Categories
ಪಶುವೈದ್ಯ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಪ್ರೊ. ಎಸ್.ಎಂ. ಜಯದೇವಪ್ಪ

ಪಶು ಶಸ್ತ್ರಚಿಕಿತ್ಸೆಯಲ್ಲಿ ಅಪಾರ ಪರಿಣತಿಯುಳ್ಳ ಪ್ರೊ. ಎಸ್.ಎಂ. ಜಯದೇವಪ್ಪ ಕಾಯಕವೇ ಕೈಲಾಸ ತತ್ವದಲ್ಲಿ ನಂಬಿಕೆಯುಳ್ಳವರು.
೧೯೪೩ರಲ್ಲಿ ದಾವಣಗೆರೆ ಜಿಲ್ಲೆಯ ಮಾಯಕೊಂಡ ಗ್ರಾಮದಲ್ಲಿ ಜನನ. ಪಶು ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ. ೧೯೬೬ರಿಂದ ಪಶುಪಾಲನಾ ಇಲಾಖೆಯಲ್ಲಿ ಸೇವೆ ಸಲ್ಲಿಕೆ. ಬೆಂಗಳೂರಿನ ಪಶುವೈದ್ಯಕೀಯ ಮಹಾ ವಿದ್ಯಾಲಯದ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ವಿವಿಧ ಶ್ರೇಣಿಗಳಲ್ಲಿ ೩೦ ವರ್ಷಗಳ ಸುದೀರ್ಘ ಅವಧಿಯ ಕರ್ತವ್ಯ ನಿರ್ವಹಣೆ. ೨೦೦೩ರಲ್ಲಿ ಸೇವೆಯಿಂದ ನಿವೃತ್ತಿ.
ಶ್ರೀಯುತರು ಪಶುವಿಜ್ಞಾನದ ಅಂಗಗಳಾದ ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣೆ ಕ್ಷೇತ್ರಗಳಲ್ಲಿ ನಡೆಸಿದ ಅಧ್ಯಯನದಿಂದ ಸಮಾಜಕ್ಕೆ ಮತ್ತು ರೈತ ವರ್ಗಕ್ಕೆ ಅಪಾರ ಪ್ರಯೋಜನ, ರಾಷ್ಟ್ರ, ರಾಜ್ಯಮಟ್ಟದ ವಿಶ್ವವಿದ್ಯಾಲಯಗಳ ಪಶುವೈದ್ಯಕೀಯ ಮತ್ತು ಕೃಷಿ ವಿಜ್ಞಾನ ಜರ್ನಲ್‌ಗಳಲ್ಲಿ ಶ್ರೀಯುತರ ೧೩೦ಕ್ಕೂ ಹೆಚ್ಚಿನ ಸಂಶೋಧನಾತ್ಮಕ ಲೇಖನಗಳು ಪ್ರಕಟ. ಹತ್ತಾರು ಲೇಖನಗಳಿಗೆ ಚಿನ್ನದ ಪದಕ. ವಿಚಾರ ಸಂಕಿರಣ, ಸಮ್ಮೇಳನಗಳಲ್ಲಿ ಭಾಗವಹಿಸಿ ಉಪಯುಕ್ತ ಉಪನ್ಯಾಸಗಳನ್ನು ಮಂಡಿಸಿದ ಅನುಭವ ಅವರದು.
ಜಾನುವಾರುಗಳಲ್ಲಿ ಒಡೆದಿರುವ ಮೂತ್ರಕೋಶ ಸರಿಪಡಿಸುವಿಕೆ, ಸಿಡಿಗಾಲಿರುವ ದನಗಳ ಸ್ಥಿತಿ ಸುಧಾರಣೆ, ಮುರಿದ ಕೊಂಬುಗಳನ್ನು ಸರಿಪಡಿಸುವಿಕೆ, ಸಾಕು ನಾಯಿಗಳು, ಬೀದಿ ನಾಯಿಗಳಿಗೆ ಕಡಿಮೆ ವೆಚ್ಚದಲ್ಲಿ ಶಸ್ತ್ರ ಚಿಕಿತ್ಸೆ ಮಾಡುವ ವಿಧಾನದಲ್ಲಿ ನಿಪುಣತೆ, ನಿವೃತ್ತಿ ನಂತರವೂ ಸಾಕು ಪ್ರಾಣಿಗಳು ಮತ್ತು ರಾಸುಗಳ ಸೇವೆಯಲ್ಲಿ ನಿರತರಾಗಿರುವ ಪಶು ವೈದ್ಯರು ಪ್ರೊ. ಎಂ. ಜಯದೇವಪ್ಪ.