Categories
ರಚನೆಗಳು

ಗುರು ರಾಮವಿಠಲ

೧೫
ಒಬ್ಬನೆ ಎಲ್ಲರಿಗೂ ಸ್ವಾಮಿ ಬಲು ಪ
ಹಬ್ಬ ಅವನನೆ ನಂಬಿದವರಿಗ್ಯಾವಾಗಲು ಅ.ಪ
ಪುಟ್ಟಿಸಿ ಪೋಷಿಸಿ ಸಂಹಾರಗೈಸಿ ತನ್ನ
ಹೊಟ್ಟೆಯೊಳಗಿಟ್ಟಿರುವನು ಎಲ್ಲರನು ೧
ಪ್ರವಿಮಲಾತ್ಮನಾಗಿ ರವಿಮಂಡಲದಲಿದ್ದು
ಭುವನಗಳನ್ನು ಪೊರೆವನು ಕೇಳಿನ್ನು ೨
ಸಾಗರಸುತೆಗೆ ಪೇಳದೆ ಭಾಗವತರ ಕಾಯ್ವನು
ಶ್ರೀಗುರುರಾಮ ವಿಠಲನು ಕೇಳಿದನೂ ೩

ಗುರುರಾಮ ವಿಠಲರ ವೈಯಕ್ತಿಕ
೩೩೩
ಒಬ್ಬನೆ ದಾಸ ಹುಟ್ಟಿದವನಿವ | ನೊಬ್ಬನೆದಾಸ ಪ
ಸುಬ್ರಹ್ಮಣ್ಯನರಸನೆಂಬಭಿದಾನವಿವನಿಗೆ
ಸೂರಿ ತಾಯಿತಂದೆಗಳಿಂದಾಯಿತು ಅ.ಪ
ನಾಲ್ಕು ವರ್ಷದವರೆವಿಗೂ ಮಾತಾಪಿತರು
ಪಾಲನೆಗೈದರು ಬಳಿಕ
ಕಾಲಾಧೀನವನೈದಿದರವರಾ
ಮೇಲೆ ನಡೆದ ಕಥೆಯನು ಬಿನ್ನೈಸುವೆ ೧
ದ್ವಾದಶ ವರುಷ ಪರಿಯಂತವು
ಮಾತುಳನ ಗೃಹದಿ ಬೆಳೆದು
ಪಾದವೂರದೆ ದೇಶವ ತಿರುಗುತ-
ಲಾದುದು ಇಪ್ಪತ್ತುನಾಲ್ಕು ವರುಷವು ೨
ಶ್ರೀರಮಣ ಗುರುದ್ವಾರದಲಿ ಇಪ್ಪತ್ತು
ಮೂರನೆಯ ವರುಷದಲಿ
ಸಾರವ ತಿಳುಹಿಸಿ ಅನುಗ್ರಹಿಸಿದನ-
ಪಾರ ಸುಗುಣನಿಧಿ ಕೈಪಿಡಿದೆನ್ನನು ೩
ಹರಿನಾಮಬಲದಿಂದಲಿಪ್ಪತ್ತೈದು
ವರುಷದ ಮೊದಲು ಸುಕೃತದಿಂ
ಹರಿಸೇವೆಗಳಿಂ ನೆರೆದ್ರವ್ಯಗಳಿಸಿ
ನಲವತ್ತು ವರುಷವಾಯಿತು ೪
ನಲವತ್ತೊಂದನೆ ವರ್ಷಮೊ-
ದಲು ಬಲು ಜನಗಳ ಬೇಡಿ
ಸಲಹುತುದರವನು ಅರಿತು ಅರಿಯದೆ
ಕಳೆದಿತು ಐವತ್ತಾರು ವರ್ಷಗಳು ೫
ಮಧ್ವರಾಯರೆ ನಮ್ಮ ತಂದೆಯು
ಮಧ್ವರಾಯರೆ ನಮಗೆ ಗುರು
ಮಧ್ವರಾಯರೆ ಉದ್ಧಾರಕರ್ತರು
ಪದ್ಮನಾಭಗತಿ ಪ್ರೀತ್ಯಾಸ್ಪದರು ೬
ಬೆಂಡಾಗಿರುವುದು ಶರೀರ-
ಧರ್ಮವು ಬೇರೊಬ್ಬರ ಕಾಣೆ
ಉಂಡುಟ್ಟು ತೆಗೆಯುವ ವಿಷಯದಿ
ಊರಿನವರ ದೂರುವುದಿನ್ಯಾಕೆ ೭
ಹರಿನಾಮದ ಬಲದಿಂದ ಗಳಿಸಿದುದು
ಹರಿಗೆ ಪ್ರೀತಿಯಾಯಿತು
ಪರರು ವ್ಯರ್ಥವಾಗಸೂಯೆ ಪಟ್ಟರೆ
ದುರಿತವ ಪ್ರಯೋಜನವು ಸತ್ಯವಿದು ೮
ಯಾತಕಿನ್ನು ಇಹಪರ ಚಿಂತನೆಗಳು
ಏನು ಕೋರುವುದು ಸಾಕು
ಸೀತಾಪತಿ ಗುರುರಾಮವಿಠ್ಠ-
ಲನ ಸೀಮೆ ಈಗಲು ಮುಂದಕು ಇರಬೇಕು೯

೩೦೪
ಶಶಿಕಳೆಯ ದೆಸೆಯಿಂದ ಪಕ್ಷಗ
ಳೆಸಗುವುದು ಶಿತಿ ಕೃಷ್ಣವೆಂಬುವು
ಪೆಸರಿನಿಂ ಸಿತಪಕ್ಷಕೇ ಭಾಗಿಗಳು ಸುಮನಸರು
ಅಸುರರೆಲ್ಲರೂ ಬಹುಳ ಪಕ್ಷವ
ನುಸರಿಸುತ್ತಿಹರೆಲ್ಲ ಕಾಲದಿ
ಅಸುರರೇ ಷಟ್ ಷಷ್ಟಿ ಕೋಟಿಯು ಸುರರದರೊಳರ್ಧ ೧
ಉತ್ತರಾಯಣ ಶುಕ್ಲದಿವಿ ಶಿಖಿ
ರಾತ್ರಿಧೂಮವು ದಕ್ಷಿಣಾಯನೆ
ಮತ್ತೆ ಬರುವುದು ದಕ್ಷಿಣಾಯನ ಪಥದಿ ಪೋದವರು
ಹತ್ತುವರು ರಗಮಾರ್ಗದಲ್ಲಿಯೆ
ಮುಕ್ತರಾಗುವರೆಂದು ಕೃಷ್ಣನು
ಪಾರ್ಥಗರುಹನೆ ಗೀತೆಯಲಿ ವಿದ್ವಾಂಸರರಿಯುವುದು ೨
ಕೆಲರು ಮುಕ್ತರು ಸುಮನಸರು ಮಿಗೆ
ಹಲವು ಜನಗಳು ದೈತ್ಯರೆನಿಪರು
ಜಲಜಸಖ ಮುಕ್ತರಿಗಧಿಪ ಸಂಸಾರಿಗಳಿಗೊಡೆಯ
ಜಲಜರಿಪುವೆನಿಸುವನು ಈ ಪ್ರಭು
ಗಳಿಗಧೀನ ಸಮಸ್ತನಿದಿರೊಳು
ಕಲುಷ ಸುಕೃತಗಳಿನಿತು ಭಾಗವು ತಿಳಿವ ಬುಧಜನಕೆ ೩
ಪಾಪವಸುರರು ಪುಣ್ಯವಮರರು
ವ್ಯಾಪಿಸಿಹುದ್ಯರಡೇ ಪ್ರಪಂಚದಿ
ಕೋಪ ಮಾಡುವುದಲ್ಲ ಪುಣ್ಯವು ಸ್ವಲ್ಪವಘವಧಿಕ
ಈ ಪರಿ ವಿಭಾಗದಲಿ ಮನುಜರು
ಸಾಪರಾಧಿಗಳೆನಿಸುತಿಹರು ಮ
ಹಾಪ್ರಯತ್ನ ದುರಾಶೆಯಿರುವರೆಯಸುರರೆನಿಸುವರು ೪
ದುರಿತವೇ ಸಂಸಾರ ಚಿಂತಿಯು
ವರಸುಕೃತವೇ ಮುಕ್ತಿ ಯೋಚನೆ
ಯರಡರೊಳು ದುಃಖಧಿಕರೆ ಸಾಮಾನ್ಯ ಜನರೆಲ್ಲ
ಪರವ ಯೋಚಿಸುವವರೆ ಸುಖಿಗಳು
ಶರಣರು ಪರಬ್ರಹ್ಮವನು ತಿಳಿ
ವರು ಸದಾ ಗುರುರಾಮ ವಿಠಲನವರ ಕೈಬಿಡುನು ೫

(ನುಡಿ-೧) ವನಿತೆಯನಪಹರಿಸಿದವನ ತಮ್ಮ
೧೬
ಕರುಣವಾರಿಧಿಯೆ ಮೊರೆ ಕೇಳೋ ಹರಿಯೆ ಪ
ಶರಣರಿಗೆ ಜರಾಮರಣರಹಿತವಹ
ಪರಮ ಪದವಿ ಕೊಡು ಪರ ವಿದೇಹ ಅ. ಪ
ವನಿತೆಯಪಹರಿಸಿದನ ತಮ್ಮ ಗೊಲಿದೆ
ಇನಕುಲಭೂಷಣನೆನಿಪ ರಾಮ ೧
ಹಿಡಿಯವಲಕ್ಕಿಯ ಬಡಬ್ರಾಹ್ಮಣ ಕೊಡ-
ಲೊಡನೆ ಒಲಿದು ಸೌಭಾಗ್ಯವಿತ್ತು ೨
ಕಾಮಜನಕ ಬಲರಾಮಾನುಜ ಮಮ
ಸ್ವಾಮಿ ಕಾಯೊ ಗುರುರಾಮವಿಠಲಾ ೩

೧೭
ಕರುಣವಾರಿಧೆ ಮಾಧವ ಕೇಶವಾ ಪ
ವರದ ವೆಂಕಟೇಶ್ವರ ಚಿತ್ಸ್ವಭಾವ ಅ.ಪ
ವುರಗಾದ್ರಿಮಂದಿರದೇವ ದೇವ
ಶರಣಾರ್ತಿ ಭಂಜನಸುಪ್ರಭಾವ ೧
ಪದುಮಾವತೀ ಹೃದಯಾಬ್ಜಮಿತ್ರ
ಸದಸದ್ವಿಹಾರ ಸನ್ಮಾನಿಸ್ತೋತ್ರ೨
ಗುರುರಾಮ ವಿಠಲ ಸುರಪತಿಸಹಾಯ
ಧರಣಿಯೊಳ್ ಕಲ್ಯಾಣ ತಿರುಪತಿನಿಲಯ೩

೧೮
ಕರುಣಾಬ್ಧೆ ಶ್ರೀನಾರಸಿಂಹ ಪ
ಶರಣಾಗತಜನರ ಪೊರೆವೊ ಕೃಪಾಳು ಅ.ಪ
ತರಳನ ಮಾತನು ಸಲಿಸುವುದಕೆ ಕಂಬ
ಬಿರಿದು ಅವತಾರಗೈದೆ ೧
ಕ್ಷೇಮವುಂಟಾದುದು ಶ್ರಮವೆಲ್ಲ ಪೋದುದು
ಭೂಮಿ ಭಾರವಿಳಿದುದು ೨
ಜಯ ಭಕ್ತವತ್ಸಲ ಜಯಜಗತ್ಪಾಲಜಯ ಜಯ ಜಯ ಶ್ರೀ  ೩

೨೧೦
ಕರೆಕರೆಯಿದು ಸಂಸಾರವತಿ ಘೋರ ಪ
ಹರಿಯನು ನೆರೆನಂಬಿ ಪರಮಸುಖವ ಪೊಂದು ಅ.ಪ
ಚರಣ ಸೇವಕರಾ ಪೊರೆವನು ಶ್ರೀಧರ
ದುರಿತವು ಪರಿಹರವಾಗುವದು ಅರಗಿಗೆ ಬೆಂಕಿಯಿಟ್ಟ
ತೆರನಾಹುದು ಮುಂದೆ ೧
ಎಷ್ಟು ಗಳಿಸಿದರೂ ಸಾಲದು ಎಂದು
ಕಷ್ಟವ ಪಡುವೆಯೊ ಅನುದಿನದಿ
ಕೃಷ್ಣಗೆ ಪ್ರೀತಿ ಮಾಡು ಶಿಷ್ಟರಂಘ್ರಿಯ ಬೇಡು ೨
ಸಂದೇಹವಿಲ್ಲದೆ ನ
ಒಂದೇ ಭಕುತಿಯಿಂದ ಕೊಂಡಾಡೊ
ಅಂಧ ಪರಂಪರ ನೋಡಿದರೆ ಅಪಾರ ೩

೧೯
ಕರೆವರು ನಿನ್ನ ಹಸೆಗೆ ಪರಮ ಪುರುಷ ನೀನೆಂದು ಪ
ಸರಸದಿಂದ ಸಿರಿಸಹಿತ ಬರಬೇಕು ನೀಂ ತ್ವರಿತದಲಿ ಅ.ಪ
ನಾದದಶವಾದ್ಯಗಳು ಮೋದದಿಂದ ಮೊರೆಯಲು
ವೇದಾಂತರಹಸ್ಯವೆಂಬ ವಿವಿಧ ಗೀತೆಗಳ ಪಾಡಿ ೧
ತತ್ವಭಿಮಾನಿಗಳೆಂಬ ಮುತ್ತೈದೆಯರೆಲ್ಲ ಕೂಡಿ
ಸುತ್ತ ಜ್ಯೋತಿಯ ಬೆಳಗಿ ಸೂರಿ ಜನಪ್ರಿಯನೆಂದು ೨
ಎಂಟುದಳ ಪದ್ಮದೊಳು ನೆಂಟರಿಷ್ಟರೆಲ್ಲುರು ನೂ-
ರೆಂಟು ಚಿತ್ರಗಳ ಬರೆದು ರಚಿಸಿ ರತ್ನ ಪೀಠವನ್ನು ೩
ಮೂರು ಸಂಪಾದಿಸಿಕೊಂಡು ಮೂರು ಬಿಟ್ಟು ಆಳಿದ
ಧೀರ ಸಭೆಯಲ್ಲಿ ಹದಿನಾರು ನಿನ್ನಾಧೀನಗೈದು ೪
ಯಾಮ ಯಾಮದಿ ಬಿಡದೆ ಕಾಮಿನೀ ಮಣಿಯರು ನಿ-
ಷ್ಕಾಮ ಸುಖವೀವ  ಬಾರೆಂದು ೫

ಕಲಿಪುರಷ : ಇವನು
೨೬೨
ಕಲಿಪುರುಷನಿಗತಿಹರುಷ
ಬಲುಸಜ್ಜನಗಳುಬಾಯ್ಬಾಯ್ಬಿಡುವುದು ಪ
ಅಲಕ್ಷ್ಮೀರಮಣ ಅಖಿಲ ದುರ್ಗುಣಂ
ಗಳಕೊಟ್ಟೆಲ್ಲರ ಗಾಳಿಗೆ ತೂರುವೆ ಅ.ಪ
ರಾವಣಾಸುರಗೆ ಮಗನೆನಿಸಿ
ದೇವತೆಗಳ ಸೆರೆಯಲ್ಲಿಡಿಸಿ
ಭಾವಜ್ಞರನು ನಿರಾಕರಿಸಿ
ಸಭಾಸ್ಥಾನಗಳ ಭಂಗಪಡಿಸಿ
ಭೂವಲಯದಿ ಧಾರ್ತರಾಷ್ಟ್ರನಾಗುತ
ಬಹುದುಃಖ ಪಡಿಸಿ ಪಾಂಡುಕುಮಾರರ
ಪಾವನಿಯಿಂತೊಡೆಯೊಡೆದು ಬೀಳುತ
ಬಗೆಯ ನೆನದುಯೀಗೆಮ್ಮ ಬಾಧಿಸುವೆ ೧
ಆಗಮಗಳು ಸುಳ್ಳೆಂಬುವದು | ನಾ
ಯೋಗಿಯೆಂದು ಹಿಗ್ಗುತಲಿಹುದು
ಭಾಗವರತ ನಿಂದನೆಗೈದು | ನಿರ್
ಭಾಗ್ಯತನ್ನತಾನೆ ಪೊಗಳುವದು
ಸಾಗರದಂತಿಹ ದುರಾಸೆಯೊಳಗಾ
ವಾಗಲು ಜನ ಮುಳುಗುತ ತಿಳಿಯದೆ
ರಾಗದ್ವೇಷದಿ ಪಾಪವಗಳಿಸಿ ಮ
ಹಾಗರ್ವದಿ ನಿಷ್ಫಲವ ಪೊಂದುವರಿದು ೨
ನೀತಿ ತಪ್ಪಿತಾವ್ನಡೆಯುವುದು | ದು
ರ್ಜಾತಿಗಳುತ್ತಮರೆಂಬುವದು
ಆತುರದಲಿಮನವಳುಕುವುದು | ಬಲು
ಘಾತಕತನದಲಿತಿರುಗುವದು
ಗಾತುರಸುಖವೇ ಮೊಕ್ಷವೆಂದು ವಿಷ
ಯಾತಿಶಯದಿಯರಿಷಡ್ವರ್ಗಗಳೊಳು
ರಾತಿರಿಪಗಲೆನ್ನದೆ ಬೀಳ್ವುದುನಿ
ನ್ನಾತಗಳಿಂಗೆ ಸ್ವಭಾವಗುಣಂಗಳು ೩
ಕ್ಷಾಮಡಾಂಬರಗಳ್ಹೆಚ್ಚುವದು | ನಿ-
ಷ್ಕಾಮರ ಹಾಸ್ಯವಮಾಡುವದು
ಕಾಮದಿಜನಗಳ ಬಾಧಿಪದು
ನಿಷ್ಕಾರಣರೋಗದಿ ಸಾಯುವದು
ಪಾಮರರೆಲ್ಲರು ಪಂಡಿತರಾವೆಂ-
ದೀಮಹಿಯೊಳುಮನಬಂದಂತೆಸದಾ
ತಾಮಸಗಳಬೋಧಿಸುತಲಿಜಗದೊಳು
ದ್ರವ್ಯಾರ್ಜನೆಮುಖ್ಯಸಾಧನವೆಂಬುದು ೪
ವಿಪರೀತ ಫಲಗಳಾಗುವುದು
ಚಪಲಹೊಂದಿಚಿಂತಿಸುತಿಹುದು
ಜಪಹೋಮಗಳನು ತ್ಯಜಿಸುವದು
ಬಲುಜಾಡ್ಯಂಗಳನನುಭವಿಸುವದು
ಉಪಕಾರಗಳನುಮಾಳ್ಪರಲ್ಲಿ ಪ್ರ
ತ್ಯಪಕಾರಗಳೆಣಿಸುತಲಾವಾಗಲು
ಕಪಟದುರ್ಮತಗಳ್ಹೆಚ್ಚಿಭುವಿಯೊಳಗೆ
ಕಾಲಕಳೆಯುತ ವೃಥಾನೋಯುವದು ೫
ಶೂದ್ರರುವೇದವ ಪಠಿಸುವದು | ನಿರು
ಪದ್ರವನುದಂಡಿಸುತಿಹುದು | ಹರಿ
ರುದ್ರವಿಧಿಗಳದೂಷಿಪದು | ಅ-
ಬದ್ಧವೆಬಲುರುಚಿಯೆಂಬುವದು
ಕ್ಷುದ್ರಕುನಾಸ್ತಿಕಮತವನಂಬಿ ದೇ-
ವದ್ರೋಹಗಳನುಮಾಡುತ ಬಾಯಲಿ
ಯದ್ವಾತದ್ವದಿ ಹಿರಿಯರ ಬೈಯ್ಯುತ
ಇದ್ದದ್ದಾದರುಯಿಲ್ಲೆಂಬುವದು೬
ಪರರೊಡವೆಗಳಪಹರಿಸುವದು | ನೆರೆ-
ಹೊರೆಯಂತಿರಬೇಕೆಂಬುವದು
ಗುರುವಿನಲ್ಲಿ ದ್ವೇಷವೆಣಿಸುವದು | ಸತಿ-
ಯರುಪತಿಯಲಿದ್ವೇಷಿಸುತಿಹುದು
ಗುರುರಾಮವಿಠ್ಠಲಪೋಷಕನೆನ್ನದೆ
ನಿರತವುಜೀವನಕಿಲ್ಲೆಂದುಬಳಲಿ
ದುರ್ವಿದ್ಯಗಳಭ್ಯಾಸಿಸಿಕಡೆಯಲಿ
ನರಕಂಗಳಿಗೆ ಪ್ರಯಾಣಮಾಡುವದು೭

೨೧೧
ಕಳೆಯ ಬ್ಯಾಡವೋ ಕಾಲ ಪ
ಹಲವು ವಿಧದಲಿ ಚಂಚಲ ಪಡುತಲಿ
ತತ್ವ ತಿಳಿಯದೆ ಅ.ಪ
ಈ ನರಜನ್ಮವು ನಾಳೆಬಾರದು
ಕೇಳೊ ಜ್ಞಾನಿಯಾಗದೆ ೧
ಹೇಯ ಸುಖವು ಕೋರಿ ನ್ಯಾಯ ಬಿಟ್ಟು ನಡಿಯೆ
ದಾಯ ತಪ್ಪುವುದು ೨
ಗುರುರಾಮವಿಠ್ಠಲನ ಗುರುತರಿಯದೆ ಬರಿದೆ ಕರೆಕರೆಯಲೀ ಕಾಲ೩

೨೧೨
ಕಾಮ ಕ್ರೋಧವನು ಬಿಡು ತಾಮಸಗುಣವ ಸುಡು ಪ
ರಾಮನಾಮ ಜಪಿಸಿ ರಾಜಯೋಗದಲ್ಲಿ ಸೇರು ಅ.ಪ
ಜ್ಞಾನಭಕ್ತಿ ವೈರಾಗ್ಯವೆಂಬಾನಂದದಿ ಮಗ್ನನಾಗಿ
ಹೀನದುರ್ವಿಷಯಗಳೇನು ಕೋರದಿರೆಲವೊ೧
ತತ್ವೋಪದೇಶವ ತೋರು ಸಾತ್ವಿಕರೊಳಗೆ ಸೇರು
ದ್ವಿತ್ವವಿಲ್ಲದಂಥ ಸುಖಮತ್ತನಾಗೋ ಮಾನವ ನೀ ೨
ಪರಮಬೊಮ್ಮನಾದ ಸಿರಿ ನ
ಚರಣಗಳ ಭಜಿಸಿ ಪರಮ ಸುಖಿಯಾಗೆಲೋ ೩

೧೮೪
ಕೃಪೆಯಿಲ್ಲ ವ್ಯಾಕೊ ಎನ್ನ ಮ್ಯಾಲೆ ಕೃಷ್ಣಮೂರುತೀ
ಅಪರಾಧವೆಲ್ಲ ಕ್ಷಮಿಸಿ ಸಲಹೊ ಪಾರ್ಥಸಾರಥಿ ಪ
ನೀನಲ್ಲದನ್ಯರಿಲ್ಲವೆಂದು ನಿಖಿಲ ನಿಗಮವು
ನಾನಾ ಪರಿಯಲಿ ಸಾರುವದು ಸಕಲಶಾಸ್ತ್ರವು ೧
ಅನಾದ್ಯನಂತ ಕಾರಣ ನೀನೆಂದು ಸುಜನರು
ಮನಾದಿಗಳಿಗಗೋಚರನೆಂದೆಲ್ಲ ಪೇಳ್ವರು ೨
ಅನಾಥ ರಕ್ಷಕಾಪ್ರಮೇಯ ಆದಿಪುರುಷನೇ
ಸನಂದನಾದಿ ಸಕಲಯೋಗಿ ವಂದ್ಯ ಚರಣನೇ ೩
ನಿರಪರಾಧಿಗಳನು ಪೊರೆಯಲೇಕೆ ಸಂಶಯ
ಸುರೇಶರುದ್ರ ಬ್ರಹ್ಮಜನಕ ನೀನೆ ನಿಶ್ಚಯ ೪
ಕರುಣದಿ ನೀನೆ ಕಾಯಬೇಕು ಮರೆಯದೆನ್ನನು
ಗುರುರಾಮ ವಿಠಲ ಬಿಡದಿರುಕೈದಾಸದಾಸನು ೫

ಪರಮ ವೈಷ್ಣವರು
೨೮೯
ಕೋಟಿ ಪೂಜೆಗೆ ಸಮವು ಸ್ತೋತ್ರವು
ಕೋಟಿ ಸ್ತೋತ್ರಕೆ ಸಮವು ಜಪಶತ
ಕೋಟಿ ಜಪಕೆ ಸಮಾನ ಧ್ಯಾನವು ಧ್ಯಾನ ಕೋಟಿ ಸಮ
ನಾಟಿಸುವುದು ಮನವನು ಹರಿಯಲಿ
ಸಾಟಿಯಿಲ್ಲ ಮನಾಲಯಕ್ಕೆ ಭ
ವಾಟವಿಯ ದಾಟುವರು ಸುಲಭದಿ ಪರಮ ವೈಷ್ಣವರು ೧
ಕರಿ ಕನಕಕಶಿಪುಸುತಜಾಮಿಳ
ನರಪ ರುಕ್ಮಾಂಗದನು ದ್ರೌಪದಿ
ದುರುಳ ರಾವಣನನುಜ ಮನು ಪೌತ್ರನು ವಶಿಷ್ಠ ಮುನಿ
ಮರುತಜ ಮಹಾರುದ್ರ ನಾರದ
ನರನು ನಾಭಾಗಜನುದಾಲ್ಭ್ಯನು
ಸುರನದೀಸುತ ಶುಕನು ಶೌನುಕ ಬಲಿ ಕಿರೀಟಿಗಳು ೨
ಇವರು ಮೊದಲಾದವರು ಭಕ್ತ
ಪ್ರವರರೆಂದಿಗು ಕೆಡದ ಸುಖವನು
ತವಕದಲಿ ಸಂಪಾದಿಸಿದರಿವರಂಘ್ರಿಯ ಸ್ಮರಣೆ
ಭವವ ನೀಗಿ ಮಹಾಸುಕೃತವನು
ತವತವಗೆ ಕೊಡುತಿಹುದು ನಿತ್ಯದಿ
ಕವಿವಿನುತ ಗುರುರಾಮ ವಿಠಲನ ದಯೆ ಪಡೆಯಬಹುದು ೩

೨೧೩
ಕೋರಬೇಡ ದುರ್ವಿಷಯಸುಖಗಳನು ಕೋತಿಮನವೆ ನೀನು ||ಪ||
ಯಾರಿದ್ದರೇನು ನಿನ್ನ ಯೋಗ್ಯತೆಯ
ಮೀರಿನಡಯಲಸಾಧ್ಯ ಶತಕಲ್ಪಕು ಅ.ಪ
ಕಷ್ಟ ಒದಗಲಿ ನಿಷ್ಠುರ ನುಡಿಯಲಿ ಕೆಟ್ಟವನಿವನೆನಲಿ
ಇಷ್ಟ ಬಂಧುಗಳು ಶತ್ರುಗಳಾಗಲಿ ಇಲ್ಲದೆ ನಿಂದಿಸಲಿ
ಹೊಟ್ಟೆತುಂಬ ಆಹಾರವಿಲ್ಲದಿರಲಿ ಹುಚ್ಚನೆಂದು ಬೈಯಲಿ
ಹುಟ್ಟಿಸಿದವ ತಾ ಕಟ್ಲೆ ಮಾಡಿರುವ ನಷ್ಟವಾಗದಾತನ
ಸಂಕಲ್ಪವು ೧
ನಿನ್ನ ನಿಜವ ನೀ ಪರರಿಗೆ ಬೋಧಿಸಿ ಬನ್ನ ಬಡಲಿ ಬೇಡ
ದೈನ್ಯರಿಂದ ತಲೆಬಾಗುತ ನೀ ಖಳರನ್ನು ಕೇಳಬೇಡ
ಅನ್ಯರಂತೆ ತಾನಿರಬೇಕೆಂದಾಯಾಸ ಹೊಂದಬೇಡ
ತನ್ನತಾನೆ ಹೊಗಳಿಕೊಂಬ ಮನುಜನ
ತತ್ವನಂಬಬೇಡ | ಮೂಢಾ ೨
ಹಿರಿಯರು ಆಡುವ ಮಾತಿಗೆ ಮಾರುತ್ತರವನು ಕೊಡಬೇಡ
ಪರಿಪರಿ ಸಂಕಟ ಬಂದರೂ ನೊಂದು ಪರರ ದೂಷಿಸಬೇಡ
ಸ್ಥಿರವೀ ಶರೀರವೆಂದು ನಂಬಿ ಛೀ ಎನಿಸಿಕೊಳ್ಳಬೇಡ
ಕೊಟ್ಟಭಾಗ್ಯವೆ ಪರಮಸುಖವೆನುತ
ತಿಳಿಯಲೊ ಮೂಢಾ ೩

(ನುಡಿ-೩) ದುಷ್ಟ ವೃಶ್ಚಿಕ ಸರ್ಪದ
ಪಾರ್ವತಿ
೧೫೯
ಕೋರಿಕೆಗಳ ನೀಡಮ್ಮ ಕೋಳಾಲಮ್ಮ ಪ
ಕೋರಿಕೆಗಳ ನೀಡೆ ಗುಣವಂತೆ ದಯಾಮಾಡೆ
ಮಾರಮಣನ ಪಾದದಾರಾಧನೆ ಮಾಳ್ಪದಕೆ ಅ.ಪ
ಹಿಮಗಿರಿ ರಾಜಸುತೆ ಯಮ್ಮಯ ಮಾತೆ
ಕಮಲಾಪ್ತ ಶಶಿವಿನುತೆ ವಿಮಲರೂಪಳೆ
ಅಹಂಮಮಯೆಂಬುವುದ ಬಿಡಿಸಿ
ಕ್ರಮವಾದ ಪಥತೋರೆ ಸುಮ ಶರೀರೆ ೧
ನಿನ್ನುಪಾಸನದ ದೈವದಾಪೆಸರಿನ ಜಪ
ವನ್ನು ಮಾಳ್ವ ಪುಣ್ಯದ ಲೇಶದ ಫಲ-
ವನ್ನು ನೀಯೆನಗಿತ್ತು ಯನ್ನಪಾಪವ ಕಳೆದು
ದುರ್ನಯಶಾಲಿಗಳನ್ನು ತರಿದು ಮುದದಿ೨
ದುಷ್ಟ ವೃಶ್ಚಿಕ ಸರ್ಪದ ಬಾಧೆಯ ಬಿಡಿಸಿ
ಇಷ್ಟಾರ್ಥವ ಸಲ್ಲಿಸಿ
ಶಿಷ್ಟ ಜನರ ಕಾಯೆ ಶಿವನರಸಿಯೆ ತಾಯೆ
ದಿಟ್ಟ ಶ್ರೀ ಗುರುರಾಮ ವಿಠಲನ ತಂಗಿಯೆ ೩

೨೬೩
ಕ್ಷಣದಲಿ ಸೌಖ್ಯ ಕ್ಷಣದಲಿ ದುಃಖ
ಬಣಗು ಸಂಸಾರದಿ ಎಣಿಸಿದರೆ ಪ
ಕೊಟ್ಟರೆ ತಂದರೆ ಸಂತೋಷ
ಬಿಟ್ಟರೆ ಕೊಡದಿರೆ ಬಲುರೋಷ ೧
ಎರೆಡು ಘಳಿಗೆ ಬಹಳಾಯಾಸ
ಏನು ಇಲ್ಲ ಕೊನೆಗೆ ನಿರಾಶ ೨
ತಾನೇಕಾದಶಿ ಪಿಕ್ನಿಕ್‍ವೂಟ
ಭಾನುವಾರ ಇಸ್ಪೇಟಾಟ೩
ಕೋಟುಷರಟು ಜುಬ್ಬ ಇಜಾರು
ನೋಟಕೆ ಮೇಲೆ ಕಾರ್ಬಾರು ೪
ಕರುಡು ಕುಂಟ ಮೂಕರು ಮಾತ್ರ
ನಿರುತವು ದಾನಕೆ ಸತ್ಪಾತ್ರ ೫
ಪತಿವ್ರತೆಯರಿಗೆ ಬಿಚ್ಚೋಲೆ
ಅತಿಜಾರಿಗೆ ಕೆಂಪು ಬೆಂಡೋಲೆ ೬
ಹಾದರಗಿತ್ತಿಗೆ ದೂದ್‍ಫೇಢ
ಸಾಧುಸ್ತ್ರೀಗನ್ನವು ಬೇಡ ೭
ಹಿರಿಯರ ಮಾತಿಗೆ ನಾನ್ಸೆನ್ಸು
ದುರುಳರ ಬೋಧೆಗೆ ತಾ ಒಳ್ಳೆಮನಸು ೮
ಮೋಕ್ಷವಿದ್ಯೆ ಕೆಲಸಕೆ ಬಾರದು
ಕುಕ್ಷಿಂಬರ ವಿದ್ಯೆ ಬಲು ದೊಡ್ಡದು ೯
ಹರಿಕಥೆ ಕೇಳ್ವುದು ಬೇಜಾರು
ಹರಟೆ ಹರಟುವುದು ಬಲು ಜೋರು ೧೦
ಪರರ ನೋಡಿ ನನ್ನಾಚರಣೆ
ಗುರುರಾಮ ವಿಠಲನಲಿಲ್ಲ ಸ್ಮರಣೆ ೧೧

ಅವಲಕ್ಷಣ ಪತಿಯೊಬ್ಬನ
೨೬೪
ಗಂಡನೆ ಪ್ರಾಣಗಂಡನೇ ಪ
ತಿಂಡಿಬಟ್ಟೆಗೆ ತಂದು ಹಾಕದೆ ಜಿಣುಗುವಅ.ಪ
ಹಬ್ಬಬಂದರೆ ಕಣ್ಣು ಹುಬ್ಬುಗಂಟಿಕ್ಕುವ
ಲಿಬ್ಬಿಯಿದ್ದರೆ ತೆಗೆದು ತಾರೆಂಬನು
ಅಬ್ಬರಿಸುತ ಕೂಗಿ ಕೈಯ್ಯೆತ್ತಿ ಬರುವನು
ಒಬ್ಬರಗೊಡವೆ ನಮಗ್ಯಾಕೆ ಎಂಬುವನು ೧
ಸೀರೆ ಕುಪ್ಪಸಕೇಳೆ ಚೀರುತ್ತಯಿಲ್ಲೆಂಬ
ಯಾರೆ ನಿನಗೆ ಬಲಯೆಂಬುವನು
ಮೋರೆ ಮುಚ್ಚಿಕೊಂಡು ನೆಲವ ಬರೆಯುವನು
ಸೋರುವ ಮನೆಯಂತೆ ಎನ್ನ ಸಂಸಾರ ೨
ಅನ್ನಮೊದಲೇ ಇಲ್ಲ ಬಟ್ಟೆ ಮಾತಿನ್ನೇನು
ಯಣ್ಣೆಕಾಣದು ತಲೆಯೇನ್ಹೇಳಲಿ
ಕಣ್ಣುಕಾಣದೆ ನಮ್ಮಪ್ಪಯಿವಗೆ ಕೊಟ್ಟ
ಗನ್ನಘಾತಕನಿವ ಕಲಿಕಾಲಜಗಳ ೩
ಓದುಬರಹಗಳೆಂಬ ಹಾದಿಯ ತಾಕಾಣ
ಶೋಧನೆ ಮಾಡುವ ಕ್ಷಣಕ್ಷಣಕೆ
ಸಾಧುಗಳು ಮನೆಗೆ ಬಂದರೆ ಸೇರನು
ಆದದ್ದಾಗಲಿಯಿನ್ನೇನು ಮಾಡುವೆನಾನು ೪
ಇರುಳು ಹಗಲುಯನ್ನ ಕರೆಕರೆ ಪಡಿಸುವ
ಹಿರಿಯರ ಮಾತನು ತಾ ಕೇಳನು
ತರುಣಿ ಮಣಿಯೆ ಕೇಳು ನ
ಚರಣಕಮಲವೆನಗೆ ದೊರೆಯುವುದ್ಹ್ಯಾಗೆ ೫

(ನುಡಿ-೧) ವೇದಘೋಷದಿಂದ ಉದಿಸಿ-
೧೦೦
ಗಂಧವಿದೇಭವ ಬಂಧ ವಿಮೋಚನ ಗರುಡ
ಗಮನ ಕೃಷ್ಣಾ ಪ
ಇಂದಿರೇಯರಸ ಮುಕುಂದ ಮೂಜಗಕ್ಕೆ
ತಂದೆತಾಯಿ ನೀನೇ | ಶ್ರೀರಾಮಾ ಅ.ಪ
ವಾಸನೆ ಪರಿಪಳ ಗಂಧ ಕರ್ಪೂರ
ಕೇಸರಿ ಪುನಗುಗಳೂ
ನೀಸತಿ ಸಹಿತ ಸದಾ ಲೇಪಿತ ಶ್ರೀನಿ-
ವಾಸ ಸುಗುಣಧಾಮಾ | ಶ್ರೀ ರಾಮ ೧
ಸ್ಪುರಿಪಲಲಾಟದೊಳೂಧ್ರ್ವ ಪುಂಡ್ರಕ-
ಸ್ತುರಿತಿಲಕವು ಬೆಳಗೇ
ಹರಿದ್ರಾ ಕುಂಕುಮ ಮಂಗಲ ದ್ರವ್ಯ ನಿನ್ನ
ಅರಸಿ ಜಾನಕಿ ದೇವಿಗೇ | ಶ್ರೀರಾಮ ೨
ಕ್ಷತೆಯಿಲ್ಲದವನು ನೀನೆಂಬುವದ-
ಕ್ಷತೆ ನಿನದಿದೊ ದೇವಾ
ಪತಿತ ಪಾವನ  ಜಗ
ತ್ಪತಿ ಮಹಾನುಭಾವಾ | ಶ್ರೀರಾಮ ೩

ಗಣೇಶ ಪ್ರಾರ್ಥನೆ

ಗಜವದನಾ ಗಣೇಶಾ ಪ
ನೀ ಮೊದಲು ಸಕಲ ವಿಘ್ನಗಳ ಕಳಿಯೊ ಅ.ಪ
ಗಿರಿಜಾಮಲ ಸಂಭೂತ ನಮೋ ನಮೋ
ಹರಿಬ್ರಹ್ಮ ಶಿವರಿಗತಿ ಪ್ರಿಯನೆ ೧
ಲಂಬೋದರ ಹೇರಂಬ ವಿನಾಯಕ
ಕಂಬುಕಂಠ ಶುಕ್ಲಾಂಬರಧರ ೨
ಸರೋಜಾಂಬಕ ನ
ಸ್ಮರಿಸುವ ಸುಜನರಿಗೆ ಅಭಯವ ಕೊಡು ನೀ ೩

(ನುಡಿ-೨) ಮೂಲಾಧರ ನಿಲಯ

ಗಣೇಶ ಬಾರೋ
ಕರುಣವ ಬೀರೋ ಪ
ತ್ರಿಗುಣಯ್ಯನ ಸುತ
ಮುನಿಜನಹಿತ ಅ.ಪ
ವಿಘ್ನನಿಕರಗಳನೆಲ್ಲವ
ಭಗ್ನವೆಗೈಯುತಲಿಶ
ತೃಘ್ನಾಗ್ರಜನಣ್ಣನನಿ-
ರ್ವಿಘ್ನತೆಯಲಿ ಭಜಿಸುವದಕೆ ೧
ಮೂಲಾಧಾರನಿಲಯರಿಪು
ಕಾಲಗಿರಿಸುತಾಬಾಲ
ಲೀಲಾಮಾತ್ರದಿ ಸುಜನರ
ಪಾಲಿಸುತಿಹೆ ಕರುಣಾಳೊ ೨
ತಾಮಸದಾನವ ಹರಗುರು
ರಾಮವಿಠಲನಡಿಗಳನಿ-
ಷ್ಕಾಮದಿಂದ ಭಜಿಸುವರಿಗೆ
ಕಾಮಿತ ಫಲಗಳ ಕೊಡುವಡೆ ೩

೨೦
ಗತಿಯೆಂದು ನಂಬಿದೆ ನಿನ್ನ ಕಾಯೊ ಎನ್ನ | ಲಕ್ಷ್ಮೀ
ಪತಿಯೆ ಪುರುಷೋತ್ತಮ ವಿಶ್ವಮೋಹನ್ನ ಪ
ಗತಿಯಿಲ್ಲದವರಿಗೆ ಗತಿನೀನಲ್ಲವೆ ಸ್ವಾಮಿ
ಸತತನಿನ್ನಯ ಪಾದಾಶ್ರಿತರಲ್ಲವೆ ನಾವು ಅ.ಪ
ಅಗಣಿತಗುಣಪೂರ್ಣನೆಂದು ದೀನಬಂಧು | ಸ-
ರ್ವಗಸರ್ವಾಂತರ್ಯಾಮೀ ಮೊರೆಹೊಕ್ಕೆನಿಂದು
ಜಗದಾದಿಕಾರಣ ಜಲಜಾತ ನಯನ ಪ-
ನ್ನಗರಾಜಶಯನ ಪ್ರಸನ್ನ ವತ್ಸಲ ಶೌರಿ ೧
ವಾಸುದೇವಾಚ್ಯುತಾನಂತಾದಿಮದ್ಯಾಂತ ರಹಿತ
ವಾಸುದೇವಾನುಜ ಸರ್ವಾಧೀಶ ಶ್ರೀಕಾಂತ
ನಾಶರಹಿತ ಪರಮಾತ್ಮ ಪಾಪವಿದೂರ
ನಾಥನು ನೀನು ಅನಾಥರಿಗೆಲ್ಲ ೨
ಸ್ಮರಿಸಿದವರ ಕಷ್ಟಗಳನು ಬಿಡಿಸುವೆ
ಶರಣಾಗತ ರಕ್ಷಾನತಸುರಧೇನು
ಗುರುರಾಮವಿಠ್ಠಲ ಕರುಣಾಸಾಗರನು ಎಂ-
ದರಿತು ನಿನ್ನಡಿಗಳ ಭಜಿಸಿ ಬೇಡುವೆನು ೩

೧೪೮
ಗಿರಿಜೇಶಾ ಕರುಣಾ ಸಮುದ್ರ ಪರಿಪಾಲಿಸೆನ್ನನು ಓ ರುದ್ರ ಪ
ಹರಶಂಕರ ಪುರಹರ ಗಂಗಾಧರ
ಉರುಗಭೂಷಾ ಶರಣತೋಷಾಭವ ಭೂತೇಶಾ ಅ.ಪ
ಹಲವು ವಿಧದಲಿ ಚಪಲ ಚಿತ್ತನಾಗುತ
ಬಳಲುವೆನುಬೇಡಿಕೊಂಬೆನು ಪಾಲಿಸೊ ನೀನು ೧
ಅನುದಿನದಿ ಶ್ರವಣ ಮನನವ ಮಾಡಿಸಿ
ಘನಪಾಪವ ಖಂಡ್ರಿಸುದೇವ ಮೃತ್ಯುಂಜಯ ಶಿವ ೨
ಕಾಮನಗೆಲಿದಾ ಮಹಾಮಹಿಮನೆ ಗುರು-
ರಾಮವಿಠಲನ ಸಖನೆ ನಿನ್ನ ಪ್ರಾರ್ಥಿಸುವೆನಾ ೩

ಗುರುಸ್ತುತಿ
೧೬೫
ಶ್ರೀರಾಮವಿಠಲ
ವರ ಭಾಗ್ಯನಿಧಿವಿಠಲ ಜಯತು
ಪರಮಾತ್ಮಭಿನವ ಜನಾರ್ದನ ವಿಠಲ ಸಿರಿಜನಾರ್ದನ
ವಿಠಲ ಜಯತು ೧
ಗುರುಗೋಪಾಲ ವಿಠಲ ಗೋಪಾಲ ವಿಠಲ
ವಿಜಯ ವಿಠಲ ಜಯ ಜಯತು
ಪುರಂದರ ವಿಠ್ಠಲ ಶ್ರೀಕೃಷ್ಣ ಪರಾತ್ಪರ ರಂಗ ವಿಠಲ ಜಯ
ಜಯತು ೨
ಜೈ ಜೈ ವಿಠ್ಠಲ ಜೈ ಜೈ ವಿಠ್ಠಲ ಜೈ ಜೈ ವಿಠ್ಠಲ ಜಯ ಜಯತು
ಜಯ ಪುಂಡರೀಕ ವರದ ಭಕ್ತಜನ ಭಯಹರ
ಗುರುರಾಮ ವಿಠಲ ಜಯತು ೩

(ನುಡಿ-೨) ಆರು ಮಂದಿಯ ಹುಡುಗಾಟ
೧೬೮
ಗುರುರಾಯ ಕರುಣಿಸೊ ಶರಣಾಗತರಂ ಪ
ಸ್ಮರಣೆಮಾತ್ರದಿ ಸರ್ವದುರಿತಗಳ ಕಳೆದು
ಪರಮಪುರಷನ ದರ್ಶನವೀಯುತೆ ಅ.ಪ
ನಾನು ಎಂಬೊ ದುರಭಿಮಾನವ ಖಂಡಿಸು
ನೀನೇ ಸರ್ವತ್ರಯೆಂಬ ತತ್ವ ಬೋಧಿಸು ೧
ಆರು ಮಂದಿಯ ಹುಡುಗಾಟವು ಹೋಗಲಿಯಿ-
ನ್ನಾರುಮಂದಿಯೊಳು ಸ್ನೇಹವು ಬೆಳಿಯಲಿ ೨
ಗುರುರಾಮ ವಿಠ್ಠಲನೆ ಸರ್ವೋತ್ತಮನೆಂದು
ಇರುಳೂ ಹಗಲು ನೆನೆವ ಭಾಗ್ಯಕೊಡಿಸಿ ೩

ಇದು ರಿಗೆ
೧೬೭
ಗುರುರಾಯ ನಿನ್ನ ಸಮರನ್ಯಾರ ಕಾಣೆ ಪ
ತರತಮ ಪಂಚಭೇದವರ ಮಾರ್ಗವ ತೋರೋ ಅ.ಪ
ತ್ರಿವಿಧ ಜೀವರಿಗೆ ಹರಿ ಕಾರಣ ಕರ್ತನೆಂದು
ವಿವಿಧ ಗತಿಗಳೆಂದು ಶ್ರವಣ ಮನನ ಮಾಡಿಸೊ ೧
ಪರಮಾತ್ಮ ಜೀವಾತ್ಮ ಪರಸ್ಪರ ಭೇದವೆಂದು
ಅರುಹಿಸೊ ನಿನ್ನವರಿಂದನುದಿನ ಗುಣಸಿಂಧು ೨
ನಿಜ ಸಿದ್ಧಾಂತ ಸುಜನರಿಗೆ ಬೋಧಿಸಿದ
ಭುಜಗ ಶಯನನ ಭಕ್ತ ವಿಜಯ ರಾಮದಾಸವರ್ಯಾ ೩
ಶಂಕೆಗಳ ಬಿಡಿಸಿ ಮೊರೆಹೊಕ್ಕ ಶಿಷ್ಯರಿಗೆ
ಅಂಕಿತಗಳ ಕೊಟ್ಟು ಆದರಿಸುವೆ ಸದಾ ೪
ಭಾಗ್ಯನಿಧಿ ದಾಸರ ಶಿಷ್ಯಾಗ್ರೇಸರ ಎನ್ನ
ಯೋಗ್ಯತೆ ತಿಳಿಸಿ ನ ತೋರೋ ೫

೧೭೦
ಗುರುವೇ ರಾಘವೇಂದ್ರ ಪ
ಗುರುವೆ ಆಶ್ರಿತ ಸುರತರುವೆನುತಲಿನಿನ್ನ
ಚರಣ ನಂಬಿದವರಿಗೆ ಪರಮಾನುಗ್ರಹ ಮಾಳ್ಪ ಅ.ಪ
ಮಂತ್ರಾಲಯದಲಿ ನೀನಿಂತುನಿರಂತರ
ಸಂತರಿಷ್ಟಾರ್ಥವ ಸಲಿಸುತಲಿರುವೆ ೧
ಜಡಮೂಕಬಧಿರಾಂಧರು ನಿನ್ನ ಭಜಿಸಲು
ದೃಢ ಮಾಡಿ ಅವರ ಆದರಿಸುವೆ ಸತತ೨
ಸ್ಮರಣೆ ಮಾಳ್ಪರ ಭವ ದುರಿತವ ತರಿವೆ
ನ ಶರಣರಗ್ರಣಿಯೆ ೩

(ನುಡಿ-೧) ಉತ್ರ‍ಕಷ್ಟ ಹರಿಯೆನುತ
೧೬೯
ಗುರುವೇ ಸುರತರುವೇ
ಹರಿಭಕ್ತಾಗ್ರೇಸರ ವಿಜಯರಾಯ ಪ
ಪುರಂದರದಾಸರ ಕರುಣಕೆ ಪಾತ್ರನೆ
ಮರುತ ಮತಾಬ್ಧಿಗೆ ಚಂದ್ರ ವಿಜಯರಾಯ ಅ.ಪ
ವಿಷ್ಣು ಬ್ರಹ್ಮ ಶಿವರನುಪರೀಕ್ಷಿಸುತು
ತ್ರ‍ಕಷ್ಟ ಹರಿಯೆನುತ ಶಿಷ್ಟರಿಗರುಹಿದ ೧
ಜನುಮ ಜನುಮದಿಂದನುಸರಿಸುತಿಹ
ಘನದುರಿತವ ದರುಶನ ಮಾತ್ರ ಕಳೆವ೨
ಪರಂಪರದಿ ತವಪಾದ ಸೇವಗೆ
ಗುರುರಾಮ ವಿಠಲನ ಚರಣವ ತೋರಿಸು ೩

೧೬೬
ಗುರುಸಂತತಿಗೆ ನಮೊ ನಮೊ ಶ್ರೀ
ಹರಿಶರಣರಿಗೆ ನಮೋ ನಮೋ ಪ
ಪರಮರಹಸ್ಯಾರ್ಥಗಳ ತಿಳಿದಿರುವ
ಧರಣೀಸುರರಿಗೆ ನಮೋ ನಮೋ ಅ.ಪ
ವಿಜಯರಾಮದಾಸಗುರುವೆ ನಮೋ ನಮ
ಭಜಕಜನರಸುರತರುವೆ ನಮೋ
ವೃಜಿನ ಕಳೆವ ಭಾಗ್ಯನಿಧಿದಾಸ ನಮೋ
ವಂದೇ ಸುಪ್ರೇಮದಾಸ ನಮೋ ೧
ತಿರುಮಲಾಖ್ಯದಾಸರಿಗೆ ನಮೋ ನಮ
ಗುರುಗೋಪಾಲರಾಯರಿಗೆ ನಮೋ
ವರ ಭಾಗಣ ವಿಜಯರಾಯರಿಗೆ ನಮೋ
ಪುರಂದರಾಖ್ಯ ಸುರಮುನಿಗೆ ನಮೋ ೨
ವ್ಯಾಸಾಭಿಧಮೌನೀಶನಮೋ | ಹರಿ
ದಾಸಶ್ರೀಪಾದರಾಯರಿಗೆ ನಮೋ
ಭೂಸುರ ಪ್ರಿಯಹನುಮತೇ ನಮೋ
ಸೀತೇಶ ಶ್ರೀಗುರುರಾಮ ವಿಠಲ ನಮೋ ೩

(ನುಡಿ-೩) ಒಂದರೊಳಗೆ ಎರಡಾಗಿ
ಪುರಂಜನೋಪಾಖ್ಯಾನ ಲಾವಣಿ
೩೩೯
ಗುರುಹಿರಿಯರ ಬಲಗೊಂಡು ವಿನಾಯಕ
ಗೆರಗಿ ಮಹೇಶ್ವರನಾ
ಶಾರದೆಯ ಸರಸಿಜಸಂಭವನಾ | ಇಂದಿರೆ
ಯರಸನಾರಾಯಣನ
ಪರಮಭಕ್ತಿಯಲಿ ಪ್ರಾರ್ಥಿಸಿ ಸತ್ಕವಿ
ವರರ ಬೇಡುವೆ ನಾನು | ಸನ್ಮತಿಗೆ
ಕರುಣಿಪುದು ಜ್ಞಾನ |
ಚರಣಗಳಿಗೆ ಬಿನ್ನೈಸುವೆನಾ ೧
ಯತಿಗಣಪ್ರಾಸೊಂದಾದರು ತಿಳಿಯದು
ಮತಿಹೀನನು ನಾನು | ನಾನಾಚಮ-
ತ್ರ‍ಕತಿಗಳರಿಯದವನು | ಆದರೀ
ಕೃತಿಯಲಿ ತಪ್ಪೇನು |
ಮತಿಯಲಿ ಭಗವಂತನು ಪೇಳಿಸಿದ
ರೀತಿಯಲಿ ಪೇಳಿರುವೆನು | ಇರುತಿರುವ
ಗತಿಯ ವಿಸ್ತರವನು
ಮತಿವಂತರಾಲಿಸುವುದು ನೀವಿದನು ೨
ಒಂದರೊಳಗೆ ಎರಡಾಗಿ ಎರಡರೊಳು
ಹೊಂದಿ ಮೂರ್ನಾಲ್ಕೈದಾಗಿ
ಆರೇಳೆಂಟೊಂಬತ್ತುಗಳಾಗಿ | ಸಕಲದೊಳು
ಹೊಂದಿರುವುದುತಾಗಿ
ಕುಂದಿಲ್ಲದೆ ಇರುತಿರುವ ಮಹಾತ್ಮನ
ವಂದಿಸುವೆನು ಬಾಗಿ | ಜನರು ಇದ
ರಂದವ ಚನ್ನಾಗಿ | ತಿಳಿದು ಸುಖ
ತಂದವನೇಯೋಗಿ ೩
ಮೊದಲು ಮಹತ್ ಸೃಷ್ಟಿಯಲಿ ಎಲ್ಲತ-
ತ್ವದಲಿ ತೋರುತಿಹುದು
ಬೇರೆಬೇರಾಗಿ ಕಾಣಿಸುವುದು
ಒಂದೊಂದ್ಹೊಂದಲೆ ಅನಾದಿಯಿದು
ಅದುಭುತವಾಗಿಹ ಅನಾದಿ ಕರ್ಮತ್ರಿ-
ವಿಧದಿ ಭಾದಿಸುವುದು | ಅದರೊಳು ಬಿ-
ಡದೆ ತಾ ಮುತ್ತುವುದು
ಎಂದಿಗು ನಿಜವತಿ ರಹಸ್ಯವಿದು ೪
ಮೊಟ್ಟೆವೊಂದು ದಶಸಾವಿರವರುಷಗ
ಳಿಟ್ಟು ಜಲದಿತಾನು | ಅದಕೆ ಕೈ-
ಗೊಟ್ಟು ಎಬ್ಬಿಸಿದನು | ನಾನಾ ವಿಧ
ಬಟ್ಟೆಗಳ್ಹರವಿದನು
ವೆಷ್ಟಿ ಸಮಷ್ಟಿಗಳೆರಡೆಂದದರೊಳು
ಗುಟ್ಟಂಗಡಿಸಿದನು | ಗುರಿಯಮಾ
ಡಿಟ್ಟು ಚೇತನಗಳನು | ಅನೇಕವು
ಪಟ್ಟಣ ರಚಿಸಿದನು ೫
ಈ ಪಟ್ಟಣಕಾರ್ ಮಂದಿ ಇರುವರತಿ
ಪಾಪಿಗಳಾಳುಗಳು | ಹೊರಗೊಳಗೆ
ವ್ಯಾಪಿಸಿ ಘಳಿಗೆಯೊಳು | ತಮದೆನುತ
ಕಾಪಾಡುವರದರೊಳು
ವ್ಯಾಪಾರಗಳನು | ಬಹುವಿಧಮಾಡುವ-
ರಾಪುರ ಜನರುಗಳು | ಇವರುನಡೆ
ದಾಪರಿ ತಾವುಗಳು | ಬಾರದಿರೆ
ಕೋಪಿಸೆ ಹಗಲಿರುಳು ೬
ಎರಡು ಮಾರ್ಗದೊಳಿರುತಿಹರೆಲ್ಲರು
ಹುರುಡಿಲ್ಲವುನೋಡೆ | ಗಜಿಬಿಜಿಯು
ತರತರದಲಿಮಾಡೆ | ನಮಗಿದೆ
ಸ್ಥಿರವೆನ್ನುತ ಕೂಡೆ |
ಪರಿಪರಿ ಬಗೆಯಲಿ ಭೇದ ಪುಟ್ಟುವುದು
ಕರೆಕರೆಯಂದುಡೆ | ವಳಗೆಕೆಲ
ಬರುಹರುಷದಿ ನೋಡೆ | ಯುವಶೃಂ-
ಗರುವು ಇದಕೆ ಈಡೆ ೭
ಇದೆತನ್ನದೆನುತೋರ್ವಳು ಮಾನಿನಿ
ಚದುರತನದಿ ಬಂದು | ಊರ
ಮುಂದಿರುವ ವನದಿ ನಿಂದು | ಅವಳಿಗಿರು
ವುದು ಜನ ಹನ್ನೊಂದು
ಚದುರೆಯೈದುತಲೆ ಸರ್ಪವಾಡಿಸುತ
ಜಾಣೆಯಿರುವಳಂದು | ತಾನೊಬ್ಬನ
ಮದುವೆಯಾಗಿ ಇಂದು | ಸುಖದೊಳಾ-
ಳ್ಬೇಕುರಾಜ್ಯವೆಂದು ೮
ಅರಸನೊಬ್ಬ ವಿಜ್ಞಾತನೆಂಬ ಭೂ-
ಸುರನಸಹಿತನಾನಾ | ದೇಶಗಳ
ತಿರುಗುತ ಉದ್ಯಾನ | ವನದಿಕಂ-
ಡನು ಆತರುಣಿಯನ
ಪರಮ ಮಿತ್ರನಹ ಬ್ರಾಹ್ಮಣನ ಮರೆತು
ಹರುಷದಿ ಪೊಕ್ಕುವನ | ಸ್ಮರಶರಕೆ
ತರಹರಿಸುತಲಿರೆ ಮನ | ಕೇಳಿದನು
ನಗುತಲಿ ನಾರಿಯನ ೯
ಯಾರೆ ಹುಡುಗಿ ನೀನ್ಯಾರೆ ನಿನ್ನ ಪೆಸ-
ರೇನು ಪೇಳೆ ಹೆಣ್ಣೆ | ಮಾತನಾ-
ಡೆಲೆ ತಾವರೆಗಣ್ಣೆ | ನಿನ್ನ ಮೈ-
ಸುಲಿದ ಬಾಳೆಯ ಹಣ್ಣೆ
ಯಾರದು ಈ ಜನ ಉರಗವೇನು ವನ-
ವಾರದು ಶಶಿವದನೆ | ಈ ಪುರವ-
ನಾಳುವನಾವವನೆ | ಒರ್ವಳಿ-
ಲ್ಲಿರುವುದಕೇನ್ಹದನೆ ೧೦
ಎನಲು ನಸುನಗುತವನಿತೆನುಡಿದಳೀ
ಜನಗಳು ನನ್ನವರು | ಇಲ್ಲಿಕಾ-
ಣುವ ಪುರ ನನ್ನೂರು | ಸರ್ಪನ-
ನ್ನದು ಇದಕಿನ್ನಾರು |
ಅರಸರಿಲ್ಲ ನಾನೊಬ್ಬಳಿರುವೆನೀ
ವನದೊಳು ನೀನ್ಯಾರು | ನಿನ್ನಕಥೆ
ವಿವರಿಸೆನಗೆ ತೋರು | ಯನ್ನ ಬಳಿ-
ಗಿಷ್ಟವಿರಲುಸಾರು ೧೧
ಎಲ್ಲಿ ನೋಡೆ ಸ್ಥಳವಿಲ್ಲವೆನಗೆ ನಿ-
ನ್ನಲ್ಲೆ ಬಂದಿರುವೆನು | ಬಾಧಿಸುವ
ನೆನ್ನ ಪುಷ್ಪಶರನು | ನೀನುಪೇ-
ಳಿದ ಪರಿ ನಡೆಯುವೆನು
ವಲ್ಲಭನನು ಮಾಡಿಕೊ ಎನ್ನನು ಬಹು
ಬಲ್ಲಿಯಳೆ ನೀನು | ನಿನ್ನಸರಿ
ಚಲ್ವೆಯರಾರಿನ್ನು | ಇಬ್ಬ-
ರಾಳ್ವೆಯೀವೂರನ್ನು ೧೨
ಎನಲು ಹರುಷಗೊಂಡಾಕೆ ಸಮ್ಮತಿಸಿ
ಜನವೆರಗಿತಂದು | ನುಡಿದಳಾಮೊಗದ-
ಲಿನಗೆತಂದು | ನಿನ್ನಮೇಲ್
ಮನಸಾಯಿತುಯಿಂದು
ಮನುಮಥಕಲಹದಿ | ದಣಿಸುವೆ
ನಿನ್ನನು ಮಾನವೇತಕಿಂದು | ಆಳು
ಜನಸಹಿತ ಪುರವ ಮುಂದು ನೀನು
ನಾನಿರುವೆವಾಗಿವಂದು ೧೩
ಆದೊರೆ ಮರುಳಾಗುತಿಹನಿವಳ ಮಾತಿಗೆ
ಮೋದ ಹೊಂದಿ ಮನದಿ | ಇವಳ
ಸಹಪೊಕ್ಕನಾಪುರದಿ | ಜನಗಳನು
ಸರ್ವವನ್ನು ಭವದಿ
ಆದರಿಸುತತತ್ಪುರ ಮಧ್ಯ | ದೊ
ಳುಪ್ಪರಿಗೆಯೇರಿ ತ್ವರದಿ | ಸರ
ಸಗಳನಾಡಿ | ಬಹುತರದಿ
ಮುಳುಗಿ ಸಂಸಾರವೆಂಬಶರಧಿ ೧೪
ಅನ್ನಪಾನಾಭರಣ ಕುಸುಮ
ವಿನ್ನು ಗಂಧಧೂಪ | ತಾಂಬೂಲಗಳ
ಮನ್ನಣೆಯಲಿ ಭೂಪ | ಪೊಂದಿದ ಸುಖ
ವನು ನಾನಾರೂಪ | ನನ್ನದು
ನಾನೀ ಪಟ್ಟಣಕರಸನು
ಎನ್ನುತಲಿ ಪ್ರತಾಪ | ಶಾಲಿತಾ-
ನೆನ್ನುತಾ ಪೊಗಳಿದ
ರಾಜ್ಯವಾಳಿದನಾಗುತಭೂಪ ೧೫
ದ್ವಾರಗಳೊಂಭತ್ತಾಪುರಕಿರುವುದು
ಮೂರು ಪೂರ್ವದಲ್ಲಿ | ಮೇ-
ಲೆರಡು ಕಿಟಕಿಗಳಿಹವಲ್ಲಿ | ಬಿಗಿಸಿ
ಕಟ್ಟಿಹುದು ಕನ್ನಡಿಯಲಿ
ತೋರುವುದುತ್ತರದಕ್ಷಿಣದೊಳೆರಡು
ದ್ವಾರ ಪಶ್ಚಿಮದಲಿ
ಎರಡುಬಾಗಿಲುವೊಂದದರಲ್ಲಿ | ಸುಖಗಳಿಗೆ
ಕಾರಣವದರಲ್ಲಿ ೧೬
ಮತ್ತದರೊಳಗಾರ್ಸುತ್ತು ಕೋಟೆ ಒಂ-
ಬತ್ತು ಬಾಗಿಲ ಪುರದಿ | ಅನೇಕವು
ಚಿತ್ರವು ಬಹುತರದಿ | ಒಳಗಿರುವ
ಗೊತ್ತನಾವವಿಧವಿ |
ಹತ್ತಿನೋಡುವರಸಾಧ್ಯ | ವುಜನರಿಗೆ
ಉತ್ತಮವಹಪುರದಿ | ಮುಖ್ಯವಾ-
ಗಿರುವದೆರಡು ಬೀದಿ | ದೊರೆಯಮನೆ-
ಯಿರುವುದು ವಿಸ್ತರದಿ೧೭
ಇಂತರಮನೆಯಲಿ ದೊರೆ ಕಲಿಯಾಗುತ
ಕಾಂತೆಯೊಡನೆ ಸೇರಿ | ಸದಾಸು-
ಸ್ವಾಂತನಾಗಿಮೀರಿ | ಸೌಖ್ಯಹೊಂ-
ದುತಲಾವೈಯ್ಯಾರಿ
ನಿಂತರೆ ನಿಲುವನು ಕುಳಿತರೆ ಕೂಡುವ
ಮಲಗಿದರೆ ನಾರಿ | ತಾನು
ಮಲಗುವಯೇಕದಿ ಸೇರಿ | ಉಂಡ-
ರುಣ್ಣುವನು ಅವಳನುಸಾರಿ ೧೮
ಮಗುವಿನಕೈಯಲಿಸಿಕ್ಕಿದ ಶಲಭದ
ಬಗೆಯೊಳಿರುತಲವನು | ಒಂದು ದಿನ
ಮನದಿಯೋಚಿಸದನೂ | ಈಗಲೆ
ಮೃಗಯಾತ್ರೆಗೆತಾನೂ |
ಸೊಗಸಿಂದ ಸೈನ್ಯವ ಕೂಡುತ ಪುಂ-
ಚಪ್ರಸ್ಥವನವನು | ಪೊಕ್ಕು ಅ-
ಲ್ಲಿರುವಮೃಗಗಳನ್ನು | ಹೊಡೆದು ಸಂ-
ತೋಷದಿ ಸುಖಿಸುವೆನು ೧೯
ಮೂರೆರಡು ಕುದುರೆಯೈದು ಮೇಲ್
ಮೂರು ಪತಾಕಿಗಳು | ಅ-
ಚ್ಚೆರಡು ಎರಡು ಕೂಬರಗಳು | ಚಕ್ರ
ವೆರಡುವರೂಥಗಳೇಳು
ಆರಥಕೊಪ್ಪುವದೇ-
ಕರಶ್ಮಿನಾಲ್ಕೊಂದು ವಿಕ್ರಮಗಳು | ಒಬ್ಬ
ಸಾರಥಿ ಎರಡು ಗತಿಗಳು | ಬಿಗಿಸಿಹುದು
ಕನಕಭೂಷಣಗಳು ೨೦
ಇಂತಿಹರಥವೇರಿ ಪುರಂಜನ ಭೂ-
ಕಾಂತಕರದಿ ಧನುವ | ಪಿಡಿದುಸು-
ಸ್ವಾಮತದಿಂದಲನುವಾ | ಗಿಬಹ ಹನ್ನೊಂ-
ದು ತನ್ನ ಜನನ | ಸಂತಸದಲಿ ಕೂ-
ಡುತ ಹೊರಡುತ ತಾ ಪೊಕ್ಕನು
ಕಾನನವಾ | ಶರಗಳಿಂ-
ದ್ಹೊಡದು ಮೃಗನಿವಹವಾ | ಮೇರೆಯಿಲ್ಲ-
ದೆ ತಟ್ಟುತ ಭುಜವಾ ೨೧
ಇನಿತು ಬೇಟೆಯಾಡುವ ಕಾಲದಿ ತನ್ನ
ಮನದಿ ನೆನೆದು ಸತಿಯಾ | ತಕ್ಷಣವೇ
ಬಂದು ಸೇರಿ ಮನೆಯ | ಕಾಣದೆ
ಹುಡುಕಿದನು ಯುವತಿಯ
ಜನಪತಿಕಕ್ಷಾಂತರದಲಿ ಕೇಳುತ
ಮಂಚದೊಳಿಹ ಸತಿಯ | ಕಂಡುಲಾ-
ಲಿಸುತ ಚಮತ್ರ‍ಕತಿಯಾ | ನುಡಿಯಲುಪ-
ಚರಿಸಿದನಾಕಾಂತೆಯ ೨೨
ನೂರುವರುಷವೀರೀತಿಯವಳೊಡನೆ
ಸೇರಿನೃಪಾಲಕನು |
ನೂರುಹನ್ನೊಂದು ಮಕ್ಕಳನ್ನು | ಪಡೆದು ಸಂ-
ಸಾರದಿ ಕಾಲವನು | ಯಾರೆ-
ದುರಿಲ್ಲದೆ ಕಳೆಯಲುಯೌವ್ವನ
ಮೀರಿ ಹೋದುದಿನ್ನು | ಮೊಮ್ಮಕ್ಕಳ
ಪಡೆದನನೇಕರನು
ದೇಶತುಂಬಿಸಿದ ತನ್ನ | ವರನು ೨೩
ಉತ್ತರ ದಕ್ಷಿಣ ಪಾಂಚಾಲಗಳಾ
ಳುತ್ತಲಿವನು ತನ್ನ | ಸುತರಬೆರೆ-
ಯುತ್ತಸದಾ ಚಿನ್ನ | ಬೆಳ್ಳಿ ನವ-
ರತ್ನರಾಶಿಗಳನಾ | ಮತ್ತೆ ಮತ್ತೆ ಕೂಡಿ-
ಸುತೈಶ್ವರ್ಯದಿ ಮತ್ತನಾ | ಗುತಲನ್ಯಾ
ಚಿಂತೆಯಿಲ್ಲದೆ ನಾ | ಬಲು
ಪುಣ್ಯವಂತನೆ |
ನ್ನುತ್ತತಿಳಿದಿರುವನಾ ೨೪
ಚಂಡವೇಗವೆಂಬುವರಾ ತಮ್ಮತಮ್ಮ
ಹೆಂಡಿರುಗಳು ತಾವು | ಸೇರಿಮು-
ನ್ನೂರರವತ್ತು ಜನವು | ಗಂಧರ್ವರು
ಬಂಡೆಬ್ಬಿಸಿ ಪುರವು | ದಂಡು
ಕೂಡಿಯುದ್ಧಮಾಡಲವ | ರ
ರೂಪುಸಿತಾಸಿತವು | ಬರಬರುತ
ಮುಂದಾಗೆ ರಿಪುಬಲವು | ಕ್ಷೀಣಗತಿ
ಹೊಂದುತಲಿರೆ ಪುರವು ೨೫
ಸ್ತ್ರೀಜಿತನಾಗಿಹಕಾರಣದಲಿಯಾ
ರಾಜಪುರಂಜನಗೆ | ಯತ್ನವಿ-
ಲ್ಲದೆ ತನ್ನಯಪುರಿಗೆ | ಕೇಡುಬಂ-
ದರು ತೋರದು ಕೊನೆಗೆ |
ಸೋಜಿಗಪಡುತಲಿ ಜಯಿಸಲಾರದೆ
ಶೋಕದಿ ಮನದೊಳಗೆ | ಮಿ
ಡುಕುತಲಿರಲಾನೃಪತಿಮೇಗೆ | ಮತ್ತು
ಶತ್ರುಗಳುನೆರೆಯೆ ಹೀಗೆ ೨೬
ಯವನೇಶ್ವರನೊಬ್ಬನುಭಯಪ್ರಜ್ವಾ
ರಾದಿ ಸೈನಿಕರನು | ಕಾಲಕನ್ಯಾಖ್ಯ
ಯುವತಿಯನ್ನು | ಕರೆದುಕೊಂ-
ಡೀಪುರವ ಸೇರಿದನು |
ಬವರದಿ ಗೆದ್ದನು ಭವಿಸಿದನಾ
ಕನ್ಯಾಮಣಿಪಟ್ಣವನು | ಭೋಗಿಸಿದ-
ಳಾಪ್ರಜ್ವಾರನನು | ಸುಡಲುಪುರಿ
ಕಂಡು ಪುರಂಜನನು ೨೭
ಕಾಲಕನ್ಯೆ ತಾ ಲೀಲೆಯಿಂದಲಿ ನೃ-
ಪಾಲನ ಹತ್ತಿಗೆಯಾ | ಪಿಡಿಯೆ ಹಾ-
ಹಾಯೆನಲಾರಾಯಾ | ಅಬಲತೋ-
ರದು ಮುಂದೆ ಉಪಾಯ |
ಬಾಲಕರನು ಪತ್ನಿಯ | ನುಕೂಗಿಬಿಡು-

೩೨೨
ಚಂಡನಾಡಿದನು ಶ್ರೀರಘುವರ ಪ
ಚಂಡನಾಡಿದನು ಮಾರ್ತಾಂಡ ವಂಶೋದ್ಭವ
ಪುಂಡರೀಕಾಕ್ಷನು ಭೂಮಿ ಸುತೆಯ ಸಹಿತ ಅ.ಪ
ಸರಸಿಜ ದಳದಂತೆ ಮೆರೆಯುವ ಹಸ್ತದಿ
ಪರಿಪರಿ ಪುಷ್ಪಗಳ ಪಿಡಿದು ಸಂಭ್ರಮದಿಂದ ೧
ಸರಸದಿ ಸೀತೆಯ ಸಿರಿಮೊಗ ನೋಡುತ
ವರರತ್ನ ಮುಕ್ತ ಭಾಸುರ ಪುಷ್ಪಮಯವಾದ ೨
ಕಾಮ ಕೋಟಿ ಲಾವಣ್ಯ ಕಾಂತೆಯೊಡನೆ ಬಲು
ಪ್ರೇಮದಿಂದಲಿ  ತಾನು ೩

೧೦೯
ಚಿತ್ತಾಭಿಮಾನಿ ಬಾರೆ ತ್ವಚ್ಚರಣಕಮಲ ತೋರೆ ಪ
ಭೃತ್ಯಾರ್ಥಕಾರಿಣೆ ನೀರೆ ಭುವನೈಕ ಸುಗುಣಧಾರೆ ಅ.ಪ
ಮಜ್ಜನನಿ ಎಂದು ನಿನ್ನೇ ಸಜ್ಜನರು ಪ್ರಾರ್ಥಿಸುವರ್ ಮುನ್ನೆ
ನಿರ್ಜರವರದೆ ಸಂಪನ್ನೆ ನಿಗಮಾಭಿಮಾನಿ ಪ್ರಸನ್ನೆ ೧
ಬುದ್ಧ್ಯಾದಿ ತತ್ವದೊಡೆಯರು ಭೃತ್ಯರು ನಿನಗೆನಿಸುವರು
ಬದ್ಧರು ನಿಮ್ಮನ್ನು ಬಿಟ್ಟು ದುರ್ಭವದಿ ಬೀಳ್ವರು ಕೆಟ್ಟು ೨
ನೀನೊಲಿದಮೇಲೆ ಭಯವೆ ಜ್ಞಾನಿಗಳಿಗೆಂದಿಗು ಜಯವೆ
ಜಾನಕಿ ನೀನೆ ಮಹಾಮಾಯೆ ಮನ್ಮಾನಸದೊಳಿರು ತಾಯೆ ೩
ಐಶ್ವರ್ಯಮದದಿ ಕೆÀಲರು ಈಶ್ವರಿ ನಿನ್ನನು ಮರೆಯುವರು
ಪಶ್ವಾದಿಗಳ ಸಮವವರೂ ನಿಸ್ವರಾಗಿಗತಿ ದೂರರಹರು ೪
ಸ್ವಾಮಿ ಜೀವೇಶ ತವ ಭರ್ತ ಕಾಮಿತ ಪ್ರದಾಯಕ ಪಾರ್ಥ-
ಸೂತನ ನಾಮ ಸ್ಮರಣೆ ಸ್ವಾರ್ಥ ಗುರುರಾಮ ವಿಠಲ ಕರ್ತ ೫

೧೪೯
ಚೂಡನಾಥೇಶ ನೋಡು ಕರುಣದಿ ಎನ್ನ ಪ
ಈಡು ನಿನಗೆ ಸರಿಯಾರು ಜಗದಿ ದಯ
ಮಾಡಿ ಸಲಹೊ ಮನ್ಮಥ ಸಂಹರನೆ ಅ.ಪ
ಸೀತಾಪತಿನಾಮಾತಿಶಯವನತಿ
ಪ್ರೀತಿಲಿ ಗೌರಿಗೆ ನೀ ತಿಳುಹಿಸಿದೆ ೧
ತ್ರಿಪುರಹರನೆ ಎನ್ನಪರಾದೆಣಿಸದೆ
ಕುಪಥಗಳ ಬಿಡಿಸಿ ಸುಪಥವ ತೋರೊ ೨
ಧರೆಯೊಳು ನೂತನಪುರದಿ ನೆಲೆಸಿರುವ ಗೆ ಪರಮಮಿತ್ರನೆ ೩

೨೬೫
ಜನ್ಮವ್ಯರ್ಥವಾಯಿತು ಶಾಙ್ರ್ಗಧನ್ವ ನಿನ್ನನಂಬದೆ ಪ
ಮನ್ಮಥನಾಟದಲ್ಲಿ ಮರೆತು ಹೋಗಿಕಾಲ ನಾಕಳದೇ ಅ.ಪ
ಹೊಟ್ಟೆಗೋಸಗ ಕಾಡಿಬೇಡಿ ನಿಷ್ಟುರಗಳನಾಡುತಾ
ಕೆಟ್ಟವನಿವನೆನಿಸಿ ಕೊಂಡು ಕೀರ್ತಿಶೂನ್ಯನಾಗುತಾ ೧
ನಿತ್ಯಕರ್ಮಮಾಡದೆ ಗೃಹಕೃತ್ಯದಲ್ಲಿ ಬಳಲುವೆ
ಸತ್ಯವೆಂಬುದು ಸ್ವಪ್ನದಲ್ಲಿಯು ಸಾಧ್ಯವಾಗದು ಜನರಿಗೆ೨
ಸುಳ್ಳು ಹೇಳುವವನ ಜನರು ಒಳ್ಳೆವನಿವನೆಂಬರು
ಬಲ್ಲ ಹಿರಿಯರಾಡುವ ನುಡಿ ಭಕ್ತಿಯಿಂದನಂಬರು ೩
ಖಲರು ನಡಿಯಲಾರದೆಯಿದು ಕಲಿಯುಗವೆಂದು ನಿಂದಿಸೀ
ಕೊಲೆಗೆ ಗುರಿಯಾಗಿ ಕಾಮ ಕ್ರೋಧಗಳಿಂದ ಬಂಧಿಸಿ ೪
ಹೀನ ವಿದ್ಯಗಳೆಚ್ಚಿತು ಸುಜ್ಞಾನಬೋಧೆ ತಗ್ಗಿತು
ಸ್ವಾನುಭವಕೆ ಹಾನಿಕರ ನಿಧಾನಿಸೇ ಧರ್ಮ ಕುಗ್ಗಿತು ೫
ದುರ್ಗುಣಿಗಳ ತೃಪ್ತಿಪಡಿಸೆ ಭರ್ಗಗಾದರು ಸಾಧ್ಯವೇ
ನಿರ್ಗಮಿಸುವಧ್ಹ್ಯಾಗೆ ನಾವಿನ್ನಿರುವುದು ಭೂಮಿಭಾರವೆ೬
ಲೇಶ ಸಾಧನವಾಗುವದಿಲ್ಲ ಆಸೆ ಅಧಿಕವಾದುದರಿಂದ
ಘಾಶಿಪಡುವದಲ್ಲದೆ ದೇಹಾಯ್ಸವೇಕೆ ಪಡುವೆನಾಂ ೭
ಮಾನವಿಲ್ಲ ಜ್ಞಾನವಿಲ್ಲ ಮಮತೆಯೆಂಬೋದು ಬಿಡದಲ್ಲಾ
ಹೀನಾರನಾಸೇವಿಸಲಾರೆ ಹಿತವ ಕಾಣೆ ಸಿರಿನಲ್ಲಾ೮
ಇರುಳು ಹಗಲು ನಿನ್ನ ದಿವ್ಯ ಚರಣಸೇವೆ ಪಾಲಿಸೊಗುರುರಾಮ ವಿಠಲನೆ ಪಾಮರರ ಬಿನ್ನಹ ಲಾಲಿಸೊ೯

೨೧೪
ಜಯ ಜಯ ನಿಮಗೆ ಜಯವಣ್ಣ
ಭಯವಿಲ್ಲೀನುಡಿ ಕೇಳ್ ಚಿಣ್ಣ ಪ
ಶ್ರೀ ಮನೋಹರನ ಲೀಲೆಯಿದು ಸು
ಕ್ಷೇಮವಹುದು ಸತ್ಪುರುಷರಿಗೆ೧
ಈ ಜಗತ್ತನೂ ಈಶ್ವರನೂ ತಾ
ರಾಜನಾಗಿ ಕಾಪಾಡುವನು ೨
ಎರೆಡು ಮಾರ್ಗವಿಹುದಿದರೊಳಗೆ
ಕುರುಡರು ತಾವ್ ಕೆಡುವರು ಕೊನೆಗೆ ೩
ಇದರೊಳುಂಟು ಬಹುವಿಧ ಭೇದ
ವದರುತಿಪ್ಪದು ಸಕಲವೇದ೪
ಅಂತ್ಯವಿಲ್ಲದಿಹ ಕಾರಣದಿ ಅ
ನಂತ್ಯವೆಂದು ಪೇಳ್ವರು ಭರದಿ ೫
ಮನುಜ ಜನ್ಮ ಬಹುದುರ್ಲಭವು
ಮನನಶೀಲರಿಗಹುದು ಶುಭವು ೬
ಮರೆಯಬೇಡಿ ಜನರೆ ನೀವು
ಅರಿತು ಅರಿಯದವರಿಗೆ ನೋವು ೭
ನಿತ್ಯವಲ್ಲ ಯೀ ಸಂಸಾರ
ಕತ್ತಲೆ ಕೊನೆಯಿಲ್ಲದ ಘೋರ ೮
ಘಳಿಸಿ ಘಳಿಸಿ ಗಂಟಿಕ್ಕಿದರೆ
ವುಳಿಯದು ನಿಮಗದು ಕೇಳ್ ಜನರೆ ೬
ಧರ್ಮವೆಂಬ ಮೂಟೆಯ ಕಟ್ಟೆ
ಮರ್ಮವಿದೇ ಮುಕ್ತಿಗೆ ಬಟ್ಟೆ ೧೦
ಗುರುವಾಜ್ಞೆಯ ಮೀರುವುದು ಸಲ್ಲ ಈ
ದುರುಳತನ ನಿಮಗೆ ಸರಿಯಲ್ಲ ೧೧
ನಾನೇ ಶ್ರೇಷ್ಠನೆಂಬುವ ಮಾತು
ಶಾನೆ ವಡಕು ಗಡಿಗೆಯು ತೂತು ೧೨
ಹಿಂದಿನವರ ಕಷ್ಟವ ನೋಡಿ
ಮುಂದಕೆ ಸತ್ ಸಾಧನೆ ಮಾಡಿ ೧೩
ಮೂರು ಕರಣ ಶುದ್ಧಿಯು ಬೇಕು
ಧೀರ ಜನರಿಗಿಷ್ಟೇ ಸಾಕು ೧೪
ಜನರ ನೋಡಿ ನಡೆಯಲಿಬೇಡಿ
ಕೊನೆಗೆ ನಿಮಗೆ ಕಾಲಿಗೆ ಬೇಡಿ ೧೫
ಹೆಚ್ಚಪೇಕ್ಷಿಸೆ ಬರುವುದಿಲ್ಲ
ಮೆಚ್ಚನು ನಿಮಗೆ ಸಿರಿಯನಲ್ಲ ೧೬
ಕರ್ಮವೆಂಬ ಕಾನನದೊಳಗೆ
ನಿರ್ಮಲ ಮಾರ್ಗ ಹುಡುಕಿದಿರಾ ೧೭
ಜ್ಞಾನರತ್ನ ಸಂಪಾದನೆಯು
ಹೀನ ಜನರಿಗಾಗದು ಕೊನೆಯು ೧೮
ದುರಾಸೆಯಲಿ ಕೆಡುವರು ಕೆಲರು
ನರಾಧಮರು ಎಂದೆನಿಸುವರು ೧೯
ಬ್ರಹ್ಮಮೊದಲು ತೃಣ ಪರಿಯಂತ ತಂ
ತಮ್ಮಟ್ಟಿಗಿಹುದು ಅಂತ ೨೦
ಗೂಡಿನ ಮೇಲೆ ದುರಭಿಮಾನ
ಮಾಡಿ ಮಾಡಿ ಕೆಡುತಿಹರು ಜನ ೨೧
ಯೀಗೂಡಿಗೆವೊಂದಾಧಾರ
ಯೋಗಿಗಳರಿವರಿದರಸಾರ ೨೨
ಎರೆಡು ಫಲವು ಮೂರದೆ ಬೇರು
ವರ ರಸಗಳು ನಾಲ್ಕು ತೊಗರು ೨೩
ಪಂಚ ಶಿಖರಗಳಾರು ಸ್ವಭಾವ
ಹಂಚೇಳರಿಂ ಮಾಡಿಹದೇವ ೨೪
ವಿಟಪವೆಂಟು ನವ ಛಿದ್ರಗಳು
ಘಟಿಸಿರುವುದು ಪತ್ತಲೆಯಿದರೊಳ್ ೨೫
ಮರನಿದೆಂದು ಶಾಸ್ತ್ರದ ಮೂಲ
ಅರಿಯದೆ ನಾನೆಂಬೆನು ಬಾಲ ೨೬
ಪಕ್ಷಿಗಳೆರಡೀ ಮರದಲ್ಲಿ
ಸಾಕ್ಷಿ ಒಂದು ಒಂದಕೆ ಅಲ್ಲಿ ೨೭
ಮರದ ಪಣ್ಣು ತಿಂಬುವದೊಂದು
ನಿರುತವು ನೋಡುತಿರುವದೊಂದು ೨೮
ದ್ವಾಸುಪರ್ಣ ಶೃತಿ ಇದರರ್ಥ
ದಾಸನಾಗದಿರುವನು ವ್ಯರ್ಥ ೨೯
ಆತ್ಮಜೀವ ಪಕ್ಷಿಗಳು ಇವೆ
ಅಧ್ಯಾತ್ಮ ವಿದ್ಯದಲಿ ತೋರುವುದೇ ೩೦
ಜೀವನಾಮ ಆತ್ಮನಿಗುಂಟು
ದೇವತಾನು ತಬ್ಬಿದ ಗಂಟು ೩೧
ಅಭೇದ ಶೃತಿಗಳೇನಕ ವಿಧ
ಸ್ವಭಾವದಿರುನಡೆ ತೋರುವದ೩೨
ಸುರರುತ್ತಮರು ನರರಾನಿತ್ಯ
ಸುರೇತರರು ನೀಚರು ಸತ್ಯ ೩೩
ನೂರು ವರುಷ ಬದುಕುವರೆಂದು
ಮೀರಿ ಮನದಿ ಯೋಚಿಸಿ ಮುಂದು ೩೪
ಬಹು ಪ್ರಯತ್ನಗಳ ಮಾಡುತಲಿ
ಬಹು ಧನಾರ್ಜನೆಯ ವೂಹೆಯಲಿ ೩೫
ಮೊದಲು ಅನ್ನಕಿಲ್ಲೆಂದು ಮತಿ
ವಿಧ ವಿಧ ವಸ್ತ್ರಗಳಲಿ ಪ್ರೀತಿ ೩೬
ಆಭರಣಗಳಲಿ ಆಸೆಯು ಬಲು
ನಾಬಡವನು ಎಂದಗಲಿರುಳು ೩೭
ಮನೆಯು ತೋಟ ಹೊಲಗದ್ದೆಗಳು
ತನಗೆ ಬೇಕಂತ ಚಿಂತೆಯೊಳು ೩೮
ಇತರರ ನೋಡಿ ತನಗಪೇಕ್ಷೆ
ಗತಿ ಇಲ್ಲದೆ ಇರುವುದೆ ಶಿಕ್ಷೆ ೩೯
ವ್ಯಾಸವಾಲ್ಮೀಕಾದಿ ಮಹಿಮರು
ತಾವ್ ಸಮಂಜಸದಿ ಪೇಳಿದರು ೪೦
ಪ್ರವೃತ್ತಿ ಮಾರ್ಗದ ಸಂಪತ್ತು
ಭವಾಂಬುಧಿ ಸುಳಿಯು ವಿಪತ್ತು ೪೧
ಫಲವ ಕೋರಿ ಕರ್ಮವ ಮಾಡಿ
ಹಲವು ಯೋನಿಗಳೊಳೋಡಾಡಿ೪೨
ಮರಳಿ ಮರಳಿ ಜನನ ಮರಣದೆ
ದರಿಯ ಕಾಂಬ ಬಗೆ ದಾರಿಯದೆ ೪೩
ಇದುವೆ ದೊಡ್ಡ ಸಂಸೃತಿ ವೃಕ್ಷ
ತುದಿ ಮೊದಲಿಗು ದೊರಕದು ಮೋಕ್ಷ ೪೪
ಅಣ್ಣ ತಮ್ಮ ತಾಯ್ತಂದೆಗಳು
ಇನ್ನು ಅಕ್ಕ ತಂಗಿಯು ಮೊದಲು ೪೫
ಅತ್ತೆ ಮಾವ ಭಾವ ಮೈದುನರು
ಮತ್ತೆ ಸತಿ ಸುತರು ಬಳಗಗಳು ೪೬
ಇವರು ತನ್ನವರಿತರರಲ್ಲ
ಭವ ಜಲಧಿಯ ಜಂತುಗಳೆಲ್ಲ ೪೭
ಒಡವೆ ವಸ್ತ್ರಧನ ಧಾನ್ಯಗಳ
ಕೊಡದಿದ್ದರೆ ಕೋಪವು ಬಹಳ ೪೮
ವಿತ್ತವಿರಲು ಬಂಧುಗಳೆಲ್ಲ
ಹತ್ತಿ ಇವನ ಬಾಧಿಪರೆಲ್ಲ ೪೯
ಒಳ್ಳೇನುಡಿ ರುಚಿಸದು ಜನಕೆ
ಸುಳ್ಳುಹೇಳಿದರೆ ಬಹುನಂಬಿಕೆ ೫೦
ಹಿತೋಪದೇಶದಿ ಬಹುಕೋಪ
ಪತಿತ ಜನರಿಗೆ ಇದು ಪಾಪ ೫೧
ಒಬ್ಬ ದೈವಲೋಕಕೆ ಸತ್ಯ
ಹಬ್ಬವವನ ಭಜಿಪುದಗತ್ಯ ೫೨
ಕಾಮುಕರಿಗೆ ಕಡೆಗೂ ದುಃಖ
ನೇಮವದಕೆ ಮೂಲವುರೊಕ್ಕ ೫೩
ಸ್ರ‍ಪಹದಿಂದಲೆ ಕೋಪವು ಬಹುದು
ವಿಹಿತವೆಂದು ನಗುವನೆ ಸಾಧು ೫೪
ಲೋಭದಿಂದ ಮೂಲಕೆ ನಾಶ
ಸ್ವಾಭಾವ್ಯದಿ ದುರ್ಜನಕಾಶಾ ೫೫
ಕಾಸಿಗಾಗಿ ಕೈಬಿಗಿ ಪಿಡಿವ
ರಾಶಿ ಧನವ ಕೊಳ್ಳೆಯು ಕೊಡುವ ೫೬
ದಾನಕೆಂದರಿಲ್ಲವು ಕಾಸು
ದಂಡಕೊಡುವುದಕೆ ಬಹುಲೇಸು ೫೭
ನಷ್ಟವಾದರೂ ಮನಕಿಷ್ಟ
ದುಷ್ಟಾತ್ಮರು ಪಡುವರು ಕಷ್ಟ ೫೮
ಆರ್ಯರುಕ್ತಿ ಕೇಳುವುದಿಲ್ಲ
ಕಾರ್ಯದಲಿ ವಿಘಾತವೆ ಎಲ್ಲ ೫೯
ಧನವಿದ್ದರು ಸೌಖ್ಯವು ಕಾಣೆ
ಘನದುರಾಸೆ ಕುಜನರಿಗೆ ಆಣೆ ೬೦
ಭೂಮಿ ಉಂಟು ತನಗೆಂಬುವರು
ನೇಮದಿ ದಂಡವ ತೆರುತಿಹರು ೬೧
ಮಳೆಬೆಳೆಯನು ನಿಂದಿಪರು ಕೆಲರು
ಖಳರು ಸುಮನಸರ ದೂಷಿಪರು೬೨
ಅದರಲ್ಲಿ ನಾಸ್ತಿಕರಧಿಕ ಜನ
ಮೊದಲು ತುದಿಯಲಿ ದುರಭಿಮಾನ ೬೩
ವ್ಯಾಪಾರದಿ ಧನ ಕಳಕೊಂಡು
ಕೋಪ ವ್ಯಾಜ್ಯಕೆಳೆವದೆ ಫಂಡು ೬೪
ಬಹಳ ದಿನವು ಬದುಕುವೆನೆಂದು
ಬಲುಧನವ ಕೂಡಿಸುತಲಿ ಮುಂದು ೬೫
ಮುಖದಾಕ್ಷಿಣ್ಯದಿ ಮಾತಾಡಿ
ವಿಕಲರನರ ಸ್ನೇಹದಿ ಕೂಡಿ೬೬
ದೊಡ್ಡದಾಗಿ ಮನೆಯನು ಕಟ್ಟಿ
ದುಷ್ಟತನದಿ ವಾದಿಸಿ ಬಿಟ್ಟಿ ೬೭
ಕೂಲಿಯವರ ಹೊಟ್ಟೆಗೆ ಕೊಡದೆ
ಲೋಲನಾಗಿ ವಂಚನೆ ಬಿಡದೆ ೬೮
ಸಂಸಾರವಿದೆ ಸ್ಥಿರವೆಂದು
ಹಿಂಸೆಪಡುತಲಿ ಸದಾನೊಂದು ೬೯
ಚತುರ ಶೀತಿ ಲಕ್ಷಯೋನಿಗಳೊಳ್
ಮತಿಹೀನರಾಗಿ ಜನಿಸುತಲೂ ೭೦
ನಿದ್ರಾಶನನ್ಯ ವಾಯುಗಳು
ಭದ್ರವು ತಮಗೆಂದು ಪ್ರಾಣಿಗಳು ೭೧
ಇದಕ್ಕಾಗಿ ಪರಾಧೀನದಲಿ
ಪದೇ ಪದೆಗೆ ತಾವು ನೋಯುತಲಿ ೭೨
ಮನುಜ ಜನ್ಮ ಬರುವುದೆ ಕಷ್ಟ
ಮಾನಿತನಾದವನೆ ಅತಿ ಶ್ರೇಷ್ಠ ೭೩
ವೇದವೋದುವವನುತ್ತಮನು
ಭೋಧಿಸುವಾತನೆ ಶುಭತಮನು ೭೪
ನಿಜಧರ್ಮದೊಳರುವವಗಿಂತ
ಸುಜನರಿಲ್ಲವವರದೆ ಪಂಥ ೭೫
ಕರ್ಮಾರ್ಥ ಶೃತಿ ಗಹನದಲಿ
ನಿರ್ಮಲರಾಗದೆ ಚಿಂತೆಯಲಿ&ಟಿಬ್ಸ್ಠಿ

(ನುಡಿ-೮೩) ಉದ್ಧವ
ಕಥನಾತ್ಮಕ ಹಾಡುಗಳು
ಭಾಗವತ ದಶಮಸ್ಕಂದ ಕಥೆ
೩೩೮
ಜಯ ಜಯ ರಾಮಾನುಜ ಪಾಹಿ
ಜಯ ಜಯ ಶ್ರೀಕೃಷ್ಣಪಾಹಿ
ಜಯ ಪಾಂಡವ ಮಿತ್ರ ಪಾಹಿ
ಜಯ ಜಯ ಜಯತು ಪ
ಶ್ರೀ ನೃಸಿಂಹಗೆರಗಿರಾಜೀವ ಭವ ಪ್ರಮುಖ ಸುರರಿ-
ಗಾನಮಿಸುತ ದಶಮಸ್ಕಂದದ ಕಥೆಯ ಪೇಳುವೆ ೧
ಭೂಮಿದೇವಿ ದೈತ್ಯರಾಜರ ಭಾರವನು ತಾಳಲಾರದೆ
ತಾಮರಸಭವಂಗೆ ಪೋಗಿ ಮೊರೆಯನಿಟ್ಟಳು ೨
ಹರಮುಖ ಸುಮನಸರ ಕೂಡಿ ವಿಧಿಯು ಕ್ಷೀರ ಶರಧಿಯೈದಿ
ಪರುಷಸೂಕ್ತದಿಂದ ಹರಿಯ ಸ್ತೋತ್ರ ಮಾಡಲು ೩
ಸುರರು ಯಾದವರಾಗಿ ನಾನು ಬರುವೆ ದೇವಕಿ ಪುತ್ರನೆನಿಸಿ
ತರಿವೆ ನೀಚರನೆಂದಾಕಾಶವಾಣಿಯಾಯಿತು ೪
ಅಣ್ಣನಾಗಿ ಶೇಷ ಪುಟ್ಟಲಿನ್ನು ಹರಿಯ ಸೇವಿಸೆ ದೇವ
ಕನ್ನಿಕೆಯರು ಭುವಿಯೊಳವತರಿಸುವದೆನ್ನುತ ೫
ನುಡಿಯ ಕೇಳಿ ಸರಸಿಜಭವ ಮೃಡ ಮುಖರಾನಂದದಿಂದ
ಸಡಗರದಲಿ ತಮ್ಮ ನಿಳಯಗಳನು ಸಾರ್ದರು ೬
ಶೂರಸೇನನೆಂಬ ರಾಜ ಪಾರಂಪರ್ಯದಿ ಮಧುರೆಯಲ್ಲಿ
ಧಾರುಣಿಯ ಪಾಲಿಸುತೆ ಧರ್ಮದಿಂದಲಿ ೭
ದೇವಕನು ದೇವಕಿಯ ವಸುದೇವಗಿತ್ತು ಉತ್ಸವ ಬರೆ
ಭಾವ ಮೈದ ಕಂಸ ರಥಕೆ ಸಾರಥಿಯಾದನು೮
ಇವಳ ಎಂಟನೇ ಗರ್ಭವು ನಿನ್ನ ಕೊಲುವದೆಂದು
ನಭವುನುಡಿಯೆ
ಜವದಿ ತಂಗಿಯ ಮುಡಿಯ ಪಿಡಿಯೆ ಕಂಸ ಕೋಪದಿ೯
ಪುಟ್ಟಿದ ಮಕ್ಕಳನೆಲ್ಲ ನಿನಗೆ ಕೊಟ್ಟುಬಿಡುವೆ ಕೊಲ್ಲದಿರವಳ
ಸಿಟ್ಟು ಸೈರಿಸೆನುತ ಪೇಳ್ದ ಶೌರಿಭಾವಗೆ ೧೦
ಮೊದಲ ಮಗನು ಕೀರ್ತಿವಂತನುದಿಸಲೊಯ್ದು
ಕೊಡಲು ಕಂಸ
ಹೃದಯದಲಿ ಸತ್ಯಕೆ ಮೆಚ್ಚಿ ಭಾವಗೆಂದನು ೧೧
ಇವನ ಭಯವು ಎನಗೆ ಇಲ್ಲ ಈವುಂದೆಂಟನೆ ಸುತನ ಮಾತ್ರ
ತವಕದಿಂದ ಮನೆಗೆ ಪೋಗು ಪುತ್ರ ಸಹಿತದಿ ೧೨
ಇನಿತು ಕಳುಹಿ ಬಳಿಕ ಯಾದವರನು ವಿಭಾಡಿಸಿ
ಸೆರೆಯೊಳಿಡಿಸಿ
ಘನವಿಭವದಿ ಭುವಿಯನಾಳುತಿರ್ದ ಕಂಸನು ೧೩
ಸುರರು ಯಾದವರಲ್ಲ ನೀನಸುರನೆಂದು ಭೋಜಪತಿಗೆ
ಸುರ ಋಷಿ ರಹಸ್ಯದಲಿ ಬಂದು ಪೇಳಿದ ೧೪
ಉರಿದ ಕಣ್ಣೊಳು ಕಿಡಿಗಳುದುರೆ ಶೌರಿಯ ಬಂಧನದೊಳಿಟ್ಟು
ತರಿದನಾರುಮಂದಿ ಸುತರ ತವಕದಲಿ ೧೫
ಏಳನೆಯ ಗರ್ಭ ಉದರವಿಳಿದೆಂದು ತಿಳಿಯೆ ಜನರು
ಶ್ರೀಲತಾಂಗಿಯರಸನಂಶ ಬಳಿಕ ಬೆಳೆದುದು ೧೬
ಅದನು ವಯ್ದು ದುರ್ಗಿ ರೋಹಿಣಿಯುದರದಲ್ಲಿ ಇಟ್ಟೆಶೋದೆ
ಯುದರದಲ್ಲಿ ತಾನು ಸೇರಿ ಬೆಳೆಯುತಿರ್ದಳು ೧೭
ಬಳಿಕಯಿಂದಿರೇಶ ತಾನು ಜಲಜಮುಖಿ ದೇವಕಿಯ ಗರ್ಭ
ದಲಿ ಪ್ರವಿಷ್ಠನಾಗಿರ್ದ ಮಹಿಮೆಯಿಂದಲಿ ೧೮
ಮುಖದಿ ಕಳೆಯೇರಿರಲ್ಕೆ ಖಳನಿದೇ ಇದೇ ಎನುತ್ತ
ಸಕಲ ಭಾಗದಿ ಕಾವಲಿಟ್ಟು ಸಮಯ ನೋಡುತ್ತಿರೆ ೧೯
ಸರಸಿಜಾಸನಾದಿ ಸಕಲ ಸುರರು ದೇವಕಿಯುದರದೊಳಿಹ
ಹರಿಯ ವೇದದಿಂದ ಸ್ತೋತ್ರಮಾಡಿ ಹೋದರು ೨೦
ನಂದನರಸಿಯಲ್ಲಿ ದುರ್ಗಿಯಂದುದಿಸಿರೆ ನಭೋ ಮಾಸದಿ
ಅಂದುರಾತ್ರಿಯ ಶಿತಪಕ್ಷಯಷ್ಟಮಿ ದಿನದಲಿ ೨೧
ಸುರರು ಪೂಮಳೆಯ ಕರೆಯೆ ಹರಿಯು ದೇವಕಿಗವತರಿಸಿದ
ಸರಸಿಜಾಪ್ತನುದಿಸಿದಂತೆ ಬೆಳಕು ತುಂಬಲು ೨೨
ದರ ಗದಾರಿ ಪದ್ಮ ಪೀತಾಂಬರ ಶ್ರೀವತ್ಸ ಕೌಸ್ತುಭಗಳ
ಧರಿಸಿದದ್ಭುತ ಬಾಲಕನಂ ಶೌರಿ ನೋಡಿದ ೨೩
ದಿವ್ಯರೂಪವ ಕಾಣುತ ವಸುದೇವ ಮನದಿ ಹಿಗ್ಗಿ ಮುದದಿ
ಗೋವುಗಳನು ಹತ್ತುಸಾವಿರ ಧಾರೆಯೆರೆದನು ೨೪
ತುತಿಸಲಂದು ಸತೀಪತಿಗಳು ಹಿತದಿ ತೇಜವ ಮಾಯಗೈದು
ಸುತನು ಮಗುವಿನಂತೆ ತೋರೆ ಸೊಬಗಿನಿಂದಲಿ ೨೫
ಕಾಲಲಿದ್ದ ಸಂಕೋಲೆಗಳು ಕಳಚಿ ಬಿದ್ದುದಾಗ ದೇವಕಿ
ಬಾಲನನ್ನು ನೋಡಿ ಮನದಿ ಭಯವ ಪಟ್ಟಳು ೨೬
ಬೀಗಮುದ್ರೆ ಸಹಿತ ಎಲ್ಲ ಬಾಗಿಲು ತನ್ನಿಂತಾನೆ ತೆಗಿಯೆ
ಕೂಗದಂತೆ ಮಗುವನೆತ್ತಿ ಶೌರಿ ನಡೆದನು ೨೭
ಯಮುನೆ ತಾನು ಪಥವ ಕೊಡಲು ನಿಮಿಷದಿ
ಗೋಕುಲವನೈದಿ
ಕಮಲನಾಭನಂ ಯಶೋದೆಯ ಬಳಿಯಲಿಟ್ಟನು ೨೮
ಆಕೆ ಪಡೆದ ಹೆಣ್ಣು ಶಿಶುವ ತಾ ಕೈಕೊಂಡು ಮನೆಗೆ ಬಂದು
ಜೋಕೆಯಿಂದ ಮೊದಲಿನಂತೆ ತೋರುತಿರ್ದನು ೨೯
ಅಳಲು ಶಿಶವು ಕೇಳಿಯೆಲ್ಲ ಖಳರು ಹೋಗಿ ಕಂಸಗುಸುರೆ
ಝಳಪಿಸುತ್ತ ಖಡ್ಗವನ್ನು ಜವದಿ ಬಂದನು ೩೦
ವಂದನಾದರೂ ಬಿಡಬಾರದೆ ಸುಂದರಿ ಇವಳಣ್ಣ ಎನಲು
ಮುಂದುಗಾಣದೆ ಯೋಚಿಸುತ್ತ ಮುಗುವನೆತ್ತಿದ ೩೧
ಹಾರಿಸಿ ಮಗುವ ಖಡ್ಗ ಪಿಡಿಯಲಾ ರಮಣಿಯು
ನಭದಿನಿಂತು
ಸಾರಿ ಛೀ ದುರಾತ್ಮ ಯಾರ ಕಡಿವೆ ಯೆಂದಳು? ೩೨
ಬೇರೆ ಬೆಳೆಯುತ್ತಿರುವ ನಿನ್ನ ವೈರಿ ಇವಳ ಮಕ್ಕಳನೇಕೆ
ಮೀರಿ ಕೊಂದು ಪಾಪಿಯಾದೆ ಛೀ! ಹೋಗೆಂದಳು ೩೩
ಮನದಿ ನೊಂದು ಕಂಸನು ತನ್ನನುಜೆಯನ್ನು ಭಾವನನ್ನು
ವಿನಯದಿಂದ ಬೇಡಿಕೊಂಡ ಕ್ಷಮಿಸಿರೆನ್ನುತಾ ೩೪
ನೆರಹಿ ತನ್ನ ಮಂದಿಯಾದ ದುರುಳರಿಗೀ ಸುದ್ದಿಪೇಳೆ
ಬರಲಿ ಹರಿಯು ಕೊಲುವೆವವನ ಭಯಬಿಡೆಂದರು ೩೫
ಧರೆಯೊಳು ಪುಟ್ಟಿದ ಶಿಶುಗಳನ್ನು ತರಿವುದೆಂದು
ಪೂತನೆಯೆಂಬ
ಮರುಳೆಯನ್ನು ಕಳುಹಿ ವಿಸ್ಮಯದಿಂದಲಿರ್ದನು ೩೬
ನಂದಗೋಕುಲದಲ್ಲಿ ಮಹಾನಂದವಾಗಿ ಜನರೆಶೋದೆಯ
ಕಂದನನ್ನು ನೋಡಿ ಹಿಗ್ಗಿಯುತ್ಸವಗೈದರು ೩೭
ಪ್ರೀತಿಯಿಂದ ನಂದಗೋಪ ಜಾತಕರ್ಮ ಮಾಡಿಸಲ್ಕೆ
ಶ್ರೀ ತರುಣಿಯ ಕಳೆ ದಿನದಿನದಿ ಪೆರ್ಚುತಿಹುದು ೩೮
ಶೌರಿಯ ಮಧುರೆಯಲಿ ನೋಡಿ ಆದರಿಸಿ ಎನ್ನ ಮಗನೆ
ಧೀರ ನಿನ್ನ ಮಗನೆನ್ನುತ ಗೋಪ ನುಡಿದನು೩೯
ಏಳನೆಯ ದಿನದಿ ಪೂತನಿ ಬಾಲಕಂಗೆ ಮೊಲೆಯನೊಡೆ
ಹಾಲಾಹಲವನೀಂಟಯಸುವನೆಳದು ಕೊಂದನು೪೦
ಬಿಡುಬಿಡೆನ್ನುತಾರ್ಭಟಿಸುತಲೊಡನೆ ಯೋಜನವಾಗಿ ದೇಹ
ಪೊಡವಿಗುರುಳೆ ನೋಡಿಗೋಪರು ಭೀತಿಗೊಂಡರು ೪೧
ಜನ್ಮತಾರೆಯುತ್ಸವದಲಿ ಶಕಟನು ಬಂಡಿಯೊಳು ಸೇರಿ ಇರಲು
ನನ್ನಿಯಿಂದಲೊದ್ದು ಕೆಡಹಿ ಕೊಂದಿತಾ ಶಿಶು ಪೋರ ೪೨
ಬಾರಿಬಾರಿಗೆ ರಕ್ಷೆಕಟ್ಟಿನಾರಾಯಣ ಕವಚವ ತೊಡಿಸಿ
ಪೋರಬಾಲನನ್ನು ಸಲಹೆನುತ ಹರಿಯ ಬೇಡಿದರು೪೩
ಮೂರು ತಿಂಗಳಲ್ಲಿ ಶಿಶುವು ಗಾಳಿಯಾದ ತೃಣಾವರ್ತನ
ಸಾರಿ ನೆಲಕೆ ಕೆಡಹಿ ಮೇಲೆ ಆಡುತಿರ್ದನು ೪೪
ಶೌರಿ ನೇಮದಿಂದ ಗರ್ಗ ಸೇರಿ ಗೋಕುಲವನು ಸಂ
ಸ್ಕಾರ ಕ್ಷತ್ರದಿಂದ ಮಾಡಿದ ಶಿಶುಗಳೆರಡಕೆ ೪೫
ರಾಮಕೃಷ್ಣರೆಂದು ಪೆಸರ ಪ್ರೇಮದಿಂದಲಿಡಿಸಿ ನಂದನ
ನೇಮಕೊಂಡು ತಾ ತೆರಳಿದ ಗರ್ಗಾಚಾರ್ಯನು೪೬
ಶುಕ್ಲಪಕ್ಷದ ಚಂದ್ರನಂತೆ ಶುಕ್ಲನಾಮಕ ಹರಿಯು ಜನದೊ
ಳಕ್ಕರಿಯಲ್ಲಿ ಬಾಲಲೀಲೆ ತೋರುತಿರ್ದನು ೪೭
ಅಂಬೆಗಾಲಿಡುತ್ತ ಕೃಷ್ಣ ಸಂಭ್ರಮದಲಿ ಮನೆಮನೆಗಳೊ
ಳಿಂಬಾಗಿ ಪಾಲು ಬೆಣ್ಣೆ ಕದ್ದು ತಿಂಬನು ೪೮
ಒಂದು ದಿನ ಯಶೋದೆ ತಾನು ಕಂದನ ಬಾಯೊಳಗಜಾಂಡ
ವಂದು ನೋಡಿ ಕಣ್ಣುಮುಚ್ಚಿ ವಿಸ್ಮಿತಳಾದಳು ೪೯
ಮನೆಮನೆಗಳ ಪೊಕ್ಕೆಶೋದೆತನಯ ಪಾಲುಬೆಣ್ಣೆಸವಿದು ವಿ
ನಯದಿಂದ ಅರಿಯದವನಂತಿರುವ ತಾಯಿಗೆ ೫೦
ದಧಿಯ ಭಾಂಡವಡಿಯೆ ಕೃಷ್ಣ ಒದಗಿ ಗೋಪಿ ಕೋಪದಿಂದ
ವಿಧ ವಿಧ ಗುಣದಿಂದಲೂಖಲಕ್ಕೆ ಕಟ್ಟಿದಳ್ ೫೧
ವರಳ ಸೆಳೆದುಕೊಂಡು ಮತ್ತಿಮರಗಳನ್ನು ಮುರಿಯೆ ಸಿದ್ಧ
ಪರುಷರೀರ್ವರಾಬಾಲಗೆ ನಮಿಸಿ ತುತಿಸಿ ಪೋದರು ೫೨
ದಿನದಿನದಲಿ ಬಂದ ಗೋಪವನಿತೆಯರು
ಯಶೋದೆ ಮುಂದೆ
ವನಜನಾಭ ಕೃಷ್ಣನನ್ನು ದೂರುತಿರುವರು ೫೩
ಏನು ಪೇಳ್ವೆವಮ್ಮ ನಿನ್ನ ಸೂನು ನಮ್ಮ ಮನೆಗೆ ಬಂದು
ಆನಂದದಿ ಯಾರು ಆಡದಾಟ ಆಡುವ ೫೪
ಮೊಸರು ತಾನು ತಿಂದು ಕೈಯ್ಯ ಸೊಸೆಯ
ಬಾಯಿಗೊರಸಲತ್ತೆ
ಸೊಸೆಯ ಹೊಡೆಯೆ ನಗುತ ಓಡಿ ಬಂದ ತವಸುತ ೫೫
ಲೀಲೆಯಿಂದಲಿವನು ನೆಲುವಿನ ಮೇಲಿಟ್ಟಿರುವ ಭಾಂಡವನ್ನು
ಕೋಲಿನಿಂದ ತಿವಿದು ವಡೆದು ಪಾಲ ಸವಿದನು೫೬
ಎತ್ತಿಕೊಳ್ಳೆನುತ್ತ ಮೈಯ್ಯ ಹತ್ತಿ ನೆಲುವಿನ ಭಾಂಡವನ್ನು
ಮತ್ತೆ ನಿಲುಕಿಸಿಕೊಂಡು ಪಾಲಕೆನೆಯ ಮೆದ್ದನು ೫೭
ಸತಿಪತಿಗಳ್ ಮಲಗಿರೆ ಮಧ್ಯೆ ಸರ್ಪವನು ಹಾಕಿ ತಾನ-
ಗುತ್ತಲಿ ಜುಟ್ಟು ಜಡೆಗೆ ಗಂಟಿಕ್ಕಿ ಓಡಿದ೫೮
ಅಳುತಲಿರುವ ಶಿಶುವಿನ ತಲೆಯ ಕೂದಲು ಕರುವಿನಬಾಲಕೆ
ಎಳೆದು ಗಂಟುಹಾಕಿ ಬೀದಿಯಲ್ಲಿ ನೂಕುವ ೫೯
ಬೆಣ್ಣಿಯನ್ನು ಮೆದ್ದು ಮಿಕ್ಕದನ್ನು ಕೋತಿಗಿತ್ತದು
ತಿನ್ನತಿರಲು ನಗುತ ನಗುತ ತಿರುಗುತಿರುವನು ೬೦
ಇನಿತು ಎಲ್ಲ ಪೇಳೆ ಗೋಪವನಿತೆ ತಾನು ಮಗನ ಮುದ್ದಿಸಿ
ಘನ ಪ್ರಮೋದ ಚಿತ್ತಳಾಗಿ ಕಾಲಕಳೆವಳು ೬೧
ಸೇತುವನ್ನು ಕಟ್ಟುವ ರಘುರಾಮ ನಾನು ನೀವ್ ಕಪಿಗಳು
ಪ್ರೀತಿಯಿಂದ ಬನ್ನಿ ಎಂದು ಕರೆವ ಬಾಲರ ೬೨
ಮೂರು ವರ್ಷವಾಗೆ ಕೃಷ್ಣ ಮುದದಿ ಕರುಗಳ ಕಾಯುತ್ತ
ವಾರಿಗೆಯವರಿಂದ ಕೂಡಿ ಕುಣಿಯುತಿರುವನು ೬೩
ವತ್ಸ ಬಕರ ಮುರಿದು ಕೃಷ್ಣ ಸ್ವೇಚ್ಛೆಯಿಂದಲಣ್ಣನೊಡನೆ ನಿಶ್ಚಲ-
ಚಿತ್ತರುಲಿಯಲಾಡುತೆಸೆದ ಮೋದದಿ೬೪
ವೃಂದಾವನಕೆ ಪೋಗಲಲ್ಲಿ ಇಂದಿರೇಶ ವಿಷದ ಮಡುವ
ನೊಂದು ದಿನದಿ ಧುಮುಕಿ ಜಲವ ನಿರ್ಮಲಗೈದನು ೬೫
ವನದೊಳಗ್ನಿಯನು ನುಂಗಿ ಜನರ ಸಲಹಿ ರಾತ್ರಿಯಲ್ಲಿ
ಮುನಿ ಜನೇಢ್ಯನಾಗಿ ಗೋಕುಲದೊಳೆಸೆದನು ೬೬
ಅಜಗರನಾಗಿದ್ದಸುರನ ನಿಜಶರೀರ ಬೆಳಸಿ ಕೊಂದು
ಸ್ವಜನರನ್ನು ಪಾಲಿಸಿದನು ವೃಜಿನದೂರನು ೬೭
ಅಣ್ಣನೊಡನೆ ವನದಿ ತಂಗಳನ್ನವನ್ನು ಭುಜಿಸಿ ಕರುಗ
ಳನ್ನು ಕಾಯ್ದ ಕೃಷ್ಣ ತಾನು ನನ್ನಿಯಿಂದಲಿ ೬೮
ಕರುಗಳನ್ನು ಹುಡುಗರನ್ನು ಸರಸಿಜಭವ ಬಚ್ಚಿಡಲ್ಕೆ
ಹರಿಯುತಾನು ತತ್ವದ್ರೂಪವಾಗಿ ಮೆರೆದನು ೬೯
ಧೇನುಕ ಪ್ರಲಂಬರೆಂಬ ದಾನವರನು ಮುರಿದು ವನದಿ
ನಾನಾಲಂಕಾರದಿ ಗೋವುಗಳ

೨೧
ಜಯ ಜಾನಕೀನಾಥ ಜಯ ಕುಶೀಲವ ತಾತ
ಜಯತು ಲಕ್ಷಣ ಭ್ರಾತ ಜನಕ ಜಾಮಾತ ಪ
ಜಯಭಕ್ತ ಸಂತ್ರಾತ ಜಯ ಭುವನ ವಿಖ್ಯಾತ
ಜಯ ಜಯತು ಸುಖದಾತ ಜಯ ಜಗನ್ನಾಥ ಅ.ಪ
ಮರುತಸಂಭವ ಪಕ್ಷ ಮಹನೀಯ ಸುಕಲಾಕ್ಷ
ಸರಿಸಿಜದಳ ನಿಭಾಕ್ಷ ಸಾಧು ಸಂರಕ್ಷಾ
ಶರಧಿ ಬಂಧನದಕ್ಷ ಶಾತ್ರವನಿಕರ ಶಿಕ್ಷ
ವರವಿಶಾಲಸು ವಕ್ಷ ವಂದ್ಯ ಪಾಲಾಕ್ಷ ೧
ದಾರಕಾಸುರನಿಕರ ದಾಸಜನ ಮಂದಾರ
ಘೋರ ಪಾಪವಿದೂರ ಕುಜನಸಂಹಾರ
ಮಾರಶತ ಶೃಂಗಾರ ಮಮಸ್ವಾಮಿ ರಘುವೀರ
ಸಾರತತ್ವವಿಚಾರ ಸದಸದ್ವಿಹಾರ ೨
ಶಿವವಿನುತ ಶುಭನಾಮ ಜೀಮೂತನಿಭಶ್ಯಾಮ
ನವತುಳಸಿದಳಧಾಮ ನತಜನಪ್ರೇಮ
ಅವನಿಪಾಲಲಲಾಮ ಅಖಿಳಾಮರಸ್ತೋಮ
ಕವಿಗೇಯ ರಿಪುಭೀಮ೩

(ನುಡಿ-೧) ವಿಧಿ ಸೃಷ್ಟಿಯೊಳಿಲ್ಲದ ರೂಪ
೨೩
ಜಾನಕೀಮನೋಹರ ಪ್ರಭೋ
ಜರಾಮರಣವಿದೂರ ರಾಮ ಪ
ನಾನಾವತಾರ ಚಿದಾ
ನಂದಾತ್ಮ ಶರೀರ ಅ.ಪ
ಧರ್ಮಾತ್ಮ ಸತ್ಯಸಂಧ
ದಿನಕರ ವಂಶಾಬ್ಧಿಚಂದ್ರ ೧
ಶಬರಿದತ್ತ ಫಲಭೋಜನ
ಶಾಶ್ವತ ತ್ರಿಜಗನ್ಮೋಹನ ೨
ಶಿವಚಾಪಖಂಡನ ಆ
ಶ್ರಿತಲೋಕ ಮಂಡನ ೩
ರಾವಣಾದಿ ದನುಜ ಮಥನ
ದೇವಪರಾತ್ಮರ ರಘುವರ ೪
ತಾಮಸಗುಣ ವಿರಹಿತ ಗುರು
ರಾಮವಿಠಲ ನಮೋ ನಮೋ ೫

೨೨
ಜಾನಕೀವರತೇ ಜಯ ಮಂಗಳಂ ಪ
ಮಾನವಾಧಿಪತೇ ಮಂಗಳಂ ಅ.ಪ
ರಾವಣಾನುಜಮಿತ್ರ ರಮಣೀಯ ಸುಚರಿತ್ರ
ದೇವಾಧಿದೇವ | ತೇ ಮಂಗಳಂ ೧
ಕಪಿಗಣಪೂಜಿತ ಕಾಮಿತ ಫಲದಾತ
ಅಪವರ್ಗಪ್ರದ ತೇ ಮಂಗಳಂ ೨
ಖರದೂಷಣನಿಹಂತ ಕರಧೃತಶರಚಾಪ ತೇ ಮಂಗಳಂ ೩

೨೯೦
ಜೀವನೇ ಶಶಿಹಾಸ ಕೇರಳ
ಭೂವರನಹಂಕಾರ ದಾಸಿಯು
ಕೋವಿದ ಜಡಪ್ರಕೃತಿ ಕುಂತಳಪುರ ಶರೀರವಿದು
ಈವ ಸಮ್ಯಕ್ ಜ್ಞಾನ ರಾಜನು
ಪಾವನದ ಶಾಸ್ತ್ರಗಳು ಗಾಲವ
ಭಾವಿಸಲು ಶುಭಫಲವು ಚಂಪಕ ಮಾಲಿನಿಯು ಕನ್ಯೆ ೧
ಚಂದನಾವತಿ ಧ್ಯಾನಸ್ಥಾನ ಕು
ಳಿಂದ ಸಾಧನೆ ದುಷ್ಟಬುದ್ಧಿಯು
ನಿಂದ್ಯ ಸಪ್ತಜ್ಞಾನಕಧಿಪತಿ ತತ್ಸುತನು ಮದನ
ಚಂದ್ರಮುಖಿ ವಿಷಯೆಯು ವಿಷಯವುಮು
ಕುಂದನಾತ್ಮನು ಸಾಲಿಗ್ರಾಮವು
ಕಂದನೊಯ್ದ ಕಟುಕರು ಪಂಚಾಘಗಳು ತಿಳಿಯುವುದೂ ೨
ಕೆಟ್ಟಕರ್ಮವು ಕಾಲೊಳಾರನೆ
ಬೆಟ್ಟುನೋಡಲು ಕಾಳಿಕೆಯು ತಾ
ಶ್ರೇಷ್ಠಮೂಲಪ್ರಕೃತಿ ಖಡ್ಗವು ನಿಷ್ಠೆಯೆನಿಸುವುದೂ
ಸೃಷ್ಟಿಯೊಳಗೀ ವಿವರ ತಿಳಿದು
ತ್ರ‍ಕಷ್ಟವೆಂದಾಲಿಪರ ಗುರುರಾಮ
ವಿಠ್ಠಲನು ಕೈಪಿಡಿದು ಕೊಡುವನಭೀಷ್ಟಸಿದ್ಧಿಗಳಾ ೩

(ನುಡಿ-೩) ಇಪ್ಪತ್ತೊಂದು
೧೩೦
ಜ್ಞಾನ ಪ್ರದಾಯಕ ಪ್ರಾಣದೇವ ಪ
ಕಾಣೆ ನಿನಗೆ ಸಮಸತ್ಪ್ರಭಾವ ಅ.ಪ
ಆಶೆಯೆಂಬ ಸಮುದ್ರವೆ ಸುತ್ತಳತೆಯಾಗಿರುವ
ಈ ಶರೀರದೊಳು ವಿಭೀಷಣನ ತೋರೊ ೧
ಕೋಪ ಕುಜನತ್ವ ದುರ್ ವ್ಯಾಪಾರಾದಿಗಳನ್ನೆಲ್ಲ
ರೂಪಡಗಿಸಿದೆ ನೀನೇ ಭೂಪನೈಯ್ಯ ೨
ಇಪ್ಪತ್ತೊಂದು ವಿಧದ ತಪ್ಪುಗಳ ತಿದ್ದಿದೆ ತಿ-
ಮ್ಮಪ್ಪ ವೇದ ವ್ಯಾಸರ ಶಿಷ್ಯಾವರ್ಯಾ ೩
ಕಲಿಮಾರ್ಗದಲಿ ಪೋಪ ಹೊರೆ ಬುದ್ಧಿನಾಶಗೈಸಿ
ಒಳಗೆ ನೀ ಪೊಳೆವುದು ಜಲಜಾಪ್ತ ಪ್ರಿಯ೪
ರಂಜೀತವಾದ ಕಣ್ಣ್ಣಿಗೆ ಮಂಜು ಮುಚ್ಚಿಹುದು ದಿ-
ವ್ಯಾಂಜನ ಹಚ್ಚೈ ವೀರಾಂಜನೇಯಾ೫
ಯೇಳಾರೊಳಗೆ ಹದಿನೇಳಾನೆಯವರನು
ಪಾಲಿಪ ದೊರೆ ನೀನು ಜಾಲವೇನು?೬
ಸಿರಿಗುರುರಾಮ ವಿಠಲನ ಶರಣಾರಾಭರಣ ನೀನೆ
ಕರುಣೀಸದಿದ್ದರೆಮ್ಮನು ಕಾವರಾರೈ ೭

೨೯೧
ಡಂಬವಿಲ್ಲದೆ ಹರಿಯ ಭಜಿಸಿ ನಂಬಿ ಮನದಲಿ ಪ
ಹಂಬಲಿಸದೆ ದುರ್ವಿಷಯವ ಹರುಷ ಪಡುತಲಿ ಅ.ಪ
ಶಮದಮಾದಿ ಸದ್ಗುಣಗಳ ಕ್ರಮದಿ ಕಲಿಯುತ
ಸಮಚಿತ್ತದಿ ವರ್ತಿಸಿ ಸಜ್ಜನರ ಕೂಡುತ ೧
ತನಗೆ ತಾನೆ ಬರುವ ಫಲದಿ ಮನದಿ ಸುಖಿಸುತ
ಮನುಮಥನಾಟಕೆ ಸಿಲುಕದೆ ಮಮತೆಯ ಬಿಡುತ ೨
ಕಾಮ ಮಖ್ಯರಿಪುಗಳನ್ನು ಕಡೆಗೆ ನೂಕಲು ಸ್ವಾಮಿ ಶ್ರೀ  ತೋರ್ಪನವರೊಳು ೩

೨೯೩
ತತ್ತ್ವೀಶರಿಗೆ ನಮಸ್ಕಾರ ಪ
ಸತ್ತ್ವಗುಣಿಗಳಾದ ಸಾಧುಜನರಿಗೂ ಅ.ಪ
ಮರತನುತ್ವಕ್ಕಿಗೆ ಶ್ರವಣದಿ ದಿಗ್ದೇ
ವರು ಕಣ್ಣಲಿ ಭಾಸ್ಕರನಿರುವಾ
ಕರ ಇಂದ್ರನು ಪದಕಿಂದ್ರಜ ವೈಶ್ವಾ
ನರವಾಕ್ಕಿಗೆ ಗುಹ್ಯದಿ ಮನುಪತಿ೧
ಗುದಕೆ ಮಿತ್ರ ರಸನದಿ ವರುಣನು ಘ್ರಾ
ಣದಿ ದಸ್ರರು ಯೀಪತ್ತು ಜನಂ
ವಿದುಧರ ಹಂಕಾರದಿ ಮನಕಿಂದು ಮ
ತಿದಾತ ಚಿತ್ತದೊಳುದಧಿಜೆ ಕರ್ತಳು ೨
ಐದು ಭೂತದೊಳಗೈದುರೂಪ ಮ
ತ್ತೈದು ವಿಷಯದೊಳು ತದ್ರೂಪ
ವೈದುತಲಿಪ್ಪತ್ತೈದಕೆ ಸಾಕ್ಷಿಯು
ಮೋದಮಯನು ಶ್ರೀಗುರುರಾಮ ವಿಠಲನು ೩

೨೧೫
ತತ್ವ ಚಿಂತನೆ ಮಾಡು ಮನುಜಾ
ವ್ಯರ್ಥಕಾಲವು ಕಳೆಯದೆ ಪ
ಮೃತ್ಯುಬರುವದು ಮುಂದೆ ಕೇಳಿದು
ಮೂರುಬಾರಿಗೆ ಸಾರಿದೆ ಅ.ಪ
ಮನೆಯು ಉರಿಯುವಾಗ ಭಾವಿ-
ಯನು ತೆಗೆವ ನರನಂದದಿ
ಕೊನೆಗೆ ಯಮನವರೆಳೆವ ಕಾಲದಿ
ಕೋರಿದರೆ ಸುಖ ಬಾರದು ೧
ಈಷಣತ್ರಯದಾಸೆಯಿಂದಲಿ
ಮೋಸಹೋಗದೆ ಸಂತತ
ರೋಷದೋಷಕೆ ಕಾರಣವು ಸಂ-
ತೋಷದಿಂದರು ನಲಿಯುತ ೨
ಎಲ್ಲಿ ನೋಡಿದರಲ್ಲಿ ಹರಿಯನು
ಸೊಲ್ಲು ಸೊಲ್ಲಿಗೆ ತುತಿಸುತ
ಬಲ್ಲ ಹಿರಿಯರ ಕೇಳಿ ಸಂಶಯ
ವೆಲ್ಲ ಕಳೆ ದೃಢವಾಗುತ ೩
ನಾನು ನನ್ನದು ಎಂಬುವ ದುರಭಿ-
ಮಾನ ನಿನಗೆ ಬೇಡೆಲೊ
ಸ್ವಾನುಭವಕಿದು ಹಾನಿ ತರುವದು
ನೀನೆ ನಿನ್ನೊಳು ನೋಡೆಲೊ೪
ಪ್ರೇಮದಲಿ ನ
ನಾಮಸ್ಮರಣೆಯ ಮಾಡುತ
ಕಾಮನಾಟಕೆ ಮನವ ಸೋಲದೆ
ನೇಮಗಳನು ಪರಿಸುತ ೫

೨೯೨
ತತ್ವಮತವೇ ಮತವು ಸಾತ್ತಿ ್ವಕರಿಗೆ ಪ
ನಿತ್ಯ ನಿರ್ಮಲರಾದ ಮುಕ್ತಿಜೀವರಿಗೇ ಅ.ಪ
ಜೀವಗಂತರ್ಯಾಮಿ ನರಸಿಂಹ ಚಿತ್ತದಲಿ
ಶ್ರೀವನಿತೆ ಮತಿಗೆ ವಾರಿಜಸಂಭವಾ
ಆವಂಗಜರಿಪು ಮನಕೆ ಅಹಂಕಾರದಲಿ
ಯೀವಿಧ ದಶೇಂದ್ರಿಯಕೆ ಸೂರ್ಯಾದಿಗಳು ಎಂಬೋ ೧
ಪಂಚಭೇದವನು ತರತಮಗಳನು ತಿಳಿಯುತಂ
ವಂಚನಾದಿಗಳಿಂದ ರಹಿತರಾಗಿ
ಪಂಚ ಸಂಸ್ಕಾರದಿಂ ಪರಿಶುದ್ಧರಾಗುತೆ ಪ್ರ-
ಪಂಚವನು ದಾಟಿರುವ ಪರಮ ಭಕ್ತರಿಗೆ ೨
ತನ್ನತೆರದಲಿ ಇತರರನ್ನು ನೋಡುತ ತ್ರಿಕರಣ
ವನ್ನು ಒಂದೇ ಬಗೆಯ ಗೈದು ಮುದದಿ
ಪನ್ನಗಾದ್ರಿನಿವಾಸ ಗುರುರಾಮ ವಿಠಲನ ಅ-
ಹರ್ನಿಶಿಯು ಬಿಡದೆ ಪೂಜಿಸುವ ಸುಜನರಿಗೆ ೩

೨೬೬
ತಿಂದು ಹೋಗುವರೆಲ್ಲ ಹೊರತು ತಂದು ಕೊಡುವರಿಲ್ಲ ಪ
ಹಿಂದಿನ ಕರ್ಮಪಾಶದಿಂದ ನಾವಿಡದೇ ತೊಡದೇ
ಕಷ್ಟಪಡುವೆವು ಅ.ಪ
ಊರಿನ ಜನವಷ್ಟು | ಒಳ್ಳೆಯ
ಶೀರೆ ಕುಪ್ಪಸ ತೊಟ್ಟು
ನೀರಿಗೆ ಪೋಗುವ ದಾರಿಯಲಿ ಬಹರು
ವಾರಿಗೆಯವರಂತಿಹುದಾನೆಂದಿಗೂ ೧
ಅತಿಥಿ ಅಭ್ಯಾಗತರು | ತಾವಂತೆ
ಪ್ರತಿದಿನ ಬರುತಿಹರು
ಹಿತವಾದಡಿಗೆಯ ಮಾಡಿಡಬೇಕು
ಗತಿಗೆಟ್ಟ ರೋಗಿಗಳಿಗೆ ಅಕಟಾ ೨
ಗಂಡನ ಕಡೆಯವರ | ಸೇವಿಸಿ
ಬೆಂಡಾಯ್ತು ಶರೀರ
ಉಂಡೇನೇ ಉಟ್ಟೇನೇ
ಯಾವ್ಯಾವ ಊರಿಗೊ ರೋಕಲಾರೆ ಹಾ ೩
ನೀರು ಸೇದಲಾರೆ | ವುಂಡು
ದೂರುವರು ಬೇರೆ
ಸೋರುವುದು ಮನೆಯು ಸುಖವು ಕಾಣೆ
ತೌರುಮನೆಯಾಸೆ ತಪ್ಪೆ ಹೋಯಿತು ೪
ಅಕ್ಕಿಬೇಳೆಯಿಲ್ಲ | ಮುಗಿದಿತು
ರೊಕ್ಕಮೂಲವೆಲ್ಲ
ಇಕ್ಕಿ ಇಕ್ಕಿ ಕೈಬರಿದಾಯಿತು ಪೊಂ-
ಬಕ್ಕಿದೇರ ಗುರುರಾಮ ವಿಠಲ ೫

೨೯೪
ತಿರುಪೆಗಾರರಯ್ಯಾ ನಾವು
ತಿಳಿದುಕೊಳ್ಳಿರೀ ಜೀಯಾ ನೀವು ಪ
ತಿರುಪೆಗಾರರನು ತಿರಸ್ಕರಿಸದಿರಿ
ತಿರುಪಿಲ್ಲದಿದ್ದರೆ ತೀರಹುದು ಅ.ಪ
ತಿರುಪುವಾಲೆ ಬುಗುಡಿ | ಚಂದ್ರಮುರವು
ತಿರುಪಿಲ್ಲವೇ ಧಗಡಿ
ತಿರುಪು ವಡವೆಗಳು | ತಿರುಪುಹೂಜಿಗಳು
ತಿರುಪು ಭರಣಿಗಳು | ತಿರುಪು ರಕ್ಷಣಿಯು ೧
ತಿರುಪು ಹಿತ್ತಾಳೆಯದು | ವಾಲಿಯು
ನೆರೆ ಭಂಗಾರವದು
ತಿರುಪು ಬಿದ್ದೋದರೆ ವಾಲೆ ಏನಾಯಿತು
ಅರಿತು ನೋಡದೇ ಮೂರ್ಖರಾಗದಿರೀ ೨
ಹಣವಂತರು ನಾವೂ | ಎಂದು
ಗೊಣಗಬೇಡಿರಿ ನೀವೂ
ಹಣವು ನಿಮಗು ನಮಗುಂಟು ವಿಚಾರಿಸೆ
ಹಣವಿಲ್ಲದ ನರ ಹೆಣಕಿಂತ ಕಡಿಮೆ ೩
ರಾಶಿಯೊಳೊಂದು ಹಿಡಿ | ತೆಗೆಯಲು
ಹ್ರಾಸವೇನೋ ನೋಡಿ
ಆಸೆಪಟ್ಟು ಧರ್ಮಬಿಟ್ಟರೆ ಮೊದಲಿಗೆ
ಮೋಸವೆ ಬರುವುದು ಓಸುಜನರೇ ಕೇಳಿ ೪
ನಿಮ್ಮ ದೊರೆ ಶ್ರೀಮಂತ | ನೋಡಲು
ನಮ್ಮ ಗುರು ಹನುಮಂತ
ನಿಮ್ಮ ದೊರೆಗಾಳು ನಮ್ಮ ಗುರುವಲ್ಲವೇ
ನಿಮಗೆ ನಾವಾಳಾದರೂ ದಯೆಯಿಲ್ಲವೇ ೫
ತ್ಯಾಗ ಭೋಗವುಳ್ಳ | ನರನು
ಧೀರನು ಬಹುಬಲ್ಲ
ಭೋಗದಿಂದಲೆ ರೋಗ ಬರುವುದು
ತ್ಯಾಗದಿಂದಲೆ ಯೋಗ ಒದಗುವುದು೬
ಸತಿಗೆ ಒಡವೆಯಿಟ್ಟು | ಕಳೆಯಲು
ಹಿತವೇ ನಿಮಗಷ್ಟು
ಗತಿಯೇನು ನಿಮಗೆ ಎಂದು ಯೋಚಿಸದೆ
ಅತಿಶಯ ಭೋಗಗಳಪೇಕ್ಷಿಸುವಿರೈ ೭
ಮರವೆಯೆ ಬಹುಕಷ್ಟ | ನಮಗೆ
ಮರವೆಯೆ ಅತಿ ಕಷ್ಟ
ಮರವೆಯೆ ದುಃಖವು ಮರವೆಯೆ ನರಕವು
ಹರಿ ಕೃಪೆಪಡೆದು ಅರಿವು ಸಂಪಾದಿಸಿ ೮
ತಿರುಕನು ಈಶ್ವರನೂ | ಇಂದ್ರಗಾಗಿ
ತಿರುಗನಾದ ವಿಷ್ಣು
ತಿರುಕರೊಡೆಯ ನು
ತಿರುಪುಹಾಕಿರುವ ತ್ರಿಲೋಕಗಳಿಗೂ೯

೨೧೭
ತಿಳಿಯದಾಯಿತು ವಯಸು ಕಳೆದು ಹೋಯಿತು ಪ
ಖಳರ ಸಂಗದಲ್ಲಿ ಸೇರಿ ಕಂಡ ಕಂಡದನು ಬಯಸಿ
ಕಳವಳಿಸುತ ಕಡೆಗಾಣದೆ ಬಳಲಿ ತೊಳಲಿ ಪಾಪ ಹೆಚ್ಚಿ ಅ.ಪ
ಹಿತವ ಕೇಳದೆ ದುಷ್ಟಧಿಕನೆನಿಸಿದೆ
ಸತಿಸುತರೆಂಬ ಬಲೆಗೆ ಸಿಲುಕಿ
ಅತಿಶಯ ಮೋಹದಲಿ ಮುಳುಗಿ ಪಥಿಕರಾಡುವಂತೆ ನಡೆದು
ಪತಿತನಾಗಿ ನಿಜದ ಮರ್ಮಾ ೧
ಕೆಲದಿನ ಆಟದಿ ಲಲನೆಯರ ಕೂಟದಿ
ಹಲವು ವಿದ್ಯೆಯ ಕಲಿತು ಪರರ
ಒಲಿಸಿ ಸ್ತ್ರೋತ್ರಮಾಡಿ ಬೇಡಿ ಫಲವ ಕಾಣಲಿಲ್ಲ ಕೊನೆಗೆ
ಹಲುಬಿ ಹಲುಬಿ ಬಾಯಿನೊಂದು ೨
ನೀತಿ ಹೇಳುತಾ ಪರರ ನಿಂದೆಗೆಯ್ಯುತಾ
ಸ್ವಾತುಮದಲಿ ಜ್ಞಾನವಿಲ್ಲದೆ
ಮಾತಿನಲ್ಲಿ ನಿಸ್ರ‍ಪಹನಾಗಿ ಕೋತಿಯಂತೆ ಕುಣಿದೆನಲ್ಲದೆ
ಗುರುಮುಖದಲಿ ಪರಮತತ್ವ ೩
ಮತ್ತನಾಗುತ ದುರಾಸಕ್ತನೆನಿಸುತ
ನಿತ್ಯಕರ್ಮವನ್ನು ತೊರೆದು
ಸತ್ಯಶಮದಮಗಳ ಮರೆದು ಚಿತ್ತದಲಿ ನಿರ್ಮಲನಾಗದೆ
ಚಿಂತಿಸುತಲಿ ನಿಜದ ನೆಲೆಯ ೪
ಪರಮಬೋಧೆಯ ಕೇಳಿ ಕರಗಿ ಮನದಲಿ
ನ ಶ್ರೀಚರಣಕಮಲ
ಸ್ಮರಣೆಗೈದು ಹೊರಗು ಒಳಗು ಒಂದೆ ವಿಧದಿ
ಚರಿಸಿ ಸೌಖ್ಯಪಡೆವ ಬಗೆಯ ೫

೨೧೬
ತಿಳಿಯದೆ ಕಾಲ ಕಳೆವರೆ ಮನವೆ ಪ
ಖಲಜನಸಂಗದಲಿ ಸದಾ
ಕಲ್ಮಶಭಾಜನನಾಗುತ
ಹಲಧರಾನುಜನ ಶ್ರೀ ಪದ
ಜಲಜಯುಗಳವ ಸುಜ್ಞಾನದಿ ಅ.ಪ
ಇಂದ್ರಿಯಗಳ ಬಂಧಿಸಿ ಮನ-
ಸೊಂದಾಗಿ ನಿಲಿಸಿ ಒಳಗೆ ಮು-
ಕುಂದನ ದರುಶನ ಮಾಡದೆ
ಮಂದಬುದ್ಧಿಯಾಗಿ ನೀನು ೧
ಯಮನವರೋಡಿ ಬರುತ ನಿ-
ನ್ನೆಳದೆಳದೊಯ್ಯುವ
ಸಮಯದಿ ಭ್ರಮೆಯಿಂದಲ್ಲಿ
ಕಾಲ್ಗೆರಗಲು ಬಿಡುವರೆ ನಿನ್ನ ೨
ತಾಮಸನಾಗುತ ಶ್ರೀಗುರು-
ರಾಮವಿಠಲ ಶರಣೆನ್ನದೆ
ಹೇಮಭೂಮಿ ಕಾಮಿನಿಯರ
ಕಾಮಿಸುತಲಿ ಸೊಕ್ಕುತ ನೀ ೩

೧೩೧
ತೋರೊ ತೋರೊ ನಿನ್ನ ಚರಣವ ಪ
ಮಾರುತಿ ಭಕ್ತರ ಸಾರಥಿ ನೀನೆಂದು
ಕೋರಿ ಭಜಿಪೆ ಬೇಗ ಬಾರೊ ಗುರುವರ ಅ.ಪ
ರಾಮನದೂತನೆ ಭೀಮಪ್ರಖ್ಯಾತನೆ
ವೋ ಮಧ್ವಮುನಿರಾಯ ವಂದಿಪೆ ಜೀಯ ೧
ಭಾವಿಬ್ರಹ್ಮನು ನೀನೆ ಜೀವರಾಧಾರ ನೀನೆ
ತಾವರೆಗಣ್ಣನದಾಸವರ್ಯನೆ ೨
ದಿಟ್ಟ ಶ್ರೀ ಗುರುರಾಮವಿಠ್ಠಲರಾಯನ ಪಟ್ಟದಾನೆಯು ನೀನು ಪಾಲಿಸೆಮ್ಮನು ೩

೨೪
ದರುಶನವಾಯಿತು ಪಂಢರೀಶನ ಪ
ದರುಶನದಿಂದಲಿ ಧನ್ಯರಾದೆವು
ಸರಸಿಜಭವನ ನಾಭಿಯಲಿ ಪಡೆದವನ ಅ.ಪ
ತಂದೆತಾಯಿಯರ ಭಕ್ತಿಯಿಂದ ಸೇವಿಸುವರಿಗೊಲಿದಾ-
ನಂದಪದವಿಯನಿತ್ತ ನಂದನ ಕಂದನ ೧
ಇಷ್ಟ ಭಕುತ ಕೊಟ್ಟ ಇಟ್ಟಿಗೆ ಮೇಲೆ ನೆಲಸಿ
ಶಿಷ್ಟರ ಸಲಹುವ ವಿಠ್ಠಲರಾಯನಂಘ್ರಿ ೨
ಉರದಲಿ ಸಿರಿಯನು ಧರಿಸಿ ಸುರರ ಕಾರ್ಯ
ನೆರವೇರಿಸುವ ಜಗದ್ಭರಿತನ ಶ್ರೀಪಾದ ೩
ಭಾಗವತರ ಭವರೋಗಗಳ ಕಳೆವ
ನಾಗಶಯನ ನಿಖಿಲಾಗಮವೇದ್ಯನ ೪
ರುಕುಮಾಬಾಯಿಗೆ ಸುಖವ ಕರುಣಿಸಿದ
ಮುಕುತಿದಾಯಕ  ಚರಣ೫

೨೧೯
ದಾರಿ ಒಳ್ಳೇದಾಗಿರಬೇಕೂ ಹರಿದಾಸನಾದ ಮೇಲೆ ಪ
ಯಾರೇ ಬಂದರೂ ಸರಿ ಯಾವ ಕಾಲದಲ್ಲಿಯು
ಪಾರಗಾಣದಂಥಾ ಈ ಸಂಸಾರವಾರ್ಧಿ ದಾಟುವದಿಕ್ಕೆ ಅ.ಪ
ಜ್ಞಾನ ಭಕ್ತಿ ದಾನಧರ್ಮ ವೈರಾಗ್ಯದಿ ಸದ್ಗುಣಂಗಳು
ತಾನೆ ತಾನಾಗೆಲ್ಲವು ಸ್ವಾಧೀನವಾಗಿರಬೇಕಾದರೆ ೧
ಓದಿದರ್ಥ ಮನಕೆ ತಿಳಿದು ನಿರತವು ಸಾಧನವು ಮಾಡುತ ಅ-
ನಾದಿ ಸಿದ್ಧವಾದ ತತ್ವದ ಹಾದಿ ಕಾಣಬೇಕಾದರೆ ೨
ಕಾಮ ಕ್ರೋಧ ಲೋಭ ಮೋಹ ಮತ್ಸರ
ತಾಮಸಾದಿ ದುರ್ಗುಣ
ನಿರ್ನಾಮವಾಗಿ ಪ್ರೇಮದಿಂ ನ್ನ ನೆನೆವದಕ್ಕೆ ೩

೨೧೮
ದಾಸನು ನಾನೆಂಬ ಧೈರ್ಯವಿದ್ದರೆ ನಿನಗೆ
ವಾಸುದೇವನ ಭಜಿಸೊ ಪ
ಕಾಸಿಗೋಸುಗ ಪರರ ಕಾಡಿಬೇಡಿವೆ ಬರಿದೆ
ವೇಷಹಾಕಿದರೇನು ವೇದಾರ್ಥ ತಿಳಿದೀತೆ ಅ.ಪ
ಉದರಂಭರಣಕ್ಕಾಗಿ ಪದ ಪದ್ಯಗಳ ಹೇಳಿ
ಉಂಟಾದುದಿಲ್ಲವೆನ್ನುವೆ
ತುದಿಮೊದಲಿಲ್ಲದ ದೋಷಕೆ ಗುರಿಯಾಗಿ
ಸದಮಲನೆಂದರೆ ಸರ್ವರು ನಗರೇನೊ ೧
ಹರಿಸ್ಮರಣೆಯಿಂದಾ ದುರಿತ ಪರಿಹರವೆಂದು
ಆಡುತಲಿದೆ ಶೃತಿಯು
ಕರಣತ್ರಯವು ಶುದ್ಧಿಯಿರ ಬೇಕದಕೆ ಮುಖ್ಯ
ಕಾರಣ ಬಾಯಿಂದ ನುಡಿದರೇನಾಯಿತು೨
ಪಂಚಸದ್ವರ್ಣಾವು ಪರಮಾತ್ಮನ ನಾಮ
ವಂಚನೆ ಇದರೊಳಿಲ್ಲಾ
ಸಂಚಿತಾಗಾಮಿ ಪ್ರಾರಬ್ಧಗಳನುಸಾರ
ಸರ್ವರು ನುಡಿವರು ಗರ್ವವೇತಕೆ ನಿನಗೆ ೩
ಕಾಲಕಾಲಕೆ ಹರಿಯೋಲಗವ ಮಾಡಿ
ಸಾಲಗೀಲ ಮಾಡದೆ
ವೇಳೆಗೆ ದೊರೆತದ್ದು ಭುಂಜಿಸುತಲಿ ಲಕ್ಷ್ಮೀ-
ಲೋಲನ ಕಂಡ ಕಂಡಲಿ ಸ್ಮರಣೆಗೈದೂ ೪
ಹೊರಗೆ ಡಂಭವ ಬಿಡು ಒಳಗೆ ನಿಶ್ಚಲನಾಗು
ಪರರಿಗೆ ಹಿತವ ತೋರು
ನು ಕರುಣದಿ ಕೈಪಿಡಿದು
ಪರಮಸೌಖ್ಯವನೀವ ನಿಜಭಕ್ತನಾದರೆ ೫

ದುರ್ಯೋಧನ ವ್ಯಕ್ತಿತ್ವ
೨೯೫
ದುರ್ಯೋಧನ ಮಹರಾಜನೆ | ಅ
ನಾರ್ಯ ಜನರ ಕಲ್ಪಭೂಜನೆ ಪ
ಧೈರ್ಯ ಧರ್ಮಜ್ಞಾನ ಸೌಂದರ್ಯ ನೀತಿಗಳಲ್ಲಿ
ನಿರ್ಹೇತುಕ ದ್ವೇಷ ಮಾಡುವೆ | ಹಾ ಹಾ ಅ.ಪ
ಹರಿಭಕ್ತಿಗೆ ಮಾನಭಂಗ ಮಾಡಲಾಪೆಯ
ದುರುಳ ಘೋಷಯಾತ್ರೆಯ ಜ್ಞಾಪಿಸಿಕೊ ದುಷ್ಟ ೧
ಜಲದೊಳು ಮುಳುಗಿ ಸ್ವಬಲವನೆಬ್ಬಿಸುವೆನೆಂ
ದೆಲೆ ಭೀಮಗೇಕಿದಿರಾದÀಯ್ಯ ನೀನು ೨
ಕೋಪ ಸ್ವರೂಪನೆ ಪಾಪಸ್ವಭಾವನೆ
ಶ್ರೀಪ ಗುರುರಾಮ ವಿಠಲಗೆ ದೂರನೆ | ಹಾ ಹಾ ೩

೨೫
ದೃಷ್ಟಾಂತವಾಗಿದೆಯೈ ಪ
ಕೃಷ್ಣಾ ನೀಮಾಡಿರ್ಪ ಸೃಷ್ಟ್ಯಾದಿಗಳೆಲ್ಲ ಅ.ಪ
ಜನರು ನಡೆವದೀಗ ನೋಡಲ್
ಮನಕೇ ಬಂದಂತೆ ಕಾರ್ಯಂಗಳೊಡಗೂಡಲ್ ೧
ಧೃಡವಾಗಿಯೇ ತೋರ್ಪುದು
ನಡೆನುಡಿ ಮೊದಲಾದ ನರರು ಮಾಳ್ಪುದೆಲ್ಲ ೨
ಚತುರಾವಸ್ಥೆಗಳಿಂದಲಿ
ಹಿತವೇಬೇಕೆಂದರು ಅಹಿತವಾಗುತಿರುವುದು ೩
ತನ್ನಿಂತಾನೆ ನಡೆವದು
ಭಿನ್ನಾಭಿನ್ನವಾಗಿ ಭೇದ ಪ್ರಪಂಚವು ೪
ಎರಡಾಗಿರುವೆಯಲ್ಲಕು
ಗುರುರಾಮವಿಠಲಾ ನೀ ಮಾಡಿರ್ಪ ಕಷ್ಟಗಳು ೫

೨೨೦
ದೇವರ ದಿವ್ಯಗುಣಗಳ ಪೊಗಳುವದು
ಜೀವರಿಗಿದುವೆ ಪ್ರಯೋಜನವು ಪ
ಭಾವದಿ ತೋರುವ ವಿಷಯಗಳೆಲ್ಲವು
ಭಕ್ತಿಯೊಳರಿತು ಸಮರ್ಪಿಸುತಂ ಅ.ಪ
ನಡೆವದು ನುಡಿವದು ಕೊಡುವದು ಬಿಡುವದು
ಒಡೆಯ ಹರಿಯ ಪ್ರೇರಣೆಯೆಂದು
ದೃಢಮನದಲಿ ತಿಳಿದಾವಾಗಲು ತಾ
ಮೃಢ ಸಖನಡಿ ಧ್ಯಾನಕೆ ತಂದು ೧
ಅರಿಯದೆ ಪಾಮರರೊರಲುವ ಬೋಧೆಯ
ತರತರದಿ ತಿರಸ್ಕರಿಸುತಲೀ
ಪರಮಾನಂದದಿ ಕುಣಿ ಕುಣಿದಾಡುತ
ಭವ ಭಯಗಳನೀಡಾಡುತಲಿ ೨
ಜನನ ಮರಣ ದೂರ ಪರಾತ್ಪರ ಪಾ-
ವನ ಚರಿತ್ರ ಭಾಸುರ ಗಾತ್ರಾ
ವನಜನಯನ  ಎಂ-
ದನುದಿನ ಭಜಿಸುವನೆ ಪವಿತ್ರ ೩

ಸರಸ್ವತಿ
೧೪೫
ದೇವಿ ಸರಸ್ವತೀ ಲೋಕಮಾತೆ ದೇವಿ ಪ
ಪರಮಕಲ್ಯಾಣಿ ಪಾವನೆವಾಣಿ
ಸುರುಚಿರ ಪುಸ್ತುಕಪಾಣಿ ದೇವಿ ಅ.ಪ
ಬುದ್ಯಾಭಿಮಾನಿ ಬ್ರಹ್ಮನರಾಣಿ
ತಿದ್ದು ಮನದ ಸಂಶಯಗಳನು ದೇವಿ ೧
ಶ್ವೇತಾಂಬರ ಪಾತಕದೂರೆ
ಮಾತುಮಾತಿಗೆ ನಿನ್ನ ಬೇಡುವೆ ದೇವಿ ೨
ಗುರುರಾಮ ವಿಠಲನ ಹಿರಿಯ ಸೊಸೆಯ ನೀನು
ಶರಣಜನರ ಸುರಧೇನು ದೇವಿ ೩

೨೬೮
ದೈವ ಭಕ್ತಿ ಸಂಸಾರದೊಳಿಲ್ಲ ಪ
ಜೀವಗಭಿಮಾನವು ಬಿಡದಲ್ಲ ಅ.ಪ
ತನಗೆ ಸಂಕಟ ಬಂದರನುದಿನ ಜಾಗ್ರತೆ
ವನಜಲೋಚನನ ಅರ್ಚನೆಗೆ ಆಲಸ್ಯ ೧
ದಾನಕ್ಕೆ ದಾರಿದ್ರ್ಯ ತನಗೋಸುಗ ಸಾಲ
ಮಾನವಂತೆ ಈ ಮಾನವ ಜನಕೆ ೨
ಮಕ್ಕಳ ಮದುವೆಗೆ ರೊಕ್ಕಸಾವಿರ ಹೊನ್ನು
ಪಕ್ಕಿವಾಹನಗೆ ದೊರೆಯದೊಂದು ಕಾಸು ೩
ಮತ್ತೆ ತನ್ನ ಹೆಂಡತಿಗೆ ಹತ್ತುವರಹದ ಸೀರೆ
ಮುತ್ತೈದೆಗೀವರೆ ಮೂರಾಣೆಯ ಕುಬಸ ೪
ಮದುವೆ ಮುಂಜಿಗೆ ಸಾಲ ಮಾಡದಿದ್ದರೆ ಹ್ಯಾಂಗೆ
ಬುಧರು ಯಾಚಿಸಿದರೆಯಿಲ್ಲ ಎಂಬುವುದೇ? ೫
ಎಷ್ಟು ಬಂದರು ಸಂಸಾರಕ್ಕೆ ಸಾಲದು
ಭ್ರಷ್ಟ ಯಾಚಕರಿಗೇತಕೆ ಕೊಡಬೇಕು ೬
ಸತಿಸುತನು ನಾವು ಸಲಹಿದರೆ ಸಾಕು
ಅತಿಶಯದಾನ ಧರ್ಮಂಗಳು ಬೇಡ ೭
ದಾಕ್ಷಿಣ್ಯಗಾರರಿಗೆ ಭಕ್ಷ್ಯ ಭೋಜ್ಯಗಳ ಊಟ
ಕುಕ್ಷಿಂಭರರು ಕೇಳೆ ಭಕ್ಷ್ಯವೂ ಇಲ್ಲ ೮
ತಾನಾಧಿಕನು ಹರಿಹೀನನೆಂದರಿತವಗೆ
ಶ್ರೀನಿಧಿ ಗುರುರಾಮ ವಿಠಲ ವಲಿವನೆ? ೯

೨೬೭
ದೈವಕೃಪೆ ಇದಲ್ಲಾ
ಇವರಿಗೆ ಭಾವ ಶುದ್ಧಿಯಿಲ್ಲಾ ಪ
ದೇವತೆಗಳು ಸಂತೋಷಿಸರೆಂದಿಗು
ನಾವೆಂಬಹಕಾರದಿ ಮಾಳ್ಪದರಲಿ ಅ.ಪ
ಮದುವೆಯ ಪೆಸರಿರಿಸಿ | ದೂರದಿಂ
ವಿವಿಧ ಬಂಧುಗಳ ಕರಸಿ
ವಧುವರರಿಗವರು ವುಡುಗೊರೆ ವೋದಿಸ-
ಲದನೇಯವರಿಗೆ ಹಿಂದಕ್ಕೆ ಕೊಡುವುದು ೧
ಕೊಡದಿದ್ದರೆ ಕೋಪಾ | ಕೊಟ್ಟರೆ
ನುಡಿಯು ನಾನಾ ರೂಪಾ | ಈ
ಕಡು ಮೂಢರಿಗೆ ಪುಣ್ಯವೆಲ್ಲಿಹುದು
ಸಡಗರ ಭ್ರಾಂತಿಯು ಡಂಬವು ಬರಿದೆ ೨
ಮಂತ್ರದಿ ಪೇಳದಿಹ ಬಾಹ್ಯವಾದ
ತಂತ್ರಗಳಾಚರಿಸೆ
ಯಂತ್ರೋದ್ಧಾರಕ ಗುರುರಾಮವಿಠಲಾ
ಸಂತಸಡುವನೆ ಧನವ್ಯಯ ಬರಿದೆ ೩

೧೮೫
ದೊರೆನೀನೆ ಮಾಧವ ಮೊರೆ ಹೊಕ್ಕೆನೋದೇವ ಪ
ಕರಿರಾಜವರದನೇ ಶರಣಾರ್ತಿಹರಣನೇ ಅ.ಪ
ಆರೊಂದುವ್ಯಸನದಿ ಈರೊಂದು ತಾಪದಿ
ಗಾರಾದೆ ಮೋಹದಿ ಕಾರುಣ್ಯವಾರಿಧಿ ೧
ಅನುಮಾನವೇತಕೈ ಎನಕಷ್ಟಬಿಡಿಸಲು
ಅನುದಿನದಿ ಬೇಡಲು ಮನಸೇಕೆ ಬಾರದು ೨
ಸುರವಂದ್ಯ ಚರಣನೆ ಗುರುರಾಮ ವಿಠಲನೆ
ಸರಿಯಾರೊ ನಿನಗೆಣೆ ಪರಿಪಾಲಿಸೆನ್ನನೆ ೩