Categories
ಕನ್ನಡ ಕುವೆಂಪು ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ ರಾಷ್ಟ್ರಕವಿ ಕೃತಿ ಸಂಚಯ

ಬೊಮ್ಮನಹಳ್ಳಿಯ ಕಿಂದರಿ ಜೋಗಿ

ತುಂಗಾತೀರದ ಬಲಗಡೆಯಲ್ಲಿ
ಹಿಂದಲ್ಲಿದ್ದುದು ಬೊಮ್ಮನಹಳ್ಳಿ.
ಅಲ್ಲೇನಿಲಿಗಳ ಕಾಟವೆ ಕಾಟ,
ಅಲ್ಲಿಯ ಜನಗಳಿಗತಿಗೋಳಾಟ:
ಇಲಿಗಳು!
ಬಡಿದವು ನಾಯಿಗಳ!
ಇಲಿಗಳು!
ಕಡಿದವು ಬೆಕ್ಕುಗಳ!
ಕೆಲವನು ಕೊಂದುವು, ಕೆಲವನು ತಿಂದುವು,
ಕೆಲವನು ಬೆದರಿಸಿ ಹಿಂಬಾಲಿಸಿದವು. ೧೦

ಅಲ್ಲಿಯ ಮೂಷಿಕನಿಕರವು ಸೊಕ್ಕೆ
ಎಲ್ಲರ ಮೇಲೆಯ ಕೈಬಾಯಿಕ್ಕಿ
ಹೆದರಿಕೆಯಿಲ್ಲದೆ ಬೆದರಿಕೆಯಲ್ಲದೆ
ಕುಣಿದುವು ಯಾರನು ಲೆಕ್ಕಿಸದೆ!
ಹಾಲಿನ ಮಡಕೆಯನೊಡೆದುವು ಕೆಲವು;
ಅನ್ನದ ಗಡಿಗೆಯ ಪುಡಿಮಾಡಿದವು.
ಬಡಿಸುವ ಅಡುಗೆಯ ಭಟ್ಟನ ತಡೆದು
ಕೈಯಲ್ಲಿರುವಾ ಸಟ್ಟುಗವ
ಭೀತಿಯೆ ಇಲ್ಲದೆ ನೆಕ್ಕಿದುವು;
ಈ ಪರಿ ತಿನ್ನುತ ಸೊಕ್ಕಿದುವು; ೨೦
ಧಾನ್ಯವನೆಲ್ಲಿಯ ಬಿಕ್ಕಿದುವು!

ಟೋಪಿಯ ಒಳಗಡೆ ಗೂಡನು ಮಾಡಿ
ಹೆತ್ತುವು ಮರಿಗಳನು;
ಪೇಟದ ಒಳಗಡೆ ಆಟವನಾಡಿ
ಕಿತ್ತುವು ಸರಿಗೆಯನು!
ಗೋಡೆಗೆ ತಗುಲಿಸಿದಂಗಿಯ ಜೇಬನು
ದಿನವೂ ಜಪ್ತಿಯ ಮಾಡಿದುವು;
ಮಲಗಿರೆ ಹಾಸಿಗೆಯನ್ನೇ ಹರಿದುವು,
ಕೇಶಚ್ಛೇದವ ಮಾಡಿದುವು;
ಬೆಣ್ಣೆಯ ಕದ್ದುವು, ಬೆಲ್ಲವ ಮೆದ್ದುವು ೩೦
ಎಣ್ಣೆಗೆ ಬಿದ್ದುವು ದಿನದಿನವು;
ಗೌಡರು ಮಾತಾಡುತ ಕುಳಿತಲ್ಲಿ
ಬಹಳ ಗಲಾಟೆಯ ಮಾಡಿದುವು.
ಗರತಿಯರಾಡುವ ಹರಟೆಗೆ ತುಂಬಾ
ತೊಂದರೆಯಿತ್ತುವು ಗಜಿಬಿಜಿಮಾಡಿ.
ಊರಿನ ಮಕ್ಕಳ ಕೈಲಿದ್ದ
ತಿಂಡಿಯ ಕಸಿದುವು ಧೈರ್ಯದಲ್ಲಿ!

ಇಲಿಗಳ ಕೊಲ್ಲಲು ಊರಿನ ಜನರು
ತುಂಬಾ ಯತ್ನವ ಮಾಡಿದರು:
ಕಡಿದರೆ ಮುರಿದವು ಕತ್ತಿಗಳೆಲ್ಲ, ೪೦
ಹೊಡೆದರೆ ಮುರಿದುವು ಕೋಲುಗಳು;
ಇಲಿಗಳ ಬೇಟೆಯನಾಡುತಲಿರಲು
ಮುರಿದುವು ತಿಮ್ಮನ ಕಾಲುಗಳು!
ಬೇಟೆಯನಾಡಲು ಅಡುಗೆಯ ಮನೆಯಲಿ
ಬಿದ್ದಳು ಬಳೆಯೊಡೆದಚ್ಚಮ್ಮ!
ಭೃಂಗಾಮಲಕದ ತೈಲವ ಹಚ್ಚಿದ
ಶೇಷಕ್ಕನ ನುಣ್ಣನೆ ಫಣಿವೇಣಿ
ಬೆಳಗಾಗೇಳುತ ಕನ್ನಡಿ ನೋಡೆ
ಇಲಿಗಳಿಗಾಗಿತ್ತೂಟದ ಫೇಣಿ!
ನುಗ್ಗುತ ಕೊಟ್ಟಿಗೆಗಿರುಳಿನ ಹೊತ್ತು ೫೦
ಉಂಡುವು, ತಿಂದುವು ದನಗಳ ಕೆಚ್ಚಲ;
ಹರಿದುವು ಕರುಗಳ ಬಾಲಗಳ!
ಸಿದ್ದೋಜೈಗಳು ಶಾಲೆಗೆ ಹೋಗಿ
ಪಾಠವ ಬೋಧಿಸುತ್ತಿದ್ದಾಗ
ಅಂಗಿಯ ಜೇಬಿಂ ಹೆಳವಿಲಿಯೊಂದು
ಚಂಗನೆ ನೆಗೆಯಿತು ತೂತನು ಮಾಡಿ.
ಲೇವಡಿ ಎಬ್ಬಿಸೆ ಬಾಲಕರೆಲ್ಲ
ಗುರುಗಳಿಗಾಯಿತು ಬಲು ಗೇಲಿ!

ಹರಿಯಲು ರೇಶ್ಮೆಯ ರವಕೆಯ ಕಣಗಳ,
ಕೊಚ್ಚಲು ಕಾಗಿನ ಸೀರೆಯನು, ೬೦
ಮುಂಗಾಣದೆ ಜಟ್ಟಕ್ಕನು ಹೋಗಿ
ಬತ್ತಿದ ಕೆರೆಯನು ಹಾರಿದಳು;
ಸತ್ತೇ ಎನ್ನುತ ಚೀರಿದಳು!
ಬೆಳಗಿನ ಜಾವದಿ ಏಳುತ ನೋಡಲು
ಭಟ್ಟಾಶಾಸ್ತ್ರಿಯ ಜನಿವಾರ
ಇಲಿಗಳಿಗಾಗಿತ್ತಾಹಾರ!
ಒಂದಿಲಿ ಸತ್ತರೆ ಎರಡಿಲಿಯಾದುವು,
ಕೊಂದರೆ ಒಂದನು ಎರಡೈತಂದುವು!
ಇಲಿಗಳ ಕಾಟವ ಸಹಿಸಲು ಆರದೆ
ಊರಿನ ಜನರೆಲ್ಲರು ಒಂದಾಗಿ ೭೦
ಮೂಷಿಕ ಯಾಗವ ಮಾಡಿದರು,
ದೇವರ ಪೂಜೆಯ ಮಾಡಿದರು;
ಹರಕೆಯ ಹೊತ್ತರು, ಕಾಣಿಕೆ ತೆತ್ತರು,
ಮಂತ್ರವ ದಿನದಿನ ಹೇಳಿದರು!
ನಿಷ್ಫಲವಾದುವು ಮಂತ್ರಗಳೆಲ್ಲ,
ಬಾಯ್‌ ಬಾಯ್‌ ಕಳೆದರು ಶಾಸ್ತ್ರಿಗಳೆಲ್ಲ,
ಕಣ್‌ ಕಣ್‌ ಬಿಟ್ಟರು ಪಂಡಿತರೆಲ್ಲ,
ಕಂಬನಿಗೆರೆದರು ಜನರೆಲ್ಲ!

ಮುಂದಿನ ಮಾರ್ಗವ ಕಾಣದೆ ಜನರು
ಗೌಡನ ಬಳಿ ಹೋದರು ಗುಂಪಾಗಿ: ೮೦
ಗೌಡನು ಮನೆಯಿಂದೀಚೆಗೆ ಬಂದನು
ಕಂಗಳನರಳಿಸಿ ಬೆರಗಾಗಿ!
ಕೂಗಿದರೆಲ್ಲರು ಗೌಡನ ಕುರಿತು;
ಗೌಡನು ನಿಂತನು ಮೈಮರೆತು:
“ಥೂ! ಛೀ! ಗೌಡನೆ ನೀ ಹಾಳಾಗ!
ಮಾರಿಯ ಇಲಿಗಳ ಕೊಲ್ಲಿಸೊ ಬೇಗ!
ತೆರಿಗೆಯ ಮಾತ್ರಾ ಕಾಸೂ ಬಿಡದೆ
ಹೊಡೆದೂ ಬೈದೂ ಎತ್ತವೆ ನೀನು.

ನಿನ್ನ ರುಮಾಲಿನ ಜರಿ ಹಾಳಾಗ,
ನಿನ್ನೀ ಗಂಟಲು ಕಟ್ಟೇ ಹೋಗ! ೯೦
ಇಲಿಗಳ ಸಹಿಸೆವು ಕೊಲ್ಲಿಸೊ ಬೇಗ!
ಬೆಂಕಿಯನಿಡುವೆವು ನಿನ್ನೀ ಮನೆಗೆ,
ಕೊಲ್ಲಿಸದಿರೆ ಬರೆಯಿಡುವೆವು ನಿನಗೆ!
ಹೆಸರಿಗೆ ಮಾತ್ರಾ ಗೌಡನೆ ನೀನು?
ಮಾನವೆ ಇಲ್ಲವೆ ಛೀ ನಿನಗೇನು!”

ಈ ಪರಿ ಬೈದರು ಜನರೆಲ್ಲ;
ಗೌಡನು ಬಾಯೇ ಬಿಡಲಿಲ್ಲ!
ಜನರೆಲ್ಲಾ ಹಿಂತಿರುಗಿದ ಮೇಲೆ
ಗೌಡನು ಓಡಿದ ಚಾವಡಿಗೆ:
ಕರೆದನು ಊರಿನ ತಲೆಯಾಳುಗಳ; ೧೦೦
ಕಟ್ಟೆಯೊಳಲ್ಲಿಯೆ ಸಭೆ ಸೇರಿದರು.
ದಿನವೆಲ್ಲಾ ಚರ್ಚೆಯ ಮಾಡಿದರು;
ದಿನವೆಲ್ಲಾ ವಾದವ ಹೂಡಿದರು.
ಹೊರಟವು ಯುಕ್ತಿಯ ಮಾತುಗಳು,
ಮಾತೊಳು ಮನೆಯನು ಕಟ್ಟಿದರು.
ಅಂತೂ ಇಲಿಗಳ ಕೊಲ್ಲುವ ಬಗೆಯು
ಒಬ್ಬರಿಗಾದರು ಹೊಳೆಯಲೆ ಇಲ್ಲ.
ಗೌಡನು ತಲೆ ತಲೆ ಹೊಡಕೊಂಡ:
ಕಡೆಗಾ ರಂಗೇಗೌಡನು ಊರಿಗೆ ೧೧೦
ಬೆಂಕಿಯ ಹಾಕುವ ಸಲಹೆಯ ಕೊಟ್ಟ.
ಊರನೆ ಖಂಡಿತ ಬಿಡಬೇಕೆಂದು
ರಾಮಾಶಾಸ್ತ್ರಿಗಳಾಡಿದರು.
ತಿಪ್ಪಂಭಟ್ಟರು ಚಿಂತಿಸಿ ಚಿಂತಿಸಿ
‘ದೇವರು ಮಾಡಿದುದಾಗಲಿ’ ಎಂದರು!
ಸಲಹೆಗಳೆಲ್ಲಾ ಮುಗಿದಾ ಮೇಲೆ
ಗೌಡನು ಜನರನು ಕುರಿತೆಂತೆಂದ:
‘ಇಲಿಗಳ ಕೊಲ್ಲಲು ದಾರಿಯನಾರು
ತೋರಿಸಿ ಕೊಡುವರೊ ಅವರಿಗೆ ಆರು
ಸಾವಿರ ನಾಣ್ಯಗಳೀಯುವೆ ನಾನು; ೧೨೦
ತಿಳಿದವರಿದ್ದರೆ ಬನ್ನಿರಿ! ಏನು?’

ಒಬ್ಬರ ಮೊಗವನು ಒಬ್ಬರು ನೋಡಿ
ಮಾತಾಡದೆ ಇದ್ದರು ಜನರೆಲ್ಲ!
ಗೌಡನು ಕೂಗಿದ ಮೊದಲನೆ ಸಾರಿ;
ಯಾರೂ ಮುಂದಕೆ ಬರಲೇ ಇಲ್ಲ.
ನಾಣ್ಯಗಳೆಂಬಾ ಮಾತನು ಕೇಳಿ
ಮಂಗೈಶೆಟ್ಟರು ಕೋಪವ ತಾಳಿ
ಬ್ರಹ್ಮನ ರಾಣಿಯ ದೂರಿದರು:
ಮೆದುಳನು ನೀಡದೆ ತಲೆಯನು ಮಾಡಿದ
ಕಮಲಜನನು ಬೈದಾಡಿದರು! ೧೩೦
ಸುತ್ತಲು ನೋಡುತ ಗೌಡನು ಮತ್ತೆ
ಎರಡನೆ ಸಾರಿಯು ಕೂಗಿದನು.
ಆಸೆಯನೆಲ್ಲವ ನೀಗಿದನು!
ಕೂಗಿದನಾತನು ಮೂರನೆ ಸಾರಿ;
ಮಾತೇ ಇಲ್ಲ, ಎಲ್ಲಿಯ ಮೌನ!
ಮುಂದಲೆ ಹಿಂದಲೆ ಎರಡನು ಉಜ್ಜುತ,
ಕಂಗಳ ಕೆರಳಿಸಿ, ಹಲ್ಲನು ಕಡಿಯುತ,
ಶೆಟ್ಟರು ಬಲು ಪೇಚಾಡಿದರು;
ಆವೇಶದ ದಯಪಾಲಿಸು ಎನ್ನುತ
ವಾಣಿಯ ಪರಿಪರಿ ಬೇಡಿದರು ೧೪೦

ಏನಿದು ಗುಜುಗುಜು ಗುಂಪಿನಲಿ?
ನೋಡಿದರೇನಾಶ್ಚರ್ಯವನು?
ಆಲಿಸಿ! ದೂರದ ಕಿಂದರಿ ನಾದ!
ಬರುವನು ಯಾರೋ ಕಿಂದರಿ ಜೋಗಿ:
ಹತ್ತಿರ ಹತ್ತಿರಕವನೈತಂದು;
ಬಂದಿತು ಜನರಿಗೆ ಒಂದಾನಂದ!
ನೋಡಿರಿ! ನೋಡಿರಿ, ಕಿಂದರಿ ಜೋಗಿ:
ನೋಡಿದರಲ್ಲರು ಬೆರಗಾಗಿ!
ಬಂದನು ಬಂದನು ಕಿಂದರಿ ಜೋಗಿ!
ಕೆದರಿದ ಕೂದಲ ಗಡ್ಡದ ಜೋಗಿ! ೧೫೦
ನಾನಾ ಬಣ್ಣದ ಬಟ್ಟೆಯ  ಜೋಗಿ!
ಕೈಯಲಿ ಕಿಂದರಿ ಹಿಡಿದಾ ಜೋಗಿ!
ಕುದುರೆಯ ಗೊರಸಿನ ಅಡಿಗಳ ಜೋಗಿ!
ಕಡವೆಯ ಕೊಂಬಿನ ತಲೆಯಾ ಜೋಗಿ!
ಆನೆಯ ಕಿವಿಗಳ  ಕಿಂದರಿ ಜೋಗಿ!
ಹಂದಿಯ ದಾಡೆಯ ಕೋರೆಯ ಜೋಗಿ!
ಮಂಗನ ಮೂತಿಯ ಮುಡಿದಿಹ ಜೋಗಿ!
ಬಂದನು ಬಂದನು ಕಿಂದರಿ ಜೋಗಿ
ಹಾರುತ ತೇಲುತಲಿಳಿದನು ಜೋಗಿ!
ಕೈಕೈ ಮುಗಿಯುತ ಕಣ್ದೆರದು ೧೬೦
ಹಿಂದಕೆ ಸರಿಯುತ ಜನರೆಲ್ಲ
ದಾರಿಯ ಬಿಟ್ಟರು ಕಿಂದರಿ ಜೋಗಿಗೆ.
ಜೋಗಿಯು ಹತ್ತಿದ ಗೌಡನ ಕಟ್ಟೆಯ;
ಗೌಡನ ಹೃದಯವು ಬಾಯ್ಗೇ ಬಂದಿತು,
ಗಡಗಡ ನಡುಗಿದನು!
ತೊದಲುತ ಬೆದರುತ ಕಂಪಿತಕಂಠದಿ
ನೀನಾರೆಂದನು ಜೋಗಿಯ ಕುರಿತು.
ಅದಕಾ ಜೋಗಿಯು ಇಂತೆಂದ;

ಕೇಳಿದರೆಲ್ಲರು ಬಾಯ್ಬಿಟ್ಟು:
“ಹಿಮಗಿರಿಯಲ್ಲಿಹ ಜೋಗಿಯು ನಾನು; ೧೭೦
ಪರಮೇಶ್ವರನಿಗೆ ಗೆಳೆಯನು ನಾನು;
ನಿಮ್ಮೀ ಗೋಳನು ಕೇಳಿದ ಶಿವನು
ನನ್ನನ್ನಿಲ್ಲಿಗೆ ಕಳುಹಿದನು.
ಇಲಿಗಳನೆಲ್ಲಾ ಕೊಂದರೆ ಆರು
ಸಾವಿರ ನಾಣ್ಯಗಳಿವೆಯೇನು?”

ಉಬ್ಬಿತು, ಉಕ್ಕಿತು ಗೌಡನ ಸಂತಸ;
ಶಹಭಾಸೆಂದರು ಜನರೆಲ್ಲ.
ಗೌಡನು ಜೋಗಿಯ ಕುರಿತಿಂತೆಂದ;
ಜನರದನೆಲ್ಲಾ ಕೇಳಿದರು:
“ಬೇಕಾದುದ ನಾ ಕೊಡುವೆನು ಜೋಗಿ; ೧೮೦
ಆರೇಕಿನ್ನೆರಡಾದರು ಕೊಡುವೆನು.
ಬೇಕಾದುದನೆಲ್ಲವ ನೀ ಕೇಳು;
ಊರೇ ನಿನ್ನದು! ನಾ ನಿನ್ನಾಳು!
ಆದರೆ ಒಂದೇ ಸಂದೇಹ —
ಇಲಿಗಳನೋಡಿಪ ಶಕ್ತಿಯು ನಿನಗೆ
ನಿಜವಾಗಿರುವುದು ಹೌದಷ್ಟೆ?”
ಜೋಗಿಯು ಹಿಂತಿರುಗೆಲ್ಲರ ನೋಡಿ,
ಕೈಯಾ ಕಿಂದರಿಯನು ಸರಿಮಾಡಿ,
ಗಡ್ಡವ ನೀವುತ ದುರುದುರು ನೋಡಿ,
ಗೌಡನ ಕಡೆ ತಿರುಗಿಂತೆಂದ: ೧೯೦
“ಕೃತಯುಗದೊಳು ಕೈಲಾಸದೊಳು
ಇಲಿಗಳ ಕಾಟವು ಮಿತಿಮೀರೆ,
ಇಲಿಗಳ ಕೊಲ್ಲುವೆನೆಂಬಾ ರೋಷ
ಏರಲು, ಭೈರವನಾದನು ಈಶ!
ಆದರು ಆಗದೆ ಮೂಷಿಕನಾಶ
ನಂದಿಯ ಕಳುಹಿದನೆನ್ನೆಡೆಗೆ:
ಕೊಂದೆನು ಅವುಗಳ ನಾ ಕಡೆಗೆ!
ಕಾಮನ ದಹಿಸಿದ ಹಣೆಗಣ್ಣು
ಮೂಷಿಕರೋಮವ ಸುಡಲಿಲ್ಲ!
ಬೊಮ್ಮನಹಳ್ಳಿಯ ಜನರೇ ಕೇಳಿ, ೨೦೦
ಮುಂದಿನ ಕಥೆಯನು ಮುಗಿಸುವೆ ಹೇಳಿ:
ದ್ವಾಪರಯುಗದೊಳು ವೈಕುಂಠದೊಳು
ಮೂಷಿಕ ಸೈನ್ಯಕು ಜಯವಿಜಯರಿಗೂ

 

ಭೀಕರ ಕಾಳಗ ಜರುಗಿತು, ಕಡೆಗೆ

ಆ ಜಯವಿಜಯರು ವಿಷ್ಣುವಿನೆಡೆಗೆ
ಓಡುತ ಹೋದರು ಮೊರೆಯಿಡಲು,
ಮೂಷಿಕ ಸೈನ್ಯಕೆ ಮೈಸೋತು!
ಕಡೆಗಾ ವಿಷ್ಣುವೆ ಚಕ್ರವ ಹಿಡಿದು
ಮೂಷಿಕಕುಲವನೆ ಕೊಲ್ಲುವೆನೆಂದ
ಕದನವನಾಡಲು ಇಲಿಗಳ ಕೂಡೆ ೨೦೦
ಮೂರ್ಛೆಗೆ ಸಂದನು ಬಲುಬಳಲಿ!
ವಿಷ್ಣುವೆ ಸೋತನು ಕದನದಲಿ!
ಪೀತಾಂಬರವನು ಹರಿದುವು ಕೆಲವು;
ಚಕ್ರದ ಹಲ್ಲನು ಮುರಿದುವು ಕೆಲವು!
ಕೌಸ್ತುಭರತ್ನವನಪರಹರಿಸಿದುವು!
ಶಂಖವ ಭೂಂ ಭೂಂ ಊದಿದವು!
ಗದೆಯನ್ನೆಳೆದು ಬಿಸಾಡಿದುವು!
ರಾಕ್ಷಸಕೋಟೆಯ ಕೊಂದಾ ಚಕ್ರವು
ಬರಿದಾಯಿತು ಇಲಿಗಳ ಮುಂದೆ.
ಕಡೆಗೆನ್ನನು ಕರೆಕಳುಹಿದನು, ೨೨೦
ಮೂಷಿಕನಾಶವ ಮಾಡಿದೆನು!
“ಕಿಂದರಿ ಜೋಗಿಯೆ ನಿಲ್ಲಿಸು, ಸಾಕು;
ನೀ ಗಟ್ಟಿಗನೆಂಬುದು ಗೊತ್ತಾಯ್ತು!
ನಿನ್ನ ಪರಾಕ್ರಮಕಂತ್ಯವೆ ಇಲ್ಲ;
ಗೆಳೆಯರು ವಿಷ್ಣುಮಹೇಶ್ವರರೆಲ್ಲ,
ನಮ್ಮೂರಿಲಿಗಳ ಸಂಹರಿಸು;
ಬೇಕಾದುದ ನಾವೀಯುವೆವು!” —
ಎಂದನು ಗೌಡನು ಸಂತಸದಿಂದ;
ಜನತತಿಗಾದುದು ಅತ್ಯಾನಂದ!

ಮರುಮಾತಾಡದೆ ಕಿಂದರ ಜೊಗಿ ೨೩೦
ಕಟ್ಟೆಯನಿಳಿದನು ಬೀದಿಗೆ ಹೋಗಿ.
ಗಡ್ಡವ ನೀವುತ ಸುತ್ತಲು ನೋಡಿ,
ಮಂತ್ರವ ಬಾಯಲಿ ಮಣಮಣ ಹಾಡಿ,
ಕಿಂದರಿ ಬಾರಿಸತೊಡಗಿದನು;
ಜಗವನು ಮೋಹಿಸಿತಾ ನಾದ!
ಏನಿದು? ಏನಿದು? ಗಜಿಬಿಜಿ ಎಲ್ಲಿ?
ಊರನೆ ಮುಳುಗಿಪ ನಾದವಿದಲ್ಲಿ?
ಇಲಿಗಳು! ಇಲಿಗಳು! ಇಲಿಗಳ ಹಿಂಡು!
ಬಳಬಳ ಬಂದುವು ಇಲಿಗಳ ದಂಡು!
ಅನ್ನದ ಮಡಕೆಯನಗಲಿದುವು! ೨೪೦
ಟೋಪಿಯ ಗೂಡನು ತ್ಯಜಿಸಿದುವು!
ಬಂದುವು ಅಂಗಿಯ ಜೇಬನು ಬಿಟ್ಟು,
ಮಕ್ಕಳ ಕಾಲಿನ ಚೀಲವ ಬಿಟ್ಟು.
ಹಾರುತ ಬಂದುವು, ಓಡುತ ಬಂದುವು,
ನೆಗಯುತ ಬಂದುವು, ಕುಣಿಯುತ ಬಂದುವು,
ಜೋಗಿಯ ಬಾರಿಸೆ ಕಿಂದರಿಯ!

ಸಣ್ಣಿಲಿ, ದೊಡ್ಡಿಲಿ, ಮೂಗಿಲಿ, ಸುಂಡಿಲಿ,
ಅಣ್ಣಿಲಿ, ತಮ್ಮಿಲಿ, ಅವ್ವಿಲಿ, ಅಪ್ಪಿಲಿ,
ಮಾವಿಲಿ, ಬಾವಿಲಿ, ಅಕ್ಕಿಲಿ, ತಂಗಿಲಿ,
ಗಂಡಿಲಿ, ಹೆಣ್ಣಿಲಿ, ಮುದುಕಿಲಿ, ಹುಡುಗಿಲಿ, ೨೫೦
ಎಲ್ಲಾ ಬಂದುವು ಓಡೋಡಿ,
ಜೋಗಿಯು ಬಾರಿಸೆ ಕಿಂದರಿಯ!
ಬಂದುವು ನಾನಾ ಬಣ್ಣದ ಇಲಿಗಳು,
ಕೆಂಪಿನ ಇಲಿಗಳು, ಹಳದಿಯ ಇಲಿಗಳು,
ಬೆಳ್ಳಿಲಿ, ಕರಿಯಲಿ, ಗಿರಿಯಲಿ, ಹೊಲದಿಲಿ,
ಕುಂಕುಮರಾಗದ, ಚಂದನರಾಗದ,

ಹಸುರಿನ ಬಣ್ಣದ, ಪಚ್ಚೆಯ ವರ್ಣದ,
ಸಂಜೆಯ ರಾಗದ, ಗಗನದ ರಾಗದ,
ನಾನಾವರ್ಣದ ಇಲಿಗಳು ಬಂದುವು
ಕುಣಿಯುತ ನಲಿಯುತ ಸಂತಸದಿ ೨೬೦
ಜೋಗಿಯು ಬಾರಿಸೆ ಕಿಂದರಿಯ!
ನೋಡಿರಿ! ಕಾಣಿರಿ! ಬರುತಿಹವಿನ್ನೂ!
ಅಟ್ಟದ ಮೇಲಿಂ ಬರುವುವು ಕೆಲವು!
ಕಣಜದ ಕಡೆಯಿಂ ಬರುವುವು ಕಲವು!
ಓಹೋ! ಬಂದುವು ಹಿಂಡ್ಹಿಂಡಾಗಿ!
ಕುಂಟಿಲಿ, ಕಿವುಡಿಲಿ, ಹೆಳವಿಲಿ, ಮೂಗಿಲಿ,
ಚೀ! ಪೀ! ಎನ್ನುತ ಕೂಗುತಲೋಡಿ
ಗಹಗಹಿಸುತ ನೆರೆ ನಲಿನಲಿದಾಡಿ
ಬಂದಿತು ಮೂಷಿಕಸಂಕುಲವು
ಜೋಗಿಯು ಬಾರಿಸೆ ಕಿಂದರಿಯ! ೨೭೦

ಬೊಮ್ಮನಹಳ್ಳಿಯ ಕಿಂದರಿ ಜೋಗಿ
ಹೊರಟನು ತುಂಗಾನದಿಯೆಡೆಗಾಗಿ.
ಕಿಂದರಿ ನಾದವು ಗಗನಕ್ಕೇರಿತು,
ಇಲಿಗಳನ್ನೆಲ್ಲಾ ಮನಮೋಹಿಸಿತು |
ಕಿಂದರಿ ಜೋಗಿಯ ಹಿಂಬಾಲಿಸಿದರು
ಜನಗಳು ನೋಡಲು ಕೌತುಕವ;
ಜೋಗಿಯು ನಡೆದನು, ಇಲಿಗಳು ನಡೆದುವು,
ಸೇರಿದರೆಲ್ಲರು ನದಿಯೆಡೆಯ;
ಹೊಳೆಯಾ ಮರಳಿನ ಗುಡ್ಡೆಯ ತುಂಬಾ
ನೋಡಿದರೆಲ್ಲಿಯು ಇಲಿಯಿಲಿ ಗುಂಪೇ | ೨೮೦

ಉಸಿರಾಡದೆ ನಿಂತರು ಜನರೆಲ್ಲಾ
ಮುಂದೇನಾಗುವುದೆಂದಲ್ಲಿ:
ದಿವಿಜರು ಕವಿದರು ಗಗನದಲಿ,
ಹೂಮಳೆ ಕರೆದರು ಹರುಷದಲಿ;
ದುಂದುಭಿನಾದವ ಮಾಡಿದರು;
ಕಾಣದ ಬೆರಗನು ನೋಡಿದರು;
ಸುತ್ತಲು ನೋಡಿದ ಕಿಂದರಿ ಜೋಗಿ,
ನಡೆದನು ಹೊಳೆಯಾ ನೀರಿನ ಮೇಲೆ!
ಸೇರಿದ ಜನರೆಲ್ಲರು ಬೆರಗಾಗಿ
‘ಜಯಜಯ ಜೋಗೀ!’ ಎಂದರು ಕೂಗಿ! ೨೯೦
ಇಲಿಗಳು ಒಂದರ ಮೇಲೊಂದು
ಹಿಂಬಾಲಿಸಿದುವು ಜೋಗಿಯನು;
ಬುಳುಬುಳು ನೀರೊಳು ಮುಳುಗಿದುವೆಲ್ಲಾ
ಹೆಣವಾಗಲ್ಲಿಯೆ ತೇಲಿದುವು.
ಎಲ್ಲಾ ಮುಳುಗಿದುವೆಂದೆನೆ, ಅಲ್ಲ:
ರಾವಣನಂದದ ಮೂಷಿಕ ಗಡವ
ದೃಢವಾಗೀಜುತ ಸೇರಿತು ದಡವ!

೧೦

ಆಗದು ಜನರಿಗೆ ಈ ಪರಿ ನುಡಿಯಿತು
ಕಿಂದರಿ ನಾದದ ಅನುಭವವ:
“ಕಿಂದರಿ ಬಾರಿಸಿದಾಗಲೆ ಎಲ್ಲಿಯು ೩೦೦
ಹೋಳಿಗೆವಾಸನೆ ತುಂಬಿದುದು;
ಯಾರೋ ಹೋಳಿಗೆ ಮಾಡುವರೆಂದು
ಗೂಡನು ಬಿಟ್ಟೆವು ಹೊರಗಡೆ ಬಂದು.
ನೋಡಲು ಹಲ್ವದ ರಾಶಿಯ ಕಂಡೆವು;
ವಿಧವಿಧ ತಿಂಡಿಗಳೆಲ್ಲಾ ಜೋಗಿಯ
ಸುತ್ತಲು ಮೆರವುದ ನೋಡಿದೆವು!

ಬಲಗಡೆ ದೊಡ್ಡ ಮಿಠಾಯಿಯ ರಾಶಿ,
ಎಡಗಡೆ ಬೇಣ್ಣೆಯ ಮುದ್ದೆಯ ರಾಶಿ,
ತಲೆಯೊಳು ಸಕ್ಕರೆ, ಕೈಯೊಳು ಬೆಲ್ಲ;
ಬನ್ನಿರಿ, ಬನ್ನಿರಿ, ಎಂದುವು ಎಲ್ಲ! ೩೧೦
ಹಿಂಬಾಲಿಸಿದೆವು ನಾವುಗಳು
ತಿಂಡಿಯ ತಿನ್ನುವ ಛಲದಿಂದ;
ಕಡೆಗೆಲ್ಲವು ಬರಿ ಬಯಲಾಯ್ತು,
ತಿಂಡೆಯೆ ಹರಿಯುವ ಹೊಳೆಯಾಯ್ತು!”
ಜನರೆಲ್ಲರು ಮಾಯೆಗೆ ಬೆರಗಾಗಿ
‘ಜಯಜಯ ಜೋಗೀ!’ ಎಂದರು ಕೂಗಿ!
ಬಿಳಿದಾಯಿತು ಗೌಡನ ಮುಖವೊಂದು:
ಹಣ ಕೊಡಬೇಕಾಯ್ತಲ್ಲಾ ಎಂದು!

೧೧

ಕಿಂದರಿ ಜೋಗಿಯು ಹಿಂದಕೆ ಬಂದ,
“ಗೌಡನೆ, ನಾಣ್ಯಗಳನು ಕೊಡು” ಎಂದ. ೩೨೦
ಗೌಡನು ನೋಡಿದ ಬೆರಗಾಗಿ!
“ಸಾವಿರ ಆರೂ” ಎಂದನು ಜೋಗಿ!
ಗೌಡನು ನಿಂತನು ತಲೆದೂಗಿ!
“ಕಿಂದರಿ ಜೋಗಿಯೆ ಹೇಳುವೆ ಕೇಳು,
ಸಾವಿರ ಆರನು ನಾ ಕೊಡಲಾರೆನು;
ನೀ ಮಾಡಿದ ಕೆಲಸವು ಹೆಚ್ಚಲ್ಲ.
ಸುಮ್ಮನೆ ಕಿಂದರಿ ಬಾರಿಸಿದೆ.
ಇಲಿಗಳ ಹೊತ್ತೆಯ ನೀನೇನು?
ಅವುಗಳು ತಮ್ಮಷ್ಟಕೆ ತಾವೇ
ಬಿದ್ದುವು ಹೊಳೆಯಲಿ ಮುಳುಗಿದುವು! ೩೩೦
ಕೊಡುವೆನು ನೀ ಪಟ್ಟಿಹ ಶ್ರಮಕಾಗಿ
ಕಾಸೈದಾರನು ತೆದುಕೊ, ಜೋಗಿ;
ಪುರಿಗಡಲೆಯ ಕೊಂಡುಕೊ ಹೋಗಿ!”

ಈ ಪರಿ ನುಡಿಯಲು ಗೌಡನು, ಜೋಗಿಯ
ಕಂಗಳ ಕೆರಳಿಸುತಿಂತೆಂದ:
“ಆಡಿದ ಭಾಷೆಯ ತಪ್ಪುವೆಯ?
ಸಾವಿರ ಆರನು ಕೊಡದಿರೆ ನೀನು
ಮತ್ತೀ ಕಿಂದರಿ ಬಾರಿಸುವೆ!
ನಿಮ್ಮೀ ಹಳ್ಳಿಯನಾರಿಸುವೆ!”

“ಸಾವಿರವಾರಲು ಕೊಡುವರದಾರು? ೩೪೦
ಅಪ್ಪನ ಗಂಟೇ? ಹೋಗೋ, ಜೋಗಿ!
ನೀ ಮಾಡುವುದೇನನು ನೋಡುವೆನು:
ಮಾತಾಡದೆ ತೊಲಗಿಲ್ಲಿಂದ!
ಹೆಚ್ಚಿಗೆ ಮಾತೇನಾದರು ನುಡಿದರೆ
ಕಿಂದರಿಯೊಡೆಸುವೆ; ಗಡ್ಡವ ಸುಡಿಸುವೆ,
ನಿನ್ನೀ ತಲೆಯನು ಬೋಳಿಸುವೆ.
ಕಿಂದರಿತಂತಿಯು ಹರಿಯುವವರೆಗೂ
ಬಾರಿಸು; ಬೇಡೆಂದವರಾರು?
ಬಲ್ಲೆಯ ನಾನಾರೆಂಬುದನು?
ಊರ ಪಟೇಲ, ಹಳ್ಳಿಗೆ ಗೌಡ! ೩೫೦
ನಡೆ, ನಡೆ, ಮರುಮಾತಾಡದಿರು!”

೧೨

ಗೌಡನು ನುಡಿಯನು ಕೇಳಿದ ಜೋಗಿ
ಕಿಂದರಿ ಬಾರಿಸತೊಡಗಿದನು.
ನಾದವು ಹಬ್ಬಿತು ಊರೊಳಗೆಲ್ಲ,
ಕರೆಯಿತು ಊರಿನ ಹುಡುಗರನೆಲ್ಲ!
ಓಡುತ ಬಂದರು ಬಾಲಕರು
ಕೇಳದೆ ಹಿರಿಯರ ಮಾತುಗಳ.
ಬೊಮ್ಮನಹಳ್ಳಿಯ ಕಿಂದರಿ ಜೋಗಿ
ಕಿಂದರಿ ಬಾರಿಸಿದನು ಇಂಪಾಗಿ.


‘ಟಿಂಗ್‌ಟಿಂಗ್‌! ಟಿಂಗ್‌ಟಿಂಗ್‌!’ ನಾದವ ಕೇಳಿ ೩೬೦
ಚಂಗ್‌ಚಂಗ್‌ ನೆಗೆದರು ಬಾಲಕರೋಡಿ.
ಕಿಂದರಿ ಜೋಗಿಯು ಹೊರಟನು ಮುಂದೆ,
ಬಾಲಕರೆಲ್ಲರು ಹರಿದರು ಹಿಂದೆ!

ಊರಿನ ಜನರೆಲ್ಲರು ಭಯದಿಂದ
ಎಂದರು ‘ಮಕ್ಕಳ ಗೌಡನೆ ಕೊಂದ;
ಹಾಳಾದೆವು ಗೌಡನ ದೆಸೆಯಿಂದ.’
ಗೌಡನು ಕೂಗಿದ ಹೆದರಿಕೆಯಿಂದ,
ಜೋಗೀ ಜೋಗೀ ಹಿಂತಿರುಗೆಂದ.
ಕಿಂದರಿ ಜೋಗಿಯು ನಡೆದನು ಮುಂದೆ,
ಮಕ್ಕಳು ಓಡುತ ಹೋದರು ಹಿಂದೆ. ೩೭೦
ಕುಂಟರು ಭರದಿಂದೋಡಿದರು!
ಕುರಡರು ನೋಟವ ನೋಡಿದರು!
ಮೂಗರು ಸವಿಮಾತಾಡಿದರು!
ಕಿವುಡರು ನಾದವ ಕೇಳಿದರು!
ಬಾಲರು ಭರದಿಂದೋಡಿದರು:
ಜನರೆಲ್ಲಾ ಗೋಳಾಡಿದರು!

ಬೊಮ್ಮನಹಳ್ಳಿಯ ಕಿಂದರಿ ಜೋಗಿ
ಮಕ್ಕಳ ಹೊಳೆಯೊಳಗಿಳಿಸುವನೆಂದು
ಓಡಿದರೆಲ್ಲರು ಜೋಗಿಯ ಹಿಂದೆ.
ಹೊಳೆಯ ತೀರವ ಜೋಗಿಯು ಸೇರಿ ೩೮೦
ನೀರೊಳಗಿಳಿಯದೆ ಬಲಗಡೆ ತಿರುಗಿ
ಚೌಡಿಯ ಬೆಟ್ಟಕ್ಕಭಿಮುಖವಾದ,
ಭರದಿಂ ಬೇಗನೆ ಮುಂದಕೆ ಹೋದ.
ಬೆಟ್ಟವನವನೇರುವುದಿಲ್ಲೆಂದು
ಹಾರೈಸಿದರಾ ಊರಿನ ಜನರು.
ಬೆಟ್ಟದ ಬುಡವನು ಸೇರಿದ ಜೋಗಿ
ನಿಲ್ಲುವನೆಂದಲ್ಲಾ ಬಯಸಿದರು!

೧೩

ಏನಿದು ನಿಂತರು ಜನರೆಲ್ಲ
‘ಅಯ್ಯೋ ಮಕ್ಕಳೆ ‘ ಎಂದೆನುತ?
ಜೋಗಿಯು ಬಾರಿಸೆ ಕಿಂದರಿಯ ೨೯೦
ಬಂಡೆಯ ದವಡೆಯನಾಕಳಿಸುತ್ತ
ಬಾಯನು ತೆರೆಯಿತು ಆ ಗಿರಿಯು!
ಜೋಗಿಯು ನುಗ್ಗಿದನದರಲ್ಲಿ
ಹಿಂದೆಯೆ ಹೋದರು ಬಾಲಕರ!
ಬೆಟ್ಟವು ಬಾಗಿಲ ಹಾಕಿತು ಬೇಗ;
ಹಿಂದಕ್ಕುಳಿದವನೊಬ್ಬನೆ ಕುಂಟ.
ಅಲ್ಲಿಗೆ ಬಂದರು ಜನರೋಡಿ,
ಕುಂಟನ ಕಂಡರು ಒಂಟಿಯಲಿ;
ಕುಂಡನನುಳಿದವರೆಲ್ಲೆಂದು
ಕೇಳಲು ಬೆಟ್ಟವ ತೋರಿದನು. ೪೦೦

ಕಂಬನಿಗೆರೆದರು ಗೋಳಾಡಿದರು.
ಜೋಗಿಯ ಕೂಗುತ ಬಲು ಬೇಡಿದರು.
ಬೆಟ್ಟವು ಕೊಟ್ಟಿತು ಮರುದನಿಯ!
ಭೂಮಿಯ ಹೀರಿತು ಕಂಬನಿಯ!
ಉಳಿದಾ ಕುಂಟನು ಅಳುತಿಂತೆಂದ:
“ಅಯ್ಯೋ ಎನಗಿಲ್ಲವರಾನಂದ!
ಜೋಗಿಯು ಕಿಂದರಿ ಬಾರಿಸೆ ಕಂಡೆವು
ಬಣ್ಣದ ಮನೆಗಳ ಪಟ್ಟಣವ,
ಹಣ್ಣುಗಳುದುರಿದ ತೋಟಗಳ!
ನಾನಾ ಆಟದ ಸಾಮಾನುಗಳ, ೪೧೦
ತರತರ ರಾಗದ ಗೊಂಬೆಗಳ;
ಮಾತಿಗೆ ಮಿರಿದ ಆನಂದಗಳ,
ಕೈಗೇ ಸಿಕ್ಕುವ ಹಕ್ಕಿಗಳ!
ಜಿಂಕೆಗಳೆಮ್ಮೊಡನಾಡಿದುವಲ್ಲಿ,
ಮೊಲಗಳು ಕುಳಿತುವು ಮೈಮೇಲಲ್ಲಿ!
ಅಯ್ಯೋ ಹೋಯಿತೆ ಆ ನಾಕ!
ಅಯ್ಯೋ ಬಂದಿತೆ ಈ ಲೋಕ!”

೧೪

ಬಂದರು ಎಲ್ಲರು ಬೊಮ್ಮನಹಳ್ಳಿಗೆ
ದಃಖಾಂಬುಧಿಯೊಳಗೀಜಾಡಿ;
ಕಂಬನಿಗೆರೆದರು ಗೋಳಾಡಿ! ೪೨೦
ಈಗಾ ಹಳ್ಳಿಯ ಬೀದಿಯಲಾರೂ
ಕಿಂದರಿನಾದವನಾಲಿಸರು
ಕಿಂದರಿ ಜೋಗಿಗಳಲ್ಲಿಗೆ ಬಂದರೆ
ಬೇಕಾದ್ದೆಲ್ಲವನೀಯುವರು!

ಭಾಷೆಯ ಕೊಟ್ಟರೆ, ಮೂರ್ತೀ, ನಾವು
ಮೋಸವ ಮಾಡದೆ ಸಲ್ಲಿಸಬೇಕು.
ಆದುದರಿಂದ, ಮೂರ್ತೀ, ಕೇಳು:
ಸತ್ಯವನೆಂದೂ ತ್ಯಜಿಸದೆ ಬಾಳು!

-ಕುವೆಂಪು