Categories
ರಚನೆಗಳು

ಗುರು ರಾಮವಿಠಲ

ಸಂಕ್ಷೇಪ ರಾಮಾಯಣ
೩೪೩
ಶ್ರೀಜಾನಕೀಮನೋಹರ ಚರಿತೆಯನು ಮುನಿ
ರಾಜವಾಲ್ಮೀಕರಿಗೆ ನಾರದಂಪೇಳ್ದನದು
ರಾಜೀವನೇತ್ರ ಪೇಳಿಸಿದಂತೆ ಸಂಕ್ಷೇಪದಿಂ ಪೇಳ್ವೆನಾಲಿಸುವುದು
ಸುರರಮೊರೆಕೇಳಿ ಹರಿಯುದಿಸಿದಂ ದಶರಥಗೆ
ವರಮುನಿಯಯಾಗಮಂ ಕಾಯ್ದುತಾಟಕಿಯಸಂ
ಹರಿಸಿ ಗೌತಮಸತಿಯಶಾಪಮಂಬಿಡಿಸಿ ಮಿಥಿಲಾಪುರದಿ
ಶೈವಧನುವ
ಮುರಿದು ಭೂಸುತೆಯ ಕರಪಿಡಿದಯೋಧ್ಯಾಪುರಿಗೆ
ಬರುತ ಭಾರ್ಗವನ ಗರ್ವವಸೆಳೆದು ತಂದೆಯಂ
ಹರುಷಪೊಂದಿಸಿದಂರಘುದ್ವಹಂ ರಾಮಚಂದ್ರನು
ಬಾಲಕಾಂಡದಲಿ ೧
ಮಾತೆಯನುಡಿಗೆ ಪಿತನಭಾಷೆಯಂ ಸಲಿಸಲ್ಕೆ
ತಾತಮ್ಮಲಕ್ಷ್ಮಣ ಧರಾತ್ಮಜೆಯರ್ಸಹಿತ ಪ್ರ
ಖ್ಯಾತವನವಂ ಪೊಕ್ಕು ಮೋದದಿಂ ಚಿತ್ರಕೂಟದೊಳಿರಲು
ಭರತಬಂದು
ಪ್ರೀತಿಯಿಂದಲಿ ರಾಜ್ಯವಪ್ಪಿಸಲ್ ರಾಮನನು
ಜಾತಂಗೆ ಪಾದುಕವನಿತ್ತು ಮನ್ನಿಸಿಮುನಿ
ವ್ರಾತಂ ಸತ್ಕರಿಸಿಯತ್ರಿಯಂಕಂಡ
ರಘುವರನಯೋಧ್ಯಾಕಾಂಡದಿ ೨
ದಂಡಕಾರಣ್ಯದಿ ವಿರಾಧನಂ ಸಂಹರಿಸಿ
ಚಂಡಿ ಶೂರ್ಪಣಖಿ ಕಿವಿಮೂಗನಂ ಕೊಯಿಸಿಯು
ದಂಡಖರದೂಷಣಾದ್ಯರ ಮಡುಹೆ
ಮಾಯಾಮೃಗದವ್ಯಾಜದಿಂ ರಾವಣಂ
ಕೊಂಡೊಯ್ಯೆಸೀತೆಯಂಅರುಣಸುತನಿಂದಕೋ
ದಂಡ ದೀಕ್ಷಾಚಾರ್ಯ ಕೇಳ್ದಸತಿವಾರ್ತೆಯಂ
ಕಂಡು ಶಬರಿಯನು ಪಂಪಾತಟಕೆಬಂದ
ನಾರಣ್ಯಕಾಂಡದೊಳ್ರಾಮನು ೩
ಮರುತಾತ್ಮಜನಕಂಡು ಸುಗ್ರೀವಸಖ್ಯವಾ
ಚರಿಸಿ ವಾಲಿಯ ಮುರಿದು ಕಪಿರಾಜ್ಯದೋಳ್ ದಿವಾ
ಕರಸುತನ ನಿಲಿಸಿ ಕಪಿಸೈನ್ಯವಂಕರಸಿ
ಸೀತೆಯಕುಶಳವಂತಹುದೆನೆ
ತೆರಳಲು ಚತುರ್ದಿಕ್ಕಿಗಾಗವಾನರರುಮೂ
ವರುಬಂದುಪೇಳ್ದರೆಲ್ಲಿಯು ಕಾಣೆವೆಂದು ವನ
ಚರರು ಹನುಮಂತ ಮುಖ್ಯರು ಕಡಲಸಾರಿದರು
ಕಿಷ್ಕಿಂಧಕಾಂಡದಲಿ ೪
ಶರಧಿಯದಾಟಿ ಲಂಕೆಯ ಪೊಕ್ಕುಲಂಕಿನಿಯ
ಮುರಿದು ಪುರವೆಲ್ಲಮುಂ ತಿರುಗಿವನದೊಳಗೆರಘು
ವರಸರಸಿಗುಂಗುರವನಿತ್ತು ಮಣಿಯನುಕೊಂಡು
ವನಭಂಗಮಂಗೈಯ್ಯುತ
ಪರಮ ಸಂಭ್ರಮದೊಳಕ್ಷಾದ್ಯರಂಕೊಂದುವಿಧಿ
ಶರಕೆ ಮೈಗೊಟ್ಟುಲಮಂಕಾಪುರವಸುಟ್ಟುಬಂ
ದೆರಗಿ ಸೀತೆಯಕ್ಷೇಮವನರುಹಿದನು
ಪತಿಗೆಸುಂದರಕಾಂಡದಲ್ಲಿ ಹನುಮಾ ೫
ವನಧಿಯೊಳ್ಸೇತುವೆಯಗಟ್ಟಿ ಧುರದೊಳಗೆರಾ
ವಣ ಕುಂಭಕರ್ಣಾದ್ಯರೆಲ್ಲರಂ ಸದೆದುತ
ಕ್ಷಣವಿಭೀಷಣಗೆ ಸ್ಥಿರಪಟ್ಟವಂಗಟ್ಟಿ ಬ್ರಹ್ಮಾದಿ ದಿವಿಜರು
ಪೊಗಳಲು
ಜನಕನಂದನೆಯ ಪಾವಕನಿಂ ಪರಿಗ್ರಹಿಸಿ
ಘನಪುಷ್ಪಕವನೇರಿಬರುತ ವಹಿಲದಲಿ ಭರ
ತನಿಗೆ ಸುದ್ದಿಯಕಳುಹಿ ರಾಘವಂ ಧರೆಯನಾಳ್ದನು
ಯುದ್ಧಕಾಂಡದಲಿ ೬
ಪರಮಧರ್ಮದಲಿ ರಾಜ್ಯವಾಳುತಲಿ ಕಲಿರಾಮಭೂ
ವರನು ಹನ್ನೊಂದುಸಾವಿರಲವಣನಂ
ಮುರಿದು ಹರಮೇಧಾದಿ ಯಾಗಂಗಳಂ ಮಾಡಿ
ಪುತ್ರರಿಗೆ ರಾಜ್ಯವಿತ್ತು
ಪುರಜನವ ಪಶುಪಕ್ಷಿ ಕೀಟವ್ರಜ ಸಹಿತ
ತೆರಳಿದಂದಿವಿಗೆದೇವರ್ಕಳರಳಿನಮಳೆಯ
ಸುರಿದು ಜಯಜಯವೆಂದು ಪೊಗಳಿದರುಹರಿ
ಯನುತ್ತರಕಾಂಡದಲಿ ತಿಳಿವದು ೭
ಇಪ್ಪತ್ತುನಾಲ್ಕುಸಾವಿರ ಶ್ಲೋಕ ಕಾಂಡಗ
ಳೊಪ್ಪುವುದು ಸಪ್ತವೈನೂರುಸರ್ಗಗಳೆಂದು
ಕ್ಲಪ್ತವಾಗಿಹ ಮಹಾರಾಮಾಯಣವನು
ವಾಲ್ಮೀಕಿ ಮುನಿವಿರಚಿಸಿದನು
ತಪ್ಪದೇ ಪಠಿಸುವಗಮುದಿನಂ ಗಾಯತ್ರಿ
ಇಪ್ಪತ್ತು ನಾಲ್ಕುಲಕ್ಷದ ಜಪದಫಲಬಹುದು
ಸರ್ಪಶಯನನ ಮಾನುಷವತಾರದ
ಚರಿತಸಜ್ಜನ ಕಲ್ಪವೃಕ್ಷವಿದುವೆ ೮
ಇಂತಪ್ಪ ಮಹಿಮೆಯುಳ್ಳೀಕಥೆಯ ಸಂಕ್ಷೇಪ
ದಿಂ ತರಳನಾಂ ಪೇಳ್ದೆತಪ್ಪಿದ್ದಡೆಯು ತಿದ್ದಿ
ಸ್ವಾಂತ ನಿರ್ಮಲರು ಪರಿಪಾಲಿಪುದು ನಿಮ್ಮಡಿಯ
ಸೇವಕಂಸೇವ್ಯನವನು
ಎಂತಾದಡೆಯು ಹರಿಯನಾಮಾಮೃತದರುಚಿಮ
ಹಾಂತರರಿವರು ದುರ್ಜನರು ನಿಂದಿಸಿದಡೇನು
ಕಂತುಪಿತ ಗುರುರಾಮವಿಠ್ಠಲಗಂಕಿತವಿದುವೆ
ಸಂಕ್ಷೇಪರಾಮಾಯಣಂ ೯

೬೪
ಶ್ರೀನರಹರಿ ಕರುಣಾಜಲಧೆ ತವಚರಣವ ನಂಬಿದೆ ಪ
ದೀನಜನರು ಪ್ರತಿದಿನ ಮೊರೆಯಿಡುತಿರೆ
ನೀನುದಾಶಿಸುವರೇನೊ ರಮಾಪತೆ ಅ.ಪ
ದುರಿತಗಿರಿ ನಿಕರ ಕುಲಿಶಾಯುಧ ಧುರಧೀರಾ ಶೂರಾ
ದುರುಳ ಹಿರಣ್ಯ ಕಶಿಪು ದನುಜವನ ಕುಠಾರ
ಸರಸಿಜಭವ ಶಿವ ಪುರಂದರ ಮುಖ ಸುರ
ಸನ್ಮುನೀಂದ್ರ ನುತಿ ಪಾತ್ರಸುಚರಿತ ೧
ಉಗ್ರರೂಪ ಸಕಲಗ್ರಹಭಯ ಪರಿಹಾರೀ ಶೌರೀ
ಊರ್ಜಿತ ಸುಬಲ ಪರಾಕ್ರಮ ಮಧು ಮುರ ವೈರಿ
ಜಾಗ್ರತ್ಸ ್ವಪ್ನಸುಷುಪ್ತಿಗಳೊಳೆನಗೆ
ಜಲಜನಾಭ ನಿನ್ನಯ ಚಿಂತನೆ ಕೊಡು ೨
ಕ್ಷುದ್ರರೋಗಗಳುಪದ್ರಪಡಿಸುತಿಹದೈಯ್ಯ | ಜೀಯಾ
ಕ್ಷೇಮವಿತ್ತು ನಿನ್ನವರ ದಾಸನೆನಿಸೈಯ್ಯಾ
ರುದ್ರಾಂತರ್ಗತ ಗುರುರಾಮ ವಿಠಲ
ಭದ್ರಮೂರುತಿ ಘಟಿಕಾಚಲನಿಲಯ ೩

(ನುಡಿ-೧) ಜಂಭಾರಿವಿನುತ
೬೫
ಶ್ರೀನಿಧಿ ನಿನ್ನನು ಧ್ಯಾನಿಸುವೆನು ಆಶ್ರಿತ ಜನ ಮಂದಾರ
ದಾನವಗಿರಿಕುಲಿಶಾ ನರಸಾರಥಿ ದಶರಥ ಸುಕುಮಾರ ಪ
ಅಂಬರರಾಜನಳಿಯ ಅಘನಾಶನ
ಕುಂಭಿನಿಜಾರಮಣ
ಜಂಭಾರಿವಿನುತ ಶಂಬರಹರಪಿತ
ನಂಬಿದೆ ನಾನಿನ್ನ ೧
ಮೀನ ಕಮಠ ವರಾಹ ನರಹರಿ ವಾ-
ಮನ ಭಾರ್ಗವ ರಾಮ
ಧೇನುಕ ಭಂಜನ ಜಿನಸುತ ಕಲ್ಕಿಯೆ
ದೀನ ಜನ ಪ್ರೇಮಾ ೨
ತಿರುಪತಿಯಲಿ ನೆಲಸಿರುವೆ ಭಕ್ತಸುರ-
ತರುವೆ ವೆಂಕಟೇಶ
ಕೋರಿದ ವರಗಳ ಕೊಡುವ ಶ್ರೀನಿವಾಸ ೩

೬೬
ಶ್ರೀನಿವಾಸ ಚಿದ್ವಿಲಾಸ ಸೇವಕ ಪರಿಪೋಷ ಪ
ಗಾನಲೋಲ ಸುಗುಣಶೀಲ ಕರುಣಾಲವಾಲ ಗೋಪಾಲ ಅ.ಪ
ಎಷ್ಟುಪ್ರಾರ್ಥಿಸಲು ನಿನಗೆ ಯಾತಕೆ ದಯಬಾರದು
ಕಷ್ಟ ಬಿಡಿಸಿ ಕರವ ಪಿಡಿದು ಕಡೆಹಾಯಿಸುವದೆನ್ನ ೧
ಕಾಮಜನಕ ಕಮಲನಾಭ ಸೋಮಶೇಖರಾರ್ಚಿತ
ಶಾಮಲಾಂಗ ಚಕ್ರಪಾಣಿ ಶತಕೋಟಿ ರವಿ ತೇಜ೨
ಕರೆಯೆಕರೆಯೆ ಬಿಂಕವೇನು ಶರಣರ ಸುರಧೇನು
ಗುರುರಾಮ ವಿಠಲ ನೀನು ಕೋರಿ ನಿನ್ನ ನಂಬಿದೆನು ೩

೧೪೦
ಶ್ರೀಮದಾಂಜನೇಯ ಸುಜನ
ಪ್ರೇಮ ಸದ್ಗುರುರಾಯ ಪ
ರಾಮದೂತಾ ಸೀತಾ ಮಹಾಸತಿ
ಕಾಮಿತದಾಯಕ ಕಡುಗಲಿ ಭೀಮ ಅ.ಪ
ಆಶಾಶರಧಿಯನು ದಾಟಿದ ಮ
ಹಾಶೂರನು ನೀನು
ಮೋಸಗಾರರಿಗೆ ಮೃತ್ಯುದೇವತೆಯೆ
ದಾಶರಥಿಯ ಕಾರ್ಯ ಧುರಂಧರನೆ ೧
ಧರ್ಮ ವಿಭೀಷಣನಾ ಮನೆಯನು
ಮರ್ಮವರಿತು ವುಳುಹಿ
ನಿರ್ಮಲನೆಂದಾನಂದವ ಪಡುತ
ಧರ್ಮೇತರ ನಿಲಯಗಳ ದಹಿಸಿದೈ ೨
ಧರಣಿ ಪುಟ್ಟಪರ್ತಿನಿಲಯ ಭಾ
ಸುರ ಕಪಿ ಚಕ್ರವರ್ತಿ
ಗುರುರಾಮ ವಿಠಲನ ದಾಸೋತ್ತಮ ಮ-
ಧ್ವರಾಜ ನಿಜ ಶರಣರ ಕಲ್ಪತರುವೇ ೩

೬೮
ಶ್ರೀರಂಗನಾಥಾ ಶ್ರಿತ ಸೌಖ್ಯದಾತ ಪ
ನೀರಜ ಭವಪಿತ ನಿನ್ನ ನಂಬಿದೆ ದಾತ ಅ.ಪ
ಬ್ರಹ್ಮಕರಾರ್ಚಿತ ಪಾದಾರವಿಂದ
ಬ್ರಹ್ಮಜನಕ ಪೂರ್ಣಾನಂದ ಮುಕುಂದಾ ೧
ರವಿವಂಶ ರಾಯರ ರಕ್ಷಿಸಿ ಮೆರೆದೆ
ರಾವಾಣಾನುಜಗೆ ಒಲಿದು ನೀ ಬಂದೆ ೨
ಕಾವೇರಿ ತಪಗೈಯೆ ಕರುಣದಿ ನೀ ನೋಡಿ
ದೇವ ತನ್ಮಧ್ಯದಿ ನೆಲೆಸಿದೆ ಹೂಡಿ ೩
ಏಳು ಪ್ರಾಕಾರ ಮಧ್ಯದಲ್ಲಿರುವವನೆ
ಫಾಲನಯನ ಸಖ ಪತಿತ ಪಾವನನೆ ೪
ನಿನ್ನ ಸಂದರುಶನ ಮಾಡಿದ ಜನರು
ಧನ್ಯರಾಗುತಯಿಹಪರ ಪಡೆಯುವರು ೫
ಚಂದ್ರ ಪುಷ್ಕರಣಿಯೋಳ್ಮಿಂದ ತಕ್ಷಣದಿ
ಬೆಂದು ಪೋಗುವುದಘವೃಂದವು ಭರದಿ ೬
ಗುರುರಾಮ ವಿಠ್ಠಲ ವರಮುನಿ ಪಾಲ
ಶರಣಜನಾಧಾರ ಶ್ರೀ ತುಲಸೀ ಮಾಲಾ ೭

೭೦
ಶ್ರೀರಮಣೀ ಮನೋಹರ ಆ
ಶ್ರಿತ ಜನ ಮಂದಾರ ಯದುವೀರ ಪ
ಘೋರ ದುರಿತ ಪರಿಹಾರ ಕುಜನ ಸಂ-
ಹಾರ ಯಶೋದೆ ಸುಕುಮಾರ ನಮೋ ನಮೋ ಅ.ಪ
ಪಾಂಡವಪ್ರಿಯ ಬ್ರಹ್ಮಾಂಡನಾಯಕ ವೇ-
ತಂಡ ರಾಜವರದ ಪುಂಡರಿಕಾಕ್ಷನೆ ೧
ಅಕ್ಷಯ ಫಲದ ಮುಮುಕ್ಷುಗಳೊಡೆಯನೆ
ಪಕ್ಷಿವಾಹನ ನಿಟಿಲಾಕ್ಷ ಸಖನೆ ನಮೋ ೨
ದುರಭಿಮಾನಿಗಳ ಗರುವ ಬಿಡಿಸಿ ತನ್ನ
ಶರಣರ ಸಲಹುವ ಗುರುರಾಮ ವಿಠಲನೆ ೩

೭೧
ಶ್ರೀರಾಮ ಮಂಗಳಂ ಘೋರಾಘಮರ್ದನ ಪ
ಸ್ಮರ ಕೋಟಿ ಲಾವಣ್ಯ ವಾನರ ಪರಿ-
ವಾರ ಜಾನಕೀ ಮನೋಹರ ಅ.ಪ
ಪಾಂಡವ ಪಾಲನ ಅಂಡಜ ವಾಹನ
ಕುಂಡಲೀ ಶಯನ ರಿಪು ಮಂಡಲವಿ-
ಖಂಡನ ಬ್ರಂಹ್ಮಾಂಡ ನಾಯಕ ೧
ವೆಂಕಟ ರಮಣ ಸಂಕಟ ಹರಣ
ಪಂಕಜ ನಯನ ಬಿರುದಾಂಕ ಹರಿ
ಶಂಖಧರ ಕಿಂಕರ ಪ್ರಿಯ ೨
ಮರುತಾತ್ಮಜಾರ್ಚಿತ ಪುರವೈರಿಭಾವಿತ
ಸುರನಾಥ ಸೇವಿತ ಮಹಿಮಾನ್ವಿತ
ಗುರುರಾಮ ವಿಠಲ ಶುಭಚರಿತ ೩

೭೨
ಶ್ರೀರಾಮ ಮನೋಹರ ಕೃಪಾಸಾಗರ ಪ
ಸಾರಸಾಪ್ತ ವಂಶ ಭೂಪ ಸಾಧು ಪೋಷಕ
ಮಾರುತಾತ್ಮಜಾ ಪೂಜಿತ ಅ.ಪ
ಗಾಧಿತನಯ ಯಾಗರಕ್ಷಗಾಧ ಮಹಿಮನೇ
ವೇದ ವೇದ್ಯ ಬೋಧ ರೂಪ ಬುಧ ಜನ ಪ್ರಿಯಾ
ವೇದವಂದ್ಯ ವಿಶ್ವವಲ್ಲಭಾ ೧
ರಾವಣಾದಿದನುಜ ಭಂಜನಾನತರ ಕಾವನೆ
ಭಾವಜಾರಿ ಚಾಪಭಂಗ ಭಾಸುರಾಂಗನೆ
ದೇವ ದೇವ ದೀನರಕ್ಷಕಾ ೨
ಭೂಮಿಗಧಿಕ ನೂತನ ಪುರಿಧಾಮ ನೀನಲಾ
ಕಾಮಿತಾರ್ಥದಾತ ಸಾಮಗಾನ ಲೋಲಕ್ಷೇಮವೀವ ಗುರುರಾಮ ವಿಠ್ಠಲ ೩

೭೩
ಶ್ರೀರಾಮ ಶ್ರೀರಾಮ ಶ್ರೀರಾಮ ಶ್ರೀರಾಮ
ಶ್ರೀರಾಮ ಸೀತಾರಮಣನೆ | ಪರಾತ್ಪರ
ಕಾರುಣ್ಯನಿಧಿಯೆ ಕೈಪಿಡಿಯೊ ಪ
ಸರಸಿಜಾಸನ ಪುರಹರನನ್ನು ಮೊದಲು ನೀ
ಶರೀರದಿ ಪಡೆದೆ ಸರ್ವೇಶ | ಕೇಶವ
ಪರಮಪುರುಷನೆ ಕೈಪಿಡಿಯೊ೧
ಅರಿವಿಗಾಶ್ರಯನೀನೆ ಸರ್ವಶಬ್ದವಾಚ್ಯ
ದುರಿತವಿದೂರ ಪರಮಾತ್ಮ | ನಾರಾಯಣ
ಕರುಣವಾರಿಧಿಯೆ ಕೈಪಿಡಿಯೊ ೨
ಮಾಯಾಮನೋಹರ ಕಾಯಜ ಜನಕನೆ
ನೋಯುತಲಿಹೆನೊ ಭವದೊಳು | ಮಾಧವ
ರಾಯನೀ ಒಲಿದು ಕೈಪಿಡಿಯೊ ೩
ಗೋವುನಿಗಮಭೂಮಿ ಸೂರ್ಯ ಕಿರಣಗಳಿಂದ
ನೀವೊಲಿದೆಲ್ಲರ ಸಲಹುವೆ | ಎನ್ನಯ್ಯ
ಗೋವಿಂದ ನೀನೆ ಕೈಪಿಡಿಯೊ ೪
ವ್ಯಾಪಕನಾಗಿದ್ದು ವ್ಯಾಪಾರ ಮಾಡಿಸುವೆ
ಭೂಪಾತಾಳದಿ ಲೋಕವ | ವಿಷ್ಣುವೆ
ಆಪತ್ಭಾಂಧವನೇ ಕೈಪಿಡಿಯೊ ೫
ಕರ್ಣದಿ ಪುಟ್ಟಿದ ಕಲುಷ ದಾನವರನ್ನು
ಮುನ್ನನೀ ಕೊಂದೆ ಯುಕ್ತಿಯಲಿ | ಮಧುಸೂಧನ
ಪನ್ನಗಶಯನ ಕೈಪಿಡಿಯೊ ೬
ಶಕ್ರಗೋಸುಗ ನೀನೆ ಶುಕ್ರ ಶಿಷ್ಯನ ಬೇಡಿ
ವಿಕ್ರಮದಿಂ ಭೂಯಳದೆ | ಅದ್ಭುತತ್ರಿ
ವಿಕ್ರಮ ಮೂರುತಿಯೆ ಕೈಪಿಡಿಯೊ ೭
ಆಮಹಾವಟುರೂಪದಿಂದಲದಿತಿಯೊಳು
ಸ್ವಾಮಿ ನೀಉದಿಸಿ ಬಲಿಯನು | ಯಾಚಿಸಿದೆ
ವಾಮನ ಮೂರ್ತಿಯೆ ಕೈಪಿಡಿಯೊ ೮
ಸಿರಿದೇವಿಯನು ವಕ್ಷಸ್ಥಳದಿ ನೀ ಧರಿಸಿದೆ
ಸುರನರೋರಗರಿಗೊಡೆಯನೆ | ಶ್ರೀಧರ
ತ್ವರಿತದಿ ಎನ್ನ ಕೈಪಿಡಿಯೊ ೯
ವಿಷಯಗಳನುಭವಿಸುವರಿಂದ್ರಿಯಗಳಿಂದ
ಹೃಷಿಕೇಶ ನಿನ್ನ ಕಾಣರೊ | ಪಾಮರರು
ಋಷಿಗಣವಂದ್ಯ ಕೈಪಿಡಿಯೊ ೧೦
ನಾಭಿಯದೆಸೆಯಿಂದ ಬ್ರಹ್ಮಾಂಡವ ಪಡೆದೆ
ಶೋಭನಚರಿತಾಮರವಿನುತ | ನೆ ಪದ್ಮ
ನಾಭನೆ ಒಲಿದು ಕೈಪಿಡಿಯೊ ೧೧
ನೀ ದಯದಲಿ ಯಶೋದಾದೇವಿಯಿಂದಲಿ
ಬೋಧರೂಪನೆ ಕಟ್ಟಿಸಿಕೊಂಡೆ | ಸ್ವಾಮಿ
ದಾಮೋದರ ಎನಗೊಲಿದು ಕೈಪಿಡಿಯೊ ೧೨
ಹರನಲ್ಲಿ ನಿಂತು ಸಂಹರಿಸುವೆ ಜಗವನ್ನು
ಪರಮ ನಿಷ್ಕರುಣದಲಿ | ನೀ ಸಂ
ಕರ್ಷಣ ಮೂರುತಿಯೆ ಕೈಪಿಡಿಯೊ ೧೩
ಭಾಸುರಗಾತ್ರ ದೇವಾಸುರ ಮನುಜರೆಂ-
ಬೀಸಮುದಾಯದೊಳಗಿರ್ಪೆ | ಸರ್ವಾತ್ಮ
ವಾಸುದೇವಾಖ್ಯ ಕೈಪಿಡಿಯೊ ೧೪
ಶುದ್ಧ ನಿರ್ಮಲರೂಪ ಸೂರಿ ಜನಾಶ್ರಯ
ವಿದ್ವದ್ಭೀರೀಡ್ಯಾ ಸುಗುಣಾಢ್ಯ | ನೀನೆ ಶ್ರೀ
ಪ್ರದ್ಯುಮ್ನ ಒಲಿದು ಕೈಪಿಡಿಯೊ ೧೫
ಮುನಿಜನವಂದಿತ ಅನಿಮಿಷಸನ್ನುತ
ಕನಕಗರ್ಭನ ತಾತ ಖಗವಾಹ | ಗತ ಮೋಹ
ಅನಿರುದ್ಧ ಎನ್ನ ಕೈಪಿಡಿಯೊ ೧೬
ಸರಸಿಜಭವ ಮೊದಲು ತೃಣಪರಿಯಂತವು
ಸರ್ವರು ಜೀವರೆನಿಸುವರು | ಸಿರಿಯರಸ
ಪುರುಷೋತ್ತಮ ನೀನೆ ಕೈಪಿಡಿಯೊ ೧೭
ಮೋಕ್ಷದಾಯಕ ಸರ್ವಾಧ್ಯಕ್ಷ ಜೀವರಿಗೆಲ್ಲ
ಸಾಕ್ಷಿಯಾಗಿರುವೆಯೊ ಹೊರ ಒಳಗೆ | ಸ್ವಾಮಿ ಅ-
ಧೋಕ್ಷಜ ನೀನೆ ಕೈಪಿಡಿಯೊ ೧೮
ಪರಮಸತ್ಪುರುಷನಾಗಿಹ ಪ್ರಹ್ಲಾದನ
ದುರುಳ ಹಿರಣ್ಯಕ ಬಾಧಿಸಲು | ಉದಿಸಿದ
ನರಸಿಂಹ ಮೂರುತಿಯೆ ಕೈಪಿಡಿಯೊ೧೯
ಇಚ್ಛಾಮಾತ್ರದಿ ಸೃಷ್ಟಿ ಸ್ಥಿತಿಲಯಗೈಯ್ಯುವೆ
ನಿಚ್ಛಲನಾಗಿ ಜಗವನ್ನು | ನುಂಗುವೆ
ಅಚ್ಯುತ ಎನ್ನ ಕೈಪಿಡಿಯೊ ೨೦
ಸ್ಪರ್ಧೆಗೈಯ್ಯುತಲಿರುವ ದುರ್‍ದಾನವರನ್ನು
ನಿರ್ದಯನಾಗಿ ಕೊಲ್ಲುವೆ | ನೀನೆ ಜ-
ನಾರ್ಧನಸ್ವಾಮಿ ಕೈಪಿಡಿಯೊ ೨೧
ಇಂದ್ರನಂದನ ವಿಧಿ ಚಂದ್ರಶೇಖರ ಮುಖ್ಯ
ಸಂದೋಹ ನಿನ್ನ ಪೊಗಳುವರು | ಅಯ್ಯ ಉ-
ಪೇಂದ್ರ ಮೂರುತಿಯೆ ಕೈಪಿಡಿಯೊ ೨೨
ಕರುಣಸಾಗರ ನೀನೆ ಶರಣ ಜನೋದ್ಧಾರ
ಸಿರಿದೇವಿಯರಸ ಸರ್ವೇಶ | ಸರ್ವಗ ಸ್ವಾಮಿ
ಹರಿಯೆ ನೀ ಒಲಿದು ಕೈಪಿಡಿಯೊ ೨೩
ಕಷ್ಟ ಎಂಬುವ ಬಲು ಉಷ್ಣ ಜಲದಿ ಬಿದ್ದು
ವಿಷ್ಣುವೆ ನಾನು ಮೊರೆಯಿಡುವೆ | ಕಾದುಕೊ
ಕೃಷ್ಣ ನೀ ಒಲಿದು ಕೈಪಿಡಿಯೊ ೨೪
ಸರ್ವಜೀವರಿಗಂತರ್ಯಾಮಿ ನೀನಲ್ಲವೆ
ವರಬಿಂಬಮೂರ್ತಿ ನೀನಯ್ಯಾ | ಸ್ವಾಮಿ ಶ್ರೀ
ಗುರುರಾಮವಿಠ್ಠಲಾನತಪಾಲ ೨೫

ಸಂಕ್ಷೇಪ ಭಾರತ
೩೪೪
ಶ್ರೀರುಕ್ಮಿಣೀರಮಣ ತಾನುಡಿಸಿದಂತೆ ನಾಂ
ಧಾರುಣಿಪ ಜನಮೇಜಯಂಗೆ ಮುನಿ ಪೇಳಿಸಿದ
ಭಾರತವನೊರೆಪ ಸಂಕ್ಷೇಪದಿಂ
ಹದಿನೆಂಟುಪದ್ಯಗಳೊಳಾಲಿಸುವುದು
ದನುಜದಿವಿಜರೀ ಭುವಿಯೊಳವತಿರಿಸಿದರುಸುಯೋ
ಧನಪಾಂಡುತನಯರಂ ಸೈರಿಸದೆಭೇದಮಂ
ನೆನೆಯುತ ವಿಷವವಿಡಿಸಿಸರ್ವದಿಂ
ಕಟ್ಟಿಸಿಯರಗಿನಮನೆಯೊಳವರನಿಡಲು |
ವನಜಲೋಚನನ ಕೃಪೆಯಿಮದದಂದಾಟಿಕಾ
ನನದಲಿ ಹಿಡಿಂಬಬಕರಂ ಮುರಿದುದೃಪದರಾ
ಜನಮಗಳನೈವರುಂ ಮದಿವ್ಯಾಗಿ
ಪುತ್ರರಪಡೆದರಾದಿಪರ್ವದಲ್ಲಿ ೧
ರಾಜಸೂಯಾಭಿಧಾನದ ಯಾಗಕಾರಣದೊ
ಳಾಜರಾಸಂಧಾದಿಗಳ ಕೊಲಿಸಿನೃಪಧರ್ಮ
ರಾಜಮಾಡಲುಮುಖವದು ನೋಡಿಸಹಿಸದೆ
ಸುಯೋಧನಂಮತ್ಸರದೊಳು
ಜೂಜಿನಲಿಸೋಲಿಸಲು ಪಂಚಪಾಂಡವರಂ ಸ
ರೋಜಾಕ್ಷಿ ದ್ರೌಪದಿಯ ಭಂಗಪಡಿಸಲ್ಕೆಪಂ-
ಕೇಜ ಪತ್ರೇಕ್ಷಣಂ ಕಾಯ್ದುಕೊಂಡನುತನ್ನವರ
ಸಭಾಪರ್ವದಲಿ ೨
ಅಡವಿಯೊಳು ವಾಸವಾಗಿರಲು ಪಾಂಡುಸುತರ್ಗೆ
ಪೊಡವಿ ಸುರರರುಹಿಸಲ್ ಸತ್ಕಥೆಗಳಾಲಿಸುತ
ಮೃಡನಮಚ್ಚಿಸಿನರಂ ಪಾಶುಪಥವಂಪಡೆಯೆ
ಘೋಷಯೊಳಹಿತನ
ಬಿಡಿಸಿದಂ ಗಂಧರ್ವಪತಿಯಿಂದ ಪಾರ್ಥನೀ
ರಡಿಸಿ ನಾಲ್ವರುಮೂರ್ಛೆಪೊಂದಲ್ಕೆಯಕ್ಷಂಗೆ
ಕೊಡಲುತ್ತರಂ ಯುಧಿಷ್ಠಿರಗೆ ಜವಮೆಚ್ಚಿದಂ
ಅರಣ್ಯಪರ್ವದೊಳಗೆ ೩
ಬಂದುಮಾತ್ಸ್ಯಾಲಯದಲಜ್ಞಾತವಾಸದೊಳ
ಗಂದುಪಾಂಡವರಿರಲ್ ಕೀಚಕಾಧಮನು ಸೈ-
ರಂಧ್ರಿಗಳುಪಿದಕಾರಣದಿ ರಾತ್ರಿಯೊಳ್
ಭೀಮಗಂಧರ್ವ ವ್ಯಾಜದಿಂದ
ಕೊಂದವಾರ್ತೆಯ ಕುರುಪಕೇಳಿ ಸೇನೆಸಹಿತ
ಬಂದುಗೋವ್ಗಳ ಪಿಡಿಯೆ ದಕ್ಷಿಣೋತ್ತರದಿನರ
ನಂದು ತುರುಗಳಬಿಡಿಸೆ ಮದುವೆಯಾಯಿತು
ಪಾರ್ಥಗೆ ವಿರಾಟಪರ್ವದಲ್ಲಿ ೪
ದೇವಕೃಷ್ಣಸಂಧಿಗೆ ತರಲ್ ಕುರುಪದು
ರ್ಭಾವದೊಳಗಿರಲದಂ ತಿಳಿದುವಿದುರನ ಮನೆಯೊ
ಳಾ ವನಜಲೋಚನಂ ಭುಂಜಿಸಿಸಮಯವರಿತು
ಕೌರವಸಭೆಗೆಪೋಗಿ
ಈವುದೈದೂರುಗಳ ಪಾಂಡವರಿಗೆನೆ ಭೇದ
ಭಾವದಿ ಸುಯೋಧನಂಸೂಜ್ಯಾಗ್ರಭೂಮಿಯಂ ತಾ
ನೀವುದಿಲ್ಲವೆನೆ ಯುದ್ಧನಿಶ್ಚಯಗೈದನುದ್ಯೋಗಪರ್ವದಲಿ ೫
ಕುರುಪತಿಯು ಗಂಗಾಸುತಗೆ ಪಟ್ಟಗಟ್ಟಿದಂ
ಎರೆಡುಬಲಮಂ ಸೇರಿಯಿರಲರ್ಜುನಂ ತನ್ನ
ವರಕೊಲ್ವದೆಂತೆನಲ್ ಹರಿವಿಶ್ವರೂಪಮಂ ತೋರಿತತ್ವವತಿಳಿಸಲು
ತರುವಾಯ ಹತ್ತುದಿನಕಾದುತಿರಲಾಗಭೀ
ಷ್ಮರಿಗೆಷಂಡನನೆವದಿ ಶಸ್ತ್ರಸಂನ್ಯಾಸ ವಾ
ಯ್ತುರು ಪರಾಕ್ರಮಿ ಸರಳಮಂಚದಲಿ ಮಲಗಿದಂ
ಭೀಷ್ಮಪರ್ವದಿಕಥೆಯಿದು ೬
ಗುರುಗಳಿಗೆ ಪಟ್ಟಾಭಿಷೇಕವಾಯಿತುದ್ರೋಣ
ದೊರೆಯಹಿಡಿತಹೆನೆಂದು ತಪ್ಪೆಸಂಶಪ್ತಕರ
ನರನೊಡನೆ ಕಾದಿದರು ಪಾರ್ಥಸುತಪೊಕ್ಕುಪದ್ಮವ್ಯೂಹ-
-ದೊಳುಮಡಿಯಲು
ನರಪ್ರತಿಜ್ಞೆಯಗೈದು ಸೈಂಧವನ ವಧಿಸಿದನ
ಸುರ ಘಟೋತ್ಕಚ ರಾತ್ರಿಯುದ್ಧದೋಳ್ ಸಂದನಾ
ವರಸುತನ ನೆವದಿಂದಗುರು ಮಡಿದನೈದು
ದಿನದಲಿದ್ರೋಣಪರ್ವದೊಳಗೆ ೭
ಕುರುಸೈನ್ಯಬತ್ತಿರುವ ಶರಧಿಯೋಲಾಯ್ತು ದಿನ
ಕರಸುತಗೆ ಪಟ್ಟವಂಗಟ್ಟಿ ದುರ್ಯೋಧನಂ
ಹರನುತ್ರಿಪುರವ ಗೆದ್ದಕಥೆಯವಿಸ್ತರಿಸಿ ಸಾರಥಿಯ
ಮಾಡಲು ಶಲ್ಯನ
ನರನವಿಕ್ರಮಪೊಗಳಿ ಕರ್ಣನಬಲವನುಧಿ
ಕ್ಕರಿಸೆಮಾದ್ರೇಶ್ವರಂ ಕರ್ಣನತಿ ಖಾತಿಯಿಂ
ದೆರಡುದಿನ ಕಾದಿಯರ್ಜುನನಿಂದ ಮಡಿದ ಸೂತಜ
ಕರ್ಣಪರ್ವದಲಿ ೮
ಸೂತಜನಮರಣದಲಿ ಶಲ್ಯಗಾಯಿತು ಪಟ್ಟ
ವಾತಧರ್ಮಜನಿಂದಲರ್ಧದಿನದೊಳು ಮಡಿದ
ಸೋತುದರಿಸೇನೆ ನಿರ್ಜನವಾಯ್ತು
ಶಕುನಿಯಂಸಹದೇವಸಂಹರಿಸಲು
ಪಾತಕಿ ಸುಯೋದನಂ ಕೊಳನಪೊಕ್ಕಿರಲು ಯಮ
ಜಾತಾದಿಗಳು ಪೋಗಿ ನುಡಿಸಲ್ಕೆಜಲ ಪೊರಟು
ವಾತಜನ ಗದೆಯಿಂದ ತೊಡೆಯೊಡೆದುಬಿದ್ದ
ಕುರುಪನು ಶಲ್ಯಪರ್ವದೊಳಗೆ ೯
ಗುರುಜಂಗೆ ಬೆಸಸಿದಂ ಕುರುರಾಯ ಪಾಂಡವರ
ಶಿರವತಹುದೆನುತಲಶ್ವತ್ಥಾಮಪಾಳಯದಿ
ತರಳರಂ ವಧಿಸಿತಲೆಗಳತರಲು ದುಃಖದಿಸುಯೋಧನಂ
ಜೀವಬಿಡಲು
ನರಭೀಮಸೇನರಾವಾರ್ತೆಯಂ ಕೇಳುತಲೆ
ತರುಬಿ ಹಿಡಿದೆಳೆ ತಂದು ದ್ರೌಣಿಯಂ ಶಿಕ್ಷಿಸಲ್
ತರುಣಿ ದ್ರೌಪದಿ ನಿವಾರಿಸಲು ಮಾಣಿಕನಕೊಂಡರು
ಸುಪ್ತಪರ್ವದಲಿ ೧೦
ರಣದಿ ಮಡಿದಿರುವ ನೃಪರರಸಿಯರ್ ಅಂಧಭೂ
ಪನು ಸತಿಯುಸಹಿತಲೈತರುತಿರಲ್ ಕಳನೊಳಗೆ
ಹೆಣೆದಬೈತಲೆ ಕೆದರಿದುಗುಡದಲಿ ನಾರಿಯರು
ತಮ್ಮಪತಿಗಳನಪ್ಪಲು
ಪೆಣಗಳೊಟ್ಟೈಸಿ ಸಂಸ್ಕಾರಕ್ರಿಯೆಗಳವಿದು
ರನುಗೈದನನ್ನೆಗಂ ಧೃತರಾಷ್ಟ್ರನರಸಿ ಕೃ
ಷ್ಣನಿಗೆ ಶಾಪವಕೊಡಲು ಯಾದವರುಕ್ಷಯವೈದಲೆಂದು
ಸ್ತ್ರೀಪರ್ವದಲಿ ೧೧
ತನಗೆ ಕರ್ಣಸಹೋದರನೆಂಬ ವಾರ್ತೆಯಮ
ಜನು ಕೇಳಿ ಶೋಕದಿವಿರಕ್ತಿಯಿಂದಿರೆ ಸಕಲ
ಮುನಿಗಳುಂ ಕೃಷ್ಣರುಂ ತಿಳುಹಲ್ಕೆ ಬಂದುಗಜಪುರದಿಪಟ್ಟವಧರಿಸಿದ
ಘನಬಂಧುವಧೆ ಮಹಾದೋಷವೆಂತೆಂದು ಭೀ
ಷ್ಮನ ಕೇಳಲರುಹಿದಂ ರಾಜನೀತಿಯ ಧರ್ಮ
ವನು ಕಷ್ಟಕಾಳಧರ್ಮವ ಮೋಕ್ಷಧರ್ಮವೆಂಬಿದುಶಾಂತಿಪರ್ವದಲಿ ೧೨
ಅತಿಶಯ ದಾನಧರ್ಮದ ಲಕ್ಷಣಗಳಂ ನಿ
ಯತಮಾದ ವರ್ಣಾಶ್ರಮಾಚಾರಕ್ರಮದಸಂ
ತತಿಗಳಂ ಶಿವವಿಷ್ಣುಗಳಮಹಿಮೆ ಬ್ರಹ್ಮಸಾಕ್ಷಾತ್ಕಾರಸದ್ಬೋಧೆಯ
ಕಥೆಗಳರುಹಿಸಿ ನದೀಸುತಧರ್ಮಜನ ಮನೋ
ವ್ಯಥೆಯ ಬಿಡಿಸಿದನುತ್ತರಾಯಣೆಯು ಬರಲುಶ್ರೀ
ಪತಿ ಕೃಷ್ಣನಂ ಧ್ಯಾನಿಸುತ ಮುಕ್ತನಾದನಿದು-
-ಮಾನುಶಾಸನ ಪರ್ವದಿ ೧೩
ಗುರುಸುತನ ಬ್ರಹ್ಮಾಸ್ತ್ರಮಂಚಕ್ರದಿಂದಸಂ
ಹರಿಸಿ ಕೃಷ್ಣಂಕಾಯ್ದನುತ್ತರೆಯಗರ್ಭಮಂ
ಧರೆಯಧರ್ಮದಿ ಯುಧಿಷ್ಠಿರನಾಳುತಿರೆ ಬಾದರಾಯಣ
ನೇಮದಿಂದ
ಪರಿಪರಿಸುವಸ್ತುಗಳನೆಲ್ಲ ತಂದುಯೈ
ವರು ಮಹಾಸಂತಸದಿಹರಿ ಸಹಾಯದಿ ಮಾಡಿ
ದರು ಯಜ್ಞಮಂ ದ್ವಿಜೋತ್ತಮರ
ಸಂಪೂಜಿಸಿದರಶ್ವಮೇಧಕಪರ್ವದಿ ೧೪
ಅಂಧಭೂಪತಿ ಕೌರವಸ್ತ್ರೀಯರುಂ ಕುಂತಿ
ಗಾಂಧಾರಿ ಸಹಿತಬರೆ ತೆರಳಿದಂತಪಗೈಯ್ಯೆ
ಸಂದು ಹೋದರುಸ್ತ್ರೀಯರೆಲ್ಲರುಂ ಗಂಗೆಯೊಳ್
ಮುವ್ವರುಪವಾಸದೊಳಿರೆ
ಬಂದುದಾಕಾಳ್ಗಿಚ್ಚಿನೋಲ್ ಮಹಾಜ್ವಾಲೆಯೋಳ್
ಪೊಂದಿದರ್ ವಿದುರಧರಾತ್ಮಜನಕೂಡಿದಂ
ಬಂದುಯಮಜನುಪುರದಿ ಶ್ರಾದ್ಧಗಳಮಾಡ್ದನಾಶ್ರಮ-
-ವಾಸಪರ್ವದೊಳಗೆ ೧೫
ವರುಷಗಳು ಷಟತ್ರೀಂತಿಯು ರಾಜ್ಯವಾಳುತಿರೆ
ಬರುಬರುತಲುತ್ಪಾತಗಳುಪುಟ್ಟಿದವು ಯಾದ
ವರುಮುಸಲದಿಂದಲನ್ಯೋನ್ಯ ಕಲಹದಿ
ಮಡಿದರೆಂಬವಾರ್ತೆಯನು ಕೇಳಿ
ನರನು ನಡೆತಂದು ಶೋಕದೊಳುಳಿದವರನುತಾ
ಕರದೊಯಿದು ವಜ್ರಾಖ್ಯನಂ ಯಿಂದ್ರಪ್ರಸ್ಥದೋಳ್
ಧರೆಗೆಪಟ್ಟವನಿಲಿಸಿದರ್ ಪಾಂಡವರ್
ಮುಸಲಪರ್ವದಕಥೆಯಿದು ೧೬
ನರನಮೊಮ್ಮಗೆ ಪಟ್ಟವಂಗಟ್ಟಿಯೈವರುಂ
ತೆರಳಿದರ್ಪಾಂಡವರ್ ಸತಿಸಹಿತಬರುತ ಹಿಮ
ಗಿರಿಯತಪ್ಪಲೊಳು ದ್ರೌಪದಿಯುಸಹದೇವನುಂ
ನಕುಲನುಂ ಸುರಪಸುತನು
ವರಭೀಮಸೇನನುಂ ಬಿದ್ದರಾನೃಪತಿಯೋ
ರ್ವರನುಕಾಣದೆಯೊಬ್ಬನೇಪೋಗುತಿರೆ ಕಷ್ಟ
ತರಮಾರ್ಗದೋಳೊಂದು ಶ್ವಾನಮುಂದೈದಿತಾ
ಪ್ರಸ್ಥಾನಪರ್ವದೊಳಗೆ ೧೭
ಇಂದ್ರಸುತನುಬರಲುಕಂಡುಧರ್ಮಜನು ತ
ಮ್ಮಂದಿರೆಲ್ಲೆನಲವಂ ಸುರನದಿಯತೋರಲ್ಕೆ
ಮಿಂದು ಶುಚಿಯಾಗಿ ದಿವ್ಯವಿಮಾನವೇರಿ
ತನ್ನವರೆಲ್ಲರ ನೋಡುತ
ಪೊಂದಿದಂ ಯಮನೊಡನೆ ಪವನನೋಳ್ ಭೀಮನರ
ನಿಂದನಂ ಯಮಳರಶ್ವಿನಿಯರೊಳ್ಕಲಿಮುಖ್ಯ
ಸಂದೋಹದೋಳ್ ಸುಯೋಧನ ಪ್ರಮುಖರೊಂದಿದರ್
ಸ್ವರ್ಗಾರೋಹಣಪರ್ವದಿ ೧೮
ಈಮಹಭಾರತ ಶತಸಹಸ್ರಗ್ರಂಥವನು
ಹಾ ಮುನಿ ಪರಾಶರಾತ್ಮಜಪೇಳ್ದನದುವೆ ಗುರು
ರಾಮವಿಠಲಂ ಹೃದಯದಲಿ ನಿಂತುನುಡಿಸಿದಂ
ಸಂಕ್ಷೇಪಭಾರತವನು
ಪ್ರೇಮದಿಂದಾಲಿಸುವ ಸಜ್ಜನರಿಗನುದಿನಂ
ಕಾಮಿತಾರ್ಥವನಿಹಪರಂಗಳೊಳ್ಸುಖವಗುರು
ರಾಮವಿಠ್ಠಲಕೊಡುವಭಾಗ್ಯವಲ್ಲೀನಗರ-
-ನಿಲಯನರಹರಿಕರುಣದಿ ೧೯

೨೫೦
ಷಷ್ಠಿ ವರ್ಷಗಳಾದ ಮೇಲೆ
ಪುಷ್ಟಿ ಎಲ್ಲಿಯದು ಪ
ದೃಷ್ಟಿ ಕಡಿಮೆಯು ಕಿವಿಯು ಕೇಳದು
ಶ್ರೇಷ್ಠ ನಾನೆಂದು ಕುಣಿವುದಕೆಅ.ಪ
ವರುಷವರವತ್ತಾದ ನಂತರ
ಪರಿವ್ರಾಜಕನಾಗಬೇಕೆಂ-
ದುರುತರಾಶ್ರಮ ಧರ್ಮಶಾಸ್ತ್ರಗ-
ಳೊರೆಯುತಿಹುದದರರ್ಥ ತಿಳಿಯದೆ ೧
ಕಾಮ್ಯಕರ್ಮಳನು ತ್ಯಜಿಸಿ
ಭ್ರಾಮ್ಯಜನಗಳ ನಡತೆ ಬಿಟ್ಟು
ಸೌಮ್ಯನಾಗುತ ಹರಿಯಧ್ಯಾನವೆ
ರಮ್ಯವೆಂದರಿಯುವುದು ಸೌಖ್ಯವು ೨
ಎಮ್ಮೆಯೋಲ್ ತಿನ್ನುತಲಿ ಬಾಯಲಿ
ಹೆಮ್ಮೆ ಮಾತುಗಳಾಡುತಿರುತಿಹ
ಗ್ರಾಮ್ಯ ಜನಗಳ ಸಂಗವೆಂದಿಗು
ಗತಿವಿದೂರನ ಮಾಡದೆ ಬಿಡದು ೩
ಗಣ್ಯತಾನೆಂದುಕೊಳ್ಳದೆ ದಾ-
ಕ್ಷಿಣ್ಯ ಜೀವನವನ್ನು ಮಾಡದೆ
ಅನ್ನಕೋಸುಗ ಪರರ ಪೊಗಳದೆ
ಧನ್ಯರಡಿಗಳ ಠಾವಿನಲಿ ನಲಿ ಸುಖ ೪
ಪಾಮರರು ಪ್ರತಿದಿನವು ದುಸ್ತರ
ತಾಮಸ ನರಕದೊಳು ಮುಣುಗುತ್ತ
ಸ್ವಾಮಿಯಾಗಿ ಮೆರೆವ ಶ್ರೀಗುರು-
ರಾಮವಿಠಲನ ಮರೆತು ಕೆಡುವರು ೫

೧೫೮
ಸಂಕರುಷಣ ಮೂರ್ತಿಯೇ ಪ
ನಿಷ್ಕಳಂಕ ಬಿರುದಾಂಕ |
ಶಶಾಂಕ ಶೇಖರ ಶ್ರೀ ಅ.ಪ
ಸದ್ಯೋಜಾತಾ ಘೋರಯೀಶಾನ ತತ್ಪುರುಷ
ಹೃದ್ಯವಾಮದೇವ ನಿರವದ್ಯ ಶೃತಿವಂದ್ಯ ೧
ಪಂಚಾತ್ಮನಾಗಿ ಪ್ರಪಂಚ ವ್ಯಾಪಿಸಿ ನಿ-
ರ್ವಂಚನೆಯಿಂದ ನೀ ವಂಚಿಪೆ ವಂಚಕರ ೨
ಶಿವರಾತ್ರಿದಿನದಿ ನಿನ್ನವರು ತವಪೂಜೆಯಿಂ
ಭವ ನೀಗುವರು ಓ ಗುರುರಾಮ ವಿಠಲ ಸಖ ೩

೨೫೧
ಸಂಗಬೇಡವೈ ಆಶಾ ಪ
ಸಂಗದಿಂದ ನಿನಗೆ ಅಂಗವೇ ಭಂಗವಾಹುದೈ ಅ.ಪ
ಇದ್ದ ಕಡೆ ಇರಲೀಸದು | ಅ
ಬದ್ಧವ ಪೇಳಿಸುವುದು
ಶುದ್ಧ ಮನುಜನಾದರೆಯು ಅ –
ವಿದ್ಯದಿ ಮುಳುಗಿಸುವುದು ೧
ನೋಡಿದುದು ಬಯಸುವುದು | ಬಲು
ಮೋಡಿಯಿಂ ತಿರುಗಿಸುವುದು
ಬೇಡವೆಂಬ ಕಾರ್ಯಗಳನ್ನು
ಮಾಡಿಸಿ ಮಾಡಿಸಿ ದಣಿಸುವುದು ೨
ಹಣವಿದ್ದರು ಕಳೆವುದು | ದುರ್
ಮನದಿ ಸಾಲ ಮಾಡಿಸುವುದು
ಗುಣಿಯಲಿ ದುರ್ಗುಣವೇ ಕಾಣಿಸಿ
ಹೆಣಕೆ ಸಮವೆಂದೆನಿಸುವುದು ೩
ಬೋಧೆಯ ಕೇಳಲೀಯದು | ಮನೋ
ವ್ಯಾಧಿಯಲ್ಲಿ ಕೃಶಿಸುವುದು
ಹಾದಿ ಹೋಕರ ಕಂಡವರಂತೆ
ಸಾಧನವ ಮಾಡಿಸುವುದು ೪
ಅನ್ನಬಾರದನ್ನಿಸುವುದು
ತಿನ್ನಬಾರದ್ದು ತಿನ್ನಿಸುವುದು
ನನ್ನದೂ ನಾನೆಂಬ ಗರ್ವದಿ
ಇನ್ನೂ ಮುನ್ನೆ ಕೆಡಿಸುವುದು ೫
ಆಗೋ ಕಾರ್ಯ ಮಾಡಲೀಯದು
ಹೋಗದೂರಿಗೇ ಹೊರಡಿಸುವುದು
ಭೋಗಗಳೊಳಪೇಕ್ಷೆ ಪುಟ್ಟಿಸಿ
ರೋಗದಿ ಬಳಲಿಸುವುದು ೬
ಕೋಪಾದಿಗಳು ಹೆಚ್ಚುವುದು
ಪಾಪಬುದ್ದಿ ಪುಟ್ಟುವುದು
ಶ್ರೀಪತಿ ಗುರುರಾಮ ವಿಠಲನ
ಶರಣರಿಗಿದು ಸಲ್ಲದು ೭

೧೪೧
ಸಂಜೀವರಾಯ ಸಾಧುಜನಪ್ರಿಯ ಪ
ಅಂಜನಾದೇವಿತನಯ ಕಂಜಾಕ್ಷನ ನಾಮಾಮೃತ
ಭುಂಜಿಪ ಸದ್ಭಕ್ತರ ಸೇವೆಯೊಳಿರಿಸೆನ್ನನು ಅ.ಪ
ರಾಮನಾಜ್ಞೆಯಲಿ ಶರಧಿಯದಾಟುತಲಿ | ರಾವಣನ ಪಟ್ಟಣದಿ
ಭೂಮಿಜಾತೆಗುಂಗುರವನು ನೀಡುತಲಿ
ಆ ಮಹಾಶಿರೋ ಮಾಣಿಕ್ಯವ ಸೀ-
ತಾ ಮಹಾದೇವಿಯಿಂದ ಕೈಕೊಂಡ ೧
ವನವ ಕೀಳುತಕ್ಷಾದಿ ರಾಕ್ಷಸರನು ವಧಿಸಿ | ಮುದದಿ ದಶಕಂ-
ಠನ ತೃಣೀಕರಿಸಿ ವರಪುರವನುದಹಿಸಿ
ಇನಕುಲಂಗೆ ವಾರ್ತೆಯ ತಿಳುಹಿಸಿ ನೀ
ವನಜ ಸಂಭವನ ಪಟ್ಟವ ಪಡೆದೆ ೨
ಕೋಲಾಹಲನಗರ ನಿವಾಸವಗೈಯ್ವೆ ಕುಜನರನು ತರಿವೆ | ಕರು-
ಣಾಲವಾಲ ಭಕ್ತರಿಗೀಪ್ಸಿತವೀವೆ
ಶ್ರೀಲತಾಂಗಿಪತಿ
ನೋಲಗಿಸುವ ಭಾಗ್ಯವಂತರೊಡೆಯನೆ ೩

೨೫೨
ಸನ್ಮಾರ್ಗ ಸನ್ಮಾರ್ಗಯಿದು ಪ
ಮನ್ಮಥ ಜನಕನ ಮನದಿ ಭಜಿಸುವುದು ಅ.ಪ
ಕರ್ತ ನೀನು ಹರಿಭೃತ್ಯನಾನು ಯೆಂ-
ದತ್ಯಂತ ಮನೋಹರುಷದಿ ಕುಣಿವದು ೧
ಪದದಿಯಾತ್ರೆ ಮೊದಲಾದ ಕರ್ಮಗಳು
ಪದುಮ ನಾಭನಿಗೆ ಪೂಜೆಯೆಂದರಿವುದು ೨
ಛಳಿಮಳೆಗಾಳಿ ಬಿಸಿಲುಗಳೊಳಗೆ ಶ್ರೀ
ಲಲನಾಧಿಪನ ವಿಭೂತಿ ತಿಳಿಯುವುದು ೩
ಕರೆಕರೆ ಸಂಸಾರದ ಭಾರದೆ ತಾ
ಮರೆಯದೆ ನಿರತವು ಹರಿಗರ್ಪಿಸುವುದು ೪
ಪಾಮರಜನದೊಳು ಸೇರದೆ ಶ್ರೀಗುರು-
ರಾಮ ವಿಠ್ಠಲನ ನಾಮ ಜಪಿಸುವುದು ೫

೩೦೬
ಸಪ್ತಾನ್ನ ತಿಳಿವುದು ಸಾಧನವಯ್ಯ ಪ
ಆಪ್ತ ಹರಿಯು ಕೊಟ್ಟ ಬುದ್ಧಿಯಿಂದಲಿ ಜನರು ಅ.ಪ
ಮಕ್ಕಳು ಮೊದಲಾದವರ ಪೋಷಣೆ ಒಂದು
ಪಕ್ಕಿಗೆ ಮೇವನ್ನು ಕೊಡುವುದೊಂದು
ಅಕ್ಕರದಲಿ ಗೋಗೆ ತೃಣವ ನೀಡುವುದೊಂದು
ಲೆಕ್ಕವಿಲ್ಲದ ಫಲವು ಅತಿಥಿ ಪೂಜೆ ೧
ಮಾತಾಪಿತರ ಸೇವೆ ಐದನೇ ಅನ್ನವು
ತಾತ ಮೊದಲಾದ ಹಿರಿಯರಪೂಜೆ ಆರು
ತಾತಿಳಿದು ಉಂಬೋದು ಏಳನೆಯ ಅನ್ನವು
ಶ್ರೀತರುಣೀವರನ ಸೇವಕರೆ ಕೇಳಿ ೨
ಈ ಸಪ್ತಾನ್ನ ಬಗೆ ಲೇಸೆಂದು ತಿಳಿದರೆ
ಭೂಸುರ ಜನ್ಮವು ಸಾರ್ಥಕವು
ಶ್ರೀಸತಿಯರಸ ಶ್ರೀ ಗುರುರಾಮ ವಿಠಲ
ದಾಸತ್ವವಿತ್ತು ಎಂದೆಂದಿಗೂ ಪೊರೆವ ೩

೭೫
ಸರಸಿಜಾಕ್ಷ ಸಾಧುಪಕ್ಷ ನಿರತ ನಿನ್ನ ನಂಬಿದೆ ಪ
ಸಿರಿ ಚರ್ತುರ್ಮುಖಾದಿ ವಿನುತ ಶ್ರೀಧರಾ ಕೃಪಾನಿದೆ.ಪ
ತರಳ ಕರೆಯೆ ಕಂಬದೊಳುದಿಸಿ ಹಿರಣ್ಯ ಕಶಿಪುಯೆಂಬನ
ತರಿದು ಕರುಳ ಮಾಲೆಧರಿಸಿದ ನರಹರಿ ಪತಿತ ಪಾವನ ೧
ಮಾನಿನಿಯ ಮೊರೆಯ ಕೇಳಿ ಮಾನಕಾಯ್ದದೇವನೆ
ದಾನಕೊಟ್ಟಬಲಿಗೆ ಮೆಚ್ಚಿ ದ್ವಾರಪಾಲಕನಾದವನೆ ೨
ಕರಿಯಪೊರೆದು ಕಾಂಚಿಪುರದೊಳಿರುವ ವರದರಾಜನೆ
ಗುರುರಾಮ ವಿಠಲ ನೀನೆ ಶರಣ ಕಲ್ಪಭೂಜನೆ ೩

೭೬
ಸರಿಯೊರೊ ನಿನಗೆ ದೇವ ಶರಣಜನ ಸಂಜೀವ ಪ
ಸುರವೈರಿವಿಪಿನ ದಾವಾ | ನಲ | ಸೂರ್ಯಾನೇಕ ಪ್ರಭಾವ ಅ.ಪ
ಕರುಣಾಬ್ಧಿದೀನಬಂಧು | ಕರಿರಾಜ ಕರೆಯೆ ಬಂದು
ಅರಿಯಾದನೆಗಳ ಕೊಂದು ಆದರಿಸಿದೆ ಗುಣ ಸಿಂಧು ೧
ಅನುದಿನದಿ ನಿನ್ನಪಾದ ನೆನೆವರಿಗೆ ಕೊಡುವೆ ಮೋದಾ
ಘನಮಹಿಮನೆಂದು ವೇದಗಳು ಪೊಗಳುವುದೊ ಶ್ರೀಧ ೨
ನತ ಪ್ರೇಮವೆಂಕಟೇಶ ಶುಭನಾಮ ಭಕ್ತಪೋಷ
ಚಿಂತಾಮಣಿ ಪುರವಾಸ  ಶ್ರೀಶಾ ೩

೧೧೯
ಸರೋಜಜಾತೆ ಜಗನ್ಮಾತೆ ಪಾಲಿಸು
ಜನಕಸುತೆ ಜನನಮರಣರಹಿತೆ ಪ
ಪರಂಪರದಿ ನಮ್ಮ ಪೊರೆದವಳಲ್ಲವೆ
ಬನ್ನಬಡಿಸುವುದೇ ನಮ್ಮ ಸೀತಮ್ಮ ಅ.ಪ
ಪತಿಹೃದಯನಿವಾಸಿನಿ ಸುವಾಸಿನಿ ಭ-
ವತ್ಪಾದಾಂಬುಜ ಭಜಿಸುವ ಜನರು
ಸತತವಿಹಪರದಿ ಸೌಖ್ಯ ಪಡುವರೆಂದು ಸಾ-
ರುತಿಹವು ಶೃತಿ ಸ್ರ‍ಮತಿ ಪುರಾಣ ೧
ಭವ್ಯ ಚರಿತರಾದ ಬ್ರಹ್ಮಾದಿಗಳಿಗಳವೆ ನಿನ್ನ
ದಿವ್ಯಾಂಘ್ರಿ ದರ್ಶನವಾಗುವುದು
ಸೇವ್ಯನಾದ ಪತಿಚಿತ್ತಾನುಸಾರದಿ
ಜೀವನಿಕರವ ಕರುಣದಿ ನೋಡುವ ೨
ಸಿರಿಮಾಯೆ ಕೃತಿ ಶಾಂತಿ ರುಕ್ಮಿಣಿ ಲಕುಮಿ
ಸೀತೆ ಭೂಜಾತೆ ಗುಣವ್ರಾತೆ ಎನುತ
ನಿರುತವು ನೆನೆವರ ದುರಿತಗಳ ಕಳೆದು
ನ ಚರಣವ ತೋರಿಸೆ ೩

೭೭
ಸರೋಜದಳೇಕ್ಷಣಾ ಸಲಹೋಯೆನ್ನ | ವಿಧಿ ಪ
ಪುರಾರಿನುತ ಚರಣಾ ನಾರಾಯಣಾ ಅ.ಪ
ಸರಸಿಜಾಪ್ತ ಕುಲಚಂದ್ರಮ ರಾಮ | ಮ-
ಹಾರಾಜ ರಾಜಲಲಾಮ ನಿಸ್ಸೀಮ ೧
ಎನ್ನಪರಾಧಗಳೇನಿದ್ದರು ಸರಿ
ಮನ್ನಿಸುವರು ನೀನಲ್ಲದಾರು ೨
ಅಜಿತಾದ್ಯನಂತರೂಪಾಪ್ರಮೇಯಭಜಕ ಪೋಷ ಗುರುರಾಮ ವಿಠ್ಠಲ ರಾಯಾ ೩

೧೪೪
ಸರ್ವಜ್ಞ ಮುನಿರಾಯ ನಿನ್ನ ಪಾದ
ಸರೋಜಯುಗಳವ ನೆರೆ ನಂಬಿದೆ ಜೀಯ್ಯ ಪ
ದುರ್ವಾದಿ ತಿಮಿರ ದಿನಕರ ಶುಭಕರ
ಗರ್ವಿತದಾನವ ಕಾನನ ಕುಠಾರ
ಯತಿವರ್ಯ ಮಹಾಶೌರ್ಯ ಮೇರು ಸಮ ಧೈರ್ಯ
ತ್ರಿವಿಧ ಜೀವರಿಗೆ ಆಚಾರ್ಯ ಅ.ಪ
ರಾಮದೂತಾನಾಗಿ ಸೀತೆಗುಂಗುರವಿತ್ತೆ
ಭೀಮನಾಗಿ ಕೌರವರ ಸಂಹರಿಸಿದೆ
ಕಲಿಯುಗದಿ ಭೂಸುರಕುಲದಿ
ಪುಟ್ಟಿ ನೀ ಮೆರೆದಿ ಆರ್ತಜನ ಕೃಪಾಶರಧಿ ೧
ಸಂಜೀವನ ತಂದು ಬದುಕಿಸಿ ಕಪಿಗಳ
ಕಂಜಾಕ್ಷಿ ದ್ರೌಪದಿಯಭಿಮತ ಸಲಿಸಿದೆ
ಪವಮಾನ ಮಧ್ವಾಭಿದಾನ
ಅನುಸಂಧಾನ ಪೂರ್ವಕ ಕೊಡು ವಿಜ್ಞಾನ ೨
ಮೂರವತಾರದಿ ಶ್ರೀರಾಮ ಕೃಷ್ಣ ವ್ಯಾಸ-
ರಾರಾಧಿಸಿ ಗೈದ ಧೀರ ಶಿಖಾಮಣಿ
ಭಾರತೀಶ ಭವ ಭಯನಾಶ
ಕೊಡುವುದು ಲೇಸಾ ನದಾಸ ೩

೭೮
ಸಲಹೋ ಎನ್ನನು ಸ್ವಾಮಿ ಸರ್ವಾಂತರ್ಯಾಮಿ ಪ
ಜಲಜಾಪ್ತಕುಲ ಭೂಷಾನತಜನ ಪ್ರೇಮಿ ಅ.ಪ
ದಶರಥನಂದನ ದಾನವ ಹರಣಾ
ಪಶುಪತಿ ಮುಖಸುರ ಪೂಜಿತ ಚರಣಾ ೧
ಭಕ್ತ ಮಾನಸ ಹಂಸ ಭವರೋಗ ವೈದ್ಯ
ಮುಕ್ತಿ ಪ್ರದಾಯಕ ನಿಗಮಾಂತ ವೇದ್ಯಾ ೨
ಸೀತಾ ಮನೋಹರಾ ಶ್ರಿತ ಪರಿಪಾಲ
ವಾತ ಸಂಭವ ಪ್ರೀಯ  ೩

೧೯೨
ಸಾಕು ಸಾಕು ಸ್ವಾಮಿ ಸಂಸಾರವು ಪ
ಸಾಕಿದರೊಳು ಲೇಶ ಸೌಖ್ಯವು ಕಾಣೆನು
ಬೇಕು ನಿನ್ನ ಪಾದಭಜನೆ ನಿರಂತರ ಅ.ಪ
ಚತುರಶೀತಿ ಲಕ್ಷಯೋನಿಗಳಲಿ ಪು-
ಟ್ಟುತ ಬೆಳೆಯುತ ಮೃತಿ ಪೊಂದುವ ಕಷ್ಟವು ೧
ಮಾಂಸರಕ್ತ ಪೂರಿತ ಕೂಪದಿ ನವ-
ಮಾಸ ಮಾತೃಗರ್ಭಯಾತನೆಯಿನ್ನು ೨
ಬಾಲರ ಕೂಡುತ ಬಾಲ್ಯದಲ್ಲಿ ಚೆಂಡು
ಗೋಲಿ ಗಜ್ಜುಗಗಳಾಡಿದ ಆಟವು ೩
ಹಿರಿಯರ ಮಾತನು ಕೇಳದೆ ಯೌವನ
ಗರ್ವದಿಂದ ಮೈಮರೆತು ತಿರುಗುವುದು ೪
ನಾರೀಮಕ್ಕಳು ಮನೆ ಧನ ಪಶುಗಳು
ಸೇರಿ ಇರುವ ಕೌಮಾರಾವಸ್ಥೆಯು ೫
ಕಿವಿಗಳು ಕೇಳದು ಕಣ್ಕಾಣದು ಬಾಂ-
ಧವರಧೀನದಲಿ ಬಾಳುವ ಕಷ್ಟವು ೬
ಮರಣವಾದ ಮೇಲೆ ನರಕವು ಸ್ವರ್ಗವು
ಧರಣಿಯಲಿ ಪುಟ್ಟುವುದೋ ತಿಳಿಯದು ೭
ಎಂತಾದರು ನಿನ್ನವರೊಳಿಡು ಸದಾ
ಪಂಥವೆ ದೀನರ ಮೇಲೆ ದಯಾನಿಧೆ ೮
ಭಾಗ್ಯವಲ್ಲಿ ಹನುಮಂತನೊಡೆಯ ಶರ-
ಣಾಗವತ್ಸಲ ೯

ರವಿಮಾರ್ಗ, ಶಶಿಮಾರ್ಗ
೩೦೭
ಸಾರ್ಥಕಾಗುವುದು ರವಿಮಾರ್ಗ ಅ
ನರ್ಥ ಊಹಿಸುವುದು ಶಶಿಮಾರ್ಗ ಪ
ತೀರ್ಥಪಾದನಾಧೀನವಿದೆನ್ನದೆ
ಕರ್ತನಾವೆನುತ ಕೆಲರು ಕೆಡುತಿಹರು ಅ.ಪ
ದೇವರುಪೂಜೆಯ ಮಾಡುವರ ಸ-
ದ್ಭಾವ ಭಕುತಿಯಿಂದ ಪೂಜೆಪುದು
ನೋವಿದು ಪೂಜೆಗೆ ಕೂಲಿ ಎಂದು ದುರ್
ಭಾವದಿಂದ ದುಷ್ಟರು ತಾವ್ ಕೆಡುವರು ೧
ಕೂಲಿಯಪೇಕ್ಷಯು ದುರ್ಜನಕ್ಕೆ
ಮೇಲಾಸಕ್ತಿಯು ಸಜ್ಜನಕೆ ಶ್ರೀ-
ಲೋಲನುಭಯರೊಳಗೆ ನಿಂತು ತ-
ತ್ಕಾಲ ಪ್ರೇರಿಸಿ ಎರಡುಗತಿ ಕೊಡಿಸುವ ೨
ಬದಲಿಗೆ ಬದಲೇ ಶಶಿಮಾರ್ಗ ಸ-
ಮ್ಮುದ ನಿಷ್ಕಾಮವು ರವಿಮಾರ್ಗ
ಪದುಮೆಯರಸ  ದ್ವಿ
ವಿಧರಿಗೆ ಮುಕ್ತಿಯು ಸಂಸಾರ ಕೊಡುವ ೩

೨೫೩
ಸಾಲದೆ ನಿನಗಾಗಿರುವ ಮರಿಯಾದೆ ಪ
ಮೇಲುಕೀಳೆನ್ನದೆ ಮರುಗುವೆ ಮನವೇ ಅ.ಪ
ಕಾಲಕಾಲದಿ ನಿತ್ಯಕರ್ಮ ಮಾಡದೆ ಹೀ-
ಯಾಳಿಕೆಗೀಡಾಗಿ ಬೇಳಾಡುತ್ತಿರುವುದು ೧
ತ್ರಿವಿಧ ಜೀವರೊಳು ಯಾವದ ನುವೆಂದು
ತಾ ತನಗೆ ಯೋಚಿಸದೆ ಪಾಪವಗಳಿಸುವೆ ೨
ತನ್ನಯೋಗ್ಯತೆಯನು ತಾ ತಿಳಿಯದೆ ಪರ-
ರನ್ನು ನಿಂದಿಸಿ ನಾ ಧನ್ಯನೆಂದುಕೊಂಬುವೆ ೩
ಈಷಣತ್ರಯಗಳ ಆಸೆಯಿಂದಲಿ ನರರ
ದೂಷ್ಯರಭೂಷಿಸಿ ಘಾಸಿ ಹೊಂದುವಿ೪
ಪರಮಶಾಂತನಾಗಿ ನ
ಚರಣವ ಭಜಿಸದೆ ಬರಿದೆ ಧಾವತಿಯಾಕೆ ೫

೩೦೮
ಸಾಹುಕಾರರು ನಾವು ಜಗದ ಹುಟ್ಟುಸಾವಿಗೆ ಭಯಪಡೆವು ಪ
ದೇಹಗಳ್ ವಸ್ತ್ರಗಳಂದದಿ ಬರುವುವು
ಸಾಹಸಿವಳಗಿರುವನೊಬ್ಬನವನಕಡೆಯ ಅ.ಪ
ಮೂಲಧನವು ಹರಿನಾಮ | ಅದಕೆ ಬೇಕಾದ
ಮೂಲ್ಯರತ್ನಗಳು ನೇಮ
ಕಾಲಕಾಲಕೆ ನಿತ್ಯಕರ್ಮಾಚರಣೆ ಬಂಡ-
ವಾಳವಾಗಲು ಸದ್ವ್ಯಾಪಾರ ಮಾಡುವಂಥ ೧
ಬಡ್ಡಿಯಧಿಕ ಬರುವುದು | ಇದಕೆ ದುರ್ಜನ
ರಡ್ಡಿಯು ಉಂಟಾಗದು
ಕಡ್ಡಿಯ ಕೊಟ್ಟು ಪೇಳುವೆವು ನಿಜದಲಿ
ಕೇಳಿ ಕಲುಷಾತ್ಮರಿಗೆ ಸಾಲಕೊಡುವುದಿಲ್ಲವು ೨
ದೊಡ್ಡಸಮಯಕೆ ಬೇಕಾದಷ್ಟು
ಬಡ್ಡಿಯು ಬರೆ ಸಮವಾಗಿಹುದಿದುವೆ ಗುಟ್ಟು
ಕಮಲಾವಲ್ಲಭ ನಿಗೆ
ಕ್ರಮವಾಗಿ ಲೆಕ್ಕ ಒಪ್ಪಿಸಬೇಕು ವರುಷಕೊಮ್ಮೆ ೩

೯೨
ಸಿಂಹಾಸನವಿದೆ ಸ್ವೀಕರಿಸೈ ನರ
ಸಿಂಹ ರಮಾರಮಣ ಪ
ಬ್ರಂಹ್ಮಾದ್ಯಮರವಿನುತ ಪಾದಪರ
ಬ್ರಂಹ್ಮನಿನಗೆ ಮನ್ಮಾನಸವೆಂಬುವ ಅ.ಪ.
ದಾರುಲೋಹಮಯ ಪೀಠಗಳೀವುದು
ತರವೆ ನಿನಗೆ ಸ್ವಾಮಿ
ಕಾರುಣ್ಯನಿಧಿಯಚಿಂತ್ಯ ಮಹಿಮಭವ
ವಾರಿಧಿತಾರಕನಾಮ ರತ್ನಮಯ ೧
ಸಿರಿದೇವಿಯು ನಿನ್ನರ್ಚನೆಗೈವಡ
ಶಕ್ತಳಾಗಿರುವಳು
ಸ್ವರಮಣ ಸರ್ವಾಂತರ್ಯಾಮಿ ಪರಾ-
ತ್ಪರ ಮುಕುಂದ ರತ್ನಮಯ ಮಣಿಖಚಿತ೨
ಏಕಚಿತ್ತದಲಿ ನಿನ್ನ ಭಜಿಪರಿಗೆ ಅ-
ನೇಕ ಸುಖಗಳೀವೆ
ನಾ ಕೇಶನುತ ಗುರುರಾಮ ವಿಠಲ ನಮೋ
ಸ್ವೀಕರಿಸೈ ರತ್ನಮಯ ಮಣಿ ಖಚಿತ ೩


ಸಿದ್ಧಿ ವಿನಾಯಕ ಪರಿಪಾಹಿ | ವರ ಪ
ಸಿದ್ಧಿ ವಿನಾಯಕ ವೀರಭದ್ರನಗ್ರಜನೆ ಮಹಾ
ರುದ್ರದೇವನ ಸುಕುಮಾರ | ಧೀರ ಅ.ಪ
ಮೊದಲು ನಿನ್ನಡಿಗಳಿಗೆ ಮುದದಿ ವಂದಿಸುವರಿಗೆ
ಸದಮಲ ಸುಮಾರ್ಗವೀವದೇವ | ವರ೧
ಏಕವಿಂಶತಿಸುರೂಪ ಕಾಕುದುರ್ಮತಿಯನು ನಿ-
ರಾಕರಿಸಿ ಕೊಡುವದು ನಿರ್ವಿಘ್ನವಂ | ವರ ೨
ತಾಮಸರಹಿತ ನಡಿಗಳ ನಿ-
ಷ್ಕಾಮದಿಂದಾ ಭಜಿಸುವಂತೆಮಾಡು | ವರ ೩

೮೨
ಸೀತಾ ಪತಿಮಮಲಂ ವಂದೇಹಂ ಪ
ವಾತಾತ್ಮಜರವಿಜಾತಾದಿ ವಾನರ
ವ್ರಾತನಮಿತಪಾದಂ ನತಮೋದಂ ಅ.ಪ
ರವಿಕುಲದೀಪಂ ರಮಣಿಯ ರೂಪಂ
ಕರಧೃತ ಶರಚಾಪಂ ಬಲಕೋಪಂ ೧
ದಶರಥಬಾಲಂ ಧರ್ಮಾನುಕೂಲಂ
ದಶಶಿರಮದಹರಣಂ ಜಿತಮರಣಂ ೨
ಗುರುರಾಮವಿಠಲಂ ಸುರಮುನಿ ಪಾಲಂ ತುಳಸೀವನಮಾಲಂ ಸುಸೀಲಂ ೩

೧೨೦
ಸೀತಾದೇವಿಯೆ ಶ್ರಿತ ಸಂಜೀವಿಯೆ ಪ
ಮಾತೆಯೆ ಪಾಲಿಸು ಮೊರೆಯನು ಲಾಲಿಸು ಅ.ಪ
ಜನಕರಾಯನ ಪುತ್ರಿ ಜಗದೇಕ ಪವಿತ್ರಿ
ಜನನಿ ಜನಯಿತ್ರಿ ಘನ ಶೋಭನ ಗಾತ್ರಿ ೧
ಸಜ್ಜನರ ಪೊರೆಯೆ ಬಾರೆ ಗೆಜ್ಜೆ ಪಾದವ ತೋರೆ
ದುರ್ಜನ ದೈತ್ಯವಿದಾರೆ ದೂರೀಕೃತ ಸಂಸಾರೆ೨
ಸಮ್ಮತದೊಳಿರಿಸು ದುರ್ಮತವ ಬಿಡಿಸು ಸು |
ಬ್ರಹ್ಮ ಜ್ಞಾನವ ಪಾಲಿಸು ಮರ್ಮವನು ಬೋಧಿಸು೩
ಹನುಮನ ಸೇರಿದವ ನಾನು ತ್ವತ್‍ಪದ
ವನಜದ ಸೇವೆ ಸದಾ ಎನಗೀಯೆ ತಾಯೆ ೪
ಕಲುಷ ಪರಿಹಾರಿಣಿ ಕಮಲಪಾಣಿ ರುಕ್ಮಣಿ
ಜಲಜಾಕ್ಷ ಗುರುರಾಮ ವಿಠಲನ ಪಟ್ಟದ ರಾಣಿ೫

೮೧
ಸೀತಾಮನೋಹರ ಬಾರೊ | ಸ್ವಾಮಿ ಪ
ಸೀತಾಮನೋಹರ ಶ್ರಿತ ಲೋಕೋದ್ಧಾರ ರಘು |
ನಾಥ ಪ್ರಖ್ಯಾತ ದಾತ ಬಾರೋ ಅ.ಪ
ನಂಬಿದ ಭಕ್ತರ ಬೆಂಬಿಡದೆ ಪೊರೆವ
ಅಂಬುಜ ಲೋಚನ ಬಾರೋ ೧
ನೀನು ಮಾಡಿಸಿದಂತೆ ನಾನು ಮಾಡುವೆನೆಂಬಸು |
ಜ್ಞಾನವಪಾಲಿಸೆ ಬಾರೊ ೨
ಅಂತಃ ಪ್ರೇರಕನಾಗಿ ನಿಂತು ಜೀವರನೆಲ್ಲ
ಸಂತೈಸುತಿಹ ದೇವ ಬಾರೋ ೩
ಬಾಗಿ ನಮಿಸುತಿರ್ಪ ಭಾಗವತರ ಭವ-
ರೋಗಕ್ಕೆ ವೈದ್ಯ ನೀನೆ ಬಾರೊ ೪
ಪರಮ ನಿಷ್ಕಾಮಿಯಾದ ಮರುತಾತ್ಮಜಾಂತರ್ಗತ ಶ್ರೀ
ಗುರುರಾಮ ವಿಠಲಬೇಗ ಬಾರೋ ಸ್ವಾಮಿ ೫

೮೦
ಸುಂದರಾಂಗಿ ತಂದುತೋರೆ ಇಂದಿರೆ ಮನೋಹರನ ಪ
ಒಂದು ಕ್ಷಣ ತಾಳಲಾರೆ ವಂದಿಸುವೆನೆಲೆ ನೀರೆ ಅ.ಪ
ಚಂದ್ರಕಿರಣಗಳುರಿಯಂದದಿ ತೋರುತಲಿದೆ
ಮಂದ ಮಾರುತಗೆ ಕಡು ಕುಂದಿದೆನೆ ಮಂದಯಾನೆ ೧
ಮಾರನಾಟದಲ್ಲಿ ಒಂದು ಬಾರಿ ಸೊಕ್ಕಿ ಸೋಲಿಸುತ
ಸೇರಿದ ಸುಖವ ಮರೆಯಲಾರೆನೆ ಸರೋರುಹಾಕ್ಷಿ ೨
ಭೂತಳಕಧಿಕವಾದ ನೂತನಾವರಣಪುರಿ
ದಾತ  ಯಾತಕೆ ನಿರ್ದಯಗೈದ ೩

೭೯
ಸುಖಖರ ನೀನೆನ್ನುತಾ ಸೂರಿಗಳು ಭಜಿಸುವರೊ ನಿನ್ನ ಪ
ಭಕುತಿಯಿಂದಲಿ ನಿನ್ನ ಶ್ರೀಪಾದ ಪದ್ಮಂಗಳ ಸೇವಿಸುತ
ಭವಭಯಗಳನೀಡಾಡುತ ಪಾಪರಹಿತರಾಗಿಹರು ಅ.ಪ
ಭೂತದಯೆ ಪಶ್ಚಾತ್ತಾಪವಿಖ್ಯಾತಿಯಶೋದಾನ
ನೀತಿಮನಃ ಪ್ರೀತಿಧ್ಯಾನ ನಿತ್ಯಾನುಸಂಧಾನ
ಶ್ರೀ ತರುಣಿವರ ಪ್ರಾಣಿ ವ್ರಾತಗಳಿಗೆ ಕರ್ತನು ಯಂ
ದಾತುರವಿಲ್ಲದೆ ಸರ್ವದ ಜಾತಿ ಧರ್ಮಾಚಾರದಲ್ಲಿ ೧
ತನ್ನಂತಿತರರ ನೋಡುತ ಮನ್ನಣೆಯಲಿ ಸತತ
ಹೆಣ್ಣು ಹೊನ್ನು ಮಣ್ಣಾಸೆ ಬಿಡುತ ಹೇಯವವರ್ಜಿಸುತ
ನನ್ನದು ನಾನೆಂಬುದ ಬಿಟ್ಟನ್ಯರ ನಿಂದಿಸದಲೆ ಹರಿ
ನಿನ್ನಾಜ್ಞೆಯೊಳಾದುದೆಲ್ಲ ನಿನಗೆ ಸಮರ್ಪಣೆಗೈಯ್ಯುತಾ ೨
ಸತಿಸುತಹಿತ ಸೋದರಾಪ್ತ ತತಿಯಲಿ ಸಂಭ್ರಮದಿ
ಮತಿಗೆಡದೆ ಎಚ್ಚರಿಕೆಯಿಂ ಸುಮಾರ್ಗದಿ ಸಮ್ಮುದದಿ
ಪ್ರತಿ ದಿನದಲಿ ಶೃತಿ ಸ್ರ‍ಮತಿ ಸಂಮತದಿ ಸತ್ಸಂಗದಿ ಸೀತಾ-
ಪತಿ ಗುರುರಾಮ ವಿಠಲ ಯಂದತಿಶಯದಲಿ ಚಿಂತಿಸುತ೩

೨೫೪
ಸುಳ್ಳುಗಳ ಬೋಧಿಸಿ ನೀ ಪೊಳ್ಳಾಗದಿರಲೊ ಪ
ನೀರ್ಗುಳ್ಳೆಯಂಥ ದೇಹ ನಂಬಿ ನಿಜಭಕ್ತ ನಾನೆಂದೂ ಅ.ಪ
ಎಳ್ಳುಕಾಳಿನಷ್ಟಾದರೂ ಈಶನಲ್ಲಿ ಭಕ್ತಿಕಾಣೆ
ಡೊಳ್ಳತುಂಬುವದಕೆ ನಾಲ್ಕಲ್ಲಿ ಇಲ್ಲಿ ಕಲಿತುಕೊಂಡು ೧
ಪರರಿಗೆ ಹೇಳುವಂತೆ ನೀ ನಡೆಯುವೆಯೇನೊ
ಪರಗತಿಯಾಗದು ನಿಜ ನಿಜ ನಿಜ ಕಾಣೊ ೨
ನಿನ್ನಯೋಗ್ಯತಾನುಸಾರ ನೀನರಿಯಲೊ
ಬನ್ನಬಡುವದೆ ಸಾಕ್ಷಿ ಪುಣ್ಯವೇನಿದರೊಳು ೩
ಬಿಡು ಬಿಡು ಬಿಡು ಬಿಡು ಬಯಲಿನ ಡಂಭವ
ಹಿಡಿ ಹಿಡಿ ಹಿಡಿ ಹಿಡಿ ಹಿರಿಯರ ಪಾದವ ೪
ಶರಣ ಜನರ ನೋಡಿ ಶಾಂತನಾಗುತ
ನ ಗುರುತರಿಯದೇ ನೀ ೫

ಮಳೆಯಿಲ್ಲದೆ ಪರಿತಪಿಸಿದ ಜನ
೩೩೭
ಸೂರ್ಯ ಮಂಡಲ ಮಧ್ಯವರ್ತಿ | ಕಾರ್ಯ-
ಕಾರಣ ಪ್ರಕೃತಿಗಳಿಗೆ ಚಕ್ರವರ್ತಿ-ವಿಜ್ಞಾನ
ಸ್ಫೂರ್ತಿ-ವಿರಾಟಮೂರ್ತಿ ಪ
ಆರ್ಯಸೇವಿತ ಪಾದ ತುರ್ಯನಾಮಕ ಲೋಕ-
ಮರ್ಯಾದಾ ಸ್ಥಾಪಕ ಮಾದೇವಿರಮಣ-ಶತಕೋಟಿ
ಕಿರಣ-ತೋರೋ ತವ ಚರಣ ೧
ಅಕ್ಷರ ಅಮಿತ ನಿರಕ್ಷರ ಕುಕ್ಷಿಗಳ್
ಲಕ್ಷ್ಯವರಿಯದೆ ನಿತ್ಯ ಮಾಡುವ ತ-
ಪ್ಪಕ್ಷಮಿಸಬೇಕಪ್ಪ-ನಾವು ನಿನಗೆ ಕಪ್ಪ ೨
ಗಾಯಿತ್ರೀ ಪ್ರತಿಪಾದ್ಯ ಕಮಲ ಸಂಭವ ಹೃದ್ಯ
ನ್ಯಾಯಧರ್ಮಯುಕ್ತ ನಿಗಮಾಂತವೇದ್ಯ
ನಿತ್ಯ ನಿರವೇದ್ಯ-ನಿನಗುಂಟೆ ಚೋದ್ಯ ೩
ಹಾರ ಕಿರೀಟ ಕೇಯೂರ ಮಕರಕುಂಡಲ
ಧಾರಿ ಸ್ವರ್ಣಮಯಾಂಗ ಧೃತ ಶಂಖ
ಚಕ್ರ-ಶಿಕ್ಷಿತ ಶುಕ್ರ-ಪರಿಹರಿಸು ವಕ್ರ೪
ವೃಷ್ಟಿಯ ಕೊಟ್ಟು ಸಂತುಷ್ಟಿ ಪೊಂದಿಸು ಜಗ
ಜಟ್ಟಿ ಶ್ರೀ ಗುರುರಾಮವಿಠ್ಠಲ ಸ್ವಾಮಿ
ಶಿಷ್ಟ ಜನಪ್ರೇಮಿ-ಸರ್ವಾಂತರ್ಯಾಮಿ೫

೨೭೩
ಸೂಳೆಯನಿಟ್ಟದ್ದೇವೆ ಕೇಳೈ ಆಶಾ ಪ
ಸೂಳೆ ಮಾತುಗಳನ್ನು ಕೇಳಿ ಕೇಳಿ ದೇಹ
ಜಾಳಾಗಿ ಹೋಯಿತು ಬೀಳೋಕಾಲವು ಬಂತು ಅ.ಪ
ಮನೆಯ ಯೋಚನೆ ಬಿಡಿಸಿ ವಿಧವಿಧ ತಿಂಡಿ-
ಯನು ತಾತಂದು ಕೊಡಿಸಿ
ಮನುಮಥನಾಟವೆಘನ ಬೋಧೆಯೆನ್ನಿಸಿ
ಕೊನೆಗೆ ರೋಗಗಳಿತ್ತು ಗತಿಶೂನ್ಯ ಮಾಡುವ ೧
ಸತಿಯ ಬಿಡಿಸಿ ಬಿಟ್ಟಳು ಆತ್ಮಜರಲ್ಲಿ
ಅತಿದ್ವೇಷವೇ ಕೊಟ್ಟಳು
ಪಿತೃಮಾತೃಗಳಿಗಿಲ್ಲ ವಡಹುಟ್ಟಿದವರಿಗಿಲ್ಲ
ಪ್ರೀತಿ ಹುಟ್ಟಿಸಿಯಿದ್ದದ್ದೆಲ್ಲಾ ಸೆಳಕೊಂಬುವ ೨
ಇತರ ಚಿಂತೆ ಹೋಯ್ತು ಕುಲದಪ-
ಧ್ಧತಿಯ ಮರಿಯ ಲಾಯ್ತು
ಮತಿಗೆಟ್ಟು ದುಶ್ಯಾಸ್ತ್ರಗಳೋದಿದರಿಂದ
ಹಿತವೇ ಪೇಳಿದರ ಹಿತವಾಗಿ ತೋರುವೆ ೩
ವಡವೆ ವಸ್ತ್ರವು ಬೇಕಂತೆ ಕೇಳಿದ್ದನೆಲ್ಲ
ಕೊಡುತಾಯಿದ್ದರೆ ಸಾಕಂತೆ
ಕಡುಚಲ್ವೆ ಅವಳೆಂದು ಕಥೆಗಳ ಹೇಳುತ್ತ
ಮಡದಿ ಮಕ್ಕಳ ಬಿಟ್ಟುಮನಸು ಅವಳಿಗೆ ಕೊಟ್ಟು ೪
ಸ್ಮರನಾಟಯಾವಾಗಲು ಅವಳನೋಡಿ
ಕರಗುತ್ತ ಹಗಲಿರುಳು
ಪರಗತಿ ಕೊಡುವಂಥ ಗುರುರಾಮ ವಿಠಲನೆ
ಅರಿಯವ ಸಂಸಾರ ತೊರೆದು ತುಂಟರಾಗಿ ೫

೧೭೩
ಸೇವಿಸುವೆ ನಿನ್ನನು ಶ್ರೀಪಾದರಾಯ ಪ
ಭಾವವಿರತಿ ಕೊಡು ಭಾಗವತಗೇಯಾ ಅ.ಪ
ವ್ಯಾಸಮುನಿಗೆ ವಿದ್ಯಾಭ್ಯಾಸವಗೈಸಿದೆ
ದಾಸಕೂಟವೆಂಬುದ ಧರೆಯೊಳು ನಿಲಿಸಿದೆ ೧
ಸುವರ್ಣವರ್ಣತೀರ್ಥಸುತ ಸುಜನಾಪ್ತ
ಶ್ರೀವರ ನಾಮಾಮೃತದಾತ ಸುಮಿತ್ರ ೨
ಶತಕವಾಟಪುರ ನೃಸಿಂಹ ತೀರ್ಥವಾಸ
ಪತಿ ಗೆ ಪ್ರಿಯದಾಸ ೩

೯೬
ಸ್ನಾನಾ ಮಾಡೈಯ ಸರ್ವಾಧಾರಾ ಪ
ಜಾನಕೀವಲ್ಲಭ ನೀನೆ ನಿರ್ಮಲ ಮೂರ್ತಿಅ.ಪ
ಸ್ಮರಿಸಿದ ಮಾತ್ರದಿ ಪರಿಶುದ್ಧ ಮಾಳ್ಪೆನೆಂ
ದುರುತರ ಶೃತಿಗಳು ಪೊಗಳುತಿಹವು ನಿನ್ನ ೧
ಕ್ಷೀರದದಾಜ್ಯ ಮಧುಶರ್ಕರ ಫಲಗಳಿಂ
ನಾರಿಕೇಳೋದಕದಿಂದ ಪಂಚಾಮೃತ ೨
ಗಂಗೆ ಗೋದಾವರಿ ಯಮುನೆ ಸರಸ್ವತಿ
ತುಂಗ ನರ್ಮದ ಸಿಂಧು ಕಾವೇರಿ ಜಲಗಳಿಂ೩
ಪರಿಮಳ ಪುನಗು ಕೇಸರಿ ಕರ್ಪೂರ ಕಸ್ತೂರಿ
ಪರಮದ್ರವ್ಯವು ನವರತ್ನ ಮುತ್ತುಗಳಿಂದ ೪
ಸಾಗರಶಯನ ಸರ್ವಾಗಮವೇದ್ಯನೆ
ಭಾಗವತಪ್ರಿಯ ನೆ ೫

೩೦೯
ಸ್ಮಾರ್ತರ ನಿಂದನೆ ಮಾಡುವ ಕೆಟ್ಟ
ಧೂರ್ತನ ಬಾಯ ಮೇಲೆ ಹೊಡೀ ಹೊಡೀ ಪ
ಕರ್ತಾರ ಸ್ವರ ಸಮನೆನಿಸುವವರ ಪುರು-
ಷಾರ್ಥಯುತ ಶೃತಿ ಶಾಸ್ತ್ರ ಪ್ರವರ್ತರ ಅ.ಪ
ಅಹರಹ ಸಂಧ್ಯಾ ಮುಪಾಸೀತಾದಿ ಬಹು
ಪ್ರಮಾಣವನುಸರಿಸುವರ
ವಿಹಿತವಾಗಿ ತಮ್ಮಂತೆ ಸರ್ವರನು ವಿಶೇಷದಿಂದರ್ಚಿಸುವವರ
ಕುಹಕಿಗಳ ನಿರಾಕರಿಸಿ ಸದಾ ಬುಧ ಕೋಟಿಯಲಿ
ಪ್ರಕಾಶಿಸುವವರ
ಸಹಿಸಿ ಸಕಲವನು ಕರ್ಮ ಮಾರ್ಗದಲಿ
ಸಮ್ಯಜ್ಞಾನವಸಂಪಾದಿಸುವರ ೧
ವೇದಾಭ್ಯಾಸದಿ ಕಾಲವ ಕಳೆಯುತ ವಿಹಿತರಿವರೆನಿಸಿಕೊಳ್ಳುವರ
ಭೇದಾಭೇದಗಳರಿಯುತಲೀ ಬ್ರಹ್ಮವಾದದಲಿ ಸಂತೋಷಿಪರ
ಆದಿ ಪಿಡಿದು ಮಾರ್ಗವು ತಪ್ಪದೆ ಸರ್ವಾತ್ಮ
ಪ್ರೀತಿಯ ಮಾಡುವರ
ಪಾದ ಮೊದಲ ಶಿರಪರಿಯಂತವು ಲಕ್ಷ್ಮೀಧರನ
ಹೃದ್ಗುಹೆಯಲಿ ನೋಳ್ಪರ ೨
ಲೇಸಾಗಿ ನಿಗಮರಾಶಿಯನ್ನು ಬಲುಶ್ವಾಸವೆಂದು
ನಂಬಿರುವವರ
ಈಶವಿಷ್ಣು ವಿಧಿ ಮುಖ ನಾಮಗಳ
ಪರೇಶನಲ್ಲಿಸಮನ್ವಯಿಸುವರ
ದಾಸೋಹಂಯಂದಖಿಲಾಮರರಿಗೆ ತಗ್ಗಿ
ಭಕ್ತಿಯಲಿ ಪೂಜಿಪರಾ
ಭಾಸುರಾಂಗ ನ ಕೃಪಾ
ಸಂಪಾದಿಸೆ ಪಾತ್ರರಾದವರ ೩

೨೫೫
ಹಣವೆನಲು ಹಣವಲ್ಲ ಹಣವಿಲ್ಲದವರಿಲ್ಲ ಪ
ಗಣಿಸಲು ಮಹಾತ್ಮರೆ ಹಣವಂತರಯ್ಯ ಅ.ಪ
ಹಣವು ವಿದ್ಯೆಯು ತಪಸು ಊಂಛ ವೃತ್ತಿಗಳು ಬ್ರಾ-
ಹ್ಮಣಗೆ ಕ್ಷತ್ರಿಯರಿಂಗೆ ಶೌರ್ಯಾದಿಗಳ್
ಘನಚಮತ್ರ‍ಕತಿ ಯುಕ್ತಿಗಳು ವೈಶ್ಯರಿಗೆ ಶೂದ್ರ
ಜನಕೆ ಭೂಪರಿಚರ್ಯ ಕೃಷ್ಯಾದಿಗಳೆ ಹಣವು ೧
ಮೋಸವತಿಲಾಭ ಸಟೆ ಕಪಟ ಬಾಯಬಡುಕತನ
ದೋಷ ತಸ್ಕರ ಅಧರ್ಮಗಳಿಂದಲಿ
ಘಾಸಿಯಿಂ ಗಳಿಸಿರುವ ಲೇಶವಾದರು ಪುಣ್ಯ-
ರಾಶಿಯನು ಕೆಡಿಸದೇ ಲೇಸು ಮಾಡುವದೇ ೨
ಸತ್ಯರಿಗೆ ಯಾಚನೆಯು ನಿತ್ಯಯಾಚನೆ ರಜಕೆ
ಅತ್ಯಾಸೆ ಪಿಶುನತೆಯು ತಾಮಸರಿಗೆ
ಸತ್ಯ ಸಂಕಲ್ಪ ಗುರುರಾಮ ವಿಠಲನ ಸ-
ರ್ವತ್ರ ಚಿಂತಿಸುವವಗೆ ಕೈತುಂಬ ಹಣವೂ ೩

ಹದಿನಾರು ಜಾತಿಯವರಣ್ಣ
೩೧೦
ಹದಿನಾರು ಜಾತಿಯವರಣ್ಣಾ
ನಿಮಗೆ ಮದಮತ್ಸರಗಳೇಕೆ ಚಿಣ್ಣಾ ಪ
ಬುದ್ಧರು ಇದರರ್ಥವನು ತಿಳಿದು ನೋಡುವುದರೊಳಗೆ
ಬುದ್ಧಿಹೀನರ ವ್ಯಾಜ್ಯ ಮುಕ್ತಿ ಮಾರ್ಗಕೆ ಪೂಜ್ಯ ಅ.ಪ
ಆದರಿಸುವರೆ ತಾಯಿ ತಂದೆ | ನಾನು
ಮೋದವಡುವುದಕೆಲ್ಲಿ ಬಂದೆ
ಆದಿ ವಿಷ್ಣುವಿನ ಮಾಯಾದಿಗಳ ತಿಳಿಯದೆಲೆ
ಭೇದಗಳು ಮಾಡುವುದು ವಾದಗಳು ತರವಲ್ಲ ೧
ಜ್ಞಾನ ಕರ್ಮೇಂದ್ರಿಯಗಳು ಹತ್ತು | ಪಂಚ
ಪ್ರಾಣಗಳು ಸೇರಿಹುದು ಗೊತ್ತು
ಮಾನಸವು ಸೇರಿ ಹದಿನಾರಾಯ್ತು ಹದಿನೇಳು
ನಾನು ಹದಿನೆಂಟನೆಯ ನೀನು ಇದು ನಿಜವಾದ ಮಾತು ೨
ಶುದ್ಧಾನುಲೋಮ ಪ್ರತಿಲೋಮ |ಯಂದು
ಬದ್ಧ ಜಾತಿಗಳಿಂಗೆ ನೇಮಾ
ಮಧ್ವವಲ್ಲಭನಾಜ್ಞೆ ಇದ್ದಂತೆ ಪೇಳಿದೆವು
ಪದ್ಮಾಕ್ಷ ಗುರುರಾಮ ವಿಠಲನಿದಕೆ ಸಾಕ್ಷಿ ೩

೧೪೨
ಹನುಮಂತ ನಿನ್ನನು ನಂಬಿದೆ ಪ
ಇನವಂಶಭೂಷಣ ರಾಮ ಮುದ್ರೆ
ಯನು ಜಾನಕೀಗಿತ್ತನೆ ಲೋಕವೀರ ಅ.ಪ
ಪತಿಕ್ಷೇಮವಂ ಭೂಸುತೆಗರುಹುತ
ಹಿತದಿವನವ ಕೀಳುತ ರಾವಣಿಯಸ್ತ್ರ
ಹತಮಾಡಿ ಸುರರಿನ್ನುತಿಗೊಂಡೆ ವೀರ ೧
ತೃಣಿ ಕರಿಸಿ ರಾವಣನಂ ಕೋಪದಿ
ಅನಲಂಗೆ ತತ್‍ಪಟ್ಟಣ
ಯನುಗೈಸಿ ಮಣಿಯ ವನಜಾಕ್ಷಿಗಿತ್ತೆ೨
ವಾಯುಪುತ್ರ ವಜ್ರ ಕಾಯ ಮೌನಿ ಗೇಯ
ರಾಯ ಶ್ರೀಗುರುರಾಮವಿಠ್ಠಲನ
ಪ್ರಿಯದೂತನೆ ಅಣುಪ್ರಸ್ಥಪುರಿನಿಲಯ ೩

೧೬೪
ಹರನರಾಣಿ ಉರಗವೇಣಿ ಸ್ಮರಿಪೆ ನಿನ್ನನಾ ಪ
ಚರಣಸೇವೆ ಇತ್ತು ನಿರತ ಪೊರೆವುದೆಮ್ಮ ನೀಂ ಅ.ಪ
ಕರಿಗಮನೆ ಶುಭಾಂಗಿ ವರಗುಣಭರಿತೆ
ಸುರನರೋರಗವಿನುತೆ ಶೋಭನಚರಿತೆ ೧
ಸರ್ವಮಂಗಳೆ ಪಾರ್ವತಿ ಮದಗರ್ಮದಿಮೆರೆವ ದು-
ರ್ವಿನೀತರ ಛೇದಿಸುತ ಸುಪರ್ವರ ಪೊರೆವೆ ೨
ಮನದದುವ್ರ್ಯಸವ ಬಿಡಿಸೆ ಜನನಿ ಶಂಕರಿ
ವನಜನಯನೆ ಗುರುರಾಮ ವಿಠಲನ ಸೋದರಿ | ಗೌರಿ ೩

೮೫
ಹರಿಕಾಣದ ಉಪಾಯ ನರಬಲ್ಲನೆ
ದುರುಳರ್ ತಾವ್ ಕರ್ತರೆಂದು ವ್ಯರ್ಥರಾಗುವರು ಪ
ಸುರಪತಿಯ ಸ್ವರ್ಗವನು ಬಲಿರಾಯ ಕೈಗೊಂಡು
ಎರೆಡು ಐವತ್ತು ಹಯಮೇಧಗೈಯ್ಯೆ
ಪುರಂದರಗೆ ತಮ್ಮನಾಗಿ ಉದಿಸಿ ಬಲಿಯನು ಗೆದ್ದು
ಎರೆಡು ಅಡಿಯಲಿ ಬುವಿಯನಳೆದು ಕೊಳಲಿಲ್ಲವೆ ೧
ಅಸುರರು ಅಮರರಲ್ಲಿ ಅತಿದ್ವೇಷವನುಗೈಯೆ
ಬಿಸಜಲೋಚನ ತಾನು ಸ್ತ್ರೀರೂಪದಿ
ನಸುನಗುತ ರಾಕ್ಷಸರ ಮೋಹಿಸಿ ಸುಧೆಯನು ಸುಮ |
ನಸರಿಗಿತ್ತಾದರಿಸಿ ಕರುಣಿಸಿದ ಸ್ವಾಮಿ ೨
ಗುರುಭೀಷ್ಮರನು ಗೆಲುವುದಕ್ಕೆ ಕೃಷ್ಣನು ಯುಧಿ
ಷ್ಠಿರನಿಂದ ಒಂದು ನುಡಿಯನು ನುಡಿಸಿ
ಪರಮ ಸಂಭ್ರಮದಿಂದ ಕೌರವರ ನಾಶಗೈದ
ಗುರುರಾಮ ವಿಠಲಗೆ ಸರಿಯು ಇನ್ನುಂಟೆ? ೩

ಹರಿಮಡದಿಯರು :
೩೨೮
ಹರಿಗೆ ಜಯಸಿರಿಗೆ ಕಮಲಜ ಪವನರಿಗೆ
ಸರಸ್ವತಿಗೆ ಭಾರತಿಗೆ ಮಂಗಳವು ಹರಿಗೆ ಪ
ಗರುಡ ಶೇಷರುದ್ರರಿಗೆ ಹರಿ ಮಡದಿಯರಿಗೆ
ವಾರುಣಿ ಸಾಪರಣಿ ಉಮೆಯರಿಗೆ ಅ.ಪ
ಸ್ಮರ ಪುರಾದ್ಯಮರ ಸಮೂಹಕೆ
ಸುರಋಷಿಚಿರಪಿತ ರಾಜರಿಗೆ ೧
ನೆರೆಕÀರ್ಮಜ ಗಂಧರ್ವ ಕ್ಷಿತಿಪರಿಗೆ
ನರಶ್ರೇಷ್ಠ ವಿಪ್ರಾದಿ ಸುಜನರಿಗೆ೨
ಅಸ್ಮದ್ಗುರು ಮುಖ ಸಕಲರೊಳಗಿರುವ
ವಿಶ್ವವ್ಯಾಪಕ ಗೆ ೩

೧೭೪
ಹರಿಗೆ ಶಿಷ್ಯನು ಬ್ರಹ್ಮ ಕಮಲಜಗೆ ಸನಕಾದಿ
ವರಋಷಿಗಳವರನಂತರದಿ ದೂರ್ವಾಸಮುನಿ
ವರನಿಗಾದರು ಜ್ಞಾನತೀರ್ಥರವರಿಗೆ ಶಿಷ್ಯ
ಗರುಡವಾಹನ ತೀರ್ಥರು |
ತರುವಾಯ ಕೈವಲ್ಯನಾಥಯೋಗೀಂದ್ರರು ಮ
ವರಿಗೆ ಜ್ಞಾನೇಶ ತೀರ್ಥರು ಅವರ ಕರಜಾತ
ವರತೀರ್ಥರವರ್ಗೆ ಸತ್ಯಪ್ರಜ್ಞರಾಬಳಿಕ
ಪ್ರಾಜ್ಞತೀರ್ಥರುಮವರಿಗೆ ೧
ಘನ ತಪೋನಿಧಿಯೆನಿಸುವಚ್ಚುತ ಪ್ರೇಕ್ಷ್ಯರಾ
ಮುನಿಗೆ ಅನವರತ ತ್ರಿವಿಧ ಜೀವಗುರುವೆನಿಸು
ವನಿಲದೇವಂ ಶಿಷ್ಯನಾದ ಮಧ್ವಾಭಿದಾನದೊಳು
ದಶಮತಿಯೆನಿಸುವ |
ಮುನಿಗೆ ನಾಲ್ವರು ಶಿಷ್ಯರುಗಳವರುಗಳ ಪೆಸರುಮಿಗೆ
ವನಜನಾಭಾಕ್ಷೋಭ್ಯಮಾಧವನೃಹರಿ ತೀರ್ಥ
ರಿನಿತು ನಾಲ್ವರೊಳಗಕ್ಷೋಭ್ಯ ತೀರ್ಥಯತೀಂದ್ರ
ಶ್ರೀಪಾದರಿಗೆ ಶಿಷ್ಯರು ೨
ಆನಂದತೀರ್ಥವಿರಚಿತ ಗ್ರಂಥಗಳಿಗೆ ತ
ತ್ವಾನುಸಾರಾರ್ಥಸುಧೆ ರಚಿಸಿದರ್ಜಯತೀರ್ಥ
ಜ್ಞಾನಸಿಂಧ್ವಾಖ್ಯ ಮುನಿನೃಹರಿ ತೀರ್ಥರ
ಶಿಷ್ಯರಾಜ್ಞಾನಸಿಂಧು ಮುನಿಗೆ
ಮೌನಿ ವಿದ್ಯಾಧಿರಾಜಂಬಳಿಕ ರಾಜೇಂದ್ರ
ಗಾನಕ ಜಯಧ್ವಜಗುರುಪ್ರವರವರಶಿ
ಷ್ಯಾನು ಶಿಷ್ಯರಲೆ ಪುರುಷೋತ್ತಮ ಬ್ರಹ್ಮಣ್ಯತೀರ್ಥರವರ
ಪ್ರಸಾದದಿಂ ೩
ವ್ಯಾಸಮುನಿರ್ಯರಾತರ್ವಾಯದಲಿ ಶ್ರೀನಿ
ವಾಸ ತೀರ್ಥರು ರಾಮತೀರ್ಥರಾ ಬಳಿಕ ಲ
ಕ್ಷ್ಮೀಶ ತೀರ್ಥರಿಗೆ ಶ್ರೀಪತಿ ತೀರ್ಥತದನಂತರದಿ
ರಾಮಚಂದ್ರತೀರ್ಥರ್ |
ಲೇಸಾಗಿ ಮುಂದೆ ಲಕ್ಷ್ಮೀವಲ್ಲಭಾಖ್ಯಯೋ
ಗೀಶಂಗೆ ಶಿಷ್ಯ ಲಕ್ಷೀನಾಥ ಶ್ರೀಪಾದ
ರಾಸಂಮಿಮ್ಯಪಗೆ ಲಕ್ಷ್ಮೀಪತಿಯತೀಂದ್ರ
ಶ್ರೀನಾರಾಯಣÁಖ್ಯ ಬಳಿಕ ೪
ರಘುನಾಥ ತೀರ್ಥರಾದವರ್ಗನಂತರದಿ ಮಿಗೆ
ಜಗನ್ನಾಥ ಮುನಿಯವರ ಬಳಿಕ ಶ್ರೀನಾಥ ತೀ
ರ್ಥಗೆ ಶಿಷ್ಯರಾದ ವಿದ್ಯಾನಾಥ ಯೋಗೀಂದ್ರರವರ್ಗೆ
ವಿದ್ಯಾಪತಿಗುರು |
ಜಗವರಿಯೆ ಮುಂದೆ ವಿದ್ಯಾವಲ್ಲಭಾಖ್ಯಯೋ
ಗಿಗೆ ಶಿಷ್ಯನಾದ ವಿದ್ಯಕಾಂತ ಮುನಿವರ್ಯ
ರಿಗೆ ಬಳಿಕ ಶಿಷ್ಯ ವಿದ್ಯಾನಿಧಿ ಮುನೀಂದ್ರ
ವಿದ್ಯಾಪೂರ್ಣರವರ ಬಳಿಕ ೫
ವಿದ್ಯಾಸಮುದ್ರ ತೀರ್ಥರವರ್ಗೆ ಶಿಷ್ಯನಾ
ಗಿದ್ದ ವಿದ್ಯಾಶ್ರೀಧರಾಖ್ಯ ತೀರ್ಥರು ಈಗ
ಪೊದ್ದಿಕೊಂಡಿರ್ಪ ವಿದ್ಯಾ ಶ್ರೀನಿವಾಸ
ತೀರ್ಥಯತೀಂದ್ರ ಶ್ರೀಪಾದರು
ಶುದ್ಧ ಮನದಲಿ ಗುರುಪರಂಪರೆ ಸ್ತೋತ್ರವಂ
ಪದ್ಮಾಕ್ಷ  ನುಡಿಸಿದ ತೆರದೊ
ಳಿದ್ದಂತೆ ಪೇಳ್ದೆನಾಂ ಸಜ್ಜನರು ತಪ್ಪಿರ್ದಡೆಯು
ತಿದ್ದುವುದು ಕರುಣದಿಂ ೬

೩೧೧
ಹರಿಯು ಕರ್ತನೆಂದರಿತವನೇ ಮುಕ್ತ ಮಿಕ್ಕಮಾತೆಲ್ಲಾ ವ್ಯರ್ಥ ಪ
ಪರಿಪರಿ ವಿಧದಲಿ ಭಾವಿಸಿ ನೋಡಲು
ಸರಸಿಜಭವ ರುದ್ರಾದ್ಯರಿಗೆಲ್ಲ ಅ.ಪ
ಗುರುಪೂರ್ಣ ಪ್ರಜ್ಞಾಚಾರ್ಯರ ಉಕ್ತಿ | ಅನುಸರಿಸಿದವರಿಗೆ
ದೊರಕುವುದೆಂದಿಗೂ ಶಾಶ್ವತ ನಿಜಮುಕ್ತಿ
ಅರಿಯದ ವಾದಗಳೆಲ್ಲ ಕುಯುಕ್ತಿ
ಸರ್ವಜೀವರಲಿ ಹರಿಯೆ ವ್ಯಾಪ್ತಿ೧
ತೇನವಿನಾ ತೃಣಮಪಿನಚಲತಿ ಎಂಬ ಶ್ರುತ್ಯರ್ಥವ ಗುರುಬೋ-
ಧಾನುಸಾರ ತಿಳಿಯಲು ತನ್ನಯ ಬಿಂಬಾ
ಮಾನಸ ಪೀಠದಿ ಹೊಳೆಯಲು ದರುಶನ-
ದಾನಂದ ಸುಖಾಮೃತ ತಾನುಂಬಾ ೨
ತ್ರಿವಿಧ ಚೇತನದಿ ಯೋಗ್ಯತೆ ಮೀರದಲಿ |
ಗುಣಕರ್ಮಗಳನು ಒಂ-
ದೆವೆ ಮಾತ್ರವು ತಪ್ಪದೆ ನಡೆಸುತಲಿರುವ
ಪವನಾಂತರ್ಗತ
ಜವನವರಿಗೆ ಒಪ್ಪಿಸನು ತನ್ನವರನು ೩ಸಂಪ್ರದಾಯದ ಹಾಡುಗಳು

೮೩
ಹರಿಯೆ ಸಿರಿದೊರೆಯೆ
ಅರಿಯೆ ನಿನ್ಹೊರತನ್ಯರ ಪ
ಶರಣರ ಪೊರೆವ ಕರುಣಿ ನೀನೆ ದೇವ
ಮೊರೆ ಹೊಕ್ಕಿರುವರ ದುರಿತಗಳ ಕಳೆವ ಅ.ಪ
ಕೋಟಿ ಸೂರ್ಯ ಪ್ರಕಾಶ ಕುಮುದಾಪ್ತಮಿತ ಭಾಸ
ನಾಟಕಾಧಾರ ಶ್ರೀಶ
ಸಾಟಿಯಿಲ್ಲ ನಿನಗೆ ಸುರ ನರೋರಗರೊಳಗೆ
ಹಾಟಕ ಗರ್ಭತಾತ ಅಖಿಲ ಸದ್ಗುಣೋಪೇತ ೧
ಬರಿದೆ ಈ ಸಂಸಾರ ಶರಧಿಯೊಳ್ ಮುಳುಗುತ
ಧರೆಯ ಕಾಣದೆ ಕೂಗುತ
ಮರಳಿ ಮರಳಿ ಜನನ ಮರಣಗಳೈದುತ
ನರಕ ಸ್ವರ್ಗ ಭೂಲೋಕ ತಿರುಗಿ ಬಳಲುವವೋ ೨
ಹಟದಿ ದುರ್ಮತಿಗಳಾರ್ಭಟಿಸುತಜ್ಞಾನದಿ
ಮಟ ಮಾಯದಿ ಚರಿಸಿ
ತ್ರುಟಿಯಾದರು ನಿನ್ನ ಭಜಿಪ ಜನರಿಗೆ
ಘಟಿಪುದೇ  ನಿನ್ನಯ ಕರುಣ ೩

೮೪
ಹರಿಯೇಕಾಯೋ ಶರಧಿಶಯನನೇ
ಸಿರಿದೇವಿಯರಸ ಪರಮಾತ್ಮ ಪರಾತ್ಪ್ಪರನೇ ಪ
ನಿರುತ ನಿನ್ನ ಸ್ಮರಿಸುವ ಸ | ಜ್ಜನರಘಗಳ ಪರಿಹರಿಸುವ
ಬಿರುದ ಧರಿಸಿ ಮೆರೆಯವೆ ನೀ ಧರೆಯೊಳು ಶುಭಚರಿತನೆ ಅ.ಪ
ವರರುಕ್ಮಾಂಗದ ಪ್ರಹ್ಲಾದರು ದ್ರೌಪದಿ ವಿಭೀಷಣಶ-
ಬರಿಧೃವಮುಖರೆಲ್ಲರು ನಿನ ಸಿರಿ ನಾಮದ ಮಹಿಮೆಯು ೧
ಬುದ್ಧಿವಂತರೆಲ್ಲ ಮನವ ತಿದ್ದಿಕೊಳುತಲಹರ್ನಿಶಿಯಲಿ
ವುದ್ಧವಪ್ರಿಯ ನಿನ್ನಪಾದ ಪದ್ಮಮಧುಪರೆನಿಪರು ೨
ಧೃಹಿಣನುಮಗ ಮೊಮ್ಮಗ ನಿನಗಹಿಭೂಷಣ ನಿನ್ನ ಮಹಿಮೆ
ಗಹನವಳವಡುವಡಲ್ಲವು ಮಹಿಯೊಳು ಪಾಮರರಿಗೆ ೩
ಸಕಲಕು ನೀನೆ ಗತಿಯೆಂದ ಕುಟಿಲರು ನಿರಂತರ ಪರ
ಸುಖವನು ತಾವ್ಕೋರದೆ ಸದ್ಭಕುತಿಯಿಂದ ಸೇವಿಪರು ೪
ಅರಿಯದ ದುರ್ಜನರೀದುಸ್ತರ ಸಂಸಾರದಿ ಮುಳುಗುತ
ಹೊರಳಿ ಹೊರಳಿ ನೋಯ್ವರು ಶ್ರೀ ಗುರುರಾಮ ವಿಠಲನೇ ೫

೮೬
ಹಸೆಗೆ ಬಾರಯ್ಯ ಹದಿನಾಲ್ಕು ಲೋಕದೊಡೆಯ ಪ
ಕುಸುಮಾಸ್ತ್ರನೈಯ್ಯ ಕೋರಿ ಪ್ರಾರ್ಥಿಪೆ ಜೀಯಾ ಅ.ಪ
ಪಕ್ಷಿಗಮನ ದುಷ್ಟ ರಾಕ್ಷಾಸಾಂತಕ ನೀನು-
ಪೇಕ್ಷೆಮಾಡದೆ ನಿರಪೇಕ್ಷ ಸೌಖ್ಯವೀಯಲು ೧
ಪದುಮೆಯೊಡನೆ ಹೃದಯಪದುಮ ಪೀಠದಿ ಕುಳಿತು
ಸದಮಲ ಜ್ಞಾನ ವದಗಿಸುವದಕೀಗ ೨
ಪ್ರೇಮಾದಿ ಸುಜನರಿಗೆ ಕಾಮಿತ ಫಲವೀವ
ಸ್ವಾಮಿ ನೀನೆ ಶ್ರೀಗುರುರಾಮ ವಿಠಲ ವಲಿದು ೩

೧೨೨
ಹಸೆಗೆ ಬಾರೆ ಬಿಸಜ ಮಂದಿರೆ
ಕುಸುಮಾಸ್ತ್ರನ ಜನನಿ ಬೇಗ ನೀ ಪ
ಎಸೆವ ಪೀಠಕೆ ನಸುನಗುತಲಿ
ದಶರಥ ನೃಪನ ಸೊಸೆಯೆ ಕರುಣದಿ ಅ.ಪ
ಮಾನಸಾಷ್ಟದಳ ಕಮಲ ಪೀಠಕೆ
ಸಾಸುರಾಗದಿ ಪತಿ ಸಹಿತವಾಗಿ
ಆನಳಿನಜಾದಿ ಪರಿವಾರದೊಡನೆ
ಆನಂದಾಮೃತ ವೃಷ್ಟಿಯ ಕರೆಸುತೆ ೧
ಕಾಲಲಂದಿಗೆ ಗೆಜ್ಜೆಗಳ್ ಮೆರೆಯೆ
ಮೇಲೆ ಸುರರು ತಾ ಹೊಮಳೆಯ ಸುರಿಯೆ
ಕಾಲ ಕಾಲದಿ ನಿನ್ನೋಲಗವಿತ್ತು
ಪಾಲಿಸಲ್ಕೆ ಭಕ್ತ ಜನರನು ೨
ಮಾಯೆ ಜಾಯೆ ಕೃತಿ ಶಾಂತಿ ರಮೆ ನಿರ |
ಪಾಯ ಸೌಖ್ಯವನು ಪುತ್ರರಿಗೀವುತ
ಕಾಯುವಳು ನೀನೆಂದು ಶೃತಿ ನಿ |
ಕಾಯ ಮುತ್ತೈದೆಯರ್ ಕರೆವರು ೩
ತಟ್ಟೆಯೊಳಗರಿಸಿನ ಕುಂಕುಮಾಕ್ಷತೆಗ
ಳಿಟ್ಟು ಗಂಧ ಪುಷ್ಪಗಳ ಸಹಿತ
ದಿಟ್ಟ ಮುತ್ತೈದೆಯರೆಲ್ಲ ಕರೆವರು
ಕೃಷ್ಣರಾಯನ ಪಟ್ಟದ ರಾಣಿಯೆ ೪
ಹತ್ತುವಿಧದ ವಾದ್ಯಗಳು ಮೊರೆಯೆ
ಚಿತ್ಪ್ರಕಾಶ ಜ್ಯೋತಿಗಳು ಹೊಳೆಯೆ
ಮತ್ತೆ ಗುರುರಾಮ ವಿಠಲನ ಸಹಿತ
ಚಿತ್ತೈಸಮ್ಮ ಚಿತ್ರಮಂಟಪದಲಿ ೫

೧೨೪
ಹಸೆಗೆ ಬಾರೆ ಬಿಸಜಾಲಯೆ
ಅಸುರಾಂತಕನರಸಿಯೆ ನೀಬೇಗ ಪ
ಕುಸುಮಾಕ್ಷತೆ ಲಾಜಗಳಿಂದಲಿ ಮೇ-
ಲೆ ಸುರಾರ್ಚೆಲ್ಲಿ ಪ್ರಾರ್ಥಿಸುವರು ನಿನ್ನ ಅ.ಪ
ವೇದ ಘೋಷೆಯಿಂ ಧರಣೀ ಸುರರು
ಮೋದದಿಂದ ತಾವು ಪೊಗಳುತಿಪ್ಪರು
ಪಾದನೂಪುರವಲುಗದಂತೆ ನೀ ಸಂ-
ಮೋದವ ಬೀರುತ್ತ ಸುಜನರಿಗೆಲ್ಲ ೧
ಗಿರಿಜಾವಾಣೀಯಾರ್ಕರವ ಕೊಡಲು
ಅರುಂಧತಿ ಮುಖರೆಚ್ಚರಿಕೆ ಪೇಳಲು
ಕರುಣಾರಸವ ಸುರಿಸುತ್ತ ನೀ ಭ-
ಕ್ತರು ಬೇಡಿದಿಷ್ಟಾವರವ ನೀಡಲು೨
ಜನಕನಸುತೇ ಜಕದೇಕ ಮಾತೆ
ಸನಕಾದಿ ಮುನಿಜನ ಸಂಸ್ತುತೆ
ವನಜಾಕ್ಷ ಗುರುರಾಮ ವಿಠ್ಠಲನ
ವಕ್ಷಮಂದಿರೆ ವಂದಿಪೆ ಇಂದಿರೆ ೩

೧೨೩
ಹಸೆಗೆ ಬಾರೆ ಶುಭಾಂಗಿವಿಭಾವ ಪ
ರೀಶನ ಸೋದರಿ | ಜಗದಾಧಾರಿಯೆ ಸಿರಿ ಅ.ಪ
ಜೀವರ ಸ್ವಭಾವಗಳಂತೆಯೆ
ಫಲವ ಕೊಟ್ಟು ಕಾಪಾಡುವೆ
ಇಭರಾಜ ವರದನ ಮಾನಿನಿ ಜನನಿಯೆ ಬೇಗದಿ ೧
ದೇಶ ಕಾಲಾದಿ ಹರಿಗೆ ಸಮ
ಭಾಸುರಾಂಗಿಯೇ ಬಾರೇ ರಮಾ
ನೀ ಸಲಹಬೇಕು ನಮ್ಮಮ್ಮ ವಂದಿಸುವೆನೂ ೨
ಗುರುರಾಮ ವಿಠಲನ ಪ್ರಿಯೆ
ಕರುಣಾಬ್ಧಿಯೆ ಕಾಯೆ ಮಾಯೆ
ವರಗಳ ನೀ ಕೊಡು ತಾಯೆ ಮಹಾಲಕ್ಷ್ಮಿಯೇ ೩

೧೨೧
ಹಸೆಗೆ ಬಾರೆ ಸುಂದರಿ ಓ ಪ
ಬಿಸಜಾಲಯೆ ಜನಕ ಕುಮಾರಿ ಅ.ಪ
ಮುತ್ತು ಮಾಣಿಕದ ಪೀಠವಂ
ಭಕ್ತಿಯಿಂದ ಅಲಂಕರಿಸಿ ಮಿತ್ರೆಯರೆಲ್ಲರು ಕರೆವರು ೧
ಸುತ್ತ ಜ್ಯೋತಿಯು ಬೆಳಗಲು
ಮತ್ತೆ ಮೆಲ್ಲಡಿಯಿಡುತಲಿ ಓ ಬಿಸಜಾಲಯೆ ೨
ಭೂಮಿಜೆ ಲೋಕಮಾತೆಯೆ
ಕಾಮಿತಪ್ರದೆ ಶ್ರೀ ಗುರುರಾಮ ವಿಠಲನರಸಿಯೆ ೩

೮೮
ಹಸೆಗೆ ಬಾರೈ ಶ್ರೀರಾಮ ಹನುಮ ಪ್ರೇಮ ಪ
ದಶರಥ ಕುಮಾರ ದಶವಿಧ ಶರೀರ ಅ.ಪ
ಪರಮಾತ್ಮ ಶುಭಚರಿತ ಸೂರ್ಯವಂಶಾ
ಶರಧೀಗೆ ಚಂದ್ರಮನೆ ಕರುಣದಿ ಬೇಗನೆ ೧
ಅಚ್ಯುತಾ ಅನಂತ ಅಗಣಿತ ಗುಣವ್ರಾತ
ಚಿತ್ಸುಖಾಪ್ರದಾತ ಜಾನಕೀ ಸಮೇತಾ ೨
ದುರಿತಾನಲಸಲಿಲ ದೈತ್ಯನಿಕರ ಕಾಲ
ಗುರುರಾಮ ವಿಠಲ ತರಣಿಜ ಪಾಲ ೩

೮೭
ಹಸೆಗೆ ಬಾರೈರಾಮಾ ಪ
ಬಿಸಜಾಪ್ತ ವಂಶಲಲಾಮ ಅ.ಪ
ಮಾನಸ ಪೀಠಕೆ ಜಾನಕಿದೇವಿ ಸಹಿತಾ
ಆನತರಿಗೆ ಸೌಖ್ಯವ ಬೀರುತಲಿ ೧
ಬ್ರಹ್ಮಮಹೇಶ್ವರ ಸುಮ್ಮಾನದಿ ಕೈಕೊಡಲು
ಧರ್ಮಸ್ಥಾಪಿಸೆ ಧರಣಿ ಮಂಡಲದಿ ೨
ಹನುಮಂತ ಜಾಂಬವ ಇನತನಯಾಂಗದಾದಿ
ಘನಕಪಿವೀರರು ಕಾದುಕೊಂಡಿರುವರು ೩
ಕಾಮಾದಿ ವರ್ಗಂಗಳ ನಿರ್‍ನಾಮವಾಗಿ ಪೋಪಂತೆ
ನೀಮನವಲಿದನುಗ್ರಹಿಸಿ ಬೇಗದಿ೪
ಅಂತಃಕರುಣಾಸಿದ್ಧಿಯಂ ತವಕದಿ ಕೊಟ್ಟು
ಅಂತರಾತ್ಮಕ ಗುರುರಾಮ ವಿಠಲನೆ ೫

೩೨೯
ಹಸೆಗೆ ಬಾರೊ ಹರುಷಬೀರೊ ಬಿಸಜನಾಭನೇ ಪ
ಶಶಿಯ ಸೋದರಿ ಸಹಿತವಾಗಿ ಶಾಮಲಾಂಗನೇ ಅ.ಪ
ರತ್ನಖಚಿತ ಪೀಠವಿರಿಸಿ ರಮಣಿ ಮಣಿಯರೂ
ಕುತ್ನಿ ಪಟ್ಟಾವಳಿಯ ಹಾಸಿ ಕೋರಿ ಪ್ರಾರ್ಥಿಪರೂ ೧
ಭೇರಿ ಮೃದಂಗ ನಾಗಸ್ವರ ನಗಾರಿ ಕಹಳೆಗಳ್
ಧಾರುಣಿ ಸುರವೇದ ಘೋಷ ವಿಸ್ತಾರವಾಗಿರಲ್ ೨
ಹಳದಿ ಕುಂಕುಮಾಕ್ಷತೆ ಗಂಧ ಕಳಶ ಕನ್ನಡಿ
ಹೊಳೆಯೆ ತಟ್ಟಿಯೋಳ್ ಸುತ್ತ ಜ್ಯೋತಿ ಬೆಳಗುವುದು ೩
ವಿಧಿ ಶಂಕರರ್ಕೊಡಲು ಕರವನೊದಗಿ ಪಾಶ್ರ್ವದಿ
ಮುದದಿ ನಸು ನಗುತ ಬಲದ ಪದವು ಮುಂದಾಗಿ ೪
ಶರಣ ಜನರಭೀಷ್ಟಗಳನು ಸಲಿಸುವಾತನೇ
ಸರ್ವೇಶ ಪುರುಷೋತ್ತಮನೆ ೫

೩೩೦
ಹಸೆಗೇಳೈ ಶ್ರೀನಿವಾಸ ಮೂರ್ತಿ ನೀ
ಬಿಸಜಾಲಯೆ ಸಹಿತ ಪ
ಎಸೆವ ಪೀಠಕೆ ನಸುನಗುತೀಗಲು
ಕುಸುಮಾಸ್ತ್ರನ ತಾತ ಅ.ಪ
ಬ್ರಹಾದಿ ಸುರರ್ ಪ್ರಾರ್ಥನೆ ಗೈವರ್
ನಿಮ್ಮಡಿಗಳ ಬೇಡಿ
ಧರ್ಮಾನುಜ ಸಾರಥಿ ಮನವಲಿದು
ತ್ವರಿತದಿ ದಯಮಾಡಿ ೧
ಓಲೆ ಬರೆದು ತಾ ಒಲಿಸಿಕೊಂಡ
ಳಾಲೋಲ ನಯನೆ ನಿನ್ನಾ
ಫಾಲಾಕ್ಷನ ಸಖ ಪುರಷೋತ್ತಮ ಜಗ
ತ್ಪಾಲನ ಸಂಪನ್ನ ೨
ಸಾಮಜ ರಾಜ ವರದ ಸುರ
ಪಾನುಜ ಸರ್ವಾಂತರ್ಯಾಮಿ
ರಮಣೀಯ ಮಹಿಮಾರ್ಣವ ಶ್ರೀಗುರು
ರಾಮವಿಠಲ ಸ್ವಾಮಿ ೩

೩೩೧
ಹೆಣ್ಣೆನವರ ಹೆಮ್ಮೆ ನೋಡಿರೀ ಜನರೆ ನೀವು ಪ
ಹೆಣ್ಣೆನವರ ನೋಡಿ ಇವರ ಬಣ್ಣ ಗೊತ್ತಾಯ್ತು ನಮಗೆ
ಕಣ್ಣು ಸನ್ನೆ ಮಾಡಿ ಮಾಡಿ ಕಾರ್ಯವನ್ನು ತೂಗಿಸುವರು ಅ.ಪ
ಪಾವು ಬೇಳೆ ಹಪ್ಪಳ ಅರ
ಪಾವು ರವೆಯು ಶಾವಿಗೆ ಮಾಡಿ
ಭಾವದಲ್ಲಿ ಹಿಗ್ಗಿಗ್ಗಿ
ತಾವು ಪ್ರಸ್ತಮಾಡುತಿಹರು ೧
ಭಕ್ಷ್ಯ ಭೋಜ್ಯವೆಂಬುದದು
ಲಕ್ಷ್ಯವಿಲ್ಲ ಮಾತಿನಲ್ಲಿ
ಕುಕ್ಷಿತುಂಬ ಭೋಜನವಿಲ್ಲ
ದಕ್ಷಿಣೆಯು ದ್ವಿಜರಿಗೆ ಕಾಣೆ ೨
ವರಗೆ ಕೊಟ್ಟ ವಸ್ತ್ರ ಪಾತ್ರೆ
ವರ್ಣಿಸಲೊಂದು ಬಾಯಿ ಸಾಲದು
ನೆರೆಹೊರೆಯವರೆಲ್ಲಾ ತಿಳಿಯೆ
ಗುರುರಾಮ ವಿಠಲನೆ ಬಲ್ಲ ೩

೨೫೬
ಹೇಳುವುದು ಬೇಡ | ಜನರ ನುಡಿ
ಕೇಳದಿರಲೋ ಮೂಢ ಪ
ಶ್ರೀಲೋಲನ ಕಿಂಕರರ ಬಾಗಿಲಲಿ
ಬೀಳುನಾಯಿಯಂದದಲಿ ಕೆಲಕಾಲ ಅ.ಪ
ದ್ರವ್ಯದಾಸೆಗಾಗಿ | ನಾರಕೀ
ಭವಿತವ್ಯರಲ್ಲಿಗೆ ಹೋಗಿ
ಸೇವ್ಯನೀನು ಸೇವಕನಾನೆನ್ನುತ
ಕಾವ್ಯನಾಟಕ ಸ್ತುತಿ ಪದ್ಯಗಳನು ೧
ನಾನು ಯೋಗ್ಯನೆನ್ನುತ | ತೋರಿಸಿ
ಶಾನೆ ಮಾತನಾಡುತ
ಮಾನವಾಗಿದಿರದಲ್ಲಿ ನಿನಗೆ ದುರಭಿ-
ಮಾನಿಯಾಗಿ ನೀ ಕೆಡುವೆಯೊ ನಿಜ ನಿಜ ೨
ಉಂಛ ವೃತ್ತಿ ಸಾಕು | ಜೀವನಕೆ
ಕೊಂಚ ಬೇಡಬೇಕು
ಪಂಚಶರಜನಕ ನ
ವಂಚನೆಯಿಲ್ಲದೆ ಭಜಿಸು ರಹಸ್ಯವ ೩

೨೫೭
ಹೊಟ್ಟೆ ನಿನ್ನಿಂದಲೆ ನಾ ಕೆಟ್ಟೆ ನಮಗೇಕೀ ಬಟ್ಟೆ ಪ
ಸಿಟ್ಟ ಮಾಡಿ ಪರರ ಕಷ್ಟವನರಿಯದೆ
ಕೆಟ್ಟವನೆಂಬಪಕೀರ್ತಿಯ ಪಡಿಯುವ ಅ.ಪ
ಒಂದು ಹೊತ್ತಿಲ್ಲದಿರುಲು ತಾಳಲಾರೆ | ನಿನಗಾಗಿ ನೀಚ-
ವೃಂದವ ಯಾಚಿಸಿ ನಾ ಬಳಲಲಾರೆ
ತಂದೆ ತಾಯಿಗಳನ್ನಾದರೂ ವಂಚಿಸಿ
ಮುಂದಾಗುವ ಕೇಡರಿಯದಿರುವ ಹಾಳು ೧
ಹೆಚ್ಚು ಕೊಟ್ಟರು ಒಲ್ಲೆಯೆಂಬೆ | ಕಡಿಮೆಯಾದರೂ ಬಾಯಿ
ಮುಚ್ಚಲೀಸದೆ ದೇಹಿ ಎಂಬೆ
ತುಚ್ಛರ ಸೇವಿಸಿ ಅನ್ಯಾರ್ಜಿಸಿ
ಹುಚ್ಚು ಹಿಡಿಸುವೆಯೇನೊ ನೀ ಕೊನೆಗೆ ೨
ನಿನಗಾಗೀ ಸಕಲ ವಿದ್ಯಗಳರಿತು | ಸಭೆಯೊಳು ವಾದಿಸಿ
ಜನವ ಮೆಚ್ಚಿಸಿ ಹಣವ ತೆಗೆದು
ದಿನ ದಿನ ತುಂಬುತಲಿದ್ದರು ಝಾವಕೆ
ಮನಸು ಚಪಲ ಮಾಡಿ ತಹ ತಹ ಪಡಿಸುವ ೩
ವ್ಯವಸಾಯಯೋಗ್ಯ ವ್ಯಾಪಾರಗಳು | ಯಾಚನೆಕಷ್ಟ
ಬವಣೆ ಭಾರವಾಹತ್ವ ಮೊದಲು
ದಿವಸ ದಿವಸ ಮಾಡುತ ನಿನ್ನೊಲಿಸಲು
ಜವನಾಳ್ಗಳ ಕೈಗೊಪ್ಪಿಸಿಸುವೆ ಕಡೆಗೆ ೪
ಜ್ಞಾನ ನಿಷ್ಕಾಮ ಕರ್ಮದಾನ | ಸಂಧ್ಯಾಜಪತಪ
ಸ್ನಾನಾನುಷ್ಠಾನ ಸತ್ಸಾಧನಾ
ಏನು ನಡೆಯಲೀಸದೆ ದಿನದಿನದಲಿ
ನಾನು ನನಗೆ ಎನ್ನಿಸಿ ಬಾಯಿಬಿಡಿಸುವ ೫
ಮುಷ್ಕರದಿಂದ ನಿನ್ನ ನೋಯಿಸಲು | ಕರಗಿಯೆಲ್ಲ
ಶುಷ್ಕವಾಗುವದು ತೃಪ್ತಿಪಡಿಸಲು
ಪುಷ್ಕಳವಾಗಯುಷ್ಕರ ಮಾಡುವೆ
ನಿಷ್ಕಾರಣವಲ್ಲವು ನೀ ಜಗದೊಳು ೬
ಕೊಟ್ಟಷ್ಟರಲ್ಲೆ ತೃಪ್ತಿಯ ಹೊಂದು | ಸಾಲದಿರಲು
ಸಿಟ್ಟೇಕೆನ್ನೊಳು ದಯಮಾಡಿಂದು
ದಿಟ್ಟ ಶ್ರೀ ನಂಘ್ರಿಯ
ಮುಟ್ಟಿ ಭಜಿಸೆ ಸಂತುಷ್ಟಿಯ ಪಡೆವೆ ೭

೮೯
ಹೊಡೆಯಿರೋ ನಗಾರಿ
ಗಡಗಡನೆ ಮೂರು ಬಾರಿ ಪ
ದೃಢಭಕ್ತ ಸಮೂಹವ ಸಿರಿ
ಯೊಡೆಯನು ಕೈಬಿಡನೆಂದು ಅ.ಪ
ವಿಧಿಸೃಷ್ಟಿಯೊಳಿಲ್ಲದರೂ-
ಪದಿ ಬಂದು ನಖದಿ ಅಸುರನ
ಉದರ ಬಗೆದು ಕರುಳ ತೆಗೆದು
ಮುದದಿ ಗಳದಿ ಧರಿಸಿದನೆಂದು ೧
ಪರರು ತನ್ನ ಹಿಂಸೆಗೈ
ದರು ಸಹಿಸಿ ಸಮಾಧಾನದಿ
ಸಿರಿಯರಸನ ನೆನೆವಗೆ ಭಯ
ವಿರದಿರದಿರದಿರದೆಂದು ೨
ದ್ವೇಷಿಗಳನುದಿನ ಯೋಚಿಪ
ಮೋಸಗಳನು ತಿಳಿಯುತ ಲ-
ಕ್ಷ್ಮೀಶನು ಪರಿಹರಿಸಿ ತನ್ನ
ದಾಸರಿಗೊಶವಾಗುವನೆಂದು ೩
ಖಳಜನರ ಮರ್ದಿಸುತ
ಜಲಜನಾಭ ಮೂಜಗದ
ಒಳಹೊರಗೂ ವ್ಯಾಪಿಸುತ
ತಿಳಿಯಗೊಡನು ಸತ್ಯವಿದೆಂದು ೪
ಕಾಮಾದಿಗಳನು ಗೆದ್ದು ಮ-
ಹಾಮಹಿಮರೆನಿಸುವರ ಯೋಗ-
ಕ್ಷೇಮವನ್ನು ವಹಿಸಿಹ ಗುರು-
ರಾಮವಿಠಲ ನರಹರಿಯೆಂದು ೫

೧೯೩
ಹ್ಯಾಗಾಗುವುದೊ ತಿಳಿಯದು ಈಶನಜ್ಞೆ ಪ
ಭಾಗವರತ ಸೇವೆಯಲ್ಲಿ ಬಹು ಪ್ರವೀಣವೆನೆಪುದೊ
ರಾಗಲೋಭದಲ್ಲಿ ಮುಳುಗಿಸಿ ರಚ್ಚೆಗಿಕ್ಕಿ ಬಿಡುವುದೊ ಅ.ಪ
ಕೋರಿಕೆಗಳ ಬಿಡಿಸಿ ಸದಾ ಗುಣವಂತನೆನಿಸುವುದೊ
ನಾರಿ ಮಕ್ಕಳಾಸೆಯಲಿಯನಾಥವ ಮಾಡಿಸುವುದೊ ೧
ದ್ವಂದ್ವಗಳಲಿಲೇಪವಿಲ್ಲದಾನಂದವ ಪೊಂದಿಸುವುದೊ
ಇಂದುಮುಂದು ತಿಳಿಯಗೊಡದೆ
ಮಂದಮತಿಯನಿಸುವುದೊ ೨
ಶ್ರವಣಮನನ ಸಾಧನೆಗಳ ಸದಾ ಮಾಡಿಸುವುದೊ
ಭವಭವದಲಿ ಮೂಢನೆನಿಸಿ ಪಾಪರತನ ಮಾಳ್ವದೊ ೩
ಸರ್ವರಲ್ಲಿ ಗುಣವೆ ಕಾಣಿಸಿ ಸಂತೋಷಪಡಿಸುವುದೊ
ದುರ್ವಿನೀತನೆನಸಿ ಸದಾ ದುಷ್ಕಾರ್ಯ ಮಾಡಿಸುವುದೊ ೪
ತರತಮ ಪಂಚಭೇದ ಜ್ಞಾನ ತತ್ವ ತಿಳಿಸಿ ಸುಖಿಪುದೊ
ದುರಹಂಕಾರರಲ್ಲಿ ಮೆರೆಸಿ ನರಕದಿ ಬೀಳಿಸುವುದೊ ೫
ದಾನಧರ್ಮ ಪರೋಪಕಾರ ದಯಾವಂತನೆನಿಪುದೊ
ಹೀನನೆನಸಿ ಸಕಲರಿಂದ ಹೀಯ್ಯಾಳಿಸಿಬಿಡುವುದೊ ೬
ಭವಹರ  ಭಾರ ಕರ್ತನಾದವ
ಅವರವರಧಿಕಾರದಂತೆ ಎಲ್ಲರಿಗೂ ನಡಿಸುವಾ ೭

೨೫೮
ಹ್ಯಾಗಿದ್ದರೂ ಸುಖವೇ ಜ್ಞಾನಿಯಾದವಗೆ ಪ
ನಾಗಶಯನನಂಘ್ರಿ ನಳಿನ ನಂಬಿರುವಗೆ ಅ.ಪ
ಬಂಧುಬಳಗವೆಲ್ಲ ಸಂದಣಿಯಾಗಿದ್ದರು
ಹಿಂದುಮುಂದಿಲ್ಲದೆ ತಾನೊಬ್ಬನಾದರು ೧
ಹೊನ್ನು ಹೆಣ್ಣು ಮಣ್ಣು ಹೊಂದಿಕೊಂಡಿದ್ದರು
ಅನ್ನಕಿಲ್ಲದೆ ತಾ ನರಳುವಂತಾದರು ೨
ಬೇಡದೆ ಸಕಲೈಶ್ವರ್ಯ ತಾನೆ ಬಂದರು
ಬೇಡಿದರೊ ಹೊಟ್ಟೆ ತುಂಬ ದೊರಕದಿದ್ದರು ೩
ಯೋಗ್ಯನೆನ್ನುತ ಜನರು ಶ್ಲಾಘ್ಯವ ಮಾಡಿದರು
ಭಾಗ್ಯಹೀನನಿವನೆಂದು ಬೈಯ್ಯತಲಿದ್ದರು ೪
ಕೊಟ್ಟಷ್ಟರಲ್ಲೆ ತೃಪ್ತಿಪಟ್ಟು ಶ್ರೀ ಗುರುರಾಮ-
ವಿಠ್ಠಲನ ಮನಮುಟ್ಟ ಭಜಿಸುವಗೆ೫

೧೯೪
ಹ್ಯಾಗೆ ಮುಕ್ತಿಯಾಗುವುದು ಕೂಗಿದರೇನು ಫಲ ಪ
ಯೋಗವರಿತು ತನ್ನಲಿರುವ ನಾಗಶಯ್ಯನನ ನೋಡದೆ ಅ.ಪ
ಗುರುಸೇವೆ ಮಾಡಲಿಲ್ಲ ಗುರುತು ತಿಳಿಯಲಿಲ್ಲ
ಅರಿತೆವೆಂದು ಹಾರಾಡುವ ಅಹಂಕಾರಿಗಳಿಗೆ ೧
ವೇದಶಾಸ್ತ್ರ ಓದಲಿಲ್ಲ ವಾದವಿಲ್ಲಿ ಸಲ್ಲ
ಬೋಧೆ ಮನಸಿಗಂಟಲಿಲ್ಲ ಬುದ್ಧಿಶೂನ್ಯರಿಗೆಲ್ಲ ೨
ಜೀವರಕ್ಷಣ ತಿಳಿಯದೆ ದೇವರನ್ನು ನಂಬದೆ
ನಾವು ನಮ್ಮದೆಂಬುದು ಬಿಡದೆ ಸಾವ ಕುನ್ನಿಗಳಿಗೆ ೩
ಬಾಯಿಮಾತಿಲಿಂದಲೇನು ಮಾಯವಾದಗಳೇನು
ನ್ಯಾಯಮಾರ್ಗವರಿತವನು ಕಾಯದಾಸೆಮಾಡನು ೪
ಗುರುರಾಮವಿಠ್ಠಲನ ಸ್ಮರಣೆಯ ಮಾಡದೆ
ಗರುವದಿ ಮೆರೆಯುವ ದುರುಳ ನರರಿಗೆ ೫

ಅಂಟಿ ಅಂಟದ ಹಾಗೆ ಇರಬೇಕು
ಲೋಕನೀತಿ (ಅ)
೧೯೫
ಅಂಟಿ ಅಂಟದ ಹಾಗೆ ಇರಬೇಕು ಪ
ಈ ತಂಟೆ ಸಂಸಾರದ ಬುದ್ಧಿ ಉಂಟಾದವರಿಗೆಲ್ಲಾ ಅ.ಪ
ಎಂಟು ಮದಗಳನ್ನು ಬಿಡಬೇಕು | ಹದಿ-
ನೆಂಟನೇ ತತ್ವ ತಿಳಿಯಬೇಕು
ಮೂರೆಂಟು ಜಯಿಸಿ ನಿಜನೆಂಟನ ಕಂಡವನ
ಭಂಟನಾಗಿ ವೈಕುಂಠ ಸೇರುವದಕೆ ೧
ಶತ್ರುಗಳಾರ್ವರ ಗೆಲ್ಲಬೇಕು | ನಿಜ-
ಮಿತ್ರರಾರ್ವರೊಳು ನಿಲ್ಲಬೇಕು
ರಾತ್ರಿ ಹಗಲು ಪತ್ನೀಪುತ್ರರೊಡನೆ ಕಮಲ-
ಪತ್ರದಿ ನೀರಿದ್ದ ರೀತಿಯಿಂದಲಿ ತಾನು ೨
ಮಾನವಮಾನ ಒಂದಾಗಬೇಕು | ಅನು-
ಮಾನವಿಲ್ಲದೆ ತಿರುಗಲುಬೇಕು
ಇನ್ನೇನಾದರು ನಾ-
ಧೀನನೆನುತ ಮದ್ದಾನೆಯಂದದಿ ತಾನು ೩

ಹಾಡಿನ ಹೆಸರು :ಅಂಟಿ ಅಂಟದ ಹಾಗೆ ಇರಬೇಕು
ಹಾಡಿದವರ ಹೆಸರು :ಪಲ್ಲವಿ ಎಂ. ಡಿ.
ಸಂಗೀತ ನಿರ್ದೇಶಕರು :ಪ್ರಸಾದ್ ಎನ್. ಎಸ್.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಅವರೆ ಕಾಯ್‍ಬೇಕು ಕಾಲದಿ
೨೭೭
ಅವರೆ ಕಾಯ್‍ಬೇಕು ಕಾಲದಿ
ಅವರೇಕಾಯ್‍ಬೇಕು ಪ
ಅವರೆ ಬಹುರುಚಿಯವರೆ ಸಂಪದ
ಅವರಿಂದಲಿ ಮೋಕ್ಷಾದಿ ಸಾಧನವು ಅ.ಪ
ಯುಕ್ತರಾಗಿ ಇರುವ ಜನರಿಗೆ
ಭುಕ್ತಿಯನು ಕೊಡುವ
ಭಕ್ತರಿಗೆಲ್ಲಾ ಬಾಯ್ಸವಿಯಾದಾ-
ಸಕ್ತಿಪುಟ್ಟಿಸುವ ಸರ್ವೋತ್ತಮವಾದ ೧
ಇವರೆಲ್ಲ ಬೆಳೆದು ಬಿತ್ತಿ
ವಿವರವಾಗಿ ಅಳದು
ತವಕದಿ ಮೂಟೆಯ ಕಟ್ಟಿಟ್ಟಿದ್ದರೆ
ಜವನವರೆಳೆಯುವ ಕಾಲಕ್ಕೊದಗುತ ೨
ಹಿತರಾಗೀ ಅವರೆ ಮಾತಾ-
ಪಿತಾರಾಗೀ ಅವರೆ
ಗತಿದಾಯಕರಾಗಿ ಅವರೆ ಭೂ-
ಸುತೆ ರೀರ್ವರು ೩

ಹಾಡಿನ ಹೆಸರು :ಅವರೆ ಕಾಯ್‍ಬೇಕು ಕಾಲದಿ
ಹಾಡಿದವರ ಹೆಸರು : ಬಾಲಸುಬ್ರಹ್ಮಣ್ಯ ಶರ್ಮ
ಸಂಗೀತ ನಿರ್ದೇಶಕರು :ಹೇಮಂತ್ ಬಿ. ಆರ್.
ಸ್ಟುಡಿಯೋ :ಗಣೇಶ್ ಕುಟೀರ್, ಬೆಂಗಳೂರು

ನಿರ್ಗಮನ

ಇಸ್ಪೀಟಾಡಬೇಕು ನಮ್ಮಯ
೨೮೧
ಇಸ್ಪೀಟಾಡಬೇಕು ನಮ್ಮಯ ತಸ್ಪೀರ್ ನೋಡಬೇಕು ಪ
ನಿಸ್ರ‍ಪಹರಾಗದ ಜನರಿಗೆ ಕಡೆಯಲಿ
ಸಸ್ಪಂಟಾದೀತೆಂದು ತಿಳಿದು ಅ.ಪ
ಆಸೆಂಬುವದಾತ್ಮ | ರಾಜಾ
ತಾಸಗುಣ ಬ್ರಹ್ಮ
ಲೇಸಾಗಿ ರಾಣಿಯು ಮೂಲ ಪ್ರಕೃತಿ
ಗುಲಾಮನೆಂಬುದು ಚತುರ್ಮಖನೆನ್ನುತ ೧
ದಹಿಲವೆಯಿಂದ್ರಿಯಗಳು | ದ್ವಾರವು
ನಹಿಲವಿದು ಭುವಿಯೋಳು
ಅಹಹಾ ಅಟ್ಟವು ಮದಗಳು ನೋಡಲು
ವಿಹಿತವೇಳನೆ ಬಂದು ವೆಸನಗಳು ೨
ಕಾಮಾದಿಗಳಾರು | ಅವೈದೆ
ಈ ಮಹಾ ವಿಷಯಗಳು
ನೇಮಕೆ ನಾಲ್ಕೇ ಪುರಷಾರ್ಥಗಳು
ನಿಜವಿದು ಮೂರನೆ ಬಂದು ತ್ರಿಕಾಲಗಳ್ ೩
ಎರಡು ಜೀವ ಪರಮಾ | ಯಿದರೊಳು
ಯಿಲ್ಲದಿಹದು ಮರ್ಮ
ತುರುಫೆಗುಣರಾಶಿಗಳೆಂದೀಪರಿ
ಅರಿತಾಡಲದೆ ಪರಮಾರ್ಥವಹದು ೪
ಕ್ಳಾವ್ರಿಸ್ಪೀಟಾಟೀನ್ | ಡೈಮಂಡ್
ಈ ವಿಧ ಪೆಸರಿರಲೇನ್
ಭಾವದಿ ಸಾಧನೆ ಯಿಂದಾಡುವ ನಿಜ
ಭಕ್ತರ ಗುರುರಾಮ ವಿಠಲ ಕೈಬಿಡ ೫

ಹಾಡಿನ ಹೆಸರು : ಇಸ್ಪೀಟಾಡಬೇಕು ನಮ್ಮಯ
ಹಾಡಿದವರ ಹೆಸರು :ಯಶವಂತ್ ಹಳಿಬಂಡಿ
ಸಂಗೀತ ನಿರ್ದೇಶಕರು :ಸುಮಿತ್ರಾ ಬಿ. ಕೆ.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಈ ಊರೊಳ್ಳೇದು ನಮಗೆ
೨೮೨
ಈ ಊರೊಳ್ಳೇದು | ನಮಗೆ
ಈ ಊರೋಳ್ಳೇದು ಪ
ಜೀವನ ಯೋಗ್ಯತೆ ಚನ್ನಾಗಿದ್ದರೆ
ದೇವರ ಕೃಪೆ ಒಂದಾದರೆ ಸಾಕು ಅ.ಪ
ಎಂಟು ಆನೆಗಳ ಸಂಹರಿಸಿದರೆ
ಉಂಟಾದ ಶತೃಗಳಿಲ್ಲೆನಿಸಿದರೆ
ತಂಟೆ ಮಾಳ್ಪ ಭಂಟರೈವರ ಗೆದ್ದರೆ
ತಾನೆಲ್ಲಿದ್ದರು ಭಯವಿಲ್ಲಣ್ಣ ೧
ಜಲತೃಣ ಕಾಷ್ಠಕೆ ವಸತಿ ಈ ಊರು
ಬಲು ಸಜ್ಜನಗಳ ನೆರೆ ಈ ಊರು
ಫಲಗಳುಂಟು ಮಾಡುವುದೀ ಊರು
ಹೊಲಗದ್ದೆ ತೋಟಗಳಿಹ ಊರು ೨
ಕೇಳಿದ ಪದಾರ್ಥ ದೊರೆಯುವ ಊರು
ವೇಳೆಗೆ ಅನುಕೂಲವು ಈ ಊರು
ತಾಳ ಮೇಳ ವಾದ್ಯಗಳಿಹ ಊರು
ಸೂಳೆ ಬೋಕರಿಗೆ ಕಷ್ಟದ ಊರು ೩
ಎಷ್ಟು ಪುಣ್ಯದಿಂದೀ ಊರಿಗೆ ಬಂದು
ಕಷ್ಟಪಡುವ ನರ ಭ್ರಷ್ಟನಲ್ಲವೇ
ಮುಷ್ಟಿಯತ್ಯಾದರು ಒಡಲನು ಹೊರೆಯುತ
ಮೂರು ಬಿಟ್ಟು ತಿರುಗುವ ಜನರಿಗೆ ೪
ಮರ ಕ್ರಿಮಿ ಪಕ್ಷಿಗಳಲಿ ಬಾರದೆ ಈ
ನರಜನ್ಮವೆಂಬ ಊರಿಗೆ ಬಂದು
ಗುರುರಾಮವಿಠ್ಠಲನ ಕರುಣನ ಪಡದರೆಕರತಲಾಮಲಕವಿದು ಕೈವಲ್ಯಕೆ ೫

ಹಾಡಿನ ಹೆಸರು :ಈ ಊರೊಳ್ಳೇದು ನಮಗೆ
ಹಾಡಿದವರ ಹೆಸರು :ಶ್ರುತಿ ರಮೇಶ್
ರಾಗ :ಪಹಾಡಿ
ಸಂಗೀತ ನಿರ್ದೇಶಕರು :ಶ್ರೀನಿವಾಸ್ ಟಿ.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಏಕೆ ನೀ ಬರಿದೆ ಮೆಚ್ಚಿದೆ ಭವಹರಗೆ
ರುದ್ರ (ಶಿವ) ಸ್ತುತಿ
೧೪೭
ಏಕೆ ನೀ ಬರಿದೆ ಮೆಚ್ಚಿದೆ ಭವಹರಗೆ
ಲೋಕರಕ್ಷಕನೆಂಬೊ ಹರ ಗಂಗಾಧರಗೆ ಪ
ನೀಕಮಲಮುಖಿ ಅಖುವೈರಿ ಅ-
ನೇಕ ಮೈಯೊಳು ಸುತ್ತಿಕೊಂಡು ವಿ-
ವೇಕವಿಲ್ಲದೆ ವಿಷವನುಂಡ ಪಿ-
ನಾಕಧರನಿಗೆ ಸೋಲುವುದೆ ಅ.ಪ
ಶಿರದೊಳು ಶಶಿಯ ಕೆಂಜಡೆಯಿಪ್ಪಭೋಗಿ
ಸ್ಮರನದಹಿಸಿ ಭಸ್ಮ ಹಣೆಗಿಟ್ಟಯೋಗಿ
ಇರುವೊಡೆ ಸ್ಥಳವಿಲ್ಲ ದಂತೆ ತಾ ಪೋಗಿ
ಬೆರೆವ ಸ್ಮಶಾನ ಮಂದಿರ ಸುಖವಾಗಿ
ಮರುಳು ಭೂತ ಪಿಶಾಚಿ ಯಕ್ಷರ
ನೆರವಿಯೊಳು ಕುಣಿ ಕುಣಿದು ಬ್ರಹ್ಮನ
ಶಿರವಿಡಿದು ತಿರಿದುಂಬ ಗೊರವಗೆ
ಬರಿದೆ ಒಲಿವುದೆ ಗರುವೆ ಪಾರ್ವತಿ೧
ಮಂಡೆಯೊಳ್ ಜಾಹ್ನವಿ ಶಶಿಯನ್ನೆ ಮಾಡಿ
ರುಂಡಮಾಲೆಗಳ ಕೊರಲೊಳಗಿಟ್ಟು ಆಡಿ
ಕುಂಡಲಗಳ ಧರಿಸಿರುವನ ನೋಡಿ
ಖಂಡಪರಶುವೆಂದು ಅವನ ಕೊಂಡಾಡಿ
ದಿಂಡೆಯಾಹ ಪ್ರಾಯದವಳು ನೀ
ಕೆಂಡಗಣ್ಣಿನ ಕ್ರೂರರೂಪನ
ಕಂಡು ನೀನವ ಗಂಡನೆಂದು ಪ್ರಾ-
ಚಂಡಗೊಲಿದಿಹೆ ಸರಿಯೆ ಪಾರ್ವತಿ ೨
ಕರದೊಳು ತ್ರಿಶೂಲ ಡಮರುಗ ಧರಿಸಿರುವ
ಕರಿಚರ್ಮಾಂಬರ ಹುಲಿದೊವಲುಟ್ಟು ಮೆರೆವ
ಹಿರಿಯತನಕೆ ವೃಷಭನ ಏರಿ ಬರುವ
ಸಿರಿಯ ಹೋಗಾಡಿ ಭಿಕಾರಿಯಾಗಿರುವ
ವಿರಚಿಸುವ ಲೀಲಾವಿನೋದನ
ಪರತರ ಶ್ರೀ ಪ್ರಣವ ರೂಪನ
ವರದ ಶ್ರೀ ನ
ಪರಮ ಪ್ರಿಯ ಪರಮೇಶ ಶಿವಗೆ ೩

ಹಾಡಿನ ಹೆಸರು :ಏಕೆ ನೀ ಬರಿದೆ ಮೆಚ್ಚಿದೆ ಭವಹರಗೆ
ಹಾಡಿದವರ ಹೆಸರು :ಶಂಕರ್ ಎಸ್.
ಸಂಗೀತ ನಿರ್ದೇಶಕರು :ವಸಂತಾ ಪಿ. ಎಸ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಪರಶುರಾಮದೇವಾ ನೀನೆ ದುರಿತ ವಿಪಿನ ದಾವಾ
೪೪
ಪರಶುರಾಮದೇವಾ ನೀನೆ ದುರಿತ ವಿಪಿನ ದಾವಾ ಪ
ದರುಶನ ಮಾತ್ರದಿ ಭವರೋಗವಪರಿ
ಹರಿಸಿ ಕೈಪಿಡಿವ ಕರುಣಾನಿಧಿಯೆ ಅ.ಪ
ಜಮದಗ್ನಿಕುಮಾರಾ ನಿನ್ನನು
ಕ್ರಮದಿಭಜಿಸುವವರಾ
ಸಮವಿರಹಿತ ಉತ್ತಮ ಪದವಿಯೊಳಿ
ಟ್ಟಮಿತ ಸುಖಪಡಿಸಿ ಆದರಿಸುವೆ ಸದಾ ೧
ನಿನ್ನಮಹಿಮೆಯನ್ನು ಅರಿಯದ
ಕುನ್ನಿಪಾಮರನಾನು
ಬನ್ನಬಡುವೆನು ಭವಾರ್ಣವದೊಳುಯೆನ್ನ
ಜನ್ಮಜನ್ಮದಘವನ್ನು ಬಿಡಿಸಿ ಕಾಯೊ ೨
ಗರಳಪುರದದೊರಿಯೆ ನಿನ್ನ ಸಂ
ಸ್ಮರಣೆ ಕೊಡೊ ಹರಿಯೆ
ಸರಸಿಜಭವ ಶಿವ ಮುಖ ಸುರವಂದಿತ
ಪರಮ ಪುರುಷ ಶ್ರೀ ಗುರುರಾಮ ವಿಠಲ ೩

ಹಾಡಿನ ಹೆಸರು :ಪರಶುರಾಮದೇವಾ ನೀನೆ ದುರಿತ ವಿಪಿನ ದಾವಾ
ಹಾಡಿದವರ ಹೆಸರು :ಸದಾಶಿವ ಪಾಟೀಲ್
ರಾಗ :ಮಿಶ್ರ ಮಾಂಡ್
ತಾಳ :ಭಜನ್ ಠೇಕಾ
ಸಂಗೀತ ನಿರ್ದೇಶಕರು :ವೆಂಕಟೇಶ ಕುಮಾರ್ ಎಂ.
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ರೋಗದಿ ಬಳಲಲಾರೆ ನಾಗಶಯನ
೧೯೧
ರೋಗದಿ ಬಳಲಲಾರೆ ನಾಗಶಯನ
ಹ್ಯಾಗಾದರು ಮಾಡು ನಿನ್ನ ಸಂಕಲ್ಪ ಪ
ವಾತಪಿತ್ತದ ರೋಗ ಬಾಯಿಗೆ ಅನ್ನಸೇರದು
ಸೋತಿಹುದು ಕೈಕಾಲು ಬಾಯಾರಿಕೆ
ಶೀತೇಶನುತ್ಸವವು ಬಹುಸಮೀಪಕೆ ಬಂತು
ನಾಥನೈಯ್ಯ ನೀನು ಅನಾಥನು ನಾನು ೧
ಹತ್ತು ಮಾಸಗಳಿಂದ ಹಾಸಿಗೆಯಲಿ ಬಿದ್ದು
ಬತ್ತಿ ಬಾಯಿಬಿಡುತಿರುವೆ ಭಯವಾಗಿದೆ
ಭಕ್ತರ ವಿಪತ್ತುಗಳು ಪರಿಹರಿಪೆ ನೀನೆಂದು
ಬಹಳ ಹಿರಿಯರು ನಿನ್ನ ಕೊಂಡಾಡುತಿಹರು ೨
ಹಿತವಾಗಬೇಕೆಂದು ನುತಿಸುವನು ನಾನಲ್ಲ
ಪತಿತ ಪಾವನನೆ ಭಾರವು ನಿನ್ನದು
ಪೃಥಿವಿಜೆಯರಸ ಶ್ರೀ ಗುರುರಾಮ ವಿಠಲನೆ
ಮತಿವಂತರಾನುಡಿ ಸಟೆ ಮಾಳ್ಪುದುಚಿತವೆ ೩

ಹಾಡಿನ ಹೆಸರು :ರೋಗದಿ ಬಳಲಲಾರೆ ನಾಗಶಯನ
ಹಾಡಿದವರ ಹೆಸರು :ಪಂಚಮ್ ಹಳಿಬಂಡಿ
ಸಂಗೀತ ನಿರ್ದೇಶಕರು :ಸುಮಿತ್ರಾ ಬಿ. ಕೆ.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಲಾಲಿ ಗೌರೀಪ್ರಿಯನೆ ಲಾಲಿ ನಾಲ್ಮೊಗನೆ
೩೨೪
ಲಾಲಿ ಗೌರೀಪ್ರಿಯನೆ ಲಾಲಿ ನಾಲ್ಮೊಗನೆ
ಲಾಲಿ ಲಕ್ಷ್ಮೀರಮಣ ಲಾಲಿ ಪರಿಪೂರ್ಣ ಪ
ತ್ರಿಪುರ ಸಂಹಾರ ದೀನ ಜನ ಮಂದಾರ
ಕಪಟದಾನವಶಿಕ್ಷ ಕರುಣಾ ಕಟಾಕ್ಷ
ತಪನಾಗ್ನಿ ಶಿಖಿನೇತ್ರ ಧನನಾಥ ಮಿತ್ರ
ಸುಪವಿತ್ರ ಚಾರಿತ್ರ ಸುಜನನುತಿ ಪಾತ್ರ೧
ವನಜ ಸಂಭವ ಸೃಷ್ಟಿ ಕರ್ತವಾಣೀಶ
ಕನಕ ಗರ್ಭಾಪ್ರತಿಮ ಮಹಿಮ ಜೀವೇಶ
ಘನ ಮಹಾಧ್ವಪು ಹಂಸ ಗಮನ ಸುವಿಲಾಸ
ಸನಕಾದಿ ಮುನಿವಿನುತ ಸರ್ವಲೋಕೇಶ೨
ಪಕ್ಷಿವಾಹನ ಜಗದ್ರಕ್ಷ ಸಿರಿವರನೆ
ಅಕ್ಷಯ ಪ್ರದ ಸುಮೋಕ್ಷದಾಯಕನೆ
ಕುಕ್ಷಿಯೊಳಗನೇಕಜಾಂಡಗಳ ಧರಿಸಿದನೆ
ಸಾಕ್ಷಿಯಾಗಿಹ ಗುರುರಾಮ ವಿಠ್ಠಲನೆ ೩

ಹಾಡಿನ ಹೆಸರು :ಲಾಲಿ ಗೌರೀಪ್ರಿಯನೆ ಲಾಲಿ ನಾಲ್ಮೊಗನೆ
ಹಾಡಿದವರ ಹೆಸರು :ಹರಿಣಿ ಎನ್. ಆರ್., ಶಾರದ ಎನ್. ಆರ್.
ಸಂಗೀತ ನಿರ್ದೇಶಕರು :ಶಂಕರ್ ಎಸ್.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಲಾಲಿ ಪಾವನ ಚರಣ ಲಾಲಿ ಭವ ಹರಣ
೫೯
ಲಾಲಿ ಪಾವನ ಚರಣ ಲಾಲಿ ಭವ ಹರಣ
ಲಾಲಿ ಲಕ್ಷ್ಮೀರಮಣ ಲಾಲಿ ನತ ಶರಣ ಪ
ಲೀಲಾ ವಿನೋದದಲಿ ಮೂಜಗವ ಸೃಜಿಸಿ
ಪಾಲಿಸುವೆ ನಿನ್ನ ವ್ಯಾಪಾರವನುಸರಿಸಿ
ಕಾಲಕಾಲಾರ್ಚಿತನೆ ಕಲುಷಹರನೆಂದು
ನೀಲಾಹಿವೇಣಿಯರು ನಿನ್ನ ತೂಗುವರು ೧
ಶೇಷ ಪರಿಯಂಕದಲಿ ಶ್ರೀ ಸಮೇತದಲಿ
ತೋಷದಿಂ ಪವಡಿಸುವೆ ಪ್ರಳಯ ವಾರಿಯಲಿ
ಭಾಷಾಪತಿಯ ಪಡದೆ ನಾಭಿ ಕಮಲದಲಿ
ಪೋಷಿಸುವೆ ಜೀವರನು ಸರ್ವಕಾಲದಲಿ ೨
ಶ್ರೀರಾಮ ಮಾಧವಾಶ್ರಿತಜನೋದ್ಧಾರಾ
ಘೋರ ಪಾಪ ವಿದೂರ ಕುಜನ ಸಂಹಾರಾ
ನಾರಾಯಣಾಚ್ಚುತಾನಂತಾವತಾರ ವಾರಿಜಾಯತ ನೇತ್ರ ಗುರುರಾಮವಿಠಲಾ ೩

ಹಾಡಿನ ಹೆಸರು :ಲಾಲಿ ಪಾವನ ಚರಣ ಲಾಲಿ ಭವ ಹರಣ
ಹಾಡಿದವರ ಹೆಸರು :ಕುಸುಮಾ ಕೆ. ಎಂ.
ಸಂಗೀತ ನಿರ್ದೇಶಕರು :ಪ್ರಸಾದ್ ಎನ್. ಎಸ್.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಶ್ರೀ ವೆಂಕಟೇಶ
೭೪
ಶ್ರೀವೆಂಕಟೇಶಾ ಶ್ರಿತಜನಪೋಷಾ ಪ
ದೇವ ದೇವ ಮಹದೇವ ವಿನುತಸುಜ |
ನಾವನ ಶ್ರೀ ಭೂದೇವಿಯರರಸನೆ ಅ.ಪ
ಅಂಬರರಾಜನಳಿಯನೆ ತ್ರಿಭುವನ ಕು |
ಟುಂಬಿ ನಿನ್ನ ನೆರೆ ನಂಬಿದೆನಯ್ಯ ೧
ಸ್ವಾಮಿ ಪುಷ್ಕರಣಿ ತಟದಿ ನೆಲಸಿ ಸುರ |
ಸ್ತೋಮದಿಂದ ಓಲಗ ಕೈಗೊಂಬ ೨
ದುರಿತವ ಕಳೆಯುವ ದೊರೆ ನೀನಲ್ಲವೆ
ಉರಗಗಿರಿನಿಲಯ  ೩

ಹಾಡಿನ ಹೆಸರು :ಶ್ರೀ ವೆಂಕಟೇಶ
ಹಾಡಿದವರ ಹೆಸರು :ವಾಗೀಶ್ ಕೆ. ಹಾಗೂ ವೃಂದ
ರಾಗ :ಮಧ್ಯಮಾವತಿ
ತಾಳ :ಛಾಪು ತಾಳ
ಸಂಗೀತ ನಿರ್ದೇಶಕರು :ವಾಗೀಶ್
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಸುಖಕರ ನೀನೆನ್ನುತ
೭೯
ಸುಖಖರ ನೀನೆನ್ನುತಾ ಸೂರಿಗಳು ಭಜಿಸುವರೊ ನಿನ್ನ ಪ
ಭಕುತಿಯಿಂದಲಿ ನಿನ್ನ ಶ್ರೀಪಾದ ಪದ್ಮಂಗಳ ಸೇವಿಸುತ
ಭವಭಯಗಳನೀಡಾಡುತ ಪಾಪರಹಿತರಾಗಿಹರು ಅ.ಪ
ಭೂತದಯೆ ಪಶ್ಚಾತ್ತಾಪವಿಖ್ಯಾತಿಯಶೋದಾನ
ನೀತಿಮನಃ ಪ್ರೀತಿಧ್ಯಾನ ನಿತ್ಯಾನುಸಂಧಾನ
ಶ್ರೀ ತರುಣಿವರ ಪ್ರಾಣಿ ವ್ರಾತಗಳಿಗೆ ಕರ್ತನು ಯಂ
ದಾತುರವಿಲ್ಲದೆ ಸರ್ವದ ಜಾತಿ ಧರ್ಮಾಚಾರದಲ್ಲಿ ೧
ತನ್ನಂತಿತರರ ನೋಡುತ ಮನ್ನಣೆಯಲಿ ಸತತ
ಹೆಣ್ಣು ಹೊನ್ನು ಮಣ್ಣಾಸೆ ಬಿಡುತ ಹೇಯವವರ್ಜಿಸುತ
ನನ್ನದು ನಾನೆಂಬುದ ಬಿಟ್ಟನ್ಯರ ನಿಂದಿಸದಲೆ ಹರಿ
ನಿನ್ನಾಜ್ಞೆಯೊಳಾದುದೆಲ್ಲ ನಿನಗೆ ಸಮರ್ಪಣೆಗೈಯ್ಯುತಾ ೨
ಸತಿಸುತಹಿತ ಸೋದರಾಪ್ತ ತತಿಯಲಿ ಸಂಭ್ರಮದಿ
ಮತಿಗೆಡದೆ ಎಚ್ಚರಿಕೆಯಿಂ ಸುಮಾರ್ಗದಿ ಸಮ್ಮುದದಿ
ಪ್ರತಿ ದಿನದಲಿ ಶೃತಿ ಸ್ರ‍ಮತಿ ಸಂಮತದಿ ಸತ್ಸಂಗದಿ ಸೀತಾ-
ಪತಿ ಗುರುರಾಮ ವಿಠಲ ಯಂದತಿಶಯದಲಿ ಚಿಂತಿಸುತ೩

ಹಾಡಿನ ಹೆಸರು :ಸುಖಕರ ನೀನೆನ್ನುತ
ಹಾಡಿದವರ ಹೆಸರು :ಶ್ರೀಕಾಂತಂ ನಾಗೇಂದ್ರಶಾಸ್ತ್ರೀ
ರಾಗ :ದೇಶ್
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ವಾಗೀಶ್
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ