Categories
ಆಯುರ್ವೇದ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಟಿ.ಎಲ್.ದೇವರಾಜ್

ಪಾರಂಪರಿಕ ವೈದ್ಯ ಪದ್ಧತಿಯಾಗಿರುವ ಆಯುರ್ವೇದ ಚಿಕಿತ್ಸಾ ವಿಧಾನದಲ್ಲಿ ಅಪಾರ ಪರಿಣತಿ ಪಡೆದ ಖ್ಯಾತ ವೈದ್ಯರು ಶ್ರೀ ಟಿ.ಎಲ್.ದೇವರಾಜ್ ಅವರು.
ಹಾಸನ ಜಿಲ್ಲೆಯ ತೇರಣ್ಯದಲ್ಲಿ ೧೯೩೮ರ ಸೆಪ್ಟೆಂಬರ್ ೨೨ರಂದು ಜನನ, ಮೈಸೂರು ವಿಶ್ವವಿದ್ಯಾಲಯದಿಂದ ಹಿಂದಿ ಭಾಷೆಯಲ್ಲಿ ಇಂಟರ್ ಮೀಡಿಯೇಟ್ ಎಂ.ಎ ಪದವಿ ಪೂರೈಸಿದ ಅವರು ತದನಂತರ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಆಯುರ್ವೇದ ವೈದ್ಯ ಪದವಿ ಪಡೆದರು.
ನಾಗಪುರ, ಮದ್ರಾಸ್, ಕರ್ನಾಟಕ, ಮೈಸೂರು, ಕೇರಳ ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷಕರಾಗಿ ಕೆಲಸ ನಿರ್ವಹಣೆ. ಕರ್ನಾಟಕ ಮೆಡಿಕಲ್ ಪ್ಲಾಂಟ್ಸ್ ಅಥಾರಿಟಿ, ಕರ್ನಾಟಕ ಆಯುರ್ವೇದ ಮತ್ತು ಕೇಂದ್ರ ನೋಂದಣಿ ಮಂಡಳಿಯ ಸದಸ್ಯರಾಗಿ ಸೇವೆ. ಆಯುರ್ವೇದ ಕುರಿತು ಸುಮಾರು ೩೬ ಪುಸ್ತಕಗಳನ್ನು ಬರೆದಿರುವರು. ಅವರ ಕೆಲವು ಪುಸ್ತಕಗಳು ರಷ್ಯನ್ ಮತ್ತು ಸ್ಪೇನ್ ಭಾಷೆಗೂ ತರ್ಜುಮೆಗೊಂಡಿವೆ.
ಪಂಚಕರ್ಮ ಚಿಕಿತ್ಸಾ ವಿಧಾನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕುರಿತು ಕನ್ನಡ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪುಸ್ತಕಗಳನ್ನು ಹಾಗೂ ಅನೇಕ ನಿಯತಕಾಲಿಕೆಗಳಲ್ಲಿ ಆಯುರ್ವೇದ ಕುರಿತ ಲೇಖನಗಳನ್ನು ಬರೆದಿದ್ದಾರೆ. ೨೦೦೭ರ ಸಾಲಿನಲ್ಲಿ ವೈದ್ಯ ಶ್ರೀರಾಮ ನಾರಾಯಣ ವೈದ್ಯ ಪ್ರಶಸ್ತಿ ಬಂದಿದ್ದು, ಈ ಪ್ರಶಸ್ತಿ ಪಡೆದ ಏಕೈಕ ಕನ್ನಡಿಗ ಎಂಬ ಹಿರಿಮೆ ಇವರದು.
ಜೊತೆಗೆ ಅಂತರರಾಷ್ಟ್ರೀಯ ಸೇವಾ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಆಯುರ್ವೇದ ಆಕಾಡೆಮಿ, ಅಗ್ನಿಮೇಳ ಆಯುರ್ವೇದ ಅನುಷ್ಠಾನ, ಬೆಂಗಳೂರು ರತ್ನ ಹೀಗೆ ಅನೇಕ ಪ್ರಶಸ್ತಿಗಳಿಗೆ ಶ್ರೀಯುತರು ಭಾಜನರು. ಆಯುರ್ವೇದದ ಪ್ರಯೋಜನವನ್ನು ಸಮಾಜಕ್ಕೆ ಪರಿಚಯಿಸಿ, ಆ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದವರು ಶ್ರೀ ಟಿ.ಎಲ್.ದೇವರಾಜ್.