Categories
ವಚನಗಳು / Vachanagalu

ಚಿನ್ಮಯ ಜ್ಞಾನಿ ಚೆನ್ನಬಸವಣ್ಣ ವಚನಗಳು

ಅಂಗ ಭವಿಗೆ ಆಚಾರನಾಸ್ತಿ, ಲಿಂಗ ಭವಿಗೆ ಜಂಗಮನಾಸ್ತಿ,
ಪ್ರಾಣಭವಿಗೆ ಪ್ರಸಾದನಾಸ್ತಿ,
ಈ ತ್ರಿವಿಧ ನಾಸ್ತಿಗೆ ಇಹಪರವಿಲ್ಲಯ್ಯಾ,
ಕೂಡಲಚೆನ್ನಸಂಗಯ್ಯ. /1
ಅಂಗ ಲಿಂಗ ಸಂಬಂಧವನ್ನುಳ್ಳ
ನಿಜವೀರಶೈವ ಭಕ್ತಾರಾಧ್ಯ ಜಂಗಮದ
ಭಕ್ತಿ ವಿವಾಹದ ಕ್ರಮವೆಂತೆಂದಡೆ:
ಪಾಣಿಗ್ರಹಣ, ವಿಭೂತಿಪಟ್ಟ, ಏಕಪ್ರಸಾದ,
ಭಕ್ತಗಣ, ಸಾಕ್ಷಿಯಾಗಿ ಭಕ್ತಿವಿವಾಹವಾಗಿ,
ಭಕ್ತ ಜಂಗಮವನಾರಾದಿಸಿ, ಭಕ್ತಿಪದಾರ್ಥ ಮತ್ತು ಭಕ್ತಿಪ್ರಸಾದವ ಕೊಂಡು
ನಿಜಮುಕ್ತಿಯನೈದುವದೆ ವೀರಶೈವ ಭಕ್ತಾರಾಧ್ಯರುಗಳ ಭಕ್ತಿಕಲ್ಯಾಣ ನೋಡ.
ಇಂತಪ್ಪ ಭಕ್ತಿಕಲ್ಯಾಣವನರಿಯದೆ
ಸತ್ಯಸದಾಚಾರ ಭಕ್ತಿಯುಕ್ತವಾದ ಗುರುಲಿಂಗ ಜಂಗಮದ
ಪಾದೋದಕ ಪ್ರಸಾದವೆಂಬ ಪಂಚಾಚಾರಕ್ಕೆ ಹೊರಗಾದ
ಭವಿ ಶೈವ ಕೃತಕಶಾಸ್ತ್ರವಿಡಿದು ಮಾಡುವ
ಪಂಚಸೂತಕ ಸಂಕಲ್ಪ ಪಾತಕವನುಳ್ಳ
ಶಕುನ ಸ್ವಪ್ನ ಸಾಮುದ್ರಿಕಲಕ್ಷಣ ಸ್ತ್ರೀ ಪುರುಷ ಜಾತಕ ಚರಿತ್ರೆ
ಕಾಮಶಾಸ್ತ್ರ ಕಲಾಭೇದ ರಾಶಿಫಲ, ನಕ್ಷತ್ರ ಯೋಗ ಕರಣ ದಿನ ತಿಥಿಗಳಿಗೆ
ಲಗ್ನಮುಹೂರ್ತ ಭವಿಶಬ್ದ ಪಾರ್ವ ಧಾರಾಪೂರಿತವಾದಿಯಾದ
ಜಗದ್ವ್ಯವಹಾರವನು,
ಪಂಚಾಂಗ ಕರ್ಮಸೂತಕ ವಿವಾಹವೆನಿಪ್ಪ
ಭವಿಮಾಟಕೂಟ ಭವಿ ದುಷ್ಕ್ರೀಯನ್ನು
ಭವಿಶೈವರಹಿತ ಭವಹರವಾದ ನಿಜವೀರಶೈವಾರಾಧ್ಯ, ಭಕ್ತಜಂಗಮದ
ಭಕ್ತಿವಿವಾಹಕ್ಕೆ ಆ ಭವಿದುಷ್ಕ್ರೀಯವ ಮಾಡಿದವಂಗೆ
ಗುರುವಿಲ್ಲ ಜಂಗಮವಿಲ್ಲ
ಪಾದೋದಕವಿಲ್ಲ ಪ್ರಸಾದವಿಲ್ಲ.
ಇಂತಪ್ಪ ಅನಾಚಾರಿಗಳು ಭಕ್ತಾರಾಧ್ಯಸ್ಥಲಕ್ಕೆ ಸಲ್ಲರಾಗಿ
ಅವರಿರ್ವರನ್ನು ಕೂಡಲಚೆನ್ನಸಂಗಯ್ಯ
ಅಘೋರ ನರಕದಲ್ಲಿಕ್ಕುವನು. /2
ಅಂಗ ಲಿಂಗ, ಲಿಂಗ ಅಂಗವೆಂದರಿದ ಬಳಿಕ, ಅಲ್ಲಿಯೇ ಕಾಣಿರೋ !
ಬೇರೆ ತೋರಲಿಲ್ಲ, ಉಂಟೆಂದರಸಲಿಲ್ಲ, ಅಲ್ಲಿಯೇ ಕಾಣಿರೋ !
ಕೂಡಲಚೆನ್ನಸಂಗಯ್ಯಲಿಂಗ ನಿರಂತರ ಅಲ್ಲಿಯೇ ಕಾಣಿರೊ. /3
ಅಂಗ ಲಿಂಗಕ್ಕೆ ಭಾಜನರೆಂಬರು, ಅಂಗ ಲಿಂಗಕ್ಕೆ ಭಾಜನವಲ್ಲ.
ಕಾಯಗುಣಂಗಳ ಕಳೆದುಳಿದು ಮಾಯಾಮಲವ ಹಿಂಗಿಸಿ,
ಮನವೆಂಬ ಘನಪರಿಯಾಣವ ಬೆಳಗಿ,
ಸಕಲ ಇಂದ್ರಿಯಗಳೆಂಬ ಕೆಲವಟ್ಟಲವನಳವಡಿಸಿ,
ಜ್ಞಾನಪ್ರಕಾಶವೆಂಬ ದೀಪಸ್ತಂಭ ಬೆಳಗಿ,
ಷಡಾಧಾರಚಕ್ರವೆಂಬ ಅಡ್ಡಣಿಗೆಯನಿಟ್ಟು,
ಸಕಲಕಾರಣಂಗಳೆಂಬ ಮೇಲುಸಾಧನಂಗ? ಹಿಡಿದು,
ಸದ್ಭಕ್ತ್ಯಾನಂದವೆಂಬ ಬೋನವ ಬಡಿಸಿ,
ವಿನಯ ವಿವೇಕವೆಂಬ ಅಬಿಘಾರವ ಗಡಣಿಸಿ
ಪ್ರಸನ್ನ ಪರಿಣಾಮದ ಮಹಾರುಚಿಯೆಂಬ
ಚಿಲುಪಾಲಘಟ್ಟಿಯ ತಂದಿಳುಹಿ,
ಸುಚಿತ್ತ ಸುಯಿಧಾನದಿಂದ, ನಿಮ್ಮ ಹಸ್ತದ ಅವಧಾನವೆ ಅನುವಾಗಿ,
ಬಸವಣ್ಣನೆ ಬೋನ ನಾನೆ ಪದಾರ್ಥವಾಗಿ
ನಿಮ್ಮ ಪರಿಯಾಣಕ್ಕೆ ನಿವೇದಿಸಿದೆನು.
ಆರೋಗಣೆಯ ಮಾಡಯ್ಯಾ, ಕೂಡಲಚೆನ್ನಸಂಗಮದೇವಾ./4
ಅಂಗ ಲಿಂಗವೆಂದರೆ ಪ್ರಳಯಕ್ಕೆ ಒಳಗು,
ಮನ ಲಿಂಗವೆಂದರೆ ಬಂಧನಕ್ಕೊಳಗು
ಪ್ರಾಣ ಲಿಂಗವೆಂದರೆ ಸಂಸಾರಕ್ಕೊಳಗು.
ಇದಾವಂಗವೆನಲಿಲ್ಲ, ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯವು/5
ಅಂಗ ಲಿಂಗವೆಂಬರು, ಲಿಂಗ ಅಂಗವೆಂಬರು,
ಅದು ಹುಸಿ ಕಾಣಿರೊ, ಅಯ್ಯಾ !
ಅಂಗವೇ ಲಿಂಗವಾದರೆ ಕಾಯದಲ್ಲಿ ಕಳವಳವುಂಟೆ ?
ಲಿಂಗವೆ ಅಂಗವಾದರೆ ಪ್ರಳಯಕ್ಕೊಳಗಹುದೆ ?
ಅಂಗ ಲಿಂಗವಲ್ಲ, ಲಿಂಗ ಅಂಗವಲ್ಲ.
ಅಂಗ-ಲಿಂಗ ಸಂಬಂಧವಳಿದಲ್ಲಿ ಪ್ರಾಣಲಿಂಗಸಂಬಂದಿ,
ಪ್ರಾಣ ನಿಃಪ್ರಾಣವಾದಲ್ಲಿ ಲಿಂಗರೂಪು,
ರೂಪು ನಾಸ್ತಿಯಾದಂದು ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯವು./6
ಅಂಗ ಲಿಂಗೈಕ್ಯವೆಂದರೆ ಸಂಸಾರಕ್ಕೊಳಗಾಯಿತ್ತು,
ಮನ ಲಿಂಗೈಕ್ಯವೆಂದರೆ ಬಂಧನಕ್ಕೊಳಗಾಯಿತ್ತು,
ಪ್ರಾಣ ಲಿಂಗೈಕ್ಯವೆಂದರೆ ಭವಕ್ಕೊಳಗಾಯಿತ್ತು.
ಇದಾವಂಗವೆನಲಿಲ್ಲ, ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯ./7
ಅಂಗ ಸಂಸಾರವಿರಹದೊಳು ಸವೆದು,
ಲಿಂಗವು ಅವಗ್ರಹಿಸಿಕೊಂಡ ಮೃತ್ತಿಕಾ ಪಂಜರದೊಳಗೆ,
ಭುಜಂಗ ತಲೆಯೆತ್ತಿ ನೋಡಲು,
ಥಳಥಳನೆ ಹೊಳೆವ ಮಾಣಕ್ಯದ ಬೆಳಗುಗಳೆಸೆಯೆ
ಸದ್ಯೋಜಾತನ ಜಟಾಮಕುಟವ ಸುತ್ತಿರ್ದ ಫಣೀಂದ್ರನಲ್ಲದೆ
ಮತ್ತಾರೂ ಅಲ್ಲವೆಂದು ಶಿಖರವ ಮೊದಲುಗೊಂಡಗುಳಿಸಲು,
ಸುತ್ತಿರ್ದ ಫಣಿಸೂತ್ರವ ಕಂಡು ಚಕ್ಕನೆ ಕದವ ತೆರೆಯಲು
ದೃಷ್ಟಿದೃಷ್ಟವಾದ (ಅ)ನಿಮಿಷನ ಕರಸ್ಥಲವ ಕಂಡು
ಧೃಷ್ಟತನದಲ್ಲಿ ಲಿಂಗವ ತೆಗೆದುಕೊಂಡಡೆ
ಸಂದು ಕಳಾಸಂಗಳು ತಪ್ಪಿ ಅಸ್ಥಿಗಳು ಬಳಬಳನುದುರಲು
ಆತನ ಬೆರಗು ನಿಮ್ಮ ಹೊಡೆದು
ಖ್ಯಾತಿಯಾಯಿತ್ತು ನೋಡಯ್ಯಾ, ಅಲ್ಲಮಪ್ರಭುವೆಂಬ ನಾಮ ನಿಮಗೆ !
ಭಕ್ತಿದಳದುಳದಿಂದ ಬಂದಿಕಾರರಾಗಿ ಬಂದು ಹೊಕ್ಕಡೆ
ಬದನೆಯ ಕಾಯಿಗಳು ಬಾಣಲಿಂಗವಾಗವೆ ನಮ್ಮ ಬಸವಣ್ಣನ ದೃಷ್ಟಿತಾಗಲು ?
ಇದು ಕಾರಣ-ಕೂಡಲಚೆನ್ನಸಂಗನಲ್ಲಿ
ಅನಿಮಿಷಪ್ರಭುವಿಂಗೆ ಬಸವಣ್ಣ ಗುರುವಾದ ಕಾರಣ
ನಾನು ನಿಮಗೆ ಚಿಕ್ಕ ತಮ್ಮ ಕೇಳಾ ಪ್ರಭುವೆ. /8
ಅಂಗ, ಮನ, ಪ್ರಾಣ ತ್ರಿಸ್ಥಾನ ಸಂಗವಾಗಿ.
ಮನಕ್ರೀಯಳಿದು, ಸಾರವುಳಿದು ನಿಂದು,
ಅತಿರಥರ ಸಮರಥರ ನುಡಿಗಡಣ ಸಂಭಾಷಣೆಯಿಂದ
ಹೃದಯ ಕಂದೆರೆದು,
ಜಂಗಮದಲ್ಲಿ ಅರಿವ, ಲಿಂಗದಲ್ಲಿ ಮೆರೆವ
ಕೂಡಲಚೆನ್ನಸಂಗ ತಾನಾಗಿ. /9
ಅಂಗಕ್ಕೆ ಆಚಾರಳವಟ್ಟಲ್ಲಿ ಆ ಲಿಂಗಕ್ಕೆ ಅಂಗವೆ ಅರ್ಪಿತ.
ಪ್ರಾಣಕ್ಕೆ ಪ್ರಸಾದ ಸಾಧ್ಯವಾದಲ್ಲಿ ಆ ಲಿಂಗಕ್ಕೆ ಆ ಪ್ರಾಣವೆ ಅರ್ಪಿತ.
ಮನವು ಮಹವನಿಂಬುಗೊಂಡಲ್ಲಿ ಆ ಲಿಂಗಕ್ಕೆ ಮನವೆ ಅರ್ಪಿತ.
ಭಾವಭ್ರಮೆಯಳಿದು ನಿಭ್ರಾಂತುವಾದಲ್ಲಿ ಆ ಲಿಂಗಕ್ಕೆ ಆ ಭಾವವೆ ಅರ್ಪಿತ.
ಜ್ಞಾತೃ ಜ್ಞಾನ ಜ್ಞೇಯ ಸಂಪುಟವಾಗಿ, ಅರಿವು ನಿರ್ಣಯಿಸಿ ನಿಷ್ಪತಿಯಾಗಿ
ಕುರುಹುಗೆಟ್ಟಲ್ಲಿ ಆ ಲಿಂಗಕ್ಕೆ ಆ ಅರಿವೆ ಅರ್ಪಿತ.
ಇಂತು, ಸರ್ವಾಂಗವರ್ಪಿತವಾದ ಲಿಂಗಕ್ಕೆ ಒಡೆತನವನಿತ್ತ ಕಾರಣ,
ಕೂಡಲಚೆನ್ನಸಂಗಯ್ಯನಲ್ಲಿ ನಾನೆಂದೆನಲರಿಯದೆ
ನಿಂದ ನಿಜದ ಮಹಾಪ್ರಸಾದಿ. /10
ಅಂಗದ ಆಪ್ಯಾಯನವಳಿಯದ ಕಾರಣ ಲಿಂಗ ಲಿಂಗವೆನುತ್ತಿದ್ದರು,
ಸಂಗದಾಪ್ಯಾಯನವಳಿಯದ ಕಾರಣ ಜಂಗಮ ಜಂಗಮವೆನ್ನುತ್ತಿದ್ದರು,
ಪರಿಣಾಮ ನೆಲೆಗೊಳ್ಳದ ಕಾರಣ ಪ್ರಸಾದ ಪ್ರಸಾದವೆನ್ನುತ್ತಿದ್ದರು.
ಒಂದೊಂದರಂಗವಿಡಿದು ನಾಮಭಂಗಿತರಾದರೆಲ್ಲ.
ಕೂಡಲಚೆನ್ನಸಂಗಾ ನಿಮ್ಮ ಶರಣ ಅಂಗವಿರಹಿತ. /11
ಅಂಗದ ಕೈಯಲು ಲಿಂಗವಿಪ್ಪುದು, ಲಿಂಗದ ಕೈಯಲು ಅರ್ಪಿತವೆಂಬರು.
ಲಿಂಗಾರ್ಪಿತವಲ್ಲದೆ ಕೊಳ್ಳೆವೆಂಬರು, ಪ್ರಾಣಲಿಂಗಿಗಳಲ್ಲದವರು.
ಪದಾರ್ಥ ಲಿಂಗಕ್ಕೆ ಬಂದುದು ಬಾರದೆಂಬ ಸಂದೇಹವುಳ್ಳನಕ
ಕೊಂಡುದು ಕಿಲ್ಬಿಷ ಕೂಡಲಚೆನ್ನಸಂಗಮದೇವಾ./12
ಅಂಗದ ಕೊನೆಯಲ್ಲಿ ಲಿಂಗ ಮುಂತಲ್ಲದೆ ಸಂಗವ ಮಾಡನಾ ಶರಣನು,
ನಯನದ ಕೊನೆಯಲ್ಲಿ ಲಿಂಗ ಮುಂತಲ್ಲದೆ ಅನ್ಯವ ನೋಡನಾ ಶರಣನು,
ಶ್ರೋತ್ರದ ಕೊನೆಯಲ್ಲಿ ಲಿಂಗ ಮುಂತಲ್ಲದೆ ಅನ್ಯವ ಕೇಳನಾ ಶರಣನು,
ನಾಸಿಕದ ಕೊನೆಯಲ್ಲಿ ಲಿಂಗ ಮುಂತಲ್ಲದೆ ಪರಿಮಳವ ವೇದಿಸ ಶರಣನು,
ಜಿಹ್ವೆಯ ಕೊನೆಯಲ್ಲಿ ಲಿಂಗ ಮುಂತಲ್ಲದೆ ರುಚಿಯ ನಿಶ್ಚಯಿಸ ಶರಣನು,
ಕೂಡಲಚೆನ್ನಸಂಗಾ ನಿಮ್ಮ ಶರಣ ಸರ್ವಾಂಗಲಿಂಗಿಯಾದ ಕಾರಣ. /13
ಅಂಗದ ಗುಣದಿಂದ ಲಿಂಗೈಕ್ಯವೆಂಬರು,
ಲಿಂ(ಅಂ?)ಗದಗುಣದಿಂದ ಲಿಂಗೈಕ್ಯವಿಲ್ಲ ನೋಡಾ.
ಭಾವಾದ್ವೈತಂ ಪರಹಿತ ಕೂಡಲಚೆನ್ನಸಂಗಾ ಲಿಂಗೈಕ್ಯವು./14
ಅಂಗದ ಪಾದತೀರ್ಥವ ಲಿಂಗದ ಮಜ್ಜನಕ್ಕೆರೆವುದು,
ಲಿಂಗದ ಪಾದತೀರ್ಥವ ಪಂಚಪಾದಾರ್ಚನೆಯ ಮಾಡುವದು
ಮಾಡಿದ ಪ್ರಾಣಂಗೆ ಪರಿಣಾಮವನೈದಿಸುವದು.
ಇಂತೀ ತ್ರಿವಿಧ ಉದಕದ ಭೇದವನರಿಯದೆ,
ಅವನೊಬ್ಬ ಮಜ್ಜನಕ್ಕೆರೆದಡೆ
ಭವಿಚಾಂಡಾಲರ ಮೂತ್ರದಲ್ಲಿ ಎರೆದಂತೆ ಕಾಣಾ
ಕೂಡಲಚೆನ್ನಸಂಗಮದೇವಯ್ಯಾ./15
ಅಂಗದ ಮೇಲಣ ಲಿಂಗ ಅಂಗಲಿಂಗವಯ್ಯಾ,
ಪ್ರಾಣದ ಮೇಲಣ ಲಿಂಗ ಪ್ರಾಣಲಿಂಗವಯ್ಯಾ,
ಭಾವದ ಮೇಲಣ ಲಿಂಗ ಭಾವಲಿಂಗವಯ್ಯಾ.
ಕೂಡಲಚೆನ್ನಸಂಗಾ ಲಿಂಗತ್ರಿವಿಧನಿರ್ಣಯ, ನಿಮ್ಮಲ್ಲಿ/16
ಅಂಗದ ಮೇಲಣ ಲಿಂಗ ಹಿಂಗದಂತಿರಬೇಕು,
ಅಂಗಕ್ಕೆ ಲಿಂಗಕ್ಕೆ ಸಂಬಂಧವೇನೊ ಮನ ಮುಟ್ಟದನ್ನಕ್ಕರ ?
ಕಾಯ ಕಾಯಕವ ಮಾಡುತ್ತಿರಲು,
ಮನವು ಲಿಂಗದಲ್ಲಿ ಬೆರಸಿ ತೆರಹಿಲ್ಲದಿಪ್ಪ ಮಡಿವಾಳನ ಪರಿಯ ನೋಡಾ !
ಅಂಗ ಲಿಂಗ ಸಂಗವೆಂಬ ಸಂದು ಸಂಶಯವಳಿದು,
ಸರ್ವಾಂಗಲಿಂಗಸಂಬಂದಿ ಕೂಡಲಚೆನ್ನಸಂಗಯ್ಯನಲ್ಲಿ
ಮಡಿವಾಳ ಮಾಚಯ್ಯನು ! /17
ಅಂಗದ ಮೇಲಣ ಲಿಂಗ ಹಿಂಗಿತ್ತೆಂದು
ಆತ್ಮಘಾತವ ಮಾಡಬೇಕೆಂಬ ಅಜ್ಞಾನಿಗಳು
ಅಂಗವಾವುದು ಲಿಂಗವಾವುದೆಂದವರೆತ್ತ ಬಲ್ಲರು ?
ಅಂಗವೆ ಆತ್ಮ, ಲಿಂಗವೆ ಸಂವಿತ್ತು.
ಎರಡರ ಸಂಬಂಧ ಸಂಚ ತಿಳಿಯದೆ ಲಿಂಗ ಹಿಂಗಿತ್ತೆಂಬವರಿಗೆ
ಪ್ರಾಣಲಿಂಗನಾಸ್ತಿ, ಪ್ರಸಾದವೆಲ್ಲಿಯದೋ
ಕೂಡಲಚೆನ್ನಸಂಗಮದೇವಾ. /18
ಅಂಗದ ಮೇಲಣ ಲಿಂಗವೆಲ್ಲಿಯಾದರೂ ಉಂಟು,
ಪ್ರಾಣದ ಮೇಲಣ ಲಿಂಗವಪೂರ್ವ.
ಅವರನೆ ಅರಸಿ ತೊಳಲಿ ಬಳಲುತ್ತಿದೇನಯ್ಯಾ.
ಇದು ಕಾರಣ- ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣರು ಸಕೃತ್ ಕಾಣಲಾರರು./19
ಅಂಗದ ಮೇಲಿಹ ಲಿಂಗಕ್ಕರ್ಪಿಸಿದಲ್ಲದೆ ಕೊಳಲಾಗದು.
ಅಂಗೈಯಲ್ಲಿ ಹಿಡಿದು ಅರ್ಪಿಸಿಹೆನೆಂದಡೆ ಅರ್ಪಿತವಾಗದು.
ಇನ್ನು ಅರ್ಪಿಸುವ ಪರಿ ಎಂತೆಂದಡೆ :
ನಾಸಿಕದಲ್ಲಿ ಗಂಧ ಅರ್ಪಿತ, ಜಿಹ್ವೆಯಲ್ಲಿ ರುಚಿ ಅರ್ಪಿತ,
ನೇತ್ರದಲ್ಲಿ ರೂಪು ಅರ್ಪಿತ, ತ್ವಕ್ಕಿನಲ್ಲಿ ಸ್ಪರ್ಶನ ಅರ್ಪಿತ,
ಶೋತ್ರದಲ್ಲಿ ಶಬ್ದ ಅರ್ಪಿತ, ಹೃದಯದಲ್ಲಿ ಪರಿಣಾಮ ಅರ್ಪಿತ.
ಇದನರಿದು ಭೋಗಿಸಬಲ್ಲಡೆ ಪ್ರಸಾದ.
ಈ ಕ್ರಮವನರಿಯದೆ ಕೊಂಡ ಪ್ರಸಾದವೆಲ್ಲವು ಅನರ್ಪಿತ.
ನುಂಗಿದ ಉಗುಳೆಲ್ಲವು ಕಿಲ್ಬಿಷ, ಕೂಡಲಚೆನ್ನಸಂಗಮದೇವಾ./20
ಅಂಗದ ಮೇಲೆ ಆಚಾರಲಿಂಗಸ್ವಾಯತವಾಯಿತ್ತು;
ಪ್ರಾಣದ ಮೇಲೆ ಜಂಗಮಲಿಂಗಸ್ವಾಯತವಾಯಿತ್ತು;
ಆತ್ಮನ ಮೇಲೆ ಸಮ್ಯಗ್ಜ್ಞಾನಲಿಂಗ ಸ್ವಾಯತವಾಯಿತ್ತು.
ಇಂತೀ ತ್ರಿವಿಧಕ್ಕೆ ತ್ರಿವಿಧ ಸ್ವಾಯತವಾಗಿಪ್ಪ
ನಮ್ಮ ಕೂಡಲಚೆನ್ನಸಂಗನ ಶರಣ ಬಸವಣ್ಣಂಗೆ
ನಮೋ ನಮೋ ಎನುತಿರ್ದೆನು./21
ಅಂಗದ ಮೇಲೆ ಆಯತವಾದುದೆ ಇಷ್ಟಲಿಂಗ,
ಆ ಇಷ್ಟಲಿಂಗವಿಡಿದಿಹುದೆ ಪ್ರಾಣಲಿಂಗ ಸ್ವಾಯತ,
(ಇಷ್ಟಲಿಂಗ ಉದಯಿಸಿದಲ್ಲದೆ ಪ್ರಾಣಲಿಂಗವ ಕಾಣಬಾರದು)
ಪ್ರಾಣಲಿಂಗ ಉದಯಿಸಿದಲ್ಲದೆ ಇಷ್ಟಲಿಂಗವ ಕಾಣಬಾರದು,
ಈ ಭೇದವ ಭೇದಿಸಬಲ್ಲರೆ ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯವು./22
ಅಂಗದ ಮೇಲೆ ಲಿಂಗ ಪ್ರತಿಷ್ಠೆಯನೆ ಮಾಡಿ
ಹಿಂಗಿದಡೆ ಪ್ರಥಮಪಾತಕ,
ಭವಿ ಪಾಕಕ್ಕೆಳಸಿದಡೆರಡನೆಯ ಪಾತಕ,
ಪ್ರತಿಮಾದಿಗಳಿಗೆರಗಿದಡೆ ಮೂರನೆಯ ಪಾತಕ
ಪ್ರಸಾದಿಸ್ಥಲವನರಿಯದಿದ್ದಡೆ ನಾಲ್ಕನೆಯ ಪಾತಕ
ಸುಳುಹಡಗಿ ಲಿಂಗಲೀಯವ ಮಾಡದಿದ್ದಡೆ ಐದನೆಯ ಪಾತಕ.
ಇಂತೀ ಪಂಚಮಹಾಪಾತಕವ ಕಳೆದಲ್ಲದೆ
ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣನಾಗಬಲ್ಲನೆ ? /23
ಅಂಗದ ಮೇಲೆ ಲಿಂಗಧಾರಣವಾದ ಬಳಿಕ ಮರಳಿ ಭವಿ ನಂಟನೆಂದು ಬೆರಸಿದರೆ
ಕೊಂಡ ಮಾರಿಂಗೆ ಹೋಹದು ತಪ್ಪದು.
ಹಸಿಯ ಮಣ್ಣಿನಲ್ಲಿ ಮಾಡಿದ ಮಡಕೆ ಅಗ್ನಿಮುಖದಿಂದಾದ ಬಳಿಕ
ಅದು ತನ್ನ ಪೂರ್ವಕುಲವ ಬೆರಸೂದೆ?
ಅಗ್ನಿದಗ್ಧಘಟಃ ಪ್ರಾಹುರ್ನ ಭೂಯೋ ಮೃತ್ತಿಕಾಯತೇ
ತಚ್ಛಿವಾಚಾರಸಂಗೇನ ನ ಪುನರ್ಮಾನುಷೋ ಭವೇತ್
ಇದು ಕಾರಣ ಪೂರ್ವ ನಾಸ್ತಿಯಾದ ಭಕ್ತನಪೂರ್ವ,
ಕೂಡಲಚೆನ್ನಸಂಗಮದೇವಾ. /24
ಅಂಗದ ಮೇಲೆ ಲಿಂಗಯುಕ್ತವಾದ ಭಕ್ತನು
ಆ ಭಕ್ತಿಯಾಚಾರದ ನೆಲೆಯನರಿಯದೆ
ಸಂಬಂಧಕ್ಕನ್ಯವಾದ ನಂದಿ ವೀರಭದ್ರ ಮತ್ತೆ ಲಿಂಗಂಗಳೆಂಬಿವಾದಿಯಾದ
ಭವಿಶೈವದೈವಂಗಳ ಹೆಸರಿನಲ್ಲಿ ಮೀಸಲುವಿಡಿದು ಬಾಸಣಿಸಿ
ಮನೆದೈವಕ್ಕೆಂದು ನೇಮಿಸಿ ಮಾಡಿದ ಪಾಕವ
ತನ್ನ ಕರಸ್ಥಲದ ನಿಜ ವೀರಶೈವಲಿಂಗಕ್ಕೆ
ಓಗರವೆಂದರ್ಪಿಸುವದು ಅನಾಚಾರ, ಪಂಚಮಹಾಪಾತಕ.
ಅವನು ಸದಾಚಾರಕ್ಕೆ ಹೊರಗು, ಅದೇನು ಕಾರಣವೆಂದೊಡೆ:
ಅದು ಶೈವದೈವೋಚ್ಛಿಷ್ಟವಾದ ಕಾರಣ.
ಅದರಿಂಲೂ ಭವಿಯ ಮನೆಯ ಅಶನ ಉತ್ತಮ.
ಅದೆಂತೆಂದೊಡೆ:ಅದು ಅನ್ನವಾದ ಕಾರಣ.
ಆ ಅನ್ನದ ಪೂರ್ವಾಶ್ರಯ ಕಳೆಯಬಹುದಾಗಿ
ಆ ಉಚ್ಛಿಷ್ಟದ ಪೂರ್ವಾಶ್ರಯ ಹೋಗದಾಗಿ. ಅದೆಂತೆಂದೊಡೆ:
ಭವಿಹಸ್ತಕೃತಂ ಪಾಕಂ ಲಿಂಗನೈವೇದ್ಯ ಕಿಲ್ಬಿಷಂ
ಶಿವಭಕ್ತ ಕೃತಂ ಪಾಕಂ ಲಿಂಗನೈವೇದ್ಯಮುತ್ತಮಂ- ಎಂದುದಾಗಿ
ಭಕ್ತಂಗೆ ಭವಿಯ ಮನೆಯ ಅಶನ ನಾಯಡಗು ನರಮಾಂಸ
ಕ್ರಿಮಿ ಮಲಕ್ಕೆ ಸಮವೆಂದರಿದು ಶಿವಭಕ್ತರಾದವರು ಮುಟ್ಟರು;
ಅದಕಿಂದಲೂ ಕರಕಷ್ಟ ಕರಕಷ್ಟ ನೋಡಾ.
ಅರೆಭಕ್ತರು ತಮ್ಮ ಕುಲದೈವವ ಕೂರ್ತು ಮಾಡಿದ
ಆ ಭವಿ ಶೈವದೈವೋಚ್ಛಿಷ್ಟವ
ತಾ ನೆರೆಭಕ್ತನಾಗಿ ಆಚಾರವನನುಸರಣೆಯ ಮಾಡಿಕೊಂಡು
ಆ ಅರೆಭಕ್ತರ ಮನೆಯಲ್ಲಿ ಹೊಕ್ಕು ಲಿಂಗಾರ್ಚನೆಯ ಮಾಡುವದಕ್ಕಿಂತಲೂ
ಹೊರಗಣ ಹೊಲೆಯರ ಮನೆಯ ಅನ್ನವೇ ಮಿಗೆ ಮಿಗೆ ಉತ್ತಮ ಕಾಣಾ
ಕೂಡಲಚೆನ್ನಸಂಗಯ್ಯಾ. /25
ಅಂಗದ ಮೇಲೆ ಲಿಂಗವಿಲ್ಲದನ್ನಕ್ಕರ,
ಪ್ರಾಣದಲ್ಲಿ ಲಿಂಗಪರಿಣಾಮವನೆಯ್ದುವ ಪರಿಯೆಂತಯ್ಯಾ ?
ಅಂಗತ್ರಯವುಳ್ಳವರು ಲಿಂಗತ್ರಯಸಂಪನ್ನರಾಗಬೇಕು,
ಒಂದಂಗ ವಿರಹಿತರಾಗಿಪ್ಪವರುಂಟೆ ?
ಕಂಗಳ ನೋಟಕ್ಕೆ ಇಂಬಾವುದು ಹೇಳಾ
ಒಂದಂಗ ಬಿಟ್ಟು ಒಂದಂಗ ತೋರದಾಗಿ.
ಸಂದುಭೇದವಿಲ್ಲದಿಪ್ಪ ಮಡಿವಾಳನ ನಿಲವು
ಕೂಡಲಚೆನ್ನಸಂಗಯ್ಯನಲ್ಲಿ ನಿನಗೆಂತು ಸಾಧ್ಯವಾಯಿತ್ತು ಹೇಳಾ
ಸಿದ್ಧರಾಮಯ್ಯ ?/26
ಅಂಗದ ಮೇಲೆ ಲಿಂಗವಿಲ್ಲದವರು ಲಿಂಗಕ್ಕೆ ಬೋನವ ಮಾಡಲಾಗದು.
ಮಾಡಿದರೆ [ಮಾಡಲಿ]
ಅವರು ಮಾಡಿದ ಬೋನವ ಲಿಂಗಕ್ಕೆ ಕೊಟ್ಟು ಪ್ರಸಾದವೆಂದು ಕೊಂಡರೆ,
ಕುಂಬಿಪಾಕ ನಾಯಕನರಕ ಕೂಡಲಚೆನ್ನಸಂಗಮದೇವಾ. /27
ಅಂಗದ ಮೇಲೆ ಲಿಂಗವುಳ್ಳುದೆಲ್ಲಾ ಸಂಗಮನಾಥನೆಂಬ ಭಾವ
ಬಸವಣ್ಣಂಗಾಯಿತ್ತಲ್ಲದೆ, ಎನಗೆ ಆ ಭಾವವಿಲ್ಲ ನೋಡಾ.
ಲಿಂಗೈಕ್ಯ ಶರಣರ ಕಂಡಡೆ ಕರುಣಾಮೃತ ಸುರಿವುದೆನಗೆ.
ಅವರ ಪಾದಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರವ
ಮಾಡುವದೆನ್ನ ಮನವು.
ಕೂಡಲಚೆನ್ನಸಂಗಮದೇವಾ, ನಿಮ್ಮ ಶರಣ ಪ್ರಭುವೆಂಬ ಜಂಗಮವ ಕಂಡು
ಪೂಜಿಸಿ ಪೂಜಿಸಿ ದಣಿಯದೆನ್ನ ಮನವು. /28
ಅಂಗದ ಮೇಲೆ ಲಿಂಗಸನ್ನಿಹಿತವಾದ ಬಳಿಕ
ಶ್ರೋತ್ರದಲ್ಲಿ ಅನ್ಯಶಬ್ದವ ಕೇಳನಾ ಶರಣನು.
ಅಂಗದ ಮೇಲೆ ಲಿಂಗಸನ್ನಿಹಿತವಾದ ಬಳಿಕ
ಅನ್ಯವ ಮುಟ್ಟನಾ ಶರಣನು.
ಅಂಗದ ಮೇಲೆ ಲಿಂಗಸನ್ನಿಹಿತವಾದ ಬಳಿಕ
ಅನ್ಯವ ನೋಡನಾ ಶರಣನು.
ಆಹಾರ ವ್ಯವಹಾರವನರಿಯನಾ ಶರಣನು
ಅಂಗದ ಮೇಲೆ ಲಿಂಗಸನ್ನಿಹಿತವಾದ ಬಳಿಕ
ಅನ್ಯವ ಘ್ರಾಣಿಸನಾ ಶರಣನು.
ಅಂಗದ ಮೇಲೆ ಲಿಂಗಸನ್ನಿಹಿತವಾದ ಬಳಿಕ
ಬರಿ ಶಬ್ದವ ನುಡಿಯನಾ ಶರಣನು.
ಅಂಗದ ಮೇಲೆ ಲಿಂಗಸನ್ನಿಹಿತನಾಗಿ
ಕೂಡಲಚೆನ್ನಸಂಗಯ್ಯನಲ್ಲದನ್ಯವನರಿಯನಾ ಶರಣನು./29
ಅಂಗದ ಮೇಲೆ ಲಿಂಗಸಾಹಿತ್ಯದ ಬಳಿಕ ಸ್ಥಾವರಲಿಂಗವ ಪೂಜಿಸಬಾರದು
ತನ್ನ ಪುರುಷನ ಬಿಟ್ಟು ಅನ್ಯಪುರುಷರ ಸಂಗ ಸಲ್ಲುವುದೆ ?
ಕರಸ್ಥಲದಲ್ಲಿ ಲಿಂಗದೇವನಿದ್ದಂತೆ ಧರೆಯ ಮೇಲಣ ಪ್ರತಿಷ್ಠೆಗೆರಗಿದಡೆ
ನರಕದಲ್ಲಿಕ್ಕುವ ನಮ್ಮ ಕೂಡಲಚೆನ್ನಸಂಗಮದೇವಾ ! /30
ಅಂಗದ ಮೇಲೆ ಲಿಂಗಸಾಹಿತ್ಯವನುಳ್ಳ ನಿಜವೀರಶೈವ ಸಂಪನ್ನರು
ತಮ್ಮ ಸ್ವಯಾಂಗಲಿಂಗವನರ್ಚಿಸುವಲ್ಲಿ ಭವಿಶೈವ ಬಿನ್ನ ಕರ್ಮಿಗಳಂತೆ
ಅಂಗನ್ಯಾಸ ಪಂಚಮಶುದ್ಧಿ ಮೊದಲಾದ
ಅಶುದ್ಧಭಾವವಪ್ಪ ಕ್ಷುದ್ರ ಕರ್ಮಂಗಳ ಹೊದ್ದಲಾಗದು.
ಅದೆಂತೆಂದೊಡೆ:“ನಕಾರಮಾತ್ಮಶುದ್ಧಿಶ್ಚ ಮಕಾರಂ ಸ್ನಾನಶೋಧನಂ
ಶಿಕಾರಂ ಲಿಂಗಶುದ್ಧಿಶ್ಚ ವಾಕಾರಂ ದ್ರವ್ಯಶೋಧನಂ
ಯಕಾರಂ ಮಂತ್ರಶುದ್ಧಿಶ್ಚ ಪಂಚಶುದ್ಧಿಃ ಪ್ರಕೀರ್ತಿತಾಃ
ಕಾಯಶುದ್ಧಿಶ್ಚಾತ್ಮಶುದ್ಧಿಶ್ಚಾಂಗನ್ಯಾಸಕರಸ್ಯ ಚ
ಸರ್ವಶುದ್ಧಿರ್ಭವೇ ನಿತ್ಯಂ ಲಿಂಗಧಾರಣಮೇವ ಚ’- ಇಂತೆಂದುದಾಗಿ.
ಅವಲ್ಲದೆ ಅಘ್ರ್ಯ ಪಾದ್ಯ ಆಚಮನಂಗಳು ಮೊದಲಾದ ಉಪಪಾತ್ರಗ?ಲ್ಲಿ
ಅಗಣಿತಂಗೆ ಅಳತೆಯ ನೀರನೆರೆದು
ಸುಖಮುಖಾರ್ಪಿತಕ್ಕೆ ಸಲುವ ಸುರಸದ್ರವ್ಯಂಗಳಪ್ಪ ಪಂಚಾಮೃತಂಗಳ
ನಿರ್ಮಲನಪ್ಪ ನಿಜಲಿಂಗದ ಮಸ್ತಕಕ್ಕೆರೆದು ಜಿಡ್ಡು ಮಾಡಿ ತೊಳೆವ
ಅಜ್ಞಾನಿ ನರಕಜೀವಿಗಳ ಮುಖವ ನೋಡಲಾಗದು.
ಅದೇನುಕಾರಣವೆಂದಡೆ:
“ಅಘ್ರ್ಯಂ ಪಾದ್ಯಂ ತಥಾಚಮ್ಯಂ ಸ್ನಾನಂ ಪಂಚಾಮೃತಂ ಯದಿ
ಲಿಂಗದೇಹೀ ಸ್ವಲಿಂಗೇಷು ಕೃತ್ವಾಚ್ರ್ಯಂತೇ ಬಹಿರ್ನರಾಃ
ತೇ ಪಾಷಂಡಾಃ ಕೃತಾಸ್ತೇನ ಕೃತಂಕರ್ಮನರಂ ನಾರಕಂ ಇಂತೆಂದುದಾಗಿ.
ಇದು ಕಾರಣ ಸ್ವಯಾಂಗಲಿಂಗದೇಹಿಗಳು ತಮ್ಮ ಲಿಂಗಮಂತ್ರವಿಡಿದು ಬಂದು
ಲಿಂಗೋದಕ ಪಾದೋದಕಂಗಳಲ್ಲಿ
ತಮ್ಮ ಕರ ಮುಖ ಪದ ಪ್ರಕ್ಷಾಲನವ ಮಾಡಿಕೊಂಬುದೆ ?
ಅಂಗಲಿಂಗಿಗಳಿಗೆ ಸ್ವರ್ಯಾಘ್ರ್ಯ ಪಾದ್ಯಾಚಮನವೆಂಬುದನರಿಯದೆ
ಕೃತಕರ್ಮ ಭವಿಜೀವಿ ಶೈವಪಾಷಂಡರಂತೆ ಬಿನ್ನವಿಟ್ಟು ಮಾಡಿ
ಫಲಪದಂಗಳನೈದಿಹೆನೆಂಬ ನರಕಜೀವಿಗಳನು ಕೂಡಲಚೆನ್ನಸಂಗಯ್ಯ
ರವಿ ಸೋಮರುಳ್ಳನ್ನಕ್ಕ
ನಾಯಕ ನರಕದಲ್ಲಿಕ್ಕುವ. /31
ಅಂಗದ ಮೇಲೆ ಲಿಂಗಸಾಹಿತ್ಯವನುಳ್ಳ ಭಕ್ತಾಂಗನೆಯರು
ತಮ್ಮ ಲಿಂಗಶರೀರಂಗ? ಮಧ್ಯದಲ್ಲಿ
ಹರಭಕ್ತಿಗೆ ಹೊರಗಾದ ಅಸು[ರಾಂಶಿ] ಕವಪ್ಪ
ಹಸುರು ಹಚ್ಚೆಗಳೆಂಬ ಪತಿತ ಲೇಖನ ಇವಾದಿಯಾದ
ಅನ್ಯ ಚಿಹ್ನೆಗಳನು ಅಂಕಿತಧಾರಣ ಲೇಖನಂಗ? ಮಾಡಿಕೊಂಡು
ಮತ್ತೆ ತಾವು ಲಿಂಗವನರ್ಚಿಸಿ ಭಕ್ತರಾದೆವೆಂಬ
ಈ ಭಂಗಮಾರಿ ಹೊಲೆಜಂಗುಳಿಗಳಿಗೆ
ಉಪದೇಶವ ಕೊಟ್ಟ ಗುರು, ಪ್ರಸಾದ ನೀಡುವ ಜಂಗಮ,
ಅವರಗೊಡಗೂಡಿಕೊಂಡು ನಡೆವ ಭಕ್ತತತಿ
ಈ ಚತುರ್ವಿಧರು ಶ್ವಪಚಗೃಹದ ಶ್ವಾನಯೋನಿಗಳಲ್ಲಿ
ಶತಸಹಸ್ರ ವೇಳೆ ಬಂದು ನರಕವಿಪ್ಪತ್ತೆಂಟುಕೋಟಿಯನೈದುವರು,
ಅದೆಂತೆಂದೊಡೆ:
“ಭಕ್ತನಾರೀ ಸ್ವಯಾಂಗೇಷು ಪತಿತಾದ್ಯನ್ಯ ಚಿಹ್ನೆಯೇತ್
ಲೇಖನಾಂಕಂ ಯದಿ ಕೃತ್ವಾ ತೇಪಿ ಸ್ತ್ರೀ ಪತಿತ ಸ್ತ್ರೀಣಾಂ
ತಸ್ಯೋಪದೇಶಶೇಷಂಚ ದತ್ವಾಶ್ಚೈ ಗುರುಃ ಚರಾನ್
ತಪತ್ಸಂಗ ಸಯೋದ್ಭಕ್ತಾ ತದಾದಿ ಚತುರಾನ್ವಯಂ
ಶ್ವಾನಯೋನಿ ಶತಂ ಗತ್ವಾ ಚಾಂಡಾಲಗೃಹಮಾಚರೇತ್
ಅಷ್ಟವಿಂಶತಿಕೋಟ್ಯಸ್ತು ನರಕಂ ಯಾತಿ ಸಧ್ರುವಂ
ಇಂತೆಂದುದಾಗಿ
ಇದು ಕಾರಣ ಇಂತಪ್ಪ ಅನಾಚಾರಿಗಳನು ಕೂಡಲಚೆನ್ನಸಂಗಯ್ಯ
ಅಘೋರ ನರಕದಲ್ಲಿಕ್ಕುವ. /32
ಅಂಗದ ಮೇಲೆ ಲಿಂಗಸಾಹಿತ್ಯವಾಗದಿದ್ದರೇನು,
ಕಾಯವೇನು ಬರಿ ಕಾಯವೆ ?
ಪ್ರಾಣದ ಮೇಲೆ ಲಿಂಗಸಾಹಿತ್ಯವಾಗದಿದ್ದರೇನು ?
ಪ್ರಾಣವೇನು ವಾಯುಪ್ರಾಣವೆ ? ಅಹಂಗಲ್ಲ, ನಿಲ್ಲು.
ಗಾರವಂ ಕಾಯಸಂಬಂಧಂ ಪ್ರಾಣಸ್ತು ಪ್ರಾಣಸಂಯುತಃ
ಕಾರಣಂ ಭಾವಸಂಬಂಧಂ ಗುರೋಃ ಶಿಷ್ಯಮನುಗ್ರಹಂ
ಎಂದುದಾಗಿ ಹರರೂಪಾಗಿದ್ದುದೆ ಪ್ರಾಣಲಿಂಗ,
ಗುರುರೂಪಾಗಿದ್ದುದೆ ಜಂಗಮಲಿಂಗ.
ಹರರೂಪಾಗಿರ್ದ ಪ್ರಾಣಲಿಂಗವಾವ ಕೈಯಲುಂಬುದೆಂದರೆ,
ಭಕ್ತನ ಜಿಹ್ವಾಗ್ರದಲುಂಬುದು.
ಗುರುರೂಪಾಗಿರ್ದ ಜಂಗಮಲಿಂಗವಾವ ಕೈಯಲುಂಬುದೆಂದರೆ
ಜಂಗಮ ಜಿಹ್ವಾಗ್ರದಲುಂಬುದು.
ಇದು ಕಾರಣ ಹರರೂಪಾಗಿದ್ದುದೆ ಪ್ರಾಣಲಿಂಗ
ಗುರುರೂಪಾಗಿದ್ದುದೆ ಜಂಗಮಲಿಂಗ.
ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ
ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಫಲಂ ಭವೇತ್
ಎಂಬ ವಚನವನರಿದು ಸ್ಥಾವರವನು ಜಂಗಮವನು ಒಂದೆಂದರಿದೆನಯ್ಯಾ.
ಕೂಡಲಚೆನ್ನಸಂಗಮದೇವಾ. /33
ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ
ಭಕ್ತನಾಗಲಿ ಜಂಗಮನಾಗಲಿ ತನ್ನ ಅಂಗದ ಮೇಲೆ
ಅನ್ಯ ಮಣಿಮಾಲೆ ನಂದಿವುಂಗುರ ನಾಗಕುಂಡಲ ಮೊದಲಾದ
ಭವಿಶೈವದ ಮುದ್ರೆಗಳ ಧರಿಸಲಾಗದು.
ಭೂತೇಶನೆಂಬ ಲಿಂಗವನರ್ಚಿಸಿ ಪ್ರಸಾದವ ಕೊಂಡೆವೆಂಬ ದ್ರೋಹಿಗಳ
ಕುಂಬಿಪಾಕ ನಾಯಕನರಕದಲ್ಲಿಕ್ಕುವ ಕೂಡಲಚೆನ್ನಸಂಗಮದೇವ./34
ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಕ್ಷೇತ್ರತೀರ್ಥಕ್ಕೆ ಹೋಗಲೇಕಯ್ಯ!
ಅಂಗದ ಮೇಲಣ ಲಿಂಗ [ರಂಗದ] ಕಲ್ಲ ತಾಗಿದರೆ
ಆವುದ ಘನವೆಂಬೆನಾವುದ ಕಿರಿದೆಂಬೆ!
ತಾಳ ಸಂಪುಟಕ್ಕೆಬಾರದ ಘನವನರಿಯದೆ ಕೆಟ್ಟರು.
ಜಂಗಮದರ್ಶನ ಶಿರಮುಟ್ಟಿ ಪಾವನ, ಲಿಂಗದರ್ಶನ ಕರಮುಟ್ಟಿ ಪಾವನ.
ಹತ್ತರಿದ್ದ ಲಿಂಗವ ಹುಸಿಮಾಡಿ, ದೂರಲಿದ್ದ ಲಿಂಗಕ್ಕೆ ನಮಸ್ಕರಿಸುವ
ವ್ರತಗೇಡಿಯ ತೋರದಿರಯ್ಯಾ!
ಕೂಡಲಚೆನ್ನಸಂಗಯ್ಯಾ. /35
ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ, ಅಂಗವೆ ಲಿಂಗ,
ಮನದ ಮೇಲೆ ಲಿಂಗಸಾಹಿತ್ಯವಾದ ಬಳಿಕ, ಕರಣಂಗಳೆ ಲಿಂಗ,
ಪ್ರಾಣದ ಮೇಲೆ ಲಿಂಗಸಾಹಿತ್ಯವಾದ ಬಳಿಕ,
ಅರಿವಿನ ವಿಷಯಾದಿಭೋಗಂಗಳೆ ಲಿಂಗ-
ಅದು ಕಾರಣ ಸರ್ವಾಂಗಲಿಂಗ ಸರ್ವಭೋಗ ಲಿಂಗಭೋಗ
ಕೂಡಲಚೆನ್ನಸಂಗಮದೇವಾ./36
ಅಂಗದ ಮೇಲೊಂದು ಲಿಂಗವು, ಲಿಂಗದ ಮೇಲೊಂದು ಅಂಗವು.
ಆವುದು ಘನವೆಂಬೆ ? ಆವುದು ಕಿರಿದೆಂಬೆ ?
ತಾಳೋಷ್ಠಸಂಪುಟಕ್ಕೆ ಬಾರದ ಘನ, ಉಭಯಲಿಂಗವಿರಹಿತವಾದ ಶರಣ.
ಕೂಡಲಚೆನ್ನಸಂಗಾ ಲಿಂಗೈಕ್ಯವು. /37
ಅಂಗದ ಲಿಂಗವ ಲಿಂಗವೆಂದು ಪೂಜಿಸುವೆನೆ ?
ಅದು ಅಂಗಲಿಂಗವಲ್ಲ-ಅದೇನು ಕಾರಣ ?
ಅದು ಅಂಗದ ಮೇಲರತು ಮುಂದೆ ಜಂಗಮವೆಂದು ತೋರಿತ್ತಾಗಿ.
ಜಂಗಮವ ಲಿಂಗವೆಂದು ಅರ್ಚಿಸಿ ಪೂಜಿಸಿಕೊಂಡಿಹೆನೆ ?
ಆ ಜಂಗಮ ಲಿಂಗವಲ್ಲ-ಅದೇನು ಕಾರಣ ?
ಮುಂದೆ ಪ್ರಸಾದಲಿಂಗವೆಂದು ತೋರಿತ್ತಾಗಿ.
ಆ ಪ್ರಸಾದಲಿಂಗವ ಲಿಂಗವೆಂದು ಅರ್ಚಿಸಿ ಪೂಜಿಸಿಕೊಂಡಿಹೆನೆ ?
ಅದು ಪ್ರಸಾದಲಿಂಗವಲ್ಲ-ಅದೇನು ಕಾರಣ ?
ಮುಂದೆ ಮಹಾಪ್ರಸಾದವ ತೋರಿತ್ತಾಗಿ
ಆ ಮಹಾಪ್ರಸಾದವೆ ನೀವಾಗಿ ಸುಖಿಯಾದೆ
ಕೂಡಲಚೆನ್ನಸಂಗಮದೇವಾ. /38
ಅಂಗದಲಳವಟ್ಟ ಲಿಂಗೈಕ್ಯನ ನಿಲವ ಭಾವಭ್ರಮಿತರೆತ್ತ ಬಲ್ಲರು?
ಬಲ್ಲವರು ಬಲ್ಲರು, ಎಲ್ಲರೆತ್ತ ಬಲ್ಲರು ? ಕೂಡಲಚೆನ್ನಸಂಗಯ್ಯನಲ್ಲಿ ಶಬ್ದ ಸೂತಕಿಗಳವರೆತ್ತ ಬಲ್ಲರು ?/39
ಅಂಗದಲಾಯತಲಿಂಗ ಸಾಹಿತ್ಯನಾಗಿದ್ದೆ ನಾನು.
ಪರಮಸುಖಪರಿಣಾಮದೊಳಿದ್ದೆ ನಾನು.
ತಸ್ಮೈ ಸರ್ವಾನುಭಾವೇನ ಶಿವಲಿಂಗಾಂತರೇ ದ್ವಯಂ
ಸ್ವಾನುಭೂತೌ ನಿವಿಷ್ಟಾಯ ಪ್ರಸನ್ನಃ ಸ್ಯಾತ್ ಸದಾಶಿವಃ
ಸ್ಥಾವರ ಜಂಗಮ ಉಭಯವೊಂದಾಗಿ
ಬೇರೆ ಬಿನ್ನಭಾವವ ವಿಚಾರಿಸಲಿಲ್ಲ.
ಕೂಡಲಚೆನ್ನಸಂಗನಲ್ಲಿ ಸ್ವಾಯತವಾಗಿದ್ದೆ ಸಹಜ. /40
ಅಂಗದಲ್ಲಿ ಆಚಾರಲಿಂಗಸಂಬಂಧಿಯಾಗಿಪ್ಪ.
ಮನದಲ್ಲಿ ಮಹಾಲಿಂಗಸಂಬಂಧಿಯಾಗಿಪ್ಪ.
ಇಂತೀ ಉಭಯಸಂಗ ಸಂಬಂಧ ಸನ್ನಹಿತನಾಗಿಪ್ಪ
ಕೂಡಲಚೆನ್ನಸಂಗಾ ನಿಮ್ಮ ಶರಣ./41
ಅಂಗದಲ್ಲಿ ಗುರುಲಿಪಿಯ ತಿಳಿಯಬೇಕು,
ಮನದಲ್ಲಿ ಲಿಂಗಲಿಪಿಯ ತಿಳಿಯಬೇಕು,
ಜೀವದಲ್ಲಿ ಜಂಗಮಲಿಪಿಯ ತಿಳಿಯಬೇಕು,
ಪ್ರಾಣದಲ್ಲಿ ಪ್ರಸಾದಲಿಪಿಯ ತಿಳಿಯಬೇಕು.
ಈ ಚತುರ್ವಿಧವೇಕವಾದ ಅನುಭವಲಿಪಿಯ ತಿಳಿದು ನೋಡಲು
ಮಹಾಲಿಂಗಲಿಪಿ ಕಾಣಬಂದಿತ್ತು.
ಆ ಮಹಾಲಿಂಗಲಿಪಿಯ ಮುಟ್ಟಿದ ಸುಜ್ಞಾನಿ
ಬಚ್ಚ ಬರಿಯ ನಿರಾಳ, ನೀನೇ ಕೂಡಲಚೆನ್ನಸಂಗಮದೇವಾ./42
ಅಂಗದಲ್ಲಿ ಲಿಂಗವರತು, ಲಿಂಗದಲ್ಲಿ ಅಂಗವರತು
ಒಡಲುಪಾದಿ ಎಂಬುದಿಲ್ಲ ನೋಡಾ !
ನಿಂದಡೆ ನೆಳಲಿಲ್ಲ ಸುಳಿದಡೆ ಹೆಜ್ಜೆಯಿಲ್ಲ,
ಅಪರಿಮಿತ ಘನಮಹಿಮನನೇನೆಂಬೆನಯ್ಯಾ !
ಶಬ್ದವನರಿದು ಸಾರಾಯನಲ್ಲ, ಗತವಿಡಿದು ಅಜಡನಲ್ಲ,
ಈ ಎರಡೂ ಅಳಿದುಳಿದ ನಿಶ್ಚಿಂತನು ತನಗೆ ತಾ ನಿಜವಾದ,
ಕೂಡಲಚೆನ್ನಸಂಗಯ್ಯನಲ್ಲಿ ಪ್ರಭುದೇವರ ಪಾದಕ್ಕೆ
ನಮೋ ನಮೋ ಎನುತಿರ್ದೆನು./43
ಅಂಗದಲ್ಲಿ ಲೀಯವಾದವರು ಅಂಗದ ನುಡಿಗಡಣವೆ ನೋಡಾ,
ಲಿಂಗದಲ್ಲಿ ಲೀಯವಾದವರು ಲಿಂಗದ ನುಡಿಗಡಣವೆ ನೋಡಾ
ಆವ ಸ್ಥಳದಲ್ಲಿ ನಿಂದವರು ಆ ಸ್ಥಳವನೆ ನುಡಿವರು ನೋಡಾ,
ಕೂಡಲಚೆನ್ನಸಂಗನ ಶರಣರು
ಆ ಲಿಂಗದ ನಡೆ ಆ ಲಿಂಗದ ನುಡಿಗಡಣವೆ ನೋಡಾ. /44
ಅಂಗದಾಪ್ಯಾಯನಕ್ಕೆ ಅರ್ಪಿತವ ಮಾಡುವನಲ್ಲ,
ಆತ ಲಿಂಗದಾಪ್ಯಾಯನಿಯಾದ ಕಾರಣ.
ಅಂಗಗುಣಂಗಳಳಿದು ಲಿಂಗದಲ್ಲಿ ನಿಲರ್ೆಪವಾದ ಶರಣ,
ಅರ್ಪಿತವನರಿಯ, ಅನರ್ಪಿತವನರಿಯ,
ಓಗರವನರಿಯ, ಪ್ರಸಾದವನರಿಯ,
ಇದು ಕಾರಣ ಕೂಡಲಚೆನ್ನಸಂಗಯ್ಯ,
ತಾನರುಹಿಸಿ ಕೊಟ್ಟು, ತನ್ನ ಕಾರುಣ್ಯ ಪ್ರಸಾದವನಿಕ್ಕಿ ಸಲಹಿದನಾಗಿ,
ಆನೇನೆಂದರಿಯೆನಯ್ಯಾ. /45
ಅಂಗದಿಂದ ಲಿಂಗ ಹಿಂಗಬಾರದೆಂಬರು:
ಅಂಗ, ಲಿಂಗಸಂಬಂಧವಾದಲ್ಲಿ ಫಲವೇನು,
ಮನ ಲಿಂಗಸಂಬಂಧವಾಗದನ್ನಕ್ಕ ?
ಕೂಡಲಚೆನ್ನಸಂಗಯ್ಯಾ ಮನದಿಂದಲೇನೂ ಘನವಿಲ್ಲಯ್ಯಾ. /46
ಅಂಗದಿಂದ ಲಿಂಗಸುಖ, ಲಿಂಗದಿಂದ ಅಂಗಸುಖ,
ಅಂಗಲಿಂಗಸಂಗದಿಂದ ಪರಮಸುಖ ನೋಡಯ್ಯಾ.
ಅಂಗಲಿಂಗಸಂಗದ ಸುಖವನು
ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯ ಬಲ್ಲ. /47
ಅಂಗದುದಯ ಲಿಂಗಸುಖ, ಲಿಂಗದುದಯ ಅಂಗಸುಖ !
ಎರಡಿಲ್ಲದ ಘನವನೇನೆಂಬೆನಯ್ಯಾ
ಮಿಕ್ಕು ಮೀರಿ ನಿಂದ ನಿಲವನೇನೆಂಬೆನಯ್ಯಾ
ಕೂಡಲಚೆನ್ನಸಂಗನ ನಿಲವನೇನೆಂಬೆನಯ್ಯಾ !/48
ಅಂಗಪ್ರಸಾದಿ ಆತ್ಮದ್ರೋಹಿ, ಲಿಂಗಪ್ರಸಾದಿ ಲಿಂಗದ್ರೋಹಿ,
ಜಂಗಮಪ್ರಸಾದಿ ಜಂಗಮದ್ರೋಹಿ ಎಂದುದಾಗಿ,
ಭಾವದಿಂದ ಪ್ರಸಾದವ ಕೊಂಡು, ಅನುಭಾವದಿಂದತಿಗಳೆದಡೆ
ಅದು ಪ್ರಸಾದವಲ್ಲ, ಮಾಂಸ.
ಇದು ಕಾರಣ-ಕೂಡಲಚೆನ್ನಸಂಗಯ್ಯನಲ್ಲಿ
ಪ್ರಸಾದಸಂಪತ್ತ ಬಸವಣ್ಣನೆ ಬಲ್ಲ./49
ಅಂಗಭೋಗವನೆ ಕುಂದಿಸಿ ಪ್ರಸಾದವನು ರುಚಿಸುವೆವೆಂಬ
ಲಿಂಗವಂತರೆಲ್ಲ ಅರಿವುಗೇಡಿಗಳಾಗಿ ಹೋದರು.
ಅಂಗಭೋಗವೆ ಲಿಂಗಭೋಗ, ಅಂಗಭೋಗವು [ಲಿಂಗಕ್ಕೆ] ಅರ್ಪಿತವಾಗಿ.
ಸ್ವಕೀಯ ಪಾಕಸಂಬಂಧಭೋಗೋ ಜಂಗಮವರ್ಜಿತಃ
ನಾಸ್ತಿ ಲಿಂಗಾರ್ಚನಂ ಚೈವ ಪ್ರಸಾದೋ ನಿಷ್ಫಲೋ ಭವೇತ್
ಅಂಗಕ್ಕೆ ಬಂದ ರುಚಿ, ಲಿಂಗಕ್ಕೆ ಬಾರದೆ ?
ಇದು ಕಾರಣ-ಕೂಡಲಚೆನ್ನಸಂಗಯ್ಯಾ
ಪಾಕಸಂಬಂದಿಗೆ ಪ್ರಸಾದ ದೂರ./50
ಅಂಗಲಿಂಗ ನಿಜಸಂಬಂಧವನ್ನುಳ್ಳ ನಿಜವೀರಶೈವ ಸಂಪನ್ನರಾದ
ಭಕ್ತಜಂಗಮಕೆ ಗುರುವೊಂದು ಲಿಂಗವೊಂದು
ಜಂಗಮವೊಂದು, ಪಾದೋದಕವೊಂದು,
ಪ್ರಸಾದವೊಂದು
ಸತ್ಯ ಸದಾಚಾರ ಸತ್ಕ್ರೀಸಮ್ಯಜ್ಞಾನಯುಕ್ತವಾದ
ಸದ್ಭಕ್ತಿ ಒಂದಲ್ಲದೇ ಬಿನ್ನವುಂಟೆ ? ಇಲ್ಲವಾಗಿ.
ಇದು ಕಾರಣ ಭಕ್ತ ಜಂಗಮಕ್ಕೆ ಸತ್ಯ ಸರ್ವಜ್ಞಾನಯುಕ್ತವಾದ
ಗುರುಭಕ್ತಿ ಒಂದಲ್ಲದೇ ಬಿನ್ನವುಂಟೆ ? ಇಲ್ಲವಾಗಿ.
ಇದು ಕಾರಣ ಭಕ್ತ ಜಂಗಮಕ್ಕೆ ಸತ್ಯ ಸರ್ವಜ್ಞಾನಯುಕ್ತವಾದ
ಗುರುಭಕ್ತಿ ಲಿಂಗನಿಷ್ಠಾವಧಾನ ಜಂಗಮವಿಶ್ವಾಸ ಪ್ರಸಾದಪರಿಣತೆ
ಭಕ್ತಾಚಾರವರ್ತನೆಯಿಂ ನಿಜಮುಕ್ತಿಯನೈದಲರಿಯದೆ
ಅಜ್ಞಾನದಿಂದ ಅಹಂಕರಿಸಿ ಮುನ್ನ ತನ್ನ ಅನ್ವಯವಿಡಿದು ಬಂದ
ನಿಜಗುರುವನನ್ಯವ ಮಾಡಿ ಬಿನ್ನವಿಟ್ಟು ಕರೆವ ಕುನ್ನಿಗಳು ನೀವು ಕೇಳಿರೋ
ಗುರು ಬಿನ್ನವಾದಲ್ಲಿ ದೀಕ್ಷೆ ಬಿನ್ನ, ದೀಕ್ಷೆ ಬಿನ್ನವಾದಲ್ಲಿ ಲಿಂಗ ಬಿನ್ನ
ಲಿಂಗ ಬಿನ್ನವಾದಲ್ಲಿ ಪೂಜೆ ಬಿನ್ನ,
ಪೂಜೆ ಬಿನ್ನವಾದಲ್ಲಿ ಅರ್ಪಿತ ಪ್ರಸಾದ ಬಿನ್ನ
ಅರ್ಪಿತ ಪ್ರಸಾದ ಬಿನ್ನವಾದಲ್ಲಿ ಅಂಗಲಿಂಗ ಸಂಬಧವನ್ನುಳ್ಳ ನಿಜವೀರಶೈವ
ಷಡುಸ್ಥಲ ಆಚಾರಕ್ಕೆ ಹೊರಗಾಗಿ ನರಕಕ್ಕೆ ಇಳಿವ.
ಗುರುವಾಕ್ಯವ ಮೀರಿ ಗುರುವನನ್ಯವ ಮಾಡಿ
ಲಿಂಗವ ಬಿನ್ನವಿಟ್ಟು ಕಂಡು ಜಂಗಮದ ಜಾತಿವಿಡಿದು ನೇತಿಮಾಡಿ
ಪ್ರಸಾದವ ಎಂಜಲೆಂದು ಅತಿಗಳೆದು ಗುರುಮಾರ್ಗವ ತಪ್ಪಿನಡೆದು
ಗುರುಭಕ್ತಿ ಪರಾಙ್ಮುಖರಾದವರ ಭಕ್ತ ಜಂಗಮವೆಂದಾರಾದಿಸಿ
ಪ್ರಸಾದವ ಕೊಳಲಾಗದು ಸಲ್ಲದು ಕಾಣಾ ಕೂಡಲಚೆನ್ನಸಂಗಮದೇವ./51
ಅಂಗಲಿಂಗ ಸಂಬಂಧವನುಳ್ಳ ನಿಜವೀರಶೈವ ದೀಕ್ಷೆಯನು
ಗುರು ತನ್ನ ಶಿಷ್ಯಂಗೆ ಉಪದೇಶಿಸಿ
ಮತ್ತೆ ಆ ಲಿಂಗದಲ್ಲಿ ಮಾಡುವ ಜಪ ಧ್ಯಾನ ಅರ್ಚನೆ ಉಪಚರಿಯ
ಅರ್ಪಿತ ಪ್ರಸಾದಭೋಗವಾದಿಯಾದ ವೀರಶೈವರ
ಸಾವಧಾನ ಸತಿ್ಕೃಯಾಚಾರಂಗಳ ಹೊಲಬನರಿಯದೆ
ಭವಿಶೈವ ಭಿನ್ನಕರ್ಮಿಗಳಂತೆ ಆಂಗನ್ಯಾಸ ಕರನ್ಯಾಸ
ಪಂಚಮಶುದ್ಧಿ ಪಂಚಾಮೃತಾಬಿಷೇಕ ಶ್ರೀರುದ್ರ
ಪಂಚಬ್ರಹ್ಮಸ್ಥಲಾದಿ ಶೈವಪಂಚಪಂಚಾಕ್ಷರ
ಭೂತಾದಿ ದೇವತಾದಿ ಗಣಿಕಾಜನನಿಕರ
ಗಣನಾಕೃತ ಪರಿಪೂರಿತ ಅಕ್ಷಮಣಿ
ಭವಮಾಲಿಕಾ ಜಪೋಪಚರಿಯಂಗಳಾದಿಯಾದ
ಶೈವ ಪಾಷಂಡಕೃತ ಕರ್ಮಮಯವಪ್ಪ
ಭವಿಮಾಟಕೂಟಂಗ?ನುಪದೇಶಿಸಿ
ಭವಹರನಪ್ಪ ಘನವೀರಶೈವಲಿಂಗದಲ್ಲಿ
ಮಾಡಿ ಕೂಡಿ ನಡೆಸಿಹನೆಂಬ ಕಡುಸ್ವಾಮಿದ್ರೋಹಿಗೆ
ಆ ನಿಜದೀಕ್ಷೆಗೆಟ್ಟು
ಗುರುಶಿಷ್ಯರಿರ್ವರು ನರಕಭಾಜನರಪ್ಪುದು ತಪ್ಪುದು
ಅದೆಂತೆಂದೊಡೆ “ನಾಮಧಾರಕಶಿಷ್ಯಾನಾಂ ನಾಮಧಾರೀ ಗುರುಸ್ತಥಾ
ಅಂಧಕೋಂಧಕರಾಬದ್ಧೋ ದ್ವಿವಿಧಂ ಪಾತಕಂ ಭವೇತ್’ ಎಂದುದಾಗಿ
ಇದು ಕಾರಣ ಗುರುಚರಪರಕರ್ತೃವಹ
ಅರುಹು ಆಚಾರ ಶರಣಸದ್ಭಾವಸಂಪದವನುಳ್ಳು
ಘನಗುರುರೂಪರಪ್ಪ ಪರಮಾರಾಧ್ಯರಲ್ಲಿ ಶರಣುವೊಕ್ಕು
ಅಜಡಮತಿಗಳಪ್ಪ ಗುರುಶಿಷ್ಯರಿಬ್ಬರು ತಮ್ಮ ಹೊದ್ದಿದ
ಅಬದ್ಧವಪ್ಪ ಭವಿಮಾಟಕೂಟಂಗಳ ಪರಿಹರಿಸಿಕೊಂಡು
ನಿಜವಿಡಿದು ನಡೆದು ಕೃತಾರ್ಥರಾಗಲರಿಯದೆ
ಅಜ್ಞಾನದಿಂದಲಹಂಕರಿಸಿ ಗುರುವಿಡಿದು ಬಂದುದ ಬಿಡಬಾರದೆಂದು
ಕಡುಮೂರ್ಖತನದಿಂ ಗುರುವಚನವನುಲ್ಲಂಘಿಸಿ
ಶರಣ ಸತ್ಕ್ರಿಯಾಚಾರಂಗಳನು ಕಡೆಮೆಟ್ಟಿಸಲವ
ತನ್ನ ಕರಸ್ಥಲದ ನಿಜವೀರಶೈವಲಿಂಗದಲ್ಲಿ ಸಲ್ಲದ
ಭವಿಶೈವ ಮಾಟಕೂಟಂಗ? ಮಾಡಿಕೊಂಡು ನಡೆವ
ನರಕಜೀವಿಗಳು ಗುರುಮಾರ್ಗಕ್ಕೆ ಹೊರಗು.
ಅವರು ಕೊಂಬುದು ಸುರೆ ಮಾಂಸವಲ್ಲದೆ ಅವರ್ಗೆ ಪ್ರಸಾದವಿಲ್ಲ.
ಇದು ಕಾರಣ ಈ ಉಭಯರನ್ನು ಕೂಡಲಚೆನ್ನಸಂಗಯ್ಯ
ಸೂರ್ಯಚಂದ್ರರುಳ್ಳನ್ನಕ್ಕ ನಾಯಕನರಕದಲ್ಲಿಕ್ಕುವ./52
ಅಂಗಲಿಂಗಸಂಗ ಹಿಂಗಿ ಬಂದ ಸುಖವನಾರಿಗರ್ಪಿಸುವೆ?
ಹಿಂಗಲಾಗದು, ಶರಣಪಥಕ್ಕೆ ಸಲ್ಲದಾಗಿ,
ಹಿಂಗಲಾಗದು, ಭಕ್ತಿಪಥಕ್ಕೆ ಸಲ್ಲದಾಗಿ.
ಕೂಡಲಚೆನ್ನಸಂಗಮದೇವನ ಹಿಂಗಿ ನುಂಗಿದುಗು[ಳು] ಕಿಲ್ಬಿಷ. /53
ಅಂಗಲಿಂಗಸಂಗವು ಲಿಂಗದಲ್ಲಿ ಆಯತವಯ್ಯಾ.
ನಿಮಿಷ ಕರಸ್ಥಲವನಗಲಿದಡೆ ಭಂಗವಯ್ಯಾ.
ಕಂಗಳೆ ಕರುವಾಗಿ, ಲಿಂಗವೆ ಗೂಡಾಗಿ, ಲಿಂಗನಿಷ್ಪತ್ತಿಯಲಿಪ್ಪ
ಕೂಡಲಚೆನ್ನಸಂಗಾ ನಿಮ್ಮ ಶರಣ. /54
ಅಂಗಲಿಂಗೈಕ್ಯನ ಲಾಂಛನಧಾರಿಯೆಂಬೆ,
ಜೀವಲಿಂಗೈಕ್ಯನ ಉಪಜೀವಿಯೆಂಬೆ,
ಪ್ರಾಣಲಿಂಗೈಕ್ಯನ ? ಸಂಸಾರಿಯೆಂಬೆ,
ಈ ತ್ರಿವಿಧ ಲಿಂಗೈಕ್ಯನೆ ? ಅಲ್ಲ,
ಮತ್ತೆಯೂ ಲಿಂಗೈಕ್ಯನೇ ಬೇಕು. ತಿಳಿದು ನೋಡಾ !
ಸಾಹಿತ್ಯವಾದಲ್ಲಿ ಅಂಗಲಿಂಗೈಕ್ಯವು,
ಮುಟ್ಟಿದಲ್ಲಿ ಇಷ್ಟಲಿಂಗೈಕ್ಯವು,
ಬೆರಸಿದಲ್ಲಿ ಪ್ರಾಣಲಿಂಗೈಕ್ಯವು,
ಈ ತ್ರಿವಿಧ ಲಿಂಗೈಕ್ಯವು ಅಲ್ಲ, ಮತ್ತೆಯೂ ಲಿಂಗೈಕ್ಯವೆ ಬೇಕು. ತಿಳಿದು ನೋಡ!
ಕಾಯದ ಕೊನೆಯಲಿಪ್ಪುದು ಪ್ರಾಣಲಿಂಗವು,
ಜೀವದ ಕೊನೆಯಲಿಪ್ಪುದು ಪ್ರಾಣಲಿಂಗವು,
ಭಾವದ ಕೊನೆಯಲಿಪ್ಪುದು ಪ್ರಾಣಲಿಂಗವು.
ಕಾಯ ಲಿಂಗವೆಂದು ಪೂಜಿಸುವ ಖಂಡಿತರನೇನೆಂಬೆ !
ಜೀವ ಲಿಂಗವೆಂದು ಪೂಜಿಸುವ ಉಪಜೀವಿಗಳನೇನೆಂಬೆ
ಭಾವ ಲಿಂಗವೆಂದು ಪೂಜಿಸುವ ಭ್ರಮಿತರನೇನೆಂಬೆ !
ಈ ಲಿಂಗವನರಿದು, ಏಕೋನಿಷ್ಠೆ ಲಿಂಗವ ಮರೆದು
ಆ ಇಷ್ಟದಲ್ಲಿ ನೆರೆಯ ಬಲ್ಲರೆ ಕೂಡಲಚೆನ್ನಸಂಗಯ್ಯಾ
ಅವರನಚ್ಚಲಿಂಗೈಕ್ಯರೆಂಬೆ. /55
ಅಂಗಲೀಯ ಲಿಂಗಲೀಯ, ಅಭಾವಲೀಯ, ಸಭಾವಲೀಯ,
ಸಂಗದಲ್ಲಿ ಪ್ರಸಾದಿ, ಅಕೃತವಾದ ಪ್ರಸಾದಿ.
ಆಧಾರ ಅಧೇಯ ದೇವನಾಮಕ್ರೀಯನು ಮನಕ್ಕೆ ತಾರದ ಪ್ರಸಾದಿ
ಇದು ಕಾರಣ,- ಕೂಡಲಚೆನ್ನಸಂಗಾ
ಮಹಾಘನದಲ್ಲಿ ನಿಂದ ಪ್ರಸಾದಿ./56
ಅಂಗವ ಬಿಟ್ಟು ಹೋಹ ಪ್ರಾಣಕ್ಕೆ ಲಿಂಗವಿಲ್ಲ ಎಂದೆಂಬರು,
ಒಡಂಬಡಿಸಿಹೆನು ಕೇಳಿರಣ್ಣಾ.
ಹಿಂಗಿದ ಪುಷ್ಪದ ಪರಿಮಳವನುಂಡೆಳ್ಳು
ಅವು ತಮ್ಮಂಗವ ಬಿಟ್ಟು ಹೋಹಾಗ ಕಮ್ಮೆಣ್ಣೆಯಾಗದಿಪ್ಪುವೆ ?
ಲಿಂಗೈಕ್ಯರು ಅಳಿದಡೆ,
ಕೈಲಾಸದಲ್ಲಿ ತಮ್ಮ ಇಷ್ಟಲಿಂಗಸಹವಾಗಿಪ್ಪರು ನೋಡಾ
ಕೂಡಲಚೆನ್ನಸಂಗಮದೇವಾ./57
ಅಂಗವನಾಚಾರಕ್ಕರ್ಪಿಸಿ, ಆಚಾರವನಂಗಕ್ಕರ್ಪಿಸಿ
ಆಚಾರಲಿಂಗಪ್ರಸಾದಿಯಾದ.
ಪ್ರಾಣವ ಲಿಂಗಕ್ಕರ್ಪಿಸಿ, ಆ ಲಿಂಗವ ಪ್ರಾಣಕ್ಕರ್ಪಿಸಿ
ಪ್ರಾಣಲಿಂಗಪ್ರಸಾದಿಯಾದ.
ದೇಹಭಾವದಹಂಕಾರ ದಾಸೋಹಭಾವದೊಳಗಲ್ಲದೆ ಅಳಿಯದೆಂದು
ಲಿಂಗಜಂಗಮಕ್ಕೆ ತೊತ್ತುವೊಕ್ಕು ಲಿಂಗಜಂಗಮಪ್ರಸಾದಿಯಾದ.
ಸತ್ಯಶರಣರ ಅಂಗಳದೊಳಗೆ ಬಿದ್ದಗುಳನೆತ್ತಿಕೊಂಡಿಪ್ಪೆನೆಂದು,
ನಿಮ್ಮ ಪ್ರಸಾದದ ಕುಳಿಯೊಳಗೆ
ಹನ್ನೆರಡು ವರ್ಷ ನಿರಂತರ ಪ್ರಸಾದಿಯಾಗಿರ್ದ,
ಕೂಡಲಚೆನ್ನಸಂಗಮದೇವರಲ್ಲಿ ಮರುಳಶಂಕರದೇವರ
ಶ್ರೀಪಾದದ ಘನವನು ನಿಮ್ಮಿಂದ ಕಂಡು ಬದುಕಿದೆನು
ಕಾಣಾ ಸಂಗನಬಸವಣ್ಣಾ./58
ಅಂಗವಾಚಾರದಲ್ಲಿ ಸಂಗವಾಯಿತ್ತು, (ಆಚಾರ ಪ್ರಾಣದಲ್ಲಿ ಸಂಗವಾಯಿತ್ತು)
ಪ್ರಾಣ ಲಿಂಗದಲ್ಲಿ ಸಂಗವಾಯಿತ್ತು, ಪ್ರಾಣಕ್ಕೆ ಪ್ರಾಣವಾಗಿ ಉಭಯ ಪ್ರಾಣ
ಕೂಡಲಚೆನ್ನಸಂಗಮದೇವ. /59
ಅಂಗವಿರೋದಿ ಶರಣ, ಲಿಂಗಪ್ರಾಣಪ್ರತಿಗ್ರಾಹಕ.
ಅರ್ಥ ಪ್ರಾಣ ಅಬಿಮಾನ ವಿರೋದಿಶರಣ, ಜಂಗಮಪ್ರಾಣಪ್ರತಿಗ್ರಾಹಕ.
ರುಚಿ ವಿರೋದಿ ಶರಣ, ಪ್ರಸಾದಪ್ರಾಣಪ್ರತಿಗ್ರಾಹಕ.
ಈ ತ್ರಿವಿಧವ ಮೀರಿ ನಿಮ್ಮಲ್ಲಿ ನಿಂದ,
ಕೂಡಲಚೆನ್ನಸಂಗಾ ನಿಮ್ಮ ಶರಣ. /60
ಅಂಗವಿಲ್ಲೆಂಬಲ್ಲಿಯೆ ಅಂಗಶಂಕೆ ಬಿಡದು,
ಲಿಂಗವುಂಟೆಬಲ್ಲಿಯೆ ಲಿಂಗಶಂಕೆ ಬಿಡದು.
ಇಲ್ಲೆಂಬುದಕ್ಕೆ ಉಂಟೆಂಬುದೆ ಮರಹು,
ಉಂಟೆಂಬುದಕ್ಕೆ ಇಲ್ಲೆಂಬುದೆ ಮರಹು.
ಉಂಟಿಲ್ಲೆಂಬುದಳಿದಲ್ಲದೆ ಪ್ರಾಣಲಿಂಗಸಂಬಂಧ ಸ್ವಯವಾಗದು,
ಕೂಡಲಚೆನ್ನಸಂಗಯ್ಯನಲ್ಲಿ
ಪ್ರಾಣಲಿಂಗಸಂಬಂಧ ನಿನಗೆಲ್ಲಿಯದು ಹೇಳಾ ಸಿದ್ಧರಾಮಯ್ಯ ?/61
ಅಂಗವು ಲಿಂಗದಲ್ಲಿ ಸಂಬಂಧವಾದವರ ಲಿಂಗವೆಂದೇ ಕಾಂಬುದು,
`ಕೀಟೋಪಿ ಭ್ರಮರಾಯತೇ ಎಂಬ ನ್ಯಾಯದಂತೆ.
ಅಂಗವು ಲಿಂಗ ಸೋಂಕಿ ಲಿಂಗವಾಯಿತ್ತಾಗಿ
ಲಿಂಗವೆಂದೇ ಕಾಂಬುದು
ಅಂಗೇಂದ್ರಿಯಂಗಳೆಂಬುವಿಲ್ಲ, ಅವೆಲ್ಲವೂ ಲಿಂಗೇಂದ್ರಿಯಂಗಳಾದ ಕಾರಣ,
ಲಿಂಗವೆಂದೇ ಕಾಂಬುದು.
ಸರ್ಪದಷ್ಟಸ್ಯ ಯದ್ದೇಹಂ ತದ್ದೇಹಂ ವಿಷದೇಹವತ್
ಲಿಂಗದಷ್ಟಸ್ಯ ಯದ್ದೇಹಂ ತದ್ದೇಹಂ ಲಿಂಗದೇಹವತ್ ಎಂದುದಾಗಿ
ಸರ್ವಾಂಗಲಿಂಗಿ ಕೂಡಲಚೆನ್ನಸಂಗಾ ನಿಮ್ಮ ಶರಣ ! /62
ಅಂಗವೆ ಅಮಳೋಕ್ಯ, ಲಿಂಗವೆ ಮುಖಸೆಜ್ಜೆಯಾಗಿ
ಆ ಲಿಂಗವೆ ಭುಂಜಗ, ಅಂಗವೆ ನಾಗವತ್ತಿಕೆಯಾದ ಬಳಿಕ
ಬೇರರಸಲುಂಟೆ ?
ಅಪ್ರತಿಮ ಪ್ರಾಣನಾಥನಾದಬಳಿಕ
ಇನ್ನು ಬೇರರಸಲುಂಟೆ ?
ಅಂಗಲಿಂಗಸುಸಂಗ ಶರಣರ ಸಂಗದಲ್ಲಿರಿಸಯ್ಯ ಕೂಡಲಚೆನ್ನಸಂಗಮದೇವ./63
ಅಂಗಸಂಗಿಯಾದವಂಗೆ ಲಿಂಗಸಂಗವಿಲ್ಲ,
ಲಿಂಗಸಂಗಿಯಾದವಂಗೆ ಅಂಗಸಂಗವಿಲ್ಲ.
ಅಂಗಸಂಗವೆಂಬುದು ಅನಾಚಾರ,
ಲಿಂಗಸಂಗವೆಂಬುದು ಸದಾಚಾರ.
ಇದು ಕಾರಣ, ಅಂಗಸಂಗವ ಬಿಟ್ಟು
ಲಿಂಗಸಂಗಿಯಾಗಿರಬೇಕು, ಕೂಡಲಚೆನ್ನಸಂಗಮದೇವಾ. /64
ಅಂಗಸಂಬಂಧ ಲಿಂಗವಾದ ಬಳಿಕ ಲಿಂಗೋಪಜೀವಿಯಾಗಿರಬೇಕು.
ಲಿಂಗಸಂಬಂಧ ಅಂಗವಾದ ಬಳಿಕ ಲಿಂಗೋಪಜೀವಿಯಾಗಿರಬೇಕು,
ಇದಾವ ಸಂಬಂಧವಿಲ್ಲದೆ ಆಶ್ರಯ ಗುಣದಿಂದ ಲಾಂಛನವಾದುದೇನಯ್ಯಾ ?
ಲಾಂಛನಂ ದುರ್ಲಭಂ ಚೈವ ಸ್ವಾನುಭಾವೋಹ್ಯತಃ ಪರಂ
ದುರ್ಲಭಂ ಶಿವತತ್ವಂ ಚ ಪ್ರಾಣಲಿಂಗಮತಃ ಪರಂ
ಎಂದುದಾಗಿ, ಆಶ್ರಯದ ಪರಿಯಲ್ಲ; ನಿರಾಶ್ರಯದ ಪರಿಯಲ್ಲ,
ಲಿಂಗಸಾರಾಯ ಶರಣ.
ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ
ಮಹದ ಅನುಭಾವ, ನಿರ್ಗಮನವಾದ ಬಳಿಕ./65
ಅಂಗಸೋಂಕಿನಲ್ಲಿ ಲಿಂಗಸಂಗವಾದ ಬಳಿಕ
ಸರ್ವಾಂಗ ವಿಕಾರವಳಿಯಬೇಕು.
ಅಂಗಸೋಂಕಿನ ಲಿಂಗಕ್ಕೆ ಸೆಜ್ಜೆ, ಶಿವದಾರವಾ[ವುವೆಂದರೆ];
ಅಂಗವೆ ಲಿಂಗದ ಸೆಜ್ಜೆ, ಆಚಾರವೆ ಶಿವದಾರ.
ತ್ರಿಕರಣ ಶುದ್ಧವಾಗಬೇಕು, ತ್ರಿವಿಧಗುಣಂಗಳಳಿಯಬೇಕು,
ತ್ರಿವಿಧ ಸಂಪನ್ನನಾಗಬೇಕು, ತ್ರಿಕಾಲ ಶಿವಲಿಂಗಾರ್ಚನೆಯ ಮಾಡಬೇಕು,
ಅಂಗಲಿಂಗ ಸಂಬಂಧಕ್ಕೆ ಇದು ಕ್ರಮ.
ಕೂಡಲಚೆನ್ನಸಂಗಮದೇವಾ. /66
ಅಂಗಸ್ಥಲ ಮೂವತ್ತಾರು ಕಲ್ಪನಾಡಿಭೇದಮಂ ಭೇದಿಸುತ್ತ
ವಾಕು ಪಾಣಿ ಪಾದ ಪಾಯು ಗುಹ್ಯವೆಂಬ
ಕಮರ್ೆಂದ್ರಿಯಂಗಳ ವರ್ಮದಲ್ಲಿರಿಸಿ
ಶಬ್ದ ಸ್ಪರ್ಶ ರೂಪ ರಸ ಗಂಧವೆಂಬ ಪಂಚೇಂದ್ರಿಯ[ವಿಷಯಂ]ಗಳ
ಪೂರ್ವನಾಮವಿಮೋಚನೆಯಂ ಮಾಡುವ ಪರಿ :
ಶ್ರೋತ್ರ, ತ್ವಕ್ಕು, ನೇತ್ರ, ಜಿಹ್ವೆ,
ಘ್ರಾಣವೆಂಬ ಪಂಚೇಂದ್ರಿಯಂಗಳ
ಬಾಹ್ಯಾಭ್ಯಂತರವನರಿವ ಪರಿ,
ಆದ್ಯಕ್ಷರವೊಂದಾದಡೆ ಅಂತ್ಯಕ್ಷರ ಶೂನ್ಯ,
ಅದಕ್ಕೆ ಶಾಸ್ತ್ರಕ್ರಮದೊಳಗಾಡುವ
ಭೇದಖಂಡದಿಂದ ಲಿಂಗಪ್ರಸಾದವ ಛೇದಿಸಿ,
ಆ ಲಿಂಗವಂ ಭೂಮಿಯ ಬಿಡಿಸುವುದು.
ಕಳಾವಿಧಸ್ಥಾನಕ್ಕೆ ತಂದಲ್ಲಿ ಸರ್ಪನು ಹಲವ ರುಚಿಸುವುದು.
ಆ ರುಚಿಸುವ ಸರ್ಪನನು ತನ್ನಿಚ್ಛೆಗೆ ಹರಿಯಲೀಯದೆ
ಅರಿವೆ ಪ್ರಾಣವಾಗಿ ಆ ಅರಿವಿನಿಂ ದೃಢವಿಡಿದು,
ಹರಿವ ಹತ್ತುವ ಪರಿಯನೊಡೆದು
ಮೂವತ್ತೆರಡು ಜವೆಯ ತೊರೆದಲ್ಲಿ ತೋರುವ, ನಾಡಿ ಮಧ್ಯಮಸ್ವರ
ಮಹಿತಸ್ವರ, ಭೂಸ್ವರವೆಂಬ ಮಧ್ಯನಾಡಿ ಮಥನಂಗಳಂ ಮಥಿಸುವುದು.
ಅಂಗಕ್ಕೆ ಲಿಂಗ ಬಂದಡೆ ಅಂಗದಾಪ್ಯಾಯನವನರಿವುದು.
ಗುರುವಿನಿಂದ ಕರಣಾದಿಗಳು ಶುದ್ಧವಹವು,
ಆದಿಪ್ರಭೆಯ ಕಿರಣಂಗಳು ಶುದ್ಧವಹವು,
ಕರಣಂಗಳ ಆರತವಡಗುವುದು,
ಕಾದ್ರಮಾ ಕಾದು ಕಾವುದು;
ಆ ಲಿಂಗವನು ಉದಯದಲ್ಲಿ
ನಾಲ್ಕು ಘಳಿಗೆ ತನಕ ಲಿಂಗಾರ್ಚನೆಯಂ ಮಾಡುವುದು.
ಆ ಲಿಂಗವನು ವಾಮಕ್ಕೆ ಆ ಲಿಂಗವನು ದಕ್ಷಿಣಕ್ಕೆ
ಆ ಲಿಂಗವನು ಪೂರ್ವಕ್ಕೆ, ಆ ಲಿಂಗವನು ಪಶ್ಚಿಮಕ್ಕೆ
ಆ ಲಿಂಗವನು ಅಧಕ್ಕೆ,
ಆ ಲಿಂಗವನು ಊಧ್ರ್ವಕ್ಕೆ ಆ ಲಿಂಗವನು ಜಡಿವುದು.
ಪ್ರಭಾಲಿಂಗವೆಂಬ ಭಾವವನು ಭಾವಿಸಿ,
ವಾತ ಪಿತ್ತ ಶ್ಲೇಷ್ಮವೆಂಬ ತ್ರಿಧಾತುವನರಿವುದು.
ವಾತೋದ್ರೇಕವಾದಡೆ ಶೀತೋಷ್ಣಂಗಳ ಲಿಂಗಕ್ಕೆ ಸಮ ಮಾಡುವುದು,
ಪಿತ್ತೋದ್ರೇಕವಾದಡೆ ಶೈತ್ಯವಂ ಮಾಡಿ ಕಾವುದು.
ಶ್ಲೇಷ್ಮೋದ್ರೇಕವಾದಡೆ ಬಿಗಿದು ಲಿಂಗಾರ್ಚನೆಯಂ ಮಾಡುವುದು.
ವಾತಪ್ರಕೃತಿಯಲ್ಲಿ ಲಿಂಗದ ಮೊದಲು ದೊಡ್ಡ ತುದಿ ಸಣ್ಣದಾಗಿಹುದು
ಪಿತ್ತಪ್ರಕೃತಿಯಲ್ಲಿ ತುದಿ ಮೊದಲು ಸಣ್ಣದಾಗಿ ನಡು ದೊಡ್ಡದಾಗಿಹುದು.
ಶ್ಲೇಷ್ಮಪ್ರಕೃತಿಯಲ್ಲಿ ಲಿಂಗತುದಿ ಮೊದಲೊಂದಾಗಿ ದೊಡ್ಡದಾಗಿಹುದು.
ಇಂತು ತ್ರಿಧಾತುವನರಿದು ಲಿಂಗಾರ್ಚನೆಯ ಮಾಡುವುದು-
ಇದು ವರ್ತನಾಕ್ರಮ.
ಆದಿಕ್ರಮ ಅಂತ್ಯಕ್ರಮ ಅನ್ವಯಕ್ರಮ ನಿನಾದಾದಿಕ್ರಮವೆಂಬ
ಭೇದಾದಿ ಭೇದಂಗಳಂ ಭೇದಿಸುವುದು.
ಶಾಸ್ತ್ರಸಂದಿಯಲ್ಲಿ ಬಾಹ್ಯಂಗಳನರಿವುದು, ಕ್ರಮಾದಿಕ್ರಮಂಗ?ಂ ತಿಳಿವುದು.
ವಿನಾದದಲ್ಲಿ ಚಿತ್ರಪತ್ರಂಗಳನರಿವುದು, ಕರಣಂಗಳಂ ಶುದ್ಧಮಂ ಮಾಡುವುದು.
ಹಿರಿದು ನಡೆಯದೆ, ಹಿರಿದು ನುಡಿಯದೆ
ಹಿರಿದುಂ ದಿವಾರಾತ್ರಿಯಲ್ಲಿ ಶೀತೋಷ್ಣಾದಿಗಳಂ ಮುಟ್ಟಿಸಿಕೊ?್ಳದೆ
ಮಹಾಮಾರ್ಗವ ತಿಳಿವುದು.
ಇದರಿಂಗೆ ತನ್ನ ಮಾರ್ಗಮಂ ತೋರದೆ ಮಹಾಮಾರ್ಗದಲ್ಲಿ ಮಾಗರ್ಿಯಾಗಿ
ಇದರ ಭೇದಸಂಬಂಧದಲ್ಲಿ ಉಚ್ಛ್ವಾಸ ನಿಶ್ವಾಸಕ್ರಮವನು ಓದಿ
ಭರತಕ್ರಮವನು ಅನುಕ್ರಮಿಸಿ ಮೂಲಕಸ್ಥಾನದಲ್ಲಿ ಹೊರೆಹೊಗದೆ
ಇಕ್ಕುವ ಚಿತ್ರಕ್ರಮದಲ್ಲಿ ಹೊರೆಹೊಗದೆ
ಇಂತಿವನರಿತು ಲಿಂಗಾರ್ಚನೆಯಂ ಮಾಡುವ ಪ್ರಕರಣ :
ಭ್ರಾಹ್ಮೀ ಮಹಾಮುಹೂರ್ತದಲ್ಲಿ ಎದ್ದು, ಅಂಗಪ್ರಕ್ಷಾಲನಮಂ ಮಾಡಿ
ಕಂಬುವಂ ವಿಸರ್ಜಿಸಿ, ಶಿಶು ಪ್ರಕಾರವಂ ಮಾಡಿ
ಶಮೆಯೆಂಬ ಸಮಾದಿಯಲ್ಲಿ ಕುಳ್ಳಿರ್ದು, ದಮೆಯೆಂಬ ಪೀಠವನಿಕ್ಕಿ,
ಶಾಂತಿಯೆಂಬ ನಿಜವಸ್ತ್ರವ ತಂದು, ಆದಿ ಶಿಶುವಿಂಗೆ ಅನುಬಂಧವಂಮಾಡಿ
ತಲೆವಲದಲ್ಲಿ ಶಿಶುವಂ ತೆಗೆದು ಕರವೆಂಬ ತೊಟ್ಟಿಲಲ್ಲಿಕ್ಕಿ ಜೋಗೈಸಿ
ಕೈಗೆ ಬಾಯಿಗೆ ಬಂದಿತ್ತು ನೋಡಾ,
ಬಾಯಿಗೆ ಬಂದಲ್ಲಿ ಭಾವ ಶುದ್ಧವಾಯಿತ್ತು, ಕೈಗೆ ಬಂದಲ್ಲಿ ಆದಿ ಶುದ್ಧವಾಯಿತ್ತು,
ಭಾವಲಿಂಗ ಜೀವಕರವಾಯವೆಂಬ ಪಟ್ಟಣದಲ್ಲಿ
ಸೀಮೆ ಸಂಬಂಧವಂ ಮೀರಿ, ಮಂತ್ರಮಯವಾಯಿತ್ತು ನೋಡಾ !
ಮಂತ್ರಲಿಂಗವೊ ! ಅಮಂತ್ರ ಲಿಂಗವೊ ಹೇಳಾ !
ಮತ್ರದಿಂ ವಸ್ತ್ರ, ಅಮಂತ್ರದಿಂ ಹಸ್ತ
ಇಂತು ಮಂತ್ರ ಆಮಂತ್ರಗಳೆರಡನು ಕೂಡಿ ರಕ್ಷಿಸುತ್ತಿದ್ದಿತ್ತು ನೋಡಾ !
ಶಿರಸ್ಸೆಂಬ ಧೇನು ಲಿಂಗವೆಂಬ ಮೊಲೆಯ ಕರವೆಂಬ ವತ್ಸ ತೊರೆಯಿತ್ತು ನೋಡಾ!
ಮಂತ್ರವೆಂಬ ಅಮೃತವ ಕರೆಯಿತ್ತು ನೋಡಾ !
ಬಸವಯ್ಯ ನೋಡಾ ಊಡದ ಹಸು, ಉಣ್ಣದ ಕರು, ಆರೂಢದ ಭಾಂಡ !
ಅಂಗದಲ್ಲಿ ಹುಟ್ಟಿದ ಅಮೃತಜಲವನು ಲಿಂಗಕ್ಕೆ ಕೊಡದೆ
ಧರೆಯಲ್ಲಿ ಬಿಟ್ಟಡೆ ಎಂತೊ ಲಿಂಗೋದಯವಹುದು ?
ಎಂತೋ ಪಾದೋದಕ ಪ್ರಸಾದಜೀವಿಯಹನು ?
ಜೀವ ಪರಮರ ಐಕ್ಯಬಾವವನರಿದ(ವ?)ಡೆ
ಲಿಂಗೋದಯದಲಲ್ಲದೆ ಅರಿಯಬಾರದು
ನಿಜಭಾವ ನಿಜಭಕ್ತಿ ನಿಜಸಮರಸವಾದಲ್ಲದೆ ಲಿಂಗೋದಯವಾಗದು.
ನಿಜಮತ್ರ್ಯದಲ್ಲಿ ಜನಿಸಿದ ಅಂಗ ಅಂಗಿಗಳೆಲ್ಲರು
ಪ್ರಾಣಲಿಂಗ ಸಂಬಂಧವನರಿಯರು.
ಅಂತು ಅಂಗಲಿಂಗಿಗಳು ಪ್ರಾಣಲಿಂಗಿಗಳಿಗೆ ಭವಿಗಳು
ಅಂತು ಪ್ರಾಣಲಿಂಗಿಗಳು ಅಂಗಲಿಂಗಿಗಳನೊಲ್ಲರು.
ಅದು ಹೇಗೆಂದಡೆ:
ಅವರಿಗೆ ಪ್ರಸಾದ ಪ್ರಾಣಲಿಂಗವಾಗಿ
ನಾಮಗೋಪ್ಯ ಮಂತ್ರಗೋಪ್ಯಂಗಳಲ್ಲಿ ಆ ಮಹಾಮಾರ್ಗವನರಿಯರಾಗಿ,
ಅಂಗಲಿಂಗಿಗಳಲ್ಲದೆ ಪ್ರಾಣಲಿಂಗಿಗಳಲ್ಲ
ಪ್ರಸಾದಸೇವನಧ್ಯಾನಾದರ್ಚನಾದರ್ಪಣಾತ್ ಶುಚಿಃ
ಪ್ರಸಾದಹೀನಸ್ಯಾಂಗೇ ತು ಲಿಂಗಂ ನಾಸ್ತಿ ಪುನಃ ಪುನಃ
ಎಂದುದಾಗಿ
ಇಂತು ಲಿಂಗಾರ್ಚನೆಯಂ ಮಾಡುವುದು
ಲಿಂಗಪಾದೋದಕ ಪ್ರಸಾದವನು ಬಾಹ್ಯಾಂತರಂಗದಲ್ಲಿ ವಿರ?ವಿಲ್ಲದೆ
ಅವಿರಳಭಾವಸಂಬಂಧದಲ್ಲಿ ಧರಿಸುವುದು; ಧರಿಸುವಾತ ಲಿಂಗವಂತನು.
ಅಂಗಲಿಂಗಿ ಪ್ರಾಣಲಿಂಗಿ ಪ್ರಸಾದಲಿಂಗಿ
ನಿಜನಿಂದ ಮಾರ್ಗವಿರಳ ಪಂಚಕನಾಡಿಯಲ್ಲಿ ಹೊರಹೊಗದೆ
ನಿರ್ನಾದಮಂ ಆಶ್ರಯಿಸುವುದು.
ಇದು ಮಹಾಮಾರ್ಗ ಪುರಾತನರ ಪೂರ್ವ;
ಅಪರದಲ್ಲಿ ಅಂಥ ಲಿಂಗವನರಿ, ಆದಿಯಲ್ಲಿ ಅನಾಹತಲಿಂಗವನರಿ.
ಲಿಂಗವಾರು ಅಂಗಾಂಗಲಿಂಗ ಸರ್ವಾಂಗಲಿಂಗ, ಲಿಂಗಸನುಮತವಾಯಿತ್ತು,
ಮಹಾವೃತ್ತಿಗೆ ಅನುಮತವಾಯಿತು, ನಿರ್ವಿಕಲ್ಪ ಪರಮಪದಕ್ಕೆ ತಾನೆ ಆಯಿತ್ತು.
ಇನ್ನು ಮಾನಸ ವಾಚಕ ಕಾಯಕದಲ್ಲಿ ಅವಿತಥವಿಲ್ಲದೆ
ಲಿಂಗಾರ್ಚನೆಯಂ ಮಾಡುವರ ತೋರಿ ಬದುಕಿಸಾ
ಕೂಡಲಚೆನ್ನಸಂಗಮದೇವಯ್ಯ./67
ಅಂಗಾಲಿಂದ ಮೊಕಾಲ ಪರಿಯಂತರ ಬಸವಣ್ಣ
ಮೊಳಕಾಲಿಂದ ಕಂಠ ಪರಿಯಂತರ ಚೆನ್ನಬಸವರಾಜದೇವರು
ಕಂಠದಿಂದ ಮೇಲೆ ಪ್ರಭುದೇವರು.
ಒಂದು ವಸ್ತು ಎರಡಾಯಿತ್ತು, ಎರಡು ವಸ್ತು ಮೂರಾಯಿತ್ತು.
ಆ ಮೂರುವಸ್ತುವನು ತಿಳಿದು ನೋಡಿದಡೆ
ಕೂಡಲಚೆನ್ನಸಂಗಯ್ಯನಲ್ಲಿ ಒಂದೆಯಾಯಿತ್ತು/68
ಅಂಗಾಶ್ರಯವಳಿದು ಲಿಂಗಾಶ್ರಯವಾದ ಬಳಿಕ
ಅಂಗಕ್ಕೆ ಲಿಂಗಾಚಾರವಲ್ಲದೆ ಅಂಗಕ್ರೀಯೆಂಬುದನರಿದಂಗವಿಸರು ನೋಡಾ!
ಲಿಂಗದಲ್ಲಿ ನಿಷ್ಠೆವಂತರಾದ ಬಳಿಕ
ಅನ್ಯನಾಮವಿಡಿದು ಬಳಲುವ ಬಳಲಿಕೆ ಇನ್ನೆಲ್ಲಿಯದೋ, ಇದು ಕಾರಣ
ಕೂಡಲಚೆನ್ನಸಂಗನ ಶರಣರು ಅನ್ಯವನಾಚರಿಸುವರಲ್ಲ. /69
ಅಂಜದಿರಿ ಅಂಜದಿರಿ ಅನಿಮಿಷನಂತೆ ಬೇಡುವವ ನಾನಲ್ಲ.
ನಿಮಗಾದಿಯ ಶಿಶು ನಾನೆ ಅಯ್ಯಾ. ಅದೆಂತೆಂದರೆ:
ಅಂಜನೆಗೆ ಜಲಗರ ಬೆಳೆಯಿತೆಂದು ಅಂಜಿ ಹೇಮರಸವ ಕುಡಿದಲ್ಲಿ
ಒಳಗಿದ್ದ ಕಪಿ ಶೃಂಗಾರವಾಗನೆ ?
ಕೆಡುವುದೆ ಶಿವಪಿಂಡವು ? ಮರೆವುದೆ ಶಿವಜ್ಞಾನವು ?
ಹಿಂದೆ ಏಳುನೂರು ವರುಷ ಮಂಡೋದರಿಯ ಬಸುರಲ್ಲಿದ್ದು
ಉದಯಂಗೆಯ್ಯನೆ ಇಂದ್ರಜಿತು ?
ನೀವು ಹೊಟ್ಟೆಗೆ ವಿಭೂತಿಯ ಪಟ್ಟವ ಕಟ್ಟಿದಂದೆ
ಅನುಗ್ರಹವಾಯಿತ್ತು. ಕೂಡಲಚೆನ್ನಸಂಗಮದೇವಾ
ನಿಮ್ಮ ತೊತ್ತಿನ ತೊತ್ತು ನಾನು ಚೆನ್ನಬಸವಣ್ಣನು. /70
ಅಂಜಿಕೆಯುಳ್ಳನ್ನಕ್ಕ ಪ್ರಾಣಲಿಂಗಸಂಬಂದಿಯಲ್ಲ,
ಸೂತಕವುಳ್ಳನ್ನಕ್ಕ ಶರಣನಲ್ಲ, ಎಂಜಲುಳ್ಳನ್ನಕ್ಕ ಪ್ರಸಾದಿಯಲ್ಲ.
ಈ ತ್ರಿವಿಧವುಳ್ಳನ್ನಕ್ಕ ಲಿಂಗೈಕ್ಯನಲ್ಲ,
ಕೂಡಲಚೆನ್ನಸಂಗಮದೇವಾ. /71
ಅಂಡಜ ಸ್ವೇದಜ ಉದ್ಭಿಜ ಜರಾಯುಜ ಈ ನಾಲ್ಕು ಯೋನಿಗಳಲ್ಲಿ ಬರುತ್ತಿಹ
ಅನಂತಕೋಟಿ ಜೀವ ಸತ್ತ ಪಾಪವು [ವಿದಿಯ] ತಾಗೂದೆ ಅಯ್ಯಾ ?
(ಕಾಮರ್ೆಘ ಗಗನದಿಂದ ಸುರಿಯಲು ಭೂಮಿ ಜರ್ಜರಿತವಾಗಿ
ಹಳ್ಳ ಕೊಳ್ಳ ಕೆರೆ ತುಂಬಿ ದಶದಿಕ್ಕುಗಳೆಲ್ಲ ಭರಿತಂಗಳಾಗಿ ಪುರಂಗಳ ಪೊಗಲು
ಅನಂತಕೋಟಿ ಜೀವ ಸತ್ತ ಪಾಪವು ಮೇಘಂಗಳಿಗೆ ತಾಗೂದೆ ಅಯ್ಯಾ?)
ಕಾನನದಡವಿಯೊಳಗೆ ಒಂದೊಂದು ಕಾಡುಗಿಚ್ಚು ಹುಟ್ಟಿ
ದಿಗಿಲು ಭುಗಿಲೆಂದು ಉರಿ ಸುಳಿಗೊಂಡಟ್ಟಿ ಸುಡುವಲ್ಲಿ
ಅನಂತಕೋಟಿ ಜೀವ ಸತ್ತ ಪಾಪವು ಹುತವಹನ ತಾಗೂದೆ ಅಯ್ಯಾ ?
ದೆಸೆದಿಕ್ಕುಗಳು ಭರಿತವಾಗಿ ಪವನನಲ್ಲಿಯೆ ಬಲಿದು
ಬ್ರಹ್ಮಾಂಡವ ಮುಟ್ಟಿ ಮಲೆತು ಬೀಸುವಲ್ಲಿ
ಅನಂತಕೋಟಿ ಜೀವಗಳು ಸತ್ತ ಪಾಪವು ಪವನನ ತಾಗೂದೆ ಅಯ್ಯಾ ?
ಧರೆಹತ್ತಿ ಉರಿದು ಬ್ರಹ್ಮಾಂಡವ ತಾಗಲು ಕೆಂಡದ ಮಳೆ ಸುರಿಯಲು
ಸುರರ ಅಸುರರ ಎಲ್ಲಾ ಭುಗಿಲು ಭುಗಿಲುಯೆಂದು ಉರಿಯೆಯ್ದೆ ತಾಗಲ್ಕೆ
ವಿಶೇಷ ಪಾಪವು ಗಗನವ ತಾಗೂದೆ ಅಯ್ಯಾ ?
ಪೃಥ್ವಿ ಅಪ್ಪು, ತೇಜ, ವಾಯು, ಆಕಾಶ, ಸೂರ್ಯ, ಚಂದ್ರ ಆತ್ಮ
ಈ ಅಷ್ಟತನುಮೂರ್ತಿಗಳು ನಷ್ಟವಾದ ಪಾಪ ಸದಾಶಿವನ ತಾಗೂದೆ ಅಯ್ಯಾ ?
ಉತ್ಪತ್ತಿ, ಸ್ಥಿತಿ, ಲಯ ಕಾಲಕಲ್ಪಿತನಲ್ಲ
ಪ್ರಳಯರಹಿತ ಕೂಡಲಚೆನ್ನಸಂಗಾ ನಿಮ್ಮ ಶರಣ/72
ಅಂತರಂಗದ ಅರಿವು, ಬಹಿರಂಗದ ಕ್ರಿಯೆ-
ಈ ಉಭಯಸಂಪುಟ ಒಂದಾದ ಶರಣಂಗೆ
ಹಿಂಗಿತ್ತು ತನುಸೂತಕ, ಹಿಂಗಿತ್ತು ಮನಸೂತಕ.
ಕೂಡಲಚೆನ್ನಸಂಗಯ್ಯಲ್ಲಿ
ಸಂಗವಾದುದು ಸರ್ವೆಂದ್ರಿಯ./73
ಅಂತರಂಗದ ನಿರವಯವದು ಲಿಂಗವೆ ?
ಬಹಿರಂಗದ ಸಾವಯವದು ಜಂಗಮವೆ ?
ಅಂತರಂಗದ ನಿರವಯವದು
ಜ್ಞಾನಸೂಚನೆಯ ಭಾವವೆಂದು ನಾಚರು ನೋಡಾ.
ಬಹಿರಂಗದ ಸಾವಯವದ ವಿಷಯದೃಷ್ಟಿಯೆಂದು ಹೆಸರು ನೋಡಾ.
ಈ ಉಭಯ ಒಂದಾದಡದು ಅಭೇದ್ಯ ಕೂಡಲಚೆನ್ನಸಂಗ ನಿಮ್ಮಲ್ಲಿ./74
ಅಂತರಂಗದ ಭಕ್ತಿ ಹಾದರಿಗನ ತೆರನಂತೆ,
ಬಹಿರಂಗದ ಭಕ್ತಿ ವೇಶಿಯ ತೆರನಂತೆ,
ಅಂತರಂಗವೂ ಅಲ್ಲ, ಬಹಿರಂಗವೂ ಅಲ್ಲ,
ಶರಣನ ನಿಲವು ಬೇರೆ, ಕೂಡಲಚೆನ್ನಸಂಗನೆಂಬ ಮಾತಂತಿರಲಿ./75
ಅಂತರಂಗದಲ್ಲಿ ಅರಿವಾದಡೇನಯ್ಯಾ ಬಹಿರಂಗದಲ್ಲಿ ಕ್ರೀ ಇಲ್ಲದನ್ನಕ್ಕ ?
ದೇಹವಿಲ್ಲದಿರ್ದಡೆ ಪ್ರಾಣಕ್ಕಾಶ್ರಯವುಂಟೆ ?
ಕನ್ನಡಿಯಿಲ್ಲದಿರ್ದಡೆ ತನ್ನ ಮುಖವ ಕಾಣಬಹುದೆ ?
ಸಾಕಾರ ನಿರಾಕಾರ ಏಕೋದೇವ,
ನಮ್ಮ ಕೂಡಲಚೆನ್ನಸಂಗಯ್ಯನು./76
ಅಂತರಂಗದಲ್ಲಿ ಪ್ರಭುದೇವರನೊಳಕೊಂಡ,
ಬಹಿರಂಗದಲ್ಲಿ ಎನ್ನನೊಳಕೊಂಡ;
ಈ ಉಭಯಸಂಗ ಮಧ್ಯದಲ್ಲಿ ನಿಜೈಕ್ಯನಾಗಿರ್ದನು.
ಪ್ರಸಾದದಲ್ಲಿ ಪರಮಾನಂದ ಸುಖಿ;
ಅರಿವಿನಲ್ಲಿ ಕುರುಹಳಿದ ಘನದ ನಿಲವು.
ಕೂಡಲಚೆನ್ನಸಂಗಮದೇವಾ
ಬಸವಣ್ಣನ ಪಾದಕ್ಕೆ ನಮೋ ನಮೋ ಎಂಬೆನು./77
ಅಂತರಂಗದಲ್ಲಿ ಭಾವಿಸುವನಲ್ಲ, ಬಹಿರಂಗದಲ್ಲಿ ಬಳಸುವನಲ್ಲ.
ಎರಡನತಿಗಳೆದು ತನ್ನಲ್ಲಿ ತಾನೆ ಸಹಜ ನೋಡಾ.
ಅಂತರಂಗವಿಲ್ಲ ಬಹಿರಂಗವಿಲ್ಲ
ಕೂಡಲಚೆನ್ನಸಂಗಾ, ನಿಮ್ಮ ಶರಣಂಗೆ./78
ಅಂದಂದಿಂಗೆ ಬಂದ ಪದಾರ್ಥವನೆಂದೆಂದೂ
ತಾನುಂಬ ಕೈಯಲಿ ಕೊಡುವುದು ಎಂತೊ?
ಲಿಂಗಕ್ಕೆ ನೀಡುವರೆಂತೊ? ಲಿಂಗಕ್ಕೆ ಕೊಡುವರೆಂತೊ?
ಲಿಂಗಕ್ಕೆ ಸಲುವುದೆಂತೊ? ಶಿವಶಿವಾ!
ಮಂಚವೊಂದೆ, ಕಂಚು ಬೇರೆಂಬ ಪ್ರಪಂಚಿಯನೊಲ್ಲ ಕೂಡಲಚೆನ್ನಸಂಗಮದೇವಾ./79
ಅಂದೊಮ್ಮೆ ಧರೆಯ ಮೇಲೆ ಬೀಜವಿಲ್ಲದಂದು
ಬಸವನೆಂಬ ಗಣೇಶ್ವರನು ಭೋಂಕರಿಸಿ ಕೆಲೆದಡೆ
ಬೀಜ ಉತ್ಪತ್ತಿಯಾಯಿತ್ತು.
ಅದೆನೆ ಬಿತ್ತಿ ಅದನೆ ಬೆಳೆದು ಅಟ್ಟಟ್ಟು ಲಿಂಗಕ್ಕೆ ಬೋನವ ಮಾಡಿ-
ನಾಗಲೋಕದ ನಾಗಗಣಂಗಳಿಗೆಯೂ ಬಸವಣ್ಣನ ಪ್ರಸಾದ,
ಮತ್ರ್ಯಲೋಕದ ಮಹಾಗಣಂಗಳಿಗೆಯೂ ಬಸವಣ್ಣನ ಪ್ರಸಾದ,
ದೇವಲೋಕದ ದೇವಗಣಂಗಳಿಗೆಯೂ ಬಸವಣ್ಣನ ಪ್ರಸಾದ,
ಎಲೆ ಕೂಡಲಚೆನ್ನಸಂಗಮದೇವಾ,
ನಿಮ್ಮಾಣೆ, ನಿಮಗೂ ಎನಗೂ ಬಸವಣ್ಣನ ಪ್ರಸಾದ ! /80
ಅಂಧಕನ ಕೈಯ ಬಿಟ್ಟಲ್ಲಿ ಲೋಕವಿರೋಧ,
ಲೋಕವಿರೋದಿ ಭಕ್ತ, ಭಕ್ತವಿರೋದಿ ಶರಣ, ಶರಣವಿರೋದಿ ಲಿಂಗೈಕ್ಯ.
ಈ ತ್ರಿವಿಧ ವಿರೋದಿ ಕೂಡಲಚೆನ್ನಸಂಗನ ಮಹಾಘನವು. /81
ಅಂಧಕನು ಓಡ ಹಿಡಿದು ಸ್ವರೂಪವ ತಾ ನೋಡುವಂತೆ,
ಶೈವ ಗುರುವಿನಲ್ಲಿ ಲಿಂಗ ಸಾಹಿತ್ಯವಾದ ಶಿಷ್ಯನ ವಿದಿಯ ನೋಡಿರೆ !
ಗುರುವಿಂಗೆ ದೂರಾರ್ಚನೆ ಶಿಷ್ಯಂಗೆ ಇಷ್ಟಲಿಂಗಾರ್ಚನೆ,
ಗುರು ವಾಯುಪ್ರಾಣಿ, ಶಿಷ್ಯ ಲಿಂಗಪ್ರಾಣಿ,
ಗುರು ಭೂತದೇಹಿ, ಶಿಷ್ಯ ಲಿಂಗದೇಹಿ,
ಗುರು ಅನರ್ಪಿತಭುಂಜಕ, ಶಿಷ್ಯ ಲಿಂಗಾರ್ಪಿತಭುಂಜಕ,
ಗುರು ಅಗ್ನಿದಹನಸಂಪತ್ತು, ಶಿಷ್ಯ ಸಿದ್ಧಸಮಾದಿಸಂಪತ್ತು,
ಎಂತುಂಟು ಹೇಳಿರಣ್ಣಾ ?
“ಜ್ಞಾನಹೀನಗುರಾ ಪ್ರಾಪ್ತೇ ಶಿಷ್ಯಜ್ಞಾನಂ ನ ಸಿಧ್ಯತಿ
ಮೂಲಚ್ಛಿನ್ನೇ ಯಥಾ ವೃಕ್ಷೇ ಕಥಂ ಪುಷ್ಪಂ ಫಲಂ ಭವೇತ್ ಎಂದುದಾಗಿ
ಇವರಿಬ್ಬರ ಗುರುಶಿಷ್ಯಸಂಬಂಧಕ್ಕೆ ನರಕ ತಪ್ಪದು ಕಾಣಾ
ಕೂಡಲಚೆನ್ನಸಂಗಮದೇವಾ. /82
ಅಂಧಕಾಸುರನ ಕೊಲುವಲ್ಲಿ ನೀಲಲೋಹಿತನೆಂಬ ಗಣೇಶ್ವರ,
ತ್ರಿಪುರವ ದಹನವ ಮಾಡುವಲ್ಲಿ ಸ್ಕಂದನೆಂಬ ಗಣೇಶ್ವರ,
ಗಜಾಸುರನ ಕೊಂದು ಚರ್ಮವ ಹೊದೆವಲ್ಲಿ ಉಗ್ರನೆಂಬ ಗಣೇಶ್ವರ,
ಬ್ರಹ್ಮಕಪಾಲವಿಡಿದು ವಿಷ್ಣು ಕಂಕಾಳವನಿಕ್ಕಿದಲ್ಲಿ, ನೀಲಕಂಠನೆಂಬ ಗಣೇಶ್ವರ,
ಪ್ರಾಣಲಿಂಗಸಂಗದಲ್ಲಿ ವೃಷಭನೆಂಬ ಗಣೇಶ್ವರ,
ಜಂಗಮದ ಪೂರ್ವಾಶ್ರಯವ ಕಳೆದು ಪುನರ್ಜಾತನೆನಿಸಿ
ಪ್ರಾಣಲಿಂಗವಾದ ಬಳಿಕ ಕೂಡಲಚೆನ್ನಸಂಗನಲ್ಲಿ
ಬಸವನೆಂಬ ಗಣೇಶ್ವರ. /83
ಅಂಬುದಿಯ ಸಂಚದ ಕುಳವನರಿಯರು,
ಪ್ರಾಣನಾಥನ ಬಿಂದುವಿನ ಅನುವನರಿಯರು.
ಕಾಂಡಾವಿಯ ಬಿಂದುವಿನಠಾವನರಿಯರು.
ಈ ತ್ರಿವಿಧದ ಮುಖವನರಿದಡೆ ಕೂಡಲಚೆನ್ನಸಂಗನೆಂಬೆನು. /84
ಅಕಾಯ ಸನ್ನಹಿತವಾಯಿತ್ತಲ್ಲಾ;
ಅಕಾಯ ಅಳವಟ್ಟಿತ್ತಲ್ಲಾ;
ಅಕಾಯ ನಿಂದು [ನಿಜ] ನಿವಾಸವಾಯಿತ್ತಲ್ಲಾ;
ಕೂಡಲಚೆನ್ನಸಂಗಾ ನಿನ್ನಿಂದೆ ನಿಂದಿತಲ್ಲಾ !/85
ಅಕಾಯನೆಂಬ ಜಂಗಮ ಮತ್ರ್ಯಕ್ಕೆ ಬಂದು,
ಎನ್ನ ಧನ್ಯನ ಮಾಡಲೆಂದು,
ಸಕಲ ಧಾನ್ಯಗಳ ಪೂರ್ವಾಶ್ರಯವ ಕಳೆದು
ಪ್ರಸಾದವೆಂದು ಹೆಸರಿಟ್ಟನು.
ಆ ಜಂಗಮದ ಹಸ್ತದಲ್ಲಿ ಭಕ್ತಿ ಇಹುದು,
ಆ ಜಂಗಮದ ಜಿಹ್ವೆಯಲ್ಲಿ ಪ್ರಸಾದ ಇಹುದು,
ಆ ಜಂಗಮದ ದೇಹದಲ್ಲಿ ಜಂಗಮ ಇಹುದು.
ಇಂತೀ ತ್ರಿವಿಧಪ್ರಸಾದವನಿಕ್ಕಿದ ಜಂಗಮಕ್ಕೆ ಶರಣೆಂದು
ಶುದ್ಧನಾದೆನಯ್ಯಾ ಕೂಡಲಚೆನ್ನಸಂಗಮದೇವಾ./86
ಅಕಾಯಮುಖದಲ್ಲಿ ಸಕಾಯ ಪ್ರತಿಬಿಂಬಿಸೂದು.
ಸಕಾಯಮುಖದಲ್ಲಿ ಅಕಾಯ ಪ್ರತಿಬಿಂಬಿಸೂದು.
ಸೋಂಕಿಲ್ಲದೆ ಸೊಗಸಿಲ್ಲದೆ ಹೂಣಿ ಹೋಗುವನು, ಅನುಭಾವ ಸಕಾಯವಾಗಿ,
ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ !
ಎಂದುದಾಗಿ ಕೂಡಲಚೆನ್ನಸಂಗಾ.
ನಿಮ್ಮ ಘನತೆಯ ಶರಣನೆ ಬಲ್ಲ/87
ಅಕಾಯೋ ಭಕ್ತಕಾಯಶ್ಚ ಮಮ ಕಾಯಸ್ತು ಭಕ್ತಿಮಾನ್
ಎಂಬ ಶ್ರುತಿಯನೋದುವರೆ ಎಂತೊ ಭಕ್ತಂಗೆ?
“ಮಹಂತೋ ಲಿಂಗರೂಪೇಣ ಮಹಂತೋ ಜಂಗಮಾಸ್ತಥಾ
ಎಂಬ ಶ್ರುತಿಯನೋದುವರೆ ಎಂತೊ ಜಂಗಮಕ್ಕೆ?
ಇಂತೆರಡೊಂದಾದರೆ ತೆರಹಿಲ್ಲ
ಕೂಡಲಚೆನ್ನಸಂಗಾ ನಿಮ್ಮಲ್ಲಿ. /88
ಅಕ್ಷರಪಂಚಕದ ನಿಕ್ಷೇಪವನರಿಯಬಲ್ಲರೆ ಬೋಳು,
ಕುಕ್ಷಿಯೊಳಗೈವತ್ತೆರಡಕ್ಷರದ ಲಕ್ಷಣವನರಿಯಬಲ್ಲರೆ ಬೋಳು,
ಅಕ್ಷಯನಿದಿ ಕೂಡಲಚೆನ್ನೆಸಂಗಯ್ಯ ಭವಕ್ಕೆ ಬೋಳು. /89
ಅಖಂಡಿತಪ್ರಸಾದ ಸಂಬಂಧದ, ಸೂಕ್ಷ್ಮದ ಕ್ರಮವ ಭೇದಿಸಿ,
ಲಿಂಗಾರ್ಪಿತ ಭೇದಾಭೇದದಲ್ಲಿ ಲಿಂಗಪ್ರಸಾದಸಾಧ್ಯ ಸಾಧಕನಾಗಿ,
ಕೂಡಲಚೆನ್ನಸಂಗನಲ್ಲಿ ಪ್ರಸಾದವ ಮಹಾಘನವೆಂಬೆ./90
ಅಗ್ಘಣಿ ಮೀಸಲಾಗಬೇಕೆಂಬುದು ಶೀಲವೆ ?
ಪುಷ್ಪ ಮೀಸಲಾಗಬೇಕೆಂಬುದು ಶೀಲವೆ ?
ಇವು ಶೀಲವಲ್ಲ ಕಾಣಿರಯ್ಯಾ !
ಪಂಚೇಂದ್ರಿಯ ಷಡ್ವರ್ಗ ಸಪ್ತಧಾತು ಅಷ್ಟಮದಂಗಳ ಕಳೆಯಬಲ್ಲಡೆ
ಕೂಡಲಚೆನ್ನಸಂಗನಲ್ಲಿ ಅಚ್ಚಶೀಲ. /91
ಅಗ್ಘವಣಿ ಸುಯಿದಾನವಾದ ಶರಣಂಗೆ,
ತನು ಸುಯಿದಾನವಾಗಬೇಕು.
ತನು ಸುಯಿದಾನವಾದ ಶರಣಂಗೆ
ಮನ ಸುಯಿದಾನವಾಗಬೇಕು.
ಮನ ಸುಯಿದಾನವಾದ ಶರಣಂಗೆ
ಪ್ರಾಣದ ಮೇಲೆ ಲಿಂಗ ಸಯವಾಗಬೇಕು.
ಪ್ರಾಣದ ಮೇಲೆ ಲಿಂಗ ಸಯವಾಗದಿರ್ದಡೆ
ಇದೆಲ್ಲ ವೃಥಾ ಎಂದಿತ್ತು ಕೂಡಲಚೆನ್ನಸಂಗಯ್ಯನ ವಚನ/92
ಅಗ್ಘವಣಿಯನೆ ತುಂಬಿ,
ಪುಷ್ಪವನೆ ತಂದು ಪೂಜಿಸಿ ಲಯಕ್ಕೊಳಗಾದರು.
ಜನಮರುಳೋ ಜಾತ್ರೆಮರುಳೊ
ಅಘ್ಘವಣಿಯನೆ ತುಂಬಿದ ಜಲ ಬತ್ತಿಹೋಯಿತ್ತು,
ಪುಷ್ಪವನೆ ತಂದು ತಂದು ಗಿಡು ಅಡವಿ ಕೂಡಿತ್ತು.
ನೀ ಪೂಜಿಸಿದ ಪೂಜೆ
ಗಿಡುವು ಮಡವಿಗಲ್ಲದೆ ನಿನಗೆಲ್ಲಿಹುದೋ ?
ಮಾಡಿ ಮಾಡಿ ಮಡಕೆ ಕೇಡು.
ಮಾಡಿ ಮನ ಮರುಗದೆ, ನೀಡಿ ನಿಜವಿಲ್ಲದೆ
ಅಣ್ಣಗಳ ಕೆಟ್ಟ ಕೇಡು ನೋಡಾ
ಮಹಾದಾನಿ ಕೂಡಲಚನ್ನಸಂಗಮದೇವಾ./93
ಅಗ್ನಿಯ ಕೂಡಾಡಿ ಕಾಷ್ಠಂಗಳೆಲ್ಲ ಕೆಟ್ಟ ಕೇಡ ನೋಡಯ್ಯ
ಜಲದಿಯ ಕೂಡಾಡಿ ಘಟ್ಟ-ಬೆಟ್ಟಗಳೆಲ್ಲ ಕೆಟ್ಟ ಕೇಡ ನೋಡಯ್ಯ
ಜ್ಯೋತಿಯ ಕೂಡಾಡಿ ಕತ್ತಲೆ ಕೆಟ್ಟ ಕೇಡ ನೋಡಯ್ಯ
ನಿಮ್ಮ ಶರಣರ ಕೂಡಾಡಿ, ನನ್ನ ಭವಂಗಳು ಕೆಟ್ಟ ಕೇಡ ನೋಡಯ್ಯ
ಕೂಡಲಚೆನ್ನಸಂಗಮದೇವ/94
ಅಘಟಿತ ಘಟಿತವೆಂಬ ಮಹಾಘನವ ಸಾದಿಸುವಡೆ,
ಮಡಿವಾಳನ ಕೃಪೆಯಿಲ್ಲದನ್ನಕ್ಕರ, ಎಂತರಿಯಬಪ್ಪುದು ನಿಜಲಿಂಗೈಕ್ಯವನು ?
ಎನ್ನ ಆರೂಡಿಯ ಅರಿವಿಂಗೆ ನೀನೆ ಶೃಂಗಾರ.
ಕೂಡಲಚೆನ್ನಸಂಗಮದೇವರಲ್ಲಿ
ಮಡಿವಾಳನ ಕೈಯ ಸ್ವಾಯತವಾದೆನು ಕಾಣಾ ಪ್ರಭುವೆ./95
ಅಚೇತನವಪ್ಪ ಶಿಲಾಮಯಲಿಂಗವು,
ಸಚೇತನವಪ್ಪ ಭಕ್ತನ ಭವರೋಗವನೆಂತು ಕಳೆಯಬಲ್ಲುದು ?
ಎಂಬ ಬರುಮಾತಿನ ಮಾನವರ ಮಾತ ಕೇಳಲಾಗದು.
ಅದೇನು ಕಾರಣವೆಂದಡೆ,
ಮಿಸುನಿಯಿಂದುಂಟಾದ ಕಟಕ ಮಕುಟಾದಿ ತೊಡವುಗಳು
ಮಿಸುನಿಯಲ್ಲದೆ ಮತ್ತೊಂದು ರೂಪಾಗಬಲ್ಲುದೆ ಹೇಳಾ ?
ಅದುಕಾರಣ-ಧರೆಯ ಕಠಿಣಾಂಗವಾದ ಶಿಲೆಯಲ್ಲೂ
ಶಿವಾಂಶವಿರ್ಪುದು ಸಹಜವೆಂದರಿತು
ಶ್ರೀಗುರು, ಶಾಸ್ತ್ರಸಮ್ಮತವಾದ ಶಿಲಾಮಯಲಿಂಗದಲ್ಲಿ
ವ್ಯಕ್ತವಾಗುವಂತೆ ಶಿವಕಲೆಯ ಪ್ರತಿಷ್ಠಿಸಿ,
ಇಷ್ಟಲಿಂಗವಾಗಿ ಮಾಡಿ ಶಿಷ್ಯನ ಕರಕಮಲಕ್ಕೆ ಕರುಣಿಸಿಕೊಟ್ಟು,
ಆ ನಿರಾಕಾರವಪ್ಪ ಪರಬೊಮ್ಮವೆ ತಿಳಿದುಪ್ಪ ಬಿಳಿದುಪ್ಪವಾದಂತೆ
ಸಾಕಾರವಾಗಿ ನಿನ್ನ ಕರಕಮಲಕ್ಕೆ ಬಂದಿರ್ಪುದು.
`ಯದ್ಭಾವಸ್ತದ್ಭವತಿ ಎಂಬ ಪ್ರಮಾಣವುಂಟಾಗಿ,
ಇದನಿನ್ನು ಸದ್ಭಾವದಿಂದರ್ಚಿಸೆಂದು ಅಪ್ಪಣೆಯಿತ್ತನು.
ಈ ಮರ್ಮವನರಿಯದೆ ಮನಬಂದಂತೆ ಮಾತಾಡುವ ಮನುಜರ
ಹುಳುಗೊಂಡದಲ್ಲಿಕ್ಕದೆ ಮಾಣ್ಬನೆ ನಮ್ಮ ಕೂಡಲಚೆನ್ನಸಂಗಮದೇವ ?/96
ಅಚ್ಚಪ್ರಸಾದವೆಂದು ಹುಸಿದು, ತನುಮನದ ಹವಣಿಗೆ ಗಡಣಿಸಿಕೊಂಬರು,
ತನುಮನ ಮುಟ್ಟಿದ ಓಗರ ಲಿಂಗಾರ್ಪಿತಕ್ಕೆ ಸಲ್ಲದು.
ಅರ್ಪಿತವನುಂಡು ಅಚ್ಚಪ್ರಸಾದಿಗಳೆಂಬವರನು
ಲಿಂಗದಲ್ಲಿ ಸಮ್ಯಕ್ಶರಣರು ಮೆಚ್ಚರು.
ಬಂದುದ ಕೂಡಲಚೆನ್ನಸಂಗಂಗರ್ಪಿಸಿ
ಕೊಳಬಲ್ಲಡಾತನೆ ಅಚ್ಚಪ್ರಸಾದಿ. /97
ಅಚ್ಚಪ್ರಸಾದಿ ಅಚ್ಚಪ್ರಸಾದಿಗಳೆಂಬ
ಹುಚ್ಚರ ನಾನೇನೆಂಬೆನಯ್ಯಾ.
ಲಿಂಗದ ಹವಣನರಿಯದೆ ತನ್ನ ಒಡಲ ಹವಣಿಂಗೆ
ಗಡಣಿಸಿಕೊಂಬ ದುರಾತ್ಮರನೇನೆಂಬೆನಯ್ಯಾ
ತನ್ನ ಒಡಲ ಹವಣಿಂಗೆ ಮನವು ಸಾಕೆಂದು
ತೃಪ್ತಿಯಾದುದು
ಲಿಂಗಾರ್ಪಿತಕ್ಕೆ ಅದು ಸಲುವುದೆ, ಹೇಳಿರೆ ?
ಆ ಲಿಂಗವು ಮುಟ್ಟದ ಅನರ್ಪಿತವನುಂಡು
ಅಚ್ಚಪ್ರಸಾದಿಗಳೆನಿಸಿಕೊಂಬವರ
ಲಿಂಗದಲ್ಲಿ ಸಜ್ಜನ ಸನ್ನಹಿತ ಶರಣರು ಮೆಚ್ಚುವರೆ ?
ಬಂದ ಬಂದ ಸಕಲ ಪದಾರ್ಥಗಳೆಲ್ಲವ
ಲಿಂಗಕ್ಕೆ ಅರ್ಪಿಸಿಕೊಳ್ಳಬಲ್ಲಡೆ
ಕೂಡಲಚನ್ನಸಂಗಯ್ಯನಲ್ಲಿ ಆತನೆ ಅಚ್ಚಪ್ರಸಾದಿ. /98
ಅಚ್ಚಪ್ರಸಾದಿ ಅಚ್ಚಪ್ರಸಾದಿಯೆಂದು
ನಿಚ್ಚಕ್ಕೆ ಬಗುಳುವ ಕುನ್ನಿಗಳ ನೋಡಾ !
ಬರದ ನಾಡಿಂದ ಬಂದ ಬಣಗುಗ?ಂತೆ
ಮತ್ತಿಕ್ಕುವರೊ ಇಕ್ಕರೊ ಎಂದು, ಒಟ್ಟಿಸಿಕೊಂಡು ತಿಂದು
ಮಿಕ್ಕುದ ಬಿಸುಡುವ ಕುನ್ನಿಗಳ ಮೆಚ್ಚುವನೆ
ನಮ್ಮ ಕೂಡಲಚೆನ್ನಸಂಗಮದೇವರು ?/99
ಅಚ್ಚಪ್ರಸಾದಿ, ನಿಚ್ಚಪ್ರಸಾದಿ, ಸಮಯ ಪ್ರಸಾದಿಗಳ ವಿವರ:
ಗುರು ಮೊದಲು `ಆಚರಿಸುವಂತಹ ಮರ್ಮವನು ತಿಳಿದು
ಶಿವಸಂಸ್ಕಾರವನು ಹೊಂದಿ ನಡೆ’ ಎಂದು, ಅತಿ ಮೋಹನದಿಂದ
ಸಮಸ್ತ ಮರ್ಮವನು ತಿಳುಹಿ
ಹಿಡಿದ ವ್ರತಾಚರಣೆಗೆ ಸಂದು ಇಲ್ಲದ ಹಾಗೆ
ಅಪಮೃತ್ಯು ಬಂದು ಸೋಂಕದ ಹಾಗೆ
ಪ್ರಮಥಕೃಪಾಕಟಾಕ್ಷದಿಂದ ನಡೆದು ಹೋಗುವರು;
ಅವರೆ ಅಚ್ಚಪ್ರಸಾದಿಗಳು, ಮತ್ರ್ಯಲೋಕದ ಮಹಾಗಣಂಗಳೆನಿಸುವರು.
ಮಿಕ್ಕಿನ ನಿಚ್ಚಪ್ರಸಾದಿಗ? ಸಮಯ ಪ್ರಸಾದಿಗಳು-
ಅವರು ನಡೆದ ಮೇಲು ಪಂಕ್ತಿ ಆಚರಣೆಯ ನೋಡಿ,
ಅವರಂತಹ ಸುವಿವೇಕ ನಮಗೆ ಬಾರದೆಂಬುದ ತಿಳಿದು,
ಅವರೆ ತಮ್ಮ ಇಷ್ಟಲಿಂಗವಾಗಿ, ತಾವೆ ಅವರ ಭೃತ್ಯರಾಗಿ ನಡೆಯುತ್ತ
ಏಕಾರ್ಥ ಪರಮಾರ್ಥಕ್ಕೆ ಸಮಾನವಾಗಿ ಆಚರಿಸಬೇಕೆಂಬ
ಅನುಸರಣೆ ಅವರಲ್ಲಿ ಹುಟ್ಟಿದ ನಿಮಿತ್ತ,
ಅದೇ ಜಂಗಮ ಬಂದು ನಿಚ್ಚಪ್ರಸಾದಿಗಳಿಗೆ ಎರಡರಲ್ಲಿ ಅಶಕ್ತರೆಂದು ತಿಳಿದು
ಅತಿ ಸೂಕ್ಷ್ಮವಾಗಿ ಅವರಿಬ್ಬರ ಆಚರಣೆಯ ಅವರಿಬ್ಬರಲ್ಲಿ ಹರಸಿ,
ಆಯಾಯ ತತ್ಕಾಲಕ್ಕೆ ಜಂಗಮ ದೊರೆದಂತಹದೆ ಆಚರಣೆ,
ಜಂಗಮ ದೊರೆಯದಂತಹದೆ ಸಂಬಂಧ ಎಂದು ಅರುಹಿಕೊಟ್ಟಲ್ಲಿ,
ದೊರೆದಾಗಲಿಂತು ಆಚಾರ ಒಡಂಬಡಿಕೆ,
ದೊರೆಯದಾಗ ಆಚಾರ ಒಡಂಬಡಿಕೆಯಾಗದು-ಎಂದು ಮರ್ಮವ ತಿಳಿದು,
ಜಂಗಮವು ಇಲ್ಲದ ವೇಳೆಗೆ ಅತಿಸೂಕ್ಷ್ಮವಾಗಿ
ಅತಿವಿಶಾಲದಿಂದ ನಿರೂಪಿಸುತಿರ್ದರು-
ಆ ಗುರು ಮೊದಲಲ್ಲಿ ಲಿಂಗವ ಕರುಣಿಸಿ ಕೊಟ್ಟಂತಹುದೆ ನಿಮ್ಮ ಕಳೆ;
ನಾ ನಿಮ್ಮ ಚಿತ್ತು; ಎರಡರ ಸಮರಸವೆ ನಿಮ್ಮ ಬಿಂದು;
ಆ ಬಿಂದುವೆ `ಅ’ಕಾರ ಪ್ರಣವ;
ನಿಮ್ಮ ಇಷ್ಟಲಿಂಗದ ಶಕ್ತಿಪೀಠದಲ್ಲಿ ಗುರುವಾಗಿ,
ಆ ಕಳೆಯೆ `ಮ’ಕಾರ ಪ್ರಣವ.
ನಿಮ್ಮ ಲಿಂಗದ ಗೋಮುಖದಲ್ಲಿ ಜಂಗಮವಾಗಿ,
ಆ ಎರಡರ ಕೂಟವೆ ನಾದ; ಅದೆ `ಉ’ಕಾರ ಪ್ರಣವ.
ನಿಮ್ಮ ಲಿಂಗದ ಗೋಳಕದಲ್ಲಿ ಲಿಂಗವಾಗಿ,
ಆ ಲಿಂಗವೆ ನಿಮ್ಮ ರಮಣನೆಂದು ಭಾವಿಸಿದ ನಿಮಿತ್ತ
ನೀವೆ ಲಿಂಗವಾದ ಕಾರಣ ಆ ಲಿಂಗವೆ ನಿಮ್ಮ ಅಂಗವಾಗಿ,
ಆ ಜಂಗಮವೆ ನಿಮ್ಮ ಪ್ರಾಣವಾಗಿ,
ಗುರುವೆ ನಿಮ್ಮ ಆಚರಣೆಯಾಗಿರ್ದ ನಿಮಿತ್ತ,
ಅದೇ ಗುರುವೆ ನಿಮ್ಮ ವಾಙ್ಮನದಲ್ಲಿ, ಅದೇ ಲಿಂಗವೆ ನಿಮ್ಮ ಕರಕಮಲದಲ್ಲಿ
ಅದೇ ಜಂಗಮವೆ ನಿಮ್ಮ ವಿಗ್ರಹದಲ್ಲಿ,
ನೆಲೆಗೊಂಡಿರ್ಪುದೆಂದು ಸಂಬಂದಿಸಿಕೊಟ್ಟಲ್ಲಿ
ಆ ಗುರು ಹೇಳಿದಂತಹ ಪತಿವ್ರತಾಧರ್ಮ ತಿಳಿಯದೆ ಆಚರಿಸಿದ ಕಾರಣ
ಆಯಾಯ ತತ್ಕಾಲದಲ್ಲಿ ಬಂದೊದಗುವವು,
ಅದೇ ಸಮರಸಾಚರಣೆಯ ಉಪಚಾರವು.
ನೀವು ಯಾವಸ್ಥಲವಿಡಿದು ಆಚರಿಸಿದಡೆಯೂ, ಆಯಾಯ ಸ್ಥಲಂಗಳಲ್ಲಿ
ಆರು ಸ್ಥಲಂಗಳು ಬಂದು ಸಂಬಂಧವಾಗುವುವು.
ಮಿಕ್ಕಿನ ಉಪದೇಶವಿಲ್ಲದೆ ಶುದ್ಧಶೈವರಿಗೆ ಗುರು,
ಅಷ್ಟಷ್ಟು ಜಪ-ಶಿವಾರ್ಚನೆಯ ಹೇಳಿ
`ಹೀಗೆ ಆಚರಿಸು’ ಎಂದರುಹಿಕೊಟ್ಟಲ್ಲಿ, ಅವರಿಗೆ ಒಂದೆ ಸ್ಥಲ ಸಂಬಂಧವು.
ಅವರಿಗೆ ಮತ್ತೊಂದು ಸ್ಥಲದ ಮರ್ಮವ ಗುರು ಅರುಹಿ ಕೊಡಲಿಲ್ಲ.
ಏನು ಕಾರಣವೆಂದಡೆ ಅವರು ಅಶಕ್ತರಾದ ನಿಮಿತ್ತ.
ಅವರು ಖಂಡಿತಾಚರಣೆಯುಳ್ಳವರು.
ಅವರಿಗೆ ಸಮರಸಾಚರಣೆ ಹೊಂದದ ನಿಮಿತ್ತ
ಅವರು ಮೂರು ಜನ್ಮಕ್ಕೆ ಮುಕ್ತರು.
ಅದರಲ್ಲಿ ತಪ್ಪಿ ನಡೆದಡೆ ನೂರು ಜನ್ಮಕ್ಕೆ ಮುಕ್ತರು.
ಹಾಗಾದಡೆಯೂ ಖಂಡಿತಮುಕ್ತರಲ್ಲದೆ ನಿಜಮುಕ್ತರಲ್ಲ.
ಇದನರಿತು ಶ್ರಿಗುರುನಾಥನು ಅವರಿಗೆ ತಕ್ಕಂತಹ ನಡತೆಯ
ಅರುಹಿಕೊಡುವನಲ್ಲದೆ ಹೆಚ್ಚಾಗಿ ಅರುಹಿಕೊಡನು.
ಕೂಡಲಚೆನ್ನಸಂಗಮದೇವಾ./100
ಅಜಕೋಟಿ ಕಲ್ಪ ವರುಷದವರೆಲ್ಲರು ಹಿರಿಯರೆ ?
ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರು ಹಿರಿಯರೆ ?
ನಡುಮುರಿದು ಗುಡುಗೂರಿ ತಲೆ ನಡುಗಿ ನೆರೆತೆರೆ ಹೆಚ್ಚಿ, ಮತಿಗೆಟ್ಟು
ಒಂದನಾಡ ಹೋಗಿ ಒಂಬತ್ತನಾಡುವ ಅಜ್ಞಾನಿಗಳೆಲ್ಲರು ಹಿರಿಯರೆ ?
ಅನುವನರಿದು, ಘನವ ಬೆರಸಿ ಹಿರಿದು ಕಿರಿದೆಂಬ ಭೇದವ ಮರೆದು
ಕೂಡಲಚೆನ್ನಸಂಗಯ್ಯನಲ್ಲಿ ಬೆರಸಿ ಬೇರಿಲ್ಲದಿಪ್ಪ ಹಿರಿಯತನ
ನಮ್ಮ ಮಹಾದೇವಿಯಕ್ಕಂಗಾಯಿತ್ತು./101
ಅಜಾಂಡ ಮೊದಲಾದ ತ್ರಿಜಾಂಡದೊಳಗೆ ಅಜಾಂಡ ಕೋಟಿಗಳು.
ನವಕೋಟಿಬ್ರಹ್ಮರೆಲ್ಲರೂ ಹರ ನಿಮ್ಮ ಚರಣವನರಿಯರು.
ಎಲ್ಲಾ ಭವಭಾರಕರಾಗಿ, ಶಿವ ನಿಮ್ಮ ಚರಣವನರಿಯರು.
ಜಡೆಯ ಕಟ್ಟಿ ಕರ್ಣ ಕುಂಡಲವನ್ನಿಕ್ಕಿ ನಂದಿಯನೇರಿದ ರುದ್ರರು-
ಇಂಥ ನವಕೋಟಿರುದ್ರರೆಲ್ಲಾ ಹರ ನಿಮ್ಮ ಚರಣವನರಿಯರು,
ಎಲ್ಲಾ ಭವಭಾರಕರಾಗಿ, ಅಷ್ಟವೃಕ್ಷಫಲದೊಳು ಸ್ಥೂಲ ಸೂಕ್ಷ್ಮನಾಗಿ,
ಕೂಡಲಚೆನ್ನಸಂಗಾ ನಿಮ್ಮ ಶರಣ ಅನಲನಾಹುತಿಯಮೇಳದಂತಿಪ್ಪ. /102
ಅಜಾತಲಿಂಗ ಸುಕ್ಷೇತ್ರದಲ್ಲಿ ಪವಿತ್ರಶರಣ,
ಪದಾರ್ಥವ ಬಿತ್ತಿ ಪ್ರಸಾದವ ಬೆಳೆವ,
ಅಂದಂದಿಗೆ ಹೊಸಫಲವನುಂಬ, ಅನ್ಯವ ಮುಟ್ಟನಾ ಶರಣ.
ಕೂಡಲಚೆನ್ನಸಂಗನ ಶರಣ ಮತ್ರ್ಯನೆಂದರೆ ನರಕ ತಪ್ಪದು. /103
ಅಜ್ಞಾನ ವಶೀಕೃತರಾದವರು ಷಡುದರುಶನಂಗಳಲ್ಲಿ ಹೊಕ್ಕು
ಪರದೈವಂಗಳ ಲಾಂಛನ ಮುದ್ರೆಯಪ್ಪ ಶಂಖ ಚಕ್ರ ಅಂಕುಶ ಪಾಶ
ಗದಾದಿಯಾದವರಿಂದ ಶ್ರೇಷ್ಠೋಪದೇಶವೆಂದು
ಕರ ಬಾಹು ಭುಜ ಉರ ಲಲಾಟ ಮೊದಲಾದ ಅವಯವಂಗಳಲ್ಲಿ
ರಚಿಸಲ್ಪಟ್ಟವರಾಗಿ
ದಹನಾಂಕ ಲೇಖನವಾದವರು ಷಡುದರ್ಶನ ಬ್ರಾಹ್ಮಣರಲ್ಲ.
ಅದಂತೆಂದಡೆ:
ಯಮಸ್ಮೈತಿಯಲ್ಲಿ :ನಾಂಕಯೇತ್ತಸ್ಯ ದೇಹೇಷು ದೇವತಾಯುಧಲಾಂಛನಂ
ದಹನಾಲ್ಲೇಖನಾದ್ವಿಪ್ರಃ ಪಾತ್ಯಯಂತಿ ಲಕ್ಷಣಾತ್- ಎಂದುದಾಗಿ
ಯಜ್ಞವೈಭವ ಕಾಂಡದಲ್ಲಿ-
ಕೇನ ಚಿಹ್ನಾಂಕಿತೋ ಮತ್ಯರ್ೊ ನ ಸಾಕ್ಷೀ ಸರ್ವತೋ ಭವೇತ್
ಶ್ರೌತಾರ್ಥೆಷು ಸದಾಚಾರೇ ನಾಧಿಕಾರೀ ಚಲಾಂಕಿತಃ-ಎಂದುದಾಗಿ
ಇಂತಪ್ಪ ಪಾಷಂಡಿ ಪತಿತ ನರಕ ಜೀವಿಗಳಿಗೆ
ಶಾಸ್ತ್ರಾಥರ್ಾದಿಯಾದ ಸದಾಚಾರಂಗಳಲ್ಲಿ ದೈವಕರ್ಮಂಗಳಲ್ಲಿ
ಅಧಿಕಾರತ್ವವಿಲ್ಲವಾಗಿ ನರಕವನೈದುವರು
ಕಾಣಾ ಕೂಡಲಚೆನ್ನಸಂಗಮದೇವಾ./104
ಅಜ್ಞಾನವೆಂಬ ಕಾಳಿಕೆವಿಡಿದ
ಮನದ ಮೋಹವ ಪರಿಹರಿಸಿದ ಪರಿಯ ನೋಡಿರೆ !
ಒಮ್ಮೆ ಕಾಸಿ ಒಮ್ಮೆ ಕರಗಿಸಿ ಒಮ್ಮೆ ಬಣ್ಣವಿಟ್ಟು
ಎನ್ನ ಮನದ ಮೋಹವ ಕಳೆದೆನಯ್ಯಾ
ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣ ಬಸವಣ್ಣನು. /105
ಅಟ್ಟುದನಡುವರೆ? ಸುಟ್ಟುದ ಸುಡುವರೆ?
ಬೆಂದ ನುಲಿಯ ಸಂದಿಸಬಹುದೆ?
ಪಂಚಾಕ್ಷರಿಯಲ್ಲಿ ದಗ್ಧವಾದ ನಿರ್ದೆಹಿಗೆ ಸಂದೇಹವುಂಟೆ?
ದಗ್ಧಸ್ಯ ದಹನಂ ನಾಸ್ತಿ ಪಕ್ವಸ್ಯ ಪಚನಂ ಯಥಾ
ಜ್ಞಾನಾಗ್ನಿದಗ್ಧದೇಹಸ್ಯ ನ ಪುನರ್ದಹನಕ್ರಿಯಾ
ಇದು ಕಾರಣ ಕೂಡಲಚೆನ್ನಸಂಗನ ಶರಣರು
ಭ್ರಾಂತುಸೂತಕ ಕ್ರಿಯಾವಿಹಿತರು./106
ಅಡಿಗಡಿಗೆ ಸ್ಥೂಲಸೂಕ್ಷ್ಮವೆಂಬ ಶಬ್ದಪರಿಭಾವ ತಲೆದೋರದೆ,
ಸಂಗ-ಮಹಾಸಂಗ-ಸಂಕಲ್ಪವಿರಹಿತನು.
ಸದ್ಯೋಜಾತ ವಾಮದೇವ ತತ್ಪುರುಷ ಅಘೋರ ಈಶಾನವೆಂಬ
ಪಂಚವಕ್ತ್ರವನು ಊಧ್ರ್ವಮುಖಕ್ಕೆ ತಂದು
ಅರ್ಪಿಸಬಲ್ಲನಾಗಿ ಗುರುಪ್ರಸಾದಿ.
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಚಂದ್ರ ಸೂರ್ಯ ಆತ್ಮ
ಇಂತೀ ಅಷ್ಟಮೂರ್ತಿಮದವನು
ದಾಸೋಹದಲ್ಲಿ ಅರ್ಪಿಸಬಲ್ಲನಾಗಿ ಜಂಗಮಪ್ರಸಾದಿ.
ಹೊರಗೆ ಭಜಿಸಲಿಲ್ಲ, ಒಳಗೆ ನೆನೆಯಲಿಲ್ಲ.
ಸರ್ವಾಂಗಲಿಂಗಿಯಾಗಿ ಲಿಂಗಪ್ರಸಾದಿ.
ಇದು ಕಾರಣ, ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣ ಮಹಾಪ್ರಸಾದಿ./107
ಅಡಿಪಾದದಿಂದೆ ಮೂರು ವೇಳೆ ಸ್ಪರ್ಶನವ ಮಾಡಿಕೊಳ್ಳುವುದು
ಧೂಳಪಾದೋದಕ,
ಅದೇ ದೀಕ್ಷಾಪಾದೋದಕವೆನಿಸುವುದು.
ಅದರಿಂದ ಸ್ನಾನ ಮುಖಪ್ರಕ್ಷಾಲನ ಅಬಿಷೇಕವ ಮಾಡಿಕೊಂಬುದು.
“ಜಂಗಮಾನಾಂ ಚ ಪಾದೋದಂ ಪಾನೀಯಂ ಚ ಕದಾಚನ
ಸ್ನಾತವ್ಯಂ ಮೂರ್ದಿ್ನ ಧರ್ತವ್ಯಂ ಪ್ರೋಕ್ಷಿತವ್ಯಂ ಸ್ವದೇಹಕೇ -ಎಂದುದಾಗಿ,
ಈ ರೀತಿಯಲ್ಲಿ ನಡೆಯಬಲ್ಲಡೆ
ಆತನೆ ಅಚ್ಚಶರಣನೆಂಬೆ ಕೂಡಲಚೆನ್ನಸಂಗಮದೇವಾ. /108
ಅಣುಕುಂಡಲ ನಾಗಬಂಧನವೆಂಬ ಸುಷುಮ್ನನಾಳದಿಂದ
ಒದಗಿದ ನಿರೂಪ(ಬಿಂದು)ವನು ಒಸರಲೀಯದೆ
ಕಟ್ಟಿಹೆನೆಂದರೆ ಆ ಶಶಿಧರಂಗಳವಲ್ಲ.
ಒಡಲುಗೊಂಡರೆ ಒಸರುವುದು ಮಾಬುದೆ?
ಒಡಲಿಲ್ಲದಿದ್ದರೆ ಒಸರುವುದು ಮಾಬುದು.
ಒಸರಲೀಯದೆ ಕಟ್ಟಿದೆನೆಂಬ ಮೂರ್ಖರೆಲ್ಲಾ
ಭಂಗಬಟ್ಟು ನಸಿದ್ಧರಾಗಿ ಹೋದರಯ್ಯಾ.
ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ,
ಕೋಟ್ಯನುಕೋಟಿ ಕರ್ಮವ ಪೂಜಿಸುವ ಕರ್ಮಿಗಳೆತ್ತ ಬಲ್ಲರು, ಆ ಶರಣನ ?
ಭಕ್ತಿ ಹಿಂದುಮುಂದಾದ ಮಹಾಲಿಂಗೈಕ್ಯನ ನಿಲವ ?
ಇದು ಕಾರಣ, ಕೂಡಲಚೆನ್ನಸಂಗಯ್ಯಾ ಲಿಂಗೈಕ್ಯರ ನಿಲವ ಲಿಂಗೈಕ್ಯನೇ ಬಲ್ಲ. /109
ಅಣೋರಣೀಯಾನ್ ಮಹತೋ ಮಹೀಯಾನ್` ಎಂದು ಶ್ರುತಿವಿಡಿದು
ಅಣು ರೇಣು ತೃಣಕಾಷ್ಠದೊಳಗೆ ಶಿವನು ಕೂಡೆ ಜಗಭರಿತನೆಂಬ
ಪಾತಕರ ನುಡಿಯ ಕೇಳಲಾಗದು, ಅದೇನು ಕಾರಣವೆಂದಡೆ:
ಜನ್ನಕ್ಕೆ ತಂದ ಕನ್ನೆಯಾಡು ಶ್ರುತಿಯಿಂದ ಹೊರಗು.
ಸರ್ವವೂ ಶಿವಮಯವೆಂಬ ಪಾತಕರ ನುಡಿಗಿನ್ನೆಂತೊ ?
ಅಂತ್ಯಜ-ಅಗ್ರಜ, ಮೂರ್ಖ-ಪಂಡಿತರೆಂಬ ಭೇದಕ್ಕಿನ್ನೆಂತೊ ?
ಜಗದೊಳಗೆ ಶಿವ ಶಿವನೊಳಗೆ ಜಗವೆಂಬ ಭ್ರಮಿತರ ನುಡಿಗಿನ್ನೆಂತೋ
`ಜಲಮಿತಿ ಭಸ್ಮ ಸ್ಥಲಮಿತಿ ಭಸ್ಮ ಅಗ್ನಿರಿತಿ ಭಸ್ಮ
ವಾಯುರಿತಿ ಭಸ್ಮ ವ್ಯೋಮೇತಿ ಭಸ್ಮ, ಭಸ್ಮೇತಿ ಭಸ್ಮ
ಸರ್ವಗ್ಂ ಹವಾ ಇದಂ ಭಸ್ಮ ಎಂದುದಾಗಿ
ಜಗದೊ?ಗೆ ಶಿವನಿಲ್ಲ, ಶಿವನೊಳಗೆ ಜಗವಿಲ್ಲ, ಶಿವ ಜಗವಾದ ಪರಿ ಇನ್ನೆಂತೊ ?
ಅದೆಂತೆಂದಡೆ :
ಯಂತ್ರಧಾರೀ ಮಹಾದೇವೋ ಯಂತ್ರಪಾಣಸ್ಸ ಏವ ಹೀ
ಯಂತ್ರಕರ್ಮ ಚ ಕರ್ತಾ ಯಂತ್ರವಾಹಾಯ ವೈ ನಮಃ
ಎಂದುದಾಗಿ; ಸಕಲಬ್ರಹ್ಮಾಂಡಗಳೆಂಬ ಯಂತ್ರಗಳ ವಾಹಕ
ನಮ್ಮ ಕೂಡಲಚೆನ್ನಸಂಗಯ್ಯ. /110
ಅತಿಬಳ ಪ್ರಬಳಿತ ಜಂಗಮ ಸಂಸಾರಿಯಾದ ಕಾರಣ,
ಭಕ್ತ ನಿಸ್ಸಂಸಾರಿಯಾದ ಕಾರಣ,
ಈ ಸಂಸಾರಿಯ ವೈರಾಗ್ಯವೂ ಆ ಸಂಸಾರಿಯ ನಿಷ್ಠೆಯೂ
ಒಂದಾದರೆ ತೆರಹಿಲ್ಲ ಕೂಡಲಚೆನ್ನಸಂಗಾ ನಿಮ್ಮಲ್ಲಿ/111
ಅತಿಮಥನವೆಂಬ ಶೂನ್ಯಸಿಂಹಾಸನವನೇರಿಕೊಂಡು
ನಾವೆ ಹಿರಿಯರು ನಾವೆ ದೇವರೆಂಬರು,
ತಮ್ಮ ತಾವರಿಯರು.
ಅದ್ಭುತಮನಭುಂಜಕರ ಮೆಚ್ಚ
ನಮ್ಮ ಕೂಡಲಚೆನ್ನಸಂಗಮದೇವ./112
ಅತೀತಃ ಪಂಥಾನಂ ತವ ಚ ಮಹಿಮಾ ಎಂಬ ಶ್ರುತಿಗಳು
ನಿಮ್ಮ ಕಾಣಲರಿಯವು ದೇವಾ.
ಲಿಂಗದೇವಾ, ನಿಮ್ಮ ಮಹಿಮೆಯ ಸ್ತುತಿಯಿಸಿ ಕಾಣಲರಿಯವು ದೇವಾ.
ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ
ಆನಂದಂ ಬ್ರಹ್ಮಣೋ ವಿದ್ವಾನ್ ನ ಬಿಭೇತಿ ಕುತಶ್ಚನ
ಎಂಬ ತುದಿ ಪದವು,
ಕೂಡಲಚೆನ್ನಸಂಗಮದೇವಾ ಪರವಿಲ್ಲಾಗಿ./113
ಅದ್ವೈತಿಗಳು ಲಿಂಗಾರಾಧನೆ ಹುಸಿಯೆಂದು ಬುದ್ಧಿಗೆಟ್ಟರು
ಆಗಮವನರಿಯದೆ ಬೊಮ್ಮನ ನೆರೆದಡೆ
ಬ್ರಹ್ಮನ ಶಿರವ ಕೊಂಡುದನರಿಯಿರೊ !
ಬೊಮ್ಮವಾದಿಗಳೆಲ್ಲ ಲಿಂಗಕ್ಕೆ ದೂರವಾದರು.
ನಮ್ಮ ಕೂಡಲಚೆನ್ನಸಂಗನ ಶರಣರು ಜಗದ್ವಂದ್ಯರಾದರು./114
ಅಧರ ತಾಗುವ ರುಚಿಯನು, ಉದರ ತಾಗುವ ಸುಖವನು,
ಲಿಂಗಾರ್ಪಿತವ ಮಾಡದಿದ್ದರೆ ಕೃತಕಿಲ್ಬಿಷ ನೋಡಾ.
ಶ್ರೋತ್ರ ನೇತ್ರ ಭುಂಜನೆಯ ಮಾಡಲಾಗದು.
ತಟ್ಟಿತ್ತು ಮುಟ್ಟಿತ್ತು ಲಿಂಗಾರ್ಪಿತವೆಂದರೆ,
ಅವನಂದೇ ವ್ರತಗೇಡಿ ಕೂಡಲಚೆನ್ನಸಂಗಮದೇವಾ/115
ಅನಂತ ಅದ್ಭುತ ತಮಂಧ ತಾರಜ ತಂಡಜ ಬಿನ್ನಜ
ಬಿನ್ನಾಯುಕ್ತ ಅದ್ಭೂತ ಅಮದಾಯುಕ್ತ ಮಣಿರಣ
ಮಾನ್ಯರಣ ವಿಶ್ವಾರಣ ವಿಶ್ವಾವಸು ಅಲಂಕೃತ
ಕೃತಯುಗ ತ್ರೇತಾಯುಗ ದ್ವಾಪರ ಕಲಿಯುಗ
ಇಂತೀ ಹದಿನೆಂಟು ಯುಗಂಗಳಲ್ಲಿ ಪುಟ್ಟಿದವಾವೆಂದಡೆ:
ಅನಂತವೆಂಬ ಯುಗದಲ್ಲಿ ಸಾಕ್ಷಾತ್ ಸರ್ವಜ್ಞ ತಾನೊಬ್ಬನೆ ಇದ್ದ.
ಅದ್ಭುತವೆಂಬ ಯುಗದಲ್ಲಿ ಪಾರ್ವತಿ ಹುಟ್ಟಿದಳು.
ತಮಂಧವೆಂಬ ಯುಗದಲ್ಲಿ ನಾರಾಯಣ ಪುಟ್ಟಿದನು.
ಆ ನಾರಾಯಣನ ನಾಬಿಯಲ್ಲಿ ಒಂದು ಕಮಲ ಹುಟ್ಟಿತ್ತು.
ಆ ಕಮಲದಲ್ಲಿ ಬ್ರಹ್ಮ ಹುಟ್ಟಿದನು.
ತಾರಜವೆಂಬ ಯುಗದಲ್ಲಿ ಆ ಬ್ರಹ್ಮಂಗೆ ಅಜನೆಂಬ ಹೆಸರಾಯಿತ್ತು.
ತಂಡಜವೆಂಬ ಯುಗದಲ್ಲಿ ಬ್ರಹ್ಮಾಂಡವೆಂಬುದೊಂದು ತತ್ತಿ ಪುಟ್ಟಿತ್ತು.
ಬಿನ್ನಜವೆಂಬ ಯುಗದಲ್ಲಿ ಆ ತತ್ತಿ ಬಿನ್ನವಾಯಿತ್ತು.
ಬಿನ್ನಾಯುಕ್ತವೆಂಬ ಯುಗದಲ್ಲಿ ಮೇಘ ಪಾರಿಜಾತಂಗಳು ಪುಟ್ಟಿದವು.
ನಿಂದಲ್ಲಿ ಭೂಮಿ ಪುಟ್ಟಿತ್ತು.
ಅದ್ಭೂತವೆಂಬ ಯುಗದಲ್ಲಿ ಅಷ್ಟ ಕುಲಪರ್ವತಂಗಳು ಪುಟ್ಟಿದುವು.
ಅಮದಾಯುಕ್ತವೆಂಬ ಯುಗದಲ್ಲಿ ಸಪ್ತಸಮುದ್ರಂಗಳು ಪುಟ್ಟಿದುವು.
ಮಣಿರಣವೆಂಬ ಯುಗದಲ್ಲಿ ಉತ್ತಮ ಮಧ್ಯಮ ಕನಿಷ್ಠಂಗಳು ಪುಟ್ಟಿದುವು.
ಮಾನ್ಯರಣವೆಂಬ ಯುಗದಲ್ಲಿ ನಕ್ಷತ್ರಂಗಳಾಗಿರ್ದ
ಚಾರಾಸೀತಿ ಲಕ್ಷಣ ಜೀವರಾಶಿಗಳು ಪುಟ್ಟಿದುವು.
ವಿಶ್ವಾರಣವೆಂಬ ಯುಗದಲ್ಲಿ ಚಂದ್ರ ಸೂರ್ಯರು ಪುಟ್ಟಿದರು.
ವಿಶ್ವಾವಸುವೆಂಬ ಯುಗದಲ್ಲಿ ದೇವಾದಿ ದೇವರ್ಕ?ು ಪುಟ್ಟಿದರು.
ಅಲಂಕೃತವೆಂಬ ಯುಗದಲ್ಲಿ ಕಾಮಾದಿವರಂಗ?ು ಪುಟ್ಟಿದುವು
ಕೃತಯುಗದಲ್ಲಿ ದೇವ ದಾನವ ಮಾನವರಿಗೆ ಯುದ್ಧವಾಯಿತ್ತು.
ತ್ರೇತಾಯುಗದಲ್ಲಿ ರಾಮರಾವಣರಿಗೆ ಯುದ್ಧವಾಯಿತ್ತು.
ದ್ವಾಪರಯುಗದಲ್ಲಿ ಕೌರವ ಪಾಂಡವರಿಗೆ ಯುದ್ಧವಾಯಿತ್ತು.
ಕಲಿಯುಗದಲ್ಲಿ ಮೌರಿಯ ಕದಂಬರಿಗೆ ಯುದ್ಧವಾಯಿತ್ತು.
ಇಂತೀ ಹದಿನೆಂಟು ಯುಗಂಗಳಲ್ಲಿ ರಾಜ್ಯವನಾಳಿದ
ಸೂರ್ಯವಂಶದ ಕ್ಷತ್ರಿಯರ ಹೆಸರಾವುವೆಂದಡೆ
ಆದಿನಾರಾಯಣ, ಆದಿನಾರಾಯಣನ ಮಗ ಬ್ರಹ್ಮ,
ಬ್ರಹ್ಮನ ಮಗ ಭೃಗು, ಭೃಗುವಿನ ಮಗ ಇಂದ್ರ,
ಇಂದ್ರನ ಮಗ ನಯನೇಂದ್ರಿಯ,
ನಯನೇಂದ್ರಿಯನ ಮಗ ಕಾಲಸ್ವಾಲ,
ಕಾಲಸ್ವಾಲನ ಮಗ ದುಂದುಮಹಂತ,
ದುಂದುಮಹಂತನ ಮಗ ತ್ರಿಶಂಕು,
ತ್ರಿಶಂಕುವಿನ ಮಗ ಹರಿಶ್ಚಂದ್ರ, ಹರಿಶ್ಚಂದ್ರನ ಮಗ ಲೋಹಿತಾಕ್ಷ,
ಲೋಹಿತಾಕ್ಷನ ಮಗ ನಳ, ನಳನ ಮಗ ಕೂರ್ಪಸ್ಯ,
ಕೂರ್ಪಸ್ಯನ ಮಗ ಪುನೋರಪಿ, ಪುನೋರಪಿಯ ಮಗ ಪರಿತಾಸಿ,
ಪರಿತಾಸಿಯ ಮಗ ಅಮರ, ಅಮರನ ಮಗ ಮಾಂಧಾತ,
ಮಾಂಧಾತನ ಮಗ ಮಾಗ್ರೀಚ, ಮಾಗ್ರೀಚನ ಮಗ ಬಿಂದು,
ಬಿಂದುವಿನ ಮಗ ಲವಲ, ಲವಲನ ಮಗ ಪರಿತಾಪಿ,
ಪರಿತಾಪಿಯ ಮಗ ಸಿಳ್ಳಗೋಪಾಲ,
ಸಿಳ್ಳಗೋಪಾಲನ ಮಗ ನಂದಗೋಪಾಲ,
ನಂದಗೋಪಾಲನ ಮಗ ವಸುದೇವ,
ವಸುದೇವನ ಮಗ ಶ್ರೀಕೃಷ್ಣ,
ಶ್ರೀಕೃಷ್ಣನ ಮಗ ಸಿಳಪ್ಪ, ಸಿಳಪ್ಪನ ಮಗ ದಿಗು,
ದಿಗುವಿನ ಮಗ ರಘು, ರಘುವಿನ ಮಗ ಅರಣ್ಯ,
ಅರಣ್ಯನ ಮಗ ಮೃಗರಾಜ, ಮೃಗರಾಜನ ಮಗ ದಶರಥ,
ದಶರಥನ ಮಗ ರಾಮ.
ಇಂತಿವರೆಲ್ಲರೂ ಪ್ರಳಯಕ್ಕೊ?ಗಾದರು ನೋಡಿರೆ !
ಪ್ರ?ಯರಹಿತ ನಮ್ಮ ಸಂಗನಬಸವಣ್ಣ
ಕೂಡಲಚೆನ್ನಸಂಗಮದೇವರು ತಾನು ತಾನಾಗಿರ್ದರು. /116
ಅನಂತ ವರುಷದವರ ಹಿರಿಯರೆಂಬೆನೆ ?
ಎನ್ನೆನು- ಅವರು ಭೂಭಾರಕರಾಗಿ.
ಏಳು ವರುಷದ ಹಿರಿಯ ಚೀಲಾಳ;
ಹನ್ನೆರಡು ವರುಷದ ಹಿರಿಯಳು ಮಹಾದೇವಿಯಕ್ಕ.
ಅಂಡಜ ಪಿಂಡಜ ಮೀನಜರೆಂಬವರೆಲ್ಲಾ ಅಂದಂದಿನ ಬಾಲಕರು.
ನಿಮಗೆ ಬುದ್ಧಿಯ ಹೇಳುವಡೆ ಎನಗೆ ಬುದ್ಧಿಯಿಲ್ಲ,
ಕೂಡಲಚೆನ್ನಸಂಗಮದೇವಾ./117
ಅನರ್ಪಿತ ಭುಂಜಕಂಗೆ ಎಂಜಲುಂಟಲ್ಲದೆ
[ಅರ್ಪಿತ] ಭುಂಜಕಂಗೆ ಎಂಜಲೆಲ್ಲಿಯದು ?
ಶಿವ ಭೋಜನವ ಮಾಡಲು ಭಾಜನವಾದಾತಂಗೆ,
ಪ್ರಸಾದಭೋಗಿಗೆ ಎಂಜಲೆಲ್ಲಿಯದು ?
ಕರ್ಮಭೋಗೇ ಶಿವಸ್ಯೈವ ಉಪಭೋಗವಿಶೇಷತಃ
ಅಶರೀರಮಿದಂ ಗ್ರಾಹ್ಯಂ ಲಿಂಗಸಾರಾಯ ಸಂಯುತಂ
ಇದು ಕಾರಣ ಕೂಡಲಚೆನ್ನಸಂಗಾ
ನಿಮ್ಮ ಶರಣಂಗೆಂಜಲು ಸೂತಕ ಹೊದ್ದಲೀಯದು./118
ಅನಲನೇ ಗುರುವೆಂದು ಇದಿರಾಸನವೇರಿ
ಭಾಷೆಗೆ ತಪ್ಪುವ ಪಾತಕರ ವಿಧಿಯೆಂತೊ?
“ವರ್ಣಾನಾಂ ಬ್ರಾಹ್ಮಣೋ ಗುರುಃ
ಎಂದು ವರ್ಣವನರಸುವ ಕುನ್ನಿಗಳ ವಿದಿಯೆಂತೊ
“ಓಂ ಭೂಃ ಓಂ ಭುವಃ ಓಂ ಸ್ವಃ ಓಂ ಮಹಃ
ಓಂ ಜನಃ ಓಂ ತಪಃ ಓಂ ಸತ್ಯಂ ಓಂ ತತ್ಸವಿತುರ್ವರೇಣ್ಯಂ
ಭಗರ್ೊ ದೇವಃ ಎಂಬ [ಆದಿಯ] ಮರೆದವರ ಕೂಡಲಚೆನ್ನಸಂಗಯ್ಯನು
ಇರಿದಿರಿದು ಸುಟ್ಟು ಮರೆವನಲ್ಲದೆ ಮೆರೆವನೆ? /119
ಅನಾಚಾರದ ಕಾಯ[ಕ]ವ ಮಾಡಿ,
ಪದಾರ್ಥವನೆ ಗಳಿಸಿ ಆ ಪದಾರ್ಥವನೆ ಪಾಕವ ಮಾಡಿ,
ಓಗರವ ಮಾಡುವುದು, ಆ ಓಗರವನೆ ಪ್ರಸಾದವ ಮಾಡಿ,
ಆ ಪ್ರಸಾದವನೆ ಓಗರವ ಮಾಡಿ!
ಇದು ಕಾರಣ ಕೂಡಲಚೆನ್ನಸಂಗನ ಶರಣನು ಅರ್ಪಿತವಲ್ಲದೆ ಮಾಡನು. /120
ಅನಾದಿ ಪರಶಿವನಿಂದಾಕಾರವಾದ
ಆದಿಬಿಂದು ಅನಾದಿಬಿಂದು ಚಿದ್ಬಿಂದು ಪರಬಿಂದುವೆ
ಜಗದ ಮಧ್ಯದಲ್ಲಿ ಸ್ವಯ, ಚರ, ಪರ, ಭಕ್ತ, ಮಹೇಶ್ವರ, ಪ್ರಸಾದಿ
ಪೂಜ್ಯ ಪೂಜಕತ್ವದಿಂದ ಚರಿಸುತ್ತಿರಲು,
ಆ ಸಮಯದಲ್ಲಿ ಪ್ರಮಾದವಶದಿಂದ ಲಿಂಗಾಂಗಕ್ಕೆ
ಸುಯಿಧಾನ ತಪ್ಪಿ ವಿಘ್ನಾದಿಗಳು ಬಂದು ತಟ್ಟಿ ಶಂಕೆ ಬಂದಲ್ಲಿ
ಭಕ್ತ ಮಹೇಶ್ವರ ಶರಣಗಣಂಗಳು ವಿಚಾರಿಸಿ ನೋಡಿದಲ್ಲಿ
ಸ್ಥೂಲವಾದಡೆ ಸದಾಚಾರಕ್ಕೆ ಹೊರಗು
ಸೂಕ್ಷ್ಮವಾದಡೆ ಶರಣಗಣಂಗಳ ಸಮೂಹಮಧ್ಯದಲ್ಲಿ
ಭೃತ್ಯಭಾವದಿಂದ ಹತ್ತು ಹನ್ನೊಂದ
ಕೊಳತಕ್ಕುದಲ್ಲ ನೋಡಾ (ಕೊಳತಕ್ಕುದಲ್ಲದೆ?)
ಕರ್ತೃತ್ವದಿಂದ ಹತ್ತು ಹನ್ನೊಂದ ಕೊಡತಕ್ಕುದಲ್ಲ ನೋಡಾ !
ಸ್ಥೂಲ ಸೂಕ್ಷ್ಮದ ವಿಚಾರವೆಂತೆಂದಡೆ:
ಪರಶಿವಸ್ವರೂಪವಾದ ಇಷ್ಟಲಿಂಗದ ಷಟ್ಸ್ಥಾನದೊಳಗೆ
ಆವ ಮುಖದಿಂದಾದಡೆಯು ಸುಯಿಧಾನ ತಪ್ಪಿ ಪೆಟ್ಟುಹತ್ತಿ ಬಿನ್ನವಾದಡೆ,
ಭಕ್ತ ಮಹೇಶ್ವರ ಶರಣಗಣಂಗಳು ವಿಚಾರಿಸಿ ನೋಡಿ
ಸ್ಥೂಲ ಸೂಕ್ಷ್ಮಕ್ಕೆ ತಕ್ಕ ಹರಗುರುವಚನ ವಿಚಾರಿಸಿರಿ
ಸ್ಥೂಲ ಸೂಕ್ಷ್ಮಕ್ಕೆ ತಕ್ಕ ಪ್ರತಿಜ್ಞೆಯ ಮಾಡುವುದು,
ಶಕ್ತಿ ಸ್ವರೂಪವಾದ ಅಂಗದ ಅವಯವಂಗಳಿಗೆ ಶಿವಾನುಕೂಲದಿಂದ
ವ್ಯಾಘ್ರ ಭಲ್ಲೂಕ ದಂಷ್ಟ್ರ ಕರ್ಕಟ ವಾಜಿ ಮಹಿಷ ಸಾಗರದುಪ್ಪಿ
ಗಜ ಶುನಿ ಶೂಕರ ಮಾರ್ಜಾಲ ಹೆಗ್ಗಣ ಉರಗ ಮೊದಲಾದ
ಮಲಮಾಂಸಭಕ್ಷಕ ಪ್ರಾಣಿಗಳು ಮೋಸದಿಂದ
ಪಾದ ಪಾಣಿ ಗುದ ಗುಹ್ಯ ದೇಹವ ಕಚ್ಚಿದಡೆ
ಸ್ಥೂಲವೆನಿಸುವುದಯ್ಯಾ !
ಅದರಿಂದ ಮೇಲೆ ಜಿಹ್ವೆ ನಾಸಿಕ ನೇತ್ರ ಲಲಾಟ ಶ್ರೋತ್ರಂಗಳ ಕಚ್ಚಿದಡೆ
ಸೂಕ್ಷ್ಮವೆನಿಸುವುದಯ್ಯಾ !
ಈ ಪ್ರಕಾರದಲ್ಲಿ ಲಿಂಗಾಂಗಕ್ಕೆ ಅಪಮೃತ್ಯು ಬಂದು ತಟ್ಟಿದಲ್ಲಿ
ಆಚಾರಕ್ಕೆ ಹೊರಗಾದವರು ಗಣಮಧ್ಯದಲ್ಲಿ ಪ್ರಾಣವ ಬಿಡುವುದಯ್ಯಾ,
ಇಂತಪ್ಪ ಆಚಾರಕ್ರಿಯಾನಿಷ್ಠನ ಭಕ್ತ ಮಹೇಶ್ವರ ಶರಣಗಣಂಗಳು
ಜಂಗಮದ ಪಾದದಲ್ಲಿ ಸಮಾದಿಯ ಮಾಡುವುದಯ್ಯಾ
ಪ್ರಾಣತ್ಯಾಗವ ಮಾಡಲಾರದಿರ್ದಡೆ,
ಭಕ್ತ ಮಹೇಶ್ವರ ಶರಣಗಣಂಗಳ ಮಹಾನೈಷ್ಠೆಯಿಂದ
ಸಾಕ್ಷಾತ್ಪ್ರಭುವೆಂದು ನಂಬಿ ಅವರು ತೋರಿದ ಸೇವೆಯ ಮಾಡಿ,
ಅವರು ಕೊಟ್ಟ ಧಾನ್ಯಾದಿಗಳ ಸ್ವಪಾಕವ ಮಾಡಿ ಮಹಾಪ್ರಸಾದವೆಂದು ಭಾವಿಸಿ
ಪಾತಕಸೂತಕಂಗಳ ಹೊದ್ದದೆ ಆಚರಿಸಿದಾತಂಗೆ
ಅವಸಾನಕಾಲದಲ್ಲಿ ಮಹಾಗಣಂಗಳು ಲಿಂಗಮುದ್ರಾಭೂಮಿಯಲ್ಲಿ
ಪಾದದಳತೆಯಿಲ್ಲದೆ ನೋಟಮಾತ್ರ ಪ್ರಮಾಣಿಸಿ ಸಹಜಸಮಾದಿಯ ಮಾಡಿ
ಲಿಂಗಾಕೃತಿಪ್ರಣವಸಂಬಂಧವಾದ ತಗಡ ಸಂಬಂಧ ಮಾಡದೆ
ಪುಷ್ಪಾಂಜಲಿಯ ಮಾಡದೆ, ಆ ನಿಕ್ಷೇಪ ಸ್ಥಾನದಲ್ಲಿ ಜಂಗಮದ ಪಾದವಿಟ್ಟು
ಆ ಮರಣಸನ್ನದ್ಧನ ನಿಕ್ಷೇಪನ ಮಾಡುವುದಯ್ಯಾ.
ಈ ರೀತಿಯಿಂದಾಚರಿಸಿದಡೆ ಮರಳಿ ಗುರುಕರಜಾತನಾಗಿ
ಸದ್ಭಕ್ತಿ ಜ್ಞಾನಾಚಾರ ಕ್ರೀಯಲ್ಲಿ ನಡೆನುಡಿಸಂಪನ್ನನಾಗಿ
ಷಟ್ಸ್ಥಲದ ಬ್ರಹ್ಮವ ಕೂಡಿ ಘನಸಾರದಂತೆ
ಸರ್ವಾಂಗವೆಲ್ಲ ಜ್ಯೋತಿರ್ಮಯಲಿಂಗದಲ್ಲಿ
ನಿರವಯವಪ್ಪುದು ನೋಡಾ !
ಇಂತು ಗುರುಮಾರ್ಗಾಚಾರವ ಮೀರಿ, ಅವಧೂತಮಾರ್ಗದಲ್ಲಿ ನಡೆದಡೆ,
ಇರುವೆ ಮೊದಲಾನೆ ಕಡೆಯಾದ ಸಮಸ್ತ ಯೋನಿಯಲ್ಲಿ ಜನಿಸಿ,
ಸುಖ-ದುಃಖ, ಪುಣ್ಯ-ಪಾಪ, ಸ್ವರ್ಗ-ನರಕವನನುಭವಿಸಿ
ಕಾಲಕಾಮಾದಿಗೊಳಗಾಗಿ ಗುರುಮಾರ್ಗಾಚಾರಕ್ಕೆ ಹೊರಗಾಗಿ
ಹೋಹರು ನೋಡಾ, ಕೂಡಲಚೆನ್ನಸಂಗಮದೇವಾ !/121
ಅನಾದಿಕುಳ ಗುರುಸನುಮತವಾದ ಪ್ರಸಾದಿ,
ಲಿಂಗ ಜಂಗಮಸನುಮತವಾದ ಪ್ರಸಾದಿ,
ಆಪ್ಯಾಯನ ಅವಧಾನ ಅಂಗವಿಸದೆ ನಿಂದು ಸನುಮತವಾದ ಪ್ರಸಾದಿ,
ನೇತ್ರ ಶ್ರೋತ್ರ ಘ್ರಾಣ ಮನ ಬುದ್ಧಿ ಚಿತ್ತಹಂಕಾರ ಸನುಮತವಾದ ಪ್ರಸಾದಿ,
ರೂಪ ರಸ ಗಂಧ ಶಬ್ದ ಸ್ಪರ್ಶ ಪಂಚೇಂದ್ರಿಯ ವಿಷಯ ಸನುಮತವಾದ ಪ್ರಸಾದಿ,
ದೇಹಾದಿಗುಣವನತಿಗಳೆದು ಉದರಾಗ್ನಿ ತಲೆದೋರದೆ
ಸಕಲಸನುಮತವಾದ ಪ್ರಸಾದಿ.
ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ,
ಸಮಾಪ್ತವಾಗಿ ಲಿಂಗಲೀಯವಾದ ಪ್ರಸಾದಿ./122
ಅನಾದಿಕುಳುಸನ್ಮತವಾದ ಏಕಾದಶಪ್ರಸಾದವ ಕುಳವ ತಿಳಿವಡೆ;
ಪ್ರಥಮದಲ್ಲಿ ಗುರುಪ್ರಸಾದ, ದ್ವಿತೀಯದಲ್ಲಿ ಲಿಂಗಪ್ರಸಾದ,
ತೃತೀಯದಲ್ಲಿ ಜಂಗಮಪ್ರಸಾದ, ಚತುರ್ಥದಲ್ಲಿ ಪ್ರಸಾದಿಪ್ರಸಾದ
ಪಂಚಮದಲ್ಲಿ ಅಪ್ಯಾಯನ ಪ್ರಸಾದ, ಷಷ್ಠಮದಲ್ಲಿ ಸಮಯಪ್ರಸಾದ,
ಸಪ್ತಮದಲ್ಲಿ ಪಂಚೇಂದ್ರಿಯವಿರಹಿತ ಪ್ರಸಾದ
ಅಷ್ಟಮದಲ್ಲಿ ಅಂತಃಕರಣ ಚತುಷ್ಟಯವಿರಹಿತಪ್ರಸಾದ,
ನವಮದಲ್ಲಿ ಸದ್ಭಾವಪ್ರಸಾದ, ದಶಮದಲ್ಲಿ ಸಮತಾಪ್ರಸಾದ,
ಏಕಾದಶದಲ್ಲಿ ಜ್ಞಾನಪ್ರಸಾದ.-
ಇಂತೀ ಏಕಾದಶ ಪ್ರಸಾದಸ್ಥಲವನತಿಗಳೆದ
ಕೂಡಲಚೆನ್ನಸಂಗಯ್ಯನಲ್ಲಿ ಐಕ್ಯಪ್ರಸಾದಿಗೆ
ನಮೋ ನಮೋ ಎಂದೆನು./123
ಅನಾಹತಮಹೇಶ್ವರನೆಂಬಾತಂಗೆ,
ಪ್ರಸಾದಸ್ಥಲದ ಪ್ರಸಾದಾಶ್ರಯದ ಭವಿತ್ವವ ನೀಕರಿಸಿ
ಪ್ರಸಾದವನು ನೆಲೆಗೊಳಿಸಿ;
ಅನ್ಯಥಾ ಪವನ ಆಧಾರ ಆಶ್ರಯವ ನೀಕರಿಸಿ
ದ್ವಿಜ ಪ್ರಜ ತ್ರಜವೆಂಬ ಡಿಂಬ ಮತ್ರ್ಯಕ್ಕೆ ಕಳುಹಿದಿರಿ ಬಸವಣ್ಣನನು.
ಮಡಿ ಮಡಿವಾಳನನು ಒಡನೆ ಕಳುಹಿದಿರಿ.
ಕನ್ನಡಿಯಾಗಿ ಭವಕ್ಕೆ ಬಾರದಂತೆ ಭಾವವ ನಿಲಿಸಿದಿರಿ.
ಬಳಿಕ ಲಿಂಗಸ್ಥಲ, ಜಂಗಮಸ್ಥಲ, ಪ್ರಸಾದಸ್ಥಲ ನಿರ್ಧರವಾದವು.
ಚಿರಕಾಲದಲ್ಲಿ ಮಹಾಸುನಾದಗಣ,
ಅನಾಹತನಾದಗಣ ಸಂಪೂರ್ಣನಾಗಿಪ್ಪನಯ್ಯಾ
ಕೂಡಲಚೆನ್ನಸಂಗಾ, ನಿಮ್ಮ ಶರಣ ಬಸವಣ್ಣನು !/124
ಅನಾಹತಸ್ಥಳದಲ್ಲಿ ಶಿವ ತನ್ನ ಲೀಲಾವಿನೋದದಿಂದ
ನೀವು ಸಹಿತ ಮೂರ್ತಿಯಾದನು,
ಹೊರಗೆ ಆಕಾರವ ಧರಿಸಿ, ಒಳಗೆ ನಿರವಯಕ್ಕೆ ಆರೋಗಣೆಯ ಮಾಡಿಸ[ಲು]
ಇದು ಕಾರಣ ಕೂಡಲಚೆನ್ನಸಂಗಯ್ಯಾ
ಬಸವಣ್ಣ ಮಡಿವಾಳಯೆಂಬೆರಡು ತೋಳ ಧರಿಸಿದೆ./125
ಅನಿಮಿಷಂಗೆ ಲಿಂಗವ ಕೊಟ್ಟಾತ ಬಸವಣ್ಣ.
ಆ ಲಿಂಗ ನಿನಗೆ ಸೇರಿತ್ತಾಗಿ,
ಬಸವಣ್ಣನ ಸಂಪ್ರದಾಯದ ಕಂದನು ನೋಡಾ ನೀನು.
ಭಕ್ತಿದಳದುಳದಿಂದ ಚೆನ್ನಸಂಗಮನಾಥನೆಂಬ ಲಿಂಗವನವಗ್ರಹಿಸಿಕೊಂಡೆನಾಗಿ
ಬಸವಣ್ಣನ ಸಂಪ್ರದಾಯದ ಕಂದನು ನೋಡಾ ನಾನು.
ಇಂತಿಬ್ಬರಿಗೆಯೂ ಒಂದೆ ಕುಲಸ್ಥಲವಾದ ಕಾರಣ,
ಕೂಡಲಚೆನ್ನಸಂಗಯ್ಯನಲ್ಲಿ ಮಹಾಮನೆಯ ಪ್ರಸಾದ
ಬ್ಬರಿಗೆಯೂ ಒಂದೆ ಕಾಣಾ ಪ್ರಭುವೆ./126
ಅನುಭಾವ ಅನುಭಾವವೆಂದೆಂಬರು
ಅನುಭಾವವೆಂಬುದು ನೆಲದ ಮರೆಯ ನಿಧಾನ ಕಾಣಿರೋ
ಅನುಭಾವವೆಂಬುದು ಅಂತರಂಗದ ಶುದ್ಧಿ ಕಾಣಿರೋ.
ಅನುಭಾವವೆಂಬುದು ರಚ್ಚೆಯ ಮಾತೆ ?
ಅನುಭಾವವೆಂಬುದು ಸಂತೆಯ ಸುದ್ದಿಯೆ ?
ಅನುಭಾವವೆಂಬುದೇನು ಬೀದಿಯ ಪಸರವೆ ?
ಏನೆಂಬೆ ಹೇಳಾ ಮಹಾಘನವ !
ಆನೆಯ ಮಾನದೊಳಗಿಕ್ಕಿದರಡಗೂದೆ ದರ್ಪಣದೊಳಗಡಗೂದಲ್ಲದೆ ?
ಕಂಡ ಕಂಡಲ್ಲಿ ಗೋಷ್ಠಿ, ನಿಂದ ನಿಂದಲ್ಲಿ ಅನುಭಾವ,
ಬಂದ ಬಂದಲ್ಲಿ ಪ್ರಸಂಗವ ಮಾಡುವ ನಿಬರ್ುದ್ಧಿ ನೀಚರ ಮೆಚ್ಚ
ಕೂಡಲಚೆನ್ನಸಂಗಮದೇವ. /127
ಅನುಶ್ರುತವ ಮಾಡೆಹೆನೆಂದು ಉಪ್ಪರಗುಡಿಯನೆತ್ತಿ ಮಾಡುವ
ಭಕ್ತನ ಮನೆ, ಅಟ್ಟಿಕ್ಕುವ ಲಂದಣಗಿತ್ತಿಯ ಮನೆ.
ಸರ್ವಜೀವರೊಳಗೆ ಚೈತನ್ಯಾತ್ಮಕ ಶಿವನೆಂದು ಮಾಡುವುದು,
ಭೂತದಯಕಿಕ್ಕುವುದು ಸಯದಾನದ ಕೇಡು.
ಸೂಳೆಯ ಮಗನಾಗಿ ಮಹವನಿಕ್ಕುವಡೆ ತಾಯ ಹೆಸರಾಯಿತ್ತು,
ತಂದೆಯ ಹೆಸರಿಲ್ಲ-ಕೂಡಲಚೆನ್ನಸಂಗಮದೇವಾ. /128
ಅನ್ನ ವಿಕಾರವಳಿದು ಸತಿಸಂಗವರಿಯ ನೋಡಾ.
ದೇಹ ಗುಣಂಗಳಳಿದು ನಿರ್ದೆಹಪ್ರಸಾದಿ ನೋಡಯ್ಯಾ.
ಅಶನ ವ್ಯಸನಾದಿಗಳು ಇರಲಂಜಿ ಹೋದವು ನೋಡಾ !
ಇವೆಲ್ಲ ಗುಣಂಗಳಳಿದು ಕೂಡಲಚೆನ್ನಸಂಗಯ್ಯನಲ್ಲಿ
ಬಸವಣ್ಣನೊಬ್ಬನೆ ಸಾವಧಾನಪ್ರಸಾದಿ ನೋಡಾ/129
ಅನ್ನದಾನವ ಮಾಡಿದಡೇನಹುದು ? ಧರ್ಮವಹುದು.
ಹೊನ್ನದಾನವ ಮಾಡಿದಡೇನಹುದು ? ಶ್ರೀಯಹುದು.
ವಸ್ತ್ರದಾನವ ಮಾಡಿದಡೇನಹುದು ? ಪುಣ್ಯವಹುದು.
ಹೆಣ್ಣುದಾನವ ಮಾಡಿದಡೇನಹುದು ? ಫಲಪದವಹುದು-
ಇಂತೀ ಚತುರ್ವಿಧ ಕರಣಾದಿಗಳು ಶುದ್ಧವಾದರೆ
ಮುಕ್ತಿಯಾಗುವುದು ಕಾಣಾ ಕೂಡಲಚೆನ್ನಸಂಗಮದೇವಾ /130
ಅನ್ನದಾನಿ, ವಸ್ತ್ರದಾನಿ, ಹಿರಣ್ಯದಾನಿಗಳ ಮನೆಯ ಬಾಗಿಲ ಕಾದಿಪ್ಪರಯ್ಯಾ
ಬಹುವಿಧದ ವೇಷಧಾರಿಗಳು.
“ವಯೋವೃದ್ಧಾಸ್ತಪೋವೃದ್ಧಾ ವೇದವೃದ್ಧಾ ಬಹುಶ್ರುತಾಃ
ಸರ್ವೆ ತೇ ದಾನಿವೃದ್ಧಸ್ಯ ದ್ವಾರೇ ತಿಷ್ಠಂತಿ ಕಿಂಕರಾಃ -ಎಂದುದಾಗಿ
ದೈನ್ಯವ ಬಿಟ್ಟಿಪ್ಪ ನಿರಾಭಾರಿಯ ತೋರಿ ಬದುಕಿಸಾ
ಕೂಡಲಚೆನ್ನಸಂಗಮದೇವಾ/131
ಅನ್ನಪಾನ ಐಶ್ವರ್ಯಪಾನ ವೇಶ್ಯಾಪಾನ,
ಅಂಗಭಂಗಿ ಮನಭಂಗಿ ಕಾಮಭಂಗಿ. ತ್ರಿಭಂಗಿ,
ತ್ರಿಸುರೆಯ ಕುಡಿದವರು
ನಿಮ್ಮ ನಿಜವನೆತ್ತಬಲ್ಲರು? ಕೂಡಲಚೆನ್ನಸಂಗಮದೇವಾ. /132
ಅನ್ನವನಿಕ್ಕಿದರೆ ಪುಣ್ಯವಹುದು, ವಸ್ತ್ರವ ಕೊಟ್ಟರೆ ಧರ್ಮವಹುದು,
ಹಣವ ಕೊಟ್ಟರೆ ಶ್ರೀಯಹುದು.
ತ್ರಿಕರಣ ಶುದ್ಧವಾಗಿ ನೆನದರೆ ಮುಕ್ತಿಯಹುದು,
ಕೂಡಲಚೆನ್ನಸಂಗಯ್ಯನ[ಲ್ಲಿ] /133
ಅನ್ಯದೈವವ ಬಿಟ್ಟುದಕ್ಕೆ ಆವುದು ಕ್ರಮವೆಂದರೆ:
ಅನ್ಯದೈವವ ಮನದಲ್ಲಿ ನೆನೆಯಲಾಗದು, ಅನ್ಯದೈವವ ಮಾತನಾಡಲಾಗದು.
ಅನ್ಯದೈವದ ಪೂಜೆಯ ಮಾಡಲಾಗದು.
ಸ್ಥಾವರಲಿಂಗಕ್ಕೆರಗಲಾಗದು.
ಆ ಲಿಂಗ ಪ್ರಸಾದವ ಕೊಳಲೆಂತೂ ಬಾರದು.
ಇಷ್ಟು ನಾಸ್ತಿಯಾದರೆ ಆತ ಅನ್ಯದೈವವ ಬಿಟ್ಟು ಲಿಂಗವಂತನೆನಿಸಿಕೊಂಬನು.
ಇವರೊಳಗೆ ಅನುಸರಣೆಯ ಮಾಡಿಕೊಂಡು
ನಡೆದನಾದೊಡೆ ಅವಂಗೆ ಕುಂಬಿಪಾತಕ
ನಾಯಕನರಕ ತಪ್ಪದು ಕಾಣಾ ಕೂಡಲಚೆನ್ನಸಂಗಯ್ಯ./134
ಅನ್ಯದೈವವುಳ್ಳ ಭಕ್ತನ ಮನೆಯ ಆರೋಗಣೆ ಅನ್ಯಾಹಾರದ ಕೂಳು,
ನಂಬುಗೆಯಿಲ್ಲದ ಭಕ್ತನ ಮನೆಯ ಆರೋಗಣೆ ಸಂದೇಹದ ಕೂಳು,
ಮಾಡಿ, ಹಮ್ಮನುಡಿವ ಭಕ್ತನ ಮನೆಯ ಆರೋಗಣೆ ಕಾರಿದ ಕೂಳು,
ನಿಮ್ಮ ನಂಬಿದ ಸಜ್ಜನ ಭಕ್ತನ ಮನೆಯ ಆರೋಗಣೆ
ಸದಾಚಾರ ಭೃತ್ಯಾಚಾರ ಶಿವಾಚಾರದಿಂದ ಬಂದುದಾಗಿ
ಲಿಂಗಾರ್ಪಿತವಾಯಿತ್ತಯ್ಯಾ ಕೂಡಲಚೆನ್ನಸಂಗಮದೇವಾ./135
ಅನ್ಯಲಿಂಗ ಅನ್ಯಲಿಂಗವೆಂದೆಂಬಿರಿ,
ಅನ್ಯಲಿಂಗವದಾವುದು ? ತನ್ನಲಿಂಗವದಾವುದು ?
ಅಂಗದ ಮೇಲೆ ಲಿಂಗವುಳ್ಳವರ ಮನೆಯ ಹೊಗಿಸಲಾಗದು,
ಬರುಕಾಯರಿಗೆ ನೀಡಲಾಗದು.
ಗುರು ಲಿಂಗ ಜಂಗಮ ಪ್ರಸಾದವಿಲ್ಲದವರ ಕಂಡರೆ ಮಾಡುವಾತ ಭಕ್ತನಲ್ಲ,
ಕೂಡಲಚೆನ್ನಸಂಗಮದೇವಾ./136
ಅಪರವಿಲ್ಲದಂದು, ಪರಬ್ರಹ್ಮವಿಲ್ಲದಂದು
ಆದಿಯಿಲ್ಲದಂದು ಅನಾದಿಯಿಲ್ಲದಂದು
ಸದಾಶಿವನಿಲ್ಲದಂದು ಶಿವನಿಲ್ಲದಂದು
ಆನು ನೀನೆಂಬುದು ತಾನಿಲ್ಲದಂದು
ಕೂಡಲಚೆನ್ನಸಂಗಯ್ಯ ಏನೂ ಎನ್ನದಿರ್ದನಂದು/137
ಅಪ್ಪುವನಪ್ಪಿದ ಆಲಿಕಲ್ಲಿನಂತೆ, ವಾಯುವನಪ್ಪಿದ ಪರಿಮಳದಂತೆ,
ಲಿಂಗವನಪ್ಪಿದ ಶರಣ. ಆತನ ದೇಹಿಯೆನಬಹುದೆ ?
ಅನಲನನಪ್ಪಿದ ಕರ್ಪುರದಂತೆ- ಈ ತ್ರಿವಿಧ ನಿರ್ಣಯ
ಕೂಡಲಚೆನ್ನಸಂಗಾ ನಿಮ್ಮಲ್ಲಿ./138
ಅಭ್ಯಾಸವೆನಗೆ ಭ್ರಾಂತುವಿದ್ದಿತಯ್ಯಾ
ಭಕ್ತಿ ಸಾಧ್ಯವಾಗದಯ್ಯಾ.
ಅಂಗಗುಣಂಗಳ ಬಿಟ್ಟವರಿಗೆ ಶರಣೆಂಬೆ
ಕೂಡಲಚೆನ್ನಸಂಗಯ್ಯಾ./139
ಅಮಲರಪ್ಪವರಾರೆಂದಡೆ;
ಅನಾದಿಮಲ ಸಂಸಾರವೆಂದರಿದು ನಿರ್ಮೊಹಿಗಳಾದವರು.
ಅಕಾಯಚರಿತ್ರರಾರೆಂದಡೆ;
ಸದ್ಗುರುಪಥದಲ್ಲಿ ನಿಂದು, ಆನೆಂಬ ತನುಗುಣವಳಿದವರು.
ಆದಿ-ಅನಾದಿಗಳೆಂಬೆರಡಳಿದವರಾರೆಂದಡೆ
ಶಾಂತಿಸ್ಥಲದಲ್ಲಿ ನಿಂದು ಪರಮಸುಖಿಗಳಾಗಿಪ್ಪವರು.
ದ್ವೈತಾದ್ವೈತವನತಿಗಳೆದವರಾರೆಂದಡೆ,
ತೋರುವ ತೋರಿಕೆ ನಿರ್ಮಲಸ್ವರೂಪರಾದವರು.
ಅವರು ತಾವೆ ನಿಮಗರ್ಪಿತ, ನಿಮ್ಮಾಣೆ,
ಕೂಡಲಚೆನ್ನಸಂಗಮದೇವಾ/140
ಅಮಳಸಿಂಹಾಸನವನಿಕ್ಕಿ ಪದುಮದೋವರಿಯಲ್ಲಿ
ಹದುಳ ಕುಳ್ಳಿರಿಸುವೆನಯ್ಯಾ.
ಜ್ಞಾನ ಜ್ಯೋತಿಯ ಬೆಳಗಿನಲ್ಲಿ ಎಡೆಯಾಡು ಶಿವನೆ !
ರುದ್ರಭೂಮಿಗೆ ಎಡೆಯಾಡದಿರು ಹರನೆ !
ಹಡೆದ ತಾಯಿ ತಂದೆ ಮುನ್ನಿಲ್ಲ,
ಹುಟ್ಟದ ಶಿಶು, ಮೂಲ ಕಡುದೇಶಿಗನಯ್ಯಾ,
ನಮ್ಮ ಕೂಡಲಚೆನ್ನಸಂಗಮದೇವ. /141
ಅಮಳೋಕ್ಯದಲ್ಲಿ ಲಿಂಗವ ಧರಿಸುವರೆ
ಅನ್ನ ಪಾನಾದಿಗಳ ಹಂಗಳಿಯಬೇಕು,
ಅಹಂಕಾರ ಮದಂಗಳಳಿಯಬೇಕು, ಜ್ಞಾನ ವಿಸ್ತಾರ ಪರಿಪೂರ್ಣನಾಗಿರಬೇಕು,
ಅನುಭಾವ ಘನಮನವೇದ್ಯನಾಗಬೇಕು, ಕಾಮದ ಕಣ್ಣರಿಯದಿರಬೇಕು,
ಶಬ್ದ ನಿಶ್ಶಬ್ಧವಾಗಬೇಕು, ಮಹದಾಶ್ರಯದಲ್ಲಿ ಮನವು ಲೀಯವಾಗಬೇಕು.
ಕೂಡಲಚೆನ್ನಸಂಗನಲ್ಲಿ ಏಕಾರ್ಥವಾಗಿರಬೇಕು /142
‘ಅಯ್ಯಾ ಅಯ್ಯಾ ಎಂದಡೆ ಅಯ್ಯ `ಓ ಎಂಬುದ ಮಾಣ್ಬನೆ ?
‘ಅವ್ವಾ ಅವ್ವಾ ಎಂದಡೆ ಅವ್ವೆ `ಓ’ ಎಂಬುದ ಮಾಣ್ಬಳೆ ?-
ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ
`ಬಸವಲಿಂಗಾ ಬಸವಲಿಂಗಾ ಬಸವಲಿಂಗಾ ಎಂದಡೆ
ಎನ್ನ ಕಾಯ ಬಯಲಾಗದೆ ?/143
ಅಯ್ಯಾ ಎನಗೆ ವಿಭೂತಿಯೆ ಕುಲದೈವ;
ಅಯ್ಯಾ ಎನಗೆ ವಿಭೂತಿಯೆ ಮನೆದೈವ;
ಅಯ್ಯಾ ಎನಗೆ ವಿಭೂತಿಯೆ ಸರ್ವಕಾರಣ;
ಅಯ್ಯಾ ಎನಗೆ ವಿಭೂತಿಯೆ ಸರ್ವಸಿದ್ಧಿ;
ಅಯ್ಯಾ ಎನಗೆ ವಿಭೂತಿಯೆ ಸರ್ವವಶ್ಯ;
ಅಯ್ಯಾ ಕೂಡಲಚೆನ್ನಸಂಗಮದೇವಾ
ಶ್ರೀಮಹಾಭೂತಿಯೆಂಬ ಪರಂಜ್ಯೋತಿ ನೀವಾದಿರಾಗಿ,
ಎನಗೆ ವಿಭೂತಿಯೆ ಸರ್ವಸಾಧನ/144
ಅಯ್ಯಾ ತನುಶುದ್ಧನಾಗಿ ಇಷ್ಟಲಿಂಗವ ಪೂಜಿಸಬೇಕು.
ಮನಶುದ್ಧನಾಗಿ ಪ್ರಾಣಲಿಂಗವ ಧ್ಯಾನಿಸಬೇಕು.
ಭಾವಶುದ್ಧನಾಗಿ ಭಾವಲಿಂಗ ಭಾವಿಸಬೇಕು.
ಇಂತೀ ತ್ರಿವಿಧವನರಿಯದೆ;
`ಲಿಂಗದೇಹಿ ಸದಾ ಶುಚಿಃ’ ಎಂಬೊಂದು ವಾಕ್ಯವನೆ ಮುಂದುಮಾಡಿ
`ಕ್ರಿಯಾದ್ವೈತಂ ನ ಕರ್ತವ್ಯಂ’ ಎಂಬ ವಾಕ್ಯವ ಮರೆಯಾಚಿ,
ಸ್ನಾನಪೂಜಾದಿ ಸತ್ಕ್ರಿಯಾಸಂಪನ್ನನಾಗದೆ
ಶಮದಮಾದಿ ಸದ್ಗುಣಸಂಪತ್ತಿಯ ಪಡೆಯದೆ,
ನಿತ್ಯನಿರ್ಮಲತ್ವ ನೆಲೆಯಾಗದೆ,
ಆನು ಶುದ್ಧನಾದೆನೆಂಬ ಕ್ರಿಯಾದ್ವೈತಿಯಾದ ಪಾತಕನ
ನಾಯಕನರಕದಲ್ಲಿಕ್ಕುವ ನಮ್ಮ ಕೂಡಲಚೆನ್ನಸಂಗಮದೇವ./145
ಅಯ್ಯಾ ನಿಮ್ಮ ನಿಜಾಚರಣೆಯ ನಿಲುಕಡೆಯ
ಭವಪಾಶಪ್ರಾಣಿಗಳೆತ್ತ ಬಲ್ಲರಯ್ಯಾ ?
ಅದೆಂತೆಂದಡೆ, ಲೋಕದಲ್ಲಿ ದೃಷ್ಟವುಂಟು.
ಅಯ್ಯಾ ಕುರಿ ಬಲ್ಲುದೆ ರಸದಾಳಿ ಕಬ್ಬಿನ ಸ್ವಾದವ ?
ಶುನಿ ಬಲ್ಲುದೆ ಕಲ್ಪವೃಕ್ಷವ ? ದಂಷ್ಟ್ರಿ ಬಲ್ಲುದೆ ಕಾಮಧೇನುವ ?
ಗಾರ್ದಭ ಬಲ್ಲುದೆ ಚಿಂತಾಮಣಿಯ ? ನರಿ ಬಲ್ಲುದೆ ಗಜಭದ್ರವ ?
ಕಾಗೆ ಬಲ್ಲುದೆ ಪರಮಾಮೃತವ ?
ಅಂಧಕ ಬಲ್ಲನೆ ಕನ್ನಡಿ ಬಿಂಬ ಮೊದಲಾಗಿ ಅನಂತ ಚಿತ್ರವಿಚಿತ್ರಂಗಳ ?
ಬದಿರ ಬಲ್ಲನೆ ಪ್ರಣವೋಂ ನಾದ ಮೊದಲಾದ ದಶನಾದಗಳ ?
ಷಂಡ ಬಲ್ಲನೆ ರತಿಸಂಯೋಗವ ?
ತೊತ್ತು ಬಲ್ಲಳೆ ರಾಜಭೋಗವ ? ಹೇಡಿ ಬಲ್ಲನೆ ರಣದಿರತ್ವವ ?
ದರಿದ್ರ ಬಲ್ಲನೆ ನವರತ್ನಂಗಳ ?
ಬೆಸ್ತ ಬಲ್ಲನೆ ಅಂದ? ಮೊದಲಾದ ಅಷ್ಟಭೋಗಂಗಳ ?
ಮೂಢ ಬಲ್ಲನೆ ಶಿವಕವಿತ್ವವ ? ಕಾಮಿ ಬಲ್ಲನೆ ಶಿವಯೋಗದ ಸುಖವ ?
ರೋಗಿ ಬಲ್ಲನೆ ರಂಭಾರಸವ ? ಗೂಗಿ ಬಲ್ಲುದೆ ಚಿತ್ಸೂರ್ಯನ ಬೆಳಗ ?
ಇಂತೆಂದುದಾಗಿ, ಲೋಕದ ದೃಷ್ಟದಂತೆ,
ಹೊನ್ನು ಹೆಣ್ಣು ಮಣ್ಣು ಅನ್ನ ನೀರು ವಸ್ತ್ರ ಆಭರಣ ವಾಹನವೆಂಬ
ಅಷ್ಟಮಲಂಗಳಲ್ಲಿ, ಅಷ್ಟಕಾಮವಿಕಾರದಿಂದ,
ಮಾಯಾಪಾಶಬದ್ಧಮಲದಲ್ಲಿ ಬಿದ್ದು ತೊಳಲುವ ಜಡಜೀವಿಗಳೆತ್ತ ಬಲ್ಲರಯ್ಯ
ನಿಮ್ಮ ಸರ್ವಾಚಾರಸಂಪತ್ತಿನಾಚರಣೆಯ ?
ನಿಜಸುಖದ ರಾಜಾದಿರಾಜ ಶಿವಯೋಗದ ನಿಲುಕಡೆಯ
ಕೂಡಲಚೆನ್ನಸಂಗಮದೇವಾ ?/146
ಅಯ್ಯಾ ನಿಮ್ಮ ಭಕ್ತರಲ್ಲಿ ಹೊಲೆಸೂತಕವ ಕಲ್ಪಿಸುವಾತನೆ ಗುರುದ್ರೋಹಿ
ಜಂಗಮದಲ್ಲಿ ಜಾತಿಸೂತಕವನರಸುವಾತನೆ ಲಿಂಗದ್ರೋಹಿ
ಪ್ರಸಾದದಲ್ಲಿ ಎಂಜಲಸೂತಕವ ಭಾವಿಸುವಾತನೆ ಜಂಗಮದ್ರೋಹಿ
ಪಾದೋದಕದಲ್ಲಿ ಸಂಕಲ್ಪಸೂತಕವ ನೆನೆವಾತನೆ ಪ್ರಸಾದದ್ರೋಹಿ
ಈ ಚತುರ್ವಿಧದಲ್ಲಿ ಭಯ ಭಕ್ತಿ ನಿಷ್ಠೆ ಪ್ರೀತಿ ಪ್ರೇಮ ವಿಶ್ವಾಸವುಳ್ಳಾತನೆ ಭಕ್ತನು.
ಈ ಚತುರ್ವಿಧದಲ್ಲಿ ಛಲ ನಿಷ್ಠೆ ದೃಢತರವಾದಾತನೆ ಮಾಹೇಶ್ವರನು
ಈ ಚತುರ್ವಿಧದಲ್ಲಿ ನಿಜಾವಧಾನವುಳ್ಳಾತನೆ ಪ್ರಸಾದಿ
ಈ ಚತುರ್ವಿಧದಲ್ಲಿ ತದ್ಗತಾನುಭಾವವುಳ್ಳಾತನೆ ಪ್ರಾಣಲಿಂಗಿ
ಈ ಚತುರ್ವಿಧದಲ್ಲಿ ನಿರ್ಣಯಾನಂದವುಳ್ಳಾತನೆ ಶರಣ
ಈ ಚತುರ್ವಿಧದಲ್ಲಿ ಸ್ಥಿರೀಕರಿಸಿ ಸಂದಳಿದೊಂದಾಗಿ ಕೂಡಿದಾತನೆ ಲಿಂಗೈಕ್ಯನು
ಈ ಚತುರ್ವಿಧದೊಳಗಡಗಿತು ಷಟ್ಸ್ಥಲವು.
ಆತಂಗೆ ಸರ್ವವೂ ಸಾಧ್ಯವಹುದು.
ಆತ ಲಿಂಗದೇಹಿ ಲಿಂಗಪ್ರಾಣಿ ಲಿಂಗಕಾಯನು.
ಆತ ನಡೆಯಿತ್ತೇ ಬಟ್ಟೆ, ಆತ ನುಡಿದುದೇ ಶಿವಮಂತ್ರ,
ಆತನಿರ್ದುದೇ ಶಿವಕ್ಷೇತ್ರ, ಆತ ನಿರ್ದೊಷಿ, ಕೂಡಲಚೆನ್ನಸಂಗಯ್ಯನಲ್ಲಿ
ಆತನೆ ಸರ್ವಾಂಗಲಿಂಗಿ./147
ಅಯ್ಯಾ ನಿಮ್ಮ ಶರಣನು ಮೂರ್ತನಲ್ಲ ಅಮೂರ್ತನಲ್ಲ.
ಲಿಂಗದಲ್ಲಿ ಪ್ರಾಣಸಂಚಿತ, ಪ್ರಾಣದಲ್ಲಿ ಪ್ರಸಾದ ಸಂವರಣೆ,
ಪ್ರಸಾದದಲ್ಲಿ ಕಾಯಾಶ್ರಿತನು.
ಲೋಕ ಲೌಕಿಕದ ಪ್ರಕಾರದುದಯನಲ್ಲ,
ಕೂಡಲಚೆನ್ನಸಂಗಾ ನಿಮ್ಮ ಶರಣ/148
ಅಯ್ಯಾ ಪಾದಪೂಜೆಯೆಂಬುದು ಅಗಮ್ಯ ಅಗೋಚರ ಅಪ್ರಮಾಣ ಅಸಾಧ್ಯ.
ಶ್ರೀಗುರು ಬಸವೇಶ್ವರದೇವರು ತಮ್ಮ ಅಂತರಂಗದೊಳಗಣ
ಪಾದಪೂಜೆಯಿಂದಾದ ತೀರ್ಥಪ್ರಸಾದವ
`ಗಣಸಮೂಹಕ್ಕೆ ಸಲ್ಲಲಿ’ ಎಂದು ನಿರ್ಮಿಸಿ, ಭಕ್ತಿಯ ತೊಟ್ಟು ಮೆರೆದರು.
ಇಂತಪ್ಪ ತೀರ್ಥಪ್ರಸಾದವ ಸೇವಿಸುವ ಕ್ರಮವೆಂತೆಂದಡೆ;
ಗ್ರಾಮಸೇವಾದಿಸಂರಂಭನೃತ್ಯಗೀತಾದಿ ವರ್ಜಿತಃ
ಅನಾಚಾರವಿಹೀನೋ ಯೋ ತಸ್ಯ ತೀರ್ಥಂ ಪಿಬೇತ್ ಸದಾ ಇಂತೆಂದುದಾಗಿ,
ತಂಬೂರಿ ಕಿನ್ನರಿವಿಡಿದು ಮನೆಮನೆಯ ಬೇಡುವಾತ
ಹಲವು ವೇಷವ ತೊಟ್ಟು ಆಡುವಾತ,
ನಗಾರಿ ಸಮ್ಮೇಳ ಕರಣೆ ಕಹಳೆ ಶಂಖ ಬಾರಿಸುವಾತ
ಅಷ್ಟಾವರಣ ಪಂಚಾಚಾರದಲ್ಲಿ ಅಹಂಕರಿಸುವಾತ ಅನಾಚಾರಿ.
ಪರ್ವತದ ಕಂಬಿ ಮಹಾಧ್ವಜವ ಹೊರುವಾತ
ರಾಜಾರ್ಥದಲ್ಲಿ ಅಹುದ ಅಲ್ಲವ ಮಾಡಿ, ಅಲ್ಲವ ಅಹುದ ಮಾಡುವಾತ
ಅನಾಚಾರವ ಹೇಳುವಾತ ಸದಾಚಾರದಲ್ಲಿ ತಪ್ಪುವಾತ
ಭಕ್ತಗಣಂಗಳ ನಿಂದೆಯ ಮಾಡುವಾತ
ಸದಾಚಾರಸದ್ಭಕ್ತಗಣಂಗಳ ಕಂಡಡೆ ಗರ್ವಿಸುವಾತ
ಧಾನ್ಯ ಅರಿವೆ ಬೆಳ್ಳಿ ಬಂಗಾರಂಗಳ ಕ್ರಯವಿಕ್ರಯದಲ್ಲಿ ವಂಚಿಸುವಾತ
ಗುರುಹಿರಿಯರಲ್ಲಿ ಹಾಸ್ಯರಹಸ್ಯವ ಮಾಡುವಾತ
ಪರದೈವ ಪರಧನ ಪರಸ್ತ್ರೀ ಗಮಿಸುವಾತ
ಸೂಳೆ ಬಸವಿಯರ ಗೃಹದಲ್ಲಿ ಇರುವಾತ
ಆಚಾರಭ್ರಷ್ಟ ಮಾನಹೀನರ ಸಂಗವ ಮಾಡುವಾತ, ದುರುಳು ಮಂಕು.
ಅವರ ಗುರುಲಿಂಗಜಂಗಮವೆಂದು ನುಡಿಯಲಾಗದು.
ಅದೆಂತೆಂದಡೆ :
ಖೇಟಕೋ ದಂಡಚಕ್ರಾಸಿಗದಾತೋಮರಧಾರಿಣಃ
ಜಂಗಮಾ ನಾನುಮಂತವ್ಯಾಃ ಸ್ವೀಯಲಕ್ಷಣಸಂಯುತಾಃ
ಆಶಾತೋ ವೇಷಧಾರೀ ಚ ವೇಷಸ್ಯ ಗ್ರಾಸತೋಷಕಃ
ಗ್ರಾಸಶ್ಚ ದೋಷವಾಹೀ ಚ ಇತಿ ಭೇದೋ ವರಾನನೇ
ಅನಾಚಾರವಿಭಾವೇನ ಸದಾಚಾರಂ ನ ವರ್ಜಯೇತ್
ಸದಾಚಾರೀ ಸುಭಕ್ತಾನಾಂ ಪಾದತೀರ್ಥಪ್ರಸಾದಕಃ
ಮಹಾಭೋಗಿ ಮಹಾತ್ಯಾಗೀ ಲೋಲುಪೋ ವಿಷಯಾತುರಃ
ಯಸ್ತ್ವಂಗವಿಹೀನಃ ಸ್ಯಾತ್ತಸ್ಯ (ಪಾದ) ತೀರ್ಥಂ[ನ]ಸೇವಯೇತ್
ಕುಷ್ಠೀ ಕರಣಹೀನಶ್ಚ ಬದಿರಃ ಕಲಹಪ್ರಿಯಃ
ವ್ಯಾದಿಬಿಸ್ತ್ವಂಗಹೀನೈಶ್ಚತೈರ್ನ ವಾಸಂ ಚ ಕಾರಯೇತ್
ಇಂತೀ ದುರ್ಮಾರ್ಗ ನಡತೆಗಳಿಲ್ಲದೆ,
ಅಯೋಗ್ಯವಾದ ಜಂಗಮವನುಳಿದು, ಯೋಗ್ಯಜಂಗಮವ ವಿಚಾರಿಸಿ
ತನು ಮನ ಧನ ವಂಚನೆಯಿಲ್ಲದೆ ಸಮರ್ಪಿಸಿ
ಅವರ ತೀರ್ಥಪ್ರಸಾದವ ಕೈಕೊಳ್ಳಬೇಕಲ್ಲದೆ
ದುರ್ಮಾರ್ಗದಲ್ಲಿ ಆಚರಿಸುವಾತನಲ್ಲಿ ತ್ರಿಣೇತ್ರವಿದ್ದಡೆಯೂ
ತೀರ್ಥಪ್ರಸಾದ ಉಪದೇಶವ ಕೊಳಲಾಗದು ಕಾಣಾ.
ಕೂಡಲಚೆನ್ನಸಂಗಮದೇವ ಸಾಕ್ಷಿಯಾಗಿ
ಗುರುವಚನವ ತಿಳಿದು ನೋಡಾ ಸಂಗನಬಸವಣ್ಣಾ. /149
ಅಯ್ಯಾ, (ಆಯತ) ಲಿಂಗದಲ್ಲಿ ಆಗಾಗಿ ಆಚಾರಲಿಂಗಪ್ರಾಣಿಯಾದ,
ಆಚಾರಲಿಂಗದಲ್ಲಿ ಅವಧಾನಿಯಾಗಿ ಸರ್ವಾಚಾರಸಂಪನ್ನನಾದ,
ಸರ್ವಾಚಾರಸಂಪತ್ತಿನಲ್ಲಿ ಲಿಂಗೈಕ್ಯವಾಗಿಪ್ಪನು.
ಕೂಡಲಚೆನ್ನಸಂಗನಲ್ಲಿ
ಸಂಗನಬಸವಣ್ಣನು ಆಚಾರವ ಬಲ್ಲನಲ್ಲದೆ
ನಾನೆತ್ತ ಬಲ್ಲೆನಯ್ಯಾ ಪ್ರಭುವೆ ?/150
ಅಯ್ಯಾ, ಅನಾದಿ ವಸ್ತುವೆ ಗುರು-ಶಿಷ್ಯ,
ಭಕ್ತ-ಜಂಗಮ, ಗುರು-ಲಿಂಗ,
ಶರಣಸತಿ-ಲಿಂಗಪತಿ- ಎಂಬ ಸಾಕಾರಲೀಲೆಯ ಧರಿಸಿ
ಅವಿರಳಾನಂದ ನಿಜ ವೇಧಾ-ಮಂತ್ರ-ಕ್ರಿಯಾದೀಕ್ಷಾಯುಕ್ತವಾದ
ಮೂರೇಳು ಇಪ್ಪತ್ತೊಂದು ದೀಕ್ಷೆಯ
ಬಿನ್ನವಿಲ್ಲದೆ ಸದ್ಗುರುಮುಖದಿಂದ ಅರಿದಾನಂದಿಸ ಬಲ್ಲಡೆ;
ಸಹಜ ದೀಕ್ಷೆಯುಳ್ಳ ಶ್ರೀಗುರುಲಿಂಗಜಂಗಮ,
ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ
ನಿರವಯಮೂರ್ತಿಯೆಂಬೆನಯ್ಯಾ ಕೂಡಲಚೆನ್ನಸಂಗಮನಲ್ಲಿ./151
ಅಯ್ಯಾ, ಆದಿಸೃಷ್ಟಿಯಿಂದ ಇಂದು ಪರ್ಯಂತವೂ
ನಾನಾ ಯೋನಿಯಲ್ಲಿ ಹುಟ್ಟಿ ಹುಟ್ಟಿ ಬಳಲಿ ಬಾಯಾರಿದವಂಗೆ
ಅಂಧ ಟಿಟ್ಟಿಭ ನ್ಯಾಯದಂತೆ
ಅಕಸ್ಮಾತ್ ಅರಿವುಳ್ಳ ನರಜನ್ಮವು ದೊರೆವುದೆ ದುರ್ಲಭ
ಅದರಲ್ಲಿಯೂ ಶೈವಕುಲದಲ್ಲಿ ಜನ್ಮವೆತ್ತಿರ್ಪುದು ಅತಿ ದುರ್ಲಭ.
ಅದಕ್ಕಿಂತಲೂ ವೀರಶೈವವಂಶದಲ್ಲಿ ಜನಿಸಿಹುದು
ಅತ್ಯಂತ ದುರ್ಲಭವಾಗಿರ್ಪುದು ಕಾಣಾ.
ಕಿಮಸ್ತಿ ಬಹುನೋಕ್ತೇನ ಮಾನುಷಂ ಜನ್ಮ ದುರ್ಲಭಂ
ತತ್ರಾಪಿ ದುರ್ಲಭಂ ಜನ್ಮ ಕುಲೇ ಶೈವಸ್ಯ ಕಸ್ಯಚಿತ್
ವೀರಶೈವಾನ್ವಯೇ ಜನ್ಮ ಪರಮಂ ದುರ್ಲಭಂ ಸ್ಮೃತಂ-ಎಂದುದಾಗಿ
ಸಕಲ ಪ್ರಾಣಿಗಳಲ್ಲಿ ವೀರಶೈವನೆ ಸವರ್ೊತ್ತಮನಯ್ಯಾ
ಕೂಡಲಚೆನ್ನಸಂಗಮದೇವಾ./152
ಅಯ್ಯಾ, ಕರ್ಮದಾಗರವ ಹೊಕ್ಕು,
ವಿಷಯದ ಬಲೆಯಲ್ಲಿ ಸಿಲುಕಿ,
ದೇಹಮೋಹವೆಂಬ ಮಹಾದುಃಖಕ್ಕೀಡಾಗಿ ಸಾವುತ್ತಿದ್ದೇನೆ, ಬೇವುತ್ತಿದ್ದೇನೆ.
ಅಯ್ಯಾ ತಪ್ಪೆನ್ನದು ತಪ್ಪೆನ್ನದು
ಈ ಮೊರೆಯ ವಿಚಾರಿಸಿ ಕಾರುಣ್ಯವ ಮಾಡು, ಕಾರುಣ್ಯವ ಮಾಡು.
ಅಯ್ಯಾ ಆಳಿನಪಮಾನ ಆಳ್ದಂಗೆಂಬಂತೆ,
ಎನ್ನಳಲು ನಿಮಗೆ ತಪ್ಪದು.
ಕಾರುಣ್ಯವ ಮಾಡು, ಅಯ್ಯಾ ಕಾರುಣ್ಯವ ಮಾಡು,
ಕೂಡಲಚೆನ್ನಸಂಗಮದೇವಾ. /153
ಅಯ್ಯಾ, ಕ್ರಿಯಾವಿಭೂತಿಯ ಧರಿಸಿದ ಭಕ್ತನು
ಚಿದ್ರುದ್ರಾಕ್ಷಿಯ ಧರಿಸಿ ಮಂತ್ರಧ್ಯಾನವ ಮಾಡಬೇಕಾದ ನಿಮಿತ್ತ,
ಪ್ರಥಮದಲ್ಲಿ ರುದ್ರಾಕ್ಷಿಮಣಿಗಳ ಕ್ರಮವ ಮಾಡದೆ,
ಅವರು ಹೇಳಿದಂತೆ ಕ್ರಯವ ಕೊಟ್ಟು ಮುಖಬಿನ್ನವಾದುದನುಳಿದು,
ಸ್ವಚ್ಛವಾದ ರುದ್ರಾಕ್ಷಿಗಳ ಶ್ರೀಗುರುಲಿಂಗಜಂಗಮದ ಸನ್ನಿದಿಗೆ ತಂದು
ವೃತ್ತಸ್ಥಾನದ ಪರಿಯಂತರವು ಧೂಳಪಾದೋದಕವ ಮಾಡಿ,
ಆ ರುದ್ರಾಕ್ಷಿಯ ಪೂರ್ವಾಶ್ರಯವ ಕಳೆದು,
ಲಿಂಗಧಾರಕಭಕ್ತರಿಂದ ಗುರುಪಾದೋದಕ ಮೊದಲಾಗಿ
ಶಿವಪಂಚಾಮೃತದಿಂದ ಇಪ್ಪತ್ತೊಂದು ಪೂಜೆಯ ಮಾಡಿಸಿ
ಆಮೇಲೆ ಶ್ರೀಗುರುಲಿಂಗಜಂಗಮದ ಪಾದಪೂಜೆಗೆ ಧರಿಸಿ,
ಆಮೇಲೆ ಲಿಂಗಜಂಗಮಕ್ಕೆ ಸಮರ್ಪಿಸಿ,
ಅವರಿಂದ ದಯಚಿತ್ತವ ಪಡೆದು,
ಶರಣುಹೊಕ್ಕು ಮಹಾಪ್ರಸಾದವೆಂದು ಬೆಸಗೊಂಡು,
ಆ ಕರುಣಾಕಟಾಕ್ಷ ಮಾಲೆಗಳ ಬಿನ್ನವಿಟ್ಟು ಅರ್ಚಿಸದೆ,
ಅಬಿನ್ನಸ್ವರೂಪು ಮುಂದುಗೊಂಡು ಬಹುಸುಯಿಧಾನದಿಂದ
ತನ್ನ ತೊಡೆಯ ಮೇಲೆ ಮೂರ್ತವ ಮಾಡಿಕೊಂಡು,
ತನ್ನ ಜ್ಞಾನಪ್ರಕಾಶವೆಂದು ಭಾವಿಸಿ ತನ್ನ ತಾನರ್ಚಿಸಿ,
ಮಂತ್ರಧ್ಯಾನಾರೂಢನಾಗಿ ತತ್ತತ್ ಸ್ಥಾನದಲ್ಲಿ ಧರಿಸುವುದಯ್ಯಾ.
ಇಂತು ವಿಭೂತಿ ರುದ್ರಾಕ್ಷಿಯ ಧರಿಸಿ ಲಿಂಗನಿಷ್ಠಾಪರನಾದ ಭಕ್ತನು
ಸ್ಥಲಮೆಟ್ಟಿಗೆಯಿಂದ ಆಯಾಯ ಮಂತ್ರವ ಹೇಳುವುದಯ್ಯಾ.
ಅದರ ವಿಚಾರವೆಂತೆಂದಡೆ:
ಕ್ರಿಯಾದೀಕ್ಷಾಯುಕ್ತನಾದ ಉಪಾದಿಭಕ್ತಂಗೆ
ಗುರುಮಂತ್ರವ ಹೇಳುವುದಯ್ಯಾ.
ಕ್ರಿಯಾದೀಕ್ಷೆಯ ಪಡೆದು ಗುರುಲಿಂಗಜಂಗಮದಲ್ಲಿ
ಅರ್ಥಪ್ರಾಣಾಬಿಮಾನಂಗ? ನಿರ್ವಂಚಕತ್ವದಿಂದ ಸಮರ್ಪಿಸಿ
ನಡೆನುಡಿ ಸಂಪನ್ನನಾದ ನಿರುಪಾದಿಭಕ್ತಂಗೆ
ಲಿಂಗಮಂತ್ರವ ಹೇ?ುವುದಯ್ಯಾ
ಇವರಿಬ್ಬರ ಆಚರಣೆಯ ಪಡೆದು ಸಮಸ್ತ ಭೋಗಾದಿಗಳು ನೀಗಿಸಿ
ಸಚ್ಚಿದಾನಂದನಾದ ಸಹಜಭಕ್ತಂಗೆ
ಜಂಗಮಮಂತ್ರವ ಹೇ?ುವುದಯ್ಯಾ.
ಆ ಮಂತ್ರಂಗಳಾವುವೆಂದಡೆ:
ಶಕ್ತಿಪ್ರಣವ ಹನ್ನೆರಡು ಗುರುಮಂತ್ರವೆನಿಸುವುದಯ್ಯಾ,
ಶಿವಪ್ರಣವ ಹನ್ನೆರಡು ಲಿಂಗಮಂತ್ರವೆನಿಸುವುದಯ್ಯಾ,
ಶಿವಶಕ್ತಿರಹಿತವಾದ ಹನ್ನೆರಡು ಜಂಗಮಮಂತ್ರವೆನಿಸುವುದಯ್ಯಾ.
ಇಂತು ವಿಚಾರದಿಂದ ಉಪಾದಿ ನಿರುಪಾದಿ
ಸಹಜಭಕ್ತ ಮಹೇಶ್ವರರಾಚರಿಸುವುದಯ್ಯಾ.
ಇನ್ನು ನಿರಾಭಾರಿ ವೀರಶೈವನಿರ್ವಾಣ ಸದ್ಭಕ್ತಜಂಗಮಗಣಂಗಳು
ಶುದ್ಧಪ್ರಸಾದಪ್ರಣವ ಹನ್ನೆರಡು,
ಸಿದ್ಧಪ್ರಸಾದಪ್ರಣವ ಹನ್ನೆರಡು,
ಪ್ರಸಿದ್ಧಪ್ರಸಾದಪ್ರಣವ ಹನ್ನೆರಡು,
ಇಂತು ವಿಚಾರದಿಂದ ಮೂವತ್ತಾರು ಪ್ರಣವವನೊಡಗೂಡಿ,
ಶುದ್ಧಪ್ರಸಾದಪ್ರಣವ ಆಚಾರಲಿಂಗ ಗುರುಲಿಂಗ ಇಷ್ಟಲಿಂಗ ಪರಿಯಂತರ
ತ್ರಿವಿಧ ಲಿಂಗಕ್ಕೆಂದು ಮಾಡುವುದಯ್ಯಾ.
ಸಿದ್ಧಪ್ರಸಾದಪ್ರಣವ ಶಿವಲಿಂಗ ಜಂಗಮಲಿಂಗ ಪ್ರಾಣಲಿಂಗ ಪರಿಯಂತರ
ತ್ರಿವಿಧಲಿಂಗಕ್ಕೆಂದು ಮಾಡುವುದಯ್ಯಾ.
ಪ್ರಸಿದ್ಧಪ್ರಸಾದಪ್ರಣವ ಪ್ರಸಾದಲಿಂಗ ಮಹಾಲಿಂಗ ಭಾವಲಿಂಗ ಪರಿಯಂತರ
ತ್ರಿವಿಧಲಿಂಗಕ್ಕೆಂದು ಮಾಡುವುದಯ್ಯಾ.
ಹೀಗೆ ಹರುಕಿಲ್ಲದೆ ಸ್ಥಲಮೆಟ್ಟಿಗೆಯಿಂದ
ಕರುಣಿಸಿದ ಗುರುವಿಂಗೆ ಬೆಸಗೊಂಡ ಶಿಷ್ಯೋತ್ತಮಂಗೆ.
ಆಯಾಯ ಲಿಂಗಪ್ರಸಾದ ಒದಗುವುದೆಂದಾಂತ
ನಮ್ಮ ಕೂಡಲಚೆನ್ನಸಂಗಮದೇವ/154
ಅಯ್ಯಾ, ಗುರುಲಿಂಗಜಂಗಮ ಕರುಣಕಟಾಕ್ಷದಿಂದ
ಚಿದ್ವಿಭೂತಿ ರುದ್ರಾಕ್ಷಿ ಚಿನ್ಮಂತ್ರಗಳ
ಗುರುವಚನ ಪ್ರಮಾಣದಿಂದ ನಿರಂತರವು ಆಚರಿಸಿ,
ಚಿದ್ಘನ ಇಷ್ಟ ಮಹಾಲಿಂಗವ ಉರಸ್ಥಲದಲ್ಲಿ ಧರಿಸಬೇಕಾದಡೆ,
ದಾರದಿಂದ ಹುಟ್ಟಿದ ಸಜ್ಜೆಯ ಕರಕಮಲವಟುವ
ನೂಲಕಾಯಿ, ಬಿಲ್ವಕಾಯಿ, ಗಂಧದ ಮನೆ, ನಾರಂಗದ ಕಾಯಿ,
ರಜತ, ಹೇಮ, ತಾಮ್ರ, ಹಿತ್ತಾಳೆ, ಮೃತ್ತಿಕೆ ಮೊದಲಾದ
ಆವುದು ತನಗೆ ಯೋಗ್ಯವಾಗಿ ಬಂದ
ಚಿದ್ಘನಲಿಂಗದೇವಂಗೆ ಪರಿಣಾಮ ಕಟ್ಟುವಂತೆ,
ಮೂವತ್ತಾರೆಳೆಯ ದಾರವಾದಡೆಯೂ ಸರಿಯೆ,
ನಾಲ್ವತ್ತೆರಡೆಳೆಯ ದಾರವಾದಡೆಯೂ ಸರಿಯೆ,
ಐವತ್ತಾರೆಳೆಯಾದಡೆಯೂ ಸರಿಯೆ,
ಅರುವತ್ತುಮೂರಾದಡೆಯೂ ಸರಿಯೆ,
ನೂರೆಂಟು ಇನ್ನೂರ ಹದಿನಾರು, ಮುನ್ನೂರರುವತ್ತು ಎಳೆ ಮೊದಲಾಗಿ
ಲಿಂಗಾಣತಿಯಿಂದ ಒದಗಿ ಬಂದಂತೆ
ಶಿವಲಾಂಛನಸಂಯುಕ್ತದಿಂದ ದಾರವ ಕೂಡಿ
ಜ್ಞಾನಕ್ರಿಯಾಯುಕ್ತವಾದ ಎರಡೆಳೆಯಾದಡೆಯೂ ಸರಿಯೆ,
ಪರಿಪೂರ್ಣ ಅವಿರಳ ಪರಂಜ್ಯೋತಿ ಎಂಬ ಮಹಾಜ್ಞಾನಸೂತ್ರಯುಕ್ತವಾದ
ಮೂರೆಳೆಯಾದಡೆಯೂ ಸರಿಯೆ.
ಸತ್ತು ಚಿತ್ತು ಆನಂದ ನಿತ್ಯವೆಂಬ ಸ್ವಾನುಭಾವ ಸೂತ್ರಯುಕ್ತವಾದ
ನಾಲ್ಕೆಳೆಯಾದಡೆಯೂ ಸರಿಯೆ.
ಆ ಲಿಂಗಗೃಹಂಗಳಿಗೆ ಮಂತ್ರಧ್ಯಾನದಿಂದ ಸೂತ್ರವ ರಚಿಸಿ
ಲಾಂಛನಯುಕ್ತವಾದ ಪಾವಡ ಯಾವುದಾದಡೆಯೂ ಸರಿಯೆ,
ಗುರುಪಾದೋದಕದಲ್ಲಿ ತೊಳೆದು ಮಡಿಕೆಯ ಮಾಡಿ,
ಬೆಳ್ಳಿ ಬಂಗಾರ ತಾಮ್ರ ಹಿತ್ತಾಳೆ ಕರತಾಳವೋಲೆ ಮೊದಲಾಗಿ ತಗಡ ಮಾಡಿ.
ಪ್ರಮಾಣಯುಕ್ತವಾಗಿ ಪಾವಡವ ಮಡಿಚಿ ಹುದುಗಿ,
ಪೂರ್ವ ಗಳಿಗೆಯಲ್ಲಿ ತ್ರಿವಿಧಪ್ರಣವ, ಪಶ್ಚಿಮ ಗಳಿಗೆಯಲ್ಲಿ ತ್ರಿವಿಧಪ್ರಣವ
ಮಧ್ಯ ಗಳಿಗೆಯಲ್ಲಿ ತ್ರಿವಿಧಪ್ರಣವ, ಎತ್ತುವ ಹುದುಗದಲ್ಲಿ ಪಂಚಪ್ರಣವ,
ಉತ್ತರ ಭಾಗದರಗಿನಲ್ಲಿ ಚಿಚ್ಛಕ್ತಿಪ್ರಣವ,
ದಕ್ಷಿಣ ಭಾಗದರಗಿನಲ್ಲಿ ಚಿಚ್ಛಿವಪ್ರಣವ,
ಇಂತು ಹದಿನಾರು ಪ್ರಣವಂಗಳ
ಷೋಡಶವರ್ಣಸ್ವರೂಪವಾದ ಷೋಡಶಕಗಳೆಂದು ಭಾವಿಸಿ,
ಕ್ರಿಯಾಭಸಿತದಿಂದ ಆಯಾಯ ನಸ್ಧಲದಲ್ಲಿಫ ಸ್ಥಾಪಿಸಿ,
ಆ ಮಂತ್ರಗೃಹದಲ್ಲಿ ಚಿದ್ಘನಮಹಾಪರತತ್ವಮೂರ್ತಿಯ
ಮೂರ್ತವ ಮಾಡಿಸುವುದಯ್ಯಾ,
ಆಮೇಲೆ ನಿರಂಜನಜಂಗಮದ ಪಾದಪೂಜೆಯ ಮಾಡಬೇಕಾದಡೆ
ರೋಮಶಾಟಿಯಾಗಲಿ ಪಾವಡವಾಗಲಿ, ಆಸನವ ರಚಿಸಿ,
ಮಂತ್ರಸ್ಮರಣೆಯಿಂದ ಗುರುಪಾದೋದಕದ ವಿಭೂತಿಯಿಂದ
ಸಂಪ್ರೋಕ್ಷಣೆಯ ಮಾಡಿ ಪುಷ್ಪಪತ್ರೆಗಳ ರಚಿಸಿ,
ಆ ಮಹಾಪ್ರಭುಜಂಗಮಕ್ಕೆ ಅಘ್ರ್ಯಪಾದ್ಯಾಚಮನವ ಮಾಡಿಸಿ,
ಪಾವುಗೆಯ ಮೆಟ್ಟಿಸಿ ಮಂತ್ರಸ್ಮರಣೆಯಿಂದ ಪಾಣಿಗಳನೇಕಭಾಜನವ ಮಾಡಿ,
ಬಹುಪರಾಕೆಂದು ಆ ಸಿಂಹಾಸನಕ್ಕೈತಂದು ಮೂರ್ತವ ಮಾಡಿದ ಮೇಲೆ
ಪಾದಾಬಿಷೇಕಜಲವ ಶಿವಗೃಹಕ್ಕೆ ತಳಿದು,
ಪಾದೋದಕ ಪುಷ್ಪೋದಕ ಗಂಧೋದಕ ಭಸ್ಮೋದಕ
ಮಂತ್ರೋದಕದಿಂದ ಲಿಂಗಾಬಿಷೇಕವ ಮಾಡಿಸಿ,
ಸಾಕಾರ ನಿರಾಕಾರ ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿ,
ಸಮ್ಮುಖದಲ್ಲಿ ಗರ್ದುಗೆಯ ಹಾಕಿ, ಅಷ್ಪಾಂಗಹೊಂದಿ ಶರಣುಹೊಕ್ಕು,
ಗರ್ದುಗೆಯ ಮೇಲೆ ಮೂರ್ತವ ಮಾಡಿ,
ಆ ಲಿಂಗಜಂಗಮವ ಮೂಲಮಂತ್ರದಿಂದ ಅನಿಮಿಷದೃಷ್ಟಿಯಿಂದ ನಿರೀಕ್ಷಿಸಿ
ತನ್ನ ವಾಮಕರದ ಪಂಚಾಂಗುಲಿಗಳಲ್ಲಿ ಪಂಚಪ್ರಣವವ ಲಿಖಿಸಿ
ಮಧ್ಯಸಿಂಹಾಸನದಲ್ಲಿ ಮೂಲಪ್ರಣವ ಸ್ಥಾಪಿಸಿ ಅರ್ಚಿಸಿ,
ಮಹಾಪ್ರಭುಜಂಗಮದ ಶ್ರೀಪಾದವ ಮೂರ್ತವ ಮಾಡಿ
ಬಹಿರಂಗದ ಕ್ರೀ ಅಂತರಂಗದ ಕ್ರೀಯಿಂದರ್ಚಿಸಿ
ಪ್ರಥಮ ತಳಿಗೆಯಲ್ಲಿ ಪೂರ್ವ ಪಶ್ಚಿಮ ಉತ್ತರ ದಕ್ಷಿಣ ತ್ರಿಪುಂಡ್ರರೇಖೆಗಳ ರಚಿಸಿ,
ಪಂಚದಿಕ್ಕುಗಳಲ್ಲಿ ಪ್ರಣವವ ಲಿಖಿಸಿ,
ದ್ವಿತೀಯ ಬಟ್ಟಲೊಳಗೆ ಮೂಲಪ್ರಣವವ ಲಿಖಿಸಿ
ಗುರುಪಾದೋದಕದ ಪಾತ್ರೆಯಲ್ಲಿ
ಬಿಂದುಯುಕ್ತವಾಗಿ ಮೂಲಪ್ರಣವವ ಲಿಖಿಸಿ
ತ್ರಿವಿಧಲಿಂಗಸ್ವರೂಪವಾದ ಸ್ಥಾನವನರಿದು
ಪಂಚಾಕ್ಷರ, ಷಡಕ್ಷರ, ನವಾಕ್ಷರ ಸ್ಮರಣೆಯಿಂದ ಪಡಕೊಂಡು
ಮಂತ್ರಸ್ಮರಣೆಯಿಂದ ಲಿಂಗ ಜಂಗಮ ಭಕ್ತ ಶರಣಗಣಂಗಳಿಗೆ ಸಲಿಸಿ,
ಮುಕ್ತಾಯವ ಮಾಡಿ ಪ್ರಸಾದಭೊಗವ ತಿಳಿದಾಚರಿಸೆಂದಾತ
ನಮ್ಮ ಕೂಡಲಚೆನ್ನಸಂಗಮದೇವ. /155
ಅಯ್ಯಾ, ಗುರುವರನ ಹೊಂದಿ ಗುರುಪುತ್ರನಾದ ಬಳಿಕ
ಅಕಸ್ಮಾತ್ ಆ ಗುರುವಿನಲ್ಲಿ ಅನಾಚಾರ ದುರಾಚಾರಗಳು ಮೈದೋರಿದಲ್ಲಿ,
ಅವು ಸೂಕ್ಷ್ಮವಿದ್ದಡೆ ತಿದ್ದಿಕೊಳ್ಳಬೇಕು,
ಸ್ಧೂಲವಿದ್ದಡೆ ಆ ಗುರುವ್ಯಕ್ತಿಯನುಳಿದು
ತಾನರಿದ ಗುರುತತ್ವವ ನಂಬಿ ಸದಾಚಾರವ ಸಾದಿಸುತ್ತಿರಬೇಕು.
ಇಂತೀ ಆಚರಣೆಯೆ ನಿಮ್ಮ ಶರಣರಿಗೆ ಸದಾ ಸಮ್ಮತವಾಗಿರ್ಪುದು ಕಾಣಾ
ಕೂಡಲಚೆನ್ನಸಂಗಮದೇವಾ. /156
ಅಯ್ಯಾ, ಘನಗಂಬಿರವಪ್ಪ ಸಮುದ್ರದೊಳಗೊಂದು ರತ್ನ ಹುಟ್ಟಿದಡೆ,
ಆ ಸಮುದ್ರದೊಳಗಡಗಿರ್ಪುದಲ್ಲದೆ ಘನವಾಗಿ ತೋರಬಲ್ಲುದೆ ?
ನಿಮ್ಮ ಕರುಣಕಟಾಕ್ಷದಿಂದುದಯಿಸಿ, ಅನಂತ ಪುರಾಣವೆಲ್ಲವು
ನಿಮ್ಮ ಕೃಪೆಯಿಂದ ಸಾಧ್ಯವಾಯಿತ್ತೆನಗೆ.
ಆದಿಯನಾದಿ ಇಲ್ಲದಂದು ನೀನೊಬ್ಬನೆ ಪ್ರಸಾದಿ.
ಉಮೆಯ ಕಲ್ಯಾಣವಿಲ್ಲದಂದು ನೀನೊಬ್ಬನೆ ಪ್ರಸಾದಿ.
ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ
ಬಸವಣ್ಣಾ, ನಿಮ್ಮ ತೊತ್ತಿನ ತೊತ್ತಿನ ಮರುದೊತ್ತಿನ ಮಗ ನಾನಯ್ಯಾ./157
ಅಯ್ಯಾ, ಪಿಂಡಬ್ರಹ್ಮಾಂಡದ ಮಧ್ಯದಲ್ಲಿ,
ಭಕ್ತನೆಂಬ ವೃಕ್ಷವಾಗಿ ಚಿದಂಡವಿರ್ಪುದು.
ಆ ಚಿದಂಡದ ಮಧ್ಯದಲ್ಲಿ ಜಂಗಮವೆಂಬ ಬೀಜವಾಗಿ ಚಿನ್ಮಯಾಂಡವಿರ್ಪುದು.
ಆ ಎರಡರ ಮಧ್ಯದಲ್ಲಿ ಸತ್ಕ್ರಿಯೆ ಸಮ್ಯಕ್ಜ್ಞಾನ ಮಹಾಜ್ಞಾನವೆಂಬ
ಚಿತ್ಸೂರ್ಯ ಚಿದಗ್ನಿ ಚಿಚ್ಚಂದ್ರಮಂಡಲವಿರ್ಪುದು.
ಆ ಮಂಡಲದ ಮಧ್ಯದಲ್ಲಿ ಏಕಾದಶ ದಿಕ್ಕುಗಳಿರ್ಪುವು.
ಆ ದಿಕ್ಕುಗಳ ಮಧ್ಯದಲ್ಲಿ ಲಕ್ಷದಳ ಕಮಲವಿರ್ಪುದು.
ಆ ಕಮಲದಳಂಗಳಲ್ಲಿ ಲಕ್ಷ ಲಿಂಗಗಳಿರ್ಪುವು.
ಆ ಲಿಂಗಂಗಳಂಗುಷ್ಠಾಗ್ರದಲ್ಲಿ ಲಕ್ಷ ಗಂಗೆಗಳಿರ್ಪುವು.
ಆ ಗಂಗೆಗಳ ಮಧ್ಯದಲ್ಲಿ ಲಕ್ಷ ಪ್ರಣವಂಗಳಿರ್ಪುವು ನೋಡಾ.
ಆ ಪ್ರಣವಂಗಳ ಮಧ್ಯದಲ್ಲಿ ಬಸವ ಮೊದಲಾದ ಮಹಾಶರಣಗಣಂಗಳು
ಪರಿಪೂರ್ಣವಾಗಿ ಮೂರ್ತಗೊಂಡಿರ್ಪರು ನೋಡಾ.
ಇಂತು ಪ್ರಮಥಗಣಂಗಳು ನೆರೆದಿರ್ದ ಸ್ವಸ್ವರೂಪದ ನಿಲುಕಡೆಯನರಿಯದೆ,
ಕೊಟ್ಟಿದನವ ದೊಡ್ಡ ವೃಕ್ಷಕ್ಕೆ ಕಟ್ಟಿದಂತೆ,
ಅಂಗದ ಮೇಲೆ ಲಿಂಗವ ಕಟ್ಟಿಕೊಂಡು ಸುಳಿವಾತ ಜಂಗಮವಲ್ಲ,
ಆ ಜಂಗಮಕ್ಕೆ ತನಮನಧನಂಗಳ ಕೊಟ್ಟು
ಅವರಡಿಯಿಂದ ಹುಟ್ಟಿದ ಜಲಶೇಷವ ಕೊಂಬಾತ ಭಕ್ತನಲ್ಲ.
ಇಂತು, ಉಭಯಾಂಧಕ ಭಕ್ತಜಂಗಮಕುಲವಳಿದು
ಪ್ರಮಥರಾಚರಿಸಿದ ಸನ್ಮಾರ್ಗದಲ್ಲಿ ಸುಳಿಯಬಲ್ಲಾತ ಜಂಗಮ.
ಆ ಜಂಗಮದನುವರಿದು ಅಡಗಬಲ್ಲಾತ ಭಕ್ತ.
ಇದು ಕಾರಣ, -ಕೂಡಲಚೆನ್ನಸಂಗಯ್ಯಾ
ಇಂತಪ್ಪ ಭಕ್ತ ಜಂಗಮರ ಪಾದವ ತೋರಿ ಬದುಕಿಸಯ್ಯಾ ಗುರುವೆ./158
ಅಯ್ಯಾ, ಶ್ರೀಗುರು ಕರುಣಿಸಿಕೊಟ್ಟ ಲಿಂಗ ಜಂಗಮವಲ್ಲದೆ,
ಅನ್ಯದೈವಂಗಳ ತ್ರೈಕರಣದಲ್ಲಿ ಅರ್ಚಿಸದಿರ್ಪುದೆ ಲಿಂಗಾಚಾರವೆಂಬೆನಯ್ಯಾ.
ಭಕ್ತನಾದಡೆ ಸತ್ಯಶುದ್ಧ ಕಾಯಕ [ವ ಮಾಡಿ],
ಮಹೇಶನಾದಡೆ ಸತ್ಯಶುದ್ಧ ಬಿಕ್ಷವ ಬೇಡಿ
ಸಮಸ್ತ ಪ್ರಾಣಿಗಳಲ್ಲಿ ಪಾತ್ರಾಪಾತ್ರವ ತಿಳಿದು ಹಸಿವು ತೃಷೆ ಶೀತಕ್ಕೆ
ಪರಹಿತಾಥರ್ಿಯಾಗಿರ್ಪುದೆ ಸದಾಚಾರವೆಂಬೆನಯ್ಯಾ.
ಗುರುಮಾರ್ಗಾಚಾರದಲ್ಲಿ ನಿಂದ ಶಿವಲಾಂಛನಧಾರಿಗಳೆಲ್ಲಾ
ಪರಶಿವಲಿಂಗವೆಂದು ಭಾವಿಸಿ,
ಅರ್ಥ ಪ್ರಾಣಾಬಿಮಾನವನರ್ಪಿಸುವುದೆ ಶಿವಾಚಾರವೆಂಬೆನಯ್ಯಾ.
ಅಷ್ಟಾವರಂಣಗಳ ಮೇಲೆ ಅನ್ಯರಿಂದ ಕುಂದು ನಿಂದೆಗಳು ಬಂದು ತಟ್ಟಿದಲ್ಲಿ
ಗಣಸಮೂಹವನೊಡಗೂಡಿ ಆ ಸ್ಥಲವ ತ್ಯಜಿಸುವುದೆ ಗಣಾಚಾರವೆಂಬೆನಯ್ಯಾ.
ಜಾತ್ಯಾಶ್ರಮ ಕುಲಗೋತ್ರ ನಾಮರೂಪು ಕ್ರಿಯಾರಹಿತನಾಗಿ,
ಗುರೂಪಾವಸ್ಥೆಯಿಂದ ಗುರುವ ಪ್ರತ್ಯಕ್ಷವ ಮಾಡಿ,
ಆ ಗುರುವಿನಿಂದ ಚಿದ್ಘನ ಮಹಾಲಿಂಗವ ಪಡೆದು,
ಆ ಲಿಂಗಸಹಿತವಾಗಿ ಭಕ್ತಿಜ್ಞಾನವೈರಾಗ್ಯ ಪಾದೋದಕ ಪ್ರಸಾದ
ವಿಭೂತಿ ರುದ್ರಾಕ್ಷಿ ಮಂತ್ರ ಮೊದಲಾದ ಷಟ್ಸ್ಥಲಮಾರ್ಗದಲ್ಲಿ ನಿಂದ
ಭಕ್ತಗಣಂಗಳಲ್ಲಿ ಪಂಚಸೂತಕಂಗಳ ಕಲ್ಪಿಸದೆ ಅವರಿದ್ದ ಸ್ಥಳಕ್ಕೆ ಹೋಗಿ,
ತನುಮನಧನಂಗಳ ಸಮರ್ಪಿಸಿ, ಅವರೊಕ್ಕುಮಿಕ್ಕುದ ಹಾರೈಸಿ
ಹಸ್ತಾಂಜಲಿತರಾಗಿ ಪ್ರತ್ಯುತ್ತರವ ಕೊಡದಿರ್ಪುದೆ ಭೃತ್ಯಾಚಾರವೆಂಬೆನಯ್ಯಾ.
ಮಲ ಮಾಯಾ ಪಾತಕ ಸೂತಕ ರಹಿತವಾದ ದೀಕ್ಷಾಗುರು,
ಶಿಕ್ಷಾಗುರು, ಜ್ಞಾನಗುರುವಿನಿಂದ
ವೇಧಾಮಂತ್ರ ಕ್ರಿಯಾದೀಕ್ಷೆಯ ಪಡೆದು ದ್ವಾದಶ ಮಲಪಾಶ ಕರ್ಮವ ತ್ಯಜಿಸಿ,
ಮನ ಮಾರುತ ಮೊದಲಾದ ದ್ವಾದಶ ಇಂದ್ರಿಯಂಗಳ
ಗುರುಪಾದಜಲದಿಂದ ಪ್ರಕ್ಷಾಲಿಸಿ ದಂತಪಙಫ್ತೆಕ್ರಿಯೆಗ? ಮಾಡಿ,
ಕಟಿಸ್ನಾನ, ಕಂಠಸ್ನಾನ, ಮಂಡೆಸ್ನಾನ ಸರ್ವಾಂಗಸ್ನಾನವ ಮಾಡಿ
ಕ್ರಿಯಾಭಸಿತದಿಂದ ಸ್ನಾನ ಧೂಲನ ಧಾರಣದ ಮರ್ಮವ ತಿಳಿದಾಚರಿಸಿ
ಸಾಕಾರ ನಿರಾಕಾರ ಅಷ್ಟವಿಧಾರ್ಚನೆ ಷೋಡಷೋಪಚಾರದಿಂದ
ಗುರು-ಲಿಂಗ-ಜಂಗಮವನರ್ಚಿಸಿ
ನಿರ್ವಂಚಕತ್ವದಿಂದ ಘನಪಾದತೀರ್ಥಪ್ರಸಾದ ಮಂತ್ರದಲ್ಲಿ ನಿಂದ
ನಿಜಾವಸ್ಥೆಯ ಕ್ರಿಯಾಚಾರವೆಂಬೆನಯ್ಯಾ
ಅಂತರಂಗದಲ್ಲಿ ಕರಣವಿಷಯ ಕರ್ಕಶದಿಂದ ಅಹಂಕರಿಸಿ
ಗುರುಹಿರಿಯರಲ್ಲಿ ಸಂಕಲ್ಪ ವಿಕಲ್ಪಗಳಿಂದ
ಕುಂದು-ನಿಂದೆ ಹಾಸ್ಯ-ರೋಷಂಗಳೆಂಬ ಅಜ್ಞಾನವ ಬಳಸದೆ
ಪರಮಪಾತಕರ ದರ್ಶನಸ್ಪರ್ಶನಸಂತರ್ಪಣೆ ಪಂಕ್ತಿಪಾಕವ ಕೊಳ್ಳದೆ
ಸತ್ಯ ನಡೆನುಡಿಯುಳ್ಳ ಶಿವಶರಣಗಣಂಗಳಲ್ಲಿ ಷಡ್ವಿಧಭಕ್ತಿ ಮುಂದುಗೊಂಡು,
ಎರಡೆಂಬತ್ತೆಂಟುಕೋಟಿ ವಚನಾನುಭವದಲ್ಲಿ
ನಿಂದ ನಿಲುಕಡೆಯೆ ಜ್ಞಾನಾಚಾರವೆಂಬೆನಯ್ಯಾ.
ತನುವಿಕಾರದಿಂದ ಕಾಮ ಕ್ರೋಧ ಲೋಭ ಮೋಹ
ಮದ ಮತ್ಸರಂಗಳ ಬಳಕೆ ಮಾಡದೆ
ಲೋಕದಂತೆ ನಡೆನುಡಿಗಳ ಬಳಸದೆ,
ತನ್ನ ಗುಣಾವಗುಣಂಗಳ ಸ್ವಾತ್ಮಾನುಭವದಿಂದರಿದು, ದುರ್ಗುಈವ ತ್ಯಜಿಸಿ,
ಸದ್ಗುಣವ ಹಿಡಿದು ಬಿಡದಿಪ್ಪುದೆ ಭಾವಾಚಾರವೆಂಬೆನಯ್ಯಾ.
ಕೊಡುವಲ್ಲಿ ಕೊಂಬಲ್ಲಿ ಅತಿಯಾಸೆಯಿಂದ ಹುಸಿಯ ನುಡಿಯದೆ,
ಕೊಟ್ಟ ಭಾಷೆಗ? ಪ್ರಾಣಾಂತ್ಯ ಬಂದಡೆಯೂ
ನುಡಿಯಂತೆ ನಡೆವುದೆ ಸತ್ಯಾಚಾರವೆಂಬೆನಯ್ಯಾ.
ಕಾಲ ಕಾಮರ ಬಾಧೆಗೊ?ಗಾಗದ ಹಠಯೋಗ ಫಲಪದಂಗ?
ತಟ್ಟುಮುಟ್ಟು ಸೋಂಕುಗಳಿಲ್ಲದೆ ಲಿಂಗಾಣತಿಯಿಂದ ಬಂದೊದಗಿದ
ಪರಿಣಾಮಪ್ರಸಾದದಲ್ಲಿ ಲೋಲುಪ್ತನಾಗಿರ್ಪುದೆ ನಿತ್ಯಾಚಾರವೆಂಬೆನಯ್ಯಾ.
ಸರ್ವಾವಸ್ಥೆಯಲ್ಲಿ ದಶವಿಧಪಾದೋದಕ ಏಕಾದಶಪ್ರಸಾದ
ಛತ್ತೀಸ ಪ್ರಣವ ಮೊದಲಾದ ಮಹಾಮಂತ್ರಂಗಳಲ್ಲಿ
ಎರಕವನುಳ್ಳುದೆ ಧರ್ಮಾಚಾರವೆಂಬೆನಯ್ಯಾ.
ಇಂತೀ ಏಕಾದಶವರ್ಮವ ಗುರುಕೃಪಾಮುಖದಿಂದರಿದು,
ಆಚಾರವೆ ಅಂಗ ಮನ ಪ್ರಾಣ ಭಾವಂಗಳಾಗಿ, ಇಹಪರವ ವಿೂರಿ,
ಪಿಂಡಾದಿ ಜ್ಞಾನಶೂನ್ಯಾಂತವಾದ ಏಕೋತ್ತರಮಾರ್ಗದಲ್ಲಿ ನಿಂದು,
ಬಯಲೊಳಗೆ ಬಚ್ಚಬರಿಯ ನಿರ್ವಯಲ ಸಾದಿಸುವುದೆ
ಸರ್ವಾಚಾರ ಸಂಪತ್ತಿನಾಚಾರದ ನಿಲುಕಡೆ ನೋಡಾ
ಇಂತು ಆಚಾರದ ಕುರುಹ ತಿಳಿದು ಪಂಚಾಚಾರವ ಬಹಿಷ್ಕರಿಸಿ
ಸಪ್ತಾಚಾರವ ಗೋಪ್ಯವ ಮಾಡಿ,
ದರಿದ್ರನಿಗೆ ನಿದಿನಿಧಾನ ದೊರೆತಂತೆ, ರೋಗಿಗೆ ವೈದ್ಯದ ಲತೆ ದೊರೆತಂತೆ,
ಮೂಕ ಫಲರಸವ ಸವಿದಂತೆ, ಕಳ್ಳಗೆ ಚೇಳೂರಿದಂತೆ,
ತಮ್ಮ ಚಿದಂಗಸ್ವರೂಪರಾದ ಶರಣಗಣಂಗಳಲ್ಲಿ ಉಸುರಿ,
ದುರ್ಜನಾತ್ಮರಲ್ಲಿ ಬಳಸದೆ ನಿಂದ ಪರಮಸುಖಿ ನಿಮ್ಮ ಶರಣನಲ್ಲದೆ
ಉಳಿದ ಕಣ್ಗೆಟ್ಟಣ್ಣಗಳೆತ್ತ ಬಲ್ಲರಯ್ಯಾ ಕೂಡಲಚೆನ್ನಸಂಗಮದೇವಾ ?/159
ಅಯ್ಯಾ, ಶ್ರೀವಿಭೂತಿಯ ಧರಿಸುವ ಭೇದವೆಂತೆಂದಡೆ :
ಸಹಜಲಿಂಗಧಾರಕರು ಎಂಟುಸ್ಥಾನದಲ್ಲಿ ಧರಿಸುವುದಯ್ಯಾ.
ಕ್ರಿಯಾದೀಕ್ಷಾನ್ವಿತರಾದ ಉಪಾದಿಭಕ್ತರು
ಹದಿನಾರು ಸ್ಥಾನದಲ್ಲಿ ಧರಿಸುವುದಯ್ಯಾ.
ಕ್ರಿಯಾದೀಕ್ಷೆ, ಮಂತ್ರದೀಕ್ಷೆಯುಕ್ತರಾದ ನಿರುಪಾದಿಭಕ್ತರು
ಮೂವತ್ತೆರಡು ಸ್ಥಾನದಲ್ಲಿ ಧರಿಸುವುದಯ್ಯಾ.
ಕ್ರಿಯಾದೀಕ್ಷೆ ಮಂತ್ರದೀಕ್ಷೆ ವೇಧಾದೀಕ್ಷೆಯುಕ್ತರಾದ ಸಹಜಭಕ್ತರು
ಮೂವತ್ತಾರು ಸ್ಥಾನದಲ್ಲಿ ಧರಿಸುವುದಯ್ಯಾ.
ಕ್ರಿಯಾದೀಕ್ಷೆ ಮಂತ್ರದೀಕ್ಷೆ ವೇಧಾದೀಕ್ಷೆ ಸಚ್ಚಿದಾನಂದದೀಕ್ಷಾಯುಕ್ತರಾದ
ನಿರ್ವಂಚನಭಕ್ತರು ನಾಲ್ವತ್ತುನಾಲ್ಕು ಸ್ಥಾನದಲ್ಲಿ ಧರಿಸುವುದಯ್ಯಾ.
ಕ್ರಿಯಾ-ಮಂತ್ರ-ವೇಧಾ-ಸಚ್ಚಿದಾನಂದ-ನಿರ್ವಾಣಪದದೀಕ್ಷಾ ಸಮನ್ವಿತರಾದ
ಸದ್ಭಕ್ತಶರಣಗಣಂಗಳು, ಆಪಾದಮಸ್ತಕ ಪರಿಯಂತರ
ಸ್ನಾನ ಧೂಳನವ ಮಾಡಿ ನಾಲ್ವತ್ತೆಂಟು ಸ್ಥಾನದಲ್ಲಿ
ಮಂತ್ರಸ್ಮರಣೆಯಿಂದ ತ್ರಿಪುಂಡ್ರವ ಧರಿಸುವುದಯ್ಯಾ
ಕೂಡಲಚೆನ್ನಸಂಗಮದೇವಾ. /160
ಅಯ್ಯಾ, ಶ್ರೀವಿಭೂತಿಯ ಸತ್ಕ್ರಿಯೆಯಿಂದ (ಮಾಡಿ)
ಧರಿಸುವ ಭೇದವೆಂತೆಂದಡೆ :
ಆವ ವರ್ಣದ ಗೋವಾದಡೆಯೂ ಸರಿಯೆ, ಅವಯವಂಗಳು ನೂನು-ಕೂನಿಲ್ಲದೆ,
ಬರೆಗಳ ಹಾಕದೆ ಇರುವಂತಹ ಗೋವ ತಂದು,
ಅದಕ್ಕೆ ಧೂಳಪಾದೋದಕ ಸ್ನಾನವ ಮಾಡುವಂತಹದೆ
ಕ್ರಿಯಾಲಿಂಗಧಾರಣದೀಕ್ಷೆ; ಧೂಳಪಾದೋದಕಸೇವನೆಯೆ ಮಹಾತೀರ್ಥ.
ಭಕ್ತ ಆತನ ಭಾಂಡದಲ್ಲಿರುವ ಪದಾರ್ಥವ
ಹಸ್ತ ಮುಟ್ಟಿ ಹಾಕಿದ ಮೇಲೆ ಮಹಾಪ್ರಸಾದವಾಯಿತ್ತು.
ಇಂತಹ ಆಚಾರಯುಕ್ತವಾದ ಗೋವಿನ ಸಗಣಿಯ
ಸ್ವಚ್ಛವಾದ ಸ್ಥಳದಲ್ಲಿ ಚೂರ್ಣ ಮಾಡಿ ಒಣಗಿಸಿ
ಕ್ರಿಯಾಗ್ನಿಯಿಂದ ದಹಿಸಿದ ಬೂದಿಯ ಧೂಳಪಾದೋದಕದಲ್ಲಿ ಶೋದಿಸಿ,
ಅದರೊಳಗೆ ತಿಳಿಯ ತೆಗೆದು ಘಟ್ಟಿಯ ಮಾಡಿ
ಪೂರ್ವದಲ್ಲಿ (ಗುರು) ಹೇಳಿದ ವಚನೋಕ್ತಿಯಿಂದ
ಧರಿಸಿದ ಲಿಂಗಾಧಾರಕಭಕ್ತಂಗೆ ಗುರುದೀಕ್ಷೆಯುಂಟಾಗುವುದಯ್ಯಾ,
ಉಪಾದಿಭಕ್ತಂಗೆ ಗುರುಲಿಂಗಜಂಗಮದ ಸದ್ಭಕ್ತಿ ದೊರೆವುದಯ್ಯಾ,
ನಿರುಪಾದಿಭಕ್ತಂಗೆ ತ್ರಿವಿಧಪಾದೋದಕ ಪ್ರಸಾದ ದೊರೆಯುವುದಯ್ಯಾ
ಸಹಜ ಭಕ್ತಂಗೆ ಸಚ್ಚಿದಾನಂದಪದ ದೊರೆಯುವುದಯ್ಯಾ
ನಿರ್ವಂಚಕ ಭಕ್ತಂಗೆ ನಿರ್ವಾಣ ಪದವಾಗುವುದಯ್ಯಾ
ನಿರ್ವಾಣಭಕ್ತಂಗೆ ನಿಷ್ಕಳಂಕ ಜ್ಯೋತಿರ್ಮಯ ಪರಶಿವಲಿಂಗದಲ್ಲಿ
ಕೂಟಸ್ಥವಾಗಿ, ನಿರಂಜನಜಂಗಮದಲ್ಲಿ ಕೂಡಿ
ಹರಗಣಸಹವಾಗಿ ನಿರವಯಸಮಾದಿ ತಪ್ಪದು ನೋಡಾ
ಕೂಡಲಚೆನ್ನಸಂಗಮದೇವಾ. /161
ಅಯ್ಯಾ, ಷೋಡಶದಳ ಕಮಲದ ಮಧ್ಯದಲ್ಲಿ ನೆಲಸಿರ್ಪ
ಅನಾದಿ ನಿಷ್ಕಲಂಕ ಜ್ಯೋತಿರ್ಮಯ ಪರಶಿವಲಿಂಗದೇವಂಗೆ
ಕ್ರಿಯಾಶಕ್ತಿಸ್ವರೂಪವಾದ ಚಿತ್ಪೃಥ್ವಿಹೃದಯಮಧ್ಯದಲ್ಲಿ ನೆಲಸಿರ್ಪ
ಪರಿಣಾಮಜಲವ ಚಿದ್ಭಾಂಡದೊಳಗೆ ಪರಿಣಾಮಪಾವಡದಿಂದ ಶೋದಿಸಿ,
ಗುರು ಚರ ಪರ ಸ್ವರೂಪವಾದ ಜಂಗಮಮೂರ್ತಿಗಳ
ಮೊಳಕಾಲ ಪರಿಯಂತರ ಪ್ರಕ್ಷಾಲನವ ಮಾಡಿ,
ಉಳಿದುದಕದಿಂದ ಉಭಯಪಾದಕಮಲವನು
ಅಡಿಪಾದವ ಮೂರು ವೇಳೆ, ಅಂಗುಲಿಗಳ ಒಂದು ವೇಳೆ
ಸ್ಪರ್ಶನವ ಮಾಡಿದಂತಹ ಗುರುಪಾದೋದಕವ ಭಾಂಡಭಾಜನದಲ್ಲಿ ತುಂಬಿ,
ಕರಕಮಲದಲ್ಲಿ ಅನಾದಿ ನಿಷ್ಕಲಂಕ ಜ್ಯೋತಿರ್ಮಯ
ಇಷ್ಟಮಹಾಲಿಂಗದೇವನ ಮೂರ್ತವ ಮಾಡಿಸಿಕೊಂಡು
ಪಂಚರಸಯುಕ್ತವಾದ ಆವುದಾದಡೆಯೂ ಒಂದು ಕಾಷ್ಠದಿಂದ
ಹಸ್ತಪಾದಮುಖಂಗಳಲ್ಲಿ ಸ್ಥಾಪಿಸಿರುವ
ಐವತ್ತೆರಡು ನಖದಂತ ಪಂಕ್ತಿಗಳ ತೀಡಿ,
ನೇತ್ರ ಮೊದಲಾದ ಲಿಂಗದವಯವಂಗ? ಪ್ರಕ್ಷಾಲಿಸಿ,
ಕಟಿಸ್ನಾನ ಕಂಸ್ನಾನ ಮಂಡೆಸ್ನಾನ
ಮೊದಲಾದ ತ್ರಿವಿಧಲಿಂಗಸ್ನಾನವ ಮಾಡಿ, ಪಾವುಗೊರಡ ಮೆಟ್ಟಿ,
ಪಾವಡವಾಗಲಿ, ಪರ್ಣಾಸನವಾಗಲಿ
ದರ್ಭೆ ಬೆತ್ತ ಮೊದಲಾದಸನದಲ್ಲಿ ಮೂರ್ತವ ಮಾಡಿ
ಗುರುಪಾದೋದಕದೊಳಗೆ ಭಸ್ಮ ಗಂಧ ಪುಷ್ಪ ಮಂತ್ರವ ಸ್ಥಾಪಿಸಿ,
ಪಂಚಾಮೃತವೆಂದು ಭಾವಿಸಿ
ಅನಾದಿ ನಿಷ್ಕಲಂಕ ಜ್ಯೋತಿರ್ಮಯ ಇಷ್ಟಮಹಾಲಿಂಗದೇವಂಗೆ
ಲೀಲಾಮಜ್ಜನವ ಮಾಡಿಸಿ,
ಕ್ರಿಯಾಚಾರದಲ್ಲಿ ದಹಿಸಿದ ವಿಭೂತಿಯಲ್ಲಿ
ಗುರುಪಾದೋದಕ ಲಿಂಗಪಾದೋದಕ ಮಂತ್ರಸಂಬಂಧವಾದ
ಚಿದ್ಭಸಿತವ ಸ್ನಾನ ಧೂಲನ ಧಾರಣಂಗಳ ಮಾಡಿ,
ಅಷ್ಟವಿಧಾರ್ಚನೆ ಷೋಡಶೋಪಚಾರಂಗಳೊಳಗೆ
ಲಿಂಗಾಣತಿಯಿಂದ ಬಂದುದ ಸಮರ್ಪಿಸಿ,
ಕ್ರಿಯಾಗುರುಲಿಂಗಜಂಗಮದ ತೀರ್ಥಪ್ರಸಾದವಾದಡೆಯೂ ಸರಿಯೆ
ಜ್ಞಾನಗುರುಲಿಂಗಜಂಗಮದ ತೀರ್ಥಪ್ರಸಾದವಾದಡೆಯೂ ಸರಿಯೆ,
ಆ ಕ್ರಿಯಾಜ್ಞಾನಗುರುಲಿಂಗಜಂಗಮದ ಮಹಾತೀರ್ಥವ
ಆ ಗುರುಲಿಂಗಜಂಗಮಕ್ಕೆ ಸಮರ್ಪಿಸಿ,
ಆಮೇಲೆ ತಳಿಗೆಬಟ್ಟಲಲ್ಲಿ
ಕಡುಬು ಕಜ್ಜಾಯ ಹೋಳಿಗೆ ಹುಗ್ಗಿ ಗುಗ್ಗರಿ ಬೆಳಸೆ ಅಂಬಲಿ ತುಂಬೆಸೊಪ್ಪು
ಮೊದಲಾದ ಶಾಕಪಾಕಾದಿಗಳ,
ಕ್ಷೀರ ದದಿ ನವನೀತ ತಕ್ರ ಘೃತ ಕಬ್ಬಿನ ಹಾಲು
ಎಳೆ ಅಗ್ಗಿಣಿ ಪನ್ನೀರು ಮೊದಲಾದ ಸಮಸ್ತದ್ರವ್ಯಂಗಳ
ಭಾಜನದಲ್ಲಿ ಸ್ಥಾಪಿಸಿ ಹಸ್ತಸ್ಪರ್ಶನವ ಮಾಡಿ,
ಆ ಕ್ರಿಯಾಜ್ಞಾನ ಗುರುಲಿಂಗಜಂಗಮ ಪ್ರಸಾದವಾದಡೆಯೂ ಸರಿಯೆ,
ಮತ್ತಾ ಗುರುಲಿಂಗಜಂಗಮಕ್ಕೆ ಸಮರ್ಪಿಸಿ
ತಾನಾ ಪರಿಣಾಮ ಪಾದೋದಕ ಪ್ರಸಾದದಲ್ಲಿ
ಸಂತೃಪ್ತನಾದಾತನೆ ನಿಮ್ಮ ಅಚ್ಚಶರಣನಲ್ಲದೆ
ಉಳಿದ ನಾಹಂ ಭ್ರಮೆಯಿಂದ ತೊಳಲುವ ಬಡಜೀವಿಗಳೆತ್ತ ಬಲ್ಲರಯ್ಯಾ
ನಿಮ್ಮ ನಿಜಾಚರಣೆಯ ವಿಚಾರದ ಪರಿಣಾಮವ,
ಕೂಡಲಚೆನ್ನಸಂಗದೇವಾ ?/162
ಅಯ್ಯಾ, ಸಜ್ಜನ ಸದ್ಭಾವಿಗಳ ಸಂಗದಿಂದ ಮಹಾನುಭಾವಿಗಳ ಕಾಣಬಹುದು,
ಮಹಾನುಭಾವಿಗಳ ಸಂಗದಿಂದ ಶ್ರೀಗುರುವ ಕಾಣಬಹುದು,
ಶ್ರೀಗುರುವಿನ ಸಂಗದಿಂದ ಲಿಂಗವ ಕಾಣಬಹುದು,
ಲಿಂಗಸಂಗದಿಂದ ಜಂಗಮವ ಕಾಣಬಹುದು.
ಜಂಗಮಸಂಗದಿಂದ ಪ್ರಸಾದವ ಕಾಣಬಹುದು,
ಪ್ರಸಾದದಿಂದ ಆಚಾರವ ಕಾಣಬಹುದಯ್ಯಾ.
ಆಚಾರದಿಂದ ತನ್ನ ಕಾಣಬಹುದಯ್ಯಾ
ಇದು ಕಾರಣ ಕೂಡಲಚೆನ್ನಸಂಗಮದೇವಾ,
ನಿಮ್ಮ ಸಜ್ಜನ ಸದ್ಭಾವಿಗಳ ಸಂಗವನೆ ಕರುಣಿಸಯ್ಯಾ
ನಿಮ್ಮ ಧರ್ಮ./163
ಅಯ್ಯಾ, ಸಮಸ್ತ ಮಾಯಾಬಲೆಯಲ್ಲಿ, ಜನ್ಮಜನ್ಮಾಂತರವೆತ್ತತೊಳಲಿ ಬಳಲಿ
ಅಂತ್ಯದಲ್ಲಿ ಜ್ಞಾನೋದಯವಾಗಿ `ಶಿವಧೋ’ ಎಂದು
ಗುರೂಪಾವಸ್ಥೆಯ ಮಾಡುತಿರ್ದ ಶಿವಕಳಾತ್ಮಂಗೆ
ಶ್ರಿಗುರು ಪ್ರತ್ಯಕ್ಷವಾಗಿ ಕೃಪಾದೃಷ್ಟಿಯಿಂದ ನೋಡಲು
ಆ ಶಿವಕಳಾತ್ಮನು ಅತಿಸಂತೋಷದಿಂದ
`ಎಲೆ ಗುರುನಾಥನೆ, ಎನ್ನ ಅಪರಾಧವ ನೋಡದೆ
ನಿನ್ನ ದಯಾಂಬುದಿಯಲ್ಲಿ ಮಡಗಿಕೋ,
ಎನ್ನ ಸರ್ವಾಧಾರ ಮೂರ್ತಿಯೆ’ -ಎಂದು ಅಬಿನಂದಿಸಲು
ಆಗ, ಶ್ರೀಗುರುನಾಥನು ಮಹಾಸಂತೋಷ ಹುಟ್ಟಿ
ಆ ಶಿವಕಳಾತ್ಮಂಗೆ ಪೂರ್ವದ ಜಡಶೈವಮಾರ್ಗವ ಬಿಡಿಸಿ
ನಿಜ ವೀರಶೈವದೀಕ್ಷೆಯನೆ ಇತ್ತು ಹಸ್ತಮಸ್ತಕಸಂಯೋಗವ ಮಾಡಿ
ಅಂತರಂಗದಲ್ಲಿರುವ ಪ್ರಾಣಲಿಂಗವ ಬಹಿಷ್ಕರಿಸಿ, ಕರಸ್ಥಲಕ್ಕೆ ತಂದುಕೊಟ್ಟನು.
ಮತ್ತಾ ಲಿಂಗವ ಸರ್ವಾಂಗದಲ್ಲಿ ಪೂರ್ಣವ ಮಾಡಿ
ಲಿಂಗಾಂಗ ಷಟ್ಸ್ಥಾನವ ತೋರಿ
ಚಿದ್ವಿಭೂತಿ, ರುದ್ರಾಕ್ಷಿ, ಪಂಚಾಕ್ಷರಿ, ಷಡಕ್ಷರಿ
ಮೊದಲಾದ ಸಪ್ತಕೋಟಿ ಮಹಾಮಂತ್ರವನರುಹಿ
ಷಟ್ಸ್ಥಲಮಾರ್ಗ, ಷಡ್ವಿಧ ಶೀಲ ವತ್ರನೇಮಂಗಳನರುಹಿ
ಷೋಡಶಭಕ್ತಿಯ ಮಾರ್ಗವ ತಿಳುಹಿ, ಬತ್ತೀಸ ಕಳೆಯ ನೆಲೆಯನರುಹಿ
ಷೋಡಶವರ್ಣ, ದ್ವಾದಶಾಚಾರ, ಸಗುಣನಿರ್ಗುಣಲೀಲೆಯ ಕರುಣಿಸಿ
ನನಗೂ ನಿನಗೂ ಚೈತನ್ಯಸ್ವರೂಪವಾದ ನಿರಂಜನಜಂಗಮಲಿಂಗ
ಲಿಂಗಜಂಗಮವೆ ಗತಿಯೆಂದು ನಿರೂಪವ ಕೊಡಲು-
ಆಚರಣೆಯ ವಿಚಾರವ ಕರುಣಿಸಬೇಕಯ್ಯಾ ಸ್ವಾಮಿ ಎಂದು ಬೆಸಗೊಳಲು,
ಕೇಳಯ್ಯಾ, ವರಕುಮಾರ ದೇಶಿಕೋತ್ತಮನೆ
ಆ ಲಿಂಗಜಂಗಮ ಜಂಗಮಲಿಂಗದಾಚರಣೆಯ ಸಂಬಂಧವ:
ಸದ್ಗುರುಮಾರ್ಗಹಿಡಿದ ಜಂಗಮ, ಭಕ್ತನಾದ ನಿಜಪ್ರಸಾದಿ
ಇವರಿಬ್ಬರಾಚರಣೆಯ ನಿನ್ನೊಬ್ಬನಲ್ಲಿ ಹುರಿಗೊಳಿಸಿಕೊಟ್ಟೆವು ನೋಡಯ್ಯಾ.
ಅದೆಂತೆಂದಡೆ:ಕ್ರಿಯಾಜಂಗಮಮೂರ್ತಿಗಳು ನಿನ್ನರ್ಚನಾ ಸಮಯಕ್ಕೆ
ದಿವಾರಾತ್ರಿಗಳೆನ್ನದೆ ಒದಗಿ ಬಂದಲ್ಲಿ,
ಅಚ್ಚಪ್ರಸಾದಿಯೋಪಾದಿಯಲ್ಲಿ, ಕ್ರಿಯಾಚರಣೆಯನ್ನಾಚರಿಸುವುದಯ್ಯಾ.
ನಿನ್ನ ಸಮಯೋಚಿತಕ್ಕೆ ಕ್ರಿಯಾಜಂಗಮ ದೊರೆಯದಿರ್ದಡೆ
ದಿವಾರಾತ್ರಿಯಲ್ಲಿ ನಿಚ್ಚಪ್ರಸಾದಿ ಸಂಬಂಧದಂತೆ
ಜ್ಞಾನಜಂಗಮಸ್ವರೂಪವಾದ ಇಷ್ಟಮಹಾಲಿಂಗದಲ್ಲಿ
ಚಿದ್ಘನತೀರ್ಥಪ್ರಸಾದವ ಸಮರ್ಪಿಸಿ
ತಾನಾ ಪರಿಣಾಮಪ್ರಸಾದದಲ್ಲಿ ಲೋಲುಪ್ತನಾದಾತನೆ
ಲಿಂಗಭಕ್ತನಾದ ಸಮಯಪ್ರಸಾದಿ ನೋಡಾ,
ಕೂಡಲಚೆನ್ನಸಂಗಮದೇವಾ./164
ಅಯ್ಯಾ, ಸಹಜಲಿಂಗಧಾರಕ ಭಕ್ತ ಉಪಾದಿಭಕ್ತರು [ವಿಭೂತಿಯ]
ಗುರುಪಾದೋದಕದಲ್ಲಿ ಸಮ್ಮಿಶ್ರವ ಮಾಡಿ ಧರಿಸುವದಯ್ಯಾ.
ನಿರುಪಾದಿಭಕ್ತ-ಸಹಜಭಕ್ತರು
ಗುರುಪಾದೋದಕ-ಲಿಂಗಪಾದೋದಕ ಸಮ್ಮಿಶ್ರವ ಮಾಡಿ
ಷಡಕ್ಷರಮಂತ್ರವ ಸ್ಥಾಪಿಸಿ ಧರಿಸುವದಯ್ಯಾ.
ನಿರ್ವಂಚಕಭಕ್ತ-ನಿರ್ವಾಣಶರಣಗಣಂಗಳು
ಗುರುಪಾದೋದಕದಲ್ಲಿ ಘಟ್ಟಿಯ ಕುಟ್ಟಿ
ಲಿಂಗಪಾದೋದಕವ ಆ ಘಟ್ಟಿಗೆ ಸಮ್ಮಿಶ್ರವ ಮಾಡಿ
ಆದಿ ಪ್ರಣಮಗಳಾರು ಅನಾದಿ ಪ್ರಣಮಗಳಾರು
ಚಿತ್ಕಲಾ ಪ್ರಸಾದ ಪ್ರಣಮಗಳಾರು
ನಿಷ್ಕಳಂಕ ಚಿತ್ಕಲಾಮೂಲ ಪ್ರಣಮ ಮೂರು
ಇಂತು ಇಪ್ಪತ್ತೊಂದು ಪ್ರಣಮಂಗಳ ಸ್ಥಾಪಿಸಿ
ಜಂಗಮಮೂರ್ತಿಗಳು ಧರಿಸಿದ ಮೇಲೆ ಧರಿಸುವುದಯ್ಯಾ.
ಹಿಂಗೆ ಧರಿಸಿದವರಿಗೆ ನಿಜಕೈವಲ್ಯಪದವಾಗುವದೆಂದಾತ
ನಮ್ಮ ಕೂಡಲಚೆನ್ನಸಂಗಮದೇವ. /165
ಅಯ್ಯಾ, ಸಾಧಕ ಸಿದ್ಧ ಅವತಾರಿಕರೆಂಬ ಗುರುಗಳು
ಲೋಕದ ಮಾನವರನುದ್ಧರಿಸುವ ಪರಿ ಎಂತೆಂದಡೆ :
ತಾನು ಪರಿಪೂರ್ಣತತ್ವವನರಿವ ಸಾಧನದಲ್ಲಿಹನಾಗಿ
ಭವಿಯ ಭವಿತ್ವವ ಕಳೆದು ಭಕ್ತನ ಮಾಡುವ ಸಾಮಥ್ರ್ಯವು
ಆ ಸಾಧಕ ಗುರುವಿನಿಂದ ಸಾಧ್ಯವಾಗದು ನೋಡಾ.
ಷಟ್ಸ್ಥಲಜ್ಞಾನದಲ್ಲಿ ಸಿದ್ಧನಾದ ಸದ್ಗುರು ತಾನು ನಿತ್ಯನಿರ್ಮಲನಾದಡೆಯೂ
ವೀರಶೈವ ಕ್ರಮಾಚರಣೆಯನಾಚರಿಸುತ್ತ,
ತನ್ನ ಶಿವಭಕ್ತಿಯ ಶಕ್ತಿಯನ್ನು ಬಿತ್ತರಿಸಲು
ಆಕಸ್ಮಾತ್ ತನ್ನ ದಿವ್ಯದೃಷ್ಟಿಯಿಂದ ಪರೀಕ್ಷಿಸಿ
ಭವಿಯ ಭವಿತ್ವವ ಕಳೆದು ಭಕ್ತನ ಮಾಡುತ್ತಿಹನು ನೋಡಾ.
ಶಿವನು ಮತ್ತು ಶಿವನಾಣತಿಯಂ ಪಡೆದ ಪ್ರಮಥರು
ಗುರುರೂಪದಿಂದ ಧರೆಗವತರಿಸಿ ಬಂದು,
ಭವಿ-ಭಕ್ತರೆಂಬ ಭೇದವನೆಣಿಸದೆ
ಕ್ರಮಾಚಾರಮಂ ಮೀರಿದ ದಿವ್ಯಲೀಲೆಯಿಂದ
ತಮ್ಮಡಿಗೆರಗಿದ ನರರೆಲ್ಲರ ಭಕ್ತರ ಮಾಡುತ್ತಿಹರು ನೋಡಾ.
ಇದು ಕಾರಣ, ಕೂಡಲಚೆನ್ನಸಂಗಮದೇವನ ಶರಣರು
ಈ ಕ್ರಮವನರಿದು ಗುರುಸೇವೆಗೈದರು./166
ಅರಮನೆಯ ಕೂಳನಾದಡೆಯು ತಮ್ಮುದರದ ಕುದಿಹಕ್ಕೆ ಲಿಂಗಾರ್ಪಿತವೆಂದೆಡೆ
ಅದು ಲಿಂಗಾರ್ಪಿತವಲ್ಲ ಆನರ್ಪಿತ. ಅದೆಂತೆಂದೆಡೆ :
ಅರ್ಪಿತಂಚ ಗುರೋರ್ವಾಕ್ಯಂ ಕಿಲ್ಬಿಷಸ್ಯ ಮನೋರ್ಪಿತಂ
ಅನರ್ಪಿತಸ್ಯ ಭುಂಜಿಯಾನ್ ರೌರವಂ ನರಕಂ ವ್ರಜೇತ್ ಎಂದುದಾಗಿ
ತನ್ನ ಒಡಲಕಕ್ಕುಲತೆಗೆ ಆಚಾರವನನುಸರಿಸಿ
ಭವಿಶೈವ ದೈವ ತಿಥಿವಾರಂಗಳ ಹೆಸರಿನಲ್ಲಿ ಅಟ್ಟಿ
ಕೂಳತಂದು ತಮ್ಮ ಇಷ್ಟಲಿಂಗಕ್ಕೆ ಕೊಟ್ಟು
ಹೊಟ್ಟೆಯ ಹೊರೆವ ಆಚಾರಭ್ರಷ್ಟ ಪಂಚಮಹಾಪಾತಕರಿಗೆ
ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ
ಪಾದೋದಕವಿಲ್ಲ ಪ್ರಸಾದವಿಲ್ಲ, ಪ್ರಸಾದವಿಲ್ಲವಾಗಿ ಮುಕ್ತಿಯಿಲ್ಲ.
ಮುಂದೆ ಅಘೋರ ನರಕವನುಂಬರು.
ಇದನರಿದು ನಮ್ಮ ಬಸವಣ್ಣನು ತನುವಿನಲ್ಲಿ ಆಚಾರಸ್ವಾಯತವಾಗಿ.
ಮನದಲ್ಲಿ ಅರಿವು ಸಾಹಿತ್ಯವಾಗಿ
ಪ್ರಾಣದಲ್ಲಿ ಪ್ರಸಾದ ಸಾಹಿತ್ಯವಾಗಿ
ಇಂತೀ ತನು-ಮನ-ಪ್ರಾಣಂಗಳಲ್ಲಿ ಸತ್ಯ ಸದಾಚಾರವಲ್ಲದೆ
ಮತ್ತೊಂದನರಿಯದ ಭಕ್ತನು
ಭವಿಶೈವ ದೈವ ತಿಥಿ ಮಾಟ ಕೂಟಂಗಳ ಮನದಲ್ಲಿ ನೆನೆಯ.
ತನುವಿನಲ್ಲಿ ಬೆರಸ ಭಾವದಲ್ಲಿ ಬಗೆಗೊಳ್ಳ ಏಕಲಿಂಗ ನಿಷ್ಠಾಪರನು
ಪಂಚಾಚಾರಯುಕ್ತನು ವೀರಶೈವ ಸಂಪನ್ನ
ಸರ್ವಾಂಗಲಿಂಗಿ ಸಂಗನಬಸವಣ್ಣನು
ಈ ಅನುವ ಎನಗೆ ಅರುಹಿಸಿ ತೋರಿದ ಕಾರಣ
ನಾನು ಬದುಕಿದೆನು ಕಾಣಾ ಕೂಡಲಚೆನ್ನಸಂಗಮದೇವಾ./167
ಅರಮನೆಯ ಕೂಳನಾದರೆಯೂ ತಂದು,
ಒಡಲ ಕುದಿಹಕ್ಕೆ ಲಿಂಗಾರ್ಪಿತವ ಮಾಡಿದರೆ
ಅದು ಲಿಂಗಾರ್ಪಿತವಹುದೆಳ ಅಲ್ಲ, ಅದು ಅನರ್ಪಿತ.
ಅರ್ಪಿತಂ ಚ ಗುರೋರ್ವಾಕ್ಯಾತ್ಕಿಲ್ಬಿಷಂ ಸ್ಯಾದನರ್ಪಿತಂ
ಯದ್ಯನರ್ಪಿತಂ ಭುಂಜೀಯಾತ್ ಕೌರವಂ ನರಕಂ ವ್ರಜೇತ್
ತನುಸಾಹಿತ್ಯ ಮನಸಾಹಿತ್ಯ ಧನಸಾಹಿತ್ಯ
ಲಿಂಗಸಾಹಿತ್ಯ ಪ್ರಸಾದಸಾಹಿತ್ಯವಾದ ಕಾರಣ,
ಕೂಡಲಚೆನ್ನಸಂಗಮದೇವರಲ್ಲಿ ಈ ಅನುವ ಬಸವಣ್ಣ ತೋರಿದನಾಗಿ,
ಅನು ಬದುಕಿದೆನು. /168
ಅರವತ್ತುನಾಲ್ಕು ಶೀಲದಲ್ಲಿ ನಡೆದು ತೋರಿದನೆನಗೆ ಬಸವಣ್ಣ ನೋಡಯ್ಯಾ.
ಆ ನಡೆಯನು ಹಿಡಿದು ಬಿಡದೆ ನಡೆವೆನು, ಲಿಂಗ ಜಂಗಮ ಸಾಕ್ಷಿಯಾಗಿ.
ಈ ನಡೆಯನು ಹಿಡಿದು ನಡೆವೆನು, ಪ್ರಸಾದ ಸಾಕ್ಷಿಯಾಗಿ.
ದೃಢದಿಂದ ಹಿಡಿದು ಬಿಡದೆ ಕಡೆಮುಟ್ಟಿ ಸಲಿಸುವೆ,
ಕೂಡಲಚೆನ್ನಸಂಗಮದೇವಾ. /169
ಅರಸನ ಹೆಸರಿಟ್ಟ ಅನಾಮಿಕನಂತೆ
ನಾಮಕ್ಕರುಹರಲ್ಲದೆ ಪಟ್ಟಕ್ಕರುಹರಪ್ಪರೆ ?
ಲಿಂಗ ಜಂಗಮ ಪ್ರಸಾದದ ಅನುಭಾವದ
ಹೆಸರ ಹೇಳಿಕೊಂಡು ಬದುಕುವರಲ್ಲದೆ,
ವೇಷವ ಧರಿಸಿಪ್ಪ ಆಶ್ರಿತರೆಲ್ಲರೂ, ಸಜ್ಜನ ಸಂಬಂಧ
ಗುಣಾದಿಗುಣಂಗಳಿಗೆ ಯೋಗ್ಯರೆ ?
ಕೂಡಲಚೆನ್ನಸಂಗಯ್ಯಾ ಸಹಜ ಸಮ್ಯಕ್ಕರಲ್ಲದವರಂತಿರಲಿ. /170
ಅರಸನಾ(ಳುವ)ಗ್ರಾಮ ಪುರ ಪಟ್ಟಣದೊಳಗೆ ತಾನಿದ್ದು
ಸೀಮೆ ನಿಸ್ಸೀಮೆ ಇದೇನಯ್ಯಾ
ಬಂಧ ನಿರ್ಬಂಧವಿಲ್ಲಾಗಿ ಶರಣಂಗೆ ಸಂದು ಸಾಧನ (ಸಂಶಯಳ)ವುಂಟೆ
ಎಡೆಗೆ ಕಡೆಯುಂಟೆ?
ಅಗುಸೆಯಲ್ಲಿ ಹೋಗುವನೆ? ಚೋರಖಂಡಿಯಲ್ಲಿ ನುಸುಳುವನೆ
ಇದು ಕಾರಣ ಕೂಡಲಚೆನ್ನಸಂಗಾ.
ಅನಿತ್ಯ ಮಿಥ್ಯವ ಕಳೆದು ನಿತ್ಯನಾದ ಶರಣ./171
ಅರಸಿ ನೋಡುವುದು, ನೋಡಿ ನಂಬುವುದು,
ನಂಬಿ ನಚ್ಚುವುದು, ನಚ್ಚಿ ಮಚ್ಚುವುದು,
ಮಚ್ಚಿ ಅವರೊಕ್ಕುದ ಕೊಂಬುದು;
ಭಕ್ತನಪ್ಪೆ, ಮುಕ್ತನಪ್ಪೆ, ಕೂಡಲಚೆನ್ನಸಂಗಮನಪ್ಪೆ./172
ಅರಸಿನ ಭಕ್ತಿ ಅಹಂಕಾರದಲ್ಲಿ ಹೋಯಿತ್ತು,
ಓಲೆಕಾರನ ಭಕ್ತಿ ಅಲಗಿನ ಮನೆಯಲ್ಲಿ ಹೋಯಿತ್ತು,
ಬಣಜಿಗನ ಭಕ್ತಿ ಬಳ್ಳದ ಮೊನೆಯಲ್ಲಿ ಹೋಯಿತ್ತು,
ಅಕ್ಕಸಾಲೆಯ ಭಕ್ತಿ ಅಗ್ಗಷ್ಟಿಗೆಯಲ್ಲಿ ಹೋಯಿತ್ತು,
ಶೀಲವಂತನ ಭಕ್ತಿ ಶಂಕೆಯಲ್ಲಿ ಹೋಯಿತ್ತು,
ಮಾಟ ಕೊಟದವನ ಭಕ್ತಿ ಅಂಜಿಕೆಯಲ್ಲಿ ಹೋಯಿತ್ತು,
ವ್ರತಸ್ಥನ ಭಕ್ತಿ ಪ್ರಪಂಚಿನಲ್ಲಿ ಹೋಯಿತ್ತು.
ಇದು ಕಾರಣ, ಕೂಡಲಚೆನ್ನಸಂಗಯ್ಯಾ
ಕಿರಾತರು ಹುಟ್ಟಿ ಪುರಾತರು ಅಡಗಿದರು. /173
ಅರಸಿನ ಭಕ್ತಿ ಅಹಂಕಾರದಿಂದ ಕೆಟ್ಟಿತ್ತು,
ಸೂಳೆಯ ಭಕ್ತಿ ಎಂಜಲ ತಿಂದಾಗಲೆ ಹೋಯಿತ್ತು,
ನಂಟುತನದ ಭಕ್ತಿ ನಾಯಕನರಕ,
ಬಡವನ ಭಕ್ತಿ ನಿಧಾನ-
ಇದು ಕಾರಣ, ಕೂಡಲಚೆನ್ನಸಂಗಮದೇವಾ
ನಿಮ್ಮ ಭಕ್ತರಿಗೆ ಬಡತನವನೆ ಕೊಡು./174
ಅರಸು ಮನೆಯೊಳಗಿದ್ದಲ್ಲಿ ಬಾಗಿಲಿಗೆ ಪದಾರ್ಥವ ತಂದು
ಅರ್ಪಿತವೆಂದರೆ ಅರ್ಪಿತವಹುದೆ?
ಅವಸರಕ್ಕೆ ಬಂದ ಪದಾರ್ಥವ ಅರ್ಪಿತವ ಮಾಡಿ,
ಅನವಸರಕ್ಕೆ ಬಂದ ಪದಾರ್ಥವನೋಸರಿಸಿದರೆ ಆತ ಲಿಂಗಪ್ರಸಾದಿಯಲ್ಲ.
ತನ್ನ ಲಿಂಗಕ್ಕೆ ಬಾರದ ರುಚಿ ಕೃತಕಿಲ್ಬಿಷವೆಂದುದು
ಕೂಡಲಚೆನ್ನಸಂಗನ ವಚನ. /175
ಅರಸುವಂಗೆ ಅರಸುವಂಗೆ ಅರಕೆ ತಾನಹುದು, ದೇವಾ !
ಬಯಸುವಂಗೆ ಬಯಸುವಂಗೆ ಬಯಕೆ ತಾನಹುದು, ದೇವಾ !
ನೀವು ಭಾವಿಸಿದಂತಲ್ಲದೆ ಬೇರೊಂದಾಗಬಲ್ಲುದೆ ?
ಈರೇಳು ಭುವನಸ್ಥಾಪ್ಯ ಪ್ರಾಣಿಗಳೆಲ್ಲ ನಿಮ್ಮಿಂದಲಾದವಾಗಿ.
ನಿಮ್ಮಿಂದಲಹುದಾಗದೆಂಬ ಸಂದೇಹವುಂಟೆ ಬಸವಣ್ಣ ?
ನಿಮ್ಮಡಿಗಳೆಂದಂತೆ, ನೆನೆದಂತೆ, ನೋಡಿದಂತೆ, ತಪ್ಪದು.
ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ
ಪ್ರಭುವಿನಾಣೆ ಕಟ್ಟು ಗುಡಿಯನು./176
ಅರಿದೆನೆಂಬನ ಅರಿವೆ ನುಂಗಿತ್ತು.
ಮರೆದೆನೆಂಬನ ಮರಹೆ ನುಂಗಿತ್ತು.
ಇನ್ನೇನಿದ್ದುದಯ್ಯಾ ಅವಧಾನಗೆಟ್ಟು ನಡೆಯದನ್ನಕ್ಕ !
ಅರಿವಿನ ಮರಹಿನ ಕುರುಹು ತಾನಲ್ಲ,
ಕೂಡಲಚೆನ್ನಸಂಗಾ ಲಿಂಗೈಕ್ಯವು./177
ಅರಿಯಲಿಲ್ಲದ ಅರಿವು, ಮರೆಯಲಿಲ್ಲದ ಮರಹು.
ನೋಟವಿಲ್ಲದ ನೋಟ, ಕೂಟವಿಲ್ಲದ ಕೂಟ.
ಬೆರಸಲಿಲ್ಲದ ಬೆರಗು ನಿಂದುದು,
ಕೂಡಲಚೆನ್ನಸಂಗಾ ಲಿಂಗೈಕ್ಯವು/178
ಅರಿವರತು ಕುರುಹು ನಷ್ಟವಾದ ಬಳಿಕ
ಕುರುಹಿನ ಬಣ್ಣ ಅಂಗದ ಮೇಲೇಕೊ ಘಟ್ಟಿವಾಳಂಗೆ ?
ಅರಿವನಾರು ? ಅರುಹಿಸಿಕೊಂಬನಾರು ?
ಬರಿಯ ಬಯಲು ಕಾಣಾ, ಕೂಡಲಚೆನ್ನಸಂಗಾ
ನಿಮ್ಮ ಶರಣ ಘಟ್ಟಿವಾಳನಲ್ಲದೆ ನೆರೆ ಅರಿವರಾರೊ ? /179
ಅರಿವರತು ಮರುಹು (ಕುರುಹು?) ನಷ್ಟವಾದರೆ ಭಕ್ತ,
ಆಚಾರವರತು ಅನಾಚಾರ ನಷ್ಟವಾದರೆ ಜಂಗಮ,
ಅರ್ಪಿತವರತು ಅನರ್ಪಿತ ನಷ್ಟವಾದರೆ ಪ್ರಸಾದಿ,
ಪ್ರಸಾದವರತು ಪದಾರ್ಥ ನಷ್ಟವಾದರೆ ಪರಿಣಾಮಿ,
ಪರಿಣಾಮವರತು ಪರಮಸುಖ ನೆಲೆಗೊಂಡರೆ
ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯವು. /180
ಅರಿವಾರಡಿಗೊಂಡುದು ಮನ, ಮನದಲ್ಲಿ ಘನವಡಗಿತ್ತು,
ಆಶ್ರಯವಿಲ್ಲ.
ಬಲ್ಲೆನೆಂಬರೆ ನೆರೆ ಅರಿತ ಅರಿವು ಘನ,
ಘನದಲ್ಲಿ ಆಶ್ರಯ ನಿರಾಶ್ರಯವಿಲ್ಲ,
ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ./181
ಅರಿವಿಂದಲಾದ ಮರಹಿನ ಶಬ್ದವನರಿಯಲಾಗದು,
ಅರಿದಡದಕ್ಕೆ ಭವವು (ಭಂಗವು?),
ಅರಿವರತು ಮರಹು ನಷ್ಟವಾಗಿ ಜ್ಞಾನ ಬೆಂದಲ್ಲಿ ನಿರ್ಣಯವೆಲ್ಲಿಯದು ?
ಜ್ಞಾನದೊಳಗಣ ಬುದ್ಧಿಯ ಭಸ್ಮವಾಗಿ ಧರಿಸಿದಲ್ಲಿ
ಕೂಡಲಚೆನ್ನಸಂಗಮದೇವರು ಸರ್ವನಿವಾಸಿ. /182
ಅರಿವಿನ ತೃಪ್ತಿಗೆ ಅನುಭಾವವಾಶ್ರಯ.
ಲಿಂಗದ ಅನುಭಾವದಿಂದ ನಿಮ್ಮ ಕಂಡೆ.
ನಿಮ್ಮ ಕಂಡೆನ್ನ ಮರೆದೆ, ಕೂಡಲಚೆನ್ನಸಂಗಮದೇವಾ. /183
ಅರಿವಿನಾಶ್ರಯ ಸಂಗವನರಿತು ನೆರೆ ಕೂಡಲು,
ಭಾವದಲ್ಲಿ ಸರ್ಪದಷ್ಟವಾಗಿ ಆಕಾರ ಪ್ರಾಣದಲ್ಲಿಯೇ ವಿಶ್ರಮಿಸಿತ್ತು.
ಭಾವದಲ್ಲಿ ಭರಿತ, ನಿರ್ಭಾವದಲ್ಲಿ ನಿರುತ,
ಕೂಡಲಚೆನ್ನಸಂಗಯ್ಯ ಸಕಳಾಶ್ರಯಸಂಗ ನಿರ್ಣಯ. /184
ಅರಿವಿನೆಡೆಯನರಿದೆಹೆನೆಂದರೆ ಅರಿವು ಮರಹಿಂಗೊಳಗಾಯಿತ್ತಾಗಿ,
ಆ ಅರಿವಿಂದ ಅರಿದೆವೆಂಬ ಬರಿಜ್ಞಾನಿಯ ಮಾತ ಕೇಳಲಾಗದು.
ಭಾವದಿಂದ ಭಾವಿಸಿದರೆ ಭಾವ ಭ್ರಾಂತಿಗೊಳಗಾಯಿತ್ತಾಗಿ
ಭಾವದಿಂದ ಭಾವಿಸಿಹೆನೆಂಬ ಭ್ರಮಿತರ ಮಾತ ಕೇಳಲಾಗದು.
ಜ್ಞಾನದಿಂದ ಅರಿದೆನೆಂದರೆ ಜ್ಞಾನ ಅಜ್ಞಾನಕ್ಕೊಳಗಾಯಿತ್ತಾಗಿ
ಜ್ಞಾನದಿಂದ ಅರಿದೆನೆಂಬ ಅಜ್ಞಾನಿಯ ಮಾತ ಕೇಳಲಾಗದು,
ಸುಜ್ಞಾನಭರಿತ ಕೂಡಲಚೆನ್ನಸಂಗಾ ನಿಮ್ಮ ಶರಣ./185
ಅರಿವಿಲ್ಲದ ಕಾರಣ ಭವಕ್ಕೆ ಬಂದರು,
ಅರಿವಿಲ್ಲದವಂಗೆ ಗುರುವಿಲ್ಲ, ಗುರುವಿಲ್ಲದವಂಗೆ ಆಚಾರವಿಲ್ಲ.
ಆಚಾರವಿಲ್ಲದವಂಗೆ ಲಿಂಗವಿಲ್ಲ, ಲಿಂಗವಿಲ್ಲದವಂಗೆ ಜಂಗಮವಿಲ್ಲ.
ಜಂಗಮವಿಲ್ಲದವಂಗೆ ಪ್ರಸಾದವಿಲ್ಲ, ಪ್ರಸಾದವಿಲ್ಲದವಂಗೆ ಗಣತ್ವವಿಲ್ಲ.
ಅರಿವು ಸಾಹಿತ್ಯ ಗುರು, ಗುರುಸಾಹಿತ್ಯ ಆಚಾರ,
ಆಚಾರಸಾಹಿತ್ಯ ಲಿಂಗ, ಲಿಂಗಸಾಹಿತ್ಯ ಜಂಗಮ,
ಜಂಗಮಸಾಹಿತ್ಯ ಪ್ರಸಾದ, ಪ್ರಸಾದಸಾಹಿತ್ಯ ಗಣತ್ವ.
ಇದು ಕಾರಣ, ಕೂಡಲಚೆನ್ನಸಂಗನಲ್ಲಿ
ಈ ಸ್ಥಲವಾದವರಿಗೆಲ್ಲಾ ಭಕ್ತಿ ಉನ್ಮದ ಉಂಟು,
[ಸಕಳ] ನಿರ್ವಾಣ ಲಿಂಗೈಕ್ಯಪದವಪೂರ್ವ. /186
ಅರಿವು ನಾಸ್ತಿಯಾದುದೆ ಗುರು, ಕುರುಹು ನಾಸ್ತಿಯಾದುದೆ ಲಿಂಗ,
ಕಾಯಗುಣ ನಾಸ್ತಿಯಾದುದೆ ವಿಭೂತಿ,
ಕರಣಗುಣನಾಸ್ತಿಯಾದುದೆ ರುದ್ರಾಕ್ಷಿ,
ಮರಣ (ಮರಹು?) ನಾಸ್ತಿಯಾದುದೆ ಮಂತ್ರ-
ಇಂತೀ ಪಂಚಾಚಾರಪ್ರತಿಷ್ಠೆಯುಳ್ಳಾತನೆ
ಕೂಡಲಚೆನ್ನಸಂಗಯ್ಯನಲ್ಲಿ ಸದಾಚಾರಿ./187
ಅರಿವು ಮುಂತಾಗಿ ಕೊಂಬುದು ಪ್ರಸಾದವಲ್ಲ,
ಲಿಂಗ ಮುಂತಾಗಿ ಕೊಂಬುದು ಪ್ರಸಾದವಲ್ಲ,
ಜಂಗಮ ಮುಂತಾಗಿ ಕೊಂಬುದು ಪ್ರಸಾದವಲ್ಲ,
ಸಯಜ್ಞಾನವಳಿದರೂ ಪ್ರಸಾದವಲ್ಲ,
ಇವು ಏನೂ ಪ್ರಸಾದವಲ್ಲ, ಸಹಜಪ್ರಸಾದವೆ ಬೇಕು.
ಅಂತಪ್ಪ ಪ್ರಸಾದಿಯ ತೋರಿ ಬದುಕಿಸಯ್ಯಾ
ಕೂಡಲಚೆನ್ನಸಂಗಮದೇವಾ./188
ಅರುಹಿನ ಮರಹಿನ ಅಪ್ಯಾಯನವ ಲಿಂಗಕ್ಕೆ ಕೊಡುವ
ಗುರುದ್ರೋಹಿಯನೇನೆಂಬೆ ? ಲಿಂಗದ್ರೋಹಿಯನೇನೆಂಬೆ ?
ಇಷ್ಟಲಿಂಗಮವಗ್ರಾಹೀ ಪ್ರಾಣಲಿಂಗೇನ ಸಂಯುತಃ
ನಿಮಿಷಾರ್ಧವಿಯೋಗೇನ ಮಹಾಪಾಪಂ ತು ಸಂಭವೇತ್
ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ಅರಿವಿನ ಮರಹಿನ ಭಕ್ತಿ,
ಬಾಯಲ್ಲಿ ಹುಡಿಯ ಹೊಯ್ದು ಹೋಯಿತ್ತು. /189
ಅರುಹಿನಾಪ್ಯಾಯನಕ್ಕೆ ಅನುಭಾವವೇ ತೃಪ್ತಿ.
ಅರಿವು ನೆರೆ ಕೂಡಿ, ಆಚಾರವೆ ಪ್ರಾಣವಾಗಿ
ವಿಶ್ರಮಿಸಿದ ಬಳಿಕ, ಶ್ರೀಗುರು ಕೃಪೆಮಾಡಿದ
ಪ್ರಾಣಲಿಂಗದ ದುರುಶನ ಎಂತೆಂದಡೆ :
ಮತ್ಸ್ಯನುಂಗಿದ ಮಾಣಿಕ್ಯದಂತೆ
ಹೊಸ್ತಿಲಲೆತ್ತಿದ ಜ್ಯೋತಿಯಂತೆ
ಸ್ಫಟಿಕದ ಘಟದಂತೆ, ಮುತ್ತು ನುಂಗಿದ ನೀರಿನಂತೆ
ಕಣ್ಣಾಲೆ ನುಂಗಿದ ನೋಟದಂತೆ
ಬಯಲನೊಳಕೊಂಡ ಬ್ರಹ್ಮಾಂಡದೊಳಗಿಪ್ಪ
ಸ್ವಾನುಭಾವಿಗಳ ಅನುಭಾವವ ತೋರಿ
ಬದುಕಿಸು ಕೂಡಲಚೆನ್ನಸಂಗಮದೇವಾ./190
ಅರೆಭಕ್ತರಾದವರ ನೆರೆಮನೆಯಲ್ಲಿರಲಾಗದು
ಲಿಂಗನಿಷ್ಠೆಯಿಲ್ಲದವರ ಅಂಗಳವ ಮೆಟ್ಟಲಾಗದು
ಜಂಗಮಪ್ರೇಮವಿಲ್ಲದವರೊಡನೆ ಮಾತನಾಡಲಾಗದು
ಪ್ರಸಾದ ಪ್ರಸನ್ನಿಕೆಯಿಲ್ಲದವರ ಸಹಪಂಕ್ತಿಯಲ್ಲಿ ಕುಳ್ಳಿರಲಾಗದು.
ಇದು ಕಾರಣ, ಕೂಡಲಚೆನ್ನಸಂಗಯ್ಯಾ ನೀವು ಸಾಕ್ಷಿಯಾಗಿ
ಚತುರ್ವಿಧ ಸನ್ನಹಿತರಲ್ಲದವರ ಮೆಚ್ಚರು ನಿಮ್ಮ ಶರಣರು./191
ಅರ್ಥ ಪ್ರಾಣ ಅಬಿಮಾನ ಭಕ್ತಂಗೆ ಹೊಲ್ಲದೆಂಬರು,
ತಮ್ಮ ಹೊದ್ದಿದ ಮಲಿನವನರಿಯರು.
ಕರುಳು ಕೊಳ್ಳದ ಉದಾನವ ಮರಳಿ ಅರ್ಪಿತವೆಂದು ಕೊಳಬಹುದೆ ?
ಬೇಡುವಾತ ಜಂಗಮವಲ್ಲ, ಮಾಡುವಾತ ಭಕ್ತನಲ್ಲ.
ಬೇಡದ ಮುನ್ನವೆ ಮಾಡಬಲ್ಲರೆ ಭಕ್ತ.
ಬೇಡಿ ಮಾಡಿಸಿಕೊಂಬನ್ನಬರ ಜಂಗಮವಲ್ಲ.
ಓಡಲಾರದ ಮೃಗವು ಸೊಣಗಂಗೆ ಮಾಂಸವನೀವಂತೆ.
ಇದು ಕಾರಣ, ಕೂಡಲ ಚೆನ್ನಸಂಗಯ್ಯನಲ್ಲಿ
ಮಾಡುವ ಭಕ್ತ, ಬೇಡದ ಜಂಗಮವಪೂರ್ವ. /192
ಅರ್ಥದ ಭಕ್ತಿ ಉತ್ತರಿಸಿ ಹೋಯಿತ್ತು,
ಅರಸು ಭಕ್ತಿ `ನಿಲ್ಲು, ಮಾಣು’ ಎಂದಲ್ಲಿ ಹೋಯಿತ್ತು,
ಆಚರಣೆಯ ಭಕ್ತಿ ಅಡಗಿ ಹೋಯಿತ್ತು,
ಕೂಡಲಚೆನ್ನಸಂಗಮದೇವರಲ್ಲಿ
ಕೀಟಕರು ಹೆಚ್ಚಿ, ಪುರಾತರು ಅಡಗಿಹೋದರು/193
ಅರ್ಥದ ಮದ, ಅಹಂಕಾರದ ಮದ, ಕುಲಮದ ಬಿಡದೆ,
ಸಮಯಾಚಾರ ಸಮಯಭಕ್ತಿ ಇನ್ನಾರಿಗೆಯೂ ಅಳವಡದು ನೋಡಾ.
ಮಾತಿನ ಮಾತಿನ ಮಿಂಚಿನ ಢಾಳಕರಿಗೆ ಸಮಯಭಕ್ತಿ ಇನ್ನೆಲ್ಲಿಯದೊ
ಕೂಡಲಚೆನ್ನಸಂಗಯ್ಯಾ ? /194
ಅರ್ಥಪ್ರಾಣ ಅಬಿಮಾನದಲ್ಲಿ ಆನು ಶರಣನೆಂಬನ್ನಕ್ಕ ಅಭೇದ್ಯವಯ್ಯಾ
ಲಿಂಗ ಜಂಗಮ. ಶರಣು, ಶಿವಸಂಗನಬಸವ ಶರಣಯ್ಯಾ.
ಕೂಡಲಚೆನ್ನಸಂಗನು ಶರಣಸತಿ ಲಿಂಗಪತಿ ಪೂರ್ಣನಾಗಿ./195
ಅರ್ಥಪ್ರಾಣಾಬಿಮಾನವ ಕೊಟ್ಟು ಕರ್ತೃ-ಭೃತ್ಯನ ಮಾತಿಗೆ
ಮನೆಯ ಬಾಗಿಲಿಗೆ ಹೋಗಿ, `ನನಗೆ ಮಾಡಿ ನೀಡು’ ಎಂದು
ಉಪಾದಿಕೆಯ ನುಡಿದರೆ ಅವನ ಕರ್ತೃತನ ಅದೇ ಹಾಳು.
ಅದೇನು ಕಾರಣ ಎಂದರೆ
ಕರ್ತನಿದ್ದೆಡೆಗೆ ಭೃತ್ಯ ತಾನೆ ಬಂದು, ದೀರ್ಘದಂಡ ನಮಸ್ಕಾರ ಮಾಡಿ,
ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಬಲ್ಲಾತನೆ ಭೃತ್ಯ,
ಪರಿಣಾಮಿಸಬಲ್ಲಾತನೆ ಕರ್ತ
ಕೂಡಲಚೆನ್ನಸಂಗಮದೇವರಲ್ಲಿ ಮೀರಿದ ಸಯಸ್ಥಲವಪೂರ್ವ/196
ಅರ್ಥೆಷಣ ಪುತ್ರೇಷಣ ದಾರೇಷಣವೆಂಬ
ಈಷಣತ್ರಯಂಗಳನೆ ಬಿಟ್ಟು, ಮಂಡೆ ಬೋಳಾದ ಬಳಿಕ
ಮರಳಿ ಹೊನ್ನಿಂಗೆರಗಿದಡೆ ಗುರುದ್ರೋಹಿ,
ಹೆಣ್ಣಿಂಗೆರಗಿದಡೆ ಲಿಂಗದ್ರೋಹಿ
ಮಣ್ಣಿಂಗೆರಗಿದಡೆ (ಜಂಗಮದ್ರೋಹಿ),
ಆತ ಪೂರ್ವಾಚಾರಿಯಲ್ಲ.
“ಸ್ಥಾವರಂ ಬಿನ್ನದೋಷೇಣ ವ್ರತಭ್ರಂಶೇನ ಜಂಗಮಃ
ಉಭಯೊರ್ಬಿನ್ನಭಾವೇನ ನ ಚಾರ್ಚಾ ನ ಚ ವಂದನಂ
ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ,
ಬಸವಣ್ಣನೊಬ್ಬನೆ ಭಕ್ತ; ಪ್ರಭುವೆ ಜಂಗಮ/197
ಅರ್ಪಿತ ಅನರ್ಪಿತವೆಂಬರು, ಅರ್ಪಿತವ ಮಾಡುವ ಪರಿಯೆಂತಯ್ಯಾ?
ತನು ಮುಟ್ಟಿ ಕೊಟ್ಟುದು ಲಿಂಗಾರ್ಪಿತವಲ್ಲ,
ಮನ ಮುಟ್ಟಿ ಕೊಟ್ಟುದು ಲಿಂಗಾರ್ಪಿತವಲ್ಲ,
ಅರ್ಪಿತದ ಕ್ರಮವ ಕೂಡಲಚೆನ್ನಸಂಗಾ ನಿಮ್ಮ ಶರಣ ಬಲ್ಲ. /198
ಅರ್ಪಿತ ಅರ್ಪಿತವೆನುತ್ತಿಹರೆಲ್ಲ
ಅರ್ಪಿತವಾವುದೆಂದು ಹೇಳಿರಯ್ಯಾ?
ಕಾಯಾರ್ಪಿತವೆಂಬಿರೆ ಅಳಿವಿನೊಳಗಾಯಿತ್ತು,
ಭಾವಾರ್ಪಿತವೆಂಬಿರೆ ಭ್ರಮೆಗೊಳಗಾಯಿತ್ತು,
ಜಿಹ್ವಾರ್ಪಿತವೆಂಬಿರೆ ರುಚಿಯೊಳಗಾಯಿತ್ತು.
ಸರ್ವವೂ ಶಿವನಾಜ್ಞೆಯೊಳಗೆಂಬಿರೆ ಭವಬಂಧನ ಬಿಡದು,
ಅರ್ಪಿಸಲೇಬೇಕು, ಅರ್ಪಿಸಿದಲ್ಲದೆ ಪ್ರಸಾದವಾಗದು.
ಅರ್ಪಿತದ ಮರ್ಮ ಸಕೀಲನು ಕೂಡಲಚೆನ್ನಸಂಗಾ
ನಿಮ್ಮ ಶರಣ ಬಲ್ಲ./199
ಅರ್ಪಿತ ಆನರ್ಪಿತವೆಂಬ ಉಭಯಕುಳದ ಶಂಕೆವುಳ್ಳನ್ನಕ್ಕ ಅಚ್ಚಸಂಸಾರಿಯೆಂಬೆ.
ಅರ್ಪಿತ ಅನರ್ಪಿತವೆಂಬೆರಡ ಕಳೆದು ನಿಂದಾತನ ಅಚ್ಚಲಿಂಗವಂತನೆಂಬೆ.
ಅರ್ಪಿತ ಅನರ್ಪಿತವನರ್ಪಿಸಿ ಪ್ರಸಾದ ಸ್ವೀಕರಿಸಬಲ್ಲಡಾತನ ವಾಙ್ಮನಾತೀತನೆಂಬೆ.
ಅರ್ಪಿತವಿಲ್ಲ, ಅನರ್ಪಿತವಿಲ್ಲ,
ಅಕಲ್ಪಿತವಯ್ಯಾ, ಕೂಡಲಚೆನ್ನಸಂಗಮದೇವಾ. /200
ಅರ್ಪಿತ ಭುಂಜಕನ, ಪ್ರಸಾದ ಭುಂಜಕನ ಪರಿ ಬೇರೆ,
ಅರ್ಪಿತವೆಂದು ಸ್ಥೂಲ ಸೂಕ್ಷ್ಮವೆಂದೆನ್ನದೆ
ಘನಕ್ಕೆ ಘನ ಮಹಾಘನ ಕಾಯ ಜೀವವೊಂದಯ್ಯಾ.
ಅರ್ಥ ಪ್ರಾಣ ಅಭಿಮಾನ ಸವೆದಡೆ ಸಮಭೋಗರುಚಿಪ್ರಸಾದಿ.
ಈ ಉಭಯಲಿಂಗದ ಮಹಿಮೆಯನು ಇನ್ನುಪಮಿಸಬಾರದು.
ರೂಹಿಸಿ ಭಾವಿಸಿ ಗುಣಪ್ರಪಂಚವನತಿಗಳೆದು ನಿರ್ವಿಕಲ್ಪಿತನಾದಾತ
ಆನೆಂಬ ಶಬ್ದವಳಿದುಳಿದ ಪ್ರಸಾದಗ್ರಾಹಕ ನಿಂದ ನಿಲುವು,
ಪರತಂತ್ರ ಪರಿಭಾವ ಪ್ರಪಂಚುವ ಬಿಟ್ಟು ಘನರವಿಲೋಚನನಾಗಿ,
ಅರ್ಪಿತ ಭುಂಜಕನಲ್ಲ, ಆದಿವಿಡಿದಾಗಮನಲ್ಲ.
ಅರ್ಪಿತ ಅನರ್ಪಿತರಹಿತ ಕೂಡಲಚೆನ್ನಸಂಗನಲ್ಲಿ
ಆತ ದಿಟಪ್ರಸಾದಿ./201
ಅರ್ಪಿತ ರೌರವ ನರಕವೆಂದುದು ಗುರುವಚನ
ಅನರ್ಪಿತ ರೌರವನರಕವೆಂದುದು ಗುರುವಚನ.
ಭುಂಜನ ಮಾಡಿದ ರುಚಿಯು ಲಿಂಗಕ್ಕೆಂಬ ಕರ್ಮಿಯ ಮಾತ ಕೇಳಲಾಗದು,
ತಾಗಿದ ಸುಖವು ಲಿಂಗಕ್ಕೆಂಬ ಗುರುದ್ರೋಹಿಯ ಮಾತ, ಕೇಳಲಾಗದು.
ಸರ್ವಾವಸ್ಥಾಗತಾಃ ಪ್ರಾಣಾಃ ಭಾಜನಂ ಭೋಜನಂ ತಥಾ
ಹಸ್ತಲಿಂಗೇ ಪ್ರತಿಗ್ರಾಹ್ಯ ನರಕೇ ಕಾಲಮಕ್ಷಯಂ
ಸಂಕಲ್ಪಂ ಚ ವಿಕಲ್ಪಂ ಚ ಭಾವಾಭಾವವಿವರ್ಜಿತಃ
ನಾಸ್ತ್ಯೇಂದ್ರಿಯಾಂತಃಕರಣಂ ತೇನೈವ ಸಹಭೋಜನಂ ಎಂದುದಾಗಿ
ಲಿಂಗಭಾಜನದಲ್ಲಿ ಸಹಭೋಜನವ ಮಾಡಿದರೆ
ಇಹಪರವಿಲ್ಲೆಂದ ಕೂಡಲಚೆನ್ನಸಂಗಮದೇವ/202
ಅರ್ಪಿತ ವಿಡಿದು ಸಯಿದಾನವಾಯಿತ್ತೀಯೊಡಲಿಂಗೆ,
ಅನರ್ಪಿತವಿಡಿದು ಪ್ರಸಾದವಾಯಿತ್ತೀ ಪ್ರಾಣಕ್ಕೆ.
ತನು ಭೋಗಿಸುವುದು ಉಪಾದಿ [ಕ] ಪ್ರಸಾದ,
ಪ್ರಾಣ ಭೋಗಿಸುವುದು ಪರಿಣಾಮಪ್ರಸಾದ.
ಈ ಭೇದವ ಭೇದಿಸಿ ಪ್ರಾಣಚೈತನ್ಯ ಲಿಂಗವೆಂದರಿದೆನಾಗಿ
ಕೂಡಲಚೆನ್ನಸಂಗನೆಂಬ ಲಿಂಗ ಸ್ವಯವಾಯಿತ್ತು. /203
ಅರ್ಪಿತ ಸಯಿದಾನಪ್ರಸಾದ ಕಾಯಕ್ಕೆ,
ಅನರ್ಪಿತ ಸಯಿದಾನಪ್ರಸಾದ ಪ್ರಾಣಕ್ಕೆಂಬ
ಭೇದವನಾರೂ [ಅರಿವರಿಲ್ಲ]
ತನುವ ಭೋಗಿಸುವ ಉಪಜೀವಿ ಪ್ರಸಾದಿಗಳಲ್ಲದೆ,
ಪ್ರಾಣವ ಭೋಗಿಸುವ ಪರಿಣಾಮಪ್ರಸಾದಿಗಳನೊಬ್ಬರನೂ ಕಾಣೆ.
ಇದು ಕಾರಣ ಕೂಡಲಚೆನ್ನಸಂಗಾ
ನಿಮ್ಮ ಪ್ರಾಣಲಿಂಗಪ್ರಸಾದ ಹುಡಿಮಾಡಿ ಕಾಡಿತ್ತು. /204
ಅರ್ಪಿತದಲ್ಲಿ ಅವಧಾನವರತು,
ಅನರ್ಪಿತದಲ್ಲಿ (ಅರ್ಪಿತದಲ್ಲಿ?) ಸುಯಿಧಾನವರತು.
ಬಂದುದು ಬಾರದುದೆಂದರಿಯದೆ,
ನಿಂದ ನಿಲವಿನ ಪರಿಣಾಮತೆಯಾಯಿತ್ತು.
ರುಚಿ ರೂಪಂ ನ ಚ ಜ್ಞಾನಂ ಅರ್ಪಿತಾನರ್ಪಿತಂ ತಥಾ
ಆದೌ ಪ್ರವರ್ತತೇ ಯಸ್ಯ ಶಿವೇನ ಸಹಮೋದತೇ
ಎಂಬುದಾಗಿ, ಕೂಡಲಚೆನ್ನಸಂಗಯ್ಯಾ.
ನಿಮ್ಮವರು ಶಿವಸುಖಸಂಪನ್ನರಾದರಯ್ಯಾ. /205
ಅರ್ಪಿತವನರ್ಪಿತವೆಂಬ ಸಂದೇಹವಳಿದುಳಿದ ಪ್ರಸಾದಿಗೆ.
ಅರ್ಪಿತ ಪ್ರಸಾದಕ್ಕೆಲ್ಲಿಯದೊ? ಆ ಪ್ರಸಾದ ಅರ್ಪಿತಕ್ಕೆಲ್ಲಿಯದೊ?
ಲಿಂಗಾರ್ಪಿತಪ್ರಸಾದಂ ಚ ನ ದದ್ಯಾಜ್ಜಂಗಮಾಯ ವೈ
ಜಂಗಮಾರ್ಪಿತಪ್ರಸಾದಂ ದದ್ಯಾತ್ತಂ ಲಿಂಗಮೂರ್ತಯೇ
ಮಹದಿಂದಾದ ಸುಖವ ಸೂತಕಕ್ಕಿಕ್ಕುವ ಪಾತಕರನೇನೆಂಬೆ,
ಕೂಡಲಚೆನ್ನಸಂಗಯ್ಯಾ. /206
ಅರ್ಪಿತವಲ್ಲದೊಲ್ಲೆನೆಂದು ಭಕ್ತನಟ್ಟ ಮಡಕೆವೆರಸಿಕೊಟ್ಟ ವಿದಿಯ ನೋಡಾ.
ಅನ್ಯರಿಗಿಕ್ಕುವರೆ ಕೂಳಹುದೆ? ಬಂದ ಜಂಗಮಕ್ಕೆ ಓಗರವಹುದೆ?
ಇಂತು ಪ್ರಸಾದ ಬೀಸರವೋದ ವ್ರತಗೇಡಿಯ ತೋರದಿರು,
ಕೂಡಲಚೆನ್ನಸಂಗಮದೇವಾ. /207
ಅರ್ಪಿತವೆಂದರೆ ಅನರ್ಪಿತವಾಯಿತ್ತು, ಅನರ್ಪಿತವೆಂದರೆ ಅರ್ಪಿತವಾಯಿತ್ತು.
ಗುರುವೆಂದರೆ ಶಿಷ್ಯನಾಯಿತ್ತು, ಶಿಷ್ಯನೆಂದರೆ ಗುರುವಾಯಿತ್ತು.
ಗುರುಶಿಷ್ಯ ಸಂಬಂಧ ಕ್ರೀ ಪ್ರತಿಭಾವವುಳ್ಳನ್ನಕ್ಕ,
ಘನಲಿಂಗೈಕ್ಯವೆಲ್ಲಿಯದೊ ? ಕೂಡಲಚೆನ್ನಸಂಗಮದೇವಾ ?/208
ಅಲ್ಲಲ್ಲಿ ಮುಟ್ಟಿತ್ತನಲ್ಲಲ್ಲಿಯೆ ಕೊಡಲು
ಎಲ್ಲಿ ಹೋಯಿತ್ತಯ್ಯಾ, ನಿಮ್ಮ ಅಂಗಲಿಂಗಾರ್ಪಿತ ?
ಕಾಲ ತಪ್ಪಿದ ಬಳಿಕ ಕೈಗೂಡಿದುದುಂಟೆ ?
ಕೂಡಲಚೆನ್ನಸಂಗಯ್ಯಾ
ಅಶನ ಮರಳುವುದಲ್ಲದೆ ರುಚಿ ಮರಳಲುಂಟೆ ?/209
ಅಲ್ಲಿಂದತ್ತ ಲಿಂಗಪೂಜಕನೆನಿಸುವೆ, ಅಭ್ಯಾಸವಿಡಿದಲ್ಲಿಂದತ್ತ ಲಿಂಗಭಕ್ತನೆನಿಸುವೆ.
ಸದಾಚಾರವಿಡಿದಲ್ಲಿಂದತ್ತ ಲಿಂಗಪ್ರಸಾದಿಯೆಂದೆನಿಸುವೆ.
ಅರ್ಪಿತವಿಡಿದಲ್ಲಿಂದತ್ತ ಪ್ರಾಣಲಿಂಗಿಯೆಂದೆನಿಸುವೆ.
ಪ್ರಾಣಲಿಂಗವಿಡಿದಲ್ಲಿಂದತ್ತ ಲಿಂಗೈಕ್ಯನೆಂದೆನಿಸುವೆ.
ಉಭಯಜ್ಯೋತಿವಿಡಿದಲ್ಲಿಂದತ್ತ
“ಸರ್ವಾಂಗಲಿಂಗೇನ ಸಹ ಮೋದತೇ’ (ಎಂದೆನಿಸುವೆ.)
ಇದು ಕಾರಣ, ಕೂಡಲಚೆನ್ನಸಂಗ
ಲಿಂಗವಿಡಿದಲ್ಲಿಂದತ್ತತ್ತ. /210
ಅವಸರ ಮಾದ ಬಳಿಕ ಅಂಗಭೋಗಂಗಳನೆಲ್ಲವ ಮರೆಯಬೇಕು.
ಅದ ಮೀರಿದ ಘನವು ಅಗಮ್ಯವಾಯಿತ್ತು.
ಅದನರಿಯಬಾರದು ಅಂತಿರಲಿ-
ನಾನು ನೀನೆಂಬ ಭ್ರಾಂತುಳ್ಳನ್ನಕ್ಕ,
ಅಷ್ಟವಿಧಾರ್ಚನೆ, ಷೋಡಶೋಪಚಾರವ ಮಾಡಬೇಕು,
ಕೂಡಲಚೆನ್ನಸಂಗಯ್ಯಾ ಇದ ಮಾಡದಿದ್ದಡೆ ನಾಯಕನರಕ/211
ಅವಸರ, ಆರೋಗಣೆ, ಆಪ್ಯಾಯನ-ತ್ರಿವಿಧವೂ,
ಲಿಂಗ ಮುಖದಲ್ಲಿ ಅರ್ಪಿತವಾಗೆ, ಆತನ ಪ್ರಸಾದಿಯೆಂಬೆನು.
ಅವಸರ ಅನವಸರ ಆತ್ಮ(ಅಂಗ?)ದಿಚ್ಛೆ ಲಿಂಗಮುಖದಲ್ಲಿ ಅರ್ಪಿತವಿಲ್ಲಾಗಿ
ಆತನನೆಂತು ಪ್ರಸಾದಿಯೆಂಬೆನು?
ಅವಸರ ಅನವಸರವರಿದು ವೇದಿಸಬಲ್ಲರೆ
ಆತನ ಪ್ರಸಾದಿಯೆಂಬೆನು-
“ಲಿಂಗಸ್ಯಾವಸರೇ ಯಸ್ತು ಅಚ್ರ್ಯಂ ದದ್ಯಾತ್ ಸುಖಂ ಭವೇತ್
ಎಂದುದಾಗಿ, ಇದು ಕಾರಣ ಕೂಡಲಚೆನ್ನಸಂಗಯ್ಯಾ
ನಿಮ್ಮ ಅವಸರವರಿದು
ಅರ್ಪಿಸುವ ಅರ್ಪಣೆ ಸದ್ಭಾವಿಗಲ್ಲದಿಲ್ಲ./212
ಅವಸರವರಿದು ಸಮಯಾಚಾರವ ಮಾಡಬೇಕಯ್ಯಾ,
ಅವಸರವರಿದು ಸಮಯಭಕ್ತಿ ಸಂಬಂಧವ ಮಾಡಬೇಕಯ್ಯಾ,
ಅವಸರವರಿದು ಮಾಡಬೇಕು, ಬಂದವಸರವ ತಪ್ಪಿಸಬಾರದು.
ಕೂಡಲಚೆನ್ನಸಂಗನ ಸಮಯಾಚಾರಕ್ಕೆ
ಇದೇ ಯುಕ್ತಿ. /213
ಅವಿನಾಶಂಗೆ ವಿನಾಶವರ್ಪಿತವಾದರೆ ಪ್ರಸಾದಿ.
ಆ ಪ್ರಸಾದ ವರ್ಣನಾಸ್ತಿಯಾಗಿ ಕೊಳಬಲ್ಲಡೆ ಪ್ರಸಾದಿ.
ಆ ಪ್ರಸಾದಿಯೆಂಬ ಅವಿನಾಶಂಗೆ ನಮೋ ನಮೋಯೆಂಬೆ
ಕೂಡಲಚೆನ್ನಸಂಗಮದೇವಾ. /214
ಅವಿಶ್ವಾಸಲೋಕದ ಕರ್ಮಿಗಳಿಗೆ,
ಯಮದೂತರೆಂಬ ದಂಡಣೆಯ ಮಾಡಿದೆಯಯ್ಯಾ.
ಶಿವಭಕ್ತರಿಗೆ ಶಿವದೂತರೆಂಬ ದಂಡಣೆಯ ಮಾಡಿದೆಯಯ್ಯಾ.
ಇದು ಕಾರಣ, ಭಕ್ತಿಯನರಿಯೆ, ಯುಕ್ತಿಯನರಿಯೆ
ಜಂಗಮವೆ ಕೂಡಲಚೆನ್ನಸಂಗಯ್ಯನೆಂಬೆ. /215
ಅಷ್ಟತನುಮೂರ್ತಿಯೆಂಬ ಮಾತಿನ ಪಾತಕವ ಕೇಳಲಾಗದು.
ಪೃಥ್ವಿಯಂತೆ ಕಠಿಣವುಳ್ಳಾತನೆ? ಅಪ್ಪುವಿನಂತೆ ಓಟ ಭರತವುಳ್ಳಾತನೆ?
ತೇಜದಂತೆ ತೃಣಕಾಷ್ಠವಿಲ್ಲದಿರೆ ನಂದುವಾತನೆ?
ವಾಯುವಿನಂತೆ ಚಲನೆವುಳ್ಳಾತನೆ? ಆಕಾಶದಂತೆ ಬಯಲಾದಾತನೆ?
ಸೋಮಸೂರ್ಯರಂತೆ ದಿವಾರಾತ್ರಿಯ ನಡೆಸುವಾತನೆ?
ಜೀವಾತ್ಮನಂತೆ ಜನನ ಮರಣವುಳ್ಳಾತನೆ?
ಇದು ಕಾರಣ ಕೂಡಲಚೆನ್ನಸಂಗಯ್ಯಾ ನೀ ನಿನ್ನಂತೆ
ಇವರೆಲ್ಲರೂ (ಇವೆಲ್ಲವೂ) ನೀನಿರಿಸಿದಂತೆ. /216
ಅಷ್ಟದಳಕಮಲದ ಮೇಲಣ ನಿಃಶೂನ್ಯದ
ವರ್ಮವನರಿಯದ ಅಂಧಕರೆಲ್ಲ
ಪ್ರಾಣಲಿಂಗ ಪ್ರಾಣಲಿಂಗವೆಂಬ ವ್ಯವಹಾರ, ಸಂತೆಯ ಪಸರ !
ಅಂಗದ ಆಪ್ಯಾಯನಕ್ಕೆ ಲಿಂಗವ ಹುಡುಕಿ ನೋಡುವ
ಭಂಗಿತರ ನೋಡಾ ಕೂಡಲಚೆನ್ನಸಂಗಮದೇವಾ/217
ಅಷ್ಟವಿಧಾರ್ಚನೆ ಷೋಡಶೋಪಚಾರ ಅರಸರಿಯದ ಬಿಟ್ಟಿ ಕಾಣಿ ಭೋ.
ಸಗುಣ ನಿರ್ಗುಣ [ಸ್ಥೂಲ] ಸೂಕ್ಷ್ಮ ಅವು ನಿಮ್ಮನರಿವುವೆ ?
ಕನ್ನಡಿಯೊಳಗಣ ಪ್ರತಿಬಿಂಬದಂತೆ, ಅವು ತಮ್ಮ ತಾವರಿಯವು.
ಅವ ಬಿನ್ನಭಾವದಿಂದರಸಲುಂಟೆ
ಕೂಡಲಚೆನ್ನಸಂಗಮದೇವ ತಾನು ತಾನಾದ ಬಳಿಕ ?/218
ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಲಾಗದು,
ಮಾಡಿದರು ಮಾಡಿರಿ ಬೇಡಿ ಮಾಡಲಾಗದು.
ಬೇಡಿ ಮಾಡಿದ ಭಕ್ತಿ ಈಡಾಗಲರಿಯದು
ಕೂಡಲಚೆನ್ನಸಂಗಯ್ಯಾ. /219
ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಲಾಗದು.
ಉದಯಾಸ್ತಮಾನವ ನೋಡಿ ಮಾಡುವ
ತುಡುಗುಣಿ ನಾಯಿಗಳು ನೀವು ಕೇಳಿ ಭೋ.
ಉದಯವೆಂದೇನೂ ಶರಣಂಗೆ ? ಅಸ್ತಮಾನವೆಂದೇನೂ ಶರಣಂಗೆ ?
ಮಹಾಮೇರುವಿನ ಮರೆಯಲ್ಲಿದ್ದು ತನ್ನ ನೆಳಲನರಸುವ
ಭಾವಭ್ರಮಿತರ ಮೆಚ್ಚ ಕೂಡಲಚೆನ್ನಸಂಗಮದೇವ. /220
ಅಷ್ಟವಿಧಾರ್ಚನೆ ಷೋಡಶೋಪಚಾರವ ಲಿಂಗಕ್ಕೆ ಮಾಡಿ,
ಜಂಗಮಕ್ಕೆ ಮಾಡದವರ ಕಂಡರೆ ಭಕ್ತರೆಂತೆಂಬೆ ?
ಇಂದ್ರಿಯಂಗಳ ಬೆಂಬಳಿಯಲ್ಲಿ ಹೋಗಿ,
ನಿಮ್ಮ ಚರಿತ್ರವ ನೆನೆಯದವರ ಕಂಡರೆ ಶರಣರೆಂತೆಂಬೆ ?
ಅನಿಮಿಷದೃಷ್ಟಿಯಲ್ಲಿ ನೋಡುವರ ಅನಿಮಿಷರೆಂದೆಂಬೆನೆ ?
ನೀವೆ ತಾನಾಗಿ ಮೈದೋರದವರ ಕಂಡರೆ, ಎನ್ನ ವಿಸ್ತಾರವೆಂಬೆ,
ಕೂಡಲಚೆನ್ನಸಂಗಮದೇವಾ. /221
ಅಷ್ಟವಿಧಾರ್ಚನೆ ಷೋಡಶೋಪಚಾರವಲ್ಲದೆ
ಮುಟ್ಟಲರಿಯದವರ ಕಂಡಡೆ ಆನವರನೇನೆಂಬೆನಯ್ಯಾ ?
ಆವ ಭಾವದಲ್ಲಿ ಆವ ಮುಖದಲ್ಲಿ ಆವ ಜ್ಞಾನದಲ್ಲಿ
ಅವರನು `ಅಯ್ಯಾ’ ಎಂಬೆನು ?
ನಿಮ್ಮಲ್ಲಿ ಸಮ್ಯಗೈಕ್ಯವಾದ ಸತ್ಯಶರಣನ `ಅಯ್ಯಾ’ ಎಂಬೆನು
ಕೂಡಲಚೆನ್ನಸಂಗಯ್ಯಾ./222
ಅಷ್ಟವಿಧಾರ್ಚನೆಯ ಮಾಡಬಲ್ಲರೆ ಅಂಗಸುಖಂಗಳನರಿಯದಿರಬೇಕು.
ಲಿಂಗಾರ್ಚನೆಯ ಮಾಡಬಲ್ಲರೆ ಕಾಮ ಕ್ರೋಧ ಲೋಭ
ಮೋಹ ಮದ ಮತ್ಸರಂಗಳಿಲ್ಲದಿರಬೇಕು.
ಪ್ರಸಾದ ಭೋಗವ ಮಾಡಬಲ್ಲರೆ ಹಸಿವು ತೃಷೆ ಆಪ್ಯಾಯನಂಗಳಡಗಿರಬೇಕು.
ಇಂತಲ್ಲದಡೆ ಕೂಡಲಚೆನ್ನಸಂಗನಲ್ಲಿ ಬರಿ ಉಪಾದಿಕರೆಂಬೆ./223
ಅಸುರರ ಸುರರ ಶಿರೋಮಾಲೆಯ ಕೊರಳಲಿಕ್ಕಿ
ಶಿವಕಳೆಯೆದ್ದಾಡುವಲ್ಲಿ ಅವಕಳೆಯಾಗದೆ ?
ಅಸುರ ದೇವಾದಿಗಳೆಲ್ಲಿಯಯ್ಯಾ !
ನೀ ಮಾಡಿದ ಧಾರುಣಿ ರಸಾತಳಕ್ಕಿಳಿದು, ಕೂರ್ಮ ಕುಸಿದು
ದಿಗುದಂತಿಗಳು ಘೀಳಿಟ್ಟು, ಫಣಿಯ ಹೆಡೆ ಮುರಿದು
ನಿನ್ನ ಪಾದದ ಗುಡುಗಾಟದಿಂದ ಕೆಂಧೂಲಿ ನೆಗೆದು
ನರಲೋಕ ಸುರಲೋಕ ಬ್ರಹ್ಮಲೋಕ ವಿಷ್ಣುಲೋಕ
ಇಂದ್ರಲೋಕ ಸೂರ್ಯಲೋಕ ಚಂದ್ರಲೋಕ ತಾರಾಲೋಕ
ಅಸುರಲೋಕಂಗಳು ಬೂದಿಯಲ್ಲಿ ಮುಸುಕಿದವಯ್ಯಾ.
ಪ್ರಭುವೆದ್ದು ಹಗರಣವಾಡುತ್ತಿರಲು,
ಈರೇಳು ಭುವನದೊಳಗುಳ್ಳ ಆತ್ಮಾದಿಗಳೆಲ್ಲ ದೆಸೆದೆಸೆಗೆಡಲು,
ಶಶಿಧರ ನಾಟ್ಯಕ್ಕೆ, ನಿಂದಲ್ಲಿ, ಇನ್ನಾರಯ್ಯ ಸಂತೈಸುವರು
ಕೂಡಲಚೆನ್ನಸಂಗಯ್ಯಾ ? /224
ಅಸ್ತಿ ಭಾತಿಯೆಂಬ ಎನ್ನ ಸತ್ಯದಲ್ಲಿ,
ನಾಮ ರೂಪೆಂಬ ಹುಸಿಯೆಂತು ಜನಿಸಿತೆಂದರಿಯೆನಯ್ಯಾ!
ಇಲ್ಲದ ಹೆಸರುಳ್ಳ ಚಿತ್ತಾರದಂತೆ, ದೇಹ ನಾಮವೀತೆರನೆಂದರಿಯದೆ
ತೊಳಲಿ ಬಳಲುತ್ತಿದ್ದೆನಯ್ಯಾ, ಕೂಡಲಚೆನ್ನಸಂಗಯ್ಯಾ,
ಸಂಸಾರಬಂಧನಯೆನಗಿದೇ ಕಂಡಯ್ಯಾ. /225
ಅಹುದಹುದು,
ಅಂಗಕ್ಕೆ ಲಿಂಗವನರಸಬೇಕಲ್ಲದೆ ಲಿಂಗಕ್ಕೆ ಲಿಂಗವನರಸಲುಂಟೆ ?
ಪ್ರಾಣಕ್ಕೆ ಜ್ಞಾನವನರಸಬೇಕಲ್ಲದೆ ಜ್ಞಾನಕ್ಕೆ ಜ್ಞಾನವನರಸಲುಂಟೆ ?
ಎರಡಾಗಿರ್ದುದನೊಂದು ಮಾಡಿಹೆನೆನಬಹುದಲ್ಲದೆ
ಒಂದಾಗಿರ್ದುದನೊಂದು ಮಾಡಲಿಲ್ಲ.
ಕೂಡಲಚೆನ್ನಸಂಗಯ್ಯನಲ್ಲಿ ನಿಸ್ಸೀಮ ಸಿದ್ಧರಾಮಯ್ಯನ ಶ್ರೀಪಾದಕ್ಕೆ
ಶರಣೆಂದು ಬದುಕಿದೆನು ಕಾಣಾ ಪ್ರಭುವೆ. /226
ಅಳಲದೆ ಸೈರಣೆ, ಬಳಲದೆ ಸಮತೆ, ಸೂರೆಯೆ ಸೂರೆಯೆ ?
ಲಿಂಗಾರಾಧನೆ ಜಂಗಮಾರಾಧನೆ ಸೂರೆಯೆ ಸೂರೆಯೆ ?
ಕೂಡಲಚೆನ್ನಸಂಗನ ಭಕ್ತಿ ಸೂರೆಯೆ ಸೂರೆಯೆ ? /227
ಆ ಮಾತನೆ ಮನೆಯ ಮಾಡಿ, ಸತಿಯ (ಪತಿಯ?) ನೆಲೆಗೊಳಿಸಿ,
ನಿಭ್ರಾಂತಿನ ಕದವನಿಕ್ಕಿ, ಸೂತಕವಳಿಯೆ ಸುಯಿದಾನಿ.
ಇದನರಿದು ಮರೆದವರ ಕೂಡಲಚೆನ್ನಸಂಗಯ್ಯನೆಂಬೆನು./228
ಆ ಲಿಂಗವೆ ಅಮಳೋಕ್ಯವಾದ ಬಳಿಕ
ಆ ಲಿಂಗವೆ ಮುಖಸೆಜ್ಜೆಯಾದ ಬಳಿಕ
ಆ ಲಿಂಗವೆ ಭುಜಂಗನಾಗವಟ್ಟಿಗೆಯಾದ ಬಳಿಕ
ಆ ಮಹಿಮನೆ ಪ್ರಾಣನಾಥನಾದ ಬಳಿಕ, ಇದಿರಿಟ್ಟು ಕೇಳಲುಂಟೆ ?
ಅಂಗಲಿಂಗಸಂಬಂದಿ ಶಿವಶರಣರ ಅಂಘ್ರಿಯಲ್ಲಿ ಇರಿಸಾ ಎನ್ನ,
ಕೂಡಲಚೆನ್ನಸಂಗಮದೇವಾ./229
ಆಕಳ ಹೊಟ್ಟೆಯಲ್ಲಿ ಹೋರಿ ಹುಟ್ಟಿದಡೇನು ?
ಲಿಂಗಮುದ್ರೆಯನೊತ್ತುವನ್ನಕ್ಕ ಬಸವನಲ್ಲ.
ಜಂಗಮದ ಆತ್ಮದಲ್ಲಿ ಪಿಂಡ ಉತ್ಪತ್ತಿಯಾದಡೇನು ?
ದೀಕ್ಷಿತನಾಗದನ್ನಕ್ಕ ಜಂಗಮದೇವನಲ್ಲ.
ದೀಕ್ಷೆಯಿಲ್ಲದೆ ಹೋಗಿ ಭಕ್ತರಲ್ಲಿ ಅಗ್ಗಣಿಯ ಮುಕ್ಕುಳಿಸಿದಡೆ
ಹಾದಿಗೊಂಡು ಹೋಗುವ ನಾಯಿ
ಗಿಡದ ಮೇಲೆ ಉಚ್ಚೆಯ ಹೊಯ್ದಂತಾಯಿತ್ತು ಕಾಣಾ
ಕೂಡಲಚೆನ್ನಸಂಗಮದೇವಾ/230
ಆಕಾರವೇ ಭಕ್ತ
ನಿರಾಕಾರವೇ ಮಹೇಶ್ವರ
ಸಹಕಾರವೇ ಪ್ರಸಾದಿ
ಸನ್ಮತ ಈಗಲೇ ಪ್ರಾಣಲಿಂಗಿ
ಲೋಕವಿರಹಿತನೇ ಶರಣ
ಈ ಭ್ರಾಂತುವಿನ ಬಲೆಯೊಳಗೆ ಸಿಲುಕದಾತನೇ ಐಕ್ಯ.
ಅದು ಎಂತು ಎಂದರೆ :
ಪೃಥ್ವಿ ಈಗಲೇ ಭಕ್ತ
ಅಪ್ಪು ಈಗಲೇ ಮಹೇಶ್ವರ
ಅಗ್ನಿ ಈಗಲೇ ಪ್ರಸಾದಿ
ವಾಯು ಈಗಲೇ ಪ್ರಾಣಲಿಂಗಿ
ಆಕಾಶ ಈಗಲೇ ಶರಣ
ಈ ಪಂಚತತ್ವದ ಒಳಗೆ
ಬೆಳಕು ಕತ್ತಲೆ ಐಕ್ಯವು.
ಇದು ಕಾರಣ, ಕೂಡಲಚೆನ್ನಸಂಗಮದೇವಯ್ಯಾ
ನಿಮ್ಮ ಶರಣ ಪಂಚತತ್ವದ ಒ?ಗೆ
ಪಂಚತತ್ವ ಪಂಚತತ್ವ ಎಂಬ ಅಣ್ಣಗಳಿರಾ ನೀವು ಕೇಳಿರೊ./231
ಆಕಾಶದಲ್ಲಾಡುವ ಪಟಕ್ಕಾದಡೆಯೂ ಮೂಲಸೂತ್ರವಿರಬೇಕು.
ಕಲಿಯಾದಡೆಯೂ ಕಜ್ಜವಿಲ್ಲದೆ ಆಗದು.
ಭೂಮಿಯಿಲ್ಲದೆ ಬಂಡಿ ನಡೆವುದೆ ?
ಅಂಗಕ್ಕೆ ಲಿಂಗವಿಲ್ಲದೆ ನಿಸ್ಸಂಗವಾಗಬಾರದು.
ಕೂಡಲಚೆನ್ನಸಂಗಮದೇವರಲ್ಲಿ
ಸಂಗವಿಲ್ಲದೆ ನಿಸ್ಸಂಗಿಯೆಂದು ನುಡಿಯಬಹುದೆ ಪ್ರಭುವೆ ?/232
ಆಗುವುದಯ್ಯಾ ನಿರಾಭಾರಿಗಳ ತೀರ್ಥ ಜಗದ್ವಂದ್ಯವಾಗಿ;
ಆಗುವುದಯ್ಯಾ ಪೀಳಾದಿಕಾರಿಗಳ ತೀರ್ಥ ಜಗನ್ಮಾನ್ಯವಾಗಿ,
ಆಗುವುದಯ್ಯಾ ದೇಶಿಕರ ತೀರ್ಥ ದೇಶಿಕರೂಪಾಗಿ,
ದೇಶಿಕನಾಗಿ ಉಪದೇಶಪ್ರಸಾದಮುಖಿಯಾಗದಿರಬಾರದು
ಕ್ರಿಯಾವಂತ ಶರಣಂಗೆ ಕಾಣಾ-ಕೂಡಲಚೆನ್ನಸಂಗಮದೇವಾ./233
ಆಚಾರ ಕಪ್ಪರ ಸೊಮ್ಮುಸಂಬಂಧವ ತೋರಿ ಬೇಡುವುದು.
ವಿಚಾರ ಕಪ್ಪರ ಲಾಂಛನವ ತೋರಿ ಬೇಡುವುದು.
ಅವಿಚಾರ ಕಪ್ಪರ ಸೊಮ್ಮುಸಂಬಂಧವ, ನೇಮಶೀಲವ ಮೀರಿ ಬೇಡುವುದಾಗಿ
ನಿರುಪಾದಿಕವಯ್ಯಾ ಕೂಡಲಚೆನ್ನಸಂಗಮದೇವಾ. /234
ಆಚಾರ ಕಪ್ಪರವೊಂದು, ವಿಚಾರ ಕಪ್ಪರವೊಂದು, ಅವಿಚಾರ ಕಪ್ಪರವೊಂದು.
ಇಂತು ಮೂರು ಕಪ್ಪರವೊಳವು.
ಆಚಾರ ಕಪ್ಪರವ ಜಾಡ್ಯವೆಂಬೆ, ವಿಚಾರ ಕಪ್ಪರವ ಹೆಳವನೆಂಬೆ,
ಅವಿಚಾರ ಕಪ್ಪರ ಸೊಮ್ಮುಸಂಬಂಧವ ತೋರಿ ಬೇಡದಾಗಿ (ಬೇಡುವುದಾಗಿ)
ನಿರುಪಾದಿಕವಯ್ಯಾ ಕೂಡಲಚೆನ್ನಸಂಗಮದೇವಾ./235
ಆಚಾರ ಗುರುಸ್ಥಲ, ಅನುಭಾವ ಲಿಂಗಸ್ಥಲ,
ಅವಧಾನ ಅರ್ಪಿತಸ್ಥಲ, ಪರಿಣಾಮ ಪ್ರಸಾದಿಸ್ಥಲ,
ಸಮಾಧಾನ ಶರಣಸ್ಥಲ, ಅರಿವು ನಿಃಪತಿಯಾಗಿ ತೆರಹಿಲ್ಲದ
ನಿಜದಲ್ಲಿಲಿಂಗೈಕ್ಯವು, ಕೂಡಲಚೆನ್ನಸಂಗಮದೇವಾ./236
ಆಚಾರದರಿವು ಆಗಮವ ಕೂಡಿಕೊಂಡಿಹುದು.
ಗುರುವಾಚಾರದ [ಅರಿವು] ನಿಷ್ಠೆಯ ಕೂಡಿಕೊಂಡಿಹುದು.
ಲಿಂಗಾಚಾರದರಿವು ಕ್ರೀಯ ಕೂಡಿಕೊಂಡಿಹುದು.
ಸಮಯಾಚಾರದ ಅರಿವು ಸಂಬಂಧವ ಕೂಡಿಕೊಂಡಿಹುದು.
ಇಂತೀ ಚತುರ್ವಿಧದೊಳಗಾವಂಗವೂ ಇಲ್ಲ- ಕೂಡಲಚೆನ್ನಸಂಗನ ಶರಣರ ಪರಿ ಬೇರೆ. /237
ಆಚಾರದುಂದುಬಿಯನೇನೆಂದು ಭಾವಿಸುವೆ,
ಬೆಳಗಿನೊಳಗೆ ತೊಳಗುತ್ತಿರ್ದೆನು.
ಅರಿವಿನಾಚರಣೆಯ ತೆರನ ಪೇಳುತಿರ್ದೆನು
ಭೇದಾಭೇದದೊಳಗಣ ಮಹಾಘನ ಸ್ಫಟಿಕದ ಗಿರಿಯ ತಟದಲ್ಲಿ ನಿಂದರೆ
ಘಟಹೊಳೆವುದು ಒಳಗೆ ಹೊರಗೆನ್ನದೆ.
ಪರುಷದ ಗಿರಿಯ ಕಡಿಯಲೆಂದು ಹೋದರಾ ಹಿಡಿದುಳಿ ಕೊಡತಿ
ಪರುಷವಾದ ಬಳಿಕಾಚಾರ ಮಾಣಿಕ್ಯವ ಹಿಡಿದವನ ಕೈ ಸೆಕೆ ಹತ್ತುವದೆ ?
ಲಿಂಗ ಜಂಗಮ ಪ್ರಸಾದವೆಂದರಿದಂಗಾಚಾರ ಸಂಪಗೆಯ ಪುಷ್ಪದಲ್ಲಿ
ಕಂಪುಂಡ ಭ್ರಮರನಂತೆ
ಕೂಡಲಚೆನ್ನಸಂಗನ ಶರಣಂಗಾಯಿತ್ತಾಚಾರ/238
ಆಚಾರಲಿಂಗ ಗುರುಲಿಂಗ ಶಿವಲಿಂಗ
ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂದಿಂತು
ಲಿಂಗಸ್ಥಲವಾರಕ್ಕಂ ವಿವರ:
ಆಚಾರಲಿಂಗಸ್ಥಲ ತ್ರಿವಿಧ:ಸದಾಚಾರ, ನಿಯತಾಚಾರ, ಗಣಾಚಾರ
ಇದಕ್ಕೆ ವಿವರ:
ಎಲ್ಲ ಜನವಹುದೆಂಬುದೆ ಸದಾಚಾರ.
ಹಿಡಿದ ವ್ರತನಿಯಮವ ಬಿಡದಿಹುದೆ ನಿಯತಾಚಾರ.
ಶಿವನಿಂದೆಯ ಕೇಳದಿಹುದೆ ಗಣಾಚಾರ.
ಗುರುಲಿಂಗಸ್ಥಲ ತ್ರಿವಿಧ:ದೀಕ್ಷೆ, ಶಿಕ್ಷೆ, ಸ್ವಾನುಭಾವ.
ಇದಕ್ಕೆ ವಿವರ :
ದೀಕ್ಷೆಯೆಂದಡೆ ಗುರು, ಶಿಕ್ಷೆಯೆಂದಡೆ ಜಂಗಮ,
ಸ್ವಾನುಭಾವವೆಂದಡೆ ತನ್ನಿಂದ ತಾನರಿವುದು.
ಶಿವಲಿಂಗಸ್ಥಲ ತ್ರಿವಿಧ:ಇಷ್ಟಲಿಂಗ, ಪ್ರಾಣಲಿಂಗ, ತೃಪ್ತಿಲಿಂಗ
ಇದಕ್ಕೆ ವಿವರ :
ಶ್ರೀಗುರು ಕರಸ್ಥಲದಲ್ಲಿ ಅನುಗ್ರಹವ ಮಾಡಿಕೊಟ್ಟುದೀಗ ಇಷ್ಟಲಿಂಗ,
ತನುಗುಣ ನಾಸ್ತಿಯಾದುದೇ ಪ್ರಾಣಲಿಂಗ,
ಜಾಗ್ರಸ್ವಪ್ನಸುಷುಪ್ತಿಯಲ್ಲಿ ಲಿಂಗವಲ್ಲದೆ
ಪೆರತೊಂದನರಿಯದಿಪ್ಪುದೆ ತೃಪ್ತಿಲಿಂಗ.
ಜಂಗಮಲಿಂಗಸ್ಥಲ ತ್ರಿವಿಧ :ಸ್ವಯ, ಚರ, ಪರ,
ಇದಕ್ಕೆ ವಿವರ :
ಸ್ವಯವೆಂದಡೆ ತಾನು.
ಚರವೆಂದಡೆ ಲಾಂಛನ ಮುಂತಾಗಿ ಚರಿಸುವುದು.
ಪರವೆಂದಡೆ ಅರಿವು ಮುಂತಾಗಿ ಚರಿಸುವುದು.
ಪ್ರಸಾದಲಿಂಗಸ್ಥಲ ತ್ರಿವಿಧ :ಶುದ್ಧ, ಸಿದ್ಧ, ಪ್ರಸಿದ್ಧ
ಇದಕ್ಕೆ ವಿವರ :
ಶುದ್ಧವೆಂದಡೆ ಗುರುಮುಖದಿಂದ ಮಲತ್ರಯವ ಕಳೆದುಳಿದ ಶೇಷ,
ಸಿದ್ಧವೆಂದಡೆ ಲಿಂಗಮುಖದಿಂದ ಕರಣಮಥನಂಗಳ ಕಳೆದುಳಿದ ಶೇಷ.
ಪ್ರಸಿದ್ಧವೆಂದಡೆ ಜಂಗಮಮುಖದಿಂದ ಸರ್ವಚೈತನ್ಯಾತ್ಮಕ ತಾನೆಯಾಗಿ
ಖಂಡಿತವಳಿದುಳಿದ ಶೇಷ.
ಮಹಾಲಿಂಗಸ್ಥಲ ತ್ರಿವಿಧ:ಪಿಂಡಜ, ಅಂಡಜ, ಬಿಂದುಜ.
ಇದಕ್ಕೆ ವಿವರ :
ಪಿಂಡಜವೆಂದಡೆ ಘಟಾಕಾಶ.
ಅಂಡಜವೆಂದಡೆ ಬ್ರಹ್ಮಾಂಡ.
ಬಿಂದುಜವೆಂದಡೆ ಮಹಾಕಾಶ.
ಇಂತು ಲಿಂಗಸ್ಥಲ ಅರಕ್ಕಂ ಹದಿನೆಂಟು ಸ್ಥಲವಾಯಿತ್ತು.
ಇನ್ನು ಅಂಗಸ್ಥಲವಾವುವೆಂದಡೆ:
ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ.
ಇನ್ನು ಅಂಗಸ್ಥಲವಾರಕ್ಕೆ ವಿವರ :
ಭಕ್ತಸ್ಥಲ ತ್ರಿವಿಧ :ಗುರುಭಕ್ತ, ಲಿಂಗಭಕ್ತ, ಜಂಗಮಭಕ್ತ.
ತನುಕ್ರೀಯಿಂದ ತನುಮನಧನವನರ್ಪಿಸುವನಾಗಿ ಗುರುಭಕ್ತ.
ಮನಕ್ರೀಯಿಂದ ಮನತನುಧನವನರ್ಪಿಸುವನಾಗಿ ಲಿಂಗಭಕ್ತ.
ಧನಕ್ರೀಯಿಂದ ಧನಮನತನುವನರ್ಪಿಸುವನಾಗಿ ಜಂಗಮಭಕ್ತ.
ಮಾಹೇಶ್ವರಸ್ಥಲ ತ್ರಿವಿಧ:ಇಹಲೋಕವೀರ, ಪರಲೋಕವೀರ, ಲಿಂಗವೀರ. ಅದಕ್ಕೆ ವಿವರ :
ಮತ್ರ್ಯಲೋಕದ ಮಹಾಗಣಂಗಳು ಮೆಚ್ಚುವಂತೆ,
ಷಡ್ದರ್ಶನಂಗಳ ನಿರಸನವ ಮಾಡಿ,
ತನ್ನ ಸಮಯಕ್ಕೆ ಪ್ರಾಣವ ವೆಚ್ಚಿಸುವನಾಗಿ ಇಹಲೋಕವೀರ.
ದೇವಲೋಕದ ದೇವಗಣಂಗಳು ಮೆಚ್ಚುವಂತೆ,
ಸರ್ವಸಂಗಪರಿತ್ಯಾಗವ ಮಾಡಿ ಚತುರ್ವಿಧಪದಂಗಳ
ಧರ್ಮಾರ್ಥಕಾಮಮೋಕ್ಷಂಗಳ ಬಿಟ್ಟಿಹನಾಗಿ ಪರಲೋಕವೀರ.
ಅಂಗಲಿಂಗಸಂಗದಿಂದ ಸರ್ವಕರಣಂಗಳು
ಸನ್ನಹಿತವಾಗಿಪ್ಪನಾಗಿ ಲಿಂಗವೀರ.
ಪ್ರಸಾದಿಸ್ಥಲ ತ್ರಿವಿಧ :ಅರ್ಪಿತಪ್ರಸಾದಿ, ಅವಧಾನಪ್ರಸಾದಿ, ಪರಿಣಾಮಪ್ರಸಾದಿ
ಅದಕ್ಕೆ ವಿವರ :
ಕಾಯದ ಕೈಯಲ್ಲಿ ಸಕಲಪದಾರ್ಥಂಗಳು
ಇಷ್ಟಲಿಂಗಕ್ಕೆ ಕೊಟ್ಟು ಕೊಂಬನಾಗಿ ಅರ್ಪಿತಪ್ರಸಾದಿ.
ಪಂಚೇಂದ್ರಿಯಂಗಳಲ್ಲಿ ಪಂಚಲಿಂಗಪ್ರತಿಷ್ಠೆಯ ಮಾಡಿ,
ಅಲ್ಲಲ್ಲಿ ಬಂದ ಸುಖವನಲ್ಲಲ್ಲಿ ಮನದ ಕೈಯಲ್ಲಿ
ಕೊಟ್ಟು ಕೊಂಬನಾಗಿ ಅವಧಾನಪ್ರಸಾದಿ.
ಅಂಗಾಶ್ರಯವಳಿದು ಲಿಂಗಾಶ್ರಯವುಳಿದು,
ಭಾವಭರಿತನಾಗಿಪ್ಪನಾಗಿ ಪರಿಣಾಮಪ್ರಸಾದಿ.
ಪ್ರಾಣಲಿಂಗಿಸ್ಥಲ ತ್ರಿವಿಧ :ಆಚಾರಪ್ರಾಣಿ, ಲಿಂಗಪ್ರಾಣ, ಜಂಗಮಪ್ರಾಣಿ.
ಅದಕ್ಕೆ ವಿವರ :
ಮನೋವಾಕ್ಕಾಯದಲ್ಲಿ ಆಚಾರವ ಅವಗ್ರಹಿಸಿಹನಾಗಿ ಆಚಾರಪ್ರಾಣಿ.
ಬಾಹ್ಯೋಪಚಾರಂಗಳ ಮರೆದು ಲಿಂಗಕ್ಕೆ ತನ್ನ ಪ್ರಾಣವನೆ
ಪೂಜೆಯ ಮಾಡುವನಾಗಿ ಲಿಂಗಪ್ರಾಣಿ.
ಬಾಹ್ಯಭಕ್ತಿಯ ಮರೆದು ಜಂಗಮಕ್ಕೆ ತನ್ನ ತನುಮನಪ್ರಾಣಂಗಳ
ನಿವೇದಿಸುವನಾಗಿ ಜಂಗಮಪ್ರಾಣಿ
ಶರಣಸ್ಥಲ ತ್ರಿವಿಧ:ಇಷ್ಟಲಿಂಗಾರ್ಚಕ, ಪ್ರಾಣಲಿಂಗಾರ್ಚಕ, ತೃಪ್ತಿಲಿಂಗಾರ್ಚಕ
ಅದಕ್ಕೆ ವಿವರ :
ಅನಿಷ್ಟ ನಷ್ಟವಾಯಿತ್ತಾಗಿ ಇಷ್ಟಲಿಂಗಾರ್ಚಕ.
ಸ್ವಯಪರವನರಿಯನಾಗಿ ಪ್ರಾಣಲಿಂಗಾರ್ಚಕ.
ಇಹಪರವನರಿಯನಾಗಿ ತೃಪ್ತಿಲಿಂಗಾರ್ಚಕ.
ಐಕ್ಯಸ್ಥಲ ತ್ರಿವಿಧ :ಕಾಯಲಿಂಗೈಕ್ಯ, ಜೀವಲಿಂಗೈಕ್ಯ, ಭಾವಲಿಂಗೈಕ್ಯ.
ಅದಕ್ಕೆ ವಿವರ :
ಕ್ರಿಯೆಯರತುದೆ ಕಾಯಲಿಂಗೈಕ್ಯ.
ಅನುಭಾವವರತುದೆ ಜೀವಲಿಂಗೈಕ್ಯ.
ಅರಿವು ಸಿನೆ ಬಂಜೆಯಾದುದೆ ಭಾವಲಿಂಗೈಕ್ಯ.
ಇಂತೀ ಅಂಗಸ್ಥಲ ಅರಕ್ಕಂ ಹದಿನೆಂಟು ಸ್ಥಲವಾಯಿತ್ತು.
ಉಭಯಸ್ಥಲ ಮೂವತ್ತಾರರೊಳಗಾದ ಸರ್ವಾಚಾರಸಂಪತ್ತನು
ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನೆ ಬಲ್ಲ./239
ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ
ಮಹಾಲಿಂಗ ಈ ಆರುಲಿಂಗಸ್ಥಲಗಳು.
ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ
ಐಕ್ಯನೆಂದಿಂತು ಆರು ಅಂಗಸ್ಥಲಗಳು.
ಅವರವರ ಸಂಬಂಧವಾವಾವೆಂದರೆ:
ಘ್ರಾಣದಲ್ಲಿ ಆಚಾರಲಿಂಗ ಸಂಬಂಧ
ಜಿಹ್ವೆಯಲ್ಲಿ ಗುರುಲಿಂಗ ಸಂಬಂಧ
ನೇತ್ರದಲ್ಲಿ ಶಿವಲಿಂಗ ಸಂಬಂಧ
ತ್ವಕ್ಕಿನಲ್ಲಿ ಜಂಗಮಲಿಂಗ ಸಂಬಂಧ
ಶ್ರೋತ್ರದಲ್ಲಿ ಪ್ರಸಾದಲಿಂಗ ಸಂಬಂಧ
ಭಾವದಲ್ಲಿ ಮಹಾಲಿಂಗ ಸಂಬಂಧ
ತತ್ಪದವೆಂದು ಲಿಂಗ, ತ್ವಂ ಪದವೆಂದು ಅಂಗ
ಅಸಿಪದವೆಂದುಭಯ ಸಂಬಂಧ.
ಭಕ್ತನೆಂಬ ಅಂಗಕ್ಕೆ ಆಚಾರಲಿಂಗ ಸುಚಿತ್ತವೆ ಹಸ್ತ.
ಘ್ರಾಣೇಂದ್ರಿಯವೆ, ಮುಖ ಸದ್ಭಕ್ತಿ, ಕ್ರಿಯಾಶಕ್ತಿ,
ಪರಿಮಳ ದ್ರವ್ಯ, ಅರ್ಪಿತ ಗಂಧ ಪ್ರಸಾದ.
ಮಹೇಶ್ವರನೆಂಬ ಅಂಗಕ್ಕೆ ಗುರುಲಿಂಗ, ಸುಬುದ್ಧಿಯೇ ಹಸ್ತ,
ಜಿಹ್ವೆಯೆ ಮುಖ, ನೈಷ್ಠಿಕವೇ ಭಕ್ತಿ, ಜ್ಞಾನ ಶಕ್ತಿ,
ರಸದ್ರವ್ಯಾರ್ಪಿತ ರುಚಿಪ್ರಸಾದ.
ಪ್ರಸಾದಿ ಎಂಬ ಅಂಗಕ್ಕೆ ಶಿವಲಿಂಗ, ನಿರಹಂಕಾರವೆ ಹಸ್ತ
ನೇತ್ರೇಂದ್ರಿಯವೆ ಮುಖ, ಸಾವಧಾನವೇ ಭಕ್ತಿ,
ಇಚ್ಛಾಶಕ್ತಿ, ರೂಪ ಅರ್ಪಿತ, ರೂಪ ಪ್ರಸಾದ.
ಪ್ರಾಣಲಿಂಗಿ ಎಂಬ ಅಂಗಕ್ಕೆ ಚರಲಿಂಗ
ಸುಮನವೆ ಹಸ್ತ,
ತ್ಪಗಿಂದ್ರಿಯವೆ ಮುಖ, ಅನುಭವವೇ ಭಕ್ತಿ, ಆದಿಶಕ್ತಿ,
ಸೋಂಕೆ ಅರ್ಪಿತ, ಸ್ಪರ್ಶವೇ ಪ್ರಸಾದ.
ಶರಣನೆಂಬ ಅಂಗಕ್ಕೆ ಪ್ರಸಾದಲಿಂಗ, ಜ್ಞಾನವೇ ಹಸ್ತ
ಶ್ರೋತ್ರೇಂದ್ರಿಯವೇ ಮುಖ, ಆನಂದವೇ ಭಕ್ತಿ, ಪರಾಶಕ್ತಿ,
ಶಬ್ದವೆ ಅರ್ಪಿತ, ಶಬ್ದಪ್ರಸಾದ.
ಐಕ್ಯನೆಂಬ ಅಂಗಕ್ಕೆ ಮಹಾಲಿಂಗ, ಭಾವವೆ ಹಸ್ತ,
ಹೃದಯವೇ ಮುಖ, ಸಮರಸವೇ ಭಕ್ತಿ,
ಚಿಚ್ಛಕ್ತಿ, ತೃಪ್ತಿಯೆ ಅರ್ಪಿತ, ಪರಿಣಾಮವೇ ಪ್ರಸಾದ.
ಇಂತು ಅಂಗ ಲಿಂಗ ಹಸ್ತ ಮುಖ ಶಕ್ತಿ ಭಕ್ತಿ
ಅರ್ಪಿತ ಪ್ರಸಾದ ಎಂಬ ಅಷ್ಟವಿಧದ ಬ್ರಹ್ಮದ ಭೇದವನರಿದು
ನಡೆಸಬಲ್ಲ ಮಹಾಮಹಿಮಂಗೆ ನಮೋ ನಮೋ ಎಂಬೆನಯ್ಯಾ
ಕೂಡಲಚೆನ್ನಸಂಗಮದೇವ/240
ಆಚಾರಲಿಂಗಭಕ್ತಿ ಗುರುಲಿಂಗಭಕ್ತಿ ಶಿವಲಿಂಗಭಕ್ತಿ,
ಜಂಗಮಲಿಂಗಭಕ್ತಿ ಪ್ರಸಾದಲಿಂಗಭಕ್ತಿ, ಮಹಾಲಿಂಗಭಕ್ತಿ,
ಇಂತೀ ಆರು ಸಹಿತ ಆಚಾರ; ಆಚಾರಸಹಿತ ಗುರು,
ಗುರುಸಹಿತ ಲಿಂಗ, ಲಿಂಗಸಹಿತ ಜಂಗಮ.
ಜಂಗಮಸಹಿತ ಪ್ರಸಾದ, ಪ್ರಸಾದಸಹಿತ ಮಹಾಲಿಂಗ.
ಇಂತೀ ಎಲ್ಲ ಸ್ಥಲಗಳು ತಾನಾಗಬಲ್ಲಡೆ
ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯವು./241
ಆಚಾರಲಿಂಗಮೋಹಿತನಾದಡೆ ಸಖೀಸಹೋದರಮೋಹವ ಮರೆಯಬೇಕು.
ಆಚಾರಲಿಂಗಭಕ್ತನಾದಡೆ, ಪೂರ್ವಾಚಾರವ ನಡೆಯಲಾಗದು.
ಆಚಾರಲಿಂಗಪೂಜಕನಾದಡೆ, ಅನ್ಯಪೂಜೆಯ ಮಾಡಲಾಗದು.
ಆಚಾರಲಿಂಗವೀರನಾದಡೆ, ಹಿಡಿದ ವ್ರತನೇಮವ ಬಿಡಲಾಗದು.
ಆಚಾರಲಿಂಗಪ್ರಸಾದಿಯಾದಡೆ, ಅಶುಚಿಯಾಗಿರಲಾಗದು.
ಆಚಾರಲಿಂಗಪ್ರಾಣಿಯಾದಡೆ, ಭಕ್ತನಿಂದೆಯ ಕೇಳಲಾಗದು.
ಇದು ಕಾರಣ-ಕೂಡಲಚೆನ್ನಸಂಗಯ್ಯನಲ್ಲಿ
ಈ ಆರುಸಹಿತ ಆಚಾರಲಿಂಗ ಭಕ್ತಿ./242
ಆಚಾರವಂಗವಾದವರಿಗೆ ಅಂಗಾಶ್ರಯ ಹೊದ್ದುವುದೆ ಅಯ್ಯಾ?
ತನು-ಭಕ್ತ, ಮನ-ಲಿಂಗ ಸಂಗವಾದವರಿಗೆ ಅನರ್ಪಿತ ಹೊದ್ದೂದೆ ಅಯ್ಯಾ?
ಈ ಉಭಯಸಂಗನಿರ್ಣಯ ಲಿಂಗೈಕ್ಯವು
ಕೂಡಲಚೆನ್ನಸಂಗಮದೇವ. /243
ಆಚಾರವಂಗಸಂಬಂಧವಾದಲ್ಲಿ ಶ್ರೀಗುರುಲಿಂಗ ಸನ್ನಿಹಿತ,
ಅರಿವು ಮನಸಂಬಂಧವಾದಲ್ಲಿ ಶಿವಲಿಂಗ ಸನ್ನಿಹಿತ,
ಉಭಯ ಲಿಂಗಸಂಬಂಧವಾದಲ್ಲಿ ಜಂಗಮಲಿಂಗ ಸನ್ನಿಹಿತ.
ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ
ಲಿಂಗತ್ರಿವಿಧಸಂಪನ್ನ ಶರಣ. /244
ಆಚಾರವಡಗಿತ್ತು ಅನಾಚಾರವೆದ್ದಿತ್ತು.
ಅಲ್ಲದ ನಡೆಯ ನಡದಾರು ಸಲ್ಲದಚ್ಚುಗಳ ಮರಳಿವೊತ್ತಿಯಾರು.
ಭಕ್ತನೆ ಹೊಲೆಯನಾದಾನು ಜಂಗಮವೆ ಅನಾಚಾರಿಯಾದಾನು.
ಲಂಡ ಭಕ್ತನಾದಾನು ಪುಂಡ ಜಂಗಮವಾದೀತು.
ಲಂಡ ಪುಂಡ ಕೂಡಿ ಜಗಭಂಡರಾಗಿ ಕೆಟ್ಟಾರು.
ಮನದ ಹಿರಿಯರ ಬಿಟ್ಟಾರು ಕುಲದ ಹಿರಿಯರ ಪೂಜಿಸಿಯಾರು.
ಹದಿನೆಂಟು ಜಾತಿಯೆಲ್ಲ ಕೂಡಿ ಒಂದೆ ತಳಿಗೆಯಲ್ಲಿ ಉಂಡಾರು.
ಮತ್ತೆ ಕುಲಕ್ಕೆ ಹೋರಿಯಾಡಿಯಾರು, ಗುರುವ ನರನೆಂದಾರು.
ಲಿಂಗವ ಶಿಲೆಯೆಂದಾರು, ಜಂಗಮವ ಜಾತಿವಿಡಿದು ನುಡಿದಾರು.
ಭಕ್ತ ಜಂಗಮ ಪ್ರಸಾದವನೆಂಜಲೆಂದತಿಗಳೆದಾರು,
ತೊತ್ತು ಸೂಳೆಯರೆಂಜಲ ತಿಂದಾರು.
ಮತ್ತೆ ನಾ ಘನ ತಾ ಘನವೆಂದಾರು, ಒತ್ತಿದಚ್ಚುಗಳು ಹುತ್ತೇರಿ ಹುಳಿತಾವು,
ಅಷ್ಟರೊಳಗೆ ಶರಣರು ಪುಟ್ಟಿ ಸಂಹಾರವ ಮಾಡಿಯಾರು,
ಹೊಟ್ಟು ಹಾರೀತು, ಘಟ್ಟಿಯುಳಿದೀತು.
ಮಿಕ್ಕಿದ್ದು ಪಲ್ಲವಿಸೀತು ಮತ್ರ್ಯವೇ ಕೈಲಾಸವಾದೀತು.
ಭಕ್ತಿಯ ಬೆಳೆ ಬೆಳೆದೀತು ಘನಪ್ರಸಾದವುದ್ಧರಿಸೀತು.
ಕೂಡಲಚೆನ್ನಸಂಗಯ್ಯನ ಶ್ರೀಪಾದವೆ ಸಾಕ್ಷಿಯಾಗಿ ಬಸವಣ್ಣನೊಬ್ಬನೆ
ಕರ್ತನಾದನು./245
ಆಚಾರವಿಡಿದು ಲಿಂಗ, ಅನುಭಾವಿಡಿದು ಜಂಗಮ.
ತನುವಿನ ಪ್ರಾಣ ಆಚಾರ, ಮನದ ಪ್ರಾಣ ಅನುಭಾವ.
ಇದು ಕಾರಣ ಕೂಡಲಚೆನ್ನಸಂಗಮದೇವಾ,
ಲಿಂಗವನೂ ಜಂಗಮವನೂ ಬೇರರಸಲಿಲ್ಲ. /246
ಆಚಾರವಿಲ್ಲದೆ ಅನುಗ್ರಹ[ವಿಲ್ಲ], ಅನುಗ್ರಹವಿಲ್ಲದೆ ಏನೂ ಇಲ್ಲ.
ದೇಶಗ್ರಾಹಕ ಅನುಗ್ರಾಹಕ ಸಮಗ್ರಾಹಕ ಸಂಗ್ರಾಹಿಯ
ಕೂಡಲಚೆನ್ನಸಂಗಯ್ಯಾ ಅನುಗ್ರಹ ಕಾರಣ ಅಂತಿಂತೆನಲಿಲ/247
ಆಚಾರವು ಅಗೋಚರ ನೋಡಯ್ಯಾ,
ಮಾಡಿದಲ್ಲದೆ ಇಲ್ಲ. ಒಡಲುವಿಡಿದಾಡಿದಡೆ ಹಿಡಿಯಲಿಲ್ಲಯ್ಯಾ.
ಇವನೀಸುವ ಕಳೆದ ಕೂಡಲಚೆನ್ನಸಂಗನ ಶರಣ
ಬಸವಣ್ಣ ಬಲ್ಲ, ನೋಡಯ್ಯಾ. /248
ಆಚಾರವುಳ್ಳಡೆ ಗುರು ಆಚಾರವುಳ್ಳಡೆ ಲಿಂಗ ಆಚಾರವುಳ್ಳಡೆ ಜಂಗಮ
ಆಚಾರವುಳ್ಳಡೆ ಪಾದೋದಕ ಆಚಾರವುಳ್ಳಡೆ ಪ್ರಸಾದ ಆಚಾರವುಳ್ಳಡೆ ಸದ್ಭಕ್ತ
ಆಚಾರವುಳ್ಳಡೆ ದಾಸೋಹ.
ಆಚಾರವಿಲ್ಲದಿದ್ದಡೆ ಗುರುವಲ್ಲ ನರನು
ಆಚಾರವಿಲ್ಲದಿದ್ದಡೆ ಲಿಂಗವಲ್ಲಾ ಶಿಲೆ
ಆಚಾರವಿಲ್ಲದಿದ್ದಡೆ ಜಂಗಮನಲ್ಲ ವೇಷಧಾರಿ
ಆಚಾರವಿಲ್ಲದಿದ್ದಡೆ ಪಾದೋದಕವಲ್ಲ ನೀರು
ಆಚಾರವಿಲ್ಲದಿದ್ದಡೆ ಪ್ರಸಾದವಲ್ಲ ಅಶನ
ಆಚಾರವಿಲ್ಲದಿದ್ದಡೆ ಭಕ್ತನಲ್ಲ ಭೂತಪ್ರಾಣಿ
ಆಚಾರವಿಲ್ಲದಿದ್ದಡೆ ದಾಸೋಹದ ಮನೆಯಲ್ಲ ವೇಶಿಯ ಗುಡಿಸಲು.
ಇದು ಕಾರಣ ಕೂಡಲಚೆನ್ನಸಂಗಯ್ಯಾ
ಆಚಾರವಿಲ್ಲದವರಿಗೆ ನಾಯಕನರಕ ತಪ್ಪದು/249
ಆಚಾರವೆಂಬ ಬಿಲ್ಲಿಗೆ ವಿಚಾರವೆಂಬ ನಾರಿ,
ಸಮತೆಯೆಂಬ ತಿರುವ ಮೆಟ್ಟಿ ಜೇವೊಡೆಗೆಯ್ದು,
ಶಿಷ್ಯನೆಂಬ ಬಾಣವ ತೊಡಚಿ,
ಗುರುವೆಂಬ ವ್ಯಾಧನು ಲಿಂಗವೆಂಬ ಬಯಲ ಗುರಿಯನೆಚ್ಚಡೆ,
ಗರಿ ತೋರದಂತೆ ಮುಳುಗಿ ಅಡಗಿತ್ತು.
ಆ ಗರಿಯನು ಬಾಣವನು ಅರಸಲುಂಟೆ,
ಕೂಡಲಚೆನ್ನಸಂಗಾ ನಿಮ್ಮಲ್ಲಿ ?/250
ಆಚಾರವೆಂಬುದು ಕೂರಲಗು, ತಪ್ಪಿ ಬಂದಡೆ ಪ್ರಾಣವ ತಗಲುವುದು.
ಅದು ಕಾರಣ, ಅರಿದರಿದು ಆಚರಿಸಬೇಕು.
ಆಚಾರವಿಚಾರ ಉಭಯದ ವಿಚಾರವ ನೋಡದೆ,
ಶಿವದೀಕ್ಷೆಯ ಮಾಡಲಾಗದು.
ಅದೆಂತೆಂದಡೆ :
ಪರರ ಹೆಣ್ಣಿಗೆ ಕಣ್ಣಿಡದಿಹುದೆ ಒಂದನೆಯ ಆಚಾರ.
ಪರರ ದ್ರವ್ಯವ ಅಪಹಾರ ಮಾಡದಿಹುದೆ ಎರಡನೆ ಆಚಾರ.
ಸುಳ್ಳಾಡದಿರವುದೆ ಮೂರನೆಯ ಆಚಾರ.
ವಿಶ್ವಾಸಘಾತವ ಮಾಡದಿಹುದೆ ನಾಲ್ಕನೆಯ ಆಚಾರ.
ಪ್ರಾಣಹಿಂಸೆಯ ಮಾಡದಿಹುದೆ ಐದನೆಯ ಆಚಾರ.
ಸಕಲ ಶಿವಶರಣರ್ಗೆ ಸಂತೋಷವಂ ಪುಟ್ಟಿಸುವುದೆ ಆರನೆಯ ಆಚಾರ.
ಸ್ವೀಕರಿಸಿದ ನೇಮವ ಪ್ರಾಣಾಂತ್ಯವಾಗಿ ಬಿಡೆನೆಂಬುವ ಏಳನೆಯ ಆಚಾರ.
ಷಟ್ಸ್ಥಲದವರ ದಿಕ್ಕರಿಸುವ ಜನರ ಸೀಳುವೆನೆಂಬುವ ವ್ರತವೆ ಎಂಟನೆ ಆಚಾರ.
ಕೆಟ್ಟಜನರ ಸಹವಾಸ ಮಾಡದಿಹುದೆ ಒಂಬತ್ತನೆಯ ಆಚಾರ.
ಸಜ್ಜನ ಸಂಗತಿಯ ಬಿಡದಿಹುದೆ ಹತ್ತನೆಯ ಆಚಾರ
ಅನ್ಯದೇವತಾಭಜನೆಗೆ ವಿಮುಖನಾಗುವುದೆ ಹನ್ನೊಂದನೆಯ ಆಚಾರ.
ಶಿವನೇ ಸರ್ವದೇವಶಿಖಾಮಣಿಯೆಂದು ಮನದಲ್ಲಿ ಅಚ್ಚೊತ್ತಿಪ್ಪುದೆ
ಹನ್ನೆರಡನೆಯ ಆಚಾರ.
ಶಿವನಿಗೆ ಶಿವಗಣಂಗಳಿಗೆ ಭೇದವ ಮಾಡದಿಹುದೆ ಹದಿಮೂರನೆಯ ಆಚಾರ.
ಸಕಲ ಜೀವಿಗಳಿಗೆ ಹಿತವ ಬಯಸುವುದೆ ಹದಿನಾಲ್ಕನೆಯ ಆಚಾರ.
ಸರ್ವರಿಗೆ ಹಿತವ ಮಾಡುವುದೆ ಹದಿನೈದನೆಯ ಆಚಾರ.
ಕಡ್ಡಿಯ ಲಿಂಗಕ್ಕೆ ತೋರಿ ದಂತಧಾವನೆಯ ಮಾಡುವುದೆ ಹದಿನಾರನೆಯ ಆಚಾರ.
ಸರ್ವಾವಯವವ ಸ್ವಚ್ಛ ಪ್ರಕ್ಷಾಳಿಸುವುದೆ ಹದಿನೇಳನೆಯ ಆಚಾರ
ಲಿಂಗಮುದ್ರೆಯಿಲ್ಲದ ಗುಡಿಯಲ್ಲಿ ಪಾಕವ ಮಾಡದಿಹುದೆ
ಹದಿನೆಂಟನೆಯ ಆಚಾರ.
ಪ್ರಣವಮುದ್ರೆ ಇಲ್ಲದ ವಸ್ತ್ರ ಹೊದೆಯದಿಹುದೆ ಹತ್ತೊಂಬತ್ತನೆಯ ಆಚಾರ.
ಹುಟ್ಟಿದ ಶಿಶುವಿಗೆ ಲಿಂಗಾಧಾರಣ ಮಾಡದೆ,
ತಾಯ ಮೊಲೆಹಾಲು ಜೇನುತುಪ್ಪ ಮುಟ್ಟಿಸದಿಹುದೆ ಇಪ್ಪತ್ತನೆಯ ಆಚಾರ.
ಆಡಿದ ಭಾಷೆಯ ಕಡೆಪೂರೈಸುವುದೆ ಇಪ್ಪತ್ತೊಂದನೆಯ ಆಚಾರ.
ಸತ್ಯವ ನುಡಿದು ತಪ್ಪದಿಹುದೆ ಇಪ್ಪತ್ತೆರಡನೆಯ ಆಚಾರ.
ತುರುಗಳ ಕಟ್ಟಿ ರಕ್ಷಿಸುವುದೆ ಇಪ್ಪತ್ತುಮೂರನೆಯ ಆಚಾರ.
ತುರುಗಳಿಗೆ ಲಿಂಗಮುದ್ರೆಯಿಕ್ಕಿ ಹಾಲು ಕರೆವುದು ಇಪ್ಪತ್ತುನಾಲ್ಕನೆಯ ಆಚಾರ.
ಮಂತ್ರಸಹಿತ ಗೋಮಯವ ಹಿಡಿದು, ಮಂತ್ರಸಹಿತ ಪುಟವಿಕ್ಕಿ
ಭಸ್ಮದ ರಾಶಿಯ ಮಾಡುವುದೆ ಇಪ್ಪತ್ತೈದನೆಯ ಆಚಾರ.
ಆ ಭಸ್ಮದ ರಾಶಿಯ ಪಾದೋದಕದೊಡನೆ ಉಂಡಿಯ ಕಟ್ಟುವುದೆ
ಇಪ್ಪತ್ತಾರನೆಯ ಆಚಾರ.
ವಿದಿಯರಿತು ಸ್ಥಾನವರಿತು ರುದ್ರಾಕ್ಷಿಗ? ಧರಿಸುವುದೆ
ಇಪ್ಪತ್ತೇಳನೆಯ ಆಚಾರ.
ಶಿವಾನುಭವವ ಶಾಸ್ತ್ರವ ವಿಚಾರಿಸುವುದೆ ಇಪ್ಪತ್ತೆಂಟನೆಯ ಆಚಾರ.
ಮನವ ನೋಯಿಸಿ ಮಾತನಾಡದಿಹುದೆ ಇಪ್ಪತ್ತೊಂಬತ್ತನೆಯ ಆಚಾರ.
ಲಿಂಗದ ಕಲೆಯರಿತು ಲಿಂಗವ ಪೂಜಿಸುವುದೆ ಮೂವತ್ತನೆಯ ಆಚಾರ.
ಗುರುಮುಖದಿಂದ `ತಾನಾರು’ ತನ್ನ ನಿಜವೇನೆಂದು ಬೆಸಗೊಳ್ಳವುದೆ
ಮೂವತ್ತೊಂದನೆಯ ಆಚಾರ.
ಷಡ್ವರ್ಗಂಗಳ ಮೆಟ್ಟಿ ಷಟ್ಸ್ಥಲವನಿಂಬುಗೊಂಡುದೆ
ಮೂವತ್ತೆರಡನೆಯ ಆಚಾರ.
ಅವಿಚ್ಛಿನ್ನವಾಗಿ ಅಂಗತ್ರಯದಲ್ಲಿ ಮನ ಓಕರಿಸಿಕೊಂಡುದೆ
ಮೂವತ್ತುಮೂರನೆಯ ಆಚಾರ.
ಲಿಂಗದಲ್ಲಿ ಶಿಲೆಯ ಭಾವವನರಸದಿಹುದೆ ಮೂವತ್ತುನಾಲ್ಕನೆಯ ಆಚಾರ.
ಜಂಗಮದಲ್ಲಿ ಕುಲವನರಸದಿಹುದೆ ಮೂವತ್ತೈದನೆಯ ಆಚಾರ.
ವಿಭೂತಿಯ ಮಾಣ್ಬದಿಹುದೆ ಮೂವತ್ತಾರನೆಯ ಆಚಾರ.
ರುದ್ರಾಕ್ಷಿಯ ಶುದ್ಧವ ಮಾಡಿ ಮಣಿಗಳ ಅರಸುವುದೆ
ಮೂವತ್ತೇಳನೆಯ ಆಚಾರ.
ಪಾದೋದಕದಲ್ಲಿ ಉಚ್ಛಿಷ್ಟವಳಿದುದೆ ಮೂವತ್ತೆಂಟನೆಯ ಆಚಾರ.
ಪ್ರಸಾದದಲ್ಲಿ ರುಚಿಯ ನೋಡದಿಹುದೆ ಮೂವತ್ತೊಂಬತ್ತನೆಯ ಆಚಾರ.
ಮಂತ್ರದಲ್ಲಿ ಕುತ್ಸಿತಕಲ್ಪನೆಯ ಮಾಡದಿಹುದೆ ನಾಲ್ವತ್ತೆಳನೆಯ ಆಚಾರ.
ಲಿಂಗಾರ್ಚನವಿರಹಿತ ಭೋಜನ ಮಾಡದಿಹುದೆ ನಾಲ್ವತ್ತೊಂದನೆಯ ಆಚಾರ.
ಐಕ್ಯರ ಸಮಾದಿಗೊಳಿಸಿ ತಾನು ಲಿಂಗಪೂಜೆಯ ಮಾಡುವುದೆ
ನಾಲ್ವತ್ತೆರಡನೆಯ ಆಚಾರ.
ಲಿಂಗದ್ರೋಹವ ಕೇಳಿ ತಾನು ಪ್ರಾಣಬಿಡುವುದೆ
ನಾಲ್ವತ್ತುಮೂರನೆಯ ಆಚಾರ.
ಜಂಗಮದ್ರೋಹವ ಕೇಳಿ ತಾನು ಐಕ್ಯನಾಗುವುದೆ
ನಾಲ್ವತ್ತುನಾಲ್ಕನೆಯ ಆಚಾರ.
ಲಿಂಗದ್ರೋಹವ ಮಾಡಿದವನ ಪ್ರಾಣವ ಭೇದಿಸುವುದೆ
ನಾಲ್ವತ್ತೈದನೆಯ ಆಚಾರ.
ಜಂಗಮದ್ರೋಹವ ಮಾಡಿದವನ ಶಿರವನೀಡಾಡುವುದೆ
ನಾಲ್ವತ್ತಾರನೆಯ ಆಚಾರ.
ಅಷ್ಟಾವರಣಸಂಗವ ಮಾಡುವ ಭೇದವ ತಿಳಿವುದೆ ನಾಲ್ವತ್ತೇ?ನೆಯ ಆಚಾರ.
ತಾನಾರು ಲಿಂಗವಾರು ಎಂಬ ಭೇದವು ತಿಲಮಾತ್ರ ಇಲ್ಲದಿರುವುದೆ
ನಾಲ್ವತ್ತೆಂಟನೆಯ ಆಚಾರ.
ತನ್ನ ನಿಜವಿಚಾರವ ತಾ ಮರೆಯದೆ ಷಟ್ಸ್ಥಲದವರಿಗೆ ಅರುಹಿ
ತನ್ನಂತೆ ಮಾಡುವುದೆ ನಾಲ್ವತ್ತೊಂಬತ್ತನೆಯ ಆಚಾರ.
ಇಂತಿಷ್ಟು ಆಚಾರಂಗಳ ಕಡೆಮುಟ್ಟಿಸುವುದೆ, ಕೂಡಲಚೆನ್ನಸಂಗಮದೇವರಲ್ಲಿ
ಐವತ್ತನೆಯ ಆಚಾರ ನೋಡಾ ಸಿದ್ದರಾಮಯ್ಯಾ./251
ಆಚಾರಸಹಿತ ಲಿಂಗಭಕ್ತನಾದರೆ, ದೈವವೆಂಬುದ ತನ್ನಲ್ಲಿಯೆ ಅರಿಯಬೇಕು.
ಇದಿರ ಅನ್ಯಭವಿಯ (ದೈವವ), ಕೊಂಡ ಕಾರಣವೇನಯ್ಯಾ ?
ಲಿಂಗೈಕ್ಯಂಗೆ ಅರಿಷಡ್ವರ್ಗ ಮಲತ್ರಯಂಗಳೆಂಬ ಭವಿಗಳರಿಯಬೇಕು.
ಅರಿದರಿದು ಆನಂದವೆಂಬ ಗುರುವಿನ ಕರದಿಂದ ಇವರ ಭಕ್ತರ ಮಾಡಿ,
ದೀಕ್ಷೆ ಶಿಕ್ಷೆ ಸ್ವಾನುಭಾವದಿಂದ ತನ್ನನೇ ಅರಿಯಬೇಕು.
ತ್ರಿಕರಣ ಘುಟಿಕೆಯಿಂದ ಜೀವಕಳೆಯನಿಕ್ಕಿ ಇವರ ಭಕ್ತರಂ ಮಾಡಿ
ಶಿವಲಿಂಗಾರ್ಚನೆಯ ಮಾಡುವಾತನೀಗ ಶೀಲವಂತ.
ಅವರಿಂ ಮತ್ತನಾಗಿ ವಿಸಟಂಬರಿದು,
ಅವು ಹೇಂಗೆ ಪ್ರಯೋಗಿಸಿದವು ಹಾಗೆ ಅವರಿಚ್ಛೆಗೆ ತಾನು ಪ್ರಯೋಗಿಸದೆ,
ಪರಿಣಾಮದಿಂದ ಬಂದ ಪದಾರ್ಥವ
ಲಿಂಗಾರ್ಪಿತವ ಮಾಡಿಕೊಂಬಾತನೀಗ ಲಿಂಗಸುಯಿಧಾನಿ, ಭವಿಪಾಕವ ಬಿಟ್ಟಾತ.
“ಅರ್ಪಯೇದ್ಯಃ ಸ್ವಯಂ ಪಾಕಂ ಪರಪಾಕಂ ವಿವರ್ಜಯೇತ್
ವ್ಯಾಪಾರಂ ಸಕಲಂ ತ್ಯಕ್ತ್ವಾ ಸ ರುದ್ರೋ ನಾತ್ರ ಸಂಶಯಃ
ಇಂತಪ್ಪಾತನೀಗ ಲಿಂಗೈಕ್ಯನು.
ಇನ್ನು ಅನ್ಯದೈವವೆಂಬವು;
ಪ್ರಾಣ ಅಪಾನ ವ್ಯಾನ ಉದಾನ ಸಮಾನ
ನಾಗ, ಕೂರ್ಮ, ಕ್ರಕರ, ದೇವದತ್ತ, ಧನಂಜಯವೆಂಬ ದಶವಾಯುಗಳುಂಟಾಗಿ
ತನ್ನ ತಾನರಿದ ಪುರುಷಂಗೆ ಇವೇ ಅನ್ಯದೈವ ಕಾಣಿಭೋ !
“ಭೂತಲಿಂಗಮಿದಂ ಜ್ಞೇಯಂ ಪ್ರೇತಲಿಂಗಂ ಶಿವಾರ್ಚಕಃ
ಭೂತಪ್ರೇತಪಿಶಾಚಾಂಶ್ಚ ದೂರತಃ ಪರಿವರ್ಜಯೇತ್
ಇಂತಪ್ಪ ಭವಿ-ಭಕ್ತರೆಂಬ ಭೇದವನರಿಯದೆ
ಇದಿರಲ್ಲಿ ಅನ್ಯದೈವವುಂಟೆಂಬ ಶೀಲರೆಲ್ಲ ಶೀಲವಂತರೆ ? ಅವರಂತಿರಲಿ.
ತನ್ನ ಮನದ ತಮಂಧವ ಕಳೆದು, ತನ್ನೊಳಗಿದ್ದ ಭವಿಗಳ ಭಕ್ತರ ಮಾಡಿ
ತನ್ನ ವಾಯುಭೂತಂಗಳ ಅನ್ಯದೈವವೆಂದೆನಿಸದೆ, ಶಿವಸಂಸ್ಕಾರಿಗಳೆಂದೆನಿಸಿ
ನಿತ್ಯ ಲಿಂಗಾರ್ಚನೆಯ ಮಾಡಬಲ್ಲ ಮಹಾಪುರುಷನ,
ಶ್ರೀಹಸ್ತಂಗಳಲ್ಲಿ ಪೊಗಳುತ್ತಿದ್ದವೈ ವೇದ.
“ಅಯಂ ಮೇ ಹಸ್ತೋ ಭಗವಾನ್ ಅಯಂ ಮೇ ಭಗವತ್ತರಃ
ಅಯಂ ಮೇ ವಿಶ್ವಭೇಷಜಃ ಅಯಂ ಶಿವಾಬಿಮರ್ಶನಃ,
ಅಯಂ ಮಾತಾ ಅಯಂ ಪಿತಾ
ಇಂತಪ್ಪ ಲಿಂಗಾರ್ಚನೆಯ ಮಾಡಬಲ್ಲಾತ ಸಂಬಂದಿಯೆನಿಸಿಕೊಳ್ಳಬಲ್ಲಾತ.
ಕೂಡಲಚೆನ್ನಸಂಗಯ್ಯಾ,
ನಿಮ್ಮ ಶರಣ, ಬಸವಣ್ಣಂಗೆ ಸುಲಭವಾಯಿತ್ತು
ಮಿಕ್ಕಿನವರಿಗೆಲ್ಲ ಅಸುಲಭ./252
ಆಜ್ಯೆಪೂಜೆಯೆಂತಿದ್ದರೇನು, ಮನದ ಓಜೆ ನೆಲೆಗೊಳ್ಳದನ್ನಕ್ಕ?
ಜಲ ಚಾಂಡಾಲವಾದರೆ ತಾವರೆ ನೆಲೆಗೊಂಬುದೇ?
ಮನ ಚಾಂಡಾಲವಾದರೆ ಲಿಂಗ ನೆಲೆಗೊಂಬುದೇ?
ಭಾವವಿಟ್ಟ ಕರುವಿನಂತೆ, ಅಲ್ಲಿಪ್ಪನೆ ಶಿವನು?
ಥಳಥಳಿಸದು, ಹೊಳೆಹೊಳೆಯದು, ಕೆರಕು ಕಲ್ಲಿನಂತೆ ಇಪ್ಪುದಯ್ಯಾ ಪರುಷವು.
ಆ ಪರುಷದಂತುವನಾರು ಬಲ್ಲರು?
ಹೆಮ್ಮೆಗೆರಗುವರಲ್ಲದೆ ಆ ಘನವನೆತ್ತಬಲ್ಲರು?
ಕೂಡಲಚೆನ್ನಸಂಗನ ಶರಣರ ಅಂತಕ ಬೊಂತಕರೆನಬೇಡ,
ಅವರಂತುವನಾ ಶಿವನೇ ಬಲ್ಲ. /253
ಆಡಿನ ಕೊರಳಲ್ಲಿ ಮೊಲೆಯಿದ್ದರೇನು ಅಮೃತವುಂಟೆ ?
ಭಕ್ತನಾದಲ್ಲಿ ಫಲವೇನು ಶಿವಪಥವನರಿಯದನ್ನಕ್ಕ ?
ದಕ್ಕಾಲಿ ಬಿದ್ದ ಕಣ್ಣಿನಂತೆ ಜಂಗಮದ ಮೇಲೆ ಹರುಷವಿಲ್ಲದ ನೋಟ.
ಕೂಡಲಚೆನ್ನಸಂಗನ ಶರಣನ ಬೆರಸದ ಹರುಷ
ಅರಸಿಯ ನೋಟದಂತೆ. /254
ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ ಮಲತ್ರಯಂಗಳಂ ಕಳೆದು
ಆಜ್ಞಾದೀಕ್ಷೆ ಉಪಮಾದೀಕ್ಷೆ ಸ್ವಸ್ತಿಕಾರೋಹಣ ಕಳಶಾಬಿಷೇಕ,
ವಿಭೂತಿಯ ಪಟ್ಟ ಲಿಂಗಾಯತ ಲಿಂಗಸ್ವಾಯತ-
ಈ ಏಳನು ಕಾಯಕ್ಕುಪದೇಶವ ಮಾಡುವುದು.
ಸಮಯ ನಿಸ್ಸಂಸಾರ ನಿರ್ವಾಣ ತತ್ತ್ವದೀಕ್ಷೆ ಆಧ್ಯಾತ್ಮ ಅನುಗ್ರಹ ಶುದ್ಧವಿದ್ಯೆ-
ಈ ಏಳನು ಪ್ರಾಣಕ್ಕುಪದೇಶವ ಮಾಡುವುದು.
ಏಕಾಗ್ರಚಿತ್ತ, ದೃಢವ್ರತ, ಪಂಚೇಂದ್ರಿಯಾರ್ಪಿತ, ಅಹಿಂಸೆ
ಮನೋಲಯ ಲಿಂಗನಿಜ ಸದ್ಯೋನ್ಮುಕ್ತಿ-
ಈ ಏಳನು ಮನಕ್ಕುಪದೇಶವ ಮಾಡುವದು.
ಈ ಪ್ರಕಾರದುಪದೇಶ ಕೂಡಲಚೆನ್ನಸಂಗಯ್ಯನಲ್ಲಿ ಸಹಜದೀಕ್ಷೆ. /255
ಆತ್ಮನ ನಿಜವನರಿದು ಪರಮಾತ್ಮಲಿಂಗ ತಾನೆಂದರಿದ ಶರಣಂಗೆ
ಎಂತಿರ್ದಡಂತೆ ಪೂಜೆ ನೋಡಾ !
ಆ ಶರಣ ಭೋಗಿಸಿತ್ತೆಲ್ಲ ಲಿಂಗಾರ್ಪಿತ, ರುಚಿಸಿತ್ತೆಲ್ಲ ಪ್ರಸಾದ
ಆ ಶರಣನರಿದುದೆಲ್ಲ ಪರಬ್ರಹ್ಮ, ನುಡಿದುದೆಲ್ಲ ಪರತತ್ತ್ವ,
ಆ ಶರಣ ತಾನೆ ಕೂಡಲಚೆನ್ನಸಂಗಯ್ಯನು/256
ಆತ್ಮನಲ್ಲಿ ಪ್ರಣವಪಂಚಾಕ್ಷರಿಯ ನಿರವಿಸಿ,
ಸದ್ಗುರುವೆ ಎನ್ನ ಶಿವಾತ್ಮನ ಮಾಡಿದಿರಾಗಿ, ಆತ್ಮಶುದ್ಧಿಯಾಯಿತ್ತೆನಗೆ.
ಪಂಚಭೂತಂಗಳಲಿ ಪಂಚಬ್ರಹ್ಮನನಿರಿಸಿದಿರಾಗಿ, ಭೂತಶುದ್ಧಿಯಾಯಿತ್ತೆನಗೆ.
ಅಂಡಜ ಜರಾಯುಜಾದಿ ಎಂಬತ್ತುನಾಲ್ಕುಲಕ್ಷ ಯೋನಿಯಲ್ಲಿ ಬಹ ಜೀವನ
ಅಯೋನಿಜನ ಮಾಡಿದಿರಾಗಿ ಜೀವಶುದ್ಧಿಯಾಯಿತ್ತೆನಗೆ.
ಅಂಗಾಶ್ರಯವ ಕಳೆದು ಲಿಂಗಾಶ್ರಯವ ಮಾಡಿದಿರಾಗಿ
ಮನಶ್ಶುದ್ಧಿಯಾಯಿತ್ತೆನಗೆ.
ಪಶುವೆಂಬ ಅಜ್ಞಾನದ್ರವ್ಯವ ಕಳೆದು ಪರಮಸುಜ್ಞಾನದ್ರವ್ಯವ ಮಾಡಿದಿರಾಗಿ
ದ್ರವ್ಯಶುದ್ಧಿಯಾಯಿತ್ತೆನಗೆ.
ಇಂತು ಸರ್ವಶುದ್ಧನಂ ಮಾಡಿ ಪೂರ್ವಾಶ್ರಯವ ಕಳೆದಿರಾಗಿ
ಕೂಡಲಚೆನ್ನಸಂಗಾ,
ನಿಮ್ಮುವ `ನ ಗುರೋರದಿಕಂ ನ ಗುರೋರದಿಕಂ ನ ಗುರೋರದಿಕಂ :
ಎನುತಿರ್ದೆನು. /257
ಆತ್ಮನು ಅಷ್ಟದಳ ಕಮಲದಳಂಗಳ ಮೆಟ್ಟಿ ಚರಿಸಿ ಆಡುವ ವಿಧವೆಂತೆಂದಡೆ;
ಇಂದ್ರದಳವೇರಿದಲ್ಲಿ ಗುಣಿಯಾಗಿಹನು.
ಅಗ್ನಿದಳವೇರಿದಲ್ಲಿ ಕ್ಷುಧಾತುರದಿಂ ಹಸಿದಿರುತ್ತಿಹನು.
ಯಮದಳವೇರಿದಲ್ಲಿ ಕ್ರೋಧದಿಂ ದುರಿತ ಚೇಷ್ಟಿತನಾಗಿಹನು.
ನೈಋತ್ಯದಳವೇರಿದಲ್ಲಿ ದ್ವೇಷಿಸುತ್ತಲಿಹನು.
ವರುಣದ?ವೇರಿದಲ್ಲಿ ನಿದ್ರೆಗೈವುತ್ತಿಹನು.
ವಾಯುವ್ಯದಳವೇರಿದಲ್ಲಿ ಸಂಚಲಚಿತ್ತದಿಂ ಗಮನಿಯಾಗಿಹನು.
ಕುಬೇರದಳವೇರಿದಲ್ಲಿ ಧರ್ಮಬುದ್ಧಿಯಿಂ ಪರಹಿತಾಥರ್ಿಯಾಗಿಹನು.
ಈಶಾನ್ಯದಳವೇರಿದಲ್ಲಿ ಸ್ತ್ರೀಗೋಷ್ಠಿ ವಿಷಯಾತುರನಾಗಿಹನು.
ಮಧ್ಯಸ್ಥಾನಕ್ಕೆ ಬಂದು ನಿಂದಲ್ಲಿ ಸದ್ಭಾವಿಯಾಗಿ
ಉತ್ತರಪಥ ಪರಮಾರ್ಥ ಮೋಕ್ಷಗಾಮಿಯಾಗಿಹನು.
ಇಂತೀ ಅಷ್ಟದಳಂಗಳ ಮೆಟ್ಟಿ ಚರಿಸುವ ಹಂಸನ ನೆಲೆಗೆಡಿಸಿ
ಸದ್ಭಾವಿಯಾಗಿರಬಲ್ಲ ಕೂಡಲಚೆನ್ನಸಂಗಾ ನಿಮ್ಮ ಶರಣನು/258
ಆತ್ಮಸಂಗವಾದ ಬಳಿಕ ಅರಿವ ಮೆರೆಯಲುಂಟೆ?
ಉಪಮೆ ನಿಃಸ್ಥಳವಾದ ಬಳಿಕ ಶಬ್ದಸಂದಣಿ ಉಂಟೆ?
ಅಖಂಡಿತ ಲಿಂಗಕ್ಕೆ ಅಪ್ರಮಾಣ ಶರಣ, ಸೀಮೆಸಂಬಂಧವೆಂಬ ಸಂಕಲ್ಪ ಉಂಟೆ ?
ಇದು ಕಾರಣ, -ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣಂಗೆ ಭವವಿಲ್ಲ, ಬಂಧನವಿಲ್ಲ./259
ಆತ್ಮಸ್ಥಿತಿ ಶಿವಯೋಗ ಸಂಬಂಧವ
ಅರಿದೆನೆಂದಡೆ ಹೇಳಿರಣ್ಣ
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚತತ್ವದ
ವಿವರಮಂ ಪೇಳ್ವೆ;
ಅಸ್ಥಿ ಮಾಂಸ ಚರ್ಮ ರುದಿರ ಶುಕ್ಲ ಮೇಧಸ್ಸು ಮಜ್ಜೆ
ಎಂಬ ಸಪ್ತಧಾತುವಿನ ಇಹವು,
ಶ್ರೋತ್ರ ನೇತ್ರ ಘ್ರಾಣ ಜಿಹ್ವೆ ತ್ವಕ್ಕು ಎಂಬ
ಪಂಚಜ್ಞಾನೇಂದ್ರಿಯಂಗಳಿಂದ ಶರೀರವೆನಿಸಿಕೊಂಬುದು.
ಶಬ್ದ ಸ್ಪರ್ಶ ರೂಪು ರಸ ಗಂಧವೆಂಬಿವು ಪಂಚೇಂದ್ರಿಯಗಳು,
ವಾಕ್ಕು ಪಾಣಿ ಪಾದ ಪಾಯು ಗುಹ್ಯವೆಂಬ
ಪಂಚಕಮರ್ೆಂದ್ರಿಯಂಗಳಿವರು ಪರಿಚಾರಕರು,
ಇಡಾ ಪಿಂಗಲಾ ಸುಷುಮ್ನಾ ಗಾಂಧಾರಿ ಹಸ್ತಿಜಿಹ್ವಾ ಪೂಷಾ
ಅಲಂಬು ಲಕುಹಾ ಪಯಸ್ವಿನಿ ಶಂಖಿನಿಯೆಂಬ ದಶನಾಡಿಗಳಂ ಭೇದಿಸುತ್ತಂ.
ಪ್ರಾಣ ಅಪಾನ ವ್ಯಾನ ಉದಾನ ಸಮಾನ ನಾಗ ಕೂರ್ಮ ಕೃಕರ
ದೇವದತ್ತ ಧನಂಜಯವೆಂಬ ದಶವಾಯುವಿನ ಸ್ಥಾನಂಗಳನರಿದು,
ಆಧ್ಯಾತ್ಮಿಕ ಆದಿದೈವಿಕ ಆದಿಭಾತಿಕವೆಂಬ ತಾಪತ್ರಯಂಗಳನರಿದು,
ರಾಜಸ ತಾಮಸ ಸಾತ್ವಿಕವೆಂಬ ಗುಣತ್ರಯಂಗಳನಳಿದು,
ಮನ ಬುದ್ಧಿ ಚಿತ್ತ ಅಹಂಕಾರವೆಂಬ ಅಂತಃಕರಣ ಚತುಷ್ಟಯಂಗಳು ತಿಳಿದು,
ಕಾಮ ಕ್ರೋಧ ಲೋಭ ಮೋಹ ಮದ
ಮತ್ಸರವೆಂಬ ಅರಿಷಡ್ವರ್ಗಂಗಳ ಗೆಲಿದು,
ಜಾಯತೆ ಅಸ್ತಿತೆ ವರ್ಧತೆ ಪರಿಣಮತೆ ಅಪಕ್ಷೀಯತೆ ವಿನಶ್ಯತೆ ಎಂಬ
ಷಡ್ಬಾವ ವಿಕಾರಂಗಳಂ ಬಿಟ್ಟು,
ಕ್ಷುತ್ತು ಪಿಪಾಸೆ ಶೋಕ ಮೋಹ ಜರೆ
ಮರಣವೆಂಬ ಷಡೂರ್ಮಿಗಳ ವರ್ಮವ ತಿಳಿದು,
ಜಾತಿ ವರ್ಣ ಆಶ್ರಮ ಕುಲ ಗೋತ್ರ ನಾಮವೆಂಬ ಷಡ್ಭ್ರಮೆಗಳಂ ತಟ್ಟಲೀಯದೆ.
ಅನ್ನಮಯ ಪ್ರಾಣಮಯ ಮನೋಮಯ ಆನಂದಮಯವೆಂಬ
ಪಂಚಕೋಶಂಗಳ ಸಂಬಂಧವನರಿದು,
ಕುಲ ಛಲ ದಾನ ಯೌವನ ರೂಪು ರಾಜ್ಯ ವಿದ್ಯೆ
ತಪವೆಂಬ ಅಷ್ಟಮದಂಗಳಂ ಕೆಡಿಸಿ,
ಧರ್ಮ ಅರ್ಥ ಕಾಮ ಮೋಕ್ಷವೆಂಬ ಚತುರ್ವಿಧ ಪುರುಷಾರ್ಥಂಗಳಂ ಕೆಡಿಸಿ,
ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯವೆಂಬ
ಚತುರ್ವಿಧ ಮುಕ್ತಿಯ ಬಯಸದೆ,
ಬ್ರಹ್ಮ ಕ್ಷತ್ರಿಯ ವೈಶ್ಯ ಶೂದ್ರರೆಂಬ ನಾಲ್ಕು ಜಾತಿಯಲ್ಲಿ ಭೇದವೆಂತೆಂದರಿದು
ಆಧಾರ ಸ್ವಾದಿಷ್ಠಾನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞಾ
ಎಂಬ ಷಡುಚಕ್ರಂಗಳಂ ಭೇದಿಸಿ,
ಕೃತಯುಗ ದ್ವಾಪರಯುಗ ಕಲಿಯುಗಂಗ?ಡಗಿ,
ಪೃಥ್ವಿ ಸಲಿಲ ಪಾವಕ ಪವನ ಅಂಬರ ರವಿ ಶಶಿ ಆತ್ಮವೆಂಬ
ಅಷ್ಟತನು ಮದಂಗಳ ಭೇದಾಭೇದಂಗಳ ಭೇದಿಸಿ,
ಸ್ಥೂಲತನು ಸೂಕ್ಷ್ಮತನು ಕಾರಣತನು ಚಿದ್ರೂಪತನು ಚಿನ್ಮಯತನು
ಆನಂದತನು ಅದ್ಭುತತನು ಶುದ್ಧತನುವೆಂಬ ಅಷ್ಟತನುವ ಏಕಾರ್ಥವಂ ಮಾಡಿ,
ಕಪಿಲವರ್ಣ ನೀಲವರ್ಣ ಮಾಂಜಿಷ್ಟವರ್ಣ ಪೀತವರ್ಣ ಕಪ್ಪುವರ್ಣ
ಗೌರವರ್ಣ ಶ್ವೇತವರ್ಣವೆಂಬ ಸಪ್ತಧಾತುಗಳ ಸ್ವಸ್ಥಾನವಂ ಮಾಡಿ,
ಜಾಗ್ರ ಸ್ವಪ್ನ ಸುಷುಪ್ತಿ ಎಂಬ ಅವಸ್ಥಾತ್ರಯಂಗಳಂ ಮೀರಿ,
ಜೀವಾತ್ಮ ಅಂತರಾತ್ಮ ಪರಮಾತ್ಮನೆಂಬೀ ಆತ್ಮತ್ರಯಂಗಳನೊಂದು ಮಾಡಿ,
ಅಣಿಮಾ ಮಹಿಮಾ ಗರಿಮಾ ಲಘಿಮಾ ಪ್ರಾಪ್ತಿ ಪ್ರಾಕಾಮ್ಯ ವಶಿತ್ವ
ಈಶತ್ವವೆಂಬ ಅಷ್ಟಸಿದ್ಧಿಗಳಂ ಬಿಟ್ಟು, ಅಂಜನಸಿದ್ಧಿ
ಘುಟಿಕಾಸಿದ್ಧಿ ರಸಸಿದ್ಧಿ ತ್ರಿಕಾಲಜ್ಞಾನಸಿದ್ಧಿ ಎಂಬ
ಅಷ್ಟಮಹಾಸಿದ್ಧಿಗಳಂ ತೃಣೀಕೃತಮಂ ಮಾಡಿಕೊಂಬುದು.
ತನುವ್ಯಸನ ಮನವ್ಯಸನ ಧನವ್ಯಸನ ರಾಜ್ಯವ್ಯಸನ ವಿಶ್ವವ್ಯಸನ
ಉತ್ಸಾಹವ್ಯಸನ ಸೇವಕವ್ಯಸನವೆಂಬ ಸಪ್ತವ್ಯಸನಂಗಳಂ ಬಿಟ್ಟು,
ವಡಬಾಗ್ನಿ ಮಂದಾಗ್ನಿ ಉದರಾಗ್ನಿ ಶೋಕಾಗ್ನಿ ಕಾಮಾಗ್ನಿ ಎಂಬ
ಪಂಚಾಗ್ನಿಯಂ ಕಳೆದು,
ಶರೀರಾರ್ಥ ಪರಹಿತಾರ್ಥ ಯೋಗಾರ್ಥ ಪರಮಾರ್ಥ
ತತ್ವಾರ್ಥಂಗಳಲ್ಲಿ ಅವಧಾನಿಯಾಗಿ,
ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ
ಪ್ರಸಾದಲಿಂಗ ಮಹಾಲಿಂಗವೆಂಬ ಷಡುಸ್ಥಲಂಗ?ಂ ಭೇದಿಸಿ,
ದಾಸ ವೀರದಾಸ ಭೃತ್ಯ ವೀರಭೃತ್ಯ ಸಜ್ಜನಸಮಯಾಚಾರ
ಸಕಲಾವಸ್ತೀಯರ್ಚನೆಯೆಂಬ ಷಡ್ವಿಧ ದಾಸೋಹದಿಂದ ನಿರಂತರ ತದ್ಗತವಾಗಿ.
ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ
ಧ್ಯಾನ ಧಾರಣ ಯೋಗ ಸಮಾದಿ ಎಂಬ ಅಷ್ಟಾಂಗ ಯೋಗದಲ್ಲಿ ಮುಕ್ತವಾಗಿ,
ಬಾಲ ಬೋಳ ಪಿಶಾಚ ರೂಪಿಗೆ ಬಾರದ ದೇಹಂಗಳನರಿದು
ಅನಿತ್ಯವಂ ಬಿಡುವುದು.
ಲಯಯೋಗವನರಿದು ಹಮ್ಮ ಬಿಡುವುದು.
ಮಂತ್ರಯೋಗವನರಿದು ಆಸೆಯಂ ಬಿಡುವುದು.
ಮರೀಚಿಕಾಜಲದಂತೆ ಬೆಳಗುವ ಶರಣ
ಆತ ರಾಜಯೋಗಿ, ಆತಂಗೆ ನಮೋ ನಮೋ ಎಂಬೆನಯ್ಯಾ
ಕೂಡಲಚೆನ್ನಸಂಗಮದೇವಾ./260
ಆದಿ ಅನಾದಿ ಅದಿದೇವತೆಗಳು
ಮೀನಜ ರೋಮಜ ಚಿಟ್ಟಜ ಚಪ್ಪಜ
ಋಷಿಯರುಗಳು ಮೊದಲಾದನಂತ
ಬ್ರಹ್ಮರಿಲ್ಲದಂದಲ್ಲಿಂದತ್ತತ್ತ
ಏಕಲಿಂಗ ಒಬ್ಬನೆ ಶರಣ.
ಗುರುವೆ ಪರಮಗುರುವೆ ನೀನೆಯಯ್ಯಾ.
ಆದಿಕುಳಕ್ಕೆ ಮೂಲಿಗನಾಗಿ ಸುಳುಹುದೋರಿ
ಪಾವನವ ಮಾಡಬಂದೆಯಯ್ಯಾ.
ಬಹುಮುಖ ಜೀವಿಗಳಿಗೆ ಬಹುಮುಖದಾಹಾರವ
ತೋರಿದೆಯಯ್ಯಾ.
ಭುವನವ ಸಲಹಲೆಂದು ಆದಿಯ ಲಿಂಗವ
ಅನಾದಿಯ ಶರಣನ ಕೈಯಲ್ಲಿ ಕೊಟ್ಟಿರಿ.
ಆ ಲಿಂಗವ ನೀವು ಸಂಘಟಿಸಿದ ಘಟಕ್ಕೆ ಕಾರುಣ್ಯವ ಮಾಡಿ
ಸಲಹಯ್ಯಾ ಕೂಡಲಚೆನ್ನಸಂಗಮದೇವಾ. /261
ಆದಿ ಅನಾದಿ ಆತ್ಮವಿವೇಕ ಅನುಭಾವಸಂಬಂಧ ಎಂತಿಪ್ಪುದೆಂದಡೆ;
ಆದಿಯೆ ದೇಹ, ಅನಾದಿಯೆ ಆತ್ಮ.
ಇಂತೀ ಆದಿ ಅನಾದಿಯ ಮೇಲಿಪ್ಪುದೆ ಪರಮಪ್ರಣವ.
ಆ ಪರಮಪ್ರಣವದ ಪರಮಪ್ರಕಾಶವೆ ಚಿಚ್ಭಕ್ತಿ.
ಆ ಚಿಚ್ಭಕ್ತಿಯ ಸುವರ್ಣಪ್ರಭೆಯ ಮೇಲಣ ಪರಮನಾದವೆ ಸುನಾದ ಬ್ರಹ್ಮ.
ಆ ಸುನಾದಬ್ರಹ್ಮದ ಮೇಲಣ ಸೂಕ್ಷ್ಮಲಿಂಗವೆ ನಾದಬಿಂದು ಕಳಾತೀತವಾದ
ಜ್ಯೋತಿರ್ಮಯಲಿಂಗ.
ಆ ಲಿಂಗದಿಂದೊಗೆದ ದೇಹೇಂದ್ರಿಯ ಮನಃ ಪ್ರಾಣಾದಿಗಳೆಲ್ಲ
ಆ ಲಿಂಗದ ಉಪಕರಣಂಗಳಾದ ಕಾರಣ
ಆ ಮನಃ ಪ್ರಾಣಾದಿಗಳೆಲ್ಲ ಆ ಪರವಸ್ತುವಿಗೆ ಬಿನ್ನವೆಂಬ ಅಜ್ಞಾನಿಯ
ಮೆಚ್ಚ ಕೂಡಲಚೆನ್ನಸಂಗಯ್ಯ./262
ಆದಿ ಅನಾದಿ ಇಲ್ಲದಂದು, ಸ್ಥಿತಿಗತಿ ಉತ್ಪನ್ನವಾಗದಂದು
ಭಕ್ತಿಯನುಭಾವಿಯ ಬಸುರೊಳಗೆ ಸತ್ಯಜ್ಞಾನವೆಂಬ ಶಾಸ್ತ್ರಂಗಳು ಹುಟ್ಟಿದವು.
ಆ ಶಾಸ್ತ್ರದೊಳಡಗಿದವು ವೇದಪುರಾಣಾಗಮಂಗಳು.
ಆ ಆಗಮಂಗಳೊಳಡಗಿದವು ಐವತ್ತೆರಡಕ್ಷರಂಗಳು
ಆ ಅಕ್ಷರಂಗಳೊಳಡಗಿದವು ಇಪ್ಪತ್ತೇಳು ನಕ್ಷತ್ರಂಗಳು.
ಆ ಇಪ್ಪತ್ತೇಳು ನಕ್ಷತ್ರಂಗಳೊಳಡಗಿದವು
ಈರೇಳು ಲೋಕದ ಗಳಿಗೆ ಜಾವ ದಿನ ಮಾಸ ಸಂವತ್ಸರಂಗಳು.
ಇಂತಿವೆಲ್ಲವನು ಒಳಗಿಟ್ಟುಕೊಂಡಿಹಾತ `ಓಂ ನಮಃ ಶಿವಾಯ ಎಂಬಾತ ಕಾಣಿರೆ !
ಹೊರಗಿಪ್ಪಾತನು `ಓಂ ನಮಃ ಶಿವಾಯ ಎಂಬಾತ ಕಾಣಿರೆ !
ಉಳಿದಿಪ್ಪಾತನು `ಓಂ ನಮಃ ಶಿವಾಯ ಎಂಬಾತ ಕಾಣಿರೆ !
ಮತ್ತಿದ್ದ ಯೋನಿಜರೆಲ್ಲರೂ ಶಾಪಹತರಾಗಿ ಹೋದರು.
ಇದು ಕಾರಣ- `ಓಂ ನಮಃ ಶಿವಾಯ ಎಂಬಾತನೆ ಲಿಂಗವುಪಂಚಾಕ್ಷರಿಯೆ ಪರಮೇಶ್ವರನು, ಪಂಚಾಕ್ಷರಿಯೆ ಪರಮತತ್ವ,
ಪಂಚಾಕ್ಷರಿಯೆ ಪರಮಯೋಗ,
ಪಂಚಾಕ್ಷರಿಯೆ ಪರಂಜ್ಯೋತಿ, ಪಂಚಾಕ್ಷರಿಯೆ ಪಾಪಾಂತಕ.
`ನ ಎಂಬಕ್ಷರವೆ ದೇವರ ಚರಣ, `ಮ ಎಂಬಕ್ಷರವೆ ದೇವರ ಒಡಲು,
`ಶಿ ಎಂಬಕ್ಷರವೆ ದೇವರ ಹಸ್ತ, `ವಾ ಎಂಬಕ್ಷರವೆ ದೇವರ ನಾಸಿಕ,
`ಯ ಎಂಬಕ್ಷರವೆ ದೇವರ ನೇತ್ರ.
ಮತ್ತೆ ;
`ನ ಎಂಬಕ್ಷರವೆ ದೇವರ ದಯೆ, `ಮ ಎಂಬಕ್ಷರವೆ ದೇವರ ಶಾಂತಿ,
`ಶಿ ಎಂಬಕ್ಷರವೆ ದೇವರ ಕ್ರೋಧ, `ವಾ ಎಂಬಕ್ಷರವೆ ದೇವರ ದಮನ,
`ಯ ಎಂಬ ಅಕ್ಷರವೆ ದೇವರ ಶಬ್ದ,
ಮತ್ತೆ ;
`ನ ಎಂಬಕ್ಷರವೆ ಪೃಥ್ವಿ, `ಮ ಎಂಬಕ್ಷರವೆ ಅಪ್ಪು,
`ಶಿ` ಎಂಬಕ್ಷರವೆ
ಅಗ್ನಿ, `ವಾ ಎಂಬಕ್ಷರವೆ ವಾಯು,
`ಯ ಎಂಬಕ್ಷರವೆ ಆಕಾಶ.
ಮತ್ತೆ;
`ನ ಎಂಬಕ್ಷರವೆ ಬ್ರಹ್ಮ, `ಮ ಎಂಬಕ್ಷರವೆ ವಿಷ್ಣು,
`ಶಿ ಎಂಬಕ್ಷರವೆ ರುದ್ರ, `ವಾ ಎಂಬಕ್ಷರವೆ ಶಕ್ತಿ,
`ಯ ಎಂಬಕ್ಷರವೆ ಲಿಂಗ,
ಇಂತು ಪಂಚಾಕ್ಷರದೊಳಗಳಿವಕ್ಷರ ನಾಲ್ಕು, ಉಳಿವಕ್ಷರ ಒಂದು.
ಈ ಪಂಚಾಕ್ಷರವನೇಕಾಕ್ಷರವ ಮಾಡಿದ ಬಳಿಕ ದೇವನೊಬ್ಬನೆ ಎಂದರಿದು,
ಬ್ರಹ್ಮ ದೈವವೆಂಬ ಬ್ರಹ್ಮೇತಿಕಾರರನೇನೆಂಬೆನಯ್ಯ !
ವಿಷ್ಣು ದೈವವೆಂಬ ವಿಚಾರಹೀನರನೇನೆಂಬೆನಯ್ಯ !
ಅಶ್ವಿನಿ ಭರಣಿ ಕೃತ್ತಿಕೆ ಮೊದಲಾದ ಇಪ್ಪತ್ತೇಳು ನಕ್ಷತ್ರಂಗಳೊಳಗೆ,
ಮೂಲಾನಕ್ಷತ್ರದಲ್ಲಿ (ವಿಷ್ಣು) ಹುಟ್ಟಿದನಾಗಿ ಮೂಲನೆಂಬ ಹೆಸರಾಯಿತ್ತು.
ದೇವರ ಸೇವ್ಯಕಾರ್ಯಕ್ಕೆ ಪ್ರಾಪ್ತನೆಂದು ವೇದಂಗಳು ಬಿನ್ನೈಸಲು,
ಜ್ಯೋತಿಷ್ಯಜ್ಞಾನ ಶಾಸ್ತ್ರಂಗಳು ಹುಸಿಯಾದೆವೆಂದು
ನಿಮ್ಮ ಹರಿಯ ಅಡವಿಯಲ್ಲಿ ಬೀಸಾಡಲು,
ಅಲ್ಲಿ ಆಳುತ್ತಿದ್ದ ಮಗನ ಭೂದೇವತೆ ಸಲಹಿ, ಭೂಕಾಂತನೆಂಬ ಹೆಸರುಕೊಟ್ಟು,
ಭೂಚಕ್ರಿ ತನ್ನ ಪ್ರತಿರೂಪ ತೋಳಲ್ಲಿ ಸೂಡಿಸಿ
ಶಿವಧರ್ಮಾಗಮ ಪೂಜೆ ಭಕ್ತಿಯಲ್ಲಿ ಯುಕ್ತನ ಮಾಡಿದ ಬಳಿಕ,
ಮತ್ತೆ ನಮ್ಮ ದೇವರ ಶ್ರೀಚರಣದಲ್ಲಿರ್ದು ಒಳಗೆ ತೋರಲು
ದೇವರು ಪುರಾಣಂಗ? ಕರೆದು ವಿಷ್ಣುವಿನ ಪಾಪಕ್ಷಯವ ನೋಡಿ ಎಂದರೆ
ಆ ಪುರಾಣಂಗಳಿಂತೆಂದವು;
“ಪಾಪಂತು ಮೂಲನಕ್ಷತ್ರಂ ಜನನೀವರಣಂ ಪುನಃ
ಪಾಪಂ ತು ಪರ್ವತಸ್ಥೂಲಂ ಶಿವೇ ವೈರಮತಃ ಪರಂ
ಶಿವದಾಸೋಹಭಾವೇನ ಪಾಪಕ್ಷಯಮವಾಪ್ನುಯಾತ್
ಎಂದು ಪುರಾಣಂಗಳು ಹೇಳಲಾಗಿ;
ವಿಷ್ಣು ಕೇಳಿ, ಪುರಾಣದ ಕೈಯಲು ದೀಕ್ಷಿತನಾಗೆ,
ಪುರಾಣ ಪುರುಷೋತ್ತಮನೆಂಬ ಹೆಸರು ಬಳಿಕಾಯಿತ್ತು.
ಮತ್ತೆ ನಮ್ಮ ದೇವರ ಪಾದರಕ್ಷೆಯ ತಲೆಯಲ್ಲಿ ಹೊತ್ತುಕೊಂಡು
ಭೂತಂಗಳಿಗಂಜಿ ಶಂಖಮಂ ಪಿಡಿದುಕೊಂಡು,
ದುರಿತಂಗಳಿಗಂಜಿ ನಾಮವನಿಟ್ಟು, ಪ್ರಳಯಂಗಳಿಗಂಜಿ ವೇಷವ ತೊಟ್ಟು.
ರಾಕ್ಷಸರಿಗಂಜಿ ಚಕ್ರಮಂ ಪಿಡಿದು,
ಶಿವನ ದಾಸೋಹದ ದಾಸಿಯೆಂದು ಕಸಕಿಲಂ ಪಿಡಿದು ಬಯಲನುಡುಗಿ,
ಹೊತ್ತ ನೀರಲ್ಲಿ ಪುತ್ಥಳಿಯ ಸಾಖ್ಯಮಂ ಮಾಡಿ
ಇಪ್ಪತ್ತೇಳು ಲಕ್ಷವರುಷ ಶಿವನ ಸೇವೆಯಂ ಮಾಡಿ
ಮತ್ತೆ ಗರುಡವಾಹನ ಸತಿಲಕ್ಷ್ಮಿ ವಾರ್ದಿಜಯಮಂ ಪಡೆದು
ದೇವರ ಎಡದ ಗದ್ದುಗೆಯನೋಲೈಸಿಪ್ಪವನ
ದೇವರೆಂದರೆ ನೀವೆಂದಂತೆ ಎಂಬರೆ ? ಕೇಳಿರಣ್ಣಾ !
ವಚನಶುದ್ಧ ಭಾವದಲ್ಲಿ ಭಕ್ತಿಯುಳ್ಳವರು ನೀವು
ಹೊತ್ತಿದ್ದ ವೇಷದಲ್ಲಿ ತಿಳಿದು ನೋಡಿ.
ತಂದೆತಾಯಿ ಇಂದ್ರಿಯದಲ್ಲಿ ಬಂದವರು ದೇವರೆ ?
ಸಂದೇಹ ಭ್ರಮೆಯೊಳಗೆ ಸಿಕ್ಕಿದವರು ದೇವರೆ ?
ಶುಕ್ಲ ಶೋಣಿತದೊಳಗೆ ಬೆಳೆದವರು ದೇವರೆ ?
ಆ ತಂದೆ ತಾಯ ಹುಟ್ಟಿಸಿದರಾರೆಂದು ಕೇಳಿರೆ;
ಹಿಂದೆ ಸಂದ ಯುಗಂಗಳು ಶತಕೋಟಿ ಸಂಖ್ಯೆಯ ಮೇಲೆ
ಏಳುನೂರೆಪ್ಪತ್ತುಸಾವಿರ ಯುಗಂಗಳು,
ಇದಕ್ಕೆ ನವಕೋಟಿ ನಾರಾಯಣರಳಿದರು,
ಶತಕೋಟಿ ಸಂಖ್ಯೆ ಬ್ರಹ್ಮರಳಿದರು
ಉಳಿದವರ ಪ್ರಳಯವ ಹೊಗಳಲಿನ್ನಾರ ವಶ ?
ಇಂತಿವೆಲ್ಲವನು ಬಿಟ್ಟು ಉಳಿದಿಪ್ಪಾತನೊಬ್ಬನೆ,
ಆತಂಗೆ ನಮೋ ಎಂಬೆ ಕೂಡಲಚೆನ್ನಸಂಗಮದೇವಾ./263
ಆದಿ ಅನಾದಿಯಿಲ್ಲದಂದು, ಮಹಾಬಯಲು ಬೆಳಗಿಲ್ಲದಂದು
ನಿಜಪ್ರಸಾದವ ತೋರಿಸಾ.
ನಾದವನೆ ಬಯಲು ನುಂಗಿ, ಬಯಲನೆ ಕಳೆ ನುಂಗಿ
ಹೊಳೆವ ಲಿಂಗವಿದೆಲ್ಲಿಯದೊ ?
ಪ್ರಸಾದಿಯ ಪ್ರಸಾದ ಮುಟ್ಟಿದಲ್ಲದೆ ಲಿಂಗಾರ್ಪಿತಕ್ಕೆ ಸಲ್ಲದು,
ಜಗಕ್ಕೆ ಪ್ರಸಾದಿಗಳೆಂತಪ್ಪರೊ ?
ಅನಾದಿಯ ಸೋಂಕಿಲ್ಲದ ಕಾರಣ ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣರು ಅನಂತ ಕುಳರಹಿತನು./264
ಆದಿ ಬಸವಣ್ಣ, ಅನಾದಿಲಿಂಗವೆಂದೆಂಬರು,
ಹುಸಿ ಹುಸಿ ಈ ನುಡಿಯ ಕೇಳಲಾಗದು.
ಆದಿ ಲಿಂಗ, ಅನಾದಿ ಬಸವಣ್ಣನು!
ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,
ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,
ಪ್ರಸಾದವು ಬಸವಣ್ಣನನುಕರಿಸಲಾಯಿತ್ತು.
ಇಂತೀ ತ್ರಿವಿಧಕ್ಕೆ ಬಸವಣ್ಣನೆ ಕಾರಣನೆಂದರಿದೆನಯ್ಯಾ
ಕೂಡಲಚೆನ್ನಸಂಗಮದೇವಾ. /265
ಆದಿ ಮಧ್ಯ ಅವಸಾನವಿಲ್ಲದುದ ವೇದಿಸುವಡೆ ವೇದ್ಯಂಗರಿದು,
ಸಾದಿಸುವ ಸಾಧಕಂಗಲ್ಲದೆ.
ವಾದಿಯಲ್ಲ ಪರವಾದಿಯಲ್ಲ, ಸಾಧಕನಲ್ಲ ಧರ್ಮದ ಬೋಧಕನಲ್ಲ.
ಗಡಣವಿಲ್ಲದ ನುಡಿಯನು ಎಡಬಲನೆಂದರಿಯನು,
ನಿಸ್ಸಂಗಿ ಶೂನ್ಯಸ್ಥಾನದಲ್ಲಿ ಸುಖಿಯಾಗಿಪ್ಪನು.
ದೇವನಲ್ಲ ಮಾನವನಲ್ಲ,
ಕೂಡಲಚೆನ್ನಸಂಗನಲ್ಲಿ ಸಯವಾದ ಲಿಂಗೈಕ್ಯನು./266
ಆದಿ ಲಿಂಗಂ ಭೋ, ಅನಾದಿ ಶರಣಂ ಭೋ!
ಪೂರ್ವ ಲಿಂಗಂ ಭೋ, ಅಪೂರ್ವ ಶರಣಂ ಭೋ!
ಕೂಡಲಚೆನ್ನಸಂಗನಲ್ಲಿ ಸಾಧ್ಯ ಲಿಂಗಂ ಭೋ,
ಅಸಾಧ್ಯ ಶರಣಂ ಭೋ! /267
ಆದಿ ಸಂಬಂಧವ ಬಿಟ್ಟು ಅಪರ ಸಂಬಂಧವ ಹಿಡಿದು
ಅಕ್ಕಟಾ ಕೆಟ್ಟರಲ್ಲಾ ದ್ವಿಜರೆಲ್ಲರು.
ಸಪ್ತವ್ಯಾಧರುಗಳು ದಶಾರಣ್ಯದಲಿ ಪಿತೃಸಂಕಲ್ಪವ ಮಾಡಿದರೆಂಬುದ ಕೇಳಿ
ಅಕ್ಕಟಾ ಕೆಟ್ಟರಲ್ಲಾ ದ್ವಿಜರೆಲ್ಲರು.
ಸಪ್ತವ್ಯಾಧಾ ದಶಾಣರ್ೆಷು ಮೃಗಾಃ ಕಾಲಂಜರೇ ಗಿರೌ
ಚಕ್ರವಾಕಾಸ್ಸರದ್ವೀಪೇ ಹಂಸಾಃ ಸರಸಿ ಮಾನಸೇ
ಯೇ ಸ್ಮ ಜಾತಾಃ ಕುರುಕ್ಷೇತ್ರೇ ಬ್ರಾಹ್ಮಣಾ ವೇದಪಾರಗಾಃ
ಪ್ರಸ್ಥಿತಾ ದೀರ್ಘಮಧ್ವಾನಂ ಯೂಯಂ ತೇ ಭ್ಯೊವಸೀದಥ
ಆಮೂರ್ತಾನಾಂ ಚ ಮೂರ್ತಾನಾಂ ಪಿತೃಣಾಂ ದೀಪ್ತತೇಜಸಾಂ
ನಮಸ್ಯಾಮಿ ಸದಾ ತೇಷಾಂ ಧ್ಯಾಯಿನಾಂ ಯೋಗಚಕ್ಷುಷಾಂ
ಚತುರ್ಬಿಶ್ಚ ಚತುರ್ಬಿಶ್ಚ ದ್ವಾಭ್ಯಾಂ ಪಂಚಬಿರೇವ ಚ
ಹೂಯತೇ ಚ ಪುನದ್ರ್ವಾಭ್ಯಾಂ ಸಮೇ ವಿಷ್ಣುಃ ಪ್ರಸೀದತು
ಇದು ಕಾರಣ ಆದಿ ಸಂಬಂಧವಂ ಬಿಟ್ಟು
ಅಪರ ಸಂಬಂಧವಂ ಹೊದ್ದಿದ ದ್ವಿಜರೆಲ್ಲರೂ
ಬೂದಿಯೊಳಗೆ ಹೋಮವ ಬೇಳಿದಂತಾದರಯ್ಯಾ
ಕೂಡಲಚೆನ್ನಸಂಗಮದೇವಾ. /268
ಆದಿ, ಅನಾದಿ, ಅನಾಗತ, ಅನಂತ, ಅದ್ಭುತ,
ತಮಂಧ, ತಾರಜ, ತಂಡಜ, ಬಿಂದುಜ,
ಬಿನ್ನಾಯುಕ್ತ, ಅವ್ಯಕ್ತ, ಆಮದಾಯುಕ್ತ,
ಮಣಿರಣ, ಮಾನ್ಯರಣ, ವಿಶ್ವರಣ, ವಿಶ್ವವಸು, ಅಲಂಕೃತ,
ಕೃತಯುಗ, ತ್ರೇತಾಯುಗ, ದ್ವಾಪರ[ಯುಗ], ಕಲಿಯುಗ-
ಇಂತೀ ಇಪ್ಪತ್ತೊಂದು ಯುಗಂಗಳ ನಿರ್ಮಿಸಿದಾತ ನಮ್ಮ ಬಸವಣ್ಣ.
ಪ್ರಥಮ ಯುಗದಲ್ಲಿ ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶಂಗಳಿಲ್ಲದಂದು
ಆರೂ ಆರೂ ಇಲ್ಲದಂದು, ನಾಮವಿಲ್ಲದಂದು,
ಅಂದು ನಿಃಶೂನ್ಯವಾಗಿದ್ದ ಕಾಣ ನಮ್ಮ ಬಸವಣ್ಣ.
ಅಂದು ನಿಮ್ಮ ನಾಬಿಕಮಲದಲ್ಲಿ ಜಲಪ್ರಳಯ ಪುಟ್ಟಿತ್ತು.
ಆ ಜಲಪ್ರಳಯದಲ್ಲಿ ಒಂದುಗುಳ್ಳೆ ಲಿಂಗಾಕಾರವಾಗಿ ಪುಟ್ಟಿತ್ತು.
ಆ ಲಿಂಗವ ತಕ್ಕೊಂಡು ಸ್ಥಾಪ್ಯವಿಟ್ಟಾತ ನಮ್ಮ ಬಸವಣ್ಣನು.
ಇಪ್ಪತ್ತನೆಯ ಯುಗದಲ್ಲಿ
ಓಂಕಾರವೆಂಬ ಮೇವ ಮೇದು, ಮೆಲುಕಿರಿದು, ಪರಮಾರ್ಥವೆಂಬ ಹೆಂಡಿಯನ್ನಿಕ್ಕಿ
ನೊಸಲ ಕಣ್ಣತೆರೆದು ನೋಡಲಾಗಿ ಆ ಹೆಂಡಿ ಭಸ್ಮವಾಯಿತ್ತು.
ಆ ಭಸ್ಮವನೆ ತೆಗೆದು ತಳಿಯಲಾಗಿ ಭೂಮಂಡಲ ಹೆಪ್ಪಾಯಿತ್ತು
ಹೆಪ್ಪಾಗಲಿಕ್ಕಾಗಿ ತೊಡೆಯ ಮೇಲಿದ್ದ ಲಿಂಗವ ತಕ್ಕೊಂಡು ಸ್ಥಾಪ್ಯವಿಟ್ಟಾತ
ನಮ್ಮ ಬಸವಣ್ಣ.
ಹತ್ತೊಂಬತ್ತನೆಯ ಯುಗದಲ್ಲಿ
ಏಕಪಾದದ ಮಾಹೇಶ್ವರನ ನಿರ್ಮಿಸಿದಾತ ನಮ್ಮ ಬಸವಣ್ಣ.
ಹದಿನೆಂಟನೆಯ ಯುಗದಲ್ಲಿ
ಕತ್ತಲೆಯ ಕಾಳೋದರನೆಂಬ ರುದ್ರನ ನಿರ್ಮಿಸಿದಾತ ನಮ್ಮ ಬಸವಣ್ಣ
ಹದಿನೇಳನೆಯ ಯುಗದಲ್ಲಿ
ವೇದಪುರಾಣಾಗಮಶಾಸ್ತ್ರಂಗಳ ನಿರ್ಮಿಸಿದಾತ ನಮ್ಮ ಬಸವಣ್ಣ
ಹದಿನಾರನೆಯ ಯುಗದಲ್ಲಿ…….
ಹದಿನೈದನೆಯ ಯುಗದಲ್ಲಿ
ಅಮೃತಮಥನವ ಮಾಡಿದಾತ ನಮ್ಮ ಬಸವಣ್ಣ.
ಹದಿನಾಲ್ಕನೆಯ ಯುಗದಲ್ಲಿ
ತೆತ್ತೀಸಕೋಟಿ ದೇವರ್ಕಳ ನಿರ್ಮಿಸಿದಾತ ನಮ್ಮ ಬಸವಣ್ಣ.
ಹದಿಮೂರನೆಯ ಯುಗದಲ್ಲಿ
ಸೌರಾಷ್ಟ್ರ ಸೋಮೇಶ್ವರನ ನಿರ್ಮಿಸಿದಾತ ನಮ್ಮ ಬಸವಣ್ಣ.
ಹನ್ನೆರಡನೆಯ ಯುಗದಲ್ಲಿ
ಪಾರ್ವತಿಪರಮೇಶ್ವರರ ನಿರ್ಮಿಸಿದಾತ ನಮ್ಮ ಬಸವಣ್ಣ.
ಹನ್ನೊಂದನೆಯ ಯುಗದಲ್ಲಿ
ಏಕಾದಶ ರುದ್ರರ ನಿರ್ಮಿಸಿದಾತ ನಮ್ಮ ಬಸವಣ್ಣ.
ಹತ್ತನೆಯ ಯುಗದಲ್ಲಿ
ದಶವಿಷ್ಣುಗಳ ನಿರ್ಮಿಸಿದಾತ ನಮ್ಮ ಬಸವಣ್ಣ.
ಒಂಬತ್ತನೆಯ ಯುಗದಲ್ಲಿ
ನವಬ್ರಹ್ಮರ ನಿರ್ಮಿಸಿದಾತ ನಮ್ಮ ಬಸವಣ್ಣ.
ಎಂಟನೆಯ ಯುಗದಲ್ಲಿ
ಅಷ್ಟದಿಕ್ಪಾಲರ ನಿರ್ಮಿಸಿದಾತ ನಮ್ಮ ಬಸವಣ್ಣ.
ಏಳನೆಯ ಯುಗದಲ್ಲಿ
ಸಪ್ತ ಸಮುದ್ರಂಗಳ ನಿರ್ಮಿಸಿದಾತ ನಮ್ಮ ಬಸವಣ್ಣ.
ಆರನೆಯ ಯುಗದಲ್ಲಿ
ಷಣ್ಮುಖದೇವರ ನಿರ್ಮಿಸಿದಾತ ನಮ್ಮ ಬಸವಣ್ಣ.
ಐದನೆಯ ಯುಗದಲ್ಲಿ
ಪಂಚಮುಖದೀಶ್ವರನ ನಿರ್ಮಿಸಿದಾತ ನಮ್ಮ ಬಸವಣ್ಣ.
ನಾಲ್ಕನೆಯ ಯುಗದಲ್ಲಿ
ಚತುಮರ್ುಖದ ಬ್ರಹ್ಮನ ನಿರ್ಮಿಸಿದಾತ ನಮ್ಮ ಬಸವಣ್ಣ.
ಮೂರನೆಯ ಯುಗದಲ್ಲಿ
ಬ್ರಹ್ಮ, ವಿಷ್ಣು, ರುದ್ರರ ನಿರ್ಮಿಸಿದಾತ ನಮ್ಮ ಬಸವಣ್ಣ.
ಎರಡನೆಯ ಯುಗದಲ್ಲಿ
ಸಂಗಯ್ಯನ ನಿರ್ಮಿಸಿದಾತ ನಮ್ಮ ಬಸವಣ್ಣ.
ಒಂದನೆಯ ಯುಗದಲ್ಲಿ
ಪ್ರಭುವೆಂಬ ಜಂಗಮವ ನಿರ್ಮಿಸಿದಾತ ನಮ್ಮ ಬಸವಣ್ಣ.
ಇಂತೀ ಇಪ್ಪತ್ತೊಂದು ಯುಗಂಗಳಲ್ಲಿ
ಬಸವಣ್ಣನು ತಮ್ಮ ಕರಕಮಲವೆಂಬ ಗರ್ಭದಲ್ಲಿ ಜನಿಸಿದನೆಂದು.
ಕಕ್ಕಯ್ಯಗಳು ತಮ್ಮ ಮೋಹದ ಮಗನೆಂದು
ಒಕ್ಕುದನಿಕ್ಕಿ ಸಲಹಿದರು ಕಾಣಾ ಕೂಡಲಚೆನ್ನಸಂಗಮದೇವಾ. /269
ಆದಿಯ ಪ್ರಸಾದವ ಕೊಂಬಡೆ ಆತ್ಮದ್ರೋಹಿ,
ಗುರುಪ್ರಸಾದವ ಕೊಂಬಡೆ ಗುರುದ್ರೋಹಿ,
ಲಿಂಗ ಪ್ರಸಾದವ ಕೊಂಬಡೆ ಲಿಂಗದ್ರೋಹಿ,
ಜಂಗಮ ಪ್ರಸಾದವ ಕೊಂಬಡೆ ಜಂಗಮದ್ರೋಹಿ,
ಸಮಯ ಪ್ರಸಾದವ ಕೊಂಬಡೆ ಭಾವವಳಿಯದಾಗಿ,
ಕೂಡಲಚೆನ್ನಸಂಗ[ನೆಂಬ] ಹಿರಿಯನ ಹಿರಿಯ ಮಗ
ಸಂಗನಬಸವಣ್ಣನ ಪ್ರಸಾದಕ್ಕೆ ನಾನೆಂಬ ಓಗರ/270
ಆದಿಯ ಪ್ರಸಾದವನರಿಯದೆ, ಅನಾದಿಯ ಪ್ರಸಾದಕ್ಕೆ ಹಸ್ತವ ನೀಡುವರಯ್ಯಾ,
ಅನಾದಿಪ್ರಸಾದವನರಿಯದೆ ಗಣಪ್ರಸಾದಕ್ಕೆ ಹಸ್ತವ ನೀಡುವರಯ್ಯಾ,
ಗಣಪ್ರಸಾದವನರಿಯದೆ ಸಮಯಪ್ರಸಾದಕ್ಕೆ ಹಸ್ತವ ನೀಡುವರಯ್ಯಾ.
ಸಮಯ ಪ್ರಸಾದವನರಿಯದೆ ಜಂಗಮಪ್ರಸಾದಕ್ಕೆ ಹಸ್ತವ ನೀಡುವರಯ್ಯಾ.
ಜಂಗಮ ಪ್ರಸಾದಿಯಾದಾತನು ಆ ಜಂಗಮದ ಮುಖವ ನೋಡಿ,
ಮನವು ತಲ್ಲೀಯವಾಗಿ ಕರಗದಿದ್ದರೆ ಆತ ಪ್ರಸಾದಿಯೆ
ಪರುಷವಿರಲು ಕಬ್ಬುನಕ್ಕೆ ಕೈಯ ನೀಡುವರೆ
ಇದು ಕಾರಣ ಕೂಡಲಚೆನ್ನಸಂಗಾ
ನಿಮ್ಮ ಪ್ರಸಾದಿಯ ಪ್ರಸಾದವ ವೇಧಿಸುತ್ತಿದ್ದೆನು. /271
ಆದಿಯಲೊಬ್ಬ ಮೂರ್ತಿಯಾದ, ಆ ಮೂರ್ತಿಯಿಂದ ಸದಾಶಿವನಾದ,
ಆ ಸದಾಶಿವನ ಮೂರ್ತಿಯಿಂದ ಜ್ಞಾನಶಕ್ತಿಯಾದಳು.
ಆ ಸದಾಶಿವಂಗೆಯೂ ಜ್ಞಾನಶಕ್ತಿಯಿಬ್ಬರಿಗೆಯೂ ಶಿವನಾದ,
ಆ ಶಿವಂಗೆ ಇಚ್ಛಾಶಕ್ತಿಯಾದಳು.
ಆ ಶಿವಂಗೆಯೂ ಇಚ್ಛಾಶಕ್ತಿಯಿಬ್ಬರಿಗೆಯೂ ರುದ್ರನಾದ.
ಆ ರುದ್ರಂಗೆ ಕ್ರಿಯಾಶಕ್ತಿಯಾದಳು.
ಆ ರುದ್ರಂಗೆಯೂ ಕ್ರಿಯಾಶಕ್ತಿಯಿಬ್ಬರಿಗೆಯೂ ವಿಷ್ಣುವಾದ.
ಆ ವಿಷ್ಣುವಿಂಗೆ ಮಹಾಲಕ್ಷ್ಮಿಯಾದಳು.
ಆ ವಿಷ್ಣವಿಂಗೆಯೂ ಮಹಾಲಕ್ಷ್ಮಿಯಿಬ್ಬರಿಗೆಯೂ ಬ್ರಹ್ಮನಾದ.
ಆ ಬ್ರಹ್ಮಂಗೆ ಸರಸ್ವತಿಯಾದಳು.
ಆ ಬ್ರಹ್ಮಂಗೆಯೂ ಸರಸ್ವತಿಯರಿಬ್ಬರಿಗೆಯೂ
ನರರು ಸುರರು ದೇವಕಳು ಹೆಣ್ಣು ಗಂಡು
ಸಚರಾಚರಂಗ?ು ಸಹಿತವಾಗಿ ಎಂಬತ್ತುನಾಲ್ಕುಲಕ್ಷ ಜೀವಜಂತುಗಳು,
ತೋರುವ ತೋರಿಕೆಯೆಲ್ಲ ಹುಟ್ಟಿತ್ತು ಕೂಡಲಚೆನ್ನಸಂಗಯ್ಯಾ. /272
ಆದಿಯಲ್ಲಿ ಪಿಂಡ ಅನಾದಿಯಲ್ಲಿ ಪ್ರಾಣ
ಎರಡನು ಸದ್ಗುರುಸ್ವಾಮಿ ಏಕಾರ್ಥವ ಮಾಡಿದಲ್ಲಿ
ಪಿಂಡದಲ್ಲಿ ಲಿಂಗಸಾಹಿತ್ಯ
ಪ್ರಾಣದಲ್ಲಿ ಜಂಗಮಸಾಹಿತ್ಯ
ಈ ಎರಡರ ಏಕಾರ್ಥದ ಕೊನೆಯ ಮೊನೆಯ ಮೇಲೆ
ಪ್ರಸಾದಸಾಹಿತ್ಯ
ಪ್ರಾಣಲಿಂಗಪ್ರಸಾದವಿರಹಿತನಾಗಿ
ಓಗರ ಪ್ರಸಾದವೆಂದು ಕೊಂಡರೆ ಕಿಲ್ಬಿಷ
ಕೂಡಲಚೆನ್ನಸಂಗಮದೇವ ಹುಳುಗೊಂಡದಲ್ಲಿಕ್ಕುವ./273
ಆದಿಯಲ್ಲಿ ಬಂದುದಲ್ಲ, ನಾದಬಿಂದುವಿನಲ್ಲಿ ಆದುದಲ್ಲ.
ನಾದವನು ಕಳೆ ನುಂಗಿ, ಕಳೆಯ ನಾದವ ನುಂಗಿ,
ಹೊಳೆವ ಲಿಂಗ ನಿನಗೆಂತು ಸಾಧ್ಯವಾಯಿತ್ತು ಹೇಳಾ ?
ಅಪ್ಪಣೆಯಿಲ್ಲದ ಅಪ್ಪಣೆ ಸಲುವುದೆ ಜಂಗಮದೊಳಗೆ ?
ಇದು ಕಾರಣ- ಕೂಡಲಚೆನ್ನಸಂಗಮದೇವರಲ್ಲಿ
ಆದಿಸೋಂಕು ನಿನಗೆಂತು ಸಾಧ್ಯವಾಯಿತ್ತು ಹೇಳಾ ಪ್ರಭುವೆ ! /274
ಆದಿಯಲ್ಲಿ ವೇದ್ಯ ಶಿವಸಂಪತ್ತಿನ ಮಹಾಘನ,
ಲಿಂಗಪ್ರಾಣ ಸಹಜದಲ್ಲಿ ಉದಯವಾದ
ಸಂಗನಬಸವ ನಮೋ ಸಂಗನಬಸವ ನಮೋ !
ಚೆನ್ನಸಂಗನ ಬಸವಿದೇವಂಗೆ ಅಪ್ರತಿಮಂಗೆ ಪ್ರತಿಯಿಲ್ಲ.
ಆ ಧರ್ಮವೆ ಧರ್ಮ.
ಕೂಡಲಚೆನ್ನಸಂಗಾ,
ನಿಮ್ಮ ಶರಣ ಬಸವಣ್ಣನು ಉಪಮಾತೀತನಯ್ಯಾ./275
ಆದಿಯಲ್ಲಿ ಹುಟ್ಟಿತ್ತಲ್ಲ, ಅನಾದಿಯಲ್ಲಿ ಬೆಳೆಯಿತ್ತಲ್ಲ;
ಮೂರ್ತಿಯಲ್ಲಿ ನಿಂದುದಲ್ಲ, ಅಮೂರ್ತಿಯಲ್ಲಿ ಭಾವಿಯಲ್ಲ;
ಅರಿವಿನೊಳಗೆ ಅರಿದುದಲ್ಲ, ಮರಹಿನೊಳಗೆ ಮರೆದುದಿಲ್ಲ;
ಎಂತಿರ್ದಡಂತೆ ಬ್ರಹ್ಮ ನೋಡಾ !
ಮನ ಮನ ಲೀಯವಾಗಿ ಘನ ಘನ ಒಂದಾದಡೆ
ಮತ್ತೆ ಮನಕ್ಕೆ ವಿಸ್ಮಯವೇನು ಹೇಳಾ ?
ಕೂಡಲಚೆನ್ನಸಂಗನ ಶರಣರು
ಕಾಯವೆಂಬ ಕಂಥೆಯ ಕಳೆಯದೆ ಬಯಲಾದಡೆ
ನಿಜವೆಂದು ಪರಿಣಾಮಿಸಬೇಕಲ್ಲದೆ
ಅಂತಿಂತೆನಲುಂಟೆ ಸಂಗನಬಸವಣ್ಣಾ ?/276
ಆದಿಯಾಧಾರ (ಆದಿಯನಾದಿ?) ಆತ್ಮ ವಿವೇಕ ಅನುಭಾವ ಸಂಬಂಧವೆಂತೆಂದಡೆ;
ಆದಿಯೆ ದೇಹ, ಅನಾದಿಯೆ ಆತ್ಮ.
ಇಂತೀ ಆದಿಯಾಧಾರದ (ಇಂತೀ ಆದಿಯನಾದಿಯ ?)
ಮೇಲಿಪ್ಪುದೆ ಪರಮಪ್ರಣವ.
ಆ ಪರಮಪ್ರಣವದ ಸುವರ್ಣದ ಪ್ರಭೆಯ ಮೇಗಳ
ಸೂಕ್ಷ್ಮಲಿಂಗವೆ ನಾದ ಬಿಂದು ಕಳಾತೀತವಾದ ಜೋತಿರ್ಮಯಲಿಂಗ,
ದೇಹ ಮನ ಪ್ರಾಣ ಇಂದ್ರಿಯಂಗಳೆಲ್ಲವು
ಆ ಲಿಂಗಕ್ಕೆ ಬಿನ್ನವೆಂಬ ಅಜ್ಞಾನಿಗಳ ಮೆಚ್ಚನು
ಕೂಡಲಚೆನ್ನಸಂಗಮದೇವ. /277
ಆದಿಯಾಧಾರವಾಗಿಹುದೇ ಘನ, ಆ ಘನವ ವೇದಿಸಿದುದೇ ಮನ;
ಮನವು ಮಹದಲ್ಲಿ ನಿಂದುದೆ ಭಕ್ತಿ,
ಬಿನ್ನಭಾವಕ್ಕಿಚ್ಛೆದೋರದಿಹುದೆ ಆಚಾರ,
ತಟ್ಟು ಮುಟ್ಟು ತಾಗು ನಿರೋಧವಿಲ್ಲದಿಹುದೆ ಪೂಜೆ,
ಆಸೆ ರೋಷ ಹರುಷವಿಲ್ಲದಿಹುದೆ ಪ್ರಸಾದ,
ಕರಣಮಥನಕ್ಕಿಚ್ಛೆ ತೋರದಿಹುದೆ ಅನುಭಾವ.
ಇಂತೀ ಸರ್ವಾಂಗದಲ್ಲಿ ಸಾಹಿತ್ಯವಾದ ನಿಜೈಕ್ಯಂಗೆ
ನಮೋ ನಮೋ ಎಂಬೆ ಕೂಡಲಚೆನ್ನಸಂಗಯ್ಯಾ./278
ಆದಿಯಿಂದತ್ತತ್ತ ನೀನೆ ಅಯ್ಯಾ, ಅನಾದಿಯಿಂದತ್ತತ್ತ ನೀನೆ ಅಯ್ಯಾ.
ಈ ಎರಡನೂ ಮೀರಿದ ಅತ್ಯತಿಷ್ಠದ್ದಶಾಂಗುಲನಾದೆಯಯ್ಯಾ.
`ಚತುರ್ಯುಗ ಸಹಸ್ರಾಣಿ’ ಎಂಬ ಸಂಖ್ಯೆ ಯುಗಂಗಳ ಪವಣಿಸದಂದು
ಕೆಸರುಗಲ್ಲನಿಕ್ಕಿ ಧರೆ ಮೇರುವ ನೆಲೆಗೊಳಿಸಿ ಅಂಡಜ ಉತ್ಪತ್ಯವಾಗದಂದು
ಆತನಂತುವ ನೀನೆ ಬಲ್ಲೆ ನಿನ್ನಂತುವನಾತನೆ ಬಲ್ಲ.
ನಿಮ್ಮಿಬ್ಬರ ಮಹಿಮೆಯ ನಾನೆತ್ತ ಬಲ್ಲೆನಯ್ಯಾ
ಕೂಡಲಚೆನ್ನಸಂಗಮದೇವಾ/279
ಆದಿಲಿಂಗ, ಅನಾದಿ ಶರಣ ಎಂಬುದು ತನ್ನಿಂದ ತಾನಾಯಿತ್ತು ಕೇಳಿರಣ್ಣಾ;
ಆದಿ ಕಾಯ, ಅನಾದಿ ಪ್ರಾಣ ಎಂಬ ಉಭಯದ ಭೇದವ ತಿಳಿದು
ವಿಚಾರಿಸಿ ನೋಡಿರಣ್ಣಾ. ಅನಾದಿಯ ಪ್ರಸಾದ ಆದಿಗೆ ಸಲುವುದು.
ಅನಾದಿ ಜಂಗಮಶ್ಚೈವ ಆದಿಲಿಂಗಸ್ಥಲಂ ಭವೇತ್
ಅನಾದೇಸ್ತು ವಿರೋಧೇನ ಇಷ್ಟೋಚ್ಛಿಷ್ಟಂ ತು ಕಿಲ್ಬಿಷಂ
ಇದನರಿದು ಪ್ರಾಣಪ್ರಸಾದ ವಿರೋಧವಾಗಿ
ಪಿಂಡಪ್ರಸಾದವ ಕೊಂಡಡೆ ಕಿಲ್ಬಿಷ ನೋಡಾ
ಕೂಡಲಚೆನ್ನಸಂಗಮದೇವಾ./280
ಆದಿಲಿಂಗ, ಅನಾದಿ ಶರಣನೆಂಬುದು ತಪ್ಪದು;
ಆದಿ ಗುರು, ಅನಾದಿ ಶಿಷ್ಯನೆಂಬುದು ತಪ್ಪದು.
ಗುರುವಿಂಗೆ ಶಿಷ್ಯಂಗೆ ಏನು ದೂರ ದೇವಾ ?
ಮುಳ್ಳುಗುತ್ತುವಡೆ ತೆರಹಿಲ್ಲದ ಪರಿಪೂರ್ಣ ಘನವು.
ಒಬ್ಬರಲ್ಲಿ ಒಂದು ಭಾವವುಂಟೆ ?
ಎನ್ನೊಳಗೆ ಬೆಳಗುವ ಜ್ಞಾನ, ನಿನ್ನ ಹೃದಯಕಮಲದೊ?ಗಣ ಆವ್ಯಕ್ತಲಿಂಗ.
ನಿನ್ನೊಳು ತೊಳಗಿ ಬೆಳಗುವ ಜ್ಯೋತಿರ್ಲಿಂಗ
ಎನ್ನಂತರಂಗದ ಸುಜ್ಞಾನಲಿಂಗ.
ಒಂದರಲ್ಲಿ ಒಂದು ಬಿಚ್ಚಿ ಬೇರೆ ಮಾಡಬಾರದಾಗಿ,
ಪ್ರಾಣಲಿಂಗ ಒಂದೆ, ಉಪದೇಶ ಒಂದೆ, ಕ್ರಿಯಾಕರ್ಮ ಒಂದೆ.
ನೀವಿನ್ನಾವುದ ಬೇರೆಮಾಡಿ ನುಡಿವಿರಯ್ಯಾ ?
ಕಾರ್ಯದಲ್ಲಿ ಗುರುವಾಗಿ,
ಅಂತರಂಗಕ್ಕೆ ಸುಜ್ಞಾನೋಪದೇಶವ ಮುನ್ನವೆ ಮಾಡಿದ ಬಳಿಕ
ಕ್ರೀಯಿಂದ ಮಾಡಲಮ್ಮೆನೆಂದಡೆ ಹೋಹುದೆ ?
ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ
ಎನಗೆ ನೀವು ಉಪದೇಶವ ಮಾಡಿದಡೆ
ಮರ್ತಲೋಕದ ಮಹಾಗಣಂಗ? ಕೈಯಲ್ಲಿ
ಅಹುದಹುದೆನಿಸುವೆ ಕಾಣಾ ಸಂಗನಬಸವಣ/281
ಆದಿಶೂನ್ಯಂ ಮಧ್ಯಶೂನ್ಯಂ ಅಂತ್ಯಶೂನ್ಯಂ ನಿರಾಮಯಂ
ಸರ್ವಶೂನ್ಯಂ ನಿರಾಕಾರಂ ನಿಶ್ಶಬ್ದಂ ಬ್ರಹ್ಮ ಉಚ್ಯತೇ
ಆ ನಿರವಯಸ್ಥಲವು, ಉರಿಯುಂಡ ಕರ್ಪುರದಂತಿದ್ದಿತ್ತು;
ಇಂತಿದು ನಿರವಯಸ್ಥಲವಯ್ಯಾ, ಕೂಡಲಚೆನ್ನಸಂಗಮದೇವಾ. /282
ಆದಿಸ್ಥಲವೆಂದು ನುಡಿವರು, ಅನಾದಿಸ್ಥಲವೆಂದು ನುಡಿವರು,
ಆದಿಗೆ ಒಡಲುಂಟು, ಅನಾದಿಗೆ ಒಡಲಿಲ್ಲ.
ನ ಚ ಭೂಮಿರ್ನ ಚ ಜಲಂ ನ ಚ ತೇಜೋ ನ ಚ ವಾಯುಃ ನ ಚಾಕಾಶಃ
ಇವೆಲ್ಲವೂ ಘಟಕ್ಕೆ ಸಂಬಂಧವಾಗಿ ಘಟ ಕೆಡುವುದು.
ಇಂಥ ನಿರ್ದೆಹಿ ಶರಣಂಗಲ್ಲದೆ ಅರಿಯಬಾರದು,
ಕೂಡಲಚೆನ್ನಸಂಗಯ್ಯಾ/283
ಆದ್ಯರ ವಚನವೇನು ಬಟ್ಟೆಯ ಸಂಬಳವೆ ?
ಮನೆ ಮನೆಯ ಹೊಕ್ಕು ಬೋದಿಸುವಂತಾಗಿ,
ಮನೆ ಮನೆಯ ಹೊಕ್ಕು ಮೆಚ್ಚಿಸುವಂತಾಗಿ,
ಇದು ಭಕ್ತಿಸ್ಥಲವೆ ? ಇದು ಜಂಗಮಸ್ಥಲವೆ ?
ಭಕ್ತನಾದರೆ ಭೃತ್ಯನಾಗಿರಬೇಕು.
ಈ ಎರಡೂ ಇಲ್ಲದ ಎಡೆಹಂಚರ ತೋರಿಸದಿರು
ಕೂಡಲಚೆನ್ನಸಂಗಮದೇವಾ. /284
ಆಧಾರ, ಲಿಂಗ, ನಾಬಿ ಮಧ್ಯನಾಳ ಕಂದದ ಬಯಲೊಳಗಿರ್ಪ
ಸೂಕ್ಷ್ಮಾಗ್ನಿಯನು ವ್ಯಾವೃತ್ತಿಯಿಂದೂಧ್ರ್ವಮುಖಕ್ಕೆ ತಂದು
ಧ್ರುವಮಂಡಲದ ಮೇಲೆ ನಿಲಿಸಿ,
ಪ್ರಭಾಮಂಡಲದೊ?ಗೆ ಹೊಳೆವ ಪ್ರಾಣಲಿಂಗಕ್ಕೆ
ನಮಚಕ್ರಮಧ್ಯದಲ್ಲಿರ್ಪ ಅಮೃತವನು, ಅರ್ಪಿತವ ಮಾಡಿ ಪ್ರಸಾದವ ಕೊಳಬಲ್ಲ,
ಕೂಡಲಚೆನ್ನಸಂಗಾ ನಿಮ್ಮ ಶರಣ/285
ಆಧಾರವುಳ್ಳನ್ನಕ್ಕ ಪ್ರಾಣಲಿಂಗಿಯಲ್ಲ,
ಅಧೇಯವುಳ್ಳನ್ನಕ್ಕ ಲಿಂಗಪ್ರಾಣಿಯಲ್ಲ.
ಇಷ್ಟಲಿಂಗದ ಕಷ್ಟಪೂಜಕರೆಲ್ಲರೂ
ಆ ದೃಷ್ಟಲಿಂಗದ ಘನವ ತಾವೆತ್ತ ಬಲ್ಲರು ?
ಇಷ್ಟದ ಕಷ್ಟವು ನಷ್ಟವಾದರೆ
ಕೂಡಲಚೆನ್ನಸಂಗನೆಂಬುದೇ ದೃಷ್ಟ. /286
ಆಧಾರಾದಿ ಷಡುಚಕ್ರಂಗಳು ಇವಕ್ಕೆ ವಿವರ:
ಆಧಾರಸ್ಥಾನದಲ್ಲಿ ಚತುರ್ದಳ ಪದ್ಮವಿಹುದು ಅದು ಸುವರ್ಣವರ್ಣ
ಅದಕ್ಕೆ ಅಕ್ಷರ ವಶಷಸ ಎಂಬ ನಾಲ್ಕಕ್ಷರ, ಅದಿದೈವ ಬ್ರಹ್ಮನು.
ಸ್ವಾದಿಷ್ಠಾನ ಸ್ಥಾನದಲ್ಲಿ ಷಡ್ದಳ ಪದ್ಮವಿಹುದು, ಅದು ಕಪ್ಪುವರ್ಣ
ಅದಕ್ಕೆ ಅಕ್ಷರ ಬಭಮಯರಲ ಎಂಬ ಷಡಕ್ಷರ, ವಿಷ್ಣು ಅದಿದೈವ.
ಮಣಿಪೂರದ ಸ್ಥಾನದಲ್ಲಿ ದಶದಳ ಪದ್ಮವಿಹುದು, ಅದು ಕೆಂಪುವರ್ಣ
ಅದಕ್ಕೆ ಅಕ್ಷರ ಡಢಣ ತಥದಧನ ಪಫ ಎಂಬ ದಶ ಅಕ್ಷರ, ರುದ್ರನದಿದೈವ.
ಅನಾಹತಸ್ಥಾನದಲ್ಲಿ ದ್ವಾದಶದಳದ ಪದ್ಮವಿಹುದು, ಅದು ನೀಲವರ್ಣ,
ಅದಕ್ಕೆ ಅಕ್ಷರ ಕಖಗಘಙ ಚ ಛ ಜಝಞ ಠ ಎಂಬ
ದ್ವಾದಶ ಅಕ್ಷರ ಅದಕ್ಕೆ ಮಹೇಶ್ವರ ಅದಿದೈವ.
ವಿಶುದ್ಧಿಸ್ಥಾನದಲ್ಲಿ ಷೋಡಶದಳ ಪದ್ಮವಿಹುದು, ಅದು ಸ್ಪಟಿಕವರ್ಣ
ಅದಕ್ಕೆ ಅಕ್ಷರ ಅ ಆ ಇ ಈ ಉ ಊ ಋ ಋೂ ಎ ಏ ಐ ಒ ಓ ಔ
ಅಂ ಅಃ ಎಂಬ ಷೋಡಶಾಕ್ಷರ, ಅದಕ್ಕೆ ಸದಾಶಿವ ಅದಿದೈವ.
ಆಜ್ಞಾಸ್ಥಾನದಲ್ಲಿ ದ್ವಿದಳದ ಪದ್ಮವಿಹುದು.
ಅದು ಮಾಣಿಕ್ಯವರ್ಣ, ಅದಕ್ಕೆ ಅಕ್ಷರ `ಹಕ್ಷ
ಎಂಬ ದ್ವಯಾಕ್ಷರ. ಅದಕ್ಕೆ ಮಹಾಶ್ರೀಗುರು ಅದಿದೈವ.
ಅಲ್ಲಿಂದ ಮೇಲೆ ಬ್ರಹ್ಮರಂಧ್ರಸ್ಥಾನದಲ್ಲಿ ಸಹಸ್ರದಳ ಪದ್ಮವಿಹುದು.
ಅದು ಹೇಮವರ್ಣ ಅಲ್ಲಿಗೆ ಓಂಕಾರವೆಂಬ ಅಕ್ಷರ
ಪರಂಜ್ಯೋತಿ ಪರಬ್ರಹ್ಮ ಅದು ಅನಂತಕೋಟಿ ಸೂರ್ಯಪ್ರಕಾಶವಾಗಿ
ಬೆಳಗುತ್ತಿಹುದು. ಅಲ್ಲಿಗೆ ಅದಿದೈವ
ಶ್ರೀಗುರು ಮೂರ್ತಿಯೇ ಕರ್ತನು.
ಇಂತೀ ಷಟ್ ಚಕ್ರಂಗಳಂ ತಿಳಿದು ಪರತತ್ವದಲ್ಲಿ ಇರಬಲ್ಲಡೆ
ಕೂಡಲಚೆನ್ನಸಂಗಯ್ಯನಲ್ಲಿ ಶರಣನೆನಿಸುವನು./287
ಆಧಾರಾಧೇಯ ಸೊಮ್ಮು ಸಂಬಂಧವಿಲ್ಲದ ಪ್ರಸಾದಿ,
ಭೋಗ ಅಭೋಗಂಗಳ ಸಾರಾಯವಿಲ್ಲದ ಪ್ರಸಾದಿ,
ಕ್ರಿಯಾಮೋಹಿತದ, ನಿಃಕ್ರಿಯಾನಿರ್ಮೊಹಿತದ,
ಎರಡರ ಭೇದವನು ಶರೀರಾರ್ಥಕ್ಕೆ ಹೊದ್ದಲೀಯದೆ
ಜಂಗಮದಲ್ಲಿ ನಿವೇದಿಸಿ ಲಿಂಗಲೀಯವಾದ ಪ್ರಸಾದಿ,
ಚತುಷ್ಟಯಂಗಳ ಜಿಹ್ವಕ್ಕೆ ತಲೆದೋರದ ಪ್ರಸಾದಿ.
ಇದು ಕಾರಣ-ಕೂಡಲಚೆನ್ನಸಂಗಯ್ಯಾ,
ಸರ್ವಾಂಗಲೀಯವಾದ ಪ್ರಸಾದಿ./288
ಆನು ನೀನೆಂಬ ಮೋಹವೆಲ್ಲಿಯದು,
ಭಾವ ನಿರ್ಭಾವವೆಂಬ ಪ್ರಸಂಗವೆಲ್ಲಿಯದು ಹೇಳಾ !
ಮನಲೀಯ ಮನಲೀಯ ಉಭಯಭಾವರಹಿತ
ಕೂಡಲಚೆನ್ನಸಂಗಾ ಲಿಂಗೈಕ್ಯವು. /289
ಆನು ಮಾಡಲು ಗುರುವಾದನಲ್ಲದೆ, ಗುರು ಮಾಡಲು ನಾನಾದೆನೆ ?
ಗುರು ಮಾಡಲು ಲಿಂಗವಾಯಿತ್ತಲ್ಲದೆ, ಲಿಂಗ ಮಾಡಲು ಗುರುವಾದನೆ ?
ಇಂತೀ ಉಭಯ ಕುಳಸ್ಥಳವನು ಕೂಡಲಚೆನ್ನಸಂಗನ ಶರಣ ಬಲ್ಲನಲ್ಲದೆ
ಎಲ್ಲರೂ ಎತ್ತ ಬಲ್ಲರು ? /290
ಆನು ಶುದ್ಧಧವಳಿತನು
ಎನಗೆ ಅನಾದಿ ಬಂದು ಹೊದ್ದಿದ ಕಾರಣವೇನಯ್ಯಾ ?
ಜಲವ ಮೊಗೆಯೆ ಬಂದೆನೇಕಯ್ಯಾ ?
ಗಿಡುವ ಹರಿಯ ಬಂದೆನೇಕಯ್ಯಾ ?
ಎಲ್ಲರ ನಡುವೆ ಕುಳ್ಳಿರ್ದು ಗೀತವ ಹಾಡಬಂದೆನೇಕಯ್ಯಾ ?
ಬಸವಣ್ಣ ಚೆನ್ನಬಸವಣ್ಣಯೆಂಬೆರಡು ಶಬ್ದವೇಕಾದವು ಹೇಳಾ,
ಕೂಡಲಚೆನ್ನಸಂಗಮದೇವಾ ? /291
ಆನು, ನೀನು, ಅರಿದೆ ಮರೆದೆ, ಅಳಿದೆನುಳಿದೆನೆಂಬ ಸಂಶಯ ಭ್ರಮೆ,
ಅತತ್ವ ತತ್ವವಿವೇಕಭ್ರಮೆ, ಮೂಲ ಸ್ಥೂಲ ಸೂಕ್ಷ್ಮ ವಿಪರೀತ ಭ್ರಮೆ,
ಪುಣ್ಯಪಾಪ ಸ್ವರ್ಗ ನರಕ ಬಂಧಮೋಕ್ಷ ಪ್ರವರ್ತಕ ನಿವರ್ತಕ
ಆದಿಯಾದ ಸಪ್ತಕರ್ಮ ಬಂಧಭ್ರಮೆ, ಹುಸಿಜೀವ ಪರಮನೈಕ್ಯಸಂಧಾನ ಭ್ರಮೆ,
ಯೋಗದಾಸೆ ಸಿಲುಕುಭ್ರಮೆ, ಅಂತಮರ್ುಖಭ್ರಮೆ ಬಹಿಮರ್ುಖಭ್ರಮೆ,
ಅನೃತಭ್ರಮೆ ಸತ್ಯಭ್ರಮೆ ನಿತ್ಯಭ್ರಮೆ, ವಾಗದ್ವೈತಭ್ರಮೆ, ಅದ್ವೈತಭ್ರಮೆ,
ಮಂತ್ರಭ್ರಮೆ ತಂತ್ರಭ್ರಮೆ, ನಾಹಂ ಭ್ರಮೆ, ಕೋಹಂ ಭ್ರಮೆ, ಸೋಹಂ ಭ್ರಮೆ.
ತತ್ವ ಸಕರಣವೇಷ್ಟಿತ ಜಗತ್ರಯವೆಲ್ಲಾ ಮಾಯಾಮಯ.
ಕೂಡಲಚೆನ್ನಸಂಗಾ
ನಿಮ್ಮ ಶರಣಂಗಾವ ಭ್ರಮೆಯೂ ಇಲ್ಲ. /292
ಆನೆಂಬುದಿಲ್ಲ, ನೀನೆಂಬುದಿಲ್ಲ,
ಸ್ವಯವೆಂಬುದಿಲ್ಲ, ಪರವೆಂಬುದಿಲ್ಲ,
ಅರಿವೆಂಬುದಿಲ್ಲ, ಮರವೆಂಬುದಿಲ್ಲ,
ಒಳಗೆಂಬುದಿಲ್ಲ, ಹೊರಗೆಂಬುದಿಲ್ಲ,
ಕೂಡಲಚೆನ್ನಸಂಗಯ್ಯನೆಂಬ ಶಬ್ದ ಮುನ್ನಿಲ್ಲ !/293
ಆನೆಂಬುದಿಲ್ಲಯ್ಯ, ಲಿಂಗವೆಂಬ ಮಹಂತಂಗೆ,
ಅಳಿಯನು ಉಳಿಯನು,
ಮಿಂಚಿನ ಗೊಂಚಲಂತೆ ಮುಂದೆ ರೂಪಾಗಿ ತೋರುತಿಪ್ಪನು.
ಶರಣನೊಡಲುಗೊಂಡಡೆ ಸಾಮಾನ್ಯನೆ ? ಪ್ರಕೃತಿ ಗುಣಬಿನ್ನಭಾವವಿಲ್ಲ.
ಕೂಡಲಚೆನ್ನಸಂಗನ ಶರಣರ ಪರಿ ಬೇರೆ. /294
ಆನೆಯನೇರಿದ ಮಾವತಿಗ ಚಕ್ರೇಶ್ವರನಾಗಬಲ್ಲನೆ ಅಯ್ಯಾ ?
ವೇದಾಗಮಶಾಸ್ತ್ರ ಪುರಾಣಂಗಳನೋದಿ ಕೇಳಿ,
ನಡೆ ನುಡಿ ಪೂರಾಯವಾದ ಪುರಾತನರಾಗಬಲ್ಲರೆ ಅಯ್ಯಾ ?
ಅದೆಂತೆಂದಡೆ; `ಪೂರ್ಣಶ್ಚ ಪುರಾತನಃ ಎಂದುದಾಗಿ.
ತೊತ್ತು ಲಕ್ಷಣವಿರಲು, ನಾಣ್ಯವ ನುಡಿಸಿ,
ನವರತ್ನಾಭರಣಂಗಳ ತೊಡಿಸಿ, ದಂಡಿಗೆಯನೇರಿಸಲು
`ಶಂಕರಸ್ಯ ಯಥಾ ಗೌರೀ’ ಎನಿಸಿಕೊಳ್ಳಬಲ್ಲಳೆ ಅಯ್ಯಾ ?
ಖ್ಯಾತಿಗಾಗಿ ನಿಜತತ್ವಂಗಳನೋದಿ ಕೇಳಿ ಹೇಳಿದಡೇನು ?
ಅದಕ್ಕೆ ತಕ್ಕ ಅರಿವು ಆಚಾರ ನಡೆನುಡಿಯಲ್ಲಿ ನಿರ್ಣಯವಿಲ್ಲದಿರ್ದಡೆ
ಕುಂಬಿಪಾತಕ ನಾಯಕನರಕ ತಪ್ಪದು-
ಕೂಡಲಚೆನ್ನಸಂಗಮದೇವಾ./295
ಆನೆಯನೇರಿದಡೇನಯ್ಯಾ, ಮಾನವರಿಗೆ ಕೈಯಾನುವಾತ ?
ಬೇಡುವು[ದ] ಬೇಡಲಾರ, ಏರಿ ಬರ್ಪ ಹೆಮ್ಮೆಯ ನೋಡಾ !
ಭವದ ಬಟ್ಟೆಯಲ್ಲಿ ಬ್ರಹ್ಮಚಾರಿಯ ಕಂಡು
ಕೂಡಲಚೆನ್ನಸಂಗಯ್ಯ ನಗುತಿರ್ದ./296
ಆಪ್ಯ ತ್ರಿವಿಧಾರ್ಪಿತವು ಲಿಂಗಮುಖದಲ್ಲಿ ಪ್ರಸಾದವಾಯಿತ್ತೆಂಬೆ.
ಅವಸರ ಅನವಸರ ಆತ್ಮಲಿಂಗಮುಖದಲ್ಲಿ
ಅರ್ಪಿತವೆರಡಾಗಿ ಪ್ರಸಾದವಾಯಿತ್ತೆಂಬೆ.
ಅವಸರ ಅನವಸರ ಉಭಯಕುಲವರಿದು ಅರ್ಪಿಸಬಲ್ಲಡೆ ಪ್ರಸಾದಿ ಎಂಬೆ.
`ಲಿಂಗಸ್ಯಾವಸರೇ ಯತ್ತು ದದ್ಯಾತ್ತತ್ತಸುಖದಂ ಭವೇತ್
ಇದು ಕಾರಣ, ಕೂಡಲಚೆನ್ನಸಂಗಯ್ಯಾ,
ಲಿಂಗಮುಖವರಿದ ಅರ್ಪಿತ ಅಪೂರ್ವ/297
ಆಪ್ಯಾಯನ ಮುಂತಾಗಿ ಕೊಂಬುದು ಪ್ರಸಾದವಲ್ಲ.
ಸಯದಾನದೊಳಗಣ ಪ್ರಸಾದ ಆವ ಪರಿಯಲೂ ಅಲ್ಲ.
ಮತ್ತೆಯೂ ಪ್ರಸಾದವೆ ಬೇಕು. ಇಂತಪ್ಪ ಪ್ರಸಾದಿಯ ತೋರು ಕೂಡಲಚೆನ್ನಸಂಗಮದೇವಾ. /298
ಆಮಿಷ ತಾಮಸವೆಂಬ ಸಂದೇಹ ನಿಂದಿತ್ತು;
ಪುಣ್ಯ ಪಾಪವೆಂಬ ಉಭಯವಳಿಯಿತ್ತು;
ಇಷ್ಟ ಪ್ರಾಣವೆಂಬ ಉಭಯದ ಬೆಳಗು ಒಡಗೂಡಿತ್ತು.
ಪ್ರಭುದೇವರ ಸುಳುಹು ಕಾಣಲಾಗಿ
ಕೂಡಲಚೆನ್ನಸಂಗಮದೇವರ ಕಾಣಬಂದಿತ್ತು./299
ಆಯತ ಪ್ರಸಾದಿ, ಸ್ವಾಯತ ಪ್ರಸಾದಿ,
ಸನ್ನಿಹಿತ ಪ್ರಸಾದಿ, ಸಮಯಭೋಗ ಪ್ರಸಾದಿ.
ಪ್ರಸಾದವೆ ಪ್ರಾಣವಾಗಿ,
ಪ್ರಸಾದವು ಪ್ರಸಾದಿಯನೆ ಅವಗ್ರಹಿಸಿಕೊಂಡಿಪ್ಪುದು,
ಪ್ರಸಾದವೂ ಪ್ರಸಾದಿಯೂ ಏಕವಾಗಿದ್ದಡಾನು
ನಮೋ ನಮೋಯೆಂಬೆ ಕೂಡಲಚೆನ್ನಸಂಗಮದೇವಾ/300
ಆಯತ ಸ್ವಾಯತ ಲಿಂಗಾನುಗ್ರಹ ಕಾರಣ ಶಿವಧ್ಯಾನ,
ಲಿಂಗ ಜಂಗಮ ಪ್ಸಾದ ತೃಪ್ತಿ.
ಬಹುಲಿಂಗ ಪ್ರಸಾದವೆ ಕಿಲ್ಬಿಷ,
ಇಂತೆಂದುದು ಕೂಡಲಚೆನ್ನಸಂಗನ ವಚನ. /301
ಆಯತ ಸ್ವಾಯತ ಸನ್ನಹಿತವ
ಅನಾಯತಗಳು ಮುಟ್ಟಲಮ್ಮವು ನೋಡಾ.
ಕಂಗಳ ಕೈಗಳಲರ್ಪಿಸುವ, ಶ್ರೋತ್ರದ ಕೈಗಳಲರ್ಪಿಸುವ
ನಾಸಿಕದ ಕೈಗಳಲರ್ಪಿಸುವ ಜಿಹ್ವೆಯ ಕೈಗಳಲರ್ಪಿಸುವ,
ತನುವಿನ ಕೈಗಳಲರ್ಪಿಸುವ, ಮನದ ಕೈಗಳಲರ್ಪಿಸುವ,
ಕೈಗಳ ಕೈಯಲರ್ಪಿಸುವ.
ಅಲ್ಲಲ್ಲಿ ತಾಗಿದ ಸುಖವನಲ್ಲಲ್ಲಿ ಲಿಂಗಾರ್ಪಿತವ ಮಾಡುವನಾಗಿ
ಕೂಡಲಚೆನ್ನಸಂಗಯ್ಯನಲ್ಲಿ ಆತ ಮಹಾಪ್ರಸಾದಿ. /302
ಆಯತಲಿಂಗದಲ್ಲಿ ಆಗಾಗಿ ಭಕ್ತನೆನಿಸೂದಯ್ಯಾ.
ಸ್ವಾಯತಲಿಂಗದಲ್ಲಿ ಆಗಾಗಿ (ಯುಕ್ತ)ನೆನಿಸೂದಯ್ಯಾ.
ಸಂಯೋಗದಲ್ಲಿ ಆಗಾಗಿ ಶರಣನೆನಿಸೂದಯ್ಯಾ.
ಪ್ರಾಣಕ್ಕೆ ಪ್ರಾಣವಾಗಿ ಉಭಯಪ್ರಾಣವೆಂದೆನಿಸೂದಯ್ಯಾ.
ಘನಕ್ಕೆ ಘನ ಮನವಾದಲ್ಲಿ ಮನವೇದ್ಯನೆಂದೆನಿಸೂದಯ್ಯಾ,
ಕೂಡಲಚೆನ್ನಸಂಗಯ್ಯಾ, ಲಿಂಗ ಸರ್ವಾಂಗದಲ್ಲಿ ಅನುಭಾವದಿಂದ
ಅದಿಕನೆಂದೆನಿಸೂದಯ್ಯಾ. /303
ಆಯತಲಿಂಗದಲ್ಲಿ ಆಚಾರವರತು,
ಸ್ವಾಯತಲಿಂಗದಲ್ಲಿ ವಿಚಾರವರತು,
ಸನ್ನಹಿತಲಿಂಗದಲ್ಲಿ ಅನುಭಾವವರತು,
ಈ ತ್ರಿವಿಧದಲ್ಲಿ ತ್ರಿವಿಧವರತಡೆ
ಒಂದಲ್ಲದೆರಡುಂಟೆ ಕೂಡಲಚೆನ್ನಸಂಗಾ ನಿಮ್ಮಲ್ಲಿ ? /304
ಆಯತ-ಸ್ವಾಯತ-ಸಂಯೋಗಸಂಬಂದಿಯ ಆಚಾರವಡಗಿತ್ತು,
ಅನುಭಾವ ತೊಡೆಯಿತ್ತು, ಕ್ರಿಯಾತೀತ ನಿಃಪತಿಯಾಯಿತ್ತು,
ಕೂಡಲಚೆನ್ನಸಂಗಾ ತ್ರಿವಿಧಸಂಬಂದಿಗೆ. /305
ಆಯುತವಿಲ್ಲದ ಅನುಭಾವ, ಸ್ವಾಯತವಿಲ್ಲದ ಸಮಾಧಾನ,
ಸನ್ನಹಿತವಿಲ್ಲದ ಸಂಬಂಧವ ಏನೆನಬಹುದಯ್ಯಾ ?
ಘನಮನವ ಭೇದಿಸಿ, ಆದಿಯು ಅನಾದಿಯನೊಳಕೊಂಡು
ಆಧಾರವಿಲ್ಲದ ನಿಲವು ಸಾಧ್ಯವಾಯಿತ್ತು ನೋಡಾ.
ಕೂಡಲಚೆನ್ನಸಂಗಮದೇವರ ಶರಣ ಪ್ರಭುದೇವರು
ಅಜಾತರೆಂಬ ಭೇದವೆನಗಿಂದು ತಿಳಿಯಿತ್ತು./306
ಆರಂಬವ ಮಾಡಿ ಸಂಸಾರಸ್ಥಿತಿ ಕಳೆಯದಿದ್ದರೆ
ಆ ಆರಂಬವೆ ಕೇಡು.
ವ್ಯವಹಾರವ ಮಾಡಿ ಸಂಸಾರಸ್ಥಿತಿ ಕಳೆಯದಿದ್ದರೆ
ಆ ವ್ಯವಹಾರವೆ ಕೇಡು.
ಓಲಗವ ಮಾಡಿ ಸಂಸಾರಸ್ಥಿತಿ ಕಳೆಯದಿದ್ದರೆ
ಆ ಓಲಗವೆ ಕೇಡು.
ಭಕ್ತಿಯ ಮಾಡಿ ಜನನ ಮರಣ ವಿರಹಿತನಾಗದಿದ್ದರೆ
ಆ ಭಕ್ತಿಯೆ ಕೇಡು. ಕೂಡಲಚೆನ್ನಸಂಗಮದೇವಾ/307
ಆರಾದಡೆಯೂ ನಿಮ್ಮ ನೆನೆವರಯ್ಯಾ, ನಾ ನಿಮ್ಮ ನೆನೆವನಲ್ಲ.
ಅದೇನು ಕಾರಣವೆಂದಡೆ; ನೆನೆವ ಎನ್ನ ಮನ ನೀವೆಯಾದಿರಾಗಿ.
ಆರಾದಡೆಯೂ ನಿಮ್ಮ ಪೂಜಿಸುವರಯ್ಯಾ, ನಾ ನಿಮ್ಮ ಪೂಜಿಸುವನಲ್ಲ.
ಅದೇನು ಕಾರಣವೆಂದೆಡೆ; ಎನ್ನ ತನುವಿಂಗೆ ನೀವೆ ಪೂಜೆಯಾದಿರಾಗಿ.
ಆರಾದಡೆಯೂ ನಿಮಗರ್ಪಿಸುವರಯ್ಯಾ, ನಾ ನಿಮಗರ್ಪಿಸುವನಲ್ಲ.
ಅದೇನು ಕಾರಣವೆಂದಡೆ ಎನ್ನ ಸರ್ವಾಂಗವೂ ನಿಮಗರ್ಪಿತವಾಯಿತ್ತಾಗಿ.
ಇದು ಕಾರಣ-ಭಕ್ತದೇಹಿಕದೇವ ದೇವದೇಹಿಕಭಕ್ತನೆಂಬ ಶ್ರುತಿಯನರಿದು,
ನಿಮ್ಮ ಮುಟ್ಟಿ ಅಬಿನ್ನನಾದೆನು, ಕೂಡಲಚೆನ್ನಸಂಗಮದೇವಾ. /308
ಆರಿಗೆ ಮಾಡಬಹುದಯ್ಯಾ ಸದ್ಭಕ್ತಿಯೆಂಬುದನು ಬಸವಣ್ಣಂಗಲ್ಲದೆ ?
ಆರಿಗೆ ತಿಳಿವುದಯ್ಯಾ ಶಿವಜ್ಞಾನದ ಸೆರಗು ಬಸವಣ್ಣಂಗಲ್ಲದೆ ?
ನಿರಾಳದ ಸಿಂಹಾಸನದ ಮೇಲೆ ನಿರವಯ ಬಂದೆರಗಿದಡೆ
ಆ ನಿರಾಕಾರ ಪದಾರ್ಥವನರ್ಪಿಸಿ, ಪ್ರಸನ್ನತೆಯ ಪಡೆದ ಬಸವಣ್ಣನು !
ಸಾಕಾರಸಿಂಹಾಸನದ ಮೇಲೆ ಮೂರ್ತಿಗೊಂಡ ಸಂಗಮನಾಥ
ಮುನಿದೆದ್ದು ಹೋದಡೆ; ತನುವಿನೊಳಗೆ ತನುವಾಗಿ ಹೊಕ್ಕು
ಮನದೊ?ಗೆ ಮನವಾಗಿ, ಭಾವದೊಳಗೆ ಭಾವವಾಗಿ ವೇದಿಸಿ
ಶಿವಶರಣರ ಮನದ ಕಂದುಕತ್ತಲೆಯ ಕಳೆದು, ತನ್ನತ್ತ ತಿರುಗಿ
ಪ್ರಸನ್ನತೆವಡೆದ- ಇಂತೀ ಉಭಯ ನಿರ್ಣಯದಲ್ಲಿ
ನಿಸ್ಸೀಮನಾದ ಬಸವಣ್ಣ.
ಕೂಡಲಚೆನ್ನಸಂಗಮದೇವರ ಶರಣ ಬಸವಣ್ಣಂಗೆ
ತ್ರಿಜಗದೊಳಗೆ ಆರನೂ ಸರಿ ಕಾಣೆನು./309
ಆರಿವರತು ಮರುಹು ದಿಟ (ನಷ್ಟ?)ವಾದವರನೇನೆಂಬೆ ?
ಅರಿವನರಿಯದೆ ಮರೆವ ನೆರೆ ಸಂಸಾರಿಗಳನೇನೆಂಬೆ ?
[ಕ್ರಿಯಾಕರ್ಮ ಸೂತಕರಲ್ಲದೆ ಉಭಯಕರ್ಮರಹಿತರನೇನೆಂಬೆ ?]
ಅಂಗವಿಕಾರದ ಹಂಗಿನೊಳಗಿದ್ದು
ಕೂಡಲಚೆನ್ನಸಂಗಾ ಎಂಬವರನೇನೆಂಬೆ ? /310
ಆರೂ ಹಿರಿಯರಲ್ಲ, ಭಕ್ತಿಯ ಸಾದಿಸುವರಲ್ಲ,
ಲಿಂಗಜಂಗಮಪ್ರಸಾದ ಆರಿಗೆಯೂ ಸಾರದೆ ಹೋಯಿತ್ತಯ್ಯಾ.
ಘನವ ವೇಧಿಸಲರಿಯದೆ ಘನಮಹಿಮರು ಕಾಲನ ಬಾಯಿಗೆ ಗುರಿಯಾದರಯ್ಯಾ,
ಕೂಡಲಚೆನ್ನಸಂಗಮದೇವಾ. /311
ಆಲಂಬಿತವೆನ್ನದೆ, ಆಲಂಬದೊಳಡಗದೆ, ಆಲಂಬವ ಬಯಸದೆ,
ಸೂಕ್ಷ್ಮ ಶಿವಪಥ ಏಕೈಕ ಪ್ರಸಾದಿ.
ಸೂಕ್ಷ್ಮವೆನ್ನದೆ, ಸೂಕ್ಷ್ಮವ ಬಯಸದೆ, ಸೂಕ್ಷ್ಮ ನಿರಾಕರಣೆ ಪರಿಕರಣೆಯೆನ್ನದೆ,
ನಿತ್ಯ ನಿಜವಾದ ಪ್ರಸಾದಿ.
ಇದು ಕಾರಣ, ಕೂಡಲಚೆನ್ನಸಂಗಾ
ಸಯದಾನಕ್ಕೆಡೆಗುಡದ ಪ್ರಸಾದಿ. /312
ಆಲಸ್ಯ(ಆಲಯಳ)ವಿಲ್ಲದೆ ಲಿಂಗಲೀಯ ಮಾಡುತ್ತಿದ್ದವು ತವತವಗೆ ಪ್ರಾಣಾದಿಗಳು.
ತಾಗಿದ ಸುಖ ಲೇಸು ಲಿಂಗಕ್ಕೆಂಬವಯ್ಯಾ,
ಲಿಂಗಭೋಗೋಪಭೋಗದಲ್ಲಿ ತವತವಗೆ ಪ್ರಾಣಾದಿಗಳು.
ಕಲಸದೆ ಬೆರಸದೆ ವಿವರಿಸಿ ಕಳೆದು, ಸವಿಯ ಸಂಪುಟದ ಸುಖವ
ಕೂಡಲಚೆನ್ನಸಂಗಾ ನಿಮ್ಮ ಶರಣ ಬಲ್ಲ. /313
ಆವಲ್ಲಿ ಸರ್ವಪ್ರಪಂಚು ನಿವೃತ್ತಿಯಾಗಿಹುದು, ಅದೀಗ ಬ್ರಹ್ಮಜ್ಞಾನ.
ಆವಲ್ಲಿ ಕೇವಲ ನಿಶ್ಚಿಂತವಾಗಿಹುದು, ಅದೀಗ ಬ್ರಹ್ಮಜ್ಞಾನ.
ಆವಲ್ಲಿ ತಾನೆಂಬ ತೋರಿಕೆ ಹುಟ್ಟದಿಹುದು, ಅದೀಗ ಬ್ರಹ್ಮಜ್ಞಾನ.
ಆವಲ್ಲಿ ಕೂಡಲಚೆನ್ನಸಂಗಯ್ಯನಲ್ಲದೆ
ಪೆರತೊಂದನರಿಯದಿಹುದು ಅದೀಗ ಬ್ರಹ್ಮಜ್ಞಾನವಯ್ಯಾ/314
ಆವಾವ ಪರಿಯಲ್ಲಿ ಆವಾವ ಭಾವದಲ್ಲಿ
ಗುರುಲಿಂಗಜಂಗಮಕ್ಕೆ ದಾಸೋಹವ ಮಾಡಿಹೆನೆಂಬ, ಕೂಡಿಹೆನೆಂಬ
ಸದ್ಭಕ್ತರ ಬಾಗಿಲ ತೋರಿ ಬದುಕಿಸಯ್ಯಾ.
ಎಲ್ಲವನೊಪ್ಪಿ `ಲಿಂಗಜಂಗಮವೆನ್ನ ಪ್ರಾಣೇಶ್ವರ’ ಎಂಬ
ಮಹಾಪುರಾತನರ ಪಾದರಕ್ಷೆಯ ಹೊತ್ತಿರಿಸೆನ್ನನು
ಕೂಡಲಚೆನ್ನಸಂಗಮದೇವಾ./315
ಆಸೆಯಾಮಿಷ ತಾಮಸ ಹುಸಿ ವಿಷಯವೆಲ್ಲವನೂ ಸಟೆಯಂ ಮಾಡಿ,
ಸದ್ಗುಣವೆಂಬ ಗೋಮಯವನು
ವಿನಯಾರ್ಥವೆಂಬ ಉದಕದಲ್ಲಿ ಸಮ್ಮಾರ್ಜನೆಯಂ ಮಾಡಿ,
ಕುಟಿಲ ಕುಹಕ ಕ್ರೋಧ ಕ್ಷುದ್ರ ಮಿಥ್ಯಮಿವೆಲ್ಲವ
ಪುಡಿಗುಟ್ಟಿ ರಂಗವಾಲಿಯನಿಕ್ಕಿ,
ಸುಮತಿಯೆಂಬ ಹತ್ತಿಯಂ ಕೊಂಡು,
ಪುಣ್ಯ ಪಾಪಗಳೆಂಬ ಕಸಗೊಚ್ಚಿಯಂ ಕಳೆದು, ದೃಢವೆಂಬ ಬತ್ತಿಯಂ ತೀವಿ,
ತನುವೆಂಬ ಪ್ರಣತೆಯಲ್ಲಿ ಕಿಂಕಿಲವೆಂಬ ತೈಲವನ್ನೆರೆದು,
ಜ್ಞಾನವೆಂಬ ಜ್ಯೋತಿಯಂ ಪೊತ್ತಿಸಿ,
ಸಮತೆಸಲಿಲವೆಂಬ ಅಗ್ಗಣಿಯ ಮಜ್ಜನಕ್ಕೆರೆದು,
ನಿರ್ಹೃದಯ ನಿಃಕಾಮ್ಯವೆಂಬ ಗಂಧಾಕ್ಷತೆಯಂ ಕೊಟ್ಟು,
ಅಷ್ಟದಳಕಮಳವ ಕೊಯ್ದು, ಪೂಜೆಯಂ ಮಾಡಿ,
ಪಂಚೇಂದ್ರಿಯ ವಿನಾಶವೆಂಬ ಪಂಚಾರತಿ, ನಿರಂತರ ಅವಧಾನವೆ ನಿರಂಜನ,
ತನು ಮುಖಾದಿಗಳನೇಕಾರ್ಥ ಮಾಡಿ, ಹಿಡಿವುದೇಕಾರತಿ.
ಸರ್ವಜೀವದಯಾಪರವೆಂಬ ಧೂಪವಂ ಬೀಸಿ,
ನಿಧರ್ಾರವೆಂಬ ನಿತ್ಯನೇಮವ ಸಲ್ಲಿಸಿ,
ಪರಮಾರ್ಥವೆಂಬ ನೈವೇದ್ಯವನಿಟ್ಟು,
ಶಿವಸುಖಸಂಕಥಾ ವಿನೋದದಿಂದರ್ಪಿತವ ಮಾಡಿ,
ಪರಿಣಾಮವೆಂಬ ಪ್ರಸಾದವ ಸ್ವೀಕರಿಸಿ,
ಸುಜ್ಞಾನಭರಿತನಾಗಿಹ.
ಇಂತಪ್ಪ ಲಿಂಗಾರ್ಚಕರ ಶ್ರೀಪಾದವ ತೋರಿ ಬದುಕಿಸಾ
ಕೂಡಲಚೆನ್ನಸಂಗಮದೇವಾ. /316
ಆಹ್ವಾನಿಸುವಲ್ಲಿ ಪ್ರಸೂತಿಕಾಯ, ಸ್ವತಂತ್ರನೆಂತೆಂಬೆ ?
ವಿಸರ್ಜಿಸುವಲ್ಲಿ ಲಿಂಗಸಂತುಷ್ಟನೆಂತೆಂಬೆ ?
ಆಧಾರಾಧೇಯದ ಸುಳುಹಲ್ಲ, ಆಧಾರಾಧೇಯ[ದ] ಭಾವವಲ್ಲ.
ಬಿಂದು ಕ್ರೀಯನುಂಡು ಬಿಂದು ತಾನಾದುದು.
ಪ್ರಾಣಾಪಾನದ ಅನುವಿನ ಅನುಸಂಧಾನ[ದ] ಮನವು.
ಅಸಮಾನ ತಾಳೋಷ್ಠ ಶಬ್ದಸಂಚಿತನಲ್ಲ,
ಉಭಯಪ್ರಸೂತಿ ವಿರಹಿತ
ಕೂಡಲಚೆನ್ನಸಂಗಾ ನಿಮ್ಮ ಶರಣ./317
ಆಹ್ವಾನಿಸುವಲ್ಲಿ ಪ್ರಾಣಲಿಂಗವಿಲ್ಲ, ವಿಸರ್ಜಿಸುವಲ್ಲಿ ಲಿಂಗವಂತರಿಸಿತ್ತು.
ಆಹ್ವಾನಿಸುವನಲ್ಲ, ವಿಸರ್ಜಿಸುವನಲ್ಲ, ಶರಣನ ಪರಿ ಬೇರೆ.
ಲಿಂಗಭೋಗೋಪಭೋಗವಲ್ಲದೆ, [ಅನರ್ಪಿತವ] ಭೋಗಿಸುವನಲ್ಲ.
ಆಗಲೂ ಪ್ರಾಣಲಿಂಗಸಂಗದಲ್ಲಿಯೆ ಇಪ್ಪನು.
ಇದು ಕಾರಣ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣಂಗೆ
ನಮೋ ನಮೋ ಎಂಬೆ. /318
ಆಳ್ದರ (ಆದ್ಯರ) ಅರವತ್ತು ವಚನಕ್ಕೆ ದಣ್ಣಾಯಕರಿಪ್ಪತ್ತು ವಚನ,
ದಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತುವಚನ,
ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಅಯ್ದು ವಚನ,
ಅಜಗಣ್ಣನ ಅಯ್ದು ವಚನಕ್ಕೆ ಕೂಡಲಚೆನ್ನಸಂಗಮದೇವಾ,
ಮಹಾದೇವಿಯಕ್ಕಗಳದೊಂದೆ ವಚನ. /319
ಇಂತಿವೆಲ್ಲ ಸ್ಥಲಂಗಳನೊಳಕೊಂಡ ಮಹಾಮಹಿಮನು
ಜ್ಞಾನಿಯಲ್ಲ ಅಜ್ಞಾನಿಯಲ್ಲ, ಶೂನ್ಯನಲ್ಲ. ಅಶೂನ್ಯನಲ್ಲ,
ಉಭಯಕು? ತಾನೆಂದರಿದ ಪರಮಜ್ಞಾನಿಗೆ ಕೊಳುಕೊಡೆಯಿಲ್ಲ.
ಸಾಕಾರ ಸಂಬಂಧವನರಿಯ, ನಿತ್ಯಮುಕ್ತ, ನಿರವಯ,
ಉಭಯಾತ್ಮಕ ತಾನು ಕೂಡಲಚೆನ್ನಸಂಗನೆಂದು
ಎನ್ನದ ಸುಯಿಧಾನಿ. /320
ಇಡುವ ಕೊಡುವ ಬಿಡುವ ಕಟ್ಟುವ ಗೊಡವೆಗಾರನಯ್ಯಾ; ಶರಣನು
ಗಾಳಿಯ ಮರೆಯ ಜ್ಯೋತಿಯಂತೆ, ಸುಖಸೂಸದೆ ಇಪ್ಪನು.
ತನ್ನರಿವು ಮರವೆಗಳೆಲ್ಲಾ ಪ್ರಾಣಲಿಂಗಾದಿನವಲ್ಲದೆ, ಮತ್ತೊಂದನರಿಯನು.
ಆಸರುವನಲ್ಲ ಬೇಸರುವನಲ್ಲ; ಜಗದ ಕಳಕಳಕ್ಕೆ ಎದ್ದು ಹರಿದಾಡುವನಲ್ಲ.
ಸುಖಮುದ್ರಿತನು ಕೂಡಲಚೆನ್ನಸಂಗಾ ಲಿಂಗೈಕ್ಯನು./321
ಇತಿಹಾಸೇಷು ವೇದೇಷು ಪುರಾಣೇಷು ಪುರಾತನೈಃ
ಮಹಷರ್ಿಬಿರ್ಮಹಾದೇವೋ ಮಹನೀಯಃ ಪ್ರತಿಷ್ಠಿತಃ
ಇಂತೆಂದುದಾಗಿ ಪುರಾತನರಲ್ಲಿ ಆದ್ಯಂತರಾಗಿದ್ದ ಮಹಾಋಷಿಗಳೆಲ್ಲರೂ
ರತ್ನಸುವರ್ಣ ರಜತ ತಾಮ್ರ ಚಂದ್ರಕಾಂತ ಸ್ಫಟಿಕ ಪವಳಲಿಂಗಂಗಧ ಆರಾದಿಸಿದರು.
ಅಗಸ್ತ್ಯದಧೀಚಿ ಕಂಕದ ಬಾಣಾಸುರ ಪುರಂದರ ಬ್ರಹ್ಮವಿಷ್ಣು ದೂರ್ವಾಸ
ನಂದಿಕೇಶ್ವರ ಸ್ಕಂದ ಭೃಂಗಿರಿಟಿ ವೀರಭದ್ರಾದಿಗಣಂಗಳೆಲ್ಲರೂ
ರುದ್ರೇಣ ದೀಕ್ಷಿತೋ ಭೂತ್ವಾ ಸ್ಕಂಧಃ ಶಿವಸಮುದ್ಭವಃ
ಶಿವಾಚಾರರಹಸ್ಯಸ್ಯ ಪಾತ್ರತಾಂ ಪರಮಾಂ ಗತಃ [ಇಂತೆಂದುದಾಗಿ]
ಇದನರಿದು ಪರಶುರಾಮ ಪರಾಶರ ವಶಿಷ್ಠ ವಾಲ್ಮೀಕಿ
ಕಮಲಾಕರ ವಿಶ್ವಾಮಿತ್ರ ಮಹಾಮುನಿಗಳೆಲ್ಲರೂ
ಪಾಣಿನಿಶ್ಚ ಕಣಾದಶ್ಚ ಕಪಿಲೋ ಗೌತಮಾದಯಃ
ಪ್ರಸಾದಸೇವನಾದ್ಧ್ಯಾನಾದರ್ಚನಾದ್ಧಾರಣಾದಪಿ ಇಂತೆಂದುದಾಗಿ
ಇದು ಕಾರಣ ಕೂಡಲಚೆನ್ನಸಂಗಮದೇವರನಾರಾದಿಸಿ,
ಪ್ರಸಾದ ಪಾದೋದಕವ ಕೊಂಡು ಅತಿಶುದ್ಧರಾದರು
ಎಲ್ಲಾ ದೇವರುಗಳು, ಎಲ್ಲಾ ಋಷಿಜನಂಗಳು. /322
ಇದೇನಯ್ಯಾ ಪ್ರಸಾದ ಒಡನೆ ನ [ಡೆ]ವುತ್ತಿದೆ,
ಇದೇನಯ್ಯಾ ಪ್ರಸಾದ ಒಡನೆ ನುಡಿವುತ್ತಿದೆ,
ಪ್ರಾಣದ ಮೇಲೆ ಲಿಂಗ ಪ್ರತಿಷ್ಠೆಯಾಗಲೊಡನೆ
ಅದು ತಾನೆ ನಡೆವುದು, ಅದು ತಾನೆ ನುಡಿವುದು, ಕಂಡಯ್ಯಾ.
ಎರಡೆಂಬುದಿಲ್ಲಾಗಿ ಮುಂದೆ ನಾನೊಂದೆ
ಕೂಡಲಚೆನ್ನಸಂಗಮದೇವಾ. /323
ಇದ್ದು ಬದ್ಧನಲ್ಲ, ಸುಳಿದು ಸೂತಕಿಯಲ್ಲ,
ಆವ ಸಂಗವೂ ಇಲ್ಲದ ನಿಜೈಕ್ಯನು.
ಬೇಕು ಬೇಡೆನ್ನದೆ, ಅಳಿದುಳಿದು
ಕರ್ಪುರದ ಗಿರಿಯನುರಿ ತಾಗಿದಂತೆ
ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯನು. /324
ಇನಿಗಡಲ ಅಣುಗನ ಕೂಡಿದ ಪತಂಗನು
ತಾಮಸದಿವಸವ ಮರೆದಂತೆ.
ಸತ್ವಗುಣ ರಜದಲಡಗಿ, ರಜದ ಗುಣ ತಮದಲಡಗಿ,
ತಮದ ಗುಣ ರುದ್ರನೊಳಡಗಿ.
ರುದ್ರನ ಗುಣ ಅಕ್ಷರಾಕ್ಷರ ಪರಶಿವನೊಳಡಗಿ,
ಅಕ್ಷರಾಣಿ ಚ ಮಾತ್ರಾಣಿ ಸರ್ವೆ ಬಿಂದುಸಮಾಶ್ರಿತಾಃ
ಬಿಂದುರ್ಬಿದ್ಯತೇ ನಾದಾತ್ ಸುನಾದಸ್ತೇನಬಿದ್ಯತೇ
ಎಂದುದಾಗಿ, ಇದು ಕಾರಣ ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣ ಬಲ್ಲನಲ್ಲದೆ, ಅಜ್ಞಾನಿಗಳೆತ್ತ ಬಲ್ಲರು ? /325
ಇನಿಗಬ್ಬಿನೊಳಗಿನ ತನಿರಸವನರಿಯದೆ
ಸೋಗೆಯ ಹೊರಗಿನ ರವದಿಯ ಸವಿದು ಸಂತಸಬಡುವ ಮೇಷದಂತೆ,
ಅಂತರಂಗದ ಆತ್ಮತೀರ್ಥವನುಳಿದು
ಹೊರಗಿನ ಜಡಭೌತಿಕತೀರ್ಥವ ಬೆದಕಿ ಬೆಂಡಾಗಿ
ಹಲವೆಡೆಗೆ ಹರಿವ ನರಗುರಿಗಳು
ಕೈಸೇರಿದ ರತ್ನವನೊಗೆದು ಕಾಜಿನ ಗುಂಡನು ಕೊಂಡ
ಮರುಳನಂತಾಗಿಪ್ಪರು ನೋಡಾ !
ಆತ್ಮತೀರ್ಥಂ ಸಮುತ್ಸೃಜ್ಯ ಬಹಿಸ್ತೀಥರ್ಾಣಿ ಯೋ ವ್ರಜೇತ್
ಕರಸ್ಥಂ ಸುಮಹಾರತ್ನಂ ತ್ಯಕ್ತ್ವಾ ಕಾಚಂ ವಿಮಾರ್ಗತೇ ಎಂದುದಾಗಿ,
ಕೂಡಲಚೆನ್ನಸಂಗಮದೇವಾ,
ನಿಮ್ಮ ನಿಲವಿನ ಗುರುಲಿಂಗಜಂಗಮವೆ ಎನ್ನ ಸ್ವರೂಪವೆಂದರಿದೆನಾಗಿ
ಆ ಗುರುಲಿಂಗಜಂಗಮದ ಪಾದೋದಕವೆ
ಆತ್ಮತೀರ್ಥವಾಗಿಪ್ಪುದು ಕಾಣಾ.
ಅಂತಪ್ಪ ಆತ್ಮತೀರ್ಥವ ಪಡೆದು ಪರಮಪವಿತ್ರನಾಗಿಪ್ಪೆನು./326
ಇನ್ನು ಮುಕ್ತಿಯೆಂದು ಮನದಲ್ಲಿ ಹೊಳೆದು ಕಾಮಿಸುವನ್ನಕ್ಕ
ಪ್ರಸಾದಲಿಂಗ ಸಾಹಿತ್ಯವಾದುದಿಲ್ಲ.
ಇನ್ನು ಪರವೆಂದು ಮನದಲ್ಲಿ ಹೊಳೆದು ಕಾಮಿಸುವನ್ನಕ್ಕ
ಜಂಗಮಲಿಂಗ ಸಾಹಿತ್ಯವಾದುದಿಲ್ಲ.
ಇನ್ನು ಲಿಂಗವ ಬೆರಸೇನೆಂದು ಮನದಲ್ಲಿ ಹೊಳೆದು ಕಾಮಿಸುವನ್ನಕ್ಕ
ಶಿವಲಿಂಗವು ಸಾಹಿತ್ಯವಾದುದಿಲ್ಲ.
ಇನ್ನು ವಿಶೇಷತ್ವವುಂಟೆಂದು ಮನದಲ್ಲಿ ಹೊಳೆದು ಕಾಮಿಸುವನ್ನಕ್ಕ
ಶ್ರೀಗುರುಲಿಂಗವು ಸಾಹಿತ್ಯವಾದುದಿಲ್ಲ.
ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ
ಈ ಚತುರ್ವಿಧವು ಏಕೀಭವಿಸಿ ಮಹಾಲಿಂಗವಾದ ಮಹಾಮಹಿಮಂಗೆ
ಇನ್ನು ಕಾಮಿಸಲಿಲ್ಲ ಕಲ್ಪಿಸಲಿಲ್ಲ ಭಾವಿಸಲಿಲ್ಲ ಚಿಂತಿಸಲಿಲ್ಲ.
ಆತ ನಿಶ್ಚಿಂತ ಪರಮಸುಖಿ ಪರಿಣಾಮಿ, ಆತನಿದ್ದುದೆ ಕೈಲಾಸ,
ಆತ ಸರ್ವಾಂಗಲಿಂಗಿ, ಕೂಡಲಚೆನ್ನಸಂಗಯ್ಯಾ/327
ಇಲ್ಲದ ಮಾಯೆಯನುಂಟುಮಾಡಿಕೊಂಡು
ಬಲ್ಲತನಕ್ಕೆ ಬಾಯ ಬಿಡಲೇತಕೊ ?
ಇಲ್ಲದ ಮಾಯೆಯ ಇಲ್ಲೆನಲರಿಯದೆ
ತಲ್ಲಣಿಸಿ ಬಾಯ ಬಿಡಲೇತಕೊ ?
ಎಲ್ಲವ, ತನ್ನ ತಾ ತಿಳಿದು ನೋಡಿದಡೆ
ಕೂಡಲಚೆನ್ನಸಂಗಯ್ಯ ತಾನೆ ಬೇರಿಲ್ಲ./328
ಇಲ್ಲದ ಸಂಸಾರ ಕಣ್ಣ ಮುಂದೆ ರೂಪಾಗಿ ಕಾಡುತ್ತಿರ್ದಡೆ,
ಸುಜ್ಞಾನವೆಂಬ ಅಂಜನವ ಹಚ್ಚಿ,
ಸಕಲಭ್ರಮೆಯೆಂಬ ಕತ್ತಲೆಯ ಕಳೆದು,
ನಿಜಲಿಂಗಸಂಬಂಧವ ನೆಲೆಗೊಳಿಸಿ, ನಿತ್ಯದಲ್ಲಿ ಅಚ್ಚೊತ್ತಿದನಾಗಿ,
ಕೂಡಲಚೆನ್ನಸಂಗಯ್ಯನಲ್ಲಿ ಪ್ರಭುವಿನ ಶ್ರೀಪಾದಕ್ಕೆ
ನಮೋ ನಮೋ ಎಂಬೆನು/329
ಇಲ್ಲೆಂಬುದನಿಲ್ಲೆನಬಲ್ಲಡೆ ಅರ್ಪಿತ.
ಉಂಟೆಂಬುದನುಂಟೆನಬಲ್ಲಡೆ ಪ್ರಸಾದ.
ಆ ಪ್ರಸಾದವ ತಾನಿಲ್ಲದೆ ಕೊಳಬಲ್ಲಡೆ ಪ್ರಸಾದಿ.
ಆ ಪ್ರಸಾದಿಯ ಪರಮ ಪರಿಣಾಮವೆ ಮಹಾಪ್ರಸಾದವಾಗಿ,
ಆ ಮಹಾಪ್ರಸಾದವೆ ತಾನಾಗಿ ಬೆಳಗುತಿಪ್ಪನಯ್ಯಾ
ಕೂಡಲಚೆನ್ನಸಂಗಾ ನಿಮ್ಮ ಶರಣ./330
ಇಷ್ಟಲಿಂಗ ಪೂಜಕರೆಲ್ಲ ದೃಷ್ಟಲಿಂಗವನೆತ್ತ ಬಲ್ಲರೊ ?
ಜಂಗಮವೆ ಲಿಂಗವೆಂಬುದನು ಭವಭಾರಿಗಳೆತ್ತ ಬಲ್ಲರೊ ?
ಕೂಡಲಚೆನ್ನಸಂಗಯ್ಯನಲ್ಲಿ, ಮಹಾಪ್ರಸಾದಿ ಬಸವಣ್ಣ ಬಲ್ಲ/331
ಇಷ್ಟಲಿಂಗ ಪ್ರಾಣಲಿಂಗವೆಂದೆಂಬಿರಿ,
ಇಷ್ಟಲಿಂಗವಾವುದು ಪ್ರಾಣಲಿಂಗವಾವುದು ಬಲ್ಲರೆ ನೀವು ಹೇಳಿರೆ ?
ಇಷ್ಟಲಿಂಗವೆಂಬುದು ದರ್ಪಣ, ಪ್ರಾಣಲಿಂಗವೆಂಬುದು ಪ್ರತಿಬಿಂಬ.
ದರ್ಪಣ ಮಸುಳಿಸಿದಡೆ ಪ್ರತಿಬಿಂಬವ ಕಾಣಬಹುದೆ ? ಬಾರದು.
ಇಷ್ಟಲಿಂಗಪೂಚೆ ಮಸುಳಿಸಿದಡೆ, ಪ್ರಾಣಲಿಂಗವ ಕಾಣಬಹುದೆ ? [ಬಾರದು].
“ಇಷ್ಟಲಿಂಗಮವಿಶ್ವಸ್ಯ ಪ್ರಾಣಲಿಂಗಂ ನ ಪಶ್ಯತಿ
ದರ್ಪಣಪ್ರತಿಬಿಂಬಸ್ತು ಯಥಾರೂಪಂ ತಥಾ ಭವೇತ್
ಇದು ಕಾರಣ- ಕೂಡಲಚೆನ್ನಸಂಗಮದೇವಾ,
ಇಷ್ಟದಲ್ಲಿ ಪ್ರಾಣತೃಪ್ತಿಯಾದವರ ತೋರಿ ಬದುಕಿಸಯ್ಯಾ./332
ಇಷ್ಟಲಿಂಗ ಸಂಬಂಧವಾದ ಬಳಿಕ ಕಾಯಗುಣ ಕೆಟ್ಟು ಲಿಂಗವಾಯಿತ್ತು.
ಪ್ರಾಣಲಿಂಗ ಸಂಬಂಧವಾದ ಬಳಿಕ ಕರಣಗುಣ ಕೆಟ್ಟು ಲಿಂಗಕರಣಂಗಳಾದುವು.
ಭಾವಲಿಂಗ ಸಂಬಂಧವಾದ ಬಳಿಕ ಇಂದ್ರಿಯಗುಣ ಕೆಟ್ಟು ಲಿಂಗೇಂದ್ರಿಯಗಳಾದುವು.
ಇದು ಕಾರಣ- ಶರಣಂಗೆ ಬೇರೆ ಲಿಂಗವಿಲ್ಲ, ಬೇರೆ ಅಂಗವಿಲ್ಲ.
ಅರ್ಪಿತ ಅನರ್ಪಿತವೆಂಬ ಉಭಯ ಶಂಕೆ ಹಿಂಗಿತ್ತು,
ಕೂಡಲಚೆನ್ನಸಂಗಯ್ಯಾ ನಿನ್ನೊಳಡಗಿದ ನಿಜೈಕ್ಯಂಗೆ/333
ಇಷ್ಟಲಿಂಗಕ್ಕೆ ಮಜ್ಜನ, ಪ್ರಾಣಲಿಂಗಕ್ಕೆ ಭೋಜನ,
ತೃಪ್ತಿಲಿಂಗದ ಮುಖದಲೆ ಪರಿಣಾಮ ನೋಡಯ್ಯಾ.
ಕಾಮಿತ ಕಲ್ಪಿತ ಭಾವಿತ ಅರ್ಪಿತ ತಾನಲ್ಲ.
ಅಲ್ಲಲ್ಲಿಗೆ ಅವಧಾನದಾಯತವ ನೋಡಯ್ಯಾ.
ಅವಧಾನದ ಕೊನೆಯಲಿಹ ಸುಯಿಧಾನದ ಲಿಂಗವನು
ನಿಮ್ಮ ಶರಣನ ಸರ್ವಾಂಗದಲ್ಲಿ ಕಾಣಬಹುದು
ಕೂಡಲಚೆನ್ನಸಂಗಮದೇವಾ. /334
ಇಷ್ಟಲಿಂಗದಲ್ಲಿ ಸರ್ವಾಚಾರಸಹಿತ ಮನಸೋಂಕಿ ಆಚರಿಸುವಲ್ಲಿ
ಅಭ್ಯಾಸಿಯ ಅಭ್ಯಾಸಕ್ರೀಯೆ ಬಲಿದು,
ಇಷ್ಟಲಿಂಗದಲ್ಲಿ ಸರ್ವಾಚಾರಸಹಿತ ಮನ ನೆಮ್ಮಿ ಆಚರಿಸುವಲ್ಲಿ
ಮಾರ್ಗಕ್ರೀಯೆ ಬಲಿದು,
ಇಷ್ಟಲಿಂಗದಲ್ಲಿ ಸರ್ವಾಚಾರಸಹಿತ ಮನವರಿದು ಆಚರಿಸುವಲ್ಲಿ
ಮೀರಿದ ಕ್ರೀಯೆ ಬಲಿದು,
ಆ ಇಷ್ಟಲಿಂಗದಲ್ಲಿ ಸರ್ವಾಚಾರ ಸಹಿತ ಮನವಾಚರಿಸುವಲ್ಲಿ
ಮೀರಿದ ಕ್ರಿಯಾನಿಷ್ಪತ್ತಿ.
ಇಂತೀ ತ್ರಿವಿಧಸ್ಥಲವನೊಳಕೊಂಡ ಮಾರ್ಗಕ್ರೀ ಲಿಂಗದಲ್ಲಿ,
ಕೂಡಲಚೆನ್ನಸಂಗನಲ್ಲಿ ಈ ಕಾರ್ಯಕ್ಕೆ ಪ್ರಸಾದವಾಯಿತ್ತು. /335
ಇಷ್ಟಲಿಂಗಮುಖದಲ್ಲಿ ಶರೀರವರ್ಪಿತ,
ಪ್ರಾಣಲಿಂಗಮುಖದಲ್ಲಿ ಮನವರ್ಪಿತ,
ಭಾವಲಿಂಗಮುಖದಲ್ಲಿ ಪ್ರಾಣವರ್ಪಿತ.-
ಇಂತೀ ತ್ರಿವಿಧಾರ್ಪಣವಾದಡೆ,
ಮಹಾಘನಲಿಂಗದಲ್ಲಿ ಸಮರಸೈಕ್ಯ,
ಕೂಡಲಚೆನ್ನಸಂಗಮದೇವಾ/336
ಈ ಆರು ಸಹಿತ ಆಚಾರ,
ಆಚಾರಸಹಿತ ಗುರು, ಗುರುಸಹಿತ ಲಿಂಗ, ಲಿಂಗಸಹಿತ ಜಂಗಮ,
ಜಂಗಮಸಹಿತ ಪ್ರಸಾದ, ಪ್ರಸಾದಸಹಿತ ಮಹಾಲಿಂಗ.
ಇಂತೀ ಎಲ್ಲ ಸ್ಥಲಂಗಳು ತಾನಾಗಬಲ್ಲಡೆ,
ಕೂಡಲಚೆನ್ನಸಂಗಾ ಲಿಂಗೈಕ್ಯವು. /337
ಈರೇಳುಭುವನವನು ಒಡಲೊ?ಗೆ ಇಂಬಿಟ್ಟುಕೊಂಡು
ಲಿಂಗರೂಪನಾಗಿ ಭಕ್ತನ ಕರಸ್ಥಲಕ್ಕೆ ಬಂದು ಪೂಜೆಗೊಂಡಿತ್ತು ನೋಡಾ !
ಅಂತಹ ಅಗಮ್ಯ ಅಗೋಚರ ಲಿಂಗವೆಂದರಿದು
ಭಕ್ತನು ತಾನು ಹಿಂದೆ ನಡೆದ ಜೂಜು ಬೇಂಟೆ ಚದುರಂಗ
ಲೆತ್ತ ಪಗಡೆಯಾಟಂಗಳಂ ಪರಿಹಾಸಕರ ಕೂಡಿಕೊಂಡು
ಕೆಲೆದಾಡುವದಂ ಬಿಟ್ಟು ಬಂಧುವ ತೊರೆದು ಮುಂದೆ ಶಿವಪಥದಲ್ಲಿ
ನಡೆಯಬಲ್ಲಾತನೇ ಸದ್ಭಕ್ತನಲ್ಲದೆ,
ಹಣದಾಸೆಗೆ ಹಂಗಿಗನಾಗಿ ಗುಣದಾಸೆಗೆ ಅಮೇಧ್ಯವ ತಿಂದು
ಬಂಧುಗಳ ಬಿಟ್ಟು ಭಕ್ತಿಯಿಲ್ಲವೇ ಉಂಟೇ ಎಂಬ
ಪಂಚಮಹಾಪಾತಕರ ಮುಖವ ನೋಡಲಾಗದು
ಅವರ ಮಾತ ಕೇಳಲಾಗದು,
ಅದೆಂತೆಂದಡೆ;
ಕತ್ತೆ ಭಕ್ತನಾದರೆ ಕಿಸುಕುಳವ ತಿಂಬುದ ಮಾಂಬುದೆ ?
ಬೆಕ್ಕು ಭಕ್ತನಾದರೆ ಇಲಿಯ ತಿಂಬುದ ಮಾಂಬುದೆ ?
ಹಂದಿ ಭಕ್ತನಾದರೆ ಹಡಿಕೆಯ ತಿಂಬುದ ಮಾಂಬುದೆ ?
ಶುನಕ ಭಕ್ತನಾದರೆ ಮೂಳೆ ಮಾಂಸವ ತಿಂಬುದ ಮಾಂಬುದೆ ?
ಕೋಳಿಯ ತಂದು ಪಂಜರವ ಕೂಡಿ
ಅಮೃತಾನ್ನವನಿಕ್ಕಿ ಸಲಹಿದರೆ
ಅದು ತಾನೆ ಮತ್ತೆ ತಿಂಬ ಹಡುವಿಂಗೆ
ಚಿತ್ತವನಿಕ್ಕುದುಂ ಮಾಂಬುದೆ ?
ಇಂತೀ ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ
ಅನಾಚಾರವ ಬಿಟ್ಟು ಸದಾಚಾರದಲ್ಲಿ ನಡೆಯಬೇಕು.
ಗುರುವಾದಡೂ ಆಗಲಿ ಭಕ್ತನಾದಡೂ ಆಗಲಿ
ತಾನು ಹಿಂದೆ ಭವಿಯಾಗಿದ್ದಾಗ ಭುಂಜಿಸುತ್ತಿದ್ದ
ಸುರೆ ಮಾಂಸ ಭಂಗಿ ಭವಿಸಂಗ ಭವಿಪಾಕ
ಇಂತಿವ ಬಿಡದಿರ್ದವರುಗಳು
ಆ ಕತ್ತೆ ಬೆಕ್ಕು ಸೂಕರ ಸೊಣಗ
ಕೋಳಿಗಿಂದತ್ತತ್ತ ಕಡೆ ನೋಡಿರೇ.
ಚಿನ್ನದ ಬೆಟ್ಟವನೇರಿದವನು ಕಣ್ಣುಕಾಣದಿಪ್ಪಂತೆ
ಗಣೆಯನೇರಿದ ಡೊಂಬ ಮೈ ಮರೆದಿಪ್ಪಂತೆ
ನಡುನೀರಿಗೆ ಹೋದ ಹರಿಗೋಲು ತಲೆ ಕೆಳಗಾದಂತೆ ಕಾಣಾ
ಕೂಡಲಚೆನ್ನಸಂಗಮದೇವಾ./338
ಉಂಟೆಂಬ ವಸ್ತು ಇಲ್ಲೆಂಬ ಪ್ರಮಾಣ ಬಹುದು
ಆಚಾರಕ್ಕಿಕ್ಕುವುದಿದು ಭಕ್ತಿಯೆ ?
ಉಂಟೆಂಬ ಉದ್ಭಾವಿಯಲ್ಲ, ಇಲ್ಲೆಂಬ ನಿರ್ಭಾವಿಯಲ್ಲ.
ಇದು ಕಾರಣ ಕೂಡಲಚೆನ್ನಸಂಗಾ.
ಸಜ್ಜನ ಶುದ್ಧ ಶಿವಾಚಾರಿಗಲ್ಲದೆ ಲಿಂಗೈಕ್ಯವಳವಡದು./339
ಉಂಟೆಂಬುದ ಬಸವಣ್ಣ ಕೊಂಡ, ಇಲ್ಲೆಂಬುದನಲ್ಲಮ ಕೊಂಡ,
ಇನ್ನಾರನಹುದೆಂಬೆನು ? ಇನ್ನಾರನಲ್ಲೆಂಬೆನು ?
ಇವರಿಬ್ಬರು ಛಲಕ್ಕೆ ಸಂಪನ್ನರಲ್ಲದೆ, ಲಿಂಗಸಂಪನ್ನರ ಕಾಣೆ
ಕೂಡಲಚೆನ್ನಸಂಗಮದೇವಾ./340
ಉಂಬ ಬಾಯೊಳು ಊಡಿಸಿಕೊಂಬ ಬಾಯಿಯಿದೇನಯ್ಯಾ ?
ನೋಡುವ ನಯನದೊಳು ನೋಡಿಸಿಕೊಂಬ ನಯನವಿದೇನಯ್ಯಾ?
ಕೇಳುವ ಶ್ರೋತ್ರದೊಳು ಕೇಳಿಸಿಕೊಂಬ ಶ್ರೋತ್ರವಿದೇನಯ್ಯಾ?
ವಾಸಿಸುವ [ನಾಸಿಕದೊಳು] ವಾಸಿಸಿಕೊಂಬ ನಾಸಿಕವಿದೇನಯ್ಯಾ?
ಮುಟ್ಟುವ ಪರುಶದೊಳು ಮುಟ್ಟಿಸಿಕೊಂಬ ಪರುಶವಿದೇನಯ್ಯಾ ?
(ಇಂತಿವರೊಳಗೆ) ನೀನಿಪ್ಪ ಅನುವನಾರು ಬಲ್ಲರು ಕೂಡಲಚೆನ್ನಸಂಗಮದೇವಾ ? /341
ಉಂಬಲ್ಲಿ ಉಡುವಲ್ಲಿ ಕ್ರೀಯಳಿಯಿತ್ತೆಂಬರು,
ಕೊಂಬಲ್ಲಿ ಕೊಡುವಲ್ಲಿ ಕುಲವನರಸುವರು,
ಏನೆಂಬೆನಯ್ಯ ಒಚ್ಚೊಚ್ಚಿ ಭಕ್ತರಳ ಏನೆಂಬೆನಯ್ಯ ಒಚ್ಚೊಚ್ಚಿ ಭವಿಗಳ?
ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ
ಭಕ್ತಕಾಯ ಮಮಕಾಯವೆಂತೆಂಬರು? /342
ಉಂಬುದು ಉಡುವುದು ಶಿವಾಚಾರ,
ಕೊಂಬುದು ಕೊಡುವುದು ಕುಲಾಚಾರ ಎಂಬ
ಅನಾಚಾರಿಯ ಮಾತ ಕೇಳಲಾಗದು.
ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರ ಒಂದೆ ಎಂದು
ಕೊಟ್ಟು ಕೊಂಬುದು ಸದಾಚಾರ, ಉಳಿದುದೆಲ್ಲ ಅನಾಚಾರ.
ಅದೆಂತೆಂದಡೆ;
ಸ್ಫಟಿಕದ ಕೊಡದಲ್ಲಿ ಕಾಳಿಕೆಯನರಸುವ ಹಾಗೆ,
ಸಿಹಿಯೊಳಗೆ ಕಹಿಯನರಸುವ ಹಾಗೆ,
ರಜಸ್ಸೂತಕ ಕುಲಸೂತಕ ಜನನಸೂತಕ ಪ್ರೇತಸೂತಕ ಉಚ್ಛಿಷ್ಟಸೂತಕ ಎಂದಡೆ,
ಆತಂಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ತೀರ್ಥಪ್ರಸಾದವಿಲ್ಲ.
ಇಂತೀ ಪಂಚಸೂತಕವ ಕಳೆದಲ್ಲದೆ ಭಕ್ತನಾಗ.
ಇಂತಹ ಭಕ್ತರಲ್ಲಿ ಕೊಟ್ಟು ಕೊಂಬುದು ಸದಾಚಾರ-
ಕೂಡಲಚೆನ್ನಸಂಗಮದೇವಾ/343
ಉಚ್ಚೆಯ ಬಚ್ಚಲ ಶೋದಿಸುವವರಿಗೆ
ಚಿಲುಮೆಯ ಆಯತವೇಕೊ ?
ಸತಿಯರ ನರಮಾಂಸವ ಭುಂಜಿಸುವವರಿಗೆ
ಪರಪಾಕವರ್ಜಿತವೆಂದು ಸ್ವಯಂಪಾಕವೇಕೊ ?
ಅಷ್ಟೋತ್ತರಶತ ವೇದವ ಓದುವವರಿಗೆ
ಅಚ್ಚಪ್ರಸಾದವೇಕೊ ?
ಇಂತೀ ತ್ರಿವಿಧ ಡಂಬಿನ ಭಕ್ತಿಗೆ ಊರ ಮುಂದಣ ಡೊಂಬನೆ ಸಾಕ್ಷಿ
ಕೂಡಲಚೆನ್ನಸಂಗಮದೇವಾ/344
ಉಚ್ಛಿಷ್ಟದ ಉದಕದೊ?ಗೆ ಚಂದ್ರಮನ ನೆಳಲಿದ್ದಡೇನು,
ಅಲ್ಲಿ ಚಂದ್ರಮನಿದ್ದಾತನೆ ?
ಸಂಸಾರದ ವ್ಯಾಪ್ತಿಯಲ್ಲಿ ಶರಣನ ಕಾಯವಿರ್ದಡೇನು,
ಅಲ್ಲಿ ಶರಣನಿದ್ದಾತನೆ ?
ಕೆಸರೊಳಗಣ ತಾವರೆಯಂತೆ, ಮರದೊಳಗಣ ಬಯಲಿನಂತೆ.
ಮಮ ಸಾಹಿತ್ಯರೂಪೇಣ ತಮೋಮಾಯೇ ವಿವರ್ಜಯೇತ್
ಮೇಘದುರ್ಮಲತೋಯಸ್ಥಂ ಕಮಲಪತ್ರಮಿವಾಚರೇತ್
ಇಂತೆಂದುದಾಗಿ, ಇದ್ದೂ ಇರನು,
ಇದು ಕಾರಣ ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣನು ಉಂಡುಪವಾಸಿ ಬಳಸಿ ಬ್ರಹ್ಮಚಾರಿ/345
ಉಟ್ಟುದನಳಿದು ಬತ್ತಲೆಯಿದ್ದಡೇನು ?
ಆಶನವರತು ವ್ಯಸನ ನಿಂದು ವ್ಯಾಪ್ತಿಗಳು ತಲ್ಲೀಯವಾಗಿದ್ದಡೇನು ?
ಮುಟ್ಟಬಾರದಠಾವ ಮರೆಗೊಂಡಿಪ್ಪನು,
ಕೂಡಲಚೆನ್ನಸಂಗಮದೇವನು./346
ಉಣ್ಣೆ ಕೆಚ್ಚಲ ಹತ್ತಿದ್ದರೇನು ಕ್ಷೀರವದಕುಂಟೆ?
ತಗಣಿ ತನುವ ಹತ್ತಿದ್ದರೇನು ಅಂಗನೆಯರ ಸುರತದ ಸುಖವ ಬಲ್ಲುದೆ?
ಗಿಳಿ ಓದಿದರೇನು ಲಿಂಗವೇದಿಯಪ್ಪುದೆ?
ಹೇಸರ ಏಸು ದೊಡ್ಡದಾದರೇನು ತೇಜಿಯಾಗಬಲ್ಲುದೆ?
ತತ್ವದ ಮಾತು ಅಂಗಸಂಗಿಗಳಿಗೇಕೆ? ಭರ್ಗನ ಸಂಗ ಭವಿಗೇಕೆ?
ಪಚ್ಚೆಯ ಪವಳದ ಗುಡಿಗೂಡಾರವೇಕೆ ಗೂಗೆಗೆ?
ಗವುಡರ ಮನೆಯ ತೊತ್ತಿಂಗೆ ಬಲ್ಲಹನಾಣೆಯೇಕೆ?
ಕೀಳು ಕುಲದೈವಕ್ಕೆರಗಿ ನರಕಕ್ಕಿಳಿವ ದುರಾಚಾರಿಗಳಿಗೆ
ಶಿವಾಚಾರವಳಡುವುದೆ, ಕೂಡಲಚೆನ್ನಸಂಗಮದೇವಾ? /347
ಉತ್ತಮಾಂಗ, ಗಳ, ಕಕ್ಷೆ, ಕರಸ್ಥಳ, ಮುಖಸಜ್ಜೆ, ಅಮಳೋಕ್ಯ,
ಅಕಟಕಟಾ ! ಬಿನ್ನವಾರ್ತೆಯ ಕೇಳಲಾಗದು.
ಕೂಡಲಚೆನ್ನಸಂಗಯ್ಯಾ, ಸರ್ವಾಂಗ ಲಿಂಗವಲ್ಲದೆ ಕೇಳಲಾಗದು./348
ಉತ್ತಮಾಂಗದಲ್ಲಿ ಲಿಂಗವ ಧರಿಸಿದ ಬಳಿಕ
ಧರೆಗೊರಗಲಾಗದು, ಮಾನವರ ಬೇಡಲಾಗದು,
ಹಸಿವು ತೃಷೆ ವ್ಯಸನಂಗಳು ಲಿಂಗದಲ್ಲಿ ನಿಕ್ಷೇಪವಾಗಬೇಕು.
ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಲಿಂಗದ ನಿಲುಕಡೆಯನರಿದು
ತೆರಹಿಲ್ಲದಿರಬೇಕು, ಕೂಡಲಚೆನ್ನಸಂಗಮದೇವಾ. /349
ಉತ್ತರ ದಕ್ಷಿಣ ಪೂರ್ವ ಪಶ್ಚಿಮದ ಬಂದ ಬಟ್ಟೆಯನಾಲಿಸದೆ
ವಾಯು ಬಂಧನಮಂ ಕಟ್ಟಿ(ಮಾಡಿ?)
ಪಶ್ಚಿಮದ್ವಾರದಲ್ಲಿ ಪ್ರಾಣನಿವಾಸಿಯಾಗಿದ್ದನಾ ಶರಣ.
ಅಧೋನಾಳದಲ್ಲಿ ನಿರುತ, ಮಧ್ಯನಾಳದಲ್ಲಿ ನಿರಾಳ,
ಊಧ್ರ್ವನಾಳದಲ್ಲಿ ಸುರಾಳ.
ವ್ಯೋಮಕುಸುಮದ ಕೊನೆಯ ಶೈತ್ಯೋದಕವ ಧರಿಸಿದ ಘಟಕ್ಕೆ ಕೇಡಿಲ್ಲಾಗಿ,
ಲಿಂಗಕ್ಕೆ ಪ್ರಾಣಕ್ಕೆ ಒಂದೆಂಬ ಕಾರಣ ಅಚಳವೆನಿಸಿತ್ತು.
ಇದು ಕಾರಣ ಕೂಡಲಚೆನ್ನಸಂಗಮದೇವಾ
ಎನ್ನ ಪ್ರಾಣಕ್ಕೆ ಭವವಿಲ್ಲ, ಬಂಧನವಿಲ್ಲ. /350
ಉದಕದಂತೆ? ಕರ್ತೃವಿಲ್ಲಾಗಿ ಕರ್ಮವಿಲ್ಲ, ಕರ್ಮವಿಲ್ಲಾಗಿ ಜನನವಿಲ್ಲ,
ಜನನವಿಲ್ಲಾಗಿ ಭೂತಾದಿ ಚರಿತ್ರ ಕರಣಾದಿ ಗುಣಂಗಳು ಮುನ್ನವೆ ಇಲ್ಲ.
ಹಿಂದಣ ಜನನವಿಲ್ಲ, ಇಂದಿನ ಸ್ಥಿತಿಯಿಲ್ಲ, ಮುಂದಣ ಲಯವಿಲ್ಲ,
ಆದಿ ಮಧ್ಯ ಅವಸಾನವಿಲ್ಲ, ಬಿಚ್ಚಿ ಬೇರಿಲ್ಲ, ಬೆರಸಿ ಒಂದಿಲ್ಲ.
ಉಪಮಾತೀತ ಕೂಡಲಚೆನ್ನಸಂಗಾ ನಿಮ್ಮ ಶರಣನು/351
ಉದಕದೊಳಗಣ ವಿಕಾರ ಪವನನಿಂದಲ್ಲದೆ,
ಉದಕ ಸಹಜಬೀಜವೆಂದರಿಯಬಹುದೆ ?
ದೇಹ ಪ್ರಪಂಚಂಗಳು ವಾಯುವಿಂದಲ್ಲದೆ,
ದೇಹದಲ್ಲಿ ಬೇರೊಂದು ಗುಣವನರಸುವರೆ ?
ಮಂಜಿನ ಗುರಿಯ ಬಿಸಿಲ ಅಂಬಿನಲ್ಲಿ ಎಚ್ಚಡೆ, ಕರ ಹೊಸತಾಯಿತ್ತಲ್ಲಾ !
ಸಹಜದ ನಿಲವು ಜೀವ ಪರಮಾತ್ಮನೆಂದು ಎರಡನು ನುಡಿಯಲಿಲ್ಲ.
ಬೇರೆ ನೆನೆವ ಮನ ತಾನೆಯಾಗಿ ತೆರಹಿಲ್ಲದ ಘನ.
ಗಗನದ ಸೂರ್ಯ ಜಲದಲ್ಲಿ ತೋರುವಂತೆ,
ಹಲವು ರವಿಯೆಂದು ಮತ್ತೆಣಿಸಲುಂಟೆ ?
ಒಳಹೊರಗು ಎಂದೆನ್ನದೆ ಮುಟ್ಟಿಯೂ ಮುಟ್ಟದಿಪ್ಪ,
ಬಯಲೊಳಡಗಿದ ನಿರಾಳವನು
ಕೇಳುವ ಕೀರುತಿಯಲ್ಲ ನೋಡುವ ಮೂರುತಿಯಲ್ಲ
ಪರಿಪೂರ್ಣ ಪರಂಜ್ಯೋತಿ ನಿರ್ಗುಣ ಮಹಿಮ.
ಭಾವವಿಲ್ಲದ ಶಬ್ದವನು ಕೇಳಬಲ್ಲವನೊಬ್ಬನೆ,
ಕೂಡಲಚೆನ್ನಸಂಗಮದೇವರಲ್ಲಿ ಪ್ರಭುವೆ ನೀನೆ ಬಲ್ಲೆ./352
ಉದಯ ಕಾಲ ಮಜ್ಜನಕ್ಕೆರೆಯಲಿಕ್ಕಾಗಿ,
ಉದಯ (ಉತ್ಪತ್ತಿ) ಕಾಲಕರ್ಮ ಕೆಡಲಿಕ್ಕಾಗಿ (ಕೆಡುವುದಾಗಿ)
ಮಧ್ಯಾಹ್ನಕಾಲ ಮಜ್ಜನಕ್ಕೆರೆಯಲಿಕ್ಕಾಗಿ,
ವರ್ತಮಾನ (ಸ್ಥಿತಿ)ಕಾಲಕರ್ಮ ಕೆಡಲಿಕ್ಕಾಗಿ (ಕೆಡುವುದಾಗಿ)
ಅಸ್ತಮಾನಕಾಲ ಮಜ್ಜನಕ್ಕೆರೆಯಲಿಕ್ಕಾಗಿ,
ಲಯಕಾಲ ಕರ್ಮವು ಕೆಡಲಿಕ್ಕಾಗಿ (ಕೆಡುವುದಾಗಿ)
ಹೊತ್ತಾರಿನ ಪೂಜೆ ಬ್ರಹ್ಮಂಗೆ,
ಮಧ್ಯಾಹ್ನದ ಪೂಜೆ ವಿಷ್ಣುವಿಂಗೆ,
ಅಸ್ತಮಾನದ ಪೂಜೆ ರುದ್ರಂಗೆ.
ಇಂತೀ ತ್ರಿವಿಧಕಾಲ ಮಜ್ಜನಕ್ಕೆರೆದವ ಭವಭಾರಿ
ಇಂತು ತ್ರಿವಿಧಕಾಲ ನಾಸ್ತಿಯಾಗಿ ಮಜ್ಜಕ್ಕೆರೆಯಬಲ್ಲನಾಗಿ
ಕೂಡಲಚೆನ್ನಸಂಗಯ್ಯಾ, ನಿಮ್ಮ ಶರಣ ಭವಕ್ಕೆ ಬಾರ. /353
ಉದಯ ಮಧ್ಯಾಹ್ನ ಅಸ್ತಮಾನ-ತ್ರಿಕಾಲದಲ್ಲಿ
ಪತ್ರೆ ಪುಷ್ಪ ಅಗ್ಗಣಿಯ ತಂದು ಮಜ್ಜನಕ್ಕೆ ನೀಡೆಹೆನೆಂದಡೆ
ನೆನೆಯದು, ಬಲಿಯದು, ಗರಿಗಟ್ಟದಯ್ಯಾ.
ನೀರ ತೋರಿದಡೆ ಒಂದು ಹನಿಯನೂ ಮುಟ್ಟದು.
ನಿಮ್ಮ ಲಿಂಗದ ಪೂಜೆ ನಮ್ಮ ಜಂಗಮದ ಉದಾಸೀನ-
ಇದ ಕಂಡು ನಾ ಬೆರಗಾದೆ, ಕೂಡಲಚೆನ್ನಸಂಗಮದೇವಾ./354
ಉದಯ ಮಧ್ಯಾಹ್ನ ಅಸ್ತಮಾನವೆಂಬ ತ್ರಿಕಾಲದಲ್ಲಿ
ಪ್ರಾಣಲಿಂಗಕ್ಕೆ ಮಜ್ಜನಕ್ಕೆರೆಯಬೇಕೆಂಬರು.
ಉದಯವಾವುದು ? ಮಧ್ಯಾಹ್ನವಾವುದು ? ಅಸ್ತಮಾನವಾವುದು ?
ಬಲ್ಲವರು ನೀವು ಹೇಳಿರೆ.
ಕಾಯದ ಉದಯವೊ ? ಕಾಯದ ಮಧ್ಯಾಹ್ನವೊ ? ಕಾಯದ ಅಸ್ತಮಾನವೊ ?
ಕಾಯದ ಉದಯ ಬಲ್ಲಾತ ಕರ್ಮಿ, ಕಾಯದ ಮಧ್ಯಾಹ್ನವ ಬಲ್ಲತ ಪ್ರಪಂಚಿ,
ಕಾಯದ ಅಸ್ತಮಾನವ ಬಲ್ಲಾತ ವಿರಕ್ತ.
ಜೀವದ ಉದಯವೊ ? ಜೀವದ ಮಧ್ಯಾಹ್ನವೊ ? ಜೀವದ ಅಸ್ತಮಾನವೊ ?
ಜೀವದ ಉದಯವ ಬಲ್ಲಾತ ಜ್ಞಾನಿ,
ಜೀವದ ಮಧ್ಯಾಹ್ನವ ಬಲ್ಲಾತ ಜಾತಿಸ್ಮರ,
ಜೀವದ ಅಸ್ತಮಾನ ಬಲ್ಲಾತ ಜೀವನ್ಮುಕ್ತ
ಲಿಂಗದ ಉದಯ, ಲಿಂಗದ ಮಧ್ಯಾಹ್ನ, ಲಿಂಗದ ಅಸ್ತಮಾನ-
ಇಂತೀ ತ್ರಿಕಾಲದಲ್ಲಿ ಪ್ರಾಣಲಿಂಗಕ್ಕೆ ಮಜ್ಜನಕ್ಕೆರೆಯಬಲ್ಲಡೆ
ಕೂಡಲಚೆನ್ನಸಂಗಮದೇವರಲ್ಲಿ
ಆತನು ಅನವರತ ಲಿಂಗಾರ್ಚನಾಪರನು. /355
ಉದಯಕಾಲ, ವಿಚಿತ್ರಕಾಲ, ಅಸ್ತಮಾನ ಕಾಲದಲ್ಲಿ
ತನ್ನ ಇಷ್ಟಲಿಂಗಕ್ಕೆ ಷೋಡಶೋಪಚಾರವ ಮಾ[ಡದ]ವನು
ಭಕ್ತನಲ್ಲ, ಶರಣನಲ್ಲ, ಲಿಂಗೈಕ್ಯನಲ್ಲ.
ಅವನು ಪಂಚಮಹಾಪಾತಕ, ವಿಘಾತಕ, ಲಿಂಗಚೋರಕ,-
ಇಂತೆಂದುದು ಕೂಡಲಚೆನ್ನಸಂಗನ ವಚನ. /356
ಉದಯಮುಖದಲ್ಲಿ ಲಿಂಗದರುಶನ,
ಹಗಲಿನ ಮುಖದಲ್ಲಿ ಜಂಗಮ ದರುಶನ,
ಲೇಸು, ಲೇಸು, ಲಿಂಗವಂತಂಗೆ ಇದೇ ಪಥವು, ಸದ್ಭಕ್ತಂಗೆ ಇದೇ ಪಥವು.
ಲೇಸು ಲೇಸು ಕೂಡಲಚೆನ್ನಸಂಗಯ್ಯನಲ್ಲಿ,
ಅಚ್ಚ ಲಿಂಗೈಕ್ಯಂಗೆ! /357
ಉದಯಮುಖದಲ್ಲಿ ಹುಟ್ಟಿದ ಬಿಸಿಲ ಲಿಂಗಾರ್ಪಿತವ ಮಾಡಬೇಕು.
ಅಸ್ತಮಾನ ಮುಖದಲ್ಲಿ ಹುಟ್ಟಿದ ನೆಳಲ ಲಿಂಗಾರ್ಪಿತವ ಮಾಡಬೇಕು.
ಅಧ ಊಧ್ರ್ವ ಮಧ್ಯವನು ಲಿಂಗಾರ್ಪಿತವ ಮಾಡಬೇಕು.
ಅಂಬರಮುಖದಲ್ಲಿ ಹುಟ್ಟಿದ ನಿರ್ಮಳೋದಕವನು ಲಿಂಗಾರ್ಪಿತವ ಮಾಡಬೇಕು.
ಬಯಲಮುಖದಲ್ಲಿ ಹುಟ್ಟಿದ ವಾಯುವನು ಲಿಂಗಾರ್ಪಿತವ ಮಾಡಬೇಕು.
ಆವ ಪದಾರ್ಥವಾದರೇನು ಲಿಂಗಾರ್ಪಿತವ ಮಾಡಬೇಕು.
ಕೂಡಲಚೆನ್ನಸಂಗಯ್ಯಾ
ಲಿಂಗಾರ್ಪಿತವಲ್ಲದೆ ಕೊಂಡರೆ ಕಿಲ್ಬಿಷವೆಂಬುದು./358
ಉದಯಾಸ್ತಮಾನವೆಂಬ ಕೊಳಗದಲ್ಲಿ. ಆಯುಷ್ಯವೆಂಬ ರಾಸಿಯನಳೆವರು
ರಾಸಿ ತೀರದ ಮುನ್ನ ಸಟೆಯ ಸಡಗರ ಬಿಟ್ಟು
ಶಿವಲಿಂಗಾರ್ಚನೆಯ ಮಾಡುವುದು.
ಕೂಡಲಚೆನ್ನಸಂಗಯ್ಯಾ, ಇದ ಮಾಡದಿರ್ದಡೆ
ನಾಯಕನರಕ. /359
ಉದರ ನಿಮಿತ್ತವಿಡಿದು ಉದರವ ಹೊರೆವವನಲ್ಲ.
ಹದಿರಿಸಬಲ್ಲ ಚದುರ ಕಾಣಿಭೋ,
ಲಿಂಗಜಂಗಮವೆಂಬ ಕುಳದಾಗಮಸಾರವಿಡಿದಾಡುವ ಚದುರ ಕಾಣಿಭೋ!
ಚದುರ ಬಿದಿರ ಬಿತ್ತುವ
ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣನು. /360
ಉದಾಸೀನವ ಮಾಡದ[ಮಾಡಿದ?] ಭಕ್ತರ ಮಂದಿರದಲ್ಲಿ ಹೊಕ್ಕು
ಲಿಂಗಾರ್ಚನೆಯ ಮಾಡುವ ಜಂಗಮದ ಪರಿಯಾಯವೆಂತೆಂದಡೆ;
ಆ ಭಕ್ತನ ಗೃಹದಲ್ಲಿ ಕರ್ತನಾಗಿ ನಿಂದು
ಭಾಂಡಭಾಜನಂಗಳ ಮುಟ್ಟಿ ಸೇವೆಯ ಮಾಡುವ ಆ ಭಕ್ತನ ಸತಿಸುತಮಾತೆ
ಸಹೋದರ ಬಂಧುಜನ ಭೃತ್ಯ ದಾಸಿಯರು ಮೊದಲಾದ ಸರ್ವರೂ
ಲಿಂಗಾರ್ಚಕ ಶ್ರೇಷ್ಠರು
ಪಾದೋದಕ ಪ್ರಸಾದ ವಿಶ್ವಾಸ ಭಕ್ತಿಯುಕ್ತರೆಂಬುದನರಿದು
ಅಂದಂದಿಂಗವರ ಹೊಂದಿ
ಮುಂದುಗೊಂಡಿರ್ಪ ತಾಮಸಗಳನ್ನು ಹಿಂದುಗಳವುತ್ತ
ಸತ್ಯ ಭಕ್ತಿಯನು ಬಂದ ಪದಾರ್ಥವನು ಪ್ರಸಾದವೆಂದೇ ಕಂಡು ಕೈಕೊಂಡು
ಲಿಂಗಾರ್ಪಿತ ಘನಪ್ರಸಾದಭೋಗಿಯಾಗಿ
ತನ್ನ ಒಕ್ಕುದ ಮಿಕ್ಕುದನಾ ಭಕ್ತಜನಕಿಕ್ಕಿ
ತನ್ನಲ್ಲಿ ಒಡಗೂಡಿಕೊಂಡು ಸಲುಹಬಲ್ಲ ಜಂಗಮವೇ ಜಗತ್ಪಾವನ.
ಇನಿತಲ್ಲದೆ ಅವರು ನಡೆದಂತೆ ನಡೆಯಿಲಿ, ಅವರು ಕೊಂಡ ಕಾರಣ ನಮಗೇಕೆಂದು
ಆ ಭಕ್ತಜನಂಗಳಲ್ಲಿ ಹೊದ್ದಿರ್ದ ತಾಮಸಂಗಳನು ಪರಿಹರಿಸದೆ
ತನ್ನ ಒಡಲುಕಕ್ಕುಲತೆಗೆ ಉಪಾದಿಯ ನುಡಿದು
ತಮ್ಮ ಒಡಲ ಹೊರೆವ ದರುಶನಜಂಗುಳಿಗಳೆಲ್ಲರೂ ಜಂಗಮಸ್ಥಲಕ್ಕೆ ಸಲ್ಲರು.
ಅದೆಂತೆಂದೊಡೆ;
ತಾಮಸಂ ಭಕ್ತಗೇಹಾನಾಂ ಶ್ವಾನಮಾಂಸಸಮಂ ಭವೇತ್
ಇತಿ ಸಂಕಲ್ಪ್ಯ ಭುಂಜಂತಿ ತೇ ಜಂಗಮಾ ಬಹಿರ್ನರಾಃ
ಶ್ವಾಪಿಂಡಂ ಕುರುತೇ ಯೇನ ಲಾಂಗೂಲೇ ಚಾಲನಂ ಯಥಾ.
ಉಪಾದಿಜಂಗಮಂ ಯಸ್ಯ ತಸ್ಯ ಜೀವೇಶ್ಚ ಗಚ್ಛಯೇತ್
ಇಂತೆಂದುದಾಗಿ
ಇದು ಕಾರಣ ತಾಮಸವಿಡಿದು ಮಾಡುವಾತ ಭಕ್ತನಲ್ಲ.
ಆ ತಾಮಸ ಮುಖದಿಂದ ಮಾಯೋಚ್ಛಿಷ್ಠವ ಕೊಂಡಾತ ಜಂಗಮವಲ್ಲ
ಅವರೀರ್ವರನ್ನು ಕೂಡಲಚೆನ್ನಸಂಗಯ್ಯ
ಇಪ್ಪತ್ತೆಂಟುಕೋಟಿ ನರಕದಲ್ಲಿಕ್ಕುವ. /361
ಉದಾಸೀನವ ಮಾಡಿದರೆ ಮುಟ್ಟಲಾಗದು, ಅದು ಅನರ್ಪಿತವೆನಿಸೂದು.
ವಿನಯದಿಂದ ನೀಡಿದರೆ ಮುಟ್ಟುವುದು, ಅರ್ಪಿತವ ಮಾಡುವುದು.
ಕೂಡಲಚೆನ್ನಸಂಗಯ್ಯಾ
ಅಂತಪ್ಪ ಲಿಂಗಾಬಿಮಾನಿಯ ಎನಗೆ ತೋರಯ್ಯಾ. /362
ಉದ್ಭ್ರಮಿಯಲ್ಲ, ಉದ್ದೇಶಿಯಲ್ಲ, ನಿದ್ರೆಗೆಟ್ಟವನು,
ನಿಜವನೆ ಬೆಳಗುತಿಪ್ಪ ನಿಶ್ಚಿಂತ ಶರಣ.-
ಚಿಂತೆಗೆಟ್ಟು ಸ್ಥಿರವಾಗಿ ನಿಂದ, ಸೀಮೆಯ ಕೆಡಿಸಿ ನಿಸ್ಸೀಮನಾದ,
ಬೋಧೆಯ ಕೆಡಿಸಿ ನಿಬರ್ೊದಿಯಾದ,
ಕಾಯವ ಕೆಡಿಸಿ ಕರ್ಮಾದಿ ಗುಣರಹಿತನಾದ,
ಆಶೆಯ ಕೆಡಿಸಿ ನಿರಾ[ಶಕ]ನಾಗಿ ತನ್ನ ಮರೆದ,
ಇದು ಕಾರಣ, ಕೂಡಲಚೆನ್ನಸಂಗಾ
ನಿಮ್ಮ ಶರಣಂಗೆ ಆರೂ ಸರಿಯಿಲ್ಲ. /363
ಉನ್ಮನಿಜ್ಞಾನದ ಗಮನ (ದ ಭಾವವು) ಲೌಕಿಕದ ನಿಷ್ಠೆಯ ದೃಷ್ಟಿ.
ಶಾಂಭವಜ್ಞಾನದ (ಗಮನದ) ಭಾವವು ಪ್ರಾಣದ ಪರಿಣಾಮದ ನಿಲವು.
ಸುಜ್ಞಾನದ ಗಮನದ ಭಾವವು ಉಪದೇಶ ಪ್ರಸೂತದ ಭಾವಭೇದ.
ಈ ತ್ರಿವಿಧ ಚರಿತ್ರ, ಸಂಭಾಷಣೆಯ ಕೂಡಲಚೆನ್ನಸಂಗಾ.
ನಿಮ್ಮ ಶರಣ ಬಲ್ಲ. /364
ಉಪದೇಶವ ಮಾಡಿದ ಗುರುವೊಂದೆ ಲಿಂಗವೊಂದೆಯಲ್ಲದೆ,
ಸತಿಗೊಂದು ಲಿಂಗ, ಸುತಗೊಂದು ಲಿಂಗ,
ಸೋದರಗೊಂದು ಲಿಂಗ, ದಾಸಿಗೊಂದು ಲಿಂಗ,
ಇಂತು ಒಂದು ಮನೆಗೆ ಗುರುಲಿಂಗವನೆರಡು ಮಾಡಿದರೆ
ಮೆಚ್ಚರು, ನಮ್ಮ ಕೂಡಲಚೆನ್ನಸಂಗನ ಶರಣರು. /365
ಉಪದೇಶವ ಮಾಡುವ ಗುರು ಒಬ್ಬನಲ್ಲದೆ ಇಬ್ಬರು ಸಾಲದು ನೋಡಾ.
ಉಪದೇಶವ ಮಾಡುವ ಗುರು ಒಂದಾದಲ್ಲಿ ಲಿಂಗ ಒಂದು,
ಲಿಂಗ ಒಂದಾದಲ್ಲಿ ದೀಕ್ಷೆ ಒಂದು, ದೀಕ್ಷೆ ಒಂದಾದಲ್ಲಿ ಪ್ರಸಾದ ಒಂದು,
ಪ್ರಸಾದ ಒಂದಾದಲ್ಲಿ ಭಕ್ತಿ ಒಂದು, ಭಕ್ತಿ ಒಂದಾದಲ್ಲಿ ಮುಕ್ತಿ ಒಂದು,
ಅದೆಂತೆಂದಡೆ;
ಗುರುರೇಕೋ ಲಿಂಗಮೇಕಂ ದೀಕ್ಷಾಮೇಕಾಂ ಪ್ರಸಾದಕಂ
ಏಕಮುಕ್ತಿಮಿದಂ ದೇವಿ ವಿಶೇಷಂ ಶುದ್ಧಭಕ್ತಿಮಾನ್
ದ್ವಯೋರ್ಗುರು ದ್ವಯೋರ್ಲಿಂಗ ದ್ವಯೋದೀಕ್ಷಾ ಪ್ರಸಾದಯೋಃ
ಯಥಾದ್ವಯಮಿದಂ ದೇವಿ ವಿಶೇಷಂ ಪಾತಕಂ ಭವೇತ್
ಎಂದುದಾಗಿ ಗುರುವೆರಡಾದಲ್ಲಿ ಲಿಂಗವೆರಡು
ಲಿಂಗವೆರಡಾದಲ್ಲಿ ದೀಕ್ಷೆ ಎರಡು
ದೀಕ್ಷೆ ಎರಡಾದಲ್ಲಿ ಭಕ್ತಿ ಎರಡು
ಭಕ್ತಿ ಎರಡಾದಲ್ಲಿ ಮುಕ್ತಿದೂರ ನೋಡ.
ಇಂತೀ ಮುಕ್ತಿದೂರರಿಗೆ ಮುಂದೆ ನರಕ ತಪ್ಪದು ನೋಡಾ.
ಇದು ಕಾರಣ ತನ್ನ ಸತಿ-ಸುತ
ಪಿತ ಮಾತೆ ಸಹೋದರ
ಭೃತ್ಯ ದಾಸಿಯರಿಗುಪದೇಶವ ಮಾಡುವ ಗುರು ಒಬ್ಬನಲ್ಲದೆ
ಇಬ್ಬರು ಸಲ್ಲದು ನೋಡಾ. ಅದೆಂತೆಂದಡೆ;
ಪತೀ ಪತ್ನಿ ಭ್ರಾತೃಪುತ್ರ ದಾಸಿ ಗೃಹಚರಾದಿನಾಂ
ಏಕದೀಕ್ಷಾ ಭವೇಸಿದ್ದೇವಿ ವಿಶೇಷಂತು ಶುದ್ಧಭಕ್ತಿಮಾನ್
ಎಂದುದಾಗಿ, ಒಂದು ಮನೆಗೆ ಗುರುಲಿಂಗವ ಎರಡು ಮಾಡಿಕೊಂಡು ನಡೆದಡೆ
ಕೂಡಲಚೆನ್ನಸಂಗಯ್ಯ ಅಘೋರನರಕದಲ್ಲಿಕ್ಕುವನು. /366
ಉಭಯ ಕಾಮ, ಉಭಯ ಶಕ್ತಿ, ಉಭಯ ಆಶ್ರಮವು-
ಅನಾಶ್ರಮವು, ಉಭಯ ತಾನೆ ಪ್ರಸಾದಿ
ಉಭಯನಾಮದ ಮೇಲೆ ನಾಮವಾದುದನು
ಲಿಂಗದೇಹಿಯೆಂಬಾತಂಗರಿಯಬಾರದು.
ಇದು ಕಾರಣ, ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿಗಲ್ಲದೆ
ಅರಿಯಬಾರದು./367
ಉಭಯತನುಗುಣವಳಿದಲ್ಲದೆ ಅರಿವಿನಾಚಾರವಳವಡದು.
ಅರಿವಿನಾಚಾರ ಅ?ವಟ್ಟಲ್ಲದೆ ಲಿಂಗದ ಬೆಳಗು ದೊರೆಕೊಳ್ಳದು,
ಲಿಂಗದ ಬೆಳಗು ದೊರೆಕೊಂಡಲ್ಲದೆ
ಕೂಡಲಚೆನ್ನಸಂಗಯ್ಯನಲ್ಲಿಪರಿಣಾಮದೊರೆಕೊಳ್ಳದು. /368
ಉಭಯಲಿಂಗಪ್ರಸಾದದುದಯವ ಲಿಂಗಪ್ರಸಾದಿಗಳೆ ಬಲ್ಲರು,
ನಾನೆತ್ತ ಬಲ್ಲೆನಯ್ಯಾ ದೇವಾ
ಕ್ರೀಯೆ ಮೀರಿದ ಸಂಬಂಧವನು ವಿಧಿ ನಿಷೇಧ ಕ್ರಿಯೆಗೆ ಹೊರಗಾದುದನು,
[ನಾನೆತ್ತ ಬಲ್ಲೆನಯ್ಯಾ ದೇವಾ]
ಶ್ರುತಿ ಸ್ಮೈತಿ ಪುರಾಣದೊಳಗಲ್ಲ,
ಕೂಡಲಚೆನ್ನಸಂಗನ ಪ್ರಸಾದ. /369
ಉಭಯಲಿಂಗಪ್ರಸಾದವನರಿಯದೆ
ಉಭಯ ಅಂತದೊಳಗಾಯಿತಲ್ಲಾ !
ಉಭಯ ನಾಮದ ಮೇಲೆ ನಾಮವಾದುದನು
ದೇಹಪೂಜಕಂಗರಿಯಬಾರದು.
ದೇಹ ಉಭಯವಾದುದನು, ಉಭಯ ತ್ರಿವಿಧವಾದುದನು
ಕೂಡಲಚೆನ್ನಸಂಗಯ್ಯಾ ನಿಮ್ಮ ಪ್ರಸಾದಿಗಲ್ಲದರಿಯಬಾರದು. /370
ಉಭಯಾರ್ಥದಿಂದ ಲಿಂಗವ ನೋಡುವಡೆ
ಗುರುವಿಂದ ಬಿಟ್ಟು ಬೇರೆ ಘನವಿಲ್ಲಯ್ಯ,
ಉಭಯಾರ್ಥದಿಂದ ಲಿಂಗವ ನೋಡುವಡೆ
ಜಂಗಮದಿಂದತಿಶಯವೇನೂ ಇಲ್ಲಯ್ಯ.
ಉಭಯಾರ್ಥದಿಂದ ಲಿಂಗವ ನೋಡುವಡೆ
ಉಭಯಸ್ಥಳದ ಕುಳವನರಿಯಬೇಕು.
ಉಭಯಾರ್ಥದಿಂದ ಲಿಂಗವ ನೋಡುವಡೆ
ಉಭಯ ಸಂಕೀರ್ಣಮನವ ತಾಳಲಾಗದು.
ಉಭಯಾರ್ಥದಿಂದ ಕೂಡಲಚೆನ್ನಸಂಗಾ
ನಿಮ್ಮ ಶರಣರಿಗೆ ಶರಣೆಂಬೆನಯ್ಯಾ. /371
ಉರಸ್ಥಲದಲ್ಲಿ ಲಿಂಗವ ಧರಿಸಿದ ಬಳಿಕ
ಮನದ ಕೊನೆಯಿಂದ ಲಿಂಗವನಗಲದಿರಬೇಕು.
ಉರ ಗುರುಸ್ಥಲ, ಉರ ಲಿಂಗಸ್ಥಲ, ಉರ ಜಂಗಮಸ್ಥಲ, ಉರ ಪ್ರಸಾದಸ್ಥಲ,
ಉರ ಮಹಾಸ್ಥಲ, ಉರ ಮಹಾಮಹಿಮರಿಪ್ಪ ಅನುಭಾವಸ್ಥಲವೆಂದರಿದು
ಅನ್ಯಮಿಶ್ರಂಗಳ ಹೊದ್ದಲಾಗದು.
ತಟ್ಟು ಮುಟ್ಟು ತಾಗು ನಿರೋಧಗಳಿಗೆ ಗುರಿಯಾಗಲಾಗದು.
ಇಂದ್ರಿಯಂಗಳ ಕೂಡ ಮನಸ್ಥಾಪ್ಯಗೊಳದಿದ್ದರೆ,
ಇದು ಉರಲಿಂಗ ಸ್ವಾಯತ.
ಪ್ರಾಣಲಿಂಗಪ್ರಾಣಿಗಿದು ಚಿಹ್ನೆ, ಕೂಡಲಚೆನ್ನಸಂಗಮದೇವಾ. /372
ಉರಿತಾಗಿದ ಮೃಗ ಒಂದಡಿಯಿಡುವುದೆ ?
ತನುತಾಗಿದ ಸುಖವಗಲುವುದೆ ?
ಕೂಡಲಚೆನ್ನಸಂಗನ ಶರಣರನುಭಾವವರಿದ ಬಳಿಕ
ಮತ್ತೆ ಮರಳೆನು./373
ಉರಿಯ ಸೀರೆಯನುಟ್ಟು, ಕಡೆಸೆರಗ ಬಿಡುಬೀಸಿ,
ಮಡದಿ ತನ್ನ ಕೆಳದಿಯರನೊಡಗೊಂಡು ಆಡುತ್ತಿರೆ,
ಪತಿ ಬಂದು ಮುಡಿಯ ಹಿಡಿದು ಸೀರೆಯನುಗಿಯೆ,
ಮಡದಿಯೊಡಗೂಡುತ್ತಿರೆ;
ಸಮರಸದಲ್ಲಿ ಸತಿಯಳಿದು ಪತಿಯಾಗಿ, ಪತಿಯಳಿದು ನಿಃಪತಿಯಾಗಿ,
ಸತಿ ಪತಿ ನಿಃಪತಿ- ಎಂಬ ತ್ರಿವಿಧವು ಏಕಾರ್ಥವಾದ
ಕೂಡಲಚೆನ್ನಸಂಗಯ್ಯನಲ್ಲಿ,
ಬಸವಣ್ಣನ ಪಾದಕ್ಕೆ ನಮೋ ನಮೋ ಎನುತಿರ್ದೆನು/374
ಉರುಗಿವೋದ ಕೊಡನುನಳುಕದೆ [ಮರುಗದೆ ಹಿಡಿವ]ನೇಹವ ನೋಡಿರೆ !
ಹರಿವ ಕರಿಗಳ ಅರಿವಿ [ನೆಡೆಗೆ] ನೋಡಿರೆ !
ಸರ ಹರಿದ ಮಣಿಗಳೊಂದೇ ಹರಳಾದುದ ನೋಡಿರೆ !
ಬೆರಸಿ ಬೇರಿಹ ಕೂಡಲಚೆನ್ನಸಂಗ[ನ]ನೆರಡಿಲ್ಲದೆ ನೋಡಿರೆ. /375
ಉಲಿಗರ ಮಾತು, ಊರುಗರ ತೋಟಿಯೊಳಗುಂಟೆ ಲಿಂಗಾನುಭಾವ ?
ರಚ್ಚೆಯ ಕೆಟ್ಟ ಬೀದಿಯ ಮಾತಿನೊಳಗುಂಟೆ ಲಿಂಗಾನುಭಾವ ?
ಸಂತೆಯೊಳಗೆ ಸಮಾದಿಯುಂಟೆ ?
ಇದು ಕಾರಣ ಕೂಡಲಚೆನ್ನಸಂಗಯ್ಯನ ಅನುಭಾವ
ಹೊರವೇಷದ ವಾಚಾಳರಿಗೆಲ್ಲಿಯದು. /376
ಊಧ್ರ್ವಬಿಂದು ನಾದ ಮುಟ್ಟಲಿಕೆ ಜಂಗಮ,
ಮಧ್ಯಬಿಂದು ಊಧ್ರ್ವ ಮುಟ್ಟಲಿಕೆ ಸ್ಥಾವರ,
ಸ್ಥಾವರಬಿಂದು ಸ್ಥಾವರವಾದ ಊಧ್ರ್ವ ಮುಟ್ಟಲಿಕೆ ಭಕ್ತ,
(ಭಕ್ತಿ?) ಬಿಂದು ನಾದ ಮುಟ್ಟಲಿಕೆ ಭವಿ.
ಇಂತು ಜಾತಿಸೂತಕ ಪ್ರೇತಸೂತಕವನಳಿದಾತಂಗೆ,
ಕಾಲವಿಲ್ಲ ಕರ್ಮವಿಲ್ಲ, ಭವಿಗೆ ಕೊಡಲಿಲ್ಲ ಭಕ್ತಂಗೆ ಕೊಡಲಿಲ್ಲ.
ಇದು ಕಾರಣ, ಕೂಡಲಚೆನ್ನಸಂಗಮದೇವಾ
ನಿಮ್ಮ ಶರಣಂಗಲ್ಲದೆ ಉಳಿದವರಿಗಪೂರ್ವ. /377
ಊರ ಮುಂದೆ ಶ್ವಾನನ ಕಾಣಬಹುದಲ್ಲದೆ
ಸಿಂಹವ ಕಾಣಬಾರದು.
ನದಿಯ ಮುಂದೆ ಬಕನ ಕಾಣಬಹುದಲ್ಲದೆ
ಹಂಸನ ಕಾಣಬಾರದು.
ಪಸರದೊಳಗೆ ಗಾಜಿನ ಮಣಿಯ ಕಾಣಬಹುದಲ್ಲದೆ ರತ್ನವ ಕಾಣಬಾರದು.
ಧರೆಯ ಮೇಲೆ ವೇಷಧಾರಿಗಳ ಕಾಣಬಹುದಲ್ಲದೆ
(ಶಿವ)ಜ್ಞಾನಿಗಳ ಕಾಣಬಾರದು, ಕೂಡಲಚೆನ್ನಸಂಗಮದೇವಾ. /378
ಊಹಿಸಲರಿಯೆ, ಉತ್ತರವನರಿಯೆ,
ದೇವನನರಿಯೆ, ದೇಹಿಕನನರಿಯೆ,
ನಾನೆನ್ನಲರಿಯೆ, ನೀನೆನ್ನಲರಿಯೆ,
ಕೂಡಲಚೆನ್ನಸಂಗಮದೇವ ಎನ್ನಲರಿಯೆ !/379
ಎಂಜಲು ಮಾತು ನುಡಿವ ರಂಜಕರೆಲ್ಲರು ಮಿಗೆಮಿಗೆ ವಿೂಸಲ ತಾವೆತ್ತ ಬಲ್ಲರು?
ವಿೂಸಲು ಎಂಜಲಹುದೆ ? ಎಂಜಲು ವಿೂಸಲಹುದೆ ?
ಮಾತಿನ ಬಣಬೆಯ ಮೇದ ಪಶುಪ್ರಾಣಿಯಂತೆ
ಎಂಜಲು ಮಾತನೆ ನುಡಿಯುತ್ತಿಹರು,
ಲಿಂಗಸಕೀಲಸಂಯೋಗದ ವರ್ಮಸ್ಥ?ವನವರೆತ್ತ ಬಲ್ಲರು !
ಕೂಡಲಚೆನ್ನಸಂಗಯ್ಯಾ,
ಉಪದೇಶ ಸೂತಕಿಗಳೆಲ್ಲರೂ ರೌರವನರಕಿಗಳು. /380
ಎಂಟುದಿಕ್ಕು ನಾಲ್ಕು ಬಾಗಿಲೊಳಗೆ,
ಸಕಲ ಪದಾರ್ಥವೆಂಬ ಮಂಟಪವ ಮಾಡಿ, ನಾನಾ ಕೇರಿ ಬೀದಿವಾಗಿಲೊಳು
ಅನಂತ ಬಣ್ಣಬಣ್ಣದ ಚೈತನ್ಯಗಳನನುಮಾಡಿ,
ಅನಂತ ವೀರರನು ಅನಂತ ಲಾಳಮೇಳಿಗಳನು
ಅನಂತ ಸೋಹಂ ಘನ ಮುಟ್ಟಿಕೊಂಡಿರ್ಪವರನು ತಂದಿರಿಸಿ
ಆ ಮಂಟಪದೊಳಗೆ ಬಿಜಯ ಮಾಡೆಂದು-
ಭಕ್ತ್ಯಂಗನೆಯ ಕರೆಸಿ ಪರಿಪೂರ್ಣವಾಗಿರಿಸಿ
ಜ್ಞಾನಾಂಗನೆಯ ಕರೆಸಿ ನಾಲ್ಕು ಬಾಗಿಲುಗಳಿಗೆ ಕಾಹ ಕೊಟ್ಟು
ನುಡಿಯದಂತೆ ಗಂಡನು ಶಿವನಲ್ಲದೆ ಮತ್ತಿಲ್ಲವೆಂದಾತನ ಮಂಟಪದ ವಾರ್ತೆಯ
ಅನ್ಯ ಮಿಶ್ರಂಗಳ ಹೊಗಲೀಸೆನೆಂಬ ಭಾಷೆ !
ಕಾಲ ಕರ್ಮ ಪ್ರಳಯವಿರಹಿತನೆಂದಾತನ ಹೆಸರು.
ಮಹಾಪ್ರಳಯದಲ್ಲಿ ಅನಂತಮೂರ್ತಿಗಳು ಮಡಿವಲ್ಲಿ
ಮಡಿಯದೆ ಉಳಿದ ನಿತ್ಯಸ್ವರೂಪನು.
ಆತನ ಶ್ರೀಚರಣದೊಳಚ್ಚೊತ್ತಿದಂತಿಪರ್ಾತನೆ
ಅನಾದಿ ಸಿದ್ಧನೆ, ಅನಾದಿ ಕುಳಜ್ಞನೆ, ಅನಾದಿ ಮಡಿವಾಳನೆ, ಶಿವನ ಮದಹಸ್ತಿಯೆ,
ಹಸ್ತದೊಳು ಮದಂಗಳ ತೃಣವ ಮಾಡಿದ ಚಾದಂತನೆ,
ಭಕ್ತಿಸಾರಾಯ ಪ್ರಸಾದಪರಿಪೂರ್ಣನೆ
ಕೂಡಲಚೆನ್ನಸಂಗನ ಮಹಾಮನೆಯಲ್ಲಿ,
ಅನಾದಿಗಣೇಶ್ವರನು ಮಡಿವಾಳನು./381
ಎಂಟುಲಕ್ಷದ ಮೇಲೆ ಐನೂರು ದೇವರಿಗೆ ಮಾಡಿದ ಬೋನವ
ಒಬ್ಬ ಜಂಗಮನಾರೋಗಣೆಯ ಮಾಡುವನಲ್ಲದೆ,
ಹದಿನಾರು ಲಕ್ಷದ ಮೇಲೆ ಐನೂರು ದೇವರು ಕೂಡಿಕೊಂಡು
ಒಬ್ಬ ಜಂಗಮಕ್ಕೆ ಮಾಡಿದ ಬೋನವನಾರೋಗಿಸಲರಿಯವು.
ಅಂತಪ್ಪ ದೇವರಿಗಿಂತಲೂ ಜಂಗಮವೆ ಘನ.
ಕೃತಯುಗದಲ್ಲಿ ಸುವರ್ಣದ ಲಿಂಗಾವಾದಲ್ಲಿ ನಿನ್ನ ಹೆಸರೇನು ?
ತ್ರೇತಾಯುಗದಲ್ಲಿ ಬೆಳ್ಳಿಯ ಲಿಂಗವಾದಲ್ಲಿ ನಿನ್ನ ತಾಯಿ-ತಂದೆ ಯಾರು ?
ದ್ವಾಪರದಲ್ಲಿ ತಾಮ್ರದಲಿಂಗವಾದಲ್ಲಿ
ಹದಿನೆಂಟು ಜಾತಿಯ ಕೈಯ ಕಿಲುಬು ಹೋಯಿತ್ತು.
ಕಲಿಯುಗದಲ್ಲಿ ಕಲ್ಲ ದೇವರಾದರೆ ಇಕ್ಕಿದೋಗರವನುಣ್ಣದೇಕೊ ?
ಹಿಂದೊಮ್ಮೆ ನಾಲ್ಕುಯುಗದಲ್ಲಿ ಅಳಿದು ಹೋದುದನರಿಯಾ ?
ಇನ್ನೇಕೆ ದೇವತನಕ್ಕೆ ಬೆರತಹೆ ?
“ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ
ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಫಲಂ ಭವೇತ್ -ಇದು ಕಾರಣ
ಕೂಡಲಚೆನ್ನಸಂಗಯ್ಯಾ, ತಪ್ಪದೆ ನಾಲ್ಕುಯುಗದಲ್ಲಿ
ಜಂಗಮವೆ ಪ್ರಾಣಲಿಂಗವಾದ ಕಾರಣ
ಸ್ಥಾವರವೆ ಜಂಗಮಪ್ರಸಾದಕ್ಕೆ ಯೋಗ್ಯವಾಯಿತ್ತು./382
ಎಂತು ಜೀವಿಸಬಹುದು, ಗುರುಪ್ರಾಣಿಗೆ ಗುರು ಓಸರಿಸಿದಡೆ ?
ಎಂತು ಜೀವಿಸಬಹುದು, ಲಿಂಗಪ್ರಾಣಿಗೆ ಲಿಂಗ ಓಸರಿಸಿದಡೆ ?
ಎಂತು ಜೀವಿಸಬಹುದು, ಜಂಗಮಪ್ರಾಣಿಗೆ ಜಂಗಮ ಓಸರಿಸಿದಡೆ ?
ಎಂತು ಜೀವಿಸಬಹುದು, ಪ್ರಸಾದಪ್ರಾಣಿಗೆ
ಕೂಡಲಚೆನ್ನಸಂಗಯ್ಯಾ ಪ್ರಸಾದ ಓಸರಿಸಿದಡೆ ?/383
ಎಂತೆನಗೆ ತೃಷ್ಣೆ [ತುಷ್ಟಿ ?] ಅಂತೆ ಲಿಂಗಪರುಶನ ಮಾಡುವೆ ನಾನಯ್ಯಾ,
ಎಂತೆನಗೆ ತೃಷ್ಣೆ [ತುಷ್ಟಿ ?] ಅಂತೆ ಜಂಗಮದರುಶನ ಮಾಡುವೆ ನಾನಯ್ಯಾ,
ಎಂತೆನಗೆ ತೃಷ್ಣೆ [ತುಷ್ಟಿ ?] ಅಂತೆ ಪ್ರಸಾದದ ಸವಿಯ ಸವಿವೆ ನಾನಯ್ಯಾ.
ತ್ರಿವಿಧದಲ್ಲಿ ಸಂಗವಾಗಿ, ಅಂಗಭೋಗವ ಭಂಗಿಸಿ ಕಳೆದು
ಲೋಕ ಲೌಕಿಕವ ವಿವರಿಸಿ ಕಳೆದು
ಬಸವನ ಅಂಗ ತಾವಾದೆವೆಂಬ [ತುಷ್ಟಿ] ಹಿರಿದು,
ಕೂಡಲಚೆನ್ನಸಂಗಯ್ಯಾ, ಕ್ರಮವರಿಯೆ./384
ಎಡೆಗೊಡುವನಲ್ಲ, ಎಡೆಗೊಂಬವನಲ್ಲ,
ನುಡಿ ಎಡೆಯೊಳಗೆ ಮರಳುವನಲ್ಲ, ತನ್ನ ತಾನು ಮಹಾಪ್ರಸಾದಿ.
ಎಡೆಯಲ್ಲಿ ಅಂಧಃಕಾರ ರೂಪನಲ್ಲ.
ಇದು ಕಾರಣ, ಕೂಡಲಚೆನ್ನಸಂಗಯ್ಯಾ
ಇದ್ದುದನರ್ಪಿಸಬಲ್ಲನಾಗಿ ಮಹಾಪ್ರಸಾದಿ. /385
ಎನಗಿಲ್ಲದ ಘನವನೇರಿಸಿ ನುಡಿದಡೆ ಅದು ನಿಮ್ಮ ಲೀಲೆ,
ನಾನದನು ಬೇಕೆನ್ನೆ ಬೇಡನ್ನೆ ಅದಂತಿರಲಿ.
ನಿಮ್ಮ ಶ್ರೀ ಪಾದದ ಕೃಪೆಯಿಂದ ನಿಮ್ಮ ನಿಲವನರಿದೆನು.
ಕೂಡಲಚೆನ್ನಸಂಗಮದೇವಾ
ಎನಗೊಮ್ಮೆ ಬಸವಣ್ಣನ ಪರಿಯನರುಹಾ ಪ್ರಭುವೆ/386
ಎನಗೆನ್ನ ಗುರುಬಸವಣ್ಣ ತೋರಿದ ಘನವ,
ನಿಮಗೆ ಬಿನ್ನೈಸುವೆನು ಕೇಳಾ ಪ್ರಭುವೆ.
ಪ್ರಸಾದದಿಂದ ಹುಟ್ಟಿದ ಕಾಯಕ್ಕೆ ಪ್ರಸಾದದಿಂದೊಗೆದ ಲಿಂಗವ ಕೊಟ್ಟು
ಪ್ರಸಾದಲಿಂಗಮುಖದಲ್ಲಿ ಪ್ರಸಾದಮಯವಾದ,
ಪ್ರಣವಪಂಚಾಕ್ಷರಿಯ ಪ್ರಸಾದಿಸಿ
ತನ್ನಾದಿರೂಪಿನಲ್ಲಿ ಅನಾದಿಲಿಂಗಪ್ರಸಾದವ ಭೋಗವ ಮಾಡಿ
ಆ ಪ್ರಸಾದದಿಂದೊಗೆದ ಪ್ರಸಾದವ ತನ್ನ ಪ್ರಸಾದಜ್ಞಾನವೆಂಬ
ಪರಮಶಿಖಿಯಿಂದ ದಹನ ಮಾಡಿ,
ಎನಗೆ, ಸಮಸ್ತ ಶಿವಭಕ್ತರ್ಗೆ ಇದು ಭಕ್ತಿ ನೀತಿಯೆಂದು ವಿಭೂತಿಯನಿಟ್ಟು
ತ್ರಿಪುರದ ಸಂಚವನಳಿದು ತ್ರಿಜಗವ ರಕ್ಷಿಸಲೆಂದು
ತ್ರಿಲೋಚನದಲ್ಲಿ ಉಗ್ರಶಾಂತಿ ಗಾಂಬಿರ್ಯವೆಂಬ ಜಲಬಿಂದುವೆ ಬೀಜವಾಗಿ ಬೆಳೆದ
ರುದ್ರಾಕ್ಷಿಯ ಧರಿಸಿ, ಶಾಂಭವೀಮುದ್ರೆಯನೊತ್ತಿ
ನಾದ ಬಿಂದು ಕಳೆಯೊಂದಾದಂದಿನ
ಅನಾದಿ ಬೋಧಚೈತನ್ಯಜ್ಞಾನಲಿಂಗ ತಾನೆ ಜಂಗಮವೆಂದು ತಿಳುಹಿ
ಆ ಜಂಗಮದ ಪಾದೋದಕ ಪ್ರಸಾದವೆ ಇಷ್ಟವಾದ
ಷಡ್ವಿಧಲಿಂಗದ ಮೂಲಾಂಗವೆನಿಸುವ ಇಷ್ಟಲಿಂಗಕ್ಕೆ
ಮಜ್ಜನ ನೈವೇದ್ಯವ ಸಜ್ಜನಸುದ್ಧ ಶಿವಭಕ್ತಿಯಿಂದ ಮಾಡೆಂದ ಬಸವಣ್ಣ.
ಅದೆಂತೆಂದಡೆ; ಹಂಸೆಗೆ ಹಾಲನೆರೆವರಲ್ಲದೆ ಹುಳಿಯನೆರೆವರೆ ?
ಇಷ್ಟಲಿಂಗಕ್ಕೆ ಪ್ರಸಾದವೆ ಭೋಜನವೆಂದು ಬಸವಣ್ಣ ನಿರೂಪಿಸಲು,
`ನಿರಂತರವೆ ? ಎಂದು ಬಿನ್ನೈಸೆ, ಬೋದಿಸಿದ ಬಸವಣ್ಣನು.
ಅದೆಂತೆಂದಡೆ; ಪದಾರ್ಥವ ಕೊಟ್ಟಡೆ ಫಲಪದ ತಪ್ಪದು,
ಪ್ರಸಾದವ ಕೊಟ್ಟಡೆ ಫಲಂ ನಾಸ್ತಿ ಪದಂ ನಾಸ್ತಿ ಭವಂ ನಾಸ್ತಿ
ಎಂದನಯ್ಯಾ ಎನ್ನ ಗುರು ಬಸವಣ್ಣನು.
ಅದೆಂತೆಂದಡೆ; ಪದಾರ್ಥವೆ ಕರ್ಮರೂಪು, ಪ್ರಸಾದವೆ ನಿಃಕರ್ಮರೂಪು.
`ದ್ರವ್ಯಂ ಕ್ರಿಯಾಸ್ವರೂಪಂ ಚ ಪ್ರಸಾದೋ ಕರ್ಮಬಾಹ್ಯಕಃ
ಪದಾಥರ್ೊ ಜನ್ಮಹೇತುಃ ಸಾತ್ ಪ್ರಸಾದೋ ಭವನಾಶಕಃ
ಇಂತೆಂದು ನುಡಿದು, ನಡೆದು ತೋರಿ
ಹೊರೆದನಲಾ ಬಸವಣ್ಣ, ಸಕಲ ಮಾಹೇಶ್ವರರ.
ಇದನರಿದು ಕೊಡುವದು, ಇದನರಿದು ಕೊಂಬುದು
ಇದೇ ಭಕ್ತಿಗೆ ಬೇಹ ಬುದ್ಧಿ, ಇದೇ ಪ್ರಸಾದಕ್ಕೆ ಪರಮಕಾರಣ.
ಇಂತಲ್ಲದವಂಗೆ ಲಿಂಗವಿಲ್ಲ; ಲಿಂಗವಿಲ್ಲಾಗಿ ಪ್ರಸಾದವಿಲ್ಲ.
ಇದನರಿದು, ಗುರುವಿಡಿದು ಲಿಂಗದಿಚ್ಛೆಯನರಿದು ಸುಖಿಸಿದೆನಯ್ಯಾ
ಕೂಡಲಚೆನ್ನಸಂಗಮದೇವಾ./387
ಎನ್ನ ಅನುಭಾವದ ಗಮ್ಯವೆ, ಎನ್ನ ಅರಿವಿನ ವಿಶ್ರಾಮವೆ,
ಎನ್ನ ಭಾವದ ಬಯಕೆಯೆ, ಎನ್ನ ನಿಜದ ನಿಲವೆ,
ಎನ್ನ ಪರಿಣಾಮದ ಮೇರುವೆ, ಎನ್ನ ಮನದ ಮಹಿಮನೆ,
ನಿಮ್ಮ ಸುಳುಹು ಎತ್ತಲಡಗಿತ್ತು, ಎಲೆ ಲಿಂಗವೆ ?
ನಿಮ್ಮ ನಾಮವೆತ್ತ ನಿರ್ನಾಮವಾಯಿತ್ತು, ಎಲೆ ಪರಮಗುರುವೆ ?
ಕೂಡಲಚೆನ್ನಸಂಗಯ್ಯನಲ್ಲಿ
ಉರಿಯುಂಡ ಕರ್ಪುರದಂತಾದೆಯಲ್ಲಾ ಪ್ರಭುವೆ ! /388
ಎನ್ನ ಅರಿವಿನ ಕಣ್ಣ ಕತ್ತಲೆಯ ಕಳೆವಡೆ,
ಸಂಗನಬಸವಣ್ಣನಲ್ಲದೆ ಮತ್ತಾರನೂ ಕಾಣೆನು.
ಎನ್ನ ಭಾವವ ನಿರ್ಭಾವದಲ್ಲಿ ನಿಶ್ಶೂನ್ಯವಮಾಡಿ
ಪರಮಸುಖದೊಳಿರಿಸುವಡೆ, ಅಲ್ಲಮಪ್ರಭುದೇವರಲ್ಲದೆ ಮತ್ತಾರನೂ ಕಾಣೆನು.
ಇದು ಕಾರಣ-ಕೂಡಲಚೆನ್ನಸಂಗಯ್ಯನಲ್ಲಿ
ಬಸವ-ಪ್ರಭುದೇವರ ಶ್ರೀಪಾದಕ್ಕೆ ನಮೋ ನಮೋ ಎನುತಿದ್ದೆನು./389
ಎನ್ನ ಕಣ್ಣು ಕಾಬಳತೆ, ಮನ ಸುತ್ತುವಳತೆ
ಸರ್ವಲೋಕ ನಿಮ್ಮದೆಂದು ಶುದ್ಧ ನಾನು ಲಿಂಗಯ್ಯಾ.
ನಾಮ ಸೀಮೆಯೆಂಬುದು ಮನದಳತೆಯಲ್ಲ[ದೆ]
ನಿಸ್ಸೀಮ, ಕೂಡಲಚೆನ್ನಸಂಗಾ ನಿಮ್ಮ ಶರಣ. /390
ಎನ್ನ ಕರಸ್ಥಲದಲ್ಲಿ ಲಿಂಗವ ಸಾಹಿತ್ಯವ ಮಾಡಿದ.
ಎನ್ನ ಮನಸ್ಥಲದಲ್ಲಿ ಜಂಗಮವ ಸಾಹಿತ್ಯವ ಮಾಡಿದ.
ಎನ್ನ ತನುಸ್ಥಲದಲ್ಲಿ ಆಚಾರವ ಸಾಹಿತ್ಯವ ಮಾಡಿದ.
ಇಂತೀ ತನು ಮನ ಪ್ರಾಣವನೇಕವ ಮಾಡಿ
ಕೂಡಲಚೆನ್ನಸಂಗಮದೇವಾ ನಿಮ್ಮನೆನ್ನ ವಶವ ಮಾಡಿದ
ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು./391
ಎನ್ನ ಕಾಯಕ್ಕೆ ಸೀಮೆಯ ಮಾಡುವೆನು;
ಎನ್ನ ಕಾಯದೊಳಗಿರ್ದ ಕರಣಾದಿ ಗುಣಂಗಳಿಗೆ ಸೀಮೆಯ ಮಾಡುವೆನು.
ಎನ್ನ ಶ್ರೋತ್ರಕ್ಕೆ ಸೀಮೆಯ ಮಾಡುವೆನು;
ಎನ್ನ ಶ್ರೋತ್ರದೊಳಗಿರ್ದ ಶಬ್ದಕ್ಕೆ ಸೀಮೆಯ ಮಾಡುವೆನು.
ಎನ್ನ ತ್ವಕ್ಕಿಗೆ ಸೀಮೆಯ ಮಾಡುವೆನು;
ಎನ್ನ ತ್ವಕ್ಕಿನೊಳಗಿರ್ದ ಸ್ಪರ್ಶಕ್ಕೆ ಸೀಮೆಯ ಮಾಡುವೆನು.
ಎನ್ನ ನಯನಕ್ಕೆ ಸೀಮೆಯ ಮಾಡುವೆನು;
ಎನ್ನ ನಯನದೊಳಗಿರ್ದ ರೂಪಕ್ಕೆ ಸೀಮೆಯ ಮಾಡುವೆನು.
[ಎನ್ನ ಜಿಹ್ವೆಗೆ ಸೀಮೆಯ ಮಾಡುವೆನು;
ಎನ್ನ ಜಿಹ್ವೆಯೊಳಗಿರ್ದ ರಸಕ್ಕೆ ಸೀಮೆಯ ಮಾಡುವೆನು.]
ಎನ್ನ ಘ್ರಾಣಕ್ಕೆ ಸೀಮೆಯ ಮಾಡುವೆನು;
ಎನ್ನ ಘ್ರಾಣದೊಳಗಿರ್ದ ಗಂಧಕ್ಕೆ ಸೀಮೆಯ ಮಾಡುವೆನು.
ಎನ್ನ ಮನಕ್ಕೆ ಸೀಮೆಯ ಮಾಡುವೆನು;
ಎನ್ನ ಮನದೊಳಗಿರ್ದ ಮರವೆಗೆ ಸೀಮೆಯ ಮಾಡುವೆನು.
ಎನ್ನ ಭಾವಕ್ಕೆ ಸೀಮೆಯ ಮಾಡುವೆನು;
ಎನ್ನ ಭಾವದೊಳಗಿರ್ದ ಭ್ರಾಂತಿಗೆ ಸೀಮೆಯ ಮಾಡುವೆನು.
ಎನ್ನ ಪ್ರಾಣಕ್ಕೆ ಸೀಮೆಯ ಮಾಡುವೆನು
ಎನ್ನ ಪ್ರಾಣವ ಲಿಂಗದಲ್ಲಿ ಹಿಂಗದಂತೆ ನಿಲಿಸುವೆನು
ಕೂಡಲಚೆನ್ನಸಂಗಮದೇವಾ./392
ಎನ್ನ ಕಾಯದೊಳಗೆ ನಿನ್ನ ಕಾಯವಿಪ್ಪುದು,
ನಿನ್ನ ಕಾಯದೊಳಗೆ ಎನ್ನ ಕಾಯವಿಪ್ಪುದು.
ಎನ್ನ ಜೀವದೊಳಗೆ ನಿನ್ನ ಜೀವವಿಪ್ಪುದು,
ನಿನ್ನ ಜೀವದೊಳಗೆ ಎನ್ನ ಜೀವವಿಪ್ಪುದು,
ಎನ್ನ ಪ್ರಾಣದೊಳಗೆ ನಿನ್ನ ಪ್ರಾಣವಿಪ್ಪುದು,
ನಿನ್ನ ಪ್ರಾಣದೊಳಗೆ ಎನ್ನ ಪ್ರಾಣವಿಪ್ಪುದು.
ಎನ್ನ ಇಂದ್ರಿಯಂಗಳೊಳಗೆ ನಿನ್ನ ಇಂದ್ರಿಯಂಗಳಿಪ್ಪುವು,
ನಿನ್ನ ಇಂದ್ರಿಯಂಗಳೊಳಗೆ ಎನ್ನ ಇಂದ್ರಿಯಂಗಳಿಪ್ಪುವು.
ಎನ್ನ ವಿಷಯಂಗಳೊಳಗೆ ನಿನ್ನ ವಿಷಯಂಗಳಿಪ್ಪುವು.
ನಿನ್ನ ವಿಷಯಂಗಳೊಳಗೆ ಎನ್ನ ವಿಷಯಂಗಳಿಪ್ಪುವು.
ಎನ್ನ ಕರಣಂಗಳೊಳಗೆ ನಿನ್ನ ಕರಣಂಗಳಿಪ್ಪುವು.
ನಿನ್ನ ಕರಣಂಗಳೊಳಗೆ ಎನ್ನ ಕರಣಂಗಳಿಪ್ಪುವು.
ಇಂತು ನಾನೆ ರೂಪು, ನೀನೆ ನಿರೂಪು.
ರೂಪಿಂಗೆ ಕೇಡುಂಟು, ನಿರೂಪಿಂಗೆ ಕೇಡಿಲ್ಲ, ಆನು ಕಪರ್ೂರ, ನೀನು ಜ್ಯೋತಿ.
ಆನು ನಿಮ್ಮೊಳಡಗಿದೆನು ಕೂಡಲಚೆನ್ನಸಂಗಮದೇವಾ. /393
ಎನ್ನ ಘ್ರಾಣದ ಬಾಗಿಲಲ್ಲಿರ್ದು, ಸುವಾಸನೆಯ ಸುಖಂಗಳ
ಭೋಗಿಸುವಾತ ನೀನಯ್ಯಾ.
ಎನ್ನ ಜಿಹ್ವೆಯ ಬಾಗಿಲಲ್ಲಿರ್ದು, ಸುರುಚಿಯ ಸುಖಂಗಳ
ಭೋಗಿಸುವಾತ ನೀನಯ್ಯಾ.
ಎನ್ನ ನೇತ್ರದ ಬಾಗಿಲಲ್ಲಿರ್ದು, ಸುರೂಪ ಸುಖಂಗಳ
ಭೋಗಿಸುವಾತ ನೀನಯ್ಯಾ.
ಎನ್ನ ತ್ವಕ್ಕಿನ ಬಾಗಿಲಲ್ಲಿರ್ದು, ಸುಸ್ಪರ್ಶವ ಮಾಡಿ
ಆ ಸ್ಪರ್ಶನಸುಖವ ಸುಖಿಸುವಾತ ನೀನಯ್ಯಾ.
ಎನ್ನ ಶ್ರೋತ್ರದ ಬಾಗಿಲಲ್ಲಿರ್ದು
ಸುಶಬ್ದ ಸುಖಂಗಳ ಭೋಗಿಸುವಾತ ನೀನಯ್ಯಾ.
ಎನ್ನ ಮನದ ಬಾಗಿಲಲ್ಲಿರ್ದು
ಪಂಚೇಂದ್ರಿಯಂಗಳನರಿದು ಸುಖಿಸುವ ಅರಿವಿನಮೂರ್ತಿ ನೀನಯ್ಯಾ
ಅದೇನು ಕಾರಣವೆಂದಡೆ;
ನೀನಾಡಿಸುವ ಜಂತ್ರದ ಬೊಂಬೆ ನಾನೆಂದರಿದ ಕಾರಣ.
ನಿಮ್ಮ ಕರಣಂಗಳೆ ಎನ್ನ ಹರಣಂಗಳಾಗಿ,
ಎನ್ನ ಹರಣಂಗಳೆ ನಿಮ್ಮ ಕಿ(ಕ?)ರಣಂಗಳಾಗಿ
ಕೂಡಲಚೆನ್ನಸಂಗಮದೇವಾ ನೀನಾಡಿಸಿದಂತೆ ನಾನಾಡಿದೆನಯ್ಯಾ./394
ಎನ್ನ ತನುವೆ ಅಗ್ಘವಣಿಯ ಬಿಂದಿಗೆ, ಮನವು ಸಿಂಹಾಸನ,
ಹೃದಯಕಮಲ ಪುಷ್ಪ, ಎನ್ನ ಕಿವಿಗಳೇ ಕೀರ್ತಿಮುಖ,
ನೆನೆವ ನಾಲಗೆ ಘಂಟೆ, ಶಿರವೆ ಸುವರ್ಣದ ಕಳಸ,
ಎನ್ನ ನಯನ ಸ್ವಯಂಜ್ಯೋತಿ ಆರತಿಯನೆತ್ತುವೆ.
ಎನ್ನ ಚಂದ್ರಶೇಖರಲಿಂಗಕ್ಕೆ ಮಾಡಿದೆನೆನ್ನ ಪ್ರಾಣಪೂಜೆಯ.
ಎನ್ನ ಕಾಯಭಾಜನವನೀಪರಿಯ ಮಾಡಿದೆನಾಗಿ
ಕೂಡಲಚೆನ್ನಸಂಗನ ಪೂಜಿಸಿದಲ್ಲದೆ ನಿಲಲಾರೆ/395
ಎನ್ನ ದೃಷ್ಟಿ ನಿಮ್ಮ ರೂಪಿನಲ್ಲಿ ನಿಂದು ಕಾಣದು;
ಎನ್ನ ಮನ ನಿಮ್ಮ ಕಳೆಯಲ್ಲಿ ಬೆರಸಿ ಅರಿಯದು.
ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ
ಅನುಪಮಸುಖಿಯಾನು ! /396
ಎನ್ನ ಬ್ರಹ್ಮರಂಧ್ರದಲ್ಲಿ ಅಖಂಡಿತನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಉತ್ತಮಾಂಗದಲ್ಲಿ ಗಂಗಾಧರನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಲಲಾಟದಲ್ಲಿ ಮಹಾದೇವನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಪಶ್ಚಿಮ[ಚಕ್ರ]ದಲ್ಲಿ ಪಂಚಮುಖನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಬಲದ ಕರ್ಣದಲ್ಲಿ ಶ್ರುತಿಪುರಾಣಪ್ರಿಯನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಎಡದ ಕರ್ಣದಲ್ಲಿ ಪಾರ್ವತೀಪ್ರಿಯನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ
ಎನ್ನ ಬಲದ ನಯನದಲ್ಲಿ ತ್ರಿಪುರಸಂಹರನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಎಡದ ನಯನದಲ್ಲಿ ಕಾಮಸಂಹರನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ನಾಸಿಕದಲ್ಲಿ ನಾಗಭೂಷಣನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಜಿಹ್ವೆಯಲ್ಲಿ ಭವಹರರನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಕಂಠದಲ್ಲಿ ಲೋಕೇಶ್ವರನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಬಲದ ಭುಜದಲ್ಲಿ ಸದಾಶಿವನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಎಡದ ಭುಜದಲ್ಲಿ ಮೃತ್ಯುಂಜಯನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಬಲದ ತೋಳಿನಲ್ಲಿ ಶೂಲಪಾಣಿಯೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಎಡದ ತೋಳಿನಲ್ಲಿ ಕೋದಂಡನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಬಲದ ಮೊಳಕೈಯಲ್ಲಿ ಪರಬ್ರಹ್ಮಸ್ವರೂಪನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಎಡದ ಮೊಳಕೈಯಲ್ಲಿ ವಿಶ್ವಕುಟುಂಬಿ ಎಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಬಲದ ಮುಂಗೈಯಲ್ಲಿ ಕರೆಕಂಠನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಎಡದ ಮುಂಗೈಯಲ್ಲಿ ಶ್ರೀಕಂಠನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಬಲದ ಅಂಗೈಯಲ್ಲಿ ನಿಧಾಂಕನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಎಡದ ಅಂಗೈಯಲ್ಲಿ ವೇದಾಂಕನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಹೃದಯದಲ್ಲಿ ಮಾಹೇಶ್ವರನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಬಲದ ಪಾಶ್ರ್ವದಲ್ಲಿ ದಕ್ಷಸಂಹರನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಎಡದ ಪಾಶ್ರ್ವದಲ್ಲಿ ಕಾಲಸಂಹರನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಬೆನ್ನಿನಲ್ಲಿ ಭೂತೇಶ್ವರನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ನಾಬಿಯಲ್ಲಿ ಶಂಕರನೆಂಬ ರುದ್ರನಾಗಿ, ಬಂದು ನಿಂದಾತ ಬಸವಣ್ಣನಯ್ಯಾ,
ಎನ್ನ ಗುಹ್ಯದಲ್ಲಿ ವಿಷ್ಣುಪ್ರಿಯನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಗುದದಲ್ಲಿ
ಬ್ರಹ್ಮಪ್ರಿಯನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಬಲದ ತೊಡೆಯಲ್ಲಿ ಪ್ರಕಾಶನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಎಡದ ತೊಡೆಯಲ್ಲಿ ಸ್ಫಟಿಕಪ್ರಕಾಶನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಬಲದ ಮಣಿಪಾದದಲ್ಲಿ ಫಣಿಭೂಷಣನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಎಡದ ಮಣಿಪಾದದಲ್ಲಿ ರುಂಡಮಾಲಾಧರನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಬಲದ ಹದಡಿನಲ್ಲಿ ಕಪಾಲಧರನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಎಡದ ಹದಡಿನಲ್ಲಿ ಬಿಕ್ಷಾಟನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಬಲದ ಅಂಗುಷ್ಠದಲ್ಲಿ ಭೃಂಗಿಪ್ರಿಯನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಎಡದ ಅಂಗುಷ್ಠದಲ್ಲಿ ನಂದಿಪ್ರಿಯನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಬಲದ ಅರೆಪಾದದಲ್ಲಿ ಪೃಥ್ವೀಪತಿಯೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಎಡದ ಅರೆಪಾದದಲ್ಲಿ ಸಚರಾಚರಪತಿಯೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಎನ್ನ ಸರ್ವಾಂಗದಲ್ಲಿ ಸರ್ವೆಶ್ವರನೆಂಬ ರುದ್ರನಾಗಿ
ಬಂದು ನಿಂದಾತ ಬಸವಣ್ಣನಯ್ಯಾ;
ಇಂತೀ ಮೂವತ್ತೆಂಟು ಸ್ಥಾನಂಗಳಲ್ಲಿ, ಕೂಡಲಚೆನ್ನಸಂಗಯ್ಯಾ
ಬಸವಸಾಹಿತ್ಯವಾಗಿಪ್ಪುದಯ್ಯಾ./397
ಎನ್ನ ಮನದಲ್ಲಿ ಇದೇ ಪಥವಯ್ಯಾ ಬೆರಸುವಡೆ;
ಪ್ರಾಣದ ಮಥನಭಾವ ನಟ್ಟು ತನುಸ್ಥಿತಿ ಮರೆದು,
ಭ್ರಾಂತು ಸೂತಕವೆಲ್ಲಾ [ನಿವಾ]ರಿಸಿ ಹೋದವು
ಶೂನ್ಯಸಿಂಹಾಸನದ ಮೇಲೆ
ಕೂಡಲಚೆನ್ನಸಂಗಾ ನಿಮ್ಮ ಶರಣನ ಪ್ರಭೆಯಿಂದ./398
ಎನ್ನ ಮನವು ನಿಮ್ಮಲ್ಲಿ ನಟ್ಟು ತೆಗೆಯಲುಬಾರದ ಬೆರಗು ನೋಡಯ್ಯಾ.
ಇಹವೆಂಬುದನರಿಯೆ, ಪರವೆಂಬುದನರಿಯೆ,
ಪರಮಾನಂದದಲ್ಲಿದ್ದೆ ನೋಡಯ್ಯಾ.
ಪರಮನ ನೆನಹೆ ನೆನಹಾಗಿ ಪರಮಸುಖದಲ್ಲಿ ಸುಖಿಸುತ್ತಿದ್ದೆನಯ್ಯಾ.
ಅಪ್ರತಿಮ ಕೂಡಲಚೆನ್ನಸಂಗಯ್ಯಾ ಎನ್ನ ಬೆರಗಿನ ಭೇದವ
ನೀನೆ ಬಲ್ಲೆಯಯ್ಯಾ. /399
ಎನ್ನ ಮನೆ’ ಎಂಬವಂಗೆ ಬ್ರಹ್ಮನಿಕ್ಕಿದ ಕೋ?ವಾಯಿತ್ತು,
`ಎನ್ನ ಸ್ತ್ರೀ’ ಎಂಬವಂಗೆ ವಿಷ್ಣುವಿಕ್ಕಿದ ಸಂಕಲೆ ಹೂಡಿತ್ತು,
`ಎನ್ನ ಧನ’ ಎಂಬವಂಗೆ ರುದ್ರನಿಕ್ಕಿದ ಆಸೆ ರೋಷದ ಜಿಂಜಿರಿ ಹೂಡಿತ್ತು,
`ಎನ್ನ ಕುಲ’ ಎಂಬವಂಗೆ ಈಶ್ವರನಿಕ್ಕಿದ ಸೆರೆಸಾಲೆಯ,
ಬಂದೀಕಾನದೊಳಗೆ ಬಿದ್ದ ನೋಡಾ.
ಇಂತು ಕೊರಳುದ್ದಕೆ ಹೂಳಿಸಿಕೊಂಡು ಮುಗಿಲುದ್ದಕೆ ಹಾರಿ
`ನಾನು ಭಕ್ತ’ `ನಾನು ಮಾಹೇಶ್ವರ’ ಎಂಬ ನುಡಿಗೆ ನಾಚರು ನೋಡಾ.
ಆ ಭಕ್ತನ ವಠಕ್ಕೆ ಜಂಗಮ ನಿರಂತರ ಬರುತ್ತಿರಲು ಬ್ರಹ್ಮನಿಕ್ಕಿದ ಕೋಳ ಕಡಿಯಿತ್ತು.
ಆ ಭಕ್ತನ ಸ್ತ್ರೀ ಜಂಗಮದಾಸೋಹವ ನಿರಂತರ ಮಾಡುತ್ತಿರಲು,
ವಿಷ್ಣುವಿಕ್ಕಿದ ಸಂಕಲೆ ಕಡಿಯಿತ್ತು.
ಆ ಭಕ್ತನ ಧನ ಜಂಗಮಕ್ಕೆ ನಿರಂತರ ನಿರುಪಾದಿಯಲ್ಲಿ ಸಲ್ಲುತ್ತಿರಲು
ಆ ರುದ್ರನಿಕ್ಕಿದ ಆಸೆರೋಷದ ಜಿಂಜಿರಿ ಕಡಿಯಿತ್ತು.
ಆ ಭಕ್ತನು ಜಾತಿಸೂತಕವಳಿದು ಶಿವಭಕ್ತರ ಕುಲವ ವಿಚಾರಿಸದೆ
ಶಿವಕುಲವೆಂದರಿದು ನಿರಂತರ ಬೆರಸಿಕೊಂಡಿರುತ್ತಿರಲು
ಈಶ್ವರನಿಕ್ಕಿದ ಕುಲದ ಸೆರಸಾಲೆಯ ಬಂದೀಕಾನದಿಂದ ಹೊರಹೊಂಟ ನೋಡಾ-
ಇಂತು ಇದ್ದೂ ಇಲ್ಲದ ಸಹಜರ ತೋರಿ ಬದುಕಿಸಯ್ಯಾ
ಕೂಡಲಚೆನ್ನಸಂಗಮದೇವಾ. /400
ಎನ್ನ ಸಂಸಾರಸೂತಕವ ತೊಡೆದು,
ನಿಜಲಿಂಗದಲ್ಲಿ ನಿರಹಂಕಾರವೆಂಬ ಘನವ ತೋರಿದನಯ್ಯಾ ಒಬ್ಬ ಶರಣನು.
ಎನಗಾರು ಇಲ್ಲೆಂದು ಪ್ರಭುದೇವರೆಂಬ ಒಬ್ಬ ಶರಣನ
ಎನ್ನ ಕಣ್ಣಮುಂದೆ ಕೃತಾರ್ಥನ ಮಾಡಿ ಸುಳಿಸಿದನಯ್ಯಾ ಆ ಶರಣನು.
ಆ ಶರಣನ ಕೃಪೆಯಿಂದ ಪ್ರಭುದೇವರೆಂಬ ಘನವ ಕಂಡು,
ಮನ ಮನ ಲೀಯವಾಗಿ ಘನ ಘನ ಒಂದಾದ ಕಾರಣ,
ಕೂಡಲಚೆನ್ನಸಂಗಯ್ಯನಲ್ಲಿ ಅಲ್ಲಯ್ಯನೆಂಬ ಮಹಿಮಂಗೆ
ನಮೋ ನಮೋ ಎನುತಿರ್ದೆನು./401
ಎನ್ನ ಸದ್ಗರುಸ್ವಾಮಿ ಎನಗೆ ಕರುಣಿಸಿದ ಕಾರುಣ್ಯವ
ನಾನೇನೆಂದುಪಮಿಸುವೆನಯ್ಯಾ ?
ಗುರುಲಿಂಗವು ಸಾಕ್ಷಾತ್ ಪರಶಿವನಿಂದ ವಿಶೇಷವು !
ಜ್ಯೋತಿಯಲೊದಗಿದ ಜ್ಯೋತಿಯಂತಾಯಿತ್ತು,
ದರ್ಪಣದೊಳಗಣ ಪ್ರತಿಬಿಂಬದಂತಾಯಿತ್ತು,
ಪದಕದೊಳಗಣ ರತ್ನದಂತಾಯಿತ್ತು;
ರೂಪದ ನೆಳಲಿನ ಅಂತರಂಗದಂತಾಯಿತ್ತು,
ಕೂಡಲಚೆನ್ನಸಂಗಯ್ಯಾ,
ದರ್ಪಣಕ್ಕೆ ದರ್ಪಣವ ತೋರಿದಂತಾಯಿತ್ತು,
ಎನ್ನ ಸದ್ಗರುವಿನುಪದೇಶವೆನಗಯ್ಯಾ./402
ಎನ್ನ ಸರ್ವಾಂಗವೆಲ್ಲವೂ ಲಿಂಗವಾದ ಪರಿಕ್ರಮವೆಂತೆಂದಡೆ;
ಶ್ರೀಗುರು ಬಸವಣ್ಣನುಪದೇಶಿಸಿದ ಇಷ್ಟಲಿಂಗವೆನ್ನ ಸರ್ವಾಂಗದಲ್ಲಿ
ಬಿನ್ನ ನಾಮಂಗಳಿಂದ ಪ್ರಕಾಶಿಸುತ್ತಿಹುದು.
ಅದೆಂತೆಂದಡೆ ;
ಸ್ಥೂಲಾಂಗದಲ್ಲಿ ಇಷ್ಟಲಿಂಗವೆಂದು,
ಸೂಕ್ಷ್ಮಾಂಗದಲ್ಲಿ ಪ್ರಾಣಲಿಂಗವೆಂದು
ಕಾರಣಾಂಗದಲ್ಲಿ ಭಾವಲಿಂಗವೆಂದು ತ್ರಿಭೇದವಾಗಿಹುದು.
ಇಂತು ಅಂಗವ ಕುರಿತು ಮೂರು ತೆರನಾಯಿತ್ತು.
ಇನ್ನು ಇಂದ್ರಿಯಂಗಳ ಕುರಿತು ಆರು ತೆರನಾಗಿರ್ಪುದು.
ಅದು ಹೇಗೆಂದಡೆ;
ಹೃದಯದಲ್ಲಿ ಮಹಾಲಿಂಗವೆಂದು, ಶ್ರೋತ್ರದಲ್ಲಿ ಪ್ರಸಾದಲಿಂಗವೆಂದು,
ತ್ವಕ್ಕಿನಲ್ಲಿ ಜಂಗಮಲಿಂಗವೆಂದು, ನೇತ್ರದಲ್ಲಿ ಶಿವಲಿಂಗವೆಂದು,
ಜಿಹ್ವೆಯಲ್ಲಿ ಗುರುಲಿಂಗವೆಂದು, ಘ್ರಾಣದಲ್ಲಿ ಆಚಾರಲಿಂಗವೆಂದು,
ಇಂತು ಷಡಿಂದ್ರಿಯಂಗಳಲ್ಲಿ ಷಡ್ವಿಧಲಿಂಗವಾಗಿ ತೋರಿತ್ತು.
ಇಂತೀ ಮರ್ಯಾದೆಯಲ್ಲಿ ಜ್ಞಾನ-ಕಮರ್ೆಂದ್ರಿಯಂಗಳಲ್ಲಿಯೂ
ಲಿಂಗವೆ ಪ್ರಕಾಶಿಸುತ್ತಿಹುದು.
ಅದು ಹೇಗಂದಡೆ;
ಜ್ಞಾನೇಂದ್ರಿಯಂಗಳಿಗೆಯೂ ಕಮರ್ೆಂದ್ರಿಯಂಗಳಿಗೆಯೂ ಭೇದವಿಲ್ಲ.
ಅದೆಂತೆಂದಡೆ,
ಶ್ರೋತ್ರಕ್ಕೂ ವಾಕ್ಕಿಗೂ ಭೇದವಿಲ್ಲ, ಶಬ್ದಕ್ಕೂ ವಚನಕ್ಕೂ ಭೇದವಿಲ್ಲ;
ತ್ವಕ್ಕಿಗೂ ಪಾಣಿಗೂ ಭೇದವಿಲ್ಲ, ಸ್ಪರ್ಶಕ್ಕೂ ಆದಾನಕ್ಕೂ ಭೇದವಿಲ್ಲ;
ನೇತ್ರಕ್ಕೂ ಪಾದಕ್ಕೂ ಭೇದವಿಲ್ಲ, ರೂಪಿಗೂ ಗಮನಕ್ಕೂ ಭೇದವಿಲ್ಲ,
ಜಿಹ್ವೆಗೂ ಗುಹ್ಯಕ್ಕೂ ಭೇದವಿಲ್ಲ, ರಸಕ್ಕೂ ಆನಂದಕ್ಕೂ ಭೇದವಿಲ್ಲ;
ಘ್ರಾಣಕ್ಕೂ ಗುದಕ್ಕೂ ಭೇದವಿಲ್ಲ, ಗಂಧಕ್ಕೂ ವಿಸರ್ಜನಕ್ಕೂ ಭೇದವಿಲ್ಲ,
ಇನ್ನು ಶ್ರೋತ್ರವೆಂಬ ಜ್ಞಾನೇಂದ್ರಿಯಕ್ಕೂ ವಾಕ್ಕೆಂಬ ಕಮರ್ೆಂದ್ರಿಯಕ್ಕೂ
ಶಬ್ದ ವಿಷಯ, ಮೂಲಭೂತ ಆಕಾಶ, ಈಶಾನಮೂರ್ತಿ ಅದಿದೇವತೆ.
ತ್ವಕ್ಕೆಂಬ ಜ್ಞಾನೇಂದ್ರಿಯಕ್ಕೂ ಪಾಣಿಯೆಂಬ ಕಮರ್ೆಂದ್ರಿಯಕ್ಕೂ
ಸ್ಪರ್ಶನ ವಿಷಯ, ಮೂಲಭೂತ ವಾಯು, ತತ್ಪುರುಷಮೂರ್ತಿ ಅದಿದೇವತೆ.
ದೃಕ್ಕೆಂಬ ಜ್ಞಾನೇಂದ್ರಿಯಕ್ಕೂ ಪಾದವೆಂಬ ಕಮರ್ೆಂದ್ರಿಯಕ್ಕೂ
ರೂಪು ವಿಷಯ, ಮೂಲಭೂತ ಅಗ್ನಿ, ಅಘೋರಮೂರ್ತಿ ಅದಿದೇವತೆ.
ಜಿಹ್ವೆಯೆಂಬ ಜ್ಞಾನೇಂದ್ರಿಯಕ್ಕೂ ಗುಹ್ಯವೆಂಬ ಕಮರ್ೆಂದ್ರಿಯಕ್ಕೂ
ರಸ ವಿಷಯ, ಮೂಲಭೂತ ಅಪ್ಪು, ವಾಮದೇವಮೂರ್ತಿ ಅದಿದೇವತೆ,
ಘ್ರಾಣವೆಂಬ ಜ್ಞಾನೇಂದ್ರಿಯಕ್ಕೂ ಪಾಯುವೆಂಬ ಕಮರ್ೆಂದ್ರಿಯಕ್ಕೂ
ಗಂಧ ವಿಷಯ, ಮೂಲಭೂತ ಪೃಥ್ವಿ, ಸದ್ಯೋಜಾತಮೂರ್ತಿ ಅದಿದೇವತೆ.
ಇಂತೀ ಜ್ಞಾನೇಂದ್ರಿಯಂಗಳಿಗೆಯೂ ಕಮರ್ೆಂದ್ರಿಯಂಗಳಿಗೆಯೂ
ಹೃದಯವೆ ಆಶ್ರಯಸ್ಥಾನವಾದ ಕಾರಣ, ಹೃದಯ ಆಕಾಶವೆನಿಸಿತ್ತು.
ಅಲ್ಲಿ ಸ್ಥೂಲ ಸೂಕ್ಷ್ಮ ಕಾರಣ ರೂಪಿಂದೆಲ್ಲಾ ಇಂದ್ರಿಯಂಗಳಿರುತ್ತಿಹವು.
ಗುರೂಪದೇಶದಿಂದ ಎಲ್ಲಾ ಇಂದ್ರಿಯಂಗಳಲ್ಲಿಯೂ ಲಿಂಗವೆ ಪ್ರಕಾಶಿಸುತ್ತಿಹುದು.
ಅದು ಹೇಗೆಂದಡೆ;
ಘ್ರಾಣದ ಘ್ರಾಣವೆ ಆಚಾರಲಿಂಗ; ಜಿಹ್ವೆಯ ಜಿಹ್ವೆಯೆ ಗುರುಲಿಂಗ;
ನೇತ್ರದ ನೇತ್ರವೆ ಶಿವಲಿಂಗ; ತ್ವಕ್ಕಿನ ತ್ವಕ್ಕೆ ಜಂಗಮಲಿಂಗ;
ಶ್ರೋತ್ರದ ಶ್ರೋತ್ರವೆ ಪ್ರಸಾದಲಿಂಗ; ಹೃದಯದ ಹೃದಯವೆ ಮಹಾಲಿಂಗ.
ಈ ಆರು ಲಿಂಗಕ್ಕೆ ಅಂಗಸ್ಥಲ ಆರು;
ಅವಾವುವೆಂದಡೆ;
ಐಕ್ಯ ಶರಣ ಪ್ರಾಣಲಿಂಗಿ ಪ್ರಸಾದಿ ಮಹೇಶ್ವರ ಭಕ್ತ
ಎಂದೀ ಆರು ಅಂಗಸ್ಥಲಗಳು.
ಇವಕ್ಕೆ ವಿವರ;
ಆತ್ಮಾಂಗದಲ್ಲಿ ಸದ್ಭಾವ ಹಸ್ತದಿಂದ ಎಲ್ಲಾ ಇಂದ್ರಿಯಂಗಳ ಪರಿಣಾಮವನು
ಸಮರಸಭಕ್ತಿಯಿಂದ ಮಹಾಲಿಂಗಕ್ಕರ್ಪಿಸುವಾತನೆ ಐಕ್ಯ.
ವ್ಯೋಮಾಂಗದಲ್ಲಿ ಸುಜ್ಞಾನಹಸ್ತದಿಂದ ಸುಶಬ್ದದ್ರವ್ಯವನು
ಆನಂದಭಕ್ತಿಯಿಂದ ಪ್ರಸಾದಲಿಂಗಕ್ಕರ್ಪಿಸುವಾತನೆ ಶರಣ.
ಅನಿಲಾಂಗದಲ್ಲಿ ಮನೋಹಸ್ತದಿಂದ ಸುಸ್ಪರ್ಶನದ್ರವ್ಯವನು
ಅನುಭಾವಭಕ್ತಿಯಿಂದ ಶಿವಲಿಂಗಕ್ಕರ್ಪಿಸುವಾತನೆ ಪ್ರಾಣಲಿಂಗಿ.
ಅನಲಾಂಗದಲ್ಲಿ ನಿರಹಂಕಾರಹಸ್ತದಿಂದ ಸುರೂಪುದ್ರವ್ಯವನು
ಅವಧಾನಭಕ್ತಿಯಿಂದ ಶಿವಲಿಂಗಕ್ಕರ್ಪಿಸುವಾತನೆ ಪ್ರಸಾದಿ,
ಜಲಾಂಗದಲ್ಲಿ ಸುಬುದ್ಧಿ ಹಸ್ತದಿಂದ ಸುರಸದ್ರವ್ಯವನು
ನೈಷ್ಠಿಕಾಭಕ್ತಿಯಿಂದ ಗುರುಲಿಂಗಕ್ಕರ್ಪಿಸುವಾತನೆ ಮಾಹೇಶ್ವರ.
ಭೂಮ್ಯಂಗದಲ್ಲಿ ಸುಚಿತ್ತಹಸ್ತದಿಂದ ಸುಗಂಧದ್ರವ್ಯವನು
ಸದ್ಭಕ್ತಿಯಿಂದ ಆಚಾರಲಿಂಗಕ್ಕರ್ಪಿಸುವಾತನೆ ಭಕ್ತ.
ಇನ್ನು ಷಡಾಧಾರಂಗಳಲ್ಲಿ ಷಡಕ್ಷರರೂಪದಿಂದ ಷಡ್ಲಿಂಗ ಸ್ಥಾಪ್ಯವಾಗಿಹವು.
ಅದು ಹೇಗೆಂದಡೆ,
ನಕಾರವೆ ಆಚಾರಲಿಂಗ, ಮಕಾರವೆ ಗುರುಲಿಂಗ,
ಶಿಕಾರವೆ ಶಿವಲಿಂಗ, ವಾಕಾರವೆ ಜಂಗಮಲಿಂಗ,
ಯಾಕಾರವೆ ಪ್ರಸಾದಲಿಂಗ, ಓಂಕಾರವೆ ಮಹಾಲಿಂಗ,
ಎಂದು ಆರು ತೆರನಾಗಿಹವು.
ಅದೆಂತೆಂದಡೆ;
ಆಧಾರದಲ್ಲಿ ನಕಾರ, ಸ್ವಾದಿಷ್ಠಾನದಲ್ಲಿ ಮಕಾರ,
ಮಣಿಪೂರಕದಲ್ಲಿ ಶಿಕಾರ, ಅನಾಹತದಲ್ಲಿ ವಾಕಾರ,
ವಿಶುದ್ಧಿಯಲ್ಲಿ ಯಕಾರ, ಆಜ್ಞೆಯಲ್ಲಿ ಓಂಕಾರ,
ಇಂತೀ ಮರ್ಯಾದೆಯಲ್ಲಿ ಷಡ್ಧಾತುವಿನಲ್ಲಿ
ಷಡಕ್ಷರರೂಪಿಂದ ಷಡ್ಲಿಂಗ ಸ್ಥಾಪ್ಯವಾಗಿಹವು.
ಅದು ಹೇಗೆಂದಡೆ;
ತ್ವಙ್ಮಯವಾಗಿಹುದು ಓಂಕಾರ, ರುದಿರಮಯವಾಗಿಹುದು ನಕಾರ,
ಮಾಂಸಮಯವಾಗಿಹುದು ಮಕಾರ, ಮೇಧೋಮಯವಾಗಿಹುದು ಶಿಕಾರ,
ಅಸ್ಥಿಮಯವಾಗಿಹುದು ವಾಕಾರ, ಮಜ್ಜಾಮಯವಾಗಿಹುದು ಯಕಾರ.
ಇಂತೀ ಷಡ್ಧಾತುವೆ ಷಡಕ್ಷರಮಯವಾಗಿ, ಅವೆ ಲಿಂಗಂಗಳಾಗಿ,
ಒ?ಹೊರಗೆ ತೆರಹಿಲ್ಲದೆ ಸರ್ವಾಂಗವೆಲ್ಲವೂ ಲಿಂಗಮಯವಾದ ಇರವು.
ಅದು ತಾನೆ ಶಿವನಿರವು, ಅದು ತಾನೆ ಶಿವನ ಭವನ.
ಅದು ತಾನೆ ಶಿವನ ವಿಶ್ರಾಮಸ್ಥಾನ.
ಇಂತೀ ಷಟ್ಸ್ಥಲಬ್ರಹ್ಮವನರಿದಾತನೆ ಶರಣ, ಆತನೆ ಲಿಂಗೈಕ್ಯ.
ಇಂತೀ ಷಟ್ಸ್ಥಲಬ್ರಹ್ಮವೆಂಬುದು
ಅಪ್ರಮಾಣ ಅಗೋಚರ ಅನಿರ್ವಾಚ್ಯವಾದ ಕಾರಣ,
ವಚಿಸುತ್ತ ವಚಿಸುತ್ತ ವಚಿಸುತ್ತ ವಚನಗೆಟ್ಟಿತ್ತು.
ಉಪ್ಪು ನೀರೊಳು ಕೂಡಿದಂತೆ, ವಾರಿಕಲ್ಲು ಅಂಬುದಿಯೊಳು ಬಿದ್ದಂತೆ,
ಶಿಖಿಕಪರ್ೂರ ಯೋಗದಂತೆ ಆದೆನಯ್ಯಾ ಕೂಡಲಚೆನ್ನಸಂಗಯ್ಯನಲ್ಲಿ,
ಬಸವಣ್ಣನ ಭಾವಹಸ್ತ ಮುಟ್ಟಿದ ಕಾರಣ. /403
ಎನ್ನ ಹೊಗಳಲಿಕ್ಕೆ ನಿಮಗೆ ತೆರಹಿಲ್ಲ;
ನಿಮ್ಮ ಹೊಗಳಲಿಕ್ಕೆ ಎನಗೆ ಹೊಲಬಿಲ್ಲ.
ಒಬ್ಬರನೊಬ್ಬರು ಹೊಗಳಲಿಕ್ಕೆ ಹೊತ್ತು ಹೋಯಿತ್ತಲ್ಲದೆ
ಸಂಗಮನಾಥನ ಆಪ್ಯಾಯನಕ್ಕೆ ಪದಾರ್ಥವ ನೀಡಲಿಲ್ಲ.
ಕೂಡಲಚೆನ್ನಸಂಗಯ್ಯಂಗೆ
ಪದಾರ್ಥವನಳವಡಿಸ ನಡೆಯಿರೆ ಸಂಗನಬಸವಣ್ಣಾ/404
ಎನ್ನಂತರಂಗವೆ ಬಸವಣ್ಣ. ಬಹಿರಂಗವೆ ಮಡಿವಾಳಯ್ಯ,
ಈ ಉಭಯದ ಸಂಗವೆ ಪ್ರಭುದೇವರು !
ಇಂತೀ ಮೂವರ ಕರುಣದ ಕಂದನಾಗಿ ಬದುಕಿದೆ ಕಾಣಾ
ಕೂಡಲಚೆನ್ನಸಂಗಮದೇವಾ./405
ಎನ್ನಾಧಾರಚಕ್ರಕ್ಕೆ `ನ’ ಕಾರವಾದಾತ ಬಸವಣ್ಣ;
ಎನ್ನ ಸ್ವಾದಿಷ್ಠಾನಚಕ್ರಕ್ಕೆ `ಮ’ಕಾರವಾದಾತ ಬಸವಣ್ಣ;
ಎನ್ನ ಮಣಿಪೂರಚಕ್ರಕ್ಕೆ `ಶಿ’ಕಾರವಾದಾತ ಬಸವಣ್ಣ:
ಎನ್ನ ಅನಾಹತಚಕ್ರಕ್ಕೆ `ವ್ಡಾಕಾರವಾದಾತ ಬಸವಣ್ಣ;
ಎನ್ನ ವಿಶುದ್ಧಿಚಕ್ರಕ್ಕೆ `ಯ’ಕಾರವಾದಾತ ಬಸವಣ್ಣ;
ಎನ್ನ ಆಜ್ಞಾಚಕ್ರಕ್ಕೆ `ಓಂ’ಕಾರವಾದಾತ ಬಸವಣ್ಣ;
ಎನ್ನ ಬ್ರಹ್ಮರಂಧ್ರಕ್ಕೆ ಸಾವಿರದೈವತ್ತೆರಡಕ್ಷರವಾದಾತ ಬಸವಣ್ಣ;
ಎನ್ನ ಶಿಖಾಚಕ್ರಕ್ಕೆ `ಕ್ಷ’ಕಾರವಾದಾತ ಬಸವಣ್ಣ;
ಎನ್ನ ಪಶ್ಚಿಮಚಕ್ರಕ್ಕೆ `ಹ’ಕಾರವಾದಾತ ಬಸವಣ್ಣ;
ಇಂತೀ ಎನ್ನ ನವಚಕ್ರಂಗಳಲ್ಲಿಯೂ, ನವನಾಳಗಳಲ್ಲಿಯೂ
ನವವಿಧಲಿಂಗಸ್ವರೂಪವಾದಾತ ಬಸವಣ್ಣ.
ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ ನಿಮ್ಮ ತೋರಿ
ಎನ್ನ ಸಲಹಿದ ವರಗುರು ಸಂಗನಬಸವಣ್ಣನ ಶ್ರೀಪಾದಕ್ಕೆ
ಶರಣೆಂದು ಬದುಕಿದೆನು ಕಾಣಾ ಪ್ರಭುವೆ./406
ಎರಡೂರ ಮಧ್ಯದಲ್ಲಿ ನೆಟ್ಟ ಸೀಮೆಯ ಕಲ್ಲು-
ಲಿಂಗವೆಂದು ಕೊಟ್ಟಾತ ಗುರುವಲ್ಲ, ಕೊಂಡಾತ ಶಿಷ್ಯನಲ್ಲ.
ಆದಿಯನರಿಯದ ಗುರು, ವೇದಿಸಲರಿಯದ ಶಿಷ್ಯ,
ಇವರಿಬ್ಬರೂ ಶಿವಾಚಾರಕ್ಕೆ ಹೊರಗು,
ಕೂಡಲಚೆನ್ನಸಂಗಯ್ಯಾ. /407
ಎಲೆ ಗುರುಕಾರುಣ್ಯವಾಯಿತ್ತೆಂಬ ಅಣ್ಣಗಳು ನೀವು ಕೇಳಿರೆ
ಶಿವನಾವಕಡೆ ಶಕ್ತಿ ಆವ ಕಡೆ ?
ಉತ್ಪತ್ಯವ ಬಲ್ಲರೆ ನೀವು ಹೇಳಿರೆ!
ಶಕ್ತಿಯ ಮೇಲೆ ಸಾಹಿತ್ಯವ ಮಾಡಿಕೊಟ್ಟನಲ್ಲಾ ನಿಮ್ಮ ಗುರು.
ಶಿವನ ಶಿವಂಗರ್ಪಿಸುವ ಪರಿಯೆಂತೊ ?
ಶಿವ ನಷ್ಟ, ಶಕ್ತಿ ನಷ್ಟ,
ಈ ಉಭಯಸ್ಥಳವನರಿದಡೆ ಕೂಡಲಚೆನ್ನಸಂಗಾ ನೀನೆಂಬೆನು./408
ಎಲೆ ನಿರೀಶ್ವರವಾದಿಗಳಿರಾ ನೀವು ಕೇಳಿರೆ, ನೀವು ಕೇಳಿರೆ, ನೀವು ಕೇಳಿರೆ,
ನಿಮ್ಮ ನಿಟಿಲದಲ್ಲಿ ಸಂಚಿತ ಪ್ರಾರಬ್ಧ ಆಗಾಮಿ ಎಂಬ
ಲಿಖಿತವ ಬರೆದವಾರು ಹೇಳಿರೆ ?
ನೀವೆ ಬ್ರಹ್ಮ, ಬೇರೆ ಈಶ್ವರನಿಲ್ಲೆಂದು ನುಡಿವಿರಿ.
ತಪಸ್ಸು ತನ್ನಂತೆ, ಊಟ ಮನದಿಚ್ಛೆಯೆಂಬ
ಲೋಕಗಾದೆಯ ಮಾತು ನಿಮಗಾಯಿತ್ತು.
ಅಶನವನುಂಡು ವ್ಯಸನಕ್ಕೆ ಹರಿದು ವಿಷಯಂಗಳೆಂಬ ಹಿಡಿಮೊಲಕ್ಕೆ ಸಿಲ್ಕಿ
ಪಂಚೇಂದ್ರಿಯಂಗಳೆಂಬ ನಾಯಿಗಳಿಚ್ಛೆಗೆ ಹರಿದು,
ನಾಯಾಗಿ ಬಗುಳಿ ನಾಯ ಡೋಣಿಯಲ್ಲಿ ಉಂಡು
ನಾಯ ಸಾವ ಸಾವ ಅದ್ವೈತಿಗಳಿರಾ, ನಿಮಗೇಕೋ ಬೊಮ್ಮದ ಮಾತು ?
ಬ್ರಹ್ಮ ವಿಷ್ಣ್ವಾದಿಗ?ು `ಬ್ರಹ್ಮೋಹಂ’ ಎಂದು ಕೆಮ್ಮನೆ ಕೆಟ್ಟು
ಹದ್ದು ಹೆಬ್ಬಂದಿಗಳಾದುದನರಿಯಿರೆ ?
ಹಮ್ಮಿಂದ ಸನತ್ಕುಮಾರ ಒಂಟೆಯಾದುದನರಿಯಿರೆ ?
ಕರ್ತನು ಭರ್ತನು ಹರ್ತನು ಶಿವನಲ್ಲದೆ
ಬೇರೆ ಮತ್ತೊಬ್ಬ ಕಾವರಿಲ್ಲ ಕೊಲುವರಿಲ್ಲ, ಮತ್ತೊಬ್ಬರು?್ಳಡೆ ಹೇಳಿರೆ,
ತ್ವಂ ವಿಶ್ವಕರ್ತಾ ತವ ನಾಸ್ತಿ ಕರ್ತಾ
ತ್ವಂ ವಿಶ್ವಭರ್ತಾ ತವ ನಾಸ್ತಿ ಭರ್ತಾ
ತ್ವಂ ವಿಶ್ವಹರ್ತಾ ತವ ನಾಸ್ತಿ ಹರ್ತಾ
ತ್ವಂ ವಿಶ್ವನಾಥಸ್ತವ ನಾಸ್ತಿ ನಾಥಃ
ಅಸತ್ಯಮಪ್ರತಿಷ್ಠಂ ಚ ಜಗದಾಹುರನೀಶ್ವರವರಿ್ ಎಂದುದಾಗಿ
ಶಿವನೆ, ನಿಮ್ಮನಿಲ್ಲೆಂದು, ಬೊಮ್ಮವಾವೆಂಬ
ಹಮ್ಮಿನ ಅದ್ವೈತಿಗಳ ಹಿಡಿದು, ಕಾಲನ ಕೈಯಲ್ಲಿ ಕೆಡಹಿ
ಬಾಯಲ್ಲಿ ಹುಡಿಯ ಹೊಯ್ಸಿ,
ನರಕಾಗ್ನಿಯಲ್ಲಿ ಅನೇಕಕಾಲ ಇರಿಸದೆ ಮಾಣ್ಬನೆ
ನಮ್ಮ ಕೂಡಲಚೆನ್ನಸಂಗಮದೇವರು ?/409
ಎಲೆ ಶಿವನೆ ನಿಮ್ಮಲ್ಲಿ ಸಾಲವ ಕೊಂಡು
ನಿಮ್ಮ ಶರಣ ಶಿವಲೋಕಕ್ಕೆ ಹೋದವನಲ್ಲಾ:
ಪೃಥ್ವಿಯ ಸಾಲವ ಪೃಥ್ವಿಗೆ ಕೊಟ್ಹು,
ಅಪ್ಪುವಿನ ಸಾಲವ ಅಪ್ಪುಗೆ ಕೊಟ್ಟು,
ತೇಜದ ಸಾಲವ ತೇಜಕ್ಕೆ ಕೊಟ್ಟು,
ವಾಯುವಿನ ಸಾಲವ ವಾಯುವಿಗೆ ಕೊಟ್ಟು,
ಆಕಾಶದ ಸಾಲವ ಆಕಾಶಕ್ಕೆ ಕೊಟ್ಟು
ಪ್ರಸಾದವನಾರಿಗೆಯೂ ಕೊಡಲಿಲ್ಲೆಂದು
ಕೂಡಲಚೆನ್ನಸಂಗನಲ್ಲಿ ಹೂಣೆಹೊಕ್ಕ ಶರಣಂಗೆ
ಮಿಗೆ ಮಿಗೆ ನಮೋ ನಮೋಯೆಂಬೆ. /410
ಎಲ್ಲರ ದೀಕ್ಷೆಯ ಪರಿಯಂತಲ್ಲ ಎಮ್ಮಯ್ಯನ ದೀಕ್ಷೆ.
ನಡೆ ನುಡಿ ಶುದ್ಧವಾದವರಿಗಲ್ಲದೆ ಅನುಗ್ರಹಿಸ ನೋಡಾ.
ಪರಮಾರ್ಥಕಲ್ಲದ ಜಡ ನರರನೊಲ್ಲನೊಲ್ಲ, ದೀಕ್ಷೆಯ ಕೊಡ,
ಭವಭಾರಿಗಳ ಮುಖದತ್ತ ನೋಡನಯ್ಯಾ
ಕೂಡಲಚೆನ್ನಸಂಗಯ್ಯನೆಂಬ ಜ್ಞಾನಗುರು./411
ಎಲ್ಲವ ಕಳೆದು ಶರಣನಿಂಬುಮಾಡಿ (ದನಾಗಿ),
ಅಂತರಂಗ ಬಹಿರಂಗದಲ್ಲಿ ಬಳಿಕ ತನ್ನಹರೆ ತನ್ನಕೊಳಲು,
ಕೂಡಲಚೆನ್ನಸಂಗ ಲಿಂಗಸಂಗಿಯಾ[ದ]./412
ಎಲ್ಲಾ ಗುಣಂಗಳನೊಲ್ಲೆನೆಂದು ಕಳೆದು, ಪ್ರಾಣಲಿಂಗದಲ್ಲಿ
ಪ್ರವೇಶವ ಮಾಡಿದನಯ್ಯಾ.
ಆಯತ ಸ್ವಾಯತದಿಂದ ನೋಡಿ ಲಿಂಗಗಬಿರ ನಿಸ್ಸಂಗಿ ನೋಡಾ.
ಮಾಟ ಕೂಟವೆಂಬ ಭ್ರಾಂತಳಿದಾ ಮನದಲ್ಲಿ ತ್ರಿವಿಧವ ನೆಮ್ಮಿಸಿ.
ಸಾಹಿತ್ಯವಾದ ಕೂಡಲಚೆನ್ನಸಂಗಾ ನಿಮ್ಮ ಶರಣ. /413
ಎಲ್ಲಿಕ್ಕೆಯ ಎಣ್ಣೆ, ಎಲ್ಲಿಕ್ಕೆಯ ಬತ್ತಿ,
ಎಲ್ಲಿಕ್ಕೆಯ ಲಿಂಗವ ಪೂಜಿಸುವರು ನೀವು ಕೇಳಿರೆ :
ಅಂಗ ಲಿಂಗವೆಂಬೆನೆ ? ಹಿಂಗದು ಮನದ ಭವಿತನ.
ಪ್ರಾಣ ಲಿಂಗವೆಂಬೆನೆ ? ಭಾವದಲ್ಲಿ ಜಂಗಮವನರಿಯರು.
ಗುರುವಚನ ಸಾರಾಯಸಂಪನ್ನರೆಂಬೆನೆ ?
ಷಟ್ಕರ್ಮ (ಷಡಕ್ಷರ?) ಮಂತ್ರ ವಿರೋದಿಗಳು.
ಇದು ಕಾರಣ ಕೂಡಲಚೆನ್ನಸಂಗಯ್ಯಾ
ತಾಯ ಮಾರಿ ತೊತ್ತ ಕೊಂಬರನೇನೆಂಬೆ. /414
ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ
ಎಂಬ ಶ್ರುತಿಯನರಿದು ಮತ್ತೆ ದೈವವುಂಟೆಂಬ ವಿಪ್ರರು ನೀವು ಕೇಳಿ[ರೊ]
“ಓಂ ನಿಧನಪತಯೇ ನಮಃ ಓಂ ನಿಧನಪತಾಂತಿಕಾಯ ನಮಃ,
ಓಂ ಊಧ್ರ್ವಾಯ ನಮಃ ಓಂ ಊಧ್ರ್ವಲಿಂಗಾಯ ನಮಃ
ಓಂ ಹಿರಣ್ಯಾಯ ನಮಃ ಓಂ ಹಿರಣ್ಯಲಿಂಗಾಯ ನಮಃ
ಓಂ ಸುವರ್ಣಾಯ ನಮಃ ಓಂ ಸುವರ್ಣಾಲಿಂಗಾಯ ನಮಃ
ಓಂ ದಿವ್ಯಾಯ ನಮಃ ಓಂ ದಿವ್ಯಲಿಂಗಾಯ ನಮಃ
ಎಂದುದಾಗಿ
ಏತತ್ ಸೋಮಸ್ಯ ಸೂರ್ಯಸ್ಯ ಸರ್ವಲಿಂಗಂ ಸ್ಥಾಪಯೇತ್
ಇತಿ ಓಂ ಪಾಣಿಮಂತ್ರ ಪವಿತ್ರಂ’ ಎಂದುದಾಗಿ-
ಇದನರಿದು ಮತ್ತೆ ದೈವವುಂಟೆಂಬ ದ್ವಿಜರೆಲ್ಲರೂ
ಭ್ರಮಿತರು ಕೂಡಲಚೆನ್ನಸಂಗಮದೇವಾ. /415
ಏಕಭಾಜನ ಏಕಭಾಜನವೆಂದೆಂಬರು; ನಾವಿದನರಿಯೆವಯ್ಯಾ.
ಅಂಗದ ಮೇಲೆ ಪ್ರಾಣಲಿಂಗಪ್ರತಿಷ್ಠೆಯಾದ ಬಳಿಕ,
ಲಿಂಗಕ್ಕೆಯೂ ತನಗೆಯೂ ಏಕಭಾಜನವಲ್ಲದೆ ಬಿನ್ನಭಾಜನವುಂಟೆ ?
ಲಿಂಗಕ್ಕೆಯೂ ತನಗೆಯೂ ಏಕಭಾಜನವಾಗದನ್ನಕ್ಕರ
ಅಂಗದ ಕಳೆಯಲ್ಲಿ ಲಿಂಗವ ಧರಿಸಿಕೊಳಬಹುದೆ ?
ಇದನರಿದು ಏಕಭಾಜನವಾಗದಿರ್ದಡೆ ಅಂತು ದೋಷ.
ಅರಿಯದೆ ಏಕಭಾಜನವಾದಡೆ ಇಂತು ದೋಷ.
ಈ ಕುಳಸ್ಥಳದ ಭೇದವ ಭೇದಿಸಬಲ್ಲ
ಕೂಡಲಚೆನ್ನಸಂಗಾ, ನಿಮ್ಮ ಶರಣ./416
ಏಕಮೂರ್ತಿಸ್ತ್ರಯೋ ಭಾಗಾ ಗುರುರ್ಲಿಂಗಂತು ಜಂಗಮಃ’ ಎಂದುದಾಗಿ
ಪರತರಪರಂಜ್ಯೋತಿಯಪ್ಪ ಮಹಾಲಿಂಗವೆ ಲೋಕಾನುಗ್ರಹಕ್ಕಾಗಿ-
ಅಗ್ಗಣಿಯೆ ಅಣಿಕಲ್ಲಾದಂತೆ, ಕರಗಿದ ತುಪ್ಪವೆ ಹೆತ್ತುಪ್ಪವಾದಂತೆ.
ಗುರು ಲಿಂಗ ಜಂಗಮವಾಗಿ ಪರಿಣಮಿಸಿರ್ಪುದು ಕಾಣಾ !
ಆ ಗುರುತತ್ವದಿರವನರಿದು ಗುರುವಾಗಿ ಗುರುಲಿಂಗವ ಪೂಜಿಸಬೇಕು.
ಲಿಂಗತತ್ವದಿಂಗಿತವನರಿದು ಲಿಂಗವಾಗಿ ಶಿವಲಿಂಗವ ಪೂಜಿಸಬೇಕು.
ಜಂಗಮತತ್ವದಿಂಗಿತವನರಿದು ಜಂಗಮವಾಗಿ ಜಂಗಮವ ಪೂಜಿಸಬೇಕು.
ಇಂತೀ ತ್ರಿವಿಧಲಿಂಗವ ಪೂಜಿಸಿ ತ್ರಿವಿಧ ಪಾದೋದಕವ ಪಡೆಯಬೇಕು.
ಇದೇ ಅಂತರಂಗದ ಆತ್ಮತೀರ್ಥ, ಕಾಣಾ !
“ಅಂತಸ್ಥಂ ಮಾಂ ಪರಿತ್ಯಜ್ಯ ಬಹಿಸ್ಥಂ ಯಸ್ತು ಸೇವತೇ
ಹಸ್ತಸ್ಥಪಿಂಡಮುತು್ಸೃಜ್ಯ ಲಿಹೇತ್ಕೂರ್ಪರಮಾತ್ಮನಃ ಎಂದುದಾಗಿ,
ಪರಿಶುದ್ಧವಾದ ಅಂತರಂಗದ ಆತ್ಮತೀರ್ಥವನುಳಿದು,
ಬಹಿರಂಗದ ಜಡತೀರ್ಥವ ಸೇವಿಸಿದಡೆ
ಷಡ್ರಸದಿಂದೊಡಗೂಡಿದ ಪರಮಾನ್ನದ ಪಿಂಡವನುಳಿದು
ಮೋಳಕೈಯ ನೆಕ್ಕಿದಂತಕ್ಕು ಕಾಣಾ-ಕೂಡಲಚೆನ್ನಸಂಗಮದೇವಾ./417
ಏಕೋ ದೇವೋ ನ ದ್ವಿತೀಯಃ’ ಎಂದೆನಿಸುವ ಶಿವನೊಬ್ಬನೆ,
ಜಗಕ್ಕೆ ಗುರುವೆಂಬುದನರಿಯದೆ,
ವಿಶ್ವಕರ್ಮ ಜಗದ ಗುರುವೆಂದು ನುಡಿವ
ದುರಾಚಾರಿಯ ಮುಖವ ನೋಡಲಾಗದು.
ಪ್ರಥಮದಲ್ಲಿ ಹುಟ್ಟಿದಾಗ ವಿಶ್ವಕರ್ಮಂಗೆ ತಾಯಿತಂದೆಗಳಾರು ?
ಅವನು ಹುಟ್ಟಿದಾಗ ಹೊಕ್ಕಳನಾಳವ ಕೊಯ್ವ ಕತ್ತಿಯ ಮಾಡಿದರಾರು ?
ಅವಂಗೆ ತೊಟ್ಟಿಲವ ಕಟ್ಟಿದರಾರು ?
ಅವಂಗೆ ಹಾಲು ಬೆಣ್ಣೆ ಬಿಸಿನೀರು ಇಡುವುದಕೆ ಮಡಕೆಯ ಮಾಡಿದರಾರು ?
ಅವಂಗೆ ವಿದ್ಯಾಬುದ್ಧಿಯ ಕಲಿಸಿದರಾರು ?
ಅವಂಗೆ ಅರುಹು ಮರಹು ಹುಟ್ಟಿಸಿದರಾರು ?
ಅವಂಗೆ ಇಕ್ಕುಳ, ಅಡಿಗಲ್ಲು, ಚಿಮ್ಮಟಿಗೆ,
ಮೊದಲಾದ ಸಂಪಾದನೆಗಳ ಕೊಟ್ಟವರಾರು ?
ಇನಿತನು ವಿಚಾರಿಸದೆ ತಾನು ವೆಗ್ಗಳವೆಂದು ಗಳಹುವನ
ದುರಾಚಾರಿಯೆಂದು ಭಾವಿಸುವುದು.
ಸರ್ವಜಗದ ಜೀವದ ಪ್ರವರ್ತನೆಯ ಚಾರಿತ್ರಂಗಳ
ನೆನಹು ಮಾತ್ರದಿಂದ ಶಿವನು ಒಂದೇ ವೇಳೆಯಲ್ಲಿ ನಿರ್ಮಿಸಿದನು.
ಅದೆಂತೆಂದಡೆ;
ಅರಣ್ಯಗಿರಿಯ ಕನ್ನಡಿಯೊಳು ನೋಡಿದಂತೆ,
ಗಿಡವೃಕ್ಷಂಗಳು ಎಳೆಯದು ಹಳೆಯದು ಒಂದೆ ವೇಳೆ ಕಾಣಿಸಿದಂತೆ,
ಒಂದೆ ವೇಳೆಯಲಿ ಬೀಜವೃಕ್ಷನ್ಯಾಯದಲ್ಲಿ, ದಿವಾರಾತ್ರಿನ್ಯಾಯದಲ್ಲಿ
ಹಿಂಚು ಮುಂಚು ಕಾಣಲೀಯದೆ,
ಸರ್ವಜೀವವ ಹುಟ್ಟಿಸಿ, ರಕ್ಷಿಸಿ, ಸಂಹರಿಸಿ, ಲೀಲಾವಿನೋದದಿಂದಿಪ್ಪ
ಶಿವನೊಬ್ಬನೆ ಸಕಲ ಜಗಕ್ಕೆ ಗುರುಸ್ವಾಮಿ.
“ಮನ್ನಾಥಸ್ತ್ರಿಜಗನ್ನಾಥೋ ಮದ್ಗುರುಸ್ತ್ರಿಜಗದ್ಗುರುಃ
ಸರ್ವಮಮಾತ್ಮಾ ಭೂತಾತ್ಮಾ ತಸ್ಮೈ ಶ್ರೀಗುರವೇ ನಮಃ ಎಂದುದಾಗಿ
ಅರಿತರಿತು ಅನಾಚಾರವ ಗಳಹಿ,
ಗುರುಲಿಂಗಜಂಗಮವೆ ಘನವೆಂದು ಅರಿಯದ
ಶಿವಭಕ್ತಿಶೂನ್ಯ ಪಾತಕನ ಹಿರಿಯನೆಂದು ಸಂಭಾಷಣೆಯ ಮಾಡಿ
ಅವನ ಚಾಂಡಾಲ ಬೋಧೆಯ ಕೇಳ್ವ ಪಂಚಮಹಾಪಾತಕನ
ರೌರವನರಕದಲ್ಲಿ ಹಾಕಿ ಮೆಟ್ಟಿಸುತಿಪ್ಪ, ಕೂಡಲಚೆನ್ನಸಂಗಮದೇವ./418
ಏಕೋವರ್ಣ ಷಡುವರ್ಣವೆಂಬೆನೆ ಪ್ರಭುವೆ? ಎನ್ನ ದೃಷ್ಟಿ ಕಾಣದು.
ಅಂಗವನೂ ಲಿಂಗವನೂ ಸಂಗವ ಮಾಡಿ ತೋರಿದರೆ ಕೂಡಲಚೆನ್ನಸಂಗಯ್ಯಾ ನೀನೆಂಬೆನು. /419
ಏನೆಂಬೆನಯ್ಯ ? ಕಲ್ಪಿತ ಬಂಧನ ಬಿಡದು, ಪ್ರಸಾದಕ್ಕೆಂತೊ ?
ಗಮನಶಂಕೆ ಬಿಡದು, ಪ್ರಾಣಲಿಂಗಕ್ಕೆಂತೊ ?
ನಿಜತುಂಬಿ ನಿಕ್ಷೇಪವಾಗದು-
ಇದು ಕಾರಣ, ಅರ್ಪಿತವುಳ್ಳನ್ನಕ್ಕ ಪ್ರಸಾದಿಯಲ್ಲ.
ಅವಧಾನವುಳ್ಳನ್ನಕ್ಕ ಪ್ರಾಣಲಿಂಗಿಯಲ್ಲ,
ಕೂಡಲಚೆನ್ನಸಂಗಯ್ಯ. /420
ಏನೆಂಬೆನೇನೆಂಬೆ ಆಶ್ರಯವಿರಹಿತವ,
ಏನೆಂಬೆನೇನೆಂಬೆ ನಾಮ ನಿರ್ನಾಮವ,
ಏನೆಂಬೆನೇನೆಂಬೆ ಸಾರಾಯ ಸನುಮತವಲ್ಲದುದ,
ಏನೆಂಬೆನೇನೆಂಬೆ ದೇವಾ ಕ್ರೀಯ ಮೀರಿದ ಸಂಬಂಧವ,
ಕೂಡಲಚೆನ್ನಸಂಗಮದೇವಾ.
ಆನೆಂಬುದಿಲ್ಲದುದನೇನೆಂದುಪಮಿಸುವೆ./421
ಐಕ್ಯಂಗೆ ಆತ್ಮನೆ ಅಂಗ, ಆ ಅಂಗಕ್ಕೆ ಸದ್ಭಾವವೇ ಹಸ್ತ;
ಆ ಹಸ್ತಕ್ಕೆ ಮಹಾಸಾದಾಖ್ಯ, ಆ ಸಾದಾಖ್ಯಕ್ಕೆ ಚಿಚ್ಛಕ್ತಿ.
ಆ ಶಕ್ತಿಗೆ ಮಹಾಲಿಂಗ, ಆ ಲಿಂಗಕ್ಕೆ ಶಾಂತತೀತೋತ್ತರವೆ ಕಲೆ;
ಆ ಕಲೆಗೆ ಹೃದಯೇಂದ್ರಿಯವೆ ಮುಖ,
ಆ ಮುಖಕ್ಕೆ ಸುಪರಿಣಾಮದ್ರವ್ಯಂಗಳನು
ರೂಪು ರುಚಿ ತೃಪ್ತಿಯನರಿದು ಸಮರಸಭಕ್ತಿಯಿಂದರ್ಪಿಸಿ,
ಆ ಸುಪರಿಣಾಮಪ್ರಸಾದವ ಭೋಗಿಸಿ ಸುಖಿಸುತ್ತಿಹನು,
ಕೂಡಲಚೆನ್ನಸಂಗಾ, ನಿಮ್ಮ ಲಿಂಗೈಕ್ಯನು./422
ಐಕ್ಯಪದವ ಹಡೆವಡೆ ನಿಕ್ಷೇಪಧಾರಣಿಯಾಗಿರಬೇಕು.
ಗುರುವೆಂಬ ಅಂಜನ, ಶಿಷ್ಯನೆಂಬ ಪಾಯಾಳು, ಲಿಂಗವೆ ಕಡವರ,
ಆಚಾರವೆ ದಿಗ್ಭಂಧನ,
`ಭಕ್ತಕಾಯೋ ಮಮಕಾಯ’ ಎಂದುದು
ಕೂಡಲಚೆನ್ನಸಂಗಯ್ಯನವಚನ./423
ಒಂದನೆಯ ಬಾಗಿಲಲ್ಲಿ ನೇಹವಿಪ್ಪುದು,
ಎರಡನೆಯ ಬಾಗಿಲಲ್ಲಿ ಗುಣವಿಪ್ಪುದು,
ಮೂರನೆಯ ಬಾಗಿಲಲ್ಲಿ ಧ್ಯಾನವಿಪ್ಪುದು,
ನಾಲ್ಕನೆಯ ಬಾಗಿಲಲ್ಲಿ ಯೋಗವಿಪ್ಪುದು,
ಐದನೆಯ ಬಾಗಿಲಲ್ಲಿ ಪಂಚೇಂದ್ರಿಯ ಗುಣವಿಪ್ಪುದು,
ಆರನೆಯ ಬಾಗಿಲಲ್ಲಿ ಷಡುಸ್ಥಲಂಗಳಿಪ್ಪವು,
ಏಳನೆಯ ಬಾಗಿಲಲ್ಲಿ ಸಪ್ತವ್ಯಸನಂಗಳಿಪ್ಪವು,
ಎಂಟನೆಯ ಬಾಗಿಲಲ್ಲಿ ಅಷ್ಟಮದಂಗಳಿಪ್ಪವು
ಒಂಬತ್ತನೆಯ ಬಾಗಿಲಲ್ಲಿ ನಾದಬಿಂದುಗಳಿಪ್ಪವು,
ಹತ್ತನೆಯ ಬಾಗಿಲಲ್ಲಿ ಸುಜ್ಞಾನವಿಪ್ಪುದು,
ಇಂತೀ ಒಂಬತ್ತು ಬಾಗಿಲಂ ಕಳೆದು
ದಶಮಬಾಗಿಲಂ ತೆಗೆದು ಹೊಕ್ಕು
ಮಹಾಸುಖಿಯಾಗಿದ್ದ ಕೂಡಲಚೆನ್ನಸಂಗಾ ನಿಮ್ಮ ಶರಣ./424
ಒಂದಾಗಿ ತೋರಿದರೆ ಮೂರಾಗಿ ವಿವರಿಸುವೆ:
ಲಿಂಗವೆಂಬೆ ಜಂಗಮವೆಂಬೆ ಪ್ರಸಾದವೆಂಬೆ.
ಮನೋಮೂರ್ತಿಯಾಗಿ ತೋರಿದೆ, ಕೂಡಲಚೆನ್ನಸಂಗಯ್ಯಾ. /425
ಒಂದೆಂಬೆನೆ ? ಆಕಾರವಿಲ್ಲ ಎರಡೆಂಬೆನೆ ? ದರ್ಶನ ನಿರ್ಣಯವಾಗದು.
ಮೂರೆಂಬೆನೆ ? ಮೂರ್ತಿಯಾಗಿ ತೋರದು.
ಸಗುಣ ನಿರ್ಗುಣ, ಸ್ಥೂಲ ಸೂಕ್ಷ್ಮವಾದುದು, ಅಲ್ಲದುದೇನಯ್ಯಾ ?
ಕೂಡಲಚೆನ್ನಸಂಗಯ್ಯಾ, ದರ್ಪಣದೊಳಗಣ ಪ್ರತಿಬಿಂಬದಂತೆ
ಬಿನ್ನದಲರಸೂದೇನಯ್ಯಾ ? /426
ಒಂದೊಂದರ ಸಂಬಂಧ ಮತ್ತೊಂದಕ್ಕಳವಡದು.
ಕಂದನೊಳಗಣ ಸ್ವಪ್ನ ಮುಂದುದೋರುವುದೇ ?
ಚಂದ್ರಕಾಂತಶಿಲೆಯಲ್ಲಿ ರತ್ನವ ಕಂಡೆನೆಂಬ ಅಹಂಕಾರ ನಿನಗೇಕೆ ಶರಣಾ?
ಕೈಯ ಕುರುಹಳಿಯದು, ಬಾಯ ಮೊರೆ ಮಿಗೆವರಿಯುತ್ತಿದೆ,
ಕೂಡಲಚೆನ್ನಸಂಗಯ್ಯನಲ್ಲಿ ಬಸವನೂ ಪ್ರಭುವೂ
ಇಬ್ಬರೂ ಮರುಳಾದರು. /427
ಒಂದೊಂದೂ ಇಲ್ಲದಂದು, ನಂದಿವಾಹನರಿಲ್ಲದಂದು,
ಹಿಂದೆ ಹದಿನಾಲ್ಕು ಭುವನಗಳಿಲ್ಲದಂದು
ಅಂದಾರೂ ಲಿಂಗವ ಕಂಡವರೊಳರೆ ?
ಅಂದಾರೂ ಲಿಂಗವ ಕಂಡು ಹೇಳಿದವರೊಳರೆ ?
ನಿರಂಧ ತಮಂಧವಿಲ್ಲದಂದು
ಕೂಡಲಚೆನ್ನಸಂಗನಲ್ಲಿ ಬಸವಣ್ಣನೊಬ್ಬನೆ ಉದಯವಾದ!/428
ಒಕ್ಕುದ ಪ್ರಸಾದವೆಂದಿಕ್ಕುವಾತನನಾಚಾರಿ;
ಕೊಂಬುವಾತ ನೆಟ್ಟನೆ ವ್ರತಗೇಡಿ.
ಪ್ರಸಾದವೆಂಬುದು ಹೆಸರಿಲ್ಲದ ಘನವು !
ಪ್ರಸಾದಿಯಾದಾತ ಶೂನ್ಯಶರಣ,
ಇರವೆ ಲಿಂಗೈಕ್ಯ, ಪರವೆ ಪ್ರಸಾದ !
ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ
ಗುರುವೆಂಬ ಓಗರಕ್ಕೆ ಶಿಷ್ಯನೆಂಬ ಪ್ರಸಾದ./429
ಒಕ್ಕುದ ಮಿಕ್ಕುದ ಕೊಂಬೆನೆಂಬ ನಿಚ್ಚಳ ಶರಣನ ತೋರಾ,
ಒಕ್ಕುದ ಮಿಕ್ಕುದ ಕೊಂಬೆನೆಂಬ ವಿವರವ ಬಲ್ಲಡೆ ಹೇಳಿರೆ ?
ಒಕ್ಕುದೆಂಬುದೆ ಕಾಯ, ಮಿಕ್ಕುದೆಂಬುದೆ ಪ್ರಾಣ
ಈ ಉಭಯವೆ ತಕ್ಕುದೆಂದರಿತುಕೊಳ್ಳ ಬಲ್ಲಡೆ
ಸಿಕ್ಕುವ ಕಾಣಾ ಕೂಡಲಚೆನ್ನಸಂಗಮದೇವ. /430
ಒಡಲಗುಣಧರ್ಮವನು ಬಿಡದೆ ನಡೆವನ್ನಕ್ಕ
ಎಡೆವರಿಯದ ಪೂಜೆಯನವರೆತ್ತ ಬಲ್ಲರು ?
ಉದಯದಲಾದ ಪೂಜೆ, ಅಸ್ತಮಾನದಲೆಂಜಲೆಂಬರು,
ಇಂತೆಂಬ ಭಂಗಿತರ ಮುಖವ ನೋಡಲಾಗದು.
ಅಗ್ನಿಯೆಂಜಲನುಂಡು ಲಿಂಗದಲ್ಲಿ ಸಯವನರಸುವ
ಭಂಗಿತರನೇನೆಂಬೆ ಕೂಡಲಚೆನ್ನಸಂಗಮದೇವಾ. /431
ಒಡಲಿಲ್ಲ ಗುರುವಿಂಗೆ, ಒಡಲಿಲ್ಲ ಭಕ್ತಂಗೆ,
ಒಡಲಿಲ್ಲ ಪ್ರಸಾದಸಂಬಂದಿಗೆ,
ಕೂಡಲಚೆನ್ನಸಂಗಯ್ಯ ನಿಂದ ನಿಲುವಿಂಗೆ,
ಹಿಂದಿಲ್ಲ ಮುಂದಿಲ್ಲ ಒಂದೂ ಇಲ್ಲ ಶರಣಂಗೆ. /432
ಒಡಲಿಲ್ಲದಾತ ಜಂಗಮ, ಪ್ರಾಣವಿಲ್ಲದಾತ ಭಕ್ತನಯ್ಯಾ.
ಆಚಾರವೆ ಜಂಗಮ, ವಿಚಾರವೆ ಭಕ್ತನಯ್ಯಾ.
ಆಚಾರ-ವಿಚಾರವೆಂಬುದು ಸ್ವಾನುಭಾವ ಸಂಭಾಷಣೆ
ಕೂಡಲಚೆನ್ನಸಂಗಮದೇವಾ/433
ಒಡಲುಗೊಂಡು ಒಡಲವಿಡಿಯದೆ ಒಡಲಿಲ್ಲದ ನಿಜವ ಬೆರಸೆಲವೊ!
ನರರು ಸುರರು ಕಿನ್ನರರು ಖೇಚರ
ಪರಮ ಪದವಿಯನರಿಯದ ಕಾರಣ ಭವದೊಳಗೆ ಸಿಲುಕಿದರು.
ಕೂಡಲಚೆನ್ನಸಂಗನ ನಿಜರೂಪನೆ ಬೆರಸಿರೊ ಮುಮುಕ್ಷುಗಳಿರಾ./434
ಒಡಲೆಂಬಾರಣ್ಯದ ಪಡುವಣ ಕಾಳುಗಟ್ಟದ
ಗಹ್ವರದ ನವದ್ವಾರದೊಳಗೆ ಅಡಗಿಪ್ಪ ಐವರ ಕಳ್ಳರ ತಿಳಿದು ನೋಡಿರಯ್ಯಾ.
ಆ ಕಳ್ಳರು ಇಹನ್ನಕ್ಕರ ಊರಿಗುಪಟಳ ಮನೆಗೆ ಮಾರಿ,
ಚಾಕ ಗ್ರಾಮದ ಮಧ್ಯದವರಿಗುಳುಹಿಲ್ಲ.
ತನುಪ್ರಪಂಚಿಗಳು ಮನಪ್ರಪಂಚಿಗಳು ಧನಪ್ರಪಂಚಿಗಳು
ವಾದಿಗಳು ತರ್ಕಿಗಳು ನಾನಾ ಕುಟಿಲ ಕುಹಕ ಬಹುಪಾಪಿಗಳೆಲ್ಲ ನೆರೆದು,
ಆ ಕ?್ಳರ ಹಿಡಿದಿಹೆವೆನುತ್ತಿಹರಯ್ಯಾ.
ಅದಕ್ಕೆಂಟು ಬೀದಿ ಒಂಬತ್ತು ಓಡುಗಂಡಿ ಕಾಣಬಾರದ ಕತ್ತಲೆ,
ಹೆಜ್ಜೆಯ ಹೊಲಬ ಕಂಡೆಹೆನೆಂಬನು ಭ್ರಾಂತ ನೋಡಾ !
ಓಂ ಬ್ರಹ್ಮಸ್ನಾನಂ ಪವನಜ್ಞಾನಂ ಲಿಂಗಧ್ಯಾನಂ
ಸುಜ್ಞಾನದರ್ಶನಂ ಪ್ರಭಾಕರಂ ದಿವಾಕರಂ
ಇಂತೀ ಶ್ರುತಿಮತದಲ್ಲಿ ತಿಳಿದು ನೋಡಲಿಕೆಯಾಗಿ ಆ ಹೆಜ್ಜೆ ಹೋಯಿತು !
ಅಂಗಸಂಗನ ಹಳ್ಳಿಯ ಒಳಗೆರೆಯ ಒಸರುಬಾವಿಯ
ಲಿಂಗಗೂಡಿನ ಶಿವಪುರದ ಸೀಮೆಯ,
ನಿಟಿಲಪುರದ ತಲೆವಲದಲ್ಲಿ ಸಿಕ್ಕಿದ ಕ?್ಳರ ಅಂಗದ ಮೇಲೆ ಕಟ್ಟಿತಂದು
ಎನ್ನೊಡೆಯ ಪ್ರಭುರಾಯಂಗೊಪ್ಪಿಸಲು
ಆ ಪ್ರಭುರಾಯ ತನ್ನವರೆಂದು ಒಕ್ಕುದ ಮಿಕ್ಕುದನಿಕ್ಕಿ ರಕ್ಷಿಸುವ ಕಾಣಿರೆ !
ಇಂತಪ್ಪ ಘಟ ಪಂಚಭೂತಂಗ? ಕಟ್ಟಿ ನಿಲಿಸಿ,
ಆತ್ಮಜ್ಞಾನ ಭಕ್ತಿರಸಾಮೃತಸಾರಾಯವನುಣಬಲ್ಲವರಾರೆಂದಡೆ
ಪ್ರಭುವಿನ ಬಳಿಯ ಬಸವಸಂತತಿಗಲ್ಲದೆ ಅ?ವಡದು
ಮಿಕ್ಕಿನ ಪ್ರಪಂಚಿಗಳಿಗೆ ಅಸಾಧ್ಯ ಕಾಣಾ
ಕೂಡಲಚೆನ್ನಸಂಗಮದೇವಯ್ಯಾ./435
ಒಡೆಯರು ಮನೆಗೆ ಬಂದುದ ಕಂಡು
ತೆರಹು ಮರಹಾಗಿಪ್ಪನೆ ಭಕ್ತನು ಬಿಷ್ಮಿಸಿಕೊಂಡಿಹನೆ ಭಕ್ತನು ?
ಜಂಗಮ ಪ್ರೀತಂಗೆ ಜಡಮತಿಯುಂಟೆ ?
ನಿಮ್ಮ ಒಕ್ಕುದ ಕೊಂಡು ಇಹಂಥ ಮಹಾಮಹಿಮರ ತೋರಯ್ಯಾ
ಕೂಡಲಚೆನ್ನಸಂಗಯ್ಯಾ. /436
ಒಮ್ಮೆ ನೆಲದಲ್ಲಿ ಬಿತ್ತಿದ ಬಿತ್ತುವ ಕಿತ್ತಿ ಕಿತ್ತಿ ಮತ್ತೆ ಬಿತ್ತುತ್ತ ಹೋದಡೆ,
ಆ ಬಿತ್ತು ಮೊಳೆತು ಕಳೆಯೇರಿ ಬೆಳೆದು
ಬೆಳಸನೀವ ಪರಿಯಿನ್ನೆಂತೊ, ಮರುಳು ಮಾನವಾ ?
ಗುರುವಿತ್ತ ಲಿಂಗವ ತೊರೆ ತೊರೆದು ಮರಳಿ ಮರಳಿ ಧರಿಸಿದಡೆ
ಆ ಇಷ್ಟಲಿಂಗವು ಅನಿಷ್ಟವ ಕಳೆದು ಇಷ್ಟಾರ್ಥವನೀವ ಪರಿಯಿನ್ನೆಂತೊ ?
ಇದು ಕಾರಣ- ಕೂಡಲಚೆನ್ನಸಂಗಯ್ಯನಲ್ಲಿ ಮುಕ್ತಿಯನರಸುವಡೆ
ಅಂಗನಲ್ಲಿ ಹೆರೆಹಿಂಗದೆ ಲಿಂಗವ ಧರಿಸಬೇಕು/437
ಒಮ್ಮೆ ಶ್ರೀಗುರುವಿನ ಚರಣವ ನೆನೆಯಲೊಡನೆ
ಭವಬಂಧನ ಬಿಡುವುದು.
ಗುರುವೇ ಶರಣು ಗುರುಲಿಂಗವೇ ಶರಣು
ಹರಿಬ್ರಹ್ಮಾದಿಗಳಿಗಗೋಚರ ಕೂಡಲಚೆನ್ನಸಂಗನ
ತೋರಿದ ಗುರುವೇ ಶರಣು. /438
ಒಮ್ಮೆಯಲ್ಲದಿಮ್ಮೆಯುಂಟೆ ಪೂಜೆ ?
ಒಮ್ಮೆಯಲ್ಲದಿಮ್ಮೆಯುಂಟೆ ಅರ್ಪಿತ ?
ಒಮ್ಮೆಯಲ್ಲದಿಮ್ಮೆಯುಂಟೆ ಪ್ರಸಾದ ?
ತಾನರ್ಪಿತವಾದ ಬಳಿಕ ಮರಳಿ ಅರ್ಪಿತವುಂಟೆ
ಕೂಡಲಚೆನ್ನಸಂಗಮದೇವಾ ?/439
ಒಲ್ಲೆನೆಂದೆಡೆ ಅದೆ ಭಂಗ, ಒಲಿವೆನೆಂದಡೆ ಅದೇ ಭಂಗ.
ಒಲ್ಲೆ ಒಲಿವೆನೆಂಬೆರಡನು ಅಳಿದು,
ತೃಪ್ತನಾದೆನೆಂದಡೆ ಅದೇ ಕೊರತೆ.
ಕೂಡಲಚೆನ್ನಸಂಗಯ್ಯ ಭಕ್ತಾದಿನನಾಗಿ,
ಇಲ್ಲಿಗೆ ನಡೆದು ಬಂದ ಬಳಿಕ ಉಪಚಾರ ಉಂಟೆ ಅಯ್ಯಾ ?/440
ಒಳಗೆ ಪ್ರಾಣಲಿಂಗ, ಹೊರಗೆ ಅಂಗಲಿಂಗ ಇದೇನಯ್ಯಾ ?
ಮನಕೆ ಮನ ನಾಚದು ನಾಚದು.
ಎರಡರ ಬಳಿವಿಡಿದು ಮರೆಗೊಂಡಾಡುವುದೇನಯ್ಯಾ ?
ಈ ಎರಡರ ನಿರ್ಣಯಕ್ಕೆ ಅದು ಒಂದೆ ಎಂದು ಅರಿದರೆ
ಅದೇ ಪದ-ಕೂಡಲಚೆನ್ನಸಂಗಮದೇವಾ/441
ಒಳಗೊಂದು ಬೆಳಗುವ ಜ್ಯೋತಿಯಂತಪ್ಪ ವಿಚಾರವಿದೇನೊ !
ಅತ್ತ ಹೊದ್ದದು ತನ್ನ ತಾನು, ಇತ್ತ ಹೊದ್ದದು ಬಾಹ್ಯವಿಚಾರವ.
ವಿಚಾರಿಸುವ ವಿಚಾರ ತಾನಾಗಿದ್ದುದನರಿಯದು.
ಹೊದ್ದುವ ಕಾಳಿಕೆ ಇಲ್ಲಿ ಹೊದ್ದದು, ನಿಸ್ಸಂದೇಹ.
ಇಲ್ಲಿ ಹೊದ್ದಿಯೂ ಹೊದ್ದದೆ ಇದ್ದಿತ್ತು
ತುದಿಯಿಲ್ಲ ಮೊದಲಿಲ್ಲ
ತುದಿ ಮೊದಲೆರಡೂ ಕೂಡಿಕೊಂಡು ನಡುವೆ ಅಂತರಾತ್ಮವಾಗಿದ್ದಿತ್ತು.
ಜೀವಗುಣವಳಿದು, ಪರಮಾತ್ಮನ ಮುಂದೆ ಪ್ರತಿಬಿಂಬವಾಗಿದ್ದಲ್ಲಿ
ಸಂಧಾನವನರಸುತ್ತಿದ್ದೆ ಕಾಣಾ, ಕೂಡಲಚೆನ್ನಸಂಗಮದೇವಾ./442
ಓಂ’ ಎಂಬಕ್ಷರವೆ ರಸ, `ನ’ ಎಂಬಕ್ಷರವೆ ರುದಿರ,
`ಮ’ ಎಂಬಕ್ಷರವೆ ಮಾಂಸ, `ಶಿ’ ಎಂಬಕ್ಷರವೆ ಮೇಧಸ್ಸು,
`ವಾ ಎಂಬಕ್ಷರವೆ ಅಸ್ಥಿ, `ಯ’ ಎಂಬಕ್ಷರವೆ ಮಜ್ಜೆ.
ಷಡಕ್ಷರದಿಂದ ಶುಕ್ಲ ಶೋಣಿತ-
ಇಂತೀ ಸರ್ವೆಂದ್ರಿಯಂಗಳುತ್ಪತ್ತಿ,
ಕೂಡಲಚೆನ್ನಸಂಗಮದೇವಾ/443
ಓಂ’ ಕಾರವೆ ಬಸವಣ್ಣನ ಶಿರಸ್ಸು, `ನ’ ಕಾರವೆ ಬಸವಣ್ಣನ ನಾಸಿಕ,
`ಮ’ ಕಾರವೆ ಬಸವಣ್ಣನ ಜಿಹ್ವೆ, `ಶಿ’ ಕಾರವೆ ಬಸವಣ್ಣನ ನಾಬಿ,
`ವ’ ಕಾರವೆ ಬಸವಣ್ಣನ ತ್ವಕ್ಕು, `ಯ’ ಕಾರವೆ ಬಸವಣ್ಣನ ಶ್ರೋತ್ರ.
ಮತ್ತೆ : `ಓಂ’ ಕಾರವೆ ಬಸವಣ್ಣನ ವದನ, `ನ’ ಕಾರವೆ ಬಸವಣ್ಣನ ಬಲದ ಭುಜ,
`ಮ’ ಕಾರವೆ ಬಸವಣ್ಣನ ಎಡದ ಭುಜ, `ಶಿ’ ಕಾರವೆ ಬಸವಣ್ಣನ ನೇತ್ರ,
`ವಾ’ ಕಾರವೆ ಬಸವಣ್ಣನ ಬಲದ ಪಾದ, `ಯ` ಕಾರವೆ ಬಸವಣ್ಣನ ಎಡದ ಪಾದ.
ಅದೆಂತೆಂದಡೆ :
“ಓಂಕಾರಂ ವದನಂ ದೇವಿ ನಮಃಕಾರಂ ಭುಜದ್ವಯಂ
ಶಿಕಾರಂ ದೇಹಮಧ್ಯಸ್ತು ವಾಯಕಾರಂ ಪದದ್ವಯಂ
ಇತಿ ಷಡ್ವರ್ಗರೂಪಂ ಚ ಭಕ್ತರೂಪಂ ಮಯೋದಿತಂ
ಇಂತೆಂದುದಾಗಿ, ಕೂಡಲಚೆನ್ನಸಂಗಯ್ಯನಲ್ಲಿ
ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು/444
ಓಂ ವಿಶ್ವನಿರಾಕಾರ ನಿರವಯನಿರ್ವಿಕಾರ ಅವಗತವಾಗ್ಮನವಾಗತ
ಆಕಾಶ ಸಭಾಮೂರ್ತಿ ನಿರಾಕಾರವೆಂಬ ನಿಜಲಿಂಗವಪ್ಪ
ಪರಶಿವಾನಂದ ಮೂರ್ತಿ ತನ್ನೊಳು ತ್ರಿಗುಣಾತ್ಮಕನಾಗಿಹ.
ಅದೆಂತೆಂದಡೆ :
ಶಿವ ಸದಾಶಿವ ಮಹೇಶ್ವರನೆಂದು ಪರಶಿವನ ತ್ರಿಗುಣಾತ್ಮಕ ಭೇದಂಗಳು,
ಇಂತಪ್ಪ ಪರಶಿವನು ವಿಶ್ವದುತ್ಪತ್ಯಕಾರಣನಾಗಿ
ಪಂಚಸಾದಾಖ್ಯ ರೂಪಗಳಂ ಪ್ರತ್ಯೇಕ ತ್ರಿಗುಣಾತ್ಮಕರಾಗಿ
ಜ್ಯೋತಿಯಿಂ ಪೊತ್ತಿಸಲಾಪುದು.
ಘನವಾದುದು ಉಪಮಿಸಬಾರದ ಮಹಾಘನದಂತೆ
ಆ ಮಹಾಬೆಳಗು ತನ್ನೊಳೈದು ರೂಪಾಯಿತ್ತು.
ಅದೆಂತೆಂದಡೆ :
ಶಿವ ಅಮೂರ್ತಿ ಮೂರ್ತಿ ಕರ್ತೃ ಕರ್ಮರೆಂಬ
ಪಂಚಬ್ರಹ್ಮ ಹುಟ್ಟಿದವು; ಅದಕೈವರು ಶಕ್ತಿಯರುದಯಿಸಿದರು,
ಅವರ ನಾಮಂಗಳು:ಪರಾಶಕ್ತಿ, ಆದಿಶಕ್ತಿ, ಇಚ್ಛಾಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿ.
ಇಂತಿಂತು ಐವರನು ಪಂಚಬ್ರಹ್ಮರಿಗೆ ವಿವಾಹಂ ಮಾಡಿದೊಡಾ
ಶಿವಶಕ್ತಿ ಪಂಚಕದಿಂದೊಂದು ಓಂಕಾರವೆಂಬ ಬೀಜವಂ
ನಿರ್ಮಿಸಿದಡಾ, ಓಂಕಾರ ಬೀಜದಿಂದೊಂದು ವಿರಾಟಸ್ವರೂಪಮಪ್ಪ
ಮಹಾಘನ ತೇಜೋಮಯವಪ್ಪ ಅನಾದಿರುದ್ರಸಹಸ್ರಾಂಶುವಿಂಗೆ
ಸಾವಿರ ಶಿರ ಸಾವಿರ ನಯನ ಸಾವಿರ ದೇಹ ಸಾವಿರಪಾದವುಳ್ಳ
ಸ್ವಯಂಭುಮೂರ್ತಿ ಪುಟ್ಟಿದ
ಆ ಸ್ವಯಂಭುಮೂರ್ತಿಯ ಮುಖದಲ್ಲಿ ಈಶ್ವರಪುಟ್ಟಿದ,
ಈಶ್ವರನ ವಾಮಭಾಗದಲ್ಲಿ ವಿಷ್ಣುಪುಟ್ಟಿದ.
ದಕ್ಷಿಣಭಾಗದಲ್ಲಿ ಬ್ರಹ್ಮಪುಟ್ಟಿದ.
ಇಂತು ತ್ರಿದೇವತೆಯರೊಳಗಗ್ರಜನಪ್ಪ ಮಹಾಮಹಿಮ
ಈಶ್ವರನ ಪಂಚಮುಖದಲ್ಲಿ ಪಂಚಬ್ರಹ್ಮ ತೇಜೋಮಯ ರುದ್ರರು ಪುಟ್ಟಿದರು.
ಅವರ ನಾಮಂಗಳು :
ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನ್ಯರೆಂದಿಂತು.
ಅವರೋಳ್ಸದ್ಯೋಜಾತನೆಂಬ ಅಗ್ರಜರುದ್ರ ಪುಟ್ಟಿದನು.
ಆ ಸದ್ಯೋಜಾತಂಗೆ ಮಹಾರುದ್ರ ಪುಟ್ಟಿದನು.
ಆ ಮಹಾರುದ್ರಂಗೆ ಶ್ರೀರುದ್ರ ಪುಟ್ಟಿದನು.
ಆ ಶ್ರೀರುದ್ರಂಗೆ ರುದ್ರ ಪುಟ್ಟಿದನು.
ಆ ರುದ್ರಂಗೆ ಅಗ್ನಿಯು ಅವಗತ ಪುಟ್ಟಿದವು.
ಆ ಅಗ್ನಿಗೆ ಕಾಶ್ಶಪಬ್ರಹ್ಮ ಪುಟ್ಟಿದನು.
ಅವಗತಕ್ಕೆ ಮಾಯಾಸ್ವಪ್ನಬ್ರಹ್ಮ ಪುಟ್ಟಿದನು.
ಅದೆಂತೆಂದಡೆ :
ಮಾಯವೆ ಮೃತ್ಯು, ಬ್ರಹ್ಮವೆ ಸತ್ಯ
ಅದು ಮಾಯಾಸ್ವವಪ್ನಬ್ರಹ್ಮವೆನಿಸಿತ್ತು.
ಇಂತಿಪ್ಪ ಬ್ರಹ್ಮವು ಮಾಯಾ ಅವಲಂಬಿಸಿಹುದಾಗಿ
ಅದು ಮಾಯಾಸ್ವಪ್ನಬ್ರಹ್ಮವೆನಿಸಿತ್ತು.
ಇಂತಪ್ಪ ಮಾಯಾ ಸ್ವಪ್ನಬ್ರಹ್ಮಂಗೆ ತ್ರಯೋದಶಕುಮಾರಿಯರು ಪುಟ್ಟಿದರು.
ಅವರ ನಾಮಂಗಳು :
ಬೃಹತಿ, ಅದಿತಿ, ದಿತಿ, ವಿನುತಾದೇವಿ, ಕದ್ರು,
ಸುವರ್ಣಪ್ರಭೆ, ಕುಮುದಿನಿ, ಪ್ರಭಾದೇವಿ, ಕಾಳಿದಂಡಿ,
ಮೇಘದಂಡಿ, ದಾತೃಪ್ರಭೆ, ಕುಸುಮಾವತಿ, ಪಾರ್ವಂದಿನಿ
ಎಂದಿಂತು ತ್ರಯೋದಶಕುಮಾರಿಯರು ಪುಟ್ಟಿದರು.
ಇದಕ್ಕೆ ಆದಿ ಪರಮೇಶ್ವರನು ಸೃಷ್ಟಿ ನಿರ್ಮಿತ ಜಗದುತ್ಪತ್ಯ ಸ್ಥಿತಿ
ಲಯಗಳಾಗಬೇಕೆಂದು, ಆ ಕಾಶ್ಯಪಬ್ರಹ್ಮಗು ತ್ರಯೋದಶ
ಸ್ತ್ರೀಯರಿಗೆಯು ವಿವಾಹವ ಮಾಡಿದನು.
ಆ ಕಾಶ್ಯಪಬ್ರಹ್ಮನ ಮೊದಲ ಸ್ತ್ರೀಯ ಪೆಸರು ಬೃಹತಿ.
ಆ ಬೃಹತಿಗೆ ಪುಟ್ಟಿದ ಮಕ್ಕಳ ಪೆಸರು ಹಿರಣ್ಯಕಾಂಕ್ಷ.
ಹಿರಣ್ಯಕಾಂಕ್ಷನ ಮಗ ಪ್ರಹರಾಜ, ಪ್ರಹರಾಜ ಮಗ ಕುಂಬಿ,
ಆ ಕುಂಬಿಯ ಮಗ ನಿಃಕುಂಬಿ, ನಿಃಕುಂಬಿಯ ಮಗ ದುಂದುಬಿ,
ಆ ದುಂದುಬಿಯ ಮಗ ಬಲಿ, ಬಲಿಯ ಮಗ ಬಾಣಾಸುರ.
ಇಂತಿವರು ಮೊದಲಾದ ಛಪ್ಪನ್ನಕೋಟಿ ರಾಕ್ಷಸರು ಪುಟ್ಟಿದರು.
ಎರಡನೆಯ ಸ್ತ್ರೀಯ ಪೆಸರು ಅದಿತಿ.
ಆ ಅದಿತಿಗೆ ಸೂರ್ಯ ಮೊದಲಾದ ಮೂವತ್ತುಕೋಟಿ
ದೇವರ್ಕಳು ದೇವಗಣ ಪುಟ್ಟಿದವು.
ಮೂರನೆಯ ಸ್ತ್ರೀಯ ಪೆಸರು ದಿತಿದೇವಿ.
ಆ ದಿತಿದೇವಿಗೆ ಕೂರ್ಮ ಮೊದಲಾದ ಜಲಚರಂಗಳು ಪುಟ್ಟಿದವು.
ನಾಲ್ಕನೆಯ ಸ್ತ್ರೀಯ ಪೆಸರು ವಿನುತಾದೇವಿ.
ಆ ವಿನುತಾದೇವಿಗೆ ಸಿಡಿಲು, ಮಿಂಚು, ವರುಣ, ಗರುಡ
ಮೊದಲಾದ ಖಗಜಾತಿಗ?ು ಪುಟ್ಟಿದವು.
ಐದನೆಯ ಸ್ತ್ರೀಯ ಪೆಸರು ಕದ್ರುದೇವಿ.
ಆ ಕದ್ರುವಿಗೆ ಶೇಷ, ಅನಂತ, ವಾಸುಗಿ, ಶಂಬವಾಳ, ಕಕ್ಷರ, ಕಕರ್ೊಟ,
ಕರಾಂಡ, ಭುಜಂಗ, ಕುಳ್ಳಿಕ, ಅಲ್ಲಮಾಜಾರ್ಯ
ಇಂತಿವು ಮೊದಲಾದ ನವಕುಲನಾಗಂಗಳು ಪುಟ್ಟಿದವು.
ಆರನೆಯ ಸ್ತ್ರೀಯ ಪೆಸರು ಸುವರ್ಣಪ್ರಭೆ.
ಆ ಸುವರ್ಣಪ್ರಭೆಗೆ ಚಂದ್ರ, ತಾರಾಗಣ, ನಕ್ಷತ್ರಂಗಳು ಪುಟ್ಟಿದವು.
ಏಳನೆಯ ಸ್ತ್ರೀಯ ಪೆಸರು ಕುಮುದಿನಿ.
ಆ ಕುಮುದಿನಿಗೆ ಐರಾವತ, ಪುಂಡರೀಕ, ಪುಷ್ಪದಂತ, ವಾಮನ,
ಸುಪ್ರದೀಪ, ಅಂಜನ, ಸಾರ್ವಭೌಮ, ಕುಮುದ, ಭಗದತ್ತ
ಇಂತಿವು ಮೊದಲಾದ ಮೃಗಕುಲಾದಿ
ವ್ಯಾಘ್ರ ಶರಭ ಶಾದರ್ೂಲಂಗಳು ಪುಟ್ಟಿದವು.
ಎಂಟನೆಯ ಸ್ತ್ರೀಯ ಪೆಸರು ಪ್ರಭಾದೇವಿ.
ಆ ಪ್ರಭಾದೇವಿಗೆ ಕನಕಗಿರಿ, ರಜತಗಿರಿ, ಸೇನಗಿರಿ, ನೀಲಗಿರಿ,
ನಿಷಧಗಿರಿ, ಮೇರುಗಿರಿ, ಮಾನಸಗಿರಿ
ಇಂತಿವು ಮೊದಲಾದ ಪರ್ವತಂಗಳು ಪುಟ್ಟಿದವು.
ಒಂಬತ್ತನೆಯ ಸ್ತ್ರೀಯ ಪೆಸರು ಕಾಳಿದಂಡಿ.
ಆ ಕಾಳಿದಂಡಿಗೆ ಸಪ್ತಋಷಿಯರು ಮೊದಲಾದ ಅಷ್ಟಾಸೀತಿ
ಸಹಸ್ರ ಋಷಿಯರು ಪುಟ್ಟಿದರು.
ಹತ್ತನೆಯ ಸ್ತ್ರೀಯ ಪೆಸರು ಮೇಘದಂಡಿ.
ಆ ಮೇಘದಂಡಿಗೆ ನೀಲಮೇಘ, ಕುಂಭಮೇಘ, ದ್ರೋಣಮೇಘ,
ಧೂಮಮೇಘ, ಕಾಮರ್ೆಘ ಇಂತಿವು ಮೊದಲಾದ ಮೇಘಂಗಳು ಪುಟ್ಟಿದವು.
ಹನ್ನೊಂದನೆಯ ಸ್ತ್ರೀಯ ಪೆಸರು ದಾತೃಪ್ರಭೆ.
ಆ ದಾತೃಪ್ರಭೆಗೆ ಚಿಂತಾಮಣಿ ಮೊದಲಾದ ನವರತ್ನಂಗಳು ಪುಟ್ಟಿದವು.
ಹನ್ನೆರಡನೆಯ ಸ್ತ್ರೀಯ ಪೆಸರು ಕುಸುಮಾವತಿ.
ಆ ಕುಸುಮಾವತಿಗೆ ಕಾಮಧೇನು, ಕಲ್ಪವೃಕ್ಷಂಗಳು ಪುಟ್ಟಿದವು.
ಹದಿಮೂರನೆಯ ಸ್ತ್ರೀಯ ಪೆಸರು ಪಾರ್ವಂದಿನಿ.
ಆ ಪಾರ್ವಂದಿನಿಗೆ ಅಷ್ಟದಿಕ್ಪಾಲಕರು ಪುಟ್ಟಿದರು.
ಇಂತಿವರುಗಳ ರಜಸ್ಸೀಲಾಶೋಣಿತದಿಂದ ಸಹಸ್ರವೇದಿ
ಮೊದಲಾದ ಅಷ್ಟ ಪಾಷಾಣಂಗಳು ಪುಟ್ಟಿದವು.
ಇವರುಗಳ ಮಲಮೂತ್ರದಿಂದ ಪರುಷರಸ ಸಿದ್ಧರಸ
ನಿರ್ಜರೋದಕ ಪುಟ್ಟಿದವು.
ಇಂತಿವರುಗಳ ಬೆಚ್ಚು ಬೆದರಿಂದ ದೇವಗ್ರಹ, ಯಕ್ಷಗ್ರಹ,
ನಾಗಗ್ರಹ, ಗಾಂಧರ್ವಗ್ರಹ, ಪಿಶಾಚಗ್ರಹ, ಪೆಂತರಗ್ರಹ, ಬ್ರಹ್ಮರಾಕ್ಷಸಗ್ರಹ
ಶತಕೋಟಿ ದೇವಗ್ರಹ, ಸರ್ವದರ್ಪಗ್ರಹ, ಶಾಕಿನಿ, ಡಾಕಿನಿ
ಮೊದಲಾದ ಗ್ರಹಭೂತ ಪ್ರೇತ ಪಿಶಾಚಂಗಳು ಪುಟ್ಟಿದವು.
ಇವರುಗಳ ಪ್ರಸೂತಿಕಾಲ ಮಾಸಿನಿಂದ
ಅಷ್ಟಲೋಹ ಪಾಷಾಣಂಗಳು ಪುಟ್ಟಿದವು.
ಕಾಲರಾಶಿ, ಕರಣರಾಶಿ, ಭೂತರಾಶಿ, ಮೂಲರಾಶಿ, ಪ್ರಾಣರಾಶಿಗಳು
ಮೊದಲಾದ ಕೀಟಕ ಜಾತಿಗಳು ಪುಟ್ಟಿದವು.
ಇಂತು ಚತುರ್ದಶ ಭುವನಂಗಳು, ಐವತ್ತಾರುಕೋಟಿ ರಾಕ್ಷಸರು,
ದ್ವಾದಶಾದಿತ್ಯರು, ಮೂವತ್ತುಮೂರುಕೋಟಿದೇವರ್ಕಗಳು, ದೇವಗಣ
ಸುರಪತಿ, ಖಗಪತಿ, ಸಿಡಿಲು, ಮಿಂಚು, ವರುಣ, ಗರುಡ, ನವಕುಲ
ನಾಗಂಗಳು, ಚಿಂತಾಮಣಿನವರತ್ನಂಗಳು, ಕಾಮಧೇನು, ಕಲ್ಪವೃಕ್ಷ
ಪರುಷರಸ, ಸಿದ್ದರಸ ನಿರ್ಜರೋದಕ, ದಿಕ್ಕರಿಗಳು, ಕೂರ್ಮ ಮೊದಲಾದ
ಜಲಚರಂಗಳು, ಚಂದ್ರತಾರಾಗಣ ನಕ್ಷತ್ರಂಗಳು ಪುಟ್ಟಿದವು.
ಇದಕ್ಕೆ ಶ್ರುತಿ :
ಓಂ ವಿಶ್ವಕರ್ಮಹೃದಯೇ ಬ್ರಹ್ಮಚಂದ್ರಮಾ ಮನಸೋ ಜಾತಃ
ಚಕ್ಷೋಸ್ಸೂರ್ಯದಯಾಭ್ಯೋ ಸರ್ವಾಂಗ ಭೂಷಿಣಿ
ದೇವಸ್ಯ ಬಾಹುದ್ವಯಾಂಶಕಃ
ಪ್ರತಿಬಾಹು ವಿಷ್ಣುಮೇವಚ ಮಣಿಬಂಧೇ ಪಿತಾಮಹಃ
ಜ್ಯೇಷ್ಠಾಂಗುಲೇ ದೇವೇಂದ್ರ ತರ್ಜಂನ್ಯಂಗುಲೇ ಈಶಾನಃ ಪ್ರೋಕ್ತಃ
ಮಾಧ್ಯಮಾದಂಗುಲೇ ಮಾಧವಃ ಅನಾಮಿಕಾಂಗುಲೇ ಅಗ್ನಿ ದೇವಃ
ಕನಿಷ್ಟಾಂಗುಲೇ ಭಾಸ್ಕರಃ ಅಚಲಕುಚಿತಮಧ್ಯೇ ವನರ್ಚಪಾದ
ಆಹ್ವಾನಾಂತು ಜಗತ್ ನಿರ್ಮಿತ ವಿಶ್ವಕರ್ಮಣಾಂ
ಇಂತು ಕಾಶ್ಯಪಬ್ರಹ್ಮನ ಹದಿಮೂರು ಸ್ತ್ರೀಯರುಗಳಿಗೆ ಸಚರಾಚರಂಗಳು
ಪುಟ್ಟಿದವಾಗಿ, ಇವರ ಪರಿಪ್ರಮಾಣ ನಮ್ಮ ಶರಣಸ್ಥಲದಲ್ಲಿದ್ದವರು ಬಲ್ಲರು.
ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ್ಯ,
ಪಂಚವಕ್ತ್ರ, ಆದಿಲಿಂಗ, ಅನಾದಿಶರಣ ಇವರೆಲ್ಲರು ಸಾಕ್ಷಿಯಾಗಿ
ಕೂಡಲಚೆನ್ನಸಂಗಯ್ಯನೆ ವಿಶ್ವಕರ್ಮ ಜಗದ್ಗುರು/445
ಓಗರವ ಪ್ರಸಾದವ ಮಾಡಿ, ಪ್ರಸಾದವ ಓಗರವ ಮಾಡಿ,
ಕೊಟ್ಟುಕೊಂಬನಾಗಿ ಆತ ಲಿಂಗಪ್ರಸಾದಿ
ರೂಪು ರಸ ಗಂಧ ಶಬ್ದ ಪರುಶ ಸಹಿತ
ಜಂಗಮಕ್ಕೆ ಅರ್ಪಿತವ ಮಾಡಿಕೊಂಬನಾಗಿ ಆತ ಜಂಗಮಪ್ರಸಾದಿ.
ಸಪ್ತಧಾತು ಅಷ್ಟಮದವಿಲ್ಲಾಗಿ ಆತ ಲಿಂಗಪ್ರಸಾದಿ.
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವಿಲ್ಲಾಗಿ
ಆತ ಜಂಗಮಪ್ರಸಾದಿ.
ಇದು ಕಾರಣ, ಕೂಡಲಚೆನ್ನಸಂಗಾ
ನಿಮ್ಮ ಪ್ರಸಾದಿಗೆ ನಮೋ ನಮೋಯೆಂಬೆ. /446
ಓದನಾದರಿಸಿ, ಗಿಳಿಯ ತಂದು ಸಲಹಿ ಓದಿಸಿದಳಯ್ಯಾ;
ಆಲದ ಮರದ ಗಿಳಿ ಓಜೆಗೊಂಡಿತ್ತಯ್ಯಾ !
ಗಿಳಿ ಓದಿತ್ತು, ತನ್ನ ಪರಬ್ರಹ್ಮವ ಬೇಡಿತ್ತು;
ತನ್ನ ಪೂರ್ವಾಶ್ರಯದ ಕೊರೆಯ ಕೂಳನುಂಡ ಗಿಳಿ,
ಮರೆಯಿತ್ತು ತನ್ನ ತಾನು !
ಅರಿವೆಂಬ ಜ್ಞಾನ ಹುಟ್ಟಿತ್ತಯ್ಯಾ ; ಅರಿವೆಂಬ ಜ್ಞಾನ ಹುಟ್ಟಲಿಕೆ
ಜಂಪಿನ ಕಡ್ಡಿಯ ಮೇಲೆ ಕುಳಿತಿರ್ದಿತ್ತಯ್ಯಾ !
ಜಂಪಿನ ಕಡ್ಡಿಯ ಮೇಲೆ ಕುಳಿತ ಗಿಳಿ, ಜಂಪಳಿಸುತ್ತಿರ್ದಿತ್ತು ತನ್ನ ತಾನು.
`ಅಕ್ಕಟಾ ಅಕ್ಕಟಾ’ ಎಂದು,
ತನ್ನ ಪೂರ್ವಾಶ್ರಯದ ಅಕ್ಕನೆಂಬಾ ಅಕ್ಕನ ಕರೆಯಿತ್ತು.
ಚಕ್ಕನೆ ಲಿಂಗವೆಂಬ ಗೊಂಚಲ ಹಿಡಿಯಲು ಮಿಕ್ಕು ಪಲ್ಲವಿಸಿತ್ತು,
ಕೂಡಲಚೆನ್ನಸಂಗಯ್ಯನಲ್ಲಿ ಪ್ರಭುವೆಂಬ ಲಿಂಗವು. /447
ಓದಿದ ವೇದದಲ್ಲಿ ಏನಹುದಯ್ಯಾ ? ಓದಿಸಬಾರದಂಥ ಲಿಂಗಸ್ಥಲ.
ಸಾದಿಸಿದ ಶಾಸ್ತ್ರದಲೇನಹುದಯ್ಯಾ ? ಸಾಧ್ಯವಾಗದಂಥ ಜಂಗಮಸ್ಥಲ.
ತರ್ಕಿಸಿದ ತರ್ಕದಲ್ಲಿ ಏನಹುದಯ್ಯಾ ? ತರ್ಕಕ್ಕಗೋಚರವಹಂಥ ಪ್ರಸಾದಿಸ್ಥಲ.
ಓದು ವೇದಶಾಸ್ತ್ರ ತರ್ಕಕ್ಕಗೋಚರ
ಕೂಡಲಚೆನ್ನಸಂಗಾ ನಿಮ್ಮ ಶರಣ. /448
ಓದಿದರೇನುಳ ಕೇಳಿದರೆನುಳ ಆಸೆ ಅಳಿಯದು ರೋಷ ಬಿಡದು,
ಮಜ್ಜನಕ್ಕೆ ನೀಡಿ ಫಲವೇನು ?
(ವಚನಾರಂಭದ ನುಡಿಯ ಕಲಿತವರೆಲ್ಲ ಅನುಭಾವಿಗಳಪ್ಪರೆ ?
ಅಷ್ಟಾಷಷ್ಟಿ ತೀರ್ಥಂಗ? ಮೆಟ್ಟಿದವರೆಲ್ಲ ತೀರ್ಥವಾಸಿಗಳಪ್ಪರೆ ?
ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಮಾಡಿದವರೆಲ್ಲ
ಲಿಂಗಾರ್ಚಕರಪ್ಪರೆಳ ಅಲ್ಲ.)
ಲಾಂಛನವ ಹೊತ್ತು ಕಾಂಚನಕ್ಕೆ ಕೈಯ ನೀಡುವ
ಜಗಭಂಡರ ಮೆಚ್ಚುವನೆ ಕೂಡಲಚೆನ್ನಸಂಗಮದೇವ ?/449
ಓಲೆಯಕಾರ ಭಕ್ತನಾದರೆ ಮನದ ಕ್ರೋಧ ಬಿಡದು.
ಒಕ್ಕಲಿಗ ಭಕ್ತನಾದರೆ ಅವನ ಪೂರ್ವಾಶ್ರಯ ಬಿಡದು.
ಹಾರುವ ಭಕ್ತನಾದರೆ ಜಾತಿ ಸೂತಕ ಬಿಡದು.
ಬೆವಹಾರಿಯ ಭಕ್ತಿಯೊಂದು ಶಬ್ದದಲ್ಲಿ ಹೋಯಿತ್ತು.
ಅರಸಿನ ಭಕ್ತಿ ಅರಸಿ ನೋಡಲಿಲ್ಲ.
ಸೂಳೆಯ ಭಕ್ತಿ ಹದಿನೆಂಟು ಜಾತಿಯ ಎಂಜಲ ತಿಂದಿತ್ತು.
ಕೂಡಲಚೆನ್ನಸಂಗಯ್ಯ ಮಜ್ಜನಕ್ಕೆರೆವ ಭವಿಗಳನೇನೆಂಬೆ? /450
ಓಲೆಯನಿಕ್ಕಿದ ಬಾಲೆಯ ಓಲೆಗಳೆಯದಿದೆಂತೊ?
ಓಲೆಯಿದ್ದು [ಓಲೆ]ಗಾಯತವಾಯಿತ್ತೆಲ್ಲರಿಗೆಯೂ,
ಓಲೆಯೂ ಹೋಯಿತ್ತೆನಗೆ, ಬಾಲೆಯೂ ಹೋಯಿತ್ತೆನಗೆ,
ಓಲೆಯ ಬಾಲೆಯ ಕೀಲಬಲ್ಲವರ ಕೂಡಲಚೆನ್ನಸಂಗನೆಂಬೆನು./451
ಕಂಗಳ (ನೋಟ) ಲಿಂಗಕ್ಕೆ ಅರ್ಪಿತ,
ಮನ ಮುಟ್ಟಿದ ಆರೋಗಣೆಯೆಂಬುದೇನೊ?
ಸಂಕಲ್ಪಿವಿರಹಿತ ಶರಣನು,
ಆಗಮವಿರಹಿತ ಶರಣನಲ್ಲದೇನೊ? ಶರಣಂಗೆ ಸೀಮೆಯೆಂಬುದೇನೊ?
ನಿರ್ಭಾವದ ಕೈಯಲು ಮುಟ್ಟಿ ಲಿಂಗಾರ್ಪಿತವು,
ಮಿಕ್ಕುದು ಕಿಲ್ಬಿಷ ಕೂಡಲಚೆನ್ನಸಂಗಮದೇವಾ./452
ಕಂಗಳ ಅಂಗಳದಲ್ಲಿ ಲಿಂಗ ಅನಿಮಿಷವಾಗಿಹುದೆ [ನೇತ್ರ]ಕಾಯವು.
ಶ್ರೋತ್ರ ಸೊಗಸಿನ ಘನಾನುಭಾವದಲ್ಲಿಹುದೆ ಶ್ರೋತ್ರಕಾಯವು,
ಮನ ಪ್ರಾಣ ಸಂಯೋಗದಲ್ಲಿ,
ಕೂಡಲಚೆನ್ನಸಂಗನಲ್ಲಿ ನಿಜವಾಗಿಹುದೆ ಶರಣಕಾಯವು./453
ಕಂಗಳ ತುರೀಯುವ ಕರಸ್ಥಲ ನುಂಗಿ, ಕರಸ್ಥಲದ ದೃಷ್ಟವ ಕಂಗಳು ನುಂಗಿ,
ಇಂತೀ ಉಭಯಕುಳವಳಿದು ಅದ್ವೈತವಾದ ಶರಣಂಗೆ
ಆಹ್ವಾನವಿಲ್ಲ ವಿಸರ್ಜನವಿಲ್ಲ ಹಿಂದೆಂಬುದಿಲ್ಲ ಮುಂದೆಂಬುದಿಲ್ಲ;
ಒಳಗೆಂಬುದಿಲ್ಲ, ಹೊರಗೆಂಬುದಿಲ್ಲ, ಕೀಳೆಂಬುದಿಲ್ಲ, ಮೇಲೆಂಬುದಿಲ್ಲ.
ಕೂಡಲಚೆನ್ನಸಂಗಮದೇವಾ,
ನಿಮ್ಮ ಶರಣನೆತ್ತತ್ತ ನೋಡಿದಡತ್ತತ್ತ ನೀವೆ ಕಂಡಯ್ಯಾ !/454
ಕಂಗಳ ನೋಟ ಕರಸ್ಥಳದ ಪ್ರಾಣ,
ಮನದೊಳಗೆ ಪರಿಣಾಮವ ತೋರುತ್ತಿದೆ ನೋಡಾ !
ನಡೆದಡೆ ಹೆಜ್ಜೆಯಿಲ್ಲ, ನಿಂದಡೆ ನೆಳಲಿಲ್ಲ,
ಸುಳುಹಿನೊಳಗೊಂದು ಅತಿಶಯದ ಸುಳುಹು ನೋಡಾ !
ತೆರೆಯ ಮರೆಯ ಪರಶಿವನು
ನಡೆಗಲಿತು ಬಪ್ಪ ಕರುಣವ ನೋಡಾ !
ಸಂಗನಬಸವಣ್ಣಾ, ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ
ಪ್ರಭುದೇವರ ಬರುವು ತಪ್ಪದು./455
ಕಂಗಳ ನೋಟ ಮನದ ಕೂಟದಲ್ಲಿಯೆ
ಏಕತ್ವಭಾವದ ಲಿಂಗೈಕ್ಯದ ನಿಲವು
ತನ್ನಿಂದ ತಾನೆಯಾದ ಬಗೆಯ ನೋಡಾ !
ಅರಿಯಲಿಲ್ಲದ ಅರಿವಿನ ತೆರನು ಸಯವಾಯಿತ್ತು.
ಕೂಡಲಚೆನ್ನಸಂಗಯ್ಯನಲ್ಲಿ ಸಿದ್ಧರಾಮಯ್ಯಂಗೆ./456
ಕಂಗಳ ನೋಟ ಲಿಂಗಕ್ಕೆ [ಪೂಜೆ], ಮನಮುಟ್ಟಿದಾರೋಗಣೆಯೆಂಬುದೇನೊ?
ಸಂಕಲ್ಪ ವಿಕಲ್ಪವಿರಹಿತ ನಿಮ್ಮ ಶರಣಂಗೆ ಸೀಮೆಯೆಂಬುದೇನೊ?
ಕಾಯದ ಕೈಯಲು ಲಿಂಗಾರ್ಪಿತವದು ಕಿಲ್ಬಿಷ
ಕೂಡಲಚೆನ್ನಸಂಗಮದೇವಾ. /457
ಕಂಗಳ ನೋಟ ಹೃದಯದ ಜ್ಞಾನ,
ಮನದೊಳಗೆ ಮಾತನಾಡುತಿರ್ದೆನಯ್ಯಾ !
ಜೇನ ಮಳೆಗಳು ಕರೆದವು ಅಮೃತದ ಬಿಂದುಗಳು ಸುರಿದವು,
ಕೂಡಲಚೆನ್ನಸಂಗನೆಂಬ ರಸಸಾಗರದೊಳಗೋಲಾಡುತಿರ್ದೆನಯ್ಯಾ !/458
ಕಂಗಳಾಶ್ರಯದ ಸೋಂಕಿನ ಸುಖಸಂಬಂಧವನು
ಮಹದಾಶ್ರಯಕ್ಕೆ ತಂದು ಸೂಸಲೀಯದೆ ನಿಮಗರ್ಪಿಸುವೆ.
ನಾಶಿಕಾಶ್ರಯದ ಸೋಂಕಿನ ಸುಖಸಂಬಂಧವನು
ಮಹದಾಶ್ರಯಕ್ಕೆ ತಂದು ಸೂಸಲೀಯದೆ ನಿಮಗರ್ಪಿಸುವೆ.
ಈ ಎರಡುಸ್ಥಾನ ಮೊದಲಾದ ಷಡುಸ್ಥಾನಾಶ್ರಯದ
ಸೋಂಕಿನ ಸುಖಸಂಬಂಧವನು ಮಹಾದಾಶ್ರಯಕ್ಕೆ ತಂದು
ಸೂಸಲೀಯದೆ ಷಡುವಿಧ ಲಿಂಗಂಗಳಿಗರ್ಪಿಸುವೆ.
ಆಪ್ಯಾಯನದಲ್ಲಿ [ಅಂಗವಿಸುವ] ಸಚರಾಚರವ
ಚೈತನ್ಯದ ಮಧ್ಯಕ್ಕೆ ತಂದು ನಾನರ್ಪಿಸುವೆ.
ಇದು ಕಾರಣ ಕೂಡಲಚೆನ್ನಸಂಗನ ಬಸವಣ್ಣನ
ಪ್ರಸಾದದಿಂದ ಪ್ರಸಾದಿಯಾದೆನಯ್ಯಾ. /459
ಕಂಗಳಿಗೆ ತೂ….. ಬಾರ
ಅಂಗಜೀವಿಗಳ ಕೂಡಿ ನಡೆವನೆ ಶರಣ ?
ತನ್ನ ಸುಖವನೆ ಸಂತದಲಿ ಅನುಭವವ ಮಾಡುವನಲ್ಲದೆ,
ನುಡಿದಂತೆ ನಡೆಯದಿದ್ದವರ ಕಂಡಡೆ
ತನ್ನೊಳಗೆ ತಾನೆ ನಗುವ
ಶರಣ ನುಡಿದಡೆ ಅದನಲ್ಲೆಂಬರು ಸಂಸಾರಜೀವಿಗಳು.
ಶರಣ ನುಡಿದಡೆ ಅದನಲ್ಲೆಂಬರು ಸಂಸಾರಜೀವಿಗಳು.
ಶರಣ ನುಡಿದಡೆ ಅದನಲ್ಲೆಂಬರು ಭವಭಾರಿಜೀವಿಗಳು.
…. ಅಲ್ಲೆಂಬುದ ತಾನು ಬಲ್ಲನಾಗಿ ನುಡಿಯ.
ಗುಣಮುಗ್ಧವರಿಾನಿಯಾಗಿಪ್ಪ ಕೂಡಲಚೆನ್ನಸಂಗಾ
ನಿಮ್ಮ ಶರಣ./460
ಕಂಗಳು ನೋಡಿದ ಪದಾರ್ಥ ಲಿಂಗಕ್ಕರ್ಪಿತವಲ್ಲ,
ಕಿವಿಗಳು ಕೇಳಿದ ಪದಾರ್ಥ ಲಿಂಗಕ್ಕರ್ಪಿತವಲ್ಲ,
ನಾಸಿಕ ಮುಟ್ಟಿದ ಪದಾರ್ಥ ಲಿಂಗಕ್ಕರ್ಪಿತವಲ್ಲ,
ಜಿಹ್ವೆ ಸೋಂಕಿದ ಪದಾರ್ಥ ಲಿಂಗಕ್ಕರ್ಪಿತವಲ್ಲ,
ಕೈಗಳು ಮುಟ್ಟಿದ ಪದಾರ್ಥ ಲಿಂಗಕ್ಕರ್ಪಿತವಲ್ಲ,
ರೂಪು ರಸ ಗಂಧ ರುಚಿ ಸ್ಪರ್ಶವನು
ಕೂಡಲಚೆನ್ನಸಂಗಯ್ಯಾ ನೀನರಿಯಲು ಪ್ರಸಾದವೆನಗೆ. /461
ಕಂಡ ಚಿತ್ತ ವಸ್ತುವಿನಲ್ಲಿ ಮಗ್ನವಾದ ಮತ್ತೆ
ಸಂಸಾರ ವಿಷಯಕ್ಕೆ ಮತ್ತನಪ್ಪುದೆ ?
ಮತ್ತೆ ಭಕ್ತರ ಗೃಹ, ರಾಜದ್ವಾರದ ತಪ್ಪಲ ಕಾಯ್ವುದೆ ?
ಆ ಚಿತ್ತ ತೊಟ್ಟು ಬಿಟ್ಟ ಹಣ್ಣು, ಕೆಟ್ಟುಸತ್ತ ಬಿದಿರು
ದೃಷ್ಟನಷ್ಟವಾದ ಅಂಗಕ್ಕೆ ಮತ್ತೆ ಬಪ್ಪುದೆ, ಪುನರಪಿಯಾಗಿ ?
ಇದು ನಿಶ್ಚಯ ನಿಜಲಿಂಗಾಂಗ ನಿಲರ್ೆಪನ ಹೊಲಬು.
ಜಗದ ಮೊತ್ತದವನಲ್ಲ ನಿಷ್ಕಳಂಕ,
ಕೂಡಲಚೆನ್ನಸಂಗಮದೇವ ತಾನಾದ ಶರಣ. /462
ಕಂಡಂತೆ ಕಂಡಂತೆ ಆಯಿತ್ತು ಭಕ್ತಿ, ಕಂಡಂತೆ ಕಂಡಂತೆ ಆಯಿತ್ತಯ್ಯಾ !
ಉಪಚಾರಕ್ಕೆ ಬಂದುದು ಉಪಚಾರಕ್ಕೆ ನಿಂದಿತ್ತಲ್ಲಾ !
ಭೃತ್ಯಾಚಾರ, ಸಮಯಭಕ್ತಿ ಸಂಗನಬಸವಣ್ಣನೊಡನೆ ಹೋಯಿತ್ತು,
ಕೂಡಲಚೆನ್ನಸಂಗಯ್ಯ ಬಸವಣ್ಣನು ಒಯ್ಯಲಾಗಿ./463
ಕಂಥೆಯೊಳಗಣ ಕಪಟವ ಹರಿದಲ್ಲದೆ ಕಾಯ[ನಿರ್ವಂಚಕ]ನಲ್ಲ.
ಕಪ್ಪರದೊಳಗಣ ಆಪ್ಯಾಯನವ ಹರಿದಲ್ಲದೆ ಜೀವ[ನಿರ್ಭಾವಕ]ನಲ್ಲ.
ಕಣ್ಣಿನೊಳಗಣ ಕಾಳಿಕೆ ಹಿಂಗಿದಲ್ಲದೆ ಜ್ಞಾನಾನುಭಾವಿಯಲ್ಲ.
ಕಾಯದೊಳಗಣ ಕಟ್ಟಿಗೆ ಮುರಿದು, ಮಾಯದೊಳಗಣ ಕಂಥೆಯ ಹರಿದು,
ಮನದೊಳಗಣ ಕಪ್ಪರವನೊಡೆದು, ಸುಳಿದಾಡುವ ಕಣ್ಣ ಕಿತ್ತು,
ನಿಶ್ಚಯ ನಿಜದಲ್ಲಿ ಚರಿಸುವ ಜ್ಞಾನಜಂಗಮಕ್ಕೆ
`ನಮೋ ನಮೋ’ ಎಂಬೆ ಕೂಡಲಚೆನ್ನಸಂಗಮದೇವಾ/464
ಕಂದದ ಹೂವನೆ ಕೊಯ್ದು, ನಂದದಾರತಿಯನೆ ಬೆಳಗಿ,
ಅಂದವಳಿಯದೆ, ಬಿಂದು ತುಳುಕದೆ, ನಂದಿ ಮುಂದುಗೆಡದೆ,
ಅಂದಂದಿನ ಹೊಸ ಪೂಜೆಯ ಮಾಡಿ
ಆ ಲಿಂಗಮಧ್ಯವನೆ ತಿಳಿದು ನೋಡಿ
ಮೇರುಗಿರಿಯಾಕಳನೆ ಕರೆದು, ಕ್ಷೀರದಲ್ಲಿ ಅಡಿಗೆಯ ಮಾಡಿ,
ಕೂಡಲಚೆನ್ನಸಂಗಯ್ಯನೆಂಬ ಲಿಂಗಕ್ಕೆ
ಆರೋಗಣೆಯ ಸಮಯ/465
ಕಕ್ಷೆ ಕರಸ್ಥಳ ಕಂಠ ಉತ್ತಮಾಂಗ ಮುಖಸೆಜ್ಜೆ ಅಂಗಸೋಂಕೆಂಬಿವು
ಬಹಿರಂಗದ ಶೃಂಗಾರ.
ಬ್ರಹ್ಮರಂಧ್ರ ಭ್ರೂಮಧ್ಯ ನಾಸಿಕಾಗ್ರ ಚೌಕಮಧ್ಯವೆಂಬಿವು
ಅಂತರಂಗದ ಶೃಂಗಾರ.
ಬ್ರಹ್ಮರಂಧ್ರದಲ್ಲಿ ಲಿಂಗಸ್ವಾಯತ,
ಭ್ರೂಮಧ್ಯದಲ್ಲಿ ಜಂಗಮಸ್ವಾಯತ,
ನಾಸಿಕಾಗ್ರದಲ್ಲಿ ಪ್ರಸಾದಸ್ವಾಯತ,
ಚೌಕಮಧ್ಯದಲ್ಲಿ ಅನುಭಾವಸ್ವಾಯತ.
ಇಂತೀ ಚತುರ್ವಿಧ ಸಾಹಿತ್ಯವಾಗಿ
ನೋಡಿತ್ತೇ ಪಾವನ, ಮುಟ್ಟಿತ್ತೇ ಅರ್ಪಿತ
ಕೂಡಲಚೆನ್ನಸಂಗಮದೇವಾ. /466
ಕಕ್ಷೆಯಲ್ಲಿ ಲಿಂಗವ ಧರಿಸಿಕೊಂಡ ಬಳಿಕ
ಅನ್ಯಕಾಂಕ್ಷೆಯಿಲ್ಲದಿರಬೇಕು.
ಮಾಯದ ಉಸಿರು ಎಡೆಯಾಡದಿರಬೇಕು,
ಸಂಸಾರ ಸಂಗವ ಹೊದ್ದದೆ
ಮನವು ಮಹಾಸ್ಥಲವನಿಂಬುಗೊಂಡಿರಬೇಕು,
ಕೂಡಲಚೆನ್ನಸಂಗನಲ್ಲಿ ಏಕಾರ್ಥವಾಗಿರಬೇಕು. /467
ಕಕ್ಷೆಯಲ್ಲಿ ಲಿಂಗವ ಧರಿಸಿಕೊಂಡಾತ ಬ್ರಹ್ಮ.
ಕರಸ್ಥಲದಲ್ಲಿ ಲಿಂಗವ ಧರಿಸಿಕೊಂಡಾತ ವಿಷ್ಣು.
ಕಂಠದಲ್ಲಿ ಲಿಂಗವ ಧರಿಸಿಕೊಂಡಾತ ರುದ್ರ.
ಉರಸೆಜ್ಜೆಯಲ್ಲಿ ಲಿಂಗವ ಧರಿಸಿಕೊಂಡಾತ ಈಶ್ವರ.
ಉತ್ತಮಾಂಗದಲ್ಲಿ ಲಿಂಗವ ಧರಿಸಿಕೊಂಡಾತ ಸದಾಶಿವ.
ಆಮಳೋಕ್ಯದಲ್ಲಿ ಲಿಂಗವ ಧರಿಸಿಕೊಂಡಾತ ಪರಮೇಶ್ವರ.
ಬ್ರಹ್ಮಂಗೆ ಪೀತವರ್ಣದ ಲಿಂಗ, ವಿಷ್ಣುವಿಂಗೆ ನೀಲವರ್ಣದ ಲಿಂಗ,
ರುದ್ರಂಗೆ ಕಪಿಲವರ್ಣದ ಲಿಂಗ, ಈಶ್ವರಂಗೆ ಮಾಂಜಿಷ್ಟವರ್ಣದ ಲಿಂಗ,
ಸದಾಶಿವಂಗೆ ಮಾಣಿಕ್ಯವರ್ಣದ ಲಿಂಗ, ಪರಮೇಶ್ವರಂಗೆ ಸ್ಫಟಿಕವರ್ಣದ ಲಿಂಗ.
ಬ್ರಹ್ಮ ಪಾಶುಪತಿಯಾಗಿ ಸುಳಿದ, ವಿಷ್ಣು ಜೋಗಿಯಾಗಿ ಸುಳಿದ,
ರುದ್ರ ಶ್ರವಣನಾಗಿ ಸುಳಿದ, ಈಶ್ವರ ಸನ್ಯಾಸಿಯಾಗಿ ಸುಳಿದ,
ಸದಾಶಿವ ಯೋಗಿಯಾಗಿ ಸುಳಿದ, ಪರಮೇಶ್ವರ ಕಾಳಾಮುಖಿಯಾಗಿ ಸುಳಿದ.
ಬ್ರಹ್ಮಂಗೆ ಕಾವಿ ಬಿಳಿದು, ವಿಷ್ಣುವಿಂಗೆ ಪೀತಸಕಲಾತಿ,
ರುದ್ರಂಗೆ ಕಾಗು ಕಂಬಳಿ, ಈಶ್ವರಂಗೆ ಮೃಗಾಜಿನ ಕಾವಿಕಪ್ಪಡ,
ಸದಾಶಿವಂಗೆ ಪುಲಿಚರ್ಮ ರತ್ನಗಂಬಳಿ,
ಪರಮೇಶ್ವರಂಗೆ ಮೇಕೆಚರ್ಮ ಸಿತಕಪ್ಪಡ.
ಬ್ರಹ್ಮ ಸ್ಥೂಲನೆಂದು, ವಿಷ್ಣು ಸೂಕ್ಷ್ಮನೆಂದು, ರುದ್ರ ಕಾರಣನೆಂದು,
ಈಶ್ವರ ಸಕಲನೆಂದು, ಸದಾಶಿವ ನಿಃಕಲನೆಂದು, ಪರಮೇಶ್ವರ ಶೂನ್ಯನೆಂದು.
ಬ್ರಹ್ಮಂಗೆ `ನ’ಕಾರ, ವಿಷ್ಣುವಿಂಗೆ `ಮ’ಕಾರ, ರುದ್ರಂಗೆ `ಶಿ’ಕಾರ,
ಈಶ್ವರಂಗೆ `ವ’ಕಾರ, ಸದಾಶಿವಂಗೆ `ಯ’ಕಾರ, ಪರಮೇಶ್ವರಂಗೆ `ಓಂ’ ಕಾರ.
ಬ್ರಹ್ಮಂಗೆ ಭಕ್ತಸ್ಥಲ, ವಿಷ್ಣುವಿಂಗೆ ಮಹೇಶ್ವರಸ್ಥಲ, ರುದ್ರಂಗೆ ಪ್ರಸಾದಿಸ್ಥಲ,
ಈಶ್ವರಂಗೆ ಪ್ರಾಣಲಿಂಗಿಸ್ಥಲ, ಸದಾಶಿವಂಗೆ ಶರಣಸ್ಥಲ,
ಪರಮೇಶ್ವರಂಗೆ ಐಕ್ಯಸ್ಥಲ.
ಇಂತಪ್ಪ ಶೈವಲಿಂಗದ ಭಕ್ತಿಯು, ಷಡುಸ್ಥಲದ ಸುಳುಹಿನೊಳಗಲ್ಲ.
ರೇವಣಸಿದ್ಧಯ್ಯದೇವರು ಸಾಕ್ಷಿಯಾಗಿ
ಪ್ರಭುದೇವರ ವಿರಶೈವ ಲಿಂಗ ಜಂಗಮದ ಷಡುಸ್ಥಲ ಸುಳುಹು
ಆ ಭೇದವ ಕೂಡಲಚೆನ್ನಸಂಗಯ್ಯನಲ್ಲಿ ಕಾಣಾ, ಸಿದ್ಧರಾಮಯ್ಯಾ./468
ಕಣ್ಣ ಕಪ್ಪರದ ಕಾಳಿಕೆಯ ಕಳೆದು,
ತನ್ನ ಲಿಂಗಕ್ಕೆ ಕೊಡಬಲ್ಲನಾಗಿ ಲಿಂಗಪ್ರಸಾದಿ.
ನಾಸಿಕ ಕಪ್ಪರದ ಅವಗಂಧವ ಕಳೆದು,
ಲಿಂಗಕ್ಕೆ ಕೊಡಬಲ್ಲನಾಗಿ ಲಿಂಗಪ್ರಸಾದಿ.
ಜಿಹ್ವೆ ಕಪ್ಪರದಲ್ಲಿ ಅವರುಚಿಯ ಕಳೆದು
ಲಿಂಗಕ್ಕೆ ಕೊಡಬಲ್ಲನಾಗಿ ಲಿಂಗ ಪ್ರಸಾದಿ.
ಸ್ಪರ್ಶ ಕಪ್ಪರದಲ್ಲಿ ಸೊಪ್ಪಡಗಿದಂತೆ
ಯೋಗದ ಪೂರ್ವಾಶ್ರಯವ ಕಳೆದು,
ತನ್ನ ಲಿಂಗಕ್ಕೆ ಕೊಡಬಲ್ಲನಾಗಿ ಲಿಂಗಪ್ರಸಾದಿ.
ಜಿಹ್ವಾಗ್ರೇ ಲಿಂಗಂ ಭಕ್ತಸ್ಯ ಲಿಂಗಸ್ಯಾಗ್ರೇ ತಥಾ ರುಚಿಃ
ರುಚ್ಯಗ್ರೇ ತು ಪ್ರಸಾದೋಸ್ತಿ ಪ್ರಸಾದೋ ಮೋಕ್ಷಸಾಧನಂ
ಇದು ಕಾರಣ ಕೂಡಲಚೆನ್ನಸಂಗಯ್ಯಾ,
ನಿಮ್ಮ ಪ್ರಸಾದಿಗೆ ನಮೋಯೆಂಬೆನು./469
ಕತ್ತಲಮನೆಯಲ್ಲಿರ್ದ ಮನಜನು,
ಜ್ಯೋತಿಯನೆನಿತು ಹೊತ್ತು ನೆನೆದಡೆಯೂ ಬೆಳಕಾಗಬಲ್ಲುದೆ
ಬೆಂಕಿಯ ಹೊತ್ತಿಸದನ್ನಕ್ಕ ?
ಮರದುದಿಯ ಫಲವು ನೋಟಮಾತ್ರಕ್ಕುದುರುವುದೆ
ಹತ್ತಿ ಹರಿಯದನ್ನಕ್ಕ ?
ಹುಟ್ಟುಗುರುಡನು ಕಷ್ಟಪಟ್ಟು, ಎಷ್ಟುಹೊತ್ತು ನಡೆದಡೆಯೂ
ಇಚ್ಛಿತ ಪಟ್ಟಣವ ಮುಟ್ಟುವನೆ ಕಣ್ಣುಳ್ಳವನ ಕೈವಿಡಿಯದನ್ನಕ್ಕ ?
ಹಾಂಗೆ, ಸಮ್ಯಗ್ಜ್ಞಾನಾತ್ಮಕವಾದ
ಲಿಂಗಾರ್ಚನ, ಲಿಂಗನಿರೀಕ್ಷಣ, ಲಿಂಗಧ್ಯಾನಗಳಿಲ್ಲದೆ,
ಆ ನೆನಹು, ನಿರೀಕ್ಷಣೆ, ಪೂಜೆ ಇವುಗಳೊಂದೊಂದೆ
ಮುಕ್ತಿಯನೀವವೆಂಬ ಯುಕ್ತಿಗೆಟ್ಟ ಮಂದಮತಿಗಳ ಮೆಚ್ಚುವನೆ
ಕೂಡಲಚೆನ್ನಸಂಗಮದೇವನು ?/470
ಕಪಿಲವರ್ಣ ನೀಲವರ್ಣ ಮಾಂಜಿಷ್ಟವರ್ಣ ಪೀತವರ್ಣ
ಕಪ್ಪುವರ್ಣ ಶ್ವೇತವರ್ಣ ಗೌರವರ್ಣವೆಂಬ ಸಪ್ತಧಾತುಗಳು.
ಇವಕ್ಕೆ ವಿವರ :
ಕಪಿಲವರ್ಣದ ಧಾತು ಪೃಥ್ವಿ ಅಂಶ, ದೇಹವ ಅಳುುಕುತ್ತಿಹುದು.
ನೀಲವರ್ಣದ ಧಾತು ಅಪ್ಪುವಿನ ಅಂಶ, ದೇಹವ [ನಡುಗುತ್ತಿಹುದು].
ಮಾಂಜಿಷ್ಟವರ್ಣದ ಧಾತು ಅಗ್ನಿ ಅಂಶ, ದೇಹ ಕನಸ ಕಾಣುತಿಹುದು.
ಪೀತವರ್ಣದ ಧಾತು ವಾಯು ಅಂಶ, ದೇಹವತ್ತರ ಒತ್ತುತ್ತಿಹುದು.
ಕಪ್ಪವರ್ಣದ ಧಾತು ಆಕಾಶದ ಅಂಶ, ಎತ್ತರ ತತ್ತರಗೆಡಹುತಿಹುದು.
ಶ್ವೇತವರ್ಣದ ಧಾತು ಚಂದ್ರನ ಅಂಶ, ದೇಹ ಕಳವಳಿಸುತಿಹುದು.
ಗೌರವರ್ಣದ ಧಾತು ಸೂರ್ಯನ ಅಂಶ, ಶರೀರ ಸಂಚಲಿಸುತಿಹುದು.
ಇಂತೀ ಸಪ್ತಧಾತುಗಳ ಸ್ವಸ್ಥಾನವಂ ಮಾಡಿ ಲಿಂಗಾರ್ಚನೆಯ ಮಾಡಬಲ್ಲಡೆ
ಕೂಡಲಚೆನ್ನಸಂಗಯ್ಯನಲ್ಲಿ ಶರಣನೆನಿಸುತಿಹನು/471
ಕಬ್ಬನಗಿದ ಗಾಣ ಬಲ್ಲುದೆ ಹಾಲ ಸವಿಯ ?
ಗಗನದಲಾಡುವ ಪಕ್ಷಿ ಬಲ್ಲುದೆ ರವಿಯ ನಿಲವ ?
ಹಗರಣಕ್ಕೆ ಪೂಜಿಸುವರು ಬಲ್ಲರೆ ನಮ್ಮ ಶರಣರ ಸುಳುಹ ?
ನಡುಮುರಿದು ಗುಡುಗೂರಿದಡೇನು
ಲಿಂಗದ ನಿಜವನರಿಯದನ್ನಕ್ಕ ?
ಸಾವನ್ನಕ್ಕ ಜಪವ ಮಾಡಿದಡೇನು
ಲಿಂಗದ ಪ್ರಾಣ ತನ್ನ ಪ್ರಾಣ ಒಡಗೂಡದನ್ನಕ್ಕ ?
ಇಂತಿವರೆಲ್ಲರು ಅಭ್ಯಾಸಶಕ್ತಿಗರುಹಿಗರು !
ನಮ್ಮ ಕೂಡಲಚೆನ್ನಸಂಗಯ್ಯನಲ್ಲಿ
ಮಾಯಾಕೋಳಾಹಳ ಸಿದ್ಧರಾಮಯ್ಯದೇವರಿಗೆ
ಅಹೋರಾತ್ರಿಯಲ್ಲಿ ನಮೋ ನಮೋ ಎಂದು
ಬದುಕಿದೆನು ಕಾಣಾ ಪ್ರಭುವೆ./472
ಕಬ್ಬುನದ ಸೊಣಗನ ತಂದು ಪರುಷವ ಮುಟ್ಟಿಸಲು.
ಸುವರ್ಣದ ಸೊಣಗನಪ್ಪುದು, ಪರುಷವಾಗದು ನೋಡಾ.
ಲೋಕದ ಮಾನವನ ತಂದು ಭಕ್ತನ ಮಾಡಿದರೆ
ವೇಷಲಾಂಛನವಹುದು, ಭಕ್ತನಾಗ ನೋಡಾ.
“ಗುರುಲಿಂಗಂ ಚರಲಿಂಗಂ ಭಾವಲಿಂಗಂ ಪ್ರಸಾದಕಂ
ಚತುರ್ವಿಧಾತ್ಮಕಜ್ಞಾನಂ ಲಿಂಗಭಕ್ತಸ್ಯ ಲಕ್ಷಣಂ’
ಇದು ಕಾರಣ ಕೂಡಲಚೆನ್ನಸಂಗಯ್ಯಾ
ಮಜ್ಜನಕ್ಕೆರೆವ ಭವಿಗಳನೆಂತು ಭಕ್ತರೆಂಬೆ! /473
ಕರಸ್ಥಲ ಸೆಜ್ಜೆಯಾದ ಶರಣನು ಹೊನ್ನಿಗೆ ಕೈಯಾಂತಡದು
ಕರಸ್ಥಳವಲ್ಲ, ಅದು ಕರ್ಮಸ್ಥಳ.
ಅಂಗಸೋಂಕು ಸೆಜ್ಜೆಯಾದ ಶರಣನು
ಅಪ್ಪಿನ ಸೋಂಕಿನ ಸುಖಕ್ಕೆ ಅಂಗೈಸಿದನಾದರೆ
ಅದು ಅಂಗಸೋಂಕಲ್ಲ, ಅದು ಕರ್ಮಸೋಂಕು.
ಮುಖ ಸೆಜ್ಜೆಯಾದ ಶರಣನು ಹುಸಿ ನುಸುಳು ಬಂದಡದು
ಮುಖ ಸೆಜ್ಜೆಯಲ್ಲಿ ಕರ್ಮಸೆಜ್ಜೆ /474
ಕರಸ್ಥಲದಲ್ಲಿ ಲಿಂಗವ ಧರಿಸಿ
ಅನ್ಯದೈವಕ್ಕೆ ತಲೆವಾಗದಾತನ ಲಿಂಗವಂತನೆಂಬೆನಯ್ಯಾ.
ಕರಸ್ಥಲದಲ್ಲಿ ಲಿಂಗವ ಧರಿಸಿ ಭವಿಸಂಗವ ಮಾಡದಾತನ ಲಿಂಗವಂತನೆಂಬೆನಯ್ಯಾ.
ಕರಸ್ಥಲದಲ್ಲಿ ಲಿಂಗವ ಧರಿಸಿದಾತ ಜಡಶೈವರ ಹೊದ್ದಲಾಗದು,
ಶೈವರು ಹೇಳಿದ ಶಾಸ್ತ್ರವ ಓದಲಾಗದು,
ಅನ್ಯಮಂತ್ರ ಅನ್ಯಜಪಮಾಲಿಕೆಯ ಮಾಡಲಾಗದು,
ಲಿಂಗಬಾಹ್ಯ ಸತಿಸುತರ ಸೋಂಕಲಾಗದು.
ಕರಸ್ಥಲದಲ್ಲಿ ಲಿಂಗವ ಧರಿಸಿದಾತ ಉದಯಾಸ್ತಮಾನವೆನ್ನದೆ
ಶಿವಪೂಜೆ ಶಿವಮಂತ್ರ ಶಿವಾರ್ಪಣ ಶಿವಶಾಸ್ತ್ರ
ಶಿವಯೋಗದಲ್ಲಿರುವಾತನೆ ಲಿಂಗವಂತನೆಂಬೆನಯ್ಯಾ.
ಇದಮೀರಿ; ಕರಸ್ಥಲದಲ್ಲಿ ಲಿಂಗವ ಧರಿಸಿ
ತನ್ನ ಮನೆಯಲ್ಲಿ ಅನ್ಯದೈವ ಭವಿಮಿಶ್ರ ಅನ್ಯಬೋಧೆ
ಭವಿಶಾಸ್ತ್ರವುಳ್ಳಾತನ ಶುದ್ಧಭವಿಯೆಂಬೆನಯ್ಯಾ.
ಅದೆಂತೆಂದಡೆ;
“ಅಭಕ್ತಜನಸಂಗಶ್ಚ ಆಮಂತ್ರಂಚ ಅನಾಗಮಃ
ಅನ್ಯದೈವಪರಿತ್ಯಾಗೋ ಲಿಂಗಭಕ್ತಸ್ಯ ಲಕ್ಷಣಂ
ಶಿವಸ್ಯ ಶಿವಮಂತ್ರಸ್ಯ ಶಿವಾಗಮಸ್ಯ ಪೂಜನಂ
ಶಿವಶೇಷಶೀಲಸಂಬಂಧೋ ಲಿಂಗಭಕ್ತಸ್ಯ ಲಕ್ಷಣಂ
ಲಿಂಗಧಾರೀ ಸುಭಕ್ತಶ್ಚ ಲಿಂಗಬಾಹ್ಯಸತೀಸುತಃ
ಅಲಿಂಗಿನೀ ಚುಂಬಕಶ್ಚ ರೌರವಂ ನರಕಂ ವ್ರಜೇತ್ ಎಂದುದಾಗಿ
ಗುರುವಾಕ್ಯವ ಮೀರಿ ನಡೆವ ಮಹಾಪಾತಕರ ಮುಖವ ತೋರದಿರಾ,
ಸೆರೆಗೊಡ್ಡಿ ಬೇಡಿಕೊಂಬೆ, ದಯದಿಂದ ನೋಡಿ ರಕ್ಷಿಸು
ಕೂಡಲಚೆನ್ನಸಂಗಮದೇವಾ. /475
ಕರಸ್ಥಲದಲ್ಲಿ ಲಿಂಗವ ಧರಿಸಿಕೊಂಡು,
ಶಿವನೆ ಆರೋಗಣೆಯ ಮಾಡಿಹೆನೆಂದು ಮಾಡಲಾಗದು.
ಲಿಂಗಭಾಜನದಲ್ಲಿ ಸಹಭೋಜನವ ಮಾಡುವ ಉದ್ದೇಶಿಗಳನೇನೆಂಬೆಯ್ಯಾ ?
ಮಾಡಲಾಗದು, ಮಾಡಲಾಗದು ! ಏನು ಕಾರಣ ?
-ಇಂದ್ರಿಯವಿಕಾರ ಬಿಡದನ್ನಕ್ಕ, ತನುವಿಕಾರ ಬಿಡದನ್ನಕ್ಕ,
“ಸಂಕಲ್ಪಂ ಚ ವಿಕಲ್ಪಂ ಚ ಭಾವಾಭಾವವಿವರ್ಜಿತಃ
ಯಸ್ಯ ಅಂತಃಕರೇ ಲಿಂಗಂ ನೈವೇದ್ಯಂ ಸಹ ಭೋಜನಂ ಎಂದುದಾಗಿ
ಇದು ಕಾರಣ ಕೂಡಲಚೆನ್ನಸಂಗಯ್ಯಾ
ಸಹಭೋಜನ ನಾಯಕನರಕ/476
ಕರಸ್ಥಲದಲ್ಲಿ ಲಿಂಗಸ್ಥಾಪನವಾದ ಬಳಿಕ,
ಲಿಂಗದಲ್ಲಿ ಅನಿಮಿಷ ದೃಷ್ಟಿಯಾಗಬೇಕು.
ತನ್ನ ತಾನೆ ಅನಿಮಿಷವಾಗಬೇಕು.
ಲಿಂಗದಲ್ಲಿ ಅನಿಮಿಷವಾಗಬೇಕು.
ಜಂಗಮದ ನಿಲುಕಡೆಯನರಿಯಬೇಕು.
ಪ್ರಸಾದದಲ್ಲಿ ಪರಿಪೂರ್ಣನಾಗಬೇಕು.
ಹಿರಣ್ಯಕ್ಕೆ ಕೈಯಾನದಿರಬೇಕು
ತನ್ನ ನಿಲುಕಡೆಯ ತಾನರಿಯಬೇಕು.
ಇದು ಕಾರಣ, ಕೂಡಲಚೆನ್ನಸಂಗನಲ್ಲಿ
ಕರಸ್ಥಲದ ನಿಜವನರಿವರೆ ಇದು ಕ್ರಮ./477
ಕರುಣಜಲ ವಿನಯಜಲ ಸಮತಾಜಲ :
ಕರುಣಜಲವೆ ಗುರುಪಾದೋದಕ:
ವಿನಯಜಲವೆ ಲಿಂಗಪಾದೋದಕ;
ಸಮತಾಜಲವೆ ಜಂಗಮಪಾದೋದಕ.
ಗುರುಪಾದೋದಕದಿಂದ ಸಂಚಿತಕರ್ಮನಾಸ್ತಿ.
ಲಿಂಗಪಾದೋದಕದಿಂದ ಪ್ರಾರಬ್ಧಕರ್ಮನಾಸ್ತಿ.
ಜಂಗಮಪಾದೋದಕದಿಂದ ಆಗಾಮಿಕರ್ಮನಾಸ್ತಿ.
ಇಂತೀ ತ್ರಿವಿಧೋದಕದಲ್ಲಿ ತ್ರಿವಿಧಕರ್ಮನಾಸ್ತಿ.
ಇದು ಕಾರಣ- ಕೂಡಲಚೆನ್ನಸಂಗಮದೇವಾ
ತ್ರಿವಿಧೋದಕವ ನಿಮ್ಮ ಶರಣನೆ ಬಲ್ಲ./478
ಕರ್ತೃತ್ವವಿಲ್ಲಾಗಿ ಕರ್ಮವಿಲ್ಲ, ಕರ್ಮವಿಲ್ಲಾಗಿ ಜನನವಿಲ್ಲ,
ಜನನವಿಲ್ಲಾಗಿ ದೇಹವಿಲ್ಲ, ದೇಹವಿಲ್ಲಾಗಿ ಭೂತಾತ್ಮ ಪವಿತ್ರ.
ಕರಣಾದಿ ಗುಣಂಗಳು ಮುನ್ನಿಲ್ಲ, ಹಿಂದಣ ಸ್ಥಿತಿಯಿಲ್ಲ, ಮುಂದಣ ಲಯವಿಲ್ಲ,
ಆದಿ ಮಧ್ಯ ಅವಸಾನವಿಲ್ಲ,
ಬಿಚ್ಚಿ ಬೇರಿಲ್ಲ, ಬೆರಸಿವೊಂದಿಲ್ಲ, ಉಪಮಾತೀತನೆಂಬೆ.
ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣನು ನುಡಿಗಡಣವಿಲ್ಲದ ಮುಗ್ಧನು./479
ಕರ್ಮಜಾತನ ಕಳೆದು ಗುರುಲಿಂಗ ಪುಣ್ಯಜಾತನ ಮಾಡಿದ ಬಳಿಕ,
ಶಿವನ ಕುಲವಲ್ಲದೆ ಅನ್ಯಥಾ ಕುಲ ಶರಣಂಗುಂಟೆ?
ಶಿವಧರ್ಮಕುಲೇ ಜಾತಃ ಪೂರ್ವಜನ್ಮವಿವರ್ಜಿತಃ
ಉಮಾ ಮಾತಾ ಪಿತಾ ರುದ್ರೋ ಈಶ್ವರಂ ಕುಲಮೇವ ಚ
ಕೂಡಲಚೆನ್ನಸಂಗಯ್ಯಾ,
ನಿಮ್ಮ ಶರಣರಿಗೆ ಪ್ರತಿಯ ಕಾಣೆ ಶಿವನ ಕುಲವಲ್ಲದೆ./480
ಕರ್ಮಿಗೆ ಹಾವಾಗಿ ತೋರುವ,
ಕರ್ಮಿಗೆ ಹಲ್ಲಿಯಾಗಿ ತೋರುವ,
ಕರ್ಮಿಗೆ ಮೀನಾಗಿ ತೋರುವ,
ಕೂಡಲಚೆನ್ನಸಂಗನ ಶರಣಂಗೆ
ಲಿಂಗಜಂಗಮವಾಗಿ ತೋರುವನಯ್ಯಾ, ಬಸವಣ್ಣ. /481
ಕಲ್ಪಿತದಿಂ ಮಾಡುವ ಭಕ್ತ ನಿರ್ಧನಿಕನಾದರೆ
ತನ್ನ ಕೈಯ ಧನವ ವೆಚ್ಚಿಸಿ,
ಆ ಭಕ್ತನ ಕೂಡಿಕೊಂಡು ಲಿಂಗಾರ್ಚನೆಯ ಮಾಡಿ,
ಅವರ ಮತ್ತೆ ದಾಸೋಹಕ್ಕೆ ನಿಲಿಸಿ,
ತಾ ಕರ್ತನಾಗಿ ಪರಿಣಾಮಿಸಬಲ್ಲರೆ ಜಂಗಮ.
ಅವರಿಗೆ ನಮೋ ನಮೋ [ಎಂಬೆ]
ಅಂತಲ್ಲದೆ ಮುನ್ನ ಮಾಡಿದಿರಿ, ಈಗ ಮಾಡಿರೇನಿ ಭೋ ಎಂದು
ಜರಿದು ಝಂಕಿಸಿ ಹೋಹರ ಜಂಗಮವೆಂಬೆನೆ ? ಎನ್ನೆನು.
ಏನು ಕಾರಣವೆಂದರೆ-
ಆತ ಸೂನೆಗಾರ, ಆತ ದೋಷಾಥರ್ಿ, ಆತ ಭವಭಾರಿ
ಕೂಡಲಚೆನ್ನಸಂಗಮದೇವಾ. /482
ಕಲ್ಪಿಸಿ ಅರ್ಪಿಸಲಿಲ್ಲ, ಭೋಗಿಸಲಿಲ್ಲ,
ಅರ್ಪಿತ ಅನರ್ಪಿತವೆಂಬೆರಡನಳಿದನಾಗಿ.
ಕಾಯದ ಕೈಗಳ ಕೈಯೆ, ಭಾವದ ಕೈಗಳ ಕೈಯೆ ಅರ್ಪಿಸುವನಲ್ಲ !
ಆತ ಅರ್ಪಿತ ತಾನಾಗಿ.
ಅರ್ಪಿತ ಅನರ್ಪಿತವೆಂಬ ಸಂದೇಹವಳಿದುಳಿದನು.
ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣಂಗೆ ಪ್ರಸಾದವೆ ಪ್ರಳಯವಾಯಿತ್ತು !/483
ಕಲ್ಲದೇವರ ಪೂಜೆಯ ಮಾಡಿ
ಕಲಿಯುಗದ ಕತ್ತೆಗಳಾಗಿ ಹುಟ್ಟಿದರಯ್ಯಾ.
ಮಣ್ಣದೇವರ ಪೂಜೆಯ ಮಾಡಿ
ಮಣ್ಣಾಗಿ ಹುಟ್ಟಿದರಯ್ಯಾ.
ಮರನದೇವರ ಪೂಜೆಯ ಮಾಡಿ
(ಎಗ್ಗ)ಗಳಾದರಯ್ಯ.
ಜಂಗಮದೇವರ ಪೂಜೆಯ ಮಾಡಿ
ಪ್ರಾಣಲಿಂಗಿ ಪ್ರಸಾದಿಗಳಾದರಯ್ಯ.
ಅದೆಂತೆಂದಡೆ :
ಜಂಗಮದೇವರು ನಡೆಸಿದರೆ ನಡೆವರು,
ನುಡಿಸಿದರೆ ನುಡಿವರು,
ಒಡನೆ ಮಾತಾಡುವರು,
ತಪ್ಪಿದರೆ ಬುದ್ಧಿಯ ಹೇಳುವರು.
ಜಂಗಮದೇವರ ಪೂಜೆಯ ಮಾಡಿ
ಕೈಲಾಸಕ್ಕೆ ಯೋಗ್ಯರಾದರಯ್ಯಾ.
ಕೂಡಲಚೆನ್ನಸಂಗಮದೇವಯ್ಯಾ./484
ಕಳಾಧರ ಧರೆ ವಾರಿದಿಸಹಿತ ಆರೂ ಇಲ್ಲದಂದು,
ಪ್ರಮಥನೊಬ್ಬನಿದ್ದನೊಂದನಂತ ಕಾಲ.
ಧರೆ ಅಂಬರ ವಾರಿದಿಸಹಿತ ಆರೂ ಇಲ್ಲದಂದು
ನಿರವಯ ನಿರ್ಮಾಯನಾಗಿದ್ದನೊಂದು ಕೋಟ್ಯನುಕೋಟಿ ವರುಷ.
ಅಲ್ಲಿ ಅನಾಗತವುಂಟು.
(ಮನವು ಮಹವಕ್ಕಾಡಿ ತತ್ತಲೆಯಾಗಿ)
ಮತ್ತಂತಲ್ಲಿಯೆ ನಿರಾಳವ ಬೆರಸಿ ಬಯಲು ಬೆಸಲಾಯಿತ್ತು.
ನರರು ಸುರರು ಮೊದಲಾದ ಚೌರಾಸಿಲಕ್ಷ ಜೀವರಾಸಿಗಳುದಯಿಸಿದವಯ್ಯಾ,
ಕೂಡಲಚೆನ್ನಸಂಗಯ್ಯಾ ನಮ್ಮ ಬಸವಣ್ಣ ನೆನೆದಡೆ!/485
ಕಳಾಮುಖಿ ಬಿಂದುವನೊಗೆದನು,
ಅಣುವಿನಾಧಾರವನೊಗೆದನು,
ಪ್ರಣವದಾಧಾರದಲ್ಲಿ ಮಹೀತಳವನೊಗೆದನು,
ಮಧ್ಯನಾದದಲ್ಲಿ ಮರೀಚಕನನೊಗೆದನು.
(ಸುನಾದದಲ್ಲಿ ಬಸವಣ್ಣನನೊಗೆದನು)
ನನ್ನನೇಕೆ ಬಿಳಿದು ಮಾಡನಯ್ಯಾ ತನ್ನ ಬಿಳಿದಿನೊಳಯಿಂಕೆ ?
ಎನ್ನ ಕರೆದುಕೊಂಡು ತನ್ನಂತೆ ಮಾಡನು.
ನಾನು ಪ್ರಸಾದಿಬಸವಣ್ಣನ ಪದಾರ್ಥ
ಪ್ರಸಾದ-ಪದಾರ್ಥವೆಂಬೆರಡರ ಸಂದಿನಲ್ಲಿ
ಕೂಡಲಚೆನ್ನಸಂಗನ ಶರಣನು ಮಡಿವಾಳಮಾಚಯ್ಯ. /486
ಕಳೆಯೇರಿದ ಲಿಂಗದ ತೆರನನರಿದು,
[ಕಳೆ]ಕಳೆಯದ ವಳಯದ ಸೀಮೆಯಿಂದತ್ತತ್ತಲು ವೇದಿಸಿದ ಮುಗ್ದೆಯ ನೋಡಾ.
ಪಂಚಭೂತದ ಗಡಣೆಯ ಭಾವವ ನೇಮದಲ್ಲಿ ಭಾವಿಸಿದ ಮುಗ್ಧೆಯ ನೋಡಾ.
ಇರುಳು ಹಗಲೆಂಬ ಬೆಳಗು ಕತ್ತಲೆಯನರಿಯದ ಮುಗ್ಧೆಯ ನೋಡಾ.
ಆಕಾರ ನಿರಾಕಾರ ಸಿಂಗಾರದ ಪುಣ್ಯ ಪಾಪದ, ಅರಿವಿನ ಮರಹಿನ,
ಅಷ್ಟದಳಕಮಲದ ಮಧುಪಾನವಾಗದೆ,
ಕೂಡಲಚೆನ್ನಸಂಗಯ್ಯನೆಂಬ ಮಹಾಲಿಂಗವನು
ಮನದಲ್ಲಿ ಅಳವಡಿಸಿದ ಮುಗ್ಧೆಯ ನೋಡಾ. /487
ಕಾಂಚನಕ್ಕೆ ಕೈಯಾನದಿರ್ದಡೆ
ಕರಸ್ಥಲದಲ್ಲಿ ಧರಿಸುವುದಯ್ಯಾ ಶಿವಲಿಂಗವ.
ಕಾಂಕ್ಷೆಯಿಲ್ಲದಿರ್ದಡೆ ಕಕ್ಷೆಯಲ್ಲಿ ಧರಿಸುವುದಯ್ಯಾ ಶಿವಲಿಂಗವ.
ಅಪ್ಪಿಲ್ಲದಿರ್ದಡೆ ಉರಸೆಜ್ಜೆಯಲ್ಲಿ ಧರಿಸುವುದಯ್ಯಾ ಶಿವಲಿಂಗವ.
ಅನ್ನಪಾನಾದಿಗಳಿಗೆ ಬಾಯ್ದೆರೆಯದಿರ್ದಡೆ,
ಅಮಳೋಕ್ಯದಲ್ಲಿ ಧರಿಸುವುದಯ್ಯಾ ಶಿವಲಿಂಗವ.
ಬಿನ್ನಶಬ್ದವಿಲ್ಲದಿರ್ದಡೆ ಮುಖಸೆಜ್ಜೆಯಲ್ಲಿ ಧರಿಸುವುದಯ್ಯಾ ಶಿವಲಿಂಗವ.
ಲೋಕಕ್ಕೆರಗದಿರ್ದಡೆ ಉತ್ತಮಾಂಗದಲ್ಲಿ ಧರಿಸುವುದಯ್ಯಾ ಶಿವಲಿಂಗವ.
ನಾಬಿಯಿಂದ ಕೆಳಯಿಕ್ಕೆ ಧರಿಸಲಾಗದು.
ಅದೇನು ಕಾರಣವೆಂದಡೆ :
ಅದು ಹೇಯಸ್ಥಾನವಾದುದಾಗಿ.
ಜಿಹ್ವೆಗೆ ತಾಗಿದ ಸಕಲರುಚಿಯೂ ಗಳದಿಂದಿಳುವುದಾಗಿ
ಗಳವೇ ವಿಶೇಷಸ್ಥಳವೆಂದು ಗಳದಲ್ಲಿ ಧರಿಸಿದೆನಯ್ಯಾ
ಕೂಡಲಚೆನ್ನಸಂಗಮದೇವಾ/488
ಕಾಂಡಾವಿಯ ಕೀಲ ಬಲ್ಲರೆ, ಮಂದರಾವಿಯ ಅನುವ ಬಲ್ಲರೆ,
ಷಣ್ಣಾವಿಯ ಭಾವವ ಬಲ್ಲರೆ, ಕಾಳಾಮುಖದ ನಿಲವ ಬಲ್ಲರೆ,
ಕೂಡಲಚೆನ್ನಸಂಗನೆಂಬೆನು. /489
ಕಾಡಸೊಪ್ಪ ನಾಡಮೇಕೆ ತಿಂದಿರದೆ ?
ಉಡು ಏಕಾಂತವಾಸದಲ್ಲಿರದೆ ?
ಮಂಡೂಕ ಮೀವುದೆ ?
ತುರಗ ಬ್ರಹ್ಮಚಾರಿಯೆ ?
ತೋಳ ದಿಗಂಬರನೆ ?
ಬಾವುಲಿ ತಲೆಕೆಳಕಾಗಿರೆ ತಪಸಿಯೆ ?
ಕೇಳಯ್ಯ
ಕೂಡಲಚೆನ್ನಸಂಗಮದೇವಯ್ಯ
ನಿಮ್ಮನರಿಯ[ದ] ವಿರಕ್ತಿಕೆ ಹೊರಗೆಲ್ಲ ನುಂಪಟೆ ಒಳಗೆಲ್ಲ ಸಟೆಸಟೆ/490
ಕಾಣದೆ ಕೇಳದೆ ಮೂವರು ಹೋದರೆಂದರೆ,
ಕಂಡು ನುಡಿಸಿ ದಿಟವಾಯಿತ್ತ ಕಂಡೆನಿದೇನೊ !
ಬಯಲಶಬ್ದವಡಗಿತ್ತ ಕಂಡೆ, ಅಜಾತ, ಕೂಡಲಚೆನ್ನಸಂಗಯ್ಯಾ
ಲಿಂಗಜಂಗಮದನುಭಾವವೆನಲಿಲ್ಲ, ಎನಿಸಿಕೊಳಲಿಲ್ಲ. /491
ಕಾಣಬಹ ಲಿಂಗವೆಂದು ಅಗ್ಘಣಿಯನೆ ಕೊಟ್ಟು ಕೆಳೆಯಾದಿರಲ್ಲಾ, ಲೋಕಕ್ಕೆ !
ನಿರಾಳಲಿಂಗಕ್ಕೆ ಕೊಡಲರಿಯರು,
ಕಂಡವರ ಕಂಡು ಕಂಡಂತೆ, ಉಂಡವರ ಕಂಡು ಉಂಡಂತೆ.
ಇದು ಕಾರಣ ಕೂಡಲಚೆನ್ನಸಂಗನಲ್ಲಿ
ಇಂಥವರ ಕಂಡು ನಾಚಿತ್ತೆನ್ನ ಮನವು. /492
ಕಾಣಬಹುದೆ ನಿರಾಕಾರ? ಕಾಣಬಹುದೆ ಮಹಾಘನವು?
ಕಂಡು ಭ್ರಮೆಗೊಂಡು ಹೋದರೆಲ್ಲರು.
ಕೂಡಲಚೆನ್ನಸಂಗನ ಅನುಭಾವವ ಲಿಂಗೈಕ್ಯನೇ ಬಲ್ಲ. /493
ಕಾಣಬಾರದ ಘನವ ಕರದಲ್ಲಿ ಧರಿಸಿದ,
ಹೇ?ಬಾರದ ಘನವ ಮನದಲ್ಲಿ ತೋರಿದ,
ಉಪಮಿಸಬಾರದ ಘನವ ನಿಮ್ಮ ಶ್ರೀಪಾದದಲ್ಲಿ ತೋರಿದ,
ಇಂತೀ ತ್ರಿವಿಧವು ಏಕಾರ್ಥವಾಗಿಹ ಭೇದವ
ಬಸವಣ್ಣ ತೋರಿಕೊಟ್ಟನಾಗಿ
ನಾನು ಬದುಕಿದೆನು ಕಾಣಾ,
ಕೂಡಲಚೆನ್ನಸಂಗಮದೇವಾ/494
ಕಾದನಂತೆ, ಕಣನೇರಲೇಕೊ ?
ನಪುಂಸಕನಂತೆ, ಗಣಿಕಾಸ್ತ್ರೀಯೇಕೊ ?
ನಡೆ ಹೆಣನಂತೆ, ನುಡಿಯಲೇಕೊ ?
ಪುರಾತರು ನುಡಿದಂತೆ ನಡೆಯಲರಿಯದವರೆಲ್ಲ,
ಹಾಳೂರೊಳಗೆ ನರಿ ಗುಳ್ಳೆಯ ತಿಂದು ಬಗುಳಿದಂತೆ ಕಾಣಾ,
ಕೂಡಲಚೆನ್ನಸಂಗಮದೇವಾ/495
ಕಾಮವ ತೊರೆದೆವೆಂಬ ಗಾವಿಲ ಮನುಜರು ನೀವು ಕೇಳಿ:
ಕಾಮವಳವಟ್ಟಿತ್ತಯ್ಯಾ ಬಸವಣ್ಣಂಗೆ,
ಕಂಗಳ ಕಾಮಿಯಯ್ಯಾ ಪ್ರಭುದೇವರು,
ಸರ್ವಾಂಗ ಕಾಮಿಯಯ್ಯಾ ಮಡಿವಾಳನು,
ಈ ಮೂವರು ಕಾಮಸನ್ನಿಹಿತರು ಕಾಣಾ.
ಕೂಡಲಚೆನ್ನಸಂಗಮದೇವಾ./496
ಕಾಮಿ ಮಜ್ಜನಕ್ಕೆ ನೀಡಿದರೆ ರಕ್ತದ ಧಾರೆ.
ಕ್ರೋಧಿ ಪುಷ್ಪವನರ್ಪಿಸಿದರೆ ಕತ್ತಿಯ ಮೊನೆ.
ಲೋಭಿ ರುದ್ರಾಕ್ಷೆಯ ಧರಿಸಿದರೆ ಗಿರಿಕೆ.
ಮೋಹಿ ವಿಭೂತಿಯ ಧರಿಸಿದರೆ ಸುಣ್ಣದ ಗರ್ತ
ಮದಿ ಲಿಂಗವ ಕಟ್ಟಿದರೆ ಎತ್ತುಗಲ್ಲು.
ಮತ್ಸರಿ ಪಾದೋದಕ ಪ್ರಸಾದವ ಕೊಂಡರೆ ಕಾಳಕೂಟದ ವಿಷ.
ಕೂಡಲಚೆನ್ನಸಂಗಮದೇವರಲ್ಲಿ
ಮದಮತ್ಸರವ ಬಿಟ್ಟವರು ಅಪೂರ್ವ/497
ಕಾಮಿಸಿ ಕಲ್ಪಿಸಲಿಲ್ಲ, ಕಲ್ಪಿಸಿ ಭಾವಿಸಲಿಲ್ಲ,
ಭಾವಿಸಿ ರೂಪಿಸಲಿಲ್ಲ, ರೂಪಿಸಿ ಭೇದಿಸಲಿಲ್ಲ.
ಇದು ಕಾರಣ, ಕೂಡಲಚೆನ್ನಸಂಗಮದೇವಾ,
ಸರ್ವಾಂಗಲಿಂಗವಾದಲ್ಲಿ ಅನರ್ಪಿತವಿಲ್ಲ. /498
ಕಾಮಿಸಿ ಬಂದ ಪದಾರ್ಥದ ಪೂರ್ವಾಶ್ರಯವ ಕಳೆದು,
ತನ್ನ ಕಾಯವ ಮುಟ್ಟಲೀಯದೆ ಲಿಂಗಾರ್ಪಿತವ ಮಾಡುವಲ್ಲಿ ಪ್ರಸಾದಿ.
ಕಲ್ಪಿಸಿ ಬಂದ ಪದಾರ್ಥದ ಪೂರ್ವಾಶ್ರಯವ ಕಳೆದು,
ತನ್ನ ಮುಟ್ಟಲೀಯದೆ ಲಿಂಗಾರ್ಪಿತವ ಮಾಡುವಲ್ಲಿ ಪ್ರಸಾದಿ.
ಅಪ್ಪಿನ ಸೋಂಕಿನ ಸುಖದ ಸಂಯೋಗದ ಪೂರ್ವಾಶ್ರಯವ ಕಳೆದು,
ತನ್ನ ತಟ್ಟದೆ ಮುಟ್ಟದೆ ಕೊಟ್ಟು ಕೊಳಬಲ್ಲನಾಗಿ ಪ್ರಸಾದಿ,
ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿ. /499
ಕಾಮಿಸಿದಲ್ಲದೆ ಕೊಡದು ಕಾಮಧೇನು, ಕಲ್ಪಿಸಿದಲ್ಲದೆ ಕೊಡದು ಕಲ್ಪವೃಕ್ಷ,
ಚಿಂತಿಸಿದಲ್ಲದೆ ಕೊಡದು ಚಿಂತಾಮಣಿ, ಭಾವಿಸಿದಲ್ಲದೆ ಕೊಡನು ಶಿವನು.
ಕಾಮಿಸದೆ ಕಲ್ಪಿಸದೆ ಚಿಂತಿಸದೆ ಭಾವಿಸಿದೆ ಕೊಡಬಲ್ಲರು,
ಕೂಡಲಚೆನ್ನಸಂಗಾ ನಿಮ್ಮ ಶರಣರು. /500