ನಮ್ಮ ರಾಜ್ಯದ ಜನರಲ್ಲಿ ವಿಜ್ಞಾನವನ್ನು ಪ್ರಚಾರಮಾಡಿ ವೈಜ್ಞಾನಿಕ ಮನೋಭಾವದ ಬೆಳವಣಿಗೆಯನ್ನು ಉತ್ತೇಜಿಸುವುದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮುಖ್ಯ ಧ್ಯೇಯವಾಗಿದೆ. ರಾಜ್ಯದ ವಿವಿಧ ಸ್ಥಳಗಳಲ್ಲಿ ಆಸಕ್ತ ಜನರು ಸ್ವಯಂಪ್ರೇರಣೆಯಿಂದ ಸಂಘಟಿಸಿರುವ ೩೫೦ ಘಟಕಗಳು ಈ ಕಾರ್ಯದಲ್ಲಿ ನಿರತವಾಗಿವೆ. ಅಲ್ಲಲ್ಲಿ ಸ್ಥಾಪಿಸಲಾಗಿರುವ ವಿಜ್ಞಾನ ಕೇಂದ್ರಗಳು ಈ ದಿಶೆಯಲ್ಲಿ ಸಂಪನ್ಮೂಲ ಕೇಂದ್ರಗಳಾಗಿವೆ.

ಪರಿಷತ್ತಿನ ಧ್ಯೇಯವನ್ನು ಸಫಲಗೊಳಿಸಲು ಉಪನ್ಯಾಸ, ವಿಚಾರ ಸಂಕಿರಣ, ವಸ್ತು ಪ್ರದರ್ಶನ, ಪ್ರಾತ್ಯಕ್ಷಿಕೆ, ಬೋಧನ ಸಾಮಗ್ರಿ ತಯಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ದಿನನಿತ್ಯದ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರಗಳನ್ನು ನೀಡಲು ಪ್ರಯತ್ನಿಸಲಾಗಿದೆ. ಪರಿಸರ ಅಧ್ಯಯನ, ಮಾಲಿನ್ಯ ನಿವಾರಣೆ, ಆರೋಗ್ಯ ಪಾಲನೆ, ಶಕ್ತಿಯ ನಿರ್ವಹಣೆ, ವಿಜ್ಞಾನ ಸಾಹಿತ್ಯ ನಿರ್ಮಾಣ, ವಿಜ್ಞಾನ ಶಿಕ್ಷಣ, ಗ್ರಾಮೀಣ ಅಭಿವೃದ್ದಿಯಂಥ ಚಟುವಟಿಕೆಗಳಲ್ಲೂ ಪರಿಷತ್ತು ಸಕ್ರಿಯವಾಗಿ ಪಾಲುಗೊಳ್ಳುತ್ತಿದೆ. ಈ ಸಂಬಂಧವಾಗಿ ಆಗಾಗ ಬೇರೆ ಬೇರೆ ಸ್ಥಳಗಳಲ್ಲಿ ಕಮ್ಮಟಗಳನ್ನು ನಡೆಸುತ್ತಿದೆ.

ತನ್ನ ಧ್ಯೇಯಸಾಧನೆಗಾಗಿ ಪರಿಷತ್ತು ‘ಬಾಲ ವಿಜ್ಞಾನ’ ಮಾಸ ಪತ್ರಿಕೆಯನ್ನು, ‘ವಿಜ್ಞಾನ ದೀಪ’ ಭಿತ್ತಿಪತ್ರಿಕೆಯನ್ನು ಮತ್ತು ವಿಜ್ಞಾನ ವಿಷಯಗಳನ್ನು ಕುರಿತ ಅಗ್ಗವಾದ ಕಿರುಹೊತ್ತಗೆಗಳನ್ನು ಪ್ರಕಟಿಸುತ್ತಿದೆ. ಕಿರುಹೊತ್ತಗೆಗಳ ಸಂಖ್ಯೆ ಈಗಾಗಲೇ ೮೦ ದಾಟಿದೆ. ಹತ್ತಾರು ಸಾವಿರ ಸಂಖ್ಯೆಯಲ್ಲಿ ಇವು ವಿತರಣೆಗೊಂಡಿರುವುದನ್ನು ನೋಡಿದರೆ ನಮ್ಮ ಜನರ ಬಹುಮುಖ್ಯವಾದ ಅವಶ್ಯಕತೆಯೊಂದನ್ನು ಗುರುತಿಸಿ ಅದನ್ನು ಪೂರೈಸಲು ನಡೆಸುತ್ತಿರುವ ಪರಿಷತ್ತಿನ ಶ್ರಮ ಸಾರ್ಥಕವೆಂದು ತೋರುತ್ತದೆ.

ವಿಜ್ಞಾನ ಎಂಬುದು ಸದಾ ಅನ್ವೇಷಣೆಯ ಚಟುವಟಿಕೆಯ ಕ್ಷೇತ್ರ. ವಿದ್ಯಮಾನಗಳು, ಘಟನೆಗಳು, ಸಮಸ್ಯೆಗಳು ಹಾಗೂ ವ್ಯಕ್ತಿ ವಿಶೇಷಗಳನ್ನು ಒಳಗೊಂಡ ಅದರಲ್ಲಿನ ಆಗುಹೋಗುಗಳು ಬಹಳ ಆಸಕ್ತಿದಾಯಕವಾದಂಥವು.

ಗ್ರಹಣಗಳ ಬಗ್ಗೆ ನಮ್ಮಲ್ಲಿ ಅನೇಕ ಮೂಡ ನಂಬಿಕೆಗಳು ಮನೆಮಾಡಿವೆ. ಈ ಮೂಡನಂಬಿಕೆಗಳನ್ನು ನಿವಾರಿಸಲು ಹಾಗೂ ಇದೇ ಅಕ್ಟೋಬರ್ ೨೪ರಂದು ಸಂಭವಿಸಲಿರುವ ಪೂರ್ಣ ಸೂರ್ಯಗ್ರಹಣಕ್ಕೆ ಸಂಬಂಧಿಸಿದಂತೆ ವೈಜ್ಞಾನಿಕ ಸತ್ಯಗಳು, ಗ್ರಹಣಗಳು ಉಂಟಾಗುವ ಬಗೆ, ಹಾಗೂ ಅವುಗಳ ವೀಕ್ಷಣೆ ಇತ್ಯಾದಿ ವಿಷಯಗಳನ್ನು ಸರಳ, ಸುಂದರವಾಗಿ ಮನಮುಟ್ಟುವಂತೆ ವಿವರಿಸಿದ್ದಾರೆ. ಜನರಲ್ಲಿ ಗ್ರಹಣಗಳ ಬಗ್ಗೆ ಇರುವ ನಂಬಿಕೆಗಳು ಬದಲಾಗುವ ದಿಶೆಯಲ್ಲಿ ಈ ಕಿರುಹೊತ್ತಗೆ ಪ್ರಮುಖ ಪಾತ್ರ ವಹಿಸಬಲ್ಲದು ಎಂದು ಆಶಿಸಲಾಗಿದೆ.

ಪೂನಾದ ಕಾನ್ಫೆಡರೇಶನ್ ಆಫ್ ಇಂಡಿಯನ್ ಅಮೇಚೂರ್ ಅಸ್ಟ್ರೋನಾಮರ್ಸ್‌ನವರು ಪೂರ್ಣ ಸೂರ್ಯಗ್ರಹಣದ ಬಗ್ಗೆ ಪ್ರಕಟಿಸಿದ ಕೈಪಿಡಿಯ ಆಧಾರದಿಂದ ಕೆಲವು ಚಿತ್ರಗಳನ್ನು ಈ ಪುಸ್ತಕಕ್ಕೆ ಬಳಸಲು ಸಾಧ್ಯವಾಗಿರುವುದಕ್ಕೆ ನಾವು ಕೃತಜ್ಞರಾಗಿದ್ದೇವೆ.

ಈ ಹೊತ್ತಗೆಯನ್ನು ರಚಿಸಿಕೊಟ್ಟ ಮಿತ್ರ ಅಡ್ಯನಡ್ಕ ಕೃಷ್ಣಭಟ್ಟರಿಗೆ ಹಾಗೂ ಅಂದವಾಗಿ ಮುದ್ರಿಸಿದ ರವಿ ಗ್ರಾಫಿಕ್ಸ್ ಅವರಿಗೆ ಕರಾವಿಪ ಕೃತಜ್ಞತೆ ಸಲ್ಲಿಸುತ್ತದೆ.

ಡಾ|| ಎಸ್. ಜೆ. ನಾಗಲೋಟಿಮರ
ಬೆಂಗಳೂರು
೨೧ – ೦೮ – ೧೯೯೫

 

 

ಮೂರನೆಯ ಆವೃತ್ತಿ

ಇದೇ ಜುಲೈ ೨೨ರಂದು ಮತ್ತೆ ಪೂರ್ಣ ಸೂರ್ಯಗ್ರಹಣವನ್ನು ಭಾರತದಲ್ಲಿ ನೋಡುವ ಅವಕಾಶ ಬರಲಿದೆ. ಅದಕ್ಕೆ ಅನುಕೂಲವಾಗಿ ‘ಗ್ರಹಣ’ ಪುಸ್ತಕದ ಪರಿಷ್ಕೃತ ಆವೃತ್ತಿ ಪ್ರಕಟವಾಗುತ್ತಿದೆ. ಪೂರ್ಣ ಸೂರ್ಯಗ್ರಹಣದ ವೈಜ್ಞಾನಿಕ ಮಹತ್ವವನ್ನು ಅರಿತು, ಈ ಅಪರೂಪ ಖಗೋಲ ವಿದ್ಯಮಾನವನ್ನು ಆನಂದಿಸಲು ಈ ಕಿರುಹೊತ್ತಗೆ ಸಹಾಯಕವಾದೀತು.

ಡಾ|| ಎಚ್. ಎಸ್. ನಿರಂಜನ ಆರಾಧ್ಯ
ಅಧ್ಯಕ್ಷರು, ಕರಾವಿಪ
ಜೂನ್ ೨೦೦೯
ಬೆಂಗಳೂರು.