Categories
ಗಮಕ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಕೆ.ಎಲ್. ನಾರಾಯಣಸ್ವಾಮಿ

ಮಹಾಕವಿಗಳ ಕಾವ್ಯಗಳ ಸೊಗಸನ್ನು ಗಾಯನದ ಮೂಲಕ ನಾಡಿನಾದ್ಯಂತ ಪ್ರಚುರಪಡಿಸುತ್ತ ಬಂದಿರುವ ಹಿರಿಯ ಗಮಕಿಗಳು ಕೆ.ಎಲ್.ನಾರಾಯಣಸ್ವಾಮಿ ಅವರು.
ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಕಣಕಟ್ಟೆ ಗ್ರಾಮದ ೮೧ ವರ್ಷದ ನಾರಾಯಣಸ್ವಾಮಿ ಅವರು ಗಮಕ ವಾಚನ ಮತ್ತು ವ್ಯಾಖ್ಯಾನ ಎರಡರಲ್ಲೂ ಪರಿಣತಿ ಪಡೆದ ಸವ್ಯಸಾಚಿ. ಸದ್ಯ ಅವರು ಬೆಂಗಳೂರು ವಾಸಿ.
ಬಿ.ಕಾಂ ಪದವೀಧರರಾದ ಅವರು ಪ್ರಾರಂಭದಲ್ಲಿ ಪ್ರೌಢಶಾಲಾ ಶಿಕ್ಷಕರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿದ್ದ ಗಮಕ ತರಗತಿ ಸೇರಿ ೧೯೪೯ರಲ್ಲಿ ನಡೆದ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ದತ್ತಿ ಬಹುಮಾನದ ಗೌರವ ಪಡೆದರು.
ಕರ್ನಾಟಕ ಗಮಕ ಕಲಾ ಪರಿಷತ್ತು ನಡೆಸುವ ಗಮಕ ಸಮ್ಮೇಳನ, ಶಿಬಿರ, ಗಮಕ ಪ್ರಚಾರದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಅವರದು ಗಮಕ ಕಲಾ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು. ಹಳೆಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಪ್ರಕಾರದ ಕಾವ್ಯಗಳನ್ನು ವಾಚನ ಮಾಡಿ ಸೈ ಎನಿಸಿಕೊಂಡವರು.
ಶೃಂಗೇರಿಯಲ್ಲಿ ೧೯೮೮ರಲ್ಲಿ ನಡೆದ ಶಂಕರವಿಜಯ, ಭಾರತೀಯ ವಿದ್ಯಾ ಭವನ ಏರ್ಪಡಿಸಿದ ಕಾರ್ಯಕ್ರಮಗಳಲ್ಲಿ ತಮ್ಮ ಗಮಕ ಪಾಂಡಿತ್ಯ ಪ್ರದರ್ಶಿಸಿರುವರು.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾಶ್ರೀ’, ಭದ್ರಾವತಿಯ ಮಾರುತಿ ಸಂಗೀತ ಪಾಠಶಾಲಾದ ಕಾವ್ಯಗಾಯನ ಬಿರುದು, ಶಿವಮೊಗ್ಗದ ಗಮಕ ಕಲಾಪರಿಷತ್ತಿನಿಂದ ಗಮಕ ಕಲಾ ತಿಲಕ, ಶಿವಮೊಗ್ಗದ ತ್ಯಾಗರಾಜ ಸ್ವಾಮಿಗಳ ಆರಾಧನಾ ಸಮಿತಿಯಿಂದ ‘ಗಮಕ ಕಲಾ ಶಿರೋಮಣಿ’, ‘ಕರ್ನಾಟಕದ ಗಮಕಿ’ ‘ಗಮಕ ಕಲೋಪಾಸಕರು’, ‘ಗಮಕ ಕಲಾ ವಿದ್ವಾಂಸರು’ ಇವು ಶ್ರೀಯುತರಿಗೆ ಸಂದಿರುವ ಬಿರುದುಗಳು.
ಕವಿ ಕಾವ್ಯವನ್ನು ಜನಮನಕ್ಕೆ ಮುಟ್ಟಿಸುತ್ತಿರುವ ಶ್ರೇಷ್ಠ ಗಮಕಿಗಳು ಶ್ರೀ ಕೆ.ಎಲ್.ನಾರಾಯಣಸ್ವಾಮಿ.