ಉಷ್ಟ್ರಪಕ್ಷಿ ಯಾವ ದೇಶದ್ದು ಎಂದು ನೀವು ಶಾಲಾ ಮಕ್ಕಳನ್ನು ಪ್ರಶ್ನಿಸಿದರೆ ಥಟ್ಟಂತೆ ಬರುವ ಉತ್ತರ: ಆಫ್ರಿಕಾ ನಿಜ. ಉಷ್ಟ್ರಪಕ್ಷಿ, ಎಮು, ಮುಂತಾದ ದೊಡ್ಡ ಪಕ್ಷಿಗಳು ಭಾರತದಲ್ಲಿಲ್ಲ. ಅವನ್ನು ನೋಡಲು ನಾವು ಪ್ರಾಣಿಸಂಗ್ರಹಾಲಕ್ಕೇ ಹೋಗಬೇಕಿತ್ತು. ಇವು ವಿದೇಶೀ ಹಕ್ಕಿಗಳು ಎನ್ನುವ ಕುತೂಹಲದಿಂದಲೇ ಅವನ್ನು ನೋಡಲು ಹೋಗಬೇಕು. ತಮಿಳುನಾಡಿನಲ್ಲಿ ಇತ್ತೀಚೆಗೆ ಎಮು ಪಕ್ಷಿಗಳನ್ನು ಆಮದು ಮಾಡಿಕೊಂಡು, ಸಾಕಿ ಲಾಭ ಮಾಡುವ ಪ್ರಯತ್ನ ವಿಫಲವಾದ ಸುದ್ದಿಯನ್ನು ನೀವು ಓದಿರಬೇಕು. ಒಟ್ಟು ಮೂರು ಕೋಟಿ ಎಮು ಹಕ್ಕಿಗಳು ಆಗ ಬೀದಿ ಪಾಲಾಗಿದ್ದುವು. ಸಾವಿರಾರು ರೈತರು ಹಣ ಕಳೆದುಕೊಂಡಿದ್ದರು. ಅಷ್ಟೊಂದು ಹಕ್ಕಿಗಳು ಭಾರತದಲ್ಲೇ ಬೆಳೆದು ನಮಗೇ ಆಹಾರವಾದರೂ, ವಿದೇಶೀ ಹಕ್ಕಿಗಳು ಎನ್ನುವ ಹಣೆಪಟ್ಟಿ ಅಳಿಯಲಿಲ್ಲ.

ವಿದೇಶೀ ಎನ್ನುವ ಕುತೂಹಲಕ್ಕಿಂತಲೂ ಇವು ಹಾರಲಾರದ ಹಕ್ಕಿಗಳು ಎನ್ನುವುದು ಇನ್ನೂ ಕುತೂಹಲದ ವಿಷಯ. ಇಂತಹ ಹಕ್ಕಿಗಳು ಕೆಲವೇ ಕೆಲವಿವೆ. ಉಷ್ಟ್ರಪಕ್ಷಿ, ಎಮು, ಎಲಿಫೆಂಟ್ ಹಕ್ಕಿ ಮತ್ತು ರಿಯಾ ಹಕ್ಕಿಗಳು ಈ ಗುಂಪಿಗೆ ಸೇರಿದವು. ಇದಷ್ಟೆ ವಿಶೇಷವಲ್ಲ. ಇವುಗಳ ಸೀಮಿತ ನೆಲೆಯೂ ಕೌತುಕದ ಸಂಗತಿ. ಉದಾಹರಣೆಗೆ, ಉಷ್ಟ್ರಪಕ್ಷಿ ಆಫ್ರಿಕಾದಲ್ಲಿದೆ. ಎಮು ಪ್ರಪಂಚದ ಒಂದು ತುದಿಯಲ್ಲಿರುವ ಆಸ್ಟ್ರೇಲಿಯಾದಲ್ಲಿವೆ. ಎಲಿಫೆಂಟ್ ಹಕ್ಕಿ (ಆನೆಹಕ್ಕಿ) ಇನ್ನೊಂದು ತುದಿಯಲ್ಲಿರುವ ದಕ್ಷಿಣ ಅಮೆರಿಕದಲ್ಲಿ ಮಾತ್ರ ಕಾಣಸಿಗುತ್ತದೆ. ರಿಯಾ ಆಫ್ರಿಕಾದ ಬಳಿ ಇರುವ ಮಡಗಾಸ್ಕರ್ ದ್ವೀಪದಲ್ಲಿ ಮಾತ್ರ ಇದೆ.

ಈ ಹಕ್ಕಿಗಳ ಚರಿತ್ರೆಯನ್ನು ಕೆದಕಿದರೆ ಇನ್ನೂ ಸ್ವಾರಸ್ಯಕರ ಸಂಗತಿಗಳು ಸಿಗುತ್ತವೆ. ಇಂತಹುದೊಂದು ಸ್ವಾರಸ್ಯವನ್ನು ಹೈದರಾಬಾದಿನಲ್ಲಿರುವ ಸೆಂಟರ್ ಫಾರ್ ಸೆಲ್ಯುಲಾರ್ ಅಂಡ್ ಮಾಲೆಕ್ಯುಲಾರ್ ಬಯಾಲಜಿ (ಸಿಸಿಎಂಬಿ – ಕೋಶೀಯ ಹಾಗೂ ಜೈವಿಕ ಕಣಗಳ ಜೀವಿವಿಜ್ಞಾನ ಕೇಂದ್ರ)ಯ ವಿಜ್ಞಾನಿಗಳು ಹೊರಗೆಡವಿದ್ದಾರೆ. ಖರಗಪುರದ ಐಐಟಿಯ ಭೂಗರ್ಭಶಾಸ್ತ್ರದ ವಿಜ್ಞಾನಿ ಸುನಿಲ್ ಜೈನ್ ಮತ್ತು ಸಂಗಡಿಗರ ಜೊತೆ ಸೇರಿದ ಸಿಸಿಎಂಬಿ ವಿಜ್ಞಾನಿಗಳು ಸುಮಾರು ಐವತ್ತು ಸಾವಿರ ವರ್ಷಗಳ ಹಿಂದೆಯೇ ಉಷ್ಟ್ರಪಕ್ಷಿಗಳು ಭಾರತದಲ್ಲಿಯೂ ಇದ್ದುವು ಎಂದು ಪಿಎಲ್ಓಎಸ್ ಒನ್ ಪತ್ರಿಕೆಯಲ್ಲಿ ವರದಿ ಮಾಡಿದ್ದಾರೆ. ಇದು ಈ ಪಕ್ಷಿಗಳ ವಿಕಾಸ, ವಿತರಣೆಯ ಬಗ್ಗೆ ಇನ್ನಷ್ಟು ಕೌತುಕಗಳನ್ನು ತೆರೆದಿಟ್ಟಿದೆ.

ಎಮು, ಉಷ್ಟ್ರಪಕ್ಷಿ, ರಿಯಾ ಮತ್ತು ಆನೆಹಕ್ಕಿಗಳು ಮೂಲತಃ ದಕ್ಷಿಣ ಅಮೆರಿಕದವೆಂದು ವಿಜ್ಞಾನಿಗಳು ಪರಿಗಣಿಸುತ್ತಾರೆ. ಇವು ಸುಮಾರು 17 ಕೋಟಿ ವರ್ಷಗಳಿಂದಲೂ ಭೂಮಿಯ ಮೇಲಿವೆ. ದಕ್ಷಿಣ ಅಮೆರಿಕ ಖಂಡಗಳಲ್ಲಿ ದೊರೆತ ಪಳೆಯುಳಿಕೆಗಳು ಈ ಎಲ್ಲ ಹಕ್ಕಿಗಳೂ 17 ಕೋಟಿ ವರ್ಷಗಳ ಹಿಂದೆ ಅಲ್ಲಿದ್ದುವೆಂದು ತಿಳಿಸಿವೆ. ಆದರೆ ಈಗ ಅಲ್ಲಿ ಆನೆ ಹಕ್ಕಿಯಷ್ಟೆ ಕಾಣ ಸಿಗುತ್ತದೆ. ಹಾಗಿದ್ದರೆ ಉಳಿದವು ಎಲ್ಲಿ ಹೋದುವು? ಹೇಗೆ ಅಲ್ಲಿಂದ ಮರೆಯಾದುವು?

ಪ್ರಪಂಚದ ವಿಭಿನ್ನ ಭೌಗೋಳಿಕ ನೆಲೆಗಳಲ್ಲಿ ಚದುರಿರುವ ಈ ವಿವಿಧ ಹಕ್ಕಿಗಳ ಗುಣಗಳನ್ನು ಪರಿಶೀಲಿಸಿದಾಗ ಇವೆಲ್ಲವೂ ನಿಕಟ ಸಂಬಂಧಿಗಳೆನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಹಾಗಿದ್ದರೂ ಸಪ್ತಸಾಗರಗಳನ್ನು ದಾಟಿಕೊಂಡು ಇವು ಚದುರಿದುವು ಹೇಗೆ? ಇದಕ್ಕೆ ಭೂವಿಜ್ಞಾನಿಗಳು ಕೆಲವು ಸ್ಪಷ್ಟನೆಗಳನ್ನು ನೀಡಿದ್ದಾರೆ. ಅದರಲ್ಲಿ ಮೊದಲನೆಯದು ಕೋಟ್ಯಂತರ ವರ್ಷಗಳ ಹಿಂದೆ ಭೂಮಿಯ ಬಹುತೇಕ ಖಂಡಗಳು ಒಟ್ಟಾಗಿದ್ದುವು. ಕ್ರಮೇಣ ಇವು ಒಡೆದು ಬೇರೆಯಾದುವು. ಹಾಗೆ ಒಟ್ಟಾಗಿದ್ದಾಗ ಒಂದೆಡೆ ಇದ್ದ ನಿಕಟ ಸಂಬಂಧಿಗಳು ಚೂರು ಚೂರಾದ ಭೂಭಾಗಗಳಲ್ಲಿ ಚದುರಿ ಹೋಗಿರಬೇಕು. ಹೀಗಾಗಿ ಇವು ಇಂದು ಆ ನೆಲೆಗಳಲ್ಲಿ ಮಾತ್ರ ಕಾಣಸಿಗುತ್ತವೆ.

ಕಾಲಾಂತರದಲ್ಲಿ ಉಷ್ಟ್ರಪಕ್ಷಿಗಳು ಹಾಗೂ ಅವುಗಳ ಸಂಬಂಧಿಗಳ ವಲಸೆ ಹಾಗೂ ನೆಲೆಯನ್ನು ತೋರುವ ಚಿತ್ರ. (ಮೂಲ. ಪಿಎಲ್ಓಎಸ್ ಒನ್)

ಸುಮಾರು 17 ಕೋಟಿ ವರ್ಷಗಳಿಗೂ ಹಿಂದೆ ದಕ್ಷಿಣ ಅಮೆರಿಕ, ಆಫ್ರಿಕಾ, ಆಸ್ಟ್ರೇಲಿಯಾ, ಭಾರತ ಹಾಗೂ ಮಡಗಾಸ್ಕರ್ ದ್ವೀಪಗಳು ಒಟ್ಟಾಗಿದ್ದುವಂತೆ. ಇದನ್ನು ಗೊಂಡ್ವಾನಾ ಖಂಡ ಎಂದು ವಿಜ್ಞಾನಿಗಳು ಹೆಸರಿಸಿದ್ದಾರೆ. ಈ ಗೊಂಡ್ವಾನಾದಿಂದ ಭಾರತ, ಮಡಗಾಸ್ಕರ್ ಇದ್ದ ಭಾಗಗಳು ಒಡೆದು ಬೇರೆಯಾದುವಂತೆ. ಉತ್ತರ ದಿಕ್ಕಿಗೆ ಚಲಿಸಿದ ಈ ತುಣುಕು ಯುರೋಪು ಖಂಡ ಭಾಗಕ್ಕೆ ಡಿಕ್ಕಿ ಹೊಡೆದು ಅದರೊಟ್ಟಿಗೆ ಕೂಡಿಕೊಂಡು ಇಂದಿನ ಭಾರತವಾಯಿತು. ನಡುಮಧ್ಯೆ ಭಾರತದಿಂದ ಮಡಗಾಸ್ಕರ್ ಬೇರೆಯಾಗಿ ಆಫ್ರಿಕಾದ ಸಮೀಪದಲ್ಲೇ ಉಳಿದುಕೊಂಡಿತು ಎನ್ನುವುದು ಭೂವಿಜ್ಞಾನಿಗಳ ತರ್ಕ.

ಭಾರತೀಯ ವಿಜ್ಞಾನಿಗಳ ಹೊಸ ಸಂಶೋಧನೆಯೂ ಇದಕ್ಕೆ ಕುಮ್ಮಕ್ಕು ನೀಡುವ ಪುರಾವೆಯಾಗಿದೆ. ಇವರು ರಾಜಸ್ತಾನ ಹಾಗೂ ಗುಜರಾತಿನ ಮರಳುಗಾಡಿನಲ್ಲಿ ದೊರೆತ 50000 ವರ್ಷ ಹಳೆಯ ಪಳೆಯುಳಿಕೆಗಳನ್ನು ಪರಿಶೀಲಿಸಿದ್ದಾರೆ. ಪಕ್ಷಿಯ ಮೊಟ್ಟೆಯನ್ನೇ ಹೋಲುವ ಈ ಶಿಲೆಗಳಲ್ಲಿ ಕ್ಯಾಲ್ಶಿಯಂ ಫಾಸ್ಫೇಟು (ಮೊಟ್ಟೆಯ ಕವಚಗಳಲ್ಲಿ ಇರುವ ಲವಣ) ಹರಳುಗಟ್ಟಿದೆ. ಜೊತೆಗೆ ಸೂಕ್ಷ್ಮದರ್ಶಕದ ಅಡಿಯಲ್ಲಿ ನೋಡಿದಾಗ ಕಾಣುವ ರಂಧ್ರಗಳು ಹಾಗೂ ಗೆರೆಗಳೂ ಸಹ ಮೊಟ್ಟೆಯ ಕವಚದಲ್ಲಿರುವಂತೆಯೇ ಇವೆ. ಈ ಪಳೆಯುಳಿಕೆಗಳಲ್ಲಿರುವ ಕಾರ್ಬನ್ ಪರಮಾಣುಗಳನ್ನು ಪರಿಶೀಲಿಸಿದಾಗ ಅವು ಸುಮಾರು 50 ರಿಂದ 60 ಸಾವಿರ ವರ್ಷಗಳಿಂದ ಅಲ್ಲಿಯೇ ಇರುವುದಾಗಿ ತಿಳಿದು ಬರುತ್ತದೆ. ಅರ್ಥಾತ್, ಈ ಮೊಟ್ಟೆಯ ಕವಚಗಳು ಅಷ್ಟು ಪುರಾತನ.

ಯಾವುದರ ಮೊಟ್ಟೆ ಇದು? ಉಷ್ಟ್ರಪಕ್ಷಿಯ ಮೊಟ್ಟೆ ಬಲು ದೊಡ್ಡ ಮೊಟ್ಟೆ ಎನ್ನುವುದು ನಮಗೂ ತಿಳಿದಿದೆ. ಈ ಮೊಟ್ಟೆಗಳೂ ಅಷ್ಟೇ ದೊಡ್ಡವಿವೆ. ಇದೇ ಪ್ರದೇಶದಲ್ಲಿ ಇಂದೂ ಭಾರತದಲ್ಲೇ ಅತಿ ದೊಡ್ಡದೆನ್ನುವ ಬಸ್ಟರ್ಡ್ ಪಕ್ಷಿ ಓಡಾಡುತ್ತಿದೆ. ಅದರ ಮೊಟ್ಟೆಗಳಿದ್ದರೂ ಇರಬಹುದು. ಅಥವಾ ಈ ಹಿಂದೆ ಗುಜರಾತ್, ರಾಜಸ್ತಾನದಲ್ಲಿಯೇ ದೊರೆತ ಡೈನಾಸಾರುಗಳ ಮೊಟ್ಟೆಗಳಿದ್ದರೂ ಇರಬಹುದು ಎನ್ನುವ ಅನುಮಾನದಿಂದ ಮೊಟ್ಟೆಗಳ ಕವಚದಲ್ಲಿನ ರಂಧ್ರಗಳು, ವಿನ್ಯಾಸಗಳನ್ನು ಇತರೆ ಮೊಟ್ಟೆಗಳ ಜೊತೆಗೆ ಹೋಲಿಸಿದ್ದಾರೆ. ಬಹುತೇಕ ವಿನ್ಯಾಸವೆಲ್ಲವೂ ಉಷ್ಟ್ರಪಕ್ಷಿಗಳ ಮೊಟ್ಟೆಯಂತೆಯೇ ಇತ್ತಂತೆ. ಅಂದರೆ ಇದು ಉಷ್ಟ್ರಪಕ್ಷಿಯ ಮೊಟ್ಟೆ.

ಇದೇ ಕಾಲಘಟ್ಟಕ್ಕೆ ಸೇರಿದ ಪಳೆಯುಳಿಕೆಗಳು ಮರುಭೂಮಿಯ ಹಲವೆಡೆಗಳಲ್ಲಿ ದೊರೆತಿದ್ದು, ಎಲ್ಲವೂ ಉಷ್ಟ್ರಪಕ್ಷಿಗಳ ಮೊಟ್ಟೆಯನ್ನು ಹೋಲುತ್ತಿದ್ದುವು. ವಿನ್ಯಾಸವಷ್ಟೆ ಅಲ್ಲ. ಮೊಟ್ಟೆಯ ಕ್ಯಾಲ್ಶಿಯಂ ಹರಳುಗಳ ಮಧ್ಯೆ ಬಂಧಿಯಾಗುಳಿದ ಸಾವಯವ ಪದಾರ್ಥವನ್ನು ಹೆಕ್ಕಿ ಅದರಲ್ಲಿದ್ದ ಡಿಎನ್ಎ ಯನ್ನೂ ಇವರು ಪರೀಕ್ಷಿಸಿದ್ದಾರೆ. ಸಾವಯವ ಪದಾರ್ಥದಲ್ಲಿರುವ ಸಿಲುಕಿರುವ ಪುರಾತನ ಡಿಎನ್ಎಯನ್ನು ವಿಶೇಷ ತಂತ್ರಗಳನ್ನು ಬಳಸಿ ಹೆಕ್ಕಿದ್ದಾರೆ. ಹೆಕ್ಕಿದ ಡಿಎನ್ಎಯ ಪ್ರಮಾಣವನ್ನು ಹೆಚ್ಚಿಸಿ, ಇಂದಿನ ರೆಕ್ಕೆಯಿಲ್ಲದ ಹಕ್ಕಿಗಳ ಡಿಎನ್ಎ ಯೊಂದಿಗೆ ಹೋಲಿಸಿದ್ದಾರೆ.

ಅಂದಿನಿಂದ ಇಂದಿನವರೆಗೂ ಡಿಎನ್ಎಯಲ್ಲಿ ಹಲವಾರು ಬದಲಾವಣೆಗಳಾಗಿರಬಹುದು. ಆದರೆ ಜೀವಕೋಶಗಳಲ್ಲಿರುವ ಮೈಟೊಕಾಂಡ್ರಿಯದಲ್ಲಿನ ಡಿಎನ್ಎ ಯಲ್ಲಿ ಬದಲಾವಣೆಗಳು ಅಪರೂಪವಾದ್ದರಿಂದ ಮೈಟೊಕಾಂಡ್ರಿಯದ ಡಿಎನ್ಎಯನ್ನಷ್ಟೆ ಹೋಲಿಸಿದ್ದಾರೆ. ಪುರಾತನ ಪಳೆಯುಳಿಕೆಯಲ್ಲಿನ ಡಿಎನ್ಎ ಶೇಕಡ 95% ರಷ್ಟು ಇಂದಿನ ಉಷ್ಟ್ರಪಕ್ಷಿಗಳಿಗೆ ಹೋಲುತ್ತದೆ.

ಇದರರ್ಥ ಇಷ್ಟೆ. ಐವತ್ತರಿಂದ ಅರವತ್ತು ಸಾವಿರ ವರ್ಷಗಳ ಹಿಂದೆಯೂ ನಮ್ಮ ದೇಶದಲ್ಲಿ ಉಷ್ಟ್ರಪಕ್ಷಿಗಳು ಓಡಾಡಿಕೊಂಡಿದ್ದುವು. ಇವುಗಳೇ ಅನಂತರ ಅರೇಬಿಯ ಮೂಲಕ ಆಫ್ರಿಕಾಗೆ ವಲಸೆ ಹೋಗಿರಬೇಕು. ಅಲ್ಲಿ ನೆಲೆಸಿರಬೇಕು. ಭಾರತದಲ್ಲಿ ಯಾವ ಕಾರಣಕ್ಕೋ ಬದುಕಲಾಗದೆ ಅಳಿದು ಹೋಗಿರಬೇಕು ಎನ್ನುವುದು ಊಹೆ. ಇದು ಹಿಂದಿನ ಊಹೆಗಳಿಗೂ ತಾಳೆಯಾಗುತ್ತವೆ. ಇದುವರೆವಿಗೂ ಭಾರತದಲ್ಲಿ ಉಷ್ಟ್ರಪಕ್ಷಿಗಳು ಕೋಟ್ಯಂತರ ವರ್ಷಗಳ ಹಿಂದೆಯೇ ಅಳಿದು ಹೋಗಿದ್ದುವೆಂದು ನಂಬಲಾಗಿತ್ತು. ಈ ಹೊಸ ಪಳೆಯುಳಿಕೆಗಳು ಮತ್ತು ಅವುಗಳ ಡಿಎನ್ಎ ಪರೀಕ್ಷೆ ಅದನ್ನು ತಪ್ಪೆಂದು ಸೂಚಿಸಿವೆ. ಐವತ್ತು ಅರವತ್ತು ಸಾವಿರ ವರ್ಷಗಳೆಂದರೆ ಭೂಮಿಯ ಆಯಸ್ಸಿನಲ್ಲಿ ಕೆಲವು ನಿಮಿಷಗಳಷ್ಟು ಹಿಂದೆಯಷ್ಟೆ. ಈಗ ಹೇಳಿ ಉಷ್ಟ್ರಪಕ್ಷಿಯನ್ನು ವಿದೇಶಿ ಎನ್ನೋಣವೇ, ಸ್ವದೇಶೀ ಎನ್ನೋಣವೇ?

ಕೊಳ್ಳೇಗಾಲ ಶರ್ಮ