆನ್ನಸಂಗಾ
ನಿಮ್ಮ ಶರಣನ ಕಾಯ ಲಿಂಗಕ್ಕೆ ಓಗರವಾಯಿತ್ತು./510
ಕಾಯ ಸಂಮೋಹಿನಿಯನು ಲಾಂಛನಧಾರಿಯೆಂಬೆ,
ಜೀವ ಸಂಮೋಹಿಯನು ಸಂಸಾರಿಯೆಂಬೆ,
ಭಾವ ಸಂಮೋಹಿಯನು ಅಜ್ಞಾನಿಯೆಂಬೆ,
ಮಿಗೆ ಮಿಗೆ ಮೀಸಲು ಸಹಜ ಶರಣನ ಕೂಡಲಚೆನ್ನಸಂಗನೆಂಬೆ./511
ಕಾಯ-ಕರಣ-ಭಾವಾಷರ್ಿತ ಭೇದದಿಂದ
ಪ್ರಸಾದಿಯ ನಿಜಸ್ಥಲ.
ತನ್ನ ಲಿಂಗಕ್ಕೆಂದು ಬಂದ ಪದಾರ್ಥದ ರೂಪ ಕಂಡು
ಸಂತೋಷಿಸುವಾತನೆ ಪ್ರಸಾದಿ.
ಬಂದುದು ಪದಾರ್ಥ, ಸಂದುದು ಪ್ರಸಾದ, ನಿಂದುದು ಕಿಲ್ಬಿಷ,
ಕೂಡಲಚೆನ್ನಸಂಗಮದೇವಾ/512
ಕಾಯಕಲ್ಪಿತದಿಂದ ಭೋಗಾದಿ ಭೋಗಂಗಳ ಭೋಗಿಸಬಲ್ಲಡೆ
ದೇವಲೋಕವೆ ಸರ್ವತಃ
ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯ ಇಂತೀ ಚತುರ್ವಿಧವನೆ ಮೀರಿ
ಶಿವನ ಶ್ರೀಪಾದದಲ್ಲಿ ಇರಬಲ್ಲಡೆ ಕೈಲಾಸವೆ ಕಲ್ಯಾಣ
ಲಿಂಗವೆ ತಾನು, ತಾನೆ ಲಿಂಗವಾಗಿರಬಲ್ಲ ಅಸಮಯೋಗಿ
ಸಿದ್ಧರಾಮಯ್ಯದೇವರ ಶ್ರೀಪಾದದಲ್ಲಿ ಎಂದಿಪ್ಪೆ ಹೇಳಾ ಪ್ರಭುವೆ ?
ಕೂಡಲಚೆನ್ನಸಂಗಮದೇವಾ/513
ಕಾಯಕ್ಲೇಶದಿಂದ ತನುಮನ ಬಳಲಿ ಧನವ ಗಳಿಸಿ
ಗುರುಲಿಂಗಜಂಗಮಕ್ಕೆ ವೆಚ್ಚಿಸಿ
ದಾಸೋಹವ ಮಾಡುವ ಭಕ್ತನ ಪಾದವ ತೋರಯ್ಯಾ, ನಿಮ್ಮ ಧರ್ಮ.
ಅದೇಕೆಂದಡೆ; ಆತನ ತನು ಶುದ್ಧ ಆತನ ಮನ ಶುದ್ಧ.
ಆತನ ನಡೆ ನುಡಿ ಪಾವನ.
ಆತಂಗೆ ಉಪದೇಶವ ಮಾಡಿದ ಗುರು ನಿರಂಜನ ನಿರಾಮಯ.
ಅಂತಹ ಭಕ್ತನ ಕಾಯವೆ ಕೈಲಾಸವೆಂದು ಹೊಕ್ಕು
ಲಿಂಗಾರ್ಚನೆಯ ಕಾಡುವ ಜಂಗಮ ಜಗತ್ಪಾವನ.
ಇಂತಿವರಿಗೆ ನಮೋ ನಮೋ ಎಂಬೆ ಕೂಡಲಚೆನ್ನಸಂಗಯ್ಯ/514
ಕಾಯದ ಕಳವಳದಲ್ಲಿ ಹುಟ್ಟಿ, ಸಂಸಾರವನೆ ವೇದಿಸಿ,
ವಿಷಯಂಗಳ ಕೊಂಡಾಡುವರಂತಿರಲಿ.
ಬ್ರಹ್ಮಜ್ಞಾನವನೆ ಪೂರಯಿಸಿ ಭಾವವಂತರೆನಿಸಿ,
ಲಿಂಗ ಮುಖವರಿಯದವರಂತಿರಲಿ.
ತನುವ ತೊರೆದು [ಮನೋಮಧ್ಯದೊಳಗೆ]
ಕಾಲವಂಚಕರಾದವರಂತಿರಲಿ,
ಕೂಡಲಚೆನ್ನಸಂಗಯ್ಯನ ನಿಲವನರಿಯದ
ಅಂಗರುಚಿಗಳವರಂತಿರಲಿ. /515
ಕಾಯದ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ.
ಭಾವದ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ.
ನೇತ್ರದ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ
ಶ್ರತ್ರದ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ.
ಘ್ರಾಣದ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ.
ಜಿಹ್ವೆಯ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ.
ಸ್ಪರ್ಶನದ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ.
ಲಿಂಗಮಧ್ಯೇ ಶರಣ, ಶರಣಮಧ್ಯೇ ಲಿಂಗ.
ಅಲ್ಲಲ್ಲಿ ತಾಗಿದ ಸುಖವೆಲ್ಲ ಲಿಂಗಾರ್ಪಿತವಾಗದಿದ್ದಡೆ
ಕೂಡಲಚೆನ್ನಸಂಗಯ್ಯನಲ್ಲಿ ಅವರ ಸಹಜರೆಂತೆಂಬೆ ? /516
ಕಾಯದ ಕೊನೆಯ ಮೊನೆಯ ಮೇಲಣ ಲಿಂಗವ
[ಇಷ್ಟ]ಲಿಂಗವೆಂದು ಪೂಜಿಸುವರು
ಜೀವದ ಕೊನೆಯ ಮೊನೆಯ ಮೇಲಣ ಲಿಂಗವ ಪ್ರಾಣಲಿಂಗವೆಂದೆಂಬರು,
ಭಾವದ ಕೊನೆಯ ಮೊನೆಯ ಮೇಲಣ ಲಿಂಗವ
[ಭಾವ]ಲಿಂಗವೆಂದು ಪೂಜಿಸುವರು.
ಕಾಯ ಲಿಂಗವೆಂದು ಪೂಜಿಸುವ ಖಂಡಿತರನೇನೆಂಬೆ ?
ಜೀವ ಲಿಂಗವೆಂದು ಪೂಜಿಸುವ ಉಪಜೀವಿಗಳನೇನೆಂಬೆ ?
ಭಾವ ಲಿಂಗವೆಂದು ಪೂಜಿಸುವ ಭ್ರಮಿತರನೇನೆಂಬೆ ?
ಕಾಯ ಲಿಂಗವೇ ? ಅಲ್ಲ, ಜೀವ ಲಿಂಗವೇ ? ಅಲ್ಲ, ಭಾವ ಲಿಂಗವೇ ?
ಅಲ್ಲ, ಅದೃಶ್ಯಭಾವನಾ ನಾಸ್ತಿ ದೃಶ್ಯಮೇವ ವಿನಶ್ಯತಿ
ಅವರ್ಣಮಕ್ಷರಂ ಬ್ರಹ್ಮ ಕಥಂ ಧ್ಯಾಯಂತಿ ಯೋಗಿನಃ
ಎಂದುದಾಗಿ- ಇಷ್ಟಲಿಂಗವ ಪೂಜಿಸಿ ದೃಷ್ಟಲಿಂಗದಲ್ಲಿ ನೆರೆಯಬಲ್ಲರೆ
ಕೂಡಲಚೆನ್ನಸಂಗಯ್ಯಾ, ಅವರ ಸರ್ವಾಂಗಲಿಂಗಿಗಳೆಂಬೆನು/517
ಕಾಯದ ಪೂರ್ವಾಶ್ರಯ ಶ್ರೀಗುರುವಿನಿಂದ ಹೋಯಿತ್ತು;
ಲಿಂಗದಿಂದ ಹೋ[ಗ]ದು.
ಇಂದ್ರಿಯದ ಪೂರ್ವಾಶ್ರಯ ಶ್ರೀಗುರುವಿನಿಂದ ಹೋಯಿತ್ತು;
ಲಿಂಗದಿಂದ ಹೋಗದು.
ತನ್ನಿಂದಲೇ (ಅಹುದು), ತನ್ನಿಂದಲೇ ಹೋಹುದು.
ಕಾಲಚಕ್ರ ಕರ್ಮಚಕ್ರ ನಾದಚಕ್ರ ಬಿಂದುಚಕ್ರವುಳ್ಳನ್ನಕ್ಕರ,
ಕೂಡಲಚೆನ್ನಸಂಗನಲ್ಲಿ ಶರಣನೆನಿಸಲು ಬಾರದು. /518
ಕಾಯದ ಸಡಗರ ಸಂಭ್ರಮ[ದ] ಬಲೆಯಲ್ಲಿ ಸಿಲುಕಿಸಿದಿರೆನ್ನುವನು.
ಆನೆಂತು ಬಲ್ಲೆನೆಂದರೆ, ಪ್ರಾಣದ ಮೇಲೆ ಲಿಂಗಪ್ರತಿಷ್ಠೆಯ ಮಾಡಿ
ಬಲೆಯಲ್ಲಿ ಸಿಲುಕಿಸಿದಿರಿ.
ಇದು ಕಾರಣ ಸ್ವಾನುಭಾವರನರಸಲೇ ಬೇಕು,
ಕೂಡಲಚೆನ್ನಸಂಗಾ ನಿಮ್ಮ ಶರಣನು. /519
ಕಾಯದಲ್ಲಿ ಲಿಂಗೈಕ್ಯವೇ ? ಅಲ್ಲ.
ಜೀವದಲ್ಲಿ ಲಿಂಗೈಕ್ಯವೇ ? ಅಲ್ಲ.
ಭಾವದಲ್ಲಿ ಲಿಂಗೈಕ್ಯವೇ ? ಅಲ್ಲ.
ಇಂತೀ ತ್ರಿವಿಧ ಲಿಂಗೈಕ್ಯವೇ ? ಅಲ್ಲ.
ಮತ್ತೆಯೂ ಲಿಂಗೈಕ್ಯವೇ ಬೇಕು,
ಕೂಡಲಚೆನ್ನಸಂಗಮದೇವಾ. /520
ಕಾಯದಲ್ಲಿ ಸಾರಿಪ್ಪ ಕಾಯ ಕಾಯಸಂಸಾರಿ,
ಲಿಂಗದಲ್ಲಿ ಸಾರಿಪ್ಪ ಕಾಯ ಲಿಂಗಸಂಸಾರಿ.
ಈ ದ್ವಿವಿಧ ಸಂಬಂದಿಯ ಭೇದವ ಭೇದಿಸಿ ಕಳೆದು ಕೂಡಲಚೆನ್ನಸಂಗಾ ಲಿಂಗೈಕ್ಯವು./521
ಕಾಯದಿಂದ ಲಿಂಗದರುಶನ, ಕಾಯದಿಂದ ಜಂಗಮ ದರುಶನ,
ಕಾಯದಿಂದ ಪ್ರಸಾದಸಂಪತ್ತು.
ಕೂಡಲಚೆನ್ನಸಂಗಯ್ಯಾ
ಆ ಕಾಯದಲ್ಲಿ ನಿಮ್ಮುವ ಕಂಡೆನಯ್ಯಾ. /522
ಕಾಯದಿಂದ ಲಿಂಗೈಕ್ಯವಾದೆವೆಂಬರು,
ಜೀವದಿಂದ ಲಿಂಗೈಕ್ಯವಾದೆವೆಂಬರು,
ಸುಷುಮ್ನನಾಳದ ಭೇದವನರಿಯರು,
ವಿಷಯದಲ್ಲಿ ಗಸಣಿಗೊಂಬರು,
ಅಂತರಂಗಶುದ್ಧಿಯನವರೆತ್ತಬಲ್ಲರು ಕೂಡಲಚೆನ್ನಸಂಗಮದೇವಾ ?/523
ಕಾಯದೊಳಗೆ ಕಾಯವಾಗಿರ್ದೆಯಲ್ಲಾ ಹಂಸಾ,
ಸಂಸಾರ ಮಾಯಾಪಾಶವ ಬಿಡಲಾರದೆ ಡಿಂಭವ ನಚ್ಚಿ ಕೆಟ್ಟೆಯಲ್ಲಾ ಹಂಸಾ.
ಜೀವ ಶೂನ್ಯವಾಗಿ
ಕೂಡಲಚೆನ್ನಸಂಗನ ಶರಣರು ಹೋಹರು. /524
ಕಾಯಪಲ್ಲಟದ ಹೆಸರಲ್ಲಿ ಅನುಮಿಷನಲ್ಲಮನಾಗಿ
ತನ್ನ ಲಿಂಗವ ತಾನೆ ಮತ್ರ್ಯಕ್ಕೆ ತಂದ.
ಕಾಯಪಲ್ಲಟದ ಹೆಸರಲ್ಲದೆ ನಹೆಸರಲ್ಲಿಳಫ ಪಾಲಸ್ತ್ಯನು
ಸಕಳೇಶ್ವರ ಮಾದಿರಾಜನಾಗಿ
ತನ್ನ ಲಿಂಗವ ತಾನೆ ಮತ್ರ್ಯಕ್ಕೆ ತಂದ.
ಕಾಯಪಲ್ಲಟದ ಹೆಸರಲ್ಲದೆನಹೆಸರಲ್ಲಿಳಫ ವಿಷ್ಣು ದಶಾವತಾರಕ್ಕೆ ಬಂದು ಸಿಕ್ಕಿದ
ಸಿದ್ಧರಾಮಯ್ಯನಾಗಿ
ತನ್ನ ದಿವ್ಯದೇಹವ ತಾನೆ ಮತ್ರ್ಯಕ್ಕೆ ತಂದ.
ಇದು ಕಾರಣ- ಕೂಡಲಚೆನ್ನಸಂಗಯ್ಯನಲ್ಲಿ
ಶರಣನ ಉಪಮಿಸಬಾರದು, ಉಪಮಾತೀತನು/525
ಕಾಯಪುರವೆಂಬ ಪಟ್ಟಣದೊಳಗೆ;
ಮನವೆಂಬ ಅರಸು, ತ್ರಿಗುಣವೆಂಬ ಪ್ರಧಾನರು,
ವಶೀಕರಣವೆಂಬ ಸೇನಬೋವ
ಸಂಚಲವೆಂಬ ತೇಜಿ, ಅಷ್ಟಮದವೆಂಬ ಆನೆ,
ಈರೈದು (ಮನ್ನೆಯ) ನಾಯಕರು, ಇಪ್ಪತ್ತೈದು ಪ್ರಜೆ,
ನೂರನಾಲ್ವತ್ತೆಂಟು ದೇಹವಿಕಾರವೆಂಬ ಪರಿವಾರ,
ಈ ಸಂಭ್ರಮದಲ್ಲಿ ಮನೋರಾಜ್ಯಂಗೆಯ್ಯುತ್ತಿರಲು-
ಇತ್ತ ಶೂನ್ಯವೆಂಬ ಪಟ್ಟಣದೊಳಗೆ ಅನಾಮಿಕನೆಂಬ ಲಿಂಗದರಸು,
ಅಜಾತನೆಂಬ ಶರಣ ಪ್ರಧಾನಿ
ಪ್ರಪಂಚವೆಂಬ ದಳ ಮುರಿದು ಮೂವರಾಟ ಕೆಟ್ಟಿತ್ತು,
ಅರಸು ಕೂಡಲಚೆನ್ನಸಂಗಯ್ಯನು, ಒಲಿದ ಕಾರಣ./526
ಕಾಯಪ್ರಸಾದ ಒಂದೆಡೆಯಲ್ಲಿ, ಜೀವಪ್ರಸಾದ ಒಂದೆಡೆಯಲ್ಲಿ,
ವ್ಯಾಪಾರ ಪ್ರಸಾದ ಒಂದೆಡೆಯಲ್ಲಿ, ನಿತ್ಯಪ್ರಸಾದ ಒಂದೆಡೆಯಲ್ಲಿ,
ವಚನಪ್ರಸಾದ ಒಂದೆಡೆಯಲ್ಲಿ, ಅರ್ಥ ಪ್ರಾಣ ಅಬಿಮಾನ ಒಂದೆಡೆಯಲ್ಲಿ,
ಅಖಂಡಿತವೆನಿಸಿ ತಾ ಲಿಂಗಪ್ರಸಾದ ಒಂದೆಡೆಯಲ್ಲಿ.
ಇಂತಿವೆಲ್ಲವೂ ಏಕವಾದ ಪ್ರಸಾದಿಯ ಪ್ರಸಾದದಿಂದ
ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿಯಾದೆನಯ್ಯಾ./527
ಕಾಯವರ್ಜಿತರ ಕಂಡೆನಯ್ಯಾ,
ಜೀವವರ್ಜಿತರ ಕಂಡೆನಯ್ಯಾ,
ಈ ಉಭಯ ವರ್ಜಿತರ ಕಂಡೆನಯ್ಯಾ
ಕೂಡಲಚೆನ್ನಸಂಗಮದೇವಯ್ಯಾ
ಅಲ್ಲಮನಂತಪ್ಪವರನಾರನೂ ಕಾಣೆನಯ್ಯಾ ! /528
ಕಾಯವಳಿದಡೇನು ? ಕಾಯ ಉಳಿದಡೇನು ?
ಕಾಯ ಬಯಲಾದಡೇನು ?
ಮನ ಮನ ಲಯವಾಗಿ ಘನಕ್ಕೆ ಘನವಾದ ಶರಣರ ಕಂಡಡೆ,
ಕೂಡಲಚೆನ್ನಸಂಗಮನೆಂದು ಶಬುದ ಮುಗದವಾಗಿರಬೇಕಲ್ಲದೆ,
ಚೋದ್ಯಕ್ಕೆ ಕಾರಣವೇನು ಹೇಳಾ ಸಂಗನಬಸವಣ್ಣಾ ?/529
ಕಾಯವಿಡಿದು ಭಕ್ತಿಯ ಮಾಡುವರಲ್ಲದೆ,
ಭಕ್ತಿವಿಡಿದು ಭಕ್ತಿಯ ಮಾಡುವರಾರೂ ಇಲ್ಲ.
ಅರ್ಪಿತವಂತಿರಲಿ ಅನರ್ಪಿತವೆ ಲೇಸು.
ಕೂಡಲಚೆನ್ನಸಂಗಯ್ಯನಲ್ಲಿ
ಬಸವಣ್ಣ ಮಾಡುವುದು ಅನರ್ಪಿತ. /530
ಕಾಯವಿಲ್ಲದ ಸಂಸಾರ ಚೋದ್ಯ,
ಸಂಸಾರವಿಲ್ಲದ ಕಾಯ ಚೋದ್ಯ,
ಕಾಯದೊಳಗೊಂದು ನಿರಾಳ ಚೋದ್ಯ,
ನಿರಾಳದೊಳಗೊಂದು ಕೂಡಲಚೆನ್ನಸಂಗಯ್ಯನೆಂಬ ಶರಣ.
ಸಮ್ಯಕ್ಚೋದ್ಯ, ಮಹಾಚೋದ್ಯ!/531
ಕಾಯವೂ ಜೀವವೂ, ಜೀವವೂ ಕಾಯವೂ ಎಂತು ಬೆರಸಿಪ್ಪುವಂತೆ
ಲಿಂಗದೊಳಗೆ ಜಂಗಮ, ಜಂಗಮದೊಳಗೆ ಲಿಂಗ ಬೆರಸಿಪ್ಪುವು, ಬಿನ್ನಭಾವವಿಲ್ಲದೆ,
ನ ಶಿವೇನ ವಿನಾ ಶಕ್ತಿರ್ನ ಶಕ್ತಿರಹಿತಃ ಶಿವಃ
ಪುಷ್ಪಗಂಧಾವಿವಾನ್ಯೋನ್ಯಂ ಮಾರುತಾಂಬರಯೋರಿವ
ಎಂದುದಾಗಿ-ಭಾವ ಭೇದವಿಲ್ಲ,
ಜಂಗಮವೆ ಲಿಂಗ ಕೂಡಲಚೆನ್ನಸಂಗ. /532
ಕಾಯವೆ ಲಿಂಗಕ್ಕರ್ಪಿತ, ಅರ್ಪಿತವೆ ಪ್ರಸಾದ.
ಅದೆ ಮತ್ತೆ ಮತ್ತೆ ಅರ್ಪಿತ.
ದರುಶನದಿಂದಲಾಯಿತ್ತು. ಪರುಶನದಿಂದಲಾಯಿತ್ತು.
ಅಪ್ಪಿನ ಸೋಂಕಿನ ಸುಖವನರ್ಪಿಸಲರಿಯದಿದ್ದರೆ ಭ್ರಾಂತಿ.
ಕೂಡಲಚೆನ್ನಸಂಗಯ್ಯನ
ಪ್ರಸಾದಿಯ ಪ್ರಸಾದವನತಿಗಳೆದಡೆ ಮುಂದೆ ಅದಕೆಂತೋ. /533
ಕಾಯವೆ ಶಿವಾಲ್ಯ, ಕಮಳಮಧ್ಯಮಂಟಪವು ಶುಕನಾಶಿ ನೋಡಾ ಅಯ್ಯಾ.
ಜ್ಞಾನಾರೂಢ ಪ್ರಾಣೇಶ್ವರನೆಂಬಾತನಲ್ಲಿಯ ದೇವನು.
ಒಂಬತ್ತು ಮಾನಿಸರು ತಂಡಾಲೆಯರು; ಇಂಬಿನ ಮಠಪತಿ ಹಂಸಜೀಯ,
ತನ್ನ ದಳವಳಯವನೊಲ್ಲದೆ ಲಿಂಗವೆ ಗೂಡಾದನು,
ಕೂಡಲಚೆನ್ನಸಂಗಯ್ಯನೆಂಬ ನಿಶ್ಚಿಂತ ನಿಜೈಕ್ಯನು./534
ಕಾಯವೆಂಬ ಕಣ್ಣಡವಿಲ್ಲ ಪ್ರಾಣವಿಲ್ಲಾಗಿ;
ಮನವೆಂಬ ನೆನಹಿಲ್ಲ ಅನುಭಾವವಿಲ್ಲವಾಗಿ;
ಅರುಹೆಂಬ ಕುರುಹಿಲ್ಲ ಪ್ರತಿಯಿಲ್ಲವಾಗಿ,
ಕೂಡಲಚೆನ್ನಸಂಗಮದೇವರಲ್ಲಿ ಪ್ರಭುದೇವರ ಶ್ರೀಪಾದಕ್ಕೆ
ನಮೋ ನಮೋ ಎಂದು ಬದುಕಿದೆನು ಕಾಣಾ, ಸಿದ್ಧರಾಮಯ್ಯಾ./535
ಕಾಯವೆಂಬ ಘಟಕ್ಕೆ ಕರಣಾದಿಗಳೆ ಸುಯಿದಾನ
ಅದಕ್ಕೆ ಚೈತನ್ಯವೇ ಜಲವಾಗಿ,
ಸಮತೆಯೇ ಮುಚ್ಚಳಿಕೆ, ಧೃತಿಯೆಂಬ ಸಮಿದೆ,
ಮತಿಯೆಂಬ ಅಗ್ನಿಯಲುರುಹಿ,
ಜ್ಞಾನವೆಂಬ ದರ್ವಿಯಲ್ಲಿ ಘಟ್ಟಿಸಿ ಪಕ್ವಕ್ಕೆ ತಂದು,
ಭಾವದಲ್ಲಿ ಕುಳ್ಳಿರಿಸಿ, ಪರಿಣಾಮ[ದೋ]ಗರವ ನೀಡುವೆ
ಕಾಣಾ ಕೂಡಲಚೆನ್ನಸಂಗಮದೇವಾ./536
ಕಾಯವೆಂಬ ಭೂಮಿಯ ಮೇಲೆ ಆರಂಬವ ಮಾಡಬಂದ
ಗೌಡನ ಪರ್ಯಾಯವ ನೋಡಿರಣ್ಣ ?
ಶಿವಜ್ಞಾನವೆಂಬ ಕೊಡಲಿಗೆ
ನಿಶ್ಚಿತವೆಂಬ ಕಾವನಿಕ್ಕಿ
ಅಷ್ಟದುಡಿಯೆಂಬ ಅಡವಿಯನೆ ಕಡಿದು
ಕುಟಿಲ ಕುಹಕವೆಂಬ ಕಿಚ್ಚ ಹತ್ತಿಸಿ ಸುಟ್ಟು
ಲೋಭತ್ವವೆಂಬ ಬಟ್ಟೆಯನೆ ಕಟ್ಟಿ
ಶಿವಭಕ್ತರ ನುಡಿಯೆಂಬ ಹಿಂಗಲ್ಲನಿಕ್ಕಿ
ವೈರಾಗ್ಯವೆಂಬ ಹಡಗಂ ಹತ್ತಿಸಿ
ದೃಷ್ಟ ಮುಟ್ಟಿಯೆಂಬ ನೇಗಿಲಿಗೆ
ಅವಧಾನವೆಂಬ ಮೀಣಿಯನಳವಡಿಸಿ
ಜೀವಭಾವವೆಂಬ ಎರಡೆತ್ತುಗಳ ಹೂಡಿ
ಅರುಹೆಂಬ ಹಗ್ಗವನೆ ಹಿಡಿದು
ಎಚ್ಚರಿಕೆಯೆಂಬ ಬಾರುಕೋಲ ತಳೆದುಕೊಂಡು
ಒತ್ತಿನೂಕಿ ಭೂಮಿಯ ಹಸನ ಮಾಡಬಂದ
ಗೌಡನ ಪರ್ಯಾಯವ ನೋಡಿರಣ್ಣ
ಅನೀತಿಯೆಂಬ ಗಾಳಿ ಬೀಸಿ
ವಿಷಯವೆಂಬ ಮಳೆ ಸುರಿದು
ಹದನಾರದ ಮುಂಚೆ
ಅರುಹೆಂಬ ಬೀಜವನೆ ಬಿತ್ತಿ
ಪ್ರಸಾದವೆಂಬ ಗೊಬ್ಬರವನೆ ತಳೆದು
ಆಚಾರವೆಂಬ ಸಸಿಹುಟ್ಟಿ
ಪ್ರಪಂಚೆಂಬ ಹಕ್ಕಿ ಬಂದು
ಹಕ್ಕಲ ಮಾಡದ ಮುನ್ನ
ನೆನಹೆಂಬ ಕವಣೆಯನೆ ತೆಕ್ಕೊಂಡು
ನಾಲ್ಕು ದಿಕ್ಕಿನಲ್ಲಿ ನಿಂತು
ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ
ಓಂ ನಮಃ ಶಿವಾಯಯೆಂದು ಅರ್ಭಟಿಸುತಿರ್ದನಯ್ಯ
ಇಂತು ಈ ಬೆಳಸು ಸಾಧ್ಯವಾಯಿತ್ತು.
ಉಳಿದವರಿಗಸಾಧ್ಯಕಾಣಾ, ಕೂಡಲಚೆನ್ನಸಂಗಮದೇವ/537
ಕಾಯಾ[ರ್ಪಿತವೆಂಬೆನೆ] ಅಳಿವಿನೊಳಗಾಯಿತ್ತು,
[ಜೀವಾರ್ಪಿತ]ವೆಂಬೆನೆ ಭ್ರಮೆಯೊಳಗಾಯಿತ್ತು,
ಜಿಹ್ವಾರ್ಪಿತವೆಂಬೆನೆ ಹುಸಿಯೊಳಗಾಯಿತ್ತು,
……ರ್ಪಿತವೆಂಬೆನೆ ….. ಕೊಳಗಾಯಿತ್ತು,
ಇಂತಿವ ಕಳೆದು ಅರ್ಪಿಸಬೇಕು.
ಅರ್ಪಿಸಿದಲ್ಲದೆ ಪ್ರಸಾದವಾಗದು.
….ವ ಶರೀರಕ್ಕೆ ಅದೆ ವರ್ಮವು
ಕೂಡಲಚೆನ್ನಸಂಗನ ಪ್ರಸಾದಿಯೇ ಬಲ/538
ಕಾಯಾನುಭಾವಿಗಳು ಕಾಯದಲೆ ಮುಕ್ತರು.
ಜೀವಾನುಭಾವಿಗಳು ಜೀವದಲೆ ಮುಕ್ತರು.
ಪ್ರಾಣಾನುಭಾವಿಗಳು ಪ್ರಾಣದಲೆ ಮುಕ್ತರು.
ಪವನಾನುಭಾವಿಗಳು ಪವನದಲೆ ಮುಕ್ತರು.
ಇವರನೆಂತು ಸರಿಯೆಂಬೆ, ಲಿಂಗಾನುಭಾವಿಗಳಿಗೆ ?
ಸ್ವಯಂಪ್ರಕಾಶಲಿಂಗದಲ್ಲಿ ಸದಾಸನ್ನಿಹಿತ.
ಕೂಡಲಚೆನ್ನಸಂಗಯ್ಯ, ನಿಮ್ಮ ಶರಣ. /539
ಕಾಲ ಕಲ್ಪಿತಂಗಳಿಲ್ಲದೆ ನಿಮ್ಮಿಂದ ನೀವೇ ಸ್ವಯಂಭುವಾಗಿರ್ದಿರಯ್ಯಾ.
ನಿಮ್ಮ ಪರಮಾನಂದ ಪ್ರಭಾವದ ಪರಿಣಾಮದಲ್ಲಿ ಅನಂತಕಾಲವಿರ್ದಿರಲ್ಲಾ !
ನಿಮ್ಮ ಆದ್ಯಂತವ ನೀವೇ ಅರಿವುತಿದ್ದಿರಲ್ಲಾ,
ನಿಮ್ಮ ನಿಜದುದಯವ ನೀವೇ ಬಲ್ಲಿರಿ
ಕೂಡಲಚೆನ್ನಸಂಗಮದೇವಾ/540
ಕಾಲ ಕಲ್ಪಿತನಲ್ಲ ಕರ್ಮವಿರಹಿತ ಶರಣ.
ವಿದಿ ನಿಷೇಧ ಪುಣ್ಯ-ಪಾಪ-ಕರ್ಮ-ಕಾಯನು ಅಲ್ಲ ಆ ಶರಣನು.
ಅವರಿವರ ಬೆರಸಿಪ್ಪನು, ತನ್ನ ಪರಿ ಬೇರೆ !
ನಿರಂತರ ಸುಖಿ, ಕೂಡಲಚೆನ್ನಸಂಗಯ್ಯಾ,
ನಿಮ್ಮ ಶರಣರು ಪ್ರಪಂಚನೊಳಗಿದ್ದೂ, ತನ್ನ ಪರಿ ಬೇರೆ/541
ಕಾಲಚಕ್ರ ಕರ್ಮಚಕ್ರ ನಾದಚಕ್ರ ಬಿಂದುಚಕ್ರ- ಈ ನಾಲ್ಕು ಚಕ್ರವ
ಸಾದಿಸಿಹೆವೆಂಬ ಹಿರಿಯರೆಲ್ಲ ಕೆಟ್ಟು ಹೋದರು ನೋಡಾ.
ಕಾಲಚಕ್ರವು ಘ್ರಾಣದಿಂದ ನಡೆವುದು,
ಕರ್ಮಚಕ್ರವು ನಯನದಿಂದ ನಡೆವುದು,
ನಾದಚಕ್ರವು ಶ್ರೋತ್ರದಿಂದ ನಡೆವುದು
ಬಿಂದುಚಕ್ರವು ಜಿಹ್ವೆಯಿಂದ ನಡೆವುದು.
ಕಾಲಚಕ್ರ ಗುರುಕ್ಷೇತ್ರ, ಕರ್ಮಚಕ್ರ ಲಿಂಗಕ್ಷೇತ್ರ,
ನಾದಚಕ್ರ ಜಂಗಮಕ್ಷೇತ್ರ, ಬಿಂದುಚಕ್ರ ಪ್ರಸಾದಕ್ಷೇತ್ರ.
ಈ ನಾಲ್ಕರ ಮನದ ಕೊನೆಯ ಮೊನೆಯ ಮೇಲೆ
ಸಿಂಹಾಸನನಾಗಿಪ್ಪ ನಮ್ಮ ಕೂಡಲಚೆನ್ನಸಂಗಮದೇವ. /542
ಕಾಲಚಕ್ರ ಕರ್ಮಚಕ್ರ ನಾದಚಕ್ರ ಬಿಂದುಚಕ್ರ:
ಕಾಲಚಕ್ರ ಘ್ರಾಣದಿಂದ ನಡೆವುದು,
ಕರ್ಮಚಕ್ರ ನಯನದಿಂದ ನಡೆವುದು,
ನಾದಚಕ್ರ ಶ್ರೋತ್ರದಿಂದ ನಡೆವುದು,
ಬಿಂದುಚಕ್ರ ಜಿಹ್ವೆಯಿಂದೆ ನಡೆವುದು,
ಇಂತು ನಾಲ್ಕರಲ್ಲಿ ನಾಲ್ಕು ನಡೆವುವು.
ಇಂತು ಲೋಕಾದಿಲೋಕಂಗಳೆಲ್ಲವು ಹೀಗೆ ಕೆಟ್ಟು ಹೋದವು.
ಈ ನಾಲ್ಕರ ಕುಳಸ್ಥಳವನರಸಿ ಹರಿಬ್ರಹ್ಮಾದಿಗಳೆಲ್ಲ ಕೆಟ್ಟು ಹೋದರು.
ಈ ನಾಲ್ಕಕ್ಕೆ ನಾಲ್ಕನು ಕೊಟ್ಟು
ಶುದ್ಧನಾದ ಕೂಡಲಚೆನ್ನಸಂಗಾ ನಿಮ್ಮ ಶರಣ./543
ಕಾಲಚಕ್ರವ ಗುರುವಿಂಗಿತ್ತು, ಕರ್ಮಚಕ್ರವ ಲಿಂಗಕ್ಕಿತ್ತು,
ನಾದಚಕ್ರವ ಜಂಗಮಕ್ಕಿತ್ತು, ಬಿಂದುಚಕ್ರವ ಪ್ರಸಾದಕ್ಕಿತ್ತು,
ಇಂತೀ ನಾಲ್ಕಕ್ಕೆ ನಾಲ್ಕನು ಕೊಟ್ಟು ಕೊಟ್ಟೆನೆಂಬುದಿಲ್ಲ, ಕೊಂಡೆನೆಂಬುದಿಲ್ಲ.
ಬಯಲಲೊದಗಿದ ಘಟವು,
ಕೂಡಲಚೆನ್ನಸಂಗಾ ನಿಮ್ಮ ಶರಣ. /544
ಕಾಲದಿಂದ ಸವೆದಡೆ ಲಿಂಗಪ್ರಾಣಿಯಲ್ಲ,
ಕಲ್ಪಿತದಿಂದ ಸವೆದಡೆ ಜಂಗಮಪ್ರೇಮಿಯಲ್ಲ,
ಸಂಸಾರದಿಂದ ಸವೆದಡೆ ಪ್ರಸಾದಸಂಬಂದಿಯಲ್ಲ,
ಅರಿವಿಂದ ಸವೆದಡೆ ಲಿಂಗಾನುಭಾವಿಯಲ್ಲ.
ಕೂಡಲಚೆನ್ನಸಂಗನ ಶರಣನೊಬ್ಬಗಲ್ಲದಿಲ್ಲ. /545
ಕಾಲವನಾದಿ ಕರ್ಮವನಾದಿ ಜೀವವನಾದಿಯಾದಡೆಯೂ ಆಗಲಿ,
ಘನನಿದಿಶಕ್ತಿಯನರಿದಲ್ಲದೆ, ಘನನಿಲಯಶಕ್ತಿಯನರಿಯಬಾರದು.
ಘನನಿಲಯಶಕ್ತಿಯನರಿದಲ್ಲದೆ, ತನೂದ್ವಹನಶಕ್ತಿಯನರಿಯಬಾರದು.
ತನೂದ್ವಹನಶಕ್ತಿಯನರಿದಲ್ಲದೆ, ಆದಿಮಧ್ಯಾವಸಾನವನರಿಯಬಾರದು.
ಆದಿಮಧ್ಯಾವಸಾನವನರಿದಲ್ಲದೆ, ಪಿಂಡಬ್ರಹ್ಮಾಂಡವನರಿಯಬಾರದು.
ಪಿಂಡಬ್ರಹ್ಮಾಂಡವನರಿದಲ್ಲದೆ, ಉನ್ಮನಿಯ ಮುಖವ ಕಾಣಬಾರದು.
ಉನ್ಮನಿಯ ಮುಖವ ಕಂಡಲ್ಲದೆ, ಲಿಂಗವ ಕಾಣಬಾರದು.
ಲಿಂಗವ ಕಂಡು ಗಹಗಹಿಸಿ ಕೂಡಿದಲ್ಲದೆ, ಮತ್ರ್ಯದ ಹಂಗು ಹರಿಯದು.
ಮತ್ರ್ಯದ ಹಂಗು ಹರಿದಲ್ಲದೆ, ಭವಂ ನಾಸ್ತಿಯಾಗದು ಕಾಣಾ
ಕೂಡಲಚೆನ್ನಸಂಗಮದೇವಾ./546
ಕಾಲಿಲ್ಲವೆಂಬರಯ್ಯಾ ಪ್ರಭುದೇವರ, ಸಂಸಾರಸೂತಕವ ಮೆಟ್ಟನಾಗಿ.
ಕೈಯಿಲ್ಲವೆಂಬರಯ್ಯಾ ಪ್ರಭುದೇವರ ಪರಧನವ ಕೊಳ್ಳನಾಗಿ.
ಕಿವಿಯಿಲ್ಲವೆಂಬರಯ್ಯಾ ಪ್ರಭುದೇವರ ಅನ್ಯವ ಕೇಳನಾಗಿ.
ಮೂಗಿಲ್ಲವೆಂಬರಯ್ಯಾ ಪ್ರಭುದೇವರ ದುರ್ಗಂಧಕ್ಕೆಳಸನಾಗಿ.
ಎದೆಯಿಲ್ಲವೆಂಬರಯ್ಯಾ ಪ್ರಭುದೇವರ ಪರಸ್ತ್ರೀಯನಪ್ಪನಾಗಿ.
ಇದು ಕಾರಣ-ಕೂಡಲಚೆನ್ನಸಂಗಮದೇವಾ
ಪ್ರಭುದೇವರ ಒಕ್ಕುಮಿಕ್ಕ ಪ್ರಸಾದವ ಕೊಂಡು
ನಾನು ಧನ್ಯನಾದೆನು ಕಾಣಾ ಸಂಗನಬಸವಣ್ಣಾ./547
ಕಾಲು ಮುಟ್ಟಿದ ಪದಾರ್ಥ ಕಾಲಿಂಗರ್ಪಿತ (ಕಾಲುಲಿಂಗಾರ್ಪಿತ?)
ಕೈಮುಟ್ಟಿದ ಪದಾರ್ಥ ಕೈಗರ್ಪಿತ (ಕೈಲಿಂಗಾರ್ಪಿತ?)
ತನು ಮುಟ್ಟಿದ ಪದಾರ್ಥ ತನುವಿಂಗರ್ಪಿತ (ತನುಲಿಂಗಾರ್ಪಿತ?)
ಮನ ಮುಟ್ಟಿದ ಪದಾರ್ಥ ಮನಕರ್ಪಿತ (ಮನಲಿಂಗಾರ್ಪಿತ)
[ಕಾಲುಕೈ] ತನುಮನ ಮುಟ್ಟದ ಪದಾರ್ಥ ಭೂಮಿಯ ಮೇಲಿಲ್ಲ.
ಕೊಟ್ಟುದ ಕೊಳಬಾರದು, ಕೊಡದೆ ಕೊಳಬಾರದು.
ಇದು ಕಾರಣ ಕೂಡಲಚೆನ್ನಸಂಗಯ್ಯಾ
ಗುರು ಕೊಟ್ಟ ಲಿಂಗವು ಕುರುಹಿನ ಲಿಂಗವು. /548
ಕಾವಿ ಕಾಷಾಂಬರವ ತೊಟ್ಟವ ಜಂಗಮವೆ ?
ಮುರುಹು ಮುದ್ರೆಯನಿಟ್ಟವ ಜಂಗಮವೆ ?
ಬರಿಯ ಬೋಳುಗಳೆಲ್ಲ ಜಂಗಮವೆ ?
ವೇಷಧಾರಿಗಳೆಲ್ಲ ಜಂಗಮವೆ ?
ಅಜ್ಞಾನಿಗಳೆಲ್ಲ ಜಂಗಮವೆ ?
ಭೂಭಾರಿಗಳೆಲ್ಲ ಜಂಗಮವೆ ? ಅಲ್ಲ
ಜಂಗಮ ಮತ್ತೆಂ[ತೆಂ]ದರೆ
ಸೀಮೆಯಿಲ್ಲದ ನಿಸ್ಸೀಮ ಜಂಗಮ
ಆಸೆಯಿಲ್ಲದ ನಿರಾಸಕ ಜಂಗಮ
ಚಿಂತೆಯಿಲ್ಲದ ನಿಶ್ಚಿಂತ ಜಂಗಮ
ಇಂತಪ್ಪ ಜಂಗಮದ ಸುಳುಹು ಕಾಣದೆ
ಕೂಡಲಚೆನ್ನಸಂಗಯ್ಯ ತಾನೇ ಜಂಗಮವಾದ/549
ಕಾವಿ ಕಾಷಾಯಾಂಬರ ಜಡೆಮಾಲೆಯ ಧರಿಸಿದರೇನು,
ಜಂಗಮವಾಗಬಲ್ಲನೆ ?
ಸಾಕಾರದಲ್ಲಿ ಸನುಮತರಲ್ಲ, ನಿರಾಕಾರದಲ್ಲಿ ನಿರುತರಲ್ಲ.
ತುರುಬು ಜಡೆ ಬೋಳೆನ್ನದೆ ಅರಿವುಳ್ಳಾತನೆ ಜಂಗಮ.
ಅರಿವಿಲ್ಲದೆಲ್ಲ ವೇಷ ಕಾಣಾ, ಕೂಡಲಚೆನ್ನಸಂಗಮದೇವಾ/550
ಕಾಸೆ ಕಮಂಡಲ ಉತ್ತಮಾಂಗ ವಿಭೂತಿ ರುದ್ರಾಕ್ಷಿ ಸಹಿತಿದ್ದವರ
ಜಂಗಮವೆಂದು ನಂಬುವೆನೆ ? ನಂಬೆ ಕಾಣಾ !
ಅದೇನು ಕಾರಣ :
ಸಾಕಾರದಲ್ಲಿ ಸನುಮತರಲ್ಲ, ಪರಿಣಾಮದಲ್ಲಿ ಪರಿಚಿತರಲ್ಲಾಗಿ.
ಇದು ಕಾರಣ ಕೂಡಲಚೆನ್ನಸಂಗನಲ್ಲಿ
ಲಕ್ಷಕ್ಕೊಬ್ಬ ಭಕ್ತ, ಕೋಟಿಗೊಬ್ಬ ಶರಣ. /551
ಕಿಂಕುರ್ವಾಣತೆಯಿಂದ ಬಂದ ಜಂಗಮವೆ ಲಿಂಗವೆಂದು
ಉಳ್ಳುದನರಿದು ಮನಸಹಿತ ಮಾಡುವಲ್ಲಿ ಭಕ್ತ.
ನಿಷ್ಠೆ ನಿಬ್ಬೆರಸಿ ಗಟ್ಟಿಗೊಂಡು ಅಬಿಲಾಷೆಯ ಸೊಮ್ಮು ಸಮನಿಸದೆ
ಪರಿಚ್ಛೇದ ಬುದ್ಧಿಯು?್ಳಲ್ಲಿ ಮಾಹೇಶ್ವರ.
ಅನರ್ಪಿತ ಸಮನಿಸದೆ ಬಂದುದ ಕಾಯದ ಕರಣದ ಕೈಯಲು ಕೊಟ್ಟು,
ಲಿಂಗಸಹಿತ ಭೋಗಿಸುವಲ್ಲಿ ಪ್ರಸಾದಿ.
ಪ್ರಾಣಕ್ಕೆ ಪ್ರಾಣವಾಗಿ ಇದ್ದು ಕಾಯಸ್ಥಿತಿಯರಿದು ಎಚ್ಚರಿಕೆಗುಂದದಿಪ್ಪಲ್ಲಿ,
ಪ್ರಾಣಲಿಂಗಸಂಬಂದಿ.
ತನಗೆ ಲಿಂಗವಾಗಿ, ಲಿಂಗಕ್ಕೆ ತಾನಾಗಿ ಬೆಚ್ಚು ಬೇರಿಲ್ಲದ
ಬೆಡಗಿನ ಒಲುಮೆಯಲ್ಲಿ ಶರಣ.
ಸದಾಚಾರ ಸಂಪತ್ತಿನಲ್ಲಿ ಬಂದ ಅನುಭಾವವ ಮೀರಿ
ಹೆಸರಡಗಿದ ಸುಖವದು ಲಿಂಗೈಕ್ಯ.
ಇದು ಕಾರಣ, ಕೂಡಲಚೆನ್ನಸಂಗನಲ್ಲಿ
ಬಸವಣ್ಣಂಗಲ್ಲದೆ ಷಡುಸ್ಥಲವಪೂರ್ವ./552
ಕಿನ್ನರರು ಕಿಂಪುರುಷರು ಸಿದ್ಧ ವಿದ್ಯಾಧರರೆಂಬ ಮೂರುತಲೆಯವರು ಬಂದು
ಮೂರಲಗಿನ ನಡುವಣ ಕೀಲ ಕಳಚಿದರೆ
ಕೂಡಲಚೆನ್ನಸಂಗಯ್ಯನೆಂಬೆ, ಆ ಮಹಾತ್ಮನ/553
ಕಿರಿದಾದ ಬೀಜದಲ್ಲಿ ಹಿರಿಯ ತರುವಡಗಿದ ಪರಿಯಂತೆ,
ಕರಗತವಾದ ಕನ್ನಡಿಯಲ್ಲಿ ಕರಿಗಿರಿಗಳು ತೋರುವ ಪರಿಯಂತೆ
ಜಗದ್ವ್ಯಾಪಕವಾದ ಪರವಸ್ತುವು ಖಂಡಿತಾಕಾರಮಾದ ಶರೀರದಲ್ಲಿ
ಅತಿ ಸೂಕ್ಷ್ಮ ಪ್ರಮಾಣದಲ್ಲಿರ್ಪಂತೆ,
ಪರತರಶಿವಲಿಂಗವು ಸದ್ಭಕ್ತರನುದ್ಧರಿಪ ಸದಿಚ್ಛೆಯಿಂದ
ಲಿಂಗಾಕಾರವಾಗಿ ನೆಲೆಗೊಂಡಿರ್ಪುದು.
`ಅಣೋರಣೀಯಾನ್ ಮಹತೋ ಮಹೀಯಾನ್’ ಎಂದುದಾಗಿ,
ಪರಬ್ರಹ್ಮರೂಪವಾದ ಲಿಂಗವು, ಮಹದ್ರೂಪದಿಂದ ಅಖಂಡವಾಗಿಯೂ
ಅಣುರೂಪದಿಂದ ಖಂಡಿತವಾಗಿಯೂ ತೋರುವುದು.
ಕೂಡಲಚೆನ್ನಸಂಗಮದೇವಾ ಇದು ನಿಮ್ಮ ದಿವ್ಯಲೀಲೆಯಯ್ಯಾ !/554
ಕಿಸು (ಕೇಶ?) ಕಾಷಾಂಬರವನಿಕ್ಕಿದರೆನುಳ ರುದ್ರಾಕ್ಷೆಯ ಮಕುಟವ ಧರಿಸಿದರೇನು?
ಸಾಕಾರದಲ್ಲಿ ಸನುಮತರಲ್ಲ, ನಿರಾಕಾರದಲ್ಲಿ ನಿರುತರಲ್ಲ,
ಪರಮಾರ್ಥದಲ್ಲಿ ಪರಿಣಾಮಿಗಳಲ್ಲ.
ಇದು ಕಾರಣ ಕೂಡಲಚೆನ್ನಸಂಗಯ್ಯಾ
ತುರುಬಾಗಲಿ, ಬೋಳಾಗಲಿ, ಅರಿವುಳ್ಳುದೆ ಜಂಗಮ. /555
ಕುಲ ಚಲ ಮೊದಲಾದ ಅಷ್ಟಮದಂಗಳನರಿತು
ದಾಸೋಹಕ್ಕೆಡೆಯಾಗಿರಬೇಕು.
ಪೃಥುವ್ಯಾದಿ ಅಷ್ಟತನುಮದವೆಂಬ ಮಹಿಮೆಯೊಳಗಿರ್ದು
ಲಿಂಗಾವಧಾನಿಯಾಗಿರಬೇಕು.
ತೈಲಾಭ್ಯಂಜನ ವಸ್ತ್ರ ಆಭರಣ ಸುಗಂಧದ್ರವ್ಯ ಷಡುರಸಾನ್ನಾದಿ
ಸತಿಸಂಗ ಸುಖ ದುಃಖಗಳ ಲಿಂಗಮುಖ ಮುಂತಾಗಿ
ಪ್ರಸಾದಭೋಗಿಯಾಗಿರ್ಪುದು.
ಯಮ ನಿಯಮಾದಿ ಅಷ್ಟಾಂಗ ಯೋಗದಲ್ಲಿ ನಿರತನಾದಡೇನು ?
ದಾಸೋಹಕ್ಕೆ ಸ್ವಯವಾಗಿರಬೇಕು.
ಗೃಹ ಅರಮನೆ ತೋಟ ಗೋಕುಲ ವಾಹನ ಪರಿಜನ
ಕೀರ್ತಿಜನದೊಳಗಿರ್ದು ಶರಣರ ಮರೆದಿರಲಾಗದು.
ಇಂದ್ರಾದಿ ದೇವತೆಗಳು ಅಷ್ಟದಿಕ್ಕಿನಲ್ಲಿ ಕರ್ತರಾಗಿ
ನಿಮ್ಮ ನಿಜ ಭೃತ್ಯರಾಗಿರ್ದರು.
ಇಂತೀ ಅಷ್ಟಸಂಪಾದನೆ ನಾಲ್ವತ್ತೆಂಟರಿಂದ
ಕೂಡಲಚೆನ್ನಸಂಗಯ್ಯನ ಶರಣರು ಲೋಕಾದಿಪತಿಗಳು/556
ಕುಲವನರಿದೆವೆಂಬರು, ಆದಿಯ ಕುಲವನರಿಯದ ಕಾರಣ
ವ್ಯಾಕುಲಗೊಂಡಿತ್ತು ತ್ರೈಜಗ ನೋಡಾ.
ಕುಲವಲ್ಲಾ ಹೊನ್ನು ಕುಲವಲ್ಲಾ ಹೆಣ್ಣು ಕುಲವಲ್ಲಾ ಮಣ್ಣು?
ಆದಿಬಿಂದುರ್ಭವೇದ್ಬೀಜಂ ಬೀಜಮಧ್ಯಸ್ಥಿತಂ ಕುಲಂ
ಬೀಜಂ ನಾಸ್ತಿ ಕುಲಂ ನಾಸ್ತಿ ತಸ್ಮೈ ಶಿವಕುಲಂ ಭವೇತ್
ಎಂದುದಾಗಿ, ಹೊನ್ನು ಹೆಣ್ಣು ಮಣ್ಣು ತ್ರಿವಿಧವನತಿಗಳೆದು
ನಿರಾಕುಲನಾದ ಬಳಿಕ ಕುಲಂ ನಾಸ್ತಿ, ಕೂಡಲಚೆನ್ನಸಂಗಮದೇವಾ. /557
ಕುಲವಳಿದು, ಛಲವಳಿದು, ಮದವಳಿದು, ಮಚ್ಚರವಳಿದು,
ಆತ್ಮತೇಜವಳಿದು, ಸರ್ವಾಹಂಭಾವವಳಿದು,
ನಿಜ ಉಳಿಯಿತ್ತು.
ಲಿಂಗಜಂಗಮವೆಂಬ ಶಬ್ದವಿಡಿದು ಸಾಧ್ಯವಾಯಿತ್ತು ನೋಡಾ,
ತಾನಳಿದು ತಾನುಳಿದು ತಾನು ತಾನಾದ ಸಹಜ ನಿಜಪದವಿಯಲ್ಲಿ
ಕೂಡಲಚೆನ್ನಸಂಗ ಲಿಂಗೈಕ್ಯವು. /558
ಕುಲವಿಲ್ಲದ ಅಕುಲನು, ಶರೀರವಿಲ್ಲದ ಸಂಬಂದಿ,
ಕೋಪವಿಲ್ಲದ ಶಾಂತನು, ಮತ್ಸರವಿಲ್ಲದ ಮಹಿಮನು.
ಕರ್ಮವಿಲ್ಲದ ಕಾರಣಿಕನು, ಅರ್ಪಿತವಿಲ್ಲದ ಆಪ್ಯಾಯನಿ,
ಜಂಗಮವಿಲ್ಲದ ಸಮಶೀಲನು, ಲಿಂಗವಿಲ್ಲದ ನಿರುತನು.
ಪ್ರಸಾದವಿಲ್ಲದ ಪರಿಣಾಮಿ ಕೂಡಲಚೆನ್ನಸಂಗಾ ನಿಮ್ಮ ಶರಣನು./559
ಕುಲಹೀನ ಶಿಷ್ಯಂಗೆ ಅನುಗ್ರಹವ ಕೊಟ್ಟು
ತನ್ನ ಪ್ರಾಣಲಿಂಗವ ನಿಕ್ಷೇಪಿಸಿ, ಕರ್ಣಮಂತ್ರವ ಹೇಳಿ,
ಆ ಗುರು ಬಂದು ಆ ಶಿಷ್ಯನ ಮನೆಯ ಹೊಗಲೊಲ್ಲದೆ
ಅಕ್ಕಿ ತುಪ್ಪವನೀಸಿಕೊಂಬವನ ಕೇಡಿಂಗೆ ಇನ್ನೇವೆನಯ್ಯಾ ?
ತನ್ನ ಪ್ರಾಣಲಿಂಗವನವನಿಗೆ ಕೊಟ್ಟು ತಾ ಹುಗೆನೆಂಬ
ವ್ರತಗೇಡಿಯ ಇನ್ನೇನೆನಬಹುದಯ್ಯಾ ?
ಅವನ ಧನಕ್ಕೆ ತಂದೆಯಾದನಲ್ಲದೆ ಅವನಿಗೆ ತಂದೆಯಾದುದಿಲ್ಲ.
ಇದು ಕಾರಣ-ಕೂಡಲಚೆನ್ನಸಂಗಯ್ಯಾ
ಆ ಲಿಂಗವ ಮಾರಿಕೊಂಡುಂಬ ಭಂಗಕಾರರು
ಕೆಟ್ಟಕೇಡನೇನೆಂಬೆನಯ್ಯಾ !/560
ಕುಳಿತಲ್ಲಿ ಎರಡು, ನಿಂದಲ್ಲಿ ನಾಲ್ಕು,
ನಡೆನುಡಿಯಲ್ಲಿ ಎಂಟು, ಅರೆನಿದ್ದೆಯಲ್ಲಿ ಹದಿನಾರು.
ರತಿಸಂಗದಲ್ಲಿ ಮೂವತ್ತೆರಡಂಗುಲ ರೇಚಕ,
ತದರ್ದ ಪೂರಕ, ಹೊರಗು ಒಳಗಾದಡೆ
ಕೂಡಲಚೆನ್ನಸಂಗಯ್ಯನಲ್ಲಿ ಸಂಯೋಗ./561
ಕೂಟಕಿಕ್ಕಿ ಮಾಡುವರೆಲ್ಲಾ ಕುಂಟಣಗಿತ್ತಿಯ ಮಕ್ಕಳು,
ಹರಸಿಕೊಂಡು ಮಾಡುವರೆಲ್ಲಾ ಹಾದರಗಿತ್ತಿಯ ಮಕ್ಕಳು,
ವರ್ಷಕ್ಕೊಂದು ತಿಥಿಯೆಂದು ಮಾಡುವರೆಲ್ಲಾ ವೇಶಿಯ ಮಕ್ಕಳು,
ಆ ಕೂಟಕ್ಕೆ ಮಾಡದೆ, ಹರಸಿಕೊಂಡು ಮಾಡದೆ,
ವರ್ಷಕ್ಕೊಂದು ತಿಥಿಯೆಂದು ಮಾಡದೆ,
ಸಹಜದಲ್ಲಿ ಮಾಡುವರೆಲ್ಲಾ ಸಜ್ಜನ ಪತಿವ್ರತೆಯ ಮಕ್ಕಳು ಕಾಣಾ,
ಕೂಡಲಚೆನ್ನಸಂಗಮದೇವಾ/562
ಕೂಡಿ ಮಾಡಿದ ಸಯಿದಾನವ ತಂದು ಪದಾರ್ಥವೆಂದು,
ಇಷ್ಟಲಿಂಗದಲ್ಲಿ ಪೂರ್ವಾಶ್ರಯ ಹೋಯಿತ್ತೆಂದು,
ಪ್ರಾಣಲಿಂಗಕ್ಕೆ ಓಗರವೆಂದು ನೀಡುತ್ತಿದ್ದರಯ್ಯಾ.
ಅಂಗದ ಕೈಯಲು ಅರ್ಪಿತವದೆ, ಲಿಂಗದ ಕೈಯಲು ರುಚಿಯದೆ.
ಅಂಗದ ಕೈಯಾವುದು ಲಿಂಗದ ಕೈಯಾವುದೆಂದರಿಯರು.
ಬೇರೆ ಮತ್ತೊಂದೆಂಬರು.
ಒಂದೆಂದರ್ಪಿಸಿ ಮತ್ತೊಂದೆಂದು ಭಾವಿಸಿದರೆ
ಹೊಂದಿದ ನೊಣವಿನಂತಾದರು,
ಕೂಡಲಚೆನ್ನಸಂಗನಲ್ಲಿ ಅವರ ಸಹಜರೆಂತೆಂಬೆ ?/563
ಕೃತಯುಗ ತ್ರೇತಾಯುಗ ದ್ವಾಪರ ಕಲಿಯುಗವಿಲ್ಲದಲ್ಲಿಂದತ್ತ ನೋಡಾ,
ಧರೆಯು ಬ್ರಹ್ಮಾಂಡವು ಮೂರುತಿಗೊಳ್ಳದಲ್ಲಿಂದತ್ತ ನೋಡಾ!
ಘನಪ್ರಸಾದವ ಸಾದಿಸಿ ತಂದು ಎನ್ನ ಕೈಯಲಿ ನಿಕ್ಷೇಪ[ವಾಗಿ] ಕೊಟ್ಟನಯ್ಯಾ
ಕೂಡಲಚೆನ್ನಸಂಗಾ ನಿಮ್ಮ ಶರಣನು. /564
ಕೃತಯುಗ ಹದಿನೇಳು ಲಕ್ಷದ ಮೇಲೆ ಇಪ್ಪತ್ತೆಂಟುಸಾವಿರ ವರುಷದಲ್ಲಿ
ಕೇತಾರದೇವರು ಮೂಲಸ್ಥಾನ.
ತ್ರೇತಾಯುಗ ಹನ್ನೆರಡು ಲಕ್ಷದ ಮೇಲೆ ತೊಂಬತ್ತಾರುಸಾವಿರ ವರುಷದಲ್ಲಿ
ಸೇತುಬಂಧ ರಾಮೇಶ್ವರದೇವರು ಮೂಲಸ್ಥಾನ.
ದ್ವಾಪರಯುಗ ಎಂಟುಲಕ್ಷದ ಮೇಲೆ ಅರವತ್ತುನಾಲ್ಕುಸಾವಿರ ವರುಷದಲ್ಲಿ
ಸೌರಾಷ್ಟ್ರ ಸೋಮಯ್ಯದೇವರು ಮೂಲಸ್ಥಾನ.
ಕಲಿಯುಗ ನಾಲ್ಕುಲಕ್ಷದ ಮೇಲೆ ಮೂವತ್ತೆರಡುಸಾವಿರ ವರುಷದಲ್ಲಿ
ಶ್ರೀಶೈಲ ಚೆನ್ನಮಲ್ಲಿಕಾರ್ಜುನದೇವರು ಮೂಲಸ್ಥಾನ.
ಇದು ಕಾರಣ ಕೂಡಲಚೆನ್ನಸಂಗಯ್ಯ ಸಾಕ್ಷಿಯಾಗಿ
ಭಕ್ತರಿಗೆ ಜಂಗಮವೆ ಮೂಲಸ್ಥಾನ. /565
ಕೃತಯುಗದಲ್ಲಿ ಓಂಕಾರಸತ್ಯರೂಪದೇವಾಂಗನೆಂಬ ಭಕ್ತನ ಮಾಡುವಲ್ಲಿ
ಸ್ಥೂಲಕಾಯನೆಂಬ ಜಂಗಮ, ಅಂದಿಗೆ ಪ್ರಥಮಮೂಲಸ್ಥಾನ ಕೇತಾರೇಶ್ವರ.
ತ್ರೇತಾಯುಗದಲ್ಲಿ ಘಂಟಾಕರ್ಣನೆಂಬ ಭಕ್ತನ ಮಾಡುವಲ್ಲಿ,
ಶೂನ್ಯಕಾಯನೆಂಬ ಜಂಗಮ, ಅಂದಿಗೆ ಪ್ರಥಮಮೂಲಸ್ಥಾನ ರಾಮೇಶ್ವರ.
ದ್ವಾಪರದಲ್ಲಿ ವೃಷಭನೆಂಬ ಭಕ್ತನ ಮಾಡುವಲ್ಲಿ,
ಅನಿಮಿಷನೆಂಬ ಜಂಗಮ, ಅಂದಿಗೆ ಪ್ರಥಮಮೂಲಸ್ಥಾನ ಸಾರಾಷ್ಟ್ರ.
ಕಲಿಯುಗದಲ್ಲಿ ಬಸವನೆಂಬ ಭಕ್ತನ ಮಾಡುವಲ್ಲಿ
ಪ್ರಭುವೆಂಬ ಜಂಗಮ, ಅಂದಿಗೆ ಪ್ರಥಮಮೂಲಸ್ಥಾನ ಶ್ರೀಶೈಲ.
ಇಂತೀ ನಾಲ್ಕು ಯುಗಕ್ಕೆ ನಾಲ್ಕು ಜಂಗಮಸ್ಥಲ,
ನಾಲ್ಕು ಯುಗಕ್ಕೆ ನಾಲ್ಕು ಲಿಂಗ (ಭಕ್ತ?) ಸ್ಥಲ
ಕೂಡಲಚೆನ್ನಸಂಗಮದೇವಾ./566
ಕೃತಯುಗದಲ್ಲಿ ದೇವರು ದೇವಾಸುರನ ಕೊಲುವಲ್ಲಿ,
ಪ್ರಮಥನೆಂಬ ಗಣೇಶ್ವರನಾಗಿರ್ದನು.
ಗಜಾಸುರನ ಚರ್ಮವ ಬಿಚ್ಚಿ ಅಜಾರಿ ಹೊದೆವಲ್ಲಿ
ಉಗ್ರನೆಂಬ ಗಣೇಶ್ವರನಾಗಿರ್ದನು.
ಅಸುರರ ಶಿರೋಮಾಲೆಯ ಕೊರಳಲ್ಲಿ ಉರದಲ್ಲಿ
ಹಾರವಾಗಿ ಧರಿಸಿ ಜಗಕ್ಕೆ ಜೂಬಾಗಿಪ್ಪಲ್ಲಿ,
ಶಂಕೆಯಿಲ್ಲದೆ ನಿಶ್ಶಂಕನೆಂಬ ಗಣೇಶ್ವರನಾಗಿರ್ದನು.
ಸಮಸ್ತ ದೇವರಿಗೆ ಕರುಣಾಮೃತವ ಸುರಿದು ಸುಖವನಿತ್ತು ರಕ್ಷಿಸುವಲ್ಲಿ
ಶಂಕರನೆಂಬ ಗಣೇಶ್ವರನಾಗಿರ್ದನು.
ಜಾಳಂಧರನೆಂಬ ಅಸುರನ ಕೊಲುವಲ್ಲಿ
ಜಾಣರಿಗೆ ಜಾಣನಾಗಿ ವಿಚಿತ್ರನೆಂಬ ಗಣೇಶ್ವರನಾಗಿರ್ದನು.
ತ್ರೇತಾಯುಗದಲ್ಲಿ ಕಾಳಂಧರದೊಳಗೆ ಶಿವನು ನಿಜಮಂದಿರವಾಗಿದ್ದಲ್ಲಿ,
ಕಾಲಾಗ್ನಿರುದ್ರನೆಂಬ ಗಣೇಶ್ವನಾಗಿರ್ದನು.
ಪಿತಾಸುರನೆಂಬ ದೈತ್ಯನ ಕೊಂದು ಜಗವ ರಕ್ಷಿಸುವಲ್ಲಿ,
ಮಾತಾಪಿತನೆಂಬ ಗಣೇಶ್ವರನಾಗಿರ್ದನು.
ತಾಳಾಸುರನೆಂಬ ದೈತ್ಯನ ಕೊಂದು ಜಗವ ರಕ್ಷಿಸಿ
ಸೃಷ್ಟಿಯ ಕಲ್ಪಿಸಿ ಬ್ರಹ್ಮಾಂಡ ಭಾರಮಂ ಧರಿಸುವಲ್ಲಿ,
ತಾಳಸಮ್ಮೇಳನೆಂಬ ಗಣೇಶ್ವರನಾಗಿರ್ದನು.
ಜಲಪ್ರಳಯದಲ್ಲಿ ಜಗನ್ನಾಥನು ಅಳಿಯದೆ ಇಪ್ಪಲ್ಲಿ
ಜನನಮರಣವರ್ಜಿತನೆಂಬ ಗಣೇಶ್ವರನಾಗಿರ್ದನು.
ಜಗವೆಲ್ಲಾ ಶೂನ್ಯವೆಂದಡೆ ನಾನೆ ಹುಟ್ಟಿಸಿದೆನೆಂದು,
ಆದಿಗಣನಾಥನೆಂಬ ಗಣೇಶ್ವರನಾಗಿರ್ದನು.
ಸುರಾಸುರರು ಅಹಂಕಾರದಲ್ಲಿ ಹೆಚ್ಚಿ ಮೇರೆದಪ್ಪಿದಲ್ಲಿ
ಗೂಳಿಯಾಗಿ ಹೋರಿ ಎಲ್ಲರ ತೊತ್ತ?ದುಳಿದು,
ಒಕ್ಕಲಿಕ್ಕಿ ಮಿಕ್ಕು ಮೀರಿ
ನಂದಿಮಹಾಕಾಳನೆಂಬ ಗಣೇಶ್ವರನಾಗಿರ್ದನು.
ಉರಿಗಣ್ಣ ತೆರೆದಡೆ ಉರಿದಹವು ಲೋಕಂಗಳೆಂದು
ಜಗವ ಹಿಂದಿಕ್ಕಿಕೊಂಡು ವಂದ್ಯನೆಂಬ ಗಣೇಶ್ವರನಾಗಿರ್ದನು.
ಉಮೆಯ ಕಲ್ಯಾಣದಲ್ಲಿ ಕಾಲಲೋಚನನೆಂಬ ಗಣೇಶ್ವರನಾಗಿರ್ದನು.
ಅಂಧಕಾಸುರನ ಕೊಲುವಲ್ಲಿ ನೀಲಲೋಹಿತನೆಂಬ ಗಣೇಶ್ವರನಾಗಿರ್ದನು.
ತ್ರಿಪುರದಹನವ ಮಾಡುವಲ್ಲಿ ಸ್ಕಂದನೆಂಬ ಗಣೇಶ್ವರನಾಗಿರ್ದನು.
ಬ್ರಹ್ಮಕಪಾಲ ವಿಷ್ಣುಕಂಕಾಳವನಿಕ್ಕುವಲ್ಲಿ ನೀಲಕಂಠನೆಂಬ ಗಣೇಶ್ವರನಾಗಿರ್ದನು.
ದ್ವಾಪರದಲ್ಲಿ ಲಿಂಗಪ್ರಾಣಸಂಯೋಗವಾಗಿ
ವೃಷಭನೆಂಬ ಗಣೇಶ್ವರನಾಗಿರ್ದನು.
ಇಂತು ನಾಲ್ಕು ಯುಗ, ಹದಿನಾಲ್ಕು ಭುವನಂಗಳು ಮಡಿವಲ್ಲಿ, ಹುಟ್ಟುವಲ್ಲಿ
ನಂದಿಕೇಶ್ವರನೆಂಬ ಗಣೇಶ್ವರನಾಗಿರ್ದನು.
ಕಲಿಯುಗದಲ್ಲಿ ಗುರು ಲಿಂಗ ಜಂಗಮ ಪಾದೋದಕ ಪ್ರಸಾದನದಫ
ಪೂರ್ವಾಶ್ರಯವ ಕಳೆದು ಲಿಂಗವಾಗಿ ಕುಳಸ್ಥಳವನರಿತು
ಮಹಾಂತ ಕೂಡಲಚೆನ್ನಸಂಗನ ಮಹಾಮನೆಯಲ್ಲಿ,
ಸರ್ವಾಚಾರಸಂಪನ್ನ ಬಸವಣ್ಣನೆಂಬ ಗಣೇಶ್ವರನಾಗಿರ್ದನು
ಕೇಳಾ ಪ್ರಭುವೆ !/567
ಕೃತಯುಗದಲ್ಲಿ ದೇವಾದಿದೇವರ್ಕಳಿಗೆ ಯುದ್ಧವಾಯಿತ್ತು.
ತ್ರೇತಾಯುಗದಲ್ಲಿ ರಾಮರಾವಣರಿಗೆ ಯುದ್ಧವಾಯಿತ್ತು.
ದ್ವಾಪರದಲ್ಲಿ ಕೌರವ ಪಾಂಡವರಿಗೆ ಯುದ್ಧವಾಯಿತ್ತು.
ಕಲಿಯುಗದಲ್ಲಿ ಮೌರ್ಯ ಕದಂಬರಿಗೆ ಯುದ್ಧವಾಯಿತ್ತು.
ಇಂತು ಅನಂತ ಯುಗಂಗಳಲ್ಲಿ ಅನಂತರಿಗೆ ಯುದ್ಧವಾಗುತ್ತಿಹ ಕಾರಣ
ಕೂಡಲಚೆನ್ನಸಂಗಯ್ಯಾ, ನಿಮ್ಮ ಶರಣರಿಗೆಯೂ ನಮಗೆಯೂ
ಅಂದು ಇಂದು ಮುಂದು ಯುದ್ಧವಿಲ್ಲಾ/568
ಕೃತಯುಗದಲ್ಲಿ ನೀನು ದೇವಾಂಗನೆಂಬ ಗಣೇಶ್ವರನಾಗಿ ಬಂದು ಆರಾದಿಸುವಲ್ಲಿ,
ಸ್ಥೂಲಕಾಯನೆಂಬ ಜಂಗಮವಾಗಿ ಬಂದು ಲಿಂಗಾರ್ಚನೆಯ ಮಾಡಿಹೋದ;
ಅದರ ಕ್ರಿಯಾಂಗವನು ಮರೆದೆಯಲ್ಲಾ ಬಸವಣ್ಣಾ.
ತ್ರೇತಾಯುಗದಲ್ಲಿ ನೀನು ಘಂಟಾಕರ್ಣನೆಂಬ
ಗಣೇಶ್ವರನಾಗಿ ಬಂದು ಆರಾದಿಸುವಲ್ಲಿ,
ಶೂನ್ಯಕಾಯನೆಂಬ ಜಂಗಮವಾಗಿ ಬಂದು ಲಿಂಗಾರ್ಚನೆಯ ಮಾಡಿಹೋದ;
ಅದರ ಕ್ರಿಯಾಂಗವನು ಮರೆದೆಯಲ್ಲಾ ಬಸವಣ್ಣಾ.
ದ್ವಾಪರಯುಗದಲ್ಲಿ ನೀನು ವೃಷಭನೆಂಬ ಗಣೇಶ್ವರನಾಗಿ ಬಂದು ಆರಾದಿಸುವಲ್ಲಿ,
ಅನಿಮಿಷನೆಂಬ ಜಂಗಮನಾಗಿ ಬಂದು ಲಿಂಗಾರ್ಚನೆಯ ಮಾಡಿಹೋದ;
ಅದರ ಕ್ರಿಯಾಂಗವ ಮರೆದೆಯಲ್ಲಾ ಬಸವಣ್ಣಾ.
ಕಲಿಯುಗದಲ್ಲಿ ನೀನು ಬಸವನೆಂಬ ಗಣೇಶ್ವರನಾಗಿ ಬಂದು ಆರಾದಿಸುವಲ್ಲಿ,
ಪ್ರಭುದೇವರೆಂಬ ಜಂಗಮವಾಗಿ ಲಿಂಗಾರ್ಚನೆಯ ಮಾಡಬಂದ
ಕಾಣಾ ಬಸವಣ್ಣಾ.
ಇಂತೀ ದೇವ ಭಕ್ತನೆಂಬ ನಾಮನಾಟಕ ಬಿನ್ನಾಣವಲ್ಲದೆ,
ಬೇರೆಂದು ಕಂಡವರಿಗೆ ನಾಯಕನರಕ ತಪ್ಪದು,
ಕೂಡಲಚೆನ್ನಸಂಗಮದೇವಾ./569
ಕೃತಯುಗದೊಳು ಸುವರ್ಣದ ಲಿಂಗವಾದಲ್ಲಿ
ನಿನ್ನ ಹೆಸರೇನು ?
ತ್ರೇತಾಯುಗದಲ್ಲಿ ಬೆಳ್ಳಿಯ ಲಿಂಗವಾದಲ್ಲಿ
ನಿನ್ನ ತಂದೆ ತಾಯಿ ಯಾರು ?
ದ್ವಾಪರದೊಳು ತಾಮ್ರದ ಲಿಂಗವಾದಲ್ಲಿ
ಹದಿನೆಂಟು ಜಾತಿಯ ಕೈಲಿ ಕಿಲುಬುಹೊಯಿತ್ತು.
ಕಲಿಯುಗದೊಳು ಕಲ್ಲ ಲಿಂಗವಾದಡೆ
ಇಕ್ಕಿದ ಓಗರವನುಣ್ಣದೇಕೋ ?
ಹಿಂದೊಮ್ಮೆ ನಾಲ್ಕು ಯುಗದೊಳು ಅಳಿದುಹೋದುದನರಿಯಾ ?
ಇನ್ನೇಕೆ ದೇವತನಕ್ಕೆ ಬೆರೆವುತ್ತಿಹೆ ?
ಸಾಕ್ಷಿ :
ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ
ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಫಲಂ ಭವೇತ್
ಇದು ಕಾರಣ ಕೂಡಲಚೆನ್ನಸಂಗಯ್ಯ ತಪ್ಪದೆ
ಸ್ಥಾವರ ದೇವರೆ ಜಂಗಮ ದೇವರ ಪ್ರಸಾದಕ್ಕೆ ಯೋಗ್ಯವಾಯಿತ್ತು.
ಅನಂತ ಯುಗಂಗಳೊಳಗೆ ಜಂಗಮ ದೇವರೆ ಪ್ರಾಣವಾದರಾಗಿ/570
ಕೃತ್ಯಕ್ಕೆ ಬಾರದ ಲಿಂಗವ ಕೃತ್ಯಕ್ಕೆ ತಂದವರಾರೊ ?
ಅವಾಙ್ಮನಸಗೋಚರ ಲಿಂಗವ,
ಬೊಬ್ಬಿಡಲು ಎಡೆದೆರಹಿಲ್ಲದ ಪರಿಪೂರ್ಣಲಿಂಗವ, ಪರಾಪರಲಿಂಗವ,
ಈ ಗುರು ಕೊಟ್ಟ, ಶಿಷ್ಯ ಕೊಂಡನೆಂಬ
ರಚ್ಚೆಯ ಭಂಡರ ನೋಡಾ ಕೂಡಲಚೆನ್ನಸಂಗದೇವಾ/571
ಕೆರೆಯಲ್ಲಿ ಕಂಡರೆ ಉದಕವೆಂಬೆ, ಮನೆಗೆ ಬಂದರೆ ಅಗ್ಘವಣಿಯೆಂಬೆ.
ಅಂಗಡಿಯಲ್ಲಿ ಕಂಡರೆ ಭತ್ತವೆಂಬೆ, ಮನೆಗೆ ಬಂದರೆ ಸಯದಾನವೆಂಬೆ
ಮಾಡುವೆ ನೀಡುವೆ, ನೀಡುವಲ್ಲಿ ಬೋನವೆಂಬೆ.
ಪ್ರಸಾದವೆಂದು ಅಂಜಿ ಎಂಜಲೆಂದರೆ
ಅಂದೇ ವ್ರತಗೇಡಿ ಕೂಡಲಚೆನ್ನಸಂಗಯ್ಯಾ. /572
ಕೆಸರಲ್ಲಿ ತಾವರೆ ಹುಟ್ಟಿ ದೇವರ ಮಂಡೆಯಲ್ಲಿರದೆ ?
ಉಚ್ಛಿಷ್ಟದಲ್ಲಿ, ಜಲಮಲಾದಿಗಳಲ್ಲಿ, ಸಮಸ್ತಜಗದಲ್ಲಿ,
ಸೂರ್ಯನ ಪ್ರಭೆ ಇದ್ದಡೇನು ಅಲ್ಲಿ ಅದು ಸಿಕ್ಕಿಹುದೆ ?
ಹೊಲೆಹದಿನೆಂಟು ಜಾತಿ ನೂರೊಂದು ಕುಲದಲ್ಲಿ ಶರಣನು ಹುಟ್ಟಿದಡೆ,
ಆ ಜಾತಿ-ಕುಲದಂತಿರಬಲ್ಲನೆ ?
ಸಾಕ್ಷಾತ್ ಪರಬ್ರಹ್ಮವೆ ಇಹ [ಲೋಕದಲ್ಲಿ] ಸಂಸಾರಿಯಾಗಿ ಬಂದನೆಂದರಿವುದು.
ಬಹಿರಂಗದಲ್ಲಿ ಕ್ರಿಯಾರಚನೆ,
ಅಂತರಂಗದಲ್ಲಿ ಅರುಹಿನ ಸ್ವಾನುಭಾವಸಿದ್ಧಾಂತ ಪರಿಪೂರ್ಣ ಶರಣನ,
ಈ ಮತ್ರ್ಯದ ನರಕಿ ಪ್ರಾಣಿಗಳು ಜರಿವರು.
ಕ್ರಿಯಾಚಾರವಿಲ್ಲದೆ, ಅರುಹಿನ ನೆಲೆಯನರಿಯದೆ,
ನಾನೇ ದೇವರೆಂದು ಅಹಂಕರಿಸಿಕೊಂಡಿಪ್ಪ ಅನಾಚಾರಿ ಹೊಲೆಯರಿಗೆ
ಅಘೋರನರಕ ತಪ್ಪದು ಕಾಣಾ,
ಕೂಡಲಚೆನ್ನಸಂಗಮದೇವರಲ್ಲಿ ಬಸವೇಶ್ವರದೇವರು ಸಾಕ್ಷಿಯಾಗಿ./573
ಕೇಶ ಕಾಷಾಯಾಂಬರ ವೇಷ ಲಾಂಛನವಾದಡೇನೊ ?
ಗ್ರಾಸಕ್ಕೆ ಭಾಜನರಲ್ಲದೆ ಲಿಂಗಕ್ಕೆ ಭಾಜನರಲ್ಲ.
ಈ ಆಸೆಯ ವೇಷವ ಕಂಡಡೆ ಕಾರಹುಣ್ಣಿಮೆಯ ಹಗರಣವೆಂಬೆ ಕಾಣಾ
ಕೂಡಲಚೆನ್ನಸಂಗಮದೇವಾ./574
ಕೊಂಡಡಗಿದನೊಬ್ಬ, ಕೊಟ್ಟರಸಿದನೊಬ್ಬನು.
ಈರೇಳು ಭುವನವರಿಯಲು ವೃಷಭನು ವಿಸ್ಮಯಗೊಂಡನು !
ಭೂಮಿಯ ಜಲಗುಗರ್ಚಿ ಹೇಮರಸವನರಸುವಂತೆ
ಅರಸುತ್ತಿದ್ದನಯ್ಯಾ ಜಂಗಮದೊಳಗೆ ಲಿಂಗವನು,
ಏಕೋನಿಷ್ಠೆಯ ಕಂಡಡೆ ಎತ್ತಿಕೊಂಡನಯ್ಯಾ ಶಿವನು !
ಜಪಸಮಾದಿಯೊಳಗೆ ಅಡಗಿದ್ದಡೆ, ಲಿಂಗವಾಗಿ ಬಂದರೀ ಪ್ರಭುದೇವರು.
ನಿಮ್ಮಡಿಗಳು ಅಸಂಖ್ಯಾತರಿಗೆ ಮಾಡಿದ ಸಯಧಾನವ
ನೀನೊಬ್ಬನೆ ಆರಿಸಿಕೊಟ್ಟಂದು
ಕೂಡಲಚೆನ್ನಸಂಗಯ್ಯನಲ್ಲಿ ಲಿಂಗವೆಂದರಿದನಯ್ಯಾ ನಿಮ್ಮನು
ನಮ್ಮ ಸಂಗನಬಸವಣ್ಣನು/575
ಕೊಟ್ಟುದೊಂದು ಸೂತಕ[ಮುಟ್ಟಿದು]ದೊಂದು ಸೂತಕ,
ಕೊಟ್ಟು ಕೊಂಬುದೊಂದು ಸೂತಕ.
ಲಿಂಗನಿಜಾಯತಂಗೆ ಇವೆಲ್ಲಿಯವು?
ಕೂಡಲಚೆನ್ನಸಂಗಾ ಲಿಂಗ ನಾನೆಂಬ ಸೂತಕವಿಲ್ಲಾಗಿ./576
ಕ್ರಮವರಿದು ಭ್ರಮೆ ತಿಳಿದು ಅಮಳಸಂಯೋಗದಲ್ಲಿ ಸಮನಿಸೂದು,
`ಏಕ ಏವ ನ ದ್ವಿತೀಯಃ’ ಎಂಬುದನರಿದು ಸಮನಿಸೂದು,
ಶಿವಾತ್ಮಕೋ ಲಿಂಗದೇಹೀ ಅಂಗಾಚಾರೇಣ ಲೌಕಿಕಃ
ಸರ್ವಂ ಲಿಂಗಮಯಂ ಪ್ರೋಕ್ತಂ ಲಿಂಗೇನ ಸಹ ವರ್ತತೇ
ಇದು ಕಾರಣ, ಕೂಡಲಚೆನ್ನಸಂಗನಲ್ಲಿ
ಸಹಭೋಜನ ಸಮನಿಸೂದು. /577
ಕ್ರಿಯಾದೀಕ್ಷೆಹೀನರಿಗೆ
ಮಂತ್ರೋಪದೇಶವ ಹೇಳುವನೊಬ್ಬ ಲಿಂಗದ್ರೋಹಿ ನೋಡ !
ಕೂಡಲಚೆನ್ನಸಂಗಮದೇವ. /578
ಕ್ರಿಯಾಲಿಂಗದ ಲಿಂಗಿಗಳೆಲ್ಲ ಕ್ರೀಯಳಿದ ಭಕ್ತರೆಂಬರಯ್ಯಾ.
ಕ್ರೀಯಳಿದ ಭಕ್ತಂಗೆ ಲಿಂಗವುಂಟೆ ?
ಕ್ರೀಯಳಿದ ಭಕ್ತಂಗೆ ಜಂಗಮವುಂಟೆ ?
ಕ್ರೀಯಳಿದ ಭಕ್ತಂಗೆ ಪ್ರಸಾದವುಂಟೆ ?
ಕ್ರೀಯಳಿದು ನಿಃಕ್ರೀಯಲ್ಲಿ ನಿಂದ ಕೂಡಲಚೆನ್ನಸಂಗಾ ನಿಮ್ಮ ಶರಣ./579
ಕ್ರಿಯೆ ಜಡವೆಂಬರು, ಜ್ಞಾನ ಅಜಡವೆಂಬರು ಅದೆಂತಯ್ಯಾ ?
ನೀತಿಯ ಹೇಳಿದುದು ಜಡವೆ ?
ಕಷ್ಟವಿಲ್ಲದೆ ಬಂದಂತೆ ಬೊಗಳಿ ಭೋಗಿಸಿ
ಭವಕ್ಕೆ ಹೋಗುವುದು ಅಜಡವೆ ?
ಕ್ರಿಯಾ-ಜ್ಞಾನವೆಂಬ ಉಭಯ ಶಬ್ದಾರ್ಥವನರಿಯದೆ
ಕಂಡ ಕಂಡ ಹಾಗೆ ಬೊಗಳುವ ಹೊಲೆಮಾದಿಗರನು ಏನೆಂಬೆ
ಕೂಡಲಚೆನ್ನಸಂಗಮದೇವಾ ?/580
ಕ್ರಿಯೆಯಿಲ್ಲದ ಭಕ್ತ ಮನುಜ, ಕ್ರಿಯೆಯಿಲ್ಲದ ಮಹೇಶ ರಾಕ್ಷಸ,
ಕ್ರಿಯೆಯಿಲ್ಲದ ಪ್ರಸಾದಿ ಯವನ, ಕ್ರಿಯೆಯಿಲ್ಲದ ಪ್ರಾಣಲಿಂಗಿ ಭವಿ,
ಕ್ರಿಯೆಯಿಲ್ಲದ ಶರಣ ಅಜ್ಞಾನಿ,
ಕ್ರಿಯೆಯಿಲ್ಲದ ಲಿಂಗೈಕ್ಯ ಜನನಕ್ಕೊಳಗು ನೋಡಾ,
ಕೂಡಲಚೆನ್ನಸಂಗಮದೇವಾ./581
ಕ್ರಿಯೆಯೆ ಜ್ಞಾನ, ಆ ಜ್ಞಾನವೆ ಕ್ರಿಯೆ.
ಜ್ಞಾನವೆಂದಡೆ ತಿಳಿಯುವುದು,
ಕ್ರಿಯೆಯೆಂದಡೆ ತಿಳಿದಂತೆ ಮಾಡುವುದು
ಪರಸ್ತ್ರೀಯ ಭೋಗಿಸಬಾರದೆಂಬುದೆ ಜ್ಞಾನ;
ಅದರಂತೆ ಆಚರಿಸುವುದೆ ಕ್ರಿಯೆ.
ಅಂತು ಆಚರಿಸದಿದ್ದಡೆ ಅದೆ ಅಜ್ಞಾನ ನೋಡಾ,
ಕೂಡಲಚೆನ್ನಸಂಗಮದೇವಾ/582
ಕ್ರೀಯಿಂದಾದುದು ಲಿಂಗವೆಂದೆಂಬರು,
ಕ್ರೀಯಿಂದಾದುದು ಜಂಗಮವೆಂದೆಂಬರು.
ಕ್ರೀಯಿಂದಾದುದು ಲಿಂಗವಲ್ಲ, ಜಂಗಮವಲ್ಲ,
ಜಂಗಮವುಂಟು ಜಂಗಮವಲ್ಲ.
ಜಂಗಮ ಸುನಾದರೂಪು, ಕೂಡಲಚೆನ್ನಸಂಗಮದೇವಾ. /583
ಕ್ರೀಯಿಲ್ಲದೆ ನಿಃ ಕ್ರೀಯಲ್ಲಿ ನಡೆಯಲೆಂತುಬಹುದು?
ಸೀಮೆಯಿಲ್ಲದೆ ನಿಸ್ಸೀಮೆಯಲ್ಲಿ ನಡೆಯಲೆಂತುಬಹುದು?
ಮೊದಲಿಲ್ಲದೆ ಲಾಭವನರಸಬಹುದೆ?
ಹರಿವ ಮನವ ನಿಲ್ಲೆಂದು ನಿಲಿಸಿ ಜಿಹ್ವೆಯ ಭುಂಜಕತನವ ಕಳೆದು
ಲಿಂಗಭೋಗೋಪಭೋಗಿಯಾದಲ್ಲದೆ ಮೆಚ್ಚುವನೆ
ಕೂಡಲಚೆನ್ನಸಂಗಾ ನಿಮ್ಮ ಶರಣ? /584
ಕ್ರೀಯೆಂಬುದನಾರು ಬಲ್ಲರು ?
ಅಂಗಲಿಂಗವೆಂಬ
ಸಂದಳಿಯದುದು ಕ್ರೀಯಲ್ಲ,
ಲಿಂಗಜಂಗಮವೆಂಬ ಸಂದಳಿಯದುದು ಕ್ರೀಯಲ್ಲ.
ಅರ್ಪಿತ ಅನರ್ಪಿತವೆಂಬ ಸಂದಳಿಯದುದು ಕ್ರೀಯಲ್ಲ.
ಅಲ್ಲ ಎನಲಿಲ್ಲ.
ಇಂತೀ ಕ್ರೀಯೊಳಗಿದ್ದ ನಿಷ್ಕ್ರೀವಂತರ ತೋರಾ.
ನಿಷ್ಕ್ಟೀಯೆಂಬುದಾವುದು ?
ಕ್ರೀ ತನು, ನಿಷ್ಕ್ರೀ ಪ್ರಾಣ, ತನುವೆ ಲಿಂಗ, ಪ್ರಾಣವೆ ಜಂಗಮ.
ತನುವ ಸಯವ ಮಾಡಿ, ಆ ಪ್ರಾಣಲಿಂಗಜಂಗಮಕ್ಕೆ
ಮನವನರ್ಪಿಸುವ ನಿಷ್ಕ್ರೀಪ್ರಸಾದಿಗಳ ತೋರಾ.
ಕೂಡಲಚೆನ್ನಸಂಗಮದೇವಾ ನಿಮ್ಮ ಧರ್ಮ, ನಿಮ್ಮ ಧರ್ಮ/585
ಕ್ಷತ್ರಿಯ ಮಂತ್ರಿ ಜಗಕ್ಕೆ ರಾಜಾಂಗವೆ ?
ಸಪ್ತಾಂಗ ಸನ್ನಾಹವೆಂಬುದು ಸಂಭ್ರಮ ಸಹಿತ
ಉನ್ಮದನ ಮೋಹಿನಿಗಳೆಲ್ಲಾ ಅನುದಪ್ಪಿ ಹೋದರಾಗಿ ಅಂತಃಕರಣ ಘನವೇದಿಸಿ ಶಬ್ದನಿಷ್ಪತ್ತಿಗಳಿಗಲ್ಲದೆ
ಸಹಭೋಜನವಳವಡದು ಕೂಡಲಚೆನ್ನಸಂಗಮದೇವಾ. /586
ಕ್ಷೀರವ ಸೋಂಕಿದ ಜಲವ ಬೇರೆ ಮಾಡಬಹುದೇ?
ಪರಿಮಳವ ಸೋಂಕಿದ ವಾಯುವ ವಿವರಿಸಲುಂಟೆ?
ಉತ್ತಮಂ ಏಕಭುಕ್ತಂ ಚ ಮಧ್ಯಮಂ ದ್ವಯಸ್ವೀಕೃತಂ
ಕನಿಷ್ಠೋನಖರ್ಪಿತಶ್ಚೈವ ಪ್ರಸಾದೋ ನಿಷ್ಫಲೋ ಭವೇತ್
ಎಂದುದಾಗಿ ನಿರೂಪಿಂಗೆ ರೂಪನರ್ಪಣೆಯ ಮಾಡಿ,
ರುಚಿ ಪರಿಮಳ ಭಾವದತ್ತಲು ಅವಧಾನಿಯಾಗಿಪ್ಪ ನಿಮ್ಮ ಶರಣ.
ಬೇರೆ ಮತ್ತೆ ವ್ಯವಧಾನವಿಲ್ಲದಂತಿಪ್ಪ ಕಾಣಾ,
ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿ. /587
ಕ್ಷೀರಸಾಗರದೊಳಗೆ ಓಲಾಡುತಿರ್ಪ ಸುಖಿ, ನೀರವಟ್ಟೆಯಕಟ್ಟಿ ನೆಳಲ ಕಡಿದು,
ಏಳುಬಾವಿಯಲ್ಲಿ ನೆಗೆಯ, ಎರಡುಬಾವಿಯಲ್ಲಿ ಉಣ್ಣ !
ಬೇರೆ ಹೇಳುವಡೆ ;
ಇಂತು ಅನುಭಾವವೆ ಪಂಚರಸವೆಂಬವನು ಪಂಚಮುಖದಲ್ಲಿ ಕಟ್ಟಿ
ಪಂಚಪಂಚೈವರನೊಂದು ಮಾಡಿ
ಅಂಚಟೆಯ ರೂಹಿಂಗೆ ಅರುವೆಯೊಂದನೆ ಹಾಸಿ-
ಇಂತು ಸಂಸಾರದ ನಿಲವು ನೋಡಾ.
ಹಲ್ಲಿ ಉತ್ತರ ಬಾಗಿಲಲ್ಲಿ ಸರಗೆಯ್ಯಲು
ಅಲ್ಲಿ ತೆಂಕಣ ಶಕುನವೊಂದಾಗಲು
ಬಲ್ಲನಂಟರು ಬಂದು ಮುಂದೆ ನಿಜ ನಿಂದಿರಲು
ಎಲ್ಲರು ಮೈಸಾಗಿಸಲು ಪಾದವ ಹಿಡಿಯೆ
ತಲೆಗಳ ಹಿಡಿದು ಕೈಗಳಲ್ಲಿ ನೆಗಹುತ್ತಿರಲು
ಎಲ್ಲರು ಹಾಡುತ್ತ ಹರಸುವ ಹರಕೆಯಿಂದ ದೈವ ದಳವೇರಿ
ಕೂಡಲಚೆನ್ನಸಂಗಯ್ಯನೊಳಗೆ `ಬಸವಣ್ಣ ಶರಣೆನುತ
ತಾನು ಹೊಕ್ಕ ಶರಣನು/588
ಕ್ಷುತ್ತು ಪಿಪಾಸೆ ಶೋಕ ಮೋಹ ಜರೆ ಮರಣವೆಂಬ
ಆರರ ರಾಶಿಯಂ ಕೆಡಿಸಿದಾತನೆ ಸದ್ಗುರು.
ಚತುಃ ಷಡು ದಶ ದ್ವಾದಶ ಷೋಡಶ ದ್ವಿಪತ್ರವೆಂಬ
ಷಡುಸ್ಥಾನದ ಮೇಲಣ ಶ್ವೇತದಳದೊಳಗಣ
ಶಶಿ ಸ್ಥಾನವ ತೋರದೆ, ನಿಜಸ್ಥಾನ ಹೃದಯಕಮಲ ಕನರ್ಿಕಾ ಮಧ್ಯದ
ಆತ್ಮಲಿಂಗಜ್ಯೋತಿಯ ತೋರಬಲ್ಲಡೆ ಆತನೇ ಚರಲಿಂಗ,
ಶೈವ, ಭಾಟ್ಟ, ವೈಶೇಷಿಕ, ಜೈನ, ಬೌದ್ಧ ಚಾರ್ವಾಕವೆಂಬ
ಷಡುದರುಶನದ ಹಂಬಲವನಡಗಿಸಿದಾತನಾಗಿ,
ವಾದ ವಶ್ಯ ಯಂತ್ರ ಮಾಹೇಂದ್ರಜಾಲ ಆಕರ್ಷಣ
ಉಚ್ಚಾಟನವೆಂಬ ಆರು ಭ್ರಮೆಯನಡಗಿಸಿದಾತನಾಗಿ
ಪ್ರಣವಪಂಚಾಕ್ಷರ ಪದಸ್ಥನಾಗಿ ಇಂತೀ ಷಷ್ಠಸಂಪಾದನೆ
ಮೂವತ್ತಾರರಿಂದ ಕೂಡಲಚೆನ್ನಸಂಗಯ್ಯಾ
ಶರಣ ಬಸವಣ್ಣ ಬರಿಯ ಬಯಲು/589
ಖಂಡಿತವಿಲ್ಲಾಗಿ ಸರ್ವಾಂಗವೂ ನಾಸಿಕವಾಯಿತ್ತು.
ತಾನಲ್ಲದೆ ಅನ್ಯವಾಸನೆಯಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ಪೃಥ್ವಿಯಡಗಿತ್ತು.
ಖಂಡತವಿಲ್ಲಾಗಿ ಸರ್ವಾಂಗವೂ ಜಿಹ್ವೆಯಾಯಿತ್ತು.
ತಾನಲ್ಲದೆ ಅನ್ಯ ರುಚಿಯಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ಅಪ್ಪುವಡಗಿತ್ತು.
ಖಂಡಿತವಿಲ್ಲಾಗಿ ಸರ್ವಾಂಗವೂ ನೇತ್ರವಾಯಿತ್ತು.
ತಾನಲ್ಲದೆ ಅನ್ಯ ರೂಪಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ಅಗ್ನಿಯಡಗಿತ್ತು.
ಖಂಡಿತವಿಲ್ಲಾಗಿ ಸರ್ವಾಂಗವೂ ಮಹಾತ್ವಕ್ಕಾಯಿತ್ತು.
ತಾನಲ್ಲದೆ ಅನ್ಯಸ್ಪರ್ಶವಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ವಾಯುವಡಗಿತ್ತು
ಖಂಡಿತವಿಲ್ಲಾಗಿ ಸರ್ವಾಂಗವೂ ಶ್ರೋತ್ರವಾಯಿತ್ತು
ತಾನಲ್ಲದೆ ಅನ್ಯ ಶಬ್ದವಿಲ್ಲಾಗಿ ಅಲ್ಲಿಯ ಮಹತ್ತಪ್ಪ ಆಕಾಶವಡಗಿತ್ತು.
ಇಂತು ಬ್ರಹ್ಮಾಂಡವೆ ಪಂಚಭೂತಮಯವಾದಡೆ,
ಶರಣನ ಸರ್ವಾಂಗದಲ್ಲಿ ಪಂಚಬ್ರಹ್ಮಮಯವಡಗಿತ್ತು.
ಅದೆ ಪಂಚವರ್ಣಾತೀತವಾದ ಮಹಾಬಯಲೊಳಗೆ ನಿಂದ ಭೇದವು.
ಅದರಲ್ಲಿ ಜಗತ್ತು ಅಡಗಿದ ಭೇದವ, ಮಹತ್ತು ಮಹತ್ತನೊಳಕೊಂಡ ಭೇದವ
ಏನೆಂದುಪಮಿಸುವೆನಯ್ಯಾ, ಕೂಡಲಚೆನ್ನಸಂಗಯ್ಯಾ ! /590
ಖಂಡಿತವೆನ್ನದೆ, ಸಹಜವೆನ್ನದೆ, ನಿಜವೆನ್ನದೆ
ಪರಿಪೂರ್ಣವೆನ್ನದೆ, ಏನೂ ಎನ್ನದೆ
ಕೂಡಲಚೆನ್ನಸಂಗಯ್ಯನನೇನೆನ್ನದಿಪ್ಪುದು ನಿಜೈಕ್ಯವು./591
ಗಂಡಭೇರುಂಡನೆಂಬ ಪಕ್ಷಿಗೆ
ತಲೆ ಎರಡು, ದೇಹವೊಂದು.
ಒಂದು ತಲೆಯಲ್ಲಿ ಹಾಲನೆರೆದು,
ಒಂದು ತಲೆಯಲ್ಲಿ ವಿಷವನೆರೆದಡೆ,
ಆ ಪಕ್ಷಿಗೆ ಮರಣವಲ್ಲದೆ
ಜಯವಪ್ಪುದೇ ಅಯ್ಯಾ ?
ಲಿಂಗವ ಪೂಜಿಸಿ ಜಂಗಮವ ಮರೆದಡೆ
ಕುಂಬಿನೀನರಕ ತಪ್ಪುದು ಕಾಣಾ
ಕೂಡಲಚೆನ್ನಸಂಗಮದೇವಯ್ಯಾ/592
ಗಂಧ-ದುರ್ಗಂಧ, ರಸ-ನೀರಸ, ರೂಪು-ಕುರೂಪು
ಸ್ಪರ್ಶನ-ಅಸ್ಪರ್ಶನ, ಶಬ್ದ-ನಿಶ್ಶಬ್ದ,
ಲಿಂಗಮುಖಕ್ಕೆ ಬಾರದುದು ಕೃತಕಿಲ್ಬಿಷವಯ್ಯಾ,
ಕೂಡಲಚೆನ್ನಸಂಗಯ್ಯಾ,
ನಿಮ್ಮತ್ತ ಮುಂದಾಗದುದೆಲ್ಲ, ಎನ್ನತ್ತ ಮುಂದಾಗದು/593
ಗಚ್ಛನ್ ತಿಷ್ಠನ್, ಸ್ವಪನ್ ಜಾಗ್ರನುನ್ಮಿಷನ್ನಿಮಿಷನ್ನಪಿ
ಶುಚಿರ್ವಾಪ್ಯಶುಚಿರ್ವಾಪಿ ಲಿಂಗಂ ಸರ್ವತ್ರ ಧಾರಯೇತ್
ಇಂತೆಂದುದಾಗಿ,
ಕಂಗಳ ಮುಂದಣಿಂದ ಗುರುಲಿಂಗ ಹಿಂಗಿದಡೆ,
ವ್ರತಕ್ಕೆ ಭಂಗವಾಗುವುದೆಂದು (ಶ್ರೀಗುರು) ತಂದುಕೊಟ್ಟನು
ಕರಸ್ಥಲದಲ್ಲಿ ಇಷ್ಟಲಿಂಗವನು.
ಆ ಲಿಂಗ ಮುಟ್ಟಲೊಡನೆ
ತನು ಪ್ರಸಾದವಾಯಿತ್ತು ಮನ ಪ್ರಸಾದವಾಯಿತ್ತು.
ಇಂತು ಸರ್ವಾಂಗ ಪ್ರಸಾದವಾಯಿತ್ತು ಕೂಡಲಚೆನ್ನಸಂಗಮದೇವಾ/594
ಗತಿಪದಮುಕ್ತಿಯ ಬಯಸಿ ಮಾಡುವಾತ ಭಕ್ತನಲ್ಲ,
ಜೀವನೋಪಾಯಕ್ಕೆ ಬೇಡುವಾತ ಜಂಗಮವಲ್ಲ.
ಗತಿಪದ ಮುಕ್ತಿಸೂತಕವಿರಹಿತ ಭಕ್ತ,
ಹಮ್ಮು ಬಿಮ್ಮು ಗಮನನಾಸ್ತಿ ಜಂಗಮ.
ಮಾಡುವಡೆ ಭಕ್ತ ಮಾಟದೊಳಗಿಲ್ಲದಿರಬೇಕು,
ಬೇಡುವಡೆ ಜಂಗಮ ಕೊಂಬುದರೊಳಗಿಲ್ಲದಿರಬೇಕು.
ಪ್ರಾಣವಿಲ್ಲದ ಭಕ್ತ ರೂಹಿಲ್ಲದ ಜಂಗಮ,
ಉಭಯಕುಳ ಸಂದಳಿದಂದು
ಕೂಡಲಚೆನ್ನಸಂಗನಲ್ಲಿ ಭಕ್ತಜಂಗಮವೆಂಬೆ/595
ಗಮನಿ ಲಿಂಗಜಂಗಮ, ನಿರ್ಗಮನಿ ಜಂಗಮಲಿಂಗ.
ಲಿಂಗಜಂಗಮ ಉಭಯಾರ್ಥದ ಸಂಚವನಾವುದ ಘನವೆಂಬೆ? ಆವುದ ಕಿರಿದೆಂಬೆ?
ಆಚಾರವುಳ್ಳಲ್ಲಿ ಪ್ರಾಣಲಿಂಗವಿಲ್ಲ, ಪ್ರಾಣಲಿಂಗವುಳ್ಳಲ್ಲಿ ಪ್ರಸಾದವಿಲ್ಲ.
ಇದು ಕಾರಣ ಕೂಡಲಚೆನ್ನಸಂಗಮದೇವಾ
ಅನಾಚಾರಿಗಲ್ಲದೆ ಪ್ರಸಾದವಿಲ್ಲ. /596
ಗುದ ಲಿಂಗ ನಾಬಿಮಂಡಲದಿಂದ ಮೇಲೆ ಷಡಂಗುಲವ ಹತ್ತಿ,
ಅಧೋಮುಖಕಮಲವನು ಊಧ್ರ್ವಮುಖಕ್ಕೆ ತಂದು,
`ನಾಭ್ಯಾ ಆಸೀದಂತರಿಕ್ಷಂ ಎಂಬ ಅಂತರಿಕ್ಷದೊಳಗಿಪ್ಪ
ಚಿದಾತ್ಮನಪ್ಪಂತಹ ಆದಿತ್ಯನ ಕಿರಣಂಗು ಹೋಗಿ ತಾಗಲ್ಕೆ,
ಆ ಪದ್ಮ ವಿಕಸಿತವಾಗಿ,
ಅನೇಕ ರತ್ನಸಂಕೀರ್ಣವಪ್ಪಂತಹ ಹೃದಯದೀಪ್ತಿಯ ಪ್ರಕಾಶವ ಕಂಡು
ಶಿವಜ್ಞಾನದೊಳಿಡಿದು,
ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ
ಧ್ಯಾನ ಧಾರಣ ಸಮಾದಿ ಎಂಬೀ
ಅಷ್ಟಾಂಗಯೋಗದೊಳ್ವಿಡಿದು
ನಿಟಿಲತಟ ಭ್ರೂಮಧ್ಯದ ಮೇಲಣ ಉಭಯದಳಕಮಲದ ಮೇಲೆ ಇಪ್ಪ
ಜೀವ ಪರಮನ ಭೇದವೆಂತಿರ್ದುದೆಂದಡೆ;
ಜೀವಾತ್ಮಪರಮಾತ್ಮೇತಿ ಭೇದಂ ತ್ಯಕ್ತ್ವಾ ಪರಾಂ ಗತಿಂ
ಅಭ್ಯೇತಿ ಪುರುಷಃ ಸಾಕ್ಷೀ ಕ್ಷೇತ್ರಜ್ಞೋಕ್ಷಯಮಶ್ನುತೇ ಎಂದುದಾಗಿ
ಜೀವಪರಮರಿಬ್ಬರನು ಏಕಾರ್ಥವ ಮಾಡಲ್ಕೆ,
ದ್ವಾಸುಪರ್ಣಾ ಸಯುಜಾ ಸಾಖಾಯಾ ಸಮಾನಂ ವೃಕ್ಷಂ ಪರಿಷಸ್ವಜಾತೇ
ತಯೋರನ್ಯಃ ಪಿಪ್ಪಲಂ ಸ್ವಾದ್ವತ್ತಿ ಅನಶ್ನನ್ನನ್ಯೋಬಿಚಾಕಶೀತಿ ಎಂದುದಾಗಿ
ಬ್ರಹ್ಮನಾ?ದ ಮೇಲೆ ಪ್ರಯೋಗಿಸಿ ಕವಾಟದ್ವಾರವ ತೆಗೆದು
ತೆರಹಿಲ್ಲದ ಬಯಲು-ಕೂಡಲಚೆನ್ನಸಂಗಾ ನಿಮ್ಮ ಶರಣ/597
ಗುದಸ್ಥಾನದಲ್ಲಿ ಆಧಾರಚಕ್ರ, ಅಲ್ಲಿಗೆ ಪೃಥ್ವಿಯೆಂಬ ಮಹಾಭೂತ,
ಸದ್ಯೋಜಾತವಕ್ತ್ರ,
ಬ್ರಹ್ಮ ಪೂಜಾರಿ, ಸುವರ್ಣದ ತೇಜ, ಬಾಲರವಿಕೋಟಿ ಪ್ರಕಾಶ,
ನಾಲ್ಕೆಸಳಿನ ತಾವರೆಯ ಮಧ್ಯದಲ್ಲಿ
ಸುವರ್ಣಮಯಲಿಂಗ – ಅದು ಆಚಾರಲಿಂಗ, ಅದಕ್ಕೆ ಬೀಜಾಕ್ಷಾರ
ಓಂ ನಾಂ ನಾಂ ನಾಂ ಎಂಬ ನಾದಘೋಷ. ಎಸಳು ನಾಲ್ಕರಲ್ಲಿ
ವ, ಶ, ಷ, ಸ ಎಂಬ ನಾಲ್ಕಕ್ಷರ.
ಅದು ದೇವರಿಗೂ ತಮಗೂ ಪಶ್ಚಿಮಮುಖ- ಸದ್ಯೋಜಾತ ವಕ್ತ್ರ, ಆಧಾರಚಕ್ರ.
ಲಿಂಗಸ್ಥಾನದಲ್ಲಿ ಸ್ವಾದಿಷ್ಠಾನಚಕ್ರ, ಅಲ್ಲಿಗೆ ಅಪ್ಪುವೆಂಬ
ಮಹಾಭೂತ, ವಾಮದೇವವಕ್ತ್ರ,
ವಿಷ್ಣು ಪೂಜಾರಿ, ನೀಲದ ತೇಜ, ಬಾಲದ್ವಿಕೋಟಿ ಸೂರ್ಯಪ್ರಕಾಶ,
ಅರೆಸಳಿನ ತಾವರೆಯ ಮಧ್ಯದಲ್ಲಿ
ಗೋಕ್ಷೀರದ ಹಾಗೆ ಧವಳ ವರ್ಣದ ಲಿಂಗ – ಅದು ಗುರುಲಿಂಗ; ಅದಕ್ಕೆ ಬೀಜಾಕ್ಷರ
ಓಂ ಮಾಂ ಮಾಂ ಮಾಂ ಎಂಬ ನಾದಘೋಷ.
ಎಸಳು ಆರರಲ್ಲಿ ಬ ಭ ಮ ಯ ರ ಲ ಎಂಬ ಷಡಕ್ಷರ
ಅದು ದೇವರಿಗೂ ತಮಗೂ ಉತ್ತರಮುಖ-ವಾಮದೇವವಕ್ತ್ರ, ಸ್ವಾದಿಷ್ಠಾನಚಕ್ರ.
ನಾಬಿಸ್ಥಾನದಲ್ಲಿ ಮಣಿಪೂರಕಚಕ್ರ,
ಅಲ್ಲಿಗೆ ಅಗ್ನಿಯೆಂಬ ಮಹಾಭೂತ, ಅಘೋರವಕ್ತ್ರ
ರುದ್ರ ಪೂಜಾರಿ, ಮಾಣಿಕ್ಯತೇಜ, ಬಾಲತ್ರಿಕೋಟಿಸೂರ್ಯಪ್ರಕಾಶ,
ಹತ್ತೆಸಳಿನ ತಾವರೆಯ ಮಧ್ಯದಲ್ಲಿ
ಮಾಣಿಕ್ಯವರ್ಣದ ಲಿಂಗ-ಅದು ಶಿವಲಿಂಗ, ಅದಕ್ಕೆ ಬೀಜಾಕ್ಷರ
ಓಂ ಶಿಂ ಶಿಂ ಶಿಂ ಎಂಬ ನಾದಘೋಷ.
ಎಸಳು ಹತ್ತರಲ್ಲಿ ಡ, ಢ, ಣ, ತ, ಥ, ದ, ಧ, ನ, ಪ, ಫ ಎಂಬ ದಶಾಕ್ಷರ.
ಅದು ದೇವರಿಗೂ ತಮಗೂ ದಕ್ಷಿಣಮುಖ – ಅಘೋರವಕ್ತ್ರ, ಮಣಿಪೂರಕಚಕ್ರ.
ಹೃದಯ ಸ್ಥಾನದಲ್ಲಿ ಅನಾಹತಚಕ್ರ,
ಅಲ್ಲಿಗೆ ವಾಯುವೆಂಬ ಮಹಾಭೂತ, ತತ್ಪುರುಷವಕ್ತ್ರ,
ಈಶ್ವರ ಪೂಜಾರಿ ಕಪೋತವರ್ಣದ ತೇಜ,
ಬಾಲಚತುಷ್ಕೋಟಿ ಸೂರ್ಯಪ್ರಕಾಶ, ಹನ್ನೆರಡೆಸಳಿನ ತಾವರೆಯ
ಮಧ್ಯದಲ್ಲಿ ಶುದ್ಧ ಪಚ್ಚವರ್ಣದಲಿಂಗ-ಅದು ಜಂಗಮಲಿಂಗ, ಅದಕ್ಕೆ ಬೀಜಾಕ್ಷರ
ಓಂ ವಾಂ ವಾಂ ವಾಂ ಎಂಬ ನಾದಘೋಷ.
ಎಸಳು ಹನ್ನೆರಡರಲ್ಲಿ ಕ ಖ ಗ ಘ ಙ ಚ ಛ ಜ ಝ ಞ ಟಂಠ
ಎಂಬ ದ್ವಾದಶಾಕ್ಷರ
ಅದು ದೇವರಿಗೂ ತಮಗೂ ಪೂರ್ವಮುಖ-ತತ್ಪುರುಷ ವಕ್ತ್ರ, ಅನಾಹತ ಚಕ್ರ.
ಕಠಸ್ಥಾನದಲ್ಲಿ ವಿಶುದ್ಧಿಚಕ್ರ, ಅಲ್ಲಿಗೆ ಆಕಾಶವೆಂಬ ಮಹಾಭೂತ, ಈಶಾನವಕ್ತ್ರ,
ಸದಾಶಿವ ಪೂಜಾರಿ, ವಿದ್ಯುಲ್ಲತೆಯ ತೇಜ,
ಬಾಲಪಂಚಕೋಟಿ ಸೂರ್ಯಪ್ರಕಾಶ, ಹದಿನಾರೆಸಳಿನ ತಾವರೆಯ ಮಧ್ಯದಲ್ಲಿ
ಅನಂತಕೋಟಿ ಮಿಂಚುಗಳ ವರ್ಣದ ಲಿಂಗ-
ಅದು ಪ್ರಸಾದಲಿಂಗ, [ಓಂ ಯಾಂ ಯಾಂ ಯಾಂ ಎಂಬ
ನಾದಘೋಷ]. ಎಸಳು ಹದಿನಾರರಲ್ಲಿ
ಅ ಆ ಇ ಈ ಉ ಊ ಋ ೂ ಏ ಐ ಓ ಔ ಅಂ ಅಃ ಎಂಬ
ಷೋಡಶಾಕ್ಷರ. ಅದು ದೇವರಿಗೂ ತಮಗೂ ಊಧ್ರ್ವಮುಖ-
ಈಶಾನವಕ್ತ್ರ, ವಿಶುದ್ಧಿಚಕ್ರ.
ಭ್ರೂಮಧ್ಯದಲ್ಲಿ ಆಜ್ಞಾಚಕ್ರ, ಅಲ್ಲಿಗೆ ಮನವೆಂಬ ಮಹಾಭೂತ, ಶ್ರೀಗುರುವೆ ವಕ್ತ್ರ
ಮಾಹೇಶ್ವರ ಪೂಜಾರಿ, ಜ್ಯೋತಿರ್ವರ್ಣದ ತೇಜ.
ಬಾಲಷಟ್ಕೋಟಿ ಸೂರ್ಯಪ್ರಕಾಶ
ಎರಡೆಸಳಿನ ತಾವರೆಯ ಮಧ್ಯದಲ್ಲಿ ಶ್ರೀಗುರುವಿನ ಶ್ರೀಪಾದದ ವರ್ಣದ ಲಿಂಗ
ಎಡಗಡೆಯ ಪಾದ ಕೆಂಪು ವರ್ಣ,
ಬಲಗಡೆಯ ಪಾದ ಶ್ವೇತವರ್ಣ-ಅದು ಮಹಾಲಿಂಗ.
ಅದಕ್ಕೆ ಬೀಜಾಕ್ಷರ `ಓಂಕಾರನಾದ ಘೋಷ.
ಎಸಳೆರಡರಲ್ಲಿ ಅಕ್ಷರ ಹಂ ಸಂ ಎಂಬ [ಎರಡಕ್ಷರ]
ಅದು ದೇವರಿಗೂ ತನಗೂ ಗಂಬಿರ ಮುಖ-ಶ್ರೀಗುರುವಕ್ತ್ರ, ಆಜ್ಞಾಚಕ್ರ.
ಅಲ್ಲಿಂದತ್ತ ಬ್ರಹ್ಮರಂಧ್ರದಲ್ಲಿ ಬ್ರಹ್ಮಚಕ್ರ ಅಲ್ಲಿಗೆ
ಚಂದ್ರನೆಂಬ ಮಹಾಭೂತ, ಲಿಂಗವಕ್ತ್ರ
ಪರಮೇಶ್ವರ ಪೂಜಾರಿ, ಮಹಾಜ್ಯೋತಿರ್ವರ್ಣದ ತೇಜ,
ಬಾಲ ಅನಂತಕೋಟಿಸೂರ್ಯಪ್ರಕಾಶ
ಒಂದುನೂರ ಎಂಟು ಸಾವಿರೆಸಳಿನ ತಾವರೆಯ ಮಧ್ಯದಲ್ಲಿ
ಮಹಾಜ್ಯೋತಿರ್ವರ್ಣದ ಲಿಂಗ.
ಅದು ನಿರಾಮಯ ಲಿಂಗ, ಅದಕ್ಕೆ ಬೀಜಾಕ್ಷರ ಪ್ರಣವ ನಾದ ಘೋಷ,
ಎಸಳೊಂದುನೂರ ಎಂಟು ಸಾವಿರದಲ್ಲಿ, ಒಂದನೂರ ಎಂಟು ಸಾವಿರ ಅಕ್ಷರ-
ಪ್ರೇತಾಸನ ವಿಶ್ವತೋಮುಖೋ ಬ್ರಹ್ಮಚಕ್ರ.
ವಿಶ್ವತಶ್ಚಕ್ಷುರುತ ವಿಶ್ವತೋ ಮುಖೋ
ವಿಶ್ವತೋ ಬಾಹುರುತ ವಿಶ್ವತಃ ಪಾತ್
ಸಂ ಬಾಹ್ಯಭ್ಯಾಂ ಧಮತಿ ಸಂಪತತ್ರೈ
ದ್ರ್ಯಾವಾ ಭೂಮೀ ಜನಯನ್ ದೇವ ಏಕಃ
ಇಂತೀ ಗುರುವಿನ ಬೆಳಗು ವಿಶ್ವವನ್ನಪಹರಿಸಿ, ತಾನು ತಾನೆ ಸೋಹಂ ಪ್ರಕಾಶ
ಕೂಡಲಚೆನ್ನಸಂಗಮದೇವಾ/598
ಗುಪ್ತದಲ್ಲಿ ಕೊಂಬುದು ಗೋಮಾಂಸವಯ್ಯಾ,
ಪ್ರಕಟದಲ್ಲಿ ಕೊಂಬುದು ಅಪ್ರಸಾದವಯ್ಯಾ,
ಗುಪ್ತವನೂ ಪ್ರಕಟವನೂ ಕಳೆದು
ಕೊಟ್ಟುಕೊಳಬಲ್ಲರೆ ನೆಟ್ಟನೆ ಪ್ರಸಾದಿ ಕೂಡಲಚೆನ್ನಸಂಗಮದೇವಾ. /599
ಗುಬ್ಬಿ ಹೆರರ ಮನೆಯ ತನ್ನ ಮನೆ ಎಂಬಂತೆ
ಧರೆ ಧನ ವನಿತೆಯರು ಎನ್ನವರು ತನ್ನವರೆಂದು
ಹೋರಿ ಹೋರಿ ಸಾಯುತ್ತದೆ ಜೀವ,
ಸರ್ವಕರ್ತೃ ಕೂಡಲಚೆನ್ನಸಂಗಯ್ಯನೆಂದರಿಯದೆ/600
ಗುರು ಉಂಟೆಂಬವಂಗೆ ಗುರುವಿಲ್ಲ, ಲಿಂಗ ಉಂಟೆಂಬವಂಗೆ ಲಿಂಗವಿಲ್ಲ,
ಜಂಗಮ ಉಂಟೆಂಬವಂಗೆ ಜಂಗಮವಿಲ್ಲ, ಪ್ರಸಾದ ಉಂಟೆಂಬವಂಗೆ ಪ್ರಸಾದವಿಲ್ಲ.
ಗರುವಿಲ್ಲವೆಂಬವಂಗೆ ಗುರು ಉಂಟು, ಲಿಂಗವಿಲ್ಲವೆಂಬವಂಗೆ ಲಿಂಗ ಉಂಟು,
ಜಂಗಮವಿಲ್ಲವೆಂಬವಂಗೆ ಜಂಗಮವುಂಟು,
ಪ್ರಸಾದವಿಲ್ಲವೆಂಬವಂಗೆ ಪ್ರಸಾದವುಂಟು.
ಇದು ಕಾರಣ, ಕೂಡಲಚೆನ್ನಸಂಗಯ್ಯಾ, ತಾನಿಲ್ಲೆಂಬವಂಗೆ ತಾನುಂಟು. /601
ಗುರು ಕರುಣಿಸೆ ಬಿಟ್ಟಿತ್ತು ಮಾಯೆ,
ಗುರು ಕರುಣಿಸೆ ಬಿಟ್ಟಿತ್ತು ಮರವೆ,
ಗುರು ಕರುಣಿಸೆ ಬಿಟ್ಟಿತ್ತು ಪ್ರಪಂಚ,
ಕೂಡಲಚೆನ್ನಸಂಗಮದೇವಾ
ಗುರು ಕರುಣಿಸೆ ಬಿಟ್ಟಿತ್ತು ಎನ್ನ ಕರ್ಮಪಾಶ/602
ಗುರು ಗುರುವೆಂದೇನೊ, ಪರಕ್ಕೆ ಹೆಸರ ಹೇಳುವನ್ನಕ್ಕವೆ ?
ಲಿಂಗ ಲಿಂಗವೆಂದೇನೊ, ಅಂಗ ಬೀಳುವನ್ನಕ್ಕವೆ ?
ಜಂಗಮ ಜಂಗಮವೆಂದೇನೊ, ಧನವ ಸವೆವನ್ನಕ್ಕವೆ ?
ಪ್ರಸಾದ ಪ್ರಸಾದವೆಂದೇನೊ, ಉಂಡು ಕಳಚಿ ಪ್ರಳಯಕ್ಕೊಳಗಾಗುವನ್ನಕ್ಕವೆ ?
ಪಾದತೀರ್ಥ ಪಾದತೀರ್ಥವೆಂದೇನೊ, ಕೊಂಡು ಕೊಂಡು
ಮುಂದೆ ಜಲವ ಮಾಡುವನ್ನಕ್ಕವೆ ?
ಅಲ್ಲಿ ನಿಂದಿರದಿರಾ ಮನವೆ ! ನಿಂದಡೆ ನೀನು ಕೆಡುವೆ ಬಂದಡೆ ನಾನು ಕೆಡುವೆ.
ಎನ್ನ ತಂದೆ ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣಂಗೆ
ಪ್ರಭುದೇವರು ತೋರಿದರೀಯನುವ !/603
ಗುರು ತನ್ನ ವಿನೋದಕ್ಕೆ ಸ್ಥಾವರವಾದ:
ಗುರುತನ್ನ ವಿನೋದಕ್ಕೆ ಜಂಗಮವಾದ;
ಗುರು ತನ್ನ ವಿನೋದಕ್ಕೆ ಪ್ರಸಾದವಾದ;
ಗುರು ತನ್ನ ವಿನೋದಕ್ಕೆ ಗುರುವಾದ;
ಕೂಡಲಚೆನ್ನಸಂಗಯ್ಯನಲ್ಲಿ ಏಕಾರ್ಥವಾದ/604
ಗುರು ನಷ್ಟವಾದಡೆ ಜಂಗಮವೇ ಗುರು.
ಭಕ್ತ ಗುರುವಾದಡೆ ಆ ಗುರು ಶಿಷ್ಯರಿಬ್ಬರೂ ಅನಾಚಾರಿಗಳು.
ಗುರು ನಷ್ಟವಾದಡೆ ಜಂಗಮ ಗುರುವಾಗಬಹುದಲ್ಲದೆ,
ಭಕ್ತ ಗುರುವಾಗಬಲ್ಲನೆ ? ಬಾರದು.
ಅದೇಕೆಂದಡೆ;
ಭೃತ್ಯಂಗೆ ಕರ್ತೃತ್ವವುಂಟೇ ?
ಇಲ್ಲವಾಗಿ,
ಆವಿಗೆ ತನೆಯಹುದೆ, ಬಸವಗಲ್ಲದೆ ?
ಇದು ಕಾರಣ, ಕೂಡಲಚೆನ್ನಸಂಗಮದೇವಾ
ಗುರುವಿನ ಗುರು, ಪರಮಗುರು, ಜಂಗಮ/605
ಗುರು ಪಾದವ ತನ್ನ ಕರದಲ್ಲಿ ಧರಿಸಿ,
ಗುರು ಮುದ್ರೆಗಳ ತನ್ನಂತರಂಗ ಬಹಿರಂಗದಲ್ಲಿರಿಸಿ,
ಗುರುಲಿಂಗಜಂಗಮದ ಪಾದತೀರ್ಥ ಪ್ರಸಾದವ
ನಿರಂತರ ಸಾವಧಾನಿಯಾಗಿ ಕೊಂಡು ಕೃತಾರ್ಥರಾಗಲರಿಯದೆ,
ಮತ್ತೆ ಬೇರೆ ಗುರುಚರ ಪರದೈವಂಗಳ
ದಂಡ ಕಮಂಡಲ ಕಂಥೆ ಕಕ್ಷದಾರ ಬಿಕ್ಷಾಪಾತ್ರೆ ಹಾವುಗೆ ತೀರ್ಥಕುಂಭ ಭಸ್ಮದುಂಡೆ
ಎಂಬಿವು ಆದಿಯಾದ ಮುದ್ರೆ ಧಾರಣ ದ್ರವ್ಯ ಪಾದೋದಕಂಗಳ
ಗದ್ದುಗೆಯ ಪೂಜೆಯ ಬೋಳುಕರಂತೆ ಇದಿರಿಟ್ಟು
ಆರಾದಿಸುವ ಅನಾಚಾರಿಗಳಿಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ,
ಪಾದೋದಕವಿಲ್ಲ, ಪ್ರಸಾದವಿಲ್ಲ.
ಇಂತೀ ಪಂಚಾಚಾರಕ್ಕೆ ಹೊರಗಾದ ಪಾತಕರನು
ಕೂಡಲಚೆನ್ನಸಂಗಯ್ಯ ಅಘೋರನರಕದಲ್ಲಿಕ್ಕುವ/606
ಗುರು ಮುಟ್ಟದ ಮುನ್ನ ಪ್ರಸಾದವಾಗಬೇಕು,
ಲಿಂಗ ಮುಟ್ಟದ ಮುನ್ನ ಪ್ರಸಾದವಾಗಬೇಕು,
ಜಂಗಮ ಮುಟ್ಟದ ಮುನ್ನ ಪ್ರಸಾದವಾಗಬೇಕು,-
ಇಂತೀ ತ್ರಿವಿಧಸಾಹಿತ್ಯ ಮುಟ್ಟದ ಮುನ್ನ
ಪ್ರಸಾದವ ಕೊಂಬವರ ತೋರಿಸಯ್ಯಾ
ಕೂಡಲಚೆನ್ನಸಂಗಮದೇವಾ, ನಿಮ್ಮ ಧರ್ಮ, ನಿಮ್ಮ ಧರ್ಮ/607
ಗುರು ಮುಟ್ಟಿ ಗುರುವಾಯಿತ್ತು,
ಲಿಂಗಮುಟ್ಟಿ ಲಿಂಗವಾಯಿತ್ತು,
ಜಂಗಮ ಮುಟ್ಟಿ ಜಂಗಮವಾಯಿತ್ತು,
ಪ್ರಸಾದ ಮುಟ್ಟಿ ಪ್ರಸಾದವಾಯಿತ್ತು,
ಪ್ರಸಾದ ಪರವಸ್ತು, ಪರದಲ್ಲಿಪ್ಪುದಾಗಿ,
ಇನ್ನು ಪ್ರಸಾದವ ಮುಟ್ಟಬೇಕೆಂಬವರ ಮುಖವ ನೋಡಲಾಗದು,
ಕೂಡಲಚೆನ್ನಸಂಗಯ್ಯಾ. /608
ಗುರು ಮುಟ್ಟಿ ಲಿಂಗವಾಯಿತ್ತೈಸೆ,
ಅದು ಬಿದ್ದಿತ್ತು, ಹೋಯಿತ್ತೆಂಬ ಅಜ್ಞಾನವ ನೋಡಾ,
ಕಟ್ಟುವಠಾವನು, ಮುಟ್ಟುವ ಭೇದವನು
ಕೂಡಲಚೆನ್ನಸಂಗಾ ನಿಮ್ಮ ಶರಣ ಬಲ್ಲ/609
ಗುರು ಮುಟ್ಟಿತ್ತು ಪ್ರಸಾದವೆಂಬೆನೆ? ಅಲ್ಲ ಅದೇನು ಕಾರಣ?
ಅನಾದಿ ಲಿಂಗವ ತೋರಲರಿಯನಾಗಿ,
ಲಿಂಗ ಮುಟ್ಟಿತ್ತು ಪ್ರಸಾದವೆಂಬೆನೆ? ಅಲ್ಲ, ಅದೇನು ಕಾರಣ?
ಅಷ್ಟವಿಧಾರ್ಚನೆ ಷೋಡಶೋಪಚಾರಕ್ಕೊಳಗಾಯಿತ್ತಾಗಿ.
ಜಂಗಮ ಮುಟ್ಟಿತ್ತು ಪ್ರಸಾದವೆಂಬೆನೆ? ಅಲ್ಲ. ಅದೇನು ಕಾರಣ?
ಆಸೆಯಾಮಿಷಕ್ಕೊಳಗಾಗಿತ್ತಾಗಿ ಲಿಂಗವಿಲ್ಲದ ಜಂಗಮ, ಜಂಗಮವಿಲ್ಲದ ಲಿಂಗ,
ಲಿಂಗಜಂಗಮವೆಂಬ ವಿಭೇದವ ಕಳೆದುಳಿದ ಪ್ರಸಾದಿಯ ಎನಗೆ ತೋರಾ ಕೂಡಲಚೆನ್ನಸಂಗಮದೇವಾ./610
ಗುರು ಲಿಂಗ ಒಂದೆ’ ಎಂಬ,
ಸಂತೆಯ ಸುದ್ದಿಯ ಬಾಲಭಾಷೆಯ ಕೇಳಲಾಗದು.
ಲಿಂಗಸಹಿತ ಪ್ರಸಾದ ಭೋಗ, ಲಿಂಗಸಹಿತ ನಿದ್ರೆ.
ಗುರು ಲಿಂಗ ಒಂದೆಯೆಂದು ಕಂಡರೆ
ಅಘೋರನರಕ ಕೂಡಲಚೆನ್ನಸಂಗಮದೇವಾ. /611
ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ [ಮಂತ್ರ]
ಒಂದೇಯೆಂಬ ಸುರೆಯ ಭುಂಜಕರ ಮಾತ ಕೇಳಲಾಗದು
ಅದೇನು ಕಾರಣವೆಂದರೆ
ಪಾದವಿಡಿದು ಅವಧರಿಸಿಕೊಂಡುದೆ ಲಿಂಗ
ಪಾದವಿಡಿಯದಿದ್ದರೆ ಕಲ್ಲು
ಪಾದವಿಡಿದಾತನೆ ಜಂಗಮ
ಪಾದವಿಡಿಯದಾತನೆ ಮಾನುಷ
ಭಯ ಬಿತಿ ಭೃತ್ಯಾಚಾರದಿಂದ
ದಿರ್ಘದಂಡ ನಮಸ್ಕಾರವಮಾಡಿ ಕೊಂಡರೆ
ಪಾದೋದಕ ಪ್ರಸಾದ
ಕೊಳ್ಳನದುಫದೆ ಉದಕ ಓಗರ
ಚಿತ್ತ ಶುದ್ಧವಾಗಿ ಧರಿಸಿಕೊಂಡುದೆ ವಿಭೂತಿ ರುದ್ರಾಕ್ಷಿ
ಶುದ್ಧವಿಲ್ಲದುದೆ ಬೂದಿ ಮರನ ಮಣಿ
ಕೂಡಲನಚೆನ್ನಫಸಂಗಮದೇವ ನೀ ಸಾಕ್ಷಿಯಾಗಿ./612
ಗುರು ಲಿಂಗ ಜಂಗಮವೇಕವಾದುದೆ ಗುರುವಲ್ಲದೆ,
ಪಿತ-ಮಾತೆ, ಸತಿ-ಸುತ, ಅತ್ತೆ-ಮಾವ ಇದಲ್ಲದೆ
ಯೋಗಿ-ಜೋಗಿ, ಶ್ರವಣ-ಸನ್ಯಾಸಿ, ಕಾಳಾಮುಖಿ-ಪಾಶುಪತಿ ಎಂಬ
ಷಡುದರ್ಶನದ ಶೈವಕರ್ಮಿಗಳ
`ಗುರುವು ಗುರುವು’ ಎಂಬುದಕ್ಕೆ ನಾಚದವರನೇನೆಂಬೆನಯ್ಯಾ ?
ಆ ಮಹಾಘನಗುರುವಿಂಗೆ, ಇಂತಿವರನೆಲ್ಲರ ಸರಿಗಂಡಡೆ
ಒಂದೆ ಎಂದು ನುಡಿದಡೆ, ಅಘೋರನರಕ ತಪ್ಪದಯ್ಯಾ
ಕೂಡಲಚೆನ್ನಸಂಗಮದೇವಾ./613
ಗುರುಕಾರುಣ್ಯ, ಲಿಂಗನಿಷ್ಠೆ, ಪ್ರಸಾದವಿಶ್ವಾಸ,
ಭಾವದ ನಿಜವನಾರು ಬಲ್ಲರಯ್ಯಾ?
ಗುರುವಿನಲ್ಲಿ ಲಿಂಗಪ್ರವೇಶ, ಲಿಂಗದಲ್ಲಿ ಜಂಗಮಪ್ರವೇಶ,
ಜಂಗಮದಲ್ಲಿ ಪ್ರಸಾದಪ್ರವೇಶ, ಪ್ರಸಾದದಲ್ಲಿ ಪರಿಣಾಮಪ್ರವೇಶ,
ಪರಿಣಾಮದಲ್ಲಿ ಭಾವಪ್ರವೇಶ.
ಇಂತು ಗುರುವಿಂಗೆ ಲಿಂಗವಿಲ್ಲ, ಲಿಂಗಕ್ಕೆ ಜಂಗಮವಿಲ್ಲ,
ಜಂಗಮಕ್ಕೆ ಪ್ರಸಾದವಿಲ್ಲ, ಪ್ರಸಾದಕ್ಕೆ ಪರಿಣಾಮವಿಲ್ಲ,
ಪರಿಣಾಮಕ್ಕೆ ಭಾವವಿಲ್ಲ.
ಇದರಾಗು ಹೋಗಿನ ಸಕೀಲಸಂಬಂಧವ
ಕೂಡಲಚೆನ್ನಸಂಗಾ ನಿಮ್ಮ ಶರಣನೆ ಬಲ್ಲ. /614
ಗುರುಕಾರುಣ್ಯದ ಮಹಾಸಂಪಾದನೆಯಲ್ಲಿ
ಅತ್ಯಂತ ವಿಶೇಷ ಸ್ಥಲವೆ ಗಳವು.
ಮಹಾಲಿಂಗ ಸಂಪಾದನೆಯಲ್ಲಿ, ತ್ರಿವಿಧ ಸಂಪಾದನೆಯಲ್ಲಿ,
ಶರೀರಾರ್ಥ ಮಹಾರ್ಥದಲ್ಲಿ, ನಾದಬಿಂದು ಸಂಪಾದನೆಯಲ್ಲಿ,
ಮಾರ್ಗಕ್ರಿಯಾ ಸಂಪಾದನೆಯಲ್ಲಿ, ಭಕ್ತಿ ಸಂಪಾದನೆಯಲ್ಲಿ,
ಭಾವ ನಿಷ್ಠೆಯಲ್ಲಿ, ಅರ್ಪಿತ ನಿಷ್ಠೆಯಲ್ಲಿ ಆ ಗಳವೆ ಘನಸ್ಥಳ.
ಅತ್ಯಂತ ವಿಶೇಷಸ್ಥಳವಾಗಿ
ಗಳದಲ್ಲಿ ಧರಿಸಿದರೆ ಕೂಡಲಚೆನ್ನಸಂಗಯ್ಯನ[ಲ್ಲಿ ಇದೇ ಕ್ರಮ]. /615
ಗುರುಕಾರುಣ್ಯವ ಪಡೆದ ಬಳಿಕ ಕೂಡೆ ಭವಿಗಳ ಬಿಡಲೇಬೇಕು.
ಲಿಂಗಸಂಗಿಯಾದ ಬಳಿಕ ದುಸ್ಸಂಗ ಹಿಂಗಲೇಬೇಕು.
ಅರ್ಪಿತವಲ್ಲದೆ ಮುಟ್ಟೆವೆಂದರೆ, ತಟ್ಟುವ ಮುಟ್ಟವ ಮರ್ಮವನರಿಯಬೇಕು.
ಪ್ರಸಾದಕಲ್ಲದೆ ಬಾಯಿದೆರೆಯೆನೆಂದರೆ ಸರ್ವಭವಿಪಾಕವ ಬಿಡಬೇಕು.
ಇದು ಕಾರಣ, ಕೂಡಲಚೆನ್ನಸಂಗನಲ್ಲಿ
ಶಿವಾಚಾರಸಂಪತ್ತಿಲ್ಲದವರ ಮನೆಯ ಹುಗಲಾದು. /616
ಗುರುಕಾರುಣ್ಯವ ಪಡೆದೆವೆಂಬರು;
ಒಬ್ಬನಾಗಾದೆಹೆನೆಂಬ, ಒಬ್ಬ ಚೇಗೆಯಾದೆಹೆನೆಂಬ
ಇವರಿಬ್ಬರು ಪಿಂಡಭೋಗಿಗಳು,
ಭಕ್ತಂಗೆ ಈ ಆಗೂ ಇಲ್ಲ, ಈ ಚೇಗೆಯೂ ಇಲ್ಲ.
ಗುರುದ್ರವ್ಯಾವನೊಪ್ಪಿಸಿದನಾಗಿ.
“ಗುರುದ್ರವ್ಯಾಬಿಲಾಷೇಣ ಗುರುದ್ರವ್ಯಸ್ಯ ವಂಚನಂ
ಯಃ ಕುರ್ಯಾದ್ಗುರೋರ್ಭಕ್ತಃಸ ಭವೇತ್ ಬ್ರಹ್ಮರಾಕ್ಷಸಃ ‘ ಎಂದುದಾಗಿ,
ಗುರುದ್ರವ್ಯವಾವುದೆಂದಡೆ;
ದೈಹಿಕದ್ರವ್ಯ, ಭಾತಿಕದ್ರವ್ಯ, ಆತ್ಮದ್ರವ್ಯ, ಇಂದ್ರಿಯದ್ರವ್ಯ, ಜ್ಞಾನದ್ರವ್ಯ-
ಈ ಪಂಚದ್ರವ್ಯವನು ಉಭಯವಳಿದು
ಷೋಡಶೋಪಚಾರದಲ್ಲಿ ಅರ್ಪಿಸಬಲ್ಲರೆ
ಕೂಡಲಚೆನ್ನಸಂಗಯ್ಯನಲ್ಲಿ ಆತನೆ ಗುರುಭಕ್ತ./617
ಗುರುಕಾರುಣ್ಯವಂ ಪಡೆದು ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ
ಕುಲದೈವ, ತನ್ನಂಗದ ಮೇಲಿಪ್ಪ ಲಿಂಗವೆಂದರಿಯದೆ
ಮನೆ ದೈವ, ತನ್ನ ಮನೆಗೆ ಬಂದ ಜಂಗಮವೆಂದರಿಯದೆ
ಮತ್ತೆ ಬೇರೆ ಕುಲದೈವ ಮನೆದೈವವೆಂದು
ಧರೆಯ ಮೇಲಣ ಸುರೆಗುಡಿ ಹೊಲೆದೈವ ಭವಿಶೈವದೈವಂಗಳ ಹೆಸರಿನಲ್ಲಿ
ಕಂಗ? ಪಟ್ಟ, ಕಾಲ ಪೆಂಡೆಯ, ಕಡೆಯ, ತಾಳಿ, ಬಂಗಾರಂಗಳ ಮೇಲೆ
ಆ ಪರದೈವಂಗಳ ಪಾದ ಮುದ್ರೆಗಳನೊತ್ತಿಸಿ
ಅವನಿದಿರಿಟ್ಟು ಆರಾದಿಸಿ, ಅವರೆಂಜಲ ಭುಂಜಿಸಿ
ತಮ್ಮ ಲಿಂಗಶರೀರಂಗಳ ಮೇಲೆ ಅವನು ಕಟ್ಟಿಕೊಂಡು
ಮತ್ತೆ ತಾವು ಭಕ್ತರೆಂದು ಬಗಳುವ
ಪರ(ಶಿವ?) ಸಮಯದ್ರೋಹಿಗಳನಿರಿದಿರಿದು ಕಿರಿಕಿರಿದಾಗಿ ಕೊಯಿದು
ಕೆನ್ನಾಯಿಗಿಕ್ಕದೆ ಮಾಣ್ಬರೆ ?
ಇಂತಪ್ಪ ನರಕಜೀವಿಗಳನು ಕೂಡಲಚೆನ್ನಸಂಗಯ್ಯ
ರವಿಸೋಮರುಳ್ಳನ್ನಕ್ಕ ನಾಯಕ ನರಕದಲ್ಲಿಕ್ಕುವ./618
ಗುರುಕಾರುಣ್ಯವಂ ಪಡೆದು ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ
ಭಕ್ತನಾಗಲಿ ಜಂಗಮನಾಗಲಿ ಭಕ್ತಿ ಭೃತ್ಯಾಚಾರ ಸಂಪನ್ನರಾಗಿ
ಗುರುಲಿಂಗ ಜಂಗಮವನಾರಾದಿಸಿ, ಪ್ರಸಾದವಕೊಂಡು ನಿಜಮುಕ್ತರಾಗಲರಿಯದೆ
ಪರಮಪಾವನಪ್ಪ ಗುರುರೂಪ ಹೊತ್ತು
ಮತ್ತೆ ತಾವು ಪರಸಮಯದಂತೆ
ದೂಷಕ ನಿಂದಕ ಪರವಾದಿಗಳಾಗಿ
ಭಕ್ತ ಜಂಗಮ ಪ್ರಸಾದವನೆಂಜಲೆಂದು ಅತಿಗಳೆದು
ತೊತ್ತು ಸೂಳೆಯರೆಂಜಲ ತಿಂದು
ಮತ್ತೆ ನಾ ಘನ ತಾ ಘನವೆಂದು
ಸತ್ಯ ಸದ್ಭಕ್ತಯಕ್ತರಾದ ಭಕ್ತಜಂಗಮವ ಜರೆದು,
ಅವರ ಕುಲವೆತ್ತಿ ಕೆಡೆನುಡಿದು ಹೊಲತಿ ಮಾದಿಗಿತ್ತಿಯರಿಗುರುಳಿ
ಹಲವು ದೈವದೆಂಜಲತಿಂದು
ಮತ್ತೆ ತಾವು ಕುಲಜರೆಂದು ಬಗುಳುವ ಹೊಲೆ ಜಂಗುಳಿಗಳೆಲ್ಲರು
ಈ ಗುರು ಕೊಟ್ಟಲಿಂಗವಿರಲು ಅದನರಿಯದೆ
ಶ್ರೀಶೈಲ, ಹಂಪಿ, ಕಾಶಿ, ಕೇತಾರ ಗಯಾ ಪ್ರಯಾಗ ರಾಮೇಶ್ವರ ಆದಿಯಾದ
ಹೊಲೆಕ್ಷೇತ್ರಂಗಳಲ್ಲಿ ಆಸಕ್ತರಾಗಿ ಹೋಗಿ
ಅಲ್ಲಲ್ಲಿಯ ಭವಿಶೈವದೈವಂಗಳ ದರ್ಶನ ಸ್ಪರುಶನ ಆರಾಧನೆಗಳ ಮಾಡಿ
ಅವಕ್ಕೆ ಶರಣೆಂದು ಅವರೆಂಜಲ ತಿಂದು
ಆ ಕ್ಷೇತ್ರಂಗಳಲ್ಲಿ ಆಶ್ರಮಸ್ಥರಾಗಿರ್ದು
ಗತಿಪದ ಮುಕ್ತಿಯ ಪಡೆವೆನೆಂಬ ವೇಷಧಾರಿಗಳೆಲ್ಲರು
ಶ್ವಪಚಗೃಹದ ಶ್ವಾನಯೋನಿಗಳಲ್ಲಿ ಶತಸಹಸ್ರವೇಳೆ ಬಪ್ಪುದು ತಪ್ಪುದು.
ಅದೆಂತೆಂದೊಡೆ ;
ಇದಂ ತೀರ್ಥಮಿದಂ ತೀರ್ಥಂ ಭ್ರಮಂತಿ ತಾಮಸಾ ನರಾಃ
ಶಿವಜ್ಞಾನೇನ ಜಾನಂತಿ ಸರ್ವತೀರ್ಥನಿರರ್ಥಕಂ
ಪ್ರಾಣಲಿಂಗಮವಿಶ್ವಾಸ್ಯ ತೀರ್ಥಲಿಂಗಂತು ವಿಶೇಷತಃ
ಶ್ವಾನಯೋನಿಶತಂ ಗತ್ವಾಶ್ಚಾಂಡಾಲಂ ಗೃಹಮಾಚರೇತ್
ಚರಶೇಷ ಪರಿತ್ಯಾಗಾದ್ಯೋಜನಾದ್ಭಕ್ತ ನಿಂದಕಾಃ
ಅನ್ಯಪಣ್ಯಾಂಗನೋಚ್ಚಿಷ್ಟಂ
ಭುಂಜಯಂತಿರೌರವಂ-ಇಂತೆಂದುದಾಗಿ,
ಇದು ಕಾರಣ, ಇಂತಪ್ಪ ಅನಾಚಾರಿಗಳು ಭಕ್ತ ಜಂಗಮ ಸ್ಥಲಕ್ಕೆ ಸಲ್ಲರು.
ಅವರಿರ್ವನು ಕೂಡಲಚೆನ್ನಸಂಗಯ್ಯ
ಸೂರ್ಯ-ಚಂದ್ರರುಳ್ಳನ್ನಕ್ಕ ನಾಯಕನರಕದಲ್ಲಿಕ್ಕುವ./619
ಗುರುಕಾರುಣ್ಯವಿಡಿದು ಅಂಗದ ಮೇಲೆ ಲಿಂಗವನುಳ್ಳ
ನಿಜವೀರಶೈವ ಸಂಪನ್ನರಾದ ಗುರುಚರ ಭಕ್ತಿವಿವಾಹದ ಪರಿಯೆಂತೆಂದಡೆ:
ದಾಸಿ, ವೇಸಿ, ವಿಧವೆ, ಪರಸ್ತ್ರೀ, ಬಿಡಸ್ತ್ರೀ ಮೊದಲಾದ
ಹಲವು ಪ್ರಕಾರದ ರಾಸಿಕೂಟದ ಸ್ತ್ರೀಯರ ಬಿಟ್ಟು
ಸತ್ಯಸದಾಚಾರವನುಳ್ಳ ಭಕ್ತಸ್ತ್ರೀಯರ, ಮುತ್ತೈದೆಯ ಮಗಳಪ್ಪ ಶುದ್ಧ ಕನ್ನಿಕೆಯ,
ವಿವಾಹವಾಗುವ ಕಾಲದಲ್ಲಿ,
ಭಕ್ತಗೃಹವಂ ಶೃಂಗರಿಸಿ ಭಕ್ತಿಪದಾರ್ಥಂಗ? ಕೂಡಿಸಿ
ಭಕ್ತಿ ಸಂಭ್ರಮದಿಂದ ಗುಡಿಕಟ್ಟಿ
ವಿವಾಹೋತ್ಸವಕ್ಕೆ ನೆರೆದ ಭಕ್ತಜಂಗಮಕ್ಕೆ ನಮಸ್ಕರಿಸಿ ಮೂರ್ತಿಗೊಳಿಸುತ್ತ
ವಿಭೂತಿ ವಿಳಯವಂ ತಂದಿರಿಸಿ ಬಿನ್ನೈಸಿ ಅವರಾಜ್ಞೆಯಂ ಕೈಕೊಂಡು
ಶೋಭನವೇಳುತ್ತ, ಮಂಗಳ ಮಜ್ಜನವಂ ಮಾಡಿ
ಅಂಗವಸ್ತ್ರ ಲಿಂಗವಸ್ತ್ರಂಗಳಿಂ ಶೃಂಗರಿಸಿ
ವಿಭೂತಿಯಂ ಧರಿಸಿ, ರುದ್ರಾಕ್ಷೆಯಂ ತೊಟ್ಟು
ದಿವ್ಯಾಭರಣವನ್ನಿಟ್ಟು ಆಸನವಿತ್ತು ಕು?್ಳರಿಸಿ
ಭಕ್ತಾಂಗನೆಯರೆಲ್ಲ ನೆರೆದು ಶೋಭನವಂ ಪಾಡುತ್ತ
ಭವಿಶೈವಕೃತಕಶಾಸ್ತ್ರವಿಡಿದು ಮಾಡುವ
ಪಂಚಸೂತಕ ಪಾತಕಯುಕ್ತವಾದ ಪಂಚಾಂಗ ಕರ್ಮ ಸಂಕಲ್ಪಗಳಂ ಅತಿಗಳೆದು
ಅಂಗಲಿಂಗಸಂಬಂಧವನುಳ್ಳ ಪಂಚಾಚಾರಯುಕ್ತರಾದ
ನಿಜವೀರಶೈವಸಂಪನ್ನರಾದ ಭಕ್ತಿವಿವಾಹಕ್ಕೆ ಮೊದಲಾದ ಗುರುವಾಜ್ಞೆವಿಡಿದು
ಉಭಯವಂ ಕೈಗೂಡಿ ಸತಿಪತಿ ಭಾವವನುಳ್ಳ ಸತ್ಯವ್ರತವ ತಪ್ಪದಿರಿ ಎಂದು.
ಭಕ್ತಾಜ್ಞೆಯಲ್ಲಿ ಭಸಿತವನಿಡಿಸಿ
ಗುರುಲಿಂಗ ಜಂಗಮವೆಂಬ ಏಕ ಪ್ರಸಾದವನೂಡಿ
ಇಂತು ಗುರುಚರ ಪರ ಮೊದಲಾದ ಭಕ್ತಗಣ ಸಾಕ್ಷಿಯಾಗಿ
ಭಕ್ತಿವಿವಾಹದ ಭಕ್ತಾರಾಧ್ಯರುಗಳ ನಿಷೇಧವಮಾಡಿ
ನಿಂದಿಸಿದವಂಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ
ಪಾದೋದಕವಿಲ್ಲ, ಪ್ರಸಾದವಿಲ್ಲ; ಅವ ಭಕ್ತಾಚಾರಕ್ಕೆ ಸಲ್ಲನು.
ಇಂತಪ್ಪ ಭಕ್ತಿ ಕಲ್ಯಾಣಯುಕ್ತವಾದ ಭಕ್ತರಾಧ್ಯರ ನಿಷೇಧವಮಾಡಿ
ನಿಂದಿಸಿದವಂಗೆ ಇಪ್ಪತ್ತೆಂಟು ಕೋಟಿ ನರಕ ತಪ್ಪದು ಕಾಣಾ
ಕೂಡಲಚೆನ್ನಸಂಗಯ್ಯ. /620
ಗುರುಕಾರುಣ್ಯವುಂಟು, ಭಕ್ತರೆಂದೆಂಬರು.
[ಶೈವ]ಗುರುಕಾರುಣ್ಯವುಳ್ಳರೆ ಭಕ್ತರೆಂತಪ್ಪರಯ್ಯಾ,
ಅಂಗದ ಮೇಲೆ ಲಿಂಗವಿಲ್ಲದನ್ನಕ್ಕ?
ಪ್ರಸಾದಕಾಯವಾಗದನ್ನಕ್ಕ?
ಈ ಪಂಚಭೂತ ಕಾಯವ ಪ್ರಸಾದಕಾಯವೆಂಬ ಹೆಸರಿಟ್ಟುಕೊಂಡು ನುಡಿವ
ಪಾತಕರ ನುಡಿಯ ಕೇಳಲಾಗದು.
ಪಂಚೇಂದ್ರಿಯಂಗಳ ಗುಣದಲ್ಲಿ ನಡೆವರನೊಳಗಿಟ್ಟುಕೊಂಡು ನಡೆದರೆ
ಭಕ್ತಿಹೀನರೆನಿಸಿತ್ತು ಕೂಡಲಚೆನ್ನಸಂಗನ ವಚನ. /621
ಗುರುಕೊಟ್ಟ ಲಿಂಗ ತನ್ನ ನಚ್ಚಿ ನನಿಂದಫ ಆಯತವಾಯಿತ್ತಯ್ಯಾ,
ಪ್ರಾಣ ನಚ್ಚಿನಿಂದ ಸ್ವಾಯತವಾಯಿತ್ತಯ್ಯಾ,
ಉಭಯ ನಚ್ಚಿನಿಂದ ಸಂಗವಾಯಿತ್ತು,
ಕೂಡಲಚೆನ್ನಸಂಗಾ ನಿಮ್ಮಲ್ಲಿ. /622
ಗುರುಜಂಗಮ ಪಾದೋದಕ ಪ್ರಸಾದವ ಭಕ್ತಿಯಿಂದ ಪಡೆದು
ನಿಚ್ಚ ನಿಚ್ಚ ಸೇವಿಸಬಲ್ಲಡೆ
ಆ ಭಕ್ತನ ಕಾಯಕರಣಾದಿಗಳ ಸೋಂಕಲಮ್ಮದೆ ದುರಿತವು ದೂರಾಗಿಪ್ಪುದು.
ಆ ಸದ್ಭಕ್ತನೆ ಸದ್ಬ್ರಾಹ್ಮಣನೆಂದು ಶಾಸ್ತ್ರವು ಹೊಗಳುತ್ತಿಪ್ಪುದು.
“ಪಾದೋದಕಂ ಚ ನಿರ್ಮಾಲ್ಯಂ ಭಕ್ತ್ಯಾ ಧಾರ್ಯಂ ಪ್ರಯತ್ನತಃ
ನ ತಾನ್ ಸ್ಪೃಶಂತಿ ಪಾಪಾನಿ ಮನೋವಾಕ್ಕಾಯಜಾನ್ಯಪಿ
ಭಕ್ಷಯೇದ್ಯೋಗಿನಾ ಭಕ್ತ್ಯಾ ಪವಿತ್ರಮಿತಿ ಶಂಸಿತಂ
ಶುದ್ಧಾತ್ಮಾ ಬ್ರಾಹ್ಮಣಸ್ತಸ್ಯ ಪಾಪಂ ಕ್ಷಿಪ್ರಂ ವಿನಶ್ಯತಿ ಎಂದುದಾಗಿ.
ಇಂತೀ ಪವಿತ್ರವಾದ ಪಾದೋದಕವ ಪಡೆದು
ಕೂಡಲಚೆನ್ನಸಂಗಯ್ಯನ ಶರಣರು ಪರಿಶುದ್ಧರಾದರು/623
ಗುರುಜಂಗಮದ ಪಾದತೀರ್ಥವು ಲಿಂಗಾಬಿಷೇಕಕ್ಕೆ ಸಲ್ಲದೆಂಬ
ಮಂದಮತಿಗಳು ನೀವು ಕೇಳಿರೊ.
ಮಂತ್ರಸಂಸ್ಕಾರದಿಂದ ಜಡಶಿಲೆ ಲಿಂಗವಾಗುತ್ತಿರ್ಪುದೆಂಬಿರಿ,
ಆ ಮಂತ್ರಸಂಸ್ಕಾರದಿಂದ ಶಿವಾಂಶಿಕನಾದ ಮನುಷ್ಯನು
ಶಿವಜ್ಞಾನಸಂಪನ್ನನಾಗಿ ಗುರುವಾಗನೆ ?
ಮತ್ತೆ ಜಂಗಮವಾಗನೆ ? ಹೇಳಿರೆ.
ಸಂಸ್ಕಾರದಿಂದಾದ ಲಿಂಗಕ್ಕೆ ಸಂಸ್ಕಾರವಿಲ್ಲದ ಮನುಷ್ಯನ ಪಾದಜಲವು
ಸಲ್ಲದೆಂದಡೆ ಅದು ಸಹಜವೆಂಬೆನು.
ಸಂಸ್ಕಾರ ವಿಶಿಷ್ಟವಾದ ಲಿಂಗಕ್ಕೆಯೂ, ಜಂಗಮಕ್ಕೆಯೂ
ಅಭೇದವೆಂಬುದನು ಆಗಮೋಕ್ತಿ `ಪದೋದಾದಬಿಷೇಚನಂ’
ಎಂದು ಸಾರುತ್ತಿಹುದು ಕಾಣಿರೊ !
ಇದು ಕಾರಣ- ಅಂತಪ್ಪ ಗುರುಜಂಗಮದ ಪಾದತೀರ್ಥವು ಅಯೋಗ್ಯವೆಂದಡೆ
ನಮ್ಮ ಕೂಡಲಚೆನ್ನಸಂಗಯ್ಯನ
ವಚನವ ನಿರಾಕರಿಸಿದಂತಕ್ಕು ಕಾಣಿರೊ !/624
ಗುರುಜಂಗಮದ ಪಾದತೀರ್ಥವೆ ಪವಿತ್ರವೆಂದು ತಿಳಿದು
ಲಿಂಗಾಬಿಷೇಕಂಗೆಯ್ವುದಯ್ಯಾ.
ಆ ಗುರುಲಿಂಗ ಜಂಗಮದಲ್ಲಿ ಭೇದವ ಕಲ್ಪಿಸಿದಡೆ
ಪಾಪವು ಸಂಘಟಿಸುವುದಯ್ಯಾ.
ಮನುಷ್ಯನ ಕಾಲ್ದೊಳೆದ ನೀರು ಪರಮತೀರ್ಥವೆಂದು ಭಾವಿಸಿ
ಲಿಂಗಕ್ಕೆರೆವುದು ಶಾಸ್ತ್ರಾಚಾರಕ್ಕೆ ವಿರೋಧ- ಎಂಬ
ಕುಹಕಿಗಳ ಕೀಳ್ನುಡಿಯ ಕೇಳಲಾಗದಯ್ಯಾ.
ಗುರುರ್ಲಿಂಗಜಂಗಮಶ್ಚ ತ್ರಿತಯಂ ಚೈಕಮೇವ ಹಿ
ಅತ ಏವ ಪದೋದಾಬಿಷೇಚನಂ ಶಿವಲಿಂಗಕೇ
ಕುರ್ವಂತ್ಯಭೇದದೃಷ್ಟ್ಯಾ ಚ ಭೇದಕೃತ್ಪಾಪಮಶ್ನುತೇ ಎಂದುದಾಗಿ
ಇಂತಿಪ್ಪುದನಾರಯ್ಯದೆ ಗಳಹುವ ಮಂದಮತಿಗಳ
ಎನ್ನತ್ತ ತೋರದಿರಯ್ಯಾ ಕೂಡಲಚೆನ್ನಸಂಗಮದೇವಾ./625
ಗುರುದೇವೋ ಮಹಾದೇವೋ’ ಎಂದುದಾಗಿ, ಗುರುದೇವನೇ ಮಹಾದೇವನು.
`ಯೋ ಗುರುಃ ಸ ಶಿವಃ ಪ್ರೋಕ್ತೋ ಯಃ ಶಿವಃ ಸ ಗುರುಃ ಸ್ಮೃತಃ
ಎಂದುದಾಗಿ-ಗುರುವೆ ಶಿವನು, ಶಿವನೆ ಶ್ರೀಗುರು ನೋಡಾ.
`ಗುರುದೈವಾತ್ ಪರಂ ನಾಸ್ತಿ’ ಎಂದುದಾಗಿ-ಗುರುವಿನಿಂದಧಕವಿಲ್ಲ.
`ಶಿಷ್ಯದೀಕ್ಷಾದಿಕಾರಣಾತ್’ ಎಂದುದಾಗಿ,
ಎನ್ನ ನಿಮಿತ್ತ ಗುರುಮೂರ್ತಿಯಾದೆ, ಕೂಡಲಚೆನ್ನಸಂಗಮದೇವಾ/626
ಗುರುದ್ರವ್ಯವ ಗುರುವಿಂಗೊಪ್ಪಿಸಿಹೆವೆಂಬರು.
ಗುರುದ್ರವ್ಯವಾವುದೆಂದರಿಯರು.
ದೇಹಿಕದ್ರವ್ಯ, ಮನದ್ರವ್ಯ, ಭಾತಿಕ[ತನು?]ದ್ರವ್ಯ, ಆತ್ಮದ್ರವ್ಯ
ಜ್ಞಾನದ್ರವ್ಯವೆಂಬ ಪಂಚದ್ರವ್ಯವನು
ಉಭಯವಳಿದು ಷೋಡಶೋಪಚರ್ಯದಲ್ಲಿ ಉಪಚರಿಸಬಲ್ಲರೆ
ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣ ಪೂಜಕನಾದ. /627
ಗುರುದ್ರೋಹಿಯಾದವನ ಮುಖವ ನೋಡಲಾಗದು,
ಮತ್ತೆ ನೋಡಬಹುದು, ಏಕೆ? ಮುಂದೆ ಲಿಂಗವಿಪ್ಪುದಾಗಿ.
ಲಿಂಗದ್ರೋಹಿಯಾದವನ ಮುಖವ ನೋಡಲಾಗದು,
ಮತ್ತೆ ನೋಡಬಹುದು, ಏಕೆ? ಮುಂದೆ ಜಂಗಮವಿಪ್ಪುದಾಗಿ
ಜಂಗಮದ್ರೋಹಿಯಾದವನ ಮುಖವ ನೋಡಲಾಗದು,
ಮತ್ತೆ ನೊಡಬಹುದು ಏಕೆ ಮುಂದೆ ಪ್ರಸಾದವಿಪ್ಪುದಾಗಿ.
ಪ್ರಸಾದದ್ರೋಹಿಯಾದವನ ಮುಖವ ನೋಡಲಾಗದು ಏಕೆ?
ಕೂಡಲಚೆನ್ನಸಂಗಯ್ಯನ ಪ್ರಸಾದವಿರಹಿತವಾಗಿ ಪರವಿಲ್ಲದ ಕಾರಣ/628
ಗುರುಪದವ ಮಹತ್ತುಪದವೆಂದು ನುಡಿದು,
ನಡೆಯಲರಿಯದ ತುಡುಗುಣಿಗಳು ನೀವು ಕೇಳಿರೊ;
ಗುರುಪದವಾವುದೆಂಬುದರಿಯಿರಿ,
ಮಹತ್ತುಪದವಾವುದೆಂಬುದ ಮುನ್ನವೆ ಅರಿಯಿರಿ.
ಆಚಾರಂ ಗುರುಪದ-ಎಂಬುದನರಿದು,
ಅಣವಮಲ ಮಾಯಾಮಲ ಕಾರ್ಮಿಕಮಲವೆಂಬ ಮಲತ್ರಯಂಗಳನತಿಗಳೆದು,
ಈಷಣತ್ರಯವೆಂಬ ವಾಸನೆಯ ಹೊದ್ದದೆ,
ದಾಸಿ, ವೇಸಿ, ಪರಸ್ತ್ರೀಯರ ಸಂಗವೆಂಬ ಹೇಸಿಕೆಯ ಮನದಲ್ಲಿ ನೆನೆಯದೆ,
ಪತಿತಾಶ್ರಮಾಶ್ರಿತನಾಗದೆ, ಭವಭಾರಿ ಶೈವಕ್ಷೇತ್ರಂಗಳಂ ಹೊದ್ದದೆ,
ಭವಿಶೈವದೈವಂಗಳನಾರಾದಿಸದೆ, ಭವಿಯನಾಶ್ರಯಿಸದೆ
ಭವಿಸಂಗ, ಭವಿಪಙಫ್ತೆ, ಭವಿದೃಷ್ಟಿ, ಭವಿಗೇಹಾನ್ನ,
ಭವಿತತ್ಸಂಭಾಷಣೆಯಂ ಬಿಟ್ಟು
ಭಕ್ತಾಚಾರ ಸದಾಚಾರವಾಗಿಪ್ಪುದೆ ಗುರುಪದ.
ಇನ್ನು ಮಹತ್ತುಪದವಾವುದೆಂದಡೆ;
ಷಟ್ಸ್ಥಲಾಚಾರಉದ್ಧಾರಂ ಮನ್ಮತ್ವಂತು ಕಥ್ಯತೇ ಎಂದುದಾಗಿ,
ಗುರುಲಿಂಗ ಜಂಗಮಲಿಂಗ ಪಾದೋದಕ ಪ್ರಸಾದ ಭಕ್ತಾಚಾರಂಗಳನುದ್ಧರಿಸುತ್ತ,
ಎಲ್ಲಿ ಗುರು ಎಲ್ಲಿ ಲಿಂಗ ಎಲ್ಲಿ ಜಂಗಮ ಎಲ್ಲಿ ಪಾದೋದಕ ಎಲ್ಲಿ ಪ್ರಸಾದ
ಎಲ್ಲಿ ಭಕ್ತಾಚಾರವಿದ್ದಲ್ಲಿಯೇ ಹೊಕ್ಕು,
ಅವರೊಕ್ಕುದ ಕೊಂಡು ನಡೆಯಬಲ್ಲಡೆ ಮಹತ್ತುಪದ,
ಇನಿತಿಲ್ಲದೆ ಗುರುವನತಿಗಳೆದು ಗುರುದ್ರೋಹಿಗಳಾಗಿ,
ಲಿಂಗವನತಿಗಳೆದು ಲಿಂಗದ್ರೋಹಿಗಳಾಗಿ,
ಜಂಗಮವನತಿಗಳೆದು ಜಂಗಮದ್ರೋಹಿಗಳಾಗಿ,
ಆಚಾರವನತಿಗಳೆದು ಭಕ್ತಾಚಾರದ್ರೋಹಿಗಳಾಗಿ,
ಹೊನ್ನು ಹೆಣ್ಣು ಮಣ್ಣಿಗಾಗಿ ಹೊರವೇಷವ ತೊಟ್ಟು,
ಭಕ್ತಜಂಗಮದ ಅರ್ಥಪ್ರಾಣಂಗಳಿಗಳುಪಿ,
ತೊತ್ತು ಸೊಳೆಯರೆಂಜಲ ತಿಂದು,
ಮತ್ತೆ ಗುರುಪದ ಮಹತ್ತುಪದವೆಂದು
ತಪ್ಪಿ ಬಗ?ುವ ಶ್ವಾನಜಂಗುಳಿಗಳ
ಜಂಗಮವೆಂದಾರಾದಿಸಿ,
ಪ್ರಸಾದವ ಕೊ?್ಳ ಸಲ್ಲದು ಕಾಣಾ, ಕೂಡಲಚೆನ್ನಸಂಗಮದೇವಾ/629
ಗುರುಪ್ರಸಾದ, ಲಿಂಗಪ್ರಸಾದ, ಜಂಗಮಪ್ರಸಾದ,
ಈ ತ್ರಿವಿಧ ನಿಕ್ಷೇಪ. ಇದು ಕಾರಣ ಕೂಡಲಚನ್ನಸಂಗಾ
[ಲಿಂಗ ತ್ರಿವಿಧದಲ್ಲಿ] ಪ್ರಸಾದ ತ್ರಿವಿಧನೆನಿಸುವನು ನಿಮ್ಮ ಪ್ರಸಾದಿ. /630
ಗುರುಪ್ರಸಾದವೆಂಬಿರಿ, ಲಿಂಗಪ್ರಸಾದವೆಂಬಿರಿ,
ಅಚ್ಚಪ್ರಸಾದವೆಂಬಿರಿ, ಭರಿತಬೋನವೆಂಬಿರಿ.
ಗುರುಪ್ರಸಾದವೆಂಬುದನು ಲಿಂಗಪ್ರಸಾದವೆಂಬುದನು
ಅಚ್ಚಪ್ರಸಾದವೆಂಬುದನು ಭರಿತಬೋನವೆಂಬುದನು
ಅರಿವವರು ನೀವು ಕೇಳಿರೆ;
ಶ್ರೀಗುರುಕಾರುಣ್ಯವುಳ್ಳ ಶಿವಭಕ್ತರು
ಆ ಶ್ರೀಗುರುಲಿಂಗಕ್ಕೆ ತನುಕ್ರೀಯಿಂದ ಪಾದಾರ್ಚನೆಯ ಮಾಡಿ
ಪಾದತೀರ್ಥಮಂ ಕೊಂಡು, ಷಡುಸಮ್ಮಾರ್ಜನೆಯ ಮಾಡಿ
ರಂಗವಾಲಿಯನಿಕ್ಕಿ, ಶ್ರೀಗುರುವ ಲಿಂಗಾರ್ಚನೆಗೆ ಕುಳ್ಳಿರಿಸಿ
ಅಷ್ಟವಿಧಾರ್ಚನೆ ಷೋಡಶೋಪಚಾರವಂ ಮಾಡಿ
ಪುರುಷಾಹಾರ ಪ್ರಮಾಣಿನಿಂದ ನೀಡಿ, ತೆರಹು ಮರಹಿಲ್ಲದೆ
ಆ ಶ್ರೀಗುರುವಾರೋಗಣೆಯಂ ಮಾಡಿದ ಬಳಿಕ
ಹಸ್ತಮಜ್ಜನಕ್ಕೆರೆದು, ಒಕ್ಕುಮಿಕ್ಕುದ ಕೊಂಡುಂಬುದು ಗುರುಪ್ರಸಾದ.
ಇಂತಲ್ಲದೆ ಕೈಯೊಡ್ಡಿ ಬೇಡುವಾತ ಗುರುದ್ರೋಹಿ,
ಕೈ ನೀಡಿದಡೆ ಇಕ್ಕುವಾತ ಶಿವದ್ರೋಹಿ.
ಇನ್ನು ಲಿಂಗಪ್ರಸಾದವನರಿವ ಪರಿ;ಹಿಂದಣ ಪರಿಯಲಿ ಪುರುಷಾಹಾರ[ವ] ಪ್ರಮಾಣಿನಿಂದ
ತೆರಹು ಮರಹಿಲ್ಲದೆ ಭರಿತಬೋನವಾಗಿ ಗಡಣಿಸಿ,
ತಟ್ಟುವ ಮುಟ್ಟುವ ಮರ್ಮವನರಿತು, ಸಂಕಲ್ಪ ವಿಕಲ್ಪವಿಲ್ಲದೆ
ಭಾವಶುದ್ಧನಾಗಿ, ಏಕಚಿತ್ತದಿಂದ ಮನಮುಟ್ಟಿ ಲಿಂಗಕ್ಕೆ ನೈವೇದ್ಯಮಂ ತೋರಿ,
ಸೀತಾ?ಮಂ ಕೊಟ್ಟು, ಸೆಜ್ಜೆಯರಮನೆಗೆ ಬಿಜಯಂಗೈಸಿಕೊಂಡು
ಪಂಚೇಂದ್ರಿಯ ಸಪ್ತಧಾತು ತೃಪ್ತರಾಗಲ್ಕೆ,
ಪ್ರಸಾದಭೋಗವಂ ಮಾಡುವುದು ಲಿಂಗಪ್ರಸಾದ.
ಅಖಂಡಿತವಾದಡೆ ಇರಿಸಿ ಲಿಂಗಪ್ರಸಾದಿಗಳಿಗೆ ಕೊಡುವುದು.
ಕೊಡದೆ ಛಲಗ್ರಾಹಕತನದಲ್ಲಿ ಕೊಂಡು
ಒಡಲ ಕೆಡಿಸಿಕೊಂಡಡೆ ಪಂಚಮಹಾಪಾತಕ.
ಅವನ ಮುಖವ ನೋಡಲಾಗದು ಕೂಡಲಚೆನ್ನಸಂಗಯ್ಯ./631
ಗುರುಪ್ರಸಾದಿಗಳಪೂರ್ವವಪೂರ್ವ, ಲಿಂಗಪ್ರಸಾದಿಗಳಪೂರ್ವವಪೂರ್ವ.
ಜಂಗಮ ಪ್ರಸಾದಿಗಳಪೂರ್ವವಪೂರ್ವ, ಪ್ರಸಾದಪ್ರಸಾದಿಗಳಪೂರ್ವವಪೂರ್ವ
ಗುರುಪ್ರಸಾದಿ ಗುರುಭಕ್ತಯ್ಯ, ಲಿಂಗಪ್ರಸಾದಿ ಪ್ರಭುದೇವರು,
ಜಂಗಮಪ್ರಸಾದಿ ಬಸವಣ್ಣನು, ಪ್ರಸಾದಪ್ರಸಾದಿ ಬಿಬ್ಬಬಾಚಯ್ಯನು.
ಇಂತೀ ಪ್ರಸಾದಿಗಳ ಪ್ರಸಾದದಿಂದ ಬದುಕಿದೆನಯ್ಯಾ
ಕೂಡಲಚೆನ್ನಸಂಗಮದೇವಾ. /632
ಗುರುಪ್ರಾಣ ಗುರುಪ್ರಾಣವೆಂಬರು,
ಗುರು[ವ] ತನ್ನಲ್ಲಿ ಸಯವ ಮಾಡಲರಿಯದ ಗುರುರ್ಭಭ್ರಷ್ಟರ ನೋಡಾ.
ಲಿಂಗಪ್ರಾಣ ಲಿಂಗಪ್ರಾಣವೆಂಬರು,
ಲಿಂಗವ ತನ್ನಲ್ಲಿ ಸಯವ ಮಾಡಲರಿಯದ ಲಿಂಗಭ್ರಷ್ಟರ ನೋಡಾ,
ಮಂತ್ರಪ್ರಾಣ ಮಂತ್ರಪ್ರಾಣವೆಂಬರು,
ಮಂತ್ರವ ತನ್ನಲ್ಲಿ ಸಯವ ಮಾಡಲರಿಯದ ಮಂತ್ರಭ್ರಷ್ಟರ ನೋಡಾ.
ಈ ತ್ರಿವಿಧ ಸಂಬಂಧವನೊಂದೆಂದರಿಯದೆ
ಪ್ರಾಣಲಿಂಗಸಂಬಂದಿಗಳೆಂಬವರನೇನೆಂಬೆ
ಕೂಡಲಚೆನ್ನಸಂಗಮದೇವಾ ? /633
ಗುರುಭಕ್ತಿ ಗುರುಭಜನೆಯಿಲ್ಲದವನ ಕೈಯಲು
ಕರುಣವ ಪಡೆವ ನರಕಿಯ ನೆರೆಯಲ್ಲಿರಲಾಗದಯ್ಯಾ.
ಶಿವಭಕ್ತಿ ಶಿವಭಜನೆಯಿಲ್ಲದವನ ಕೈಯಲಿ ಕರುಣವ ಪಡೆದ
ಪಾಪಿಯ ಸಂಗವ ಮಾಡಲಾಗದು.
ಶೈವಸನ್ಯಾಸಿ ಕಾಳಾಮುಖಿಯ ಗುರುವೆಂಬ
ಅನಾಮಿಕನ ನೋಡಲಾಗದು, ಮಾತಾಡಿಸಲಾಗದು.
ತಟ್ಟು ಮಟ್ಟಿಯನಿಟ್ಟ ಭ್ರಷ್ಟಂಗೆ ಶಿಶುವಾದ
ಕಷ್ಟಭ್ರಷ್ಟನ ಮುಟ್ಟಲಾಗದು.
ವಿಭೂತಿ ರುದ್ರಾಕ್ಷಿಗಳಲ್ಲಿ ಪ್ರೀತಿಯಿಲ್ಲದ ನರನ
ಗುರುವೆಂಬ ಪಾತಕನ ಮಾತು ಬೇಡ.
ಭಕ್ತರಲ್ಲದರಲ್ಲಿ ಭಕ್ತಿಯಿಲ್ಲದರಲ್ಲಿ ಭಕ್ತನಾದರೆ ಅವನ ಯುಕ್ತಿ ಬೇಡ.
ಇವೆಲ್ಲವೂ ಇಲ್ಲದವರಲ್ಲಿ ಕರುಣವ ಹಡೆದು
ಬಲುಹಿಂದ ನಡೆವವನ ಸೊಲ್ಲುಬೇಡ.
ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ
ಸಮಯಕ್ಕೆ ಸಮನಿಸದವನು ನಮಗೆ ಬೇಡಯ್ಯಾ. /634
ಗುರುಲಿಂಗ ಉದಯವಾದ ಉದಯವ ನೋಡಿರಯ್ಯಾ.
ಹಿಂದೆ ಕತ್ತಲೆ ಮುಂದೆ ಬೆಳಗಾಯಿತ್ತು !
ಬೆಳಗು ಬೆಳದಿಂಗಳಾಯಿತ್ತು.
ಕೂಡಲಚೆನ್ನಸಂಗಯ್ಯನಲ್ಲಿ
ಒಲವಿನ ಉದಯದ ದರ್ಪಣದಿಂದ. /635
ಗುರುಲಿಂಗ ಶಿವಲಿಂಗ ಜಂಗಮಲಿಂಗ-
ಈ ತ್ರಿವಿಧ ಒಂದೇ ಎಂದುದಾಗಿ ಒಂದರ ಕಡನ ಒಂದು ತಿದ್ದುವವು.
ಗುರು ನಷ್ಟವಾದರೆ ಜಂಗಮ ಗುರುವಲ್ಲದೆ ಭಕ್ತ ಗುರುವಾಗಲಾಗದು.
ಪಶು ಪಶುವಿಂಗೆ ಗರ್ಭವಹುದೆ ಬಸವಂಗಲ್ಲದೆ ?
ಭಕ್ತ ಗುರುವಾದರೆ ಅವನನಾಚಾರಿ, ವ್ರತಗೇಡಿ, ಅವನುನ್ಮತ್ತನು.
ಗುರುಶಿಷ್ಯರಿಬ್ಬರು ಕೆಟ್ಟಕೇಡಿಂಗೆ ಕಡೆಯಿಲ್ಲ
ಕೂಡಲಚೆನ್ನಸಂಗಮದೇವಾ. /636
ಗುರುಲಿಂಗ ಶಿವಲಿಂಗ ಜಂಗಮಲಿಂಗ ಪರೀಕ್ಷಿಸಿ, ತ್ರಿವಿಧ ತ್ರಿವಿಧ.
ಅನುಗ್ರಹ ಅರ್ಪಿತ ಅನುಭಾವದಿಂದ ಲಿಂಗ ತ್ರಿವಿಧ ತ್ರಿವಿಧ.
ಶಿಷ್ಯ ವ್ಯವಸ್ಥಾ ವೃತ್ತಿತನದಿಂದ ಲಿಂಗ ತ್ರಿವಿಧ ತ್ರಿವಿಧ.
ಲಿಂಗೋದಕ ಪಾದೋದಕ ಪರಿಣಾ[ಮೋದಕ]ತ್ರಿವಿಧ ತ್ರಿವಿಧ.
ಆದ್ಯ ವೇದ್ಯ ಸಹಜ ಸಾಧಕತನದಿಂದ ತ್ರಿವಿಧ ತ್ರಿವಿಧ.
ಸ್ಥಾನಾಸ್ಥಾನಾಪ್ಯ ಪೂಜೆ ಜ್ಞಾನಗಮನದಿಂದ ತ್ರಿವಿಧ ತ್ರಿವಿಧ.
ಇದು ಕಾರಣ ಕೂಡಲಚೆನ್ನಸಂಗಯ್ಯ ನೀನೊಲಿದ ಮಹಂತಂಗಿದು ಸಹಜ. /637
ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗವೆಂಬ
ಅಪಸ್ಮಾರಿಗಳ ಮಾತ ಕೇಳಾಗದು.
ಅದೆಂತೆಂದಡೆ;
ಅಂಗದ ಮೇಲೆ ಒಬ್ಬ ಗಂಡ, ಮನೆಯೊಳಗೆ ಒಬ್ಬ ಗಂಡ-
ಹಿತ್ತಲೊ?ಗೊಬ್ಬ ಗಂಡ, ಮುಂಚೆಯಲೊಬ್ಬ ಗಂಡ-
ಇಂತೀ ಚತುವಿರ್ಧ ಗಂಡರು ಎಂಬ ಸತಿಯರ
ಲೋಕದವರು ಮೆಟ್ಟಿ ಮೂಗಕೊಯ್ಯದೆ ಮಾಬರೆ ?
ಕೂಡಲಚೆನ್ನಸಂಗಮದೇವಾ
ಪ್ರಾಣಲಿಂಗವಿರ್ದುದ ಎತ್ತಲೆಂದರಿಯರು/638
ಗುರುಲಿಂಗಜಂಗಮ ಸನುಮತವಾದ ಕ್ರೀಯನು ಅಹುದಾಗದೆಂಬ
ಸಂದೇಹಬೇಡ.
ಕ್ರೀವಿಡಿದು ತನುವ ಗಮಿಸೂದೂ, ಅರಿವಿಡಿದು ಮನವ ಗಮಿಸೂದು.
ಕ್ರಿಯಾದ್ವೈತಂ ನ ಕರ್ತವ್ಯಂ ಭಾವಾದ್ವೈತಂ ಸಮಾಚರೇತ್
ಕ್ರಿಯಾಂ ನಿರ್ವಹತೇ ಯಸ್ತು ಭಾವಶುದ್ಧಂ ತು ಶಾಂಕರಿ
ಎಂದುದಾಗಿ ಅನುಭಾವದಿಂದ ಸಕಳೇಂದ್ರಿಯಂಗಳು
ಕೂಡಲಚೆನ್ನಸಂಗಯ್ಯನಲ್ಲಿಯೆ ತದ್ರೂಪು. /639
ಗುರುಲಿಂಗಜಂಗಮದ ಏಕಾರ್ಥವನೇನೆಂದುಪಮಿಸಬಹುದು ?
ಗುರುಪ್ರಾಣ, ಲಿಂಗದೇಹ, ಜಂಗಮ ಆಪ್ಯಾಯನ ಎಂದುದಾಗಿ.
ಪ್ರಾಣ ಮುಟ್ಟಿ ಬಂದಡೇನು ? ಕಾಯ ಮುಟ್ಟಿ ಬಂದಡೇನು ?
ಜಿಹ್ವೆ ಮುಟ್ಟಿ ಬಂದಡೇನು ? ಜಂಗಮಮುಖ ಆಪ್ಯಾಯನ !
ಕೂಡಲಚೆನ್ನಸಂಗಮದೇವಾ, ಜಂಗಮಪ್ರಸಾದ ಸರ್ವಸಿದ್ಧಿ./640
ಗುರುಲಿಂಗಜಂಗಮಪ್ರಸಾದ ಪ್ರಾಣಪ್ರವೇಶವಾದುದಾಗಿ
ಲಿಂಗಪ್ರಾಣದೊಳಗೆ ಪ್ರಾಣಲಿಂಗ ನೋಡಾ.
ಭಕ್ತಕಾಯದೊಳಗೆ ಪ್ರಸಾದಕಾಯ ನೋಡಾ.
ವಿಶ್ವತೋ ಚಕ್ಷುವಿನೊಳಗೆ ಜ್ಞಾನಚಕ್ಷು ನೋಡಾ
ವಿಶ್ವತೋ ಮುಖದೊಳಗೆ ಸುಮುಖ ನೋಡಾ.
ವಿಶ್ವತೋ ಬಾಹುವಿನೊಳಗೆ ನಮಸ್ಕಾರ ಬಾಹು ನೋಡಾ.
ವಿಶ್ವತೋ ಪಾದದಲ್ಲಿ ನಿಂದ ಮಹತ್ಪಾದ ನೋಡಾ.-
ಇಂತಾದುದಾಗಿ,
ಲಿಂಗವ ಮನದಲ್ಲಿ ನೆನೆದು ಲಿಂಗಕ್ಕೆ ನೆನೆಯಲಿತ್ತು,
ಪ್ರಸಾದವ ಮನದಲ್ಲಿ ನೆನೆದು ಪ್ರಸಾದಿ ಪರಿಣಾಮಿಸುವ,
ಲಿಂಗವ ದೃಷ್ಟಿಯಲ್ಲಿ ನೋಡಿ ಲಿಂಗಕ್ಕೆ ನೋಡಲಿತ್ತು,
ಪ್ರಸಾದನಯನದಿಂದ ನೋಡಿ ನಯನಪ್ರಸಾದವ
ನಯನದಿಂದ ನೋಡಿಸಿ ಪರಿಣಾಮಿಸುವ.
ಲಿಂಗವ ಶ್ರೋತ್ರದಿ ಕೇಳಿ ಲಿಂಗಕ್ಕೆ ಕೇಳಲಿತ್ತು,
ಪ್ರಸಾದ ಶ್ರೋತ್ರದಿಂ ಶಬ್ದಪ್ರಸಾದಿ ಕೇಳಿ ಪರಿಣಾಮಿಸುವ,
ಲಿಂಗ[ವ] ಪರುಶನದಿಂ ಪರುಶಿಸಿ ಲಿಂಗಕ್ಕೆ ಪರುಶಿಸಲಿತ್ತು,
ಪ್ರಸಾದ ಪರುಶನದಿಂ ಪರುಶಿಸಿ ಪರುಶನಪ್ರಸಾದವ
ಪ್ರಸಾದಿ ಭೋಗಿಸಿ ಪರಿಣಮಿಸುವ.
ಲಿಂಗ ಜಿಹ್ವೆಯಿಂದ ಮಹಾರುಚಿಯ ರುಚಿಸಿ ಲಿಂಗಕ್ಕೆ ರುಚಿಸಲಿತ್ತು
ಪ್ರಸಾದಜಿಹ್ವೆಯಿಂ ಮಹಾರುಚಿಯ ರುಚಿಸಿ ರುಚಿಪ್ರಸಾದವ
ಪ್ರಸಾದಿ ಭೋಗಿಸಿ ಪರಿಣಾಮಿಸುವ.
ಇಂತು ಸರ್ವಭೋಗದ್ರವ್ಯದ ಲಿಂಗಕಾಯದಿಂ ಭೋಗಿಸಿ ಲಿಂಗಕ್ಕೆ ಭೋಗಿಸಲಿತ್ತು,
ಪ್ರಸಾದಕಾಯದಿಂ ಸರ್ವಭೋಗವನೂ ಭೋಗಿಸುವವ ಪ್ರಸಾದಿ.
ಇದು ಕಾರಣ ಭಕ್ತದೇಹಿಕದೇವ ಕೂಡಲಚೆನ್ನಸಂಗಮದೇವನೆಂದರಿದು
ಪ್ರಸಾದಿಯ ಪ್ರಸಾದಿಯಾದೆನಯ್ಯಾ. /641
ಗುರು-ಲಿಂಗ-ಜಂಗಮವೆಂಬ ಭೇದವನೆ ಕಳೆದು,
ಗುರು ಲಿಂಗವ ಏಕವ ಮಾಡಿ ತೋರಿದನಾಗಿ,
ತನು, ಮನ, ಪ್ರಾಣ ಮೊದಲಾಗಿಪ್ಪ ಕರಣೇಂದ್ರಿಯಂಗಳನು,
ತನು ಮುಟ್ಟಿದ ಸುಖಂಗಳನು ಲಿಂಗಕ್ಕೆ ಕೊಟ್ಟು,
ಅದ ಬಗೆಗೆತ್ತಿ ಬಿಚ್ಚಿ ಬೇರೆ ಮಾಡ,
ಕೂಡಲಚೆನ್ನಸಂಗಾ ಲಿಂಗೈಕ್ಯನು. /642
ಗುರುಲಿಂಗದಲ್ಲಿ ಆಗಾಗಿ ಆಚಾರಲಿಂಗಪ್ರಸಾದಿಯಾದ.
ಆಚಾರಲಿಂಗದಲ್ಲಿ ಅವಧಾನಿಯಾಗಿ ಸರ್ವಾಚಾರಸಂಪನ್ನನಾದ.
ಸರ್ವಾಚಾರಸಂಪತ್ತಿನಲ್ಲಿ ಲಿಂಗೈಕ್ಯನಾಗಿಪ್ಪನು.
ಕೂಡಲಚೆನ್ನಸಂಗಯ್ಯನಲ್ಲಿ ಸಂಗನಬಸವಣ್ಣನು
ಆಚಾರವ ಬಲ್ಲನಲ್ಲದೆ ನಾನೆತ್ತ ಬಲ್ಲೆನಯ್ಯಾ ?/643
ಗುರುಲಿಂಗದಲ್ಲಿ ಇಲ್ಲದ ಒಲವು ಪರದೈವದಲಾದೂದೆಂಬಿರಿ,
ಶರಣು ಶರಣೆನಲರಿಯದೆ ಬರುದೊರೆವೋದಿರಲ್ಲ.
ಜನನ ಮರಣರಹಿತ ಕೂಡಲಚೆನ್ನಸಂಗನ ಶರಣರಿಗೆ
ಶರಣೆನ್ನದೆ ಬರುದೊರೆವೋದಿರಲ್ಲ. /644
ಗುರುಲಿಂಗದಲ್ಲಿ ಪೂಜೆಯ ಮಾಡಿ,
ಜಂಗಮಲಿಂಗದಲ್ಲಿ ಉದಾಸೀನವ ಮಾಡಿದಡೆ
ಗುರುಲಿಂಗದ ಪೂಜಕರಿಗೆ ಶಿವದೂತರ ದಂಡನೆ
ಎಂಬುದ ಮಾಡಿದೆಯಯ್ಯಾ.
ಲೋಕದ ಕರ್ಮಿಗಳಿಗೆ ಯಮದೂತರ ದಂಡನೆ
ಎಂಬುದ ಮಾಡಿದೆಯಯ್ಯಾ.
ಭಕ್ತಿಯನರಿಯರು, ಯುಕ್ತಿಯನರಿಯರು
ಕೂಡಲಚೆನ್ನಸಂಗಮದೇವಾ/645
ಗುರುಲಿಂಗಮೋಹಿತನಾದಡೆ ಮಾತಾಪಿತರ ಮೋಹವ ಮರೆಯಬೇಕು.
ಗುರುಲಿಂಗಭಕ್ತನಾದಡೆ ಪೂರ್ವಬಂಧುಪ್ರೇಮವ ಮಾಡಲಾಗದು.
ಗುರುಲಿಂಗಪೂಜಕನಾದಡೆ ಅನ್ಯಪೂಜೆಯ ಮಾಡಲಾಗದು.
ಗುರುಲಿಂಗವೀರನಾದಡೆ ಗುರುಲಿಂಗಾಚಾರದಲ್ಲಿ ನಡೆಯಬೇಕು.
ಗುರುಲಿಂಗಪ್ರಸಾದಿಯಾದಡೆ ಗುರ್ವಾಜ್ಞೆಯ ಮೀರಲಾಗದು.
ಗುರುಲಿಂಗಪ್ರಾಣಿಯಾದಡೆ ಮಾನವರ ಸೇವೆ ಮಾಡಲಾಗದು.
ಇದು ಕಾರಣ-ಕೂಡಲಚೆನ್ನಸಂಗಯ್ಯನಲ್ಲಿ
ಈ ಆರು ಸಹಿತ ಗುರುಲಿಂಗಭಕ್ತಿ./646
ಗುರುಲಿಂಗವು ಬಂದು ಶಿಷ್ಯನ ಕರೆದು
ಪಾದದ ಮೇಲಿಕ್ಕಿ ಕೊಂಡಡೆ ನಾಯಕನರಕ.
ಪ್ರಸಾದವೆಂದು ಇಕ್ಕಿಸಿಕೊಂಡಡೆ ಅದು ಕಿಲ್ಬಿಷ.
ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ
ಬಲ್ಲ ಮಹಾತ್ಮರು ಕೊಳ್ಳರು/647
ಗುರುವ ನರನೆಂದೆನಾದರೆ ಹಿಂದಣ ಭವಮಾಲೆ ಹಿಂಗದು.
ಗುರುಶಬ್ದಕ್ಕೆ ರೋಷವ ಮಾಡಿದೆನಾದರೆ, ಶ್ವಾನನ ಬಳಗದಂತಪ್ಪೆನು.
ಗುರೂಪದೇಶವ ಮೀರಿದೆನಾದರೆ ಎನಗೆ ಏಳೇಳು ಭವಕರ್ಮ ಹಿಂಗದು.
ಇದು ಕಾರಣ ಗುರುಲಿಂಗವು ಭಗರ್ೊದೇವನೆಂಬೆನು
ಕೂಡಲಚೆನ್ನಸಂಗಯ್ಯ, ಇವ ನಂಬದಿದ್ದರೆ ಭವ ಹಿಂಗದು. /648
ಗುರುವ ಬಿಟ್ಟವಂಗೆ ಲಿಂಗವಿಲ್ಲ, ತನುವಿರಹಿತವಾಗಿ ಪ್ರಾಣವಿಲ್ಲ,
ಕಂಗಳುವಿರಹಿತವಾಗಿ ನೋಡಲಿಲ್ಲ, ಸತ್ಯವಿರಹಿತವಾಗಿ ಭಕ್ತಿಯಿಲ್ಲ.
ಈ ಭೇದಕಸ್ಥಲವನರಿಯದಿದ್ದಡೆ ಭಕ್ತಜಂಗಮವನಲ್ಲ ಕಾಣಾ
ಕೂಡಲಚೆನ್ನಸಂಗಮದೇವಾ/649
ಗುರುವ ಭವಿಯೆಂಬೆ, ಲಿಂಗವ ಭವಿಯೆಂಬೆ,
ಜಂಗಮವ ಭವಿಯೆಂಬೆ, ಪ್ರಸಾದವ ಭವಿಯೆಂಬೆ.
ಅದೇನು ಕಾರಣವೆಂದರೆ;
ಇವಕ್ಕೆ ಉಪದೇಶವ ಕೊಟ್ಟವರಿಲ್ಲವಾಗಿ,
ಇವಕ್ಕೆ ಸಾಮಿಪ್ಯ ಸಂಬಂಧವಿಲ್ಲಾಗಿ.
ಅದೆಂತೆಂದಡೆ;
`ನಾಸ್ತಿ ತತ್ವಂ ಗುರೋಃ ಪರಂ ಎಂಬುದಾಗಿ.
ಅದಕ್ಕೆ ಮತ್ತೆಯೂ;
ತ್ವಂ ವಿಶ್ವಕರ್ತಾ ತವ ನಾಸ್ತಿ ಕರ್ತಾ
ತ್ವಂ ವಿಶ್ವಭರ್ತಾ ತವ ನಾಸ್ತಿ ಭರ್ತಾ
ತ್ವಂ ವಿಶ್ವಹರ್ತಾ ತವ ನಾಸ್ತಿ ಹರ್ತಾ
ತ್ವಂ ವಿಶ್ವನಾಥಸ್ತವ ನಾಸ್ತಿ ನಾಥಃ ಎಂಬುದಾಗಿ.
ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ಭವಿಯಾಗಿ ಭವಿಯ
ಬೆರಸಬೇಕು./650
ಗುರುವಚನವನುದಾಸೀನವ ಮಾಡಿ, ಗುರುಲಿಂಗಕ್ಕೆ ವಂಚಿಸುವವನ
ಮುಖವ ನೋಡೆನೋಡೆನವನ ಕೂಡೆ ಮಾತಾಡೆ ಮಾತಾಡೆ
ಪಾಪಿಯ ಇದಿರಲ್ಲಿ ನಿಲ್ಲೆ ನಿಲ್ಲೆ
ಕೂಡಲಚೆನ್ನಸಂಗಯ್ಯನ
ವಚನ `ನ ವದಂತಿ ನ ಪಶ್ಯಂತಿ ಎಂದುದಾಗಿ. /651
ಗುರುವನುಳಿದು ಲಿಂಗವುಂಟೆ ? ಲಿಂಗವನುಳಿದು ಜಂಗಮವುಂಟೆ ?
ಜಂಗಮವನುಳಿದು ಪ್ರಸಾದವುಂಟೆ ? ಪ್ರಸಾದವನುಳಿದು ಸದ್ಭಕ್ತಿಯುಂಟೆ ?
ಭಕ್ತಿಯನುಳಿದು ಮುಕ್ತಿಯುಂಟೆ ? ಕೂಡಲಚೆನ್ನಸಂಗಯ್ಯ./652
ಗುರುವಪ್ಪುದರಿದು, ಶಿಷ್ಯನಪ್ಪುದರಿದು,
ಗುರುಶಿಷ್ಯಸಂಬಂಧವಾರಿಗೆಯೂ ಅಳವಡದಾಗಿ.
ಗುರುವಾದಾತ ಸೊನ್ನಗಾರನಾಗಬೇಕು.
ಶಿಷ್ಯನಾದಾತ ಬೆವಹಾರಿಯಾಗಬೇಕು.
ಇದು ಕಾರಣ-ಕೂಡಲಚೆನ್ನಸಂಗಯ್ಯಾ
ಇಂತಹ ಗುರುಶಿಷ್ಯಸಂಬಂಧವಪೂರ್ವ/653
ಗುರುವಾಗಬಹುದು, ಶಿಷ್ಯನಾಗಬಾರದು.
ದೇವನಾಗಬಹುದು, ಭಕ್ತನಾಗಬಾರದು.
ಶಿಷ್ಯನ ಪೂರ್ವಾಶ್ರಯವ ಗುರುವರಿಯ
(ಗುರುವಿನ ಪೂರ್ವಾಶ್ರಯವ ಶಿಷ್ಯನರಿಯ ?)
ಆಶೆ ನಿಮಿತ್ತವಾದ ಭಕ್ತಿ ಮುಕ್ತಿಗೆ ಸಾಧನವಲ್ಲ,
ಕೂಡಲಚೆನ್ನಸಂಗನಲ್ಲಿ ನೇಮದ ಲೆಂಕರು./654
ಗುರುವಾದಡೂ ಆಗಲಿ, ಲಿಂಗವಾದಡೆಯೂ ಆಗಲಿ,
ಜಂಗಮವಾದಡೆಯೂ ಆಗಲಿ
ಪಾದೋದಕ ಪ್ರಸಾದವಿಲ್ಲದ ಪಾಪಿಯ ಮುಖವ ತೋರಿಸದಿರಯ್ಯಾ.
ಭವಭಾರಿ ಜೀವಿಯ ಮುಖವ ತೋರಿಸದಿರಯ್ಯಾ.
ಅವರ ನಡೆವೊಂದು ನುಡಿವೊಂದು.
ಹಿರಿಯತನಕ್ಕೆ ಬೆಬ್ಬನೆ ಬೆರತು ಉದರವ ಹೊರೆದುಕೊಂಡಿಹ
ಕ್ರೂರಕರ್ಮಿಯ ಮುಖವ ತೋರಿಸದಿರಯ್ಯಾ,
ಕೂಡಲಚೆನ್ನಸಂಗಯ್ಯಾ. /655
ಗುರುವಾದಡೂ ತನ್ನ ಶಿಷ್ಯನ ಕೈಯ(ಕೈಯಿಂದ?) ಜಂಗಮಕ್ಕೆ ಸೇವೆಯ ಮಾಡಿಸದೆ,
ತಾ ಮಾಡಿಸಿಕೊಂಡನಾದಡೆ ಶ್ವಾನ ಒಡಲ ಹೊರೆದಂತೆ.
ಅದು ಹೇಗೆಂದಡೆ;
ತನ್ನ ಲಿಂಗವನಾ ಶಿಷ್ಯಂಗೆ ಕೊಟ್ಟು, ತಾನು ವ್ರತಗೇಡಿಯಾಗಿ ಹೋಹಲ್ಲಿ,
ಆ ಜಂಗಮವೆ ಸಾಕ್ಷಿಯಾಗಿರ್ದು ವಿಭೂತಿವೀಳೆಯವ ತೆಗೆದುಕೊಂಡು
ಗುರು ಶಿಷ್ಯರಿಬ್ಬರ ಪೂರ್ವಾಶ್ರಯವ ಕಳೆದರಾಗಿ, ಆ ಜಂಗಮಕ್ಕೆ ಮಾಡಿಸುವುದು.
ಗುರುವಾದಡಾಗ ಲಿಂಗವಾದಡಾಗಲಿ ಜಂಗಮ ತಾನಾದಡೂ ಆಗಲಿ
ಜಂಗಮ ಪಾದೋದಕ ಪ್ರಸಾದವಿಲ್ಲದವರನೊಲ್ಲೆನೊಲ್ಲೆ.
ಅವರು ಬರುಕಾಯರೆಂಬೆ, ಬರುಮುಖಿಗಳೆಂಬೆ,
ಅಂಗಹೀನರೆಂಬೆ ಲಿಂಗಹೀನರೆಂಬೆ.
ಜಂಗಮದಲ್ಲಿ ಗುಣವ ನೋಡದೆ, ಅವಗುಣವ ನೋಡದೆ
ರೂಪವ ನೋಡದೆ, ನಿರೂಪವ ನೋಡದೆ, ಕೋಪವ ನೋಡದೆ, ಶಾಂತವ ನೋಡದೆ,
ವಿವೇಕವ ನೋಡದೆ, ಅವಿವೇಕವ ನೋಡದೆ,
ಮಲಿನವ ನೋಡದೆ, ಅಮಲಿನವ ನೋಡದೆ,
ರೋಗವ ನೋಡದೆ, ನಿರೋಗವ ನೋಡದೆ,
ಕುಲವ ನೋಡದೆ, ಛಲವ ನೋಡದೆ, ಆಶೆಯ ನೋಡದೆ, ನಿರಾಶೆಯ ನೋಡದೆ,
ಅಂಗದ ಮೇಲಣ ಲಿಂಗವನೆ ನೋಡಿ, ಜಂಗಮಕ್ಕೆ ಮಾಡಿ ನೀಡಿ,
ಪಾದೋದಕ ಪ್ರಸಾದವ ಕೊಂಬ ಶರಣನ ಬಸವಣ್ಣನೆಂಬೆ
ಕಾಣಾ
ಕೂಡಲಚೆನ್ನಸಂಗಮದೇವಾ./656
ಗುರುವಾದರು ಕೇಳಲೆಬೇಕು
ಲಿಂಗವಾದರು ಕೇಳಲೆಬೇಕು
ಜಂಗಮವಾದರು ಕೇಳಲೆಬೇಕು
ಪಾದೋದಕವಾದರು ಕೇಳಲೆಬೇಕು
ಪ್ರಸಾದವಾದರು ಕೇಳಲೆಬೇಕು
ಕೇಳದೆ
ಹುಸಿ ಕೊಲೆ ಕಳವು ಪಾರದ್ವಾರ ಪರಧನ ಪರಸತಿಗಳಿಪುವ
ಭಕ್ತ ಜಂಗಮವೊಂದೇಯೆಂದು
ಏಕೀಕರಿಸಿ ನುಡಿದರೆ
ಆ ಭಕ್ತ ಭಕ್ತಸ್ಥಳಕ್ಕೆ ಸಲ್ಲ
ಆ ಜಂಗಮ ಮುಕ್ತಿಸ್ಥಳಕ್ಕೆ ಸಲ್ಲ
ಕೂಡಲಚೆನ್ನಸಂಗಮದೇವ ಸಾಕ್ಷಿಯಾಗಿ ಇವರು ಕಾಗೆಯ ಬಳಗವೆಂದೆ/657
ಗುರುವಾದರೆ ಲಿಂಗವನೆತ್ತ ಬಲ್ಲ ?
ಜಂಗಮನಾದರೆ ಪ್ರಸಾದವನೆತ್ತ ಬಲ್ಲ ?
ಇದು ಕಾರಣ,
ಕೂಡಲಚೆನ್ನಸಂಗಮದೇವಯ್ಯನೆತ್ತ ಬಲ್ಲ ಬಸವಣ್ಣನ ?/658
ಗುರುವಾದುದು ತಪ್ಪು, ಲಿಂಗವಾದುದು ತಪ್ಪು,
ಜಂಗಮವಾದುದು ತಪ್ಪು.
ಈ ತ್ರಿವಿಧ ಭೇದದ ಸಂಬಂಧದ ಸಕೀಲವ,
ಸಂಚದ ನಿಕ್ಷೇಪವ ಅರಿತರೆ
ಈ ಲೋಕವೇನು ? ಆ ಲೋಕವೇನು ?
ಈರೇಳುಭುವನ ಹದಿನಲ್ಕುಲೋಕದ ನಿಸ್ಸಾರಾಯವ ಬಿಟ್ಟು,
ತನ್ನೊಳಗೆ ಇದ್ದ ಲಿಂಗಸಾರಾಯದ ಯೋಗಿಯಾದರೆ
ಸರ್ವಾಂಗವೆಲ್ಲವೂ ಲಿಂಗ, ಇದ್ದುದೆ ಕೈಲಾಸ,
ಕೂಡಲಚೆನ್ನಸಂಗಮದೇವ/659
ಗುರುವಿಂಗೆ ಗುರುವಾಗಿ ಗುರುಪ್ರಸಾದವ ಕೊಂಬುದು,
ಲಿಂಗಕ್ಕೆ ಲಿಂಗವಾಗಿ ಲಿಂಗಪ್ರಸಾದವ ಕೊಂಬುದು,
ಜಂಗಮಕ್ಕೆ ಜಂಗಮವಾಗಿ ಜಂಗಮಪ್ರಸಾದವ ಕೊಂಬುದು,
ಪ್ರಸಾದಕ್ಕೆ ಪ್ರಸಾದವಾಗಿ ಪ್ರಸಾದವನೆ ಕೊಂಬುದು.
ಈ ಚತುರ್ವಿಧಸ್ಥಲಕ್ಕೆ ಚತುರ್ವಿಧವಾಗಬಲ್ಲಡೆ,
ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯವು. /660
ಗುರುವಿಂದಾಯಿತ್ತೆಂಬೆನೆ ? ಗುರುವಿಂದಾಗದು.
ಲಿಂಗದಿಂದಾಯಿತ್ತೆಂಬೆನೆ ? ಲಿಂಗದಿಂದಾಗದು.
ಜಂಗಮದಿಂದಾಯಿತ್ತೆಂಬೆನೆ ? ಜಂಗಮದಿಂದಾಗದು.
ಪಾದೋದಕದಿಂದಾಯಿತ್ತೆಂಬೆನೆ ? ಪಾದೋದಕದಿಂದಾಗದು.
ಪ್ರಸಾದದಿಂದಾಯಿತ್ತೆಂಬೆನೆ ? ಪ್ರಸಾದದಿಂದಾಗದು.
ತನ್ನಿಂದ ಅಹುದು, ತನ್ನಿಂದ ಹೋಹುದು ಕಾಣಾ
ಕೂಡಲಚೆನ್ನಸಂಗಮದೇವಾ. /661
ಗುರುವಿನ ಗುರು ಪರಮಗುರು ಜಂಗಮವೆಂದೆನಿಸಿಕೊಂಬರು.
ದೀಕ್ಷೆ ಶಿಕ್ಷೆ ಮಾಡಿದಲ್ಲಿ ದಾಸೋಹವ ಮಾಡಿಸಿಕೊಳ ಕರ್ತರಲ್ಲದೆ
ತನ್ನ ಪ್ರಾಣಲಿಂಗವ ಕೊಡ ಕರ್ತರಲ್ಲ.
ಪ್ರಾಣಲಿಂಗವ ಕೊಟ್ಟು ಗುರುವಾದ ಬಳಿಕ, ಜಂಗಮಸ್ಥಲಕ್ಕೆ ಭಂಗಹೊದ್ದಿತ್ತು,
ಕೂಡಲಚೆನ್ನಸಂಗಮದೇವಾ. /662
ಗುರುವಿನ ಗುರುವಿನ ಕೈಯ ಶಿಷ್ಯರ ಶಿಷ್ಯ
ಪಾದಾರ್ಚನೆಯ ಮಾಡಿಕೊಂಬುದ ಕಂಡು
ಎನ್ನ ಮನ ಬೆರಗಾಯಿತ್ತು !
ಮುಂದು ಹಿಂದಾಯಿತ್ತು, ಹಿಂದು ಮುಂದಾಯಿತ್ತು !
ಕೂಡಲಚೆನ್ನಸಂಗಮದೇವಾ,
ನಿಮ್ಮ ಗುರುಶಿಷ್ಯರ ಸಂಬಂಧ ಎನಗೆ ವಿಪರೀತವಾಯಿತ್ತು./663
ಗುರುವಿನ ಭಾವದಂತೆ ಶಿಷ್ಯನಿರಬಲ್ಲಡೆ
ಅದು ಗುರುಶಿಷ್ಯಭಾವ.
ಅವರಂದವಿಲ್ಲದಲ್ಲಿ ನಮ್ಮಂದವಿಲ್ಲ.
ಅದು ಕಾರಣ-ನಮ್ಮ ಕೂಡಲಚೆನ್ನಸಂಗನ ಶರಣ
ಮರು?ಶಂಕರನ ಯಾಚಿಸಯ್ಯಾ ಸಿದ್ಧರಾಮಯ್ಯಾ./664
ಗುರುವಿನಲ್ಲಿ ಗುಣವನರಸುವರೆ ?
ಲಿಂಗದಲ್ಲಿ ಲಕ್ಷಣವನರಸುವರೆ ?
ಜಂಗಮದಲ್ಲಿ ಜಾತಿಯನರಸುವರೆ ?
ಅರಸಿದರೆ ನಾಯಕನರಕ ತಪ್ಪದು
ಕೂಡಲಚೆನ್ನಸಂಗಮದೇವ./665
ಗುರುವಿನಲ್ಲಿ ಗುಣಸಂಪಾದನೆಯ ಮಾಡುವನ್ನಕ್ಕ
ಗುರುಸಂಬಂದಿಯಲ್ಲ.
ಲಿಂಗದಲ್ಲಿ ಸ್ಥಲಸಂಪಾದನೆಯ ಮಾಡುವನ್ನಕ್ಕ
ಲಿಂಗಸಂಬಂದಿಯಲ್ಲ.
ಜಂಗಮದಲ್ಲಿ ಜಾತಿಸಂಪಾದನೆಯ ಮಾಡುವನ್ನಕ್ಕ
ಜಂಗಮಸಂಬಂದಿಯಲ್ಲ.
ಪ್ರಸಾದದಲ್ಲಿ ರುಚಿಸಂಪಾದನೆಯ ಮಾಡುವನ್ನಕ್ಕ
ಪ್ರಸಾದಸಂಬಂದಿಯಲ್ಲ.
ಇದು ಕಾರಣ-ಕೂಡಲಚೆನ್ನಸಂಗಯ್ಯಾ
ಮಜ್ಜನಕ್ಕೆರೆವ ಭವಿಗಳನೇನೆಂಬೆ ?/666
ಗುರುವಿನಲ್ಲಿ ಭಕ್ತಿ, ಲಿಂಗದಲ್ಲಿ ನಿಷ್ಠೆ,
ಜಂಗಮದಲ್ಲಿ ಸುಯಿಧಾನ, ಅರ್ಪಿತದಲ್ಲಿ ಅವಧಾನ,
ಪ್ರಸಾದದಲ್ಲಿ ಪರಿಣಾಮ-
ಇಂತೆಂದುದು ಕೂಡಲಚೆನ್ನಸಂಗನ ವಚನ. /667
ಗುರುವಿನಲ್ಲಿ ಸದಾಚಾರಿ, ಲಿಂಗದಲ್ಲಿ ಶಿವಾಚಾರಿ,
ಜಂಗಮದಲ್ಲಿ ಸಮಯಾಚಾರಿ, ಪ್ರಸಾದದಲ್ಲಿ ಬ್ರಹ್ಮಚಾರಿ,
ಆಚಾರದಲ್ಲಿ ವಿಚಾರಿ ಕೂಡಲಚೆನ್ನಸಂಗಾ ನಿಮ್ಮ ಶರಣ. /668
ಗುರುವಿನಲ್ಲಿ ಸದಾಚಾರಿ, ಲಿಂಗದಲ್ಲಿ ಶಿವಾಚಾರಿ, ಜಂಗಮದಲ್ಲಿ ಸಮಯಾಚಾರಿ.
ಇಂತೀ ತ್ರಿವಿಧಾಚಾರ ಸಂಬಂಧವಾದ ಬಳಿಕ
ತನ್ನ ಶೀಲಕ್ಕೆ ಸಮಶೀಲವಾಗದವರ
ಮನೆಯಲನುಸರಿಸಿ ನಡೆದಡೆ ಕೂಡಲಚೆನ್ನಸಂಗನ ಶರಣ,
ಪೂರ್ವಾಚಾರ್ಯ ಸಂಗನಬಸವಣ್ಣ ಮೆಚ್ಚ ಕಾಣಿರಣ್ಣಾ. /669
ಗುರುವಿನಿಂದಾಯಿತ್ತೆನ್ನ ಗುರುಸಂಬಂಧ;
ಲಿಂಗದಿಂದಾಯಿತ್ತೆನ್ನ ಲಿಂಗಸಂಬಂಧ;
ಜಂಗಮದಿಂದಾಯಿತ್ತೆನ್ನ ಜಂಗಮಸಂಬಂಧ.
ಅದೆಂತೆಂದಡೆ:
ತನುವಿಕಾರವಳಿದೆನಾಗಿ ಗುರುಸಂಬಂಧ;
ಮನವಿಕಾರವಳಿದೆನಾಗಿ ಲಿಂಗಸಂಬಂಧ;
ಧನವಿಕಾರವಳಿದೆನಾಗಿ ಜಂಗಮಸಂಬಂಧ.
ಇಂತೀ ತ್ರಿವಿಧವಿಕಾರವಳಿದೆನಾಗಿ,
ಗುರುವಾಗಿ ಗುರುಭಕ್ತಿಸಂಪನ್ನ;
ಲಿಂಗವಾಗಿ ಲಿಂಗಭಕ್ತಿಸಂಪನ್ನ;
ಜಂಗಮವಾಗಿ ಜಂಗಮಭಕ್ತಿ ಸಂಪನ್ನ.
ಇದು ಕಾರಣ, ಅರಿವೆ ಗುರು, ಅನುಭಾವವೆ ಲಿಂಗ, ಆನಂದವೆ ಜಂಗಮ.
ಅದು ಹೇಗೆಂದಡೆ:
ಅರಿವೆಂಬ ಗುರುವಿನಿಂದ ಇಷ್ಟಲಿಂಗಸಾಹಿತ್ಯ;
ಅನುಭಾವವೆಂಬ ಲಿಂಗದಿಂದ ಪ್ರಾಣಲಿಂಗಸಾಹಿತ್ಯ
ಆನಂದವೆಂಬ ಜಂಗಮದಿಂದ ತೃಪ್ತಿಲಿಂಗಸಾಹಿತ್ಯ.
ಅರಿವಿನಿಂದ ಅನುಭವ; ಅನುಭವದಿಂದ ಅರಿವು.
ಅರಿವು ಅನುಭವ ಸಮರಸವಾದುದೆ ಆನಂದ.
ಆನಂದಕ್ಕೆ ಅರಿವೆ ಸಾಧನ.
ಇಷ್ಟದಿಂದ ಪ್ರಾಣ, ಪ್ರಾಣದಿಂದ ಇಷ್ಟ;
ಇಷ್ಟಪ್ರಾಣಸಂಯೋಗವಾದುದೆ ತೃಪ್ತಿ.
ಆ ತೃಪ್ತಿಗೆ ಇಷ್ಟಲಿಂಗದರಿವೆ ಸಾಧನ.
ಅದೆಂತೆಂದಡೆ:
ಆ ಇಷ್ಟಲಿಂಗದಲ್ಲಿ ವಿನಯ ಮೋಹ ಭಯ ಭಕ್ತಿ ಕರುಣ ಕಿಂಕುರ್ವಾಣ
ಸಮರಸವಾದುದೆ ಆಚಾರಲಿಂಗ.
ಮತ್ತಾ ಇಷ್ಟಲಿಂಗದಲ್ಲಿ ದೃಢಸ್ನೇಹ ನಿಶ್ಚಯ ನಿಶ್ಚಲವಿಶ್ವಾಸ
ಸಮರಸವಾದುದೆ ಗುರುಲಿಂಗ.
ಮತ್ತಾ ಇಷ್ಟಲಿಂಗದಲ್ಲಿ ಎಚ್ಚರಿಕೆ ಸುಜನತ್ವ ಸಾವಧಾನ ಸನ್ನಹಿತ ಪ್ರಸನ್ನತ್ವ
ಸಮರಸವಾದುದೆ ಶಿವಲಿಂಗ.
ಮತ್ತಾ ಇಷ್ಟಲಿಂಗದಲ್ಲಿ ನಿಸ್ತರಂಗ ದೃಕ್ಕಿರಣೋದಯ ಹೃದಯಕುಹರ
ಸ್ವಯಾನುಭಾವಾಂತಮರ್ುಖ ಸಮರಸವಾದುದೆ ಜಂಗಮಲಿಂಗ.
ಮತ್ತಾ ಇಷ್ಟಲಿಂಗದಲ್ಲಿ ಪರವಶ ಗೂಢ ಏಕಾಗ್ರಚಿತ್ತ ಉತ್ತರಯೋಗ
ಪರಿಪೂರ್ಣಭಾವ ಸಚ್ಚಿದಾನಂದ ಸಮರಸವಾದುದೆ ಪ್ರಸಾದಲಿಂಗ.
ಮತ್ತಾ ಇಷ್ಟಲಿಂಗದಲ್ಲಿ ಮನೋಲಯ ಭಾವಾದ್ವೈತ ಅನುಪಮ ಚಿತ್ತಾತ್ಮಿಕದೃಷ್ಟಿ
ಸುನಾದ ಭೋಜ್ಯ ಸಮರಸವಾದುದೆ ಮಹಾಲಿಂಗ.
ಇಂತಪ್ಪ ಮಹಾಲಿಂಗದಿಂದ ಪ್ರಸಾದಲಿಂಗ, ಪ್ರಸಾದಲಿಂಗದಿಂದ ಜಂಗಮಲಿಂಗ,
ಜಂಗಮಲಿಂಗದಿಂದ ಶಿವಲಿಂಗ, ಶಿವಲಿಂಗದಿಂದ ಗುರುಲಿಂಗ,
ಗುರುಲಿಂಗದಿಂದ ಆಚಾರಲಿಂಗ.
ಆಚಾರಲಿಂಗದಲ್ಲಿ ಅನುಭಾವಿಯಾದಡೆ,
ಇಪ್ಪತ್ತೈದು ಕರಣಂಗಳನರಿದಾಚರಿಸಬೇಕು.
ಗುರುಲಿಂಗದಲ್ಲಿ ಅನುಭಾವಿಯಾದಡೆ,
ಇಪ್ಪತ್ತು ಕರಣಂಗಳನರಿದಾಚರಿಸಬೇಕು.
ಶಿವಲಿಂಗದಲ್ಲಿ ಅನುಭಾವಿಯಾದಡೆ,
ಹದಿನೈದು ಕರಣಂಗಳನರಿದಾಚರಿಸಬೇಕು.
ಜಂಗಮದಲ್ಲಿ ಅನುಭಾವಿಯಾದಡೆ,
ಹತ್ತು ಕರಣಂಗಳನರಿದಾಚರಿಸಬೇಕು.
ಪ್ರಸಾದಲಿಂಗದಲ್ಲಿ ಅನುಭಾವಿಯಾದಡೆ,
ಐದು ಕರಣಂಗಳನರಿದಾಚರಿಸಬೇಕು.
ಮಹಾಲಿಂಗದಲ್ಲಿ ಅನುಭಾವಿಯಾದಡೆ,
ಎಲ್ಲಾ ಕರಣಂಗ?ನರಿದಾಚರಿಸಬೇಕು.
ಇಂತಪ್ಪ ಮಹಾಲಿಂಗವೆ ಇಷ್ಟಲಿಂಗವಾಗಿ,
ಆ ಇಷ್ಟಲಿಂಗದ ಗಂಧಂಗಳಾರು ಮುಖಂಗಳಾಗಿ,
ಆ ಮುಖಂಗಳ ತತ್ತತ್ಸ್ಥಾನದ್ರವ್ಯಂಗಳನರಿದರ್ಪಿಸಿಕೊಳಬಲ್ಲನಾಗಿ
ಆಚಾರಲಿಂಗಭೋಗಿ.
ಮತ್ತಾ ಇಷ್ಟಲಿಂಗದ ರಸಂಗಳಾರು ಮುಖಂಗಳಾಗಿ,
ಆ ಮುಖಂಗಳ ತತ್ತತ್ಸ್ಥಾನದ್ರವ್ಯಂಗಳನರಿದರ್ಪಿಸಿಕೊಳಬಲ್ಲನಾಗಿ
ಗುರುಲಿಂಗಭೋಗಿ.
ಮತ್ತಾ ಇಷ್ಟಲಿಂಗದ ರೂಪುಗಳಾರು ಮುಖಂಗಳಾಗಿ,
ಆ ಮುಖಂಗಳ ತತ್ತತ್ಸ್ಥಾನದ್ರವ್ಯಂಗಳನರಿದರ್ಪಿಸಿಕೊಳಬಲ್ಲನಾಗಿ
ಶಿವಲಿಂಗಭೋಗಿ.
ಮತ್ತಾ ಇಷ್ಟಲಿಂಗದ ಸ್ಪರ್ಶನಂಗಳಾರು ಮುಖಂಗಳಾಗಿ
ಆ ಮುಖಂಗಳ ತತ್ತತ್ಸ್ಥಾನದ್ರವ್ಯಂಗಳನರಿದರ್ಪಿಸಿಕೊಳಬಲ್ಲನಾಗಿ
ಜಂಗಮಲಿಂಗಭೋಗಿ.
ಮತ್ತಾ ಇಷ್ಟಲಿಂಗದ ಶಬ್ದಂಗಳಾರು ಮುಖಂಗಳಾಗಿ,
ಆ ಮುಖಂಗಳ ತತ್ತತ್ಸ್ಥಾನದ್ರವ್ಯಂಗಳನರಿದರ್ಪಿಸಿಕೊಳ್ಳಬಲ್ಲನಾಗಿ
ಪ್ರಸಾದಲಿಂಗಭೋಗಿ.
ಮತ್ತಾ ಇಷ್ಟಲಿಂಗದ ಪರಿಣಾಮಂಗಳಾರು ಮುಖಂಗಳಾಗಿ,
ಆ ಮುಖಂಗಳ ತತ್ತತ್ಸ್ಥಾನದ್ರವ್ಯಂಗಳನರಿದರ್ಪಿಸಿಕೊಳಬಲ್ಲನಾಗಿ
ಮಹಾಲಿಂಗಭೋಗಿ.
ಇಂತಪ್ಪ ಮಹಾಲಿಂಗವೆ ಇಷ್ಟಲಿಂಗವಾಗಿ,
ಆ ಇಷ್ಟಲಿಂಗದ ಸದ್ಯೋಜಾತಮುಖವಪ್ಪ ಪ್ರಾಣಂಗಳಾರು ದ್ರವ್ಯಂಗಳಲ್ಲಿ
ಷಟ್ತ್ರಿಂಶಲ್ಲಿಂಗಾವಧಾನಿಯಾಗಿ,
ಮತ್ತಾ ಇಷ್ಟಲಿಂಗದ ವಾಮದೇವಮುಖವಪ್ಪ ಜಿಹ್ವೆಗಳಾರು ದ್ರವ್ಯಂಗಳಲ್ಲಿ
ಷಟ್ತ್ರಿಂಶಲ್ಲಿಂಗಾವಧಾನಿಯಾಗಿ,
ಮತ್ತಾ ಇಷ್ಟಲಿಂಗದ ಅಘೋರಮುಖವಪ್ಪ ನೇತ್ರಂಗಳಾರು ದ್ರವ್ಯಂಗಳಲ್ಲಿ
ಷಟ್ತ್ರಿಂಶಲ್ಲಿಂಗಾವಧಾನಿಯಾಗಿ,
ಮತ್ತಾ ಇಷ್ಟಲಿಂಗದ ತತ್ಪುರುಷಮುಖವಪ್ಪ ತ್ವಕ್ಕುಗಳಾರು ದ್ರವ್ಯಂಗಳಲ್ಲಿ
ಷಟ್ತ್ರಿಂಶಲ್ಲಿಂಗಾವಧಾನಿಯಾಗಿ,
ಮತ್ತಾ ಇಷ್ಟಲಿಂಗದ ಈಶಾನಮುಖವಪ್ಪ ಶ್ರೋತ್ರಂಗಳಾರು ದ್ರವ್ಯಂಗಳಲ್ಲಿ
ಷಟ್ತ್ರಿಂಶಲ್ಲಿಂಗಾವಧಾನಿಯಾಗಿ,
ಮತ್ತಾ ಇಷ್ಟಲಿಂಗದ ಗೋಪ್ಯಮುಖವಪ್ಪ ಹೃದಯಂಗಳಾರು ದ್ರವ್ಯಂಗಳಲ್ಲಿ
ಷಟ್ತ್ರಿಂಶಲ್ಲಿಂಗಾವಧಾನಿಯಾಗಿ.
ಇಂತಪ್ಪ ತೃಪ್ತಿಪದಾರ್ಥಂಗಳಾರು, ಶಬ್ದಪದಾರ್ಥಂಗಳಾರು,
ಸ್ಪರ್ಶನಪದಾರ್ಥಂಗಳಾರು, ರೂಪುಪದಾರ್ಥಂಗಳಾರು,
ರಸಪದಾರ್ಥಂಗಳಾರು, ಗಂಧಪದಾರ್ಥಂಗಳಾರು.
ಇಂತೀ ಗಂಧಪದಾರ್ಥಂಗಳಾರನು ಘ್ರಾಣಿಸುವಲ್ಲಿ ಅಷ್ಟಾದಶಲಿಂಗಶೇಷಭುಕ್ತನಾಗಿ,
ರಸಪದಾರ್ಥಂಗಳಾರನು ರುಚಿಸುವಲ್ಲಿ ಅಷ್ಟಾದಶಲಿಂಗಶೇಷಭುಕ್ತನಾಗಿ,
ರೂಪುಪದಾರ್ಥಂಗಳಾರನು ನಿರೀಕ್ಷಿಸುವಲ್ಲಿ ಅಷ್ಟಾದಶಲಿಂಗಶೇಷಭುಕ್ತನಾಗಿ,
ಸ್ಪರ್ಶನ ಪದಾರ್ಥಂಗಳಾರನು ಸೋಂಕಿಸುವಲ್ಲಿ ಅಷ್ಟಾದಶಲಿಂಗಶೇಷ ಭುಕ್ತನಾಗಿ,
ಶಬ್ದಪದಾರ್ಥಂಗಳಾರನು ಲಾಲಿಸುವಲ್ಲಿ ಅಷ್ಟಾದಶಲಿಂಗಶೇಷಭುಕ್ತನಾಗಿ,
ತೃಪ್ತಿಪದಾರ್ಥಂಗಳಾರನು ಪರಿಣಾಮಿಸುವಲ್ಲಿ ಅಷ್ಟಾದಶಲಿಂಗಶೇಷಭುಕ್ತನಾಗಿ,
ಅರ್ಪಿತ ಪ್ರಸಾದ ಅವಧಾನ ಸ್ಥಳಕು? ಅನುಭಾವ ಆಚರಣೆ
ಇಂತಿವೆಲ್ಲವನು ಇಷ್ಟಲಿಂಗದಲ್ಲಿಯೆ ಕಂಡು ಸುಖಿಸುತ್ತಿರ್ಪ
ಮಹಾಮಹಿಮನ ನಾನೇನೆಂಬೆನಯ್ಯಾ !
ಇಂತಪ್ಪ ಮಹಾಮಹಿಮನೊಳಕೊಂಡಿಪ್ಪ ಇಷ್ಟಬ್ರಹ್ಮವ ನಾನೇನೆಂಬೆನಯ್ಯಾ !
ಫಲ ಪತ್ರ ಕುಸುಮ ರಸ ಗಂಧ ಕಾರ ಒಗರು ಹುಳಿ ಮಧುರ ಇಂತಿವೆಲ್ಲಕ್ಕೂ
ಜಲವೊಂದೆ ಹಲವು ತೆರನಾದಂತೆ,
ಮಸೆದ ಕೂರಲಗು ಮೊನೆ ಮೊನೆಗೆ ಬಂದಾನುವಂತೆ,
ರಸಘುಟಿಕೆಯೊಂದೆ ಸಹಸ್ರ ಮೋಹಿಸುವಂತೆ,
ಬಂಗಾರವೊಂದೆ ಹಲವಾಭರಣವಾದಂತೆ,
ಹತ್ತೆಂಟುಬಾಯ ಹುತ್ತದೊಳಗೆ ಸರ್ಪನೊಂದೆ ತಲೆದೋರುವಂತೆ
ಹಲವು ಕರಣಂಗಳ ಕೊನೆಯ ಮೊನೆಯ ಮೇಲೆ
ತೊ?ಗಿ ಬೆಳಗುವ ಪರಂಜ್ಯೋತಿರ್ಲಿಂಗವು !
ಅನುಪಮ ಅದ್ವಯ ವಾಙ್ಮನೋತೀತ ಅವಿರಳ ಅಪ್ರಮೇಯ
ಚಿನ್ಮಯ ನಿರಾವರಣ ನಿರುತ ನಿರ್ಗುಣ ನಿರ್ಭೆದ್ಯ,
ಕೂಡಲಚೆನ್ನಸಂಗಮದೇವಾ, ನಿಮ್ಮ ಶರಣ ಸರ್ವಾಂಗಲಿಂಗಿ./670
ಗುರುವಿಲ್ಲದ ಕೂಟ ಲಿಂಗವಿಲ್ಲದ ನೋಟ,
ಜಂಗಮವಿಲ್ಲದ ಮಾಟ, ಪ್ರಸಾದವಿಲ್ಲದ ಊಟ,
ಈ ನಾಲ್ಕರ ಬೇಟವಿಲ್ಲದ ಕೂಟ,
ಕೂಡಲಚೆನ್ನಸಂಗಯ್ಯನೆನಲಿಲ್ಲದ ಆಟ/671
ಗುರುವಿಲ್ಲದ ಲಿಂಗ, ಲಿಂಗವಿಲ್ಲದ ಗುರು
ಗುರು-ಲಿಂಗವಿಲ್ಲದ ಶಿಷ್ಯ.
ಶಿಷ್ಯನಿಲ್ಲದ ಸೀಮೆ, ಸೀಮೆಯಿಲ್ಲದ ನಿಸ್ಸೀಮ
ಕೂಡಲಚೆನ್ನಸಂಗಾ ನಿಮ್ಮ ಶರಣ/672
ಗುರುವಿಲ್ಲದೆ, ಲಿಂಗ ನಿನಗೆಲ್ಲಿಯದಯ್ಯಾ ?
ಕೊಂದೆ ನಿಮ್ಮಯ್ಯನ, ಕೊಂಡೆ ಲಿಂಗವನು !
ಅಂದು ಅನುಮಿಷ ನಿನಗೆ ಗುರುವಾದುದನರಿಯಾ ?
ಕೂಡಲಚೆನ್ನಸಂಗಯ್ಯನಲ್ಲಿ
ಮೂರು ಲೋಕವರಿಯೆ ಅಲ್ಲಮ ಪ್ರವತಗೇಡಿ !/673
ಗುರುವುಳ್ಳಾತ ಶಿಷ್ಯನಲ್ಲ, ಪ್ರಸಾದವುಳ್ಳಾತ ಭಕ್ತನಲ್ಲ.
ಲಿಂಗೈಕ್ಯನಾದರೆ ಸ್ಥಾವರಲಿಂಗ ವಿರೋದಿಯಾಗಿರಬೇಕು.
ಕಾಯಕ್ಕೆ ಸಾಹಿತ್ಯವೆಲ್ಲಿಯಾದರೆಯೂ ಉಂಟು, ಆತ್ಮಸಾಹಿತ್ಯವಪೂರ್ವ.
ಆಚಾರಸಾಹಿತ್ಯ ಲೋಕ, ಅನಾಚಾರಸಾಹಿತ್ಯ ಶರಣ,
ಇದು ಕಾರಣ ಕೂಡಲಚೆನ್ನಸಂಗಯ್ಯಾ
ನಾನು ಅನಾಚಾರಿಯಾದ ಕಾರಣ ಎನಗೆ ಪ್ರಸಾದ ನೆಲೆಗೊಂಡಿತ್ತು./674
ಗುರುವೆ ಬೋನ, ಶಿಷ್ಯನೆ ಮೇಲೋಗರ.
ಲಿಂಗಕ್ಕೆ ಪದಾರ್ಥವರ್ಪಿತವಯ್ಯಾ !
ಘನಕ್ಕೆ ಮನವೆ ಅರ್ಪಿತ, ಮನಕ್ಕೆ ಮಹವೆ ಅರ್ಪಿತ !
ಘನದೊಳಗೆ ಮನವು ತಲ್ಲೀಯವಾದ ಬಳಿಕ
ಅರ್ಪಿಸುವ ಭಕ್ತನಾರು ? ಆರೋಗಿಸುವ ದೇವನಾರು ?
ನಿತ್ಯತೃಪ್ತ ಉಣಕಲಿತನೆಂದಡೆ
ಅರ್ಪಿಸಲುಂಟೆ ದೇವಾ ಮತ್ತೊಂದನು ?
ಕೂಡಲಚೆನ್ನಸಂಗಮದೇವಾ,
ಬಸವಣ್ಣನೆ ಬೋನ, ನಾನೆ ಪದಾರ್ಥ;
ಸುಚಿತ್ತದಿಂದ ಆರೋಗಿಸಯ್ಯಾ ಪ್ರಭುವೆ/675
ಗುರುವೆ ಸದಾಶಿವ, ಗುರುವೆ ಮಹಾಮಹಿಮ,
ಗುರುವೆ ಅಕಲ್ಪಿತ ನಿತ್ಯ ನಿರವಯ.
ಸಾಕಾರವಿಡಿದು ಗುರುಲಿಂಗವಾದ;
ನಿರಾಕಾರವಿಡಿದು ಪ್ರಾಣಲಿಂಗವಾದ;
ಉಭಯಸ್ಥಲ ಏಕವಾದಲ್ಲಿ ಭವವಿರಹಿತಭಕ್ತ ಜೀವನ್ಮುಕ್ತನಾದ.
ಅಂತು ಗುರು ನಿಂದ ಸ್ಥಾನ, ಕಾಶೀಕ್ಷೇತ್ರ.
ಗುರುಚರಣ ಪ್ರಕ್ಷಾಲನೋದಕವೆ ಗಂಗಾತೀರ್ಥ.
ಗುರುಲಿಂಗ ಸಾಕ್ಷಾತ್ ಪರಶಿವನಿಂದ ವಿಶೇಷ.
ಗುರುದರ್ಶನ ಪರಮಪೂಜೆ, ಗುರುಪಾದ ರುದ್ರಗಾಯತ್ರಿ;
ಗುರುವಿನಿಂದತಿಶಯ ಫಲವೇನೂ ಇಲ್ಲ.
ಕೂಡಲಚೆನ್ನಸಂಗಯ್ಯಾ, ಎನ್ನ ಪರಮಗುರು ಬಸವಣ್ಣನ ಶ್ರಿಪಾದಕ್ಕೆ
ನಮೋ ನಮೋ ಎಂಬೆನು./676
ಗುರುವೆ ಹೆಂಡತಿಯಾಗಿ, ಹೆಂಡತಿಯೆ ತಾಯಾಗಿ;
ತಾಯೆ ಹೆಂಡತಿಯಾಗಿ; ಶಿಷ್ಯನೆ ಗಂಡನಾಗಿ-
ಏನೆಂದು ಹೇಳುವೆ, ಏನೆಂದುಪಮಿಸುವೆ,
ಕೂಡಲಚೆನ್ನಸಂಗಯ್ಯಾ ಇಹಪರವಿಲ್ಲವಾಗಿ./677
ಗುರುವೆಂಬ ಗೂಳಿ ಮುಟ್ಟಲು, ಶಿಷ್ಯನೆಂಬ ಮಣಿಕ ತೆನೆಯಾಯಿತ್ತು.
ಲಿಂಗವೆಂಬ ಕಿಳುಗರು, ತನುವೆ ಕೆಚ್ಚಲು, ಮನವೆ ಮೊಲೆವಾಲು.
ಅರಿದಲ್ಲಿ ಐಕ್ಯ, ಮರೆದಲ್ಲಿ ಸಾಹಿತ್ಯ.
ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ
ಅನಾಚಾರಿಗಲ್ಲದೆ ಪ್ರಸಾದವಿಲ/678
ಗುರುವೆಂಬ ತಂದೆಗೆ ಶಿಷ್ಯನೆಂಬ ಮಗಳು ಹುಟ್ಟಿ,
ಲಿಂಗವೆಂಬ ಗಂಡನ ತಂದು, ಮದುವೆಯ ಮಾಡಿದ ಬಳಿಕ
ಇನ್ನಾರೊಡನೆ ಸರಸವನಾಡಲೇಕಯ್ಯಾ
ನಾಚಬೇಕು ಲಿಂಗದೆಡೆಯಲ್ಲಿ ನಾಚಬೇಕು ಜಂಗಮದೆಡೆಯಲ್ಲಿ,
ನಾಚಬೇಕು ಪ್ರಸಾದದೆಡೆಯಲ್ಲಿ,
ನಾಚಿದಡೆ ಭಕ್ತನೆಂಬೆನು, ಯುಕ್ತನೆಂಬೆನು, ಶರಣನೆಂಬೆನು,
ನಾಚದಿದ್ದರೆ ಮಿಟ್ಟೆಯ ಭಂಡರೆಂಬೆನು
ಕೂಡಲಚೆನ್ನಸಂಗಮದೇವಾ. /679
ಗುರುವೆಂಬ ಪ್ರತಿಭಾವವಿಲ್ಲದ ಶಿಷ್ಯ;
ಶಿಷ್ಯನೆಂಬ ಪ್ರತಿಭಾವವಿಲ್ಲದ ಗುರು;
ಏನೆಂಬೆನೇನೆಂಬೆ ಎರಡಿಲ್ಲದ ಘನವನೇನೆಂಬೆನೇನೆಂಬೆ !
ಉಭಯವಳಿದು ಒಂದಾದುದನೇನೆಂಬೆನೇನೆಂಬೆ:
ಕೂಡಲಚೆನ್ನಸಂಗಯ್ಯನಲ್ಲಿ
ಗುರುಶಿಷ್ಯಸಂಬಂಧವಪೂರ್ವ/680
ಗುರುವೆನ್ನ ತನುವ ಬೆರಸಿದ ಕಾರಣ,
ಗುರುವಿನ ತನುವ ನಾ ಬೆರಸಿದ ಕಾರಣ, ಗುರು ಶುದ್ಧನಾದನಯ್ಯಾ.
ಲಿಂಗವೆನ್ನ ಮನವ ಬೆರಸಿದ ಕಾರಣ,
ಲಿಂಗದ ಮನವ ನಾ ಬೆರಸಿದ ಕಾರಣ, ಲಿಂಗ ಶುದ್ಧವಾದನಯ್ಯಾ.
ಜಂಗಮವೆನ್ನ ಜಿಹ್ವೆಯ ಬೆರಸಿದ ಕಾರಣ,
ಜಂಗಮದ ಜಿಹ್ವೆಯ ನಾ ಬೆರಸಿದ ಕಾರಣ
ಜಂಗಮ ಶುದ್ಧನಾದನಯ್ಯಾ
ಈ ಮೂವರು ತಮ್ಮಿಂದ ತಾವಾಗಲರಿಯದೆ
ಎನ್ನ ಮುಟ್ಟಿ ಶುದ್ಧವಾದರು ಕಾಣಾ,
ಕೂಡಲಚೆನ್ನಸಂಗಮದೇವಾ. /681
ಗುರುಶಿಷ್ಯ ಸಂಬಂಧವನರಸುವ ಮಹಂತರ ನಾನೇನೆಂಬೆನಯ್ಯಾ;
ಶಿಷ್ಯಂಗೆ ಗುರು ಶಿವಸೋದರ, ಗುರುವಿಂಗೆ ಲಿಂಗ ಶಿವಸೋದರ,
ಲಿಂಗಕ್ಕೆ ಜಂಗಮ ಶಿವಸೋದರ, [ಜಂಗಮಕ್ಕೆ ಪ್ರಸಾದ ಶಿವಸೋದರ]
ಪ್ರಸಾದಕ್ಕೆ ಪರಿಣಾಮವೆ ಶಿವಸೋದರ,
ಇದು ಕಾರಣ, ಗುರುವಿನಲ್ಲಿ ಗುಣವ, ಲಿಂಗದಲ್ಲಿ ಸ್ಥಲವ (ಶಿಲೆಯ?)
ಜಂಗಮದಲ್ಲಿ ಕುಲವ, ಪ್ರಸಾದದಲ್ಲಿ ರುಚಿಯ,
ಪರಿಣಾಮದಲ್ಲಿ ಕುರುಹನರಸುವ ಪಾತಕರ ತೋರದಿರು
ಕೂಡಲಚೆನ್ನಸಂಗಮದೇವಾ. /682
ಗುರುಶಿಷ್ಯ ಸಂಬಂಧವನು ಏನೆಂದುಪಮಿಸುವೆನಯ್ಯ!
ಒಂದಾಗಿ ಹೋಗಲುಬಾರದು, ಅವರಿದ್ದೂರಲಿರಲಾಗದು.
ಗಣತಿಂಥಿಣಿಯಲ್ಲಿ ಕುಳ್ಳಿರಲಾಗದು,
ಅವರ ಸಹಪಙ್ತಯಲ್ಲಿ ಲಿಂಗಾರ್ಚನೆಯ ಮಾಡಲಾಗದು,
ಅವರಂಥವರಿಂಥವರೆಂದು ಕನಸಿನಲ್ಲಿ ಮನಸಿನಲ್ಲಿ ನೆನೆದಡೆ
ಅಘೋರನರಕ ಕೂಡಲಚೆನ್ನಸಂಗಯ್ಯಾ. /683
ಗುರುಶಿಷ್ಯರಲ್ಲಿ ಭೇದವಿಲ್ಲದ ಕಾರಣ ಗಮಿಸುವುದಯ್ಯಾ
ದ್ವಾರದ ಮುಂದಿಪ್ಪ ಪಲ್ಲಕ್ಕಿಯಲ್ಲಿ.
ಮರುಳಶಂಕರನೇರುವ ಗಜಮಹಾಪೀಠವ,
ಕೂಡಲಚೆನ್ನಸಂಗನ ಶರಣ ಸಿದ್ಧರಾಮನ
ಭಕ್ತಿ ನಿಮಿತ್ತಕ್ಕೇರುವೆನಾಂದೋಲನವ,
ಮತ್ತೊಂದಕ್ಕಲ್ಲ ಪ್ರಭುವೆ/684
ಗುರುಶಿಷ್ಯಸಂಬಂಧವನೇನೆಂದುಪಮಿಸುವೆ ?
ಜ್ಯೋತಿಯಲೊದಗಿದ ಜ್ಯೋತಿಯಂತಿರಬೇಕು,
ದರ್ಪಣದೊಳಡಗಿದ ಪ್ರತಿಬಿಂಬದಂತಿರಬೇಕು,
ಸ್ಫಟಿಕದೊಳಗಿರಿಸಿದ ರತ್ನದಂತಿರಬೇಕು,
ರೂಪಿನ ನೆಳಲಿನ ಅಂತರಂಗದಂತಿರಬೇಕು.
ಇದು ಕಾರಣ, ಕೂಡಲಚೆನ್ನಸಂಗಯ್ಯಾ
ದರ್ಪಣವ ದರ್ಪಣಕ್ಕೆ ತೋರಿದಂತಿರಬೇಕು/685
ಗುರುಸತ್ತಡೆ ಸಮಾದಿಯ ಹೊಗಲೊಲ್ಲರಯ್ಯಾ;
ಲಿಂಗಬಿದ್ದಡೆ ಸಮಾದಿಯ ಹೊಕ್ಕಹೆವೆಂಬರು.
ಗುರುವಿಂದ ಲಿಂಗವಾಯಿತ್ತೆ ? ಲಿಂಗದಿಂದ ಗುರುವಾದನೊ ?
ಅದೆಂತೆಂದಡೆ:
ಪೃಥ್ವಿಯಲ್ಲಿ ಹುಟ್ಟಿತ್ತು, ಕಲ್ಲುಕುಟಿಗನಿಂದ ರೂಪಾಯಿತ್ತು,
ಗುರುವಿನ ಹಸ್ತದಿಂದ ಲಿಂಗವಾಯಿತ್ತು.
ಇಂತೀ ಮೂವರಿಗೆ ಹುಟ್ಟಿದ ಲಿಂಗವ ಕಟ್ಟಿ
ಜಗವೆಲ್ಲ ಭಂಡಾಯಿತ್ತು ನೋಡಿರೊ !
ಅಣ್ಣಾ, ಲಿಂಗ ಬಿದ್ದಿತ್ತು ಬಿದ್ದಿತ್ತೆಂದು ನೋಯಲೇಕೆ ?
ಬಿದ್ದ ಲಿಂಗವನೆತ್ತಿಕೊಂಡು ಷೋಡಶೋಪಚಾರವ ಮಾಡುವುದು.
ಹೀಗಲ್ಲದೆ ಶಸ್ತ್ರಸಮಾದಿ ದುರ್ಮರಣವ ಮಾಡಿಕೊಂಡಿಹೆನೆಂಬ
ಪಂಚಮಹಾಪಾತಕಂಗೆ ನಾಯಕನರಕ.
ಲಿಂಗವು ಬೀಳಬಹುದೆ ? ಭೂಮಿಯು ಆನ ಬಲ್ಲುದೆ ?
ಸದ್ಗುರುನಾಥನಿಲ್ಲವೆ ?
ಇಂತೀ ಕಟ್ಟುವ ತೆರನ, ಮುಟ್ಟುವ ಭೇದವ ಆರು ಬಲ್ಲರೆಂದಡೆ:
ಈರೇಳು ಭುವನ, ಹದಿನಾಲ್ಕುಲೋಕದೊಡೆಯ
ಪೂರ್ವಾಚಾರಿ ಕೂಡಲಚೆನ್ನಸಂಗಯ್ಯನಲ್ಲದೆ
ಮಿಕ್ಕಿನ ಮಾತಿನ ಜ್ಞಾನಿಗಳೆತ್ತ ಬಲ್ಲರು ?/686
ಗುರುಸಾಧಕರ ಕಾಣೆನಯ್ಯ, ಬಲ್ಲೆನೆಂಬರು ಹೊಲಬುಗೆಟ್ಟರು.
ಲಿಂಗಸಾಧಕರ ಕಾಣೆನಯ್ಯ, ಬಲ್ಲೆನೆಂಬರು ಹೊಲಬುಗೆಟ್ಟರು,
ಜಂಗಮಸಾಧಕರ ಕಾಣೆನಯ್ಯ, ಬಲ್ಲೆನೆಂಬರು ಹೊಲಬುಗೆಟ್ಟರು.
ಪಾದೋದಕ ಪ್ರಸಾದ ಉಭಯದಲ್ಲಿ ನಿಂದ ಕಾರಣ
ಕೂಡಲಚೆನ್ನಸಂಗಯ್ಯಾ,
ಈ ವಚನಸಾಧಕರ ಕಂಡು ಮನ ನಾಚಿತ್ತು. /687
ಗುರುಸಾಹಿತ್ಯವಾದವರಂತಿರಲಿ,
ಲಿಂಗಸಾಹಿತ್ಯವಾದವರಂತಿರಲಿ,
ಜಂಗಮಸಾಹಿತ್ಯವಾದವರಂತಿರಲಿ,
ಪ್ರಸಾದಸಾಹಿತ್ಯವಾದವರಂತಿರಲಿ,
ಕೂಡಲಚೆನ್ನಸಂಗಯ್ಯಾ
ಇಂದ್ರಿಯ ಸಾಹಿತ್ಯ ಬಸವಣ್ಣಂಗಲ್ಲದಿಲ್ಲ. /688
ಗುರುಸ್ಥಲ ಘನವೆಂಬೆನೆ ? ಗುರುವಿಂಗೆ ಲಿಂಗವುಂಟು.
ಲಿಂಗಸ್ಥಲ ಘನವೆಂಬೆನೆ ? ಲಿಂಗಕ್ಕೆ ಜಂಗಮವುಂಟು.
ಆ ಜಂಗಮ ಎಲ್ಲಿ ಇದ್ದಡೆ ಅಲ್ಲಿ,
ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ಭಕ್ತಿ ಅನುಭಾವ
ಸನ್ನಿಹಿತ ಕಾಣಾ-ಕೂಡಲಚೆನ್ನಸಂಗಮದೇವಾ./689
ಗುರುಸ್ಥಲ ನಾಸ್ತಿಯಾದಲ್ಲದೆ ಶಿಷ್ಯನಲ್ಲ;
ಲಿಂಗಸ್ಥಲ ನಾಸ್ತಿಯಾದಲ್ಲದೆ ಭಕ್ತನಲ್ಲ,
ಜಂಗಮಸ್ಥಲ ನಾಸ್ತಿಯಾದಲ್ಲದೆ ಶರಣನಲ್ಲ.
ಇದುಕಾರಣ, ಕೂಡಲಚೆನ್ನಸಂಗಮದೇವಾ
ಈ ತ್ರಿವಿಧವು ನಾಸ್ತಿಯಾಗಿ
ಭಕ್ತ ಕೆಟ್ಟು ಭವಿಯಾದಲ್ಲದೆ ಲಿಂಗೈಕ್ಯನಲ/690
ಗುರುಹಸ್ತದಲ್ಲಿ ಉತ್ಪತ್ಯವಾಗಿ,
ಜಂಗಮಾನುಭವ ಶರಣರ ಸಂಗದಲ್ಲಿ ಬೆಳೆದು,
ನಿಜಲಿಂಗದಲ್ಲಿ ಲೀಯವಾದ ಗುರುಚರ ಭಕ್ತರು
ತಮ್ಮ ಸ್ಥೂಲಕಾಯವೆಂಬ ನರಕಂಥೆಯ ಕಳೆದರೆ,
ಭಕ್ತ ಬಂಧುಗಳಾದ ಆಪ್ತ ಗಣಂಗಳು ಬಂದು
ಸಮಾದಿಯಂ ತೆಗೆದು, ಆ ಕಾಯವೆಂಬ ಕಂಥೆಯ
ನಿಕ್ಷೇಪವಂ ಮಾಡುವುದೆ ಸದಾಚಾರ.
ಇಂತಲ್ಲದೆ ಮೃತವಾದನೆಂದು ಗೂಟವಂ ಬಲಿದು,
ಗುಂಟಿಕೆಯನಿಕ್ಕಿ, ಶೋಕಂಗೆಯ್ದು,
ಪ್ರೇತಸೂತಕ ಕರ್ಮವಿಡಿದು,
ತದ್ದಿನವಂ ಮಾಡುವದನಾಚಾರ, ಪಂಚಮಹಾಪಾತಕ.
ಅವಂಗೆ ಗುರು ಲಿಂಗ ಜಂಗಮ ಪ್ರಸಾದವಿಲ್ಲ ಅದೆಂತೆಂದೊಡೆ:
“ಯೋ ಗುರುಂ ಮೃತಭಾವೇನ ತದ್ದಿನಂ ಯಸ್ಯ ಶೋಚ್ಯತೇ
ಗುರುಲಿಂಗಪ್ರಸಾದಂ ಚ ನಾಸ್ತಿ ನಾಸ್ತಿ ವರಾನನೇ ಎಂದುದಾಗಿ,
ಪ್ರೇತಸೂತಕದ ಪಾತಕರಿಗೆ ಅಘೋರನರಕ ತಪ್ಪದು.
ಇಂತಪ್ಪ ಅಘೋರನರಕಿಗಳ ಮುಖವ ನೋಡಲಾಗದು ಕಾಣಾ
ಕೂಡಲಚೆನ್ನಸಂಗಯ್ಯ./691
ಗುರುಹಸ್ತದೊಳು ಪುನರ್ಜಾತನಾದ ಭಕ್ತನಲ್ಲಿ
ಆವ ಜನ್ಮಜಾತಿಯ ಬೆದಕಲಪ್ಪುದು ?
ಅವೆಲ್ಲ ಪ್ರಾಕೃತರಿಗಲ್ಲದೆ ಅಪ್ರಾಕೃತರಿಗುಂಟೆ ಹೇಳಾ ?
“ಅಪ್ರಾಕೃತಸ್ಯ ಭಕ್ತಸ್ಯ ಗುರುಹಸ್ತಾಮಲಾಂಬುಜಾತ್
ಪುನರ್ಜಾತಸ್ಯಾತ್ಮಜನ್ಮ ಜಾತ್ಯಾದೀನ್ನ ಚ ಕಲ್ಪಯೇತ್ ‘
ಎಂಬ ಆಗಮವನರಿಯದೆ,
ನಿಮ್ಮ ಶರಣರಲ್ಲಿ ಜಾತಿಯ ಹುಡುಕುವ
ಕಡುಪಾತಕಿಗ? ಎನ್ನತ್ತ ತೋರದಿರಯ್ಯಾ
ಕೂಡಲಚೆನ್ನಸಂಗಮದೇವಾ/692
ಗೆದ್ದಲು ಮನೆಯ ಮಾಡಿದರೆ ಹಾವಿಂಬುಗೊಂಡಿತ್ತು
ವೇಶಿ ಮನೆಯ ಮಾಡಿದರೆ ಎಂಜಲಿಂಬುಗೊಂಡಿತ್ತು
ಬಸವಣ್ಣ ಮನೆಯ ಮಾಡಿದರೆ ಪ್ರಸಾದವಿಂಬುಗೊಂಡಿತ್ತು
ಕೂಡಲಚೆನ್ನಸಂಗಮದೇವ ನೀ ಸಾಕ್ಷಿಯಾಗಿ./693
ಗೋಚರ ಅಗೋಚರ ಸಾಕಾರ ನಿರಾಕಾರ,
ಶೂನ್ಯ ನಿಶ್ಶೂನ್ಯವೆಂದುದು ಪುರಾತನರ ವಚನ.
ಕೂಡಲಚೆನ್ನಸಂಗಯ್ಯ ಮುಟ್ಟಿತ್ತೇ ಆಯಿತ್ತು ಮಹಾಪ್ರಸಾದ/694
ಗೋವಿನ ಹೊಟ್ಟೆಯಲ್ಲಿ ಘೃತವಿದ್ದಡೇನೊ
ಆ ಗೋವು ದಿನದಿನಕ್ಕೆ ಪುಷ್ಟವಾಗಬಲ್ಲುದೆ ?
ಅದು ಕಾರಣ- ಆ ಗೋವ ಪೋಷಿಸಿ ಕರೆದು ಕಾಸಿ,
ಘೃತವ ಮಾಡಿ ಆ ಗೋವಿಂಗೆ ಕುಡಿಯಲೆರೆದಡೆ
ಆ ಗೋವು ದಿನದಿನಕ್ಕೆ ಪುಷ್ಟವಹುದು.
ಹಾಂಗೆ, ತನ್ನಲ್ಲಿ ವಸ್ತುವಿದ್ದಡೇನೊ ?
ವಸ್ತುವ ಗುರುಮುಖದಿಂದ ಕರಸ್ಥಲಕ್ಕೆ ಪಡೆದು,
ಸತ್ಕ್ರಿಯೆಯಿಂದ ಪ್ರಾಣಕ್ಕೆ ವೇದಿಸಿದಲ್ಲದೆ ಪ್ರಾಣಲಿಂಗವಾಗದು.
ಕೂಡಲಚೆನ್ನಸಂಗಯ್ಯನಲ್ಲಿ,
ಇಷ್ಟಲಿಂಗವ ಸತ್ಕ್ರಿಯೆಯಿಂದ ಪ್ರಾಣಕ್ಕೆ ವೇಧಿಸಿ,
ತಾನೆಂಬ ಅನಿಷ್ಟವ ತೊಲಗಿಸಿದಲ್ಲದೆ
ಪ್ರಾಣಲಿಂಗಸಂಬಂಧವಾಗಬಾರದು/695
ಗ್ರಾಮದ ಪಥಗತಿಯನರಿಯರು, ಗ್ರಾಮಕ್ಕೆ ಗುರುವಾವುದೆಂದರಿಯರು,
ಗ್ರಾಮದ ಕರಣವಿಡಿದಲ್ಲಿ ನಿಚ್ಚಾಟವಾವುದೆಂದರಿಯರು.
ಇವನರಿದು ಮರೆದು ನಿಂದರೆ
ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯವು. /696
ಗ್ರಾಮಮಧ್ಯದ ಧವಳಾರದೊ?ಗೊಂದು ಸತ್ತ ಹೆಣನಿರುತ್ತಿರಲು,
ಗ್ರಾಮ ಸುತ್ತಿ ಬರುತಿದ್ದ ರಕ್ಕಸಿ ಆ ಸತ್ತುದ ಕಂಡಳಲ್ಲಾ.
ಗ್ರಾಮ ನನ್ನ ಕಾಹು, ಗ್ರಾಮದಲ್ಲಿ ನಾನಿಪ್ಪೆ, ಇದಾರೊ ಕೊಂದವರು ?
ನಾನು ಕೊಲ್ಲದ ಮುನ್ನ, ಅದು ತಾನೆ ಸತ್ತಡೆ, ಎನಗಿದು ಸೋಜಿಗವು.
ಸತ್ತುದು ಗ್ರಾಮವ ಕೆಡಿಸಿತ್ತು, ಇನ್ನಿದ್ದರೆ ಎನ್ನನೂ ಕೆಡಿಸಿತ್ತು.
ಇಲ್ಲಿದ್ದವರಿಗುಪಟಳ ನೋಡಾ ! (ಎಂದು) ಗ್ರಾಮ ಬಿಟ್ಟು ಹೋಯಿತ್ತಯ್ಯಾ
ಕೂಡಲಚೆನ್ನಸಂಗಮದೇವಾ./697
ಗ್ರಾಮಮಧ್ಯದ ಧವಳಾರದೊಳಗೆ ಎಂಟು ಕಂಬ,
ಒಂಬತ್ತು ಬಾಗಿಲ ಶಿವಾಲ್ಯವಿರುತಿರಲು,
ಮಧ್ಯಸ್ಥಾನದಲ್ಲಿದ್ದ ಸ್ವಯಂಭುನಾಥನನೇನೆಂದರಿಯರಲ್ಲಾ.
ಕಲ್ಲಿನಾಥನ ಪೂಜಿಸಿ ಸ್ವಯಂಭುನಾಥನನೊಲ್ಲದೆ
ಎಲ್ಲರೂ ಮರುಳಾದರು ನೋಡಾ.
ಮೆಲ್ಲ ಮೆಲ್ಲನೆ ಸ್ವಯಂಭುನಾಥನು ತನ್ನ ತಪ್ಪಿಸಿಕೊಂಡು,
ಕಲ್ಲಿನಾಥನ ತೋರಿದ.
ಶಿವಾಲ್ಯದೊಳಗಣ ಮಧ್ಯಸ್ಥಾನವನರಿದು
ಗರ್ಭಗೃಹವ ಹೊಕ್ಕಡೆ ಕಲ್ಲಿನಾಥ ನಾಸ್ತಿ.
ಕೂಡಲಚೆನ್ನಸಂಗನೆಂಬ ಸ್ವಯಂಭು ಇರುತ್ತಿರಲು
ಎತ್ತಲೆಂದರಿಯರಲ್ಲಾ. /698
ಘಟದೊಳಗಿದ್ದ ಪದಾರ್ಥವು,
ಆ ಘಟದ ಹೊರಗೆ ಉರಿಯ ಹತ್ತಿಸಿದಲ್ಲದೆ ಪರಿಪಕ್ವವಾಗದು.
ಹಾಗೆ-ಅಂತರಂಗದಲಿರ್ದ ಚಿದ್ವಸ್ತು ಸಂಸ್ಕಾರಬಲದಿಂದ ಹೊರಹೊರಟಲ್ಲದೆ,
ಅಂತರಂಗದಲಿರ್ದ ಭವರೋಗ ಮಾಣದು.
ಇದು ಕಾರಣ, ಕೂಡಲಚೆನ್ನಸಂಗಮದೇವಾ.
ಅರ್ಚನ ಅರ್ಪಣ ಅನುಭಾವಾದಿಗಳಿಂದ ನೀವು ಪ್ರಕಟಗೊಳ್ಳುವಿರಾಗಿ./699
ಘಟನಾಘಟನಸಮರ್ಥನಪ್ಪ ಶ್ರಿಗುರುವಿನ ಪ್ರಸಾದದಿಂದಲ್ಲದೆ,
ಮಾಯೆಗೆ ಮರುಳಾದ ನರಜೀವಿಗಳ
ಬಹಿರಂಗದ ಬರಿಯಸಂಸ್ಕಾರ ಮಾತ್ರದಿಂದ ಭವಿ ಭಕ್ತನಪ್ಪನೆ ?
ಸೊಡ್ಡಳದೇವನ ಶುಭವಪ್ಪ ನೋಟದಿಂದ
ಇಟ್ಟಿಯ ಹಣ್ಣುಗಳು ಸಿಹಿಯಾದುವಲ್ಲದೆ,
ಲೋಕದ ಕಾಕುಮಾನವರ ನೋಟಮಾಟದಿಂದ ಸಿಹಿಯಾದುವೆ ?
ಅದು ಕಾರಣ-ಅಂತಪ್ಪ ಸಾಮಥ್ರ್ಯವಿಲ್ಲದೆ
ಕಡುಪಾತಕಿಗಳ ಹಿಡಿದು ತಂದು, ಲಿಂಗವ ಕೊಡಲು
ಕಡೆತನಕ ಭವಿಗಳಾಗಿರ್ಪರಲ್ಲದೆ ಭಕ್ತರಾಗಲರಿಯರಯ್ಯಾ
ಕೂಡಲಚೆನ್ನಸಂಗಯ್ಯಾ. /700
ಘಟಸಂಸ್ಕಾರದಲ್ಲಿ ಪಟಲ ಹರಿವುದೆ, ಜೀವಸಂಸ್ಕಾರವಿಲ್ಲದನ್ನಕ್ಕ ?
ವೇಷಧಾರಿತನದಲ್ಲಿ ಗ್ರಾಸವಹುದಲ್ಲದೆ,
ಜ್ಞಾನಸಂಸ್ಕಾರವಿಲ್ಲದನ್ನಕ್ಕ ಭವವೆಂತು ಹರಿವುದು ?
ಅಂಗಭವಿಯನು ಲಿಂಗಭವಿಯನು ಕಳೆದುಳಿದಲ್ಲದೆ,
ಕೂಡಲಚೆನ್ನಸಂಗಯ್ಯನ ಹೊದ್ದಬಾರದು. /701
ಘಟಾಕಾಶ ಮಠಾವಕಾಶ ದಿಗಾಕಾಶ ಬಿಂದ್ವಾಕಾಶ
ಬಿನ್ನಾಕಾಶ ಮಹದಾಕಾಶವೆಂಬ
ಆಕಾಶಕೊಂಬತ್ತು ಬಾಗಿಲು.
ಹೊಗಲಿಕಸಾಧ್ಯ ಹೊರಹೊಂಡಲಿಕಸಾಧ್ಯ.
ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ ಸಾಧ್ಯವಲ್ಲದೆ
ಉಳಿದವರಿಗಸಾಧ್ಯವು./702
ಘನವೆಂಬ ಮನದ ತಲೆವಾಗಿಲಲ್ಲಿ ಸದಾ ಸನ್ನಹಿತನಾಗಿಪ್ಪೆಯಯ್ಯಾ.
ಸಕಲಪದಾರ್ಥದ ಪೂರ್ವಾಶ್ರಯವ ಕಳೆದುಬಹ
ಸುಖಂಗಳನವಧರಿಸುತಿಪ್ಪೆಯಯ್ಯಾ,
ನಿನ್ನ ಮುಟ್ಟಿ ಬಂದುದಲ್ಲದೆ ಎನ್ನ ಮುಟ್ಟದೆಂಬ
ಎನ್ನ ಮನದ ನಿಷ್ಠೆಗೆ ನೀನೆ ಒಡೆಯ,
ಕೂಡಲಚೆನ್ನಸಂಗಮದೇವಾ. /703
ಚಂದ್ರಶಿಲೆಯಲ್ಲಿ ಪಾವಕ ಹುಟ್ಟಿ, ಈಡಾ ಪಿಂಗಳ ಮಧ್ಯದಲ್ಲಿ ಅನಿಲ ತುಂಬಿ,
ಅರಿದರಿದು ! ನಿಮ್ಮ ನೆನೆವ ಪರಿಕರ ಹೊಸತು !
ಅರಿವಡೆ ತಲೆಯಿಲ್ಲ, ಹಿಡಿವಡೆ ಮುಡಿಯಿಲ್ಲ !
ಕೂಡಲಚೆನ್ನಸಂಗಮದೇವಾ
ನಿಮ್ಮ ಶರಣನ ಪರಿಯಿಂತುಟು; ಅರಿದರಿದು !/704
ಚತುರ್ಗ್ರಾಮ ಪಂಚೈದು ಭೂತದೊಳಗೆ ಸ್ಥೂಲವಾವುದು? ಸೂಕ್ಷ್ಮವಾವುದು?
ಎಮಗೆ ಬಲ್ಲವರು ನೀವು ಹೇಳಿರೇ.
ಕಾಲಚಕ್ರ ಕರ್ಮಚಕ್ರ ನಾದಚಕ್ರ ಬಿಂದುಚಕ್ರ,
ಆವುದು ಘನ, ಆವುದು ಕಿರಿದು? ಎಮಗೆ ಬಲ್ಲವರು ನೀವು ಹೇಳಿರೇ,
ಶುದ್ಧ ಸಿದ್ಧ ಪ್ರಸಿದ್ಧವೆಂದು ಹೆಸರಿಟ್ಟುಕೊಂಡು ನುಡಿವಿರಿ,
ಓಗರವಾವ ಕಡೆ? ಪ್ರಸಾದವಾವ ಕಡೆ? ಎಮಗೆ ಬಲ್ಲವರು ನೀವು ಹೇಳಿರೇ,
ಇಕ್ಕಿದ ರಾಟಳ ತುಂಬುತ್ತ ಕೆಡಹುತ್ತಲಿದೆ.
ಇಕ್ಕಿದ ರಾಟಳ ಮುರಿದು ಸೂತ್ರ ಹರಿದು ನಿಶ್ಶೂನ್ಯವಾದಡೆ
ಕೂಡಲಚೆನ್ನಸಂಗನಲ್ಲಿ ಮಹಾಪ್ರಸಾದಿಯೆಂಬೆನು./705
ಚರಣವಿಡಿದಂಗೆ ಕರುಣಿ ಕಂದೆರವೆಯ ಮಾಡಬೇಕೆಂದು,
ಮರಹಿಂದ ಬಂದ ಕಾಯದ ಕರ್ಮವ ಕಳೆದು
ಗುರುಲಿಂಗವು ಕರುಣಿಸಿ
ಕಂದೆರವೆಯ ಮಾಡಿದ ಪ್ರಾಣಲಿಂಗ ಸಂಬಂಧವೆಂತಿದ್ದುದೆಂದರೆ:
ಆಲಿ ನುಂಗಿದ ನೋಟದಂತೆ, ಬಯಲು ನುಂಗಿದ ಬ್ರಹ್ಮಾಂಡದಂತೆ,
ಮುತ್ತು ನುಂಗಿದ ಉದಕದಂತೆ ಪುಷ್ಪ ನುಂಗಿದ ಪರಿಮಳದಂತೆ ಇಪ್ಪ
ಮಹಾನುಭಾವದ ನುಡಿಗೆ ಗುರಿಯಾದೆನಾಗಿ
ಎನ್ನ ಒಡಲ ಪರ್ಯಾಯ ಕೆಟ್ಟಿತ್ತಯ್ಯಾ, ಕೂಡಲಚೆನ್ನಸಂಗಮದೇವಾ. /706
ಚಾಂಡಾಲಭಾಂಡದಲ್ಲಿ ಭಾಗೀರಥಿಯುದಕವ ತುಂಬಿದಡೇನೊ
ಶುದ್ಧವಾಗಬಲ್ಲುದೆ ?
ಪಾಪಿ ಗುರುಮುಖವಾದಡೇನೊ
ಲಿಂಗವನರಿಯಬಲ್ಲನೆ ?
ಇದು ಕಾರಣ-ಕೂಡಲಚೆನ್ನಸಂಗಮದೇವಾ
ಕೂಡೆ ಮಜ್ಜನಕ್ಕೆರೆವರೆಲ್ಲ ಭಕ್ತರಾಗಬಲ್ಲರೆ ?/707
ಚಿದ್ಘನ ಚಿತ್ಪ್ರಕಾಶ ಚಿದಾನಂದ ಲಿಂಗವೆ,
ಎನ್ನ ಹೃದಯಕಮಲವ ಬೆಳಗುವ ಪರಂಜ್ಯೋತಿ ಲಿಂಗವೆ,
ಎನ್ನ ಕರಸ್ಥಲಕ್ಕನುವಾದ ಲಿಂಗವೆ,
ಎನ್ನ ಕಂಗಳ ಕೊನೆಯಲ್ಲಿ ಮೂರ್ತಿಯಪ್ಪೆಯಯ್ಯಾ ಧರ್ಮಿ
ಕೂಡಲಚೆನ್ನಸಂಗಮದೇವಾ/708
ಚೆನ್ನಸಂಗಾ, ನಿಮ್ಮಲ್ಲಿ ಬಯಸಿ ಬೇಡುವಡೆ,
ಬಸವನಂತಪ್ಪ ನಿಧಾನ ದೊರಕಿತ್ತೆನಗೆ.
ಚೆನ್ನಸಂಗಾ, ನಿಮ್ಮಲ್ಲಿ ಬಯಸಿ ಬೇಡುವಡೆ,
ಬಸವನಂತಪ್ಪ ಪರುಷ ದೊರಕಿತ್ತೆನಗೆ.
ಚೆನ್ನಸಂಗಾ ನಿಮ್ಮಲ್ಲಿ ಬಯಸಿ ಬೇಡುವಡೆ
ಬಸವನಂತಪ್ಪ ಕಾಮಧೇನು ದೊರೆಯಿತ್ತೆನಗೆ.
ಚೆನ್ನಸಂಗಾ, ನಿಮ್ಮಲ್ಲಿ ಬಯಸಿ ಬೇಡುವಡೆ,
ಬಸವನಂತಪ್ಪ ಸುರತರು ದೊರಕಿತ್ತೆನಗೆ.
ಚೆನ್ನಸಂಗಾ, ನಿಮ್ಮಲ್ಲಿ ಬಯಸಿ ಬೇಡುವಡೆ,
ತ್ರಿವಿಧ ತ್ರಿವಿಧ[ದ] ಮೊದಲನೆ ತೋರಿದ ಬಸವಣ್ಣನೆನಗೆ.
ಚೆನ್ನಸಂಗಾ, ನಿಮ್ಮಲ್ಲಿ ಬಯಸಿ ಬೇಡುವಡೆ,
ಬಸವಣ್ಣನಿಂದ ನೀವಾದಿರಾಗಿ, ಕೂಡಲಚೆನ್ನಸಂಗಯ್ಯನಲ್ಲಿ
ಪ್ರಸಾದಿಯ ಪ್ರಸಾದಿಯಾದೆನು. /709
ಜಂಗಮ ಘನವೆಂಬೆನೆ ? ಬೇಡಿ ಕಿರಿದಾಯಿತ್ತು.
ಲಿಂಗ ಘನವೆಂಬೆನೆ ? ಕಲುಕುಟಿಗರ ಕೈಯೆ ಮಾಡಿಸಿಕೊಂಡು ಕಿರಿದಾಯಿತ್ತು.
ಭಕ್ತ ಘನವೆಂಬೆನೆ ? ತನುಮನಧನ ವಂಚನೆಯಿಂದ ಕಿರಿದಾಯಿತ್ತು.
ಇಂತೀ ತ್ರಿವಿಧ ನಿಷ್ಪತ್ತಿಯಾಗದನ್ನಕ್ಕರ
ಕೂಡಲಚೆನ್ನಸಂಗಮದೇವನೆಂತೊಲಿವನೊ ?/710
ಜಂಗಮ ಜಂಗಮವೆಂದರೆ ಬಾಯಿಲೆಕ್ಕವೆ ಜಂಗಮ ?
ಜಂಗಮ ಜಂಗಮವೆಂದರೆ ಉಪಾದಿಕನೆ ಜಂಗಮ ?
ಜಂಗಮ ಜಂಗಮವೆಂಬುದೇನೊ ಬೋಧಕನೆ ಜಂಗಮ ?
ಜಂಗಮ ಜಂಗಮವೆಂಬುದೇನೊ ಆಶ್ರಿತನೆ ಜಂಗಮ ?
ಜಂಗಮ ಜಂಗಮವೆಂಬುದೇನೊ ಕಾರ್ಯಕಾರಣನೆ ಜಂಗಮ ?
ಜಂಗಮ ಜಂಗಮವೆಂಬುದೇನೊ ಸ್ತ್ರೀಲಂಪಟನೆ ಜಂಗಮ ?
ಈ ಷಡ್ಗುಣದಿಚ್ಛುಕರ ಜಂಗಮವೆಂಬೆನೆ ? ಎನ್ನೆನು.
ಈ ಪಾತಕದ ನುಡಿಯ ಕೇಳಲಾಗದು.
ಜಂಗಮವೆಂತಹನೆಂದರೆ:
ನಿರವಯ ಜಂಗಮ, ನಿರುಪಾದಿಕ ಜಂಗಮ
ನಿಬರ್ೊಧಕ ಜಂಗಮ, ನಿರಾಶ್ರಿತ ಜಂಗಮ
ನಿಃಕಾರಣ ಜಂಗಮ, ನಿರ್ಲಂಪಟ ಜಂಗಮ-
ಇಂತಪ್ಪುದೆ ಕಾರಣವಾಗಿ ಪ್ರಭುದೇವರಿಗೆ ಶರಣೆಂದು
ಬದುಕಿದ ಬಸವಣ್ಣ.
ಅವರಿಬ್ಬರ ಒಕ್ಕುದ ಕೊಂಡು, ನಾನು ಬದುಕಿದೆನು ಕಾಣಾ
ಕೂಡಲಚೆನ್ನಸಂಗಮದೇವಾ/711
ಜಂಗಮ ನಾನೆಂಬ ಅಗ್ಗಳೆಯಿನ್ನೆಂತೊ ?
ಜಂಗಮ ತಾನಾದಡೆ ಲಿಂಗ ತನ್ನ ಬೆಸಮಗನಾಗಿರಬೇಕು.
ಇಂತಿರ್ದುದು ಉಭಯಾರ್ಥವು.
ಅದೆಂತೆಂದಡೆ:
ಆಚಾರಶ್ಚಾಪ್ಯಡಿನಾಚಾರೋ ಸೀಮೋ ನಿಸ್ಸೀಮ ಏವ ಚ
ಆಗಮೋಡಿನಾಗಮೋ ನಾಸ್ತಿ ಸ ಹಿ ಜಂಗಮ ಉಚ್ಯತೇ ಎಂದುದಾಗಿ,
ಕೂಡಲಚೆನ್ನಸಂಗಯ್ಯಾ, ಆ ಲಿಂಗ-ಜಂಗಮವಪೂರ್ವ./712
ಜಂಗಮ ಪ್ರಸಾದದಿಂದ ಲಿಂಗಕ್ಕೆ ಚೈತನ್ಯಸ್ವರೂಪವೆಂದರಿದು,
ಪಾದೋದಕದಿಂದ ಲಿಂಗಕ್ಕೆ ಮಜ್ಜನವೆಂದರಿದು,
ಜಂಗಮ ಪ್ರಸಾದವೆ ಲಿಂಗಕ್ಕೆ ಅರ್ಪಿತವಾಗಿ,
ಲಿಂಗದಿಂದ ನೋಡುತ್ತ, ಕೇಳುತ್ತ, ರುಚಿಸುತ್ತ,
ಮುಟ್ಟುತ್ತ, ವಾಸಿಸುತ್ತ, ಕೂಡುತ್ತ, ಅಹಂ ಮಮತೆಗೆಟ್ಟು,
ಸಂದು ಸಂಶಯವರತು, ಹಿಂದ ಮುಂದ ಹಾರದಿಪ್ಪುದೇ ನಿಜವೀರಶೈವ.
ಇಂತಲ್ಲದೆ ಉಳಿದುದೆಲ್ಲವು ಇತರ ಶೈವ ಕಾಣಾ.
ಕೂಡಲಚೆನ್ನಸಂಗಮದೇವಾ./713
ಜಂಗಮ ಬರಬೇಕೆಂದು ಲಿಂಗಾರ್ಚನೆಯ ಮಾಡೂದು.
ಆ ಜಂಗಮ ಬಂದರೆ ತನ್ನ ಲಿಂಗಾರ್ಚನೆಯ ಮಾಣಬೇಕು,
ಮಾದು ಜಂಗಮಾರ್ಚನೆಯ ಮಾಡಬೇಕು.
ಲಿಂಗದಲೇನುಂಟು, ಜಂಗಮದಲೇನುಂಟೆಂದರೆ:
ಲಿಂಗದಲ್ಲಿ ಫಲವುಂಟು ಪದವುಂಟು ಛಲವುಂಟು ಭವವುಂಟು.
ಜಂಗಮದಲ್ಲಿ ಫಲವಿಲ್ಲ ಪದವಿಲ್ಲ ಕುಲವಿಲ್ಲ ಛಲವಿಲ್ಲ ಭವವಿಲ್ಲ.
ಇದು ಕಾರಣ ಕೂಡಲಚೆನ್ನಸಂಗಮದೇವಾ
ಜಂಗಮವೇ ಲಿಂಗವೆಂದು ನಂಬಿದನಾಗಿ
ಬಸವಣ್ಣ ಸ್ವಯಲಿಂಗವಾದ. /714
ಜಂಗಮದ ಪಾದತೀರ್ಥ ಪ್ರಸಾದವ
ಲಿಂಗಕ್ಕೆ ಕೊಟ್ಟು ಕೊಳಬಾರದು ಎಂಬಾತನು ಲಿಂಗದ್ರೋಹಿ, ಜಂಗಮದ್ರೋಹಿ,
ಪಾದೋದಕ ಪ್ರಸಾದದ್ರೋಹಿಯಾದ
ಚಾಂಡಾಲರ ಮುಖವ ನೋಡಲಾಗದು.
ನೋಡಿದಡೆ ನಾಯಕನರಕ ತಪ್ಪದು
ಕೂಡಲಚೆನ್ನಸಂಗಮದೇವಾ/715
ಜಂಗಮಪಾದವು ಪರಮಪವಿತ್ರವಾಗಿರ್ಪುದಯ್ಯಾ,
ಜಂಗಮಪಾದವು ಜಗದ್ಭರಿತವಾಗಿರ್ಪುದಯ್ಯಾ,
ಜಂಗಮಪಾದವು ಆದಿಯಿಂದತ್ತತ್ತಲಾಗಿರ್ಪುದಯ್ಯಾ,
`ಚರಣಂ ಪವಿತ್ರಂ ವಿತತಂ ಪುರಾಣಂ್ಡ ಎಂದುದಾಗಿ,
ಜಂಗಮದ ಶ್ರೀಪಾದವ ಭಕ್ತಿಯಿಂದ ಪಿಡಿದ ಸದ್ಭಕ್ತನು
ದುರಿತಾಂಬುದಿಯಿಂದ ದೂರವಾಗಿರ್ಪನಯ್ಯಾ
ಕೂಡಲಚೆನ್ನಸಂಗಮದೇವಾ/716
ಜಂಗಮಪ್ರಸಾದವ ಲಿಂಗಕ್ಕೆ ಸಲಿಸಬಾರದೆಂಬ ಮಾತ ಕೇ?ಲಾಗದು.
ಪ್ರಸಾದವೆ ಲಿಂಗ, ಆ ಲಿಂಗವೆ ಅಂಗ;
ಆ ಜಂಗಮವೆ ಚೈತನ್ಯ, ಆ ಚೈತನ್ಯವೆ ಪ್ರಸಾದ.
ಇಂತೀ ಉಭಯದ ಬೇಧವನರಿಯರು ನೋಡಾ !
ಜಿಹ್ವೆಯಲ್ಲಿ ಉಂಡ ರಸ ಸರ್ವೆಂದ್ರಿಯಕ್ಕೆ ಬೇರೆಯಾಗಬಲ್ಲುದೆ ?
ಪ್ರಾಣಲಿಂಗದಲ್ಲಿ ಸವಿದು ಭಾವಲಿಂಗದಲ್ಲಿ ತೃಪ್ತಿಯಾದ ಬಳಿಕ
ಇಷ್ಟಲಿಂಗಕ್ಕೆ ಬಿನ್ನವುಂಟೆ ?
ಇದನರಿದು ಅರ್ಪಿಸಿ ಸುಖಿಸಲೊಲ್ಲರು.
ದೇಹಭಾವದಲ್ಲಿ ಕೊಂಬುದು ಅನರ್ಪಿತವೆಂದರಿಯರು.
ಲಿಂಗಕ್ಕೂ ಭಕ್ತಂಗೂ ಭೇದವಿಲ್ಲೆಂಬುದನರಿಯಲರಿಯರು.
ಜಂಗಮಮುಖದಿಂದೊಗೆದುದು ಪ್ರಸನ್ನಪ್ರಸಾದವೆಂದರಿಯರು.
ಸರ್ವೆಂದ್ರಿಯಮುಖದ್ವಾರೇ ಸದಾ ಸನ್ನಿಹಿತಃ ಶಿವಃ
ಪ್ರಾಣೇ ಲಿಂಗಸ್ಥಿತಿಂ ಮತ್ವಾ ಯೋ ಭುಂಕ್ತೇ ಲಿಂಗವರ್ಜಿತಃ
ಸಃ ಸ್ವಮಾಂಸಂ ಸ್ವರುದಿರಂ ಸ್ವಮಲಂ ಭಕ್ಷಯತ್ಯಹೋ
ತಸ್ಮಾಲ್ಲಿಂಗಪ್ರಸಾದಂ ಚ ನಿರ್ಮಾಲ್ಯಂ ತಜ್ಜಲಂ ತಥಾ
ನೈವೇದ್ಯಂ ಚರಲಿಂಗಸ್ಯ ಶೃಣು ಷಣ್ಮುಖ ಸರ್ವದಾ
ಇದು ಕಾರಣ,
ಪ್ರಸಾದವೆ ಇಷ್ಟ ಪ್ರಾಣ ಭಾವವಾಗಿ ನಿಂದುದನರಿಯರು.
ಇಂತೀ ಮರ್ಮವ ನಮ್ಮ ಬಸವಣ್ಣ ಬಲ್ಲ.
ಇದನೆಲ್ಲರಿಗೆ ತೋರಿ, ಲಕ್ಷದ ಮೇಲೆ ತೊಂಬತ್ತುಸಾವಿರ ಜಂಗಮದ
ಒಕ್ಕುದನೆತ್ತಿಕೊಂಬ; ಅಚ್ಚಪ್ರಸಾದವ ಲಿಂಗಕ್ಕಿತ್ತುಕೊಂಬ.
ಪ್ರಸಾದಿಗಳು ಮೂವತ್ತಿಛರ್ಾಸಿರದೊಳಗೆ ತಾನೊಬ್ಬನಾಗಿ ಸುಖಿಸುವುದ
ನಾನು ಬಲ್ಲೆನಾಗಿ, ಸಂದೇಹವಳಿದು ಬದುಕಿದೆನಯ್ಯಾ
ಕೂಡಲಚೆನ್ನಸಂಗಮದೇವಾ./717
ಜಂಗಮಭಕ್ತನು ಗಂಡನು?್ಳ ಸಜ್ಜನಸತಿಯಂತಿರಬೇಕು.
ಹೊಯ್ದಡೆ ಬಯ್ದಡೆ ಜರಿದಡೆ ಕೋಪಿಸಿದಡೆ ನಿಂದಿಸಿದಡೆ
ಅಳಲಿಸಿದಡೆ ಬಳಲಿಸಿದಡೆ ಹುರುಡಿಸಿದಡೆ-
ಇಂತಿವು ಮೊದಲಾಗಿ ಏನೊಂದು ಮಾಡಿದಡೆಯೂ
ಮನದಲ್ಲಿ ಮರುಗಿದಡೆ ಇದಿರುತ್ತರ ಕೊಟ್ಟಡೆ
ಆ ಸಜ್ಜನಸತಿಯ ಗುಣಕ್ಕೆ ಕೊರತೆಯಹುದು.
ಆ ಪುರುಷನೆ ದೈವವೆಂದರಿವುದು,
ಅವನ ಗುಣವ ನೋಡದೆ, ತನ್ನ ಗುಣವ ಬಿಡದೆ ಇದ್ದಡೆ
ಪತಿವ್ರತೆ ಎನಿಸುವಳು, ಮೇಲೆ ಮುಕ್ತಿಯಪ್ಪುದು.
ಈ ಪತಿವ್ರತೆಯಂತೆ ಜಂಗಮದಾಸೋಹವ ಮಾಡುವ ಭಕ್ತರು
ಜಂಗಮ ಮಾಡಿದಂತೆ ಮಾಡಿಸಿಕೊಂಬುದು, ನಿರುತ್ತರದಲ್ಲಿಪ್ಪುದು.
ಹೀಂಗಿರದೆ, ಜಂಗಮಕ್ಕೆ ಇದಿರುತ್ತವ ಕೊಟ್ಟಡೆ,
ಅವರಿಗೆ ಮಾಡುವ ಭಕ್ತಿಯ ಸಾಮಾನ್ಯವ ಮಾಡಿದಡೆ
ತಾ ಹಿಂದೆ ಮಾಡಿದ ಭಕ್ತಿಯೆಲ್ಲ ಬೆಂದುಹೋಗಿ
ಮುಂದೆ ನರಕಕ್ಕೆ ಗುರಿಯಹುದು ತಪ್ಪದು ಕಾಣಾ
ಕೂಡಲಚೆನ್ನಸಂಗಮದೇವಾ/718
ಜಂಗಮಭಕ್ತನು, ಚಿನ್ನದಂತೆ ಕಬ್ಬಿನಂತೆ ಶ್ರೀಗಂಧದಂತೆ ಇರಬೇಕು.
ಅದು ಹೇಂಗೆ ?
ಆ ಚಿನ್ನವ ಕಾಸಿದಡೆ ಕರಗಿಸಿದಡೆ ಕಡಿದಡೆ ನಿಗುಚಿದಡೆ
ಬಣ್ಣ ಅದಿಕವಲ್ಲದೆ ಕಿರಿದಾಗದು, ಇವರು ನನ್ನನೇಕೆ ಘಾಸಿ ಮಾಡಿದರೆನ್ನದು.
ಆ ಕಬ್ಬ ಕಡಿದಡೆ ಖಂಡಿಸಿದಡೆ ಗಾಣದಲಿಕ್ಕಿ ಹಿಂಡಿ, ಹಿಳಿದು,
ಬಂದ ರಸವನಟ್ಟಡೆ,
ನಾನಾ ಪ್ರಕಾರದಲ್ಲಿ ಸಾಯಸಗೊಳಿಸಿದಡೆಯೂ
ಮಿಗೆ ಮಿಗೆ ಮಧುರವಾಗಿಪ್ಪುದಲ್ಲದೆ ವಿಷವಾಗದು,
ನನ್ನನೇಕೆ ನೋಯಿಸಿದರೆಂದೆನ್ನದು.
ಆ ಶ್ರೀಗಂಧವು ಕೊರೆದಡೆ ತೇದಡೆ ಹೂಸಿದಡೆ ಬೆಂಕಿಯೊಳಗೆ ಹಾಯಿಕಿದಡೆ
ಪರಿಮಳ ಘನವಾಯಿತ್ತಲ್ಲದೆ ದುರ್ಗಂಧವಾಗದು, ತನ್ನಲ್ಲಿ ದುಃಖಗೊಳ್ಳದು.
ಈ ತ್ರಿವಿಧದ ಗುಣದ ಪರಿಯಲ್ಲಿ;
ಭಕ್ತನು ತನ್ನ ಸುಗುಣವ ಬಿಡದ ಕಾರಣ
ಸದ್ಭಕ್ತನಹ ಮಾಹೇಶ್ವರನಹ ಪ್ರಸಾದಿಯಹ
ಪ್ರಾಣಲಿಂಗಿಯಹ ಶರಣನಹ ಐಕ್ಯನಹ.
ಇಂತು ಷಟ್ಸ್ಥಲದಲ್ಲಿ ಸಂಪನ್ನನಹಡೆ
ಇಂತಪ್ಪ ಜಂಗಮಭಕ್ತಿಯೆ ಮೂಲವಯ್ಯ
ಕೂಡಲಚೆನ್ನಸಂಗಮದೇವಾ/719
ಜಂಗಮಮುಖದಲು ಲಿಂಗ ಸರ್ವಾಂಗವಾಯಿತ್ತಾಗಿ
ಆರೋಗಿಸಿ ಕೊಡುವುದು ನೋಡಾ !
ಜಂಗಮದಾಪ್ಯಾಯನವೆ ಲಿಂಗದಾಪ್ಯಾಯನ ನೋಡಾ !
ಜಂಗಮತೃಪ್ತಿಯೆ ಲಿಂಗತೃಪ್ತಿನೋಡಾ !
ಜಂಗಮವಾರೋಗಿಸಿ ಡರ್ರನೆ ತೇಗಿದಡೆ
ಂಗೈಯಲೆರಗುವುದು ನಮುಕ್ತಿಫ ನೋಡಾ !
ಜಂಗಮಮುಖದಲು ತೃಪ್ತನಾದನೆಂದು
`ಬಾರಯ್ಯಾ ಬಸವ್ಡ ಎಂದು ಕೈವಿಡಿದು, ತೆಗೆದಪ್ಪಿ ಮುದ್ದಾಡಿ,
ತಕ್ಕೈಸಿಕೊಂಡು, ನಿನ್ನ ಹೊರಗಿರಿಸಲಾರೆನೆಂದು
ತನ್ನ ಹೃದಯಕಮಲದಲ್ಲಿ ಇಂಬಿಟ್ಟುಕೊಂಡು
ಕೂಡಲಚೆನ್ನಸಂಗಯ್ಯಂಗೆ ಬಸವ ಪ್ರಾಣಲಿಂಗವಾದ. /720
ಜಂಗಮಲಿಂಗಮೋಹಿತನಾದಡೆ ತನ್ನ ಕುಲಗೋತ್ರಮೋಹವ ಮರೆಯಬೇಕು.
ಜಂಗಮಲಿಂಗಭಕ್ತನಾದಡೆ ಪೂರ್ವಕುಲವ ಬೆರಸಲಾಗದು.
ಜಂಗಮಲಿಂಗಪೂಜಕನಾದಡೆ ಮಾನವರನು ಉಪಧಾವಿಸಲಾಗದು.
ಜಂಗಮಲಿಂಗವೀರನಾದಡೆ ಅರ್ಥವ ಕಟ್ಟಲಾಗದು.
ಜಂಗಮಲಿಂಗಪ್ರಸಾದಿಯಾದಡೆ ಬೇಡಿದಡೆ ಇಲ್ಲೆನ್ನಲಾಗದು.
ಜಂಗಮಲಿಂಗಪ್ರಾಣಿಯಾದಡೆ ಲಾಂಛನದ ನಿಂದೆಯ ಕೇಳಲಾಗದು.
ಇದು ಕಾರಣ-ಕೂಡಲಚೆನ್ನಸಂಗಯ್ಯನಲ್ಲಿ
ಈ ಆರು ಸಹಿತ ಜಂಗಮಲಿಂಗಭಕ್ತಿ. /721
ಜಂಗಮವ ಕಾಣುತ ಅಹಂಕಾರದೊಳಗಿಪ್ಪ
ಅನಿತ್ಯದೇಹಿಯನೇನೆಂಬೆ ಶಿವನೇ !
ಲಿಂಗಸ್ಥಲಕ್ಕೆ ಸಲ್ಲರು, ಗುರು ಹೇಳಿತ್ತ ಮರೆದರು.
ಭಸ್ಮಾಂಗಮಾಗತಂ ದೃಷ್ಟಾ ಆಸನಂ ಚ ಪರಿತ್ಯಜೇತ್
ಸ್ವಧರ್ಮಃ ಪಿತೃಧರ್ಮಶ್ಚ ಸರ್ವಧರ್ಮೊ ವಿನಶ್ಯತಿ
ಕುಲೀನಮಕುಲಿನಂ ವಾ ಭೂತಿರುದ್ರಾಕ್ಷಧಾರಿಣಂ
ದೃಷ್ಟ್ವೋನ್ನತಾಸನೇ ತಿಷ್ಠನ್ ಶ್ವಾನಯೋ ನಿಷು ಜಾಯತೇ
ಇದು ಕಾರಣ ಕೂಡಲಚೆನ್ನಸಂಗಾ
ಭಸ್ಮಾಂಗಿಯ ಕಂಡರೆ, ನಮೋ ನಮೋ ಎಂಬೆನು. /722
ಜಂಗಮವ ಜರಿದು, ಲಿಂಗವ ಮ(ರೆದು) ಅಂಗಹೀನನಾದ ಬಳಿಕ
ಸಂಗಸಂಯೋಗ ಎಲ್ಲಿಯದೋ ಅಯ್ಯಾ ?
(ಜಂಗ)ಮಮೋಹಿ ಜರಿಯಬಲ್ಲನೆ ?
ಲಿಂಗಮೋಹಿ ಮರೆಯಬಲ್ಲನೆ ?
ಜಾತಿಕಾರ ಭಂಡರ ಮೆಚ್ಚುವನೆ
ನಮ್ಮ ಜಾತ ಅಜಾತ ಕೂಡಲಚೆನ್ನಸಂಗಮದೇವಯ್ಯ. /723
ಜಂಗಮವಾರೋಗಿಸಿ ಮಿಕ್ಕುದು ಲಿಂಗಕ್ಕೋಗರ,
ಲಿಂಗವಾರೋಗಿಸಿ ಮಿಕ್ಕುದು ಪ್ರಸಾದ-ನೀಡಬಹುದು.
ಜಂಗಮಮುಖದಲ್ಲಿ ಓಗರವಾಯಿತ್ತು.
ಲಿಂಗಮುಖದಲ್ಲಿ ಪ್ರಸಾದವಾಯಿತ್ತು.
ಇದು ಕಾರಣ ಕೂಡಲಚೆನ್ನಸಂಗಯ್ಯಾ
ನಿನಗೆ ಎನಗೆ ಜಂಗಮದ ಪ್ರಸಾದ. /724
ಜಂಗಮವೆ ಪರವೆಂದರಿದಡೇನು, ಆ ಜಂಗಮದಂಗವಲ್ಲವೆ ಲಿಂಗ ?
ಆ ಲಿಂಗಚೈತನ್ಯದರಿವೆಲ್ಲವು ಜಂಗಮವಲ್ಲವೆ ?
ಅಂಗವಿಲ್ಲದ ಜೀವಕ್ಕೆ, ಆತ್ಮನಿಲ್ಲದ ಅಂಗಕ್ಕೆ, ಸರ್ವಭೋಗದ ಸುಖವುಂಟೆ ?
ಮಣ್ಣಿಲ್ಲದೆ ಮರನುಂಟೆ ? ಮರನಿಲ್ಲದೆ ಹಣ್ಣುಂಟೆ? ಹಣ್ಣಿಲ್ಲದೆ ಸ್ವಾದವುಂಟೆ ?
ಹೀಂಗರಿವುದಕ್ಕೆ ಕ್ರಮ:
ಅಂಗವೇ ಮಣ್ಣು, ಲಿಂಗವೇ ಮರನು, ಜಂಗಮವೇ ಫಲವು,
ಪ್ರಸಾದವೆ ರುಚಿಯು.
ಇದು ಕಾರಣ-ಕೂಡಲಚೆನ್ನಸಂಗಯ್ಯನಲ್ಲಿ
ಸಾಕಾರಲಿಂಗವೆ ಜಂಗಮದಂಗವಯ್ಯಾ ಪ್ರಭುವೆ/725
ಜಂಗಮವೆ ಪ್ರಾಣವೆಂದರಿದ ಭಕ್ತಂಗೆ,
ಜಂಗಮಪ್ರಸಾದವಲ್ಲದೆ ಲಿಂಗಪ್ರಸಾದವ ಕೊಳಲಾಗದು.
ಜಂಗಮಪ್ರಸಾದ ಲಿಂಗಕ್ಕೆ ಸಲ್ಲದೆಂದು ಶಂಕಿಸಲಾಗದು.
ದೆಂತೆಂದಡೆ :
ಜಂಗಮಾದಿ ಗುರೂಣಾಂ ಚ ಅನಾದಿ ಸ್ವಯಲಿಂಗವತ್
ಆದಿಪ್ರಸಾದವಿರೋಧೇ ಇಷ್ಟೋಚ್ಛಿಷ್ಟಂತು ಕಿಲ್ಬಿಷಂ ಎಂದುದಾಗಿ,
ಪ್ರಾಣ ಭಾವದಲ್ಲಿ ಸಂಬಂಧವಾಗಿ ಇಷ್ಟಕ್ಕೂ ಸಂದಿತ್ತು.
ಈ ಭೇದವನರಿದು ಜಂಗಮಪ್ರಸಾದವಿಲ್ಲದೆ ಲಿಂಗಪ್ರಸಾದವ ಕೊ?ಲಾಗದು
ಕೂಡಲಚೆನ್ನಸಂಗಮದೇವಾ/726
ಜಂಗಮವೆ ಲಿಂಗ, ಲಿಂಗವೆ ಜಂಗಮವೆಂದು ತೋರಿ
ನಿಜಲಿಂಗೈಕ್ಯನಾದೆಯಲ್ಲಾ ನಿಜಗುರು ಬಸವಣ್ಣಾ.
ಪ್ರಸಾದವೆ ಕಾಯ, ಕಾಯವೆ ಪ್ರಸಾದವೆಂಬುದ
ಎನ್ನ ಸರ್ವಾಂಗದಲ್ಲಿ ಪ್ರತಿಷ್ಠಿಸಿ,
ಎನ್ನನಾಗುಮಾಡಿ ಮುಂದುವರಿದೆಯಲ್ಲಾ ಬಸವಣ್ಣಾ.
ನಿಜಲಿಂಗವ ಎನ್ನಂಗದಲ್ಲಿ ಸ್ಥಾಪಿಸಿ ಎನ್ನ ನಿನ್ನಂತೆ ಮಾಡಿ
ನಿಜಲಿಂಗದೊಳು ನಿರವಯವಾದೆಯಲ್ಲಾ ಬಸವಣ್ಣಾ.
ಎನ್ನ ಮನವ ಮಹದಲ್ಲಿ ಲಯಮಾಡಿ
ನಿರ್ವಯಲಾಗಿ ಹೋದೆಯಲ್ಲಾ ನಿಜಲಿಂಗೈಕ್ಯ ಬಸವಣ್ಣಾ.
ನಿಮ್ಮ ಒಕ್ಕುಮಿಕ್ಕಪ್ರಸಾದವನಿಕ್ಕಿ ನಿರಂತರದಲ್ಲಿ ಆಗುಮಾಡಿ
ನಾಗಾಯವ್ವೆಯನಿಂಬುಕೊಂಡೆಯಲ್ಲಾ, ಬಸವಣ್ಣಾ.
ಎನ್ನ ಮನ ನಿಮ್ಮ ಪಾದದಲ್ಲಿ ಕರಗಿತ್ತಯಾ, ಬಸವಣ್ಣಾ.
ಕೂಡಲಚೆನ್ನಸಂಗಯ್ಯಂಗೆ ಸುಜ್ಞಾನವಾಹನವಾಗಬೇಕೆಂದು
ನಿರವಯವಾಗಿ ಹೋದೆಯಲ್ಲಾ ಸಂಗನಬಸವಣಾ/727
ಜಂಗಮವೆಂದು ಪಾದಪ್ರಕ್ಷಾಲನವ ಮಾಡಿ
ಉನ್ನತಾಸನದಲ್ಲಿ ಮೂರ್ತಮಾಡಿಸಿ
ವಿಶ್ವಾಸದಿಂದ ಪಾದತೀರ್ಥವ ಪಡಕೊಂಡು-
ಆ ಸಮಯದಲ್ಲಿ ಆ ಜಂಗಮದೇವರ ಸೆಜ್ಜೆಯಲ್ಲಿ ಲಿಂಗವಿಲ್ಲದಿರಲು
ಆ ತೀರ್ಥವ ಬಿಡಲಾಗದು. ಅದೆಂತೆಂದಡೆ:
ತಾ ಭಾವಿಸಲು ತೀರ್ಥವಾಯಿತ್ತು,
ಆ ಭಾವವ ಬಿಟ್ಟಡೆ ಅದು ನೀರೆನಿಸಿತ್ತು.
ಇದು ಸಕಲಮಾಹೇಶ್ವರರಿಗೂ ಸನ್ಮತ.
ಅಶೀಲವ್ರತಿಗಳಾದಡೆ, ಪಾದೋದಕ ತ್ಯಾಗವ ಮಾಡುವುದಯ್ಯಾ.
ಅದೆಂತೆಂದಡೆ:
ಪ್ರಕ್ಷಾಲಿತಂ ಚ ಪಾದಾಂಬು ಜಂಗಮೋ ಲಿಂಗವರ್ಜಿತಃ
ಪಾದೋದಕಂ ತ್ಯಜೇತ್ ಜ್ಞಾನೀ ಇದಂ ಮಾಹೇಶಸಮ್ಮತಂ
ಆ ಸಮಯದಲ್ಲಿ ಲಿಂಗವಿದ್ದಡೆ, ಆ ತೀರ್ಥವ ಅರ್ಪಿಸಿ ಸಲಿಸುವುದು.
ಬೇರೆ ತೀರ್ಥವ ಪಡಕೊಳಲಾಗದು, ಕೂಡಲಚೆನ್ನಸಂಗಯ್ಯಾ ನಿಮ್ಮಾಣೆ/728
ಜಂಗಮವೇ ಲಿಂಗವೆಂಬರಯ್ಯಾ
ಲಿಂಗಜಂಗಮವೆಂಬ ಸಂದಿಲ್ಲದ ಮುನ್ನ ಎರಡೆಂಬರಯ್ಯಾ.
ಏಕೋಗ್ರಾಹಕನಾಗಿ ಕೂಡಲಚೆನ್ನಸಂಗಯ್ಯ ಬೇರಿಲ್ಲ. /729
ಜಂಬೂದ್ವೀಪ ನವಖಂಡ ಸುಕ್ಷೇತ್ರವೆಂಬ ಕಾಯಪುರದ
ಒಂದು ಪಟ್ಟಣವ ಸಾದಿಸುವನೆಂಬರಿಗೆ ಸಾಧ್ಯವಿಲ್ಲ
ಭೇದಿಸುವೆನೆಂಬರಿಗೆ ಭೇದ್ಯವಲ್ಲ
ಮರಹು ಮಹಾಕತ್ತಲೆಗಳೆಂಬ (ಕ)ರಿಗಳು
ಕುಹಕವೆಂಬ ಕೊತ್ತಳ, ಮಹಾಪಾಶ
ಉನ್ಮತ್ತ ಅಹಂಕಾರವೆಂಬುದೊಂದು ಆಳು ಕುದುರೆ
ಇದನಾರು ಸಾದಿಸಬಲ್ಲರಯ್ಯಾ
ಪ್ರಾಣಪಂಚಾಕ್ಷರಿಯನೆ ನಿರ್ಮಿಸಿಕೊಂಡು
ಹಿಂದಣಬೇರ ಕಟ್ಟೊರಿಸಿ ಕಿತ್ತು, ಮುಂದಣ ಭವಾಂಬುದಿಯನೆಲ್ಲ ಬಿಟ್ಟು
ಮನವೆಂಬ ಬಿಲ್ಲಿಗೆ ತನುವೆಂಬ ಹೆದೆಯ ಮಾಡಿಕೊಂಡು
ಗುರುವೆಂಬ ಗುರಿಯ ನೋಡಿಕೊಂಡು, ಏಕಭಾವದಲ್ಲಿ ಎಸೆವುತ್ತಿರಲು
ಭವಹರಿದು, ಕಾಲಕರ್ಮದ ಶಿರವರಿದು
ಅಂಗವಿಕಾರವೆಂಬ ಅರಸು ಸತ್ತು, ಪಂಚಭೂತಗಳೆಲ್ಲ
ಪ್ರಳಯಕ್ಕೊಳಗಾದವು. ಅಷ್ಟಮದಂಗಳ ನಷ್ಟವಾಯಿತ್ತು
ಕೋಟೆ ಕೋಳು ಹೋಯಿತ್ತು, ಪಟ್ಟಣ ಸಾಧ್ಯವಾಯಿತ್ತು
ಒಳಕೋಟೆಗೆ ಕಿಚ್ಚನ್ನಿಕ್ಕೆ, ಪೃಥ್ವಿ ವಿಶ್ವವೆಲ್ಲ ಬೆಂದು
ಬೆಳಕಾಯಿತ್ತು- ಇಂತಪ್ಪ ಗುರು-ಲಿಂಗ-ಜಂಗಮಕ್ಕೆ
ಸಮವಾಗಿ ಸಿಕ್ಕಿತ್ತು ಸಂಸಾರಬಯಲು
ಇಂತಪ್ಪ ಆ ಪ್ರಸಾದವನಾರು ಬಲ್ಲರೆಂದರೆ
ಪ್ರಭುವಿನ ಬಳಿಯ ಬಸವಣ್ಣಂಗಲ್ಲದೆ ಅಳವಡದು
ನಿಮ್ಮಾಣೆ ನಿಮ್ಮ ಪ್ರಮಥರಾಣೆ ಕೂಡಲಚೆನ್ನಸಂಗಮದೇವಾ/730
ಜಗದ ಕರ್ತ ಜಗದ ಸ್ಥಿತಿ-ಗತಿಯ ನಡೆಸುವ ಪರಿಯನು
ಆವಂಗೆ ಆವಂಗೆಯೂ ಅರಿಯಬಾರದು.
ಅಕಟಕಟಾ ದೇವದಾನವ ಮಾನವರೆಲ್ಲ ಅಹಂ ಎಂದು ಅಹಂಕಾರದಿ ಕೆಟ್ಟರಲ್ಲ.
ಆ ಮಹಾಕರ್ತನು ತನ್ನ ಶಕ್ತಿಯ ವಿನೋದಕ್ಕೆ ರಚಿಸಿದ ರಚನೆ: ಮೂವರು ಪ್ರಧಾನರು, ಒಂಬತ್ತು ಪ್ರಜೆ ಪಸಾಯಿತರು,
ಪದಿನಾಲ್ಕು ನಿಯೋಗಿಗಳು, ಇಪ್ಪತ್ತೇಳು ಅನುಚರರು,
ಅಷ್ಟತನುಗಳಿಂದಾದ ಜಗಸ್ಥಿತಿಯ ನಡೆಸುವರು.
ಆ ಮಹಾಕರ್ತನು ಕಟ್ಟಿದ ಕಟ್ಟಳೆಯಲು, ಆಯುಷ್ಯ ನಿಮಿಷ ಮಾತ್ರ
ಹೆಚ್ಚಿಸ ಬಾರದು, ಕುಂದಿಸಬಾರದು ನೋಡಾ.
ಭಾಷೆಯಲಿ ಅಣು ಮಾತ್ರ ಹೆಚ್ಚಿಸಬಾರದು, ಕುಂದಿಸಬಾರದು ನೋಡಾ.
ಇದನಾವಂಗೆಯೂ ಅರಿಯಬಾರದು.
ಇದ ಬಲ್ಲರೆ ಎಮ್ಮ ಶರಣರೆ ಬಲ್ಲರು.
ಕೂಡಲಚೆನ್ನಸಂಗಮದೇವಾ. /731
ಜಗದ ಕರ್ತನ ಕೈಯಲ್ಲಿ ಹಿಡಿದುಕೊಂಡು ಬೇಡುವ
ತುಡುಗುಣಿಗಳ ಏನೆಂಬೆನಯ್ಯಾ ?
ಬೇಡಲಾಗದು ಭಕ್ತನ, ಕಾಡಲಾಗದು ಭವಿಯ,
ಬೇಡಿ ಕಾಡಿ ಒಡಲ ಹೊರೆದನಾದರೆ,
ಬೇಟೆಯನಾಡಿದ ಮೊಲನನಟ್ಟು ಬಾಣಸವ ಮಾಡಿ
ನಾಯಿ ತಿಂದು ಮಿಕ್ಕುದ ತಾ ತಿಂದಂತೆ
ಕೂಡಲಚೆನ್ನಸಂಗಮದೇವಾ./732
ಜಗಭರಿತನೆನ್ನ ದೇವ, ಜಗವ ಹೊದ್ದನೆನ್ನ ದೇವ.
ಭಕ್ತನ ಕರಸ್ಥಲಕ್ಕೆ ಬಂದನೆನ್ನ ದೇವ, ಭಕ್ತನನವಗ್ರಹಿಸಿಕೊಂಡನಾಗಿ ಎನ್ನ ದೇವ.
“ಓಂ ನಮೋ ಮಹದ್ಭ್ಯೋ ನಮೋ ಅರ್ಭಕೇಭ್ಯೋ ನಮೋ ಯುವಭ್ಯೋ ನಮಃ
ಆಸೀನೇಭ್ಯಃ ಯಜಾಮ ದೇವಾನ್ಯದಿಶಕ್ನವಾಮ ಮಮಾಜ್ಯಾಯಸಃ
ತಂ ಸಮಾವೃಕ್ಷಿ ದೇವಾ ಎಂದುದಾಗಿ ಎನ್ನ ದೇವ.
ಇದು ಕಾರಣ, ಕೂಡಲಚೆನ್ನಸಂಗಮದೇವರು
ಅಕ್ಷರಾಕ್ಷರವ ಮೀರಿದ ಘನವು. /733
ಜಗಭರಿತಲಿಂಗ ಎಲ್ಲಾ ಎಡೆಯಲುಂಟು,
ಶರಣಭರಿತ ಲಿಂಗವಪೂರ್ವ ನೋಡಾ.
ಗಮನವುಳ್ಳ ಜಂಗಮ ಎಲ್ಲಾ ಎಡೆಯಲುಂಟು,
ನಿರ್ಗಮನಿ ಜಂಗಮವಪೂರ್ವ ನೋಡಾ.
ಸುಚೈತನ್ಯಲಿಂಗಕ್ಕೆ ಚೈತನ್ಯಜಂಗಮ ಸಾಹಿತ್ಯ ನೋಡಾ.
ಈ ಲಿಂಗದ ಸಕೀಲ ಸಂಯೋಗದಲ್ಲಿ ಪರಿಣಾಮಿ
ಕೂಡಲಚೆನ್ನಸಂಗಾ ನಿಮ್ಮ ಶರಣ./734
ಜಲ ಗಂಧ ಅಕ್ಷತೆ ಪುಷ್ಪ ಧೂಪ ದೀಪ ನೈವೇದ್ಯ,
ತಾಂಬೂಲ ಪಂಚವರ್ಣದ ಪತ್ರೆ ಪುಷ್ಪದ ಪೂಜೆಯ ರಚನೆಯ ಮಾಡುವೆನಯ್ಯಾ.
ಅಷ್ಟವಿಧಾರ್ಚನೆ ಷೋಡಶೋಪಚಾರ ಮುಖ್ಯವಾಗಿ ಮಾಡುವೆನಯ್ಯಾ.
ಸಕಲಕ್ಷೇಮದಿಂದ ನಡೆದು ನಿಮ್ಮಲ್ಲಿಗೆ ಸಾರುವೆನು
ಕೂಡಲಚೆನ್ನಸಂಗಯ್ಯಾ. /735
ಜಲದಲ್ಲಿ ಹುಟ್ಟಿದ ಕೆಸರು ಕ್ಷೀರದಲ್ಲಿ ತೊಳೆದರೆ ಹೋಹುದೆ ?
ಜಲದಲ್ಲಿ ತೊಳೆದಡಲ್ಲದೆ.
ಜೀವನಲ್ಲಿ ಹುಟ್ಟಿದ ಪ್ರಪಂಚು ಪಾಪಂಗಳು
ಬ್ರಹ್ಮದಂಡ ಪ್ರಾಯಶ್ಚಿತ್ತದಲ್ಲಿ ಹೋಹವೆ ?
ಶಿವಸಂಸ್ಕಾರಿಯಾಗಿ `ಅಕ್ಷರೋಸಿ ಎಂಬ ಮಂತ್ರದಿಂದ
ಜೀವನ ಪಾಪವು ಜೀವನಲ್ಲಿಯೇ ಕಳೆವುದು
ಜೀವಾತ್ಮಾ ಪರಮಾತ್ಮಾ ಚೇನ್ಮುಕ್ತಾನಾಂ ಪರಮಾ ಗತಿಃ
ಅವ್ಯಯಃ ಪುರುಷಃ ಸರ್ವಕ್ಷೇತ್ರಜ್ಞೋಕ್ಷಯ ಏವ ಚ
ಎಂದುದಾಗಿ,- ಇದು ಕಾರಣ ಕೂಡಲಚೆನ್ನಸಂಗಯ್ಯಾ.
ನಿಮ್ಮ ಶರಣನ ಕಾಯವು ಸುಕ್ಷೇತ್ರವೆಂದೆನಿಸೂದು. /736
ಜಲನಿದಿ ತಟಾಕದಲ್ಲಿ ಕನ್ನವನಿಕ್ಕಿ ಉದಕವ ತಂದು
ಮಜ್ಜನಕ್ಕೆರೆವರೆಲ್ಲ ಶೀಲವಂತರೆ ?
ಭವಿಪಾಕವನೊಲ್ಲೆವೆಂದು ಭುಂಜಿಸುವ
ಉದರಪೋಷಕರೆಲ್ಲ ಶೀಲವಂತರೆ?
ವರಲ್ಲ, ನಿಲ್ಲು ಮಾಣು.
ಅಶನವರತು ವ್ಯಸನ ಬೆಂದು ವ್ಯಾಪ್ತಿಗಳು ಅಲ್ಲಿಯೆ ಲೀಯವಾಗಿ
ಅಷ್ಟಮದ ಬೆಂದು ನಷ್ಟವಾಗಿ, ತನುಗುಣ ಸಮಾಧಾನವಾದಡೆ
ಕೂಡಲಚೆನ್ನಸಂಗಯ್ಯನಲ್ಲಿ ಅಚ್ಚಶೀಲವೆಂಬೆ/737
ಜಲನಿಧಿಶಿಖರದ ನಡುವೊಂದು ದ್ರವ್ಯದ ತಳದಲ್ಲಿ
ಶಿವಲೋಕ ಕೇಳಿರಣ್ಣಾ !
ದ್ರವ್ಯಪಾಕದಲ್ಲಿ ತಮ್ಮ ಸುಖವನರಿಯದೆ
ಶಿವಲೋಕದೊಳಗೆ ಬಳಲುತ್ತಿರ್ದರೆಲ್ಲಾ.
ದ್ರವ್ಯಶುದ್ಧ, ಪಾಕಶುದ್ಧ
ಕೂಡಲಚೆನ್ನಸಂಗನ ಪ್ರಸಾದಿಗೆ. /738
ಜಲಮಧ್ಯ ತನುವಳಯದ ಪ್ರಾಣಬದ್ಧನೆ? ಅಲ್ಲ.
ನಿಜಕ್ಕೆ ಪರಿಚಾರಕ, ಸರ ಸುಸರ, ಮೇಘರೂಪು ಕಂಠಕ್ಕೆ ಮಂಗಳ ವಸ್ತು.
ಇಂತಿದು ಕಾರಣ ಅಪ್ರತಿಗೆ ಪ್ರತಿ ಹುಟ್ಟಿ
ಇದು ಸಹಿತ ಇದು ಸಾಹಿತ್ಯ ನೋಡಾ,
ಕೂಡಲಚೆನ್ನಸಂಗಾ ಲಿಂಗೈಕ್ಯವು./739
ಜಾಗ್ರಪ್ರಸಾದಿಗಳ ಪ್ರಸಾದಿಗಳೆಂದೆನ್ನೆ,
ಮುಂದೆ ಸ್ವಪ್ನಪ್ರಸಾದಿಗಳುಂಟಾಗಿ.
ಸ್ವಪ್ನಪ್ರಸಾದಿಗಳ ಪ್ರಸಾದಿಗಳೆಂದೆನ್ನೆ,
ಮುಂದೆ ಸುಷುಪ್ತಿಪ್ರಸಾದಿಗಳುಂಟಾಗಿ.
ಸುಷುಪ್ತಿಪ್ರಸಾದಿಗಳ ಪ್ರಸಾದಿಗಳೆಂದೆನ್ನೆ,
ಮುಂದೆ ಲಿಂಗಪ್ರಸಾದಿಗಳುಂಟಾಗಿ.
ಈ ಒಂದರಲ್ಲು ನಿಯತರಲ್ಲಾಗಿ
ನಾವು ಭಕ್ತರು, ನಾವು ಶರಣರು, ನಾವು ಹಿರಿಯರೆಂಬ
ಮಧುಭುಂಜಕರ ಮೆಚ್ಚುವನೆ, ನಮ್ಮ ಕೂಡಲಚೆನ್ನಸಂಗಮದೇವ ?/740
ಜಾಗ್ರಸ್ವಪ್ನದಲ್ಲಿ ಲಿಂಗಜಂಗಮವನಲ್ಲದೆ ಅರಿಯನು,
ಗಣತಿಂಥಿಣಿಯ ಭಕ್ತಿಸಾಗರದೊಳಾಡುವ,
ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನು. /741
ಜಾತಕರ್ಮ ಶುಭಕರ್ಮ ಪ್ರೇತಕರ್ಮವ
ಮಾಡುವರು ಲೋಕದ ಮನುಜರು.
ಅದೆಂತೆಂದಡೆ:
ಈರಿಲು, ಮೂವಟ್ಟಲು; ಹಸೆ-ಹಂದರ ತೊಂಡಿಲು ಬಾಸಿಂಗ;
ಹಣೆಯಕ್ಕಿ ಹೆಣನ ಸಿಂಗಾರ ಶ್ರಾದ್ಧಕೂಳು-
ಈ ಪರಿಯ ಮಾಡುವನೆ ಶಿವಭಕ್ತ [ಅಲ್ಲ]
ಅದೆಂತೆಂದಡೆ;
ಹುಟ್ಟಿದ ಮಕ್ಕಳಿಗೆ ಲಿಂಗಧಾರಣೆ,
ನೆಟ್ಟನೆ ವಿವಾಹದಲ್ಲಿ ಶಿವಗಣಂಗಳ ಪ್ರಸಾದ,
ದೇವರಪಾದಕ್ಕೆ ಸಂದಲ್ಲಿ ಶಿವಭಕ್ತಂಗೆ ವಿಭೂತಿವೀಳೆಯಂಗೊಟ್ಟು
ಸಮಾದಿಪೂರ್ಣನಂ ಮಾಡುವುದೆ ಶಿವಾಚಾರ.
ಲೋಕದ ಕರ್ಮವ ಮಾಡಿದಡೆ ಆತ ಭಕ್ತನಲ್ಲ,
ಲಿಂಗದೂರ ಅಘೋರನರಕಿಯಯ್ಯಾ, ಕೂಡಲಚೆನ್ನಸಂಗಮದೇವಾ/742
ಜಾತಿವಿಡಿದು ಜಂಗಮವ ಮಾಡಬೇಕೆಂಬ ಪಾತಕರು ನೀವು ಕೇಳಿರೊ:
ಜಾತಿ ಘನವೊ ಗುರುದೀಕ್ಷೆ ಘನವೊ ?
ಜಾತಿ ಘನವಾದ ಬಳಿಕ, ಆ ಜಾತಿಯೆ ಗುರುವಾಗಿರಬೇಕಲ್ಲದೆ
ಗುರುದೀಕ್ಷೆ ಪಡೆದು, ಗುರುಕರಜಾತರಾಗಿ
ಜಾತಕವ ಕಳೆದು ಪುನರ್ಜಾತರಾದೆವೆಂಬುದ ಏತಕ್ಕೆ ಬೊಗಳುವಿರೊ ?
ಜಾತಿವಿಡಿದು ಕಳೆಯಿತ್ತೆ ಜಾತಿತಮವು ? ಅಜಾತಂಗೆ ಆವುದು ಕುಲಳ
ಆವ ಕುಲವಾದಡೇನು ದೇವನೊಲಿದಾತನೆ ಕುಲಜ.
ಅದೆಂತೆಂದಡೆ; ದೀಯತೇ ಜ್ಞಾನಸಂಬಂಧಃ ಕ್ಷೀಯತೇ ಚ ಮಲತ್ರಯಂ
ದೀಯತೇ ಕ್ಷೀಯತೇ ಯೇನ ಸಾ ದೀಕ್ಷೇತಿ ನಿಗದ್ಯತೇ ಎಂಬುದನರಿದು,
ಜಾತಿ ನಾಲ್ಕುವಿಡಿದು ಬಂದ ಜಂಗಮವೇ ಶ್ರೇಷ್ಠವೆಂದು
ಅವನೊಡಗೂಡಿಕೊಂಡು ನಡೆದು ಜಾತಿ ಎಂಜಲುಗಳ್ಳರಾಗಿ
ಉಳಿದ ಜಂಗಮವ ಕುಲವನೆತ್ತಿ ನುಡಿದು, ಅವನ ಅತಿಗಳೆದು
ಕುಲವೆಂಬ ಸರ್ಪಕಚ್ಚಿ, ಎಂಜಲೆಂಬ ಅಮೇಧ್ಯವ ಭುಂಜಿಸಿ
ಹಂದಿ-ನಾಯಂತೆ ಒಡಲ ಹೊರೆವ ದರುಶನಜಂಗುಳಿಗಳು
ಜಂಗಮಪಥಕ್ಕೆ ಸಲ್ಲರಾಗಿ.
ಅವರಿಗೆ ಗುರುವಿಲ್ಲ ಗುರುಪ್ರಸಾದವಿಲ್ಲ, ಲಿಂಗವಿಲ್ಲ ಲಿಂಗಪ್ರಸಾದವಿಲ್ಲ,
ಜಂಗಮವಿಲ್ಲ ಜಂಗಮಪ್ರಸಾದವಿಲ್ಲ.
ಇಂತೀ ತ್ರಿವಿಧಪ್ರಸಾದಕ್ಕೆ ಹೊರಗಾದ ನರಜೀವಿಗ?
ಸ್ವಯ-ಚರ-ಪರವೆಂದಾರಾದಿಸಿ ಪ್ರಸಾದವ ಕೊಳಸಲ್ಲದು ಕಾಣಾ
ಕೂಡಲಚೆನ್ನಸಂಗಮದೇವಾ/743
ಜಾತಿಸೂತಕ ಬಿಡದು, ಜನನಸೂತಕ ಬಿಡದು,
ಪ್ರೇತಸೂತಕ ಬಿಡದು, ರಜಸ್ಸೂತಕ ಬಿಡದು, ಎಂಜಲುಸೂತಕ ಬಿಡದು,
ಭ್ರಾಂತುಸೂತಕ ಬಿಡದು, ವರ್ಣಸೂತಕ ಬಿಡದು,
ಇವರೆಂತು ಭಕ್ತರಹರು?
ಹೂಸಿ ಹುಂಡನ ಮಾಡಿದಲ್ಲಿ, ಬಾಯಿಗೆ ಬೆಲ್ಲವ ತೊಡೆದಲ್ಲಿ
ಸದ್ಗುರು ಲಿಂಗವು ಮೂಗ ಕೊಯ್ಯದೆ ಮಾಬನೆ?
ಕಾಡು ಕಿಚ್ಚಿನ ಕೈಯಲ್ಲಿ ಕರಡದ ಹುಲ್ಲ ಕೊಯ್ಸಿದಂತಿರಬೇಕು ಭಕ್ತಿ.
ಹಿಂದೆ ಮೆದೆಯಿಲ್ಲ, ಮುಂದೆ ಹುಲ್ಲಿಲ್ಲ.
ಇದು ಕಾರಣ ಕೂಡಲಚೆನ್ನಸಂಗನ ಭಕ್ತಿಸ್ಥಲ
ನಿಮ್ಮ ಶರಣಂಗಲ್ಲದೆ ಅಳವಡದು. /744
ಜಿತಪ್ರಸಾದ ಸಮಾಕ್ಷವಾದುದ ಅಶುದ್ಧಿತರೆತ್ತ ಬಲ್ಲರು ?
ಮಹಾಮುನಿಗಳೆತ್ತ ಬಲ್ಲರು ?
ಅನೇಕ ಕಾಲ ಮಹಾಕ್ಷೇತ್ರದಲ್ಲಿ ನಿಜನಿವಾಸಿಯಾಗಿರ್ದನು, ನಮ್ಮ ಮಡಿವಳನು.
ಆ ಮಡಿವಳನ ಧ್ಯಾನದಲ್ಲಿ ಆರೂಢನಾಗಿರ್ದನು ನಮ್ಮ ಬಸವಣ್ಣನು.
ಆ ಬಸವಣ್ಣನು ಬಪ್ಪಲ್ಲಿ ಮೈಯೆಲ್ಲ ಕಣ್ಣಾಗಿ, ಉತ್ತಮಾಂಗವೆಲ್ಲ ಕಣ್ಣಾಗಿ,
ರೋಮ ರೋಮಾದಿಗಳೆಲ್ಲ ಕಣ್ಣಾಗಿ ಬಂದನಯ್ಯಾ,
ಆ ಬಸವಣ್ಣನ ಭಕ್ತಿಯ ಜಡವ ಹರಿಯ ಬಂದನಯ್ಯಾ
ನಮ್ಮ ಮಡಿವಾಳಯ್ಯನು.
ಇವರಿಬ್ಬರ ನಿತ್ಯಪ್ರಸಾದಿ ನಾನಾದೆನು, ಕೂಡಲಚೆನ್ನಸಂಗಮದೇವಾ/745
ಜಿಹ್ವೆ ಗುರು, ಕಂಗಳು ಲಿಂಗ,
ನಾಸಿಕ ಆಚಾರ, ಶ್ರೋತ್ರ ಪ್ರಸಾದ,
ಹಸ್ತ ಜಂಗಮ, ಭಾವದಲ್ಲಿ ಮಹಾಲಿಂಗ,
ಆಚಾರಸ್ಯ ಮುಖಂ ಘ್ರಾಣಃ ಮುಖಂ ಜಿಹ್ವಾ ಗುರೋಸ್ತಥಾ
ಶಿವಲಿಂಗಮುಖಂ ನೇತ್ರಂ ಮಹಾಲಿಂಗಂ ಚ ಭಾವನೇ
ಇತಿ ಭೇದಮುಖಂ ಜ್ಞಾತ್ವಾ ಅರ್ಪಿತಂ ಚ ವಿಶೇಷತಃ
ಎಂದುದಾಗಿ ಕೂಡಲಚೆನ್ನಸಂಗಾ
ನಿಮ್ಮ ಶರಣ ಸರ್ವಾಂಗಪ್ರಸಾದಿ. /746
ಜೀವನ ಪಾಪವ ಜೀವನದಲ್ಲಿಯೇ ಕಳೆವುದು.
“ಜೀವಾತ್ಮಾ ಪರಮಾತ್ಮಾ ಚೇನ್ಮುಕ್ತಾನಾಂ ಪರಮಾ ಗತಿಃ
ಅವ್ಯಯಃ ಪುರುಷಃ ಸರ್ವಕ್ಷೇತ್ರಜ್ಞೋಕ್ಷಯ ಏವ ಚ
ಎಂಬುದಾಗಿ ಕೂಡಲಚೆನ್ನಸಂಗಯ್ಯ,
ನಿಮ್ಮ ಶರಣನ ಕಾಯವು ಸುಕ್ಷೇತ್ರವೆಂದೆನಿಸುವುದು/747
ಜೈನನ ಮನದ ಕೊನೆಯ [ಮೊನೆಯ] ಮೇಲೆ
ಹೊಲೆಯಿಪ್ಪುದಲ್ಲದೆ ವ್ರತವಿಲ್ಲ.
ಸನ್ಯಾಸಿಯ ಮನದ ಕೊನೆಯ ಮೊನೆಯ ಮೇಲೆ
ಹೆಣ್ಣಿಪ್ಪುದಲ್ಲದೆ ಸನ್ಯಾಸವಿಲ್ಲ.
ತಪಸ್ವಿಯ ಮನದ ಕೊನೆಯ ಮೊನೆಯ ಮೇಲೆ
ಸಂಸಾರವಿಪ್ಪುದಲ್ಲದೆ ತಪಸ್ಸಿಲ್ಲ.
ಶ್ರಾವಕನ ಮನದ ಕೊನೆಯ ಮೊನೆಯ ಮೇಲೆ
ಕೊಲೆಯಿಪ್ಪುದಲ್ಲದೆ ಜಿನನಿಲ್ಲ.
ಶೀಲವಂತನ ಮನದ ಕೊನೆಯ ಮೊನೆಯ ಮೇಲೆ
ಭವವಿಪ್ಪುದಲ್ಲದೆ ಲಿಂಗವಿಲ್ಲ.
ಇದು ಕಾರಣ, ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣರ ಮನದ ಕೊನೆಯ ಮೊನೆಯ ಮೇಲೆ
ಲಿಂಗವಿಪ್ಪುದು. /748
ಜ್ಞಾನ ಉಪಾಸ್ಥೆಪಶುಜ್ಞಾನವ ಬಲ್ಲ ಮಾತ ನುಡಿಯಲಾಗದು,
ಉತ್ಪತ್ತಿ ಸ್ಥಿತಿ ಲಯವೆಂಬ ಕಾಲತ್ರಯದಲ್ಲಿ ಬೀಳದೆ,
ಜಾಗ್ರತ ಸ್ವಪ್ನ ಸುಷುಪ್ತಿಯೆಂಬ ವ್ಯಾಪಾರತ್ರಯದ ಅನುಮಾನವರಿತು,
ಆಧ್ಯಾತ್ಮಿಕ ಆಧಿಭೌತಿಕ ಆದಿದೈವಿಕವೆಂಬ ತಾಪತ್ರಯವಂ ಕೊಳಲಾಗದೆ,
ಅರ್ಥೆಷಣ ಪುತ್ರೇಷಣ ದಾರೇಷಣವೆಂಬ ಈಷಣತ್ರಯದ ಭ್ರಾಂತಿಯಡಗಿ,
ಅಭಾವ ಸ್ವಭಾವ ನಿರ್ಭಾವದಲ್ಲಿ ಶುದ್ಧವಾಗಿ,
ದೀಕ್ಷೆ ಶಿಕ್ಷೆ ಸ್ವಾನುಭಾವವೆಂಬ ದೀಕ್ಷಾತ್ರಯದಲ್ಲಿ ಅನುಮಾನವನ್ನರಿತು,
ಇಷ್ಟಲಿಂಗ ಪ್ರಾಣಲಿಂಗ ತೃಪ್ತಿಲಿಂಗವೆಂಬ ಲಿಂಗತ್ರಯದ ಭೇದವಂ ಭೇದಿಸಿ,
ಶುದ್ಧ ಸಿದ್ಧ ಪ್ರಸಿದ್ಧವೆಂಬ ಪ್ರಸಾದತ್ರಯವಂ ಭೇದಿಸಿ,
ಸ್ವರ್ಗಮತ್ರ್ಯ ಪಾತಾಳವೆಂಬ ಲೋಕತ್ರಯವನತಿಗಳದು,
ಇಹ ಪರ ಸ್ವಯವೆಂಬ ಮುಕ್ತಿತ್ರಯದ ಹಂಗು ಹಿಂಗಿ,
ಮಥನ ನಿರ್ಮಥನ ಸಮ್ಮಥನವೆಂಬ ಮಥನತ್ರಯದಲ್ಲಿ ನಿರತನಾಗಿ,
ರಾಜಸ ತಾಮಸ ಸಾತ್ವಿಕವೆಂಬ ಗುಣತ್ರಯದ ಹಮ್ಮ ಬಿಟ್ಟು,
ವಿಶ್ವ ತೈಜಸ ಪ್ರಾಜ್ಞವೆಂಬ ಜೀವತ್ರಯವನೊರಸಲೀಯದೆ,
ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ
ಮಲತ್ರಯಂಗಳಂ ನಿರ್ಮಲವಂ ಮಾಡಿ,
ಗುರುನಿಂದೆ ಶಿವನಿಂದೆ ಭಕ್ತನಿಂದೆಯೆಂಬ ನಿಂದಾತ್ರಯಂಗಳಂ ಕೇಳದೆ,
ಚಂದ್ರ ಸೂರ್ಯ ಅಗ್ನಿ ಎಂಬ ನೇತ್ರತ್ರಯದ ಹೊಲಬನರಿದು,
ಪ್ರಾಹ್ನ ಮಧ್ಯಾಹ್ನ ಅಪರಾಹ್ನವೆಂಬ ವೇಳಾತ್ರಯವಂ ಮೀರಿ,
ಉದರಾಗ್ನಿ ಶೋಕಾಗ್ನಿ ಕಾಮಾಗ್ನಿ ಎಂಬ ಅಗ್ನಿತ್ರಯಕ್ಕೆ ಇಂಬುಗೊಡದೆ,
ಅಧೋನಿರಾಳ ಮಧ್ಯನಿರಾಳ ಊಧ್ರ್ವನಿರಾಳವೆಂಬ ನಿರಾಳತ್ರಯದಲ್ಲಿ ನಿರತನಾಗಿ,
ಅನುಭಾವ ಮಹಾನುಭಾವ ಸ್ವಾನುಭಾವವೆಂಬ
ಅನುಭಾವತ್ರಯಂಗ?ಲ್ಲಿ ಬೀಸರಹೊಂದದೆ,
ಬಾಲ್ಯ ಯೌವನ ವೃದ್ಧಾಪ್ಯವೆಂಬ ತನುತ್ರಯಂ ಮರೆದು,
ತನು ಮನ ಧನದಲ್ಲಿ ಶುದ್ಧನಾಗಿ,
ಆಗಮತ್ರಯದಲ್ಲಿ ಅನುವರಿತು, ಇಂತೀ ತ್ರಯ ಸಂಪಾದನೆಯಂ
ಮೀರಿದ ನಿಜಶರಣನೆ ಕೂಡಲಚೆನ್ನಸಂಗಯ್ಯನೆಂದರಿದು
ಸುಖಿಯಾದೆನಯ/749
ಜ್ಞಾನ ತನ್ನೊಳಗೆ, ಅಜ್ಞಾನ ತನ್ನೊಳಗೆ,
ಎರಡುವನರಿದ ಸಹಜಸುಜ್ಞಾನಿ ಸುಸಂಗಿ ಲಿಂಗವಶಕನಾಗಿದ್ದು
ಪರಿಣಾಮಿ ಕೂಡಲಚೆನ್ನಸಂಗಾ, ನಿಮ್ಮ ಶರಣ. /750
ಜ್ಞಾನ, ಸುಜ್ಞಾನ, ಕೈವಲ್ಯಜ್ಞಾನ:
ಜ್ಞಾನ, ತನುವಿನ ಪರಿಣಾಮ, ಸುಜ್ಞಾನ, ಪ್ರಾಣದ ಪರಿಣಾಮ,
ಕೈವಲ್ಯಜ್ಞಾನ, ಮನದ ಪರಿಣಾಮ.
ಗಮನದ ಭಾವದರಿವು ತ್ರಿವಿಧ:
ವೈಲ, ವೈರಂಭಣ, ಮುಖಪ್ರಭಂಜನ.
ಅಂತರ್ವಹ ವಾಯು ಭಾವದ ಚರಿತ್ರ.
ಇದರ ಭೇದವ ಕೂಡಲಚೆನ್ನಸಂಗಾ
ನಿಮ್ಮ ಶರಣನಲ್ಲದೆ ಕುಹಕಯೋಗಿಗಳವರೆತ್ತ ಬಲ್ಲರು ?/751
ಜ್ಞಾನದೀಪ್ತಿಯ ಬೆಳಗುವ ತೈಲವಾವುದೆಂದರೆ:
ಸದುಮಾನ್ಯರ ನುಡಿಗಡಣದಿಂದೊ[ಸರುವ ಒಸರು]-
ಅದು ತಾನೆಂಬ ಅರಿವಿನ ನಿಶ್ಚಯವ ತೋರುವುದು,
ಹೀನ ಜಡತೆಯ ಮುಸುಕಿದ ಗಂದಿಕೆ ತಿಳಿದು
ಭಾನು ಬಂದರೆ ಜಗದ ಭ್ರಮೆ ಹರಿವಂತೆ ಹರಿವುದು.
ಬುಧರೊಳು ನೀನಿರಲು ಕರ್ಮಹರಿವುದು,
ಕೂಡಲಚೆನ್ನಸಂಗಮದೇವಾ. /752
ಜ್ಞಾನಪಾದೋದಕದಲ್ಲಿ ಮೂರು ಸಂಬಂಧವಾಗುವವು, ಅದೆಂತೆಂದಡೆ:
ಮಹಾಂತನ ಪಾದವನ್ನು ಪಡೆದುಕೊಂಬಂತಹ ಭಕ್ತನು
ಆ ಮಹೇಶ್ವರನ ಉನ್ನತಾಸನದಲ್ಲಿ ಮೂರ್ತಗೊಳಿಸಿ
ಪಾದಪ್ರಕ್ಷಾಲನೆಯ ಮಾಡಿದ ನಂತರದಲ್ಲಿ
ದೀಕ್ಷಾಪಾದೋದಕವ ಮಾಡಿ, ಶುಭ್ರವಸ್ತ್ರದಿಂದ ದ್ರವವ ತೆಗೆದು
ಅಷ್ಟವಿಧಾರ್ಚನೆಯಿಂದ ಲಿಂಗಪೂಜೆಯ ಮಾಡಿಸಿ ಮರಳಿ ತಾನು
ಚೈತನ್ಯಂ ಶಾಶ್ವತಂ ಶಾಂತಂ ವ್ಯೋಮಾತೀತಂ ನಿರಂಜನಂ
ನಾದಬಿಂದು ಕಲಾತೀತಂ ತಸ್ಮೈ ಶ್ರೀಗುರವೇ ನಮಃ
ಎಂದು ಅಷ್ಟಾಂಗಯುಕ್ತನಾಗಿ ವಂದನಂಗೈದು
ಪಾದಪೂಜೆಗೆ ಅಪ್ಪಣೆಯ ತೆಗೆದುಕೊಂಡು,
ಅವರ ಸಮ್ಮುಖದಲ್ಲಿ ಗದ್ದುಗೆಯ ಹಾಕಿಕೊಂಡು,
ಅದರ ಮೇಲೆ ಮೂರ್ತವ ಮಾಡಿಕೊಂಡು, ತನ್ನ ಲಿಂಗವ ನಿರೀಕ್ಷಿಸಿ,
ವಾಮಹಸ್ತದಲ್ಲಿ ನಿರಂಜನ ಪ್ರಣವವ ಲಿಖಿಸಿ ಪೂಜೆಯ ಮಾಡಿ,
ಆಮೇಲೆ ಜಂಗಮದ ಪಾದವ ಹಿಡಿದು ಪೂಜೆಯ ಮಾಡಿ ಆ ಪೂಜೆಯನಿಳುಹಿ,
ಅದೇ ಉದಕದ ಪಾತ್ರೆಯಲ್ಲಿ ಶಿಕ್ಷಾಪಾದೋದಕವ ಮಾಡಿ,
ಪಾದದ್ರವವ ತೆಗೆದು ಐದಂಗುಲಿಗಳಲ್ಲಿ ಪಂಚಾಕ್ಷರವ ಲೇಖನವ ಮಾಡಿ,
ಮಧ್ಯದಲ್ಲಿ ಮೂಲಪ್ರಣವವ ಬರೆದು,
ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ ಪೂಜೆಯ ಮಾಡಬೇಕು.
ಶಿವಧರ್ಮೊತ್ತರೇ:
ಲಿಂಗಾರ್ಪಿತಪ್ರಸಾದಂ ಚ ನ ದದ್ಯಾಚ್ಚರಲಿಂಗಕೇ
ಚರಾರ್ಪಿತಪ್ರಸಾದಂ ಚ ದದ್ಯಾಲ್ಲಿಂಗಾಯ ವೈ ಶುಭಂ
ಶಿವರಹಸ್ಯೇ :
ಅನಾದಿಜಂಗಮಶ್ಚೈವ ಆದಿಲಿಂಗಸ್ಥಲಂ ಭವೇತ್
ಅನಾದಿಜಂಗಮಾಯೈವಂ ಇಷ್ಟೋಚ್ಛಿಷ್ಟಂ ತು ಕಿಲ್ಬಿಷಂ ಎಂದುದಾಗಿ
ಲಿಂಗಕ್ಕೆ ತೋರಿ ಪಾದವ ಪೂಜಿಸಲಾಗದು.
ಅದೆಂತೆಂದಡೆ:
ಗುರುವಿಗೂ ಲಿಂಗಕ್ಕೂ ಚೈತನ್ಯಸ್ವರೂಪ, ಜಂಗಮವಾದ ಕಾರಣ,
ಆ ಜಂಗಮದ ಪ್ರಸಾದವ ಲಿಂಗಕ್ಕೆ ತೋರಬೇಕಲ್ಲದೆ
ಲಿಂಗಪ್ರಸಾದವ ಪಾದಕ್ಕೆ ತೋರಲಾಗದು.
ಅದೇನು ಕಾರಣವೆಂದಡೆ:
ಗುರುಲಿಂಗಜಂಗಮಕ್ಕೆ ಅನಾದಿಜಂಗಮವೆ ಚೈತನ್ಯಸ್ವರೂಪವಾದ ಕಾರಣ,
ಆ ಜಂಗಮವೆ ಮುಖ್ಯಸ್ವರೂಪು.
ಇಂತಪ್ಪ ಜಂಗಮಪಾದವೆ ಪರಬ್ರಹ್ಮಕ್ಕೆ ಆಧಾರವಾಗಿಪ್ಪುದು.
ಆ ಪಾದವ ಬಿಟ್ಟು ಪರವ ಕಂಡುದಿಲ್ಲವೆಂದು ಶ್ರುತಿಗಳು ಪೊಗಳುತಿರ್ದ ಕಾರಣ,
ಇಂತಪ್ಪ ಚರಮೂರ್ತಿಯ ಪಾದವನು ಅಷ್ಟವಿಧಾರ್ಚನೆ
ಷೋಡಶೋಪಚಾರದಿಂದ ಅರ್ಚಿಸಿದಂತಹುದೆ ಲಿಂಗಪೂಜೆ.
ಆಮೇಲೆ ಆ ಮೂರ್ತಿಯ ಉಭಯಪಾದಗಳ ಹಿಮ್ಮಡ ಸೋಂಕುವಂತೆ
ಹಸ್ತವ ಮಡಗಿ ಲಲಾಟವ ಮುಟ್ಟಿ ನಮಸ್ಕರಿಸಿ ಆ ಪೂಜೆಯನಿಳುಹಿ,
ಆ ಶಿಕ್ಷಾಪಾದೋದಕವನು
ಬಲದಂಗುಷ್ಠ ಮೇಲೆ ಷಡಕ್ಷರಮಂತ್ರವ ಆರುವೇಳೆ ಸ್ಮರಿಸುತ್ತ ನೀಡಿ,
ಅಲ್ಲಿ ಇಷ್ಟಲಿಂಗವೆಂದು ಭಾವಿಸಿ,
ಎಡದಂಗುಷ್ಠದ ಮೇಲೆ ಪಂಚಾಕ್ಷರೀಮಂತ್ರವ ಐದುವೇಳೆ ಸ್ಮರಿಸುತ್ತ ನೀಡಿ,
ಅಲ್ಲಿ ಪ್ರಾಣಲಿಂಗವೆಂದು ಭಾವಿಸಿ,
ಮಧ್ಯದಲ್ಲಿ `ಓಂ ಬಸವಾಯ ನಮಃ ಎಂದು
ಒಂದುವೇಳೆ ಒಂದು ಪುಷ್ಪವ ಧರಿಸಿ ಸ್ಮರಿಸುತ್ತ ನೀಡಿ,
ಅಲ್ಲಿ ಭಾವಲಿಂಗವೆಂದು ಭಾವಿಸಿ,
ನೀಡಿದ ಉದಕವೆ ಬಟ್ಟಲಲಿ ನಿಂದು ಮಹತ್ಪಾದವೆಂದೆನಿಸುವುದು,
ಈ ಮಹತ್ಪಾದದಲ್ಲಿ ದ್ರವವ ತೆಗೆದು ಮತ್ತೆ ಪೂಜಿಸಬೇಕಾದಡೆ,
ಬಹುಪುಷ್ಪವ ಧರಿಸದೆ ಒಂದೆ ಪುಷ್ಪವ ಧರಿಸಬೇಕು.
ಅದೇನು ಕಾರಣವೆಂದಡೆ;
ಪಶ್ಚಿಮಚಕ್ರದಲ್ಲಿ ಸಂಬಂಧವಾದ ನಿರಂಜನ ಜಂಗಮಕ್ಕೆ
ಏಕದಳವನುಳ್ಳ ಒಂದೆ ಪುಷ್ಪವು ಮುಖ್ಯವಾದ ಕಾರಣ,
ಏಕಕುಸುಮವನೆ ಧರಿಸಿ ಪೂಜೆಯಮಾಡಿ ನಮಸ್ಕರಿಸುವುದೆ ಜಂಗಮಪೂಜೆ.
ಆ ಪೂಜೆಯ ತೆಗೆದ ಶಿಷ್ಯನು `ಶರಣಾಥರ್ಿ ಸ್ವಾಮಿ ಎಂದು
ಬಟ್ಟಲವನೆತ್ತಿಕೊಟ್ಟಲ್ಲಿ,
ಕರ್ತೃವಾದ ಜಂಗಮವು ಆ ಬಟ್ಟಲಲ್ಲಿರ್ದ ತೀರ್ಥವನು
ತಮ್ಮ ಪಂಚಾಂಗುಲಿಗಳ ಪಂಚಪ್ರಾಣವೆಂದು ಭಾವಿಸಿ,
ಮೂಲಮಂತ್ರದಿಂದ ಮೂರುವೇಳೆ ಪ್ರದಕ್ಷಿಣವ ಮಾಡಿ ನಮಸ್ಕರಿಸಿ,
ಲಿಂಗದ ಮಸ್ತಕದ ಮೇಲೆ ಮೂರುವೇಳೆ
ಚತುರಂಗುಲ ಪ್ರಮಾಣಿನಲ್ಲಿ ಲಿಂಗವ ಮುಟ್ಟದೆ ನೀಡಿ,
ಆ ಪಂಚಾಂಗುಲಿಗಳ ತಮ್ಮ ಜಿಹ್ವೆಯಲ್ಲಿ ಸ್ವೀಕರಿಸುವಲ್ಲಿ
ಗುರುಪಾದೋದಕವೆನಿಸುವುದು; ಅದೇ ದೀಕ್ಷಾಪಾದೋದಕ.
ತಾವು ಲಿಂಗವನೆತ್ತಿ ಸಲಿಸಿದುದೆ
ಲಿಂಗಪಾದೋದಕವೆನಿಸುವುದು; ಅದೇ ಶಿಕ್ಷಾಪಾದೋದಕ.
ಬಟ್ಟಲನೆತ್ತಿ ಸಲ್ಲಿಸಿದಲ್ಲಿ
ಜಂಗಮಪಾದೋದಕವೆನಿಸುವುದು; ಅದೇ ಜ್ಞಾನಪಾದೋದಕ.
ಈ ರೀತಿಯಲ್ಲಿ ಮಾಹೇಶ್ವರನು ಸಲಿಸಿದ ಬಳಿಕ
`ಶರಣಾಥರ್ಿ ಎಂದು ಶಿಷ್ಯೋತ್ತಮನು ಎದ್ದು,
ಲಲಾಟಂ ಚ ಭುಜದ್ವಂದ್ವಂ ಪಾಣಿಯುಗ್ಮಮುರಸ್ತಥಾ
ಅಂಗುಷ್ಠಯುಗಲಂ ಪ್ರೋಕ್ತಂ ಪ್ರಣಾಮೋಷ್ಟಾಂಗಮುಚ್ಯತೇ ಎಂದು
ಭೃತ್ಯೋಪಚಾರಗಳಿಂದ ಪ್ರಣತಿಂಗೈದು ಅಪ್ಪಣೆಯ ಪಡೆದುಕೊಂಡು ಬಂದು,
ಆ ಜಂಗಮದ ಮರ್ಯಾದೆಯಲ್ಲಿಯೆ ತಾನು ಸ್ವೀಕರಿಸುವುದು.
ಇದೇ ರೀತಿಯಲ್ಲಿ ಗುರುಶಿಷ್ಯರಿರ್ವರು ಸಮರಸಭಾವದಿಂದ ಸೇವನೆ ಮಾಡಿದಲ್ಲಿ,
ಆ ಶಿಷ್ಯೋತ್ತಮನೆ ನಿಜಶಿಷ್ಯನಾದ ಕಾರಣ,
ಗುರುವೆ ಶಿಷ್ಯ, ಶಿಷ್ಯನೆ ಗುರು.
ಈ ಎರಡರ ಮರ್ಮವು ಆದ ಬಗೆ ಹೇಗೆಂದಡೆ:
ಆ ಶಿಷ್ಯನು ಪಡೆದುಕೊಂಡ ಪಾದೋದಕವ
ಆ ಗುರು ಭಕ್ತಿಮುಖದಿಂದ ತೆಗೆದುಕೊಂಡಲ್ಲಿ ಗುರುವೆ ಶಿಷ್ಯನಾಗಿಪ್ಪನು.
ಆ ಗುರು ಸೇವನೆಯ ಮಾಡಿ ಉಳಿದ ಉದಕವ
ಶಿಷ್ಯ ಭಕ್ತಿಭಾವದಿಂದ ಸೇವನೆ ಮಾಡಿದಲ್ಲಿಗೆ ತಚ್ಛಿಷ್ಯನಾದಹನು.
ಈ ಮರ್ಮವ ತಿಳಿದು ಗುರುಶಿಷ್ಯರೀರ್ವರು ಸಲಿಸಿದ ಬಳಿಕ
ಕೆಲವು ಭಕ್ತಮಾಹೇಶ್ವರರು ಸಲ್ಲಿಸುವುದು.
ಇನ್ನು ನಿಚ್ಚಪ್ರಸಾದಿಗಳಿಗೆ, ಸಮಯಪ್ರಸಾದಿಗಳಿಗೆ
ಆಯಾಯ ತತ್ಕಾಲದಲ್ಲಿ ತ್ರಿವಿಧೋದಕವಾಗಿಪ್ಪುದು;
ಇದೇ ಆಚರಣೆ.
ಇದನರಿಯದಾಚರಿಸುವವರಿಗೆ ನಿಮ್ಮ ನಿಲವರಿಯಬಾರದು ಕಾಣಾ,
ಕೂಡಲಚೆನ್ನಸಂಗಮದೇವಾ/753
ಜ್ಞಾನಾಮೃತಜಲನಿದಿಯ ಮೇಲೆ, ಸಂಸಾರವೆಂಬ ಹಾವಸೆ ಮುಸುಕಿಹುದು.
ನೀರ ಮೊಗೆವರು ಬಂದು ನೂಕಿದಲ್ಲದೆ ತೆರಳದು.
ಮರಳಿ ಮುಸುಕುವುದ ಮಾಣಿಸಯ್ಯಾ.
ಆಗಳೂ ಎನ್ನುವ ನೆನೆವುತ್ತಿರಬೇಕೆಂದು ಬೇಗ ಗುರು ಅಪ್ಪೈಸಿ
ತನ್ನ ಪ್ರಸಾದವೆಂದು ಕುರುಹ ಕೊಟ್ಟನು,
ದಿವಾರಾತ್ರಿ ತನ್ನನರಿಯಬೇಕೆಂದು.
ಕೆರೆಯ ನೀರನುಂಡು ತೊರೆಯ ನೀರ ಹೊಗಳುವ
ಅರೆಮರುಳರ ಮೆಚ್ಚುವನೆ ನಮ್ಮ ಕೂಡಲಚೆನ್ನಸಂಗಮದೇವ ?/754
ತಂಗುಳು ಬುತ್ತಿಯ ಕಟ್ಟಿ ಹೊಟ್ಟೆಯ ಮೇಲಿಕ್ಕಿಕೊಂಡಿರ್ದಡೆ
ಹಸಿವು ಹೋಗಿ ಅಪ್ಯಾಯನವಹುದೆ ?
ಅಂಗದ ಮೇಲೆ ಲಿಂಗವಿದ್ದಲ್ಲಿ ಫಲವೇನು ?
ಅಂಗವೂ ಲಿಂಗವೂ ಕೂಡವ ಭೇದವನರಿಯದವರು
ಗುರುತಲ್ಪಕರು, ಪಂಚಮಹಾಪಾತಕರು-ಅದೆಂತೆಂದಡೆ:
ದ್ವೈತಭಾವಿತದುಃಖಾನಾಮದ್ವೈತಂ ಪರಮಂ ಪದಂ
ಭಾರಮನ್ನಂ ಪಥಿ ಶ್ರಾಂತೇ ತಸ್ಮಿನ್ ಭುಕ್ತೇ ಸುಖಾವಹಂ
ಮತ್ತೆಯೂ-ಅಂಗಾನಾಂ ಲಿಂಗಸಂಬಂಧೋ ಲಿಂಗಾನಾಮಂಗಸಂಯುತಿಃ
ನಿಮಿಷಾರ್ಧ ವಿಯೋಗೇನ ನರಕೇ ಕಾಲಮಕ್ಷಯಂ ಎಂದುದಾಗಿ,
ಅಂಗದಲ್ಲಿ ಲಿಂಗ ಒಡಗಲಸಬೇಕು, ಲಿಂಗದಲ್ಲಿ ಅಂಗ ಒಡಗಲಸಬೇಕು.
ಇದು ಕಾರಣ-ಎಲ್ಲರೂ ಅಂಗಸಂಬಂದಿಗಳಲ್ಲದೆ
ಲಿಂಗಸಂಬಂದಿಗಳಪೂರ್ವ ಕಾಣಾ-ಕೂಡಲಚೆನ್ನಸಂಗಮದೇವಾ/755
ತದ್ದಿನವ ಮಾಡುವ ಕ್ರೂರಕರ್ಮಿಯ ಮನೆಯಲ್ಲಿ
ಮದ್ಯ ಮಾಂಸವಲ್ಲದೆ ಲಿಂಗಕ್ಕೋಗರವಿಲ್ಲ.
ಹರಸಿಕೊಂಡು ಮಾಡುವ ಭಕ್ತನ ಮನೆಯಲು
ದಂಡಕ್ಕಿಕ್ಕುವುದಲ್ಲದೆ ಲಿಂಗಕ್ಕೋಗರವಿಲ್ಲ.
ವರುಷಕ್ಕೊಂದು ತಿಥಿಯೆಂದು ಕೂಟಕ್ಕಿಕ್ಕಲು
ಕೀರ್ತಿವಾರ್ತೆಗೆ ಸಲುವುದಲ್ಲದೆ ಲಿಂಗಕ್ಕೋಗರವಿಲ್ಲ.
ತದ್ದಿನಂ ದಿನದೋಷಂ ಸ್ಯಾತ್ ರಕ್ತಮಾಂಸಸುರಾನ್ವಿತಂ
ಸ ಸಂಕಲ್ಪಂ ವಿಕಲ್ಪಂ ಚ ನರಕೇ ಕಾಲಮಕ್ಷಯಂ
ಈ ತ್ರಿವಿಧವಿಡಿದು ಮಾಡುವಾತ ಭಕ್ತನಲ್ಲ,
ಅಲ್ಲಿ ಹೊಕ್ಕು ಮಾಡಿಸಿಕೊಂಬವರು ಜಂಗಮವಲ್ಲ.
ಕೂಡಲಚೆನ್ನಸಂಗಯ್ಯಾ ಈ ತ್ರಿವಿಧವು ನರಕಕ್ಕೆ ಭಾಜನ./756
ತನಗೆ ತಾನೆ ಹುಟ್ಟಿದನಾಗಿ, ತಾನೆ ಸ್ಥಾವರವಾದ ಆ ಲಿಂಗವು,
ತನ್ನಲ್ಲಿರ್ದ ರುಚಿಯ ಅವ್ಯಕ್ತಕ್ರೀಯಿಂದ
ಮನವೆ ಬಾಯಾಗಿ ಉಂಬ ಲಿಂಗವು,
ಇತರರ ಸುಖವ ಬಲ್ಲುದೆ, ಕೂಡಲಚೆನ್ನಸಂಗಮದೇವಾ ?/757
ತನತನಗೆ ಕುಳ್ಳಿರ್ದು ಮನಸಿಗೆ ಬಂದಂತೆ
ಘನಲಿಂಗದ ವಾರ್ತೆಯ ಗಳಹುತಿಪ್ಪರು ನೋಡಾ !
ಗುರುಕಾರುಣ್ಯವ ಹಡೆಯದೆ, ಸ್ವರಬಿಂದುಗಳ ತಡೆಯದೆ
ಹರನ ಶರಣರ ಮುಂದೆ ಹಿರಿದು ಮಾತನಾಡುತಿಪ್ಪರು ನೋಡಾ !
ಇರಿಯದೆ ಮೆರೆವರು, ಅರಿಯದೆ ಉಳಿವರು
ಕೂಡಲಚೆನ್ನಸಂಗಯ್ಯನಲ್ಲಿ ಜನಜಂಗುಳಿಗಳು/758
ತನು ಕಾಮಿಯಾಗದೆ
ಮನ ಕಾಮಿಯಾಗದೆ
ಧನ ಕಾಮಿಯಾಗದೆ
ಅಶನ ವಸನ ಕಾಮಿಯಾಗದೆ
ಲಿಂಗ ಕಾಮಿಯಾದರೆ
ಕೂಡಲಚೆನ್ನಸಂಗಯ್ಯನೆಂಬೆ./759
ತನು ಗುರುವಿನಲ್ಲಿ ಸವೆದು, ಮನ ಲಿಂಗದಲ್ಲಿ ಸವೆದು,
ಧನ ಜಂಗಮದಲ್ಲಿಸವೆದು,
ತನುವೆ ಗುರುವಾಗಿ, ಮನವೆ ಲಿಂಗವಾಗಿ, ಧನವೆ ಜಂಗಮವಾಗಿ-
ಇಂತೀ ತ್ರಿವಿಧ ಐಕ್ಯವಾಗಿ ನಿಮ್ಮಲ್ಲಿ ನಿಂದನಾಗಿ;
ಕಾಯವಿಡಿದು ಕರ್ಮವಿರಹಿತನಾದ,
ಕೂಡಲಚೆನ್ನಸಂಗಮದೇವರಲ್ಲಿ
ಸಂಗನಬಸವಣ್ಣನು ಉಪಮಾತೀತನಾಗಿರ್ದನು/760
ತನು ನಾಗವತ್ತಿಗೆಯಾದಡೆ ಅರ್ಪಿತವ ಮಾಡಬೇಕು,
ತನು ಸೆಜ್ಜೆಯಾದಡೆ ಅರ್ಪಿಸಲಿಲ್ಲ ಕಂಡಯ್ಯಾ.
ತನು ಸಿಂಹಾಸನವಾದಡೆ ಸುಳಿವುದೆ ಭಂಗ.
ಪ್ರಾಣಲಿಂಗ ಸಂಬಂದಿಯಾದಡೆ,
ಅದನು ಎರಡು ಮಾಡಿಕೊಂಡು ನುಡಿಯಲೇಕಯ್ಯಾ ?
ಒಂದೆಯೆಂದು ನುಡಿವ ಸೋಹದವನಲ್ಲ,
ಬಹ ಪದಾರ್ಥದ ಲಾಭದವನಲ್ಲ,
ಹೋಹ ಪದಾರ್ಥದ ಚೇಗೆಯವನಲ್ಲ,
ಪ್ರಪಂಚವ ಹೊತ್ತುಕೊಂಬ ಭಾರದವ ತಾನಲ್ಲ.
ಕೂಡಲಚೆನ್ನಸಂಗನ ಶರಣನುಪಮಾತೀತನು./761
ತನು ನಿಮ್ಮನಪ್ಪಿ ಮಹಾತನುವಾದ ಬಳಿಕ
ತನುವೆಂಬುದು ಮತ್ತೆಲ್ಲಿಯದೊ ?
ಮನ ನಿಮ್ಮನಪ್ಪಿ ಘನಮನವಾದ ಬಳಿಕ
ಮನವೆಂಬುದು ಮತ್ತೆಲ್ಲಿಯದೊ ?
ಭಾವ ನಿಮ್ಮನಪ್ಪಿ ನಿರ್ಭಾವವಾದ ಬಳಿಕ
ಭಾವವೆಂಬುದು ಮತ್ತೆಲ್ಲಿಯದೊ ?
ಇಂತೀ ತ್ರಿವಿಧವು ಲಿಂಗದಲ್ಲಿ ನಿಲರ್ೆಪವಾಗಿ ಮೈದೋರದಿರವ,
ಕೂಡಲಚೆನ್ನಸಂಗಯ್ಯ ತಾನೆ ಬಲ್ಲ. /762
ತನು ಬಯಲು ನಿರವಯದೊಳಡಗಿತ್ತು;
ಮನ ಬಯಲು ನಿರವಯದೊಳಡಗಿತ್ತು;
ಭಾವ ಬಯಲು ನಿರವಯದೊಳಡಗಿತ್ತು;
ಬಯಲು ಬಯಲು ಬೆರಸಿ ಬಯಲೆ ಆಯಿತ್ತು !
ಕೂಡಲಚೆನ್ನಸಂಗಯ್ಯನೆಂಬ ನುಡಿಯಡಗಿತ್ತು./763
ತನು ಭಕ್ತ, ಮನ ದಾಸೋಹಿ, ಇಂದ್ರಿಯಂಗಳು ಪ್ರಸಾದಿಗಳು,
ಸಜ್ಜನ ಶರಣರ ಪ್ರಾಣವೆ ಲಿಂಗ, ಇದು ಕಾರಣ,
ಕೂಡಲಚೆನ್ನಸಂಗಮದೇವಾ ಹೊರಗೇನೂ ಅರಸಲಿಲ್ಲ./764
ತನು ಮನ ಧನ ಏಕಾರ್ಥವಾದ ಕಾರಣ,
ಉದಯದಲ್ಲಿ, `ಲಿಂಗವೇ ಶರಣು, ಜಂಗಮವೇ ಶರಣು, ಪ್ರಸಾದವೆ ಶರಣು’
ಕಂಡಯ್ಯಾ.
ಈ ತ್ರಿವಿಧಗುಣಸಂಪನ್ನರು,
ಕೂಡಲಚೆನ್ನಸಂಗನ ಶರಣರು ಮಹಾಘನರಯ್ಯಾ/765
ತನು ಮನ ಧನ ನಿವೇದಿಸಿದಲ್ಲಿ ಭಕ್ತರೆಂಬೆನು,
ಅರ್ಥಪ್ರಾಣಾಬಿಮಾನವ ನಿವೇದಿಸಿದಲ್ಲಿ ಪ್ರಸಾದಿಗಳೆಂಬೆನು,
ಹೊನ್ನು ಹೆಣ್ಣು ಮಣ್ಣ ನಿವೇದಿಸಿದಲ್ಲಿ ಶರಣರೆಂಬೆನು
ನವಸ್ಥ?ವನರ್ಪಿಸಿದರೇನಯ್ಯ ನವಬ್ರಹ್ಮರ ಕುಳ ತಿಳಿಯದನ್ನಕ್ಕ ?!
ನವಬ್ರಹ್ಮರ ಕುಳ ನಷ್ಟವಾದರೆ,
ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯರೆಂಬೆನು./766
ತನು ಮನ ಧನವನಿತ್ತೆವೆಂಬವರೆಲ್ಲ [ರು].
ತನುಮನಧನವನಿತ್ತೆಂಬವರ ಮಾತ ಕೇಳಬಹುದೆ?
ಅಂಬಲಿಯನೆರೆದವರೆಲ್ಲ ಭಕ್ತರೆ ಕಂಬಳಿಯ ಕೊಟ್ಟವರೆಲ್ಲ ಭಕ್ತರೆ?
ಧರ್ಮ ಅರ್ಥ ಕಾಮ ಮೋಕ್ಷ ಚತುರ್ವಿಧಪದವಲ್ಲದೆ,
ತನುಮನಧನವ ನೆರೆಯಿತ್ತು ತನ್ನ ಹರಿವರಿಯದನ್ನಕ್ಕ
ಕೂಡಲಚೆನ್ನಸಂಗಯ್ಯನಲ್ಲಿ ಅದೆಂತು ಸದ್ಭಕ್ತರೆಂಬೆ? /767
ತನು ಮನ ಬಳಲದೆ ಉದ್ದಂಡವೃತ್ತಿಯಲ್ಲಿ ಧನವ ಗಳಿಸಿ ತಂದು
ಗುರುಲಿಂಗಜಂಗಮಕ್ಕೆ ವೆಚ್ಚಿಸಿ, ದಾಸೋಹವ ಮಾಡಿ,
ಭಕ್ತರಾದೆವೆಂಬವರನೆನಗೆ ತೋರದಿರಯ್ಯಾ.
ಅದೇಕೆಂದರೆ:ಅವ ಪರಧನ ಚೋರಕ; ಅವ ಪಾಪಿ,
ಅವಗೆ ವಿಚಾರಿಸದೆ ಉಪದೇಶವ ಕೊಟ್ಟ ಗುರುವಿಂಗೆ ರಾರವ ನರಕ.
ಅವನ ಕಾಯಕವ ವಿಚಾರಿಸದೆ ಅವರ ಮನೆಯಲ್ಲಿ ಹೊಕ್ಕು
ಲಿಂಗಾರ್ಚನೆಯ ಮಾಡುವ ಜಂಗಮಕ್ಕೆ ಏಳನೆಯ ಪಾತಕ.
ಇಂತಹರ ಬದುಕು, ಹುಲಿ ಕಪಿಲೆಯ ತಿಂದು
ಮಿಕ್ಕುದ ನರ ಬಂದು ತಿಂಬಂತೆ ಕಾಣಾ.
ಕೂಡಲಚೆನ್ನಸಂಗಮದೇವಾ/768
ತನು ಮುಟ್ಟಿದ ಪದಾರ್ಥ ಲಿಂಗಾರ್ಪಿತವಲ್ಲ,
ಮನ ಮುಟ್ಟಿದ ಪದಾರ್ಥ ಲಿಂಗಾರ್ಪಿತವಲ್ಲ,
ಕಿವಿಗಳು ಕೇಳಿದ ಪದಾರ್ಥ ಲಿಂಗಾರ್ಪಿತವಲ್ಲ,
ಕಂಗಳು ನೋಡಿದ ಪದಾರ್ಥ ಲಿಂಗಾರ್ಪಿತವಲ್ಲ,
ಘ್ರಾಣ ಸೋಂಕಿದ ಪದಾರ್ಥ ಲಿಂಗಾರ್ಪಿತವಲ್ಲ,
ಜಿಹ್ವೆ ತಾಗಿದ ಪದಾರ್ಥ ಲಿಂಗಾರ್ಪಿತವಲ್ಲ.
ಅಹುದೆಂಬುದ ನಡೆಯ (ನುಡಿಯ?), ಅಲ್ಲೆಂಬುದ ನುಡಿಯ,
ಬೇಕು ಬೇಡೆಂಬುದಿಲ್ಲ, ಸಾವಯವೆಂಬುದಿಲ್ಲ.
ನಿರವಯದಲ್ಲಿ ಸಕಲಭೋಗಂಗಳ ಭೋಗಿಸುವನು, /769
ತನು ಶುದ್ಧವಾಯಿತ್ತು ಗುರುವಿನಿಂದೆ.
ಮನ ಶುದ್ಧವಾಯಿತ್ತು ಲಿಂಗದಿಂದೆ.
ಧನ ಶುದ್ಧವಾಯಿತ್ತು ಜಂಗಮದಿಂದೆ.
ಪ್ರಾಣ ಶುದ್ಧವಾಯಿತ್ತು ಪ್ರಸಾದದಿಂದೆ.-
ಇಂತೀ ಚತುರ್ವಿಧದಿಂದೆನ್ನ ಸರ್ವಾಂಗ ಶುದ್ಧವಾಯಿತ್ತು
ಕೂಡಲಚೆನ್ನಸಂಗಮದೇವಾ/770
ತನು ಸೋಂಕಿ ತನು ನಷ್ಟವಾಯಿತ್ತು,
ಮನ ಸೋಂಕಿ ಮನ ನಷ್ಟವಾಯಿತ್ತು,
(ಧನ ಸೋಂಕಿ ಧನ ನಷ್ಟವಾಯಿತ್ತು)
ಭಾವ ಸೋಂಕಿ ಭಾವ ನಷ್ಟವಾಯಿತ್ತು.
ಇದು ಕಾರಣ ಕೂಡಲಚೆನ್ನಸಂಗಯ್ಯಾ,
ಲಿಂಗ ಸೋಂಕಿ ಶರಣನ ಸಂದು ನಷ್ಟವಾಯಿತ್ತು,
(ನಿಮ್ಮೊಳಗೇಕಾರ್ಥವಾಯಿತ್ತು)./771
ತನು, ಮನ, ಧನಕ್ಕೆ ಆಸೆಮಾಡುವಾತನ ಬಸವಣ್ಣನ ಸಂತತಿಯೆಂತೆನಬಹುದು?
ವಧುವಿಂಗೆ ಆಸೆ ಮಾಡುವರನು ಬಲ್ಲಾಳನ ಸಂತತಿಯೆಂತೆನಬಹುದು?
ಮಕ್ಕಳಿಗೆ ಆಸೆ ಮಾಡುವರ ಸಿರಿಯಾಳನ ಸಂತತಿಯೆಂತೆನಬಹುದು?
ಎನಲಾಗದು, ಎನಿಸಿಕೊಳಲಾಗದು.
ಎಂದಾತಂಗೆಯೂ ಎನಿಸಿಕೊಂಡಾತಂಗೆಯೂ
ನರಕ ತಪ್ಪದು, ಕೂಡಲಚೆನ್ನಸಂಗಮದೇವಾ. /772
ತನುಗುಣ ಸಂಕರದಿಂದ ಪ್ರಸಾದಸಂಗ ಕೆಟ್ಟಿತ್ತು.
ಮನಗುಣ ಸಂಕರದಿಂದ ಲಿಂಗಸಂಗ ಕೆಟ್ಟಿತ್ತು.
ಲೋಭಗುಣ ಸಂಕರದಿಂದ ಜಂಗಮಸಂಗ ಕೆಟ್ಟಿತ್ತು.
ಈ ತ್ರಿವಿಧದ ಆಗುಚೇಗೆಯನರಿಯದ ಕಾರಣ
ಭವಘೋರ ನರಕಕ್ಕೊಳಗಾದರು,-
ಇದು ಕಾರಣ ಕೂಡಲಚೆನ್ನಸಂಗಯ್ಯಾ, ಈ ತ್ರಿವಿಧದ ಅನುಭವ ಬಲ್ಲ
ಬಸವಣ್ಣಂಗೆ ನಮೋ ನಮೋ ನಎಂಬೆಫ /773
ತನುಗುಣಗ್ರಾಹಕನಾಗದಿರಬೇಕು,
ಮನಗುಣಗ್ರಾಹಕನಾಗದಿರಬೇಕು,
ಪ್ರಾಣಗುಣಗ್ರಾಹಕನಾಗದಿರಬೇಕು.
ಈ ತ್ರಿವಿಧಗ್ರಾಹಕನಾಗದೆ ಲಿಂಗಗ್ರಾಹಕನಾಗಬೇಕು.
ಕೂಡಲಚೆನ್ನಸಂಗಮದೇವಾ. /774
ತನುಧನಾದಿಗಳ ಮೋಹ ಮಾಣದೆ,
ತನ್ನಲ್ಲಿ ನಿಜದ ನೆನಹು ನೆಲೆಗೊಳ್ಳದೆ,
ಎನಗೆ ಕುಲಗೋತ್ರಗಳಿಲ್ಲವೆಂದು ಗಳಹುತ್ತ ವಿದಿನಿಷೇಧವನಾರಯ್ಯದೆ,
ಕಂಡಕಂಡಂತೆ ಕುಣಿವ ಮಂದ ಮನುಜರು ಕೆಟ್ಟು ಭ್ರಷ್ಟರಪ್ಪರಯ್ಯಾ.
ಅದೇತಕೆಂದಡೆ:ಬೊಮ್ಮವಾನೆಂಬ ಸುಜ್ಞಾನ ನೆಲೆಗೊಳ್ಳದಾಗಿ.
ಅರಸಿನ ಹೆಸರಿನ ಅನಾಮಿಕಂಗೆ, ಅರಸೊತ್ತಿಗೆಯ ಸಿರಿ ದೊರೆಯದಂತೆ
ಮಾಯಾ ಜಡದಿಯಲ್ಲಿ ಮುಳುಗಿದ ಮರುಳುಮಾನವಂಗೆ
ಪರಮಸುಖವೆಂತು ದೊರೆವುದಯ್ಯಾ ಕೂಡಲಚೆನ್ನಸಂಗಮದೇವಾ ?/775
ತನುಮನಧನವು ತ್ರಿಸ್ಥಾನ ಸಂಗವಾಯಿತ್ತಾಗಿ
ಭಕ್ತಿ ಮದವೇರಿತ್ತು
ಸದ್ಭಕ್ತಿ ಸಂಭಾಷಣೆ ಕ್ರೀಯನರಿದು
ತೂರ್ಯಾತೂರ್ಯಗೊಂಡಿತ್ತಾಗಿ
ಲಿಂಗದಲ್ಲಿ ಅರಿವ ಜಂಗಮದಲ್ಲಿ ಮೆರೆವ
ಕೂಡಲಚೆನ್ನಸಂಗ ತಾನಾಗಿ /776
ತನುಮುಟ್ಟದ ಮುನ್ನ ಲಿಂಗಾರ್ಪಿತವ ಮಾಡಬೇಕು,
ಮನಮುಟ್ಟದ ಮುನ್ನ ಲಿಂಗಾರ್ಪಿತವ ಮಾಡಬೇಕು,
ಶ್ರೋತ್ರ ನೇತ್ರ ಫ್ರಾಣ ಜಿಹ್ವೆ ಪರುಶನ ಮುಟ್ಟದ ಮುನ್ನ
ಲಿಂಗಾರ್ಪಿತವ ಮಾಡಬೇಕು,
ಕೂಡಲಚೆನ್ನಸಂಗಮನಲ್ಲಿ ಪ್ರಸಾದಿಯಾದಡೆ./777
ತನುಮುಟ್ಟಿ ಮನ ಮುಟ್ಟದೆ ದೂರವಾದರಯ್ಯಾ ಬೆಲೆವೆಣ್ಣಿನಂತೆ,
ಸೂಳೆ ತನುಮುಟ್ಟಿ ಅಪ್ಪುವಳಲ್ಲದೆ ಮನಮುಟ್ಟಿ ಅಪ್ಪಳಾಗಿ.
ಆಚಾರವರಿಯದ ಅರೆಮರುಳುಗಳು ಶಿವಸುಖವನೆತ್ತ ಬಲ್ಲರು
ಕೂಡಲಚೆನ್ನಸಂಗಮದೇವಾ. /778
ತನುವ ಕೊಟ್ಟು ತನು ಬಯಲಾಯಿತ್ತು,
ಮನವ ಕೊಟ್ಟು ಮನ ಬಯಲಾಯಿತ್ತು,
ಧನವ ಕೊಟ್ಟು ಧನ ಬಯಲಾಯಿತ್ತು,
ಈ ತ್ರಿವಿಧವನು ಕೊಟ್ಟು ಕೂಡಲಚೆನ್ನಸಂಗಯ್ಯನಲ್ಲಿ
ಬಸವಣ್ಣಂಗೆ ಬಯಲಸಮಾದಿಯಾಯಿತ್ತು. /779
ತನುವನೊಪ್ಪಿಸಿದನಯ್ಯಾ ಭಕ್ತನು, ತನ್ನ ಮನವನೊಪ್ಪಿಸಿದನಯ್ಯಾ ಭಕ್ತನು.
ತನ್ನ ಧನವನೊಪ್ಪಿಸಿದನಯ್ಯಾ ಭಕ್ತ(ನು),
ತನ್ನ ಅಂತರಂಗದಾತ್ಮಸುಖಕ್ಕೆ ಈ ತ್ರಿವಿಧವನು
ಶ್ರೀಗುರು ಹೇಳಿದಂತುಟಂ ಬಿಟ್ಟ ವ್ರತಗೇಡಿಯ ತೋರದಿರು
ಕೂಡಲಚೆನ್ನಸಂಗಮದೇವಾ. /780
ತನುವಿಡಿದು ನಡೆವ ತ್ರಿವಿಧ ಸಂಪತ್ತುಗಳು ಭಕ್ತ ಮಹೇಶ್ವರ ಪ್ರಸಾದಿ;
ಮನ ವಿಡಿದು ನಡೆವ ತ್ರಿವಿಧ ಸಂಪತ್ತುಗಳು ಪ್ರಾಣಲಿಂಗಿ ಶರಣ ಐಕ್ಯ.
ಈ ಉಭಯದನುಭವವಿಡಿದು
`ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ ಎಂಬ,
ಈ ಭೇದವ ಭೇದಿಸಬಲ್ಲಡೆ ಹಿಂದಿಲ್ಲ ಮುಂದಿಲ್ಲ,
ಇಹ ಪರ ಒಂದೆ, ಕರ್ಮ ನಾಸ್ತಿ ಭವಂ ನಾಸ್ತಿ.
ಕೂಡಲಚೆನ್ನಸಂಗ ಸ್ವಾಯತವಾದವಂಗೆ ಇದು ಸಹಜ./781
ತನುವಿನ ಸೂತಕ, ಮನದ ಸಂಚಲ, ಜೀವನ ಕಳವಳ;
ಹಿಂಗಿದುವಯ್ಯಾ ಗುರುಕರುಣವ ಪಡೆದೆನಾಗಿ,
ಕೂಡಲಚೆನ್ನಸಂಗಮದೇವಾ
ಎನ್ನ ಭಾವಭ್ರಾಂತಿಯಳಿಯಿತ್ತು ನೀವೆಂದರಿದೆನಾಗಿ !/782
ತನುವಿನ ಸ್ವಾರ್ಥಕ್ಕೆ ಪದಾರ್ಥದ ಪೂರ್ವಾಶ್ರಯವ ಕಳೆದು,
ಲಿಂಗಕ್ಕೆ ಕೊಟ್ಟು ಕೊಂಬುದು ಶುದ್ಧ.
ಮನದ ಸ್ವಾರ್ಥಕ್ಕೆ ರುಚಿಯ ಪೂರ್ವಾಶ್ರಯವ ಕಳೆದು,
ಲಿಂಗಕ್ಕೆ ಕೊಟ್ಟು ಕೊಂಬುದು ಸಿದ್ಧ.
ಈ ಉಭಯ ಕ್ರಿಯಾಭಾವವಳಿದುಳಿದ ಪ್ರಸಿದ್ಧ ಪ್ರಸಾದವ,
ಕೂಡಲಚೆನ್ನಸಂಗಾ ನಿಮ್ಮ ಶರಣ ಬಲ್ಲ. /783
ತನುವಿನಲ್ಲಿ ತನು ಸವೆದು, ಮನದಲ್ಲಿ ಮನ ಸವೆದು, ಧನದಲ್ಲಿ ಧನ ಸವೆದು,
ಲಜ್ಜೆಗೆಟ್ಟು ನಾಣುಗೆಟ್ಟು ಕಿಂಕಿಲನಾಗಿರಬೇಕು.
ಲಿಂಗಜಂಗಮವನೊಲಿಸುವಂಗೆ ಇದು ಚಿಹ್ನವಯ್ಯಾ.
ಪ್ರಸಾದ ಸಾಹಿತ್ಯವಾಗಿ ಉಲುಹಡಗಿರಬೇಕು,
ಕೂಡಲಚೆನ್ನಸಂಗಯ್ಯನಲ್ಲಿ ಏಕಾರ್ಥವಾಗಿರಬೇಕು. /784
ತನುವಿನೊಳಗಿದ್ದು ತನುವ ಗೆದ್ದಳು, ಮನದೊಳಗಿದ್ದು ಮನವ ಗೆದ್ದಳು,
ವಿಷಯದೊಳಗಿದ್ದು ವಿಷಯಂಗಳ ಗೆದ್ದಳು,
ಅಂಗಸುಖವ ತೊರೆದು ಭವವ ಗೆದ್ದಳು,
ಕೂಡಲಚೆನ್ನಸಂಗಯ್ಯನ ಹೃದಯಕಮಲವ ಬಗಿದು ಹೊಕ್ಕು
ನಿಜಪದವನೈದಿದ ಮಹಾದೇವಿಯಕ್ಕನ ಶ್ರೀಪಾದಕ್ಕೆ
ನಮೋ ನಮೋ ಎಂಬೆನು./785
ತನುವಿರಹಿತ ಪ್ರಾಣವಿಲ್ಲ, ಗುರುವಿರಹಿತ ಲಿಂಗವಿಲ್ಲ,
ಕಂಗಳಸಂಗ ವಿರಹಿತವಾಗಿ ನೋಡಲಿಲ್ಲ.
ಈ ಭೇದಸ್ಥಾನವನರಿಯಬೇಕು,
ಕೂಡಲಚೆನ್ನಸಂಗಯ್ಯನನರಿವರೆ. /786
ತನುವಿಲ್ಲದ ಭಕ್ತ, ಮನವಿಲ್ಲದ ಭಕ್ತ, ಧನವಿಲ್ಲದ ಭಕ್ತ,
ಪಂಚೇಂದ್ರಿಯ ಸುಖವಿಲ್ಲದ ಭಕ್ತ, ಕಾಲವಿಲ್ಲದ ಭಕ್ತ,
ಕರ್ಮವಿಲ್ಲದ ಭಕ್ತ, ಕಲ್ಪಿತವೆಂಬುದನರಿಯದ ಭಕ್ತ,
ಅಶನವನರಿಯದ ಭಕ್ತ, ವ್ಯಸನವನರಿಯದ ಭಕ್ತ,
ಹುಸಿ ನುಸುಳು ಅರಿಷಡ್ವರ್ಗಂಗಳನರಿಯದ ಭಕ್ತ,
ಲಿಂಗಕ್ಕೆ ಆಧಾರ ಭಕ್ತ, ಜಂಗಮಕ್ಕೆ ಆಧಾರ ಭಕ್ತ, ಪ್ರಸಾದಕ್ಕೆ ಆಧಾರ ಭಕ್ತ,
ಕೂಡಲಚೆನ್ನಸಂಗಯ್ಯನಲ್ಲಿ
ಎನ್ನ ಮಾತಾಪಿತನೀ ಸದ್ಭಕ್ತ. /787
ತನುವೇ ಭಾಂಡವಾಗಿ, ಮನವೇ ಸುಯಿದಾನವಾಗಿ
ಜ್ಞಾನಾಗ್ನಿಯಲೇ ಪದಾರ್ಥವ ಮಾಡೆ,
ಶ್ರೋತ್ರ ನೇತ್ರ ಘ್ರಾಣ ಜಿಹ್ವೆ ಸ್ಪರ್ಶಮೂರ್ತಿಯು ನೀನೆ.
ನಿನ್ನ ಪ್ರಸಾದಕ್ಕೆ ನಮೋ ನಮೋಯೆಂಬೆ
ಕೂಡಲಚೆನ್ನಸಂಗಮದೇವಾ. /788
ತನುವ್ಯಸನ ಮನವ್ಯಸನ ಧನವ್ಯಸನ ವಾಹನವ್ಯಸನ
ಉತ್ಸಾಹವ್ಯಸನ ವಿಶ್ವವ್ಯಸನ ಸೇವಕವ್ಯಸನ
ಇಂತೀ ಸಪ್ತವ್ಯಸನಂಗಳು:
ತನುವ್ಯಸನ ವಸ್ತು ಆಭರಣ ವೀಳೆಯ ಬಯಸೂದು,
ಮನವ್ಯಸನ ಕಳವು ಹುಸಿ ಪಾರದ್ವಾರವ ಬಯಸೂದು,
ಧನವ್ಯಸನ ರಾಜ್ಯವ ಬಯಸೂದು. (ಧನಧಾನ್ಯವ ಬಯಸೂದು?)
ವಾಹನವ್ಯಸನ ಆನೆ ಕುದುರೆ ಸೇನೆ ಬಯಸೂದು,
ವಿಶ್ವವ್ಯಸನ ಚತುರ್ವಿಧಕರ್ತವ್ಯ ಬಯಸೂದು,
ಉತ್ಸಾಹವ್ಯಸನ ಪುತ್ರ ಮಿತ್ರ ಕಳತ್ರವ ಬಯಸೂದು,
ಸೇವಕವ್ಯಸನ ಉಣಲಾರೆ, ಉಡಲಾರೆ ತೊಡಲಾರೆನೆಂದೆನುತ್ತಿಹುದು.
ಈ ಸಪ್ತವ್ಯಸನಂಗಳಂ ಬಿಟ್ಟು ಲಿಂಗವ್ಯಸನಿಯಾಗಬಲ್ಲರೆ
ಕೂಡಲಚೆನ್ನಸಂಗಯ್ಯನಲ್ಲಿ ಪ್ರಾಣಲಿಂಗಿಗಳೆಂಬೆನು. /789
ತನುಸ್ವಾಯತವಾಗಿ ತನುವಿನ ಹಂಗಿನ ಗುರುವೆನ್ನದೆ,
ಗುರುಸ್ವಾಯತವಾಗಿ ಗುರುವಿನ ಹಂಗಿನ ತನುವೆನ್ನದೆ,
ತನ್ನೊಳಗೆ ಗುರು ಐಕ್ಯವೆನ್ನದೆ, ಗುರುವಿನೊಳಗೆ ತಾನೈಕ್ಯವೆನ್ನದೆ,
ಅವಿರಳ ಸಂಭಾವನೆಯಿಂದ ಸುಬುದ್ಧಿ ನಿಷ್ಠೆ ಅಣುಮಾತ್ರ ಓಸರಿಸದೆ,
ರಸಮುಖಾರ್ಪಿತ ತೃಪ್ತನಾಗಿ, ಕಾಯಾಧಾರಲಿಂಗೋಪಜೀವಿಯಾಗಿ,
ಸ್ಥಾವರದಂತೆ ನಿಬ್ಬೆರಗಾಗಿ, ತನು ಸೋಂಕಿ ತನು ನಷ್ಟವಾಗಿ
ಒಂದು ಮುಖಮಾರ್ಗವಲ್ಲದೆ ಮತ್ತೊಂದ ಮೆಟ್ಟದಿರಬಲ್ಲಡಾತ
ಮಹೇಶ್ವರನಯ್ಯಾ ಕೂಡಲಚೆನ್ನಸಂಗಯ್ಯಾ./790
ತನುಸ್ವಾಯತವಾದವರಂಗ ಸ್ಥಾವರದಂತಿಪ್ಪುದು,
ಮನಸ್ವಾಯತವಾದವರಂಗ ಜ್ಯೋತಿರ್ಮಯಲಿಂಗದಂತಿಪ್ಪುದು,
ಶಬ್ದಸ್ವಾಯತವಾದವರಂಗ ಪೃಥ್ವಿಯಂತಿಪ್ಪದು.-
ಇಂತೀ ತ್ರಿವಿಧಸ್ವಾಯತರಾದವರಂಗ
ಜಂಗಮಲಿಂಗವೆಂಬೆ ಕಾಣಾ, ಕೂಡಲಚೆನ್ನಸಂಗಮದೇವಾ. /791
ತನ್ನ ತಾನರಿದ ಶಿವಯೋಗಿಯ ಪರಿಯೆಂತೆಂದಡೆ:
ದೇಹಿ ತಾನಲ್ಲ, ಜಾತಿಜಾತಕಂಗಳು ತಾನಲ್ಲ, ಪ್ರಾಣ ತಾನಲ್ಲ,
ದಶವಾಯುಗಳು ತಾನಲ್ಲ, ಇಂದ್ರಿಯಂಗಳು ತಾನಲ್ಲ, ಗುಣತ್ರಯಂಗಳು ತಾನಲ್ಲ
ಅಂತಃಕರಣ ಚತುಷ್ಟಯಂಗಳು ತಾನಲ್ಲವೆಂದರಿದು ವಿವರಿಸಿ ಕಳೆದು,
ತನ್ನ ನಿಜಸ್ವರೂಪ ತಾನೇ ನೋಡಿ ಕಂಡು;
ಜೀವಾತ್ಮ ಅಂತರಾತ್ಮ ಪರಮಾತ್ಮ ಮತ್ತಂ ಭೂತಾತ್ಮ ಶುದ್ಧಾತ್ಮ
ನಿರ್ಮಲಾತ್ಮ ಸತ್ಯಾತ್ಮ ಮಹಾತ್ಮವೆಂಬ
ಅಷ್ಟ ಆತ್ಮೇಶ್ವರರು ಏಕಾರ್ಥವೆಂದರಿದು,
ಅಲ್ಲಿಯೆ ತಲ್ಲೀಯವಾಗಿಹುದೀಗ ಯೋಗ ಕಾಣಾ,
ಕೂಡಲಚೆನ್ನಸಂಗಮದೇವಾ./792
ತನ್ನ ಪುತ್ರಂಗೆ ತಾನೆ ಗುರುವಾದೆನೆಂಬ
ಗುರುದ್ರೋಹಿಯ ಮಾತ ಕೇಳಲಾಗದು.
ಅವರಿಬ್ಬರನು ಹೊತ್ತಿಸಿ ನಂದಿಸಿ ಸುಡುವ
ಕೂಡಲಚೆನ್ನಸಂಗಯ್ಯನವರ ಗುರುಶಿಷ್ಯತನವ./793
ತನ್ನ ಪ್ರೀತಿಯ ಪುತ್ರ ಮಿತ್ರಾದಿಗಳು ಪರದೇಶದೊಳಗಿಪ್ಪರೆಂಬ ಭಾವದಲ್ಲಿ
ಅಡಗಿದ ಆನಂದಕ್ಕಿಂತ
ಮನಮುಟ್ಟಿ ನೆನೆವುದರಿಂದಾದ ಆನಂದ ಮಿಗಿಲಾಗಿಪ್ಪುದು ನೋಡಾ !
ಮನಮುಟ್ಟಿ ನೆನೆವುದರ ಸುಖಕ್ಕಿಂತ, ಅವರನಪ್ಪಿ ಆಲಂಗಿಸುವುದರಿಂದಾದ ಸುಖ
ಅದಿಕವಾಗಿ ತೋರ್ಪುದು ನೋಡಾ !
ಒಮ್ಮೆ ಅಪ್ಪಿ ಆಲಂಗಿಸಿದ ಆನಂದಕ್ಕಿಂತ ಅವರೊಡನೆ ಸದಾ ಕೂಡಿಪ್ಪ ಹರ್ಷ
ಹಿರಿದಾಗಿಪ್ಪುದು ನೋಡಾ !
ಇಂತೀ ದೃಷ್ಟಾಂತದಂತೆ, ಪರಶಿವಲಿಂಗವ ಭಾವದಲ್ಲಿ ಭಾವಿಸುವುದಕ್ಕಿಂತ
ಮನಮುಟ್ಟಿ ನೆನೆವುದು, ಮನಮುಟ್ಟಿ ನೆನೆವುದಕ್ಕಿಂತ ಕಣ್ಮುಚ್ಚಿ ಕಾಣುವುದು,
ಕಣ್ಮುಚ್ಚಿ ಕಾಣುವುದಕ್ಕಿಂತ ಕರಮುಟ್ಟಿ ಪೂಜಿಸುವುದು,
ಕರಮುಟ್ಟಿ ಪೂಜಿಸುವುದಕ್ಕಿಂತ ಸದಾ ಅಂಗದಲ್ಲಿ ಹಿಂಗದೆ ಧರಿಸುವ ಹರ್ಷವು,
ಪರಮಾವದಿಯಾಗಿಪ್ಪುದು ನೋಡಾ !
ಇದು ಕಾರಣ-ಕೂಡಲಚೆನ್ನಸಂಗಯ್ಯನ ಶರಣರು
ಭಾವದಿಂದ ಮನಕ್ಕೆ, ಮನದಿಂದ ನೇತ್ರಕ್ಕೆ, ನೇತ್ರದಿಂದ ಕರಕ್ಕೆ
ಆ ಶಿವಲಿಂಗವ ಬಿಜಯಂಗೈಸಿಕೊಂಡು
ಪೂಜಾದಿ ಸತ್ಕ್ರಿಯೆಗಳನಗಲದೆ ಆಲಸದೆ ಆಚರಿಸುತಿಪ್ಪರು/794
ತನ್ನ ಮನೆಯ ಹೊಗದ ಗುರುವಿನ ಕೈಯಲಿ ಕಾರುಣ್ಯವ ಪಡೆವ ಶಿಷ್ಯ,
ತಾ ಹೊಗದ ಮನೆಯಲುಪದೇಶವ ಮಾಡುವ ಗುರು-
ನಾಮಧಾರಕಶಿಷ್ಯಾಣಾಂ ನಾಮಧಾರೀ ಗುರುಸ್ತಥಾ
ಅಂಧಕೋಂಧಕರಾಸಕ್ತೋ ಭವೇತಾಂ ಪತಿತಾವುಭೌ
ಇವರಿಬ್ಬರ ಭಕ್ತರೆಂದವರ ಕೂಡಲಚೆನ್ನಸಂಗಯ್ಯ
ನಾಯಕನರಕದೊಳಗಿಕ್ಕುವ. /795
ತನ್ನ ಲಿಂಗಕ್ಕೆ ಕೊಟ್ಟಲ್ಲದೆ ಕೊಳ್ಳೆನೆಂಬ ಶರಣನು,
ಬಿಸಿಲಲಿ ನಿಂದರೆ ಬಿಸಿಲ ಲಿಂಗಾರ್ಪಿತವ ಮಾಡಬೇಕು,
ನೆಳಲಲಿ ನಿಂದರೆ ನೆಳಲ ಲಿಂಗಾರ್ಪಿತವ ಮಾಡಬೇಕು.
ಧೂಪ ದೀಪ ಪರಿಮಳ ವಾಯು ರುಚಿ ರೂಪನು
ಕಾಯದ ಕೈಯ್ಯಲು ಮುಟ್ಟಿ ಅರ್ಪಿಸೂದರಿದಲ್ಲ, ನಿಲ್ಲು ಮಾಣು.
ಭಾವದ ಕೈಯ್ಯಲು ಮುಟ್ಟಿ ಲಿಂಗಕ್ಕೆಂಬರು ನಾವಿದನರಿಯೆವಯ್ಯಾ.
(ಶಬ್ದ ಸ್ಪರ್ಶ ರೂಪ ರಸ ಗಂಧ) ನಿರವಯಲಿಂಗದಲ್ಲಿ.
ಈ ತೆರನನರಿಯಬಲ್ಲರೆ ಕೂಡಲಚೆನ್ನಸಂಗಮದೇವ (ನಲ್ಲಿ). (ಆತ ಮಹಾಪ್ರಸಾದಿ)/796
ತನ್ನ ಲಿಂಗಕ್ಕೆ ಕೊಡಬಾರದರಠಾವಿನಲ್ಲಿ ಪ್ರಸಾದಿಸಿಕೊಂಡು,
ತುಡುಗುಣಿ ನಾಯಂತೆ ತಿಂಬವರನೇನೆಂಬೆನಯ್ಯಾ !
ಅದು ತನ್ನ ಒಡಲ ಹೊರೆವುದಲ್ಲದೆ ಹಿಡಿದ ಕುಳಕ್ಕೆ ಸಲ್ಲದು,
`ದ್ರವ್ಯಂ ಜಾತು ಶುಭಂ ಭವೇತ್’ ಎಂದುದಾಗಿ.
ಇದು ಕಾರಣ ಕೂಡಲಚೆನ್ನಸಂಗಯ್ಯಾ
ಆಯತ ಬೀಸರವೋದ ವ್ರತಗೇಡಿಗ?ನೇನೆಂಬೆನಯ್ಯಾ. /797
ತನ್ನ ಲಿಂಗಕ್ಕೆ ಬಾರದ ರುಚಿಯ,
ಜಂಗಮಕ್ಕೆ ಸಲಿಸಿ ಕೈಯ ನೀಡಿ ಪ್ರಸಾದವನಿಕ್ಕೆಂಬಿರಿ,
ಅದು ಪ್ರಸಾದವಲ್ಲ, ಸಿಂಗಿ ಕಾಳಕೂಟ ವಿಷವು, ಕೇಳಿರಣ್ಣಾ.
ಆ ಪ್ರಸಾದ ಪದವೆಂಬಿರಿ, ಆ ಪ್ರಸಾದ ಕಿಲ್ಬಿಷವೆಂಬೆ
ಕೂಡಲಚೆನ್ನಸಂಗಮದೇವಾ./798
ತನ್ನ ಲಿಂಗಕ್ಕೆ ಬೋನವ ಮಾಡುವನ್ನಕ್ಕ
ಭವಿಮಿಶ್ರವ ಕಳೆದೆನೆಂದು ಎಂತೆನ್ನಬಹುದು ?
ತನು ಭವಿ, ಆ ಹಸ್ತ ಪಂಚಮಹಾಪಾತಕ
ಮನ ಭವಿ ಅಘೋರನರಕ
`ಭವೀನಾಂ ಪಾಪದೃಷ್ಟಾನಾಂ ಪ್ರಚ್ಛನ್ನಂ ಪದಮುತ್ತಮಂ’
ಎಂಬ ಶೃತಿಯನರಿದು
ನನಗೆ ಭವಿಮಿಶ್ರವೆಂದು ನುಡಿದ
ಲಜ್ಜೆಗೆಟ್ಟ ದುರಾಚಾರಿಗಳ,
ಸಜ್ಜನ ಶುದ್ಧ ಶಿವಾಚಾರ ಸಂಪನ್ನ ಸದುಭಕ್ತರು ಮೆಚ್ಚರು ಕಾಣಾ
ಕೂಡಲ ಚೆನ್ನಸಂಮದೇವ./799
ತನ್ನ ಲಿಂಗಕ್ಕೆ ಮಾಡಿದ ಬೋನವ
ಜಂಗಮಕ್ಕೆ ನೀಡಬಾರದೆಂಬುದನೇಕ ನರಕ !
ತನ್ನ ಲಿಂಗವಾರೋಗಿಸಿ ಮಿಕ್ಕ ಪ್ರಸಾದವ
ಜಂಗಮಕ್ಕೆ ನೀಡುವುದನೇಕ ನಾಯಕನರಕ.
ಆ ಜಂಗಮವಾರೋಗಿಸಿ ಮಿಕ್ಕ ಪ್ರಸಾದ,
ಎನ್ನ ಲಿಂಗಕ್ಕೆ ಬೋನವಾಯಿತ್ತು, ಎನಗೆ ಪ್ರಸಾದವಾಯಿತ್ತು.
ಕೂಡಲಚೆನ್ನಸಂಗಯ್ಯಾ ಎನಗೆಯೂ ನಿನಗೆಯೂ
ಜಂಗಮಪ್ರಸಾದ ಪ್ರಾಣವಾಯಿತ್ತು./800
ತನ್ನ ಲಿಂಗದಲ್ಲಿ ಪದಾರ್ಥದ ಪೂರ್ವಾಶ್ರಯ ಹೋಗದೆಂದು
ಅನುಸರಿಸಿ ಜಂಗಮದ ಒಕ್ಕುದ ಮಿಕ್ಕುದ ಕೊಂಬೆನೆಂಬವನೊಬ್ಬ ಠಕ್ಕಭವಿ.
ಆ ಚರಲಿಂಗ ಜಂಗಮ ಹೋದ ಬಳಿಕ್ಕ
ತನ್ನ ಸ್ವಯಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರಮಂ ಮಾಡಿ,
ಆ ಲಿಂಗಪ್ರಸಾದವಲ್ಲದೆ ಒಲ್ಲೆನೆಂಬವನೊಬ್ಬ ಠಕ್ಕಭವಿ.
ಅವಂಗೆ ಲಿಂಗವಿಲ್ಲ, ಲಿಂಗಕ್ಕೆ ತಾನಿಲ್ಲ, ಆವ ಆಚಾರಭ್ರಷ್ಟ.
ಅಂಥವರ ಕಂಡಡೆ ಇರಿದಿರಿದು ಸುಡುವನಲ್ಲದೆ, ಮೆರೆವನಲ್ಲ
ಕೂಡಲಚೆನ್ನಸಂಗಮದೇವ./801
ತನ್ನ ಲಿಂಗವ ಶಿಷ್ಯಂಗೆ ಬಿಜಯಂಗೈಸಿ ಕೊಟ್ಟು
ಮುಂದೆ ತಾನೇನಾಗುವನೆಲವೊ ?
ಅವನ ಧರ್ಮಕ್ಕೆ ಗುರುವಾದನಲ್ಲದೆ
ಅವನ ಮನಕ್ಕೆ ಗುರುವಾದುದಿಲ್ಲ.
ಹಿಂದಾದ ಮುಕ್ತಿಯ ಮಾರಿಕೊಂಡುಂಬ
ಭಂಗಗಾರರ ತೋರದಿರಾ-ಕೂಡಲಚೆನ್ನಸಂಗಮದೇವಾ./802
ತನ್ನ ಸತ್ಕಾಯದಿಂದೊದಗಿದ ವಿಶುದ್ಧಪದಾರ್ಥವ ಲಿಂಗಕ್ಕಿತ್ತು
ಆ ಲಿಂಗಪ್ರಸಾದವ ತಾನು ಬೋಗಿಸಬೇಕಲ್ಲದೆ
ಇದು ಸ್ಥೂಲ ಇದು ಸೂಕ್ಷ್ಮವೆಂದರಿಯದೆ
ಅಂಗಸುಖಕ್ಕಾಗಿ ಲಿಂಗವನು ಮರೆತು,
ಕಂಡ ಕಂಡ ಪದಾರ್ಥವನುಂಡಡೆ ಅದು ಕೆಂಡದಂತಾಗುವುದಯ್ಯಾ.
ಈ ಮರ್ಮವನರಿಯದನ್ನಕ್ಕ
ಕೂಡಲಚೆನ್ನಸಂಗಯ್ಯನಲ್ಲಿ ಸದ್ಭಕ್ತರೆಂತಪ್ಪರಯ್ಯಾ/803
ತನ್ನ ಸಮಯಾಚಾರಕ್ಕೆ ಸಲ್ಲದವರಿಗೆ
ಉಪದೇಶವ ಮಾಡುವಾತ ಗುರುವಲ್ಲ, ಮಾಡಿಸಿಕೊಂಬಾತ ಶಿಷ್ಯನಲ್ಲ.
ಲಿಂಗವ ಮಾರಿಕೊಂಡುಂಬ ವಾಳಕರು, ಗುರುಲಿಂಗಜಂಗಮಕ್ಕೆ ದೂರಹರು.
ಕೂಡಲಚೆನ್ನಸಂಗಯ್ಯಾ ಆ ಇಬ್ಬರಿಗೆಯೂ ನರಕ ತಪ್ಪದು/804
ತನ್ನ ಹೊದ್ದದಂತೆ ಮಾಡಿದ, ತನ್ನ ಸಾರದಂತೆ ಮಾಡಿದ.
ಕಾಮವ ತಂದು ಕಣ್ಣಿಗೆ ತೋರಿದನು,
ವಿದಿಯ ತಂದು ಮುಂದೊಡ್ಡಿದನು ನೋಡಯ್ಯಾ.
ಪ್ರಸಾದಸಾಧಕರಿಗೆ ಇದೇ ವಿಘ್ನವಯ್ಯಾ.
ಕೂಡಲಚೆನ್ನಸಂಗಮದೇವಯ್ಯ ತನ್ನ ಹೊದ್ದದಂತೆ ಮಾಡಿದನಯ್ಯಾ/805
ತನ್ನನಿಕ್ಕಿ ನಿಧಾನವ ಸಾದಿಸಲರಿಯದ ಹಂದೆಗಳಿದ್ದೇನು ಫಲ ?
ಕಾಡಹಂದಿ ನರಿಯ ಹಿಂಡು ತರುವಿಂಧ್ಯದಲ್ಲಿ ಕೂಡಿರವೆ ?
ತಮ್ಮ ತಮ್ಮ ತಮಂಧ ಕತ್ತಲೆ ಹರಿಯದನ್ನಕ್ಕ
ಇದಿರಿಗೆ ಬುದ್ಧಿಯ ಹೇಳಿ ಉದರವ ಹೊರೆವ ಚದುರರೆಲ್ಲರು ಹಿರಿಯರಪ್ಪರೆ ?
ಲೋಗರ ಮಕ್ಕಳನಿಕ್ಕಿ ನೆಲೆಯ ನೋಡಿಹೆನೆಂದಡೆ,
ಅದೆಂದು ಸಾಧ್ಯವಪ್ಪನಯ್ಯಾ ನಮ್ಮ ಕೂಡಲಚೆನ್ನಸಂಗಮದೇವರು ?/806
ತಪವೆಂಬುದು ಬಂಧನ, ನೇಮವೆಂಬುದು ತಗಹು,
ಶೀಲವೆಂಬುದು ಸೂತಕ, ಭಾಷೆಯೆಂಬುದು ಪ್ರಾಣಘಾತಕ.
ಈ ಚತುರ್ವಿಧದೊಳಗೆ ಇಲ್ಲ,
ಕೂಡಲಚೆನ್ನಸಂಗಯ್ಯ ಏಕೋಗ್ರಾಹಿ. /807
ತಮ್ಮ ನಿಧಾನವ ಸಾದಿಸುವ ಭೇದವನರಿಯದ
ಅಜ್ಞಾನಿಗಳು ಇದ್ದು ಫಲವೇನು ?
ಕಾಡಹಂದಿ ನರಿಯಹಿಂಡು ತರುವಿಂಧ್ಯದಲ್ಲಿ ಕೂಡಿರವೆ ?
ಹಿರಿಯಹಂದಿ ನಾಯವಿಂಡು ನರವಿಂಧ್ಯದಲ್ಲಿ ಕೂಡಿರುವೆ ?
ತಮ್ಮ ತಮ್ಮ ಅಜ್ಞಾನ ಹಿಂಗದೆ
ಇದಿರಿಗೆ ಬೋಧೆಯ ಹೇಳಿ ಉದರವ ಹೊರೆವ
ಚದುರರೆಲ್ಲ ಹಿರಿಯರಪ್ಪರೆ ?
ಲೋಗರ ಮಕ್ಕಳನಿಕ್ಕಿ ನೆಲೆಯ ನೋಡೇನೆಂದರೆ
ಅದೆಂತು ಸಾಧ್ಯವಾಗುವುದಯ್ಯ ?
ಕೂಡಲಚೆನ್ನಸಂಗಮದೇವ./808
ತಮ್ಮಾಚಾರಕ್ಕೆ, ಅನ್ಯರಿಗೆ ಪ್ರಾಣಲಿಂಗಸಂಬಂಧವ ಮಾಡುವರಯ್ಯಾ.
ಹೊದ್ದಿತ್ತಲ್ಲಾ ಗುರುವಚನಕ್ಕೆ ಭಂಗ, ಅದೇಕೆಂದರೆ:
ಏಕಕಾಲ ಲಿಂಗಾರ್ಚನೆ ತಡೆದರೆ ರೌರವನರಕವೆಂದುದಾಗಿ.
ಇದು ಕಾರಣ ಕೂಡಲಚೆನ್ನಸಂಗಯ್ಯಾ
ಉಪದೇಶವ ಮಾಡುವುದು ರೌರವನರಕ. /809
ತರುಮರಾದಿಗಳಲ್ಲಿಗೆ ಹೋಗಿ ಅನಂತಕಾಲ ತಪಸ್ಸಿಹುದರಿಂದ
ಒಂದು ದಿನ ಗುರುಚರಣಸೇವೆ ಸಾಲದೆ?
ಅನಂತಕಾಲ ಗುರುಚರಣಸೇವೆಯ ಮಾಡೂದರಿಂದ
ಒಂದು ದಿನ ಲಿಂಗಪೂಜೆ ಸಾಲದೆ?
ಅನಂತಕಾಲ ಲಿಂಗಪೂಜೆಯ ಮಾಡೂದರಿಂದ
ಒಂದುದಿನ ಜಂಗಮ ತೃಪ್ತಿ ಸಾಲದೆ
ಅನಂತಕಾಲ ಜಂಗಮತೃಪ್ತಿಯಮಾಡೂದರಿಂದ
ಒಂದು ನಿಮಿಷ ನಿಮ್ಮ ಶರಣರ ಅನುಭಾವ ಸಾಲದೆ
ಕೂಡಲಚೆನ್ನಸಂಗಮದೇವಾ? /810
ತಾನು ಜಂಗಮವಾದರೆ ತನ್ನ ಕೈಯ ಲಿಂಗವು
ತನಗೆ ಬೆಸಮಗ[ನಾ]ಗಿರಬೇಡಾ ?
ಇಂತಿದ್ದುದು ಉಭಯಾರ್ಥವು, ಇದು ಕಾರಣ ಕೂಡಲಚೆನ್ನಸಂಗಯ್ಯಾ
ಆ ಲಿಂಗವಾದ ಜಂಗಮವಪೂರ್ವ./811
ತಾನು ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ
ಮರಳಿ, ಭವಿಯಾಗಿದ್ದ ತಾಯಿ ತಂದೆ ಒಡಹುಟ್ಟಿದವರ
ಬಂಧುಬಳಗವೆಂದು ಬೆರಸಿದರೆ
ಕೊಂಡ ಮಾರಿಂಗೆ ಹೋಹುದು ತಪ್ಪದು.
ಹಸಿಯ ಮಣ್ಣಿನಲ್ಲಿ ಮಾಡಿದ ಮಡಕೆ, ಅಗ್ನಿಯ ಮುಖದಲ್ಲಿ ಶುದ್ಧವಾದ ಬಳಿಕ
ಅದು ತನ್ನ ಪೂರ್ವಕುಲವ ಕೂಡದು ನೋಡಾ, ಅದೆಂತೆಂದಡೆ:
ಅಗ್ನಿದಗ್ಧಘಟಃ ಪ್ರಾಹುರ್ನ ಭೂಯೋ ಮೃತ್ತಿಕಾಯತೇ
ತಚ್ಛಿವಾಚಾರಸಂಗೇನ ನ ಪುನರ್ಮಾನುಷೋ ಭವೇತ್ ಎಂದುದಾಗಿ,
ಭಕ್ತನಾಗಿ, ಭವಿಯ ನಂಟನೆಂದು ಪಂತಿಯಲ್ಲಿ ಕುಳ್ಳಿರಿಸಿಕೊಂಡು
ಉಂಡನಾದರೆ; ಪಂಚಮಹಾಪಾತಕ,
ಅವಂಗೆ ನಾಯಕನರಕ ತಪ್ಪದು ಕಾಣಾ
ಕೂಡಲಚೆನ್ನಸಂಗಯ್ಯಾ. /812
ತಾನೆ ಜಗ, ಜಗವೆಲ್ಲ ತಾನೆಂದರಿದ ಘನವೇದ್ಯನಭೇದರೂಪನಾಗಿ,
ಅನ್ಯವಿಲ್ಲದನ್ಯವನರಿಯಲೆಲ್ಲಿಯದೊ ?
ನಿರಂಜನ ನಿಜಚಿದ್ರೂಪು ತಾನಾಗಿ
ಅರಿವು ತಾನೆಂಬ ಮಾತಿಗೆಡೆಯಲ್ಲಿಯದೊ ?
ಅನ್ಯವೆನ್ನದ ತಾನೆನ್ನದಳಿದುಳಿಮೆಯನುಪಮಿಸಬಹುದೆ ?
ಅನಪಮಸುಖಸಾರಾಯ, ಕೂಡಲಚೆನ್ನಸಂಗಾ ನಿಮ್ಮ ಶರಣ./813
ತಾನೆನ್ನದೆ ಇದಿರೆನ್ನದೆ ಏನೂ ಏನೂ ಎನಲಿಲ್ಲದ ಅನಿರ್ವಾಚ್ಯವಾಗಿದ್ದ ವಸ್ತು
ತನ್ನ ಲೀಲೆಯಿಂ ತಾನೆ ಸ್ವಯಂಭುಲಿಂಗವಾಗಿತ್ತು.
ಆ ಲಿಂಗದಿಂದಾಯಿತ್ತು ಶಿವಶಕ್ತ್ಯಾತ್ಮಕ
ಆ ಶಿವಶಕ್ತ್ಯಾತ್ಮಕದಿಂದಾಯಿತ್ತು ವಿಶ್ವ.
ಆ ವಿಶ್ವಪ್ರಪಂಚದಿಂದಾದುದು ಸಂಸಾರ.
ಆ ಸಂಸಾರವ ತನ್ನ ವಿವೇಕದಿಂ ವಿಚಾರಿಸಿ
ತಾನಾರಿದೆಲ್ಲಿಯದೆಂದು ವಿಡಂಬಿಸಿ
ಗುರುಸನ್ನಿದಿಯ[ಲ್ಲಿ], ಗುರು ಹಸ್ತಮಸ್ತಕ ಸಂಯೋಗದಿಂ ಮಹಾಲಿಂಗವ
ಕರತಳಾಮಳಕವಾಗಿ ಕರ ಮನ ಭಾವದಲ್ಲಿ ಪ್ರತಿಷ್ಠಿಸಿ ತೋರಲು
ಪರಮಾನಂದವನೆಯ್ದಿ; ಆ ಲಿಂಗದಲ್ಲಿ ಆಚಾರ ವಿಡಿದು ಭಕ್ತ,
ಪೂಜೆವಿಡಿದು ಮಾಹೇಶ್ವರ, ಅರ್ಪಿತವಿಡಿದು ಪ್ರಸಾದಿ,
ಅನುಭಾವವಿಡಿದು ಪ್ರಾಣಲಿಂಗಿ, ಆನಂದವಿಡಿದು ಶರಣ,
ಸಮರಸವಿಡಿದು ಐಕ್ಯ-ಇಂತು ತಾನೆಲ್ಲವಾಗಿ, ಎಲ್ಲವೂ ತಾನಾಗಿ
ಒಳಹೊರಗೆನ್ನದೆ, ಇಹಪರವೆನ್ನದೆ
ಸರ್ವವೂ ತಾನಾದ ಮಹಾಜ್ಞಾನಿ ಶರಣನ ಸುಳುಹೆ
ಜಗತ್ಪಾವನವಯ್ಯಾ, ಕೂಡಲಚೆನ್ನಸಂಗಮದೇವಾ. /814
ತಾಪತ್ರಯವಿಲ್ಲದವ, ವ್ಯಾಪ್ತಿಯನರಿದವ,
ಇರುಳು ಹಗಲೆಂದು ಮನದಲ್ಲಿ ತಾಳದವ,
ತಾಳೋಷ್ಠಸಂಪುಟಕ್ಕೆ ಬಾರದವ,
ಭವಚ್ಛೇದ ಕಾಮಭಂಜನ ಕಾಯವಿಲ್ಲದವ,
ಕಾಲನ ಗೆದ್ದವ, ಮಾಯವ ತೊರೆದವ, ಮತ್ತೊಂದನರಿಯದವ
ನಮ್ಮ ಕೂಡಚೆನ್ನಸಂಗನನರಿದು ಸುಖಿಯಾದವ. /815
ತಾರಕಾಕೃತಿ, ದಂಡಕಾಕೃತಿ, ಕುಂಡಲಾಕೃತಿ, ಅರ್ಧಚಂದ್ರಾಕೃತಿ,
ದರ್ಪಣಾಕೃತಿ-ಜ್ಯೋತಿರ್ಮಯಾಕೃತಿ, ನಿಷ್ಕಳಾಕೃತಿ, ನಿರಾಳಾಕೃತಿ,
ನಿರಂಜನಾಕೃತಿ-ಇವು ಆಕೃತಿಗಳು
ಈ ಆಕೃತಿಗಳ ಮಧ್ಯದಲ್ಲಿ ಪ್ರಣವಂಗಳಾವಾವೆಂದಡೆ:
ನಕಾರ, ಮಕಾರ, ಶಿಕಾರ, ವಕಾರ, ಯಕಾರ, ಓಂಕಾರ,
ಬಕಾರ, ಕ್ಷಕಾರ, ಹಕಾರ-ಇವು ಪ್ರಣವಂಗಳು.
ಈ ಪ್ರಣವಂಗಳ ನಾದಂಗಳಾವಾವೆಂದಡೆ:
ಪೆಣ್ದುಂಬಿನಾದ, ವೇಣುನಾದ, ಘಂಟಾನಾದ, ಭೇರಿನಾದ,
ಮೇಘನಾದ, ಪ್ರಣವನಾದ, ಕಿಂಕಿಣಿನಾದ, ಅಗಣಿತನಾದ, ದಿವ್ಯನಾದ
ಈ ನಾದಂಗಳಿಗೆ ಪಿಂಡಂಗಳಾವಾವೆಂದಡೆ:
ಭಕ್ತನೆಂಬ ಪಿಂಡ, ಮಹೇಶ್ವರನೆಂಬ ಪಿಂಡ, ಪ್ರಸಾದಿಯೆಂಬ ಪಿಂಡ,
ಪ್ರಾಣಲಿಂಗಿಯೆಂಬ ಪಿಂಡ, ಶರಣನೆಂಬ ಪಿಂಡ, ಐಕ್ಯವೆಂಬ ಪಿಂಡ,
ಚಿದ್ಗುಣವೆಂಬ ಪಿಂಡ, ಚಿನ್ಮಯವೆಂಬ ಪಿಂಡ,
ಚಿನ್ಮೂರ್ತಿಯೆಂಬ ಪಿಂಡ-
ಈ ಪಿಂಡಂಗಳಿಗೆ ಷಡಾಧಾರಂಗಳಾವಾವೆಂದಡೆ:
ಆಧಾರಚಕ್ರ, ಸ್ವಾದಿಷ್ಠಾನಚಕ್ರ, ಮಣಿಪೂರಕಚಕ್ರ,
ಅನಾಹತಚಕ್ರ, ವಿಶುದ್ಧಿಚಕ್ರ, ಅಜ್ಞಾಚಕ್ರ, ಬ್ರಹ್ಮಚಕ್ರ, ಶಿಖಾಚಕ್ರ,
ಪಶ್ಚಿಮಚಕ್ರ,-
ಈ ಚಕ್ರಂಗಳಿಗೆ ವರ್ಣಂಗಳಾವಾವೆಂದಡೆ:
ಪೀತವರ್ಣ, ಶ್ವೇತವರ್ಣ, ಪುಷ್ಯರಾಗದ ವರ್ಣ, ಮುತ್ತಿನ ವರ್ಣ,
ವೈಢೂರ್ಯದ ವರ್ಣ, ಎಳೆಯ ಮಾಣಿಕ್ಯದ ವರ್ಣ, ಗೋಮೇದಿಕವರ್ಣ
ಪಶ್ಯವರ್ಣ, ವಜ್ರದ ವರ್ಣ-
ಈ ವರ್ಣಂಗಳಿಗೆ ಅಂಗಗಳಾವಾವೆಂದಡೆ:
ಪೃಥ್ವಿಯಂಗ, ಅಪ್ಪುವಂಗ, ಅಗ್ನಿಯಂಗ, ವಾಯುವಂಗ,
ಆಕಾಶವಂಗ, ಆತ್ಮಂಗ, ಯೋಗಾಂಗ, ಭೋಗಾಂಗ, ತ್ಯಾಗಾಂಗ-
ಈ ಅಂಗಗಳಿಗೆ ಆತ್ಮಂಗಳಾವಾವೆಂದಡೆ:
ಜೀವಾತ್ಮ, ಅಂತರಾತ್ಮ, ಪರಮಾತ್ಮ, ಜ್ಞಾನಾತ್ಮ,
ನಿರ್ಮಲಾತ್ಮ, ಶುದ್ಧಾತ್ಮ, ಮಹಾತ್ಮ, ಚಿದಾತ್ಮ, ದಿವ್ಯಾತ್ಮ-
ಈ ಆತ್ಮಂಗಳಿಗೆ ಮೂರ್ತಿಗಳಾರಾರೆಂದಡೆ:
ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ,
ನಿಃಕಳ, ನಿರಾಳ, ನಿರಂಜನ-
ಈ ಮೂರ್ತಿಗಳಿಗೆ ತನುಗಳಾವಾವೆಂದಡೆ:
ಸ್ಥೂಲತನು, ಸೂಕ್ಷ್ಮತನು, ಕಾರಣತನು, ನಿರ್ಮಳತನು,
ಆನಂದತನು, ಶುದ್ಧತನು, ಚಿದ್ರೂಪತನು, ಚಿನ್ಮಯತನು, ನಿಮರ್ುಕ್ತತನು
ಈ ತನುಗಳಿಗೆ ಹಸ್ತಂಗಳಾವಾವೆಂದಡೆ:
ಸುಚಿತ್ತ, ಸುಬುದ್ಧಿ, ನಿರಹಂಕಾರ, ಸುಮನ, ಸುಜ್ಞಾನ
ಸದ್ಭಾವ, ನಿರ್ಭಾವ, ನಿರ್ಮಾಯ, ನಿರಾಳ;
ಈ ಹಸ್ತಂಗಳಿಗೆ ಲಿಂಗಗಳಾವೆಂದಡೆ;
ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ,
ಮಹಾಲಿಂಗ, ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ ಅಂತುಮಲ್ಲದೆ
ನಿಃಕಲಲಿಂಗ, ನಿಃಶೂನ್ಯಲಿಂಗ, ನಿರಂಜನಲಿಂಗ-
ಈ ಲಿಂಗಂಗಳಿಗೆ ಮುಖಂಗಳಾವಾವೆಂದಡೆ:
ಘ್ರಾಣ, ಜಿಹ್ವೆ, ನೇತ್ರ, ತ್ವಕ್ಕು, ಶ್ರೋತ್ರ, ಹೃದಯ, ಪರಬ್ರಹ್ಮ,
ಅಭ್ರಶಿಖಿ, ಉನ್ಮನಿ-
ಈ ಮುಖಂಗಳಿಗೆ ಶಕ್ತಿಗಳಾವಾವೆಂದಡೆ:
ಕ್ರಿಯಾಶಕ್ತಿ, ಜ್ಞಾನಶಕ್ತಿ, ಇಚ್ಛಾಶಕ್ತಿ, ಆದಿಶಕ್ತಿ, ಪರಾಶಕ್ತಿ,
ಚಿಚ್ಛಕ್ತಿ, ಪರಿಪೂರ್ಣಶಕ್ತಿ, ನಿಭ್ರಾಂತಿಶಕ್ತಿ, ನಿರ್ಬಿನ್ನಶಕ್ತಿ-
ಈ ಶಕ್ತಿಗಳಿಗೆ ಭಕ್ತಿಗಳಾವಾವೆಂದಡೆ:
ಶ್ರದ್ಧಾಶಕ್ತಿ, ನೈಷ್ಠಿಕಾಭಕ್ತಿ, ಸಾವಧಾನಭಕ್ತಿ, ಅನುಭಾವಭಕ್ತಿ,
ಆನಂದಭಕ್ತಿ, ಸಮರಸಭಕ್ತಿ, ಪರಿಪೂರ್ಣಭಕ್ತಿ, ಅಪ್ರದರ್ಶಭಕ್ತಿ,
ನಿರ್ನಾಮಭಕ್ತಿ, ಅಂತುಮಲ್ಲದೆ ಅಖಂಡಭಕ್ತಿ, ನಿರಂಜನಭಕ್ತಿ
ಈ ಭಕ್ತಿಗಳಿಗೆ ಪದಾರ್ಥಂಗಳಾವಾವೆಂದಡೆ:
ಗಂಧಪದಾರ್ಥ, ರಸಪದಾರ್ಥ, ರೂಪುಪದಾರ್ಥ, ಸ್ಪರ್ಶನಪದಾರ್ಥ,
ಶಬ್ದಪದಾರ್ಥ, ತೃಪ್ತಿಪದಾರ್ಥ, ಆನಂದವೆಂಬ ರೂಪುಪದಾರ್ಥ,
ಪರಮಾನಂದವೆಂಬ ರುಚಿಪದಾರ್ಥ, ಪರಮಾಮೃತವೆಂಬ
ತೃಪ್ತಿಪದಾರ್ಥ-
ಈ ಪದಾರ್ಥಂಗಳು ಲಿಂಗಾರ್ಪಿತವಾದ ಪ್ರಸಾದಗಳಾವಾವೆಂದಡೆ:
ಸುಗಂಧಪ್ರಸಾದ, ಸುರಸಪ್ರಸಾದ, ಸುರೂಪುಪ್ರಸಾದ,
ಸುಸ್ಪರ್ಶನಪ್ರಸಾದ, ಸುಶಬ್ದಪ್ರಸಾದ, ಸುತೃಪ್ತಿಪ್ರಸಾದ, ಸುಅವಿರ?
ಶುದ್ಧಪ್ರಸಾದ, ಸುಪರಮಾನಂದ ಸಿದ್ಧಪ್ರಸಾದ, ಸುಪರಮಾಮೃತ
ಪ್ರಸಿದ್ಧಪ್ರಸಾದ-
ಈ ಪ್ರಸಾದಂಗಳ ಲಿಂಗಾರ್ಪಿತವ ಮಾಡುವ ಪೂಜಾರಿಗಳಾರಾರೆಂದೊಡೆ:
ಬ್ರಹ್ಮಪೂಜಾರಿ, ವಿಷ್ಣುಪೂಜಾರಿ, ರುದ್ರಪೂಜಾರಿ, ಈಶ್ವರಪೂಜಾರಿ,
ಸದಾಶಿವಪೂಜಾರಿ, ಪರಶಿವಪೂಜಾರಿ, ಅಗಣಿತನೆಂಬ ಪೂಜಾರಿ,
ಅಪ್ರಮಾಣನೆಂಬ ಪೂಜಾರಿ, ಬಾಲೇಶ್ವರನೆಂಬ ಪೂಜಾರಿ-
ಈ ಪೂಜಾರಿಗಳಿಗೆ ಅದಿದೈವಂಗಳಾರಾರೆಂದಡೆ:
ಭವನದಿದೈವ, ಮೃಡನದಿದೈವ, ಬಿಮನದಿದೈವ,
ಮಹಾದೇವನದಿದೈವ, ಮಹಾಶ್ರೀಗುರುವದಿದೈವ,
ಪದ್ಮೋದ್ಭವನದಿದೈವ, ಚಿದಿಂದುವದಿದೈವ, ಚಿತ್ಸೂರ್ಯವದಿದೈವ,
ಈ ಅದಿದೈವಂಗಳಿಗೆ ಬ್ರಹ್ಮಮೂರ್ತಿಗಳಾರಾರೆಂದೊಡೆ:
ಮೂರ್ತಿಬ್ರಹ್ಮ, ಪಿಂಡಬ್ರಹ್ಮ, ಕಲಾಬ್ರಹ್ಮ, ಆನಂದಬ್ರಹ್ಮ,
ವಿಜ್ಞಾನಬ್ರಹ್ಮ, ಪರಬ್ರಹ್ಮ, ಪರಿಪೂರ್ಣಬ್ರಹ್ಮ, ಅಖಂಡಬ್ರಹ್ಮ,
ಅವಿರಳಬ್ರಹ್ಮ-
ಈ ಬ್ರಹ್ಮಗಳಿಗೆ ಕಲೆಗಳಾವಾವೆಂದಡೆ:
ನಿವೃತ್ತಿಕಲೆ, ಪ್ರತಿಷ್ಠಾಕಲೆ, ವಿದ್ಯಾಕಲೆ, ಶಾಂತಿಕಲೆ,
ಶಾಂತ್ಯತೀತಕಲೆ, ಶಾಂತ್ಯತೀತೋತ್ತರಕಲೆ, ಅನಾದಿಯೆಂಬಕಲೆ,
ನಿರುಪಮಕಲೆ, ನಿರ್ವಾಚ್ಯಕಲೆ-
ಈ ಕಲೆಗಳಿಗೆ ಸಾದಾಖ್ಯಂಗಳಾವಾವೆಂದಡೆ:
ಕರ್ಮಸಾದಾಖ್ಯ, ಕರ್ತೃಸಾದಾಖ್ಯ, ಮೂರ್ತಿಸಾದಾಖ್ಯ,
‘ಮೂರ್ತಿಸಾದಾಖ್ಯ, ಶಿವಸಾದಾಖ್ಯ, ಮಹಾಸಾದಾಖ್ಯ,
ನಿರ್ಮಾಯಸಾದಾಖ್ಯ, ಅವಿರಳಸಾದಾಖ್ಯ, ನಿಮರ್ುಕ್ತಿಸಾದಾಖ್ಯ-
ಈ ಸಾದಾಖ್ಯಂಗಳಿಗೆ ಲಕ್ಷಣಂಗಳಾವಾವೆಂದಡೆ:
ಸತ್ತುವೆಂಬ ಲಕ್ಷಣ, ಚಿತ್ತುವೆಂಬ ಲಕ್ಷಣ, ಆನಂದವೆಂಬ ಲಕ್ಷಣ,
ನಿತ್ಯವೆಂಬ ಲಕ್ಷಣ, ಪರಿಪೂರ್ಣವೆಂಬ ಲಕ್ಷಣ, ಅಖಂಡನೆಂಬ ಲಕ್ಷಣ,
ಅನಾಮಯವೆಂಬ ಲಕ್ಷಣ, ಅಗಮ್ಯವೆಂಬ ಲಕ್ಷಣ,
ಅಪ್ರಮಾಣವೆಂಬ ಲಕ್ಷಣ,-
ಈ ಲಕ್ಷಣಂಗಳಿಗೆ ಸಂಜ್ಞೆಗಳಾವಾವೆಂದಡೆ:
ಪರವೆಂಬ ಸಂಜ್ಞೆ, ಗೂಢವೆಂಬ ಸಂಜ್ಞೆ, ಶರೀರಸ್ಥವೆಂಬ ಸಂಜ್ಞೆ,
ಲಿಂಗಕ್ಷೇತ್ರವೆಂಬ ಸಂಜ್ಞೆ, ಅನಾದಿವತ್ ಎಂಬ ಸಂಜ್ಞೆ, ಮಹಾಸಂಜ್ಞೆ,
ನಿರ್ನಾಮವೆಂಬ ಸಂಜ್ಞೆ, ಅಪ್ರಮಾಣವೆಂಬ ಸಂಜ್ಞೆ, ಅವಿರಳ ಸಂಜ್ಞೆ
ಈ ಸಂಜ್ಞೆಗಳಿಗೆ ದಿಕ್ಕುಗಳಾವಾವೆಂದಡೆ:
ಪಶ್ಚಿಮದಿಕ್ಕು, ಉತ್ತರದಿಕ್ಕು, ದಕ್ಷಿಣದಿಕ್ಕು, ಪೂರ್ವದಿಕ್ಕು,
ಊಧ್ರ್ವದಿಕ್ಕು, ಗಂಬಿರದಿಕ್ಕು, ಧನದಿಕ್ಕು, ಸುದ್ವವಯನೆಂಬ ದಿಕ್ಕು,
ಜ್ಞಾನಶೂನ್ಯಮಹಾಜ್ಯೋತಿ ದಿವ್ಯವಾದ ಅಘೋಷದಿಕ್ಕು,-
ಈ ದಿಕ್ಕುಗಳಿಗೆ ವಕ್ತ್ರಂಗಳಾವಾವೆಂದಡೆ:
ಸದ್ಯೋಜಾತವಕ್ತ್ರ, ವಾಮದೇವವಕ್ತ್ರ, ಅಘೋರವಕ್ತ್ರ,
ತತ್ಪುರುಷವಕ್ತ್ರ, ಈಶಾನವಕ್ತ್ರ, ಗೋಪ್ಯವಕ್ತ್ರ, ತಾರಕಬ್ರಹ್ಮವೆಂಬ ವಕ್ತ್ರ,
ಸುರಾಳವೆಂಬ ವಕ್ತ್ರ, ನಿರಂಜನವೆಂಬ ವಕ್ತ್ರ-
ಈ ವಕ್ತ್ರಂಗಳಲ್ಲಿ ಪುಟ್ಟಿದ ವೇದಂಗಳಾವಾವೆಂದಡೆ:
ಋಗ್ವೇದ, ಯಜುರ್ವೆದ, ಸಾಮವೇದ, ಅಥರ್ವಣವೇದ,
ಅಜಪವೇದ, ಗಾಯತ್ರಿವೇದ, ಗಾಂಧರ್ವವೇದ, ಧನುರ್ವೆದ,
ಕಾಣ್ವವೇದ ಅಂತುಮಲ್ಲದೆ ಆಯುರ್ವೆದ, ವರ್ತುಳವೇದ,
ಅರ್ಥವೇದ-
ಈ ವೇದಂಗಳಿಗೆ ಅಧ್ವಂಗಳಾವಾವೆಂದಡೆ:
ಭುವನಾಧ್ವ, ಪದಾಧ್ವ, ವರ್ಣಾಧ್ವ, ಕಲಾಧ್ವ, ತತ್ವಾಧ್ವ,
ಮಂತ್ರಾಧ್ವ, ಲಿಂಗಾಧ್ವ, ಪ್ರಸಾದಾಧ್ವ, ಸರ್ವಶೂನ್ಯಾಧ್ವ-
ಈ ಸಕೀಲಂಗಳೆಲ್ಲ ಇಪ್ಪ ಬ್ರಹ್ಮದ ವೃತ್ತ, ಕಟಿ, ವರ್ತುಳ,
ಗೋಮುಖ, ನಾಳ, ಗೋಳಕ, ಆಜ್ಯಪ್ರದಾರಿಕೆ, ಅಭ್ರಶಿಖಿ,
ಚಿದಬ್ಜವೆಂಬ ನವಸ್ಥಾನಂಗಳಲ್ಲಿ ಸಂಬಂಧವಾಗಿಹವು. ಅದೆಂತೆಂದು ಸದ್ಭಕ್ತ
ಶರಣಜನಂಗಳು ಬೆಸಗೊಂಡಲ್ಲಿ, ಮುಂದೆ ತ್ರಿವಿಧ ಲಿಂಗಾನುಭಾವಿಗಳಾದ
ಷಟ್ಸ್ಥಲಬ್ರಹ್ಮಿಗಳು ಸೂತ್ರವಿಟ್ಟು ನಿರೂಪಿಸುತ್ತಿಹರು.
ಇಂತು ಹಿಂದೆ ಹೇಳಿದ ಸಕೀಲಂಗಳನು ಹಸ್ತಾಬ್ಜ ಪೀಠದಲ್ಲಿ
ಮೂರ್ತಿಗೊಂಡಿಪ್ಪ ಪಂಚಸೂತ್ರಯುಕ್ತವಾದ ವಿಷ್ಣುಬ್ರಹ್ಮದಲ್ಲಿ
ಸಂಬಂಧ ಮಾಡುವ ಭೇದವ ಸದ್ಭಕ್ತ ಶರಣಜನಂಗಳು ಬೆಸಗೊಂಡಲ್ಲಿ,
ಮುಂದೆ ತ್ರಿವಿಧ ಲಿಂಗಾನುಭಾವಿಗಳಾದ ಷಟ್ಸ್ಥಲ ಸಂಪ್ನರಾದ
ವೀರಶೈವಾಚಾರ್ಯರು ಉಪದೇಶವ ಮಾಡುತ್ತಿಹರು.
ಅದೆಂತೆಂದೊಡೆ :
ಆ ವಿಷ್ಣು ಬ್ರಹ್ಮದಧೋಕಂಜದಲ್ಲಿ ತಾರಕಾಕೃತಿ, ನಕಾರಪ್ರಣವ,
ಪೆಣ್ದುಂಬಿನಾದ, ಭಕ್ತನೆಂಬಪಿಂಡ, ಆಧಾರಚಕ್ರ, ಪೀತವರ್ಣ,
ಭಕ್ತನೆಂಬ ಮೂರ್ತಿ.
ಪೃಥ್ವಿಯಂಗ, ಜೀವಾತ್ಮಭಕ್ತ, ಸ್ಥೂಲತನು, ಸುಚಿತ್ತಹಸ್ತ, ಆಚಾರಲಿಂಗ,
ಘ್ರಾಣವೆಂಬ ಮುಖ, ಕ್ರಿಯಾಶಕ್ತಿ, ಶ್ರದ್ಧಾಶಕ್ತಿ, ಗಂಧಪದಾರ್ಥ,
ಸುಗಂಧಪ್ರಸಾದ, ಬ್ರಹ್ಮಪೂಜಾರಿ, ಭವನದಿದೈವ, ನಿವೃತ್ತಿಕಲೆ,
ಕರ್ಮಸಾದಾಖ್ಯ, ಸತ್ತುವೆಂಬ ಲಕ್ಷಣ, ಪರವೆಂಬ ಸಂಜ್ಞೆ,
ಸದ್ಯೋಜಾತವಕ್ತ್ರ, ಋಗ್ವೇದ ಇಂತಿವೆಲ್ಲವು
ಇಷ್ಟಲಿಂಗದ ವೃತ್ತದಲ್ಲಿ ಸಂಬಂಧವು.
ದಂಡಾಕೃತಿ, ಮಕಾರಪ್ರಣವ, ವೇಣುನಾದ, ಮಾಹೇಶ್ವರನೆಂಬ ಪಿಂಡ,
ಸ್ವಾದಿಷ್ಠಾನಚಕ್ರ, ಶ್ವೇತವರ್ಣ, ಮಾಹೇಶ್ವರನೆಂಬ ಮೂರ್ತಿ, ಅಪ್ಪುವಂಗ, ಅಂತರಾತ್ಮ,
ಸೂಕ್ಷ್ಮತನು, ಸುಬುದ್ಧಿ ಹಸ್ತ, ಗುರುಲಿಂಗ, ಜಿಹ್ವೆಯೆಂಬ
ಮುಖ, ಜ್ಞಾನಶಕ್ತಿ, ನೈಷ್ಠಿಕಾಭಕ್ತಿ, ರಸಪದಾರ್ಥ, ಸುರಸಪ್ರಸಾದ,
ವಿಷ್ಣುಪೂಜಾರಿ, ಮೃಡನದಿದೈವ, ಪ್ರತಿಷ್ಠೆಯೆಂಬ ಕಲೆ, ಕರ್ತೃಸಾದಾಖ್ಯ,
ಚಿತ್ತುವೆಂಬ ಲಕ್ಷಣ, ಗೂಢವೆಂಬ ಸಂಜ್ಞೆ, ವಾಮದೇವ ವಕ್ತ್ರ
ಯಜುರ್ವೆದ- ಇಂತಿವೆಲ್ಲವು ಇಷ್ಟಲಿಂಗದ ಕಟಿಯಲ್ಲಿ ಸಂಬಂಧವು.
ಕುಂಡಲಾಕೃತಿ, ಶಿಕಾರಪ್ರಣವ, ಘಂಟಾನಾದ, ಪ್ರಸಾದವೆಂಬ ಪಿಂಡ,
ಮಣಿಪೂರಕ ಚಕ್ರ, ಪುಷ್ಯರಾಗವರ್ಣ, ಪ್ರಸಾದಿಯೆಂಬ ಮೂರ್ತಿ, ಅಗ್ನಿಯೆಂಬ ಅಂಗ, ಪರಮಾತ್ಮ ಪ್ರಸಾದಿ,
ಕಾರಣತನು, ನಿರಹಂಕಾರಹಸ್ತ, ಶಿವಲಿಂಗ, ನೇತ್ರವೆಂಬ ಮುಖ
ಇಚ್ಛಾಶಕ್ತಿ, ಸಾವಧಾನಭಕ್ತಿ, ರೂಪುಪದಾರ್ಥ, ಸುರೂಪುಪ್ರಸಾದ,
ರುದ್ರಪೂಜಾರಿ, ಹರನದಿದೈವ, ವಿದ್ಯಾಕಲೆ, ಮೂರ್ತಿಸಾದಾಖ್ಯ,
ಅನಂದವೆಂಬ ಲಕ್ಷಣ, ಶರೀರಸ್ಥವೆಂಬ ಸಂಜ್ಞೆ, ಅಘೋರವಕ್ತ್ರ,
ಸಾಮವೇದ-ಇಂತಿವೆಲ್ಲವು ಇಷ್ಟಲಿಂಗದ ವರ್ತುಳದಲ್ಲಿ ಸಂಬಂಧವು
ಅರ್ಧಚಂದ್ರಾಕೃತಿ, ವಕಾರಪ್ರಣವ, ಭೇರಿನಾದ, ಪ್ರಾಣಲಿಂಗಿಯೆಂಬ ಪಿಂಡ,
ಅನಾಹತಚಕ್ರ, ಮುತ್ತಿನವರ್ಣ, ಪ್ರಾಣಲಿಂಗಿಯೆಂಬ ಮೂರ್ತಿ, ವಾಯುವಂಗ ನಿರ್ಮಲಾತ್ಮ
ನಿರ್ಮಲತನು, ಮನಹಸ್ತ, ಜಂಗಮಲಿಂಗ, ತ್ವಕ್ಕೆಂಬ ಮುಖ,
ಆದಿಶಕ್ತಿ, ಅನುಭಾವಭಕ್ತಿ, ಸ್ಪರ್ಶಪದಾರ್ಥ, ಸುಸ್ಪರ್ಶನ ಪ್ರಸಾದ,
ಈಶ್ವರಪೂಜಾರಿ, ಬಿಮನದಿದೈವ, ಶಾಂತಿಕಲೆ, ಆಮೂರ್ತಿಸಾದಾಖ್ಯ,
ನಿತ್ಯವೆಂಬ ಲಕ್ಷಣ, ಲಿಂಗಕ್ಷೇತ್ರವೆಂಬ ಸಂಜ್ಞೆ, ತತ್ಪುರಷವಕ್ತ್ರ,
ಅಥರ್ವಣವೇದ- ಇಂತಿವೆಲ್ಲವು ಇಷ್ಟಲಿಂಗದ ಗೋಮುಖದಲ್ಲಿ ಸಂಬಂದವು.
ದರ್ಪಣಾಕೃತಿ, ಯಕಾರಪ್ರಣವ, ಮೇಘನಾದ, ಶರಣನೆಂಬ ಪಿಂಡ,
ವಿಶುದ್ಧಿಚಕ್ರ, ವೈಢೂರ್ಯದ ವರ್ಣ, ಶರಣನೆಂಬ ಮೂರ್ತಿ ಆಕಾಶವಂಗ, ಶುದ್ಧಾತ್ಮ,
ಆನಂದತನು, ಸುಜ್ಞಾನಹಸ್ತ, ಪ್ರಸಾದಲಿಂಗ, ಶ್ರೋತ್ರಮಖ, ಪರಾಶಕ್ತಿ,
ಆನಂದಭಕ್ತಿ, ಶಬ್ದಪದಾರ್ಥ, ಸುಶಬ್ದಪ್ರಸಾದ, ಸದಾಶಿವಪೂಜಾರಿ,
ಮಹಾದೇವನದಿವೈವ, ಶಾಂತ್ಯತೀತಕಲೆ, ಶಿವಸಾದಾಖ್ಯ
ಪರಿಪೂರ್ಣವೆಂಬ ಲಕ್ಷಣ, ಅನಾದಿವತ್ ಎಂಬ ಸಂಜ್ಞೆ, ಈಶಾನವಕ್ತ್ರ,
ಅಜಪವೇದ- ಇಂತಿವೆಲ್ಲವು ಇಷ್ಟಲಿಂಗದ ನಾಳದಲ್ಲಿ ಸಂಬಂಧವು.
ಜ್ಯೋತಿರಾಕೃತಿ, ಓಂಕಾರಪ್ರಣವ, ಪ್ರಣವನಾದ,
ಐಕ್ಯನೆಂಬ ಪಿಂಡ, ಆಜ್ಞಾಚಕ್ರ, ಎಳೆಯಮಾಣಕ್ಯವರ್ಣ, ಆತ್ಮನೆಂಬ ಅಂಗ,
ಜ್ಞಾನಾತ್ಮ, ಐಕ್ಯನೆಂಬ ಮೂರ್ತಿ, ಶುದ್ಧತನು, ಸದ್ಭಾವಹಸ್ತ,
ಮಹಾಲಿಂಗ, ಹೃದಯಮುಖ, ಚಿಚ್ಛಕ್ತಿ, ಸಮರಸಭಕ್ತಿ, ತೃಪ್ತಿಪದಾರ್ಥ,
ಸುತೃಪ್ತಿಪ್ರಸಾದ, ಪರಶಿವಪೂಜಾರಿ, ಮಹಾಶ್ರೀಗುರುವದಿದೈವ,
ಶಾಂತ್ಯತೀತೋತ್ತರೆ ಎಂಬ ಕಲೆ, ಮಹಾಸಾದಾಖ್ಯ ಅಖಂಡವೆಂಬ ಲಕ್ಷಣ,
ಮಹಾಸಂಜ್ಞೆ, ಗೋಪ್ಯವಕ್ತ್ರ, ಗಾಯತ್ರಿವೇದ- ಇಂತಿವೆಲ್ಲವು ಇಷ್ಟಲಿಂಗದ
ಗೋಳಕದಲ್ಲಿ ಸಂಬಂಧವು.
ನಿಷ್ಕಲಾಕೃತಿ, ಬಕಾರಪ್ರಣವ, ಸುನಾದ, ಚಿದ್ಗಣನೆಂಬ ಪಿಂಡ
ಬ್ರಹ್ಮಚಕ್ರ, ಗೋಮೇದಿಕವರ್ಣ, ತ್ಯಾಗಾಂಗ, ಮಹಾತ್ಮ, ನಿಃಕಲವೆಂಬ ಭಕ್ತಿ,
ಚಿದ್ರೂಪತನು, ನಿರ್ಭಾವಹಸ್ತ, ಇಷ್ಟಲಿಂಗ, ಪರಬ್ರಹ್ಮವೆಂಬ ಮುಖ,
ಅನಾಮಯಶಕ್ತಿ, ಪರಿಪೂರ್ಣಭಕ್ತಿ, ಆನಂದವೆಂಬ ರೂಪುಪದಾರ್ಥ,
ಅವಿರಳಶುದ್ಧಪ್ರಸಾದ, ಅಗಣಿತನೆಂಬ ಪೂಜಾರಿ, ಪದ್ಮೋದ್ಭವನದಿದೈವ,
ಅನಾದಿಯೆಂಬ ಕಲೆ, ನಿರ್ಮಾಯ ಸಾದಾಖ್ಯ, ಅನಾಮಯವೆಂಬ ಲಕ್ಷಣ,
ನಿರ್ನಾಮವೆಂಬ ಸಂಜ್ಞೆ, ತಾರಕಬ್ರಹ್ಮವೆಂಬ ವಕ್ತ್ರ, ಗಾಂಧರ್ವವೇದ-
ಇಂತೆಲ್ಲವು ಇಷ್ಟಲಿಂಗದ ಆಜ್ಯಪ್ರದಾರಿಕೆಯಲ್ಲಿ ಸಂಬಂಧವು.
ನಿರಾಳಾಕೃತಿ, ಕ್ಷಕಾರಪ್ರಣವ, ಅಗಣಿತನಾದ, ಚಿನ್ಮಯನೆಂಬ ಪಿಂಡ,
ಶಿಖಾಚಕ್ರ ಪಶ್ಯವರ್ಣ, ಪಶ್ಪಮಾದಯೋಗಾಂಗ ಚಿದಾತ್ಮ
ನಿರಾಳವೆಂಬ ಭಕ್ತ, ಚಿನ್ಮಯ ತನು
ನಿರ್ಮಾಯ ಹಸ್ತ ಶೂನ್ಯಸ್ವರೂಪವಪ್ಪ
ಪ್ರಾಣಲಿಂಗ, ಅಭ್ರಶಿಖಿಯೆಂಬ ಮುಖ, ನಿಭ್ರಾಂತಶಕ್ತಿ, ಅಪ್ರದರ್ಶನಭಕ್ತಿ,
ರುಚಿಪದಾರ್ಥ, ಸುರುಚಿಪ್ರಸಾದ, ಅಪ್ರಮಾಣನೆಂಬ ಪೂಜಾರಿ,
ಚಿದ್ಬಿಂದುವೆಂಬ ಅದಿದೈವ, ನಿರುಪಮ ಕಲೆ, ಅವಿರಳ ಸಾದಾಖ್ಯ,
ಅಗಮ್ಯವೆಂಬ ಲಕ್ಷಣ, ಅಪ್ರಮಾಣಸಂಜ್ಞೆ, ಸುರಾಳವೆಂಬ ವಕ್ತ್ರ,
ಧನುರ್ವೆದ- ಇಂತಿವೆಲ್ಲವು ನಿಶ್ಶೂನ್ಯ ಸ್ವರೂಪವಪ್ಪ ಪ್ರಾಣಲಿಂಗದ
ಅಭ್ರಶಿಖಿಯಲ್ಲಿ ಸಂಬಂಧವು.
ಏಕನಿರಂಜನಾಕೃತಿ, ಹಕಾರ ಪ್ರಣವ, ದಿವ್ಯನಾದ, ಚಿನ್ಮೂರ್ತಿಯೆಂಬ ಪಿಂಡ,
ಪಶ್ಚಿಮಚಕ್ರ, ವಜ್ರದ ವರ್ಣ, ಭೋಗಾಂಗ, ದಿವ್ಯಾತ್ಮ,
ನಿರಂಜನನೆಂಬ ಶರಣ, ನಿರ್ಮಲತನು, ನಿರಾಳಹಸ್ತ, ನಿರಂಜನ-
ಸ್ವರೂಪವಪ್ಪ ಭಾವಲಿಂಗ, ಉನ್ಮನಿಯೆಂಬ ಮುಖ, ನಿರ್ಬಿನ್ನಶಕ್ತಿ,
ನಿರಂಜನಭಕ್ತಿ, ಪರಮಾಮೃತ ಪದಾರ್ಥ, ಪರಿಪೂರ್ಣವೆಂಬ ಪ್ರಸಿದ್ಧ-
ಪ್ರಸಾದ, ಬಾಲೇಶ್ವರನೆಂಬ ಪೂಜಾರಿ ಚಿತ್ಸೂರ್ಯನದಿದೇವತೆ,
ನಿವ್ರ್ಯಾಜ ಕಲೆ, ನಿಮರ್ುಕ್ತಿ ಸಾದಾಖ್ಯ, ಅಪ್ರಮಾಣವೆಂಬ ಲಕ್ಷಣ,
ಅವಿರಳ ಸಂಜ್ಞೆ, ಜ್ಞಾನಶೂನ್ಯಮಹಾಜ್ಯೋತಿದಿವ್ಯನಾದ, ಘೋಷದಿಕ್ಕು,
ನಿರಂಜನವೆಂಬ ವಕ್ತ್ರ, ಕಾಣ್ವವೇದ- ಇಂತಿವೆಲ್ಲವು ಅದೇ ಇಷ್ಟಲಿಂಗದ
ಹಿಂದೆಸೆಯಲ್ಲಿರ್ಪ ನಿರಂಜನ ಸ್ವರೂಪವಪ್ಪ ಚಿದಜ್ಯದಲ್ಲಿ ಸಂಬಂಧವು.
ಕೂಡಲಚೆನ್ನಸಂಗಮದೇವಾ. /816
ತಾವು ಗುರುವೆಂದು ಮುಂದಣವರಿಗನುಗ್ರಹವ ಮಾಡುವರಯ್ಯಾ,
ತಾವು ಗುರುವೆಂತಾದರೊ ! ಎಲ್ಲರಿಗೆಯೂ ಒಂದೇ ದೇಹ.
“ಸಪ್ತಧಾತುಸಮಂ ಪಿಂಡಂ ಸಮಯೋನಿಸಮುದ್ಭವಂ
ಆತ್ಮಾಕಾಯಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಯಂ’
ಎಂದುದಾಗಿ, ಗುರುವೆಂಬುದು ತಾನು ಪರುಷವು
ಆ ಪರುಷವು ಮುಟ್ಟಲೊಡನೆ ಉಳಿದ ಲೋಹಂಗಳು ಸುವರ್ಣವಾದುವಲ್ಲದೆ,
ಆ ಪರುಷವೆ ಆಗಲರಿಯವು- ಅದು ಗುರುಸ್ಥಲವಲ್ಲ ನಿಲ್ಲು ಮಾಣು.
ಗುರುವೆಂಬುದು ತಾನು ಸ್ವಯಂ ಜ್ಯೋತಿಪ್ರಕಾಶವು,
ಅಂತಪ್ಪ ಸ್ವಯಂಜ್ಯೋತಿ ಪ್ರಕಾಶವ ತಂದು
ಪರಂಜ್ಯೋತಿಯ ಹೊತ್ತಿಸಿದಡೆ, ಆ ಜ್ಯೋತಿ ತನ್ನಂತೆ ಮಾಡಿತ್ತು.
ಅದಾವ ಜ್ಯೋತಿಯೆಂದಡೆ ಪಶ್ಚಿಮಜ್ಯೋತಿ.
ಆ ಪಶ್ಚಿಮಜ್ಯೋತಿಯ ಬೆಳಗಿನಿಂದ ಪ್ರಾಣಲಿಂಗವ ಕಂಡು ಸುಖಿಯಾದೆನು.
ನಾಲ್ಕು ವೇದಾರ್ಥ:ಅಜಪಗಾಯತ್ರಿ.
ಅಜಪಗಾಯತ್ರಿಯರ್ಥ:ಪ್ರಾಣಾಯಾಮ.
ಪ್ರಾಣಾಯಾಮದಿಂದ ಪ್ರಾಣಲಿಂಗ ಸಂಬಂಧವ ಮಾಡೂದು.
ಇಷ್ಟರಲ್ಲಿ ತಾನು ಸ್ವತಂತ್ರನಾದಡೆ, ಇಷ್ಟಲಿಂಗವನಾರಿಗಾದರೂ ಕೊಡುವುದು.
ಇಲ್ಲದಿದ್ದರೆ ಅಂಧಕನ ಕೈಯ ಹೆಳವ ಹಿಡಿದಂತೆ ಕಾಣಾ
ಕೂಡಲಚೆನ್ನಸಂಗಮದೇವಯ್ಯಾ/817
ತಾಳು ಬೋಳು ಕಪ್ಪರಾದಿಗಳೆಂಬರು,
ತಾಳಾವುದು, ಬೋಳಾವುದು, ಕಪ್ಪರವಾವುದೆಂದರಿಯರು.
ಕಾಯದ ಕಳವಳದ ಗುಣವ ತಾಳಬಲ್ಲರೆ ತಾಳು,
ಸಂಸಾರ ವಿಷಯವ ಬೋಳಿಸ ಬಲ್ಲರೆ ಬೋಳು
ಪರದಲ್ಲಿ ಪರಿಣಾಮಿಸಬಲ್ಲರೆ ಕಪ್ಪರ.
ಅಂತಲ್ಲದಿದ್ದರೆ ಕೂಡಲಚೆನ್ನಸಂಗಮದೇವರಲ್ಲಿ
ಡೊಂಬರ ಬೋಳು. /818
ತಿಳಿದುಪ್ಪ ಗಟ್ಟಿದುಪ್ಪಕ್ಕೆ ಭೇದವುಂಟೆ?
ದೀಪಕ್ಕೆ ದೀಪ್ತಿಗೆ ಬಿನ್ನವುಂಟೆ ?
ಆತ್ಮಕ್ಕೆಯೂ ದೇಹಕ್ಕೆಯೂ ಸಂದುಂಟೆ ?
ಕ್ಷೀರಕ್ಕೆಯೂ ಸ್ವಾದಕ್ಕೆಯೂ ಭೇದವುಂಟೆ ?
ಇದು ಕಾರಣ, ಸಾಕಾರವೆ ನಿರಾಕಾರವೆಂದರಿದು;
ಅಂಗಲಿಂಗಸಂಬಂಧವಿಲ್ಲದವರ ಸಂಗ ಭಂಗವೆಂದು
ಕೂಡಲಚೆನ್ನಸಂಗಯ್ಯನ ಶರಣರು ಮೆಚ್ಚರಯ್ಯಾ ಪ್ರಭುವೆ/819
ತುದಿ ಮೊದಲಿಲ್ಲದ ಘನವ ನೋಡಾ,
ಒಳಹೊರಗಿಲ್ಲದಿಪ್ಪ ಅನುವ ನೋಡಾ,
ಗುರುಲಿಂಗಜಂಗಮ ತಾನೆಯಾಗಿ,
ಮತ್ತೆ ತಾನೆಂಬುದೇನೂ ಇಲ್ಲದ ಪರಿಯ ನೋಡಾ !
ತನ್ನ ತಾನಿರ್ದೆಸೆಯ ಮಾಡಿಕೊಂಡು
ನಿಜಪದವನೆಯ್ದಿಪ್ಪ ಪರಿಯ ನೋಡಾ.
ಕೂಡಲಚೆನ್ನಸಂಗಮದೇವರಲ್ಲಿ
ಪ್ರಸಾದಿಯಾಗಿಪ್ಪ ಮರುಳಶಂಕರದೇವರ ನಿಲವ ನೋಡಾ !/820
ತೆಂಗಿನೊಳಗಣ ತಿರುಳು ಸೇವಿಸಬರ್ಪುದಲ್ಲದೆ
ಹೊರಗಣ ಪರಟೆ ಸೇವಿಸಲು ಬಾರದು.
ಚಾಂಡಾಲಂಗೆ ಜ್ಞಾನವಂಕುರಿಸಿದಡೆ
ಆತನ ಅಂತರಂಗದ ವೃತ್ತಿಗೆ ಪೂಜ್ಯತೆಯಲ್ಲದೆ
ಬಹಿರಂಗದ ತನುವಿಗೆ ಪೂಜ್ಯತೆಯಾಗದು.
ಒಳಹೊರಗೆಂಬ ಭೇದವಿಲ್ಲದೆ ಸೇವಿಸಲುಚಿತವಪ್ಪಂತೆ
ಶಿವಕುಲಪ್ರಸೂತಂಗೆ ಶಿವಜ್ಞಾನವಾಗಲು
ಆತನ ತನುವೃತ್ತಿಗಳೆರಡೂ ಸೇವ್ಯವಾಗಿರ್ಪವು.-
ಇಂತಿದು ಸಾಧಕರ ಸ್ಥಿತಿಯಯ್ಯಾ ಕೂಡಲಚೆನ್ನಸಂಗಮದೇವಾ/821
ತೆರಹಿಲ್ಲದ ಘನವು ಬಿನ್ನವಾಯಿತ್ತೆಂದು
ತನುವಿನ ಮೇಲೆ ಶಸ್ತ್ರವನಿಕ್ಕಿಕೊಂಬ
ಶಿವದ್ರೋಹಿಯ ಮುಖವ ನೋಡಲಾಗದು,
ಕಲುಕುಟಿಗ ಮುಟ್ಟಿ ಚಕ್ಕೇಳುವಾಗ,
ಪ್ರಾಣಲಿಂಗ ಬಿನ್ನವಾಯಿತ್ತೆ ? ಭಾವಲಿಂಗ ಬಿನ್ನವಾಯಿತ್ತೆ ?
ಪೂಜಾಲಿಂಗ ಬಿನ್ನವಾಯಿತ್ತಲ್ಲದೆ,
ಇಂತೀ ನಿರಾಳದ ನೆಲೆಯ ಸೋಂಕನಾರೂ ಅರಿಯರು.
ಇಷ್ಟಲಿಂಗ ಬಿದ್ದಿತ್ತೆಂಬ ಕಷ್ಟವ ನೋಡಾ
ಕೂಡಲಚೆನ್ನಸಂಗಮದೇವಾ./822
ತೆರಹಿಲ್ಲದ ಘನವು ಮನದೊಳಗೆ ನಿಂದು ನೆಲೆಗೊಂಡ ಬಳಿಕ,
ಆ ಘನವ ತೆರೆಯ ಮರೆಯಲಡಗಿಸಿಹೆನೆಂದಡೆ ಅಡಗುವುದೆ ?
ಹೇಮಗಿರಿಯ ಕದ್ದು ಭೂಮಿಯಲಡಗಿಸಿಹೆನೆಂದಡೆ
ಆ ಕಳವು ಸಿಕ್ಕದೆ ಮಾಣ್ಬುದೆ ?
ಕೂಡಲಚೆನ್ನಸಂಗನ ಶರಣ ಪ್ರಭುವಿನಲ್ಲಿ ಬೆರಸಿದ ಸುಖವ
ಮರೆಸಿಹೆನೆಂದಡೆ ನಿನ್ನಳವೆ ಹೇಳಾ ಸಂಗನಬಸವಣ್ಣಾ ?/823
ತೆರಹಿಲ್ಲದ ಮಹಾಘನ ಪರಿಪೂರ್ಣ ಲಿಂಗಭರಿತವೆಂದೇ ಭಾವಿಸಿ, ಪೂಜಿಸಿ,
ಮರಳಿ ಬಿದ್ದಿತ್ತು ಕೆಡೆಯಿತ್ತು ಎಂಬ ಅಜ್ಞಾನವ ನೋಡಾ !
ತೆರಹಿಲ್ಲದ ಪರಿಪೂರ್ಣ ಲಿಂಗವು, ಬೀಳಲಿಕ್ಕೆ ತೆರಹುಂಟೆ ?
ಅರಿಯರು ಪ್ರಾಣಲಿಂಗದ ನೆಲೆಯನು.
ಅರಿಯದೆ ಅಜ್ಞಾನದಲ್ಲಿ ಕುರುಹು ಬಿದ್ದಿತ್ತೆಂದು
ಪ್ರಾಣಘಾತವ ಮಾಡಿಕೊಂಡು ಸಾವ ಅಜ್ಞಾನಿಗ? ನೋಡಾ !
ಅರದು ಕೂಡಿ ಸ್ವಯವಾಗಿರ್ದ ಲಿಂಗವು ಓಕರಿಸಿತ್ತೆಂದು
ಆ ಲಿಂಗದೊಡನೆ ಪ್ರಾಣಘಾತವ ಮಾಡಿಕೊಂಡು ಸಾವ ಅಜ್ಞಾನಿಗಳಿಗೆ
ಅಘೋರ ನರಕ ತಪ್ಪದು ಕಾಣಾ- ಕೂಡಲಚೆನ್ನಸಂಗಮದೇವಾ./824
ತೆರಹಿಲ್ಲದ ಲಿಂಗಭರಿತನೆಂದು ನಾಮವಿಡಿದು ಪೂಜಿಸಿ,
ಮರಳಿ ಬಿದ್ದಿತ್ತೆಂಬ ನಾಚಿಕೆಯ ನೋಡಾ.
ಅರಿಯರರಿಯರು ಪ್ರಾಣಲಿಂಗದ ನೆಲೆಯನು,
ಅರಿದರಿದು ಕುರುಹಿಂಗೆ ವೇಳೆಯ ಮಾಡುವ ಮತಿಭ್ರಷ್ಟರು.
ಅರಿದರಿದು ಸಯವಾದ ಲಿಂಗ ಓಸರಿಸಿತ್ತೆಂದು
ಸಾವ ವ್ರತಗೇಡಿಗಳನೊಲ್ಲ ಕೂಡಲಚೆನ್ನಸಂಗಮದೇವ. /825
ತ್ರಿವಿಧ ಲಿಂಗದಲ್ಲಿ ಸಮ…………
ಶುದ್ಧ ಸಿದ್ಧ ಪ್ರಸಿದ್ಧವೆಂದು, ತ್ರಿವಿಧ ಪ್ರಸಾದವು.
ಶುದ್ಧವು ಗುರುಭುಕ್ತಶೇಷ, ಸಿದ್ಧವು ಲಿಂಗಭುಕ್ತಶೇಷ.
ಪ್ರಸಿದ್ಧವು ಜಂಗಮಭುಕ್ತಶೇಷ.
ಇಂತೀ ತ್ರಿವಿಧ ಪ್ರಸಾದ, ಅಂತರಂಗ ಪ್ರಸಾದ ಇದಕ್ಕೆ ವಿವರ :
ಅರ್ಪಿತ ಪ್ರಸಾದ…… ಆರೋಪಿತ ಪ್ರಸಾದ
ಅಂತರಂಗದಲ್ಲಿ ತ್ರಿವಿಧ ಪ್ರಸಾದ.
ಅರ್ಪಿತ ಪ್ರಸಾದವೆಂದು ಪಾಕ ಪ್ರಯಾ…. ವಾದ
ಪದಾರ್ಥವನರ್ಪಿಸಿಕೊಂ…… ಅರ್ಪಿತ ಪ್ರಸಾದ.
ಆ … ಧಾರಿತ ಪ್ರಸಾದವೆಂದು
ಪಾಕವಿಲ್ಲದ ಪದಾರ್ಥವನಾಧರಿಸಿಕೊಂಬುದು
ಅವಧಾರಿತ ಪ್ರಸಾದ.
ಆರೋಪಿತ ಪ್ರಸಾದವೆಂದು ……….
…. ಪಂಚೇಂದ್ರಿಯವ ಸಾರೆ ಬಂದುದು ಆರೋಪಿತ ಪ್ರಸಾದ.
ಇಂತಿದು ಪ್ರಸಿದ್ಧಪ್ರಸಾದ..
ಕಂಗಳ ಪೂಜೆ ಲಿಂಗ ಮನ ಮುಟ್ಟದಾರೋಗಣೆಯೆಂಬುದೇನೊ.
ನಿಸ್ಸೀಮ ಶರಣಂಗೆ ಸೀಮೆಯೆಂಬುದೇನೋ,
ಆತನ ನೆನಹೆ ಲಿಂಗಾರ್ಪಿತ,
ಕೂಡಲಚೆನ್ನಸಂಗಮದೇವಾ./826
ತ್ರಿವಿಧಕ್ಕೆ ರತಿಯಾಗಿ, ತ್ರಿವಿಧದ ಜನಿತವ ತಿಳಿದು,
ತ್ರಿವಿಧ ಕಣ್ದೆರೆದು, ತ್ರಿವಿಧ ತ್ರಿವಿಧವನನವಫಗ್ರಹಿಸಿ,
ತ್ರಿವಿಧ ಪಥವ ಮೀರಿ ತ್ರಿವಿಧ ನಿರ್ಣಯ ನಿಷ್ಪತ್ತಿ
ಕೂಡಲಚೆನ್ನಸಂಗಾ, ನಿಮ್ಮ ಶರಣ. /827
ತ್ರಿವಿಧನಿರ್ವಚಂಕನೆ ಭಕ್ತ, ತ್ರಿವಿಧವಿರಾಗಿಯೆ ಜಂಗಮ.
ಭಾಷೆಗೆ ತಪ್ಪದಿರ್ದಡೆ ಮಾಹೇಶ್ವರ ಪ್ರಸಾದಿ,
ವೇಷವ ತೋರದಿರ್ದಡೆ ಜಂಗಮ
ಇಂದ್ರಿಯ ವಿಕಾರವಳಿದಡೆ ಪ್ರಸಾದಿ, ಮನವಳಿದಡೆ ಜಂಗಮ.
ಪ್ರಾಣಸಂಚಾರಗೆಟ್ಟಡೆ ಪ್ರಾಣಲಿಂಗಿ, ಜೀವಭಾವಗೆಟ್ಟಡೆ ಜಂಗಮ.
ಅರಿವಿನ ಭ್ರಾಂತಳಿದರೆ ಶರಣ, ಬೋಧೆಗೆಟ್ಟಡೆ ಜಂಗಮ.
ತಾನಿಲ್ಲದಿರ್ದಡೆ ಐಕ್ಯ, ಏನೂ ಇಲ್ಲದಿರ್ದಡೆ ಜಂಗಮ-
ಇಂತೀ ಷಟ್ಸ್ಥಲದಲ್ಲಿ ನಿಜವನರಿದು ನೆಲೆಗೊಂಡಾತನೆ ಶ್ರೀಗುರು.
ಇಂತಲ್ಲದೆ ನುಡಿಯಲ್ಲಿ ಅದ್ವೈತವನಾಡಿ
ನಡೆಯಲ್ಲಿ ಅನಂಗವ ನಡೆವರ ಕಂಡಡೆ
ಎನ್ನ ಮನ ನಾಚಿತ್ತು ಕೂಡಲಚೆನ್ನಸಂಗಮದೇವಾ/828
ತ್ರಿವಿಧವಿರಹಿತಲಿಂಗ, ಆಗಮವಿರಹಿತ ಪ್ರಸಾದಿ,
ಲಿಂಗವಿಲ್ಲದ ಜಂಗಮ ಜಂಗಮವಿಲ್ಲದ ಲಿಂಗ,- ಇದ ಕೇಳಿ
ಗುರುವಿಲ್ಲದ ಶಿಷ್ಯ, ಶಿಷ್ಯನಿಲ್ಲದ ಗುರು, ಇವೆಲ್ಲವ ಕಂಡು-
ಯುಕ್ತಿಯಿಲ್ಲದ ಭಕ್ತಿ,
ಭಕ್ತಿಯಿಲ್ಲದ ಯುಕ್ತಿ ನೋಡಯ್ಯ !
ಇದು ಐಕ್ಯಸ್ಥಲವಲ್ಲ, ನಿಃಸ್ಥಲ ನಿರವಯ
ಕೂಡಲಚೆನ್ನಸಂಗಾ ನಿಮ್ಮ ಶರಣ. /829
ತ್ರಿವಿಧೋದಕತ್ರಿವಿಧೋದಕವೆಂದು ತಿರುಗಿ ತಿರುಗಿ
ಕುಂಡಲಿಗನ ಹುಳುವಿನಂತೆ ಭ್ರಮೆಗೊಂಡು ಹೋದರಲ್ಲಾ
ನಿಮ್ಮ ಭಕ್ತರೆಂಬವರು, ನಿಮ್ಮ ಹಿರಿಯರೆಂಬವರು.
ತ್ರಿವಿಧೋದಕ ಒಬ್ಬರಿಗೆಯೂ ಆಗದು.
ತ್ರಿವಿಧೋದಕ ಅಳವಟ್ಟ ದೇಹ ಕುರುವಿಟ್ಟ ರೂಹಿನಂತೆ
ಕಣ್ಣೆವೆ ಹಳಚದೆ ನಿಬ್ಬೆರಗಾಗಿರಬೇಕು,
ಸಿಡಿಲು ಹೊಡೆದ ಹೆಣನಂತಿರಬೇಕು.
ಅಂತಲ್ಲದೆ ಬಯಲಿಂಗೆ ತ್ರಿವಿಧೋದಕ ತ್ರಿವಿಧೋದಕವೆಂಬ
ಹೇಸಿಕೆಯ ಮಾತ ಕೇಳಲಾಗದು.
ಇದು ಕಾರಣ, ಕೂಡಲಚೆನ್ನಸಂಗಮದೇವಾ.
ನಿಮ್ಮ ತ್ರಿವಿಧೋದಕವ ಬಲ್ಲ ಬಸವಣ್ಣಂಗೆ ನಮೋ ನಮೋ./830
ದರುಶನಾದಿಗಳೆಲ್ಲಾ ವಿರಸವಾಯಿತ್ತು ನೋಡಾ !
ಲಿಂಗಾರ್ಚಕರಲ್ಲದವರು ಲಿಂಗೈಕ್ಯವ ಬಲ್ಲರೆ ?
ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯವ ಲಿಂಗೈಕ್ಯರೇ ಬಲ್ಲರು./831
ದಶ ದ್ವಾದಶಂಗಳ ಮೇಲಣ ಬಾಗಿಲಲಿರ್ದು, ಕಾಲ ಜರಾ ಮರಣವೆಂಬ
ಬಾಗಿಲ ಹೊಗದೆ ಹೊನ್ನಬಣ್ಣವಾಗದಂತೆ ಮಾಡಿಕೊಂಬುದು.
ಕುಲಸಂಕುಲವಾಗದೆ ದಶದಿಕ್ಕಿನಲ್ಲಿ ದೇಸಿಗನಾಗದೆ ದೇಶಿಕನಾಗಿರಬೇಕು
ದಶಸ್ಥಾನಂಗಳ ನೋಡಿ ಲಿಂಗಸ್ಥಾನದಲ್ಲಿ ನಿಂದು.
ಇಂತು ದಶಸಂಪಾದನೆ ಮೂವತ್ತಾರರಿಂದ, ಸಂಸಾರಮೃಗದ
ಮರೀಚಿಕಾಜಲದ ಮಾಯವೆಂದರಿತು ನಿಶ್ಚಲ ಮತಿಯಿಂದ
ಶುದ್ಧಾತ್ಮಚಿತ್ತರಾಗಿ ಆರಾದಿಸಬೇಕು ಕೂಡಲಚೆನ್ನಸಂಗನ ಶರಣರು/832
ದಶವಿಧ ಉದಕ, ಏಕಾದಶ ಪ್ರಸಾದ, ಎಲ್ಲಾ ಎಡೆಯಲ್ಲಿ ಉಂಟು.
ಮತ್ತೊಂದ ಬಲ್ಲವರ ತೋರಾ ಎನಗೆ.
ಲಿಂಗವ ನೆನೆಯದೆ, ಲಿಂಗಾರ್ಪಿತವ ಮಾಡದೆ,
ಅನರ್ಪಿತವ ಕೊಳ್ಳದ ಅಚ್ಚಪ್ರಸಾದಿಯ
ತೋರಿ ಬದುಕಿಸಯ್ಯಾ ಕೂಡಲಚೆನ್ನಸಂಗಮದೇವಾ. /833
ದಾನವ ಮಾಡುವ ಕ್ರೂರಕರ್ಮರ ಮನೆಯಲ್ಲಿ
ಮಜ್ಜೆ ಮಾಂಸವಲ್ಲದೆ ಲಿಂಗಕ್ಕೆ ಓಗರವಿಲ್ಲ
ವರುಷಕ್ಕೆ ಒಂದು ತಿಥಿಯ ಮಾಡುವ ಭಕ್ತ ಮನೆಯಲ್ಲಿ
ಕೂಟಕ್ಕೆಯಿಕ್ಕಿ ಕೀರ್ತಿಗೆ ಸಲುವನಲ್ಲದೆ ಲಿಂಗಕ್ಕೋಗರವಿಲ್ಲ
ಹರಸಿಕೊಂಡು ನೀಡುವ ಭಕ್ತನ ಮನೆಯಲ್ಲಿ ಲಿಂಗಕ್ಕೆ ಓಗರವಿನಲ್ಲಫ
ಈ ತ್ರಿವಿಧವಿಡಿದು ಮಾಡುವಾತ ಭಕ್ತನಲ್ಲ
ಅವನ ಮನೆಯ ಹೊಕ್ಕು
ಲಿಂಗಾರ್ಚನೆಯ ಮಾಡಿಸಿಕೊಂಬಾತ
ಜಂಗಮಸ್ಥಳಕ್ಕೆ ಸಲ್ಲ
ಈ ತ್ರಿವಿಧ ಭಕ್ತಿಯೆಂಬುದು ನರಕಕ್ಕೆ ಭಾಜನವಾಯಿತ್ತು
ಕೂಡಲಚೆನ್ನಸಂಗಮದೇವ ನೀ ಸಾಕ್ಷಿಯಾಗಿ /834
ದಾಯೆಂದಡೆ ನಡೆದು ಹೋಯೆಂದಡೆ ನಿಲ್ಲನೆ ಜಗವ ಹೊರೆಯಲೆಂದು ?
ಆತನ ಸಾಹಸವ ಬೆಸಗೊಂಬಡೆ ಈಶ್ವರನ ತಾಳುವನಯ್ಯಾ.
ಆವರಿಸಿದಡಲ್ಲಾಡಿದತ್ತು ಕೈಲಾಸವು !
ಗಂಡುಗೆದರಿ ಈಡಾಡಿದಡೆ ಅಂಡಜ ಬ್ರಹ್ಮಾಂಡಗಳು ನಿಲುವವೆ ?
ಕೆಲೆದು ಕೆದರಿ ಅಟ್ಟಿದೊಡೆ ಮೊರೆಯೆಂಬರಲ್ಲದೆ ಇದಿರಾನುವರುಂಟೆ ?
ಅಯ್ಯಾ ನೀನು ಬಿಟ್ಟು ಬೀದಿವರಿದೋಡೆ
ಅಟ್ಟಿ ಹಿಡಿವ ಗಂಡುಗರ ನಾ ಕಾಣೆನಯ್ಯಾ.
ಸೃಷ್ಟಿಗೀಶ್ವರನಲ್ಲದೆ ಮತ್ತಾರೂ ಇಲ್ಲ.
ಗಂಬಿರವೆಂದಡೆ ಇಂಬುಗೊಳ್ವವೆ ಕೊಳಗು ?
ಶಂಭುವೇರುವ ವಾಹನವೆಂದೊಡೆ ಬೆನ್ನು ಬೆಂಕಟ್ಟಾಗದೆ ? ಈ ಕೀಳು ಭುವನಕ್ಕೆ.
ನಮ್ಮ ಕೂಡಲ[ಚೆನ್ನ]ಸಂಗಮದೇವನಲ್ಲಿ
ತೆತ್ತೀಸಾದಿಗಳಿಗುಬ್ಬಸವಯ್ಯ ಎಮ್ಮ ಬಸವರಾಜನು/835
ದಾಸಪ್ರಸಾದವ ದಾಸಿಮಯ್ಯಗಳು ಕೊಂಡರು,
ಪ್ರಾಣಪ್ರಸಾದವ ಸಿರಿಯಾಳ ಕೊಂಡ,
ಸಮತೆಪ್ರಸಾದವ ಬಲ್ಲಾಳ ಕೊಂಡ,
ಜಂಗಮಪ್ರಸಾದವ ಬಸವಣ್ಣ ಕೊಂಡ,
ಸಮಯಪ್ರಸಾದವ ಬಿಬ್ಬ ಬಾಚಯ್ಯಗಳು ಕೊಂಡರು,
ಜ್ಞಾನಪ್ರಸಾದವ ಅಕ್ಕಗಳು ಕೊಂಡರು,
ಶೂನ್ಯಪ್ರಸಾದವ ಪ್ರಭುದೇವರು ಕೊಂಡರು.
ಎನಗಿನ್ನೆಂತಯ್ಯಾ ? ಮುಳ್ಳಗುತ್ತೆ ತೆರಹಿಲ್ಲ.
ಇದು ಕಾರಣ, ಕೂಡಲಚೆನ್ನಸಂಗನ ಶರಣರ
ಒಕ್ಕು ಮಿಕ್ಕ ಪ್ರಸಾದವೆನಗಾಯಿತ್ತು. /836
ದಾಸಿಯ ಸಂಗ, ಭಂಗಿಯ ಸೇವನೆ,
ವೇಶಿಯ ಸಂಗ, ಸುರೆಯ ಸೇವನೆ,
ಮುಂಡೆಯ ಸಂಗ, ಅಮೇಧ್ಯದ ಸೇವನೆ,
ಕನ್ನೆಯ ಸಂಗ, ರಕ್ತದ ಸೇವನೆ.-
ಇಂತೀ ಐವರ ಸಂಗವ ಮಾಡುವ ದ್ರೋಹಿಗೆ
ಕಠಪಾವಡ, ಧೂಳಪಾವಡ, ಸರ್ವಾಂಗಪಾವಡ ಉಂಟೆಂಬ
ಪಂಚಮಹಾಪಾತಕರಿಗೆ, ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ,
ಪಾದೋದಕ ಪ್ರಸಾದವಿಲ್ಲ
ನಾ(ನಾಮ?) ಮೊದಲೇ ಇಲ್ಲ- ಕೂಡಲಚೆನ್ನಸಂಗಮದೇವಾ/837
ದಾಸಿಯ ಸಂಗದಿಂದ ಮಜ್ಜನವಂತರಿಸಿತ್ತು.
ವೇಶಿಯ ಸಂಗದಿಂದ ಪ್ರಸಾದವಂತರಿಸಿತ್ತು.
ಪರಸ್ತ್ರೀಯ ಸಂಗದಿಂದ ದೇವರ ಕಾರುಣ್ಯವಂತರಿಸಿತ್ತು.
ಈ ತ್ರಿವಿಧ ನಾಸ್ತಿಯಾದಂಗಲ್ಲದೆ ಭಕ್ತಿಯಿಲ್ಲ
ಕೂಡಲಚೆನ್ನಸಂಗಮದೇವಾ. /838
ದಾಸಿಯ ಸಂಗವ ಮಾಡಿದಡೆ ಸೂಕರನ ಮಾಂಸವ ತಿಂದ ಸಮಾನ,
ವೇಶಿಯ ಸಂಗವ ಮಾಡಿದಡೆ ಮಾಂಸವ ತಿಂದ ಸಮಾನ,
ಮುಂಡೆಯ ಸಂಗವ ಮಾಡಿದಡೆ ಅಮೇಧ್ಯವ ತಿಂದ ಸಮಾನ,
ಗಂಡನ ಬಿಟ್ಟವಳ ಸಂಗವ ಮಾಡಿದಡೆ ನರಮಾಂಸವ ತಿಂದ ಸಮಾನ,
ಗಂಡನುಳ್ಳವಳ ಸಂಗವ ಮಾಡಿದಡೆ ಸತ್ತ ಹೆಣದ ಬೆನ್ನ ಮಲವ ತಿಂದ ಸಮಾನ,
ಚೋರ ಕನ್ನಿಕೆಯ ಸಂಗವ ಮಾಡಿದಡೆ ಸುರಾಪಾನವ ಕೊಂಡ ಸಮಾನ.
ಇದು ಕಾರಣ
ಗುರುವಾಗಲಿ, ಜಂಗಮವಾಗಲಿ, ಭಕ್ತನಾಗಲಿ
ದಾಶಿ ವೇಶಿ ವಿಧವೆ ಪರಸ್ತ್ರೀ ಚೋರಕನ್ನಿಕೆ ಬಿಡಸ್ತ್ರೀ ಮೊದಲಾದ
ಹಲವು ಪ್ರಕಾರದ ರಾಶಿಕೂಟದ ಸ್ತ್ರೀಯರ ಬಿಟ್ಟು
ಶುದ್ಧಕನ್ಯೆಯ ಭಕ್ತಗಣ ಸಾಕ್ಷಿಯಾಗಿ ವಿಭೂತಿಪಟ್ಟ ಪಾಣಿಗ್ರಹಣ
ಏಕಪ್ರಸಾದಭುಕ್ತನಾಗಿ ಭಕ್ತಿಕಲ್ಯಾಣವಾಗಿ ಸತ್ಯಸದಾಚಾರದಲ್ಲಿ ವರ್ತಿಸುವ
ಭಕ್ತಾರಾಧ್ಯರಿಗೆ- ಗುರುವುಂಟು ಲಿಂಗವುಂಟು ಜಂಗಮವುಂಟು
ಪಾದೋದಕವುಂಟು ಪ್ರಸಾದವುಂಟು; ಆತಂಗೆ ನಿಜಮೋಕ್ಷವುಂಟು.
ಇಂತಲ್ಲದೆ- ತನ್ನಂಗವಿಕಾರಕ್ಕೆಳಸಿ ದುರ್ವಿಷಯಾಸಕ್ತನಾಗಿ
ಆರು ಪ್ರಕಾರದ ಸ್ತ್ರೀಯರು ಮುಂತಾದ ರಾಶಿಕೂಟದ ಸ್ತ್ರೀಯರಿಗೆ ಹೇಸದೆ
ಆಸೆ ಮಾಡುವ ಪಾಠಕರಿಗೆ; ಗುರುವಿಲ್ಲ; ಲಿಂಗವಿಲ್ಲ ಜಂಗಮವಿಲ್ಲ
ಪಾದೋದಕವಿಲ್ಲ ಪ್ರಸಾದವಿಲ್ಲ; ಅವ ಭಕ್ತನಲ್ಲ ಜಂಗಮವಲ್ಲ,
ಅವರಿಗೆ ಮುಕ್ತಿಯಿಲ್ಲ, ಮುಂದೆ ನರಕ ತಪ್ಪದು ಕಾಣಾ
ಕೂಡಲಚೆನ್ನಸಂಗಮದೇವಾ./839
ದಿಟದಾಕಾಶ, ಘಟದಾಕಾಶ, ಮಠದಾಕಾಶತ್ರಯಂಗಳಲ್ಲಿ ಹೋಗಲಿಕಸಾಧ್ಯ,
ಹೊರವಡಲಿಕಸಾಧ್ಯ.
ಚಿತ್ತಾಕಾಶಂ ಚಿದಾಕಾಶಂ ಆಕಾಶಂ ಚ ತೃತೀಯಕಂ ದ್ವಾಭ್ಯಾಂ ಶೂನ್ಯತರಂ ವಿದ್ಧಿ ಚಿದಾಕಾಶಂ ವರಾನನೇ
ಎಂಬುದಾಗಿ-ಆಕಾಶತ್ರಯ ಕೂಡಲಚೆನ್ನಸಂಗಾ.
ನಿಮ್ಮ ಶರಣಂಗೆ ಸಾಧ್ಯ, ಉಳಿದವರಿಗಸಾಧ್ಯ /840
ದಿರಸಂಪನ್ನರೆಲ್ಲ ಅಲಗಿನ ಮೊನೆಗೆ ಭಾಜನವಾದರು ನೋಡಯ್ಯಾ !
ಧನಸಂಪನ್ನರೆಲ್ಲ ರಾಜರಿಗೆ ಭಾಜನವಾದರು ನೋಡಯ್ಯಾ !
ರೂಪಸಂಪನ್ನರೆಲ್ಲ ಸ್ತ್ರೀಯರಿಗೆ ಭಾಜನವಾದರು ನೋಡಯ್ಯಾ !
ಗುಣಸಂಪನ್ನರೆಲ್ಲ ಬಂಧುಗಳಿಗೆ ಭಾಜನವಾದರು ನೋಡಯ್ಯಾ !
ಜ್ಞಾನಸಂಪನ್ನರೆಲ್ಲ ಬಸವಣ್ಣ ಲಿಂಗಕ್ಕೆ ಭಾಜನವಾದ ನೋಡಯ್ಯಾ
ಕೂಡಲಚೆನ್ನಸಂಗಮದೇವಾ./841
ದೀವಿಗೆಯೊಳಗಣ ಜ್ಯೋತಿಯ ದಿವಿಜರೆತ್ತಬಲ್ಲರು ?
ಮನೋಜಲ ಹರಿವಠಾವನು ಮನೋಹರನೆತ್ತ ಬಲ್ಲ?
ತನುವಿನ ಸ್ನೇಹಗುಣವ ದೇಹಿಕನೆತ್ತ ಬಲ್ಲ?
ಅಷ್ಟತನು ಅಣುವಿನ ಭೇದವನು
ಕೂಡಲಚೆನ್ನಸಂಗನಲ್ಲಿ ಆ ಲಿಂಗಿಯೇ ಬಲ್ಲನು/842
ದೂರದಲ್ಲಿ ಅರ್ಪಿತವೆಂಬ ದುರಾಚಾರಿಯ ಮಾತ ಕೇಳಲಾಗದು.
ಭಾವದಲ್ಲಿ ಅರ್ಪಿತವೆಂಬ ಭ್ರಮಿತರ ಮಾತ ಕೇಳಲಾಗದು.
ಅಂತರದಲ್ಲಿ ಅರ್ಪಿತವೆಂಬ ಅನಾಚಾರಗಳ ಮಾತ ಕೇಳಲಾಗದು.
ತನ್ನ ಕಾಯದ ಮೇಲಣ ಲಿಂಗಕ್ಕೆ
ಭಾವಶುದ್ಧಿಯಲ್ಲಿ ಕೊಟ್ಟಲ್ಲದೆ ಕೊಂಡನಾದಡೆ,
ಸತ್ತ ಹಳೆಯ ನಾಯಿಯ ಅರಸಿ ತಂದು
ಅಟ್ಟದ ಮೇಲೆ ಇರಿಸಿಕೊಂಡು,
ಗದ್ಯಾಣ ಗದ್ಯಾಣ ತೂಕವ ಕೊಂಡಂತೆ ಕಾಣಾ
ಕೂಡಲಚೆನ್ನಸಂಗಮದೇವಾ/843
ದೃಷ್ಟ ನಷ್ಟಕ್ಕೇನು ದೃಷ್ಟ ? ಭಾವ ನಷ್ಟವೇ ದೃಷ್ಟ
ಭಾವ ನಷ್ಟಕ್ಕೇನು ದೃಷ್ಟ? ಅನುಭಾವ ನಷ್ಟವೇ ದೃಷ್ಟ.
ಅನುಭಾವ ನಷ್ಟಕ್ಕೇನು ದೃಷ್ಟ ? ಸ್ವಯ ಪರವಾವುದೆಂದರಿಯದುದೆ ದೃಷ್ಟ.
ಸ್ವಯ ಪರವಾವುದೆಂದರಿಯದಕ್ಕೇನು ದೃಷ್ಟ ?
ಕೂಡಲಚೆನ್ನಸಂಗನೆಂದು ಎನ್ನದುದೆ ದೃಷ್ಟ./844
ದೃಷ್ಟದ ದೃಷ್ಟ ಕಾಣಿರೆ, ಮುಟ್ಟದ ಮುಟ್ಟು ಕಾಣಿರೆ,
ಆಗಿನ ಆಗು ಕಾಣಿರೆ, ಭೇದದ ಭೇದ ಕಾಣಿರೆ,
ಅರಿವಿನ ಅರಿವು ಕಾಣಿರೆ.
ಲಿಂಗದಲ್ಲಿ ಹಿಂಗದ ಸಂದು
ಕೂಡಲಚೆನ್ನಸಂಗನಲ್ಲಿ ಬಸವಣ್ಣ ಕಾಣಿರೆ./845
ದೃಷ್ಟದಲ್ಲಿ ನಡೆ ನುಡಿ ತನುಕ್ರೀ,
ಅದೃಷ್ಟದಲ್ಲಿ ಪ್ರಾಣ ಮನಕ್ರೀ ಆಚಾರದಲ್ಲಿ ಸ್ಥಾನಾಸ್ಥಾನವೆ?
ಭಾವಸ್ಥಾನಾಂಗಲಿಂಗೇಷು ಪ್ರಾಣಲಿಂಗಾಂತರೇ ದ್ವಯಂ
ಸನ್ನಿಧಾನತ್ಪರಂ ಲಿಂಗಂ ಸ್ಥಾಪ್ಯಮೇತ್ತತ್ತು ದಿಮತಾ
ಈ ಉಭಯ (ಸುಸಂಗಿ) ಲಿಂಗನಿರಂತರ, ಕೂಡಲಚೆನ್ನಸಂಗಮದೇವಾ. /846
ದೃಷ್ಟಿ ನಟ್ಟಿತ್ತು ನೋಡಾ, ನಟ್ಟು ಮತ್ತೆ ತೆಗೆಯಲಾರದು ನೋಡಾ.
ಅಲ್ಲಿಯೇ ಅಚ್ಚೊತ್ತಿದಂತಿತ್ತು ನೋಡಾ.
ಆಶ್ರಯವ ಗೆಲಿದು ನಿರಾಶ್ರಯದ ನಿಃಪತಿಯಲ್ಲಿ ನಿಂದನು
ಕೂಡಲಚೆನ್ನಸಂಗಾ, ನಿಮ್ಮ ಶರಣ. /847
ದೇವ ದಾನವ ಮಾನವ ಮೊದಲಾದ ಎಲ್ಲಾ ಜೀವರಲ್ಲಿ
ಹಿರಿದು ಕಿರಿದೆನ್ನದೆ ನಿದ್ರೆಯ ಬಲೆಯ ಬೀಸಿ,
ಸರಿದು ತೆಗೆಯಲೊಡನೆ, ಅರಿವು ಮರೆಯಿತ್ತು,
ನೋಟ ಜಾರಿತ್ತು, ಬುದ್ಧಿ ತೊಡೆಯಿತ್ತು,
ಜೀವ ಹಾರಿತ್ತು, ದೇಹ ಒರಗಿತ್ತು.
ಇದು ನಿಚ್ಚ ನಿಚ್ಚ ಬಹುದ, ಹೋಹುದರ ಕೀಲನಾರೂ ಅರಿಯರು
ಕೂಡಲಚೆನ್ನಸಂಗಯ್ಯಾ./848
ದೇವ ದೇವ ಮಹಾಪ್ರಸಾದ,
ನಿಮ್ಮಡಿಗಳಿಗೆ ಉತ್ತರಕೊಡಲಮ್ಮೆನಯ್ಯಾ,
[ಇದ] ಬಲ್ಲೆನೆಂಬ ಬಲುಮೆಯ ದೇಹಿ ನೀವಲ್ಲವಾಗಿ,
ಆನು ಭಕ್ತನೆಂಬ ಭಕ್ತಿಶೂನ್ಯನಲ್ಲವಾಗಿ
ಆನು ಬಲ್ಲೆನೆಂಬ ನುಡಿ ಎನ್ನನಿರಿದಿರಿದು ಸುಡದೆ ?
ತಪ್ಪೆನ್ನದು ಕ್ಷಮೆ ನಿಮ್ಮದು.
ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ
ಕೊಲ್ಲು, ಕಾಯಿ, ನಿಮ್ಮ ಧರ್ಮ !/849
ದೇವ ದೇವ ಮಹಾಪ್ರಸಾದ.
ತನ್ನ ರೂಪವ ತಿಳಿದು ನೋಡಬೇಕೆಂದು ಕನ್ನಡಿಯನುಪಾಸ್ತಿ ಮಾಡಲು
ಆ ಕನ್ನಡಿ ಬೇಕು ಬೇಡೆಂಬುದೆ ಅಯ್ಯಾ ?
ಪತಿಯಾಜ್ಞೆಯಂತೆ ಸತಿಪತಿಭಾವವ ಧರಿಸಿದಡೆ
ಸಂಯೋಗಕಾಲದಲ್ಲಿ ಅಲ್ಲವೆಂದೆನಬಹುದೆ ?
ನೀವೆ ಮಾಡಿದಡೆ ನೀವೆ ಮಾಡಿದುದು
ನಾನೆ ಮಹಾಪ್ರಸಾದವೆಂದು ಸ್ವೀಕರಿಸಿದಡೂ ನೀವೆ ಮಾಡಿದುದು.
ಅಂಗೈಯ ಲಿಂಗದ ಲಕ್ಷಣವ ನೋಡಿ ಎಂದು ಕೈಯಲ್ಲಿ ಕೊಟ್ಟಡೆ,
ಲಿಂಗದಲ್ಲಿ ಲಕ್ಷಣವನರಸಲಾಗದೆಂದು
ಚೆನ್ನಸಂಗಮನಾಥನ `ಕೋ’ ಎಂದು ಕೊಟ್ಟಡೆ
ಮಹಾಪ್ರಸಾದವೆಂದು ಕೈಕೊಂಡೆನು ಗುರುವೆ.
ಬೆದರಿ ಅಂಜಿದಡೆ ಮನವ ಸಂತೈಸಿ
ಏಕಾರ್ಥದ ಭೇದದ ತೋರಿ ಬಿನ್ನಹವ ಮಾಡಿದೆನು.
ಕೂಡಲಚೆನ್ನಸಂಗಮದೇವರ ಮಹಾಮನೆಯ ಗಣಂಗಳು ಮೆಚ್ಚಲು,
ಸಂಗನಬಸವಣ್ಣನ ಕರುಣದ ಶಿಶುವೆಂಬುದ
ಮೂರುಲೋಕವೆಲ್ಲವು ಅಂದು ಜಯ ಜಯ ಎನುತಿರ್ದುದು. /850
ದೇವನಾಮ ಸೊಗಸದು ಲಿಂಗಾಯತಂಗೆ,
ಮಾನವನಾಮ ಸೊಗಸದು ಜಂಗಮ ಭಕ್ತಂಗೆ,
ಅನ್ಯನಾಮವರಿಯ ಪ್ರಸಾದಸಮ್ಯಕನಾಗಿ,
ಈ ತ್ರಿವಿಧ ಮಾಟದರ್ಥ[ಏಕಾರ್ಥಳ]
ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ. /851
ದೇವಪ್ರಭೆಯೊಳಗಿಹರಲ್ಲದೆ
ದೇವಗಹನವ ಮಾಡಬಾರದಾರಿಗೆಯೂ.
ದೇವಸಕೀಲದೊಳಗೆ ಬೆಳೆಯಬಹುದಲ್ಲದೆ,
ದೇವನಷ್ಟದೊಳಗೆ ಉತ್ಪತ್ಯವಾಗಬಾರದಾರಿಗೆಯೂ.
ಉತ್ಪತ್ತಿಯ ಗಣತಿ(ಗತಿ?)ಯನಾರೋಗಣೆಯ ಮಾಡಬಾರದಾರಿಗೆಯೂ.
ಸಚರಾಚರವೆಲ್ಲವೂ ಈ ಪರಿಯಲ್ಲಿ ಸಂಭ್ರಮಿಸುತ್ತಿರ್ದುದಲ್ಲಾ,
ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ
ಇದ್ದ ಭಾವವಳಿದಡೆ ಲಿಂಗೈಕ್ಯವು. /852
ದೇವರು ಬಿದ್ದರು ದೇವರು ಬಿದ್ದರು ಎಂದು
ಸಾಹಿತ್ಯದ ಕೂಡ ಸಾಯಬೇಕೆಂಬಿರಿ.
ಆವಾಗ ಬಿದ್ದಿತ್ತೆಂದರಿಯಿರಿ ಆವಾಗ ಇದ್ದಿತ್ತೆಂದರಿಯಿರಿ,
ಆವಾಗ ಇದ್ದಿತ್ತು ಆವಾಗ ಬಿದ್ದಿತ್ತು ಎಂದು ಬಲ್ಲರೆ ನೀವು ಹೇಳಿರೆ ?
“ಅದೃಶ್ಯಭಾವನೋ ನಾಸ್ತಿ ದೃಶ್ಯಮೇವ ವಿನಶ್ಯತಿ
ಅವರ್ಣಮಕ್ಷರಂ ಬ್ರಹ್ಮ ಕಥಂ ಧ್ಯಾಯಂತಿ ಯೋಗಿನಃ
ಎಂದುದಾಗಿ, ಇದು ಕಾರಣ ಕೂಡಲಚೆನ್ನಸಂಗಯ್ಯನ
ಅರಿದಾಗಲಿದ್ದಿತ್ತು ಮರೆದಾಗ ಬಿದ್ದಿತ್ತು./853
ದೇವಾ, ‘ನಮಃ ಶಿವಾಯೇತಿ ಶಿವಂ ಪ್ರಪದ್ಯೇ ಶಿವಂ ಪ್ರಸೀದೇತಿ ಶಿವಂ ಪ್ರಪದ್ಯೇ
ಶಿವಾತ್ಪರಂ ನೇತಿ ಶಿವಂ ಪ್ರಪದ್ಯೇ ಶಿವೋಹಮಸ್ಮೀತಿ ಶಿವಂ ಪ್ರಪದ್ಯೇ
ಎಂದು ನಿಮ್ಮ ಪವಿತ್ರವಚನವಿಪ್ಪುದಾಗಿ
ಎನ್ನ ತನುವ ನಿಮ್ಮ ಶರಣರ ಸೇವೆಯಲ್ಲಿರಿಸುವೆನಯ್ಯಾ.
ಆನು ಸತ್ಕಾರ್ಯದಿಂದ ಸಂಪಾದಿಸಿದ ಧನವ
ನಿಮ್ಮ ನಿಲುವಿಂಗಾಗಿ ವಿನಿಯೋಗಿಸುವೆನಯ್ಯಾ.
ಇಂತೀ ಸಕಲದ್ರವ್ಯವ ನಿರ್ವಂಚನೆಯಿಂದ ನಿಮಗರ್ಪಿಸಿ,
ನಿಮ್ಮಡಿಯ ಹೊಂದಲಿಚ್ಛಿಸುವೆನಯ್ಯಾ.
ಮೇಣು, ನಿಮ್ಮ ಸುಪ್ರಸಾದವ ಪಡೆದು ಲಿಂಗಭೋಗೋಪಭೋಗಿಯಾಗಿ,
ನಿಮ್ಮ ಹೊಂದಲಾತುರಿಪೆನಯ್ಯಾ.
ದೇವಾ, ನೀವು ಸರ್ವಶಕ್ತರಾಗಿ ಅಂದಿಂದು ಮುಂದೆಂದಿಗೆಯೂ
ನಿಮ್ಮ ಸರಿಮಿಗಿಲಾರೂ ಇಲ್ಲವೆಂಬುದನರಿದು
ನಿಮ್ಮಡಿಯ ಸೇರೆ ಯತ್ನಿಸುವೆನಯ್ಯಾ.
ಬಳಿಕ ನೀವೇ ಎನ್ನ ಸ್ವರೂಪವಾಗಿ [ಅನ್ಯ] ಭೇದವಡಗಿ
ನಿಮ್ಮೊಡನೆ ಬೆರೆದು ನಿತ್ಯಮುಕ್ತನಾಗಿಪರ್ೆನಯ್ಯಾ
ಕೂಡಲಚೆನ್ನಸಂಗಮದೇವಾ. /854
ದೇಹ ನಿರ್ದೆಹವೆಂದೆನುತ್ತಿಪ್ಪರಯ್ಯಾ.
ದೇಹ ನಿರ್ದೆಹ[ದ] ಮರ್ಮವನರಿಯರು.
ಅಹಮ್ಮೆಂಬುದೆ ದೇಹ ನೋಡಾ, ದಾಸೋಹವೆಂಬುದೆ ನಿರ್ದೆಹ ನೋಡಾ.
ಅಹಂಭಾವವಳಿದುಳಿದು ದಾಸೋಹಿಯಾದ
ಕೂಡಲಚೆನ್ನಸಂಗಾ ನಿಮ್ಮ ಶರಣ. /855
ದೇಹ ಪ್ರಸಾದವೆಂದೆನ್ನೆ, ಅಂತರ್ದೆಹ ಪ್ರಸಾದವೆಂದೆಂಬೆ (ವೆಂದೆನ್ನೆ?).
ಜಾಗ್ರ ಪ್ರಸಾದವೆಂದೆನ್ನೆ, ಸ್ವಪ್ನ ಪ್ರಸಾದವೆಂದೆಂಬೆ (ವೆಂದೆನ್ನೆ?),
ಅಂತರ್ದೆಹಕ್ಕೆ ಆಕಾರವಿಲ್ಲ, ಸ್ವಪ್ನಕ್ಕೆ ಬೀಜವಿಲ್ಲ.
ಇದು ಕಾರಣ, ಕೂಡಲಚೆನ್ನಸಂಗ ತೋರಿದನಾಗಿ
ಅಕಾಯದಲ್ಲಿ ಮಹಾಘನಪ್ರಸಾದಿ. /856
ದೇಹದ ಬೆಂಬಳಿಯ ದೇಹಿಕನಾದಡೆ
ಸದಾಚಾರವಳವಡುವುದೆ ?
ಜೀವದ ಬೆಂಬಳಿಯ ಜೀವಿತನಾದಡೆ
ಪ್ರಸಾದಸ್ಥಳವಳವಡುವುದೆ ?
ಬೆಸನದ ಬೆಂಬಳಿಯ ವ್ಯಾಪಕನಾದಡೆ
ಜಂಗಮ ಪ್ರೇಮವಳವಡುವುದೆ ?
ಕಾಲಕರ್ಮಪ್ರಳಯಜೀವಿಗಳು ತ್ರಿವಿಧ ಸಂಪನ್ನರಾಗಲರಿವರೆ ?
ಅರಿವು ಮರಹು ಕುರುಹುಳ್ಳನ್ನಕ್ಕ
ಪ್ರಾಣಲಿಂಗಸಂಬಂದಿಗಳಾಗಲರಿವರೆ ?
ಇದು ಕಾರಣ, ಕೂಡಲಚೆನ್ನಸಂಗನಲ್ಲಿ
ಸರ್ವಾಚಾರಿಗಳಾಗಲರಿವರೆ ?/857
ದೇಹದೊಳಗಣ ದೇಹಿಯೆನ್ನಬಹುದೆ ನಿಮ್ಮ ಶರಣನ?
ಅನ್ನ ಪಾನಾದಿಗಳೊಗಣ ಅನ್ನಪಾನವೆಂದೆನ್ನಬಹುದೆ ಪ್ರಸಾದವ?
ಎನಬಾರದಯ್ಯಾ, ಎನ್ನ ತಂದೆ!
ಸಾಧನದೊಳಗಣ ಸಂಯೋಗವೆಂತಿದ್ದುದು ಅಂತಿದ್ದುದಾಗಿ.
ಇದು ಕಾರಣ, ಶ್ರತಿ ಸ್ಮೈತಿಗಗೋಚರ
ಕೂಡಲಚೆನ್ನಸಂಗಮದೇವಾ ನಿಮ್ಮ ಶರಣರು. /858
ದೇಹಿಯಲ್ಲ ನಿರ್ದೆಹಿಯಲ್ಲ, ಬೋಧಕನಲ್ಲ ನಿರ್ಬೊಧಕನಲ್ಲ,
ಕಾಮಿಯಲ್ಲ, ನಿಃಕಾಮಿಯಲ್ಲ, ಆಸೆವಿಡಿದು ಬಂದ ಆಮಿಷನಲ್ಲ.
ಅವಗುಣವಿಲ್ಲದ ನಿರ್ಗುಣಿ ನಿರಂತರ,
ಕೂಡಲಚೆನ್ನಸಂಗನ ಶರಣ ನೋಡಯ್ಯಾ. /859
ದೇಹೇಂದ್ರಿಯ ಮನಃಪ್ರಾಣ ಅಹಮಾದಿ ತತ್ವಪದಾರ್ಥವ ಕೆಡಸಿತಲ್ಲಾ,
ಕೋಹಮೆನಲರಿಯದ ಮುಗ್ಧಾ, ಸೋಹಂ ನಿನ್ನ ನೀ ತಿಳಿಯಾ,
ತತ್ವಮಸಿ ವಾಕ್ಯಾರ್ಥ ನೀನಾಗಿ, ಕೂಡಲಚೆನ್ನಸಂಗ ಬೇರಿಲ್ಲ./860
ದ್ರವ್ಯರೂಪ ರೂಪಿಸುವೆ ಅರ್ಪಿತಕ್ಕೆಂದು
ಅರ್ಪಿತರೂಪ ರೂಪಿಸುವೆ ಪ್ರಸಾದಕ್ಕೆಂದು,
ಪ್ರಸಾದರೂಪ ರೂಪಿಸುವೆ ಕಾಯಕ್ಕೆಂದು,
ಪ್ರಥಮೇ ಯೋಜಯೇದ್ದ್ರವ್ಯಂ ದ್ವಿತೀಯಂ ಅರ್ಪಿತಂ ತಥಾ
ತದರ್ಥಂ ತು ಶರೀರಾರ್ಥಂ ಶರೀರಂ ಪ್ರಾಣಕಾರಣಂ
ಎಂದುದಾಗಿ ಕಾಯರೂಪ ರೂಪಿಸುವೆ ಪ್ರಾಣಕ್ಕೆಂದು
ಪ್ರಾಣರೂಪ ರೂಪಿಸುವೆ ಕೂಡಲಚೆನ್ನಸಂಗಯ್ಯಗೆಂದು. /861
ದ್ವಿಜರು ಪ್ರತಿಸಾಂವತ್ಸರಿಕ ಶ್ರಾದ್ಧವ ಮಾಡುವಲ್ಲಿ,
“ವಿಶ್ವೇದೇವಾನುಜ್ಞಯಾ ಪಿತೃಕಾಯರ್ೆ ಪ್ರವರ್ತಯೇತ್’
ಎಂಬ ವಚನವಿಡಿದು
“ಗಯಾಯಾಂ ಶ್ರೀರುದ್ರಪಾದೇ ದತ್ತಮಸ್ತು’
ಎಂದು ಪಿಂಡವನಿಟ್ಟು,
ವಸುರುದ್ರಾರ್ಕರೂಪೇಣ ಮಧ್ಯಪಿಂಡಸ್ತು ಪುತ್ರತಃ
ವೇದೋಕ್ತರುದ್ರನಿರ್ಮಾಲ್ಯಂ ಕಿಂ ಪುನರ್ಬಹುಭಾಷಣೇ
ಎಂದು ರುದ್ರಪಿಂಡದಿಂ ಜನಿಸಿ
“ಜನ್ಮನಾ ಜಾಯತೇ ಶೂದ್ರಃ’ ಎನಿಸಿಹನೆಂಬ ಶ್ರುತಿಯ ತೊಡೆದು,
ಸಾವಿತ್ರಪ್ರದಾನ ಗಾಯತ್ರೀ ಉಪದೇಶವಂ ಮಾಡಿ,
“ಮಾನಸ್ತೋಕೇ ತನಯೇ ಎಂಬ ಮಂತ್ರದಿಂ
“ತ್ರಿಯಾಯುಷಂ ಜಮದಗ್ನೇಃ ಎಂದು ವಿಭೂತಿಯನಿಟ್ಟು,
ರುದ್ರಮುಖದಿಂದ ಬ್ರಹ್ಮರಾಗಿ ಶಿವನಿರ್ಮಾಲ್ಯ ಪಾದೋದಕ ಪ್ರಸಾದಮಂ
ಧರಿಸಲಾಗದೆಂಬ ಶ್ರುತಿಬಾಹ್ಯ ಶಾಪಹತರನೇನೆಂಬೆನಯ್ಯಾ
ಕೂಡಲಚೆನ್ನಸಂಗಮದೇವಾ./862
ಧನವ ಕೊಟ್ಟರೆ ದಾನಿಯಾದ, ತನುವ ಕೊಟ್ಟರೆ ವೀರನಾದ,
ಮನವ ಕೊಟ್ಟರೆ ವಶಿಯಾದ.
ಈ ತ್ರಿವಿಧದಿಂದ ಹೊರಗೆ ಕೊಡಬಲ್ಲರೆ
ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯವು./863
ಧನವ ಮರೆದು ಮಾಡಿದರೆ ಜಂಗಮರೂಪವಾಗಲೇಬೇಕು,
ಮನವ ಮರೆದು ಮಾಡಿದರೆ ಲಿಂಗರೂಪವಾಗಲೇಬೇಕು,
ತನುವ ಮರೆದು ಮಾಡಿದರೆ ಪ್ರಸಾದರೂಪವಾಗಲೇಬೇಕು.
ಇಂತಿವ ಮರೆದು ಮಾಡಿದರೆ ಬಯಲಲೊದಗಿದ ಘಟ್ಟಿಯಂತಿರಬೇಕು.
ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ
ಬಸವಣ್ಣಂಗಲ್ಲದೆ ಇಲ್ಲ ನೋಡಯ್ಯಾ. /864
ಧರಣಿಜರೆಲ್ಲರೂ ಭಕ್ತರೇ ಆಗಿ, ಪಾಷಾಣಂಗಳೆಲ್ಲವೂ ಲಿಂಗಂಗಳಾಗಿ,
ಆದಿ ಸೂತಕವೇದ್ಯನು ಭಕ್ತನು; ವಿರಕ್ತನು, ಮುಕ್ತನೆಂದೆನಿಸುವ,
ತ್ರಿವಿಧ ಸೂತಕವ ಕಳೆದುಳಿದಲ್ಲದೆ
ಕೂಡಲಚೆನ್ನಸಂಗನ ಹೊದ್ದಬಾರದು. /865
ಧರೆ ಗಗನವೆಂಬುದ ನಾನರಿಯೆನಯ್ಯಾ
ಲಿಂಗಮಧ್ಯೇ ಜಗತ್ಸರ್ವವೆಂಬುದ ನಾನರಿಯೆನಯ್ಯಾ
ಲಿಂಗಸುಖದ ಸೋಂಕಿನೊಳಗೆ ಶಿವಶಿವಾ ಎನುತಿರ್ದೆನಯ್ಯ
ಕೂಡಲಚೆನ್ನಸಂಗಯ್ಯಾ, ಅಂಬುದಿಯೊಳಗೆ ಬಿದ್ದ ಆಲಿಕಲ್ಲಂತೆ
ಬಿನ್ನಭಾವವಿಲ್ಲದೆ ಶಿವಶಿವಾ ಎನುತಿರ್ದೆನಯ್ಯಾ./866
ಧರೆಗೆ ತೊಂಬತ್ತೆಂಟುಸಾವಿರ ಯೋಜನದುದ್ದದಲು
ಸಿಡಿಲು ಮಿಂಚು ಮುಗಿಲುಗಳಿಹವು.
ಅದರಿಂದ ಮೇಲೆ ಒಂದುಲಕ್ಷ ಯೋಜನದುದ್ದದಲು ಬೃಹಸ್ಪತಿ ಇಹನು.
ಆ ಬೃಹಸ್ಪತಿಯಿಂದ ಮೇಲೆ ಮೂವತ್ತೆರಡುಲಕ್ಷ ಯೋಜನದುದ್ದದಲು
ಶುಕ್ರನಿಹನು.
ಆ ಶುಕ್ರನಿಂದ ಮೇಲೆ ಅರುವತ್ತುನಾಲ್ಕು (ಸಾವಿರರಿ) ಯೋಜನದುದ್ದದಲು
ಶನಿಯಿಹನು.
ಆ ಶನಿಯಿಂದ ಮೇಲೆ ಒಂದಕೋಟಿ ಇಪ್ಪತ್ತೆಂಟುಲಕ್ಷ ಯೋಜನದುದ್ದಲು
ಆದಿತ್ಯನಿಹನು.
ಆ ಆದಿತ್ಯನಿಂದ ಮೇಲೆ ಎರಡುಕೋಟಿಯುಂ ಐವತ್ತುಸಾವಿರ (ಐವತ್ತಾರುರಿ)ಲಕ್ಷ
ಯೋಜನದುದ್ದದಲು ರಾಹುಕೇತುಗಳು ಪ್ರವರ್ತಿಸಿಕೊಂಡಿಹವು.
ಅಲ್ಲಿಂದ ಮೇಲೆ ಐದುಕೋಟಿಯುಂ ಹನ್ನೆರಡುಲಕ್ಷ ಯೋಜನದುದ್ದದಲು
ನಕ್ಷತ್ರವಿಹವು.
ಆ ನಕ್ಷತ್ರಂಗಳಿಂದ ಮೇಲೆ ಹತ್ತುಕೋಟಿಯುಂ ಇಪ್ಪತ್ತುನಾಲ್ಕು (ಲಕ್ಷ)
ಯೋಜನದುದ್ದದಲು ಸಕಲ ಮಹಾಋಷಿಗಳಿಹರು.
ಆ ಋಷಿಗಳಿಂದ ಮೇಲೆ ಇಪ್ಪತ್ತುಕೋಟಿಯುಂ ನಾಲ್ವತ್ತೆಂಟುಲಕ್ಷ
ಯೋಜನದುದ್ದದಲು ತ್ರಿವಿಧ ದೇವತೆಗಳಿಹರು.
ಆ ತ್ರಿವಿಧ ದೇವತೆಗಳಿಂದಂ ಮೇಲೆ ನಾಲ್ವತ್ತುಕೋಟಿಯುಂ ತೊಂಬತ್ತಾರುಲಕ್ಷ
ಯೋಜನದುದ್ದದಲು ದೇವರ್ಕಳಿಹರು.
ಆ ದೇವರ್ಕಳಿಂದಂ ಮೇಲೆ ಎಂಬತ್ತೊಂದುಕೋಟಿಯುಂ ತೊಂಬತ್ತೆರಡುಲಕ್ಷ
ಯೋಜನದುದ್ದದಲು ದ್ವಾದಶಾದಿತ್ಯರಿಹರು.
ಆ ದ್ವಾದಶಾದಿತ್ಯರಿಂದಂ ಮೇಲೆ ನೂರರುವತ್ತುಮೂರುಕೋಟಿಯುಂ
ಎಂಬತ್ತುನಾಲ್ಕುಲಕ್ಷ ಯೋಜನದುದ್ದದಲು ಮಹಾಸೇನರಿಹರು.
ಆ ಮಹಾಸೇನರಿಂದಂ ಮೇಲೆ ಮುನ್ನೂರಿಪ್ಪತ್ತೇಳುಕೋಟಿಯುಂ
ಅರವತ್ತೆಂಟುಲಕ್ಷ ಯೋಜನದುದ್ದದಲು ಕೃತರೆಂಬ ಮಹಾಮುನಿಗಳಿಹರು.
ಇಂತು-ಧರೆಯಿಂದಂ ಆಕಾಶ ಉಭಯಂ ಕೂಡಲು
ಆರುನೂರೈವತ್ತೈದು ಕೋಟಿ ಐದು ಲಕ್ಷ ತೊಂಬತ್ತೆಂಟು ಸಾವಿರ
ಯೋಜನದುದ್ದದಲು ಒಂದು ಮಹಾಲೋಕವಿಹುದು.
ಆ ಲೋಕದಿಂದ ಹದಿನಾಲ್ಕು ಲೋಕವುಂಟು. ಅವು ಎಲ್ಲಿಹವೆಂದಡೆ:
ಪಾತಾಳಲೋಕ ದೇವರ ಕಟಿಯಲ್ಲಿಹುದು,
ರಸಾತಳಲೋಕ ದೇವರ ಗುಹ್ಯದಲ್ಲಿಹುದು,
ತಳಾತಳಲೋಕ ಊರುವಿನಲ್ಲಿಹುದು,
ಸುತಳಲೋಕ ಜಾನುವಿನಲ್ಲಿಹುದು, ನಿತಳಲೋಕ ಜಂಘೆಯಲ್ಲಿಹುದು,
ವಿತಳಲೋಕ ಪಾದೋಧ್ರ್ವದಲ್ಲಿಹುದು, ಅತಳಲೋಕ ಪಾದತಳದಲ್ಲಿಹುದು.
ಅಲ್ಲಿಂದತ್ತ ಕೆಳಗುಳ್ಳ ಲೋಕವನಾತನೆ ಬಲ್ಲ.
ಭೂಲೋಕ ನಾಬಿಯಲ್ಲಿಹುದು, ಭುವರ್ಲೊಕ ಹೃದಯದಲ್ಲಿಹುದು,
ಸ್ವರ್ಲೊಕ ಉರೋಮಧ್ಯದಲ್ಲಿಹುದು, ಮಹರ್ಲೊಕ ಕಂಠದಲ್ಲಿಹುದು,
ಜನರ್ಲೊಕ ತಾಲವ್ಯದಲ್ಲಿಹುದು, ತಪರ್ಲೊಕ ಲಲಾಟದಲ್ಲಿಹುದು,
ಸತ್ಯಲೋಕ ಬ್ರಹ್ಮರಂಧ್ರದಲ್ಲಿಹುದು.
ಅಲ್ಲಿಂದತ್ತ ಮೇಲುಳ್ಳ ಲೋಕವನಾತನೆ ಬಲ್ಲ.
ಇಂತೀ ಈರೇಳು ಲೋಕವು ತಾನೆಯಾಗಿಪ್ಪ ಮಹಾಲಿಂಗವನ್ನು
ಅಡಗಿಸಿಹೆನೆಂಬ ಅತುಳಬಲ್ಲಿದರು ಕೆಲಬರುಂಟೆ ?
ಅಡಗುವನು ಮತ್ತೊಂದು ಪರಿಯಲ್ಲಿ, ಅದು ಹೇಂಗೆ ?
ಅಡರಿ ಹಿಡಿಯಲು ಬಹುದು ಭಕ್ತಿಯೆಂಬ ಭಾವದಲ್ಲಿ
ಸತ್ಯಸದಾಚಾರವನರಿದು ಪಾಪಕ್ಕೆ ನಿಲ್ಲದೆ ಕೋಪಕ್ಕೆ ಸಲ್ಲದೆ
ಮಾಯವನುಣ್ಣದೆ ಮನದಲ್ಲಿ ಅಜ್ಞಾನವ ಬೆರಸದೆ
ಅಲ್ಲದುದನೆ ಬಿಟ್ಟು, ಬಲ್ಲುದನೆ ಲಿಂಗಾರ್ಚನೆಯೆಂದು
`ಓಂ’ ಎಂಬ ಅಕ್ಷರವನೋದಿ ಅರಿತ ಬಳಿಕ
ಬಸುರಲ್ಲಿ ಬಂದಿಪ್ಪ, ಶಿರದಲ್ಲಿ ನಿಂದಿಪ್ಪ
ಅಂಗೈಯೊಳಗೆ ಅಪ್ರತಿಮನಾಗಿ (ಸಿಲ್ಕಿಪ್ಪ) ಕಾಣಾ
ಕೂಡಲಚೆನ್ನಸಂಗಮದೇವ./867
ಧರೆಗೆ ಸೂತಕವುಂಟೆ ? ವಾರಿದಿಗೆ ಹೊಲೆಯುಂಟೆ ?
ಉರಿವ ಅನಲಂಗೆ ಜಾತಿಭೇದವುಂಟೆ ?
ಹರಿದು ಚರಿಸುವ ಅನಿಲಂಗೆ ಸೀಮೆಯುಂಟೆ ?
ಆಕಾಶಕ್ಕೆ ದಾರಿ ಮೇರೆಯುಂಟೆ ?
[ಇನಿತ]ರಿಂದಲೊದಗಿದ ಘಟವನು ಆರು ಹೊಲ್ಲೆಂಬರು ?
ಸಾರವು ಕರ್ಮ, ಕೂಡಲಚೆನ್ನಸಂಗಮದೇವಾ
ನಿಮ್ಮ ಶರಣಂಗೆ. /868
ಧರೆಯ ಮೇಲೆ ಸುಳಿವ ವೇಷಲಾಂಛನಧಾರಿಗಳೆಯ್ದೆ,
ಹದಿನೆಂಟು ಜಾತಿಯ ಮನೆಯ ಬಿಕ್ಷವನುಂಡು ಕೆಟ್ಟರು.
ಅರೆಯ ಮೇಲಿಪ್ಪ ಅರುಹಿರಿಯರೆಯ್ದೆ ವಾಯುಬಿಕ್ಷವನುಂಡು ಕೆಟ್ಟರು.
ಗಿರಿಯ ಮೇಲಿಪ್ಪ ತಪಸ್ವಿಗಳೆಯ್ದೆ ವನಬಿಕ್ಷವನುಂಡು ಕೆಟ್ಟರು.
ಅರಿಯದೆ ಇಂದ್ರಿಯಂಗಳ ಕಟ್ಟಿ ಕುರುಹಿನ (ರಾಜ್ಯಕ್ಕೆ ಬಂದು) ನರಕಕ್ಕೆ ಹೋಹವರ
ಹಿರಿಯರೆಂದು ಎನಗೆ ತೋರದಿರಾ.
ಸರ್ವ ಭ್ರಾಂತಳಿದ ಮಹಂತರನೆನಗೆ ತೋರಾ,
ಕೂಡಲಚೆನ್ನಸಂಗಮದೇವಾ. /869
ಧರೆಯಗಲದ ಜಲಕ್ಕೆ ಕರಿಯ ನೂಲಿನ ಜಾಲ,
ಕರಿಯ ಕಬ್ಬಿಲ ಹೊಕ್ಕು ಸೇದುತ್ತಿರಲು, ಕರದ ಕೈಯಲಿ ಗಾಳ,
ಸೂಕ್ಷ್ಮವಿಚಾರದಲ್ಲಿ,
ಅರಿದುಕೊಂಬಡೆ ಗಾಳ ಹೊರಗಾಯಿತ್ತು.
ಹರಿವ ಜಲಗಳು ಬತ್ತಿ ಕೆಲಕೆ ಉಷ್ಣವು ತೋರಿ
ಬಿಳಿಯ ಮಳಲಲ್ಲಿಗಲ್ಲಿಗೆ ಕಾಣಬರಲು,
ಕರಿಯ ಕಬ್ಬಿಲ ಬಂದು, ಉರಿಯ ಮೆಟ್ಟಿ ನೋಡಿ ಕಾಣದೆ,
ಜಾಲವ ಹೊತ್ತುಕೊಂಡು ಹೋಹಾಗ,
ಹೊಂಗರಿಯ ಬಿಲ್ಲಕೋಲನೊಂದು ಕೈಯಲಿ ಹಿಡಿದು,
ಒಂದು ಕೈಯಲಿ ಬಿದಿರಕ್ಕಿವಿಡಿದು,
ದಂಗಟನ ಪುಣುಜೆಯರು ಮುಂದೆ ಬಂದಾಡಲು,
ಕಂಗಳ ಮುತ್ತು ಸಡಿಲಿ ಪಾದದ ಮೇಲೆ ಬೀಳಲು,
ಅಂಗಯ್ಯ ಒಳಗೊಂದು ಅರಿದಲೆ ಮೂಡಿರಲು
ದಂಗಟನ ಹೊತ್ತುಕೊಂಡಾಡುವಾಗಲ್ಲಿ
ಶೃಂಗಾರ ಸಯವಾಯಿತ್ತು, ಕೂಡಲಚೆನ್ನಸಂಗಯ್ಯನಲ್ಲಿ
ಭಕ್ತ್ಯಂಗನೆಯ ನಾವು ಕಂಡೆವಯ್ಯಾ. /870
ಧರೆಯಾಕಾಶವಿಲ್ಲದಂದು, ಅನಲ ಪವನ ಜಲ ಕೂರ್ಮರಿಲ್ಲದಂದು,
ಚಂದ್ರಸೂರ್ಯರೆಂಬವರು ಕಳೆದೋರದಂದು,
ಆತ್ಮಸ್ಥಲ ಅನುಭಾವಕ್ಕೆ ಬಾರದಂದು,
ನಿತ್ಯನಿಜಲಿಂಗವ ಬಲ್ಲರಾರಯ್ಯ ನೀವಲ್ಲದೆ ?
ಮಹಾಘನಕ್ಕೆ ಘನವಾಹನವಾಗಿ, ಅಗಮ್ಯಸ್ಥಾನದಲ್ಲಿ ನಿಂದು
ಭರಿತರಾಗಿರಬಲ್ಲರಾರಯ್ಯಾ ನೀವಲ್ಲದೆ ?
ನಿಮ್ಮ ಒಕ್ಕು ಮಿಕ್ಕ ಶೇಷಪ್ರಸಾದದ ಕಾರುಣ್ಯದ ಶಿಶುವಾಗಿ ಒಡಲೊಳಗೆ ಇದ್ದಲ್ಲಿ
ವಿಭೂತಿ ಪಟ್ಟವ ಕಟ್ಟಿ, ಹಸ್ತಮಸ್ತಕಸಂಯೋಗವ ಮಾಡಿ
ಎನ್ನನುಳುಹಿದರಾರಯ್ಯ ನೀವಲ್ಲದೆ ?
ಕೂಡಲಚೆನ್ನಸಂಗಮದೇವರ ಸಾಕ್ಷಿಯಾಗಿ
ನಾನು ನಿಮ್ಮ ಕರುಣದ ಕಂದನೆಂಬುದ ಮೂರುಲೋಕ ಬಲ್ಲುದು ಕಾಣಾ
ಸಂಗನಬಸವಣ್ಣ. /871
ಧರ್ಮವೆ ಸಯವಾಗಿ, ಆಚಾರದ ನಿಲವನರಿದು,
ಹೃದಯದ ಕತ್ತಲೆಯ ಉದಯದಲೆ ಕಳೆದು,
ಮುಟ್ಟುವುದ ಮುಟ್ಟದೆ ಕಳೆದು, ಮುಟ್ಟದುದ ಮುನ್ನವೆ ಕಳೆದು,
ಅಯ್ಯಾ ಅಯ್ಯಾಯೆಂಬಲ್ಲಿಯೆ ಕಲಿಯಾದ.
ಕೇಸರಿಸಮ ಜೋಗಯ್ದ ಮದಸೇನೆಗಳ ಮುರಿಯಿತ್ತು,
ಎನ್ನೊಡೆಯ ಕೂಡಲಚೆನ್ನಸಂಗಯ್ಯ ಹಿಡಿವಡೆದ. /872
ನ’ ಕಾರವೆ ಬಸವಣ್ಣನ ನಾಸಿಕ, `ಮ’ ಕಾರವೆ ಬಸವಣ್ಣನ ಜಿಹ್ವೆ,
`ಶಿ’ ಕಾರವೆ ಬಸವಣ್ಣನ ನಯನ, `ವ’ ಕಾರವೆ ಬಸವಣ್ಣನ ತ್ವಕ್ಕು,
`ಯ’ ಕಾರವೆ ಬಸವಣ್ಣನ ಶ್ರೋತ್ರ, `ಓ’ ಕಾರವೆ ಬಸವಣ್ಣನ ಪ್ರಾಣ.
`ಕಾರವೆ ಬಸವಣ್ಣನ ನಾದ, `ಉ’ ಕಾರವೆ ಬಸವಣ್ಣನ ಬಿಂದು,
`ಮ ಕಾರವೆ ಬಸವಣ್ಣನ ಕಳೆ-
ಇಂತೀ ಮೂರು ಪ್ರಣವಂಗಳೆ ಪ್ರಣವದ ಶಿರಸ್ಸಾಗಿ,
ಪ್ರಣವದ ಕುಂಡಲಿ ಸೋಂಕಿ ಶಾಖೆಗಳಾಗಿಪ್ಪುವು
`ಬ’ ಕಾರವೆ ಭವಹರ ಗುರು, `ಸ’ ಕಾರವೆ ಸಕಲಚೈತನ್ಯಲಿಂಗ,
`ವ’ ಕಾರವೆ ವಚಿಸುವ ಜಂಗಮ-
ಇಂತೀ ಮೂರು ಪ್ರಣವಂಗಳೆ ಪ್ರಣವದ ಮೂರು ಪದಂಗಳಾಗಿ
ಪ್ರಣವಕ್ಕೆ ಮೂಲಪದಂಗಳಾಗಿಪ್ಪುವು-
ಇಂತೀ ಹನ್ನೆರಡು ಪ್ರಣವ ತಾನೆಯಾದ ಕೂಡಲಚೆನ್ನಸಂಗಯ್ಯನಲ್ಲಿ
ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು. /873
ನಂಬುಗೆಗೆ ಇಂಬಾಗದೆ ನೈಷ್ಠೆ ನೆಲೆಗೊಳ್ಳದು;
ನೈಷ್ಠೆ ನೆಲೆಗೊಳ್ಳದೆ ಎಚ್ಚರವಚ್ಚೊತ್ತದು;
ಎಚ್ಚರವಿಲ್ಲದೆ ಅನುಭವವು ಮನಂಗೊಳ್ಳದು;
ಅನುಭವವಿಲ್ಲದೆ ಆನಂದವು ತಲೆದೋರದು;
ಆನಂದವಿಲ್ಲದೆ ಶಿವಲಿಂಗದಲ್ಲಿ ಸಮರಸವಾಗದು.
ಇಂತೀ ಆರು ತೆರನಾದ ಭಕ್ತಿಯ ಗೊತ್ತನರಿದಡೆ.
ಭಕ್ತನೆಂಬೆನು ಮಹೇಶ್ವರನೆಂಬೆನು-
ಇಲ್ಲದಿರ್ದಡೆ ಶುದ್ಧಭವಿಯೆಂಬೆನು ಕಾಣಾ
ಕೂಡಲಚೆನ್ನಸಂಗಮದೇವಾ./874
ನಚ್ಚು ಬಿಚ್ಚದೆ ಮನದಲಚ್ಚೊತ್ತಿದಂತಿತ್ತು,
ಲಿಂಗವೆನ್ನದು, ಜಂಗಮವೆನ್ನದು, ಪ್ರಸಾದವೆನ್ನದು.
ಅದು ತಾನಾಗಿ ತಾನೆ ಭರಿತ
ಕೂಡಲಚೆನ್ನಸಂಗಾ ಲಿಂಗೈಕ್ಯವು. /875
ನಡೆಯುಳ್ಳವರ ನುಡಿಯೆಲ್ಲ ಬರಡು ಹಯನಾದಂತೆ
ನಡೆಯಿಲ್ಲದವರ ನುಡಿಯೆಲ್ಲ ಹಯನು ಬರಡಾದಂತೆ
ಅವರು ಗಡಣಿಸಿ ನುಡಿವ ವಚನ
ಎನ್ನ ಶ್ರೋತ್ರಕ್ಕೆ ಸೊಗಸದಯ್ಯ
ಅವರ ನೋಡುವರೆ
ಎನ್ನ ಕಣ್ಣು ಮನದಿಚ್ಛೆಯಾಗದಯ್ಯ
ಮಂಡೆ ಬೋಳಿಸಿ ಕುಂಡೆ ಬೆಳಸಿ
ಹೆಗ್ಗುಂಡ ಮೈಯೊಳಗೆ ತಳೆದಿರೆ
ಕಂಡು ಕಂಡು ವಂದಿಸುವರೆ
ಎನ್ನ ಮನ ನಾಚಿತ್ತು ನಾಚಿತ್ತಯ್ಯ
ಜಡೆಯ ತೋರಿ ಮುಡಿಯ ತೋರಿ
ಅಡಿಗಡಿಗೊಮ್ಮೆ ಎಡೆ ಮಾಡಿದರೆ ಇಲ್ಲವೆನ್ನೆ
ಕಡುಕೋಪವ ತಾಳುನವೆಫ
ಮಡೆಯಳ ಹೊಲೆಯರ ಗುರುವಾದರು ಗುರುವೆನ್ನೆ
ಲಿಂಗವಾದರು ಲಿಂಗವೆನ್ನೆ
ಜಂಗಮವಾದರು ಜಂಗಮವೆನ್ನೆ
ಎನ್ನ ಮನದೊಡೆಯ ಕೂಡಲಚೆನ್ನಸಂಗಮದೇವ./876
ನಡೆವ ನುಡಿವ ಚೈತನ್ಯವುಳ್ಳನಕ್ಕ
ಒಡಲ ಗುಣಂಗಳಾರಿಗೂ ಕಾಣವು.
ನೋಡುವ ನಯನ, ಕೇಳುವ ಶ್ರೋತ್ರ, ವಾಸಿಸುವ ಘ್ರಾಣ,
[ಮುಟ್ಟವ ತ್ವಕ್ಕು, ರುಚಿಸುವ ಚಿಹ್ವೆ] ತಾಗಿತ್ತೆನಬೇಡ.
ನೋಡುತ್ತ [ಕೇಳುತ್ತ ವಾಸಿಸುತ್ತ ಮುಟ್ಟುತ್ತ, ರುಚಿಸುತ್ತ] ಲಿಂಗಾರ್ಪಿತವಮಾಡಿ
ಲಿಂಗಭೋಗೋಪಭೋಗಿಯಾದ ಪ್ರಸಾದಿಗಳಿಗೆ
ಸರ್ವಾಂಗಶುದ್ಧವೆಂಬುದಿದೆಯಯ್ಯಾ.
ಕಾಯತ್ರಯಂಗಳ ಜೀವತ್ರಯಂಗಳ ಭಾವತ್ರಯಂಗಳನೊಂದು ಮಾಡಿ;
ಸುಖ-ದುಃಖ, ಗುಣ-ನಿರ್ಗುಣಂಗಳೆಂಬ ಉಭಯವ, ಲಿಂಗದಲ್ಲಿ ಏಕವ ಮಾಡಿ;
ಅಹುದು ಅಲ್ಲ, ಬೇಕುಬೇಡೆಂಬ ಸಂಶಯವ ಕಳೆದು;
ಕೂಡಲಚೆನ್ನಸಂಗನ ಆದಿಯ ಪುರಾತನರು
ಮಾಡಿದ ಪಥವಿದು. /877
ನದಿ ಕೂಪ ತಟಾಕ ಜಲದಲ್ಲಿ ಕನ್ನವನ್ನಿಕ್ಕಿ ಉದಕವ ತಂದು,
ಮಜ್ಜನಕ್ಕೆರೆವವರು ಸುಯಿಧಾನಿಗಳಪ್ಪರೆ ?
ಪಾಕದಲ್ಲಿ ಭವಿಪಾಕ ಪರಪಾಕವೆಂದು ಭುಂಜಿಸುವ
ಉದರಪೋಷಕರೆಲ್ಲಾ ಶೀಲವಂತರಪ್ಪರೆ ? ಅಲ್ಲ.
ಆಸೆಯರತು, ವ್ಯಸನ ಬೆಂದು, ವ್ಯಾಪ್ತಿಗಳೆಲ್ಲವು ತಲ್ಲೀಯವಾಗಿ,
ತನುಗುಣಾದಿಗಳೆಲ್ಲಾ ಸಮಾಪ್ತಿಯಾದಡೆ
ಕೂಡಲಚೆನ್ನಸಂಗನಲ್ಲಿ ಶೀಲವಂತರೆಂಬೆ. /878
ನದಿ ಕೂಪ ತಟಾಕ ಜಲಾಶಯದಲ್ಲಿ ಅಗ್ಗಣಿಯ ತಂದು
ಮಜ್ಜನಕ್ಕೆ ನೀಡುವರೆಲ್ಲ ಶೀಲವಂತರೆ ?
ಪಾಕದಲ್ಲಿ ಪರಪಾಕ ಭವಿಪಾಕ ಎಂಬವರೆಲ್ಲ ಶೀಲವಂತರೆ ?
ತಳಿಗೆ ಬಟ್ಟಲ ಪ್ರಗಾಳಿಸಿ ನೇಮವ ಮಾಡಿಕೊಂಬವರೆಲ್ಲ ಶೀಲವಂತರೆ ?
ಕಂಠಪಾವಡ, ಧೂಳಿಪಾವಡ, ಸರ್ವಾಂಗಪಾವಡವೆಂಬವರೆಲ್ಲ ಶೀಲವಂತರೆ ?
[ಲ್ಲ], ಅದೇನು ಕಾರಣವೆಂದಡೆ;
ಅವರು `ಸಂಕಲ್ಪಂ ಚ ವಿಕಲ್ಪಂ ಚ ಆ ಎಂದುದಾಗಿ, ಶುದ್ಧಭವಿಗಳು.
ಭವಿಯೆಂಬವನೆ ಶ್ವಪಚ, ವ್ರತಸ್ಥನೆಂಬವನೆ ಸಮ್ಮಗಾರ.
ಶೀಲವಿನ್ನಾವುದೆಂದಡೆ;
ಆಶನ ಅರತು, ವ್ಯಸನ ನಿಂದು, ವ್ಯಾಪ್ತಿಯಳಿದು,
ಅಷ್ಟಮದವೆಲ್ಲ ನಷ್ಟವಾದಲ್ಲದೆ,
ಕೂಡಲಚೆನ್ನಸಂಗಮದೇವರಲ್ಲಿ ಶೀಲವಿಲ್ಲ ಕಾಣಿರೊ/879
ನಮಃ ಶಿವಾಯ ಲಿಂಗವು, ಓಂ ನಮಃ ಶಿವಾಯ ಬಸವಣ್ಣನು.
ನೀನೆ ಎನ್ನ ಮನಸ್ಥಲದಲ್ಲಿ ನಿಂದು ಬೆಳಗಿ ತೋರಿದೆಯಾಗಿ
ಇದು ಕಾರಣ, ಕೂಡಲಚೆನ್ನಸಂಗಯ್ಯಾ
ಆದಿಯಾಧಾರವಿಲ್ಲದಂದು
`ಓಂ ನಮಃ ಶಿವಾಯ’ ಎನುತಿರ್ದೆನು. /880
ನಮ್ಮ ಆದಿಪುರಾತನರು ಪ್ರಸಾದಕ್ಕೆ ತಪ್ಪದೆ ನಡೆದರು,
ನಡೆ ತಪ್ಪದೆ ನುಡಿದರು.
ಇಂತಪ್ಪ ಪುರಾತನರ ವಚನಂಗಳ ಎರಡಿಲ್ಲದೆ ಕೊಂಡಾಡಿ
ತನು ಮನ ಧನವ ಎರಡಿಲ್ಲದೆ ಸಮರ್ಪಿಸುವ,
ಭಕ್ತರ ಭಕ್ತ ನಾನು, ಆಳಿನಾಳಯ್ಯಾ ನಾನು,
ಕೂಡಲಚೆನ್ನಸಂಗನ ಶರಣರು ಸಾಕ್ಷಿಯಾಗಿ/881
ನಮ್ಮ ಗುರುಗಳ ಸನ್ನಿದಿಯಲ್ಲಿ ನಿಮ್ಮ ಗುರುಗಳು ಪಲ್ಲಕ್ಕಿಯನೇರುವರೆಂತು ?
ನಮ್ಮ ಗುರುಗಳ ಸನ್ನಿದಿಯಲ್ಲಿ ನಿಮ್ಮ ಗುರುಗಳು ಮೆರೆವರೆಂತು ?
ಅವರ ಮೆರವಣಿಗೆಯೆ ಎನ್ನ ಮೆರವಣಿಗೆ,
ಅವರಾನಂದವೆ ಎನ್ನಾನಂದ ಕಾಣಾ
ಕೂಡಲಚೆನ್ನಸಂಗನ ಶರಣ ಸಿದ್ಧರಾಮಯ್ಯಾ./882
ನಮ್ಮ ಪುರಾತನರ ವಚನಂಗಳನೆಲ್ಲ ಓದದೆ ಇದ್ದಾರು,
ಓದಿಯೂ ನಂಬಿಗೆ ಇಲ್ಲದೆ ಇದ್ದಾರು, ನೂರಕ್ಕೊಬ್ಬರಲ್ಲದೆ ನಂಬರು,
ನಮ್ಮ ಆದ್ಯರ ವಚನಂಗಳ ಜರೆದಾರು, ತಮ್ಮ ಕವಿತ್ವವ ಮೆರೆದಾರು,
ನಮ್ಮ ಆದ್ಯರ ವಚನಂಗಳಿಂದೊದವಿದ ಜ್ಞಾನವೆಂಬುದನರಿಯರು.
ತಾಯಿಯಿಂದ ಮಕ್ಕಳಾದರೆಂಬುದನರಿಯರು.
ಊರೆಲ್ಲಕ್ಕೆ ಹುಟ್ಟಿದ ಹಾಗೆ ನುಡಿದಾರು
ನಮ್ಮ ಪುರಾತನರ ವಚನವೆ ತಾಯಿ ತಂದೆ ಎಂದರಿಯರು.
ನಮ್ಮ ಆದ್ಯರ ವಚನ ಜ್ಞಾನದ ನೆಲೆಯ ತೆಗೆದಿರಿಸಿತ್ತು
ನಮ್ಮ ಆದ್ಯರ ವಚನ ಮದ ಮಾತ್ಸರ್ಯಾದಿ ಅರಿಷಡ್ವರ್ಗ ಸಪ್ತವ್ಯಸನ
ಪಂಚೇಂದ್ರಿಯ ದಶವಾಯುಗಳಿಚ್ಛೆಗೆ ಹರಿವ ಮನವ ಸ್ವಸ್ಥವಾಗಿ ನಿಲಿಸಿತ್ತು
ನಮ್ಮ ಆದ್ಯರ ವಚನ ಅಂಗೇಂದ್ರಿಯಂಗಳ ಲಿಂಗೇಂದ್ರಿಯಂಗಳೆನಿಸಿತ್ತು.
ನಮ್ಮ ಆದ್ಯರ ವಚನ ನೂರೊಂದುಸ್ಥಲವ ಮೀರಿದ ಮಹದಲ್ಲಿ ನೆಲಸಿತ್ತು.
ನಮ್ಮ ಆದ್ಯರ ವಚನ ಇನ್ನೂರಹದಿನಾರು ಲಿಂಗಕ್ಕೆ
ಸರ್ವೆಂದ್ರಿಯವ ಸನ್ಮತವ ಮಾಡಿ,
ಸಾಕಾರವ ಸವೆದು ನಿರಾಕಾರವನರಿದು ನಿರವಯಲ ನಿತ್ಯಸುಖದಲ್ಲಿರಿಸಿತ್ತು.
ಇಂತಪ್ಪ ಆದ್ಯರ ವಚನಭಂಡಾರವ,
ನಮ್ಮ ಪ್ರಭುದೇವರು ಮುಖ್ಯವಾದ ಏಳುನೂರೆಪ್ಪತ್ತು ಅಮರಗಣಂಗಳು
ಅಂಖ್ಯಾತ ಪುರಾತನರು, ಪ್ರಮಥಗಣಂಗಳು ಕೇಳಿ ಹೇಳಿ ಕೊಂಡಾಡಿದ ಕಾರಣ
ನಮ್ಮ ಕೂಡಲಚೆನ್ನಸಂಗಯ್ಯನಲ್ಲಿ
ಸರ್ವಸುಖವ ಸೂರೆಗೊಂಡು ಸ್ವಯಲಿಂಗವಾದರು/883
ನಮ್ಮ ಶರಣ ಅಂತರಂಗದ ಅಷ್ಟವಿಧಾರ್ಚನೆಯ ಮಾಡಿ
ಸುಜ್ಞಾನದೃಷ್ಟಿಯಿಂದ ನೋಡಲು
ಆ ಜ್ಯೋತಿರ್ಲಿಂಗ ಒಂದೆರಡಾಯಿತ್ತು ಎರಡು ಮೂರಾಯಿತ್ತು;
ಮೂರಾರಾಯಿತ್ತು; ಆರೊಂಬತ್ತಾಯಿತ್ತು, ಒಂಬತ್ತು ಹದಿನೆಂಟಾಯಿತ್ತು;
ಹದಿನೆಂಟು ಮೂವತ್ತಾರಾಯಿತ್ತು; ಆ ಮೂವತ್ತಾರೆ ಇನ್ನೂರ ಹದಿನಾರಾಯಿತ್ತು.
ಇನ್ನೂರ ಹದಿನಾರೆ ಸಾವಿರದೇಳನೂರಿಪ್ಪತ್ತೆಂಟಾಯಿತ್ತು.
ಆ ಲಿಂಗಂಗಳೆ ಶರಣನ ರೋಮದ ಕುಳಿಯಲ್ಲಿ ನಿಂದು ಸರ್ವಾಂಗ ಲಿಂಗವಾಯಿತ್ತು.
ಆ ಲಿಂಗ ಶರಣಂಗೆ ಚೈತನ್ಯವಾಯಿತ್ತು. ಆ ಶರಣನೆ ಲಿಂಗಕ್ಕೆ ಚೈತನ್ಯವಾಗಲು,
ಶರಣಸತಿ ಲಿಂಗಪತಿಯೆಂಬೆರಡಳಿದು ಒಬ್ಬ ಶರಣನೆ ಉಳಿಯಲು
ಆ ಶರಣನ ಪಾದೋದಕವೆ ಲಿಂಗಕ್ಕೆ ಅಬಿಷೇಕವಾಯಿತ್ತು.
ಆ ಶರಣನ ಪಾದಕ್ಕರ್ಪಿಸಿದ ಕುಸುಮವೆ ಪ್ರಸಾದಪುಷ್ಫವಾಯಿತ್ತು.
ಆ ಶರಣನ ಪಾದಕ್ಕರ್ಪಿಸಿದ ಗಂಧಾಕ್ಷತೆಯೆ,
ತಾಂಬೂಲವೆ ಲಿಂಗಪ್ರಸಾದಗಳಾದವು.
ಆ ಶರಣನ ಸನ್ನಿದಿಯಲ್ಲಿ ಪ್ರಕಾಶವಾದ ಧೂಪದೀಪಂಗಳೆ ಲಿಂಗದ್ರವ್ಯಂಗಳಾಗಿ
ಆ ಶರಣನ ಪಾದಪೂಜಾದ್ರವ್ಯವೆ ಲಿಂಗಪೂಜಾದ್ರವ್ಯವಾಗಿ ಆಚರಿಸುತಿರ್ದಲ್ಲಿ
ಶರಣಸತಿ ಲಿಂಗಪತಿ ಎಂಬ ನ್ಯಾಯ ಒಂದಾಯಿತ್ತು. ಲಿಂಗ ಹಿರಿದು ಅಂಗ ಕಿರಿದು
ಎಂಬ ನ್ಯಾಯ ಇಲ್ಲದೆ ಹೋಯಿತ್ತು- ಅದೆಂತೆಂದಡೆ;
ದೀಪದಿಂದ ದೀಪ ಹುಟ್ಟಿದಲ್ಲಿ, ಆವ ಆವ ದೀಪ ಮೊದಲೆಂಬುದು ಕಾಣದಂತೆ;
ಸರ್ಪ ಕಚ್ಚಿದ ಮನುಷ್ಯನ ಅಂಗವಿಷ,
ಒಂದರ ಠಾವಿನಲ್ಲಿದೆಯೆಂದು ಕುರುಹಿಡಬಾರದಂತೆ,
ಲಿಂಗ ಪ್ರಾಣವಾದ ಶರಣಂಗೆ,
ಶರಣ ಪ್ರಾಣವಾದ ಲಿಂಗಕ್ಕೆ ಭೇದವಿಲ್ಲ-
ಹರಗುರು ವಾಕ್ಯದಲ್ಲಿ ಶರಣ- ಲಿಂಗಾದಾಚರಣೆ ಇಂತಿಹುದು.
ಈ ಶರಣ- ಲಿಂಗದೂಷಣೆಯ ಮಾಡುವ ದ್ರೋಹಿಗಳಿಗೆ
ನಾಯಕನರಕ ತಪ್ಪದು, ಕೂಡಲಚೆನ್ನಸಂಗಮದೇವಾ/884
ನಯನಾಗ್ರದ ನೋಟದ ಸುಖವ ಲಿಂಗಾರ್ಪಿತವೆಂಬರು,
ನಾಸಿಕಾಗ್ರ ಪರಿಮಳದ ಸುಖವ ಲಿಂಗಾರ್ಪಿತವೆಂಬರು,
ಶ್ರೋತ್ರಾಗ್ರದ ಕೇಳುವ ಸುಖವ ಲಿಂಗಾರ್ಪಿತವೆಂಬರು,
ಜಿಹ್ವಾಗ್ರದ ರುಚಿಯ ಸುಖವ ಲಿಂಗಾರ್ಪಿತವೆಂಬರು,
ಮುಟ್ಟುವ ತ್ವಕ್ಕಿನ ಸುಖವ ಲಿಂಗಾರ್ಪಿತವೆಂಬರು.
ಇದು ಲಿಂಗಾರ್ಪಿತವೆ? ಅರ್ಪಿತವ ಮಾಡದೆ,
ಅನರ್ಪಿತವ ಹೊದ್ದದೆ, ಅರ್ಪಿಸಬೇಕು,
ಅರ್ಪಿಸುವ ಭಾವನೆವುಳ್ಳನ್ನಕ್ಕ ಶರಣೆನಿಸಬಾರದು,
ಕೂಡಲಚೆನ್ನಸಂಗಮದೇವಾ./885
ನರರಿಗೆಯ್ದೆ ಗುರುವಪ್ಪ ಹಿರಿಯರು, ನೀವು ಕೇಳಿರೆ !
ನಿಮ್ಮ ಗುರುತನ ಕೆಟ್ಟು ಶಿಷ್ಯನ ಶಿಷ್ಯತನವ ಕೆಡಿಸಬಲ್ಲರೆ,
ಅವರ ಹಿರಿಯರೆಂಬೆ, ಕೂಡಲಚೆನ್ನಸಂಗಮದೇವಾ/886
ನರರು ಸುರರು ನವಕೋಟಿಯುಗಗಳ ಪ್ರಳಯಕ್ಕೆ ಒಳಗಾಗಿ ಹೋದರು,
ಒಳಗಾಗಿ ಹೋಹಲ್ಲಿ ಸುರಪತಿಗೆ ಪರಮಾಯು ನೋಡಿರೆ !
ಅಂಥ ಸುರಪತಿ ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ,
ಚಿಟ್ಟಜನೆಂಬ ಋಷಿಗೆ ಒಂದು ಚಿಟ್ಟು ಸಡಿಲಿತ್ತು ನೋಡಿರೆ !
ಅಂಥ ಚಿಟ್ಟನೆಂಬ ಋಷಿ ನವಕೋಟಿಯುಗ
ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ
ಚಿಪ್ಪಜನೆಂಬ ಋಷಿಗೆ ಒಂದು ಚಿಪ್ಪು ಸಡಿಲಿತ್ತು ನೋಡಿರೆ !
ಅಂಥ ಚಿಪ್ಪಜನೆಂಬ ಋಷಿ ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ
ಡೊಂಕಜನೆಂಬ ಋಷಿಗೆ ಒಂದು ಡೊಂಕು ಸಡಿಲಿತ್ತು ನೋಡಿರೆ !
ಅಂಥ ಡೊಂಕಜನೆಂಬ ಋಷಿ ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ
ರೋಮಜನೆಂಬ ಋಷಿಗೆ ಒಂದು ರೋಮ ಸಡಿಲಿತ್ತು ನೋಡಿರೆ !
ಅಂಥ ರೋಮಜನೆಂಬ ಋಷಿ
ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ
ಆದಿಬ್ರಹ್ಮಂಗೆ ಆಯುಷ್ಯವು ನೂರಾಯಿತ್ತು ನೋಡಿರೆ !
ಅಂಥ ಆದಿಬ್ರಹ್ಮ ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ
ಆದಿನಾರಾಯಣಂಗೆ ಒಂದು ದಿನವಾಯಿತ್ತು ನೋಡಿರೆ !
ಅಂಥ ಆದಿ ನಾರಾಯಣ ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ
ರುದ್ರಂಗೆ ಕಣ್ಣೆವೆ ಹಳಚಿತ್ತು ನೋಡಿರೆ !
ಅಂಥ ರುದ್ರರು ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ
ಫಣಿಮುಖರೊಂದು ಕೋಟಿ, ಪಂಚಮುಖರೊಂದು ಕೋಟಿ,
ಷಣ್ಮಮುಖರೊಂದು ಕೋಟಿ, ಸಪ್ತಮುಖರೊಂದು ಕೋಟಿ
ಅಷ್ಟಮೂಖರೊಂದು ಕೋಟಿ, ನವಮುಖರೊಂದು ಕೋಟಿ
ದಶಮುಖರೊಂದು ಕೋಟಿ- ಇಂತಿವರೆಲ್ಲರ
ಕೀರೀಟದಾಭರಣಂಗಳು ಬಿದ್ದವು ನೋಡಿರೆ !
ಅಂಥ ಸಪ್ತಕೋಟಿಗಳು ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ
ನಂದಿವಾಹನರೊಂದು ಕೋಟಿ, ಭೃಂಗಿ ಪ್ರಿಯರೊಂದು ಕೋಟಿ
ಚಂದ್ರಪ್ರಿಯರೊಂದು ಕೋಟಿ- ಇಂತೀ ತ್ರಿಕೋಟಿಗಳ ತಲೆಗಳು
ಬಾಗಿದವು ನೋಡಿರೆ !
ಅಂಥ ತ್ರಿಕೋಟಿಗಳ ತಲೆಗಳು ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ
ಕೂಡಲಚೆನ್ನಸಂಗಯ್ಯಾ
ನಮ್ಮ ಬಸವಣ್ಣನೀ ಸುದ್ದಿಯನೇನೆಂದುವರಿಯನು/887
ನರಸುರಾದಿಗಳೆಲ್ಲರು ನಿಮ್ಮ ಹೊರೆಯೊಳಗಿದ್ದರು,
ಮನು ಮುನಿ ಯತಿ ವ್ರತಿಗಳೆಲ್ಲರು ನಿಮ್ಮ ತೋಹಿನೊಳಗಿದ್ದರು.
ಗಂಗೆವಾಳುಕರೆಲ್ಲರು ನಿಮ್ಮ ಮಡಿಯೊಳಗಿದ್ದರು.
ಗಂಗೆ ಗೌರೀವಲ್ಲಭರೆಲ್ಲರು, ಚತುಮರ್ುಖ, ಪಂಚಮುಖ,
ಷಣ್ಮಖ, ದಶಮುಖರೆಲ್ಲರು ನಿಮ್ಮ ಮಡಿಯ ಗಳಿಗೆಯೊಳಗಿದ್ದರು.
ಲೋಕಾದಿ ಲೋಕವೆಲ್ಲವು ನಿಮ್ಮ ಕುಕ್ಷಿಯೊಳಗು.
ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ, ನಿಮ್ಮ ನಿರಾಳದ ಪ್ರಸಾದದಿಂದ
ನಿರವಯಲ ಹಾದಿಯ ಕಂಡೆನಲ್ಲದೆ,
ನಿಮ್ಮಿಂದಲಾನು ಘನವೆ ಮಡಿವಾಳ ಮಾಚಯ್ಯಾ ?/888
ನವಖಂಡ ಪೃಥ್ವಿ ಚತುರ್ದಶಭುವನದೊಳಗೆ
ಸ್ಥೂಲವಾವುದು, ಸೂಕ್ಷ್ಮವಾವುದು ಬಲ್ಲವರು ನೀವು ಹೇಳಿರಿ !
ಕಾಲಚಕ್ರವೊ, ಕರ್ಮಚಕ್ರವೊ, ನಾದಚಕ್ರವೊ, ಬಿಂದುಚಕ್ರವೊ.
ಇದರೊಳಗೆ ಆವುದ ಹಿರಿದೆಂಬೆನಾವುದ ಕಿರಿದೆಂಬೆ?
ಬಲ್ಲವರು ನೀವು ಹೇಳಿರೆ !ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದವೆಂಬಡೆ
ಇಕ್ಕಿದ ರಾಟಳ ತುಂಬುತ ಕೆಡಹುತಲಿದ್ದೂದಾಗಿ.
ಕೀಲು ಮುರಿದು, ರಾಟಳ ನಿಂದು, ನಿಶ್ಶೂನ್ಯವಾಗಿ
ಕೂಡಲಚೆನ್ನಸಂಗನಲ್ಲಿ ಮಹಾಪ್ರಸಾದಿ./889
ನವಸೂತ್ರ ಪಟ್ಟಣಕ್ಕೆ ನವದ್ವಾರ ಬೀದಿಯೊಳು,
ನವ ಲಿಂಗಸ್ಥಾವರಕ್ಕೆ ನವ ಕಳಸವು
ನವದೀಪ, ನವಧೂಪ, ನವಮಂತ್ರ, ನವಪೂಜೆ, ನವಜಪ
ನಮೋ ನಮೋ ಎನುತಿರ್ದೆನು ಕೂಡಲಚೆನ್ನಸಂಗಯ್ಯಾ
ನಿಮ್ಮ ಬಸವಣ್ಣಂಗೆ./890
ನಾಥನು ಅನಾಥನು ಪುಣ್ಯನಾಥನು ಕರುಣಾಕರನೆಂಬ
ಶಬ್ದಂಗಳ ಮನಕ್ಕೆ ತಾರದ ಪ್ರಸಾದಿ,
ಸ್ಥಾಪ್ಯಾಯನ, ಸ್ತಂಭ ಆ ಎರಡರ ಅನ್ವಯವಳಿದ ಪ್ರಸಾದಿ,
ಅಂಗ ಲಿಂಗೈಕ್ಯವೆಂಬ ನುಡಿಯ ಹಂಗಿಲ್ಲದ ಪ್ರಸಾದಿ.
ಇದು ಕಾರಣ, ಕೂಡಲಚೆನ್ನಸಂಗಯ್ಯಾ,
ನಾನೆನ್ನದ ಪ್ರಸಾದಿ./891
ನಾದದಿಂದಾದ ಸಂಗ ವಿನೋದಸಂಗ,
ಬಿಂದುವಿನಿಂದಾದ ಸಂಗ ಬದ್ಧಕ್ರಿ.
ದ್ವಯ, ಅದ್ವಯದಿಂದಾದ ಸಂಗ ಪರಿಭಾವ.
ಗಮಿಸುವುದೆ ನಿರವಯವು, ಬಯಸದಿರಾ ! ಬೇರೆ ಮತ್ತಿಲ್ಲ,
ಅನುಭಾವವೆಂಬ ಘನಮಹಿಮೆಯ ನೆಮ್ಮಿತ್ತೆ ಆಯಿತ್ತು;
ಆ ನಾದದ ನಿಶ್ಚಿಂತನಿಲವನರಿಯಿತ್ತೆ ಆಯಿತ್ತು.
ಇದು ನಿಮ್ಮ ಕಲ್ಪನೆ, ಆದಿ ಅಂತ್ಯವ ಬಲ್ಲಡೆ, ಬಲ್ಲನು.
ಅವಚಿತ್ತದ ಅವಧಾನದ, ಅಹುದೆಂಬ ಅಲ್ಲವೆಂಬ, ಉಂಟೆಂಬ ಇಲ್ಲವೆಂಬ
ಈ ಎರಡರ ಮಥನವಲ್ಲ ಕೇಳಿರಯ್ಯಾ.
ಚೆಂದಗೆಡದ ಮುನ್ನ ಬೇಗಮಾಡಿ ತಿಳಿದಿರಾದಡೆ
ಬಸವನಂತೆ ಭಾವ, ಬಸವನಂತೆ ಮನ,
ಬಸವನ ಪದವಿಡಿದಡೆ ಇದೇ ಪಥ ಕಾಣಾ
ಕೂಡಲಚೆನ್ನಸಂಗಮದೇವಾ/892
ನಾನಾ ಜನ್ಮಾಂತರದಿಂದ ಮಾನವರಾಗಿ ಪುಟ್ಟಿ,
ಜಪದಿಂದ ಧ್ಯಾನದಿಂದ ತಪದಿಂದ ಸಮಾದಿಯಿಂದ
ದೇವಾ, ನಿಮ್ಮನರಿದೆನೆಂದು ಬಳಲುತ್ತಿದ್ದರು.
“ಜನ್ಮಾಂತರ ಸಹಸ್ರೇಷು ತಪೋಧ್ಯಾನ ಸಮಾದಿ ಬಿಃ
ನರಾಣಾಂ ಕ್ಷೀಣಪಾಪಾನಾಂ ಶಿವಭಕ್ತಿಃ ಪ್ರಜಾಯತೇ ‘
ಇಂತೆಂದುದಾಗಿ ಪಾಪಂಗಳು ಕೆಟ್ಟಲ್ಲದೆ,
ನಿಮ್ಮ ಭಕ್ತರಾಗರಯ್ಯಾ
ಕೂಡಲಚೆನ್ನಸಂಗಮದೇವಾ. /893
ನಾನಾ ವಿಲಾಸದ ಜಪವ ಬಿಟ್ಟು ತಪಸಿಯಾಗಿ,
ಕರಿಯ [ಕ]ತ್ತರಿಸಿ, ಕರಣನಾಳದ ಗಂಟಲ ಮುಳ್ಳ ಕಿತ್ತು
ಗಡ್ಡ, ಮಂಡೆಯ ಕೇಶವ ಸವರಿ
ಜ್ಞಾನವೆಂಬ ದಂಡವಂ ಪಿಡಿದು ವೇಳರಿಸಿ
ಕರಪಾತ್ರತಿವಿತ[ದಿಂ] ಮೂವರು ಜ್ವಾಲೆಯವರ ಜಾಡಿಸಿ
ಜೋಡಿ ಜವಳಿ ಪರನಾದನಾಗಿ ಲೀಲಾಂಗನ ವಿಲಾಸದವರಂತೆ
ಹಾದುಣ್ಣದೆ ಒದ್ದು ?
ಲಿಂಗಾಂಗಿಗಳಲ್ಲಿ ಕ್ಷುಧಾತೃಷ್ಣೆಯರತು, ಮೂಸಿದ ಮಸಿಯಳಿದು
ವಿಚಾರ ಅವಿಚಾರಿ ಅನಾಚಾರಸಂಹಾರಿ
ಲಿಂಗಾಲಿಂಗಾಂಗಿ ಲಿಂಗಾರ್ಪಿತ ಶಬ್ದ ಅಕ್ಷಯನ ನಿರೀಕ್ಷಿಸುತ್ತ
ಕುಕ್ಷಿಯ ಕುಕ್ಕಿರದೆ ಹೇಮಲೋಲಚಾಲನು,
ತುತ್ತಿಂಗೆ ಕೂಳನಾಯ್ವ ಲಾಳಭಂಜಕರನೊಲ್ಲೆನೆಂದ
ಕೂಡಲ[ಚೆನ್ನಸಂಗ]ಯ್ಯನು/894
ನಾನು ನೀನೆಂಬ ಮೋಹವೆಲ್ಲಿಯದೊ ?
ನಿರ್ಭಾವವೆಂಬ ಪ್ರಸಂಗವೆಲ್ಲಿಯದು ಹೇಳಾ ?
ಮನಲೀಯ, ಉಭಯಭಾವರಹಿತ
ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯವು./895
ನಾನು ಮೆಟ್ಟುವ ಭೂಮಿಯ ಭಕ್ತನ ಮಾಡಿದಲ್ಲದೆ ಮೆಟ್ಟೆನಯ್ಯಾ.
ನಾ ನೋಡುತಿಹ ಆಕಾಶದ ಚಂದ್ರಸೂರ್ಯರ
ಭಕ್ತರ ಮಾಡಿದಲ್ಲದೆ ನಾ ನೋಡೆನಯ್ಯಾ.
ಜಲವ ಭಕ್ತನ ಮಾಡಿದಲ್ಲದೆ ನಾನು ಬಳಸೆನಯ್ಯಾ,
ನಾನು ಕೊಂಬ ಹದಿನೆಂಟು ಧಾನ್ಯವ ಭಕ್ತನ ಮಾಡಿದಲ್ಲದೆ
ಕೊಳ್ಳೆನು ಕೂಡಲಚೆನ್ನಸಂಗಾ ನಿಮ್ಮಾಣೆ. /896
ನಾನೆಂಬುದಿಲ್ಲ, ನೀನೆಂಬುದಿಲ್ಲ,
ಸ್ವಯವೆಂಬುದಿಲ್ಲ, ಪರವೆಂಬುದಿಲ್ಲ,
ಅರಿವೆಂಬುದಿಲ್ಲ, ಮರಹೆಂಬುದಿಲ್ಲ,
ಒಳಗೆಂಬುದಿಲ್ಲ, ಹೊರಗೆಂಬುದಿಲ್ಲ,
ಕೂಡಲಚೆನ್ನಸಂಗಯ್ಯನೆಂಬ [ಶಬ್ದ]ಮುನ್ನಿಲ್ಲ./897
ನಾನೊಂದ ತೋರಲರಿಯೆನು, ನಾನೊಂದ ಹೇಳಲರಿಯೆನು,
ನಾನೊಂದ ಸ್ಥಲವಿಡಲರಿಯೆನು, ಕುಲವಿಡಲರಿಯೆನು.
ಕೂಡಲಚೆನ್ನಸಂಗಮದೇವರಲ್ಲಿ
ಮಡಿವಾಳನ ನಿಲವ ನಾನೆತ್ತ ಬಲ್ಲೆನಯ್ಯಾ ಸಂಗನಬಸವಣ್ಣಾ ?/898
ನಾರಾಯಣ ತನ್ನ ಲೋಕದಲ್ಲಿ ಮಾಡಿದ ಮಂಟಪದಂತಲ್ಲ,
ಇಂದ್ರ ನಿಜವನದಲ್ಲಿ ಮಾಡಿದ ಮಂಟಪದಂತಲ್ಲ,
ವೀರಭದ್ರ ಬಿಮಾದ್ರಿಯಲ್ಲಿ ರಚಿಸಿದ ಪೂಜಾಮಂಟಪದಂತಲ್ಲ.
ಇಲ್ಲಿರ್ಪ ಮಂಟಪದ ಉದಯವ ನೋಡಿದಡೆ
ಇದರ ವಿಸ್ತಾರ ಅರಿದಯ್ಯಾ ಕೂಡಲಚೆನ್ನಸಂಗಮದೇವಾ/899
ನಾಲ್ಕು ಗ್ರಾಮದ ಪಟ್ಟಣಕ್ಕೆ ಪಂಚೈವರ ಕಾಹು.
ಅವರ ಸಂಚವಿಡಿದು ಲಿಂಗಾರ್ಚನೆಯ ಮಾಡಿದರೆ
ಲೋಕದ ಬಳಕೆ ಕಂಡಯ್ಯಾ.
ಪಂಚೈವರ ಪಂಚಸ್ಥಳವಳಿದು ಏಕಸ್ಥಳವಾಗಿ
ನವನಾಳದ ಭೇದದ ಪರಿಯರಿದಡೆ ಲಿಂಗೈಕ್ಯ ನೋಡಾ.
ನಾಳ ಮಧ್ಯದಲಿಪ್ಪ ಜೀವಪ್ರಾಣನ ನೆಲೆಯನರಿದಡೆ
ಕೂಡಲಚೆನ್ನಸಂಗನೊಬ್ಬ ಸಾಹಿತ್ಯವಾಗಿಹನು. /900
ನಾಲ್ಕು ವೇದವನೋದಿದ ವಿಪ್ರರ ಮನೆಯ
ಎಣ್ಣೆಹೊಳಿಗೆ ತುಪ್ಪ ಸಕ್ಕರೆ ಎಂದಡೆ
ನಮ್ಮ ಶಿವಭಕ್ತರ ಮನೆಯ ಶ್ವಾನ, ಮೂಸಿನೋಡಿ ಒಲ್ಲದೆ ಹೋಯಿತ್ತು.
ಅದೆಂತೆಂದಡೆ:ಸಾಮವೇದಿ ಹೋಗುತ್ತಿರಲು ಶ್ವಪಚಯ್ಯಗಳು,
ತಮ್ಮ ಪಾಕಕ್ಕೆ ಪಾದರಕ್ಷೆಯ ತೆರೆಯ ಹಿಡಿದಿದ್ದರಾಗಿ.
ಆ ಶ್ವಾನನೆ ಶುಚಿಯೆಂದು ಹಾಕಿದ ಮುಂಡಿಗೆಯ
ಆರಾದಡೂ ಎತ್ತುವಿರೊ, ಜಗದ ಸಂತೆಯ ಸೂಳೆಯ ಮಕ್ಕಳಿರಾ ?
ಜಗಕ್ಕೆ ಪಿತನೊಬ್ಬನೆ ಅಲ್ಲದೆ ಇಬ್ಬರೆಂದು ಬಗಳುವನ ಬಾಯಲ್ಲಿ
ನಮ್ಮ ಪಡಿಹಾರಿ ಉತ್ತಣ್ಣಗಳ ಎಡದ ಪಾದರಕ್ಷೆಯ
ಅವನಂಗಳ ಮೆಟ್ಟಿಕ್ಕುವೆನೆಂದ-ಕೂಡಲಚೆನ್ನಸಂಗಮದೇವ./901
ನಿಃಶಬ್ದ ಲಿಂಗಾನುಭಾವಿ, ಶರಣ ಮುಗ್ಧಾನುಭಾವಿ,
ಪ್ರಸಾದಿ ಪರಿಣಾಮಾನುಭಾವಿ.
ಇಂತೀ ತ್ರಿವಿಧಾನುಭಾವಿ
ಕೂಡಲಚೆನ್ನಸಂಗಾ ನಿಮ್ಮ ಶರಣ. /902
ನಿಜವೆಲ್ಲ ತಾನಾಗಿ, ತಾನೆಲ್ಲ ನಿಜವಾಗಿ, ಒಡಲುಪಾದಿಯೆಂಬುದಿಲ್ಲ ನೋಡಾ,
ನಿಂದಡೆ ನೆಳಲಿಲ್ಲ, ನಡೆದಡೆ ಹೆಜ್ಜೆಯಿಲ್ಲ,
ಅಪರಿಮಿತ ಘನಮಹಿಮನನೇನೆಂಬೆನಯ್ಯಾ !
ಶಬ್ದವರಿದು ಸಾರಾಯನಲ್ಲ, ಗತಿವಿಡಿದು ಜಡನಲ್ಲ, ಎರಡಳಿದುಳಿದ ನಿಶ್ಚಿಂತನು !
ತನಗೆ ತಾ ನಿಜವಾದ ಕೂಡಲಚೆನ್ನಸಂಗಯ್ಯನಲ್ಲಿ
ಪ್ರಭುದೇವರೆಂಬ ಜಂಗಮದ ಪಾದಕ್ಕೆ ನಮೋ ನಮೋ ಎನುತಿರ್ದೆನು./903
ನಿತ್ಯ ನಿರವಯ ನಿರಂಜನ ಪರಂಜ್ಯೋತಿ ಮಹಾಘನ ಪರವಸ್ತು
ಪರಮಲೀಲಾ ವಿನೋದದಿಂದ ಪರಾಶಕ್ತಿಸಂಯುಕ್ತವಾಗಿ
ಪರಾಪರ ವಿನೋದದಿಂದ ಅಖಿಲ ಬ್ರಹ್ಮಾಂಡಾವರಣವಾಯಿತ್ತು.
ಇದನರಿಯದೆ ಶೈವರು ಶಾಕ್ತೇಯರು ವೈಷ್ಣವರು
ಗಾಣಪತ್ಯರು ಸಾರರು, ಕಾಪಾಲಿಕರು,
ಒಂದೊಂದು ಪರಿಯಲ್ಲಿ ಲಕ್ಷಿಸಿ ಹೆಸರಿಟ್ಟು ನುಡಿವರು.
ಇನ್ನು ಶೈವನ ಯುಕ್ತಿ ಎಂತೆಂದಡೆ:
`ಶಿವಸಾಕ್ಷಿಕ, ಶಕ್ತಿ, ತಂತ್ರ, ಜೀವನೋಪಾದಿ’ ಎಂದು.
ಇದು ಕ್ರಮವಲ್ಲ-ಮತ್ತೆ ಹೇಗೆಂದಡೆ:
ಬೀಜವೃಕ್ಷದಂತೆ ಬ್ರಹ್ಮದ ಪರಿಯಾಯ. ಅದೆಂತೆಂದಡೆ:
“ಪತ್ರಪುಷ್ಪಫಲೈರ್ಯುಕ್ತಃ ಸಶಾಖಃ ಪಾದಮೂಲವಾನ್
ಬೀಜೇ ವೃಕ್ಷೋ ಯಥಾ ಸರ್ವಂ ತಥಾ ಬ್ರಹ್ಮಣಿ ಸಂಸ್ಥಿತಂ ‘ ಎಂದುದಾಗಿ.
ಇನ್ನು ಶಾಕ್ತೇಯನ ಯುಕ್ತಿ ಎಂತೆಂದಡೆ:
`ನಾದಬಿಂದು ಸಂಯುಕ್ತ, ಮಂತ್ರರೂಪವಸ್ತು ಜಗತ್ತು ಕರ್ಮರೂಪ.’
ಇದು ಕ್ರಮವಲ್ಲ; ಮತ್ತೆ ಹೇಗೆಂದಡೆ:
ವಾರಿದಿಯ ನೆರೆ ತೊರೆ ತರಂಗದಂತೆ ಬ್ರಹ್ಮದ ಪರಿಯಾಯ; ಅದೆಂತೆಂದಡೆ:
“ಯಥಾ ಫೇನತರಂಗಾಣಿ ಸಮುದ್ರೇ ತೂರ್ಜಿತೇ ಪುನಃ
ಉತ್ಪದ್ಯಂತೇ ವಿಲೀಯಂತೇ ಮಯಿ ಸರ್ವಂ ಜಗತ್ತಥಾ ಎಂದುದಾಗಿ.
ಇನ್ನು ವೈಷ್ಣವನ ಯುಕ್ತಿ ಎಂತೆಂದಡೆ:
`ಕರ್ಮಕರ್ತೃ, ಮಾಯಾದಿನ ಜಗತ್ತು’ ಎಂದು.
ಇದು ಕ್ರಮವಲ್ಲ, ಮತ್ತೆ ಹೇಗೆಂದಡೆ:
“ರೂಪಾದಿ ಸಕಲಂ ವಿಶ್ವಂ ವಿಶ್ವರೂಪಾದಿಕಃ ಪರಃ
ಸರ್ವಾದಿ ಪರಿಪೂರ್ಣತ್ವಂ ಪರವಸ್ತು ಪ್ರಮಾಣತಃ ಎಂದುದಾಗಿ.
ಇನ್ನು ಗಾಣಪತ್ಯನ ಯುಕ್ತಿ ಎಂತೆಂದಡೆ:
`ಅತೀತವೆ ವಸ್ತು, ಜಗತ್ತು ಮಾಯಾತಂತ್ರ’ ಎಂದು.
ಇದು ಕ್ರಮವಲ್ಲ; ಮತ್ತೆ ಹೇಗೆಂದಡೆ:
“ಪರಾದಿನಂ ಜಗತ್ಸರ್ವಂ ಪರಿಣಾಮೋತ್ತರಃ ಪ್ರಭುಃ
ಯದ್ವಿಲಾಸೋ ವಿಲಾಸಾಯ ಮಹತೋ ನ ಚ ವಹ್ನಿವತ್ ಎಂದುದಾಗಿ.
ಇನ್ನು ಸಾರನಯುಕ್ತಿ ಎಂತೆಂದಡೆ:
`ಘಟಾದಿ ಮೂಲ ಬಿಂದು, ದಿಟವಪ್ಪುದೆ ನಾದ ಎಂದು,
ಇದು ಕ್ರಮವಲ್ಲ; ಮತ್ತೆ ಹೇಗೆಂದಡೆ:
“ನಾದಾತೀತಮಿದಂ ವಿಶ್ವಂ ಬಿಂದ್ವತೀತೋ ಸ್ವಯಂ ಪ್ರಭುಃ
ಅನಾಮಯೋ ನಿರಂಜನೋ ನಿಶ್ಚಯಃ ಪರಮೇಶ್ವರಃ ಎಂದುದಾಗಿ.
ಇನ್ನು ಕಾಪಾಲಿಕನ ಯುಕ್ತಿ ಎಂತೆಂದಡೆ:
`ಜೋಗೈಸುವ ವಿಶ್ವಂ ಮಹಾಜೋಗಿ ಜೋಗೈವ ಈಶಂ’ ಎಂದು.
ಇದು ಕ್ರಮವಲ್ಲ; ಮತ್ತೆ ಹೇಗೆಂದಡೆ:
“ಬ್ರಹ್ಮಾದಿಸ್ತಂಬಪರ್ಯಂತಂ ಸಿದ್ಧಯೋಗಮುದಾಹೃತಂ
ನಿರಂಜನಂ ನಿರಾಕಾರಂ ನಿರ್ಮಾಯಂ ಪರಮಾಶ್ರಯಂ ಎಂದುದಾಗಿ.
ಪರಾಪರವಸ್ತು ಪರಮಾರ್ಥವಿಲಾಸಿಯಾಗಿ, ಪರಶಕ್ತಿಲೋಲನಾಗಿ,
ಪರಮಾಶ್ರಯ ಪರಿಪೂರ್ಣನಾಗಿ, ನಾನಾವಿಚಿತ್ರವಿನೋದನಾಗಿ,
ಪರಮಾತ್ಮ ಅಂತರಾತ್ಮನಾಗಿ, ಅಂತರಾತ್ಮ ಜೀವಾತ್ಮನಾಗಿ,
ಜೀವಾತ್ಮ ಅಖಿಲಾತ್ಮನಾಗಿ, ಅಖಿಲಾತ್ಮ ಏಕಾತ್ಮನಾಗಿ-
ನಿರಂಜನ ನಿರುಪಮ ನಿರ್ವಿಕಾರ ನಿತ್ಯಾನಂದ ನಿಶ್ಚಲ ನಿಶ್ಚಿಂತ ನಿರಾಳ
ನಿಜಾತ್ಮಸುಖ ನೀನೇ ಕೂಡಲಚೆನ್ನಸಂಗಮದೇವಾ/904
ನಿತ್ಯನೆಂಬ ಭಕ್ತನ ಮನೆಗೆ ಘನಚೈತನ್ಯವೆಂಬ ಜಂಗಮ ಬಂದಡೆ,
ಜಲವಿಲ್ಲದ, ಜಲದಲ್ಲಿ ಪಾದಾರ್ಚನೆಯ ಮಾಡಿದಡೆ,
ಮಾಡಿದ ಆ ಪಾದೋದಕವೆ ಮಹಾಪದವಯ್ಯಾ,
ಸ್ವಚ್ಛಾನಂದಜಲೇ ನಿತ್ಯಂ ಪ್ರಕ್ಷಾಲ್ಯ ಚರಪಾದುಕಾಂ
ತಚ್ಚ ಪಾದೋದಕಂ ಪೀತ್ವಾ ಸ ಮುಕ್ತೋ ನಾತ್ರ ಸಂಶಯಃ
ಎಂದುದಾಗಿ,
ಆ ಪಾದೋದಕದಲ್ಲಿ ಪರಮಪರಿಣಾಮಿ
ಕೂಡಲಚೆನ್ನಸಂಗಾ ನಿಮ್ಮ ಶರಣ. /905
ನಿಧಾನವನಗೆವೆನೆಂದು ಹೋದರೆ
ವಿಘ್ನ ಬಪ್ಪುದು ಮಾಬುದೆ ಯ್ಯಾ ರಿ ?
ಸದಾಶಿವನ ಪೂಜಿಸುವೆನೆಂದು ಹೋದಡೆ
ಕದುಬಿ ಹಿಡಿವವಯ್ಯಾ ಸಕಲ ವಿಪತ್ತುಗಳು.
ಎದೆ ಭಂಗವಿಲ್ಲದೆ ನಿಲ್ಲಬಲ್ಲಡೆ
ಸದಮಲ ಸುಖವನೀವ ನಮ್ಮ ಕೂಡಲಚೆನ್ನಸಂಗಮದೇವ./906
ನಿಮನಿಮಗೆಲ್ಲಾ ಬಲ್ಲೆವೆಂದೆಂಬಿರಿ.
ಹರಿ ಹತ್ತು ಭವಕ್ಕೆ ಬಂದಲ್ಲಿ, ಅಜನ ಶಿರವರಿದಲ್ಲಿ
ಅಂದೆಲ್ಲಿಗೆ ಹೋದವೋ ನಿಮ್ಮ ವೇದಶಾಸ್ತ್ರಾಗಮ ಪುರಾಣಂಗಳೆಲ್ಲಾ.
ಚೆನ್ನಯ್ಯನ ಕೈಯಲ್ಲಿ ಹಾಗವನೆ ಕೊಟ್ಟು
ಕಂಕಣದ ಕೈಯ ಕಂಡು ಧನ್ಯರಾಗಿರೆ ನೀವುರಿ
ಮಾತಂಗಿಯ ಮಕ್ಕಳೆಂದು, ಗಗನದಲ್ಲಿ ಸ್ನಾನವ ಮಾಡೆ
ಆಕಾಶದಲ್ಲಿ ಧೋತ್ರಂಗಳು ಹಾರಿ ಹೋಗಲಾಗಿ
ನಮ್ಮ ಶ್ವಪಚಯ್ಯಗಳ ಕೈಯಲ್ಲಿ ಒಕ್ಕುದ ಕೊಂಡು
ಧನ್ಯರಾಗರೆ ಸಾಮವೇದಿಗಳಂದು ?
ನಿಮ್ಮ ನಾಲ್ಕು ವೇದವನೋದದೆ ನಮ್ಮ ಭಕ್ತರ ಮನೆಯ `ಕಾಳನು ?-
ಇದು ಕಾರಣ:ನಮ್ಮ ಕೂಡಲಚೆನ್ನಸಂಗನ ಶರಣರ ಮುಂದೆ
ಈ ಒಡ್ಡುಗಳ ಮಾತ ಪ್ರತಿ ಮಾಡಬೇಡ. /907
ನಿಮ್ಮ ಅಂಗದಲ್ಲಿರ್ದ ಅವಗುಣಂಗಳ ವಿಚಾರಿಸದೆ
ಜಂಗಮದಲ್ಲಿ ಅವಗುಣವ ವಿಚಾರಿಸುವ ದುರಾಚಾರಿಗಳು ನೀವು ಕೇಳಿರೆ
ಅದೆಂತು ಅಂಗದಲ್ಲಿ ಅನಾಚಾರವುಂಟೆಂಬುದ,
ನಾನು ವಿಚಾರಿಸಿ ಪೇಳುವೆನು ಕೇಳಿರೆ:
ನೀವು ಪರಸ್ತ್ರೀಯರ ನೋಡುವ ಕಣ್ಣುಗಳನೊಳಗಿಟ್ಟುಕೊಂಡಿರ್ಪುದು
ನಿಮ್ಮದಾಚಾರವೆ ಹೇಳಿರಣ್ಣಾ ಅನಾಚಾರವಲ್ಲದೆ ?
ತನ್ನ ಸ್ತ್ರೀಯಲ್ಲದೆ ಅನ್ಯಸ್ತ್ರೀಯಲ್ಲಿ ಆಚರಿಸುವುದು
ನಿಮ್ಮದಾಚಾರವೆ ಹೇಳಿರಣ್ಣಾ ಅನಾಚಾರವಲ್ಲದೆ ?
ಅಂಗದ ಮೇಲಣ ಲಿಂಗವ ಪೂಜಿಸಿ ಜಂಗಮವ ನಿಂದಿಸುವುದು
ನಿಮ್ಮದಾಚಾರವೆ ಹೇಳಿರಣ್ಣಾ ಅನಾಚಾರವಲ್ಲದೆ ?
ಇನ್ನು ಹೇಳುವಡೆ ಅವಕೇನು ಕಡೆಯಿಲ್ಲ.
ಇದನರಿದು, ನಮ್ಮ ಜಂಗಮಲಿಂಗವ ಮಾಯೆಯೆನ್ನದಿರಿ
ಅಥವಾ ಮಾಯೆಯೆಂದಿರಾದಡೆ, ಆ ದ್ರೋಹ ಲಿಂಗವ ಮುಟ್ಟುವುದು.
ಅದೆಂತೆಂದಡೆ:
ಬೀಜಕ್ಕೆ ಚೈತನ್ಯವ ಮಾಡಿದಡೆ, ವೃಕ್ಷಕ್ಕೆ ಚೈತನ್ಯವಪ್ಪುದು.
ಆ ಅಂತಹ ಬೀಜಕ್ಕೆ ಚೈತನ್ಯವ ಮಾಡದಿರ್ದಡೆ
ವೃಕ್ಷ ಫಲವಾಗದಾಗಿ, ಬೀಜಕ್ಕೆ ಕೇಡಿಲ್ಲ.
ಅದು ನಿಮಿತ್ತವಾಗಿ, ಬೀಜವೆ ಜಂಗಮಲಿಂಗವು.
ಆ ಜಂಗಮಲಿಂಗವೆಂಬ ಬೀಜವನು ಸುರಕ್ಷಿತವ ಮಾಡಿದಡೆ
ಲಿಂಗವೆಂಬ ವೃಕ್ಷ ಫಲಿಸುವುದಯ್ಯಾ.
ಕೂಡಲಚೆನ್ನಸಂಗಮದೇವಾ./908
ನಿಮ್ಮ ಗುರುಗಳು ಪಲ್ಲಕ್ಕಿಯಲ್ಲಿ,
ನಿಮ್ಮ [ನಮ್ಮರಿ] ಪರಮಗುರು ನಂದಿವಾಹನದಲ್ಲಿ ವಿರಾಜಿಪ ಪರಿ
ನಿನ್ನ ಮನಕ್ಕೆ ವೇದ್ಯವೆ ?
ಗುರುಶಿಷ್ಯರ ಭಾವದ ಗೌರವ ನೀ ಬಲ್ಲೆಯಲ್ಲದೆ
ಮತ್ತಾರಯ್ಯಾ ಕೂಡಲಚೆನ್ನಸಂಗಮದೇವಾ ?/909
ನಿಮ್ಮ ಜಂಗಮವ ಕಂಡು ಉದಾಸೀನವ ಮಾಡಿದಡೆ, ಒಂದನೆಯ ಪಾತಕ.
ನಿಮ್ಮ ಜಂಗಮದ ಸಮಯೋಚಿತವ ನಡೆಸದಿದ್ದಡೆ, ಎರಡನೆಯ ಪಾತಕ.
ನಿಮ್ಮ ಜಂಗಮದ ಕೂಡೆ ಮಾರುತ್ತರವ ಕೊಟ್ಟಡೆ, ಮೂರನೆಯ ಪಾತಕ.
ನಿಮ್ಮ ಜಂಗಮದ ಸಕಲಾರ್ಥಕ್ಕೆ ಸಲ್ಲದಿದ್ದಡೆ, ನಾಲ್ಕನೆಯ ಪಾತಕ.
ನಿಮ್ಮ ಜಂಗಮಕ್ಕೆ ಮಾಡಿದೆನೆಂದು ಮನದಲ್ಲಿ ಹೊಳೆದಡೆ, ಐದನೆಯ ಪಾತಕ.
ನಿಮ್ಮ ಜಂಗಮವು ಅಂಥವರಿಂಥವರೆಂದು ನುಡಿದಡೆ, ಆರನೆಯ ಪಾತಕ.
ನಿಮ್ಮ ಜಂಗಮವೆ ಲಿಂಗವೆಂದು ನಂಬದಿದ್ದಡೆ, ಏಳನೆಯ ಪಾತಕ.
ನಿಮ್ಮ ಜಂಗಮದ ಕೂಡೆ ಸುಖಸಂಭಾಷಣೆಯ ಮಾಡದಿದ್ದಡೆ,
ಎಂಟನೆಯ ಪಾತಕ.
ನಿಮ್ಮ ಜಂಗಮಕ್ಕೆ ಸಕಲ ಪದಾರ್ಥವ ನೀಡದೆ,
ತನ್ನ ಲಿಂಗಕ್ಕೆ ಕೊಡುವುದು ಒಂಬತ್ತನೆಯ ಪಾತಕ.
ನಿಮ್ಮ ಜಂಗಮದ ಪಾದೋದಕ ಪ್ರಸಾದವನು ತಂದು,
ತನ್ನ ಲಿಂಗಕ್ಕೆ ಕೊಟ್ಟು ಕೊಳದಿಹುದು
ಹತ್ತನೆಯ ಪಾತಕ-ಇಂತೀ ಹತ್ತು ಪಾತಕವ ಕಳೆದಲ್ಲದೆ
ಭಕ್ತನಲ್ಲ, ಮಹೇಶ್ವರನಲ್ಲ, ಪ್ರಸಾದಿಯಲ್ಲ, ಪ್ರಾಣಲಿಂಗಿಯಲ್ಲ,
ಶರಣನೈಕ್ಯನೆಂತೂ ಆಗಲರಿಯ.
ಇದು ಕಾರಣ, ಕೂಡಲಚೆನ್ನಸಂಗಮದೇವಾ
ಭಕ್ತಹೀನ ಜಡಜೀವಿಗಳು ನಿಮಗೆಂದೂ ದೂರವಯ್ಯಾ./910
ನಿಮ್ಮ ಭಕ್ತಂಗೆ ಮಲತ್ರಯವಿಲ್ಲ;
ಅದೇನು ಕಾರಣವೆಂದಡೆ;
ತನುವ ಸದಾಚಾರಕ್ಕರ್ಪಿಸಿ, ಮನವ ಮಹಾಲಿಂಗಭಾವದಲಿರಿಸಿ,
ಧನವ ನಿಮ್ಮ ಶರಣರ ದಾಸೋಹಕ್ಕೆ ಸವೆಯಬಲ್ಲವನಾಗಿ-
ಇಂತೀ ತ್ರಿವಿಧವ ತ್ರಿವಿಧಕ್ಕೆ ಕೊಟ್ಟಬಳಿಕ
ಆ ಭಕ್ತನ ತನು ನಿರ್ಮಲ, ಆ ಭಕ್ತನ ಮನ ನಿಶ್ಚಿಂತ,
ಆ ಭಕ್ತನ ಧನ ನಿರ್ವಾಣ.
ಇಂತಪ್ಪ ಭಕ್ತ ಪ್ರಸಾದಕಾಯನಯ್ಯಾ ಕೂಡಲಚೆನ್ನಸಂಗಮದೇವಾ./911
ನಿಮ್ಮ ಭಕ್ತರ ಕಂಡು ಉದಾಸೀನವ ಮಾಡಿದರೆ ಒಂದನೆಯ ಪಾತಕ.
ನಿಮ್ಮ ಭಕ್ತರ ಸಮಯೋಚಿತವ ನಡೆಸದಿದ್ದರೆ ಎರಡನೆಯ ಪಾತಕ.
ನಿಮ್ಮ ಭಕ್ತರೊಡನೆ ಮಾರುತ್ತರವ ಕೊಟ್ಟರೆ ಮೂರನೆಯ ಪಾತಕ.
ನಿಮ್ಮ ಭಕ್ತರ ಸಕಳಾರ್ಥಕ್ಕೆ ಸಲ್ಲದಿದ್ದರೆ ನಾಲ್ಕನೆಯ ಪಾತಕ.
ನಿಮ್ಮ ಭಕ್ತರಿಗೆ ಮಾಡಿದೆನೆಂದು ಮನದಲ್ಲಿ ಹೊಳೆದರೆ ಐದನೆಯ ಪಾತಕ.
ಇಂತೀ ಪಂಚಪಾತಕವ ಕಳೆದುಳಿದ
ಕೂಡಲಚೆನ್ನಸಂಗಾ ನಿಮ್ಮ ಶರಣ. /912
ನಿಮ್ಮಲ್ಲಿ ಸನ್ನಿಹಿತವಲ್ಲದ ತನುವಿನ ಬಿನ್ನ ಭಾವವನೇನ ಹೇಳುವೆನಯ್ಯಾ?
ಲಿಂಗ ಬಿನ್ನಭಾವದ ಮನಸಿನ, ಲಿಂಗ ಬಿನ್ನಭಾವದ ತನುವಿನ
ಅನ್ಯಾಯದಲ್ಲಿ ಅನರ್ಪಿತವಾಯಿತ್ತು.
ಎನ್ನಲ್ಲಿ ಅನುದಿನ ಅಗಲದಿಪ್ಪ
ಕೊಡಲಚೆನ್ನಸಂಗಯ್ಯನೆನ್ನ ಪ್ರಾಣನಾಥನಾಗಿ. /913
ನಿರವಯವಾದಡೆಯೂ
ಭಕ್ತಿಯ ತೋರಿದ ತನುವಿನ ಮೇಲೆ ಮೂರ್ತಿಯಾಯಿತ್ತು.
ಪ್ರಸಾದವಾದಡೆಯೂ ಬಸವಣ್ಣನ ಕರಸ್ಥಳದಲ್ಲಿ ಮೂರ್ತಿಯಾಯಿತ್ತು,
ಪ್ರಸಾದವ ನಾನೆತ್ತ ಬಲ್ಲೆನಯ್ಯಾ ಮಡಿವಾಳ ತೋರಲಿಕೆ ಕಂಡೆನು:
ಭಕ್ತಿಯ ಕಂದೆರೆದು ತೋರಿದ, ಜ್ಞಾನದ ನಿಲುಕಡೆಯ ತೋರಿದ.
ಇದು ಕಾರಣ ಕೂಡಲಚೆನ್ನಸಂಗಯ್ಯಾ
ಮಡಿವಾಳನೂ ಬಸವಣ್ಣನೂ ಪದಾರ್ಥವನಾರೋಗಿಸಿ ಕೊಡುತ
ಕರುಣಿಸಿದ ಪ್ರಸಾದಿಯಾನು. /914
ನಿರಾಲಂಬದಲ್ಲಿ ನಿಜಲಿಂಗ ನಾ(ತಾ)ನೆಂಬ ಮಹದಹಂಕಾರವೆ
ಸಂಸಾರಿಯಾಗಿ ಬಂದು ಬಳಲುವ ಭ್ರಾಂತು ಇನ್ನಾರಿಗೆಯೂ ತಿಳಿಯದಯ್ಯಾ.
ಇನ್ನಾರು ಪರಿಹರಿಸುವರಯ್ಯಾ ಬಸವಣ್ಣನಲ್ಲದೆ?
ಇದು ಕಾರಣ, ಬಸವಣ್ಣನ ಶ್ರೀಪಾದವ ತೋರಿ ಬದುಕಿಸಾ
ಕೂಡಲಚೆನ್ನಸಂಗಮದೇವಾ. /915
ನಿರಾಳ ನಿಶ್ಶೂನ್ಯಲಿಂಗಕ್ಕೆ ಶರಣರು
ತಮ್ಮ ತನುಮನವ ಕೊಡುವುದು
ಇರಿಸಿಕೊಂಡಿಪ್ಪುದು ಕರ್ಮ.
ಈ ಉಭಯ ನಾಸ್ತಿಯಾಗದ ಸುಳುಹು
ಮುಂದೆ ಕಾಡುವುದು ಕಾಣಾ,
ಕೂಡಲಚೆನ್ನಸಂಗಮದೇವಾ/916
ನಿರ್ನಾಮವಾಯಿತ್ತು, ನಿಷ್ಪತ್ತಿಯಾಯಿತ್ತು,
ಅಗಮ್ಯದಲ್ಲಿ ಗಮನಗೆಟ್ಟಿತ್ತು, ನಿಂದಲ್ಲಿ ನಿರಾಳವಾಯಿತ್ತು,
ಕೂಡಲಚೆನ್ನಸಂಗಮದೇವರಲ್ಲಿ ಶಬ್ದಮುಗ್ಧವಾಯಿತ್ತು !/917
ನಿಷ್ಠಾಂಗದಲ್ಲಿ, ದೃಷ್ಟಾಂಗದಲ್ಲಿ, ದ್ರಷ್ಟಂಗದಲ್ಲಿ, ದೃಷ್ಟ್ಯಂಗದಲ್ಲಿ,
ನಷ್ಟಾಂಗದಲ್ಲಿ ಮುಟ್ಟಿ ನಿಷ್ಠೆಯಾದ ಪ್ರಸಾದಿ
ಇಷ್ಟಾನಿಷ್ಟವಾದ ಪ್ರಸಾದಿ, ಪ್ರಸಾದದಿಂದ ಪ್ರಸಾದಿ
ಕೂಡಲಚೆನ್ನಸಂಗಯ್ಯಾ, ಲಿಂಗೈಕ್ಯಪ್ರಸಾದಿ. /918
ನಿಷ್ಠೆ ನಿಬ್ಬೆರಗು ಗಟ್ಟಿಗೊಂಡಡೆ
ಏಕೋಭಾವದಲ್ಲಿ ಸೊಮ್ಮು ಸಂಬಂಧ.
ಆಹ್ವಾನ ವಿಸರ್ಜನ ದುರ್ಭಾವಬುದ್ಧಿ ಲಯವಾದಡೆ, ಆತ ಮಾಹೇಶ್ವರ.
ಗುರುಮುಖದಲ್ಲಿ ಸರ್ವಶುದ್ಧನಾಗಿ ಪಂಚಭೂತದ ಹಂಗಡಗಿದಡೆ
ಆತ ಮಾಹೇಶ್ವರ.
ಪರದೈವ ಮಾನವಸೇವೆ ಪರಸ್ತ್ರೀ ಪರಧನವ ಬಿಟ್ಟು
ಏಕಲಿಂಗನಿಷ್ಠಾಪರನಾಗಿ,
“ದಾಸತ್ವಂ ವೀರದಾಸತ್ವಂ ಭೃತ್ಯತ್ವಂ ವೀರಭೃತ್ಯತಾ
ಸಮಯಃ ಸಕಲಾವಸ್ಥಃ ಸಜ್ಜನಃ ಷಡ್ವಿಧಸ್ತಥಾ
ಎಂಬ ಶ್ರುತ್ಯರ್ಥದಲ್ಲಿ ನಿಹಿತನಾಗಬಲ್ಲಡೆ
ಆತ ಮಾಹೇಶ್ವರನಪ್ಪನಯ್ಯಾ.
ಗುರುಮಾರ್ಗವೆ ತನಗೆ ಸನ್ಮತವಾಗಿ ಇರಬಲ್ಲಡೆ
ಆತ ಮಾಹೇಶ್ವರ.
ಈ ಮತವನರಿಯದ ಮೂಕೊರೆಯರ ಮೆಚ್ಚುವನೆ
ಕೂಡಲಚೆನ್ನಸಂಗಮದೇವ ?/919
ನಿಷ್ಠೆಯುಳ್ಳಾತಂಗೆ ನಿತ್ಯನೇಮದ ಹಂಗೇಕೆ ?
ಸತ್ಯವುಳ್ಳಾತಂಗೆ ತತ್ವವಿಚಾರದ ಹಂಗೇಕೆ ?
ಅರಿವುಳ್ಳಾತಂಗೆ ಅಗ್ಘವಣಿಯ ಹಂಗೇಕೆ ?
ಮನಶುದ್ಧವುಳ್ಳವಂಗೆ ಮಂತ್ರದ ಹಂಗೇಕೆ ?
ಭಾವ ಶುದ್ಧವುಳ್ಳವಂಗೆ ಹೂವಿನ ಹಂಗೇಕೆ ?
ಕೂಡಲಚೆನ್ನಸಂಗಯ್ಯಾ,
ನಿಮ್ಮನರಿದಾತಂಗೆ ನಿಮ್ಮ ಹಂಗೇಕೆ ? /920
ನಿಸ್ಸಾರ (ನಿಃಸ್ವರೂಪರಿ)ನ ಸ್ವರೂಪಕ್ಕೆ ತಂದು
ನಯನಾದಿ ಅನಿಮಿಷ ದೃಷ್ಟವಾದ ಪ್ರಸಾದಿ
ಇಷ್ಟಾನಿಷ್ಟವಾದ ಪ್ರಸಾದಿ, ಪ್ರಸಾದೇನ ಪ್ರಸಾದಿ.
ಇದು ಕಾರಣ ಕೂಡಲಚೆನ್ನಸಂಗಯ್ಯಾ, ಲಿಂಗೈಕ್ಯಪ್ರಸಾದಿ !/921
ನೀ ನಿಲಿಸಿದಲ್ಲಿ ನಾನಂಜೆ ನಾನಂಜೆ ನಾನಂಜೆನಯ್ಯಾ
ಘನವು ಮಹಾಘನಕ್ಕೆ ಶರಣು ಹೊಕ್ಕುದಾಗಿ.
ನೀ ನಿಲಿಸಿದ ಧನದಲ್ಲಿ ನಾನಂಜೆ ನಾನಂಜೆನಯ್ಯಾ,
ಧನವು ಸತಿಸುತ ಮಾತಾಪಿತರಿಗೆ ಹೋಗದಾಗಿ.
ನೀ ನಿಲಿಸಿದ ತನುವಿನಲ್ಲಿ ನಾನಂಜೆ ನಾನಂಜೆನಯ್ಯಾ,
ತನು ಸರ್ವಾರ್ಪಿತದಲ್ಲಿ ನಿಹಿತಪ್ರಸಾದಭೋಗಿಯಾಗಿ,
ಇಂತೆಲ್ಲರ ದಿರಸಮಗ್ರನಾಗಿ,
ಕೂಡಲಚೆನ್ನಸಂಗಮದೇವಾ, ನಿಮಗಾನಂಜೆನು/922
ನೀಡಿ ನೀಡಿ ನಿಜವಿಲ್ಲದೆ ಕೆಟ್ಟೆ,
ಮಾಡಿ ಮಾಡಿ ಮನವಿಲ್ಲದೆ ಕೆಟ್ಟೆನಯ್ಯಾ,
ಅಟಮಟದ ಬೆಂದ ಸಂಸಾರವ ಹಿಡಿದು,
ಒಡಲ ಹೊರೆವೆನೆಂದು ಭವಭಾರಿಯಾದೆನಯ್ಯಾ.
ಕುಹಕವೆಂಬ ಮಡುವಿನ ಕೆಸರೊಳು ಬಿದ್ದು,
ಪಶುವಿನಂತಾದೆನಯ್ಯಾ.
ನನ್ನವಗುಣವ ಸಂಪಾದಿಸದಿರಯ್ಯಾ.
ಎನ್ನ ಭವಪಾಶವ ಹರಿದು,
ಇನ್ನಾದರೂ ಕರುಣಿಸೈ ಮಹಾದಾನಿ
ಕೂಡಲಚೆನ್ನಸಂಗಮದೇವಯ್ಯಾ. /923
ನೀನಳವಡಿಸಿಕೊಟ್ಟುದು ನಿನಗೆ ಅರ್ಪಿತವಯ್ಯಾ,
ಆರೋಗಣೆ ಮಹಾರೋಗಣೆ ಸಕಲಗಣಂಗಳಿಗೆ ಹಿತಾರ್ಥ.
ಕೂಡಲಚೆನ್ನಸಂಗಯ್ಯಾ ನಿನಗೆ ಕ್ಷುತ್ತಿಲ್ಲಾಗಿ
ಅರ್ಪಿತವ ಮಾಡಲಿಲ್ಲ/924
ನೀವಲ್ಲದೆ ಬೇರೆ ಮತ್ತನ್ಯವ ತೋರದಿರು ಕಂಡಾ, ಲಿಂಗವೆ.
ಬೇರೆ ಮತ್ತೊಂದುವನೆನಗೆ ತೋರದಿರು ಕಂಡಾ, ಲಿಂಗವೆ.
ಎನ್ನ ಮನಕ್ಕೆ ಮನವೆ ಸಾಕ್ಷಿ
ಕೂಡಲಚೆನ್ನಸಂಗಯ್ಯಾ ನೀನೆ ಬಲ್ಲೆ. /925
ನೂರನಾಲ್ವತ್ತೆಂಟು ದೇಹ ವಿಕಾರಕ್ಕೆ ಮನವೆ ತೇಜಿ,
ಕರಣಂಗಳೇಳು ಮಾನಿಸ ಸೇನಬೋವರು, ಅಷ್ಟಮದವೆಂಟಾನೆ,
ಮೊದ[ಲ] ನಾಯಕರಿಪ್ಪತ್ತೈವರು.
ಕಾಯಪುರವೆಂಬ ಪಟ್ಟಣದೊಳಗೆ ಅನಾಮಿಕನೆಂಬ ಹೆಸರಿನ
ಲಿಂಗವ ಪೂಜಿಸುವಾತ ಅಜಾತನೆಂಬ ಶರಣ.
ಆ ಶರಣನ ಮತ್ರ್ಯನೆಂದರೆ ನಾಯಕನರಕ ತಪ್ಪದು
ಕೂಡಲಚೆನ್ನಸಂಗಮದೇವಾ. /926
ನೆನಹಿನ ಸುಖವ ನೋಟ ನುಂಗಿತ್ತು, ನೋಟದ ಸುಖವ ಕೂಟ ನುಂಗಿತ್ತು.
ಕೂಟದ ಸುಖವ ಸಮರಸ ನುಂಗಿತ್ತು, ಸಮರಸದ ಸುಖವ ಪರವಶ ನುಂಗಿತ್ತು,
ಪರವಶದ ಸುಖವ ಕೂಡಲಚೆನ್ನಸಂಗಯ್ಯ ತಾನೇ ಬಲ್ಲ./927
ನೆಲನೊಂದೆ ಜಲ[ನೊಂದೆ] ಎಂಬುದ ಎಲ್ಲ ಲೋಕವು ಬಲ್ಲುದು ನೋಡಿರೆ !
ನೆಲ ಶುದ್ಧವೆಂಬಿರಿ:ನೆಲದೊಳಗಿಪ್ಪ ಎಂಬತ್ತುನಾಲ್ಕುಲಕ್ಷ ಜೀವರಾಸಿಗಳು
ಅಲ್ಲಿಯೆ ಹುಟ್ಟಿ ಅಲ್ಲಿ ಮಡಿವವಾಗಿ ಆ ನೆಲ ಶುದ್ಧವಲ್ಲ ನಿಲ್ಲು.
ಜಲ ಶುದ್ಧವೆಂಬಿರಿ:ಜಲದೊಳಗಿಪ್ಪ ಇಪ್ಪತ್ತೊಂದು [ಲಕ್ಷ] ಜೀವರಾಸಿಗಳು
ಅಲ್ಲಿಯೆ ಹುಟ್ಟಿ ಅಲ್ಲಿಯೆ ಮಡಿವವಾಗಿ ಆ ಜಲ ಶುದ್ಧವಲ್ಲ ನಿಲ್ಲು.
ನಿಮ್ಮ ತನು ಶುದ್ಧವೆಂಬಿರಿ; ತನುವಿನೊಳಗಿಪ್ಪ ಅಷ್ಟಮದಗಳೆಂಬ ಭವಿಗಳಂ
ಕಟ್ಟಿ ನಿಲಿಸಲರಿಯಲಿಲ್ಲವಾಗಿ ಆ ತನು ಶುದ್ಧವಲ್ಲ ನಿಲ್ಲು.
ನಿಮ್ಮ ಹಸ್ತಂಗಳು ಶುದ್ಧವೆಂಬಿರಿ:ಒಂದು ಹಸ್ತ ಜಿಹ್ವೆಯೊಳಗಾಡುವದು
ಒಂದು ಹಸ್ತ ಗುಹ್ಯದೊಳಗಾಡುವುದು-[ಆ] ಹಸ್ತಂಗಳು ಶುದ್ಧವಲ್ಲ ನಿಲ್ಲು.
ನಿಮ್ಮ ನಯನಂಗಳು ಶುದ್ಧವೆಂಬಿರಿ:ನಯನದಲ್ಲಿ ನೋಡಿದಲ್ಲಿ ಕೂಡುವಿರಾಗಿ
ನಿಮ್ಮ ನಯನಂಗಳು ಶುದ್ಧವಲ್ಲ ನಿಲ್ಲು-
ಇಂತೀ ತಮ್ಮ ಅಶುದ್ಧವಂ ತಾವು ಕಳೆಯಲರಿಯದೆ,
ಇದಿರ ಅಶುದ್ಧವಂ ಕಳೆವೆವೆಂದಡೆ, ನಾಚಿತ್ತು ನೋಡಾ ಎನ್ನ ಮನವು.
ಭಕ್ತಿ ವಿಶ್ವಾಸದಿಂದ ಗುರುಲಿಂಗಜಂಗಮದ ಪಾದಾರ್ಚನೆಯಂ ಮಾಡಿ
ಪಾದೋದಕ ಪ್ರಸಾದವಂ ಕೊಂಬ ಭಕ್ತನ ಶೀಲವೇ ಶೀಲವಲ್ಲದೆ
ಉಳಿದವರದಲ್ಲ ಕಾಣಾ ಕೂಡಲಚೆನ್ನಸಂಗಮದೇವಾ/928
ನೇತ್ರಕಪಾಲದಲ್ಲಿ ನಿಂದ ಕಾಳಿಕೆ ಹೋದಡೆ.
ಶ್ರೋತ್ರಕಪಾಲದಲ್ಲಿ ಸೊಪ್ಪು ಸೊಗಡು ಹೋದಡೆ.
ಮನಕಪಾಲದಲ್ಲಿ ಮನಗ್ಲಾನಿಗೊಳ್ಳದೆ, ಪ್ರಾಣಿಯ ಕೊಲ್ಲದೆ,
ಪ್ರಾಣಲಿಂಗವ ಬಲ್ಲರು ಎನ್ನ ಪ್ರಾಣಲಿಂಗ ಕಾಣಾ,
ಕೂಡಲಚೆನ್ನಸಂಗಮದೇವಾ. /929
ನೇಮವೆಂದೇನು ? ನಿತ್ಯವೆಂದೇನು ? ಆಗಮವೆಂದೇನು ? ಆಚಾರವೆಂದೇನು ?
ಲಿಂಗಜಂಗಮದ ಕುಳವೊಂದೇ ಎಂದು ಸಂಪಾದಿಸಲ[ರಿಯ]ದೆ
ನಾಲ್ಕು ಯುಗಂಗಳು ಇಂತೆ ಹೋದವು.
ಕಂಡು ಹೇಳರು, ತಂದು ತೋರರು, ಅವರು ಮಹಂತರೇ ?
ಕೂಡಲಚೆನ್ನಸಂಗಮದೇವ
ಸುಲಭವಾಗಿ ಶರಣಸನ್ನಿಹಿತ ಲಿಂಗವು. /930
ನೇಮಸ್ತನಿಂದ ಮಹಾಪಾಪಿ ಲೇಸು,
ಅವನಿಂದ ಭೂಮಿಯ ಮೇಲೆ ಹುಟ್ಟಿದ
ಸಮಸ್ತಪ್ರಾಣಿಯ ಕೊಲುವ ವ್ಯಾಧ ಲೇಸು.
ಅವನಿಂದ ಅನಂತಕೋಟಿ ನರಕವನೈದುವರು, ಆ ನೇಮಸ್ತನೆಂಬ ಮಹಾಪಾಪಿಯ
ಮುಖವ ನೋಡಿ ಅವನ ಒಡಗೂಡಿಕೊಂಡು ನಡೆದವರು; ಅದೆಂತೆಂದಡೆ:
ನೇಮಸ್ತಯೋ ಮಹಾಪಾಪೀ ತೇನ ದರ್ಶಂತೇ [ಪಶ್ಯತಿರಿ]ಯೋನರಃ
ಭಾಕ್ತಿಕಂ ತತ್ವಪರ್ಯಂತಂ ನರಕಂ ಯಾತಿ ಸ ಧ್ರುವಂ
ಇಂತೆಂದುದಾಗಿ-ಇದು ಕಾರಣ ಕೂಡಲಚೆನ್ನಸಂಗಯ್ಯಾ
ನೇಮಸ್ತರಾದ ಪಾಪಿಗಳನೆನಗೆ ತೋರದಿರಯ್ಯಾ./931
ನೊಸಲಲೊಂದು ಕಣ್ಣು, ಮಕುಟವರ್ಧನರಾದರೇನವರು?
[ಅಂಗದ ಮೇಲೆ] ಲಿಂಗ ಸಂಬಂಧವಿಲ್ಲದವರ
ಮನೆಯಲು ಮಾಡಿದ ಪಾಕವ ಕೊಂಡರೆ
ಶ್ವಾನಜನ್ಮ ನರಕ ತಪ್ಪದಾಗಿ ಬಲ್ಲವರೊಲ್ಲರು.
ಶಿವಭಕ್ತರಲ್ಲದವರ ಮನೆಯಲುಂಡರೆ
ಜನ್ಮ ಜನ್ಮಾಂತರ ಶ್ವಾನಯೋನಿಯಲ್ಲಿ ಬಪ್ಪುದು ತಪ್ಪದು.
ಎಲೆ ಶಿವನೆ ನೀನಿಲ್ಲದವರ ಮನೆಯಲು [ತಿನಿಸಿಂಗೆ]
ಎನ್ನ ಮನವು ಸೊಗಸದಯ್ಯಾ ಕೂಡಲಚೆನ್ನಸಂಗಮದೇವಾ. /932
ನೋಟವುಳ್ಳನ್ನಕ್ಕರ ಕೂಟವುಂಟು, ಭಾವವುಳ್ಳನ್ನಕ್ಕರ ಭ್ರಮೆಯುಂಟು.
ನೋಟಗೆಟ್ಟು ಭಾವನಷ್ಟವಾಗಿ ಮನ ಲಯವಾದ ಬಳಿಕ
ಕೂಡಲಚೆನ್ನಸಂಗಮದೇವಾ,
ನಿಮ್ಮ ಶರಣ ಒಳಗೂ ನೋಡ, ಹೊರಗೂ ನೋಡ/933
ನೋಡಿ ನೋಟವ ಮರೆದು, ಕೂಡಿ ಕೂಟವ ಮರೆದು,
ಬಯಲ ಸಮರಸಕ್ಕೆ ಮರುಳಾಯಿತ್ತಲ್ಲಾ,
ಜೀವಪ್ರಾಣನ ಭೇದವಳಿದು ನಿಜವದಕ್ಕಾಯಿತ್ತಲ್ಲಾ.
ಅನ್ಯಚಿಹ್ನವಳಿದು ತನ್ನತಾ ಮರೆಯಿತ್ತು,
ಕೂಡಲಚೆನ್ನಸಂಗಾ ನೀನೆಂದೆ ನಿಂದಿತಲ್ಲಾ./934
ನೋಡಿಹೆನೆಂದಡೆ ದೃಷ್ಟಿ ಕೊಳ್ಳದು.
ಪೂಜಿಸಿಹೆನೆಂದಡೆ ಪೂಜೆಗೊಳ್ಳದಿನ್ನೆಂತೊ !
ಅರಿದೆನೆಂದಡೆ ಏನೂ ಇಲ್ಲ,
ಘನದೃಷ್ಟಿ ಕೂಡಲಚೆನ್ನಸಂಗಾ
ಈ ಉಭಯಗೆಟ್ಟ ಲಿಂಗಾರ್ಚನೆ./935
ನೋಡುವ ನೋಟ ನೀವೆಂದರಿವೆ,
ಕೇಳುವ ಶ್ರೋತ್ರ ನೀವೆಂದರಿದೆ,
ವಾಸಿಸುವ ಘ್ರಾಣ ನೀವೆಂದರಿದೆ,
ಮುಟ್ಟುವ ಸ್ಪರ್ಶನ ನೀವೆಂದರಿದೆ,
ರುಚಿಸುವ ಜಿಹ್ವೆ ನೀವೆಂದರಿದೆ,
ಎನ್ನ ಕರಣಂಗಳು ನಿಮ್ಮ ಕಿರಣಂಗಳಾಗಿ.
ಕೂಡಲಚೆನ್ನಸಂಗಯ್ಯಾ ನಾ ನಿಮ್ಮ ಬೇಡಲಿಲ್ಲ,
ನೀ ಕೂರ್ತು ಕೊಡಲಿಲ್ಲಾಗಿ. /936
ನೋಡುವುದೊಂದು ನೋಡಿಸಿಕೊಂಬುದೊಂದು
ಇನ್ನೂ ನಿನ್ನಲ್ಲಿ ಎರಡುಂಟಲ್ಲಾ !
ಕರಸ್ಥಲದಲ್ಲಿ ಒಂದು, ಮನಸ್ಥಲದಲ್ಲಿ ಒಂದು,
ಇನ್ನೂ ನಿನ್ನಲ್ಲಿ ಎರಡುಂಟಲ್ಲಾ
ಕೂಡಲಚೆನ್ನಸಂಗಯ್ಯನಲ್ಲಿ ಗುಹೇಶ್ವರನೆಂಬ ಲಿಂಗವು
ನಿನಗೆಂತು ಸಾಧ್ಯವಾಯಿತ್ತು ಹೇಳಾ ಪ್ರಭುವೆ ?/937
ನ್ಮನಿಯ ಲೌಕಿಕದನುಸಂಧಾನವ ಪರಿಹರಿಸಲ್ಕೆ,
ತನುವಿನ ಕೊರತೆಯ ಕಳೆಯಲ್ಕೆ
ಸ್ಥಾವರವಾಯಿತ್ತು,
ಮನದ ಕೊರತೆಯ ಕಳೆಯಲ್ಕೆ
ಜಂಗಮವಾಯಿತ್ತು.
`ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ’
ಇಂತೆಂಬ ವಚನವು ಕೂಡಲಚೆನ್ನಸಂಗಯ್ಯನಲ್ಲಿ
ಸಮಯಾಚಾರಿಗಲ್ಲದೆ ಎಲ್ಲರಿಗೆಲ್ಲಿಯದೊ ? /938
ಪಂಚಬ್ರಹ್ಮ ಮಂತ್ರವೆ ಶಿವನ ದೇಹವೆಂದರಿವುದಯ್ಯಾ.
ಶಿರವೆ ಈಶಾನ್ಯ, ಮುಖವೆ ತತ್ಪುರುಷ,
ಹೃದಯವೆ ಅಘೋರ, ಗುಹ್ಯವೆ ವಾಮದೇವ,
ಪಾದವೆ ಸದ್ಯೋಜಾತಮಂತ್ರವಯ್ಯಾ !
ಇಂತೀ ಪಂಚಮಂತ್ರತನುರೂಪಾದವ ನೀನೆ
ಕೂಡಲ[ಚೆನ್ನ]ಸಂಗಮದೇವಾ./939
ಪಂಚಶತಕೋಟಿ ವಿಸ್ತೀರ್ಣ ಭೂಮಂಡಲ ಮೊದಲಾದ
ನವಖಂಡಪೃಥ್ವಿಯೆಲ್ಲವು ಒಂದು ಭುವನದೊಳಡಗಿತ್ತು.
ಇಂತಹ ಈರೇಳು ಭುವನವನೊಳಕೊಂಡ ಮಹಾಘನಕ್ಕೆ
ಸಯದಾನವ ನೀಡಿಹೆನೆಂಬ ಸ್ವಾಮಿಯ ಮರುಳತನವನೇನೆಂಬೆನು ?
ಕೂಡಲಚೆನ್ನಸಂಗಮದೇವರ ತೃಪ್ತಿಯ ತೆರನನೊಲಿವಡೆ
ನೀವು ಬೋನ, ನಾನು ಪದಾರ್ಥ.
ಇದರಿಂದ ಮೇಲೇನೂ ಘನವಿಲ್ಲ ಕಾಣಾ ಸಂಗನಬಸವಣ್ಣ./940
ಪಂಚಾಮೃತವನುಂಡಡೇನು ? ಮಲಮೂತ್ರ ವಿಷಯ ಘನವಕ್ಕು.
ಭ್ರಾಂತು ಬೇಡ ಮರುಳೆ, ಬಿಡುವುದು ಕಾಯಗುಣವ.
ಆಸೆ ಆಮಿಷ ಅಶನ ವ್ಯಸನದಲ್ಲಿ ಹಿರಿಯರು ಗರುವರುಂಟೆ ?
ಭ್ರಾಂತು ಬೇಡ ಮರುಳೆ, ಬಿಡುವುದು ಕಾಯಗುಣವ.
ಈ ಭೇದವ ಭೇದಿಸ ಬಲ್ಲಡೆ ಕೂಡಲಚೆನ್ನಸಂಗನ ಶರಣ
ಸಾಣೆಯಲ್ಲಿ ಸವೆದ ಶ್ರೀಗಂಧದಂತಿರಬೇಕು. /941
ಪಂಚೇಂದ್ರಿಯಂಗಳ ಮುಖಂಗಳಲ್ಲಿ
ಅಲ್ಲಲ್ಲಿ ತಾಗಿದ ಸುಖವ ಸುಖಿಸಿ ಲಿಂಗಾರ್ಪಿತವೆಂಬರು.
ಅದು ಲಿಂಗಾರ್ಪಿತವೆ ? ಅಲ್ಲಲ್ಲ.
ಅರ್ಪಿತವ ಮಾಡದೆ, ಅನರ್ಪಿತವ ಹೊದ್ದದೆ ಅರ್ಪಿಸಬೇಕು.
ಅರ್ಪಿಸುವ ಈ ಭೇದವುಳ್ಳನ್ನಕ್ಕ ಶರಣನೆನಿಸಬಾರದು.
ಕೂಡಲಚೆನ್ನಸಂಗಯ್ಯಾ. /942
ಪಂಚೇಂದ್ರಿಯಂಗಳು ಲಿಂಗಲಿಕ್ತದಲ್ಲಿಂದ ಹರು(ರಿ?)ವ ಸಂಚವನರಿಯದೆ
ತೋಟದ ಕೊಜೆಯನಾಗಿ ಕರಣಂಗಳ ಮೇಲೆ ಮಣಿಹವಾಗಿ ಬಂದೆನಯ್ಯಾ
ಯೋಗಿ ವಿಯೋಗಿಯಾಗಿ ಕುಂಡಲಿಯನೆ ಬಿಗಿದು ಇಂದ್ರಿಯ ಷಡಂಗವ
ಮಡ(ಡಿರಿ)ದಲ್ಲಿ ಇಂದ್ರಿಯನಿಗ್ರಹವಂ ಮಾಡಿ
ಮಂತ್ರ ಮಂತ್ರ ಮಥನದ ಹೋಮದ ಹೊಗೆಯ ತೆಗೆದು
ಚಂದ್ರಸೂರ್ಯರನಾಣೆಯಿಟ್ಟಂತೆ ಒಂದೆ ಠಾವಿನಲ್ಲಿ ನಿಲಿಸಿದೆ ರುದ್ರಪದದಲ್ಲಿ-
ಇಂತು ಕ್ರೀಯಳಿದು ನಿಃಕ್ರಿಯದಲ್ಲಿ ನಿಂದ ಕೂಡಲಚೆನ್ನಸಂಗಯ್ಯನು
ಎನ್ನ ಪ್ರಾಣನಾಥನೆಂದರಿದು ಎನ್ನ ಕಾಯವ ಬಾದಿಪುದಂ ಬಿಟ್ಟು
ನಿಜದಲ್ಲಿ ನಿಂದೆನು. /943
ಪಕ್ಕವಿಲ್ಲದ ಹಕ್ಕಿ ಮಿಕ್ಕು ಮೀರಿ ಹಾರಿಯಾಡುತ್ತಿರಲು,
ಹಿಡಿದವರ ಹಿಡಿಯನೊಡೆದು, ಹರಿಯ ಹೃದಯವನೊಡೆದು,
ಬ್ರಹ್ಮನ ಬ್ರಹ್ಮಾಂಡವನೊಡೆದು, ರುದ್ರನ ರಾದ್ರವ ಭಸ್ಮವ ಮಾಡಿ,
ದ್ವೈತಾದ್ವೈತವೆಂಬ ಮೇಹಕೊಂಡು, ಘನಕ್ಕೆ ಘನವೆಂಬ ಘುಟಿಕೆಯನೆ ನುಂಗಿ,
ಇದ್ದುದೆಲ್ಲವಂ ನಿರ್ದೊಷವಂ ಮಾಡಿ
ಮಿಕ್ಕಿನ ಘನವ ಹೇಳಲೊಲ್ಲದೆ ಇದಕ್ಕಿನ್ನಾರೆಂದಡೆ:
ಕೂಡಲಚೆನ್ನಸಂಗಯ್ಯನ ಶರಣರಲ್ಲದೆ
ಮತ್ತಾರು ಮತ್ತಾರು ಇಲ್ಲವೆಂದು ಘೂ ಘೂ ಘೂಕೆಂದಿತ್ತು !/944
ಪಟವಾಕಾಶವನಡರಿತ್ತೆಂದಡೆ,
ಪಟಸೂತ್ರದ ಸಂಚು ಕೆಳಗಿಪ್ಪುದು ನೋಡಾ !
ವ್ಯೋಮದಲ್ಲಿ ಚರಿಸುವ ಸೋಮಸೂರ್ಯರೆಂದಡೆ
ಹೇಮಗಿರಿಯ ಸಂಚ ತಪ್ಪದು ನೋಡಾ !
ಭೂಮಿಯನೊಲ್ಲದೆ ಗಗನಕ್ಕೆ ಹಾರಿದವಂಗೆ,
ಆ ವ್ಯೋಮದಲ್ಲಿ ನಿಲುವುದಕ್ಕೆ ಒಂದೆಡೆಯುಂಟೆ ?
ನಮ್ಮ ಕೂಡಲಚೆನ್ನಸಂಗನ ಶರಣರೊಳಗಿರ್ದು
ಸೀಮೆಯ ಮೀರಿದ ನಿಸ್ಸೀಮನು ಸಿದ್ಧರಾಮಯ್ಯನೆಂಬ ಮಾತು
ಅಳಂತಿರಲಯ್ಯಾ ಪ್ರಭುವೆ. /945
ಪತಿವ್ರತೆಯಾದಡೆ ಪರಪುರುಷರ ಸಂಗವೇತಕೆ?
ಲಿಂಗಸಂಗಿಯಾದಡೆ ಅನಂಗಸಂಗವೇತಕೆ? (ಸ್ಥಾವರಲಿಂಗಸಂಗವೇತಕೆ)
ಕಂಡ ಕಂಡವರ ಹಿಂದೆ ಹರಿವ ಚಾಂಡಾಳಗಿತ್ತಿಯಂತೆ:
ಒಬ್ಬರ ಕೈವಿಡಿದು, ಒಬ್ಬರಿಗೆ ಮಾತಕೊಟ್ಟು,
ಒಬ್ಬರಿಗೆ ಸನ್ನೆಗೆಯ್ವ ಬೋಸರಿಗಿತ್ತಿಯಂತೆ
ಪ್ರಾಣಲಿಂಗವಿದ್ದಂತೆ ಸ್ಥಾವರಲಿಂಗಕ್ಕೆ ಹರಸಿ ಹೊಡವಡಲೇಕೆ?
ಪಾದೋದಕ ಪ್ರಸಾದ ಜೀವಿಯಾದ ಬಳಿಕ ಅನ್ಯರಿಗೆ ಕೈಯಾನಲೇಕೆ?
ಇದು ಕಾರಣ ಕೂಡಲಚೆನ್ನಸಂಗಯ್ಯಾ
ಇಂತಪ್ಪ ಪಾಪಿಗಳನೆನಗೆ ತೋರದಿರಯ್ಯಾ. /946
ಪತ್ರದಲ್ಲಿ ಪದಸ್ಥರಿಬ್ಬರು ಕಾಯ್ದುಕೊಂಡಿಹರು
ಪದ್ಮ ಬೆಂದು ಪತ್ರ ಉಳಿಯಿತ್ತು.
ಆ ಪತ್ರದ ಭೇದವ ಕೂಡಲಚೆನ್ನಸಂಗಾ
ನಿಮ್ಮ ಶರಣ ಬಲ್ಲ./947
ಪಥವನರಿಯದೆ ಮಂಡೆಯ ಬೋಳಿಸಿಕೊಂಡರೆ ಜಂಗಮವೆ ? ಅಲ್ಲ,
ಹಮ್ಮು ಬಿಮ್ಮು ಗಮನನಾಸ್ತಿಯಾದರೆ ಜಂಗಮ.
ಸತ್ತರೆ ತೆಗೆವರಿಲ್ಲೆಂದು ಕಟ್ಟಿಕೊಂಡರೆ ಭಕ್ತನೆ ? ಅಲ್ಲ,
ಅರ್ಥ ಪ್ರಾಣ ಅಬಿಮಾನಕ್ಕೆ ವಿರೋದಿಯಾದರೆ ಭಕ್ತ.
ತನುಗುಣ ನಾಸ್ತಿಯಾಗಿ ಮನ ಲಿಂಗದಲ್ಲಿ ಸಿಲುಕಿತ್ತು,
ಇದು ಕಾರಣ ಕೂಡಲಚೆನ್ನಸಂಗಯ್ಯಾ
ಪ್ರಭು ಜಂಗಮ, ಬಸವ ಭಕ್ತ. /948
ಪದವು ಪದಾರ್ಥವು ಎಂಬರು,
ಪದವಾವುದೆಂದರಿಯರು, ಪದಾರ್ಥವಾವುದೆಂದರಿಯರು.
ಪದವೇ ಲಿಂಗ, ಪದಾರ್ಥವೇ ಭಕ್ತ.
ಇದನರಿದು ಪದಾರ್ಥವ ತಂದು ಲಿಂಗಾರ್ಪಿತವ ಮಾಡಬಲ್ಲರೆ
ಕೂಡಿಕೊಂಡಿಪ್ಪ ನಮ್ಮ ಕೂಡಲಚೆನ್ನಸಂಗಮದೇವ. /949
ಪದಾರ್ಥ ಪ್ರಸಾದವಾಗದು, ಇದೆಂತೊ ?
ಪ್ರಸಾದ ಪದಾರ್ಥವಾಗದು ಇದೆಂತೊ ?
ಪ್ರಸಾದ ಪದಾರ್ಥವಾಗದ ಪರಿಯ
ಪದಾರ್ಥ ಪ್ರಸಾದವಾಗದ ಪರಿಯ-
ಇಂತೀ ಉಭಯದ ವಿವರವ,
ಕೂಡಲಚೆನ್ನಸಂಗಯ್ಯಲ್ಲಿ ಬಸವಣ್ಣನನೆ ಕೇಳಬೇಕು./950
ಪದಾರ್ಥವೆತ್ತ ? ಪ್ರಸಾದವೆತ್ತ ? ಪದಾರ್ಥವೇ ಪ್ರಸಾದ.
ಈ ಎರಡರ ಮನಮಥನವಿಲ್ಲದ ಪ್ರಸಾದಿ,
`ಮಧ್ಯಂ ದೇವದತ್ತಂ ಮಧ್ಯಂ ಭುವನಸಂಗ’ವಿಲ್ಲದ ಪ್ರಸಾದಿ,
ಪ್ರಸಾದ ಪಾಕವ ವಿವರವನು ಕೂಡಲಚೆನ್ನಸಂಗಾ
ನಿಮ್ಮ ಪ್ರಸಾದಿಯೇ ಬಲ್ಲ./951
ಪದ್ಮ (ಪದ?) ಪತ್ರದಲ್ಲಿ ಪದಸ್ಥರಿಬ್ಬರು ಕಾದುಕೊಂಡು ಇದ್ದಾರು.
ಪದ್ಮ (ಪದ?) ಬೆಂದು ಪತ್ರ ಉಳಿಯಿತ್ತಯ್ಯಾ.
ಆ ಪತ್ರದ ಭೇದವ ಕೂಡಲಚೆನ್ನಸಂಗಾ.
ನಿಮ್ಮ ಶರಣಬಲ್ಲ. /952
ಪರಂಜ್ಯೋತಿಯಪ್ಪ ಮಹಾಲಿಂಗವ ಮರೆದು
ಜಡತನುವಾನೆಂಬ ಆಣವವೈರಿಯ ಗೆಲುವಡೆ
ಚಿತ್ಸ್ವರೂಪಿ ಶ್ರೀಜಂಗಮಪಾದವನೊಡನೆ ಪಿಡಿವುದಯ್ಯಾ.
ಚಿತ್ಕೈಲಾಸವನೈದುವಡೆ ಜಂಗಮಪಾದವೆ ಮಹಾದ್ವಾರವಾಗಿಪ್ಪುದಯ್ಯಾ.
ಆ ಜಂಗಮಪಾದವೆ ಭವಜಡದಿಗೆ ಹಡಗವಾಗಿಪ್ಪುದಯ್ಯಾ.
`ಅರಾತಿಂ ತರೇಮ ಶಿವಲೋಕಸ್ಯ ದ್ವಾರಂ…’ ಎಂದುದಾಗಿ
ಕೂಡಲಚೆನ್ನಸಂಗಮದೇವಾ
ಇಂತಪ್ಪ ಪಾದವಿಡಿದು ಪವಿತ್ರರಾದ ಸದ್ಭಕ್ತರ ಸಂಗವನೆನಗೆ ಕರುಣಿಸು/953
ಪರತರಶಿವಲಿಂಗವೆ ಗುರುಲಿಂಗಜಂಗಮವಾಗಿ
ಧರೆಯ ನರರನುದ್ಧರಿಸುತಿಪ್ಪುದು ಕಾಣಿರೊ,
ಅದೆಂತೆಂದಡೆ:ಅಜ್ಞಾನವೆಂಬ ಕತ್ತಲೆಯ ಕಳೆವಡೆ
ಗುರುಲಿಂಗ ಕಾರಣವಾಗಿಪ್ಪುದು ಕಾಣಿರೊ.
ಒಳಹೊರಗಿನ ನೋಟಮಾಟದ ತಿಳಿವಿನ ಬಳಗಕ್ಕೆಲ್ಲ
ಶಿವಲಿಂಗವೆ ಕಾರಣವಾಗಿಪ್ಪುದು ಕಾಣಿರೋ.
`ಜ್ಯೋತಿಷ್ಮದ್ಭಾಜಮಾನಂ ಮಹಸ್ವತ್’ ಎಂದು
ಕೂಡಲಚೆನ್ನಸಂಗಮದೇವನ ವಚನವಿಪ್ಪುದಾಗಿ
ಗುರುಲಿಂಗಜಂಗಮದ ಪಾದೋದಕವೆಂಬಮೃತವ ಸೇವಿಸಿ
ನಮ್ಮ ಶರಣರು ಜರಾಮರಣರಹಿತರೆನಿಸಿ ನಿತ್ಯಮುಕ್ತರಾದರು./954
ಪರಧನ ಪರಸತಿ ಪರವಾರ್ತೆಯ ತೊರೆಯದನ್ನಕ್ಕ
ಎಂತು ಮಾಹೇಶ್ವರನಪ್ಪನಯ್ಯಾ ?
ಲಿಂಗಪೂಜೆಯಲ್ಲಿ ಲೀಯವಾಗಿ ಅಂಗಗುಣವಿರೋದಿಯಾಗದನ್ನಕ್ಕ
ಎಂತು ಮಾಹೇಶ್ವರನಪ್ಪನಯ್ಯಾ ?
ಗುರುಪ್ರಸಾದದಲ್ಲಿ ನಿಹಿತಾವಧಾನಿಯಾಗದನ್ನಕ್ಕ
ಎಂತು ಮಾಹೇಶ್ವರನಪ್ಪನಯ್ಯಾ ?
ಕೂಡಲಚೆನ್ನಸಂಗಯ್ಯನಲ್ಲಿ,
ಮಾಹೇಶ್ವರನೆನಿಸಿಕೊಂಬುದು ಸಾಮಾನ್ಯವೆ ಅಯ್ಯಾ /955
ಪರಬೊಮ್ಮವೆ ಶರಣನ ಶಿರದರಮನೆಯಿಂದ ಕರದರಮನೆಗೆ
ಗುರುಕೃಪೆಯಿಂದ ಲಿಂಗಮೂರ್ತಿಯಾಗಿ ಬಿಜಯಂಗೈದಿರ್ಪುದು ಕಂಡಾ !
ಅದು ಕಾರಣ ಶರಣಂಗೆಯೂ ಲಿಂಗಕ್ಕೆಯೂ
ಭೇದಾಭೇದ ಸಂಬಂಧವಿರ್ಪುದು ಕಂಡಾ !
ಈ ಗೊತ್ತನರಿಯದೆ ಯುಕ್ತಿಗೆಟ್ಟ ಮನುಜರು,
ಲಿಂಗವು ಕೈಲಾಸದ ಶಿವನ ಕುರುಹಾದುದರಿಂದ ಪೂಜ್ಯವೆಂಬರು;
ಶರಣನು ಮನುಜನಾದುದರಿಂದ ಅವನು ಪೂಜಕನೆಂಬರು.
ಇಂತೀ ಕೇವಲ ಭೇದಸಂಬಂಧ ಕಲ್ಪಿಸುವ ಭವಭಾರಿಗಳು
ಶಿವಾದ್ವೈತಕ್ಕೆ ದೂರವಾಗಿಪ್ಪರು ಕಂಡಾ !
ಅರೆಯರುವಿನ ನರಜೀವಿಗಳು ಶರಣರ ಸಾಮರಸ್ಯಕ್ಕೆ ಹೊರಗಾಗಿರ್ಪರು ಕಂಡಾ,
ಕೂಡಲಚೆನ್ನಸಂಗಮದೇವಾ ! /956
ಪರಮಾರಾಧ್ಯರ ಭಾವ ಅಂತಿರ್ದಡೆ ಆಗಬಹುದು:
ನುಡಿದ ತೆರದಿ ನೋಡುವ ಭಕ್ತರ ಮನಕ್ಕೆ ಸಂಶಯ;
ನೋಡುವ ರಾಜಕುಮಾರರಿಗೆ(ರಾಜಕುಮಾರಿಗೆ?) ವಿಪರೀತ ಉಪದ್ರವ.
ಇದು ಕಾರಣ-ಗುರು-ಶಿಷ್ಯರಲ್ಲಿರ್ಪುದೆ ಲೇಸು
ಕೂಡಲಚೆನ್ನಸಂಗಮದೇವಾ./957
ಪರಮೂತ್ರದ ಕುಳಿಯನಗುಳುವಂಗೆ
ಚಿಲುಮೆಯಗ್ಗಣಿಯೆಂಬ ಕಟ್ಟಳೆ ಏತಕಯ್ಯಾ ?
ಪರನಾರಿಯರ ಅಧರಪಾನವ ಕೊಂಬವಂಗೆ
ಸ್ವಯಪಾಕದ ಕಟ್ಟಳೆ ಏತಕಯ್ಯಾ ?
ದುಷ್ಟಸ್ತ್ರೀಯರನಾಳಿಪ್ಪಂಗೆ ಗುರುವಿನ ಪ್ರಸಾದವಿಲ್ಲ,
ಬೆಕ್ಕ ಸಲಹಿಪ್ಪಂಗೆ ಲಿಂಗದ ಪ್ರಸಾದವಿಲ್ಲ,-
ಇಂತೀ ತ್ರಿವಿಧವ ಸಲಹಿದ ದ್ರೋಹಿಗೆ ನರಕ ತಪ್ಪದು ಕಾಣಾ
ಕೂಡಲಚೆನ್ನಸಂಗಮದೇವಾ./958
ಪರಶಿವನು ಗುರುಜಂಗಮರೂಪಿಂದ ನರರನುದ್ಧರಿಸಲೆಂದು
ಸಜಾತೀಯವಾದ ಮನುಜಾಕಾರವ ಧರಿಸಿ ಧರೆಗವತರಿಸಿರ್ಪನಯ್ಯಾ.
ಇದನರಿಯದ ಮಂದಮತಿಗಳು ಆ ಗುರುಜಂಗಮವನಾರಾದಿಸಿ ಭಕ್ತರಾಗದೆ,
ವಿಜಾತೀಯವಾದ ಕಲ್ಲು ಕಟ್ಟಿಗೆ ಮಣ್ಣು ಮುಂತಾಗಿ
ಹೊರಗಿನ ಜಡಾಕಾರವೆ ದೈವವೆಂದಾರಾದಿಸಿ,
ಮೊರಡಿಯಿಂದೊಸರುವ ನೀರ ತೀರ್ಥವೆಂದು ಸೇವಿಸಿ
ಭವಭಾರಿಗಳಾಗುತ್ತಿಪ್ಪರಯ್ಯಾ
`ತೀರ್ಥೆ ದಾನೇ ಜಪೇ ಯಜ್ಞೇ ಕಾಷ್ಠೇ ಪಾಷಾಣಕೇ ಸದಾ
ಶಿವಂ ಪಶ್ಯತಿ ಮೂಢಾತ್ಮಾ ಶಿವೇ ದೇಹೇ ಪ್ರತಿಷ್ಠಿತೇ ಎಂದುದಾಗಿ
ನಮ್ಮ ಕೂಡಲಚೆನ್ನಸಂಗಯ್ಯನ ವಚನವನಾರಯ್ಯದೆ ಕೆಡುತಿಪ್ಪರಯ್ಯಾ./959
ಪರಶಿವನು ಪರಮಪುರುಷನಾಗಿಪ್ಪನು ನೋಡಾ.
ಈ ಪುರುಷಪದವು ಶಿವಂಗಲ್ಲದೆ ಮಿಕ್ಕ ದೈವಂಗಳಿಗಿಲ್ಲ ನೋಡಾ.
ಆ ಪರಶಿವನು ಗುರುಲಿಂಗಜಂಗಮವೆಂಬ
ಮೂರು ಪಾದಂಗಳಿಂದುತ್ಕೃಷ್ಟವಾಗಿ ಉದಯಿಸಿ
ಜಗದುದ್ಧಾರಂಗೆಯ್ಯುತಿಪ್ಪನು ನೋಡಾ,
`ತ್ರಿಪಾದೂಧ್ರ್ವಂ ಉದೈತ್ಪುರುಷಃ’ ಎಂದುದಾಗಿ
ಇಂತಪ್ಪ ಗುರುಲಿಂಗಜಂಗಮದ ಪಾದೋದಕ ಪ್ರಸಾದವ ಪಡೆಯಲರಿಯದೆ
ಇಳೆಯ ಮೇಲಿನ ಹಲವು ಜಲಂಗಳಿಗೆ ಹರಿದು,
ಬಳುಲಿ ಬಾಯಾರ ನರರೆಲ್ಲರು ತೊಳಲುತಿಪ್ಪರು ನೋಡಾ.
ಕೂಡಲಚೆನ್ನಸಂಗಮದೇವಾ.
ಇಂತಿದರ ಭೋದವನರಿದು ನಮ್ಮ ಶರಣರು
ತ್ರಿವಿಧ ಪಾದೋದಕ ಪ್ರಸಾದವ ಸವಿದು ಚಿರಸುಖಿಯಾಗಿಪ್ಪರು./960
ಪರಿಪೂರ್ಣವನೈದಿಪ್ಪನಾಗಿ ಜ್ಞಾನಿಯಲ್ಲ ಅಜ್ಞಾನಿಯಲ್ಲ,
ಶೂನ್ಯನಲ್ಲ, ನಿಶ್ಯೂನ್ಯನಲ್ಲ,
ಉಭಯಾಚಾರ ತಾನೆಯಾಗಿ ಕೊಳುಕೊಡೆಯಿಲ್ಲ.
ಸಾಕಾರದ ಸಂಬಂಧವನರಿಯ, ನಿತ್ಯಮುಕ್ತ ನಿರವಯ,
ಉಭಯಾತ್ಮಕ ತಾನೆ ಕೂಡಲಚೆನ್ನಸಂಗಯ್ಯನೆಂದೆನ್ನ
ಸುಯಿದಾನಿಯಯ್ಯಾ ಬಸವಣ್ಣನು./961
ಪರುಷ ಮುಟ್ಟಲು ಕಬ್ಬುನ ಹೊನ್ನಾದಂತೆ
ಪುಣ್ಯ ಪಾಪಗಳಿಲ್ಲ, ಸ್ವರ್ಗನರಕಗಳಿಲ್ಲಯ್ಯಾ ನಿಮ್ಮವರಿಗೆ.
ಕೂಡಲಚೆನ್ನಸಂಗಾ ನಿಮ್ಮ ಶರಣ[ರು] ಭವರಹಿತರು/962
ಪರುಷದ ಅರಸಿಂಗೆ ಕಬ್ಬುನದ ಪರಿವಾರದಂತೆ,
ಮುನಿದೊಮ್ಮೆ ಮುಟ್ಟಿದರೂ ಸುವರ್ಣವಾಗುವುದು ತಪ್ಪದು,
ಸ್ನೇಹದಿಂದ ಮುಟ್ಟಿದರೂ ಸುವರ್ಣವಾಗುವುದು ತಪ್ಪದು.
ಪರುಷ ಲೋಹದ ಸಂಗದಂತೆ
ಕೂಡಲಚೆನ್ನಸಂಗನ ಶರಣರ ಸನ್ನಿದಿ./963
ಪರುಷದ ಪರ್ವತದಲ್ಲಿ ಕಬ್ಬುನಂಗಳುಂಟೆ ?
ಅಷ್ಟವಿಧಾರ್ಚನೆ ಷೋಡಶೋಪಚಾರ ಸನ್ನಿಹಿತಂಗೆ
ಅವಗುಣಂಗಳುಂಟೆ ?
ಭಕ್ತಕಾಯ ಮಮಕಾಯ
ಕೂಡಲಚೆನ್ನಸಂಗಮದೇವ. /964
ಪರುಷದ ಪುತ್ಥಳಿಯ ಬಸುರಲ್ಲಿ ಅವಲೋಹ ಹುಟ್ಟುವುದೆ ಅಯ್ಯಾ ?
ಮರಳಿ ಮರಳಿ ಪರುಷ ಮುಟ್ಟಿ ಸುವರ್ಣವಹರೆ,
ಮುನ್ನ ಮುಟ್ಟಿತ್ತೆಲ್ಲಾ ಹುಸಿಯೇ ?
ಇದು ಕಾರಣ ಕೂಡಲಚೆನ್ನಸಂಗಯ್ಯ ಮೆಚ್ಚ,
ಭವಿಯ ಕಳೆದು ಸಂಬಂದಿಗೆ ಸಂಗವಾದರೆ./965
ಪರುಷವ ಬಂಧನಕ್ಕೆ ತಂದಿರಿಸಿಕೊಂಡಾತ ನೀನಯ್ಯಾ,
ಅತೀತನ ಬಂಧನಕ್ಕೆ ತಂದಿರಿಸಿಕೊಂಡಾತ ನೀನಯ್ಯಾ,
ಆನಂದನ ಬಂಧನಕ್ಕೆ ತಂದಿರಿಸಿಕೊಂಡಾತ ನೀನಯ್ಯಾ,
ಬ್ರಹ್ಮನಿದ್ದಲ್ಲಿ ಪರುಷವನಿರಿಸಿದೆ,
ವಿಷ್ಣುವಿದ್ದಲ್ಲಿ ಅತೀತವನಿರಿಸಿದೆ,
ರುದ್ರನಿದ್ದಲ್ಲಿ ಆನಂದವನಿರಿಸಿದೆ,
ಈ ತ್ರಿವಿಧಧ್ಯಾನವರ್ಣನೆ ನಷ್ಟವಾದ ಕಾರಣ
ಕೂಡಲಚೆನ್ನಸಂಗಯ್ಯನಲ್ಲಿ
ಮಡಿವಾಳ ಬಸವಣ್ಣನೆಂಬೆರಡು ಶಬ್ದಪ್ರಸಾದವೆನಗದೆ ಅರವಟ್ಟಿತ್ತು./966
ಪರುಷವಿದ್ದುದ ಕಂಡು ಪರಿಣಾಮಬಡುವರು,
ಇಷ್ಟಲಿಂಗ ಬಿದ್ದಿತ್ತೆಂದು ಕುತ್ತಿಕೊಂಡು ಸಾವರು.
ಅರಿದರಿದು ಗುರುಶಿಷ್ಯಸಂಬಂಧವು,
ಅರಿವುಳ್ಳವರಿಗಲ್ಲದೆ ಮತ್ತಾರಿಗೆಯೂ ಆಗದು.
ಕುರುಹು ಘನವೋ ? ಲಿಂಗ ಘನವೋ ? ಅರಿವುಳ್ಳವರು ಹೇಳಿರೆ.
ಮರಹು ಕವಿದಹುದೆಂದು ಕುರುಹ ತೋರಿದನಲ್ಲದೆ
ಅರಿದರಿವ ಮರೆದರೆ ಕೂಡಲಚೆನ್ನಸಂಗಯ್ಯಂಗೆ
ಅವನಂದೇ ದೂರ. /967
ಪವನದ ಕಡೆಯಿಂದ ಪರಿಮಳ ಬೀಸರವಾಯಿತ್ತು,
ನುಡಿಗಡಣದಿಂದ ಅನುಭಾವ ಬೀಸರವಾಯಿತ್ತು,
ಮಾಟದ ಬೆರಕೆಯಿಂದ ಭಕ್ತಿ ಬೀಸರವಾಯಿತ್ತು,
ಕೂಟದ ಬೆರಕೆಯಿಂದ ಅರಿವು ಬೀಸರವಾಯಿತ್ತು,
ಸೂಕ್ಷ್ಮಶಿವಪಥವು ಸಾಮಾನ್ಯರಿಗ?ವೆ ?
ಕೂಡಲಚೆನ್ನಸಂಗಯ್ಯನ ಶರಣರಿಗಲ್ಲದಿಲ/968
ಪವನಸಾಧಕರೆಲ್ಲ ಕವಳವಳಿಸಿ ಹೋದರು.
ತನುಸಾಧಕರೆಲ್ಲ ಬುದ್ಧಿಗೇಡರಾದರು. ತತ್ವಸಾಧಕರೆಲ್ಲ ಭಕ್ತಹೀನರಾದರು
ಲಿಂಗಸಾಧಕರೆಲ್ಲ ಅಂಗಹೀನರಾದರು ಪ್ರಸಾದಸಾಧಕರೆಲ್ಲ ವ್ರತಗೇಡಿಗಳಾದರು.
ಕೂಡಲಚೆನ್ನಸಂಗಯ್ಯಾ
ನಿಮ್ಮಲ್ಲಿ ಬಸವಣ್ಣ ಜಂಗಮಸಾಧಕನಾಗಿ
ಸ್ವಯಲಿಂಗವಾದ. /969
ಪಶ್ಚಿಮಪದ್ಮಾಸನದಲ್ಲಿ ಕುಳ್ಳಿರ್ದು, ನಿಟ್ಟೆಲುವ ನೆಟ್ಟನೆ ಮಾಡಿ,
ಅಧೋಮುಖ ಕಮಲವ ಬಲಿದು, ಊಧ್ರ್ವಮುಖವ ಮಾಡಿ,
ಇಂದ್ರಿಯಂಗಳನು ಏಕಮುಖವ ಮಾಡಿ,
ಚಂದ್ರ ಸೂರ್ಯರನೊಂದಠಾವಿನಲ್ಲಿರಿಸಿ
ಅತ್ತಿತ್ತ ಮಿಸುಕದೆ ನಡುಗೀರ ಜ್ಯೋತಿಯ ದೃಢವಾಗಿ ಹಿಡಿದು,
ಪರಮಾನಂದದ ವಠದೊಳಗೆ, ಪ್ರಾಣಲಿಂಗಾರ್ಚನೆಯ ಮಾಡುವ
ಮಹಾಮಹಿಮರ ತೋರಿ ಬದುಕಿಸಾ, ಕೂಡಲಚೆನ್ನಸಂಗಯ್ಯಾ./970
ಪಾತಾಳದಗ್ವಣಿಯ ನೇಣಿಲ್ಲದೆ ತೆಗೆಯಬಹುದೆ,
ಸೋಪಾನದ ಬಲದಿಂದಲ್ಲದೆ ?
ಶಬ್ದಸೋಪಾನವ ಕಟ್ಟಿ ನಡೆಯಿಸಿದರು ಪುರಾತರು,
ದೇವಲೋಕಕ್ಕೆ ಬಟ್ಟೆ ಕಾಣಿರೋ.
ಮತ್ರ್ಯರ ಮನದ ಮೈಲಿಗೆಯ ಕಳೆಯಲೆಂದು
ಗೀತಮಾತೆಂಬ ಜ್ಯೋತಿಯ ಬೆಳಗಿ ಕೊಟ್ಟರು,
ಕೂಡಲಚೆನ್ನಸಂಗನ ಶರಣರು. /971
ಪಾದ ಬಾಹು ಮೊದಲಾಗಿ ಎಲ್ಲ ಪ್ರಸಾದಿಯಾಗಿರಬೇಕು.
ಖೇಚರಭೇದದಿಂದ ಗೂಢ ಪ್ರಸಾದಿಯಾಗಿರಬೇಕು.
`ಶಯನಾನ್ಯಂ ನ ಚರೇತ್’ ಪ್ರಸಾದಿಯಾಗಿರಬೇಕು.
`ನಾಸಿಕಾನ್ಯಂ ನ ಚರೇತ್’ ಪ್ರಸಾದಿಯಾಗಿರಬೇಕು.
`ಕರ್ಣಾನ್ಯಂ ನ ಚರೇತ್’ ಪ್ರಸಾದಿಯಾಗಿರಬೇಕು.
`ನೇತ್ರಾನ್ಯಂ ನ ಚರೇತ್’ ಪ್ರಸಾದಿಯಾಗಿರಬೇಕು.
`ಜಿಹ್ವಾನ್ಯಂ ನ ಚರೇತ್’ ಪ್ರಸಾದಿಯಾಗಿರಬೇಕು.
`ಆರೋಹಿತಾವರೋಹಿತಾನ್ಯಂ ನ ಚರೇತ್’ ಪ್ರಸಾದಿಯಾಗಿರಬೇಕು.
ಇದು ಕಾರಣ ಕೂಡಲಚೆನ್ನಸಂಗಯ್ಯನ ಪ್ರಸಾದಿಯ
ಪ್ರಸಾದದಿಂದ ಬದುಕಿದೆನು. /972
ಪಾದಪೂಜೆಯ ಮಾಡಿ, ಅಂಗುಷ್ಠವೆರಡು ಅಂಗುಲವೆಂಟು
ಉಭಯಹಸ್ತದಲ್ಲಿ ಮಾಡಿಕೊಂಬುದೆ ಶಿಕ್ಷಾಪಾದೋದಕ.
ಲಿಂಗಧಾರೀ ಮಹಾಯೋಗೀ ಚರಪಾದೋದಕಂ ವಿನಾ
ದಿನೇನ ದಶಜನ್ಮಾನಿ ಮಾಸೇನ ಶತಜನ್ಮಸು
ವರ್ಷೆ ಸಹಸ್ರಜನ್ಮಾನಿ ವಷರ್ಾಧರ್ೆ ಘೂಕವಾಯಸಾ
ದ್ವಿವರ್ಷೆ ಸಾಕರೇ ಗರ್ಭೆ ಜಾಯತೇ ನಾತ್ರ ಸಂಶಯಃ ಎಂದುದಾಗಿ
ಆ ಶಿಕ್ಷಾಪಾದೋದಕವನೆ ಆ ವಿಭೂತಿಯಲ್ಲಿ ಸಮ್ಮಿಶ್ರವ ಮಾಡಿ
ಲಲಾಟ ಮೊದಲಾದ ನಾಲ್ವತ್ತೆಂಟು ಸ್ಥಾನಂಗಳಲ್ಲಿ ಧಾರಣವ ಮಾಡುವುದು
ಇದು ವೀರಶೈವರಿಗೆ ಸಲ್ಲುವ ನಡತೆ.
ಶುದ್ಧಶೈವರಿಗೆ ಗಿಂಡಿಯಲ್ಲಿ ತುಂಬುವ ನಡತೆ.
ವಿಶೇಷವೀರಶೈವರು ಗಿಂಡಿಯ ಮಾಡಲಾಗದು,
ಅದೇನು ಕಾರಣವೆಂದಡೆ:ಅವರಿಗೆ ತ್ರಿವಿಧ ಪಾದೋದಕವು
ನಿತ್ಯದ ಸಹಬಂಧವಾಗುವುದೆಂದು.
[ಇದ]ನರಿದು ಆಚರಿಸುವಾತನೆ ನಿತ್ಯಮುಕ್ತನಯ್ಯಾ
ಕೂಡಲಚೆನ್ನಸಂಗಮದೇವಾ. /973
ಪಾದೋದಕ ಪಂಚೇಂದ್ರಿಯಾರ್ಚನೆ, ಲಿಂಗೋದಕ ಅಂಗಾರ್ಚನೆ,
ಪ್ರಸಾದೋದಕ ಘ್ರಾಣಾರ್ಚನೆ-
ಲಿಂಗೋದಕ, ಪಾದೋದಕ, ಪ್ರಸಾದೋದಕ ಈ ತ್ರಿವಿಧೋದಕವ
ಈ ಕ್ರಮವರಿದಲ್ಲದೆ ಮುಟ್ಟಲಾಗದು
ಕೂಡಲಚೆನ್ನಸಂಗಮದೇವಾ. /974
ಪಾದೋದಕವಿಡಿದು ಪಾದೋದಕವನುದ್ಧರಿಸುವ ಕ್ರಮಭೇದವೇನಯ್ಯಾ
ಲಿಂಗೋದಕವಿಡಿದು ಲಿಂಗೋದಕವನುದ್ಧರಿಸುವ ಕ್ರಮಭೇದವೇನಯ್ಯಾ?
ಪ್ರಸಾದೋದಕವಿಡಿದು ಪ್ರಸಾದೋದಕವನುದ್ಧರಿಸುವ ಕ್ರಮಭೇದವ ಭೇದಿಸಿ
ಗ್ರಹಿಸುವ ಕೂಡಲಚೆನ್ನಸಂಗಾ ನಿಮ್ಮ ಶರಣ. /975
ಪಾಲುಂಡ ಸವಿಯ ಮೇಲು ಪಂಕ್ತಿಯ ಹೇಳಬಹುದಲ್ಲದೆ
ಸುಖದ ಸೋಂಕಿನ ಸ್ವಾನುಭಾವವ ಹೇಳಬಾರದು ಕೇಳಬಾರದು.
ಇಂಬಿನ ಸೋಂಕು ಸಂಬಂಧವರಿದ ಬಳಿಕ ಉಪಚಾರವುಂಟೆ ?
ಕೂಡಲಚೆನ್ನಸಂಗಯ್ಯನರುಹಿದಡರಿವೆನಲ್ಲದೆ
ಎನಗೆ ಬೇರೆ ಸ್ವತಂತ್ರಜ್ಞಾನವಿಲ್ಲ. /976
ಪಿಂಡದ ಮೇಲೊಂದು ಪಿಂಡವನಿರಿಸಿ,
ಆ ಪಿಂಡದ ಮೇಲೊಂದು ಲಿಂಗವ ನಿಕ್ಷೇಪಿಸಿ,
ಮತ್ತೊಂದು ಪಿಂಡವ ನಿಕ್ಷೇಪಿಸಿ, ಆ ಮತ್ತೊಂದು
ಪಿಂಡದ ಮೇಲೆ ಲಿಂಗವನಿರಿಸೆ
ಪಿಂಡ ಪಿಂಡವನರಿಯದು, ಲಿಂಗ ಲಿಂಗವನರಿಯದು.
ಒಳಗಿದ್ದ ಲಿಂಗಕ್ಕೆ ಅದ್ಭುತ ಸಂಕಟವಾಯಿತ್ತು.
ಪಿಂಡಸ್ಥಂ ಪಿಂಡಮಧ್ಯಸ್ಥಂಸಾ ಪಿಂಡೇನ ತು ಘಟೀಕೃತಂ
ಪಿಂಡೇನ ಪಿಂಡಿತಂ ಪಿಂಡಂ ಪಿಂಡರೂಪಮುದಾಹೃತಂ
ಯತಃ ಶಿವಮಯಂ ಪಿಂಡಂ ಸರ್ವತತ್ವಾಲಯಂ ವಿದುಃ
ಇದು ಕಾರಣ ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣನು ಅಕಾಯಚರಿತ್ರನು. /977
ಪಿತನಾಚಾರವನುದ್ಧರಿಸುವಾತ ಪುತ್ರನಲ್ಲದೆ
ಗತಿಗೆಡಿಸುವಾತ ಪುತ್ರನಲ್ಲ.
ತಂದೆಯ ಅಂಗದ ಮೇಲಣ ಲಿಂಗವ ಹಿಂಗಿಸಿ
ಆತನ ಭೂತಪ್ರಾಣಿಯ ಮಾಡಿ ಕಳುಹಿದಾತ ಪುತ್ರನೆ ಅಲ್ಲ,
ಅವ ದುರಾತ್ಮನು.
ತಂದೆಯ ಬರುಕಾಯವ ಮಾಡಿ ಭಕ್ತನಾದಾತ ಪುತ್ರನೇ? ಅಲ್ಲ,
ಅವ ಜ್ಞಾನಶೂನ್ಯನು.
ಇಲ್ಲಿ `ಭೂನರಕಂ ವ್ರಜೇತ್ ಎಂಬ ಶ್ರುತಿಯ ಕೇಳಿ, ವಿಸ್ತರಿಸಿ ನೋಡಿ ನೋಡಿ,
ಕುಳ್ಳಿರಿಸಿ, ಅವನ ಭಕ್ತನ ಮಾಡಿದಾತನು ಪಂಚಮಹಾಪಾತಕಿ.
ಅಲ್ಲಿಗೆ ಹೋದಾತ ಭೂತಪ್ರಾಣಿ, ಭಕ್ತನಾದಾತ ಪ್ರೇತಲಿಂಗ ಸಂಸ್ಕಾರಿ,
ಭಕ್ತನ ಮಾಡಿದವರಿಗೆ ರೌರವನರಕ,
ಭೂತಲಿಂಗೇನ ಸಂಸ್ಕಾರೀ ಭೂತಪ್ರಾಣಿಷು ಜಾಯತೇ
ಪ್ರಭಾತೇ ತನ್ಮುಖಂ ದೃಷ್ಟ್ವಾ ಕೋಟಿಜನ್ಮನಿ ಸೂಕರಃ
ಎಂದುದಾಗಿ, – ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ
ತ್ರಿಜನಕೆ ತಪ್ಪದು ಅಘೋರನರಕ. /978
ಪುಣ್ಯತೀರ್ಥಕ್ಷೇತ್ರಂಗಳಲ್ಲಿ ತಂದ ಶಿಲೆಯ ಪರೀಕ್ಷಿಸಿ ಸಂಸ್ಕಾರಂಗೈಯಲು
ಅದು ಲಿಂಗವಾಗಿಪ್ಪುದಯ್ಯಾ.
ಸದ್ವಂಶೀಯರಾದ ವಟುಗಳ ಪರೀಕ್ಷಿಸಿ ಸಂಸ್ಕಾರಂಗೈಯಲು
ಗುರುಜಂಗಮವಾಗಿರ್ಪರಯ್ಯಾ,
ಇಂತಿಹುದನಾರಯ್ಯದೆ ಸಂಸ್ಕಾರವಿರಹಿತ ಗುರುಲಿಂಗಜಂಗಮವ ಪೂಜಿಸುವ
ಅರೆಮರುಳರನೆನಗೊಮ್ಮೆ ತೋರದಿರಯ್ಯಾ-
ಕೂಡಲಚೆನ್ನಸಂಗಮದೇವಾ./979
ಪುರಾತನರ ವಚನವ ಕಲಿತು ಹೇಳುವವರನೇನೆಂಬೆ!
ಅದ ಕುಳ್ಳಿರ್ದು ಕೇಳುವವರನೇನೆಂಬೆ!
ಅದಕ್ಕೆ ಮನ ನಾಚದವರನೇನೆಂಬೆ !
ಇದು ಕಾರಣ, ಕೂಡಲಚೆನ್ನಸಂಗನಲ್ಲಿ ಶಬ್ದ ನಷ್ಟವಾಗದವರನೇನೆಂಬೆ !/980
ಪುಷ್ಪ ಅಗ್ಘವಣಿ ಓಗರ ಅಡಿಗಡಿಗೆ ಮೀಸಲಾಗಿರಬೇಕೆಂಬುದು ಶೀಲವೆ,
ಪಂಚೇಂದ್ರಿಯ ಸಪ್ತಧಾತು ಅರಿಷಡ್ವರ್ಗವನತಿಗಳೆಯದನ್ನಕ್ಕ?
ಲಿಂಗ ಜಂಗಮ ಪ್ರಸಾದದಲ್ಲಿ ನಿಸ್ಸೂತಕವಾದಡೆ
ಆತನೇ ಪ್ರಸಾದಿ, ಕೂಡಲಚೆನ್ನಸಂಗಮದೇವಾ. /981
ಪೂಜಿಸುವನ್ನಕ್ಕ ಫಲದಾಯಕ ಕಂಡಾ,
ಸಹಜಸಂಬಂಧದನುವು ಹುಟ್ಟದನ್ನಕ್ಕ ಎರವೆಂದೆನಿಸೂದು.
ಗಮನ ನಿರ್ಗಮನವಾಗದನ್ನಕ್ಕ,
ಆಶೆಯಾಮಿಷವಳಿಯದನ್ನಕ್ಕ ಭಕ್ತಿ ಮತ್ತೆಲ್ಲಿಯದೊ ?
ಘಟದೊಳಗೆ ದಿಟವಾಗಿದ್ದ ಪಂಚೈದುಭೂತವಳಿಯದೆ
ಕೂಡಲಚೆನ್ನಸಂಗನಲ್ಲಿ ಶರಣರೆನಿಸಿಕೊಳಲೆಂತುಬಹುದು ? /982
ಪೂರ್ವಜನ್ಮವ ನಿವೃತ್ತಿಯ ಮಾಡಿ ಶ್ರೀಗುರುಕರಕಮಲದಲ್ಲಿ ಜನಿಸಿದ ಭಕ್ತನ
ಪಂಚಭೌತಿಕದ ತನುವಿನಂತೆ ವರ್ಣಿಸಿ ನುಡಿಯಬಹುದೆ ?
ಉತ್ತಮಾಧಮ ತೃಣ ಮೊದಲಾದುವೆಲ್ಲವು
ಜ್ಯೋತಿಯ ಮುಟ್ಟಿ ಜ್ಯೋತಿಯಪ್ಪುವು ಕೇಳಿರೆ.
ಜ್ಯೋತಿರ್ಮಯಲಿಂಗವ ಮುಟ್ಟಿದ ತನು ಕೇವಲ ಜ್ಯೋತಿರ್ಮಯಲಿಂಗ.
ಆಧಾರ, ಸ್ವಾದಿಷ್ಠಾನ, ಮಣಿಪೂರಕ ಅನಾಹತ, ವಿಶುದ್ಧಿ, ಆಜ್ಞೇಯ
ಬ್ರಹ್ಮರಂಧ್ರ ದಳ ಕಳೆ ವರ್ಣ ಅದಿದೇವತೆ ಎಂದು,
ಅಲ್ಲಿ ಶುಕ್ಲ ಶೋಣಿತಾತ್ಮಕನಂತೆ ವರ್ಣಿಸಿ ನುಡಿಯಬಹುದೆ, ಶಿವಲಿಂಗತನುವ ?
ಷಡಾಧಾರಚಕ್ರವನು ಎನ್ನ ಸರ್ವಾಂಗದಲ್ಲಿ ಪ್ರತಿಷ್ಠೆಯ ಮಾಡಿ,
ಅಂತರ್ಬಾಹ್ಯದಲ್ಲಿ ಭರಿತನಾಗಿ ಸರ್ವಾಂಗವ ಲಿಂಗವ ಮಾಡಿದ,
ಕೂಡಲಚೆನ್ನಸಂಗಾ ಶ್ರೀಗುರುಲಿಂಗ/983
ಪೂರ್ವಜಾತವಳಿದು ಪುನರ್ಜಾತರೆನಿಸಿ, ಅಂಗದ ಮೇಲೆ ಲಿಂಗವ ಧರಿಸಿ
ಲಿಂಗವಂತರೆನಿಸಿದ ಮೇಲೆ;
ಮತ್ತೆ ಜಾತಿಸೂತಕ ಜನನಸೂತಕ ಪ್ರೇತಸೂತಕ ರಜಸ್ಸೂತಕ,
ಎಂಜಲಸೂತಕ ಬಿಡದನ್ನಕ್ಕರ ಇವರನೆಂತು ಭಕ್ತರೆಂಬೆನಯ್ಯಾ ?
ಇವರನೆಂತು ಯುಕ್ತರೆಂಬೆನಯ್ಯಾ ? ಇವರನೆಂತು ಮುಕ್ತರೆಂಬೆನಯ್ಯಾ ?
ಶ್ರೀಗುರುಸ್ವಾಮಿ ಶಿಷ್ಯನ ಪೂರ್ವಾಶ್ರಯಮಂ ಕಳೆದು,
ಹಸ್ತಮಸ್ತಕಸಂಯೋಗವಂ ಮಾಡಿ, ಕರ್ಣಮಂತ್ರಮಂ ತುಂಬಿ,
ಕರಸ್ಥಲಕೆ ಶಿವಲಿಂಗಮಂ ಬಿಜಯಂಗೈಸಿ ಕೊಟ್ಟ ಬಳಿಕ
ಕಾಡ್ಗಿಚ್ಚಿನ ಕೈಯಲ್ಲಿ ಕರಡವ ಕೊಯ್ಸಿದಂತಿರಬೇಕು ಭಕ್ತನು !
ಹಿಂದೆ ಮೆದೆಯಿಲ್ಲ ಮುಂದೆ ನಿಲವಿಲ್ಲ-ಇದು ಕಾರಣ
ಕೂಡಲಚೆನ್ನಸಂಗಯ್ಯಾ, ನಿಮ್ಮ ಸದ್ಭಕ್ತರು ಸೂತಕವ ಮಾಡಲಿಲ್ಲ/984
ಪೂರ್ವದ್ವಾರವ ಬಿಟ್ಟು ಪಶ್ಚಿಮದ್ವಾರದಲ್ಲಿ ಪ್ರಾಣನಿರವ ಮಾಡಿ,
ನಾಬಿಮುಖದಗ್ನಿಯನೂಧ್ರ್ವಮುಖಕ್ಕೊಯ್ದು,
ಶಂಕಿನಿಯ ನೋಟದಲ್ಲಿ ನಿಲಯವಾದಾತ ಶರಣ.
ಆತನೇ ತೂರ್ಯಾತೀತ ಉನ್ಮನಿಯವಸ್ಥೆಯಾದಾತ
ಆತನೇ ಜನನ-ಮರಣವರ್ಜಿತನಪ್ಪ, ಆತನೇ ನಿರ್ದೆಹಿಯಪ್ಪ,
ಆತನೇ ಮಹಾಪುರುಷನು.
ಇದನಲ್ಲಾ ಎಂಬ ಗುರುದ್ರೋಹಿಯನೇನೆಂಬೆ,
ಇದನಲ್ಲಾ ಎಂಬ ಲಿಂಗದ್ರೋಹಿಯನೇನೆಂಬೆ,
ಅಯ್ಯಾ ಕೂಡಲಚೆನ್ನಸಂಗಮದೇವಾ ? /985
ಪೂರ್ವಬೀಜನಲ್ಲ, ಪೂರ್ವಪ್ರಾಣಿಯಲ್ಲ, ಪೂರ್ವಾಹಾರಿಯಲ್ಲ.
ಪೂರ್ವಾದಿಗಳೆಲ್ಲವನುತ್ತರಿಸಿ ಕಳೆದು ಲಿಂಗಗರ್ಬಿತನಾದ,
ಕೂಡಲಚೆನ್ನಸಂಗಾ ನಿಮ್ಮ ಶರಣ. /986
ಪೂರ್ವಾಶ್ರಯ ಪೂರ್ವಾಶ್ರಯವೆಂದೆಂಬರು,
ಪೂರ್ವಾಶ್ರಯವಾವುದೆಂದರಿಯರು.
ಪೂರ್ವವೆಂಬುದೆ ಬಂದ ಬಟ್ಟೆ, ಆಶ್ರಯವೆಂಬುದೆ ಕರಣಾದಿ ಗುಣಂಗಳು.
ಈ ಉಭಯವಳಿದು ಕೂಡಲಚೆನ್ನಸಂಗನಲ್ಲಿಪ್ಪ
ಶರಣಂಗೆ ಶರಣೆಂಬೆ. /987
ಪೂರ್ವಾಶ್ರಯವಳಿಯದೆ ಪುನರ್ಜಾತರೆನಿಸಿಕೊಂಬರಿನ್ನೆಂತೊ ?
ಪುಜರ್ನಾತನಾದಾತ ಸತಿ-ಸುತ ಮಾತಾ-ಪಿತರ್ಕಳ ಬೆರಸುವ[ಡೆ]
ಕೂಡಲಚೆನ್ನಸಂಗಯ್ಯನಲ್ಲಿ ಶರಣರೆಂತೆಂಬೆ ?/988
ಪೂರ್ವಿಕ ಪೂಜಕ, ಅಪೂರ್ವಿಕ ಭಕ್ತ;
ಕರ್ಮಿ ಪೂಜಕ, ನಿಷ್ಕರ್ಮಿ ಭಕ್ತ;
ಲಿಂಗ ಪೂಜಕ, ಜಂಗಮ ಭಕ್ತ,
ತನುಗುಣ ಪೂರ್ವಸೂತಕ ವಿರಹಿತ
ಕೂಡಲಚೆನ್ನಸಂಗಯ್ಯನಲ್ಲಿ ಆತನೆ ಅಚ್ಚಶರಣ. /989
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚಭೂತಂಗಳಲ್ಲಿ
ಪಂಚಮುಖಲಿಂಗವ ಪ್ರತಿಷ್ಠೆಯ ಮಾಡಿದನಯ್ಯಾ.
ಮನ ಬುದ್ಧಿ ಚಿತ್ತ ಅಹಂಕಾರವೆಂಬ ಅಂತಃಕರಣ ಚತುಷ್ಟಯದಲ್ಲಿ
ಚತುಮರ್ುಖಲಿಂಗವ ಪ್ರತಿಷ್ಠೆಯ ಮಾಡಿದನಯ್ಯಾ.
ಶ್ರೋತ್ರ ನೇತ್ರ ಘ್ರಾಣ ತ್ವಕ್ಕು ಜಿಹ್ವೆ ವಾಕ್ಕು ಪಾಣಿ ಪಾದ
ಪಾಯು ಗುಹ್ಯಗಳೆಂಬ ದಶೇಂದ್ರಿಯಂಗಳಲ್ಲಿ
ದಶಮುಖಲಿಂಗವ ಪ್ರತಿಷ್ಠೆಯ ಮಾಡಿ
ಅಂತರಂಗ ಬಹಿರಂಗವ ಹತವ ಮಾಡಿದನಯ್ಯಾ
ಕೂಡಲಚೆನ್ನಸಂಗಮದೇವಾ ಎನ್ನ ಶ್ರೀಗುರು ಬಸವಣ್ಣನು/990
ಪೃಥ್ವಿ ಅಪ್ಪು ತೇಜ ವಾಯು, ಆಕಾಶ-
ಇಂತೀ ಪಂಚಭೂತದಿಂದ ಒದಗಿದ ತನುವಿನ ಭೇದವ ನೋಡಿರೆ ಅಯ್ಯಾ.
ಐದರ ವಿಶ್ರಾಂತಿಯಲ್ಲಿಯೆ ತನು ಸವೆದು ಹೋಗುತ್ತಿರಲು
ಮತ್ತೆ ದೇವರ ಕಂಡೆನೆಂದರೆ ತನುವೆಲ್ಲಿಯದೊ ?
ಅಕ್ಕಟಕ್ಕಟಾ ಲಿಂಗವೆ !
ಜಡದೇಹಿಗಳೆಲ್ಲಾ ಜಡವನೆ ಪೂಜಿಸಿ ಹತ್ತಿದರಲ್ಲಾ ಕೈಲಾಸದ ಬಟ್ಟೆಯ,
ಹೋ ಹೋ ಅಲ್ಲಿಯೂ ಪ್ರಳಯ ಬಿಡದು !
ನಾ ನನ್ನ ಅಚಲಲಿಂಗವ ಸೋಂಕಿ ಸ್ವಯಾನುಭಾವ ಸಮ್ಯಕ್ಜ್ಞಾನದಿಂದ
ಕೈಲಾಸದ ಬಟ್ಟೆ ಹಿಂದಾಗಿ ನಾ ಬಯಲಾದೆ ಕಾಣಾ
ಕೂಡಲಚೆನ್ನಸಂಗಮದೇವಾ. /991
ಪೃಥ್ವಿ ಭಕ್ತಸ್ಥಲ, ಮುಖ ನಾಸಿಕ, ಅದಕ್ಕೆ ಆಚಾರಲಿಂಗ.
ಅಪ್ಪು ಮಾಹೇಶ್ವರಸ್ಥಲ, ಮುಖ ಜಿಹ್ವೆ, ಅದಕ್ಕೆ ಗುರುಲಿಂಗ.
ತೇಜ ಪ್ರಸಾದಿಸ್ಥಲ, ಮುಖ ನೇತ್ರ, ಅದಕ್ಕೆ ಶಿವಲಿಂಗ.
ವಾಯು ಪ್ರಾಣಲಿಂಗಿಸ್ಥಲ, ಮುಖ ಸ್ಪರ್ಶನ, ಅದಕ್ಕೆ ಜಂಗಮಲಿಂಗ.
ಆಕಾಶ ಶರಣಸ್ಥಲ, ಮುಖ ಶ್ರೋತ್ರ, ಅದಕ್ಕೆ ಪ್ರಸಾದಲಿಂಗ.
ಅತೀತ ಐಕ್ಯಸ್ಥಲ, ಮುಖ ತೃಪ್ತಿ, ಅದಕ್ಕೆ ಮಹಾಲಿಂಗ.
ಇಂತೀ ಷಡುಸ್ಥಲಂಗಳುತ್ಪತ್ಯ ಕೂಡಲಚೆನ್ನಸಂಗಮದೇವಾ/992
ಪೃಥ್ವಿ ಸಲಿಲ ಪಾವಕ ಪವನ ಅಂಬರ]ರವಿ ಶಶಿ ಆತ್ಮವೆಂಬ
ಅಷ್ಟತನುವಿನ ಭೇದವ ಭೇದಿಸಿ
ಶ್ರೋತ್ರ ನೇತ್ರ ತ್ವಕ್ಕು ಘ್ರಾಣ ಜಿಹ್ವೆ [ಎಂಬ] ಪಂಚೇಂದ್ರಿಯವನರಿದು,
ವಾಕು ಪಾಣಿ ಪಾದ ಪಾಯು ಗುಹ್ಯವೆಂಬ ಕಮರ್ೆಂದ್ರಿಯಂ[ಗಳ] ತೊರೆದು,
ಪ್ರಾಣಾಪಾನ ವ್ಯಾನೋದಾನ ಸಮಾನ ನಾಗ ಕೂರ್ಮ ಕೃಕರ ದೇವದತ್ತ
ಧನಂಜಯವೆಂಬ ದಶವಾಯುಗಳ ಸಂಚವನರಿದು,
ಮನಬುದ್ಧಿ ಚಿತ್ತಹಂಕಾರವೆಂಬ ಚತುರ್ವಿಧ ಕರಣಂಗಳನೊಂದು ಮಾಡಿ,
ಉತ್ಪತ್ತಿ ಸ್ಥಿತಿ ಲಯವೆಂಬ ಕಾಲಮೂಲಾದಿಗಳಂ ಸುಟ್ಟು,
ಜ್ಞಾನವನೆ ಬೆಳಗಿ, ಧ್ಯಾನವನೆ ನಿಲಿಸಿ,
ಸುಚಿತ್ತದಲ್ಲಿ ಲಿಂಗಾರ್ಚನೆಯ ಮಾಡುವ ಶರಣ.
ವ್ಯಾಪಾರಂ ಸಕಲಂ ತ್ಯಕ್ತ್ವಾ ರುದ್ರೋ ರುದ್ರಂ ಸಮರ್ಚಯೇತ್
ಎಂಬ ಶ್ರುತಿಯ ನಿಮ್ಮ ಶರಣರಲ್ಲಿ ಕಾಣಬಹುದು ಕೂಡಲಚೆನ್ನಸಂಗಮದೇವಾ. /993
ಪೃಥ್ವಿಗೆ ಹುಟ್ಟಿದ ಪಾಷಾಣ, ಬಿನ್ನಣಿಗೆ ಹುಟ್ಟಿದ ಪ್ರತಿಮೆ,
ಮಂತ್ರಕ್ಕೆ ಹುಟ್ಟಿದ ಮೂರ್ತಿ, ಗುರುವಿಂಗೆ ಹುಟ್ಟಿದ ಲಿಂಗ-
ಇಂತೀ ಚತುರ್ವಿಧದ ಕೈಗೆ ಕೈಗೆ ಬಾಯ್ಗೆ ಬಾಯ್ಗೆ ಬರಲಾಗಿ
ಹೇಸಿ ಲಿಂಗವೆಂದು ಮುಟ್ಟಿ ಪೂಜೆಯ ಮಾಡೆ ಕಾಣಾ
ಕೂಡಲಚೆನ್ನಸಂಗಮದೇವಾ./994
ಪೃಥ್ವಿಮದ ಸಲಿಲಮದ ಪಾವಕಮದ (ಪವನಮದ)
ಅಂಬರಮದ ರವಿಮದ ಶಶಿಮದ ಆತ್ಮಮದ-
ಇಂತೀ ಅಷ್ಟಮದಂಗಳ ವಿವರ: ಪೃಥ್ವಿಮದವೆತ್ತಿದಲ್ಲಿ ತನುಗುಣಭರಿತನಾಗಿಹ,
ಸಲಿಲಮದವೆತ್ತಿದಲ್ಲಿ ಸಂಸಾರಭರಿತನಾಗಿಹ,
ಪಾವಕಮದವೆತ್ತಿದಲ್ಲಿ ಕಾಮ್ಯರಸಭರಿತನಾಗಿಹ,
ಪವನಮದವೆತ್ತಿದಲ್ಲಿ ಇರ್ದಠಾವಿನಲ್ಲಿರ್ದು
ಜಂಬೂದ್ವೀಪಭರಿತನಾಗಿಹ,
ಅಂಬರಮದವೆತ್ತಿದಲ್ಲಿ ವಾಹನಭರಿತನಾಗಿಹ,
ರವಿ ಮದವೆತ್ತಿದಲ್ಲಿ ಕೋಪಾಗ್ನಿಭರಿತನಾಗಿಹ,
ಶಶಿಮದವೆತ್ತಿದಲ್ಲಿ ಚಿಂತಾಭರಿತನಾಗಿಹ,
ಆತ್ಮಮದವೆತ್ತಿದಲ್ಲಿ ಅಹಂಕಾರಭರಿತನಾಗಿಹ.
ಇಂತೀ ಅಷ್ಟಮದವಳಿದು ನಿಜವನರಿಯ ಬಲ್ಲರೆ, ಕೂಡಲಚೆನ್ನಸಂಗಯ್ಯನಲ್ಲಿ ಶಿವಯೋಗಿಗಳೆಂಬೆನು. /995
ಪೃಥ್ವಿಯ ಪೂರ್ವಾಶ್ರಯ ರಂಗವಲ್ಲಿಯಲ್ಲಿ ಹೋಹುದು.
ಅಪ್ಪುವಿನ ಪೂರ್ವಾಶ್ರಯ ಶಬ್ದದಿಂದ ಹೋಹುದು.
ಅಗ್ನಿಯ ಪೂರ್ವಾಶ್ರಯ ಧೂಪದಿಂದ ಹೋಹುದು.
ವಾಯುವಿನ ಪೂರ್ವಾಶ್ರಯ ಧ್ಯಾನದಿಂದ ಹೋಹುದು.
ಆಕಾಶದ ಪೂರ್ವಾಶ್ರಯ ಮಂತ್ರದಿಂದ ಹೋಹುದು.
ಚಂದ್ರ ಸೂರ್ಯ ಆತ್ಮನ ಪೂರ್ವಾಶ್ರಯ
ಮಾಡುವ ಕಿಂಕಿಲದಿಂದ ಹೋಹುದು
ಇದು ಕಾರಣ ಭಕ್ತಕಾಯ ಮಮಕಾಯ
ಕೂಡಲಚೆನ್ನಸಂಗಮದೇವ. /996
ಪೃಥ್ವಿಯ ಮೇಲಣ ಕಣಿಯ ತಂದು,
ಪೂಜಾವಿಧಾನಕ್ಕೊಳಗಾದ ಅಷ್ಟತನುವಿನ ಕೈಯಲ್ಲಿ ಕೊಟ್ಟು
ಮುಟ್ಟಿ ಪೂಜಿಸಬೇಕೆಂಬರು.
ಮೂವರಿಗೆ ಹುಟ್ಟಿದಾತನೆಂದು ಪೂಜಿಸುವಿರೊ ?
ಭೂಮಿಗೆ ಹುಟ್ಟಿ ಶಿಲೆಯಾಯಿತ್ತು
ಕಲ್ಲುಕುಟ್ಟಿಗ ಮುಟ್ಟಿ ರೂಪಾಯಿತ್ತು.
ಗುರುಮುಟ್ಟಿ ಲಿಂಗವಾಯಿತ್ತು.
ಇದು ಬಿದ್ದಿತ್ತೆಂದು ಸಮಾದಿಯ ಹೊಕ್ಕೆವೆಂಬರು
ಎತ್ತಿಕೊಂಡು ಅಷ್ಟವಿಧಾರ್ಚನೆ ಷೋಡಶೋಪಚಾರವ
ಮಾಡುವುದೆ ವ್ರತವು.
ಕಟ್ಟುವ ಠಾವನು ಮುಟ್ಟುವ ಭೇದವನು
ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣನೆ ಬಲ್ಲ./997
ಪೃಥ್ವಿಯಂತಹ ಭಕ್ತ, ಉದಕದಂತಹ ಮಾಹೇಶ್ವರ, ಅಗ್ನಿಯಂತಹ ಪ್ರಸಾದಿ,
ವಾಯುವಿನಂತಹ ಪ್ರಾಣಲಿಂಗಿ, ಆಕಾಶದಂತಹ ಶರಣ, ಚಂದ್ರನಂತಹ ನೇಮಸ್ತ,
ಸೂರ್ಯನಂತಹ ಅನುಭವಿ, ಆತ್ಮನಂತಹ ಐಕ್ಯ-
ಇಂತೀ ಅಷ್ಟತನು ಗಟ್ಟಿಗೊಂಡು,
ಕೂಡಲಚೆನ್ನಸಂಗನ ಶರಣನು ಅನಂತಕುಳರಹಿತನು. /998
ಪೃಥ್ವಿಯಿಂದ ಈಶ್ವರ ಪರಿಯಂತ ಪಂಚವಿಶಂತಿ ತತ್ವಂಗಳುತ್ಪತ್ಯ,
ಈಶ್ವರಾದಿ ಪರಶಿವ ಪರಿಯಂತ ಶಿವತತ್ವದುತ್ಪತ್ಯ.
ದೇವತಾದಿಗೆ ಜಗದಾದಿಗೆ ಪೃಥ್ವಿಯಾದಿಗೆ
ಪಂಚವಿಂಶತಿತತ್ವಂಗಳುತ್ಪತ್ಯಮಂ ಪೇಳ್ವೆ:
ಪಂಚಶತಕೋಟಿ (ವಿಸ್ತೀರ್ಣ) ಭೂಮಂಡಲವಳಯದಲ್ಲಿ
ಮೇರುಮಂದಿರದ ವಿಸ್ತೀರ್ಣ
ಒಂದುಕೋಟಿ ಇಪ್ಪತ್ತಾರುಲಕ್ಷದ ಮೇಲೆ ಎಂಬತ್ತೈದುಸಾವಿರ
ಯೋಜನ ಪ್ರಮಾಣು.
ಆ ಮೇರುಮಂದಿರದ ಮೇಲೆ ಬ್ರಹ್ಮ ವಿಷ್ಣು ರುದ್ರ ಸದಾಶಿವ
ನಂದಿ ಮಹಾಕಾಳ ವೀರಭದ್ರ ಅಷ್ಟಾಶೀತಿಸಹಸ್ರ ಋಷಿಯರು,
ಅಸಂಖ್ಯಾತ ಮಹಾಗಣಂಗಳು, ದ್ವಾದಶಾದಿತ್ಯರು, ನಾರದಯೋಗೀಶ್ವರರು,
ಅಷ್ಟದಿಕ್ಪಾಲಕರು ಏಕಾದಶ ರುದ್ರರು ಮುಖ್ಯವಾಗಿ
ಶಿವಸುಖಸಂತೋಷದಿಂ ರಾಜ್ಯಂಗೆಯ್ವರು.
ಆ ಮೇರುಮಂದಿರದ ಕೆಳಗಣ ಜಂಬೂದ್ವೀಪದ ವಿಸ್ತೀರ್ಣ
ಲಕ್ಷದಮೇಲೆ ಇಪ್ಪತ್ತೈದುಸಾವಿರ ಯೋಜನಪ್ರಮಾಣು.
(ಅಲ್ಲಿಂದ ಮುಂದೆ) ಲವಣಸಮುದ್ರ
ಲಕ್ಷದಮೇಲೆ ಇಪ್ಪತ್ತೈದುಸಾವಿರ ಯೋಜನಪ್ರಮಾಣು.
ಆ ಲವಣಸಮುದ್ರದಿಂದಾಚೆಯಲ್ಲಿ ಭೂಮಿ
ಎರಡುಲಕ್ಷದ ಮೇಲೆ ಐವತ್ತುಸಾವಿರ ಯೋಜನಪ್ರಮಾಣು.
(ಆ ದ್ವೀಪದ ಹೆಸರು ಪ್ಲಕ್ಷದ್ವೀಪ)
ಪ್ಲಕ್ಷದ್ವೀಪಕ್ಕೆ ಇಕ್ಷುರಸಮುದ್ರ
ಎರಡುಲಕ್ಷ ಐವತ್ತುಸಾವಿರ ಯೋಜನಪ್ರಮಾಣು.
ಅದರಿಂದಾಚೆಯಲ್ಲಿ ಭೂಮಿ ಐದುಲಕ್ಷ ಯೋಜನಪ್ರಮಾಣು.
(ಆ ದ್ವೀಪದ ಹೆಸರು ಶಾಲ್ಮಲಿದ್ವೀಪ)
ಶಾಲ್ಮಲಿದ್ವೀಪಕ್ಕೆ ಮಧುಸಮುದ್ರ, ಐದುಲಕ್ಷ ಯೋಜನಪ್ರಮಾಣು.
ಅದರಿಂದಾಚೆಯಲ್ಲಿ ಭೂಮಿ, ಹತ್ತುಲಕ್ಷ ಯೋಜನಪ್ರಮಾಣು.
(ಆ ದ್ವೀಪಕ್ಕೆ ಹೆಸರು ಕುಶದ್ವೀಪ)
ಕುಶದ್ವೀಪಕ್ಕೆ ಘೃತಸಮುದ್ರ ಹತ್ತುಲಕ್ಷ ಯೋಜನಪ್ರಮಾಣು.
ಅಲ್ಲಿಂದತ್ತ ಭೂಮಿ, ಇಪ್ಪತ್ತೈದು ಲಕ್ಷ ಯೋಜನಪ್ರಮಾಣು.
(ಆ ದ್ವೀಪದ ಹೆಸರು ಶಾಕದ್ವೀಪ)
ಶಾಕದ್ವೀಪಕ್ಕೆ ದದಿಸಮುದ್ರ, ನಾಲ್ವತ್ತುಲಕ್ಷ ಯೋಜನಪ್ರಮಾಣು.
ಅದರಿಂದಾಚೆಯಲ್ಲಿ ಭೂಮಿ ನಾಲ್ವತ್ತುಲಕ್ಷ ಯೋಜನಪ್ರಮಾಣು.
(ಆ ದ್ವೀಪದ ಹೆಸರು ಕ್ರಾಂಚದ್ವೀಪ)
ಕ್ರಾಂಚದ್ವೀಪಕ್ಕೆ ಕ್ಷೀರಸಮುದ್ರ, ನಾಲ್ವತ್ತುಲಕ್ಷ ಯೋಜನಪ್ರಮಾಣು.
ಅದರಿಂದಾಚೆಯಲ್ಲಿ ಭೂಮಿ, ಎಂಬತ್ತುಲಕ್ಷ ಯೋಜನಪ್ರಮಾಣು.
(ಆ ದ್ವೀಪದ ಹೆಸರು ಪುಷ್ಕರದ್ವೀಪ)
ಪುಷ್ಕರದ್ವೀಪಕ್ಕೆ ಸ್ವಾದೋದಕಸಮುದ್ರ ಎಂಬತ್ತುಲಕ್ಷ ಯೋಜನಪ್ರಮಾಣು,
ಅಲ್ಲಿಂದತ್ತತ್ತ ಲೋಕಾಲೋಕ ಪರ್ವತಾಕಾರವಾಗಿಪ್ಪುದು.
ಇಂತೀ ಸಪ್ತಸಮುದ್ರಂಗಳ ಸಪ್ತದ್ವೀಪಂಗಳ ಪ್ರಮಾಣವೊಂದಾಗಿ ಮೇಳೈಸಿದಡೆ
ಮೂರುಕೋಟಿಯುಂ ಹದಿನೇಳುಲಕ್ಷದೈವತ್ತುಸಹಸ್ರ ಯೋಜನ
ಪರಿಮಾಣಿನ ಕಟ್ಟಳೆಯಾಯಿತ್ತು.
ಮತ್ತಲ್ಲಿಂದ ಭೂಮಂಡಲ ಉಂಟೆರಿ ಎಂದೊಡೆ, ಉಂಟು:
ನಾನೂರುಕೋಟಿಯೋಜನ ಹೇಮೋರ್ವಿ.
ಅಲ್ಲಿಂದತ್ತ ಭೂಮಂಡಲ ಉಂಟೆರಿ ಎಂದೊಡೆ ಉಂಟು:
ಹತ್ತುಕೋಟಿ ಇಪ್ಪತ್ತುಲಕ್ಷ ಯೋಜನಪ್ರಮಾಣು, ಹೇಮದ ಬೆಟ್ಟ.
ಮತ್ತಲ್ಲಿಂದತ್ತಲೂ ಭೂಮಂಡಲ ಉಂಟೆರಿ ಎಂದಡೆ, ಉಂಟು:
ಎಂಬತ್ತೈದುಕೋಟಿ ಮೂವತ್ತೈದುಲಕ್ಷದ ಅರುವತ್ತೈದುಸಾವಿರ
ಯೋಜನ ಪರಿಮಾಣ ವಳಯದಲ್ಲಿಅಂಧಕಾರವಾಗಿ, ಸೂರ್ಯಚಂದ್ರರ ಬೆಳಗಿಲ್ಲ.
ಇಂತಿವನೆಲ್ಲವನೊಂದಾಗಿ ಮೇಳೈಸಿದಡೆ
ಐನೂರುಕೋಟಿ ಯೋಜನ ಪರಿಪ್ರಮಾಣು ಕಟ್ಟಳೆಯಾಗಿತ್ತು.
ಆ ಮೇರುವಿನ ಒಂದು ದಿಕ್ಕಿನ ಪ್ರಮಾಣು:ಆ ಮೇರುವಿನ ಪ್ರದಕ್ಷಿಣವಾಗಿ
ಎಂಟು ದಳದಲ್ಲಿಎಂಟು ಪಂಚಶತಕೋಟಿ [ಯೋಜನ] ವಿಸ್ತೀರ್ಣವಾಯಿತ್ತು.ಇದನು ದಿವಸದೊಳಗೆ ಸೂರ್ಯ ತಿರುಗುವನು,
ರಾತ್ರಿಯೊಳಗೆ ಚಂದ್ರ ತಿರುಗುವನು,
ಇಪ್ಪತ್ತೇಳು ನಕ್ಷತ್ರ, ಧ್ರುವಮಂಡಲ, ಸಪ್ತಋಷಿಯರು, ರಾಹುಕೇತು, ನವಗ್ರಹ-
ಇಂತಿವರೆಲ್ಲರು ಆ ಮೇರುಮಂದಿರದ ಹೊಸಪ್ರದಕ್ಷಿಣವಂ
ದಿವಾರಾತ್ರಿಯಲ್ಲಿ ತಿರುಗಿ ಬಹರು.ಇವರೆಲ್ಲರ ಪ್ರಮಾಣವನು ಮಹಕ್ಕೆ ಮಹವಾಗಿಪ್ಪ ಶರಣಸ್ಥಲದವರು ಬಲ್ಲರು.
ಪ್ರಭುದೇವರು ಸಿದ್ಧರಾದೇವರು ಸಾಮವೇದಿಗಳು,
ಆದಿಲಿಂಗ ಅನಾದಿಶರಣ ಪೂರ್ವಾಚಾರಿ ಸಂಗನಬಸವಣ್ಣನು
ಕಟ್ಟಿದ ಕಟ್ಟಳೆಯೊಳಗೆ ಜ್ಯೋತಿರ್ಜ್ಞಾನದವರು.
(ಇಂತೀ) ಕಾಲ ಜ್ಯೋತಿಷ ಗ್ರಹಣ ಸಂಕ್ರಮಣ ತಿಥಿ ವಾರ ನಕ್ಷತ್ರ
ಯೋಗ ಕರಣ ಸಂವತ್ಸರ ಇವೆಲ್ಲವು
ಕೂಡಲಚೆನ್ನಸಂಗನಲ್ಲಿ ಬಸವಣ್ಣ ಕಟ್ಟಿದ ಕಟ್ಟಳೆ./999
ಪೃಥ್ವ್ಯಾದಿ ಪಂಚಭೂತಂಗು ಇದಕ್ಕೆ ವಿವರ:
ಅಸ್ಥಿ ಚರ್ಮ ಮಾಂಸ ರೋಮ ಮಜ್ಜೆ ಇವೈದು ಪೃಥ್ವಿಯ ಅಂಶ.
ಶುಕ್ಲ ಶೋಣಿತ ಶ್ಲೇಷ್ಮ ಪಿತ್ತ ರಕ್ತ ಇವೈದು ಅಪ್ಪುವಿನ ಅಂಶ.
ಹಸಿವು ತೃಷೆ ನಿದ್ರೆ ಆಲಸ್ಯ ಸ್ತ್ರೀಸಂಗ ಇವೈದು ಅಗ್ನಿಯ ಅಂಶ.
ಹವುದು ಕುಳ್ಳಿರುವುದು ಏಳುವುದು ಮೈಮುರಿವುದು ನಡೆವುದು
ಈ ಐದು ವಾಯುವಿನ ಅಂಶ.
ಡಂಬು ಪ್ರಕಟ ಪ್ರಪಂಚು ಅಭ್ರಚ್ಛಾಯ ಆನಂದ ಇವೈದು ಆಕಾಶದ ಅಂಶ.
ಇಂತೀ ಅಂಗ ಶುದ್ಧಂಗಳ ಬಿಟ್ಟು ಲಿಂಗಾಂಗವ ಮಾಡಬಲ್ಲಡೆ
ಕೂಡಲಚೆನ್ನಸಂಗಯ್ಯನಲ್ಲಿ ಶರಣನೆನಿಸುವನು/1000