Categories
ಪರಿಸರ ಲೇಖನಗಳು ವಿಜ್ಞಾನ

ಕೆರೆ ಪರಿಸರ

ಕೆರೆ ಪರಿಸರ

(ಚಿತ್ರ ಕೃಪೆ:  ನಂದಿ ಮಲ್ನಾಡ್)

ಕೆರೆ ಪರಿಸರ

ಒಳನಾಡು ಜಲಸಂಪನ್ಮೂಲಗಳ ಪೈಕಿ ಕೆರೆಗಳಿಗೆ ಪ್ರಮುಖ ಸ್ಥಾನವಿದೆ. ಭಾರತದಲ್ಲಿ ಮಾನ್ಸೂನ್ ಅನಿಶ್ಚಿತವಾದ್ದರಿಂದ ಮಳೆಗಾಲದಲ್ಲಿ ಮಳೆನೀರು ಹಿಡಿದಿಡುವುದು ಅತ್ಯವಶ್ಯಕವೆಂದು ಪ್ರಾಚೀನ ಕಾಲದಿಂದಲೂ ಜನಸಮುದಾಯ ಯೋಚಿಸಿ ಕೆರೆಗಳ ನಿರ್ಮಾಣಕ್ಕೆ ಆದ್ಯತೆ ಕೊಟ್ಟಿತು. ಎಷ್ಟೋವೇಳೆ ಸ್ಥಳೀಯ ಸಮುದಾಯವೇ ಕೆರೆಯ ನಿರ್ಮಾಣವನ್ನು ನಿರ್ಧರಿಸಿದೆ. ಮಳೆನೀರು ಕೊಯ್ಲಿನ ಮೊದಲ ಪಾಠವೇ ಹಿಂದಿನವರು ನಿರ್ಮಿಸಿದ ಕೆರೆಗಳು. ಕೆರೆಗಳನ್ನು ಕಟ್ಟಲು ಅನೇಕ ಕಾರಣಗಳಿದ್ದವು. ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಕೃಷಿಗೆ, ಪಶುಗಳಿಗೆ, ದೈನಂದಿನ ಬಳಕೆಗೆ ಹೆಚ್ಚು ನೀರಿನ ಅವಶ್ಯಕತೆ ಇತ್ತು. ಸ್ಥಳೀಯ ಬೆಟ್ಟಗುಡ್ಡಗಳಿಂದ ಬರುವ ಸಣ್ಣ ಪುಟ್ಟ ತೊರೆ, ಹಳ್ಳಗಳನ್ನು ಗಮನಿಸಿ, ತಗ್ಗಿನಲ್ಲಿ ಕೆರೆ ಕಟ್ಟುವುದು ಸಾಂಪ್ರದಾಯಕವೆಂಬಂತೆ ಭಾರತೀಯರ ಗ್ರಾಮೀಣ ಬದುಕಿನಲ್ಲಿ ಕಂಡುಬಂದಿದೆ. ಭಾರತಕ್ಕೆ ೩೨೯ ದಶಲಕ್ಷ ಹೆಕ್ಟೇರು ಭೌಗೋಳಿಕ ಪ್ರದೇಶವಿದ್ದರೂ ಎಲ್ಲೆಡೆಯೂ ನದಿ ನೀರಿನ ಹರಿವು ಇಲ್ಲ. ಅದಕ್ಕೆ ಪರ್ಯಾಯವಾಗಿ ಸಣ್ಣ ಪ್ರಮಾಣದಲ್ಲಾದರೂ ಮೈದಾನ ಪ್ರದೇಶಗಳಲ್ಲಿ ನೀರು ಹಿಡಿದಿಡುವ ಯೋಜನೆಯೇ ಕೆರೆ ನಿರ್ಮಾಣ. ಅದರಲ್ಲೂ ದಕ್ಷಿಣ ಭಾರತದಲ್ಲಿ ಪ್ರಸ್ಥಭೂಮಿ ಬಹುತೇಕ ಎತ್ತರಿಸಿದ ಭಾಗವಾದ್ದರಿಂದ, ಮೇಲಾಗಿ ಗ್ರನೈಟ್ ಸಂಬಂಧೀ ಗಡಸುಕಲ್ಲಿನಿಂದ ರೂಪಿತಗೊಂಡಿರುವುದರಿಂದ ಇಲ್ಲಿ ಕೆರೆ ನಿರ್ಮಿಸಿದಾಗ ದೊಡ್ಡ ಪ್ರಮಾಣದಲ್ಲಿ ನೀರು ಹಿಂಗಿಹೋಗುವ ಸಂದರ್ಭ ಕಡಿಮೆ. ಐತಿಹಾಸಿಕವಾಗಿ ನೋಡಿದರೆ ಕೆರೆ ಕಟ್ಟೆ ಕಟ್ಟಿಸುವುದು ಪ್ರಜೆಗಳ ಹಿತರಕ್ಷಣೆಯ ರಾಜಧರ್ಮವಾಗಿತ್ತು.

ಕೆರೆ ಮತ್ತು ಕೊಳಗಳು ನೀರಿನ ಮುಖ್ಯ ಆಕರವಾದರೂ ಕೆರೆ ಉದ್ದೇಶಪೂರ್ವಕವಾಗಿಯೇ ನಿರ್ಮಿಸಿದ್ದು. ಕೊಳ ನೈಸರ್ಗಿಕವಾಗಿ ರೂಪಿತವಾಗಿದ್ದು. ಕೆರೆಗಳನ್ನು ಕಟ್ಟುವಾಗ ನಮ್ಮ ಪ್ರಾಚೀನರು ಅತ್ಯಂತ ಯುಕ್ತಮಾರ್ಗ ಅನುಸರಿಸಿದ್ದಾರೆ. ಮಳೆಗಾಲದಲ್ಲಿ ಹೆಚ್ಚುವರಿ ನೀರು ಬಂದು ಕೆರೆ ತುಂಬಿದರೆ ಏರಿ ಒಡೆಯಬಾರದು ಎಂದು, ಹೆಚ್ಚುವರಿ ನೀರು ವ್ಯರ್ಥವಾಗಿ ಹೋಗಬಾರದು ಎಂದು ಕೋಡಿಕಟ್ಟಿದ್ದಾರೆ. ಎಲ್ಲ ಕೆರೆಗಳಲ್ಲೂ ಇದನ್ನು ಗಮನಿಸಬಹುದು. ಕೋಡಿಯಿಂದ ಹರಿದ ಕೆರೆಯ ನೀರು ಮುಂದಿನ ಕೆರೆಗೆ ತುಂಬುವಂತೆ ಸಂಪರ್ಕವಿರುತ್ತಿತ್ತು. ಅಲ್ಲಿಂದ ಮತ್ತೊಂದಕ್ಕೆ, ಇನ್ನೂ ದೊಡ್ಡ ಕೆರೆಯೆಂದರೆ ತೂಬುಗಳನ್ನು ತೆರೆಯುವ ಉಪಾಯ. ಕೃಷಿ, ಜಾನುವಾರುಗಳಿಗೆ, ಕುಡಿಯುವ ನೀರಿಗೆ, ಗೃಹಕೃತ್ಯಕ್ಕೆ ಕೊನೆಗೆ ಶೌಚಕ್ಕೂ ಕೆರೆಯೇ ಆಧಾರ ಎಂಬ ಪರಿಕಲ್ಪನೆ ಲಾಗಾಯ್ತಿಯಿಂದ ಬಂದಿದ್ದರೂ ಕಳೆದ ಶತಮಾನದ ೭೦ರ ದಶಕದ ನಂತರ ಅನೇಕ ಪರಿವರ್ತನೆಗಳಾದವು. ಆ ಮುಂಚೆ ಕೆರೆಗಳಲ್ಲಿ ಹೂಳು ತುಂಬಿದರೆ ಅದನ್ನು ಎತ್ತಲು ಸಮುದಾಯ ಭಾಗವಹಿಸುತ್ತಿತ್ತು. ಸೋಮವಾರದಂದು ಉಳುಮೆಗೆ ಬಿಡುವು ಇದ್ದುದರಿಂದ ಆ ಕಾಲವನ್ನು ಗ್ರಾಮೀಣ ಜನರು ಕೆರೆಗಳ ಹೂಳೆತ್ತಲು, ಏರಿಯನ್ನು ಭದ್ರಪಡಿಸಲು ಬಳಸಿಕೊಳ್ಳುತ್ತಿದ್ದರು. ೭೦ರ ದಶಕದ ನಂತರ ಬದಲಾದ ಕೃಷಿ ಪರಿಸ್ಥಿತಿ, ಅಂತರ್ಜಲದ ಯಥೇಚ್ಛ ಬಳಕೆ, ಕೆರೆಯ ಜಲಾನಯನ ಪ್ರದೇಶದ ಒತ್ತುವರಿ, ಹೂಳನ್ನು ಎತ್ತುವುದರಲ್ಲಿ ನಿರ್ಲಕ್ಷ್ಯ ಇವೆಲ್ಲ ಸೇರಿ ಕೆರೆಯ ಸಂರಕ್ಷಣೆಗೆ ಅನೇಕ ಅಡಚಣೆಗಳು ಎದುರಾದವು.

ಏಷ್ಯ ಅಭಿವೃದ್ಧಿ ಬ್ಯಾಂಕ್ ದೇಶದ ಪ್ರಮುಖ ಕೆರೆಗಳ ಸ್ಥಿತಿಗತಿಗಳನ್ನು ವರದಿಮಾಡಿದೆ. ಕರ್ನಾಟಕದಲ್ಲಿ ೩೦ ಜಿಲ್ಲೆಗಳೂ ಸೇರಿ ಒಟ್ಟು ೩೬,೬೭೮ ಕೆರೆಗಳಿವೆ. ಇವು ವಿಸ್ತರಿಸಿರುವ ಜಾಗ ೬,೯೦,೦೦೦ ಹೆಕ್ಟೇರು. ಆದರೆ ಇವುಗಳಲ್ಲಿ ಶೇ. ೯೦ ಭಾಗ ಕೆರೆಗಳು ೪೦ ಹೆಕ್ಟೇರುಗಳಿಗಿಂತ ಹೆಚ್ಚು ವಿಸ್ತರಿಸಿಲ್ಲ. ಅವುಗಳನ್ನು ಆಧರಿಸಿ ಸದ್ಯದಲ್ಲಿ ಸಾಗುವಳಿ ಮಾಡುತ್ತಿರುವುದು ಶೇ. ೩೫ ಭಾಗ ಮಾತ್ರ. ೧೯೯೭ರಿಂದ ಸಣ್ಣ ನೀರಾವರಿ ಇಲಾಖೆ ಈ ಕೆರೆಗಳು ಉಸ್ತುವಾರಿ ವಹಿಸಿದೆ. ಕೆರೆಗಳ ಅಚ್ಚುಕಟ್ಟು ಪ್ರದೇಶವನ್ನು ಆಧರಿಸಿ ಅವುಗಳ ನಿರ್ವಹಣೆಯನ್ನು ಬೇರೆ ಬೇರೆ ಆಡಳಿತಕ್ಕೆ ವಹಿಸಿದೆ. ೪೦ ರಿಂದ ೨೦೦೦ ಹೆಕ್ಟೇರು ಅಚ್ಚುಕಟ್ಟು ಇರುವ ಕೆರೆಗಳ ಉಸ್ತುವಾರಿಯನ್ನು ಸರ್ಕಾರದ ಸಣ್ಣ ನೀರಾವರಿ ಇಲಾಖೆ ವಹಿಸಿಕೊಂಡಿದೆ. ೪೦ ಹೆಕ್ಟೇರಿಗಿಂತ ಕಡಿಮೆ ಅಚ್ಚುಕಟ್ಟು ಇರುವ ಕೆರೆಗಳನ್ನು ಜಿಲ್ಲಾ ಪರಿಷತ್ ಮತ್ತು ಪಂಚಾಯತಿಗಳು ವಹಿಸಿಕೊಂಡಿವೆ. ಅಚ್ಚುಕಟ್ಟು ಪ್ರದೇಶ ೨೦೦೦ ಹೆಕ್ಟೇರಿಗಿಂತ ಹೆಚ್ಚಾಗಿದ್ದರೆ ಸಣ್ಣ ಮತ್ತು ಭಾರಿ ನೀರಾವರಿ ಇಲಾಖೆಗಳು ಇದನ್ನು ನಿರ್ವಹಿಸುತ್ತವೆ.

ಕೆರೆಗಳನ್ನು ಯುಕ್ತವಾಗಿ ಬಳಸಲು ಕರ್ನಾಟಕ ಸರ್ಕಾರ ನೀರು ಬಳಕೆದಾರ ಸಹಕಾರ ಸಂಘಗಳ ಸ್ಥಾಪನೆಗೆ ಒತ್ತುಕೊಟ್ಟಿದೆ (Water users Co-operative Sociery-W.W.C.S.) ಕರ್ನಾಟಕ ಸರ್ಕಾರ ೧೯೬೫ರ ನೀರಾವರಿ ಕಾಯ್ದೆಯನ್ನು ತಿದ್ದುಪಡಿ ಮಾಡಿ ೫೦೦ರಿಂದ ೭೦೦ ಹೆಕ್ಟೇರು ಅಚ್ಚುಕಟ್ಟು ಇರುವ ಕೆರೆಗಳನ್ನು ಈ ಸಂಘದ ಸುಪರ್ದಿಗೆ ಕೊಡುವ ಯೋಜನೆ ರೂಪಿಸಿತು. ೨೦೦೨ರಲ್ಲಿ ಮತ್ತೆ ಒಂದು ಕಾಯ್ದೆ ರೂಪಿಸಿ ಕೆರೆ ಬಳಕೆದಾರರ ಗುಂಪಿಗೆ (Tank Users Group-T.U.G.) ಬಿಡಿ ಕೆರೆಗಳನ್ನು ವಹಿಸುವ ಯೋಜನೆಯೊಂದನ್ನು ರೂಪಿಸಿತು. ೨೦೦೪ರಿಂದ ಯಾವ ಕೆರೆಯ ಅಚ್ಚುಕಟ್ಟು ೪೦ ಹೆಕ್ಟೇರಿಗಿಂತ ಹೆಚ್ಚಾಗಿದೆಯೋ ಅದನ್ನು ಗ್ರಾಮ ಪಂಚಾಯಿತಿಯ ಸುಪರ್ದಿಗೆ ನೀಡಿದೆ. ೪೦ ಹೆಕ್ಟೇರಿಗಿಂತ ಕಡಿಮೆ ಅಚ್ಚುಕಟ್ಟು ಇರುವ ೨೦೦೦ ಕೆರೆಗಳನ್ನು ಆಯ್ಕೆ ಮಾಡಿಕೊಂಡು ಸಮುದಾಯ ಆಧಾರಿತ ಸಣ್ಣ ಕೆರೆಗಳ ಪುನಶ್ಚೇತನ ಯೋಜನೆಯೊಂದನ್ನು ತಂದಿದೆ. ಹಾಗೆಯೇ ಜಲಸಂವರ್ಧನಾ ಯೋಜನಾ ಸಂಘವೆಂಬ ಸ್ವತಂತ್ರ ಸಂಸ್ಥೆಯನ್ನೂ ಅಸ್ತಿತ್ವಕ್ಕೆ ತಂದಿದೆ. ಬಹು ಮುಖ್ಯವಾದ ಅಂಶವೆಂದರೆ ಇಂಥ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕಾದರೆ ಒಂದು ಕಾಲಮಿತಿಯಲ್ಲಿ ಇವನ್ನು ಪೂರ್ಣಗೊಳಿಸಬೇಕು. ಅದಕ್ಕೆ ತಕ್ಕ ಅನುಕೂಲತೆಗಳನ್ನು ಕಲ್ಪಿಸಬೇಕು. ಆಡಳಿತಾತ್ಮಕವಾಗಿ ಇದು ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ. ಅಥವಾ ಅದರ ನಿರ್ವಹಣೆಗೆ ಸ್ಪಷ್ಟ ರೂಪುರೇಖೆಗಳು ನಿರ್ಧಾರವಾಗಿಲ್ಲ.

ಗ್ರಾಮೀಣ ಪ್ರದೇಶಗಳಲ್ಲಿ ಕೆರೆ ಪರಿಸರದ ಅವನತಿ

ಸದ್ಯದಲ್ಲಿ ಕರ್ನಾಟಕ ಕೆರೆ ಪರಿಸರ ಅಷ್ಟೇನೂ ಉತ್ತಮ ಸ್ಥಿತಿಯಲ್ಲಿಲ್ಲ. ಕೃಷಿಗಾಗಿ ಕೆರೆಗಳ ಮೇಲಿನ ಅವಲಂಬನೆ ಸ್ವಾತಂತ್ರ್ಯಾನಂತರ ಅದರಲ್ಲೂ ವಿಶೇಷವಾಗಿ ೭೦ರ ದಶಕದ ನಂತರ ಕಡಿಮೆಯಾಗುತ್ತ ಬಂತು. ಕೊಳವೆ ಬಾವಿಗಳು ಆದ್ಯತೆ ಪಡೆದವು, ಕೆರೆಯ ಪರಿಸರದ ಬಗ್ಗೆ ನಿರ್ಲಕ್ಷ್ಯ ಉಂಟಾಯಿತು. ಹಳ್ಳ ಕೂಡುವ ಜಾಗಗಳು ಸೇರಿದಂತೆ ಕೆರೆಯ ಭಾಗವನ್ನು ಒತ್ತುವರಿ ಮಾಡಿದಾಗ ಎರಡು ಸಮಸ್ಯೆಗಳೂ ಏಕಕಾಲಕ್ಕೆ ಎದುರಾದವು. ಕೆರೆಗಳ ನೀರು ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾದದ್ದು, ಅದೇ ಕಾಲಕ್ಕೆ ಅಧಿಕ ಹೂಳು ಕೆರೆಯಂಗಳವನ್ನು ತುಂಬಿದ್ದು. ಹೀಗಾಗಿ ಅಧಿಕ ಮಳೆ ಬಂದಾಗ, ಸುಸ್ಥಿತಿಯಲ್ಲಿರದ ಎಷ್ಟೋ ಕೆರೆಯ ಏರಿಗಳು ಒಡೆದುಹೋದವು. ಎಲ್ಲದಕ್ಕೂ ಸರ್ಕಾರದ ಹಣವನ್ನೇ ನಿರೀಕ್ಷಿಸುವ ಜಾಯಮಾನ ಗ್ರಾಮೀಣ ಪ್ರದೇಶದ ಜನರಲ್ಲಿ ಬೆಳೆಯಿತು. ಕೆರೆ ದುರಸ್ತಿ ಸರ್ಕಾರದ ಕೆಲಸ ಎನ್ನುವಂತಾಯಿತು. ಬರಗಾಲ ಬಂದಾಗ ಕೆರೆಗಳು ಬತ್ತಿಹೋದವು. ಹಾಗೆಯೇ ಅಂತರ್ಜಲದ ಮಟ್ಟವೂ ಕೆಳಕ್ಕೆ ಹೋಗುತ್ತ ಬಂತು. ಕೆರೆಗಳನ್ನು ಆಧರಿಸಿದ ಜೀವಿ ವೈವಿಧ್ಯಕ್ಕೆ ಇದು ಮುಳುವಾಯಿತು. ಕೆರೆಗಳ ಪುನಶ್ಚೇತನಕ್ಕಾಗಿ ವಿಶ್ವಬ್ಯಾಂಕ್ ನೆರವನ್ನು ಕೇಳುವ ಸ್ಥಿತಿ ಬಂತು.

ಹಸುರು ಕ್ರಾಂತಿ ನಮ್ಮ ಆಹಾರೋತ್ಪಾದನೆಯಲ್ಲಿ ದೊಡ್ಡ ಬದಲಾವಣೆ ತಂದರೂ ಇನ್ನೊಂದು ದೃಷ್ಟಿಯಿಂದ ಶಾಶ್ವತ ಸಮಸ್ಯೆಯನ್ನು ತಂದೊಡ್ಡಿತು. ಯಥೇಚ್ಛವಾಗಿ ಕೀಟನಾಶಕವನ್ನು ಬೆಳೆಗೆ ಬಳಸಿದ್ದರಿಂದ ಅದು ತಂದ ವಿಪತ್ತುಗಳು ನೂರಾರು. 50ರ ದಶಕದಲ್ಲಿ ಸೊಳ್ಳೆ ನಿರ್ಮೂಲನಕ್ಕಾಗಿ ಬಳಸಿದ ಡಿ.ಡಿ.ಟಿ. ಈಗಲೂ ಕೃಷಿ ನೆಲದಿಂದ ಪೂರ್ಣ ಮರೆಯಾಗಿಲ್ಲ ಎಂಬುದು ಪರಿಸರ ಚಿಂತಕರ ಅಳಲು. ಕೃಷಿ ಬೆಳೆಗೆ ಸಿಂಪಡಿಸುವ ಕೀಟನಾಶಕಗಳಲ್ಲಿ ಪೊಟಾಸಿಯಂ ಸಾರ ಹೆಚ್ಚಾಗಿರುತ್ತದೆ. ಮಳೆ ಬಂದಾಗ ಕೆರೆಯಲ್ಲಿ ಸೇರಿಕೊಂಡು ನೀರಿನ ಆಮ್ಲಾಂಕವನ್ನು (PH) ಏರುಪೇರು ಮಾಡುತ್ತದೆ. ಬೆನ್ಜೀನ್ ಹೆಕ್ಸಾಕ್ಲೋರೈಡ್, ಲಿಂಡೇನ್, ಎಂಡೋಸಲ್ಫಾನ್-ಇವು ನೀರಿನಲ್ಲಿ ಸೇರಿ ಅಲ್ಲಿನ ಜೀವಿಗಳಿಗೆ ಮಾರಕವಾಗತೊಡಗಿತು. ಎಷ್ಟೋ ಸಂದರ್ಭಗಳಲ್ಲಿ ಕ್ಯಾನ್ಸರ್‍ಗೂ ಇವು ಕಾರಣ ಎಂದು ಸಮೀಕ್ಷೆಗಳು ಹೇಳಿದವು. ಕೆರೆಗಳನ್ನು ಶೌಚಕ್ಕೆ ಬಳಸುತ್ತಿದ್ದುದರಿಂದ ನೀರಿನಿಂದ ಹರಡುವ ರೋಗಗಳು ಹೆಚ್ಚಾಗುತ್ತಿದ್ದವು. ಈಗಲೂ ಇಂಥ ಸಂದರ್ಭಗಳು ಕೆಲವು ಹಿಂದುಳಿದ ಗ್ರಾಮಗಳಲ್ಲಿದೆ. ಯಾವ ಕೆರೆಯ ನೀರೂ ಶುದ್ಧವಲ್ಲ, ಅದರಲ್ಲಿ ಹಲವು ಲವಣಗಳು ವಿಲೀನವಾಗಿರುತ್ತವೆ. ಅಷ್ಟೇಕೆ ಕೆರೆಯ ನೀರನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಣ್ಣ ಮಣ್ಣಿನ ಕಣಗಳಿಂದಾಗಿ ನೀರಿಗೆ ಕೆಂಪು ಬಣ್ಣ ಬಂದಿರುತ್ತದೆ. ಈ ಸೂಕ್ಷ್ಮ ಕಣಗಳು ನಿಲಂಬಿತ ಸ್ಥಿತಿ (ಸಸ್ಪೆಂಡೆಡ್)ಯಲ್ಲಿರುತ್ತವೆ.

ಸಮುದ್ರಗಳಲ್ಲಿ ಜೀವಿ ವೈವಿಧ್ಯ ಹೇಗಿರುತ್ತದೋ ಕೆರೆಗಳಲ್ಲೂ ಸ್ಥಳೀಯ ಮಟ್ಟದಲ್ಲಿ ಜೀವಿಗಳಲ್ಲಿ ವೈವಿಧ್ಯವಿರುತ್ತದೆ. ಇದಕ್ಕೆ ತುಮಕೂರಿನ ಅಮಾನಿಕೆರೆ ಉದಾಹರಣೆಯಾಗುತ್ತದೆ. ಈ ಕೆರೆಯ ಜೀವಿ ವೈವಿಧ್ಯವನ್ನು ತುಮಕೂರಿನ ಸರ್ಕಾರೇತರ ಸಂಸ್ಥೆ-ವೈಲ್ಡ್ ಲೈಫ್ ಅವೇರ್ ನೆಟ್‍ವರ್ಕ್-ದಾಖಲೆ ಮಾಡಿದೆ. ತುಮಕೂರು ಅಮಾನಿಕೆರೆ ನಗರಕ್ಕೇ ಹೊಂದಿಕೊಂಡಿರುವ ದೊಡ್ಡ ಕೆರೆ. ಇದರ ವಿಸ್ತೀರ್ಣ ೮೩೫ ಎಕರೆ. ಹಾಗೆಯೇ ನೀರು ಹಿಡಿದಿಡುವ ಸಾಮರ್ಥ್ಯ ೧೬೫.೪೪ ದಶಲಕ್ಷ ಘನ ಅಡಿ. ಸಮುದ್ರ ಮಟ್ಟದಿಂದ ೭೮೫ ಮೀಟರ್ ಎತ್ತರದಲ್ಲಿದೆ. ತುಮಕೂರು ತಾಲ್ಲೂಕಿನ ವಾರ್ಷಿಕ ಮಳೆ ಪ್ರಮಾಣ ೬೮೮ ಮಿಲಿ ಮೀಟರ್. ಕೆರೆಯ ಅಚ್ಚುಕಟ್ಟು ಪ್ರದೇಶ ೭೦೫ ಎಕರೆ. ಇದಕ್ಕೆ ಕಟ್ಟಿರುವ ಏರಿಯೇ ೧.೮ ಕಿ.ಮೀ. ಉದ್ದವಿದೆ. ದೇವರಾಯನದುರ್ಗದ ಪಶ್ಚಿಮ ಇಳಿಜಾರು ಪ್ರದೇಶ ಸೇರಿದಂತೆ ಇದರ ಜಲಾನಯನ ಪ್ರದೇಶ ೩೫ ಚದರ ಕಿಲೋ ಮೀಟರ್ ವಿಸ್ತರಿಸಿದೆ. ಈ ಕೆರೆ ತುಂಬಿ ಕೋಡಿ ಬಿದ್ದಾಗ ಅದು ಮುಂದೆ ಭೀಮಸಮುದ್ರ ಕೆರೆಗೆ ಹೋಗುತ್ತದೆ, ಅಲ್ಲಿಂದ ಶಿಂಷಾ ನದಿಗೆ, ಅಂತಿಮವಾಗಿ ಕಾವೇರಿ ನದಿ ಕಣಿವೆಯನ್ನು ಕೂಡಿಕೊಳ್ಳುತ್ತದೆ. ಕ್ರಿ.ಶ. ೧೧೩೦ರಲ್ಲಿ ರಾಜೇಂದ್ರ ಚೋಳ ಈ ಕೆರೆ ಕಟ್ಟಿಸಿದನೆಂಬ ಉಲ್ಲೇಖವಿದೆ. ಈಗ ಇದು ಸಣ್ಣ ನೀರಾವರಿ ಇಲಾಖೆಯ ಉಸ್ತುವಾರಿಯಲ್ಲಿದೆ. ಈ ಕೆರೆಗೆ ಎರಡು ಹಳ್ಳಗಳು ನೀರು ತುಂಬುತ್ತವೆ. ದೇವರಾಯಪಟ್ಟಣ ಹಳ್ಳ ಮತ್ತು ಹನುಮಂತಪುರ ಹಳ್ಳ. ಇವು ಸರ್ವಋತು ಹಳ್ಳಗಳಲ್ಲ, ಮಳೆಗಾಲದಲ್ಲಿ ಮಾತ್ರ ಹರಿಯುವಂತಹವು. ತುಮಕೂರಿನ ಕೆರೆ ಹಿಂಭಾಗದ ಅಂತರ್ಜಲ ಮರುಪೂರಣಕ್ಕೆ ಈ ಕೆರೆಯ ನೀರೇ ಆಧಾರ. ಹಾಗೆಯೇ ಜೀವಿ ವೈವಿಧ್ಯವನ್ನು ಪೋಷಿಸಿರುವ ಈ ಅಮಾನಿಕೆರೆ ಸದಾ ಅಧ್ಯಯನ ಯೋಗ್ಯ. ಈ ಕೆರೆಯನ್ನು ಆಶ್ರಯಿಸಿ ೪೨ ಕುಟುಂಬಕ್ಕೆ ಸೇರಿದ ೧೨೧ ಪಕ್ಷಿ ಪ್ರಭೇದಗಳನ್ನು ಇಲ್ಲಿ ದಾಖಲಿಸಿದ್ದಾರೆ. ಈ ಪೈಕಿ ೪೨ ಪಕ್ಷಿ ಪ್ರಭೇದಗಳು ದೂರದಿಂದ ವಲಸೆ ಬರುವಂತಹವು. ಆರು ಕುಟುಂಬಗಳಿಗೆ ಸೇರಿದ ೨೪ ಚಿಟ್ಟೆ ಪ್ರಭೇದಗಳು, ೧೨ ಜೇಡ ಪ್ರಭೇದಗಳು, ೬ ಸ್ತನಿ ಪ್ರಭೇದಗಳು, ೧೧ ಉರಗ ಪ್ರಭೇದಗಳು ಜೊತೆಗೆ ಆಮೆ, ಕಪಿ, ಮುಂಗುಸಿ, ದಂಷ್ಟ್ರಕ ಜೀವಿಗಳು, ಉಭಯ ಜೀವಿಗಳಿಗೆ ಇದು ನೆಲೆಯಾಗಿದೆ. ತುಮಕೂರಿನ ಅಮಾನಿಕೆರೆ ಅನೇಕ ಹಂತಗಳಲ್ಲಿ ಅಳಿವಿನಂಚಿನತ್ತ ಸಾಗಿತ್ತು. ಮುಖ್ಯವಾಗಿ ಹಳ್ಳದ ನೀರು ಒಳಹರಿಯುವ ಭಾಗದಲ್ಲಿ ಪಾತ್ರ ಬದಲಾಯಿಸಿದ್ದು, ಅತಿಕ್ರಮಣ, ಕೆರೆ ಒತ್ತುವರಿ, ಇಟ್ಟಿಗೆ ಕಾರ್ಖಾನೆಗಳ ಸ್ಥಾಪನೆ, ಅತಿರೇಕದ ಬಯಲು ಶೌಚ ಈ ಮೂಲಕ ನೀರಿನಿಂದ ಹರಡುವ ಕಾಯಿಲೆಗೆ ಜನ ತುತ್ತಾಗಿದ್ದರು. ಅನೇಕ ಪಕ್ಷಿಗಳನ್ನು ಕಾನೂನುಬಾಹಿರವಾಗಿ ಕೊಂದದ್ದರಿಂದ ಅವುಗಳ ಸಂಖ್ಯೆ ಇಳಿಮುಖವಾಯಿತು. ತುಮಕೂರಿನ ಚರಂಡಿ ನೀರು ಅಂತಿಮವಾಗಿ ಈ ಅಮಾನಿಕೆರೆಯನ್ನೇ ಸೇರುತ್ತದೆ. ಇಲ್ಲಿನ ಜೀವಿ ಪ್ರಭೇದಗಳಿಗೆ ದೊಡ್ಡ ಕುತ್ತು ತಂದಿರುವ ಸಂಗತಿ ಇದು. ನೀರಿನಲ್ಲಿ ಬೆಳದ ಅಂತರಗಂಗೆ ಕೆರೆಯ ಬಹುಭಾಗದ ನೀರನ್ನೇ ಮರೆಮಾಡಿತ್ತು. ತುಮಕೂರಿನ ನಾಗರಿಕರು ಕ್ರಿಯಾಶೀಲರಾಗಿ, ಸ್ವಯಂಪ್ರೇರಿತರಾಗಿ ಇದನ್ನು ಶುದ್ಧೀಕರಿಸುವ ಕಾರ್ಯ ಕೈಗೊಂಡರು.

ಸಾಮಾನ್ಯವಾಗಿ ಯಾವ ಕೆರೆಯೇ ಆಗಲಿ, ಅದರಲ್ಲಿ ತೇಲುವ ಸಸ್ಯಗಳು, ಮುಳುಗಿರುವ ಸಸ್ಯ, ನೀರಿನ ತಳದಲ್ಲಿ ಆಳ ಬೇರು ಬಿಟ್ಟಿರುತ್ತವೆ. ಅಂತರಗಂಗೆ, ನೀರು ಬ್ರಾಹ್ಮಿ, ಒಂದೆಲಗೆ ಸಸ್ಯ ಅನೇಕ ಕೆರೆಗಳಲ್ಲಿ ತೇಲುವುದನ್ನು ಸಾಮಾನ್ಯವಾಗಿ ಕಾಣಬಹುದು. ಶೈವಲ, ಡಯಾಟಂ ಕೂಡ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಜೀವಿ ವಿಜ್ಞಾನಿಗಳು ಬಹುತೇಕ ಕೆರೆಗಳಲ್ಲಿ ಹದಿನೈದು ಬಗೆಯ ಸಸ್ಯಗಳನ್ನು ದಾಖಲೆ ಮಾಡಿದ್ದಾರೆ. ಹಾಗೆಯೇ ಗುಳುಮುಳುಕ, ನೀರುಕಾಗೆ, ರಾತ್ರಿಬಕ, ಬೂದುಕೊಕ್ಕರೆ, ಮೀಂಚುಳ್ಳಿ, ಚಮಚದ ಕೊಕ್ಕು ಸೇರಿದಂತೆ ಅನೇಕ ಬಗೆಯ ಪಕ್ಷಿಗಳಿಗೆ ಕೆರೆ ಆಶ್ರಯ ಕೊಡುತ್ತದೆ. ಶಂಕದ ಹುಳು, ಏಡಿ, ಸೀಗಡಿ, ನಳ್ಳಿ, ಸಂದಿಪದಿಗಳು, ವಲಯವಂತಗಳು ಆಹಾರ ಸರಪಳಿಯ ಒಂದು ಭಾಗವಾಗಿ ಕೆರೆಯನ್ನು ಆಶ್ರಯಿಸಿರುತ್ತವೆ. ಕೊಡತಿಕೀಟದಿಂದ ಹಿಡಿದು ಜಲಜೀರುಂಡೆಗಳವರೆಗೆ ಅನೇಕ ಕೀಟಗಳಿಗೂ ಕೆರೆಯೇ ಆವಾಸ. ಹಾಗೆಯೇ ಸೂಕ್ಷ್ಮಜೀವಿಗಳು ಕೆರೆಯಲ್ಲಿ ಆಶ್ರಯ ಪಡೆಯುತ್ತವೆ. ಯೂಗ್ಲಿನ, ಸ್ಪೈರೋಗೈರ, ಪ್ಯಾರಮೀಡಿಯಮ್ ಮುಂತಾದವು. ಇದಲ್ಲದೆ ಕೆರೆಗಳಲ್ಲಿ ನೈಸರ್ಗಿಕವಾಗಿರುವ ಮೀನುಗಳೂ ಉಂಟು. ಹಾಗೆಯೇ ಮೀನುಗಳನ್ನು ಬೆಳೆಸುವುದೂ ಉಂಟು. ಸರ್ವಋತು ನೀರಿದ್ದಾಗ ಮಾತ್ರ ಇದು ಸಾಧ್ಯ. ಕಾಟ್ಲಾ, ಮೃಗಾಲ್, ಗೆಂಡೆಮೀನು, ಬಾಳೆಮೀನು ಸೇರಿದಂತೆ ೨೦ ಬಗೆಯ ಮೀನಿನ ತಳಿಗಳನ್ನು ಕೆರೆಗಳಲ್ಲಿ ಬೆಳೆಸುವುದುಂಟು. ಅಂಥ ಕೆರೆಗಳು ಮಲಿನವಾಗಿರಬಾರದು. ಕೆರೆ ಕಲುಷಿತವಾಯಿತೆಂದರೆ ಬಹು ಬೇಗ ಜೀವಿಗಳು ಸಾಯುತ್ತವೆ, ಜೀವಿ ವೈವಿಧ್ಯ ನಷ್ಟವಾಗುತ್ತವೆ. ಹಾಗೆಯೇ ಆಹಾರ ಸರಪಳಿಯ ಕೊಂಡಿ ಕಳಚುತ್ತದೆ. ಇವೆಲ್ಲವನ್ನೂ ಕಾನೂನಿನಿಂದಲೇ ಸರಿಪಡಿಸಲು ಸಾಧ್ಯವಿಲ್ಲ. ಸಂರಕ್ಷಣೆ ಕುರಿತು ಸ್ಥಳೀಯರಲ್ಲಿ ಜಾಗೃತಿ ಮೂಡಿಸಬೇಕು.

ಸೂಳೆಕೆರೆ (ಶಾಂತಿಸಾಗರ) ಅಧ್ಯಯನ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸೂಳೆಕೆರೆಗೆ ಕರ್ನಾಟಕದ ಕೆರೆಗಳಲ್ಲಿ ವಿಶಿಷ್ಟ ಸ್ಥಾನವಿದೆ. ಕ್ರಿ.ಶ. ೧೧೨೮ರಲ್ಲಿ ಶಾಂತವ್ವ ಎಂಬಾಕೆ ಕಟ್ಟಿಸಿದ ಈ ಕೆರೆ ಏಷ್ಯದ ಅತಿದೊಡ್ಡ ಎರಡನೇ ಕೆರೆ ಎಂದು ಪ್ರಸಿದ್ಧಿಯಾಗಿದೆ (ಏಷ್ಯದ ಅತಿದೊಡ್ಡ ಕೆರೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆ ಕುಂಬಂ. ಇದರ ನೀರು ಸಂಗ್ರಹಣಾ ಸಾಮರ್ಥ್ಯ ೩,೩೭೮ ಘನ ಅಡಿ). ಸೂಳೆಕೆರೆಯ ನೀರಿನ ವಿಸ್ತೀರ್ಣ ೨,೪೬೬ ಹೆಕ್ಟೇರು, ಜಲಾನಯನ ಪ್ರದೇಶದ ವಿಸ್ತೀರ್ಣ ೮೪,೪೧೬ ಹೆಕ್ಟೇರು. ಕೆರೆಯ ಸುತ್ತಳತೆ ೩೦ ಕಿಲೋ ಮೀಟರು. ಈ ನೀರನ್ನು ಆಧರಿಸಿ ೨,೮೭೬ ಹೆಕ್ಟೇರು ಸಾಗುವಳಿಯಾಗುತ್ತಿದೆ. ಕೆರೆಯ ಕನಿಷ್ಠ ಆಳ ಐದು ಮೀಟರು, ಗರಿಷ್ಠ ಆಳ ಒಂಬತ್ತು ಮೀಟರು. ಕೆರೆಯ ನೀರಿನ ಮಟ್ಟ ಕೆಳಗೆ ಇಳಿಯುವ ಪರಿಸ್ಥಿತಿ ಎದುರಾಗಿತ್ತು. ಆಗ ಭದ್ರಾ ಅಣೆಕಟ್ಟಿನ ಕಾಲುವೆ ಸಂಪರ್ಕ ಕಲ್ಪಿಸಲಾಯಿತು. ಈಗ ಸರ್ವಋತುವಿನಲ್ಲೂ ಇದರಲ್ಲಿ ನೀರಿರುತ್ತದೆ. ಕೆರೆಯ ಅಂಚಿನ ಭಾಗದಲ್ಲಿ ಶೇ. ಸುಮಾರು ೧೫ ಭಾಗ ಒತ್ತುವರಿಯಾಗಿದ್ದರೂ, ಶೇ. ೩೦ ಭಾಗದಲ್ಲಿ ಜಲಸಸ್ಯಗಳು ಬೆಳೆದಿದ್ದರೂ, ಈ ಕೆರೆ ಕಲುಷಿತವಾಗಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಹತ್ತಿರದಲ್ಲಿ ಯಾವುದೇ ಕಾರ್ಖಾನೆಗಳಿಲ್ಲವಾದ್ದರಿಂದ ಕೆರೆಗೆ ಕೊಳಚೆ ಹರಿಯುವ ಸಂಭವವಿಲ್ಲ.

ವೈಜ್ಞಾನಿಕ ದೃಷ್ಟಿಯಿಂದ ಈ ಕೆರೆಯ ನೀರಿನ ಬೇರೆ ಬೇರೆ ಗುಣಗಳನ್ನು ತಜ್ಞರು ವಿಶ್ಲೇಷಿಸಿದ್ದಾರೆ. ಕೆರೆಯ ನೀರಿನ ಉಷ್ಣತೆಗಿಂತ ಇದರ ಮೇಲೆ ಬೀಸುವ ಗಾಳಿಯ ಉಷ್ಣತೆಯೇ ಹೆಚ್ಚು (೨೭.೦-೩೩.೨೦ ಡಿಗ್ರಿ ಸೆಂ.). ಈ ನೀರು ಕುಡಿಯಲು ಯೋಗ್ಯವಾಗಿದೆ. ಈ ಕಾರಣಕ್ಕಾಗಿಯೇ ಚಿತ್ರದುರ್ಗಕ್ಕೆ ಈ ಕೆರೆಯಿಂದ ದಿನವಹಿ ೩೦ ದಶಲಕ್ಷ ಲೀಟರು ನೀರು ಪೂರೈಕೆ ಸಾಧ್ಯವಾಗಿದೆ. ನೀರಿನಲ್ಲಿ ಯಾವುದೇ ವಾಸನೆ ಇಲ್ಲ, ಮಳೆಗಾಲದಲ್ಲೂ ಪ್ರಕ್ಷುಬ್ದ ಕಣಗಳು ಒಂದು ಲೀಟರ್‍ಗೆ ಮೂರು ಮಿಲಿಗ್ರಾಂಗಿಂತ ಕಡಿಮೆ. ನೀರು ಕ್ಷಾರವಾಗಿದೆ. ಇದರ ಕ್ಷಾರತೆ ೮.೪-೮.೬. ಅತ್ಯಂತ ಗಮನಾರ್ಹ ಅಂಶವೆಂದರೆ ಈ ನೀರಿನಲ್ಲಿ ವಿಲೀನವಾಗಿರುವ ಆಕ್ಸಿಜನ್ ೫.೫ ರಿಂದ ೭.೪ ಮಿಲಿಗ್ರಾಂ/ಲೀಟರ್. ಇದು ವಿಶೇಷವಾಗಿ ಮೀನುಸಾಕಣೆಗೆ ಅತ್ಯಂತ ಪ್ರಶಸ್ತವಾದ ಅಂಶ. ನೀರಿನಲ್ಲಿ ನೈಟ್ರೇಟ್ ಪ್ರಮಾಣ ಅತಿ ಕಡಿಮೆ ಮತ್ತು ಅಮೋನಿಯ ಇಲ್ಲವೇ ಇಲ್ಲ. ತೇಲು ಸಸ್ಯಗಳಿದ್ದರೂ ಅವುಗಳ ಪ್ರಮಾಣ ಕಡಿಮೆ. ಹಾಗೆಯೇ ಕೆರೆಯಲ್ಲಿ ಮುಳುಗಿರುವ ಕಲ್ಲುಗಳ ಮೇಲೆ ಬೆಳೆಯುವ ಸಸ್ಯಗಳ ಪ್ರಮಾಣ ಹೆಚ್ಚು. ಜಲಚರಗಳಲ್ಲಿ ಮೃದ್ವಂಗಿಗಳು, ಕೀಟಗಳು, ಮೀನು ಮತ್ತು ಚಿಪ್ಪುಜೀವಿಗಳು ಕ್ರಮವಾಗಿ ಹೆಚ್ಚು ಪ್ರಮಾಣದಲ್ಲಿವೆ. ಮೃಗಾಲ್, ಕಾಟ್ಲಾ ಮೀನುಗಳಿಗಿಂತ ರೋಹು ಮತ್ತು ಕಾರ್ಪ್ ಮೀನು ತಳಿಗಳನ್ನು ಇಲ್ಲಿ ಹೆಚ್ಚು ಬೆಳೆಸಿದ್ದಾರೆ. ರಾಜ್ಯದ ಮೀನುಗಾರಿಕೆ ಇಲಾಖೆಯ ಮೀನು ಉತ್ಪಾದನಾ ಫಾರ್ಮ್‍ಗಳಲ್ಲಿ ಇದೂ ಒಂದು. ಜಲಾನಯನ ಪ್ರದೇಶದಲ್ಲಿ ಕೃಷಿಗೆ ಬಳಸುತ್ತಿರುವ ಕೃಷಿ ಕೀಟನಾಶಕ ಮುಂದೆ ಈ ಕೆರೆಯನ್ನು ಮಲಿನಗೊಳಿಸಬಹುದೆಂಬ ಎಚ್ಚರಿಕೆಯನ್ನು ತಜ್ಞರು ಕೊಟ್ಟಿದ್ದಾರೆ. ಸ್ಥಳೀಯ ಮೀನುಗಳು ಈ ಕೆರೆಯಿಂದ ಕಣ್ಮರೆಯಾಗಿರುವ ಬಗ್ಗೆ ವರದಿಗಳಿವೆ.

ಒಂದು ಕೆರೆ ಅತ್ಯಂತ ಆರೋಗ್ಯಕರ ಪರಿಸರ ಹೊಂದಿದ್ದರೆ ಅದು ಹೇಗೆ ಒಂದು ಸಂಪನ್ಮೂಲವಾಗುತ್ತದೆ ಎಂಬುದಕ್ಕೆ ಸೂಳೆಕೆರೆ ಒಂದು ಜೀವಂತ ನಿದರ್ಶನ. ಇಲ್ಲಿ ಒಳನಾಡು ಮೀನುಗಾರಿಕೆ ಸಹಕಾರ ಸಂಘವಿದೆ. ಈ ಕೆರೆಯಿಂದ ವಾರ್ಷಿಕ ೩೫ ಲಕ್ಷ ಟನ್ನು ಮೀನು ಸಂಗ್ರಹವಾಗುತ್ತದೆ.

ಕೆರೆ ಪರಿಸರ

ನಗರಗಳ ಕೆರೆಗಳ ಪರಿಸರ

ಕೆರೆಗಳ ಅಸ್ತಿತ್ವಕ್ಕೆ ದೊಡ್ಡ ಕುತ್ತು ಬಂದಿರುವುದು ನಗರಗಳಲ್ಲೇ-ಅದೂ ಮಹಾನಗರಗಳಲ್ಲಿ. ನಗರಗಳು ಬೆಳವಣಿಗೆ ತೋರಿಸಿದಂತೆ ಅವು ಹಾಕುವ ಒತ್ತಡ ಅನೇಕ ಕ್ಷೇತ್ರಗಳ ಮೇಲೆ ನಿಚ್ಚಳವಾಗಿ ಕಂಡುಬರುತ್ತದೆ. ನಗರ ಬೆಳವಣಿಗೆಗೆ ಹಲವು ಆಯಾಮಗಳಿವೆ. ಗ್ರಾಮೀಣ ಭಾಗಗಳಿಂದ ಉದ್ಯೋಗ ಅರಸಿ ಬರುವವರ ಸಂಖ್ಯೆ ದೊಡ್ಡದಾಗಿದೆ. ಕೃಷಿ ತೊರೆದು ನಗರವಾಸಿಗಳಾಗಲು ಜನ ಹೆಚ್ಚು ಉತ್ಸಾಹ ತೋರುತ್ತಿದ್ದಾರೆ. ಬಹುಮುಖ್ಯವಾಗಿ ನೆಲ ಮತ್ತು ನೀರಿನ ಮೇಲೆ ಅತ್ಯಂತ ಹೆಚ್ಚು ಒತ್ತಡ ಬೀಳುತ್ತದೆ. ನಿವೇಶನಗಳ ಬೆಲೆ ಕೈಮೀರಿ ಹೋಗುತ್ತದೆ. ಹೈದರಾಬಾದ್, ಬೆಂಗಳೂರು, ಅಹಮದಾಬಾದ್, ದೆಹಲಿ, ಚೆನ್ನೈ ಎಲ್ಲ ಕಡೆಯಲ್ಲೂ ನಗರೀಕರಣ ಭರದಿಂದ ಸಾಗಿದೆ. ನೆಲಬಾಕ ಸಂಸ್ಕೃತಿಗೆ ಇದು ಇಂಬುಕೊಟ್ಟಿದೆ. ಕಾನೂನನ್ನು ಮೀರಿ ಸಾಗಿರುವ ಕೆರೆಗಳ ಒತ್ತುವರಿ, ಕೆರೆಯಂಗಳದಲ್ಲೂ ತಲೆ ಎತ್ತಿರುವ ಅನೇಕ ಕಟ್ಟಡಗಳು, ಜಲಾನಯನ ಪ್ರದೇಶ ಕಣ್ಮರೆಯಾಗಿರುವುದು ಇವೆಲ್ಲವೂ ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಕಳೆದ ಹದಿನೈದು ವರ್ಷಗಳಲ್ಲಿ ಹೈದರಾಬಾದ್ ನಗರ ೩,೨೪೫ ಹೆಕ್ಟೇರಿನಷ್ಟು ಕೆರೆಗಳನ್ನು ಕಳೆದುಕೊಂಡಿದೆ. ಚೆನ್ನೈ ಸ್ಥಿತಿ ಇದಕ್ಕಿಂತಲೂ ಘೋರ. ಕಳೆದ ಶತಮಾನದಲ್ಲಿ ಅಲ್ಲಿ ೬೫೦ ಕೆರೆಗಳಿದ್ದವು, ಈಗ ಅವು ೩೦ಕ್ಕೆ ಇಳಿದಿವೆ. ೨೦೧೨ರಲ್ಲಿ ೧,೧೩೦ ಹೆಕ್ಟೇರಿನಿಂದ ೬೪೫ ಹೆಕ್ಟೇರಿಗೆ ಕುಗ್ಗಿಹೋಗಿವೆ. ಇದರ ನೇರ ಪರಿಣಾಮ ಆ ನಗರಕ್ಕೆ ತಟ್ಟಿದೆ. ಅಂತರ್ಜಲ ಮಟ್ಟ ಕೆಳಕ್ಕೆ ಇಳಿದಿದೆ. ಕಳೆದ ಡಿಸೆಂಬರ್‍ನಲ್ಲಿ ಪ್ರಳಯ ರೂಪವಾಗಿ ಕಾಡಿದ ಜಲಪ್ರವಾಹಕ್ಕೆ ಅಲ್ಲಿನ ಕೆರೆಗಳು ನಾಶವಾಗಿರುವುದೂ ಒಂದು ಕಾರಣ. ಏಕೆಂದರೆ ಹೆಚ್ಚುವರಿ ಮಳೆನೀರನ್ನು ಹಿಡಿದಿಡುವ ಸಾಮರ್ಥ್ಯ ಈ ಕೆರೆಗಳಿಗಿತ್ತು. ಅಹಮದಾಬಾದಿನಲ್ಲಿ ೨೦೦೨ ರಲ್ಲಿ ೨೩೫ ಕೆರೆಗಳಿದ್ದವು. ಮುಂದಿನ ಹತ್ತು ವರ್ಷಗಳಲ್ಲಿ ಶೇ. ೬೦ ಭಾಗ ಕೆರೆಗಳು ಕಣ್ಮರೆಯಾದವು. ಇನ್ನು ದೇಶದ ರಾಜಧಾನಿ ದೆಹಲಿಯಲ್ಲಿ ಕೆರೆಗಳ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ದೆಹಲಿಯ ಉದ್ಯಾನ ಮತ್ತು ತೋಟಗಳ ಅಭಿವೃದ್ಧಿ ಸಂಘ ವರದಿ ಮಾಡಿರುವಂತೆ ೬೧೧ ಕೆರೆಗಳ ಪೈಕಿ ೨೭೪ ಕೆರೆಗಳು ಬತ್ತಿಹೋಗಿವೆ. ೧೮೦ ಕೆರೆಗಳನ್ನು ಜೀರ್ಣೋದ್ಧಾರ ಮಾಡಲಾಗದ ಸ್ಥಿತಿ ಇದೆ.

ಕೆರೆಗಳನ್ನು ನುಂಗಿ ಬೆಳೆದಿರುವ ಮಹಾ ನಗರಗಳ ಪೈಕಿ ಬೆಂಗಳೂರು ಒಂದು. ೧೯೬೦ರ ದಶಕದಲ್ಲಿ ೨೮೦ ಕೆರೆಗಳಿದ್ದವು. ಇವುಗಳನ್ನು ಪರಸ್ಪರ ಸಂಪರ್ಕಿಸುವ ರಾಜ ಕಾಲುವೆಗಳಿದ್ದವು. ಕೆರೆ ತುಂಬಿದಾಗ ಕೋಡಿ ನೀರು ಹರಿದು ಮುಂದಿನ ಕೆರೆಯನ್ನು ತುಂಬುತ್ತಿತ್ತು. ನಗರದ ಉತ್ತರ ಭಾಗದ ಜಕ್ಕೂರು ಕೆರೆ, ಹೆಬ್ಬಾಳ ಕೆರೆ, ನಾಗವಾರ ಕೆರೆ ತುಂಬಿಬಂದಾಗ ಅವು ದಕ್ಷಿಣ ಭಾಗದ ಕಲ್ಕೆರೆ, ಮಾರಗೊಂಡನಹಳ್ಳಿ ಕೆರೆ, ವರ್ತೂರು, ಬೆಳ್ಳಂದೂರು ಕೆರೆಗಳನ್ನು ತುಂಬುತ್ತಿದ್ದವು. ಈ ನೀರು ಕೃಷಿಗೆ ಬಳಕೆಯಾಗುತ್ತಿತ್ತು. ಸದ್ಯದಲ್ಲಿ ೮೦ ಕೆರೆಗಳನ್ನು ನಗರ ಭಾಗದಲ್ಲಿ ಗುರುತಿಸಬಹುದು. ನೀರು ತುಂಬಿದ ಕೆರೆಗಳು ಬರಿ ೩೪. ಬೆಂಗಳೂರು ಕೆರೆಗಳ ಬಗ್ಗೆ ಸರ್ಕಾರ, ಕಾರ್ಪೋರೇಷನ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮುಂತಾದವು ಕಾಳಜಿ ವಹಿಸಿದರೂ ಅದು ಬಹು ತಡವಾಗಿತ್ತು. ಆ ಹೊತ್ತಿಗೆ ಎಷ್ಟೋ ಕೆರೆಗಳು ಕಣ್ಮರೆಯಾಗಿದ್ದವು. ‘ಲ್ಯಾಂಡ್ ಮಾಫಿಯಾ’ ಕೆರೆ ಒತ್ತುವರಿಯಲ್ಲಿ ಆಸಕ್ತಿ ತೋರಿ ನ್ಯಾಯಬಾಹಿರವಾಗಿ ಹಣವನ್ನು ಕೊಳ್ಳೆಹೊಡೆಯಿತು. ಬೆಂಗಳೂರಿನ ಎಷ್ಟೋ ಕೆರೆಗಳನ್ನು ನುಂಗಿಹಾಕಿ ಬಡಾವಣೆಗಳು ಬೆಳೆದಿವೆ. ಇದಕ್ಕೆ ೨೮ ಕೆರೆಗಳು ಬಲಿಯಾಗಿವೆ. ಇಂದಿನ ಗಾಂಧಿಬಜಾರು, ಬಸವನಗುಡಿ ಭಾಗದಲ್ಲಿ ಹಿಂದೆ ಕಾರಂಜಿ ಕೆರೆ ಇತ್ತು. ಅಕ್ಕಿತಿಮ್ಮನಹಳ್ಳಿಯ ಕೆರೆಯನ್ನು ಕಬಳಿಸಿ ವಿಲ್ಸನ್ ಗಾರ್ಡನ್ ಹುಟ್ಟಿತು. ತಾವರೆಕೆರೆ, ಭೈರಸಂದ್ರ ಕೆರೆಗಳನ್ನು ನುಂಗಿ ಜಯನಗರ ಬಡಾವಣೆ ಬೆಳೆಯಿತು. ಕೋಡಿಚಿಕ್ಕನಹಳ್ಳಿ ಕೆರೆ, ಅರಕೆರೆ, ಹುಳಿಮಾವು ಕೆರೆ, ರೂಪೇನ ಅಗ್ರಹಾರ ಕೆರೆಗಳನ್ನು ನುಂಗಿ ಬಿ.ಟಿ.ಎಂ. ಬಡಾವಣೆ ತಲೆಯೆತ್ತಿತು. ಉತ್ತರಹಳ್ಳಿ, ಯಲಚೇನಹಳ್ಳಿ, ಹಾಲದೇವನಹಳ್ಳಿ, ಬಿಕಾಸಿಪುರ ಕೆರೆಗಳನ್ನು ಕಬಳಿಸಿ, ಬನಶಂಕರಿ ಐದನೇ ಹಂತ ತಲೆ ಎತ್ತಿದೆ. ಆಲಹಳ್ಳಿ, ಸಾರಕ್ಕಿ, ಪುಟ್ಟೇನಹಳ್ಳಿ, ಜರಗನಹಳ್ಳಿ ಕೆರೆಗಳು ಜೆ.ಪಿ.ನಗರ ೯ನೇಹಂತಕ್ಕೆ ಬಲಿಯಾಗಿವೆ. ಪ್ರತಿಷ್ಠಿತ ಕೆಂಪೇಗೌಡ ಬಸ್ ನಿಲ್ದಾಣ ಹಿಂದೆ ಧರ್ಮಾಂಬುಧಿ ಕೆರೆಯಾಗಿತ್ತು. ಈಗಿರುವ ಸಿಟಿ ಮಾರ್ಕೆಟ್‍ನಲ್ಲಿ ಸಿದ್ಧಿಕಟ್ಟೆ ಎಂಬ ಕೆರೆ ಇತ್ತು. ಸರ್ಕಾರ ಕಣ್ಣುಬಿಟ್ಟು ನೋಡಿದ್ದು ೧೯೮೫ರಲ್ಲಿ. ಸರ್ಕಾರದ ಆದೇಶದಂತೆ ಎನ್. ಲಕ್ಷ್ಮಣರಾವ್ ಅವರು ನೀಡಿದ ವರದಿಯಿಂದ. ಆ ಸಮಯದಲ್ಲಿ ನಗರದ ಸುತ್ತಮುತ್ತಲ ೧೦೮ ಕೆರೆಗಳಿಗೆ ಸಂಬಂಧಿಸಿದಂತೆ ೫೦೦ ಎಕರೆ ಜಾಗ ಒತ್ತುವರಿಯಾಗಿತ್ತು.

ಬೆಂಗಳೂರು ಕೆರೆಯ ನಿರ್ವಹಣೆಯಲ್ಲಂತೂ ಸದಾ ಗೊಂದಲವೇ ತುಂಬಿದೆ. ಆಡಳಿತಾತ್ಮಕವಾಗಿ ಬೆಂಗಳೂರಿನ ಕೆರೆಗಳು ಒಂದು ಸಂಸ್ಥೆಯ ಉಸ್ತುವಾರಿಯಲ್ಲಿಲ್ಲ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ೧೨೩ ಕೆರೆಗಳನ್ನು, ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ೬೦ ಕೆರೆಗಳನ್ನೂ, ಅರಣ್ಯ ಇಲಾಖೆ ೫ ಕೆರೆಗಳನ್ನೂ, ಸಣ್ಣ ನೀರಾವರಿ ಯೋಜನೆ ೧೮ ಕೆರೆಗಳನ್ನು, ಕೆರೆ ಅಭಿವೃದ್ಧಿ ಪ್ರಾಧಿಕಾರ ೪ ಕೆರೆಗಳನ್ನು ನಿರ್ವಹಿಸುವ ಹೊಣೆಯನ್ನು ಹೊತ್ತವು. ಆದರೆ ಈ ಸಂಸ್ಥೆಗಳ ನಡುವ ನಿಜವಾದ ಸಮನ್ವಯ ಇಲ್ಲದೆ ಕೆರೆ ಅಭಿವೃದ್ಧಿ ಬೇರೆ ಬೇರೆ ದಾರಿ ಹಿಡಿಯಿತು.

ಬೆಂಗಳೂರು ಕೆರೆಗಳಿಗೆ ಕುತ್ತು ತಂದಿರುವುದು ನಮ್ಮ ಒಳಚರಂಡಿ ವ್ಯವಸ್ಥೆ. ಕಲುಷಿತ ನೀರು, ಗೃಹತ್ಯಾಜ್ಯ, ಕಾರ್ಖಾನೆ ತ್ಯಾಜ್ಯ, ಇವೆಲ್ಲವೂ ಕೆರೆಗಳಿಗೇ ಹರಿಯುವಂತಹ ಅನಿವಾರ್ಯ ಸ್ಥಿತಿ ಸೃಷ್ಟಿಯಾಯಿತು. ಕೆರೆಗಳು ತುಂಬಿಬರಲು ಜಲಾನಯನದ ಭಾಗ ಸುರಕ್ಷಿತವಾಗಿರಬೇಕು. ಈ ಪ್ರದೇಶವೆಲ್ಲ ವಸತಿ ಕಟ್ಟಡಗಳಿಂದ ತುಂಬಿಹೋದ ಮೇಲೆ ಕೆರೆಗೆ ಹರಿದುಬರುವ ನೀರಿನ ಮೇಲೆ ದೊಡ್ಡ ಪರಿಣಾಮ ಬೀರಿತು. ಇನ್ನು ಲಾಗಾಯ್ತಿನಿಂದ ತುಂಬುತ್ತಿದ್ದ ಹೂಳು ತೆಗೆಯಲು ಕೋಟ್ಯಂತರ ರೂಪಾಯಿ ಬೇಕಾಯಿತು. ಬೆಂಗಳೂರು ನಗರ ಪಾಲಿಕೆ ‘ಕೆರೆಸಿರಿ’ ಯೋಜನೆಯಲ್ಲಿ ಹಲವು ಕೆರೆಗಳ ಪುನಶ್ಚೇತನ ಮಾಡಿದರೂ (ಉದಾ: ಎಡೆಯೂರು ಕೆರೆ), ಆ ಭಾಗ್ಯ ಎಲ್ಲ ಕೆರೆಗಳಿಗೂ ಸಿಕ್ಕಲಿಲ್ಲ. ಹಲಸೂರು ಕೆರೆ ಈಗಲೂ ಮಿಲಿಟರಿ ಆಡಳಿತದಲ್ಲೇ ಇದೆ. ಅಲ್ಲಿ ಆಗಾಗ್ಗೆ ಸತ್ತ ಮೀನುಗಳೂ ರಾಶಿರಾಶಿ ಬೀಳುವುದು ಸರ್ವಸಾಮಾನ್ಯವಾಗಿದೆ. ಅಲ್ಲಿ ನೀರಿನಲ್ಲಿ ವಿಲೀನವಾದ ಆಕ್ಸಿಜನ್ ಪ್ರಮಾಣ ಕಡಿಮೆ. ಹೀಗಾಗಿ ಮತ್ತೆ ಮತ್ತೆ ಈ ಅವಘಡ ಸಂಭವಿಸುತ್ತಿದೆ. ಚರಂಡಿ ನೀರನ್ನು ಇಲ್ಲಿಗೆ ಬಿಡುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಹೆಬ್ಬಾಳ, ಮಡಿವಾಳ ಮತ್ತು ದೊಡ್ಡ ಬೊಮ್ಮಸಂದ್ರ ಕೆರೆಗಳ ಅಭಿವೃದ್ಧಿಗೆ ಇಂಡೋ ನಾರ್ವೇ ಎನ್ವಿರಾನ್‍ಮೆಂಟಲ್ ಪ್ರಾಜೆಕ್ಟ್ ನೆರವಿಗೆ ಬರಬೇಕಾಯಿತು. ವರ್ತೂರು ಕೆರೆ (೪೧೧.೨೧ ಎಕರೆ) ಕೆಲವು ವರ್ಷಗಳಿಂದ ಭಾರಿ ಸುದ್ಧಿ ಮಾಡುತ್ತಿದೆ. ಕೆರೆಯ ತುಂಬ ನೊರೆ ಕಾಣಿಸಿಕೊಳ್ಳುತ್ತಿದೆ. ಇದರ ಮೂಲ ಹುಡುಕುವುದು ಕಷ್ಟವೇನಲ್ಲ. ಇಲ್ಲಿಗೆ ದೊಡ್ಡ ಪ್ರಮಾಣದಲ್ಲಿ ಗೃಹ ತ್ಯಾಜ್ಯ ಬರುತ್ತಿದೆ. ಕಾರ್ಖಾನೆಗಳ ತ್ಯಾಜ್ಯವೂ ಸೇರುತ್ತಿದೆ. ಶುದ್ಧೀಕರಣದ ವ್ಯವಸ್ಥೆ ಸಾಲದು. ಹತ್ತಾರು ರಾಸಾಯನಿಕಗಳು ಇದರಲ್ಲಿ ವಿಲೀನವಾಗಿದೆ. ಮನೆಯಲ್ಲಿ ಬಳಸುವ ಡಿಟರ್ಜೆಂಟಗಳಿಂದಾಗಿ ನೊರೆ ಹೆಚ್ಚುತ್ತಿದೆ. ಫಾಸ್ಪೇಟ್ ಅಂಶ ಕೆರೆಗೆ ಸೇರುತ್ತಿದೆ. ಇದನ್ನೇ ಆಧರಿಸಿ ಭರ್ಜರಿಯಾಗಿ ಕಳೆ ಬೆಳೆಯುತ್ತಿದೆ. ಬೆಂಗಳೂರಿನ ಶೇ.೪೦ ಭಾಗದ ಕೊಳಚೆ ನೀರು ವರ್ತೂರು ಕೆರೆಗೆ ಹರಿಯುತ್ತಿದೆ. ಹಾಗೆಯೇ ಅಮಾನಿಕೆರೆಯ ಸ್ಥಿತಿಯೂ ಹೀನಾಯವಾಗಿದೆ. ಈ ಕೆರೆಗೆ ಅಧಿಕ ಪ್ರಮಾಣದ ಹೈಡ್ರೋ ಕಾರ್ಬನ್ ಸೇರಿರುವುದರಿಂದ ಆಗಾಗ ಬೆಂಕಿ ಕಾಣಿಸಿಕೊಳ್ಳುವ ಅಪರೂಪದ ಘಟನೆಯೂ ನಡೆಯುತ್ತದೆ. ಜೊಂಡು, ಅದನ್ನು ಆಶ್ರಯಿಸಿರುವ ಬ್ಯಾಕ್ಟೀರಿಯಗಳು ಬಿಡುವ ಅಮೋನಿಯ ಕೂಡ ಹೆಚ್ಚಿನ ಪ್ರಮಾಣದಲ್ಲಿದೆ. ಈ ನೀರನ್ನು ಯಾವುದಕ್ಕೂ ಬಳಸದ ಸ್ಥಿತಿ ಉಂಟಾಗಿದೆ.

ಹಿಂದೆ ಬೆಂಗಳೂರಿನ ಅನೇಕ ಕೆರೆಗಳು ವಿಗ್ರಹ ವಿಸರ್ಜನೆಯ ಜಾಗಗಳಾಗಿದ್ದವು. ವಿಗ್ರಹಗಳ ಪೇಂಟ್‍ನಲ್ಲಿದ್ದ ಸೀಸದ ಅಂಶವು ನೀರಿಗೆ ಸೇರುತ್ತಿತ್ತು. ಅದನ್ನು ನಿವಾರಿಸಲು ಕೆಲವು ಕೆರೆಗಳಲ್ಲಿ ಪ್ರತ್ಯೇಕ ಸಣ್ಣ ಗುಂಡಿಗಳನ್ನು ತೋಡಿ ವಿಗ್ರಹ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿದೆ. ಲಾಲ್‍ಬಾಗ್ ಕೆರೆ ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ಅಲ್ಲಿ ಯಥೇಚ್ಛವಾಗಿ ವೃಕ್ಷಗಳಿರುವುದರಿಂದ ಅನೇಕ ಬಗೆಯ ಪಕ್ಷಿಗಳನ್ನು ಅಲ್ಲಿ ಕಾಣಬಹುದು. ಹೆಬ್ಬಾಳ ಕೆರೆ ೧೮೨ ಎಕರೆ ಇದ್ದದ್ದು ರೈಲ್ವೆ ಇಲಾಖೆ ೨೮ ಎಕರೆಯನ್ನು ಸ್ವಾಧೀನಮಾಡಿಕೊಂಡಿತು. ಈ ಕೆರೆಯ ಜೀರ್ಣೊದ್ಧಾರಕಕ್ಕಾಗಿ ೨೭೦ ಲಕ್ಷ ರೂಪಾಯಿಗಳನ್ನು ಮೀಸಲಾಗಿಟ್ಟಿತ್ತು. ಹೆಬ್ಬಾಳ ಕೆರೆಯ ವಿಶೇಷವೆಂದರೆ ಅದು ಹೆದ್ದಾರಿಯ ಬಳಿ ಇದ್ದರೂ, ಕೂಗಳತೆಯೆ ದೂರದಲ್ಲಿ ಪ್ಲೈಓವರ್ ಇದ್ದರೂ, ಕೆರೆ ಪಕ್ಷಿಗಳಿಗೆ ಆಶ್ರಯ ನೀಡಿದೆ. ಕೆರೆಗಳು ಅಂತರ್ಜಲ ಭಂಡಾರವನ್ನು ಹೆಚ್ಚಿಸುವುದು ಸಾಮಾನ್ಯರಿಗೂ ತಿಳಿದ ಸಂಗತಿ. ಕೆರೆಗಳು ಕಣ್ಮರೆಯಾಗುತ್ತಿದ್ದರೆ, ನಗರ ಸ್ಥಳಗಳೆಲ್ಲವೂ ಕಾಂಕ್ರೀಟ್‍ಮಯವಾದರೆ ಮಳೆನೀರು ಹಿಂಗುವುದು ಹೇಗೆ? ಬೆಂಗಳೂರಿನ ಅನೇಕ ಬಡಾವಣೆಗಳಲ್ಲಿ ೨೦೦ ಕಿಲೋ ಮೀಟರ್ ಆಳಕ್ಕೆ ಕೊಳವೆ ಬಾವಿ ತೋಡಿದರೂ ನೀರು ಬರುತ್ತಿಲ್ಲ. ಇದೆಲ್ಲ ನಗರೀಕರಣದ ಪರಿಣಾಮ.

ಈಗ ಬೆಂಗಳೂರಿನ ಕೆರೆಗಳ ಉಸ್ತುವಾರಿ ನೋಡಿಕೊಳ್ಳಲು ಸರ್ಕಾರ ‘ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ’ವನ್ನು ಸ್ಥಾಪಿಸಿದೆ. ಹಾಗಾಗಿ ಹಿಂದೆ ಅರಣ್ಯ ಇಲಾಖೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಕೆರೆ ಪ್ರಾಧಿಕಾರ ನಿರ್ವಹಿಸುತ್ತಿದ್ದ ಕೆಲಸವನ್ನು ಒಂದು ಛತ್ರದಡಿ ತರಲಾಗಿದೆ. ಕೆರೆಗಳ ಸಂರಕ್ಷಣೆ ಎಂದರೆ ಅವುಗಳ ದುರಸ್ತಿ, ಏರಿಯ ಸುತ್ತ ಪರಿಸರವನ್ನು ವೃದ್ಧಿಸುವುದು, ಹೂಳು ತೆಗೆಯುವುದು, ಸಾಧ್ಯವಿದ್ದ ಕಡೆ ಮನೋರಂಜನೆಗೆ ಅನುಕೂಲ ಕಲ್ಪಿಸುವ ಹೊಣೆಯೂ ಇರುತ್ತದೆ. ಕೆರೆಗಳ ವಿಸ್ತೀರ್ಣದ ಬಗ್ಗೆ ಮತ್ತೆ ಸಮೀಕ್ಷೆ ಮಾಡಿ ಹೊಸ ಮಾಹಿತಿಯ ಮೇರೆಗೆ ಕೆರೆಗಳ ಅಭಿವೃದ್ಧಿ ಮಾಡುವುದು ಈ ಸಂಸ್ಥೆಯ ಗುರಿ.

ಬೆಳ್ಳಂದೂರು ಮತ್ತು ಅದರ ಕೆರೆಗಳನ್ನು ಒತ್ತುವರಿ ಮಾಡಿ ಅಲ್ಲಿ ಎರಡು ಕಟ್ಟಡ ನಿರ್ಮಾಣ ಸಂಸ್ಥೆಗಳು ಬಹುಮಹಡಿ ಕಟ್ಟಡಗಳನ್ನು ಕಟ್ಟಿವೆ. ಇದನ್ನು ಗಮನಿಸಿದ ರಾಷ್ಟ್ರೀಯ ಹಸುರು ನ್ಯಾಯಾಧೀಕರಣ (ಎನ್.ಜಿ.ಟಿ.) ಆ ಎರಡೂ ನಿರ್ಮಾಣ ಸಂಸ್ಥೆಗಳಿಗೆ ತಲ್ ೧೧೭ ಕೋಟಿ ರೂಪಾಯಿ ಮತ್ತು ೧೩.೫ ಕೋಟಿ ರೂಪಾಯಿ ದಂಡವಿದಿಸಿದೆ. ಒತ್ತುವರಿಮಾಡಿದ ೩.೭ ಎಕರೆ ಕರೆ ಜಾಗವನ್ನು ಹಿಂತಿರುಗಿಸಲು ಸೂಚಿಸಿದೆ. ರಾಜಾಕಾಲುವೆಯ ೫೦ ಮೀಟರ್ ಪಾಸಲೆಯಲ್ಲಿ ಯಾವುದೇ ನಿರ್ಮಾಣ ಮಾಡಬಾರದೆಂದು ಕಟ್ಟಳೆ ಮಾಡಿದೆ. ಇಂಥ ದಿಟ್ಟ ಕ್ರಮದಿಂದ ಮಾತ್ರ ಬೆಂಗಳೂರಿನ ಕೆರೆಗಳನ್ನು ಉಳಿಸಿಕೊಳ್ಳಬಹುದೇನೋ.

ಕೆರೆ ಪರಿಸರ

——————————————————————————————————————————————-