Categories
ವಚನಗಳು / Vachanagalu

ಚಿನ್ಮಯ ಜ್ಞಾನಿ ಚೆನ್ನಬಸವಣ್ಣ ವಚನಗಳು

ಶಿವಶಕ್ತಿಸಂಪುಟವಿಹೀನ ಲಿಂಗ, ಹಾನಿವೃದ್ಧಿಯಿಲ್ಲದುದೆ ಜಂಗಮ.
ಜಾಗ್ರದಲ್ಲಿ ಕುರುಹು, ಸ್ವಪ್ನದಲ್ಲಿ ಆಕೃತಿ.
ನೆರೆ ಅರಿತ ಅರಿವು, ಹಿರಿದುಕಿರಿದೆನ್ನದ ಸಜ್ಜನ ಶುದ್ಧಶಿವಾಚಾರ
ಕೂಡಲಚೆನ್ನಸಂಗಾ ಲಿಂಗೈಕ್ಯವು. /1501
ಶಿವಶರಣ ತಾನಾದ ಬಳಿಕ,
ಹರಗಣಂಗಳಂಘ್ರಿಯಲ್ಲಿ ನಮ್ರಲಲಾಟನಾಗಿರಬೇಕು.
ಪತಿವ್ರತೆ ತಾನಾದ ಬಳಿಕ,
ವಲ್ಲಭನ ಸವರ್ೊಪಚಾರದಲ್ಲಿ ಲೀನೆಯಾಗಿರಬೇಕು.
ಇದು ಕಾರಣ- ಶಿವಶರಣರು ಹರಗಣಂಗಳ ಕಂಡು ಮಣಿಯದಿದ್ದಡೆ
ಕೂಡಲಚೆನ್ನಸಂಗಮದೇವರು ಕೊಡುವ ಮುಕ್ತಿಯಲ್ಲಿ ಮೌನರು ಕಾಣಾ
ಸಿದ್ಧರಾಮಯ್ಯ. /1502
ಶಿವಸಂಸ್ಕಾರಿಯಾಗಿ ಅಂಗದ ಮೇಲೆ ಲಿಂಗವ ಧರಿಸಿ.
ಆ ಲಿಂಗವೆ ತನ್ನಂಗ ಮನ ಪ್ರಾಣದಲ್ಲಿ ಹಿಂಗದಿರ್ದುದ ಕಂಡು,
ನಂಬಿ ಪೂಜಿಸಿ ಪ್ರಸಾದವ ಪಡೆದು ಲಿಂಗೈಕ್ಯರಾಗಲರಿಯದೆ,
ತನ್ನಂಗಲಿಂಗಸಂಬಂಧಕ್ಕನ್ಯವಾದ, ಭವಿ ಶೈವದೈವಕ್ಕೆ
ಎರಗುವ ಕುನ್ನಿಗಳಿಗೆ ಅಘೋರನರಕ, ಅದೆಂತೆಂದಡೆ:
“ಇಷ್ಟಲಿಂಗಂ ಪರಿತ್ಯಜ್ಯ ಅನ್ಯಲಿಂಗಮುಪಾಸತೇ
ಪ್ರಸಾದಂ ನಿಷ್ಪಲಂ ಚೈವ ರೌರವಂ ನರಕಂ ವ್ರಜೇತ್ ಎಂದುದಾಗಿ
ಅಲ್ಲಲ್ಲಿ ಧರೆಯ ಮೇಲಿಪ್ಪ ಭವಿದೈವ ಸ್ಥಾವರಕ್ಕೆ ಹರಿಯಲಾಗದು.
ಪ್ರಾಣಲಿಂಗಸಂಬಂದಿಗೆ ಅದು ಪಥವಲ್ಲ.
ತನ್ನ ಭವಿತನವ ಬಿಟ್ಟು ಭಕ್ತನಾದ ಬಳಿಕ ಆ ಭವವಿರಹಿತಲಿಂಗಕ್ಕೆ
ಭವಿಪಾಕವ ನಿವೇದಿಸಿದರೆ ಅದು ಕಿಲ್ಬಿಷ, ಅದೆಂತೆಂದೊಡೆ:
“ಭವಿಹಸ್ತಕೃತಂ ಪಾಕಂ ಲಿಂಗನೈವೇದ್ಯಕಿಲ್ಬಿಷಂ
ಶಿವಭಕ್ತಕೃತಂ ಪಾಕಂ ಲಿಂಗನೈವೇದ್ಯಮುತ್ತಮಂ ಎಂದುದಾಗಿ
ತಾ ಶಿವಭಕ್ತನಾಗಿ ಭವಿಪಾಕ ಭವಿಪಂಥ ಭವಿಶೈವದೈವ, ಭವಿತಿಥಿಮಾಟಕೂಟ
ಭವಿವರ್ತನಾಕ್ರೀಯನೊಡಗೂಡಿಕೊಂಡು ನಡೆದನಾದಡೆ,
ಕೂಡಲಚೆನ್ನಸಂಗಯ್ಯ ಅಘೋರನರಕದಲ್ಲಿಕ್ಕುವ/1503
ಶಿವಸಂಸ್ಕಾರಿಯಾಗಿ ಲಿಂಗವೆ ಪ್ರಾಣವಾಗಿದ್ದ ಬಳಿಕ
ಅಲ್ಲಲ್ಲಿಗೆ ಹರಿಯಲಾಗದು.
ಪ್ರಾಣಲಿಂಗಸಂಬಂದಿಗೆ ಅದು ಪಥವಲ್ಲ.
ಅಸಂಸ್ಕಾರಿಕೃತಂ ಪಾಕಂ ಶಂಭೋನರ್ೈವೇದ್ಯಮೇವ ನ
ಅನರ್ಪಿತಂ ತು ಭುಂಜೀಯಾತ್ ಪ್ರಸಾದೋ ನಿಷ್ಫಲೋ ಭವೇತ್
ಎಂದುದಾಗಿ, ಇದು ಕಾರಣ ಕೂಡಲಚೆನ್ನಸಂಗಯ್ಯ
ನಾಯಕನರಕದಲಿಕ್ಕುವನಾಗಿ. /1504
ಶಿವಸ್ವರೂಪವನರಿದು ಶಿವನೊಡನಾಡಿ ಶಿವನೊಡನುಂಡು
ಶಿವಾಕಾರವಾದ ಶಿವಭಕ್ತನು
ದೇವ ದಾನವ ಮಾನವಾದಿಗಳಲ್ಲಿರ್ದಡೇನು ? ಆತನು ಹುಟ್ಟುಗೆಟ್ಟನಾಗಿ.
ಆವ ಕುಲ ಜಾತಿಗಳಲ್ಲಿ ಹುಟ್ಟಿದಡೇನು ?
ಶಿವಜ್ಞಾನಸಿದ್ಧನಾದ ಶಿವಭಕ್ತನು
ಸಾಧಕರಂತೆ ವರ್ಣಾಶ್ರಮದ ಅಬಿಮಾನಕ್ಕೊಳಗಪ್ಪನೆ ? ಇಲ್ಲಿಲ್ಲ.
ಶಿವಭಕ್ತಾ ಮಹಾತ್ಮಾನಸ್ಸಂತಿ ದೇವೇಷು ಕೇಚನ
ದೈತ್ಯೇಷು ಯಾತುಧಾನೇಷು ಯಕ್ಷಗಂಧರ್ವಭೋಗಿಷು
ಮುನೀಶ್ವರೇಷು ಮೂರ್ತೆಷು ಬ್ರಾಹ್ಮಣೇಷು ನೃಪೇಷು ಚ
ಊರುಜೇಷು ಚ ಶೂದ್ರೇಷು ಸಂಕರೇಷ್ವಪಿ ಸರ್ವಶಃ
ವರ್ಣಾಶ್ರಮವ್ಯವಸ್ಥಾಶ್ಚ ನೈಷಾಂ ಸಂತಿ ಮುನೀಶ್ವರಾಃ
ಕೇವಲಂ ಶಿವರೂಪಾಸ್ತೇ ಸರ್ವೆ ಮಾಹೇಶ್ವರಾಃ ಸ್ಮೃತಾಃ
ಎಂದುದಾಗಿ, ಹೇಯವಾದ ಮಾಯೆಯ ನಾಯಿಯಂತೆ ಅಳಿದುಳಿದು
ಭಕ್ತನು ಮಾಹೇಶ್ವರನೆನಿಸಿಕೊಂಬನಾಗಿ,
ಜಡ ಮಾಯಾಧರ್ಮವ ಹೊದ್ದಲಮ್ಮನು ಕಾಣಾ.
ಕೂಡಲಚೆನ್ನಸಂಗಮದೇವಾ/1505
ಶಿವಾಯ ವಿಷ್ಣುರೂಪಾಯ ಶಿವರೂಪಾಯ ವಿಷ್ಣವೇ
ಶಿವಸ್ಯ ಹೃದಯಂ ವಿಷ್ಣುರ್ವಿಷ್ಣೋಶ್ಚ ಹೃದಯಂ ಶಿವಃ
ಯಥಾ ಶಿವಮಯೋ ವಿಷ್ಣುರೇವಂ ವಿಷ್ಣುಮಯಃ ಶಿವಃ
ಇಂತೆಂಬ ಪಾತಕರು ನೀವು ಕೇಳಿಭೋ
ಓಂ ಭೂಃ ಓಂ ಭುವಃ ಓಂ ಸ್ವಃ ಓಂ ಮಹಃ
ಓಂ ಜನಃ ಓಂ ತಪಃ ಓಂ ಸತ್ಯಂ ಓಂ ತತ್ಸವಿತುರ್ವರೇಣ್ಯಂ
ಭಗರ್ೊ ದೇವಸ್ಯ ಧೀಮಹಿ ದಿಯೋ ಯೋ ನಃ ಪ್ರಚೋದಯಾತ್
ಇಂತೆಂಬ ಶ್ರುತಿಯೊಳಗೆ ಆ ಶಬ್ದವುಳ್ಳರೆ ತೋರಿರೇ.
ಹಿಂದನರಿಯರು, ಮುಂದ ವಿಚಾರಿಸರು.
ಇಂತಪ್ಪ ಅಂತ್ಯಜರನೇನೆಂಬೆ ಕೂಡಲಚೆನ್ನಸಂಗಮದೇವಾ/1506
ಶಿಷ್ಯನ ಪೂರ್ವಾಶ್ರಯವ ಕಳೆವುದು ಗುರುವಿಗೆ ಸಹಜ.
ಶಿಷ್ಯನು ತನ್ನ ಪೂರ್ವಾಶ್ರಯವ ಕಳೆದು
ಶ್ರೀಗುರುಲಿಂಗವ ಮುಟ್ಟುವ ಪರಿ ಎಂತೋ ?
ಅರ್ಪಿತ ಹೋಗಿ, ಪ್ರಸಾದವನರಸುವುದೊ ?
ಕೂಡಲಚೆನ್ನಸಂಗಯ್ಯನಲ್ಲಿ, ಮಹಾಪ್ರಸಾದಿಯೆ ಬಲ್ಲ. /1507
ಶಿಷ್ಯನ ಪೂರ್ವಾಶ್ರಯವ ಗುರು ಕಳೆದನೆಂಬರು,
ಆ ನುಡಿಯ ಕೇಳಲಾಗದು.
ಗುರುವಿನ ಪೂರ್ವಾಶ್ರಯವ ಶಿಷ್ಯ ಕಳೆವನಲ್ಲದೆ,
ಶಿಷ್ಯನ ಪೂರ್ವಾಶ್ರಯವ ಗುರು ಕಳೆಯಲರಿಯ.
ಶರಣನ ಪೂರ್ವಾಶ್ರಯವ ಲಿಂಗ ಕಳೆಯಿತ್ತೆಂಬರು
ಆ ನುಡಿಯ ಕೇಳಲಾಗದು,
ಲಿಂಗದ ಪೂರ್ವಾಶ್ರಯವ ಶರಣ ಕಳೆವನಲ್ಲದೆ,
ಆ ಶರಣನ ಪೂರ್ವಾಶ್ರಯವ ಲಿಂಗವು ಕಳೆಯಲರಿಯದು.
ಭಕ್ತನ ಪೂರ್ವಾಶ್ರಯವ ಜಂಗಮ ಕಳೆಯಿತ್ತೆಂಬರು
ಆ ನುಡಿಯ ಕೇಳಲಾಗದು,
ಜಂಗಮದ ಪೂರ್ವಾಶ್ರಯವ ಭಕ್ತ ಕಳೆವನಲ್ಲದೆ,
ಆ ಭಕ್ತನ ಪೂರ್ವಾಶ್ರಯವ ಜಂಗಮ ಕಳೆಯಲರಿಯ.
ಪ್ರಸಾದಿಯ ಪೂರ್ವಾಶ್ರಯವ ಪ್ರಸಾದ ಕಳೆಯಿತ್ತೆಂಬರು
ಆ ನುಡಿಯ ಕೇಳಲಾಗದು,
ಪ್ರಸಾದದ ಪೂರ್ವಾಶ್ರಯವ ಪ್ರಸಾದಿ ಕಳೆವನಲ್ಲದೆ
ಆ ಪ್ರಸಾದಿಯ ಪೂರ್ವಾಶ್ರಯವ ಪ್ರಸಾದ ಕಳೆಯಲರಿಯದು.
ಆ ಪ್ರಸಾದದ ಪೂರ್ವಾಶ್ರಯವ ಕಳೆಯಲಿಕಾಗಿ
ಮಹಾಪ್ರಸಾದಿಯಾದ ಕೂಡಲಚೆನ್ನಸಂಗಾ ನಿಮ್ಮ ಶರಣ. /1508
ಶಿಷ್ಯನ ಮುಖದಿಂದಾದ ಗುರುವಿಂಗೆ-ಶಿಷ್ಯನ ಪ್ರಸಾದ ಗುರುವಿಂಗಲ್ಲದೆ,
ಗುರುವಿನ ಪ್ರಸಾದ ಶಿಷ್ಯಂಗಿಲ್ಲ,
ಇದಕ್ಕಾ ಗುರುವೆ ಸಾಕ್ಷಿ.
ಶರಣನ ಮುಖದಿಂದಾದ ಲಿಂಗಕ್ಕೆ-ಶರಣನ ಪ್ರಸಾದ ಲಿಂಗಕ್ಕೆ ಅಲ್ಲದೆ,
ಲಿಂಗಪ್ರಸಾದ ಶರಣಂಗಿಲ್ಲ, ಇದಕ್ಕಾ ಲಿಂಗವೆ ಸಾಕ್ಷಿ.
ಭಕ್ತನ ಮುಖದಿಂದಾದ ಜಂಗಮಕ್ಕೆ-ಭಕ್ತನ ಪ್ರಸಾದ ಜಂಗಮಕ್ಕಲ್ಲದೆ,
ಜಂಗಮಪ್ರಸಾದ ಭಕ್ತಂಗಿಲ್ಲ, ಇದಕ್ಕಾ ಜಂಗಮವೆ ಸಾಕ್ಷಿ.
ಇದು ಕಾರಣ ಕೂಡಲಚೆನ್ನಸಂಗಮದೇವಾ ಈ ತ್ರಿವಿಧದನುಭಾವವ ಬಸವಣ್ಣ ಬಲ್ಲ. /1509
ಶಿಷ್ಯನ ಸ್ತುತಿಯಲ್ಲಿ ಗುರು ಸಂತುಷ್ಟನಾಗಬೇಕೆಂದಡೆ
ಅಲ್ಲಿ ಗುರುವಿನ ಅಪ್ಪಣೆಯೊಂದುಂಟು.
ಅದೇನೆಂದಡೆ:
ಕೇಳುವೆನೆಂಬ ಭಾವ ತೋರದಡೆ
ಸರ್ವರು ಕೂಡಲಚೆನ್ನಸಂಗನ ಶರಣರು ಕಾಣಾ ಸಿದ್ಧರಾಮಯ್ಯಾ./1510
ಶಿಷ್ಯನೆಂಬ ಪ್ರತಿಭಾವವಿಲ್ಲದ ಗುರು, ಗುರುವೆಂಬ ಪ್ರತಿಭಾವವಿಲ್ಲದ ಶಿಷ್ಯ,
ಏನೆಂಬೆನಯ್ಯ ಎರಡಿಲ್ಲದ ಘನವ ? ಏನೆಂಬೆನಯ್ಯ ಎರಡೊಂದಾದ ಘನವ !
ಕೂಡಲಚೆನ್ನಸಂಗನಲ್ಲಿ ಗುರುಶಿಷ್ಯಸಂಬಂಧವಪೂರ್ವ. /1511
ಶೀಲ ಶೀಲವೆಂದು ಗರ್ವಿಸಿ ನುಡಿವುತಿಪ್ಪರು, ಶೀಲವಾವುದೆಂದರಿಯರು.
ಇದ್ದುದ ವಂಚನೆಯ ಮಾಡಿದಿಪ್ಪುದೆ ಶೀಲ,
ಇಲ್ಲದಿದ್ದುದಕ್ಕೆ ಕಡನ ಬೇಡದಿಪ್ಪುದೆ ಶೀಲ,
ಪರಧನ ಪರಸತಿಗೆಳಸದಿಪ್ಪುದೆ ಶೀಲ,
ಪರದೈವ ಪರಸಮಯಕ್ಕೆಳಸದಿಪ್ಪುದೆ ಶೀಲ,
ಗುರುನಿಂದೆ ಜಂಗಮನಿಂದೆಯ ಕೇಳದಿಪ್ಪುದೆ ಶೀಲ,
ಕೂಡಲಚೆನ್ನಸಂಗನ ಶರಣರ ಬರವಿಂಗೆ
ಮುಯ್ಯಾಂತು ಪರಿಣಾಮಿಸ ಬಲ್ಲರೆ ಅಚ್ಚಶೀಲ. /1512
ಶೀಲ ಶೀಲವೆಂದು ನುಡಿವ ಉದ್ದೇಶಪ್ರಾಣಿಗಳು ಎಲ್ಲರೂ ಅನಂತಶೀಲರು,
ಅರಿವಿನ ನಿರ್ಣಯವನರಿಯರು.
ಹೊರಗೆ ಬಳಸುವರು, ಒಳಗಣ ಶುದ್ಧಿಯನರಿಯರು.
ನೇಮಶೀಲವೆಂದು ಹಿಡಿವರು, ನಿರ್ಣಯವನರಿಯರಾಗಿ,
ಕೂಡಲಚೆನ್ನಸಂಗಯ್ಯನಲ್ಲಿ ಉದ್ದೇಶಪ್ರಾಣಿಗಳು. /1513
ಶೀಲ ಶೀಲವೆಂದೇನೋ ?
ಮಾಡಿದ ಮನೆ, ಹೂಡಿದ ಒಲೆ, ಅಟ್ಟುಂಬ ಮಡಕೆ, ಕಟ್ಟಿದ ಕೆರೆ,
ಬಿತ್ತಿದ ಕೆಯಿ ಶೀಲವಲ್ಲದೆ ತನ್ನ ಮನಕ್ಕೆ ಶೀಲವಿಲ್ಲ.
ಶೀಲವೆಂತೆಂದರೆ :
ಲಿಂಗವು ಬಂದು ಮನವನಿಂಬುಗೊಂಬುದೇ ಶೀಲ.
ಜಂಗಮ ಬಂದು ಧನವನಿಂಬುಗೊಂಬುದೇ ಶೀಲ.
ಪ್ರಸಾದ ಬಂದು ತನುವನಿಂಬುಗೊಂಬುದೇ ಶೀಲ.
ಇಂತಪ್ಪ ಶೀಲಕ್ಕೆ ನಮೋ ನಮೋ.
ಉಳಿದ ದುಃಶೀಲರ ಕಂಡರೆ ಮೆಚ್ಚುವನೆ ನಮ್ಮ
ಕೂಡಲಚೆನ್ನಸಂಗಯ್ಯ ? /1514
ಶೀಲ ಸಂಬಂಧವನೆಂತು ಮಾಡುವರಯ್ಯ,
ಮನದಂತುವನರಿಯಬಾರದೆ ?
ಕಾಯದ ಕಳವಳವು ತಮತಮಗೆ ತಟತಟ ತಾಗುತ್ತಿರಲು
ಶೀಲ ಶೀಲದಂತೆ, ತಾವು ತಮ್ಮಂತೆ, ಲಿಂಗ ಲಿಂಗದಂತೆ,
ಮನದೊಳಗೆ ಎನಗೆ ತನಗೆಂಬ ಭಾವ ಬಿಡದನ್ನಕ್ಕ ಶೀಲ ಮತ್ತೆಲ್ಲಿಯದೊ ?
ಅಷ್ಟಮದವಳಿದು ಷಡ್ವರ್ಗವರತಡೆ,
ಕೂಡಲಚೆನ್ನಸಂಗನಲ್ಲಿ ಸುಶೀಲನೆಂಬೆನು. /1515
ಶೀಲವಂತರು ಲಕ್ಕ ಲಕ್ಕ, ನೇಮಸ್ಥರು ಲಕ್ಕ ಲಕ್ಕ,
ವ್ರತಸ್ಥರು ಲಕ್ಕ ಲಕ್ಕ,
ಅರ್ಥ ಪ್ರಾಣ ಅಬಿಮಾನವನೊಪ್ಪಿಸಿದ ವೈರಾಗಿಗಳು ಲಕ್ಕ ಲಕ್ಕ.
ಕೂಡಲಚೆನ್ನಸಂಗಯ್ಯನಲ್ಲಿ ಇವರೆಲ್ಲಾ ಫಲಸದರ್ಥರಲ್ಲದೆ
ಲಿಂಗಪದಾರ್ಥರಾರೂ ಇಲ್ಲ. /1516
ಶೀಲವಂತರು ಶೀಲವಂತರೆಂದೆಂಬರು ನಾವಿದನರಿಯೆವಯ್ಯ.
ಅಂಗನೆಯರ ಅಧರಪಾನವು
ತನ್ನ ಉದರವ ಹೊಗುವನ್ನಕ್ಕ ಶೀಲವೆಲ್ಲಿಯದೊ ?
ಈಷಣತ್ರಯವೆಂಬ ಸೊಣಗ ಬೆಂಬತ್ತಿ ಬರುತ್ತಿರಲು ಶೀಲವೆಲ್ಲಿಯದೊ ?
ಹೆರಸಾರಿ ಮನವು ಮಹದಲ್ಲಿ ನಿಂದರೆ ಶೀಲ,
ಪರಿಣಾಮ ನೆಲೆಗೊಂಡರೆ ಶೀಲ.
ಇದು ಕಾರಣ ಕೂಡಲಚೆನ್ನಸಂಗನಲ್ಲಿ ಶೀಲವಂತರಪೂರ್ವ/1517
ಶೀಲವಂತರು ಶೀಲವಂತರೆಂದೆಂಬರು,
ಶೀಲ ಸಂಬಂಧದ ಹೊಲಬನರಿಯದ ಭ್ರಮಿತ ಪ್ರಾಣಿಗಳು ನೀವು ಕೇಳಿ ಭೋ
ಕಾಮವೆಂಬುದೊಂದು ಪಾಪಿ, ಮದವೆಂಬುದೊಂದು ದ್ರೋಹಿ,
ಮತ್ಸರವೆಂಬುದೊಂದು ಹೊಲೆಯ,
ಕ್ರೋಧವೆಂಬುದೊಂದು ಕೈಸೂನೆಗಾರ,
ಮನವ್ಯಾಪಕಂಗಳು ಭವಿ.
ಇಂತಿವನರಿದು ಮರೆದು ಹರವಸಂಬೋಗಿ ಹೊಯಿ ಹಡೆದಂತಿದ್ದರೆ
ಕೂಡಲಚೆನ್ನಸಂಗನಲ್ಲಿ ಅವರ ಲಿಂಗವಂತರೆಂಬೆ. /1518
ಶೀಲವಂತರೆಲ್ಲ ಅಂತಿರಲಿ,
ತಮ್ಮ ತಮ್ಮ ಮನದಿ ಮದವ ಕಳೆದು
ತಮ್ಮೊಳಗಿರ್ದ ಭವಿಗಳ ಭಕ್ತರ ಮಾಡಿ
ತಮ್ಮಲ್ಲಿರುವ ಅಷ್ಟಮದಂಗಳು, ಸಪ್ತವ್ಯಸನಂಗಳು,
ಅರಿಷಡ್ವರ್ಗಂಗಳು, ಪಂಚಭೂತಂಗಳು,
ಚತುಷ್ಕರಣಂಗಳು, ತ್ರಿಕರಣಂಗಳು, ತ್ರಿಗುಣಂಗಳು
ಶಿವಸಂಸ್ಕಾರದಿಂದ ಲಿಂಗಕರಣಂಗಳೆಂದೆನಿಸಿ
ನಿತ್ಯ ಲಿಂಗಾರ್ಚನೆಯ ಮಾಡಬಲ್ಲಾತನೆ ಶೀಲವಂತನಯ್ಯಾ.
ಅವನ ಶ್ರೀಪಾದವನು ಹಸ್ತವನೆತ್ತಿ ಹೊಗಳುತಿರ್ದವು ವೇದಂಗಳು:
`ಓಂ ಅಯಂ ಮೇ ಹಸ್ತೋ ಭಗವಾನ್ ಅಯಂ ಮೇ ಭಗವತ್ತರಃ
ಅಯಂ ಮೇ ವಿಶ್ವಭೇಷಜಃ ಅಯಂ ಶಿವಾಬಿಮರ್ಶನಃ
ಅಯಂ ಮಾತಾ ಅಯಂ ಪಿತಾ ‘
ಇಂತಪ್ಪ ಲಿಂಗದ ಅರ್ಚನೆಯ ಮಾಡಬಲ್ಲಾತನೆ
ಸಂಬಂದಿಯೆನಿಸಿಕೊಳ್ಳಬಲ್ಲನಯ್ಯಾ ಕೂಡಲಚೆನ್ನಸಂಗಮದೇವಾ/1519
ಶೀಲವಂತರೆಲ್ಲಾ ಶೀಲವಂತರಯ್ಯಾ
ಭಾಷೆವಂತರೆಲ್ಲಾ ಭಾಷೆವಂತರಯ್ಯಾ
ವ್ರತವಂತರೆಲ್ಲಾ ವ್ರತವಂತರಯ್ಯಾ
ಸತ್ಯವಂತರೆಲ್ಲಾ ಸತ್ಯವಂತರಯ್ಯಾ
ನೇಮವಂತರೆಲ್ಲಾ ನೇಮವಂತರಯ್ಯಾ
ಕೂಡಲಚೆನ್ನಸಂಗಮದೇವಯ್ಯಾ
ಸಂಗನಬಸವಣ್ಣನೊಬ್ಬನೆ ಲಿಂಗವಂತ./1520
ಶೀಲವಾದಡೆ ಪ್ರಪಂಚು ನಾಸ್ತಿಯಾಗಿರಬೇಕು,
ಸೀಮೆಯಾದಡೆ ಪಂಚೇಂದ್ರಿಯ ನಾಸ್ತಿಯಾಗಿರಬೇಕು,
ಸೀಮೆಯಾದಲ್ಲದೆ ಭಕ್ತನೆನಿಸಬಾರದು,
ಶೀಲವಾದಲ್ಲದೆ ಶರಣನೆನಿಸಬಾರದು,
ಶೀಲಕ್ಕೆ ಭವಿನಾಸ್ತಿ, ಸೀಮೆಗೆ ಭವಂ ನಾಸ್ತಿ,
ಈ ದ್ವಿವಿಧನಾಸ್ತಿಯಾದಲ್ಲದೆ ಕೂಡಲಚೆನ್ನಸಂಗನಲ್ಲಿ
ಶೀಲವಂತನೆಂದೆನಿಸಬಾರದು. /1521
ಶೀಲಶೀಲವೆಂದೇನೊ, ಪಿಂಡ ಬ್ರಹ್ಮಾಂಡ ಸಂಯೋಗವಾಗದನ್ನಕ್ಕರ ?
ಅಷ್ಟತನುವಿನ ಗುಣಧರ್ಮವನರಿದು ಬಿಡದನ್ನಕ್ಕರ ?
ಅಕ್ರೋಧ ಸತ್ಯವಚನ ಸಾವಧಾನ ವ್ರತಾನುಗ್ರಹವಾಗದನ್ನಕ್ಕರ ?
“ಅಕ್ರೋಧಃ ಸತ್ಯವಚನಂ ಸಾವಧಾನೋ ದಮಃ ಕ್ಷಮಾ
ಅನುಗ್ರಹಶ್ಚ ದಾನಂ ಚ ಶೀಲಮೇವ ಪ್ರಶಸ್ಯತೇ ‘ ಎಂದುದಾಗಿ,
ಕೂಡಲಚೆನ್ನಸಂಗಮದೇವಯ್ಯಾ, ಶೀಲವೆಂಬುದು ಅಪೂರ್ವ./1522
ಶೀಲಶೀಲವೆಂಬ ಅಣ್ಣಗಳು ನೀವು ಕೇಳಿರೊ:
ಕಾಮ ಒಂದನೆಯ ಭವಿ, ಕ್ರೋಧ ಎರಡನೆಯ ಭವಿ,
ಲೋಭ ಮೂರನೆಯ ಭವಿ, ಮೋಹ ನಾಲ್ಕನೆಯ ಭವಿ,
ಮದ ಐದನೆಯ ಭವಿ, ಮತ್ಸರ ಆರನೆಯ ಭವಿ.
ಇಂತೀ ಷಡ್ವಿಧಭವಿಯ ತಮ್ಮ ಎದೆಯೊಳಗೆ ಇಂಬಿಟ್ಟುಕೊಂಡು
ಅಂಗದ ಮೇಲೆ ಅವರಿಗೆ ಲಿಂಗವುಂಟೊ ? ಇಲ್ಲವೊ ?
ಎಂಬ ಜಗಭಂಡರು ನೀವು ಕೇಳಿರೊ:
ಅಚ್ಚಪ್ರಸಾದಿ ನಿಚ್ಚಪ್ರಸಾದಿ !
ಜಲವನೆ ಹೊಕ್ಕು ಕನ್ನವನಿಕ್ಕಿ ಅಗ್ಗಣಿಯ ತಂದು ಮಜ್ಜನಕ್ಕೆ ನೀಡುವ
ಹಗಲುಗಳ್ಳರ ಮೆಚ್ಚುವನೆ ಕೂಡಲಚೆನ್ನಸಂಗಮದೇವ ?/1523
ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದವೆಂತುಟೆಂದು ಹೇಳಿಹೆ ಕೇಳಿರೇ:
ಶುದ್ಧಪ್ರಸಾದವು ಗುರುವಿನಲ್ಲಿ, ಸಿದ್ಧಪ್ರಸಾದವು ಲಿಂಗದಲ್ಲಿ,
ಪ್ರಸಿದ್ಧಪ್ರಸಾದವು ಜಂಗಮದಲ್ಲಿ.
ಇದರೊಳಗಾವುದು ಘನವೆಂಬೆನಾವುದು ಕಿರಿದೆಂಬೆ?
ಘನಕ್ಕೆ ಘನ ಮಹಾಘನ ಪ್ರಸಾದವು.
ಕೂಡಲಚೆನ್ನಸಂಗನಲ್ಲಿ ತ್ರಿವಿಧಪ್ರಸಾದವನು
ಸುಯಿಧಾನದಲ್ಲಿ ಕೊಳಬಲ್ಲನಯ್ಯಾ ಬಸವಣ್ಣನು. /1524
ಶುದ್ಧ ಸಿದ್ಧ ಪ್ರಸಿದ್ಧದ ಭೇದಾಭೇದ ಸೂಕ್ಷ್ಮವಂ ಪೇಳ್ವೆ:
ಭಕ್ತ ಲಿಂಗಾರ್ಚನೆಯಂ ಮಾಡುತ್ತಿರಲು ಮಠದಲ್ಲಿ ಪದಾರ್ಥ ಹೆಚ್ಚಿರಲು
ಆ ಸಮಯದಲ್ಲಿ ಒಡೆಯರು ಬಿಜಯಂಗೈಯಲು
ತಾನು ಕೊಂಡುದೆ ಪ್ರಸಾದ ನಿಂದುದೆ ಪದಾರ್ಥವಾಗಿ ನೀಡಬಹುದಯ್ಯಾ.
ಬಹುದು ಬಾರದೆಂಬ ಸಂದೇಹಮಂ ತಾಳ್ದಡೆ
ಲಿಂಗಕ್ಕೆ ದೂರ ಜಂಗಮಕ್ಕೆ ಸಲ್ಲನಯ್ಯಾ.
ಅದು ಶುದ್ಧ ಮುಖದಿಂದ ಬಂದುದು ಪ್ರಸಿದ್ಧ ಮುಖಕ್ಕೆ ನೀಡಬಹುದಾಗಿ
ಸಂದೇಹಮಂ ತಾಳಲಾಗದು ಕೂಡಲಚೆನ್ನಸಂಗಮದೇವ/1525
ಶುದ್ಧ, ಸಿದ್ಧ, ಪ್ರಸಿದ್ಧದ ವಿವರವ ಕೇಳಿದಡೆ ಹೇಳುವೆನು:
ವಿಶ್ವ ಮುಟ್ಟಿತ್ತು ಶುದ್ಧ, ತೈಜಸ ಮುಟ್ಟಿತ್ತು ಸಿದ್ಧ,
ಪ್ರಾಜ್ಞ ಮುಟ್ಟಿತ್ತು ಪ್ರಸಿದ್ಧ.
ಪ್ರತ್ಯಗಾತ್ಮನಲ್ಲಿ ಪರಿಣಾಮಿ,
ಕೂಡಲಚೆನ್ನಸಂಗಾ, ನಿಮ್ಮ ಶರಣ/1526
ಶೂನ್ಯ ಹುಟ್ಟದಂದು, ನಿಶ್ಶೂನ್ಯವಿಲ್ಲದಂದು,
ಬ್ರಹ್ಮ ವಿಷ್ಣು ಮಹೇಶ್ವರರಿಲ್ಲದಂದು,
ಹದಿನಾಲ್ಕು ದಿಗುವಳಯವಿಲ್ಲದಂದು,
ಕೂಡಲಚೆನ್ನಸಂಗಯ್ಯನೆಂಬ ಹೆಸರು ಮುನ್ನಿಲ್ಲದಂದು/1527
ಶೂನ್ಯವ ನುಡಿದು ದುರ್ಗತಿಗಿಳಿದವರ,
ಅದ್ವೈತವ ನುಡಿದು ಅಹಂಕಾರಿಗಳಾದವರ,
ಬ್ರಹ್ಮವ ನುಡಿದು ಭ್ರಮಿತರಾದವರ,
ತ್ರಿಕಾಲ ಲಿಂಗಪೂಜೆಯ ಮಾಡದವರ
ಬ್ರಹ್ಮದ ಅನವರತ ಮಾತ ಕೇಳಿ
ಹಿಡಿದ ವ್ರತನೇಮಗಳ ಬಿಡುವವರ-
ಈ ದುರಾಚಾರಿಗಳ ಮೆಚ್ಚ, ಕೂಡಲಚೆನ್ನಸಂಗಾ ನಿಮ್ಮ ಶರಣ. /1528
ಶೃಂಗಾರಾದಿ ನವರಸ ರಸಿಕನಾದಹೆನೆಂಬವ
ನವಖಂಡಮಂಡಲಾಧಾರದಲ್ಲಿ ಕರ ಚಂಡನಾಗದೆ
ನವವಿಧ ಬಂಧನಕ್ಕೊಳಗಾಗದೆ
ನವನಾಳದಲ್ಲಿ ಕಳಾಹೀನನಾಗದೆ
ಇಂತೀ ನವಸಂಪಾದನೆ ಮೂವತ್ತಾರು ಪ್ರಕಾರಂಗಳು
ಪ್ರಾಣಲಿಂಗಕ್ಕೆ ಸಲುವರನರಿತು ಸಲಿಸುವದು, ಸಲ್ಲದಿದ್ದಡೆ
ತನಗಾಗಿ ಚಿಂತಿಸಲಾಗದು ಕೂಡಲಚೆನ್ನಸಂಗಮದೇವಾ/1529
ಶೈವ ಸೈವೆರಗಾದ, ಪಾಶುಪತಿ ಪಥವನರಿಯ
ಕಾಳಾಮುಖಿ ಕಂಗೆಟ್ಟ, ಮಹಾವ್ರತಿ ಮದವೇರಿದ
ಸನ್ಯಾಸಿ ಪಾಷಂಡಿಯಾದ, ಕಾಪಾಲಿ ಮರುಳಾಗಿ ತಿರುಗಿದ.
ಈ ಆರು ಭಕ್ತಿಸ್ಥಲಕ್ಕೆ ಸಲ್ಲವು ಕೇಳಿರಣ್ಣಾ-
ಏಳೇಳು ಭವದಲ್ಲಿ ಭವಿಯಾಗಿ ಬಂದು,
ಶ್ರೀಗುರುಕಟಾಕ್ಷ ನಿರೀಕ್ಷಣೆಯಿಂದ ಪ್ರಾಣದಮೇಲೆ ಲಿಂಗಪ್ರತಿಷ್ಠೆಯಂ ಮಾಡಿಕೊಂಡು
ಆರರಿಂದ ಮೀರಿದ ಸ್ಥಲವಿಟ್ಟು
ವೀರಮಾಹೇಶ್ವರತ್ವಮಂ ಪಡೆದು ಮರಳಿ
ತನ್ನ ಕುಲವನರಿಸಿದರೆ ಒಡೆದ ಮಡಕೆಯ ಓಡಿನಂತಹನು ಕೇಳಿರಣ್ಣಾ.
ತನ್ನ ಕುಲವೆಂದು ಪ್ರಾಣಸ್ನೇಹ ಮಾಯಾಮೋಹ ಕಿಂಚಿತ್ ಮಾತ್ರ ಬೆರಸಿದರೆ,
ಅವ ಪಂಚಮಹಾಪಾತಕಿ, ರೌರವ ನಾರಕಿ.
ಅವನ ಭಕ್ತನೆಂದು ನೋಡಿದಡೆ, ನುಡಿಸಿದಡೆ, ಸಪಂಕ್ತಿಯಲ್ಲಿ ಕುಳಿತಡೆ,
ಸಂಭಾಷಣೆಯ ಮಾಡಿದಡೆ, ಕೈವೊಡ್ಡಿ ಬೇಡಿದಡೆ ಅವಂಗೆ ಕುಂಬಿಪಾತಕ ನಾಯಕನರಕ ಕೇಳಿರಣ್ಣಾ.
ಭಕ್ತಂಗೆ ಭವಿನೇಮಸ್ತರು ಸಲಲಾಗದು.
ಭವಿ ಶ್ವಪಚ, ನೇಮಸ್ತ ಸಮ್ಮಗಾರ- ಇವರಿಬ್ಬರನು ಸತಿಸುತ ಮಿತ್ರರೆಂದು
ಮಠಮಂ ಹೊಗಿಸಿದಡೆ ಅನ್ನಮನಿಕ್ಕಿದಡೆ;
ಸುರೆಯ ಮಡಕೆಯಂ ತೊಳೆದು ಘೃತಮಂ ತುಂಬಿ ಶ್ವಾನನಂ ಕರೆದು ತಿನಿಸಿ,
ಮಿಕ್ಕುದನು ತಾನು ಭುಂಜಿಸಿದಂತೆ ಕೇಳಿರಣ್ಣಾ.
ಭಕ್ತ ಲಿಂಗಾರ್ಚನೆಯ ಮಾಡಿದ ಪವಿತ್ರ ಭಾಜನಮಂ
ಶ್ವಾನ ಸೂಕರ ಕುಕ್ಕುಟ ಮಾರ್ಜಾಲಂಗಳು ಮುಟ್ಟಿದಡೆ
ಅವರ ಕೂಡೆ ಸಹಭೋಜನವ ಮಾಡಿದಂತೆ.
ಗುರುಲಿಂಗಜಂಗಮಕ್ಕೆ ಅರ್ಪಿತವ ಮಾಡಿ,
ಒಕ್ಕುಮಿಕ್ಕ ಪ್ರಸಾದವ ಭೋಗಿಸುವಲ್ಲಿ ಪದಾರ್ಥವೆಂದು ಭಾವಿಸಿದಡೆ ಪ್ರಸಾದದ್ರೋಹ.
ಜಂಗಮದಲ್ಲಿ ಅನೃತ ಅಸ್ಥಿರವಾಕ್ಯ ಪಂಕ್ತಿಭೇದ ಉದಾಸೀನ, ನಿರ್ದಯೆ, ಇಷ್ಟು (ಇರ್ದಡೆ) ಜಂಗಮದ್ರೋಹ.
ಲಿಂಗದಲ್ಲಿ ತ್ರಿಕಾಲಪೂಜೆ ಪ್ರೀತಿ ಪ್ರೇಮ ಸ್ನೇಹ ಮೋಹ -ಇಂತೀ ಐದು ಇಲ್ಲದಿರುವದೆ ಲಿಂಗದ್ರೋಹ
ಗುರುವಿನಲ್ಲಿ ಅಹಂಕಾರ, ಭಯವಿಲ್ಲದಿಹುದು, ಸಮಪಂಕ್ತಿಯಲ್ಲಿ ಕುಳ್ಳಿರುವುದು
ಸಂಭಾಷಣೆಯ ಮಾಡುವುದು, ಕೈವೊಡ್ಡಿ ಬೇಡುವುದು- ಇಷ್ಟು ಗುರುದ್ರೋಹ.
ಇದು ಕಾರಣ ಗುರುಲಿಂಗಜಂಗಮಕ್ಕೆ, ತನುಮನಧನವ ಸಮರ್ಪಿಸಿ ಏಕಲಿಂಗನಿಷ್ಠಾಪರನಾಗಿ,
ಭಕ್ತಕಾಯ ಮಮಕಾಯವೆಂಬ ಶಬ್ದಕ್ಕೆ ಸಂದು,
ಪ್ರಸಾದವೆಂದು ಕೊಂಡು ಎಂಜಲೆಂದು ಕೈತೊಳೆದಡೆ
ಅಘೋರನರಕ ತಪ್ಪದು ಕೂಡಲಚೆನ್ನಸಂಗಮದೇವಯ್ಯಾ./1530
ಶೈವಸಿದ್ಧಾಂತಿಗಳಪ್ಪ ಕರ್ಮಕಾಂಡಿಗಳು ಸ್ಥಾವರಲಿಂಗದೆಡೆಯಲ್ಲಿ,
ಹವನ ಹೋಮಾದಿ ಪವಿತ್ರಕಾರ್ಯವ ಕೈಕೊಂಡೆಡೆಯಲ್ಲಿ,
ಉಚ್ಛಿಷ್ಟಾದಿ ಪಂಚಸೂತಕಗಳಂಟಿದಡೆ
ಅವರು ಆ ಸೂತಕವ ಮಾನಿಸದೆ ಪರಿಶುದ್ಧಭಾವದಿಂದಿರ್ಪರು.
ದೇವದೇವನಪ್ಪ ಮಹಾದೇವನನು ಲಿಂಗರೂಪದಿಂದ ಅಂಗದಲ್ಲಿ ಧರಿಸಿ
ಪರಿಶುದ್ಧರಾದೆವೆಂದು ತಿಳಿಯದೆ ಸೂತಕವನಾಚರಿಸುವ
ವ್ರತಗೇಡಿಗಳ ಎನಗೆ ತೋರದಿರಯ್ಯಾ- ಕೂಡಲಚೆನ್ನಸಂಗಮದೇವಾ./1531
ಶ್ರೀ ಗುರುಲಿಂಗ ತ್ರಿವಿಧ:ದಿಕ್ಷಾಗುರು, ಶಿಕ್ಷಾಗುರು, ಜ್ಞಾನಗುರು.
ಶಿವಲಿಂಗ ತ್ರಿವಿಧ:ಕ್ರಿಯಾಲಿಂಗ, ಜ್ಞಾನಲಿಂಗ, ಭಾವಲಿಂಗ.
ಜಂಗಮಲಿಂಗ ತ್ರಿವಿಧ:ಸ್ವಯ ಚರ ಪರ-ಇಂತು ಆಚಾರಲಿಂಗ ಸ್ಥಲ ೯
ಆಗಮಲಿಂಗ ತ್ರಿವಿಧ:ಕ್ರಿಯಾಗಮ, ಭಾವಾಗಮ, ಜ್ಞಾನಾಗಮ
ಕಾಯಲಿಂಗ ತ್ರಿವಿಧ:ಸಕಾಯ, ಆಕಾಯ, ಪರಕಾಯ.
ಆಚಾರಲಿಂಗ ತ್ರಿವಿಧ:ಧರ್ಮಾಚಾರ, ಭಾವಾಚಾರ, ಜ್ಞಾನಾಚಾರ.
ಇಂತು ಗುರುಲಿಂಗ ಸ್ಥಲ ೯-ಉಭಯಸ್ಥಲ ೧೮
ಅನುಗ್ರಹಲಿಂಗ ತ್ರಿವಿಧ:ಕಾರ್ಯಾನುಗ್ರಹ, ಇಂದ್ರಿಯಾನುಗ್ರಹ, ಪ್ರಾಣಾನುಗ್ರಹ.
ಅರ್ಪಿತಲಿಂಗ ತ್ರಿವಿಧ:ಕಾಯಾರ್ಪಿತ, ಕರಣಾರ್ಪಿತ, ಭಾವಾರ್ಪಿತ.
ತನುಗುಣಲಿಂಗ ತ್ರಿವಿಧ:ಶಿಷ್ಯ, ಶುಶ್ರೂಷ, ಸೇವ್ಯ.
ಇಂತು ಸ್ಥಲ ೯-ತೃತೀಯ ಸ್ಥಲ ೨೭
ಒಲವುಲಿಂಗ ತ್ರಿವಿಧ:ಜೀವಾತ್ಮ, ಅಂತರಾತ್ಮ, ಪರಮಾತ್ಮ.
ನಿರೂಪಲಿಂಗ ತ್ರಿವಿಧ:ನಿರ್ದೆಹಾಗಮ, ನಿರ್ಭಾವಾಗಮ, ನಷ್ಟಾಗಮ.
ಪ್ರಸಾದಲಿಂಗ ತ್ರಿವಿಧ:ಆದಿ ಪ್ರಸಾದಿ, ಅಂತ್ಯ ಪ್ರಸಾದಿ, ಸೇವ್ಯ ಪ್ರಸಾದಿ.
ಪಾದೋದಕಲಿಂಗ ತ್ರಿವಿಧ:ದೀಕ್ಷಾಪಾದೋದಕ, ಶಿಕ್ಷಾಪಾದೋದಕ,
ಜ್ಞಾನಪಾದೋದಕ. ಇಂತು ಸ್ಥಲ ೧೨- ಚತುರ್ಥಸ್ಥಲ ೩೯
ಮೀರಿದ ಕ್ರಿಯಾ ದೀಕ್ಷಾಕ್ರಮದಿಂದತ್ತತ್ತಲು
ನಿಃಪತಿಲಿಂಗ ತ್ರಿವಿಧ:ಕ್ರಿಯಾ ನಿಃಪತಿ, ಭಾವನಿಃಪ, ಜ್ಞಾನನಿಃಪತಿ.
ಆಕಾಶಲಿಂಗ ತ್ರಿವಿಧ:ಪಿಂಡಾಕಾಶ, ಬಿಂದ್ವಾಕಾಶ, ಮಹದಾಕಾಶ.
ಪ್ರಕಾಶಲಿಂಗ ತ್ರಿವಿಧ:ಕ್ರಿಯಾಪ್ರಕಾಶ, ಭಾವಪ್ರಕಾಶ, ಜ್ಞಾನಪ್ರಕಾಶ.
ಇಂತು ಸ್ಥಲ ೯, ಪಂಚಮಸ್ಥಲ ೪೮.
ಆ ಲಿಂಗೈಕ್ಯ ಕೊಂಡುದು ಪ್ರಸಾದ, ನಿಂದುದೋಗರ, ಚರಾಚರನಾಸ್ತಿ-
ಇಂತು ತ್ರಿವಿಧ.
ಭಾಂಡ, ಭಾಜನ, ಅಂಗಲೇಪ- ಇಂತು ತ್ರಿವಿಧ.
ಸ್ವಯ ಚರ ಪರವರಿಯ[ದ], ಭಾವಾಭಾವನಷ್ಟ, ಜ್ಞಾನಶೂನ್ಯ-
ಇಂತು ಸ್ಥಲ ೯. ಷಡುಸ್ಥಲ ೫೭
ಇಂತಿವೆಲ್ಲ ಸ್ಥಲಂಗಳನೊಳಕೊಂಡ ಮಹಾಮಹಿಮನು
ಜ್ಞಾನಿಯಲ್ಲ ಅಜ್ಞಾನಿಯಲ್ಲ, ಶೂನ್ಯನಲ್ಲ. ಅಶೂನ್ಯನಲ್ಲ,
ಉಭಯಕು? ತಾನೆಂದರಿದ ಪರಮಜ್ಞಾನಿಗೆ ಕೊಳುಕೊಡೆಯಿಲ್ಲ.
ಸಾಕಾರ ಸಂಬಂಧವನರಿಯ, ನಿತ್ಯಮುಕ್ತ, ನಿರವಯ,
ಉಭಯಾತ್ಮಕ ತಾನು ಕೂಡಲಚೆನ್ನಸಂಗನೆಂದು
ಎನ್ನದ ಸುಯಿಧಾನಿ./1532
ಶ್ರೀ ಗುರುಸ್ವಾಮಿ ಶಿಷ್ಯನನನುಗ್ರಹಿಸುವ ಪರಿಯೆಂತೆಂದರೆ:
ಆಚಾರಸ್ಥಲ ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ
ಅರ್ಪಿತಸ್ಥಲ ಪ್ರಸಾದಸ್ಥಲವೆಂದು ಕರುಣಿಸುವುದು ದೀಕ್ಷೆ.
ಈ ಕ್ರಮವರಿದು ಮಹಾಪ್ರಸಾದವೆಂದು ಕೈಕೊಂಡ ಬಳಿಕ
ಪರಪಾಕಂ ನ ಕರ್ತವ್ಯಂ ಲಿಂಗನೈವೇದ್ಯಕಿಲ್ಬಿಷಂ
ಸ್ವಯಂಪಾಕಂ ಪವಿತ್ರಾಣಾಂ ಲಿಂಗನೈವೇದ್ಯಮುತ್ತಮಂ ಎಂಬುದಾಗಿ,
ಒಡಲ ಕಕ್ಕುಲತೆಗೆ, ಭಕ್ತನ ದಾಕ್ಷಿಣ್ಯಕ್ಕೆ
ಅನ್ಯದೈವ ಭವಿನೇಮಸ್ತರುಳ್ಳಲ್ಲಿ ಹೊಕ್ಕರೆ,
ಕೂಡಲಚೆನ್ನಸಂಗಾ ಅವರಂದೆ ದೂರ. /1533
ಶ್ರೀಗುರು ಉಪದೇಶವ ಮಾಡುವಲ್ಲಿ ಭಕ್ತಗಣಸಾಕ್ಷಿಯಾಗಿ
ಹಸ್ತಮಸ್ತಕಸಂಯೋಗವ ಮಾಡಿ, ಆ ಮಸ್ತಕಾಗ್ರದೊಳಿಪ್ಪ
ನಿತ್ಯನಿರಂಜನ ಶಿವಕಳೆಯ ಭಾವದೊಳು ಭರಿತವೆನಿಸಿ
ಮನದೊಳು ಮಂತ್ರಯುಕ್ತದಿಂ ಮೂರ್ತಿಗೊಳಿಸಿ
ಚರಪಾದತೀರ್ಥಪ್ರಸಾದದೊಳು ಬೆರಸಿ- ಇಂತೀ ಗುರುಚರಪರರಾಜ್ಞೆಯಲಿ
ಪ್ರಾಣಲಿಂಗವ ಕರಸ್ಥಲಕ್ಕೆ ಬಿಜಯಂಗೈಸಿ ಕೊಟ್ಟ ಬಳಿಕ,
ಗುರು ಕೊಟ್ಟ ಇಷ್ಟಲಿಂಗದಲ್ಲಿ ನಿಷ್ಠೆಗಟ್ಟಿಗೊಂಡು ಮನಮುಟ್ಟಿ ಪೂಜಿಸಿ
ಪ್ರಸಾದವಂ ಪಡೆದು ನಿಜಮುಕ್ತಿಯನೈದಲರಿಯದೆ
ಈ ಗುರು ಕೊಟ್ಟ ಇಷ್ಟಲಿಂಗವ ಬಿಟ್ಟು ಗುರುಕಾರುಣ್ಯ ಚರಪ್ರಸಾದ ಹೊರಗಾದ,
ಧರೆಯ ಮೇಲಣ ಪ್ರತಿಷ್ಠೆಯನುಳ್ಳ ಭವಿಶೈವದೈವಕ್ಕೆರಗುವ
ದುರಾಚಾರಿಗಳಿಗೆ ಅಘೋರನರಕ ತಪ್ಪದು ಕಾಣಾ
ಕೂಡಲಚೆನ್ನಸಂಗಯ್ಯ. /1534
ಶ್ರೀಗುರು ಕರಸ್ಥಲಕ್ಕೆ ಇಷ್ಟಲಿಂಗವ ಬಿಜಯಂಗೈಸಿ ಕೊಟ್ಟ ಬಳಿಕ,
ಮತ್ತೊಂದು ಸೆಜ್ಜೆ ಶಿವದಾರಬೇಕೆಂಬ ದ್ರೋಹ ಸಾಲದೆ ?
ಅಂಗದ-ಲಿಂಗವ ಹಿಂಗಿ, ಮಜ್ಜನಕ್ಕೆರೆವ ಭಂಗಿತರ ತೋರದಿರಯ್ಯಾ
ಕೂಡಲಚೆನ್ನಸಂಗಯ್ಯಾ. /1535
ಶ್ರೀಗುರು ತನ್ನ ಸಾಕಾರವ ಬಿಟ್ಟು ನಿರಾಕಾರವಾದಡೆ ಸಂದೇಹಿಸಲಿಲ್ಲ.
ಸಾಕಾರವಿಡಿದು ಉಪದೇಶವ ಕೊಟ್ಟು, ಎನ್ನ ಕಾಯವ ಸಮರ್ಪಿಸಿಕೊಂಡು
ಶುದ್ಧನ ಮಾಡಿದನಯ್ಯಾ ಶ್ರೀಗುರು.
ಪ್ರಾಣದಲಡಗಿ ಸಿದ್ಧನ ಮಾಡಿದನಯ್ಯಾ ಶ್ರೀಗುರು.
ಇಂತು ಅವಿರಳ ಗುರುತತ್ವ-ಸಂಗನಬಸವಣ್ಣನು
ಕೂಡಲಚೆನ್ನಸಂಗಾ ನಿನ್ನೊಳಗೆ ಪರಿಪೂರ್ಣ ಕಾಣಾ/1536
ಶ್ರೀಗುರು ಲಿಂಗ ಜಂಗಮಕ್ಕೆ ಅರ್ಚನೆ ಪೂಜನೆ ದಾಸೋಹವನು
ಧರ್ಮವ ಕಾಮಿಸಿ ಮಾಡಿದರೆ ಧರ್ಮವಪ್ಪುದು,
ಅರ್ಥವ ಕಾಮಿಸಿ ಮಾಡಿದರೆ ಅರ್ಥವಪ್ಪುದು,
ಕಾಮವ ಕಾಮಿಸಿ ಮಾಡಿದರೆ ಕಾಮವಪ್ಪುದು,
ಮೋಕ್ಷವ ಕಾಮಿಸಿ ಮಾಡಿದರೆ ಮೋಕ್ಷವಪ್ಪುದು,
ಸಾಲೋಕ್ಯವ ಕಾಮಿಸಿ ಮಾಡಿದರೆ ಸಾಲೋಕ್ಯವಪ್ಪುದು,
ಸಾಮೀಪ್ಯವ ಕಾಮಿಸಿ ಮಾಡಿದರೆ ಸಾಮೀಪ್ಯವಪ್ಪುದು
ಸಾರೂಪ್ಯವ ಕಾಮಿಸಿ ಮಾಡಿದರೆ ಸಾರೂಪ್ಯವಪ್ಪುದು,
ಸಾಯುಜ್ಯವ ಕಾಮಿಸಿ ಮಾಡಿದರೆ ಸಾಯುಜ್ಯವಪ್ಪುದು,
ಕಾಮಧೇನುವ ಕಾಮಿಸಿ ಮಾಡಿದರೆ ಕಾಮಧೇನುವಪ್ಪುದು,
ಕಲ್ಪತರುವ ಕಾಮಿಸಿ ಮಾಡಿದರೆ ಕಲ್ಪತರುವಪ್ಪುದು,
ಪರುಷವ ಕಾಮಿಸಿ ಮಾಡಿದರೆ ಪರುಷವಪ್ಪುದು,
ಆವುದನಾವುದ ಕಾಮಿಸಿದರೆ ಕಾಮಿಸಿದ ಫಲ ತಪ್ಪದು.
ಕಾಮಿಸದ ನಿಷ್ಕಾಮದಾಸೋಹ
ಕೂಡಲಚನ್ನಸಂಗಾ ನಿಮ್ಮ ಶರಣಂಗೆ. /1537
ಶ್ರೀಗುರು ಲಿಂಗ ಜಂಗಮದ ಪಾದೋದಕ ಪ್ರಸಾದವ ಕೊಂಡೆವೆಂಬರು.
ಅವರು ಕೊಟ್ಟ ಪರಿಯಾವುದು ? ನೀವು ಕೊಂಡ ಪರಿಯಾವುದು ?
ಆ ಗುರುವಿಂಗೆ ಜಂಗಮಪ್ರಸಾದವೆ ಬೇಕು,
ಆ ಲಿಂಗಕ್ಕೆ ಜಂಗಮಪ್ರಸಾದವೆ ಬೇಕು.
ಅದೆಂದೆಂತಡೆ:
ಚರಪ್ರಸಾದಸ್ಸಂಗ್ರಾಹ್ಯೋ ಗುರುಲಿಂಗಜಂಗಮಾನಾಂ
ತದುಚ್ಛಿಷ್ಟಂ ತು ಸಂಪ್ರಾಪ್ಯ ಭವಾನ್ಮುಕ್ತಿಸ್ತದಾ ಭವೇತ್ ಎಂದುದಾಗಿ
ಕೂಡಲಚೆನ್ನಸಂಗಯ್ಯಾ, ನಿಮ್ಮ ಜಂಗಮಪ್ರಸಾದವಿಲ್ಲದಿರ್ದಡೆ
ಗುರುವಾಗಬಾರದು, ಲಿಂಗವಾಗಬಾರದು, ಜಂಗಮವಾಗಬಾರದು/1538
ಶ್ರೀಗುರು ಶಿಷ್ಯಂಗೆ ಅನುಗ್ರಹ ಮಾಡಿದ ಕ್ರಮವೆಂತೆಂದಡೆ:
`ಲಿಂಗ, ಜಂಗಮ, ಪಾದೋದಕ, ಪ್ರಸಾದ-
ಇಂತು ಚತುರ್ವಿಧ ಲಂಪಟನಾಗೈ ಮಗನೆ’ ಎಂದು
ಅಂಗದ ಮೇಲೆ ಲಿಂಗಸಾಹಿತ್ಯವ ಮಾಡಿ,
`ಹುಸಿ ಕಳವು ವೇಶ್ಯಾಗಮನ ಪಾರದ್ವಾರ ಪರದ್ರವ್ಯ ಪರನಿಂದೆ ಪರದೋಷ:
ಇಂತೀ ಸಪ್ತಗುಣ ವಿರಹಿತನಾಗಿ, ಅನ್ಯಭವಿನಾಸ್ತಿಯಾಗಿ
ಮಜ್ಜನಕ್ಕೆರೆವುದು ಶಿವಪಥ ಕಂಡಾ ಮಗನೆ’
ಎಂದು ಹೇಳಿಕೊಟ್ಟ ಉಪದೇಶವನೆ ಕೇಳಿ ನಡೆಯ ಬಲ್ಲಡೆ
ಆತನೆ ಶಿಷ್ಯ ಆತನೆ ನಿತ್ಯಮುಕ್ತನು.
ಆ ಗುರುಶಿಷ್ಯರಿಬ್ಬರು ನಿಮ್ಮೊಳಗೆರಕವು-ಅದಂತಿರಲಿ,
ಅದು ಉಪಮಿಸಬಾರದ ಘನವು, ಅದಕ್ಕೆ ಶರಣಾರ್ಥಿ.
ಇನಿತಲ್ಲದೆ ಕೊಡುವ ಕೊಂಬ ಗುರುಶಿಷ್ಯರಿಬ್ಬರಿಗೂ ಯಮದಂಡನೆ ಕಾಣಾ,
ಕೂಡಲಚೆನ್ನಸಂಗಮದೇವಾ/1539
ಶ್ರೀಗುರು ಶಿಷ್ಯಂಗೆ ಮಂತ್ರಮೂರ್ತಿಯ ಕೊಡಬೇಕಾಗಿ,
ಸೃಷ್ಟಿಯ ಮೇಗಣ ಕಣಿಯ ತಂದು ಇಷ್ಟಲಿಂಗವ ಮಾಡಿ,
ಶಿಷ್ಯನ ತನುವಿನ ಮೇಲೆ ಅದ ಧರಿಸಿ,
ಲಿಂಗ ಅವತಳವಾಯಿತ್ತೆಂದು, ಭೂಮಿ ಸಿಂಹಾಸನಗೊಂಡಿತ್ತೆಂದು
ಸಮಾದಿಯ ಹೊಗುವಿರಯ್ಯಾ.
ಆ ಲಿಂಗ ಅವತಳವಾದಡೆ ಭೂಮಿ ತಾಳಬಲ್ಲುದೆ ?
ಗರಡಿಯಲ್ಲಿ ಮುಟ್ಟಿ ಸಾಧನೆಯ ಮಾಡುವಲ್ಲಿ, ಆಳು ಬಿದ್ದಡೆ ಭಂಗವಲ್ಲದೆ
ಅಲಗು ಬಿದ್ದಡೆ ಭಂಗವೆ ? -ಅಲಗ ತಕ್ಕೊಂಡು ಗರಡಿಯಲಿ
ಸಾಧನೆಯ ಮಾಡುವುದು ಕರ್ತವ್ಯ ನೋಡಾ.
ಆ ಲಿಂಗ ಹುಸಿಯಾದಡೇನು ? ಗುರುಲಿಂಗ ಹುಸಿಯಾದಡೇನು ?
ಜಂಗಮಲಿಂಗ ಹುಸಿಯಾದಡೇನು ? ಪಾದತೀರ್ಥ ಹುಸಿಯೆ ?
ಪಾದತೀರ್ಥ ಪ್ರಸಾದ ಹುಸಿಯಾದಡೇನು, ವಿಭೂತಿವೀಳ್ಯಕ್ಕೆ ಬಂದ
ಗಣಂಗಳು ಹುಸಿಯೆ ?-
ಇಂತೀ ಷಡುಸ್ಥಲವ ತುಚ್ಛಮಾಡಿ, ಗುರೂಪದೇಶವ ಹೀನಮಾಡಿ
ಸಮಾದಿಯ ಹೊಕ್ಕೆನೆಂಬ ಪಾತಕರ ಮುಖವ ನೋಡಲಾಗದು ಕಾಣಾ
ಕೂಡಲಚೆನ್ನಸಂಗಮದೇವಾ./1540
ಶ್ರೀಗುರು ಶಿಷ್ಯನ ಭವಿಪೂರ್ವಾಶ್ರಯವ ಕಳೆದು ಭಕ್ತನ ಮಾಡಿದ ಬಳಿಕ
ಆ ಭಕ್ತ ಹೋಗಿ ಜಂಗಮವಾಗಿ, ಗುರುವಿನ ಮಠಕ್ಕೆ ಬಂದಡೆ
ಆ ಜಂಗಮವೆನ್ನ ಶಿಷ್ಯನೆಂದು ಗುರುವಿನ ಮನದಲ್ಲಿ ಹೊಳೆದಡೆ
ಪಂಚಮಹಾಪಾತಕ.
ಆ ಜಂಗಮಕ್ಕೆ ಎನ್ನ ಗುರುವೆಂದು ಮನದಲ್ಲಿ ಭಯಬಿತಿ ಹೊಳೆದಡೆ
ರೌರವನರಕ.
ಇಂತೀ ಭೇದವ ಕೂಡಲಚೆನ್ನಸಂಗಯ್ಯನಲ್ಲಿ ಶರಣರೆ ಬಲ್ಲರು/1541
ಶ್ರೀಗುರು ಸಪ್ತವಿಧದೀಕ್ಷೆಯನಿತ್ತು
ಶಿಷ್ಯನ ಶಿರದರಮನೆಯ ಚಿತ್ಕಲೆಯನೆ ಇಷ್ಟಲಿಂಗವಾಗಿ ನೋ[ಮಾ ?]ಡಿ,
ಆಂಗದಲ್ಲಿ ಸಂಗಗೊಳಿಸಿದ ಬಳಿಕ
ಆದೆ ಪ್ರಾಣಲಿಂಗವೆಂದರಿದು ಸಾವಧಾನದಿಂದರ್ಚಿಸಬೇಕು.
ಆದನಾವಾಗಳೂ ತನುವಿಂದಗಲದಿರಬೇಕು.
ಇದು ಶರಣರ ಮಚ್ಚು ಪರಾತನರ ನಚ್ಚು !
ಇದನರಿಯದೆ ದುರ್ಲಕ್ಷ್ಯದಿಂದ ಲಿಂಗವನಗಲಿದ ಭಂಗಿತರ
ಕೂಡಲಚೆನ್ನಸಂಗಯ್ಯನ ಶರಣರೆಂತು ಮೆಚ್ಚುವರು ?/1542
ಶ್ರೀಗುರು ಸಾಹಿತ್ಯಸಂಬಂಧವ ಮಾಡುವಲ್ಲಿ;
ಲಿಂಗವೆ ಜಂಗಮ, ಜಂಗಮವೆ ಲಿಂಗವೆಂದು,
ಹೇಳಿಕೊಟ್ಟ ವಿವರವನರಿಯದೆ,
ಲಿಂಗದೊಳಗೆ ಜಂಗಮವುಂಟೆಂದು ಗಳಹುತಿಪ್ಪಿರಿ.
ರಾಸಿಗಿಕ್ಕದ ಲಚ್ಚಣ ರಾಸಿಯ ಕೊಳಬಲ್ಲುದೆ, ರಾಸಿಯ ಒಡೆಯನಲ್ಲದೆ ?-
ಆ ಪರಿಯಲ್ಲಿ ಲಿಂಗವು ಜಂಗಮದ ಮುದ್ರೆ,
ಅದಕ್ಕೆ ಜಂಗಮವೆ ಮುದ್ರಾದಿಪತಿಯಾದ ಕಾರಣ,
ಜಂಗಮದೊಳಗೆ ಲಿಂಗವುಂಟೆಂಬುದು ಸತ್ಯವಲ್ಲದೆ
ಲಿಂಗದೊಳಗೆ ಜಂಗಮವುಂಟೆಂಬುದು ಅಸತ್ಯವು.
ವೃಕ್ಷದ ಕೊನೆಗಳಿಗೆ ಉದಕವ ನೀಡಿದಡೆ ಫಲವಹುದೆ ?ಬೇರಿಂಗೆ ನೀಡಬೇಕಲ್ಲದೆ.
ವೃಕ್ಷದ ಆಧಾರವೆ ಪೃಥ್ವಿ, ಪೃಥ್ವಿಯೆ ಜಂಗಮ, ಶಾಖೆಯೆ ಲಿಂಗವು.
ದೇಹದ ಮೇಲೆ ಸಕಲಪದಾರ್ಥಂಗಳ ತಂದಿರಿಸಿದಡೆ ತೃಪ್ತಿಯಹುದೆ ?
ಮುಖವ ನೋಡಿ ಒಳಯಿಂಕೆ ನೀಡಬೇಕಲ್ಲದೆ.
ಅದು ಕಾರಣವಾಗಿ-ಅವಯವಂಗಳು ಕಾಣಲ್ಪಟ್ಟ ಮುಖವುಳ್ಳುದೆ ಜಂಗಮ
ದೇಹವೆ ಲಿಂಗ. ಲಿಂಗವೆಂಬುದು ಜಂಗಮದೊಂದಂಗ ಕಾಣಾ
ಕೂಡಲಚೆನ್ನಸಂಗಮದೇವಯ್ಯಾ. /1543
ಶ್ರೀಗುರುಕರುಣಕಟಾಕ್ಷದಲ್ಲಿ ಉತ್ಪತ್ಯವಾದ ಅಜಾತಂಗೆ
ಜಾತಿಸೂತಕ, ಜನನಸೂತಕ, ಪ್ರೇತಸೂತಕ, ರಜಸ್ಸೂತಕವುಂಟೆಂಬವಂಗೆ
ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪ್ರಸಾದವಿಲ್ಲವಯ್ಯಾ
ಕೂಡಲಚೆನ್ನಸಂಗಯ್ಯ. /1544
ಶ್ರೀಗುರುಕರುಣವೆ ಲಿಂಗ, ಶ್ರೀಲಿಂಗದ ನಿಜವೆ ಜಂಗಮ,
ಇಂತಿದು ಬಹಿರಂಗದ ವರ್ತನೆ.
ಇನ್ನು- ಅಂತರಂಗದ ಸುಜ್ಞಾನವೆ ಜಂಗಮ,
ಆ ಜಂಗಮದ ನಡೆವ ಸತ್ಕ್ರಿಯೆ ಲಿಂಗ,
ಆ ಉಭಯದ ಏಕತ್ವದ ಸಿದ್ಧಿಯೆ ಗುರು.
ಇದು ಕಾರಣ- ಅಂಗತ್ರಯದಲ್ಲಿ ಲಿಂಗತ್ರಯ ಸಂಗಮವಾದಲ್ಲಿ,
ಜಂಗಮದಾಸೋಹವಿಲ್ಲದಡೆ ತೃಪ್ತಿಯಿಲ್ಲ.
ಅಂಗದ ಮೇಲೆ ಲಿಂಗವಿಲ್ಲದಿರ್ದಡೆ ಜಂಗಮ ಸೇವೆಯ ಕೈಕೊಳ್ಳ
ಅದು ಕಾರಣ- ಒಂದ ಬಿಟ್ಟು ಒಂದರಲ್ಲಿ ನಿಂದಡೆ,
ಅಂಗವಿಲ್ಲದ ಆತ್ಮನಂತೆ, ಶಕ್ತಿಯಿಲ್ಲದ ಶಿವನಂತೆ, ದೀಪವಿಲ್ಲದ ಪ್ರಕಾಶದಂತೆ !
ಒಂದಂಗ ಶೂನ್ಯವಾಗಿ ಭಕ್ತಿಯುಂಟೆ ?
ಅವಯವಹೀನನು ರಾಜಪಟ್ಟಕ್ಕೆ ಸಲುವನೆ ?
ಲಿಂಗಹೀನನು ಭೃತ್ಯಾಚಾರಕ್ಕೆ ಸಲುವನೆ ? ಅದು ದೇವತ್ವಕ್ಕೆ ಸಲ್ಲದು.
ನಮ್ಮ ಕೂಡಲಚೆನ್ನಸಂಗಯ್ಯನಲ್ಲಿ
ತ್ರಿವಿಧಸನ್ಮತವೆ ಚರಸೇವೆಯಯ್ಯಾ./1545
ಶ್ರೀಗುರುಲಿಂಗಜಂಗಮಕರುಣಕಟಾಕ್ಷೆಯಿಂದ
ತ್ರಿವಿಧದೀಕ್ಷೆ ತ್ರಿವಿಧಾಚಾರ ತ್ರಿವಿಧಲಿಂಗಾರ್ಚನೆ ತ್ರಿವಿಧಲಿಂಗಾರ್ಪಣ
ತ್ರಿವಿಧಲಿಂಗಾನುಭಾವ, ತ್ರಿವಿಧಭಕ್ತಿ ಜ್ಞಾನವೈರಾಗ್ಯ ಸತ್ಯಸನ್ಮಾರ್ಗಾಚಾರಾನ್ವಿತ
ಸದ್ಭಕ್ತ-ಮಾಹೇಶ್ವರ-ಶರಣಗಣಂಗಳು, ಮೊಟ್ಟಮೊದಲಲ್ಲಿ,
ಮಡು ಹೊಂಡ ನದಿ ಹಳ್ಳ ಕೆರೆ ಬಾವಿ ಕೊಳ ಗುಂಡ ಚಿಲುಮೆ
ಮೊದಲಾದ ಸ್ಥಾನಂಗಳಲ್ಲಿ ಸ್ವಚ್ಛನಿರ್ಮಲತರವಾದ ಪರಿಣಾಮೋದಕವನ್ನು
ಭಾಜನಮುಖಂಗಳಿಗೆ ಕ್ರಿಯಾ-ಜ್ಞಾನಯುಕ್ತವಾದ
ಉಭಯಮಡಿಕೆಯ ಪಾವಡವ ಹಾಕಿ ಶೋದಿಸಿ ಮೇಲುಪಾವಡವ ಬಾಸಣಿಸಿ,
ಭವಿಜನಾತ್ಮರ ಸೋಂಕದೆ ತೆಗೆದುಕೊಂಡು ಬಂದು
ಶ್ರೀಗುರುಲಿಂಗಜಂಗಮದ ಪಾದ ಪ್ರಕ್ಷಾಲನವಂ ಮಾಡಿ
ಆ ಮೇಲೆ ಉಭಯ ಪಾದದ ಅಡಿಯಲ್ಲಿ ಮೂರುವೇಳೆ,
ದಶಾಂಗುಲಿ ಒಂದು ವೇಳೆ,
ಸ್ಪರ್ಶನವಾದಂಥ ಗುರುಪಾದೋದಕವ ಸಮಸ್ತ ಭಾಂಡ ಭಾಜನಂಗಳಲ್ಲಿ ತುಂಬಿ
ಕ್ರಿಯಾಶಕ್ತಿಯರು ಕ್ರಿಯಾಭೃತ್ಯರಾದರು ಸರಿಯೆ
ಲಿಂಗಾಬಿಷೇಕ ಲಿಂಗಾರ್ಚನಕ್ರಿಯಗಳ ತೀರ್ಚಿಸಿಕೊಂಡು
ಮಂತ್ರಧ್ಯಾನಾರೂಢರಾಗಿ ಲಿಂಗಬಾಹ್ಯರ ಸ್ಪರ್ಶನಸಂಭಾಷಣೆಗಳನುಳಿದು
ಸಕಲಪದಾರ್ಥಂಗಳ ಕ್ರಿಮಿಕೀಡೆಕೀಟಕಂಗಳ
ಕಾಷ್ಠಮೃಣ್ ಪಾಷಾಣಂಗಳ ಶೋದಿಸಿ,
ಅತಿ ಸುಯಿದಾನದಿಂದ ಪಾದೋದಕದಲ್ಲಿ ಪಾಕವ ಮಾಡಿ,
ಆ ಪಾಕದ ಭಾಜನಂಗಳಿಗೆ, ಹಸ್ತಸ್ಪರ್ಶನ ಮಂತ್ರನ್ಯಾಸ ಲಿಂಗದೃಷ್ಟಿ ವಾಕ್ಶೀಲ
ಮಂತ್ರಸ್ಮರಣೆ ಚಿದ್ಭಸ್ಮದಿಂದ, ಆ ಪದಾರ್ಥದ ಪೂರ್ವಾಶ್ರಯವ ಕಳೆದು
ಶ್ರೀಗುರುಲಿಂಗಜಂಗಮದ ಶುದ್ಧಪ್ರಸಾದವೆಂದು ಭಾವಿಸಿ
ಸಾವಧಾನಭಕ್ತಿಯಿಂದ ಮಹಾನೈಷ್ಠೆ ಕರಿಗೊಂಡು
ಮಂತ್ರಸ್ಮರಣೆಯಿಂದ ಸತ್ಯಸದಾಚಾರ ಸತ್ಕ್ರಿಯಾಸಮ್ಯಜ್ಞಾನವುಳ್ಳ
ಗುರುಲಿಂಗಜಂಗಮಕ್ಕೆ ಸಮರ್ಪಣೆಯಂ ಮಾಡಿ
ಅವರ ಕರುಣಪ್ರಸಾದವ ಸಮಸ್ತಶಕ್ತಿ ಭಕ್ತಶರಣಂಗಳೆಲ್ಲ ಪರಿಣಾಮಿಸಿ,
ಭಾಂಡಭಾಜನಂಗಳಲ್ಲಿ ಉಳಿದ ಶೇಷಪಾದೋದಕವ
ಇಷ್ಟಲಿಂಗಬಾಹ್ಯವಾದ ಭವಿಜನಾತ್ಮರುಗಳಿಗೆ ಹಾಕಲಾಗದು.
ಅದಕ್ಕೆ ಹರವಾಕ್ಯವುಂಟು. ಹರಗುರುವಾಕ್ಯವ ಮೀರಿ
ವೇದಶ್ರುತಿವಾಕ್ಯವ ಹಿಡಿದು ಗುರುಮಾರ್ಗಾಚಾರಬಾಹ್ಯರಿಗೆ
ಲಿಂಗಪದಾರ್ಥವ ಕೊಟ್ಟಾತಂಗೆ ಯಮದಂಡಣೆ ಉಂಟು.
ಅಂತ್ಯದಲ್ಲಿ ಕಾಲಕಾಮರಿಗೊಳಗು ನೋಡ
ಕೂಡಲಚೆನ್ನಸಂಗಮದೇವ./1546
ಶ್ರೀಗುರುಲಿಂಗವು ಶಿಷ್ಯನ ಬರವ ಕಂಡು,
ಬಂದು ಪಾದದ ಮೇಲೆ ಬೀಳುವಾತ ಗುರುಲಿಂಗ,
ಮಂಡೆಯ ಹಿಡಿದೆತ್ತುವಾತ ಶಿಷ್ಯ.
ಶ್ರೀಗುರುಲಿಂಗವು ಶಿಷ್ಯನ ಸಿಂಹಾಸನದಲ್ಲಿ ಕುಳ್ಳಿರಿಸಿ
ಪಾದಾರ್ಚನೆಯ ಮಾಡುವಾತ ಗುರುಲಿಂಗ,
ಮಾಡಿಸಿಕೊಂಬಾತ ಶಿಷ್ಯ.
ಶ್ರೀಗುರುಲಿಂಗವು ಶಿಷ್ಯನಾರೋಗಣೆಯ ಮಾಡುತ್ತಿದ್ದಾನೆಂದು ಬಂದು,
ಪ್ರಸಾದವ ಕೊಂಬಾತ ಗುರುಲಿಂಗ, ಇಕ್ಕುವಾತ ಶಿಷ್ಯ.
ಇದು ಕಾರಣ ದ್ವಿವಿಧ ಸಂಬಂಧ ಸನುಮತವಾಯಿತ್ತು,
ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ. /1547
ಶ್ರೀಗುರುವನುಳಿದು ಲಿಂಗವುಂಟೆ ? ಲಿಂಗವನುಳಿದು ಜಂಗಮವುಂಟೆ ?
ಜಂಗಮವನುಳಿದು ಪ್ರಸಾದವುಂಟೆ ?
ಪ್ರಸಾದವನುಳಿದು ಭಕ್ತಿಯುಂಟೆ ? ಭಕ್ತಿಯನುಳಿದು ಮುಕ್ತಿಯುಂಟೆ ?
ಇಲ್ಲವಯ್ಯಾ ಕೂಡಲಚೆನ್ನಸಂಗಯ್ಯ./1548
ಶ್ರೀಗುರುವಾದಾತನು ಸಕಲಾಗಮಂಗಳ ಹೃದಯವನರಿತು
ತನ್ನ ತಾನರಿದು ಸರ್ವಾಚಾರ ತನ್ನಲ್ಲಿ ನೆಲೆಗೊಂಡು
ಉಪದೇಶವ ಮಾಡುವ ಕ್ರಮವೆಂತೆಂದಡೆ:
ಬ್ರಾಹ್ಮಣನ ಮೂರು ವರುಷ ನೋಡಬೇಕು,
ಕ್ಷತ್ರಿಯನ ಆರು ವರುಷ ನೋಡಬೇಕು,
ವೈಶ್ಯನ ಒಂಬತ್ತು ವರುಷ ನೋಡಬೇಕು,
ಶೂದ್ರನ ಹನ್ನೆರಡು ವರುಷ ನೋಡಬೇಕು,
ನೋಡಿದಲ್ಲದೆ ದೀಕ್ಷೆ ಕೊಡಬಾರದು – ವೀರಾಗಮೇ.
“ಬ್ರಾಹ್ಮಣಂ ತ್ರೀಣಿ ವಷರ್ಾಣಿ ಷಡಬ್ದಂ ಕ್ಷತ್ರಿಯಂ ತಥಾ
ವೈಶ್ಯಂ ನವಾಬ್ದಮಾಖ್ಯಾತಂ ಶೂದ್ರಂ ದ್ವಾದಶವರ್ಷಕಂ
ಈ ಕ್ರಮವನರಿಯದೆ,
ಉಪಾದಿವಿಡಿದು ಉಪದೇಶವ ಮಾಡುವಾತ ಗುರುವಲ್ಲ,
ಉಪಾದಿವಿಡಿದು ಉಪದೇಶವ ಮಾಡಿಸಿಕೊಂಬಾತ ಶಿಷ್ಯನಲ್ಲ.
ಇವರಿಬ್ಬರ ನಿಲವು ಒಂದೆ ಠಕ್ಕನ ಮನೆಗೆ ಠಕ್ಕ ಬಿದ್ದಿನ ಬಂದಂತೆ
ಈ ಗುರುಶಿಷ್ಯರಿಬ್ಬರನು ರೌರವನರಕದಲ್ಲಿಕ್ಕುವ
ಕೂಡಲಚೆನ್ನಸಂಗಯ್ಯ./1549
ಶ್ರೀಗುರುವಿನ ಹಸ್ತದಲ್ಲಿ ಉಪದೇಶವ ಪಡೆದು ಭಕ್ತರಾದುದು ಮೊದಲಾಗಿ
ನಿಮ್ಮ ಲಿಂಗವಾರೋಗಣೆಯ ಮಾಡಿದ ದಿನವುಂಟೆ ?
ಉಂಟಾದಡೆ ತೋರಿ, ಇಲ್ಲದಿದ್ರ್ದರೆ ನೀವು ಕೇಳಿ:
ನಾನು ನಮ್ಮ ಗುರುವಿನ ಹಸ್ತದಲ್ಲಿ ಉಪದೇಶವಡೆದು ಭಕ್ತನಾದುದು ಮೊದಲಾಗಿ
ನಮ್ಮ ಲಿಂಗವು ನಿರಂತರ ಆರೋಗಣೆಯ ಮಾಡಿ ಪ್ರಸಾದವ ಕರುಣಿಸುವುದು,
ಅದು ಕಾರಣ ನಮಗೆ ಲಿಂಗವುಂಟು.
ನಿಮ್ಮ ಲಿಂಗಕ್ಕೆ ಕರಚರಣ ಅವಯವಂಗಳಿಲ್ಲವಾಗಿ
ನಿಮ್ಮ ಲಿಂಗವು ಸಕಲ ಭೋಗಂಗಳ ಭೋಗಿಸಲರಿಯದಾಗಿ ನಿಮಗೆ ಲಿಂಗವಿಲ್ಲ.
ಪ್ರಸಾದವಿಲ್ಲವಾಗಿ ನಿಮಗೆ ಲಿಂಗವಿಲ್ಲವೆಂದೆನು.
ಅದಕ್ಕೆ ನೀವು ಸಂಕೀರ್ಣಗೊಳ್ಳದಿರಿ.
ಆ ವಿವರವನು ನಾನು ನಿಮಗೆ ಚೆನ್ನಾಗಿ ಕಾಣಿಸಿ ತೋರಿ ಹೇಳುವೆನು:
ನಿಮ್ಮ ಶ್ರೀ ಗುರು ನಿಮಗೆ ಪ್ರಾಣಲಿಂಗ ಸಂಬಂಧವ ಮಾಡುವಲ್ಲಿ,
ಆ ಲಿಂಗವೆ ಜಂಗಮದಂಗವು,
ಆ ಜಂಗಮವ ಲಿಂಗದ ಪ್ರಾಣಚೈತನ್ಯದ ಕಳೆಯ ಮಾಡಿ
ನಿಮ್ಮ ಶ್ರೀಗುರು ಕರಸ್ಥಲದಲ್ಲಿ ಆ ಲಿಂಗವ ಕೊಟ್ಟ ಕಾರಣ,
ಇಂತಹ ಜಂಗಮ ಮುಖದಲ್ಲಿ ತ್ಯಪ್ತನಹೆನಲ್ಲದೆ
ಲಿಂಗದ ಮುಖದಲ್ಲಿ ನಾನು ತೃಪ್ತನಹೆನೆಂದು ಹೇಳಿಕೊಟ್ಟನೆ ?
ಶ್ರೀಗುರು ಲಿಂಗವನು ಹಾಗೆ ಕೊಟ್ಟುದಿಲ್ಲವಾಗಿ.
ಅದೆಂತೆಂದಡೆ, ಶಿವರಹಸ್ಯದಲ್ಲಿ ಶಿವನ ವಾಕ್ಯ:
ಸ್ಥಾವರಾರ್ಪಿತನೈವೇದ್ಯಾನ್ನ ಚ ತೃಪ್ತಿರ್ಮಹೇಶ್ವರಿ
ಜಂಗಮಾರ್ಪಿತನೈವೇದ್ಯಾದಹಂ ತುಷ್ಟೋ ವರಾನನೇ ಎಂದುದಾಗಿ,
ಇದಕ್ಕೆ ಉಪದೃಷ್ಟವಾಕ್ಯ:
ವೃಕ್ಷದ ಕೊನೆಗಳಿಗೆ ಉದಕವ ನೀಡಿದಡೆ ವೃಕ್ಷಪಲ್ಲವಿಸುವುದೆ
ಬೇರಿಂಗೆ ನೀಡಬೇಕಲ್ಲದೆ ? ಅದೆಂತೆಂದಡೆ:
ವ್ಯಕ್ಷಸ್ಯ ವದನಂ ಭೂಮಿಃ ಸ್ಥಾವರಸ್ಯ ತು ಜಂಗಮಃ
ಅಂತು ವ್ಯಕ್ಷದ ಕೊನೆಯ ಸ್ಥಾನವೆ ಲಿಂಗವು
ಬೇರಿನ ಸ್ಥಾನವೆ ಜಂಗಮವು.
ಮತ್ತೆಯೂ ದೃಷ್ಟ:
ಗರ್ಬಿಣೀಸ್ತ್ರೀಗೆ ಉಣಲಿಕ್ಕಿದಡೆ ಆ ಗರ್ಭದೊಳಗಣ ಶಿಶು ತೃಪ್ತವಹುದಲ್ಲದೆ,
ಆ ಸ್ತ್ರೀಯ ಗರ್ಭದ ಮೇಲೆ ಸಕಲಪದಾರ್ಥಂಗಳನಿಕ್ಕಿದಡೆ
ಆ ಗರ್ಭದೊಳಗಣ ಶಿಶು ತೃಪ್ತವಾಗಬಲ್ಲುದೆ ?
ಅದು ಕಾರಣ- ಆ ಗರ್ಭದೊಳಗಣ ಶಿಶುವಿನ ಸ್ಥಾನವೆ ಲಿಂಗವು,
ಆ ಗರ್ಭದ ಸ್ತ್ರೀಯ ಸ್ಥಾನವೆ ಜಂಗಮವು.
ಅದಕ್ಕೆ ಮತ್ತೆಯೂ ದೃಷ್ಟ:
ಪೃಥ್ವಿಗೆ ಚೈತನ್ಯವಾದಡೆ ಸಸಿಗಳು ಬೆಳೆವವಲ್ಲದೆ
ಆ ಸಸಿಗಳ ಕೊನೆಯ ಮೇಲೆ ಮಳೆ ಸುರಿದಡೆ
ಆ ಸಸಿಗಳು ಬೆಳೆಯಬಲ್ಲವೆ ? ಬೆಳೆಯಲರಿಯವಾಗಿ.
ಅಂತು ಆ ಸಸಿಯ ಕೊನೆಯ ಸ್ಥಾನವೆ ಲಿಂಗವು
ಆ ಪೃಥ್ವೀ ಸ್ಥಾನವೆ ಜಂಗಮವು.
ಅದಕ್ಕೆ ಮತ್ತೆಯೂ ದೃಷ್ಟ:
ದೇಹದ ಮೇಲೆ ಸಕಲ ಪದಾರ್ಥವ ತಂದಿರಿಸಿದಡೆ
ಆತ್ಮನು ತೃಪ್ತನಾಗಬಲ್ಲನೆ, ಜಿಹ್ವೆಯ ಮುಖದಲ್ಲಿ ತೃಪ್ತನಹನಲ್ಲದೆ ?
ಅಂತು ದೇಹಸ್ಥಾನವೆ ಲಿಂಗವು; ಜಿಹ್ವೆಯ ಸ್ಥಾನವೆ ಜಂಗಮವು.
ಇಂತೀ ನಾನಾ ದೃಷ್ಟಂಗಳಲ್ಲಿ ತೋರಿ ಹೇಳಿದ ತೆರನಲ್ಲಿ
ನಿಮ್ಮ ಲಿಂಗವು ನಮ್ಮ ಜಂಗಮದ ಸರ್ವಾಂಗದಲ್ಲಿ ಹೊಂದಿಹ ಕಾಣಾ
ಕೂಡಲಚೆನ್ನಸಂಗಮದೇವಾ./1550
ಶ್ರೀಶೈಲ ಸಿಂಹಾಸನದ ಮೇಲೆ ಕುಳ್ಳಿರ್ದು,
ಪುರದ ಬಾಗಿಲೊಳು ಕದಳಿಯ ನಿರ್ಮಿಸಿದರು,
ನರರು ಸುರರು ಮುನಿಗಳಿಗೆ ಮರಹೆಂಬ ಕದವನಿಕ್ಕಿ
ತರಗೊಳಿಸಿದರು ತ್ರಿವಿಧ ದುರ್ಗಂಗಳ.
ಆ ಗಿರಿಯ ಸುತ್ತಲು ಗಾಳಿ ದೆಸೆದೆಸೆಗೆ ಬೀಸುತ್ತಿರೆ,
ಕೆರಳಿ ಗಜ ಎಂಟೆಡೆಗೆ ಗಮಿಸುತ್ತಿರಲು
ಪರಿವಾರ ತಮ್ಮೊಳಗೆ ಅತಿಮಥನದಿಂ ಕೆರಳೆ
ಪುರದ ನಾಲ್ಕು ಕೇರಿಯನೆ ಬಲಿದರು.
ಆ ನರನೆಂಬ ಹೆಸರಳಿದು, ಗುರುಮಾರ್ಗದಿಂದ ಮರಹೆಂಬ ಕದವ ಮುರಿದು
ಒಳಹೊಕ್ಕು ಪುರದ ಮರ್ಮವನರಿದು, ಭರದಿಂದ ತ್ರಿಸ್ಥಾನವನುರುಹಿ
ಪರಿವಾರವನು ವಶಕ್ಕೆ ತಂದು, ಗಿರಿಶಿಖರವನೇರಿ
ಪುರವ ಸೂರೆಯಂಗೊಂಡು, ಪುರಕ್ಕೊಡೆಯನಾಗಿ
ಪರಿಣಾಮದಿಂದ ಕೂಡಲಚೆನ್ನಸಂಗಯ್ಯನಲ್ಲಿ
ಶರಣಾದವಂಗೆ ನಮೋ ನಮೋ ಎಂಬೆ/1551
ಶ್ರುತಿಸಾಕ್ಷಿಯಾದ ಸಮ್ಯಕ್ಗುಣಂಗಳಂ ಬೊಮ್ಮವೆಂಬ,
[ಸಂಪತ್ತೆಂಬ] ಬ್ರಹ್ಮವಿತ್ತುಗಳು ನೀವು ಕೇಳಿ ಭೋ !
ಓಂ ಪೃಥಿವೀತೇ ಪಾತ್ರಂ ದ್ಯೌರಪಿಧಾನಂ
ಬ್ರಹ್ಮಣಸ್ತ್ವಾಂ ಮುಖೇ ಜುಹೋಮಿ,
ಬ್ರಾಹ್ಮಣಾನಾಂ ತ್ವಾ ಪ್ರಾಣಾಪಾನಯೋರ್ಜುಹೋಮಿ,
ಅಶಿತಮಸಿ ಮೈಷಾಂಕ್ಷೇಷ್ಠಾಃ ಅಯುತ್ರಾಯು ಸ್ಮಿನ್ ಲೋಕೇ
ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಂ
ಸಮೂಳ್ಹಮಸ್ಯ ಪಾಂಸುರೇ ಶ್ರೀ ವಿಷ್ಣೋ ಕವ್ಯಂ ರಕ್ಷಸ್ವ
ಎಂದುದು ವೇದ.
ಆ ವೇದವನೋದಿ ಅರ್ತಿಯಲ್ಲಿ ಸುರೆಮಾಂಸವ [ಹೊಲಸ] ತಿಂಬ
ದ್ವಿಜರ ಮೆಚ್ಚುವರೆ ಕೂಡಲಚೆನ್ನಸಂಗನ ಶರಣರು? /1552
ಶ್ರೂತ್ರೇಂ]ದ್ರಿಯದ ಶ್ರುತದ ಅನುಭಾವವುಳ್ಳನಕ
ಗುರುವಚನ ಕೇಳಿದೆನೆಂದು ಎಂತೆನಬಹುದು ?
ನೇತ್ರೇಂದ್ರಿಯದ ನೋಟದ ಅನುಭಾವವುಳ್ಳನಕ
ಲಿಂಗವ ಭಾವಿಸಿದೆನೆಂದು ಎಂತೆನಬಹುದು ?
ನಾಸಿಕೇಂದ್ರಿಯದ ಪರಿಮಳ ವಾಸನೆಯನುಭಾವವುಳ್ಳನಕ
ಲಿಂಗದಲ್ಲಿ ಪರಿಮಳವ ವೇದಿಸಿದೆನೆಂದು ಎಂತೆನಬಹುದು ?
ಜಿಹ್ವೇಂದ್ರಿಯದ ರುಚಿಯ ರುಚಿಸುವನುಭಾವವುಳ್ಳನಕ
ಪ್ರಸಾದವ ಸೇವಿಸಿದೆನೆಂದು ಎಂತೆನಬಹುದಯ್ಯ ?
ಸ್ಪಶರ್ೆಂದ್ರಿಯದ ಸೋಂಕಿನ ಸುಖದ ಅನುಭಾವವುಳ್ಳನಕ
ಲಿಂಗೈಕ್ಯನಾದೆನೆಂದು ಎಂತೆನಬಹುದು ?
ಇವೆಲ್ಲವನು ಪರಿಚ್ಛೇದಿಸಿ ಭಾವನಿರ್ಭಾವಾಗದನಕ
ಕೂಡಲಚೆನ್ನಸಂಗಯ್ಯನಳಿಶರಣರ ಮನದಲ್ಲಿ ನೆಲೆಗೊಳ್ಳನಾಗಿ
ಅವರೆಂತು ಪ್ರಾಣಲಿಂಗಿಗಳೆಂಬೆನು ? /1553
ಶ್ರೋತ್ರ ನೇತ್ರ ತ್ವಕ್ಕು ಜಿಹ್ವೆ ಘ್ರಾಣೇಂದ್ರಿಯಂಗಳ ಕೂಡಿಕೊಂಡು
ಚೇಷ್ಟಿಸುವ ದಶವಾಯುಗಳಾವುವೆಂದರೆ:
ರೇಚಕ ಪೂರಕ ಕುಂಭಕ ರೂಪಿಂದ ಚೇಷ್ಟಿಸೂದೊಂದು ಪ್ರಾಣವಾಯು,
ರಸಂಗಳ ನೀರಸಂಗಳ ಮಾಡಿ ಮಲಮೂತ್ರಂಗಳ ನಡಸೂದೊಂದಪಾನವಾಯು
ಅನ್ನರಸವಂ ಪಿಡಿದು ತನುವಂ ವ್ಯಾಪಿಸಿ ಪಸರಿಸೂದೊಂದು ವ್ಯಾನವಾಯು,
ಪಾದವ ನೆಲಕ್ಕಿಕ್ಕಿಸೂದೊಂದು ಉದಾನವಾಯು.
ಸಮಧಾತುಗಳನರಿದು ಅನ್ನಪಾನಂಗಳ ಪಸರಿಸೂದೊಂದು ಸಮಾನವಾಯು.
ರಸವ್ಯಾಪ್ತಿಯ ಮಾಡೂದೊಂದು ನಾಗವಾಯು,
ಘರವಟ್ಟಿಗೆಯ ತೊಳಲೂದೊಂದು ಕೂರ್ಮವಾಯು
ಆಗುಳಿಕೆ ಸೀನು ಮೈಮುರಿವುದೊಂದು ಕೃಕರವಾಯು,
ಓಕರಿಕೆಯ ಮಾಡೂದೊಂದು ದೇವದತ್ತವಾಯು,
ನುಡಿಯ ಬುದ್ಧಿಯ ಮಾಡಿ ನಡಸೂದೊಂದು ಧನಂಜಯವಾಯು.
ಇಂತು ದಶವಾಯುಗಳು ಇಹ ಸ್ಥಾನವಾವುದೆಂದರೆ:
ಗುಹ್ಯದಲ್ಲಿ ಅಪಾನವಾಯು, ನಾಬಿಯಲ್ಲಿ ಸಮಾನವಾಯು,
ಹೃದಯದಲ್ಲಿ ಪ್ರಾಣವಾಯು, ಕಂಠದಲ್ಲಿ ಉದಾನವಾಯು,
ಸಮಸ್ತ ಸಂದುಗಳಲ್ಲಿ ವ್ಯಾನವಾಯು, ಈಡಾನಾಳದಲ್ಲಿ ನಾಗವಾಯು,
ಪಿಂಗಳನಾಳದಲ್ಲಿ ಕೂರ್ಮವಾಯು, ಸುಷುಮ್ನಾನಾಳದಲ್ಲಿ ಕೃಕರವಾಯು,
ಹಸ್ತದಲ್ಲಿ ದೇವದತ್ತವಾಯು, ಜಿಹ್ವೆಯಲ್ಲಿ ಧನಂಜಯವಾಯು.
ಈ ವಾಯುಪ್ರಾಣಿಯ ಕಳೆದು, ಲಿಂಗಪ್ರಾಣಿಯ ಮಾಡಬಲ್ಲರೆ
ಕೂಡಲಚೆನ್ನಸಂಗಯ್ಯನಲ್ಲಿ ಅದೇ ಯೋಗ. /1554
ಶ್ರೋತ್ರಾದಿ ಜ್ಞಾನೇಂದ್ರಿಯಂಗಳು, ಇವಕ್ಕೆ ವಿವರ:
ಶ್ರೋತ್ರವು ಸ್ವರ ಶಬ್ದ ನಾದಂಗಳುಂ ಬಲ್ಲುದು,
ನೇತ್ರಂಗಳು ಸಪ್ತವರ್ಣಂಗಳಂ ಕಂಡು ಸುಖಿಸುವುವು[ಸಬಲ್ಲವು],
ಘ್ರಾಣವು ಗಂಧ ದುರ್ಗಂಧಂಗಳಂ ಬಲ್ಲುದು,
ಜಿಹ್ವೆ ಮಧುರ ಆಮ್ಲ ತಿಕ್ತ ಕಟು ಕಷಾಯವಂ ಬಲ್ಲುದು,
ತ್ವಕ್ಕು ಸ್ಪರ್ಶವ ಮೃದು ಕಠಿಣ ಶೀತೋಷ್ಣವಂ ಬಲ್ಲುದು,
ಇಂತೀ ಜ್ಞಾನೇಂದ್ರಿಯಂಗಳ ಸಂಚಲನವರಿದು ನಿಜ ಉಳಿಯ ಬಲ್ಲಡೆ
ಕೂಡಲಚೆನ್ನಸಂಗಯ್ಯನಲ್ಲಿ ಶರಣನೆನಿಸುವನು./1555
ಶ್ರೋತ್ರೋತ್ಪಾತವ ಕಾಯಬೇಕು ಶರಣಂಗೆ,
ನೇತ್ರೋತ್ಪಾತವ ಕಾಯಬೇಕು ಶರಣಂಗೆ,
ಘ್ರಾಣೋತ್ಪಾತವ ಕಾಯಬೇಕು ಶರಣಂಗೆ,
ಜಿಹ್ವ್ಯೋತ್ಪಾತವ ಕಾಯಬೇಕು ಶರಣಂಗೆ,
ಸ್ಪಶರ್ೊತ್ಪಾತವ ಕಾಯಬೇಕು ಶರಣಂಗೆ.
ಎಲ್ಲ ಉತ್ಪಾತವ ಕಾದಲ್ಲದೆ
ಕೂಡಲಚೆನ್ನಸಂಗಯ್ಯನಲ್ಲಿ ಪ್ರಸಾದ ನಿಷ್ಠೆ ಸೂರೆಯೆ ? /1556
ಷೋಡಶಕಳೆಯುಳ್ಳ ಜಂಗಮವ
ರಾಜರುಗಳು ಪೂಜೆಯ ಮಾಡುವರು.
ವಿಷಯವುಳ್ಳ ಜಂಗಮವ ವೇಸಿ ಪೂಜೆಯ ಮಾಡುವಳು.
ರಸವಿದ್ಯೆಯುಳ್ಳ ಜಂಗಮವ
ಅಕ್ಕಸಾಲೆ ಪೂಜೆಯ ಮಾಡುವನು.
ವೇಷವುಳ್ಳ ಜಂಗಮವ ಭಕ್ತರು ಪೂಜೆ ಮಾಡುವರು.
ಜ್ಞಾನವುಳ್ಳ ಜಂಗಮವ ಆರಿಗೂ ಕಾಣಬಾರದು
ಕೂಡಲಚೆನ್ನಸಂಗಮದೇವಾ./1557
ಷೋಡಶೋಪಚಾರವಿಲ್ಲದೆ ಮುಟ್ಟಲರಿಯದವರ ಕಂಡರೆ
ಅವರನೇನೆಂಬೆನಯ್ಯಾ ?
ಆವ ಭಾವದಲ್ಲಿ ಆವ ಮುಖದಲ್ಲಿ ಆವ ಜ್ಞಾನದಲ್ಲಿ
ಆವರನಯ್ಯಯೆಂಬೆನು ?
ನಿಮ್ಮಲ್ಲಿ ಸಮ್ಯಕ್ಕಾದ ಸತ್ಯಶರಣರ ಅವರನಯ್ಯಯೆಂಬೆನು
ಕೂಡಲಚೆನ್ನಸಂಗಮದೇವಾ. /1558
ಸಂಕರ ಸಂಕರವೆಂದು ಸಹಜವರಿಯದೆ
ನುಡಿವ ಶ್ವಾನನ ಮಾತ ಕೇಳಲಾಗದು,
ಸಂಕರವಾವುದೆಂದರಿಯರಾಗಿ.
ಲಿಂಗ ಸಂಕರವೊ? ಜಂಗಮ ಸಂಕರವೊ? ಪ್ರಸಾದ ಸಂಕರವೊ?
ತ್ರಿವಿಧದಲ್ಲಿ ಹೊರಗಿಲ್ಲ.
ಆವ ಸಂಕರದಲ್ಲಿ ಆವುದಿಚ್ಛೆ? ಬಲ್ಲರೆ ನೀವು ಹೇಳಿರೇ.
ಬರುಮಾತಿನ ಬಳಕೆಯ ಬಳಸಿ ಹಿರಿಯರಾದೆವೆಂಬ
ಮೂಗುಚ್ಚಿಗಳನೇನೆಂಬೆ, ಕೂಡಲಚೆನ್ನಸಂಗಮದೇವಾ/1559
ಸಂಕಲ್ಪ ವಿಕಲ್ಪವೆಂಬ ಉದಯಾಸ್ತಮಾನಗಳಿಗೆ ದೂರವಾದ
ಶಿವಶರಣರ ಅಕುಲಜರೆಂದು ಗಳಹುತಿಪ್ಪರು ನೋಡಾ ಈ ಮರುಳ ವಿಪ್ರರು
ತಾವು ಮಾತಂಗಿಯ ಗರ್ಭಸಂಭವ ಜೇಷ್ಠಪುತ್ರರೆಂಬುದನರಿಯದೆ.
ನಮ್ಮ ಶಿವಭಕ್ತರು ಅಂತಹ ಕುಲ ಇಂತಹ ಕುಲದವರೆಂದು ನಿಂದಿಸಿ
ನುಡಿವ ವಿಪ್ರಹೊಲೆಯರು ನೀವು ಕೇಳಿ ಭೋ ಅದೆಂತೆಂದಡೆ-
ಸ್ತ್ರೀವಾದಪುರುಷಃ ಷಂಡಶ್ಚಂಡಾಲೋ ದ್ವಿಜವಂಶಜಃ
ನಜಾತಿಭೇದೋ ಲಿಂಗಾರ್ಚಿ ರುದ್ರಗಣಾಃ ಸ್ಮೃತಾಃ
ಇಂತೆಂಬ ಪುರಾಣವಾಕ್ಯವನರಿದು
ನಮ್ಮ ಶಿವಭಕ್ತನು ಹೊಲೆಯ ಮಾದಿಗ ಕಬ್ಬಿಲ ಕಮ್ಮಾರ
ಕಂಚುಗಾರ ಅಕ್ಕಸಾಲೆ ಕುಂಬಾರ ಅಗಸ ನಾವಿಂದ
ಜೇಡ ಬೇಡನೆಂದು ನುಡಿಯುತಿಪ್ಪರು.
ನಿಮ್ಮ ಉತ್ತಮ ಸತ್ಕುಲಂಗಳ ನಾವು ಎತ್ತಿ ನುಡಿಯಬಹುದೇ
ಮಾರ್ಕಂಡೇಯ ಮಾದಿಗನೆಂದು ಸಾಂಖ್ಯ ಶ್ವಪಚನೆಂದು
ಕಾಶ್ಯಪ ಕಮ್ಮಾರನೆಂದು ರೋಮಜ ಕಂಚುಗಾರನೆಂದು
ಅಗಸ್ತ್ಯ ಕಬ್ಬಿಲನೆಂದು ನಾರದ ಅಗಸನೆಂದು
ವ್ಯಾಸ ಬೇಡನೆಂದು ವಶಿಷ್ಠ ಡೊಂಬನೆಂದು
ದುರ್ವಾಸ ಮಚ್ಚಿಗನೆಂದು ಕೌಂಡಿಲ್ಯ ನಾವಿಂದನೆಂದು
ಅದೆಂತೆಂದಡೆ ವಾಸಿಷ್ಠದಲ್ಲಿ-
ವಾಲ್ಮಿಕೀ ಚ ವಶಿಷ್ಠಶ್ಚ ಗಾಗ್ರ್ಯಮಾಂಡವ್ಯಗೌತಮಾಃ
ಪೂರ್ವಾಶ್ರಯೇ ಕನಿಷ್ಠಾಸ್ಯುರ್ದಿಕ್ಷಯಾ ಸ್ವರ್ಗಗಾಮಿನಃ
ಎಂದುದಾಗಿ ಇದನರಿದು ಮರೆದಿರಿ ನಿಮ್ಮ ಕುಲವನು
ಇನ್ನು ನಿಮ್ಮ ಕುಲದಲ್ಲಿ ಹಿರಿಯರುಳ್ಳರೆ ನೀವು ಹೇಳಿ ಭೋ
ನಿಮ್ಮ ಗೋತ್ರವ ನೋಡಿ ನಿಮ್ಮ ಹಮ್ಮು ಬಿಡಿ ಭೋ
ಎಮ್ಮ ಸದ್ಭಕ್ತರೇ ಕುಲಜರು.
ಇದ ನಂಬಿದಿರ್ದಡೆ ಓದಿ ನೋಡಿರಣ್ಣಾ ನಿಮ್ಮ ವೇದವರ್ಗಂಗಳೊಳಗೆ
ಅದೆಂತೆಂದಡೆ ಅಥರ್ವವೇದದಲ್ಲಿ-
ಮಾತಂಗೀ ರೇಣುಕಾ ಗರ್ಭಸಂಭವಾತ್ ಇತಿ ಕಾರುಣ್ಯಂ
ಮೇಧಾವೀ ರುದ್ರಾಕ್ಷಿಣಾ ಲಿಂಗಧಾರಣಸ್ಯ ಪ್ರಸಾದಂ ಸ್ವೀಕುರ್ವನ್
ಋಷೀಣಾಂ ವರ್ಣಶ್ರೇಷ್ಠೋ ಘೋರ ಋಷಿಃ ಸಂಕರ್ಷಣಾತ್
ಇತ್ಯಾದಿ ವೇದ ವಚನ ಶ್ರುತಿಮಾರ್ಗೆಷು ಎಂದುದಾಗಿ
ಮತ್ತಂ ವಾಯವೀಯಸಂಹಿತಾಯಾವಮ್-
ಬಾಹ್ಮಣೋ ವಾಪಿ ಚಾಂಡಾಲೋ ದುರ್ಗುಣಃ ಸುಗುಣೋಪಿ ವಾ
ಭಸ್ಮ ರುದ್ರಾಕ್ಷಕಕಂಠೂ ವಾ ದೇಹಾಂತೇ ಸ ಶಿವಂ ವ್ರಜೇತ್
ಎಂದುದಾಗಿ ಮತ್ತಂ ಶಿವರಹಸ್ಯದಲ್ಲಿ-
ಗ್ರಾಮೇಣ ಮಲಿನಂ ತೋಯಂ ಯಥಾ ಸಾಗರಸಂಗತವರಿ್
ಶಿವಸಂಸ್ಕಾರಸಂಪನ್ನೆ ಜಾತಿಭೇದಂ ನ ಕಾರಯೇತ್
ಎಂದುದಾಗಿ ಇವರೆಲ್ಲರ ವರ್ಣಂಗಳು ಲಿಂಗಧಾರಣೆಯಿಂದ
ಮರೆಸಿಹೋದವು ಕೇಳಿರಣ್ಣಾ.
ಇಂತಪ್ಪ ಋಷಿ ಜನಂಗಳೆಲ್ಲ ಶ್ರೀಗುರುವಿನ ಕಾರುಣ್ಯವಂ ಪಡೆದು
ವಿಭೂತಿ ರುದ್ರಾಕ್ಷಿಯಂ ಧರಿಸಿ ಶಿವಲಿಂಗಾರ್ಚನೆಯಂ ಮಾಡಿ
ಪಾದತೀರ್ಥ ಪ್ರಸಾದವಂ ಕೊಂಡು
ಉತ್ತಮ ವರ್ಣಶ್ರೇಷ್ಠರಾದರು ಕಾಣಿರೇ
ಇದು ಕಾರಣ ನಮ್ಮ ಕೂಡಲಚೆನ್ನಸಂಗಯ್ಯನ
ಅರಿದು ಪೂಜಿಸುವಾತನೇ ಉತ್ತಮ ಸದ್ಭಕ್ತ ಬ್ರಾಹ್ಮಣನು.
ಅರಿಯದವನೀಗಲೇ ಕೆಟ್ಟ ಹೊಲೆಯ ಕಾಣಿರಣ್ಣಾ. /1560
ಸಂಕಲ್ಪ ವಿಕಲ್ಪವೆಂಬುದಿಲ್ಲ, [ವಿಕಲ್ಪ ಸಂಕಲ್ಪವೆಂಬುದಿಲ್ಲ].
ಭಾವ ಅಭಾವವೆಂಬುದಿಲ್ಲ, ಅಭಾವ ಭಾವವೆಂಬುದಿಲ್ಲ.
ಪದಾರ್ಥ ಪ್ರಸಾದವೆಂಬುದಿಲ್ಲ, ಪ್ರಸಾದ ಪದಾರ್ಥವೆಂಬುದಿಲ್ಲ.
ಅದೇನು ಕಾರಣ ? ನಿಃಪದಾರ್ಥ ನಿಃಪ್ರಸಾದ ಕೂಡಲಚೆನ್ನಸಂಗಯ್ಯಾ.
ಗುರುಲಿಂಗವಾರೋಗಣೆಯ ಮಾಡಿದ ಕಾರಣ./1561
ಸಂಗವಿಡಿದಂತೆ ಸಂಗವಿಡಿದು ನೋಡದಿರಾ.
ಶರಣ ಸಂಗಸೂತಕಿಯಲ್ಲ, ಲಿಂಗಪರಿಚಿತ.
ಸಂಗವಂತನೆಂದೆನ್ನದಿರು, ಶರಣ ಮನಬಂದಂತೆ ಮಾಡುವ.
ಅರಸಿ ಸಕಳಾಗಮಾಚಾರ್ಯನಪ್ಪ, ಅಹುದಾಗದೆಂಬುದಿಲ್ಲ ನೋಡಾ.
ಕೂಡಲಚೆನ್ನಸಂಗನ ಶರಣ ಸಂಗಿಯಲ್ಲ. /1562
ಸಂಗಸಹಿತ ಬಸವ ಲೇಸು, ಬಸವಸಹಿತ ಸಂಗ ಲೇಸು,
`ಸಂಗಾ ಬಸವಾ’ ಎನ್ನುತ್ತಿದ್ದಿತ್ತು ಎನ್ನ ಮನವು.
ದೃಷ್ಟಿ ಮುಟ್ಟಿ ಶರಣನಾಗಿ, ಲಿಂಗಜಂಗಮಕ್ಕೆ ಯೋಗ್ಯನಾಗಿ
ಕೂಡಲಚೆನ್ನಸಂಗಯ್ಯನಲ್ಲಿ ಪ್ರಸಾದಸಂತೋಷಿ ಬಸವಣ್ಣನು./1563
ಸಂಗಾ, ನೀನಿಲ್ಲದವರಂಗಣ ಪಂಚ ಮಹಾಪಾತಕ, ಏಳನೆಯ ನರಕ.
ಸಂಗಾ, ನೀನಿಲ್ಲದವರಂಗಣ ಬ್ರಹ್ಮೇತಿಗೆ ಅದು ಮೊದಲು.
ಸಂಗಾ, ನೀನಿದ್ದವರಂಗಣ ಲಿಂಗಾಂಗಣ, ಅವರಂಗವು ಲಿಂಗ.
ಸಂಗಾ, ನೀನಿದ್ದವರಂಗಣವೆ ವಾರಣಾಸಿಯಿಂದದಿಕ.
ಸಂಗಾ, ನೀನಿದ್ದವರಂಗಣ ಅಮೃತ ದಿವ್ಯಕ್ಷೇತ್ರದಿಂದದಿಕ.
ಸಂಗಾ, ಕೂಡಲಚೆನ್ನಸಂಗಾ,
ನಿಮ್ಮ ಶರಣರ ಸಂಗ ಸುಸಂಗವೆನಗೆ. /1564
ಸಂಶಯವುಳ್ಳನ್ನಕ್ಕ ಸಂಸಾರಿಯಲ್ಲದೆ
ಲಿಂಗಭಕ್ತನಲ್ಲ, ಜಂಗಮ ಪ್ರೇಮಿಯಲ್ಲ.
ಉಭಯ ಸಂದೇಹವುಳ್ಳನ್ನಕ್ಕ ಕೂಡಲಚೆನ್ನಸಂಗಯ್ಯನಲ್ಲಿ
ಭಕ್ತರೆಂತಪ್ಪರಯ್ಯಾ ? /1565
ಸಕಲ ಪ್ರಾಣಿಗಳಿಗೆ ಲೇಸಾಗಲೆಂದು ಮಜ್ಜನಕ್ಕೆರೆವ
ಲಾಂಛನಧಾರಿಯ ವೇಷಕ್ಕೆ ಶರಣೆಂಬೆ,
ಲಾಂಛನದ ಹೆಚ್ಚು-ಕುಂದನರಸೆ.
ಸಕಲ ಪದಾರ್ಥವ ತಂದು ಜಂಗಮಕ್ಕೆ ನೀಡುವೆ ಭಕ್ತಿಯಿಂದ.
ಮನೆಗೆ ಬಂದಡೆ ಪರಿಣಾಮವ ಕೊಡುವೆ, ಆತನಿದ್ದೆಡೆಗೆ ಹೋಗೆ.
ಕೂಡಲಚೆನ್ನಸಂಗಯ್ಯನಲ್ಲಿ ಅನುವಿಲ್ಲಾಗಿ ಮುನಿದುದಿಲ್ಲ./1566
ಸಕಲ-ನಿಷ್ಕಲ, ರೂಪು-ನಿರೂಪು ಮಾಯಾ-ನಿರ್ಮಾಯ, ಕಾರಣ-ಅಕಾರಣ,
ದೇಹ-ನಿರ್ದೆಹದಲ್ಲಿ ಅವಧಾನಿಯಾಗಿ, ಸವಾಯ-ನಿರ್ವಾಯ.
ಸಂಕಲ್ಪ-ವಿಕಲ್ಪ, ಸಂಯೋಗ-ವಿಯೋಗ, ಪುಣ್ಯ-ಪಾಪ,
ಧರ್ಮ-ಅಧರ್ಮಂಗಳೆಂಬ ಕಾಲ-ವೇಳೆಯಿಂದ ನಿರತನಾಗಿ,
ಇಂತೀ ದ್ವಯ ಸಂಪಾದನೆಗಳ ಸಂಪಾದಿಸದೆ
ಕೂಡಲಚೆನ್ನಸಂಗಯ್ಯನ ಶರಣರ ಕಾರುಣ್ಯಮಂ ಪಡೆವುದು/1567
ಸಕಳ ನಿಷ್ಕಳನಯ್ಯಾ ನಿಷ್ಕಳ ಸಕಳನಯ್ಯಾ,
ಸಕ?ನಾಗಿ ಸಂಸಾರಿಯಲ್ಲ, ನಿಷ್ಕಳನಾಗಿ ವೈರಾಗಿಯಲ್ಲ,
ಸಂಸಾರಿಯಲ್ಲದ ಸಂಗ, ವೈರಾಗಿಯಲ್ಲದ ನಿಸ್ಸಂಗ, (ಉಭಯ) ಸಂಗದಿಂದ ಮಹಂತಿಕೆಯನೆಯ್ದಿಹನಾಗಿ.
ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ-[ಎಂದುದಾಗಿ] ಕೂಡಲಚೆನ್ನಸಂಗನೆಂತಿದ್ದಡಂತೆ ಕ್ಷೀಣನಲ/1568
ಸಗುಣಾನಂದಜೀವಚರ್ಯವಿಡಿದೆತ್ತಿ ಜೀವಾತ್ಮನ ಹೇಯವೆಂದು
ಆತ್ಮನ ನಿಜವನರಿದು, ನಿರ್ಗುಣಾನಂದಲೀಲೆಯ ವಿರತಿಯೊಡನೆ
ಪರಮಾತ್ಮ ತಾನೆಂದರಿದ ಶರಣಂಗೆ, ಎಂತಿರ್ದುದಂತೆ ಪೂಜೆ ನೋಡಾ.
ಆ ಶರಣ ಭೋಗಿಸಿತೆಲ್ಲವು ಲಿಂಗಾರ್ಪಿತ, ರುಚಿಸಿತೆಲ್ಲವು ಪ್ರಸಾದ.
ಆ ಶರಣನರಿದುದೆಲ್ಲವು ಪರಬ್ರಹ್ಮ, ನುಡಿದುದೆಲ್ಲವು ಶಿವತತ್ವ
ಆ ಶರಣ ತಾನೆ ಕೂಡಲಚೆನ್ನಸಂಗಯ್ಯ./1569
ಸಚರಾಚರ ಚತುರ್ವಲಯದೊಳಗೆ ತಿರುಗುವ
ವೇಷಧಾರಿಯನೆನಗೆ ತೋರದಿರಾ.
ಆಶಯಾ ಬಧ್ಯತೇ ಲೋಕಃ ಕರ್ಮಣಾ ಬಹುಚಿಂತಯಾ
ಆಯುಃಕ್ಷೀಣಂ ನ ಜಾನಾತಿ ವೇಣುಸೂತ್ರಂ ವಿದಿಯತೇ
ಎಂದುದಾಗಿ-ಆಶೆಯ ದಿಕ್ಕರಿಸಿ ನಿರಾಶೆಯ ಪತಿಕರಿಸಿದವರ ಕಂಡರೆ
ನೀ ಸರಿಯೆಂಬೆ ಕೂಡಲಚೆನ್ನಸಂಗಮದೇವಾ./1570
ಸಚರಾಚರದೊಳಗಿಪ್ಪ ಲಾಂಛನಧಾರಿಗಳೆಯ್ದೆ
ಸಯದಾನವೆ ಪ್ರಸಾದವೆಂದು ಹೆಸರಿಟ್ಟುಕೊಂಡುಂಬರು,
ಲೋಕ ಏವೋಚ್ಯತೇ ಲಿಂಗಂ ಲಿಂಗಮೇವೋಚ್ಯತೇ ಶಿವಃ ತಲ್ಲಿಂಗಧಾರಣಾಚ್ಛಿಷ್ಯಃ
ಪೂರ್ವಜನ್ಮವಿವರ್ಜಿತಃ ಇಂತು ಪಕೃತ್ಯಾದಿಗಳ ಗುಣಂಗಳು ಪಲ್ಲಟವಾದ ಕಾರಣ.
ಕೂಡಲಚೆನ್ನಸಂಗನಲ್ಲಿ ಬಸವನೆಂಬ ಪ್ರಸಾದಿಗೆ ನಾನೆಂಬ ಓಗರ./1571
ಸಜ್ಜನ ಸದ್ಭಾವಿ ಅನ್ಯರಲ್ಲಿ ಕೈಯ್ಯಾಂತು ಬೇಡ,
ಲಿಂಗವ ಮುಟ್ಟಿ ಕೈಮೀಸಲು.
ಕಂಗಳಲ್ಲಿ ಒಸೆದು ನೋಡ ಪರವಧುವ.
ಮನದಲ್ಲಿ ನೆನೆಯನನ್ಯವ, ಮಾನವ ಸೇವೆಯ ಮಾಡ, ಲಿಂಗವ ಬೇಡ,
ಲಿಂಗದ ಹಂಗನೊಲ್ಲ, ಕೂಡಲಚೆನ್ನಸಂಗಾ ನಿಮ್ಮ ಶರಣ/1572
ಸತಿಯ ಕೈಯಲ್ಲಿ ಕೊಟ್ಟುದು ಪ್ರಾಣಲಿಂಗವಲ್ಲ,
ಸುತನ ಕೈಯಲ್ಲಿ ಕೊಟ್ಟುದು ಪ್ರಾಣಲಿಂಗವಲ್ಲ,
ಅಲಸಿ ನಾಗವತ್ತಿಗೆಯಲಿರಿಸಿದುದು ಪ್ರಾಣಲಿಂಗವಲ್ಲ,
ತನುವ ಸೋಂಕಿ ವಜ್ರಲೇಪದಂತಿರಬೇಕು.
ಮನ ಕರದಲ್ಲಿ ಕೊಟ್ಟ ಪ್ರಾಣಲಿಂಗ ಹಿಂಗಿದರೆ
ಅವನಂದೇ ವ್ರತಗೇಡಿ, ಕೂಡಲಚೆನ್ನಸಂಗಮದೇವಾ. /1573
ಸತಿಯ ಸಂಗವತಿಸುಖವೆಂದರಿದಡೇನು ?
ಗಣಸಾಕ್ಷಿಯಾಗಿ ವಿವಾಹವಾಗದನ್ನಕ್ಕರ ?
ಕಣ್ಣು ಕಾಂಬುದೆಂದಡೆ, ಕತ್ತಲೆಯಲ್ಲಿ ಕಾಂಬುದೆ ದೀಪವಿಲ್ಲದನ್ನಕ್ಕರ ?
ಸೂರ್ಯನ ಪ್ರಕಾಶದಿಂದ ಕಂಡು
ತಾನೆ, ಕಂಡೆನೆಂಬ ಜಗದ ನಾಣ್ಣುಡಿಯಂತಾಯಿತ್ತು.
ಅಂಗವ ಬಿಟ್ಟು ಆತ್ಮನುಂಟೆ ? ಶಕ್ತಿಯ ಬಿಟ್ಟು ಶಿವನುಂಟೆ ?
ಇದು ಕಾರಣ-ಸ್ಥೂಲ ಸೂಕ್ಷ್ಮಕಾರಣ ತನುತ್ರಯವಿರಲು,
ಇಷ್ಟ ಪ್ರಾಣ ಭಾವವೆಂಬ ತ್ರಿವಿಧಲಿಂಗಸಂಬಂಧ ಬೇಡವೆಂದಡೆ
ಅಸಂಖ್ಯಾತ ಪ್ರಮಥಗಣಂಗಳೊಪ್ಪುವರೆ ?
ಕೂಡಲಚೆನ್ನಸಂಗಯ್ಯನಲ್ಲಿ ಇಷ್ಟಲಿಂಗಸಂಬಂಧವಿಲ್ಲದವರ ಮುಖವ
ನೋಡಲಾಗದು ಪ್ರಭುವೆ. /1574
ಸತಿಯರ ನರಮಾಂಸವೆಂಬ ಮಾಂಸದ ಪುತ್ಥಳಿಯ
ನಿಚ್ಚನಿಚ್ಚ ಕಡಿದುಕೊಂಡು ತಿಂಬ ನಾಯಿಗಳಿಗೆ
ಎಲ್ಲಿಯದೊ ವ್ರತಶೀಲಸಂಬಂಧ ?
ಅವರ ಅಧರ ಸೇವನೆಯೆ ಮಧುಮಾಂಸ,
ಅವರ ಉದರ ಸೇವನೆಯೆ ಸುರೆಮಾಂಸ
ಕಾಮವೆ ಕಬ್ಬಲಿಗ, ಕ್ರೋಧವೆ ಹೊಲೆಯ, ಲೋಭವೆ ಕಳ್ಳ,
ಮೋಹವೆ ಬಲೆಗಾರ, ಮದವೆ ಮಾದಿಗ, ಮತ್ಸರವೆ ಸುರಾಪಾನಿ-
ಇಂತೀ ಷಡ್ವಿಧ ಭವಿಯ, ತಮ್ಮೆದೆಯೊಳಗೆ ಇಂಬಿಟ್ಟುಕೊಂಡು
`ಭವಿಪಾಕ ಪರಪಾಕ’ ಎಂಬ ಪಂಚಮಹಾಪಾತಕರ,
ಮೆಚ್ಚುವನೆ ಕೂಡಲಚೆನ್ನಸಂಗಮದೇವ ? /1575
ಸತ್ಕ್ರಿಯಾಸಮ್ಯಗ್ಜ್ಞಾನಸಂಪನ್ನರಪ್ಪ
ಶಿವಯೋಗಿಗಳೆಡೆಯಾಡಿದ ನೆಲವೆ ಸುಕ್ಷೇತ್ರವಯ್ಯಾ
ಅವರಡಿಯಿಟ್ಟ ಜಲವೆ ಶುಭತೀರ್ಥವಯ್ಯಾ.
ಸಕಲತೀರ್ಥಕ್ಷೇತ್ರವೆಲ್ಲ ಶಿವಯೋಗಿಯ ಶ್ರೀಪಾದದಲ್ಲಿ ಅಡಗಿಪ್ಪವಯ್ಯಾ.
ಜ್ಞಾನಯೋಗಪರಾಣಾಂ ತು ಪಾದಪ್ರಕ್ಷಾಲಿತಂ ಜಲಂ
ಭಾವಶುದ್ಧ್ಯರ್ಥಮಜ್ಞಾನಾಂ ತತ್ತೀರ್ಥಂ ಮುನಿಪುಂಗವ ಎಂದುದಾಗಿ
ಶಿವಯೋಗಿಯ ಪಾದೋದಕವ ಸೇವಿಸಿ
ನಮ್ಮ ಶರಣರೆಲ್ಲ ಪರಮುಕ್ತರಾದರಯ್ಯಾ
ಕೂಡಲಚೆನ್ನಸಂಗಮದೇವಾ./1576
ಸತ್ತ ಹೆಣನ ಹೊತ್ತವರೆಲ್ಲಾ ಅಚ್ಚುಗಗೊಂಡರಲ್ಲಾ.
ಹೊತ್ತವರೆಲ್ಲಾ ಸತ್ತುದ ಕಂಡು ಮೂರ್ಛೆವೋದರಲ್ಲಾ.
ಸುತ್ತಿಬಂದಿದ್ದವರೆಲ್ಲಾ ಹೋಗಿ ಅದ ಮುಟ್ಟಲಮ್ಮರು ನೋಡಾ !
ಮುಟ್ಟದ ಮುನ್ನ ಮೂವರ ಕೆಡಿಸಿತ್ತು. ಸತ್ತ ಪರಿಯ ನೋಡಾ !
ಅದು ಕಾಡಿನಲ್ಲಿ ಉರಿಯದು, ಕಿಚ್ಚಿನಲ್ಲಿ ಬೇಯದು.
ಸತ್ತ ಪರಿಯ ನೋಡಾ ! ಕೂಡಲಚೆನ್ನಸಂಗನೆಂಬ
ಚಿಂತೆ ಸತ್ತಿತಲ್ಲಾ./1577
ಸತ್ಯಕಾಯಕ ಸತ್ಯಕಾಯಕವೆಂದು ನುಡಿವಿರಿ, ಸತ್ಯಕಾಯಕವಾವುದೆಂದರಿಯಿರಿ;
ಭಕ್ತಗೃಹಂಗಳಿಗೆ ಭೃತ್ಯಕಾಯಕವನೊಡಗೊಂಡು ಹೋಗಿ ಆ ಭಕ್ತರಿಗೆ
ತಾನು ಭೃತ್ಯನಾಗಿ ಶರಣೆಂದು, ತನ್ನ ಕಾಯಕವನೊಪ್ಪಿಸಿ
ಪದಾರ್ಥಂಗಳನು ಪಡೆವಲ್ಲಿ ಭಕ್ತಿ ಬಂಧನವಿಲ್ಲದೆ, ಆ ಭಕ್ತನ ಮನವ ನೋಯಿಸದೆ,
ಭಕ್ತಿಮಹೋತ್ಸಾಹದಿಂದ ಬಂದ ಪದಾರ್ಥಂಗಳನು ತಂದು ಲಿಂಗಜಂಗಮಕ್ಕೆ ನೀಡಿ,
ಅವರೊಕ್ಕುದ ಕೊಂಡಿಪ್ಪುದೆ ಸತ್ಯಕಾಯಕ, ಆತನೆ ಸದ್ಭಕ್ತ.
ಇನಿತಲ್ಲದೆ ಜಂಗಮಕ್ಕೆ ಸಲುವುದೆಂದು ಭಕ್ತನ ಬಂಧನಕಿಕ್ಕಿ
ಭಕ್ತಿಯ ಮನೋತ್ಸಾಹಗುಂದಿಸಿ, ಅಸುರಕರ್ಮದಿಂದ ತಂದ ದ್ರವ್ಯಂಗಳೆಲ್ಲವು
ಅಸ್ಥಿ ಮಾಂಸ ಚರ್ಮಂಗಳೆನಿಸುವುದಲ್ಲದೆ ಅವು ಪದಾರ್ಥಂಗಳಲ್ಲ.
ಅದು ಲಿಂಗಜಂಗಮಕ್ಕೆ ಸಲ್ಲದು, ಅವಂಗೆ ಪ್ರಸಾದವಿಲ್ಲ.
ಅದು ಸತ್ಯಕಾಯಕಕ್ಕೆ ಸಲ್ಲದು.
ಅವ ರಾಕ್ಷಸನಪ್ಪನಲ್ಲದೆ ಭಕ್ತನಲ್ಲ. ಅವನ ಮನೆಯ ಹೊಕ್ಕು
ಲಿಂಗಾರ್ಚನೆಯ ಮಾಡುವಾತ ಜಂಗಮಸ್ಥಲಕ್ಕೆ ಸಲ್ಲ.
ಅವರಿರ್ವರನು ಕೂಡಲಚೆನ್ನಸಂಗಯ್ಯ
ಇಪ್ಪತ್ತೆಂಟುಕೋಟಿ ನಾಯಕನರಕದಲ್ಲಿಕ್ಕುವ/1578
ಸತ್ಯವಿಲ್ಲದ ಭಕ್ತಿಯ ಸಾವಿರ ವರುಷ ಮಾಡಿದರೇನು?
ನಿಷ್ಠೆಯಿಲ್ಲದ ಪೂಜೆಯನೇಸುಕಾಲ ಮಾಡಿದರೇನು?
ಭಾವ ನೆಲೆಗೊಳ್ಳದ ಪ್ರಸಾದವನೇಸುಕಾಲ ಕೊಂಡಲ್ಲಿ ಫಲವೇನು?
ಅಭ್ಯಾಸವಾಯಿತ್ತಲ್ಲದೆ,
ಒಬ್ಬರೊಬ್ಬರ ಕಂಡು ಮಾಡುವರಲ್ಲದೆ, ಸಹಜವಿಲ್ಲ, ಸಮ್ಯಕ್ಕಿಲ್ಲ, ನಿಜವಿಲ್ಲ.
ಇದು ಕಾರಣ, ಇಂತಪ್ಪವರ ಭಕ್ತರೆಂದೆನಲಾಗದು,
ಕೂಡಲಚೆನ್ನಸಂಗಯ್ಯಾ ನೀ ಸಾಕ್ಷಿಯಾಗಿ ಛೀಯೆಂಬೆನು. /1579
ಸತ್ಯವುಳ್ಳವರಿಗೆ ನಿತ್ಯನೇಮದ ಹಂಗೇಕಯ್ಯಾ ?
ಅರಿವುಳ್ಳವರಿಗೆ ಅಗ್ಗವಣಿಯ ಹಂಗೇಕಯ್ಯಾ ?
ಮನಶುದ್ಧವುಳ್ಳವರಿಗೆ ಮಂತ್ರದ ಹಂಗೇಕಯ್ಯಾ ?
ಭಾವಶುದ್ಧವುಳ್ಳವರಿಗೆ ಪತ್ರೆಯ ಹಂಗೇಕಯ್ಯಾ ?
ನಿಮ್ಮನರಿದ ಶರಣರಿಗೆ ನಿಮ್ಮ ಹಂಗೇಕಯ್ಯಾ ?
ಕೂಡಲಚೆನ್ನಸಂಗಮದೇವಾ ?/1580
ಸತ್ಯವೆನ್ನದೆ ಸಹಜವೆನ್ನದೆ ಅಚಲವೆನ್ನದೆ ಅಖಂಡಿತವೆನ್ನದೆ,
ಪರಿಪೂರ್ಣವೆನ್ನದೆ ಶೂನ್ಯವೆನ್ನದೆ ನಿಃಶೂನ್ಯವೆನ್ನದೆ ನಿಜವೆನ್ನದೆ-
ಏನೂ ಎನ್ನದೆ, ಕೂಡಲಚೆನ್ನಸಂಗಯ್ಯನೆಂಬ ನುಡಿಗೆಡೆಯಿಲ್ಲದುದ
ನಾನೇನೆಂಬೆ ? /1581
ಸತ್ಯಸದಾಚಾರವುಳ್ಳ ಶಿವಶರಣರವರಹುದೆಂದುದೆ
ಶುಭಮುಹೂರ್ತ [ಶುಭಘಳಿಗೆ] ಸಕಲ ಬಲ, ಸಕಲ ಜಯ,
ಅವರಲ್ಲವೆಂಬುದೇ ವಿಘ್ನ ವಿಷಗಳಿಗೆ ನಿರ್ಬಲ ಅಪಜಯ.
ಅದೆಂತೆಂದಡೆ:
ಅವರು ಮಾಡುವ ಕಾರ್ಯವೆಲ್ಲಾ ಕೂಡಲಚೆನ್ನಸಂಗಮಾದಿನವಾಗಿ.
ನೀನೆ ಮೃತ್ಯುಂಜಯನು, ವಿಶ್ವಾದಿಪತಿಯಾದ ಕಾರಣ
ಜಯವಪ್ಪುದಯ್ಯಾ./1582
ಸತ್ಯಾಚಾರಯುಕ್ತವಾದ ಭಕ್ತಜಂಗಮವನರಸಿಕೊಂಡು ಹೋಗಿ
ಭಕ್ತದೇಹಿಕದೇವನೆಂಬ ಶ್ರುತಿಯನರಿದು ಪ್ರಸಾದಕ್ಕೆ ಸೂತಕವ ಮಾಡುವ
ಪಾತಕರ ವಿದಿಯಿನ್ನೆಂತೊ ?
`ಶರೀರಮರ್ಥಂ ಪ್ರಾಣಂಚ ಸದ್ಗುರುಭ್ಯೋ ನಿವೇದಯೇತ್’ ಎಂದುದಾಗಿ
ಆತನ ತನುಮನಧನಂಗಳೆಲ್ಲಾ ಗುರುವಿನ ಸೊಮ್ಮು
ಆತನ ಸರ್ವಾಂಗವೆಲ್ಲವೂ ಪ್ರಸಾದಕ್ಷೇತ್ರ
ಆ ಪ್ರಸಾದಕ್ಷೇತ್ರದೊಳಗಿದ್ದವರೆಲ್ಲರೂ ಪ್ರಸಾದಮಯ
ಆ ಪ್ರಸಾದಮಯದೊಳಗಿದ್ದವರೆಲ್ಲರೂ ಪ್ರಸಾದದ ಬೆಳೆ, ಪ್ರಸಾದದಾಗು,
ಆತ ಮುಟ್ಟಿದ ಪದಾರ್ಥವೆಲ್ಲವೆಲ್ಲವೂ ಪ್ರಸಾದವಪ್ಪುದು
ಆತ ಮಾಡಿದುದೆಲ್ಲವು ಪ್ರಸಾದದ ಕಾಯಕ, ಪ್ರಸಾದದ ನಡೆ, ಪ್ರಸಾದದ ನುಡಿ.
ಇಂತಪ್ಪ ಪ್ರಸಾದವಿದ್ದಲ್ಲಿಗೆ ಹೋಗಿ `ಅದು ಬೇಕು ಇದು ಬೇಕು’ ಎಂದು
ಓಗರಪದಾರ್ಥದ ಸವಿಯನರಸುವ ಪಾತಕದ್ರೋಹಿಗಳ ಮೆಚ್ಚ
ನಮ್ಮ ಕೂಡಲಸಂಗಮದೇವ./1583
ಸತ್ವ ರಜ ತಮವೆಂಬವು ಪ್ರಪಂಚುವೆಂದೆಂಬಿರಿ;
ಸತ್ವವೆ ಪರತತ್ವ ಕಾರಣ, ಒಂದೆರಡೆಣಿಕೆಯ ಉದಯಾಸ್ತಮಾನವುಂಟೆ
ಆತ್ಮವಿತ್ತುವಿಂಗೆ ?
ಉದಕವನುಂಡ ಲೋಹದ ಪರಿಯಂತೆ ಇರಬೇಕು,
ಮೂಗ ಕಂಡ ಕನಸ ನೀವು ಬಲ್ಲಡೆ ಹೇಳಿರೆ !
ಉಪಾದಿಯಿಲ್ಲದುಪಮೆ, ಭಾವವಿಲ್ಲದ ಭರಿತ, ಇಂದ್ರಿಯವರತ ಪ್ರಕಾಶ ನೋಡಿರೆ !
ಕಾರಣವಿಲ್ಲದ ಕಾರ್ಯ, ಕೇಳಲಿಲ್ಲದ ಉಲುಹು, ಬೇಡಲಿಲ್ಲದ ಪದವಿದು.
ತೋರಿ, ಆದಿ ಅಂತ್ಯವಿಲ್ಲದ, ತ್ಯಪ್ತಿಯಡಗಿದ ನಿಜಕ್ಕೆ
ನಾನು ನೀನೆಂಬೊಂದು ಪ್ರತಿಯುಂಟೆ ?
ನಿಜಭಾವವಳಿದಾತ್ಮ ನಿತ್ಯವೆಂಬುದನು ಎಲ್ಲ ಶ್ರುತಿಗಳಲ್ಲಿ ಕೇಳಿಕೊಳ್ಳಿ.
ಸುಖದ ಸೋಕಿನ ಪರಿಣಾಮದ ಪದವನು
ಕೂಡಲಚೆನ್ನಸಂಗಯ್ಯನಲ್ಲಿ ಪ್ರಭುವೆ ಬಲ್ಲ. /1584
ಸತ್ವದ ಉದಯವ ಗುರುವಿಂಗಿತ್ತು,
ರಜದ ಉದಯವ ಲಿಂಗಕ್ಕಿತ್ತು,
ತಮದ ಉದಯವ [ಜಂಗಮಕ್ಕಿತ್ತು]
ಈ ತ್ರಿವಿಧದುದಯವ ಪ್ರಸಾದಕ್ಕಿತ್ತು,
ಇಂತಪ್ಪ ಲಿಂಗಸಂಗಿಗಳಲ್ಲಿ ಸೇರಿಸಯ್ಯಾ.
ಪಂಚೀಕೃತ ಪಂಚ ಪಂಚಕವ ಕಳೆದು
ಕೂಡಲಚೆನ್ನಸಂಗಯ್ಯ ಎನ್ನ ಪ್ರಾಣಲಿಂಗವಾಗಿ,
ಉಳಿದ ಸುಖಂಗಳು ಕಾಡಲಮ್ಮವು ಬಳಿಕ. /1585
ಸದಾಚಾರಿಯಾದಡೆ:ಉಪ್ಪರಗುಡಿ ಸಿಂಧುಪತಾಕೆ,
ಒಬ್ಬರಿಗೊಬ್ಬರು ಶರಣೆಂಬುದೆ ಸರ್ವತೀರ್ಥ.
ಭಕ್ತನ ದೇಹವೆ ತ್ರಿಕೂಟಶಿವಾಲಯ,
ಕಾಲೇ ಕಡೆದ ಕಂಬ, ಶಿರವೆ ಸುವರ್ಣದ ಕಳಶ,
ಶಿವಾಚಾರ ಪೌಳಿ, ವಿಭೂತಿಯಲ್ಲಿ ಧವಳಿಸಿ,
ಪರದೈವಕ್ಕಂಜೆವೆಂಬ ಅಗುಳಿ ದಾರವಟ್ಟ ಬಿಯಗವೊಪ್ಪುತ್ತಿರೆ,
ಹಸ್ತಾಗ್ರಪೂಜೆ, ಶಾಂತವೆ ಅಗ್ಘಣಿ, ಸಜ್ಜನವೆ ಮಜ್ಜನ,
ಸದಾ ಸನ್ನಿಹಿತವೆ ಲಿಂಗಪೂಜೆ, ಸತ್ಯವೆ ಅಡ್ಡಣಿಗೆ,
ಸಮತೆ ಪರಿಯಾಣ, ಮನ ಮೀಸಲೋಗರ.
ಲಿಂಗಬಣ್ಣಿಗೆಯ ಮೇಲೋಗರದಲ್ಲಿ
ದೇವರೊಲಿದಾರೋಗಣೆಯ ಮಾಡುತ್ತಿರಲು
ಹರುಷವೆ ಹಸ್ತಮಜ್ಜನ, ಪ್ರೀತಿಪ್ರೇಮವೆ ಕರ್ಪುರದ ವೀಳೆಯ,
ಕಲಿತನದ ಝೇಘಂಟೆ, ಛಲಪದದ ಕಹಳೆ ಭೇರಿ,
ವೀರವಂದನೆ ಮದ್ದಳೆ, ಕೇಳಿಕೆ ಸಂಪ್ರದಾಯವು.
ಇದು ಕಾರಣ, ಕೂಡಲಚೆನ್ನಸಂಗಾ
ನಿಮ್ಮ ಶರಣ ಸರ್ವಾಂಗಲಿಂಗಿ./1586
ಸದ್ಗುರು ಕಾರುಣ್ಯವ ಪಡೆದು, ಪೂರ್ವಗುಣವಳಿದು,
ಪುನರ್ಜಾತನಾದ ಬಳಿಕ
ಆ ಸದ್ಗುರು, ಪರಶಿವ, ಪ್ರಾಣಾತ್ಮ
-ಈ ತ್ರಿವಿಧವು ಏಕಾರ್ಥವಾಗಿ ಲಿಂಗ ಪ್ರವೇಶವಂ ಮಾಡಿ,
ಆ ಮಹಾಲಿಂಗವನು ಸದ್ಭಕ್ತಂಗೆ ಕರುಣಿಸಿ
ಪ್ರಾಣಲಿಂಗವಾಗಿ ಬಿಜಯಂಗೆಯಿಸಿ ಕೊಟ್ಟು,
ಲಿಂಗಪ್ರಾಣ ಪ್ರಾಣಲಿಂಗ ಲಿಂಗವಂಗ ಅಂಗಲಿಂಗವೆನಿಸಿ
ಭಕ್ತಕಾಯ ಮಮಕಾಯವಾಗಿ
ಅಂಗದ ಮೇಲೆ ಲಿಂಗಸ್ಥಾಪ್ಯವಂ ಮಾಡಿ,
“ಆ ಮಹಾಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರವನು ಮಾಡು’
ಎಂದು ಶ್ರೀ ಗುರುವಾಜ್ಞೆಯಂ ಮಾಡಲು,
“ಮಹಾಪ್ರಸಾದ’ವೆಂದು ಆಜ್ಞೆಯಂ ಕೈಕೊಂಡು
ಕ್ರಿಯಾಮಾರ್ಗದಿಂ ಮಾಡುವಲ್ಲಿ,
ದೀಪಾರಾಧನೆ ಪರಿಯಂತರ ಆಗಮಮಾರ್ಗದಲು ಮಾಡಿ
ನೈವೇದ್ಯ ಕ್ರಿಯಮಾಡುವಲ್ಲಿ,
ಸರ್ವ ರಸ ಫಲ-ಪುಷ್ಪ ಪಾಕಾದಿ ಮಹಾದ್ರವ್ಯಂಗಳನು
ಪಂಚೇಂದ್ರಿಯಂಗಳ ಪಂಚಸ್ಥಾನ ಪ್ರವೇಶವಾದ ಮಹಾಲಿಂಗಕ್ಕೆ ಅರ್ಪಿಸುವಲ್ಲಿ
ದ್ರವ್ಯಂಗಳ ಸುರೂಪವನು ಶ್ವೇತ ಪೀತ ಹರಿತ ಮಾಂಜಿಷ್ಟ ಕೃಷ್ಣ ಕಪೋತ
ಷಡುವರ್ಣ ಮಿಶ್ರವಾದ ಮೂವತ್ತಾರು ಬಹುವಿಧ ವರ್ಣಂಗಳನು,
ಕಂಗಳಲ್ಲಿ ನೋಡಿ, ಕಂಡು, ಅರಿದು, ಕುರೂಪವ ಕಳೆದು,
ಸುರೂಪವನು ಕಂಗಳಿಂದ ಲಿಂಗಕ್ಕರ್ಪಿಸುವಲ್ಲಿ
ಸ್ವಯಭಾಜನವೋ? ಲಿಂಗಭಾಜನವೋ?
ಆ ಕಾಲದಲು ಸೂತಕವಿಲ್ಲ, ದೋಷವಿಲ್ಲ;
ರೂಪು ಲಿಂಗಕ್ಕರ್ಪಿತವಾಯಿತ್ತು.
ನಾದ ಮಂತ್ರಂಗಳಾದಿಯಾದ ಶಬ್ದವನು
ಶ್ರೋತ್ರದಿಂ ಕೇಳಿ, ಕುಶಬ್ದವನೆ ಕಳೆದು
ಸುಶಬ್ದವನು ಶ್ರೋತ್ರದಿಂ ಲಿಂಗಕ್ಕರ್ಪಿಸುವಲ್ಲಿ
ಸ್ವಯಭಾಜನವೋ? ಲಿಂಗಭಾಜನವೋ?
ಆ ಕಾಲದಲು ಸೂತಕವಿಲ್ಲ, ದೋಷವಿಲ್ಲ,
ಸುಶಬ್ದದ್ರವ್ಯಂಗ?ು ಶ್ರೋತ್ರದಿಂ ಲಿಂಗಕ್ಕರ್ಪಿತವಾಯಿತ್ತು.
ದ್ರವ್ಯಂಗ? ಸುಗಂಧ ದುರ್ಗಂಧಗ?ನು
ಘ್ರಾಣವರಿದು, ಘ್ರಾಣ ವಾಸಿಸಿ
ದುರ್ಗಂಧವ ಕಳೆದು ಸುಗಂಧವನು ಘ್ರಾಣದಿಂ ಲಿಂಗಕ್ಕರ್ಪಿಸುವಲ್ಲಿ
ಸ್ವಯಭಾಜನವೋ? ಲಿಂಗ ಭಾಜನವೋ?
ಆ ಕಾಲದಲು ಸೂತಕವಿಲ್ಲ ದೋಷವಿಲ್ಲ;
ಘ್ರಾಣದಿಂ ಸುಗಂಧ ಲಿಂಗಾರ್ಪಿತವಾಯಿತ್ತು.
ದ್ರವ್ಯಂಗಳ ಮೃದು ಕಠಿಣ ಶೀತೋಷ್ಣಂಗಳನು ಪರುಶನದಿಂ ಪರುಶಿಸಿ
ಸುಪರುಶನವರಿದು ತತ್ಕಾಲೋಚಿತ ದ್ರವ್ಯಂಗಳನು
ಅನುವರಿದು ಪರುಶಿಸಿ ಲಿಂಗಕ್ಕರ್ಪಿಸುವಲ್ಲಿ
ಸ್ವಯಭಾಜನವೋಳ ಲಿಂಗಭಾಜನವೋ?
ಆ ಕಾಲದಲು ಸೂತಕವಿಲ್ಲ, ದೋಷವಿಲ್ಲ,
ದ್ರವ್ಯಂಗಳ ಮೃದುಕಠಿಣ ಶೀತೋಷ್ಣಂಗಳು
ಪರುಶನದಿಂ ಲಿಂಗಾರ್ಪಿತವಾಯಿತ್ತು.
ಮಹಾದ್ರವ್ಯಂಗಳ ರೂಪು ಶಬ್ದ ಗಂಧ ರಸ ಮೃದುರಿಠಣ ಶೀತೋಷ್ಣ ಮೊದಲಾದುವು
ಇಂದ್ರಿಯಂಗಳಿಂದ ಲಿಂಗಾರ್ಪಿತವಾಯಿತ್ತು.
ದ್ರವ್ಯಂಗಳ ಸುರೂಪವನು ಕಂಗಳಿಂದರ್ಪಿಸುವಂತೆ
ಶ್ರೋತ್ರಘ್ರಾಣ ಸ್ಪರ್ಶ ಜಿಹ್ವೆ ಮೊದಲಾದ
ನಾಲ್ಕು ಇಂದ್ರಿಯಂಗಳಲ್ಲಿ ಅರ್ಪಿಸಬಾರದು,
ಕಂಗಳಲ್ಲಿ ರೂಪನರ್ಪಿಸಬೇಕು.
ಸುಶಬ್ದವನು ಶ್ರೋತ್ರದಿಂದರ್ಪಿಸುವಂತೆ,
ಚಕ್ಷು ಘ್ರಾಣ ಜಿಹ್ವೆ ಪರುಶ ಮೊದಲಾದ
ನಾಲ್ಕು ಇಂದ್ರಿಯಂಗಳಿಂದರ್ಪಿಸಬಾರದು,
ಸುಶಬ್ದವನು ಶ್ರೋತ್ರದಿಂದವೆ ಅರ್ಪಿಸಬೇಕು.
ಸುಗಂಧವನು ಘ್ರಾಣದಿಂದರ್ಪಿಸುವಂತೆ
ನೇತ್ರ ಶ್ರೋತ್ರ ಸ್ಪರ್ಶ ಜಿಹ್ವೆ ಮೊದಲಾದ
ನಾಲ್ಕು ಇಂದ್ರಿಯಂಗಳಲ್ಲಿ ಅರ್ಪಿಸಬಾರದು,
ಸುಗಂಧವನು ಘ್ರಾಣದಿಂದವೆ ಅರ್ಪಿಸಬೇಕು.
ಮೃದು ಕಠಿಣ ಶೀತೋಷ್ಣಂಗಳನು ಸ್ಪರುಶನದಿಂದರ್ಪಿಸುವಂತೆ
ನೇತ್ರ ಶ್ರೋತ್ರ ಘ್ರಾಣಜಿಹ್ವೆ ಮೊದಲಾದ
ನಾಲ್ಕು ಇಂದ್ರಿಯಂಗಳಿಂದ ಅರ್ಪಿಸಬಾರದು,
ಮೃದು ಕಠಿಣ ಶೀತೋಷ್ಣ ದ್ರವ್ಯಂಗಳನು ಸ್ಪರುಶನದಿಂದರ್ಪಿಸಬೇಕು.
ನಾಲ್ಕು ಇಂದ್ರಿಯದಿಂ ರೂಪು ಶಬ್ದಗಂಧ ಮೃದುಕಠಿಣ ಶೀತೋಷ್ಣ
[ದ್ರವ್ಯಂಗಳ ಲಿಂಗಾರ್ಪಿತವಾಯಿತ್ತು]
ಮಹಾದ್ರವ್ಯಂಗಳ ಸುರಸವನು ಮಹಾರುಚಿಯನು
ಜಿಹ್ವೆಯಿಂದರ್ಪಿಸುವಂತೆ ನೇತ್ರ ಶ್ರೋತ್ರ ಘ್ರಾಣ ಸ್ಪರುಶನ ಮೊದಲಾದ
ಈ ನಾಲ್ಕು ಇಂದ್ರಿಯಂಗಳಿಂದರ್ಪಿಸಬಹುದೆ ಹೇಳಿರಣ್ಣಾ.
ಮಹಾರಸವನು ಮಹಾರುಚಿಯನು ಜಿಹ್ವೆಯಿಂದವೆ ಅರ್ಪಿಸಬೇಕು.
ಅಹಂಗಲ್ಲದೆ ಲಿಂಗಾರ್ಪಿತವಾಗದು, ಆ ಲಿಂಗದ ಆರೋಗಣೆಯಾಗದು.
ಮಹಾರಸವನು ರುಚಿಯನು ಜಿಹ್ವೆಯಿಂದರ್ಪಿಸುವಲ್ಲಿ
ಸೂತಕವೆಂದು ದೋಷವೆಂದು ಸ್ವಯಭಾಜನವಾಗದೆಂದು
ಬಿನ್ನಭಾಜನವಾಗಬೇಕೆಂದು ದೇವರ ಆರೋಗಣೆಗೆ ಮುನ್ನವೇ ಇದ್ದ
ಪರಿಯಾಣವ ತೆಗೆದ ಕಷ್ಟವ ನೋಡಾ! ಅಗಲನಾರಡಿಗೊಂಬ ಪಾಪವ ನೋಡಾ
ಅಕಟಕಟಾ! ಈ ಪರಿಯೆ ಲಿಂಗಾರ್ಚನೆ?
ಈ ಪರಿಯೆ ಲಿಂಗಾರ್ಪಿತವ ಮಾಡಿ ಪ್ರಸಾದವ ಪಡೆವ ಪರಿ?
ಈ ಪರಿಯೆ ಭಕ್ತಿ? ಈ ಪರಿಯೆ ಜ್ಞಾನ?
ಇಂತಲ್ಲ ಕೇಳಿರಣ್ಣಾ, ಕರ್ತೃ ಭೃತ್ಯ ಸಂಬಂಧದ ಪರಿ.
ದೇವರ ಪರಿಯಾಣದಲು ದೇವರಿಗೆ ಬಂದ ಸರ್ವದ್ರವ್ಯಮಹಾರಸಂಗಳನು,
ಮಹಾರುಚಿಯನು ಭಕ್ತದೇಹಿಕ ದೇವನಾಗಿ
ದೇವರ ಜಿಹ್ವೆಯಲ್ಲಿ ದೇವಾದಿದೇವ ಮಹಾದೇವಂಗರ್ಪಿಸಬೇಕು. ಸ್ಮೃತಿ:
ರೂಪಂ ಸಮರ್ಪಿತಂ ಶುದ್ಧಂ ರುಚಿಃ ಸಿದ್ಧಂ ತು ವಿಶ್ರುತಂ
ಏ ತತ್ಸಮಾಗತಾ ತೃಪ್ತಿಃ ಪ್ರಸಿದ್ಧಂತುಪ್ರಸಾದಕಂ
ದರ್ಪಣಂ ಧೂಪದೀಪೌ ಚ ನಾನಾರುಚಿ ಸುಖಂ ಬಹು
ಪ್ರಸಾದ ಏವ ಭೋಕ್ತವ್ಯೋ ಅನ್ಯದ್ಗೋಮಾಂಸಸನ್ನಿಭಂ
ರೂಪಂ ಸಮರ್ಪಯೇದ್ದ್ರವ್ಯಂ ರುಚಿಮಪ್ಯರ್ಪಯೇತ್ತತಃ
ಉಭಯಾರ್ಪಣಹೀನಶ್ಚೇತ್ ಪ್ರಸಾದೋ ನಿಷ್ಫಲೋ ಭವೇತ್
ನೈವೇದ್ಯಂ ಪುರತೋ ನ್ಯಸ್ತಂ ದರ್ಶನಾತ್ ಸ್ವೀಕೃತಂ ಮಯಾ
ರಸಾನ್ ಭಕ್ತಸ್ಯ ಜಿಹ್ವಾಗ್ರಾದಶ್ನಾಮಿ ಕಮಲೋದ್ಭವ
ಶಬ್ದಃ ಸ್ಪರ್ಶಶ್ಚ ರೂಪಂ ಚ ರಸೋ ಗಂಧೋ ಮಹಾರುಚಿಃ
ತತ್ತಲ್ಲಿಂಗಮುಖೇನೈವ ಅರ್ಪಿತಂ ಸ್ಯಾತ್ಸಮರ್ಪಣಂ
ಅರ್ಪಿತಾನರ್ಪಿತಂ ಸ್ಥಾನಂ ಇಂದ್ರಿಯಾದಿಂದ್ರಿಯಂ ಯಥಾ
ಇಂದ್ರಿಯಸ್ಥಾನತತ್ಕರ್ಮ ಸಮರ್ಪಿತಕ್ರಿಯಾರ್ಪಿತಂ
………………ಜ್ಞಾನಾರ್ಪಣಕ್ರಿಯಾರ್ಪಣೇ
ಉಭಯಾರ್ಪಣಹೀನಸ್ಯ ಪ್ರಸಾದೋ ನಿಷ್ಫಲೋ ಭವೇತ್
ಗರ್ಬಿಣ್ಯಾ ಗರ್ಭದೇಹಸ್ಯ ಸರ್ವಭೋಗಸ್ಸಮೋ ಭವೇತ್
ಲಿಂಗಿನಾಂ ಲಿಂಗಭೋಗೇನ ಪ್ರಸಾದಃ ಸಹ ಸಂಭವೇತ್
ಗರ್ಬಿಣೀ ಸರ್ವಭೋಗೇಷು ಶಿಶೂನಾಂ ತೃಪ್ತಿಸಂಭವಃ
ಲಿಂಗಿನಾಂ ಲಿಂಗಭೋಗೇಷು ಪ್ರಸಾದಸ್ಸಂಭವೇತ್ತಥಾ
ಯಥಾ ಚ ಗರ್ಬಿಣೀ ಭೋಗೇ ಶಿಶೂನಾಂ ತೃಪ್ತಿಸಂಭವಃ
ತಥಾ ಲಿಂಗಸ್ಯ ಭೋಗೇಷು ಅಂಗಸ್ತೈಪ್ತಿಮವಾಪ್ನು ಯಾತ್
ಗರ್ಬಿಕೃತಸ್ಯ ಪ್ರಾಣಸ್ತು ಗರ್ಭಣೀಭೋಗಮಾಶ್ರಿತಃ
ಲಿಂಗಗರ್ಬಿಕೃತೋ ಲಿಂಗೀ ಲಿಂಗಭೋಗಸಮಾಶ್ರಿತಃ
ಮತ್ತೊಂದಾಗಮದಲ್ಲಿ:
ಭಕ್ತಕಾಯೋ ಮಹಾದೇವೋ ಭಕ್ತಾತ್ಮಾ ಚ ಸದಾಶಿವಃ
ಭಕ್ತಭೋಗೋಪಭೋಗಶ್ಚ ಭೋಗಸ್ತಸ್ಯ ವಿದಿಯತೇ
ಲಿಂಗದೇಹೀ ಶಿವಾತ್ಮಾಯಂ ಲಿಂಗಾಚಾರೋ ನ ಲೌಕಿಕಃ
ಸರ್ವಲಿಂಗಮಯಂ ರೂಪಂ ಲಿಂಗೇನ ಸಮಮಶ್ನುತೇ
ಘ್ರಾಣಸ್ತಸ್ಯೈವ ಘ್ರಾಣಶ್ಚ ದೃಷ್ಟಿದರ್ೃಷ್ಟಿಃ ಶ್ರುತಿಃ ಶ್ರುತಿಃ
ಸ್ಪರ್ಶನಂ ಸ್ಪರ್ಶನಂ ವಿಂದ್ಯಾದ್ ಗ್ರಾಹ್ಯಂ ತದ್ಗ್ರಾಹ್ಯಮೇವ ಚ
ಭುಕ್ತಂ ತದ್ಭುಕ್ತಮಾಖ್ಯಾತಂ ತೃಪ್ತಿಸ್ತತ್ತೃಪ್ತಿರೇವ ಚ
ತಸ್ಯೈಕಃ ಪ್ರಾಣ ಆಖ್ಯಾತ ಇತ್ಯೇತತ್ಸಹವರ್ತಿನಾಂ
ಲಿಂಗದೃಷ್ಟಿನಿರೀಕ್ಷಾ ಸ್ಯಾಲ್ಲಿಂಗಹಸ್ತೋಪಸ್ಪರ್ಶನಂ
ಲಿಂಗಶ್ರೋತ್ರೇಣ ಶ್ರವಣಂ ಲಿಂಗಜಿಹ್ವಾರಸಾನ್ನವಾನ್
ಲಿಂಗಘ್ರಾಣಸ್ತು ಘ್ರಾಣಶ್ಚ ಲಿಂಗೇನ ಸಹ ವರ್ತತೇ
ಲಿಂಗಂ ಮನೋಗತಂ ವಾಪಿ ಇತ್ಯೇತೈಃ ಸಹಭೋಜನಂ
ಲೋಕಾಚಾರನಿಬದ್ಧಸ್ತು ಲೋಕಾಲೋಕವಿವರ್ಜಿತಃ
ಲೋಕಾಚಾರಪರಿತ್ಯಾಗೀ ಪ್ರಾಣಲಿಂಗೀತಿ ಸಂಸ್ಮೃತಃ
ನ ಪ್ರಾಣಲಿಂಗಿನಃ ಕಾಲೋ ನ ಲಿಂಗಪ್ರಾಣಿನಃ ಕ್ರಿಯಾ
ಕಾಲಕರ್ಮದ್ವಯಂ ನಾಸ್ತಿ ಶರಣಸ್ಯ ಪ್ರಸಾದತಃ
ಇಂತೆಂದುದಾಗಿ ಇದು ಲಿಂಗಾರ್ಚನೆಯ ಪರಿ,
ಇಂತಲ್ಲದೆ ರುಚಿಯರ್ಪಿತಕ್ಕೆ ಮುನ್ನವೆ
ಪರಿಯಾಣವ ತೆಗೆಯಲು ಲಿಂಗಾರ್ಚನೆಯ ಕ್ರೀ ತಪ್ಪಿತ್ತು.
ಶ್ರೀ ಗುರುವಾಜ್ಞೆಯ ಮೀರಿದವನು ಜ್ಞಾನಿಯಲ್ಲ, ಭಕ್ತನಲ್ಲ ಕೇಳಿರೇ.
ಆವನಾನು ಮಹಾರಾಜಂಗೆ ಆರೋಗಣೆಗೆ ಮುನ್ನವೆ ಪರಿಯಾಣವ ತೆಗೆಯಲು
ದ್ರೋಹ, ಶಾಸ್ತಿಗೊಳಗಾದರು, ಇದು ದೃಷ್ಟ ನೋಡಿರೆ.
ರಾಜಾದಿರಾಜ ಮಹಾರಾಜ ದೇವಾದಿದೇವ ಮಹಾದೇವಂಗೆ ಆರೋಗಣೆಗೆ ಮುನ್ನ
ಪರಿಯಾಣವ ತೆಗೆಯಲು ಮಹಾದ್ರೋಹ.
ಇದನರಿದು ಶ್ರೀ ಗುರುವಾಜ್ಞೆಯ ತಪ್ಪದೆ, ಲಿಂಗಾರ್ಚನೆಯ ಕ್ರೀ ತಪ್ಪದೆ
ದೇವರ ಪರಿಯಾಣದಲು ಮಹಾರಸ ದ್ರವ್ಯ ಪದಾರ್ಥಂಗಳನಿಟ್ಟು
ಶ್ರೀಗುರು ಸಹಿತ ಜಂಗಮಸಹಿತ ಲಿಂಗಾರ್ಪಿತ ಮಾಡುವುದು.
ಪಂಚೇಂದ್ರಿಯಗಳ ಪಂಚಸ್ಥಾನ ಪ್ರವೇಶವಾದ ಮಹಾಲಿಂಗಕ್ಕೆ,
ಶಬ್ದ ಸ್ಪರ್ಶ ರೂಪ ರಸ [ಗಂಧಂಗಳನು]ಮನೋವಾಕ್ಕಾಯದಲ್ಲಿ ಭೋಗಿಸುವ
ಭೋಗವೆಲ್ಲವನು ಅರ್ಪಿಸುವುದು.
ಮೇಲೆ ತಾಂಬೂಲದಿಂ ಅಷ್ಟವಿಧಾರ್ಚನೆ ಷೋಡಶೋಪಚಾರವನು ಮಾಡಿ,
ಲಿಂಗಾರ್ಚನೆಯಂ ಮಾಡಿ, ಪ್ರಸಾದವ ಹಡದು, ಆ ಮಹಾಪ್ರಸಾದದಿಂ
ಪ್ರಸಾದಿಯಪ್ಪುದು ಕೂಡಲಚೆನ್ನಸಂಗಮದೇವಾ. /1587
ಸದ್ಗುರು ಕಾರುಣ್ಯವುಳ್ಳ ಭಕ್ತನ ಲಿಂಗ ಓಸರಿಸಿದರೆ
ವ್ರತಗೇಡಿಯೆಂದು ಕಳೆಯಬಾರದು, ಕೊಳಬಾರದು, ಕಾರಣ(ಕಾರುಣ್ಯ)ವುಂಟಾಗಿ:
`ಸುವ್ರತಂ ಸುಲಭಂ ಸಿದ್ಧಂ ಶತ್ರುಜಿತ್ ಶತ್ರುಪಾವನಃ ಎಂದುದಾಗಿ
ಅಲಿಂಗೀ ಲಿಂಗರೂಪೇಣ ಯೋ ಲಿಂಗಮುಪಜೀವತಿ
ಸ ಪತೇತ್ ಮಹಾಘೋರೇ ನರಕೇ ಕಾಲಮಕ್ಷಯಂ-ಎಂದುದಾಗಿ
ಶಸ್ತ್ರ, ಸಮಾದಿ, ಜಲಾಂತ, ವನಾಂತ, ದಿಗ್ಭಲಿ, ದಹನ ಈ ಆರರಲ್ಲಿ ಸತ್ತಡೆ
ಕೂಡಲಚೆನ್ನಸಂಗಯ್ಯನಲ್ಲಿ ಆತ ವ್ರತಗೇಡಿ./1588
ಸದ್ಗುರುಪ್ರಸನ್ನಿಕೆಯಿಂದ ಲಿಂಗಪ್ರಸನ್ನಿಕೆ,
ಸದ್ಗುರುಪ್ರಸನ್ನಿಕೆಯಿಂದ ಜಂಗಮಪ್ರಸನ್ನಿಕೆ,
ಸದ್ಗುರುಪ್ರಸನ್ನಿಕೆಯಿಂದ ಪ್ರಸಾದಪ್ರಸನ್ನಿಕೆ,
ಇದು ಕಾರಣ-ಕೂಡಲಚೆನ್ನಸಂಗಮದೇವಾ
ಸದ್ಗುರುಪ್ರಸನ್ನಿಕೆಯಿಂದ ಸರ್ವಸಿದ್ಧಿಯಯ್ಯಾ. /1589
ಸದ್ಭಕ್ತರ ಬಸುರಲ್ಲಿ ಹುಟ್ಟಿದ ಮಕ್ಕಳು ಭವಿಯನಾಚರಿಸಿದಡೆ
ಪಂಚಮಹಾಪಾತಕವೆಂದುದು ವಚನ.
ತಿಲಷೋಡಶಭಾಗಂ ಚ ತೃಣಾಗ್ರಾಂಬುಕಣೋಪಮಂ
ಪಾದೋದಕಂ ಪ್ರಸಾದಾನ್ನಂ ನಾಶನಾನ್ನರಕಂ ವ್ರಜೇತ್ ಎಂದುದಾಗಿ,
ಇದು ಕಾರಣ ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣರಿಗೆ ಸಂತಾನ ಅಬಿವೃದ್ಧಿಯಾಗದಿರಲಿ. /1590
ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನವೆಂದು
ಶಿವಲಿಂಗದ ಮೇಲೆ ಪಂಚವಕ್ತ್ರವ ಸ್ಥಾಪಿಸುವ
ಅನಾಚಾರಿಯ ಮಾತ ಕೇಳಲಾಗದು.
ಇಂತಪ್ಪ ಲಿಂಗದ್ರೋಹಿಯ ತೋರದಿರಯ್ಯಾ,
ಸಕಲ ನಿಃಕಲದಂತಹನೆ ಲಿಂಗವು ?
ಕೂಡಲಚೆನ್ನಸಂಗಯ್ಯನಲ್ಲಿ ಸರ್ವಾಂಗಲಿಂಗಿ ಬಸವಣ್ಣ ಬಲ್ಲ./1591
ಸಮತೆ ಸಯವಾದ ಶರಣಂಗೆ ಅರಿವ ಮರೆಯಲುಂಟೆ ?
ಉಪಮೆ ನಿಃಸ್ಥಲವಾದ ಶರಣಂಗೆ ಸಬ್ದಸಂದಣಿ ಉಂಟೆ ?
ಅಖಂಡಿತ ಲಿಂಗಕ್ಕೆ, ಅಪ್ರಮಾಣ ಶರಣಂಗೆ ಸೀಮೆ ಸಂಬಂಧವೆಂಬ ಸಂಕಲ್ಪವುಂಟೆ?
ಇದು ಕಾರಣ,- ಸುಳುಹಿಂಗೆ ಭವವಿಲ್ಲ, ಬಂಧನವಿಲ್ಲ
ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣಂಗೆ. /1592
ಸಮಯದಲ್ಲಿ ಸಮ್ಮತನು ಆಚಾರದ ನೆಲೆಯನರಿದು,
ಹೃದಯದ ಕತ್ತಲೆಯ ಉದಯದಲ್ಲಿಯೇ ಕಳೆದ.
ಮುಟ್ಟುವುದ ಮುಟ್ಟದೆ ಕಳೆದ; ಮುಟ್ಟದುದ ಮುನ್ನವೆ ಕಳೆದ.
ಅಯ್ಯಾ ಆಯ್ಯಾ ಎಂದಲ್ಲಿಯೆ ಕಲಿಯಾದ.
ಕೇಸರಿಸಮ ಜೋಗ; ಐದರ ಮದಸೇನೆ ಮುರಿಯಿತ್ತು,
ಎನ್ನೊಡೆಯ ಕೂಡಲಚೆನ್ನಸಂಗಯ್ಯ ಹಿಡಿವಡೆದ/1593
ಸಮಯವಿರೋಧವಾದೀತೆಂದು ಪಾದಾರ್ಚನೆಯ ಮಾಡುವರಯ್ಯಾ.
ಲಿಂಗಜಂಗಮಕ್ಕೆ ಪಾದವಾವುದು ? ಅರ್ಚನೆ ಯಾವುದು ? ಎಂಬ
ತುದಿ ಮೊದಲನರಿಯರು.
ಉದಾಸೀನದಿಂದ ಪಾದಾರ್ಚನೆಯ ಮಾಡಿ, ಪಾದೋದಕ ಧರಿಸಿದಡೆ
ಅದೇ ಪ್ರಳಯಕಾಲಜಲ.
ವರ್ಮವನರಿದು ಕೊಂಡಡೆ ತನ್ನ ಭವಕ್ಕೆ ಪ್ರಳಯಕಾಲಜಲ !
ಈ ಉಭಯವ ಭೇದಿಸಿ ಸಂಸಾರಮಲಿನವ ತೊಳೆವಡೆ
ಕೂಡಲಚೆನ್ನಸಂಗಾ ಈ ಅನುವ ನಿಮ್ಮ ಶರಣ ಬಲ್ಲ./1594
ಸಮಸುಖ (ಸಮ) ಸಂಧಾನವಿಲ್ಲದ ಸಂಗ ನೋಡಾ !
ತಾಗು ನಿರೋಧವಿಲ್ಲದ ಸಂಗ ನೋಡಾ !
ಆವಂಗೆ ಆವಂಗೆ ಅನುಭಾವವಿಲ್ಲದ ಸಂಗ ನೋಡಾ !
ಕೂಡಲಚೆನ್ನಸಂಗಮದೇವಾ ಲಿಂಗಲೀಯ ಸಂಗ ನೋಡಾ. /1595
ಸಯದಾನ ಸರೂಪವನು ನಿರೂಪಕ್ಕೆ ತಂದು,
ನಯನಾದಿ ಅನಿಮಿಷದಷ್ಟವಾದ ಪ್ರಸಾದಿ,
ನಿಷ್ಠಾನಿಷ್ಠವಾದ ಪ್ರಸಾದಿ, ಪ್ರಸಾದದಿಂದ ಪ್ರಸಾದಿ,
ಕೂಡಲಚೆನ್ನಸಂಗಯ್ಯಾ ಲಿಂಗೈಕ್ಯ ಪ್ರಸಾದಿ. /1596
ಸರವರದೊಳಗೊಂದು ಹಿರಿದು ಕಮಳವು ಹುಟ್ಟಿ,
ಪರಿಮಳವಡಗಿತ್ತನಾರೂ ಅರಿಯರಲ್ಲಾ !
ಅರಳಿಲೀಯದೆ ಕೊಯ್ದು ಕರಡಿಗೆಯೊಳಗಿರಿಸಿ
ಸುರಕ್ಷಿತವ ಮಾಡಲಾರೂ ಅರಿಯರಲ್ಲಾ !
ಎಡದ ಕೈಯಲಿ ಲಿಂಗ, ಬಲದ ಕೈಯಲಿ ಪುಷ್ಪ ಎರಡನರಿದು
ಪೂಜೆಯ ಮಾಡಲರಿಯರಲ್ಲಾ !
(ಇವರಲೋಗರವ) ಮಾಡಿ ಸರುವ ತೃಪ್ತಿಯ ಕೊಟ್ಟು
ಭರಿತರಾಗಿಪ್ಪರಿನ್ನಾರು ಹೇಳಾ !
ಪರದೇಶಮಂಡಲವನಿರವನೊಂದನೆ ಮಾಡಿ
ಪರಿಯಾಯ ಪರಿಯಾಯವನೊರೆದು ನೋಡುತ್ತ
ಕರುವಿಟ್ಟ ರೂಹಿಂಗೆ ಕಣ್ಣೆರಡು ಹಳಚದಂತೆ,
ಧರೆಯ ಏರಿಯ ಮೇಲೆ ಮೆಟ್ಟಿನಿಂದು ನೋಡುತ್ತ
ಹರಿವ ವೃಷಭನ ಹಿಡಿದು ನೆರೆವ ಸ್ವಾಮಿಯ ಕಂಡು
ಜನನ ಮರಣವಿಲ್ಲದಂತಾದೆನಲ್ಲಾ !
ಕರುಣಿ ಕೂಡಲಚೆನ್ನಸಂಗಯ್ಯಾ ಬಸವಣ್ಣನ ಕರುಣ,
ಪ್ರಭುವಿಗಲ್ಲದೆ ಇನ್ನಾರಿಗೂ ಅಳವಡದು/1597
ಸರ್ಪದಷ್ಟವಾದರೆ ಗಾರುಡವುಂಟು, ಪ್ರಸಾದದಷ್ಟವಾದರೆ ಗಾರುಡವಿಲ್ಲ.
ಅಂಗದ ಕೈಯಲಾದುದ ಲಿಂಗಕ್ಕೆ ಕೊಡಲಿಲ್ಲ.
ಲಿಂಗದ ಕೈಯಲಾದುದ ಅಂಗಕ್ಕೆ ಕೊಡಲಿಲ್ಲ.
ಲಿಂಗದ ಒಡಲೆಂಬರು, ಲಿಂಗಕ್ಕೆ ಒಡಲುಂಟೆ ?
ಈ ಉಭಯಸಂಗ ಕೂಡಲಚೆನ್ನಸಂಗಾ ನಿಮ್ಮಲ್ಲಿ ವಿಚಾರಿಸೂದು
ಮಹಾಘನ ತಾನು. /1598
ಸರ್ವಗತಶಿವನೆಂಬುದೀ ಲೋಕವೆಲ್ಲಾ.
ಶಿವಶಿವಾ ನಿಬರ್ುದ್ಧಿ ಜನಂಗಳನೇನೆಂಬೆ!
ಸರ್ವವೆಲ್ಲವೂ ಶಿವನಾದರೆ ಹಿಂದಣ ಯುಗ ಪ್ರಳಯಂಗಳೇಕಾದವು?
ಸರ್ವವೆಲ್ಲವೂ ಶಿವನಾದರೆ ಚೌರಾಸಿಲಕ್ಷ ಜೀವರಾಶಿಗಳೇಕಾದವು?
ಸೂತ್ರಧಾರಿ, ನರರಿಗಾಗಿ ಯಂತ್ರವನಾಡಿಸುವಲ್ಲಿ
ಹೊರಗಿದ್ದಾಡಿಸುವನಲ್ಲದೆ ತಾನೊಳಗಿದ್ದಾಡಿಸುವನೆ?
ಅಹಂಗೆ ಶಿವನು ತನ್ನಾದಿನವಾಗಿಪ್ಪ ತ್ರಿಜಗದ ಸಚರಾಚರಂಗಳ
ತಾನು ಯಂತ್ರವಾಹಕನಾಗಿ ಆಡಿಸುವನಲ್ಲದೆ, ತಾನಾಡುವನೆ?
ಸರ್ವಯಂತ್ರವೂ ತಾನಾದರೆ ಸಕಲತೀರ್ಥಕ್ಷೇತ್ರಯಾತ್ರೆಗೆ ಹೋಗಲೇಕೊ ?
ಇದು ಕಾರಣ ಸರ್ವವೂ ಶಿವನೆನಲಾಗದು.
ಸದಾಚಾರ ಸದ್ಭಕ್ತಿ ಸನ್ನಿಹಿತ ಲಿಂಗಜಂಗಮದೊಳಗಿಪ್ಪ,
ಮತ್ತೆಲ್ಲಿಯೂ ಇಲ್ಲ, ಕೂಡಲಚೆನ್ನಸಂಗಯ್ಯಾ/1599
ಸರ್ವತ್ರಯ ಸರ್ವಗುಣತ್ರಯ ಪ್ರಸಾದವವ್ವಾ,
ಸರ್ವಭಾವ ಪ್ರಸಾದವವ್ವಾ, ಸರ್ವಪರಿಪೂರ್ಣ ಪ್ರಸಾದವವ್ವಾ,
ಸ್ವಯವವ್ವಾ, ಶರಣನವ್ವಾ,
ಸ್ವಯವವ್ವಾ ಕೂಡಲಚೆನ್ನಸಂಗ ಸರ್ವಪ್ರಸಾದವವ್ವಾ ! /1600
ಸರ್ವವೂ ಶಿವನಿಂದ ಉದ್ಭವಿಸುವವೆಂದರೆ, ಉದ್ಭವಿಸುವವೆಲ್ಲವೂ ಶಿವನೆ?
ಸಕಲ ಬೀಜವ ಬಿತ್ತುವನೊಕ್ಕಲಿಗನೆಂದರೆ ಆ ಬೆಳೆ ತಾನೊಕ್ಕಲಿಗನೆ?
ಮಡಕೆಯ ಕುಂಬಾರ ಮಾಡುವನೆಂದರೆ, ಆ ಮಡಕೆ ತಾ ಕುಂಬಾರನೆ?
ಕಬ್ಬುನವ ಕಮ್ಮಾರ ಮಾಡುವನೆಂದರೆ, ಆ ಕಬ್ಬುನ ತಾ ಕಮ್ಮಾರನೆ?
ಆ ಪರಿಯಲಿ ಸಕಲ ಜಗತ್ತಿನ ಸಚರಾಚರವನು ಮಾಡುವನೆಂದರೆ,
ಆ ಸಚರಾಚರವು ಶಿವನೆ?
ಅಹಂಗಾದರೆ ಅಷ್ಟಾದಶವರ್ಣವೇಕಾದವು?
ಚೌರಾಸಿಲಕ್ಷ ಜೀವರಾಶಿಗಳೇಕಾದವು?
ಸುಖ-ದುಃಖ ಸ್ವರ್ಗ-ನರಕಂಗಳೇಕಾದವು?
ಉತ್ತಮ-ಮಧ್ಯಮ-ಕನಿಷ್ಠಂಗಳೇಕಾದವು?
ಪುಣ್ಯ-ಪಾಪ, ಭವಿ-ಭಕ್ತರೆಂದೇಕಾದವು?
ಇದು ಕಾರಣ ಸದಾಚಾರ ಸದ್ಭಕ್ತಿಯಲ್ಲಿಪ್ಪಾತನೆ ಶಿವ.
ಅಂತಲ್ಲದೆ ಸರ್ವವೂ ಶಿವನೆಂದರೆ
ಅಘೋರ ನರಕ ಕೂಡಲಚೆನ್ನಸಂಗಯ್ಯಾ. /1601
ಸರ್ವಸಂಗನಿವೃತ್ತಿಯ ಮಾಡಿದ ಬಳಿಕ,
ಆದಿ ಮಧ್ಯ ಅವಸಾನವನರಿಯಬೇಕು.
ಅರಿಯದೆ ಭಕ್ತಿ-ಜ್ಞಾನ-ವೈರಾಗ್ಯವೆಂಬ ಬರಿ ವೇಷಕ್ಕಿಂತ
ಬಡಸಂಸಾರವೆ ಲೇಸು-ಕೂಡಲಚೆನ್ನಸಂಗಮದೇವಾ. /1602
ಸರ್ವಸಂಗಪರಿತ್ಯಾಗ ಮಾಡಿದ ಶಿವಶರಣನ
ಲೋಕದ ಸಂಸಾರಿಗಳೆಂತು ಮೆಚ್ಚುವರಯ್ಯಾ ?
ಊರೊಳಗಿರ್ದಡೆ [ಸಂಸಾರಿ] ಎಂಬರು,
ಅಡವಿಯೊಳಗಿರ್ದಡೆ ಮೃಗನೆಂಬರು
ಹೊನ್ನ ಬಿಟ್ಟಡೆ ದರಿದ್ರನೆಂಬರು, ಹೆಣ್ಣ ಬಿಟ್ಟಡೆ ನಪುಂಸಕನೆಂಬರು,
ಮಣ್ಣ ಬಿಟ್ಟಡೆ ಪೂರ್ವಕರ್ಮಿ ಎಂಬರು, ಮಾತನಾಡದಿರ್ದಡೆ ಮೂಗನೆಂಬರು
ಮಾತನಾಡಿದಡೆ ಜ್ಞಾನಿಗೇಕಯ್ಯಾ ಮಾತೆಂಬರು
ನಿಜವನಾಡಿದಡೆ ನಿಷ್ಠುರಿಯೆಂಬರು, ಸಮತೆಯನಾಡಿದಡೆ ಅಂಜುವನೆಂಬರು.
ಇದು ಕಾರಣ ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣ ಲೋಕದಿಚ್ಛೆಯ ನುಡಿಯ
ಲೋಕದಿಚ್ಛೆಯ ನಡೆಯ !/1603
ಸರ್ವಾಂಗಪ್ರಸಾದವವ್ವಾ; ಸರ್ವಾರ್ಥಪ್ರಸಾದವವ್ವಾ;
ಸರ್ವಾಂಗ ಸ್ವಯವವ್ವಾ, ಕೂಡಲಚೆನ್ನಸಂಗನ ಪ್ರಸಾದವವ್ವಾ ! /1604
ಸರ್ವಾಂಗವೂ ಲಿಂಗವಾದ ಆರೋಗಣೆಗೆ ಅಪ್ಯಾಯನವೆ ಕರಸ್ಥಲ.
ನಿಂದುದೆ ಓಗರ, ಬಂದ ಪರಿಣಾಮವೆ ಪ್ರಸಾದವಾಗಿ
ಹೇಳಲಿಲ್ಲದ ಕೇಳಲಿಲ್ಲದ ನಿರ್ಣಯ, ಕೂಡಲಿಲ್ಲ ಕಳೆಯಲಿಲ್ಲ ನೋಡಾ.
ಇದು ಕಾರಣ, ಕೂಡಲಚೆನ್ನಸಂಗಮದೇವಾ,
ಬಸವನನುಗ್ರಹಿಸಿಕೊಂಡ, ನಿಲುವಿನ ಸಹಜದಲ್ಲಿ
ಉದಯಿಸಿದ ಲಿಂಗ ನಿರಂತರ/1605
ಸರ್ವಾರ್ಪಿತವ ಮಾಡಬೇಕೆಂಬರು,
ಸರ್ವೆಂದ್ರಿಯ ನುಮತವಾದುದನರಿಯರು.
ಶ್ರೋತ್ರ ನೇತ್ರ ಘ್ರಾಣ ಜಿಹ್ವೆ [ತ್ವಕ್ಕು] ಸಹಿತ ಅರ್ಪಿತವ ಮಾಡಬೇಕು.
ಪ್ರಾಣಪ್ರಯಾಣಕಾಲ್ಯೇಪಿ ಸರ್ವಭೋಗೇಷು ಯಸ್ಸದಾ
ಅರ್ಪಣೇ ಚಾವಧಾನೀ ಚ ಸ ಲಿಂಗೀ ಪ್ರಾಣನಾಯಕಃ[ಎಂದುದಾಗಿ]
ಕೂಡಲಚೆನ್ನಸಂಗಯ್ಯಾ
ನಿಮ್ಮ ಪ್ರಸಾದಿಗೆ ನಮೋ ನಮೋ. /1606
ಸರ್ವೆಂದ್ರಿಯ ಸಮ್ಮತವಾಗಿ ಸರ್ವಕರಣಂಗಳ ಸಮಾಧಾನವ ಮಾಡಿ,
ಸಮಸ್ತ ಸುಖಭೋಗಾದಿಗಳ ಬಯಸದೆ, ತನ್ನ ಮರೆದು ಶಿವತತ್ವವನರಿದು,
ಅಹಂಕಾರ ಮಮಕಾರವಿಲ್ಲದೆ, ಜ್ಞಾತೃ ಜ್ಞಾನ ಜ್ಞೇಯವೆಂಬ ತ್ರಿಪುಟಿಯ ಮೀರಿ,
ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ ಮಲತ್ರಯಗಳನಳಿದು,
ಸ್ತುತಿ-ನಿಂದಾದಿ, ಕಾಂಚನ ಲೋಷ್ಠಂಗಳ ಸಮಾನಂಗಂಡು,
ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯಾದಿ ಪದಂಗಳ ಬಯಸದೆ,
ವೇದ ವೇದಾಂತ ತರ್ಕ ವ್ಯಾಕರಣ ದರ್ಶನ ಸಂಪಾದನೆಗಳ ತೊಲಗಿಸಿ,
ಖ್ಯಾತಿ ಲಾಭದ ಪೂಜೆಗಳ ಬಯಸದೆ
ತತ್ವನಿರ್ಣಯವನರಿಯದವರೊಳು ತಾನೆಂಬುದನೆಲ್ಲಿಯೂ ತೋರದೆ;
ಹೊನ್ನು ತನ್ನ ಲೇಸ ತಾನರಿಯದಂತೆ, ಬೆಲ್ಲ ತನ್ನ ಸಿಹಿಯ ತಾನರಿಯದಂತೆ,
ವಾರಿಶಿಲೆ ಉದಕದೊಳಡಗಿದಂತೆ, ಪುಷ್ಪದೊಳಗೆ ಪರಿಮಳವಡಗಿದಂತೆ
ಅಗ್ನಿಯೊಳಗೆ ಕಪರ್ೂರವಡಗಿದಂತೆ,
ಮಹಾಲಿಂಗದಲ್ಲಿ ಲೀಯವಾದುದೆ ಲಿಂಗೈಕ್ಯ ಕಾಣಾ
ಕೂಡಲಚೆನ್ನಸಂಗಮದೇವಾ/1607
ಸವಿಕರದಿಂದ ಪರಿಕರದಿಂದ ರುಚಿಕರದಿಂದ ಪದಾರ್ಥಕರದಿಂದ,
ತನು ಮನ ಧನ ವಂಚನೆಯಿಲ್ಲದೆ
ಶರಣ ಮಾಡುವಲ್ಲಿ, ನೀಡುವಲ್ಲಿ
ಕೂಡಲಚೆನ್ನಸಂಗಯ್ಯಾ ನಿಮಗೆ!
ಎಂದೂ ತನಗೆನ್ನದ ಕಾರಣ. /1608
ಸಹಜ ಸಂಬಂಧಾಚಾರದ ನಿರ್ಣಯವನಿಲ್ಲಿ ಹೇಳಿಹೆ ಕೇಳಿರಯ್ಯಾ:
ಪ್ರತ್ಯಕ್ಷವಾಗಿ ಜಂಗಮವೆ ಭಕ್ತನ ಮಠಕ್ಕೆ ಬಿಜಯಂಗೈಯೆ
ನೂರು ಮಂದಿಯಲ್ಲಿ ಮೂರು ಮಂದಿ ಇರ್ಪರೆಂಬಂತೆ,
ಆ ಜಂಗಮದಲ್ಲಿ ಗುರು ಲಿಂಗಗಳುಂಟೆಂದು ತಿಳಿದು
ತ್ರಿವಿಧ ಪಾದೋದಕವನಲ್ಲಿ ಪಡೆವುದು- ಇದೇ ಸದಾಚಾರ.
ಆ ಜಂಗಮವಿಲ್ಲದೆ ಗುರು ಒರ್ವನೆ ಬಿಜಯಂಗೈಯೆ,
ಆ ಗುರುವಿನಲ್ಲಿ ವಿದಿಗನುಗುಣವಾಗಿ ಜಂಗಮವನನುಸಂಧಾನಿಸಿ
ಗುರುವಿನಲ್ಲಿ ಲಿಂಗವು ಸಹಜವಾಗಿರ್ಪುದರಿಂದ
ಅಲ್ಲಿ ತ್ರಿವಿಧೋದಕವ ಪಡೆವುದು-ಇದೊಂದು ಸಹಜಸಂಬಂಧವು.
ಗುರುಜಂಗಮರಿರ್ವರೂ ಸಮಯಕ್ಕೊದಗದಿರ್ಪಲ್ಲಿ
ಆ ಗುರುಜಂಗಮವ ತನ್ನ ಇಷ್ಟಲಿಂಗದಲ್ಲಿ ಕ್ರಮವರಿತು ಅನುಸಂಧಾನಿಸಿ
ಅಲ್ಲಿ ತ್ರಿವಿಧೋದಕವ ಪಡೆವುದು- ಇದೊಂದು ಕೇವಲ ಸಂಬಂಧವು.
ಇಂತೀ ಸಹಜಸಂಬಂಧದ ಭೇದವನರಿದು, ಅರಿದಂತಾಚರಿಸಿ
ನಮ್ಮ ಶರಣರು ಕೂಡಲಚೆನ್ನಸಂಗಯ್ಯನಲ್ಲಿ ಅಚ್ಚಸುಖಿಗಳಾದರು./1609
ಸಹಜದಿಂದ ನಿರಾಲಂಬವಾಯಿತ್ತು, ನಿರಾಲಂಬದಿಂದ ನಿರವಯವಾಯಿತ್ತು,
ನಿರವಯದಿಂದ ನಿರಾಕಾರವಾಯಿತ್ತು, ನಿರಾಕಾರದಿಂದ ಆದಿಯಾಯಿತ್ತು.
ಆದಿಯಿಂದ ಮೂರ್ತಿಯಾದನೊಬ್ಬ ಶರಣ,
ಆ ಶರಣನ ಮೂರ್ತಿಯಿಂದ ಸದಾಶಿವನಾದ.
ಆ ಸದಾಶಿವಮೂರ್ತಿಗೆ ಜ್ಞಾನಶಕ್ತಿಯಾದಳು.
ಆ ಸದಾಶಿವಂಗೆಯೂ ಜ್ಞಾನಶಕ್ತಿಯಿಬ್ಬರಿಗೆಯೂ ಶಿವನಾದ.
ಆ ಶಿವಂಗೆ ಇಚ್ಛಾಶಕ್ತಿಯಾದಳು.
ಆ ಶಿವಂಗೆಯೂ ಇಚ್ಛಾಶಕ್ತಿಯರಿಬ್ಬರಿಗೆಯೂ ರುದ್ರನಾದ.
ಆ ರುದ್ರಂಗೆ ಕ್ರಿಯಾಶಕ್ತಿಯಾದಳು.
ಆ ರುದ್ರಂಗೆಯೂ ಕ್ರಿಯಾಶಕ್ತಿಯಿಬ್ಬರಿಗೆಯೂ ವಿಷ್ಣುವಾದ.
ಆ ವಿಷ್ಣುವಿಂಗೆ ಮಹಾಲಕ್ಷ್ಮಿಯಾದಳು.
ಆ ವಿಷ್ಣುವಿಂಗೆಯೂ ಮಹಾಲಕ್ಷ್ಮಿಯಿಬ್ಬರಿಗೆಯೂ ಬ್ರಹ್ಮನಾದ.
ಆ ಬ್ರಹ್ಮಂಗೆ ಸರಸ್ವತಿಯಾದಳು.
ಆ ಬ್ರಹ್ಮಂಗೆಯೂ ಸರಸ್ವತಿಯಿಬ್ಬರಿಗೆಯೂ
ನರರು ಸುರರು ದೇವರ್ಕಳು ಹೆಣ್ಣು ಗಂಡು
ಸಚರಾಚರ ಸಹಿತವಾಗಿ ಎಂಬತ್ತುನಾಲ್ಕುಲಕ್ಷ ಜೀವಜಂತುಗಳು,
ತೋರುವ ತೋರಿಕೆಯೆಲ್ಲ ಹುಟ್ಟಿತ್ತು ಕಾಣಾ,
ಕೂಡಲಚೆನ್ನಸಂಗಮದೇವಾ/1610
ಸಹಜವೆನ್ನದೆ, ನಿಜವೆನ್ನದೆ, ಅಚಳವೆನ್ನದೆ, ಶೂನ್ಯವೆನ್ನದೆ,
ಅಖಂಡಿತ ಪರಿಪೂರ್ಣವೆನ್ನದೆ, ಏನೂ ಎನ್ನದೆ,
ಕೂಡಲಚೆನ್ನಸಂಗಾ ಲಿಂಗೈಕ್ಯವು./1611
ಸಾಕಾರ ಹದಿನೆಂಟುಕುಳವನಂಗದಲ್ಲಿ ಆಚರಿಸುತ್ತ
ಅಲ್ಲಲ್ಲಿಗೆ ಭಕ್ತ, ಅಲ್ಲಲ್ಲಿಗೆ ಮಾಹೇಶ್ವರ, ಅಲ್ಲಲ್ಲಿಗೆ ಪ್ರಸಾದಿಯಾಗಿಪ್ಪ
ಆ ಸಾಕಾರವನೇನೆಂದುಪಮಿಸುವೆ !
ನಿರಾಕಾರ ಹದಿನೆಂಟುಕುಳವನಾತ್ಮನಲ್ಲಿ ಆಚರಿಸುತ್ತ
ಅಲ್ಲಲ್ಲಿಗೆ ಪ್ರಾಣಲಿಂಗಿ, ಅಲ್ಲಲ್ಲಿಗೆ ಶರಣ, ಅಲ್ಲಲ್ಲಿಗೆ ಐಕ್ಯನಾಗಿಪ್ಪ
ಆ ನಿರಾಕಾರವನೇನೆಂದುಪಮಿಸುವೆ !
ಇಂತು ಉಭಯಸ್ಥಲ ಒಂದಾಗಿ ನಿಂದ ನಿಜದ ಘನದಲ್ಲಿ
ಕುಳವಡಗಿತ್ತು, ಕೂಡಲಚೆನ್ನಸಂಗಾ/1612
ಸಾಧಕದೆಸೆಯಲ್ಲಿ ಕುಲವನರಸಬಹುದಲ್ಲದೆ,
ಸಿದ್ಧದೆಸೆಯಲ್ಲಿ ಅರಸಲಹುದೆ ?
ಹಲವು ಜಾತಿಯ ಕಟ್ಟಿಗೆಯ ಸುಟ್ಟಲ್ಲಿ ಅಗ್ನಿಯೊಂದಲ್ಲದೆ
ಅಲ್ಲಿ ಕಟ್ಟಿಗೆಗಳ ಕುರುಹು ಕಾಂಬುದೆ ?
`ಶಿವಭಕ್ತಸಮಾವೇಶೇ ನ ಜಾತಿಪರಿಕಲ್ಪನಾ
ಇಂಧನೇಷ್ವಗ್ನಿದಗ್ಧೇಷು ಕೋ ವಾ ಭೇದಃ ಪ್ರಕೀತ್ರ್ಯತೇ ‘ ಎಂದುದಾಗಿ,
ಶಿವಜ್ಞಾನಸಿದ್ಧರಾದ ಶಿವಭಕ್ತರಲ್ಲಿ ಪೂರ್ವಜಾತಿಯನರಸುವ
ಅರೆಮರುಳರನೇನೆಂಬೆ ಕೂಡಲಚೆನ್ನಸಂಗಮದೇವಾ. /1613
ಸಾಯುವರ ಸತ್ತವರು ಹೊತ್ತರು, ತಲೆಯಿಲ್ಲದವರತ್ತರು,
ಕೈಯಿಲ್ಲದವರು ಹಿಡಿದರು, ಕಾಲಿಲ್ಲದವರು ಕೊಂಡೊಯ್ದರು,
ಕಣ್ಣಿಲ್ಲದವರು ಕಂಡರು, ಕಿವಿಯಿಲ್ಲದವರು ಕೇಳಿದರು.
ಇದು ಕಾರಣ ಕೂಡಲಚೆನ್ನಸಂಗಾ
ನಿಮ್ಮ ಶರಣರು ಸರ್ವಾಂಗಲಿಂಗಿಗಳು ! /1614
ಸಾರಾಯ ಪದಾರ್ಥವನಾರಯ್ಯಬೇಕೆಂದು ಶರಣ ಮತ್ರ್ಯಕ್ಕೆ ಬಂದು,
ತನ್ನ ಇಪ್ಪತ್ತೈದಿಂದ್ರಿಯಂಗಳ ಭಕ್ತರ ಮಾಡಿ,
ಮೆಲ್ಲಮೆಲ್ಲನೆ ಅವರ ಪೂರ್ವಾಶ್ರಯವ ಕಳೆದು
ಕಲ್ಪಿತವಿಲ್ಲದೆ ಅರ್ಪಿತವ ಮಾಡಲು,
ಇಂದ್ರಿಯಂಗಳು ತಮ್ಮ ತಮ್ಮ ಮುಖದಲ್ಲಿ ಗ್ರಹಿಸಲಮ್ಮದೆ
ಕೂಡಲಚೆನ್ನಸಂಗಂಗೆ ಬೇಕೆಂದು ಹಿಡಿದು ಕೊಂಡೈದವೆ ! /1615
ಸಾರಾಯ ಪದಾರ್ಥವನಾರಯ್ಯಾ ಅರಿವರು ?
ಆರರಿಂದ ಬೇರೆ ತೋರಲಿಲ್ಲೆನಿಸಿತ್ತು.
ಹೆಸರೆನಿಸಿಕೊಂಬಡೆ ಹೆಸರು ಮುನ್ನಿಲ್ಲ,
ಹೆಸರೆಲ್ಲವೂ ಪರಿಣಮಿಸಲಾಯಿತ್ತು.
ಕಂಡೆನೆಂದಡೆ ಕಾಣಲಾಯಿತ್ತು, ಕಂಡು ನುಡಿಸುವಂಥದಲ್ಲ,
ಕಂಡಾತ ಕಲಿಕೆಯೊಳಗಿಲ್ಲದಂತಿಪ್ಪ, ಕಾರ್ಯವಿಲ್ಲದ ಕಾರಣಕರ್ತ.
ಆರರಿಂದತ್ತ ತಾನಿಲ್ಲೆಂದೆನಿಸಿಕೊಂಡ ಕೂಡಲಚೆನ್ನಸಂಗಯ್ಯಾ,
ಆ ಮಹಾಲಿಂಗದ ಅನುಭಾವ ಶರಣಫಲದ
ಸಂಬಂಧವ ಮೀರಿತ್ತು./1616
ಸಾಲೋಕ್ಯ ಬೇಕೆಂದು ಪೂಜಿಸಿ ಸಾಲೋಕ್ಯವ ಹಡೆವರು,
ಸಾಮಿಪ್ಯ ಬೇಕೆಂದು ಪೂಜಿಸಿ ಸಾಮೀಪ್ಯವ ಹಡೆವರು,
ಸಾರೂಪ್ಯ ಬೇಕೆಂದು ಪೂಜಿಸಿ ಸಾರೂಪ್ಯವ ಹಡೆವರು,
ಸಾಯುಜ್ಯ ಬೇಕೆಂದು ಪೂಜಿಸಿ ಸಾಯುಜ್ಯವ ಹಡೆವರು.
ಇಂತೀ ನಾಲ್ಕು ಪದವಿಗಳು ಬೇಕೆಂದು ಪೂಜಿಸಿ
ನಾಲ್ಕು ಪದವಿಗಳ ಬೇಡಿ ಇತ್ತಿತ್ತಲಾದರಲ್ಲದೆ,
ಅವರು ನಿಮ್ಮ ವೇದಿಸಲರಿಯರು.
ಅಂಥವರೆಲ್ಲ ಕೊಟ್ಟರೆ ಕೊಂಡಾಡುವ ಕೂಲಿಕಾರರು. ನಿಮ್ಮ ಬಲ್ಲರೆ ?
ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣನಲ್ಲದೆ. /1617
ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯದವರೆಲ್ಲರು ಬಸವಣ್ಣನಂತಹರೆ ?
ಇನ್ನು ಭೂಲೋಕದವರೆಲ್ಲರು ಬಸವಣ್ಣನಂತಹರೆ ?
ದುರಿತನಿವಾರಣ ಕೂಡಲಚೆನ್ನಸಂಗಾ
ನಿಮ್ಮ ಶರಣ ಬಸವಣ್ಣನಿಂತಹ ಮಾಹಾಮಹಿಮ ನೋಡಯ್ಯಾ !/1618
ಸಾವ ಜೀವ ಬಿಂದುವಿನ ಸಂಚ, ಸಾಯದ ನಾದ ಪ್ರಾಣದ ಸಂಚ.
ಸಾವ ಜೀವದ, ಸಾಯದ ಪ್ರಾಣದ -ಎರಡರ ಭೇದವನರಿಯದಿರ್ದಡೆ ಲಾಂಛನಧಾರಿ,
ಸಾವ ಜೀವದ, ಸಾಯದ ಪ್ರಾಣದ ಎರಡರ ಭೇದವ ಭೇದಿಸಿ ಅರಿವು ಕಣ್ದೆರೆದ ಪ್ರಾಣಲಿಂಗಸಂಬಂಧವಂತಿರಲಿ,
ಮತ್ತೆಯೂ ಪ್ರಾಣಲಿಂಗಸಂಬಂಧವೇ ಬೇಕು. ಇಂತೀ ಉಭಯ ಸಂಬಂಧವಳಿದ ಸಂಬಂಧ ನಿಜವಾಯಿತ್ತು.
ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ/1619
ಸಾವಧಾನಿ ಸರ್ವಸಂಸಾರಿ ನಿಸ್ಸಂದೇಹಿಯಲ್ಲ, ನಿಃಪ್ರಪಂಚಿಯಲ್ಲ.
ಅರ್ಪಿತಕ್ಕೆ ಅರಿವುಳ್ಳನ್ನಕ್ಕ, ಶರಣನಲ್ಲ ಪ್ರಸಾದಿಯಲ್ಲ ಲಿಂಗೈಕ್ಯನಲ್ಲ,
ತೆಂದುದು ಕೂಡಲಚೆನ್ನಸಂಗನ ವಚನ. /1620
ಸಾವಧಾನಿ ಸರ್ವಸಂಸಾರಿ, ನಿಃಪ್ರಪಂಚಿ ನಿಸ್ಸಂಸಾರಿ.
ಅರ್ಪಿತಕ್ಕೆ ಅರಿವುಳ್ಳನ್ನಕ ಆಚಾರ್ಯನು.
ನಿಯತಾತ್ಮಂಗೆ ಇದಾವಂಗವೂ ಇಲ್ಲ,
ಕೂಡಲಚೆನ್ನಸಂಗನೆನ್ನದ ಸುಯಿಧಾನಿಗೆ./1621
ಸಾವಯವವೆಂದರೆ ನಿರವಯವಾಯಿತ್ತು.
ನಿರವಯವೆಂದರೆ ಸಾವಯವಾಯಿತ್ತು.
ಸಾವಯ ನಿರವಯ ತನ್ನೊಳಡಗಿತ್ತು.
ಸ್ಫಟಿಕದ ಘಟದೊಳಗಣ ಜ್ಯೋತಿಯಂತೆ
ಕೂಡಲಚೆನ್ನಸಂಗನ ಶರಣರ ಇರವು. /1622
ಸಿರಿವಂತ ಶಿಷ್ಯಂಗೆ ಗುರು ದರಿದ್ರನಾದರೆ
ಅಬಿಮಾನದಿಂದ ಅವಿಶ್ವಾಸವ ಮಾಡುವ ನರಕಿಯನೆನ್ನತ್ತ ತೋರದಿರಯ್ಯಾ.
ಜಂಗಮವೆ ಲಿಂಗ, ಲಿಂಗವೆ ಜಂಗಮವೆಂದ ಬಳಿಕ ಅಲ್ಲಿ
ಸು[ಖಿ]ಸಾಮಾನ್ಯವೆಂಬ ಪಾಪಿಯ ಮುಖವನೆನ್ನತ್ತ ತೋರದಿರಯ್ಯಾ.
ರೂಪಾನ್ವಿತಂ ಕುರೂಪಂ ವಾ ಮಲಿನಂ ಮಲಿನಾಂಬರಂ
ಯೋಗೀಂದ್ರಮನಿಶಂ ಕಾಯಮಿತ್ಯಾದೀನ್ನ ವಿಚಾರಯೇತ್
ಎಂಬ ವಚನವ ನಂಬಿದೆನಯ್ಯಾ, ಕೂಡಲಚೆನ್ನಸಂಗಾ ನಿಮ್ಮಾಣೆ./1623
ಸಿರಿವಂತನೆಂದು ಅಡಿಗಡಿಗೆ ಕೊಂಬುದು ಉಪಜೀವಿತಪ್ರಸಾದ,
ಬಡವನೆಂದು ಮರೆಮಗ್ಗುಲಲ್ಲಿ ಕೊಂಬುದು ತುಡುಗುಣಿಪ್ರಸಾದ,
ಬಿತಿಯಿಲ್ಲದೆ ಸೆಳೆದುಕೊಂಬುದು ದಳದುಳಿಪ್ರಸಾದ,
ಇಕ್ಕುವಾತನ ಮನದಲ್ಲಿ ಅಳುಕು ಬಳುಕಿಲ್ಲದೆ,
ಕೊಂಬಾತ ಮನದಲ್ಲಿ ಗುಡಿಗಟ್ಟಿ ಕೊಂಬುದು ಸ್ವಯಪ್ರಸಾದ,
ಇದು ಕಾರಣ ಕೂಡಲಚೆನ್ನಸಂಗಮದೇವಾ
ನಿಮ್ಮ ಪ್ರಸಾದಿಗಳಪೂರ್ವ. /1624
ಸೀಮರ ಕಂಡೆ, ನಿಸ್ಸೀಮರ ಕಂಡೆ
ಭಾವರ ಕಂಡೆ, ಅಭಾವರ ಕಂಡೆ.
ಕೂಡಲಚೆನ್ನಸಂಗಯ್ಯಾ ಮನಸಾಹಿತ್ಯರನಾರುವ ಕಾಣೆ. /1625
ಸೀಮೆ ನೇಮಂಗಳ ಹೊದ್ದದ ನಿಜವೀರಶೈವದೀಕ್ಷೆಯನು
ಗುರು ತನ್ನ ಶಿಷ್ಯಂಗಿತ್ತು, ಮತ್ತೆ ಆ ಶಿಷ್ಯನ ನೇಮಸ್ಥನ ಮಾಡಿದಲ್ಲಿ,
ಆ ನಿಜದೀಕ್ಷೆಗೆಟ್ಟು ಆ ಗುರುಶಿಷ್ಯರಿರ್ವರೂ ಪತಿತರಾಗಿ
ಶ್ವಾನಯೋನಿಯಲ್ಲಿ ಶತಸಹಸ್ರವೇಳೆ ಬಂದು,
ನರಕವಿಪ್ಪತ್ತೆಂಟುಕೋಟಿಯನೈದುವರು. ಅದೆಂತೆಂದಡೆ:
ನೇಮಸ್ಥಂ ಚನ ದೀಕ್ಷಯಾದೀ ಶ್ವಾನಜನ್ಮಸು ಜಾಯತೇ
ಅಷ್ಟವಿಂಶತಿಕೋಟ್ಯಸ್ತು ನರಕಂ ಯಾಂತಿ ಧ್ರುವಂ ಎಂದುದಾಗಿ,
ನಿಜಗೆಟ್ಟು ಪತಿತರಾಗಿ ನರಕಕ್ಕಿಳಿವ ಪಾತಕರನೆನಗೆ ತೋರದಿರಾ
ಕೂಡಲಚೆನ್ನಸಂಗಯ್ಯಾ. /1626
ಸುಖವನರಿಯದ ಕಾರಣ ಹೆಂಗಸು ಸೂಳೆಯಾದಳು.
ಲಿಂಗವನರಿಯದ ಕಾರಣ ಭಕ್ತ ಶೀಲವಂತನಾದ.
ಈ ಉಭಯ ಕುಲಸ್ಥಲದರಿವು ನಿಷ್ಪತ್ತಿಯಾಗದನ್ನಕ್ಕರ
ಕೂಡಲಚೆನ್ನಸಂಗಮದೇವನೆಂತೊಲಿವನಯ್ಯಾ ?/1627
ಸುಖವಾವುದು? ಸುಖಿಯಾವುದು? ಸುಖದನುಭಾವವಾವುದು?
ಸುಖಲಿಂಗ, ಸುಖಿ ಶರಣ, ಸುಖದನುಭಾವ ಸುಸಂಗ, ಕೊಡಲಚೆನ್ನಸಂಗಾ ಪರವಿಲ್ಲಾಗಿ. /1628
ಸುಖಶೀಲ ಲಿಂಗಧ್ಯಾನ, ಸಮಶೀಲ ಜಂಗಮಪ್ರೇಮ,
ಮಹಾಶೀಲವವರೆಂದಂತೆಂಬುದು.
ಈ ತ್ರಿವಿಧವನರಿದಡೆ ಕೂಡಲಚೆನ್ನಸಂಗನೆಂಬೆನು./1629
ಸುಜ್ಞಾನವೆಂಬ ಭಾವವು ಗುರುವಿನಲ್ಲಿ ಸಾಹಿತ್ಯವು.
ಜ್ಞಾನವೆಂಬ ಭಾವವು ಶಿಷ್ಯನಲ್ಲಿ ಸಾಹಿತ್ಯವು.
ಮನವೆಂಬ ಭಾವವು ಲಿಂಗದಲ್ಲಿ ಸಾಹಿತ್ಯವು.
ಲಿಂಗಕ್ಕೆ ಮಜ್ಜನ ಮಾಡಲಾಗದು, ಅದೇನು ಕಾರಣ ?
ಮನವೆಂಬ ಲಿಂಗವು ಭಾವದಲ್ಲಿ ಸಾಹಿತ್ಯವಾದ ಕಾರಣ.
ಲಿಂಗಕ್ಕೆ ಗಂಧ ಧೂಪ ನಿವಾಳಿಯ ಕುಡಲಾಗದು, ಅದೇನು ಕಾರಣ ?
ನಿರ್ಗಮನವೆಂಬ ಲಿಂಗವು ನಾಸಿಕದಲ್ಲಿ ಸಾಹಿತ್ಯವಾದ ಕಾರಣ.
ಲಿಂಗಕ್ಕೆ ಪೂಜೆಯ ಮಾಡಲಾಗದು ಅದೇನು ಕಾರಣ ?
ಪರಿಮಳವೆಂಬ ಲಿಂಗವು ಮನಸ್ಥಳದಲ್ಲಿ ಸಾಹಿತ್ಯವಾದ ಕಾರಣ.
ಲಿಂಗಕ್ಕರ್ಪಿತವ ಮಾಡಲಾಗದು ಅದೇನು ಕಾರಣ ?
ರುಚಿತತ್ವವೆಂಬ ಲಿಂಗವು ಜಿಹ್ವೆಯ ಕೊನೆಯ ಮೊನೆಯ ಮೇಲೆ
ಸಾಹಿತ್ಯವಾದ ಕಾರಣ.
ಲಿಂಗಕ್ಕೆ ರೂಪನರ್ಪಿಸಲಾಗದು, ಅದೇನು ಕಾರಣ ?
ರೂಪಾತೀತವಾದ ಲಿಂಗವು ನೇತ್ರದಲ್ಲಿ ಸಾಹಿತ್ಯವಾದ ಕಾರಣ.
ಇಂತು ಷಡುಸ್ಥಲವನರಿದು ಷಡುವರ್ಣವ ಮೀರಿ,
ಚರವೆಂಬ ಜಂಗಮಸಾಹಿತ್ಯವಾದ ಕಾರಣ,
ಭಕ್ತಗೆ ಮತ್ತೆ ಪ್ರಾಣಲಿಂಗವಿಲ್ಲಯ್ಯ.
ಇದು ಕಾರಣ ಕೂಡಲಚೆನ್ನಸಂಗಮದೇವಯ್ಯಾ,
(ಲಿಂ)ಗ ಸಾಹಿತ್ಯವಾದವರಂತಿರಲಿ
ಕಂಗಳ ನೋಟದಲ್ಲಿ ಜಂಗಮಸಾಹಿತ್ಯವಾದವರಪೂರ್ವ./1630
ಸುಟ್ಟು ಶುದ್ಧವಾದ ಬಳಿಕ ಮತ್ತೆ ಸುಡಲಿಕೆಲ್ಲಿಯದೊ ?
ಅಟ್ಟು ಪಾಕವಾದ ಬಳಿಕ ಮತ್ತೆ ಅಡಲೆಲ್ಲಿಯದೊ ?
ಇನ್ನು ಶುದ್ಧ ಮಾಡಿಹೆನೆಂಬ ವಿದಿಯ ನೋಡಾ
ಶ್ರುತಿ:
ದಗ್ಧಸ್ಯ ದಹನಂ ನಾಸ್ತಿ ಪಕ್ವಸ್ಯ ಪಚನಂ ಯಥಾ
ಜ್ಞಾನಾಗ್ನಿದಗ್ಧದೇಹಸ್ಯ ನ ಚ ಶ್ರಾದ್ಧಂ ನ ಚ ಕ್ರಿಯಾ
ಇದು ಕಾರಣ, ಕೂಡಲಚೆನ್ನಸಂಗಯ್ಯಾ
ನಂಬಿಯೂ ನಂಬದಿದ್ದಡೆ ನ ಭವಿಷ್ಯತಿ./1631
ಸುರಾಭಾಂಡಕ್ಕೆ ಹೊರಗೆ ವಿಭೂತಿಯ ಹೂಸಿದಡೊಳಗು
ಶುದ್ಧವಾಗಬಲ್ಲುದೆ ?
ಗುರುಕಾರುಣ್ಯ ನೆಲೆಗೊಂಡು, ಗುರುಲಿಂಗಜಂಗಮ
ತ್ರಿವಿಧವೊಂದೆಂದು ಕಾಣದನ್ನಕ್ಕ ಕೂಡಲಚೆನ್ನಸಂಗಮದೇವರಲ್ಲಿ
ಸದಾಚಾರವೆಲ್ಲರಿಗೆ ಸೂರೆಯೆ ? /1632
ಸುರೆಯ ತುಂಬಿದ ಭಾಂಡವನು ಎನಿಸು ವೇಳೆ ಜಲದಿ ತೊಳೆದಡೇನು
ಒಳಗೆ ಶುದ್ಧವಾಗಬಲ್ಲುದೆ ?
ಬಾಹ್ಯದ ಜಲತೀರ್ಥದಲ್ಲಿ ಮುಳಿ ಮುಳಿಗಿ ಎದ್ದಡೇನು
ಅಂತರಂಗದ ಮಲಿನತ್ವವು ಮಾಂಬುದೆ ಹೇಳಾ
ಚಿತ್ತೇತ್ವಂತರ್ಗತಂ ದಾಷ್ಟ್ಯಂ ತೀರ್ಥಸ್ನಾನೈರ್ನ ಶುದ್ಧ್ಯತಿ
ಶತಶೋಪಿ ಜಲೈರ್ಧಾತಂ ಸುರಾಭಾಂಡಮಿವಾಶುಚಿಃ ಎಂದುದಾಗಿ
ಚಿದಾಕಾಶವನೊಳಕೊಂಡ ಶಿವಜ್ಞಾನಿಗಳ ಪಾದೋದಕವ ಪಡೆದು,
ಭಕ್ತರು ಭವರಹಿತರಾದರು ಕಾಣಾ ಕೂಡಲಚೆನ್ನಸಂಗಮದೇವಾ./1633
ಸುರೆಯ ತೊರೆ, ಮಾಂಸದ ಒಟ್ಟಿಲು, ಭಂಗಿಯ ಬಣಬೆ,
ಜಾಯಿಕಾಯಿ ಜಾಯಿಪತ್ರೆಯ ತಿಂಬ ಹಿರಿಯರ, ಹರಿಕಾರರ
ಜಂಗಮವೆಂದಡೆ ನಾಯಕನರಕ ತಪ್ಪದು
ಕೂಡಲಚೆನ್ನಸಂಗಮದೇವಾ./1634
ಸುಷುಮ್ನನಾಳದ ಭೇದವನರಿಯರು, ವಿಷಯದಲ್ಲಿ ಗಸಣೆಗೊಂಬರು.
ಅಂತರಂಗದ ಸುದ್ದಿ[ಶುದ್ಧಿರಿ]ಯನವರೆತ್ತ ಬಲ್ಲರು
ಕೂಡಲಚೆನ್ನಸಂಗಮದೇವಾ. /1635
ಸುಳಿವ ಜಂಗಮ ಕಾಲಿಲ್ಲದೆ ಸುಳಿಯಬೇಕು,
ಮಾಡುವ ಭಕ್ತ ಕೈಯಿಲ್ಲದೆ ಮಾಡಬೇಕು.
ಸುಳಿವ ಜಂಗಮಕ್ಕೆ ಕಾಲಿದ್ದರೇನು ? ಅನ್ಯರ ಮನೆಯ ಹೊಗದಿದ್ದರೆ ಸಾಕು.
ಮಾಡುವ ಭಕ್ತಂಗೆ ಕೈಯಿದ್ದರೇನು ? ಲಿಂಗಜಂಗಮಕ್ಕಲ್ಲದೆ ಮಾಡದಿದ್ದರೆ ಸಾಕು.
ಜಂಗಮಸ್ಯಾಗಮೋ ನಾಸ್ತಿ ಭಕ್ತಸ್ಯ ಗೃಹಮಾಚರೇತ್
ಅನ್ಯಸ್ಯ ಚೇದ್ಗೃಹಂ ಯಾತಿ ಸದ್ಯೋ ಗೋಮಾಂಸಭಕ್ಷಣಂ
ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ
ಶರಣಸಂಬಂಧವಪೂರ್ವ. /1636
ಸೂತಕವಿರಹಿತ ಲಿಂಗಾರಾಧನೆ ತನುಮೂರ್ತಿಯಾದಲ್ಲಿ ಲಿಂಗೈಕ್ಯ.
ಪಾತಕವಿರಹಿತ ಜಂಗಮಾರಾಧನೆ ಮನಮೂರ್ತಿಯಾದಲ್ಲಿ ಲಿಂಗೈಕ್ಯ.
ಸೂತಕ ಪಾತಕವೆಂಬ ಉಭಯ ಸಂಗ ಹಿಂಗಿತ್ತು,
ಕೂಡಲಚೆನ್ನಸಂಗಾ ನಿಮ್ಮ ಲಿಂಗೈಕ್ಯಂಗೆ. /1637
ಸೂತಕವುಳ್ಳನ್ನಕ ಲಿಂಗಾರ್ಚನೆಯಿಲ್ಲ.
ಪಾತಕವುಳ್ಳನ್ನಕ ಜಂಗಮಾರ್ಚನೆಯಿಲ್ಲ.
ಸೂತಕ ವಿರಹಿತ ಲಿಂಗಾರ್ಚನೆ. ಪಾತಕ ವಿರಹಿತ ಜಂಗಮಾರ್ಚನೆ.
ಇಂತು ಸೂತಕ ಪಾತಕ ಎರಡೂ ಇಲ್ಲ.
ಕೂಡಲಚೆನ್ನಸಂಗನ ಶರಣಂಗೆ. /1638
ಸೂಸದ ಮಚ್ಚು ಅಚ್ಚೊತ್ತಿದಂತಿದ್ದರೆ
ಲಿಂಗವೆಂಬೆ, ಜಂಗಮವೆಂಬೆ, ಪ್ರಸಾದಿಯೆಂಬೆ,
ಸ್ವಯಂಕೃತ ಸಹಜಭಾವ
ಕೂಡಲಚೆನ್ನಸಂಗಯ್ಯ. /1639
ಸೂಳೆಯ ಮಗ ಮಾಳವಪಾಳ್ಯದೊಳಗೆಲ್ಲಾ,
ತಮ್ಮಪ್ಪನ ಕಾಣದೆ ಅರಸುತೈದಾನೆ.
ಆಳೆಂದರಿಯ, ಅರಸೆಂದರಿಯ.
`ಬಹುಲಿಂಗಪೂಜಕಶ್ಚೈವ ಬಹುಭಾವಗುರುಸ್ತಥಾ
ಬಹುಪ್ರಸಾದಂ ಭುಂಜತೇ ವೇಶ್ಯಾಪುತ್ರಸ್ತಥೈವ ಚ ಎಂದುದಾಗಿ
ಮತಿಹೀನ ಕಾಳಮೂಳರಿಗೆ ಶಿವಭಕ್ತಿ ದೊರೆಯದು,
ಆಣೆ ನಿಮ್ಮಾಣೆ ಕೂಡಲಚೆನ್ನಸಂಗಮದೇವಾ. /1640
ಸೃಷ್ಟಿಯ ಮೇಲಣ ಕಣಿಯ ತಂದು ಇಷ್ಟಲಿಂಗವೆಂದು ಮಾಡಿ
ಅಷ್ಟತನುವಿನ ಕೈಯಲ್ಲಿ ಕೊಟ್ಟು
ಆ ಅಷ್ಟತನುವಿನ ಕಯ್ ತಪ್ಪಿ ಸೃಷ್ಟಿಯ ಮೇಲೆ ಬಿದ್ದಡೆ
ಮೆಟ್ಟಿ ಮೆಟ್ಟಿ ಹೂಳಿಸಿಕೊಂಬ ಗುರುದ್ರೋಹಿಗಳ ಮುಖವ ನೋಡಲಾಗದು,
ಅವರ ನುಡಿಯ ಕೇಳಲಾಗದು.
ಇದಕ್ಕೆ ದೃಷ್ಟಾಂತ, ಗಾರುಡ ಪುರಾಣೇ:
ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ
ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯೇತ್
ಇಂತೆಂದುದಾಗಿ,
ಇಷ್ಟಲಿಂಗ ಬಿದ್ದಡೆ ಆಚಾರಲಿಂಗ ಬಿದ್ದಿತೆ ?
ಆಚಾರಲಿಂಗ ಬಿದ್ದಡೆ ಗುರುಲಿಂಗ ಬಿದ್ದಿತೆ ?
ಗುರುಲಿಂಗ ಬಿದ್ದಡೆ ಶಿವಲಿಂಗ ಬಿದ್ದಿತೆ ?
ಶಿವಲಿಂಗ ಬಿದ್ದಡೆ ಜಂಗಮಲಿಂಗ ಬಿದ್ದಿತೆ ?
ಜಂಗಮಲಿಂಗ ಬಿದ್ದಡೆ ಪ್ರಸಾದಲಿಂಗ ಬಿದ್ದಿತೆ ?
ಪ್ರಸಾದಲಿಂಗ ಬಿದ್ದಡೆ ಮಹಾಲಿಂಗ ಬಿದ್ದಿತೆ ?
ಅಕಟಕಟ ಷಡ್ವಿಧಲಿಂಗದ ಭೇದವನರಿಯದೆ ಕೆಟ್ಟ ಕೇಡ ನೋಡಾ !
ಅಭ್ಯಾಸವ ಮಾಡುವಲ್ಲಿ ಕೋಲು ಬಿದ್ದಡೆ
ತನ್ನ ತಾನೆ ಇರಿದುಕೊಂಡು ಸಾಯಬಹುದೆ ?
ಆ ಕೋಲಿನಲ್ಲಿ ಅಭ್ಯಾಸವನೆ ಮಾಡಿ
ಸುರಗಿಯ ಮೊನೆಯನೆ ಗೆಲಿಯಬೇಕಲ್ಲದೆ ?
ಇದು ಕಾರಣ:ಜಲ ಅಗ್ನಿ ನೇಣು ವಿಷ ಅಸಿಪತ್ರ ಸಮಾದಿ ಇಂತವರಿಂದ
ಪ್ರಾಣಹಿಂಸೆಯ ಮಾಡುವರನು ಅಘೋರನರಕದಲ್ಲಿ ಅದ್ದಿ ಅದ್ದಿ ಇಕ್ಕುವ
ನಮ್ಮ ಕೂಡಲಸಂಗಮದೇವ. /1641
ಸೃಷ್ಟಿಯ ಮೇಲಣ ಕಣಿಯ ತಂದು, ಅಷ್ಟತನುವಿನ ಕೈಯಲ್ಲಿ ಕೊಟ್ಟು
ಪೂಜಿಸು ಪೂಜಿಸು ಎಂಬರಯ್ಯಾ.
ನಾಲ್ವರಿಗೆ ಹುಟ್ಟಿದ ಲಿಂಗವ ನಾನೆತ್ತ ಪೂಜಿಸುವೆನಯ್ಯಾ.
ಪೃಥ್ವಿಗೆ ಹುಟ್ಟಿ ಶಿಲೆಯಾಯಿತ್ತು, ಕಲ್ಲುಕುಟಿಗನ ಕೈಯಲ್ಲಿ ರೂಪಾಯಿತ್ತು.
ಗುರುವಿನ ಹಸ್ತದಲ್ಲಿ ಮೂರ್ತಿಯಾಯಿತ್ತು,
ಉಪಚಾರಕ್ಕೆ ದೇವರಾಯಿತ್ತು.
ಈ ನಾಲ್ವರಿಗೆ ಹುಟ್ಟಿದ ಲಿಂಗವ ನಾನೆತ್ತ ಪೂಜಿಸುವೆನಯ್ಯಾ.
ಈ ಲಿಂಗ ನೆಲಕ್ಕೆ ಬಿದ್ದರೆ ಸಮಾದಿಯ ಹೊಕ್ಕೇನೆಂಬರು.
`ಸಮಾದಿ ಶಸ್ತ್ರಂ ಚ ಶಿಲಾದಾನಾದಿಂ ಚ
ಈ ಆರು ತೆರದಲ್ಲಿ ಸತ್ತನಾದರೆ
ಕುಂಬಿಪಾತಕ ನಾಯಕನರಕ ತಪ್ಪದು
ಕೂಡಲಚೆನ್ನಸಂಗಮದೇವಾ/1642
ಸೃಷ್ಟಿಯ ಮೇಲಣ ಕಣಿಯ ತಂದು, ಇಷ್ಟಲಿಂಗವೆಂದು ಮಾಡಿ,
ಅಷ್ಟತನುವಿನ ಕೈಯಲ್ಲಿ ಕೊಟ್ಟು,
ಅಷ್ಟತನುವಿನ ಕೈತಪ್ಪಿ ಸೃಷ್ಟಿಯ ಮೇಲೆ ಬಿದ್ದರೆ
ಕೆಟ್ಟನವನನಾಚಾರಿಯೆಂದು ಮುಟ್ಟರು ನೋಡಾ.
ಮುಟ್ಟಿದ ಪ್ರಾಣವ, ಬಿಚ್ಚದ ಭೇದವ ಕಷ್ಟ ಜೀವಿಗಳೆತ್ತ ಬಲ್ಲರು
ಕೂಡಲಚೆನ್ನಸಂಗಮದೇವಾ ? /1643
ಸೋಂಕಿನ ಸುಖವನರ್ಪಿತವ ಮಾಡಿ,
ಅಸೋಂಕಿನ ಸುಖವನರ್ಪಿತವ ಮಾಡದಿದ್ದಡೆ
ಪ್ರಸಾದಿಯಲ್ಲ, ಶರಣನಲ್ಲ, ಲಿಂಗೈಕ್ಯನಲ್ಲ.
ಸಂಯೋಗೇ ಚ ವಿಯೋಗೇ ಚ ಅಣುಮಾತ್ರಂ ಸುಖಾರ್ಪಣಂ
ಯಃ ಕುರ್ಯಾದಿಷ್ಟಲಿಂಗೇ ತು ಸೋವಧಾನೀ ನಿರಂತರಂ
ಇದು ಕಾರಣ ಕೂಡಲಚೆನ್ನಸಂಗಯ್ಯಾ,
ಭೇದವನರಿದು ಅರ್ಪಿತವ ಮಾಡುವ
ನಿಮ್ಮ ಪ್ರಸಾದಿಗೆ ನಮೋ ನಮೋಯೆಂಬೆನು./1644
ಸೋಮವಾರ ಮಂಗಳವಾರ ಶಿವರಾತ್ರಿಯೆಂದು ಮಾಡುವ ಭಕ್ತರ
ಲಿಂಗಭಕ್ತಂಗೆ ನಾನೆಂತು ಸರಿಯೆಂಬೆನಯ್ಯಾ?
ದಿನ ಶ್ರೇಷ್ಠವೋ ಲಿಂಗ ಶ್ರೇಷ್ಠವೋ?
ದಿನ ಶ್ರೇಷ್ಠವೆಂದು ಮಾಡುವ
ಪಂಚಮಹಾಪಾತಕರ ಮುಖವ ನೋಡಲಾಗದು.
ಸೋಮೇ ಭೌಮೇ ವ್ಯತೀಪಾತೇ ಸಂಕ್ರಾಂತಿಶಿವರಾತ್ರಯೋಃ
ಏಕಭಕ್ತೋಪವಾಸೇನ ನರಕೇ ಕಾಲಮಕ್ಷಯಂ
ಇದು ಕಾರಣ ಕೂಡಲಚೆನ್ನಸಂಗಯ್ಯಾ
ಇಂಥವರ ಮುಖವ ನೋಡಲಾಗದು. /1645
ಸೋಮವಾರ ಮಂಗಳವಾರ ಹುಣ್ಣಿಮೆ ಸಂಕ್ರಾಂತಿ ಶಿವರಾತ್ರಿ-
ಮೊದಲಾದ ತಿಥಿವಾರಂಗಳಲ್ಲಿ ಏಕಭುಕ್ತೋಪವಾಸಿಯಾಗಿ
ಆ ಕ್ಷುದ್ರ ತಿಥಿಗಳಲ್ಲಿ, ಮಾಡಿದ ನೀಚೋಚ್ಛಿಷ್ಟವಂ ತಂದು
ತನ್ನ ಕರಸ್ಥಲದ ಇಷ್ಟಲಿಂಗಕ್ಕೆ ಕೊಟ್ಟು ಕೊಂಡು ಭಕ್ತನೆನಿಸಿಕೊಂಡೆನೆಂಬ
ಅನಾಚಾರಿಯ ಮುಖವ ನೋಡಲಾಗದು ನೋಡಲಾಗದು.
ಅದೇನು ಕಾರಣವೆಂದಡೆ:
ದಿನ ಶ್ರೇಷ್ಠವೊ ? ಲಿಂಗ ಶ್ರೇಷ್ಠವೊ ? ದಿನ ಶ್ರೇಷ್ಠವೆಂದು ಮಾಡುವ
ದುರಾಚಾರಿಯ ಮುಖವ ನೋಡಲಾಗದು, ನೋಡಲಾಗದು, ಅದೆಂತೆಂದಡೆ:
ಆವ ದಿನ ಶ್ರೇಷ್ಠವೆಂದು ದಿನವೆ ದೈವವೆಂದು ಮಾಡುವನಾಗಿ,
ಅವನು ದಿನದ ಭಕ್ತನು.
ಅವನಂತಲ್ಲ ಕೇಳಿರಣ್ಣ ಸದ್ಭಕ್ತನು-ಲಿಂಗವೆ ಘನವೆಂದು ಜಂಗಮವೆ ಶ್ರೇಷ್ಠವೆಂದು
ಆ ಲಿಂಗಜಂಗಮವೆ ಶ್ರೇಷ್ಠವೆಂದು ಆ ಲಿಂಗಜಂಗಮವೆ ದೈವವೆಂದು ಮಾಡುವನಾಗಿ
ಆತ ಲಿಂಗಭಕ್ತನು. ಈ ಲಿಂಗಭಕ್ತಂಗೆ ದಿನದ ಭಕ್ತನ ತಂದು
ಸರಿಯೆಂದು ಹೋಲಿಸಿ ನುಡಿವಂಗೆ,
ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲ,
ಅವ ಭಕ್ತನಲ್ಲ, ಅವಂಗೆ ಅಘೋರನರಕ.
ಭವಿದಿನ-ತಿಥಿ-ವಾರಂಗಳಲ್ಲಿ ಕೂರ್ತುಮಾಡುವಾತ
ಭಕ್ತನಲ್ಲ. ಅಲ್ಲಿ ಹೊಕ್ಕು ಲಿಂಗಾರ್ಚನೆಯ ಮಾಡುವಾತ ಜಂಗಮವಲ್ಲ.
ಈ ಉಭಯರನು ಕೂಡಲಚೆನ್ನಸಂಗಯ್ಯ ಕುಂಬಿಪಾತಕ
ನಾಯಕನರಕದಲ್ಲಿಕ್ಕುವನು/1646
ಸ್ತ್ರೀಲಿಂಗ ಪುಲ್ಲಿಂಗ ನಪುಂಸಕಲಿಂಗವೆಂದೆಂಬರು,
ಆದಿ ಅನಾದಿ ಸಂದಣಿ ಸಯವಾಯಿತ್ತು.
ಪ್ರಣಮಪ್ರಜ್ವಲಿತ ಕುಳವಳಿಯದ ಪ್ರಣಮಲಿಂಗ
ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ./1647
ಸ್ಥಲ ಹೋಯಿತ್ತೆನಗೆ, ನಿಃಸ್ಥಲ ಹೋಯಿತ್ತೆನಗೆ
ಗೋರಿಕಲ್ಲ ಮಾಡ ಹೋಯಿತ್ತೆನಗೆ,
ಹೂವಿಮಾನ ಹೋಯಿತ್ತೆನಗೆ,
ಬಸವ ಹೋದನೆನಗೆ, ಬಸವನ ಜಂಗಮ ಹೋದನೆನಗೆ.
ಇನ್ನು ಬಸವಾಯೆಂದೆನಾದರೆ ಕೂಡಲಚೆನ್ನಸಂಗಾ ನಿಮ್ಮಾಣೆ./1648
ಸ್ಥಲಗೆಟ್ಟ ನಿಭ್ರಾಂತಂಗೆ, ಸಾಕಾರಗುಣವಡಗಿದ ಸನ್ಮಾರ್ಗಂಗೆ,
ನಯನ [ತಾ]ಗಿದ ಸುಖವ ಮನಮುಟ್ಟಲೀಯದ ಪ್ರಸಾದಿ[ಗೆ],
ಕರಣೇಂದ್ರಿಯಂಗಳಿದವು,
ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿಗೆ. /1649
ಸ್ಥಲದಿಂದ ನಡೆನುಡಿಯಾಯಿತ್ತು, ನಿಃಸ್ಥಲದಿಂದ ನುಡಿನಡೆಗೆಟ್ಟಿತ್ತು.
ನೋಡಲೊಡನೆ ಸ್ಥಲವಾಗಿ ತೋರಿತ್ತು,
(ಆರಯ್ಯಲೊಡನೆ ನಿಃಸ್ಥಲವಾಗಿ ತೋರಿತ್ತು.)
ಸ್ಥಲವೂ ಅಲ್ಲ, ನಿಃಸ್ಥಲವೂ ಅಲ್ಲ,
ನೋಟವೆ ಕೂಟ, ಕೂಡಲಚೆನ್ನಸಂಗಾ/1650
ಸ್ಥಲದಿಂದ ಸ್ಥಲವನರ್ಪಿಸೂದೊಡಲ ಗುಣ.
ನಿಃಸ್ಥಲದಿಂದ ನಿಃಸ್ಥಲವನರ್ಪಿಸೂದೆ ಪ್ರಾಣಗುಣ.
ಸ್ಥಲವೆನ್ನದೆ ನಿಃಸ್ಥಲವೆನ್ನದೆ ನೋಡದೆ ಆರಯ್ಯದೆ ಅರ್ಪಿಸೂದು ನಿರ್ಗುಣ.
ಇಂಥ ಮಹಂತರ ತೋರಿ ಬದುಕಿಸಯ್ಯಾ ಕೂಡಲಚೆನ್ನಸಂಗಮದೇವಾ. /1651
ಸ್ಥಲವನರಿದೆನೆಂದರೆ ಕುಳವನರಿಯಬೇಕು.
ಕುಳವನರಿದಡೆ ಭ್ರಾಂತು ಸೂತಕವಿಲ್ಲಯ್ಯಾ.
ತನುಮನ ಲಯವಾದ ನಿಜೈಕ್ಯನ,
`ಲಿಂಗದೇವಾ ಎಂದು ಉಪಚರಿಸಲುಂಟೆ ?
ಆಗಮ ಮುನ್ನವೇ ಹಿಂಗಿತ್ತು, ಆಚಾರ ಮೀರಿತ್ತು.
ಕೂಡಲಚೆನ್ನಸಂಗನ ಶರಣ ಸುಚರಂ ಭೋ. /1652
ಸ್ಥಲವಿಡಿದು ಸರ್ವದಲಾಯತನಾಗಿ
ಸಹಜವಳವಟ್ಟಲ್ಲಿ ಇದದೆನ್ನಲುಂಟೆ ?
ಭಾವವಳಿದು ನಿರ್ಭಾವವುಳಿದಲ್ಲಿ ಇದದೆನ್ನಲುಂಟೆ ?
ಕದಂಬ ಕಾಳಾಸ (ಕಲಶ?) ಕೂಡಲಚೆನ್ನಸಂಗಯ್ಯ
ಸರ್ವಾಂಗಮಯವಾದಲ್ಲಿ./1653
ಸ್ಥಲವಿಡಿದು ಸರ್ವದಲಾಯತವಾಗಿ.
ಸಹಜವಿಡಿದು ನಿಜವಳವಟ್ಟುದಾಗಿ, ಅದಿದೆಂದೆನಲುಂಟೆ ? ರೂಪವಲ್ಲ ನಿರೂಪವಲ್ಲ,
ಕೂಡಲಚೆನ್ನಸಂಗಾ ನಿರ್ಗಮನವಾದ ಕಾಯವೆ ಕೈಲಾಸ. /1654
ಸ್ಥಲವೆಂದೆನ್ನೆ, ನಿಃಸ್ಥಲವೆಂದೆನ್ನೆ, ತಾನು ಎನಗಾದ ಬಳಿಕ
ನಿಃಪತಿಯೆನಗಾದ ಬಳಿಕ ಎತ್ತಲೆಂದರಿಯೆನು.
ಇದು ಕಾರಣ ಕೂಡಲಚೆನ್ನಸಂಗಯ್ಯಾ,
ಲಿಂಗೈಕ್ಯವೆಂದು ಎನ್ನೆನಾಗಿ./1655
ಸ್ಥಾವರ ಜಂಗಮ ಒಂದೆಂಬರು ನೀವು ಕೇಳಿರೆ :
ಸ್ಥಾವರವೆ ಲಿಂಗ, ಜಂಗಮವೆ ಭಕ್ತ.
ಪೂಜಿಸುವುದು ಲಿಂಗ, ಪೂಜೆಗೊಂ[ಬುದು] ಜಂಗಮ.
ಸ್ಥಾವರ-ಜಂಗಮ ಒಂದಾದ ಕಾರಣ ಜಂಗಮವೆನಿಸಿತ್ತು.
ದೇವ-ಭಕ್ತನೊಂದಾದ ಕಾರಣ ಸ್ಥಾವರವೆನಿಸಿತ್ತು.
ಸ್ಥಾವರವೇ ಘಟವು, ಜಂಗಮವೆ ಪ್ರಾಣವು.
ಇದು ಕಾರಣ ಕೂಡಲಚೆನ್ನಸಂಗಾ ನಿಮ್ಮ ಶರಣ ಸ್ವತಂತ್ರ. /1656
ಸ್ಥಾವರಾರಾಧನೆಯ ಪೂಜನೆಯ ಪುರಸ್ಕಾರದ
ಅಂಗರಚನೆಯ ರತಿಯಿಲ್ಲದ ಪ್ರಸಾದಿ
ಜಂಗಮಗುಣಾದಿ ಸಂಗವ ಮನಕ್ಕೆ ತಾರದ ಪ್ರಸಾದಿ.
ತ್ರೈಪುರುಷ ಏಕೋವರ್ಣದ ಸಂಯೋಗವಿಲ್ಲದ ಪ್ರಸಾದಿ.
ನಾದದ ಸಾರಸಾರವನು ಕರಸ್ಥಲಕ್ಕೆ ತಂದು ಪರಗಮನರಹಿತ ಪ್ರಸಾದಿ.
ಇದು ಕಾರಣ, ಕೂಡಲಚೆನ್ನಸಂಗಾ
ಸಮಾಪ್ತವಾಗಿ, ಲಿಂಗಲೀಯವಾದ ಪ್ರಸಾದಿ./1657
ಸ್ಥೂಲ ಪಂಚಭೂತಂಗಳಲ್ಲಿ ಇಷ್ಟಲಿಂಗಪ್ರತಿಷ್ಠೆ,
ಸೂಕ್ಷ್ಮ ಪಂಚಭೂತಂಗಳಲ್ಲಿ ಪ್ರಾಣಲಿಂಗ ಪ್ರತಿಷ್ಠೆ,
ಕಾರಣ ಪಂಚಭೂತಂಗಳಲ್ಲಿ ತೃಪ್ತಿಲಿಂಗ ಪ್ರತಿಷ್ಠೆ.
ಇಂತೀ ಸ್ಥೂಲ ಸೂಕ್ಷ್ಮ ಕಾರಣ ಮಹವು.
ಮಹದ ಹೃದಯದಲ್ಲಿ ಕೊನೆದೋರದಿಪ್ಪ ಜ್ಯೋತಿಯ
ನಿಮ್ಮ ಶರಣನ ಸರ್ವಾಂಗದಲ್ಲಿ ಕಂಡೆನು
ಕೂಡಲಚೆನ್ನಸಂಗಮದೇವಾ/1658
ಸ್ಥೂಲ ಪಂಚಭೂತಕಾಯದ ಪಂಚತತ್ವಂಗಳ
ವಿವರಿಸಿ ಬೋದಿಸಿ ಕಳೆದು,
ಸೂಕ್ಷ್ಮ ಪಂಚಭೂತಕಾಯದ ತನ್ಮಾತ್ರಗುಣಂಗಳ
ವಿವರದ ಭೇದವ ಭೇದಿಸಿ ತೋರಿ ಕಳೆದು,
ಕಾರಣಪಂಚಭೂತ ಕಾಯದ ಕರಣವೃತ್ತಿಗಳ
ಮಹಾವಿಚಾರದಿಂದ ತಿಳುಹಿ ವಿವರಿಸಿ ಕಳೆದು,
ಸ್ಥೂಲಪಂಚಾಚಾರದಿಂದ ತಿಳುಹಿ ವಿವರಿಸಿ ಕಳೆದು,
ಸ್ಥೂಲಪಂಚಭೂತಕಾಯದಲ್ಲಿ ಇಷ್ಟಲಿಂಗವ ಪ್ರತಿಷ್ಠೆಯ ಮಾಡಿ
ಸದಾಚಾರಸ್ಥಳಕುವ ನೆಲೆಗೊಳಿಸಿ,
ಸೂಕ್ಷ್ಮಪಂಚಭೂತಕಾಯದಲ್ಲಿ ಪ್ರಾಣಲಿಂಗ ಪ್ರತಿಷ್ಠೆಯ ಮಾಡಿ,
ಮಹಾವಿಚಾರದ ಅನುಭಾವವ ನೆಲೆಗೊಳಿಸಿ,
ಕಾರಣಪಂಚಭೂತಕಾಯದಲ್ಲಿ ತೃಪ್ತಿಲಿಂಗವ ಪ್ರತಿಷ್ಠೆಯ ಮಾಡಿ
ಪರಮಾನಂದಸುಜ್ಞಾನವ ನೆಲೆಗೊಳಿಸಿ;-
ಇಂತೀ ಸ್ಥೂಲಸೂಕ್ಷ್ಮ ಕಾರಣವೆಂಬ ತನುತ್ರಯಂಗಳನೇಕೀಭವಿಸಿ ತೋರಿ,
ಪೂರ್ವಜನ್ಮದ ನಿವೃತ್ತಿಯ ಮಾಡಿ, ಲಿಂಗಜನ್ಮದ ಪ್ರತಿಷ್ಠೆಯ ಮಾಡಿ
ಎನ್ನ ಕೃತಾರ್ಥನ ಮಾಡಿದ ಬಸವಣ್ಣನ ಶ್ರೀಪಾದಕ್ಕೆ
ನಮೋ ನಮೋ ಎಂದು ಬದುಕಿದೆನಯ್ಯಾ
ಕೂಡಲಚೆನ್ನಸಂಗಮದೇವಾ/1659
ಸ್ಥೂಲ ಸೂಕ್ಷ್ಮವೆಂಬ ಶಬ್ದಪರಿಭಾವ ತಲೆದೋರದೆ,
ಸಂಗ ಮಹಾಸಂಗದ ವರ್ಮದಾಸೋಹ
ಹೃದಯಕ್ಕೆ ಸಾಹಿತ್ಯವಾದ ಭಕ್ತಂಗೆ
ಅರ್ಪಿತ ಅನರ್ಪಿತವೆಂಬ ಸಂಕಲ್ಪ ವಿಕಲ್ಪವಿರಹಿತ,
ಮತ್ತೆ ಅರ್ಪಿಸಬಲ್ಲನಾಗಿ.
ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ್ಯವೆಂಬ
ಪಂಚವಕ್ತ್ರವನು ಊಧ್ರ್ವಮುಖಕ್ಕೆ ತಂದು,
ಅರ್ಪಿಸಬಲ್ಲನಾಗಿ ಗುರುಪ್ರಸಾದಿ.
ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ಚಂದ್ರ, ಸೂರ್ಯ, ಆತ್ಮ
ಇಂತೀ ಅಷ್ಟತನುವನು ದಾಸೋಹದಲ್ಲಿ
ಅರ್ಪಿಸಬಲ್ಲನಾಗಿ ಜಂಗಮಪ್ರಸಾದಿ.
ಹೊರಗೆ ಭಜಿಸಲಿಲ್ಲ, ಒಳಗೆ ನೆನೆಯಲಿಲ್ಲ.
ಸರ್ವಾಂಗಲಿಂಗಿಯಾಗಿಹ ಲಿಂಗಪ್ರಸಾದಿ.
ಇದು ಕಾರಣ ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣ ಮಹಾಪ್ರಸಾದಿ. /1660
ಸ್ಥೂಲತನು ಸೂಕ್ಷ್ಮತನು ಕಾರಣತನು:
ಸ್ಥೂಲತನುವಿನಲ್ಲಿ ಇಷ್ಟಲಿಂಗಪ್ರತಿಷ್ಠೆ,
ಸೂಕ್ಷ್ಮತನುವಿನಲ್ಲಿ ಪ್ರಾಣಲಿಂಗಪ್ರತಿಷ್ಠೆ,
ಕಾರಣತನುವಿನಲ್ಲಿ ತೃಪ್ತಿಲಿಂಗಪ್ರತಿಷ್ಠೆ.
ಇಂತೀ ಸ್ಥೂಲ ಸೂಕ್ಷ್ಮ ಕಾರಣವು ಮಹವು !
ಮಹದುದಯ ಹೃದಯದಲ್ಲಿ ಕೊನೆದೋರುತ್ತಿಪ್ಪ ಪರಂಜ್ಯೋತಿ,
ನಿಮ್ಮ ಶರಣನ ಸರ್ವಾಂಗದಲುಂಟು
ಕೂಡಲಚೆನ್ನಸಂಗಮದೇವಾ./1661
ಸ್ನಾನ ಸಂಧ್ಯಾ[ವಂದನ] ಜಪ ಹೋಮಾದಿ ಕ್ರೀಗಳು ನಿಮ್ಮ ಶರಣಂಗೆ
ನೀವಲ್ಲದಿಲ್ಲಾಗಿ, ಇಲ್ಲಯ್ಯಾ.
ಅನ್ಯಕಾರ್ಯ ಅನರ್ಪಿತ ನಿಮ್ಮ ಶರಣಂಗೆ
ಲಿಂಗವನಗಲಿ ಇರನಾಗಿ, ಇಲ್ಲಯ್ಯಾ.
ಆಗಮೋಕ್ತವಹ ಅರ್ಚನೆ ಆಹ್ವಾನ ವಿಸರ್ಜನೆ ನಿಮ್ಮ ಶರಣಂಗೆ
ಅವಸಾನವಿಲ್ಲಾಗಿ, ಇಲ್ಲಯ್ಯಾ.
ಇಂತಪ್ಪ ಭಕ್ತಿಯ ಪದವನರಿಯದೆ
ಹರಿಬ್ರಹ್ಮಾದಿಗಳು ಬಂಧನಕ್ಕೊಳಗಾದರು.
ಈ ಪದವನರಿದ ಕಾರಣ ನಿಮ್ಮ ಶರಣಂಗೆ ಭವವಿಲ್ಲ ಬಂಧನವಿಲ್ಲ,
ಕೂಡಲಚೆನ್ನಸಂಗಯ್ಯನಲ್ಲಿ ದಾಸೋಹಿಯಾಗಿ./1662
ಸ್ಪರ್ಶನವಿರಹಿತ ಅರ್ಪಿತ, ರುಚಿವಿರಹಿತ ಪ್ರಸಾದಯೆಂದೆನೆಂದೆ.
ಮತ್ತಾರಿಗೆಯೂ ಸಾಧ್ಯವಾಗಲಿ, ಕೂಡಲಚೆನ್ನಸಂಗನ ಪ್ರಸಾದಿಯ
ಪ್ರಸಾದದಿಂದ ಎಂದೆನೆಂದೆ.
ಮತ್ತಾರಿಗೆಯಾದಡೆಯೂ ಸಾಧ್ಯವಾಗಲಿ. /1663
ಸ್ವಯಂ ಪ್ರಸಾದವವ್ವಾ, ಸ್ವಯಂ ಲಿಂಗವವ್ವಾ;
ಸ್ವಯಂ ದಾಸೋಹವವ್ವಾ, ಸ್ವಯಂ ಶರಣನವ್ವಾ
ಸ್ವಯಂ ಕೂಡಲಚೆನ್ನಸಂಗನ ಪ್ರಸಾದವವ್ವಾ ! /1664
ಸ್ವಯಮಜ್ಜನ, ಸ್ವಯಪೂಜೆ, ಸ್ವಯಾರೋಗಣೆ-
ನಾ ನೀನೆಂಬ ಸಂಶಯ ನಿಂದ ನಿಲವೆಂತಿದ್ದಿತೆಂದರೆ:
[ಪ್ರ]ಪಂಚ ಪರತಂತ್ರವ ಮೀರಿ,
ಭಾವವ ಬಿಟ್ಟು, ಘನರವಿಲೋಚನನಾಗಿ,
ಅರ್ಪಿತವೆ (ಭುಂಜಿತ), ಅನರ್ಪಿತವೆ ಅಭುಂಜಿತ,
ಸ್ಥೂಲ ಸೂಕ್ಷ್ಮ ಘನನಿತ್ಯವೆಂದರಿಯರು, ಜಡವೇಷಲಾಂಛನಧಾರಿಗಳು.
ಕಾಯ ಜೀವ ಪ್ರಸಾದವಂ ಬಿಟ್ಟು ಸರ್ವಭಾವ ರುಚಿ ಪ್ರಸಾದಿ,
ಕೂಡಲಚೆನ್ನಸಂಗಯ್ಯಾ ಆತ ಸರ್ವಾಂಗಪ್ರಸಾದಿ./1665
ಸ್ವಸ್ತಿ ಸಮಸ್ತಪ್ರಶಸ್ತಿ ಸಹಿತಂ ಶ್ರೀಮತ್ ಕಲ್ಯಾಣಪುರದ ಮಹಾತ್ಮ್ಯ
ಎಂತೆಂದಡೆ:
ವಿಸ್ತರಿಸಿ ಪೇಳುವೆನು; ಎಲ್ಲಾ ಶಿವಗಣಂಗಳು ಕೇಳಿ ಕೃತಾರ್ಥರಾಗಿರಯ್ಯಾ.
ಹದಿನಾಲ್ಕು ಭುವನಕ್ಕೆ ಕಳಸವೆಂದೆನಿಸುವ ರುದ್ರಲೋಕವೆ ಮತ್ರ್ಯಕ್ಕಿಳಿತಂದು,
ಕಲ್ಯಾಣವೆಂಬ ಪುರವಾಗಿ ಹುಟ್ಟಿತ್ತು ನೋಡಿರಯ್ಯಾ !
ಅಲ್ಲಿ ಸತ್ಯರು ಸಾತ್ತ್ವಿಕರು ನಿತ್ಯರು ನಿಜೈಕ್ಯರು ಮಹಾಜ್ಞಾನಿಗಳು
ಪರಮಶಿವಯೋಗಿಗಳು ಶಿವಾನುಭಾವಸಂಪನ್ನರು ಶಿವಲಿಂಗಪ್ರಾಣಿಗಳು
ಶಿವಪ್ರಸಾದಪಾದೋದಕಸಂಬಂದಿಗಳು ಶಿವಾಚಾರವೇದ್ಯರು ಶಿವಾಗಮಸಾಧ್ಯರು
ಶಿವಸಮಯಪಕ್ಷರುಗಳಲ್ಲದೆ, ಮತ್ತಾರು ಅಲ್ಲಿಲ್ಲ ನೋಡಿರಯ್ಯಾ.
ಪಾಪಿಗಳು ಕೋಪಿಗಳು ಅಸತ್ಯರು ಅನಾಚಾರಗಳು ಹೊಗಬಾರದು ಕಲ್ಯಾಣವ.
ಮೀರಿ ಹೊಕ್ಕೆಹೆವೆಂಬವರಿಗೆ ಬಾಳ ಬಾಯಧಾರೆ ನೋಡಿರಯ್ಯಾ.
ಆ ಕಲ್ಯಾಣ ಅಗಮ್ಯ ಅಗೋಚರ ನೋಡಿರಯ್ಯಾ.
ಆ ಮಹಾಕಲ್ಯಾಣದ ವಿಸ್ತೀರ್ಣ ತಾನೆಂತೆಂದಡೆ:
ಹನ್ನೆರಡು ಯೋಜನ ಪರಿಪ್ರಮಾಣದ ವಿಸ್ತ್ರೀರ್ಣಪಟ್ಟಣಕ್ಕೆ
ಮುನ್ನೂರರವತ್ತು ಬಾಗಿಲವಾಡ.
ಆ ಬಾಗಿಲಿಂಗೆ ನೂರ ಐವತ್ತೈದು ವಜ್ರದ ಹಾರೆಯ ಕದಂಗಳು.
ಇನ್ನೂರ ಇಪ್ಪತ್ತೈದು ಕಲುಗೆಲಸದ ದ್ವಾರವಟ್ಟಕ್ಕೆ
ನಾನೂರ ಐವತ್ತು ಸುವರ್ಣದ ಕೆಲಸದ ಕದಂಗಳು,
ಅಲ್ಲಿ ನೂರ ಹದಿನೈದು ಚೋರಗಂಡಿ;
ಅವಕ್ಕೆ ನೂರ ಹದಿನೈದು ಮೊಳೆಯ ಕದಂಗಳು.
ಇಪ್ಪತ್ತು ಬಾಗಿಲು ಆಳ್ವರಿಯೊಳಗಿಪ್ಪವಾಗಿ ಅವಕ್ಕೆ ಕದಂಗಳಿಲ್ಲ.
ಆ ಪಟ್ಟಣಕ್ಕೆ ಬರಿಸಿಬಂದ ಕೋಂಟೆ ನಾಲ್ವತ್ತೆಂಟು ಯೋಜನ ಪರಿಪ್ರಮಾಣು.
ಬಾಹತ್ತರ [ನಿಯೋಗಿಗಳ] ಮನೆ ಲಕ್ಷ; ಮಂಡಳಿಕರ ಮನೆ ಲಕ್ಷ;
ಸಾಮಂತರ ಮನೆ ಲಕ್ಷ; ರಾಯ ರಾವುತರ ಮನೆಯೊಳಡಗಿದ ಮನೆಗಳಿಗೆ ಲೆಕ್ಕವಿಲ್ಲ.
ದ್ವಾದಶ ಯೋಜನ ವಿಸ್ತ್ರೀರ್ಣದ ಸೂರ್ಯವೀಥಿ ನೂರಿಪ್ಪತ್ತು;
ದ್ವಾದಶ ಯೋಜನದ ಸೋಮವೀಥಿ ನೂರಿಪ್ಪತ್ತೈದು.
ಅದರಿಂ ಮಿಗಿಲಾದ ಒಳಕೇರಿ ಹೊರಕೇರಿಗೆ ಗಣನೆಯಿಲ್ಲ.
ಆ ಪಟ್ಟಣದೊಳಗೆ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶಿವಾಲಯ.
ಆ ಶಿವಾಲಯಂಗಳಿಗೆ ಮುಖ್ಯವಾದ ತ್ರಿಪುರಾಂತಕದೇವರ ಶಿವಾಲಯ.
ಮುನ್ನೂರರವತ್ತು ಪದ್ಮಪತ್ರ ತೀವಿದ ಸರೋವರಗಳು.
ಎರಡು ಲಕ್ಷವು ಎಂಬತ್ತೈದು ಸಾವಿರದ ಏಳು ನೂರೆಪ್ಪತ್ತು
ದಾಸೋಹದ ಮಠಂಗಳು.
ಆ ದಾಸೋಹದ ಮಠಂಗಳಿಗೆ ಮುಖ್ಯವಾದ
ಬಸವರಾಜದೇವರ ಮಠದ ವಿಸ್ತ್ರೀರ್ಣವೆಂತೆಂದಡೆ:
ಯೋಜನವರಿಯ ಬಿನ್ನಾಣದ ಕಲುಗೆಲಸದ ಪಾಳಿ;
ಅತಿ ಸೂಕ್ಷ್ಮದ ಕುಸುರಿಗೆಲಸದ ದ್ವಾರವಟ್ಟವೈದು.
ಅವಕ್ಕೆ ಪಂಚಾಕ್ಷರಿಯ ಶಾಸನ.
ಮಿಸುನಿಯ ಕಂಭದ ತೋರಣಗಳಲಿ ರುದ್ರಾಕ್ಷಿಯ ಸೂಸಕ
ಆ ಬಾಗಿಲುವಾಡದಲ್ಲಿ ಒಪ್ಪುತಿರ್ಪವಯ್ಯಾ,
ನಂದಿಯ ಕಂಭದ ಧ್ವಜ ಉಪ್ಪರಗುಡಿ ಪತಾಕೆ ವ್ಯಾಸಧ್ವಜ ಒಪ್ಪುತಿರ್ಪವಯ್ಯಾ,
ಆ ಮಧ್ಯದಲ್ಲಿ ಬಸವರಾಜದೇವರ ಸಿಂಹಾಸನದ ವಿಸ್ತ್ರೀರ್ಣದ ಪ್ರಮಾಣು:
ಸಹಸ್ರಕಂಭದ ಸುವರ್ಣದುಪ್ಪರಿಗೆ; ಆ ಮನೆಗೆತ್ತಿದ ಹೊನ್ನಕಳಸ ಸಾವಿರ.
ಗುರುಲಿಂಗ ಜಂಗಮಕ್ಕೆ ಪಾದಾರ್ಚನೆಯ ಮಾಡುವ ಹೊಕ್ಕರಣೆ
ನಾಲ್ಕು ಪುರುಷಪ್ರಮಾಣದ ಘಾತ.
ಅಲ್ಲಿ ತುಂಬಿದ ಪಾದೋದಕದ ತುಂಬನುಚ್ಚಲು
ಬೆಳೆವ ರಾಜಶಾಲಿಯ ಗದ್ದೆ ಹನ್ನೆರಡು ಕಂಡುಗ,
ಆ ಯೋಜನವರಿಯ ಬಿನ್ನಾಣದ ಅರಮನೆಯ ವಿಸ್ತ್ರೀರ್ಣದೊಳಗೆ
ಲಿಂಗಾರ್ಚನೆಯ ಮಾಡುವ ಮಠದ
ಕಟ್ಟಳೆ ಲಕ್ಷದ ಮೇಲೆ ತೊಂಬತ್ತಾರು ಸಾವಿರ.
ಇನ್ನು ಬಸವರಾಜದೇವರು ಮುಖ್ಯವಾದ ಅಸಂಖ್ಯಾತರ ಮಠಂಗಳು
ಆ ಕಲ್ಯಾಣದೊಳಗೆ ಎಷ್ಟು ಎಂದಡೆ:
ಹನ್ನೆರಡು ಸಾವಿರ ಕಟ್ಟಳೆಯ ನೇಮದ ಭಕ್ತರ ಮಠಂಗಳು,
ಇಪ್ಪತ್ತೆಂಟು ಸಾವಿರ ಮಹಾಮನೆಗಳು;
ಹತ್ತು ಸಾವಿರ ನಿತ್ಯನೇಮಿಗಳ ಮಠಂಗಳು;
ಹದಿನೈದು ಸಾವಿರ ಚಿಲುಮೆಯಗ್ಗವಣಿಯ ವ್ರತಸ್ಥರ ಮಠಂಗಳು;
ಐದು ಸಾವಿರ ವೀರವ್ರತನೇಮಿಗಳ ಕಟ್ಟಳೆಯ ಮಠಂಗಳು;
ಹನ್ನೆರಡು ಸಾವಿರ ಅಚ್ಚಪ್ರಸಾದಿಗಳ ಮಠಂಗಳು,
ಒಂದು ಸಾವಿರ ಅರವತ್ತು ನಾಲ್ಕು ಶೀಲಸಂಪನ್ನರ ಮಠಂಗಳು;
ನಿತ್ಯ ಸಾವಿರ ಜಂಗಮಕ್ಕೆ ಆರೋಗಣೆಯ ಮಾಡಿಸುವ ದಾಸೋಹಿಗಳ
ಮಠಂಗಳು ಮೂವತ್ತೆರಡು ಸಾವಿರ;
ನಿತ್ಯ ಐನೂರು ಜಂಗಮಕ್ಕೆ ಒಲಿದು ದಾಸೋಹವ ಮಾಡುವ
ಸತ್ಯಸದಾಚಾರಿಗಳ ಮಠಂಗಳು ಐವತ್ತೆಂಟು ಸಾವಿರ;
ನಿತ್ಯ ಸಾವಿರದೈನೂರು ಜಂಗಮಕ್ಕೆ ಒಲಿದು ದಾಸೋಹವ ಮಾಡುವ
ದಾಸೋಹಿಗಳ ಮಠಂಗಳು ಹನ್ನೊಂದು ಸಾವಿರ;
ನಿತ್ಯ ಅವಾರಿಯಿಂದ ಮಾಡುವ
ಮಾಟಕೂಟದ ಸದ್ಭಕ್ತರ ಮಠಂಗಳು ಒಂದು ಲಕ್ಷ;
ಜಂಗಮಸಹಿತ ಸಮಯಾಚಾರದಿಂದ ಲಿಂಗಾರ್ಚನೆಯ ಮಾಡುವ
ಜಂಗಮಭಕ್ತರ ಮಠಂಗಳು ಎರಡು ಸಾವಿರದೇಳ್ನೂರೆಪ್ಪತ್ತು;
ಅಂತು ಎರಡು ಲಕ್ಷವು ಎಂಬತ್ತೈದು ಸಾವಿರದ ಏಳುನೂರೆಪ್ಪತ್ತು.
ಇಂತಪ್ಪ ಅಸಂಖ್ಯಾತರಿಗೆ ಮುಖ್ಯವಾಗಿ ರುದ್ರಲೋಕದಿಂದಿಳಿತಂದ
ಪ್ರಮಥಗಣಂಗಳ ಮಠಂಗಳು ಏಳು ನೂರೆಪ್ಪತ್ತು.
ಇಂತೀ ಮಹಾಪ್ರಮಥರಿಗೆ ಪುರಾತರಿಗೆ ಅಸಂಖ್ಯಾತ
ಮಹಾಗಣಂಗಳಿಗೆ ಪ್ರಥಮ ನಾಯಕನಾಗಿ,
ಏಕಮುಖ, ದಶಮುಖ, ಶತಮುಖ, ಸಹಸ್ರಮುಖ,
ಲಕ್ಷಮುಖ, ಕೋಟಿಮುಖ, ಅನಂತಕೋಟಿಮುಖನಾಗಿ
ಭಕ್ತರಿಗೆ ಒಡನಾಡಿಯಾಗಿಪ್ಪನು ಸಂಗನಬಸವಣ್ಣ.
ಜಗದಾರಾಧ್ಯ ಬಸವಣ್ಣ, ಪ್ರಮಥಗುರು ಬಸವಣ್ಣ,
ಶರಣಸನ್ನಹಿತ ಬಸವಣ್ಣ, ಸತ್ಯಸಾತ್ವಿಕ ಬಸವಣ್ಣ,
ನಿತ್ಯನಿಜೈಕ್ಯ ಬಸವಣ್ಣ, ಷಡುಸ್ಥಲಸಂಪನ್ನ ಬಸವಣ್ಣ,
ಸರ್ವಾಚಾರಸಂಪನ್ನ ಬಸವಣ್ಣ, ಸರ್ವಾಂಗಲಿಂಗಿ ಬಸವಣ್ಣ,
ಸುಜ್ಞಾನಭರಿತ ಬಸವಣ್ಣ, ನಿತ್ಯಪ್ರಸಾದ ಬಸವಣ್ಣ,
ಸಚ್ಚಿದಾನಂದಮೂರ್ತಿ ಬಸವಣ್ಣ, ಸದ್ಯೋನ್ಮುಕ್ಮಿರೂಪ ಬಸವಣ್ಣ,
ಅಖಂಡಪರಿಪೂರ್ಣ ಬಸವಣ್ಣ, ಅಭೇದ್ಯಭೇದಕ ಬಸವಣ್ಣ,
ಅನಾಮಯಮೂರ್ತಿ ಬಸವಣ್ಣ,
ಮಹಾಮನೆಯ ಮಾಡಿದಾತ ಬಸವಣ್ಣ,
ರುದ್ರಲೋಕವ ಮತ್ರ್ಯಲೋಕಕ್ಕೆ ತಂದಾತ ಬಸವಣ್ಣ,
ಶಿವಚಾರದ ಘನವ ಮೆರೆದಾತ ಬಸವಣ್ಣ.
ಇಂತಹ ಬಸವಣ್ಣನ ಭಕ್ತಿಯನು ಒರೆದೊರೆದು ನೋಡುವ,
ಪ್ರಜ್ವಲಿತವ ಮಾಡುವ ಅಶ್ವಪತಿ, ಗಜಪತಿ, ನರಪತಿರಾಯ,
ರಾಜಾದಿರಾಜ ಬಿಜ್ಜಳರಾಯನೂ ಆ ಬಸವಣ್ಣನೂ ಆ ಕಲ್ಯಾಣಪಟ್ಟಣದೊಳಗೆ
ಸುಖಸಂಕಥಾವಿನೋದದಿಂದ ರಾಜ್ಯಂಗೆಯುತ್ತಿರಲು,
ಆ ಕಲ್ಯಾಣದ ನಾಮವಿಡಿದು ವಿವಾಹಕ್ಕೆ ಕಲ್ಯಾಣವೆಂಬ ನಾಮವಾಯಿತ್ತು.
ಲೋಕದೊಳಗೆ ಕಲ್ಯಾಣವೆ ಕೈಲಾಸವೆನಿಸಿತ್ತು.
ಇಂತಪ್ಪ ಕಲ್ಯಾಣದ ದರುಶನವ ಮಾಡಿದಡೆ ಭವಂ ನಾಸ್ತಿ,
ಇಂತಪ್ಪ ಕಲ್ಯಾಣವ ನೆನೆದಡೆ ಪಾಪಕ್ಷಯ,
ಇಂತಪ್ಪ ಕಲ್ಯಾಣದ ಮಹಾತ್ಮೆಯಂ ಕೇಳಿದಡೆ
ಕರ್ಮಕ್ಷಯವಹುದು, ಮೋಕ್ಷ ಸಾಧ್ಯವಹುದು,
ಇದು ಕಾರಣ, ಕೂಡಲಚೆನ್ನಸಂಗಮದೇವಾ,
ನಿಮ್ಮ ಭಕ್ತ ಬಸವಣ್ಣನಿದರಠಾವೆ ಮಹಾಕಲ್ಯಾಣವೆಂದರಿದು
ದಿವ್ಯಶಾಸನವ ಬರೆದು ಪರಿಸಿದ ಕಾರಣ,
ಎನ್ನ ಭವಂ ನಾಸ್ತಿಯಾಯಿತ್ತಯ್ಯಾ./1666
ಹಂದಿಯ ದಾಡಿಯಲ್ಲಿ ಹೊಯ್ಸಿಕೊಂಡ ಹಿರಣ್ಯಕ,
ಅರೆಮಾನಿಸನುಗುರ ಕೊನೆಯಲ್ಲಿ ಸೀಳಿಸಿಕೊಂಡ ಹಿರಣ್ಯಾಕ್ಷ;
ತಳಿಗೆಗೆ ತಲೆಗೊಟ್ಟ ಶಿಶುಪಾಲ,
ಕುಮಾರಿಯ ಕೈಯಲ್ಲಿ ಹೊಡಿಸಿಕೊಂಡ ಮಹಿಷಾಸುರ;
ಕಪಿಯ ಬಾಲದಲ್ಲಿ ಕಟ್ಟಿಸಿಕೊಂಡ ರಾವಣ.
ಹೊಲೆಯಂಗೆ ಆಳಾದ ಹರಿಶ್ಚಂದ್ರಮಹಾರಾಯ,
ಜೂಜಿಂದ ಭಂಗಿತರಾದರು ಪಾಂಡವರು,
ದುರ್ವಾಸನಿಂದ ಸಮಚಿತ್ತನಾದ ಪುರಂದರ, ತಾಯ ತಲೆತಿವಿದ ಪರಶುರಾಮ,
ಸತಿ ಹೇಳಿತ ಕೇಳಿದ ಶ್ರೀರಾಮ, ಹಕ್ಕಿಂದೊಪ್ಪಗೆಟ್ಟ ದೇವೇಂದ್ರ,
ಅಪರಾಹ್ನದರಿದ್ರನೆನಿಸಿಕೊಂಡ ಕರ್ಣ, ಮಡುಹೊಕ್ಕು ಅಡಗಿದ ದುಯರ್ೊಧನ;
ಕೇಡಿಂಗೆ ಹಿಂದು ಮುಂದಾದರು ಬಿಷ್ಮರು,
ವೇಶ್ಯೆಯ ಮನೆಗೆ ಕಂಬಿಯ ಹೊತ್ತ ವಿಕ್ರಮಾದಿತ್ಯ,
ಕಲ್ಯಾಣದಲ್ಲಿ ಬೆಳ್ಳಿಯ ಗುಂಡಾದ ವ್ಯಾಲ
ಬೆಳ್ಳಿಯ ಕಂದಾಲದ ಕೆರೆಯ ಹೊಕ್ಕ ಕೋರಾಂಟ;
ಚಕ್ರಕ್ಕೆ ತಲೆಗೊಟ್ಟ ನಾಗಾರ್ಜುನ.
ಹಗೆಯ ಕಂಪಲ ಹೊಕ್ಕ ರತ್ನಘೋಷ
ರಾಹುವಿಗೊಳಗಾದ ಚಂದ್ರ, ಕಟ್ಟಿಂಗೊಳಗಾದುದು ಸಮುದ್ರ,
ಶಿರವ ಹೋಗಾಡಿಸಿಕೊಂಡ ಬ್ರಹ್ಮ, ಕಾಲಿಂದ ಮರಣವಾಯಿತ್ತು ಕೃಷ್ಣಂಗೆ,
ನೀರಿನಿಂದ ಕೆಟ್ಟ ಚಂಡಲಯ್ಯ, ಪುತ್ರರಿಂದ ಕೆಟ್ಟ ದಶರಥ,
ಅಬಿಮಾನದಿಂದ ಕೆಟ್ಟ ಅಬಿಮನ್ಯು, ವಿದಿಯಿಂದ ಕೆಟ್ಟ ಶೂದ್ರಕ,
ನಿದ್ರೆಯಿಂದ ಕೆಟ್ಟ ಕುಂಭಕರ್ಣ, ಬಲಿಗೆ ಬಂಧನವಾಯಿತ್ತು.
ಇದು ಕಾರಣ, ಕೂಡಲಚೆನ್ನಸಂಗಮದೇವಾ
ನೀ ಮಾಡಿದ ಮಾಯೆಯ ಮಾಟವದಾರಾರನಾಳಿಗೊಳಿಸಿತ್ತು !/1667
ಹಗಲು ನಾಲ್ಕು ಜಾವ ಅಶನಕ್ಕೆ ಕುದಿವರು
ಇರುಳು ನಾಲ್ಕು ಜಾವ ವ್ಯಸನಕ್ಕೆ ಕುದಿವರು.
ಅಷ್ಟವಿಧಾರ್ಚನೆ ಷೋಡಶೋಪಚಾರ ಎಂಬರಲ್ಲದೆ
ತಮ್ಮನಿಕ್ಕಿ ನಿಧಾನವ ಸಾದಿಸುವರ ಆರನೂ ಕಾಣೆ
ಕೂಡಲಚೆನ್ನಸಂಗಮದೇವಾ. /1668
ಹಣವಕೊಟ್ಟು ಹಾದರವನಾಡುವದರಿಂದ
ತಾರವ ಕೊಟ್ಟು ಸೂಳೆಗೆಯ್ಯಬಾರದೆ?
ಧರ್ಮವ ಮಾಡುವಲ್ಲಿ ಕರ್ಮವುಂಟೆ?
ಧರ್ಮ ಕರ್ಮದ ಭೇದವನರಿದು ಮಾಡಲರಿಯರು.
ಅಡಗುಗಡಿವಂಗೆ, ಸುರೆಯ ಕುಡಿವಂಗೆ ಕೊಟ್ಟರೆ ಆ ಫಲ ತಪ್ಪದು
ಕೂಡಲಚೆನ್ನಸಂಗಯ್ಯಾ. /1669
ಹತ್ತರಲೊಂದು ಕಳೆದು ಅರುವತ್ತಾಯಿತ್ತು.
ಸಪ್ತಕ ಸಾದಿಸಲಾರವಶವಲ್ಲ,
ಶಶಿ ಸೂರ್ಯರ ವಶವಲ್ಲ, ದಶಕೋಟಿಯೆಯ್ದೆ ಅಳಿದುದು.
ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ
ಹತ್ತರ ಮೇಲೆ ಹನ್ನೊಂದರಂತಿದ್ದೆನಯ್ಯಾ./1670
ಹದಿನಾರು ತೆರದಿಂದ ಭಕ್ತಿಯ ಮಾಡುವೆನು,
ಷೋಡಶೋಪಚಾರಂಗಳನೆ ಮಾಡುವೆನು,
ಬಂದುದಕ್ಕೆ ಪರಿಣಾಮವ ಕೊಡುವೆನು, ಇದ್ದುದಕ್ಕೆ ಇಂಬುಗೊಡುವೆನು,
ಆಯತದಿಂದ ಲಿಂಗಾರ್ಚನೆಯ ಮಾಡುವೆನು,
ಸ್ವಾಯತದಿಂದ ಲಿಂಗಭೋಗೋಪಭೋಗವ ಮಾಡುವೆನು.
ಅನರ್ಪಿತಂಗಳ ಮುಟ್ಟಲೀಯದೆ, ಗುರುಪ್ರಸಾದಕ್ಕೆ ತನುವ ಇಂಬುಕೊಟ್ಟು,
ಲಿಂಗ ಪ್ರಸಾದಕ್ಕೆ ಮನವ ಇಂಬುಕೊಟ್ಟು,
ಜಂಗಮ ಪ್ರಸಾದಕ್ಕೆ ಪ್ರಾಣವ ಇಂಬುಕೊಟ್ಟು
ಇಂತೀ ತ್ರಿವಿಧ ನಿರ್ಣಯದಲ್ಲಿ ನೇಮಿಸಿ ನಡೆವೆ,
ಕೂಡಲಚೆನ್ನಸಂಗಯ್ಯಾ ನೀವು ಮುಂತಾಗಿ. /1671
ಹದಿನಾಲ್ಕು ಭುವನದಲ್ಲಿ ಮನವೇದ್ಯವನಾರು ಬಲ್ಲರಯ್ಯಾ ?
ದೂರದೂರವಾಗಿ ಮನ್ನಿಸುವರು,
ದೂರದೂರವಾಗಿ ಸಂಭಾಷಣೆಯ ಮಾಡುವರು.
ದೂರ ದೂರವೆನಲಿಲ್ಲ, ಕೂಡಲಚೆನ್ನಸಂಗಯ್ಯನ. /1672
ಹದಿನೆಂಟು ಯುಗದವರು ಲಿಂಗವ ಪೂಜಿಸಿ
ದೃಷ್ಟವಾವುದು ನಷ್ಟವಾವುದೆಂದರಿಯದೆ
ಭಾವ ಭ್ರಾಮಿತರಾದರು.
ಜೀವ ಸಂಕಲ್ಪಿಗಳಾದವರು
ಜೀವದಾಹುತಿಯನೆ ಲಿಂಗಕ್ಕರ್ಪಿತವೆಂಬರು,
ಭವದ ಬಳ್ಳಿಯ ಹರಿಯಲರಿಯರು,
ಇಂಥವನೆ ಭಕ್ತಳ ಇಂಥವನೆ ಪ್ರಸಾದಿ?
ಕೇಳು ಕೇಳು ಭಕ್ತನ ಮಹಿಮೆಯ (ಪ್ರಸಾದಿಯ ಮಹಿಮೆಯ):
ಪೃಥ್ವಿಯ ಸಾರಾಯದಲಾದ ಪದಾರ್ಥವ ಲಿಂಗಕ್ಕೆ ಕೊಡದ ಭಾಷೆ,
ಅಪ್ಪುವಿಂದಾದ ಅಗ್ಘಣೆಯ ಲಿಂಗಕ್ಕೆ ಕೊಡದ ಭಾಷೆ,
ತೇಜದಿಂದಾದ ನಿವಾಳಿಯ ಲಿಂಗಕ್ಕೆ ಕೊಡದ ಭಾಷೆ,
ವಾಯುವಿನಿಂದಾದ ಪರಿಮಳವ ಲಿಂಗಕ್ಕೆ ಕೊಡದ ಭಾಷೆ
ಆಕಾಶದಿಂದಾದ ಶೂನ್ಯವ ಲಿಂಗಕ್ಕೆ ಕೊಡದ ಭಾಷೆ
ಇದೇನು ಕಾರಣವೆಂದಡೆ:
ಮತ್ತೊಂದು ಪೃಥ್ವಿವುಂಟಾಗಿ, ಮತ್ತೊಂದು ಅಪ್ಪುವುಂಟಾಗಿ,
ಮತ್ತೊಂದು ತೇಜವುಂಟಾಗಿ, ಮತ್ತೊಂದು ವಾಯುವುಂಟಾಗಿ
ಮತ್ತೊಂದು ಆಕಾಶವುಂಟಾಗಿ,
ಇವರ ಮೇಲಣ ಪಾಕದ್ರವ್ಯವ ಲಿಂಗಕ್ಕೆ ಕೊಡುವುದು ಭಕ್ತಿ.
ಕೂಡಲಚೆನ್ನಸಂಗಾ ಅರ್ಪಿತ ಮುಖವ ನಿಮ್ಮ ಶರಣ ಬಲ್ಲ./1673
ಹದಿರು ಸೂಳೆಗೆ ಕಟಕಿ ವಿದ್ಯಾವಂತಂಗೆ,
ವಾದ್ಯ ವಾದನೆ ಹಾವಾಡಿಗಂಗೆ, -ಶಿವಭಕ್ತರಿಗುಂಟೆ ಅಯ್ಯಾ ?
ಒಬ್ಬರಿಗೊಬ್ಬರು ಮಚ್ಚರಿಸಬೇಕೆಂದು ಕೊಟ್ಟನೆ ಶ್ರೀಗುರು ಲಿಂಗವನು ?
ಶಿವಭಕ್ತರು ಲಿಂಗಜಂಗಮವೊಂದೆಂದು ಕಾಣದಿರ್ದರೆ
ಅಘೋರ ನರಕ ಕೂಡಲಚೆನ್ನಸಂಗಯ್ಯಾ. /1674
ಹನ್ನೆರಡು ಗಾವುದ ವಿಸ್ತೀರ್ಣದ ಮಹಾಪಟ್ಟಣಕ್ಕೆ
ಕಲ್ಯಾಣವೆಂಬ ಪ್ರಣತೆ, ಮಹತ್ತೆಂಬ ಎಣ್ಣೆ,
ಬಸವನೆಂಬ ಸ್ವಯಂಜ್ಯೋತಿ.
ಅಲ್ಲಿ ಕಾಳಯ್ಯ ಚವುಡಯ್ಯ ಕೋಲ ಸಾತಯ್ಯ,
ಮುಖವಾಡದ ಕೇಶಿರಾಜ ಖಂಡನೆಯ ಬೊಮ್ಮಣ್ಣ,
ಮಿಂಡ ಮಲ್ಲಿನಾಥ ಹಡಪದ ಅಪ್ಪಣ್ಣ ಮಡಿವಾಳ ಮಾಚಯ್ಯ,
ಅವ್ವೆ ನಾಗವ್ವೆ ಸಹಿತ ಇವರೆಲ್ಲರೂ ಸಂಗನಬಸವಣ್ಣನ ಬಯಲ ಕೂಡಿದರು.
ಇದು ಕಾರಣ, ಕೂಡಲಚೆನ್ನಸಂಗನಲ್ಲಿ
ಇವರ ಪ್ರಸಾದದ ಬಯಲೆನಗಾಯಿತ್ತು./1675
ಹರ ತನ್ನ ರೂಪ ತೋರಬೇಕೆಂದು, ಗುರುರೂಪಾಗಿ ಬಂದು
ಮನಸ್ಥಲಕ್ಕೆ ಮಂತ್ರವಾದ, ತನುಸ್ಥಲಕ್ಕೆ ಪ್ರಸಾದವಾದ, ಕರಸ್ಥಲಕ್ಕೆ ಲಿಂಗವಾದ
ಇಂತೀ ತ್ರಿವಿಧದಲ್ಲಿ ತ್ರಿವಿಧ ಸಾಹಿತ್ಯವಾದನಯ್ಯಾ
ಕೂಡಲಚೆನ್ನಸಂಗನ[ಲ್ಲಿ] ಬಸವಣ್ಣನು. /1676
ಹರ[ನಿತ್ತಾ]ಗ್ರಹ ನಿಗ್ರಹದ ಬೆಸನ, ಗುರುನಿರೂಪವೆಂದು ಕೈಕೊಂಡು,
ಕರುಣಿ ಬಸವಣ್ಣ ಕೈಲಾಸದಿಂದ
ಗುರುಲಿಂಗಜಂಗಮಕ್ಕೆ ಭಕ್ತಿಯ ಮಾಡಬೇಕೆಂದು
ಏಳುನೂರೆಪ್ಪತ್ತು ಅಮರಗಣಂಗಳು ಸಹಿತ ಮತ್ರ್ಯಲೋಕಕ್ಕೆ ಬಂದನಯ್ಯಾ.
ಶಿವಸಮಯಕ್ಕಾಧಾರವಾದನಯ್ಯಾ, ಬಸವಣ್ಣನು.
ಜಡರುಗಳ ಮನದ ಕತ್ತಲೆಯ ಕಳೆಯಲೆಂದು
ಕಟ್ಟಿತ್ತು ಕಲ್ಯಾಣದಲ್ಲಿ ಮಹಾಮಠವು.
ಪರಮನಟ್ಟಿದ ಓಲೆ ಬಂದಿಳಿಯಿತ್ತು, ಬಿಜ್ಜಳನ ಸಿಂಹಾಸನದ ಮುಂದೆ.
ಅದತಂದು ಓದಿದಡೆ ಸೃಷ್ಟಿಯ ಸೇನಬೋವರಿಗೆ ತಿಳಿಯದು
ಛಪ್ಪನ್ನ ದೇಶದ ಭಾಷೆಯ ಲಿಪಿ ಮುನ್ನವಲ್ಲ.
ಇದನೋದಿದವರಿಗೆ ಆನೆ ಸೇನೆ ಕುದುರೆ ಭಂಡಾರ
ಅರವತ್ತಾರು ಕರಣಿಕರಿಗೆ ಮುಖ್ಯನ ಮಾಡುವೆನೆಂದು
ಬಿಜ್ಜಳ ಭಾಷೆಯ ಕೊಡುತ್ತಿರಲು,
ಹರನಿರೂಪವ ಶಿರದ ಮೇಲಿಟ್ಟು ಶಿವಶರಣೆಂದು
ಬಸವಣ್ಣನೋದಿ ಮೆಟ್ಟಿ ತೆಗೆಸಿದನಯ್ಯಾ
ಅರವತ್ತಾರು ಕೋಟಿ ವಸ್ತುವ ಅರಮನೆಗೆ.
ರಾಜ್ಯಕ್ಕೆ ಅರಮನೆಗೆ [ಶಿರಃ ಪ್ರಧಾನ]ನಾಗಿ
ಹರಗಣಂಗಳಿಗೆ ಗತಿಮತಿ ಚೈತನ್ಯನಾಗಿ
ಕೂಡಲಚೆನ್ನಸಂಗಯ್ಯನಲ್ಲಿ
ಅಂಡಜದೊಳಗಿದ್ದು ಶಿವನ ಭಂಡಾರಿಯಾದನಯ್ಯಾ
ಎನ್ನ ತಂದೆ ಪೂರ್ವಾಚಾರಿ ಸಂಗನಬಸವಣ್ಣನು. /1677
ಹರಂಗೆಯೂ ತನಗೆಯೂ ಏಕೋಭಾಜನವೆಂಬರು,
ಗುರುಲಿಂಗ ಬಂದರೆ ಮತ್ತೊಂದು ಭಾಜನವ ತನ್ನಿಯೆಂಬ[ರಿಗೆ] ಲಿಂಗವುಂಟೆ ?
ಲಿಂಗವ ಮುಟ್ಟಿ ಹಿಂಗುವ ಭವಿಗಳಿಗೆ ಲಿಂಗವುಂಟೆ ?
ಲಿಂಗ ಜಂಗಮವನು ಮಹಾಪ್ರಸಾದವನು ಏಕವ ಮಾಡಿದವಂಗಲ್ಲದೆ.
ಏಕೋಭಾಜನವಿಲ್ಲ ಕೂಡಲಚೆನ್ನಸಂಗಮದೇವಾ. /1678
ಹರಿ ಬ್ರಹ್ಮ ಇಂದ್ರ ಚಂದ್ರ ರವಿ ಕಾಲ ಕಾಮ ದಕ್ಷ
ಇವರೊಳಗಾದ ಸಮಸ್ತ ದೇವ ದಾನವ ಮಾನವರೆಲ್ಲರು
ಶಿವಲಿಂಗದೇವರನಾರಾದಿಸಿಹೆವೆಂದು,
ಜಪ ಧ್ಯಾನ ಮೌನಾದಿ ತಪ ನಾನಾವ್ರತ ನೇಮಂಗಳಂ ಕೈಕೊಂಡು,
ಅರ್ಚನೆ ಪೂಜನೆಯಂ ಮಾಡಿ, ಹಲವು ಪ್ರಕಾರದಿಂದೊಲಿಸಿ
ಅನೇಕ ಫಲಪದಮುಕ್ತಿಯಂ ಪಡೆದು ಭೋಗಿಸಿ
ಸುಖಿಯಾಗಿರುತಿಹುದಕ್ಕೆ ಸಂಶಯವೇಕೆ ?
ಶ್ರುತ ದೃಷ್ಟ ಅನುಮಾನದಿಂ ತಿಳಿದುನೋಡಿ
ಅದಕೇನೂ ಸಂದೇಹಂ ಬಡಲಿಲ್ಲಯ್ಯಾ.
ಎರಡಿಲ್ಲದೆ ಏಕವಾದ, ಬಿನ್ನದೋರದೆ ಶಿವನಂಗವಾದ
ಶಿವಭಕ್ತನು ಇದರಂತೆ ಅಲ್ಲ.
ಜಪ ತಪ ಧ್ಯಾನ ಮೌನ ನಾನಾವ್ರತನಿಯಮಂಗಳಂ ಕೈಕೊಂಡು
ಅರ್ಚನೆ ಪೂಜನೆಯಂ ಮಾಡಿ, ಹಲವು ಪ್ರಕಾರದಿಂದೊಲಿಸಿ
ಅನೇಕ ಫಲಪದಮುಕ್ತಿಯ ಪಡೆದಹೆವೆಂದು ಅಲ್ಪಾಸೆವಿಡಿದು
ಭ್ರಮೆಗೊಳಗಾದ ಮರ್ಕಟಮನದ ಪರಿಯ ನೋಡಾ !
ಶಿವಶಿವ ಮಹಾದೇವಾ ಮಹಾವಸ್ತುವಿನಲ್ಲಿ ಭೇದವಿಲ್ಲದಿಪ್ಪ
ಅಭೇದ್ಯ ಶರಣಂಗೆ ಜಪದ ನೇಮವೆಲ್ಲಿಯದು ?
ಜಪದ ಫಲ ಕೈಸಾರಿದಂಗೆ ಧ್ಯಾನಮೌನವೆಲ್ಲಿಯದು ?
ಧ್ಯಾನದೇಹ ಅಳವಟ್ಟು ಅನಂದಿಪಂಗೆ ತಪದ ತಗಹೆಲ್ಲಿಯದು ?
ಇಹ-ಪರವೆಂಬ ಇದ್ದೆಸೆಗೆಟ್ಟಂಗೆ ವ್ರತನೇಮದ ನೋಂಪಿಯ ಸೂತಕವೆಲ್ಲಿಯದು ?
ಉದ್ಯಾಪನೆಯಂ ಮಾಡಿ ಮಹಾಪುರುಷನಂ ಪಡೆದು
ತೆರಹಿಲ್ಲದೆ ಪತಿಭಕ್ತಿಯ ಮಾಡುವ ಸಜ್ಜನ ಸತಿಗೆ
ಅರ್ಚನೆ ಪೂಜನೆಯಂ ಮಾಡುವ ದಂದುಗವೆಲ್ಲಿಯದೊ ?
ತನು ಮನ ಧನ ಮುಂತಾದುವೆಲ್ಲವು ಶಿವನೊಡವೆಯೆಂದು ಮಾಡುವ ಸದ್ಭಕ್ತಂಗೆ
ಆವಾಗಲೂ ಶಿವನ ಸೇವೆಯ ಮಾಡುವ ಕೈಗಳಿಗೆ
ಮಣಿಯ ಹಿಡಿದು ತಿರುಹಬೇಕೆಂಬ ಕೋಟಲೆಯೇಕೆ ?
ಅನುಶ್ರುತವು ನೆನೆವ ಮನದ ನೆನಹ ಬಿಡಿಸಿ
ಎಣಿಕೆಗಿಕ್ಕಿ ಸಂದೇಹಿಸುವ ಸಂಚಲವೇಕೆ ?
ಅನಿಮಿಷನಾಗಿ ನೋಡುವ ದೃಷ್ಟಿಗೆ,
ಎವೆಯ ಮರೆ ಮಾಡಿಕೊಂಡು ಕಣ್ಣುಮುಚ್ಚಲೇತಕ್ಕೆ ?
ಕಣ್ಣು ಮನ ಕೈ (ಈ) ತ್ರಿಸ್ಥಾನದಲ್ಲಿರಿಸಲರಿಯದೆ
ಭೇದವ ಮಾಡಿ ಅಗಲಿಸುವ ಜಪ ತಾನೇಕೆ ?
ಪರಿಪೂರ್ಣವಾಗಿಹ ಸರ್ವಪದವನೀವ ಸ್ವತಂತ್ರ ಪರಾತ್ಪರವಸ್ತುವನಗಲಿ
ದೂರಕಿಕ್ಕಿ, ಎಡೆದೆರಹ ಮಾಡಿ ಖಂಡಿಸಿ (ಕಂಡಹೆ)ನೆಂಬ ಧ್ಯಾನಮನವೇಕೆ ?
ಸಮರ್ಥತೆಯನುಳ್ಳ ಮಹಾಪದದೊಳಗಿದ್ದು, ಅಲ್ಪಪದವ ಸಾದಿಸೇನೆಂದು
ಕಾಯವ ದಂಡಿಸಿ ಆತ್ಮನಿಗ್ರಹವ ಮಾಡಿ,
ಬಟ್ಟೆಗುತ್ತಗೆತನವ ಹಣ್ಣಿ, ತಗಹಿನಲ್ಲಿ ಕುಳ್ಳಿರ್ದು ಬೇಡಿಕೊಂಬ ತಪ ತಾನೇಕೆ ?
ಮುಟ್ಟಿತ್ತೆಲ್ಲ ಪವಿತ್ರ, ನೋಡಿತ್ತೆಲ್ಲ ಪಾವನ,
ನಿರ್ಮಾಯನೆಂಬ ನಿರ್ಮಳಾಂಗ ನಿತ್ಯಶುದ್ಧದಾಸೋಹದೊಳಿರುತ
ಸೂತಕ ಬಿಡದೆಂದು, ಜಡಕ್ರೀಯಿಂದ ಭಾಷೆಗೊಡಲ ಗುರಿಮಾಡಿ
ಮೀಸಲಾಗಿಹ ಪ್ರಾಣವನಿರಿದುಕೊಂಡು ಸಾವ ಸಂಕಲ್ಪ ವ್ರತನೇಮವೇಕೆ ?
ಪೂಜೆಯು ಪೂಜ್ಯನು ಪೂಜಿಸುವವ-
ಈ ತ್ರಿವಿಧದೋಜೆಯ ಸೂತ್ರಾತ್ಮಕ ತಾನೆ ಎಂಬ ಹವಣನರಿದು,
ಅರಿವಿಂಗಾಶ್ರಯವಾಗಿರಲರಿಯದೆ; ನಾನಾ ಪರಿಯಿಂದ ಒಲಿಸಿ ಮೆಚ್ಚಿಸಿ
ಸ್ವರ್ಗಾದಿ ಭೋಗ ಧರ್ಮಕರ್ಮವನುಂಬ ಕೈಕೂಲಿಕಾರಕರ್ಮಿಗಳಂತೆ
ಮಾಡುವ ಅರ್ಚನೆ ಪೂಜನೆಯ ಆಯಸವೇಕೆ ?
ಜಪದ ಜಾಡ್ಯದ ಜಂಜಡದವನಲ್ಲ,
ಧ್ಯಾನಮೌನದಿಂದ ಬಿಗಿದು ಬೆರೆತಿಹ ಬಂಧನದವನಲ್ಲ.
ತಪದ ದಂಡನೆಯ ತಗಹಿನವನಲ್ಲ, ವ್ರತನೇಮದ ಸೂತಕಿಯಲ್ಲ,
ಅರ್ಚನೆ ಪೂಜನೆಯ ಫಲ[ಗ್ರಾಹ]ಕನಲ್ಲ, ಹರಕೆಗೆ ಹವಣಿಸಿ ಬೆರೆತಹನಲ್ಲ,
ನೆವದಿಂದ ತದ್ದಿನವ ಮಾಡಬೇಕೆಂಬ ಉದ್ದೇಶಿಯಲ್ಲ,
ವರುಷಕ್ಕೊಂದು ತಿಥಿಯೆಂದು ಕೂಡಿ ಮಾಡುವ ಕೀರ್ತಿವಾರ್ತೆಗೆ
ಮುಯ್ಯಾನುವನಲ್ಲ, ಮಿಕ್ಕಾದ ಕಿರುಕುಳ ಬಾಧೆ ಆದಿವಿಡಿಯದ
ಸಹಜಸಂತೋಷಿ, ಸರ್ವಾಂಗದೊಳ್ ತನ್ಮಯನಾಗಿರುತ್ತ, ಬಿನ್ನವೇಕೆ ?
ಹಾಲ ಸಾಗರದೊಳಗೋಲಾಡುತಿರ್ದು ಓರೆಯಾವಿನ ಬೆನ್ನ ಹರಿವನಲ್ಲ,
ಪರುಷದ ಗಿರಿ ಕೈಸಾರಿರಲು; ನಾಡ ಮಣ್ಣ ಕೂಡಲಿಕ್ಕಿ ತೊಳೆದು
ಹಾಗವ ಸಾದಿಸಬೇಕೆಂಬ ಧಾವತಿಯವನಲ್ಲ,
ಅತ್ಯಂತ ಸ್ನೇಹದಿಂದ ನೆನಹಿನಲ್ಲಿ ಮನಕ್ಕೆ ಬಂದು ನೆಲೆಗೊಂಡಿರುತ್ತಿರಲು
`ಆಹಾ ಪುಣ್ಯವೆ’ ಎಂದು ಕ್ರೀಡಿಸುವ ರತಿಸುಖವಂ ಬಿಟ್ಟು
ನೆನಹಿನ ಆಸೆಯಿಂದ ತೊಳಲಿ ಬಳಲುವ ಮರಹಿನವನಲ್ಲ.
ಕೆಲವು ಮತದವರಂತೆ ಕಂಡಹೆನೆಂದರಿಸಿ ಆಡುವನಲ್ಲ
ಕೆಲವು ಮತದವರಂತೆ ತೆರಪಿಟ್ಟು ಅರಸುವನಲ್ಲ
ತಾನಲ್ಲದನ್ಯವಿಲ್ಲವೆಂದು ಅಹಂಕರಿಸಿ ಬೆರೆವವನಲ್ಲ.
ಮತ್ತೆ ಉಳಿದಾದ ಕಾಕುಮತದ ಸೊಗಸಿಗೆಳಸನಾಗಿ, ಹೊಲಬುಗೆಡುವನಲ್ಲ.
ಹೊತ್ತುದ ಹುಸಿ ಮಾಡಿ ಮತ್ತೆ ಉಂಟೆಂದು ಭೇದವ ಮಾಡುವ
ದುಷ್ಟದುಷ್ಕರ್ಮಿಗಳ ಪರಿಯವನಲ್ಲ.
ಮಾಡಿಹೆನೆಂಬ ಸಂಸಾರದ ಬಂಧನದವನಲ್ಲ.
ಮಾಡಲೊಲ್ಲೆನೆಂಬ ವಿಕಳವಾವರಿಸಿಹ ವೈರಾಗ್ಯದ ಉದಾಸೀನದವನಲ್ಲ.
ಋತುವುಳ್ಳ ಸತಿಯ ರತಿಕೂಟದಂತೆ
ಮುಂದೆ ಅಗಲಿಸುವ ಕಷ್ಟದ ಸುಖವನೊಲುವನಲ್ಲ.
ಋತುವರತ ಸತಿಯ ರತಿಕೂಟದಂತೆ
ಅಗಲಿಕೆಯಿಲ್ಲದ ಸುಖದ ಸಂಯೋಗದ ನೆಲೆಯನರಿದಾತಂಗೆ;
ಮಾಡುವಾತ ತಾನು ಮಾಡಿಸಿಕೊಂಬಾತ ತಾನು
ಸೋಹ ದಾಸೋಹ ತಾನೆಂದು ಬೇರೆನ್ನದೆ
ದಾತೃ ಭೋಕ್ತೃ ಶಿವನೊಬ್ಬನಲ್ಲದೆ,
ಬೇರೆ ಬೇರೆ ತಮತಮಗೆ ಒಡೆಯರುಂಟೆ ? ಇಲ್ಲ.
ಆದಿ ಪರಶಿವ ತಾನೆ ಎಂದು ಮಾಡುವ ಮಾಟ,
ಸಟೆಯಿಲ್ಲದೆ ದಿಟ ಘಟಿಸಿ ಸಯವಾಗಿ ನಿಂದು
ನಿರಾಶೆಯ ಕುಳ(ನಿರಾಕುಳರಿ)ದ ಅನುವನರಿತು
ನಿಜವೆಡೆಗೊಂಡ ನಿಲವ ಪ್ರಮಾಣಿಸಿ ಕಾಬಂತೆ, ಮಾಡಬೇಕೆಂದು
ದ್ರವ್ಯವ ಸಂಕಲ್ಪಿಸಿ ಕೊಟ್ಟವರಾರು ?
ಮಾಡಬೇಕೆಂಬ ಅರಿವಿನ ಕಣ್ದೆರೆಸಿದವರಾರು ?
ಮಾಡುವೆನೆಂದು ನೆನೆವ ಚೇತನದ ಪ್ರಾಣವ ತಂದಿರಿಸಿದವರಾರು ?
ಮಾಡಿಹೆನೆಂಬ, ಮಾಡಬೇಕೆಂಬ, ಮಾಡುವ-
ಇವನೆಲ್ಲವ ಅರಿವಡಿಸಿಕೊಂಡಿಹ ಕಾಯವ ರೂಪಿಸಿದರಾರು ?
ಆದಿಯಿಂದವೆ ನುಡಿದು ನಡೆದು ರೂಪಾಗಿ ಪ್ರಭಾವಿಸಿ
ವ್ಯಾಪಾರಕ್ಕೆ ಸಂದೆವೆಂಬ ಹವಣಗಾರರು
ಬರಿಯ ವಳಾವಳಿಯಿಂದ, ನಾ ಮಾಡಿದಹೆನೆಂದು ಪ್ರತಿಜ್ಞೆಯಂ ಕೈಕೊಂಡು,
ಇಲ್ಲದುದನುಂಟುಮಾಡಿ, ಪಡೆದು ಸಾದಿಸೆಹೆನೆಂಬ ಬಯಕೆಯ ಸಂಭ್ರಮದಾಯಸ
ತಲೆಗೇರಿ, ಉಬ್ಬಿ ಹರಿದಾಡುವ,
ಅವಿಚಾರದ ಮನದ, ಮರವೆ ಬಲಿದ ಇರವಿನ ಪರಿಯ ನೋಡಾ !
ಶಿವ ಮಹಾದೇವಾ.
ಶಿವ ತನ್ನ ಲೀಲಾ ವಿನೋದಕ್ಕೆ ಸಕಲವನು ರೂಪಿಸಿ ಆಗುಮಾಡಿಕೊಂಡಿರುತ್ತಿರಲು,
ಹುಚ್ಚುಗೊಂಡಂತೆ ಎಲ್ಲವೂ ನನ್ನಿಂದಾಯಿತು, ನಾ ಮಾಡಿದೆನೆಂದು
ಉಲಿವ ದೇಹಿಯ ಇನ್ನೇನೆನಬಹುದಯ್ಯ ?
ಅವರಿಂದಾದ ಒಡವೆಯ ಅವರಿಗೆ ಈವುದು, ಉಪಚರಿಯವೆ ?
ನದಿಯುದಕವ ನದಿಗರ್ಪಿಸುವಂತೆ
ಒಡೆಯಂಗೊಡವೆಯನರ್ಪಿಸಿ ತಾ ಶುದ್ಧನಾಗಿ
ನಡೆನುಡಿಯಲ್ಲಿ ಕವಲುದೋರದೆ ತನ್ನಲ್ಲಿ ತಾನೆ ತಿಳಿದು,
ಘನವೆಡೆಗೊಂಡ ಮಹಾನುಭಾವಿಗಳು;
ಎಲ್ಲವನಳವಡಿಸಿಕೊಂಡಿಹ ಕಾಯವ ಗುರುವೆಂದೆ ಸಾದಿಸಿದ
ನೆನೆವ ಚೇತನದ ಪ್ರಾಣವ ಲಿಂಗವೆಂದೆ ಭಾವಿಸಿದ
ಅರಿವಿನ ಜ್ಞಾನವ ಜಂಗಮವೆಂದೆ ಅರಿದ
ನಮ್ಮ ಕೂಡಲಚೆನ್ನಸಂಗಮದೇವರು./1679
ಹರಿದ ಶಿರವ ಹಚ್ಚಿ ಮೆರೆದರು ನಮ್ಮ ಶರಣರು,
ಭಕ್ತಿಯ ಪ್ರಭಾವದಿಂದ.
ಬರಡಾಕಳವ ಕರೆದು ಚರತತಿಗಿತ್ತರು ನಮ್ಮ ಶರಣರು,
ಭಕ್ತಿಯ ಪ್ರಭಾವದಿಂದ.
ಪೂರ್ವಕುಲಗೋತ್ರವನಳಿದು ಪುನೀತರಾದರು ನಮ್ಮ ಶರಣರು
ಭಕ್ತಿಯ ಪ್ರಭಾವದಿಂದ.
“ಭಕ್ತೇರಸಾಧ್ಯಂ ನ ಹಿ ಕಿಂಚಿದಸ್ತಿ
ಭಕ್ತ್ಯಾ ಸರ್ವಸಿದ್ಧಯಃ ಸಿದ್ಧ್ಯಂತಿ ‘
ಎಂಬ ವಚನವುಂಟಾಗಿ-ಭಕ್ತಂಗೆ ಅಸಾಧ್ಯವಾವುದು ?
ಅದು ಕಾರಣ, ನಿಮ್ಮಡಿಯ ಭಕ್ತಿಯನೊಂದನೆ ಕರುಣಿಸಿ
ಕಾಪಾಡಯ್ಯಾ ಕೂಡಲಚೆನ್ನಸಂಗಮದೇವಾ. /1680
ಹರಿವ ಹಾವಿಂಗೆ ಹಾಲನೆರೆವ ಪ್ರಾಣಿಗಳು
ಹಾವಿನ ಅಂತರಂಗವನೆತ್ತ ಬಲ್ಲರು ಹೇಳಾ ?
ಕೈಲೆಡೆಗೊಟ್ಟ ಲಿಂಗಕ್ಕೆ ಮಜ್ಜನಕ್ಕೆರೆವ ಪ್ರಾಣಿಗಳು
ಪ್ರಾಣಲಿಂಗಸಂಬಂಧ ಸಕೀಲವನೆತ್ತ ಬಲ್ಲರು ಹೇಳಾ ?
ಪಾಣಿನಾ ಧೃತಲಿಂಗಂ ತತ್ ಪ್ರಾಣಸ್ಥಾನೇ ವಿನಿಕ್ಷಿಪೇತ್
ಯಸ್ತು ಭೇದಂ ನ ಜಾನಾತಿ ನ ಲಿಂಗಂ ಸತ್ಯ ನಾರ್ಚನಂ
ಲಿಂಗ ಜಂಗಮ ಒಂದೆಂದರಿಯದವರ ಮಾಟ
[ಅವರ] ವಿದಿಯಂತೆ ಕೂಡಲಚೆನ್ನಸಂಗಮದೇವಾ./1681
ಹಲವು [ಪರಿಯ] ಪುಷ್ಪದಲ್ಲಿ ಪರಿಮಳವನರಸುವರೆ ?
ಪಿರಿದು ರಸದಾಳಿಯ ಕಟ್ಟಿನಲ್ಲಿ ಹಣ್ಣನರಸುವರೆ ?
ಸುರಬಿಗೆ ತನು ಕತ್ತಲೆಯೆಂದು ಬೆಳಗನರಸುವರೆ ?
ಪರಶಿವಮೂರ್ತಿ ಸಂಗನ ಶರಣರಲ್ಲಿ ಕ್ರಿಯೆ ನಿಃಕ್ರಿಯೆಯನರಸುವರೆ ?
ಅವರಿದ್ದಿರವೆ ಮುಕ್ತಿ, ಕೂಡಲಚೆನ್ನಸಂಗಮದೇವಾ. /1682
ಹಲವು ಕಾಲ ಹಂಸೆಯ ಸಂಗದಲ್ಲಿದ್ದರೆ ಬಕನು ಶುಚಿಯಾಗಬಲ್ಲುದೆ ?
ನಿದಿನಿಧಾನದೊಳಗಿದ್ದರೇನು ಪಾಷಾಣ ಹೊನ್ನಾಗಬಲ್ಲುದೆ ?
ಕಲ್ಪತರುಗಳ ಸಂಗದಲ್ಲಿದ್ದರೇನು ಕೊರಡು ಫಲವಾಗಬಲ್ಲುದೆ ?
ಕಾಶೀಕ್ಷೇತ್ರದಲ್ಲಿ ಶುನಕನಿದ್ದರೇನು ಅದರ ಕ್ಷೀರ ಪಂಚಾಮೃತವಾಗಬಲ್ಲುದೆ ?
ಖಂಡುಗ ಹಾಲೊಳಗೆ ಇದ್ದಿಲ ಹಾಕಿದರೇನು ಬಿಳಿದಾಗಬಲ್ಲುದೆ ?
ಇದು ಕಾರಣ ಕೂಡಲಚೆನ್ನಸಂಗನ ಶರಣರ ಸನ್ನಿದಿಯಲ್ಲಿದ್ದರೇನು
ಅಸಜ್ಜನ ಸದ್ಭಕ್ತನಾಗಬಲ್ಲನೆ ? /1683
ಹಲವು ದೈವಂಗಳ ಪೂಜೆಯ ಮಾಡುವ ಗೊರವನ
ಗುರುದೇವನೆಂದು ನುಡಿದು ಕರೆವ
ವಿವೇಕವಿಹೀನ ದುರಾಚಾರಿಯ ಮುಖವ ನೋಡಲಾಗದು.
ಸರ್ವದೇವರಿಗೆ ಒಡೆಯನಾದಂತಹ ಸದಾಶಿವನೆ ಗುರುದೇವನು.
ಶಿವಲಿಂಗಕ್ಕೆ ತಮ್ಮ ಪಾದತೀರ್ಥ ಪ್ರಸಾದವನೀವ
ವೀರಮಾಹೇಶ್ವರ ಜಂಗಮದೇವರು, ತನಗೆ ಗುರುದೇವ ಮಹಾದೇವನು.
ಅದೆಂತೆಂದಡೆ:
ಗುರುದೇವೋ ಮಹಾದೇವೋ ಗುರುದೇವಸ್ಸದಾಶಿವಃ
ಗುರುದೈವಾತ್ ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ ಎಂತೆಂದುದಾಗಿ,
ಗುರುದೇವನೆಂಬ ಶಬ್ದವು ಉಳಿದವರಿಗೆ ಸಲ್ಲದು.
“ಏಕೋ ದೇವೋ ನ ದ್ವಿತೀಯಃ” ಎಂದು ಶುದ್ಧಶೈವನಿಷ್ಠಾಪರನಾಗಿ
ಶಿವಮಹೇಶ್ವರನ ಎರಡನೆಯ ಶಿವನೆಂದು ಭಾವಿಸಿ
ಅವನೊಕ್ಕು ಮಿಕ್ಕುದ ಶೇಷಪ್ರಸಾದವೆಂದುಕೊಂಡು
ಅನ್ಯಾಯವನರಿಯದ ಶುದ್ಧಪತಿವ್ರತೆಯಂತೆ, ಶಿವಲಿಂಗೈಕ್ಯಭಾವದಿ ಅರಿವಾಗಿ
ನಚ್ಚಿ ಮಚ್ಚಿ ಮನವು ಲಿಂಗದಲ್ಲಿ ನೆಲೆಗೊಂಡು ನಿಂದ
ಸುಜ್ಞಾನಭರಿತನ ಅಯ್ಯನೆಂಬುದು. ಮಿಕ್ಕಿನ ಶೈವನೆಂಬುದು,
ಮಿಕ್ಕಿನ ಕೀಳುದೈವದ ಪೂಜೆಯ ಮಾಡುವ[ನ] ಗೊರವನೆಂಬುದು.
ಅದೆಂತೆಂದಡೆ:
ತೊತ್ತು ತೊಂಡರ ಕಾಲ ತೊಳೆದು ಸೇವೆಯ ಮಾಡಿ ಬದುಕುವನ,
ಪಡಿದೊತ್ತಿನ ಮಕ್ಕಳೆಂದು ಎಂಬರಲ್ಲದೆ, ರಾಜಕುಮಾರನೆಂದೆನ್ನರು.
ಆ ಪ್ರಕಾರದಲ್ಲಿ ವಿಪ್ರ, ಭ್ರಷ್ಟ, ನಂಟ, ಶ್ವಪಚ ಮಾನವರ ವೇಷ ತಾಳಿ
ಹಲಬರ ಹೊಗಳಿ ಕೀಳು ದೈವದ ಕಾಲು ತೊಳೆದು ಎಂಜಲ ತಿಂಬ
ಭ್ರಷ್ಟಜಾತಿಯ ಗುರುದೇವನೆಂದು ಹೇಸಿಕೆಯಿಲ್ಲದೆ ನುಡಿದು ಕರೆವ
ದುರಾಚಾರಿಗಳಿಗೆ ಶಿವಭಕ್ತಿ ಸಲ್ಲದು, ನರಕ ತಪ್ಪದು,
ಅಂಜದೆ ಕರೆಸಿಕೊಂಬ ಅಜ್ಞಾನಿ ಗೊರವಂಗೆ ಮೊದಲೆ ನರಕ ತಪ್ಪದು ಕಾಣಾ
ಕೂಡಲಚೆನ್ನಸಂಗಮದೇವಾ./1684
ಹವಣಿಲ್ಲದ ಶಾಖೆಯ ಕಪಿ ಕೈವಿಡಿಯಲೊಲ್ಲದು,
ಗಮನವಿಲ್ಲದೆ ಪಿಕಶಿಶು ನುಡಿಯಲೊಲ್ಲದು,
ಪ್ರಭಾವಿಸಿದಲ್ಲದೆ ಉಲಿಯದು ಕುಕ್ಕುಟ.
ಈ ತ್ರಿವಿಧದ ಭೇದವ ನೋಡಿರೆ ಭಕ್ತರಪ್ಪರೆಲ್ಲ.
ಹೂ ಮಿಡಿಯ ಹರಿದಡೆ ಹಣ್ಣಪ್ಪುದೆ ?
ಹಸಿವು ತೃಷೆ ನಿದ್ರೆ ಆಲಸ್ಯವುಳ್ಳನ್ನಕ್ಕರ ಅದ್ವೈತವುಂಟೆ ಜಗದೊಳಗೆ ?
ತನ್ನ ಮರೆದು ಲಿಂಗವ ಮರೆವುದು,
ತನ್ನ ಮರೆಯದೆ ಲಿಂಗವ ಮರೆವ ಯೋಗವೆಂಥದೋ ?
ಸುಡು ಸುಡು ಅವರು ಗುರುದ್ರೋಹಿಗಳು, ಆಚಾರಭ್ರಷ್ಟರು.
ಉಭಯ ತನುಗುಣನಾಸ್ತಿಯಾಗದನ್ನಕ್ಕರ
ಕೂಡಲಚೆನ್ನಸಂಗಯ್ಯನೆಂತೊಲಿವನು ? /1685
ಹಸರದ ಪಸರದ ಭಕ್ತಿಯ ಹಸರಿಸಿ
ಬೆಸಗೊಂಬರೆ, ನಾವು ಗುರುವೆಂಬಿರಿದಕಿನ್ನೆಂತಯ್ಯ ?
ದಶದಳ ಸೂತಕವರ್ಣವಳಿಯದನ್ನಕ್ಕ ನಾವು ಗುರುವೆಂಬಿರೆಂತಯ್ಯಾ ?
ತನ್ನ ಶಿಷ್ಯರ ಕೈಯ ನಿಷ್ಕವ ಕೊಂಬ ಪಾತಕರ ನುಡಿಯ ಕೇಳಲಾಗದು,
ಕೂಡಲಚೆನ್ನಸಂಗಮದೇವಾ./1686
ಹಸಿವರತಲ್ಲದೆ ಪ್ರಸಾದಿವೇದಿಯಲ್ಲ,
ತೃಷೆಯರತಲ್ಲದೆ ಪಾದೋದಕವೇದಿಯಲ್ಲ,
ನಿದ್ರೆಯರತಲ್ಲದೆ ಭವವಿರಹಿತನಲ್ಲ.
ಅನಲ ಪವನ (ಗುಣವರತಲ್ಲದೆ) ಜನನ ಮರಣ ರಹಿತನಲ್ಲಯ್ಯ.
ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ
ಲಿಂಗೈಕ್ಯವೆಲ್ಲರಿಗೆಲ್ಲಿಯದು ? /1687
ಹಸಿವಿನ ಹಂಗಿಗೆ ಭವಿಪಾಕಕ್ಕಿಚ್ಛೆಯ ಮಾಡುವರು.
ಮಥನದ ಹಂಗಿಗೆ ಭವಿಯ ಸಂಗಕ್ಕಿಚ್ಛೆಯ ಮಾಡುವರು.
ಶ್ರೋತ್ರ ನೇತ್ರದ ಸುಖವ ಭುಂಜಿಸುವನ್ನಕ್ಕ
ಭಕ್ತನೆಂತೆಂಬೆ ? ಲಿಂಗೈಕ್ಯನೆಂತೆಂಬೆ ?
ಕೂಡಲಚೆನ್ನಸಂಗಯ್ಯಾ,
ಅವರು ಸಮಯಾಚಾರಕ್ಕೆ ದೂರ ನೋಡಯ್ಯಾ. /1688
ಹಸಿವು ತೃಷೆ ನಿದ್ರೆ ರೋಗಾದಿ ಬಾಧೆಗಳು
ತನಗಾಗುತ್ತಿಹವೆಂಬ ಜೀವಭಾವವ ಮರೆದು,
ಅವು ಲಿಂಗದ ಸದಿಚ್ಛೆಯಿಂದ ಅಂಗಕ್ಕುಂಟಾಗಿಹವೆಂಬ
ಶಿವಭಾವವು ಸದಾಸನ್ನಿಹಿತವಾಗಿದ್ದಡೆ
ಶರಣನ ಹಸಿವು ತೃಷೆ ಮುಂತಾದ ಸರ್ವಭಂಗವು
ಲಿಂಗದಲ್ಲಿ ಲೀನವಾಗಿ, ಹುಟ್ಟುಗೆಟ್ಟು, ಸಾವಿನಸಂತಾಪವಿಲ್ಲದೆ
ನಾನು ನನ್ನದೆಂಬಹಂಕಾರ ಮಮಕಾರಗಳು ಮರೆಮಾಜಿ
ಸಂಚಿತ ಅಗಾಮಿ ಪ್ರಾರಬ್ಧವೆಂಬ ಕರ್ಮತ್ರಯ ಮುಂತಾದ
ಪಾಶಗಳು ನಾಶವಾಗಿ, ನಿತ್ಯಮುಕ್ತಿಯಾಗುತ್ತಿಹುದಯ್ಯಾ.
ಕೂಡಲಚೆನ್ನಸಂಗಮದೇವಾ,
ಇದು ನಿಮ್ಮ ಭಕ್ತಿದೇವತೆಯ ಚಮತ್ಕೃತಿಯೆಂದರಿದೆನು./1689
ಹಸಿವು ತೃಷೆ ವಿಷಯವೆಂಬ ಮರಂಗಳನೆ ಕಂಡು,
ಪರಿಣಾಮವೆಂಬ ಕೊಡಲಿಯಲ್ಲಿ ತತ್ತರಿದರಿದು,
ಕಾಮ ಕ್ರೋಧ ಲೋಭ ಮೋಹ ಮದಮತ್ಸರಂಗಳ ತರಿದೊಟ್ಟಿದನೊಂದೆಡೆಯಲ್ಲಿ.
ಪಂಚೇಂದ್ರಿಯ, ಷಡುವರ್ಗ, ಸಪ್ತಧಾತು, ಅಷ್ಟಮದವೆಂಬ ಬಳ್ಳಿಯ ಸೀಳಿ,
ಏಳು ಕಟ್ಟಿನ ಮೋಳಿಗೆಯನೆ ಹೊತ್ತು ನಡೆದನಯ್ಯಾ.
ಆಶೆ ಆಮಿಷ ತಾಮಸವೆಂಬ ತುರಗವನೇರಿ
ಆತುರದ ತುರವನೆ ಕಳೆದನಯ್ಯಾ-ಈ ಮಹಾಮಹಿಮಂಗೆ,
ಜಗದ ಜತ್ತಿಗೆಯ, ಹಾದರಗಿತ್ತಿಯ,
ಹದಿನೆಂಟು ಜಾತಿಯ ಮನೆಯಲ್ಲಿ ತೊತ್ತಾಗಿಹ
ಶಿವದ್ರೋಹಿಯ ಲಿಂಗವಂತರ ಮನೆಯಲ್ಲಿ ಹೊಗಿಸುವರೆ ?
ಎಲೆ ಲಿಂಗತಂದೆ, ಜಡವಿಡಿದು ಕೆಟ್ಟೆನಯ್ಯಾ, ಭಕ್ತಿಯ ಕುಲವನರಿಯದೆ.
ಎಲೆ ಲಿಂಗದಾಜ್ಞಾಧಾರಕಾ, ಎಲೆ ಲಿಂಗಸನುಮತಾ, ಎಲೆ ಲಿಂಗೈಕಪ್ರತಿಗ್ರಾಹಕಾ.
ಕೂಡಲಚೆನ್ನಸಂಗಯ್ಯನಲ್ಲಿ, ಮೋಳಿಗೆಯ ಮಾರಿತಂದೆಗಳ ಶ್ರೀಪಾದಕ್ಕೆ
ನಮೋ ನಮೋ ಜಯಜಯತು. /1690
ಹಸಿವು ಹರಿದು, ತೃಷೆ ಬತ್ತಿ, ಪರಿಣಾಮವೆ ಪಥ್ಯವಾಗಿ ನಿಂದಂಗ
ನೀನಾದ ಕಾರಣ,
ನಿನ್ನ ಕಾರುಣ್ಯಚಕ್ಷು ಎನ್ನ ನಿರೀಕ್ಷಿಸಿದಲ್ಲಿ,
ಎನ್ನ ಬಂಧ ಮೋಕ್ಷವೆಂಬುವು ಅಂದೆ ನಿಂದವು.
ಕೂಡಲಚೆನ್ನಸಂಗಮದೇವರಲ್ಲಿ
ಪ್ರಭುದೇವರ ಸುಳುಹು ಗೋಪ್ಯವಾಯಿತ್ತು. /1691
ಹಸು ರತ್ನವ ನುಂಗಿ ಬ್ರಹ್ಮೇತಿಗೆ ಬಲವಾಯಿತ್ತೆ ಅಯ್ಯಾ ?
ಹಸುವ ಕೊಲಬಾರದು ರತ್ನವ ಬಿಡಲಾರದು
ಕೂಡಲಚೆನ್ನಸಂಗಯ್ಯನೆಂಬ ರತ್ನ,
ನೀ ಜಂಗಮದೊಳಗೆ ಸಿಲುಕಿದೆಯಾಗಿ./1692
ಹಸು ಹಯನಾಯಿತ್ತು, ಹಸು ಮನೆಗೆ ಬಂದಿತ್ತು,
ಹಸುವ ಕಟ್ಟುವರೆಲ್ಲರ ಕಟ್ಟಿ, ಕಟ್ಟ ಬಂದವರ ಒಕ್ಕಲಿಕ್ಕಿ [ತು]ಳಿಯಿತ್ತು.
ನಮ್ಮ ಕೂಡಲಚೆನ್ನಸಂಗಮದೇವರಲ್ಲಿ
ಹಸುವ ಕಟ್ಟಿದಾತ ನಮ್ಮ ಸಿದ್ಧರಾಮಯ್ಯದೇವರೊಬ್ಬರೆ./1693
ಹಸ್ತಮಸ್ತಕಸಂಯೋಗವಾಗದ ಮುನ್ನ ಯೌವನ ಮಥನವಾಯಿತ್ತು
ಆವುದ ಅಂತರಂಗವೆಂಬೆನು ? ಆವುದ ಬಹಿರಂಗವೆಂಬೆನು ?
ಆವುದ ಆತ್ಮಸಂಗವೆಂಬೆನು ?
ಹಸ್ತಮಸ್ತಕಸಂಯೋಗವೆ ಬಹಿರಂಗ, ಮನಸಂಯೋಗವೆ ಅಂತರಂಗ.
ಕೂಡಲಚೆನ್ನಸಂಗಯ್ಯನಲ್ಲಿ ಆತ್ಮಸಂಗವಾಯಿತ್ತು. /1694
ಹಾಡಿ ಮಾಡುವರೆಲ್ಲ ಹಾದರಗಿತ್ತಿಯ ಮಕ್ಕಳಯ್ಯಾ,
ಕೂಡಿ ಮಾಡುವರೆಲ್ಲ ಕುಂಟಣಿಗಿತ್ತಿಯ ಮಕ್ಕಳಯ್ಯಾ,
ಬೇಡಿ ಮಾಡುವರೆಲ್ಲ ಬೇಡಿತಿಯ ಮಕ್ಕಳಯ್ಯಾ,
ಡಂಬಕತನದಲ್ಲಿ ಮಾಡುವರೆಲ್ಲ ಡೊಂಬಗಿತ್ತಿಯ ಮಕ್ಕಳಯ್ಯಾ,
ಅಚ್ಚ ಪ್ರಸಾದಿಗಳೆಂಬವರೆಲ್ಲ ಮುಚ್ಚಗಿತ್ತಿ[ಮಾದಗಿತ್ತಿ ?]ಯ ಮಕ್ಕಳಯ್ಯಾ,
ಸಮಯಾಚಾರದಲ್ಲಿಪ್ಪವರೆಲ್ಲ ಸಮ್ಮಗಾರಿಯ ಮಕ್ಕಳಯ್ಯಾ,
ಜಂಗಮ ಬಂದ ಬರವ, ನಿಂದ ನಿಲುಕಡೆಯ ನೋಡಿ,
ಮಾಡಿ ನೀಡಿ ಸ್ವಯಾನುಭಾವದ ಸಮ್ಯಗ್ಜ್ಞಾನವನರಿವವರು
ಕೂಡಲಚೆನ್ನಸಂಗನ ಶರಣರಯ್ಯಾ. /1695
ಹಾಡುವಾತ ಜಂಗಮನಲ್ಲ, ಕೇಳುವಾತ ಭಕ್ತನಲ್ಲ.
ಹಾಡಿ ಬೇಡುವನೆ ಜಂಗಮ ? ಹಾಡಿದಡೆ ಕೇಳಿ ಕೊಡುವನೆ ಭಕ್ತ ?
ಹಾಡುವಂಗೆಯೂ ಕೇಳುವಂಗೆಯೂ ಸ್ವಾಮಿ ಭೃತ್ಯಸಂಬಂಧದ ಸಕೀಲ ತೋರದು.
ಇದು ಕಾರಣ-ಕೂಡಲಚೆನ್ನಸಂಗಯ್ಯಾ ನಮ್ಮಲ್ಲಿ ಇವರಿಬ್ಬರು
ಉಭಯಭ್ರಷ್ಟರು. /1696
ಹಾರುವನ ಭಕ್ತಿ ಪ್ರಾಣ ಹಾರುವನ್ನಕ್ಕ, ಪ್ರಾಣ ಹಾರಿದಡೆ ಭಕ್ತಿ ಹುರುಳಿಲ್ಲ.
ನೋಡಲಿಲ್ಲ ನುಡಿಸಲಿಲ್ಲ ಬಿಚ್ಚಿದಡತ್ತಿಯ ಹಣ್ಣು.
ಸಂಪಾದಿಸಲಿಲ್ಲ ಪ್ರಾಣಲಿಂಗ ಪ್ರಸಾದವ ಮುಂದಿಟ್ಟುಕೊಂಡು.
“ಪ್ರಾಣಾಯ ಸ್ವಾಹಾ ವ್ಯಾನಾಯ ಸ್ವಾಹಾ
ಅಪಾನಾಯ ಸ್ವಾಹಾ ಉದಾನಾಯ ಸ್ವಾಹಾ ಸಮಾನಾಯ ಸ್ವಾಹಾ’
ಎಂಬ ನರಕಿಗಳ ಮೆಚ್ಚ ಕೂಡಲಚೆನ್ನಸಂಗಮದೇವ. /1697
ಹಾಲ ಹಿಡಿದು ಬೆಣ್ಣೆಯನರಸಲುಂಟೆ ?
ಲಿಂಗವ ಹಿಡಿದು ಪುಣ್ಯತೀರ್ಥಕ್ಕೆ ಹೋಗಲುಂಟೆ ?
ಲಿಂಗಸಂಗವ ಮಾಡಿಹೆನೆಂಬಾತಂಗೆ ಅನ್ಯದೈವಭಜನೆ ಏತಕ್ಕಯ್ಯಾ ?
“ಇಷ್ಟಲಿಂಗಮವಿಶ್ವಸ್ಯ, ಯೋನ್ಯದೈವಮುಪಾಸತೇ
ಶ್ವಾನಯೋನಿಶತಂ ಗತ್ವಾ ಚಾಂಡಾಲಗೃಹಮಾಚರೇತ್ ಇಂತೆಂದುದಾಗಿ,
ಇಂತಪ್ಪ ಪಾತಕಂಗೆ ಅಘೋರನರಕ ತಪ್ಪದು ಕಾಣಾ
ಕೂಡಲಚೆನ್ನಸಂಗಮದೇವಾ./1698
ಹಿಂದ ಮರಹಿಸದೆ, ಮುಂದನರುಹಿಸದೆ
ಹರಿಹರಿದು ಉಪದೇಶವ ಮಾಡುವ ಹೀಹಂದಿಗಳನೇನೆಂಬೆಯ್ಯಾ ?
ಗಂಡನ ಗುರು ಹೆಂಡತಿಯ ಮಾವನೆ ?
ಹೆಂಡತಿಯ ಗುರು ಗಂಡನ ಮಾವನೆ ?
ಉಪಮೆಗೆ ಬಾರದ ವಸ್ತುವ ಭಾವಕ್ಕೆ ತಂದು ನುಡಿವ ನರಕಿಗಳ
ಕೂಗಿಡೆ ಕೂಗಿಡೆ ನರಕದಲದ್ದೂದ ಮಾಬನೆ
ಕೂಡಲಚೆನ್ನಸಂಗಯ್ಯಾ./1699
ಹುಟ್ಟದ ಯೋನಿಯಿಲ್ಲ, ಮೆಟ್ಟದ ನೆಲನಿಲ್ಲ, ಉಣ್ಣದಾಹಾರವಿಲ್ಲ
ಆವರ್ತನ, ಪರಿವರ್ತನ!
ಕಾಲಚಕ್ರ ಕರ್ಮಚಕ್ರ ಬಿಂದುಚಕ್ರ ನಾದಚಕ್ರದ ದಾರಿಯಲ್ಲಿ
ನುಗ್ಗು ನುಸಿಯಾದ ಜೀವಂಗಳು ಮುಟ್ಟಬಹುದೆ ಗುರುವ?
ಅರ್ಚಿಸಬಹುದೆ ಲಿಂಗವ? ಕೊಳಬಹುದೆ ಪ್ರಸಾದವ? ಭವಂ ನಾಸ್ತಿಯಾದಂಗಲ್ಲದೆ.
ನಾನಾಯೋನಿಸಹಸ್ರಾಣಿ ಕೃತ್ವಾ ಚೈವಂತು ಮಾಯಯಾ
ಆಹಾರಂ ವಿವಿಧಾಕಾರಂ ಪೀತಾಸ್ತು ವಿವಿಧಾಃ ಸ್ತನಾಃ -ಎಂದುದಾಗಿ,
ಇದು ಕಾರಣ ಕೂಡಲಚೆನ್ನಸಂಗಯ್ಯಾ
ತ್ರಿಸ್ಥಾನ ಶುದ್ಧವಾದಂಗಲ್ಲದೆ ನಾನಾ ಆಹಾರ ಕೊಟ್ಟು ಪ್ರಸಾದಿಯಾಗ/1700
ಹುಟ್ಟಿದ ಕುಳಸ್ಥಲವನರಿದು, ಕಾಮಕ್ರೋಧವನಳಿದು,
ಸತ್ವರಜತಮವನೊತ್ತಿ-ನಿಂದಲ್ಲಿ, ಸಹಜ ನೆಲೆಗೊಂಬುದು.
ಮನದಂತುವನರಿದು, ಜೀವದ ಹೋಹ ನೆಲೆಯ ಬಲ್ಲರೆ
ಕೂಡಲಚೆನ್ನಸಂಗನಲ್ಲಿ ಮಹಂತರೆನಿಸುವರು./1701
ಹುಟ್ಟಿದ ಮಕ್ಕಳು ಪ್ರಬುದ್ಧರಾದಲ್ಲದೆ ಲಿಂಗಸ್ವಾಯತವ
ಮಾಡಬಾರದೆಂಬ ಯುಕ್ತಿಶೂನ್ಯರ ನೋಡಿರೇ.
ಅಳುಪಿ ತಾಯಿ ತಂದೆ ಅವರೊಡನುಂಡರೆ
ಅವರನಚ್ಚ ವ್ರತಗೇಡಿಗಳೆಂಬೆ ಕೂಡಲಚೆನ್ನಸಂಗಯ್ಯಾ. /1702
ಹುಟ್ಟಿದ ಶಿಶು ಧರಣಿಯ ಮೇಲೆ ಬಿದ್ದಂತೆ
ವಿಭೂತಿಯ ಪಟ್ಟವಂ ಕಟ್ಟಿ, ಲಿಂಗಸ್ವಾಯತವ ಮಾಡಿ
ಪ್ರಸಾದದೆಣ್ಣೆ ಬೆಣ್ಣೆ ಹಾಲನೆರೆದು ಸಲಹೂದೆ ಅದು ಸದಾಚಾರ.
ಆ ಮಗುವಿಂಗೆ ಈರಿಲು [ಗಾಳಿ]ಭೂತ ಸೋಂಕಿತ್ತೆಂದು ಮಾಡುವ ಭಕ್ತಂಗೆ
ಗುರುವಿಲ್ಲ, ಲಿಂಗವಿಲ್ಲ, ಅವ ಪಂಚಮಹಾಪಾತಕ ನೋಡಾ.
ಇದನರಿದಾತ ಎನ್ನ ಮಾತಾಪಿತನು.
ನಿಮ್ಮ ನಚ್ಚಿದ ಮಚ್ಚು ಅಚ್ಚೊತ್ತಿದಂತಿರಬೇಕು
ಕೂಡಲಚೆನ್ನಸಂಗಯ್ಯಾ. /1703
ಹುಲಿ ಹಾವು ಕಿಚ್ಚು ಕಳ್ಳರ ಭಯವೆಂದು
ಹೇಳಿದವರ ಮೇಲೆ ನೋವುಂಟೆ ಅಯ್ಯಾ ?
ನೊಂದರೆ ನೋಯಲಿ, ಇದರಿಂದೇನಾದಡಾಗಲಿ ಕಂಡು ಸುಮ್ಮನಿರ್ದಡೆ ದ್ರೋಹ.
ಆನೆಯ ಚೋಹವ ತೊಟ್ಟು ನಾಯಾಗಿ ಬಗುಳಿದಂತೆ, ಭಕ್ತನಾಗಿ
ಭವಿಯೊಡ ಕೂಟಂಗಳ ಮಾಡಿ, ಭವಿಶೈವದೈವಕ್ಕೆರಗಿ, ಭವಿಸಂಗ ಭವಿಸೇವೆ,
ಭವಿಪಾಕ ಭವಿಪಂತಿ ಭವಿಶೈವಕ್ರಿಯೆ ಮಾಡಿ, ಕೆಟ್ಟು ನಡೆದು
ಕೊಟ್ಟು ವರ್ತಿಸಿ, ನರಕಭಾಜನರಾಗಿ ಹೋಹಲ್ಲಿ,
ಅರಿದರಿದು ಗುರುರೂಪರಾದ ಶರಣರು ಸುಮ್ಮನಿರ್ದಡೆ ದ್ರೋಹ.
ಇದೇನು ಕಾರಣವೆಂದಡೆ, ಆ ಭಕ್ತಮಾರ್ಗವು ಸತ್ಯಶರಣರದಾಗಿ.
ಅವರ ಹಾನಿವೃದ್ಧಿ ತನ್ನದಾಗಿ, ಅವರ ಸುಖದುಃಖಂಗಳು ತನ್ನವಾಗಿ.
ಅದು ಕಾರಣ ಅವರ ಹೊಡೆದು ಬಡಿದು ಜಡಿದು ನುಡಿದು
ತಡಿಗೆ ಸಾರಿಸಿದಲ್ಲಿ ಒಡಗೂಡಿಕೊಂಡಿಪ್ಪ ಲಿಂಗವು.
ಅಲ್ಲದಿರ್ದಡೆ ನಡುನೀರೊಳಗದ್ದುವನು ಕೂಡಲಚೆನ್ನಸಂಗಯ್ಯ. /1704
ಹುಸಿ ಕಳವು ಪರದಾರ ಹಿಂಸೆ ಅದಿಕಾಶೆಗಳ ಕೂಡಿಸಿಕೊಂಡು ಇದ್ದು
ಅನ್ಯ ಅನಾಚಾರದಲ್ಲಿ ವರ್ತಿಸುವವರು,
ತಮ್ಮ ಅಂಗದ ಮೇಲೆ ಕಟ್ಟಿಕೊಂಡಿದ್ದ ಲಿಂಗವು
ಅದು ಲಿಂಗವಲ್ಲ.
ಅವರು ಮಾಡುವ ದೇವಪೂಜೆ ನಿಚ್ಚದಂಡಕ್ಕೆ ಪ್ರಾಯಶ್ಚಿತ್ತವೆಂದು
ಶಿವನ ವಾಕ್ಯ ಮೊದಲಾದ ಸಕಲಪುರಾತನರ ವಚನಂಗಳು
ಮುಂದೆ ಸಾರಿ ಹೇಳಿಹವು.
ಅದು ಕಾರಣ-ಕೂಡಲಚೆನ್ನಸಂಗಯ್ಯಾ ಪ್ರಾಣಲಿಂಗದ ಸಂಬಂಧವಾದ ಸದ್ಭಕ್ತನು
ಅನ್ಯಾಯ ಅನಾಚಾರದಲ್ಲಿ ವರ್ತಿಸುವವರ ಬಿಟ್ಟಿಹನು/1705
ಹುಸಿಯ ಹಸರವನಿಕ್ಕಿ ವಚನವನರ್ಪಿಸುವನಲ್ಲ.
ಆನು ಬಲ್ಲೆನೆಂಬ ಅರಿವಿನ ಕೊರವಂಜಿಯಂತೆ ಜಗಕ್ಕೆ ಹೇಳುವನಲ್ಲ.
ಘನಕ್ಕೆ ಮಹಾಘನ ತಾನಾದ ಕಾರಣ ಕೂಡಲಚೆನ್ನಸಂಗನ ಶರಣರು
ಕುಟಿಲ ಕುಹಕದೊಳಗೆ ವರ್ತಿಸುವರಲ್ಲ. /1706
ಹುಸಿಯಂಕರಿಸಿತ್ತು ಹೊಲೆಯನಲ್ಲಿ, ಹುಸಿ ಎರಡೆಲೆಯಾಯಿತ್ತು ಮಾದಿಗನಲ್ಲಿ,
ಹುಸಿ ನಾಲ್ಕೆಲೆಯಾಯಿತ್ತು ಸಮ್ಮಗಾರನಲ್ಲಿ, ಹುಸಿ ಆರೆಲೆಯಾಯಿತ್ತು ಅಗಸನಲ್ಲಿ,
ಹುಸಿ ಎಂಟೆಲೆಯಾಯಿತ್ತು ವ್ಯವಹಾರಿಯಲ್ಲಿ, ಹುಸಿ ಸಸಿಯಾಗಿತ್ತು ಹಾದರಿಗನಲ್ಲಿ,
ಹುಸಿ ಗಿಡವಾಗಿತ್ತು ಮದ್ಯಪಾನಿಯಲ್ಲಿ, ಹುಸಿ ಮರವಾಯಿತ್ತು ಜೂಜುಗಾರನಲ್ಲಿ,
ಹುಸಿ ಹೂವಾಯಿತ್ತು ಡೊಂಬನಲ್ಲಿ, ಹುಸಿ ಕಾಯಾಯಿತ್ತು ಅಕ್ಕಸಾಲಿಗನಲ್ಲಿ,
ಹುಸಿ ಹಣ್ಣಾಯಿತ್ತು ಸೂಳೆಯಲ್ಲಿ,
ಹುಸಿ ಹಣ್ಣಾಗಿ ತೊಟ್ಟು ಬಿಚ್ಚಿತ್ತು ಅರಸನಲ್ಲಿ.
ಇಂತೀ ಹುಸಿಯ ನುಡಿವವರಿಗೆ
ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ,
ಪಾದೋದಕವಿಲ್ಲಾಗಿ ಮೋಕ್ಷವಿಲ್ಲ.
ಕಾರಣ-ನಮ್ಮ ಕೂಡಲಚೆನ್ನಸಂಗಯ್ಯನ ಶರಣರು
ಹುಸಿಯ ಬಿಟ್ಟುಕಳೆದು ನಿಜಲಿಂಗೈಕ್ಯರಾದರು. /1707
ಹುಸಿಯುಳ್ಳವ ಭಕ್ತನಲ್ಲ, ವಿಷಯವುಳ್ಳವ ಮಾಹೇಶ್ವರನಲ್ಲ,
ಆಸೆಯುಳ್ಳವ ಪ್ರಸಾದಿಯಲ್ಲ, ಜೀವಗುಣವುಳ್ಳವ ಪ್ರಾಣಲಿಂಗಿಯಲ್ಲ,
ತನುಗುಣವುಳ್ಳವ ಶರಣನಲ್ಲ, ಜನನಮರಣವುಳ್ಳವ ಐಕ್ಯನಲ್ಲ.
ಈ ಆರರ ಅರಿವಿನ ಅರ್ಕದ ಸಂಪತ್ತಿನ ಭೋಗ ಹಿಂಗಿದಡೆ
ಸ್ವಯಂ ಜಾತನೆಂಬೆ.-ಆ ದೇಹ ನಿಜದೇಹವೆಂಬೆ
ಆ ನಿಜದೇಹ ಇರಿದರರಿಯದು, ತರಿದರರಿಯದು, ಹೊಯ್ದರರಿಯದು,
ಬಯ್ದರರಿಯದು, ಸ್ತುತಿಸಿದರರಿಯದು, ನಿಂದಿಸಿದರರಿಯದು,
ಪುಣ್ಯವನರಿಯದು, ಪಾಪವನರಿಯದು, ಸುಖವನರಿಯದು
ದುಃಖವನರಿಯದು, ಕಾಲವನರಿಯದು, ಕರ್ಮವನರಿಯದು
ಜನನವನರಿಯದು, ಮರಣವನರಿಯದು-
ಇಂತೀ ಷಡುಸ್ಥಲದೊಳಗೆ ತಾ ಒಂದು ನಿಜವಿಲ್ಲವಾಗಿ
ನಾವು ಹಿರಿಯರು ನಾವು ಗುರುಗಳು
ನಾವು ಸಕಲಶಾಸ್ತ್ರಸಂಪನ್ನ ಷಡುಸ್ಥಲದ ಜ್ಞಾನಿಗಳು
ಎಂಬ ಮೂಕೊರೆಯರ ಮೆಚ್ಚುವನೆ ಕೂಡಲಚೆನ್ನಸಂಗಮದೇವ ?
ಕುತ್ತಗೆಯುದ್ದ ಹೂಳಿಸಿಕೊಂಡು ಮುಗಿಲುದ್ದಕ್ಕೆ ಹಾರಲುಂಟೆ ? /1708
ಹೂ-ಮಿಡಿಯ ಹರಿದು ಹಣ್ಣ ಮಾಡಿಹೆನೆಂದಡೆ
ಫಲಕಾರ್ಯಂಗಳಪ್ಪುವೆ ದೇವಾ ?
ಶಶಿಧರನಟ್ಟಿದ ಬೆಸನದೊಳಗೆ ಎವೆ ಮಾತ್ರ ಪ್ರಮಾಣವೆ ಪೂರೈಸಲು ?
ಲಿಂಗಪ್ರಾಣ ಪ್ರಾಣಲಿಂಗದ ಭೇದವ ನೆಟ್ಟನೆ ತಿಳಿದಲ್ಲದೆ,
ಸಂಗಮನಾಥ `ನೀ ಬಾರಾ’ ಎಂದು ಎತ್ತಕೊಳ್ಳನು.
ಕೂಡಲಚೆನ್ನಸಂಗಯ್ಯಂಗೆ ಸವೆಯದ ಮುನ್ನ ಸಯವಾಗಲುಂಟೆ ?
ಹೇಳಾ ಸಂಗನಬಸವಣ್ಣಾ./1709
ಹೃತ್ಕಮಲಕರ್ಣಿಕೆಯ ಕುಹರದಲೊಮ್ಮೆ ಪೃಥಗ್ಭಾವದಿಂದ
ನೋಡಿ ಕಾಬನೆ ಶರಣನು ?
ವಕ್ತ್ರಶ್ರಯದ ಜಿಹ್ವೆಯ ಕೊನೆಯಲ್ಲಿ ಪರವಕ್ತ್ರನಾಗಿ
ನೋಡಿ ನುಡಿವನೆ ಶರಣನು ?
ಪ್ರಕೃತಿ ತನುಗುಣರಹಿತ, ಸುಕೃತ ಶೂನ್ಯ, ಘನಮುಗ್ಧ ಮಹಂತ,
ಕೂಡಲಚೆನ್ನಸಂಗಾ ಲಿಂಗೈಕ್ಯನು./1710
ಹೃದಯ ಕಮಲ ಮಧ್ಯದಲ್ಲಿಪ್ಪ ದೇವರ ದೇವನ ದೇಹಾರವ ಮಾಡಲರಿದು.
ದೇಹಿ ನಿರ್ದೆಹಿಯಾಗದನ್ನಕ್ಕ ದೇಹಾರವೆಲ್ಲಿಯದೊ ?
ಅನಂತಮುಖದಲ್ಲಿ ದೇಹಾರವ ಮಾಡಲು ದೇವನಲ್ಲಿಲ್ಲ ನೋಡಯ್ಯಾ.
ಅಸಾಹಿತ್ಯವಿಡಿದು ಹುಸಿಯನೆ ಪೂಜಿಸಿ ಗಸಣಿಗೊಳಗಾದಿರಲ್ಲಾ.
ಅನಂತವಳಿದು ನಿಜವನರಿದ ಏಕೋಗ್ರಾಹಿ
ಕೂಡಲಚೆನ್ನಸಂಗಾ ನಿಮ್ಮ ಶರಣ. /1711
ಹೃದಯಕಮಲ ಮಧ್ಯದ ಶುದ್ಧಾತ್ಮನನು
ಸಿದ್ಧ ವಿದ್ಯಾಧರ ನಿರ್ದೆಹಿಗಳು ಬಲ್ಲರೆ ?
ಕಾಯದ ಕೈಯಲಿ ಕೊಟ್ಟುದು ಮಾಯಾಮುಖದರ್ಪಿತ.
ಇದಾವ ಮುಖವೆಂದರಿಯದೆ ಭ್ರಮೆ [ಗೊಂಡು]ಹೋದರು.
ಕೊಂಬ ಕೊಡುವ ಎಡೆಯನಿಂಬಿನ ಗ್ರಾಹಕ ಬಲ್ಲ.
ಕೂಡಲಚೆನ್ನಸಂಗನಲ್ಲಿ ಬಸವಣ್ಣಪ್ರಭು ಬಲ್ಲ. /1712
ಹೃದಯದೊಳಿಪ್ಪ ಮಹಾಲಿಂಗಜ್ಯೋತಿಯ ಬೆಳಗು,
ಪಂಚೇಂದ್ರಿಯಂಗಳಲ್ಲಿ ಪ್ರಭಾವಿಸಿ ತೋರುವ ಬೆಳಗು,
ಒಂದೆ ಕಾಣಿ ಭೋ.
ಒಂದು ಮೂರಾಗಿ, ಮೂರು ತಾನಾರಾಗಿ ಆರು ಮೂವತ್ತಾರಾಗಿ
ಮೂವತ್ತಾರು ಇನ್ನೂರುಹದಿನಾರಾಗಿ, ಬೇರುವರಿದು ವಿಸ್ತಾರವ ಪಡೆದವಲ್ಲಾ !
ವಿಶ್ವಾಸದಿ ಬೆಳಗುವ ಬ್ರಹ್ಮಕ್ಕೂ ಗಣಿತವುಂಟೆ ?
ಅಗಣಿತವೆಂದು ಅಗೋಚರವೆಂದು ಹೇಳುವರಲ್ಲದೆ, ದೃಶ್ಯವಾಗಿ ಕಾಬವರುಂಟೆ ?
ದೃಗುದ್ಯಶ್ಯವಲ್ಲ ಮಹಾದಾನಿ ಕೂಡಲಚೆನ್ನಸಂಗಮದೇವ./1713
ಹೆಂಡಿರು-ಮಕ್ಕಳಿಗೆ ಕುಲದೈವ ಮನೆದೈವವಲ್ಲದೆ
ಎನಗೆ ಕುಲದೈವ ಮನೆದೈವವಿಲ್ಲೆಂಬ
ಭಂಡನ ಭಕ್ತಿಯ ಪರಿಯ ನೋಡಾ.
[ಆ] ಯುಕ್ತಿಶೂನ್ಯಂಗೆ ಮುಂದೆ ದೃಷ್ಟವ ಹೇಳಿಹೆನು:
ತನ್ನ ಹೆಂಡತಿ ಮತ್ತೊಬ್ಬನ ಮೆಚ್ಚಿಕೊಂಡು ಹೋಗುತ್ತಿರೆ,
ಹೋದರೆ ಹೋಗಲಿ ಎಂದು ಸೈರಿಸಬಲ್ಲಡೆ ತಾನವರೊಳಗಲ್ಲ.
ಅಕಟಕಟಾ ಲೌಕಿಕಕ್ಕೆ ಆಜ್ಞೆಯುಂಟು ಪಾರಮಾರ್ಥಕ್ಕೆ ಆಜ್ಞೆಯಿಲ್ಲವೆ !
ಇದು ಕಾರಣ-ಕೂಡಲಚೆನ್ನಸಂಗಯ್ಯಾ
ಭಕ್ತನಾಗಿ ಭವಿಯ ಬೆರಸುವ ಅನಾಚಾರಿಯ ತೋರದಿರಯ್ಯಾ. /1714
ಹೆಗ್ಗಣವನಿಕ್ಕಿ ನೆಲಗಟ್ಟ ಕಟ್ಟಿದಂತೆ,
ಎನ್ನ ಕಾಯಗುಣ ಅಹಂಕಾರ ಪ್ರಬೋಧೆಗಳಯ್ಯಾ.
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳನಿಕ್ಕಿ
ಎನ್ನ ಮಾಡಿದಿರಿ ಎನ್ನ ಬಾದಿಸಲೆಂದು.
ಲಿಂಗಯ್ಯ ತಂದೆ ಆದಿವ್ಯಾದಿಗಳೆಲ್ಲವ ಕಳೆದು
ನಿರ್ವಾಣವಪ್ಪ ಪಥವ ಕರುಣಿಸಯ್ಯಾ,
ಕೂಡಲಚೆನ್ನಸಂಗಮದೇವಾ. /1715
ಹೆಣ್ಣ ಬಿಟ್ಟಡೇನು ಹೊನ್ನಿನಾಸೆ ಉಳ್ಳನ್ನಬರ ?
ಅಲ್ಲಿಗೆ ಹಿರಿಯತನ ಸಾಲದು.
ಹೊನ್ನ ಬಿಟ್ಟಡೇನು ಮಣ್ಣಿನಾಸೆ ಉಳ್ಳನ್ನಬರ ?
ಅಲ್ಲಿಗೆ ಹಿರಿಯತನ ಸಾಲದು.
ಅವುಗಳೊಳಗೊಂದ ಹಿಡಿದಡೆಯೂ ಆ ತ್ರಿವಿಧವ ಹಿಡಿದವ,
ಆ ಮಾಯೆ ಒಂದ ಬಿಟ್ಟೊಂದಿರದಾಗಿ.
ಅವನತಿಗಳೆದಲ್ಲದೆ ಭವಂ ನಾಸ್ತಿಯಾಗದು.
ಇದು ಕಾರಣ-ಕೂಡಲಚೆನ್ನಸಂಗಮದೇವಾ
ಈ ತ್ರಿವಿಧಮಲವ ಕಳೆದು ಸುಳಿವ ನಿಜಸುಳುಹಿಂಗೆ
ನಮೋ ನಮೋ ಎಂಬೆನಯ್ಯಾ. /1716
ಹೊತ್ತಾರೆಯ ಪೂಜೆ, ಹಗಲಿನ ಪೂಜೆ, ಬೈಗಿನ ಪೂಜೆ,
ನಿಚ್ಚಕ್ಕೆ ಪೂಜೆಯ ಮಾಡಿ ಅಚ್ಚಿಗಗೊಂಡರೆಲ್ಲರು.
ನಿಶ್ಚಿಂತ ನಿರಾಳ ನಿಜೈಕ್ಯಲಿಂಗವ ಹೊತ್ತಿಂಗೆ ತರಲಹುದೆ ?
ಹೊತ್ತನೆ ಪೂಜಿಸಿ, ಹೊತ್ತನೆ ಅರ್ಚಿಸಿ, ಇತ್ತಲೆಯಾದರೆಲ್ಲರು.
ನಿಶ್ಚಿಂತವನರಿದು ನಿಜವನೆಯ್ದುವರೆ ಸುಚಿತ್ತ ಸಮಾಧಾನ.
ಕೂಡಲಚೆನ್ನಸಂಗನೆಂಬ ಲಿಂಗ ನಿಶ್ಚಿಂತ ನಿಜೈಕ್ಯವು./1717
ಹೊದ್ದದಂತೆ ಮಾಡಿದ, ತನ್ನ ಸಾರದಂತೆ ಮಾಡಿದ.
ಕಾಮವ ತಂದು ಕಣ್ಣಿಗೆ ತೋರಿದ,
ವಿದಿಯ ತಂದು ಮುಂದೊಡ್ಡಿದ ನೋಡಯ್ಯಾ.
ಪ್ರಸಾದಸಾಧಕರಿಗೆ ಇದೆ ವಿಘ್ನವಯ್ಯಾ,
ಕೂಡಲಚೆನ್ನಸಂಗಯ್ಯ ತನ್ನ ಹೊದ್ದದಂತೆ ಮಾಡಿದನಯ್ಯಾ./1718
ಹೊನ್ನ ಬಿಟ್ಟು, ಹೆಣ್ಣ ಬಿಟ್ಟು, ಮಣ್ಣ ಬಿಟ್ಟು,
ಮಂಡೆಯ ಬೋಳಿಸಿಕೊಂಡು ಬೋಳಾದ ಬಳಿಕ
ನಿರಾಸಕ್ತನಾಗಿ, ಬಿಕ್ಷಾಹಾರಿಯಾಗಿ
ಶಿವಧ್ಯಾನಪರಾಯಣನಾಗಿಪ್ಪುದೀಗ ಪ್ರಥಮ ಬೋಳು.
ಲಿಂಗಾಣತಿಯಿಂದ ಬಂದುದ ಕೈಕೊಂಡು
ಲಿಂಗ ಸಾವಧಾನವಾಗಿಪ್ಪುದೀಗ ದ್ವಿತೀಯಬೋಳು.
ಶರಣಸತಿ ಲಿಂಗಪತಿಯೆಂಬುಭಯವಳಿದು
ಪರಮಾನಂದದಲ್ಲಿಪ್ಪುದೀಗ ತೃತೀಯಬೋಳು.
ಈ ಬೋಳಿನ ಅನುವ ಕೂಡಲಚೆನ್ನಸಂಗಯ್ಯನಲ್ಲಿ ಅಲ್ಲಯ್ಯ ಬಲ್ಲ./1719
ಹೊನ್ನಿಂಗೆ ಕೂರ್ತು ಜಂಗಮವನವಿಶ್ವಾಸವ ಮಾಡುವೆ,
ಹೆಣ್ಣಿಂಗೆ ಕೂರ್ತು ಜಂಗಮವನವಿಶ್ವಾಸವ ಮಾಡುವೆ,
ಮಣ್ಣಿಂಗೆ ಕೂರ್ತು ಜಂಗಮವನವಿಶ್ವಾಸವ ಮಾಡುವೆ,
ಎಲೆ ಕುಚಿತ್ತಮನವೆ, ಕುಚಿತ್ತಾಶ್ರಯದಲ್ಲಿ ಎನ್ನನಿರಿಸದಿರಾ
ಸುಚಿತ್ತವಾಗಿ ಬಸವನೆಂದೆನಿಸಾ ಕೂಡಲಚೆನ್ನಸಂಗಯ್ಯಾ,
ಎನ್ನ ಚಿತ್ತವು ಕಾಡಿಹುದಯ್ಯಾ. /1720
ಹೊನ್ನಿಂಗೆ ಬಂದಾತನಲ್ಲ, ಹೆಣ್ಣಿಂಗೆ ಬಂದಾತನಲ್ಲ,
ಅಶನಕ್ಕೆ ಬಂದಾತನಲ್ಲ, ವಸನಕ್ಕೆ ಬಂದಾತನಲ್ಲ,
ಕೂಡಲಚೆನ್ನಸಂಗಯ್ಯಾ,
ಭಕ್ತಿಯ ಪಥವ ತೋರ ಬಂದನಯ್ಯಾ ಬಸವಣ್ಣನು./1721
ಹೊನ್ನು ಭಕ್ತನೆಂಬೆನೆ ? ಹೊನ್ನಿನೊಳಗಣ ಮುದ್ರೆ ಭವಿ.
ಹೆಣ್ಣು ಭಕ್ತನೆಂಬೆನೆ ಹೆಣ್ಣಿನೊಳಗಣ ವಿರಹ ಭವಿ.
ಮಣ್ಣು ಭಕ್ತನೆಂಬೆನೆ ಮಣ್ಣಿನೊಳಗಣ ಬೆಳೆಸು ಭವಿ.
ಈ ತ್ರಿವಿಧ ಭವಿಯ ಕಳೆದು ಪ್ರಸಾದವ ಮಾಡಿಕೊಳ್ಳಬಲ್ಲರೆ
ಕೂಡಲಚೆನ್ನಸಂಗನಲ್ಲಿ ಅಚ್ಚಶೀಲವಂತನೆಂಬೆ. /1722
ಹೊನ್ನುಳ್ಳಾತ ಭಕ್ತನಲ್ಲ, ಹೆಣ್ಣುಳ್ಳಾತ ಶರಣನಲ್ಲ,
ಮಣ್ಣುಳ್ಳಾತ ಲಿಂಗೈಕ್ಯನಲ್ಲ.
ಹೊನ್ನು ಜೀವ, ಹೆಣ್ಣು ಪ್ರಾಣ, ಮಣ್ಣು ದೇಹ.
ಹೊನ್ನು ಭವ, ಹೆಣ್ಣು ಭವಿ, ಮಣ್ಣು ಹಮ್ಮು.
ಇಂತೀ ತ್ರಿವಿಧಸ್ಥಲವಪೂರ್ವ ಕೂಡಲಚೆನ್ನಸಂಗಯ್ಯನಲ್ಲಿ./1723
ಹೊರಗಣ ಭವಿಯ ಕಳೆದೆವೆಂಬರು, ಒಳಗಣ ಭವಿಯ ಕಳೆಯಲರಿಯರು.
ಕಾಮವೆಂಬುದೊಂದು ಭವಿ, ಕ್ರೋಧವೆಂಬುದೊಂದು ಭವಿ,
ಲೋಭವೆಂಬುದೊಂದು ಭವಿ, ಮೋಹವೆಂಬುದೊಂದು ಭವಿ,
ಮದವೆಂಬುದೊಂದು ಭವಿ, ಮಚ್ಚರವೆಂಬುದೊಂದು ಭವಿ,
ಆಸೆಯೆಂಬುದೊಂದು ಭವಿ, ಆಮಿಷವೆಂಬುದೊಂದು ಭವಿ,
ಹೊನ್ನೆಂಬುದೊಂದು ಭವಿ, ಹೆಣ್ಣೆಂಬುದೊಂದು ಭವಿ,
ಮಣ್ಣೆಂಬುದೊಂದು ಭವಿ.
ಇಂತೀ ಭವಿಯ ಕಳೆದುಳಿದ ಕೂಡಲಚೆನ್ನಸಂಗಾ ನಿಮ್ಮ ಶರಣ./1724
ಹೊರಗನೆ ಕೊಯ್ದು ಹೊರಗನೆ ಪೂಜಿಸಿದಡೆ,
ಪರಿಣಾಮವಿಲ್ಲ, ಪ್ರಯೋಜನವಿಲ್ಲ ಸುಖ ದೊರೆಕೊಳ್ಳದು ನೋಡಾ !
ಅದೆಂತೆಂದಡೆ:
ಸರ್ವಜೀವಂಗಳಲ್ಲಿ ಜೀವಹಿಂಸೆಯ ಮಾಡದಿರಬಲ್ಲಡೆ ಪ್ರಥಮಪುಷ್ಪ.
ಸರ್ವೆಂದ್ರಿಯಂಗಳ ನಿಗ್ರಹಿಸಿಕೊಂಡಿರಬಲ್ಲಡೆ ದ್ವಿತೀಯಪುಷ್ಪ.
ಸರ್ವಾಹಂಕಾರವರತು ಶಾಂತನಾಗಿರಬಲ್ಲಡೆ ತೃತೀಯಪುಷ್ಪ.
ಸರ್ವವ್ಯಾಪಾರವಳಿದು ನಿವ್ರ್ಯಾಪಾರಿಯಾಗಿರಬಲ್ಲಡೆ ಚತುರ್ಥಪುಷ್ಪ.
ದುರ್ಭಾವ ಪ್ರಕೃತಿಯಳಿದು ಸದ್ಭಾವವೆಡೆಗೊಂಡಿರಬಲ್ಲಡೆ ಪಂಚಮಪುಷ್ಪ.
ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿಯಾಗಿರಬಲ್ಲಡೆ ಷಷ್ಠಪುಷ್ಪ.
ಅನೃತವ ಮರೆದು ಸತ್ಯವ ನುಡಿಯಬಲ್ಲಡೆ ಸಪ್ತಮಪುಷ್ಪ.
ಸಕಲಪ್ರಪಂಚವಳಿದು ಶಿವಜ್ಞಾನಸಂಪನ್ನರಾಗಿರಬಲ್ಲಡೆ ಅಷ್ಟಮಪುಷ್ಪ.
ಇಂತೀ ಅಷ್ಟದಳಕಮಲದಲ್ಲಿ ಸಹಜಪೂಜೆಯ ಮಾಡಬಲ್ಲ ಶರಣರು
ನಿಮ್ಮ ಪ್ರತಿಬಿಂಬದಂತಿಪ್ಪರು ಕಾಣಾ-ಕೂಡಲಚೆನ್ನಸಂಗಮದೇವಾ./1725
ಹೊರಗನೆ ಹಾರೈಸಿ ಹೊರಗಣ ಸದಾಚಾರ ಕ್ರಿಯೆಗಳ,
ಮನಮುಟ್ಟಿ ಮಾಡುತ್ತಿರಲು;
ಇದೆಲ್ಲಿಯ ಹೊರಗಣಸುಖವೆಂದು, ಸುವಿಚಾರ ಕಣ್ದೆರೆದು ನೋಡಲು
ಕನ್ನಡಿಯೊಳಗಣ ರೂಪ ತಾನೆಂದರಿವಂತೆ
ಮೆಲ್ಲಮೆಲ್ಲನೆ ಒಳಗೆ ಅಡಗಿತ್ತಯ್ಯಾ.
ಲಿಂಗಸುಖದ ಸುಗ್ಗಿಯಲ್ಲಿ ಎನ್ನ ಪ್ರಾಣ ಮನ ಕರಣಂಗಳು
ಮೇರೆದಪ್ಪಿದ ಸುಖಸಮುದ್ರದೊಳಗೋಲಾಡಿದಂತಾದೆನಯ್ಯಾ !
ಮುಳುಗಿದೆನಯ್ಯಾ, ಸ್ವಾನುಭಾವವೆಂಬ ಗುರುವಿನ ಕರುಣದಲ್ಲಿ.
ಇಂತಾದ ಬಳಿಕ ಕೂಡಲಚೆನ್ನಸಂಗಯ್ಯನೆ ಪ್ರಾಣವಾಗಿದ್ದನಯ್ಯಾ./1726
ಹೊರವೇಷದ ವಿಭೂತಿರುದ್ರಾಕ್ಷಿಯನಳವಡಿಸಿಕೊಂಡು
ವೇದಶಾಸ್ತ್ರ ಪುರಾಣ, ಪುರಾತರ ವಚನದ ಬಹುಪಠಕರು,
ಅನ್ನದಾನ, (ಹೊನ್ನದಾನ), ವಸ್ತ್ರದಾನವನೀವನ ಬಾಗಿಲ ಮುಂದೆ
ಮಣ್ಣಪುತ್ಥಳಿಯಂತಿಹರು ನಿತ್ಯನೇಮದ ಹಿರಿಯರು.
“ವಯೋವೃದ್ಧಾಸ್ತಪೋವೃದ್ಧಾ ವೇದವೃದ್ಧಾ ಬಹುಶ್ರುತಾಃ
ಇತ್ಯೇತೇ ಧನವೃದ್ಧಸ್ಯ ದ್ವಾರೇ ತಿಷ್ಠಂತಿ ಕಿಂಕರಾಃ
ಎಂಬ ಶ್ರುತಿ ದಿಟವಾಯಿತ್ತು.
ಆ ಎಲ್ಲಾ ಅರಿವು?್ಳವರು ಲಕ್ಷ್ಮಿಯ ದ್ವಾರಪಾಲಕರಾದರು.
ಅರಿವಿಂಗೆ ಇದು ವಿದಿಯೆ ?
ಕೂಡಲ ಚೆನ್ನಸಂಗಯ್ಯಾ ನೀ ಮಾಡಿದ ಮರಹು !/1727
ಹೊಲೆ ಹೊಲೆ ಎಂದನಯ್ಯಾ ಬಸವಣ್ಣ.
ಹೊಲೆ ಹುಟ್ಟಿದ ಮೂರು ದಿನಕ್ಕೆ ಪಿಂಡಕ್ಕೆ ನೆಲೆಯಾಯಿತ್ತು.
ನರರಿಗೆ ಹೊಲೆ, ಸುರರಿಗೆ ಹೊಲೆ, ಹರಿಬ್ರಹ್ಮಾದಿಗಳಿಗೆ ಹೊಲೆ.
ಇಂತೀ ಹೊಲೆಯಲ್ಲಿ ಹುಟ್ಟಿ, ಹೊಲೆಯನತಿಗಳೆದೆನೆಂಬ
ಉಭಯಭ್ರಷ್ಟರ ಮುಖವ ನೋಡಲಾಗದು-
ಕೂಡಲಚೆನ್ನಸಂಗಮದೇವಾ/1728
ಹೊಲೆಯ ಹೊಲೆಯನೆಂದು ಹೊರಗಿರು ಎಂದೆಂಬರು
ಹೊಲೆಯನೆಂತವನಯ್ಯಾ ?
ತನ್ನ ಹೊಲೆಯ ತಾನರಿಯದೆ
ಮುನ್ನಿನವರ ಹೊಲೆಯನರಸುವ
ಭ್ರಷ್ಟರಿಗೆ ಏನೆಂಬೆನಯ್ಯಾ,
ಮಹಾದಾನಿ ಕೂಡಲ ಚೆನ್ನಸಂಗಮದೇವಾ./1729
ಹೋ ಹೋ ಗುರುವೆ ನಿಮ್ಮ ಚಮ್ಮಾವುಗೆಯ ಬಂಟ ನಾನಾಗಿರಲು
ಅಂಜುವರೆ ? ಅಳುಕುವರೆ ?
ಸಂಗಮನಾಥ ಬಂದು, ನಿಮ್ಮ ಮನವ ನೋಡಲೆಂದು
ತಮ್ಮ ಮನವನಡ್ಡಲಿಕ್ಕಿದನೊಂದು ಲೀಲೆಯಿಂದ.
ಅದು ನಿಮಗೆ ಸಹಜವಾಗಬಲ್ಲುದೆ ?
ಮಂಜಿನ ಮೋಹರ, ರವಿಯ ಕಿರಣವ ಕೆಡಿಸಲಾಪುದೆ ?
ನಿಮ್ಮ ನೆನೆವರಿಗೆ ಸಂಸಾರವಿಲ್ಲೆಂದು ಶ್ರುತಿಗಳು ಹೊಗಳುತ್ತಿರಲು
ನಿಮ್ಮ ಅರುಹಿಂಗೆ ಕೇಡುಂಟೆ ?
ಕೂಡಲಚೆನ್ನಸಂಗನ ಶರಣರ ಕರೆವಡೆ
ಎನ್ನ ಮನವೆಂಬ ಚಮ್ಮಾವುಗೆಯ ಮೆಟ್ಟಿ ನಡೆಯಾ
ಸಂಗನಬಸವಣ್ಣ/1730
ಹೋ ಹೋ ಗುರುವೆ, ನಿಮ್ಮ ಕರಕಮಲದಲ್ಲಿ ಉದಯಿಸಿ
ಅಂಗದ ಮೇಲೆ ಲಿಂಗವ ಧರಿಸಿ, ಲಿಂಗದಲ್ಲಿ ಆಗಾಗಿ
ಪ್ರಾಣಲಿಂಗ ಲಿಂಗಪ್ರಾಣ ಎಂಬುದ ನಾನು ಕಂಡೆನು.
ನಿಮಗಾನು ತೋರಲು ಸಮರ್ಥನೆ ?
ಆಚಾರ ಅಂಗದ ಮೇಲೆ ನೆಲೆಗೊಂಡು, ಇಷ್ಟಲಿಂಗದಲ್ಲಿ ದೃಷ್ಟಿನಟ್ಟು
ಭಾವಸಂಪನ್ನವಾಗಿಪ್ಪ ನಿಮ್ಮ ಘನವ ನಾನೆತ್ತ ಬಲ್ಲೆನಯ್ಯಾ ?
ಅನುಭಾವ ಅಂತರಂಗದಲ್ಲಿ ಎಡೆಗೊಂಡು, ಪ್ರಾಣಲಿಂಗದಲ್ಲಿ ನಿಕ್ಷೇಪವಾಗಿ,
ನಿಜಲಿಂಗೈಕ್ಯನಾಗಿಪ್ಪ ನಿಮ್ಮ ಘನವ ನಾನೆತ್ತ ಬಲ್ಲೆನಯ್ಯಾ ?
ಜ್ಞಾನಸಮಾದಿಯೊಳಗೆ ಬಯಕೆಯಡಗಿ
ಪರಿಣಾಮಲಿಂಗದಲ್ಲಿ ಮನಸ್ಸು ಲಯವಾಗಿ
ನಿಜಲಿಂಗತೃಪ್ತರಾಗಿಪ್ಪಿರಿ ನೀವು; ನಿಮ್ಮ ಘನವ ನಾನೆತ್ತ ಬಲ್ಲೆನಯ್ಯಾ !
ಅಂಗದ ಮೇಲೆ ಲಿಂಗವುಳ್ಳುದೆಲ್ಲವು ಸಂಗಮನಾಥನೆಂಬಲ್ಲಿ
ಜಂಗಮಲಿಂಗ ಪ್ರಾಣಿಯಾಗಿಪ್ಪಿರಿ ನೀವು, ನಿಮ್ಮ ಘನವ ನಾನೆತ್ತ ಬಲ್ಲೆನಯ್ಯಾ
ಲಿಂಗಕ್ಕೆ ಬಂದ ಪದಾರ್ಥವನಲ್ಲದೆ ಕೊಳ್ಳೆನೆಂದು
ಮನ ಮೀಸಲು, ತನುಮೀಸಲು ಮಾಡಿ,
ಸರ್ವಾಂಗಸುಖವೆಲ್ಲವನು ಪ್ರಾಣಲಿಂಗದಲ್ಲಿ ಅರ್ಪಿಸಿ .
ನಿರಾಭಾರಿಯಾಗಿ, ಪ್ರಸಾದಲಿಂಗಪ್ರಾಣಿಯಾಗಿಪ್ಪಿರಿ ನೀವು
ನಿಮ್ಮ ಘನವ ನಾನೆತ್ತ ಬಲ್ಲೆನಯ್ಯಾ !
ಅನಾದಿ ಶಿವಂಗೆ ಆಧಾರವಿಲ್ಲೆಂದು,
ಅಖಂಡಿತನ ನಿಮ್ಮ ರೋಮದ ಕೊನೆಯಲ್ಲಿ ಧರಿಸಿ
ಮಹಾಲಿಂಗಪ್ರಾಣಿಯಾಗಿಪ್ಪಿರಿ ನೀವು, ನಿಮ್ಮ ಘನವ ನಾನೆತ್ತ ಬಲ್ಲೆನಯ್ಯಾ !
ಕೂಡಲಚೆನ್ನಸಂಗಮದೇವ ಸಾಕ್ಷಿಯಾಗಿ,
ನಿಮ್ಮ ಪ್ರಾಣಲಿಂಗಸಂಬಂಧದ ಸೆರಗು ಸೋಂಕಿನ
ಒಕ್ಕುಮಿಕ್ಕ ಪ್ರಸಾದಿ ನಾನು ಕಾಣಾ ಸಂಗನಬಸವಣ್ಣ./1731