ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆ. ಕ್ರಿಕೆಟ್ ಜನಪ್ರಿಯಗೊಳ್ಳುವ ಮುನ್ನ ಹಾಕಿ ರಾಷ್ಟ್ರದಲ್ಲಿ ನಂ.1 ಕ್ರೀಡೆಯಾಗಿತ್ತು. ಈ ಕ್ರೀಡೆಯಲ್ಲಿ 8 ಬಾರಿ ಒಲಿಂಪಿಕ್ಸ್ ಚಿನ್ನ ಗೆದ್ದಿರುವುದು ಭಾರತದ ಹಿರಿಮೆ.

ಆಟದ ಸ್ವರೂಪ:
ಹಾಕಿ ಎರಡು ತಂಡಗಳ ನಡುವಿನ ಕ್ರೀಡೆ. ಇದರಲ್ಲಿ ಉಭಯ ತಂಡಗಳು ಗಟ್ಟಿಯಾದ ಸಣ್ಣ ಚೆಂಡನ್ನು ಕೋಲಿನ ನೆರವಿನಿಂದ ಎದುರಾಳಿಯ ನೆಟ್ ಅಥವಾ ಗೋಲುಪೆಟ್ಟಿಗೆಯೊಳಕ್ಕೆ ತಳ್ಳಲು ಯತ್ನ ನಡೆಸುತ್ತವೆ.

ವಿಧಗಳು:
ಹಾಕಿಯಲ್ಲಿ ಹಲವು ವಿಧ. ಫೀಲ್ಡ್ ಹಾಕಿ, ಐಸ್ ಹಾಕಿ, ರೋಲರ್ ಹಾಕಿ, ಸ್ಟ್ರೀಟ್ ಹಾಕಿ, ಇತ್ಯಾದಿ.
ಫೀಲ್ಡ್ ಹಾಕಿಯನ್ನು ಸಹಜ ಹಸಿರು ಹುಲ್ಲಿನ ಅಂಕಣ ಅಥವಾ ಕೃತಕ ಟರ್ಫ್ ಮೇಲೆ ಆಡಲಾಗುತ್ತದೆ. ಇದು ವಿಶ್ವದ ಹಲವು ಭಾಗಗಳಲ್ಲಿ ಪುರುಷರು ಹಾಗೂ ಮಹಿಳೆಯರ ತಂಡ ಕ್ರೀಡೆಯಾಗಿ ಪ್ರಸಿದ್ಧ. ವಿಶೇಷವಾಗಿ ಯುರೋಪ್, ಏಷ್ಯಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಜನಪ್ರಿಯ ಕ್ರೀಡೆ.

ಅಂತಾರಾಷ್ಟ್ರೀಯ ಹಾಕಿ ಒಕ್ಕೂಟ (ಎಫ್ಐಎಚ್) ಹಾಕಿಯ ವಿಶ್ವ ಆಡಳಿತ ಸಂಸ್ಥೆ. ಪುರುಷರ ಹಾಕಿ 1908ರಿಂದ (1912 ಮತ್ತು 1924 ಹೊರತು ಪಡಿಸಿ) ಒಲಿಂಪಿಕ್ಸ್ ಕ್ರೀಡೆಗಳ ಭಾಗವಾಗಿದೆ. ಮಹಿಳಾ ಹಾಕಿ 1980ರಿಂದ ಒಲಿಂಪಿಕ್ಸ್ ನಲ್ಲಿ ಸ್ಥಾನ ಪಡೆದಿದೆ.

ಆಧುನಿಕ ಹಾಕಿ ಕೋಲು ಜೆ ಆಕಾರದಲ್ಲಿರುತ್ತದೆ. ಇದನ್ನು ಮರ, ಗ್ಲಾಸ್ ಫೈಬರ್ ಅಥವಾ ಕಾರ್ಬನ್ ಫೈಬರ್ (ಕೆಲವೊಮ್ಮೆ ಎರಡೂ) ನಿಂದ ತಯಾರಿಸಲಾಗುತ್ತದೆ. ಈ ಕೋಲು ಚೆಂಡನ್ನು ಹೊಡೆಯುವ ಭಾಗದಲ್ಲಿ ಅರ್ಧ ಚಂದ್ರಾಕೃತಿಯಲ್ಲಿ ಭಾಗಿರುತ್ತದೆ.

ಇತಿಹಾಸ:
ಇತಿಹಾಸದ ಪುರಾವೆಗಳ ಪ್ರಕಾರ ಹಾಕಿಯ ಕಚ್ಚಾ ಮಾದರಿಯನ್ನು ಈಜಿಪ್ಟ್ ನಲ್ಲಿ 4000 ವರ್ಷಗಳ ಹಿಂದೆ ಹಾಗು ಇತಿಯೋಪಿಯದಲ್ಲಿ ಕ್ರಿಸ್ತ ಪೂರ್ವ 1000ದ ಸುಮಾರಿಗೆ ಆಡಲಾಗುತ್ತಿತ್ತು. ರೋಮನ್ನರು, ಗ್ರೀಕರು ಮತ್ತು ಕೊಲಂಬಸ್ ಆಗಮಿಸುವುದಕ್ಕೆ ಹಲವು ಶತಮಾನಗಳ ಮುಂಚೆಯೇ ದಕ್ಷಿಣ ಅಮೆರಿಕದಲ್ಲಿ ಈ ಕ್ರೀಡೆ ಆಡಲಾಗುತ್ತಿತ್ತು ಎನ್ನುವುದಕ್ಕೆ ಹಲವು ಪುರಾವೆಗಳು ಪ್ರಾಚ್ಯ ವಸ್ತು ಸಂಗ್ರಹಾಲಯದಲ್ಲಿ ದೊರಕುತ್ತವೆ. ಆದರೆ, ಆಧುನಿಕ ಹಾಕಿ ಅರಳಿದ್ದು 18ನೇ ಶತಮಾನದ ಮಧ್ಯಭಾಗದಲ್ಲಿ ಇಂಗ್ಲೆಂಡಿನಲ್ಲಿ. ಅದರಲ್ಲೂ ಮುಖ್ಯವಾಗಿ ಶಾಲೆಗಳಲ್ಲಿ. ಮೊದಲ ಹಾಕಿ ಕ್ಲಬ್ 1849ರಲ್ಲಿ ವಾಯುವ್ಯ ಲಂಡನ್ನಿನ ಬ್ಲಾಕ್ ಹೀತ್ ನಲ್ಲಿ ಪ್ರಾರಂಭವಾಯಿತು. ಹಾಕಿ ಭಾರತದಂತೆಯೇ, ಪಾಕಿಸ್ತಾನದ ರಾಷ್ಟ್ರೀಯ ಕ್ರೀಡೆಯೂ ಹೌದು.

ಲಂಡನ್ನಿನಲ್ಲಿ ನಡೆದ 1908ರ ಒಲಿಂಪಿಕ್ಸ್ ನ ಹಾಕಿ ಸ್ಪರ್ಧೆಯಲ್ಲಿ ಇಂಗ್ಲೆಂಡ್, ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. 1921ರ ಸ್ಟಾಕ್ ಹೋಮ್ ಒಲಿಂಪಿಕ್ಸ್ ನಿಂದ ಹಾಕಿ ಕೈಬಿಡಲಾಯಿತು. 1920ರ ಆಂಟ್ ವರ್ಪ್ ಕೂಟಕ್ಕೆ ಮರಳಿತಾದರೂ, ಕ್ರೀಡೆಗೆ ಅಂತಾರಾಷ್ಟ್ರೀಯ ಒಕ್ಕೂಟ ಇಲ್ಲ ಎಂಬ ಕಾರಣ ನೀಡಿ 1924ರಲ್ಲಿ ಪ್ಯಾರಿಸ್ ಕೂಟದ ಸಂಘಟಕರು ಕೈಬಿಟ್ಟರು.
ಅಂತಾರಾಷ್ಟ್ರೀಯ ಹಾಕಿ ಒಕ್ಕೂಟದ ಸ್ಥಾಪನೆಗೆ ಇದು ಕಾರಣವಾಯಿತು. 1924ರಲ್ಲಿ ಪ್ಯಾರಿಸ್ ನಲ್ಲಿ ಫ್ರಾನ್ಸ್ ನ ಪಾಲ್ ಲ್ಯೂಟೆ ಎಂಬವರು ಎಫ್ಐಎಚ್ ಸ್ಥಾಪಿಸಿದರು. ಅವರೇ ಇದರ ಪ್ರಥಮ ಅಧ್ಯಕ್ಷರು. ಇದರ ಆರು ಸಂಸ್ಥಾಪಕ ಸದಸ್ಯ ರಾಷ್ಟ್ರಗಳೆಂದರೆ, ಆಸ್ಟ್ರಿಯಾ, ಬೆಲ್ಜಿಯಂ, ಚೆಕೊಸ್ಲಾವೇಕಿಯಾ, ಫ್ರಾನ್ಸ್, ಹಂಗೆರಿ, ಸ್ಪೇನ್ ಮತ್ತು ಸ್ವಿಟ್ಜರ್ಲೆಂಡ್.

ಮಹಿಳೆಯರ ಹಾಕಿಯ ಅಂತಾರಾಷ್ಟ್ರೀಯ ಒಕ್ಕೂಟ 1927ರಲ್ಲಿ ಸ್ಥಾಪನೆಯಾಯಿತು. 1982ರಲ್ಲಿ ಪುರುಷರು ಹಾಗೂ ಮಹಿಳೆಯರ ಒಕ್ಕೂಟಗಳು ವಿಲೀನಗೊಂಡು ಅಂತಾರಾಷ್ಟ್ರೀಯ ಹಾಕಿ ಒಕ್ಕೂಟ ಸಮಗ್ರ ರೂಪ ಪಡೆಯಿತು.
ಭಾರತ 1928ರ ಆಮ್ ಸ್ಟರ್ಡಾಮ್ ಒಲಿಂಪಿಕ್ಸ್ ನಲ್ಲಿ ಎಫ್ಐಎಚ್ ಸದಸ್ಯತ್ವ ಪಡೆಯಿತು. ಭಾರತ ಒಕ್ಕೂಟದ ಮೊದಲ ಯುರೋಪೇತರ ಸದಸ್ಯ. 1964ರ ಹೊತ್ತಿಗೆ 50 ರಾಷ್ಟ್ರಗಳು ಸದಸ್ಯತ್ವ ಪಡೆದಿದ್ದವು. 1974ರಲ್ಲಿ ಸದಸ್ಯತ್ವ 71ಕ್ಕೆ ಏರಿತ್ತು. ಸದ್ಯ 5 ಖಂಡಗಳ 127 ರಾಷ್ಟ್ರಗಳು ಎಫ್ಐಎಚ್ ಸದಸ್ಯತ್ವ ಹೊಂದಿವೆ. ಇದರ ಕೇಂದ್ರ ಕಚೇರಿ ಲೌಸೇನ್ ನಲ್ಲಿದೆ.

ಭಾರತದಲ್ಲಿ:
ಹಾಕಿ ಬ್ರಿಟಿಷರ ಮೂಲಕ ಭಾರತವನ್ನು ಪ್ರವೇಶಿಸಿತು. 1985ರಲ್ಲಿ ಕೋಲ್ಕತ್ತದಲ್ಲಿ ಮೊದಲ ಕ್ಲಬ್ ಸ್ಥಾಪನೆಯಾಯಿತು. ಇದಾದ 10 ವರ್ಷಗಳಲ್ಲಿ ಬೇಯ್ಟನ್ ಕಪ್ ಮತ್ತು ಆಘಾ ಖಾನ್ ಟೂರ್ನಿಗಳು ಆರಂಭವಾದವು. 1928ರಲ್ಲಿ ಒಲಿಂಪಿಕ್ಸ್ ಪ್ರವೇಶಿಸಿದ ಭಾರತ ಮೊದಲ 5 ಪಂದ್ಯಗಳನ್ನು ಒಂದೂ ಗೋಲು ಬಿಟ್ಟುಕೊಡದೆ ಜಯಿಸಿತು. ನಂತರ 1932ರಿಂದ 1956ರವರೆಗೆ ಸತತ ಒಲಿಂಪಿಕ್ಸ್ ಗಳಲ್ಲಿ ಗೆದ್ದ ಭಾರತ 1964, 1980ರಲ್ಲೂ ಚಿನ್ನ ಗೆದ್ದಿದೆ.

ಹಾಕಿ ಇಂಡಿಯಾ:
ಭಾರತದಲ್ಲಿ ಹಾಕಿ ಆಡಳಿತದ ಉಸ್ತುವಾರಿ ಹೊತ್ತಿದ್ದ ಭಾರತೀಯ ಹಾಕಿ ಒಕ್ಕೂಟ (ಐಡಬ್ಲ್ಯುಎಚ್) ಭ್ರಷ್ಟಾಚಾರದ ಹಿನ್ನೆಲೆಯಲ್ಲಿ 2008ರಲ್ಲಿ ಬರ್ಖಾಸ್ತುಗೊಂಡ ಬಳಿಕ 2009ರಲ್ಲಿ ಪುರುಷರು ಹಾಗೂ ಮಹಿಳಾ ಹಾಕಿಯ ಏಕೀಕೃತ ಸಂಸ್ಥೆ ಹಾಕಿ ಇಂಡಿಯಾ ಸ್ಥಾಪನೆಯಾಗಿದೆ. ಇದರ ಚೊಚ್ಚಲ ಚುನಾವಣೆ 2010ರ ಫೆಬ್ರವರಿಯಲ್ಲಿ ನಡೆಯಲಿದೆ.

ಹಾಕಿ ಸಂಸ್ಕೃತಿ:
ಭಾರತದಲ್ಲಿ ಪಂಜಾಬ್ ಮತ್ತು ಕೊಡಗು ಹಾಕಿ ತೊಟ್ಟಿಲು ಎಂದೇ ಪರಿಗಣಿಸಲಾಗುತ್ತದೆ. ಈ ಭಾಗಗಳಿಂದ ಗರಿಷ್ಠ ಆಟಗಾರರು ರಾಷ್ಟ್ರ ಪ್ರತಿನಿಧಿಸಿದ್ದಾರೆ. ಕೊಡಗಿನಲ್ಲಿ ಮಕ್ಕಳು ಜನಿಸುವಾಗಲೇ ಕೈಯಲ್ಲಿ ಬಂದೂಕು ಮತ್ತು ಹಾಕಿ ಸ್ಟಿಕ್ ಹಿಡಿದಿರುತ್ತವೆ ಎಂಬ ಪ್ರತೀತಿ ಇದೆ.

ಕ್ರಿಕೆಟ್ ಗೆ ಡಾನ್ ಬ್ರಾಡ್ಮನ್ ಇರುವಂತೆ ಹಾಕಿಗೆ ಭಾರತದ ಧ್ಯಾನ್ ಚಂದ್. ಇವರು ಹಾಕಿ ವಿಶ್ವದ ಸರ್ವಶ್ರೇಷ್ಠ ಆಟಗಾರ. ಭಾರತ ಸರ್ಕಾರ ಧ್ಯಾನ್ ಚಂದ್ ಜನ್ಮದಿನವಾದ ಆಗಸ್ಟ್ 29ರಂದು ವಾರ್ಷಿಕ ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತದೆ.

ಕರ್ನಾಟಕದಲ್ಲಿ ಕರ್ನಾಟಕ ಹಾಕಿ ಸಂಸ್ಥೆ ಕ್ರಿಯಾಶೀಲವಾಗಿದೆ. ವರ್ಷಂಪ್ರತಿ ವಿವಿಧ ವಯೋಮಾನದ, ಡಿವಿಜನ್ ಟೂರ್ನಿಗಳನ್ನು ಸಂಘಟಿಸುತ್ತದೆ. ಸದ್ಯ ಕರ್ನಾಟಕದ ಅರ್ಜುನ್ ಹಾಲಪ್ಪ, ವಿಎಸ್ ವಿನಯ, ರಘುನಾಥ್ ಮೊದಲಾದವರು ಭಾರತ ತಂಡದಲ್ಲಿದ್ದಾರೆ. ಕರ್ನಾಟಕದ ಅಂಪೈರ್ ರಘು ವಿಶ್ವ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ.

ಪ್ರೀಮಿಯರ್ ಹಾಕಿ ಲೀಗ್:
ಹಾಕಿಯ ವಾಣಿಜ್ಯೀಕರಣಕ್ಕೆ ಇದು ಭಾರತದ ಕೊಡುಗೆ. ಕ್ರಿಕೆಟ್ ನ ಇಂಡಿಯನ್ ಪ್ರೀಮಿಯರ್ ಲೀಗ್ ಪರಿಕಲ್ಪನೆಗೂ ಮುನ್ನವೇ ಇದು ಜಾರಿಗೆ ಬಂದಿತ್ತು. ಫ್ರಾಂಚೈಸಿ ತಂಡಗಳ ಪರಿಕಲ್ಪನೆ, ಟೈಮ್ ಔಟ್ ಇವೆಲ್ಲವೂ ಹಾಕಿ ಜನಪ್ರಿಯಗೊಳಿಸಲು ನೆರವಾದವು.

ವಿವಿಧ ಟೂರ್ನಿಗಳು:
ಒಲಿಂಪಿಕ್ಸ್ ಅಲ್ಲದೆ 4 ವರ್ಷಗಳಿಗೊಮ್ಮೆ ಹಾಕಿ ವಿಶ್ವಕಪ್ ನಡೆಯುತ್ತಿದೆ. ಭಾರತ 2010ರಲ್ಲಿ ಪ್ರಪ್ರಥಮ ಬಾರಿ ವಿಶ್ವಕಪ್ ಆತಿಥ್ಯ ವಹಿಸಲಿದೆ. ಇದಲ್ಲದೆ ಚಾಂಪಿಯನ್ಸ್ ಟ್ರೋಫಿ, ಚಾಂಪಿಯನ್ಸ್ ಚಾಲೆಂಜ್ ಪ್ರಮುಖ ಟೂರ್ನಿಗಳು. ಅಲ್ಲದೆ, ಏಷ್ಯಾಡ್, ಅಜ್ಲಾನ್ ಷಾ ಹಾಕಿಯಂಥ ವಿವಿಧ ಖಂಡಾಂತರ ಟೂರ್ನಿಗಳು ನಡೆಯುತ್ತವೆ. ಕಾಮನ್ವೆಲ್ತ್ ಕ್ರೀಡಾಕೂಟದಲ್ಲೂ ಹಾಕಿ ಭಾಗವಾಗಿದೆ. ದ್ವಿಪಕ್ಷೀಯ ಸರಣಿಗಳು ನಿರಂತರವಾಗಿ ನಡೆಯುತ್ತಿರುತ್ತವೆ.

ಪ್ರಖ್ಯಾತ ಆಟಗಾರರು:
ಭಾರತದಲ್ಲಿ ಹಾಕಿ ಜನಪ್ರಿಯಗೊಳ್ಳುವಲ್ಲಿ ಧ್ಯಾನ್ ಚಂದ್ ಕೊಡುಗೆ ದೊಡ್ಡದು. ಪರ್ಗತ್ ಸಿಂಗ್, ಧನರಾಜ್ ಪಿಳ್ಳೆ, ಸೋಮಯ್ಯ, ಎಂಪಿ ಗಣೇಶ್, ಆಶಿಶ್ ಬಲ್ಲಾಳ್ , ದಿಲೀಪ್ ಟರ್ಕಿ ಮೊದಲಾದ ಆಟಗಾರರು ಕ್ರೀಡೆಯಲ್ಲಿ ಮಹೋನ್ನತ ಸಾಧನೆ ಮಾಡಿದ್ದಾರೆ.

ನಿಯಮಗಳು:
ಪ್ರತೀ ತಂಡ 11 ಆಟಗಾರರನ್ನು ಆಡಿಸಬಹುದು. ಆಟದ ನಡುವೆ 5 ಬಾರಿ ಆಟಗಾರರನ್ನು ಬದಲಾಯಿಸಲು ಅವಕಾಶವಿರುತ್ತದೆ.

ತಂಡದಲ್ಲಿ ಓರ್ವ ಗೋಲ್ ಕೀಪರ್ ಕಡ್ಡಾಯ. ಉಳಿದ 10 ಆಟಗಾರರನ್ನು ಮುಖ್ಯವಾಗಿ ಮುನ್ಪಡೆ (ಎದುರಾಳಿಯ ಗೋಲು ಆವರಣದಲ್ಲಿ ಆಕ್ರಮಣ ಮಾಡುವವರು), ಮಿಡ್ ಫೀಲ್ಡರ್ಸ್ (ಅಂಕಣದ ಮಧ್ಯಭಾಗದಲ್ಲಿ ಆಟ ನಿಯಂತ್ರಿಸುವವರು) ಮತ್ತು ರಕ್ಷಣಾ ಆಟಗಾರರೆಂದು (ತಮ್ಮ ಗೋಲು ಆವರಣದಲ್ಲಿ ಕಾವಲು ಕಾಯುವವರು) ವಿಂಗಡಿಸಲಾಗುತ್ತದೆ.

ಆಟಗಾರರು ಚೆಂಡನ್ನು ಕಾಲು ಅಥವಾ ದೇಹದ ಯಾವುದೇ ಭಾಗದಿಂದ ತಡೆಯುಂತಿಲ್ಲ. ಗೋಲಿ ಮಾತ್ರ ಗೋಲು ಆವರಣದಲ್ಲಿ ಕೈ, ಕಾಲು, ದೇಹದಿಂದ ತಡೆಯಬಹುದು.
ಹಾಕಿಯಲ್ಲಿ ಗೋಲನ್ನು ಮುಕ್ತ ಗೋಲು, ಪೆನಾಲ್ಟಿ ಕಾರ್ನರ್ ಮತ್ತು ಪೆನಾಲ್ಟಿ ಸ್ಟ್ರೋಕ್ ರೂಪದಲ್ಲಿ ಮೂರು ಬಗೆಯಲ್ಲಿ ಗಳಿಸಬಹುದು.
ಮುಕ್ತ ಗೋಲನ್ನು ಆಟಗಾರರು ಕೌಶಲ್ಯ ಪೂರ್ಣ ಆಟದಿಂದ ಗಳಿಸುತ್ತಾರೆ. ಆದರೆ, ಇದರಲ್ಲಿ ಆಟಗಾರ ಗೋಲನ್ನು ಎದುರಾಳಿ ಆವರಣದ ಗೋಲು ವರ್ತುಲದೊಳಗಿಂದ ಗಳಿಸಿರಬೇಕು. ಹೊರಭಾಗದಿಂದ ಹೊಡೆದ ಚೆಂಡು ಗೋಲು ಪೆಟ್ಟಿಗೆ ಪ್ರವೇಶಿಸಿದರೂ, ಗೋಲೆಂದು ಪರಿಗಣಿಸಲಾಗುವುದಿಲ್ಲ.

ಎದುರಾಳಿ ತಂಡಗಳು ಗೋಲು ಆವರಣದಲ್ಲಿ ತಪ್ಪು ಮಾಡಿದಾಗ, ನಿಯಮ ಉಲ್ಲಂಘಿಸಿದಾಗ ಪೆನಾಲ್ಟಿ ಕಾರ್ನರ್ ನೀಡಲಾಗುತ್ತದೆ. ರಕ್ಷಣಾ ಆಟಗಾರ ಚೆಂಡನ್ನು ತಡೆಯುವಾಗ ಒರಟಾಟ ಪ್ರದರ್ಶಿಸಿದರೂ, ಪೆನಾಲ್ಟಿ ಕಾರ್ನರ್ ನೀಡಲಾಗುತ್ತದೆ.

ಪೆನಾಲ್ಟಿ ಸ್ಟ್ರೋಕ್ ಗಳನ್ನು, ಆಟಗಾರ ಗೋಲು ಗಳಿಸದಂತೆ ತಡೆಯುವ ಯತ್ನದಲ್ಲಿ ರಕ್ಷಣಾ ಆಟಗಾರರು ನಿಯಮ ಉಲ್ಲಂಘಿಸಿದರೆ ಹಾಗೂ ಇನ್ನೂ ಹಲವು ಗಂಭೀರ ಪ್ರಮಾದಗಳಿಗೆ ನೀಡಲಾಗುತ್ತದೆ.
ಇದರಲ್ಲಿ ಓರ್ವ ನಿರ್ದಿಷ್ಟ ಆಟಗಾರ ಗೋಲು ಯತ್ನ ನಡೆಸುತ್ತಾನೆ. ಅದನ್ನು ಗೋಲಿ ಮಾತ್ರ ತಡೆಯಬೇಕು. ಗೋಲು ಪೆಟ್ಟಿಗೆಯ ಮುಂಭಾಗದಲ್ಲಿ 6.4ಮೀ. (7 ಗಜ) ಅಂತರದಿಂದ ಚೆಂಡು ಹೊಡೆಯಬೇಕು. ಉಳಿದೆಲ್ಲಾ ಆಟಗಾರರು ಸುಮಾರು 23ಮೀ. ದೂರದಲ್ಲಿರುತ್ತಾರೆ. ಪೆನಾಲ್ಟಿ ಸ್ಟ್ರೋಕ್ ಆಡುವ ಸಂದರ್ಭದಲ್ಲಿ ಪಂದ್ಯ ಗಡಿಯಾರ ಸ್ಥಗಿತಗೊಳಿಸಲಾಗಿರುತ್ತದೆ.