Categories
ಕನ್ನಡ ಕುವೆಂಪು ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ ಮಕ್ಕಳ ನಾಟಕ ಮಕ್ಕಳ ಸಾಹಿತ್ಯ ರಾಷ್ಟ್ರಕವಿ ಕೃತಿ ಸಂಚಯ

ಮೋಡಣ್ಣನ ತಮ್ಮ

[ವನದೆಡೆ ಹುಡುಗನೊಬ್ಬನು ಸುತ್ತಲೂ ನೋಡುತ್ತ ಬಂದು, ನೀಲ ಗಗನದ ಕಡೆ ನೋಡಿ ಮಂದಸ್ಮಿತನಾಗಿ ಸಂತೋಷವನ್ನು ತೋರ್ಪಡಿಸಿ, ಅಲ್ಲಿ ಒಂಟಿಯಾಗಿ ತೇಲುತ್ತಿದ್ದ ಮೋಡವನ್ನು ಸಂಬೊಧಿಸುತ್ತಾನೆ.]

ಹುಡುಗ
ಓ ಮೋಡಣ್ಣಾ, ಓ ಮೊಡಣ್ಣಾ,
ನಾನು ಬರುವೆನೊ ಕೈ ನೀಡಣ್ಣ!

ಮೋಡ
‘ಮೇಲಿಂದ ಉತ್ತರ ಕೊಡುತ್ತದೆ.’
ಬರಬೇಡಣ್ಣಾ! ಬರಬೇಡಣ್ಣಾ!
ಅವ್ವನು ಬೈವಳು ನೀ ನೋಡಣ್ಣಾ!

ಹುಡುಗ
ನಿನ್ನನು ನೋಡಲು ನಾ, ಮೋಡಣ್ಣಾ,
ನನ್ನೀ ಜನ್ಮವ ನಿಂದಿಪೆನಣ್ಣ.
ಬಲು ಸಂತೋಷದಿ ತೇಲುವೆಯಣ್ಣ;
ಬಳಲದೆ ಆಟವನಾಡುವೆಯಣ್ಣ.
ಮಿಂಚಿನ ಬಳಿಯೇ ನೀನಿರುವೆ;
ಮಿಂಚಿನ ಬಳೆಯನೆ ಧರಿಸಿರುವೆ;
ಗುಡುಗಿನ ಸಂಗಡ ಆಡುವೆ ನೀನು
ಗುಡುಗಾಟವ ಆಡುವವೊಲು ನಾನು.
ದೂರದ ಗಿರಿಗಳ ಏರುವೆ ನೀನು;
ದೂರದ ಪುರಗಳ ನೋಡುವೆ ನೀನು;
ಎಲೆ ಮೋಡಣ್ಣಾ, ಎಲೆ ಮೋಡಣ್ಣಾ,
ನಾನೂ ಬರುವೆನು ಕೈ ನೀಡಣ್ಣಾ!

ಮೋಡ
ಬರಬೇಡಣ್ಣಾ! ಬರಬೇಡಣ್ಣಾ!
ಅವ್ವನು ಬೈವಳು ನೀ ನೋಡಣ್ಣಾ!
(ಹುಡುಗನು ನಿರಾಶನಾಗಿ ಸುತ್ತಲೂ ನೋಡಿ ಗಿರಿಯನ್ನು ಕಂಡು ಅದರ ಸಹಾಯವನ್ನು ಬೇಡುತ್ತಾನೆ.)

ಹುಡುಗ
ಏ ಗಿರಿಯಣ್ಣಾ, ನೀ ಹೇಳಣ್ಣಾ;
ನೀನಾಡುವುದು ಮನ್ನಿಪನಣ್ಣಾ!
ಗೆಳೆಯನು ನಾ ನಿನಗಲ್ಲವೆ, ಅಣ್ಣಾ?
ಅಲೆಯೆನೆ ನಿನ್ನೊಡನನುದಿನವಣ್ಣಾ?
ಉದಯವ ನಿನ್ನೊಡನನುದಿನ ಕಳೆದೆ;
ಹೃದಯಾನಂದವ ನಿನ್ನಿಂ ತಳೆದೆ.
ಊದಿದೆ ಕೊಳಲನು ನಿನಗಾಗಿ!
ಕೂಗಿದೆ ಎನ್ನನು ‘ತಮ್ಮಾ’ ಎಂದು,
ಕೂಗಿದೆ ನಿನ್ನನು ‘ಅಣ್ಣಾ’ ಎಂದು.
ನನ್ನನು ಅಣಕಿಸಿ ಕೂಗಲು ನೀನು
ನಿನ್ನಂ ಕ್ಷಮಿಸಿದೆ ಬೈಯದೆ ನಾನು.
ಅಂದಿನ ಗೆಳತನವಿನ್ನೂ ಉಂಟು,
ಎಂದಿಗು ಹೋಗದು ಹಿಂದಿನ ನಂಟು.
ಏ ಗಿರಿಯಣ್ಣಾ! ಏ ಗಿರಿಯಣ್ಣಾ,
ನೀ ಹೇಳಣ್ಣಾ; ಮನ್ನಿಪನಣ್ಣಾ!
(ಎಂದು ಗಿರಿಗೆ ಹೇಳಿ ಮೆಲ್ಲನೆ ತೇಲುವ ಮೋಡವನ್ನುನೋಡಿ ಕಾತರನಾಗಿ ನುಡಿಯುತ್ತಾನೆ.)
ಓ ಮೋಡಣ್ಣಾ, ಓ ಮೋಡಣ್ಣಾ!
ನಾನೂ ಬರುವೆನೊ ಕೈ ನೀಡಣ್ಣಾ
(ಹುಡುಗನು ಅಳುಮೊಗನಾಗಿ ನಿಲ್ಲುತ್ತಾನೆ. ಗಿರಿ ಹುಡುಗನ ಪರವಾಗಿ ಮೋಡಣ್ಣನಿಗೆ ನುಡಿಯ್ಯತ್ತದೆ.)

ಗಿರಿ
ಎಲೆ ಮೋಡಣ್ಣಾ, ಬಾಲಕ ಸಣ್ಣ;
ಪಾಪಾ, ಹೋಗಲಿ; ಕರೆದೊಯ್ಯಣ್ಣ!
ಶರಧಿಯ ನೀರನೆ ಹೊರವಾ ನಿನಗೆ
ಕಿರಿಯವನಿವನತಿ ಭಾರವೆ, ಅಣ್ಣಾ?
ಸಿಡಿಲನು ಮಿಂಚನು ಆಳುವೆ ನೀನು
ಹುಡುಗನ ಆಳುವುದಸದಳವೇನು?
ರೈತರ ನಿಂದೆಯ ಸೈರಿಪ ನೀನು
ತಾಯಿಯ ದೂರನು ಹೊಂದಿದರೇನು?
ಎಲೆ ಮೋಡಣ್ಣಾ; ಬಾಲಕ ಸಣ್ಣ;
ಪಾಪಾ, ಹೋಗಲಿ; ಕರೆದೊಯ್ಯಣ್ಣಾ!
(ಗಿರಿಯ ನುಡಿಯನ್ನು ಆಲಿಸಿ ಮೋಡ ಸ್ಪಲ್ಪ ಕೋಪದಿಂದ ಗರ್ಜಿಸಿ ರೀತಿ ಗಿರಿಯನ್ನು ಸಂಬೊಧಿಸುತ್ತದೆ.)

ಮೋಡ
ಎಲೆ ಗಿರಿಯಣ್ಣಾ, ನಿನಗೇನಣ್ಣಾ?
ಕುಳಿತುಪದೇಶವ ಮಾಡುವೆಯಣ್ಣ!
ಅಣುಗನ ನುಡಿಗಳ ಆಲಿಸಿ ನೀನೂ
ಅಣುಗುವಚನಗಳ ಹೇಳುವಿಯೇನು?
ಹತ್ತು ಕಡಲಗಳ ಹೊತ್ತರು ನಾನು
ಎತ್ತೆನು ಬಾಲಕನೋರ್ವನ, ಕೇಳು.
ಸಿಡಿಲು ಮಿಂಚುಗಳನಾಳಲು ಬಲ್ಲೆ;
ಹುಡುಗರನಾಳುವುದಾದರೆ ಒಲ್ಲೆ!
ರೈತರೆ ಗುಂಪೇ ಬೈದರು ಸೈರಿಪೆ;
ತಾಯಿಯ ಶಾಪವ ಸೈರಿಸೆ ನಾನು!
ಎಲೆ ಗಿರಿಯಣ್ಣಾ, ಎಲೆ ಗಿರಿಯಣ್ಣಾ,
ನಿನಗೇಕಣ್ಣಾ? ಸುಮ್ಮನಿರಣ್ಣಾ!
(ಗಿರಿ ಖಿನ್ನವದನದಿಂದ ಹುಡುಗನನ್ನು ನೋಡಿ ಸುಮ್ಮನಾಗುತ್ತದೆ. ಹುಡುಗ ಇನ್ನೊಮ್ಮೆ ಮೋಡವನ್ನು ಬೇಡುತ್ತಾನೆ.)

ಹುಡುಗ
ಓ ಮೋಡಣ್ಣಾ, ಓ ಮೋಡಣ್ಣಾ,
ನಾನೂ ಬರುವೆನೊ, ದಮ್ಮಯ್ಯಣ್ಣಾ!
ಬಾ, ಬಾ ಕೊಡುವೆನೊ ಬಾಳೆಯಹಣ್ಣ.
ಏನನು ಮಾಡಿದೆ ನಾ ನಿನಗಣ್ಣಾ?
ಒಂದೇ ದಿನವೇ ನಿನ್ನಲ್ಲಿರುವೆ;
ತೊಂದರೆ ಕೊಡನೆಂದಾಣೆಯನಿಡುವೆ.
ದೂರದ ಹುಡುಗರನಡಗಿಸಿಕೊಂಡಿಹೆ;
ಊರಿನ ನನ್ನನೆ ‘ಬೇಡಾ’ ಎನ್ನವೆ?
ಕೊಡೆಯನುತರುವೆನೊ, ಕಂಬಳಿತರುವೆನೊ,
ಹಾಸಿಗೆ ಹೊದಿಕೆಯನೆಲ್ಲಾ ತರುವೆನೊ!
ಒಂದೇ ದಿನವೇ ನಿನ್ನಲಿರುವೆನೊ;
ಮುಂದಿನ ದಿನವೇ ಇಲ್ಲಿಗೆ ಬರುವೆನೊ!
ಹೊತ್ತುದ ಹುಲಿಗಳ ಕಂಡಿಹೆನು;
ಹೆತ್ತುದ ಭೀಕರ ರಕ್ಕಸರ!
ಪುರಗಳ ನಿನ್ನೊಳು ಕಂಡಿಹೆನು;
ಕುರಿಗಳ ಹಿಂಡನು ಕಂಡಿಹೆನು;
ಹೊಳೆಗಳ ತೊರೆಗಳ ಕಡಲುಗಳ
ನಲಿದಾಡುವ ದಟ್ಟಡವಿಗಳ!
ಇಂತಿರೆ ನಿನ್ನೀ ಮಹಿಮೆಯು, ಅಣ್ಣಾ,
ಚಿಂತೆಯದೇತಕೆ ಕರೆದೊಯ್ಯೆನ್ನ!
ಓ ಮೋಡಣ್ಣಾ, ಓ ಮೋಡಣ್ಣಾ,
ನಾನೂ ಬರುವೆನೊ, ಕೈ ನೀಡಣ್ಣಾ!

ಮೋಡ
ಬರಬೇಡಣ್ಣಾ! ಬರಬೇಡಣ್ಣಾ!
ಅವ್ವನು ಬೈವಳು; ನೀ ನೋಡಣ್ಣಾ!
ಇಲ್ಲಿಗೆ ಬಂದರೆ ಹಾಲನು ಕೊಡುವರು,
ಮೈಯನು ತೊಳೆವರು ನಿನಗಾರಣ್ಣಾ?
ಅತ್ತರೆ ನಿನ್ನನು ಸಂತಸ ಪಡಿಸಲು
ಹೆತ್ತವರಿಲ್ಲದೆ ಆಗದು, ಅಣ್ಣಾ!
ನೀ ಬೇಕಾದುದ ಹೇಳುವೆಯಣ್ಣಾ;
ನಾ ಬಲ್ಲೆನು ಎಲ್ಲವ ಕಾಣಣ್ಣಾ!
ಗುದ್ದುವೆ ಅವ್ವನ ದಿನವೆಲ್ಲ!
ಗದ್ದಲ ಮಾಡುವೆ ಹಗಲೆಲ್ಲ!
ಎಷ್ಟೋ ಸಾರಿ ನನ್ನನು ತೋರಿ
ನಿನ್ನನು ಸಂತೈಸಿರುವಳು ತಾಯಿ!
ಸಜ್ಜನ ನೀನೆಂಬುದ ನಾ ಬಲ್ಲೆ:
ಅಜ್ಜನ ಬಳಿಹೋಗೈ, ನಾ ನಿಲ್ಲೆ!
ಬರಬೇಡಣ್ಣಾ! ಬರಬೇಡಣ್ಣಾ!
ಅವ್ವನು ಬೈವಳು, ಬೇಗೋಡಣ್ಣಾ!
(ಹುಡುಗನು ಏನೂ ತೋರದೆ ಸಮೀಪದಲ್ಲಿದ್ದ ಕಾಡನ್ನು ಸಹಾಯಕ್ಕೆ ಕರೆಯುತ್ತಾನೆ.)

ಹುಡುಗ
ಎಲೆ ಕಾಡಣ್ಣಾ, ಎಲೆ ಕಾಡಣ್ಣಾ,
ನೀನಾದರೂ ತುಸು ಮಾತಾಡಣ್ಣಾ!
ಗಿರಿಯಣ್ಣನ ನುಡಿಯನು ಮೋಡಣ್ಣ
ಜರೆದೆಸೆದನು; ನೀನೇ ನೋಡಣ್ಣಾ!
ಋಣಿಯಾಗಿರುವೆನೊ ನಾ ನಿನಗೆಂದೂ:
ಮಾತಾಡಯ್ಯಾ, ಋಷಿಗಳ ಬಂಧು!
(ಕಾಡು ಆಸಮಾಧಾನದಿಂದ ಹುಡುಗನನ್ನು ಅಲ್ಲಗಳೆದು ಮೋಡಕ್ಕೆ ಕರೆದುಕೊಂಡು ಹೋಗುವುದು ಖಂಡಿತ ಬೇಡವೆಂದು ಹೇಳುತ್ತದೆ.)

ಕಾಡು
ಬಿಡೊ ಬಿಡೊ ನಿನ್ನೀ ನುಣ್ಣನೆ ನುಡಿಗಳ:
ಕಡಿ ಕಡಿ ಎನ್ನುವೆ ತಂದೆಗೆ ಬುಡಗಳ !
ಬೆಂಕಿಯ ಬುಡಗಳಿಗಿಡಿಸುವನು,
ಧಗ ಧಗ ಉರಿಸುವನು!
ಅಂಕೆಯ ಇಲ್ಲದೆ ಕಡಿಸುವನು,
ಸೊಬಗನೆ ಕೆಡಿಸುವನು!
ಸೊಟ್ಟನೆ ಮರಗಳನೊಡಿಸುವನು;
ಕಟ್ಟಿಗೆಯಂದದಿ ಸುಡಿಸುವನು!
ದಟ್ಟನೆ ಎನ್ನನು ಕಡಿ ಕಡಿದು
ಮಟ್ಟುವ ಮಾಡುವರಡಿಗಡಿಗೆ.
ಕಡಿವರೆ ಹೊರತೂ ಬಂದವರೆಲ್ಲಾ
ನೆಡುವರನೊಬ್ಬರ ಕಾಣಲೆ ಇಲ್ಲಾ.
ಇದ್ದಿಲ ನೆವದಿಂ ಕಡಿವರು ಕೆಲರು.
ಗೆದ್ದಲಿಗೆನ್ನನು ಕೊಡುವರು ಕೆಲರು!
ಕದ್ದೇ ಸಾಗಿಪರೆನ್ನರು ಕೆಲರು.
ಸುದ್ದಿಯೆ ಇಲ್ಲದೆ ಕೊಲ್ಲುತಲಿಹರು!
(ಪುನಃ ಮೋಡದ ಕಡೆಗೆ ತಿರುಗಿ ಅದನ್ನು ಸಂಭೋದಿಸಿ)

ಎಲೆ ಮೋಡಣ್ಣಾ, ಎಲೆ ಮೋಡಣ್ಣಾ;
ಸಾಯುತಲಿರುವೆನೊ ನೀ ನೋಡಣ್ಣಾ!
ನಾನಿರಲಿಲ್ಲಿಗೆ ಬಹೆ, ಮೋಡಣ್ಣ;
ನಾನಳಿಯಲು ನೀ ಓಡುವಿಯಣ್ಣ!
ಗೆಳೆತನವೆಮ್ಮದ ಬಿಡಿಸುವರಣ್ಣ;
ತಲೆಯೊಳು ಕೆಂಡವನಿಡಿಸುವರಣ್ಣ!
ಮನುಜರು ಹೋದಡೆಯೆಲ್ಲಾ ಹಾಳು!
ನೀನಿವನೊಯ್ದರೆ ತಪ್ಪದೊ ಗೋಳು!
ಎಲೆ ಮೇಘಣ್ಣ, ನಡೆ ಬೇಗಣ್ಣಾ!
ಮಾತೇನಿವನೊಡನಿವ ಹುಡುಗಣ್ಣಾ!
(ಹುಡುಗನು ದಿಕ್ಕು ತೋರದವನಾಗಿ, ಕಣ್ಣೀರು ಒರೆಸಿಕೊಳ್ಳುತ್ತಾ, ಸುತ್ತಲೂ ನೋಡಿ, ಕಡೆಗೆ ಮೇಲೆ ತೇಲುವ ಮೋಡವನ್ನು ಪುನಃ ಅಂಗಲಾಚಿ ಬೇಡಿಕೊಳ್ಳುತ್ತಾನೆ.)

ಹುಡುಗ
ದಮ್ಮಯ್ಯಣ್ಣಾ! ದಮ್ಮಯ್ಯಣ್ಣಾ!
ದಮ್ಮಯ್ಯಯ್ಯೋ, ಓ ಮೋಡಣ್ಣಾ!
ತಮ್ಮನು ನಾ ನಿನಗಲ್ಲವೆ, ಅಣ್ಣಾ?
ಅಮ್ಮನ ಮಗ ನೀನಲ್ಲವೆ, ಅಣ್ಣಾ?
ಹೋಗುವೆ ಎಲ್ಲಿಗೆ?  ಬಾ ಬಾರಣ್ಣಾ;
ಕೈ ಕೈ ಮುಗಿಯುತೆ ಬೇಡುವೆನಣ್ಣಾ!
ಅಮ್ಮನ ಗುದ್ದುವುದಿಲ್ಲವೊ ಬಾರೊ;
ಗದ್ದಲ ಮಾಡುವುದಿಲ್ಲೋ ಬಾರೋ!
ಹರಿಯುವ ಹೊಳೆಗಳ ನೋಡಲು ಬೇಕೊ;
ಮೆರೆಯುವ ಪುರಗಳ ನೋಡಲು ಬೇಕೊ;
ಗಿರಿಯಾಚೆಯ ನಾ ನೋಡಲು ಬೇಕೊ;
ಹರಿಣಾಂಕ ನಾ ಕೊಯ್ಯಲು ಬೇಕೊ;
ಇಷ್ಟೇ ಕೆಲಸವೊ, ಮೋಡಣ್ಣಾ;
ಇಷ್ಟ್ಟೇ; ಇನ್ನೇನಿಲ್ಲಣ್ಣಾ!
ಓ ಮೋಡಣ್ಣಾ, ಓ ಮೋಡಣ್ಣಾ
ನಾನೂ ಬರುವೆನೊ, ಕೈ ನೀಡಣ್ಣಾ!
(ಮೋಡ ಬಾಲಕನ ಗೋಳನ್ನು ನೋಡಿ ಸಹಿಸಲಾರದೆ, ಬುದ್ಧಿವಾದ ಹೇಳಿ, ಬರುತ್ತೇನೆಂದು ಹೇಳಿ ಹೋಗುತ್ತದೆ.)

ಮೋಡ
ಅಳಬೇಡಣ್ಣಾ! ಎಲೆ ಕಿಟ್ಟಣ್ಣಾ;
ಕೆಲಸದ ಕಾಲವೊ ನನಗಿದು ಅಣ್ಣಾ.
ಸಾಗರ ರಾಜನು ಕಳುಹಿದನೆನ್ನ
ಗಿರಿ ಚಕ್ರೇಶ್ವರಗೀಯಲು ತನ್ನ
ವರ್ಷದ ಕಪ್ಪವ, ಕಾಲಕೆ ಮುನ್ನ!
ಆದರೆ ಮಾರ್ಗದ ಗೆಳೆಯರು ನನ್ನ
ಹೋಗಲು ಬಿಡುವರೆ, ನೀ ಹೇಳಣ್ಣ?
ಪಶ್ಚಿಮಘಟ್ಟದ ಗೆಳೆಯನ ಕೂಡೆ
ಕೆಲದಿನವಿದ್ದೆನು ಸೊಬಗನು ನೋಡೆ!
ಆ ಮೇಲೈತರಲಲ್ಲಿಂದಿಲ್ಲಿ
ಎಲ್ಲರ ಬಾಯೊಳು! ‘ನಿಲ್ಲಿ’ ‘ನಿಲ್ಲಿ’ !
ಎಲೆ ಕಿಟ್ಟಣ್ಣಾ, ಮಾಡುವುದೇನು?
ನೀನೇ ನೋಡೋ ದಣಿದಿಹೆ ನಾನು.
ಹೋದರೆ ಬೋರೇಗೌಡನ ಬಳಿಗೆ
ಮಾದೇಗೌಡನು ಬೈಯುವನೆನಗೆ!
ಸುಖವೂ ಸಾಕು, ಗೋಳೂ ಸಾಕು,
ನನ್ನೀ ಬಾಳಿಗೆ ಬೆಂಕಿಯ ಹಾಕು!
ಅಂತೂ ಮರೆಯೆನೊ ನಿನ್ನನು, ಅಣ್ಣಾ;
ಹಿಂತಿರುಗೈತರೆ ಕಾಣುವೆನಣ್ಣಾ!
(ಹೀಗೆಂದು ನುಡಿದ ಮೋಡದೊಡನೆ ಬಾಲಕನು ಸಹಾನುಭೂತಿ ತೋರಿಸಿ, ಕ್ಷಮಾಪಣೆ ಬೇಡಿ, ಬುದ್ದಿವಾದವನ್ನು ಆಲಿಸುತ್ತಾನೆ.)

ಹುಡುಗ
ಎಲೆ ಮೋಡಣ್ಣಾ, ಎಲೆ ಮೋಡಣ್ಣಾ,
ಹಟಮಾಡಿದುದನು ಮನ್ನಿಸು, ಅಣ್ಣಾ.
ನಿನ್ನನ್ನರಿಯದೆ ನುಡಿದೆನೊ, ಅಣ್ಣಾ;
ನನ್ನಿಯನರಿತೆನು; ನೀನೆನಗಣ್ಣ!
ಹಿರಿಯವ ನೀನೆಲೆ ಮೋಡಣ್ಣಾ,
ಅರಿಯದವನು ನಾ ಕಿಟ್ಟಣ್ಣ!
ಅನುಭಶಾಲಿಯು ನೀ ಮೋಡಣ್ಣಾ,
ಅನುಭವವಿಲ್ಲದವನು ನಾನಣ್ಣಾ!
ಹೇಳೈ ಬುದ್ಧಿಯ ಮಾತುಗಳ
ಕೇಳುವೆ ನಾನಾ ನೀತಿಗಳ !
ಪಂಡಿತ ನೀನೈ, ಎಲೆ ಮೋಡಣ್ಣಾ;
ಪಾಮರ ನಾನೈ; ದಯೆ ತೋರಣ್ಣ!

ಮೋಡ
ಬುದ್ಧಿಯ ಹೇಳುವೆನಾಲಿಸು: ನೀನು
ಬುದ್ಧಿಯರಿಯೆ ಕರೆದೊಯ್ವೆನೊ ನಾನು!
ಧರ್ಮಮೇಘ ನೀನಾಗಲು ಬೇಕು:
ಧರ್ಮದ ಮಳೆಯನು ಸುರಿಸಲು ಬೇಕು!
ಸತ್ಯವನೆಂದಿಗು ಬಿಡಬೇಡ:
ಮಿಥ್ಯೆಯನೆಂದೂ ಹಿಡಿಯಲು ಬೇಡ!
ಚಿತ್ತದಿ ಭಕ್ತಿಯ ಬೀಜವನು

ಬಿತ್ತುತ ಪಡೆಯೈ ಮುಕ್ತಿಯನು!
ದೇವರ ದಿನವೂ ಭಜಿಸಲು ಬೇಕೊ;
ಪಾವನನಾತನ ನೆನೆಯಲು ಬೇಕೊ;
ಮಾನವರೆಲ್ಲಾ ದೇವರ ಪುತ್ರರು;
ಆದುದರಿಂದವರೆಲ್ಲಾ ಮಿತ್ರರು!
ಜಾತಿ ವೈರಗಳ ಮರೆಯಲು ಬೇಕೊ
ನೀತಿ ನಡತೆಗಳ ಕಲಿಯಲು ಬೇಕೊ!
ನಿರ್ಮಲ ಮನುಜನೆ ದೇವಾಲಯವೊ;
ನಿರ್ಮಲ ಹೃದಯವೆ ದೇವರ ಪೀಠ!
ಶುದ್ಧವಾದ ಮನಸೇ ಪೂಜಾರಿ:
ಶುದ್ಧಾಲೋಚನೆಗಳೆ ಸುಮಹಾರ!
ಈಶನ ಕರುಣೆಯ ಕಿರಣವು ಬೀಳೆ
ವಾರಧಿಯಂದದ ಹೃದಯದ ಮೇಲೆ
ಪರಿಶುದ್ಧಾತ್ಮನು ಆವಿಯ ರೂಪದಿ
ಪಾಪಕ್ಷಾರವನಲ್ಲಿಯೆ ಬಿಟ್ಟು
ಗಗನಕ್ಕೇರುವಂತೆಯೆ, ಕಿಟ್ಟೂ,
ಧರ್ಮಮೇಘ ನೀನಾಗಲು ಬೇಕೊ;
ಧರ್ಮದ ಮಳೆಯನೆ ಸುರಿಯಲು ಬೇಕೊ!

ಬಾರತ ಮಾತೆಯ ಭಕ್ತಿಯು ನಿನ್ನ
ರಕ್ತನಾಳದೊಳು ಹರಿಯುತಲಿರಲಿ:
ಕಪಿಲ ಮಹರ್ಷಿಯ ಪುತ್ರನು ನೀನು;
ಯೋಗಿ ಪತಂಜಲನೊಲಿದವ ನೀನು!
ಗೌತಮ ಚುಂಬಿಸಿದಣುಗನೊ ನೀನು;
ಕೃಷ್ಣನ ಕೂಡಾಡಿದವನೊ ನೀನು!
ಶ್ರೀಮಚ್ಛಂಕರ ಗುರುವರ ತಾನು
ಬೋಧಿಸಿ ಕಲಿಸಿದ ಆತ್ಮನು ನೀನು!
ವರವೇದಾಂತದ ಕೇಸರಿ ನೀನು;
ಪರಶಿವ ನೀನು, ಪರಶಿವ ನೀನು!

ಶ್ರೀರಾಮಾಯಣವನು ವಾಲ್ಮೀಕಿ
ವಿರಚಿಸಿದನೊ ಬಾಲಕ ನಿನಗಾಗಿ!
ವ್ಯಾಸ ಕವೀಶ್ವರ ತಾ ನಿನಗಾಗಿ
ಭಾರತವನು ರಚಿಸಿದ ಚೆಲುವಾಗಿ!
ರಾಮಕೃಷ್ಣ ಗುರು ಕರುಣಿಸಿ ತಾನು
ವ್ಯೋಮಕ್ಕೇರಿಸಿದಾತನೊ ನೀನು!
ಧೀರ ವಿವೇಕಾನಂದನೆ ತಾನು
ಹುರಿದುಂಬಿಸಿದಾ ಕೇಸರಿ ನೀನು!
ದೇವ ಮಹಾತ್ಮಾಗಾಂಧಿಯೆ ತಾನು
ಬೋಧಿತ ತತ್ವಕೆ ನಾಂದಿಯೆ ನೀನು!
ವರವೇದಾಂತದ ಕೇಸರಿ ನೀನು;
ಪರಶಿವ ನೀನು; ಪರಶಿವ ನೀನು!
ಆಲಿಸಿ ಮರೆಯುವ ನುಡುಗಳಿವಲ್ಲ;
ಊಹನೆ ಮಾತ್ರದ ಕವಿತೆಗಳಲ್ಲ.
ಕೈ ಚಪ್ಪಾಳೆಯ ಮಟ್ಟಿಗಿವಲ್ಲ;
ಬಾಲನೆ ಅನುಸರಿಸಿವುಗಳನೆಲ್ಲ!
ಹೊತ್ತಾಯಿತು ಹೋಗುವೆ ನಾನೀಗ;
ಕತ್ತಲಿಳಿಯುತಿದೆ ನಡೆ ನೀ ಬೇಗ.
ಪುರುಸತ್ತಾಗಲು ಬರುವೆನು ಅಣ್ಣಾ;
ಕರೆದೊಯ್ಯುವೆ ನಿನ್ನನು ಕಿಟ್ಟಣ್ಣಾ!
(ಅಷ್ಟು ಹೊತ್ತಿಗೆ ತೆರೆಯ ಹಿಂದೆ ತಾಯಿಯ ಕೂಗು ಕೇಳಿ ಬರುತ್ತದೆ. ಇಬ್ಬರೂ ಕಿವಿಗೊಟ್ಟು ಆಲಿಸುತ್ತಾರೆ, ತಾಯಿ ತೆರೆಯಲ್ಲಿ ಹಾಡುತ್ತಾಳೆ.)

ತಾಯಿ
ಕಿಟ್ಟೂ, ಕಿಟ್ಟೂ, ಬಾರೋ ಬೇಗ.
ಬೆಟ್ಟಕ್ಕೇತಕೆ ಹೋದೆಯೊ ಈಗ?
ಹೊತ್ತು ಮುಳುಗುತಿದೆ ನೋಡೋ ಅಲ್ಲಿ;
ಕತ್ತಲ ಛಾಯೆಗಳಿಳಿಯುವವಿಲ್ಲಿ.
ಗೂಡಿಗೆ ಹೋಗಲು ಹಕ್ಕಿಗಳೆಲ್ಲಾ
ಹಾಡುತಲಾಡುತ ಹಾರುತಲಿಹವು;
ಅಡಗಿಹ ತಾರೆಗಳೊಂದೊಂದಾಗಿ
ಹೊರಡುತಲಿರುವುವು ಅಂಜಿಕೆ ನೀಗಿ;
ಬೆಟ್ಟಕೆ ಹೋದಾ ಗೋಗಳ ಗುಂಪು
ಕೊಟ್ಟಿಗೆಗಾಗಲೆ ಬಂದುವೊ ನೋಡು;
ಬಂದನು ದನಗಳ ಕಾಯುವ ತಿಮ್ಮ;
ತಂದಿಹನವ ಬೆಮ್ಮಾರಲ ಹಣ್ಣ.
ಕೊಳಲನು ಮಾಡಿಹನವ ನಿನಗಾಗಿ;
ಕೊಲಳಿಹುದೆಂದರೆ ಬಲು ಚೆಲುವಾಗಿ!
ಕಿಟ್ಟೂ, ಕಿಟ್ಟೂ, ಬಾರೋ ಬೇಗ,
ಬೆಟ್ಟಕ್ಕೇತಕೆ ಹೋದೆಯೊ ಈಗ?
(ಮೋಡ ಕಿಟ್ಟುಗೆ ಹೋಗಿ ತಾಯಿಯನ್ನು ಸಂತೋಷಪಡಿಸಲು ಹೇಳುತ್ತಿದೆ.)

ಮೋಡ
ಅಗೊ ಅವ್ವನು ಕರೆವಳು ಕೇಳಣ್ಣ!
ಇಗೋ ಹೊರಡುವೆ ನಾನೆಲೆ ಕಿಟ್ಟಣ್ಣ.
ನನ್ನುಪದೇಶವ ಮರೆಯದಿರು;
ನಿನ್ನಾತ್ಮನ ನೀ ತೊರೆಯದಿರು.
ನಡೆ ನಡೆ ಬೇಗನೆ ತೆರಳುವೆನಣ್ಣಾ!
ಅಡಿಯಿಡು ಅಡಿಯಿಡು ನಿಲ್ಲದಿರಣ್ಣಾ!
ಬರಬೇಡಣ್ಣಾ, ಬರಬೇಡಣ್ಣಾ,
ಅವ್ವನು ಬೈವಳು, ನೀ ಓಡಣ್ಣಾ!
(ಎಂದು ಮೋಡ ಅಂತರಿಕ್ಷದಲ್ಲಿ ಅಡಗುತ್ತದೆ. ಬಾಲಕ ಮೋಡ ಹೋದ ದಾರಿಯನ್ನೇ ನೋಡುತ್ತಾ ನಿಂತಹಾಗೆ ಆತನ ತಾಯಿ ಪುನಃ ಕರೆಯುವುದು ಕೇಳಿ ಬರುತ್ತದೆ. ಪುನಃ ತಾಯಿ ತೆರೆಯಲ್ಲಿ ಹಾಡುತ್ತಾಳೆ.)

ತಾಯಿ
ಕಿಟ್ಟೂ, ಕಿಟ್ಟೂ, ಬಾರೋ ಬೇಗ:
ರೊಟ್ಟಿಯು ಬೇಕಾದರೆ ಬಾ ಬೇಗ.
ರಂಗನು ಎಲ್ಲಾ ತಿಂಬನು ಬಾರೋ;
ಬಾರದೆ ಇದ್ದರೆ ನಿನಗೇ ಸೊನ್ನೆ!
ಶಾರದೆಗಾದುದ ಕಂಡೆಯ ನಿನ್ನೆ?
ಕಿಟ್ಟೂ ಕಿಟ್ಟೂ ಬಾರೋ ಬೇಗ;
ರೊಟ್ಟಿಯು ಬೇಕಾದರೆ ಬಾ ಬೇಗ!

ಹುಡುಗ
[ಶಬ್ದ ಬಂದ ಕಡೆ ತಿರುಗಿ]
ಬಂದೇ ಬಂದೇ ತಾಳೌ ತಾಯೆ!
ವಂದಿಸಿ ಮೋಡಣ್ಣನ ಬಹೆ ತಾಯೆ!
(ಎಂದು ಪುನಃ ಮೋಡ ಹೋದ ದಾರಿಯನ್ನೇ ಅಭೀಷ್ಟಕ ನಯನಗಳಿಂದ ನೋಡುತ್ತಾ)

ಸುಖವಾಗಲ್ಲಿಗೆ ನೀ ಹೋಗಣ್ಣಾ;
ಮಂಗಳ ನಿನಗಾಲಿ ಮೇಘಣ್ಣಾ!
ಆದರೆ ತಮ್ಮನ ಮರೆಯದಿರಣ್ಣಾ;
ಆಡಿದ ಭಾಷೇಯ ತಪ್ಪದಿರಣ್ಣಾ.
ಕಾಯುವೆ ನಿನ್ನಾಗಮನವನಣ್ಣಾ,
ಆಯುವವರೆಗೂ, ಓ ಮೋಡಣ್ಣಾ!
ಹೋಗುವೆ ನಾ! ನೀ ಹೋಗಿ ಬಾರಣ್ಣಾ!
ಹೋಗಿ ಬಾರಣ್ಣಾ!
(ಆಕಾಶದಲ್ಲಿ ಗುಡುಗಿನ ಶಬ್ದ ಕೇಳಿಸುತ್ತದೆ. ಬಾಲಕ ತೆರಳುತ್ತಾನೆ.)