ಒಂದೂರಲ್ಲಿ ಒಬ್ಬ ರಾಜನಿದ್ದ. ಅವನಿಗೊಬ್ಬ ಮಗಳಿದ್ದಳು. ಅವಳು ಬಹಳ ಸುಂದರಿ. ಅನೇಕ ರಾಜಕುಮಾರರು ಅವಳನ್ನು ಮದುವೆಯಾಗುವುದಕ್ಕೆ ಪ್ರಯತ್ನ ಮಾಡಿದರು. ಆದರೆ ರಾಜ ಮಗಳನ್ನು ಕೊಡಲೊಪ್ಪದೆ ಏನಾದರೊಂದು ನೆಪ ಹೇಳಿ ಇಲ್ಲವೆನ್ನುತ್ತಿದ್ದ. ಮನುಷ್ಯರಿಗೆ ನೀಗದ ಶರ್ತುಗಳನ್ನು ಹಾಕುತ್ತಿದ್ದ. ತಂದೆಯ ಇಂಥ ಸ್ವಭಾವದಿಂದ ಮಗಳಿಗೂ ನೋವಾಗುತ್ತಿತ್ತು. ಆದರೆ ತಂದೆ ಹೇಳಿದ ಹಾಗೆ ಕೇಳಿಕೊಂಡಿರಬೇಕಲ್ಲ; ಹಾಗೆಯೇ ಇದ್ದಳು.

ಒಂದು ಸಲ ಒಬ್ಬ ಗಟ್ಟಿಮುಟ್ಟಾದ ರಾಜಕುಮಾರನೇ ಬಂದ. ಅವನ ಹೆಸರು ರಾಜಶೇಖರ. ಗುಣ, ರೂಪ, ವಿದ್ಯೆ – ಯಾವುದರಲ್ಲೂ ತೆಗೆದುಹಾಕುವಂತಿಲ್ಲ. ರಾಜಕುಮಾರಿಗೂ ರಾಜಶೇಖರನ ಮೇಲೆ ಮೋಹವುಂಟಾಯಿತು. ಬಾಯಿಬಿಟ್ಟು ತಂದೆಗೆ ಹೇಳಲಾರಳು. ಕೊನೆಗೆ ಉಪಾಯ ಮಾಡಿ ಒಂದು ಪತ್ರ ಬರೆದು ಗೋಪ್ಯವಾಗಿ ತನ್ನ ಸೇವಕಿಯ ಮೂಲಕ ರಾಜಶೇಖರನಿಗೆ ಕಳುಹಿಸಿದಳು. ಆದರೆ ಆ ಪತ್ರವನ್ನು ಒಯ್ಯುತ್ತಿದ್ದ ಸೇವಕಿ ರಾಜನ ಕೈಯಲ್ಲಿ ಸಿಕ್ಕಿಬಿದ್ದಳು. ರಾಜನಿಗೆ ತನ್ನ ಮಗಳ ಇಂಗಿತ ಗೊತ್ತಾಯಿತು. ಆತ ರಾಜಶೇಖರನನ್ನು ತನ್ನ ಅರಮನೆಗೇ ಕರೆಸಿದ.

ರಾಜಶೇಖರನನ್ನು ಅರಮನೆಗೆ ಕರೆಸಿ ನಾನಾ ವಿಧವಾಗಿ ಸನ್ಮಾನ ಮಾಡಿದ. ತನ್ನ ಮಗಳನ್ನೂ ಕರೆಸಿ ಅವಳ ಎದುರಿನಲ್ಲಿಯೇ ಅವನ ಪರೀಕ್ಷೆ ಆಗಬೇಕೆಂದು ಏರ್ಪಾಟು ಮಾಡಿದ. ಅಂತಿಂಥ ವಿದ್ಯೆಗಳ ಬಗ್ಗೆ ಕೇಳಿದರೆ ರಾಜಶೇಖರ ಗೊತ್ತಿದೆಯೆನ್ನುತ್ತಾನೆ. ಇವನಿಗೆ ಗೊತ್ತಿಲ್ಲದ ವಿದ್ಯೆ ಕೇಳಿದರೆ ಏನು ಹೇಳುತ್ತಾನೆ?- ಎಂದುಕೊಂಡು ರಾಜ,

‘ಅಯ್ಯಾ, ನಿನಗೆ ಕಳ್ಳತನ ಗೊತ್ತೆ?’ – ಅಂದ.

ಈ ಹುಡುಗ ಬುದ್ಧಿವಂತ ನಿಜ. ಆದರೆ ಸಭ್ಯ, ಕಳ್ಳತನ ಮಾಡಿದವನಲ್ಲ, ‘ಇಲ್ಲ’ ಅಂದ. ರಾಜನಿಗೆ ಅಷ್ಟೇ ಸಾಕಾಯಿತು – ‘ಹೋಗೋ ಹುಚ್ಚಾ, ವಿದ್ಯೆಗಳಲ್ಲೆಲ್ಲ ಕಳ್ಳತನವೇ ಹೆಚ್ಚಿನದು; ಅದೇ ಗೊತ್ತಿಲ್ಲವೆಂದ ಮೇಲೆ ನೀನು ಹೇಗೆ ರಾಜ್ಯವಾಳಬಲ್ಲೆ. ಕಳ್ಳರನ್ನು ಹೇಗೆ ಹಿಡಿಯಬಲ್ಲೆ ಹೇಗೆ ಶಿಕ್ಷಿಸಬಲ್ಲೇ’ ಅಂದ, ರಾಜ. ರಾಜಶೇಖರನ ಮರ್ಮಕ್ಕೆ ಈ ಮಾತು ನಾಟಿತು. ಮುಖ ತಗ್ಗಿಸಿಕೊಂಡು ಆತ ಹೊರಗೆ ಬಂದ.

ಅದೇ ಊರಿನಲ್ಲಿ ಒಬ್ಬ ಭಾರೀ ಕಳ್ಳನಿದ್ದ. ಅವನಿಗೆ ಬೇಕಾದಷ್ಟು ಹಣಕೊಟ್ಟು, ಕಳ್ಳತನ ಕಲಿಸು ಎಂದ ರಾಜಶೇಖರ. ಅವನ ಜೊತೆಗಾರನಾದ. ರಾಜಶೇಖರ ಎಷ್ಟಾದರೂ ಹುಷಾರಿ ಹುಡುಗ. ಜಾತಿವಂಥ ಕ್ಷತ್ರಿಯ ಕೆಲವೇ ದಿನಗಳಲ್ಲಿ ಕಳ್ಳತನದಲ್ಲಿ ಭಾರೀ ಚಾಣಾಕ್ಷಾನಾದ.

ಒಂದು ದಿನ ತನ್ನ ಜೊತೆಗಾರನೊಂದಿಗೆ ಅರಮನೆಯ ಹಿಂಭಾಗಕ್ಕೆ ಹೋಗಿ ಕನ್ನ ಕೊರೆದ. ಮೇಲಿನ ಕಿಟಕಿಯಿಂದ ಒಂದು ಹಗ್ಗ ಬಂಗಾರದ ಮಂಚದ ಮೇಲೆ ಮಲಗಿದ್ದಾನೆ. ಆ ಮಂಚದ ನಾಲ್ಕೂ ಕಾಲುಗಳನ್ನು ಕೊಯ್ದು ಅವುಗಳ ಸ್ಥಳದಲ್ಲಿ ಈ ಬಾಳೇ ದಿಂಡನ್ನು ಹಚ್ಚಿ ಬಾ.’

ಕಳ್ಳ ಆಗಲೆಂದು ಇಳಿದ.

ಜಾಗರೂಕತೆಯಿಂದ ಪಹರೆ ತಿರುಗುತ್ತಿದ್ದ ಕಾವಲುಗಾರರನ್ನು ದಾಟಿ ರಾಜನ ಕೋಣೆ ಪ್ರವೇಶಿಸಿದ. ರಾಜ ಮಂಚದ ಮೇಲೆ ಮಲಗಿದ್ದ. ಕಳ್ಳ ಮಂಚದ ಒಂದೊಂದೇ ಕಾಲನ್ನು ಕೊಯ್ದು, ಅದರ ಸ್ಥಳದಲ್ಲಿ ಬಾಳೇ ದಿಂಡು ಇಟ್ಟ. ಹೀಗೆ ಮೂರು ಕಾಲುಗಳನ್ನು ತೆಗೆದಿದ್ದ. ನಾಲ್ಕನೆಯದನ್ನು ತೆಗೆಯುತ್ತಿರುವಾಗ ಮಂಚ ಅದುರಿತು. ಅರೆನಿದ್ದೆಯಲ್ಲಿದ್ದ ರಾಜ ತನ್ನ ಕೈಯಲ್ಲಿಯ ಖಡ್ಗ ಬೀಸಿದ. ಮತ್ತೆ ಹಾಗೇ ಬಿದ್ದುಕೊಂಡ. ಆದರೆ ರಾಜ ಖಡ್ಗ ಬೀಸಿದ್ದಕ್ಕೆ ಆ ಕಳ್ಳನ ತಲೆ ಕತ್ತರಿಸಿ ಬಿತ್ತು.

ಹೊರಗೆ ತನ್ನ ಜೊತೆಗಾರ ಕಳ್ಳನನ್ನೇ ನಿರೀಕ್ಷಿಸುತ್ತಿದ್ದ ರಾಜಶೇಖರನಿಗೆ ಅನುಮಾನವಾಯಿತು. ನೋಡಿಕೊಂಡು ಬರಬೇಕೆಂದು ಒಳಗೆ ಬಂದ. ನೋಡಿದರೆ ತನ್ನ ಜೊತೆಗಾರ ಕಳ್ಳನ ರುಂಡ ಬೇರೆ ಮುಂಡ ಬೇರೆಯಾಗಿ ಬಿದ್ದಿತ್ತು. ಚಾಕಚಕ್ಯತೆಯಿಂದ ಮಂಚದ ನಾಲ್ಕನೇ ಕಾಲನ್ನು ತೆಗೆದ. ರಾಜನ ಮುಖಕ್ಕೆ ಸುಣ್ಣದ ಮೂರು ಬೊಟ್ಟನ್ನಿಟ್ಟ. ಎಲೆ ಅಡಿಕೆ ತಿಂದು ಆ ಕೋಣೆಯ ತುಂಬ ಉಗುಳಿದ. ಕೊನೆಗೆ ಜೊತೆಗಾರನ ಕಡಿದು ಬಿದ್ದ ರುಂಡವನ್ನು ಬಟ್ಟೆಯಲ್ಲಿ ಮುಚ್ಚಿಟ್ಟುಕೊಂಡು ಪರಾರಿಯಾದ.

ಬೆಳಿಗ್ಗೆ ಎದ್ದು ನೋಡಿದರೆ ರಾಜನ ಮಂಚದ ಕಾಲುಗಳೇ ಇರಲಿಲ್ಲ. ರುಂಡವಿಲ್ಲದ ಮುಂಡವೊಂದೇ ಪಕ್ಕದಲ್ಲಿ ಬಿದ್ದಿತ್ತು. ರಕ್ತ ಹರಿದಾಡಿತ್ತು. ರಾಜನ ಮುಖದ ಮೇಲೆ ಮೂರು ಬೊಟ್ಟು ಮೂಡಿದ್ದವು. ಎಲ್ಲರಿಗೂ ಆಶ್ಚರ್ಯವಾಯಿತು. ರಾಜ, ಕಾವಲುಗಾರರನ್ನು ದಂಡಿಸಿದ; ಮಂತ್ರಿ ಕೊತವಾಲರನ್ನು ಕರೆಯಿಸಿ, ‘ನನ್ನ ಅರಮನೆಯಲ್ಲಿ ಇಂಥಾ ಕಳ್ಳತನ ಮಾಡಿದವರು ಯಾರು? ಮುಂಡ ಬಿಟ್ಟು ರುಂಡ ಮಾತ್ರ ತೆಗೆದುಕೊಂಡು ಹೋದವರು ಯಾರು? ಇಲ್ಲಿಯ ತನಕ ಈ ಬಗೆಯ ಕಳ್ಳತನವಾಗಿರಲಿಲ್ಲ. ಈಗ ಆಗಿದೆಯೆಂದ ಮೇಲೆ ಆತ ಯಾರೋ ಭಾರೀ ದೊಡ್ಡ ಕಳ್ಳನೇ ಇರಬೇಕು. ಹಿಡಿದುಕೊಟ್ಟರೆ ಸೈ. ಇಲ್ಲದಿದ್ದರೆ ನೀವೂ ಉಳಿಯಲಿಕ್ಕಿಲ್ಲ.’ ಎಂದು ರಾಜ ರೇಗಾಡಿದ.

ಆಗ ಮಂತ್ರಿ ಒಂದು ಉಪಾಯ ಮಾಡಿದ. ಸೇವಕರನ್ನು ಕರೆದು, ‘ಈ ಮುಂಡವನ್ನು ಒಂದು ಗಾಡಿಯಲ್ಲಿ ಹಾಕಿಕೊಂಡು ಊರ ತುಂಬ ಮೆರವಣಿಗೆ ಮಾಡಿರಿ. ಇದನ್ನು ನೋಡಿ ಯಾರಾದರೂ ಅತ್ತರೆ ತಕ್ಷಣ ಅವರನ್ನು ಹಿಡಿದುಕೊಂಡು ಬನ್ನಿ’ ಎಂದು ಆಜ್ಞೆ ಮಾಡಿದ.

ಈ ಸುದ್ದಿ ರಾಜಶೇಖರನಿಗೆ ಹೇಗೋ ತಿಳಿಯಿತು. ಆ ಊರಿನ ಒಂದು ಮುದುಕಿಗೆ ಉಡಿತುಂಬ ಹಣ ಸುರಿದು ‘ಅಜ್ಜೀ, ಇಂದೊಂದು ಹೆಣದ ಮೆರವಣಿಗೆ ಬರುತ್ತದೆ. ಕೂಡಲೇ ನಾನು ನಿನ್ನ ಮನೆಯ ಮುಂದೆ ಸತ್ತವರ ಹಾಗೆ ಕೂರುತ್ತೇನೆ ಸೇವಕರು ಬಂದು ಕೇಳಿದರೆ ‘ನನ್ನ ಮಗ ಸತ್ತ’ ಎಂದು ಹೇಳಿ ಅಳು’ ಎಂದ. ಹಣ ನೋಡಿ ಮುದುಕಿ ಒಪ್ಪಿಕೊಂಡಳು.

ಅತ್ತ ಸೇವಕರು ಗಾಡಿಯಲ್ಲಿ ಕಳ್ಳನ ಹೆಣ ಹಾಕಿಕೊಂಡು ಮೆರವಣಿಗೆ ಮಾಡುತ್ತ, ಆ ಮುದುಕಿಯ ಮನೆಯ ಮುಂದೆಯೇ ಬಂದರು. ಕೂಡಲೇ ರಾಜಶೇಖರ ಸತ್ತವನಂತೆ ಕೂತ. ಮುದುಕಿ ಹಾಡಿಕೊಂಡು ಅಳಲಾರಂಭಿಸಿದಳು. ಸೇವಕರು ಯಾಕೆಂದು ಕೇಳಿದರೆ ಹೆಣದಂತೆ ಕೂತ ರಾಜಶೇಖರನನ್ನು ತೋರಿಸಿ, ‘ನನ್ನ ಮಗ ಸತ್ತಾ’ ಎಂದು ಹೇಳಿ ತಲೆ ಚಚ್ಚಿಕೊಂಡು ಅಳತೊಡಗಿದಳು. ಸೇವಕರಿಗೂ ಕೆಡುಕೆನಿಸಿತು. ಮುದುಕಿಯನ್ನು ಸಮಾಧಾನ ಮಾಡಿ ತಮ್ಮ ಮೆರವಣಿಗೆ ಮುಂದೆ ಸಾಗಿಸಿಕೊಂಡು ಹೋದರು. ಮಂತ್ರಿಯ ಬಳಿಗೆ ಹೋಗಿ, ‘ಊರೆಲ್ಲ ಸುತ್ತಿ ಬಂದೆವು. ಯಾರೂ ಅಳಲಿಲ್ಲ. ಒಂದು ಮುದುಕಿ ಮಾತ್ರ ತನ್ನ ಮಗನ ಹೆಣ ಇಟ್ಟುಕೊಂಡು ಅಳುತ್ತಿದ್ದಳು. ನಾವೇ ಸಮಾಧಾನ ಮಾಡಿ ಬಂದೆವು’ ಎಂದು ಹೇಳಿದರು. ಮಂತ್ರಿಗೇ ತಕ್ಷಣವೇ ಕಳ್ಳನ ಜಾಣತನ ಗೊತ್ತಾಯಿತು. ‘ಎಂಥ ದಡ್ಡರು ನೀವು, ಆ ಮುದುಕಿಯ ಮುಂದೆ ಹೆಣವಾಗಿ ಕೂತವನೇ ಕಳ್ಳ. ಹೋಗಿ ಹಿಡಿದು ತನ್ನಿ’ ಎಂದ. ಸೇವಕರು ಓಡಿ ಓಡಿ ಬಂದರು. ಆದರೆ ಕಳ್ಳನೆಲ್ಲಿರುತ್ತಾನೆ?

ಮಾರನೇ ದಿನ ಮಂತ್ರಿ ಇನ್ನೊಂದು ಉಪಾಯ ಮಾಡಿದ. ಕಳ್ಳನ ಮುಂಡದ ರುಂಡ ಇನ್ನೊಂದು ಕಡೆಗಿದೆ. ಇದನ್ನು ಸುಡುವಾಗ ರುಂಡವನ್ನು ತರಲೇಬೇಕಾಗುತ್ತದೆ. ಅವನು ಜಾತಿವಂತ ಕಳ್ಳನಾಗಿದ್ದರೆ ಅದನ್ನು ತಂದೇ ತರುತ್ತಾನೆ ಎಂದು ಯೋಚಿಸಿ ಸೇವಕರಿಗೆ ಹೇಳಿದ: ‘ಈ ಹೆಣ ಸುಡುವ ತಯ್ಯಾರಿ ನಡೆಯಲಿ. ಅಗ್ನಿಯಲ್ಲಿ ಈ ಮುಂಡ ಸುಡುತ್ತಿದ್ದಾಗ ಯಾವನಾದರೂ ರುಂಡವನ್ನು ತಂದು ಎಸೆದರೆ ಅವನನ್ನು ಸೆರೆಹಿಡಿದು ತನ್ನಿ’.

ಈ ಸಮಾಚಾರವೂ ರಾಜಶೇಖರನಿಗೆ ಹೇಗೋ ತಿಳಿಯಿತು. ಕೆಲವು ಡಬ್ಬಿಗಳನ್ನು ಒಂದು ಬಂಡಿಯಲ್ಲಿ ಹೇರಿಕೊಂಡ. ಒಂದು ಡಬ್ಬಿಯಲ್ಲಿ ಕಳ್ಳನ ರುಂಡವನ್ನೂ ಹಾಕಿದ. ತುಪ್ಪ ಮಾರುವ ಶೆಟ್ಟಿಯಂತೆ ಸ್ಮಶಾನದ ಕಡೆಗೆ ಹೊರಟ. ಅಷ್ಟರಲ್ಲಿ ಸೇವಕರು ಬೆಂಕಿ ಮಾಡಿ ಅದರಲ್ಲಿ ಮುಂಡವನ್ನು ಸುಡುತ್ತಿದ್ದರು. ಸೇವಕರು ಇವನ್ನು ನೋಡಿ ಬಂಡಿ ನಿಲ್ಲಿಸಿದರು. ಯಾರೆಂದು ಕೇಳಿದರು. ತಾನು ಅರಮನೆಗೆ ತುಪ್ಪ ಮಾರುವ ಶೆಟ್ಟಿ ಎಂದು ಹೇಳಿದ. ತನ್ನ ಮೇಲೆ ಸಂಶಯ ತೊಕ್ಕಂಡದ್ದಕ್ಕೆ ರೇಗಾಡಿದ. ರಾಜನಿಗೇನು ಹೇಳಿಕೊಳ್ಳುತ್ತೀರೋ ನೀವೇ ಹೇಳಿಕೊಳ್ಳಿ. ಎನ್ನುತ್ತ ತುಪ್ಪದ ಡಬ್ಬಿಗಳನ್ನೆಲ್ಲಾ ಬೆಂಕಿಯಲ್ಲಿ ಹಾಕಿದ. ಬಂಡಿ ಹಿಂದುರುಗಿಸಿಕೊಂಡು ಬಂದ.

ಸೇವಕರಾಗಲೇ ಗಾಬರಿಯಾಗಿದ್ದರು. ಅರಮನೆಗೆ ಸೇರಬೇಕಾದ ತುಪ್ಪ ತಮ್ಮ ಆಚಾತುರ್ಯದಿಂದ ಹೀಗೆ ಬೆಂಕಿಯ ಪಾಲಾಯಿತಲ್ಲಾ! ರಾಜರಿನ್ನು ಅದೇನು ಶಿಕ್ಷೆ ಕೊಡುತ್ತಾರೋ ಎನ್ನುತ್ತ ಮಂತ್ರಿಯ ಬಳಿಗೆ ಬಂದು ಹೇಳಿದರು.

‘ನಾವೇನೂ ತಪ್ಪು ಮಾಡಲಿಲ್ಲ. ಆದರೂ ಆ ಶೆಟ್ಟಿ ಹೆಣ ಸುಡುವ ಬೆಂಕಿಯಲ್ಲಿ ತುಪ್ಪದ ಡಬ್ಬಿಗಳನ್ನು ಹಾಕಿ ಹೋದ.’ ಮಂತ್ರಿಗೆ ಕಳ್ಳನ ಚಾಕಚಕ್ಯತೆ ಅರ್ಥವಾಯಿತು. ‘ಎಲಾ, ಕಳ್ಳ ಈ ಬಾರಿಯೂ ಮೋಸ ಮಾಡಿದ. ಇನ್ನು ಅವನನ್ನು ಹಿಡಿಯುವುದು ಹೇಗೆ?’ ಎಂದು ತಲೆಯ ಮೇಲೆ ಕೈ ಹೊತ್ತು ಕೂತ. ರಾಜನಿಗೆ ಈ ಸುದ್ದಿ ತಿಳಿಯಿತು. ಮಂತ್ರಿ ಸೇವಕರನ್ನೆಲ್ಲ ಬೈದು ತಾನೇ ಕಳ್ಳನನ್ನು ಹಿಡಿಯಲು ಸಿದ್ಧನಾದ.

ಹೆಣದ ಬೂದಿಯನ್ನು ಹೇಗೂ ನೀರುಗಾಣಿಸಬೇಕು. ಅದಕ್ಕಾಗಿ ಕಳ್ಳ ಬಂದೇ ಬರುತ್ತಾನೆ. ಅಲ್ಲಿಯೇ ಅವನನ್ನು ಹಿಡಿದರಾಯಿತು. ಎಂದು ಸ್ವಯಂ ಮಂತ್ರಿಯೆ ಸುಡುಗಾಡಿಗೆ ಹೋದ. ಬೂದಿ ಕಾಯುತ್ತ ಕೂತ. ರಾಜಶೇಖರನಿಗೆ ಇದೂ ಹೇಗೋ ಗೊತ್ತಾಯಿತು. ಮಧ್ಯರಾತ್ರಿಯ ಸುಮಾರಿಗೆ ಮಂತ್ರಿಯ ಹೆಂಡತಿಯ ವೇಷ ಹಾಕಿಕೊಂಡು ಪಲ್ಲಕ್ಕಿಯಲ್ಲಿ ಕೂತು, ನಾಲ್ಕು ಜನ ಕಳ್ಳರಿಗೆ ಸೀರೆ ಉಡಿಸಿ ಪಲ್ಲಕ್ಕಿಯನ್ನು ಹೊರಿಸಿಕೊಂಡು ಸುಡುಗಾಡಿಗೆ ಬಂದ.

 

ಹೆಂಡತಿ ಬಂದಿರುವಳೆಂದು ಮಂತ್ರಿಗೆ ಸೇವಕರು ಹೇಳಿದರು. ಮಂತ್ರಿಗೆ ದಿಗಿಲಾಯಿತು. ಓಡಿ ಬಂದು ಪಲ್ಲಕ್ಕಿಯ ಹತ್ತಿರ ನಿಂತು ‘ಇಲ್ಲಿಗ್ಯಾಕೆ ಬಂದೆ?’ ಎಂದು ಕೇಳಿದ. ರಾಜಶೇಖರ, ‘ನೀವು ಸುಡುಗಾಡಿನಲ್ಲಿದ್ದರೆ ನಾನು ಮನೆಯಲ್ಲಿರುವುದು ಯೋಗ್ಯವೆ?’ ಎಂದು ಅವನ ಹೆಂಡತಿಯಂತೆಯೇ ಧ್ವನಿ ಮಾಡಿ ಹೇಳಿದ. ‘ಛೇ, ಛೇ, ಮೊದಲು ಇಲ್ಲಿಂದ ಹೊರಡು’ ಎಂದು ಹೇಳುತ್ತಿರಲು ಹೆಂಡತಿಯ ವೇಷದಲ್ಲಿದ್ದ ರಾಜಶೇಖರ ಸಿಟ್ಟಿನಿಂದೆಂಬಂತೆ ಮೈ ಪರಚಿಕೊಂಡಂತೆ ಮಾಡಿ ಕತ್ತಿನ ರತ್ನದ ಹಾರವನ್ನು ತೆಗೆದು ಬೂದಿಯಲ್ಲಿ ಎಸೆದು ತಿರುಗಿ ಹೋದ. ಮಂತ್ರಿ, ‘ಎಂಥ ಸಿಟ್ಟಿನ ಹೆಂಗಸಿದು’ ಎಂದುಕೊಳ್ಳುತ್ತ ರತ್ನದ ಹಾರ ಹುಡುಕಿದ. ಅದಕ್ಕೆ ಸಾಕಷ್ಟು ಬೂದಿಯಂಟಿತ್ತು. ಅಲ್ಲೇ ನದಿಯಲ್ಲಿ ತೊಳೆದುಕೊಂಡು ಮನೆಗೆ ಧಾವಿಸಿದ. ಅಂತೂ ಹೆಣದ ಬೂದಿಯನ್ನು ನೀರಿಗೆ ಬಿಟ್ಟಂತಾಯಿತು. ಅರಮನೆಗೆ ಬಂದು ‘ಇಂಥ ಹೊತ್ತಿನಲ್ಲಿ ಸುಡುಗಾಡಿಗೆ ಯಾಕೆ ಬಂದಿದ್ದೇ?’ ಎಂದು ಹೆಂಡತಿಯನ್ನು ಕೇಳಿದ. ಅವಳಿಗೆ ವಿಸ್ಮಯವಾಯಿತು. ‘ಏನಾಗಿದೆ ನಿಮಗೆ? ಸುಡುಗಾಡಿನೊಳಗಿನ ಭೂತ ಬಡಿದುಕೊಂಡಿತೆ? ನಾನು ಯಾಕೆ ಅಲ್ಲಿಗೆ ಬರಲಿ?’ ಎಂದಳು. ‘ಅಯ್ಯೋ, ಕಳ್ಳ ನನಗೂ ಮೋಸ ಮಾಡಿದನಲ್ಲಾ!’ ಎಂದು ತಲೆ ತಗ್ಗಿಸಿದ.

ಕಳ್ಳನನ್ನು ಹಿಡಿಯುವುದೊಂದು ದೊಡ್ಡ ಸಮಸ್ಯೆಯಾಯಿತು. ಈಗ ಆ ಸಾಹಸಕ್ಕೆ ಸ್ವತಃ ರಾಜನೇ ಸಿದ್ಧನಾದ. ಈ ಸುದ್ದಿ ಹೇಗೋ ರಾಜಶೇಖರನಿಗೆ ತಿಳಿಯಿತು. ಒಂದು ಈಜುಗುಂಬಳಕಾಯಿ ತಕ್ಕೊಂಡ. ಊರ ಬಳಿಯ ನದಿಯ ದಡದಲ್ಲಿ ಅದಕ್ಕೆ ರುಮಾಲು ಸುತ್ತಿದ. ರಾತ್ರಿಯಾಗುತ್ತಲೇ ಅದನ್ನು ಆಚೆ ದಡದ ನೀರಿನಲ್ಲಿ ಬಿಟ್ಟು ಈಚೆ ದಡಕ್ಕೆ ಬಂದ. ಒಂದು ಪೆಟ್ಟಿಗೆಯಲ್ಲಿ ಎಲೆ ಅಡಿಕೆ ಹುರಿಗಾಳು ಇಟ್ಟುಕೊಂಡು ಬೆಳಕಿಗೊಂದು ಪಂಜು ಉರಿಸಿ ಇಟ್ಟುಕೊಂಡು ಕಾದು ಕುಳಿತ.

ಕಳ್ಳನನ್ನು ಗೋಪ್ಯವಾಗಿ ಹಿಡಿಯಲು ಪಹರೆ ಮಾಡುತ್ತಿದ್ದ ರಾಜ ಪಂಜಿನ ಬೆಳಕನ್ನು ನೋಡಿ ಸೈನಿಕರೊಂದಿಗೆ ಧಾವಿಸಿ ಬಂದ. ‘ಎಲಾ, ನೀನು ಯಾರು? ಇಂಥ ವೇಳೆಯಲ್ಲಿ ಇಲ್ಲೇನು ನಿನ್ನ ಕೆಲಸ?’ ಎಂದು ರಾಜ ಗದರಿಸಿದ. ರಾಜಶೇಖರ ಕೈ ಮುಗಿದು, ‘ರಾಜರೇ ಇಲ್ಲಿ ದಿನಾ ರಾತ್ರಿ ಒಬ್ಬ ಕಳ್ಳ ಬರುತ್ತಾನೆ. ಏನೋ ಅಷ್ಟಿಷ್ಟು ವ್ಯವಹಾರ ಮಾಡುತ್ತಾನೆ. ಹುರಿಗಾಳು, ಎಲೆ ಅಡಿಕೆ ಕೊಳ್ಳುತ್ತಾನೆ. ಅವನಿಂದಲೇ ನನ್ನ ಹೊಟ್ಟೆ ತುಂಬುತ್ತದೆ. ನನ್ನ ಹೆಸರು ಸಣ್ಣಶೆಟ್ಟಿ’ ಎಂದ. ರಾಜನಿಗೂ ಈ ಮಾತಿನಲ್ಲಿ ನಂಬಿಕೆ ಉಂಟಾಯಿತು. ‘ಕಳ್ಳ ಯಾವಾಗ ಬರುತ್ತಾನೆ?’ ಎಂದು ಕೇಳಿದ. ‘ಇನ್ನೇನು ಬರುವ ಸಮಯವಾಯಿತು. ನೀವು ನಿಮ್ಮ ಸೈನಿಕರನ್ನು ದೂರದಲ್ಲಿ ಅಡಗಿಸಿ. ನೀವು ಒಬ್ಬರೇ ಇಲ್ಲಿದ್ದರೆ ಅವರು ಬರುತ್ತಾರೆ. ಆಗ ನೀವು ನಿಮ್ಮ ಸೈನಿಕರಿಗೆ ಸಂಕೇತ ಮಾಡಿ ಅವರನ್ನು ಹಿಡಿಯಬಹುದು’ ಎಂದ, ರಾಜಶೇಖರ. ರಾಜ ಅದರಂತೆಯೇ ಸೈನಿಕರನ್ನು ದೂರದಲ್ಲಿ ಅಡಗಿಸಿಕೊಂಡಿರಲಿಕ್ಕೆ ಹೇಳಿ, ತಾನು ಸಿಳ್ಳು ಹಾಕಿದೊಡನೆ ಬರಬೇಕೆಂದು ಆಜ್ಞೆಯಿತ್ತ.

ಸೈನಿಕರು ದೂರಕ್ಕೆ ಹೋದಾರು. ‘ನೀನು ಕಳ್ಳನನ್ನು ಹಿಡಿದುಕೊಟ್ಟರೆ ಭಾರೀ ಬಹುಮಾನ ಕೊಡುತ್ತೇನೆ’ ಎಂದು ರಾಜಶೇಖರನನ್ನು ರಾಜ ಪುಸಲಾಯಿಸಿದ. ಆಗ ರಾಜಶೇಖರ, ‘ರಾಜರೇ, ನಾವು ಈ ದಿನ ಇಲ್ಲಿ ಇಬ್ಬರಿದ್ದರೆ ಕಳ್ಳನಿಗೆ ಸಂದೇಹ ಬರಬಹುದು. ಅಕೋ ಅಲ್ಲಿ ಬರುತ್ತಿದ್ದಾನೆ ನೋಡಿ’ ಎಂದು ರುಮಾಲು ಸುತ್ತಿ ತೇಲಿ ಬರುತ್ತಿದ್ದ ಈಜುಗುಂಬಳಕಾಯಿ ತೋರಿಸಿದ. ಮಂದ ಬೆಳಕಿನಲ್ಲಿ ತೇಲಿ ಬರುತ್ತಿದ್ದ ಅದು ಕಳ್ಳನೇ ಈಜಿಕೊಂಡು ಬರುವಂತೆ ಕಂಡಿತು. ರಾಜನಿಗೆ ಹೌದಲ್ಲಾ ಎನಿಸಿತು. ‘ಹಾಗಿದ್ದರೆ ನೀನು ಆ ಮರದ ಹಿಂದೆ ನಿಂತರು. ನಾನು ಅಂಗಡಿಯ ಮುಂದೇ ಇರುತೆನೆ’ ಎಂದ ರಾಜ. ರಾಜಶೇಖರ, ‘ಪ್ರಭೂ, ತಾವು ರಾಜಪೋಷಾಕಿನಲ್ಲಿದ್ದೀರಿ. ನಿಮ್ಮನ್ನು ನೋಡಿ ಕಳ್ಳ ಓಡದೆ ಇರಲಾರ’ ಎಂದ. ರಾಜನಿಗೆ ಇದೂ ಸರಿಯೆನ್ನಿಸಿತು. ‘ಹಾಗಿದ್ದರೆ ನಿನ್ನ ಉಡುಪು ನನಗೆ ಕೊಡು. ನನ್ನದನ್ನ ನೀನು ಇಟ್ಟುಕೊಂಡು ಆ ಮರದ ಹಿಂದೆ ಅವಿತುಕೋ’ ಎಂದು ಹೇಳಿ ತನ್ನ ಉಡುಪನ್ನು ಅವರಸರದಿಂದ ಕಳಚಿ ರಾಜಶೇಖರನ ಕೈಗೆ ಕೊಟ್ಟ. ಅವನದನ್ನು ರಾಜ ಧರಿಸಿದ.

ರಾಜಶೇಖರ ತಕ್ಷಣವೇ ರಾಜನ ಪೋಷಾಕು ಹಾಕಿಕೊಂಡು ಸೈನಿಕರಿದ್ದಲ್ಲಿಗೆ ಹೋದ. ‘ನೋಡ್ರೋ, ಆ ಸಣ್ಣ ಅಂಗಡಿಯ ಮುಂದೆ ವ್ಯಾಪಾರ ಮಾಡುತ್ತಿರುವವನೇ ಕಳ್ಳ. ಹೋಗಿ ತಕ್ಷಣ ಅವನನ್ನು ಬಂಧಿಸಿರಿ. ಅವನು ತಾನೇ ರಾಜ ಎಂದು ಕೂಗಬಹುದು. ಹಾಗೇನಾದರೂ ಕೂಗಿದರೆ ಅವನ ಮಾತು ನಂಬಬೇಡಿ. ಆ ಅಂಗಡಿಪೆಟ್ಟಿಗೆಯಲ್ಲೇ ಅವನನ್ನು ತುರುಕಿ ತೆಗೆದುಕೊಂಡು ಬನ್ನಿ’ ಎಂದ. ಸೈನಿಕರು ಓಡಿಹೋಗಿ ಸಣ್ಣಶೆಟ್ಟಿಯ ವೇಷದಲ್ಲಿದ್ದ ರಾಜನನ್ನು ಸೆರೆಹಿಡಿದರು. ಹಗ್ಗ ಬಿಗಿದು ಕಟ್ಟಿದರು. ಅವನು, ‘ಅಯ್ಯೋ, ನಾನೇ ರಾಜ ಕಣ್ರಯ್ಯಾ’ ಎಂದು ಕೂಗಿದ. ಕೂಡಲೇ ಅವನನ್ನು ಹೊಡೆದು ಪೆಟ್ಟಿಗೆಯಲ್ಲಿ ತುರುಕಿ ಅರಮನೆಗೊಯ್ದರು. ರಾಜಶೇಖರ ಪರಾರಿಯಾದ.

ಬೆಳಗಾಯಿತು. ರಾಜರು ಕಳ್ಳನನ್ನು ಸೆರೆಹಿಡಿದಿದ್ದ ಸುದ್ದಿ ಹಬ್ಬಿತು. ಮಂತ್ರಿ ಮುಂತಾದ ಹಿರಿಯರು ಬಂದರು. ಕಳ್ಳನನ್ನು ನೋಡುವುದಕ್ಕೆ ರಾಜಕುಮಾರಿಯೂ ಬಂದಳು. ಮಂತ್ರಿ ಪೆಟ್ಟಿಗೆ ತೆಗೆದು ನೋಡಿದರೆ ಒಳಗಿದ್ದ ಶೆಟ್ಟಿಯ ವೇಷದ ರಾಜ. ‘ನನ್ನ ಜೀವವೇ’ ಎನ್ನುತ್ತ ಹೊರಗೆ ಬಂದ. ಅಯ್ಯೋ ಘಾತವಾಯಿತೆಂದುಕೊಂಡು ಉಪಚರಿಸಿದರು. ಕಳ್ಳನನ್ನು ಯಾರಿಂದಲೂ ಹಿಡಿಯಲಾಗದ್ದಕ್ಕೆ ಸೋತರು. ಕೊನೆಗೆ ರಾಜ, ‘ಆ ಕಳ್ಳ ಬಂದು ಹಾಜರಾದರೆ ಅರ್ಧ ರಾಜ್ಯ ಕೊಡುವೆ’ ಎಂದು ಡಂಗುರ ಸಾರಿಸಿದ. ರಾಜಶೇಖರ ಹಾಜರಾದ. ನೋಡಿದರೆ ಇವನು ರಾಜಕುಮಾರನಾದ ರಾಜಶೇಖರ! ‘ಹಿಂದೆ ನಿಮ್ಮ ಮಗಳನ್ನು ಕೇಳಿದ್ದಕ್ಕೆ ನಿನಗೆ ಕಳ್ಳತನ ಬರುವುದೇ ಎಂದಿದ್ದಿರಿ. ಈಗ ನಾನು ಕಳ್ಳತನವನ್ನು ಬಲ್ಲೆನೆಂದು ಹೇಳಬಲ್ಲೆ’ ಎಂದ. ‘ನೀನೇ ಆ ಮಹಾಕಳ್ಳ ಎನ್ನುವುದಕ್ಕೆ ಸಾಕ್ಷಿ ಏನಿದೆ?’ ಎಂದು ರಾಜ ಕೇಳಿದ. ರಾಜಶೇಖರ ರಾಜನ ಪೋಷಾಕು ತೋರಿಸಿದ. ರಾಜ ಮೆಚ್ಚಿ ತನ್ನ ಮಗಳನ್ನು ರಾಜಶೇಖರನಿಗೆ ಕೊಟ್ಟು ಮದುವೆ ಮಾಡಿದ. ತನ್ನ ರಾಜ್ಯಕ್ಕೆ ಅವನನ್ನೇ ಪಟ್ಟಗಟ್ಟಿದ. ರಾಜಶೇಖರ ತನ್ನ ಹೆಂಡತಿಯೊಂದಿಗೆ ರಾಜ್ಯವಾಳುತ್ತಾ ಸುಖದಿಂದ ಇದ್ದ. ನಾವಿಲ್ಲಿ ಹೀಗಿದ್ದೇವೆ.

* * *